ಕನ್ನಡದಲ್ಲಿ ಇಂದು ವೈವಿಧ್ಯಮಯ ಸಾಹಿತ್ಯ ಕೃತಿಗಳು ಸೃಷ್ಟಿಯಾಗುತ್ತಿವೆ. ಹೊಸ ಹೊಸ ಪ್ರಕಾರಗಳು ಕನ್ನಡ ಸಾಹಿತ್ಯಕ್ಕೆ ಸೇರ್ಪಡೆಗೋಳ್ಳುತ್ತವೆ. ಹಾಗೆ ನೋಡಿದರೆ “ಅಂಕಣ ಬರಹ” ಎಂಬುದು ಯಾವುದೇ ಒಂದು ನಿರ್ದಿಷ್ಟ ಸಾಹಿತ್ಯ ಪ್ರಕಾರವಲ್ಲ. ಅದು ಸಾಹಿತ್ಯದ ಗುಣಕ್ಕೆ ಸಂಬಂಧಪಟ್ಟ ಹೆಸರೂ ಅಲ್ಲ; ಬದಲಾಗಿ ಸಾಹಿತ್ಯ ಪ್ರಕಟವಾಗುವ ಪತ್ರಿಕೆಯ ನಿರ್ದಿಷ್ಟ ಸ್ಥಳವಿನ್ಯಾಸಕ್ಕೆ ಸಂಬಂಧಪಟ್ಟ ಹೆಸರು. ಇಂಗ್ಲಿಷಿನ “Column” ಎಂಬುದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ “ಅಂಕಣ” ಪದ ಬಳಕೆಗೆ ಬಂತು. ಅಲ್ಲಿನ “Columnlist”ಗೆ ಸಂವಾದಿಯಾಗಿ ನಮ್ಮಲ್ಲಿ “ಅಂಕಣಕಾರ” ಪದ ಚಾಲ್ತಿಗೆ ಬಂತು. ಒಟ್ಟಿನಲ್ಲಿ ತನ್ನೊಳಗಿನ ಗುಣ ಸ್ವಭಾವವನ್ನು ಗೌಣವಾಗಿಸಿ ಪತ್ರಿಕೆಯ ಮೀಸಲಿಟ್ಟ ಜಾಗವನ್ನೇ ತನ್ನ ಅಂಕಿತನಾಮವಾಗಿಸಿಕೊಂಡ ಈ ಅಂಕಣ ಸಾಹಿತ್ಯ ತನ್ನೊಳಗೆ ಅಪಾರವಾದುದನ್ನು ಹುದುಗಿಸಿಟ್ಟುಕೊಂಡಿದೆ.

“ಆಡು ಮುಟ್ಟದ ಸೊಪ್ಪಿಲ್ಲ” ಎನ್ನುವಂತೆ ಅಂಕಣಕಾರ ಸ್ಪರ್ಶಿಸದ, ಸ್ಪಂದಿಸದ ವಸ್ತು – ವಿಷಯವೇ ಇಲ್ಲವೆನ್ನಬಹುದು. ಪ್ರಪಂಚದ ಆಗು – ಹೋಗುಗಳು, ಸುತ್ತಲಿನ ಸಾಹಿತ್ಯಿಕ – ಸಾಂಸ್ಕೃತಿಕ ಚಟುವಟಿಕೆಗಳು, ರಾಜಕೀಯ – ಆರ್ಥಿಕ ವಿದ್ಯಮಾನಗಳು, ಪುರಾಣ – ಇತಿಹಾಸದ ಘಟನಾವಳಿಗಳು – ಇವೆಲ್ಲವುಗಳಿಗೂ ಓರ್ವ ಅಂಕಣಕಾರ ಸ್ಪಂದಿಸುತ್ತಾನೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರ ಬಗೆಗೆ, ಮಹಾತ್ಮರ ಬಗೆಗೆ ಬರೆಯುತ್ತಾನೆ ತನ್ನ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಕುರಿತು ಆತ್ಮೀಯವಾದ ಚಿತ್ರಣಗಳನ್ನು ಕೊಡುತ್ತಾನೆ. ಹರಟೆ ಹೊಡೆಯುತ್ತಾನೆ; ಪ್ರಬಂಧ ಕಟ್ಟುತ್ತಾನೆ; ಕಥೆ ಹೇಳುತ್ತಾನೆ; ಆತ್ಮ ಕಥೆ ಬರೆಯುತ್ತಾನೆ; ಭಾವ ಲಹರಿಯನ್ನು ಹರಿಸುತ್ತಾನೆ, – ಹೀಗೆ ಸಾಹಿತ್ಯದ ಹೆಚ್ಚಿನೆಲ್ಲಾ ಪ್ರಕಾರಗಳಿಗೂ ಈ ಅಂಕಣ ಸಾಹಿತ್ಯದೊಳಗಡೆ ಸೇರಿಕೊಂಡಿರುತ್ತವೆ. ತನ್ನ ಬರವಣಿಗೆಯ ಮೂಲಕ ಓದುಗರಿಗೆ ಅಪೂರ್ವ ಮಹಾಹಿತಿಗಳನ್ನೊದಗಿಸಿಕೊಡುವ, ಅವರನ್ನು ಚಿಂತನೆಗೆ ಹಚ್ಚುವ, ನಗಿಸುವ, ಅವರ ಮನಸ್ಸನ್ನು ಅರಳಿಸುವ ಕೆಲಸವನ್ನು ಓರ್ವ ಅಂಕಣಕಾರ ಮಾಡುತ್ತಾನೆ. ಪತ್ರಿಕೆಯಲ್ಲಿ ಬರೆಯುವ ಒಬ್ಬ ಅಂಕಣಕಾರನಿಗೆ ಅದೇ ಪತ್ರಿಕೆಯ ಓರ್ವ ವರದಿಗಾರನಿಗಿಂತ ಹೆಚ್ಚಿನದಾದ ಸ್ವಾತಂತ್ರ್ಯವಿರುತ್ತದೆ.

ಅಂಕಣ ಸಾಹಿತ್ಯವೆಂಬುದು ಪತ್ರಿಕೆಯಷ್ಟೇ ಪ್ರಾಚೀನವಾದುದು. ದೈನಿಕ ಹಾಗೂ ನಿಯತಕಾಲಿಕೆಗಳ ಸಂಪಾದಕೀಯಗಳು, ಅವುಗಳ ನಿಗದಿತ ಜಾಗದಲ್ಲಿ, ನಿರ್ದಿಷ್ಟ ಶೀರ್ಷಿಕೆಗಳಡಿಯಲ್ಲಿ, ನಿಯತವಾಗಿ ಪ್ರಕಟವಾಗುವ ಬಿಡಿ ಬರೆಹಗಳು – ಇವೆಲ್ಲಾ ಅಂಕಣ ಸಾಹಿತ್ಯವೆನಿಸಿಕೊಳ್ಳುತ್ತವೆ. ಇಲ್ಲಿ ಮುಖ್ಯ ಶೀರ್ಷಿಕೆ ಒಂದೇ ಇದ್ದರೂ, ವಿಷಯ ಮಾತ್ರ ಲೇಖನದಿಂದ ಲೇಖನಕ್ಕೆ ಬದಲಾಗುತ್ತಿರುತ್ತದೆ. ಈ ಅರ್ಥದಲ್ಲಿ ಅವು ಪತ್ರಿಕೆಯ ಧಾರವಾಹಿಗಳಿಗಿಂತ ಭಿನ್ನವಾಗಿರುತ್ತವೆ.

ತೀರಾ ಇತ್ತೀಚಿನ ದಶಕಗಳವರೆಗೆ ಅಂಕಣ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಗೋಜಿಗೆ ಯಾರು ಹೋಗುತ್ತಿರಲಿಲ್ಲ. ಹಾಗಾಗಿ ಅವುಗಳ ಸಾಹಿತ್ಯಕ ಮೌಲ್ಯದ ಬಗೆಗೂ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಪತ್ರಿಕೆಗಳಲ್ಲಿ ಅವು ಪ್ರಕಟವಾಗುತ್ತಿದ್ದ ಸಮಕಾಲೀನ ಸಂದರ್ಭಗಳಿಗಷ್ಟೇ ಅಂಕಣ ಬರೆಹಗಳು ಪ್ರಸ್ತುತ; ಅದರಿಂದಾಚೆಗಿನ ಸಾಹಿತ್ಯಿಕ ಮೌಲ್ಯ ಅವುಗಳಿಗಿಲ್ಲ – ಎಂಬ ಭಾವನೆಯೇ ಸಾಮಾನ್ಯವಾಗಿತ್ತು. ಆದರೆ ಅಂತಹ ಬರೆಹಗಳು ಇಂದು ಪುಸ್ತಕ ರೂಪದಲ್ಲಿ ಸಂಕಲನಗೊಂಡು, ಹೊರ ಬರತೊಡಗಿದಾಗಲೇ ಅವುಗಳ ನಿಜವಾದ ಸಾಹಿತ್ಯಿಕ ಮೌಲ್ಯ ಅರಿವಾಗತೊಡಗಿದುದು. ಬಹುಶಃ ೮೦ರ ದಶಕದವರೆಗೆ ಅಲ್ಲೊಂದು ಇಲ್ಲೊಂದರಂತೆ ಪ್ರಕಟವಾಗುತ್ತಿದ್ದ ಅಂಕಣ ಬರೆಹಗಳ ಸಂಕಲನಗಳು ೯೦ರ ದಶಕದ ವೇಳೆಗೆ ವಿಫುಲವಾಗಿ ಹೊರಬರತೊಡಗಿದುವು. ಜತೆಗೆ ಬರೆಹಗಳ ವಿಷಯ, ಅವುಗಳ ನಿರ್ವಹಣೆ, ನಿರೂಪಣೆಯ ಧಾಟಿ, ಭಾಷೆ – ನುಡಿಗಟ್ಟು ಇವುಗಳಲ್ಲೂ ವೈವಿಧ್ಯ ಕಾಣಿಸಿಕೊಂಡಿತು. ಹಾ. ಮಾ. ನಾಯಕರಿಗೆ ಕೇಂದ್ರಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಬಂದುದಂತೂ ಅಂಕಣ ಸಾಹಿತ್ಯಕ್ಕೆ ಸಂದ ಮಹೋನ್ನತ ಗೌರವವೆನಿಸಿತು ಹೀಗೆ ೯೦ರ ದಶಕವು ಅಂಕಣ ಬರೆಹಗಳ ಸಂಕಲಗಳ ಮಟ್ಟಿಗೆ ಸುಗ್ಗಿಯ ಕಾಲವೆಂದೇ ಹೇಳಬಹುದು, ಪ್ರಸ್ತುತ ಅವಧಿಯಲ್ಲಿ ಪ್ರಕಟವಾದ ಸುಮಾರು ೩೦ಕ್ಕೂ ಹೆಚ್ಚು ಕೃತಿಗಳು ಈ ಸಮೀಕ್ಷಕನ ಗಮನಕ್ಕೆ ಬಂದಿವೆ. ಗಮನಕ್ಕೆ ಬಾರದ ಕೃತಿಗಳೂ ಇರಬಹುದು.

ಈ ದಶಕದಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾದ ಒಟ್ಟು ಅಂಕಣ ಸಾಹಿತ್ಯವನ್ನು ವಿಷಯ ಹಾಗೂ ಸಂವಹನದ ದೃಷ್ಟಿಯಿಂದ ಕೆಲವೊಂದು ವರ್ಗೀಕರಣಗಳಡಿಯಲ್ಲಿ ಗುರುತಿಸಬಹುದೆಂದು ತೋರುತ್ತದೆ.

೦೧. ವರದಿ ಕೇಂದ್ರಿತ ಬರೆಹಗಳು
೦೨. ಪ್ರಾದೇಶಿಕ ಸಂಗತಿಗಳನ್ನು ಕುರಿತ ಬರೆಹಗಳು
೦೩. ಜಾಗತಿಕ ವಿದ್ಯಮಾನಗಳಿಗೆ ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು
೦೪. ರಾಜಕೀಯ ವಿಶ್ಲೇಷಣೆ – ವಿಮರ್ಶೆಗಳು
೦೫. ಸಾಹಿತ್ಯ – ಸಂಸ್ಕೃತಿ ಚಿಂತನೆಗಳು
೦೬. ಚಿಂತನಾಪರ ಬರೆಹಗಳು
೦೭. ವ್ಯಕ್ತಿ ಚಿತ್ರಗಳು
೦೮. ವಿನೋದ – ವಿಡಂಬನೆಗಳು
೦೯. ಲಲಿತ ಪ್ರಬಂಧ – ಹರಟೆಗಳು
೧೦. ಕಥೆಯ ಅನುಭವ ಕೊಡುವ ಬರೆಹಗಳು
೧೧. ಆತ್ಮಕಥನಾತ್ಮಕ ಬರೆಹಗಳು
೧೨. ಮನೋ ವೈಜ್ಞಾನಿಕ ಬರೆಹಗಳು
೧೩. ಪರಿಸರ – ಕೃಷಿ – ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳು
೧೪. ಸಮಾಜ – ಸಂಸ್ಕೃತಿ – ಜಾನಪದಕ್ಕೆ ಸಂಬಂಧಪಟ್ಟ ಲೇಖನಗಳು
೧೫. ಪ್ರವಾಸ ಕಥನಗಳು

– ಹೀಗೆ ವರ್ಗೀಕರಣಗಳನ್ನು ಮಾಡಿಕೊಳ್ಳುತ್ತಾ ಹೋಗುಬಹುದು. ಹಾಗೆಂದು ಇಡಿಯ ಕೃತಿಯ ನಿರ್ದಿಷ್ಟ ಪ್ರಭೇದದಡಿಯಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಒಂದೇ ಕೃತಿಯಲ್ಲಿ ಈ ಎಲ್ಲಾ ಪ್ರಭೇದಗಳಿಗೂ ಉದಾಹರಣೆಗಳಾಗುವ ಬರೆಹಗಳಿರುತ್ತವೆ. ಇದಕ್ಕೆ ಅಲ್ಲೊಂದು ಇಲ್ಲೊಂದರಂತೆ ಅಪವಾದವೂ ಇರಬಹುದು. ಹಾಗಾಗಿ ಮೇಲಿನ ವರ್ಗೀಕರಣಗಳೇನಿದ್ದರೂ ಹೆಚ್ಚಾಗಿ ಅಂಕಣ ಬರೆಹಗಳಿಗೆ ಅನ್ವಯಿಸುತ್ತವೆಯೇ ಹೊರತು, ಅವುಗಳ ಸಂಕಲನಗಳಿಗಲ್ಲ.

ಈ ದಶಕದ ಅಂಕಣ ಬರೆಹಗಳ ಸಂಕಲನಗಳಲ್ಲಿ “ಕಡೆಂಗೋಡ್ಲು ಅಗ್ರಲೇಖನಗಳು” ಎಂಬ ಸಂಪುಟಕ್ಕೆ ಐತಿಹಾಸಕ ಮಹತ್ವವಿದೆ. ಕಡೆಂಗೋಡ್ಲು ಶಂಕರಭಟ್ಟರು ೧೯೨೭ ರಿಂದ ೧೯೫೩ರವರೆಗೆ ‘ರಾಷ್ಟ್ರಬಂಧು’ ವಾರ ಪತ್ರಿಕೆಗೆ ಬರೆಯುತ್ತಿದ್ದ ಸಂಪಾದಕೀಯ ಲೇಖನಗಳಲ್ಲಿ ಹಲವು ಇಲ್ಲಿ ಸಂಕಲನಗೊಂಡಿವೆ. ಒಟ್ಟು ಬರೆಹಗಳನ್ನು ಭಾರತದ ರಾಜಕೀಯ – ಸ್ವಾತಂತ್ರ್ಯಾ ಪೂರ್ವ, ಭಾರತದ ರಾಜಕೀಯ – ಸ್ವಾತಂತ್ರ್ಯೋತ್ತರ, ಯುದ್ದಗಳು, ಅಂತರರಾಷ್ಟ್ರೀಯ ವಿದ್ಯಮಾನಗಳು, ವಾಣಿಜ್ಯೋದ್ಯಮ – ವ್ಯವಸಾಯ, ಸಾಮಾಜಿಕ ಸಮಸ್ಯೆಗಳು, ಶಿಕ್ಷಣಕ್ಷೇತ್ರ, ಭಾಷೆ – ಸಾಹಿತ್ಯ – ಪತ್ರಿಕೋದ್ಯಮ – ಹೀಗೆ ಸಂಪಾದಕರು ವರ್ಗೀಕರಿಸಿಕೊಂಡಿದ್ದಾರೆ. ಸಂಪಾದಕರು ಇವನ್ನು ಅಂಕಣ ಬರೆಹಗಳೆಂದು ಕರೆದಿಲ್ಲವಾದರೂ ವಾರಪತ್ರಿಕೆಯೊಂದರ ಸಂಪಾದಕೀಯ ಬರೆಹಗಳೆನ್ನುವ ನೆಲೆಯಲ್ಲಿ ಇವು ಅಂಕಣ ಸಾಹಿತ್ಯವೆನಿಸುತ್ತವೆ. ಈ ಸಂಪುಟದ ಲೇಖನಗಳನ್ನು ನೋಡಿದರೆ, ೧೯೨೭–೫೩ರ ಅವಧಿಯಲ್ಲೇ ಅಂಕಣ ಸಾಹಿತ್ಯದ ವಿಷಯ ಎಷ್ಟೊಂದು ವೈವಿಧ್ಯಮಯ ವಾಗಿತ್ತೆಂಬುದು ಮನವರಿಕೆಯಾಗುತ್ತದೆ. ವಿಷಯ ವೈವಿಧ್ಯದ ಜತೆಗೆ ವಿಚಾರ ಪ್ರತಿಪಾದನೆಯ ದೃಷಟ್ಟಿಯಿಂದಲು ಇಲ್ಲಿನ ಬರೆಹಗಳು ಮಹತ್ವವನ್ನು ಪಡೆದುಕೊಳ್ಳುತ್ತವೆ.

ನಂತರದಲ್ಲಿ ವಿ. ಎಂ. ಇನಾಮ್‌ದಾರ್, ಹಾ. ಮಾ. ನಾಯಕ, ಕು. ಶಿ. ಹರಿದಾಸ ಭಟ್ಟ, ಕೀರ್ತಿನಾಥ ಕುತೃಕೋಟಿ, ಪಾಟೀಲ ಪುಟ್ಟಪ್ಪನವರಂಥ ಹಿರಿಯ ಬರೆಹಗಾರರು ತಮ್ಮ ಅಂಕಣ ಬರೆಹಗಳ ಮೂಲಕ ಈ ಪರಂಪರೆಯನ್ನು ಇನ್ನಷ್ಟು ಸತ್ವಯುತವಾಗಿ ಬೆಳಸಿದರೆನ್ನಬಹುದು. ‘Wonder ಕಣ್ಣು’ಗಳ ವೈ. ಎನ್‌. ಕೆ., ‘ವ್ಯಕ್ತಿ ವಿಷಯ’ಗಳ ಎಚ್ಚೆಸ್ಕೆ ಮುಂತಾದವರೂ ವಿಭಿನ್ನ ಮಾದರಿಯಲ್ಲಿ ಬರೆಯುವ ಹಿರಿಯ ಅಂಕಣಕಾರರಲ್ಲಿ ಮುಖ್ಯರೆನಿಸುತ್ತಾರೆ.

ಹಾ. ಮಾ. ನಾಯಕರ ‘ಸಂಪ್ರತಿ’ಯ ೨ ಮತ್ತು ೩ ನೆಯ ಸಂಪುಟಗಳು ಇದೇ ದಶಕದಲ್ಲಿ ಬೆಳಕು ಕಂಡುವು. ೧೯೮೪ ರಿಂದ ೯೦ರ ವರೆಗೆ ‘ಪ್ರಜಾವಾಣಿ’ ದೈನಿಕದ ಸಾಪ್ತಾಹಿಕ ಪುರವಣೆಯಲ್ಲಿ ಅವರು ಬರೆದ ಒಟ್ಟು ೧೮೪ ವೈವಿಧ್ಯಮಯ ಲೇಖನಗಳು ಈ ಎರಡು ಸಂಪುಟಗಳಲ್ಲಿ ಸಂಕಲನಗೊಂಡಿವೆ. ಅಂಕಣ ಬರೆಹಗಳಿಗೂ ಸಾಹಿತ್ಯಿಕ ಮೌಲ್ಯವಿದೆಯೆಂಬುದನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯುವ ಮೂಲಕ ತೋರಿಸಿಕೊಟ್ಟವರು ಹಾ. ಮಾ. ನಾಯಕರು.

ಕು. ಶಿ. ಹರಿದಾಸ ಭಟ್ಟರು ‘ಉಯದವಾಣಿ’ಗೆ ಬರೆಯುತ್ತಿದ್ದ ‘ಲೋಕಾಭಿರಾಮ’ದ ಬರೆಹಗಳು ಕಾರಾವಳಿ ಜನರಿಗಂತೂ ಚಿರಪರಿಚಿತ. ಒಂದು ಕಾಲಕ್ಕೆ ‘ಉದಯವಾಣಿ’ಗೆ ಸಂಪಾದಕೀಯವಿಲ್ಲವೆಂಬ ಕೊರತೆಯನ್ನೂ ಈ ಲೋಕಾಭಿರಾಮದ ಬರೆಹಗಳು ನೀಗುತ್ತಿದ್ದುವೆಂದು ಹೇಳಬಹುದು. ಬಹುಶಃ ಕು. ಶಿ. ಯವರ ಚಿಂತನಾಪರ ಬರೆಹಗಳಿದ್ದುರಿಂದಲೇ ಪತ್ರಿಕೆಯ ಸಂಪಾದಕರಿಗೆ ಸಂಪಾದಕೀಯದ ಅಗತ್ಯವೂ ಕಂಡು ಬರಲಿಲ್ಲವೇನೋ! ‘ಲೋಕಾಭಿರಾಮ’ದ ೪, ೫ ಮತ್ತು ೬ನೇಯ ಸಂಪುಟಗಳು ಈ ದಶಕದಲ್ಲಿ ಪ್ರಕಟವಾದವು. ಸಾಹಿತ್ಯ, ಕಲೆ, ಸಂಸ್ಕೃತಿ, ರಾಜಕೀಯ, ಅರ್ಥಶಾಸ್ತ್ರ, ಪ್ರಚಲಿತ ವಿದ್ಯಮಾನ – ಇವೆಲ್ಲವುಗಳಿಗೆ ಪ್ರತಿಸ್ಪಂದಿಸುವ ಕು. ಶಿ. ಯವರು ಸಾಹಿತಿ, ಕಲಾವಿದ, ಸಮಾಜ ಸೇವಕ, ರಾಜಕಾರಣಿಗಳ ಬಗೆಗೂ ಬರೆಯುತ್ತಾರೆ.

ಕೀರ್ತಿನಾಥ ಕುತೃಕೋಟಿಯವರ ಅಂಕಣ ಬರೆಹಗಳು ಮುಖ್ಯವಾಗಿ ಸಾಹಿತ್ಯ – ಸಂಸ್ಕೃತಿ ಚಿಂತನೆಗಳು, ಅವರು ‘ಸಮ್ಮುಖ’ ಎಂಬ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ಗಾಗಿ ಬರೆಯುತ್ತಿದ್ದ ಅಂಕಣ ಬರೆಹಗಳು ‘ಉರಿಯನಾಲಗೆ’ ಎಂಬ ಹೊಸ ಹೆಸರಲ್ಲಿ, ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಇಲ್ಲಿನ ಪ್ರತಿಯೊಂದು ಲೇಖನದ ವಸ್ತು ವೈವಿಧ್ಯಮಯವಾಗಿದ್ದರೂ “ಅವುಗಳ ಹಿಂದಿನ ಚಿಂತನೆಯ ಕ್ರಮ ಏಕಸೂತ್ರವಾಗಿರುವಂತೆ ನೋಡಿಕೊಳ್ಳಲಾಗಿದೆ” ಎಂದು ಮೊದಲ ಮಾತಲ್ಲಿ ಸ್ವತಃ ಲೇಖಕರೇ ಹೇಳಿಕೊಂಡಿದ್ದಾರೆ. ಇಲ್ಲಿನ ಬರೆಹಗಳು ಯಾವುದೇ ವಿಷಯಕ್ಕೆ ಸಂಬಂಧಪಟ್ಟವುಗಳಾಗಿರಲಿ ಅಲ್ಲೆಲ್ಲಾ ವಿಮರ್ಶೆಯ ದಾಟಿ ಕಂಡುಬರುತ್ತದೆ. ಕುರ್ತಕೋಟಿಯವರು ಓರ್ವ ಸೂಕ್ಷ್ಮ ಪ್ರಜ್ಞೆಯ ವಿಮರ್ಶಕರಾಗಿರುವುದೇ ಇದಕ್ಕೆ ಕಾರಣವೆನ್ನಬಹುದು. ಅವರ ಸಾಹಿತ್ಯ ವಿಮರ್ಶೆಯೆಂದರೆ ಅದು ಸಂಸ್ಕೃತಿ ಚಿಂತನೆಯೂ ಆಗಿರುತ್ತದೆ; ಸಂಸ್ಕೃತಿ ಚಿಂತನೆಯೆಂದರೆ ಅದು ಸಾಹಿತ್ಯ ವಿಮರ್ಶೆಯೂ ಆಗಿರುತ್ತದೆ. ಈ ವೈಶಿಷ್ಟ್ಯವನ್ನು ಇಲ್ಲಿಯೂ ನಾವು ಗಮನಿಸಬಹುದು. ಭಾಷೆ, ಸಾಹಿತ್ಯ, ಸಂಸ್ಕೃತಿ, ಜಾನಪದ, ಹಬ್ಬ – ಆಚರಣೆ, ಕಲೆ, ಸಿನಿಮಾ, ಶಿಲ್ಪ, ಕಾವ್ಯಮೀಮಾಂಸೆ, ಪುರಾಣ, ರಾಜಕೀಯ, ಸಮಕಾಲೀನ ವಿದ್ಯಮನ – ಇವೆಲ್ಲವುಗಳಿಗೆ ಸಂಬಂಧಿಸಿದ ಚರ್ಚೆ – ಚಿಂತನೆಗಳು ಇಲ್ಲಿವೆ. ವ್ಯಕ್ತಿ ಚಿತ್ರಗಳೂ ಸೇರಿಕೊಂಡಿವೆ.

ಹಳೆಯ ತಲೆಮಾರಿನವರಲ್ಲೊಬ್ಬರಾದ ವೈ. ಎನ್‌. ಕೆ. ಯವರ ಬರೆಹಗಳ ಧಾಟಿ ವಿನೋದ ಪರವಾದುದು. ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ಹರಟೆ – ವಿಡಂಬನೆಗಳ ಮಾದರಿಯಲ್ಲಿ ಪ್ರತಿ ಗುರುವಾರ ಅವರು ಬರೆಯುತ್ತಿದ್ದ “Wonkder ಕಣ್ಣು” ಬರೆಹಗಳು ಏಳು ಸಂಪುಟಗಳಾಗಿ ಪ್ರಕಟವಾಗಿವೆ. ಅವರು ಚರಿತ್ರೆಯನ್ನು ಉಲ್ಲೇಖಿಸಿ ಬರೆಯಲಿ, ವರ್ತಮಾನವನ್ನು ಉದಾಹರಿಸಿ ಬರೆಯಲಿ, ದೇಶದ ಬಗೆಗೆ ಬರೆಯಲಿ, ವಿದೇಶದ ಬಗೆಗೆ ಬರೆಯಲಿ ಅಲ್ಲೆಲ್ಲಾ ವಿನೋದ – ವಿಡಂಬನೆಯ ಲಾಸ್ಯ ಇದ್ದೇ ಇರುತ್ತದೆ. ಅವರ ಬಹುಪಾಲು ಬರೆಹಗಳ ಅಂತ್ಯದಲ್ಲಿ ಕಾಣಸಿಕೊಳ್ಳುವ ‘ಕೊನೆಸಿಡಿ’ಯಲ್ಲಂತು ಹಾಸ್ಯ ಸಿಡಿಯುತ್ತಿರುತ್ತದೆ. ‘ಘಾ’ ಎಂಬ ಅಲ್ಲಿನ ಪಾತ್ರವು ವಿಶಿಷ್ಟವಾದುದೇ ಹಾಸ್ಯ ಹಾಸ್ಯಕ್ಕಷ್ಟೇ ಸೀಮಿತವಲ್ಲ ಎಂಬುದಕ್ಕೆ ವೈ. ಎನ್‌. ಕೆ. ಯವರ ‘Wonder ಕಣ್ಣು’ಗಳು ಉತ್ತಮ ಉದಾಹರಣೆಗಳೆನಿಸುತ್ತವೆ. ತಮ್ಮ ವೈಚಾರಿಕ ಚಿಂತನಗಳ ಪ್ರತಿಪಾದನೆಗೆ ಅವರು ಹಾಸ್ಯವನ್ನು ಬಳಸಿಕೊಳ್ಳುತ್ತಾರೆ.

ಅಂಕಣ ಸಾಹಿತ್ಯವೆಂದಾಕ್ಷಣ ನಮ್ಮ ನೆನಪಿಗೆ ಬರುವ ಇನ್ನೊಂದು ಪ್ರಮುಖ ಹೆಸರೆಂದರೆ ಎಚ್ಚೆಸ್ಕೆಯವರದು. ಸುಮಾರು ೬೦ ವರ್ಷಗಳಷ್ಟು ದೀರ್ಘಕಾಲ ವಿವಿಧ ಪತ್ರಿಕೆಗಳಲ್ಲಿ ಅಂಕಣ ಬರೆಹಗಳನ್ನು ಬರೆಯುತ್ತಾ ಬಂದ “ಅಂಕಣ ಬ್ರಹ್ಮ”ರಿವರು. ಅವರು ಅಂಕಣ ಬರೆಹಗಳನ್ನೇ ಸೃಜನಶೀಲವಾಗಿಸಲು ಹೊರಟವರು; ಗದ್ಯದಲ್ಲಿ ಕಾವ್ಯ ಹರಿಯುವಂತೆ ಬರೆಯಹೊರಟವರು. ‘ಸುಧಾ’ ವಾರಪತ್ರಿಕೆಯಲ್ಲಿ ಅವರು ಬರೆಯುತ್ತಿರುವ ‘ವ್ಯಕ್ತಿ ವಿಷಯ’ ತುಂಬಾ ಪ್ರಸಿದ್ಧ. ಚಿಕ್ಕ, ಚೊಕ್ಕ ವಾಕ್ಯಗಳು ಅವರ ಅಂಕಣಗಳಲ್ಲಿನ ಎದ್ದು ಕಾಣುವ ಗುಣ. ಕ್ರಿಯಾ ಪದಗಳನ್ನು ಕಳಚಿಕೊಂಡಿಂತಿರುವ ಅವರ ಕೆಲವು ವಾಕ್ಯಗಳು ವಿಶಿಷ್ಟವಾಗಿವೆ. ‘ವ್ಯಕ್ತಿ ವಿಷಯ’ದ ಚಿಕ್ಕ ಅಂಕಣದಲ್ಲಿ ಅವರು ವ್ಯಕ್ತಿಯ ಇಡಿಯ ವ್ಯಕ್ತಿತ್ವವನ್ನೇ ಹಿಡಿದಿಡುವ ಪರಿ ನಿಜಕ್ಕೂ ಅನನ್ಯವಾದುದು. ಅಂಕಣ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಪರಿಗಣಿಸಿ, ಗದುಗಿನ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿಯು ಇತ್ತೀಚೆಗೆ ತನ್ನ ಪ್ರಥಮ “ಅಂಕಣ ಶ್ರೀ” ಪ್ರಶಸ್ತಿಯನ್ನು ಅವರಿಗೆ ನೀಡಿ, ಗೌರವಿಸಿದೆ.

ಪಾಟೀಲ ಪುಟ್ಟಪ್ಪನವರು ಪತ್ರಿಕಾ ಸಾಹಿತಿಯಾಗಿ ಪ್ರಸಿದ್ದರು. ‘ತರಂಗ’ ವಾರಪತ್ರಿಕೆಗಾಗಲಿ, ತಮ್ಮ ಸ್ವಂತ ಪತ್ರಿಕೆಗಾಗಲಿ ಅವರು ಬರೆಯುತ್ತಿದ್ದ ಲೇಖನಗಳು ಒಂದು ಪುಟ್ಟ ಪ್ರಪಂಚವನ್ನೇ ಓದುಗರೆದುರು ತೆರೆದಿಡುತ್ತವೆ. ಒಂದೇ ಪುಸ್ತಕವಾಗಿ ಪ್ರಕಟವಾದ ನಾಲ್ಕು ಸಂಪುಟಗಳ ‘ಪಾಪು ಪ್ರಪಂಚ’ದಲ್ಲಿ ಚರೆತ್ರೆಯಿದೆ; ವರ್ತಮಾನವಿದೆ; ವ್ಯಕ್ತಿ ಚಿತ್ರಗಳಿವೆ; ಹಳೆಯ ನೆನಪುಗಳಿವೆ. ಅರಸು ಮನೆತನಗಳ ಕಥೆಯಿದೆ; ಸ್ವಾತಂತ್ರ್ಯ ಹೋರಾಟದ ಗಾಥೆಯಿದೆ.

ನಿರ್ಭಿಡೆಯ ಸಂಪಾದಕೀಯ ಬರೆಹಗಳಿಗಾಗಿ ನಾವು ಸಂತೋಷಕುಮಾರ ಗುಲ್ವಾಡಿಯವರ “ಅಂತರಂಗ – ಬಹಿರಂಗ” ಮತ್ತು ಬಿ. ವಿ. ವೈಕುಂಟರಾಜು ಅವರ “ಸಂಪಾದಕ ಡೈರಿ”ಗಳನ್ನು ಓದಬೇಕು. ‘ತರಂಗ’ ವಾರಪತ್ರಿಕೆಯ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿಯವರು ರಾಜಕೀಯ, ಸಮಾಜ, ಸಂಸ್ಕೃತಿ – ಮೊದಲಾದ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯಾತ್ಮಕವಾಗಿ ಬರೆದ ಬರೆಹಗಳು ಐದು ಸಂಪುಟಗಳಲ್ಲಿ ಪ್ರಕಟವಾಗಿವೆ. ಇಲ್ಲಿನ ಬಹುಪಾಲು ಲೇಖನಗಳು ಸಮಾಜದ ಓರೆ – ಕೋರೆಗಳನ್ನು ಎತ್ತಿ ತೋರಿಸುವಂತಹವು. ವಿಡಂಬನೆ – ವಿಮರ್ಶೆಗಳ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಬಯಸುವಂತಹವು. ರಾಜಕೀಯ ವಿದ್ಯಮಾನಗಳ ಬಗೆಗೆ, ರಾಜಕಾರಣಿಗಳ ಸ್ವಾರ್ಥ ರಾಜಕಾರಣದ ಬಗೆಗೆ ಗುಲ್ವಾಡಿಯವರು ಎಗ್ಗಿಲ್ಲದೆ ಬರೆಯುತ್ತಾರೆ. ಆಯಾ ಕಾಲದ ರಾಜಕೀಯ ಆಗು – ಹೋಗುಗಳಿಗೆ ಸ್ಪಂದಿಸಿ, ಸಾಮಾಜಿಕ ಸಮಸ್ಯೆಗಳಿಗೆ ಕನ್ನಡಿ ಹಿಡಿದು, ಸರಕಾರದ ದುರಾಡಳಿತಕ್ಕೆ ಪ್ರತಿಕ್ರಿಯಿಸಿ ಗುಲ್ವಾಡಿಯವರು ಬರೆದ ಅನೇಕ ಲೇಖನಗಳು ಇಂದಿಗೂ ಪ್ರಸ್ತುತವೆನಿಸುತ್ತವೆ. ಸಿನಿಮಾ, ಸಂಗೀತ, ಚಿತ್ರಕಲೆಯಂತಹ ಕಲಾಮಾಧ್ಯಮಗಳ ಬಗೆಗೆ ಬರೆದ ಬರೆಹಗಳು ಓದುಗರಿಗೆ ಅಪೂರ್ವ ಮಾಹಿತಿಗಳನ್ನು ಒದಗಿಸಿಕೊಡುತ್ತವೆ.

‘ವಾರಪತ್ರಿಕೆ’ಯ ಸಂಪಾದಕ ಬಿ. ವಿ. ವೈಕುಂಠರಾಜು ಅವರ ‘ಸಂಪಾದಕ ಡೈರಿ’ ಒಂದು ಬೃಹತ್‌ ಸಂಪುಟ. ಸಂಪುಟದ ಪ್ರಕಾಶಕರು ಅಭಿಪ್ರಾಯ ಪಡುವಂತೆ “ಸಂಪಾದಕ ಡೈರಿ ಆಯಾ ಕಾಲದ ಇತಿಹಾಸವನ್ನು ಡಾಕ್ಯುಮೆಂಟ್‌ ಮಾಡುವಲ್ಲಿ ಸಫಲವಾಗಿದೆ. ಈ ದೃಷ್ಟಿಯಿಂದ ೧೯೮೭, ೧೯೮೮ ಮತ್ತು ೧೯೮೯ರ ರಾಜಕೀಯ, ಸಾಮಾಜಿಕ, ಆರ್ಥಿಕ ವಿಷಯಗಳ ಡಾಕ್ಯುಮೆಂಟೇಶನ್‌ ಈ ಕೃತಿ” ಇವಿಷ್ಟೇ ಅಲ್ಲದೆ ಸಾಹಿತ್ಯಿಕ – ಸಾಂಸ್ಕೃತಿಕ ಸಂಗತಿಗಳಿಗೂ ಇಲ್ಲಿ ಪ್ರತಿಸ್ವಂದಿಸಲಾಗಿದೆ. ಹಂಪೆಯ ಲಕ್ಷ್ಮೀ ನರಸಿಂಹ ವಿಗ್ರದ ನವೀಕರಣ ವಿವಾದಕ್ಕೆ ಸಂಬಂಧಿಸಿದಂತೆ ಶಿವರಾಮ ಕಾರಂತರಿಗೆ ಬರೆದ ಬಹಿರಂಗ ಪತ್ರಗಳಾಗಲಿ, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ಬಿಹಾರದ ಉನ್ನತ ನ್ಯಾಯಾಲಯ ಮತ್ತು ದೆಹಲಿಯ ಸರ್ವೋಚ್ಚ ನ್ಯಾಯಾಲಯಗಳ ತೀರ್ಪುಗಳ ಬಗೆಗೆ ವ್ಯಕ್ತಪಡಿಸಿರಿವ ಪ್ರತಿಕ್ರಿಯೆಗಳಾಗಲಿ ಲೇಖಕರ ನಿರ್ಭಿಡೆಯ ಬರವಣಿಗೆಗೆ ಸಾಕ್ಷಿಗಳಾಗಿವೆ.

ಇಲ್ಲಿ ಪ್ರಸ್ತಾಪಿಸಬೇಕಾದ ಇನ್ನೊಂದು ಪ್ರಮುಖ ಕೃತಿಯೆಂದರೆ ಡಾ. ಬಿ. ಎ. ವಿವೇಕ ರೈಯವರ “ಗಿಳಿಸೂವೆ”. ೧೯೯೨ ರಿಂದ ೧೯೯೫ರ ವರೆಗೆ ರೈಯವರು ‘ಮುಂಗಾರು’ ಪತ್ರಿಕೆಗೆ ಬರೆದ ಅಂಕಣ ಬರೆಹಗಳಲ್ಲಿ ೫೪ನ್ನ ಆಯ್ದು ಇಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಜಾನಪದ ತಜ್ಞರಾದ, ಅದರಲ್ಲೂ ತುಳು ಜಾನಪದದದ ಬಗೆಗೆ ವಿಶೇಷ ಪರಿಜ್ಞಾನವುಳ್ಳ ವಿವೇಕ ರೈಯವರ ಅಂಕಣ ಬರೆಹಗಳಲ್ಲಿ ಅದರ ಛಾಪು ತಾನೇ ತಾನಾಗಿ ಕಾಣಿಸಿಕೊಳ್ಳುತ್ತದೆ. ‘ಗಿಳಿಸೂವೆ’ಯೆಂಬ ಅರ್ಥಪೂರ್ಣ ಶಿರ್ಷಿಕೆಯೇ ಇದಕ್ಕೆ ಉತ್ತಮ ಉದಾಹರಣೆಯಾಗುತ್ತದೆ. ಮನೆಗೋಡೆಗೆ ಅಳವಡಿಸಿದ, ಗಿಳಿಯೊಂದು ಹಾದುಹೋಗಬಹುದಾದಷ್ಟು ವ್ಯಾಪ್ತಿಯ ರಂಧ್ರರೂಪದ ಚಿಕ್ಕ ಕಿಂಡಿಗೆ ತುಳು ಸಂದರ್ಭದಲ್ಲಿ ‘ಗಿಳಿಸೂವೆ’ ಎನ್ನಲಾಗುತ್ತದೆ. ಮನೆಯೊಳಗಿದ್ದುಕೊಂಡೇ ಈ ಸಣ್ಣ ರಂಧ್ರದ ಮೂಲಕ ವಿಶಾಲವಾದ ಹೊರ ಪ್ರಪಂಚವನ್ನು ನೋಡಬಹುದಾಗಿದೆ. ಅದೇ ರೀತಿ ತಾನು ತನ್ನ ಸೀಮಿತ ಓದು – ಅರಿವಿನ ಮೂಲಕ ಸುತ್ತಣ ಪ್ರಪಂಚವನ್ನು ನೋಡಲು ಇಲ್ಲಿ ಪ್ರಯತ್ನಸಿರುವೆನೆಂಬ ಸೌಜನ್ಯದ ಭಾವ ಲೇಖಕರದು. ಆದರೆ “ಗಿಳಿಸೂವೆ”ಯ ಹಿಂದಿದ್ದ ಲೇಖಕರ ದೃಷ್ಟಿ ಮಾತ್ರ ವಿಶಾಲವಾದುದು; ವೈವಿಧ್ಯಮಯವಾದುದು; ವಿಶಿಷ್ಟವಾದುದು. ಜಾನಪದ, ಸಂಶೋಧನೆ, ಸಾಹಿತ್ಯ, ವಿಮರ್ಶೆ, ಸ್ತ್ರೀವಾದ, ವಿದೆಸಪ್ರವಾಸ – ಈ ಎಲ್ಲಾ ವಸ್ತು – ವಿಷಯಗಳಿಗೆ ಸಂಬಂಧಪಟ್ಟ ಚಿಂತನಾಪೂರ್ಣ ಬರೆಹಗಳು ಇಲ್ಲಿವೆ.

ಈಶ್ವರ ದೈತೋಟ ಅವರು ‘ಉದಯವಾಣಿ’ ದೈನಿಕಕ್ಕೆ ‘ಅಂತರದೃಷ್ಟಿ’ ಎಂಬ ಶೀರ್ಷಿಕೆಯಲ್ಲಿ ಬರೆಯುತ್ತಿದ್ದ ಅಂಕಣ ಬರೆಹಗಳೂ ಪುಸ್ತಕರೂಪದಲ್ಲಿ ಪ್ರಕಟವಾಗಿವೆ. ಒಟ್ಟು ಬರೆಹಗಳನ್ನು ಅವರು ಕೃಷಿ, ಆಹಾರ, ಅನುಪಾನ, ಅಮೃತ, ಆರೋಗ್ಯ, ಪರಿಸರ ಮತ್ತು ಪರ್ಯಟನೆ ಎಂಬ ಏಳು ವಿಭಾಗಗಳಲ್ಲಿ ಬರ್ಗೀಕರಿಸಿಕೊಂಡಿದ್ದಾರೆ. ದೈತೋಟ ಅವರು ಕೃಷಿ ಬಗೆಗೆ ಬರೆಯಲಿ, ಆಹಾರದ ಬಗೆಗೆ ಬರೆಯಲಿ, ಪರಿಸರದ ಬಗೆಗೆ ಬಗೆಗೆ ಬರೆಯಲಿ – ಅಲ್ಲೆಲ್ಲಾ ಹೊಸ ಹೊಸ ವಿಚಾರಗಳನ್ನು ಹೇಳುತ್ತಾರೆ. ಕೃಷಿಯ ಬಗ್ಗೆ ಬರೆಯುತ್ತಾ, ಸಹಜ ಕೃಷಿ – ಪಾರಂಪರಿಕ ಜ್ಞಾನಗಳಿಗೆ ಅವರು ಒತ್ತು ಕೊಡುತ್ತಾರೆ. ಆಹಾರ, ಅನುಪಾನ, ಅಮೃತಗಳೆಂಬ ಭಾಗಗಳಂತೂ ವಿವಿಧ ಆಹಾರ – ಪಾನೀಯಗಳಿಗೆ ಸಂಬಂಧಿಸಿದ ಕುತೂಹಲಕರ ವಿವರಗಳನ್ನು ಸುಲಲಿತ ಗದ್ಯದಲ್ಲಿ ಓದುಗರ ಮುಂದೆ ತೆರೆದಿಡುತ್ತವೆ. ಅವರ ಪ್ರವಾಸದ ಅನುಭವಗಳು ರೋಚಕವಾಗಿರುವುದರ ಜತೆಗೆ, ಓದುಗರ ಅರಿವಿನ ಪರಿಧಿಯನ್ನು ವಿಸ್ತರಿಸುತ್ತವೆ.

ಪತ್ರಿಕಾರಂಗದಲ್ಲಿ “ಲಂಕೇಶ್ ಯುಗ” ವೆಂಬ ಕಾಲಘಟ್ಟವೊಂದನ್ನು ಗುರುತಿಸಬಹುದೇನೊ! “ಲಂಕೇಶ್ ಪತ್ರಿಕೆ”ಯು ತನ್ನ ವರದಿ, ವಿಮರ್ಶೆ. ಟೀಕೆ – ಟಿಪ್ಪಣಿ, ಕಥೆ, ಕವಿತೆ, ಲೇಖನಗಳ ಮೂಲಕ ಒಂದು ಕ್ರಾಂತಿಯನ್ನೇ ಉಂಟುಮಾಡಿತೆನ್ನಬಹುದು. ಭಾಷೆಯ ಬಗೆಗೆ ಹೇಳುವುದಾರೆ, ಪ್ರತ್ರಿಕಾ ಸಾಹಿತ್ಯಕ್ಕೆ ಒಂದು ವಿನೂತನ ನುಡಿಗಟ್ಟನ್ನೇ ಅದು ರೂಪಿಸಿತೆನ್ನಬಹುದು. ಅದಕ್ಕೆ ಪೂರಕವೆಂಬಂತೆ ಅಂಕಣ ಬರೆಹಗಳಲ್ಲೂ ವೈವಿಧ್ಯತೆ, ಹೊಸತನಗಳು ಕಾಣಿಸಿಕೊಳ್ಳ ತೊಡಗಿದವು. ಸ್ವತಃ ಲಂಕೇಶ್ ಅವರ ಟೀಕೆ – ಟಿಪ್ಪಣಿಗಳೇ ತಮ್ಮ ಭಾಷೆ, ವಿಷಯ, ನಿರ್ವಹಣೆ – ನಿರೂಪಣೆ – ಸಂವಹನ ವಿಧಾನಗಳಿಂದ ಓದುಗರಿಗೆ ಹೆಚ್ಚು ಪ್ರಿಯವಾದುವು: ಆಪ್ತವಾದವು. ಇತರ ಬರೆಹಗಾರರು ಸಾಮಾನ್ಯವಾಗಿ ಎತ್ತಿಕೊಳ್ಳುವಂತಹ ಎಲ್ಲಾ ಬಗೆಯ ವಸ್ತು – ವಿಷಯಗಳನ್ನು ಹೆಚ್ಚು ಕಡಿಮೆ ಲಂಕೇಶರೂ ತಮ್ಮ ಬರೆಹಗಳಿಗೆ ಬಳಸಿಕೊಂಡಿದ್ದಾರೆ, ಆದರೆ ಬರವಣಿಗೆಯಲ್ಲಿ ಅವುಗಳನ್ನು ನಿರ್ವಹಿಸಿದ ರೀತಿ ಮಾತ್ರ ವಿಭಿನ್ನವಾದುದು. ಕೆಲವು ವಿಶಿಷ್ಟ – ವಿನೂತನ ವಿಷಯಗಳ ಬಗೆಗೂ ಲಂಕೇಶರು ಬರೆಯುತ್ತಾರೆ. ಉದಾಹರಣೆಗೆ: ಹದಿಹರೆಯದವರನ್ನು ಕುರಿತು, ಮನ್ಮಥನ ಆಗಮನ ಮುಂತಾದ ಲೇಖನಗಳನ್ನೇ ಗಮನಿಸಬಹುದು. ವೈಜ್ಞಾನಿಕ ವಿಷಯಗಳನ್ನೂ ಓದುಗರಿಗೆ ಆಪ್ಯಾಯಮಾನವಾಗುವಂತೆ ಹೇಗೆ ಬರೆಯಬಹುದೆಂಬುದಕ್ಕೆ ಈ ಬರವಣಿಗೆಗಳೇ ಸಾಕ್ಷಿಯಾಗುತ್ತವೆ. ಕಥೆ, ಲಲಿತ ಪ್ರಬಂಧ, ಮಿಮರ್ಶೆ, ಚಿಂತನೆ – ಇವೆಲ್ಲಾ ಗುಣಗಳನ್ನೂ ಇಲ್ಲಿನ ಬರೆಹಗಳಲ್ಲಿ ನಾವು ಕಾಣಬಹುದಾಗಿದೆ. ವ್ಯಕ್ತಿ ಚಿತ್ರಗಳನ್ನು ಬರೆಯುವಾಗ ಎಷ್ಟೇ ಆತ್ಮೀಯರೆನಿಸಿದ ವ್ಯಕ್ತಿಗಳಾಗಿರಲಿ ಅವರ ಗುಣ – ದೋಷಗಳೆರಡನ್ನೂ ತೆರೆದಿಡುವ ಲಂಕೇಶರ ಪ್ರವೃತ್ತಿ ಇಷ್ಟವಾಗುತ್ತದೆ. ಅವರು ಏನೇ ಬರೆದರೂ ಅಲ್ಲಿ ಮಹತ್ವದ ಚಿಂತನೆಯಿರುತ್ತದೆ; ಓದುಗರನ್ನು ಅದು ಚಿಂತನೆಗೆ ಹಚ್ಚುತ್ತದೆ. ತಮ್ಮ ‘ಟೀಕೆ – ಟಿಪ್ಪಣಿ’ಗಳ ಮೂಲಕ ಉತ್ತಮ ಗದ್ಯದ ಮಾದರಿಯೊಂದನ್ನು ಅವರು ಕನ್ನಡಿಗರಿಗೆ ಒದಗಿಸಿಕೊಟ್ಟರು. ಅಂಕಣ ಬರೆಹಗಳಿಗೆ ಸಂಬಂಧಪಟ್ಟಂತೆ ಅದುವರೆಗೆ ರೂಢಿಯಲ್ಲಿದ್ದ ನುಡಿಗಟ್ಟುನ್ನೂ ಬದಲಿಸಿದರು. “ಟೀಕೆ ಟಿಪ್ಪಣಿ’ ಸಂಪುಟದ ಎರಡೆನೆಯ ಆವೃತ್ತಿ ಹೊರ ಬಂದಾಗ ಅದರಲ್ಲಿ ಲಂಕೇಶರು ಹಿಂದೆ ‘ಪ್ರಜಾವಾಣಿ’ಗೆ ಬರೆಯುತ್ತಿದ್ದ ಕೆಲವು ಅಂಕಣ ಬರೆಹಗಳೂ ಸೇರ್ಪಡೆಯಾದವು.

ಲಂಕೇಶರ ‘ಟೀಕೆ – ಟಿಪ್ಪಣಿ’ಗಳ ಜತೆ ಜತೆಗೇ ಹೆಸರಿಸಬೇಕಾದ ಇನ್ನೊಂದು ಮಹತ್ವದ ಅಂಕಣ ಬರೆಹಗಳ ಸಂಕಲನವೆಂದರೆ ‘ನಿಮ್ಮಿ ಕಾಲಂ’. ಲಂಕೇಶ್ ಪತ್ರಿಕೆಯಲ್ಲಿ ‘ನಿಮ್ಮಿ’ ಎಂಬ ಕಾಲ್ಪನಿಕ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಈ ಕಾಲದ ನಿಜವಾದ ಲೇಖಕರು ಯಾರೆಂಬುದು ತೀರಾ ಇತ್ತೀಚಿನವರೆಗೂ ಬಹಳಷ್ಟು ಓದುಗರಿಗೆ ಗೊತ್ತಿರಲಿಲ್ಲ. ಅನೇಕರು ‘ನಿಮ್ಮಿ’ ಎಂಬ ಹುಡುಗಿಯೇ ಅವುಗಳನ್ನು ಬರೆಯುತ್ತಿದ್ದಿರಬೇಕೆಂದೂ ಭಾವಿಸಿದ್ದರು. ಆದರೆ ಅಲ್ಲಿನ ಬರೆಹಗಳಲ್ಲಿ ಹಲವು ಈಗ ಪುಸ್ತಕ ರೂಪದಲ್ಲಿ ಹೊರಬಂದಿರುವುದರಿಂದ ಅವುಗಳ ನಿಜವಾದ ಲೇಖಕರಾರೆಂಬುದು ಓದುಗರಿಗೆ ಗೊತ್ತಾಗಿದೆ. ಹಾಗೆಂದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ನಿಮ್ಮಿ ಕಾಲಂ’ನ ಎಲ್ಲಾ ಬರೆಹಗಳನ್ನೂ ಅನಿತಾ ಹುಳಿಯಾರ್ ಅವರೇ ಬರೆದಿಲ್ಲ. ಅವರಿಗಿಂತ ಮುಂಚೆ ಬೇರೆಯವರು ಬರೆಯುತ್ತಿದ್ದುದೂ ಇದೆ. ಅನಿತಾ ಅವರು ಬರೆದ ಬರೆಹಗಳಷ್ಟೆ ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಲಂಕೇಶರನ್ನು ‘ಅಂಕಲ್‌’ ಎಂದು ಸಂಬೋಧಿಸಿ, ಅವರಿಗೆ ಬರೆದ ಪತ್ರಗಳೋಪಾದಿಯಲ್ಲಿ ನಿರೂಪಿತವಾಗಿರುವ ಇಲ್ಲಿನ ಬರೆಹಗಳು ಲೇಖಕಿಯ ಅನುಭವ, ಭಾವನೆ, ಚಿಂತನೆಗಳನ್ನು ಓದುಗರ ಮುಂದೆ ತೆರೆದಿಡುತ್ತವೆ. ಸಾಹಿತ್ಯ ವಿಮರ್ಶೆ, ಸಮಾಜ ವಿಮರ್ಶೆ, ಆತ್ಮ ವಿಮರ್ಶೆ, ಸ್ತ್ರೀವಾದ – ಇವೆಲ್ಲಾ ಇರುವ ‘ನಿಮ್ಮಿ ಕಾಲಂ’ನ ಬರೆಹಗಳು ಉತ್ತಮ ಭಾವಾಭಿವ್ಯಕ್ತಿಗಳಾಗಿ ಗಮನ ಸೆಳೆಯುತ್ತವೆ.

‘ಖಾಸ್‌ಬಾತ್‌’ನ ರವಿ ಬೆಳಗೆರೆಯವರು ಒಂದರ್ಥದಲ್ಲಿ ಲಂಕೇಶ್‌ ಗರಡಿಯಲ್ಲೇ ಪಳಗಿದವರು. ಆದರೂ ಸ್ವತಂತ್ರವಾಗಿ ಬೆಳೆದವರು. ಅವರ ಅಂಕಣ ಅಥವಾ ಸಂಪಾದಕೀಯ ಬರೆಹಗಳ ಮಟ್ಟಿಗೂ ಈ ಮಾತು ಸತ್ಯ. ತಮ್ಮ ‘ಹಾಯ್‌ ಬೆಂಗಳೂರು’ ಪತ್ರಿಕೆಯ ಮೂಲಕ ಓದುಗರೊಂದಿಗೆ ರವಿ ಹಂಚಿಕೊಂಡ ‘ಖಾಸ್‌ಬಾತ್‌’ (ಸ್ವಂತದ ಮಾತುಗಳು) ಈಗ ಪುಸ್ತಕ ರೂಪದಲ್ಲಿ ಹೊರಬಂದಿವೆ. ಶೀರ್ಷಿಕೆಯೇ ಸೂಚಿಸುವಂತೆ ಇಲ್ಲಿನ ಬರೆಹಗಳೆಲ್ಲಾ ಸ್ವಂತದ ಅನುಭವ ಕಥನಗಳಂತಿವೆ; ಆತ್ಮ ಕಥೆಗಳಂತಿವೆ. ತಮ್ಮ ಬದುಕಿನ ನೈಜ ಅನುಭವ – ಘಟನೆಗಳೆಂಬಂತೆ ರವಿ ನಿರೂಪಸುವ ಅನೇಕ ಪ್ರಸಂಗಗಳು ಅಲ್ಲಿನ ಭಾಷೆ, ಕಥನ ಕ್ರಮಗಳಿಂದಾಗಿ ಓದುಗರಿಗೆ ಪ್ರಿಯವಾಗುತ್ತವೆ. ಬಾಲ್ಯದ ನೆನಪುಗಳನ್ನು, ಯೌವ್ವನದ ಅನುಭವಗಳನ್ನು, ಬದುಕಿನಲ್ಲುಂಟಾದ ಸೋಲು – ಗೆಲುವುಗಳನ್ನು, ನೋವು – ನಲಿವುಗಳನ್ನು ಲೇಖಕರು ರೋಚಕವಾಗಿ ಅಭಿವ್ಯಕ್ತಿಸುತ್ತಾರೆ.

ಲಂಕೇಶರ ಬರವಣಿಗೆಗಳಿಂದ ಪ್ರೇರಿತವಾಗಿ ಬರೆಯ ಹೊರಟವರಲ್ಲಿ ಅಬ್ದುಲ್‌ ರಶೀದ್‌ ಅವರೂ ಪ್ರಮುಖರು. ೧೯೯೪ರ ವೇಳೆಗೆ ಅವರು ‘ಮುಂಗಾರು’ ಪತ್ರಿಕೆಯಲ್ಲಿ ಬರೆಯುತ್ತಿದ್ದ ‘ಮಾತಿಗೂ ಆಚೆ’ ಅಂಕಣ ಬರೆಹಗಳು ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ರಶೀದ್‌ ಅವರು ಇಲ್ಲಿ ತಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಕುರಿತು ತುಂಬಾ ಆತ್ಮೀಯವಾಗಿ ಬರೆಯುತ್ತಾರೆ. ಲಂಕೇಶ್‌, ಕಿ. ರಂ. ರಂತಹ ಸಾಹಿತಿಗಳಿರಬಹುದು, ಸೂಫಿ ಬ್ಯಾರಿಯವರಂಥ ಸಹಜ ಕೃಷಿಯ ಪ್ರತಿಪಾದಕರಿರಬಹುದು, ಇಸ್ಮಾಯಿಲ್‌ ಕುಂಞಪ್ಪ ಬ್ಯಾರಿ ಮತ್ತು ರಾಮಚಂದ್ರ ಭಟ್ಟರಂಥ ಅಪರೂಪದ ಅನುಭಾವೀ ಸ್ನೇಹಿತರಿರಬಹುದು, ಓಡಿ ಹೋದ ಹುಡುಗಿಯಿರಬಹುದು, ಹುಲಿವೇಷದ ಹುಡುಗರಿರಬಹುದು, – ಇವರೆಲ್ಲರ ಕಥೆಗಳನ್ನು ರಶೀದ್‌ ಅವರು ಇಲ್ಲಿ ಹೇಳುತ್ತಾರೆ. ಈ ‘ಕಥೆ’ಗಳನ್ನು ಓದುತ್ತಾ ಹೋದಂತೆ ಅಲ್ಲಿನ ಆ ವ್ಯಕ್ತಿಗಳು ನಮಗೂ ಹತ್ತಿರವಾಗಿ ಬಿಡುತ್ತಾರೆ; ಆತ್ಮೀಯರಾಗಿ ಬಿಡುತ್ತಾರೆ. ಕೃತಿಯ ಬೆನ್ನುಡಿಯಲ್ಲಿ ಹೆಳಿರುವಂತೆ “ಇವು ಕತೆ, ಕವಿತೆ, ಪ್ರಬಂಧ, ಲೇಖನ, ಹರಟೆ – ಹೀಗೆ ಏನೆಲ್ಲಾ ಹೌದು”. ಇದುವೇ ಇಲ್ಲಿನ ವೈಶಿಷ್ಟ್ಯ. ಲಂಕೇಶ್, ‘ನಿಮ್ಮಿ’, ರವಿ, ರಶೀದ್‌ ಮುಂತಾದವರು, ಅಂಕಣ ಸಾಹಿತ್ಯದ ಪಾರಂಪರಿಕ ಲಕ್ಷಣಗಳನ್ನು ಮೀರಿದ ಲೇಖಕರಾಗಿ ನಮಗಿಲ್ಲಿ ಮುಖ್ಯರೆನಿಸುತ್ತಾರೆ.

ಸಿದ್ಧಲಿಂಗ ಪಟ್ಟಣಶೆಟ್ಟಿಯವರ “ಚಹಾದ ಜೋಡಿ ಚೂಡದ್ಹಾಂಗ”, ವೀರಣ್ಣ ದಂಡೆಯವರ “ಕಲಬುರ್ಗಿಯ ಕಲರವ” ಮತ್ತು ನಾ. ದಾಮೋದರ ಶೆಟ್ಟಿಯವರ “ತೆಂಕಣ ಸುಳಿಗಾಳಿ” – ಇವು ಮೂರೂ ಪ್ರಜಾವಾಣಿಯ ಒಂದೇ ಪುಟದಲ್ಲಿ ಪ್ರಕಟವಾಗುತ್ತಿದ್ದ, ಪ್ರಾದೇಶಿಕ ಸಾಂಸ್ಕೃತಿಕ ಸುದ್ದಿಗಳನ್ನಾಧರಿಸಿದ ಅಂಕಣ ಬರೆಹಗಳು. ಈ ಮೂರೂ ಬರೆಹಗಳು ಆಯಾ ಪ್ರದೇಶಗಳ ಸಾಂಸ್ಕೃತಿಕ – ಸಾಹಿತ್ಯಿಕ ಕಾರ್ಯಕ್ರಮಗಳ ಬಗೆಗಿನ ರಸಗ್ರಾಹಿ ವಿಶ್ಲೇಷಣೆಗಳಾಗಿವೆ. ಅವುಗಳಲ್ಲಿ ‘ಚಹಾದ ಜೋಡಿ ಚೂಡದ್ಹಾಂಗ’ ಮತ್ತು ‘ತೆಂಕಣ ಸುಳಿಗಾಳಿ’ ಗಳು ಈಗಾಗಲೇ ಪುಸ್ತಕ ರೂಪದಲ್ಲಿ ಹೊರಬಂದಿವೆ. ಪಟ್ಟಣ ಶೆಟ್ಟಿಯವರ ಧಾರವಾಡ ಕಡೆಯ ಕಾರ್ಯಕ್ರಮಗಳನ್ನಾಧರಿಸಿ ತಮ್ಮ “ಚಹಾದ ಜೋಡಿ ಚೂಡದ್ಹಾಂಗ” ಲೇಖನಗಳನ್ನು ಬರೆದಿದ್ದಾರೆ. ಇಲ್ಲಿನ ವಿಶಿಷ್ಟತೆಯಿರುವುದು ಧಾರವಾಡ ಪ್ರದೇಶದ ಭಾಷೆಯ ಬಳಕೆಯಲ್ಲಿ. ಸಿದ್ಧಲಿಂಗ ಪಟ್ಟಣ ಶೆಟ್ಟಿಯವರ ಮಾತು – ಬರೆಹಗಳೆರಡರಲ್ಲೂ ಧಾರವಾಡ ಭಾಷೆಯ ಸೊಗಡು ತಾನೇ ತಾನಾಗಿರುತ್ತದೆ. ಆದರಿಂದಾಗಿಯೇ ಅವರ ಬರೆಹಗಳು ಅನೇಕರಿಗೆ ಇಷ್ಟವಾಗುತ್ತವೆ.

ನಾ. ದಾಮೋದರ ಶೆಟ್ಟಿಯವರ ‘ತೆಂಕಣ ಸುಳಿಗಾಳಿ’ಯ ಬರೆಹಗಳೆಲ್ಲಾ ಕಾಸರಗೋಡೂ ಸೇರಿದಂತೆ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸಾಂಸ್ಕೃತಿಕ – ಸಾಹಿತ್ಯಿಕ ಕಾರ್ಯಕ್ರಮಗಳ ವಿಶೇಷ ವರದಿಗಳು; ಅಥವಾ ಸುದ್ದಿ ವಿಶ್ಲೇಷಣೆಗಳು. ಯಕ್ಷಗಾನ, ನಾಟಕ, ನೃತ್ಯ, ಚಿತ್ರ ಪ್ರದರ್ಶನ, ಕವಿಗೋಷ್ಠಿ, ಪುಸ್ತಕ ಬಿಡುಗಡೆಗಳಂತಹ ವಿವಿಧ ಕಾರ್ಯಕ್ರಮಗಳ ರಸಗ್ರಾಹಿ ವಿಶ್ಲೇಷಣೆಗಳು ಇಲ್ಲಿವೆ. ವಿರಳವಾಗಿ ವ್ಯಕ್ತಿಚಿತ್ರಗಳೂ ಸೇರಿಕೊಂಡಿವೆ. ಒಟ್ಟಿನಲ್ಲಿ ಇಂತಹ ಕೃತಿಗಳು ಆಯಾ ಪ್ರದೇಶಗಳು ಸಾಂಸ್ಕೃತಿಕ ಚಟುವಟಿಕೆಗಳ ದಾಖಲಾತಿಗಳಾಗಿ ಮಹತ್ವವನ್ನು ಪಡೆದುಕೊಳ್ಳುತ್ತವೆ. ಅದಕ್ಕಿಂತ ಹೊರತಾದ ಸಾಹಿತ್ಯಿಕ ಮೌಲ್ಯಗಳೇನನ್ನೂ ಅವುಗಳಿಂದ ನಿರೀಕ್ಷಿಸಲಾಗದು.

ಕನ್ನಡದಲ್ಲಿ ಪ್ರಾದೇಶಿಕ ಪತ್ರಿಕೆಗಳೂ ಅಪಾರ ಸಂಖ್ಯೆಯಲ್ಲಿವೆ. ಕಾಸರಗೋಡು, ಮುಂಬಯಿಗಳಂತಹ ಗಡಿನಾಡು – ಹೊರನಾಡುಗಳಿಂದಲೂ ಕನ್ನಡ ಪತ್ರಿಕೆಗಳು ಪ್ರಕಟವಾಗುತ್ತಿವೆ. ಅವುಗಳಲ್ಲೂ ಅಂಕಣ ಬರೆಹಗಳು – ಸಂಪಾದಕೀಯಗಳು ಇದ್ದೇ ಇರುತ್ತವೆ. ಇಂತಹ ಪತ್ರಿಕೆಗಳ ಪ್ರಸರಣ ವ್ಯಾಪ್ತಿ ಸೀಮಿತವಾಗಿರುವುದರಿಂದ ಅವುಗಳಲ್ಲಿ ಪ್ರಕಟವಾಗುವ ಅಂಕಣ ಬರೆಹಗಳೂ ಅನೇಕ ಸಂದರ್ಭಗಳಲ್ಲಿ ಸ್ಥಳೀಯ ವಿಷಯಗಳಿಗಷ್ಟೇ ಸಂಬಂಧಪಟ್ಟಿರುವುದುಂಟು. ಹಾಗೆಂದ ಮಾತ್ರಕ್ಕೆ ಅವುಗಳಿಗೆ ಮಹತ್ವವಿಲ್ಲವೆಂದು ತಿಳಿಯಲಾಗದು. ಕೆಲವು ಪ್ರಾದೇಶಿಕ ಪತ್ರಿಕೆಗಳಲ್ಲೂ ಮೌಲಿಕ ಬರೆಹಗಳು ಪ್ರಕಟವಾಗಿವೆ; ಪ್ರಕಟವಾಗುತ್ತಿವೆ. ವಿ. ಗ. ನಾಯಕರ ‘ಬಿಡುಗಡೆ’, ವಸಂತಕುಮಾರ ಪೆರ್ಲ ಅವರ ‘ಪ್ರಸ್ತಾಪ’, ರತ್ನಾಕರ ಶೆಟ್ಟಿಯವರ ‘ಪ್ರಾಸಂಗಿಕ’ದ ಎರಡು ಸಂಪುಟಗಳು ಈ ನಿಟ್ಟಿನಲ್ಲಿ ಮಹತ್ವದ ಕೃತಿಗಳು.

ದಕ್ಷಿಣ ಕನ್ನಡದ ಪುತ್ತೂರಿನಿಂದ ಹೊರ ಬರುತ್ತಿದ್ದ ‘ಜನ ಈ ದಿನ’ ದೈನಿಕಕ್ಕೆ ವಿ. ಗ. ನಾಯಕರು ಬರೆಯುತ್ತಿದ್ದ ಅಂಕಣ ಬರೆಹಗಳಲ್ಲಿ ೧೯ನ್ನು ಆಯ್ದು ‘ಬಿಡುಗಡೆ’ ಎಂಬ ಪುಸ್ತಕವಾಗಿ ಪ್ರಕಟಿಸಲಾಗಿದೆ. ಇಲ್ಲಿನ ಬಹುಪಾಲು ಬರೆಹಗಳು ಪ್ರಾದೇಶಿಕ ಮಿತಿಯುಳ್ಳವು. ಅವಿಭಜಿತ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಸಂಬಂಧಪಟ್ಟ ಲೇಖನಗಳೇ ಹೆಚ್ಚೆನ್ನಬಹುದು. ಆದರೂ ಸಾಹಿತಿ – ಸಾಹಿತ್ಯ ಕುರಿತಾದ ಪ್ರಾದೇಶಿಕ ಇತಿ – ಮಿತಿಗಳನ್ನು ರಾಜ್ಯವ್ಯಾಪಿಯಾಗಿ ಅಥವಾ ರಾಷ್ಟ್ರವ್ಯಾಪಿಯಾಗಿ ವಿಸ್ತರಿಸಬಲ್ಲ ಚಿಂತನೆಗಳು ಇಲ್ಲಿವೆ. ಕರ್ಕಿ ವೆಂಕಟ್ರಮಣ ಶಾಸ್ತ್ರಿ ಸೂರಿ ಅವರ ‘ಅನಾರ್ಯ ವಿವರ’ ಎಂಬ ಅಪರೂಪದ (ಅಪೂರ್ವ) ಪುಸ್ತಕದ ಕುರಿತು ನಾಯಕರು ಬರೆದಿರುವ ಎರಡು ಲೇಖನಗಳು ಆ ದೃಷ್ಟಿಯಿಂದ ಬಹಳ ಮಹತ್ವದ್ದೆನಿಸುತ್ತವೆ. ಅದೇ ರೀತಿ ಅವರು ಕರಾವಳಿ ಕರ್ನಾಟಕದ ಅನೇಕ ಸಾಹಿತಿಗಳ ಬಗೆಗೆ, ಸಾಹಿತ್ಯದ ಬಗೆಗೆ, ಸಾಹಿತ್ಯಿಕ ಚಟುವಟಿಕೆಗಳ ಬಗೆಗೆ ಬರೆದಾಗಲೂ ಅಲ್ಲಿನ ವಸ್ತುನಿಷ್ಠ ಪರಿಭಾವನೆ ನಮ್ಮ ಗಮನ ಸೆಳೆಯುತ್ತದೆ.

ವಸಂತಕುಮಾರು ಪೆರ್ಲ ಅವರು ಪುತ್ತೂರಿನ “ಸುದ್ದಿ ಬಿಡುಗಡೆ” ದಿನ ಪತ್ರಿಕೆಗೆ ಬರೆಯುತ್ತಿದ್ದ ‘ಪ್ರಸ್ತಾಪ’ ಎಂಬ ಹೆಸರಿನ ೫೨ ಅಂಕಣ ಬರೆಹಗಳು ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಇಲ್ಲಿನ ಬಹುಪಾಲು ಬರೆಹಗಳು ದಕ್ಷಿಣ ಕನ್ನಡ ಜಿಲ್ಲೆಗಷ್ಟೇ ಸೀಮಿತವೆಂದು ಕಂಡು ಬಂದರೂ ಅನೇಕ ಬರೆಹಗಳು ಆ ಮಿತಿಯನ್ನು ಮೀರಿ ನಿಂತಿವೆ. ಪ್ರಾದೇಶಿಕ ಜಾನಪದ ಹಾಗೂ ಸಂಸ್ಕೃತಿಗೆ ಸಂಬಂಧಪಟ್ಟ ಲೇಖನಗಳ ಜೊತೆಗೆ ಮುಂಬಯಿ, ಲಕ್ಷದ್ವೀಪ, ಕೇರಳಗಳಂತಹ ಪ್ರದೇಶಗಳ ಜನಜೀವನ – ಸಂಸ್ಕೃತಿಗಳನ್ನು ಬಿಂಬಿಸುವ ಲೇಖನಗಳೂ ಇಲ್ಲಿವೆ. ಎಲ್ಲಕ್ಕಿಂತಲೂ ಮುಖ್ಯವಾಗಿ ನಮ್ಮ ಗಮನ ಸೆಳೆಯುವ ಬರೆಹಗಳೆಂದರೆ ಕೊಡೆ, ಚುರಿದಾರ, ಲುಂಗಿ, ಜಡೆ – ಮುಂತಾದವುಗಳ ಬಗೆಗೆ ವಸಂತಕುಮಾರರು ಬರೆಯುವ ‘ಲಲಿತ ಪ್ರಬಂಧ’ಗಳು. ಇಲ್ಲೆಲ್ಲಾ ಪ್ರಾದೇಶಿಕ ಅನುಭವಗಳನ್ನು ಸಾರ್ವತ್ರಿಕಗೊಳಿಸುವ ಸಾಹಿತ್ಯಿಕ ಸತ್ವಗಳಿವೆ.

ರತ್ನಾಕರ ಶೆಟ್ಟಿಯವರ ‘ಪ್ರಾಸಂಗಿಕ’ದ ಎರಡು ಸಂಪುಟಗಳು ಮುಂಬಯಿಯ ‘ಕರ್ನಾಟಕಮಲ್ಲ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅಂಕಣ ಬರೆಹಗಳ ಸಂಕಲನಗಳು. ಹೊರನಾಡ ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳಾದ್ದರಿಂದ ಅವುಗಳಲ್ಲಿ ಸಹಜವಾಗಿಯೇ ಕೆಲವೊಂದು ವೈಶಿಷ್ಟ್ಯಗಳಿವೆ. ಮುಖ್ಯವಾಗಿ ಹೇಳಬೇಕೆಂದರೆ, ಇಲ್ಲಿನ ಅನೇಕ ಬರೆಹಗಳು ಮುಂಬಯಿ ಪರಿಸರದ ಮರಾಠಿ ಸಾಹಿತ್ಯ – ಸಂಸ್ಕೃತಿಗೆ ಸಂಬಂದಪಟ್ಟ ಅಪೂರ್ವ ಮಾಹಿತಿಗಳನ್ನೊದಗಿಸಿಕೊಡುತ್ತವೆ. ಜತೆಗೆ ಮುಂಬಯಿಯ ಕನ್ನಡ ಚಟುವಟಿಕೆಗಳ ಬಗೆಗೂ, ಕನ್ನಡಕ್ಕಾಗಿ ದುಡಿದ ಧೀಮಂತರ ಬಗೆಗೂ ಕೆಲವು ಲೇಖನಗಳು ವಿವರಗಳನ್ನು ನೀಡುತ್ತವೆ. ಮುಂಬಯಿಯನ್ನು ಬಿಟ್ಟು, ಒಳನಾಡು, ತುಳುನಾಡುಗಳತ್ತಲೂ ಅಂಕಣಕಾರರ ದೃಷ್ಟಿ ಹರಿದದ್ದಿದೆ. ಇತರ ರಾಜ್ಯ, ದೇಶ, ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಬಗೆಗೂ ಪ್ರತಿಕ್ರಿಯಿಸಿದ್ದಿದೆ. ಒಟ್ಟಿನಲ್ಲಿ ಪತ್ರಿಕೆಯ ಅಂಕಣವೊಂದರಲ್ಲಿ ‘ಪ್ರಾಸಂಗಿಕ’ವಾಗಿ ಪ್ರಕಟವಾಗುತ್ತಿದ್ದ ಈ ಲೇಖನಗಳು ಪುಸ್ತಕ ರೂಪ ಪಡೆದುಕೊಂಡು, ಆಸಕ್ತರಿಗೆ ಅಪೂರ್ವ ಮಹಿತಿಗಳನ್ನೊದಗಿಸಿ ಕೊಟ್ಟಿವೆ.

ಹೀಗೆ ೯೦ರ ದಶಕದಲ್ಲಿ ಪುಸ್ತಕ ರೂಪದಲ್ಲಿ ಬಂದ ಅಂಕಣ ಸಾಹಿತ್ಯವು ಸಾಕಷ್ಟು ಹುಲುಸಾಗಿಯೇ ಇದೆಯೆನ್ನಬಹುದು. ಹಾಗೆಂದು ಕೆಲವು ಕೃತಿಗಳು ಈ ಸಮೀಕ್ಷಕನ ಗಮನಕ್ಕೆ ಬಾರದೆ ಹೋಗಿರುವ ಸಾಧ್ಯೆಗಳೂ ಇಲ್ಲದಿಲ್ಲ. ಇಲ್ಲಿ ಹೆಸರಿಸಿದ ಬರೆಹಗಾರರಲ್ಲದೆ ಇನ್ನೂ ಅನೇಕ ಅಂಕಣ ಸಾಹಿತಿಗಳು ನಮ್ಮಲ್ಲಿದ್ದಾರೆ. ಈಗಲೂ ವಿವಿಧ ಪತ್ರಿಕೆಗಳಲ್ಲಿ ಅವರ ಅಂಕಣ ಬರೆಹಗಳು ಪ್ರಕಟವಾಗುತ್ತಿವೆ. ಓದುಗನ ಆಸಕ್ತಿಗೆ ತಕ್ಕಂತೆ, ಸಂಚಿಕೆಯಿಂದ ಸಂಚಿಕೆಗೆ ಆತನ ಕತೂಹಲವನ್ನು ಕೆರಳಿಸುತ್ತಾ, ಅಭಿರುಚಿಗೆ ಸ್ಪಂದಿಸುತ್ತಾ, ಆತನಿಗೆ ಅಪೂರ್ವವಾದ ಮಾಹಿತಿಗಳನ್ನು ನೀಡುತ್ತಾ, ಆತನನ್ನು ಚಿಂತನೆಗೆ ಹಚ್ಚುತ್ತಾ ಬರೆಯುವ ಜವಾಬ್ದಾರಿ ಅಂಕಣಕಾರನಿಗಿರುತ್ತದೆ. ಈ ದೃಷ್ಟಿಯಿಂದ ಅಂಕಣಕಾರನಿಗೂ, ಓದುಗನಿಗೂ ಒಂದು ರೀತಿಯ ತಾದಾತ್ಮ್ಯ ಸಂಬಂಧವೇರ್ಪಡುತ್ತದೆ.

ಆದರೆ ಅಂತಹ ಬರೆಹಗಳೆಲ್ಲಾ ಅಂದಂದಿನ ಓದಿಗಷ್ಟೆ ಸೀಮಿತವಾಗುಳಿಯುತ್ತವೆ. ಇದೀಗ ಅವುಗಳಲ್ಲಿ ಕೆಲವಾದರೂ ಪುಸ್ತಕ ರೂಪದಲ್ಲಿ ಪ್ರಕಟವಾಗತೊಡಗಿದುದರಿಂದ ಅವುಗಳ ಸಾರ್ವಕಾಲಿಕತೆ, ಸಾರ್ವತ್ರಿಕತೆ ಓದುಗರಿಗೆ ಮನವರಿಕೆಯಾಗಿದೆ; ಸಾಹಿತ್ಯಿಕ ಮಹತ್ವವೂ ಅರಿವಾಗತೊಡಗಿದೆ. ಅಂಕಣ ಬರೆಹಗಳೇನಿದ್ದರೂ ಅವು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಆಯಾ ಕಾಲಘಟ್ಟಕ್ಕಷ್ಟೇ ಪ್ರಸ್ತುತವಾದವುಗಳು ಎಂಬ ಬಾವನೆ ಈಗ ಮಾಯವಾದಂತಿದೆ. ಅದಕ್ಕೆ ಪೂರಕವೆಂಬಂತೆ ಬರೆಹಗಳ ವಸ್ತುಗಳೂ ವೈವಿಧ್ಯಮಯವಾಗಿವೆ. ಭಾಷೆ – ನುಡಿಗಟ್ಟುಗಳಲ್ಲೂ ಹಲವು ಅಂಕಣ ಸಾಹಿತಿಗಳು ಹೊಸತನವನ್ನು ತಂದಿದ್ದಾರೆ. ಕವಿಗಳು, ಕಥೆಗಾರರು, ವಿಮರ್ಶಕರು, ಸಂಸ್ಕೃತಿ ಚಿಂತಕರು, ಆರ್ಥಿಕ ಚಿಂತಕರು, ರಾಜಕೀಯ ಚಿಂತಕರು – ಮೊದಲಾದವರೆಲ್ಲಾ ಇಂದು ಅಂಕಣ ಬರೆಹಗಳನ್ನು ಬರೆಯುತ್ತಿರುವುದರಿಂದ ಸಹಜವಾಗಿಯೇ ಅಂಕಣ ಸಾಹಿತ್ಯ ವೈವಿಧ್ಯಮಯವಾಗಿ ಬೆಳೆದಿದೆ; ಆ ಮೂಲಕ ವಿಶಿಷ್ಟವಾದ ಗದ್ಯವೊಂದು ಕನ್ನಡಕ್ಕೆ ದತ್ತವಾಗಿದೆ. ಪ್ರಸ್ತುತ ದಶಕದ ಅನೇಕ ಕೃತಿಗಳು ಇದಕ್ಕೆ ಉದಾಹರಣೆಗಳಾಗುತ್ತವೆ. ಕೆಲವು ಬರೆಹಗಳಂತೂ ಹಿಂದೆ ಪತ್ರಿಕೆಗಳ ಅಂಕಣಗಳಲ್ಲಿ ಪ್ರಕಟವಾದವುಗಳೆಂಬ ವಾಸ್ತವವನ್ನೂ ಹಿನ್ನೆಲೆಗೆ ಸರಿಸಿ, ಸ್ವತಂತ್ರವಾಗಿ ಬೆಳೆದು ನಿಂತಿರುತ್ತವೆ. ಇದಕ್ಕೆಲ್ಲಾ ಅವುಗಳಲ್ಲಿನ ಸಾಹಿತ್ಯಿಕ ಗುಣವೇ ಕಾರಣವೆನ್ನಬಹುದು. ಅದೇನೇ ಇದ್ದರೂ ಇಂತಹ ವೈವಿಧ್ಯಮಯ, ವಿಶಿಷ್ಟ ಸಾಹಿತ್ಯದ ಹುಟ್ಟು – ಬೆಳವಣಿಗೆಗೆ ಕಾರಣವಾದ ಪತ್ರಿಕೆಗಳನ್ನೂ ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು.