ಕನ್ನಡ ವಿಶ್ವವಿದ್ಯಾಲಯದ ದಲಿತ ಸಂಸ್ಕೃತಿ ಅಧ್ಯಯನ ಪೀಠವು ದಲಿತರು, ಭಾಷೆ ಮತ್ತು ಸಮಾಜ ಎಂದು ಇಟ್ಟುಕೊಂಡಿರುವ ವಿಚಾರಸಂಕಿರಣ ಬಹಳ ಉಪಯುಕ್ತವಾದುದು. ದಲಿತ ಸಂಸ್ಕೃತಿ ಅಧ್ಯಯನ ಪೀಠವು ದಲಿತರನ್ನು ಕುರಿತು ಹೆಚ್ಚು ವಿಚಾರಸಂಕಿರಣಗಳನ್ನು ನಡೆಸಿದೆ ಮತ್ತು ಪ್ರಕಟಣೆಗಳನ್ನು ಹೊರತಂದಿದೆ. ದಲಿತರನ್ನು ಕುರಿತು ವಿಚಾರಸಂಕಿರಣಗಳನ್ನು ಮಾಡಿ, ಪ್ರಕಟಣೆಗಳನ್ನು ಹೊರತಂದಿದೆ. ದಲಿತರನ್ನು ಕುರಿತು ವಿಚಾರಸಂಕಿರಣಗಳನ್ನು ಮಾಡಿ, ಪ್ರಕಟಣೆಗಳನ್ನು ಹೊರತಂದು ಇಷ್ಟು ಒಂದು ಕೆಲ್ಸ ಮಾಡುವಾಗ ಅದರ ಎಚ್ಚರಕೂಡ ಕನ್ನಡ ವಿಶ್ವವಿದ್ಯಾಲಯಕ್ಕೆ ಇದೆ ಅನ್ನೋದು ತುಂಬಾ ಸಂತೋಷದ ವಿಷಯ. ‘ದಲಿತರನ್ನು ಸಂಕುಚಿತ ದೃಷ್ಟಿಯಿಂದ ಜಾತಿಯ ನೆಲೆಯಲ್ಲಿ ನೋಡದೆ ಈ ನಾಡಿನ ಶೋಷಿತ ವರ್ಗಗಳ ದೃಷ್ಟಿಕೋನದಿಂದ ಅದರ ಹಿತವನ್ನು ಗಮನದಲ್ಲಿಟ್ಟುಕೊಂಡು ಈ ಕೆಲ್ಸ ಮಾಡ್ತಾ ಒಟ್ಟು ಸಮಾಜಕ್ಕೆ ದಲಿತ ಸಂಸ್ಕೃತಿ ಪರ್ಯಾಯವಾಗಬಹುದೇ, ಒಟ್ಟು ಸಮಾಜಕ್ಕೆ ಈ ದಲಿತ ಚಿಂತನಾಕ್ರಮ ಪೂರಕವಾಗಬಹುದೇ ಎಂದು ಚಿಕಿತ್ಸಕ ದೃಷ್ಟಿಯಿಂದ ಕನ್ನಡ ವಿಶ್ವವಿದ್ಯಾಲಯ ಈ ಕೆಲಸವನ್ನು ಮಾಡ್ತಾ ಇದೆ. ಆಶಯ ಭಾಷಣ ಮಾಡಿದೆ ಕೆ.ವಿ.ನಾರಾಯಣ ಅವರು ಕೂಡ ಅಂತಹ ಮಾತುಗಳನ್ನ ಆಡಿದ್ದಾರೆ. ಆದ್ದರಿಂದ ಈ ಕೆಲ್ಸ ಇದೇ ರೀತಿಯಲ್ಲಿ ಇನ್ನೂ ತೀವ್ರವಾಗಿ ನಡೀಲಿ ಅಂತ ಆಶಿಸುತ್ತೇನೆ.

ದಲಿತರ ಚಿಂತಾನಕ್ರಮ ಮತ್ತು ಅನುಭವಗಳಿಗೆ ಅನುಗುಣವಾಗಿ ಇರ್ತಕ್ಕಂತದ್ದು ಭಾಷೆ. ಎಲ್ಲ ಸಾಮಾಜಿಕ ಬುಡಕಟ್ಟುಗಳ ಭಾಷೆ ಸ್ವರೂಪ ಕೂಡ ಇದೆ ಆಗಿರ್ತದೆ. ಸಮಾಜದಲ್ಲಿ ಮತ್ತು ಭಾಷೆ ರೂಪುಗೊಳ್ತದೆ ಅಂತ ಅನ್ಸೋದಿಲ್ಲ. ಏಕೆಂದ್ರೆ ದಲಿತರ ಭಾಷೆ ಅವರ ಬದುಕಿಗೆ ಸಂಬಂಧಪಟ್ಟದ್ದು. ಅವರ ಬದುಕು ಚರಿತ್ರೆಯಲ್ಲಿ ನಿತ್ಯವೂ ಕೂಡ ಅನೇಕ ಸಂಕಷ್ಟಗಳನ್ನು ಎದುರಿಸಿ ಬಂದಿರ್ತಕ್ಕಂತದ್ದು. ಆದ್ರಿಂದ ಬೇರೆ ಬೇರೆ ಆಕರಗಳನ್ನಿಟ್ಟುಕೊಂಡು ಗಮನಿಸೋದಾದ್ರೆ ದಲಿತವರ್ಗದವರ ಚಿಂತನಾಕ್ರಮ ಉಳಿದ ವರ್ಗದವರ ಚಿಂತನಾಕ್ರಮಕ್ಕಿಂತ ಭಿನ್ನವಾಗಿರ್ತದೆ. ಏಕೆಂದ್ರೆ ಏಟು ಹೊಡೆಯುವವನ ಚಿಂತನಾಕ್ರಮಕ್ಕೂ ಏಟನ್ನು ಹೊಡೆಸಿಕೊಳ್ಳುವವನ ಚಿಂತನಾಕ್ರಮಕ್ಕೂ ಯಾವ ರೀತಿ ವ್ಯತ್ಯಾಸ ಇರ್ತದೋ ಅದೇ ರೀತಿ ದಲಿತರು ಮತ್ತು ಇತರರ ಚಿಂತನಾಕ್ರಮದಲ್ಲಿ ವ್ಯತ್ಯಾಸವನ್ನು ಕಾಣೇವನೆ. ಆದ್ರೆ ಏಟು ಹೊಡೆಯುವವನ ಹುಮ್ಸಸ್ಸು, ವೇಗ, ಸಾಮರ್ಥ್ಯ ಮತ್ತು ಅಟ್ಟಹಾಸ ದಲಿತನಿಗಿಲ್ಲ. ಅವನು ಹೊಡೆಸಿಕೊಳ್ಳುವಾಗ ಇನ್ನೊಂದು ರೀತಿಯಲ್ಲಿ ಅದಕ್ಕೆ ಪ್ರತಿಕ್ರಿಯೆ ವ್ಯಕ್ತಪಡ್ಸಿರ್ತಕ್ಕಂತದ್ದನ್ನ ನಾವು ಕೇಳ್ತೇವೆ.

ಇಡೀ ದೇಶದ ಚರಿತ್ರೆಯಲ್ಲಿ ದಲಿತರನ್ನ ತುಂಬಾ ಅಪಮಾನಕ್ಕೆ ಈಡು ಮಾಡಿದಂತಹ ಮನುಸ್ಪೃತಿಯ ಬಗ್ಗೆ ದಲಿತರ ಪ್ರತಿ‌ಕ್ರಿಯೆ ಏನು? ಅದು ಪೂರ್ವ ಕಾಲದ ಪ್ರತಿಕ್ರಿಯೆ ಅಂತ ಇಟ್ಕೊಳ್ಳೋಣ. ಒಂದು ಸಾವಿರ ವರ್ಷಗಳ ಹಿಂದೆ ದಲಿತರು ಮನುಸ್ಮೃತಿಗೆ ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡ್ಸಿದ್ರು? ಅದರಲ್ಲೂ ಮಹಾರಾಷ್ಟ್ರಗಳಲ್ಲಿ ಪೇಶ್ವೆಗಳ ಆಡಳಿತ ಕಾಲದಲ್ಲಿ ಮನುಸ್ಮೃತಿಯನ್ನು ಆಡಳಿತದಲ್ಲಿ ಅನುಷ್ಟಾನಗೊಳಿಸುವ ಉತ್ಸಾಹ ತೀವ್ರವಾಗಿದ್ದ ಕಾಲದಲ್ಲಿ ದಲಿತರು ಯಾವ ರೀತಿ ಪ್ರತಿಕ್ರಿಯೆ ವ್ಯಕ್ತಪಡ್ಸಿದ್ರು ಅನ್ನುವುದು ಬಹಳ ಸೂಕ್ಷ್ಮವಾದ ಅಂಶ. ಇದನ್ನ ಗಮನಿಸಿದಾಗ ಈ ಚಿಂತನಾಕ್ರಮದ ನೆಲೆಯೇ ಬೇರೆ ಅನ್ನೋದು ಗೊತ್ತಾಗ್ತದೆ. ಅದು ಬಹುಶಃ ಎಲ್ಲ ಜಾತಿಗಳಲ್ಲಿರುವ ಎಲ್ಲ ಕೋಮುಗಳಲ್ಲಿರುವ ಅವರು ದಲಿತರಲ್ಲದೇ ಇದ್ರೂ ಕೂಡ ಆ ಗುಂಪುಗಳಲ್ಲಿದ್ದು ದಲಿತನ ರೀತಿಯಲ್ಲಿ ಸಂಕಷ್ಟಕ್ಕೆ ಒಳಗಾದವರ ಮನೋಧರ್ಮಕ್ಕೆ ಹತ್ತಿರವಾದ ಪ್ರತಿಕ್ರಿಯೆ ಇದು. ಸುಮಾರು ಒಂದು ಸಾವಿರ ವರ್ಷದ ಹಿಂದೆ ಅವರು ವ್ಯಕ್ತಪಡಿಸಿದ ಅಭಿಪ್ರಾಯ, ಪ್ರತಿಕ್ರಿಯೆ ಏನು ಅಂತಂದ್ರೆ; ಆ ಭಾಗದಲ್ಲಿ ಪುರಾಣಗಳು ಮತ್ತು ಅಮಾನವೀಯವಾದ ಈ ಶೋಷಣೆ ದೌರ್ಜನ್ಯಗಳನ್ನು ಮೇಲ್ವರ್ಗದವರು ಯಾವ ರೀತಿ ಈ ದಲಿತರ ಮೇಲೆ ಮಾಡೋಕೋದ್ರೋ , ದಲಿತರು ಕೂಡ ಅದೇ ಪುರಾಣಗಳನ್ನು ಬೇರೆ ರೀತಿ ಆಶ್ರಯಿಸಿ ಇವುಗಳಿಗೆ ಪ್ರತಿರೋಧ ಒಡ್ಡಿದ್ದು ಒಂದು ರೀತಿ ಸೋಜಿಗದ ಸಂಗತಿ ಅಂತ ನನಗನಿಸ್ತದೆ. ಪೇಶ್ವೆಗಳ ಆಡಳಿತ ಕಾಲದಲ್ಲಿ ಚಲಾವಣೆಯಲ್ಲಿದ್ದಂತಹ ಒಂದೆರಡು ನಂಬಿಕೆಗಳನ್ನ ನಾನು ಹೇಳ್ಲಿಕ್ಕೆ ಇಷ್ಟಪಡ್ತೇನೆ. ಒಂದು ನಂಬಿಕೆ ಎಂದರೆ ದಲಿತರು ಹೊರಗಡೆ ಎಲ್ಲೂ ಉಗುಲ್ಬಾರ್ದು – ಇದು ದಲಿತರೇ ನಂಬಿಕೊಂಡಿರುವಂತಹುದು. ಮನುಸ್ಮೃತಿಯಲ್ಲಿ ಮನು ಒಂದು ನಿಯಮವನ್ನು ದಾಖಲಿಸಿದ್ದಾನೆ. ದಲಿತರು ದಾರಿಯಲ್ಲಿ ಹೋಗ್ಬೇಕಾದ್ರೆ ಅವರ ಹೆಗಲಿನಲ್ಲಿ ಒಂದು ಗಡಿಗೆಯನ್ನ ನೇತು ಹಾಕೊಂಡಿರ್ಬೇಕು. ಯಾಕೆಂದ್ರೆ ದಲಿತರು ದಾರಿಯಲ್ಲಿ ಉಗುಳಿದ ಉಗುಳನ್ನು ಮೇಲ್ವರ್ಗದವರು ತುಳೀಬಾರ್ದು. ಅದಕ್ಕೋಸ್ಕರ ಕಂಕಳಲ್ಲಿ ಒಂದು ಗಡಿಗೆ ಕಟ್ಕೊಂಡು ಅದಕ್ಕೆ ಉಗುಳಬೇಕೆನ್ನುವ ಮನುಸ್ಮೃತಿಯ ವಿಚಾರ ಏನಿದೆ ಅದಕ್ಕೆ ಪರ್ಯಾಯವಾಗಿ ಮಾಡಿಕೊಂಡ ಪ್ರತಿಕ್ರಿಯೆ ಏನೂಂತಂದ್ರೆ ಆ ನಿಯಮದ ವಿರುದ್ಧ ಹೋರಾಟ ಅಲ್ಲ. ಬದಲಾಗಿ, ಹೌದು ನಾವು ಹೊರಗಡೆ ಉಗುಳಿದ್ರೆ ನಮ್ಮ ಬಾಯಿಂದ ಮುತ್ತು ರತ್ನಗಳು ಬಿದ್ದೋಗ್ತವೆ. ಅದನ್ನ ಮೇಲ್ವರ್ಗದವರು ಬಾಚ್ಕೋಬಹುದು. ಅದರಿಂದ ನಮಗೇ ನಷ್ಟವಾಗ್ತದೆ. ಅದಕ್ಕೆ ನಾವು ಮನೆ ಒಳಗೇ ಉಗೀತೀವಿ. ನೀವು ಹೇಳಿದ್ರಿ ಅಂತ ಆಗಲೀ ಅಥವಾ ಮನು ಹೇಳಿದ ಅಂತ ಆಗಲಿ ನಾವು ಉಗುಳ್ತಾ ಇಲ್ಲ. ಮುತ್ತು, ರತ್ನಗಳು ಬಾಯಿಂದ ಬಿದ್ದು ನಮಗೆ ನಷ್ಟವಾಗದೇ ಇರ್ಲಿ ಅಂತಾನೇ ನಾವು ಉಗಿತಾ ಇಲ್ಲ ಅಂತ. ದಲಿತರು ಕಂಡುಕೊಂಡ ಒಂದು ರೀತಿಯ ಸೂಕ್ಷ್ಮವಾದ ಪ್ರತಿರೋಧ ಅಥವಾ ಅಪಮಾನವನ್ನು ಅರಗಿಸಿಕೊಳ್ಳಲು ನಂಬಿಕೊಂಡ ಅಸಹಾಯಕತೆ ಅಂತ ಹೇಳ್ಬಹುದು.

ದಲಿತರು ದಾರಿಯಲ್ಲಿ ಹೋಗ್ಬೇಕಾದ್ರೆ ತಮ್ಮ ಹಿಂದೆ ಒಂದು ಪೊರಕೆಯನ್ನ ಕಟ್ಕೊಂಡು ಹೋಗ್ಬೇಕು. ಅವರು ತಮ್ಮ ಹೆಜ್ಜೆಗಳನ್ನ ಗುಡಿಸಿಕೊಂಡು ಹೋಗ್ಲಿ ಉಳಿದವರು ಆ ಹೆಜ್ಜೆಗಳನ್ನ ತುಳೀಬಾರ್ದು ಅನ್ನುವ ಮನಧರ್ಮದ ನಿಯಮಕ್ಕೆ ಪರ್ಯಾಯವಾಗಿ ದಲಿತರು ರೂಢಿಸಿಕೊಂಡ ಇನ್ನೊಂದು ನಂಬಿಕೆ ಏನಂದ್ರೆ; ದಲಿತರು ಹೆಜ್ಜೆ ಇಟ್ಟಲ್ಲೆಲ್ಲ ಕಮಲಗಳು ಹುಟ್ಕೊಂಡು ಬಿಡ್ತವೆ. ಆದ್ರಿಂದ ದಾರೀನಲ್ಲೆಲ್ಲ ಕಮಲಗಳು ಹುಟ್ಕೊಂಡು ಓಡಾಡೋ ಜನರಿಗೆ ತೊಂದ್ರೆ ಆಗ್ತದೆ. ಅದಕ್ಕೋಸ್ಕರ ದಲಿತರು ತಾವೆ ಬುದ್ಧಿವಂತಿಕೆಯಿಂದ ಉಳಿದವರಿಗೆ ತೊಂದ್ರೆ ಆಗದೇ ಇರಲಿ ಅನ್ನೋ ಕಾರಣದಿಂದ ನಮ್ಮ ಹಿಂದೆ ಪೊರಕೆ ಕಟ್ಕೊಂಡು ಹೋಗ್ತಿವಿ. ನಮ್ಮ ಹೆಜ್ಜೆಗಳನ್ನು ಆ ಪೊರಕೆ ಗುಡ್ಸಿಕೊಂಡು ಹೋಗ್ತದೆ ಅಂತ ನಂಬಿಕೆಯನ್ನ ಸೃಷ್ಟಿ ಮಾಡ್ಕೊಂಡ್ರು. ಅಂದ್ರೆ ಅಪಮಾನಗಳನ್ನ ಎದುರಿಸುವಾಗ ದಲಿತರ ಪ್ರತಿರೋಧ ಕೂಡ ಯಾವ ರೀತಿಯ ಅಸಹಾಯಕತೆಯನ್ನ ರೂಢಿಸಿಕೊಳ್ತು ಅಂತಕ್ಕಂತಹದನ್ನ ನೋಡ್ದಾಗ, ತುಂಬ ದಬ್ಬಾಳಿಕೆಗೆ ಒಳಗಾದವನು ಎಲ್ಲವನ್ನು ಕಳಕೊಳ್ತ ಹೋಗ್ತಾನೆ. ಅವನಿಗೊಂದು ವ್ಯಕ್ತಿತ್ವ ಇರೋದಿಲ್ಲ. ಒಂದು ಭಾಷೆ ಇರೋದಿಲ್ಲ. ಒಂದು ದೇವ್ರು ಕೂಡಾ ಇರೋದಿಲ್ಲ. ಭಾಷೆ, ಚಹರೆ, ವ್ಯಕ್ತಿತ್ವ ಮುಂತಾದವೆಲ್ಲವೂ ಕೂಡ ದಬ್ಬಾಳಿಕೆ ಮಾಡುವವನಿಂದ ಬರ್ಬೇಕು. ದಬ್ಬಾಳಿಕೆ ಮಾಡುವವನ ನಡೆ, ನುಡಿ, ಆಚಾರ-ವಿಚಾರ ಎಲ್ಲವುಗಳನ್ನು ಕಲ್ತುಕೊಂಡು, ಅರಗಿಸಿಕೊಂಡು ಈತ ಬದುಕ್ಬೇಕಾಗ್ತದೆ. ಇದರ ನಡುವೆ ದಲಿತರು ತಮ್ಮ ಭಾಷೆಯನ್ನು ಉಳಿಸಿಕೊಳ್ಳಕ್ಕೆ ಪ್ರಾರಂಭ ಮಾಡಿದ್ದು ಮತ್ತು ಪ್ರಯತ್ನ ಮಾಡಿದ್ದನ್ನ ನೋಡ್ದಾಗ ಆಶ್ಚರ್ಯವಾಗ್ತದೆ.

ನಾನು ಒಂದ್ಸಲ ಆಕಾಶವಾಣಿಲಿ ನನ್ನ ಪದ್ಯ ಓದ್ತಾ ಇದ್ದೆ. ‘ಮಳೆರಾಯ ಕ್ವಾಪದಲಿ ದೇಸಾಂತರ ಹೋಗಿ’ ಅಂತ ನನ್ನ ಪದ್ಯ. ನಾನು ಉದ್ದೇಶ ಪೂರ್ವಕವಾಗಿ ಬರ್ದಿದ್ದೆ. ಧ್ವನಿ ಸಂಗ್ರಹ ಮಾಡುವಾಗ ಮಳೆರಾಯ ಕ್ವಾಪದಲಿ ದೇಸಾಂತರ ಹೋಗಿ ಅಂತ ಹಾಡ್ತಾ ಇದ್ದೆ. ಧ್ವನಿ ಸಂಗ್ರಹ ಮಾಡ್ತಾ ಇದ್ದವರು ಕೂಡ್ಲೆ ಸ್ಟಾಪ್ ಮಾಡಿ ಗಾಜಿನ ಮೂಲಕ ಶ, ಶ, ಅಂತ ಹೇಳ್ಲಿಕ್ಕೆ ಸುರು ಮಾಡಿದ್ರು. ಗಾಜಿನ ಹೊರಗೆ ಅವರು ಕೂಗ್ತಾ ಇದ್ದದರಿಂದ ನನಗೆ ಕೇಳಿಸ್ತಾ ಇರ್ಲಿಲ್ಲ. ನಾನು ಇವ್ರಿಗೆ ಏನ್ಬಂತು? ಒಂಥರಾ ಆಡ್ತಾ ಇದ್ದಾರಲ್ಲ ! ಕರೆಂಟು ಹೋಯಿತೋ ಏನೋ ಅಂತ ನಾನು ಅವ್ರನ್ನೇ ನೋಡ್ತಾ ಇದ್ದೆ. ಅವರೆಲ್ಲರೂ ಶ, ಶ, ಅಂತ ಕಿರುಚಕ್ಕೆ ಸುರುಮಾಡಿದ್ರು. ಆಗ ಅವರು ಶ ಕಾರದ ಬಗ್ಗೆ ಹೇಳ್ತಾ ಇದ್ದಾರೆ ಅನ್ನೋದು ಗೊತ್ತಾಯ್ತು. ಆಗ ನಾನು ಇಲ್ಲ ನಾನು ‘ಸ’ ಕಾರವನ್ನೇ ಬಳಸೋದು ಅಂತ ಹೇಳ್ಲಿಕ್ಕೆ ಸುರು ಮಾಡ್ದೆ. ಅವರು ಒಳಗಡೆ ಬಂದು ನಿನ್ನ ಒಳ್ಳೇದಕ್ಕೆ ಹೇಳ್ತಾ ಇದ್ದೀವಪ್ಪ ನೀನು ‘ಸ’ ಅಂತಿದ್ದೀಯ, ‘ಶ’ ಅನ್ನಬೇಕು ಇದನ್ನ ತಿದ್ದಿಕೊಲಳಿ ಅಂತ ಹೇಳಿದ್ರು. ನನ್ನ ಬಾಯಲ್ಲಿ ಶ ಹೇಳ್ಸಿ ನನಗೆ ಸಹಾಯ ಮಾಡ್ತಾ ಇದ್ದೀವಿ ಅಂತ ಅವ್ರು ತಿಳ್ಕಂಡಿದ್ರು. ನಾನು ಹೇಳ್ದೆ ನಿಮ್ಮ ಸಹಾಯನೂ ಬೇಕಾಗಿಲ್ಲ. ನಿಮ್ಮ ‘ಶ’ನೂ ಬೇಕಾಗಿಲ್ಲ ನನಗೆ, ನನ್ನ ‘ಸ’ ನಾನು ಉಳ್ಸಿಕೊಂಡಿದ್ದೀನಿ ಈ ಆಕಾಶವಾಣಿಯಿಂದನೇ ನಾನು ಹೊರಟೋಗ್ತೀನಿ ಅಂತ ಹೇಳ್ದೆ. ಅವ್ರು ಇವ್ನಿಗೆ ಏನೋ ಸಮಸ್ಯೆ ಇರ್ಬೇಕು ಅಂತ ಅಂದ್ಕೊಂಡ್ರು. ಅವನ ಸೌಜನ್ಯವನ್ನ ಮೆಚ್ಚೇನೆ. ‘ಶ’ ಕಾರವನ್ನು ಬಿಟ್ಟು ‘ಸ’ ಕಾರವನ್ನೇ ಪ್ರಸಾರ ಮಾಡಿದ್ದು ನನಗೂ ಒಂದು ಅನುಭವ.

ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ಶಿಶು ಶಾಹಿತ್ಯ ಗೋಷ್ಠಿ ಅಂತ ಮಾಡಿದ್ರು. ಅದರಲ್ಲಿ ಸ್ವಾಗತಕಾರನಿಂದ ಹಿಡಿದು ಪ್ರಬಂಧಕಾರನವರೆಗೂ ಎಲ್ಲರೂ ‘ಶಿಶು’ ಅನ್ನೋದರಲ್ಲೇ ಮುಗ್ಗಿರಿಸಿಬಿಡ್ತಾ ಇದ್ರು. ಪ್ರಾರಂಭದಲ್ಲೇ ಮುಗ್ಗರಿಸಿಬಿಟ್ಟಾಂತಂದ್ರೆ ಎಲ್ಲಿ ಭಾಷಣ ಮಾಡ್ತಾನೆ. ಪ್ರಬಂಧ ಹೇಗೆ ಓದ್ತಾನೆ, ಸಿಸು ಸಾಹಿತ್ಯ ಅಂದೇಟ್ಗೆ ಅವನ್ಗೆ ಗಾಬ್ರಿಯಾಗಿ, ಜನರೂ ಇವನಿಗೇನ್ಬಂತು ಸಿಸು ಅಂತಿದ್ದಾನೆ ಅಂದ್ಕೊಂಡು ಕೊನೆಗೆ ಭಾಷಣ ಮಾಡೋವ್ನು ಗಾಬರಿಯಲ್ಲಿ ವಿಷ ಎಲ್ಲ ಮರ್ತು ಅವಮಾನಿತವಾಗಿ ನಾನು ಹುಟ್ಟಿದ್ದೇ ತಪ್ಪು, ಸಿಸು ಅಂತಿದ್ದೀನಲ್ಲಪ್ಪ ಮೊದ್ಲು ಮನೆ ಕಡೆ ಓಡೋಗ್ಬೇಕು ಅಂತ ಅಂದ್ಕೊಳ್ಳೋದು ಈತರ ನಡೀತಾ ಇತ್ತು ಅಲ್ಲಿ. ನಾನು ಏನಪ್ಪಾ ಈತರ ಆಗ್ಬುಡ್ತು, ಇವರಿಗೆಲ್ಲ ಸಬ್ಜೆಕ್ಟ್ ಗೊತ್ತಿದೆ. ವಿಷಯ ಚೆನ್ನಾಗಿ ರೆಡಿ ಮಾಡಿದ್ದಾರೆ ಅದ್ರೆ ಸಿಸು ಅಂದೇಟ್ಗೆ ಎ‌ಲ್ಲರೂ ಮಂಕಾಗಿ ಬಿಡ್ತಾರೆ ಅಂದ್ಕೊಂಡು ನಾನು ಕೂಡ್ಲೆ ಮಕ್ಕಳ ಸಾಹಿತ್ಯವನ್ನು ಕುರಿತಂತೆ ಎಂದೆ. ಎಲ್ಲರಿಗೂ ಜೀವ ಬಂದಂಗೆ ಆಯ್ತು. ಆನಂತರ ಕಾರ್ಯಕ್ರಮ ಎಲ್ಲ ಚೆನ್ನಾಗಿ ನಡೆಯಿತು. ಶಿಶು ಎನ್ನುವ ಒಂದು ಶಬ್ದಕ್ಕಾಗಿಯೇ ಇಡೀ ಗೋಷ್ಠಿ ಹಾಸ್ಯಾಸ್ಪದವಾಗಿ ವಿಫಲವಾಗಿ ಬಿಡ್ತಿತ್ತು. ಭಾಷೆಗೆ ಕೆಲವು ನಿರ್ಬಂಧಗಳಿವೆ. ಮೇಲ್ವರ್ಗದವರು ಯಾವ ರೀತಿ ದುರ್ಬಲರಾಗಿ ಬಿಡ್ತಾರೆ ಅನ್ನೋದಿಕ್ಕೆ ಈ ಮಾತನ್ನ ಹೇಳ್ದೆ. ಯಾವ ಶಬ್ದಗಳು ದಲಿತರ ಹುಮ್ಮಸ್ಸನ್ನೇ ಕುಂದಿಸಿ ಅವರನ್ನ ದಡ್ಡರು ಅಂತ ಉಳಿದವರಿಗೆ ತೋರಿಸ್ತವೆಯೋ ಅಂತಹ ಅಕ್ಷರಗಳನ್ನ, ಶಬ್ದಗಳನ್ನ ನಾವು ಗಮನಿಸ್ಬೇಕು ಮತ್ತು ಇದರ ಬಗ್ಗೆ ಯೋಚ್ನೆ ಮಾಡ್ಬೇಕಾಗಿದೆ ಅಂತ ಹೇಳೋಕೆ ನಾನು ಇಷ್ಟಪಡ್ತೇನೆ.

ದೇವ್ನೂರು ಮಹಾದೇವ ಅವರು ಕುಸುಮಬಾಲೆಯನ್ನು ಆ ಉಪಭಾಷೆಯಲ್ಲಿ ಬರೀದೇ ಇದ್ದಿದ್ರೆ ಅದರ ಪರಿಣಾಮ ಏನಾಗ್ತಿತ್ತೋ ಗೊತ್ತಿಲ್ಲ. ಆದ್ರೆ ಅವರು ಹಾಗೆ ಬರ್ದಿದ್ದರಿಂದ ಬಹಳ ಪರಿಣಾಮ ಆಯ್ತು. ಭಾಷೆಯ ಆಯ್ಕೆಯಲ್ಲಿಯೇ ಪ್ರತಿಭಟನೆ ಅದು. ಡಾ. ಕಲ್ಗುಡಿಯವ್ರು ಹೇಳಿದ್ರು, ಭಾಷೆಯನ್ನು ಆ‌ಯ್ಕೆ ಮಾಡ್ಕೊಳ್ಳೋದು ಬಹಳ ಮುಖ್ಯ. ಮೊದಲೇ ಇದರ ಬಗ್ಗೆ ತೀರ್ಮಾನ ಮಾಡ್ಬುಡ್ಬೇಕು ಅಂತ. ಮೇಲ್ವರ್ಗದವರ ಭಾಷೆಯನ್ನ ನಾವು ಒಪ್ಕೊಂಡ ಕೂಡ್ಲೆ ಸೃಜನಶೀಲ ಬರಹಗಾರರ ಸಮಸ್ಯೆ ಏನಾಗ್ತದೆ ಅಂದ್ರೆ ಭಾಷೆ ಜೊತೆಗೆ ಆ ಮೌಲ್ಯಗಳೂಳ ಬಂದು ಬಿಡ್ತವೆ, ಆ ನಂಬಿಕೆಗಳೂ ಬರ್ತವೆ. ಭಾಷೆಯ ಜೊತೆಗೆ ಇಡೀ ಸಂಸ್ಕೃತಿ ಬಂದು ಬಿಡ್ತದೆ. ಆದ್ರಿಂದ ಮೇಲ್ವರ್ಗದ ಭಾಷೆಯಲ್ಲಿ ಕೆಳವರ್ಗದ ಮೌಲ್ಯಗಳನ್ನು ಸಂಸ್ಕೃತಿಯನ್ನು ಹೇಳಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನ ನಮ್ಮ ಲೇಖಕರು ಯೋಚ್ನೆ ಮಾಡ್ಬೇಕಾಗಿದೆ ಅಂತ ಹೇಳಿಕೆ ನಾನು ಇಷ್ಟಪಡ್ತೇನೆ.

ಬಸವಲಿಂಗಪ್ಪನವ್ರು ಮಲಹೊರುವ ಪದ್ಧತಿಯನ್ನು ರದ್ದು ಮಾಡ್ದಾಗ ಅವರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯ್ಲಲಿ ಮಾತಾಡ್ತಾ ಮಾತಡ್ತ ಹೇಲು ಅಂದ್ಬಿಟ್ರು. ತಕ್ಷಣ ಪತ್ರಿಕೆಯವ್ರು ಎಲ್ಲೂ ಆ ಶಬ್ದ ಬಳಸ್ಬೇಡಿ, ಆ ಶಬ್ದ ಹಿಂದಕ್ಕೆ ತಗೊಳ್ಳಿ ಅಂತ ಮಂತ್ರಿಗಳಿಗೆ ಒತ್ತಾಯ ಮಾಡಿದ್ರು. ಆಗ ಮಂತ್ರಿಗಳು ಹೇಳಿದ್ರು ಅಲ್ರಿ ಆ ಶಬ್ದ ಕೇಳ್ಸಿಕೊಳ್ಳೋಕೆ ಇಷ್ಟು ಅಸಹ್ಯ ಪಡ್ತೀರಲ್ಲ, ಆದ್ರೆ ಅದನ್ನ ತಲೆ ಮೇಲೆಲ ಹೋರ್ತಾನಲ್ಲ ಅವ್ನ ಕಥೆ ಏನಾಗ್ಬೇಕು. ತಲೆ ಮೇಲೆ ಹೊತ್ಕೊಂಡು ಹೋಗೋದನ್ನ ತಪ್ಸೋಕೆ ನಾನು ಪ್ರಯತ್ನ ಪಡ್ತಾ ಇದ್ದೀನಿ. ಆದ್ರಿಂದ ನೀವುಉ ಈ ಶಬ್ದವನ್ನು ವಿರೋಧ ಮಾಡೋ ಅಗತ್ಯ ಇಲ್ಲ. ನಾನು ಸಹಜವಾಗಿ ಈ ಶಬ್ದ ಹೇಳಿದ್ದೀನಿ ಅಂತ ಹೇಳಿದ್ರು. ನಾನು ಯಾಕೆ ಇದನ್ನ ಹೇಳ್ದೆ ಅಂದ್ರೆ ಸಾಂಸ್ಕೃತಿಕವಾಗಿ ಮನುಷ್ಯನನ್ನು ಎದೆಗುಂದಿಸುವ ವ್ಯವಸ್ಥೆ ಈ ಭಾಷೆಯಲ್ಲಿಯೇ ಇದೆ. ಕೆಲವು ಶಬ್ದಗಳನ್ನು ಉಚ್ಚಾರ ಮಾಡುವಾಗ್ಲೇ ಅವನು ಎದೆಗುಂದಿಬಿಡ್ತಾನೆ. ಕೆಲವು ಶಬ್ದಗಳ ಉಚ್ಚಾರ ಮಾಡುವಾಗ ಹುಮ್ಮಸು ಬರುತ್ತದೆ. ಅದು ಈ ಭಾಷೆಯಲ್ಲಿರುವ ಸಂಚು. ಅದು ಇನ್ನೂ ಆಳದ ಸಂಚುಗಳಿಗೆ ಕರ್ಕೊಂಡು ಹೋಗ್ತದೆ. ಅದೇನೆಂದ್ರೆ ಆ ಮನುಷ್ಯ ಆ ವಿಚಾರಧಾರೆಗಳನ್ನ ಒಪ್ಕೊಂಡ ಕೂಡ್ಲೇ ಮಾನಸಿಕ ಗುಮಾಮರಿಗೆ ತುತ್ತಾಗಿಬಿಡ್ತಾನೆ. ಇದು ಒಂದು ರೀತಿಯ ದುರಂತ. ಇದಕ್ಕೋಸ್ಕರ ಭಾಷಿಕವಾಗಿ ಮೀರ್ಬೇಕಾಗಿದೆ. ಇಂತಹ ವಿಷಯದ ಬಗ್ಗೆ ಕನ್ನಡ ವಿಶ್ವವಿದ್ಯಾಲಯ ಒಂದು ವಿಚಾರಸಂಕಿರಣ ಮಾಡಿದ್ದು ತುಂಬ ಅದ್ಭುತವಾದ ಕೆಲ್ಸ ಮತ್ತು ಇದು ವಿಶಿಷ್ಟವಾದುದು ಅಂತ ಹೇಳೋಕೆ ನಾನು ಇಷ್ಟಪಡ್ತೇನೆ.

ಭಾಷೆ ಬಗ್ಗೆ ಎಷ್ಟು ಭಯ ಇದೆ ಅನ್ನೋದನ್ನ ಮಾರಮ್ಮನ ಕಥೆಯಲ್ಲಿ ನಾವು ನೋಡ್ಬುಹದು. ಮಾರಮ್ಮನ ಕಥೆಯಲ್ಲಿ ಕದಿರ ಅನ್ನೋ ದಲಿತ ತಾನು ಬ್ರಾಹ್ಮಣ ಅಂತ ಹೇಳಿ ಬ್ರಾಹ್ಮಣ ಹೆಣ್ಮಗಳನ್ನ ಮದುವೆಯಾಗಿ ಸಂಸಾರ ಮಾಡ್ಕೊಂಡು ಅವ್ನ ಪಾಡಿಗೆ ಅವ್ನು ಇರ್ತಾನೆ. ಆಗ ಅವನನ್ನ ಹುಡುಕಿಕೊಂಡು ಅವನ ತಾಯಿ ಬಂದ್ಬಿಡ್ತಾಳೆ. ತಾಯಿ ಬಂದದ್ದು ನೋಡಿ ಕದಿರನಿಗೆ ಭಯ ಸುರುವಾಗುತ್ತೆ. ಕೂಡಲೆ ಬ್ರಾಹ್ಮಣ ಮಹಿಳೆ ರೀತಿಯಲ್ಲಿ ಅವಳ ವೇಷ ಬದಲಾಯಿಸ್ತಾನೆ. ಅವನ ಹೆಂಡ್ತಿ ನಮ್ಮ ಅತ್ತೆಯವ್ರು ಅಂತ ಬಹಳ ಚೆನ್ನಾಗಿ ನೊಡ್ಕೊಳ್ತಾಳೆ. ಆದ್ರೆ ನನ್ನ ತಾಯಿ ಅಕಸ್ಮಾತ್ ಮಾತಾಡಿಬಿಟ್ರೆ ನನ್ನ ಜಾತಿ ಗೊತ್ತಾಗ್ಬುಡ್ತದೆ. ನಾನು ಮದುವೆಯಾಗಿ ನಾಲ್ಕು ಮಕ್ಕಳಾದ್ರೂ ನನ್ನ ಜಾತಿಯ ರಹಸ್ಯವನ್ನ ಕಾಪಾಡಿಕೊಂಡು ಬಂದಿದ್ದೀನಿ ಈ ಹೆಣ್ಮಗಳ ಹತ್ರ. ಆದ್ರೆ ಈಗ ನಮ್ಮ ತಾಯಿ ಬಂದು ಪರಿಸ್ಥಿತಿ ಹದಗೆಟ್ಟು ಹೋಯ್ತಲ್ಲ ಅಂತ ಯೋಚ್ನೆ ಮಾಡಿ ತನ್ನ ಜಾತಿಯ ರಹಸ್ಯವನ್ನ ಕಾಪಾಡಿಕೊಂಡು ಬಂದಿದ್ದೀನಿ ಈ ಹೆಣ್ಮಗಳ ಹತ್ರ. ಆದ್ರೆ ಈಗ ನಮ್ಮ ತಾಯಿ ಬಂದು ಪರಿಸ್ಥಿತಿ ಹದಗೆಟ್ಟು ಹೋಯ್ತಲ್ಲ ಅಂತ ಯೋಚ್ನೆ ಮಾಡಿ ತನ್ನ ಜಾತ ರಹಸ್ಯ ಕಾಪಾಡಲು ತನ್ನ ತಾಯಿ ಮೂಗಿ ಅಂತ ಪರಿಚಯ ಮಾಡಿಕೊಡ್ತಾನೆ. ಅವಳು ಮಾತನಾಡದೇ ಇರೋದ್ರಿಂದ ಜಾತಿ ಗೊತ್ತಾಗೋ ಪ್ರಶ್ನೆನೇ ಇಲ್ಲ ಅಂತ ಸಮಾಧಾನಪಟ್ಕೊಳ್ತಾನೆ. ಅತ್ತೆಗೆ ಒಳ್ಳೇ ಅಡಿಗೆ ಮಾಡಿ ಊಟ ಹಾಕಿ ಸಂತೋಷಪಡಿಸ್ಬೇಕು ಅಂತ ಸೊಸೆ ಭಕ್ಷ್ಯ ಭೋಜನಗಳನ್ನ ತಯಾರು ಮಾಡಿ ಊಟಕ್ಕೆ ತಂದಿಡ್ತಾಳೆ. ಊಟ ನೋಡ್ದೆಟ್ಗೆ ಅವರತ್ತೆ ಅಸಹ್ಯಗೊಂಡು ಗಾಬರಿಯಾಗ್ತಾಳೆ. ಅವಳ ಮನಸ್ನಲ್ಲಿ ಎಷ್ಟರಮಟ್ಟಿಗೆ ಒತ್ತಡ ಬರ್ತದೆ ಅಂದ್ರೆ ಆಗ ಅವಳು ಬಾಯಿ ಬಿಟ್ಬಿಡ್ತಾಳೆ. ಏ ಕದಿರಾ, ನೀನು ಇದನ್ನ ತಿಂದ್ಕೊಂಡು ಬಿದ್ದಿದ್ದೀಯಲ್ಲೋ ಇಲ್ಲಿ ನಮ್ಮ ಕ್ವಾಣನ ಕರಿಕಾಲ್ಗೆ ಸಮ ಏನೋ ಈ ತಿಂಡಿಗಳೆಲ್ಲ ಅಂತ ಹೇಳ್ತಾಳೆ. ಆಗ ಕದಿರಂಗೆ ಗಾಬರಿಯಾಗ್ತದೆ. ಬಹಳ ಕಷ್ಟಪಟ್ಟು ನಮ್ತಾಯಿನ ಮೂಗಿ ಮಾಡಿದ್ದೆ. ಅಂದ್ರೆ ಭಾಷೆ ಎಷ್ಟು ಮುಖ್ಯ ಅಂತಕ್ಕಂತಹದ್ದು. ಮಾರಮ್ಮನ ಕಥೆಗೆ ಭಾಷೆಯೇ ದುರಂತ. ನಾಲ್ಕು ಶಬ್ದಗಳೇ ಈ ಕಥೆಯ ದುರಂತಕ್ಕೆ ಕಾರಣವಾಗಿ ಬಿಡ್ತವೆ. ಕದಿರನ ತಾಯಿ ಮೂಗಿಯಾಗಿಯೇ ಇದ್ದು ಭಾಷೆಯನ್ನ ಬಳಸದೇ ಇದ್ದಿದ್ರೆ ಈ ರೀತಿಯ ತೊಂದರೆ ಆಕ್ತಾ ಇರ್ಲಿಲ್ಲ. ಇದನ್ನ ನೋಡಿದ್ರೆ ಬಳಕೆ ಬಗ್ಗೆ ಬಹಳ ಎಚ್ಚರಿಕೆ ವಹಿಸ್ಬೇಕು ಅನ್ನೋದು ಅರಿವಾಗ್ತದೆ. ಕೆಲವರು ತಾವು ಬಾರೀ ವಿದ್ವಾಂಸರು ಅಂದೊಂಡ್ಬಿಟ್ಟು ಒಳ್ಳೊಳ್ಳೆ ಶಬ್ದಗಳನ್ನ ಬಳಸಕ್ಕೆ ಹೋಗಿ ಮುಳುಗೋಗಿ ಬಿಡ್ತಾರೆ ಮತ್ತು ಅಪಾಯಕ್ಕೆ ಸಿಕ್ಕಾಕೊಳ್ತಾರೆ. ಶಬ್ದಗಳನ್ನು ಬಳಸುವಾಗಲೇ ಇದು ಸರಿಯಾದ ಶಬ್ದನೋ ಅಥವಾ ಈ ಶಬ್ದವನ್ನು ಬಳಸೋದರಿಂದ ಏನಾದ್ರೂ ಅಪಾಯ ಅಗ್ತದಾ ಅಂತ ಯೋಚನೆ ಮಾಡ್ಬೇಕು. ಈ ವಿಚಾರಸಂಕಿರಣದಲ್ಲಿ ಇಂತಹ ವಿಷುಯ ಚರ್ಚೆ ಆಗ್ತದೆ ಅಂತ ನಾನು ಭಾವಿಸ್ತೇನೆ. ಇವತ್ತು ಬಿಡುಗಡೆಯಾದ ಮೂರು ಕೃತಿಗಳು ಬಹಳ ಉಪಯುಕ್ತವಾದವುಗಳು. ದಲಿತರು ಮತ್ತು ಚರಿತ್ರೆ ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರದು, ದಲಿತರು ಮತ್ತು ಪರ್ಯಾಯ ರಾಜಕಾರಣ ಡಾ. ಪಿ.ಮಹದೇವಯ್ಯ ಅವರದು ಮತ್ತು ದಲಿತ ಅಧ್ಯಯನ ಡಾ. ಟಿ.ಆರ್. ಚಂದ್ರಶೇಖರ ಅವರದು. ಈ ಮೂವರು ಸಂಪಾದನೆ ಮಾಡಿರ್ತಕ್ಕಂತಹ ಈ ಕೃತಿಗಳು ಅಮೂಲ್ಯವಾದ ಲೇಕನಗಳನ್ನು ಒಳಗೊಂಡಿವೆ. ಇವುಗಳ ಬಗ್ಗೆ ಡಾ. ಸೋಮಶೇಖರ ಅವರು ಮಾತಾಡಲಿರುವುದರಿಂದ ನಾನು ಹೆಚ್ಚಿಗೆ ಏನೂ ಹೇಳೋದಿಲ್ಲ. ಆದರೆ ದಲಿತರು ಮತ್ತು ಚರಿತ್ರೆ ಪುಸ್ತಕದಲ್ಲಿ ನಾನು ಒಂದು ಅಂಶವನ್ನು ಗಮನಿಸಿದೆ. ಅದರ ಬಗ್ಗೆ ಒಂದು ಮಾತ್ನಾಡಿ ನನ್ನ ಮಾತನ್ನ ಮುಗಿಸ್ತೇನೆ. ಈ ಪುಸ್ತಕದಲ್ಲಿ ನಾಲ್ಕೈದು ಶಾಸನಗಳನ್ನ ಉದ್ಧರಣೆ ಮಾಡಿ ಪೊಲೆಗಾವುಂಡ ಅನ್ನುವಂತ ಮಾತನ್ನ ಹೇಳಿದ್ದಾರೆ. ಪೊಲೆಗಾವುಂಡ ಅನ್ತಕ್ಕಂತ ಮಾತು ತಿಳುವಳಿ ಶಾಸನದಲ್ಲಿ, ರಾಣಿಬೆನ್ನೂರು ಶಾಸನದಲ್ಲಿ, ಮಡಲೂರು ಶಾಸನದಲ್ಲಿ ಬರ್ತಕ್ಕಂತದ್ದನ್ನ ಅವರು ಅಂದರೆ ಹೊಲೆಯ ಗೌಡರು ಅಂತ. ಹೊಲೆಯರನ್ನ ಗೌಡರು ಅಂತ ಕರೀತಿದ್ರು ಅನ್ತಕ್ಕಂತಹ ಮಾತನ್ನ ಅವ್ರು ಹೇಳಿದ್ದಾರೆ. ಕೆಲವು ಜಾತಿಗಳು, ಬುಡಕಟ್ಟುಗಳು ಕೂಡ ಗೌಡ್ರು ಅಂತ ಕರ್ಕೋಳ್ತಕ್ಕಂತದ್ದು ಇದೆ. ಕುರುಬಹೌಡ್ರು, ಗೊಲ್ಲನಗೌಡ್ರು ಇತ್ಯಾದಿಯಾಗಿ, ಮೂರು ನಾಲ್ಕು ಶಾಸನಗಳಲ್ಲಿ ಕಂಡು ಬರುವಂತಹ ಪೊಲೆಗಾವುಂಡ ಅನ್ತಕ್ಕಂತಹ ಶಬ್ದ ಹೊಲೆಯರು ತಮ್ಮನ್ನು ಗೌಡ್ರು ಅಂತ ಕರ್ಕೋಳ್ತಿದ್ದುದನ್ನ ಮತ್ತು ಅದನ್ನ ಸಮಾಜ ಅಂಗೀಕಾರ ಮಾಡಿದ್ದನ್ನ ದಾಖಲು ಮಾಡಿರೋದು ಕಂಡು ಬರ್ತದೆ. ಅದರ ಬಗ್ಗೆ ವಿದ್ವಾಂಸರು ಚರ್ಚೆ ಮಾಡ್ಬೇಕು. ಮಾದಾರಿಕೆ ಅನ್ನೋ ಶಬ್ದವನ್ನ ಕೂಡ ಈ ಪುಸ್ತಕದಲ್ಲಿ ಬಳಸಲಾಗಿದೆ. ಕರ್ನಾಟಕದಲ್ಲಿ ಮಾತಂಗರಾಜ್ಯ ಇತ್ತು ಅನ್ನೋದನ್ನ ದಾಖಲು ಮಾಡಿದ್ದಾರೆ. ಒಂದನೇ ಪುಲಕೇಶಿಯ ಎರಡನೇ ಮಗ ಮಂಗಳೇಶ ಮಾತಂಗರೊಡನೆ ಸಂಬಂಧ ಇಟ್ಕೊಂಡಿದ್ದ ಅಂತ ಅವರು ಹೇಳುವ ಮಾತುಗಳು ಕೂಡ ಹೊಸ ವಿಚಾರಗಳು. ದಲಿತರು ಕೂಡ ಸಾಮ್ರಾಜ್ಯ ಕಟ್ಟಿದ್ರು, ರಾಜ್ಯಗಳನ್ನ ಆಳ್ತಿದ್ರು ಅನ್ತಕ್ಕಂತಹದ್ದು ಹೊಸ ಸಂಗತಿ. ಅದನ್ನ ದಾಖಲು ಮಾಡಿದ್ದಾರೆ. ಒಬ್ಬ ಅಸ್ಪೃಶ್ಯ ಮಹಿಳೆ-ಹರಿಕಾರ ದೇವಣ್ಣನ ಮಗಳು ಬ್ರಾಹ್ಮಣರಿಗೆ ಅಗ್ರಹಾರ, ಭೂಮಿ ಇವುನ್ನೆಲ್ಲ ದಾನ ಮಾಡಿದ್ದು, ಅದನ್ನ ಅವ್ರು ಸ್ವೀಕರಿಸಿದ್ದು ಇದು ಕೂಡ ಹೊಸ ವಿಚರ. ಇದುವರೆಗೆ ಗೊತ್ತಿಲ್ದೇ ಇದ್ದಂತಹ ವಿಷಯಗಳು ಮತ್ತು ಕರ್ನಾಟಕ ರಾಜಕೀಯ ಚರಿತ್ರೆಯನ್ನು ಕುರಿತು ನಮ್ಮ ಚಿಂತನೆಯನ್ನು ಬದಲಾವಣೆ ಮಾಡ್ತಕ್ಕಂತ ಅಥವಾ ಭೀನ್ನ ರೀತಿಯಲ್ಲಿ ಹೊಸ ದೃಷ್ಟಿಕೋನದಿಂದ ನಾವು ನೋಡ್ಬೇಕಾದಂತಹ ಅನೇಕ ನಮ್ಮ ವಿದ್ವಾಂಸರು ಈ ಕೃತಿಗಳಲ್ಲಿ ಮಂಡಿಸಿದ್ದಾರೆ. ಅವುಗಳನ್ನು ನಾವು ಚರ್ಚೆ ಮಾಡ್ಬೇಕು ಅಂತ ನಾನು ಹೇಳ್ತೇನೆ. ಈ ಒಂದು ವಿಚಾರಸಂಕಿರಣ ದಲಿತರ ಭಾಷೆಯನ್ನು ಕುರಿತಂತೆ ಹೊಸ ಬೆಳಕನ್ನ ಚೆಲ್ಲಲ್ಲಿ ಅನ್ತಕ್ಕಂತಹ ಮಾತನ್ನ ಹೇಳಿ ನನ್ನ ಮಾತನ್ನ ಮುಗಿಸ್ತೇನೆ. ಧನ್ಯವಾದಗಳು.

(ಮುಖ್ಯ ಅತಿಥಿ ಭಾಷಣ)