ಕನ್ನಡದಲ್ಲಿ ಪ್ರಾದೇಶಿಕ ಪ್ರಭೇದಗಳು ರೇಖಾತ್ಮಕವಾಗಿದ್ದರೆ: ಸಾಮಾಜಿಕ ಪ್ರಭೇದಗಳು ಲಂಬಾತ್ಮಕವಾಗಿರುತ್ತವೆ. ರೇಖಾತ್ಮಕವಾಗಿರುವ ಪ್ರಾದೇಶಿಕ ಪ್ರಭೇದದೊಳಗೆ ಹಲವು ಲಂಬಾತ್ಮಕವಾದ ಸಾಮಾಜಿಕ ಪ್ರಭೇದಗಳು ಇರುತ್ತವೆ. ಆದರೆ ಲಂಬಾತ್ಮಕವಾದ ಸಾಮಾಜಿಕ ಪ್ರಭೇದದೊಳಗೆ ಹಲವು ರೇಖಾತ್ಮಕವಾದ ಪ್ರಾದೇಶಿಕ ಪ್ರಭೇದಗಳು ಇರಲು ಸಾಧ್ಯವಿಲ್ಲ. ರೇಖಾತ್ಮಕವಾದ ಪ್ರಾದೇಶಿಕ ಪ್ರಭೇದಗಳನ್ನು ನಿರ್ಧರಿಸಲು ಭಾಷಿಕ ಮಾನದಂಡಗಳು ಇರುವಾಗೆ: ಲಂಬಾತ್ಮಕವಾದ ಸಾಮಾಜಿಕ ಪ್ರಭೇದಗಳನ್ನು ನಿರ್ಧರಿಸಲು ನಿರ್ದಿಷ್ಟವಾದ ಭಾಷಿಕ ಮಾನದಂಡಗಳು ಇವೆ.

ಕನ್ನಡ ಸಾಮಾಜಿಕ ಪ್ರಭೇದಗಳಲ್ಲಿ ಬಳಕೆಯಲ್ಲಿರುವ ಪದಗಳು ಎರಡು ಮಾದರಿಯಲ್ಲಿವೆ: ಒಂದು : ರೂಪಭೇದ ಇರುವಂತಹವು. ಎರಡು: ಅರ್ಥಭೇದ ಇರುವಂತಹವು. ರೇಖಾತ್ಮಕವಾಗಿ ಬಳಕೆಯಲ್ಲಿರುವ ಪದಗಳೆಲ್ಲವೂ ಲಂಬಾತ್ಮಕವಾಗಿಯೂ ಬಳಕೆಯಲ್ಲಿದೆ. ಅಣ್ಣೈ, ಅಪ್ಪೈ ಅವೈ, ಎದೈ, ಏನ್‌ದೈ, ಬದೈ ಮುಂತಾದ ಸಂಬೋಧನಾ ರೂಪಗಳು ಲಂಬಾತ್ಮಕವಾಗಿ ಹೊಲೆಮಾದಿಗರ ಕನ್ನಡದಲ್ಲಿ ಮಾತ್ರ ಬಳಕೆಯಲ್ಲಿದೆ.

ಈಗಾಗಲೆ ಕನ್ನಡದ ವೈಶಿಷ್ಟ್ಯಗಳನ್ನು ಕುರಿತು ಪ್ರಬಂಧವನ್ನು ಬರೆದಿದ್ದಾರೆ. ನಾನು ಮೂಲತಹ ಚಾಮರಾಜನಗರ ಜಿಲ್ಲೆಯವನ್ನೇ ಆಗಿರುವುದರಿಂದ ಕೆಲವು ಹೆಚ್ಚಿನ ಮಾಹಿತಿಯನ್ನು ದಾಖಲಿಸಬೇಕು ಎನಿಸಿತು. ಆ ಹಿನ್ನೆಲೆಯಿಂದ ದಾಖಲಿಸಿದ್ದೇನೆ.

ಚಾಮರಾಜನಗರ ಜಿಲ್ಲೆಯಲ್ಲಿ ಲಂಬಾತ್ಮಕವಾಗಿ ಹೊಲೆಮಾದಿಗರು ಬಹುಸಂಖ್ಯಾತರಾಗಿದ್ದಾರೆ. ಅವರು ಬಳಕೆ ಮಾಡುವ ಕನ್ನಡ ಇತರ ಸಾಮಾಜಿಕ ವರ್ಗಗಳು ಬಳಸುವ ಕನ್ನಡಕ್ಕಿಂತ ಬೇರೆ ಆಗಿದೆ. ಅಂದರೆ ಅವರು ಬಳಕೆ ಮಾಡುವ ಧ್ವನಿ, ಪದ, ವಾಕ್ಯ ಮತ್ತು ಸಂಬೋಧನೆ ಮುಂತಾದ ಹಂತಗಳಲ್ಲಿ ಗುರುತಿಸಲು ಸಾಧ್ಯ. ಈ ಭಾಗದ ಹೊಲೆಮಾದಿಗರ ಕನ್ನಡದಲ್ಲಿ ಮೂಲದ ದ್ರಾವಿಡ ಭಾಷೆಯ ಲಕ್ಷಣವಾದ ‘ಐ’ ಅಥವಾ ‘ಅಯ್’ ಕಾರವನ್ನು ನಾಮಪದ ಮತ್ತು ಕ್ರಿಯಾಪದದ ಸಂಬೋಧನಾ ರೂಪದಲ್ಲಿ ಉಳಿಸಿಕೊಂಡಿದೆ. ಈ ಲಕ್ಷಣ ಪ್ರಾದೇಶಿಕವಾಗಿ ವಿಶಿಷ್ಟವಾಗಿದ್ದರೂ, ಸಾಮಾಜಿಕವಾಗಿ ನಿರ್ದಿಷ್ಟವಾಗಿದೆ. ಈ ಲೇಖನಕ್ಕೆ ಹನ್ನೂರು ಚನ್ನಪ್ಪನವರು ಪ್ರಕಟಿಸಿರುವ ಅನ್ನ ಕಥಾಸಂಕಲನದಲ್ಲಿ ಬಳಕೆಯಾಗಿರುವ ಭಾಷೆಯೇ ಆಕರ.

ಉದಾಹರಣೆ :

ಹೊಲೆಮಾದಿಗರ ಕನ್ನಡ ಬರಹದ ಕನ್ನಡ
ಚನ್ನಾಗಿದ್ದೀರಣೈ ಚನ್ನಾಗಿದ್ದೀರಾ ಅಣ್ಣ
ಬಂದ್ರು ಕಣ್ಣೈ ಬಂದರು ಅಣ್ಣ
ಉಡೈರಾಸೇಕ ಏ ರಾಜಶೇಖರಾ
ಅವೈ… ಕೋಳಿ ಯಿಡ್ಕಳ್ಳ ಹಕ್ಕಿ ಪಿಕ್ಕೆವ್ರು ಅವ್ವ ಕೋಳಿ ಹಿಡಿದುಕೊಳ್ಳುವುದಕ್ಕೆ
ಬಂದಿರಂತೆ ಕವೈ ಹಕ್ಕಿಪಿಕ್ಕಿ ಅವರು ಬಂದಿದ್ದರಂತೆ
ಒತಾರಿಂದ್ಲೂ ಒಂದೇ ಸಮ್ಕ ಒಲ ಮುಂದ ಬೆಳಿಗ್ಗೆಯಿಂದಲೂ ಒಂದೇ ಸಮನೆ
ಕೂತ್ತಿದೈ ಒಲ ಮುಂದೆ ಕುಳಿತಿದ್ದೀಯಾ?
ಬುಡಪ್ಪೈ ಬಿಟ್ಟುಬಿಡು
ವದೈ, ಯೆನ್‌ ದೈ ಏನಮ್ಮ
ಬದೈ ಬಾರಮ್ಮ

ಮೇಲಿನ ನಿದರ್ಶನಗಳನ್ನು ಗಮನಿಸಿದಾಗ ಒಂದೇ ಸಂದರ್ಭದಲ್ಲಿ ಬಳಕೆ ಆಗಿಲ್ಲ ಎಂದೆನಿಸುತ್ತದೆ. ಬೇರೆ ಬೇರೆ ಕಾರಣಗಳಿಗಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಬಳಕೆಯಾಗಿರುವುದು ಸ್ಪಷ್ಟವಾಗಿದೆ. ತಮ್ಮ ಅಣ್ಣನನ್ನು ಸಂಬೋಧನೆ ಮಾಡುವ ಸಂದರ್ಭ, ಮಗಳು ತಾಯಿಯನ್ನು ಸಂಬೋಧನೆ ಮಾಡುವುದು, ಸ್ನೇಹಿತ ಮತ್ತೊಬ್ಬ ಸ್ನೇಹಿತನನ್ನು ಸಂಬೋಧನೆ ಮಾಡುವ ಸಂದರ್ಭ, ತಾಯಿಯನ್ನು ಮಗಳು ಅಥವಾ ಮಗನು ಸಂಬೋಧನೆ ಮಾಡುವ ಸಂದರ್ಭಗಳಲ್ಲಿ ಮೇಲಿನ ಪದಗಳು ನಿರ್ದಿಷ್ಟ ಸಾಮಾಜಿಕ ವರ್ಗವನ್ನು ಸೂಚಿಸುತ್ತವೆ.

ಕನ್ನಡದಲ್ಲಿ ವ್ಯಂಜನಾಂತ ಪದಗಳಲ್ಲಿ ಸ್ವರಾಂತ್ಯ ಆಗುವುದು ಹೊಸಗನ್ನಡದ ಒಂದು ಪ್ರಮುಖ ಧ್ವನಿ ನಿಯಮ. ಈ ಮಾದರಿ ಧ್ವನಿ ನಿಯಮ. ಈ ಮಾದರಿ ಧ್ವನಿ ನಿಯಮ ನಂಜನಗೂಡಿನ ಕನ್ನಡದಲ್ಲಿ ವ್ಯಂಜನಾಂತ ಪದಗಳು ಸ್ವರಾಂತ ಆಗುವ ಬದಲು ಕೊನೆಯ ವ್ಯಂಜನ ಲೋಪಗೊಂಡಿದೆ ಎಂದು ಡಿ.ಎನ್.ಶಂಕರಭಟ್ಟರು (ಕನ್ನಡ ಭಾಷೆಯ ಕಲ್ಪಿತ ಚರಿತ್ರೆ, ಪು. ೭೫) ಅಭಿಪ್ರಾಯ ಪಡುತ್ತಾರೆ. ಇದೆ ಮಾದರಿಯಲ್ಲಿ ಚಾಮರಾಜನಗರದ ಹೊಲೆಮಾದಿಗರ ಕನ್ನಡ ಉಚ್ಚಾರಣೆಯಲ್ಲಿ ವ್ಯಂಜನ ಲೋಪವಾಗಿರುವುದು ಮತ್ತು ಒಂದು ಧ್ವನಿಗೆ ಬದಲು ಮತ್ತೊಂದು ಧ್ವನಿಯನ್ನು ಉಚ್ಚಾರಣೆ ಮಾಡುವುದು ವಿಶೇಷ.

ಹೊಲೆಮಾದಿಗರ ಕನ್ನಡಬರಹದ ಕನ್ನಡ

ಅಮ ಅವನು
ಇಮ ಇವನು
ಅಬ ಅವಳು
ಇಬ ಇವಳು

ಮೇಲಿನ ನಿದರ್ಶನಗಳನ್ನು ಗಮನಿಸಿದಾಗ ಚಾಮಾರಜನಗರದ ಹೊಲೆಮಾದಿಗರ ಕನ್ನಡದ ಉಚ್ಚಾರಣೆಯಲ್ಲಿ ‘ಅ’ ಮತ್ತು ‘ಇ’ ಕಾರಗಳ ಮುಂದಿನ ಧ್ವನಿಯಾದ ‘ಮ’ ಕಾರವು ಪುಲ್ಲಿಂಗ ಸೂಚಕವಾಗಿಯೂ, ‘ಬ’ ಕಾರವು ಸ್ತ್ರೀಲಿಂಗ ಸೂಚಕವಾಗಿಯೂ ಬಳಕೆಯಲ್ಲಿದೆ. ಬರಹದ ಕನ್ನಡದಲ್ಲಿ ‘ಬ’ ಕಾರವಾಗುವುದು ಒಂದು ಮಾದರಿ ಧ್ವನಿ ನಿಯಮ. ಅದರಂತೆ ‘ಇವ’ ಮತ್ತು ‘ಅವ’ ರಚನೆಗಳಲ್ಲಿ ‘ವ’ ಕಾರಕ್ಕೆ ಬದಲಾಗಿ ‘ಬ’ ಕಾರ ಬಳಕೆಯಲ್ಲಿ ಇರಬಹುದು.

ಸರ್ವನಾಮ ರೂಪಗಳಾದ ‘ನಾವು’ ಮತ್ತು ‘ನೀವು’ ಮುಂತಾದ ರಚನೆಗಳು ವಿಶಿಷ್ಟವಾಗಿ ಉಚ್ಚಾರಣೆಯಲ್ಲಿವೆ.

ಹೊಲೆಮಾದಿಗರ ಕನ್ನಡ ಬರಹದ ಕನ್ನಡ
ನಾಮು/ನಾಮ ನಾವು
ನೀಮು/ನೀಮೆ ನೀವು
ಜೀಮ ಜೀವ
ಕಿಮಿ ಕಿವಿ
ಅರ್ಜೀಮ ಅರ್ಧಜೀವ
ನಾಮ್ಯಾಕ ನಾವೇಕೆ
ತಿಮಿಯಾಕೆ ತಿವಿಯಕ್ಕೆ
ಅದ್ಯಾಕ ನೀಮು ಡೈಲಿ ಅನ್ನ ಮಾಡ್ದರ್ಯಾ….!!! ಅದೇಕೆ ನೀವು ಪ್ರತಿದಿನ ಅನ್ನ ಮಾಡುತೀರಾ…..!!!?
ನಾಮುವೇ ಒಯ್ತಿಮಿ ನಾವುವೇ ಹೋಗುತ್ತೇವೆ
ಕೂಡ್ತೀಮಿ ಕೊಡುತ್ತೇವೆ
ಮಾಡ್ತೀಮಿ ಮಾಡುತ್ತೇವೆ
ಅಮುತ್ಕಂದಿ ಅವಿತುಕೊಂಡೆ

ಮೇಲಿನ ನಿದರ್ಶನಗಳಿಂದ ತಿಳಿದು ಬರುವ ಭಾಷಾ ಸಂಗತಿಯೆಂದರೆ ಇವುಗಳ ಬಳಕೆ ಸಂದರ್ಭ ವಿಶಿಷ್ಟ. ಮೇಲ್ವರ್ಗದವರ ಜತೆಯಲ್ಲಿ ಹೊಲೆಮಾದಿಗರು ಮಾತನಾಡುವ ಸಂದರ್ಭ ಇಲ್ಲವೆ ಹೊಲೆಮಾದಿಗರ ಜತೆಯಲ್ಲಿ ಹೊಲೆಮಾದಿಗರು ಸಂಬೋಧನೆ ಮಾಡುವ ಸಂದರ್ಭವಿದು. ಬರಹದ ಕನ್ನಡದಲ್ಲಿ ‘ನಾವು’, ‘ನೀವು’ ರೂಪಗಳು ಈ ಭಾಗದ ಹೊಲೆಮಾದಿಗರ ಕನ್ನಡದಲ್ಲಿ ‘ನಾಮು’ ಮತ್ತು ‘ನೀಮು’ ಎಂದು ಬಳಕೆಯಲ್ಲಿರುವುದು. ‘ವ’ ಕಾರಕ್ಕೆ ‘ಮ’ ಕಾರ ಬಳಕೆಯಲ್ಲಿದೆ. ಇದಕ್ಕೆ ಕಾರಣ ಚಾಮರಾಜನಗರ ಕನ್ನಡದ ಮೇಲೆ ತಮಿಳು ಭಾಷೆಯ ಪ್ರಭಾವ ಆಗಿದೆ. ಲಿಖಿತ ಆಕರಗಳಲ್ಲಿ ಗಮನಿಸಿದಾಗ ತಮಿಳು ಭಾಷೆಯಲ್ಲಿ ‘ನಾವು’ ರೂಪಕ್ಕೆ ಸಮನಾರ್ಥಕವಾಗಿ ‘ನಾಮ್’ ಎಂದು ಉಚ್ಚಾರಣೆಯಲ್ಲಿದೆ. ಕನ್ನಡದ ಸಂದರ್ಭದಲ್ಲಿ ಹಳಗನ್ನಡ ಕಾಲದಲ್ಲಿ ‘ನಾಮ್’ ಎಂದು ವ್ಯಂಜನಾಂತವಾಗಿ ಬಳಕೆಯಲ್ಲಿದೆ. ‘ನಾಮ್’ ರೂಪದಲ್ಲಿ ‘ನಾ’ ಕಾರದ ಮುಂದಿನ ವ್ಯಂಜನ ಧ್ವನಿಯಾದ ‘ಮ್’ ಕನ್ನಡದಲ್ಲಿ ಉಚ್ಚಾರಣೆ ಆಗುವಾಗ ಸ್ವರಾಂತವಾಗುತ್ತದೆ. ವಿಶೇಷ ಎಂದರೆ ಇಲ್ಲಿ ‘ಅ’ ಕಾರದ ಮುಂದೆ ಮತ್ತೊಂದು ‘ಉ’ ಕಾರ ಸೇರಿ ‘ಮು’ ಆಗಿ ಬಳಕೆಯಲ್ಲಿದೆ. ಇದೆ ಮಾದರಿಯಲ್ಲಿ ‘ನೀವು’ ರೂಪ ‘ನೀಮು’ ಆಗಿ ಉಚ್ಚಾರಣೆಯಲ್ಲಿರುವುದು ಸ್ಪಷ್ಟ. ಇದೆ ಸಾಮಾಜಿಕ ವರ್ಗದವರ ಕನ್ನಡದಲ್ಲಿ ‘ವ’ ಕಾರ ‘ಮ’ ಕಾರವಾಗಿ ಉಚ್ಚಾರಣೆಯಲ್ಲಿದೆ.

‘ಅಯ್‌ಕ’ (ಐಕಳು) ಎಂಬ ಏಕವಚನಕ್ಕೆ ಬಹುವಚನವಾಗಿ ‘ಅಯ್‌ಕ್ಳು’

ರೂಪವನ್ನು ಮಕ್ಕಳು ಎಂಬ ಅರ್ಥದಲ್ಲಿ ಈ ಭಾಗದ ಜನರು ಬಳಕೆ ಮಾಡುತ್ತಾರೆ. ಈ ಪದವು ಹೆಚ್ಚಿನ ಬಳಕೆಯಲ್ಲಿದೆ. ‘ಹೈದ’ ರೂಪವು ‘ಹುಡುಗ’ ಎಂಬ ಅರ್ಥದಲ್ಲಿ ಬಳಕೆಯಲ್ಲಿದೆ. ‘ಹೈದ’ ಪುಲ್ಲಿಂಗ ಎಂದು ತಿಳಿದು ‘ಹೈದೆ’ ಎಂದು ಸ್ತ್ರೀಲಿಂಗ ಸೂಚಕವಾಗಿ ಪತ್ರಿಕೆಗಳಲ್ಲಿ. ಬಳಕೆ ಮಾಡಲಾಗಿದೆ. ಡಾ. ಕೆ.ವಿ.ನಾರಾಯಣರವರು ‘ಹೈದೆ’ ಮತ್ತು ‘ಹೈದೆಯರು’ ಪದಗಳನ್ನು ಕುರಿತು ಪದ ಪದಾರ್ಥ ಕಾಲಂನಲ್ಲಿ ವಿವರಿಸಿದ್ದಾರೆ.

ಹೊಲೆಮಾದಿಗರು ‘ಮಗು ಕಕ್ಕಸು ಮಾಡಿಕೊಂಡಿದೆ’ ಎಂಬುದಕ್ಕೆ ಸಮನಾರ್ಥಕವಾಗಿ ‘ಕೂಸು ಆಚ್ಕ ಓಕ್‌ಕೊಂಡದೈ’ ಎಂದು ಬಳಕೆ ಮಾಡುತ್ತಾರೆ. ಇದೆ ಭಾಗದ ಹೊಲೆಮಾದಿಗರು ಮಲಮೂತ್ರ ವಿರ್ಸನೆಗೆ ಹೋಗಿದ್ದಾರೆ ಎಂಬರ್ಥದಲ್ಲಿ ‘ನೀರ್ ಕಡೆ ಹೋಗಿದ್ದಾರೆ’, ‘ಒಳ ಕಡೆ ಹೋಗಿದ್ದಾರೆ’, ‘ಕೆರೆ ಕಡೆ ಹೋಗಿದ್ದಾರೆ’, ‘ಬಯ್ಲು ಕಡೆ ಹೋಗಿದ್ದಾರೆ’, ‘ಕಾಲ್ವೆ ಕಡೆ ಹೋಗಿದ್ದಾರೆ’ ಎಂದು ಬಳಕೆ ಮಾಡುವರು. ಆದರೆ ಮಕ್ಕಳಿಗೆ ಸಂಬಂಧಿಸಿದಂತೆ ಹೇಳುವಾಗ ಮಾತ್ರ ಇತರೆ ಸಾಮಾಜಿಕ ವರ್ಗಗಳು ಬಳಸದೆ ಇರುವ ‘ಆಚ್ಕ’ (ಕಕ್ಕಸು) ಮಾದರಿಯೊಂದನ್ನು ಬಳಕೆ ಮಾಡುವರು. ‘ಆಚ್ಕ’ ಪದ ‘ಅ’ ಕಾರಾಂತವಾಗಿದೆ. ಅದರ ಅರ್ಥ ‘ಆಚೆಗೆ’, ‘ಹೊರಕ್ಕೆ’, ‘ಹೊರಗೆ’, ಎನ್ನುವ ಅರ್ಥದಲ್ಲಿ ಬಳಕೆ ಆಗುತ್ತಿದೆ ಎಂಬುದು ಗಮನಿಸುವಂತಹ ಅಂಶ. ಇತ್ತೀಚಿಗೆ ಬೇರೆ ಬೇರೆ ಕಾರಣಗಳ ಪ್ರಭಾವದಿಂದ ‘ಟು ಸೈಡ್ಗೆ’ ಎನ್ನುವ ಪದ ಹೆಚ್ಚು ಜನಪ್ರಿಯವಾಗಿ ಬಳಕೆಯಲ್ಲಿದೆ. ಹಾಗೆಯೇ ‘ಶಾಲೆ’ ಅಥವಾ ‘ಸ್ಕೂಲ್’ ಪದ ‘ಇಸ್ಕೂಲ್’ ಆಗಿ ಉಚ್ಚಾರಣೆಯಲ್ಲಿರುವುದಕ್ಕೆ ಕಾರಣಗಳಿವೆ. ಕನ್ನಡದಲ್ಲಿ ಪದಾದಿಯಲ್ಲಿ ವ್ಯಂಜನ ದ್ವಿತ್ವ ಬರುವುದಿಲ್ಲ ಎನ್ನುವುದು ಒಂದು ಧ್ವನಿ ನಿಯಮ. ಜತೆಗೆ ‘ಸ್ಕೂಲ್’ ಪದ ಇಂಗ್ಲಿಶ್ ಭಾಷೆಯದು ಬೇರೆ. ಇಲ್ಲಿ ಗಮನಿಸಬೇಕಾದ ಅಂಶ ‘ಪಳ್ಳಿ’ ರೂಪ ಯಾವ ಕಾರಣಕ್ಕಾಗಿ ಈ ಭಾಗದಲ್ಲಿ ಬಳಕೆಯಲ್ಲಿದೆ. ತಮಿಳು ಭಾಷೆಯಲ್ಲಿ ‘ಪಳ್ಳಿ’ ಮತ್ತು ‘ಪಳ್ಳಿಕ್ಕೂಡಂ’ ರೂಪಗಳು ಬಳಕೆಯಲ್ಲಿದೆ. (ದ್ರಾವಿಡ ನಿಘಂಟು, ಪು. ೧೧೯. ಕ.ವಿ.ವಿ. ಹಂಪಿ) ಈ ಹಿನ್ನೆಲೆಯಿಂದ ಚಾಮರಾಜನಗರ ಕರ್ನಾಟಕದ ಗಡಿ ಪ್ರದೇಶವಾಗಿದೆ. ಜತೆಗೆ ಏಕೀಕರಣೋತ್ತರದಲ್ಲಿ ಮದ್ರಾಸ್ ರಾಜ್ಯ ಆಡಳಿತಕ್ಕೆ ಒಳಗಾಗಿತ್ತು. ಈ ಹಿನ್ನೆಲೆಯಿಂದ ಈ ಭಾಗದ ಹೊಲೆಮಾದಿಗರ ಕನ್ನಡದಲ್ಲಿ ಮೂಲ ದ್ರಾವಿಡ ಅಂಶಗಳು ಹೆಚ್ಚು ಉಳಿದು ಕೊಂಡಿರುವುದು ವಿಶೇಷ.

ಮೂಲ ದ್ರಾವಿಡ ಭಾಷೆಯ ‘ಐ’ ಅಥವಾ ‘ಅಯ್’ ಕಾರ ಕನ್ನಡದಲ್ಲಿ ‘ಎ’ಕಾರವಾಗಿ ಮೈಸೂರು ಕನ್ನಡದಲ್ಲಿ ಎಕಾರಾಂತವಾಗಿ, ಉತ್ತರ ಕರ್ನಾಟಕ ಕನ್ನಡದಲ್ಲಿ ‘ಇ’ ಕಾರಾಂತವಾಗಿ ಮೈಸೂರು ಪ್ರದೇಶದಲ್ಲೆ ಪೂರ್ವ ವಿಭಾಗದ ಚಾಮರಾಜನಗರ ಯಳಂದೂರು ಮತ್ತು ಕೊಳ್ಳೇಗಾಲ ಪ್ರದೇಶಗಳಲ್ಲಿ ನಾಮಪದ ಮತ್ತು ಕ್ರಿಯಾ ಪದಗಳೆರಡು ರಚನೆಗಳಲ್ಲೂ ‘ಅ’ ಕಾರಂತವಾಗಿರುವುದು ವಿಶಿಷ್ಟ. ಈ ಲಕ್ಷಣ ಎಲ್ಲಾ ನಿಮ್ನ ವರ್ಗಗಳಲ್ಲೂ ಬಳಕೆಯಲ್ಲಿದೆ. ಹೆಚ್ಚಿನ ಪ್ರಮಾಣದಲ್ಲಿ ಹೊಲೆಮಾದಿಗರ ಕನ್ನಡದಲ್ಲಿ ಬಳಕೆಯಲ್ಲಿದೆ.

ಉದಾಹರಣೆಗೆ:

. ಕ್ರಿಯಾಪದ:

ಹೊಲೆಮಾದಿಗೆ ಕನ್ನಡ ಬರಹದ ಕನ್ನಡ
ಕ್ವೂರ ಕೊರೆ
ಬರ ಬರೆ
ಕರ ಕರೆ

.ನಾಮಪದ

ಮನ/ಮಣ ಮನೆ
ಜಡ ಜಡೆ
ತಲ ತಲೆ
ಅಬ ಹವೆ
ಆನ/ಆಣ ಆನೆ
ಆಸ್ಗ ಹಾಸಿಗೆ
ಕಡ್ಬ ಕಡವೆ
ಕ್ವೂಲ ಕೊಲೆ

ಸಂಬಂಧಸೂಚಕ ಪದಗಳು ಸಹ ‘ಅ’ ಕಾರಾಂತವಾಗಿವೆ.

ಅತ್ಗ ಅತ್ತಿಗೆ
ಸೊಸ ಸೊಸೆ

ಈ ಮಾದರಿ ವ್ಯತ್ಯಾಸಕ್ಕೆ ಕಾರಣ ಮೂಲ ದ್ರಾವಿಡದಲ್ಲಿ ‘ಅ’ ಕಾರಾಂತ ಪದಗಳು ಬಳಕೆಯಲ್ಲಿದ್ದು: ಈ ಪ್ರಭೇದ ಹಾಗೆ ಉಳಿಸಿಕೊಂಡಿದೆ. ಬದಲಾವಣೆಗೆ ಒಳಗಾಗಿಲ್ಲ ಎಂಬುದು ಕೆಲವು ದ್ರಾವಿಡ ಭಾಷಾಸ್ತ್ರಜ್ಞರ ಅಭಿಪ್ರಾಯ. ‘ಅ’ ಕಾರಾಂತ ಪದಗಳು ಬಳಕೆಯಲ್ಲಿವೆ ಎಂದು ಖಚಿತವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ. ಅದು ‘ಅ’ ಕಾರ ಮತ್ತು ‘ಎ’ಕಾರದ ನಡುವೆ ಬೇರೊಂದು ಸ್ವರವೊಂದು ಉಚ್ಚಾರಣೆಯಲ್ಲಿದೆ. ಇದರ ಬಗ್ಗೆ ಹೆಚ್ಚಿನ ಅಧ್ಯಯನ ಆಗಬೇಕಾಗಿದೆ.

ಅಲ್ಲದೆ ಈ ಭಾಗದ ಹೊಲೆಮಾದಿಗರ ಕನ್ನಡದಲ್ಲಿ ಪದಾದಿಯ ‘ಇ’ ಕಾರ ‘ಎ’ ಕಾರವಾಗಿದೆ.

ಹೊಲೆಮಾದಿಗರ ಕನ್ನಡ ಬರಹದ ಕನ್ನಡ
ಎಲಿ ಅಥವಾ ಯಲಿಸುಂಡ ಇಲಿ
ಎರ ಇರುವೆ
ಎಂದ್ ಬಂದ್ಯಾ ಇಂದು ಬಂದೆಯಾ?

ಮೇಲಿನ ಪದಗಳಿಂದ ತಿಳಿದು ಬರುವ ಭಾಷೆಯ ಬದಲಾವಣೆ ಸಂಗತಿಯೆಂದರೆ ಬರಹದ ಕನ್ನಡದಲ್ಲಿ ಪದದ ಮೊದಲು ‘ಇ’ ಕಾರ ಹೊಲೆಮಾದಿಗರ ಕನ್ನಡದಲ್ಲಿ ‘ಎ’ ಕಾರವಾಗಿದೆ. ಹಾಗಾದರೆ ಬದಲಾವಣೆ ಚಾಮರಾಜನಗರದ ಹೊಲೆಮಾದಿಗರ ಕನ್ನಡದಲ್ಲಿ ಆಗಿದೆ ಎಂದುಕೊಂಡರೆ, ಬರಹದ ಕನ್ನಡದ ಸ್ವರವೇ ಮೂಲ ದ್ರಾವಿಡ ಎಂದಾಯ್ತು. ಇದಕ್ಕೆ ವಿರುದ್ಧವಾಗಿ ಚಾಮರಾಜನಗರದ ಹೊಲೆಮಾದಿಗರ ಕನ್ನಡದ ‘ಎ’ ಕಾರವೆ ಮೂಲ ಎಂದುಕೊಂಡರೆ ಬರಹದ ಕನ್ನಡದ ರೂಪವೆ ಬದಲಾವಣೆ ಆಗಿದೆ ಎಂದು ಕಲ್ಪಿಸಿಕೊಳ್ಳಲು ಸಾಧ್ಯವಿದೆ. ತುಲನಾತ್ಮಕ ವಿಧಾನದಿಂದ ‘ಎ’ ಕಾರ ‘ಇ’ ಕಾರಗಿ ‘ಒ’ ಕಾರ ‘ಉ’ ಕಾರವಾಗಿದೆ. ಈ ನಿಯಮದಂತೆ ಚಾಮರಾಜನಗರ ಹೊಲೆಮಾದಿಗರ ಕನ್ನಡ ಮೂಲ ದ್ರಾವಿಡ ಸ್ವರವನ್ನು (ಎ) ಉಳಿಸಿಕೊಂಡಿದೆ ಎಂಬ ತೀರ್ಮಾನಕ್ಕೆ ಬರಬೇಕಾಗಿದೆ.

ವಿಶೇಷವಾಗಿ ಈ ಭಾಗದ ಮಾದಿಗರು ಸಂಬಂಧಸೂಚಕ ಪದವನ್ನು ಬಳಕೆ ಮಾಡುವ ಕ್ರಮ ಮಾದರಿಯಾದುದು.

ಅಯ್ಯ   ಅಪ್ಪ/ತಂದೆ

ಹೊಲೆಯರು ‘ಅಪ್ಪ’ ಅಥವಾ ‘ತಂದೆಗೆ’ ‘ಅಪ್ಪೈ’ ಎಂದು ಸಂಬೋಧನೆ ಮಾಡಿದರೆ ಮಾದಿಗರು ‘ಅಪ್ಪನಿಗೆ’ ಅಥವಾ ‘ತಂದೆಗೆ’ ‘ಅಯ್ಯ’ ಎಂದು ಸಂಬೋಧನೆ ಮಾಡುತ್ತಾರೆ. ಹೊಲೆಯರು ತಂದೆಯ ಅಥವಾ ತಾಯಿಯ ತಂದೆಗೆ ‘ತಾತ’ ಅಥವಾ ‘ಅಯ್ಯ’ ಎಂದು ಸಂಬೋಧನೆ ಮಾಡುವರು. ಮಾದಿಗರು ‘ತಾತ’ ಎಂದೆ ಸಂಬೋಧನೆ ಮಾಡುವ ಕ್ರಮವಿದೆ. ಹಳಗನ್ನಡದಲ್ಲಿ ‘ಅಯ್ಯ’ ಎಂದರೆ ‘ತಂದೆ’ ಎಂಬ ಅರ್ಥವಿರುವುದರಿಂದ ಈ ಭಾಗದ ಮಾದಿಗರು ಹಳಗನ್ನಡದ ರೂಪವನ್ನು ಉಳಿಸಿಕೊಂಡಿದ್ದಾರೆ. ಹೊಲೆಮಾದಿಗರು ತಮ್ಮ ಹೆಂಡತಿಯನ್ನು ಸಂಬೋಧನೆ ಮಾಡುವಾಗ ‘ಅಮ್ಮೈ’ ಅಥವಾ ‘ಒಮ್ಮೈ’ ಎಂದು ಕರೆಯುವುದು ರೂಢಿ. ಆದರೆ ಇಂತಹ ನಿರ್ದಿಷ್ಟ ಸಂಬಂಧಿತ ಪದವನ್ನು ಮೇಲ್ವರ್ಗದ ಗಂಡಸರು ಹೊಲೆಮಾದಿಗರ ಹೆಂಡಂತಿಯರನ್ನು ಕೂಲಿ ಮಾಡುವುದಕ್ಕೆ ಕರೆಯುವಾಗ ‘ಅಮ್ಮೆ ಕೆಂಪಿ’, ‘ಒಮ್ಮೆ ಮಾದಿ’ ಎಂದು ಸಂಬೋಧನೆ ಮಾಡುತ್ತಿದ್ದರು. ಈಗ ಹಲವು ಕಾರಣಗಳಿಂದ ಬದಲಾವಣೆ ಆಗಿದೆ. ಇದ್ದರೆ ತುಂಬ ನಿರ್ದಿಷ್ಟ ವಲಯದಲ್ಲಿ ಬಳಕೆಯಲ್ಲಿದೆ.

ಹೊಲೆಮಾದಿಗರ ಕನ್ನಡದಲ್ಲಿ ಸ, ಶ ಮತ್ತು ಷ ಕಾರಗಳ ನಡುವಿನ ಉಚ್ಚಾರಣೆಯಲ್ಲಿ ಅಭೇದವಾಗಿದೆ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೊಲೆಮಾದಿಗರ ಕನ್ನಡದಲ್ಲಿ ‘ಶ’ ಮತ್ತು ‘ಷ’ ಕಾರಗಳ ಕೆಲಸವನ್ನು ‘ಸ’ ಕಾರ ಒಂದೇ ನಿರ್ವಹಿಸುತ್ತಿದೆ. ಇದಕ್ಕೆ ಕಾರಣ ಉಚ್ಚಾರಣೆ ಸುಲಭತೆಗಾಗಿ ಈ ಮಾದರಿಯ ಬದಲಾವಣೆ ಆಗಿದೆ.

ಹೊಲೆಮಾದಿಗರ ಕನ್ನಡ ಬರಹದ ಕನ್ನಡ
ಯಾಸ ವೇಷ
ನಾಸ ನಾಶ
ವರ್ಸ ವರ್ಷ
ಬಾಸೆ ಭಾಷೆ

ಇಷ್ಟೆಲ್ಲಾ ಭಾಷೆಯ ಬಳಕೆಯಲ್ಲಿ ವೈಶಿಷ್ಟ್ಯತೆಯನ್ನು ಉಳಿಸಿಕೊಂಡಿರುವ ಹೊಲೆಮಾದಿಗರ ಕನ್ನಡ ಭಾಷೆಯನ್ನು ಒಂದು ಸಾಮಾಜಿಕ ಚಹರೆಯಾಗಿ ಉಳಿಸಿಕೊಂಡಿದೆ. ಪದ ಪ್ರಯೋಗದಲ್ಲಿ ವಿಶಿಷ್ಟವಾಗಿ ಬಳಕೆಯಲ್ಲಿರುವುದು ಕೆಳಗಿನ ಪದಗಳಿಂದ ತಿಳಿಯಬಹುದು.

ಪವೌಡ ಬಟ್ಟೆ
ಸಿಬ್‌ರಿ ಬೇಜಾರು/ಬೇಸರ
ಒಪ್ಕಳಮು ಒಪ್ಪಿಕೊಳ್ಳೋಣ
ಇಂಕ/ಇಂಕ್ರ/ಚಿಂಕ್ರ ಸ್ವಲ್ಪ
ಬೆಳ್ಗಾನ ರಾತ್ರಿಯೆಲ್ಲ
ಗಮ್ಲು ವಾಸನೆ
ಸಾಗ್ಯಮು ಸಾಗಿಸೋಣ
ಅಚ್ಚಮು ಹಚ್ಚೋಣ
ನಿಚ್ಚಾ ದಿನ
ಸೂಲು ಪ್ರಾಣ
ಗಳಾಸು ಲೋಟ
ಮುಂಚೋರಿ ಇಸ್ಕಳಿ ಮುಂದುಗಡೆ ತೆಗೆದುಕೊಳ್ಳಿ
ಮಡ್ಗು ಇಡು
ಇಪಾಟಿ ಇಷ್ಟು ಗಾತ್ರ
ಅರಣ ಊಟದತಟೆ (ಹರಿವಾಣ)
ಜಬ್ದಾರಿ ಜವಾಬ್ದಾರಿ
ಐಲಾಟ ತಮಾಷೆ
ತಾನ ಸ್ನಾನ
ಸಂಕ್ಲಾಂತಿ ಸಂಕ್ರಾಂತಿ
ವತ್ತಾರ ಬೆಳಿಗ್ಗೆ
ಇನ್ನೂಸಿ ಇನ್ನು ಸ್ವಲ್ಪ
ತಡ್ಕ ಸಹಿಸಿಕೊಳ್ಳು
ನರಪಿಳ್ಳೆ ಒಬ್ಬರೂ
ಚಣಹೊತ್ತು ಕ್ಷಣಾರ್ಧದಲ್ಲಿ
ಮನಿಕಳಕ ಮಲಗುವುದಕ್ಕೆ
ಯೆಳ್ಗ ಆದಮ ಅಭಿವೃದ್ಧಿ ಆಗುತ್ತೇವೆಯೆ?
ಗಕುಂ ಕಗ್ಗತ್ತಲು
ಅಮುಕು ಒತ್ತು
ಓಗಿ ಅಮಟ್ಗಾ ಕುಡ್ಕಾ ಬಂದಿದ್ದೇಲ್ಲಾ ಹೋಗಿ ಅಷ್ಟುಮಟ್ಟಿಗೆ ಕುಡಿದುಕೊಂಡು ಬಂದಿದ್ದೀಯಲ್ಲಾ
ತೇರ್ತ ತೀರ್ಥ
ಪವೌಡ ತ್ಯಾಮ ಬಟ್ಟೆ ಒದ್ದೆಯಾಗಿದೆ
ಮಾಡಮು ಮಾಡೋಣ
ತಾಡಿ ಸ್ವಲ್ಪ ಇರು

ಇಷ್ಟೆಲ್ಲಾ ಭಾಷಿಕ ಚಹರೆಯನ್ನು ಉಳಿಸಿಕೊಂಡಿರುವ ಚಾಮರಾಜನಗರ ಪರಿಸರದ ಹೊಲೆಮಾದಿಗರ ಕನ್ನಡ ವಿಶಿಷ್ಟವಾದುದು. ಬಳಕೆಯ ನೆಲೆಗಳನ್ನು ಇನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಭಾಷೆಯೊಂದು ಸಾಮಾಜಿಕ ಸೂಚಕವೆಂದು ತಿಳಿದುಬರುತ್ತದೆ. ಭಾಷೆಯ ಎಲ್ಲಾ ಸ್ತರಗಳು (ಧ್ವನಿ, ಧ್ವನಿಮಾ, ಉಪಧ್ವನಿ, ಆಕೃತಿ, ಆಕೃತಿಮಾ, ಉಪ ಆಕೃತಿಯ, ವಾಕ್ಯ ಮತ್ತು ಅರ್ಥ) ಒಂದಲ್ಲ ಒಂದು ಭಾಷಿಕ ಸ್ತರಗಳಲ್ಲಾದರೂ ಸಾಮಾಜಿಕತೆಯನ್ನು ಪ್ರತಿನಿಧಿಸುತ್ತವೆ.