ತ್ರಿಪದಿ ರಚನೆ:

ಜನಪದ ಸಾಹಿತ್ಯದ ಬಹು ಪಾಲು ಭಾಗ ಮಹಿಳೆಯರದು, ಅದರಲ್ಲೂ ಕೆಳವರ್ಗದ ಮಹಿಳೆಯರದು ಸಿಂಹ ಪಾಲು. ಇದನ್ನು ಗಮನಿಸಿದ ಸಿಂಪಿ ಲಿಂಗಣ್ಣ ಅವರು ಜನಪದ ಸಾಹಿತ್ಯ ‘ಹಾಳರ್ದ ಹೊಲೆಯರದು ಬೀಳರ್ದ ಹೆಂಗಳೆಯರದು’ ಎಂದು ಹೇಳಿದ್ದಾರೆ, ಅದರಂತೆ ಪೋಳ ಅವರು ಹುಟ್ಟು ಪ್ರತಿಭಾವಂತರು. ಪ್ರತಿಭೆಗೆ ಕುಲವಿಲ್ಲ. ಕಮಲ ಹುಟ್ಟುವುದು ಕೆಸರಿನಲ್ಲಿಯೇ ಎನ್ನುವುದು ನಮಗೆಲ್ಲ ಹೊಸದೇನು ಅಲ್ಲ. ತಳ ಸಮುದಾಯದಿಂದ ಬಂದ ಪೋಳ ಅವರು ಕಮಲದಂತೆ ಅರಳಿದವರು. ಅವಕಾಶ ಸಿಕ್ಕರೆ ಎಂಥವರೂ ಸಾಧನೆ ಮಾಡಬಹುದು ಎನ್ನಲಿಕ್ಕೆ ಪೋಳ ಅವರು ಒಂದು ಉದಾಹರಣೆ. ಅಕ್ಷರ ಸಂಸ್ಕೃತಿಯ ವ್ಯಾಪ್ತಿಗೆ ಬಂದರೆಂಭ ಕಾರಣಕ್ಕಾಗಿ ಕಥೆ, ಕಾದಂಬರಿ, ನಾಟಕ, ವಚನ ರಚನೆ ಮಾಡಿದ್ದಲ್ಲದೆ ತ್ರಿಪದಿಗಳನ್ನು ರಚಿಸಿದ್ದಾರೆ, ಕಲ್ಯಾಣ ಕ್ರಾಂತಿಯನ್ನು ವಸ್ತುವನ್ನಾಗಿಸಿಕೊಂಡು ಬಿಂಬಿಸಿದ್ದಾರೆ. ಉದಾಹರಣೆಗಾಗಿ ಕೆಲವು ತ್ರಿಪದಿಗಳನ್ನು ನೋಡಬಹುದು.

ಕಲ್ಯಾಣ ಊರಾಗ ಶರಣರು ಇಷ್ಟ್ಯಾಕ
ಹರನಾಮ ಜಯಘೋಷ ಮಾಡ್ಯಾರ ಬಸವಣ್ಣ
ಜಾತಿಯ ಭೂತ ಬಿಡಸ್ಯಾರ ||
ಕಲ್ಯಾಣ ಊರೀಗಿ ಊರಿಯಾಕ ಹತ್ಯಾದ
ಕ್ರಾಂತಿಯ ಕಿಡಿಯ ಸಿಡಿದಾದ | ಶರಣರು
ತ್ರಿಶೂಲ ಹಿಡಿದು ಕಾದ್ಯಾರ ||
ಕಲ್ಯಾಣ ಕೆರೆ ನೀರು ರಕ್ತ್ಯಾಕ ಆಗ್ಯಾವ
ರುಂಢುರಳಿ ಧಂಡ ಬಿದ್ದಾವ | ಶರಣರ
ನೆತ್ತರ ಕಾವಲಿ ಹರಿದಾವ ||
ಉಳವಿ ಕಲ್ಯಾಣ ನಡುವೆ ಧೂಳ್ಯಾಕ ಎದ್ದಾದ |
ಚೆನ್ನಬಸವಣ್ಣ ಬರುವಾಗ ಶರಣರು
ಘೋರ ಕಾಳಗ ಮಾಡ್ಯಾರ ||
ಉಳವಿಯ ಮಹಾಮನಿಗಿ ಮುತ್ತಿಗಿ ಹಾಕ್ಯಾರ |
ನೂರಾರು ಶರಣರು ಸಿಕ್ಕಾರ ಒಳಗ | ಸೈನಿಕರು
ಕಗ್ಗೊಲೆಯ ಮಾಡಿ ಕುಣಿದಾರ ||
ಶರಣರ ಶಿಶುಧರ್ಮ ಪರದೇಶಿ ಅಗ್ಯಾದ |
ಮಲತಾಯಿ ಕೈಗಿ ಸಿಕ್ಕಾದ | ಬಸವಣ್ಣ
ಕೊರಗಿ ಕೊರಗಿ ಸೊರಗ್ಯಾನ ||

ಬಸವ ಚಳವಳಿಯ ಕೊನೆಯಲ್ಲಾದ ಘಟನೆಯನ್ನು ತಮ್ಮ ತ್ರಿಪದಿಯಲ್ಲಿ ಚಿತ್ರಿಸಿದ್ದಾರೆ. ಬಸವಣ್ಣ ನಂತರ ಶರಣ ತತ್ವ ಅನಾಥವಾಗಿದೆ. ಅಷ್ಟೇ ಅಲ್ಲದೆ ಉಳವಿ ಹಾಗೂ ಕಲ್ಯಾಣದ ದುರ್ಗತಿ ಕುರಿತು ಲೇಖಕರು ಆತಂಕ ಪಟ್ಟಿರುವುದು ಕಾಣುತ್ತೇವೆ.

ವೈಚಾರಿಕ ಸಾಹಿತ್ಯ:

ವೈಚಾರಿಕತೆ ಎಂದರೇನು? ಯಾವ ವಿಚಾರ, ವಸ್ತು, ವಿಷಯ ವಿಚಾರಕ್ಕೆ ಒಳಪಡುತ್ತದೆಯೋ ಅದುವೇ ವೈಚಾರಿಕ ಸಾಹಿತ್ಯ. ಅಂತಹ ಸಾಹಿತ್ಯ ತತ್ವ ಚಿಂತನೆಗೆ ಒಳಪಡಬೇಕು. ಪ್ರತಿಯೊಂದು ಪದಾರ್ಥಕ್ಕೆ ಎರಡು ರೂಪಗಳುಂಟು. ಒಂದು ಇರುವ ನಿಜರೂಪ, ಇನ್ನೊಂದು ತೋರುವ ರೂಪ. ಇರುವ ರೂಪವೇ ತತ್ವ ತೋರುವ ರೂಪವೇ ಪ್ರತೀತಿ. ಇಂಥ ಸತ್ಯಾಶಂದಿಂದ ಕೂಡಿದ ವಸ್ತು ರೂಪದ ಭೌತಿಕ ವಾದವೇ ವೈಚಾರಿಕತೆಯಾಗಿದೆ.

ಅರಿವಿನ ಆಳದಲ್ಲಿ ಉಂಟಾದ ಸಂದೇಹಗಳ ಸಂಘರ್ಷವೇ ವೈಚಾರಿಕತೆಯಾಗಿದೆ. ಪ್ರಸ್ತುತ ಸಮಾಜಕ್ಕೆ ಬೇಕಾದ ಮೌಲ್ಯಗಳನ್ನು ಅರ್ಥೈಸಿಕೊಳ್ಳುವುದು; ವಾಸ್ತವಿಕತೆಯ ಹಿನ್ನೆಲೆಯಲ್ಲಿ ಜನಪರವಾಗಿ ಆಲೋಚಿಸುವುದೇ ವೈಚಾರಿಕತೆ. ಅರಿವೇ ಗುರು, ಅರಿವೇ ಲಿಂಗ, ಅರಿವೇ ಜಂಗಮ ಎಂಬುದು ವಚನಕಾರರ ವಿಚಾರವಾಗಿದೆ. ಅರಿವು ಅನುಭಾವದ ಸಂಗಮದಿಂದ ಕೂಡಿದಾಗ ಉಂಟಾಗುವ ಸುಖವೂ ಕೂಡ ವೈಚಾರಿಕತೆ. ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ. ಬಸವಣ್ಣನವರು ಜ್ಞಾನವನ್ನು ಅರಿವೆಂದು ತಿಳಸಿದರು. ಮರೆವಿಗೆ ಮುನಿವರಲ್ಲದೆ ಅರಿವಿಗೆ ಮುನಿದವರುಂಟೆ ಎಂಬುದು ಅರಿವಿನ ಮಾರಿ ತಂದೆಯ ವಿಚಾರವಾಗಿದೆ. ನಾಡಿನಲ್ಲಿ ಎಲ್ಲ ಕಾಲದಲ್ಲಿ ಸಾಹಿತ್ಯದ ವಿವಿಧ ಪ್ರಕಾರಗಳು ಸೃಷ್ಟಿಯಾಗುತ್ತಾ ಬಂದಿವೆ. ಹೆಚ್ಚಿನ ಕವಿಗಳು ಕಾಲಮಾನಕ್ಕೂ ಅಥವಾ ರಾಜಾಶ್ರಯಕ್ಕಾಗಿಯೇ ವರ್ಣನಾತ್ಮಕ ಪೌರಾಣಿಕ ವ್ಯಕ್ತಿಗಳನ್ನು ವೈಭವೀಕರಿಸುವ ಸಾಹಿತ್ಯ ಸೃಷ್ಟಿಸಿದರು. ಇಂದು ಅಂಥ ಸಾಹಿತ್ಯ ಸೃಷ್ಟಿಯ ಅವಶ್ಯಕತೆ ಇದೆಯೇ ಎಂದು ತಿರುಗಿ ನೋಡಬೇಕಾಗಿದೆ.

ಪ್ರಕೃತಿಯನ್ನು ಆರಾಧಿಸುತ್ತ ಬಂದ ಮಾನವ ಬೌದ್ಧಿಕ ವಿಕಾಸ ಹೊಂದಿದ ಮೇಲೆ ತನ್ನ ಕಲ್ಪನಾ ಶಕ್ತಿಯಿಂದ ಅಲೌಕಿಕವಾದ, ಕಾಣದ ಸ್ವರ್ಗ – ನರಕ, ಪಾಪ – ಪುಣ್ಯ, ದೇವಲೋಕದ ದೇವಾನು ದೇವತೆಗಳನ್ನು ಕುರಿತಾಗಿ ಕಥೆ ಬರೆದರು. ಕೆಲವಾರು ಪುರಾಣಗಳಲ್ಲಿ ದೇವತೆಗಳನ್ನು ಸಹ ಮಾನವ ರಾಗ – ದ್ವೇಷ, ಕಾಮ – ರತಿ, ಯುದ್ಧಗಳ ಕೋಲಾಹಲಗಳಲ್ಲಿ ತೊಡಗಿಸಿ ಅವರ ಗೌರವಕ್ಕೆ ಧಕ್ಕೆ ತಂದ ಕಥೆಗಳು, ಕೃತಿಗಳು ವಿಫುಲವಾಗಿವೆ.

ದಾನ, ಧರ್ಮಗಳ ಕುರಿತಾಗಿ ಕಲ್ಪಿತ ಚರಿತ್ರೆಗಳಲ್ಲಿ ಕನ್ಯಾದಾನ, ಗೋಧಾನ, ಭೂದಾನಗಳಿಂದ ಪುಣ್ಯ ಬರುತ್ತದೆ. ಬಲಿ ಕೊಡುವುದರಿಂದ ಮೋಕ್ಷ, ಮುಕ್ತಿ ಕೊಟ್ಟವರಿಗೂ ಬಲಿಯಾದ ಪ್ರಾಣಿಗೂ ಸಿಗುತ್ತದೆ ಎಂದು ನಂಬಿಸಿದರು. ಇಂಥ ಮಾರಕ ಅಮಾನವೀಯ ತಂತ್ರಗಳಿಂಧ ಕೂಡಿದ ನಿಯಮಾವಳಿಗಳುಳ್ಳ ಗ್ರಂಥಗಳನ್ನು ಸೃಷ್ಟಿ ಮಾಡಿದರು. ಅಮಾನವೀಯ ಹಾಗೂ ಜೀವ ವಿರೋಧಿ ಚಿಂತನೆಯ ಗ್ರಂಥಗಳು ಮುಂದಿನ ಜನಾಂಗಕ್ಕೆ ಧರ್ಮ ಗ್ರಂಥಗಳಾದವು. ಅಷ್ಟೇ ಅಲ್ಲ ಅವುಗಳನ್ನು ಈಗಲೂ ಪೂಜಿಸುತ್ತಿರುವುದು ವಿಪರ್ಯಾಸವೆ ಸರಿ. ಅವುಗಳನ್ನು ಯಾರು ಆರಾಧಿಸುತ್ತಾರೋ ಅವರು ಪೂಜೆಗೆ ಅರ್ಹರಾದರು. ಇಂದಿಗೂ ಆ ಕುರಿತಂತೆ ಜನರಲ್ಲಿ ಹುಟ್ಟಿದ ಭಯ, ಭಾವನೆಯಿಂದಾಗಿ ಭಕ್ತಿ ಮುಂದುವರೆದಿರುವುದನ್ನು ಕಾಣುತ್ತೇವೆ.

ಪ್ರಗತಿ ಪರ ವಿಚಾರವಾದಿ, ಬಸವ ತತ್ವದ ಅನುಯಾಯಿ, ನಿಷ್ಟುರವಾದಿ, ಜೀವಪರ – ಜನಪರ ಚಿಂತನೆಯ ಕುಮಾರ ಕಕ್ಕಯ್ಯ ಪೋಳ ಅವರು, ಸಮಾಜದಲ್ಲಿ ಬೇರೂರಿರುವ ಮೌಢ್ಯ, ಕಂದಾಚಾರ, ಪಾಪ, ಪುಣ್ಯಗಳ ಹೆಸರಿನಲ್ಲಿ ಕಲ್ಪನೆಯ ದೇವರು, ಸ್ವರ್ಗ, ನರಕ ಚಿಂತನೆಯನ್ನು ಹೊತ್ತಿರುವ ಧರ್ಮ ಗ್ರಂಥಗಳು ಹಾಗೂ ಧರ್ಮಗುರುಗಳು, ಸಮಾಜದ ರೀತಿ, ನೀತಿ, ರಾಜಕೀಯ, ಸಾಮಾಜಿಕ ವಂಚನೆ ಇಂಥ ಸೂತ್ರಗಳಿಂದ ಮಣ್ಣು ತಿನ್ನುತ್ತಿರುವ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡಲು ಅವುಗಳ ನಿಜಾರ್ಥವನ್ನು ತಿಳಿಸಿದ್ದಾರೆ. ವ್ಯವಸ್ಥೆಯ ಪುನರ್ ನಿರ್ಮಾಣದ ಬಗ್ಗೆ ಕಳಕಳಿಯಿಂದ ಚಿಂತಿಸಿ ವೈಚಾರಿಕವಾಗಿ ಚಿಂತನೆ ಮಾಡಿದ್ದಾರೆ, ಅಂತಹ ಚಿಂತನೆಗಳನ್ನು ಹೊತ್ತ ಅವರ ಕೃತಿಗಳು ಮಹತ್ವದ್ದಾಗಿವೆ. ‘ಧರ್ಮಕ್ರಾಂತಿ’ ಕೃತಿಯಲ್ಲಿ ಧರ್ಮ, ಭಕ್ತಿ ದೇವರನ್ನು ಕುರಿತು ವಿವೇಚಿಸಿದ್ದಾರೆ. ‘ಮೂಕನ ಭಾಷಣ’ ದನಿ ಕಳೆದುಕೊಂಡ ಶೋಷಿತ ಶೋಷಣೆಗೆ ಕಾರಣವಾದ ಸಾಕ್ಷಾತ್ಕಾರ, ದೇವಾನು ದೇವತೆಗಳು, ಧರ್ಮ ಗುರುಗಳು, ಹಿಂದೂ ಧರ್ಮದ ಕುರಿತ ರಹಸ್ಯವಾದ ವಿಚಾರಗಳನ್ನು ಆಧಾರ ಸಹಿತವಾಗಿ ವಿವೇಚಿಸಿದ್ದಾರೆ.

ಧರ್ಮಕ್ರಾಂತಿ: ೧೯೬೫ರಲ್ಲಿ ಧರ್ಮಕ್ರಾಂತಿ ಕೃತಿಯ ಮೂಲಕ ಪೋಳ ಅವರು ಧಾರ್ಮಿಕ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಿದರು. ವೈರುಧ್ಯಗಳ ನಡುವೆಯೇ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಮತ್ತು ಧಾರ್ಮಿಕ ದಾಳಿಗಳಿಂದ ಆಗುವ ಅಮಾನವೀಯ ಕೃತ್ಯಗಳ ಮೂಲಕ ನಡೆಯುವ ಶೋಷಣೇಯನ್ನು ನಿಲ್ಲಿಸುವುದಕ್ಕಾಗಿ ದಬ್ಬಾಳಿಕೆಯನ್ನು ದಮನ ಮಾಡುವುದಕ್ಕಾಗಿ ಪ್ರಯತ್ನಿಸಿದರು. ಇದು ಅವರ ಮೊದಲ ಕೃತಿಯಾದರೂ ಹರಿತವಾದ ವೈಚಾರಿಕ ಚಿಂತನಾ ಗ್ರಂಥ ಇದಾಗಿದೆ. ಇದರಲ್ಲಿ ಧರ್ಮ, ಭಕ್ತಿ ಮತ್ತು ದೇವರ ಕುರಿತು ಚಿಂತನೆಗೆ ತೊಡಗಿಸುವ ಸುಮಾರು ೮೨ ವಿಚಾರಶೀಲ ಬರಹಗಳಿವೆ. ಪ್ರಸ್ತುತ ಗ್ರಂಥದ ಆರಂಭದಲ್ಲಿಯೇ ಭಕ್ತಿ ಭಕ್ತಿ ಎಂದು ಭಜಿಸಿ ನೇಮ – ನಿಷ್ಠೆಯಿಂದ ಜಪಮಾಡಿ ನೇರವಾಗಿ ಸ್ವರ್ಗ ಸೇರಿ ಮುಕ್ತಿ ಪಡೆಯಬೇಕೆಂದು ಹಲುಬಿ – ಹಂಬಲಿಸಿ ಗಾಳಿಯೊಡನೆ ಗುದ್ದಾಡುವ ಮಹಾನುಭವರಿಗೆ ಸಮರ್ಪಣೆ ಎಂದು ದಾಖಲಿಸುವುದರ ಮೂಲಕ ಡಾಂಭಿಕ ಭಕ್ತಿ ಮಾಡುವವರನ್ನು ಕುರಿತು ವಿಡಂಬಿಸಿದ್ದಾರೆ.

ದೇವರ ಕುರಿತು ಮಾತನಾಡುವ ಕುಮಾರ ಕಕ್ಕಯ್ಯ ಪೋಳ ಅವರು ವಿವಿಧ ನೆಲೆಯಲ್ಲಿ ದೇವರ ಅಸ್ತಿತ್ವವನ್ನು ಕಾಣುವವರು, ಅದನ್ನು ಮನುಷ್ಯ ರೂಪಿ ಎಂದವರಿಗೆ ಹೀಗೆ ಹೇಳುತ್ತಾರೆ “ನಾಟಕದಲ್ಲಿ ಪ್ರಕಟವಾಗುವ ದೇವರು ಹೊರಗೂ ಪ್ರಕಟವಾಗುವುದು ಎಂದು ಭ್ರಮಿಸಿ ಮುರ್ಖನಾದೆ. ಕಾಣದ ದೇವರಿಗೆ ಕೈಮಾಡಿ ಕರೆದೆ, ನಿರಾಕಾರ ದೇವರು ಸಾಕಾರನೆಂದು ಬಗೆದು ಅವಿವೇಕಿಯಾದೆ. ಚಿಂತೆಯಿಂದ ಬೆಂದು ಪ್ರಕೃತಿಯ ಸುಖ ಕಳೆದುಕೊಂಡೆ”. ಇದು ಅವರ ಸ್ವಾನುಭವದ ವಿಚಾರ. ಹುಟ್ಟು – ಸಾವು ಇವು ನಿಸರ್ಗದ ವ್ಯಾಪಾರವೆಂದು ಹೇಳಿದ ಬೌದ್ಧರ ವಿಚಾರಗಳು ಪೋಳ ಅವರನ್ನು ಹೆಚ್ಚು ಪ್ರಭಾವಿತರನ್ನಾಗಿ ಮಾಡಿವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಕಾಣದ ದೇವರನ್ನು ಹುಡುಕುವುದಕ್ಕಿಂತ ಕಾಣುವ ಸುಂದರ ಸೃಷ್ಟಿಯನ್ನೊಮ್ಮೆ ಸೂಕ್ಷ್ಮದೃಷ್ಟಿಯಿಂದ ನೋಡು. ಈ ನಿಸರ್ಗದ ತೊಟ್ಟಿಲನ್ನು ತೂಗುತ್ತಿರುವ ಶಕ್ತಿಯೇ ದೇವರೆಂದು ತಿಳಿ ಎಂದು ಸಂಪ್ರದಾಯವಾದಿಗಳನ್ನು ಮೂಢರನ್ನು ಪೋಳ ಅವರು ಎಚ್ಚರಿಸಿದ್ದಾರೆ. ಧರ್ಮ, ಜಾತಿ, ಭಾಷೆಯ ವ್ಯಾಮೋಹದಲ್ಲಿ ಸೊಣಗನಂತೆ ಬೊಗಳುವವರನ್ನು ತಮ್ಮ ವಿಚಾರಗಳ ಮೂಲಕ ತಿವಿಯುತ್ತಾರೆ. ಚಾರಿತ್ರ್ಯ ಕುರಿತು ಮಾತನಾಡುತ್ತಾ ನಿನ್ನ ಸತಿ ಪತಿವ್ರತೆಯಾಗಬೇಕು ಎಂದು ಹಂಬಲಿಸುವ ನೀನು ಮೊದಲು ಸತಿ ವ್ರತನಾಗು, ಆಕಾಶದಲ್ಲಿ ಸ್ವರ್ಗ, ಪಾತಾಳದಲ್ಲಿ, ನರಕಗಳಲ್ಲಿ ಜ್ಞಾನಿಯಾದ ನೀನು ವಿಚಾರ ಮಾಡಿ ಸುಖಿಯಾಗಿ ಬಾಳು ಎನ್ನುತ್ತಾರೆ. ಆತ್ಮ ಸಾಕ್ಷಿಗೆ ವಿರುದ್ಧವಾಗಿ ನಡೆಯುವವರ ಮೇಲೆ ಹರಿಹಾಯುತ್ತಾರೆ. ಈ ತೆರನಾಗಿ ಕ್ರಾಂತಿಕಾರಿ ಚಿಂತನೆಗಳು ಕೃತಿಯುದ್ಧಕ್ಕೂ ಮಹತ್ವದ ದೃಷ್ಟಾಂತಗಳ ಮೂಲಕ ವ್ಯಕ್ತಗೊಂಡಿವೆ. ವಿವರಣೆಯೊಂದಿಗೆ ಈ ಕೃತಿ ಕುತೂಹಲ ಕೆರಳಿಸುತ್ತ ಓದಿಸಿಕೊಂಡು ಹೋಗುತ್ತದೆ.

‘ಬಸವ ಧರ್ಮ ಯಾರ ಸೊತ್ತು’, ಚಿಂತನಪರ ಗ್ರಂಥ. ‘ಬಸವ ಧರ್ಮ ದರ್ಶನ’ದಲ್ಲಿ ಬಸವ, ಧರ್ಮದರ್ಶನ ಮಾಡಿಸಿದರೆ ‘ಚಾತುರ್ವರ್ಣ ಧರ್ಮದರ್ಶನ’ ಹಿಂದೂ ಧರ್ಮದ ಪವಿತ್ರ ಗ್ರಂಥಗಳೆಂದು ಕರೆಯಲ್ಪಡುವ, ರಾಮಾಯಣ – ಮಹಾಭಾರತದ ಪೌರಾಣಿಕ ವ್ಯಕ್ತಿಗಳಾದ, ರಾಮ, ಸೀತೆ, ಲಕ್ಷ್ಮಣ, ಕೃಷ್ಣ, ಕೌರವ, ಪಾಂಡವರ ಕುರಿತು ಸಂಶೋಧನಾತ್ಮಕ ಹಾಗೂ ಪ್ರಖರವಾದ ವೈಚಾರಿಕ ನೆಲೆಯಲ್ಲಿ ಮೂಡಿಬಂದಿವೆ. ನಿಜಕ್ಕೂ ವೈಚಾರಿಕ ಕ್ಷೇತ್ರದ ಮಹತ್ವದ ಬೃಹತ್‌ಗ್ರಂಥ ಇದಾಗಿದೆ. ಬ್ರಹ್ಮನ ಭ್ರಾಂತಿ, ದೇವತೆಗಳ ದ್ವಂದ್ವ, ಧರ್ಮ ಗುರುಗಳ ಅವಾಂತರ, ಅಸ್ಪೃಶ್ಯರಾದ ಆದಿ ಕ್ಷತ್ರಿಯರೆಂಭ ನಾಲ್ಕು ಭಾಗಗಳಲ್ಲಿ ಸ್ಮೃತಿ ಶಾಸ್ತ್ರ, ವೇದ ಆಗಮ, ಪುರಾಣಗಳ ಮೂಲಕ ಶೋಷಣೆ ಹೇಗೆ ಮಾಡುತ್ತಾ ಬಂದಿದ್ದಾರೆಂಬುದನ್ನು ವಿವೇಚಿಸಿದ್ದಾರೆ.

‘ಮೂಕನ ಭಾಷಣ’ ಈ ಕೃತಿಯು ಕುಮಾರ ಕಕ್ಕಯ್ಯ ಪೋಳ ಅವರ ವೈಚಾರಿಕ ಲೇಖನಗಳ ಸಂಕಲನ. ಕೃತಿಯ ಆರಂಭದಲ್ಲಿ ತುಂಬ ಮಾರ್ಮಿಕವಾಗಿ ಲೇಖಕರು ಹೀಗೆ ನಿವೇದಿಸಿಕೊಂಡಿದ್ದಾರೆ. “ತತ್ವಜ್ಞಾನಿಗಳಿಗಾಗಿ, ವಿದ್ವಾಂಸರಿಗಾಗಿ ಅಥವಾ ವಿಜ್ಞಾನಿಗಳಿಗಾಗಿ ಹೇಳಿದ ವಿಚಾರಗಳು ಇವಲ್ಲ. ಯಾವುದೇ ಆಳವಾದ, ಅಭ್ಯಾಸ ಅಥವಾ ಪಾಂಡಿತ್ಯ ಪ್ರದರ್ಶನ ಮಾಡುವ ಇಚ್ಚೆ ನನಗಿಲ್ಲ. ವಾದ ಹಾಕಿ ವಿಷಯ ಸಮರ್ಥಿಸಲು ನಾನು ಬದುಕುವುದಿಲ್ಲ. ದೇವರು, ಧರ್ಮ ಮತ್ತು ಜಾತಿ ಇವುಗಳ ವಿಪರೀತ ಪರಿಣಾಮಗಳಿಂದಾಗಿ ಇಂದಿನ ಮಾನವ ಮಾನವೀಯತೆಯನ್ನು ಕಳೆದುಕೊಂಡಿದ್ದಾನೆ. ಧರ್ಮದ ಹೆಸರಿನಲ್ಲಿ ಕೆಲವೊಂದು ವಿಶಿಷ್ಟ ಕೋಮಿನಿವರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಕೆಳವರ್ಗದ ಬಡಪಾಯಿಗಳು ಘೋರವಾದ ಯಾತನೆಗಳನ್ನು ಅನುಭವಿಸುತ್ತಿದ್ದಾರೆ. ಧರ್ಮದ ಭದ್ರ ಕೋಟೆಯಲ್ಲಿ, ಧಾರ್ಮಿಕ ಬಂಧಿಖಾನೆಗಳಲ್ಲಿ, ಜಾತೀಯತೆಯ ಸಂಕೋಲೆಗಳಿಂದ ಪ್ರತಿಬಂಧಿತರಾಗಿ ಜೀವನದಿಂಧ ಮರಣದವರೆಗೆ ಒಂದೇ ಸಮನೆ ಕೊಳೆಯುತ್ತಲೇ ಇರುವ ಸಹೋದರ – ಸಹೋದರಿಯರಲ್ಲಿ ಕೆಲವರಾದರೂ ನನ್ನ ಈ ಮೂಕನ ಭಾಷಣದ ಅರ್ಥ ಮಾಡಿಕೊಂಡರೆ, ಅದು ನಾನು ಹೇಳಿದ್ದಕ್ಕೆ ಸಾರ್ಥಕ ಎಂದಿದ್ದಾರೆ.

‘ಮೂಕನ ಭಾಷಣ’ ಕೃತಿಯಲ್ಲಿ ಸಾಕ್ಷಾತ್ಕಾರ ಶಬ್ದ ಸಾಮಾನ್ಯವಾಗಿ ಕಾಣು, ದರ್ಶನ, ಕೃಪೆಯಾಗು, ಆಶೀರ್ವಾದ. ಈ ಮುಂತಾದ ಅರ್ಥವನ್ನು ಹೊಂದಿದೆ. ಇದರಲ್ಲಿ ಆರ್ಯರ ದೇವಾನು ದೇವತೆಗಳು, ಧರ್ಮಗುರುಗಳು, ಹಿಂದೂ ಧರ್ಮದ ರಹಸ್ಯ ಎಂಬ ನಾಲ್ಕು ವೈಚಾರಿಕ ಪ್ರಬಂಧಗಳಿವೆ. ಸಾಕ್ಷಾತ್ಕಾರ ಪ್ರಬಂಧದಲ್ಲಿ ಈಗ ನಾನು ಹೇಳಬಯಸುವ ವಿಷಯ ಪರಮಾತ್ಮನ ಸಾಕ್ಷಾತ್ಕಾರ, ಹಾಲು, ಅಮೃತ ಅದನ್ನು ಕುಡಿಯಬೇಕು. ಅದೇ ಹಾಲೆಂದು ಸುಣ್ಣದ ನೀರು ಕೊಟ್ಟರೆ? ಕಾಲ್ಪನಿಕ ಸಾಕ್ಷಾತ್ಕಾರಕ್ಕಾಗಿ, ಮೋಕ್ಷಕ್ಕಾಗಿ ಅನೇಕ ಜನ ಅನೇಕ ಮಾರ್ಗಗಳನ್ನು ಅನುಸರಿಸುತ್ತಾರೆ. ಬಲಿಕೊಟ್ಟ ಪ್ರಾಣಿಗೆ ಸ್ವರ್ಗ, ಮೋಕ್ಷಸಿಗುತ್ತದೆ ಎಂದು ಹೇಳುತ್ತಾರೆ. ಬಲಿಹಿಂಸೆಯಲ್ಲವೆಂದು ಹೇಳುವುದು ಜೀವವಿರೋಧಿ ವಿಚಾರವಾಗುತ್ತದೆ. ಸಾಕ್ಷಾತ್ಕಾರ ಮನಸ್ಸಿನ ಕಾಲ್ಪನಿಕ ಭ್ರಾಂತಿಯೇ ಹೊರತು ಅದಕ್ಕೆ ಯಾವುದೇ ರೀತಿಯ ಯಾವುದೇ ಅಧಿಕೃತ ಆಧಾರಗಳಿಲ್ಲ. ಊರಲ್ಲಿಯ ಮನೆಬಿಟ್ಟು ಸನ್ಯಾಸಿಯನ್ನಾಗಿ ಮಾಡುವ, ಬಾಳನ್ನು ಹಾಳಾಗಿಸುವ ಮೋಕ್ಷದ, ಮುಕ್ತಿಯ ಹೆಸರಲ್ಲಿ ಮೃತ್ಯು ಪೂಜೆಮಾಡಲು ಹಚ್ಚುವ ಇಂತಹ ಗೊಡ್ಡು ಆಧ್ಯಾತ್ಮಿಗಳ ಬಗ್ಗೆ ಎಚ್ಚರದಿಂದರಲು ಲೇಖಕರು ಕರೆಕೊಡುತ್ತಾರೆ. ಅಲ್ಲದೆ ಮೋಸ ಹೋಗಿ ಆ ಬಳಿಕ ಪರಿತಪಿಸಬಾರದು ಎನ್ನುತ್ತಾರೆ.

ಪ್ರಾಣಿಯನ್ನು ಬಲಿಕೊಡುವ ಪ್ರಸಂಗದಲ್ಲಿ ಬಿಂಬಸಾರ ದೊರೆಯನ್ನು ಕಂಡು ಬುದ್ಧ ಹೀಗೆ ಹೇಳುತ್ತಾನೆ. ಪ್ರಾಣಿ ಬಲಿಕೊಡುವುದರಿಂದ ದೇವರು ನಿಮಗೆ ಸಿಗುತ್ತಾನೆ ಎನ್ನುವುದಾದರೆ, ನನ್ನನ್ನೇಕೆ ಬಲಿಕೊಡಬಾರದು ಎಂದು ವಿನಂತಿಸಿಕೊಳ್ಳುತ್ತಾನೆ, ಬುದ್ಧನ ಈ ಮಾತಿಗೆ ಎಚ್ಚೆತ್ತ ಅರಸ ಬಲಿಕೊಡುವುದನ್ನು ನಿಲ್ಲಿಸುತ್ತಾನೆ. ಆದ್ದರಿಂದ ಬಲಿಯಿಂದ ದೇವರು ದೊರೆಯುವುದಿಲ್ಲ. ಬಸವಣ್ಣನವರೂ ತಮ್ಮ ಅನೇಕ ವಚನಗಳಲ್ಲಿ ಪ್ರಾಣಿಬಲಿಕೊಡುವುದನ್ನು ಪ್ರತಿಭಟಿಸಿದ್ದಾರೆ. ದಯವೇ ಧರ್ಮದ ಮೂಲ, ದಯೆ ಇರಬೇಕು ಎಲ್ಲ ಪ್ರಾಣಿಗಳಲ್ಲಿ ಎಂದಿದ್ದಾರೆ. ಪ್ರಾಣಿ ಬಲಿಯಿಂದ ದೇವರನ್ನು ತೃಪ್ತಿಪಡಿಸುವುದು ಶುದ್ಧ ಸುಳ್ಳು ಎನ್ನುವುದು ಪೋಳ ಅವರ ವಿಚಾರದಲ್ಲೂ ಹೊಳೆದಿದೆ. ಈ ಪ್ರಬಂಧದಲ್ಲಿ ಆರ್ಯರ ಹಲವಾರು ದೇವಾನು ದೇವತೆಗಳ ಕುರಿತಾದ ಪೌರಾಣಿಕ, ಕಾಲ್ಪನಿಕ ಹಾಗೂ ಅನೈತಿಕ ಜೀವನ ಪದ್ಧತಿ, ಹುಟ್ಟು ಮುಂತಾದ ವಿಷಯಗಳ ಕುರಿತು ವಿವರವಾಗಿ ಚರ್ಚಿಸಿದ್ದಾರೆ. ಪೋಳ ಅವರು ಅಭಿಪ್ರಾಯ ಪಡುವ ಹಾಗೆ ಆರ್ಯರಿಗೆ ಬೇಕಾದವರೆಲ್ಲರೂ ದೇವಾನು ದೇವತೆಗಳಾದರು. ಬೇಡವಾದವರೆಲ್ಲರೂ ದಾನವರಾದರು. ಶತಮಾನಗಳಿಂದ ದೇವತೆಗಳೆಂದು ಕರೆಯಿಸಿಕೊಳ್ಳುವವರು ಯುದ್ಧಗಳನ್ನು ಮಾಡಿದ್ದಾರೆ. ಒಬ್ಬರ ರುಂಡವನ್ನು ಇನ್ನೊಬ್ಬರು ಚಂಡಾಡಿದ್ದಾರೆ. ಗುರುಗಳ ಹೆಂಡಿರನ್ನು ಶಿಷ್ಯರು ದೇವರೆಂದು ಇಂದು ನಾವು ಗೌರವಿಸುತ್ತೇವೆ. ಆತನಿಗೆ ಹದಿನಾರು ಸಾವಿರ ಹೆಂಡಂದಿರಿದ್ದರು ಎಂಬುದು ಪುರಾಣ ಕಲ್ಪನೆ. ಇದೇ ಕೃಷ್ಣ ಸ್ನಾನ ಮಾಡುತ್ತಿದ್ದ ಬಾಲೆಯರ ಉಡುಪುಗಳನ್ನು ಕದ್ದಿರುವುದು, ಮೊಸರು ಕದ್ದಿರುವುದು ಇಂತಹ ಅನಾಚಾರಿ ಕಾಲ್ಪನಿಕ ದೇವತೆಗಳನ್ನು ಕೈಬಿಡಲು ಪೋಳ ಅವರು ವಿನಂತಿಸಿಕೊಳ್ಳುತ್ತಾರೆ. ಅವರ ದೃಷ್ಟಿಯಲ್ಲಿ ದಯವೇ ದೇವರು. ಬಸವಣ್ಣನವರೂ ದಯವೇ ಧರ್ಮದ ಮೂಲವೆಂದುದನ್ನಿಲ್ಲಿ ಸ್ಮರಿಸಿಕೊಳ್ಳಬಹುದು. ಒಬ್ಬ ಮಾನವ ಇನ್ನೊಬ್ಬನ ಹೃದಯದಲ್ಲಿ ಪ್ರೀತಿ ಕಾಣುವುದೇ ದೇವರು. ಇದೇ ರಹಸ್ಯ, ಇದೇ ನಿಜವಾದ ಧರ್ಮ ಸೂತ್ರ ಅದಕ್ಕಾಗಿ ಇದನ್ನು ಮರೆಯಬೇಡಿ ಎಂದು ವಿನಂತಿಸಿಕೊಳ್ಳುತ್ತಾರೆ.

ಇದೇ ಸಂಕಲನದ ‘ಧರ್ಮ ಗುರುಗಳು’ ಲೇಖನದಲ್ಲಿ ಸ್ವಾರ್ಥಿ, ದುರಹಂಕಾರಿ, ಅನಾಚಾರಿ, ವ್ಯಭಿಚಾರಿ, ಢೋಂಗಿ, ಆಷಾಢಭೂತಿ, ಗುರು ಜಗದ್ಗುರು, ಸ್ವಾಮಿ ಸನ್ಯಾಸಿಗಳ ಕಪಟ ಗುಣಗಳನ್ನೆಲ್ಲ ತೆರೆದಿಟ್ಟಿದ್ದಾರೆ. ಮಠಾಧೀಶರು ಹೆಣ್ಣು, ಹೊನ್ನು, ಮಣ್ಣು, ಬಂಗಾರ, ಬೆಳ್ಳಿ ಕಿರೀಟಗಳನ್ನು ಸ್ವೀಕರಿಸುವುದು, ಧರಿಸುವುದು, ಪಾದ ಪೂಜೆ ಮಾಡಿಸಿಕೊಳ್ಳುವುದು, ಪಲ್ಲಕ್ಕಿಯಲ್ಲಿ ಕೂತು ಹೋಗುವುದು, ಪಟ್ಟಾಭಿಷೇಕ ಮಾಡಿಸಿಕೊಳ್ಳುವುದಲ್ಲದೆ ರತ್ನ ಖಚಿತ ಸಿಂಹಾಸನದ ಮೇಲೆ ಕೂತುಕೊಳ್ಳುವರು. ಮೇಲಾಗಿ ಹೆಣ್ಣಿನ ಸುತ್ತ ಸುತ್ತುವರು. ಇಂತಹ ಭೋಗ ವಿಲಾಸಗಳು ಜ್ಞಾನ – ವೈರಾಗ್ಯವನ್ನರಿತು ಪಾಲಿಸುತ್ತಾರೆ ಎಂದು ಸಾಧು, ಸನ್ಯಾಸಿಗಳ ವ್ಯಕ್ತಿತ್ವದ ನಿಜ ಸ್ವರೂಪ೦ವನ್ನು ಲೇಖಕರು ತೆರೆದಿಡುತ್ತಾರೆ. ಪಲ್ಲಕ್ಕಿಯಲ್ಲಿ ಕೂತು ಮೆರೆಸಿಕೊಳ್ಳುವುದು ನಿಜಕ್ಕೂ ಸರಿಯಾದುದಲ್ಲ. ಶರಣರು ಇಂಥ ವೈಭವಯುತ ಜೀವನವನ್ನು ವಿರೋಧಿಸಿದರು. ಪೋಳ ಅವರೂ ಡಂಭಾಚಾರದ ಧರ್ಮಗುರುಗಳನ್ನು ತಮ್ಮ ಬರಹಗಳಲ್ಲಿ ನಿರ್ಭಿಡೆಯಿಂದ ಖಂಡಿಸಿದ್ದುಂಟು.

ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಪಟ್ಟಭದ್ರರು ನಿರಂತರವಾಗಿ ಶೂದ್ರರನ್ನು, ದಲಿತರನ್ನು, ಮಹಿಳೆಯರನ್ನು ತುಳಿಯುತ್ತಲೇ ಬಂದಿದ್ದಾರೆ. ಅವರ‍ಶ್ರಮದ ಮೇಲೆ ವೈಭವದ ಸುಖ ಭೋಗ ಅನುಭವಿಸುತ್ತಾ ಬಂದಿರುವುದನ್ನು ತಾರ್ಕಿಕವಾಗಿ ವಿವೇಚನೆಗೊಳಪಡಿಸಿದ್ದಾರೆ. ‘ಹಿಂದೂ ಧರ್ಮದ ರಹಸ್ಯ’ ಎಂಬ ಪ್ರಬಂಧದಲ್ಲೂ ಸನಾತನರು ಅನೇಕ ಕಟ್ಟಳೆಗಳನ್ನು ಇತರರ ಮೇಲೆ ವಿಧಿಸುತ್ತ ಅಂತ್ಯಜರ ಸುಖ, ಸಂಪತ್ತನ್ನು ದೋಚುತ್ತಾ ದಲಿತರನ್ನು ದಲಿತರನ್ನಾಗಿಡುವುದರಲ್ಲಿಯೇ ನೆಮ್ಮದಿ ಕಂಡಿದ್ದಾರೆ. ಇದನ್ನು ಅವರು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ.

ಅವರಲ್ಲಿರುವ ಮಡಿವಂತಿಕೆಯಿಂದಾಗಿ ಅವರು ಪ್ರತಿಪಾದನೆಮಾಡುವ ಮೌಢ್ಯತೆಯಿಂದಾಗಿ ಬಹುಸಂಖ್ಯಾತ ಶೋಷಿತ ವರ್ಗದವರು, ತಲೆಎತ್ತದಂತೆ ನೋಡಿಕೊಂಡಿದ್ದಾರೆ. ಅದೇ ಅವರ ಧಾರ್ಮಿಕ ವ್ಯವಸ್ಥೆಯ ರಹಸ್ಯವಾಗಿದೆ ಎಂದು ಪೋಳ ಅವರು ಹೇಳುವುದರ ಮೂಲಕ ದಲಿತ, ಶೂದ್ರರಲ್ಲಿ ಅರಿವು ಮೂಡಿಸಿದ್ದಾರೆ. ಮುಂದುವರೆದು ಜಾಗೃತಿಯ ಕಾಲ ದೂರವಿಲ್ಲ ದಲಿತ ಶೂದ್ರರು, ಶೋಷಿತರು, ಬಡವರು, ಕಾರ್ಮಿಕರು ಎಚ್ಚರಗೊಳ್ಳಬೇಕು. ವಿದ್ಯಾ, ಬುದ್ಧಿ, ಶಿಕ್ಷಣ ಪಡೆಯುವುದಲ್ಲದೆ ಎಚ್ಚರಿಕೆಯಿಂದ ಸನಾತನರ, ಕರ್ಮಠರ ಶೋಷಣೆಯನ್ನು ವಿರೋಧಿಸಬೇಕು ಎಂದಿದ್ದಾರೆ. ಅಂಬೇಡ್ಕರ್ ಅವರು ಹೇಳುವ ಹಾಗೆ ಶೋಷಣೆ ಮಾಡುವುದು ಎಷ್ಟು ಅಪರಾಧವೋ ಶೋಷಣೆಯನ್ನು ಸಹಿಸುವುದು ಮಹಾ ಅಪರಾಧವೆಂದಿದ್ದಾರೆ. ಈ ಕೃತಿಯುದ್ಧಕ್ಕೂ ಪುರೋಹಿತ ಶಾಹಿ ವ್ಯವಸ್ಥೆಯನ್ನು ಇಂಚಿಂಚಾಗಿ ಖಂಡಿಸಿದ್ದಾರೆ, ತುಂಡರಿಸಿದ್ದಾರೆ.

ಬಸವ ಧರ್ಮ ಯಾರ ಸೊತ್ತು: ಬಸವ ಧರ್ಮ ಯಾರ ಸೊತ್ತು (೧೯೪೨) ವೈಚಾರಿಕ ನೆಲೆಯಲ್ಲಿ ಬಸವ ಧರ್ಮ ಯಾರ ಸೊತ್ತು ಎನ್ನುವುದನ್ನು ಪೋಳ ಅವರು ಬಹಳ ನಿಖರವಾಗಿ, ಸ್ಪಷ್ಟವಾಗಿ ವಿವೇಚನೆಗೊಳಪಡಿಸಿದ್ದಾರೆ. ಸಹಸ್ರಾರು ವರ್ಷಗಳಿಂದ ಶೈವ – ವೈದಿಕ ಪುರೋಹಿತಶಾಹಿಗಳ ಕರ್ಮಠ ಧರ್ಮ – ದೇವಾಲಯ ಸಂಸ್ಕೃತಿಗಳ ಕಪಿಮುಷ್ಠೆಯಿಂದ ದೀನ ದಲಿತರು, ಶೂದ್ರರು, ಪಂಚಮರು, ಸ್ತ್ರೀ ಬಡವರೆಲ್ಲರನ್ನು ಪಾರು ಮಾಡಿ ಸಮತೆಯ ಕಾಯಕ ಜೀವಿಗಳು ಲಿಂಗಾಯತ ಧರ್ಮವನ್ನು ಉದ್ದರಿಸಿದ ಬಸವಣ್ಣನವರು ಈ ದೇಶದ ಇತಿಹಾಸದಲ್ಲಿಯೇ ಅದ್ಭುತ ಕ್ರಾಂತಿ ಮಾಡಿದರು. ಇಂತಹ ಜೀವಪರ ಚಿಂತನೆಯ, ಮಾನವ ಕುಲದ ಕಲ್ಯಾಣ, ಸರ್ವಜೀವಿಗಳ ಲೇಸು ಬಯಸಿದ ಬಸವಣ್ಣನ ಲಿಂಗಾಯತ ಧರ್ಮ ವಿಶ್ವಧರ್ಮವಾಗಬೇಕಾಗಿತ್ತು. ಆದರೆ ಅದು ಆಗಲಿಲ್ಲ. ಸಮಾಜದಲ್ಲಿ ತೀವ್ರತರವಾದ ಬದಲಾವಣೆಯನ್ನು ತಂದ ಬಸವ ಚಳವಳಿ ಆನಂತರದಲ್ಲಿ ಅನೇಕ ಕಾರಣಗಳಿಂದ ಸ್ವಾವರವಾಯಿತು. ಪುರೋಹಿತಶಾಹಿಗಳಂತೆ ಜಂಗಮ ಶಾಹಿಗಳು ಅದನ್ನು ಸಂಕುಚಿತಗೊಳಿಸಿದರು ಎಂದು ಪೋಳ ಹೇಳುತ್ತಾರೆ. ಇದು ಅವರ ಸ್ಪಷ್ಟ ನಿಲುವು ಆಗಿದೆ. ಬಸವಣ್ಣನವರನ್ನು ಜಾತಿಗೆ ಸೀಮಿತಗೊಳಿಸಿದ್ದಲ್ಲದೆ ಎಲ್ಲ ಶರಣರನ್ನು ಸಹ ಆಯಾ ಜಾತಿಗೆ ಅಂಟಿಸಿಬಿಟ್ಟು ಧನ, ದ್ರವ್ಯ, ಆಸ್ತಿ – ಪಾಸ್ತಿ ಮಾಡಿಕೊಂಡು ಅರಮನೆಗಳನ್ನು ಮೀರಿಸುವಂತಹ ದೊಡ್ಡ ಮಠಗಳನ್ನು ಕಟ್ಟಿಸಿ ಭಕ್ತರಿಂದ ಧನ, ಧಾನ್ಯಗಳನ್ನು ಸಂಗ್ರಹ ಮಾಡುವುದು ಒಂದು ಉದ್ಯೋಗವಾಗಿದೆ. ಪಾದ ಪೂಜೆ ಮಾಡಿಸಿಕೊಳ್ಳುತ್ತಾ ಪಲ್ಲಕ್ಕಿಯಲ್ಲಿ ಮೆರೆಯುತ್ತಾ ಮೌಢ್ಯತೆಯನ್ನು ಬಿತ್ತುತ್ತಿದ್ದಾರೆ. ಒಂದರ್ಧದಲ್ಲಿ ಮಠ ಮಾನ್ಯಗಳು, ಪೀಠಗಳು ಆಸ್ತಿ, ಪಾಸ್ತಿ ಹಿರಿಮೆಗಾಗಿ ಹೆಣಗುತ್ತಲಿವೆ. ಜಾತಿಮತವನ್ನು ಬೆಳೆಸುತ್ತಾ ಜಾತಿಗೊಂದು ಮಠಗಳನ್ನು ಕಟ್ಟುವ ಕಾಯಕದಲ್ಲಿ ಮಠಧೀಶರು ತೊಡಗಿದ್ದಾರೆ ಎನ್ನುವ ಪೋಳ ಅವರ ಮಾತುಗಳಲ್ಲಿ ಅತಿಶಯೋಕ್ತಿ ಏನಿಲ್ಲ.

ಕಾಯಕ ಜೀವಿಗಳ ಧರ್ಮ ಸಂಸ್ಕೃತಿಯನ್ನು ನಾಶಮಾಡಿ ಅಡ್ಡಪಲ್ಲಕ್ಕಿಯಲ್ಲಿ ಮೆರೆಯುವುದೊಂದೇ ಅವರ ನಿಜವಾದ ಧರ್ಮವಾಗಿದೆ. ಬಸವ ಧರ್ಮ ಈ ಪುರೋಹಿತ ಶಾಹಿಗಳ ಸೊತ್ತಲ್ಲ. ಅದು ಲಿಂಗಾಧಾರಿಗಳೆಲ್ಲರ ಸೊತ್ತು ಎಂದು ಪೋಳ ಅವರು ಎಲ್ಲರ ಅರಿವಿಗೆ ತರುತ್ತಾರೆ. ಬಸವ ಚಳವಳಿ ಬಸವಣ್ಣನೊಬ್ಬನಿಂದಲೇ ಅಲ್ಲ. ಬಸವಣ್ಣನಿಲ್ಲದೆ ಬಸವ ಚಳವಳಿ ಇಲ್ಲ. ಹಲವು ಜಾತಿಗಳಿಂದ ಹರಿದು ಬಂದ ಸಮುದಾಯದ ಮೊತ್ತವೇ ವಚನ ಚಳವಳಿ ಅದೊಂದು ಮೊಟ್ಟ ಮೊದಲ ದಲಿತ ಚಳವಳಿಯೂ ಆಗಿದೆ. ಡೋಹಾರ ಕಕ್ಕಯ್ಯ, ಸಮಗಾರ ಹರಳಯ್ಯ, ಕಲ್ಯಾಣಮ್ಮ, ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಹೊಲೆಯರ ಶಿವನಾಗಮಯ್ಯ, ಉರಿಲಿಂಗ ಪೆದ್ದ, ಅಂಬಿಗರ ಚೌಡಯ್ಯ, ಕಾಳವ್ವೆ, ಮಾಚಿದೇವ, ಹಡಪದ ಅಪ್ಪಣ್ಣ, ಲಿಂಗಮ್ಮ ಒಬ್ಬರೆ ಇಬ್ಬರೇ ಸುಮಾರು ಏಳುನೂರಕ್ಕೂ ಹೆಚ್ಚು ವಚನಕಾರರಲ್ಲಿ ಅರಿವಿನಿಂದ ಮೇಲ್ಜಾತಿಗಳನ್ನು ತೊರೆದು ಬಂದ ಕೇವಲ ೮ – ೧೦ ಜನರನ್ನು ಬಿಟ್ಟರೆ ಅಲ್ಲಮ ಪ್ರಭು ಮೊದಲ್ಗೊಂಡು ಸೂಳೆ ಸಂಕವ್ವೆವರೆಗೆ ೭೫೦ ಕ್ಕೂ ಹೆಚ್ಚು ಜನರು ಹಿಂದುಳಿದ ದೀನ ದಲಿತ, ಶೂದ್ರ, ಅಸ್ಪೃಶ್ಯರ ವರ್ಗಗಳಿಂದಲೇ ಬಂದವರು. ಅಂದರೆ ಚಾತುರ್ವರ್ಣ ಸಮಾಜದ ಕೆಳಸ್ತರಗಳಿಂದಲೇ ಕಲ್ಯಾಣಕ್ಕೆ ಬಂದು ಬಸವಣ್ಣನ ನೇತೃತ್ವದ ಬಸವ ಧರ್ಮವನ್ನು ಕಟ್ಟಿ ಅದರ ಶಿಖರ, ಕಳಸ ಏನೆಲ್ಲ ಆದವರು. ದಲಿತರನ್ನು, ಕಪ್ಪು ಜನರನ್ನು ಪಾವನರೆಂದು ಅಪ್ಪಿಕೊಂಡಿದ್ದಲ್ಲದೆ ಅವರು ಮಾಡಿದ ಚಪ್ಪಲಿಯನ್ನು ಮಸ್ತಕದ ಮೇಲಿರಿಸಿಕೊಂಡು ಬಸವಣ್ಣ ಅಪ್ಪ – ಬೊಪ್ಪ ಎಂದು ಕರೆದು ಗೌರವಿಸಿದ್ದಾನೆ. ಬಸವಣ್ಣನವರ‍ನಿಜವಾದ ವಾರಸುದಾರರೆಂದರೆ ದಲಿತರು, ಶೂದ್ರರು ಎಂದು ಕುಮಾರ ಕಕ್ಕಯ್ಯ ಪೋಳ ಅವರು ಅಭಿಪ್ರಾಯ ಪಡುವಲ್ಲಿ ಔಚಿತ್ಯವಿದೆ.

‘ಬಸವ ಧರ್ಮ ದರ್ಶನ’ ವಿಶೇಷ ಉಪನ್ಯಾಸದ ವಿಸ್ತೃತ ರೂಪ, ಪ್ರಸ್ತುತ ಗ್ರಂಥದಲ್ಲಿ ಬಸವ ಧರ್ಮದ ಸಿದ್ಧಾಂತ, ಸಮಾಜ ದರ್ಶನ ಮೂಡಿಸಿದ್ದಾರೆ. ಅಲ್ಪ – ಸ್ವಲ್ಪ ದಲಿತರು ಲಿಂಗವನ್ನು ಧರಿಸಿ ಲಿಂಗವಂತರೊಂದಿಗೆ ಊಟ ಮಾಡುವ ಕಾಲವಾದರು ಬಂತಲ್ಲವೆಂದು ಸಂತಸ ಪಟ್ಟವರು ಪೋಳ. ಬಸವ ಧರ್ಮ ಯಾರ ಸೊತ್ತು ಎಂಬ ಕೃತಿಯ ವಿಚಾರಗಳ ಮಂಥನವೇ ಬಸವಧರ್ಮ ದರ್ಶನ ರೂಪದಲ್ಲಿ ಮೂಡಿಬಂದಿದೆ.