ಭಾರತ ದೇಶ ಪ್ರಪಂಚದ ಇನ್ನಿತರ ದೇಶಗಳಂತಲ್ಲ. ಇದು ಬಹುಮುಖಿ ಮತ್ತು ಬಹುಸಂಸ್ಕೃತಿಗಳಿಂದ ರೂಪುಗೊಂಡ ಸಮಾಜವಾಗಿದೆಯಲ್ಲದೆ ಬಹುಭಾಷಾ ಪರಿಸರವೂ ಆಗಿದೆ. ಇಲ್ಲಿನ ಸಮಾಜವನ್ನು ಧರ್ಮ, ಜಾತಿ, ಭಾಷೆ, ಸಂಸ್ಕೃತಿ ಮತ್ತು ಪ್ರಾದೇಶಿಕವಾಗಿ ವಿಭಾಗಿಸಿ ನೋಡಲು ಸಾಧ್ಯವಿದೆ. ಭಾರತದಲ್ಲಿ ನೂರಕ್ಕೂ ಹೆಚ್ಚು ಭಾಷೆಗಳು ಚಲಾವಣೆಯಲ್ಲಿವೆ. ಜೊತೆಗೆ ನೂರಾರು ಬುಡಕಟ್ಟುಗಳಿವೆ. ಈ ಬುಡಕಟ್ಟುಗಳೂ ತಮ್ಮದೇ ಭಿನ್ನವಾದ ಸಂಸ್ಕೃತಿಯನ್ನು ಹೊಂದಿವೆ. ಹೀಗೆ ಭಿನ್ನಭಿನ್ನ ಧರ್ಮ, ಸಂಸ್ಕೃತಿಗಳಿಂದ ಕೂಡಿದ ಜನರು ಭಿನ್ನಭಿನ್ನವಾದ ಭಾಷೆಯನ್ನು ಬಳಸುತ್ತಾರೆ. ಹೀಗೆ ಬೇರೆ ಬೇರೆ ಭಾಷೆಗಳನ್ನು ಬಳಸುವ ಸಮುದಾಯಗಳು, ಬುಡಕಟ್ಟುಗಳು ವಿಶಾಲ ಕರ್ನಾಟಕದಲ್ಲಿ ಚದುರಿ ಹೋಗಿರುವುದರಿಂದ ಕಾಲಾಂತರದಲ್ಲಿ ಒಂದೇ ಕನ್ನಡ ಹಲವು ಕನ್ನಡಗಳಾಗಿ ಮಾರ್ಪಟ್ಟಿವೆ.

ಕನ್ನಡ ಭಾಷೆಯನ್ನೇ ಕುರಿತು ಮಾತನಾಡುವುದಾದರೆ ಉತ್ತರದ ಬೀದರ್ ಜಿಲ್ಲೆಯಿಂದ ಹಿಡಿದು ದಕ್ಷಿಣದ ಚಾಮರಾಜನಗರ ಜಿಲ್ಲೆಯವರೆಗೆ, ಪೂರ್ವದ ಬಳ್ಳಾರಿ, ರಾಯಚೂರು ಜಿಲ್ಲೆಗಳಿಂದ ಹಿಡಿದು ಪಶ್ಚಿಮದ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳವರೆಗೆ ಕನ್ನಡ ಭಾಷೆಯ ಬಳಕೆ ಇದೆ. ಎಲ್ಲರೂ ತಾವು ಮಾತನಾಡುವ ಭಾಷೆ ಕನ್ನಡ ಎಂತಲೇ ಹೇಳುತ್ತಾರೆ. ಆದರೆ ಉತ್ತರ ಬೀದರ್ ಕನ್ನಡಕ್ಕೂ, ದಕ್ಷಿಣದ ಚಾಮರಾಜನಗರ ಜಿಲ್ಲೆಯ ಕನ್ನಡಕ್ಕೂ ಸ್ಪಷ್ಟವಾದ ವ್ಯತ್ಯಾಸಗಳಿವೆ. ಹಾಗೆಯೇ ಪೂರ್ವದ ಬಳ್ಳಾರಿ ಜಿಲ್ಲೆಯ ಕನ್ನಡಕ್ಕೂ ಪಶ್ಚಿಮದ ಉಡುಪಿ ಜಿಲ್ಲೆಯ ಕನ್ನಡಕ್ಕೂ ಇದೇ ರೀತಿಯ ವ್ಯತ್ಯಾಸವನ್ನು ಕಾಣುತ್ತೇವೆ. ಈ ವ್ಯತ್ಯಾಸವನ್ನು ಪ್ರಾದೇಶಿಕ ಭಾಷೆಗಳೆಂದು ಗುರುತಿಸುತ್ತೇವೆ. ಹೀಗೆ ಪ್ರಾದೇಶಿಕ ಪ್ರಭೇದಗಳು ಉಂಟಾಗಲು ಮುಖ್ಯವಾಗಿ ಭೌಗೋಳಿಕವಾದ ಕಾರಣಗಳನ್ನು ಹೇಳಲಾಗುತ್ತದೆ. ಭೌಗೋಳಿಕವಾಗಿ ಕನ್ನಡ ಮಾತನಾಡುವ ಭಾಷಿಕರ ನಡುವೆ ಸಂಪರ್ಕ ಕಡಿಮೆಯಾಗಿ ಕಾಲಾಂತರದಲ್ಲಿ ಇಂಥ ಪ್ರಭೇದಗಳು ಉಂಟಾಗುತ್ತವೆ. ಉದಾಹರಣೆಗೆ ಒಂದು ಪ್ರದೇಶದ ಕನ್ನಡ ಭಾಷಿಕರ ಮತ್ತೊಂದು ಪ್ರದೇಶದ ಕನ್ನಡ ಭಾಷಿಕರ ನಡುವೆ ಗುಡ್ಡಗಾಡು, ದೊಡ್ಡ ದೊಡ್ಡ ನದಿಗಳು, ದಟ್ಟವಾದ ಕಾಡು, ಮರುಭೂಮಿಗಳು ಇದ್ದಾಗ ಆ ಜನರ ನಡುವಿನ ಸಂಪರ್ಕ ಬಹುತೇಕ ಕಡಿಮೆಯಾಗಿ ಇಂಥ ಪ್ರಭೇದಗಳು ಉಂಟಾಗಿವೆ. ತುಂಗಭದ್ರ, ಕೃಷ್ಣ, ಕಾವೇರಿ ನದಿಗಳ ಆಚೆ ಈಚೆ, ಮಂಗಳೂರು ಕಡತ ತೀರ ಮತ್ತು ಘಟ್ಟಗಳ ಮೇಲಿನ ಕನ್ನಡದ ನಡುವೆ ಇಂಥ ಪ್ರಭೇದಗಳು ಇರುವುದು ನಮ್ಮ ಕಣ್ಣ ಮುಂದಿದೆ.

ಭಾರತದಂಥ ಬಹುಮುಖಿ, ಬಹುಸಂಸ್ಕೃತಿ ಸಮಾಜದಲ್ಲಿ ಒಂದೇ ಭಾಷಿಕರ ನಡುವಿನ ಸಂಪರ್ಕ ನಿಯಂತ್ರಣ ನೈಸರ್ಗಿಕ ಕಾರಣಗಳಾದ ಬೆಟ್ಟಗುಡ್ಡ, ನದಿ, ಕಾಡುಗಳಷ್ಟೇ ಆಗದೆ ಜಾತಿ, ಧರ್ಮ, ವರ್ಗ, ವರ್ಣವೂ ಕಾರಣವಾಗಿದೆ. ಹಾಗಾಗಿ ಕನ್ನಡ ಭಾಷೆಯನ್ನು ಪ್ರಾದೇಶಿಕ ಪ್ರಭೇದಗಳಷ್ಟೇ ಅಲ್ಲದೆ ಒಂದೇ ಸ್ಥಳದಲ್ಲಿ ವಾಸಿಸುವ ಒಂದೇ ಭಾಷಿಕರ ನಡುವೆಯೂ ಇಂಥ ಪ್ರಭೇದಗಳನ್ನು ಗುರುತಿಸಲು ಸಾಧ್ಯವಿದೆ. ಈ ಕಾರಣದಿಂದಲೇ ಗುಂಫರ್ಜ ತನ್ನ ಒಂದು ಲೇಖನದಲ್ಲಿ ಭಾರತದ ಭಾಷೆಯೊಳಗಿನ ಭಾಷಾ ಪ್ರಭೇದಗಳ ಅಂತರವನ್ನು ಪ್ರಪಂಚದ ಇನ್ನಿತರ ಭೌಗೋಳಿಕ ಭಾಷಾ ಪ್ರಭೇದಗಳಂತಲ್ಲದೆ ಸಾಮಾಜಿಕ ದೃಷ್ಟಿಕೋನದಿಂದ ನೋಡುವುದು ಒಳ್ಳೆಯದು. ಒಂದೇ ಸ್ಥಳದಲ್ಲಿ ಒಂದೇ ಭಾಷೆಯನ್ನು ಮಾತನಾಡಿದರೂ ಸಾಮಾಜಿಕ ವರ್ಗಗಳಲ್ಲಿ ಗುರುತಿಸಬಹುದಾದಷ್ಟು ಭಾಷಾ ಪ್ರಭೇದಗಳಿಗೆ ಸ್ಪಷ್ಟ ಉದಾಹರಣೆಗಳನ್ನು ಭಾರತದ ಭಾಷೆಗಳಲ್ಲಿ ಕಾಣಬಹುದು ಎಂದು ಹೇಳಿರುವುದು ಸರಿಯಾಗೇ ಇದೆ.

ಕನ್ನಡ ಭಾಷೆಯನ್ನು ಕೂಡ ಪ್ರಾದೇಶಿಕ ಪ್ರಭೇದಗಳೆಂದು ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಧಾರವಾಡ ಕನ್ನಡ, ಗುಲಬರ್ಗಾ ಕನ್ನಡ ಎಂದು ಗುರುತಿಸುವ ಹಾಗೆ ರಾಯಚೂರು ಕನ್ನಡ ಎಂತಲೂ ಗುರುತಿಸಬಹುದು. ರಾಯಚೂರು ಪ್ರದೇಶದ ಕನ್ನಡವನ್ನು ಪ್ರಾದೇಶಿಕ ಪ್ರಭೇದವೆಂದು ಗುರುತಿಸಿದ ಕೂಡಲೇ ಈ ಪ್ರದೇಶದ ಕನ್ನಡವೆಲ್ಲ ಒಂದೇ ಪ್ರಭೇದ ಎಂದು ಹೇಳಲು ಬರುವುದಿಲ್ಲ. ರಾಯಚೂರು ಪ್ರದೇಶದ ಕನ್ನಡವನ್ನೇ ಪ್ರಾದೇಶಿಕವಾಗಿ ಮತ್ತೆ ವಿಭಾಗಿಸಿ ನೋಡಲು ಸಾಧ್ಯವಿದೆ. ಹಾಗೆಯೇ ಈ ಪ್ರದೇಶದಲ್ಲಿ ಇರುವ ಜಾತಿ, ಧರ್ಮ ಮತ್ತು ವರ್ಗಗಳ ಹಿನ್ನೆಲೆಯಲ್ಲಿ ಮತ್ತೆ ಭಿನ್ನ ರೂಪ ಇರುವುದನ್ನು ನೋಡಲು ಸಾಧ್ಯವಿದೆ. ರಾಯಚೂರು ಪ್ರದೇಶದ ಬ್ರಾಹ್ಮಣರು, ಲಿಂಗಾಯತರು, ಲಿಂಗಾಯತೇತರರು ಮತ್ತು ದಲಿತರು ಬಳಸುವ ಕನ್ನಡಗಳ ಮಧ್ಯ ಸ್ಪಷ್ಟ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಹೀಗೆ ವ್ಯತ್ಯಾಸವಿರಲು ಹಲವಾರು ಕಾರಣಗಳಿವೆ. ಪ್ರಾದೇಶಿಕವಾಗಿ ಬೆಟ್ಟಗುಡ್ಡಗಳು, ನದಿಗಳು, ಕಾಡುಗಳು ಭಾಷಿಕ ಸಂಪರ್ಕ ಕಡಿದು ಹಾಕಿದಂತೆ ಇಲ್ಲಿನ ಜಾತಿ, ಧರ್ಮ, ಅಂತಸ್ತುಗಳು ಕೂಡ ಎರಡು ಸಮುದಾಯಗಳ ನಡುವಿನ ಸಂಪರ್ಕವನ್ನು ನಿಯಂತ್ರಿಸಿವೆ. ಹಾಗಾಗಿ ಬ್ರಾಹ್ಮಣ, ಲಿಂಗಾಯತ, ಲಿಂಗಾಯತೇತರ ಮತ್ತು ದಲಿತ ಸಮುದಾಯಗಳ ಕನ್ನಡದಲ್ಲಿ ಸ್ಪಷ್ಟ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಈ ವ್ಯತ್ಯಾಸಗಳಿಗೆ ನೈಸರ್ಗಿಕ ತಡೆಗೋಡೆಗಳು ಕಾರಣವಲ್ಲ. ಬದಲಿಗೆ ಸಾಮಾಜಿಕ ಕಾರಣಗಳು ಈ ವ್ಯತ್ಯಾಸಕ್ಕೆ ಮುಖ್ಯ ಕಾರಣ. ಈ ವ್ಯತ್ಯಾಸವನ್ನೆ ಸಾಮಾಜಿಕ ಪ್ರಭೇದಗಳು ಎಂತಲೂ ಕರೆಯಬಹುದು.

ಯಾವುದೇ ಒಂದು ಪ್ರದೇಶದ ಭಾಷಾ ವ್ಯತ್ಯಾಸಕ್ಕೆ ಆ ಪ್ರದೇಶದ ರಾಜಕೀಯ, ಭಾಷಿಕ ಮತ್ತು ಸಾಮಾಜಿಕ ಸನ್ನಿವೇಶವೂ ಕಾರಣವಾಗುತ್ತದೆ. ಉದಾಹರಣೆಗೆ ರಾಯಚೂರು ಜಿಲ್ಲೆಯ ರಾಜಕೀಯ ಇತಿಹಾಸವನ್ನೇ ಗಮನಿಸಿದರೆ ನೂರಾರು ವರ್ಷಗಳ ಕಾಲ ಈ ಪ್ರದೇಶ ಹೈದರಾಬಾದಿನ ನಿಜಾಮರ ಆಳ್ವಿಕೆಗೆ ಒಳಗಾಗಿದ್ದರಿಂದ ಇಲ್ಲಿನ ಕನ್ನಡದ ಮೇಲೆ ಉರ್ದುವಿನ ಪ್ರಭಾವ ಆಗಿರುವುದು ನೋಡಬಹುದು. ಹಾಗೆಯೇ ರಾಯಚೂರು ಜಿಲ್ಲೆಯ ಬಹುಭಾಗ ಆಂಧ್ರಪ್ರದೇಶದ ಗಡಿಯಾಗಿರುವುದರಿಂದ ಸಹಜವಾಗಿಯೇ ತೆಲುಗು ಭಾಷೆಯ ಕೊಡುಕೊಳೆ ನಡೆದಿದೆ. ಆದ್ದರಿಂದ ಈ ಪ್ರದೇಶದ ಕನ್ನಡದಲ್ಲಿ ತೆಲುಗು ಭಾಷೆಯ ಅನೇಕ ಪದಗಳನ್ನು ಕನ್ನಡ ಪದಗಳೆಂಬಂತೆ ಬಳಸುವುದು ಸಹಜವಾಗಿದೆ. ಈ ಸ್ವೀಕರಣ ಇಡೀ ಪ್ರದೇಶದಲ್ಲಿ ಇದ್ದಂತೆ ಕಂಡರೂ ಬ್ರಾಹ್ಮಣ, ಲಿಂಗಾಯತರ ಮನೆಗೆ ದಲಿತರ ಮನೆಗೆ ಪ್ರವೇಶಿಸಿದಷ್ಟು ಪ್ರವೇಶಿಸಿಲ್ಲ.

ತುಂಗಭದ್ರ ಆಣೆಕಟ್ಟು ನಿರ್ಮಾಣವಾಗಿ ರಾಯಚೂರು ಭಾಗದಲ್ಲಿ ನೀರಾವರಿ ಪ್ರದೇಶವಾದ ಸ್ಥಳಗಳಲ್ಲಿ ತೆಲುಗು ಭಾಷಿಕರು ಹೆಚ್ಚಾಗಿ ವಲಸೆ ಬಂದಿರುವುದರಿಂದ ಅಂಥ ಜಾಗಗಳಲ್ಲಿ ನುಡಿ ಜಿಗಿತ ಮತ್ತು ನುಡಿ ಬೆರೆತಗಳು ಸಹಜವಾಗಿ ಕಂಡು ಬರುತ್ತದೆ. ಹೀಗೆ ನುಡಿ ಜಿಗಿತ ಮತ್ತು ನುಡಿ ಬೆರತ ಕಾಣುವುದು ಕೂಡ ದಲಿತರಲ್ಲಿ ಹೆಚ್ಚು. ಏಕೆಂದರೆ ಕೂಲಿ ಕೆಲಸಗಳಿಗಾಗಿ ತೆಲುಗು ಭಾಷಿಕರೊಂದಿಗೆ ಇವರು ಹೆಚ್ಚಿನ ಸಮಯ ಕಳೆಯಬೇಕಾಗಿರುವುದರಿಂದ.

ಉರ್ದು ಮತ್ತು ತೆಲುಗು ಭಾಷೆಯ ಪ್ರಭಾವಗಳ ಜೊತೆಗೆ ಶಿಕ್ಷಣ ಮತ್ತು ಮಾಧ್ಯಮಗಳ ಪ್ರಭಾವದಿಂದ ದಲಿತರ ಕನ್ನಡದಲ್ಲಿ ಇಂಗ್ಲಿಶ್ ಪದಗಳ ಬಳಕೆ ಕೂಡ ಹೆಚ್ಚಾಗಿದೆ.

ಪ್ರಾದೇಶಿಕವಾಗಿ ರಾಯಚೂರು ಪ್ರದೇಶದಲ್ಲಿ ಉರ್ದು, ತೆಲುಗು ಮತ್ತು ಇಂಗ್ಲಿಶ್ ಭಾಷೆಯ ಪ್ರಭಾವ ಇಡೀ ಪ್ರದೇಶದ ಕನ್ನಡದ ಮೇಲೆ ಕಂಡರು ಜಾತಿ, ಧರ್ಮಗಳ ಹಿನ್ನೆಲೆಯಲ್ಲಿ ನಿರ್ಮಾಣವಾದ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಿದೆ.

ಯಾವುದೇ ಒಂದು ಸಮುದಾಯ ತಾನು ದಿನನಿತ್ಯ ಬದುಕುವ ಕ್ರಮಕ್ಕನುಗುಣವಾಗಿ ಭಾಷೆಯನ್ನು ಬಳಸುತ್ತಾರೆ. ಹಾಗಾಗಿ ಆ ಸಮುದಾಯಗಳು ಸಮಾಜದಲ್ಲಿ ಪ್ರತ್ಯೇಕವಾಗಿ ಬದುಕುತ್ತಿದ್ದಂತೆ ಭಾಷೆಯನ್ನು ಬಳಸುತ್ತಿರುತ್ತವೆ. ಆದ್ದರಿಂದ ಆಯಾ ಸಮುದಾಯಗಳು ತಮಗೇ ಗೊತ್ತಿಲ್ಲದಂತೆ ಪ್ರತ್ಯೇಕವಾದ ಪದಕೋಶವನ್ನೇ ನಿರ್ಮಾಣ ಮಾಡಿಕೊಂಡಿರುತ್ತವೆ.

ಒಂದೇ ಸ್ಥಳದಲ್ಲಿ ವಾಸಿಸುವ ಬ್ರಾಹ್ಮಣರು ಬಳಸುವ ಕನ್ನಡ, ಲಿಂಗಾಯತರು ಬಳಸುವ ಕನ್ನಡ ಮತ್ತು ಲಿಂಗಾಯತೇತರರು ಬಳಸುವ ಕನ್ನಡ ಮತ್ತು ದಲಿತರು ಬಳಸುವ ಕನ್ನಡಗಳಲ್ಲಿ ಈ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಿದೆ. ಉದಾ:- ದಿನನಿತ್ಯ ಕಾಣುವ ಆಕಾಶದಲ್ಲಿನ ಒಂದು. ನಕ್ಷತ್ರ ಪುಂಜವನ್ನು ಬ್ರಾಹ್ಮಣ ಸಮುದಾಯದವರು ಸಪ್ತರ್ಷಿ ಮಂಡಲ ಎಂದು ಕರೆಯುತ್ತಾರೆ ಎನ್ನೋಣ. ಅದೇ ನಕ್ಷತ್ರ ಪುಂಜವನ್ನು ರೈತರು ಕೃಷಿಗೆ ಸಂಬಂಧಿಸಿದ ಪದಕೋಶದ ಹಿನ್ನೆಲೆಯಲ್ಲಿ ಕೂರಿಗೆ ತಾಳು ಎನ್ನಬಹುದು. ಅದೇ ನಕ್ಷತ್ರ ಪುಂಜವನ್ನು ದಲಿತ ಸಮುದಾಯದವರು ತೊಗಲು ಮಂಚ ಎನ್ನಬಹುದು. ಈ ಮೂರು ಸಮುದಾಯದವರು ಅಪ್ಪಿತಪ್ಪಿಯೂ ಬೇರೊಬ್ಬರ ಬಳಕೆಯ ಪದವನ್ನು ಬಳಸಲಾರರು. ಏಕೆಂದರೆ ಬ್ರಾಹ್ಮಣ ಸಮುದಾಯದವರು ತೊಗಲು ಮಂಚ ಎನ್ನುವ ಪದವೇ ಬಳಸುವುದು ಅನಿಷ್ಟ ಎನ್ನಬಹುದು ಅಥವಾ ರೈತರ ಉಪಕರಣ ಅವರಿಗೆ ಅಸಹಜ ಬಳಕೆ ಎನಿಸಬಹುದು. ಹಾಗಾಗಿ ಆಯಾ ಸಮುದಾಯಗಳಲ್ಲಿ ಅವರು ದಿನನಿತ್ಯ ಬಳಸುವ ಪದಗಳು, ಕ್ರಿಯೆಗನುಗುಣವಾಗಿ ಪದಗಳು ರೂಪುಗೊಂಡಿರುವುದರಿಂದ ಬ್ರಾಹ್ಮಣರ ಕನ್ನಡ, ಲಿಂಗಾಯತರ ಕನ್ನಡ, ಲಿಂಗಾಯತೇತರರ ಕನ್ನಡ ಮತ್ತು ದಲಿತರ ಕನ್ನಡದಲ್ಲಿರುವ ವ್ಯತ್ಯಾಸಗಳನ್ನು ಮುಖ್ಯವಾಗಿ ಈ ಕೆಳಗೆ ಸೂಚಿಸಿದ ಮೂರು ಹಂತಗಳಲ್ಲಿ ಗಮನಿಸಬಹುದು.

೧. ವರ್ಣ ಭಿನ್ನತೆ

೨. ವ್ಯಾಕರಣ ಭಿನ್ನತೆ.

೩. ಶಬ್ದಕೋಶದ ಭಿನ್ನತೆ

ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಯಲ್ಲಿ ಬಳಕೆಯಾಗುವ ವರ್ಣ ಭಿನ್ನತೆಗಳು ಈ ಕೆಳಗಿನಂತೆ ಕಂಡು ಬಂದಿವೆ.

. ವರ್ಣ ಭಿನ್ನತೆ

ದಕ್ಷಿಣ ಕರ್ನಾಟಕದ ಭಾಷೆಗೂ ಉತ್ತರ ಕರ್ನಾಟಕದ ಭಾಷೆಗೂ ಮುಖ್ಯವಾದ ವ್ಯತ್ಯಾಸವನ್ನು ಗುರುತಿಸುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಆನೆ ಎಂದಿದ್ದರೆ ಉತ್ತರ ಕರ್ನಾಟಕದಲ್ಲಿ ಆನಿ ಎಂದಾಗುತ್ತದೆ. ಇಲ್ಲಿ ಪದಾಂತ್ಯದಲ್ಲಿ ಇ ಕಾರಾಂತರವಾಗಿ ಮಾರ್ಪಟ್ಟಿದೆ. ಈ ಬಗೆಯ ವ್ಯತ್ಯಾಸಗಳು ರಾಯಚೂರು ಜಿಲ್ಲೆಯಲ್ಲಿ ಸಾಮಾಜಿಕವಾಗಿ ನೋಡಬಹುದು. ಉದಾ:- ಮೇಲ್ವರ್ಗದ ಲಿಂಗಾಯತ ಸಮುದಾಯದಲ್ಲಿ ಸ್ಪೆಷಲ್, ಪದ ಲಿಂಗಾಯೇತರ ಭಾಷಿಕರಲ್ಲಿ ಫೇಸಲ್ ಎಂದಾದರೆ ದಲಿತ ಕನ್ನಡದಲ್ಲಿ ಫೇಸಲ್ಲು ಎಂದಾಗುತ್ತದೆ. ಈ ಬಗೆಯ ಅನೇಕ ವ್ಯತ್ಯಾಸಗಳನ್ನು ನೋಡಬಹುದು. ಇದಕ್ಕೆ ಭಾಷಿಕ ಕಾರಣಗಳು ನೀಡುವುದರ ಜೊತೆಗೆ ಸಾಮಾಜಿಕ ಕಾರಣಗಳನ್ನು ಕೂಡ ನೀಡಲು ಸಾಧ್ಯವಿದೆ.

ಇಂಗ್ಲಿಶಿನಿಂದ ಬಂದ ಫ, ಝ ರೂಪಗಳು ವಿಲಿಯಂ ಬ್ರೈಟ್ ಅವರು ಮೈಸೂರು ಕನ್ನಡದಲ್ಲಿ ಕಂಡ ವ್ಯತ್ಯಾಗಳಂತೆಯೇ ಕಂಡು ಬಂದಿವೆ.

ಶಿಷ್ಠ ಕನ್ನಡ ಲಿಂಗಾಯತರ ಕನ್ನಡ ಲಿಂಗಾಯೇತರ ಕನ್ನಡ ದಲಿತರ ಕನ್ನಡ
ಕಾಫಿ ಕಾಫಿ ಕಾಪಿ ಕಾಪಿ
ಆಫೀಸ್ ಆಪೀಸು ಹಾಪೀಸು ಹಾಪೀಸು
ಫೀಜ್ ಪೀಜ್ ಫೀಸು ಫೀಸು
ಡಜನ್ ಡಜನ ಡಜೇನು ಡಜೇನ್

 

ಇತರೆ ಇಂಗ್ಲಿಶ್ ಪದಗಳು

ಸ್ಪೇಷಲ್ ಇಸ್ಪೇಷಲ್ ಫೇಸಲ್ ಫೇಸಲ್ಲು
ಡ್ಯೂಟಿ ದ್ಯೂಟಿ ಡೂಟಿ ದೂಟಿ
ಬಂಗ್ಲೋ ಬಂಗ್ಲಾ ಬಂಗಲ್ಯಾ ಬಂಗ್ಲ್ಯಾ

 

ಉರ್ದು ಅಥವಾ ಹಿಂದಿಯಿಂದ ಬಂದ ಪದಗಳು

ಶಿಷ್ಠ ಕನ್ನಡ ಲಿಂಗಾಯತರ ಕನ್ನಡ ಲಿಂಗಾಯೇತರ ಕನ್ನಡ ದಲಿತರ ಕನ್ನಡ
ಜಬರ್ದಸ್ತ್ ಜಬರ್ ದಸ್ತ್ ಜಬುರ್‌ದಸ್ತಿ ಜಬುರ್ದಸ್ತಿ
ಒಂಚಾಲೀಸ್ ಒಂತಾಲೀಸ್ ಒಂತಾಲೀಸ್ / ಒಂದು ಕಮ್ ಚಾಳೀಸು ಒಂದ್ ಕಮ್

 

ಸಂಸ್ಕೃತ ಪದಗಳು

ಶಿಷ್ಠ ಕನ್ನಡ ಲಿಂಗಾಯತರ ಕನ್ನಡ ಲಿಂಗಾಯೇತರ ಕನ್ನಡ ದಲಿತರ ಕನ್ನಡ
ದೇಶ ದೇಶ್ಯಾ ದೇಸ್ಯಾ ದೇಸ್ಯಾ
ಕಷ್ಟ ಕಸ್ಟ ಕಟ್ಟ ಖಟ್

 

ದಲಿತರ ಕನ್ನಡದಲ್ಲಿ ಅಲ್ಪ ಪ್ರಾಣಗಳ ಪದಗಳು ಮಹಾಪ್ರಾಣಗಳಾಗಿ ಬಳಕೆಯಾಗಿರುವುದಕ್ಕೆ ಉದಾಹರಣೆಗಳು

ಶಿಷ್ಠ ಕನ್ನಡ ಲಿಂಗಾಯತರ ಕನ್ನಡ ಲಿಂಗಾಯತೇತರ ಕನ್ನಡ ದಲಿತರ ಕನ್ನಡ
ಗೋಡೆ ಗ್ವಾಡಿ ಗ್ವಾಡಿ ಘ್ವಾಡಿ
ಊಟ ಮಾಡೋಣ ಉಂಬೋಣ ಉಂಬರಿ ಉಂಭರಿ
ಕೆಂಪು ಕೆಂಪ್ ಖೆಂಪು ಖ್ಯಾಂಪಂದು
ಬೇಡ ಬ್ಯಾಡ ಭ್ಯಾಡ ಭ್ಯಾಡ್
ಕಪ್ಪು ಕರಿದು ಖರ್ರ‍ಂದು ಖರ್ರ‍ಂದು
ಬೊಂಬೆ / ಗೊಂಬೆ ಗೊಂಬಿ ಘೊಂಬಿ ಘೊಂಭಿ

 

ಗ ಕಾರ ಕ ಕಾರವಾಗಿ ಬಳಕೆಯಾಗುವ ಪದಗಳು

ಶಿಷ್ಠ ಕನ್ನಡ ಲಿಂಗಾಯತರ ಕನ್ನಡ ಲಿಂಗಾಯತೇತರ ಕನ್ನಡ ದಲಿತರ ಕನ್ನಡ
ಗುಂಪೆ ಕುಂಪಿ ಖುಂಪಿ ಖುಂಫಿ
ಘಮ್ಮನೆ ಖಮ್ಮನ್ ಖಮ್ಮಗ ಖಮ್ಮಗ್
ನೆಟ್ಟಗೆ ನೆಟ್ಟಗ್ ನಿಟ್ಟಗ್ ನಿಟ್ಟಕ್
ಮಲಗು/ಮಲಗಿಕೊ ಮೊಕೊ ಮೊಕೊ ಮಕ
       

 

ಅಂಕಿತ ನಾಮಗಳನ್ನು ಉಚ್ಛರಿಸುವಾಗ ವ್ಯಂಜನಗಳನ್ನು ಬಿಟ್ಟು ಸ್ವರದಿಂದ ಆರಂಭಿಸುವುದು

ಶಿಷ್ಠ ಕನ್ನಡ ಲಿಂಗಾಯತರ ಕನ್ನಡ ಲಿಂಗಾಯತೇತರ ಕನ್ನಡ ದಲಿತರ ಕನ್ನಡ
ವೆಂಕಟೇಶ ಯಂಕಟೇಶ ಎಂಕಟೇಸ ಎಂಕ್ಟೇಸ್
ವಿಶ್ವನಾಥ ಇಸ್ಸನಾತ್ ಇಸನಾತ್ ಇಸ್ನಾತ್

 

ಉಚ್ಛಾರಣೆಯಲ್ಲಿ ಭಿನ್ನತೆ ಇರುವ ಇತರೆ ಪದಗಳು

ಶಿಷ್ಠ ಕನ್ನಡ ಲಿಂಗಾಯತರ ಕನ್ನಡ ಲಿಂಗಾಯತೇತರ ಕನ್ನಡ ದಲಿತರ ಕನ್ನಡ
ಜಾಲಿ ವರ ಬಬಲಿ ಗಿಡ ಬಬ್ಲಿ ಗಿಡ ಬೊಬ್ಲಿ ಗಿಡ
ತಪ್ಪಲು/ಸೊಪ್ಪು ತಪ್ಲು ತಾಪ್ಪುಲ್ ತ್ವೊಪ್ಪುಲ್
ಬಾವಿ ಭಾಂವಿ ಭಾಯಿ ಭಾಂಯಿ
ಬೆರಳು ಬೆಳ್ಳ ಬೆಳ್ಳ ಬೊಳ್ಳ
ಬೆಳ್ಳುಳ್ಳಿ ಬಳ್ಳೊಳ್ಳಿ ಬೆಳೊಳಿ  ಬೆಳ್ಗಡ್ಡಿ
ತಂಬಿಗೆ ತಂಬ್ಗಿ ಥೆಮಿಗಿ/ಥೆಮ್ಗಿ ಥೆಮ್ಗಿ

 

ವಿಭಕ್ತಿ ಪ್ರತ್ಯಯಗಳು

ವಿಭಕ್ತಿ ಶಿಷ್ಠ ಲಿಂಗಾಯತರ ಲಿಂಗಾಯತೇತರ ದಲಿತರ
೧. ಪ್ರಥಮ ವಿಭಕ್ತಿ ಮನೆ ಮನಿ ಮನಿ ಮನಿ
೨. ದ್ವಿತೀಯ ವಿಭಕ್ತಿ ಮನೆಯನ್ನು ಮನೀನ  ಮನೀನ್ ಮನೀನ್
೩. ತೃತೀಯ ವಿಭಕ್ತಿ ಮನೆಯಿಂದ ಮನೀನಿಂದ ಮನಿದಿಂದ ಮನಿಲಿಂದ
೪. ಚತುರ್ಥಿ ವಿಭಕ್ತಿ ಮನೆಗೆ ಮನೀಗ್ ಮನೀಕ್ ಮೀನಕ್
೫. ಪಂಚಮಿ ವಿಭಕ್ತಿ ಮನೆಯ ದೆಸೆಯಿಂದ ಮನಿದಸಿಂದ ಮನಿದ್‌ದಸಿಂದ ಮನಿಕಡೀಂದ್
೬. ಷಷ್ಠಿ ವಿಭಕ್ತಿ ಮನೆಯ ಮನಿದ ಮನಿಂದ ಮನಿಂದ
೭. ಸಪ್ತಮಿ ವಿಭಕ್ತಿ ಮನೆಯಲ್ಲಿ ಮನಿಯೊಲಗ ಮನಿದೊಳಗೆ ಮನಿದಾಗ

ಇವುಗಳ ಜೊತೆಗೆ ತೃತೀಯ ವಿಭಕ್ತಿಯಲ್ಲಿ ಲಿಂದ ಪ್ರತ್ಯಯ ಬಳಕೆಯಾಗಿರುವುದನ್ನು ನೋಡಬಹುದು. ಹಾಗೆಯೇ ಉರ್ದು ಅಥವಾ ಹಿಂದಿಯ ಪ್ರಭಾವದಿಂದ ಬಿ ಎನ್ನುವ ಪ್ರತ್ಯಯ ಇರುವುದನ್ನು ನೋಡಬಹುದಾಗಿದೆ. ಅವನೂ ಬಂದ ಎನ್ನುವಲ್ಲಿ ಅಂವಬೀ ಬಂದ ಎಂದು ಹೇಳುವುದನ್ನು ನೋಡಬಹುದು.

ಸಪ್ತಮಿ ವಿಭಕ್ತಿಯಲ್ಲಿ ಬರುವ ಅಲ್ಲಿ ಪ್ರತ್ಯಯ ಆಗ್, ಒಳಗ್ ಎಂದೂ ಕೂಡ ಬಳಕೆಯಾಗಿದೆ. ಮನಿದಾಗ, ಮನಿದೊಳಗೆ ಎನ್ನುವಲ್ಲಿ ಇದನ್ನು ನೋಡಬಹುದು.

ಸರ್ವನಾಮಗಳು

ಸರ್ವನಾಮ ಪದ ಶಿಷ್ಠ ಲಿಂಗಾಯತರ ಲಿಂಗಾಯತೇತರ ದಲಿತರ
೧. ಏ.ವ.ಉ.ಪು. ನಾನು ನಾ ನಾ ನಾ
೨. ಏ.ವ.ಮ.ಪು ನೀ ನೀ ನೀ/ನೀನು ನೀ
೩. ಏ.ವ.ಪ್ರ.ಪು ಅವನು ಅವ ಅಂವ/ಕಂವ ಕಂವ
೪. ಬ.ವ.ಉ.ಪು ನಾವು ನಾವು ನಾವ್ ನಾವ್
೫. ಬ.ವ.ಮ.ಪು ನೀವು ನೀವು ನೀವ್ ನೀವ್
೬. ಬ.ವ.ಪ್ರ.ಪು ಅವರು ಅವ್ರು ಕವರು/ಕವ್ರು ಕಂವ್ರು

ಸರ್ವನಾಮಗಳು ಏ.ವ.ಪ್ರ. ಪುರುಷದಲ್ಲಿ ಮತ್ತು ಬ.ವ.ಪ್ರ. ಪುರುಷದಲ್ಲಿ ಅವನು ಎನ್ನವುದಕ್ಕೆ ದಲಿತರಲ್ಲಿ ಕಂವ ಎಂದು ಬ.ವ.ಪ್ರ. ಪುರುಷದಲ್ಲಿ ಕಂವ್ರು ಎನ್ನುವುದು ಬಳಕೆಯಾಗಿರುವುದು ವಿಶೇಷವಾಗಿದೆ.

ಕ್ರಿಯಾ ಪದಗಳು

ಶಿಷ್ಠ ಲಿಂಗಾಯತರ ಲಿಂಗಾಯತೇತರ ದಲಿತರ
೧. ಕೂಡು ಕೂಡು ಕೂಡ್ ಖೂಡ್
೨. ಊಟ ಮಾಡೋಣ ಊಟ ಮಾಡರಿ ಉಂಬರಿ ಉಂಭರಿ
೩. ಸಾಯಿಸು ಸಾಯ್ಸು ಸಾಯ್ಸು/ಕೊಲ್ಲು ಖೊಲ್ಲು
೪. ಬಾರಿಸು ಬಾರ್ಸು ಬಾರ್ಸು/ಭಾರ್ಸು ಭಾರ್ಸು
೫. ಹೋಗುತ್ತೇನೆ ಹೋಗ್ತೀನಿ ಹೋಕ್ಕಿನಿ/ಹೊಯ್ತಿನಿ ಹೊಯ್ತಾ

. ಶಬ್ದಕೋಶದ ಭಿನ್ನತೆ

ಮೇಲೆ ವಿವರಿಸಿದಂತೆ ಭೌಗೋಳಿಕವಾಗಿ ಮತ್ತು ಸಾಮುದಾಯಿಕವಾಗಿ ಬೇರೊಂದು ಸಮುದಾಯದಿಂದ ದೂರವಾಗಿ ಬದುಕುತ್ತಿರುವಾಗದ ಸಹಜವಾಗಿಯೇ ಅವರ ಪದಕೋಶಗಳಲ್ಲಿ ಅನೇಕ ಭಿನ್ನ ರೂಪಗಳು ಇರಲು ಸಾಧ್ಯವಿದೆ. ಉದಾಹರಣೆಗೆ ಕೃಷಿಕ ಸಮುದಾಯಕ್ಕೆ ಒಂದು ವಿಶೇಷವಾದ ಪದಕೋಶ ಇದ್ದರೆ ದಲಿತರಿಗೆ ವಿಶೇಷವಾದ ಒಂದು ಪದಕೋಶ ಇರುವುದನ್ನು ನೋಡಬಹುದಾಗಿದೆ.

ಪ್ರಾದೇಶಿಕವಾಗಿ ಒಂದು ಭಾಷೆ ಭಿನ್ನ ರೂಪಗಳನ್ನು ಹೊಂದಿರುವಂತೆ ಸಾಮಾಜಿಕ ವಲಯಗಳಿಂದಲೂ ಭಿನ್ನತೆ ಇರುವುದನ್ನು ಮುಖ್ಯವಾಗಿ ಈ ಲೇಖನದಲ್ಲಿ ಚರ್ಚಿಸಲಾಗಿದೆ.

. ಶಬ್ದಕೋಶದಲ್ಲಿನ ಭಿನ್ನತೆಗಳು

ಕರ್ನಾಟಕದಾದ್ಯಂತ ಕನ್ನಡ ಒಂದೇ ಭಾಷೆ ಬಳಕೆಯಲ್ಲಿದ್ದರೂ ಅನೇಕ ಪ್ರಾದೇಶಿಕ ಭಿನ್ನತೆಗಳಿವೆ ಎಂದು ತಿಳಿದಿದ್ದೇವೆ. ಹೀಗೆ ಪ್ರಾದೇಶಿಕವಾಗಿ ಭಿನ್ನ ರೂಪಗಳು ಪರಸ್ಪರ ಬೇರೆ ಬೇರೆ ಪ್ರದೇಶದ ಜನರ ಮಧ್ಯ ಸಂಪರ್ಕ ಇಲ್ಲದಿರುವುದೇ ಬಹುಮಟ್ಟಿಗೆ ಪ್ರಾದೇಶಿಕ ಭಿನ್ನ ರೂಪಗಳು ಹುಟ್ಟಿಕೊಳ್ಳಲು ಕಾರಣವಾಗಿದೆ. ಈಗ ಕಂಡುಕೊಂಡಿರುವ ಪ್ರಾದೇಶಿಕ ಭಿನ್ನ ರೂಪಗಳು ಕಾಣುವಲ್ಲಿ ನಡುವೆ ನದಿಗಳೋ, ಬೆಟ್ಟಗಳ ಸಾಲೋ ಇದ್ದಂತೆ ಕಾಣುತ್ತದೆ. ಹಾಗೆಯೇ ಒಂದೇ ಪ್ರದೇಶದಲ್ಲಿ ವಾಸಿಸುವ ಜನರ ಮಧ್ಯ ಇರುವ ಈ ಭಾಷಾ ಭಿನ್ನತೆಗೆ ಪರಸ್ಪರ ಜನಾಂಗಗಳ ನಡುವಿನ ಸಂಪರ್ಕವೇ ಕಾರಣ ಎಂದರೂ ತಪ್ಪಾಗಲಾರದು. ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಜನಾಂಗಕ್ಕೂ ಮತ್ತು ಲಿಂಗಾಯತೇತರ ಜನಾಂಗ ಮತ್ತು ದಲಿತರ ನಡುವಿನ ಸಂಬಂಧಗಳು ಮತ್ತು ಸಂಪರ್ಕದ ನೆಲೆಯಲ್ಲಿ ಈ ವ್ಯತ್ಯಾಸಗಳನ್ನು ಕಾಣಬಹುದಾಗಿದೆ. ಸಂಪರ್ಕದ ಕೊರತೆಯಿಂದಾಗಿ ಇಲ್ಲವೇ ಸಂಪರ್ಕ ಅತ್ಯಂತ ಕಡಿಮೆಯಿದ್ದು ಅಥವಾ ಕೆಲವು ಸಂದರ್ಭದಲ್ಲಿ ಮಾತ್ರ ಒಡನಾಟ ಇದ್ದು ಉಳಿದ ಸಂದರ್ಭದಲ್ಲಿ ದಲಿತರು ಬಳಸುವ ಭಾಷೆ ಪ್ರತ್ಯೇಕವಾಗಿಯೇ ಉಳಿಸಿಕೊಂಡಿರುವುದರಿಂದ ಇವರ ಶಬ್ದಕೋಶವೇ ಸ್ವಲ್ಪಮಟ್ಟಿಗೆ ಭಿನ್ನವಾಗಿ ಇರುವುದು ಕಂಡು ಬಂದಿದೆ.

ಶಿಷ್ಠ ಲಿಂಗಾಯತರ ಲಿಂಗಾಯತೇತರ ದಲಿತರ
ಹೆಬ್ಬಾಗಿಲು ಹೊರಬಾಗ್ಲು ಧೊಡ್ ಬಾಗುಲ್ ಧೊಡ್ ಬಾಕುಲ್
ಮೆಟ್ಟು/ಜೋಡು ಜೋಡಾ ಜೋಡಾ ಬೂಟು
ಯಜಮಾನ ಯಜಮಾನ್ ಧರಿ ಧರಿ
ನಮಸ್ಕರಿಸು ನಮಸ್ಕಾರ್ ಮಾಡು ಶಣಮಾಡು ಸಣಮಾಡು
ಚಾಣಾಕ್ಷ ಶಾಣ್ಯ ಶಾಣ್ಯ ಚಾಲು
ಬಹಿರ್ದೆಸೆ ಮೈದಾನಕ್ಕ್ ಹೊರ್ಕಡಿಗಿ ಹೇಲಾಕ್
ಅನ್ನ ಬೋನ ಬಾನಾ ಬಾನಾ

ಗುಲಬರ್ಗಾ ಮತ್ತು ರಾಯಚೂರು ಜಿಲ್ಲೆಗಳ ದಲಿತರ ಕನ್ನಡ ದಕ್ಷಿಣ ಕರ್ನಾಟಕದ ಭಾಷೆಗಿಂತ ಪ್ರಾದೇಶಿಕ ಭಿನ್ನತೆ ಇರುವುದು ಒಂದು ಬಗೆಯವಾದರೆ ಸಾಮಾಜಿಕವಾಗಿ ಭಿನ್ನವಾಗಿರುವುದು ಮತ್ತೊಂದು ಬಗೆಯದು. ಮೊದಲ ಬಗೆಯ ಬಗ್ಗೆ ಸಾಕಷ್ಟು ವಿದ್ವಾಂಸರು ಚರ್ಚಿಸಿದ್ದಾರೆ. ಈಗಲೂ ಉತ್ತರ ಕರ್ನಾಟಕದ ಭಾಷೆಗು ದಕ್ಷಿಣ ಕರ್ನಾಟಕದ ಭಾಷೆಗೂ ಇರುವ ವ್ಯತ್ಯಾಸಗಳನ್ನು ಎ ಕಾರಾಂತ ಪದಗಳನ್ನು ಇ ಕಾರಾಂತವಾಗಿ ಬಳಸುತ್ತಾರೆ. ಹಾಗೆ ಎನ್ನುವಲ್ಲಿ ಹಾಂಗ ಎನ್ನುವ ಪದ ಬಳಸುತ್ತಾರೆ ಎನ್ನುವ ವ್ಯತ್ಯಾಸಗಳನ್ನು ಕುರಿತು ಸಾಕಷ್ಟು ಚರ್ಚೆಯಾಗಿರುವುದನ್ನು ನಾವು ಕಂಡಿದ್ದೇವೆ. ಆದರೆ ಉತ್ತರ ಕರ್ನಾಟಕದ ಭಾಗದ ಪ್ರಾದೇಶಿಕ ಭಾಷೆಯಲ್ಲಿಯೇ ಸಾಮಾಜಿಕವಾಗಿ ಇರುವ ಭಿನ್ನತೆಯನ್ನು ಈ ಮೇಲಿನ ಲೇಖನದಲ್ಲಿ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಈ ಕುರಿತು ಚರ್ಚಿಸಬೇಕಾದ ಅವಶ್ಯಕತೆ ಇದೆ.