ಸಮಾಜ ಮತ್ತು ಭಾಷೆ ಇವೆರಡರ ಸಂಬಂಧ ವಿಶಿಷ್ಟವಾದುದು. ಸಾಮಾಜಿಕ ಭಾಷಾಧ್ಯಯನ ಒಂದು ನಿರ್ದಿಷ್ಟ ಸಮಾಜದ ಅಧ್ಯಯನಕ್ಕೆ ಪೂರಕ ಮತ್ತು ಸಹಾಯಕವಾಗಿರುತ್ತದೆ. ಭಾಷೆಯಿಂದ ಸಾಮಾಜಿಕ ರಚನಾವಿನ್ಯಾಸ ಮತ್ತು ಅದರ ವಿಶೇಷತೆಯನ್ನು ಸಮರ್ಪಕ ರೀತಿಯಲ್ಲಿ ಸೂತ್ರೀಕರಿಸಿ ವಿವರಿಸಬಹುದು. ವ್ಯಕ್ತಿಯ ದೈನಂದಿನ ವ್ಯವಹಾರವೆಲ್ಲವೂ ಆತ ವಾಸಿಸುವ ಭಾಷಿಕ ಸಮುದಾಯದ ಒಪ್ಪಿತ ನಡಾವಳಿಗಳ ಪ್ರತಿನಿಧಿತ ಸಂವಹನ ಮಾಧ್ಯಮವಾಗಿರುತ್ತದೆ. ಭಾಷೆ ಸಂಸ್ಕೃತಿಯ ಕನ್ನಡಿಯಲ್ಲದೆ ನಿರ್ದಿಷ್ಟ ಸಮುದಾಯದ ಎಲ್ಲ ಜೀವಂತ ನೈಜ ಚಟುವಟಿಕಯ ಕೇಂದ್ರ. ಸಮಾಜದಿಂದ ವ್ಯಕ್ತಿಯನ್ನು, ವ್ಯಕ್ತಿಯಿಂದ ಭಾಷೆಯನ್ನು ಬೇರ್ಪಡಿಸಲಾಗದು.

ಭಾರತದಲ್ಲಿ ನೂರಾರು ಸಾಮಾಜಿಕ ವರ್ಗಗಳಿವೆ. ಪ್ರತಿಯೊಂದು ಸಾಮಾಜಿಕ ವರ್ಗ ತನ್ನದೇ ಆದ ಭಾಷೆ, ಸಮಾಜ ಮತ್ತು ಸಂಸ್ಕೃತಿಯನ್ನು ಹೊಂದಿರುತ್ತವೆ. ಹಾಗೆಯೇ ದಲಿತರು ಕೂಡ ತನ್ನ ಅನನ್ಯತೆಯುಳ್ಳ ಭಾಷೆ, ಸಮಾಜ ಮತ್ತು ಸಂಸ್ಕೃತಿಯನ್ನು ಹೊಂದಿರುವುದನ್ನು ಕಾಣಬಹುದು. ಇಂತಹ ಅನನ್ಯತೆಗಳಿಗೆ ಸಾಮಾಜಿಕ ವರ್ಗಗಳು ಪ್ರಮುಖ ಪಾತ್ರವಹಿಸುತ್ತವೆ. ಕನ್ನಡದಲ್ಲಿ ಪ್ರಾದೇಶಿಕತೆ ಮತ್ತು ವಿವಿಧ ಸಾಮಾಜಿಕ ವರ್ಗಗಳನ್ನು ಆಧರಿಸಿ ಭಾಷಿಕ ಹಿನ್ನೆಲೆಯಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿವೆ. ಸಾಮಾಜಿಕ ದೂರ ಭಾಷಾ ಪ್ರಭೇದಕ್ಕೆ ಮತ್ತೊಂದು ಪ್ರಧಾನ ಅಂಶವಾಗಿದೆ. ಅಲ್ಲದೆ ಜನಾಂಗದ ಆಚರಣೆ, ವಿಧಿವಿಧಾನಗಳು ಊಟೋಪಚಾರಗಳು ವೃತ್ತಿಗಳು, ಭಾಷಾಭೇದಕ್ಕೆ ಮುಖ್ಯ ಕಾರಣಗಳಾಗಿರುತ್ತವೆ.

ಕೇವಲ ಪ್ರಾದೇಶಿಕ ಕಾರಣಗಳಿಂದ ಅಲ್ಲದೆ ಉಪಭಾಷೆಗಳು ಸಾಮಾಜಿಕ ಕಾರಣಗಳಿಂದಲೂ ಕೂಡ ರಚಿತವಾಗಿರುತ್ತದೆ. ಇಲ್ಲಿ ಭಾಷಿಕ ಭಿನ್ನತೆಗೆ ಆಯಾ ಜನಾಂಗದಲ್ಲಿನ ಆಚರಣೆ, ಸಂಪ್ರದಾಯ ವಿಧಿವಿಧಾನ ಮತ್ತು ನಿಷೇಧಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಸಾಮಾಜಿಕ ಉಪಭಾಷೆಗಳ ಲಕ್ಷಣಗಳನ್ನು ಇಂತಿಷ್ಟೆ ಎಂದು ನಿರ್ಧರಿಸುವುದು ಕಷ್ಟದ ಕೆಲಸ. ಸಾಮಾನ್ಯವಾಗಿ ಸಾಮಾಜಿಕ ಉಪ ಭಾಷೆಗಳನ್ನು ಧ್ವನ್ಯಾತ್ಮಕ, ಆಕೃತಿಮಾತ್ಮಕ ಮತ್ತು ವಾಕ್ಯಾತ್ಮಕ ರಚನಾ ವೈಶಿಷ್ಟ್ಯತೆಗಳಿಂದ ನಿರ್ಧರಿಸುವುದು ಸಾಧ್ಯ. ಆದ್ದರಿಂದ ಸಾಮಾಜಿಕ ಉಪಭಾಷೆಗಳ ಲಕ್ಷಣಗಳನ್ನು ನಿರ್ಧರಿಸುವ ಅಂಶಗಳು ಈ ಮುಂದಿನಂತೆ ಇರುತ್ತವೆ.

ಸಾಮಾಜಿಕ ಉಪಭಾಷಾರೂಪಗಳು, ಸಾಮಾಜಿಕ ದೂರ ಸಾಮಾಜಿಕ ವರ್ಗ ಮತ್ತು ಸಾಮಾಜಿಕ ಭಿನ್ನಾಂಶಗಳ ಮೇಲೆ ಅವಲಂಬಿತವಾಗಿರುತ್ತವೆ.

ಆಯಾಯ ಸಾಮಾಜಿಕ ಉಪಭಾಷೆಗಳಲ್ಲಿ ಕಂಡುಬರುವ ಭಾಷಿಕ ಅಂಶಗಳು ಆಯಾಯ ಸಾಮಾಜಿಕ ಉಪಭಾಷೆಗಳಿಗೆ ನಿಗದಿತವಾಗುತ್ತವೆ.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಪ್ರತಿಯೊಂದು ಪ್ರಾಕೃತಿಕ ವಲಯದಲ್ಲೂ ಪ್ರತಿಯೊಂದು ಜಾತಿ ಧರ್ಮಕ್ಕೂ ಪ್ರತ್ಯೇಕ ಪ್ರತ್ಯೇಕವಾಗಿ ಸಾಮಾಜಿಕ ಉಪಭಾಷೆ ಇರುತ್ತವೆ ಎಂಬುದು ನಿರ್ವಿವಾದ.

ಕುತೂಹಲಕಾರಿಯಾದ ಅಂಶವೆಂದರೆ ಕನ್ನಡ ನಾಶವಾಗುತ್ತಿದೆ. ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು ಎಂಬ ಆವೇಶ ಭರಿತ ಮಾತುಗಳನ್ನು ಆಡುತ್ತಿರುವ ಈ ಸಂದರ್ಭದಲ್ಲಿ ನಿಜವಾಗಿ ಕನ್ನಡವನ್ನು ಇನ್ನೂ ಉಳಿಸಿಕೊಂಡಿರುವವರು ಹೊಲೆಮಾದಿಗರು (ದಲಿತರು) ಎಂದರೆ ಆಶ್ಚರ್ಯವೆನಿಸುತ್ತದೆ. ಜೊತೆಗೆ ಕಹಿಯಾದ ವಿಷಯವಾಗುತ್ತದೆ. ಆದರೆ ಕೆಲವು ಮೂಲಭೂತವಾದಿಗಳು ಈ ಅಂಶವನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಕನ್ನಡ ಭಾಷೆಯೆಂದರೆ ಶೇ. ಎಂಬತ್ತರಷ್ಟು ಆವೃತ್ತವಾಗಿರುವ ಸಂಸ್ಕೃತ ಭೂಯಿಷ್ಟ ಕನ್ನಡವೇ ನಿಜವಾದ ಕನ್ನಡ. ಆದರೆ ಈ ನಿಯಮವನ್ನು ಇಂಗ್ಲಿಶ್ ಭಾಷೆಗೆ ಅಳವಡಿಸಿಕೊಳ್ಳುವ ಸಹನೆ ಅಂತಹವರಿಗಿಲ್ಲ. ಅದೇನೇ ಇದ್ದರೂ ಈ ನೆಲದ ಕನ್ನಡ ಭಾಷೆಯ ವಾರಸುದಾರರು ದಲಿತರು ಎಂಬುದನ್ನು ಒಪ್ಪಿಕೊಳ್ಳಲು ಅವರು ಸಿದ್ಧರಿದ್ದಂತೆ ಕಾಣುವುದಿಲ್ಲ.

ಪ್ರಸ್ತುತ ಲೇಖನದಲ್ಲಿ ತುಮಕೂರು ಜಿಲ್ಲಾ ಪರಿಸರದ ದಲಿತ ಕನ್ನಡದ ವೈಶಿಷ್ಟ್ಯಗಳನ್ನು ಕುರಿತು ಚರ್ಚಿಸಲಾಗುವುದು. ತುಮಕೂರು ಜಿಲ್ಲೆ ಭೌಗೋಳಿಕವಾಗಿ ಮೊದಲಿನಿಂದಲೂ ಹಳೇ ಮೈಸೂರು ಪ್ರಾಂತ್ಯದ ಆಡಳಿತಕ್ಕೆ ಒಳಪಟ್ಟಿದ್ದು ಬಹಳಷ್ಟು ಆ ಭಾಗದ ಭೌತಿಕ ಲಕ್ಷಣಗಳನ್ನು ಉಳಿಸಿಕೊಂಡಿರುವುದನ್ನು ಕಾಣಬಹುದು. ಅಲ್ಲದೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಮಧುಗಿರಿ ಮತ್ತು ಪಾವಗಡ ತಾಲೂಕುಗಳು ಆಂಧ್ರಪ್ರದೇಶದ ಗಡಿಯಲ್ಲಿ ಇರುವುದರಿಂದ ಈ ಎರಡು ತಾಲೂಕುಗಳಲ್ಲಿ ಸಹಜವಾಗಿ ತೆಲುಗಿನ ಗಾಢ ಪ್ರಭಾವವಿರುವುದನ್ನು ಕಾಣಬಹುದು.

ಇಲ್ಲಿ ದಲಿತರ ಭಾಷೆಯನ್ನು ದಲಿತ ಭಾಷೆಯೆಂದು ತಿಳಿಯದೇ ಕನ್ನಡದ ನಿಜವಾದ ಒಂದು ಪ್ರಭೇದ ಎಂದೇ ಹೇಳಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಅಧ್ಯಯನ ವಿಶ್ಲೇಷಣೆ ತುಂಬಾ ಅವಶ್ಯಕವಾಗುತ್ತವೆ. ಈ ರೀತಿಯ ಭಾಷಿಕ ವಿಶ್ಲೇಷಣೆಯನ್ನು ಧ್ವನಿ, ಧ್ವನಿಮಾ, ಆಕೃತಿ, ಆಕೃತಿಮಾ, ಪದರಚನೆ, ವಾಕ್ಯರಚನೆ ಮತ್ತು ಭಾಷೆಯ ಶೈಲಿಯ ದೃಷ್ಟಿಯಿಂದ ವಿವರಣೆ ಮಾಡಬಹುದು.

ಸಂಬಂಧವಾಚಕಗಳು : ಇಲ್ಲಿನ ಕನ್ನಡದಲ್ಲಿ ಪ್ರಮಾಣ ಕನ್ನಡದಲ್ಲಿರುವ ಪದಗಳಿಗೆ ಆಯ್ಯ, ಅಯ, ಎಂಬ ರೂಪ ಬಳಸಿ ಸಂಬೋಧನೆ ಮಾಡಲಾಗುತ್ತದೆ. ಇದು ಗೌರವ ಸೂಚಕವಾಗಿಯೂ ಬಳಕೆಯಾಗುವುದನ್ನು ಕಾಣಬಹುದು.

ಉದಾ :

ಚಿಕ್ಕಪ್ಪ ಸಣಪಯ
ದೊಡ್ಡಮ್ಮ ದೊಡ್ಡಮಯ
ಅಣ್ಣ ಅಣ್ಣಯ್ಯ
ಅಪ್ಪ ಅಪ್ಪಯ್ಯ

ಹೀಗೆ ಮಾಮ, ಅಕ್ಕ, ಅತ್ತೆ, ಮುಂತಾದ ರೂಪಗಳಿಗೂ ಅಯ್ಯ ಸೇರಿಸಿ ಬಳಕೆ ಮಾಡಲಾಗುತ್ತದೆ.

ಇಲ್ಲಿನ ಜನರ ಮಾತಿನಲ್ಲಿ ಕೆಲವು ಧ್ವನ್ಯಾತ್ಮಕ ವ್ಯತ್ಯಾಸಗಳೂ ಉಂಟಾಗುತ್ತವೆ. ಅಂದರೆ ‘ಚ’ ಕಾರ ‘ಸ’ ಕಾರವಾಗಿ ಬಳಕೆಯಾಗುತ್ತದೆ.

ಉದಾ : ಇಂಗ್ಲಿಶ್‌ನ Chairman ಚೇರ್‌ಮನ್ ಎನ್ನುವುದು ಆಡುಮಾತಿನಲ್ಲಿ ಸೇರ್‌ಮೀನ್ ಎಂದಾಗುತ್ತದೆ. ಅಲ್ಲದೆ

ಚೆಂಬು > ಸೆಂಬು – ಸೊಂಬು
ಚಾಪೆ > ಸ್ಯಾಪೆ
ಚೇಳು > ಸೇಳು ಎಂಬುದಾಗಿ ಬಳಸಲ್ಪಡುತ್ತವೆ
ಚಂದ್ರ > ಸಂದ್ರ
ಚೆಲುವ > ಸೆಲುವ

‘ಹ’ ಕಾರ ‘ಅ’ ಕಾರವಾಗಿ ಬಳಕೆಯಾಗುತ್ತದೆ.

ಉದಾ :

ಹಬ್ಬ > ಅಬ್ಬ
ಹೊಲೆಯರು > ವಲೇರು
ಹಾಲು > ಆಲು
ಹೊಂಚು > ವಂಚು
ಹೊರಗೆ > ವರಗೆ

ಈ ರೀತಿಯಾಗಿ ‘ಹ’ ಕಾರದ ಬಳಕೆ ಎಲ್ಲಿಯೂ ಕಂಡು ಬರುವುದಿಲ್ಲ.

ಕೂದಲು > ಕೂರ್ಲು
ಬಾಗಿಲು > ಬಾಕ್ಲು
ಪೊರ್ಕೆ > ಪಕ್ಕಿ

ಆಗಿ ಬಳಕೆಯಾಗುವುದನ್ನು ಕಾಣಬಹುದು.

‘ಶ’ ಕಾರಕ್ಕೆ ‘ಸ’ ಕಾರ ಬಳಕೆ

ಶಿವ > ಸಿವ
ಶನಿವಾರ > ಸೆನಿವಾರ
ಶುರುವಾಗುತ್ತೆ > ಸುರುವಾಗುತ್ತೆ
ಈಶ್ವರ > ಈಸ್ಪುರ

ಎಂದು ಪಾವಗಡ ಮತ್ತು ಮಧುಗಿರಿ ತಾಲೂಕಿನಲ್ಲಿ ಬಳಕೆ ಮಾಡಲಾಗುತ್ತದೆ.

ಪದಾದಿಯಲ್ಲಿ ಬರುವ ‘ವ’ ಕಾರ ಬಳಕೆಯಲ್ಲಿ ‘ಇ’ ಕಾರವಾಗಿ ಬಳಸಲ್ಪಡುತ್ತದೆ.

ಅದು ದೀರ್ಘವಾಗಿದ್ದರೆ ‘ಈ’ ಕಾರವಾಗುವುದನ್ನು ಕಾಣಬಹುದು.

ಉದಾ :

ವಿಶ್ವನಾಥ > ಇಸ್ವನಾಥ
ವೀರಣ್ಣ > ಈರಣ್ಣ
ವೀರೇಂದ್ರ > ಈರೇಂದ್ರ
ವಿರುಪಾಪುರ > ಇರುಪಾಪುರ

ಈ ಅಂಶ ಅತ್ಯಂತ ಕುತೂಹಲಕಾರಿಯಾದುದು ‘ವ’ ಧ್ವನಿಯು ಇ, ಈ ಧ್ವನಿಗಳಿಗಿಂತ ಉಚ್ಚರಿಸುವುದು ಸ್ವಲ್ಪ ಶ್ರಮದಾಯಕವಾಗಿರುವುದರಿಂದ ಈ ರೀತಿಯ ವ್ಯತ್ಯಾಸಗಳನ್ನು ಕಾಣಬಹುದು.

ಇನ್ನೊಂದು ವಿಶೇಷವೆಂದರೆ ‘ಬ’ ಕಾರ ಮತ್ತು ‘ವ’ ಕಾರ ಬರುವ ಕಡೆ ‘ಮ’ ಕಾರ ಆದೇಶವಾಗಿ ಬರುವುದನ್ನು ಕಾಣಬಹುದು.

ಉದಾ :

ಶನಿವಾರ – ಸೆಣ್ಮಾರ
ಉಂಟಾನ – ಉಮ್ಮಾನ (ಊಟ ಮಾಡೋಣ)

ತೃತಿಯಾಕ್ಷರಯುಕ್ತವಾದ ಪದ ರಚನೆಯಲ್ಲಿ ದ್ವಿತಿಯಾಕ್ಷರ ‘ರ’ ಕಾರವಿದ್ದು ಮೂರನೇ ಅಕ್ಷರ ‘ಡ’ ಅಥವಾ ‘ರ’ ಅಕ್ಷರಗಳಿದ್ದರೆ. ಅವುಗಳು ಜನರ ಆಡುಮಾತಿನಲ್ಲಿ (ಡ, ರ) ಳ ಅಥವಾ ‘ಳ’ ಕಾರ ದಿತ್ವವಾಗಿ ಬಳಕೆಯಾಗುವುದನ್ನು ಕಾಣಬಹುದು.

ಉದಾ:

ಕರಡಿ     –           ಕಳ್ಡಿ
ಜರಡಿ    –           ಜಳ್ಡಿ ಒಂದು ರೀತಿಯಾದರೆ
ಮರಳು  –           ಮಳ್ಳು
ಹೊರಳು            –           ಒಳ್ಳು
ಬೆರಳ್ಳು  –           ಬೆಳ್ಳು
ಕೊರಳ್ಳು            –           ಕೊಳ್ಳು
ಅರಳಿ     –           ಅಳ್ಳಿ
ಎರಳು    –           ಎಳ್ಟು

ಇತ್ಯಾದಿ ರೂಪಗಳಲ್ಲಿ ಪದದ ದ್ವಿತೀಯಾಕ್ಷರ ‘ರ’ ಕಾರ ಮತ್ತು ‘ಳ’ ಕಾರ ಬಂದರೆ ಅವರೆಡು ಅಕ್ಷರಗಳ ಬದಲಿಗೆ ಆಡುಮಾತಿನಲ್ಲಿ ‘ಳ’ ಕಾರ ದ್ವಿತ್ವ ಬರುವುದನ್ನು ಗಮನಿಸಬಹುದು. ಪದರಚನೆಯಲ್ಲಿ ಪರಿವೇಷಿತ ಧ್ವನಿಗಳನ್ನುಳಿದು ಬೇರೆ ವ್ಯಂಜನಗಳು ಬಂದರೆ ಈ ಮೇಲಿನ ರೀತಿಯ ಸಮರೂಪಧಾರಣೆ ನಡೆಯುವುದಿಲ್ಲ.

ಉದಾ: ಕರಿಕೆ > ಕರಿಕೆ          ಬೆರಕೆ > ಬೆರಕೆ

ಪಾದದಿಯ ಒ, ಓ ಧ್ವನಿಗಳು ‘ವ’ ಕಾರವಾಗುತ್ತವೆ. ಇಲ್ಲಿ ಒ ಮತ್ತು ವ ಉಚ್ಚಾರಣೆಯಲ್ಲಿ ಸಾಮ್ಯತೆ ಇರುವುದರಿಂದ ಇದು ಸಾಧ್ಯವಾಗುತ್ತದೆ.

ಉದಾ :

ತೋಟ > ತ್ವಾಟ
ಚೋಳ > ಜ್ವಾಳ
ಒರಗೆ > ವರ್ಗೆ
ಕೋಟಿ > ಕ್ವಾಟಿ

ಕೆಲವೆಡೆ ‘ಅ’ ಕಾರಾದಿಯಾದ ಸಂಬಂಧವಾಚಕಗಳು ‘ಯ’ ಕಾರಾದಿಯಾಗಿ ಬಳಸಲ್ಪಡುತ್ತವೆ.

ಉದಾ :

ಅಪ್ಪ > ಯಪ್ಪ
ಅಕ್ಕ > ಯಕ್ಕ
ಅಮ್ಮ > ಯಮ್ಮ

ಕೆಲವೊಂದು ಕಡೆ ‘ಏ’ ಕಾರವು ‘ಯ’ ಕಾರವಾಗಿ ಬಳಕೆಯಾಗುತ್ತದೆ.

ಉದಾ :

ಬೇಸಿಗೆ > ಬ್ಯಾಸಗೆ
ಬೇಟೆ > ಬ್ಯಾಟಿ
ಮೇಲೆ > ಮ್ಯಾಲೆ

ಇದು ‘ಏ’ ಕಾರವಿದ್ದರೆ ಮಾತ್ರ ಸಂಭವಿಸುತ್ತಿರುತ್ತದೆ. ಬೇರೆ ಕಡೆಗಳಲ್ಲಿ ಇದು ಸಾಧ್ಯವಿರುವುದಿಲ್ಲ.

ಕೆಲವೊಂದು ನಾಮಪದಗಳು ಅರ್ಧಉಚ್ಛಾರಣೆಯಾಗುವಾಗ ಸ್ತ್ರೀಲಿಂಗ ರೂಪವನ್ನು ಪಡೆಯುವುದನ್ನು ಕಾಣಬಹುದು.

ಉದಾ :

ಹನುಮಂತರಾಯ – ಹನುಮಂತಿ
ದೇವರಾಜ – ದೇವಿ
ನಟರಾಜ – ನಟಿ
ಮಂಜುನಾಥ – ಮಂಜಿ

ಕೆಲವು ಪದಗಳ ಹಂತಗಳಲ್ಲಿ ವ್ಯತ್ಯಾಸಗಳಿರುವುದನ್ನು ಕಾಣಬಹುದು.

ಉದಾ :

ಸೀರೆ      >         ಶ್ಯಾಲೆ
ಕೂದಲು >         ಕೂರ್ಲು
ಮೇಸ್ಟ್ರು >         ಮೇಶು
ಸೆಳೆ        >         ಗುಡಿಸು
ಹಾಯಿಸು           >         ಇಕ್ಕು ಎಂದು ಬಳಕೆಯಾಗುವುದನ್ನು ಕಾಣಬಹುದು. ಹಾಗೆಯೇ “ಬೇಗ ಬೇಗ” ಎಂಬ ದ್ವಿರುಕ್ತಿ ಪದಕ್ಕೆ ರಪರಪ, ಗಕ್ನ, ಸರ್ನ, ಎಂಬ ವಿವಿಧ ಪದಗಳು ಬಳಕೆಯಲ್ಲಿರುವುದನ್ನು ಕಾಣಬಹುದು.

ಕ್ರಿಯಾಪದ ಪ್ರಯೋಗಗಳು:

ಬರುತ್ತದೆ > ಬತ್ತೈತೆ, ಹಾಕಿಕೊ > ಒಯ್ಕೆ ಎಂಬ ಪದಗಳನ್ನು ಬಳಸಲಾಗುತ್ತದೆ.

ಪರಿಮಾಣ ವಾಚಕಗಳು ವಿಶಿಷ್ಟವಾಗಿ ಬಳಕೆಯಾಗುತ್ತವೆ.

ಉದಾ :

ಎಷ್ಟು > ಏಟು
ಕಡಿಮೆ > ರವಷ್ಟು > ರವಟು > ಒಸಿ
ಹೆಚ್ಚು > ಶ್ಯಾನೆ > ಬಾಳ > ಜಾಸ್ತಿ ಎಂಬುದಾಗಿ ಬಳಕೆಯಾಗುವುದನ್ನು ಕಾಣಬಹುದು.

ಸಂಖ್ಯಾವಾಚಕಗಳು :

ಒಂದು > ವಂದು
ಎರಡು > ಎಳ್ಡು
ನಾಲ್ಕು > ನಾಕು ಎಂದು ಉಚ್ಚರಿಸಲ್ಪಡುತ್ತವೆ.

ಇನ್ನು ಕೆಲವು ವಾಕ್ಯದ ಹಂತದಲ್ಲಿ ಬದಲಾವಣೆಗಳಾಗುವುದನ್ನು ಗಮನಿಸಬಹುದು.

ಉದಾ : ಅಮ್ಮಯ್ಯ ಊರ್ಗೆ ಹೊಯ್ತು. ಈ ವಾಕ್ಯದಲ್ಲಿ ಅಮ್ಮ ಪದದ ಜೊತೆಗೆ ಅಯ್ಯ ಎಂಬ ಪುಲ್ಲಿಂಗ ರೂಪವೂ ಸೇರುತ್ತದೆ. ಜೊತೆಗೆ ಕೊನೆಗೆ ‘ಹೋದಳು’ ಎಂಬ ಸ್ತ್ರೀಲಿಂಗ ರೂಪಕ್ಕೆ ಬದಲಾಗಿ ‘ಹೋಯ್ತು’ ಎಂಬ ‘ನಪುಂಸಕಲಿಂಗ’ದ ಪದ ಬಳಕೆಯಾಗುತ್ತದೆ. ಇದು ಈ ಭಾಗದ ವಿಶೇಷವಾಗಿದೆ.

ಈ ಎಲ್ಲ ಅಂಶಗಳು ತುಮಕೂರು ಜಿಲ್ಲಾ ಪರಿಸರದ ದಲಿತರ ಕನ್ನಡ ಭಾಷೆಯಾಗಿದೆ. ಇಷ್ಟೆ ಅಲ್ಲದೆ ಇನ್ನೂ ಅನೇಕ ವಿಶೇಷತೆಗಳಿರುವುದನ್ನು ಕಾಣಬಹುದು. ಜಿಲ್ಲೆಗೆ ಒಂದು ಇತಿಹಾಸ ಇರುವ ಹಾಗೆ ಇಲ್ಲಿನ ದಲಿತರ ಭಾಷೆಗು ಒಂದು ಚರಿತ್ರೆ ಇದೆ. ರಾಜ್ಯದಲ್ಲಿ ಇಂದಿನ ದಿನಮಾನಗಳಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ಜಾರಿಯಾಗಬೇಕು ಎಂದು ಒತ್ತಾಯಿಸುತ್ತಿರುವ ಈ ಸಂದರ್ಭದಲ್ಲಿ ‘ದಲಿತರು, ಭಾಷೆ ಮತ್ತು ಸಮಾಜ’ ಸಂವಾದ ಚರ್ಚೆ, ವಿಚಾರಸಂಕಿರಣಗಳು ತುಂಬಾ ಉಪಯುಕ್ತವಾಗುತ್ತವೆ. ಅಚ್ಚಗನ್ನಡ, ಮಾತೃ ಭಾಷೆಯ ಶಿಕ್ಷಣ ಎಂದರೇನು, ಇವನ್ನು ನಿಗದಿಪಡಿಸುವ ಮಾನದಂಡಗಳೇನು? ಎಂಬುದೇ ಅತ್ಯಂತ ಸಂಕಿರ್ಣ ವಿಚಾರ. ಇವುಗಳ ಬಗ್ಗೆ ಚರ್ಚೆಯಾಗಬೇಕಾಗಿದೆ. ಏಕೆಂದರೆ ಪ್ರಮಾಣ ಕನ್ನಡದ ಶಿಕ್ಷಣವನ್ನು ಮಾತೃಭಾಷಾ ಶಿಕ್ಷಣ ಎಂದು ತುಂಬಾ ಸರಳೀಕರಣಗೊಳಿಸಿ ಹೇಳಲಾಗುತ್ತದೆ. ಇದು ಅಲ್ಪಸಂಖ್ಯಾತರು ಆರೋಪಿಸಿಕೊಳ್ಳುತ್ತಿರುವ ಅತಿರೇಕದ ನಿರ್ಧಾರವೆಂದೇ ಹೇಳಬೇಕಾಗುತ್ತದೆ. ಒಂದು ವೇಳೆ ಅವರು ತಿಳಿದುಕೊಂಡಂತೆ ಮಾತೃಭಾಷೆಯಲ್ಲಿ ಶಿಕ್ಷಣ ಜಾರಿಯಾದರೆ ಕರ್ನಾಟಕದಲ್ಲಿ ದಲಿತರು, ಹವ್ಯಕರು, ಲಂಬಾಣಿಗಳು, ಮುಂತಾದವರಿದ್ದಾರೆ. ಆಗ ಅವರ ಚಿಂತನೆ ಅರ್ಥಹೀನವಾಗುತ್ತದೆ. ಮಾತೃಭಾಷೆ ಎಂದರೆ ತಾಯಿಯಿಂದ ಕಲಿತ ಭಾಷೆಯೆ, ಪರಿಸರದಿಂದ ಕಲಿತ ಭಾಷೆಯೇ, ಶಾಲಾ ವಾತಾವರಣದಲ್ಲಿ ಕಲಿತ ಭಾಷೆಯೇ ಅಥವಾ ಉನ್ನತ ಶಿಕ್ಷಣದಲ್ಲಿ ತಿಳಿದುಕೊಂಡು ಬಳಸುವ ಕನ್ನಡವೇ ಇದರ ಬಗ್ಗೆ ಪೂರ್ವಾಗ್ರಹದವಿಲ್ಲದ ಚರ್ಚೆ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಇಂತಹ ವಿಚಾರಸಂಕಿರಣ ತುಂಬಾ ಉಪಯುಕ್ತ. ಸ್ಥಳೀಯ ಭಾಷಾ ಚರ್ಚೆಯ ವಿಚಾರದಲ್ಲಿ ಈ ಕಾರ್ಯ ಒಂದು ಅಡಿಗಲ್ಲು ಹಾಗೂ ಒಂದು ಮೈಲಿಗಲ್ಲು ಎಂದೇ ಹೇಳಬೇಕಾಗುತ್ತದೆ.