ಈ ವಿಚಾರ ಸಂಕಿರಣವನ್ನು ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅತ್ಯಂತ ಸಂದಿಗ್ಧ ಸಂಕಷ್ಟ ಪರಿಸ್ಥಿತಿಯಲ್ಲಿ ಹಮ್ಮಿಕೊಂಡಿರುವುದು ಅರ್ಥಪೂರ್ಣವಾಗಿದೆ. ನಮ್ಮೆಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ, ಕನ್ನಡಗಳು ಅಥವಾ ಹಲವು ಕನ್ನಡಗಳು ಕನ್ನಡಿಗರ ಸಮುದಾಯದ ಭಾಷೆ. ೨೧ನೇ ಶತಮಾನದಲ್ಲಿ ಈ ಭಾಷೆಗೆ, ಭಾಷೆಯ ಅಸ್ತಿತ್ವಕ್ಕೆ ತನ್ನದೆ ಆದ ಆತಂಕಗಳು ಸೃಷ್ಟಿ ಆಗಿವೆ. ಆಧುನಿಕ ಯುಗದಲ್ಲಿ ಶಿಕ್ಷಣವು ಹಿಡಿದಿರುವ ಸ್ವರೂಪದಿಂದಾಗಿ ವಿವಿಧ ಕನ್ನಡಗಳಿಗೆ ತನ್ನದೇ ಆದ ಶ್ರೇಣೀಕರಣ ಉಂಟಾಗಿದೆ. ಬಹುಸಂಖ್ಯೆಯ ಗ್ರಾಮೀಣ ಸಮುದಾಯ ಬಳಸುವ ‘ಆಡುಮಾಡು ಕನ್ನಡ’ ದ ವೈವಿಧ್ಯಮಯ ಬಳಕೆಯು ವಿದ್ಯಾವಂತ, ಪಟ್ಟಣದ, ಮೇಲುವರ್ಗದ, ಸಂಸ್ಕೃತ ಮಾದರಿಯನ್ನು ಅನುಸರಿಸಿದ ಸ್ಟಾಂಡರ್ಡ್‌ ಕನ್ನಡದ ಎದುರು ತನ್ನ ಸ್ಥಾನ ಕಳೆದುಕೊಂಡಿದೆ. ಈ ಸ್ಟಾಂಡರ್ಡ್ ಕನ್ನಡವು -ಶಿಕ್ಷಣದಲ್ಲಾಗಲೀ, ಆಡಳಿತದಲ್ಲಾಗಲೀ ಇಂಗ್ಲಿಶ್‌ನ ಎದುರು ತನ್ನನ್ನು ಗಟ್ಟಿಗಳಿಸಿಕೊಳ್ಳದೇ ತನ್ನದೇ ಆದ ಅಪ್ರಸ್ತುತತೆಯನ್ನು ಅನುಭವಿಸುತ್ತಿದೆ. ಎಲ್ಲ ಸತ್ವ ಕಳೆದುಕೊಂಡ ಉಪಚಾರದ ಭಾಷೆಯಾಗಿ ಹೋದಂತೆ ಭಾಷವಾಗುತ್ತಿದೆ. ತಮಿಳುನಾಡು, ಆಂಧ್ರದಲ್ಲಿ ಆಯಾ ಭಾಷಿಕ ಸಮುದಾಯಗಳು ಭಾಷೆಯ ಅಸ್ತಿತ್ವದ ಪ್ರಶ್ನೆಯನ್ನು ರಾಜಕೀಯ ಅಥವಾ ಪ್ರಭುತ್ವದ ಅಸ್ತಿತ್ವದ ಪ್ರಶ್ನೆಯ ಜೊತೆಗೆ ಪರಿಣಾಮಕಾರಿಯಾಗಿ ತಳುಕು ಹಾಕಿ ತಮ್ಮನ್ನು ತಾವು ಗಟ್ಟಿಗೊಳ್ಳಿಸಿಕೊಳ್ಳುವುದು ನಮಗೆ ಯಾಕೆ ಕಣ್ಣಿಗೆ ಬೀಳುತ್ತಿಲ್ಲವೊ? ಕನ್ನಡ ಭಾಷೆಗೆ ಮತ್ತು ಭಾಷಾ ಸಮುದಾಯಕ್ಕೆ, ರಾಜಕೀಯ ಶಕ್ತಿ ದಕ್ಕದಿರಲು ಕಾರಣಗಳೇನು?

ರಾಜಕೀಯ ಪ್ರಭುತ್ವಗಳು ಈ ಐವತ್ತು ವರ್ಷಗಳಲ್ಲಿ ಕನ್ನಡ ಭಾಷೆಯನ್ನು ತನ್ನ ಓಟಿನ ರಾಜಕಾರಣಕ್ಕಾಗಿ ಮಾತ್ರ ಬಳಸುತ್ತ, ಶಿಕ್ಷಣದಲ್ಲಾಗಲೀ, ಆಡಳಿತದಲ್ಲಾಗಲೀ, ಸಮೂಹ ಸಂವಹನ ಸಂದರ್ಭದಲ್ಲಾಗಲೀ – ಅದು ಕಾಲ್ತೆಗೆಯುವಂತೆ ಮಾಡಿರುವ ಸಂಗತಿ ನಮ್ಮೆದುರು ಇದೆ. ಆಧುನಿಕತೆ ಮತ್ತು ಅಭಿವೃದ್ಧಿ ಮತ್ತು ‘ವಿಶ್ವಾತ್ಮಕ ಜ್ಞಾನ’ ಸ್ವರೂಪದ ಹೆಸರಿನಲ್ಲಿ ಇಂಗ್ಲಿಶ್ ನಮ್ಮ ನಡುವೆ ಗಟ್ಟಿಯಾಗಿ ತಳವೂರಿರುವುದು ಕಾಣುತ್ತಿದೆ. ಕನ್ನಡದಲ್ಲಿ ಜ್ಞಾನ ಸೃಷ್ಟಿ ಅಸಾಧ್ಯವೆಂಬ ನೆಲೆಗೆ ನಾವು ಬಂದು ನಿಂತಂತಿದೆ. ಈ ಭಾಷೆಗೆ ಹಲವಾರು ಬಗೆಯ ಆತಂಕಗಳು ಇರುವ ಕಾಲ ಇದು.

ಕನ್ನಡದ ನವ್ಯ ಸಾಹಿತ್ಯ ಮತ್ತು ಸಂಸ್ಕೃತಿ ಸಂದರ್ಭದಲ್ಲಿ (ಅಂದರೆ ವಸಾಹಾತು ಆಧುನಿಕತೆಯ ಸಂದರ್ಭವೆಂದೂ ಇದನ್ನು ಕರೆಯಬಹುದು)ಕನ್ನಡಕ್ಕೆ ದಲಿತ ಭಾಷೆ ತಂದುಕೊಟ್ಟ ವಿಭಿನ್ನ ಆಯಾಮವು ಗಮನಾರ್ಹವಾದದ್ದೇ ಆಗಿದೆ. ಕನ್ನಡದ ನವೋದಯಕ್ಕಾಗಲೀ, ನವ್ಯಕ್ಕಾಗಲೀ ಭಾಷೆಯೆನ್ನುವುದು ವರ್ತಮಾನದ ಕ್ಷಣವನ್ನು ಹಿಡಿಯುವ ಸತ್ಯದ ಹಾಗೂ ಸಧ್ಯದ ಭಾಷೆಯಾಗಿತ್ತು. ಆ ಭಾಷೆಗೆ ಸತ್ಯವೆನ್ನುವುದು ಕ್ಷಣದ ಸತ್ಯವಾಗಿತ್ತು. ಆಗ ಭಾವಗೀತೆಗಳು ಅತ್ಯಂತ ಪ್ರಧಾನವಾಗಿ ಮುಂದೆ ಬಂದಂಥ ಕಾವ್ಯ ಪ್ರಕಾರ. ಇಂಥ ಸತ್ಯದ ಕ್ಷಣವನ್ನು ಬಹಳ ಪರಿಣಾಮಕಾರಿಯಾಗಿ ಹಿಡಿದಿಟ್ಟ ಕಾಲ ಅದು. ಆದರೆ ದಲಿತ ಭಾಷೆ ವರ್ತಮಾನದ, ಅಂದರೆ ಈ ಕ್ಷಣದ ಸತ್ಯದ ಕಲ್ಪನೆಯನ್ನೇ ಸಂಪೂರ್ಣವಾಗಿ ನಿರಾಕರಿಸಿತು ಎನ್ನುವುದು ಆ ಭಾಷೆಗೆ ಒಂದು ದೊಡ್ಡ ಚೈತನ್ಯವನ್ನು ಒದಗಿಸಿತು. ಕಾಲದ ಪರಿಕಲ್ಪನೆಯನ್ನು ಅದು ಶತಮಾನಗಳ ಸತ್ಯಾಸತ್ಯತೆಗಳ ಸತ್ಯವನ್ನಾಗಿ ಮಾರ್ಪಡಿಸಿಕೊಂಡಿತು. ಹೀಗಾಗಿ ಕನ್ನಡ ಸಾಹಿತ್ಯಕ್ಕೆ ಒಂದು ಪ್ರಜ್ವಲವಾದ ಭಾಷೆಯನ್ನು ದಲಿತ ಭಾಷೆ ಸೃಜನಶೀಲವಾಗಿ ಕೊಟ್ಟಿತು. ಕನ್ನಡ ತಿಳುವಳಿಕೆಗೆ ಅದರಿಂದ ಒಂದು ಮಿಂಚು ಬಂದಿದೆ. ಆ ಭಾಷೆಯನ್ನು ಬಳಸಿದ ಸಮುದಾಯ ಶ್ರೇಣೀಕರಣಗೊಂಡ ಸ್ವರೂಪವನ್ನು ಪ್ರಶ್ನಿಸಿದ ಸಮುದಾಯ.

ಈಗ ಕನ್ನಡದ ಅಸ್ತಿತ್ವದ ಆತಂಕಗಳ ಸಂದರ್ಭದಲ್ಲಿ ಕನ್ನಡ ಉಳಿಯಬೇಕಾದರೆ, ಬೆಳೆಯಬೇಕಾದರೆ ಅಶಿಕ್ಷಿತರಾದ, ಗ್ರಾಮೀಣ, ಹಿಂದುಳಿದ ಜಾತಿ ಸಮುದಾಯಗಳೇ ಕಾರಣವಾಗಬಲ್ಲವು; ಅವುಗಳೇ ಈ ಭಾಷೆಯ ಉಜ್ವಲತೆಯನ್ನು ಕಾಪಾಡಬಲ್ಲವು ಎನ್ನುವ ಮಾತಿದೆ. ದಲಿತ ಸಮುದಾಯಗಳಿಗೆ ಇದು ಪ್ರಶ್ನಿಸಬಲ್ಲ ಮಾತಾಗಿ ಉಳಿಯುವ ಸಂದರ್ಭ ಇದು. ಎಂಥ ಕನ್ನಡವನ್ನು ನಾವು ಉಳಿಸಬೇಕು? ಬೆಳೆಸಬೇಕು? ಮತ್ತು ಯಾಕೆ ಉಳಿಸಬೇಕು? ದಲಿತ ಲೋಕ ಅದನ್ನು ವಿಭಿನ್ನ ರೀತಿಯಲ್ಲಿ ಎದುರಿಸುತ್ತಿದೆ, ಪ್ರಶ್ನಿಸುತ್ತಿದೆ.

ಶಿಕ್ಷಣದಲ್ಲಿ ವಿಭಿನ್ನ ವರ್ಗದ ಸಮುದಾಯಗಳು ತಮ್ಮನ್ನು ತಾವು ಹೆಚ್ಚು ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಭಾಷೆಯೊಂದು ‘ಮಾಧ್ಯಮ’ ವಾಗುವ ಸ್ವರೂಪವು ಈಗ ಹೆಚ್ಚು ಕಂದರಗಳನ್ನು, ತರತಮವನ್ನೂ ಸೃಷ್ಟಿಸುತ್ತಿದೆ. ಭಾಷೆಯ ಸೃಜನಶೀಲಗೊಳ್ಳಬೇಕಾದ ವಾತಾವರಣವಾಗಿರುವ ‘ಶಿಕ್ಷಣ’ದಲ್ಲಿ ಕನ್ನಡದ ಅಸ್ತಿತ್ವದ ಪ್ರಶ್ನೆಯು ಭೂತಾಕಾರವಾಗಿ ನಿಂತಿದೆ. ‘ಭಾಷಾ ಸಮುದಾಯದ ಬದುಕಿ’ನ ಸೃಜನಶೀಲತೆಗೂ, ಆ ‘ಭಾಷೆಯ’ ಸೃಜನಶೀಲ ಅಸ್ತಿತ್ವಕ್ಕೂ ಸಂಬಂಧವಿರಬೇಕಾಗಿಲ್ಲವೆಂಬ ತಿಳುವಳಿಕೆಗೆ ನಾವು ಬಂದಿದ್ದೇವೆ.

ಸಮೂಹ ಮಾಧ್ಯಮದಲ್ಲಿ: ಸಂವಹನ ಸಂದರ್ಭಗಳಲ್ಲಿ ಕನ್ನಡ ಭಾಷೆಗಿದ್ದ ಸೃಜನಶೀಲ ಉಜ್ವಲತೆಯು ಕ್ರಮೇಣ ಸವೆದು ಹೋಗುತ್ತ ಇರುವುದನ್ನು ನಾವು ದಿನನಿತ್ಯ ಕಾಣುತ್ತಿದ್ದೇವೆ.

ಭಾಷೆಯ ಉಳಿವು-ಅಳಿವಿನ ಪ್ರಶ್ನೆ ಬಂದಾಗ, ದಿನನಿತ್ಯದ ಜೀವನೋಪಾಯಕ್ಕಾಗಿ ಅಗತ್ಯವಾದ ಭಾಷೆಯೇ, ಮುಖ್ಯವಾದ ಭಾಷೆಯೆಂದು ಸಮುದಾಯವು ತಿಳಿಯುವುದು ಸಹಜವಾಗಿದೆ. ಹೀಗಾಗಿ ನಮ್ಮ ಈ ಸಂದರ್ಭದಲ್ಲಿ ಇಂಗ್ಲಿಶ್ ಭಾಷೆಯು ಜೀವನೋಪಾಯಕ್ಕಾಗಿ ಅಗತ್ಯವೆನ್ನುವ ಭಾವನೆ ಸಮುದಾಯಕ್ಕೆ ಮೂಡಿದ್ದರೆ ಅದು ವಾಸ್ತವವೂ ಹೌದು. ಇಂಗ್ಲಿಶ್ ಭಾಷೆಯು ಹೀಗೆ ವಾಸ್ತವವಾಗುತ್ತಿರುವ ಈ ಸಂದರ್ಭದಲ್ಲಿ ಕನ್ನಡವನ್ನು ಕ್ರಿಯಾಶೀಲಗೊಳಿಸುವುದು ಹೇಗೆ ಎನ್ನುವ ಸವಾಲನ್ನು ನಾವು ಎದುರಿಸಬೇಕಾಗಿದೆ.

ಭಾಷೆಯ ಬಳಕೆ ಬಹುಪಾಲು ‘ಉಪಯೋಗಿ ನೆಲೆ’ಯಲ್ಲಿ ಮಾತ್ರ ಎಂಬ ಮಾತು ಇರುವುದಾದರೂ; ಭಾಷಾ ಸಮುದಾಯದ ಬಹುಸಂಖ್ಯಾಕರು ಭಾಷೆಯನ್ನು ಬಳಸುವುದು ಸಂವಹನ ಮತ್ತು ಉಪಯೋಗಿ ನೆಲೆಯಲ್ಲಿ ಎಂಬ ವಿಚಾರವು ಮೇಲುನೋಟಕ್ಕೆ ಸರಿ ಎನ್ನುವುದಾದರೂ ಸೂಕ್ಷ್ಮವಾಗಿ ವಿಚಾರ ಮಾಡಿದಾಗ ಅದು ಸರಳವಾದದ್ದೂ, ತಪ್ಪು ನೆಲೆಯದ್ದು ಆಗಿದೆ ಎಂದು ತಿಳಿಯಬೇಕಾಗಿದೆ. ಏಕೆಂದರೆ ಭಾಷೆಯ ಬಳಕೆ ಕೇವಲ ಯಾಂತ್ರಿಕವಾದದ್ದಲ್ಲ. ನಮ್ಮ ನಡುವಣ ಅತಿ ಸಹಜ ಮಾತುಗಳು ಉಪಯೋಗಿ ನೆಲೆಯಾಚೆ ಭಾವ ಸೂಕ್ಷ್ಮಗಳನ್ನೂ, ವಿಚಾರಗಳನ್ನೂ, ಅರಿವಿನ ಬೆಳಕನ್ನೂ ಕೊಡಬಲ್ಲವಾದ್ದರಿಂದಲೇ ಆ ಭಾಷೆಗೆ ಸೃಜನಶೀಲತೆ ದಕ್ಕಲು ಸಾಧ್ಯವಾಗುತ್ತದೆ. ಈ ಹಂತದ ಸೃಜನಶೀಲತೆ ಮಾತಿಗೆ ಮೊನಚನ್ನೂ, ಮಾತಿನ ವಾತಾವರಣಕ್ಕೆ ಸೊಗಸನ್ನೂ ಮತ್ತು ಮಾತನಾಡುವ ಮನುಷ್ಯರ ಬಗ್ಗೆ ಪ್ರೀತಿಯನ್ನೂ ಹುಟ್ಟಿಸಬಲ್ಲುದು. ಕನ್ನಡವು ಇದನ್ನು ಕಳೆದುಕೊಳ್ಳುತ್ತಿದೆಯೇ? ಎನ್ನುವ ಆಂತಕ ಹುಟ್ಟಿಸುವ ಈ ಸಂದರ್ಭದಲ್ಲೇ ಇಂಗ್ಲಿಶನ್ನು ಎದುರಿಸಬೇಕಾದ ಮತ್ತು ಕನ್ನಡವನ್ನು ಉಜ್ವಲಗೊಳಿಸಬೇಕಾದ ಸವಾಲುಗಳು ನಮ್ಮ ಮುಂದೆ ಹುಟ್ಟುತ್ತವೆ.

ದಲಿತ ಭಾಷೆಗೆ ಕನ್ನಡ ಪರಂಪರೆಯಲ್ಲಿ, ಬದುಕಿನಲ್ಲೇ ಅರಿವಿನ ಉಜ್ವಲತೆಯ ದೀಪವನ್ನು ಆರದಂತೆ ನೋಡಿಕೊಳ್ಳುವ ಚೈತನ್ಯವಿದೆ. ತನ್ನ ಎದುರಿಗೆ ಇರುವ ಸಾಂಪ್ರದಾಯಕತೆಯನ್ನು ಅದು ಧೀಮಂತಿಕೆಯಿಂದ ಎದುರಿಸಿದೆ. ಮಂಟೇಸ್ವಾಮಿ ಪರಂಪರೆ ಇರಬಹುದು, ನಿರ್ವಾಣಸ್ವಾಮಿ ಪರಂಪರೆಯಾಗಬಹುದು. ಉರಿಲಿಂಗಪೆದ್ದಿಯಾಗಬಹುದು, ಅಂಬಿಗರ ಚೌಡಯ್ಯ- ಈ ಪರಂಪರೆಗಳು ಬಳಸಿದ ಕನ್ನಡ ಭಾಷೆ ಪರಂಪರೆಯನ್ನು ಹೊಸ ಬೆಳಕಿನಲ್ಲಿ ಉಜ್ವಲಗೊಳಿಸಿದ ಭಾಷೆ; ಇಂಥ ಉಜ್ವಲತೆ, ಪ್ರಖರತೆಯ ಪರಂಪರೆಯನ್ನು ಕನ್ನಡ ಭಾಷೆಯು ಅತಿ ಎಚ್ಚರದಿಂದ ಕಾಪಾಡಿಕೊಂಡು ಬಂದಿರುವ ಬಗೆ ಮತ್ತು ಅದರ ಮಹತ್ವವನ್ನು ಅರಿಯುವ ತುರ್ತು ಈಗ ಇದೆ. ಈಗ ದಲಿತ ಭಾಷೆಗೆ ಇದು ಒಂದು ಬೆಳಕು ಮತ್ತು ಇಂದಿನ ಸಂದಿಗ್ಧ ನೆಲೆಗಳನ್ನು ಅರಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡು ದಿನದ ವಿಚಾರಸಂಕಿರಣವನ್ನು ಬೆಂಗಳೂರು ವಿಶ್ವವಿದ್ಯಾಲಯ, ಪ್ರಸಾರಾಂಗ ಮತ್ತು ಕನ್ನಡ ವಿಶ್ವವಿದ್ಯಾಲಯ, ದಲಿತ ಅಧ್ಯಯನ ಪೀಠ ಸೇರಿ ಮಾಡುತ್ತಿವೆ. ಈ ಮಹತ್ವದ ಚಿಂತನೆಯ ಕೆಲಸದಲ್ಲಿ ಡಾ. ಕೆ.ವಿ.ನಾರಾಯಣ, ಡಾ. ಪಿ.ಮಹಾದೇವಯ್ಯ ಅವರನ್ನು ಒಳಗೊಂಡು ಸಾಕಷ್ಟು ಜನ ದುಡಿದಿದ್ದಾರೆ. ನನ್ನ ನಮಸ್ಕಾರಗಳು.