ಹೆಬ್ಬಾಲೆ ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕು, ಕುಶಾಲನಗರ ಹೋಬಳಿಗೆ ಸೇರಿದೆ. ಈ ಗ್ರಾಮದಲ್ಲಿ ಬ್ರಾಹ್ಮಣರು, ಲಿಂಗಾಯತರು, ಗೌಡರು, ಕುಂಬಾರರು, ಅಗಸರು, ಈಡಿಗರು, ಆಚರಿಗಳು, ಕಮ್ಮರರು, ಅಗಸರು ಮುಂತಾದ ಸಾಮಾಜಿಕ ವರ್ಗದವರು ವಾಸಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಗೌಡ ಜನಾಂಗದವರು ಇದ್ದಾರೆ. ಸಂಖ್ಯೆ ದೃಷ್ಟಿಯಿಂದ ಹೊಲೆಮಾದಿಗರು ಎರಡನೆ ಸ್ಥಾನದಲ್ಲಿದ್ದಾರೆ. ಹಳ್ಗೋಟಿ, ಸಿರ್ಗಾಂಲ ಪ್ರದೇಶಗಳು ಕೊಡಗು ಮತ್ತು ಹಾಸನ ಜಿಲ್ಲೆಗಳ ಗಡಿ ಪ್ರದೇಶಗಳಾಗಿವೆ. ಕಣವೆ, ಕೊಡಿಗೆ, ಕೂಣನೂರು, ಸೂಳೆಕೋಟೆ ಪ್ರದೇಶಗಳು ಹಾಸನ ಜಿಲ್ಲೆಯ ಗಡಿ ಪ್ರದೇಶಗಳಾಗಿವೆ. “ಹೆಬ್ಬಾಲೆ” ಆಡಳಿತಾತ್ಮಕವಾಗಿ ಮಡಿಕೇರಿ ಜಿಲ್ಲೆಗೆ ಸೇರಿದೆ. ‘ಹೆಬ್ಬಾಲೆ’ ಯಲ್ಲಿರುವ ಹೊಲೆಮಾದಿಗರು ಹಾಸನ ಜಿಲ್ಲೆಯ ಭಾಷೆಯ ಚಹರೆಯನ್ನು ಉಳಿಸಿಕೊಂಡಿದ್ದಾರೆ. ಮಡಿಕೇರಿ ಪ್ರದೇಶದ ಹೊಲೆಮಾದಿಗರ ಪ್ರಭಾವ ಹೆಬ್ಬಾಲೆ ಪ್ರದೇಶದ ಹೊಲೆಮಾದಿಗರ ಮೇಲೆ ಆಗಿಲ್ಲ.

ಕಕಾರ ಮತ್ತು ಗಕಾರಗಳು ಚಜಗಳಾಗಿ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಉತ್ತರ ಭಾಗದಲ್ಲಿ (ಹುಣಸೂರು ಮತ್ತು ಸಾಲಿಗ್ರಾಮಗಳಲ್ಲಿ) ಹರಿಜನರ ಕನ್ನಡದಲ್ಲಿ ಪೂರ್ವ ಸ್ವರಗಳಾದ ಇ, ಈ, ಎ ಮತ್ತು ಏಗಳು ಪರದಲ್ಲಿರುವಗಾ ಕಕಾರ ಮತ್ತು ಗಕಾರಗಳು ಅನುಕ್ರಮವಾಗಿ ಚ ಮತ್ತು ಜ ಗಳಾಗಿ ಬದಲಾಗಿರುವುದು ಕಂಡುಬರುತ್ತದೆ. ಎಂದು ಡಿ.ಎ‌ನ್.ಶಂಕರಭಟ್ಟರು ತಮ್ಮ ಕನ್ನಡ ಕಲ್ಪಿತ ಚರಿತ್ರೆ (ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪು.೮೯)ಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೆ ಸಮಸ್ಯೆಯೊಂದನ್ನು ಕುರಿತು ಕನ್ನಡದ ಪ್ರಸಿದ್ಧ ಸಂಶೋಧಕರಾದ ಡಾ. ಎಂ. ಚಿದಾನಂದಮೂರ್ತಿ ಅವರು ‘ಕನ್ನಡದ ಉಪಭಾಷೆಯೊಂದರಲ್ಲಿ ತಾಲವ್ಯೀಕರಣ ಮತ್ತು ಕಂಠ್ಯೀಕರಣ’ ಲೇಖನದಲ್ಲಿ ದೀರ್ಘವಾಗಿ ಚರ್ಚಿಸಿದ್ದಾರೆ. ಈ ಲೇಖನಕ್ಕೆ ಸಾಮಾಗ್ರಿಯನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ, ಚನ್ನರಾಯಪಟ್ಟಣ, ಅರಕಲಗೂಡು, ಸಕಲೇಶಪುರ, ಮೂಡಿಗೆರೆ, ಕೃಷ್ಣರಾಜಪೇಟೆ, ತಾಲೂಕುಗಳಲ್ಲಿ ಸಂಗ್ರಹಿಸಿದ್ದಾರೆ. ಬಹುಮಟ್ಟಿಗೆ ಹರಿಜನರ ಭಾಷೆಯಲ್ಲಿ ಈ ತಾಲವ್ಯೀಕರಣ ಬಳಕೆಯಲ್ಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಒಂದು ಧ್ವನಿ ಲಕ್ಷಣ ಸೋಮವಾರ ಪೇಟೆಯ ‘ಹೆಬ್ಬಾಲೆ’ ಗ್ರಾಮದಲ್ಲಿರುವ ಹೊಲೆಮಾದಿಗರ ಕನ್ನಡದಲ್ಲಿ ಬಳಕೆಯಲ್ಲಿದೆ. ಇದಕ್ಕೆ ಆಕರ ಡಾ. ಹೆಬ್ಬಾಲೆ ಕೆ.ನಾಗೇಶ್ ಅವರು ರಚಿಸಿರುವ ‘ಅರಳವ್ವ’ ಕಾದಂಬರಿಯಲ್ಲಿ ಬಳಕೆಯಾಗಿರುವ ಭಾಷೆ. ಇದರ ಜತೆಗೆ ಲೇಖಕರ ಜತೆಯಲ್ಲಿ ಚರ್ಚಿಸಿ ನಂತರ ಆ ಪ್ರದೇಶದ ಭಾಷೆಯ ಸ್ಥಿರವಾದ ಲಕ್ಷಣ ಕುರಿತು ಅಂತಿಮ ನಿರ್ಧಾರಕ್ಕೆ ಬರಲಾಗಿದೆ.

‘ಹೆಬ್ಬಾಲೆ’ಯಲ್ಲಿ ಪೂರ್ವಸ್ವರಗಳಾದ ಇ, ಈ, ಎ ಮತ್ತು ಏ ಹಿಂದಿನ ‘ಕ್’ ಮತ್ತು ‘ಗ್’ ಗಳು ‘ಚ್’ ಮತ್ತು ‘ಜ್‌’ ಗಳಾಗಿ ಬದಲಾವಣೆ ಆಗುತ್ತವೆ.

ಉದಾಹರಣೆ :

ಹೆಬ್ಬಾಲೆ ಹೊಲೆಮಾದಿಗರ ಕನ್ನಡ ಬರಹದ ಕನ್ನಡ
ಚಿವಿ ಕಿವಿ
ಚಿಡಿ ಕಿಡಿ
ಚಳಕ್ಕೆ ಕೆಳಕ್ಕೆ
ಚೆಳ್ಗೆ ಕೆಳಗೆ
ಚೆಂಪು ಕೆಂಪು
ಚಾಳ್ಸ್ಕೊಂಡು ಕೇಳಿಸಿಕೊಂಡು
ಚೇರಿ ಕೇರಿ
ಚಟ್ಟೊಗದಾ ಕೆಟ್ಟು ಹೋಗಿದಿಯಾ
ಚಾಳಿದ್ಲು ಕೇಳಿದಳು
ಚಾಳ್ಸುತು ಕೇಳಿಸಿತು
ತಲೆಚಳ್ಗೆ ತಲೆಕಳಗೆ
ಚೆಂಡ ಕೆಂಡ
ಚೆದ್ರದೆ ಕೆದರಿದೆ
ಜಿಡ ಗಿಡ
ಜೆದ್ಲು ಗೆದ್ದಿಲು
ಜಿಣಿ ಗಿಣಿ/ಗಿಳಿ
ಜೀಟು ಗೀಟು
ಜೆಯ್ಯಿ ಗೆಯ್ಯಿ
ಜೆಯ್ಯಿದ ಗೆಯ್ಯದ

ಪದಾದಿ ಪರಿಸರ ಉಳಿದಂತೆ ಬೇರೆ ಪರಿಸರಗಳಲ್ಲಿ ತಾಲವ್ಯೀಕರಣ ಆಗುವುದಿಲ್ಲ.

ಉದಾಹರಣೆಗೆ : ಚಿಲಕ, ತಿಲಕ, ಆಕಾಶ ನಾಟಕ, ಪಾಠಕ, ನಾಯಕ ಇತ್ಯಾದಿ. ಪೂರ್ವ ಸ್ವರಗಳ ರಹಿತ ಸಂದರ್ಭದಲ್ಲೂ ತಾಲವ್ಯೀಕರಣ ಬಳಕೆಯಲ್ಲಿ ಇಲ್ಲ. ಕಾಗದ, ಕಾಯಿ, ಕೂಗು, ನೂಕು, ಕೂರು, ಕೂದಲು, ಇತ್ಯಾದಿ.

‘ಒ’ ಕಾರಕ್ಕೆ ‘ಒ’ ಕಾರ ಬಳಕೆಯಲ್ಲಿದೆ.

ಕೋಣೆ ಕ್ವಾಣೆ
ತೋರುತಿತ್ತು ತ್ವಾರತಿತ್ತು
ಕೋಟೆ ಕ್ವಾಟೆ
ನೋಡುತ್ತಾ ನ್ವಾಡ್ತಾ
ಗೋಣಿಚೀಲ ಗ್ವಾಣಿಚೀಲ
ಕೊಳ್ಳಿ ಕ್ವಾಳ್ಳಿ
ಕೋಳಿ ಕ್ವಾಳಿ
ಗೋತ್ತಿಲ್ಲವ್ವ ಗ್ವಾತ್ತಿಲ್ವ
ಜೋಕೆ ಜ್ವಾಕೆ
ಜೋಗಿ ಜ್ವಾಗಿ

‘ಎ’ ಕಾರಕ್ಕೆ ‘ಎ’ ಕಾರ ಬಳಕೆಯಲ್ಲಿದೆ.

ಬೇದ ಬ್ಯಾದ
ದೇವತೆ ದ್ಯಾವತೆ

ಪದಾದಿಯ ಎ ಕಾರ ಮತ್ತು ಒ ಕಾರಗಳು ಯಕಾರ ವಕಾರಗಳಾಗಿ ಬಳಕೆಯಲ್ಲಿವೆ.

ಎ ಕಾರ ಯ ಕಾರವಾಗಿರುವುದು

ಎಲೆ ಯಲೆ
ಎಮ್ಮೆ ಯಮ್ಮೆ
ಎರ ಯರ
ಎಲ್ಲ ಯಲ್ಲ

ಒ ಕಾರ ವ ಕಾರವಾಗಿರುವುದು

ಒಳಗೆ ವಳ್ಗೆ
ಒಲೆ ವಲೆ
ಓಲೆ ವಾಲೆ

‘ಹೆಬ್ಬಾಲೆ’ ಅರಕಲಗೂಡಿಗೆ ೩೫ ಕಿ.ಮೀ. ದೂರದಲ್ಲಿದೆ. ಮಡಿಕೇರಿಯಿಂದ ಹೆಬ್ಬಾಲೆಗೆ ೩೪ ಕಿ.ಮೀ. ಅಂತರವಿದೆ. ಪರಿಯಪಟ್ಟಣ (ಹುಣಸೂರು ತಾಲೂಕು) ‘ಹೆಬ್ಬಾಲೆಗೆ’ ೨೮ಕಿ.ಮೀ. ದೂರದಲ್ಲಿದೆ. ಹುಣಸೂರಿನಿಂದ ಹೆಬ್ಬಾಲೆಗೆ ೮೦ ಕಿ.ಮೀ. ಅಂತರವಿದೆ. ಇಷ್ಟೆಲ್ಲಾ ಅಂತರವಿದ್ದರೂ ಈ ಪ್ರದೇಶದಲ್ಲಿ ಬಳಕೆಯಾಗುವ ಹೊಲೆಮಾದಿಗರ ಕನ್ನಡ ಭಾಷೆಯ ಚಹರೆ ಹಾಸನ ಜಿಲ್ಲೆಯ ಹೊಲೆಮಾದಿಗರ ಕನ್ನಡದ ಲಕ್ಷಣಗಳನ್ನು ಉಳಿಸಕೊಂಡಿದೆ. ಉದಾಹರಣೆಗೆ: ಮೈಸೂರು ಜಿಲ್ಲೆಯ ಹುಣಸೂರು ಪ್ರದೇಶದ ಹೊಲೆಮಾದಿಗರ ಕನ್ನಡದಲ್ಲಿರುವ ‘ಣೇ’ ಎಂಬ ಸ್ತ್ರೀಸಂಬೋಧನಾ ರೂಪವು (ಡಿ.ಪಾಂಡುರಂಗಬಾಬು, ನುಡಿನೋಟ, ಪು.೯). ‘ಹೆಬ್ಬಾಲೆ’ ಗ್ರಾಮದ ಹೊಲೆಮಾದಿಗರ ಕನ್ನಡದಲ್ಲಿದೆ. ಇದೇ ರೀತಿ ಲಪ್ಪ, ಲಣ್ಣ ಲಕ್ಕ, ಲವ್ವ, ಮುಂತಾದ ಸಂಬೋಧನಾ ರೂಪಗಳು ಬಳಕೆಯಲ್ಲಿವೆ.

ಉದಾಹರಣೆಗೆ:

ಬರಹದ ಕನ್ನಡ ಹೆಬ್ಬಾಲೆ ಹೊಲೆಮಾದಿಗರ ಕನ್ನಡ
ಅವ್ವ ಅದೇಕೆ ಮಲಗಿಕೊಂಡಿಲ್ಲವೆ? ಅದ್ಯಾಕ ಲವ್ವ ಮಂಕೊಂಡಿಲ್ವ
ಲೇ ಮಲ್ಲಿ ಎಂದು ದೋಣ್ಣೆಯಲ್ಲಿತಿವಿದ. ಣೇ ಮಲ್ಲಿ ಅಂತ ದೊಣ್ಣೇಲಿ ತಿವ್ದ
ಅಕ್ಕ ನಾನು ಬೇಡ ಎಂದೆ ಲಕ್ಕಾ ನಾ ಬ್ಯಾಡಂದೆ
ಅಪ್ಪ ಊರಿನ ಜನ ಒಂದು ಸಣ್ಣ ಮರಿ ಮೀನನ್ನು ಲಪ್ಪಾ, ಊರ್ನ ಜನ ಒಂದು ಸಸ್ಲುನುವೇ
ಬಿಡದ ಹಾಗೆ ಎತ್ತಿಕೊಂಡು ಹೋಗುತ್ತಾರೆ. ಬುಡ್ಪಂಗೆ ಗೊರ್ಕೊಂಡು ವಯ್ತರೆ
ಅಣ್ಣ ನಾಳೆ ಏನು ಮಾಡುವುದು ಲಣ್ಣ/ಯಣ್ಣ ನಾಳಿಕ್ಕೆ ಯೇನ ಮಾಡೋದು?

ಹೆಬ್ಬಾಲೆ ಪರಿಸರದ ಹೊಲೆಮಾದಿಗರು ಹೆಣ್ಣು ಮಕ್ಕಳನ್ನು ಸಂಬೋಧನೆ ಮಾಡುವ ಕ್ರಮ ವಿಶೇಷವಾದುದು. ಉದಾಹರಣೆಗೆ:

ಅವ್ವಣೇ ಈ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಅಣ್ಣಂದಿರು ಮತ್ತು ತಮ್ಮಂದಿರು ಸಂಬೋಧನೆ ಮಾಡುವ ಕ್ರಮವಿದು. ಜತೆಗೆ ಮಕ್ಕಳು ತಾಯಿಗೆ ಬಳಸುವ ಸಂಬೋಧನಾ ರೂಪ.
ಅವ್ವಣೆ ಅಣ್ಣ ತಮ್ಮಂದಿರು, ಅಕ್ಕಂದಿರು ಕಿರು ಹೆಣ್ಣುಮಗಳಿಗೆ ಸಂಬೋಧನೆ ಮಾಡುವ ಕ್ರಮವಿದು.
ಣೇ ಅರಳ್ಳಿ ಹೊಲೆಮಾದಿಗರು ತಮ್ಮ ಜೊತೆಗಾರರನ್ನು ಉದ್ದೇಶಿಸಿ ಸಂಬೋಧನೆ ಮಾಡುವಾಗ, ಗಂಡ ಹೆಂಡತಿಯನ್ನು ಸಂಬೋಧನೆ ಮಾಡುವಾಗ, ಮೇಲ್ಜಾತಿಯ ಗಂಡಸರು ಮತ್ತು ಹೆಂಗಸರು ಕೆಳಜಾತಿಯ ಹೆಂಗಸರನ್ನು ಸಂಬೋಧನೆ ಮಾಡುವಾಗ ಪ್ರಯೋಗದಲ್ಲಿದೆ.
ಲಕ್ಕಾ ತಂಗಿ ಅಥವಾ ತಮ್ಮ ತನಗಿಂತ ಹಿರಿಯರನ್ನು ಕರೆಯುವಾಗ ಸಂಭೋದನೆ ಮಾಡುವ ಕ್ರಮವಿದು. ಶೂದ್ರ ವರ್ಗಗಳಲ್ಲಿ ಬಳಕೆಯಲ್ಲಿದೆ.
ಲಪ್ಪಾ ಮಕ್ಕಳು ತಂದೆಯನ್ನು ಸಂಬೋಧಿಸುವಾಗ ಬಳಸುವ ಪರಿಭಾಷೆ. ಹೊಲೆಮಾದಿಗರು, ಗೌಡರು, ಮಡಿವಾಳರು, ಕುಂಬಾರು ಮುಂತಾದ ವರ್ಗಗಳಲ್ಲಿ ಬಳಕೆಯಲ್ಲಿದೆ.
ಯೆಣ್ಣ/ಎಣ್ಣ ತಮ್ಮ ತನಗಿಂತ ಹಿರಿಯರನ್ನು ಸಂಬೋಧಿಸುವಾಗ ಬಳಸುವ ಪರಿಭಾಷೆ. ಹೊಲೆಮಾದಿಗ, ಗೌಡ, ಮಡಿವಾಳ, ಕುಂಬಾರ ಮುಂತಾದ ಸಾಮಾಜಿಕ ವರ್ಗಗಳಲ್ಲಿ ಬಳಕೆಯಲ್ಲಿದೆ

.

ಹೆಬ್ಬಾಲೆ ಪ್ರದೇಶದ ಹೊಲೆಮಾದಿಗರ ಕನ್ನಡ ತನ್ನದೇ ಆದ ವಿಶಿಷ್ಟವಾದ ಪದಕೋಶವನ್ನು ಹೊಂದಿದೆ ಎಂಬುದು ಕೆಳಗಿನ ಪದಪಟ್ಟಿಯಿಂದ ತಿಳಿಯಬಹುದು.

ಹೆಬ್ಬಾಲೆ ಹೊಲೆಮಾದಿಗರ ಕನ್ನಡ ಬರಹದ ಕನ್ನಡದ
ಗಂಗ್ಲ ಊಟದ ತಟ್ಟೆ
ವಾಗು ಹೋಗು
ಯಜ್ಜೆ ಹೆಜ್ಜೆ
ನಿಗಾ ಗಮನ
ಚಾಮೆ ಕೆಲಸ
ಜೀವಸ/ಜಿವ್ಸ ದಿನ
ವಸಿ ಸ್ವಲ್ಪ
ಹೊಣ್ತ್‌ರಾ  ಹೂಳುತ್ತಾರೆ
ಯಾಪಾರ ವ್ಯಾಪಾರ
ಜಗ್ತಿ ಜಗಲಿ
ಯಲ್ಡು ಎರಡು
ಮಂಕ್ರಿ ಮಕ್ಕರಿ
ಗುಡ್ಲ ಗುಡಿಸಲು
ಗಂಡುಪಿಳ್ಳೆ ಗಂಡುಮಗು
ದವ್‌ಗತ್ಲೆ ಕಗ್ಗತ್ತಲು
ವತರಿಕೆ ಬೆಳಿಗ್ಗೆ
ಹೈದ ಹುಡುಗ
ಜಿಂಟ ಟವಲು
ಚಳಗ್ಲ ಕೆಳಗಿನ
ಯಾಚ್ನೆ ಯೋಚನೆ
ಅಮ್ಯಾಕ ಅಮೇಲೆ
ತ್ಯವ ತೇವ
ರ್ವೋಮ ರೋಮ
ಜಪ್ತಿ, ನೆಪ್ತಿ, ಗ್ಯಪ್ತಿ ನೆನಪು
ಅಕ್ಲು ಮಕ್ಕಳು
ನ್ಯಾಲ್ಗೆ ನಾಲಗೆ
ಚಿಡಿ ಸಿಡಿ
ಗಿಳಿ ಜಿಣಿ

ಮೇಲಿನ ನಿದರ್ಶನಗಳಿಂದ ತಿಳಿದು ಬರುವ ಭಾಷಾ ಸಂಗತಿಯೆಂದರೆ ಪ್ರತಿಯೊಂದು ಸಾಮಾಜಿಕ ವರ್ಗಕ್ಕೂ ಒಂದೊಂದು ಭಾಷೆಯ ಚಹರೆ ಇದೆ. ಅದು ತುಂಬ ನಿರ್ದಿಷ್ಟವಾಗಿ ಬಳಕೆಯಲ್ಲಿರುತ್ತವೆ. ಅವುಗಳ ಬಳಕೆಯ ಒತ್ತಡ ಬಂದಾಗ ಅವು ಗೋಚರಿಸುತ್ತವೆ. ತಾಲವ್ಯೀಕರಣದ ವ್ಯಾಪ್ತಿ ಮುಖ್ಯವಾಗಿ ಮೈಸೂರು ಹಾಸನ ಮತ್ತು ಕೊಡಗು ಸಂಗಮ ಸ್ಥಾನಗಳಲ್ಲಿ ಎಂದು ನಿರ್ಧರಿಸಬಹುದಾಗಿದೆ. ವಿಶೇಷವಾಗಿ ಈ ತಾಲವ್ಯೀಕರಣದ ಪ್ರಕ್ರಿಯೆ ಹೊಲೆಮಾದಿಗರಿಗೆ ಮಾತ್ರ ಸೀಮಿತಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಶಿಕ್ಷಿತ ಹೊಲೆಮಾದಿಗರಲ್ಲಿ ತಾಲವ್ಯೀಕರಣ ಮತ್ತು ಕಂಠ್ಯೀಕರಣ ಲೋಪವಾಗುತ್ತಿದೆ. ಶಿಕ್ಷಿತರಲ್ಲಿ ಬಳಕೆಯಲ್ಲಿದ್ದರೆ ಅದು ತುಂಬ ನಿರ್ದಿಷ್ಟ ವಲಯದಲ್ಲಿ ಬಳಕೆಯಲ್ಲಿದೆ. ತಾಲವ್ಯೀಕರಣದ ಕನ್ನಡದ ಲಕ್ಷಣವಲ್ಲ. ಆದರೂ ಕನ್ನಡ ಪ್ರದೇಶದಲ್ಲಿ ಜೀವಂತವಾಗಿದೆ ಎಂದರೆ ಅದಕ್ಕೆ ಕಾರಣವೇನು? ಸಾಮಾಜಿಕರು ಭಾಷೆಯ ಉಚ್ಚಾರಣೆಯನ್ನು ಕಠಿಣತೆಯಿಂದ ಸರಳತೆ ಕಡೆಗೆ ಬಯಸುತ್ತಾರೆ. ಆ ಹಿನ್ನೆಲೆಯಿಂದ ಧ್ವನ್ಯಂಗದಲ್ಲಿ ‘ಕ್’ ಮತ್ತು ‘ಚ್‌’ ಧ್ವನಿಗಳಲ್ಲಿ ಯಾವುದು ಮೊದಲು ಹುಟ್ಟುತ್ತದೆ? ಯಾವುದು ಸುಲಭವಾಗಿ ಉಚ್ಚಾರಣೆ ಆಗುತ್ತಿದೆ ಎಂಬುದು ಗಮನಿಸುವಂತಹ ಅಂಶವಾಗಿದೆ. ಭಾಷಿಕರಿಗೆ ‘ಚ್’ ಮೊದಲು ಹುಟ್ಟುತ್ತದೆ. ಜತೆಗೆ ಸುಲಭವಾಗಿ ಉಚ್ಚಾರಣೆ ಮಾಡಬಹುದಾಗಿದೆ. ಏಕೆ ಹೊಲೆಮಾದಿಗರಲ್ಲೆ ಈ ಧ್ವನಿಗಳು ವಿಶಿಷ್ಟವಾದ ಲಕ್ಷಣವಾಗಿ ಬಳಕೆಯಲ್ಲಿವೆ ಎಂದರೆ, ಸಾಮಾನ್ಯವಾಗಿ ಹೊಲೆಮಾದಿಗರು ಏಕಭಾಷಿಕರು. ಚಾರಿತ್ರಿಕವಾಗಿ ಗಮನಿಸಿದಾಗ ಶಿಕ್ಷಣದಿಂದ ವಂಚಿತರು. ಅಂತಹವರಿಗೆ ತಾವು ಬದುಕುವ ಸಾಮಾಜಿಕ ಪರಿಸರದ ಕನ್ನಡ ಅದೇ ಸತ್ಯ. ಅದರಿಂದಾಚೆಗಿನ ಭಾಷಾಲೋಕ ಕನಸು. ಇತ್ತೀಚಿನ ದಿನಗಳಲ್ಲಿ ಬದಲಾದ ಪರಿಸ್ಥಿತಿ ಕಂಡು ಬರುತ್ತಿದೆ. ಯಾವುದು ನಮ್ಮದು. ಯಾವುದು ಬೇರೆಯವರದು ಎಂದು ವರ್ಗೀಕರಿಸಿ ಚಿಂತಿಸುವ ಕಾಲ ಬಂದಿದೆ. ನಾವು ಮಾತನಾಡುವ ಕನ್ನಡ ಭಾಷೆಯನ್ನು ಶಿಕ್ಷಣದಲ್ಲಿ ಮಾನ್ಯ ಮಾಡಬೇಕೆಂಬ ಒತ್ತಡವನ್ನು ಹಾಕುತ್ತಿದ್ದಾರೆ. ಅವರಿಗೆ ನಮ್ಮ ಉಚ್ಚಾರಣೆಯಲ್ಲಿರುವ ಕನ್ನಡವೆ ನಿಜವಾದ ಕನ್ನಡ ಎಂದು ತಿಳಿದಿದೆ.