ಸಾವಿರಾರು ವರ್ಷಗಳ ಸುದೀರ್ಘ ಮತ್ತು ಉಜ್ವಲ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಕರ್ನಾಟಕದ ಆಧುನಿಕ ಇತಿಹಾಸದಲ್ಲಿ ಕರ್ನಾಟಕದ ಏಕೀಕರಣ ಒಂದು ಐತಿಹಾಸಿಕವೂ ಮತ್ತು ಮಹತ್ವಪೂರ್ಣವೂ ಆದ ವಿಶಿಷ್ಟ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಠಾಪನೆ ಮತ್ತೊಂದು ಮಹತ್ವದ ಐತಿಹಾಸಿಕ ಘಟನೆ. ಕರ್ನಾಟಕದ ಇತರೆ ವಿಶ್ವವಿದ್ಯಾಲಯಗಳು ಕೇವಲ ಕೆಲವು ಜಿಲ್ಲೆಗಳಿಗೆ ಮಾತ್ರ ಪರಿಮಿತಗೊಂಡಿದ್ದರೆ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ಅಖಂಡ ಕರ್ನಾಟಕ ಮಾತ್ರವಲ್ಲದೆ ಕನ್ನಡಿಗ ಮತ್ತು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲ ದೇಶ ಮತ್ತು ವಿದೇಶಗಳನ್ನೂ ಒಳಗೊಂಡಿದೆ. ಈ ಕಾರಣದಿಂದ ನಮ್ಮ ವಿಶ್ವವಿದ್ಯಾಲಯದ ದಾರಿ ಮತ್ತು ಗುರಿ ಎರಡೂ ವಿಭಿನ್ನವೂ ಮತ್ತು ವೈಶಿಷ್ಟ್ಯಪೂರ್ಣವೂ ಅಗಿವೆ.

ಕನ್ನಡ ವಿಶ್ವವಿದ್ಯಾಲಯ ಕನ್ನಡ ನಾಡು, ನುಡಿ ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟಾವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನದ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತಮುಖಿಯಾದ ವಿಶ್ವಜ್ಞಾನವನ್ನು ಕನ್ನಡಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿಯಾಗಿ ಸ್ಥಾಪಿತಗೊಂಡಿದೆ. ಭೋಧನೆಗಿಂತ ಸಂಶೋಧನೆ, ಸೃಷ್ಟಿಗಿಂತ ವಿಶ್ವಂಭರ ದೃಷ್ಟಿ, ಶಿಥಿಲ ವಿವರಣೆಗಿಂತ ಅತುಳ ಸಾಧ್ಯತೆಗಳನ್ನೊಳಗೊಂಡ ಅನನ್ಯ ಅಭಿವ್ಯಕ್ತಿ, ನಾಡಿನ ಕೋಟಿ ಕೋಟಿ ಶ್ರೀಸಾಮಾನ್ಯರ ವಿವಿಧ ಪ್ರತಿಭಾಶಕ್ತಿ ಮತ್ತು ಸಾಮರ್ಥ್ಯಗಳ ಸದ್ಬಳಕೆಯ ಮೂಲಕ ಅವರ ಅಂತಃಪ್ರಜ್ಞೆಯನ್ನು ಎಚ್ಚರಿಸುವ, ವಿಕಸಿಸುವ ಶ್ರದ್ಧಾನ್ವಿತ ಕಾಯಕ ಇದರ ದಾರಿಯಾಗಿದೆ.

ಕನ್ನಡ ನಾಡನ್ನು ವಿಶ್ವವಿದ್ಯಾಲಯದಲ್ಲಿ ನೋಡು, ಕನ್ನಡ ವಿಶ್ವವಿದ್ಯಾಲಯವನ್ನು ನೋಡಿದಲ್ಲದೆ ಕನ್ನಡ ನಾಡಿನ ಯಾತ್ರೆ ಸಂಪೂರ್ಣವಾಗದು, ಸಾರ್ಥಕವಾಗದು ಎಂಬಂತೆ ರೂಪುಗೊಳ್ಳುತ್ತಿರುವ ಮತ್ತು ರೂಪುಗೊಳ್ಳಬೇಕಾದ ಮಹಾಸಂಸ್ಥೆ ಇದು. ಕನ್ನಡಪ್ರಜ್ಞೆ ತನ್ನ ಸತ್ವ ಮತ್ತು ತತ್ವದೊಡನೆ ವಿಶ್ವಪ್ರಜ್ಞೆಯಾಗಿ ಅರಳಿ ನಳನಳಿಸಬೇಕು; ವಿಶ್ವಪ್ರಜ್ಞೆ ಕನ್ನಡ ದೇಶೀ ಪ್ರಜ್ಞೆಯೊಳಗೆ ಪ್ರವೇಶಿಸಿ, ಪ್ರವಹಿಸಿ, ಸಮನ್ವಯಗೊಂಡು, ಸಂಲಗ್ನಗೊಂಡು, ಸಮರಸಗೊಂಡು ಸಾಕ್ಷಾತ್ಕಾರಗೊಳ್ಳಬೇಕು ಎಂಬುದೇ ಇದರ ಗುರಿ. ಈ ಗುರಿಯ ಮೂಲಕ ಕನ್ನಡ ಕರ್ನಾಟಕತ್ವದ ಊಸಿರಾಗಿ, ವಿಶ್ವಪ್ರಜ್ಞೆಯ ಹಸಿರಾಗಿ, ಕನ್ನಡಮಾನವ ವಿಶ್ವಮಾನವನಾಗಿ ಬೆಳೆಯಲು ಸಾಧನವಾಗಬೇಕು. ಕನ್ನಡಿಗರೆಲ್ಲರ ಸಾಮೂಹಿಕ ಶ್ರಮ ಮತ್ತು ಪ್ರತಿಭೆಗಳ ಸಮಷ್ಟಿ ಪ್ರಕ್ರಿಯೆಯಿಂದ ಬೆಳಕಿನ ಈ ಮಹಾಪಥವನ್ನು ಕ್ರಮಿಸುವುದು ನಮ್ಮ ವಿಶ್ವವಿದ್ಯಾಲಯದ ಮಹತ್ತರ ಆಶಯ.

ನಾಗಾಲೋಟದಿಂದ ಕ್ರಮಿಸುತ್ತಿರುವ ಜಗತ್ತಿನ ವ್ಯಾಪಕ ಜ್ಞಾನ, ತಂತ್ರಜ್ಞಾನ ಮತ್ತು ವಿಜ್ಞಾನಗಳ ಶೋಧನೆ ಮತ್ತು ಚಿಂತನೆಗಳನ್ನು ಕನ್ನಡದಲ್ಲಿ ಸತ್ವಪೂರ್ಣವಾಗಿ ದಾಖಲಿಸಿ ಕನ್ನಡ ಓದುಗರ ಜ್ಞಾನವನ್ನು ವಿಸ್ತರಿಸಿ ಅವರಲ್ಲಿ ಪುಸ್ತಕ ಸಂಸ್ಕೃತಿಯನ್ನು ಪ್ರಸರಿಸುವ ವಿಶೇಷ ಹೊಣೆಯನ್ನು ಹೊತ್ತು ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗ ಅಸ್ತಿತ್ವಕ್ಕೆ ಬಂದಿದೆ. ಶ್ರವ್ಯ, ದೃಶ್ಯ ಮತ್ತು ವಾಚನ ಸಾಮಗ್ರಿಗಳ ಸಮರ್ಪಕ ಉತ್ಪಾದನೆ ಮತ್ತು ವಿತರಣಾ ಪ್ರಕ್ರಿಯೆಗಳ ಮೂಲಕ ಇದು ಈ ಗುರಿಯನ್ನು ತಲುಪಲು ಶಕ್ತಿಮೀರಿ ಪ್ರಯತ್ನಿಸುತ್ತಿದೆ. ಈಗಾಗಲೇ ೬೦೦ಕ್ಕೂ ಹೆಚ್ಚು ವೈವಿಧ್ಯಮಯ ಮತ್ತು ವೈಶಿಷ್ಠ್ಯಮಯ ಕೃತಿಗಳ ಮೂಲಕ ಕನ್ನಡ ಗ್ರಂಥಲೋಕದ ಅಂತರಂಗ ಮತ್ತು ಬಹಿರಂಗ ಸೌಂದರ್ಯಗಳನ್ನು ಉಜ್ವಲಿಸಿರುವ ಇದು ತನ್ನ ಮುಂದಿನ ಗುರಿಯ ಕಡೆಗೆ ಆಶಾದಾಯಕವಾಗಿ ಚಲಿಸುತ್ತಿದೆ.

ಕನ್ನಡ ಸಾಹಿತ್ಯ, ಅದರಲ್ಲೂ ಹೊಸಗನ್ನಡ ಸಾಹಿತ್ಯ ಒಂದು ಪ್ರತಿಷ್ಠಿತ ಭಾಷೆ. ಸಕಾರಣವಾಗಿಯೇ ಹೆಮ್ಮೆಪಡುವಷ್ಟು ವೈವಿಧ್ಯಮಯವಾಗಿ, ವ್ಯಾಪಕವಾಗಿ ಹಾಗು ಮಹತ್ತರ ಎತ್ತರಗಳನ್ನು ಎಟಕಿಸುತ್ತ ಸಮೃದ್ಧವಾಗಿ ಬೆಳೆದಿದೆ ಎಂಬುದು ನಾವು ಮೊದಲೇ ಗಮನಿಸಬೇಕಾದ ಮುಖ್ಯ ಅಂಶವಾಗಿದೆ. ಸಾಂಪ್ರದಾಯಿಕ ಶಿಕ್ಷಣವನ್ನು ಪಡೆದ ಮತ್ತು ಪರಂಪರಾಗತವಾಗಿ ಸಾಹಿತ್ಯವನ್ನು ಅಭ್ಯಾಸ ಮಾಡಿದ ಒಂದು ಪ್ರತಿಷ್ಠಿತ ಸಮುದಾಯದ ನಾಲಿಗೆಯಾಗಿ ಹಾಗೂ ಆಶೋತ್ತರಗಳ ಪ್ರತೀಕವಾಗಿ ಬೆಳೆದಿರುವ ಸಾಹಿತ್ಯದ ಜೊತೆ ಜೊತೆಗೆ ಹೊಸದಾಗಿ ಅಕ್ಷರಲೋಕದ ತೆಕ್ಕೆಯೊಳಕ್ಕೆ ಪರಿಶ್ರಮದಿಂದ ಪ್ರವೇಶ ಮಾಡಿದ ಅವಕಾಶ ವಂಚಿತ ಶ್ರಮಿಕ ಸಮಾಜದ ಪೀಳಿಗೆಗಳು ಸಾಕಷ್ಟು ಕ್ಷಿಪ್ತ ಕಾಲದಲ್ಲಿಯೇ ಸಾಹಿತ್ಯದ ಅಧ್ಯಯನ ಮತ್ತು ಅಭಿವ್ಯಕ್ತಿಗಳಲ್ಲಿ ಹಠದಿಂದಲೆಂಬಂತೆ ಗಣನೀಯ ಸ್ಥಾನವನ್ನು ಪಡೆದುಕೊಳ್ಳುತ್ತಿರುವುದರಿಂದ, ನಮ್ಮ ಸಾಹಿತ್ಯದಲ್ಲಿ ಹೊಸ ಧ್ವನಿಗಳು, ಹೊಸ ಬನಿಗಳು ಹೊಸ ಎತ್ತರಗಳು ಹಾಗೂ ಇದುವರೆಗೆ ನಿಗೂಢವಾಗಿದ್ದ ಅನುಭವಗಳ ಹೊಸ ಪದರಗಳು ಪರಿಣಾಮಕಾರಿಯಾಗಿ ಬಿಚ್ಚಿಕೊಳ್ಳುತ್ತಿರುವುದರಿಂದ ನಮ್ಮ ಸಾಹಿತ್ಯ ವೈವಿಧ್ಯಮಯವಾಗಿ ಸಂಸ್ಕೃತಿಯ ಹೊಸ ಅವಿಷ್ಕಾರಗಳ ಹಾಗೂ ಹಳೆಯ ಸ್ವರೂಪದ ಹೊಸ ಜಾಡುಗಳ ಅನ್ವೇಷಣೆಯಲ್ಲಿ ತೊಡಗುತ್ತ ನಮ್ಮ ಸಾಹಿತ್ಯವನ್ನು ಬಹುಮುಖ ಸ್ತರಗಳ ಆಡುಂಬೊಲವಾಗಿ ಮಾಡುತ್ತಿರುವುದು ಹರ್ಷದ ಸಂಗತಿಯಾಗಿದೆ. ಹೊಸ ಮಳೆ ಬಂದಾಗ ಸ್ವಚ್ಛ ನೀರಿನ ಜೊತೆಗೆ ಕೆಸರು ಮಣ್ಣಿನ ನೀರುಗಳು ಸೇರಿಕೊಂಡು ಹೊಳೆಯಾಗಿ ಹರಿಯುವಂತೆ ಸಾಹಿತ್ಯದಲ್ಲೂ ಜೀವ ಬೆಳೆಯ ಜೊತೆಗೆ ಕಳೆಗಳು ಬೆಳೆಯುತ್ತಿರುವುದು ಸಹಜವಾದ ಸಂಗತಿಯೇ ಆಗಿದೆ. ದಿನ ದಿನ ಹುಟ್ಟಿಕೊಳ್ಳುತ್ತಿರುವ ಹೊಸ ಸ್ತರದ ಮತ್ತು ಒಳ ಲೋಕಗಳ ಅಂತರಿಕವಾದ ಸಹಜ ಒತ್ತಡದಿಂದ, ಪ್ರತಿಭೆಯ ಅದಮ್ಯವಾದ ಸ್ಪೋಟದಿಂದ, ಅಕ್ಷರ ಲೋಕದ ಗೌರವಗಳ ಆಕರ್ಷಣೆಯಿಂದ, ಕೀರ್ತಿ ಕಾಮನೆಯಿಂದ ಹೀಗೆ ಹಲವು ತುಡಿತಗಳಿಂದ ಬಹುಸಂಖ್ಯೆಯಲ್ಲಿ ಕೃತಿಗಳ ರಚನೆ ಮಾಡುತ್ತಿರುವುದರಿಂದ, ಈ ಎಲ್ಲ ಕೃತಿಗಳ ಸಮುದಾಯದಲ್ಲಿ ಜಳ್ಳುಕಾಳುಗಳನ್ನು ಸಮರ್ಥವಾಗಿ ಬೇರ್ಪಡಿಸಿ ಕಾಳುಗಳನ್ನು ಮಾತ್ರ ಸಾಹಿತ್ಯ ಪ್ರಿಯರ ಕಣ್ಣು ಮನಸ್ಸುಗಳ ಎದುರಿಗೆ ತರುವ ಪ್ರಯತ್ನಗಳು ಕಷ್ಟಕರವಾಗಿ ಪರಿಣಮಿಸುತ್ತಿವೆ. ಅಪಾರವಾದ, ವ್ಯಾಪಕವಾದ ಓದು, ಸೂಕ್ಷ್ಮ ಚಿಂತನೆ, ಮೌಲ್ಯಮಾಪನ ಸಾಮರ್ಥ್ಯಗಳನ್ನು ಅಪೇಕ್ಷಿಸುವ ವಿಮರ್ಶೆ ತನ್ನ ಸಾಧನೆಗಳ ಮತ್ತು ಸಾಧನಗಳ ಕೊರತೆಯಿಂದಾಗಿ ಹಾಗೂ ಪ್ರದೇಶ, ವರ್ಗ, ಜಾತಿ, ವ್ಯಕ್ತಿಗತ ದ್ವೇಷ ಹಾಗೂ ನಿಷ್ಪಕ್ಷಪಾತವಾದ ಸಮತೋಲನ ದೃಷ್ಟಿಗಳ ಕೊರತೆಯಿಂದಾಗಿ ಹಾಗೂ ಅವುಗಳನ್ನು ಪ್ರಕಟಿಸುವ ಮಾಧ್ಯಮಗಳ ಇತಿಮಿತಿಯಿಂದಾಗಿ ಪ್ರಕಟವಾದ ಎಲ್ಲ ಕೃತಿಗಳ ಪರಿಚಯ ಕನ್ನಡ ಓದುಗರಿಗೆ ಸಾಧ್ಯವಾಗುತ್ತಿಲ್ಲ. ಪುಸ್ತಕಗಳ ಪರಿಚಯಕ್ಕೆಂದೇ ಮೀಸಲಾದ ನಿಯತಕಾಲಿಕೆಗಳ ಸಂಖ್ಯೆ ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ದಿನಪತ್ರಿಕೆಗಳ, ವಾರಪತ್ರಿಕೆಗಳ, ಪುಸ್ತಕ ವಿಮರ್ಶೆಯ ಅಂಕಣಗಳನ್ನು ಆಕ್ರಮಿಸಿಕೊಂಡಿರುವ ವಿಮರ್ಶಕರೆನ್ನುವವರ ವ್ಯಕ್ತಿಗತ ಇತಿಮಿತಿಗಳು ಪುಸ್ತಕಗಳ ಆರೋಗ್ಯಕರ ಪರಿಚಯವನ್ನು ಮಾಡಿಸುವಲ್ಲಿ ಬಹುಪಾಲು ಸೋಲುತ್ತಿವೆ. ಗ್ರಂಥಲೋಕದಂತಹ ಮಹತ್ವದ ಪುಸ್ತಕಪರಿಚಯ ನಿಯತಕಾಲಿಕೆ, ವ್ಯಕ್ತಿಗತ ಸಾಹಸದ ಕಾರಣದಿಂದಾಗಿ ಕಣ್ಣುಮುಚ್ಚಿದೆ. ಪುಸ್ತಕ ಪ್ರಾಧಿಕಾರ ಸದುದ್ದೇಶದಿಂದ ಆರಂಭಿಸಿದ ‘ಪುಸ್ತಕಲೋಕ’ ನಿಯತಕಾಲಿಕೆ ಅಲ್ಪಾಯುಷಿಯಾಯಿತು. ಪುಸ್ತಕಗಳನ್ನು ಓದುಗರ ಮನದೊಳಕ್ಕೆ ಪ್ರವೇಶಗೊಳಿಸುವ ಎಲ್ಲ ಪ್ರಯತ್ನಗಳು ಅಂಶಿಕವಾಗಿ ಸಫಲವಾಗಿವೆಯಾದರೂ ಕನ್ನಡ ಸಾಹಿತ್ಯ ಲೋಕದ ವ್ಯಾಪ್ತಿ ಮತ್ತು ವೈವಿಧ್ಯಗಳಿಗೆ ತಕ್ಕಂತೆ ಈ ದಿಸೆಯಲ್ಲಿ ಹೆಚ್ಚು ಪತ್ರಿಕೆಗಳು ಹೊರಬರುವುದು ಕೊನೆಯ ಪಕ್ಷ ಪ್ರಾದೇಶಿಕ ಸಾಹಿತ್ಯ ಪ್ರಕಟಣೆಗಳನ್ನು ಪರಿಚಯಿಸುವುದಕ್ಕಾದರೂ ಅತ್ಯಗತ್ಯವಾಗಿದೆ. ಈ ಸನ್ನಿವೇಶದಲ್ಲಿ ಕನ್ನಡ ವಿಶ್ವವಿದ್ಯಾಲಯ ಹತ್ತು ವರ್ಷಗಳಿಂದ ಪ್ರಕಟಿಸುತ್ತಿರುವ ‘ಪುಸ್ತಕ ಮಾಹಿತಿ’ ಎಂಬ ಮಾಸಿಕ ಪತ್ರಿಕೆ ತನ್ನ ಪಾಲಿನ ಕರ್ತವ್ಯವನ್ನು ಸಾಕಷ್ಟು ಗಂಭೀರವಾಗಿ ನಿರ್ವಹಿಸುವ ಪ್ರಯತ್ನವನ್ನು ಮಾಡುತ್ತಿದೆ. ಆದರೆ, ಈ ಪ್ರಯತ್ನ ಕೂಡ ಕೈಬೊಗಸೆಯಲ್ಲಿ ಹೊಳೆಯನ್ನು ಅಳೆಯುವ ಸೀಮಿತ ಪ್ರಯತ್ನವಾಗಿಯೇ ಇದೆ ಎಂಬುದನ್ನು ಮರೆಮಾಚಲಾಗದು. ವಿಶ್ವವಿದ್ಯಾಲಯದ ಒಳಗಿನ ವಿದ್ವಾಂಸರು ಮಾತ್ರವಲ್ಲದೆ ಹೊರಗಿನ ಗ್ರಂಥಾಭ್ಯಾಸಿಗಳೂ ಕೂಡ ತಾವು ಕಂಡ, ಉಂಡ, ಅನುಭವಿಸಿದ ಪುಸ್ತಗಳನ್ನು, ಅವು ದೊರೆಯುದವರಿಗೆ ಪರಿಚಯ ಮಾಡಿಸುವ ಪುಸ್ತಕ ಪ್ರಚಾರ ಪ್ರಕ್ರಿಯೆಗೆ ಚಾಲನೆ ನೀಡುವ ನಿಷ್ಠೆಯನ್ನು ತೀವ್ರವಾಗಿ ಮತ್ತು ಕ್ರಿಯಾತ್ಮಕವಾಗಿ ವ್ಯಕ್ತಪಡಿಸಬೇಕಾಗಿದೆ.

ಕನ್ನಡ ವಿಶ್ವವಿದ್ಯಾಲಯಕ್ಕೆ ಹತ್ತು ವರ್ಷಗಳು ತುಂಬಿರುವ ಈ ಶುಭಸಂದರ್ಭದಲ್ಲಿ ಹತ್ತು ವರ್ಷಗಳ ಕನ್ನಡ ಸಾಹಿತ್ಯದ ಸೋಲು, ಗೆಲುವುಗಳ ಹಾಗೂ ಮುಖ್ಯ ಪ್ರವೃತ್ತಿಗಳ ಪರಿಚಯವನ್ನು ಓದುಗರಿಗೆ ಒದಗಿಸುವ ಸಲುವಾಗಿ ನಮ್ಮ ಪುಸ್ತಕ ಮಾಹಿತಯ ವಿಶೇಷ ಸಂಪುಟವೊಂದನ್ನು ಈ ಮೂಲಕ ಸಿದ್ಧಪಡಿಸಿದೆ. ಈ ಕೃತಿಯಲ್ಲಿ ೨೨ ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದ ೨೬ ಲೇಖನಗಳನ್ನು ಅಳವಡಿಸಲಾಗಿದೆ. ಯಾವ ಯಾವುದೋ ಸಂದರ್ಭದಲ್ಲಿ ಪ್ರಕಟವಾದ ಲೇಖನಗಳನ್ನು ಇಲ್ಲಿ ಯಾಂತ್ರಿಕವಾಗಿ ಸಂಕಲಿಸದೆ ಈ ಸಂಕಲನಕ್ಕಾಗಿಯೇ ಹೊಸದಾಗಿ ಈ ಸಮೀಕ್ಷಾ ಲೇಖನಗಳನ್ನು ನಮ್ಮ ವಿಶ್ವವಿದ್ಯಾಲಯದ ಪರಿಣತ ವಿದ್ವಾಂಸರಿಂದ ಬರೆಸಲಾಗಿದೆ. ಸಾಹಿತ್ಯ ಮತ್ತು ಸಾಮಾಜಿಕ ಅಧ್ಯಯನಗಳ ವಿವಿಧ ಪ್ರಕಾರಗಳಲ್ಲಿ ಪರಿಣತಿಯನ್ನು ಪಡೆದ ವಿದ್ಯಾಂಸ ಸಮೂಹ ನಮ್ಮ ವಿಶ್ವವಿದ್ಯಾಲಯದಲ್ಲೇ ಕಾರ್ಯನಿರತವಾಗಿರುವುದರಿಂದ ಈ ಅಭ್ಯಾಸಪೂರ್ಣ ಲೇಖನಗಳನ್ನು ಬರೆಸಲು ಸಾಧ್ಯವಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಕಳೆದ ದಶಕದಲ್ಲಿ ಕಾಣಿಸಿಕೊಂಡ ಸಾಹಿತ್ಯ ಪ್ರಕಾರಗಳ ಮುಖ್ಯ ಕೃತಿಗಳನ್ನು ಈ ಸಮೀಕ್ಷಾ ಲೇಖನಗಳಲ್ಲಿ ಗಮನಿಸಲಾಗಿದೆ. ಈ ದಶಕದಲ್ಲಿ ಪ್ರಕಟವಾದ ಎಲ್ಲ ಪುಸ್ತಕಗಳನ್ನು ಸಮೀಕ್ಷೆಗೆ ಒಳಪಡಿಸುವುದು ಅಸಾಧ್ಯದ ಮಾತು ಮತ್ತು ಅದು ಅನಗತ್ಯವೂ ಹೌದು. ಏಕೆಂದೆ ಈ ಹತ್ತು ವರ್ಷಗಳ ಸಮೃದ್ಧ ಫಸಲಿನಲ್ಲಿ ಮುಖ್ಯವಾದ ಅಮುಖ್ಯವಾದ ಎಲ್ಲ ಪುಸ್ತಕಗಳೂ ಒಳಗೊಳ್ಳುವುದರಿಂದ ಮತ್ತು ಅವುಗಳಲ್ಲಿ ಬಹುಪಾಲು ಹಠದಿಂದ, ಚಟದಿಂದ, ಕೀರ್ತಿಕಾಮನೆಯಿಂದ, ಹಣದ ಬೆಂಬಲದಿಂದ, ಬಾಹ್ಯ ಒತ್ತಡಗಳ ಅನಿವಾರ್ಯತೆಯಿಂದ ಬರೆದವುಗಳೇ ಹೆಚ್ಚು. ಪುಸ್ತಕ ಬರೆಯುವ ಮೂಲಕ ಹೊಸದಾಗಿ ಅಕ್ಷರಾಭ್ಯಾಸವನ್ನು ಮಾಡಿಕೊಳ್ಳುತ್ತಿರುವಂತೆ ಕಾಣಿಸುವ ಪುಸ್ತಕಗಳೂ ದೀರ್ಘ ಸಂಖ್ಯೆಯಲ್ಲೇ ಇವೆ. ಅನುಭವದ ಗಟ್ಟಿ ಹೂರಣವಿಲ್ಲದೆ, ಅಭ್ಯಾಸದ ಸಾಂದ್ರತೆಗಳಿಲ್ಲದೆ, ವಿಶಿಷ್ಟ ದೃಷ್ಟಿಕೋನಗಳ ಸೂಕ್ಷ್ಮತೆಯಿಲ್ಲದೆ, ಅಭಿವ್ಯಕ್ತಿ ಸಾಧ್ಯತೆಗಳ ಪರಿಚಯವೇ ಇಲ್ಲದೆ, ಭಾಷೆಯ ಮೇಲಿನ ಪ್ರಭುತ್ವವಿಲ್ಲದೆ, ವಸ್ತುಗಳ ಆಯ್ಕೆಯಲ್ಲಿ ವಿಶಿಷ್ಟ ದೃಷ್ಟಿ ಮತ್ತು ಕೌಶಲವಿಲ್ಲದೆ ಸಂಜೆ ಹೊತ್ತಿಗೆ ಮೂರು ಮೊಳ ನೇಯ್ದಂತಹ ಕೃತಿಗಳ ಸಂಖ್ಯೆಯೇ ವಿಫುಲವಾಗಿದೆ. ಇದಲ್ಲದೆ ಕನ್ನಡದಲ್ಲಿ ಪ್ರಕಟವಾಗುವ ಎಲ್ಲ ಪುಸ್ತಕಗಳು ಮತ್ತು ಅವುಗಳ ಅಂಕಿ ಅಂಶಗಳು ಒಂದೆಡೆ ಎಲ್ಲಿಯೂ ಲಭ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪ್ರಕಟವಾಗುವ ಎಲ್ಲ ಕೃತಿಗಳ ಓದು, ಚಿಂತನೆ ಸಮಗ್ರವಾಗಿ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ, ದೊರೆತ ಕೃತಿಗಳ ಆಧಾರದಿಂದಲೇ ಸಮೀಕ್ಷೆ ಅಥವಾ ವಿಮಶೇಯನ್ನು ಮಾಡುವುದು ಮತ್ತು ಆ ಮೂಲಕ ಒಂದು ನಿಶ್ಚಿತ ಅವಧಿಯ ಸಾಧನೆಗಳ ಮುಖಗಳನ್ನು ಅನಾವರಣ ಮಾಡುವುದು ಅನಿವಾರ್ಯವಾಗುತ್ತದೆ. ಆದರೂ ಈ ಸಂಪುಟದ ವಿಮರ್ಶಕ ವಿದ್ವಾಂಸರು ಅತ್ಯಂತ ಶ್ರಮವಹಿಸಿ ಈ ಹತ್ತು ವರ್ಷಗಳಲ್ಲಿ ಪ್ರಟವಾದ ಮೌಲಿಕ ಗ್ರಂಥಗಳನ್ನು ಅಭ್ಯಸಿಸಿ, ಸಾಕಷ್ಟು ಸಾಧಾರವಾದ ಪರಿಶೀಲನೆ ಮತ್ತು ಮೌಲ್ಯಮಾಪನಗಳೊಡನೆ ಈ ಸಮೀಕ್ಷೆಗಳನ್ನು ಸಿದ್ಧಪಡಿಸಿದ್ದಾರೆ. ಈ ಎಲ್ಲ ಲೇಖನಗಳನ್ನು ಒಟ್ಟಿಗೆ ಪರಿಶೀಲಿಸಿದಾಗ ಈ ವಿಮರ್ಶಕರು ಮೂರು ಮುಖ್ಯ ಮಾರ್ಗಗಳನ್ನು ಆರಿಸಿಕೊಂಡಿರುವಂತೆ ಕಾಣುತ್ತದೆ ಒಂದು, ನಿರ್ದಿಷ್ಟ ಪ್ರಕಾರದಲ್ಲಿ ಪ್ರಕಟಗೊಂಡ ಪ್ರಾತಿನಿಧಿಕವೆಂದು ಅನ್ನಿಸಿದ ಕೆಲವು ಕೃತಿಗಳ ನಿದರ್ಶನಗಳೊಡನೆ ಆ ಪ್ರಕಾರ, ಆ ಅವಧಿಯಲ್ಲಿ ತೋರ್ಪಡಿಸಿದ ವಿಶೇಷಗಳನ್ನು, ಕ್ರಮಿಸಿದ ಹಾದಿಯನ್ನು ಮತ್ತು ವಿಶಿಷ್ಟ, ಪ್ರವೃತ್ತಿಗಳನ್ನು ಹಾಗೂ ಸಾಧನೆಗಳನ್ನು ಗಂಭೀರ ಹಾಗೂ ತಾತ್ವಿಕ ಪರಿಶೀಲನೆಗೆ ಒಡ್ಡುವುದು. ಎರಡು, ಆ ಪ್ರಕಾರದ ಮುಖ್ಯ ಕೃತಿಗಳೆಲ್ಲವನ್ನೂ ಅಭ್ಯಸಿಸಿ ಅವುಗಳ ಸೋಲು ಗೆಲುವುಗಳನ್ನು ಆಧುನಿಕ ವಿಮರ್ಶೆಯ ನಿಕಷಕ್ಕೆ ಒಡ್ಡಿ ಅವುಗಳ ವಿಶೇಷತೆಗಳ ಮಗ್ಗಲುಗಳನ್ನು ನಿಷ್ಠುರವಾಗಿ ಬೈಲಿಗಿಡುವುದು, ಮೂರು, ಒಂದು ನಿರ್ದಿಷ್ಟ ಪ್ರಕಾರದಲ್ಲಿ ತಮಗೆ ಮುಖ್ಯವೆಂದು ಕಂಡ ಕೃತಿಗಳೆಲ್ಲವನ್ನೂ ತಮ್ಮ ಕಣ್ಣಿನ ಕಕ್ಷೆಯಲ್ಲಿ ತಂದುಕೊಂಡು ಒಂದೊಂದರ ಬಗೆಗೂ ಕೆಲವು ಮಾತುಗಳನ್ನು ಹೇಳುತ್ತಾ ಒಟ್ಟು ಫಸಲಿನ ಸ್ವರೂಪವನ್ನು ಓದುಗರ ಗಮನಕ್ಕೆ ತರುವುದು. ಈ ಮೂರೂ ನೆಲೆಗಳಲ್ಲಿ ಮೂಡಿಬಂದಿರುವ ಇಲ್ಲಿ ೨೬ ಲೇಖನಗಳು, ಅವುಗಳ ಇತಿಮಿತಿಗಳೊಡನೆ, ಪ್ರಾಮಾಣಿಕ ಅಧ್ಯಯನದ ನಿಷ್ಪಕ್ಷಪಾತ ದೃಷ್ಟಿಯ, ಕನ್ನಡ ಸಾಹಿತ್ಯ ಸಾಧನೆಯನ್ನು ಒಟ್ಟಂದದಲ್ಲಿ ಹಿಡಿದಿಡುವ ಗಂಭೀರ ಪ್ರಯತ್ನಗಳ ಫಲಿತವಾಗಿವೆ. ಸುಮಾರು ೩೨೮ ಪುಟಗಳಷ್ಟು ದೀರ್ಘ ವಿಸ್ತಾರದಲ್ಲಿ ಹೊಮ್ಮಿರುವ ಈ ಸಂಪುಟ ನಮ್ಮ ವಿಶ್ವವಿದ್ಯಾಲಯದ ವಿದ್ವಾಂಸರ ವಿದ್ವತ್ತಿನ ಆಳ, ಅಗಲ, ಪರಿಣತಿಗಳಿಗೆ ಕನ್ನಡಿ ಹಿಡಿಯುವುದು ಮಾತ್ರವಲ್ಲದೆ ಕಳೆದ ದಶಕದ ಸಾಹಿತ್ಯದ ವೈವಿಧ್ಯಮಯ ಸಾಧನೆಗಳನ್ನು ಪರಿಚಯಿಸುವಲ್ಲಿ ಸಾಕಷ್ಟು ಸಫಲವಾಗಿದೆ ಎನ್ನಬಹುದು. ವಿಸ್ತಾರ ವ್ಯಾಸಂಗದಿಂದ ಮಾತ್ರ ಸಾಧ್ಯವಾಗುವ ಇಂತಹ ಒಂದು ಪರಾಮರ್ಶನ ಸಂಪುಟವನ್ನು ಹೊರತರಲು ವಿಶೇಷ ಶ್ರಮವಹಿಸಿದ ಸಂಪಾದಕರಾದ ಡಾ. ಎಫ್‌. ಟಿ. ಹಳ್ಳಿಕೇರಿ ಮತ್ತು ಡಾ. ಕೆ. ರವೀಂದ್ರನಾಥ ಅವರ ಸಾಹಿತ್ಯ ನಿಷ್ಠೆಗೆ ಮತ್ತು ಕ್ರಿಯಾಶೀಲತೆಗೆ ಹಾಗೂ ತುಂಬು ಆಸಕ್ತಿ, ಶ್ರದ್ಧೆ ಅಧ್ಯಯನಗಳಿಂದ ಇಲ್ಲಿನ ಲೇಖನಗಳನ್ನು ಬರೆದುಕೊಟ್ಟ, ನಮ್ಮ ಮತ್ತು ಹೊರಗಿನ ವಿದ್ವಾಂಸರಿಗೂ ಹಾರ್ದಿಕ ಅಭಿನಂದನೆಗಳು ಸಲ್ಲಬೇಕು. ಓದುಗರು ಈ ಸಂಪುಟವನ್ನು ಅದರ ಕುತೂಹಲಗಳಿಂದ ಸ್ವಾಗತಿಸಿದಲ್ಲಿ ಈ ನಮ್ಮ ಪ್ರಯತ್ನ ಸಾರ್ಥಕವಾಗುತ್ತದೆ.