ಕಾಲದ ದೃಷ್ಟಿಯಿಂದ ವಿಸ್ತಾರ, ಪ್ರಕಾರ ದೃಷ್ಟಿಯಿಂದ ವೈವಿಧ್ಯ, ವಸ್ತುವಿನ ದೃಷ್ಟಿಯಿಂದ ವಿನೂತನವಾದ ಕನ್ನಡ ಸಾಹಿತ್ಯ ನಿರಂತರವಾಗಿ ಸೃಜನಗೊಳ್ಳುತ್ತ ನಡೆದಿದೆ. ಈ ಸೃಜನದ ಬೆನ್ನಹಿಂದೆಯೇ ಮೀಮಾಂಸೆ, ವಿಮರ್ಶೆ ಹಾಗೂ ಸಂಶೋಧನೆಗಳಂತಹ ಹಲವು ಮಗ್ಗಲುಗಳು ಮೈತಳೆದಿವೆ. ಈ ಮಾತು ಕೇವಲ ಸಾಹಿತ್ಯ ಪ್ರಕಾರಕ್ಕೆ ಮಾತ್ರ ಅನ್ವಯಿಸಿ ಹೇಳಿದಂತಾದರೂ ಶುದ್ಧ ವೈಜ್ಞಾನಿಕ, ಮನವಿಕ ಹಾಗೂ ಲಲಿತಕಲೆಗಳಂತಹ ಸಾಹಿತ್ಯೇತರ ಜ್ಞಾನಶಾಖೆಗಳೂ ಈ ಹೊತ್ತು ವಿಜ್ಞಾನಸಾಹಿತ್ಯ, ಮಾನವಿಕಸಾಹಿತ್ಯ ಹಾಗೂ ಲಲಿತಕಲಾಸಾಹಿತ್ಯ ಎಂಬ ಹೆಸರಿನಿಂದ ಗುರುತಿಸಿಕೊಂಡಿರುವುದನ್ನು ನೋಡಬಹುದು. ಈ ಕಾರಣವಾಗಿ ಇಂದು ಸಾಹಿತ್ಯದ ವ್ಯಾಪ್ತಿ ವಿಸ್ತಾರಗೊಂಡಿತು.

ಎಷ್ಟು ವಿಸ್ತಾರವಾದ ಫಲಿತಗಳನ್ನು ಓದುಗರಿಗೆ ತಿಳಿಸಿಕೊಡುವ ಉಪಕ್ರಮಗಳು ನಮ್ಮಲ್ಲಿ ಎರಡು ನೆಲೆಯಲ್ಲಿ ನಡೆದು ಬಂದಿವೆ, ಒಂದು, ಕಾಲಮಿತಿಗನುಗುಣವಾಗಿ ಆಯಾ ಪ್ರಕಾರಕ್ಕೆ ಸಂಬಂಧಿಸಿದ ಉತ್ತಮ ಪಠ್ಯಗಳನ್ನು ಸಂಕಲಿಸಿಕೊಡುವ ಸಂಯೋಜನ ಕ್ರಮ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಹೊರತಂದ ವಾರ್ಷಿಕ, ದಶವಾರ್ಷಿಕ, ಕಾಲುಶತಮಾನ ಹಾಗೂ ಶತಮಾನಗಳನ್ನು ಅನುಲಕ್ಷಿಸಿ ಕಾವ್ಯ, ಸಣ್ಣ ಕಥೆ, ಲಲಿತ ಪ್ರಬಂಧ, ವಿಮರ್ಶೆ, ವಿಚಾರ ಸಾಹಿತ್ಯ, ವಿನೋದ ಸಾಹಿತ್ಯ ಹಾಗೂ ಮಕ್ಕಳ ಸಾಹಿತ್ಯ ಪ್ರಕಾರಗಳ ಪಠ್ಯವನ್ನು ಹೊರತಂದಿದೆ. ಪ್ರಿಸಂ ಬುಕ್‌ ಪ್ರೈವೇಟ್‌ ಲಿಮಿಟೆಡ್‌ನಂತಹ ಖಾಸಗಿ ಪ್ರಕಾಶನ ಸಂಸ್ಥೆಗಳೂ ಶತಮಾನದ ಸಣ್ಣಕಥೆ ಇತ್ಯಾದಿ ಹೆಸರಿನ ಸಂಕಲನಗಳನ್ನು ಪ್ರಕಟಿಸಿರುವುದು ಗಮನಿಸಬೇಕಾದ ಸಂಗತಿ. ಎರಡು, ಒಟ್ಟು ರಚನೆಗೊಂಡ ಸಾಹಿತ್ಯವನ್ನು ಗಮನಿಸಿ ವಿಮರ್ಶಾತ್ಮಕವಾಗಿ ಮೌಲ್ಯಮಾಪನ ಮಾಡುವ ವಿಶ್ಲೇಷಣಾ ಕ್ರಮ. ಈ ಕಾರಣವಾಗಿ ಬೆಂಗಳೂರು ವಿಶ್ವವಿದ್ಯಾಲಯ ಸಾಹಿತ್ಯ ವಾರ್ಷಿಕ, ದಶವಾರ್ಷಿಕ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಾಹಿತ್ಯ ಸಮೀಕ್ಷೆ, ಕನ್ನಡ ವಿಶ್ವವಿದ್ಯಾಲಯದ ಕನ್ನಡ ವಾರ್ಷಿಕ, ಬೆಂಗಳೂರಿನ ಉದಯಭಾನು ಕಲಾ ಸಂಸ್ಥೆಯ ಸ್ವಾತಂತ್ರೋತ್ತರ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ, ಅಂಕೋಲದ ಶ್ರೀರಾಘವೇಂದ್ರ ಪ್ರಕಾಶನದ ಶತಮಾನದ ಕನ್ನಡ ಸಾಹಿತ್ಯ – ೧ ಹೀಗೆ ಹಲವಾರು ಸಂಕಲನಗಳು ಕಳೆದ ಶತಮಾನದ ಮಧ್ಯಭಾಗದಿಂದೀಚೆಗೆ ಹೊರಬಂದಿವೆ. ಈ ಸಂಕಲನಗಳಿಗೆ ಅವುಗಳದೇ ಆದ ಧೋರಣೆ, ಇತಿಮಿತಿಗಳು ಇರುವುದನ್ನು ಬೇರೆ ಹೇಳಬೇಕಿಲ್ಲ, ಇವುಗಳ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ‘ದಶಕದ ಕನ್ನಡ ಸಾಹಿತ್ಯ’.

ಪ್ರಸ್ತುತ ಕೃತಿ ಕನ್ನಡ ವಿಶ್ವವಿದ್ಯಾಲಯ ತನ್ನ ದಶಮಾನೋತ್ಸವವನ್ನು ಆಚರಿಸಿಕೊಳ್ಳುತ್ತಲಿರುವ ಸಂದರ್ಭದಲ್ಲಿ ಹೊರಬಂದ ಪುಸ್ತಕ ಮಾಹಿತಿಯ ವಿಶೇಷ ಸಂಪುಟವಾಗಿದೆ. ಜೊತೆಗೆ ‘ಪುಸ್ತಕಮಾಹಿತಿ’ಗೆ ಹತ್ತು ವರ್ಷ ತುಂಬುತ್ತಲಿದೆ. ಒಂದು ದಶಕದ ಅವಧಿಯಲ್ಲಿ ಕರ್ನಾಟಕದ ಲೇಖಕ, ಓದುಗ ಹಾಗೂ ಪ್ರಕಾಶಕರಿಗೆ ಪುಸ್ತಕೋದ್ಯಮವನ್ನು ಕುರಿತಂತೆ ಸಮೃದ್ಧವಾದ ಮಾಹಿತಿಯನ್ನು ನೀಡಿದ ಹೆಗ್ಗಳಿಕೆ ಈ ನಿಯತಕಾಲಿಕೆಗೆ ಇದೆ. ಈ ಸವಿನೆನಪಿಗಾಗಿ ಕಳೆದ ಹತ್ತು ವರ್ಷಗಳ (೧೯೯೧ – ೨೦೦೦) ಅವಧಿಯಲ್ಲಿ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ರಚನೆಗೊಂಡ ಗ್ರಂಥಗಳ ಪರಾಮರ್ಶನ ಮಾಡುವುದರ ಮೂಲಕ, ಅವುಗಳ ಹೆಜ್ಜೆ ಗುರುತುಗಳನ್ನು ದಾಖಲಿಸುವುದು ಈ ಸಂಕಲನದ ಆಶಯವಾಗಿದೆ. ಪುಸ್ತಕ ಮಾಹಿತಿ ವಿಶೇಷ ಸಂಪುಟ ಇದಾಗಿರುವುದರಿಂದ ಮಾನವಿಕ, ವಿಜ್ಞಾನ ಹಾಗೂ ಲಲಿತಕಲೆಗಳಿಗೆ ಸಂಬಂಧಪಟ್ಟ ಪುಸ್ತಕಗಳನ್ನು ಇಲ್ಲಿ ಪರಾಮರ್ಶಿಸಿರುವುದು ಈ ಸಂಪುಟದ ವಿಶೇಷವೆಂದು ಹೇಳಬಹುದು. ಏಕೆಂದರೆ ಇಲ್ಲಿಯವರೆಗೆ ವಿಮರ್ಶೆಗೆ ಪರಿಧಿಗೆ ಇವುಗಳನ್ನು ತಂದಿರಲಿಲ್ಲ. ಅದಕ್ಕೆ ಕಾರಣ, ಇವು ಸಾಹಿತ್ಯೇತರ ವಿಷಯಗಳು ಹಾಗೂ ಪ್ರಕಟಣೆಯಲ್ಲಿಯೂ ಇವುಗಳ ಪ್ರಮಾಣ ಅತ್ಯಲ್ಪ. ಆದರೆ ಕಳೆದ ದಶಕದಲ್ಲಿ ಈ ಪ್ರಕಾರಗಳಲ್ಲಿಯೂ ವೈವಿಧ್ಯಮಯವಾದ ಮತ್ತು ವಿಶಿಷ್ಟವಾದ ಪುಸ್ತಕಗಳು ಬಂದಿರುವುದನ್ನು ಗಮನಿಸಿದರೆ ಅವುಗಳನ್ನು ಸಮೀಕ್ಷಿಸುವುದು ಸೂಕ್ತವೆಂದು ಭಾವಿಸಿ ಆ ಪ್ರಕಾರಗಳನ್ನು ವಿಮರ್ಶಿಸಲಾಗಿದೆ.

ಇಲ್ಲಿ ೨೨ ಪ್ರಕಾರಗಳಿಗೆ ಸಂಬಂಧಿಸಿದ ೨೬ ಲೇಖನಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ದಶಕದ ಎಲ್ಲಾ ಪುಸ್ತಕಗಳು ಪರಿಶೀಲನೆಗೆ ಒಳಗಾಗಿವೆ, ಒಳಗಾಗಬೇಕಿತ್ತು ಎಂಬುದು ಉದ್ದೇಶವಲ್ಲ. ಪ್ರಾಯಶಃ ಈ ಮಾತು ಆಯಾ ಲೇಖಕರ ಸಮೀಕ್ಷೆಯ ಪರಿಧಿಯಿಂದ ಮನವರಿಕೆಯಾಗುತ್ತದೆ. ಅವರವರದೇ ಆದ ಧೋರಣೆ, ಅಧ್ಯಯನ ಶಿಸ್ತುಗಳಿಂದ ಮತ್ತು ಪುಸ್ತಕಗಳ ಆಯ್ಕೆಯ ತೊಡಕು, ಪರಿಶೀಲನೆಯ ಇತಿಮಿತಿಗಳಿಂದ ಲೇಖನಗಳಿಗೆ ಒಂದು ಸೀಮಿತತೆ ಪ್ರಾಪ್ತವಾಗಿರಬಹುದು. ಹೀಗಾಗಿ ಆಯಾಯ ಪ್ರಕಾರದ ಸಮೀಕ್ಷೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳಿಗೆ ಆಯಾ ಲೇಖಕರೇ ಹೊಣೆಗಾರರು ಎಂಬುದನ್ನು ಹೇಳಬೇಕಾಗುತ್ತದೆ.

ಹಸ್ತಪ್ರತಿಶಾಸ್ತ್ರ ವಿಭಾಗದ ಕಾರ್ಯ ಬಾಹುಳ್ಯದ ಜೊತೆಗೆ ‘ಪುಸ್ತಕ ಮಾಹಿತಿ’ಯಂಥ ಮಾಸಿಕ ನಿಯತಕಾಲಿಕೆಯನ್ನು ಕಾಲಬದ್ಧವಾಗಿ ಹೊರತರುವ ಜವಾಬ್ದಾರಿಯನ್ನು ವಿಶ್ವವಿದ್ಯಾಲಯವು ನಮಗೆ ವಹಿಸಿದ್ದು, ಆ ಮೂಲಕ ಈ ವಿಶೇಷ ಸಂಪುಟದ ಸಂಪಾದಕತ್ವದ ಹೊಣೆಯನ್ನು ಹೊರಿಸಿದ್ದು ನಮ್ಮ ಕರ್ತವ್ಯದ ಭಾಗವೆಂದು ಭಾವಿಸಿದ್ದೇವೆ. ಇಂತಹ ಹೊಣೆಗಾರಿಕೆಯಿಂದ ನಮ್ಮ ಕರ್ತವ್ಯ ಪ್ರಜ್ಞೆಯ ಹೆಚ್ಚುಗಾರಿಕೆಗೆ ಪ್ರೋತ್ಸಾಹ ನೀಡಿದವರು ಮಾನ್ಯ ಕುಲಪತಿಗಳಾದ ಡಾ. ಎಚ್‌. ಜೆ. ಲಕ್ಕಪ್ಪಗೌಡ ಅವರು, ಸಂಪುಟದ ರೂಪರೇಷೆಗಳನ್ನು ನಿರ್ಧರಿಸುವಲ್ಲಿ ಸೂಕ್ತ ಸಲಹೆ ನೀಡಿ, ‘ಕೂಡಿ ಕಳೆದ ದಶಕ’ ಎಂಬ ಪ್ರವೇಶಿಕೆಯ ಮಾತುಗಳನ್ನು ಪೋಣಿಸಿದವರು ಮಾನ್ಯ ಕುಲಸಚಿವರಾದ ಡಾ. ಕೆ. ವಿ. ನಾರಾಯಣ ಅವರು, ಪುಸ್ತಕಗಳನ್ನು ಹುಡುಕಿ, ಆಯ್ಕೆ ಮಾಡಿ, ಮೌಲಿಕವಾದ ಲೇಖನಗಳನ್ನು ಸಕಾಲದಲ್ಲಿ ಬರೆದುಕೊಟ್ಟವರು ನಮ್ಮ ವಿಶ್ವವಿದ್ಯಾಲದ ವಿದ್ವಾಂಸರು, ಸಾಹಿತ್ಯ ವಿಮರ್ಶೆ ಹಾಗೂ ನಾಟಕ ಪ್ರಕಾರಗಳ ಲೇಖನಗಳನ್ನು ಸಿದ್ದಪಡಿಸಿಕೊಟ್ಟವರು ಕ್ರಮವಾಗಿ ಕೋಲಾರದ ವಿ. ಚಂದ್ರಶೇಖರ ನಂಗಲಿ ಮತ್ತು ಹೊಸಪೇಟೆಯ ಡಾ. ಮೃತ್ಯುಂಜಯ ರುಮಾಲೆ ಅವರು ಪುಸ್ತಕ ವಿನ್ಯಾಸ ಮಾಡಿಕೊಟ್ಟವರು ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರು. ಸುಂದರವಾದ ಮುಖಪುಟವನ್ನು ರಚನೆ ಮಾಡಿಕೊಟ್ಟವರು ಕಲಾವಿದ ಕೆ. ಕೆ. ಮಕಾಳಿ ಅವರು. ಅಕ್ಷರ ಸಂಯೋಜಿಸಿದ ಋತ್ವಿಕ್‌ ಕಂಪ್ಯೂಟರ್ಸ್‌ನ ಡಿಸೋಜಾ ದಂಪತಿಗಳವರು. ಈ ಎಲ್ಲಾ ಮಹನೀಯರಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ.

ಈ ಸಂಪುಟವನ್ನು ಸಾಹಿತ್ಯಾಸಕ್ತರು, ವಿದ್ವಾಂಸರು ಪ್ರೀತಿಯಿಂದ ಸ್ವಾಗತಿಸುವರೆಂದು ಭಾವಿಸಿದ್ದೇವೆ.