ನಾಟಕ ರಚನೆ:

‘ಇದು ನನ್ನ ಸಮಾಜ’ ಎಂಬ ನಾಟಕವು ೧೯೬೧ ರಲ್ಲಿ ಪ್ರಕಟಗೊಂಡಿದೆ. ಈ ನಾಟಕವು ಸಹ ‘ಧರ್ಮಕ್ರಾಂತಿ’ ಕೃತಿಯ ಚಿಂತನೆಯನ್ನು ಬೆಳೆಸುತ್ತದೆ. ಇದು ಅವರ ಎರಡನೆಯ ಕೃತಿ. ಭಾರತೀಯರ ಮನೋಧರ್ಮವೇ ವಿಚಿತ್ರವಾದದ್ದು. ಹಾವನ್ನು ನಾಗೇಶನೆಂದು, ಕೋತಿಯನ್ನು ಹನುಮನೆಂದು, ನಾಯಿಯನ್ನು ಮಲ್ಲಯ್ಯನೆಂದು ಗೌರವಿಸುತ್ತಾರೆ. ಆದರೆ ನಮ್ಮ ಸಮಾಜ ಅಸ್ಪೃಶ್ಯರನ್ನು ಕೀಳಾಗಿ ಗಣಿಸುತ್ತಾ ಬಂದಿದೆ. ಅವರೂ ಮನುಷ್ಯರೆಂದು ಎಲ್ಲರು ಸಮಾನರೆಂದೂ ಒಪ್ಪದೇ ಇದ್ದುದು ಒಂದು ಬಗೆಯ ದುರಂತವೇ ಸರಿ. ದಾಸರು ಲೌಕಿಕವಾಗಿ ಮಾತನಾಡುವಾಗ ನಿಂದಕರಿರಬೇಕು ಹಂದಿಯಾಂಗ ಎಂದು ಹೇಳಿದರೆ, ಅಲೌಕಿಕವಾಗಿ ಮಾತನಾಡುವಾಗ ಹಂದಿಯನ್ನು ವರಾಹ ಅವತಾರವೆಂದು ಸಂಭೋಧಿಸುತ್ತಾರೆ. ಅದೇ ವರಾಹವತಾರಿ ವಿಷ್ಣುವನ್ನು ದೇವರೆಂದು ಗೌರವಿಸುತ್ತಾರೆ. ಆದರೆ, ಆ ಅವತಾರಿ ರೂಪಿ ಜೀವಂತ ಪ್ರಾಣಿ, ಹಂದಿ, ಹಾವುಗಳು ಎದುರಾದರೆ ಹಂದಿಯನ್ನು ಹೊಲಸು ಎಂದು ಮುಟ್ಟಿಸಿಕೊಳ್ಳಬಾರದು ಎನ್ನುತ್ತಾರೆ. ಹಾವನ್ನು ಕೊಲ್ಲು ಎನ್ನುತ್ತಾರೆ. ನಿಜಕ್ಕೂ ಇಂತಹ ವಿಚಾರಗಳನ್ನು ಶರಣರು ತಾತ್ವಿಕ ನೆಲೆಯಲ್ಲಿ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕುಮಾರ ಕಕ್ಕಯ್ಯ ಪೋಳ ಅವರು ಮಾಡಿದ ಚಿಂತನೆ ಎಂತಹವರನ್ನು ದಂಗುಪಡಿಸುತ್ತದೆ. ಹಾವಿಗೆ ಹಾಲೆರೆದು ಇರುವೆಗೆ ಸಕ್ಕರೆ ಮೇಯಿಸಿ, ತಮ್ಮ ಸಹ ಬಂಧುಗಳನ್ನು ನೀರಿಗಾಗಿ ವಂಚಿಸುವ ಡಾಂಭಿಕರು ಆತ್ಮದ್ರೋಹಿಗಳಲ್ಲವೇ? ಎಂದು ಸನಾತನ ವ್ಯವಸ್ಥೆಗೆ ಪ್ರಶ್ನೆ ಮಾಡುತ್ತಾರೆ. ಹೀಗೆ ಸನಾತನ ವ್ಯವಸ್ಥೆಯನ್ನು, ಅಸ್ಪೃಶ್ಯತೆಯನ್ನು ಪ್ರಬಲವಾಗಿ ಬಸವಣ್ಣನವರು ಪ್ರಶ್ನಿಸಿದುದಕ್ಕೆ ಇತಿಹಾಸವೇ ಸಾಕ್ಷಿ. ಕಂಬಳಿ ನಾಗಿದೇವನನ್ನು ಒಬ್ಬ ಶಿವಭಕ್ತನನ್ನಾಗಿ ನೋಡಬೇಕೆಂದು ಬಸವಣ್ಣ ಅಂದು ಹೇಳಿದ್ದು ಉಚ್ಚಕುಲದವರಿಗೆ ನುಂಗಲಾರದ ತುತ್ತಾಗಿತ್ತು. ಎಲ್ಲರ ಮೈಯಲ್ಲಿ ಹರಿವ ರಕ್ತ ಒಂದೇ ಇದ್ದಾಗ ಜಾತೀಯತೆ ಎಲ್ಲಿ ಬಂತು ಎಂದಿದ್ದಾರೆ.

ನಾಯಿ, ನರಿ, ಕುರಿ, ಬೆಕ್ಕುಗಳೊಡನೆ ಚೆಲ್ಲಾಟವಾಡುವ ಇವರು ಮುಗ್ಧ ದಲಿತರನ್ನು ಅಸ್ಪೃಶ್ಯರೆಂದು, ಪಂಚಮರೆಂದು ಕಂಡು ಹೇಯ ಭಾವನೆ ತಾಳಿ ದೂರ ಸರಿಯುವ ಸವರ್ಣೀಯರು ಸಮಾಜ ದ್ರೋಹಿಗಳಲ್ಲವೆ? ಸತ್ಪುರುಷರ, ಪುರಾಣ, ಶಾಸ್ತ್ರ ವಚನ, ಅಭಂಗಗಳನ್ನು ಓದಿ, ದಾಸ ಸಂತರ ಶರಣರ ಚಿಂತನೆಗಳನ್ನು ತಿಳಿದು, ಮೇಲು ಕೀಳುಗಳ ಪರಿಪಾಠ ಪಾಲಿಸುವವರು ಸಮಾಜ ಘಾತುಕರಲ್ಲವೆ? ಇಂಥ ಜನರಿಂದ ಅಲ್ಲವೇ ದೇಶ ಸಹಸ್ರಾರು ವರುಷ ಪರಕೀಯರ ದಬ್ಬಾಳಿಕೆಯನ್ನು ಸಹಿಸಿ, ಕೊನೆಗೆ ಧಾರ್ಮಿಕ ನೆಲೆಯಲ್ಲಿ ಸ್ವಧರ್ಮದ ಹಿತಕ್ಕಾಗಿ ದೇಶ ವಿಭಜನೆಯಾದದ್ದು ಆದರೂ, ನಮ್ಮದು ಹೆಮ್ಮೆಯ ಇತಿಹಾಸ. ಕುಮಾರ ಕಕ್ಕಯ್ಯ ಪೋಳ ಅವರು ಸರಿಸುಮಾರು ನಲ್ವತ್ತು ವರ್ಷಗಳ ಕೆಳಗೆ ಆಡಿದ ಮಾತುಗಳಿವು. ಸ್ವಾತಂತ್ರ್ಯಗಳಿಸಿ ೬೦ ವರ್ಷಗಳು ಕಳೆದರೂ ದಲಿತರು ಕೆರೆ ಮುಟ್ಟಿದರೆ, ನೀರು ಕುಡಿದರೆ, ದೇವತೆಗಳು ಮುನಿಸಿಕೊಳ್ಳುತ್ತಾರೆ ಎನ್ನುವವರೇ ದನ ಎತ್ತು ಎಮ್ಮೆಗಳನ್ನು ಅದೇ ಕೆರೆಯಲ್ಲಿ ಮಿಂದು ಬರಲು ಬಿಡುತ್ತಾರೆ. ಇದು ವಿಪರ್ಯಾಸ ಸಂಗತಿ ಎನ್ನುವುದು ಪ್ರಜ್ಞಾವಂತರು ಆಲೋಚಿಸಬೇಕಾಗಿದೆ.

ಕುಮಾರ ಕಕ್ಕಯ್ಯ ಪೋಳ ‘ಮೂಗು ಹೋದರೂ ಮೂಗಿನ ಸೊಳ್ಳೆ ಇದೆ’. ಎನ್ನುವುದೇ ಈ ನನ್ನ ಸಮಾಜದ ಸಿದ್ಧಾಂತ ವಿಚಾರವೆನ್ನುತ್ತಾರೆ. ಮಹಾತ್ಮ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿದ್ದಾಗ ಅಲ್ಲಿಯ ಕರಿಯರ ಮೇಲಾಗುವ ದಬ್ಬಾಳಿಕೆ ಶೋಷಣೆ ವಿರುದ್ದ ಹೋರಾಡಿದ್ದು ಈಗ ಇತಿಹಾಸ. ಅದೇ ಮಹಾತ್ಮ ಗಾಂಧೀಜಿಯವರು ಭಾರತಕ್ಕೆ ಬಂದಮೇಲೆ ಇಲ್ಲಿಯ ಅಸ್ಪೃಶ್ಯರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲವೆನ್ನುವುದು ಯಕ್ಷಪ್ರಶ್ನೆ. ಆದರೆ, ತಲೆ ಕೆಡಿಸಿಕೊಂಡಿದ್ದು ಅಂಬೇಡ್ಕರ್ ಅವರ ಹೋರಾಟ ಪ್ರಾರಂಭವಾದ ಮೇಲೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ.

ಪಾಶ್ಚಿಮಾತ್ಯರು ಅದರಲ್ಲಿ ವಲಸೆ ಬಂದ ನಿಗ್ರೋ ಜನರಿಗೆ ಸರಿಸಮಾನ ಹಕ್ಕು ಕೊಡುತ್ತಿಲ್ಲವೆಂದು ಭಾರತದಲ್ಲಿ ಬೊಬ್ಬಾಟ ಮಾಡುತ್ತಾರೆ. ಆದರೆ, ಒಂದೇ ದೇಶದ, ಒಂದೇ ಬಣ್ಣದ, ಒಂದೇ ಸಮಾಜದ, ಒಂದೇ ಉಸುರಿನ, ಒಂದೇ ಉದರದ ಸಹ ಬಂಧುಗಳನ್ನು ಊರ ಹೊರಗಿಟ್ಟು ಮೋಜು ನೋಡುವುದು. ಈ ನನ್ನ ಸುಧಾರಿಸಿದ ಸಮಾಜ! ಪ್ರತಿ ಗ್ರಾಮದಲ್ಲಿಯೂ ಮನಕರಗುವಂತೆ ಕಾಣಸಿಗುವ ಕರಾಳ ಸನ್ನಿವೇಶ ಎಂದು ಪೋಳ ಅವರು “ಇದು ನನ್ನ ಸಮಾಜ” ನಾಟಕದಲ್ಲಿ ವ್ಯಕ್ತ ಪಡಿಸಿದ ವಿಚಾರವಾಗಿದೆ. ಅವರೇ ಹೇಳುವಂತೆ ನಾನು ಸಾಹಿತಿಯೂ ಅಲ್ಲ, ಸಾಹಿತಿಯಾಗುವ ಇಚ್ಛೆಯೂ ನನಗಿಲ್ಲ. ಆದಾಗ್ಯೂ, ಧರ್ಮದ ಹೆಸರಿನಲ್ಲಿ ಮಾನವನು ಸಹಬಂಧುಗಳ ಮೇಲೆ ಮಾಡುತ್ತಿರುವ ದಬ್ಬಾಳಿಕೆಯನ್ನು ತಡೆಗಟ್ಟುವಲ್ಲಿ ಕಿಂಚಿತ್ತಾದರೂ ಸಹಾಯಕವಾಗಬಹುದೆಂಬ ಉತ್ಕಟ ಇಚ್ಛೆಯಿಂಧ ಇದನ್ನು ಬರೆದಿದ್ದೇನೆ. ನಿಜವಾದ ಸಮಾಜಿಕ ಜವಾಬ್ದಾರಿ, ಕಾಳಜಿ ಇರುವ ಲೇಖಕನೊಬ್ಬನ ಬದ್ಧತೆ ಇದಾಗಿದೆ. ಶರಣರು ಕೂಡಾ ಸಾಹಿತ್ಯ ರಚನೆಗೆಂದು ವಚನ ರಚಿಸಿದವರಲ್ಲ. ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಅಂಧಶೃದ್ಧೆ, ಕಂದಾಚಾರಗಳನ್ನು ಹೊಡೆದೋಡಿಸುವಲ್ಲಿ ವಚನಗಳನ್ನು ಬಳಸಿಕೊಂಡವರು ಸಾಹಿತ್ಯ ರಚನೆಯನ್ನು ಜನರಲ್ಲಿ ಅರಿವು ಮೂಡಿಸುವುದಕ್ಕಾಗಿ ಮಾದ್ಯಮರೂಪದಲ್ಲಿ ಬಳಸಿದ ಪೋಳ ಅವರಿಗೂ ಸಾಮಾಜಿಕ ಬದಲಾವಣೆ ಮುಖ್ಯವಾಗಿತ್ತು.

‘ಇದು ನನ್ನ ಸಮಾಜ’ ನಾಟಕದ ವರಹಾಚಾರಿ, ಗೋಳಯ್ಯ, ಸಾವಿತ್ರಿ, ರುದ್ರಯ್ಯ ಕುಲಜ ಪಾತ್ರಗಳು ಪ್ರತಿಯೊಂದು ಗ್ರಾಮಗಳಲ್ಲಿರುವ ಶೋಷಕರ ಅಂದರೆ, ದುರಾಡಳಿತಕ್ಕೆ ಹೆಸರಾದ ಪೇಶ್ವಾಶಾಹಿ ಪ್ರತಿನಿಧಿಗಳಾಗಿದ್ದಾರೆ. ಚೆನ್ನಪ್ಪ, ಸಿದ್ದಪ್ಪ, ಗ್ರಾಮದ ರೈತರು, ದುರ್ಗಪ್ಪ, ಶಂಕರ, ನಿಂಗವ್ವ, ಸಂಗಪ್ಪ, ಬಾಳಮ್ಮ, ಹರಿಜನ ಕುಟುಂಬಗಳ ಸದಸ್ಯರು. ಹಣಿಮಿ ಗ್ರಾಮದ ಹರಿಜನ ವೇಶ್ಯೆ, ಪೌಜದಾರ ಗ್ರಾಮದ ಹಿತಚಿಂತಕರ ಕಾಳಜಿ. ಶೋಷಣೆ, ದಬ್ಬಾಳಿಕೆ, ಕೊಲೆ – ಸುಲಿಗೆ, ಎಲ್ಲವೂ ಕಣ್ಣೆದುರಿಗೆ ನಡೆಯುವಂತೆ ವಾಸ್ತವ ಸಂಗತಿಗಳಿಗೆ ಹಿಡಿದ ಕನ್ನಡಿಯಾಗಿದೆ. ಪ್ರಸ್ತುತ ಈ ನಾಟಕದಲ್ಲಿ ಹಣಿಮಿ ಎಂಬ ವೇಶ್ಯೆ ಹೇಳುವ ಮಾತುಗಳು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡುತ್ತವೆ. ‘ಕಾಕಾ ಯಾವ ದೇಶದಾಗ ನಮ್ಮದೂ ಅನ್ನುವಂಥದ್ದು ಅಂಗೈಯಷ್ಟು ಭೂಮಿ ಇಲ್ಲಾ, ಯಾವ ಧರ್ಮದಲ್ಲಿ ನಮಗ ಮರ್ಯಾದೆ ಇಲ್ಲಾ, ಆದೇಶ, ಆ ಧರ್ಮದ ಅಭಿಮಾನ ನಮಗೆ ಯಾಕೆ ಇರಬೇಕು? ಇದು ನಮಗೆ ಬಿಡಲಾರದ ಕರ್ಮ ಏನು? ಈ ದರಿದ್ರ ಧರ್ಮ, ಈ ದರಿದ್ರ ಜಾತಿ, ನಾವು ಅದೇಕ ಬದಲಾಯಿಸಬಾರದು? ನಾನೇಕೆ ಬೌದ್ಧ, ಕ್ರಿಶ್ಚಿಯನ್‌, ಮುಸಲ್ಮಾನರಾಗಿ ಮಾರ್ಪಟ್ಟು ಸುಖಿಯಾಗಿ ಬಾಳಬಾರದು? ಯಾವ ಧರ್ಮದಲ್ಲಿ ನಮಗೆ ಕಿಮ್ಮತ್ತಿಲ್ಲಾ, ಯಾವ ಧರ್ಮದಲ್ಲಿ ನಮ್ಮನ್ನು ಮನುಷ್ಯರೆಂದು ಕಾಣುವುದಿಲ್ಲಾ, ಆ ಧರ್ಮ ತಗೊಂಡು ನಮಗೇನು ಮಾಡುವುದಪ್ಪಾ? ಈ ನಾಟಕದಲ್ಲಿ ಇಂತಹ ಮಾತುಗಳ ಮೂಲಕ ಹಿಂದೂ ಧರ್ಮದ ಹಳಸಲು ಸಂಸ್ಕೃತಿ, ಅಪಮಾನ ವ್ಯವಸ್ಥೆಯಿಂದಾಗಿ ಬೇಸತ್ತು ದಲಿತರು, ಪಂಚಮರು ಅನ್ಯ ಧರ್ಮಗಳಿಗೆ ಮತಾಂತರಗೊಳ್ಳುವ ಅನಿವಾರ್ಯತೆಯನ್ನು ಸೂಚಿಸುತ್ತದೆ. ಈ ತರಹದ ದಿಟ್ಟ ವಿಚಾರಗಳು ಲೇಖಕನದಾಗಿದ್ದರೂ, ಅವು ಆ ಲೇಖಕನಿಗಾದ ಅಂಬೇಡ್ಕರ್ ಅವರ ಪ್ರಭಾವದ ತೀವ್ರ ನೋವಿನ ಒತ್ತಡದ ಪ್ರತೀಕವಾಗಿವೆ. ದಲಿತ, ಶೋಷಿತ ಸಮುದಾಯದಲ್ಲಿ ಅರಿವು ಮೂಡಿಸುವಲ್ಲಿ ಇಂತಹ ಮಹತ್ವದ ವಿಚಾರಗಳು ಪೂರಕವಾಗಿ ನಿಲ್ಲುತ್ತವೆ. ಕನ್ನಡ ನೆಲದಲ್ಲಿ ದಲಿತ, ಬಂಡಾಯ ಚಳವಳಿ ರೂಪುಗೊಳ್ಳುವ ಪೂರ್ವದಲ್ಲಿ ಸುಧಾರಣಾವಾದಿ ವಿಚಾರಗಳು ಪೋಳ ಅವರ ಬರಹದಿಂದ ವ್ಯಕ್ತವಾಗಿದ್ದು ನಿಜಕ್ಕೂ ದಲಿತ – ಬಂಡಾಯ ಚಳವಳಿಗೆ ಪೂರ್ವರಂಗವಾಗಿತ್ತೆಂದು ಹೇಳಿದರೆ ಅತಿಶೋಕ್ತಿಯಾಗಲಾರದು. ದಲಿತ – ಬಂಡಾಯ ಧೋರಣೆಯ ಆಶಯಗಳನ್ನು ಪೋಳ ಅವರ ಬರಹಗಳಲ್ಲಿ ನಾವು ದಟ್ಟವಾಗಿ ಕಾಣುವೆವು. ದಲಿತ – ಬಂಡಾಯ ಸಾಹಿತಿಗಳಲ್ಲಿ ಪೋಳ ಅವರಿಗೆ ಶಾಶ್ವತವಾದ ಸ್ಥಾನವಿದೆಯೆನ್ನುವಲ್ಲಿ ಎರಡು ಮಾತಿಲ್ಲ.

ವಚನ ಸಾಹಿತ್ಯ:

ಹನ್ನೆರಡನೆಯ ಶತಮಾನದ ವಚನಕಾರರ ಪ್ರಭಾವ – ಕನ್ನಡ – ಕನ್ನಡಿಗರ ಜೀವನದ ಬೀರಿದ ಸಾಹಿತ್ಯ ಪ್ರಕಾರ ಮತ್ತೊಂದಿಲ್ಲ. ಶರಣ ಸಂಸ್ಕೃತಿ ಅಚ್ಚಳಿಯದೇ ಇಂದಿಗೂ ಉಳಿದಿದೆ. ಅದು ಎಂದೆಂದಿಗೂ ಉಳಿಯುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಅನೇಕರನ್ನು ಪ್ರಭಾವಿತರನ್ನಾಗಿ ಮಾಡಿದೆ. ಅಂತಹವರಲ್ಲಿ ಕುಮಾರ ಕಕ್ಕಯ್ಯ ಪೋಳ ಒಬ್ಬರಾಗಿದ್ದಾರೆ. ‘ಕುಮಾರ ಕಕ್ಕಯ್ಯ ಪೋಳ ಅವರ ವಚನಗಳು’ ಕೃತಿ ೧೯೭೯ ರಲ್ಲಿ ಪ್ರಕಟಗೊಂಡಿದೆ. ಬಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದನ್ನು ಪ್ರಕಟಿಸಿದೆ. “ಕುಮಾರ ಕಕ್ಕಯ್ಯ” ಇದು ಅವರ ವಚನಾಂಕಿತ. ಈ ಹೆಸರಿನ ಮೂಲಕ ಶರಣ – ಸಾಹಿತ್ಯ – ಸಂಸ್ಕೃತಿಯಲ್ಲಿ ಅವರು ಚಿರಪರಿಚಿತರಾಗಿದ್ದಾರೆ. ಇದರಲ್ಲಿ ೪೧೬ ವಚನಗಳಿವೆ. ಇವರ ಇನ್ನೊಂದು ವಚನ ಸಂಕಲನ ‘ಕುಮಾರ ಕಕ್ಕಯ್ಯನ ವಚನಗಳಲು’ ಇದನ್ನು ಕಲ್ಯಾಣ ನಾಡಿನ ಶರಣ ಸಾಹಿತ್ಯ ಪರಿಷತ್ತಿನವರು ಪ್ರಕಟಿಸಿದ್ದಾರೆ. ಇದರಲ್ಲಿ ೬೭೫ ವಚನಗಳಿವೆ. ಬಸವಾದಿ ಶರಣರಂತೆ ಆಧುನಿಕ ಯುಗದಲ್ಲಿ ದೇವರು ಧರ್ಮ ಕಂದಾಚಾರಗಳ ಕುರಿತಂತೆ ಪೋಳ ಅವರು ತೀಕ್ಷ್ಣವಾಗಿ ತಮ್ಮ ವಚನಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಂಪ್ರದಾಯ, ಶ್ರಮ, ಸಂಸಾರ, ಕುಡಿತ, ಕಾಮಕ, ಕದನ, ಕುಲ – ಗೋತ್ರ, ಜಾತಿ – ಮತ, ಕಲ್ಯಾಣ, ಕ್ರಾಂತಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ವಚನಗಳನ್ನು ರಚನೆ ಮಾಡಿದ್ದಾರೆ.

೧೯೯೩ ರಲ್ಲಿ ಪ್ರಕಟವಾದ “ಪ್ರಗತಿಪರ ವಿಚಾರವಾದಿ ಕುಮಾರ ಕಕ್ಕಯ್ಯನ ವಚನಗಳು” ಎಂಬ ಕೃತಿ ಅವರ ಸಮಗ್ರ ವಚನಗಳ ಸಂಕಲನವಾಗಿದೆ. ಈ ಸಂಪುಟದಲ್ಲಿ ಸಾವಿರದ ಎರಡು ನೂರಾ ಮೂವತ್ತೈದು ವಚನಗಳಿವೆ. ಆಧುನಿಕ ದಲಿತ ವಚನಕಾರ ಕುಮಾರ ಕಕ್ಕಯ್ಯನವರ ಸಮಗ್ರ ವಚನಗಳನ್ನು ಅಧ್ಯಯನ ಮಾಡಿದ ಡಾ. ಸಿದ್ದಯ್ಯ ಪುರಾಣಿಕರು ಹೀಗೆ ಅಭಿಪ್ರಾಯಪಟ್ಟಿದ್ದಾರೆ, “ನಾನು ನಿಮ್ಮ ಈ ವಚನ ಸಂಗ್ರಹವನ್ನು ಓದಿ ಪುಲಕಿತನಾಗಿದ್ದೇನೆ. ಎಷ್ಟೊಂದು ವಿಷಯಗಳ ಬಗ್ಗೆ ಎಷ್ಟೊಂದು ಆಳವಾಗಿ ಆಲೋಚಿಸಿರುವಿರಿ. ಅವುಗಳಿಗೆ ಎಷ್ಟೊಂದು ಪ್ರಾಮಾಣಿಕ ಅಭಿವ್ಯಕ್ತಿಯನ್ನು ನೀಡಿರುವಿರಿ. ನಿಮ್ಮ ವಚನಗಳಲ್ಲಿ ಮನೋಜ್ಞವಾಗಿ ಮೂಡಿನಿಂತಿರುವ ನಿಮ್ಮ ಮಾನವೀಯ ದೃಷ್ಟಿ, ನೀವು ಕಂಡರಿಸಿರುವ ಬಸವಣ್ಣನವರ ಮಹೋನ್ನತ ಮೂರ್ತಿ ಸ್ವರೂಪ, ನೀವು ವಿಷಧೀಕರಿಸಿರುವ ಬಸವ ಧರ್ಮದ ಅನನ್ಯತೆ, ಅನೇಕ ವಚನಗಳಲ್ಲಿ ಸುಸ್ಪಷ್ಟವಾಗಿರುವ ನಿಮ್ಮ ಸಾಮಾಜಿಕ ಕ್ರಾಂತಿಯ ಕಳಕಳಿಗಳು, ಓದುಗರ ಮೇಲೆ ಅಚ್ಚಳಿಯದೆ ಮುದ್ರೆಯನ್ನೊತ್ತುವಂಥವುಗಳಾಗಿವೆ. ಶಿವಾನುಭವ ಲೋಕಾನುಭವಗಳ ಹೃದಯಂಗಮ ಸಂಗಮದಂತಿರುವ ಈ ವಚನಗಳಿಗೆ ಸರ್ವತ್ರ ಸ್ವಾಗತ ದೊರೆಯಲೆಂದು ಹಾರೈಸುತ್ತೇನೆ”.

ಬಸವಾದಿ ಶರಣರ ತತ್ವ ಚಿಂತನೆಗಳನ್ನು ಆಧುನಿಕಯುಗದಲ್ಲಿ ಅದರಲ್ಲೂ, ವಿಜ್ಞಾನ ಯುಗದ ನಡುವೆ ಬೆಳೆಸಿದ ಕಾಡಸಿದ್ಧೇಶ್ವರರು, ತೋಂಟದ ಸಿದ್ಧಲಿಂಗೇಶ್ವರರು, ಸ್ವತಂತ್ರ ಸಿದ್ಧಲಿಂಗೇಶ್ವರರು, ಷಣ್ಮುಖ ಶಿವಯೋಗಿಗಳು, ಹರ್ಡೇಕರ ಮಂಜಪ್ಪನವರು, ಡಾ. ಸಿದ್ದಯ್ಯ ಪುರಾಣಿಕರು, ಮಹಾದೇವ ಬಣಕಾರ, ಕುಮಾರ ಕಕ್ಕಯ್ಯ ಪೋಳ ಮುಂತಾದವರು ಮುಂದುವರಿಸಿದ್ದಾರೆ. ಕುಮಾರ ಕಕ್ಕಯ್ಯ ಪೋಳ ಅವರ ವಚನಗಳಲ್ಲಿ ಬಸವಾದಿ ಶರಣರ ಅನುಭಾವದ ಸೆಳೆತ, ಸಮಾಜ ಸುಧಾರಣೆಯ ಕಾಳಜಿ ಜೀವನಾನುಭವದ ಕಟುಸತ್ಯವಲ್ಲದೆ, ದಲಿತ ಪ್ರಜ್ಞೆ, ಸ್ವಾಭಿಮಾನ, ವೈಚಾರಿಕ ನೆಲೆ ವಿಶೇಷವಾಗಿ ಕಂಡು ಬರುತ್ತದೆ. ತಾನೇಕೆ ವಚನಗಳನ್ನು ಬರೆದೆನೆಂಬುದನ್ನು ವಚನವೊಂದರಲ್ಲಿ ಹೀಗೆ ವ್ಯಕ್ತ ಪಡಿಸಿದ್ದಾರೆ.

ಶೋಷಣೆಯನ್ನು ಸಹಿಸಲಿಕ್ಕಾಗದು ಕಾರಣ
ಬಂಡವಾಳ ಶಾಹಿಯನ್ನು ಕಟುವಾಗಿ ಖಂಡಿಸಿದೆ
ಮೂಢನಂಬಿಕೆಗಳನ್ನು ಬಲವಾಗಿ ಧಿಕ್ಕರಿಸಿದೆ
ಕ್ರಾಂತಿಯ ಕುಂಡ ಹೊತ್ತುರಿಯದ ಕಾರಣ
ಸಿಡಿದ ಕಿಡಿ ನುಡಿಗಳನ್ನು ಬರೆದೆನೆಂದ
ಕುಮಾರ ಕಕ್ಕಯ್ಯ

ಶೋಷಣೆ ಸಹಿಸದ ಪೋಳ ಅವರಿಗೆ ಅಂಬೇಡ್ಕರ್ ಅವರ ಚಿಂತನೆಯ ಗಾಢ ಪ್ರಭಾವವಿರುವುದರಿಂದಲ್ಲದೆ ಬುದ್ಧ, ಬಸವರನ್ನು ಪ್ರಾಮಾಣಿಕನಾಗಿ ಅಪ್ಪಿಕೊಂಡಿರುವುದರಿಂದಲೇ ವ್ಯವಸ್ಥೆಯ ವಿರುದ್ಧ ನಿರ್ಭಿಡೆಯಿಂದ ಮಾತಾಡಿದ್ದಾರೆ. ಸ್ವತಃ ‘ಅಸ್ಪೃಶ್ಯತೆ’ಯ ಅವಮಾನದಿಂದ ನೊಂದು, ಬೆಂದು ಬದುಕಿದ್ದ ಪೋಳ ಅವರು ದೀನ – ದಲಿತರ, ಶೂದ್ರರ, ಪಂಚಮರ, ಶೂದ್ರಾತಿಶೂದ್ರರ ಉದ್ದೇಶವೇನೆಂಬುದನ್ನು ಬಹು ಮಾರ್ಮಿಕವಾಗಿ ವ್ಯಕ್ತಪಡಿಸಿದ್ದಾರೆ.

ಬೆಕ್ಕಿನ ಕೈಯಲ್ಲಿ ಸಿಕ್ಕ ಇಲಿ, ತನ್ನ ಪ್ರಾಣ ರಕ್ಷಣೆಗಾಗಿ ಹೋರಾಡುತ್ತದೆಯೇ ಹೊರತು, ಆ ಬೆಕ್ಕಿನ ಮನಸ್ಸು ನೋಯಿಸುವ ಅಥವಾ ಆ ಬೆಕ್ಕಿಗೆ ದ್ರೋಹ ಬಗೆಯುವ ಕಾರಣಕ್ಕಲ್ಲ. ಅದೇ ಪ್ರಕಾರ ಚಾತುರ್ವರ್ಣನೆಂಬ ಬ್ರಹ್ಮರಾಕ್ಷಸನ ಕೈಯಲ್ಲಿ ಸಿಕ್ಕ ಅಸ್ಪೃಶ್ಯರ ವಿಮೋಚನೆಯ ಪ್ರಯತ್ನವನ್ನು ಆಕ್ಷೇಪಣೆ ಮಾಡುವ ಪ್ರಶ್ನೆಯೇ ಇಲ್ಲಿ ಹುಟ್ಟುವುದಿಲ್ಲ. ಈ ಮಾತು ಬೆಂದ – ನೊಂದ ಹೃದಯದಿಂದ ಬಂದದ್ದೆ ಹೊರತು ಪಾಂಡಿತ್ಯದಿಂದ ಹೊರ ಹೊಮ್ಮಿದ್ದಲ್ಲ. ಈ ಹಿನ್ನೆಲೆಯಲ್ಲಿ ಅವರ ವಚನವೊಂದು ಹೀಗೆ ಮೂಡಿ ಬಂದಿದೆ.

ಇಲಿ ಹೌಹಾರಿ ಹೋರಾಡುವುದು
ಬೆಕ್ಕಿಗೆ ದ್ರೋಹ ಬಗೆಯಲಿಕ್ಕೆಂದಲ್ಲ
ತನ್ನ ಪ್ರಾಣ ಉಳಿಸಿಕೊಳ್ಳಲಿಕ್ಕೆ
ಅಂತ್ಯಜಗೋಗರೆದು ಹೋರಾಡುವುದು
ಕುಲಜನಿಗೆ ದ್ರೋಹ ಬಗೆಯಲಿಕ್ಕೆಂದಲ್ಲ.
ತನ್ನ ಜೀವ ಉಳಿಸಿಕೊಳ್ಳಲಿಕ್ಕೆಂದ
ಕುಮಾರ ಕಕ್ಕಯ್ಯ

ದೇವರು – ದೈವದ ಹೆಸರಿನಲ್ಲಿ ಹೊಟ್ಟೆಹೊರೆವ ಕರ್ಮಠರನ್ನು ನಿಜಕ್ಕೂ ಈ ವಚನ ಕುಮಾರ ಕಕ್ಕಯ್ಯ ಪೋಳ ಅವರ‍ಅಂತರ್ಯದ ಧ್ವನಿಯನ್ನು ದಲಿತರಿಗಾದ ಶೋಷಣೆ ಯನ್ನು ಉಜ್ವಲವಾಗಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಕುಮಾರ ಕಕ್ಕಯ್ಯ ಪೋಳ ಅವರು ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಾರೆ. ಮಠಮಾನ್ಯ ವಿಚಾರಗಳನ್ನು ಪೂಜಾರಿ ಪುರೋಹಿತರು. ದೀನ ದಲಿತರ ಶೋಷಣೆ ಮಾಡುವ ಪರಿಯನ್ನು ತಮ್ಮೊಂದು ವಚನದಲ್ಲಿ ಹೀಗೆ ವಿಡಂಬಿಸುತ್ತಾರೆ.

ತನಗಾಗಿ ಪುರೋಹಿತ
ಯಾವ ಶಾಸ್ತ್ರವನ್ನೂ ಓದುವುದಿಲ್ಲ
ತನಗಾಗಿ ಪೂಜಾರಿ
ಯಾವ ದೇವರಲ್ಲಿಯೂ ಬೇಡಿಕೊಳ್ಳುವುದಿಲ್ಲ
ತನಗಾಗಿ ವಕೀಲ
ಯಾವ ಕೋರ್ಟಿಗೂ ಬೇಡಿಕೊಳ್ಳುವುದಿಲ್ಲ
ತನಗಾಗಿ ವಕೀಲ
ಯಾವ ಕೋರ್ಟಿಗೂ ಹೋಗುವುದಿಲ್ಲ
ಈ ಕದೀಮರು ಮಾಡುವುದೆಲ್ಲವೂ
ಅಜ್ಞಾನಿಗಳ ಶೋಷಣೆಗೆಂದ
ಕುಮಾರ ಕಕ್ಕಯ್ಯ

ಶೋಷಣೆ ಮಾಡುವುದು ಎಷ್ಟು ಅಪರಾಧವೋ ಶೋಷಣೆ ಸಹಿಸುವುದು ಮಹಾ ಅಪರಾಧವೆಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಅದರಂತೆ, ಶತಶತಮಾನಗಳಿಂದ ಉಚ್ಚಕುಲದವರಿಂದ ದಬ್ಬಾಳಿಕೆಗೆ, ದೌರ್ಜನ್ಯಕ್ಕೆ, ಅನೇಕ ಹಿಂಸೆಗಳಿಗೆ ಬಲಿಯಾಗಿ ನಾಯಿಗಿಂತಲೂ ಕೀಳಾದ ಬಾಳು ಬಾಳುತ್ತಾ ಯಾತನೆ ಅನುಭವಿಸುತ್ತ ಬಂದಿರುವ ದಲಿತ – ಪದದಲಿತರು ಕೆಚ್ಚೆದೆಯಿಂದ ಎದುರಿಸಬೇಕು, ಅದನ್ನು ಪ್ರತಿಭಟಿಸಬೇಕೆಂದು ಅವರಲ್ಲಿ ಆತ್ಮಬಲವನ್ನು ಈ ಕೆಳಗಿನ ವಚನವೊಂದರ ಮೂಲಕ ತುಂಬುತ್ತಾರೆ.

ತೋಳ ಏರಿ ಬಂದಾಗ ಕಿರುಬನಾಗು
ಕಿರುಬ ಎದುರು ಬಿದ್ದಾಗ ಕರಡಿಯಾಗು
ಕರಡಿ ತಿರುಗಿ ನಿಂತಾಗ ಹುಲಿಯಾಗು
ಹುಲಿ ಗುಡುಗಿ ಎರಗಿದಾಗ ಸಿಂಹನಾಗು
ಅಯ್ಯ ನೀನು ಕುರಿಯಾದರೆ ಎಲ್ಲರೂ
ನಿನ್ನನ್ನು ಹರಿದು ತಿನ್ನುವರೆಂದ
ಕುಮಾರ ಕಕ್ಕಯ್ಯ

ಈ ವಚನ ದಲಿತರಿಗಷ್ಟೇ ಏಕೆ, ಕುರಿಯಂತೆ ಹೆದರಿ ನಡೆಯುವ ಎಲ್ಲರಿಗೂ ಅನ್ವಯವಾಗುವುದು. ಅವರಿಗೆ ಮಾರ್ಗದರ್ಶನ ನೀಡಬಲ್ಲಂಥದಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಕುಲಜರು ಶರಣರು ಎಂದು ಹೇಳಿದವರು ಶರಣರು. ಆದರೆ, ಸಕಲ ಜೀವಾತ್ಮಗಳನ್ನು ತಿಂದು – ತೇಗುವ ವರ್ಗದ ಸಾಮಾಜಿಕ ವ್ಯವಸ್ಥೆ ಕುರಿತು ತಮ್ಮ ವಚನಗಳಲ್ಲಿ ಕುಮಾರ ಕಕ್ಕಯ್ಯನವರು ಮಾತಾಡುವುದು ಮಾನವೀಯತೆಗೆ ಹಿಡಿದ ಕನ್ನಡಿಯಾಗಿದೆ.

ಪಶುಪಕ್ಷಿಗಳುಬೇಟೆಯಾಡುವುದು ಜಗದಲ್ಲಿ
ಪಾಪಪುಣ್ಯ ಶಾಸ್ತ್ರದ ಬದನೆಕಾಯಿಗಳೆಂದ
ಕುಮಾರ ಕಕ್ಕಯ್ಯ

ಬದುಕಿಗೆ ಆಸರೆಯಾಗಿರುವ ಪ್ರಾಣಿಯನ್ನು ದುಡಿಸಿಕೊಂಡು ಅದು ನಿತ್ರಾಣವಾದಾಗ ಕಟುಕನಿಗೆ ಮಾರುವವರನ್ನು ಕಂಡು ಯಾವುದು ಪುಣ್ಯವೆಂದು ಪ್ರಶ್ನಿಸಿದ್ದಾರೆ. ‘ದಯವೇ ಧರ್ಮದ ಮೂಲ’ ಎನ್ನುವಂತೆ ದಯೆಯನ್ನು ಪ್ರತಿಪಾದಿಸಿದ ಕಾಣದ ಯಾವುದೋ ಲೋಕದ ಸಿದ್ಧತೆಗೆ ಹೆಣಗುವುದು ಸರಿಯಾದ ಕ್ರಮವಲ್ಲ. ಸತ್ತ ಬಳಿಕ ನರಕ, ಮೋಕ್ಷ, ಪುನರ್ ಜನ್ಮಗಳೆಂಬ ತರತಮ ಶಬ್ದಗಳ ಶಾಸ್ತ್ರಜಾಲವೆಂದ ಕುಮಾರ ಕಕ್ಕಯ್ಯ. ಇಹದಲ್ಲಿಯೇ ಎಲ್ಲವನ್ನು ಕಾಣುವುದು ಮುಖ್ಯವಾಗಬೇಕು. ಪಾಪ, ಪುಣ್ಯ, ಸ್ವರ್ಗ, ನರಕಗಳೆಲ್ಲವು ದಯೆ, ಸತ್ಯ, ಶುದ್ಧ. ಕಾಯದಲ್ಲಿ ಅಡಗಿದೆ ಎನ್ನುವುದನ್ನು ಕುಮಾರ ಕಕ್ಕಯ್ಯ ಪೋಳ ಅವರು ಸ್ಪಷ್ಟಪಡಿಸಿದ್ದಾರೆ. ಕುಮಾರಕಕ್ಕಯ್ಯ ಪೋಳ ಅವರ ಈ ವಿಚಾರಗಳು ಬಸವಣ್ಣನವರ ಅನೇಕ ವಚನಗಳಿಂದ ಪ್ರೇರಣೆ ಹೊಂದಿ ಹುಟ್ಟಿಕೊಂಡಂತಿವೆ. ಬಸವಣ್ಣನವರು ಸತ್ತು ಕಾಣುವ ಸ್ವರ್ಗಕ್ಕಿಂತ ಇದ್ದು ಅನುಭವಿಸುವ ಈ ಲೋಕವೇ ಶ್ರೇಷ್ಠವೆಂದಿದ್ದಾರೆ. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ, ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರು, ಇಲ್ಲಿ ಸಲ್ಲದವರು ಎಲ್ಲೆಲ್ಲೂ ಸಲ್ಲರು. ಆದ್ದರಿಂದ ಈ ಲೋಕದ ಬಗೆಗೆ ನಾವು ಮಮತೆಯನ್ನು ಇಟ್ಟುಕೊಳ್ಳಬೇಕು. ಬದುಕಿನ ಬಗ್ಗೆ ಭರವಸೆ ನಂಬಿಕೆ ಇಟ್ಟುಕೊಳ್ಳಬೇಕು. ಬದುಕಿನ ಬಗ್ಗೆ ಭರವಸೆ ನಂಬಿಕೆ ಇಟ್ಟುಕೊಳ್ಳಬೇಕು. ಈ ಬದುಕು ಶ್ರೇಷ್ಠವಾದುದು ಎಂದು ತಿಳಿಯಬೇಕು. ಈ ಬದುಕು ಕೊಡುವ ಸಿಹಿ ಗುಟುರೆಗೆ ಸದಾ ಬಾಯ್ದರೆಯುವ ಆಶಾವಾದಿಗಳಾಗಬೇಕು. ನಿರಾಶಾವಾದಿಗಳಾಗಬಾರದು ಎಂದು ಬಸವಣ್ಣನವರು ಸಕಲರಿಗೂ ತಿಳಿಸುತ್ತ ಬದುಕಿನ ಬಗ್ಗೆ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರಂತೆಯೇ ಪೋಳ ಅವರೂ ಕೂಡ ಈ ಬದುಕನ್ನು ಆಶಾವಾದಿಯಾಗಿಯೇ ಕಂಡಿದ್ದಾರೆಯೇ ವಿನಾ ನಿರಾಶಾವಾದಿಗಳಾಗಿ ಕಂಡಿಲ್ಲ. ಆಸೆಯನ್ನು ಇರಿಸಿಕೊಂಡೇ ಈ ಭವವನ್ನು ದಾಟಬೇಕೆಂದು ದಲಿತ ಜನಾಂಗದಲ್ಲಿ ಸ್ಥೈರ್ಯ ಧೈರ್ಯವನ್ನು ತಮ್ಮ ವಚನಗಳ ಮೂಲಕ ಬಿಂಬಿಸಿದ್ದಾರೆ. ಇವರ ವಚನಗಳೂ ನಿಜಕ್ಕೂ ಶ್ರೇಷ್ಠ ಸೃಜನಶೀಲ ಕಾವ್ಯವಾಗಿವೆ. ಬದುಕಿನ ಬಗ್ಗೆ ವಾಸ್ತವತೆಯನ್ನು, ಭರವಸೆಯನ್ನು ಎಲ್ಲರಲ್ಲೂ ತುಂಬುವಲ್ಲಿ ಯಶಸ್ವಿಯಾಗಿವೆ. ಅವರ‍ವಚನಗಳಿಂದ ಅವರೊಬ್ಬ ದಲಿತ ಕವಿಯಾಗಿ ಕಾಣಧೆ ಒಬ್ಬ ಶರಣನಾಗಿ ಆಧುನಿಕ ವಚನಕಾರರಾಗಿ ಹೊರ ಹೊಮ್ಮಿದುದನ್ನು ನಾವು ಗುರುತಿಸುವೆವು.

ಅಹಂಕಾರಿಗಳನ್ನು ಅರಿವಿಲ್ಲದವರನ್ನು ನಾನು ತಾನು ಮೇಲೆಂದು ಹೇಳುವವರನ್ನು ಮಣ್ಣಿಗಿಂತ ಮಡಿಕೆ ಘನವಲ್ಲ, ಸೃಷ್ಟಿಗಿಂತ ಶಾಸ್ತ್ರ ಹಿರಿದಲ್ಲವೆಂದು ಕಕ್ಕಯ್ಯನವರು ಅಭಿಪ್ರಾಯ ಪಟ್ಟಿರುವುದನ್ನು ಕಾಣುತ್ತೇವೆ.

ಬಸವಣ್ಣ ತನ್ನ ಬದುಕಿನುದ್ದಕ್ಕೂ ಕರ್ಮ, ಕಂದಾಚಾರಗಳನ್ನು ವಿರೋಧಿಸುತ್ತ ಹೊಸದೊಂದು ಸಮಾಜ ನಿರ್ಮಾಣಮಾಡಿದ. ಹಾಗೆ ಮಾಡುವಲ್ಲಿ ಯಾವುದನ್ನು ವಿರೋಧಿಸಿದ ಅದನ್ನು ಎಂದೂ ಮರಳಿ ಮುಟ್ಟಲಿಲ್ಲ. ಆದರೆ ಅದೇ ಬಸವ ಅನುಯಾಯಿಗಳು ಇಂದು ತಪ್ಪು ದಾರಿ ಹಿಡಿದಿದ್ದಾರೆ. ಯಾವುದು ಬಸವಣ್ಣ ಬೇಡವೆಂದಿದ್ದ ಅದನ್ನು ಎತ್ತಿ ಹಿಡಿಯುತ್ತ ಪುರೋಗಾಮಿ ಚಿಂತನೆಗೆ ಮುಂದಾಗಿದ್ದಾರೆ ಮಠಗಳನ್ನು ಕಟ್ಟಿಕೊಂಡು ಆ ಮೂಲಕ ದುಡ್ಡು ಮಾಡುತ್ತಿದ್ದಾರೆ. ಜೊತೆಗೆ ಯಾವುದು ಜನಪರವಲ್ಲ ಅದನ್ನು ಬೆಂಬಲಿಸುವ ಬಸವ ಅನುಯಾಯಿಗಳನ್ನು ಕಂಡು ಪೋಳ ಅವರು ಮಮ್ಮಲ ಮರುಗುತ್ತಾರೆ.

ಬಸವಣ್ಣ ಪುರೋಹಿತ ಪಂಡಿತರಲ್ಲಿ ಹೋಗಲಿಲ್ಲ.
ಮಠಮಾನ್ಯ ಜಗದ್ಗುರುಗಳಲ್ಲಿ ಸುಳಿಯಲಿಲ್ಲ
ದೀನ ದಲಿತ ಜನಸಾಮಾನ್ಯರ ಬರಸೆಳೆದು
ಮಾದಾರ ಚೆನ್ನಯ್ಯನ ಮನೆಯ ಮಗ ನಾನು

ಡೋಹರ ಕಕ್ಕಯ್ಯನ ಮನೆಯ ಮಗನಾನು,
ವಿಪ್ರಮೊದಲು ಅಂತ್ಯಜಕಡೆಯಾಗಿ
ಶಿವಭಕ್ತರೆಲ್ಲ ಒಂದೇ ಎಂದು ಬಸವಣ್ಣಂಗೆ
ಧರ್ಮ ತಳದಿಂದಲೇ ಕಟ್ಟಬೇಕಿತ್ತೆಂದ
ಕುಮಾರ ಕಕ್ಕಯ್ಯ.

ಬಸವಾದಿ ಶರಣರ ಚಿಂತನೆಯ ಆ ಪರಂಪರೆಯನ್ನು ೨೦ನೇ ಶತಮಾನದಲ್ಲಿ ಮುಂದುವರಿಸಿದ್ದಲ್ಲದೆ, ಬಸವಣ್ಣ ಹಾಗೂ ಆತನ ಧರ್ಮದ ಬಗ್ಗೆ ಅಪಾರ ಗೌರವ, ಕಾಳಜಿ, ವಿಶ್ವಾಸ, ಅವರಲ್ಲಿ ಎಷ್ಟು ಗಟ್ಟಿಯಾಗಿತ್ತು ಎನ್ನುವುದನ್ನು ಅವರು ಈ ವಚನದಲ್ಲಿ ವ್ಯಕ್ತಪಡಿಸಿದ್ದಾರೆ.

ಎಲ್ಲ ಧರ್ಮ ಸ್ಥಾಪಕರು ತೂಗಿದರೆ
ಬಸವಣ್ಣನೇ ಹೆಚ್ಚು ತೂಗುವನು
ಎಲ್ಲ ಧರ್ಮಗ್ರಂಥಗಳನ್ನು ತೂಗಿದರೆ
ವಚನ ಗ್ರಂಥವೇ ಹೆಚ್ಚು ತೂಗುವುದು,
ಜಗದಲಿ ಬಸವ ಧರ್ಮಕ್ಕೆ ಸಾಟಿಯೇ
ಇಲ್ಲೆಂದ ಕುಮಾರ ಕಕ್ಕಯ್ಯ.

ಬಸವ ಚಿಂತನೆಯ ಶ್ರೇಷ್ಠತೆಯ ಜೊತೆಗೆ ಆ ಕ್ರಾಂತಿಯ ಮಹತ್ವವನ್ನು ಅವರ ವಚನವೊಂದರಲ್ಲಿ ವ್ಯಕ್ತವಾಗಿರುವುದು ಗಮನ ಸೆಳೆಯುತ್ತದೆ.

ದೇವನಿಗಾಗಿ ಭವಿಗಳ ವಿರುದ್ಧ ಬಂಡೆದ್ದ
ಧರ್ಮಕ್ಕಾಗಿ ವರ್ಣಾಶ್ರಮದ ವಿರುದ್ಧ ಹೋರಾಡಿದ
ಜಾತಿ ಮತಗಳ ನಿರ್ಮೂಲನೆಗಾಗಿ ಈಡಾಡಿದ
ಸಮಾಜವಾದ ಸಮತಾವಾದಕ್ಕಾಗಿ ಪ್ರಾಣಾರ್ಪಣೆ ಮಾಡಿದ
ಬಸವಾದಿ ಪ್ರಮಥರ ಕಲ್ಯಾಣ ಕ್ರಾಂತಿ
ಜಗದಲ್ಲಿ ಚಿರಕಾಲ ಸ್ಥಿರವೆಂದ
ಕುಮಾರ ಕಕ್ಕಯ್ಯ

ಕುಮಾರ ಕಕ್ಕಯ್ಯ ಪೋಳ ಅವರ ವಚನಗಳಲ್ಲಿ ಸಾಮಾಜಿಕ ಕಳಕಳಿ ಪ್ರಧಾನವಾಗಿ ಕಾಣುತ್ತದೆ. ಮಠಗಳು ತಮ್ಮ ಸಾಮಾಜೋ ಧಾರ್ಮೀಕ ಚಿಂತನೆಯ ವಿರುದ್ಧವಾಗಿ ನಡೆದಿರುವುದನ್ನು ಕಂಡು ಬೇಸರದಿಂದ ಹೀಗೆ ನುಡಿಯುತ್ತಾರೆ.

ಗೊಡ್ಡ ಆಕಳ ಧರ್ಮಕ್ಕ ಕೊಟ್ಟಾರ
ಧಡ್ಡ ಮಗನೀಗ ಮಠಕ್ಕೆ ಬಿಟ್ಟಾರ
ಮಹಾರಾಯ, ಪಲ್ಲಕ್ಕಿ ಬಿಟ್ಟಾರ
ಮಹಾರಾಯ, ಪಲಕ್ಕಿ ಏರಿ ಮೆರದಾನೆಂದ
ಕುಮಾರ ಕಕ್ಕಯ್ಯ

ಇದಲ್ಲದೆ ಸಭೆ ಸಮಾರಂಭಗಳಲ್ಲಿ ಶರಣರ ಆದರ್ಶ ಸಮಾಜದ ಚಿಂತನೆಗಳ ಕುರಿತು ಮಾತಾಡುವವರೇ ಹೆಚ್ಚು. ಆಚರಣೆಯಲ್ಲಿ ಯಾರೂ ತರುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜಾತಿಯ ಸೂತಕ ಬಿಡದ ಶಾಸ್ತ್ರ ಗೋಷ್ಠಿ
ಬದಲಾವಣೆಗೆ ಆಸ್ಪದವಿಲ್ಲದ ಸಮಾಜಗೋಷ್ಠಿ
ಸತ್ಯಕ್ಕೆ ಅವಕಾಶಕೊಡದ ತತ್ವಗೋಷ್ಠಿ
ಕಂದಾಚಾರದಿಂದ ಹೊರಬರದ ವಚನಗೋಷ್ಠಿ
ಪಾದ ಪೂಜೆಯ ಜಾಢ್ಯ ಬಿಡದ ಧರ್ಮಗೋಷ್ಠಿ
ಕಂದಕಗಳಲ್ಲಿ ಕಪ್ಪಿಗಳು ಕಿರಿಚಿದಂತೆಂದ
ಕುಮಾರ ಕಕ್ಕಯ್ಯ

ಆಧುನಿಕ ಜಗತ್ತಿನ ಲಂಚಾವತಾರದ ಕುರಿತು ಕುಮಾರ ಕಕ್ಕಯ್ಯ ಪೋಳ ಅವರು ಹೇಳುವುದು ಮಾರ್ಮಿಕವಾಗಿದೆ.

ಹಾಲು ಇಲ್ಲದೆ ಕೂಸು ಬದುಕಿದರೂ ಬದುಕಬಹುದು
ಆದರೆ, ಹೆಂಡ ಇಲ್ಲದೆ ಕುಡುಕ ಬದುಕಲಾರ,
ಬಂಡವಾಳವಿಲ್ಲದೆ, ವ್ಯಾಪಾರಿ ಬದುಕಿದರೂ ಬದುಕಬಹುದು,
ಆದರೆ ಅಧಿಕಾರ ಇಲ್ಲದೆ ರಾಜಕಾರಣಿ ಬದುಕಲಾರ
ಪಗಾರ ಇಲ್ಲದೇ ಮಾಸ್ತರ ಬದುಕಿದರೂ ಬದುಕಬಹುದು
ಆದರೆ ಲಂಚವಿಲ್ಲದೆ ತಲಾಟಿ ಬದುಕಲಾರನೆಂದ
ಕುಮಾರ ಕಕ್ಕಯ್ಯ

ಸಮಾಜದಲ್ಲಿ ಸ್ವಾತಂತ್ಯರ ಹೋರಾಟಗಾರರನ್ನು, ಸಾಹಿತಿಗಳನ್ನು ಕಾರ್ಯಕ್ರಮಗಳಿಗೆ ಕರೆದು ಗೌರವಿಸಿ ಚಪ್ಪಾಳೆ ತಟ್ಟಿಸಿಕೊಂಡು ಸಂತಸಪಡುವ ಸಂಘಟಕರು, ಕಾರ್ಯಕ್ರಮ ಮೂಗಿದ ಮೇಲೆ ಆ ಹೋರಾಟಗಾರರನ್ನು ಸಾಹಿತಿಗಳನ್ನು ಮರತೇ ಬಿಡುವ ಪದ್ಧತಿ ತೀರ ಹೊಸದೇನು ಅಲ್ಲ. ಅವರು ಬದುಕಿರುವಾಗಲೇ ಗೌರವಿಸದ ಸಮಾಜ, ಸತ್ತ ಮೇಲೆ ತೋರಿಸುವ ಕಾಳಜಿ ಕುರಿತು ವಚನಕಾರ ಪೋಳ ಅವರು ಹೀಗೆ ಹೇಳಿದ್ದಾರೆ.

ಲೋಕಾನುಭವದ ವಾಸನೆ ಹರಡುವುದು ಸುಟ್ಟ ಬಳಿಕ
ರೇಶ್ಮೆಯ ನೂಲು ಸಿಗುವುದು ಹುಳ ಬೆಂದ ಬಳಿಕ
ಕಸ್ತೂರಿ ದೊರೆಯುವುದು ಮೃಗದ ತಲೆ ಒಡೆದ ಬಳಿಕ
ಸೈನಿಕ ಸಂಸಾರ ಮಾಡುವುದು ವಯಸ್ಸುಹೋದ ಬಳಿಕ
ಸಾಹಿತಿ ಬಾಳುವುದು ಸತ್ತ ಬಳಿಕ ಎಂದ
ಕುಮಾರ ಕಕ್ಕಯ್ಯ

ಒಟ್ಟಾರೆಯಾಗಿ ತಮ್ಮ ವಚನಗಳ ಮೂಲಕ ಆಧುನಿಕರಲ್ಲಿ ಮೌಢ್ಯತೆಗೆ ಕಾರಣವಾದ ಅನೇಕ ವಿಷಯಗಳ ಮೇಲೆ ವೈಚಾರಿಕ, ವೈಜ್ಞಾನಿಕವಾದ ಬೆಳಕು ಚೆಲ್ಲುವ ಪ್ರಯತ್ನವನ್ನು ಪೋಳ ಅವರು ಮಾಡಿದ್ದಾರೆ. ಸೌಜನ್ಯ ಸತ್ಯಗಳ ಅರಿವನ್ನು ತಮ್ಮ ವಚನಗಳ ಮೂಲಕ ಅರುಹಿದ್ದಾರೆ. ವಿಶ್ವಧರ್ಮವಾಗಬೇಕಿದ್ದ ಬಸವ ಧರ್ಮದ ಅವನತಿಗೆ ಕಾರಣವಾದವರ ಬಗ್ಗೆ ಕಕ್ಕಯ್ಯನವರಿಗೆ ನೋವಿದೆ, ಸಿಟ್ಟಿದೆ. ಸಿಟ್ಟಿನ ಹಿಂದೆ ಸಾಮಾಜಿಕ ಕಾಳಜಿ ಅಡಗಿದೆ. ಸಮಾಜ ಬದಲಾಗಬೇಕು. ಎಲ್ಲರೂ ಸಮಾನರಾಗಿ ಬಾಳಬೇಕು ಎನ್ನುವ ಮಹದಾಸೆ ಕುಮಾರ ಕಕ್ಕಯ್ಯನವರದಾಗಿದೆ.