ಕರ್ನಾಟಕ ರಾಜ್ಯದ ಮೂಡಣ ದಿಕ್ಕಿನಲ್ಲಿರುವ ಕೋಲಾರ ಜಿಲ್ಲೆ ಹಲವು ಕಾರಣಗಳಿಗಾಗಿ ತನ್ನದೇ ಆದ ಖ್ಯಾತಿಯನ್ನು ಹೊಂದಿದೆ. ದಲಿತ ಚಳುವಳಿಯ ಮುಂಚೂಣಿ ಜಿಲ್ಲೆ ಎಂದೇ ಪರಿಗಣಿಸಲಾಗಿರುವ ಈ ಜಿಲ್ಲೆಯಲ್ಲಿ ೩೨% ರಷ್ಟು ದಲಿತ ಜನಾಂಗದವರಿದ್ದಾರೆ. (ಇವರಲ್ಲಿ ಪ.ಜಾ. ೨೭% ಹಾಗೂ ಪ. ವರ್ಗ ೫% ಇದ್ದಾರೆ) ‘ಸುವರ್ಣ ಭೂಮಿ’ ಅಥವಾ ‘ಚಿನ್ನದ ಬೀಡು’ ಎಂದೇ ಪ್ರಸಿದ್ಧವಾದ ಕೋಲಾರದ ಹಿಂದಿನ ಹೆಸರು ಕೋಲಾಹಲ, ಕುವಲಾಲ ಎಂದಿದ್ದು ಕೋಳಾಲ ಆಗಿ ಈಗ ಕೋಲಾರ ಆಗಿದೆ. ತಲಕಾಡಿನ ಗಂಗರ ಮೊದಲ ರಾಜಧಾನಿ ಕೂಡ ಆಗಿದ್ದ ಈ ಜಿಲ್ಲೆ ಭೌಗೋಳಿಕವಾಗಿ ಕರ್ನಾಟಕದ ರಾಜ್ಯದ ದಕ್ಷಿಣ ಭಾಗಕ್ಕಿದ್ದು, ಪೂರ್ವಾಭಿಮುಖವಾಗಿದೆ. ಜಿಲ್ಲೆಯ ಪಶ್ಚಿಮಕ್ಕೆ ಬೆಂಗಳೂರು ಮತ್ತು ತುಮಕೂರು ಜಿಲ್ಲೆಗಳಿದ್ದರೆ, ಮಿಕ್ಕ ಜಿಲ್ಲೆಗಳು ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ – ತಮಿಳುನಾಡಿಗೆ ಸೇರಿದವುಗಳು. ಅವೆಂದರೆ ಉತ್ತರ ದಿಕ್ಕಿನಲ್ಲಿ ಅನಂತಪುರ ಜಿಲ್ಲೆ (ಆಂಧ್ರಪ್ರದೇಶ), ಪೂರ್ವಭಾಗದಲ್ಲಿ ಚಿತ್ತೂರು (ಆಂಧ್ರಪ್ರದೇಶ), ದಕ್ಷಿಣಕ್ಕೆ ಉತ್ತರ ದಿಕ್ಕಿನಲ್ಲಿ ಅನಂತಪುರ ಜಿಲ್ಲೆ (ಆಂಧ್ರಪ್ರದೇಶ), ಪೂರ್ವಭಾಗದಲ್ಲಿ ಚಿತ್ತೂರು (ಆಂಧ್ರಪ್ರದೇಶ), ದಕ್ಷಿಣಕ್ಕೆ ಉತ್ತರ ಆರ್ಕಾಳು ಹಾಗೂ ಧರ್ಮಪುರಿ ಜಿಲ್ಲೆಗಳಿವೆ (ತಮಿಳುನಾಡು). ಜಿಲ್ಲೆಯ ವಿಸ್ತೀರ್ಣ ೮೨೨೩ ಚ.ಕಿ.ಮೀ.ಗಳಿದ್ದು ಇದರ ಅತಿ ಉದ್ದ ಭಾಗವೆಂದರೆ ಉತ್ತರದಿಂದ – ದಕ್ಷಿಣಕ್ಕೆ ೧೩೫ ಕಿ.ಮೀ. ಇದೆ. ಪೂರ್ವದಿಂದ – ಪಶ್ಚಿಮಕ್ಕೂ ಸುಮಾರು ಅಷ್ಟೇ ದೂರ ಇದೆ.

ಜಿಲ್ಲೆಯ ಭಾಷಿಕ ಪರಿಸರ ಹಾಗೂ ಸಾಮಾಜಿಕವಾಗಿ ದಲಿತರ ಅಸ್ತಿತ್ವ

ಕೋಲಾರ ಜಿಲ್ಲೆ ಭೌಗೋಳಿಕವಾಗಿ ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಿಗೆ ಗಡಿ ಭಾಗವಾಗಿರುವುದರಿಂದ ತೆಲುಗು-ಕನ್ನಡ, ತಮಿಳು-ಕನ್ನಡ ದ್ವಿಭಾಷಾ ಪರಿಸರ ನಿರ್ಮಾಣವಾಗಿದೆ. ಜಿಲ್ಲೆಯ ಕೆ.ಜಿ.ಎಫ್, ಮಾಲೂರು ಗಡಿ ಭಾಗಗಳು ತಮಿಳು ಭಾಷಾ ಸಂಪರ್ಕದಿಂದಾಗಿ ತಮಿಳು-ಕನ್ನಡ ದ್ವಿಭಾಷಾ ಪರಿಸರ ನಿರ್ಮಾಣವಾಗಿದ್ದರೆ, ಮಿಕ್ಕೆಲ್ಲಾ ಬಹುತೇಕ ತೆಲುಗು-ಕನ್ನಡ ದ್ವಿಭಾಷಿಕ ಸಂದರ್ಭ ಏರ್ಪಟ್ಟಿದೆ. ಈಗಾಗಲೇ ಹೇಳಿರುವಂತೆ ಜಿಲ್ಲೆಯಲ್ಲಿ ದಲಿತ ಜನಾಂಗದ ಜನಸಂಖ್ಯಾ ಬಾಹುಳ ೩೨% ರಷ್ಟಿದೆ. ಇವರಲ್ಲಿ ಹೊಲೆಯ, ಮಾದಿಗ, ವಡ್ಡ (ಬೋವಿ), ನಾಯಕ (ಬೇಡ) ಜನಾಂಗಗಳು ಪ್ರಮುಖವಾಗಿವೆ. ಆದರೆ ಭಾಷಿಕವಾಗಿ ನೋಡಿದಾಗ ಇವರಲ್ಲಿ ಕೆಲವೇ ಜನಾಂಗದವರು ಮಾತ್ರ ಕನ್ನಡವನ್ನು ಮನೆಮಾತಾಗಿ ಉಳ್ಳವರಾಗಿದ್ದಾರೆ. ಹೊಲೆಯ ಜನಾಂಗದ ಉಪಜಾತಿಯಾದ ‘ಮಗ್ಗದ ಹೊಲೆಯ’ರ ಮನೆಮಾತು ಮಾತ್ರ ಕನ್ನಡವಾಗಿದ್ದು, ಮಿಕ್ಕಂತೆ ಚಿಂತಲು ಹೊಲೆಯರು, (ಬಾಗೇಪಲ್ಲಿ, ಚಿಂತಾಮಣಿ ಹಾಗೂ ಶ್ರೀನಿವಾಸಪುರಗಳಲ್ಲಿ ಇವರ ಇರುವು ಇದೆ) ಸಾವು ಹೊಲೆಯರು, (ಕೆ.ಜಿ.ಎಫ್., ಮಾಲೂರು, ವೀರಾಪುರ) ಮಾದಿಗರು, ವಡ್ಡರು ಹಾಗೂ ನಾಯಕ (ಬೇಡ) ಜನಾಂಗಗಳ ಮನೆಮಾತು ತೆಲುಗಾಗಿದ್ದು, ವ್ಯಾವಹಾರಿಕ ಕಾರಣಗಳಿಗಾಗಿ ಅವರು ಬಹುತೇಕ ಕನ್ನಡವನ್ನು ಬಳಸುವ ಮೂಲಕ ದ್ವಿಭಾಷಾ ಪರಿಸರ ಏರ್ಪಟ್ಟಿದೆ.

ಕೋಲಾರದ ದಲಿತರ ಕನ್ನಡದ ವೈಶಿಷ್ಟ್ಯಗಳನ್ನು ವಿವಿಧ ಹಂತಗಳಲ್ಲಿ ಗುರುತಿಸುವ ಉದ್ದೇಶದಿಂದ ಸಂಶೋಧನಾ ಕಾರ್ಯ ನಡಸಿದಾಗ ಕಂಡ ಅಂಶಗಳನ್ನು ಇಲ್ಲಿ ನಿರೂಪಿಸಲಾಗಿದೆ. ಭಾಷಾ ಸಮೂಹ, ಭಾಷಾ ಸೀಮೆಗಳ ಹಾಗೂ ಭಾಷಾ ಸಂಗೋಪನಗಳನ್ನು ಗುರುತಿಸುದಲ್ಲಿ ಕೋಲಾರ ದಲಿತರ ಕನ್ನಡವನ್ನು ಇಲ್ಲಿ ಒಂದು ಸಾಮಾಜಿಕ ಘಟಕವನ್ನಾಗಿ ಪರಿಗಣಿಸಲಾಗಿದೆ. ಇಲ್ಲಿನ ಸಾಂಸ್ಕೃತಿಕ ಪರಿಸರ. ಸಾಮಾಜಿಕ ಹಾಗೂ ರಾಜಕೀಯ ವೈಪರೀತ್ಯಗಳ ಅಥವಾ ಬದಲಾವಣೆಗಳ ಕಾರಣವಾಗಿ ತೆಲುಗು ಮಿಶ್ರಿತ ಕನ್ನಡವು ತನ್ನದೇ ಆದ ವೈಶಿಷ್ಟ್ಯವನ್ನು ಕಾಯ್ದುಗೊಂಡಿದೆ. ಕೋಲಾರದ ದಲಿತರು ತಮ್ಮದೇ ಆದ ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಿಸರದ ಭಾಷಾ ವೈಶಿಷ್ಟ್ಯವನ್ನು ಹೊಂದಿರುವುದು ಇಲ್ಲಿ ಗಮನಾರ್ಹವಾದ ಅಂಶ.

ಕೋಲಾರದ ದಲಿತರಲ್ಲಿ ಕನ್ನಡವನ್ನು ಮನೆಮಾತಾಗಿ ಹೊಂದಿರುವ ‘ಮಗ್ಗದ ಹೊಲೆಯ’ರ ವಿವಿಧ ಪರಿಸರ ಸನ್ನಿವೇಶಗಳನ್ನು ಪರಿಗಣಿಸಿ ಅವರು ಬಳಸುವಂತಹ ಕನ್ನಡ ಭಾಷೆಯ ವೈಶಿಷ್ಟ್ಯಗಳನ್ನು ಇಲ್ಲಿ ಎತ್ತಿ ತೋರಿಸುವ ಪ್ರಯತ್ನವನ್ನು ಮಾಡಲಾಗಿದೆ. ಚಿಂತಾಮಣಿ, ಕಸಬಾ, ಮುರುಗಮಲ್ಲ, ಶ್ರೀನಿವಾಸಪುರ, ಬಂಗವಾದಿ, ರೋಜರ‍್ಪಲ್ಲಿ, ಹಿಡ್ಲಘಟ್ಟ, ಮೇಲೂರು, ಮಳ್ಳೂರು, ವಕ್ಕಲೇರಿ, ಟೇಕಲ್, ವೇಮಗಲ್, ಬಾಗೇಪಲ್ಲಿ, ಮುಳಬಾಗಿಲು ಮುಂತಾದ ಕಡೆಗಳಲ್ಲಿರುವ ದಲಿತರು ಕನ್ನಡವನ್ನು ಮನೆಮಾತಾಗಿ ಬಳಸುವವರಾಗಿದ್ದು, ಅವರಲ್ಲಿ ೨೦-೮೦ ವರ್ಷದವರೆಗಿನ ೫೦ ಜನ ಸ್ಥಳೀಯ ದಲಿತರನ್ನು ಪ್ರಚ್ಛಕರನ್ನಾಗಿ ಪರಿಗಣಿಸಿ ವಿಷಯ ಸಂಗ್ರಹಣೆ ಮಾಡಲಾಯಿತು. ಅಲ್ಲಿ ಕಂಡು ಬಂದ ಕನ್ನಡದ ವೈಶಿಷ್ಟ್ಯಗಳನ್ನು ಈ ಕೆಳಕಂಡಂತೆ ವಿಶ್ಲೇಷಣೆಗೆ ಒಳಪಡಿಸಿ ವಿವರಿಸಲಾಗಿದೆ.

I. ಧ್ವನಿಮಾ ಹಂತ

ಕೋಲಾರದ ದಲಿತರ ಕನ್ನಡದಲ್ಲಿ ಕೆಳಕಂಡ ಸ್ವರ ಹಾಗೂ ವ್ಯಂಜನಗಳ ಧ್ವನಿಮಾಗಳು (Phonemes) ಬಳಕೆಯಾಗುತ್ತವೆ.

೧. ಸ್ವರಗಳು :- ಅ, ಆ, ಇ, ಈ, ಉ, ಊ, ಎ, ಏ, ಒ ಓ- ೧೦

. ವ್ಯಂಜನಗಳು : – ಕ್, ಖ್, ಚ್, ಜ್, ತ್, ದ್, ಟ್, ಡ್, ಸ್, ಬ್ – ೧೦

. ಅನುನಾಸಿಕಗಳು : – ನ್, ಣ್, ಮ್, – ೩

. ಅವರ್ಗೀಯ ವ್ಯಂಜನಗಳು : – ಯ್, ರ್, ಲ್, ವ್, ಸ್, ಶ್, ಷ್ – ೦೭

ಗ್ರಹಿಸಲಾದ ವೈಶಿಷ್ಟ್ಯಗಳು : –

೧. ‘ಚ್’ ಧ್ವನಿ ‘ಸ್’ ಆಗಿ ಉಚ್ಚರಿಸಲಾಗುತ್ತದೆ.

ಉದಾಹರಣೆಗೆ : –

ಶಿಷ್ಟ ಕನ್ನಡ            ದಲಿತ ಕನ್ನಡ         ಚರಂಡಿ                     ಸಿರಂಡಿ

ಚಳಿ                       >                       ಸಳಿ                          ಚಿಟಿಕೆ                 –          ಸಿಟ್ಕೆ

ಚಟ್ನಿ                     >                       ಸಟ್ನಿ                        ಚಿಗಳಿ                 –          ಸಿಮ್ಮುಂಡೆ

ಚೆನ್ನಾಗಿದೆ               >                       ಸೆಂದಾಕೈತೆ                 ಚೇಪೆ(ಪೇರಲ) ಕಾಯಿ > ಸೇಪ್‌ಕಾಯಿ

೨. ‘ವ್’, ‘ಯ್’ ಧ್ವನಿ ಇಲ್ಲಿ ‘ಇ’, ‘ಏ’ ಆಗಿ ಬಳಕೆಯಾಗುತ್ತದೆ.

ಉದಾ :-

ವಿಮಾನ > ಇಮಾನ ಯುಕ್ತಿ-ಇಗತಿ
ವಿಚಿತ್ರ > ಇಸಿತ್ರ
ವಿದ್ಯೆ > ಇದ್ಯೆ
ವಿಠ್ಠಲಾಚಾರಿ > ಇಟ್ಲಾಚಾರಿ
ವ್ಯವಹಾರ > ಯವಾರ
ವ್ಯಾಜ್ಯ > ಏಚ್ಚೇವು
ವೆಂಕಟೇಶ > ಎಂಕಟೇಸು

೩. ಶಿಷ್ಟ ಕನ್ನಡ ಅನುಸ್ವರದ ನಂತರ ಬರುವ ಧ್ವನಿಗಳು ದ್ವಿತ್ವವಾಗಿ ಬಳಕೆಯಾಗುತ್ತದೆ.

ಉದಾ :-

ಕೊಂಬು > ಕೊಮ್ಮು
ಮತ್ತೆ<ಮಂತೆ
ಬಂಡಿ<ಬನ್ನಿ

೪. ಊಷ್ಮ ಧ್ವನಿಗಳಾದ ಸ, ಶ, ಷಗಳು ಅಭೇದವಾಗಿ ಉಚ್ಚರಿತವಾಗುತ್ತವೆ.

ಉದಾ:-

ಸೀಗೆಕಾಯಿ<ಸೀಕಾಯಿ > ಶೀಕಾಯಿ
ಸೀರೆ > ಶ್ಯಾಲೆ
ಶರಟು > ಸರಟು > ಸಲ್ಟು
ಶಬ್ದ > ಸಬ್ದ
ಶ್ರೀಮಂತ > ಸೀಮಂತ
ಆಕಾರ > ಅಕಾಸ
ಶಕ್ತಿ > ಸಕ್ತಿ > ಸಗತಿ > ಸತುವು (ಸತುವು)

೫. ಕೆಲವು ಶಬ್ದಗಳು ಸೌಲಭ್ಯಾಕಾಂಕ್ಷೆ ಕಾರಣದಿಂದಾಗಿ ಹ್ರಸ್ವವಾಗಿ ಧ್ವನಿ ವ್ಯತ್ಯಾಸಗೊಂಡು ಉಚ್ಚಾರವಾಗುತ್ತವೆ.

ಉದಾ :-

ಕೊಡಲಿ > ಗೊಡ್ಲಿ                         ಜ್ಞಾನ > ಗ್ಯಾನ
ಕಡಲೆ > ಕಳ್ಳೆ                                ಇಡು > ಇಕ್ಕು
ಕಟ್ಟೆ > ರಚ್ಚೆ                                ಸೋಪು > ಸೊಬ್ಬು
ಕೊಬ್ಬರಿ > ಕೊಮ್ಮರಿ                     ಏಣಿ > ನಿಚ್ಚಣಿ > ಮೆಳ್ಳು
ಮಾಳಿಗೆ > ಮಿದ್ದೆ                          ಕೆನ್ನೆ > ಚೆಕ್ಕು
ಮೊನ್ನೆ > ಮನ್ನೆ                            ಮೂಗು > ಮುಕ್ಕು
ಬಿಲ > ಬಕ್ಯೆ                                  ಹಕ್ಕಿ > ಅಕ್ಕಲಿ
ಪ್ರಜ್ಞೆ > ಪೆಗ್ಗಣಿ                             ನಿನ್ನೆ > ನೆನ್ನೆ
ತಟ್ಟೆ > ತಣಿಗೆ

೬. ಶಬ್ದದ ಆದಿಯಲ್ಲಿ ದ್ವಿತ್ವ ಹೊಂದಿರುವ ಅನ್ಯಭಾಷಾ ಪದಗಳು ದ್ವಿತ್ವವನ್ನು ಕಳೆದುಕೊಳ್ಳುತ್ತವೆ.

ಉದಾ:-

ಸ್ಟೇಷನ್ > ಟೇಷನ್ನು:
ಪ್ಲೇಟ್ > ಪಿಲೇಟು
ಸ್ಟೀಲು > ಇಸ್ಟೀಲು > ಟೀಲು

೭. ‘ಹ’ ವ್ಯಂಜನದ ನಂತರ ‘ಅ’, ‘ಆ’, ‘ಇ’, ‘ಎ’, ‘ಓ’ ಸ್ವರಗಳು ಬಂದಾಗ ‘ಹ’ ಧ್ವನಿ ಲೋಪವಾಗುತ್ತದೆ.

ಉದಾ:-

ಹಸು > ಅಸ > ಅಸುವು
ಹಾಲು > ಆಲು
ಹಣ್ಣು > ಅಣ್ಣು
ಹರಕು > ಅರಕ್ಲು (ಅರಕ್ಲು ಪುರುಕ್ಲು ಬಟ್ಟೆ)
ಹಾವು > ಆವು
ಹಾಸಿಗೆ > ಆಸ್ಕೆ
ಹೆಣ್ಣು > ಎಣ್ಣು                                  ಹುಟ್ಟು > ಉಟ್ಟು
ಹೆಂಗಸು > ಎಂಗ್ಸು                                ಹೊಲ > ಒಲ > ವಲ
ಹೆಸರು > ಎಸ್ರು                                     ಹೋರಿ > ಓರಿ
ಹೆಂಡತಿ > ಎಂಡ್ರು                                  ಹಿರಿಯರು > ಇರೀಕ್ರು
ಹೆರಿಗೆ > ಎರಿಗೆ
ಹಿಟ್ಟು > ಇಟ್ಟು
ಹಿಡಿ > ಇಡಿ
ಹುಡುಗಿ > ಉಡ್ಗಿ
ಹುಳು > ಉಳುವು

೮. ಕೆಲವು ಸಂದರ್ಭಗಳಲ್ಲಿ ‘ಗ್’ ಧ್ವನಿ ‘ಕ್’ ಆಗಿ ಉಚ್ಚರಿಸಲ್ಪಡುತ್ತದೆ.

ಉದಾ:-

ನಾಲಿಗೆ > ನಾಲಿಕೆ
ಕಾಗೆ > ಕಾಕಿ
ಅವನಿಗೆ > ಅವನ್ನ

II. ಆಕೃತಿಮಾ ಹಂತ

೧. ದ್ವಿತೀಯ ವಿಭಕ್ತಿ ಶೂನ್ಯ ಸ್ಥಿತಯಲ್ಲಿ ಬಳಕೆಯಾಗುತ್ತದೆ.

ಉದಾ:-

ಬಟ್ಟೆ ಒಗಿ
ಇಟ್ಟು ಮಾಡು
ಮುತ್ತಿಕ್ಕು – ಮುತ್ತು ಕೊಡು

೨. ಚತುರ್ಥಿ ವಿಭಕ್ತಿ ಪ್ರತ್ಯಯ ‘ಗೆ’, ‘ಕ್ಯ’, ‘ಕ’ ಎಂದು ಉಚ್ಚಾರವಾಗುತ್ತದೆ.

ಉದಾ:-

ಮನೆಗೆ > ಮನ್‌ಕ್ಯ > ಮನೇಕ
ಊರಿಗೆ > ಊರ್ಕ
ಬೆಂಗಳೂರಿಗೆ > ಬೆಂಗಳೂರ್ಕ

೩. ಪಂಚಮಿ ವಿಭಕ್ತಿ ‘ಇಂದ’, ‘ಇಂಕ’, ರೂಪಗಳು ಬಳಕೆಯಾಗುತ್ತವೆ.

ಉದಾ:-

ಮನೆಯಿಂದ > ಮನ್ನಿಂಕ
ಅವನಿಮದ > ಅವನ್ನಿಂಜಿ
ಇವನಿಂದ > ಇವನ್ನಿಂಕ
ಊರಿನಿಂದ > ಊರ್ನಿಂಚಿ

೪. ಸಪ್ತಮಿ ವಿಭಕ್ತಿ ‘ಅಲ್ಲಿ’ ‘ಆಗ’ ‘ಆಗ’ ಎಂಬುದಾಗಿ ಬಳಕೆಯಾಗುತ್ತದೆ.

ಉದಾ:-

ಮನೆಯಲ್ಲಿ > ಮನೇನಾಗ > ಮನ್ಯಾಗ
ಊರಲ್ಲಿ > ಊರ್ನಾಗ
ಗದ್ದೆಯಲ್ಲಿ > ಗದ್ಯಾಗ
ಹೊಲದಲ್ಲಿ > ಒಲ್ದಾಗ

೫. ತೆಲುಗಿನ ‘ಗಾಡು’ ಪ್ರತ್ಯಯ ಇಲ್ಲಿ ‘ಗಾನು’ ಎಂಬ ಪ್ರತ್ಯಯ ಆಗಿ ಪುಲ್ಲಿಂಗ ನಾಮಪದಗಳಿಗೆ ಹತ್ತುತ್ತದೆ.

ಉದಾ:-

ಗಾಡು > ಗಾನು
ನಾಗರಾಜಗಾನು
ವೆಂಕಟೇಶ್‌ಗಾನು
ಸೀನಗಾನು
ಮುನಿಗ್ಯಾನು

೬. ವಿಭಕ್ತಿ ಪ್ರತ್ಯಯಗಳ ಜೊತೆಗೆ ವಿಭಕ್ತ್ಯರ್ಥವನ್ನು ಹೇಳಲು ಉತ್ತರ ಸ್ಥಾನೀಯಗಳಾದ (Postpositions) ಮುಕ್ತ ರೂಪಗಳು ಬಳಕೆಯಲ್ಲಿವೆ.

ಸಪ್ತಮಿ ವಿಭಕ್ತಿ ‘ಅಲ್ಲಿ’ ಬಳಕೆಯಾಗುವ ಕೆಲವೊಂದು ಕಡೆ ‘ಪೈಕಿ’ ಎಂಬ ಉತ್ತರ ಸ್ಥಾನೀಯವನ್ನು ಬಳಸಲಾಗುತ್ತಿದೆ.

ಉದಾ:-

ಏಳಾಳು ಪೈಕಿ ಚಿಕ್ಕೋನೆ ಆಸೋ ಈಸೋ ಏಳ್ಗೆ ಆಗಿರೋದು.
ತೃತೀಯೆ ‘ಇಂದ’ ಬಳಕೆಯಾಗುವಂತಹ ಕಡೆ ‘ಕೈಲಿ’
‘ಕೈಯಾಗ’ ಎಂಬುದಾಗಿ ಬಳಕೆಯಾಗುತ್ತದೆ.

ಉದಾ:-

ನನ್ನಿಂದ ಆಗೋಲ್ಲ – ನನ್‌ಕೈಲಿ/ಕೈಯಾಗ ಆಗೋಲ್ಲ
‘ಜೊತೆ’ ‘ಕೂಡ’ ಎಂಬ ರೂಪಗಳು ಸಹ ವಿಭಕ್ತಿಯಾಗಿ ಕಾಣಿಸಿಕೊಳ್ಳುತ್ತವೆ.

ಉದಾ:-

೧. ನನ್ ತಮ್ನ್ ಕೂಡ ವತೀನೆ ಬೆಂಗ್ಳೂರ್ಕ ಬನ್ನಿ (ಬಂದೆ).
೨. ರಾಮಕ್ನೂ-ಲಚ್ಚಕ್ನೂ ಇಬ್ರೂ ಒಂದ್ ಜೊತ್ಯಾಗ

ಇಸ್ಸೋಲ್ಕ ಓದೋರು (ಹೋದವರು)

‘ಹತ್ತಿರ’ ಎಂಬ ರೂಪಕ್ಕೆ ಬದಲಾಗಿ ತಾವ/ತಾಗ/ತ್ಯಾವ ರೂಪಗಳು ಕಾಣಿಸಿಕೊಳ್ಳುತ್ತವೆ.

೧. ಮನೆ ಹತ್ತಿರ ಇದ್ದಾನೆ – ಮನ್‌ತ್ಯಾವ ಅವ್ನೆ

– ಮಸೀತಾಗ ಅವ್ನೆ

೨. ಹೊಲದ ಹತ್ತಿರ ಇದ್ದಾನೆ – ಹೊತ್‌ತಾಗ ಅವ್ನೆ

ಹೊಲ್‌ತಾವ ಅವ್ನೆ

೭. ದಲಿತ ಕನ್ನಡದಲ್ಲಿ ತಂದೆ, ತಾಯಿ, ಅಣ್ಣ, ಅಕ್ಕ, ಮಾವ ಸಂಬಂಧಿ ಸೂಚಕ ಪ್ರಕೃತಿಗಳಿಗೆ – ಗಾರ (ಪುಲ್ಲಿಂಗ), ಗಾರ್ತಿ (ಸ್ತ್ರೀಲಿಂಗ) ಎಂಬ ಪ್ರತ್ಯಯಗಳು ಹತ್ತುತ್ತವೆ.

ಉದಾ :-

ತಂದೆಗಾರ್ದು                               ತಾಯಿಗಾರ್ತಿ
ಅಣ್ಣಗಾರ್ನು                              ಅಕ್ಕನುಗಾರ್ತಿ
ಮಾವ್ನ್‌ಗಾರ್ನು ಇತ್ಯಾದಿ.

೮. ‘ರು’, ‘ಓದು’, ‘ಯೋರು’ ‘ಳು’ ಎಂಬ ಬಹುವಚನ ಪ್ರತ್ಯಯಗಳು ಬಳಕೆಯಲ್ಲಿವೆ.

ಉದಾ:-

ತಾಸೀಲ್ದಾರು, ಅಗಸ್ರು, ಕುಂಬಾರ್ರು‍,
ಅಣ್ಣೋರು, ತಮ್ನೋರು, ಸಾಕ್ಲೋರು (ಅಗಸರು),
ತಂದ್ಯೋರು ಒದೀಲುಗ್ಳು, ವಡವೆಗ್ಳು, ಇತ್ಯಾದಿ.

ತೆಲುಗು ಭಾಷೆಯ ಪ್ರಭಾವದಿಂದಾಗಿ ಬಳಕೆಯಲ್ಲಿರುವ ಪದಗಳು

ಗಡಿನಾಡು ಜಿಲ್ಲೆಯಾದ್ದರಿಂದ ತೆಲುಗು ಭಾಷೆಯ ಪದಗಳು ಸಂಭಾಷಣೆಯ ಸಂದರ್ಭದಲ್ಲಿ ಪದಗಳಾಗಿಯಾಗಲಿ, ವಾಕ್ಯಗಳ ರೂಪದಲ್ಲಿಯಾಗಲಿ ಬಳಕೆಯಾಗುವ ಸಂದರ್ಭಗಳು ನುಡಿ ಮಿಶ್ರಣ, ನುಡಿ ಜಿಗಿತದ ಸಾಧ್ಯತೆಗಳನ್ನು ಹೆಚ್ಚಾಗಿಸಿವೆ.

ಕನ್ನಡ ರೂಪ                              ತೆಲುಗು ರೂಪ

ಕತ್ತರಿಸು                                              ನರಕು

ಹಂಗಿಸು                                              ಎಕ್ಕರಿಸು

ಅರಳಿಮರಕಳ್ಳೆ                                      ರಾಗಿ ಮರ ರಚ್ಚೆ

ಆ ಕಡೆ                                                 ಆ ತಟ್ಟು

ಬದು                                                  ಗೆನೆಮೆ

ಬುರುಡೆ                                              ಬುತ್ತಿ

ಸುಳ್ಳು                                                ಬೂಸಿ, ತರಗು

ಏಡಿ                                                    ಎಂಡ್ರಕಾಯಿ

ಹೀಗೆ ವಿಶಿಷ್ಟ ಪದಕೋಶವೊಂದು ಆಯಾ ಸಾಮಾಜಿಕ ವರ್ಗಗಳಿಗೆ ಸೀಮಿತವಾಗಿ ಬಳಕೆಯಲ್ಲಿರುವುದು ಭಾಷಾಧ್ಯಯನಗಳಿಂದ ತಿಳಿದುಬರುತ್ತದೆ. ಅದರಲ್ಲೂ ಗಡಿಪ್ರದೇಶಗಳಲ್ಲಿ ಅಲ್ಪಸಂಖ್ಯಾತ ಭಾಷೆಯ ರಚನೆ ವಿಶಿಷ್ಟವಾಗಿದ್ದು; ಆಳವಾದ ಸಂಶೋಧನೆಯಿಂದ ಮತ್ತಷ್ಟು ವಿಚಾರಗಳನ್ನು ಚರ್ಚಿಸುವ ಅಗತ್ಯವಿದೆ.