ಉತ್ತರ ಕರ್ನಾಟಕದ ಹಾಗೂ ದಕ್ಷಿಣ ಮಹಾರಾಷ್ಟ್ರ ಪರಿಸರದ ಭಾಷೆ, ಸಂಸ್ಕೃತಿ ಮತ್ತು ಜನಜೀವನದ ಸಾಮಾಜಿಕ ರೂಢಿ ಪದ್ಧತಿಗಳಲ್ಲಿ ಅಧಿಕ ಸಾಮ್ಯತೆ-ಸಮರತೆಯಿದೆ. ಬಹುಜನ ಸಮುದಾಯದ ಉಡುಗೆ-ತೊಡುಗೆ, ಆಹಾರ, ಧಾರ್ಮಿಕ ನಂಬುಗೆ-ಆಚರಣೆಗಳಲ್ಲಿ ಬಹಳಷ್ಟು ಕೊಡುಕೊಳ್ಳುವಿಕೆ ಹಿಂದಿನ ಕಾಲದಿಂದಲೂ ಇದೆ. ರಕ್ತ ಸಂಬಂಧಗಳಂತೂ ಎಲ್ಲ ಕೋಮು-ಜಾತಿಗಳಲ್ಲೂ ನಡೆಯುತ್ತ ಬಂದಿದೆ. ಪೇಶ್ವಾಯಿ ಸಂಸ್ಕೃತಿ ಢಾಳವಾದ ಪರಿಣಾಮವನ್ನು ಕಂಡಂತೆ, ಸಂತ ಪರಂಪರೆ ವೀರಶೈವ ಮಠಗಳ ಪ್ರಭಾವಗಳು ಹಾಗೂ ದಲಿತ ಹಿಂದುಳಿದ ಜನಾಂಗಗಳಲ್ಲಿ ಮಹಾತ್ಮಾ ಜ್ಯೋತಿವಾ ಪುಲೆ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ವೈಚಾರಿಕ ಎಚ್ಚರವೂ ಮಿನುಗು ಮಿಂಚುಗಳ ಪಡೆಯುತ್ತ ಬಂದಿದೆ. ವಾರಕರಿಗಳ ದೊಡ್ಡ ಪರಂಪರೆಯನ್ನು ಗಡಿಭಾಗದ ಪರಿಸರಗಳಲ್ಲಿ ದಟ್ಟವಾಗಿ ಕಾಣಬಹುದು. ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗಲಿ ಜಿಲ್ಲೆಗಳ ಗಡಿಯಂಚಿನಲ್ಲಿ ಲಿಂಗಾಯತ, ಚೈನ ಸಮುದಾಯ ಹಾಗೂ ಕುರುಬ, ಬೇಡರು, ದಲಿತ, ಹಿಂದುಳಿದ ಸಮುದಾಯಗಳು ಕನ್ನಡ ಭಾಷೆಯನ್ನು ಜೀವಂತವಿಡುವ: ಮುಂದಿನ ಪೀಳಿಗೆಗೆ ರವಾನಿಸುವ ಪ್ರಯತ್ನಗಳನ್ನು ಮಾಡಿದರೂ ಮರಾಠಿ ಸಂಸ್ಕೃತಿಯ ಮುಖ್ಯವಾಹಿನಿಯಲ್ಲಿ ನಿಧಾನಕ್ಕೆ ಕರಗುತ್ತಿದ್ದಾರೆ. ಅದೇ ಬೆಳಗಾವಿ, ವಿಜಾಪುರ, ಗುಲ್ಬರ್ಗಾ, ಬೀದರ ಗಡಿಯಲ್ಲಿರುವ ಮರಾಠಿ ಭಾಷಿಕರು ತಮ್ಮ ಅಸ್ಮಿತೆಯನ್ನು ಇಂದಿಗೂ ಕಾಯ್ದುಕೊಂಡಿದ್ದಾರೆ. ನಮ್ಮ ಸಮಾಜ-ಸರಕಾರಗಳು ಅವರನ್ನು ಅತ್ಯಂತ ಗೌರವದಿಂದ ಕಾಣುತ್ತ, ಭ್ರಾತೃತ್ವ ಮೆರೆಯುತ್ತ ಸಕಲ ಸವಲತ್ತುಗಳನ್ನು ನೀಡುತ್ತ ಬಂದಿವೆ. ಅವರು ಅದರ ಲಾಭ ಪಡೆದರೂ ಮರಾಠಿ ಸಮುದಾಯದ ಕೆಲಶಕ್ತಿಗಳು ತಂಟೆ-ತಕರಾರುಗಳ ವ್ಯರ್ಥ ರಾಜಕಾರಣ ಮಾಡುತ್ತ ಬಂದಿವೆ. ಹಾಗೆ ನೋಡಿದರೆ ಭಾಷಿಕ ಕಲಹ ಇಲ್ಲಿ ಸರ್ವವ್ಯಾಪ್ತಿಯಲ್ಲ. ಕನ್ನಡ-ಮರಾಠಿ ಭಾಷೆ ಆಡುವ ಸಮಾಜಗಳು ಪರಸ್ಪರ ಗೌರವದಿಂದಲೇ ಬದುಕುತ್ತ ಬಂದಿವೆ. ಹೆಚ್ಚು ಕಡಿಮೆ ಎರಡು ಭಾಷೆ ಮಾತನಾಡುವವರು ದ್ವಿಭಾಷೆಗಳಲ್ಲಿ ವ್ಯವಹರಿಸುವವರೇ ಆಗಿದ್ದಾರೆ.

ಹೀಗೆ ದ್ವಿಭಾಷೆಯ ಸಹಜ ಬಳಕೆ ಅನಿವಾರ್ಯವು ಹೌದು. ಒಬ್ಬ ಕನ್ನಡ ಭಾಷಿಕ ಮರಾಠಿ ಮನುಷ್ಯನ ಯಾವುದೋ ಒಂದು ಹೇಳಿಕೆಯನ್ನು ಹೇಳುವಾಗ “ಅವ್ವ ಕಡಿ ಹ್ವಾದ್ನಿಗೌಂಡs ‘ ಮಿ ಕಾಯಿ ಅಜ ವಿತ ನಾಹಿ ಮ್ಹಣೂನ ‘ಸಾಂಗ’ ಅಂತ ಹೇಳ್ಯಾನ. ಎಷ್ಟು ಮಸ್ತಿ ನೋಡ್ರಿ” ಹೀಗೆ ಕನ್ನಡ-ಮರಾಠಿ ಭಾಷೆಗಳನ್ನು ಬಳಸುತ್ತಾರೆ. ಹಾಗೆ ಮರಾಠಿ ಭಾಷಿಕನದೂ ಸಹ. ಮರಾಠಿಯಲ್ಲಿ ಶುರುಹಚ್ಚಿ ‘ಕನ್ನಡ’ ಉಕ್ತಿ ಉದಾಹರಿಸುವನು.

ದಕ್ಷಿಣ ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ ಪರಿಸರ ಅಚ್ಚ ಕನ್ನಡದ್ದು. ಹಾಗೆಯೇ ಜತ, ಅಕ್ಕಲಕೊಟೆ,ಸೊಲ್ಲಾಪುರಗಳು. ಈ ಭಾಗದ ಮೇಲೆ ಕನ್ನಡ ಪ್ರಭಾವ ದಟ್ಟವಾಗಿದೆ. ಆದ್ದರಿಂದ ಮರಾಠಿ ಭಾಷೆಯನ್ನು ಶಾಲೆಯಲ್ಲಿ ಕಲಿತರೂ ಮನೆ, ವ್ಯವಹಾರವಾಗಿ ಕನ್ನಡ ಮಾತನಾಡುತ್ತಾರೆ. ಕರ್ನಾಟಕದ ಗಡಿ ತಾಲೂಕು ಚಿಕ್ಕೋಡಿ, ರಾಯಬಾಗ, ಅಥಣಿ, ವಿಜಾಪುರ, ಕಲಬುರ್ಗಿ ಜಿಲ್ಲೆಯ ಗಡಿಭಾಗದಲ್ಲಿ ಮರಾಠಿ ಪ್ರಭಾವವು ಕನ್ನಡ ಸಂಸ್ಕೃತಿ ಮೇಲಾಗಿದೆ. ಪೇಶ್ವಾಯಿ ಸಂಸ್ಕೃತಿಯ ಒತ್ತಡಗಳಲ್ಲಿ ಸಮಾಜ ಬದುಕುತ್ತಿದೆ. ಬ್ರಾಹ್ಮಣ ಸಮುದಾಯವನ್ನು ಅನುಕರಣೆ ಮಾಡುವುದುಂಟು. ಉದಾಹರಣೆಗೆ ಕಚ್ಚೇ ಸೀರೆ ಉಡುವುದನ್ನು ಶೂದ್ರ ಹಾಗೂ ದಲಿತ ಸಮುದಾಯಗಳು ಇವತ್ತಿಗೂ ಮಾಡುತ್ತ ಬಂದಿವೆ. ಒಂದೇ ರೀತಿಯ ಅನೇಕ ಸಾಮಾಜಿ-ಸಾಂಸ್ಕೃತಿಕ ಸಂಪ್ರದಾಯಗಳನ್ನು ಕೆಳವರ್ಗದ ಜನ ಅನುಸರಿಸಿಕೊಂಡು ಬಂದಿದ್ದಾರೆ. ಅದು ಅವರ ಕೀಳರಿಮೆ ಹೋಲಾಗಡಿಸಲು ಒಂದು ಸಾಧನವಾಗಿರಬಹುದು. ನಮ್ಮ ಗಿಡಗುಂಟ ಇದೇ ಬಗೆಯ ಅಡ್ಡ ಹೆಸರುಗಳ ಪರಂಪರೆಯಿದೆ. ಸವರ್ಣಿಯರ ಅಡ್ಡಹೆಸರುಗಳನ್ನು ದಲಿತರು ಇಟ್ಟುಕೊಂಡರು. ಹೆಗಡೆ, ಜೋಶಿ, ಶಾಸ್ತ್ರೀ, ಸೂರ್ಯವಂಶಿ, ಯಾದವ, ಜಾಧವ, ಚೌಗಲೆ, ಕಾಮತ, ಪಾಟೀಲ ಮುಂತಾದವುಗಳು. ಸಮಾಜ ಸುಧಾರಕ ದೇವರಾಯ ಇಂಗಳೆಯವರ ಪ್ರೇರಣೆಯಿಂದ ಇದು ಸಾಧ್ಯವಾಯಿತು.

ಸಾಂಗಲಿ ಜಿಲ್ಲೆಯ ಕರ್ನಾಟಕದ ಗಡಿಯಂಚಿನ ಪ್ರದೇಶಗಳ ಭಾಷೆ ಕನ್ನಡ ಮರಾಠಿ ಮಿಶ್ರಿತ. ಅಲ್ಲಿಯ ಜನ ಮಾತನಾಡುವಾಗ ಮರಾಠಿ ಪದಗಳಿಗೆ ಕನ್ನಡ ಪ್ರತ್ಯಯಗಳನ್ನು ಸೇರಿಸಿ ‘ದಿಕ್ಷೆ’ ನೀಡಿಯೇ ಬಿಡುತ್ತಾರೆ. ಗೊತ್ತಿದೆ ಎನ್ನಲು ‘ಠ್ಯಾಂಕ ಐತಿ’ ಅನ್ನುತ್ತಾರೆ. ಮರಾಠಿಯ ಠಾವುಕ (ಗೊತ್ತು, ನೆನಪು ಇತ್ಯಾದಿ)ನ ಅಪಭ್ರಂಶ ರೂಪ ಠ್ಯಾಂಕ. ಒಂದು ವಾಕ್ಯದಲ್ಲಿ ಮರಾಠಿ-ಕನ್ನಡವನ್ನು ಸೇರಿಸಿ ಮಾತನಾಡುವ ಪರಿ ಅಲ್ಲಿಯ ದೇಸಿಯ ಗುಣ. ‘ಪಾವಣೇರ ಪಾರ ಬಂದೇತಿ ದುಕಾನಕ ಹೋಗಿ ಸಾಕಲ್ಯಾ ತೊಗೊಂಡ ಬಾ’. ಇದರಲ್ಲಿ ಪಾವಣಿ = ಅತಿಥಿ, ನಂಟ. ದುಕಾನ-ಅಂಗಡಿ, ಸಾಕರ್ಯಾ=ಸಕ್ಕರೆ. ಹೀಗೆ ಮಿಶ್ರಣ ರೂಪದ ಕನ್ನಡ ಭಾಷೆ ಬಳಕೆಯಲ್ಲಿದೆ. ಠೀಕ ಐತಿ, ಬಕ ಯಾವಾಗ ಬಂದಿ ಬಾಬಾ. ಇಂಥ ವಾಕ್ಯಗಳಲ್ಲಿ ರೀಠಕ=ಸರಿ ಬಕದಲ್ಲಿ ‘ಳಿ’ ಲೋಪವಾಗಿದೆ. ಅದು ಬಳಿಕ. ಬಾಬಾ=ಅಪ್ಪ. ಹೊಯಿಂದ=ಹೌದು, ಗೌಂಡ-ಗೌಡ. ‘ಚಪ್ಪಲಿ’ ಸಾಮಾನ್ಯರೂಪದ ಕನ್ನಡ ಪದ. ಆದರೆ ಈ ಪರಿಸರದಲ್ಲಿ ಚಪ್ಪಲ (ಪುಲ್ಲಿಂಗ) ಚಪ್ಪಲಿ (ಸ್ತ್ರೀಲಿಂಗ) ಭಿನ್ನ ಲಿಂಗ ಸೂಚಕ ವಾಗಿರುವಂಥವು. ಪುರುಷರು ಮೆಟ್ಟುವುದ ‘ಚಪ್ಪಲ’ ವಾದರೆ ಸ್ತ್ರೀಯರು ಮೆಟ್ಟುವುದೆಲ್ಲದಕ್ಕೆ ‘ಚಪ್ಪಲಿ’ ಎನ್ನುವರು.

ಎರಡು ರಾಜ್ಯಗಳ ಗಡಿಗುಂಟ ಇರುವ ಈ ಭಾಷಾ ವೈಶಿಷ್ಟ್ಯ ಕೇವಲ ದಲಿತರಷ್ಟೇ ಅಲ್ಲ. ಶ್ರಮಿಕರು, ಕೂಲಿಕಾರರು, ಎಲ್ಲ ಹಿಂದುಳಿದವರಲ್ಲಿ ಬಳಕೆಯಲ್ಲಿವೆ. ಯಾವುದೇ ತರದ ಕಾಯಿಪಲ್ಯೆಗೆ ‘ವಣಿಗಿ’ ಎಂದು ಸಂಬೋಧಿಸುವರು. ಬಿಳಿ ಅನ್ನಕ್ಕೆ ‘ಕಿಚಡಿ’ ಎಂದು. ಕಾಯಿಪಲ್ಲೆಗೇನೆ ಶಿಷ್ಟರೂಪದಲ್ಲಿ ‘ಭಾಜಿ’ ಎಂತಲೂ ರೂಢಿಯಲ್ಲಿ ಇಟ್ಟುಕೊಂಡಿರುವರು. ಚವಳಿಕಾಯಿ=ಬಾಚಿಕಾಯಿ, ಹೀರೇಕಾಯಿ=ಹಿ‌ಲ್ಲಿಕಾಯಿ, ಹಾಗಲಕಾಯಿ=ಕಾರ್ಲಿಕಾಯಿ ಈ ತರದ ತರಕಾರಿ ವಸ್ತುಗಳು ದೈನಂದಿನ ಊಟೋಪಚಾರಗಳಲ್ಲಿ ಬಳಕೆಯ್ಲಲಿವೆ. ಕಸಬರಿಗೆ=ಕಸಬರಿಗೆ=ಕಸಗೇಲ ಪುಟ್ಟ ಗುಡಿಸಲಿಗೆ ‘ಖೊಪ್ಪಿ’ ಎಂತಲೂ ನೇಗಿಲಿಗೆ ‘ನಂಗರಿ’ ಹಗ್ಗಕ್ಕೆ ‘ಚರಿ’ ಎಂಬ ಪದಗಳು ವಿಶಿಷ್ಟವೆನಿಸುತ್ತವೆ. ಬೈಗುಳಗಳಲ್ಲಿ ಉಂಡಿಗಿ, ಉಂಡಗ್ಯಾ ಪದಗಳಿಗೆ ‘ಉಡಾಳ’ವೆಂಬ ಅರ್ಥವಿದ್ದರೆ: ಸು‌ಕ್ಕಾಳಿಮಗನ, ವಾವರ್ಯಾ ಪದಗಳು ಮರಾಠಿಯ ಬೈಗುಳಗಳು. ಘೋದ್ರಿ ಮಗನವೆಂಬ ಬೈಗುಳ ಇವೆಲ್ಲ ಗಂಡಸರು ಬಳಸುವ ಪದಗಳಾದರೆ, ಹೆಂಗಸರಲ್ಲೂ ಅವಾಚ್ಯವಾದವುಗಳಿವೆ. ‘ಮಾರ್ಯೂ ಮೂನ್ಯಾ’, ‘ಮಾಝ್ಯಾ ರಾಡ್ಯಾ’ ಗಂಡಸರಿಗೆ ಬೈಯ್ಯುವ ಪದಗಳು. ಇದರರ್ಥ ನನ್ನ ಯೋನಿಯ ಚಂದ್ರನಾಡಿ ನೀ, ನನ್ನ ಯೋನಿಯ ಹೊಲಸು ಕೆಸರು ನೀ ಎಂಬಂತೆ ಅರ್ಥದ ಬೈಗುಳುಗಳು ಬಹಳಷ್ಟಿವೆ. ಹಾಂಟ್ಯಾ, ಭಾಡ್ಯಾ, ಭಾಡಖಾನವು ಸಾಮಾನ್ಯ ಬೈಗುಳುಗಳು.

ತಂಬಾಕು ಕೃಷಿಯಲ್ಲಿ ಮರಾಠಿ ಪ್ರಭಾವದ ಪದಗಳು ಸಾಕಷ್ಟು ಬಳಕೆಯಲ್ಲಿವೆ. ತಂಬಾಕಿನ ಕಸವಾಗಿ ಬೆಳೆಯುವುದರ ಕೊಂಬಿನಂತಹ ‘ಕಳೆ’ಗೆ ‘ಬಂಬಾಕು’ ಎಂದು, ಎಲೆಗಳನ್ನು ಕಿತ್ತು ಹಾಕಿದಾಗ ‘ಘಳ’ ಎಂತಲೂ ಕಾಡಿ, ಮಾತಿ ಎಂಬ ಪದಗಳು ನಿತ್ಯವಾದವು. ಕಬ್ಬಿನ ಎಲೆಗಳ ಮೇವಿಗೆ ‘ವಾಡೆ’ ಮೇವು ಎಂದು, ಕಟಾವು ಆದನಂತರದ ಬೆಳೆಗೆ ‘ಖ್ವಾಡವಿ’ ಎಂಬ ವಿಶಿಷ್ಟ ಪದಗಳು ಬಳಕೆಯಲ್ಲಿವೆ.

ಮರಾಠಿಯ ಖ್ಯಾತ ಕತೆಗಾರ ಜಿ.ಎ. ಕುಲಕರ್ಣಿ ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗಡಿ ನೆಲ ಎಕ್ಸಂಬಾ ಎಂಬ ಊರಲ್ಲಿ. ನೌಕರಿ ಮಾಡಿದ್ದು ಧಾರವಾಡದಲ್ಲಿ. ಅವರ ಮರಾಠಿ ಕತೆಗಳಲ್ಲಿಲ ಅಮಾಸಿ, ಯಲ್ಲುಭೀಮಾ, ಕರೆಪ್ಪ, ಸೀತಕ್ಕ, ಸಣ್ಣ ಪದಗಳು ದೊರಕುತ್ತವೆ. ನಿಪ್ಪಾಣಿ ಪರಿಸರ ಕನ್ನಡ ಪ್ರದೇಶವಾದರೂ ಮರಾಠಿ ಪ್ರಾಬಲ್ಯವಿದೆ. ಮಹಾದೇವ ಮೋರೆ ಕನ್ನಡ ಮಣ್ಣಿನ ಮರಾಠಿ ಕತೆಗಾರ. ಅವರ ಕತೆಗಳಲ್ಲಿ ಬರುವ ಪಾತ್ರಗಳ ಹೆಸರು ಕನ್ನಡದವು. ಬಾಬಗೊಂಡ, ಲಗಮ, ಬಾಳವ್ವ, ಕಾಶೆವ್ವ, ಸತ್ಯವ್ವ, ತಂಗೆವ್ವ, ಸುಂದರವ್ವ, ಚಂದ್ರವ್ವ ಎಂಬವು ಮರಾಠಿ ಸಂಸ್ಕೃತಿ ಸಮಾಜದ ಜತೆಗೆ ಕೂಡಿವೆ. ಬೆಳಗಾವಿಯ ಪಶ್ಚಿಮ ಭಾಗದ ಮರಾಠಿಗರಲ್ಲಿ, ನಗರ ಭಾಗದ ಮರಾಠಿಗರಲ್ಲಿ ಬಹಳಷ್ಟು ಕನ್ನಡ ಪದಗಳು ನಿತ್ಯ ವ್ಯವಹಾರಗಳಲ್ಲಿ ಬಳಕೆಯಲ್ಲಿವೆ. ಭಾವಿ, ಒಟ್ಟು, ಆಳ, ಹೆಣ್ಣ ಕುತ್ರಾ, ಗಂಡ ಕುತ್ರಾ ಅದೂ ಅಲ್ಲದೆ ಬಡೀಮ=ಗಂಜಿ, ಇಲ್ಲ, ಮನೀ ಕಡೆ, ಹೋಗ, ಮಗನ, ಲಗೂಟ, ಪದಗಳು ಎರಡು ಭಾಷೆಯ ಸಂಕರದಿಂದ ಅಥವಾ ನೇರ ಪದಗಳಾಗಿ ಸಾಕಷ್ಟು ಉಪಯೋಗಗೊಳ್ಳುತ್ತಿವೆ.

ಕನ್ನಡ ಶೈಲಿಯಲ್ಲಿ ಬಳಸುವ ಮರಾಠಿ ಶಬ್ದಗಳು ಈ ಮುಂದಿನಂತಿವೆ. ಕೌಂಚಾ ಟೈಮಾಚ (ಯಾವ ವೇಳೆಯದ್ದು) (ಶೀಕಬೀಕ) ಕಲಿಬಿಲಿ ಬೀಕ ಇದು ಜೋಡು ಶಬ್ದವಾಗಿ ಬಳಸಿದೆ. ಮರಾಠಿ ಜಾಯಮಾನದಲ್ಲಿದ ಇದು ವಿರಳ. ತಂವರಕಾ, ಹಾಂಟ್ಯಾಚ್ಯಾನಿ, ಸೂಟ ಲೌಕರ, ಕಾನೂಲ್ಯಾಚಿ (ಕರ್ಚಿಕಾಯಿ ಪದಾರ್ಥ) ದುರಡಿ=ಇದು ಅಚ್ಚಕನ್ನಡ ಪದ ಮರಾಠಿ ದಲಿತರಲ್ಲಿ, ಶ್ರಮಿಕರು, ಕೃಷಿಕರು ಬಳಸುವರು. ಉಠಲ್ಯಾ ಪೆಟ್ಟಾಲಾ > ಉಠಲ್ಯಾ ಎಂದರೆ ಎದ್ದು ಬಿಡುವ ‘ಪೆಟ್ಟಾಲಾ’ ಇದು ಎದ್ದಪೆಟ್ಟಿಗೆ ಎನ್ನುವ ರೂಪದ ಪ್ರಭಾವದಲ್ಲಿ ಬಳಕೆಯಾಗುತ್ತಿದೆ. ಗಿಡ್ಡ, ಮನಗಂಡ, ‘ಹಾಂ’ ಬಗ, ಬೀಡಿ ಕಾಡಿ ಈ ಬಗೆಯ ಪದಗಳು ಕನ್ನಡ ಶೈಲಿಯ ಜಾಯಮಾನದ ರೂಪದಲ್ಲಿ ಮಿಳಿತಗೊಂಡಿವೆ.

ಮರಾಠಿ ವಾಕಗಳಲ್ಲಿ ಕನ್ನಡ ಪದಗಳು ಹೇರಳವಾಗಿ ಸಿಗುತ್ತವೆ. ಪೋಲಿಸ ಮಾರಲ್ಯಾ ಪೆಟ್ಟಾಲಾ ‘ಅಯ್ಯೊ’ ದೇವಾ ಮ್ಹಣಾಲಾ, ಡೋಸ್ಕ ‘ಜಿಡ್ಡ’ ಧರಲ್ಯಾಗತ, ಯೇ ‘ಲಡದು’ – ‘ಹುಡುಗ’, ‘ಕುಠ ಆಹೆಹೋ ತ್ಯೋಂ’, ‘ತಗೊಂಬಾ’ ಪೈಲಾ ‘ನೋಡ ಮಾಸ್ತರಗೋಳ’, ಆಮಿ ಸಾರ ‘ಎಲ್ಲ ಪಾಕ’, ‘ಚೌಕಶಿ’ ಮಾಡತಿ – ಇವು ಕೆಲವು ಉದಾಹರಣೆಗಳು. ಕೌಂದಿ ಕೂಡ (ಮೂಲ ಕೌದಿ) ಮರಾಠಿಯಲ್ಲಿದೆ. ಗಡಿ ಪರಿಸರದಲ್ಲಿ ‘ಆಯೀ’ (ತಾಯಿ) ಎಂಬುದನ್ನು ಅಜ್ಜಿಗೆ ಸಂಬೋಧಿಸುತ್ತಾರೆ.

ದಲಿತ-ಹಿಂದುಳಿದವರಲ್ಲಿ ಕೆಲವು ವೃತ್ತಿಯಿಂದ ಬಂದ ಪದಗಳು ವಿಶಿಷ್ಟವಾಗಿವೆ. ಹೊಲೆಯ ಸಮುದಾಯದವರು ಸತ್ತ ದನಗಳನ್ನು ಕೊಂಡೊಯ್ದಾಗ ಮಾಂಸವನ್ನು ಪಾಲು ಮಾಡಿಕೊಳ್ಳುತ್ತಿದ್ದರು. ತಲಿ ಪಾಲ (ತಲೆಮಾಂಸ) ಕಾಲುಪಾಲ. (ಕಾಲು ತೊಡೆಮಾಂಸ) ಎಂದು ‘ಪಾಲ’ ಪದ ಬಳಕೆಯಿದ್ದು ಮಾಂಸ ‘ಖಂಡ’ ಎಂದು ಪ್ರಯೋಗಿಸುವರು. ತೊಗಲು, ಚರ್ಮಕ್ಕೆ ‘ತಗಲ’, ‘ಭಾವಿಗೆ’, ‘ಭಾಯಿ’ ಎಂದು ದಲಿತರು ಆಡುನುಡಿಯಾಗಿ ಬಳಕೆ ಮಾಡುವರು. ಜ್ವರ, ಮೈ ಕೈ ನೋವಿಗೆ ದುಗಾಡ, ಕಸಾರಕಿ ಎಂಬ ಪದಗಳು ಬಳಕೆಯಲ್ಲಿದ್ದರೆ ‘ಝಡತಿ’ ಎಂಬ ಪದವು ಮರಾಠಿ ಭಾಷೆಯಿಂದ ಕನ್ನಡದಲ್ಲಿ ನಿರಂತರವಾಗಿ ಪ್ರಯೋಗದಲ್ಲಿದೆ. ಫಡಿನಾರಗಳಿಂದ ಹಗ್ಗ ತಯಾರು ಮಾಡುವ ಮಾದರ ಸಮುದಾಯದವರು ನಾರ ತೆಗೆಯುವ ‘ಫಡಿ’ಗೆ ‘ಆಲೋಸ’ ಎಂದು ಕರೆಯುವರು. ಹುರಿಗೊಳಿಸಿ ನೇಯುವ, ಎರಡು ಕೈಗಳಿಂದ ನೇಯ್ಗೆಯನ್ನು ನುರಿಸುವ ಕಟಗಿಯ ವಸ್ತುವಿಗೆ ‘ತಿರಶ್ಯಾಳ’ ಎಂದು ಕರೆಯುವರ. ಇದೇ ತಿರಸ್ಯಾಳ ಸಾಧನ ಹೆಚ್ಚು ವರ್ಗದವರು ಬೈಗುಳ ಪದವಾಗಿದೆ. ತಿರಶ್ಯಾಳದಿಂದ ನೇಯುವಾಗ ಕೈ ವಕ್ರವಾಗುತ್ತದೆ. ವಕ್ರವಾಗುವುದಕ್ಕೆ ಆಡುನುಡಿಯಲ್ಲಿ ‘ಯಾಶಿ’ ಎನ್ನುವರು. ಯಾಶಿಗೈನ ಶೈಲಿ ಹಿಡಿದು ಉತ್ತಮರು ‘ಯಾಂಶಿ ಗೈ ಮಾದರಂಗ ಹಂಗ್ಯಾಕ ಒರಟ ಮಾತಾಡತೀಯೋ’ ಎಂದು ಹೇಳುವುದನ್ನು ಗಮನಿಸಬಹುದು.

ದೇವದಾಸಿ ಪದ್ಧತಿಯಲ್ಲಿ ಹೆಣ್ಣುಮಗಳೊಬ್ಬಳು ಒಬ್ಬನಿಗೆ ನಿಷ್ಠನಾಗಿರುವ ರೂಢಿಗೆ ‘ಜುಲ್ಫಿ’ ಇಟ್ಟುಕೊಂಡಿರೋದು ಎನ್ನುವರು. ‘ಉಡಕಿ’ ಹಚ್ಚಿಕೊಳ್ಳುವ ಪದ್ಧತಿಯೂ ಇದೆ ಬಗೆಯದಾಗಿದೆ. ಉಡಕಿ ಮತ್ತು ಜುಲ್ಫಿಗಳು ದೇವದಾಸಿಯಲ್ಲಿ ಕಾಯಮ್ಮಾಗಿ ಒಬ್ಬ ಗಂಡಸನ ಜತೆಗಿರುವುದಕ್ಕೆ ಇರುವ ಸಮಾನರ್ಥದ ಪದಗಳು.

ಟಿಮಕಿಕ, ಹಲಗಿ, ದಿಮಡಿ ಇವು ವಿವಿಧ ವಾದ್ಯಗಳು. ಟಿಮಕಿ ಯಾತ್ರೆ, ಉತ್ಸವ ಹಾಗು ಏನಾದರೂ ಸುದ್ಧಿ ಹೇಳುವ ಸಂದರ್ಭದಲ್ಲಿ ಬಾರಿಸುವ ವಾದ್ಯ. ಹಲಗಿ ಸತ್ತಾಗ ರಣಹಲಗಿ ಯುದ್ಧ, ಪಂದ್ಯಾಟಗಳಲ್ಲಿ ಆವೇಶ ತುಂಬುವ, ಉತ್ಸಾಹ ತರುವ ಚರ್ಮವಾದ್ಯ. ದಿಮಡಿ ಉಡದ ಚರ್ಮದಿಂದ ಮಾಡುವ ವಾದ್ಯವಾಗಿದೆ. ಇವು ಮಹಾರಾಷ್ಟ್ರದ ಗಡಿ ಭಾಗದಲ್ಲಿ ಇದೇ ನಾಮದಿಂದ ಬಳಸಿ ಹೇಳುವ ರೂಢಿಯಿದೆ. ಜೋಗಮ್ಮಗಳು ಬಾರಿಸುವ ಏಕತಂತಿಯ ವಾದ್ಯಕ್ಕೆ ‘ಸುತಿ’ ಎನ್ನುವರು. ಗಂಡ ಜೋಗಪ್ಪ ಧರಿಸುವ ಮುತ್ತಿಗೆ ‘ಗಂಡಮುತ್ರ’ ಎಂತಲೇ ಕರೆವರು. ಸವರ್ಣಿಯರು ಯಾರನ್ನಾದರೂ ಬೈಯ್ಯುವಾಗ ಜೋಗವ್ವ, ಜೋಗಪ್ಪ ಎಂಬ ಗೌರವಯುತ ಪದಗಳನ್ನು ಜೋಗ್ಯಾ, ಜೋಗತಿ ಎಂದು ವ್ಯಂಗ್ಯ ಕಟುಕಿಯಿಂದ ನುಡಿಯುವರು.

ಎರಡು ಕಡೆಯ ಗಡಿ ಪ್ರದೇಶಗಳಲ್ಲಿ ನೇಕಾರಕ ಮಗ್ಗ ‘ಮಾಗ’ ಎಂದು ‘ಹಾತಮಾಗ’ (ಕೈಮಗ್ಗ) ಎಂದು ಕರೆವರು. ಬಹುಸಂಖ್ಯೆಯ ಕನ್ನಡ ಜನ ಇಚಲಕರಂಜಿ ಎಂಬ ಶಹರಿನಲ್ಲಿ ಈ ಕೂಲಿಕಾರ್ಮಿಕರಾಗಿ ಹಲವಾರು ದಶಕಗಳಿಂದಲೂ ದುಡಿಯುತ್ತಿದ್ದಾರೆ.

ವಿಶಿಷ್ಟ ನಡೆನುಡಿಗಳಿಂದ ಕೂಡಿದ ಗಡಿ ಪರಿಸರಗಳ ಬಹುಜನ ಸಮುದಾಯಗಳು ‘ಸಂಸ್ಕೃತಿ’ ಯಿಂದ ವಿಶಿಷ್ಟವೂ ಆಗಿವೆ. ಅಷ್ಟೇ ಅಲ್ಲ ತನ್ನದೇ ಆದ ಅನನ್ಯತೆ ಹೊಂದಿವೆ. ಸಂಸ್ಕೃತಿ ಮತ್ತು ಭಾಷಿಕ ನೆಲೆಯಲ್ಲಿ ಈ ಭಾಗದ ಆಳವಾದ ಅಧ್ಯಯನ ನಡೆಯಬೇಕು. ವಾಣಿಜ್ಯದ ಮುಕ್ತ ಆರ್ಥಿಕ ನೀತಿಗಳಿಂದಾಗಿ ಅದರ ಪ್ರಭಾವದ ಹೊಡೆತಕ್ಕೆ ಸಿಲುಕುವ ಅಪಾಯ ಈ ದೇಸಿ ಸಂಸ್ಕೃತಿಗಿದ್ದರೂ ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ಇದಕ್ಕಿದೆ ಎಂದರೆ ಅದು ಉತ್ಪ್ರೇಕ್ಷೆಯ ಮಾತಲ್ಲ. ಅಂಥ ಗಡಿನಾಡಿನ ದಲಿತ ಪರಿಸರದ ಭಾಷೆ, ಉಪಭಾಷೆಗಳನ್ನು ದಾಖಲಿಸುವ ಒಂದು ಪುಟ್ಟ ಪ್ರಯತ್ನವಿದು ಅಷ್ಟೆ.