ಮನುಷ್ಯನ ಸರ್ವತೋಮುಖ ಅಭಿವೃದ್ಧಿಯ ಮಾಧ್ಯಮ ಭಾಷೆ, ಯಾವುದೇ ಜೀವಂತ ಭಾಷೆ, ಕಾಲ, ದೇಶ, ವ್ಯಕ್ತಿ ಮತ್ತು ಪ್ರದೇಶಕ್ಕನುಗುಣವಾಗಿ ಬದಲಾಗುತ್ತಲೇ ಬೆಳೆಯುತ್ತಾ ಬಂದಿದೆ. ಈ ಬದಲಾವಣೆಯನ್ನು ಪ್ರಾರಂಭದಿಂದಲು ಐತಿಹಾಸಿಕ ಮತ್ತು ವಿವರಣಾತ್ಮಕ ಭಾಷಾವಿಜ್ಞಾನಿಗಳು ಗುರುತಿಸುತ್ತಲೇ ಬಂದಿದ್ದಾರೆ. ಸಾಮಾಜಿಕ ಭಾಷಾವಿಜ್ಞಾನಿಗಳು ಈ ಭಾಷಿಕ ಬದಲಾವಣೆಯನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲಗಟ್ಟಿನ ಮೂಲಕ ಗುರುತಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಸ್ತುತ ಲೇಖನವು ಕೂಡ ಈ ಹಿನ್ನೆಲೆಯಲ್ಲಿಯೇಲ ಮೈಸೂರು ದಲಿತರಾಡುವ ಕನ್ನಡ ಭಾಷಾ ವಿಶೇಷತೆಯನ್ನು ಕುರಿತದಾಗಿದೆ.

ಇಲ್ಲಿ ಪ್ರಸ್ತುತವಾಗಿ ಇಲ್ಲಿ ಎರಡು ಪ್ರಮುಖ ಅಂಶಗಳು ಗಮನಿಸುವಂತಹುದಾಗಿದೆ.

೧. ಕನ್ನಡ ಭಾಷೆ.

೨. ಮೈಸೂರಿನಲ್ಲಿ ದಲಿತರಾಡುವ ಕನ್ನಡ.

ಮೊದಲಿಗೆ ಕನ್ನಡ ಭಾಷೆಯು ತನ್ನ ಐತಿಹಾಸಿಕ ಹಿನ್ನೆಲೆಯಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಪನ್ನತೆಯಿಂದ ಪ್ರಸಿದ್ಧ ಪಡೆದ ಭಾಷೆಯಾಗಿದೆ. ಸಾಹಿತ್ಯ ಈ ಲೇಖನವು ಭಾಷೆಯ ಪೂರ್ವ ಪರಿಚಯಕ್ಕೆ ಹೋಗದೆ ಮೇಲೆ ತಿಳಿಸಿರುವ ಹಾಗೆ ಭಾಷೆ ಬದಲಾಗುತ್ತಲೇ ಇರುವ ಸತ್ಯದತ್ತ ಗಮನಹರಿಸಿ ಆ ಬದಲಾವಣೆಯನ್ನು ಮೂರು ಹಂತದಲ್ಲಿ ಗುರುತಿಸಲಾಗಿದೆ.

೧. ಕನ್ನಡ ಭಾಷೆ ಕಾಲದಿಂದ ಕಾಲಕ್ಕೆ ಆಗಿರುವ ಬದಲಾವಣೆ.

ಉದಾ : ಹಳೆಗನ್ನಡದಿಂದ ಇಂದಿನವರೆಗಿನ ಕನ್ನಡ ಭಾಷೆಯಲ್ಲಾಗಿರುವ ವ್ಯತ್ಯಾಸಗಳು.

೨. ಒಂದೇ ಊರಿನಲ್ಲಿ ವಾಸಿಸುವ ಬೇರೆ ಬೇರೆ ಸಮಾಜಗಳ ನಡುವಿನ ವ್ಯತ್ಯಾಸಗಳು.

ಉದಾ : ಬ್ರಾಹ್ಮಣ ಮತ್ತು ಬ್ರಾಹ್ಮಣೇತರರ ಭಾಷೆ.

ಈ ವ್ಯತ್ಯಾಸ ಅಥವಾ ಬದಲಾವಣೆಯನ್ನೆ ಭಾಷಾವಿಜ್ಞಾನಿಗಳು ಪ್ರಭೇದ ಅಥವಾ ಉಪಭಾಷೆ ಎಂದು ಕರೆದರು. ಕನ್ನಡ ಭಾಷೆಯು ಕೂಡ ಪ್ರಾದೇಶಿಕ ಮತ್ತು ಸಾಮಾಜಿಕವಾಗಿ ಅನೇಕ ಪ್ರಭೇದಗಳನ್ನು ಒಳಗೊಂಡಿದೆ. ಇದನ್ನು ಆ ಭಾಷೆಯ ವ್ಯಕ್ತಿ ಭಾಷೆ, ಅವುಗಳ ಪ್ರಭೇದ ಮತ್ತು ಉಪಭಾಷೆಯ ವೈವಿಧ್ಯತೆಗಳ ಭಿನ್ನತೆಯನ್ನು ಗುರುತಿಸಿದಾಗ ಗೊತ್ತಾಗುತ್ತದೆ. ಆದರೆ ಲೇಖನದ ವಿಷಯವು ಸಾಮಾಜಿಕ ಭಿನ್ನತೆಗೆ ಸೀಮಿತವಾಗಿರುವುದರಿಂದ ಆ ಹಿನ್ನೆಲೆಯಲ್ಲಿಯೇ ಗುರುತಿಸುವ ಪ್ರಯತ್ನ ಮಾಡಲಾಗಿದೆ.

ಸಾಮಾಜಿಕ ದೂರ ಹಾಗೂ ಸಾಮಾಜಿಕ ಪ್ರತಿಬಂಧಕಗಳು ಸಾಮಾಜಿಕ ಉಪಭಾಷೆಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ. ಇದು ಜಾತಿ, ಅಂತಸ್ತು, ವಯಸ್ಸು ಇತ್ಯಾದಿಗಳಿಂದ ವ್ಯಕ್ತಿ ವ್ಯಕ್ತಿಗಳ ನಡುವೆ ಭಾಷಿಕ ಭಿನ್ನತೆ ಗುರುತಿಸುವುದಾಗಿದೆ. ಒಂದು ಕಾಲಕ್ಕೆ ಸಾಮಾಜಿಕ ಉಪಭಾಷೆಗಳ ಅಧ್ಯಯನ ಸಲ್ಲಗಳೆಯುವಂತಹ ವಿಷಯವಾಗಿತ್ತು ಆದರೆ ವಿಲಿಯಂ ಬ್ರೈಟ್‌ರವರ ಅಧ್ಯಯನದ ನಂತರ ಈ ಅಧ್ಯಯನಕ್ಕೆ (ಸಾಮಾಜಿಕ ದೂರ ಭಾಷೆಯ ನಿರ್ಮಾಣದಲ್ಲಿ ಹೇಗೆ ಮಹತ್ವದ್ದು) ಇಂದು ಹೆಚ್ಚು ಪುಷ್ಠಿ ಪಡೆದಿದೆ. ಅದರಲ್ಲೂ ಮುಖ್ಯವಾಗಿ ಒಂದು ಜಾತಿಯಿಂದ ಇನ್ನೊಂದು ಜಾತಿಯ ಭಾಷೆಯ ನಡುವೆ ಇರುವ ದೂರ ಭಾಷಾ ದೃಷ್ಟಿಯಿಂದ ಹೆಚ್ಚು ಗಮನಿಸುವಂತಹದ್ದಾಗಿವೆ. ಇದಕ್ಕೆ ಮೈಸೂರು ದಲಿತರ ಕನ್ನಡವು ಹೊರತಾಗಿಲ್ಲ.

ಮೈಸೂರು ಜಿಲ್ಲೆಯು ತಮಿಳುನಾಡು, ಕೇರಳ, ಕೊಡಗು, ಹಾಸನ, ಮಂಡ್ಯ ಹಾಗೂ ಬೆಂಗಳೂರು ಜಿಲ್ಲೆಗಳಿಂದ ಸುತ್ತುವರೆದಿದ್ದು ತಾಲ್ಲೂಕುಗಳನ್ನು ಒಳಗೊಂಡಿದೆ. ೧೫.೦೮.೯೭ರಲ್ಲಿ ಆಡಳಿತದ ದೃಷ್ಟಿಯಿಂದ ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿ ಬೇರ್ಪಟ್ಟು ಕೆಲವು ತಾಲ್ಲೂಕುಗಳು ಆ ಜಿಲ್ಲೆಗೆ ಸೇರಿವೆ. ಆದರೂ ಪ್ರಸ್ತುತ ಲೇಖನವು ಎಲ್ಲಾ ತಾಲ್ಲೂಕುಗಳನ್ನು ಗಮನದಲ್ಲಿಟ್ಟುಕೊಂಡು ವಿವೇಚಿಸಲಾಗಿದೆ. ವಾಸ್ತವವಾಗಿ ಮೈಸೂರು ಜಿಲ್ಲೆಯ ಕನ್ನಡವನ್ನು ಆಡಳಿತ, ಕಾನೂನು, ಶಿಕ್ಷಣ, ಪ್ರಸಾರ ಮಾಧ್ಯಮ ಇತ್ಯಾದಿಗಳಲ್ಲಿ ಬಳಸುತ್ತಿದ್ದೂ ಶಿಷ್ಟ ಕನ್ನಡಕ್ಕೆ ಸಮೀಪವಾಗಿರುವ ಭಾಷೆ ಎಂದು ಗುರುತಿಸಲಾಗಿದೆ. ಆದರೆ ಇದೇ ಜಿಲ್ಲೆಯಲ್ಲಿ ಬಳಸಲಾಗುತ್ತಿರುವ ದಲಿತರ ಕನ್ನಡವು ಶಿಷ್ಟ ಭಾಷೆಗಿಂತ ಭಿನ್ನವಾದ ವೈಶಿಷ್ಟ್ಯತೆಯನ್ನು ಹೊಂದಿದೆ. ಅದನ್ನು ಅವರ ಉಚ್ಚಾರಣೆ ವ್ಯಾಕರಣ ಅಂಶಗಳು, ಪದ ಪ್ರಯೋಗ ಮತ್ತು ವಾಕ್ಯರಚನೆ ಒಟ್ಟಾರೆ ಭಾಷಿಕ ಅಂಶಗಳ ಹಿನ್ನೆಲೆಯಿಂದ ಗುರುತಿಸಲಾಗಿದೆ.

ಯಾವುದೇ ಒಂದು ಭಾಷೆಯನ್ನು ಭಾಷಿಕ ಹಿನ್ನೆಲೆಯಿಂದ ಗುರುತಿಸಿದರೆ ಆ ಭಾಷಾ ಪ್ರಯೋಗ, ಅದರ ವ್ಯತ್ಯಾಸ, ಬಳಕೆಯಾಗುತ್ತಿರುವ ರೀತಿ, ಶಿಷ್ಟ ಕನ್ನಡದಿಂದ ವ್ಯತ್ಯಾಸಗೊಂಡಿರುವ ರೀತಿಯನ್ನು ಗುರುತಿಸಬಹುದು. ಆಗ ಭಾಷಾ ರಚನೆಯನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವಂತೆ ಆಗುತ್ತದೆ. ಅದರಿಂದ ಅದು ಪ್ರಯೋಗವಾಗುತ್ತಿರುವ ರೀತಿಯನ್ನು ಗುರುತಿಸಿದಂತಾಗುತ್ತದೆ. ಆದರೆ ಯಾವುದೇ ಪ್ರದೇಶದ ಭಾಷೆ ಪ್ರಯೋಗದ ಸೊಗಡು, ರೀತಿ, ಆ ಭಾಷಾ ಪ್ರಯೋಗದ ಶೈಲಿ, ಸೊಗಸನ್ನು ಸವಿಯಬೇಕಾದರೆ ನಾವು ಜನಪದ ಹಿನ್ನೆಲೆಯಲ್ಲಿ ಗುರುತಿಸಬೇಕಾಗುತ್ತದೆ. ಆಗ ಗಾದೆ, ಒಗಟುಗಳು, ಕತೆ, ಇವುಗಳ ಆಧಾರದ ಮೇಲೆ ವಿಶ್ಲೇಷಿಸಬಹುದು. ಇದಕ್ಕೆ ಒಳ್ಳೆಯ ಉದಾಹರಣೆಯಾಗಿ ದಲಿತ ಲೇಖಕರ ಪ್ರಸಿದ್ಧ ಕೃತಿಗಳ ಹಿನ್ನೆಲೆಯಲ್ಲಿ ನೋಡಬಹುದು. ಪ್ರೊ.ಮನಜನರವರ ಮಾಗಿ ಕಾದಂಬರಿ, ಪ್ರೊ.ಸಿದ್ಧಲಿಂಗಯ್ಯನವರ ಕವನಗಳು, ಅರವಿಂದ ಮಾಲಗತ್ತಿಯವರ ಕತೆಗಳು. ಪ್ರಚಲಿತ ಸಂಗ್ರಹಿತವಾಗಿರುವ ಗಾದೆ, ಒಗಟುಗಳು ಒಳ್ಳೆಯ ಉದಾಹರಣೆಗಳಾಗುತ್ತವೆ. ನಾವು ಇವರ ಆಳಕ್ಕೆ ಹೋದಾಗ ಇಲ್ಲಿ ಭಾಷಾ ವ್ಯತ್ಯಾಸವನ್ನು ಗುರುತಿಸುವುದಕ್ಕಿಂತ ಅದು ಪ್ರಯೋಗಗೊಳ್ಳುತ್ತಿರುವ ರೀತಿಯನ್ನು ತಿಳಿಯಬಹುದಾಗಿದೆ. ಆದರೆ ಈ ಲೇಖನವು ಆ ನಿಟ್ಟಿನಲ್ಲಿ ಚಿಂತಿಸದೆ ಭಾಷಾ ವಿಶ್ಲೇಷಣೆಯ ಹಿನ್ನೆಲೆಯಲ್ಲಿ ಅವರ ಭಾಷೆಯನ್ನು ಗುರುತಿಸಲಾಗಿದೆ.

ಮುಖ್ಯವಾಗಿ ಇಲ್ಲಿ ದಲಿತರು ಎಂದರೆ ಯಾರು ? ಇದು ಮತ್ತೊಂದು ಪ್ರಶ್ನೆ ಇದನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸುವ ಅಗತ್ಯವಿಲ್ಲವೆಂದು ಕಾಣುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚು ದಲಿತರು ಆರ್ಥಿಕವಾಗಿ ಹಿಂದುಳಿದ್ದು ಜೀವನಕ್ಕಾಗಿ ಕೂಲಿ ಕಾರ್ಮಿಕರಾಗಿದ್ದು. ವ್ಯವಸಾಯವನ್ನೇ ಅವಲಂಬಿಸಿದ್ದಾರೆ. ಇಡೀ ಜಿಲ್ಲೆಯನ್ನು ಪರಿವೀಕ್ಷಣೆ ಮಾಡಿದಾಗ ಕೆಲವು ತಾಲ್ಲೂಕುಗಳನ್ನು ಬಿಟ್ಟರೆ ಉಳಿದೆಡೆ ಹೆಚ್ಚು ಅವಿದ್ಯಾವಂತರಿರುವುದು ಕಂಡು ಬರುತ್ತದೆ. ವಿಶಿಷ್ಟವೆಂದರೆ ಈ ಜಿ‌ಲ್ಲೆಯ ವಿದ್ಯಾವಂತರಲ್ಲೂ ಈ ವೈಶಿಷ್ಟ್ಯತೆ ಹಾಗೆ ಉಳಿದು ಪ್ರಯೋಗವಾಗುತ್ತಿರುವುದು ಮತ್ತೊಂದು ವಿಶಿಷ್ಟವಾಗಿದೆ.

ಇಡೀ ಜಿಲ್ಲೆಯಲ್ಲಿ ದಲಿತರಾಡುತ್ತಿರುವ ಕನ್ನಡದಲ್ಲಿ ಧ್ವನಿಗಳ ವಿಶ್ಲೇಷಿಸಿದಾಗ ಶಿಷ್ಟ ಕನ್ನಡದ ಸ್ವರಗಳ ಜೊತೆಗೆ ವಿಶೇಷವಾಗಿ ಅ, ಆ, ಓ, ಎಂಬ ನಾಲ್ಕು ಸ್ವರಗಳು ಕಂಡು ಬರುತ್ತವೆ.

ಉದಾ :

ಅ – ಕ್ಯಲ್ಸ, ಮ್ಯಳೆ, ಮ್ಯದೆ  (೯)
ಆ – ಮ್ಯಾಳೆ, ತ್ಯಾವ          (೫)
ಒ – ಕ್ವೊಳ, ಕ್ವೊಡೆ          (೦)
ಓ -ವ್ವೋತೆ, ಮ್ವೋಳೆ ಇತ್ಯಾದಿಗಳು.(೦:)

ಅದೇ ರೀತಿ ಶಿಷ್ಟ ಕನ್ನಡದ ಐ ಮತ್ತು ಔ ದ್ವಿತ್ಯಾಕ್ಷರಗಳು (dipthong) ಅಯ್ ಮತ್ತು ಅವ್‌ಗಳಾಗಿ ಉಚ್ಚಾರಿಸುತ್ತಾರೆ. ವ್ಯಂಜನಾಕ್ಷರಗಳಲ್ಲಿ ದಲಿತರ ಕನ್ನಡದಲ್ಲಿ ಮಹಾಪ್ರಾಣಗಳ ಬಳಕೆ ಇಲ್ಲ. ಮಹಾಪ್ರಾಣ ಅಕ್ಷರಗಳನ್ನು ಬಳಸುವ ಕಡೆ ಅಲ್ಪಪ್ರಾಣಗಳನ್ನು ಬಳಸುತ್ತಾರೆ.

ಉದಾ :

ವಿದ್ಯಾಭ್ಯಾಸ – ಇದ್ಯಾಭ್ಯಾಸ
ಬುದ್ಧಿವಂತ – ಬುದ್ವಂತ

ಇನ್ನೂ ಮುಖ್ಯವಾಗಿ ಗಮನಿಸುವ ಧ್ವನಿಗಳೆಂದರೆ ಅನುನಾಸಿಕ ವ್ಯಂಜನ ‘ನ್‌’ ಕಾರವು ಮೂರ್ದನ್ಯ ಅನುನಾಸಿಕ ‘ಣ’ ಕಾರವಾಗಿ ಕೊಳ್ಳೇಗಾಲ, ಯಳಂದೂರು, ಚಾಮರಾಜನಗರ ಕನ್ನಡದಲ್ಲಿ ವಿಶಿಷ್ಟವಾಗಿ ಪ್ರಯೋಗವಾಗುತ್ತದೆ. ಅಂದರೆ ಎಲ್ಲಿ ‘ನ’ ಕಾರ ಧ್ವನಿಯನ್ನು ಬಳಸುತ್ತಾರೊ ಅಲ್ಲೆಲ್ಲಾ ‘ಣ’ ಕಾರವನ್ನು ಬಳಸುತ್ತಾರೆ. ಅದೇ ರೀತಿ ‘ಣ’ ಕಾರಕ್ಕೆ ಬದಲಾಗಿ ‘ನ’ ಕಾರವನ್ನು ಬಳಸಿ ಪದ ಪ್ರಯೋಗ ಮಾಡುತ್ತಾರೆ.

ಉದಾ :

ಮನೆ > ಮಣೆ
ನಾಯಿ > ಣಾಯಿ
ಗುಣ > ಗುನ

ಗಣಿ > ಗನಿ. ಆದರೆ ಕೆಲವು ಪದಗಳಲ್ಲಿ ಟ ಮತ್ತು ಡ್ ಅನುಸರಿಸಿ ಬರುವ ಕಡೆ ಅಂತಹ ವ್ಯತ್ಯಾಸ ಕಾಣುವುದಿಲ್ಲ. ಉದಾ:- ಕ್ವೊಂಟ, ಕುಂಟ.

ಊಷ್ಮ ಅಥವಾ ಸಂಘರ್ಷ ಧ್ವನಿಗಳಾದ ಶ್, ಷ್, ಸಗಳಲ್ಲಿ ‘ಸ’ ಕಾರವನ್ನು ಮಾತ್ರ ಬಳಸುತ್ತಾರೆ.

ಉದಾ :

ಷರತ್ತು > ಸರತ್ತು
ಶಕ್ತಿ > ಸಕ್ತಿ
ಸಂತೋಷ > ಸಂತೋಸ

ಷಷ್ಠಿ > ಸಸ್ಟಿ ಸಂಸ್ಕೃತಿ ಪದಗಳನ್ನು ಬಳಸುವಾಗಲೆಲ್ಲಾ ಅದಕ್ಕೆ ಪರ್ಯಾರ್ಯವಾಗಿ ಇಂಗ್ಲಿಶ್ ಪದಗಳ ಬಳಕೆ ಇಲ್ಲಿ ದಲಿತ ವಿದ್ಯಾವಂತರಾಡುವ ಭಾಷೆಯಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

ಉದಾ :- ಸಂತೋಷ – Happy, ಎಂದೂ ಶಬ್ದಕ್ಕೆ Sound, ಶುಚಿ > Clean ಅಥವಾ ಅದಕ್ಕೆ ಸಮನಾರ್ಥ ಪದಗಳನ್ನು ಬಳಸುತ್ತಾರೆ.

ಉದಾ :- ನಷ್ಟ > ದ್ರೋಹ, ಅಣಾಯ ಹೀಗೆ ಬಳಸುತ್ತಾರೆ. ಅದೇ ರೀತಿ ವ್ಯಂಜನ ‘ಹ’ಕಾರವು ಅ, ಆ, ಕಾರವಾಗಿ ಬದಲಾಯಿಸಿ ಉಚ್ಚಾರಿಸುತ್ತಾರೆ. ‘ಹ’ ಕಾರವ ಪ್ರಯೋಗ ಪೂರ್ಣವಾಗಿ ಮೈಸೂರು ದಲಿತರಾಡುವ ಕನ್ನಡದಲ್ಲಿ ಇಲ್ಲವೆಂದೇ ಹೇಳಬಹುದು.

ಉದಾ :

ಹಾಲು > ಆಲು
ಹದ್ದು > ಅದ್ದು
ಹಕ್ಕಿ > ಅಕ್ಕಿ

ಅದೇ ರೀತಿ ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿ ‘ವ್ಯಂಜನ ‘ಹ’ ಕಾರವು ಸ್ವರ ‘ಉ’ ಕಾರವಾಗಿ ಬಳಕೆಯಾಗುತ್ತದೆ. ಹುರುಳ್ಳಿ > ಹುಳ್ಳಿ > ಉಲ್ಲಿ. ಅದೇ ರೀತಿ ಪಿರಿಯಾಪಟ್ಟಣ ದಲಿತರಲ್ಲಿ ಕ್‌ ಧ್ವನಿಯು ‘ಚ’ ಕಾರವಾಗಿದೆ. ‘ಸ’ ಕಾರವು ‘ಚ’ ಕಾರವಾಗಿ ಬದಲಾಯಿಸಿ ಪದ ಪ್ರಯೋಗ ಮಾಡುತ್ತಾರೆ.

ಉದಾ :

ಕಿವಿ > ಚಿಮಿ
ಕೆಂಪು > ಚೆಂಪು
ಕೇರಿ > ಚೇರಿ
ಸಕ್ಕರೆ > ಚಕ್ಕರೆ
ಸಾಕು > ಚಾಕು

ಸೂಜಿ, ಚೂಜಿ (ಇದು ಐತಿಹಾಸಿಕವಾಗಿ ದ್ರಾವಿಡ ಭಾಷೆಗಳಲ್ಲಿ ಬದಲಾವಣೆಯಾಗಿದ್ದರೂ ಪಿರಿಯಾಪಟ್ಟಣದಲ್ಲಿ ಅದು ವೈಯಕ್ತಿಕವಾಗಿ ಆಡುಮಾತಿನಲ್ಲಿ ಕಂಡು ಬರುತ್ತದೆ) ಇನ್ನೂ ವಿಶೇಷವೆಂದರೆ ಸ್ವರ ‘ಇ’ ಕಾರವು ‘ಎ’ ಕಾರವು ‘ಅ’ ಕಾರವಾಗಿ ಬಳಸುತ್ತಾರೆ.

ಉದಾ :

ಇರುವೆ > ಇರ > ಯರ (ಕೊಳ್ಳೇಗಾಲ)
ಎಲೆ > ಎಲ
ಮೊಳಕೆ > ಮೊಳಕ (ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ)

ಈ ರೀತಿ ವಿಶಿಷ್ಟವಾಗಿ ಪ್ರಯೋಗಿಸುತ್ತಾರೆ. ಗುಂಡ್ಲುಪೇಟೆ ಕನ್ನಡದಲ್ಲಿ ‘ದ’ ಕಾರವು ‘ಜ’ ಕಾರವಾಗಿ ಬಳಕೆಯಾಗುತ್ತವೆ. ಉದಾ:- ದಿನ > ಜಿನ, ದಿಟ > ಜಿಟ.

ಮತ್ತೆ ಮುಂದುವರೆದಂತೆ ಇಲ್ಲಿ ಒಂದು ವ್ಯಂಜನಕ್ಕೆ ಬದಲಾಗಿ ಇನ್ನೊಂದು ವ್ಯಂಜನ ಬಳಸುವುದು ಸರ್ವಸಾಮಾನ್ಯವಾಗಿದೆ.

ಉದಾ: ನೋಟು > ಲೋಟು, ಜನ್ಮ > ಜಲ್ಮ. ಅದೇ ರೀತಿ ಪದ ಮಧ್ಯದ ಸ್ವರ ಬಿದ್ದು ಹೋಗಿ ವ್ಯಂಜನ ದ್ವಿತ್ವಗಳು ಇಲ್ಲವೆ ಸಮ ರೂಪಗಳು ಉಂಟಾಗುವುದು ಹೆಚ್ಚು.

ಉದಾ : ಕರುಳು > ಕಳ್ಳು, ಮರಳು > ಮಳ್ಳು, ಕಡಲೆ > ಕಳ್ಳೆ, ಕೊಡಲಿ > ಕೊಳ್ಳಿ.

ಇನ್ನೊಂದು ಮುಖ್ಯವಾದ ಧ್ವನಿ ವ್ಯತ್ಯಾಸವೆಂದರೆ ವ್ಯಂಜನ ದ್ವಿತ್ವಗಳ ನಡುವೆ ಸ್ವರವನ್ನು ಬಳಸಿ ಉಚ್ಚರಿಸುವುದನ್ನು ಕಾಣಬಹುದು.

ಉದಾ : ಪ್ರೀತಿ > ಪಿರೂತಿ, ಪ್ರಾಣ > ಪಿರಾಣ.

ಇನ್ನೂ ಭಾಷೆಯನ್ನು ರಚನಾತ್ಮಕವಾಗಿ ಅಥವಾ ವ್ಯಾಕರಣಾತ್ಮಕವಾಗಿ ಲಿಂಗ, ವಚನ, ವಿಭಕ್ತಿ ಹಾಗೂ ಕಾಲ ಸೂಚಕ ಪ್ರತ್ಯಯಗಳಲ್ಲಿ ಕೂಡ ಮೈಸೂರು ದಲಿತರ ಕನ್ನಡವು ಬಹಳಷ್ಟು ಭಿನ್ನವಾಗಿರುವುದು ಕಂಡು ಬರುತ್ತದೆ.

ನಾನು, ನೀನು, ಅವನು, ಅವಳು ಎಂಬ ಸರ್ವನಾಮಗಳು ಕೊಳ್ಳೇಗಾಲ, ಚಾಮರಾಜನಗರ, ಯಳಂದೂರು ತಾಲ್ಲೂಕುಗಳಲ್ಲಿ ಣಾ, ಣಿ, ಣೀ, ನೀ, ಅವ, ಅಮ, ಇವ, ಇಬ, ಇಮ, ಎಂಬುದಾಗಿ ಬಳಸುವುದನ್ನು ಗುರುತಿಸಬಹುದು.

ಅವನು, ಅವಳು > ಅವ (ಮೈಸೂರು, ಕೊಳ್ಳೇಗಾಲ, ಚಾಮರಾಜನಗರ)
ಅವಳು > ಅಬ (ಗುಂಡ್ಲುಪೇಟೆ)

ಅವಳು, ಅವನು > ಅಮ (ಚಾಮರಾಜನಗರದಲ್ಲಿ) ಬಳಸುತ್ತಾರೆ. ನಂಜನಗೂಡು ಮತ್ತು ಕೊಳ್ಳೇಗಾಲದಲ್ಲಿ ಕೊಡಲಿ, ಮಾಡಲಿ, ನೋಡಲಿ ಎಂಬ ಕ್ರಿಯಾ ರೂಪಗಳಿಗೆ ಜೊತೆಗೆ ಎಳಿ ಎಂಬ ಸಹಾಯ ಕ್ರಿಯಾ ರೂಪವನ್ನು ಬಳಸುವುದು ಇಲ್ಲಿ ರೂಢಿಯಲ್ಲಿವೆ.

ಉದಾ: ಮಾಡ್ಲೇಳಿ, ಬರ್ಲೇಳಿ, ಯೋನ್ನೇಳಿ, ನ್ವೋಡ್ಲೋಳಿ, ಒಲ್ಲೇಳಿ ಇತ್ಯಾದಿ. ಅದೇ ರೀತಿ ಚತುರ್ಥಿ ವಿಭಕ್ತಿ ಪ್ರತ್ಯಯಕ್ಕೆ ಅಕ್ಕೆ ಮತ್ತು ಗೆ ಪ್ರತ್ಯಯಗಳು ಅಕ್ಕ ಮತ್ತು ‘ಗ’ಗಳಾಗಿ ಬದಲಾಗುವುದು ಈ ಜಿಲ್ಲೆಯ ಗುಂಡ್ಲುಪೇಟೆ ದಲಿತರಲ್ಲಿ ಗುರುತಿಸಬಹುದು.

ಉದಾ :

ಅದಕ್ಕೆ > ಅದಕೆ
ಅವನಿಗೆ > ಅವಂತ ಇತ್ಯಾದಿ. ಅದೇ ರೀತಿ.
ಮಾಡಿದೆವು > ಮಾಡ್ವಿವಿ
ಕೇಳಿದೆವು > ಕೇಳ್ವಿವಿ ಆಗುತ್ತವೆ.

ವಾಕ್ಯಗಳಲ್ಲಿ ಲಿಂಗಭೇದವಿಲ್ಲದೆ ಪ್ರಯೋಗಿಸುವುದು ಮತ್ತೊಂದು ವಿಶಿಷ್ಟವಾಗಿದೆ.

ಉದಾ :

ಅಪ್ಪ ಬಂದಾ ಅದೇ ರೀತಿ ಅಪ್ಪ ಬಂತು
ಅವ್ವ ಬಂದಾ ಅದೇ ರೀತಿ ನಾಯಿ ಬಂತು

ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗಗಳು ಪ್ರತ್ಯಯ ಭೇದವಿಲ್ಲದೆ ಉಪಯೋಗಿಸುತ್ತಾರೆ. ಇನ್ನೂ ದರ್ಶಕ ಸರ್ವನಾಮಗಳಾಗಿವೆ. ದೂರ, ಸಮೀಪ ಮತ್ತು ಪ್ರಶ್ನಾರ್ಥಕ ಸೂಚಿಗಳು ಇನ್ನೂ ವಿಶಿಷ್ಟವಾಗಿ ಪ್ರಯೋಗಿಸುತ್ತಾರೆ. ಅತ್ತಾಂಗಿ, ಇತ್ತಾಂಗಿ, ಅಚ್ಚೋರಿ, ಈಚ್ಚೋರಿ, ಯಚ್ಚೋರಿ, ಎತ್ತಾಂಗೆ, ಯಕ್ಕಟೆ, ಆಟು, ಈಟು, ಏಟುಗಳು ಅಷ್ಟು, ಇಷ್ಟು, ಎಷ್ಟುಗೆ ಪ್ರತ್ಯಯವಾಗಿ ಬಳಸುತ್ತಾರೆ. ಮತ್ತೆ ಹಾಗೇ ಹೀಗೇ, ಹೇಗೆ, ಎಂಬ ರೂಪಗಳನ್ನು ಅಂಗೆ, ಇಂಗೆ, ಎಂಬಿತ್ಯಾದಿಯಾಗಿ ಬಳಸುವುದನ್ನು ನಂಜನಗೂಡು, ಕೊಳ್ಳೆಗಾರ, ಯಳಂದೂರು ತಾಲ್ಲೂಕುಗಳಲ್ಲಿ ಗುರುತಿಸಲಾಗಿದೆ.

ಇನ್ನೂ ಸಂಬಂಧ ಸೂಚಕಗಳ ಬಗ್ಗೆ ಗಮನಿಸಿದಾಗ ಅಲ್ಲಿಯೂ ಶಿಷ್ಟ ಕನ್ನಡದ ಕಡೆಗೆ ವಾಲದಿರುವುದು ಸ್ಪಷ್ಟವಾಗಿದೆ. ಸಂಬಂಧ ಸೂಚಕಗಳಾಗಿವೆ.

ತಾಯಿ-ಅವ್ವ, ಅಮ್ಮಿ, ಯವ್ವ ಆಗುತ್ತಾಳೆ, ಹುಡುಗ > ಹೈದ > ಗಂಟೈದ > ಗಂಡುಕೂಸು ಆಗಿ ಪ್ರಯೋಗವಾಗುತ್ತಿವೆ. ಅದೇ ರೀತಿ ಹೆಣ್ಣು > ಹೆಣ್ಣುಕೂಸು, ಕೂಸು ಆಗುತ್ತದೆ.

ಪತ್ನಿ > ಎಡ್ತಿಯಾಗುತ್ತಾಳೆ,. ಮಕ್ಕಳು > ಐಕ ಹಾಗೆ ಮಗು > ಕೂಸು ಆಗುತ್ತದೆ. ಪ್ರಾಯದ ಹುಡುಗರು > ಪಡ್ಡೆ ಐಕ್ಕಳಾಗುತ್ತಾರೆ.

ಇನ್ನೂ ಪದ ಪ್ರಯೋಗವನ್ನು ಈ ಜಿಲ್ಲೆಯ ದಲಿತರಲ್ಲಿ ಗುರುತಿಸಿದಾಗ ಇಲ್ಲಿಯೂ ವಿಶಿಷ್ಟ ರೀತಿಯ ಪದ ಪ್ರಯೋಗವನ್ನು ಕಾಣಬಹುದು. ಭಾನುವಾರ, ಗುರುವಾರಗಳು > ಬೈಸ್ತವಾರ, ಆಯ್ತವಾರಗಳು ಬಳಸುತ್ತಾರೆ. ಅಲ್ಲದೆ ಸೂರ್ಯನನ್ನು ಒತ್ತಾಗಿಯೂ, ನಕ್ಷತ್ರಗಳನ್ನು ಕ್ರಮವಾಗಿ ತಾರಕ್ಕಿ, ಚಿಕ್ಕಿಗಳಾಗಿ ಪ್ರಯೋಗವಾಗುತ್ತವೆ. ಸಾರು > ಉದಕವಾಗಿಯುಂ ಸೀಮೆಎಣ್ಣೆ ದೀಪವೂ ಬುಟ್ಟಿ, ಚಿಮಿಣಿ ದೀಪ ಮತ್ತು ಸೊಳ್ಳುಗಳಾಗಿ ಬಳಸುತ್ತಾರೆ. ಶಾಲೆ > ಪಳ್ಳಿ ಮನೆಯಾಗುತ್ತದೆ. ಕ್ರಮವಾಗಿ ದಿಕ್ಕುಗಳು, ಮೂಡ್ಲು ಬಡಗ್ಲು, ತೆಂಕ, ಪಡಲುಗಳಾಗಿ ಪ್ರಯೋಗವಾಗುತ್ತವೆ.

ಮೇಲಿನ ಈ ಎಲ್ಲಾ ಭಾಷಾ ವ್ಯತ್ಯಾಸಗಳನ್ನು ಗುರುತಿಸಿದಾಗ, ಅದರ ಈ ವ್ಯತ್ಯಾಸ ಹೇಗೆ ಉಂಟಾಗುತ್ತಿದೆ ಎಂಬುದು ಒಂದು ಸೋಜಿಗದ ಸಂಗತಿಯಾಗಿ. ಒಂದು ರೀತಿ ಮೈಸೂರು ಜಿಲ್ಲೆ ಒಂದು ಕಡೆ ಹೆಚ್ಚು ಪ್ರಾದೇಶಿಕವಾಗಿ ಭಾಷೆಗಳ ಪ್ರಭಾವಕ್ಕೂ ಒಳಗಾಗಿದೆ. ಅದಕ್ಕೆ ಉದಾಹರಣೆಯಾಗಿ ಕೊಳ್ಳೇಗಾಲ, ಚಾಮರಾಜನಗರಗಳಲ್ಲಿ ಹುಡ, ಎನುಡ ಎಂಬ ಪ್ರಯೋಗ ಒಳ್ಳೆಯ ಉದಾಹರಣೆಯಾಗಿದೆ. ಅಂದರೆ ‘ಡ’ ಕಾರದ ಪ್ರಯೋಗ ಹೆಚ್ಚಾಗಿ ಕಂಡು ಬರುತ್ತದೆ. ಇದೇ ಅಲ್ಲದೆ ಸಾಮಾಜಿಕವಾಗಿ ಗಮನಿಸಿದ ಕೆಳಗೆ ಕೊಟ್ಟಿರುವ ಅಂಶಗಳು ಹೆಚ್ಚು ಸೂಕ್ತವಾಗಿರುವುದು ಕಂಡು ಬರುತ್ತದೆ.

೧. ಮೈಸೂರು ಜಿಲ್ಲೆಯ ಹೆಚ್ಚು ಪೋಷಕರು ಅವಿದ್ಯಾವಂತರಾಗಿವುದು ಕಂಡು ಬರುತ್ತದೆ.

೨. ತಲಾ ತಲಾಂತರದಿಂದ ಭಾಷಾ ಜ್ಞಾನ ಇಲ್ಲದೆ ಇರುವುದು.

೩. ಸಾಮಾಜಿಕ ತಾರತಮ್ಯ.

೪. ಮನೆ ಮತ್ತು ಶಾಲೆಯಲ್ಲಿ ಉತ್ತಮ ಭಾಷಿಕ ವಾತಾವರಣದಿಂದ ವಂಚಿತವಾಗಿರುವುದು.

೫. ಭಾಷಾ ಜ್ಞಾನ ಬೆಳೆಸಿಕೊಳ್ಳಲು ಮನೆ ಮತ್ತು ಶಾಲೆಗಳಲ್ಲಿ ಉತ್ತಮ ವಾತಾವರಣ ಸಿಗದೆ ಇರುವುದು.

೬. ಮೈಸೂರು ಜಿಲ್ಲೆಯ ಬಲುಪಾಲು ಕುಟುಂಬಗಳು ಆರ್ಥಿಕವಾಗಿ ಹಿಂದುಳಿದ್ದು ಶುಚಿತ್ವವನ್ನು ಕಾಪಾಡಿಕೊಳ್ಳದೇ ಇರುವುದು.

ಮಗು ಸಾಮಾನ್ಯವಾಗಿ ತನ್ನ ೯ನೇ ತಿಂಗಳಿಂದಲೇ ಭಾಷೆಯ ಅರಿವು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತವೆ. ೨/೨ ವರ್ಷದೊಳಗೆ ಅವು ಸ್ವತಃವಾಗಿ ಪೂರ್ಣವಾಗಿ ಭಾಷೆಯನ್ನು ಕಲಿತು ಮಾತನಾಡಲು ಪ್ರಾರಂಭಿಸುತ್ತೇನೆ. ಅಂತಹ ವೇಳೆಯಲ್ಲಿ ಉತ್ತಮ ಭಾಷಾ ಪರಿಸರದ ಅಗತ್ಯವಿರುತ್ತವೆ. ಧ್ವನಿ ಉಚ್ಚಾರಣೆ, ಪದಗಳ ಬಳಕೆ, ವಾಕ್ಯರಚನೆಗಳಲ್ಲಿ ತಪ್ಪು ಮಾಡುವ ಸಾಧ್ಯತೆ ಹೆಚ್ಚು. ಅಲ್ಲಿ ದಲಿತ ಮಕ್ಕಳು ತಾವು ಬೆಳೆಯುತ್ತಿರುವ ಪರಿಸರದ ಭಾಷೆಯನ್ನು ಅನುಸರಿಸುವುದರಿಂದ ಅಲ್ಲಿ ಯಾವ ರೀತಿಯ ಭಾಷಾ ಪ್ರಯೋಗವಿರುತ್ತದೆಯೂ ಅದೇ ರೀತಿ ಕಲಿಯುತ್ತಾರೆ. ಇಲ್ಲಿ ಮಕ್ಕಳು ತಪ್ಪು ಮಾಡಿದಾಗ ಅದನ್ನು ತಿದ್ದಿ ಹೇಳುವ ಜ್ಞಾನ ಆ ಪರಿಸರದಲ್ಲಿ ಇದ್ದಾಗ ಮಾತ್ರ ಅಲ್ಲಿ ಭಾಷೆಯನ್ನು ಸ್ಪಷ್ಟವಾಗಿ ಕಲಿಯಲು ಸಾಧ್ಯವಾಗುತ್ತವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಈ ದಲಿತ ಮಕ್ಕಳ ಕೇರಿಗಳು ಊರಿನಿಂದ ಹೊರಭಾಗದಲ್ಲಿ ಇರುವುದರಿಂದ ಇವುಗಳಿಗೆ ಮೇಲ್ವರ್ಗದವರ ಸಂಪರ್ಕ ಕಡಿಮೆಯಾಗುತ್ತವೆ. ಅವ್ವ ತಮ್ಮ ಪರಿವಾರದಲ್ಲಿಯೇ ಬೆರೆಯುವುದರಿಂದ ಭಾಷಿಕ ತಪ್ಪುಗಳು ಹೆಚ್ಚಾಗಿರುವ ಸಾಧ್ಯತೆ ಹೆಚ್ಚು.

ನಂತರ ಇದೇ ಮಕ್ಕಳು ಶಾಲೆಗೆ ಒಂದಾಗಲು ಅವರ ಸಾಮಾಜಿಕ ಸ್ಥಾನಮಾನಗಳು ಆ ಶಾಲಾ ಪರಿಸರವನ್ನು ಅವಲಂಬಿಸಿರುತ್ತದೆ. ಅಂದರೆ ಪ್ರತ್ಯೇಕತೆ ಹಾಗೂ ಉಪಾಧ್ಯಾಯರ ತಿರಸ್ಕಾರದಿಂದ ಅಲ್ಲಿಯೂ ಭಾಷೆಯನ್ನು ಸರಿಪಡಿಸಿಕೊಳ್ಳು ಆಗುವುದಿಲ್ಲ. ತಾವೇ ಬದಲಾಯಿಸಿಕೊಳ್ಳಲು ಪ್ರಯತ್ನಪಟ್ಟರೂ ಅದನ್ನು ತಿದ್ದಿ ಕಲಿಸುವ ಮಾರ್ಗದರ್ಶಕ ತಪ್ಪುಗಳನ್ನು ಮಾಡುತ್ತಾರೆ. ಅಲ್ಲದೆ ಅವರು ತಾವು ಅರಿತ ಜ್ಞಾನವೇ ಸರಿ ಎಂದು ತಿಳಿಯುತ್ತಾ ಬೆಳೆಯುತ್ತಾರೆ. ಎಲ್ಲಿಗೆ ತಾವು ಆಡುವ ಭಾಷೆ ಬೇರೆಯವರಿಂದ ಪ್ರತ್ಯೇಕವಾಗಿವೆ ಎಂದೂ ಅನ್ನಿಸಲು ಪ್ರಾರಂಭಿಸುತ್ತದೆಯೋ, ಅಷ್ಟೊತ್ತಿಗೆ ಅವರು ತಿದ್ದಿಕೊಳ್ಳಲಾರದ ರೀತಿಯಲ್ಲಿ ಪ್ರಭಾವಿತವಾಗಿರುತ್ತಾರೆ. ಅರಿವು ಇದ್ದಾಗಲೂ ಅದನ್ನು ಸರಿಯಾಗಿ ಉಚ್ಚರಿಸಲು ಆಗದೇ ಕೊನೆಗೆ ಹಾಗೆ ಉಳಿದು ತಮ್ಮದೇ ಪ್ರತ್ಯೇಕ ಭಾಷಾ ಪ್ರಯೋಗಕ್ಕೆ ಗುರಿಯಾಗಿ ಪ್ರಭೇದಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗಿದೆ.

ಇನ್ನು ಮತ್ತೊಂದು ಮುಖ್ಯ ಅಂಶವೆಂದರೆ ನಾವು ಕನ್ನಡ ಭಾಷಾ ಚರಿತ್ರೆಯನ್ನು ನೋಡಿದಾಗ ಹಳೆಗನ್ನಡದಲ್ಲಿ ಮುಖ್ಯವಾಗಿ ಸಂಸ್ಕೃತ ಪ್ರಭಾವಿತವಾಗಿರುವುದು ಕಂಡು ಬರುತ್ತದೆ. ಅಲ್ಲಿ ಹೆಚ್ಚು ಅಲ್ಪ ಪ್ರಾಣಗಳು ಕಂಡು ಬರುತ್ತವೆ. ಮಹಾಪ್ರಾಣ ಪ್ರಯೋಗ ಕೇವಲ ಸಂಸ್ಕೃತವನ್ನು ಬಲಿಷ್ಟಗೊಳಿಸುವುದಕೋಸ್ಕರ ಮೇಲ್‌ವರ್ಗದವರು ಮಾಡುವ ಒಂದು ತಂತ್ರವಾಗಿದೆ. ಸಂಸ್ಕೃತವನ್ನು ಯಥಾವತ್ತಾಗಿ ಬಳಸುವುದಕ್ಕೋಸ್ಕರವಾಗಿ ಕನ್ನಡದಲ್ಲಿ ಸಲ್ಲದ ಮಹಾಪ್ರಾಣ ಪ್ರಯೋಗಗಳು ನಡೆದಿದ್ದು ಅದರ ಪ್ರಯೋಗವು ಕೂಡ ಅವರಿಗೆ ಮಾತ್ರ ಸೀಮಿತವಾಗುತ್ತಾ ಬಂದಿರುವುದು ಒಂದು ದುರಂತವೆಂದೇ ಭಾವಿಸಬಹುದು. ಏಕೆಂದರೆ ಹಿಂದೆ ಸಂಸ್ಕೃತದ ಪ್ರಯೋಗ ಕೇವಲ ಬ್ರಾಹ್ಮನರಲ್ಲಿ ಮಾತ್ರ ಇದ್ದು ಅವರೇ ಅದರ ಅಳಿವು ಉಳುವಿಗೆ ಕಾರಣಕರ್ತರಾಗಿದ್ದರು. ಅಲ್ಲದೆ ಹೆಚ್ಚು ಭಾಷಾ ರಚನೆಯು ಅವರಿಂದ ಮಾಡಲ್ಪಟ್ಟಿರುವುದರಿಂದ ಕನ್ನಡ ಭಾಷಾ ರಚನೆಯಲ್ಲಿಯೂ ಸಂಸ್ಕೃತಿ ರಚನೆಗೆ ಅನುಗುಣವಾದ ರಚನೆ ಮಾಡಲಾಗಿದೆ. ಆದರೆ ಇದರ ಕಲಿಕೆಯಲ್ಲಿ ಮಾತ್ರ ದಲಿತರು ವಂಚಿತರಾಗಿದ್ದು ಇಂದು ಅವರು ಭಾಷಾ ಪ್ರಯೋಗದಲ್ಲಿ ಅವರು ಮಾತನಾಡುವಾಗ ಹಾಗೂ ಬರವಣಿಗೆಯಲ್ಲಿ ಕೂಡ ಈ ಭಾಷಾ ಪ್ರಯೋಗದಿಂದ ದೂರ ಉಳಿಯುವಂತೆ ಆಗಿದೆ.

ಇಷ್ಟೆಲ್ಲಾ ವಿವೇಚನೆಯ ನಂತರ ನೋಡಿದಾಗ ದಲಿತರು ಬಳಸುವ ಕನ್ನಡವೇ ಮೂಲ ಕನ್ನಡವಾಗಿದ್ದರೆ ಅದಕ್ಕೆ ಅನುಗುಣವಾಗಿಯೇ ಭಾಷೆಯ ರಚನೆಯನ್ನು ಕೂಡ ಮಾಡಬೇಕಾಗುತ್ತದೆ. ಇದು ಅಸಾಧ್ಯದ ಮಾತಾದರೂ ದಲಿತರು ಇಂತಹ ಭಾಷೆಯ ತಾರತಮ್ಯದಲ್ಲಿಯೇ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಳ್ಳಬೇಕೇ ಅಥವಾ ದಲಿತರೇ ಆ ರಚನೆಗೆ ಹೊಂದಿಕೊಳ್ಳುವಂತೆ ಬೆಳೆಯಬೇಕೆ ಅಥವಾ ಮೇಲ್ ಮತ್ತು ಕೆಳವರ್ಗದವರಿಗೆ ಅನುಕೂಲವಾಗುವಂತೆ ಕನ್ನಡದ ನೈಜ ಭಾಷಾರಚನೆ ಸೃಷ್ಟಿಯಾಗಬೇಕೇ ಈ ಪ್ರಶ್ನೆಗಳ ಉತ್ತರವನ್ನು ಕನ್ನಡಿಗರೆ ನಿರ್ಧರಿಸಬೇಕಾಗಿದೆ, ವಿವೇಚಿಸಬೇಕಾಗಿದೆ.