ಭಾಷೆ ಮಾನವ ಸಮಾಜಕ್ಕಿಂತಲೂ ಹಳೆಯದು. ಪ್ರಾಣಿಗಳಲ್ಲೂ ಭಾಷೆ ಇದೆ. ಆದರೆ ತುಂಬಾ ಅಭಿವೃದ್ಧಿ ಹೊಂದಿದ ಭಾಷೆ ಮನುಷ್ಯರ ಭಾಷೆ. ಒಂದು ಜೇನುನೊಣ ಹೂವಿನಲ್ಲಿ ಬಹಳ ಸ್ವಾದವಾದ ತುಪ್ಪ ಇದೆ ಎಂದು ಗೊತ್ತಾದಾಗ ಒಂದು ರೀತಿಯ ಶಬ್ದ ಮಾಡುತ್ತಾ ಹಾರಾಡುತ್ತಾ ಬರುತ್ತೆ. ಅದರಿಂದ ಇತರ ನೊಣಗಳಿಗೆ ವಿಷಯ ತಿಳಿಯುತ್ತೆ. ಭಾಷೆ ಎಂದರೆ ಇದೇ. ಆ ಧ್ವನಿ ಮತ್ತು ಆ ರೀತಿಯ ಸುತ್ತುವಿಕೆಯಿಂದ ಓಹೋ ಕಂಡಿದೆಯಂತೆ ನಮಗೆ ಹೇಳ್ತಾ ಇದೆ ಹೋಗೋಣ ಅಂತ ಉಳಿದ ನೊಣಗಳು ಹೊರಡ್ತವೆ. ಸೈದ್ಧಾಂತಿಕವಾಗಿ ಅಧ್ಯಯನ ಮಾಡ್ದಾಗ ಆ ಜೇನುನೊಣದ ಭಾಷೆಗೆ ಒಂದು ವ್ಯಾಕರಣ ಇದೆ ಅಂತ ಗೊತ್ತಾಗ್ತದೆ. ಹಾಗೇನೇ ಹಕ್ಕಿ ಮತ್ತು ಇತ್ಯಾದಿ ಪ್ರಾಣಿಗಳಲ್ಲೂ ಭಾಷೆ ಇದೆ.

ಮನುಷ್ಯರಿಗಿಂತಲೂ ಮುಂಚೆ ಪ್ರಾಣಿಗಳ ಅಸ್ತಿತ್ವ ಇತ್ತು ಎನ್ನುವ ಡಾರ್ವಿನ್‌ನ ವಿಕಾಸವಾದವನ್ನು ಒಪ್ಪುವುದಾದರೆ ಭಾಷೆ ಮನುಷ್ಯನಿಗಿಂತ ಮೊದಲು ಹುಟ್ಟಿದೆ ಎಂದು ಹೇಳ್ಬಹುದು. ಮನುಷ್ಯನೂ ಸೇರಿ ಎಂಬತ್ತುನಾಲ್ಕು ಲಕ್ಷ ಜೀವಿಗಳು ಒಟ್ಟಿಗೆ ಬಂದ್ವು ಅನ್ನೋ ವಾದ ಕೂಡ ಇದೆ. ಅದು ಬೇರೆ ಪ್ರಶ್ನೆ. ಒಟ್ಟಿನಲ್ಲಿ ಭಾಷೆ ಮನುಷ್ಯನಿಗಿಂತ ಬಹಳ ಹಳತಾದುದು ಅಂತ ಹೇಳ್ಬಹುದು. ಇನ್ನು ಪದ ಮನುಷ್ಯ ಸಮಾಜದಲ್ಲಿ ಮಾತ್ರ ಇದೆಯೇ ಅಂದ್ರೆ ಅದೂ ಇಲ್ಲ. ಕೆಲವು ಹಕ್ಕಿಗಳು ಕೂಡ ತಮ್ಮದೇ ಆದ ಪದವನ್ನು ಬಳಸ್ತವೆ. ಈ ವಿಕಾಸವಾದರಲ್ಲಿ ಪ್ರಾಣಿಗಳಲ್ಲಿ ಇಲ್ದೇ ಇರುವ ಮನುಷ್ಯನಿಗೆ ಮಾತು ವಿಶಿಷ್ಟವಾಗಿರೋದು ಏನೂಂತ ನೋಡ್ತಾ ಹೋದಾಗ ತಿಳಿಯುವುದೇನೆಂದ್ರೆ; ಭಾಷೆ ಪ್ರಾಣಿಗಳಲ್ಲೂ ಇದೆ. ಮನುಷ್ಯನಲ್ಲೂ ಇದೆ. ಸಮೂಹ ಪ್ರಾಣಿಗಳಲ್ಲೂ ಇದೆ, ಮನುಷ್ಯನಲ್ಲೂ ಇದೆ. Well Developed Society ಇರುವೆಗಳಲ್ಲೂ ಇದೆ. King Ant, Queen Ant, Scrvent Ant. ನೋಡಿ ಎಂತಾ ಒಂದು ಸಾಮಾಜಿಕ ಶ್ರೇಣಿ ಇದೆ ಅಲ್ಲಿ. ಹೀಗೆ ಭಾಷೆ, ಸಮಾಜ ಇವೆ‌ಲ್ಲ ಮನುಷ್ಯನಿಗೆ ವಿಶಿಷ್ಟವಾದುದಲ್ಲ. ಮನುಷ್ಯನಿಗೆ ಇರುವ ಒಂದು ವಿಶಿಷ್ಟತೆ ಎಂದರೆ ಬರವಣಿಗೆ, ಇದು ಯಾವ ಪ್ರಾಣಿಗಳಲ್ಲೂ ಇಲ್ಲ. ಯಾವ ಪ್ರಾಣಿ ಕೂಡ ತನ್ನ ಅನುಭವವನ್ನು ಕಾಲಲ್ಲೋ, ಮರದ ಮೇಲೋ, ಕಲ್ಲಲ್ಲೋ ಕೆತ್ತಿ ಇಟ್ಟಿಲ್ಲ. ಮನುಷ್ಯನಿಗೆ ಮಾತ್ರ ಈ ಬರವಣಿಗೆ ಭಾಷೆ ಇದೆ.

ದಲಿತರು ಅಂತ ಬಂದಾಗ ಸಮಾಜ, ಭಾಷೆ ಅಂತ ಬರುತ್ತೆ. ದಲಿತರು ತುಳಿತಕ್ಕೆ ಒಳಪಟ್ಟವರು, ನಿರ್ಲಕ್ಷ್ಯಕ್ಕೆ ಒಳಪಟ್ಟವರು. ಈಗ ಹುಟ್ಟಿರೋ ವಾದದಲ್ಲಿ ಭಾಷೆ ಕಲಿತರನ್ನು ಮತ್ತಷ್ಟು ಪ್ರತ್ಯೇಖಿಸುತ್ಯೇ ಅಂತಕ್ಕಂತಹದ್ದು. ಇಂತಹ ವಿಷಯವನ್ನು ಚರ್ಚೆ ಮಾಡೋದಿಕ್ಕೆ ಈ ಒಂದು ಗಾಬರಿ, ಈ ಒಂದು ಆತಂಕವೇ ಕಾರಣವಾಗಿದೆ ಅಂತ ನಾನು ಅಂದ್ಕೊಂಡಿದ್ದೀನಿ. ಈಗ ಶಿಕ್ಷಣದಲ್ಲಿ, ಆಡಳಿತದಲ್ಲಿ ಭಾಷೆಯ ಯಾವ ವ್ಯವಸ್ಥೆಯನ್ನು ಕಂಡ್ಕೊಳ್ಳೋಕೆ ನೋಡ್ತಾ ಇದ್ದೀವಿ. ಈ ವ್ಯವಸ್ಥೆ ದಲಿತರನ್ನು ಒಂದು ಗೂಡಿಸತ್ಯೇ, ದಲಿತನನ್ನು ಇನ್ನಷ್ಟು ಸಮಾನತೆಗೆ ತೆಗೆದುಕೊಂಡು ಹೋಗುತ್ಯೇ, ದಲಿತನನ್ನು ಪ್ರತಿಷ್ಠೆಗೆ ಕರ್ಕೊಂಡು ಹೋಗುತ್ಯೇ ಅಥವಾ ದಲಿತನನ್ನು ಪ್ರತ್ಯೇಕಿಸುತ್ಯೇ, ಇನ್ನಷ್ಟು ತುಳಿತಕ್ಕೆ ಒಳಪಡಿಸುತ್ಯೇ, ಇನ್ನಷ್ಟು ಅಸಮಾನತೆಗೆ ಒಡ್ಡುತ್ಯೇ ಅನ್ನುವ ಆತಂಕ ಎಲ್ಲೊ ಒಂದು ಕಡೆ ಇಂತಹದೊಂದು ಚರ್ಚೆಗೆ ಕಾರಣವಾಗಿರಬಹುದು. ವಿಶ್ವವಿದ್ಯಾಲಯ ಮಟ್ಟದಲ್ಲಿ ಎಲ್ಲರೂ ಕೂತ್ಕೊಂಡು ವಿದ್ವತ್ ಪೂರ್ಣ ಚರ್ಚೆ ಮಾಡ್ತಾ ಇದ್ದಾರೆ,ಸ್ವಾಭಾವಿಕವಾದದ್ದು ಅಂಕಿ ಅಂಶಗಳನ್ನು ಆಧಾರವಾಗಿಟ್ಕೊಂಡು ವಿಶ್ವವಿದ್ಯಾಲಯಗಳು ಈ ಚರ್ಚೆಗಳನ್ನು ಮಾಡ್ಲೇಬೇಕಾಗುತ್ತದೆ. ಈ ಸಮಸ್ಯೆಗೊಂದು ಪರಿಹಾರವನ್ನು ಕಂಡುಕೊಳ್ಬೇಕಾಗುತ್ತೆ. ಯಾವುದೇ ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತೆ. ಪರಿಹಾರ ಇಲ್ಲಾಂದ್ರೆ ಅದು ಸಮಸ್ಯೆ ಅಂತ ಕರ್ಕೋಳ್ಳೋದಿಲ್ಲ. ಹಾಗೆಯೇ ಈ ಸಮಸ್ಯೆಗೂ ಪರಿಹಾರ ಇದೆ. ಈಗ ಪ್ರಶ್ನೆ ಅಂತ ಹೇಳ್ತೇವೆ. ಉತ್ತರ ಇದ್ರೆನೇ ಪ್ರಶ್ನೆ ಉದ್ಬವಿಸೋದು. ಆ ದೃಷ್ಟಿಯಿಂದ ಇದಕ್ಕೂ ಒಂದು ಪರಿಹಾರ ಇದೆ. ನಾವು ಎಲ್ಲರೂ ಒಟ್ಟಾಗಿ ಕಂಡ್ಕೊಳ್ಬೇಕು. ಆ ದೃಷ್ಟಿಯಿಂದ ಇದು ಚರ್ಚೆ ಆಗ್ಬೇಕು. ಚರ್ಚೆ ಆಗಿ ಒಮ್ಮತಕ್ಕೆ ಬರ್ಬೇಕು ಅನ್ನೋ ದೃಷ್ಟಿಯಿಂದ ನಾನು ಹೇಳ್ತಾ ಇದ್ದೇನೆ. ಈ ಪ್ರತ್ಯೇಕತೆ ಅನ್ನೋದು ಯಾಕೆ? ಭಾಷೆ ಮತ್ತು ಪ್ರತ್ಯೇಕತೆ ಯಾಕೆ ಆಗ್ತಾ ಇದೆ? ದಲಿತರ ಭಾಷೆ ಕನ್ನಡ ಆಗಿರ್ಲಿಲ್ವೇ? ದಲಿತರಲ್ಲೂ ಬಹಳ ಪಂಗಡಗಳಿವೆ. ನನ್ಗೆ ಗೊತ್ತಿದೆ. ಭಾಷೆಯಲ್ಲೂ ಕರ್ನಾಟಕ ದಲಿತರಲ್ಲಿ ಪಂಗಡ ಇದೆಯಂತೆ, ತಮಿಳು ದಲಿತರು, ಕ್ರಿಶ್ಚಿಯನ್ ದಲಿತರು, ತೆಲುಗು ಮಾತನಾಡೋ ದಲಿತರು, ಕನ್ನಡ ಮಾತನಾಡೋ ದಲಿತರು ಅಂತ ಅದೊಂದು ದುರಂತವೇ. ದಲಿತರು ಒಗ್ಗಟ್ಟಿನಿಂದ ಇದ್ದು ದಲಿತರು ಕನ್ನಡ ಮಾತಾಡೋದು ಅಂತ ಆದ್ರೆ ಅದೊಂದು ಪ್ರಶ್ನೆ. ಒಬ್ಬ ತಮಿಳು ಮಾತಾಡುವ ದಲಿತ ಕನ್ನಡದ ಬಗೆ ವಿರೋಧ ಮಾಡ್ದಾಗ ಅದು ಬೇರೆ ಅರ್ಥ ಬಂದು ಬಿಡುತ್ತೆ. ಭಾಷೆ ದಲಿತ ಅನ್ನೋ ಅರ್ಥ ಬರೊಲ್ಲ ಆದಕ್ಕೆ ಪ್ರಾಂತೀಯ ಅರ್ಥ ಬರುತ್ತೆ. ಇದೊಂದು ದುರಂತ. ಈ ಸಮಸ್ಯೆಗೆ ಹಲವು ಮಜಲುಗಳಿವೆ. ಬಹುಶಃ ಈ ಒಂದು ಮಜಲು ಅಂತಹ ಪರಿಣಾಮಕಾರಿ ಅಲ್ಲ. ತಮಿಳು ದಲಿತ ಕನ್ನಡ ಬೇಡ ಅನ್ನೋದು ಇದನ್ನೆಲ್ಲ ಬಹಳ ದೊಡ್ಡದಾಗಿ ತಗೊಳ್ಬಾರ್ದು. ಆದ್ರಿಂದ ದಲಿತ ಅಂತ ಒಂದು ಯೂನಿಟ್ ಈ ಮಜಲುಗಳನ್ನು ನಾವು ಗಮನಕ್ಕೆ ತಗೋಬೇಕಾಗ್ತದೆ. ಯಾಕೆಂದ್ರೆ ನಮ್ಮ ಚರ್ಚೆಯಲ್ಲಿ ಈ ರೀತಿಯ ವೈರುಧ್ಯದ ಪ್ರೇರಣೆಗಳು ಇರ್ಬಹುದು. ನಾವು ಅದನ್ನ ಮೀರಿ ಚರ್ಚೆ ಮಾಡ್ಬೇಕಾಗುತ್ತೆ.

ನಾನು ಕುಲಪತಿಯಾಗಿ ಒಂದು ಐದಾರು ತಿಂಗ್ಳಲ್ಲಿ ವಿಶ್ವವಿದ್ಯಾಲಯದಲ್ಲಿ ನಾವು ಕಂಪ್ಯೂಟರನ್ನ ಕಂಪಲ್ಸರಿ ಅಂತ ಮಾಡಿದ್ವಿ. ಅಂಡರ್ ಗ್ಯ್ರಾಜ್ಯುಯೇಟ್‌ನಲ್ಲಿ ಪೋಸ್ಟ್ ಗ್ಯ್ರಾಜ್ಯುಯೇಟ್‌ನಲ್ಲಿ ಸಂಸ್ಕೃತವನ್ನು ಕಲೀತೀರಿ, ಪಿಜಿಕ್ಸ್ ಮುಂತಾದ ವಿಷಯಗಳನ್ನ ಕಲೀತೀರಿ ಅವುಗಳ ಜೊತೆಗೆ ಕಂಪ್ಯೂಟರ್ ಮ್ಯಾನ್ಡೇಟ್ ಅಂತ ಮಾಡಿದ್ವಿ. ಯಾಕೆಂದ್ರೆ ಅದೊಂದು ಸಬಲೀಕರಣದ ಕ್ರಿಯೆ ಅಂತ ನನಗನ್ನಿಸ್ತು. ಈಗಂತೂ ಎಲ್ಲೋದ್ರೂ ಕಂಪ್ಯೂಟರು. ಅದನ್ನ ಕಲ್ತುಕೊಂಡ್ರೆ ಇಂಟರ್‌ನೆಟ್ ಇತ್ಯಾದಿಯಿಂದ ತಮ್ಮನ್ನು ಪ್ರಪಂಚಕ್ಕೆ ತೆಗೆದಿಟ್ಟುಕೊಳ್ಳೋ ಸಾಧ್ಯತೆ ಇದೆ. ಶಿಕ್ಷಣದ ಮುಕ್ಯ ಗುರಿ ಅಥವಾ ಗುರುವಿನ ಮುಖ್ಯ ಗುರಿ ಏನಪ್ಪಾಂ ತಂದ್ರೆ ಶಿಷ್ಯನನ್ನ ಸ್ವತಂತ್ರವಾಗಿ ಬದುಕುವುದಕ್ಕೆ ಸಬಲನನ್ನಾಗಿ ಮಾಡುವುದು. ಅವನು ಯಾರ ಮೇಲೂ ಅವಲಂಬಿತನಾಗಿರ್ಬಾರ್ದು. ಹೀಗೆ ಅವನು ಅವಲಂಬಿತನಾಗಿದ್ರೆ ಪ್ರತಿಯೊಂದು ಸಮಸ್ಯೆ ಬಂದಾಗಲೂ ಗುರುವಿನ ಹತ್ರ ಬರ್ತಾನೆ. ಇಂತಹ ಶಿಕ್ಷಣ ಶಿಕ್ಷಣವಲ್ಲ. ಅದು ಮನುಷ್ಯನ ಸಬಲೀಕರಣ ಮಾಡೊಲ್ಲ. ಅದು ಮನುಷ್ಯನಿಗೆ ಶಕ್ತಿ ತುಂಬೊಲ್ಲ. ಹಾಗಾಗಿ ಅವನನ್ನ ಇಂಡಿಪೆಂಡೆಂಟ್ ಮಾಡ್ಬೇಕು ಅನ್ನೋ ದೃಷ್ಟಿಯಿಂದ ಕಂಪ್ಯೂಟರನ್ನ ಮ್ಯಾನ್ಡೇಟ್ ಮಾಡಿದ್ದು. ಸರಿ, ಈ ವ್ಯವಸ್ಥೆಯಿಂದಾಗಿ ಮುಂದೆ ಕಲಿಯೋ ವಿದ್ಯಾರ್ಥಿಗಳಿಗೆ ಅನುಕೂಲ ಆಯ್ತು. ಆದ್ರೆ ಹಿಂದೆ ಬಿ.ಎ., ಬಿ.ಎಸ್.ಸಿ., ಎಂ.ಎಂ., ಎಂ.ಎಸ್.ಸಿ. ಮಾಡಿ ಈಗ ಪಿಎಚ್.ಡಿ. ಮಾಡ್ತಾ ಇದ್ದಾರಲ್ಲ ಅವರಿಗೆ ಈ ಅವಕಾಶ ಇಲ್ವಲ್ಲ. ಅದಕ್ಕಾಗಿ ನಾನು ಹೇಳ್ದೆ: ಬೆಂಗಳೂರು ವಿಶ್ವವಿದ್ಯಾಲಯದ ಎಲ್ಲ ದಲಿತ ಸಂಶೋಧನ ವಿದ್ಯಾರ್ಥಿಗಳಿಗೆ ಇಪ್ಪತ್ತು ದಿವಸಗಳ ಬೇಸಿಕ್ ಕಂಪ್ಯೂಟರ್ ಬಗ್ಗೆ ಒಂದು ಸ್ಪೆಶಲ್ ವರ್ಕ್‌ಶಾಪ್ ಮಾಡಿ ಕಳ್ಸಿಕೊಂಡಿ ಅಂತ. ಅದರ ಮುಕ್ತಾಯ ಸಮಾರಂಭಕ್ಕೆ ನಾನು ಹೋಗಿದ್ದೆ. ಸರ್ಟಿಫಿಕೇಟ್ ಎಲ್ಲ ಡಿಸ್ಟ್ರಿಬ್ಯೂಟ್ ಮಾಡ್ಬೇಕಲ್ಲ ಅಂತ. ಆ ಸಮಯದಲ್ಲಿ ಒಕ್ಕೊರಲಿನ ಒಂದು ಮನವಿಯನ್ನ ಅವರು ನನ್ನಗೆ ಸಲ್ಲಿಸಿದ್ರು. ಅವರು ನೂರಿಪ್ಪತ್ತು ಜನರಿದ್ರೇನೋ. ನನಗೆ ಅವತ್ತು ಆಶ್ಚರ್ಯ ಆಯ್ತು. ಏನಂದ್ರೆ ಸಾರ್ ನೀವು ಕಂಪ್ಯೂಟರ್ ಏನೋ ಕಲ್ಸಿ ಕೊಟ್ರಿ. ನಮಗೆ ಅವಕಾಶ ಇರ್ಲಿಲ್ಲ. ಥ್ಯಾಂಕ್ಯೂ. ಆದ್ರೆ ನಮಗೆ ಇನ್ನೊಂದು ಅತ್ಯಂತ ತ್ವರಿತವಾದ ಬೇಡಿಕೆ ಇದೆ ಅಂತ. ಏನಪ್ಪಾಂತಂದ್ರೆ ನಮಗೆ ಇಂಗ್ಲಿಶ್ ಭಾಷೆ ಕಲಿಯೋಕೆ ಇಂತಹದೇ ಒಂದು ವರ್ಕ್‌‌ಶಾಪ್ ಮಾಡ್ಕೊಂಡಿ ಅಂತ. ನನಗಂತೂ ಆಶ್ಚರ್ಯ ಆಯ್ತು. ಹಾಸ್ಟೆಲ್‌ನಲ್ಲಿರುವ ಪಿಎಚ್‌.ಡಿ. ಮಾಡ್ತಿರುವಂತಹ ದಲಿತ ಸ್ಟೂಡೆಂಟ್ಸ್ ಈ ಮಾತನ್ನ ಹೇಳಿದ್ದು. ಬಹಳ ನೋವಾಯಿತು. ಖಂಡಿತವಾಗಿ ಮಾಡ್ತೇನಂತ ಹೇಳಿ, ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಅವರಿಗೆ ಇವರಿಗೊಂದು ಪ್ಯಾಕೇಜ್ ಮಾಡಿಕೊಡಿ ಅಂತ ಕೇಳ್ಕೊಂಡೆ.

ಜನರಲ್ ಇಂಗ್ಲಿಶ್ ಇವರಿಗೆ ಬೇಡ್ದೇ ಇರ್ಬಹುದು. ಪಿಎಚ್.ಡಿ. ಮಾಡ್ತಾ ಇದ್ದಾರೆ. ಇಂಗ್ಲಿಶ್ ಭಾಷೆ ಕಲಿಯಲು ಅವರಲ್ಲಿ ತುಡಿತ ನೋಡಿ. ಅಂದ್ರೆ ಬಹುಶಃ ಇಂಗ್ಲಿಶ್ ಬಾರದ್ರಿಂದ ಈ ಪೋಸ್ಟ್‌ ಗ್ರಾಜ್ಯುಯೇಟ್ ಸೆಂಟರ್‌ನಲ್ಲಿ ಎಷ್ಟು ದಿವ್ಸದಿಂದ ಏನೊಂದು ನೋವನ್ನು ಅನುಭವಿಸಿರ್ಬಹುದು ಇವರು. ಇಂಗ್ಲಿಶ್ ಬರದೇ ಇರೋದ್ರಿಂದ ಇವರಲ್ಲಿ ಕೀಳರಿಮೆ ಇರ್ಬಹುದು. ಆತ್ಮವಿಶ್ವಾಸ ಇಲ್ದೇ ಇರಬಹುದು. ಅವರು ಹೇಳೋ ರೀತಿ ನನ್ನನ್ನು ಬಹಳ ಕಲಕಿಬಿಡ್ತು. ಇಷ್ಟು ದಿವ್ಸ ಈ ಕೆಲ್ಸನ ಯಾಕೆ ಮಾಡ್ಲಿಲ್ಲ ಇವರು? ಬಹುಶಃ ಈ ಕೀಳರಿಮೆಯೆಂದಾಗಿಯೇ ಇದ್ದಿರ್ಬಹುದು. ಅಂಬೇಡ್ಕರ್, ಸಂವಿಧಾನ ಅವರ ಕಣ್ಣಮುಂದಿದೆ. ಇದೇ ಅವರಿಗೆ ಆತ್ಮಸ್ಥೈರ್ಯವನ್ನು ತಂದುಕೊಟ್ಟಿದೆ. Thanks to Ambedkar, Thanks to Constitution. ಇದರಿಂದಾಗಿ ಅವರು ಖಿನ್ನರಾಗಿಲ್ಲ. ಹಾಗಾಗಿ ಅವರ ಮೂಲೆಗೆ ಹೋಗಿಬಿಟ್ಟಿಲ್ಲ. ಆದರೆ ಒಂದು ರೀತಿಯ ರೋಷ ಅವರಲ್ಲಿದೆ. ಆ ರೋಷ ಏನಪ್ಪಾಂತಂದ್ರೆ; “ಪ್ರತಿಭೆ ನನಗೂ ಇದೆ ನಿನಗೂ ಇದೆ ಕಣಯ್ಯ, ಅದು ಯಾರ ಒಬ್ಬರ ಸ್ವತ್ತೂ ಅಲ್ಲ. ಇಂಗ್ಲಿಶ್ ಬರ್ತದೆ ಅಂತ ನೀನೇನೋ ಮಹಾ ದೊಡ್ಡೋನು ಅಂತ ಓಡಾಡ್ತಿದ್ದೀಯಲ್ಲ, ನನಗೆ ನಿನಗಿಂತಲೂ ಮೀರಿದ ಪ್ರತಿಭೆ ಇದೆ. ಆದ್ರೆ ಈ ಭಾಷೆ ಒಂದು ಅಡ್ಡ ಬರ್ತಿದೆ.” ಅನ್ನೋ ರೋಷದ ಧ್ವನಿ ಅವರ ಮನವಿಯಲ್ಲಿತ್ತು. ಅಥವಾ ನಾನು ಆ ರೀತಿ ವ್ಯಾಖ್ಯೆ ಕೊಟ್ಕೊಂಡೆ. ಈ ಬೇಡಿಕೆಗೆ ಹಲವು ಮಜಲುಗಳಿವೆ. ನಾನು ಅರ್ಥ, ಮಾಡ್ಕೊಂಡ ಮಜಲುವೇ ಸರಿ ಅಂತ ನಾನು ಹೇಳ್ತಾ ಇಲ್ಲ. ಅದು ಚರ್ಚೆ ಆಗ್ಬೇಕಾಗಿದೆ. ಮನವಿ ಬಂತಲ್ಲ ಅಂತ ನಾನು ರೀಜನಲ್ ಇನ್‌ಸ್ಟಿಟ್ಯೂಟ್‌ಗೆ ಹೇಳ್ದೆ. ಅವರು ಒಂದು ಪ್ಯಾಕೇಜ್ ಮಾಡಿಕೊಟ್ರು. ಒಂದು ತಿಂಗಳ ಒಂದು ಕೋರ್ಸನ್ನ ನಾವು ವಿದ್ಯಾರ್ಥಿಗಳಿಗೆ ಕೊಟ್ಟೆ. ಅದು ಬೇರೆ ಪ್ರಶ್ನೆ. ಅವಾಗ್ಲೇ ನನಗೆ ಅನ್ಸಿದ್ದು ಈ ಭಾಷೆಗೆ ಹಲವು ಮಜಲು ಇದೆ, ಹಲವು ಅರ್ಥ ಇದೆ. ಭಾಷಾಭಿಮಾನದ ಒಂದೇ ಅರ್ಥ ಇದಕ್ಕೆ ಕೊಡ್ಬಾರ್ದು ಅಂತ.

ತನ್ನ ವ್ಯಕ್ತಿತ್ವ ವಿಕಾಸ, ಸಮಾನತೆ ಮತ್ತು ಜಾಗತಿಕ ಮಟ್ಟದಲ್ಲಿ ನನ್ನನ್ನು ಸ್ಪಂದಿಸ ಕೊಡೋದು ಇವು ಮೂರು ಅರ್ಥ ಭಾಷೆಗಿದೆ. ಭಾಷೆ ಅದನ್ನು ತೆಗೆದುಕೊಳ್ತೇ, ಭಾಷೆ ಅವನಿಗೆ ಲಿಂಕ್ ಕೊಡುತ್ತೋ ಅನ್ನೋದು ಬೇರೆ ಪ್ರಶ್ನೆ. ನನ್ನ ಪ್ರಕಾರ ಕೊಡುತ್ತೆ ಅವನು ಯಾವ ಒಂದು ಆತಂಕದಿಂದ ಈ ಮೂರನ್ನು ಬಯಸ್ತಾನೋ ಅದನ್ನು ಭಾಷೆ ಕೊಡುತ್ತೆ. ಭಾಷೆನೇ ಎಲ್ಲವನ್ನು ಕೊಡದಿರಬಹುದು. ಆದರೆ ಭಾಷೆ ಒಂದು ಮುಖ್ಯ ಸಾಧನೆ ಅಥವಾ ಅಸ್ತ್ರ. ಆ ದೃಷ್ಟಿಯಿಂದ ದಲಿತರು ಕನ್ನಡ ಒಂದನ್ನೇ ನೆಚ್ಚಿಕೊಂಡಿದ್ರೆ ಅಸಹಾಯಕತೆಯಿಂದ ಗಾಬರಿಯಾಗ್ತಾರೆ. ಈಗ ಬಂದಿರೋ ಪ್ರಶ್ನೆ ಅಷ್ಟೇ. ಕನ್ನಡ ಮಾಧ್ಯಮ, ಕನ್ನಡದಲ್ಲೇ ಕಲೀಬೇಕು. ಕನ್ನಡ ಒಂದನ್ನೇ ಓದ್ಬೇಕು ಅಂತ. ಹೀಗೆ ಕನ್ನಡ ಒಂದನ್ನೇ ಅವಲಂಬಿಸಿದ್ರೆ ದಲಿತ ಗಾಬರಿಯಾಗ್ತಾನೆ. ಅವನು ಭಾಷೆ ಮತ್ತು ಸಮಾಜದಲ್ಲಿ ಇನ್ನಷ್ಟು ಪ್ರತ್ಯೇಕಗೊಳ್ತಾನೆ. ಇನ್ನಷ್ಟೂ ಕೀಳರಿಮೆಗೆ ಒಳಗಾಗ್ತಾನೆ. ಇನ್ನಷ್ಟು ಆತ್ಮವಿಶ್ವಾಸವನ್ನು ಕುಗ್ಗಿಸಿ ಕೊಳ್ತಾನೆ. ಇಂಗ್ಲಿಶ್ ಕಲ್ತವರಿಗೆ ಮಾತ್ರ ಹತ್ತು ಸಾವಿರ, ಹದಿನೈದು ಸಾವಿರ, ಇಪ್ಪತ್ತು ಸಾವಿರ ಸಂಬಂಳ ಬರೋ ಕೆಲ್ಸ. ಇಂಗ್ಲಿಶ್ ಕಲೀದೆ ಇರೋವರಿಗೆ ಮೂರು ಸಾವಿರ, ನಾಲ್ಕು ಸಾವಿರ, ಐದು ಸಾವಿರ ರೂಪಾಯಿ ಕೆಲ್ಸ. Not even third class citizen Fourth Class Citizen! ಯಾವ ಪಾಪ ಮಾಡಿದ್ದೀನಿ ನಾನು ಹಾಗಿರ್ಲಿಕ್ಕೆ, ಒಂದೇ ರೂಪದ ಸಮಾಜ ಅಂತೀರಿ. ಅಂಬೇಡ್ಕರ್ ಕಾನ್‌ಸ್ಟಿಟ್ಯೂಟ್ ಒಪ್ಕೊಂಡಿದ್ದೀನಿ ಅಂತೀರಿ ನೀವು, ಮತ್ತೆ ನಿಮಗೆ ಸಿಗೋ ಕೆಲ್ಸಗಳು ಮಾತ್ರ ಇಂತಹವೇ ಯಾಕೆಂದ್ರೆ ನಮಗೆ ಇಂಗ್ಲಿಶ್ ಬರೊಲ್ಲ ಅಂತ.

ನಿಮಗೆ ಗೊತ್ತಿರ್ಬಬಹುದು ಎಷ್ಟೋ ಜನ ಬಿ.ಎ., ಬಿ.ಎಸ್.ಸಿ. ಮಾಡಿದ್ದಾರೆ. ಅವರಿಗೆ ಇನ್‌ಫೋಸಿಸ್ ಅಂತ ಕಡೆ Business Outsourceನಲ್ಲಿ ಕೆಲ್ಸ ಸಿಕ್ಕಿದೆ. ಬರೀ ಡಿಗ್ರಿ ಪಡ್ಡವ್ರು ಹತ್ತು ಸಾವಿರ ಹದಿನೈದು ಸಾವಿರ ಸಂಬಳ ಪಡೀತಾ ಇದ್ದಾರೆ. ಡಿಗ್ರಿ ಆಗಿದೆ ಅಂತ ಅವ್ರಿಗೆ ಕೆಲ್ಸ ಸಿಕ್ಕಿರೋದು ಅಲ್ಲ. ಇಂಗ್ಲಿಶ್ ಬರುತ್ತೆ ಅನ್ನೋ ಕಾರಣಕ್ಕೆ. ನೀವು ಹ್ಯಾಗೆ ಇಂಗ್ಲಿಶ್ ಕಲಿಸದೆ ದಲಿತರನ್ನು ಈ ತರದ ಕೆಲ್ಸಗಳಿಂದ ವಂಚಿಸೋಕೆ ಸಾಧ್ಯ. ವಿದ್ಯೆ, ಉನ್ನತ ವಿದ್ಯೆ ಅನ್ನೋದಕ್ಕಿಂತ ಭಾಷೆ, ದಲಿತರು ಅನ್ನೋದು ಬಹಳ ಮುಖ್ಯವಾಗಿ ಬಿಟ್ಟಿದೆ ಇಲ್ಲಿ. ಇಂಗ್ಲಿಶ್ ಭಾಷೆಗೆ ಮುಖ್ಯವಾಗಿ. ಈ ಚರ್ಚೆ ಇರುವ ಹರವನ್ನು ನಾನು ತೋಡಿಕೊಳ್ತಾ ಇದ್ದೇನೆ. ಇದರ ಬಗ್ಗೆ ವಿವರವಾದ ಮಾಹಿತಿ ನೀಡಬೇಕಾದರೆ ಒಂದು ಪುಟ್ಟ ಸಂಶೋಧನೆ ಬೇಕಾಗುತ್ತದೆ. ಈಗ ಚರ್ಚೆಗೆ ಇಟ್ಟಿರುವ ದಲಿತರು, ಭಾಷೆ ಮತ್ತು ಸಮಾಜ ಈ ಮೂರು ವಿಷಯಗಳ ಬಗ್ಗೆ ನನ್ನಲ್ಲಿ ಮಾಹಿತಿ ಇಲ್ಲದೇ ಇರುವುದರಿಂದ ನಾನು ಈ ಕುರಿತು ಹೆಚ್ಚಿಗೆ ಹೇಳಲಿಕ್ಕೆ ಹೋಗೋದಿಲ್ಲ.

ಕನ್ನಡವನ್ನು ಕಲಿಲೇಬೇಕು ಅನ್ನೋದರಲ್ಲಿ ಎರಡು ಮಾತಿಲ್ಲ. ಮನೆಯಲ್ಲಿ ಮಾತಾಡೋ ಭಾಷೆ ಕನ್ನಡವೇ ಆದ್ದರಿಂದ ಒಂದೇ ತರಗತಿಯಿಂದ್ಲೇ ಕನ್ನಡ ಕಲಿಸ್ಬೇಕು. ಕನ್ನಡ ಮಾತೃಭಾಷೆಯಾಗಿದ್ರೂ ಕನ್ನಡವನ್ನು ಶಾಸ್ತ್ರೀಯವಾಗಿ ಸಾಹಿತ್ಯದ ಮೂಲಕವಾಗಿ ಕಲಿಸ್ಬೇಕು. ಸಾಹಿತ್ಯ ಇಲ್ಲದೇ ಭಾಷೆ ಕಲ್ಸೋಕೆ ಹೋದ್ರೆ ಅದೊಂತರಾ ಮಮ್ಮಿ, ಡ್ಯಾಡಿ ಇಂಗ್ಲಿಶ್ ಕಲ್ತ ಹಾಗೆ ಆಗುತ್ತೆ. ಅದರಲ್ಲಿ ಏನೂ ಹುರುಳಿರೋದಿಲ್ಲ. ಈಗ ನೋಡಿ ಹಿಂದಿ ಬಹಳ ಒಳ್ಳೆಯ ಸಂಭಾಷಣೆ ಭಾಷೆ, ಮಾತಾಡಕ್ಕೆ ಬಹಳ ಚೆನ್ನಾಗಿರ್ತದೆ. ಇನ್ನೆಲ್ಲಕ್ಕೂ ಅದು ನಾಲಾಯಕ್. ಹೀಗೆ ನೀವು ಸಾಹಿತ್ಯ ಇಲ್ಲದೆ ಕನ್ನಡ ಕಲ್ಸಿದ್ರೆ ಕನ್ನಡಕ್ಕೂ ಇಂತಹದೇ ದುರಂತ ಆಗುತ್ತೆ. ಕನ್ನಡ ಮಾಧ್ಯಮ ಆಗ್ಬೇಕು, ಕನ್ನಡ ಮೊದ್ಲು ಆಗ್ಬೇಕು ಅನ್ನುವುದು ನಿರ್ವಿವಾದ. ಆದರೆ ಫಾಸ್ಟ್ ಸ್ಟಾಂಡರ್ಡ್‌ನಿಂದಲೇ ಇಂಗ್ಲಿಶ್ ಕಲಿಸಬೇಕು ಅನ್ನುವುದು ಕೂಡ ಅಷ್ಟೇ ಸತ್ಯ. ಕನ್ನಡ ಕಲಿಯೋದ್ರಿಂದ ಸಮಾಜದೊಂದಿಗೆ ವ್ಯಕ್ತಿಯ ನಂಟು ಇನ್ನಷ್ಟು ಗಟ್ಟಿಯಾಗಿ ಬೇರೂರುತ್ತೆ – ಭಾಷೆ ವಿಚಾರವಾಹಕ ಅಷ್ಟೇ ಅಲ್ಲ, ಭಾಷೆಯೇ ವಿಚಾರವೂ ಹೌದು. Language is not a Vehicle of thought, Language is Thought ಅಂತ ರಷ್ಯನ್ ಮನೋವಿಜ್ಞಾನಿ ವಿಗೆಟೋವಿಸ್ಕಿ ಹೇಳಿದ ಮಾತನ್ನ ನಾನು ಸಂಪೂರ್ಣವಾಗಿ ಒಪ್ತೀನೆ. ವ್ಯಕ್ತಿ ಪ್ರಪಂಚವನ್ನು ನೋಡುವ ರೀತಿ, ಬದುಕನ್ನು ನೋಡುವ ರೀತಿ, ಸಂಬಂಧವನ್ನು ನೋಡುವ ರೀತಿ ಎಲ್ಲವೂ ಭಾಷೆಯಲ್ಲಿ ಅಡಕವಾಗಿದೆ. ಆದ್ರಿಂದ ವ್ಯಕ್ತಿ ಭಾಷೆ ಕಲೀದೇ ಇದ್ರೆ ತನ್ನ ಸಮಾಜದೊಡನೆ, ತನ್ನ ಸಂಸಾರದೊಡನೆ, ತನ್ನ ಸಮೂಹದೊಡನೆ ಸಂಪರ್ಕಿಸಲಿಕ್ಕೆ ಅತಂತ್ರನಾಗುತ್ತಾನೆ. ತನ್ನ ಮಾತೃಭಾಷೆ ಕಲೀದೇ ಹೋದ್ರೆ ಅವನದು ತ್ರಿಶಂಕು ಸ್ಥಿತಿಯಾಗ್ತದೆ. ಮಾತೃಭಾಷೆಗೆ ಕಲೀದೇ ಇದ್ರೆ ತನ್ನ ಬದುಕಿನಲ್ಲಿ ಪ್ರತ್ಯೇಕಗೊಳ್ತಾನೆ. ಬದುಕಿನ ಅನುಭವ ನೋಡುವ ಕ್ರಮ ತನ್ನ ತಂದೆ-ತಾಯಿ ತನ್ನ ಪರಂಪರೆ ಕ್ರಮದಲ್ಲೇ ಓದ್ಕೊಳ್ದೇ ಹೋದ್ರೆ ಆತ ಪರಕೀಯನಾಗ್ತಾನೆ, ಅತಂತ್ರನಾಗ್ತಾನೆ. ತನ್ನ ಪರಂಪರೆಗೆ ಸ್ಪಂದಿಸಿ ಅದರಲ್ಲಿ ಸೇರ್ಕೊಂಡು ನಂತರ ಹೆಚ್ಚು ಹೆಚ್ಚು ಭಾಷೆಗಳನ್ನು ಕಲಿತು ತನ್ನ ಅನುಭವ ಜ್ಞಾನವನ್ನು ವೃದ್ಧಿಸುತ್ತ ಹೋಗ್ಬಹುದು. ತನ್ನ ಜನರೊಡನೆ ಒಗ್ಗೂಡುವಿಕೆಗೆ ತನ್ನನ್ನು ಪರಕೀಯವಾಗಿ ಕಂಡುಕೊಳ್ಳದೇ ಇರಲಿಕ್ಕೆ ತನ್ನ ಮಾತೃಭಾಷೆಯನ್ನ ಕಲಿಲೇಬೇಕು. ತನ್ನತನವನ್ನು ಕಂಡುಕೊಳ್ಳುವುದರ ಜೊತೆಗೆ ತನ್ನ ಹಿರಿತನವನ್ನು ಕಂಡುಕೊಳ್ಳೋಕೆ ಇತರ ಭಾಷೆಗಳನ್ನು ಕಲೀಬೇಕು. ಆದ್ದರಿಂದ ವ್ಯಕ್ತಿಯ ವ್ಯಕ್ತಿತ್ವದ ವಿಕಾಸಕ್ಕಾಗಿ ಕನ್ನಡದ ಜೊತೆಗೇ ಇಂಗ್ಲಿಶ್‌ನೂ ಕಲೀಬೇಕು. ವಿಜ್ಞಾನವನ್ನು ಕಲಿಸುವ ಭಾಷೆ ಕನ್ನಡದಲ್ಲಿಲ್ಲ. ಕನ್ನಡದಲ್ಲಿ ಬರೆದ ಪದಗಳು ಹೆಚ್ಚಾಗಿ ಅರ್ಥವೇ ಆಗೊಲ್ಲ. ಇಂಗ್ಲಿಶ್ ಓದಿನೇ ಅವುಗಳನ್ನ ಅರ್ಥ ಮಾಡ್ಕೊಬೇಕು. ಯಾಕೆಂದ್ರೆ ಕನ್ನಡದ ಅನುಭವದಲ್ಲಿ ಆ ಪದ ಇಲ್ಲ. ಬೇರೊಂದು ಪರಂಪರೆಯ ಪದ ತಕ್ಕೊಂಡು ಕನ್ನಡವನ್ನ ಬೆಳೆಸಬೇಕು. ಕನ್ನಡ ಉಳೀಬೇಕು, ಕನ್ನಡ ಬೆಳೀಬೇಕು ಅಂದ್ರೆ ಕನ್ನಡವನ್ನು ತುಂಬುವ ಕೆಲ್ಸ ಆಗ್ಬೇಕು. ಕನ್ನಡವನ್ನ ತುಂಬುವ ಕೆಲಸ ಕನ್ನಡದಿಂದಷ್ಟೇ ಆಗೊಲ್ಲ ಅಂತ ನನಗನ್ನಿಸುತ್ತೆ. ಕೊಡುವಿಕೆ – ತಗೊಳ್ಳುವಿಕೆಯಿಂದ ಕನ್ನಡ ಸಮೃದ್ಧವಾಗ್ತದೆ. ಕನ್ನಡದ ಬಗ್ಗೆ ಪ್ರೀತಿಯಿಂದೀ ಮಾತನ್ನ ಹೇಳ್ತಾ ಇದ್ದೀನಿ. ಇಲ್ಲಿ ತಗೊಳ್ಳುವಿಕೆ ಹೆಚ್ಚಾಗ್ಬೇಕು. ಹಾಗಾಗ್ಬೇಕಾದ್ರೆ ಕನ್ನಡದವರು ಇನ್ನೊಂದು ಭಾಷೆಯನ್ನ ಕಲ್ತುಕೊಡಬೇಕು. ಈ ನಿಟ್ಟಿನಲ್ಲಿ ಸುಲಭವಾಗಿ ಸಿಗುವಂತಹದು ಇಂಗ್ಲಿಶ್ ಆ ದೃಷ್ಟಿಯಿಂದ ನನ್ನತನವನ್ನು ಕಂಡುಕೊಳ್ಳುವುದರ ಜೊತೆಗೆ ನನ್ನತನದ ಸಾಧ್ಯತೆಗಳನ್ನು, ಹಿರಿತನವನ್ನು ಕಂಡುಕೊಂಡು ಜಾಗತಿಕ ಮಟ್ಟದಲ್ಲೂ ಸ್ಪಂದಿಸೋದಿಕ್ಕೆ ನಾನು ತಯಾರಾಗಬೇಕು. ಅದಕ್ಕೆ ಇಂಗ್ಲಿಶ್ ಒಂದೇ ಸರಿಯಾದ ಭಾಷೆ. ಅದರಿಂದ ವಂಚಿತರಾಗಿರುವವರು ದಲಿತರು. ಆ ದೃಷ್ಟಿಯಿಂದ ಕನ್ನಡವನ್ನು ಹಿರಿದಾಗಿಸ್ಲಿಕ್ಕೆ, ಕನ್ನಡವನ್ನ ತುಂಬ್ಲಿಕ್ಕೆ, ಕನ್ನಡವನ್ನ ಬೆಳೆಸ್ಲಿಕ್ಕೆ ಇನ್ನೊಂದು ಭಾಷೆ ಇಂಗ್ಲಿಶ್ ಬೇಕು. ಅದರ ಪ್ರಕ್ರಿಯೆಯಲ್ಲಿ ಕನ್ನಡಿಗನೂ ದೊಡ್ಡವನಾಗ್ತಾನೆ. ಜಾಗತಿ, ಮಟ್ಟದಲ್ಲೂ ಸ್ಪಂದಿಸ್ತಾನೆ. ಅದು ಬಹಳ ಮುಖ್ಯವಾಗ್ಬೇಕು ಅಂತ ಹೇಳ್ತಾ ಎರಡು ದಿವಸದ ಇಂತಹ ಒಂದು ವಿನೂತನ ಹಾಗೂ ವಿಶಿಷ್ಟ ವಿಷಯದ ಬಗ್ಗೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ಚರ್ಚೆ ಮಾಡು‌ತ್ತಿರುವುದು ನನಗೆ ಹೆಮ್ಮೆ ಎನಿಸಿದೆ. ಈ ಚರ್ಚೆ ಯಶಸ್ವಿಯಾಗ್ಲಿ ಅಂತ ಹಾರೈಸಿ ನನ್ನ ಮಾತುಗಳನ್ನ ಮುಗಿಸ್ತೇನೆ.

(ಉದ್ಘಾಟನಾ ಭಾಷಣ)