ದ್ರಾವಿಡ ಭಾಷಾ ಪರಿವಾರಗಳಲ್ಲಿಯೇ ಎರಡನೇ ಪ್ರಾಚೀನ ಭಾಷೆ ಕನ್ನಡ ಭಾಷೆ. ಅಷ್ಟೇ ಅಲ್ಲದೆ ಭಾರತ ಸಂವಿಧಾನ ಮಾನ್ಯ ಮಾಡಿರುವ ಇಪ್ಪತ್ತೇರಡು ಭಾಷೆಗಳಲ್ಲಿ ಕನ್ನಡ ಭಾಷೆಯೂ ಒಂದಾಗಿದೆ. ಕನ್ನಡ ಭಾಷೆಯ ಪ್ರಾಚೀನತೆ ಹಾಗೂ ಸಾಹಿತ್ಯಿಕ ಪರಂಪರೆ ಇದು ನಿನ್ನೆಯದಲ್ಲಾ, ಅದು ಪೂರ್ವದ ಹಳಗನ್ನಡದಿಂದ ಹಿಡಿದು ಇಂದಿನ ಆಧುನಿಕ ಕನ್ನಡದವರೆಗೆ ಬೆಳೆದು ಬಂದ ರೀತಿಯನ್ನು ಗಮನಿಸಿದರೆ, ಕನ್ನಡ ಭಾಷೆಯೂ ಭಾಷಾ ದೃಷ್ಟಿಯಿಂದ ತನ್ನದೇ ಆದಂತಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದು ಐತಿಹಾಸಿಕ ದೃಷ್ಟಿಯಿಂದ ಮುಖ್ಯವಾಗಿ ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ನಾಲ್ಕು ಅವಸ್ಥಾಭೇದಗಳಲ್ಲಿ ಗುರುತಿಸಿಕೊಂಡಿದೆ. ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಶಾಸನಗಳು, ಶಿಲಾಶಾಸನಗಳು ಮತ್ತು ಸಾಹಿತ್ಯ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ಕಾಲದಿಂದ ಕಾಲಕ್ಕೆ ಕನ್ನಡ ಭಾಷೆ ಬೆಳೆದು ಬಂದ ಬಗೆಯನ್ನು ಗುರುತಿಸಲಾಗಿದೆ. ಪ್ರಪಂಚದ ಎಲ್ಲಾ ಭಾಷೆಗಳಲ್ಲಿರುವಂತೆ ಕನ್ನಡ ಭಾಷೆಯಲ್ಲೂ ಪ್ರಾದೇಶಿಕ ಉಪಭಾಷೆಗಳು ಮತ್ತು ಸಾಮಾಜಿಕ ಉಪಭಾಷೆಗಳೂ ಎಂದು ಈಗಾಗಲೇ ಬಳಕೆಯಲ್ಲಿವೆ.

ಹಾಸನ ಜಿಲ್ಲೆಯ ಐತಿಹಾಸಿಕವಾಗಿ ಮತ್ತು ಸಾಹಿತ್ಯಿಕವಾಗಿ ಒಂದು ದೀರ್ಘವಾದ ಪರಂಪರೆಯನ್ನು ಹೊಂದಿದೆ. ಕನ್ನಡದ ಮೊದಲನೆಯ ಶಾಸನವೆಂದು ಈಗಾಗಲೇ ಗುರುತಿಸಿಕೊಂಡಿರುವ ಹಲ್ಮಿಡಿಶಾಸನ (ಕ್ರಿ.ಶ. ೪೫೦)ವು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಲ್ಮಿಡಿ ಎಂಬಲ್ಲಿ ದೊರೆತಿರುವುದರಿಂದ ಈ ಜಿಲ್ಲೆಗೆ ವಿಶಿಷ್ಟವಾದ ಸ್ಥಾನ ಸಿಕ್ಕಿದೆ. ಈ ಜಿಲ್ಲೆಯು ಕರ್ನಾಟಕದಲ್ಲಿ ಬಹು ಪ್ರಮುಖವಾದ ಭೌಗೋಳಿಕ ಪರಿಸರದಲ್ಲಿದೆ. ಇದು ಮುಖ್ಯವಾಗಿ ಮಲೆನಾಡು, ಅರೆಮಲೆನಾಡು ಮತ್ತು ಬಯಲುನಾಡು ಎಂಬ ಭಿನ್ನತೆಯನ್ನು ಹೊಂದಿದೆ. ಈ ರೀತಿಯ ಭಿನ್ನತೆ ಹೊಂದಿದ್ದರೂ ಬಹುಭಾಗ ಪ್ರದೇಶವು ಬಯಲು ನಾಡಾಗಿದೆ. ಹಾಗಾಗಿ ಇಲ್ಲಿ ಭಾಷಿಕವಾಗಿ ಮತ್ತು ಸಾಮಾಜಿಕವಾಗಿ ಬಹಳ ಅಂತರವನ್ನು ಕಾಣಬಹುದು. ಕನ್ನಡದಲ್ಲಿ ಪ್ರಾದೇಶಿಕ ಭಾಷಾ ವೈವಿಧ್ಯತೆ ಸಾಕಷ್ಟಿದೆ. ಮೈಸೂರು ಕನ್ನಡ ಪ್ರಾದೇಶಿಕ ಉಪಭಾಷೆಯ ಒಂದು ಪ್ರಭೇದ ಭಾಷೆಯಾಗಿ ಇರುವಂತೆ: ಹಾಸನ ಪರಿಸರದ ಕನ್ನಡವು ಪರಿಗಣಿಸಲ್ಪಟ್ಟಿದೆ. ಅದೇ ರೀತಿ ಇಲ್ಲಿ ಸಾಮಾಜಿಕ ಉಪಭಾಷೆಗಳನ್ನು ಗುರುತಿಸಿದ್ದಾರೆ. ಈ ಜಿಲ್ಲೆಯ ಸಾಮಾಜಿಕ ಅಂತಸ್ತುಗಳ ಹಿನ್ನೆಲೆಯಲ್ಲಿ ಬಹುತೇಕ ಜನಾಂಗದಲ್ಲಿ ಭಾಷಾ ಭಿನ್ನತೆಯನ್ನು ಕಾಣುತ್ತೇವೆ. ಏಕೆಂದರೆ ಅವರು ಬೆಳೆದು ಬಂದ ಪರಿಸರದ ಹಿನ್ನೆಲೆಯಲ್ಲಿ ಸಾಮಾಜಿಕ ಭಿನ್ನತೆಯ ಅಂಶಗಳ ಪ್ರಭಾವದಿಂದ ಭಾಷೆಯಲ್ಲಿ ವಿಶಿಷ್ಟತೆಯಾಗಿರುವುದನ್ನು ನೋಡಬಹುದು.

ಹಾಗಾಗಿ ಪ್ರಸ್ತುತ ಪತ್ರಿಕೆಯಲ್ಲಿ ದಲಿತರು ಬಳಸುತ್ತಿರುವ ಕನ್ನಡ ಭಾಷೆಯನ್ನು ಅರಕಲಗೂಡು ತಾಲೂಕು ಮತ್ತು ಅದರ ಸುತ್ತಮುತ್ತಲ ಪ್ರದೇಶವನ್ನು ಕೇಂದ್ರೀಕರಿಸಿಕೊಂಡು ವೀಕ್ಷಿಸಿದಾಗ ಅಲ್ಲಿ ಕಂಡುಬರುವ ಭಾಷಾ ವೈಶಿಷ್ಟ್ಯಗಳನ್ನು ಈ ರೀತಿಯಲ್ಲಿ ಅಧ್ಯಯನ ಮಾಡಬಹುದು.

ಧ್ವನಿಮಾತ್ಮಕವಾಗಿ

ಅರಕಲಗೂಡು ತಾಲೂಕಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಡುಬರುವ ದಲಿತರ ಕನ್ನಡದ ಪದಾದಿಯಲ್ಲಿಯ ಪೂರ್ವ ಸ್ವರಗಳಾದ “ಎ, ಏ”ಗಳು ತಾಲವ್ಯ ಧ್ವನಿಯಾದ ‘ಯ್’ ಕಾರವಾಗಿ ಬಳಸಲ್ಪಡುತ್ತದೆ. ಉದಾಹರಣೆಗೆ: ಎಲೆ > ಯೆಲೆ, ಎದೆ > ಯೆದೆ, ಎಂಟು > ಯೆಂಟು, ಏಳು > ಯೇಳು.

ದಂತ್ಯ ಧ್ವನಿಯಾದ ‘ದ’ ಕಾರವು ಪದಾದಿ ಮತ್ತು ಪದ ಮಧ್ಯದಲ್ಲಿ ತಾಲವ್ಯ ಧ್ವನಿ ‘ಜ’ಕಾರವಾಗಿ ಮಾರ್ಪಟ್ಟಿರುವುದು ಕಂಡು ಬರುತ್ತದೆ. ಉದಾಹರಣೆಗೆ: ದಿನ > ಜಿನ, ದಿಟ್ಟಿ > ಜಿಡ್ಡಿ, ಕಾದಗ > ಕಾಜಗ ಮತ್ತು ಇದ್ದಿಲು > ಇಜ್ಜಿಲು.

ಗಲಿಯ ಧ್ವನಿಯಾದ ‘ಹ’ ಕಾರವು ಪದಾದಿಯಲ್ಲಿ ಸಂಪೂರ್ಣವಾಗಿ ಬಿದ್ದು ಹೋಗಿದೆ. ‘ಹ’ ವ್ಯಂಜನದೊಂದಿಗೆ ಆರಂಭವಾಗುವ ಪದಗಳಲ್ಲಿ ವ್ಯಂಜನ ‘ಹ’ ಬಿದ್ದು ಹೋಗಿ ಅದರೊಂದಿಗೆ ಸ್ವರವು ಯಾವುದೆ ಬದಲಾವಣೆ ಇಲ್ಲದೆ ಮುಂದುವರಿಯುತ್ತದೆ. ಉದಾಹರಣೆಗೆ: ಹಕ್ಕಿ > ಹಕ್ಕಿ, ಹಾಸ > ಆಸನ, ಹಿಟ್ಟು > ಇಟ್ಟು (ಅವನ ಇಟ್ಟೂಂಡಾ), ಹಿಂಗಾಲು > ಇಂಗಾಲು, ಹೀನ > ಈನ, ಹುಂಬ > ಉಂಬ, ಹುಬ್ಬು > ಉಬ್ಬು, ಹೂರಣ > ಊರಣ, ಹೂಳು > ಊಳು, ಹೆಡೆ > ಎಡೆ, ಹೇಡಿ > ಏಡಿ, ಹೇಮಂತ > ಏಮಂತ, ಹೈನು > ಐನು, ಹೌದು > ಔದು ಮತ್ತು ತಂಗಳ ಹಿಟ್ಟು > ತಂಗಿಟ್ಟುವಾಗಿದ್ದು ಇದರಲ್ಲಿ ‘ಳ’ ಕಾರವು ಲೋಪವಾಗಿದೆ. ಇದರ ಕುರಿತು ಹೆಚ್ಚಿನ ಗಮನಹರಿಸಬಹುದು.

ವರ್ತ್ಸ್ಯ ಧ್ವನಿಯಾದ ‘ಸ’ ಕಾರವು ತಾಲವ್ಯ ಧ್ವನಿ ‘ಚ’ ಕಾರವಾಗಿ ಮಾರ್ಪಡುವ ವಿರಳ ಸಂದರ್ಭಗಳು ಕಂಡು ಬರುತ್ತದೆ. ಉದಾಹರಣೆಗೆ: ಸೌತೆಕಾಯಿ > ಚೌತೆಕಾಯಿ ಮತ್ತು ಸಂಜೆ > ಚಂಜೆ.

ಈ ಪ್ರದೇಶದ ಬಹುಮುಖ್ಯವಾದ ಭಾಷಾ ವೈಶಿಷ್ಟ್ಯವೆಂದರೆ ಅವಿದ್ಯಾವಂತರು ಮಾತನಾಡುವ ಭಾಷೆಯಲ್ಲಿ ಪದಾದಿಯ ಕಂಠ್ಯ ಧ್ವನಿಗಳಾದ -ಕ್, -ಗ್ ಗಳು ಪೂರ್ವ ಸ್ವರಗಳಾದ ಇ, ಈ, ಎ, ಏಗಳು ಹಿಂದೆ ಬಂದಾಗ – ಚ್, ಜ ಕಾರವಾಗಿ ಬದಲಾಗುತ್ತವೆ ಎಂದು ಡಾ. ಚಿದಾನಂದಮೂರ್ತಿಯವರು ಗುರುತಿಸಿದ್ದಾರೆ. ಉದಾಹರಣೆಗೆ: ಕಿವಿ > ಚಿವಿ, ಕಿಟಕಿ > ಚಿಟಕಿ, ಕೀವು > ಚೀವು, ಕೆರೆ > ಚೆರೆ, ಕೆಳಗಿನ > ಚೆಳಗಿನ, ಕೆಂಪು > ಚೆಂಪು, ಕೇಳು > ಚೇಳು, ಕೆನ್ನೆ > ಚೆನ್ನೆ, ಕೆಂಡ > ಚೆಂಡ, ಗಿಡ > ಜಿಡ, ಗಿಣಿ > ಜಿಣಿ, ಗೀಟು > ಜೀಟು, ಗೆರೆ > ಜೆರೆ, ಗೇಣು > ಜೇಣು ಮತ್ತು ಗೆಯ್ಯಿ > ಜೆಯ್ಯಿ ಇತ್ಯಾದಿ. ಪ್ರಸ್ತುತ ಸಂದರ್ಭದಲ್ಲಿ ಭಾಷಾ ಶಿಷ್ಠೀಕರಣದ ಒಂದು ಭಾಗವಾಗಿ ಈ ವಿಶಿಷ್ಟ ಕೆಲವೊಂದು ಅಂಶಗಳು ಕಳೆದು ಹೋಗುತ್ತವೆ ಏನೋ ಎಂದಿನಿಸುತ್ತದೆ. ಉದಾಹರಣೆಗೆ: ಕಿವಿ > ಚಿವಿ ಆಗಿತ್ತು. ಈಗ ಚಿವಿಯು > ಕಿವಿಯಾಗಿ ಮತ್ತು ಕೆರೆ > ಚೆರೆ ಆಗಿತ್ತು. ಈಗ ಚೆರೆ > ಕೆರೆಯಾದ ಈ ರೂಪಗಳು ಸಾಮಾನ್ಯವಾಗಿ ಬಳಕೆಯಾಗುತ್ತವೆ. ಇನ್ನೂಳಿದ ಕೆಲವು ಪದಗಳು ಹಾಗೆಯೇ ಮುಂದುವರಿಯುವುದು ಕಂಡು ಬರುತ್ತದೆ. ಉದಾಹರಣೆಗೆ: ಕೀವು > ಚೀವು, ಕೆಳಗಿನ > ಚೆಳಗಿನ, ಕೆಂಪು > ಚೆಂಪು, ಗಿಡ > ಜಿಡ, ಗಿಣಿ > ಜಿಣಿ ಮತ್ತು ಗೆರೆ > ಚೆರೆ ಈ ಪದಗಳು ಈಗಲೂ ಬಳಕೆಯಲ್ಲಿವೆ.

ವ್ಯಾಕರಣಾತ್ಮಕವಾಗಿ

ವ್ಯಾಕರಣ ವ್ಯವಸ್ಥೆಯಲ್ಲಿ ಎದ್ದು ಕಾಣುವ ಕೆಲವು ಅಂಶಗಳ ಕುರಿತು ಹೇಳುವುದಾದರೆ, ಬಹುವಚನ ಪ್ರತ್ಯಯಗಳಲ್ಲಿ – ಗಳು ರೂಪವು – ಗೋಳು, ಗೊಳು ಎಂದು ಬಳಕೆಯಾಗಿರುವುದನ್ನು ಕಾಣಬಹುದು. ಉದಾಹರಣೆಗೆ: ಮರಗಳು > ಮರಗೋಳು ಮತ್ತು ಹಸುಗಳು > ಹಸುಗೊಳು.

ಬಂಧುವಾಚಕ (Kinshipterms)ಪ್ರತ್ಯಯವಾದ – ಅಂದಿರು ಬದಲಾಗಿ – ದೀರು ಎಂಬ ರೂಪ ಬಳಕೆಯಲ್ಲಿದೆ. ಉದಾಹರಣೆಗೆ: ಅಕ್ಕಂದಿರು > ಅಕ್‌ದೀರು, ಅಣ್ಣಂದಿರು > ಅಣ್‌ದೀರು ಮತ್ತು ತಮ್ಮಂದಿರು > ತಮ್‌ದೀರು. ಅಷ್ಟೇ ಅಲ್ಲದೆ ಸ್ವಜಾತಿಯ ದ್ವಿತ್ವಕ್ಷರ ವ್ಯಂಜನಗಳಲ್ಲಿ ಒಂದು ವ್ಯಂಜನ ಲೋಪವಾಗಿರುವುದನ್ನು ಕಾಣಬಹುದು. ಇದರ ಇನ್ನೊಂದು ಪ್ರತ್ಯಯವಾದ- ರು ಹಾಗೆಯೇ ಉಳಿದುಕೊಂಡಿದೆ. ಉದಾಹರಣೆಗೆ: ಸೊಸೇರು ಮತ್ತು ಹುಡಗೇರು.

ವಿಧ್ಯರ್ಥಕ ರೂಪ – ಓಣ ಎಂಬ ರೂಪವು ಈ ಸಮುದಾಯದ ಕನ್ನಡದಲ್ಲಿ – ಓನ, ಆನ ಎಂಬ ರೂಪಗಳಾಗಿ ಬಳಕೆಯಲ್ಲಿರುವುದು ಕಂಡು ಬರುತ್ತವೆ. ಉದಾಹರಣೆಗೆ: ಮಾಡೋಣ > ಮಾಡೋನ ಅಥವಾ ಮಾಡಾನಾ ಮತ್ತು ಹೋಗೋಣ > ಹೋಗೋನ ಅಥವಾ ಹೋಗಾನಾ ಎಂಬ ಹಲವಾರು ರೂಪಗಳು ಬಳಕೆಯಲ್ಲಿವೆ.

ಈ ಸಮುದಾಯದಲ್ಲಿ ಬಳಕೆಯಾಗುವ ಕೆಲವೊಂದು ವಿಶಿಷ್ಟ ಪದಗಳನ್ನು ಗುರುತಿಸಲಾಗಿದೆ. ಕೊಟ್ಲ (ಅರವತ್ತು ಸೇರುದಾನ್ಯಕೆ) ಕ್ವಾಟ (ಮಂಜು, ಇಬ್ಬನಿ) ಮುಟ(ವರೆಗೆ), ಕಟೆ(ಜೊತೆ), ಸಟೆ(ಸ್ವಲ್ಪ), ಕೆಂದಲ್ಲ (ಯಾವ ಪರಿಣಾಮವು ಆಗಲ್ಲ), ಮನೆಗೆಂಡೆ (ಇದ್ದಿಲು) ಮತ್ತು ಕಾಲಿಂಗೆಂಡೆ (ಆಲೂಗಡ್ಡೆ) ಇವುಗಳಲ್ಲದೆ ‘ಬನ್ನಿ’ ಬದಲಾಗಿ ‘ಬಲ್ಲಿ’ ಮತ್ತು ‘ತನ್ನಿ’ ಬದಲಾಗಿ ‘ತಲ್ಲಿ’ ಎಂಬ ರೂಪಗಳು ಬಳಕೆಯಲ್ಲಿವೆ. ಅರಕಲಗೂಡು ಸುತ್ತಮುತ್ತಲಿನಲ್ಲಿ ಹೀಗೆ ಬಳಕೆಯಾಗುವ ಎಷ್ಟೋ ಹೊಸ ಹೊಸ ಪದಗಳು ಹುದುಗಿವೆ. ಇಂಥ ಪದಗಳು ಕನ್ನಡ ಭಾಷೆಯ ಶ್ರೀಮಂತಗೊಳಿಸುವಲ್ಲಿ ಸಹಾಯಕವಾಗಬಹುದು.

ಇಲ್ಲಿಯವರೆಗೆ ಹಾಸನ ಜಿಲ್ಲಾ ಪರಿಸರದಲ್ಲಿರುವ ದಲಿತ ಕನ್ನಡದ ಬಗ್ಗೆ ವಿವರಣೆ ಕೊಟ್ಟಿದ್ದರೂ ಸಹ, ಇಲ್ಲಿ ಬರುವ ಪದಾವಳಿಯಿಂದಲೇ ಇಲ್ಲಿನ ಸಾಮಾಜಿಕ ಪ್ರಭೇದವನ್ನು ಅರಿಯಬಹುದು. ಈ ಹಿನ್ನೆಲೆಯಲ್ಲಿ ಇನ್ನೂ ವ್ಯಾಪಕವಾಗಿ ಇಡೀ ಜಿಲ್ಲೆಯ ಬೇರೆ ಬೇರೆ ಪ್ರಾಂತ್ಯಗಳನ್ನು ಅಧ್ಯಯನ ಮಾಡಿದರೆ ಇನ್ನೂ ಹಲವಾರು ಕೂತುಹಲಕಾರಿ ಭಾಷಾ ವೈಶಿಷ್ಟ್ಯಗಳನ್ನು ಗುರುತಿಸಬಹುದು.

ಆಕರ ಗ್ರಂಥಗಳು

೧. ವಾಗರ್ಥ – ಡಾ. ಚಿದಾನಂದಮೂರ್ತಿ.

೨. ಕರ್ನಾಟಕ ಭಾರತಿ – ಸಂ.ಡಾ. ಎಂ.ಎಸ್. ಸುಂಕಾಪೂರ (ಸಂಪುಟ:೯, ಸಂಚಿಕೆ : ೧ ಮತ್ತು ೨) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ-೦೩, ೧೯೭೬.