ಭಾಷೆ ಸಂಸ್ಕೃತಿ ಮಾಧ್ಯಮ. ದಲಿತರ ಸಂಸ್ಕೃತಿ ಅವರ ಭಾಷೆಯಲ್ಲಿ ಅಭಿವ್ಯಕ್ತವಾಗಿದೆ. ದಲಿತರ ಬದುಕಿನ ಪ್ರಾತಿನಿಧಿಕ ರೂಪ ಅವರ ಭಾಷೆ. ಅದು ಕನ್ನಡ ಭಾಷೆಯ ಆದಿಮ ಸ್ವರೂಪವನ್ನು ತಿಳಿಸುವುದರೊಂದಿಗೆ ಕನ್ನಡ ಹೇಗೆ ಸಂಸ್ಕೃತದಿಂದ ಭಿನ್ನ ಎಂಬುದನ್ನ ತಿಳಿಯಲು ಸಹ ಸಹಕಾರಿ. ದಲಿತರ ಬದುಕು ಅಸ್ಪೃಶ್ಯತೆಯ ಕಾರಣಕ್ಕೆ ಇತರ ಸಮುದಾಯಗಳಿಂದ ಬೇರ್ಪಟ್ಟಿತು. ಅದೇ ಕಾರಣಕ್ಕೆ ಅದು ಇತರೆ ಸಮುದಾಯಗಳಿಗಿಂತ ಭಿನ್ನವಾದ ವಿಶಿಷ್ಟತೆ ರೂಪ ಪಡೆಯಲು ಕಾರಣವಾಯಿತು.

ದಲಿತ ವರ್ಗವನ್ನು ಅಕ್ಷರ ಸಂಸ್ಕೃತಿಯ ಗುತ್ತಿಗೆ ಹಿಡಿದ ಮಂದಿ ವಂಚಿಸುತ್ತಲೇ ಬಂದಿರುವುದು ಇಂದಿಗೂ ಮುನ್ನಡೆದಿದೆ. ಸಮಕಾಲೀನ ಅನಿವಾರ್ಯಗಳಿಗೆ ಸ್ಪಂದಿಸುತ್ತಾ ಬಂದಿರುವ ಮಾಧ್ಯಮಗಳು ದಲಿತರ ಬದುಕಿನ ಸಮಸ್ಯೆಗಳಿಗೂ ಆಗಾಗ ಅನಿವಾರ್ಯವಾಗಿ ಸ್ಪಂದಿಸಿವೆಯೇ ಹೊರತು ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ಹೊರ ತರುತ್ತಿದ್ದ ಮಾರನಾಯಕ ಅಲ್ಲದೆ ದಲಿತ ವಾಯ್ಸ್, ಅಂಬೇಡ್ಕರ್ ವಾಹಿನಿ, ಸಂವಾದ, ಸಂಬುದ್ಧ, ಪಂಚಮದಂತಹ ದಲಿತ ವರ್ಗದವರೇ ನಡೆಸುತ್ತಿದ್ದ ಹಾಗೂ ಈಗಲೂ ನಡೆಸುತ್ತಿರುವ ಮಾಧ್ಯಮಗಳು ದಲಿತರ ಬದುಕಿನ ಚಿತ್ರಣಗಳನ್ನು ಹಾಗು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಗರ್ಭಿತವಾಗಿಯೇ ಚಿತ್ರಿಸಿವೆ. ಇವುಗಳಲ್ಲಿ ದೊರಕಿದಷ್ಟು ಆದ್ಯತೆ ಮುಖ್ಯವಾಹಿನಿಯಲ್ಲಿರುವ ಮಾಧ್ಯಮಗಳಲ್ಲಿ ದೊರಕುತ್ತಿಲ್ಲವೆಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಇದಕ್ಕೆ ಕಾರಣಗಳನ್ನು ಹುಡುಕಾಡಿದರೆ ಮಾಧ್ಯಮಗಳು ತಮಗೆ ತಾವೇ ರೂಢಿಸಿಕೊಂಡಿರುವ ಶಿಷ್ಠತೆ ಬಹುಮುಖ್ಯ ಕಾರಣವಾಗುತ್ತದೆ. ಇದರಿಂದಾಗಿ ದಲಿತರೇ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರಿಂದ ಆಗಬಹುದಾದ ಹೊಸತನವನ್ನು ನಿರೀಕ್ಷೆ ಮಾಡುವುದು ಸಾಧ್ಯವಿಲ್ಲ.

ಸ್ವಾತಂತ್ರ್ಯದ ನಂತರ ದಲಿತರ ಮೇಲೆ ಸವರ್ಣೀಯರು ನಡೆಸಿದ ಹಿಂಸೆಗಳು, ಭೂ ಹೋರಾಟಗಳು, ದೇವರಾಜು ಅರಸುರವರು ತಂದ ಭೂಸುಧಾರಣೆಯ ಫಲಿತಗಳು, ಅಸ್ಪೃಶ್ಯತಾ ಕಾನೂನು, ಅಂಬೇಡ್ಕರ್ ಹಿನ್ನೆಲೆಯ ಹೋರಾಟ, ದಲಿತ ಸಂಘರ್ಷ ಸಮಿತಿ ನಡೆಸಿದ ಹಾಗೂ ನಡೆಸುತ್ತಿರುವ ಸಾಮಾಜಿಕ ಮತ್ತು ರಾಜಕೀಯ ಸಂಘರ್ಷ ಮೊದಲಾದವುಗಳನ್ನು ಕೇವಲ ಒಂದು ಘಟನೆಯನ್ನಾಗಿ ಅಷ್ಟೇ ವರದಿ ಮಾಡಿವೆಯೇ ಹೊರತು ನಿರೀಕ್ಷಿತ ಮಟ್ಟದಲ್ಲಿ ಅವರ ಸಮಸ್ಯೆಗಳು ಸಮಾಜದ ಮುಂದಿಡುವ ಕೆಲಸ ಆಗಲಿಲ್ಲವೆಂದೇ ಹೇಳಬಹುದು. ಆದರೆ ಅನೇಕ ದಲಿತ ಸಾಹಿತಿಗಳು ಬೆಳಕಿಗೆ ಬರಲು ಮಾಧ್ಯಮಗಳ ಕೊಡುಗೆ ಇದೆ ಎಂಬುದನ್ನು ಇದೇ ಕಾಲಕ್ಕೆ ಮರೆಯಲಾಗದು.

ದಲಿತರು ಎದುರಿಸುವ ಪ್ರಮುಖ ಸಮಸ್ಯೆಗಳೆಂದರೆ ಭೂಮಿ ಮತ್ತು ಅಸ್ಪೃಶ್ಯತೆ. ಎರಡು ಗಂಭೀರವಾದವು ಅದರಲ್ಲೂ ಅಸ್ಪೃಶ್ಯತೆ ಹೆಚ್ಚು ಗಂಭೀರ. ಆರೋಗ್ಯಕರ ಸಮಾಜದ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಮಾಧ್ಯಮಗಳು ಇಂದು ಸಾಮಾಜಿಕ ಶಿಕ್ಷಣದ ಭಾಗವಾಗಿ ಕೆಲಸ ಮಾಡಬೇಕು. ಇದರ ಜೊತೆಗೆ ದಲಿತರ ಜನಾಂಗೀಕ ಸಾಂಸ್ಕೃತಿಕ ವಿಷಯಗಳ ಅಧ್ಯಯನ ಮಾಧ್ಯಮಗಳಲ್ಲಿ ಇಂದು ಹೆಚ್ಚಾಗಿ ನಡೆಯಬೇಕಾಗಿದೆ.

ದಲಿತರ ಬದುಕು ಯಾವತ್ತಿಗೂ ಪ್ರಾಚ್ಯವಾಗಿಯೇ ಉಳಿಯುವುದಿಲ್ಲ. ಅದು ಕ್ಷಿಪ್ರ ಗತಿಯಲ್ಲಿ ಬದಲಾಗುತ್ತಲಿರುತ್ತದೆ. ಆದ್ದರಿಂದ ಸಮಕಾಲೀನ ಬದುಕಿನ ಧೋರಣೆಗಳ ನಡುವೆ ದಲಿತರ ಬದುಕನ್ನ ಹೊಸ ವಿವೇಚನೆಯೊಂದಿಗೆ ವ್ಯಾಖ್ಯಾನಿಸಬೇಕಾಗಿದೆ. ನಮ್ಮ ಸಮಾಜದ ತಾರತಮ್ಯಗಳಿಂದಾಗಿ ದಲಿತರ ಬದುಕು ಯಾವತ್ತೂ ತೀರ ಸೂಕ್ಷ್ಮ. ರಾಜಕೀಯ ಉದ್ದೇಶಗಳು, ಸಾಂಸ್ಕೃತಿಕ ಬಿಕ್ಕಟ್ಟುಗಳು ತಮ್ಮ ಹಕ್ಕುಗಳಿಗಾಗಿ ದಲಿತರಲ್ಲಿರುವ ಹೋರಾಟದ ಸ್ವರೂಪ ನಮ್ಮ ಸಮಾಜಕ್ಕೆ ಸದಾ ಕಾಲದ ಎಚ್ಚರ. ಆದ್ದರಿಂದ ಮಾಧ್ಯಮಗಳು ದಲಿತರನ್ನು ಪರಿಭಾಷಿಸಬೇಕಾದ ರೀತಿ ಸಹ ಗಂಭೀರವಾದುದು. ಸಾಂಸ್ಕೃತಿಕವಾಗಿ ಮಾಧ್ಯಮಗಳೂ ದಲಿತರ ಸಾಹಿತ್ಯ, ಜಾನಪದ ಕಲೆಗಳು, ಸಂಸ್ಕೃತಿಯ ವಿವಿಧ ವಿನ್ಯಾಸಗಳು ಮುಂತಾದವುಗಳನ್ನು ಕುರಿತು ಗಂಭೀರ ಚರ್ಚೆ ಮಾಡಬೇಕಾಗಿದೆ.

ಹೀಗೆ ಹೇಳಲು ಕಾರಣಗಳು ಇಲ್ಲದೆ ಇಲ್ಲ. ದಲಿತರು ನಮ್ಮ ನಾಡಿನ ಮೂಲ ನಿವಾಸಿಗಳೆಂಬ ಕಲ್ಪನೆಯನ್ನೇ ನಾಶ ಮಾಡಲು ಹೊರಟಿದ್ದೇವೆ. ಶೂದ್ರರಲ್ಲಿಯೂ ದಲಿತರ ಸಂಸ್ಕೃತಿಯ ಬಗ್ಗೆ ಕಾಳಜಿ ಮರೆಯಾಗುತ್ತಲಿದೆ. ಭಾರತೀಯ ಸಂಸ್ಕೃತಿಯ ಮೂಲ ಇರುವುದೇ ದಲಿತರಲ್ಲಿ. ಅವರ ಸಂಸ್ಕೃತಿ ವಿಚಾರ, ಆಚಾರ, ವೇಷಭೂಷಣಗಳನ್ನ ಜಾಗತೀಕರಣದ ನೆಪದಲ್ಲಿ ನಾಶ ಮಾಡಲು ಹೊರಟಿದ್ದೇನೆ. ಬುನಾದಿಯನ್ನೇ ಬಿಟ್ಟು ಗಾಳಿಯಲ್ಲಿ ಗೋಪುರ ಕಟ್ಟುವ ಕೆಲಸ ನಡೆದಂತಾಗಿದೆ.

ಮಾಧ್ಯಮಗಳಲ್ಲಿ ದಲಿತರ ಭಾಷೆಯ ನೆಲೆಯನ್ನು ಎರಡು ರೀತಿಯಲ್ಲಿ ನಾವು ಗುರುತಿಸಬೇಕು. ಒಂದು ದಲಿತರೇ ನೇರವಾಗಿ ಅಭಿವ್ಯಕ್ತಿಸುವುದು, ಇನ್ನೊಂದು ಅವರ ಸಂಸ್ಕೃತಿಯನ್ನು ಕುರಿತು ಹೇಳುವುದು. ಮೊದಲನೆಯದು ಸಂವೇದನೆಯಾದರೆ, ಎರಡನೆಯದು ಮಾಹಿತಿ ಸ್ವರೂಪದ್ದು. ದಲಿತರ ಕುರಿತ ಭಾಷೆ ಮತ್ತು ಮಾಧ್ಯಮಗಳ ಸಂಬಂಧ ಕನ್ನಡ ಸಂಸ್ಕೃತಿಯನ್ನು ಕಟ್ಟುವ ನಿಟ್ಟಿನಲ್ಲಿ ಮಹತ್ವದ್ದು. ಅದು ಒಟ್ಟಾರೆ ಕನ್ನಡ ಸಂಸ್ಕೃತಿಯ ಭಾಗ.

ದಲಿತರು ಮತ್ತು ಮಾಧ್ಯಮದ ಒಂದು ಹಂತ ಇದಾದರೆ ಇನ್ನೊಂದು ಚಿತ್ರಣವೇ ಬೇರೆ ಇದೆ. ಮಾಧ್ಯಮಗಳಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತರಿಗೆ ಅವಕಾಶಗಳು ಲಭ್ಯವಾಗುತ್ತಿರುವುದೇ ಕಡಿಮೆ. ಅನೇಕ ಸಂದರ್ಭಗಳಲ್ಲಿ ತುಳಿತಕ್ಕೆ ಒಳಗಾದವರ ಬಗ್ಗೆ ವೃತ್ತಿ ಪ್ರಾಮಾಣಿಕತೆ ಸಹ ಕಂಡು ಬಂದಿರುವುದಿಲ್ಲ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ದೇವರಾಜು ಅರಸುರವರ ಸಂಪುಟದಲ್ಲಿ ಸಚಿವರಾಗಿದ್ದ ಬಿ.ಬಸವಲಿಂಗಪ್ಪರವರ ರಾಜೀನಾಮೆ ಪ್ರಕರಣ. ಇದು ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಕ್ರೂರ ಚಿತ್ರಣವನ್ನ ನಮ್ಮ ಮುಂದೆ ಕಟ್ಟುತ್ತದೆ. ಇದರೊಂದಿಗೆ ದಲಿತ ವಿರೋಧಿ ಮನಸ್ಥಿತಿಯ ಬಟ್ಟ ಬಟ್ಟ ಬಯಲಾಗುತ್ತದೆ. ಇದೇ ರೀತಿ ಹಾವನೂರು ವರದಿಯ ವಿರುದ್ಧ ಮಾಧ್ಯಮಗಳಲ್ಲಿರುವ ಮುಂದಿಯೇ ನಡೆಸಿದ ಮಸಲತ್ತುಗಳು ಜಾತೀವಾದಿ ಮನಸ್ಥಿತಿಗೆ ಸಾಕ್ಷಿ.

ಕನ್ನಡ ಏಕೀಕರಣದ ೫೦ ವರ್ಷಗಳಷ್ಟು ಅವಧಿಯಲ್ಲಿ ಸುಮಾರು ೪೦ ವರ್ಷಗಳ ಕಾಲ ಮಾಧ್ಯಮಗಳು ಕೇವಲ ನಗರಕ್ಕೆ ಕೇಂದ್ರಿಕೃತವಾಗಿದ್ದವು. ಆ ಮೂಲಕ ಏಕರೂಪ ಭಾಷೆ, ಏಕರೂಪ ಸಂಸ್ಕೃತಿಯನ್ನು ರೂಢಿಸಿಕೊಂಡು ಅದನ್ನೇ ಎಲ್ಲರ ಮೇಲೂ ಬಲವಂತದಿಂದ ಹೇರುತ್ತಾ ಹೊರಟಿರುವುದನ್ನು ಇಂದಿಗೂ ಕಾಣಬಹುದಾಗಿದೆ. ಮಾಧ್ಯಮಗಳು ರಾಜಧಾನಿಯಿಂದ ದೂರವಿರುವ ಜನಸಾಮಾನ್ಯರ ಪ್ರಾತಿನಿಧಿಕ ಸಂಸ್ಥೆಗಳಾಗಿ ರೂಪುಗೊಳ್ಳಲಿಲ್ಲ. ಜನತೆಗೆ ಬೇಕೋ ಬೇಡವೊ ಮಾಧ್ಯಮಗಳಲ್ಲಿ ಇಂದು ರಾಜಕಾರಣಿಗಳ ಸುದ್ಧಿಯೇ ಪ್ರಾತಿನಿಧ್ಯ ಪಡೆಯುತ್ತಿವೆ. ಅಭಿವೃದ್ಧಿ ವಿಚಾರಗಳು ಮೂಲೆಗುಂಪಾಗುತ್ತಲಿವೆ. ಈ ರೀತಿಯ ಪರಿಸ್ಥಿತಿ ಇರುವಾಗ ದಲಿತರ ಸಮಸ್ಯೆಗಳಿಗೆ ಪ್ರಾಮುಖ್ಯತೆ ದೊರಕುವುದಾದರು ಎಲ್ಲಿ ?

ಮಾಧ್ಯಮಗಳಲ್ಲಿ ಇಂತಹುದೇ ಭಾಷೆ ಶೈಲಿ, ಇಂತಹವುದೇ ಸಂಸ್ಕೃತಿ ಎಂಬ ಕಟ್ಟುಪಾಡುಗಳನ್ನು ರೂಡಿಸಿಕೊಂಡಿದ್ದೆ ದಲಿತ ಸಮುದಾಯಕ್ಕೆ ಸೇರಿದವರನ್ನ ಮಾಧ್ಯಮಗಳಿಂದ ದೂರವಿಡುವ ಸಂಚು. ಕನ್ನಡ ಭಾಷೆಗೆ ದಲಿತರು ನೀಡಿರುವ ಕೊಡುಗೆಯನ್ನು ಗುರುತಿಸುವಲ್ಲಿ ಹಾಗೂ ಆ ಸಂಸ್ಕೃತಿಯನ್ನು ತನ್ನದೆಂದು ಒಪ್ಪಿಕೊಳ್ಳುವಲ್ಲಿ ಮಾಧ್ಯಮಗಳು ಪ್ರಯತ್ನಗಳನ್ನೇ ನಡೆಸಲಿಲ್ಲ. ಗ್ರಾಮ್ಯ ಭಾಷೆ ಮಾಧ್ಯಮಗಳ ಬಳಿ ಬರುವುದನ್ನೇ ತಡೆಯಲಾಯಿತು. ಮಾಧ್ಯಮಗಳಲ್ಲಿಂದು ದಲಿತರ ಸಂಖ್ಯೆ ವಿರಳಾತಿ ವಿರಳ. ಇರುವ ಸಣ್ಣ ಪ್ರಮಾಣದ ಶೂದ್ರರಿಗೆ ಪ್ರತಿಭೆಗೆ ತಕ್ಕ ಅರ್ಹತೆಗಳಿಲ್ಲದೆ ವಂಚನೆಗಳಿಗೆ ಒಳಗಾಗಿದ್ದಾರೆ.

ಜಾಗತೀಕರಣದ ಈ ದಿನಗಳಲ್ಲಿ ಮಾಧ್ಯಮಗಳೂ ಸಹ ವಾಣಿಜ್ಯಕರಣವಾಗಿವೆ. ಇದರಿಂದಾಗಿ ಜನಸಮುದಾಯದ ವಿಷಯಗಳಿಗೆ ಸಿಗಬೇಕಾದಷ್ಟು ಪ್ರಾಮುಖ್ಯತೆ ದೊರಕುತ್ತಿಲ್ಲ. ಉಚ್ಛಾರಣೆಯೊಂದರಲ್ಲಿಯೇ ದಲಿತರು ಮಾಧ್ಯಮಗಳಲ್ಲಿ ಕೆಲಸ ಮಾಡಲು ಅನರ್ಹರು ಎಂಬಂತೆ ಚಿತ್ರಿಸುವ ಪ್ರಯೋಗ ನಡೆದಿರುವುದನ್ನು ಕಾಣಬಹುದು. ಜಾಗತೀಕರಣದಿಂದಾಗಿ ಸಾಮಾಜಿಕ ನ್ಯಾಯದ ದನಿ ಅಡಗುತ್ತಿದೆ. ಮೀಸಲಾತಿ ಅವಕಾಶಗಳು ಕಡಿಮೆಯಾಗುತ್ತಿವೆ. ಭಾರತದಂತಹ ಅಭಿವೃದ್ಧಿ ದೇಶಗಳ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಇದು ಗೊತ್ತಿರಬೇಕಾಗುತ್ತದೆ. ಖಾಸಗೀಕರಣದ ಹಿನ್ನೆಲೆಯಲ್ಲಿ ಖಾಸಗೀ ರಂಗದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆ ಮಾಧ್ಯಮಗಳಿಗೂ ವಿಸ್ತಾರವಾಗಬೇಕೆ ಎಂಬ ಕುರಿತು ಚರ್ಚೆಯ ಆರಂಭ ಇಂದಿನ ಅಗತ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ತೊಡಗಿರುವ ದಲಿತ ಪ್ರತಿಭೆಗಳ ಅಧ್ಯಯನ ನಡೆಯಬೇಕು. ದಲಿತರ ಸಂಸ್ಕೃತಿಯನ್ನು ಬಿಂಬಿಸುವಂತಹ ಪಠ್ಯಗಳು ಇಂದಿನ ಅಗತ್ಯತೆಯಾಗಿದೆ.

ಮಾಧ್ಯಮಗಳು ದಲಿತರ ಬದುಕನ್ನ ಗಂಭೀರವೆಂದು ಪರಿಗಣಿಸಿದರೆ ಅದರ ಅಭಿವ್ಯಕ್ತಿ ಸಾಧ್ಯತೆ ಇದೆ ಮತ್ತು ಮಾಧ್ಯಮಗಳಲ್ಲಿ ಅವರು ಬಳಕೆಯಾಗಬೇಕಾದ ರೀತಿ ಸಹ ಅಷ್ಟೇ ಮುಖ್ಯವಾಗುತ್ತದೆ. ಇದರ ಜೊತೆಗೆ ಹೇಳಲೇಬೇಕಾದ ಇನ್ನೊಂದು ಮಾತಿದೆ. ಇಂದಿನ ಈ ದಿನಮಾನಗಳಲ್ಲಿ ಇಂಗ್ಲಿಶ್‌ನ ಅನಿವಾರ್ಯತೆ ಎಷ್ಟಿದೆ ಎಂಬುದನ್ನು ಅರ್ಥ ಮಾಡಿಕೊಂಡು ರಾಜ್ಯ ಸರ್ಕಾರವೇ ಹೇಳುತ್ತಿರುವಂತೆ ಒಂದನೇ ತರಗತಿಯಿಂದಲೇ ಕಲಿಕೆ ಆರಂಭಿಸುವುದು ನಮ್ಮ ಅನಿವಾರ್ಯವಾಗಬೇಕಾಗಿದೆ.