ದಮಂಧಂ ತಮಃ ಕೃತ್ನಂ ಜಾಯೇತ ಭುವನತ್ರಯಂ|
ಯದಿ ಶಬ್ಬಾಹ್ವಯಂ ಜ್ಯೋತಿರಾಸಂಸಾರಾನ್ನ ದೀಪ್ಯತೇ ||
(ದಂಡಿ)

ಮಾತೆಂಬ ಜ್ಯೋತಿ ಸಂಸಾರದ ಉದ್ದಕ್ಕೂ ಬೆಳಗದೆ ಇದ್ದರೆ ಅಶೇಷ ಭುವನ ತ್ರಯವೂ ಕಗ್ಗತ್ತಲಾಗಿ ಬಿಟ್ಟೀತು. ದಂಡಿಯ ಈ ಉಕ್ತಿ ಒಂದು ವಿಷಯವನ್ನು ಕಾವ್ಯಮಯವಾಗಿ ಸ್ಪಷ್ಟಪಡಿಸುತ್ತದೆ. ಮನುಷ್ಯ ಬುದ್ಧಿ ಬೆಳೆದಂತೆ ಅವನಲ್ಲಿ ವಿಚಾರ ಶಕ್ತಿ ಬೆಳೆಯಿತು. ಆ ವಿಚಾರ ಬೇರೆಯವರೊಂದಿಗೆ ಹಂಚಿಕೊಳ್ಳಲು ಯಾವುದೋ ಧ್ವನಿ ಮಾಡುತ್ತ, ಸನ್ನೆಯೊಂದಿಗೆ ತನ್ನ ವಿಚಾರವನ್ನು ಅಭಿವ್ಯಕ್ತಿಸ ತೊಡಗಿದನು. ಈ ಅಭಿವ್ಯಕ್ತಿ ಮಾಧ್ಯಮವೇ ಭಾಷೆ.

ಭಾಷೆ ಉಸಿರಿನಷ್ಟೇ ಅನಿವಾರ್ಯ. ಹೀಗಾಗಿ ಇದು ಅವನ ಒತ್ತಡದಿಂದ ಹುಟ್ಟಿಕೊಂಡಿತ್ತು. ಭಾಷ್ ಎಂಬ ಪದ ಸಂಸ್ಕೃತ ಶಬ್ದ; ‘ಭಾಷೆ’ ಎಂದರೆ ಮಾತನ್ನಾಡು ಎಂಬ ಅರ್ಥವನ್ನು ಹೊಂದಿದೆ. ಭಾಷೆ ಮಾನವನ ಧ್ವನ್ಯಾಂಗಗಳಾದ ತುಟಿ, ನಾಲಿಗೆ, ಹಲ್ಲು, ಗಂಟಲುಗಳ ಸಹಾಯದಿಂದ ರಚನೆಯಾದ ಧ್ವನಿಗಳ ಗುಂಪು. ಭಾಷೆ ಯಾವುದೇ ಇರಲಿ ಅದರಲ್ಲಿ ‘ಧ್ವನಿ’ ‘ಧ್ವನಿಮಾ’, ‘ಆಕೃತಿಮಾ’ ಎಲ್ಲವೂ ವ್ಯವಸ್ಥಿತವಾದ, ನಿರ್ದಿಷ್ಟ ನಿಯಮಾನುಸಾರವಾಗಿ ಪ್ರಕ್ರಿಯೆಯನ್ನು ಪ್ರತಿಬಿಂಬಿಸುತ್ತದೆ. ಇವುಗಳು ಭಾಷೆಯಿಂದ ಭಾಷೆಗೆ ಭಿನ್ನವಾಗಿರಬಹುದು. ಇದರ ಅತ್ಯಂತ ಚಿಕ್ಕ ಘಟಕವೆಂದರೆ ‘ಧ್ವನಿ’. ಈ ಧ್ವನಿ ಘಟಕಗಳು ಒಂದರ ನಂತರವೊಂದು ಬಂದು ಧ್ವನಿಗಳ ರಚನೆಯಾಗುತ್ತದೆ. ಇವುಗಳು ಕರ್ತೃ, ಕರ್ಮ, ಕ್ರಿಯಾಪದಗಳಿಂದ ಕೂಡಿದ ಒಂದು ವ್ಯವಸ್ಥಿತವಾದ ವಾಕ್ಯ ರಚನೆಯಾಗುತ್ತದೆ. ಇದಕ್ಕೆ ಧ್ವನಿ. ಅರ್ಥವೆಂಬ ಎರಡು ಮುಖಗಳಿರುತ್ತವೆ. ಕ್ರಿ.ಪೂ. ೪ನೇ ಶತಮಾನದ ಮೊದಲು ಪಾಣಿನಿ ಅಷ್ಟು ವ್ಯವಸ್ಥಿತ ರೀತಿಯಲ್ಲಿ ‘ಅಷ್ಟಾಧ್ಯಾಯಿ’ ಎಂಬ ವರ್ಣನಾತ್ಮಕ ಭಾಷಾಶಾಸ್ತ್ರ ಕೃತಿ ರಚಿಸಿದ್ದಾರೆ. ಇದು ಮಾನವ ಪ್ರಜ್ಞೆಯ ಮಹಾಸ್ಮಾರಕಗಳಲ್ಲೊಂದು ಭಾಷೆ ಸ್ವಾಭಾವಿಕ ಕ್ರಿಯೆಯಲ್ಲ, ಕಲಿತ ಪ್ರಕ್ರಿಯೆ.

ಭಾಷೆ ಕಲಿತ ಪ್ರಕ್ರಿಯೆ ಎಂದ ಮೇಲೆ ಈ ಕಲಿಕೆ ಎಲ್ಲರೂ ಒಂದೇ ರೀತಿಯಲ್ಲಿ ಏಕೆ ಕಲಿಯಲಿಲ್ಲ?; ಇದು ಭೌಗೋಳಿಕವಾಗಿ ಹೇಗೆ ಭಿನ್ನವಾಗಿದೆ?; ಸಮಾಜದಿಂದ ಸಮಾಜಕ್ಕೆ ಹೇಗೆ ಬೇರೆಯಾಗಿದೆ? ಎಂಬುದರ ಬಗ್ಗೆಯೂ ಚರ್ಚೆ, ಸಂಶೋಧನೆಗಳೂ ನಡೆಯುತ್ತಲೇ ಇದ್ದರೂ ಅದಕ್ಕೆ ಸರಿಯಾದ ನೆಲೆಯನ್ನು ಈವರೆಗೂ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಇದು (ಭಾಷೆ) ನಿರಂತರವಾಗಿ ಬದಲಾಗುತ್ತ ಹೋಗುತ್ತದೆ. ಕರ್ನಾಟಕದಲ್ಲಿ ಸಾಮಾಜಿಕವಾಗಿ ಕನ್ನಡದ ರಚನೆಯ ಸರ್ವೇಕ್ಷಣ ಕಾರ್ಯ ಇಲ್ಲಿಯವರೆಗೆ ನಡೆಯಲಿಲ್ಲ. ನಡೆದರೂ ಅಲ್ಲೊಂದು ಇಲ್ಲೊಂದು ಎಂಬಂತೆ ನಡೆದಿವೆ. ಇಡಿಯ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾವಾರು ಭಾಷಾ ಸರ್ವೇಕ್ಷಣ ಕಾರ್ಯ ನಡೆಯಬೇಕು. ಅಂಥ ಬೆಳವಣಿಗೆಯ ಒಂದು ಪ್ರಯತ್ನವೇ ಈ ಲೇಖನ. ಬೀದರ ದಲಿತ ಕನ್ನಡವನ್ನು ಕುರಿತು, ಅದರಲ್ಲಿ ಕಂಡುಬರುವ ವರ್ಣವ್ಯತ್ಯಯ, ವ್ಯಾಕರಣ ರೂಪ, ಮತ್ತು ಪದ ಜಾಲಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಗದಿಪಡಿಸಿದ ಶಿಷ್ಟ ಕನ್ನಡದೊಡನೆ ಹೋಲಿಸಿ ಸ್ಥೂಲವಾಗಿ ಇಲ್ಲಿ ಸಮೀಕ್ಷಿಸಲಾಗಿದೆ. ಇದು ತನಗೆ ತನ್ನ ಉಪಯುಕ್ತವಾಗಿರುವುದರ ಜೊತೆಗೆ ಇದರ ಅಭ್ಯಾಸಗಳಿಗೆ ಸಹಾಯ ಒದಗಬಹುದೆಂಬ ಭಾವನೆ ನನಗಿದೆ.

ಬೀದರ ಜಿಲ್ಲೆಯಲ್ಲಿ ದಲಿತ ಕನ್ನಡಿಗರೆಂಧರೆ ಪ್ರಧಾನವಾಗಿ ಹೊಲೆಯರು ಮತ್ತು ಮಾದಿಗರು. ಉಳಿದ ದಲಿತ ವರ್ಗದವರ ಭಾಷೆ ಕನ್ನಡವಲ್ಲ. ಸಮಗಾರ ದಲಿತ ಕುಟುಂಬಗಳು ಬೀದರ ಗುಲಬರ್ಗಾ ಗಡಿ ಭಾಗದಲ್ಲಿ ಮಾತ್ರ ಕೆಲವು ಕಡೆ ಕನ್ನಡ ಬಳಸುವುದು ಕಂಡು ಬರುತ್ತದೆ. ಹೀಗಾಗಿ ಇಲ್ಲಿ ಹೊಲೆಯರು, ಮಾದಿಗರು ಮತ್ತು ಸಮಗಾರರು ಬಳಸುವ ಕನ್ನಡವನ್ನು ಮಾತ್ರ ಬೀದರ ದಲಿತ ಕನ್ನಡವೆಂದು ಸ್ವೀಕರಿಸಲಾಗಿದೆ.

ಬೀದರ ಜಿಲ್ಲೆಯ ಹಿನ್ನೆಲೆ

ಕ್ರಿ.ಶ. ೮೧೪ ರಿಂದ ೮೧೭ರ ಈ ಅವಧಿಯಲ್ಲಿ ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಲಚೂರಿ ಅವರಸು ಹೀಗೆ ಕನ್ನಡ ದೊರೆಗಳು ಆಳಿ ಹೋದನಂತರ ಕ್ರಿ.ಶ. ೧೧೮೯ರ ಸಂದರ್ಭದಲ್ಲಿ ಹೊಯ್ಸಳರು ನಂತರ ಯಾದವರು ಈ ಪ್ರದೇಶವನ್ನು ಆಳಿದರು. ೧೩೧೦ರ ವೇಳೆಗೆ ಮಲ್ಲಿಕಾಫರನ ಆಕ್ರಮಣದಿಂದ ಯಾದವರ, ಹೊಯ್ಸಳರ ಆಳ್ವಿಕೆಯೂ ಅಂತ್ಯವಾಯಿತು. ಕ್ರಿ.ಶ. ೧೪೨೪-೨೯ರ ಸಂದರ್ಭದಲ್ಲಿ ಅಹಮದ್ ಶಹಾನು ಬೀದರ ನಗರ ನಿರ್ಮಿಸಿ ಅಳತೊಡಗಿದರು. ನಂತರ ೧೭೨೪ರ ವೇಳೆಗೆ ಆಸಿಫ್ ಜಾನು ಸ್ವತಂತ್ರವಾಗಿ ನಿಜಾಮ ಆಳ್ವಿಕೆಯನ್ನು ಆರಂಭಿಸಿದರು. ೧೯೪೮ರಲ್ಲಿ ಪೋಲಿಸ್ ಕಾರ್ಯಚರಣೆಯನ್ನು ನಡೆಸಿ ರಜಾಕರ ಹಾವಳಿಯೂ ಅಂತ್ಯವಾಯಿತು. ಕ್ರಿ.ಪೂ. ೨೨೨-೨೩೧ರಲ್ಲಿ ಈ ಪ್ರದೇಶ ಬೌದ್ಧ ಚಕ್ರವರ್ತಿಗಳ ಆಡಳಿತಕ್ಕೆ ಒಳಪಟ್ಟಿತ್ತು. ಕ್ರಿ.ಪೂ. ೨೨೦ರ ಸಂದರ್ಭದಲ್ಲಿ ಇದು ಆಂಧ್ರ ಆಡಳಿತಕ್ಕೆ ಒಳಪಟ್ಟಿತ್ತು. ಕ್ರಿ.ಶ.೫೫೦ ಬಾದಾಮಿ ಚಾಲುಕ್ಯರು ಕಲ್ಯಾಣವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡರು. ಹೀಗಾಗಿ ಬೀದರ ಜಿಲ್ಲೆಯಲ್ಲಿ ಸಾಂಸ್ಕೃತಿಕವಾಗಿ, ಭಾಷಿಕವಾಗಿ ಏರುಪೇರುಗಳನ್ನು ಅನುಭವಿಸಿದುದು ಇತಿಹಾಸದಿಂದ ತಿಳಿದುಬರುತ್ತದೆ. ಈಗ ಆಯ್ದುಕೊಂಡ ವಿಷಯಕ್ಕೆ ಬರುತ್ತೇನೆ.

ಬೀದರ ದಲಿತರ ಕನ್ನಡದಲ್ಲಾದ ‘ವರ್ಣವ್ಯತ್ಯಯಗಳು’ ಇಲ್ಲಿ ಕನ್ನಡವನ್ನು ಕುರಿತು ಅದರಲ್ಲಿ ಕಂಡುಬರುವ ವರ್ಣವ್ಯತ್ಯಯ, ಪದ ಜಾಲಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸ್ಥೂಲವಾಗಿ ಹೀಗೆ ಸಮೀಕ್ಷಿಸಬಹುದು.

ಸ್ವರ : ಪದಾದಿಯ ‘ಅ’ ಕಾರ ಕೆಲವು ಬಂಧುತ್ವ ವಾಚಕಪದಗಳಲ್ಲಲಿ ‘ಯ’ ಕಾರವಾಗಿ ಮಾರ್ಪಟ್ಟಿರುವುದು ಕಾಣಬಹುದು.

ಉದಾ :

ಅಪ್ಪ > ಯಪ್ಪಾ Yappaa: ಅವ್ವ > ಯವ್ವಾ Yavvaa
ಅಕ್ಕ > ಯಕ್ಕಾ Yakkaa; ಅಣ್ಣ > ಅಣ್ಣಾ Yannaa

ಇಂಥ ಬದಲಾವಣೆ ವಾಕ್ಯ ರಚನೆಯಲ್ಲಿ ಬರುವುದಿಲ್ಲ. ನಮ್ಮೆಪ್ ಬಂದಿಲ್, ಯಕ್ಕನ್ಮದಿಯದ, ಯವ್ ಬುಂತಾಳದ ಈ ರೀತಿ ಆಗುವುದಿಲ್ಲ. ಔರಾದ ತಾಲೂಕಿನ ಕಡೆ ಕ್ರಮವಾಗಿ ಮೊಪ್ಪ ಬಂದಿಲಾ, ಯಕ್ಕ ನ್ಮೊದಿ ಯ್ಯಾದಾ ಯಾವ್ ಬುಂತಾಳ ಹೀಗೆ ವಾಕ್ಯ ರಚನೆಯಲ್ಲಿ ಬಳಸುವುದನ್ನು ಕಂಡು ಬರುತ್ತದೆ. ಕೂಗಿ ಕರೆಯುವಾಗ ಯಾವ್, ಯಾಪ್, ಯಾಕ್, ಯಾಣ್ ಎಂದು ಬಳಕೆಯಲ್ಲಿವೆ.

ಪದಾದಿಯ ವ್ಯಂಜನದ ನಂತರ ‘ಅ’ ಕಾರ ‘ಎ’ ಕಾರವಾಗಿ ಬಳಸುವುದು ಕಂಡುಬರುತ್ತದೆ.

ಉದಾ :

ಕಬ್ಬಿಣ > ಖೆಬ್ಬುಣ್ Khebbun ಬಳ್ಳಿ > ಬೆಳ್ಳಿ Belli
ತಂಗಿ > ತೆಂಗಿ > Tengi

ಪದಾದಿಯ ಅಕ್ಷರದ ‘ಅ’ ಕಾರ ‘ಓ’ ಕಾರವಾಗಿ ಮಾರ್ಪಟ್ಟಿದೆ.

ಉದಾ :

ಕಪ್ಪೆ > ಖೊಪ್ಪಿ Khoppi ಕಬ್ಬು > ಖೊಬ್ Khobbu
ಬಂಡಿ > ಬೊಂಡಿ Bondi ಸಪ್ಪಳ > ಸೊಪ್ಪುಳ್ Soppul
ಮದಿ > ಮೊದಿ Modi ನವಿಲು > ನೊವುಲ್ Novul

ಪದಾದಿಯ ‘ಹ್’ ವ್ಯಂಜನ ಲೋಪಿಸಿ ಉಳಿಯುವ ‘ಅ’ > ಒ ಬರುತ್ತದೆ.

ಉದಾ :

ಹಸಿವು > ಒಸು Osu, ಹಚ್ಚು > ಹೊಚ್ > ಒಚ್ Och ಹೊರ್ಸು > ಒರ್ಸ್ Orsu
‘ವ್’ ವ್ಯಂಜನ ಪದದಲ್ಲಿರುವ ‘ಇ’ ಕಾರ ‘ಉ’ ಕಾರವಾಗಿ ಮಾರ್ಪಟ್ಟಿದೆ.

ಉದಾ :

ಸಾವಿರ > ಸಾವುರ್ Sa:vur, ನವಿಲು > ನೊವುಲ Novul

ಪದಾಂತ್ಯದ ‘ಉ’ ಕಾರ ‘ಇ’ ಕಾರವಾದುದು.

ಉದಾ :

ಕುಳಿತು > ಖುಂತಿ Khunti, ನಿಂತು > ನಿಂತಿ Ninti
ಬರೆದು > ಬರ್ದಿ Bardi, ಕೊಟು > ಕೊಟ್ಟಿ Kotti

ಇದು ವಾಕ್ಯ ರಚನೆಯಲ್ಲಿ ಈ ಕೆಳಗಿನಂತಿರುತ್ತವೆ.

ಖುಂತೀ ಬಂದಾನ Khunti : Banda:n
ನಿಂತೀ ನೋಡ್ದ Ninti : No:dda
ಬರ್ದಿ ತೋರುಸ್ದ bardi:to:rusda
ಕೊಟ್ಟೀ ಬಂದ Kotti Banda

ಪದಾಂತ್ಯದ ‘ಇ’ ಕಾರ ‘ಎ’ ಕಾರವಾಗುತ್ತದೆ. (ಕೆಲವು ಕಡೆ ಮಾತ್ರ)

ಉದಾ :

ನರಿ > ನರೆ Nare
ಸಿಂದಿ > ಸಿಂದೆ Sinde
ನಾದನಿ > ನಾದಣಿ > ನಾದಣೆ Na:dne

ಪದಾದಿಯ ಇ ಕಾರ ಎ ಕಾರವಾಗಿದಕ್ಕೆ ಉದಾಹರಣೆ

ಇಬ್ಬರು – ಎಬ್ಬರು, ಇರುವೆ – ಎರು ಇತ್ಯಾದಿ

ಔರಾದ ತಾಲೂಕಿನ ಕಡೆಗೆ ಪದಾಂತ್ಯದ ಅ ಕಾರ ‘ಉ’ ಕಾರವಾಗಿರುವ ಕೆಲವು ಪದಗಳು ಸಿಗುತ್ತವೆ.

ಉದಾ :

ದೊಡ್ಡ > ಧೊಡ್ಡು Dhoddv : ಇಲ್ಲ? ಇಲ್ಲು? ILLU ಸಾವಿರ > ಸಾವುರು Sa : Vuru:

ಸಾಮಾನ್ಯವಾಗಿ ಸ್ವರದಿಂದ ಪ್ರಾರಂಭವಾಗುವ ನಿರ್ದೇಶಕ ಸರ್ವನಾಮಗಳು ‘ಕ’ ಕಾರ ವ್ಯಂಜನದಿಂದ ಪ್ರಾರಂಭವಾಗುವುದೊಂದು ವಿಶೇಷ.

ಉದಾ :

ಅವ > ಕವ Kava: ಇವ > ಕಿವ KIva, ಇದು > ಕಿದು Kidu ಅಲ್ಲಿ > ಕಲ್ಲಿ Kalli, ಇಲ್ಲಿ > ಕಿಲ್ಲಿ Killi, ಅದು > ಕಮ Kadu.

ಅಕೊ-ಅವ ಎಂಬ ದರ್ಶಕ ಸರ್ವನಾಮ ಕಾರಣವಾಗಿ ಕವ ಎಂದಾಗಿರುವ ಸಾಧ್ಯತೆಯಿದೆ. ವ್ಯಂಜನಗಳಲ್ಲಿ ವರ್ಣ ವ್ಯತ್ಯಯಗಳು : ಪದಾದಿಯ ಹಾಗೂ ಪದ ಮಧ್ಯದ ‘ವ್’ ಕಾರ ‘ಯ್’ ಕಾರವಾಗಿ ಮಾರ್ಪಟ್ಟಿದೆ.

ಉದಾ :

ವೇಳೆ > ಯಾಳಿ ya:I, ಬೇವಿನಸೊಪ್ಪು > ಬೇಯಿನ್ ತೊಪ್ಪುಲ್
beyin toppul, ವೇಶ > ಯೇಸ್ಯ Yesx,
ಬಾವಿ > ಭಾಂಯ್ bha:y ಇತ್ಯಾದಿ

‘ಎ’ ಕಾರದಿಮದ ಪ್ರಾರಂಭವಾಗುವ ಪದಗಳು ‘ಯ್’ ಕಾರವಾಗಿದೆ.

ಉದಾ :

ಏನು > ಯಾನು ya:nu, ಏಕೆ > ಯಾಕಾ ya:ka:
ಬೆಳೆ > ಬ್ಯಳಿ b೫II ಬೇಳೆ > ಬ್ಯಾಲಿ b೫II

ಹಿಪ್ಪೆ ಪದದ ‘ಹ್’ ಕಾರ ಲೋಪವಾಗಿ ಇಪ್ಪೆ > ಇಪ್ಪಿ IppI ಆಗಿದೆ.

ಎಪ್ಪತ್ತು > ಹೆಪ್ಪತ್ heppat,

ಬಸವಕಲ್ಯಾಣ ತಾಲೂಕಿನ ಕೊಹಿನೂರು, ಬಟಗೇರಾ ಕಡೆ ‘ಗ್’ ಕಾರ ‘ಯ್’ ಕಾರವಾಗಿ ಮಾರ್ಪಟ್ಟಿದೆ.

ಉದಾ :

ಹೋಗುತ್ತದೆ > ಹ್ವಾತದ > ಹೊಯ್ತುದ hoytud.
ಇವತ್ತು > ಇಗೋತ್ Igo:t, ಮೂವರು > ಮೂಗರ್ mu:gar.

ಪದ ಮಧ್ಯದ ರ ಕಾರ ಲೋಪವಾಗಿ ಅದರ ನಂತರ ಬರುವ ವ್ಯಂಜನಕ್ಕೆ ಸಜಾತಿಯ ದ್ವಿತ್ವ ಬರುತ್ತದೆ.

ಉದಾ :

ಕೊರಳು > ಕೊಳ್ಳು Kallu, ಕರಳು > ಕಳ್ಳು Kallu
ಕೊರಡಿ > ಖೊಡ್ಡಿ KhoddI ಬೆರಳು > ಬರಳ > ಬಳ್ > ಬಟ್ bat

ದಲಿತರ ಕೆಲವೊಂದು ಪದಗಲು ಅಂತ್ಯಾಕ್ಷರವನ್ನು ಕಳೆದುಕೊಂಡು ಸರಳೀಕೃತವಾಗುತ್ತವೆ.

ಉದಾ :

ಮದುವೆ > ಮದಿ > ಮೊದಿ madI/modI
ಇರುವೆ > ಇರು Iru. ಅಡವಿ > ಆಡಿ adI
ನನಗೆ > ನಙ nan, ನಿನಗೆ > ನಿಙ nin            ಇತ್ಯಾದಿ.

ಗಂಡಸು ಪದದ ಪರಿವೇಷ್ಠಿತ ಸ್ಪರ್ಶ ಧ್ವನಿ ‘ಡ್’ ಲೋಪವಾಗಿದೆ.

ಉದಾ :

ಗಂಡಸು > ಗಣ್ಸ್ gans, ಹೆಂಡತಿ > ಹ್ಯಣ್ತಿ h೫ntI
ಸಾದೃಶ್ಯ ಸೃಷ್ಟಿಯಿಂದ ಸುಮ್ಮನೆ ಪದ ಸುಳ್ಳೆ Sulle ಆಯಿತು

ಖರೇನೆ ಪದ ಖರ್ಕೆ, Kharke, ಖರಟ್ಕೆ, Khartge, Kharpan (ಖರ್ಪನ್) ಆಗುತ್ತದೆ. ಕೆಲವು ಪದಗಳಲ್ಲಿ ಅನುಸ್ವಾರ ಸೇರಿಕೊಂಡಿವೆ.

ಉದಾ :

ಹೌದು > ಹೋಂದು / ಹೊಯಿಂದು, ho:nd/hoyind
ಸೌಟು > ಸೌಟ್ > ಸೋಂಟ್ saut/so:nt.
ಬೀಜ > ಭೀಜಾ bI: nJa : ಕಿವಿ > ಖಿಂವಿ Khinvi ಇತ್ಯಾದಿ.

ಬೀದರ ದಲಿತರ ಕನ್ನಡದಲ್ಲಿ ಸೇವಿಸುವ ಮೌಂಸಕ್ಕೆ ಪಲ್ಯಾ ಎಂದು ಹೇಳುತ್ತಾರೆ. ಖಂಡ ಅಂತೂ ಹೇಳುವುದಿಲ್ಲ. ಖಂಡ ಪದ ಬಳಸುವುದೇ ಇಲ್ಲಂತಲ್ಲ.

ಉದಾ :

ದನಕ್ ಕಲ್ಲಿಲಿ ಹುಡ್ದುರಾ ಖಂಡಾನೆ ಹೊರಾಗ ಬಂದದ್
‘ನಾಯ್ ಖಂಡಾ ತಿಂತದ್’ಇತ್ಯಾದಿ.
‘ನೀ ಖೂನಾ ಅಜೀಬಾತ್ ಇಲ್ಲ’ (ನಿನ್ನ ಗುರುತು ನನಗೆ ಇಲ್ಲವೇ ಇಲ್ಲ).
ನಾವು ದುನ್ನಡಿ ಹೋಗಿ ತ್ಯಲಿ ಮಾಡ್ಸ್ಕೊಂಡು ಬಂದ (ಕ್ಷೌರ ಮಾಡಿಸಿಕೊಂಡೆ)
ಹುಮನಾಬಾದ ತಾಲೂಕಿನ ಧೂಳಾ ಎಂಬಾತನು ಬಿಂದು ವಿಚಾರ ಮತ್ತೊಬ್ಬನಿಗೆ ಹೇಳಿದ್ದು ಇಲ್ಲಿ ಹಿಡಿದಿಡಲಾಗಿದೆ.

“ಕೊನ್ಮಳಿ ಇದ್ದರಾ ಗಾಢಿ ಘಾಲಿ ಛಂದ್ ನಡಿತಾವ್. ಎತ್ತಿನ್ಕೊಳ್ ಬಿಡು, ಮಿಳಿಸುತ್ಕೊ ಜಂತ್ಗಿ, ಖಿಳಿ ಖಟ್ಗಿ ಕುದ್ರಿಕಾಲ್ ಛಪ್ರಾಗ್ ಭೀಟು, ಚ್ಯಾಕ್ ಬಿಚ್ಕೋಣ್ನಡಿ ಘಿಸ್ಡ್ಯಾ ಬಂದಾನ್. ಚ್ಯಾಕ್ ಹಳ್ಗಕ್ ಬಂದಾವ್, ಎತ್ಗುಳಿಗಿ ಬಂದಾರಿಗ್ಬಿಟ್ಟು ಬೆಂಚ್ಯಾಗ್ ನೀರ್ಕುಂಡುಸ್ಕೋಣ್ಬರ್ತಾ; ಹೊತ್ರಳಿ ನ್ಹ್ಯಾರಿ ಯಾಳಿಗಿ ಕಟ್ಟಿದೆನ್ರಾ ಯಾಡ್ಬ್‌ರ್ ಬಾಳ್ಗಾ ಹಾಕ್ಕೊತ್ತೆತು”

ಈ ಮೇಲೆ ವಿವರಿಸಿದ್ದೆಲ್ಲ ಕನ್ನಡ ಭಾಷೆಯಿಂದಲೆ. ಇಲ್ಲಿಯ ದಲಿತರ ವಾಕ್ಯರಚನೆ ಈ ಕೆಳಗಿನಂತಿವೆ.

‘ಕವ್ ಮನ್ಯಾಗ್ ಠಾಕಾ ಕನಾಡಾನೆ ಆಡ್ತಾವ್
‘ಮೊದಿ ಮ್ಹೈನ್ – ದೋನ್ಹ್ಮೈ ನಾದಾಗೆ ಠರಾಸಾದ್ಮಾಡ್ರಿ’
‘ಕಲ್ಲಿ ಹೋಗಾದು ತೋಲ್ ಜರೂರಿ ಅದಾ’
‘ಕಿಂವ್ಯಾಗ ಭೆಂಢೋಳಿ ತೊಟ್ಕೊ ತಾಳ್ ನೋಡು
‘ಜರಾ ಪೋರಿ ಬಗ್ಗಡ ಹಳಾ’
‘ನಿನ್ನ ಹೊಯ್ತಿದ ಪನ್ ನಂಭಾಬಿ ರೊಕಾಸ್ದುಳ್’
‘ಧಂದ್ಯಾನೇ ಮಾಡಾಲ್ ಮನಾರ್ ಘಸ್ಮುರ್‌ಹನಾ ಖರೆ’

ಬೀದರ ದಲಿತರು ಬಳಸುವ ಕೆಲವು ಗಾದೆಗಳು

“ಕುರಿ ತಿಂಬಾಕಿ ಹ್ವಾದುರ್ ಕ್ವಾಣ ತಿಂಬಾಕೆ ಬಂದಿಳಂತೆ”
“ಮನಿಗಿ ಮಜ್ಗಿಗಿ ಹ್ವಾದುರ್ ಮನಿ ಸಾರ್ಸಿ ಹೋಗಂದಿರಂತ”
“ಬಗ್ಸಿ ಭಾವುನ್ಕಡಿ ಹ್ವಾದುರ್ ಖಿಸ್ಗಾಲ್ ಮಗಾ ಹುಟ್ಟಿತಂತ್”
“ಆರ್ ಹಡ್ದಾಕಿನ್ಮುಂದ ಮೂರ್ ಹಡ್ಕಾಕಿ ಠಿಣ್‌ಕೀಳಂತ”
“ಸೆಬ್ಬಾಸ್ರೆ ಹೊಲ್ಯಾ ಅಂದುರ ಖೊಳ್ಕ ಬೇಲಿ ಹಾರಿನಂತ” ಇತ್ಯಾದಿ.

ಸೌಲಭ್ಯಾಕಾಂಕ್ಷೆಯಿಂದ ಬೀದರ ದಲಿತ ಕನ್ನಡ ಪದಗಳು ರೂಪದಲ್ಲಿ ವ್ಯತ್ಯಾಸ ಹೊಂದಿ ಪ್ರಯೋಗವಾಗುತ್ತಿರುವುದನ್ನು ನೋಡಬಹುದು.

ಉದಾ :

ರಾಮನು ಬಂದನು > ರ್ಹಾಮಾ ಬಂದ Rha:ma:band
ರಾಮ ಸೀತೆಯನ್ನು > ರ್ಹಾಮಾಸೀತಾಗ Rha:ma:si:ta:g
ರಾಮನದು > ರ್ಹಾಮುಂದ್ Rha:mund ಇತ್ಯಾದಿ.

ಹೀಗೆ ವಿಭಕ್ತಿ ಪ್ರತ್ಯಯಗಳು ಬಂದಿರುತ್ತವೆ. ಮತ್ತೆ ಕೆಲವು ಕಡೆ ವಿಭಕ್ತಿ ಪ್ರತ್ಯಯಗಳು ಪಲ್ಲಟವೂ ಆಗುವುದಲ್ಲದೆ ಅನ್ಯ ಪ್ರತ್ಯಯಗಳು ಸ್ವಾಭಾವಿಕ ಎಂಬಂತೆ ಬರುವುವು. ಗಪ್ಲೆ,’ಅಪ್ಲೆ’ / ಹಪ್ಲೆ’ ‘ಕಸಿ’ ‘ಅಸು’ ಅಲ್ಲಿ’ ಇತ್ಯಾದಿ

ಉದಾ :

ರಾಮನಂತೆ > ರ್ಹಾಮುನ್ಗಪ್ಲೆ Rha:mungaple
ಸೀತೆಯಂತೆ > ಸಿತಾನಲ್ಗೆ Sitanatli
ಹೋದನಂತರ > ಹೊಕ್ಕಾಸಿ hokko :si

ಬೀದರ ದಲಿತರ ಕನ್ನಡದಲ್ಲಿ ಕ್ರಿಯಾಪದದೊಡನೆ ಸಂಬಂಧವನ್ನು ನಿರೂಪಿಸುವ ವಿಭಕ್ತಿ ರಚನೆಯನ್ನು ಒಂಬತ್ತು ಪ್ರಕಾರವಾಗಿ ಗುರುತಿಸಬಹುದು. ಪ್ರಥಮಾದಿಂದ ಸಪ್ತಮಿ ಮತ್ತು ೮ನೆಯದು ತರಭಾವ ಸೂಚಕ ವಿಭಕ್ತಿ ೯ನೆಯದು ಸಹತ್ವ ಸೂಚಕ ವಿಭಕ್ತಿ ಪ್ರಥಮಾ ವಿಭಕ್ತಿ ಸೂಚಿಸುವ ಪ್ರತ್ಯೇಕವಾದ ಪ್ರತ್ಯಯ ರೂಪ ಬೀದರ ದಲಿತರಲಿಲ್ಲ.

ಪ್ರಥಮಾ ವಿಭಕ್ತಿ : ಉದಾ:

ನಾನು ಬಂದೆನು > ನಾ ಬಂದ, na:band
ಅದು ಬಂದಿತು > ಅದು ಬಂತು adu bantu
ನೀರು ತುಂಬಿತ್ತು > ನೀರ್‌ಥುಂಬ್ತು nI:r thunbtu ಇತ್ಯಾದಿ

ದ್ವಿತೀಯಾ ವಿಭಕ್ತಿಯನ್ನು ಸೂಚಿಸಲು ಚತುರ್ಥಿ ವಿಭಕ್ತಿಯನ್ನೇ ಬಳಸುತ್ತಾರೆ.

ಉದಾ :

ಹುಡುಗನಿಗೆ ಕರೆ > ಪಾರಗ್ಕರಿ pa:rgkarl
ಅಪ್ಪನನ್ನು ಕರೆ > ಅಪ್ಪುಗ್ಕರಿ appugkarI ಇತ್ಯಾದಿ.

ತೃತೀಯ ವಿಭಕ್ತಿ :

ಬೀದರ ದಲಿತರ ಕನ್ನಡದಲ್ಲಿ ಈ ವಿಭಕ್ತಿ ಪ್ರತ್ಯಯವನ್ನು ಸೂಚಿಸಲು – ಲೇ ಎಂಬ ಪ್ರತ್ಯಯ ಬಳಸುವ ರೂಢಿಯಿದೆ.

ಉದಾ :

ಬಸ್ಸಿನಿಂದ ಬಂದೆ > ಬಸ್ಸಿಲೇ ಬಂದ bassiLe band
ಕೈಯಿಂದ ಬಡಿದೆ > ಕೈಲೇ ಬಡ್ಡ KaILe badd

ಚತುರ್ಥಿ ವಿಭಕ್ತಿ :

ಈ ಮೇಲೆ ವಿವರಿಸಲಾದ ದ್ವಿತೀಯ ವಿಭಕ್ತಿ ಇಲ್ಲಿ ಬಳಸಲಾಗುತ್ತದೆ. ಗ್‌ಗಿ, -ಇಗಿ, -ಕ್ ಹಾಗೂ ಇಕ್ ಎಂಬ ರೂಪಗಳು ಬಳಸಲಾಗುತ್ತದೆ. ಉದಾ:

ನಾಳೆ > ನಾಳಿಗಿ na:!gi, ಅಪ್ಪನಿಗೆ > ಅಪ್ಪುಗ್ appug ದುಕಾನಕೆ > ದುಕಾನ್ಕ್ duka:nk, ಇತ್ಯಾದಿ.

ಪಂಚಮಿ ವಿಭಕ್ತಿ :

ಇಲ್ಲಿ ತೃತೀಯ ವಿಭಕ್ತಿ ಪ್ರತ್ಯಯವಾದ – ಲೇ

ಉದಾ :

ಮನೆಯಿಂದ > ಮನಿಲಿಂದ > ಮಲಿಂದ manilind/manind ಎಕಾರದಲ್ಲಿ ಕೊನೆಗೊಳ್ಳುವ ಪದಗಳು ಇಂದು ಪ್ರತ್ಯಯವನ್ನು ಸ್ವೀಕರಿಸುತ್ತವೆ.

-‘ಲೇ’ ಕೆ ಉದಾ : ಹಾಲಿನಿಂದ > ಹಾಲಿಲೇ ha:lile
ಕಟ್ಟಗೆಯಿಂದ > ಖಟ್ಗಿಲೇ Khatgile. ಇತ್ಯಾದಿ

ಷಷ್ಠಿ ವಿಭಕ್ತಿ :

ಇದಕ್ಕೆ ಪ್ರತ್ಯೇಕವಾದಗ ರೂಪವಿಲ್ಲ. ಆದರೂ ಇನ್ ಪ್ರತ್ಯಯ ಬಳಕೆಯಲ್ಲಿದೆ.

ಉದಾ :

೧. ನಾಳೆಯ ಮಾತು > ನಾಳಿನ್ಮಾತು na:!inma:tu
೨. ನಿನ್ನೆಯ ಗುಣ > ನಿನ್ನಿನ್ ಗುಣ ninninguna:
೩. ಡಾಂಬರಿನ ಕಲೆ > ಡಾಂಬರ್ ಡಾಗ್ da:mbarda:g
೪. ಕಿಟಕಿಯ ಬಣ್ಣ > ಖಿಡ್ಕಿ ಬಣ್ಣ Khid kibanna ಇತ್ಯಾದಿ.

ಈ ಮೇಲಿನ ಉದಾಹರಣೆಗಳಲ್ಲಿ ಮೊದಲೆರಡರಲ್ಲಿ ‘ಇನ್’ ಪ್ರತ್ಯಯವಿದೆ. ೩ ಮತ್ತು ೪ನೇ ಉದಾಹರಣೆಗಳಲ್ಲಿ ಯಾವ ಪ್ರತ್ಯಯವೂ ಹಚ್ಚದೇ ವಾಕ್ಯರಚನೆ ಮಾಡುವುದು ಗಮನಿಸಬಹುದು.

ಸಪ್ತಮಿ ವಿಭಕ್ತಿ :

ಈ ವಿಭಕ್ತಿ ಪ್ರತಿನಿಧಿಸಲು ‘-ಆಗ’ ಪ್ರತ್ಯಯ ಬಳಸಲಾಗುತ್ತದೆ. ಕೆಲವು ಕಡೆ ‘-ಆಗ’ ಬಂದುದು ಉದಾಹರಣೆಗಳುಂಟು.

ಉದಾ :

ಮನಿ+ಆಗ್ > ಮನ್ಯಾಗ man೫g
ಗುಡಿ+ಆಗ > ಗುಡ್ಯಾಗ gud೫g
ಕಂಬ+ಆಗ್ > ಖಂಬುದಾಗ್ Khamduda:g
ಕಲ್ಲ+ಆಗ್ > ಕಲ್ಲಾಗ್ Kalla:g

ಸ್ಥಳ ನಿರ್ದೇಶಿಸಲು ‘ಬಲ್ಲಿ’ ‘ಒಳಗ್’, ‘ಮ್ಯಾಕ್’ , ‘ಮ್ಯಾಗ್’ ‘ಮ್ಯಾಕ್ಕತ’, ಬಾಜು ಎಂಬ ಉಪ ಸರ್ಗಗಳೂ ಬಳಸಲಾಗುತ್ತದೆ.

ಉದಾ : ಮನಿ ಬಲ್ಲಿ, ಮನಿವಳಗ್, ಮನಮ್ಯಾಕ್, ಮನಿಮ್ಯಾಲ್, ಮನಿಮ್ಯಾಗ್, ಮನಿಮ್ಯಾಕ್ಕತ, ಮನಿಬಾಜು ಇತ್ಯಾದಿ.

ತುಲನಾತ್ಮಕ ಪ್ರತ್ಯಯ

ತುಲನೆ ಮಾಡಿ ಹೇಳುವುದು ‘-ಕಾ’ ‘-ಖಿನ್ನಾ’ ಪ್ರತ್ಯಯಗಳು ಬಳಕೆಯಲ್ಲಿವೆ.

ಉದಾ :

ಅವನಿಗಿಂತ ದೊಡ್ಡವನು > ಅವುನ್ಕಾ ಧೊಡ್ಡಾವ್ avunka:dhoddasv
ಅವಳಿಗಿಂತ ಸುಂದರ > ಆಕಿನ್ಖಿನ್ನಾ ಚದುರ a:kinkhinna chedur

ಸಹಸೂಚಕ ಪ್ರತ್ಯಯ

ಜೊತೆಯಾಗಿ ನಡೆಯುವ ಕ್ರಿಯೆಯನ್ನು ಸೂಚಿಸುವುದು ಔರಾದ ತಾಲೂಕಿನ ದಲಿತರಲ್ಲಿ ‘ಸಂಗಟ್’ ಎಂದು ಭಾಲ್ಕಿ ತಾಲೂಕಿನ ದಲಿತರಲ್ಲಿ ‘ಸರಿ’ ಬೀದರ ತಾಲೂಕಿನ ದಲಿತರಲ್ಲಿ’ಸಂಗ್ಟ್’ ಹುಮನಾಬಾದ್, ಬಸವ ಕಲ್ಯಾಣ ಕಡೆ ‘ಗುಡ’ ಎಂಬ ಪ್ರತ್ಯಯಗಳನ್ನು ಬಳಕೆಯಲ್ಲಿವೆ.

ಉದಾ:

ನನ್ನ ಜೊತೆಗೆ ಅವನೂ ಬಂದನು > ನನ್ಸರಿ ಅಂವ ಬೀ ಬಂದ
”           ”           > ನನ್ಗುಡ         ”
”           ”           > ನನ್ಸಂಗ್ಟ್       ”
”           ”           > ನನ್ಸಂಗಟ್     ”           ಇತ್ಯಾದಿ

ಕೆಲವು ಕಡೆ ‘ಸೋಬ್ತಿ’ ಎಂಬ ಪ್ರತ್ಯಯವೂ ಬಳಕೆಯಲ್ಲಿದೆ.

ಸಮಯವನ್ನು ಸೂಚಿಸುವುದು:

ಉದಾ :

ಮುಂಜಾನೆ > ಮುಜೆಳಿ, ಮುಂಜೇಳಿ, ಮುಂಜಿಲಿ, ನ್ಹ್ಯಾರಿಯಾಳಿ, ಹೊತ್ರಾಳಿ, ಗಜರ್‌ದಮ್, ರ್ಹಾಮಪರಯ್

ನಸುಕು > ಮಸುಕು, ಖೆಂಪ್‌ಹರಿಲಾಕ್, ಕೋಲಿ ಕೂಗ್ಲಾಕ್, ಮೂಡುಲ್ದಾಗ್

ಮದ್ಯಾಹ್ನ > ಮದ್ಯಾಣ, ಖಡಿಬಾರಾ

ಸಂಜೆ > ಛಂಜಿಪಾರಿ, ಮುರ್ಘೇಂಜಿ, ತೀನ್ಪಾರ್

ತುಸುಹೊತ್ತು > ಚುಟ್ಟಾ ಬಿಗ್ಯಾಟ್ಕೆ, ಉಚ್ಚಿಹೊಯ್ಯಾಟ್ಕೆ, ಒಂದಮ್

ಮನೆಯ ಪರಿಸರದ ಸೂಚಿಸುವ ಪದಗಳು:

ಝಗ್ಲಿ, ಗೋರ್ಝೆಗ್ಲಿ, ಮ್ಹಾಳ್ಗಿ,ಮ್ಹಾಡಾ, ಫಡ್ಸಾಲಿ, ಫರ್ಖಾನಿ,

ಢೊಲೊಜಿ, ಮ್ಹಾಡಿ, ಖೊಲ್ಲಿ, ಭೋಯರ್, ದೋಮಜಲಿ

ಉರಿ ಹೊಂಟಾಮ್ ಎಂದರೆ ಜ್ವರ ಬರುತ್ತವೆ. ಬೀದರ ಜಿಲ್ಲೆಯ ಭಾಷಾ ಚಿಂತಕ ‘ಉರಿಹೊಂಟಾವ’ ಎನ್ನುವಲುದೇ ಸೂಕ್ತ ಎನ್ನುತ್ತಾರೆ.

ವಿಶೇಷ ಭಕ್ಷಗಳು

ಬಾನಾ, ಆಂಬೂರ್, ಅಂಬ್ಲಿ, ಸೆಂಡ್ಗಿ, ಘಟ್ಯಾನ್ಪಲ್ಯ

ಸುರ್ಖುಬಾ, ಕರಂಜಿ ಇತ್ಯಾದಿ.

ಧಾನ್ಯಗಳ ಉಚ್ಛಾರಣೆ

ದೊಡ್ಡ್‌ಜ್ವಾಳ್, ಫುಂಡಿ, ಕಳ್ವಿ, ಖಪ್ಲಿ, ಭಟಾಣಿ

ಕಾಯಿಗಳು

ಸೊತೆಕಾಯ್, ಗುಡ್ಮಿನ್ಕಾಯ, ಮಟ್ಕಿನ್‌ಕಾಯ್,

ಊಷ್ಮಗಳಲ್ಲಿಯ ಸ ಕಾರವೊಂದೆ ಬಳಕೆಯಲ್ಲಿದೆ.

ಉದಾ :

ಅಷ್ಟು > ಅಟ್ಟು, ಓಟ್, ಒಸ್ಸು
ಇಷ್ಟು > ಇಟ್ಟು, ಇಸ್ಸು    ಇತ್ಯಾದಿ.

ಇಲ್ಲಿ ಸಜಾತಿಯ ದ್ವಿತ್ವ ಬರುತ್ತವೆ. ಇಲ್ಲವಾದರೆ ಪದಾದಿಯ ಸ್ವರ ದೀರ್ಘೀಕರಣಗೊಳ್ಳುವುದು ಗಮನಿಸಬಹುದು.

‘ಹ’ಕಾರ ಲೋಪ ಕೆಲವು ಕಡೆ ಆಗುವುದು ಗಮನಿಸಬಹುದು.

ಉದಾ :

ತಹಸೀಲ > ತಸೀಲ್. ಮಹಿಮೆ > ಮೈಮೆ, ಸಿಹಿ > ಸೈ
ಕಹಿ > ಖೈ, ವಹಿವಾಟ್ > ವೈವಾಟ್ ಇತ್ಯಾದಿ.

ಬೆಂಗಳೂರು ‘ಕಣೊ’/’ಕಣೆ’, ರಾಯಚೂರು ಬಳ್ಳಾರಿ ‘ಲೇ’ ಇಲ್ಲಿ ‘ಗ’ ರೂಪ ತಾಳುತ್ತದೆ. ಇದು ಮರಾಠಿಯಿಂದ ಬಂದಿದೆ. ಮರಾಠಿಗರಲ್ಲಿ ಸ್ತ್ರೀಯರನ್ನು ಸಂಬೋಧಿಸುವ ರೂಪ. ಆದರೆ ಬೀದರ ದಲಿತ ಕನ್ನಡದಲ್ಲಿ ಸ್ತ್ರೀಪುರುಷರಿಗೂ ಹತ್ತುತ್ತದೆ: ಹಿರಿಯರು, ಯಜಮಾನರು ಕಿರಿಯರಿಗೆ ಸೇವಕರಿಗೆ ‘ಗ’ ಪ್ರತ್ಯಯದಿಂದ ಸಂಬೋಧಿಸುತ್ತಾರೆ.

ಉದಾ:

ಬಾ :- ಬಾಗ, ಹೋಗು :- ಹೊಗ್ಗ, ಮಾಡು:- ಮಾಡ್ಗ
ಓದು :- ಓದ್ಗ, ಬೀದರ ತಾಲೂಕಿನ ಕಡೆ, ಗೆ ಆಗುತ್ತದೆ.

ಗಂಡನು ಯಜಮಾನಿಕೆಯಿಂದ ಹೆಂಡತಿಗೆ ‘ಗ’ ಕಾರ ಪ್ರತ್ಯಯಿಂದ ಸಂಬೋಧಿಸುತ್ತಾನೆ. ಬೀದರ ದಲಿತರ ವ್ಯಕ್ತಿನಾಮಗಳಲ್ಲಿ ಭಿನ್ನತೆ ಇದ್ದುದು ಕಾಣುತ್ತದೆ.

ಸ್ತ್ರೀಯರು ಹೆಸರುಗಳು

ಉದಾ :

ರುಕ್ಮಿಣ > ರುಕ್ಕಾ, ಅನುಸುಯ > ಅನು, ವಿಷ್ಣುಬಾಯಿ > ಇಟಾ, ಕೋಂಡಾಬಾಯಿ > ಕೋಂಡಾ, ರಾಜಾಬಾಯಿ > ರಾಜು, ಲಕ್ಷ್ಮಿಬಾಯಿ > ಲಕ್ಷಾ

ಪುರುಷರ ಹೆಸರುಗಳು

ಉದಾ :

ಗಣಪತಿ > ಗಣು, ಮನೋಹರ > ಮನು, ಮರಿಯಪ್ಪಾ > ಮರು
ಭಿವಾಜಿ > ಭಿಯ್ಯಾ, ವಿಠಲ > ಇಟು

ಕೆಲವು ವಿಶಿಷ್ಟ ಪದಗಳು

ಲಾಗುಟ್ < ಪ್ರಿಯಕರು, ಓಡ್ಹೋಗ > ಗಂಡು ಹೆಣ್ಣು ಯಾರಿಗೂ ಗೊತ್ತಾಗದಂತೆ ಹೋಗುವುದು. ಘುಂಬ-ವಂಶ ಹಾಳಾದುದು

ಜಾತಲ್ – ಚಲನೆಯಲಿಲ್ಲದು, ಗಿನ-ಎಚ್ಚರಿಕೆ (ನಾ ನಡ್ಡಿದ ಬಂದಿಗಿನ)
ತಾಗಂತಿ – ವರ್ಷದ ತಿಂಗಳುಗಳು, ನಾಬತ್ – ಸ್ತ್ರೀಯರ ಮೂತ್ರಪಿಂಡ

(ಔರಾದ), ಕಳಕ – ಸ್ಫುಟ, ಇತ್ಯಾದಿಗಳು ವಿಫುಲವಾಗಿ ಬಳಕೆಯಲ್ಲಿದೆ.

ಕೆಲವು ಅನುಕರಣ ಪದಗಳು

೧. ಗುಡುಗಿನ ಸದ್ದು – ಘಢಡಡ,
೨. ನೀರು ಹರಿಯುವ ಶಬ್ದ – ಧಢಡಡ
೩. ಮಿಂಚಿನ ಆರ್ಭಟ – ಛಳಾಛಲ್
೪. ಸುಟ್ಟುದ್ದು – ಚ್ಯೆಟ್
೫. ನಡಿಗೆ – ಭರ್‌ಭರ್
೬. ಅಂಜಿಕೆ – ಥರ್‌ಥರ್
೭. ಮಜ್ಜಿಗೆ ಕಡಿತ – ಭರ್ ಭರ್
೮. ಬರವಣಿಗೆ – ಕರ್‌ಖರ್
೯. ಕುಣಿತ – ಥೈಥೈ

ಬೀದರ ದಲಿತ ಕನ್ನಡದ ಬೈಗಳು

“ಮಾನವನು ಸಿಟ್ಟಿಗೇರಿ ರೌದ್ರಾವತರಾ ತಾಳಿ ಕೋಪದ ಕಿಡಿ ನುಡಿಯನ್ನು ತನ್ನ ಬಾಯಿಯ ಮುಖಾಂತರ ಕಾರುವ ಅವಾಚ್ಯ ಪದಗಳೇ ಬೈಗಳು” ಈ ಬೈಗಳು ಮುಖ್ಯವಾಗಿ ೧. ನಾಮಪದಗಳಿಂದ ಕೂಡಿದ ಬೈಗಳು, ೨. ಹೋಲಿಕೆ ಮಾಡಿ ಬೈಯ್ಯುವ ಬೈಗಳು ಹಾಗೂ ೩. ಲೈಂಗಿಕ ಬೈಗಳು ಎಂದು ಮೂರು ಭಾಗವಾಗಿ ವಿಂಗಡಿಸಬಹುದು.

೧. ನಾಮಪದಗಳಿಂದ ಕೂಡಿದ ಬೈಗಳು : ಇಂಥ ಬೈಗಳಿಂದ ದಲಿತರಿಗೆ ಕೋಪವೇ ಬರುವುದಿಲಲ. ಇವು ಬೀದರ ದಲಿತರಲ್ಲಿ, ಸಹಜ, ಇದರಲ್ಲಿ ಅ.ಗಂಡಸರ ನಾಮಪದ ಬೈಗಳು, ಬ.ಹೆಂಗಸರ ನಾಮಪದ ಬೈಗಳೆಂದು ವಿಭಾಗಿಸಬಹುದು.

ಆ. ಕತ್ತಿಹಂತಾದು, ಖ್ವಾಣದಂಥದು, ಢೊಳ್ಯಾ, ಠೊಣ್ಯ ಇತ್ಯಾದಿ

ಬ. ಛಿನಾಲಿ, ಖಜ್ಯಾಳಿ, ಒಢಾಳಿ, ಭೋಸ್ಡಿ ಇತ್ಯಾದಿ.

. ಹೋಲಿಕೆ ಮಾಡಿ ಬಯ್ಯುವ ಬೈಗಳು

ನಿನ್ಧೀಪಾ ಅಡಗ್ಲಿ, ನಿಂಘ್ವಾಡಿಗ್ ಘೂಟಾಹುಡಿಲಿ, ನಿಂದಾಣಿನಾ ಅಗಳ್ಳಿ, ಇತ್ಯಾದಿಯಾಗಿ ಲಿಂಗದ್ವಯರು ಒಂದೇ ರೀತಿಯ ಬೈಗಳು ಬೈಯ್ಯುವರು.

. ಲೈಂಗಿಕ ಬೈಗಳು

ಇವುಗಳಲ್ಲಿಯೂ ಗಂಡಸರ ಬೈಗಳು ಮತ್ತು ಹೆಂಗಸರ ಬೈಗಳೆಂದು ವಿಭಾಗಿಸಲು ಸಾಧ್ಯವಿದೆ.

ಅ. ಗಂಡಸರು: ನಿನ್ಮನಾವದಿನಾಹಡಾ,.. ನಿನ್ನವ್ವುssನ್ ….ದಾಗ

ನಿನ್ತಂಗಿಗಿನಾ….., ನಿನ್ನವ್ವುssನ್ ನಿನಗ ಗಿಡ್ಬಚ್ಚಿಹಡತಾ…….

ಬ. ನಿನ್….ನಾ ಒಣ್ಕಿ/ಬಡ್ಗಿ, /ಘೂಟಾ ಘಡಸ್ಲಿ, ನಿನ್ಕೆಚ್ಚೆನಾ

ಅಗಳ್ಳಿ, ನಿಂಗ್ ಗಾಡೆ ಛಂದ್ ಹಡ್ತಾನ್ ಲವ್ಡಿ, ಗೌಡುರ್ ಆಳ್ಮನ್ಸ್ಯನ್ ಮುಂದ್ ಅಡ್ಡ ಬಿದ್ದಿಂದ್ಬೋಸ್ಡಿ ಇದ್ದಿನೀ….ಇತ್ಯಾದಿಯಾಗಿ ಹೆಂಗಸರು ಹೆಂಗಸರಿಗೆ ಬಯ್ಯುತ್ತಾರೆ. ಗಂಡಸರಿಗೆ ಬಯ್ಯುವುದಿಲ್ಲ. ಹಾಗೆ ಬೈದರೆ ಆ ಬೈಗಳು ಬೈದಾಕೆಗೆ ಹತ್ತುತ್ತವೆ. ಹಾಗಾಗಿ ಅವರು ಗಂಡಸರಿಗೆ ಲೈಂಗಿಕವಾಗಿ ಬೈಯ್ಯುವುದಿಲ್ಲ.

ಗಂಡಸರು ಗಂಡಸರಿಗೆ : ಸೂಳಿಮಗಾ, ಭೋಸ್ಡಿಮಗಾ, ರಂಡಿಮಗಾ

ಗಂಡಸರು ಹೆಂಗಸರಿಗೆ : ಬೋಸುಡ್‌ಛೋದಿ, ಸುಳಿ, ಖಜಾಳಿ ಇತ್ಯಾದಿ

ದನಕರುಗಳಿಗೆ ಹೆಂಗಸರು

ಯಾ ಛಿನಾಲಿದಿದ್ದಿ? ಯಾ ಹಾಟ್ಯಾ ಸಲ್ವಾನ್‌ನಿಂಗ್, ಖಜಾಳಿಮತ್, ಯಾರ್ಮುಂದ್ ಅಡ್ಡಬಿದ್ದು ತಂದದೋ.

ಗಂಡಸರು : ‘ಏಯ್….ನಿಂಧೊರ್ತಿನಾ ಹಡಾ, ಏಸ್ ಹುಳಾವ ನಿಂಧೊರ್ತಿಗಿ?

ಯಾ ರಂಡಿ ಮಗುಂದಿದ್ದಿ, ನಿಂಧೋರ್ತಿನಾಹಡಾ ಇತ್ಯಾದಿ.

ಬೀದರ ದಲಿತರಲ್ಲಿ ಅವಾಚ್ಛ ಬೈಗಳು ಬಹಳೇ ಇವೆ. ಕುಡಿದು ಬಂದು ಹೆಂಡತಿಗೆ ಬೈಯ್ಯುವುದಂತು ಹೇಳತೀರದು.

ದಲಿತ ಮಹಿಳೆಯರು ತಮ್ಮ ಗಂಡಂದಿರೆಗೆ ಬಹುವಚನದಿಂದ ಸಂಬೋಧಿಸುತ್ತಾರೆ. ಹುಮನಾಬಾದ, ಬೀದರ ತಾಲೂಕಿನ ಕೆಲವು ಕಡೆ ಏಕ ವಚನದಿಂದ ಸಂಬೋಧಿಸುತ್ತಾರೆ. ಕಿರಿಯರು ಹಿರಿಯರನ್ನು ತಂದೆ ತಾಯಿಯನ್ನು ಏಕವಚನದಿಂದಲೇ ಮಾತಾಡಿಸುವರು. ಬನ್ನಿ > ಬಾ, ಅಲ್ಲಿ ಏಕೆ ಕೂತಿದ್ದಿರಿ > ಅಲ್ಯಾಕ್ಖುಂತಿದಿ.

ದಲಿತರ ನುಡಿಗಟ್ಟುಗಳು

ನುಡಿಗಟ್ಟುಗಳು ಭಾಷೆಯ ಜೀವಾಳ ಇವುಗಳ ರೂಢಿಯನ್ನು ಗಮನಿಸಿಯೇ ಅರ್ಥವನ್ನು ತಿಳಿಯಬೇಕು. ೧. ಸಾಮಾನ್ಯ ನುಡಿಗಳು ೨. ವಿಶಿಷ್ಟ ನುಡಿಗಳು ಎಂದು ವಿಭಾಗಿಸಬಹುದು.

ಉದಾ : ೧. ತೊಗುಲ್ ಯಳೀಕ್ ಅದಾ, ಪೋರಿ ಯಳೀಕ್ ಅದ, ಪಲ್ಯ (ಯಳ ಗರುವಿನ ಮೌಂಸ) ಯಳೀಕ ಅದ, ಗಿಡಾ ಯೇರ್, ಇತ್ಯಾದಿ ಇಲ್ಲಿ ಯಳೀಕ ಅಂದರೆ ಕೋಮಲ, ಪ್ರೌಢಾವಸ್ಥೆಯ ಪೂರ್ವ:

ಉದಾ ೨ : ನಾಯ್ಜಲ್ಮ, (ಝಲ್ಮ), ಗೂಗಿ ಖುಂತುದ್, ರ್ಹಾಮರ್ಯಾಜ ಬರಮ್ಗಂಟ್, ಖರಿಖಾಗಿ (ಕರಿಖಾಗಿ) ಇತ್ಯಾದಿ.

ಲಿಂಗ ವ್ಯವಸ್ಥೆ

ತ್ರಿಲಿಂಗ ಏಕವಚನಕ್ಕೆ ೧. ಪುಲ್ಲಿಂಗ-ಹನಾ/ಹಾನ್, ೨. ಸ್ತ್ರೀಲಿಂಗ-ಹಳಾ/ಹಾಳ್, ೩. ನಪುಂಸಕಕ್ಕೆ – ಅದಾ/ಆದ್ ಇತ್ಯಾದಿ.

ತ್ರಿಲಿಂಗ ಬಹುವಚನಕ್ಕೆ

೧. ಪುಲ್ಲಿಂಗ – ಹರಾ-ಹಾರ್, ೨. ಸ್ತ್ರೀ.ಲಿಂ. ಹರಾ/ಹಾರ್ ನ.ಪು. ಆವ್/ಅವಾ ಇತ್ಯಾದಿ.

-ಯಾನ್ -ಆನ್ ಪ್ರತ್ಯಯ :- ಮುತ್ಯಾಂದ್, ತಾತ್ಯಾಂದ್. ಹೆಣ್ತಿದ್

ಇಂದ್/ಉಂದ್/ಅಂದ್ ಪ್ರತ್ಯಯ :- ಅಕ್ಕುಂದ್, ತಂಗಿದ್, ಹಚ್ಚಾಂದ್, ಖರ್ರ‍ಂದ್ ಮ್ಹೆವ್ನಿಂಗ್, ಸಾಲಿಂದ್, ಬೆಂಪಾಂದ್ ಇತ್ಯಾದಿ.

ನಪುಂಸಕ :- ಏ.ವ.ಟ        ಬ.ವ
ಖಡ್ಡಿ    ಖಡಿಗುಳ್
ಖುಳ್    ಖುಳ್ಗುಳ್
ಖಟ್ಕಿ     ಖಟ್ಕಿಗುಳ್

ಪುಲ್ಲಿಂಗ ತದ್ಧಿತ ಪ್ರತ್ಯಯ:

ಉದಾ : ಇಗ್ಯಾ – ಘಾಣ್ಗ್ಯಾ, ಹಲ್ಗ್ಯಾ, ಉಪ್ಪುಣ್ಗ್ಯಾ
ಗಾರ್ – ಬಳ್ಗಾರ್, ಸಮ್ಗಾರ್, ಮಣ್ಗಾರ್
ವಂತ – ದಸವಂತ್ ಗುಣವಂತ

ಸ್ತ್ರೀಸೂಚಕ ತದ್ಧಿತ ಪ್ರತ್ಯಯ

ಉದಾ : ಅತಿ – ಅಗಸಾಲ್ತಿ, ಮಾದುಗ್ತಿ, ಹೊಲ್ತಿ
ಅರ್ತಿ-ಪತಿವರ್ತಿ, ಸಾವುಕಾರ್ತಿ
ಗಿತ್ತಿ – ಹಾದರ್‌ಗಿತ್ತಿ, ಪಾತರಗಿತ್ತಿ, ಗವಳಗಿತ್ತಿ

ಕ್ರಿಯಾಸೂಚಕ ತದ್ಧಿತ ಸ್ತ್ರೀಸೂಚಿ ಪ್ರತ್ಯಯ

ಉದಾ : ಆಕಿ – ಖುಂತಾಕಿ ಒದ್ರಾಕಿ
ಆಕಿ – ಹುಡ್ಯಾಕ, ಹೊಯ್ಯಾಕೆ, ಒಗ್ಯಾಕೆ

ಧಾತುವೇ ನಾಮಪದವಾದುದುಕ್ಕೆ

ಥಂಡಿ, ಥಡಿ, ಭಿಕ್ಕು, ಧಾಟ್, ಛಿಡಿ

ಕಾಲ ಸೂಚಕ ಪ್ರತ್ಯಯಗಳು

ಉದಾ : ಭೂತ : ಖುಂತ್, ಮಾಡ್ಕೊಂಡ್, ಕೊಯ್ದ್ ಹೊಕ
ವರ್ತಮಾನ : ‘ತಿದ’ ಪ್ರತ್ಯಯ ಹತ್ತುತ್ತದೆ. ಸವುರ್ಸಲತಿದ, ಹಿಕ್ಲತಿದ,
ಭವಿಷ್ಯ : ‘ತಾ’ಪ್ರತ್ಯಯ, ಖೂಡ್ತಾ, ಒಗಿತಾ, ಸುಡ್ತಾ, ಖಪ್ಪುಸ್ತಾ, ಅನ್ತಾ.

ಸತಿ ಸಪ್ತಮಿ

ಕುಳ್ಬಾನ್ ಒಟ್ಲಾಕ್ ಮಳಿ ಬಿತ್
ಇರ್ಳಿ ಹಚ್ಲಾಕ್ ಮಾಡಾ ಘಧ್ರುಸ್ತ್
ಉರಿ ಹಚ್ಚಿನ್ಮ್ಯಾಲ್ ಹಾವ್ ಬಂತ್
ಫಡ್ಕಿ ಹೊಲ್ಪಿನ್ಮಾಲ್ ತೊಟ್ಕೊಂಡ

ಕರ್ಮಿಣೀ ಪ್ರಯೋಗ

ಘಚ್ಚಿನ್ ಘ್ವಾಡಿ/ಘೋಡಿ ಅದಾ
ಘಚ್ಚಿನ್ ಘ್ವಾಡಿ/ಘೋಡಿ ಕಟ್ಸ್ಯಾನ್

ಕ್ರಿಯಾ ವಿಶೇಷಣಗಳು

ಕ್ರಿಯಾಪದಗಳನ್ನು ವರ್ಣಿಸುವ ಪದಗಳನ್ನು ಕ್ರಿಯಾ ವಿಶೇಷಗಳೆನ್ನುತ್ತಾರೆ. ಇದರಲ್ಲಿ ಸಹಜ, ತದ್ದಿತ, ಪ್ರಶ್ನಾರ್ಥಕ, ವಾಕ್ಯಾರ್ಥಕ ಕ್ರಿಯಾ ವಿಶೇಷಣಗಳೆಂದು ಭಾಗಿಸಬಹುದು.

ಸಹಜ : ಧೂರ, ಕಲ್ಲಿ, ಕಿಲ್ಲಿ, ಕೀಟು ಕೋಟ್
ತದ್ಧಿತ : ಸೆಣ್ಣುದ್, ಧೊಡ್ಡುದ್, ಘಟ್ಟ್ಯಾಂಡ್, ಖೆಂಪಾಂದ್
ಪ್ರಶ್ನಾರ್ಥಕ : ಯಾಕಾ ? ಏಟು? ಖರ್ನೇ, ಹುಂದಾ? ಹಾಂಗಾ? ಯಾನು?

ವಾಕ್ಯಾರ್ಥಕ : ಇಡಿಯ ವಾಕ್ಯದಲ್ಲಿ ಒಂದಕ್ಕಿಂತ ಹೆಚ್ಚು ವಿಶೇಷಣಗಳು ವರ್ಣಿಸುತ್ತಿದ್ದರೆ ಅದನ್ನು ವಾಕ್ಯಾರ್ಥ ಎಂದು ಭಾವಿಸಬೇಕು.

ಉದಾ : ಅವಾ ಫಕಾ ಫಕಾ ಬುಕ್ದ್, ಕಕಿ ಭಡಾಭಡಾ ನಡ್ದುಳ್
ಕವಾ ಛಂದ್ ಧಮ್‌ಹನಾ,
ವರ್ಣವಾಚಕ ವಿಶೇಷಣಗಳು : ಖರ್ರ‍ಂದ್, ಖೆಂಪಾಂದ್, ಬೆಳ್ಳಾಂದ್, ಘಂದದ್ಬಣ್ಣ
ಗುಣವಾಚಕ ವಿಶೇಷಣಗಳು : ಮೆತ್ತಾಂದ್, ಘಟ್ಯಾಂದ್, ಥಣ್ಣಾಂದ್, ಖಟೂರ್
ಪ್ರಮಾಣವಾಚಕ ”            :           ತೋಲ್, ಬಕ್ಕಳ್, ಢಿಗಾರಿ, ಪುಸ್ಕಳ್, ಢಿಗ್ಗಿ, ಥ್ವಾಡೆ
ಸಂಖ್ಯಾವಾಚಕ ”  : ಪೈಲಿ, ದುಸ್ತಿ, ತೀಸ್ರಿ, ಧಾವಿ, ಇಪ್ಪತ್ನೆ
ರುಚಿ ಸೂಚಕ ”     : ಬೈ, ಖಮ್ಮುಗ್, ಖಾಕಾ, ರುಚಿ ಇತ್ಯಾದಿ
ಇಲ್ಲಿ ‘ರುಚಿ’ ಪದ ಸಿಹಿ- (ಟೇಸ್) ಎಂಬರ್ಥ ಸೂಚಿಸುತ್ತದೆ.
ಆಕಾರ ಸೂಚಕ ವಿಶೇಷಣಗಳು : ಊಚಾಂದ್, ಗೋಲ್, ಟೆಂಗಿಸೋಟ್, ಖಡ್ಡಿಯೋಟ್
ನಿರ್ದೇಶನಾ ”       : ಕಲ್ಲಿಂದು, ಕಿಲ್ಲಿಂದ್, ಕಿಕಡಿಂದ್, ಕಕಡಿಂದ್
ನಾಮವಾಚಕ ”     : ಪೊರಾಬಟ್ಟಿ, ಕೆಸ್ರಿನೆತ್ತ್, ಖರ್ಬನ್ ಗಡ್ಗಿ
ಅಂತರ ಸೂಚಕ ”  :ಧೂರ್, ಬಲ್ಲಿ, ಸನಿ
ಕ್ರಿಯಾವಾಚಕ ”    :ಓಡಾಪೋರಿ, ಓಡಾಪಾರ್

ಬೀದರ ಜಿಲ್ಲೆಯ ದಲಿತ ಕನ್ನಡಿಗರ ಉಪಜೀವನದ ಬಗ್ಗೆ ಇತ್ಯಾದಿ ಹೇಳುವುದು ಅನಿವಾರ್ಯ.

ಹೊಲೆಯರು

ಸತ್ತಸುದ್ಧಿ ಮುಟ್ಟಿಸುವುದು, ಸೆಗಣಿ ಬಳಿಯುವುದು ಮಾಡುತ್ತಾರೆ. ಹೀಗಾಗಿ ಇವರು ಹೆಂಡಿಹೊಲ್ಯ, ಹೆಂಡಿಹೊಲ್ತಿ, ಸುಗ್ಗಿ ಕಾಲದಲ್ಲಿ ರಾಸಿಕಣದಲ್ಲಿ, ಹೊಲದಲ್ಲಿ ಕಣ್ತಪ್ಪಿ ಬಿದ್ದ ಕಾಳುಗಳು ಆಯ್ದು ಜೀವನ ನಡೆಸುತ್ತಾರೆ.

ಮಾದಿಗರು

ಸತ್ತ ದನ ಹೊತ್ತೊಯ್ದು ಚರ್ಮ ಸುಲಿದು ಡೋಹಾರನಿಗೆ ಮಾರಿ ದನದ ಮಾಲಿಕನಿಗೆ ಹಣ ತಂದು ಕೊಡುವುದು ಮಾಡಿದರೆ ಅವರು ರೂಪಾಯಿಗಳನ್ನು ಪವಿತ್ರೀಕರಿಸಿ ಐದೋ, ಹತ್ತೊ ಇವನ ಬೊಗಸೆಗೆ ಒಗೆಯುತ್ತಾರೆ; ಸೆಗಣಿ ಬಳಿಯುವುದು. ಮಿಳಿ (ಚರ್ಮದ ಹಗ್ಗ) ಮಾಡುವುದು, ಒಬ್ಬ ಮಾಲಿಕನ ಹತ್ತಿರ ಜೀತಕೆ ಇದ್ದಂತೆ ಇರುವುದು ಮಾಡುತ್ತಾರೆ. ಇದಕ್ಕೆ ಮಾದುಗತಾನ್ ಎಂದು ಕರೆಯುತ್ತಾರೆ. ಸುಗ್ಗಿ ಸಮಯದಲ್ಲಿ ಹೊಟ್ಟಿನಲ್ಲಿದ ಕಾಳುಗಳು ಕಣದಲ್ಲಿರುವ ಕಾಳುಗಳು ತೂರಿ, ಗುಡಿಸಿ ತಂದ ಕಾಳುಗಳಿಂದ ಜೀವನ ನಡೆಸುತ್ತಾರೆ.

ಸಮಗಾರರು

ಡೋಹರನಲ್ಲಿಂದ ಚರ್ಮ ತಂದು ಚಪ್ಪಲಿ ಮೆಟ್ಟುಗಳು ಮಾಡಿ ಮಾಲಿಕರಿಗೆ ಒಪ್ಪಿಸಿ ಹಣ ಪಡೆಯುವುದು, ಹರಿದ ಪಾದರಕ್ಷೆಗಳು ಹೊಲಿದು ಪಾಲಿಶ್ ಮಾಡಿ ಜೀವನ ನಡೆಸುತ್ತಾರೆ.

ಹಾಗಾಗಿ ಇವರ ಹೊಟ್ಟೆಯೇ ಇವರಿಗೆ ಭಾರವಾಗಿರುತ್ತದೆ. ಹಾಗಾಗಿ ದೇಶದ ಬಗ್ಗೆಯೂ ತನ್ನ ಊರಿನ ಬಗ್ಗೆಯೂ ಚಿಂತಿಸುವುದಿಲ್ಲ. ಚುನಾವಣೆಯಲ್ಲಿ ತನ್ನ ಧಣಿಯು ಸೂಚಿಸಿದ ಪಕ್ಷಕ್ಕೆ ಮತ ಚಲಾಯಿಸುತ್ತಾರೆ. ಅನಕ್ಷರಸ್ತರಿದ್ದುದರಿಂದ ಸಾಹಿತ್ಯಕ, ಪೌರಾಣಿಕ, ತಾಂತ್ರಿಕ ಯಾವ ವಿಷಯಗಳು ಇವರಿಗೆ ಗೊತ್ತಿಲ್ಲ. ಮೇಲ್ವರ್ಗದವರು ಯಾವ ವಿಚಾರಗಳು ಇವರೊಂದಿಗೆ ಹಂಚಿಕೊಳ್ಳುವುದಿಲ್ಲ. ಮುಸ್ಲಿಂರ ಮೊಹರಂ ಹಬ್ಬದಲ್ಲಿ ಮಾದಿಗರ ಬಾಜಾ, ಹೊಲೆಯರ ಕುಣಿತ ನೋಡುವಂಥದ್ದು. ಮೊಹರಂ ಪದಗಳು ಜಾತಿದ್ವಯರು ಹಾಡುತ್ತಾರೆ. ಒಳ್ಳೆಯ ಸ್ವರ ಇವರಿಗೆ ದೈವದತ್ತ. ಹಾಡಲು ಇವರು ಊರಿನಿಂದೂರಿಗೆ ಹೋಗುವರು. ನಾ ಮೇಲು ನೀಮೇಲು ಎಂದು ಹಾಡಿನ ಮೂಲಕ ಸವಾಲ್ ಜವಾಬ್ ನಡೆಸುತ್ತಾರೆ. ಇಂಥ ಪ್ರಸಂಗ ಮೇಲ್ವರ್ಗದವರೂ ತಲೆ ತೂಗಿಸುವಂಥದ್ದು. ಒಂದು ಉದಾಹರಣೆ ಈ ಕೆಳಗೆ ನೋಡಬಹುದು.

ಖಿಲಿದೊಳಗೆ ಮುರ್ನೂರು ಸಂದಾ
ಸಂದಿನೊಳಗೆ ಗಿಡ ಒಂದೊಂದಾ
ಗಿಡದಾಗ ಗಿಡಾ ಅವ ಯೇಸು ಕುಲ
ನೀರು ಹತ್ಯದ ಯೇಸು ಕೊಡಾ
……………………………….
……………………………….
ಸೈ ಜವಾಬ್ ಮಾಡೊ ನಮ್ಮ ಸಮ್ಮತಾ.

ಈ ಹಾಡಿಗೆ ಖೆಲ್ಲೆಯೆಂದರೆ ಒಂದು ವರ್ಷ ಗಿಡಗಳು ದಿವಸಗಳ ಇತ್ಯಾದಿ ಹಾಡಿನ ಮುಖಾಂತರವೆ ಉತ್ತರ ಕೊಡುವರು. ಉತ್ತರ ಕೊಟ್ಟವನು ಪ್ರಶ್ನೆ ಮಾಡುತ್ತಾನೆ. ಹೀಗೆ ಮುಂದುವರಿದ ಮೇಲೆ ಒಗಟುಗಳಿಗೆ ಉತ್ತರ ಬಾರದಿದ್ದರೆ ಅವನಿಗೆ ಛೀಮಾರಿ ಹಾಕುವುದು, ಅವನ ಗುರುವಿಗೆ ಬಯ್ಯುವುದು ನಡೆಯುತ್ತದೆ.

ಉದಾ : ಯಾಕೋ ತಮ್ಮಾ | ಮಾತಾಡಿತಿ ನೀ
ಧಮ್ಮ ಧಮ್ಮಾ | ಸೈ ನಿನ ಕುಂಡ್ಯಾಗ್ ಹುಡದಿನೋ
ಕುಂಟಿ ರುಮ್ಮಾ ||೨||

ತಕ್ಕಡ ತೋಡಿ ಯಂದಾರಾ ಸಭಾದಾಗ ಹಾಡಿಗೀಡಿ
ಪರಸಂಗ ಬಿದ್ದರ ಓಡಿ ಗೀಡಿ
ಸೈ ಕಡದು ಬಟ್ಟಿದಾ ಹೋಗೋ
ಚೊಲಾಣಿಲಾಡಿ ||೨||

ಇತ್ಯಾದಿ ಹಾಡುಗಳು

ಒಟ್ಟಾರೆಯಾಗಿ ಹೇಳುವುದಾದರೆ ಈ ಮೂರೂ ಜಾತಿಗಳು ಮೇಲ್ವರ್ಗದ ಸಹಾಯಕ್ಕೆಂದು ಹುಟ್ಟಿದ್ದಾರೆನೋ ಎಂಬಂತಿವೆ. ಇತ್ತೀಚೆಗೆ ಶಿಕ್ಷಣ ಸೌಲಭ್ಯದಿಂದಾಗಿ ಪಟ್ಟಣಾವಲಂಬಿಯಾಗಿ ಹಳೆಯ ಸಂಪ್ರದಾಯಕ್ಕೆ ವಿದಾಯ ಹೇಳಿದ್ದಾರೆ. ಆದರೆ ಹಳ್ಳಿಯಲ್ಲಿ ವಾಸಿಸುವವರಿಗೆ ಇದು ಅನಿವಾರ್ಯ. ದಲಿತರು ಮೇಲ್ವರ್ಗದವರೊಂದಿಗಿದ್ದರೂ ಭಾಷೆಯಲ್ಲಿಯ ವ್ಯತ್ಯಾಸದ ಸ್ತರವನ್ನು ಗುರುತಿಸುವುದೇ ಈ ಲೇಖನದ ಉದ್ದೇಶ.

ಟಿಪ್ಪಣಿ

೧. ಚಿದಾನಂದ ಮೂರ್ತಿ ಎಂ., “ಭಾಷಾವಿಜ್ಞಾನದ ಮೂಲತತ್ವಗಳು”, ಡಿ.ವಿ.ಕೆ. ಮೂರ್ತಿ.ಪ್ರ. ಮೈಸೂರು.

೨. ಮುರಗೆಪ್ಪಾ, ಎ., “ಬೀದರ್ ಜಿಲ್ಲೆಯ ಕನ್ನಡ”, ಕ.ಸಾ.ಪ.ಬೆಂಗಳೂರು.

೩. ಮುರಗೆಪ್ಪಾ. ಎ., “ಬೀದರ್ ಕನ್ನಡ”, ಕ.ಸಾ.ಪ. ಬೆಂಗಳೂರು.

ಆಕರಗಳು

೧. ಮುರಿಗೆಪ್ಪ. ಎ., ೨೦೦೬, “ಬೀದರ ಜಿಲ್ಲೆಯ ಕನ್ನಡ”, ಕ.ಸಾ.ಪ. ಬೆಂಗಳೂರು

೨. ಸಂಗಮೇಶ ಸವದತ್ತಿಮಠ, ೨೦೦೩, “ಕನ್ನಡ ಭಾಷಾ ಸ್ವರೂಪ”, ರೂಪ ರಶ್ಮಿ ಪ್ರಕಾಶನ, ಕಲಬುರ್ಗಿ.

೩. ಚಿದಾನಂದಮೂರ್ತಿ.ಎಂ., ೧೯೯೮, “ಭಾಷಾವಿಜ್ಞಾನದ ಮೂಲತತ್ವಗಳು”, ಡಿ.ವಿ.ಕೆ. ಪ್ರಕಾಶನ, ಮೈಸೂರು.

೪. ತಮಿಳ್ ಸೆಲ್ವಿ, ೨೦೦೬, “ದ್ರಾವಿಡ ಮೂಲ – ಕನ್ನಡ ತಮಿಳು”, ಕ.ಸಾ.ಪ.ಬೆಂಗಳೂರು

೫. ಶಂಕರಭಟ್. ಡಿ.ಎನ್., ೧೯೯೫, “ಕನ್ನಡ ಭಾಷೆಯ ಕಲ್ಪಿತ ಚರಿತ್ರೆ” ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೬. ಶಿವಾನಂದ.ವಿ., ೧೯೮೭, “ಕನ್ನಡ ಆಕೃತಿಮಾ”, ಧ್ವನಿ ಪತಿಮಾ ಪ್ರಕಾಶನ, ಗುಲಬರ್ಗಾ.

೭. ಪೆರ್ಲಿಕೃಷ್ಣಭಟ್, ೨೦೦೪, “ಅಪಭ್ರಂಶ ಕನ್ನಡ”, ಕ.ಸಾ.ಪ., ಬೆಂಗಳೂರು.

೮. ಮಹಾದೇವಯ್ಯ.ಪಿ., ೨೦೦೦, “ಸಾಮಾಜಿಕ ಉಪಭಾಷೆ”, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೯. ನಾರಾಯಣ.ಕೆ.ವಿ. (ಸಂ), ೨೦೦೦, “ಕನ್ನಡ ವಿಶ್ವವಿದ್ಯಾಲಯ ವಿಶ್ವಕೋಶ-೧”, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೧೦. ವೈಜನಾಥ ಭಂಡೆ, ೧೯೯೨. “ಬೀದರ ಜಿಲ್ಲೆಯ ಸ್ಥಳನಾಮಗಳು ಒಂದು ಸಾಂಸ್ಕೃತಿಕ ಅಧ್ಯಯನ”, ಪಿ.ಎಚ್.ಡಿ. ಮಹಾಪ್ರಬಂಧ ಅಪ್ರಕಟಿತ.

೧೧. ಶ್ರೀನಿವಾಸ ಬೇಂದ್ರೆ, ೨೦೦೨, “ಬೀದರ ಕನ್ನಡ ಸಾಮಾಜಿಕ ಹಾಗೂ ಪ್ರಾದೇಶಿಕ ಪ್ರಭೇದಗಳು ಒಂದು ಭಾಷಾಶಾಸ್ತ್ರೀಯ ಅಧ್ಯಯನ” ಪಿಎಚ್.ಡಿ.ಮಹಾಪ್ರಬಂಧ ಅಪ್ರಕಟಿತ.

೧೨. ಸೋಮನಾಥ ನುಚ್ಚಾ, “ಬೀದರ ಜಿಲ್ಲೆಯ ಕೋಲಾಟ ಒಂದು ಅಧ್ಯಯನ”, ಪಿಎಚ್.ಡಿ. ಮಹಾಪ್ರಬಂಧ ಅಪ್ರಕಟಿತ.

೧೩. ಶ್ರೀನಿವಾಸ ಬೇಂದ್ರೆ (ಸಂ.), “ಬೀದರ ಜಿಲ್ಲೆಯ ಮೋಹರಮ್ ಪದಗಳು ಪದಗಳು”, ಅಪ್ರಕಟಿತ.

೧೪. ಶ್ರೀನಿವಾಸ ಬೇಂದ್ರೆ, (ಸಂ), “ಬೀದರ ಜಿಲ್ಲೆಯ ಜನಪದ ಹಾಡುಗಳು”, ಅಪ್ರಕಟಿತ.