ಪ್ರಖರ ವೈಚಾರಿಕತೆ:

ವಿಶಾಲ ಸಮುದ್ರ ಜಲವೋ ಜಲ, ಆದರೆ ಕುಡಿಯಲು ಗುಟುಕು ನೀರಿಲ್ಲ! ಅದೇ ಪ್ರಕಾರ, ಹಿಂದೂ ಧರ್ಮದ ಹೆಗ್ಗಳಿಕೆಯೋ ಹೆಗ್ಗಳಿಕೆ, ಆದರೆ ಕೋಟಿ ಕೋಟಿ ಜನ ಶೂದ್ರರ, ದಲಿತರ, ಅಸ್ಪೃಶ್ಯರ ಬಾಳಿಗೆ ಬೆಲೆಯೇ ಇಲ್ಲ! ಹಿಂದೂ ಧರ್ಮದ ಸ್ವಾಮಿಗಳು, ಮಹಾಸ್ವಾಮಿಗಳು, ಧರ್ಮಗುರುಗಳು ಮತ್ತು ಜಗದ್ಗುರುಗಳು ಸಪ್ತ ಸಮುದ್ರ ದಾಟಿ ಪರದೇಶಗಳಿಗೆ ಹೋಗಿ, ಅಲ್ಲಿಯ ವೇದಿಕೆಗಳ ಮೇಲೆ ನಿಂತು ತಮ್ಮ ಧರ್ಮದ ಹಿರಿಮೆಯ ಬಗ್ಗೆ, ತಮ್ಮ ಧರ್ಮ, ಸಮಾಜದ ಘನತೆಯ ಬಗ್ಗೆ ಹೆಮ್ಮೆಯಿಂದ ಹೇಳುತ್ತಾರೆ! ಜಗತ್ತಿನಲ್ಲಿರುವ ಅಂದಿನ ಇಂದಿನ ಮುಂದಿನ ಸಜ್ಜನಿಕೆ ಮತ್ತು ಸದಾಚಾರಗಳೆಲ್ಲವನ್ನು ಹೇಳಿ, ಅವುಗಳಿಗೆ ಹಿಂದೂ ಧರ್ಮದ ಮುಖವಾಡ ಹಾಕಿ, ಅಹುದು ಅಹುದು ಎನಿಸಿಕೊಂಡು ಬರುತ್ತಾರೆ.

ಆದರೆ ಈ ದೇಶದಲ್ಲಿ ತಮ್ಮವರೇ ಆದ ಬಹುಸಂಖ್ಯಾತ ದೀನದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ, ಎತ್ತು, ಎಮ್ಮೆ, ಕತ್ತೆ, ಕುದುರೆ, ಹಂದಿ, ನಾಯಿಗಳಂತೆ ಊರ ಹೊರಗೆ ಬಹುದೂರದಲ್ಲಿ ಇಟ್ಟಿದ್ದರ ಬಗ್ಗೆ ಹೇಳುವುದಿಲ್ಲ! ಹೆತ್ತ ತಾಯಿ ಒಡ ಹುಟ್ಟಿದ ಸಹೋದರಿಯರನ್ನು ಸಹಗಮನವೆಂದು ಅವರ ಗಂಡಂದಿರ ಶವದೊಡನೆ ಜೀವಂತ ಸುಡುವುದರ ಬಗ್ಗೆ ಚಕಾರ ಶಬ್ದ ಎತ್ತುವುದಿಲ್ಲ. ಸ್ತ್ರೀ ಬಹಿಷ್ಠೆಯಾದಾಗ ಅವಳನ್ನು ಅಸ್ಪೃಶ್ಯಳಂತೆ ಕಾಣುವುದನ್ನು ಹೇಳುವುದಿಲ್ಲ. ಕುಲಜರ ಸ್ತ್ರೀಯರು ವಿಧವೆಯರಾದಾಗ ಅವರ ತಲೆಬೋಳಿಸಿ ವಿಕಾರ ಮಾಡಿ, ಖೂನಿ ಕೈದಿಯಂತೆ ಸಾಯುವವರೆಗೆ ನರಕದಲ್ಲಿ ನೂಕುವುದರ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ! ಸವರ್ಣೀಯನಾದ ದ್ರೋಣಾಚಾರ್ಯ, ಗುರು – ದಕ್ಷಿಣೆಯ ನೆಪದಲ್ಲಿ ಶೂದ್ರನೆಂಬ ಕಾರಣಕ್ಕಾಗಿ ಶಿಷ್ಯ ಏಕಲವ್ಯನ ಹೆಬ್ಬೆರಳನ್ನೇ ಕತ್ತರಿಸಿಕೊಂಡದ್ದನ್ನು ವಿವರಿಸುವುದಿಲ್ಲ! ಇಲ್ಲಿಯ ವೈದಿಕರು ಭೂಸುರರೆಂದೂ ಶೂದ್ರರು ರಾಕ್ಷಸರೆಂದೂ ಧರ್ಮದ ಹೆಸರಿನಲ್ಲಿ ಅಧರ್ಮದ ಬೀಜ ಬಿತ್ತಿದ್ದರ ಬಗ್ಗೆ ಮಾತನಾಡುವುದಿಲ್ಲ ಎಂದು ಪೋಳ ಅವರು ಉದ್ಗಾರ ತೆಗೆದುದು ಸಮಂಜಸವಾಗಿದೆ. ನಮ್ಮ ದೇಶದ ವಸ್ತುಸ್ಥಿತಿಗೆ ಅವರ ಈ ಮಾತುಗಳು ನಿಜಕ್ಕೂ ಕನ್ನಡಿ ಹಿಡಿದಂತಿವೆ.

ಸ್ವಾತಂತ್ರ್ಯ ಸಿಕ್ಕು ಐದಾರು ದಶಕಗಳೇ ಕಳೆದು ಹೋದರೂ, ಇನ್ನೂವರೆಗೆ ಹಂದಿನಾಯಿಗಳು ಹೊಕ್ಕು ಬರುವ ಕೆರೆ, ಬಾವಿ, ದೇವಾಲಯಗಳಲ್ಲಿ ದಲಿತರಿಗೆ ಬಹಿಷ್ಕಾರ ಇರುವಾಗ ತಮ್ಮ ಧರ್ಮವೇ ಶ್ರೇಷ್ಠ ಎಂದು ಹೇಳಿಕೊಳ್ಳಲು ಈ ಜನಗಳಿಗೆ ಮನಸ್ಸಾದರೂ ಹೇಗೆ ಒಪ್ಪುವುದೋ ನಾನು ಕಾಣೆ! ಇದು ಭಾರತದಲ್ಲಿ ಮನುಷ್ಯರಾಗಿ ಹುಟ್ಟಿದ ದಲಿತರ ದುರ್ದೈವವೆ! ಎಲ್ಲಿಯವರೆಗೆ, ಊರ ಹೊರಗೆ ದಲಿತರ ಕೇರಿಗಳು ಕಾಣಸಿಗುತ್ತವೆಯೋ, ಅಲ್ಲಿಯವರೆಗೆ, ಈ ಹಿಂದೂಗಳಿಗೆ ತಮ್ಮದು ಶ್ರೇಷ್ಠ ಧರ್ಮ ಎಂದು ಹೇಳಿಕೊಳ್ಳುವ ನೈತಿಕ ಹಕ್ಕಿಲ್ಲ. ದುಡಿಯದೇ ದುಃಖಪಡದೇ, ಕಷ್ಟ – ಕಾರ್ಪಣ್ಯಗಳನ್ನು ಅನುಭವಿಸದೇ, ಸುಖ – ಸಂಪತ್ತು – ಪ್ರತಿಷ್ಠಗಳನ್ನು ಗಿಟ್ಟಿಸಿ ಕೊಡುತ್ತಿರುವ ಜಾತಿ ಪದ್ಧತಿಯ ಧರ್ಮವನ್ನು ಅವರು ಅದು ಹೇಗೆ ಬಿಟ್ಟು ಕೊಟ್ಟಾರು? ಹೀಗಾಗಿ ಜಾತೀಯತೆಯು ಭಾರತವನ್ನು ಸಜೀವವಾಗಿ ತಿಂದು ಹಾಕತ್ತಲಿದೆ!! ಎಂದು ಉದ್ಗಾರ ತೆಗೆದ ಅವರ‍ನುಡಿ ಇಂದಿಗೂ ನಿಜವೇ ಎನ್ನಿಸಿದೆ.

ದಲಿತೋದ್ಧಾರ ಕುರಿತು ಅಂದಿನಿಂದ ಇಂದಿನವರೆಗೆ ಏನೆಲ್ಲವೂ ನಡೆದೇ ಇದೆ! ಆದರೆ ದಲಿತರು ಮಾತ್ರ ಅಲ್ಲಿಯೇ ನಾಟಕ ಸಿನೇಮಾಗಳಲ್ಲಿ ನಾಯಕನಾದವನು ಖಳನಾಯಕನನ್ನು ಕೊಂದಂತೆ ಮಾಡುತ್ತಾನೆ. ಖಳನಾಕನಾದವನು ಸತ್ತು ಬಿದ್ದಂತೆ ನಟಿಸುತ್ತಾನೆ. ಇಂಥ ಸನ್ನಿವೇಶದಲ್ಲಿ ನಾಯಕನಾದವನು ಖಳನಾಯಕನನ್ನು ನಿಜವಾಗಿಯೂ ಕೊಂದೇಬಿಟ್ಟರೆ ಕಂಪನಿಯ ಗತಿ? ಇದೇ ತತ್ತ್ವ ಮತ್ತು ಸೂತ್ರದ ಆಧಾರದ ಮೇಲೆ ಇಂದು ದಲಿತೋದ್ದಾರದ ನಾಟಕ ನಡೆದಿದೆ! ಕುಲಜರ ಗಂಡಿಗೆ ಅಂತ್ಯಜರ ಹೆಣ್ಣನ್ನು ಕೊಡಿಸಿ, ಸಿನೇಮಾ, ನಾಟಕ, ಕಥೆ, ಕಾದಂಬರಿಗಳನ್ನು ಬರೆಯುತ್ತಾರೆ. ಆದರೆ ಅಂತ್ಯಜರ ಗಂಡಿನೊಡನೆ ಕುಲಜರ ಹೆಣ್ಣನ್ನು ಸಹಸಾ ಕೂಡಿಸುವದೇ ಇಲ್ಲಾ! ಯಾಕೆಂದರೆ ಅಸ್ಪೃಶ್ಯರು ಸ್ಪೃಶ್ಯರುಗಳಾದರೆ ಸವರ್ಣೀಯರ ಗತಿ?

ಅಂತ್ಯಜರ ಹೆಣ್ಣನ್ನು ಸೂಳೆಯನ್ನಾಗಿ ಮಾಡುವ, ಕುಲಜರ ಇಂಥ ಸಾಹಿತ್ಯ, ಸಕ್ಕರೆ ಲೇಪಿತ ವಿಷ (Sugar Coated Poison) ಎಂಬುದನ್ನು ಮರೆಯಬೇಡಿ! ಅಸ್ಪೃಶ್ಯರನ್ನು ಸ್ಪೃಶ್ಯರನ್ನಾಗಿ ಮಾಡುವುದೇ ದಲಿತ ಸಾಹಿತ್ಯ. ದಲಿತರನ್ನು ಕುಲಜರ ಸರಿಸಮಾನರನ್ನಾಗಿ ಮಾಡುವುದೇ ದಲಿತಸಾಹಿತ್ಯ. ಆದರೆ ವಾಮಪಂಥೀಯರು ದಲಿತೋದ್ಧಾರದ ಹೆಸರಿನಲ್ಲಿ ಸಾಹಿತ್ಯದ ವ್ಯಭಿಚಾರ ಮಾಡುತ್ತಿದ್ದಾರೆ. ನಮ್ಮ ದುರ್ದೈವಕ್ಕೆ ಇಂದಿನ ಬಹುತೇಕ (ಎಲ್ಲ) ಸಾಹಿತ್ಯಕ್ಕೆ ಅವರೇ ಅಧಿಪತಿಗಳಾಗಿದ್ದಾರೆ! ಪೀಠ ಅವರದು, ಪ್ರಶಸ್ತಿ ಅವರದು, ಸಲಹೆ ಅವರದು, ಸಲಕರಣೆ ಅವರದು, ಮಾಸಿಕ ಅವರದು, ಅಲ್ಲಿ ಇಲ್ಲಿ ಎಲ್ಲಿ ಹೋದರೂ ಅವರೇ ಅವರಾಗಿದ್ದಾರೆ!! ಎನ್ನುವ ಅವರ ಮಾತುಗಳಲ್ಲಿ ಸತ್ಯಾಂಶವಿದೆ.

ಅವನು (ಕುಲಜ) ಅವರವನೇ ಆಗಿರಬೇಕು. ಇಲ್ಲವೇ ಇವನು (ಅಂತ್ಯಜ) ಅವರಿಗಾಗಿ ಬರೆಯಬೇಕು! ಆಗ ಮಾತ್ರ ಅಂಥವರಿಗೆ ಪುರಸ್ಕಾರ! ಅನೇಕ ಜನ ಕುಲಜರ ಸಾಹಿತ್ಯದಲ್ಲಿ ದಲಿತರ ಬಗ್ಗೆ ಸಹಾನುಭೂತಿ ಇರುತ್ತದೆ. ಕನಿಕರ ಕಂಡು ಬರುತ್ತದೆ. ಆದರೆ ಅದಕ್ಕೆ ಪರಿಹಾರ ಮಾತ್ರ ಅಲ್ಲಿ ಇರುವದೇ ಇಲ್ಲ!! ಅದು ಅವರ ತಪ್ಪಲ್ಲ, ಅದು ಹುಟ್ಟಿ ಬೆಳೆದ ಸಂಸ್ಕೃತಿಯೇ ಅಂಥಾದ್ದು!

ದಲಿತರ ನೋವು ದಲಿತರಿಗಲ್ಲದೆ ಅದು ಅನ್ಯರಿಗೆ ತಿಳಿಯದು! ನಾನು ದಲಿತ ಜಾತಿಯಲ್ಲಿ ಹುಟ್ಟಿದ್ದೇನೆಂಬ ಒಂದು ಒಂದು ಕಾರಣಕ್ಕಾಗಿ ಎಂಥ ಅವಮಾನಕರವಾದ ಹೀನ ಜೀವನ ಬಾಳಿದ್ದೇನೆ, ಬಾಳುತ್ತಿದ್ದೇನೆ ಎಂಬುದು ನನಗೆ ಗೊತ್ತು ಹಿಂದೂ ಧರ್ಮದ ಮನುಸ್ಮೃತಿಯ ಕಟ್ಟಳೆಗನುಗುಣವಾಗಿ ಕುಲಜರು ಅಂತ್ಯಜರ ಮರ್ದನ ಮಾಡುತ್ತಲೇ ಇದ್ದಾರೆ. ಊರಲ್ಲಿ ತಮ್ಮವರು ಕೊಳ್ಳೆ ಹೊಡದರೂ ಸುಮ್ಮನಿರುತ್ತಾರೆ. ಬಡಪಾಯಿ ದಲಿತನೊಬ್ಬ ಖಡಗಾಯಿ ಕದ್ದರೆ ಅವನನ್ನು ಹಿಡಿದು ತಂದು ಕಟ್ಟಿ ಬಡಿಯುತ್ತಾರೆ. ತಮ್ಮವರು ಊರಲ್ಲಿ ಖೂನಿ ಮಾಡಿದರೂ ಸುಮ್ಮನಿರುತ್ತಾರೆ, ದಲಿತರು ಎದ್ದು ನಿಂತರೆ ಅವರನ್ನು ಜೀವಂತ ಸುಡುತ್ತಾರೆ. ಈ ಭೂಮಿಯ ಮೇಲೆ ದಲಿತರ ಬಾಳು, ಅವರ ಬೆವರು, ಕಣ್ಣೀರು, ರಕ್ತದಿಂದ ತೊಯ್ದ ಆ ಭೂಮಾತೆಗೇ ಗೊತ್ತು. ಶೂದ್ರರ ದಾಸ್ಯತ್ವ ಸವರ್ಣೀಯರ ಯಜಮಾನಿಕೆಯಾಗಿದೆ. ಅಂತ್ಯಜರ ಕೀಳುತನ ಕುಲಜರ ಪ್ರತಿಷ್ಠೆಯಾಗಿದೆ. ದಲಿತರು ಅನುಭವಿಸುವ ನರಕ, ಹಿಂದುಗಳು ಭೋಗಿಸುವ ಸ್ವರ್ಗವಾಗಿದೆ! ದಲಿತರನ್ನು ದಲಿತರನ್ನಾಗಿಡುವುದರಲ್ಲಿಯೇ ಹಿಂದುಗಳ ಪ್ರತಿಷ್ಠೆ ಅಡಗಿದೆ! ಹಿಂದುಗಳೆಂಬ ಸವರ್ಣೀಯರು ಪರಿಶಿಷ್ಟ ಜಾತಿ – ಪಂಗಡಗಳ, ಶೂದ್ರ – ದಲಿತ ಪಂಗಡಗಳು ಬಹುಸಂಖ್ಯಾತರಾಗಿರುವ ನಮ್ಮನ್ನು ಎಂದೂ ಧಾರ್ಮಿಕವಾಗಿ, ಸಾಮಾಜಿಕವಾಗಿ ಸಮಾನವೆಂದು ಪರಿಗಣಿಸುವುದಿಲ್ಲ, ಸಂಸ್ಕಾರ – ಸಂಸ್ಕೃತಿ ನೀಡುವುದಿಲ್ಲ, ನಮ್ಮೊಂದಿಗೆ ಬೆರೆಯುವುದಿಲ್ಲ. ದ್ರಾವಿಡ – ಆರ್ಯಕಾಲದ ಹೋರಾಟ – ಸಂಘರ್ಷದಿಂದಲೂ ಈ ಬಿರುಕು – ಭಯಾನಕ ಕಂದಕವಾಗಿ ಹೆಚ್ಚುತ್ತಲೇ ನಡೆದಿದೆ. ರಾಮಾಯಣದಲ್ಲಿ ದ್ರಾವಿಡರನ್ನು ಕೋತಿ ಕರಡಿಗಳನ್ನಾಗಿ ಪಾತ್ರ ಚಿತ್ರಣ ಮಾಡುವುದರ ಮೂಲಕ ಅವಮಾನಿಸಿರುವುದು ಪುರಾಣ ಕಾವ್ಯಗಳಲ್ಲಿ ದಾಖಲಾಗಿವೆ.

ಅದೇ ಮಹಮ್ಮದೀಯರಲ್ಲಿ – ಕಸಗೂಡಿಸುವವರು, ಧೋಬಿಗಳು, ಹಜಾಮರು, ಮುಲ್ಲಾ – ಮೌಲವೀಯರು ಎಲ್ಲರೂ ಸರಿಸಮಾನರಾಗಿದ್ದಾರೆ. ಮಸೀದೆಗಳಲ್ಲಿ ಎಲ್ಲರೂ ಸರಿಸಮಾನರಾಗಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಸರಿಸಮಾನವಾದ ಹಕ್ಕು ಬಾಧ್ಯತೆಗಳಿವೆ. ಅದೇ ಪ್ರಕಾರ ಕ್ರಿಶ್ಚಿಯನ್‌ಧರ್ಮದಲ್ಲಿಯೂ ಅವರವರ ಉದ್ಯೋಗ ವ್ಯವಹಾರ ಯಾವುದೇ ಇರಲಿ, ಅವರೆಲ್ಲರಿಗೂ ಆ ಸಮಾಜದಲ್ಲಿ ಸರಿಸಮಾಣವಾದ ಸ್ಥಾನಮಾನಗಳಿವೆ. ಆದರೆ ಜಾತಿಪದ್ಧತಿಗಳಿಗನುಗುಣವಾಗಿ ಮೇಲು – ಕೀಳುಗಳನ್ನು ಆಚರಿಸುವ ಆ ಚಾತುರ್ವರ್ಣ ಧರ್ಮ ಸಮಾಜದಲ್ಲಿ ಸಮಾನತೆಗೆ ಅವಕಾಶವೇ ಇಲ್ಲ ಎಂದಾಗ ನಾವಿಲ್ಲಿ ಇರೋದ್ರಲ್ಲಿ ಏನು ಸಾರ್ಥಕತೆ ಇದೆ? ಯಾವ ದೇಶದಲ್ಲಿ ನಮಗೆ ಮರ್ಯಾದೆ ಇಲ್ಲಾ, ಯಾವ ಧರ್ಮದಲ್ಲಿ ನಮಗೆ ಸಮಾನ ಸ್ಥಾನಮಾನವಿಲ್ಲ, ಆ ಧರ್ಮದ ಬಗ್ಗೆ ನಾವೇಕೆ ಅಭಿಮಾನ ಬೆಳೆಸಿಕೊಳ್ಳಬೇಕು? ಈ ದರಿದ್ರ ಧರ್ಮ, ಈ ಜಾತಿಗೊಂದಲ ತೊರೆದು ನಮ್ಮನ್ನು ಗೌರವಿಸುವ ಸಮಾನವಾಗಿ ಕಾಣುವ ಮುಸಲ್ಮಾನ, ಕ್ರಿಶ್ಚಿಯನ್‌ಧರ್ಮ ಏಕೆ ಸೇರಬಾರದು?” ಎಂದು ಪೋಳ ಅವರು ವ್ಯವಸ್ಥೆಯನ್ನು ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ. ಅವರು ವ್ಯಕ್ತಪಡಿಸಿದ ಈ ಮೇಲಿನ ವಿಚಾರಗಳಲ್ಲಿ ಅವರು ಪಟ್ಟ ಅವಮಾನ ಶೋಷಣೆ ಮಡುಗಟ್ಟಿನಿಂತಿವೆ. ಹಿಂದೂ ಧರ್ಮದಲ್ಲಿನ ಅಸಮಾನತೆಯ ವಿರುದ್ಧ ಅವರು ಸಮರ ಸಾರಿದುದನ್ನಿಲ್ಲಿ ಕಾಣುವೆವು. ಸಮಾನತೆ ಇರುವೆಡೆಗೆ ತುಡಿವ ಅವರ ಈ ವಿಚಾರಗಳು ಸ್ವಾಗತಾರ್ಹವೆನ್ನಿಸಿವೆ; ಅನುಕರಣಯೋಗ್ಯವಾಗಿವೆ.

ಸಮಾರೋಪ

ನ್ಯಾಯ ನಿಷ್ಠುರಿ, ದಾಕ್ಷಿಣ್ಯಪ೦ರ ನಾನಲ್ಲ
ಲೋಕ ವಿರೋಧಿ ಶರಣನಾರಿಗೂ ಅಂಜುವನಲ್ಲ
ಕೂಡಲಸಂಗಮದೇವರ ರಾಜ ತೇಜದಲ್ಲಿಪ್ಪನಾಗಿ.

ಪೋಳ ಅವರು ವಿಶ್ವಗುರು ಬಸವಣ್ಣನವರ ಈ ವಚನವಾಣಿಯಂತೆ, ನ್ಯಾಯನಿಷ್ಠುರನಾಗಿ ಬಸವ ಧರ್ಮ – ಸಿದ್ಧಾಂತ – ತತ್ವವನ್ನು ಆಚರಿಸುತ್ತಾ, ಜಿಡ್ಡು ಗಟ್ಟಿದ ಸಮಾಜದಲ್ಲಿ ಪರಿವರ್ತನೆ ತರಲು ಅಹರ್ನಿಶೆ ಶ್ರಮಿಸಿದರು. ಗಣಾಚಾರದ ಧೀರ, ಕುಮಾರ ಕಕ್ಕಯ್ಯ ಪೋಳ ಇವರ ಬದುಕು ಶರಣಪಥದ ಬದುಕು, ನಡೆ ನುಡಿ, ನೇರ, ಅವರ ಲೇಖನಿಯಲ್ಲಿ ಬಸವತ್ತತ್ವದ ಮೊನಚು, ಭಾಷಣದಲ್ಲಿ ತತ್ವನಿಷ್ಠೆಯ ಹರಿತ ಹೃದಯದಲ್ಲಿ ದೀನ – ದಲಿತೋದ್ಧಾರದ ಕಳಕಳಿ, ಭಾವದಲ್ಲಿ ವಿಶ್ವ ಬಂಧುತ್ವದ ಮಾನವೀಯತೆ ತುಂಬಿ ತುಳುಕಾಡುತ್ತಿರುವುದನ್ನು ಯಾರೂ ಅರಿಯಬಹುದು.

ಕುಮಾರ ಕಕ್ಕಯ್ಯ ಪೋಳ ಎಂದೇ ಕನ್ನಡ ಸಾರಸ್ವತ ಪ್ರಪಂಚಕ್ಕೆ ಚಿರಪರಿತರಾಗಿದ್ದ ಶ್ರೀಯುತರು ಕರ್ನಾಟಕ ಬಸವತತ್ವ ಪ್ರೇಮಿಗಳಿಗೆ ಅಷ್ಟೇ ಚಿರಪರಿಚಿತರು, ಅಸ್ಪೃಶ್ಯ – ಶೂದ್ರ ದಲಿತ – ಪಂಚಮ ಜನಾಂಗದವರ ಧ್ವನಿಯಾಗಿ, ಅವರಿಗೆಲ್ಲ ಬಸವಧರ್ಮ ನಿಮ್ಮದು ನಮ್ಮದು, ಸರ್ವರದೂ ಎಂದು ಸಾರಿ ಸಾರಿ ಹೇಳಿದ್ದು ಇತಿಹಾಸ ಮೈನವಿರೇಳಿಸುವಂತಹದು, ರೋಮಾಂಚನಕಾರಿಯಾದುದು.

ಕುಮಾರ ಕಕ್ಕಯ್ಯ ಪೋಳ ಇವರು ಬಾಳಪಥದಲ್ಲಿ ನಡೆದ ದಾರಿ ಹೂವಿನ ಹಾಸಿಗೆ, ಸುಖದ ಸುಪ್ಪತ್ತಿಗೆಯಾಗಿರಲಿಲ್ಲ, ಅದು ದುಃಖ, ದಾರಿದ್ಯ್ರ, ಕಷ್ಟ – ಸಂಕಷ್ಟಗಳ, ಯಮಯಾತನೆಯ ಕಲ್ಲುಮುಳ್ಳಿನ ಭಯಾನಕ ಕಾಡು ದಾರಿಯಾಗಿತ್ತು. ಜಾತೀಯತೆ ಅಸ್ಪೃಶ್ಯತೆಯ ಕರಾಳ ಕರ್ಮಠ ಸಂಪ್ರದಾಯಿಗಳ ತುಳಿತಕ್ಕೆ ಒಳಗಾಗಿ, ನೋವು ಅನುಭವಿಸುತ್ತ, ಹೊಟ್ಟೆಯ ಸಿಟ್ಟು, ರಟ್ಟೆಗೆ ಇಲ್ಲದೇ ಮೌನವಾಗಿ ಕಣ್ಣೀರು ಕೂಳು ತಿನ್ನುತ್ತ ಬಾಲ್ಯದ ದಿನಗಳನ್ನು ಕಳೆದು, ಚಾತುರ್ವರ್ಣ ಸಮಾಜದ ನಂಜು ಉಣ್ಣುತ್ತಲ್ಲೇ ಎತ್ತರೆತ್ತರಕ್ಕೆ ಬೆಳೆದವರು. ನೊಂದವರ ನೋವು ನೋಯದವರೆತ್ತ ಬಲ್ಲರು? ಎಂಬಂತೆ ಅವರ ನೋವು ಅನೇಕ ಸಲ ನಮ್ಮೆದುರಿಗೆ ಹೇಳಿಕೊಂಡಿದ್ದರು. ಈ ಶತಮಾನದಲ್ಲಿ ಆಗಿಹೋಗಿರುವ ಯಾವ ದಲಿತೋದ್ದಾರಕರಿಗೂ ಕಡಿಮೆ ಇಲ್ಲದಂತಹ ಕಷ್ಟಗಳನ್ನು ಎದುರಿಸಿ, ದಲಿತರಿಗಾಗಿ ಡಾ.ಅಂಬೇಡ್ಕರರು ಬೌದ್ಧ ಧರ್ಮ ಅನುಸರಿಸಿ ತೋರಿದಂತೆಯೇ ಕುಮಾರ ಕಕ್ಕಯ್ಯ, ಪೋಳರು ದೀನ ದಲಿತರ ಕಲ್ಯಾಣಕ್ಕಾಗಿ ಕಲ್ಯಾಣಕ್ರಾಂತಿಗೈದ ಬಸವ ಧರ್ಮವನ್ನು ಅನುಸರಿಸಿ, ಬಸವ ಧರ್ಮ – ಬಸವ ಮಾರ್ಗವನ್ನು ತೋರಿದವರು.

ಹುಟ್ಟು ಮಾನವನ ಶ್ರೇಷ್ಠತ್ವವನ್ನು ಅಳೆಯುವ ಸಾಧನವಲ್ಲ. ಮನುಷ್ಯ ಯಾವುದೇ ಜಾತಿಯಲ್ಲಿ ಹುಟ್ಟಿರಲಿ ಅವನು ಪ್ರದರ್ಶಿಸುವ ಗುಣಗಳಿಂದ ಆತನ ಶ್ರೇಷ್ಠತ್ವವನ್ನು ಅಳೆಯಬೇಕೆಂದು ಶರಣರು ಸಾರಿದರು. ಈ ಸಂದೇಶವನ್ನೇ ಪೋಳರು ತಮ್ಮ ಜೀವನದುದ್ದಕ್ಕೂ ಜನತೆಗೆ ಸಂದೇಶರೂಪದಲ್ಲಿ ತಮ್ಮ ವಚನಗಳ ಮೂಲಕ ಸಾರಿದರು.

ಹುಟ್ಟನ್ನು ಆಧರಿಸಿ ಸಾಮಾಜಿಕ ಸ್ಥಾನಮಾನಗಳು ನೀಡಲ್ಪಡುವ ಚಾತುವರ್ಣದ ಧರ್ಮದ ಕುಲುಮೆಯಲ್ಲಿ ಬೆಂದವರು, ಬಾಳಿನುದ್ದಕ್ಕೂ ಮಾನಸಿಕ, ಆರ್ಥಿಕ, ದೈಹಿಕ, ಸಾಮಾಜಿಕ ಹಾಗೂ ಧಾರ್ಮಿಕವಾಗಿ ಶೋಷಣೆಗೊಳಗಾದವರು. ಬಾಳಲ್ಲಿ ಅನುಭವಿಸಿದ ನೋವುಗಳೇ ಮುಪ್ಪರಿಗೊಂಡು ಜೀನನಾನುಭವದ ಕಿಡಿಗಳೆ ನೊರೆಗಳಾಗಿ ಪರಿವರ್ತನೆಗೊಂಡಿವೆ. ವಾಸ್ತವ ಬದುಕಿನ ನೋವು ತಮ್ಮ ಕೃತಿಗಳಲ್ಲಿ ಜೀವಂತಿಕೆ ಪಡೆದಿವೆ. ಸವರ್ಣಿಯರ ದಬ್ಬಾಳಿಕೆಯನ್ನು, ಶೋಷಣೆಯನ್ನು ಅನುಭವಿಸಿದ ದಲಿತನ ನೋವಿದೆ, ಛಲವಿದೆ ಎದೆಗಾರಿಕೆ ಇದೆ. ಕೆಚ್ಚು ರೊಚ್ಚು, ಪ್ರತಿಭಟನೆಯ ಕೂಗಿದೆ, ರಾಗ ದ್ವೇಷಗಳಿಂದ ಕೂಡಿದ ಪ್ರತೀಕಾರದ ಸೇಡು ಇಲ್ಲ, ಪ್ರತಿಭಟನೆಯ ಕ್ರಾಂತಿಯ ನುಡಿಯಿದೆ.

ಬುದ್ಧ, ಬಸವ, ಅಂಬೇಡ್ಕರ್, ಲೋಹಿಯಾ ಮುಂತಾದವರ ವಿಚಾರ ಧಾರೆಗಳನ್ನು ಅರಗಿಸಿಕೊಂಡ ಪೋಳ ಅವರು ತಮ್ಮ ಕೃತಿಗಳಲ್ಲಿ ಅವರ ತತ್ವಗಳನ್ನು ಪ್ರತಿಪಾದಿಸಿದ್ದಾರೆ. ದನಿ ಕಳೆದುಕೊಂಡವರ ದನಿಯಾಗಿದ್ದಾರೆ. ಆರ್ಥಿಕ ಸಾಮಾಜಿಕ, ಧಾರ್ಮಿಕ ಶೋಷಣೆಗಳನ್ನು ತಡೆದುಕೊಂಡ ಅವರ ಹೃದಯವು ಕ್ರಾಂತಿಕಾರಕ ವೈಚಾರಿಕ ಕಿಡಿಗಳನ್ನು ಸಾಹಿತ್ಯದ ಮೂಲಕ ಹೊರ ಹಾಕಿದ್ದಾರೆ. ಧಾರ್ಮಿಕ ಶೋಷಣೆಗಳನ್ನು ತಡೆದುಕೊಂಡ ಅವರ ಹೃದಯವು ಕ್ರಾಂತಿಕಾರಕ ವೈಚಾರಿಕ ಕಿಡಿಗಳನ್ನು ಸಾಹಿತ್ಯದ ಮೂಲಕ ಹೊರ ಹಾಕಿದ್ದಾರೆ. ಧಾರ್ಮಿಕವಾಗಿ ನಮ್ಮನ್ನು ಸಮಾನರನ್ನಾಗಿ ಕಾಣಲಾರದ ಧರ್ಮದ ಬಗ್ಗೆ ನಮಗೇಕೆ ಗೌರವವಿರಬೇಕು. ಯಾವ ಸಮಾಜ ನಮ್ಮನ್ನು ಮನುಷ್ಯರಂತೆ ಕಾಣುವುದಿಲ್ಲವೋ ಅಸಮಾಜದ ಬಗ್ಗೆ ನಾವೇಕೆ ಚಿಂತಿಸಬೇಕು ಎಂದು ವ್ಯವಸ್ಥೆಗೆ ಮೇಲಿಂದ ಮೇಲೆ ಪ್ರಶ್ನೆಮಾಡುತ್ತಾರೆ. ಇಂಥ ಧೋರಣೆಯಿಂದಲೇ ಪೋಳ ಅವರು ಒಬ್ಬ ವಿಚಾರವಾದಿ, ಚಿಂತನಶೀಲ ಸಾಹಿತಿಗಳಾಗಿ ಬೆಳೆದರು. ದಲಿತ ಸಾಹಿತಿಯೆಂದು ಖ್ಯಾತಿ ಪಡೆದರು.

ಕುಮಾರ ಕಕ್ಕಯ್ಯ ಪೋಳ ಅವರು ಬಹುಮುಖ ಪ್ರತಿಭೆಯುಳ್ಳ ಲೇಖಕರು ಕಥೆ, ಕಾದಂಬರಿ, ನಾಟಕ, ಪ್ರಬಂಧ, ವೈಚಾರಿಕ ಕ್ಷೇತ್ರವಲ್ಲದೆ ವಚನಕಾರರು, ಸಂಶೋಧಕರು ಆತ್ಮ ಚರಿತ್ರೆಕಾರರು ಆಗಿರುವಂತೆ ಕವಿಗಳೂ ಆಗಿದ್ದಾರೆ. ನಾಡಿನ ಪತ್ರಿಕೆಗಳಲ್ಲಿ ಪಾಕ್ಷಿಕ, ಸಾಪ್ತಾಹಿಕ ಮಾಸಿಕ, ತ್ರೈಮಾಸಿಕ ಅಭಿನಂದನಾ ಸಂಪುಟಗಳಲ್ಲಿ ಅವನ ಕವನಗಳು ಪ್ರಕಟಗೊಂಡಿವೆ. ಕನ್ನಡ, ಮರಾಠಿ, ಹಿಂದಿ, ಸಂಸ್ಕೃತ ಹಾಗೂ ಇಂಗ್ಲಿಷ್‌ಹೀಗೆ ಪಂಚಭಾಷೆಗಳ ಪಂಡಿತರಾಗಿದ್ದರು. ಕನ್ನಡಾಭಿಮಾನವನ್ನು ಪ್ರತಿಬಿಂಬಿಸುವ ಕವಿತೆಗಳನ್ನು ರಚಿಸಿದ್ದಾರೆ.

ಶ್ರೀಯುತ ಪೋಳ ಅವರು ನೂರಾರು ಲೇಖನಗಳನ್ನು ಬರೆದಿದ್ದಾರೆ. ಅವು ನಾಡಿನ ಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಿದ್ಧಾಂತ ಶಿಖಾಮಣಿ ಗೀತೆಯ ನಕಲಲ್ಲವೇ? ಬಸವ ಬಲಿದಾನ ಹುಸಿ ಹೋಗಬೇಕು? ಕೇವಲ ತಾಳಿ (ಲಿಂಗ) ಕಟ್ಟಿಕೊಂಡರೆ ಆಯಿತೆ ? ಗೊಡ್ಡಾಕಳ, ದಡ್ಡಮಗ, ಅಡ್ಡಪಲ್ಲಕ್ಕಿ, ಬಸವಣ್ಣ ಧರ್ಮ ಸ್ಥಾಪಕ ಅಲ್ಲ ಎನ್ನುವ ಗತ್ತುಗಾರಿಕೆ ಏನು? ಜಂಗಮರ ಪ್ರಶ್ನೆ ವೀರಶೈವ, ಜಚನಿಯವರ ಪ್ರತಿಗಾಮಿತನ ಹೀಗೆ ಸಾಮಾಜಿಕ ವೈಚಾರಿಕತೆಯುಳ್ಳ ನೂರಾರು ಲೇಖನಗಳನ್ನು ಬರೆದಿದ್ದಾರೆ. ಅವುಗಳೆಲ್ಲ ಸಮಾಜದ ಹಿತಕ್ಕೆ ಸಹಕಾರಿಯಾಗಲಿಲ್ಲ. ಕಾರಣವಿಷ್ಟೆ ಇದ್ದದ್ದು ಇದ್ದಂಗ ಹೇಳಿದರ ಎದ್ದ ಬಂದು ಎದಿಗೆ ಒದ್ದಾಂಗ ಆಗ್ತದಲ್ಲ, ಹಾಗೆ ಸತ್ಯವನ್ನು ಈ ಸಮಾಜ ಸ್ವೀಕರಿಸಲು ಸಿದ್ಧವಿಲ್ಲ, ಆದರೂ ಅವರ ವಿಚಾರಗಳು ಧರ್ಮದ ಮೈಲುಗಲ್ಲಾಗಳಾಗಿವೆ. ಇಂತಹ ವಿಚಾರಗಳೆಲ್ಲವನ್ನೂ ಒಂದೆಡೆ ಕೂಡಿಸಿ ಮುದ್ರಿಸುವ ಕೆಲಸ ನಡೆಯಬೇಕಾಗಿದೆ. ಪೋಳ ಅವರು ಜೀವಿತದುದ್ದಕ್ಕೂ ಸಾಮಾಜಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಅವಿರತವಾಗಿ ಪಾಲ್ಗೊಂಡು ದುಡಿದವರು. ತಮ್ಮ ಮನೆ ಕೆಲಸಕ್ಕಿಂತಲೂ ಸಮಾಜ ಸೇವೆಯೇ ಮುಖ್ಯವೆಂದು ಬಗೆದವರು.

ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ, ಅಧ್ಯಕ್ಷ, ಉಪಾಧ್ಯಕರಾಗಿ ಶ್ರಮಿಸಿದ್ದಾರೆ ಸಮಾಜೋದ್ದಾರದ ಕುರಿತು ಮಾಜಿ ರಾಷ್ಟ್ರಪತಿಗಳಾದ ಜೇಲಸಿಂಗ ಹಾಗೂ ಬಿ.ಡಿ. ಜತ್ತಿಯವರೊಂದಿಗೆ ಚರ್ಚೆ ಮಾಡಿದ್ದಾರೆ. ಜೀವಿತದ, ಕೊನೆಗೆ ಶರಣ ಧರ್ಮದೆಡೆಗೆ ವಾಲಿ, ಲಿಂಗವನ್ನು ಧರಿಸಿದರು. ಇವರಿಗೆ ಬಸವ ಧರ್ಮ ಪ್ರಕಾಶ, ಪ್ರಶಸ್ತಿ, ನೀಡಿ ಗೌರವಿಸಿದ ಕೀರ್ತಿ ಇಲಕಲ್ಲ ಶ್ರೀಗಳಿಗೂ ಹಾಗೂ ಗದಗದ ತೊಂಟದ ಸಿದ್ದಲಿಂಗ ಸ್ವಾಮಿಗಳಿಗೂ ಸಲ್ಲುತ್ತದೆ. ಹೀಗೆ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕುಮಾರ ಕಕ್ಕಯ್ಯ ಪೋಳ ಅವರು ತುಂಬು ಜೀವನ ನಡೆಸಿ ಬದುಕನ್ನು ಸಾರ್ಥಕ ಮಾಡಿಕೊಂಡವರು. ಇತರರ ಬದುಕು ಸಾರ್ಥಕವಾಗಲಿ ಎಂದು ಶ್ರಮಿಸಿದ ಮಹಾನ ಸಾಧಕ ತನ್ನ ಕೊನೇ ಘಳಿಗಿಯಲ್ಲಿ ಮಕ್ಕಳನ್ನು ಕರೆದು ನಾನು ಹೋಗುವ ಸಮಯ ಬಂದಿದೆ ಬಸವನ ಮನೆಯಲ್ಲಿ ಬಹಳ ಹೊಲಸು ತುಂಬ್ಯಾದ, ಅದನ್ನು ಸ್ವಚ್ಛಗೊಳಿಸಬೇಕಾಗಿದೆ ಎಂದು ಹೇಳಿದರು. ನೀನು ಬರ್ತಿದ್ರ ಬಾ ಎಂದು ಪತ್ನಿಯನ್ನು ಕರೆದು ದಿನಾಂಕ ೧೫.೦೨.೧೯೯೬ ರಂದು ನಮ್ಮನ್ನು ಅಗಲಿದರು. ಕಕ್ಕಯ್ಯ ಪೋಳ ಸಾಮಾಜಿಕ ಜವಾಬ್ದಾರಿಯಿರುವ ಒಬ್ಬ ಲೇಖಕ. ತನ್ನ ಕೊನೆಯ ಘಳಿಗೆಯವರೆಗೂ ದಲಿತೋದ್ಧಾರದ ಬಸವ ಚಿಂತನೆಗೆ ತಮ್ಮನ್ನು ತಾವು ಅರ್ಪಿಸಿಕೊಂಡವರು.