ಪ್ರಾಸ್ತಾವಿಕ ಮಾತುಗಳನ್ನು ಆಡಿದಂತಹ ಡಾ. ಕೆ.ವಿ.ನಾರಾಯಣ ಅವರು ದಲಿತರು ಮತ್ತು ಭಾಷೆ ಸಂಬಂಧವನ್ನು ಕುರಿತು ಮಾತನಾಡ್ತ, ಇವತ್ತು ಶಿಕ್ಷಣದಲ್ಲಾಗಬಹುದು ಅಥವಾ ಬೇರೆ ಬೇರೆ ವಲಯಗಳಲ್ಲಾಗಬಹುದು. ದಲಿತರ ಭಾಷೆಯನ್ನು ಮಾನ್ಯತೆ ಮಾಡುವ ಸಹನೆ ಬೇಕು ಎಂದರು. ಅವರು ಮನಸ್ಸುಗಳು ಪಲ್ಲಟವಾಗದೆ ಹೊರತು ಸಹನೆ ಸೃಜಿಸದು ಅನ್ತಕ್ಕಂತಹ ಒಂದು ಪ್ರಶ್ನೆಯನ್ನು ಇಟ್ರು. ಅನಂತರ ಡಾ. ಪಾಂಡುರಂಗ ಬಾಬು ಅವರು ಮಾತನಾಡ್ತ, ಭಾಷೆಯ ಕಲಿಕೆಯ ಸಮಸ್ಯೆಯನ್ನು ಎತ್ತಿದ್ರು. ಅದರ ಮುಂದುವರಿಕೆಯಾಗಿ ಬರಗೂರು ರಾಮಚಂದ್ರಪ್ಪನವರು ಇವತ್ತು ದಲಿತರ ಬದುಕನ್ನು, ಅವರ ಭಾಷೆಯನ್ನು, ಅವರ ಸಮಾಜವನ್ನು ಯಾವ ಕೇಂದ್ರದ ನೆಲೆಯಿಂದ ಅಧ್ಯಯನಕ್ಕೊಳಪಡಿಸಬೇಕು ಅನ್ತಕ್ಕಂತಹ ಪ್ರಶ್ನೆಯನ್ನು ಎತ್ತಿದ್ರು. ಈ ವಿಚಾರಸಂಕಿರಣಕ್ಕೆ ಇದರಿಂದ ಉದ್ದಕ್ಕೂ ಬಹಳ ಮುಖ್ಯವಾದ ಸಾತತ್ಯ ಬಂದಿದೆ ಅಂತ ನಾನು ಅಂದ್ಕೊಂಡಿದ್ದೇನೆ. ದಲಿತರ ಭಾಷೆಯನ್ನ ದಲಿತ ಕೇಂದ್ರಿತ ನೆಲೆಯಿಂದ ನೋಡ್ಬೇಕು ಅಂತ ಬರಗೂರು ಅವರು ಅಭಿಪ್ರಾಯಪಟ್ರೆ, ಕೆ.ವಿ.ನಾರಾಯಣ ಅವರು ದಲಿತ ಭಾಷೆಗೆ ಮಾನ್ಯತೆ ಅಥವಾ ಶಿಷ್ಟತೆ ಅಥವಾ ಪ್ರಮಾಣೀಕರಣವನ್ನ ತಂದ್ಕೊಡ್ಬೇಕಾದ್ರೆ ನಾವು ಯಾವ ರೀತಿ ಅದನ್ನ ಮಾನ್ಯತೆ ಮಾಡ್ಬೇಕು, ಇವತ್ತಿನ ಸಾಮಾಜಿಕ ಸಂದರ್ಭದೊಳಗೆ ಅದು ಎಷ್ಟು ಮಹತ್ವದ್ದು ಅನ್ನುವಂತಹದ್ದನ್ನ ಕೂಡ ಹೇಳಿದ್ರು.

ಈ ಸಂದರ್ಭದಲ್ಲಿ ನಾನು ಮುಖ್ಯವಾಗಿ ಹೇಳೋದಕ್ಕೆ ಇಷ್ಟ ಪಡೋದು ಅಂದ್ರೆ ಸುಮಾರು ಮುವತ್ತು-ಮುವತ್ತೈದು ವರ್ಷಗಳ ಹಿಂದೆ ಅಂದರೆ ಸುಮಾರು ಎಪ್ಪತ್ತರ ದಶಕದ ಆದಿಯಲ್ಲಿ ಸಾಮಾಜಿಕವಾಗಿ, ಸಾಹಿತ್ಯಕವಾಗಿ, ಧಾರ್ಮಿಕವಾಗಿ ಮತ್ತು ಆರ್ಥಿಕವಾಗಿ ಹೀಗೆ ಅನೇಕ ರಂಗಗಳಲ್ಲಿ ದಲಿತ ಚಳುವಳಿಗಳು ಪ್ರಾರಂಭವಾದವು. ಬಹುಶಃ ಐವತ್ತರ ದಶಕದಲ್ಲಿ ಶಾಲೆಗೆ ಸೇರಿದ ನಮ್ಮಂತಹ ಶೂದ್ರರು ಅಥವಾ ನಮ್ಮ ವಾರಿಗೆಯ ಅಸ್ಪೃಶ್ಯ ದಲಿತರ ಮಕ್ಕಳು ಎಪ್ಪತ್ತರ ದಶಕದ ಆದಿಯಲ್ಲಿ ಅರಿವನ್ನು ತಿಳುವಳಿಕೆಯನ್ನು ಎಚ್ಚರವನ್ನು ಓದಿ ಪಡೆದುಕೊಂಡು ವಿಶ್ವವಿದ್ಯಾಲಯಗಳಿಂದ ಹೊರಗೆ ಬಂದಂತಹ ಸಂದರ್ಭದಲ್ಲಿ ಈ ದಲಿತ ಚಳುವಳಿ, ದಲಿತ ಸಾಹಿತ್ಯ, ದಲಿತ ಸಂಸ್ಕೃತಿ, ದಲಿತ ಭಾಷೆ ತನ್ನ ಆನನ್ಯತೆಯನ್ನು ಅಸ್ಮಿತೆಯನ್ನು ಗುರುತಿಸಿಕೊಳ್ಳೋದಿಕ್ಕೆ ಆರಂಭವಾಯಿತು. ಇದು ಇತಿಹಾಸದ ವ್ಯಂಗ್ಯ ಅಲ್ಲ. ಚಾರಿತ್ರಿಕವಾದ ಒಂದು ಸತ್ಯ ಕೂಡ. ರಾಜಕೀಯ ಮುಂಚೂಣಿಯಲ್ಲಿದ್ದಂತಹ ದಲಿತ ನಾಯಕರು ಮಾತನಾಡಿದ ಮಾತು ಆಗಿರಬಹುದು. ಅಥವಾ ಸಾಹಿತ್ಯದ ಮುಂಚೂಣಿ ಯಲ್ಲಿದ್ದಂತಹ ಶೂದ್ರ ಹಾಗೂ ದಲಿತ ಲೇಖಕರು ಎತ್ತಿದ ಪ್ರಶ್ನೆ ಆಗಬಹುದು. ನಮ್ಮ ದಲಿತ ಲೇಖಕರು ಕಳೆದ ಮುವತ್ತು ವರ್ಷದ ಹಿಂದೆ ಹೇಗೆ ಒಂದು ದೀರ್ಘಕಾಲದ ಮೇಲುಜಾತಿ ಮತ್ತು ಮೇಲುವರ್ಗ ಸಮಾಜದ ದಮನದ ಅನಾವರಣ ಮಾಡೋದಿಕ್ಕೆ ಯಾವ ಭಾಷೆಯ ಮೂಲಕ ಆರಂಭ ಮಾಡಿದ್ರೋ ಅಂತಹ ಆ ಭಾಷೆಯ ಮಾನ್ಯತೆಯ ಬಗೆಗೆ ನಾವು ಇವತ್ತು ಮಾತನಾಡ್ತ ಇದ್ದೀವಿ.

ದಲಿತರು ಕಳೆದುಕೊಳ್ಬೇಕಾದಂತಹದ್ದು ಬಹುಶಃ ಇವತ್ತು ಭಾಷೆಯನ್ನು ಬಿಟ್ಟರೆ ಯಾವುದೂ ಇಲ್ಲ ಅನಿಸ್ತದೆ. ಅವರಿಗೆ ಆಸ್ತಿಯನ್ನು ಕಳೆದುಕೊಳ್ಳುವ ಪ್ರಶ್ನೆ ಉದ್ಭವವಾಗೋದಿಲ್ಲ. ಅಥವಾ ಜಾತಿಯನ್ನು ಕಳೆದುಕೊಳ್ಳುವ ಪ್ರಶ್ನೆ ಉದ್ಭವವಾಗೋದಿಲ್ಲ. ಯಾಕೆಂದರೆ ಅವರಿಗೆ ಖಾಸಗಿ ಆಸ್ತಿ, ಹಣ, ಇಂಗ್ಲಿಶ್ ಶಿಕ್ಷಣ, ಜಾತಿ ಯಾವುದೂ ಇಲ್ಲ. ಭಾಷೆಯ ಪ್ರಶ್ನೆ ಎದುರಾದಾಗ ಬಹುಶಃ ಇವತ್ತು ದಲಿತರಿಗೆ ಭಾಷೆಯೇ ಆಸ್ತಿ ಮತ್ತು ಶಕ್ತಿ ಅಂತ ನಾನು ಅಂದ್ಕೊಂಡಿದ್ದೀನಿ. ಪ್ರಭುತ್ವವೇ ಶಕ್ತಿಯ ಕೇಂದ್ರ ಅನ್ತಕ್ಕಂತಹದ್ದನ್ನ ನಾವೆಲ್ಲ ಅನೇಕ ಕಡೆ ಓದಿದ್ದೀವಿ. ಆದ್ರೆ ಇವತ್ತು Language is a Power ಅನ್ತಕ್ಕಂತಹದ್ದು ಅದರಲ್ಲೂ ದಲಿತರ ವಿಷಯದಲ್ಲಿ ಬಹಳ ಮುಖ್ಯ ಅಂತ ನಾನು ಅಂದ್ಕೊಂಡಿದ್ದೀನಿ. ಇವತ್ತು ಶಕ್ತಿಯ ಕೇಂದ್ರ ‌ಪ್ರಭುತ್ವವೂ ಅಲ್ಲ, ಜ್ಞಾನವೂ ಅಲ್ಲ. ಪ್ರಭುತ್ವ ಮತ್ತು ಜ್ಞಾನದ ನಡುವೆ ಅನೇಕ ಶತಮಾನಗಳಷ್ಟು ಕಾಲ ಈ ದಲಿತರು, ಶೂದ್ರರು ಶೋಷಣೆಗೆ ಅಥವಾ ತುಳಿತಕ್ಕೆ ಒಳಗಾಗಿರೋದನ್ನ ಕಾಣ್ತಾ ಇದ್ದೇವೆ. ಅದು ಮನುಸ್ಪೃತಿಯಿಂದ ಆಗಿರ್ಬಹುದು, ಕೌಟಿಲ್ಯನ ಅರ್ಥಶಾಸ್ತ್ರದಿಂದ ಆಗಿರ್ಬಹುದು ಅಥವಾ ಪ್ರಭುತ್ವದಿಂದ ಆಗಿರ್ಬಹುದು. ಒಂದು ಕಡೆ ಚರಿತ್ರೆಯಲ್ಲಿ ಪ್ರಭುತ್ವ ಮತ್ತು ಜ್ಞಾನದ ಶೋಷಣೆ ನಡೆದಿದ್ದರೆ, ಮತ್ತೊಂದು ಕಡೆ ದಲಿತರು ಬಡತನ ಮತ್ತು ಜ್ಞಾನದ ಯುಗಳ ಪ್ರಶ್ನೆಯ ವಿರುದ್ಧ ಸೆಣೆಸುತ್ತ ಬಂದಿರುವುದು ಚರಿತ್ರೆಯಲ್ಲಿ ಕಂಡು ಬರುತ್ತದೆ. ಆದರೆ ಪ್ರಭುತ್ವ ಮತ್ತು ಜ್ಞಾನದ ನಡುವೆ ಈ ಮೌನದ ಮಾತು ಅನೇಕ ಶತಮಾನಗಳ ಕಾಲ ದಮನಕ್ಕೆ ಒಳಗಾಗಿದ್ದಂತಹ ಸಂದರ್ಭದಲ್ಲಿ ಇಲ್ಲಿ ಅಂಬೇಡ್ಕರ್ ಬಹುಮುಖ್ಯರಾಗ್ತಾರೆ. ಅಂಬೇಡ್ಕರ್ ಸಂವಿಧಾನ ರಚನೆ ಮಾಡುವ ಕಾಲದಲ್ಲಿ ಹುಟ್ಟಿನಿಂದ ಮನುಷ್ಯನನ್ನು ಅಳೀತಕ್ಕಂತಹ ಪ್ರಶ್ನೆ ಇತ್ತು. ಅಲ್ಲಿಯವರೆಗೆ ಹುಟ್ಟಿನಿಂದ ಮನುಷ್ಯರೆಲ್ಲ ಸಮಾನರಲ್ಲ ಅನ್ತಕ್ಕಂತಹ ಸಿದ್ಧಾಂತ ಏನಿತ್ತು ಅದು ಸಂವಿಧಾನ ರಚನೆಯ ಸಂದರ್ಭದಲ್ಲಿ ಕಾನೂನಿನ ಮುಂದೆ ಎಲ್ಲ ಮನುಷ್ಯರೂ ಸಮಾನರು ಅಂತ ಅಂಬೇಡ್ಕರವರು ಎತ್ತಿದ ಪ್ರಶ್ನೆ ಬಹಳ ದೊಡ್ಡದು. ಆದರೆ ನೆನ್ನೆ ಮಾತು ಇವತ್ತು ನಡೆದಂತಹ ಚರ್ಚೆಯೊಳಗೆ ಕಾನೂನು ಕೂಡ ಪರ್ಯಾಯವಾದ ಕಾನೂನನ್ನ ಹುಡುಕ್ತಾ ಇದೆ ಎಂಬ ಮಾತನ್ನು ಕೇಳಿದೆ. ಕಾನೂನಿನ ಬಗ್ಗೆ ಅಂಬೇಡ್ಕರ್ ಕಂಡಿದ್ದ ಕನಸು ಕೂಡ ವಿಫಲವಾಗ್ತಕ್ಕಂತಹದ್ದನ್ನು ಅಲ್ಲಿ ಇಲ್ಲಿ ಕೇಳ್ತಾ ಇದ್ದೇವೆ. ಆ ಕಾರಣದಿಂದ ಜ್ಞಾನ ಮತ್ತು ಪ್ರಭುತ್ವದ ನಡುವೆ ದಲಿತರಿಗೆ ಮಾತು ಬಂದದ್ದು, ತಮ್ಮ ಮಾತನ್ನು ಅಕ್ಷರಕ್ಕೆ ಇಳಿಸಿದ್ದು ಬಹುಶಃ ಕಳೆದ ಶತಮಾನದಲ್ಲಿ ಅಂದುಕೊಂಡಿದ್ದೀನಿ.

ಹಾಗಾಗಿ ಇವತ್ತು ದಲಿತರ ಆಸ್ತಿ ಮತ್ತು ಶಕ್ತಿಯೆಂದರೆ ಅವರ ಭಾಷೆ. ದಲಿತರು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರಬಹುದು. ಆದರೆ ಸಾಂಸ್ಕೃತಿಕವಾಗಿ ಅವರ ಭಾಷಾ ಸಂಪತ್ತು ಇದೆಯಲ್ಲ ಅದು ಸಮೃದ್ಧವಾದುದು. ದಲಿತರ ಸಾಂಸ್ಕೃತಿಕ ಸಂಪತ್ತು ಅಂದ್ರೆ ಅವರ ಭಾಷೆ ಅಂತ ನಾನು ಅಂದ್ಕೊಂಡಿದ್ದೀನಿ. ಅವರ ಭಾಷೆಯಲ್ಲಿ ಇವತ್ತು ಕಾಣಿಸಿಕೊಳ್ತಕ್ಕಂತಹ ಸಾಹಿತ್ಯ ಆಗಿರ್ಬಹುದು, ಸಂಸ್ಕೃತಿ ಆಗಿರ್ಬಹುದು. ಬಡವರ, ದಲಿತರ, ಶೂದ್ರರ, ತಳವರ್ಗದವರ, ಅಲ್ಪಸಂಖ್ಯಾರ, ಹಿಂದುಳಿದವರ ಮಗುವಿನ ಶಕ್ತಿ ಇರುವುದು ಇವತ್ತು ಅವರ ಭಾಷೆಯಲ್ಲಿಯೇ. ನನ್ನ ಅನೇಕ ಮಿತ್ರರು ಕರ್ನಾಟಕದ ಬೇರೆ ಬೇರೆ ಭಾಗದ ಉಪಭಾಷೆಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ದಲಿತರ ಉಪಭಾಷೆಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ದಲಿತರ ಉಪಭಾಷೆಗಳ ಬಗ್ಗೆ ಅನೇಕ ಮಾಹಿತಿಗಳನ್ನ ಕೊಟ್ರು. ಈ ಮಾಹಿತಿಗಳು ಬರೀ ಮಾಹಿತಿಗಳಾಗಿ ನಿಲ್ಬಾರ್ದು. ಇದನ್ನ ಒಂದು ಜ್ಞಾನವನ್ನಾಗಿ, ಬೌದ್ಧಿಕ ಶಿಸ್ತನ್ನಾಗಿ ಪರಿವರ್ತಿಸ್ತಕ್ಕಂತಹ ಕೆಲ್ಸ ಆಗ್ಬೇಕಾಗಿದೆ. ಮುಖ್ಯವಾಗಿ ಈ ಸಂದರ್ಭದಲ್ಲಿ ನನಗನಿಸೋದು ಈ ವಿಚಾರ ಸಂಕಿರಣದಲ್ಲಿ ದಲಿತರು, ಅವರ ಬದುಕು, ಸಮಾಜ, ಅವರ ಆಚರಣೆಗಳು, ಸಮುದಾಯ, ಭಾಷೆ ಇವನ್ನೆಲ್ಲ ಬೇರ್ಪಡಿಸಲಾಗದ ಸ್ಥಿತಿಯೊಳಗೆ ಒಟ್ಟಾಗಿ, ಅಖಂಡವಾಗಿ ನೋಡ್ಬೇಕಾದಂತಹ ಸಂದರ್ಭದಲ್ಲಿ ನಾವಿದ್ದೇವೆ. ಆದ್ದರಿಂದ ಜ್ಞಾನ ಮತ್ತು ಪ್ರಭುತ್ವದ ನಡುವೆ ಒಂದು ಭಾಷೆ ಹೇಗೆ ಮುಖ್ಯವಾಗ್ತದೆ, ಅದೂ ದಲಿತರ ಭಾಷೆಯು ಕನ್ನಡದ ಸಂಸ್ಕೃತಿಯ ಭಾಷೆ ಅನ್ತಕ್ಕಂತಹ ಮಾತನ್ನ ಹೇಳ್ತಾ ಈ ಎರಡು ದಿನ ಇಂತಹ ಒಂದು ಚಿಂತನೆಗೆ, ಒಂದು ಚರ್ಚೆಗೆ, ಒಂದು ಅರಿವಿಗೆ, ಒಂದು ಸಂವಾದಕ್ಕೆ ಈ ವಿಚಾರ ಸಂಕಿರಣದ ಮೂಲಕ ನನ್ನ ಸ್ನೇಹಿತರು ಹುಟ್ಟು ಹಾಕಿದ್ದಾರೆ. ವಿದ್ವಾಂಸರು ನಿನ್ನೆಯಿಂದ ಬಹಳ ಪ್ರಬುದ್ಧವಾದ ಉಪನ್ಯಾಸಗಳನ್ನ ನೀಡಿದ್ದಾರೆ. ಎಲ್ಲರಿಗೂ ನಾನು ವೈಯಕ್ತಿಕವಾಗಿ ಮತ್ತು ವಿಶ್ವವಿದ್ಯಾಲಯದ ಪರವಾಗಿ ನನ್ನ ನಮನಗಳನ್ನ ಸಲ್ಲಿಸ್ತಾ ನನ್ನ ಮಾತುಗಳನ್ನ ಮುಗಿಸ್ತೇನೆ.

(ಅಧ್ಯಕ್ಷೀಯ ಭಾಷಣ)