ಪತ್ರಿಕೆ, ಟಿ.ವಿ. ಮತ್ತು ಸಿನಿಮಾ ಹಾಗೂ ದಲಿತರ ಭಾಷೆಗೆ ಸಂಬಂಧಿಸಿದ ಈ ಗೋಷ್ಠಿಗೆ ನಾನು ಪರಕೀಯ. ಇಲ್ಲಿ ದಲಿತರ ಭಾಷೆ ಬಗ್ಗೆ ಬೆಳಿಗ್ಗೆಯಿಂದ ಇಲ್ಲಿಯವರೆಗೂ ಚರ್ಚೆ ನಡೆಯಿತು. ನಾನು ಹಿಂದಿನ ಗೋಷ್ಠಿಯಲ್ಲಿ ಕುಳಿತಿದ್ದೆ. ಅದರಲ್ಲಿ ಬೆಳಗಿನ ಗೋಷ್ಠಿಯ ಉಲ್ಲೇಖಗಳಿದ್ದವು. ಪರಿಸ್ಥಿತಿ ಎಷ್ಟು ವಿಚಿತ್ರ ಇದೆ ಅಂತೇಳಿದ್ರೆ, ಟಿ.ವಿ.ಯ ಎಲ್ಲ ಚಾನೆಲ್‌ಗಳಲ್ಲೂ ಬೇರೆ ಬೇರೆ ಕಾರ್ಯಕ್ರಮಗಳು ಬರುತ್ವೆ. ರಾಜಶೇಖರ ಅವ್ರು ಟಿ.ವಿ. ಕಚೇರಿ ಒಳಗಡೆ ಎಷ್ಟು ಜನ ಇದ್ರು ಅಂತ ಅಂಕಿ ಅಂಶಗಳನ್ನ ಕೊಟ್ರು. ಆ ಟಿ.ವಿ. ಒಳಗಡೆ ಇರುವ Softwareಗಳಿವೆ ಏನು… ಅಲ್ಲೂ ಕೂಡ ವ್ಯವಸ್ಥೆ ಹೇಗಿದೆ-ಅಂದ್ರೆ ಧಾರಾವಾಹಿಗಳು ಬರುತ್ವೆ ಪುಂಖಾನುಪುಂಖವಾಗಿ ಒಂದರ ಹಿಂದೆ ಒಂದು. ಯಾವ ಧಾರವಾಹಿಯಲ್ಲಿಯೂ ಕೂಡ ಯಾವ ಪಾತ್ರಧಾರಿಗಳೂ ಕೂಡ ದಲಿತರ ಭಾಷೆಯನ್ನ ಬಳಸೋದಿಲ್ಲ. ಸಂದರ್ಶನಗಳು ಬರುತ್ವೆ, ಸಂದರ್ಶನಗಳಲ್ಲಿಯೂ ಕೂಡ ದಲಿತ ಲೇಖಕರನ್ನ ಸಂದರ್ಶಿಸುವಾಗ ಅಥವಾ ಟಿ.ವಿ. ಚಾನಲ್ ಹೊರಗಡೆ ಇರುವಂತಹ ದಲಿತರೇ ಸಂದರ್ಶನ ಮಾಡುವಾಗ ಅಲ್ಲಿ ದಲಿತರ ಭಾಷೆ ಬರೋದಿಲ್ಲ. ನ್ಯೂಸ್‌ನನಲ್ಲಂತೂ ಇಲ್ಲವೇ ಇಲ್ಲ. ಕೆಲವು ಸಿನಿಮಾಗಳನ್ನ ತೋರಿಸುವಾಗ ಎಲ್ಲೋ ಶೇ. ೦.೧ ಅಥವಾ ೦.೨ ಅದೂ ಉಮಾಶ್ರೀ ಅಂತಹವರು ಎಲ್ಲೋ ಒಂದೆರಡು ಕಡೆ ಬಳಸಿರೋದನ್ನ ನಾನು ನೋಡಿದ್ದು ಬಿಟ್ರೆ ಮತ್ತೆಲ್ಲೂ ಆ ಭಾಷೆ ಪ್ರತಿಬಿಂಬಿತವಾಗೋದಿಲ್ಲ. ಹೋಗ್ಲಿ ಬೆಳಿಗ್ಗೆ ಎರಡೆರಡು ಗಂಟೆ ಅಡಿಗೆ ಮಾಡೋದನ್ನ ತೋರಿಸ್ತಾರೆ ಅಲ್ಲೂ ಕೂಡ ದಲಿತರ ಭಾಷೆ, ದಲಿತರ ಸಂಸ್ಕೃತಿ ಪ್ರತಿಬಿಂಬಿತವಾಗೋ ಪರಿಸ್ಥಿತಿ ಇಲ್ಲ. ಇವ್ರು ದಲಿತರು ಅಡಿಗೆನೇ ಮಾಡೋದಿಲ್ವ, ಊಟಾನೇ ಮಾಡೋದಿಲ್ವ, ಮಾತೂ ಆಡೋದಿಲ್ವ ಅಂತ ಸಹಜವಾಗಿ ಬರೋ ಸಂಶಯ.

ಯಾರಿಗೂ ಇನ್ನು ಪತ್ರಿಕೆಗಳಿಗೆ ಬಂದ್ರೆ ಯಾವ ರೀತಿ ದಲಿತರ ಭಾಷೆಯನ್ನ ಒಳಗೊಳ್ಳುವ ಸಾಧ್ಯತೆಗಳಿವೆ ಅನ್ನೋದನ್ನ ನಾನು ಒಂದೆರಡು ಮಾತುಗಳಲ್ಲಿ ಪ್ರತಿಕ್ರಿಯೆ ರೂಪದಲ್ಲಿ ಹೇಳ್ತೇನೆ. ಇತ್ತೀಚಿನ ದಿನಗಳಲ್ಲಿ ಕನ್ನಡ ದಿನಪತ್ರಿಕೆಗಳಲ್ಲಿ ಒಂದು ಅಭ್ಯಾಸ ಬೆಳೆದು ಬಂದಿದೆ ಹೆಡ್‌ಲೈನ್‌ಗಳಲ್ಲಿ ದ್ವಂದ್ವಾರ್ಥಗಳನ್ನು ಧ್ವನಿಸೋದು ಅಥವಾ ಆ ಸುದ್ದಿಗೆ ಸಂಬಂಧಿಸಿದ ವ್ಯಕ್ತಿಗಳ ಹೆಸರುಗಳನ್ನು ಹೆಡ್‌ಲೈನ್‌ಗೆ ಬಳಸಿಕೊಳ್ಳೋದು. ಈ ಸಂದರ್ಭಗಳಲ್ಲಿ ಬಹಳಷ್ಟು ಸಲ ಇಂಗ್ಲಿಶ್ ಶಬ್ದಗಳನ್ನ ಬಳಸ್ತೀವಿ ನಾವು. ಆದ್ರೆ ದಲಿತರ ಭಾಷೆಗೆ ಸಂಬಂಧಿಸಿದಂತಹ ಒಂದೇ ಒಂದು ಶಬ್ದವನ್ನು ಇದುವರೆಗೆ ಬಳಸಿದ್ದು ಗೊತ್ತಿಲ್ಲ. ಅದು ದಲಿತರಿಗೇ ಸಂಬಂಧಿಸಿದ ಸುದ್ಧಿ ಇರ್ಬಹುದು. ಯಾವುದೇ ತರಹದ ಸುದ್ದಿಗಳಿಗೆ ಕೂಡ.

ಅದೇ ರೀತಿ ಸಿನಿಮಾಗಳಲ್ಲಂತೂ ಭಾಷೆ ಮತ್ತಷ್ಟು ವಿರೂಪಗೊಂಡಿರುತ್ತದೆ. ಸಿನಿಮಾಗಳನ್ನು ಬಿಟ್ಟು ಸಾಕಷ್ಟು ಸಂವೇದನಾಶೀಲ ವ್ಯಕ್ತಿಗಳ ಮತ್ತು ಸಮಾಜಕ್ಕೆ ಉತ್ತರದಾಯಿತ್ವ ಹೊಂದಿರುವ ಟಿ.ವಿ. ಮತ್ತು ಪತ್ರಿಕೆಗಳಲ್ಲಿ ಕೂಡ ಇದೇ ಸ್ಥಿತಿ ಇದೆ.

ಏನು ಮಾಡ್ಬಹುದು, ದಲಿತರು ಅಂದ್ರೆ ನನಗನಿಸುತ್ತೆ ಇದು ದಲಿತರದೇ ತಪ್ಪು. ಇದು ಬೇರೆಯವರ ತಪ್ಪು ಅಲ್ಲ. ಈಗ ಆಕಾಶವಾಣಿಯಲ್ಲಿ ಸಂಸ್ಕೃತ ವಾರ್ತೆ ಬರುತ್ತೆ. ನೂರು ಕೋಟಿ ಜನರಲ್ಲಿ ಶೇ. ೨ರಷ್ಟು ಜನ ಮಾತ್ರ. ಪ್ರತಿನಿಧಿಸುವಂತಹ ಅದರಲ್ಲಿಯೂ ಶೇ. ೧ರಷ್ಟು ಮಂದಿಗೆ ಮಾತ್ರ ಅರ್ಥವಾಗುವಂತಹ ಸಂಸ್ಕೃತ ಭಾಷೆಯಲ್ಲಿ ವಾರ್ತೆ ಬರುತ್ತೆ. ನೀವು ಶೇ. ೨೫ ಅಂದಾಜು ಶೇ. ೨೫ ಅಂದ್ರೆ ಸುಮಾರು ೨೫ ಕೋಟಿ ಕರ್ನಾಟಕದಲ್ಲಿ ನೀವು ತಗೊಂಡ್ರೆ ಒಂದು ಕೋಟಿ ಜನ ಮಾತಾಡ್ತಕ್ಕಂತ ಭಾಷೆ ಇದೆಯಲ್ಲ ಈ ಭಾಷೆಯಲ್ಲಿ ಒಂದು ಸುದ್ದಿನಾಗಲಿ ಅಥವಾ ಸಮೂಹ ಮಾಧ್ಯಮಗಳಲ್ಲಿ ಈ ತರದ ಕಾರ್ಯಕ್ರಮಗಳಾಗಲಿ ಅಥವಾ ಭಾಷೆಯನ್ನ ಪ್ರತಿನಿಧಿಸುವಂತಹ ಕಾರ್ಯಕ್ರಮಗಳು ಯಾಕೆ ಬರ್ತಾ ಇಲ್ಲ?

ನಾವು ಹೇಳ್ತೀವಿ. Democracyನಲ್ಲಿ ಜನಸಂಖ್ಯೆ ಮುಖ್ಯ. ಪ್ರಜಾಪ್ರಭುತ್ವದಲ್ಲಿ ಸಂಖ್ಯೆ ಮುಖ್ಯ ಎಂದು. ಎಲ್ಲಿ ಸಂಖ್ಯೆ ಮುಖ್ಯ ಆಗಿದೆ? ಇಲ್ಲಿ ಶೇ. ೨ರಷ್ಟು ಸಂಖ್ಯೆಯ ಜನರು ಆಡುವಂತಹ ಭಾಷೆಯಲ್ಲಿ ವಾರ್ತೆ ಬರುತ್ತೆ ಅಂತಾದರೆ ಕನಿಷ್ಟ ಕರ್ನಾಟಕದಲ್ಲಾದರೂ ಒಂದು ಕೋಟಿ ಜನ ಮಾತಾಡ್ತಕ್ಕಂತಹ ಒಂದು ಭಾಷೆ ಯಾಕಾಗಲ್ಲ ಅಂತ ಹೇಳಿದ್ರೆ ದಲಿತರಿಗೆ ಅದರಲ್ಲಿ ಆಸಕ್ತಿ ಇಲ್ಲ. ಬಹಳ ಸ್ಪಷ್ಟವಾದಂತ ವಿಚಾರ ಇದು.

ಏನಾಗುತ್ತೆ ಅಂತೇಳಿದ್ರೆ ರೊಮಾಂಟಿಸೈಸ್ ಮಾಡೋಕೆ ಹೋಗೋದ್ರಿಂದ ಕಷ್ಟ ಇದೆ. ಭಾವುಕ ನಿರ್ಧಾರಗಳನ್ನ ಈ ಭಾಷೆಗೆ ಸಂಬಂಧಿಸಿದಂತೆ ತಗೊಳ್ಳೋದು ಕೂಡ ತಪ್ಪು ಅನ್ಸುತ್ತೆ. ಯಾಕೆ ರೊಮಾಂಟಿಸೈಸ್ ಅಂತ ಹೇಳ್ತಾ ಇದ್ದೇನೆ ಅಂತೇಳಿದ್ರೆ ಈಗ ಶಿಷ್ಟ ಭಾಷೆಯನ್ನ ಮಾತಾಡ್ಲಿಕ್ಕೆ ಆಗೋದಿಲ್ಲ ಅನ್ನೋ ವಿಚಾರ ಬೆಳಗ್ಗೆಯಿಂದ ಕೇಳಿ ಬರ್ತಾ ಇದೆ ಇಲ್ಲಿ. ಇಂಗ್ಲಿಶ್‌ನ್ನ ಚೆನ್ನಾಗಿ ಕಲ್ತು ಉಪನ್ಯಾಸ ಮಾಡಕ್ಕೆ ಬರುತ್ತೆ. ಹಿಂದಿಯನ್ನ ಚೆನ್ನಾಗಿ ಕಲ್ತು ಉಪನ್ಯಾಸ ಮಾಡಕ್ಕೆ ಬರುತ್ತೆ. ಶಿಷ್ಟ ಕನ್ನಡವನ್ನ ಯಾಕೆ ಕಲಿಯೋಕೆ ಆಗೊಲ್ಲ ದಲಿತರಿಗೆ ? ಅದು ದಲಿತರ ಅಸಹಾಯಕತೆ. ಆ ಅಸಹಾಯಕತೆಯನ್ನೇ ವಾಸ್ತವ ಅಂತ ಯಾಕೆ ತಿಳ್ಳೋಬೇಕು? ಯಾಕೆ ರಿವರ್ಸ ಆಗಿ ಆಲೋಚನೆ ಮಾಡ್ಬಾರ್ದು ನಾವು?

ಕರ್ನಾಟಕದ್ದೇ ಎರಡು ಭಾಷಾ ಗುಂಪುಗಳನ್ನ ಉದಾಹರಣೆಯಾಗಿ ಕೊಡ್ಲಿಕ್ಕೆ ನಾನು ಇಷ್ಟಪಡ್ತೇನೆ. ಒಂದು ತುಳುವರು, ಇನ್ನೊಂದು ಬ್ಯಾರಿಗಳು. ದಕ್ಷಿಣ ಕನ್ನಡದಲ್ಲಿ ಸುಮಾರು ೧೦ ಲಕ್ಷ ಮಂದಿ ಬ್ಯಾರಿ ಭಾಷೆ ಮಾತಾಡ್ತಾರೆ. ಕುತೂಹಲಕರ ಅಂಶ ಅಂದ್ರೆ ಮಾಧ್ಯಮದಲ್ಲಿರುವ ಮುಸ್ಲಿಮರಲ್ಲಿ ಎಲ್ಲರೂ ಬ್ಯಾರಿಗಳೇ ಇದ್ದಾರೆ. ಪತ್ರಿಕೆಗಳಿಗೆ ನೋಡ್ಬಹುದು. ನೀವು ಟಿ.ವಿ.ಚಾನೆಲ್‌ಗಳಲ್ಲಿ ನೋಡ್ಬಹುದು. ಬ್ಯಾರಿಳು ೧೦ ಲಕ್ಷ ಮಂದಿ ಲಿಪಿಯಿಲ್ಲದ ತಮ್ಮ ಭಾಷೆಯನ್ನ ಇವತ್ತಿಗೂ ಕೂಡ ನಮ್ಮ ಮನೆಯಲ್ಲಿ ತಮ್ಮ ಪರಿಸರದಲ್ಲಿ ಬಹಳ ಸ್ಪಷ್ಟವಾಗಿ ಬಳಸ್ಕೊಂಡು ಬರ್ತಾ ಇದ್ದಾರೆ. ಎಂಟು ವರ್ಷದ ಕೆಳಗೆ ಬ್ಯಾರಿ ಸಾಹಿತ್ಯ ಪರಿಷತ್ತು ಅಂತ ಸ್ಥಾಪನೆ ಮಾಡಿ ಬ್ಯಾರಿ ಭಾಷೆಯಲ್ಲಿ ಹೆಚ್ಚು ಹೆಚ್ಚು ಪುಸ್ತಕಗಳು, ಕ್ಯಾಸೆಟ್‌ಗಳು, ನಾಟಕಗಳೆಲ್ಲ ಪ್ರಿಂಟೆಡ್ ರೂಪದಲ್ಲಿ ಬರಕ್ಕೆ ಆರಂಭವಾಗಿದೆ. ಕಳೆದ ಎರಡೂ ವರ್ಷಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಬ್ಯಾರಿ ಭಾಷೆಯಲ್ಲಿ ಪ್ರಕಟವಾಗಿದೆ. ಕರ್ನಾಟಕ ಸರ್ಕಾರ ಇವತ್ತಿಗೂ ಆ ಭಾಷೆಗೆ ಮಾನ್ಯತೆ ನೀಡಿಲ್ಲ. ಹತ್ತು ವರ್ಷಗಳ ಕೆಳಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಡ್ಬೇಕು ಅನ್ನೋ ಒತ್ತಡವನ್ನ ಸರಕಾರದ ಮೇಲೆ ಹೇರ್ಕೊಂಡು ಬಂದ್ರೂ ಕೂಡ, ಸರಕಾರಕ್ಕೆ ಹೇಳಿದ್ದೀವಿ ೧.೨ ಲಕ್ಷ ಇರೋ ಜನ ಕೊಡವರು ಮಾತನಾಡುವ ಭಾಷೆಗೆ ಒಂದು ಪ್ರತ್ಯೇಕವಾದ ಅಕಾಡೆಮಿ ಕೊಟ್ಟಿದ್ದೀರಿ, ಬಹಳ ಒಳ್ಳೆಯ ನಿರ್ಧಾರ. ೧೦ ಲಕ್ಷ ಮಂದಿ ಮಾತಾಡ್ತಾ ಇರುವಂತಹ ಭಾಷೆಗೆ ಯಾಕೆ ಕೊಡ್ಬಾರ್ದು ಅನ್ನುವಂತಹ ವಾದವನ್ನು ಮುಂದಿಟ್ಟಾಗಲೂ ಕೊಟ್ಟೆಲ್ಲ. ಕೊಡದೇ ಇದ್ರು ಕೂಡ ಬ್ಯಾರಿ ಭಾಷೆ ಇವತ್ತು ಜೀವಂತ ಭಾಷೆಯಾಗಿ ಉಳ್ಕೊಳುತ್ತಾ ಅದೇ ಸಂದರ್ಭದಲ್ಲಿ ಇನ್ನೊಂದು ಕಡೆ ಕನ್ನಡಕ್ಕೆ ಕನ್ನಡದ ಮಾಧ್ಯಮ ಇರ್ಬಹುದು, ಕನ್ನಡದ ಸಾಹಿತ್ಯ ಇರ್ಬಹುದು. ಅತ್ಯಂತ ಹೆಚ್ಚು ಕೊಡುಗೆಯನ್ನು ಕೊಡುವ ಲೇಖಕರನ್ನ ಬ್ಯಾರಿಗಳು ಕೊಟ್ಟಿದ್ದಾರೆ. ಎರಡೂ ಭಾಷೆಯನ್ನ ತಮ್ಮ ಮಾತೃಭಾಷೆಯನ್ನ, ಹೇಗೆ ಅವರು ಅತ್ಯಂತ ಹೆಚ್ಚು ಪವರ್‌ಪುಲ್ ಆಗಿ ಬಳಸ್ಕೊಂಡು ಉಳಿಸಿಕೊಂಡಿದ್ದಾರೋ ಅಷ್ಟೇ ಸಮರ್ಥವಾಗಿ ಕನ್ನಡವನ್ನು ಬಳಸಿಕೊಂಡು ಶಿಷ್ಟ ಕನ್ನಡ ಅದರಲ್ಲೂ ಕೂಡ ಅತ್ಯುತ್ತಮವಾದ ತಮ್ಮ ಸಾಮರ್ಥ್ಯವನ್ನ ಪ್ರತಿಬಿಂಬಿಸಿದ್ದಾರೆ.

ಅದೇ ರೀತಿ ತುಳು. ತುಳು ಭಾಷೆಗೆ ಕೂಡ ಇದು ಅನ್ವಯವಾಗುತ್ತೆ. ಆ ಸಾಧ್ಯತೆ ನಮ್ಮ ಕಣ್ಣೆದುರೆ ಇರುವಾಗ ದಲಿತರು ಯಾಕೆ ಹಿಂದಿದ್ದಾರೆ?

ಸಂಸ್ಕೃತಕ್ಕೆ ಹೋಲ್ಸಿದ್ರೆ ದಲಿತ ಭಾಷೆ ಜೀವಂತ ಭಾಷೆ. ಬೆಂಗಳೂರಿನಲ್ಲಿರುವ ದಲಿತನೊಬ್ಬ ತನ್ನ ಕೇರಿಗೆ ಹೋದ್ರೆ ಅಲ್ಲಿ ಬೆಂಗಳೂರು ಭಾಷೆನ ಮಾತಾಡೋಲ್ಲ, ತನ್ನ ಕನ್ನಡವನ್ನೇ ಮಾತ್ನಾಡ್ಬೇಕಾಗುತ್ತದೆ. ಅಲ್ಲಿ ಇಲ್ದಿದ್ರೆ ಅವನಿಗೆ ತನ್ನ ಸಮುದಾಯದ ಜೊತೆಗೆ ಸಂಪರ್ಕನೇ ಕಡಿದು ಹೋದ ಹಾಗಾಗುತ್ತೆ. ಎಲ್ಲೋ ಅಪರಿಚಿತನಾಗಿ ಹೋಗ್ತಾನೆ. ಅಷ್ಟು ಜೀವಂತವಾಗಿರುವ, ಸಾಕಷ್ಟು ಸಂಖ್ಯೆಯಲ್ಲಿರುವ ವಿದ್ಯಾವಂತರಿಗೆ ಕೂಡ ತಮ್ಮ ಕೇರಿಗೆ ಹೋದಾಗ ಒತ್ತಡ ಹೇರುವಷ್ಟು ಪ್ರಬಲವಾಗಿರುವ ಜೀವಂತ ಭಾಷೆಯನ್ನು ಯಾಕೆ ದಲಿತರು ಪವರ್‌ಪುಲ್ ಆಗಿ ಬಳಸಿ ಇನ್ನೊಂದು ಹೊಸ ಸಂಬಂಧವನ್ನು ಸೃಷ್ಟಿಸಿಕೊಳ್ಲಿಕ್ಕೆ ಆಗಿಲ್ಲ. ಶಿಷ್ಟ ಕನ್ನಡವನ್ನ ಒಗ್ಗಿಸಿಕೊಳ್ಲಿಕ್ಕೆ ಯಾಕೆ ಆಗಿಲ್ಲ? ಸಮೂಹ ಮಾಧ್ಯಮಗಳಲ್ಲಿ ನನಗಂತೂ ಇದೊಂದು ಮುಖ್ಯವಾದಂತಹ ಪ್ರಶ್ನೆ ಅನಿಸ್ತಾ ಇದೆ. ಈ ನಿಟ್ಟಿನಲ್ಲಿ ಕೂಡ ನಾವು ಆಲೋಚನೆ ಮಾಡ್ಬಹುದು.

ದಲಿತರ ಕನ್ನಡ ಮಾತ್ರವಲ್ಲ, ಹವ್ಯಕರ ಕನ್ನಡ ಇದೆ, ಕುಂದಾಪುರದ ಕನ್ನಡ ಇದೆ. ಮಂಗಳೂರಿನಲ್ಲಿ ನಾವು ಮೂರ್ನಾಲ್ಕು ರೀತಿ ಕನ್ನಡವನ್ನ ಮಾತಾಡ್ತೇವೆ. ನಾರಾಯಣ ಅವರು ಹೇಳ್ತಾರೆ. ೫೦ ಕಿ.ಮೀ.ಗೆ ಒಮ್ಮೆ ಭಾಷೆ ಬದ್ಲಾಗುತ್ತೆ ಅಂತ. ಆದ್ರೆ ಕೋಸ್ಟಲ್ ಲೈನ್‌ನಲ್ಲಿ ೧೫ ಕಿ.ಮೀ.ಗೆ ಒಂದ್ಸಲ ಭಾಷೆ ಬದ್ಲಾಗ್ತಾ ಹೋಗ್ತದೆ. ಶೇ. ೨೦ ಹೊಸ ಹೊಸ ಶಬ್ದಗಳು ಸೇರುತ್ತಾ ಹೋಗುತ್ವೆ. ಹವ್ಯಕರು ಅವರ ಭಾಷೆಯನ್ನ ಅವರ ಪರಿಸರದಲ್ಲಿ ಇಟ್ಕೊಂಡು ಮುಖ್ಯ ಪ್ರವಾಹದಲ್ಲಿ ಶಿಷ್ಟ ಕನ್ನಡದಲ್ಲಿ ಬಹಳ ದೊಡ್ಡ ಸಾಧನೆಯನ್ನ ಮಾಡಿಲ್ವ? ಅದು ಹೇಗೆ ಸಾಧ್ಯ ಆಯಿತು ? ಕುಂದಾಪುರ ಕನ್ನಡ ಮಾತನಾಡುವ ಕನ್ನಡಿಗರು ಕೂಡ ಶಿಷ್ಟ, ಕನ್ನಡಕ್ಕೆ ತಮ್ಮ ಭಾಷೆಯನ್ನು ಒಗ್ಗಿಸಿಕೊಂಡು ಬಗ್ಗಿಸಿಕೊಂಡು ಹೊಸ ಕೃತಿಗಳನ್ನು ರಚಿಸಿದ್ದೆಲ್ಲ ಇಲ್ವ. ಹೇಗೆ ಸಾಧ್ಯ ಆಯಿತು? ಈ ಸಾಧ್ಯತೆಗಳನ್ನು ಕೂಡ ನಾವು ಬಹುಶಃ ಚಿಂತಸ್ಬಹುದು ಅಂತ ಅಂದ್ಕೊಳುತ್ತಾ ಇದು ಅಂತಿಮ ಅಲ್ಲ. ಈ ದೃಷ್ಟಿಯಲ್ಲಿ ಚರ್ಚೆ ಎರಡು ದಿಕ್ಕಿನಲ್ಲಿ ಸಾಗಿದ್ರೆ ಒಳ್ಳೆಯದು ಅಂತ ಹೇಳ್ತಾ ಕೊನೆಯದಾಗಿ ನನಗೆ ಗೊತ್ತಿರುವಂತಹ ಸೂಫಿ ಕತೆಯನ್ನ ಹೇಳಿ ಈ ಭಾಷೆಗೆ ಸಂಬಂಧಿಸಿದ ನನ್ನ ನಿಲುವನ್ನ ಸ್ಪಷ್ಟಪಡಿಸ್ತೇನೆ.

ಒಂದು ಕಾಡಿನಲ್ಲಿ ಒಬ್ಬ ಸೂಫಿ ಹೋಗ್ತಾ ಇದ್ದಾಗ ‘ಕಾಪಾಡಿ, ದಯವಿಟ್ಟು, ಕಾಪಾಡಿ’ ಅಂತ ಒಂದು ಕೂಗು ಕೇಳಿಸ್ತಂತೆ. ಮುಸ್ಸಂಜೆ ಹೊತ್ತು ಯಾವ ಕಡೆಯಿಂದ ಈ ಕೂಗು ಬರ್ತಾ ಇದೆ ಅಂತ ಸೂಫಿ ಹುಡುಕಾಡಿದಾಗ ಒಂದು ಅಗಲ ಕಿರಿದಾದಂತ ಬಾವಿ ಒಳಗಡೆಯಿಂದ ಈ ಕೂಗು ಕೇಳಿಸ್ತದೆ. ಸೂಫಿ ಹೋಗಿ ‘ಯಾರಪ್ಪಾ ನೀನು ಎಲ್ಲಿದ್ದೀಯ ಕಾಣಿಸ್ತಾ ಇಲ್ಲ’ ಅಂತ ಕೇಳಿದಾಗ ಬಾವಿ ಒಳಗಿಂದ ‘ಅಯ್ಯಾ ನಾನೊಬ್ಬ ಕನ್ನಡ ಪಂಡಿತ, ಕತ್ತಲೆಯಲ್ಲಿ ಬರುವಾಗ ದಾರಿ ಕಾಣಿಸದೆ ಈ ಬಾವಿಯಲ್ಲಿ ಬಿದ್ದು ಬಿಟ್ಟಿದ್ದೀನಿ ದಯವಿಟ್ಟು ನನ್ನನ್ನು ಮೇಲೆ ಎತ್ತಿ ಕಾಪಾಡು’ ಅಂತ ಬಾವಿ ಒಳಗಿದ್ದ ಕನ್ನಡ ಪಂಡಿತ ಕೂಗಿ ಹೇಳ್ತಾನೆ. ಆಗ ಈ ಸೂಫಿ ಹೇಳ್ತಾನೆ. ‘ಸರಿಯಪ್ಪ ಒಂದು ಅಗ್ಗ ಮತ್ತು ಹೇಣಿ ಇದ್ರೆ ತಗೊಂಡು ಬರ್ತೇನೆ’ ಅಂತಾನೆ. ಆಗ ಕನ್ನಡ ಪಂಡಿತ ‘ಅಯ್ಯಾ ಮಹಾಶಯ, ಅದು ಹೇಣಿ ಅಲ್ಲ ಏಣಿ; ಅಗ್ಗ ಅಲ್ಲ ಹಗ್ಗ ಅದು. ಸರಿಯಾಗಿ ಕನ್ನಡ ಮಾತಾಡೋದನ್ನ ಕಲ್ತಬೇಕು ನೀನು ಅಂತ ಕೂಗಿ ಹೇಳ್ತಾನೆ ಒಳಗಿನಿಂದ. ಆಗ ಸೂಫಿ ‘ಸರಿಯಪ್ಪ, ನಾನು ಕನ್ನಡ ಭಾಷೆಯನ್ನ ಮಾತಾಡೋದನ್ನ ಸರಿಯಾಗಿ ಕಲಿತ್ಕೊಂಡು ಆಮೇಲೆ ಬರ್ತೇನೆ’ ಅಂತ ಮುಂದಕ್ಕೆ ಹೋಗ್ತಾನೆ. ದಲಿತರು ನನ್ನ ಪ್ರಕಾರ ಮಾಡಬಹುದಾದದ್ದು ಇದು. ಅಷ್ಟೇ.

ನಮಸ್ಕಾರ.