ನನ್ನ ಮಾತುಗಳು ಇಲ್ಲಿ ಪ್ರಮೇಯ ರೂಪದಲ್ಲಿ ಇರುತ್ತವೆಯೇ ಹೊರತು ನಿರ್ಣಯ ರೂಪದಲ್ಲಿ ಇರುವುದಿಲ್ಲ. ಹೀಗೆಂದು ಹೇಳಿ ನನ್ನ ಮಾತನ್ನು ಪ್ರಾರಂಭ ಮಾಡುತ್ತಿದ್ದೇನೆ. ಇಲ್ಲಿ ಮಂಡಿಸಲ್ಲಿರುವ ಪ್ರಮೇಯಗಳನ್ನು ಚರ್ಚಿಸಬಹುದು. ಏಕೆಂದರೆ ಅವು ಸಿಂಧುವಾದ ತರ್ಕದಿಂದ ಕೂಡಿರುತ್ತವೆ. ಇಡೀ ಸಮಾಜದಲ್ಲಿರುವ ದಲಿತರ ಸಮಾಜ ಮತ್ತು ಭಾಷೆಗಳ ಸಂಬಂಧವನ್ನು ನೋಡುವುದಕ್ಕೆ ಯಾಕೆ ಕಾಲ ಈಗ ಪಕ್ವವಾಗಿದೆ ಎನ್ನುವುದು ಕೂಡ ಬಹಳ ಮುಖ್ಯವಾದ ಸಮಸ್ಯೆ. ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಕಲ್ಗುಡಿ ಮತ್ತು ಉದ್ಘಾಟನೆ ಭಾಷಣ ಮಾಡಿದ ಡಾ. ತಿಮ್ಮಪ್ಪನವರೂ ಈ ಬಗ್ಗೆ ಮತ್ತು ಯಾಕೆ ಈ ಸಮಸ್ಯೆ ಬಂದಿದೆ ಎಂಬುದರ ಬಗ್ಗೆ ಸೂಕ್ಷ್ಮವಾಗಿ ಮತ್ತು ಸ್ಪಷ್ಟವಾದ ವಿಚಾರಗಳನ್ನು ಸಭೆ ಮುಂದೆ ಇಟ್ಟಿದ್ದಾರೆ. ಅದನ್ನು ವಿಸ್ತರಿಸಿ ಅಂತಹ ವಿಚಾರಗಳನ್ನು ನಿಮ್ಮ ಜತೆ ಹಂಚಿಕೊಳ್ಳುವುದಕ್ಕೆ ಇಷ್ಟಪಡುತ್ತಿದ್ದೇನೆ.

ಇಂಡಿಯಾದ ಸಮಾಜ, ಅಸಮಾನತೆಯ ಸಮಾಜ. ಹೀಗೆ ಹೇಳುವುದೂ ಒಂದು ಕ್ಲೀಷೆಯಾಗಿ ಬಿಟ್ಟಿದೆ. ಅಸಮಾನತೆಯನ್ನು ಕಂಡುಕೊಳ್ಳುವುದಕ್ಕೆ ಹಲವು ಗುರುತುಗಳನ್ನು ಈ ಸಮಾಜ ರೂಪಿಸಿಕೊಂಡಿದೆ. ಅವು ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕವಾದ ಮಾನದಂಡಗಳು ಇರಬಹುದು. ಯಾವ ಕಾರಣದಿಂದ ಈ ಅಸಮಾನತೆ ಉಂಟಾಗಿದೆ ಎಂಬುದು ಗಮನಿಸುವಂತಹ ಅಂಶ. ಹಣ ಇರಬಹುದು. ಜಾತಿ ಇರಬಹುದು, ಇವೆಲ್ಲವೂ ಅಸಮಾನತೆಗೆ ಕಾರಣವಿರಬಹುದು. ಇವುಗಳಲ್ಲಿ ಭಾಷೆ ಎಲ್ಲಿ ನಿಲ್ಲುತ್ತದೆ? ಭಾಷೆಯು ಒಂದು ಗುರುತಾಗಿ ಬಳಕೆಯಾಗುತ್ತಿದೆ. ಹಾಗೆ ಕನ್ನಡ ಸಮಾಜ ಬಹಳ ಹಿಂದಿನಿಂದಲೂ ರೂಪಿಸಿಕೊಂಡು ಬಂದ ಹಾಗೆ ಕಾಣಿಸುತ್ತದೆ. ೧೦ನೇ ಶತಮಾನದ ಕನ್ನಡದ ಕವಿ ಪಂಪ ‘ವಿಕ್ರಮಾರ್ಜುನ ವಿಜಯ’ದಲ್ಲಿ ದ್ರೋಣನ ಬಾಯಿಂದ ಒಂದು ಮಾತನ್ನು ಆಡಿಸುತ್ತಾನೆ ” :’ಕುಲಮಂ ನಾಲಗೆ ತುಬ್ಬುವವೊಲ್’, (ನಾಲಗೆ ಕುಲವ ಹೊರಹಾಕುವ ಹಾಗೆ) ನಾಲಗೆ ಕುಲವನ್ನು ಹೊರ ಹಾಕುತ್ತದೆ ಎನ್ನುವುದು ಸತ್ಯ. ನಮ್ಮ ಮಾತಿನಲ್ಲಿ ನಮ್ಮ ಕುಲ ಇರುತ್ತದೆ ಅಂತ ಅಲ್ಲ. ಕುಲವನ್ನು, ಜಾತಿಯನ್ನು ಗುರುತಿಸುವುದಕ್ಕೆ ಮಾತನ್ನು ಒಂದು ಸಾಧನವಾಗಿ ಬಳಸುತ್ತಿರುತ್ತೇವೆ. ಅದು ಇಂದಿಗೂ ಕೂಡ ನಿಜ. ಅಸಮಾನತೆಯನ್ನು, ಸಾಮಾಜೀಕರಣವನ್ನು ಗುರುತಿಸುವುದಕ್ಕೆ ಭಾಷೆಯನ್ನು ಒಂದು ಚಹರೆಯಾಗಿ ಇಟ್ಟುಕೊಳ್ಳಲಾಗಿದೆ. ಭಾಷೆಯೊಂದೇ ಪ್ರಮುಖವಾದ ಅಂಶವಲ್ಲ. ಆದರೆ ಎಷ್ಟೋ ಸಂದರ್ಭದಲ್ಲಿ ಈ ಗುರುತುಗಳೇ ಕಾರಣಗಳಾಗಿಬಿಡುತ್ತವೆ. ಅಸಮಾನತೆಗೆ ಯಾವುದು ಗುರುತಾಗಿರುತ್ತದೋ, ಅಸಮಾನತೆಗೆ ಅದೇ ಕಾರಣವಾಗಿ ಬಿಡುತ್ತದೆ. ಈ ವಿಪರ್ಯಾಸದಲ್ಲಿ ೨೦ನೇ ಶತಮಾನದ ದಲಿತರ ಮತ್ತು ಭಾಷೆಯ ಸಂಬಂಧ ರೂಪುಗೊಂಡಿದೆ. ಯಾವುದು ಕೇವಲ ಅಸಮಾನತೆಯ ಚಹರೆಯಾಗಿ ಇತ್ತೋ ಅದು ಅಸಮಾನತೆಗೆ ಕಾರಣವಾಗಿ ಬಿಟ್ಟಿದೆ ಎನ್ನುವುದು ನಾನು ಮಂಡಿಸುವಂತಹ ಪ್ರಮೇಯ. ಮುಂದೆ ಕೆಲವು ವಿಚಾರಗಳಾದ ಈ ಪ್ರಮೇಯವನ್ನು ಸಮರ್ಥಿಸುವುದಕ್ಕೆ ಇಷ್ಟಪಡುತ್ತೇನೆ.

ಭಾಷೆ ಮತ್ತು ದಲಿತರ ಸಂಬಂಧವನ್ನು ಸಾಮಾನ್ಯವಾಗಿ ಮೂರು ತರಹ ನೋಡಬಹುದು.

೧. ಕನ್ನಡ ಭಾಷೆಯಲ್ಲಿ ಹೇಗೆ ದಲಿತರು ಪ್ರತಿನಿಧೀಕರಣಗೊಂಡಿದ್ದಾರೆ. ಬಹುಶಃ ಈ ಅಂಶ ಎರಡು ದಿನದಲ್ಲಿ ಅಷ್ಟು ಚರ್ಚೆಗೆ ಗುರಿಯಾಗುವುದಿಲ್ಲ. ೨. ದಲಿತರು ಮತ್ತು ಭಾಷೆಯ ಸಂಬಂಧ ಯಾವ ತರಹದ್ದು? ಇದು ಮೊದಲನೆಯ ಗೋಷ್ಠಿಗಳಲ್ಲಿ ಹೆಚ್ಚು ಚರ್ಚೆಗೆ ಒಳಗಾಗುತ್ತದೆ. ೩. ದಲಿತರ ಭಾಷೆ. ದಲಿತರಿಗೆ ಅವರದ್ದೇ ಆದ ಭಾಷಾ ಬಗೆಯೊಂದಿದ್ದರೆ, ಅದರ ಬಗ್ಗೆ ನಾಳೆ ನಡೆಯುವ ಗೋಷ್ಠಿಗಳಲ್ಲಿ ಚರ್ಚೆಯಾಗುತ್ತದೆ. ಅಂದರೆ ಮೂರು ಬಗೆಯ ಸಂಬಂಧಗಳಲ್ಲಿ ಎರಡು ಬಗೆಯ ಸಂಬಂಧಗಳನ್ನು ಈ ವಿಚಾರಸಂಕಿರಣದಲ್ಲಿ ಚರ್ಚೆ ಮಾಡಲಾಗುವುದು. ಸ್ವಲ್ಪ ಎರಡನೆಯ ಅಂಶದ ಬಗ್ಗೆ ಹೆಚ್ಚು ಒತ್ತು ಕೊಟ್ಟು ವಿಚಾರ ಮಂಡಿಸುವ ಪ್ರಯತ್ನ ಮಾಡಲಾಗುವುದು. ದಲಿತರ ಭಾಷೆಯ ಬಗೆಗೆ ಕೆಲವು ಪ್ರಾಸಂಗಿಕವಾದ ಮಾತುಗಳನ್ನಾಡಬಹುದು.

ಸುಮಾರು ನಾಲ್ಕೈದು ದಶಕಗಳ ಹಿಂದೆ ಲೋಹಿಯಾ ಅವರು ಭಾರತೀಯ ಸಮಾಜದ ಬಗ್ಗೆ ವ್ಯಾಖ್ಯೆಯನ್ನು ಕೊಡುತ್ತಾ ಸಾಮಾಜಿಕ ಮೇಲ್ ಚಲನೆಗೆ ಬೇಕಾಗುವ ಮೂರು ಅಂಶಗಳನ್ನು ಕುರಿತು ಮಾತನಾಡಿದ್ದಾರೆ. ಒಂದು; ಮೇಲ್ಜಾತಿ, ಎರಡು; ಸಂಪತ್ತು ಮತ್ತು ಮೂರು; ಇಂಗ್ಲಿಶ್ ಭಾಷೆ. ಈ ಮೂರು ಇದ್ದರೆ ಈ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗಬಹುದು ಎಂದಿದ್ದಾರೆ. ೫೦ ವರ್ಷ ಆದ ಮೇಲೂ ಕೂಡ ಈ ಮಾತನ್ನು ಹಾಗೆ ರಿಪೀಟ್ ಮಾಡುತ್ತಾ ಇದ್ದೇವೆ. ಆದರೆ ವಾಸ್ತವವಾಗಿ ಕಳೆದ ೪೦-೫೦ ವರ್ಷಗಳಲ್ಲಿ ಈ ಮೂರು ಅಂಶಗಳಲ್ಲಿ ಯಾವ ಅಂಶ, ಯಾವ ಅಂಶದ ಜತೆಗೆ ಬೆರೆತು, ಯಾವ ತರಹದ ಚಲನೆ ಉಂಟಾಗಿದೆ ಎನ್ನುವುದನ್ನು ಕುರಿತು ನಾವಿನ್ನು ಚರ್ಚೆ ಮಾಡಿಲ್ಲ. ಈ ಮೂರರಲ್ಲಿ ಯಾವುದಾದರೂ ಎರಡು ಇದ್ದು, ಇನ್ನು ಯಾವುದಾದರೂ ಒಂದು ಇಲ್ಲದಿದ್ದರೆ ಅಥವಾ ಎರಡು ಇಲ್ಲದೆ ಇದ್ದರೆ ಏನಾಗುತ್ತದೆ, ಯಾವ ಯಾವ ರೀತಿ ಚಲನೆ ಆಗುತ್ತದೆ ಎಂಬುದನ್ನು ಕೂಲಂಕಷವಾಗಿ ಅಧ್ಯಯನ ಮಾಡಿದಂತಿಲ್ಲ. ಇಂಗ್ಲಿಶ್ ಮತ್ತು ದೇಶೀಯ ಭಾಷೆಗಳ ನಡುವೆ ಹಿಂದಿ ಭಾಷೆ ಬಂದು ಸೇರಿದರೆ ಏನಾಗಬಹುದು? ದೇಶೀಯ ಭಾಷೆಯಲ್ಲಿರುವ ಪ್ರಭೇದಗಳ ನಡುವೆ ಸಂಬಂಧ ಯಾವ ರೀತಿ ರೂಪುಗೊಳ್ಳುತ್ತದೆ? ಏಕೆಂದರೆ ಜಾತಿ ಎನ್ನುವುದು ಸ್ಥಿರ. ಅದನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಕ್ಕೆ ಆಗುವುದಿಲ್ಲ. ಸಂಪತ್ತು ಅಥವಾ ಹಣದಲ್ಲಿ ಚಲನೆ ಸಾಧ್ಯ. ಭಾಷೆ ಎಂದರೇನು? ಭಾಷೆಯನ್ನು ಸಂಪತ್ತು ಮತ್ತು ಜಾತಿಗಳ ಸಂಬಂಧದಲ್ಲಿ ಹೇಗೆ ನೋಡಬೇಕು? ಇಲ್ಲಿ ಪಲ್ಲಟಗಳು ಸಾಧ್ಯವಿದೆಯೇ? ಆಯ್ಕೆಗಳು ಸಾಧ್ಯವಿದೆಯೇ? ಆಯ್ಕೆ ಇದ್ದರೆ ಅದು ಸಾಮಾಜಿಕವಾದದ್ದೇ ಅಥವಾ ವೈಯಕ್ತಿಕವಾದದ್ದೇ? ವೈಯಕ್ತಿಕವಾಗಿದ್ದಾಗ ವ್ಯಕ್ತಿಗತವಾದ ಸವಲತ್ತುಗಳೇನು? ಸಾಮಾಜಿಕ ಆಯ್ಕೆ ಆಗಿದ್ದಾಗ ಸಮೂಹಕ್ಕೆ ಸಿಕ್ಕ ತಕ್ಕಂತಹ ಸವಲತ್ತುಗಳೇನು? ಇವುಗಳೆಲ್ಲವನ್ನು ಕೂಡ ನಾವು ಪರಿಶೀಲಿಸಿ ನೋಡಿಯೇ ಇಲ್ಲ. ಲೋಹಿಯಾ ಕೊಟ್ಟ ಚೌಕಟ್ಟು ಅದ್ಭುತವಾಗಿದೆ. ಇಂತಹ ಚೌಕಟ್ಟು ಸ್ವಾತಂತ್ರೋತ್ತರ ಭಾರತದಲ್ಲಿ ಹೇಗೆ ಕಾರ್ಯಶೀಲವಾಗಿದೆ ಎಂಬುದನ್ನು ವಿಶ್ಲೇಷಣೆ ಮಾಡಿಲ್ಲ. ವಿಶ್ಲೇಷಣೆ ಮಾಡಿದರೆ ಬಹಳ ಕುತೂಹಲಕಾರಿಯಾದ ಸಂಗತಿಗಳು ನಮಗೆ ಗೋಚರವಾಗುತ್ತವೆ.

ದಲಿತರು ಮತ್ತು ಭಾಷೆ ಎನ್ನುವಾಗ ಚರ್ಚೆಯನ್ನು ಬೆಳೆಸುವುದಕ್ಕಾಗಿ ದಲಿತರು ಮತ್ತು ಕನ್ನಡ ಅಥವಾ ದಲಿತರ ಕನ್ನಡ ಎಂದೇ ಬಳಕೆ ಮಾಡುತ್ತೇನೆ. ದಲಿತರು ಆಡುವ ಕನ್ನಡ ಯಾವ ತರಹದ್ದು? ದಲಿತರಿಗೊಂದು ಕನ್ನಡ ಇದೆಯೇ?ದಲಿತರ ಮಾತಿನ ಕನ್ನಡವನ್ನು ಅವರ ಚಹರೆಯ ಕನ್ನಡ ಭಾಷೆಯಾಗಿ ಪರಿಗಣಿಸಲಾಗಿದೆ. ದಲಿತ, ಆದ್ದರಿಂದ ಅವರು ಆ ರೀತಿ ಕನ್ನಡವನ್ನು ಮಾತನಾಡುತ್ತಾ ಇದ್ದಾರೆ ಎಂದು ಗುರುತಿಸಿಕೊಳ್ಳುತ್ತಿದ್ದೇವೆ. ಸ್ವಾತಂತ್ಯ್ರೋತ್ತರ ಕಾಲದಲ್ಲಿ ದಲಿತರು ತಾವು ಆಡುವ ಕನ್ನಡವನ್ನು ಸಂಪೂರ್ಣವಾಗಿ ಕಳೆದುಕೊಳ್ಳಬೇಕೆಂದು ಒತ್ತಾಯ ಇತ್ತು. ಅಂದರೆ ಕನ್ನಡ ಭಾಷೆಯಲ್ಲಿದ್ದ ಶಿಷ್ಟ ಅಥವಾ ಪ್ರಮಾಣ ಮಾದರಿಗೆ ಹೊಂದಿಕೊಳ್ಳಬೇಕೆಂಬ ಒತ್ತಾಯ ಬಲವಾಗಿತ್ತು. ಹೀಗೆ ಹೆದ್ದಾರಿಯನ್ನು ಸೇರಬೇಕು ಎಂದರೆ ನೀವು ಸಂಪೂರ್ಣ ನಿಮ್ಮ ಭಾಷೆಯ ಸ್ವಾತಂತ್ರ್ಯ ಬಿಡಬೇಕು. ಹೆಚ್ಚು ಸಂದರ್ಭದಲ್ಲಿ ಒಬ್ಬ ವ್ಯಕ್ತಿಯ ಮುಂಚಲನೆಯನ್ನು ಹೇಗೆ ಗುರುತಿಸುತ್ತಿದ್ದೇವೆ ಎಂದರೆ ಅವರು ಮಾತನಾಡುತ್ತಾ ಇದ್ದರೆ ಆ ವ್ಯಕ್ತಿ ತಮ್ಮ ಸಾಮಾಜಿಕ ಹಿನ್ನೆಲೆ ಸೂಚಿಸುವ ಭಾಷೆಯನ್ನು ಬಿಟ್ಟುಕೊಟ್ಟಿದ್ದನ್ನು ಗುರುತಿಸುವ ಮೂಲಕ. ಈ ವಿಚಾರ, ಕರ್ನಾಟಕದಲ್ಲಿರುವ ಅಲ್ಪಸಂಖ್ಯಾತರಿಗೂ ಅನ್ವಯಿಸುತ್ತದೆ. ಒಬ್ಬ ಮುಸ್ಲಿಂ ಕನ್ನಡ ಮಾತನಾಡುತ್ತಾ ಇದ್ದರೆ ಆತ ಮುಸ್ಲಿಂ/ಸಾಬಿ ಅಂತ ಗೊತ್ತಾಗುವುದೇ ಇಲ್ಲ. ಅಷ್ಟು ಚೆನ್ನಾಗಿ ಕನ್ನಡ ಮಾಡನಾಡ್ತಾರೆ ಎಂದು ಬಿಡುತ್ತೇವೆ. ಅಂದರೆ ತನ್ನ ಉರ್ದು ಭಾಷೆಯ ನೆಲೆಯಿಂದ ರೂಪುಗೊಂಡ ಕನ್ನಡವನ್ನು ಕಳೆದುಕೊಂಡು ತನ್ನ ಚಹರೆಯನ್ನು ಬಿಟ್ಟು ಕೊಡಬೇಕು. ಆಗ ಮಾತ್ರ ಮೇಯಿನ್ ಸ್ಟೀಮ್ ಒಳಗಡೆ ಇದ್ದಾರೆ ಅಥವಾ ಪರವಾಗಿದ್ದಾರೆ ಎನ್ನುತ್ತೇವೆ. ಈ ಒತ್ತಾಯ ಶೈಕ್ಷಣಿಕವಾಗಿ ಸಾಮಾಜಿಕವಾಗಿಯೂ ಹಲವು ನೆಲೆಗಳಲ್ಲಿ ದಲಿತರ ಮೇಲೆ ಇತ್ತು.

ಎರಡನೇ ಆಯ್ಕೆ ಎಂದರೆ ಕೆಲವು ಬಳಕೆಯ ವಲಯಗಳಲ್ಲಿ ನಿಮ್ಮ ಪ್ರಭೇದದ ಕನ್ನಡವನ್ನು ಉಳಿಸಿಕೊಳ್ಳಬಹುದು. ಇನ್ನು ಕೆಲವು ವಲಯಗಳಲ್ಲಿ ಪ್ರಮಾಣ ಕನ್ನಡವನ್ನು ಬಳಕೆ ಮಾಡಬೇಕು ಎಂಬ ನಿರ್ಧಾರ. ಅಂದರೆ ಪ್ರಮಾಣಕನ್ನಡದ ಹೆದ್ದಾರಿಗುಂಟ ಸಾಗುವಂತಹದು. ಸಾಮಾಜಿಕ ಪ್ರಭೇದ ಹೆದ್ದಾರಿಯಲ್ಲಿ ಸಾಗುವಂತಹದ್ದಲ್ಲ. ಆದರೆ ನಿಮ್ಮ ಕನ್ನಡವನ್ನು ನಿರ್ಬಂಧಿತ ವಲಯಗಳಲ್ಲಿ ಬಳಸಿಕೊಳ್ಳಬೇಕು. ಈ ಆಯ್ಕೆಯನ್ನು ಕೂಡ ಕೆಲವು ಕಾಲ ಕೊಟ್ಟಂತೆ ಕಾಣುತ್ತದೆ.

ಆದರೆ ಎರಡು ದಶಕಗಳಲ್ಲಿ ನಡೆದಿರುವಂತಹ ಬಹಳ ಮುಖ್ಯ ಪಲ್ಲಟವೆಂದರೆ ಚಹರೆಯನ್ನು ಉಳಿಸಿಕೊಳ್ಳುವ ಕಡೆಗೆ ಇದೆ. ಸಂಪೂರ್ಣವಾಗಿ ಕಳೆದುಕೊಳ್ಳುವ ಕಡೆಗೆ ಇಲ್ಲ. ಚಹರೆ ಸಂಪೂರ್ಣವಾಗಿ ರಕ್ಷಿಸಿಕೊಳ್ಳವಂತಹದು, ಉಳಿಸಿಕೊಳ್ಳುವಂತಹದು, ಹೇಗೆ ಉಳಿಸಿಕೊಳ್ಳಬೇಕು ಎನ್ನುವುದರ ಕಡೆಗೆ ಬಹಳ ಮುಖ್ಯವಾದ ಚಲನೆಯನ್ನು ಗಮನಿಸಿದ್ದೇವೆ. ಇದು ಭಾಷೆಗೆ ಮಾತ್ರ ಸಂಬಂಧಪಟ್ಟದ್ದು ಅಲ್ಲ. ಇಡೀ ದಲಿತ ಸಮುದಾಯದಲ್ಲಾಗುವ ಬದಲಾವಣೆಯನ್ನೇ ಈಗ ಗಮನಿಸಬಹುದು.

ಯಾವುದು ಲಜ್ಜೆಯ ವಿಷಯವಾಗಿತ್ತೋ. ಅದು ಹೆಮ್ಮೆಯ ವಿಷಯವಾಗಿದೆ. ದಲಿತ ಎನ್ನುವುದು ಲಜ್ಜೆಯ ವಿಷಯವಾಗಿತ್ತು. ಅದು ಹೆಮ್ಮೆಯ ವಿಷಯವಾಗಿ ಪರಿವರ್ತನೆ ಆಗಿದೆ. ಅದು ಅಧಿಕೃತತೆಯ ವಿಷಯವಾಗಿ ಪರಿವರ್ತನೆ ಆಗಿದೆ. ಆ ಚಹರೆಯನ್ನು ಕಾಯ್ದುಕೊಳ್ಳುವ, ಉಳಿಸಿಕೊಳ್ಳುವ, ರಕ್ಷಿಸಿಕೊಳ್ಳುವ ಕಡೆಗೆ ಬದಲಾವಣೆ ಆಗುತ್ತಿದೆ. ಈ ಮೂರು ಆಯ್ಕೆಗಳನ್ನು ಕಳೆದ ೬೦-೭೦ರ ದಶಕದಿಂದ ಜನಸಾಮಾನ್ಯರ ಮುಂದೆ ಇಟ್ಟಿದ್ದೇವೆ. ಈ ಕಾಯ್ದುಕೊಳ್ಳುವುದರ ಬಗೆಗೆ, ಮರುಸ್ಥಾಪಿಸುವುದರ ಬಗೆಗೆ, ನಾನು ಹೆಚ್ಚು ವಿವರಣೆಯನ್ನು ಕೊಡುತ್ತೇನೆ. ಉಳಿದೆರಡರ ಬಗ್ಗೆ ಮುಂದೇನಾಗುತ್ತದೆ ಎಂದು ಕಾಯ್ದು ನೋಡೋಣ. ಈಗ ಕನ್ನಡದ ಸಮಸ್ಯೆಯನ್ನು ಜಾಗತಿಕ ನೆಲೆಯ ಮುಖಾಂತರ ನೋಡೋಣ. ಇಂಥದೇ ಪ್ರಸಂಗ ಬೇರೆ ಬೇರೆ ಸಂದರ್ಭಗಳಲ್ಲಿ ಯಾವ ಬಗೆಯ ಪ್ರತಿಕ್ರಿಯೆ ಪಡೆದಿದೆ ಎಂಬುದನ್ನು ನೋಡಬಹುದು. ಒಂದೆರಡು ನಿದರ್ಶನಗಳನ್ನು ನಿಮ್ಮ ಮುಂದೆ ಇಡುವುದಕ್ಕೆ ಪ್ರಯತ್ನ ಪಡುತ್ತೇನೆ.

ಒಂದು: ಇಂಗ್ಲಿಶ್‌ನ ಒಂದು ಪ್ರಭೇದವನ್ನು ಮಾತನಾಡುತ್ತಾ ಇದ್ದ ಕಪ್ಪು ಜನರ ಬಗೆಗೆ ಒಂದು ಮಾಹಿತಿಯನ್ನು ಕೊಡುವುದಕ್ಕೆ ಇಷ್ಟಪಡುತ್ತೇನೆ. ಕಪ್ಪು ಜನರ ಮಕ್ಕಳು ಮಾತಾಡುತ್ತಿದ್ದ ಪ್ರಭೇದವನ್ನು ಬ್ಲಾಕ್ ವೆರ್ಯಿಟಿ ಆಫ್ ಇಂಗ್ಲಿಶ್ ಅಂತ ಕರೆಯುತ್ತಿದ್ದರು. ಆದರೆ ಅವರ ಜತೆಯಲ್ಲಿ ಕುಳಿತುಕೊಂಡು ಓದುತ್ತಿದ್ದ ಶ್ವೇತ ವರ್ಣೀಯ ಮಕ್ಕಳು ಬಳಸುತ್ತಿದ್ದ ಪ್ರಭೇದ ಬೇರೆಯಾಗಿತ್ತು. ಕಪ್ಪು ಮಕ್ಕಳಿಗೆ ಶಾಲೆಯಲ್ಲಿ ಕಲಿಸುತ್ತಿದ್ದ ಭಾಷೆ ಮತ್ತು ಶೈಕ್ಷಣಿಕ ವಲಯದಲ್ಲಿ ನೆಲೆಗೊಳಿಸುತ್ತಿದ್ದ ಭಾಷೆ ಬೇರೆಯಾಯಿತು ಆ ಭಾಷಾ ಪ್ರಭೇದದ ಬಳಕೆ ಮತ್ತು ಸಾಧ್ಯತೆ ಬಿಳಿ ಮಕ್ಕಳಿಗೆ ಇದ್ದಷ್ಟು ಕಪ್ಪು ಮಕ್ಕಳಿಗೆ ಇರುತ್ತಿರಲಿಲ್ಲ. ಅಂದರೆ ಅವರು ಬೇರೊಂದು ಭಾಷೆಯನ್ನು ಕಲಿಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅದನ್ನು ಕೆಲವು ಶಿಕ್ಷಣತಜ್ಞರು ಗಮನಿಸಿದರು.

ಒಂದು ವಿಚಿತ್ರವಾದ ಕೇಸು. ೧೯೭೯ರಲ್ಲಿ ಅಮೆರಿಕಾದ ರಾಜ್ಯ ಆನ್ ಹಾರ್ಬರ್ ಊರಿಲ್ಲಿ. ಅಲ್ಲಿಯ ಶಾಲೆಯ ಆಡಳಿತ ಮಂಡಳಿಯ ಮೇಲೆ ಕಪ್ಪು ಮಕ್ಕಳ ೨೫ಜನ ತಂದೆ ತಾಯಂದಿರು ಒಂದು ಕೇಸು ಹಾಕಿದರು. ನಮ್ಮ ಮಕ್ಕಳು ಶಾಲೆಗೆ ಹೋಗುವಾಗ ಮಾತನಾಡುತ್ತಿದ್ದ ಇಂಗ್ಲಿಶ್, ಶಾಲೆಯಲ್ಲಿ ಅಧ್ಯಾಪಕರು ಮತ್ತು ಇತರ ಮಕ್ಕಳು ಬಳಸುವ ಇಂಗ್ಲಿಶ್ ಬೇರೆ ಬೇರೆಯಾಗಿವೆ. ಇದರಿಂದ ನಮ್ಮ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ವಾದಿಸಿದರು. ನ್ಯಾಯಾಲಯಕ್ಕೆ ಹಲವು ಜ್ಞಾನಶಿಸ್ತುಗಳ ತಜ್ಞರನ್ನು ಕರೆಯಿಸಿದರು. (ಸಾರ್ವಜನಿಕರು, ಆಡಳಿತ ಮಂಡಳಿ, ಸಮಾಜಶಾಸ್ತ್ರಜ್ಞರು, ಶಿಕ್ಷಣತಜ್ಞರು, ಭಾಷಾ ಶಾಸ್ತ್ರಜ್ಞರು ಮುಂತಾದವರು) ಕೊನೆಯಲ್ಲಿ ಆ ಕೇಸನ್ನು ನ್ಯಾಯಾಲಯ ಒಪ್ಪಿಕೊಂಡು ಒಂದು ತೀರ್ಪನ್ನು ನೀಡಿತು. ಕಪ್ಪು ಮಕ್ಕಳು disadvantageous positionನಲ್ಲಿ ಇದ್ದಾರೆ ಎಂದು ಒಪ್ಪಿತು. ನಾನು ಈ ಪದವನ್ನು ಬಹಳ ಎಚ್ಚರಿಕೆಯಿಂದ ಬಳಕೆ ಮಾಡುತ್ತಾ ಇದ್ದೇನೆ. ಇದನ್ನು ಒಪ್ಪಿಕೊಂಡು ಶಾಲೆಯ ಆಡಳಿತ ಮಂಡಳಿಗೆ ಒಂದು ನಿರ್ದೇಶನವನ್ನು ಕೊಟ್ಟರು. ಅದು ಬಹಳ ಕುತೂಹಲಕಾರಿಯಾಗಿದೆ. ಅದೇನೆಂದರೆ ಶಾಲೆಗೆ ಬರುತ್ತಿರುವ ಈ ಕಪ್ಪು ಮಕ್ಕಳಿಗೆ ಒಂದು ವಿಶೇಷ ತರಬೇತಿಯೊಂದನ್ನು ಪ್ರಾರಂಭಿಸಿ ಬಿಳಿಯ ಮಕ್ಕಳು ಮಾತನಾಡುತ್ತಿರುವ ಇಂಗ್ಲಿಶ್‌ನ್ನು ಕಲಿಸಬೇಕು ಎಂದು. ೨೫ವರ್ಷ ನಂತರ ಅಂದರೆ ೨೦೦೪ರಲ್ಲಿ ಒಂದು ಪುರ್ನಮಿಲನ ಮಾಡಿದರು. ಅಂದರೆ ಕಪ್ಪು ಜನ ಮಕ್ಕಳ ಪರ ಹೋರಾಟ ನಡೆಸಿದವರೆಲ್ಲರೂ ಒಂದು ಕಡೆ ಸೇರಿ ಈ ೨೫ ವರ್ಷಗಳಲ್ಲಿ ಏನಾಯಿತು ಅಂತ ಚರ್ಚೆ ಮಾಡಿದರು. ೨೫ ವರ್ಷ ಹಿಂದೆ ಕೊಟ್ಟಿದ್ದಂತಹ ತೀರ್ಪಿನ ಪರಿಣಾಮವೇನಾಯಿತು ಅಂದರೆ ಬಿಳಿಯರ ಇಂಗ್ಲಿಶ್‌ಗೆ ಹತ್ತಿರವಾಗದ ಹೊರತು ಶೈಕ್ಷಣಿಕ ಉನ್ನತೀಕರಣ ಅಥವಾ ಸಬಲೀಕರಣ ಸಾಧ್ಯವಾಗುವುದಿಲ್ಲ. ಅಂದರೆ ನಮ್ಮ ಭಾಷೆ ಚಹರೆ ಕಳೆದುಕೊಳ್ಳುವ ಹೊರತು ನಿಮ್ಮ ಉನ್ನತಿ ಸಾಧ್ಯವಿಲ್ಲ ಎಂದಾಯ್ತು. ನ್ಯಾಯಾಲಯ ಕೊಟ್ಟ ತೀರ್ಪಿನ ನಿರ್ಣಯ ಮಾತ್ರ ವಿಚಿತ್ರವಾಗಿತ್ತು. ಅದರ ಪರಿಣಾಮದಿಂದ ಬೇಕಾದಷ್ಟು ಬದಲಾವಣೆ ಆದವು. ಯುರೋಪಿನಲ್ಲಿ ಕೂಡ ಬದಲಾವಣೆ ಆದವು. ಅದೇನೆಂದರೆ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಅವರ ಉಪಭಾಷೆಯಲ್ಲೆ ಶಿಕ್ಷಣ ಕೊಡಬೇಕು ಎಂದರು. ಇದಕ್ಕೆ ತೀವ್ರವಾದ ವಿರೋಧ ಪಾಲಕರಿಂದ ಬಂತು.

ಮೈಸೂರಿನಲ್ಲಿರುವ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯಲ್ಲಿ ಭಾರತ ಸರ್ಕಾರದ ಆದೇಶದ ಮೇರೆಗೆ ಇಂತಹ ಒಂದು ಪ್ರಯೋಗ ಮಾಡಲಾಯಿತು. ಅಂದರೆ ಕನ್ನಡವನ್ನು ಕಲಿಸುವ ಸೋಲಿಗ ಮತ್ತು ಜೇನು ಕುರುಬ ಮಕ್ಕಳಿಗೆ ಅವರಾಡುವ ಉಪಭಾಷೆಯಲ್ಲಿ ಪಠ್ಯಪುಸ್ತಕ ತಯಾರಿಸಿ ಕಲಿಸಲಾಯಿತು. ಅದಕ್ಕೆ ತೀವ್ರವಾದ ವಿರೋಧ ಬಂದುದು ಆ ಸಮುದಾಯದಿಂದಲೇ. ಅವರ ಮೇಲ್ವರ್ಗದ ಅಂದರೆ ಸಾಮಾಜಿಕವಾಗಿ ಮನ್ನಣೆ ಪಡೆದಿರುವಂತಹ ಭಾಷೆಯಲ್ಲೆ ಕಲಿಸದೆ ನಮ್ಮ ಮಕ್ಕಳು ಮನೆಯಲ್ಲಿ ಮಾತನಾಡುವ ಕನ್ನಡದಲ್ಲಿ ಬೋಧಿಸಿದರೆ ನಮ್ಮ ಮಕ್ಕಳು ಶಾಲೆಗೆ ಏಕೆ ಬರಬೇಕು ಎಂಬ ಪ್ರಶ್ನೆ ಹಾಕಿದರು. ದಕ್ಷಿಣ ಆಫ್ರಿಕಾದಲ್ಲೂ ಇದೇ ರೀತಿ ಆಯ್ತು. ಆಫ್ರಿಕಾದಲ್ಲಿ ಇಂಗ್ಲಿಶ್ ಬದಲು ಆಫ್ರಿಕಾನ್‌ನಲ್ಲಿ ಶಿಕ್ಷಣ ಕೊಡಬೇಕು ಎಂದಾಗ ಆಫ್ರಿಕದ ಜತೆ ಆಫ್ರಿಕಾನ್ ಎನ್ನುವ ಭಾಷೆಯನ್ನೇ ವಿರೋಧಿಸಿದರು. ನಮಗೆ ಇಂಗ್ಲಿಶ್‌ನಲ್ಲಿ ಶಿಕ್ಷಣ ನೀಡಬೇಕು ಎಂಬ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ತೀರಾ ಈಚೆಗೆ ಒಂದು ಸಂಶೋಧನೆಯಲ್ಲಿ ಒಂದು ಸಂಗತಿ ಬಂದಿದೆ. ಅಂದರೆ ಶೈಕ್ಷಣಿಕವಾಗಿ ಮಕ್ಕಳು ಹಿಂದುಳಿದಿರುವುದಕ್ಕೆ ಕಾರಣ, ಎರಡು ಉಪಭಾಷೆಗಳ ನಡುವೆ ಇರುವ ವ್ಯತ್ಯಾಸವಲ್ಲ; ಅದರ ಬದಲು ಒಂದು ಉಪಭಾಷೆಯನ್ನು ಇನ್ನೊಂದು ಉಪಭಾಷೆಯ ಎದುರಿಗೆ ತರತಮಭಾವದಿಂದ ನೋಡುವಂತಹದು. ಉಪಭಾಷೆಯ ನಿರಾಕರಣೆ ಸಮಸ್ಯೆಯೇ ಹೊರತು ಅವುಗಳ ನಡುವೆ ಇರುವ ವ್ಯತ್ಯಾಸವಲ್ಲ, ಅಂದರೆ ದಲಿತರು ಮಾತನಾಡುವ ಕನ್ನಡ, ಮೇಲ್ಜಾತಿಯವರು ಮಾತನಾಡುವ ಕನ್ನಡ ಅಥವಾ ಶಿಷ್ಟ ಕನ್ನಡದ ನಡುವೆ ಇರುವ ವ್ಯತ್ಯಾಸ ಶೈಕ್ಷಣಿಕವಾಗಿ ಬಹಳ ಮುಖ್ಯವಾಗಿಲ್ಲ. ಆದರೆ ದಲಿತರು ತಮ್ಮ ಕನ್ನಡವನ್ನು ಕಳೆದುಕೊಳ್ಳಬೇಕು. ಅದನ್ನು ಬಿಟ್ಟು ಕೊಡಬೇಕು. ಅದು ನಾಚಿಕೆಯ ಸಂಗತಿ ಎನ್ನುವ ರೀತಿಯಲ್ಲಿ ಅದನ್ನು ಬಹಿಷ್ಕರಿಸತಕ್ಕದ್ದು ; ಅದನ್ನು ಕೀಳು ಎಂದು ಸ್ಥಿರೀಕರಣ ಮಾಡುವುದು; ಅದನ್ನು ಚೌಕಟ್ಟು ಹೊರಗಡೆ ಇಡುವಂತಹದ್ದು ; ಇದು ಶೈಕ್ಷಣಿಕವಾಗಿ ಹಿಂದುಳಿದಿರುವುದಕ್ಕೆ ಮುಖ್ಯವಾದ ಕಾರಣವಾಗಿರುತ್ತದೆ. ಅಂದರೆ ಬೆರಳು ಮಾಡಿ ಇದು ಈ ಕನ್ನಡ ಅಂದರೆ, ಶ, ಷ ಮತ್ತು ಸಗಳ ನಡುವೆ ಭೇದವಿರಬೇಕು. ‘ಶ’ ಉಚ್ಛಾರ ಮಾಡುವ ಕಡೆ ‘ಸ’ ಉಚ್ಛರಿಸಬಾರದು. ‘ಷ’ ಎಂದು ಉಚ್ಛರಿಸಲೆಬೇಕೆಂದು ದಲಿತರ ಮೇಲೆ ಒತ್ತಡ ಹೇರಲಾಗುತ್ತಿದೆ. ‘ಷ’ ಹೇಳುವ ಕಡೆಗಳೆಲ್ಲ ‘ಸ’ ಹೇಳಿದರೆ, ಅದು ಅಶುದ್ಧವಾದ ಅವಮಾನದ (ಗ್ರಾಮ್ಯ, ತಪ್ಪು ಕನ್ನಡ) ಸಂಗತಿ ಎಂದು ತಿಳಿಯಲಾಗಿದೆ. ‘ವಿಷ’ ಎಂದು ಹೇಳುವುದನ್ನು ‘ಇಸ’ ಎಂದರೆ ಅಶುದ್ಧ ಕನ್ನಡ, ಗ್ರಾಮ, ಕನ್ನಡ. ಅದು ‘ವಿಷ’ ಎಂದೆ ಇರಬೇಕು. ‘ಇಸ’ ಎನ್ನುವುದು ಅವಮಾನದ ಸಂಗತಿಯಾಗಿದೆ. ಇದು ಕನ್ನಡದಲ್ಲಿ ನಡೆದರೂ ಜಗತ್ತಿನಾದ್ಯಂತ ಈ ಮಾದರಿ ಚರ್ಚೆಗಳು ನಡೆಯುತ್ತಿವೆ. ನಾನು ಕನ್ನಡ ನಿದರ್ಶನಗಳ ಮೂಲಕ ನಿಮ್ಮ ಗಮನಕ್ಕೆ ತರುತ್ತಾ ಇದ್ದೇನೆ. ಇದೇ ರೀತಿ ಮತ್ತೊಂದು ಚರ್ಚೆಯನ್ನು ಮಂಡಿಸುತ್ತೇನೆ. ಇದು ಕೂಡ ಕಳೆದ ಮೂವತ್ತು ನಾಲ್ವತ್ತು ವರ್ಷಗಳಲ್ಲಿ ನಡೆದಿರುವಂತಹದು.

ಬ್ರಿಟನಿನ ಒಬ್ಬ ಸಮಾಜ ಶಿಕ್ಷಣ ತಜ್ಞ ಮತ್ತು ಭಾಷಾ ತಜ್ಞ ಮಂಡಿಸಿದ ಕೆಲವು ವಿಚಾರಗಳು ಹೀಗಿವೆ. ಆತ ಬೆಸಿಲ್ ಬರ್ನ್‌‌ಸ್ಟೈನ್. ಅವನು ೧೯೭೧ ರಿಂದ ೧೯೯೦ರವರೆಗೆ ಹಲವು ಅಧ್ಯಯನಗಳನ್ನು ನಡೆಸಿದ್ದಾನೆ. ೨೦೦೦ದಲ್ಲಿ ತೀರಿಕೊಂಡ ಆತ. ೧೯೨೪ರಲ್ಲಿ ಹುಟ್ಟಿದ ಅವನು ೧೯೯೫ರಲ್ಲಿ ತನ್ನ ಸಂಶೋಧನಾ ಪ್ರಮೇಯಗಳನ್ನು ೫ ಸಂಪುಟಗಳಲ್ಲಿ ಮಂಡಿಸಿದ್ದಾನೆ. Code-Class and Control ಹೆಸರಿನಲ್ಲಿ ಪ್ರಕಟವಾಗಿವೆ. ಆತ ಇದೆ ಸಮಸ್ಯೆಯನ್ನು ತೆಗೆದುಕೊಳ್ಳುತ್ತಾನೆ. ಅಂದರೆ ಬ್ರಿಟನ್ ಶಾಲೆಯಲ್ಲಿ ಮಕ್ಕಳು ಕಲಿಯುವ ಭಾಷಾ ಸಮಸ್ಯೆಯನ್ನು ತೆಗೆದುಕೊಂಡು ಅಧ್ಯಯನ ಆರಂಭಿಸುತ್ತಾನೆ. ಏಕೆ ಶಿಕ್ಷಣದಲ್ಲಿ ಕೆಳವರ್ಗದ ಮಕ್ಕಳು ಉನ್ನತ ವರ್ಗದ ಮಕ್ಕಳಿಗಿಂತ ಹಿಂದುಳಿದಿರುತ್ತಾರೆ? ಅವರಿಬ್ಬರು ಮಾತನಾಡುವ ಭಾಷಾ ಪ್ರಭೇದ ಬೇರೆ ಬೇರೆ. ಅಧ್ಯಾಪಕರು ಬಳಸುವ, ಮಾತನಾಡುವ, ಓದಬೇಕೆಂದು ಒತ್ತಾಯ ಪಡಿಸುವ ಭಾಷೆ ಮತ್ತು ಮಕ್ಕಳ ಸಾಮಾಜಿಕ ಪರಿಸರದ ಭಾಷೆ ಬೇರೆ ಬೇರೆ. ಅವು ಬೇರೆ ಬೇರೆ Codeಗಳು, ಬರ್ನ್‌‌ಸ್ಟೈನ್ ಈ ಮಾತನ್ನು ಬಳಸುತ್ತಾನೆ. ವಿಶಿಷ್ಟವಾದ ಪರಿಭಾಷೆಗಳನ್ನು ಬಳಸುತ್ತಾರೆ. ೧. Restricted Code. ೨. Elaborate Code ಅಂತ ಬಳಸುತ್ತಾನೆ. ಮೊದಲನೆಯದು ಸಂವೃತ ವ್ಯವಸ್ಥೆ ಇನ್ನೊಂದು ವಿವೃತ ವ್ಯವಸ್ಥೆ ಎಂದು ನಾನು ಕರೆಯುವುದಕ್ಕೆ ಇಷ್ಟಪಡುತ್ತೇನೆ.

ಸಂವೃತ ನುಡಿ ಯಾವಾಗಲೂ ಒಂದು ಸಮುದಾಯದ ಒಳಗಡೆ ಜೀರ್ಣಿಸತಕ್ಕ ಆ ಅನುಭವಗಳಿಗೆ ತೆರೆದುಕೊಂಡಿರುವ ಮತ್ತು ಯಾರ ಜತೆಯಲ್ಲಿ ಮಾತನಾಡುತ್ತಾರೋ ಅವರನ್ನು ಒಳಗೊಂಡು ಮಾತನಾಡುವ ಭಾಷೆ. ಆದರೆ Elaorated Code ಎನ್ನುವುದು ಯಾರ ಜತೆಯಲ್ಲಿ ಮಾತನಾಡುವ ವ್ಯಕ್ತಿ ಮತ್ತು ತಾನು ಬೇರೆ ಬೇರೆ ತನಗೆ ಗೊತ್ತಿರುವ ವಿಚಾರಗಳನ್ನು ಅಂದರೆ ತನಗೆ ಇರುವ ಅನುಭವಗಳನ್ನು ಇನ್ನೊಬ್ಬರಿಗೆ ರವಾನಿಸುತ್ತಾ ಇದ್ದೇನೆ ಎಂಬ ದೃಷ್ಟಿಕೋನದಿಂದ ಮಾತನಾಡುತ್ತಿರುವ ಭಾಷೆ. Elaorate Code, Standard Languageನಲ್ಲಿ ಇರುತ್ತದೆ. ಕೆಳಸಾಮಾಜಿಕ ವರ್ಗದ ಮಕ್ಕಳು ಬಳಸುವ ಭಾಷೆಯನ್ನು Restricted Code ಎಂದು ಕರೆಯುತ್ತಾರೆ. ಈ Restricted Codeನಿಂದ Elaborate Codeಗೆ ಪಲ್ಲಟವಾಗಬೇಕಾಗಿ ಬಂದಾಗ ಆ ಮಕ್ಕಳು ತೊಂದರೆಯನ್ನು ಅನುಭವಿಸುತ್ತಾರೆ. ಈಗಾಗಲೇ Elaborate Codeವ್ಯವಹರಿಸುತ್ತಿರುವ ಉತ್ತಮ ಜಾತಿಯ ಮಕ್ಕಳು. ಸುಲಭವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿಯನ್ನು ಸಾಧಿಸುತ್ತಾರೆ Elaborate Codeನಿಂದ ದೂರವಿರುವ ಕೆಳವರ್ಗದ ಮಕ್ಕಳು ಶೈಕ್ಷಣಿಕವಾಗಿ ಹಿಂದುಳಿಯುತ್ತಾರೆ. ಬಹಳ ತೀವ್ರವಾದ ವಿವಾದ ಉಂಟಾಯಿತು. ಸಮಾಜ ಅಮೆರಿಕಾದ ಸಮಾಜಶಾಸ್ತ್ರಜ್ಞ ವಿಲಿಯಂ ಲೆಬೊವ್ ಇದಕ್ಕೆ ತೀವ್ರವಾದ ವಿರೋಧವನ್ನು ವ್ಯಕ್ತಪಡಿಸಿದ. ಕಪ್ಪು ಜನರ ಮಕ್ಕಳು ಬಳಸುವ ಇಂಗ್ಲಿಶ್ ಸಮರ್ಥವಾದ ಇಂಗ್ಲಿಶ್ ಎಂಬುದನ್ನು ಸಮರ್ಥಿಸುತ್ತಾನೆ. ಬರ್ನ್‌‌ಸ್ಟೈನ್ Elaborate Code ಮತ್ತು Restriated Codeಗಳ ಬಗ್ಗೆ ಆತ ಮಾತನಾಡುತ್ತಿದ್ದಾಗ ಅವುಗಳ ಸಾಮರ್ಥ್ಯದ ಬಗ್ಗೆ ಆತ ಮಾತನಾಡುತ್ತಿರಲಿಲ್ಲ. ಅಂದರೆ Restricated Code ಅಸಮರ್ಥ. ಅದರಲ್ಲಿ ಬಹಳ ಸೂಕ್ಷ್ಮವಾದ ವಿಚಾರಗಳನ್ನು ಹೇಳುವುದಕ್ಕೆ ಸಾಧ್ಯವಿಲ್ಲ ಎಂದಲ್ಲ. Elaborated Code ಎಂದರೆ ಸಮರ್ಥವಾದ ವಿಚಾರಗಳನ್ನು ಹೇಳಬಹುದಾದ ಬಗೆ ಎಂದೇನಲ್ಲ. ಅವುಗಳ ನಡುವೆ ಇರುವ ತಾರತಮ್ಯದ ಸ್ವರೂಪವನ್ನು ನಮ್ಮ ಮುಂದೆ ಇಡುತ್ತಾನೆ.

ದಲಿತರು ಮಾತನಾಡುತ್ತಿರುವ ಕನ್ನಡವನ್ನು ಮತ್ತು ಅವರು ಕಲಿಯಬೇಕಾಗಿ ಬಂದಿರುವ ಕನ್ನಡಗಳ ನಡುವೆ ವ್ಯತ್ಯಾಸವನ್ನು ಈ ರೀತಿ ಬೇರೆ ಬೇರೆ ನೆಲೆಗಳಲ್ಲಿ ನೋಡುವ ಮುಖಾಂತರ ಆಗ ಅವರ ಶೈಕ್ಷಣಿಕ ಅಭಿವೃದ್ಧಿಗೆ ಇವು ಯಾವುದಾದರೂ ರೀತಿಯಲ್ಲಿ ಅಡ್ಡಿಯುಂಟು ಮಾಡಿವೆಯೇ ಎನ್ನುವುದನ್ನು ನಾವು ಇನ್ನೂ ಕೂಡ ಪರಿಶೀಲಿಸುವುದಕ್ಕೆ ಹೋಗಿಲ್ಲ. ಈ ಪರಿಕಲ್ಪನೆಗಳ ಬಗೆಗೆ ಜಗತ್ತಿನಾದ್ಯಂತ ಇವತ್ತು ಕೂಡ ಚರ್ಚೆಯಾಗುತ್ತಾ ಇದೆ. ಆಫ್ರಿಕಾದಲ್ಲಿ ನಡೆದ ಸಂಶೋಧನೆಗಳಲ್ಲಿ ಬೆಸಿಲ್ ಬರ್ನ್‌‌ಸ್ಟೈನ್ ಪರಿಕಲ್ಪನೆಗಳನ್ನು ಮರಳಿ ಪರಿಶೀಲನೆ ಮಾಡಲಾಗುತ್ತಿದೆ. ಈ ಎರಡೂ ಉದಾಹರಣೆಗಳನ್ನು ನೋಡುವುದರ ಮುಖಾಂತರ ಕನ್ನಡ ಮತ್ತು ದಲಿತರ ಸಂಬಂಧಗಳನ್ನು ಮರುಪರಿಶೀಲಿಸಬೇಕಾದ ಅವಕಾಶಗಳು ಇವೆ. ದಲಿತರಿಗೆ ತಾವು ಮಾತನಾಡುತ್ತಿರುವ ಕನ್ನಡವನ್ನು ಶಾಲೆಗಳಲ್ಲಿ ಬಂದಾಗ ಅಥವಾ ಸಾಮಾಜಿಕ ಸಂವಹನದಲ್ಲಿ ಅದನ್ನು ಯಾವ ರೀತಿ ಬಳಸಬೇಕು, ಉಳಿಸಿಕೊಂಡು ಬಳಸಬೇಕು ಅದನ್ನು ಕಳೆದುಕೊಳ್ಳಬೇಕೇ, ಉಳಿಸಿಕೊಳ್ಳಬೇಕೇ, ಕಾಯ್ದುಕೊ‌ಳ್ಳಬೇಕೇ ಇತ್ಯಾದಿಗಳೆಲ್ಲ ಗೊಂದಲವಾಗಿದೆ. ಸಾಮಾಜಿಕ ಒತ್ತಡಗಳು ಬೇರೆ ರೀತಿ ಇವೆ. ಈ ಸಂದರ್ಭದಲ್ಲಿ ಏಕಲವ್ಯನ ಕಥೆಯನ್ನು ಮರಳಿ ನೆನಪು ಮಾಡಿಕೊಳ್ಳಬೇಕಾಗಿದೆ. ಅಂದರೆ ನಮಗೆ ತಿಳಿದಿರುವಂತೆ ದ್ರೋಣ ಹೆಬ್ಬೆರಳನ್ನು ಕತ್ತರಿಸಿಕೊಳ್ಳುವಂತೆ ಮಾಡಿದ. ಆದರೆ ಏಕಲವ್ಯ ಸಮರ್ಥ. ಅರ್ಜುನನಷ್ಟೇ ಸಮರ್ಥ. ಆದರೆ ಅರ್ಜುನನಿಗಿರುವ, ಅವಕಾಶ, ಏಕಲವ್ಯನಿಗೆ ಇಲ್ಲ. ಹೆಬ್ಬೆರಳನ್ನು ಕತ್ತರಿಸಿರುವುದು ಸಾಮರ್ಥ್ಯವನ್ನು ಕುಂದುಗೊಳಿಸುವುದು ಅಲ್ಲ. ಸಾಮರ್ಥ್ಯದ ಬಳಕೆಯನ್ನು ಅಡ್ಡಿಮಾಡುವಂತಹದು. ಸಾಮರ್ಥ್ಯವನ್ನು ಅಡ್ಡಿ ಮಾಡುವ ಸಂಗತಿಗಳು ದಲಿತರಿಗೆ ಯಾವುವು?

ಅಂದರೆ ಶೈಕ್ಷಣಿಕವಾಗಿ ಅದರ ಉನ್ನತೀಕರಣ ಆಗುತ್ತಾ ಇರಬೇಕಾದರೆ ಅವರು ಸಮರ್ಥರಾಗುತ್ತಾ ಹೋಗುತ್ತಿರುತ್ತಾರೆ. ಆದರೆ ಅವರ ಸಾಮರ್ಥ್ಯಗಳ ಬಳಕೆಗೆ ಅಡ್ಡಿಯಾಗುವ ಸಂಗತಿಗಳಲ್ಲಿ ಭಾಷೆಯೂ ಒಂದು ಆಗಿರಬಹುದು. ಅಂದರೆ ಹೆಬ್ಬೆರಳನ್ನು ಕತ್ತರಿಸಿಕೊಂಡ ಏಕಲವ್ಯನ ಕತೆಯಂತೆ. ಈ ರೀತಿ ಕೂಡ ಸಮಸ್ಯೆಯನ್ನು ನಾವು ಯೋಚನೆ ಮಾಡುವುದಕ್ಕೆ ಸಾಧ್ಯವಿದೆ. ನಾನು ಇನ್ನೊಂದು ಮಾತನ್ನು ಹೇಳಿದೆ. ಅದನ್ನು ಬೇರೊಂದು ರೀತಿಯಲ್ಲಿ ವಿಶ್ಲೇಷಣೆ ಮಾಡುವುದಕ್ಕೆ ಇಷ್ಟಪಡುತ್ತೇನೆ. ಕಳೆದುಕೊಂಡಿದ್ದನ್ನು ಮರಳಿ ಪಡೆದುಕೊಳ್ಳುವ ದಲಿತರು ಶಾಲೆಗೆ ಬಂದಾಗ ಸಾಮಾಜಿಕ ವಲಯಕ್ಕೆ ತಮ್ಮನ್ನು ತಾವು ಬಂದಾಗ, ಹೆಚ್ಚು ಚಲನಶೀಲವಾಗುವಾಗ, ತಮ್ಮ ಕನ್ನಡವನ್ನು ಕಳೆದುಕೊಳ್ಳುವಾಗ ಮಾಡಿರಲೇಬೇಕು. ಈ ಒತ್ತಡಗಳನ್ನು ಅವರು ಹೇಗೆ ಕಳೆದುಕೊಂಡರು, ಹೇಗೆ ಒತ್ತಡದಿಂದ ಹೊರಬಂದರು ಎನ್ನುವುದು ಸಹ ಬಹಳ ಕುತೂಹಲಕಾರಿ ವಿಷಯ. ಅಂದರೆ ಇದು ಕಳೆದುಕೊಂಡದ್ದನ್ನು ಮರಳಿ ಸ್ಥಾಪಿಸಿಕೊಳ್ಳುವುದು. ಎಂದರೆ ಮರಳಿ ತಾವು ಮತ್ತೆ ಆ ಕನ್ನಡವನ್ನೇ ಮಾತನಾಡುವಂತಹದು. ಅದಕ್ಕೆ ಇರುವ ಕೀಳುತನದ ಚೌಕಟ್ಟನ್ನು ಮೀರಿ ಮಾತನಾಡುವಂತಹದ್ದು. ಮೇಲಿಂದ ಮೇಲೆ ನನಗೆ ಕರ್ನಾಟಕ ಸರ್ಕಾರದ ವಿಧಾನ ಸಂಭೆಯ ಸದಸ್ಯರುಗಳು ಮಾತನಾಡುವಾಗ ಅವರು ಬಳಸುವ ಭಾಷೆಯ ಬಳಕೆಯನ್ನು ಕೇಳಿಸಿಕೊಳ್ಳುವುದು ತುಂಬಾ ಕುತೂಹಲಕಾರಿಯಾದ ಸಂಗತಿ. ಏಕೆಂದರೆ ೨೨೪ ಜನ ಅವರೆಲ್ಲರೂ ಇದ್ದರೆ ಏಕಕಾಲಕ್ಕೆ ೨೨೪ ಪ್ರಭೇದಗಳನ್ನು ಬಳಸುತ್ತಿರುತ್ತಾರೆ. ಬಹುಶಃ ಕರ್ನಾಕಟದ ಸಮಗ್ರ ಪ್ರಭೇದಗಳು ಅಥವಾ ಕನ್ನಡತ್ವದ ವಿಶಿಷ್ಟತೆ ಇದ್ದರೆ ಅದು ವಿಧಾನಸಭೆಯಲ್ಲಿ ಮಾತ್ರ. ಅಲ್ಲಿರುವವರು ತಮ್ಮ ಕನ್ನಡವನ್ನು ಬದಲಾಯಿಸಿಕೊಳ್ಳುತ್ತಾರೆ. ಅಲ್ಲಿ ಹಲವು ಸಂದರ್ಭಗಳಲ್ಲಿ ಭಾಷೆಯ ಬಗೆಗೆ ಚರ್ಚೆ ನಡೆಯುತ್ತಿರುತ್ತದೆ. ಅಂತಹ ಕಡೆಗಳಲ್ಲಿ ಭಾಷೆಯ ಚಹರೆಯನ್ನು ಕಳೆದುಕೊಳ್ಳುವುದರ ಕಡೆಗೆ ತುಂಬ ಒಲವು ಇರುತ್ತದೆ. ಅಂತಹ ಸಂದರ್ಭದಲ್ಲಿ ಅವರು ಕನ್ನಡವನ್ನು ಬಿಟ್ಟು ಬಿಡುವುದುಂಟು. ಇಂಗ್ಲಿಶ್‌ಗೆ ಹೆಚ್ಚು ಪಲ್ಲಟವಾಗುತ್ತಿರುತ್ತಾರೆ. ಏಕೆ ಆ ರೀತಿ ಪಲ್ಲಟವಾಗುತ್ತಾರೆ ಎಂದರೆ ಅವರು ತಮ್ಮ ಕನ್ನಡವನ್ನು ರಿಕ್ಲೈಮ್ ಮಾಡುವುದಕ್ಕೆ ಆಗುವುದಿಲ್ಲ. ಭೀಮಣ್ಣ ಖಂಡ್ರೆ ಅವರು ಬೀದರ್ ಕನ್ನಡದಲ್ಲಿ ಮಾತನಾಡುವುದಕ್ಕೆ ಆಗುತ್ತಿರಲಿಲ್ಲ. ಮಾತನಾಡಿದರೆ ಬೇರೆಯವರು ಗೇಲಿ ಮಾಡುವುದಕ್ಕೆ ಸಿದ್ಧ ಇರುತ್ತಿದ್ದರು, ನೀವೇನು ಮಾತನಾಡುತ್ತೀರಿ ಸ್ವಾಮಿ ನಿನಗೆ ಅರ್ಥವಾಗುವುದಿಲ್ಲ ಎನ್ನುತ್ತಿದ್ದರು. ನಫಿಸಾ ಫಜಲ್ ಮಾತನಾಡಿದರೆ ಬೇರೆಯವರು ಗೇಲಿ ಮಾಡುವುದಕ್ಕೆ ಆರಂಭ ಮಾಡುತ್ತಿದ್ದರು.

ಕನ್ನಡ ವಿವಿಧತೆಯನ್ನು ತೆಗೆದುಕೊಳ್ಳುವುದಕ್ಕೆ ಅಂದರೆ ಸ್ವೀಕರಿಸುವುದಕ್ಕೆ ಸಾಧ್ಯ ವಾಗುತ್ತಿಲ್ಲ ಅಥವಾ ಸಿದ್ಧರಿಲ್ಲ. ಕನ್ನಡ ಆವಿಷ್ಕಾರಗೊಳ್ಳುವ ಸಂದರ್ಭದಲ್ಲೆಲ್ಲ ಹೀಗೆ ನೋಡುವ ವಿಧಾನ ಬಳಕೆಯಲ್ಲಿದೆ. ದಲಿತ ಸಮುದಾಯಗಳಲ್ಲಿ ಇದು ಯಾವ ಬಗೆಯ ಒತ್ತಡವನ್ನು ಸೃಷ್ಟಿ ಮಾಡಬಹುದು? ಚಲನಚಿತ್ರಗಳನ್ನು ನೋಡಿದರೆ ಬಹಳ ವಿಚಿತ್ರ ಸಂಗತಿ ಗೊತ್ತಾಗುತ್ತದೆ. ೫೦ ವರ್ಷದಲ್ಲಿ ಕನ್ನಡ ಚಲನಚಿತ್ರದ ನಾಯಕ ಮತ್ತು ಖಳನಾಯಕರ ಭಾಷೆಯನ್ನು ಗಮನಿಸಿದರೆ, ಹಾದ್ಯ ನಟರ ಭಾಷೆಯನ್ನು ಗಮನಿಸಿದರೆ ಮರುಗಳಿಕೆ ಪ್ರಕ್ರಿಯೆ ಬಹಳ ವಿಶಿಷ್ಟವಾಗಿ ಕಾಣುತ್ತದೆ. ರಾಜಕುಮಾರ್ ಮಾತನಾಡುವ ಕನ್ನಡ ಗಮನಿಸಿ. ಕನ್ನಡವನ್ನು ಅತ್ಯಂತ ಚೆನ್ನಾಗಿ ಮಾತನಾಡುವ ಏಕೈಕ ವ್ಯಕ್ತಿ ಎಂಬ ಗೌರವ ಅವರಿಗಿದೆ. ಶಿಷ್ಟ ಅಥವಾ ಪ್ರಮಾಣ ಕನ್ನಡವನ್ನು ಮಾತನಾಡುವ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಕುಮಾರ್ ಮಾತನಾಡುವ ಕನ್ನಡ ನನ್ನದಲ್ಲದು. ಅದು ಯಾರ ಕನ್ನಡವೂ ಅಲ್ಲ. ಆದರೆ ನನ್ನ ಕನ್ನಡವನ್ನು ಮಾತನಾಡುವವರು ಯಾರು? ಅವರು ಈಗ ಬರುತ್ತಾ ಇದ್ದಾರೆ. ನಾಯಕರುಗಳಾಗಿ ಬರುತ್ತಾ ಇದ್ದಾರೆ. ಅಂದರೆ ಮರಳಿ ಪಡೆದು ಕೊಳ್ಳುವ ಪ್ರಕ್ರಿಯೆ ಇದೆಯಲ್ಲ ಅದು ಇನ್ನೊಂದು ರೀತಿಯಲ್ಲಿ ಬೇರೆ ಕಡೆ ಕಾಣಿಸಿಕೊಳ್ಳುತ್ತಾ ಇದೆ. ಸಾಂಸ್ಕೃತಿಕ ವಿಶ್ಲೇಷಕರು ಇದನ್ನೆಲ್ಲ ಗಮನಿಸಬೇಕಾಗಿ ಬರುತ್ತದೆ.

ಇನ್ನೊಂದು ಬಹಳ ಮುಖ್ಯವಾಗಿ ದೀರ್ಘವಾಗಿರುವುದಕ್ಕೆ ಕಾರಣವೆಂದರೆ, ಏಕೀಕರಣದ ಕಾಲದಲ್ಲಿ ಯಾವುದು ನಾವು ಪ್ರಮಾಣ ಅಥವಾ ಶಿಷ್ಟ ಕನ್ನಡ ಎನ್ನುತ್ತಿದ್ದವೋ. ಈಗ ಯಾವುದನ್ನು ಪ್ರಮಾಣ ಕನ್ನಡ ಅಥವಾ ಶಿಷ್ಟ ಕನ್ನಡ ಎನ್ನುತ್ತಿದ್ದೇವೋ ಅದೇ ಬದಲಾಗಿದೆ. ಆ ಕನ್ನಡವೇ ಬದಲಾಗಿದೆ. ಇದು ಹೇಗೆ ಬದಲಾಗಿದೆ ಎಂದರೆ ಹೆಚ್ಚು ಹೆಚ್ಚು ಜನ ಅದರಿಂದ ದೂರವಾಗಿದ್ದಾರೆ. ಅಂದರೆ ಪ್ರಮಾಣ ಕನ್ನಡ ೧೯೫೬ರಲ್ಲಿ ಎಷ್ಟು ಹತ್ತಿರವಾಗಿತ್ತೋ ಜನರಿಗೆ ಈಗ ಅಷ್ಟೇ ದೂರವಾಗಿದೆ. ಜನದೂರವಾಗುತ್ತಿದೆ. ಕನ್ನಡ ಹೆಚ್ಚು ಸಂಸ್ಕೃತಮಯವಾಗುವುದರ ಮೂಲಕ ಹೀಗಾಗಿದೆ. ಇದರ ಬಗ್ಗೆ ಡಿ.ಎನ್.ಶಂಕರಭಟ್ಟರು ‘ಕನ್ನಡ ಬರಹವನ್ನು ಸರಿಪಡಿಸೋಣ’ ಪುಸ್ತಕದಲ್ಲಿ ಈ ಸಿದ್ಧಾಂತವನ್ನು ಮಂಡಿಸಿದ್ದಾರೆ. ಎಲ್ಲ ಕನ್ನಡ ಅಧ್ಯಾಪಕರು ಆ ಪುಸ್ತಕವನ್ನು ಓದಲೇಬೇಕು.

ನಿನ್ನೆ ವಾಚಕರ ವಾಣಿಯಲ್ಲಿ ಒಂದು ಪತ್ರ ಬಂದಿದೆ. ತಾವೆಲ್ಲರೂ ಗಮನಿಸಿರಬೇಕು ಅಲ್ಲಿ ಸಿನಿಮಾದವರಿಗೆಲ್ಲ ನಿಘಂಟುಗಳನ್ನು ಕೊಡಬೇಕು ಅಂತಾ ಹೇಳಿ ಗೇಲಿ ಮಾಡಿ ಬರೆದಿದ್ದಾರೆ. ಇಂಗ್ಲಿಶ್ ಮಿಶ್ರಿತ ಕನ್ನಡವನ್ನು ಕೆಟ್ಟ ಕನ್ನಡ ಎಂತಲೂ, ಸಂಸ್ಕೃತಮಯ ಕನ್ನಡವನ್ನು ಪ್ರಮಾಣ ಕನ್ನಡವೆಂದೂ ಪರಿಭಾವಿಸುವವರ ಪ್ರಮಾಣ ಹೆಚ್ಚಿದೆ. ಸಂಸ್ಕೃತಮಯ ಕನ್ನಡ ಮಾತನಾಡುವವರು ಬಹಳ ಅದ್ಭುತವಾಗಿ ಮಾತನಾಡುತ್ತಾರೆ, ಜತೆಗೆ ಬರೆಯುತ್ತಾರೆ ಎಂದು ತಿಳಿಯಲಾಗುತ್ತದೆ. ಆದರೆ ಎಷ್ಟೋ ಜನಕ್ಕೆ ತಾವು ಬರೆದ ಸಂಸ್ಕೃತಮಯ ಕನ್ನಡ ಮಾತನಾಡುವವರು ಬಹಳ ಅದ್ಭುತವಾಗಿ ಮಾತನಾಡುತ್ತಾರೆ, ಜತೆಗೆ ಬರೆಯುತ್ತಾರೆ ಎಂದು ತಿಳಿಯಲಾಗುತ್ತದೆ. ಆದರೆ ಎಷ್ಟೋ ಜನಕ್ಕೆ ತಾವು ಸಂಸ್ಕೃತಮಯ ಕನ್ನಡದಲ್ಲಿ ಬಳಕೆ ಮಾಡುವ ಪದ ಸಂಸ್ಕೃತ ಎಂದು ಗೊತ್ತಿರುವುದೇ ಇಲ್ಲ. ಏಕೆ ಈ ರೀತಿ ಬಳಸುತ್ತೇವಿ ಅಂದರೆ ಅದು ಹೆಚ್ಚು ಹೆಚ್ಚು ಖಚಿತತೆಯನ್ನು ತಂದು ಕೊಡುತ್ತವೆ ಎನ್ನುತ್ತೇವೆ; ಅದಕ್ಕೊಂದು ಶಾಸ್ತ್ರೀಯತೆಯನ್ನು ತಂದು ಕೊಡುತ್ತದೆ ಎನ್ನುತ್ತೇವೆ. ಡಿ.ಎನ್.ಶಂಕರಭಟ್ಟರು ಈ ನಂಬಿಕೆಯನ್ನು ಒಡೆದಿದ್ದಾರೆ. ಸಂಸ್ಕೃತಮಯವಾಗಿರುವುದರಿಂದ ಭಾಷೆಗೆ ಒಂದು ಬಗೆಯ ಔಚಿತ್ಯ ಬರುತ್ತದೆ ಎಂಬ ಕಲ್ಪನೆಯನ್ನು ಒಡೆದಿದ್ದಾರೆ. ಒಂದು ಬಗೆಯ ಶಾಸ್ತ್ರೀಯತೆ ಬರುತ್ತದೆ ಅನ್ನುವುದೆ ಹೇಗೆ ಎಂದು ತಪ್ಪು ಕಲ್ಪನೆ ಎಂಬುದನ್ನು ವಿವರಿಸಿದ್ದಾರೆ. ಸಂಸ್ಕೃತವನ್ನು ಬಳಸುವುದರಿಂದ ಕೂಡ ಅದು ಖಚಿತವಾಗದೆ ಇರಬಹುದು ಎಂಬುದಕ್ಕೆ ನಿದರ್ಶನ ಮೂಲಕ ಉದಾಹರಣೆಗೆ ಕೊಟ್ಟಿದ್ದಾರೆ. ಕನ್ನಡದಲ್ಲಿ ಇಲ್ಲಿಯವರೆಗೆ ಘೋಷಿಸಿಕೊಂಡು ಬಂದ ಮಿತ್‌ನ್ನು ಒಡೆದು ಹಾಕಿದ್ದಾರೆ. ಪ್ರಮಾಣ ಕನ್ನಡ ಎನ್ನುವುದು ದಲಿತರ ಕನ್ನಡದಿಂದ ದೂರ ಹೋಗುತ್ತಾ ಇದೆ. ಈ ಅಂತರವನ್ನು ನಾವು ಹೇಗೆ ಒಡೆಯಬೇಕು. ಇದು ಕೂಡ ಒಂದು ದೊಡ್ಡ ಸಮಸ್ಯೆಯಾಗಿ ನಮ್ಮನ್ನು ಕಾಡುತ್ತಿದೆ.

೨೧ನೇ ಶತಮಾನದಲ್ಲಿ ದಲಿತರು ಒಂದು ಮುಖ್ಯ ಪ್ರಶ್ನೆಯನ್ನು ಕೇಳುತ್ತಾರೆ. ನನ್ನ ಕನ್ನಡವನ್ನು ನೀವು ಪುರಸ್ಕರಿಸದಿದ್ರೆ ನಾನು ಯಾರ/ಯಾವ ಕನ್ನಡವನ್ನು ಉಳಿಸಬೇಕು? ನಿಮ್ಮ ಕನ್ನಡವನ್ನು ಉಳಿಸಬೇಕೇ. ಆದರೆ ಪ್ರಮಾಣ ಕನ್ನಡ ನನ್ನದಲ್ಲ. ನನಗೆ ದತ್ತವಾದ ಕನ್ನಡವಲ್ಲ. ನನ್ನ ಮೇಲೆ ಹೇರುತ್ತಾ ಇರುವ ಕನ್ನಡ ಅದು. ಜನಕನ್ನಡ ಅಲ್ಲ. ಜನ ದೂರವಾದ ಕನ್ನಡ. ಆ ಕನ್ನಡವನ್ನು ಉಳಿಸುವ ಒತ್ತಾಯವನ್ನು ನನ್ನ ಮೇಲೆ ಏಕೆ ಹೇರುತ್ತಾ ಇದ್ದೀರಿ? ನಾನು ಉಳಿಸಿಕೊಳ್ಳುವುದಿದ್ದರೆ ನನ್ನ ಕನ್ನಡವನ್ನು ಉಳಿಸಿಕೊಳ್ಳಬೇಕು.

ದಲಿತರಿಗೆ ನೀವು ಕನ್ನಡವನ್ನು ಉಳಿಸುವ ಹೊಣೆಗಾರಿಕೆಯನ್ನು ಕೊಡುವುದಾದರೆ ದಲಿತರದೊಂದು ಮೂಲಭೂತ ಪ್ರಶ್ನೆಯಿದೆ. ಯಾವ ಕನ್ನಡವನ್ನು ಉಳಿಸಿಕೊಳ್ಳುವುದಕ್ಕೆ ಹೇಳುತ್ತಾ ಇದ್ದೀರಿ? ನೀವು ಯಾವ ಕನ್ನಡವನ್ನು ಉಳಿಸಿಕೊಳ್ಳುವುದಕ್ಕೆ ಹೇಳುತ್ತಾ ಇದ್ದೀರಿ? ಅಥವಾ ನಾವು ಸಾಮಾಜಿಕವಾಗಿ ಆಡುವ ಕನ್ನಡವನ್ನು ಉಳಿಸಿಕೊಳ್ಳುವುದಕ್ಕೆ ಹೇಳುತ್ತಾ ಇದ್ದಿರೋ? ದಲಿತರು ಯಾವುದಕ್ಕೆ ಹಕ್ಕುದಾರರು? ಈ ಪ್ರಶ್ನೆ ಇಂದು ಮುಂಚೂಣೆಗೆ ಬರುತ್ತಾ ಇದೆ.

ನನಗೆ ಮೇಲಿಂದ ಮೇಲೆ ಕಳೆದ ನಾಲ್ಕೈದು ವರ್ಷಗಳಿಂದ ಕಾಡ್ತಾ ಇರುವ ಪ್ರಶ್ನೆ ಎಂದರೆ, ಬಸವಣ್ಣನವರು ಬೇರೆ ಸಂದರ್ಭದಲ್ಲಿ ಅವರು ಹೇಳಿದಂತೆ ಗುಂಡು ಮತ್ತು ಬೆಂಡು ಇವುಗಳ ಚಿತ್ರ, ಗಂಡು ಮತ್ತು ಬೆಂಡು ಕಟ್ಟಿದ ವ್ಯಕ್ತಿಯೊಬ್ಬ ನೀರೊಳಗೆ ಇದ್ದಾಗ, ಮುಳುಗಲಿಕ್ಕೆ ಬಿಡದು ಗುಂಡು. ತೇಲಲಿಕ್ಕೂ ಬಿಡದೆ ಬೆಂಡು. ಆದರೆ ನೀರಿನಲ್ಲಿರುವ ವ್ಯಕ್ತಿಗೆ ಮುಳುಗುವ ಅಪೇಕ್ಷೆಯೇನೂ ಇರುವುದಿಲ್ಲ. ತೇಲುವ ಆಪೇಕ್ಷೆ ಇರುತ್ತದೆ. ಆದರೆ ತೇಲುವುದಕ್ಕೆ ಬಿಡುತ್ತಿಲ್ಲ ಗುಂಡು. ಹೋಗಲಿ ಸತ್ತು ಹೋಗಿ ಬಿಡುತ್ತೇನೆ. ಅಂದರೆ ಮುಳುಗಲೀಯದು ಗುಂಡು. ನಾವು ಎದುರಿಸಬೇಕಾಗಿರುವ ಪ್ರಶ್ನೆ ಎಂದರೆ ಈ ಗುಂಡು ಮತ್ತು ಬೆಂಡುಗಳಲ್ಲಿ ಕನ್ನಡ ಯಾವುದು? ಇಂಗ್ಲಿಶ್ ಯಾವುದು? ಒಂದು ವ್ಯಾಖ್ಯಾನದ ಪ್ರಕಾರ ನಮಗೆ ಕಟ್ಟಿರುವ ಗುಂಡು ಇಂಗ್ಲಿಶ್. ನಮ್ಮ ರಕ್ಷಿಸುವ ಬೇಡ ಕನ್ನಡ. ದಲಿತರು ಇದಕ್ಕೆ ವಿರುದ್ಧವಾಗಿ ನೋಡುತ್ತಾ ಇರಬಹುದು. ನಮಗೆ ಕಟ್ಟಿರುವುದು ಗುಂಡು ಕನ್ನಡ, ನಮ್ಮನ್ನು ತೇಲಿಸುವ ಬೆಂಡು ಇಂಗ್ಲಿಶ್ ಎಂದು ಯಾಕೆ ಇಂಗ್ಲಿಶ್ ಕಡೆಗೆ ಹೋಗುತ್ತಾ ಇದ್ದಾರೆ? ಇಂಗ್ಲಿಶ್ ಅವರಿಗೆ ಹೊಸ ಜಗತ್ತಿಗೆ ರಹದಾರಿಯನ್ನು ಕಲ್ಪಿಸಿಕೊಡದೆ ಇರಬಹುದು. ಆದರೆ ಇನ್ನೊಂದು ಜಗತ್ತಿಗೆ ಒಂದು ಹೊರದಾರಿಯನ್ನಾದರೂ ಕಲ್ಪಿಸಿಕೊಡುತ್ತದೆ.

ದಲಿತರಿಗೆ ಇಂಗ್ಲಿಶ್ ಕಲಿತರೆ ಅವಕಾಶ ಸಿಕ್ಕತ್ತದೋ? ಅಥವಾ ಬೇಕಾದಂತಹ ಅಂಕಿ ಅಂಶಗಳನ್ನು ತಂದು ಬಿಡಬಹುದು. ನೂರೆಂಟು ಅರ್ಹತೆಗಳನ್ನು ಸೃಷ್ಟಿಸಬಹುದು. ಅದರಿಂದ ನಿರುದ್ಯೋಗ ಪ್ರಮಾಣದಲ್ಲಿ ವ್ಯತ್ಯಾಸವಾಗದೆ ಇರಬಹುದು. ದಲಿತರ ಸ್ಥಿತಿಗತಿ ಹೀಗೆ ಮುಂದುವರಿಯಬಹುದು. ಹೊಸ ಅವಕಾಶಗಳು ಸೃಷ್ಟಿ ಆಗುತ್ತವೋ ಇಲ್ಲವೋ ಅದು ಬೇರೆ ಪ್ರಶ್ನೆ. ಆದರೆ ಈ ಗುಂಡು ಮತ್ತು ಬೆಂಡುಗಳ ತರ್ಕದೊಳಗೆ ಯಾವುದು ಇವರನ್ನು ಕೆಳಗಡೆ ಎಳೆಯುತ್ತಿದೆ. ಯಾವುದು ಇವರನ್ನು ಮೇಲೆಡೆಗೆ ಎಳೆಯುತ್ತಿದೆ ಎನ್ನುವುದನ್ನು ಚರ್ಚಿಸಬೇಕಾಗಿದೆ ಅಥವಾ ಯಾವುದು ಇವರನ್ನು ಬಿಡುಗಡೆ ಆಗದಂತೆ ನೋಡಿಕೊಳ್ಳುತ್ತ ಇದೆ ಎಂಬುದನ್ನು ಪರಾಮರ್ಶಿಸಬೇಕಾಗಿದೆ. ಅದಕ್ಕೆ ಒಂದು ಹೊರದಾರಿಯನ್ನು ಇಂಗ್ಲಿಶ್ ಕಲ್ಪಿಸಿ ಕೊಡಬಹುದು. ಆದರೆ ಇಂಗ್ಲಿಶ್ ಪರವಾಗಿ ದಲಿತರು ಮಾತನಾಡುತ್ತಿದ್ದರೆ ನಾವು ಕನ್ನಡ ವಿರೋಧವೆಂಬಂತೆ ನೋಡುವುದಕ್ಕೆ ಪ್ರಯತ್ನ ಪಡುತ್ತಾ ಇರುತ್ತೇವೆ. ನಾನು ಇದನ್ನೆ ನಿರಾಕರಿಸುತ್ತಿಲ್ಲ. ಏಕೆಂದರೆ ಇದನ್ನು ನಾವು ಸಮನ್ವಯ ನೆಲೆಯಲ್ಲಿ ನೋಡಬೇಕಾಗಿಲ್ಲ ಏಕೆಂದರೆ ನಾವು ಬಲಬದಿಯಲ್ಲಿ ಕನ್ನಡವನ್ನು, ಎಡ ಬದಿಯಲ್ಲಿ ಇಂಗ್ಲಿಶ್‌ನ್ನು ನೋಡಬೇಕಾಗಿಲ್ಲ. ಇದು ಈಗ ಇಂಗ್ಲಿಷ್ ಅಥವಾ ಕನ್ನಡ ಎನ್ನಬೇಕೋ ಅಥವಾ ಇಂಗ್ಲಿಶ್ ಮತ್ತು ಕನ್ನಡ ಎನ್ನಬೇಕೋ?

ಕನ್ನಡ ಎಂದರೆ ಯಾವ ಕನ್ನಡವನ್ನು ಶಾಲೆಯಲ್ಲಿ ಕಲಿಯಬೇಕು ಎನ್ನುವುದೆ ನನ್ನ ಪ್ರಶ್ನೆ. ದಲಿತರಿಗೂ ಅವರ ಸಂಸ್ಕೃತಿಗೂ ಸಂಬಂಧ ಇದೆ ಎಂದರೆ ಆ ಕನ್ನಡ ಯಾವುದು? ಇದು ಕೂಡ ೨೦ನೇ ಶತಮಾನದ ಅರ್ಥ ಭಾಗದವರೆಗೂ ಚರ್ಚೆ ಆಗಿರುವಂತಹದು. ಭಾಷೆ ಮತ್ತು ಸಂಸ್ಕೃತಿ ಸಂಬಂಧಗಳ ಬಗ್ಗೆ ಚರ್ಚೆ ನಿರಂತರವಾಗಿ ನಡೆಯುತ್ತಿದೆ. ಭಾಷೆ ಒಬ್ಬ ವ್ಯಕ್ತಿಯನ್ನು ನಿಯಂತ್ರಿಸುತ್ತಿರುತ್ತದೆ. ಅದೇ ಸಂದರ್ಭದಲ್ಲಿ ಬಿಡುಗಡೆ ಪಡೆಯಬೇಕೆಂಬ ಅಪೇಕ್ಷೆಯೂ ಇರುತ್ತದೆ. ಒಂದು ವೇಳೆ ಇದನ್ನು ಒಪ್ಪಿಕೊಂಡರೆ ನಮ್ಮನ್ನು ನಮ್ಮ ಸಂಸ್ಕೃತಿಗೆ ಬದ್ಧವಾಗಿಡುವುದು ನಮ್ಮ ಭಾಷೆ ಎಂದು ತಿಳಿದುಕೊಂಡರೂ ಕೂಡ. ಅದರಿಂದ ಬಿಡುಗಡೆ ಪಡೆಯುವ ಹಪಾಹಪಿಯ ಕಾಲವಿದು. ಬಂಧನದ ಹಪಾಹಪಿಯ ಕಾಲ ಅಲ್ಲ. ಅದರಿಂದಾಗಿ ಈ ಕಾಲದಲ್ಲಿ ನಿಂತು ಯೋಚನೆ ಮಾಡ್ತಾ ಇದ್ದೇವೆ ಎಂದರೆ, ಈ ಸಮಸ್ಯೆಯನ್ನು ಬೇರೆ ಚೌಕಟ್ಟಿನಲ್ಲಿ ನಿಂತುಕೊಂಡು ನೋಡಬೇಕಾದ ತುರ್ತಿದೆ.

(ಆಶಯ ಭಾಷಣ)