ಭಾಷೆಯ ಪರಿಕಲ್ಪನೆಗಳಲ್ಲಿ ಮೌನದ ಭಾಷೆ ಅನ್ನೋದು ಕೂಡ ಒಂದು. ಸಾವಿರಾರು ವರ್ಷಗಳ ಕಾಲ ದಲಿತರು ಮೌನದ ಭಾಷೆಯನ್ನು ಆಚರಿಸಿಕೊಂಡು ಬಂದಿದ್ದಾರೆ. ಹಾಗಾಗಿ ನಾನು ಶಬ್ದಗಳ ಭಾಷೆಯನ್ನ ಕಡಿಮೆ ಮಾಡಿ ಬರೇ ಶಬ್ದಗಳಲ್ಲಿ ಮೌನದ ಭಾಷೆಯನ್ನು ತುಂಬುವುದಕ್ಕೆ ಪ್ರಯತ್ನಿಸುತ್ತೇನೆ.

ಮೊಟ್ಟ ಮೊದಲನೆಯದಾಗಿ ನಮ್ಮ ವಿಶ್ವವಿದ್ಯಾಲಯದ ಮಹತ್ವದ ಕಾರ್ಯಕ್ರಮವನ್ನು ಇಲ್ಲಿ ಮಾಡಲು ಅವಕಾಶ ಮಾಡಿಕೊಟ್ಟ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ.ಎಸ್. ತಿಮ್ಮಪ್ಪ ಹಾಗೂ ಪ್ರಸಾರಾಂಗದ ಗೆಳೆಯ ಡಾ. ಬಸವರಾಜ ಕಲ್ಗುಡಿಯವರಿಗೆ ನಾನು ವಂದನೆ ಹೇಳ್ಬೇಕು. ಬಹಳ ನೋವಿನಿಂದ ನಾವು ಇವತ್ತು ಈ ಕಾರ್ಯಕ್ರಮವನ್ನು ಆರಂಭ ಮಾಡಿದ್ದೇವೆ ಮತ್ತು ಸಿದ್ಧಲಿಂಗಯ್ಯನವರ ನಗುವಿನಿಂದ ಈ ಕಾರ್ಯಕ್ರಮವನ್ನು ಮುಕ್ತಾಯ ಮಾಡುತ್ತಾ ಇದ್ದೇವೆ. ಈ ನೋವು ನಗು ಯಾವಾಗಲ್ಲೂ ಕೂಡ ಒಟ್ಟಿಗೆ ಇರುವಂತಹದು. ದಲಿತರಿಗೆ ಒಂದು ಕಡೆ ಶತಮಾನಗಳ ನೋವು ಇದೆ. ಜೊತೆಗೆ ಒಂದು ಹೊಸ ಕಾಮನ ಬಿಲ್ಲನ್ನು ಕಾಣುವಂತಹ ಒಂದು ನಗುವಿನ ನೋಟವೂ ಇದೆ. ಸಿ.ಜಿ.ಕೆ. ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ವಿಶ್ವವಿದ್ಯಾಲಯದ ಈ ಕಾರ್ಯಕ್ರಮವನ್ನು ಅವರ ನೆನಪಿಗೆ ಅರ್ಪಿಸುತ್ತಾ ಇದ್ದೇವೆ. ಅವರು ದಲಿತರಾಗಿದ್ರು ಅಂತ ಮಾತ್ರವಲ್ಲ. ಒಂದು ರಂಗಭೂಮಿಯು ಭಾಷೆಯನ್ನು, ಕನ್ನಡದ ಭಾಷೆಯನ್ನ ಸಂಸ್ಕೃತಿ ಭಾಷೆಯನ್ನ ಅವರು ಹೊಸದಾಗಿ ಮುರಿದು ಕಟ್ಟಿದ್ರು. ಇಂದಿನ ಪತ್ರಿಕೆಯಲ್ಲಿ ಅವರಿಗೆ ಎಷ್ಟು ಚಿಕ್ಕ ವಯಸ್ಸಿನಲ್ಲಿ ಪೋಲಿಯೋ ಬಂದು ಅಂಗವಿಕಲರಾದ್ರು ಅಂತ ಬರೆದಿದ್ದಾರೆ. ಆದ್ರೆ ಒಂದು ದೇಹದ ಭಾಷೆಯನ್ನ (Body Language) ರಂಗಭೂಮಿಯಲ್ಲಿ ಬಹಳ ಅದ್ಭುತವಾಗಿ ಸೃಷ್ಟಿಸುವ ಕೆಲಸವನ್ನು ಅವರು ಮಾಡಿದ್ರು. ಹಾಗಾಗಿ ಯಾವುದು ಊನ, ಯಾವುದು ಸೃಷ್ಟಿ, ಯಾವುದು ಸೃಜನಶೀಲತೆ ಎನ್ನುವುದು ನಾವು ಬಳಸುವಂತಹ ಮಾರ್ಗಗಳು. ಸಿ.ಜಿ.ಕೆ. ಯವರು ರಂಗಭೂಮಿಗೆ ದೇಹದ ಭಾಷೆಯನ್ನು ಬಳಸುವ ಮತ್ತು ಧ್ವನಿಮಾಗಳ ವ್ಯವಸ್ಥೆಯ ಭಾಷೆಯನ್ನು ಬಳಸುವ ಎರಡನ್ನೂ ಕೂಡ ಹೊಸದಾಗಿ ಕಟ್ಟಿಕೊಟ್ರು. ಹಾಗಾಗಿ ನಾವು ಒಂದು ಮೌನದ ನೆನಪಿನಿಂದ ಈ ಕಾರ್ಯಕ್ರಮವನ್ನು ನೋವಿನಿಂದ ಆರಂಭ ಮಾಡಿದ್ದೇವೆ. ಪುಸ್ತಕಗಳನ್ನು ಬಿಡುಗಡೆ ಮಾಡಿದ ಗೆಳೆಯ ಕವಿ ಡಾ. ಸಿದ್ಧಲಿಂಗಯ್ಯ ಅವರು ತಮ್ಮ ಅನುಭವದ ಭಂಡಾರದಿಂದ ತೆಗೆದು ತೆಗೆದು ಮಾತನಾಡಿದ್ದು ನಗೆಯ ಮಾತುಗಳು ನೋವಿನ ಮಾತುಗಳು ಕೂಡ.

೧೯೭೫ರಲ್ಲಿ ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು ಬಂದಾಗ ಅದರ ಬಗ್ಗೆ ಒಂದು ದೊಡ್ಡ ಚರ್ಚೆ ಬಂದದ್ದು ಭಾಷೆಯ ಬಗ್ಗೆ. ಇಕ್ಕ್‌ಲ್ರಾ, ಒದಿಲ್ರಾ ಅನ್ನೋ ಪದಗಳು ಕನ್ನಡದ ಕವನದ ಭಾಷೆ ಅಂತ ಒಪ್ಪಬಹುದೇ ಅಂತ. ಆದರೆ ಒಂದು ವೇಳೆ ಇಕ್ಕ್‌ಲ್ರಾ ಒದಿಲ್ರಾ ಅನ್ನೊ ಶಬ್ದವನ್ನು ಬಿಟ್ಟು ಯಾವುದೇ ಶಬ್ದವನ್ನು ಬಳಸಿದ್ರೂ ಬಹುಶಃ ಕರ್ನಾಟಕದಲ್ಲಿ ದಲಿತರ ಸಂಘಟನೆ ಆಗ್ತಾ ಇರ್ಲಿಲ್ಲ. ದಲಿತ ಸಂಘರ್ಷ ಸಮಿತಿಗಳು ನಿರ್ಮಾಣವಾಗ್ತಿರಲಿಲ್ಲ. ಕರ್ನಾಟಕದಲ್ಲಿ ಬರಹಗಾರರ, ಕಲಾವಿದರ ಒಕ್ಕೂಟ ಆಗುತ್ತಿರಲಿಲ್ಲ. ಬಂಡಾಯ ಸಂಘಟನೆ ಆಗ್ತಾ ಇರಲಿಲ್ಲ ಮತ್ತು ಆ ಬಳಿಕದ ಬಹಳ ಸಂಘಟನೆಗಳು ಚಳುವಳಿಗಳು ಆಗ್ತಾ ಇರಲಿಲ್ಲ ಮತ್ತು ಕನ್ನಡ ವಿಶ್ವವಿದ್ಯಾಲಯ ಕೂಡ ಆಗ್ತಾ ಇರಲಿಲ್ಲ. ಯಾಕೆಂತೇಳಿದ್ರೆ ಇವೆಲ್ಲವನ್ನು ನಾವು ಬಿಡಿ ಬಿಡಿಯಾದ ಸಂಗತಿಗಳು ಅಂತ ಭಾವಿಸುವುದಕ್ಕೆ ಆಗೋದಿಲ್ಲ – ಸುಮಾರು ೧೯೭೫ ರಿಂದ ೨೦೦೬ರವರೆಗಿನ ನಮ್ಮ ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ನೋಡಿದ್ರೆ. ಸಿದ್ಧಲಿಂಗುಯ್ಯನವರು ಹೊಲೆಮಾದಿಗರ ಹಾಡು ಕವನ ಸಂಕಲನದಲ್ಲಿ ಬಳಸಿದ ಭಾಷೆ, ಅದೊಂದು ಒದೆಯುವ ಮತ್ತು ಬಯ್ಗಳದ ಭಾಷೆಯಾಗಿತ್ತು. ಆ ರೀತಿಯ ಭಾಷೆ ಬಳಸದೇ ಹೋಗಿದ್ರೆ ಕರ್ನಾಟಕದ ಆಗಿನ ಬಹಳ ಸುಶಿಕ್ಷಿತರಾದ ಸಾಹಿತಿಗಳಿಗೆ, ಲೇಖಕರಿಗೆ ಅದುಅರ್ಥವಾಗ್ತಾ ಇರಲಿಲ್ಲ. ಆದಕಾರಣ ಆ ಭಾಷೆ ಬಳಸಿದ್ರು, ಅದರಿಂದ ಒಂದು ಭಾಷೆಯ ಬಳಕೆಯ ಜೊತೆಗೆನೇ ಅದನ್ನು ಕಾರ್ಯರೂಪಕ್ಕೆ ತರುವುದು ಕೂಡ ನಮಗೆ ಬಹಳ ಮುಖ್ಯವಾಗುತ್ತದೆ. ಈ ಅರ್ಥದಲ್ಲಿಯೇ ಒಂದು ಕಾಲದಲ್ಲಿ ಯಾವ ಕನ್ನಡ ಮಾತಾಡ್ಬೇಕು ಅಂದಾಗ ಬಯ್ಗಳು ಮಾತಾಡ್ಬಾರ್ದು ಬಯ್ಗಳ ಮಾತಾಡಿದ್ರೆ. ಅದು ಅಸಭ್ಯ ಅಂತ ತಿಳೀತಿದ್ರು. ಹಾಗೆಯೇ ಎಲ್ಲರೂ ತಾವು ಅನ್ನುವ ಆತ್ಮಾರ್ಥಕ ಸರ್ವನಾಮ ಬಳಸ್ಬೇಕು ಅನ್ನುವಂತಹದು. ಅನೇಕ ಸಂದರ್ಭಗಳಲ್ಲಿ ಗೌರವಾರ್ಥಕ ಬಹುವಚನಗಳನ್ನು ಅದು ವ್ಯಾಕರಣದ ಒಂದು ಭಾಗ ಅಂತ ಬಳಸುತ್ತಿದ್ರು, ಈಗೇನಾಗಿದೆ ಬಹಳ ವಿದ್ಯಾವಂತರಾದವರು ಕೂಡ ಪರಸ್ಪರ ಏಕವಚನದಲ್ಲಿ ಮಾತನಾಡುವುದು ಬಹಳ ಒಳ್ಳೆಯದು ಅಂತ ತಿಳಿದಿದ್ದಾರೆ. ಬಹುಶಃ ಇದು ದಲಿತರ ಕನ್ನಡದಿಂದ ನಮ್ಮ ವಿದ್ಯಾವಂತರು ಪಡೆದುಕೊಂಡಂತಹ ಒಂದು ಸಣ್ಣ ಪಾಠ. ಈ ವಿಚಾರಸಂಕಿರಣದ ತಮ್ಮ ಆಶಯ ಭಾಷಣದಲ್ಲಿ ಡಾ. ಕೆ.ವಿ.ನಾರಾಯಣ ಅವರು ಬಹಳ ವ್ಯಾಪಕವಾಗಿ ಮತ್ತು ಬಹಳ ಸಮರ್ಥವಾಗಿ ಪ್ರಸ್ತಾಪ ಮಾಡಿದ್ದಾರೆ. ಅದನ್ನೇ ಬೇರೆ ಮಾತುಗಳಲ್ಲಿ ಕಲ್ಗುಡಿಯವರು ಆರಂಭದಲ್ಲಿ ಹೇಳಿದ್ದಾರೆ. ತಿಮ್ಮಪ್ಪನವ್ರೂ ಹೇಳಿದ್ದಾರೆ. ಸಹಜವಾಗಿ ಅದನ್ನು ರೂಪಕ ಮತ್ತು ಐರನಿಯ ಭಾಷೆಯಲ್ಲಿ ಕವಿ ಸಿದ್ಧಲಿಂಗಯ್ಯನವರು ಹೇಳಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ಬಗ್ಗೆ ಸಿದ್ಧಲಿಂಗಯ್ಯನವರು ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ವೈಯಕ್ತಿಕವಾಗಿ ಅವರು ನನಗೆ ಮುವತ್ತೈದು ವರ್ಷಗಳ ಗೆಳೆಯ. ನನ್ನ ಕಾರಣಕ್ಕೆ ಈ ಮಾತುಗಳನ್ನು ಹೇಳಿರಬಹುದು.

ವಿಶ್ವವಿದ್ಯಾಲಯಗಳ ಕನ್ನಡ ಹಾಗೂ ಇತರ ವಿಭಾಗಗಳು ಬೆಂಗಳೂರಿನಿಂದ ಆರಂಭವಾಗಿ ತಮ್ಮ ವೈಚಾರಿಕ ಅಸ್ಪೃಶ್ಯತೆಯನ್ನು ಹೇಗೆ ನಿವಾರಣೆ ಮಾಡಿಕೊಂಡು ಬಂದ್ವು ಅನ್ನೋದು ಕೂಡ ಮುಖ್ಯ. ವಿಚಾರಗಳ ಬಗ್ಗೆ ಮಡಿವಂತಿಕೆಯನ್ನಿಟ್ಟುಕೊಂಡಿದ್ದಂತಹ ಯುನಿವರ್ಸಿಟಿಗಳು ನಿಧಾನವಾಗಿ ಮಡಿವಂತಿಕೆಯನ್ನು ಬಿಟ್ಟಿವೆ. ನಾನು ಮಾಡಿದ ಅನೇಕ ಕೆಲಸಗಳಲ್ಲಿ ದಲಿತರ ಭಾಷೆ ಹಾಗೂ ದಲಿತರ ಬರವಣಿಗೆ ಕೆಲಸ ಮಾಡಿವೆ. ಹಾಗಾಗಿ ನಾವು ಇವತ್ತು ದಲಿತರ ಬಗ್ಗೆ ಮಾತಾಡುವಾಗ ಬರೀ ಎಸ್‌.ಸಿ.ಗಳ ಬಗ್ಗೆ ಮಾತಾಡ್ತಾ ಇ‌ಲ್ಲ. ಇವತ್ತು ಈ ಸಭಾಂಗಣದಲ್ಲಿರುವವರಾಗಲೀ ಅಥವಾ ಕಳೆದ ವರ್ಷ ಡಿಸೆಂಬರ್ ೨೯ರಂದು ಮೈಸೂರಿನಲ್ಲಿ ನಡೆದ ವಿಚಾರಸಂಕಿರಣದಲ್ಲಿ ಭಾಗವಹಿಸಿದವರಾಗಲೀ ಎಲ್ಲರೂ ಒಂದರ್ಥದಲ್ಲಿ ತಮ್ಮನ್ನು ಐಡೆಂಟಿಪೈ ಮಾಡಿಕೊಳ್ತ ಇದ್ದಾರೆ. ದಲಿತರನ್ನು ಮೆಚ್ಚಿಸುವುದಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡ್ತಾ ಇಲ್ಲ. ಒಂದು ಇಪ್ಪತ್ತೈದು ವರ್ಷಗಳ ಹಿಂದೆ ದಲಿತರ ಬಗ್ಗೆ ಮಾತನಾಡೋದು ಫ್ಲೀಸ್ ಮಾಡೋದು ಮತ್ತು ಆ ಮೂಲಕ ತಾವು ಪ್ರಗತಿಪರರು ಅಂತ ಹೇಳ್ಕೊಳ್ಳೋದು, ತಳವರ್ಗದವರ ಬಗ್ಗೆ ಮಾತನಾಡೋದು, ಸ್ಟಿ ಮಾಡೋದು ಒಂದು ಫ್ಯಾಶನ್ ಆಗಿತ್ತು. ಆದರೆ ಇವತ್ತು ಅಂತರಾಳದಲ್ಲಿ ಈ ರೀತಿಯ ಪ್ರಜ್ಞೆ ಬಂದಿರೋದನ್ನ ನಾವು ಕಾಣ್ತೇವೆ. ನಮ್ಮ ಇಡೀ ಬೌದ್ಧಿಕ ವಲಯ ಹೊರನೋಟಕ್ಕೆ ಮೆಚ್ಚಿಸುವ ಒಂದು ಪ್ರದರ್ಶನದ ಸೋಗಿನ ನಡವಳಿಕೆಯನ್ನಾಗಿ ಇದನ್ನು ಭಾವಿಸಬಾರದು. ಅದಕ್ಕೆ ನಾನು ಹೇಳ್ತಾ ಇರೋದು, ೧೯೭೫ರಲ್ಲಿ ಸಿದ್ಧಲಿಂಗಯ್ಯನವರು ಹೊಲೆಮಾದಿಗರ ಹಾಡು ಕವನ ಸಂಕಲನ ಬರೆಯದೇ ಇದ್ದಿದ್ರೆ ಕನ್ನಡ ವಿಶ್ವವಿದ್ಯಾಲಯ ಸ್ಥಾಪನೆಯಾಗ್ತಾ ಇರಲಿಲ್ಲ ಅಂತ. ಕನ್ನಡ ವಿಶ್ವವಿದ್ಯಾಲಯ ಮೊಗಳ್ಳಿ ಗಣೇಶ್ ಅವರು ಬರೆದ “ದಲಿತರು ಮತ್ತು ಜಾಗತೀಕರಣ” ಎಂಬ ಪುಸ್ತಕವನ್ನು ಈ ಹಿಂದೆ ಬಿಡುಗಡೆ ಮಾಡಿದೆ. ಈ ದಿವಸ ದಲಿತರ ಬಗ್ಗೆ ಮೂರು ಪುಸ್ತಕಗಳು ಬಿಡುಗಡೆ ಆಗಿವೆ. ಇನ್ನೊಂದು ಗ್ರಂಥ ಅಚ್ಚಿನಲ್ಲಿದೆ. ಮತ್ತೊಂದು ಪ್ರಕಟಣೆಯ ಸಿದ್ಧತೆಯಲ್ಲಿದೆ. ಯಾಕೆ ಈ ಮಾತನ್ನು ಹೇಳ್ತಾ ಇದ್ದೀನಿ ಅಂತಂದ್ರೆ ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಡೆದಿರುವ ಎಲ್ಲ ಚರ್ಚೆಗಳು ನಮಗೆ ಹೊಸ ದಾರಿಗಳನ್ನು ಕೊಡುವುದಕ್ಕೆ ಸಾಧ್ಯ ಆಗ್ಬೇಕು. ನಾವು ವೈಫಲ್ಯಗಳ ಬಗ್ಗೆ ನೂರು ಮಾತಾಡ್ಬಹುದು. ದಲಿತ ಸಂಘರ್ಷ ಸಮಿತಿ ಹೋಳಾದುದರ ಬಗ್ಗೆ, ರೈತ ಸಂಘಗಳು ವಿಭಜನೆಯಾದುದರ ಬಗ್ಗೆ ಅಥವಾ ನಮ್ಮಲ್ಲಿ ನಡೆದ ಪ್ರಗತಿಪರ ಚಳುವಳಿಗಳೆಲ್ಲ ಮುಂದುವರಿಯದೇ ಇದ್ದುದರ ಬಗ್ಗೆ, ಬಂಡಾಯ ಸಂಘಟನೆಗಳು ವ್ಯವಸ್ಥೆಯ ಬಗ್ಗೆ ರಾಜಿ ಮಾಡಕೊಂಡಿರುವ ಬಗ್ಗೆ ನಾವು ಬಗೆ ಬಗೆಯಾಗಿ ಮಾತಾಡ್ಬಹುದು. ಆದ್ರೆ ನಾವು ನಮ್ಮ ನಿಜದ ನೆಲೆಯಲ್ಲಿ ಕುಳಿತು ಮಾತನಾಡೋದಾದ್ರೆ ಅವೆಲ್ಲವನ್ನು ವಿಫಲತೆ ಎನ್ನುವ ಬೇಗುದಿಯ ಮಾತುಗಳನ್ನಾಡದೆ ಅಥವಾ ಗೋಳಿನ ಕಥೆಯನ್ನೇ ನಾವು ಹೇಳದೆ ಸ್ವಲ್ಪ ನಗುತ್ತ ಕಟ್ಟುವ ಕತೆಯನ್ನ ಹೇಳ್ಬೇಕಾದ್ರೆ ಮತ್ತೆ ಮತ್ತೆ ದಲಿತ ಎನ್ನುವ ಹೆಸರಿನಲ್ಲಿ ನಾವೆಲ್ಲ ಒಟ್ಟಾಗುವುದಕ್ಕೆ ಇಂತಹ ಸಂಕಿರಣಗಳು ಮತ್ತು ಇಂತಹ ಗ್ರಂಥಗಳು ಸಹಾಯಕ ಆಗ್ಬೇಕು. ಹಾಗಾಗಿ ‘ಹೊಲೆಮಾದಿಗರ ಹಾಡು’ ಎನ್ನುವ ಕವನ ಸಂಕಲನ, ‘ಒಡಲಾಳ’, ‘ಕುಸುಮಬಾಲೆ’, ‘ಸಾವಿರಾರು ನದಿಗಳು’ ಮಾಡಿದ ಕೆಲಸಗಳನ್ನ ಇವತ್ತು ದಲಿತರು ಮತ್ತು ಪರ್ಯಾಯ ರಾಜಕಾರಣ ಎನ್ನುವ ವಿಚಾರಸಂಕಿರಣದ ಮಾಡಬಹುದು.

ನಾವು ಇಲ್ಲಿ ವಿಚಾರಗಳನ್ನ ವಿನಿಮಯ ಮಾಡ್ಲಿಕ್ಕೆ ಅಥವಾ ನಮ್ಮ ಪ್ರತಿಷ್ಠೆಯನ್ನು ಮೆರೀಲಿಕ್ಕೆ ಸೇರಿಲ್ಲ. ಒಂದು ಇಪ್ಪತ್ತೈದು ವರ್ಷಗಳ ಹಾದಿ ನಾವು ದಾಟಿಕೊಂಡು ಬಂದಿದ್ದೇವೆ. ಸಮಸ್ಯೆ ಏನು ಅಂತ ನಮಗೆ ಗೊತ್ತಿದೆ. ಕನ್ನಡದ ಬಗ್ಗೆ, ಇಂಗ್ಲಿಶಿನ ಬಗ್ಗೆ ಅನೇಕ ಚರ್ಚೆಗಳು ನಡೆದಿವೆ ಅನ್ನೋದು ನಮಗೆ ಗೊತ್ತಿದೆ. ಆ ಚರ್ಚೆಯನ್ನು ಇಟ್ಟುಕೊಂಡೇ ಒಂದು ಪ್ರಣಾಳಿಕೆಯನ್ನು ಕೊಡ್ಲಿಕ್ಕೆ ಸಾಧ್ಯ ಆಗ್ಬೇಕು. ಈಗ ನಾವು ಇಟ್ಟುಕೊಂಡಿರುವ ವಿಚಾರಸಂಕಿರಣ ಭಾಷೆಯ ಬಗ್ಗೆ ಮಾತ್ರ. ಕರ್ನಾಟಕದ ಒಂದು ಇಡೀ ಸಮಾಜವನ್ನು ಪುನಾರಚನೆ ಮಾಡುವಂತಹ ವಿಚಾರ ಸಂಕಿರಣ ಕೂಡ ಆಗ್ಬೇಕು. ಹಾಗಾಗಿ ಸಮಾಜ ಎನ್ನುವ ಪದವನ್ನು ಇಟ್ಕೊಂಡು ನಾವು ದಲಿತ ಎಂಬ ಪದವನ್ನು ಮೇಲ್ಭಾಗಕ್ಕೆ ತಂದಿದ್ದೇವೆ. ದಲಿತರ ಮುಂದಾಳುತನದಲ್ಲಿ ನಾವು ಕರ್ನಾಟಕದಲ್ಲಿ ಸಮಾಜವನ್ನು ರಚನೆ ಮಾಡುವ ಮತ್ತು ಭಾಷೆಯನ್ನು ಕುರಿತು ಒಂದು ನಿರ್ಣಯ ಮಾಡುವ ಅಥವಾ Langauage Planning ಅಂತ ಏನು ಹೇಳ್ತೇವೆ, ಈಗ ನಮ್ಮ ಭಾಷಾ ಸಂಸ್ಥೆಗಳು ಯಾವ ಕೆಲಸ ಮಾಡ್ತಾ ಇವೆ ಅದನ್ನ ಮಾಡುವುದಕ್ಕೆ ಬೇಕಾದ ಒಂದು ಕರಡನ್ನು ಸಿದ್ಧಪಡಿಸಬೇಕು. ಡಾ. ಕೆ.ವಿ.ನಾರಾಯಣ ಅವರು ಅದೆಲ್ಲ ಸಮಸ್ಯೆಗಳನ್ನು ಪ್ರಮೇಯಗಳ ಸಹಿತ ಹೇಳಿದ್ದಾರೆ. ಯಾಕೆಂದ್ರೆ ಇದು ಒಂದು ಏಕರೂಪದ ಏಕಾಕೃತಿಯ ನಿರ್ಣಯ ಮಾಡುವ ಕಾಲ ಅಲ್ಲ. ಹಾಗಾಗಿ ಒಂದು ಕಡೆ ಜಾಗತೀಕರಣಕ್ಕೆ ಪ್ರತಿಯಾಗಿ ಮತ್ತು ಪರ್ಯಾಯವಾಗಿ ಕರ್ನಾಟಕವನ್ನು ಪ್ರಬಲವಾಗಿಸುವುದು. ಪ್ರಾರಂಭದಲ್ಲಿ ಕಲ್ಗುಡಿಯವರು ಶಾಸ್ತ್ರೀಯ ಭಾಷೆಯ ಬಗ್ಗೆ ಚರ್ಚೆ ಮಾಡುವಾಗಲೂ ಆ ಮಾತನ್ನು ಹೇಳಿದರು. ಭಾರತದಲ್ಲಿ ಹಿಂದಿಯ ಸಾಮ್ರಾಜ್ಯದ ನಡುವೆ ಹಾಗೂ ಜಗತ್ತಿನಲ್ಲಿ ಇಂಗ್ಲಿಶಿನ ಸಾಮ್ರಾಜ್ಯದ ನಡುವೆ ಕನ್ನಡಿಗರು ಮತ್ತೆ ಗುಲಾಮರಾಗಿ ಸೇರುವ ಬದಲು ಅವುಗಳ ಜೊತೆಗೆ ಇದ್ದುಕೊಂಡೇ ನಮ್ಮ ಐಡೆಂಟಿಟಿಯನ್ನು ನಮ್ಮ ಚಹರೆಯನ್ನು ಸ್ಥಾಪಿಸುವುದಕ್ಕೆ ಏನು ಮಾಡಬೇಕು ಅಂತ. ಅದನ್ನ ನಮ್ಮ ಬರವಣಿಗೆಯಲ್ಲಿ, ನಮ್ಮ ಮಾತಿನಲ್ಲಿ, ನಮ್ಮ ಮಾಧ್ಯಮಗಳಲ್ಲಿ ಮತ್ತು ಸಂವಹನದ ಎಲ್ಲ ಹೊರದಾರಿ ರಹದಾರಿಗಳಲ್ಲಿ ಹೇಗೆ ಬಳಸ್ಕೋಬೇಕು ಅಂತದ್ದು.

ಈ ಅರ್ಥದಲ್ಲಿ ಕೂಡ ನಮ್ಮಲ್ಲಿ ಭಾಷಾತಜ್ಞರುಗಳು, ಸಾಹಿತಿಗಳು, ಹೋರಾಟಗಾರು, ಚಿಂತಕರು ಎಲ್ಲ ಬೇರೆ ಬೇರೆ ಕ್ಷೇತ್ರಗಳವರು ಸೇರಿರುವುದು ಬಹಳ ಮುಖ್ಯ. Language Planning ಬಗ್ಗೆ ಮಾತನಾಡುವಾಗ ತಜ್ಞರು ಮಾತ್ರ ಇರುತ್ತಾರೆ. ಎಷ್ಟೋ ಬಾರಿ ತಜ್ಞರುಗಳ ಆಲೋಚನೆಗಳು ಬಹಳ ಅದ್ಭುತ ಇರುತ್ತವೆ. ಆದರೆ ಕಾರ್ಯರೂಪಕ್ಮಕೆ ಬರ್ಲಿಕ್ಕೆ ಸಾಧ್ಯ ಇರುವುದಿಲ್ಲ. ಆ ದೃಷ್ಟಿಯಿಂದ ಮಾಧ್ಯಮ, ಸಾಹಿತ್ಯ ಭಾಷಾ ಯೋಜನೆಗಳು, ಲೇಖಕರು ಮತ್ತು ಹೋರಾಟಗಾರರು ಸೇರಿಕೊಂಡು ಮಾತ್ರ ಭಾಷೆ ಕುರಿತು ಮಾತಾಡ್ಲಿಕ್ಕೆ ಸಾಧ್ಯ. ಭಾಷೆ ಅನ್ನುವುದಕ್ಕೆ ಪ್ರಮಾಣ ಸತ್ಯ, ಮಾತು ಕೊಡುವುದು ಅನ್ನುವಂತಹ ಅರ್ಥವೂ ಇದೆ. ಪಂಪ ಹಾಗೂ ರಾಘವಾಂಕ ಅವರು ಈ ಪದವನ್ನು ಹೆಚ್ಚಾಗಿ ಬಳಸಿದ್ದಾರೆ. ಹಾಗಾಗಿ ಇವತ್ತು ಕನ್ನಡವೇ ಸತ್ಯ ಅಂತ ಹೇಳುವಾಗ ಕನ್ನಡವೇ ಒಂದು ಪ್ರಮಾಣ ಅಂತ ಹೇಳುವಾಗ ಆ ಅರ್ಥವನ್ನು ನಾವು ಶಕ್ತಿಯನ್ನಾಗಿ ಇಟ್ಟುಕೊಂಡು ಇಂಗ್ಲಿಶ್, ಹಿಂದಿ ಸೇರಿದಂತೆ ಬೇರೆ ಭಾಷೆಗಳನ್ನು ನಮ್ಮ ಭಾಷಾ ಸಾಮ್ರಾಜ್ಯದ ಒಳಗೆ ಸೇರಿಸ್ಕೊಂಡು ಹೇಗೆ ಬಳಸಿಕೊಳ್ಬೇಕು ಅನ್ನುವಂತಹದು. ಆ ರೀತಿ ಮಾಡುವಾಗ ಪ್ರಮಾಣ ಅನ್ನುವುದು ಶಿಷ್ಟ ಅಥವಾ ಸ್ಟಾಂಡರ್ಡ್ ಅಂತ ಅರ್ಥ ಅಲ್ಲ. ಇದು ನಮಗೆ ಪ್ರಧಾನವಾದುದು ಅನ್ನುವ ಅರ್ಥದಲ್ಲಿ. ನಮ್ಮಲ್ಲಿ ಇರುವ ಭಾಷೆಗಳನ್ನು ಕೈಬಿಡುವ ಬದಲು ಅದನ್ನು ಹೇಗೆ ಬದಲಿಯಾಗಿ ಬಳಸಿಕೊಳ್ಬಹುದು ಅಂತ.

ಸಿದ್ಧಲಿಂಗಯ್ಯನವರು ಮನುಸ್ಮತಿಯ ನಿಯಮ ಪ್ರಸ್ತಾಪ ಮಾಡಿ ಹೇಳಿದಂತೆ ಕೊರಗರಲ್ಲಿಯೂ ಈ ಸಂ‌ಪ್ರದಾಯ ಕಂಡುಬರುತ್ತದೆ. ಉಗುಳಿದುದನ್ನು ಒಂದು ಕಂಟದಲ್ಲಿ ಹಾಕಿಕೊಳ್ಳುವ ಮತ್ತು ಅವರು ದಾರಿಯಲ್ಲಿ ಬರುವಾಗ ಶಬ್ದ ಮಾಡುತ್ತಾ ಬರುವುದಿದೆ. ಕೊರಗರಿಗೆ ಒಂದು ಭಾಷೆ ಇದೆ. ಡಿ.ಎನ್.ಶಂಕರಭಟ್ಟರು ಕೊರಗ ಭಾಷೆಯ ಬಗ್ಗೆ ಇಂಗ್ಲಿಶಿನಲ್ಲಿ ಪುಸ್ತಕ ಬರೆದಿದ್ದಾರೆ. ಈಗ ಕೊರಗರು ಆ ಭಾಷೆ ಮಾತಾಡ್ತಾ ಇಲ್ಲ. ಅವರು ತುಳು ಮಾತಾಡ್ತಾರೆ. ನಾವು ದೇಶೀ ಭಾಷೆ ಎಂದು ಹೇಳುವ ತುಳು ಕೊರಗರ ಪಾಲಿಗೆ ಶಿಷ್ಟ ಭಾಷೆ. ಆಮೇಲೆ ಅದರ ಮುಂದಿನ ಭಾಷೆ ಕನ್ನಡ. ಅದರ ನಂತರದ ಭಾಷೆ ಇಂಗ್ಲಿಶ್. ಹಾಗೆ ಐದು ಸ್ತರಗಳನ್ನು ದಾಟಿಕೊಂಡು ಕೊರಗರು ಇಂಗ್ಲಿಶಿಗೆ ಬರುವ ಹೊತ್ತಿಗೆ ಇನ್ನು ಇನ್ನೂರುವರ್ಷ ದಾಟಬಹುದು. ಬಹುಶಃ ಆ ಅವಧಿಯಲ್ಲಿ ನಮ್ಮ ಕಾರ್ಯತಂತ್ರಗಳು ಹೇಗಿರಬೇಕು ಅಂತ. ನಾನು ಯಾಕೆ ಕರಾವಳಿ ಉದಾಹರಣೆ ಕೊಡ್ತೇನೆ ಅಂದ್ರೆ ಕರಾವಳಿಯಲ್ಲಿ ದಲಿತರ ಭಾಷೆ ಕನ್ನಡ ಅಲ್ಲ. ಅಲ್ಲಿ ದಲಿತರ ಭಾಷೆ ಕೊರಗ ಭಾಷೆ ಮತ್ತು ತುಳುವಿನ ಅನೇಕ ಉಪಭಾಷೆಗಳು. ಅವರು ಇವತ್ತು ಕೂಡ ಕನ್ನಡದಲ್ಲಿ ಮಾತನಾಡೋದು ಕಷ್ಟ. ನಾನು ಕನ್ನಡದ ಮೇಷ್ಟ್ರಾಗಿ ಕಂಡದ್ದು, ಅವರು ಕಳೆದ ಹತ್ತು-ಹದಿನೈದು ವರ್ಷಗಳಿಂದೀಚೆಗೆ ಮಾತ್ರ ಎಂ.ಎ. ತರಗತಿಗಳಿಗೆ ಬರುತ್ತಿದ್ದಾರೆ. ಯಾಕೆಂದ್ರೆ ಅವರಿಗೆ ಕನ್ನಡ ಮಾತಾಡ್ಲಿಕ್ಕೆ ಬರೋದಿಲ್ಲ. ಕನ್ನಡ ಎಂ.ಎ.ಗೆ ಬಂದರೂ ಈ ತರಹದ ಸಾಹಿತ್ಯಿಕ ಭಾಷೆ ಮಾತಾಡ್ಲಿಕ್ಕೆ ಆಗೋದಿಲ್ಲ. ಆದುದರಿಂದ ಏಕಕಾಲಕ್ಕೆ ಈ ಭಾಷೆಗಳನ್ನೆಲ್ಲ ಕ್ರಿಯಾಶೀಲವಾಗಿಸುವಂತಹ ಒಂದು ಕಾರ್ಯತಂತ್ರವನ್ನು ಕುರಿತು ನಾವು ಯೋಚನೆ ಮಾಡ್ಬೇಕು. ಅದನ್ನು ನಮ್ಮ ಮಾಧ್ಯಮ, ಶಿಕ್ಷಣ ಮತ್ತು ಸಾಹಿತ್ಯಿಕ ಬರವಣಿಗೆಗಳಲ್ಲಿ ಬಳಸಿಕೊಳ್ಬೇಕು. ಜೊತೆಗೆ ನಾವು ಇಂಗ್ಲಿಶ್, ಹಿಂದಿ ಭಾಷೆಗಳೊಂದಿಗೆ ಹೇಗೆ ಸಂಬಂಧ ಇಟ್ಟುಕೊಳ್ಳಬೇಕು ಅನ್ನುವುದು ಕೂಡ ಚರ್ಚೆ ಮಾಡುವಂತಹದು. ಪ್ರಭುತ್ವ ಮತ್ತು ಅಧೀನತೆ ಎಂಬ ಪರಿಕಲ್ಪನೆ ಬಂದಾಗಲೆಲ್ಲ ಈ ಸಮಸ್ಯೆ ಎದುರಾಗ್ತದೆ. ಅದರ ಬದಲು ದಲಿತರ ಭಾಷೆಯೇ ಕರ್ನಾಟಕದ ಭಾಷೆಯಾಗ್ಬೇಕು ಅಂತ. ನಾವು ಹುನ್ನಾರವನ್ನ ಮಾಡಿದ್ರೆ. ಸಿದ್ಧಲಿಂಗಯ್ಯನವರ ಕವನದ ಭಾಷೆಯ ಹಾಗೆನೇ ಅದು ಕರ್ನಾಟಕದ ಭಾಷೆಯಾದ್ರೆ, ಆಮೇಲೆ ನಾವು ಕೃತಕವಾಗಿ ನಿರ್ಮಾಣ ಮಾಡಿದ ಭಾಷೆಗಳನ್ನೆಲ್ಲ ಶಿಥಿಲ ಮಾಡ್ತಾ ಬಂದ್ರೆ ಬಹುಶಃ ನಮ್ಮ ಇಡೀ ಸಾಹಿತ್ಯಿಕ ಭಾಷೆಯನ್ನೇ ನಾವು ಬದಲಾವಣೆ ಮಾಡ್ಲಿಕ್ಕೆ ಸಾಧ್ಯನೇ ಅಂತ ಚರ್ಚಿಸಬೇಕಾದ ಅಥವಾ ಯೋಜಿಸಬೇಕಾದಂತಹ ವಿಷಯ. ಮುಖ್ಯವಾಗಿ ಇದು ಏಕೆ ಚರ್ಚೆಯಾಗ್ತಾ ಇದೆ ಅಂತ ಹೇಳಿದ್ರೆ, ದಲಿತರು ಅಂತ ಹೇಳುವವರನ್ನ ಸಮಾಜ ಬದಲಾವಣೆ ಮಾಡ್ತ ಇದೆ. ತಮ್ಮ ಐಡೆಂಟಿಟಿಯನ್ನು ಹಾಗೇ ಉಳಿಸಿಕೊಳ್ಬೇಕು ಅನ್ನೋದು ಭಾಷೆಯ ಬಗ್ಗೆ ಅಲ್ಲ. ಅದು ಕುಲಕಸುಬುಗಳು ಇರ್ಬಹುದು, ಅಸ್ಪೃಶ್ಯತೆ ಇರ್ಬಹುದು, ಆಹಾರ ಪದ್ಧತಿ ಇರ್ಬಹುದು, ಧಾರ್ಮಿಕ ಆಚರಣೆ ಇರ್ಬಹುದು ಇವೆಲ್ಲವನ್ನು ಹಾಗೆಯೇ ಇಟ್ಕೊಳ್ಲಿಕ್ಕೆ ಆಗೋಲ್ಲ. ಹಾಗಾಗಿ ಅಲ್ಲಿ ಯಾವ ಚಹರೆಗಳು, ಮಾದರಿಗಳು ಪುನರೂಪಿತವಾದ ಮಾದರಿಗಳನ್ನ ಪಡೀಲಿಕ್ಕೆ ಸಾಧ್ಯ, ಯಾವುವು ತಿರಸ್ಕರಿಸಲಿಕ್ಕೆ ಅರ್ಹವಾದವು, ಯಾವುದು ಬದಲಾವಣೆ ರೂಪದಲ್ಲಿ ಮುಂದುವರಿಸಬೇಕಾದುದು. ಯಾವುದನ್ನು ಪರಿಷ್ಕರಣೆ ಮಾಡ್ಬೇಕು ಅನ್ನೋದೆಲ್ಲ ಬಹು ಮಟ್ಟಿಗೆ ಅಧ್ಯಯನದ ಮೂಲಕ, ಯೋಜನೆ ಮೂಲಕ ರೂಪಿಸಬೇಕಾದುದೇ ಹೊರತು ಕೇವಲ ಹೇಳಿಕೆಗಳ ಮೂಲಕ ಆಗುವಂತಹುದಲ್ಲ. ಆ ಕಾರಣಕ್ಕಾಗಿ ಇದನ್ನು ಯಾಕೆ ಒಂದು ಸವಾಲಾಗಿ ಸ್ವೀಕರಿಸಬೇಕು ಅಂದ್ರೆ ವಿಶ್ವವಿದ್ಯಾಲಯದ ಸಂಸ್ಥೆಗಳು ಇದನ್ನೆಲ್ಲ ಸಮಗ್ರವಾಗಿ ಕರ್ನಾಟಕದ ದಲಿತರುಗಳನ್ನ ಭಾಷಿಕ ನೆಲೆಯಲ್ಲಿ ಸಂಪೂರ್ಣವಾಗಿ ಅವರನ್ನು ದಾಖಲೀಕರಣದ ಮೂಲಕ ಅಧ್ಯಯನ ಮಾಡುವುದರಿಂದ ನಾವು ಓದಿಕೊಳ್ಳಬಹುದು. ಇಲ್ಲದೆ ಹೋಗಿದ್ರೆ ಒಂದು ಹತ್ತು-ಇಪ್ಪತ್ತು ವರ್ಷಗಳ ಹಿಂದೆ ಹೇಳಿದಂತಹದೇ ಸಾಮಾನ್ಯೀಕರಣದ ಬೀಸು ಹೇಳಿಕೆ ಹೇಳುವುದರಿಂದ ನಾವು ಈ ಸಮಸ್ಯೆಯನ್ನ ಪರಿಹಾರ ಮಾಡ್ಲಿಕ್ಕೆ ಆಗೊಲ್ಲ. ಆ ಕಾರಣ ವಿಶ್ವವಿದ್ಯಾಲಯ ದಲಿತ ಪೀಠದ ಜವಾಬ್ದಾರಿಯಲ್ಲಿ ಇದು ಕೂಡ ಒಂದು.

ನಮ್ಮ ಮುಂದೆ ಇರುವ ನಿಜವಾದಂತಹ ಇಡೀ ಸಾಂಸ್ಕೃತಿಕ ಸೊತ್ತುಗಳ ಮೂಲಕ ಅದನ್ನೇ ನಾವು ಸಮಗ್ರವಾಗಿಟ್ಟುಕೊಂಡು ಹೇಗೆ ಯೋಜನೆ ರೂಪಿಸಬಹುದು ಎನ್ನುವುದು ಮುಖ್ಯ. ಈ ದೃಷ್ಟಿಯಿಂದ ಈ ಎರಡು ದಿನಗಳ ವಿಚಾರಸಂಕಿರಣದಲ್ಲಿ ಪಾಲುಗೊಳ್ಳಲು ಬಂದಂತಹ ಬೇರೆ ಬೇರೆ ಕ್ಷೇತ್ರಗಳ ಗೆಳೆಯರನ್ನ ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ಯಾಕೆಂದ್ರೆ ಅವರ ಆಲೋಚನೆಗಳೆಲ್ಲ ಇಲ್ಲಿ ದಾಖಲೀಕರಣಗೊಳ್ತವೆ. ಕಳೆದ ಬಾರಿ ನಮ್ಮ ದಲಿತ ಪೀಠದ ಸಂಚಾಲಕರಾದ ಡಾ. ಪಿ.ಮಹದೇವಯ್ಯನವರು ತುಂಬಾ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಅವರು ಭಾಷಣಗಳನ್ನ ಎಷ್ಟು ಬಾರಿ ಲಿಪ್ಯಂತರ ಮಾಡಿದ್ದಾರೋ ಗೊತ್ತಲ್ಲ. ವಾರಕ್ಕೊಮ್ಮೆ ಯಾದ್ರೂ ಬಂದು ನನ್ನ ಕಾಣ್ತಾ ಇದ್ರು. ಪ್ರತಿಬಾರಿಯೂ, ಸರ್, ರವಿವರ್ಮಕುಮಾರ್ ಲೇಖನ ಬಂದಿಲ್ಲ, ಶ್ರೀನಿವಾಸ ‌ಪ್ರಸಾದ್ ಅವರೂ ಕಳ್ಸಿಲ, ಪುಟ್ಟಣ್ಣಯ್ಯ ಅವರದ್ದೂ ಬಂದಿಲ್ಲ ಅಂತ ಹೇಳುತ್ತ ಪ್ರತಿ ಸಲವೂ ಫೋನ್ ಮಾಡ್ತಿದ್ರು, ನನ್ನ ಪ್ರಕಾರ ಐನೂರಕ್ಕಿಂತಲೂ ಹೆಚ್ಚು ಫೋನ್‌ಕಾಲ್ ಮಾಡಿರ್ಬಹುದು. ಕೊನೆಗೂ ರವಿವರ್ಮಕುಮಾರ್ ಲೇಖನ ಬರೆಯಲಿಲ್ಲ. ನಾನು ಅವರಿಗೆ ಫೋನ್ ಮಾಡಿದಾಗ ಒಂದು ವಾರ-ಎರಡು ವಾರ ಅಂತ ಹೇಳ್ತಿದ್ರು, ಕೊನೆಗೆ ಈ ದಿನಾಂಕಕ್ಕಿಂತ ಹೆಚ್ಚಿಗೆ ಮುಂದೂಡ್ಲಿಕ್ಕೆ ಆಗೋದಿಲ್ಲ ಅಂತ ಅದನ್ನ ಬಿಡ್ಬೇಕಾಯಿತು. ಆದರೆ ಮುಂದಿನ ಬಾರಿಗೆ ಹಾಗೆ ಆಗೋದಿಲ್ಲ ಅಂತ ಮಹದೇವಯ್ಯನವರಿಗೆ ನೀವೆಲ್ಲ ವಿಶ್ವಾಸ ಕೊಡ್ಬೇಕು. ಯಾಕೆಂತೇಳ್ದ್ರೆ ಬಹಳ ಪ್ರೀತಿಯಿಂದ ಅವರು ಆ ಕೆಲ್ಸ ಮಾಡ್ತಾ ಇದ್ದಾರೆ. ಹಾಗಾಗಿ ನಾವು ಮುಂದಿನ ವಿಚಾರಸಂಕಿರಣದ ವೇಳೆಗೆ ಎರಡು ದಿನಗಳ ಗಾಳಿಯ ಮಾತುಗಳನ್ನೆಲ್ಲ ಬರಹ ರೂಪಕ್ಕೆ ಇಳಿಸ್ತೇವೆ ಮತ್ತು ಪುಸ್ತಕ ಮಾಡ್ತೇವೆ. ಇದು ಕನ್ನಡ ವಿಶ್ವವಿದ್ಯಾಲಯದ ಪ್ರಮಾಣ ಅಂತ ಹೇಳ್ತಾ ಈ ಪ್ರಮಾಣಕ್ಕೆ ತಾವೆಲ್ಲ ಕೈ ಜೋಡಿಸ್ಬೇಕು ಅಂತ ಕೇಳ್ಕೊಂಡು ತಮಗೆ ವಂದಿಸ್ತೇನೆ. ನಮಸ್ಕಾರ.