“ನನ್ನ ಭಾಷೆಯ ಮಿತಿ ನನ್ನ ಜ್ಞಾನದ ಮಿತಿ”
– ವಿಟ್ಗೆನ್ ಸ್ಟೇನ್

ಪೀಠಿಕೆ

ಭಾಷೆಯು ನಿರಂತರ ಚಲನಶೀಲವಾಗಿರುವುದರಿಂದ ಅದರ ವಿವಿಧ-ಆಯಾಮಗಳು ಕಾಲ ದೇಶವನ್ನು ಮೀರಿ ತನ್ನ ಅಂತಃ ಸತ್ವವನ್ನು ಗಳಿಸಿಕೊಂಡಿರುವುದು. ಈ ಹೊತ್ತು ನಾವು ಚರ್ಚಿಸುತ್ತಿರುವ ವಿಷಯ “ದಲಿತರು, ಭಾಷೆ ಮತ್ತು ಸಮಾಜ” ಈ ಮೂರು ಪರಿಕಲ್ಪನೆಗಳ ನಡುವೆ ಏರ್ಪಡುವ ಅನುಸಂಧಾನ, ಮುಖಾಮುಖಿ ಮತ್ತು ವಾಗ್ವಾದಗಳ ಒಟ್ಟು ಸ್ವರೂಪ, ಪ್ರೇರಣೆ, ಪ್ರಭಾವ ಮತ್ತು ತಾತ್ವಿಕ ಒತ್ತಡಗಳನ್ನು ಕುರಿತು ಯೋಜನೆ ಮಾಡುತ್ತೇವೆ ಎಂದು ತೋರುತ್ತದೆ. ಜಾಗತೀಕರಣದ ಸಂದರ್ಭದಲ್ಲಿಯೂ ಕೂಡ ‘ದಲಿತ’ರನ್ನು ಕುರಿತು ಯೋಚಿಸುವ ಬಗೆಯನ್ನು ಹೇಗೆ ಪ್ರಾರಂಭಿಸಬೇಕು ಎನ್ನುವುದು ಒಂದು ಮುಖ್ಯ ತಾತ್ವಿಕ ಪ್ರಶ್ನೆಯಾಗಿದೆ. “ದಲಿತ ಪರಿಭಾಷೆ : ಅನನ್ಯತೆ ಮತ್ತು ಪ್ರತಿರೋಧ” ಎನ್ನುವ ಪರಿಕಲ್ಪನೆಗಳನ್ನು ಮಾನದಂಡವಾಗಿ ಬಳಸಿಕೊಂಡು “ದಲಿತರು, ಭಾಷೆ ಮತ್ತು ಸಮಾಜ” ಇವುಗಳ ಪರಸ್ಪರ ಸಂಬಂಧ, ಅಂತರ್ ಸಂಬಂಧ, ಅನುಸಂಧಾನ ಮತ್ತು ಮುಖಾಮುಖಿಗಳ ಕುರಿತು ಯೋಚಿಸುವಾಗ “ಭಾಷೆ” ಎಂಬುದು ಹೇಗೆ ಒಂದು ನಿರ್ದಿಷ್ಟ ಪರಿಭಾಷೆಯಾಗಿ, ಒಂದು ಜಾತಿ, ಜನಾಂಗ ಅಥವಾ ವರ್ಗದ ಗ್ರಹಿಕಾ ಸಾಮರ್ಥ್ಯಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಪೂರಕವಾಗುವುದು. ಮತ್ತು ಆ ಮೂಲಕ ದಲಿತರ ‘ಅಪೇಕ್ಷಿತ’ ಮತ್ತು ‘ಅಪೇಕ್ಷಿತ’ ಮತ್ತು ‘ಆರೋಪಿತ’ ಅನನ್ಯತೆಯನ್ನು ಗುರುತಿಸುವುದಕ್ಕೆ ಸಾಧ್ಯ. ಇದರೊಂದಿಗೆ, ದಲಿತ ಪ್ರತಿಭಟನೆ, ಪ್ರತಿರೋಧ ಮತ್ತು ಚಳುವಳಿಗಳು ಸೃಷ್ಟಿಸಿದ ಪರಿಭಾಷೆ ಈ ಜನಾಂಗಕ್ಕೆ ಹೇಗೆ ಒಂದು ವಿಮುಕ್ತಿ ಮಾರ್ಗವಾಗುವುದೆಂಬುದು ಈ ಪ್ರಬಂಧದ ಪ್ರಮುಖ ಪ್ರಣಾಲಿಕೆಯಾಗಿದೆ. ನಿಗೂಢವಾದ, ಸಂಕೀರ್ಣವಾದ ಮನುಷ್ಯನ ಪ್ರಜ್ಞೆಯ ತರಂಗಗಳಿಗೆ ಸರಣಿ ಸರಣಿಯಾದ ಅನೇಕ ನೆಲೆಗಳಿವೆ. ಸ್ವತಂತ್ರವಾಗಿ ಪ್ರವರ್ತಿಸುವುದರೊಂದಿಗೆ ಅಂತರ್‌ಸಂಬಂಧಗಳನ್ನು ಸ್ಥಾಪಿಸಿಕೊಳ್ಳುವುದರಿಂದ ಇವುಗಳನ್ನು ಸರಿಯಾದ ಸಂದರ್ಭಗಳಲ್ಲಿ ಗ್ರಹಸುವುದೂ ಕಷ್ಟ ಸಾಧ್ಯವೆ ಆಗುತ್ತದೆ. ಈ ಮೂಲ ಆಶಯದಿಂದಾಚೆಗಿನ ಅಭಿವ್ಯಕ್ತಿಯ ಶ್ರಮಗಳೂ ವೈವಿಧ್ಯಪೂರ್ಣವಾಗಿವೆ. ಸಂಜ್ಞೆ ಸಂಕೇತ, ಭಾಷೆ, ಧ್ವನಿ, ಉದ್ಗಾರ, ಪ್ರತಿಕ್ರಿಯೆ ಮುಂತಾದ ಅನೇಕ ಅಂಶಗಳನ್ನು ಅದು ಒಳಗೊಂಡಿರುತ್ತದೆ. ಅಭಿವ್ಯಕ್ತಿ ಮಾಧ್ಯಮಗಳ ಪ್ರಕಾರ ಪ್ರಭಾವ ಹಾಗು ಪರಿಣಾಮಗಳು ಸಂದರ್ಭ ಸಂವಾದಿಗಳಾಗಿವೆ. ಉದಾ. ‘ಎಡಗೈನವರು’ ಮತ್ತು ‘ಬಲಗೈನವರು’ ಎನ್ನುವ ಪದಗಳು ಕೀಳು ಮತ್ತು ಮೇಲ್‌ಜಾತಿಗಳನ್ನು ಸಾಂಕೇತಿಕವಾಗಿ ಧ್ವನಿಸುತ್ತವೆ.

ನಿಜ, ಪ್ರತಿಯೊಬ್ಬ ಭಾಷಿಕನು/ಳು ವಿಭಿನ್ನವಾಗಿ ಮಾತನಾಡುತ್ತಾನೆ/ಳೆ. ಆದಾಗ್ಯೂ, ಅವುಗಳ ಮಧ್ಯ ಒಂದು ರಾಚನಿಕ ಸಂಬಂಧವನ್ನು ಅನುಸರಿಸುವುದುಂಟು. ಆಧುನಿಕ ಭಾಷಾವಿಜ್ಞಾನಿ ಫರ್ಡಿನಾಂಡ್ ಡಿ. ಸಸ್ಯೂರ್‌ನ ಆಲೋಚನೆ ಕ್ರಮವನ್ನು ಅಳವಡಿಸಿಕೊಂಡು ಒಂದು ಭಾಷೆಯನ್ನು ಅಥವಾ ಭಾಷಾ ಪ್ರಬೇಧವನ್ನು ಅರ್ಥೈಸಿಕೊಳ್ಳುವುದಾದರೆ, ಉಕ್ತಿ (parole) ಮತ್ತು ಭಾಷೆ (langua) ನಡುವೆ ಗುರುತಿಸಿ, ಆ ವ್ಯತ್ಯಾಸಗಳನ್ನು ರಚನೆ ಮತ್ತು ವ್ಯವಸ್ಥೆ ಎಂಬ ಪ್ರತಿಪಾದನೆಗಳಿಂದ ಏಕೀಭಾವಿಸಿ ಒಂದು ಸಂದರ್ಭದಲ್ಲಿ ಅದಕ್ಕೆ ಒಂದು ಅರ್ಥವನ್ನು ಕಲ್ಪಿಸಿಕೊಳ್ಳಲಾಗುವುದು. ಅಂದರೆ, ಉಕ್ತಿ ಎಂದರೆ ಆಡು ಮಾತು/ವ್ಯಕ್ತಿ ಭಾಷೆ/ಯಾವುದೇ ಸಂದರ್ಭದಲ್ಲಿ ಆಡುವ ಮಾತು, ಅದು ಒಂದು ವ್ಯವಸ್ಥೆಯಾದರೆ, ಇಂತಹ ಎಲ್ಲ ಮಾತುಗಳನ್ನು ಒಳಗೊಳ್ಳುವ ಭಾಷೆ ಒಂದು ರಚನೆಯಾಗುತ್ತದೆ. ಈ ವ್ಯವಸ್ಥೆ ಮತ್ತು ರಚನೆಗಳು ವ್ಯಷ್ಠಿ ಮತ್ತು ಸಮಷ್ಠಿ ಪ್ರಜ್ಞೆಗಳನ್ನು ಗ್ರಹಿಸುವುದಕ್ಕೆ ಸಹಾಯಕಾರಿ. ಅಂದರೆ, ಇದರ ಒಟ್ಟು ಸಾರ ಅರ್ಥವೆನ್ನುವುದು ಹುಟ್ಟಿಕೊಳ್ಳವುದು ವ್ಯವಸ್ಥೆ ಮತ್ತು ರಚನೆಗಳ ಸಮನ್ವಯದಲ್ಲಿ ಈ ಅರ್ಥಗಳ ಯಾದೃಚ್ಛಿಕವಾದರೂ, ಒಂದು ಸಮಾಜ, ಸಂಸ್ಕೃತಿ, ಜನಾಂಗ, ರಾಜಕೀಯ ಮತ್ತು ಮುಂತಾದವುಗಳ ಪ್ರಾತನಿಧೀಕರಣವನ್ನು ಪ್ರತಿನಿಧಿಸುತ್ತವೆ. ಈ ಹಿನ್ನೆಲೆಯಲ್ಲಿಲ ಭಾಷೆ, ಪರಿಭಾಷೆ, ಪ್ರಬೇಧ ಮತ್ತು ವ್ಯತ್ಯಾಸಗಳನ್ನು ವಿಶ್ಲೇಷಣೆ ಮಾಡುವುದರ ಮೂಲಕ ಒಂದು ಜಾತಿ, ವರ್ಗ, ಜನಾಂಗದ ಗ್ರಹಿಕಾ ಸಾಮರ್ಥ್ಯ ಮತ್ತು ಪರಿಭಾವನೆಗಳನ್ನು ಗುರುತಿಸಬಹುದು. ಇವುಗಳ ಮಧ್ಯ ಇನ್ನೂ ಒಂದು ಸಮಾಜೋಧಾರ್ಮಿಕ ಅಥವಾ ಸಾಂಸ್ಕೃತಿಕ ಪ್ರಾಬಲ್ಯ (Dominance) ಮತ್ತು ಯಜಮಾನ್ಯ (Hegemanes) ಪ್ರಭಾವಗಳನ್ನು ಭಾಷೆಯ ವಿಶ್ಲೇಷಣೆಯ ಮುಖಾಂತರ ಒಂದು “ಸಾಮಾಜಿಕ ಕಥನ” ಅಥವಾ “ಮಾನವ ಚರಿತ್ರೆ”ಗಳನ್ನು ಸ್ಪಷ್ಟವಾಗಿ ಗ್ರಹಿಸಬಹುದು. ಆದ್ದರಿಂದ ಭಾಷೆಯನ್ನು ಒಂದು ನಿರ್ಣಾಯಕ ಮಾನದಂಡವಾಗಿ ಬಳಸಿಕೊಂಡು ಆ ಮೂಲಕ ಒಂದು ವಿಶಿಷ್ಟವಾದ ಪರಿಭಾಷೆ ಮತ್ತು ಪರಿಭಾವನೆಗಳನ್ನು ಅರ್ಥೈಸಿಕೊಳ್ಳಬಹುದು.

ಈ ಸೈದ್ದಾಂತಿಕ ವಿವರಣೆಗೆ ಪೂರಕವಾಗಿ “ದಲಿತ” ಎನ್ನುವ ಪದದ ನಿಷ್ಪತ್ತಿಯನ್ನು ನೋಡುವುದಾದರೆ, ದಲಿತರ ಪದವು ವ್ಯಾಪಕವಾಗಿ ಎಲ್ಲ ಭಾರತೀಯ ಭಾಷೆಗಳಲ್ಲಿ ಬಳಕೆಯಲ್ಲಿದೆ. ‘ದಲಿತ’ ಪದಕ್ಕೆ ಸಂವಾದಿಯಾಗಿ ಇಂಗ್ಲಿಷಿನಲ್ಲಿ burst, split, scattered, dispersed, broken, torn, as under, destroged, crushed ಮುಂತಾದ ಅರ್ಥಗಳು ಈ ಎಲ್ಲ ಅರ್ಥಗಳನ್ನು ಕ್ರೂಢೀಕರಿಸಿ, ಭಾರತೀಯ ‘ಅಸ್ಪೃಶ್ಯ’ ಮತ್ತು ‘ಬುಡಕಟ್ಟು’ ಜನರಿಗೆ ದಲಿತರು ಎಂದು ಗುರುತಿಸುವರು. ‘ದಲಿತ’ ರೂಪದ ಮೂಲಧಾತು ‘ದಲ್’ ಈ ‘ದಲ್’ ಧಾತುವಿನ ನಾಮವಿಶೇಷ ದಲಿತ. ಈ ‘ದಲಿತ’ ಪದದ ಜೊತೆಗೆ ‘ದಲಿತತ್ವ’ ಎನ್ನುವ ಇನ್ನೊಂದು ಪದವು ವ್ಯಾಪಕವಾಗಿ ಬಳಕೆಗೊಳ್ಳುವುದು. ಈ ದಲಿತತ್ವವು (Dalitism) ಭಾರತೀಯ ಕೀಳು ಮತ್ತು ಉಪೇಕ್ಷಿತ ಜನರ ತತ್ವ (Ideology) ಮತ್ತು ರಾಷ್ಟ್ರೀಯತೆಗಳ ಗುರುತಿಸುವುದು. ಈ ದಲಿತ ಮತ್ತು ದಲಿತತ್ವ ಸಿದ್ಧಾಂತಗಳು ಅಂಬೇಡ್ಕರ್ ವಾದದಲ್ಲಿ ಬೇರೂರಿಕೊಂಡಿವೆ. ಅಂದರೆ, ಭಾರತೀಯ ಅಸ್ಪೃಶ್ಯತೆ, ಜಾತೀಯತೆ ಮುಂತಾದ ಅನಿಷ್ಟಗಳ ವಿರುದ್ಧ ಹೋರಾಟ ವಿಮೋಚನ ಚಳುವಳಿಯಾಗಿ ರೂಪಗೊಂಡಿರುತ್ತವೆ. ಈ ಸಾಮಾಜಿಕ ಚಳುವಳಿಗಳಲ್ಲಿ ಬಳಕೆಯಾಗುವ ಭಾಷೆ ಮತ್ತು ಭಾಷಾ ಸಿದ್ಧಾಂತವು ಈ ಜನರ ಸಾಮಾನ್ಯ ಜ್ಞಾನ. ಅರಿವು ಮತ್ತು ಆ ಭಾಷೆಯ ರಚನಾ ವಿನ್ಯಾಸವನ್ನು ಸೂಚಿಸುವವು. ಹಾಗಾಗಿ, ಭಾಷಾ ತತ್ವಶಾಸ್ತ್ರೀಯ ಆಲೋಚನೆ ಕ್ರಮದಿಂದ ಯೋಚಿಸುವಾಗ ಸೃಷ್ಟಿಯಾಗುವ ವಿಚಾರವೆನೆಂದರೆ, ಭಾಷಿಕರೂಪಗಳು ಮತ್ತು ಸಾಮಾಜಿಕ ರಚನೆಗಳು ತಮ್ಮ ಮಧ್ಯ ಸಂಬಂಧವನ್ನು ಏರ್ಪಡಿಸಿಕೊಳ್ಳುವುದು ಎಂಬುದು. ಅಂದರೆ, ಈ ಭಾಷಾ ಸಿದ್ಧಾಂತಗಳು ಯಾವಾಗಲೂ ಸಾಮಾಜಿಕ ಮತ್ತು ರಾಜಕೀಯ ಚಹರೆಗಳನ್ನು ನಿರ್ಧರಿಸುವುದಕ್ಕೆ ಮತ್ತು ಕಟ್ಟಿಕೊಳ್ಳುವುದಕ್ಕೆ ದಾರಿ ಮಾಡಿಕೊಳ್ಳುತ್ತವೆ (Woolord : 1998)ಎಂಬ ವೂಲಾರ್ಡರ ಮಾತುಗಳು ಸ್ಪಷ್ಟ. ಭಾಷಾತತ್ವಶಾಸ್ತ್ರೀಯ ತರ್ಕದ ಪ್ರಖರತೆ, ಬಿಗು, ವ್ಯಾಪಕತೆ, ಪರಿಣಾಮಗಳು ಮತ್ತು ಎಚ್ಚರಗಳನ್ನು ಗಮನದಲ್ಲಿಟ್ಟುಕೊಂಡು ಅರ್ಥಾರ್ಥ ಸಂಬಂಧಗಳ ಪರಿಕಲ್ಪನೆಗಳನ್ನು ಪದಗಳನ್ನಾಗಿ ಬಳಸುವ ಪ್ರಕ್ರಿಯೆಯನ್ನು ಗುರುತಿಸುವುದು. ಇದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, “ಸತ್ಯದ ಉತ್ಪಾದನೆಯ ಮೂಲಕವಲ್ಲದೇ ನಾವು ಅಧಿಕಾರವನ್ನು ಚಲಾಯಿಸುವುದು ಸಾಧ್ಯವಿಲ್ಲ” ಮಿಶಲ್ ಫೂಕೋ ಮಾತಿನ ಅರ್ಥವೂ ಇದೆ. ಭಾಷಾ ತತ್ವಶಾಸ್ತ್ರೀಯ ಹೊಸ ಹುಟುಕಾಟ (ಬಲ್ಲಾಳ. ೨೦೦೦). ಇದನ್ನು ಇನ್ನೂ ಸ್ಪಷ್ಟಪಡಿಸುವುದಾದರೆ, ಸಂಘರ್ಷಮಯವಾಗಿದ್ದರೂ ಸಹಜ ಎಂಬಂತೆ ಕಾಣುವ ಭಾಷಿಕ ಅಥವಾ ಸಾಂಸ್ಕೃತಿಕ ವೈವಿಧ್ಯಮಯ ವ್ಯಾಪಾರಗಳನ್ನು ಆಳುವ ಕೆಲವೇ ಶಕ್ತಿ ಕೇಂದ್ರಗಳು ಕಣ್‌ಮರೆಯಲ್ಲಿ ವ್ಯವಸ್ಥಿತವಾಗಿ ಕಾರ್ಯಪ್ರವೃತ್ತವಾಗಿವೆ ಎಂದು ಸೂಚಿಸುವ ಪ್ರಭಾವಶಾಲಿ ಚಿಂತನ ವಿಧಾನಗಳು ಉದ್ಘಾಟನೆಗೊಂಡವು. ಹಾಗಾಗಿ, ಸಂರಚನವಾದವು ತೋರಿಸುವ, ವೈವಿಧ್ಯಮಯ ಸತ್ಯಗಳ ತಳಗಟ್ಟಿಯಾಗಿ ಸ್ಥಿತವಾಗಿರುವ, ಈ ವೈವಿಧ್ಯಮಯತೆಗಳನ್ನು ಸಂಬಂಧ ಮತ್ತು ಅಂತರಳೆಂಬ ಸುಸಂಬದ್ಧತೆಯ ಕ್ರಮಪ್ರಕಾರವಾಗಿ ವ್ಯಾಕರಣದಂತ ಆಳುವ ಸಂರಚನೆಗಳನ್ನು ಡಿಶನ್‌ಸ್ಟ್ರಕ್ಟ್ ಮಾಡುವ ವೈಚಾರಿಕ ಅಗತ್ಯತೆಗಳು ಪರಿಷ್ಕರಣಗೊಂಡವು. ಈ ಕೆಲವು ಸೈದ್ಧಾಂತಿಕ ಮಾಹಿತಿಗಳನ್ನು ಈ ಲೇಖನದ ಆಶಯಕ್ಕೆ ಪೂರಕವಾಗಿ ಬಳಸಿಕೊಂಡು ದಲಿತ ಪರಿಭಾಷೆ, ಹೇಗೆ ಅನನ್ಯತೆ ಮತ್ತು ಪ್ರತಿರೋಧಕ್ಕೆ ಒಂದು ಮಾನದಂಡವಾಯಿತೆಂಬುದನ್ನು ಚರ್ಚಿಸಲಾಗಿದೆ.

ದಲಿತ ಭಾಷೆ : ರಚನೆ ಮತ್ತು ಸ್ವರೂಪ

ನಮ್ಮ ಈ ಹೊತ್ತಿನ ಕಾಲವನ್ನು ಗ್ರಹಿಸುವುದಕ್ಕೆ ಅಥವಾ ಒಂದು ಜನಾಂಗ ಅಥವಾ ಜಾತಿಯ ಗ್ರಹಿಕಾ ಸಾಮರ್ಥ್ಯಗಳನ್ನು ಸರಿಯಾಗಿ ಅರಿತುಕೊಳ್ಳುವುದಕ್ಕೆ ಭಾಷೆ ಮತ್ತು ಭಾಷಿಕ ನಿಲುವುಗಳು ಅತ್ಯಂತ ಪರಿಣಾಮಕಾರಿ ಮಾನದಂಡಗಳಾಗಿ ಒದಗಿಬರುತ್ತವೆ. ಈ ಭಾಷಾ ವಿಶ್ಲೇಷಣೆಯು ನಮ್ಮ ಅರಿವಿನ ವಿಸ್ತಾರವನ್ನು ಕೂಡಾ ಹೆಚ್ಚಿಸುವುದು. ಅಂದರೆ, ನೋಮ್ ಜೋಮ್‌ಸ್ಕಿಯವರ ಪ್ರಕಾರ, “ಭಾಷೆಯ ಅಧ್ಯಯನವು ನಿಯಮಬದ್ಧವಾಗಿ ವ್ಯವಸ್ಥೆಯನ್ನು, ಮನುಷ್ಯನ ಮನೋರಚನೆಯನ್ನು ಕೊನೆಯ ಪಕ್ಷ ಭಾಗಶಃ ಪ್ರತಿಫಲಿಸುವಂತೆ, ನಿಯಮ ವ್ಯವಸ್ಥೆಯ ಚೌಕಟ್ಟಿನೊಳಗೆ ನಡೆಯಬಹುದಾದ ಸೃಜನ ಕ್ರಿಯೆಯ ಸಾಧ್ಯತೆಗಳನ್ನು ತಿಳಿಯುವಂತಹ ಕೆಲವು ಹೊಳಹುಗಳನ್ನು ನಿಡುತ್ತೆ ಎಂಬುದು ನನ್ನ ಅನಿಸಿಕೆ” (ನೋಮ್‌ಚೋಮ್‌ಸ್ಕಿ : ೨೦೦೨) ಎಂದು ಭಾಷೆ ಮತ್ತು ಸ್ವಾತಂತ್ರ್ಯವನ್ನು ಕುರಿತು ಹೇಳುತ್ತಾರೆ. ಈ ಮಾತುಗಳು ಈ ಪ್ರಬಂಧದ ಆಶಯವನ್ನು ಸಾಕ್ಷಿಕರಿಸುತ್ತವೆ. ಹಲವು ಸಾಮಾಜಿಕ ಆಯಾಮಗಳನ್ನು ಗಮನದಲ್ಲಿಟ್ಟುಕೊಂಡು ಜನಾಂಗೀಯ ಅಥವಾ ಪ್ರಾದೇಶಿಕ ಭಾಷಾ ಪ್ರಬೇಧಗಳನ್ನು ಗುರುತಿಸುವುದು ವಾಡಿಕೆ. ಆದರೆ, ಈಗ ಸಮಾಜೋ, ರಾಜಕೀಯ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸ್ಥಿತ್ಯಂತರ ಅಥವ ಪಲ್ಲಟಗಳಿಂದ ಹಲವು ವ್ಯತ್ಯಾಸಗಳಾಗಿರುವುದುಂಟು. ಹಾಗಂತ ಈ ಪ್ರಬೇಧ ಅಥವಾ ವ್ಯತ್ಯಾಸಗಳು ಮತ್ತು ವೈವಿಧ್ಯತೆಗಳು ಕಣ್ಮರೆಯಾಗಿವೆಂದಲ್ಲ. ಇಲ್ಲಿ ಕೆಲವು ಭಾಷಾ ರಚನೆಯ ಪ್ರಾತಿನಿಧಿಕ ಉದಾಹರಣೆಗಳ ಮೂಲಕ ಧಾರವಾಡ ಪರಿಸರದ ದಲಿತರ ಕನ್ನಡದ ವೈಶಿಷ್ಟ್ರಗಳನ್ನು (ಬ್ರಾಹ್ಮಣೇತರ ವೈಶಿಷ್ಟ್ಯಗಳು) ಗುರುತಿಸುವುದಕ್ಕೆ ಪ್ರಯತ್ನಿಸಲಾಗಿದೆ. ಈ ವೈಶಿಷ್ಟ್ಯಗಳು ಸ್ಪಷ್ಟವಾಗಿ ದಲಿತ ಮತ್ತು ಇನ್ನೂಳಿದ ಶೂದ್ರ ವರ್ಗದವರ ಮಧ್ಯ ಭಿನ್ನತೆಗಳನ್ನು ಗುರುತಿಸುವುದಕ್ಕೆ ಸಾಧ್ಯ ವಿಲ್ಲದಿದ್ದರೂ, ದಲಿತರು ಬಳಸುವ ಭಾಷಾ ರೂಪಗಳು, ವಿಶಿಷ್ಟ ಅನುಭವ, ಸಂವೇದನೆಯನ್ನು ಸಾಕ್ಷಿಕರಿಸುವ ಭಾಷಾ ರೂಪಗಳಾಗಿ ಗುರುತಿಸಲ್ಪಟ್ಟಿವೆ. ಉದಾ.ದಲಿತರು ಅನುಭವಿಸಿದ ಶೋಷಣೆ, ಅನ್ಯಾಯ, ಸಾಮಾಜಿಕ, ಸಾಂಸ್ಕೃತಿಕ ಅಸಮತೋಲನ, ಹಸಿವು ವಿಷಾದ ಮುಂತಾದವುಗಳನ್ನು ಪ್ರತಿನಿಧಿಸುವ ಸೂಚಕಗಳಾಗಿ ಬಳಕೆಗೊಂಡಿವೆ. ಹಾಗಾಗಿ ದಲಿತರ ಭಾಷೆಯನ್ನು ವಿಶ್ಲೇಷಿಸುವ ಜರೂರಿದೆ. ಈ ವೈಶಿಷ್ಟ್ಯಗಳನ್ನು ಸಾಂಕೇತಿಕವಾಗಿ ಬಳಸಿಕೊಂಡು ಒಟ್ಟು ದಲಿತ ಭಾಷೆ, ಪರಿಭಾಷೆಯಿಂದ, ಆ ಸಾಂಸ್ಕೃತಿಕ ನಿಲುವುಗಳನ್ನು ಮತ್ತು ಸಂವೇದನೆಯನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಲಾಗಿದೆ. ಈ ಕೆಳಕಂಡ ಹಲವು ಉದಾಹರಣೆಗಳ ಮೂಲಕ ಜನಾಂಗ ಮತ್ತು ಪ್ರಾದೇಶಿಕ ಭಿನ್ನತೆಗಳನ್ನು ಗುರುತಿಸಬಹುದು. ಉದಾಹರಣೆಗಾಗಿ ವಿಭಕ್ತಿ ಪ್ರತ್ಯಯಗಳ ವಿಶಿಷ್ಟ ರೂಪಗಳನ್ನು ನೋಡಬಹುದು.

ಪ್ರಥಮಾ : ಏಕವಚನದಲ್ಲಿ -ಉ-ಬಹುವಚನದಲ್ಲಿ ಬಳಕೆಯಲ್ಲಿದೆ, ಹುಡುಗ – ಹುಡಗರು, ಮನೆ-ಮನೆಗಳು.

ದ್ವಿತೀಯಾ : ನ, ನ್ನ ಇಲಲಿ -ನ, -ನ್ನ ಪ್ರತ್ಯಯಗಳು ಅಕಾರಂತ, ಆಕಾರಂತ ಪುಲ್ಲಿಂಗ, ಸ್ತ್ರೀಲಿಂಗ ಶಬ್ದ ಸರ್ವನಾಮಗಳಲ್ಲಿ ಕಾಣಬಹುದು. ಹುಡಗನ್ನ, ಅದನ್ನ, ರಾಮ್ಯಾ ಮಗನ್ನ ಹೊಡ್ದಾ-ದ್ಯಾಮಿ ಅವನ್ನ ಲಗ್ನ ಅಗ್ಯಾಳ ಹಾಗೂ – ಮರs ಕಡಿಯ್ಯಾಕೆ ಹೋಗ್ಯಾನ್, ಕಲ್ಲು ಬಿದ್ವು.

ತೃತೀಯ : -ಇಂದ-ಲಿಂದ ಇವುಗಳ-ಏಕವಚನದಲ್ಲಿ : ಗಿಡದಿಂದ, ಗಿಡದ್ಲಿಂದ, ಮಂಗ್ಯಾ ಗಿಡದ್ಲಿಂದs ಜಂಕೊಂತs ಹೊಯ್ತು.

ಚತುರ್ಥಿ : -ಗೆ, -ಗ, ಕ, ಕ್ಕ್, -ಗೆ ಇಕಾರದ ಮುಂದೆ, -ಗ- ಅ, ಆ, ಉ ಗಳ ಮುಂದೆ: -ಕ, -ಕ್ಕ ಅಕಾರದ ಮುಂದೆ ಉದಾ. ಮಗಿಗೆ, ಗಿಳಿಗೆ, ಕಾಗಿಗೆ, ಮನಿಗೆ, -ಅಂದ ಮನಿಗೆ ಹ್ವಾದ-ನಮ್ಮ ಹುಡುಗ್ಗ ಜ್ವರಾ ಬಂದಾವು. ಮಂಗ್ಯಾಗ ಹೆಂಡಾ ಕುಡಿಸಿದ್ಯಾಂಗ – ಹೊಲಕ್ಕ ಹೋಗ್ಯಾನ ಗಿಡಕ್ಕ ಕಲ್ಲು ಹೊಗಿತಾನs ಮತ್ತು ಒಗಿತಾನs ಷಷ್ಠಿ : -ಅ- ಮರದ, ಹುಡುಗನ ಸಪ್ತಮಿ : ಅಲ್ಲಿ, ಆಗ ಮರದಲ್ಲಿ-ಮರದಾಗ ಪಕ್ಷಿ ಮರದಾಗ ಗೂಡು-ಕಟ್ಟ್ಯೆತಿ.

ಇವುಗಳನ್ನು ಹೊರತುಪಡಿಸಿ ಕೆಲವು ವಿಭಕ್ತಿ ಪ್ರತ್ಯಯಗಳು ರಾಚನಿಕ ಗೊಂದಲಗಳನ್ನು ಸೃಷ್ಟಿಸುತ್ತವೆ. ಉದಾ. ಹೊಲದಾಗ ಅಹ್ಹಾನ ಮತ್ತು ಹೊಲದಾಕ ಹೋಗ್ಯಾನs -ಹೊಲಕ ಹೋಗ್ಯಾನs ಇಲ್ಲಿ ಹೊಲದಾಕ ಮತ್ತೂ ಹೊಲಕಗಳನಡುವೆ ಸ್ವಚ್ಛಂದ ಪರಿವರ್ತನೆ ಆಗಬಹುದೆಂದು ಅರ್ಥೈಸಿಕೊಂಡಾಗಲೂ -ಹೊಲದಾಗ -ಹೊಲದಾಕ-ಹೊಲಕಗಳ ಮಧ್ಯ ಒಂದು ಅಸ್ಪಷ್ಟವಾದ ರಾಚನಿಕ ತೊಡಕು ಇದ್ದ ಹಾಗೆ ಕಂಡುಬರುವುದು. ಮತ್ತೂ ಇನ್ನೊಂದು ಪ್ರಮುಖವಾದ ಅಂಶ. ‘-ಇರು-‘ ಧಾತುವಿನ ರೂಪಗಳು ವರ್ತಮಾನ ಕಾಲ – ಪ್ರಪು : ಹೀನಿ – ಹೀವಿ, ದ್ವಿಪು : ಹೀದಿ-ಹೀರಿ, ತೃತೀಯ ಪ್ರನಾಳ-ಹಾಳ, ಹದ-ಅದ-ಅದ ಮತ್ತು ಹಾರ-ಆದ-ಅವ ಭೂತಕಾಲ : ಬಂದ-ಬಂದ್ಯಾ : ಬಂದ್ವಿ-ಬಂದಾವೆ : ಬಂದ್ರಿ – ಬಂದ್ರಿ, ಬಂದ-ಬಂದ್ಳು ಬಂತೂ (ಬನ್ತು), ಬಂದ್ರು-ಬಂದ್ವು ಮತ್ತು ಕ್ರಿಯಾಪದದ ಕೆಲವು ನ್ಯೂನ ರೂಪಗಳು :ಮ್ಯಾಡಕಾರ-ಮ್ಯಾಡಿಕ್ಯಾಸ, ಮ್ಯಾಡಕ್ಯಾಸಿಂದ-ಬಂದಕ್ಯಾರ, ಬಂದಕ್ಯಾಸಿನಿಂದ-ತಿಂದಕ್ಯಾಸಿಂದ…… ವಿಧ್ಯರ್ಥ ರೂಪಗಳು : ಹೋಗೋಣ-ಹೋಗsಮು, ಬರೋಣ-ಬರsಮು ಬಂದು ವಾಚಕಗಳು : ಅಪ-ಯಪಾ/ಯಪ್ಪ, ಅವ-ಯವ್ವ ಅಥವಾ ಯ್ಯಾವ್ವ, ಅಕ್ಕ-ಯಕ್ಕ ಅಥವಾ ಯ್ಯಾಕ್ಕ ಮತ್ತು ಅಣ್ಣ-ಯಣ್ಣ-ಯನ್ನ ಮುಂತಾದವು. ಸರ್ವನಾಮಗಳು : ಅದೆ-ಇದೆ, ಅಂವ-ಇಂವ, ಅದು-ಇದು, ಅಕ್ಕಡೆ-ಇಕ್ಕಡೆ, ಅಚ್ಚೆಕಡೆ-ಇಚ್ಚೆಕಡೆ, ಅಲ್ಲಿ-ಇಲ್ಲಿ (ಕಲ್ಲಿ) ಅಂವಬೀ-ಇಂವಬೀ (ಮರಾಠಿ ಪ್ರಭಾವದಿಂದ) ಸಂಖ್ಯಾವಾಚಕಗಳು : ಮರಾಠಿ ಪ್ರಭಾವದಿಂದ ಹೆಚ್ಚು ಮರಾಠಿ ಸಂಖ್ಯಾವಾಚಕಗಳು ಬಳಕೆಯಾಗುತ್ತವೆ. ಸಾಡೆಬಾರs, ಅಡಿಬ್, ಶಂಬೋರ್ ಮುಂತಾದವು. ಕೆಲವು ವಾಕ್ಯಗಳು : ಬರೇ ಹೊತ್ತಿನಲ್ಲಿ > ಬರೊ ಹೊತ್ನಾಗ, ಹೋಗೊ ಹೊತ್ನಾಗ. ಪದಬಳಕೆ : ಸಣ್ಣ-ಸಣ್ಣಕ, ದೊಡ್ಡ-ದೊಡ್ಡಕ, ಕೇರಿ-ಕ್ಯಾರಿ ಹೊಲ-ಹ್ವಾಲs, ಕೆರೆ-ಕೆರಿ, ಕಪ್ಪಸ-ಕಬಸs ಮುಂತಾದವು. ಈ ಕೆಲವು ಪ್ರಾತಿನಿಧಿಕ ಭಾಷಾ ಪ್ರಭೇದಗಳನ್ನು ಪರಿಶೀಲಿಸಿದಾಗ ಅನೇಕ ವೈಶಿಷ್ಟ್ಯಗಳು ಕಂಡುಬರುತ್ತವೆ. ಈ ವೈಶಿಷ್ಟ್ಯಗಳ ಸಹಾಯದಿಂದ ಸ್ಪಷ್ಟವಾಗಿ ಗುರುತಿಸಲಿಕ್ಕೆ ಸಾಧ್ಯವಾಗುವುದು. ಎರಡು ಪ್ರಮುಖ ಅಂಶಗಳು.

೧. ಪ್ರಾದೇಶಿಕ ಭಿನ್ನತೆ

೨. ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ಪ್ರಬೇಧಗಳು

ಇವತ್ತೀನ ಜಾಗತೀಕರಣ, ತಂತ್ರಜ್ಞಾನ ಮತ್ತು ಶಿಕ್ಷಣದಂತ ಪ್ರಭಾವಗಳಿಂದ ಹೆಚ್ಚಿನ ವೈಶಿಷ್ಟ್ಯಗಳು ಮಾಯವಾಗಿರುವ ಸಾಧ್ಯತೆ ಇರುವುದು. ಇದೆಲ್ಲಕ್ಕಿಂತ ಹೆಚ್ಚಾಗಿ ಭಾಷೆಯನ್ನು ಬಳಸುವ ಜನ, ವರ್ಗ, ಜಾತಿ, ಮತ್ತು ಧರ್ಮಗಳ ಆಧಾರದ ಮೇಲೆ ಅವರ ಸಂಸ್ಕೃತಿ ಪರಿಭಾಷೆ, ಸಂವೇದನೆ ಮತ್ತು ಸೂಕ್ಷ್ಮತಿಗಳನ್ನು ಸ್ಪಷ್ಟವಾಗಿ ಗ್ರಹಿಸಬಹುದು. ಆದ್ದರಿಂದ ಈ ಕೆಲವು ಪ್ರಬೇಧ ಅಥವಾ ಭಾಷಿಕ ರೂಪಗಳಿಂದ ದಲಿತ ಪರಿಭಾಷೆಯನ್ನು ಗುರುತಿಸುವ ಮುಖ್ಯ ಪ್ರಣಾಲಿಕೆ ಈ ಪ್ರಬಂಧದ ಜವಾಬ್ದಾರಿಯಾಗಿದೆ.

ದಲಿತ ಭಾಷೆ, ಸಾಮಾಜಿಕತೆ ಮತ್ತು ರಾಜಕಾರಣ

ಒಂದು ನಿರ್ದಿಷ್ಟ ಜಾತಿ,ವರ್ಗ ಮತ್ತು ವರ್ಣದ ಜನ ಬಳಸುವ ಭಾಷೆಯನ್ನು ವ್ಯಾಖ್ಯಾನಿಸುವ ಅಥವಾ ಅರ್ಥೈಸುವುದರ ಮೂಲ ಉದ್ದೇಶ ಆ ಜನರ ಗ್ರಹಿಕೆಗಳನ್ನು ಮತ್ತು ಗ್ರಹಿಕಾ ಸಾಮರ್ಥ್ಯಗಳನ್ನು ಅರ್ಥೈಸಿಕೊಳ್ಳುವುದು. ಅಂದರೆ, ಒಂದು ಸಮುದಾಯ ಅಥವಾ ಸಮಾಜದಲ್ಲಿ ಬಳಕೆಯಾಗುವ ಭಾಷೆ ತುಂಬಾ ಸಂಕೀರ್ಣವಾಗಿರುತ್ತದೆ. ಕಾರಣ ಅದು ಒಂದು ನಿರ್ದಿಷ್ಟ ಜನಾಂಗದ ಭಾಷೆ ಮಾತ್ರವಾಗಿರದೆ ಹಲವು ಜನಾಂಗ, ಜಾತಿ ಅಥವಾ ಧರ್ಮಗಳೊಂದಿಗೆ ಸಹಯೋಗಗೊಂಡಿರುವುದು. ಆದ್ದರಿಂದ, ಇಂತಹ ಒಂದು ಸಂಕೀರ್ಣಗೊಂಡ ಸಾಂಸ್ಕೃತಿಕ ಸಂದರ್ಭದಲ್ಲಿ ಭಾಷೆಯು, ಹೇಗೆ ಒಂದು ಸಾಂಸ್ಕೃತಿಕ ಅನನ್ಯತೆ ಅಥವಾ ಚಹರೆಳನ್ನು ಗುರುತಿಸುವುದು ಎಂಬುದನ್ನು ಅರ್ಥೈಸಿಕೊಳ್ಳುವುದು. ಈ ಆಲೋಚನ ಕ್ರಮದಿಂದ ಸಾಮಾಜಿಕತೆಯನ್ನು ವಿಶ್ಲೇಷಣೆ ಮಾಡುವುದಕ್ಕೆ ಸಾಧ್ಯ. ಈ ವಿಶ್ಲೇಷಣೆಯಿಂದ ಸಿದ್ಧವಾಗುವ ಮಾತೆಂದರೆ, ಪ್ರತಿಯೊಂದು ಸಂಸ್ಕೃತಿಯು ತನ್ನದೇ ಆದ ಭಾಷಿಕ ಮತ್ತು ಸಾಂಸ್ಕೃತಿಕ ಅನನ್ಯತೆಗಳನ್ನು ಹೊಂದಿರುವುದೆಂದು ಜೊತೆ ಜೊತೆಗೆ ಸಾಮಾಜಿಕತೆ ವಾಸ್ತವಿಕತೆಯ ನಿಲುವುಗಳನ್ನು ಕೂಡಾ ಸ್ಪಷ್ಟವಾಗುತ್ತ ಹೋಗುತ್ತದೆ. ಆದ್ದರಿಂದ ಇದರ ಮೌಲ್ಯಮಾಪನಕ್ಕೆ ಭಾಷೆಯನ್ನು ಮುಖ್ಯ ಆಯಾಮವಾಗಿ ಬಳಸಿಕೊಂಡು ಒಂದು ಸಾಂಸ್ಕೃತಿಕ ಸಂದರ್ಭದ ವೈಚಾರಿಕ ಭಾವನಾತ್ಮಕ ನಿಲುವುಗಳನ್ನು ಕಂಡುಕೊಳ್ಳಬಹುದು. ಭಾಷೆಯ ಉದ್ದೇಶ ಒಂದೇ ನಿವೇದನೆ ಮಾಡುವುದಲ್ಲ. ಅದರ ಮೂಲ ಉದ್ದೇಶ ಸಾಂಸ್ಕೃತಿಕ, ಸಾಮಾಜಿಕ ಮತ್ತು ರಾಜಕೀಯ ಚಹರೆಗಳನ್ನು ನಿರೂಪಿಸುವುದು ಅಥವಾ ನಿರ್ಮಿಸುವುದು. ಈ ಚಹರೆಗಳನ್ನು ಸಾಂಕೇತಿಕವಾಗಿ, ರೂಪಾತ್ಮಕವಾಗಿ ಅಥವಾ ಪ್ರತಿಮೆಗಳ ಮೂಲಕ ರಚನೆಗೊಳ್ಳಬಹುದು. ಅದೆಂದರೆ, ವಿಲಿಯಮ್ ಹಂಬೊಲ್ಟನ ಮಾತುಗಳನ್ನು ಈ ಸಂದರ್ಭಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು, “ಭಾಷೆ ಮೂರ್ತತೆ-ಅಮೂರ್ತತೆಗಳ ನಡುವೆ, ದೃಶ್ಯ-ಅದೃಶ್ಯಗಳ ನಡುವೆ, ವ್ಯಕ್ತಿ-ವ್ಯಕ್ತಿಗಳ ನಡುವೆ ಸೇತುವೆ ಕಟ್ಟುತ್ತದೆ”. ಈ ವಿಚಾರ ಸರಣಿಗಳನ್ನೆಲ್ಲ ಏಕೆ ಇಲ್ಲಿ ಚರ್ಚಿಸಲಾಗಿದೆಯೆಂದರೆ, ಭಾಷೆಯ ವಿವಿಧ ಆಯಾಮ ಅಥವಾ ನಿಲುವುಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಆ ಮೂಲಕ ಸಾಮಾಜಿತೆ ಎನ್ನುವ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವುದು ಸುಲಭ. ಈ ಸಂದರ್ಭದಲ್ಲಿ, ಬರ್ನಸ್ಟೇನ್ ಎಂಬ ಸಮಾಜೋ-ಭಾಷಾವಿಜ್ಞಾನಿ ಪರಿಚಯಿಸಿದ ಪರಿಕಲ್ಪನೆಗಳಾದ “ನಿರ್ಬಂದಿತ” (Restricted code) ಮತ್ತು “ವ್ಯಾಪಕ” (Elobarated code) ಭಾಷಾರೂಪಗಳು ಅಂಶಗಳು ಕೆಲವು ಸೈದ್ದಾಂತಿಕ ತಕರಾರುಗಳನ್ನು ಮುಂದೊಡ್ಡುವವು. ಅಂದರೆ, ಬರ್ನಸ್ಟೇನ್ ಎಡ್ವರ್ಡ್ ಸಪೀರ್ ಮತ್ತು ಬೆಂಜಮಿನ್ ವೂರ್ಫರ “ಭಾಷಿಕ ಸಾಪೇಕ್ಷ ಪ್ರಮೇಯ” (Lingnistic relativity hypothises) ಯೋಚನಾ ಕ್ರಮದನ್ವಯ ಈ ಮೇಲ್ಕಾಣಿಸಿದ ಪರಿಕಲ್ಪನೆಗಳನ್ನು ಚರ್ಚಿಸುತ್ತಾನೆ. ಈ “ನಿರ್ಬಂದಿತ” ಮತ್ತು “ವ್ಯಾಪಕ” ಭಾಷಾಕಲಾಪಗಳ ಬಳಕೆ, ಕಾರ್ಮಿಕ, ದಲಿತ ಮತ್ತು ಇನ್ನಿತರ ಶೂದ್ರವರ್ಗಗಳು ಬಳಸುವ ಭಾಷಾರೂಪಗಳು. ನಿರ್ಬಂಧಿತ ಭಾಷಾರೂಪಗಳೊಂದಿಗೆ ಮಾತ್ರ ಸಹಯೋಗಗೊಂಡಿರುತ್ತವೆ. ಹಾಗಾಗಿ, ಒಂದು ಭಾಷೆಯ ಭಾಷಾರೂಪಗಳನ್ನು ಮತ್ತು ಅವುಗಳ ರಚನಾ ವಿನ್ಯಾಸಗಳನ್ನು ಕುರಿತು ಯೋಚಿಸುವಾಗ, ಇವುಗಳು ಎಷ್ಟರಮಟ್ಟಿಗೆ, ಒಂದು ನಿರ್ದಿಷ್ಟ ಜನಾಂಗ ಅಥವಾ ಜಾತೀಯ ಗ್ರಹಿಕಾ ಸಾಮರ್ಥ್ಯಗಳನ್ನು ಇಂಗಿತ ಪಡಿಸುತ್ತವೆ ಎನ್ನುವುದನ್ನು ಸಮರ್ಥಿಸುವುದು ತುಂಬಾಕಷ್ಟ ಎಂಬ ವಾದವೂ ಪ್ರಚಲಿತ ಸಂದರ್ಭದಲ್ಲಿ ಹುಟ್ಟಿಕೊಂಡಿದೆ. ಈ ವಿಚಾರ ಕ್ರಮವು, ರಾಜಕೀಯ ಗೊಂದಲವನ್ನುಂಟು ಮಾಡಲಿಕ್ಕೂ ಸಾಧ್ಯ. ಆದಾಗ್ಯೊ, ಭಾಷೆಯು ಒಂದು ನಿರ್ದಿಷ್ಟ ಜನಾಂಗ ಅಥವಾ ಜಾತಿಯ ಅನುಭವ, ಪರಿಭಾವನೆ ಮತ್ತು ಪರಿಕಲ್ಪನೆಗಳನ್ನು ಹಾಗೂ ಅವುಗಳನ್ನು ನಿರ್ವಹಿಸುವ ಪರಿಕ್ರಮವೂ, ಭಾಷೆ, ಸಮಾಜ ಮತ್ತು ರಾಜಕಾರಣದ ಸಂಬಂಧವನ್ನು ನಿರ್ಧರಿಸುವುದಕ್ಕೆ ಸಾಧ್ಯವಾಗಬಹುದು. ಈ ಮೇಲಿನ ತೀರ್ಮಾನಗಳನ್ವಯ ಒಂದು ಸಾಂಸ್ಕೃತಿಕ ಸಂದರ್ಭವನ್ನು ಭಾಷಿಕ ನಿಲುವುಗಳ ಮುಖಾಂತರ ಸಾಕ್ಷಿಕರಿಸುವುದನ್ನು ಈ ಕೆಳಗಿನ ಕೆಲವು ಭಾಷಿಕ ಮತ್ತು ಪಾರಿಭಾಷಿಕ ನಿಲುವುಗಳನ್ನು ಗಮನದಲ್ಲಿಟ್ಟುಕೊಂಡು ನೋಡಬಹುದು. ದಲಿತ ಜಾತಿಯ ಜನರು ಮೇಲ್‌ಜಾತಿಯವರನ್ನು ಸಂಬೋಧಿಸುವ ರೀತಿಯಿಂದಲೇ, ಮೇಲುಜಾತಿಯ ಸಾಂಸ್ಕೃತಿಕ ಯಜಮಾನಿಕೆಯು ಸ್ಪಷ್ಟವಾಗುತ್ತದೆ. ಉದಾ. ಮಾಲಿಕರೇ, ಧಣಿ, ಸಾಹುಕಾರ, ಒಡೆಯ, ಗೌಡ್ರು, ಯಜಮಾನ್ರು, ಅಪ್ಪವರೆ, ಅವ್ವವರೆ, ಮುಂತಾಗಿ ಇವರನ್ನು ಕರೆಯುವ ರೂಢಿಯು ಸಂಸ್ಕೃತಿ-ಸಾಮಾಜಿಕ ಸಮ್ಮತಿಯನ್ನು ಪಡಕೊಂಡಂತಿರುವುದು. ಇದಕ್ಕೆ ವಿರುದ್ಧವಾಗಿ ದಲಿತೇತರು, ದಲಿತರನ್ನು ಕುರಿತು ಸಂಬೋಧಿಸುವ ರೀತಿ ಯಾವ ಸಾಮಾಜಿಕ ಕ್ರೌರ್ಯಕ್ಕೂ ಕಮ್ಮಿ ಇಲ್ಲ. ಉದಾ. ಲೇ, ವಾರ ಬಸ್ಯಾ, ಯಮನ್ಯಾ, ಮಳ್ಳ, ದುಬ್ಬ, ಬಂಡ್ಯಾ, ಕರಿಯ್ಯಾ ಮುಂತಾಗಿ ಮೂದಲಿಸುವ ರೀತಿಯಲ್ಲಿದೆ. ಇದಕ್ಕೆ ಪೂರಕವಾಗಿ ಸಿದ್ಧನಗೌಡ ಪಾಟೀಲರ ‘ನಾ ಬಸ್ಸಾ ಅಂತ’ ಕವನದ ಸಾಲುಗಳು ದಲಿತ ಚಹರೆ ಅಥವಾ ಅನನ್ಯತೆಯನ್ನು, ಇವತ್ತಿನ ಸಂದರ್ಭದಲ್ಲಿಯೂ ಕೂಡಾ ಹೇಗೆ ಪ್ರತ್ಯೇಕಿಸಿ ಗುರುತಿಸುತ್ತವೆ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.

“ಆ ಐನಾರ ಹುಡುಗ ಬಸಯ್ಯ ಅಂತ
ಗೌಡರ ಹುಡುಗ ಬಸವನಗೌಡ ಅಂತ
ಬಣಜಿಗೇರ ಉಳಿದ ಲಿಂಗಾಯತ್ರ ಹುಡುಗ ಬಸವರಾಜ ಅಂತ
ಆ ಕುರುಬರ ಹುಡುಗ ಬಸಪ್ಪ ಅಂತ
ನಾ ಬಸ್ಯಾ ಅಂತ ಯಾಕಂದ್ರ ನಾ ಹೊಲ್ಯಾ ಅಂತ”

ಇದಕ್ಕಿಂತ ಹೆಚ್ಚಾಗಿ, ಸವರ್ಣೀಯರನ್ನು ಮೂದಲಿಸುವಾಗ ಅಥವಾ ಬೈಯುವಾಗಲೂ ಕೂಡಾ ದಲಿತರನ್ನು ಆಧರಿಸಿ ಅಥವಾ ಆರೋಪಿಸಿಕೊಂಡು ಬೈಯುವುದು ತುಂಬಾನೆ ಸಹಜ. ಉದಾ. ಇಂತಾ ಹೊಲೆ ಸೂಳೆ ಮಕ್ಳು…. ಹೊಲಿಸೂಳ್ಯಾರು…..ಮುಂತಾಗಿ ಜೀವ ವಿರೋಧಿ ಪರಿಭಾಷೆಗಳನ್ನು ಬಳಸುವುದು ಸರ್ವೇಸಾಮಾನ್ಯ. ಮತ್ತು ದಲಿತರನ್ನು ಮೂದಲಿಸುವ ವಿಧಾನ ಇನ್ನೂ ಅವಮಾನವೀಯ ಉದಾ. ಹೊಲ್ಯಾರು, ಹೊಲಸ ತಿನ್ನೋರು, ಸತ್ತದನ ತಿನ್ನೋರು, ಹೊಲಗೆರಿಯಾಂವ, ಹೇಲು ಬಳಿಯಾಂವ, ಯಕ್ಕಡ ಮಾಡಾಂವ, ಹೇಲು ತಿಂದು ಹೆಂಡಿ ಅಣೆ ಮಾಡುವ ಜನ ಮುಂತಾಗಿ ಬಳಸುವುದು ತುಂಬಾನೆ ರೂಢಿಯಲ್ಲಿದೆ. ಹಾಗೂ ಇವರನ್ನು ಆಧರಿಸಿಕೊಂಡು ಗಾಧೆ ಮತ್ತು ಇನ್ನಿತರ ಭಾಷಾ ರೂಪಗಳನ್ನು ಸೃಷ್ಟಿಸುವುದು ಕೂಡಾ ಸಹಜ. ಉದಾ. ‘ಹೊಲೆಯ್ಯಾಗ ಅಂಗಿ ಕೊಟ್ಟರ ಕಲ್ಲು ಕಟ್ಟಿ ಹರಿದಿದ್ದಾನಂದ’, ‘ಹೊಲಿಯಾನ ಸುಗ್ಗಿ ಒಲಿಯ್ಯಾಗ ಅಂತ’ ‘ಹಿಂಡಿ ಹೊಲೆಯ್ಯಾರು ಸೇರಿ ತೊಗಲು ಮಿನಿ ಹದಗೆಡಿಸಿದರಂತೆ’ ಮುಂತಾಗಿ ರೂಢಿಯಲ್ಲಿವೆ. ಈ ಎಲ್ಲ ಪರಿಭಾಷೆಗಳನ್ನು ಗಮನಿಸಿದಾಗ ಮೇಲ್‌ಜಾತಿಯ ಯಜಮಾನಿಕೆಯ ದೃಢ ನಿಲುವುಗಳ ಈ ಪರಿಭಾಷೆಗಳ ಮುಖಾಂತರ ವ್ಯಕ್ತಗೊಂಡಿವೆ. ಈ ಪರಿಭಾಷೆಗಳು ಅವಮಾನ, ಅಪಮಾನ ಮತ್ತು ದೌರ್ಜನ್ಯರ ಕೀಳು ಸಂಕೇತಗಳಾಗಿವೆ ಎಂಬುದನ್ನು ಸಾಕ್ಷಿಕರಿಸುತ್ತವೆ. ಈ ಪರಿಭಾಷೆಗಳು ಸಂದರ್ಭ ಸಂವಾದಿಯಾಗಿ ಕಾರ್ಯನಿರ್ವಹಿಸುವುದರಿಂದ. ಇವುಗಳನ್ನು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾಗಿ ಗುರತಿಸುವ ಜರೂರು ಇದೆ. ಅಂದರೆ ಸಾಮಾಜಿಕವಾಗಿ, ದಲಿತರು ಹೊಲೆಯಾ, ಮಾದಿಗ, ಎಡಗೈನವರು, ಹೊಲಸು ತಿನ್ನುವರು ಹೊಲಗೇರಿ ಜನ, ಮುರಿಚೆಟ್ಟು ಅಥವಾ ಮೈಲಿಗೆ ಜನ ಮುಂತಾಗಿ ಹೇಳುವ ಅಥವಾ ಗುರುತಿಸುವ ರೂಢಿ. ಇದಕ್ಕೆ ಪ್ರತಿರೋಧವನ್ನು ವಚನ ಚಳುವಳಿಯ ಸಂದರ್ಭದಲ್ಲಿ ಕಾಳವ್ವೆ ಎತ್ತಿದ್ದರು. “ಕುರಿಕೋಳಿ ಕಿರುಮೀನು ತಿಂಬವರಿಗೆಲ್ಲ ಕಾಲಜರೆಂದೆಂಬರು ಶಿವಗೆ ಪಂಚಾಮೃತದ ಕರೆವ ಪಶುಪತಿ ಮಾದಿಗ ಕೀಳು ಜಾತಿ ಎಂಬರು. ಅವರೆಂತು ಕೀಳು ಜಾತಿಯಾದರು, ಜಾತಿಗಳು ನೀವೇಕೆ ಕೀಳಾಗಿರೋ ಬ್ರಾಹ್ಮಣನುಂಡದ್ದು ಪುಲ್ಲಿಗೆ ಶೋಭಿತವಾಗಿ ನಾಯಿ ನೆಕ್ಕಿ ಹೋಯಿತು, ಮಾದಿಗರುಂಡಿದ್ದು ಪುಲ್ಲಿಗೆ ಬ್ರಾಹ್ಮಣಿಗೆ ಶೋಭಿತವಾಯಿತು. ಅದೆಂತೆಂದು ಸಿದ್ದಲಿಕೆಯಾಯಿತು ಸಗ್ಗಳಿಕೆ ನೂಂಬತ ಎನ್ನುತ್ತಾಳೆ. ಹೀಗೆ ಕಾಳವ್ವೆಯ ತೀವ್ರ ಪ್ರತಿಭಟನೆ ಜಾತಿ ಮತ್ತು ಆಹಾರ ಪದ್ಧತಿ ನಿಂದನೆ ಕುರಿತು ವ್ಯಕ್ತವಾಗಿದೆ. ಇ‌ನ್ನೂ ರಾಜಕೀಯವಾಗಿ ಮತ್ತು ರಾಜಕಾರಣದಲ್ಲಿ ರೂಪಗೊಂಡು ಬಳಸುವ ಪರಿಭಾಷೆಗಳನ್ನು ನೋಡುವುದಾದರೆ, ದೀನ ದಲಿತರ ಬಂದು, ಹಿಂದೂಳಿದ ಜನರ ನೇತಾರ ಅಥವಾ ನಾಯಕ, ಹರಿಜನ ಗಿರಿಜನ ಉದ್ಧಾರಕ, ನವಸಮಾಜ ಪ್ರವರ್ತಕ ಅಥವಾ ನಿರ್ಮಾಪಕ, ಸಮಾಜ ಸುಧಾರಕ, ಮಾನವತವಾದಿ ಮುಂತಾಗಿ ರಾಜಕಾರಣಿಗಳು ತಮ್ಮನ್ನು ಕುರಿತು ರೂಪಿಸಿಕೊಂಡ ಪರಿಭಾಷೆಗಳು, ದಲಿತರನ್ನು ತಮ್ಮತ್ತ ಸೆಳೆದುಕೊಳ್ಳುವ ಹುನ್ನಾರಕ್ಕಾಗಿ ಎಂಬುದು ನಿಚ್ಛಳವಾಗಿ ಗೋಚರವಾಗುತ್ತದೆ ಮತ್ತು ದಲಿತ ಅಥವಾ ಹಿಂದೂಳಿದ ಜನರ ಏಳ್ಗೆಗಾಗಿ ಅಂತ ಬಳಸುವ ರಾಜಕೀಯ ಪರಿಭಾಷೆಗಳು ಕೂಡಾ ಕೋಪಗೊಳ್ಳುತ್ತಲೇ ಇವೆ. ಉದಾ. ಭಾಗ್ಯಜ್ಯೋತಿ, ಆಶ್ರಯ ಯೋಜನೆ, ಕುಲಿಗಾಗಿ ಕಾಳು, ಮೀಸಲಾತಿ, ಒಳಮೀಸಲಾತಿ, ಅಸ್ಪೃಶ್ಯತೆಯ ನಿರ್ಮೂಲನೆ, ಸಮಾಜಕಲ್ಯಾಣ ಯೋಜನೆ, ಹಿಂದೂಳಿದ ಮತ್ತು ಅಲ್ಪಸಂಖ್ಯಾತನ ಕಲ್ಯಾಣ ನಿಧಿ ಮತ್ತು ಯೋಜನೆ ಮುಂತಾಗಿವೆ. ಇವುಗಳಲ್ಲದೆ ಸಾಮಾಜಿಕ ನ್ಯಾಯ, ಸಮಾನತೆ, ಸ್ತ್ರೀ ಸಬಲೀಕರಣ, ಜಾತ್ಯಾತೀತತೆ, ಕೋಮುಸಾಮರಸ್ಯ ಅಥವಾ ಕೋಮುಸೌರ್ಹಾದ ಇನ್ನಿತರ ಕ್ಲೀಷೆಗಳು ಬಳಕೆಯಲ್ಲಿರುತ್ತವೆ. ಇವುಗಳಿಗೆ ವ್ಯತಿರಕ್ತವಾಗಿ ಅಥವಾ ದಲಿತರ ಪರವಾಗಿ ಹುಟ್ಟಿಕೊಂಡ ಸಂಘ, ಸಂಸ್ಥೆ, ಚಳುವಳಿಗಳು ಕೂಡಾ ಹಲವಾರು ಪರಿಭಾಷೆಗಳನ್ನು ರೂಪಿಸಿಕೊಳ್ಳುವುದುಂಟು. ಉದಾ.ದಲಿತ ಸಂಘರ್ಷ ಸಮಿತಿ, ಭಾರತೀಯ ಭೀಮಸೇನೆ, ದಲಿತ ಜನ ಜಾಗೃತಿ, ಪ್ರಜಾಂದೋಲನ, ಹರಿಜನ ಸೇವಕ ಸಂಘ, ಅಂಬೇಡ್ಕರ ಯುವಕ ಸಂಘ, ಅಥವಾ ಮಿತ್ರ ಮಂಡಳಿ, ದಲಿತ ಸ್ಥಾನ, ಆತ್ಮರಕ್ಷಣಾ ಪಡೆ, ಶೋಷಿತ ವರ್ಗದ ಸಮಾವೇಶ, ಸಮ್ಮೇಳನ ಅಥವಾ ಆಂದೋಲನ, ಕೋಮುವಾದಿ ಕರಾಳ ಘಟನೆ, ದಲಿತರ ಕಗ್ಗೋಲೆ, ಸಾಮಾಜಿಕ ಸ್ವಾತಂತ್ರ್ಯ, ಸಾಂಸ್ಕೃತಿಕ ಮನ್ನಣೆ, ಅವೈದಿಕ ಚಿಂತನೆ, ಬಹಿಷ್ಕೃತ ಭಾರತಿ ಹಿತಕಾರಣಿ ಸಭಾ, ಇಂಡಿಯನ್ ಲೇಬರ್ ಪಾರ್ಟಿ, ದಲಿತ ಕಾರ್ಮಿಕ ಸಂಘ, ವಾಮಪಂಥೀಯರ ಸಂಘಟನೆ ಅಥವಾ ಸಾಂಸ್ಕೃತಿಕ ಒಗ್ಗಟ್ಟು, ಸಾಮಾಜಿಕ ಬದ್ಧತೆ, ಅಂಬೇಡ್ಕರವಾದ, ದಲಿತಶ್ವ, ಲೋಹಿಯಾವಾದ, ದಲಿತ ವಿದ್ಯಾರ್ಥಿ ಒಕ್ಕೂಟ, ದಲಿತ ಕಲಾ ಮಂಡಳಿ, ದಲಿತ ಮಹಿಳಾ ಒಕ್ಕೂಟ ಈ ಎಲ್ಲ ಪರಿಭಾಷೆಗಳನ್ನು ಬಳಸುವುದು ಶೋಷಿತರ, ಸಾಂಸ್ಕೃತಿಕ ಯಜಮಾನ್ಯ ಪ್ರಾಬಲ್ಯವನ್ನು ಸಾಧಿಸುವವರ ವಿರುದ್ಧ ಹೋರಾಡುವ ಸ್ವಾಭಿಮಾನದ ಪ್ರತಿಮೆ ಅಥವಾ ಸಂಕೇತಗಳು ಪರಿಭಾಷೆಯಾಗಿ ಮೂಡಿಬಂದಿವೆ. ಇದಕ್ಕೆ ಪೂರಕವಾಗಿ ಬುದ್ಧಿಜೀವಿಗಳು ಸಾಹಿತಿಗಳು ಮತ್ತು ಜನಪರ ಕಾಳಜಿ ಇರುವ ಹೋರಾಟಗಾರರು ಕೂಡಾ ತಮ್ಮದೇ ಆದ ಕೆಲವು ಪರಿಭಾಷೆಗಳನ್ನು ಬಳಸುವುದುಂಟು. ಉದಾ. ದಲಿತ ಬಂಡಾಯ ರ್ಯಾಡಿಕಲ್ ಚಳುವಳಿ, ಜನಪರ ಚಿಂತಕ, ಸಮಾಜ ಕಾರ್ಯಕರ್ತ ಅಸ್ಪೃಶ್ಯತೆಯ ವಿಮೋಚನೆಗಾಗಿ ಹೋರಾಟ, ದಲಿತ ಸಾಹಿತಿ, ಬಂಡಾಯ ಸಾಹಿತಿ, ಪ್ರಗತಿಪರ ಚಿಂತಕ ಮುಂತಾದ ಪರಿಭಾಷೆಗಳು ಚಾಲ್ತಿಯಲ್ಲಿವೆ ಎಂಬುದು ಸ್ಪಷ್ಟ. ಈ ಎಲ್ಲ ಪರಿಭಾಷೆಗಳೊಂದಿಗೆ ಧಾರ್ಮಿಕ ರಂಗದಲ್ಲಿಯೂ ಕೂಡಾ ಜೀವಪರ ಜೀವ ವಿರೋಧವಾದಂತಹ ಕೆಲವು ಪರಿಭಾಷೆಗಳು ಬಳಕೆಗೊಂಡಿವೆ. ಉದಾ. ಮಡಿ, ಮೈಲಗೆ, ದೇವದಾಸಿಯರು, ಹೋಮ, ಅಗ್ನಿ, ತೀರ್ಥ, ಪ್ರಸಾದ ಮುಂತಾದವು. ದಲಿತರು ಸರಕಾರಿ ಪರಿಭಾಷೆಯಲ್ಲಿ ಪರಿಶಿಷ್ಟ ಜಾತಿ, ಪಂಗಡ, ಆದಿ ದ್ರಾವಿಡ, ಆದಿ ಕರ್ನಾಟಕ ಮುಂತಾಗಿ ಗುರುತಿಸಲ್ಪಟ್ಟಿರುವವು.

ಈ ಎಲ್ಲ ಪರಿಭಾಷೆಗಳನ್ನು ಗಮನದಲ್ಲಿಟ್ಟುಕೊಂಡು ಆಲೋಚನೆ ಮಾಡಿದಾಗ, ಭಾಷೆಯ ಒಟ್ಟು ಸಂಬಂಧ ಮತ್ತು ಸಹಭಾಗಿತ್ವವವೂ ಹಲವಾರು ಸಂದಿಗ್ಧತೆಗಳನ್ನು ಸೃಷ್ಟಿಸುವುದು ಸಹಜ. ಯಾಕೆಂದರೆ, ಸಮಾಜ, ಮನುಷ್ಯ ಮತ್ತು ಭಾಷೆ ಈ ಮೂರು ಪರಿಕಲ್ಪನೆಗಳನ್ನು ವ್ಯಾಖ್ಯಾನಿಸುವುದು ತುಂಬಾ ಕ್ಲಿಷ್ಟ. ಕಾರಣ ಇವುಗಳು ತುಂಬಾ ಸಂಕೀರ್ಣವಾಗಿರುವಂತಹ ಅಂಶಗಳಾಗಿವೆ. ಅಂದರೆ, ಒಂದು ಸಮಾಜದ ಜನರ ಇಂಟರ್‌ ಮತ್ತು ಇಂಟ್ರಾ ಸಂವಹನ ಸಂಬಂಧವನ್ನು ಅರ್ಥೈಸಿಕೊಳ್ಳುವಾಗ ಇದು ನಮಗೆ ಸ್ಪಷ್ಟವಾಗುತ್ತದೆ. ಉದಾ. ಈ ಮೇಲೆ ಉದ್ಧರಿಸಿದಂತೆ ಪರಿಭಾಷೆಯಿಂದ ಹೀಗೆ ಔಪಚಾರಿಕ, ಸೌಜನ್ಯ, ದೌರ್ಜನ್ಯ, ಆತ್ಮೀಯ ಮಾತುಗಳು ಸಾಂದರ್ಭಿಕ್ಕನುಗುಣವಾಗಿ ರೂಢಿಗೊಂಡಿವೆಂಬುದು ನಿರೂಪಿಸಲ್ಪಟ್ಟಿದೆ. ಈ ಪ್ರಾದೇಶಿಕ ಭಾಷಾರೂಢಿಗಳು ಅಥವಾ ಭಾಷಾ ರೂಪಗಳು ಆ ಪ್ರದೇಶದ ಜನರ ಭಾಷೆ ಮತ್ತು ರಚನಾ ವಿನ್ಯಾಸವನ್ನು ಅನುಸರಿಸಿಕೊಂಡಿವೆ. ಹಾಗಾಗಿ ಇವತ್ತಿನ ಈ ಸಂದರ್ಭದಲ್ಲಿ, ದಲಿತ ಪರಿಭಾಷೆ, ಅನನ್ಯತೆ ಮತ್ತು ಪ್ರತಿರೋಧ ಅನ್ನುವ ಸಂದರ್ಭಕ್ಕೆ ಸೀಮಿತಗೊಳಿಸಿ ಆಲೋಚನೆ ಮಾಡಲಾಗಿ. ಈ ಮೂಲ ನೆಲೆಯಿಂದ ಅಥವಾ ಸೆಲೆಯಿಂದ, ದಲಿತರು, ಸಮಾಜ ಮತ್ತು ಭಾಷೆಯ ಸಂಬಂಧ ಹಾಗೇ ಮುಖಾಮುಖಿಯನ್ನು ಅರ್ಥೈಸಿಕೊಳ್ಳುವುದು ಸುಲಭವಾಗಿದೆ.

ದಲಿತ ಸಾಹಿತ್ಯ ಅನನ್ಯತೆ ಮತ್ತು ಪ್ರತಿರೋಧ

ಭಾಷೆಯು ಒಂದು ಅದ್ಭುತವಾದ, ಚಲನಶೀಲವಾದ ಮತ್ತು ಸೃಜನಶೀಲವಾದಂತಹ ಪರಿಕಲ್ಪನೆ ಆದ್ದರಿಂದ, ಕಾಲ ದೇಶಕ್ಕೆ ಮಾತ್ರ ಸೀಮಿತಗೊಳಿಸದೆ ಅದರಾಚೆ ನಿಂತು ಯೋಚಿಸಿದಾಗ ಅದರ ಅಮೂರ್ತಸ್ವರೂಪದಲ್ಲಿರವ ಅಖಂಡ ಮತ್ತು ಅಧಮ್ಯವಾದ ಗ್ರಹಿಕೆಗಳು, ಪರಿಭಾವನೆಗಳು ಅಥವಾ ಅನುಭಾವಗಳು ದಟ್ಟವಾಗಿ ನಮಗೆ ಸಿಗಬಹುದು. ದಲಿತ ಜನರು ದಿನನಿತ್ಯ ತಮ್ಮ ಜೀವನದಲ್ಲಿ ಬಳಸುವ ಭಾಷೆ, ನುಡಿಗಟ್ಟು ಮತ್ತು ಭಾಷಾ ರೂಪಗಳನ್ನು ಬಳಸಿಕೊಂಡು ತಮ್ಮ ಅಸ್ತಿತ್ವ ಮತ್ತು ಅನನ್ಯತೆಯನ್ನು ಸಾಹಿತ್ಯ ಮುಖೇನ ಅಥವಾ ಸಾಹಿತ್ಯಾಭಿವ್ಯಕ್ತಿ ಮುಖೇನ ಗಟ್ಟಿಗೊಳಿಸಿಕೊಂಡಿದ್ದಾರೆ. ಈ ಅನನ್ಯತೆ ಮತ್ತು ಅಸ್ತಿತ್ವಗಳು ಸಾಹಿತ್ಯಾಭಿವ್ಯಕ್ತಿ ಮೂಲಕ ಪ್ರತಿನಿಧೀಕರಣಗೊಂಡಿದ್ದು ಪ್ರತಿರೋಧ ಅಥವಾ ಪ್ರತಿಭಟನೆಯಾಗಿ ಎನ್ನುವುದು ಮರೆಯುವಂತಿಲ್ಲ. ಇಲ್ಲಿ, ದಲಿತ ಅನನ್ಯತೆನ್ನುವುದು ಆರೋಪಿತವಾದ ಅನನ್ಯತೆಗೆ ವಿರುದ್ಧವಾಗಿ ಅಪೇಕ್ಷಿತ ಚಹರೆಗಳನ್ನು ಅನುಷ್ಠಾನಗೊಳಿಸಲು ಅವರ ಅನುಸರಿಸಿದ ಮಾರ್ಗ ಪ್ರಮಾಣ ಭಾಷೆಯನ್ನುವ ಪ್ರಕಾರವನ್ನು ಪ್ರತಿಭಟಿಸಿ ತಮ್ಮ ಭಾಷೆಯ ಮೂಲಕ ಅಸ್ತಿತ್ವ ಮತ್ತು ಅನನ್ಯತೆಯನ್ನು ಸಾಹಿತ್ಯಾಭಿವ್ಯಕ್ತಿಯಾಗಿ ರೂಢಿಸಿಕೊಂಡರು. ಈ ಅಭಿವ್ಯಕ್ತಿ ಮಾಧ್ಯಮದಲ್ಲಿ ಬಳಸಿಕೊಂಡು ಭಾಷೆ ಮತ್ತು ವಿಧಾನ ; ಅವರು ಮೇಲ್‌ಜಾತಿಗೆ ತೋರಿದ ಪ್ರತಿರೋಧವನ್ನು ಸಾಕ್ಷಿಕರಿಸುತ್ತವೆ. ಅಂದರೆ, ಯಾವುದೇ ಭಾಷೆಯಲ್ಲಿ ಬಳಕೆಯಾಗುವ ಪದ ಅಥವಾ ಭಾಷಿಕ ರೂಪಗಳು, ಅಸಮುದಾಯದ ಸ್ವಂತಿಕೆಯ ಸೂಚಕಗಳಾಗಿರುತ್ತವೆ. ಈ ಸ್ವಂತಿಕೆಯ ಸೂಚಕಗಳಿಂದಲೇ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸುವುದು. ಇಂತಹ ಸೂಚಕಗಳು ಮತ್ತು ಭಾಷಿಕ ಸೂಕ್ಷ್ಮತೆಗಳು, ಒಂದು ನಿರ್ದಿಷ್ಟ ಜಾತಿ, ಜನಾಂಗ ಅಥವಾ ಧರ್ಮದ ಸಾಂಸ್ಕೃತಿಕ ಸೂಕ್ಷ್ಮಗಳನ್ನು ಗುರುತಿಸುವುದು. ಈ ಗುರುತುಗಳು ಆ ಸಮುದಾಯಕ್ಕೆ ಒಂದು ಚಾರಿತ್ರಿಕ ನೆಲೆಯನ್ನು ಸೃಷ್ಟಿಸುವುವು. ಇಂತಹ ಚಾರಿತ್ರಿಕ ಹಿನ್ನೆಲೆಯಿಂದ ಸಮಾಜಗಳಲ್ಲಿ ಸಾಹಿತ್ಯ ಕೃತಿಯನ್ನು ಸಂದರ್ಭ ಮತ್ತು ಸಂಸ್ಕೃತಿ ರೂಪಿಸುವ ಕ್ರಿಯೆಗೆ ಒತ್ತು ಸಿಕ್ಕುವುದು ಸಹಜ. (ನಟರಾಜ ಹುಳಿಯಾರ, ೨೦೦೪.) ಹೀಗೆ ಯಾವುದೇ ಸಾಹಿತ್ಯ ಪ್ರಕಾರ ಬಳಸಿಕೊಂಡ ಭಾಷೆಯು, ಹೇಗೆ ಒಂದು ಜನಾಂಗ ಅಥವಾ ಜಾತೀಯ ಸಾಂಸ್ಕೃತಿಕ ಪರಿಭಾಷೆಯಾಗುತ್ತ ಯಜಮಾನ್ಯ ಸಂಸ್ಕೃತಿಗೆ ಪ್ರತಿರೋಧವನ್ನು ಒಡ್ಡುವುದು ಎನ್ನುವುದು ತುಂಬಾ ಪ್ರಮುಖ ಮತ್ತು ಎಚ್ಚರದ ಅಂಶವಾಗಿದೆ. ಈ ಪ್ರಮುಖವಾದ ಸಾಂಸ್ಕೃತಿಕ ನಿಲುವುಗಳನ್ನು ಕೆಲವು ದಲಿತ ಸಾಹಿತ್ಯ ಪ್ರಕಾರಗಳನ್ನು ಅವಲೋಕಿಸುವುದರ ಮುಖಾಂತರ ಖಾತ್ರಿಪಡಿಸಿಕೊಳ್ಳುವುದು. ಉದಾ. ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು, ೧೯೭೫ ಹೀಗೆ ತನಗೆ ಗೊತ್ತಿರುವ ಪರಿಭಾಷೆಯ ಮುಖಾಂತರ ತನ್ನ ಎಲ್ಲ ಜನರನ್ನು ಎಚ್ಚರಗೊಳಿಸುತ್ತ ಅವರ ಅಸ್ತಿತ್ವವನ್ನು ಖಾಯಂಗೊಳಿಸಲು ಒತ್ತಾಯಿಸುವುದು.

ಇಕ್ರಲಾ ವದೀರ್ಲಾ
ಈ ನನ್ನ ಮಕ್ಕಳ ಚರ್ಮ ಎಬ್ರಿಲಾ
ದೇವ್ರು ಒಬ್ನೇ ಅಂತಾರೆ
ಓಣಿಗೊಂದೊಂದು ತರಾಗುಡಿ ಕಟ್ಸಿವ್ರೆ
ಎಲ್ಲಾರು ದೇವ್ರು ಮಕ್ಕಳು ಅಂತಾರೆ
ಹೊಲೇರ್ನ ಕಂಡ್ರೆ ಹಾವ್ ಕಂಡಂಗಾಡ್ತರೆ

ಈ ಭಾಷಾರೂಪಗಳು ಅಥವಾ ಪರಿಭಾಷೆಗಳನ್ನು ಅವರ ಸ್ವಾಭಿಮಾನದ ಪ್ರತೀಕ ಅಥವಾ ಸಾಂಕೇತಿಕವಾಗಿ ಬಳಸಿಕೊಂಡು ಯಜಮಾನ್ಯ ಸಾಂಸ್ಕೃತಿಕ ಭಾಷೆಯನ್ನು ದಿಕ್ಕರಿಸುವ ದಿಟ್ಟತನ, ಹಠಮಾರಿತನವನ್ನು ಮತ್ತು ತಪ್ಪು ಮಾಡಿದವರನ್ನು ಮುಖಕ್ಕೆ ರಾಚುವ, ಹಾಗೂ ಈ ಜನಾಂಗದ ದುರಂತಕ್ಕೆ ಕಾರಣವಾಗಿರುವ ವ್ಯವಸ್ಥೆಯ ವಿರುದ್ಧ ಸಿಟ್ಟು, ಅದನ್ನು ದ್ವಂಸ ಮಾಡಿಬಿಡುವ ಅದಮ್ಯ ಉತ್ಸಾಹ, ಜೊತೆಗೆ ದಲಿತರನ್ನು ಸಂಘರ್ಷಕ್ಕೆ ಪ್ರಚೋದಿಸುವ ಬಯಕೆಯನ್ನು ಕವಿ ವ್ಯಕ್ತಪಡಿಸುವರು. ಮತ್ತು ಇದೇ ಪೂರಕವಾಗಿರುವ ಅರವಿಂದ ಮಾಲಗತ್ತಿಯವರು ಮೂಕನಿಗೆ ಬಾಯಿ ಬಂದಾಗ, ೧೯೮೧ ಕವನಗಳ ಕೂಡಾ ದಲಿತಾನುಭವದ ಸತ್ವಶಾಲೀರಚನೆಗಳಾಗಿವೆ. ಹಾಗೇ ಅವರ ಅನುಭವಗಳನ್ನು ಹಸಿ ಹಸಿಯಾಗಿ ಚಿತ್ರಿಸುತ್ತಾ, ನೋವು, ಸಂಕಟ, ಮತ್ತು ಚಡಪಟಿಕೆಯ ಪರಿಭಾಷೆಯನ್ನು ಮುನ್ನವೇ ತರುತ್ತ, ದಲಿತರ ಪ್ರತಿಭಟನೆಯ ಧೋರಣೆಯನ್ನು ಸ್ಪಷ್ಟವಾಗಿ ಚಿತ್ರಿಸುತ್ತಾರೆ.

ಹುಟ್ಟು ಬಾರದ್ರೆಪ್ಪೋ ಹುಟ್ಟಿಬಾರ್ದ
ಏಳ್ಲೊ ಜಲ್ಮದಾಗ ಈ ಭೂಮಿಮ್ಯಾಗ
ಹೊಲಿ ಮಾದಿಗ್ರಾಗಿ ಹುಟ್ಟಿ ಬಾರ್ದ

ಈ ಭಾಷಾ ಪ್ರಭೇದಗಳು ಒಂದು ಸಮುದಾಯದ ಸಾಮಾಜಿಕ ನೆಲೆಯ ಧಾರುಣ ಮತ್ತು ಅಸಹಾಯಕ ಸ್ಥಿತಿಯನ್ನು ಹಾಗೇ ಅರುವಿನ ನೆಲೆಯನ್ನು ಸ್ಪಷ್ಟಪಡಿಸುತ್ತವೆ. ಇವರ ಇನ್ನೊಂದು ಕವನ ಜೋಗತಿ ಕಲ್ಲು ಇದರ ಕೆಲವು ಸಾಲುಗಳು ಹೀಗಿವೆ.

ಬರ್ತಾವು ಬರ್ತಾವು
ನಾವು ಹೊಲ್ದ ಕಾಲ್ಮರಿ
ನಮ್ಮ ಕೆರ್ಯಾಗ ಬರ್ತಾವು
ಬೆಳ್ಳಿ ಬೆಳ್ಳಿ ಜೋಡಿ ಮಟ ಮಾಯಾಕ್ಕವು

ಈ ಕವನದಲ್ಲಿ ಬಳಸಿರುವ ಭಾಷಾರೂಪಗಳು, ಯಜಮಾನ್ಯ ಸಂಸ್ಕೃತಿಯ ಆಕ್ರಮಣ, ದೌರ್ಜನ್ಯ ಮತ್ತು ಅವರ ಧೋರಣೆಗಳನ್ನು ಪ್ರತಿನಿಧಿಸುವುದರೊಂದಿಗೆ, ಈ ಕಾಲ್ಮರಿ ದಲಿತ ಹೆಣ್ಣುಗಲ ಸಾಮಾಜಿಕ ಸಾಂಸ್ಕೃತಿಕ ಹೀನ ಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ. ಇಂತಹ ಸಾಲುಗಳ ಗದ್ಯಗುಣ ಮತ್ತು ಘೋಷಾಣಾತ್ಮಕ ಶೈಲಿಯೇ ದಲಿತ ಸಾಹಿತ್ಯ ಅಭಿವ್ಯಕ್ತಿಯ ವಿಶಿಷ್ಟ ಗುಣವಾಗಿದೆ. ಈ ವೈಶಿಷ್ಟ್ಯಗಳ ದಲಿತ ಭಾಷೆ ಮತ್ತು ಪರಿಭಾಷೆಯನ್ನು ಸ್ಪಷ್ಟವಾಗಿ, ಇವು ಹೀಗೆ ಭಿನ್ನ ಎಂಬುದನ್ನು ತೋರಿಸುತ್ತದೆ. ಈ ಪರಿಭಾಷೆಗಳು, ಕೆನೆಗಟ್ಟುವ ವ್ಯಂಗ, ಲೇವಡಿತನಗಳನ್ನು, ವಿಷಾದ ಮತ್ತು ದುರಂತಗಳನ್ನು ಚೆನ್ನಾಗಿ ಸಂವಹಿಸುತ್ತವೆ. (ಪುರುಷೋತ್ತಮ ಬಿಳಿಮಲೆ, ೧೯೯೦.) ಇದು ಕನ್ನಡ ದಲಿತ ಸಾಹಿತ್ಯದ ಅನೇಕ ರೂಪಗಳಲ್ಲಿ ವ್ಯಕ್ತವಾಗಿದೆ. ಮುಖ್ಯವಾಗಿ ಕಾವ್ಯ, ಕಥೆ, ಕಾದಂಬರಿ, ನಾಟಕ, ಆತ್ಮಕತೆ, ಶೋಧನೆ, ವಿಚಾರ ವಿಮರ್ಶೆ ಮತ್ತು ಪ್ರವಾಸ ಕಥನಗಳು ಉಲ್ಲೇಖಾರ್ಹವಾದವು. ಇಲ್ಲಿನ ಪ್ರತಿಯೊಂದು ಪ್ರಕಾರವು ಪ್ರತ್ಯೇಕ ಗುಣಲಕ್ಷಣ, ಭಾಷೆ ಬಂಧ, ಸಂಭಾಷಣೆ, ಶೈಲಿ ಮತ್ತು ತಂತ್ರಗಳು ಕನ್ನಡ ದಲಿತ ಸಾಹಿತ್ಯಕ್ಕೆ ಒಂದು ಅನನ್ಯತೆಯನ್ನು ತಂದುಕೊಟ್ಟಿವೆ. ಈ ಅನನ್ಯತೆಯ ಗುರುತು ಅವರ ಪರಿಭಾಷೆ. ಈ ಪರಿಭಾಷೆಗಳು ದಲಿತರ ಅನುಭವವನ್ನು ಪ್ರತಿನಿಧಿಕರಿಸುತ್ತವೆ. ಉದಾ. ದ್ಯಾವನೂರು, ಒಡಲಾಳ, ಕುಸುಮಬಾಲೆ, ಭೂಮಿ, ಮಾಗಿ, ಹೊಲಗೇರಿ ರಾಜಕುಮಾರ ಮುಂತಾದವು. ಇಲ್ಲಿ ವ್ಯಕ್ತವಾಗುವ ದಲಿತ ಭಾಷೆ ಕೇವಲ ಭಾಷೆಯಾಗದೆ, ದಲಿತ ಸಂಸ್ಕೃತಿ, ಶಿಷ್ಟ ಸಂಸ್ಕೃತಿಗೆ ತೋರುವ ಪ್ರತಿರೋಧ ಮತ್ತು ಅವರ ಪ್ರತ್ಯೇಕ ಅನನ್ಯತೆಯನ್ನು ತೋರಿಸುವುದು. ಈ ಭಾಷಾ ಪ್ರಯೋಗವು Deantomatization (ಅಪರಿಚಿತ)ವಾಗಿರುವುದರಿಂದ ಸಂರಚನಾ ಮತ್ತು ಶೈಲಿಶಾಸ್ತ್ರದ ಅಧ್ಯಯನಕ್ಕೆ ವಿಶಿಷ್ಟ ಆಕರವೂ ಕೂಡ ಆಗಬಲ್ಲದು. ಮತ್ತು ಇಲ್ಲಿ ಬಳಸಿರುವ ಪದ, ಪದಪುಂಜ, ವಾಕ್ಯರಚನೆ ಮುಂತಾದವು ಸಂಜ್ಞಾ ಮತ್ತು ಶೈಲಿಶಾಸ್ತ್ರದ ಹೊಸ ಸಾಧ್ಯತೆಗಳ್ನು ಸಾಂಕೇತಿಸುವವು. ಮತ್ತು ಭಾಷಿಕ ವೈವಿಧ್ಯತೆಯ ಯಥಾಸ್ಥಿತಿ ಕಾಪಾಡಿಕೊಂಡಿರುವುದು. ಉದಾ.ಪಾತ್ರೋಟರ ನಾಟಕ, ನಮಗೆ ಯಾರೂ ಇಲ್ಲೋ ಎಷ್ಟು ಸಾಕ್ಷಿ, ಮತ್ತೊಬ್ಬ ಏಕಲವ್ಯ, ಹ್ವಾದವರು ಮಾಲಗತ್ತಿಯವರ ಕಾರ್ಯ ಮತ್ತು ಚದುರಂಗ ವೈಶಾಖ ಮುಂತಾದವುಗಳನ್ನು ಇಲ್ಲಿ ಸ್ಮರಿಸಬಹುದು. ಪಾತ್ರೋಟರ ಭಾಷೆ ಬಾಗಲಕೋಟೆ, ಧಾರವಾಡ ಪರಿಸರದ ದಲಿತ ಕನ್ನಡವನ್ನು ಬಳಸಿಕೊಂಡು ದಲಿತ ಸಂವೇದನೆಯನ್ನು ತುಂಬಾ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಉದಾ. ಅವರ ನಮಗೆ ಯಾರು ಇಲ್ಲೋ ಎಪ್ಪ ಸಾಕ್ಷಿ ಎಂಬ ನಾಟಕದ ಕೆಲವು ಮಾತುಗಳನ್ನು ಉಲ್ಲೇಖಿಸಬಹುದು. ಹಗಲ ಹನ್ಯಾಡ ತಾಸ ಮ್ಯಾಗ ಸೂರ್ಯಾನ ಜೋಡಿ ಕಳಗ ಕೆಂಡಕಾರೋ ಭೂಮಿ ಜೋತೆ ಕುಸ್ತಿ ಹಿಡಿದ ಮುತ್ತು ರತ್ನ ಬೆಳೆದರೆ, ಸಿಗೋದು ಕಸ ಕಡ್ಡಿ ತುಂಬಿದ ಯಾಡ ನೇರ ಜ್ವಾಳ ಎಷ್ಟೋ ಸಂದರ್ಭಗಳಲ್ಲಿ, ಈ ಎಲ್ಲ ಸಾಹಿತ್ಯ ಪ್ರಕಾರಗಳ ಶೀರ್ಷಿಕೆಗಳು ತುಂಬಾ ವಿಶಿಷ್ಟವಾಗಿವೆ. ಉದಾ. ಕಾರ್ಯ, ನಮಗೆ ಯಾರೂ ಇಲ್ಲೋ ಎಪ್ಪ ಸಾಕ್ಷಿ, ಮಾಗಿ. ಮೆರವಣಿಗೆ, ಒಡಲಾಳ, ಹೊಲಗೇರಿ ರಾಜಕುಮಾರ್ ಮುಂತಾದವುಗಳನ್ನು ಕಾಣಬಹುದು. ಇನ್ನೂ ಆತ್ಮಕಥನಗಳನ್ನು ನೋಡಬಹುದಾದರೆ, ಅಕ್ರಮ ಸಂತಾನ, ಗೌರ್ನಮೆಂಟ್ ಬ್ರಾಹ್ಮಣ, ಮಣಿಗಾರ, ಊರುಕೇರಿ, ಮನವಿಲ್ಲದವರ ಮಧ್ಯ, ಕತ್ತಲೆ ಬೆಳದಿಂಗಳೊಳಗೆ ಮತ್ತು ಈಗೇನ ಮಾಡೀರಿ ಮುಂತಾದವುಗಳ ಮೂಲಕ ದಲಿತರ ಅಂತರಂಗದ ನೋವು, ವಿಷಾದ, ಅವಮಾನ, ಪ್ರತಿಭಟನೆ, ಶೋಷಣೆಗಳ ಕಥಾನಕವನ್ನು ತಮ್ಮದೇ ಆದ ಪರಿಭಾಷೆಯಲ್ಲಿ ವ್ಯಕ್ತಪಡಿಸಿರುವರು. ಈ ತಮ್ಮ ಗುಡಿಸಲು ಭಾಷೆಯಿಂದಲೇ ತಮ್ಮ ಮೇಲೆ ಯಜಮಾನಿಕೆ ಮತ್ತು ಪ್ರಾಬಲ್ಯವನ್ನು ನಡೆಸಿದವರೆಗೆ ತಿರುಗೇಟು ಕೊಡುವ ಈ ದಿಟ್ಟ ನಿಲುವುಗಳು ಇವರು ಒಡ್ಡುವ ಪ್ರತಿರೋಧದ ಸ್ಪಷ್ಟ ಗುರುತುಗಳಾಗಿವೆ. ಈ ನಿಲುವು ಅಥವಾ ಗುರುತುಗಳು ದಲಿತ ಸಂವೇದನೆಯನ್ನು ಅರ್ಥೈಸಿಕೊಳ್ಳುವುದಕ್ಕೆ ಪೂರಕವಾಗುವವು. ಅಂದರೆ, ಇವರ ಭಾಷಾಶೈಲಿ, ಪದಬಳಕೆ, ಭಾಷಿಕ ವಾಗ್ವಾದ ಮತ್ತು ಭಾಷಿಕ ಅಂತರಿಕ ಚಲನಶೀಲತೆಯ ಪ್ರಾಬಲ್ಯ ಮತ್ತು ಜಯಮಾನಿಕೆಗೆ ತೋರಿದ ಪ್ರತಿಭಟನೆ ಮತ್ತು ಪ್ರತಿರೋಧದ ವಿಶಿಷ್ಟ ರೀತಿ ಇವರ ಅನನ್ಯತೆಯನ್ನು ಗುರುತಿಸಿಕೊಳ್ಳುವ ಬಗೆಗಳಾಗಿವೆ. ಇದಕ್ಕಿಂತ ಹೆಚ್ಚಾಗಿ, ಈ ಎಲ್ಲ ಅಭಿವ್ಯಕ್ತಿ ಪ್ರಕಾರಗಳು ಅಥವಾ ಮಾದರಿಗಳು, ಖಂಡಿತ ಒಂದು ಸಾಮಾಜಿಕ ಸಂಕಥನ ಅಥವಾ ಚರಿತ್ರೆಯನ್ನು ಪ್ರಸ್ತುತಪಡಿಸುತ್ತಿವೆ. ಇವುಗಳ ಒಂದು ಸಂಸ್ಕೃತಿಯ ಪಠ್ಯವಾಗಿ, ಗ್ರಹಿಕಾ ನಿಲುವು ಮತ್ತು ದಲಿತ ವಿಮೋಚನ ತಂತ್ರಗಳಾಗಿ ಅಸ್ತಿತ್ವಗೊಂಡಿವೆ. ಹಾಗಾಗಿ, ಈ ವಿಚಾರಧಾರೆಗೆ ಪೂರಕವಾಗಿ, ಖ್ಯಾತಭಾಷಾವಿಜ್ಞಾನಿ ಡಿಜ್‌ಕ್ ವ್ಯಾನ್ ಅವರ ಮಾತುಗಳನ್ನು ಬಳಸಿಕೊಳ್ಳಬಹುದು. We shall there fore, be concerned with their inteationality, context, social dynamics, communicative interactived (Dijk : 1997 : L-37). ಹಾಗೇನೆ, Linguistically as a text, the foces being on how it works, viz on what happens when it is being read (Lejenne : 1975 : 49-303 : 1980) ಎಂಬ ಲೇಜನ್‌ರ ಮಾತುಗಳು ದಲಿತ ಅಭಿವ್ಯಕ್ತಿ ಪ್ರಕಾರಗಳನ್ನು ಕುರಿತು ಸೂಕ್ಷ್ಮವಾಗಿ ನಮಗೆ ಅದರ ಸುಳಿವುಗಳನ್ನು ನೀಡುತ್ತವೆ. ಅಂದರೆ, ದಲಿತ ಅಥವಾ ಶೂದ್ರ ಜನಾಂಗದ ಸಮಸ್ತ ವ್ಯಾಪಾರಗಳು, ಪ್ರಣಯ, ಊಟ, ಜಗಳ, ಇಂತಹ ಛಿದ್ರ ಅನುಭವಗಳಿಂದ ಹಿಡಿದು ಅವರ ಬದುಕು ಕಟ್ಟಿಕೊಳ್ಳುವರಿಗೆ, ಒಂದು ಭಾಷೆ ಮೂಲಕ ನಡೆಯುವುದರಿಂದ ಇಡೀ ಜನಾಂಗದ ಒಟ್ಟು ಸೃಷ್ಟಿ ಒದು ಜೀವಂತ ಭಾಷೆಯಾಗಿ ಬೆಳೆಯುತ್ತಿದೆ. ಒಟ್ಟು ಪ್ರಜ್ಞೆಗೆ ಆಕಾರ ಕೊಡುವ ಸೂಚಕವಾಗುತ್ತವೆ (ಯು.ಆರ್.ಅನಂತಮೂರ್ತಿ, ೧೯೭೧), ತಾತ್ವಿಕವಾಗಿ ಈ ಲೋಕದ ಪ್ರತಿಯೊಂದು ತುಣುಕಿಗೆ ಅವರದೇ ಆದ ಅಸ್ತಿತ್ವವು, ಸ್ವಾಯುತತ್ತೆಯೂ ಇದೆ. ಸತ್ಯವು ಒಂದಲ್ಲ ಹಲವು ಸತ್ಯದ ಪ್ರತಿ ಮೂಖವೂ ಮಾನ್ಯವಾದುದು. ಒಂದು ಇನ್ನೊಂದರ ಅಧೀನ ಎಂದು ಭಾವಿಸಬೇಕಿಲ್ಲ ಎಂದು ಅವು ಭಾವಿಸುತ್ತವೆ (ರಹಮತ್ ತರಿಕೇರಿ, ೨೦೦೩). ಅಂದರೆ, ಪ್ರತಿಯೊಂದು ಜಾತಿ, ಧರ್ಮ, ಲಿಂಗ, ಪ್ರದೇಶ ಮತ್ತು ಭಾಷೆಯ ಗುರುತುಗಳ ಆಧಾರದಲ್ಲಿ ಹುಟ್ಟುತ್ತಿರುವ ಸಾಂಸ್ಕೃತಿಕ ಅನನ್ಯತೆಯ ಪ್ರಶ್ನೆಯನ್ನು ಈ ಸಾಂಸ್ಕೃತಿಕ ವಿಶ್ಲೇಷಣೆಗಳ ದೃಢೀಕರಿಸುತ್ತವೆ ಎಂಬ ನಂಬಿಕೆ ಗಟ್ಟಿಗೊಳ್ಳುವುದು.

ಚರಿತ್ರೆ ಯುದ್ಧಕ್ಕೂ ಕೀಳಜನ, ಹೀನರು, ಅಸ್ಫೃಶ್ಯರು ಎಂಬ ಅನವಶ್ಯಕ ಅವಹೇಳನಕ್ಕೆ ತುತ್ತಾಗಿ, ಅಪಮಾನದಿಂದ ಬೇಯುತ್ತಿರುವ ಜನಕುಲವು ಎದೆಯುಬ್ಬಿಸಿ ಸವರ್ಣೀಯರ ಮುಖಕ್ಕೆ ಹೊಡದಂತೆ ಹೇಳುವಂತೆ ಅದ್ಭುತ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವುದು ಎಂಥಾ ಅಲೆಯನ್ನುಂಟು ಮಾಡುವುದು ಎಂಬುದು ಒಂದು ಸಂಭ್ರಮದ ಮಾತು. ಇದು ದಲಿತರ ವಿಮೋಚನೆಯ ತತ್ವಕ್ಕೆ ಸಮರ್ಪಕ ಅಡಿಪಾಯವನ್ನು ಒದಗಿಸುತ್ತದೆ. ಅಂದರೆ, ಮನುಷ್ಯ ಎಷ್ಟೇ ಪ್ರಗತಿಶೀಲನಾಗಿ ಮುಂದುವರೆದರೂ ಇತಿಹಾಸದ ಕ್ರೂರ ವ್ಯಂಗದಲ್ಲಿ ಮತ್ತೆ ಮತ್ತೆ ಬೀಳುತ್ತಲೇ ಇರುತ್ತಾನೆ. ಹಾಗೇ ಊಳಿಗಮಾನ್ಯ ಶಾಹೀ ವ್ಯವಸ್ಥೆಯಿಂದ ಹಿಡಿದ ಸಾಮ್ರಾಜ್ಯಶಾಹೀ ವ್ಯವಸ್ಥೆಯವರಿಗೆ ಪ್ರತಿಯೊಂದು ವ್ಯವಸ್ಥೆಯು ಗುಲಾಮಗಿರಿಯನ್ನು ಪೋಷಿಸಿಕೊಂಡು ಬಂದಿವೆ ಎನ್ನುವಂತ ವಾದಗಳಿವೆ. ಪೂರ್ಣವಿರಾಮವನ್ನು ಇಡಬಹುದು. ಈ ಎಲ್ಲ ವಿವರಣೆ ಮತ್ತು ವ್ಯಾಖ್ಯಾನಗಳ ಒಟ್ಟು ಆಶಯವೆಂದರೆ ದಲಿತ ಭಾಷೆ ಎನ್ನುವಂತಹ ಕೇವಲ ರಾಚನಿಕವಾಗಿ ವಿಶ್ಲೇಷಣೆ ಮಾಡವಂತಹದಲ್ಲ ಅದು ಅವರ ಸಾಂಸ್ಕೃತಿಕ ನಿಲುವುಗಳಿಂದ ನಿರೂಪಿಸಬಹುದಾದಂತಹದು. ಆದ್ದರಿಂದ ಈ ಮೇಲೆ ಕೊಟ್ಟಿರುವ ಕೆಲವು ಪಠ್ಯದ ಉದಾಹರಣೆಗಳು ದಲಿತರ ಹಸಿವು, ನೋವು, ವಿಷಾದ ಇನ್ನಿತರ ಅವಮಾನದ ಅನುಭವವನ್ನು ಸೂಚಿಸುವ ಪ್ರತೀಕಗಳಾಗಿ, ಸಂಕೇತಗಳಾಗಿ ಮತ್ತು ಸೂಚಕಗಳಾಗಿ ತಮ್ಮ ಪರಿಭಾಷೆಯನ್ನು ರೂಪಿಸಿಕೊಂಡಿವೆ.

ಅಭ್ಯಾಸ ಪುಸ್ತಕಗಳು

೧. ಅರವಿಂದ ಮಾಲಗತ್ತಿ, ೨೦೦೨, ದಲಿತ ಮಾರ್ಗ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

೨. ಅನಂತಮೂರ್ತಿ ಯು.ಆರ್., ೧೯೭೧, ಪ್ರಜ್ಞೆ ಮತ್ತು ಪರಿಸರ, ಅಕ್ಷರ ಪ್ರಕಾಶನ, ಸಾಗರ.

೩. ಬಿಳಿಮಲೆ, ಪುರುಷೋತ್ತಮ, ೧೯೯೦, ಬಂಡಾಯ ದಲಿತ ಸಾಹಿತ್ಯ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

೪. ಡಿ.ಆರ್.ನಾಗರಾಜ, ೧೯೯೩, The Flaming Feet : A Study of the Dalit movement, ಸೌತ್ ಫೋರಮ್ ಪ್ರೆಸ್.

೫. ಹೆಚ್.ಟಿ.ಪೋತೆ, ೨೦೦೫, ಅವೈದಿಕ ಚಿಂತನೆ, ತಿಪ್ಪಣ್ಣಂಚು ಪ್ರಕಾಶನ, ಗುಲಬರ್ಗಾ.

೬. ರಹಮತ್ ತರಿಕೇರಿ, ೨೦೦೩, ಸಾಂಸ್ಕೃತಿಕ ಅಧ್ಯಯನ, ಕರ್ನಾಟಕ ಸಾಹಿತ್ಯ ಅಕಾಡಮಿ, ಬೆಂಗಳೂರು.

೭. ರಂಗರಾಜ ವನದುರ್ಗ, ೨೦೦೫, ದಲಿತ ಸಂವೇದನೆ, ಸಿವಿಜಿ ಪಬ್ಲಿಕೇಷನ್, ಬೆಂಗಳೂರು

೮. ಅಭಿನವ, ೨೦೦೨, ನೋಮ್ ಚೋಮಸ್ಕಿ, ಅಭಿನವ ಬೆಂಗಳೂರು.

೯. ನಟರಾಜ ಹುಳಿಯಾರ್, ೨೦೦೪, ಆಫ್ರಿಕನ್ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ, ಕವಿಹಂ.

೧೦. ನಾರಾಯಣ ಕೆ.ವಿ., ೨೦೦೦, ಭಾಷೆಯ ಸುತ್ತಮುತ್ತ, ಕ್ರೈಸ್ತ ಕಾಲೇಜು, ಬೆಂಗಳೂರು.

೧೧. ಮುರಾರಿ ಬಲ್ಲಾಳ, ೨೦೦೧, ಸಾಹಿತ್ಯ ಸಮ್ಮುಖ, ಕರ್ನಾಟಕ ಸಂಘ, ಪುತ್ತೂರು.

೧೨. Gail Omvedt, 1995, Dalit Vision, Orient Longman.

೧೩. Woolard, Karthrzn : Languae Ideology as a field of inquirs, languages ideologies : Practice and theory (ed) by Bambi schieffeln.

೧೪. ಮೇಟಿ ಮಲ್ಲಿಕಾರ್ಜುನ, ಭಾಷೆ, ಧರ್ಮ ಮತ್ತು ರಾಷ್ಟ್ರೀಯತೆ, ಪ್ರಾದೇಶಿಕ ವಿಚಾರ ಸಂಕಿರಣ ಕನ್ನಡ ಭಾಷೆ ಮತ್ತು ಭಾಷಾವಿಜ್ಞಾನ, ಭಾರತೀಯ ಭಾಷಾ ಸಂಸ್ಥಾನ ಮೈಸೂರು.

೧೫. ಕನ್ನಡ ಅಧ್ಯಯನ ಸಂಸ್ಥೆ, ೧೯೬೭, ಸುವರ್ಣ ಸಂಚಯ, ಮೈಸೂರು ವಿಶ್ವವಿದ್ಯಾನಿಯಲ, ಮೈಸೂರು.

೧೬. ಲಿಂಗದೇವರ ಹಳೆಮನೆ, ೨೦೦೩, ನಿಲುವು, ತಳಮನೆ ಪ್ರಕಾಶನ, ಶ್ರೀರಂಗಪಟ್ಟಣ.