ತಾಳೆಗರಿ ಮತ್ತು ಕೋರಿಕಾಗದಳಂತಹ ಹಸ್ತಪ್ರತಿಗಳಲ್ಲಿ ಹುದುಗಿದ್ದ ಯಾವುದೇ ಕೃತಿಯ ಆಶಯ ಮತ್ತು ಪಾಠಾಂತರಗಳನ್ನು ಅವಲಂಬಿಸಿ ನಿಜಪಾಠವನ್ನು ನಿರ್ಣಯಿಸುವ ಕ್ರಿಯೆ ಗ್ರಂಥಸಂಪಾದನೆ. ೧೯ನೆಯ ಶತಮಾನದ ಕೊನೆಯ ಭಾಗ (೧೮೭೨) ದಲ್ಲಿ ರೆವ್ಹರೆಂಡ್‌ ಎಫ್‌. ಕಿಟೆಲ್‌ ಅವರು ಒಂಬತ್ತು ಹಸ್ತಪ್ರತಿಗಳ ಸಹಾಯದಿಂದ ಕೇಶೀರಾಜನ ಶಬ್ದಮಣಿ ದರ್ಪಣವನ್ನು ಪರಿಷ್ಟರಿಸಿ ಪ್ರಕಟಿಸುವುದರೊಂದಿಗೆ ಶಾಸ್ತ್ರೀಯ ರೀತಿಯ ಗ್ರಂಥಸಂಪಾದನ ಕಾರ್ಯಕ್ಕೆ ನಾಂದಿ ಹಾಡಿದರು. ಅಲ್ಲಿಂದ ಸುಮಾರು ೧೩೦ ವರ್ಷಗಳ ದೀರ್ಘ ಇತಿಹಾಸವನ್ನು ಹೊಂದಿರುವ ಇದು ಕಾಲದಿಂದ ಕಾಲಕ್ಕೆ ತನ್ನ ಸ್ಪಷ್ಟವಾದ ಸೈದ್ಧಾಂತಿಕ ನೆಲೆಗಳನ್ನು ಕಂಡುಕೊಳ್ಳುತ್ತ ಬಂದಿದೆ. ವಿಶ್ವವಿದ್ಯಾನಿಲಯ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕನ್ನಡ ಪುಸ್ತಕ ಪ್ರಾಧಿಕಾರಗಳಂಥ ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಗದುಗಿನ ತೋಂಟದಾರ್ಯ ಮಠದ ವೀರಶೈವ ಅಧ್ಯಯನ ಸಂಸ್ಥೆ, ಮೈಸೂರು ಸುತ್ತೂರು ಮಠದ ಶ್ರೀ ಜೆ. ಎಸ್. ಎಸ್. ಗ್ರಂಥಮಾಲೆಗಳಂಥ ಧಾರ್ಮಿಕ ಸಂಸ್ಥೆಗಳು, ಬಸವ ಸಮಿತಿ, ಬಿ.ಎಂ. ಶ್ರೀ ಸ್ಮಾರಕ ಪ್ರತಿಷ್ಠಾನ, ಕನ್ನಡ ಸಾಹಿತ್ಯ ಪರಿಷತ್ತುಗಳಂಥ ಸಾರ್ವಜನಿಕ ಸಂಸ್ಥೆಗಳು, ಆಸಕ್ತ ವಿದ್ವಾಂಸರು, ಪ್ರಕಾಶಕರು ಪ್ರಾಚೀನ ಅಪ್ರಕಟಿತ ಕೃತಿಗಳನ್ನು ಪರಿಷ್ಕರಿಸಿ ಪ್ರಕಟಿಸುತ್ತಿರುವುದು ಸಂತೋಷದ ಸಂಗತಿ. ಆ ಮೂಲಕ ಕನ್ನಡದ ಬಹುತೇಕ ಕವಿಗಳ ಕೃತಿಗಳು ದೊರಕುವಂತಾಗಿವೆ. ಕಳೆದ ದಶಕ (೧೯೯೧–೨೦೦೦) ದಲ್ಲಿ ಗ್ರಂಥಸಂಪಾದನ ಕ್ಷೇತ್ರದಲ್ಲಿ ಬಹುಮಹತ್ವದ ಪ್ರಕಟಣೆಗಳು ಬಂದಿವೆ. ಅವೆಲ್ಲವುಗಳನ್ನು ಅವಲೋಕಿಸುವುದು ಈ ಸಂಪ್ರಬಂಧದ ಉದ್ದೇಶವಲ್ಲ. ಬದಲಾಗಿ ಈ ಕ್ಷೇತ್ರದಲ್ಲಾದ ಗಮನಾರ್ಹ ಸಾಧನೆಗಳನ್ನು, ಅರೆಕೊರೆಗಳನ್ನು ಗುರುತಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಅಧ್ಯಯನದ ಅನುಕೂಲಕ್ಕಾಗಿ ಈ ಅವಧಿಯಲ್ಲಿ ಪ್ರಕಟವಾದ ಸಂಪಾದಿತ ಕೃತಿಗಳನ್ನು ಅನುಲಕ್ಷಿಸಿ ವಚನ – ಸ್ವರವಚನಸಾಹಿತ್ಯ, ಕಾವ್ಯ, ಲಘಸಾಹಿತ್ಯ, ಸಂಕೀರ್ಣ ಸಾಹಿತ್ಯವೆಂದು ಸ್ಥೂಲವಾಗಿ ವರ್ಗೀಕರಿಸಿಕೊಂಡು ವಿವೇಚಿಸಲಾಗಿದೆ.

ವಚನ ಸ್ವರವಚನ ಸಾಹಿತ್ಯ

ಇತ್ತೀಚಿನ ದಶಕಗಳಲ್ಲಿ ವಚನಗಳ ಶೋಧ ಮತ್ತು ಪ್ರಕಟನ ಕಾರ್ಯ ತೀವ್ರಗತಿಯಲ್ಲಿ ನಡೆಯುತ್ತಲಿದೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ೧೯೯೩ ರಲ್ಲಿ ಸಮಗ್ರ ವಚನ ಸಾಹಿತ್ಯದ ಜನಪ್ರಿಯ ಆವೃತ್ತಿಗಳನ್ನು ಹೊರತಂದಿತ್ತು. ಈ ಸಂಪುಟಗಳು ಕನ್ನಡ ಪುಸ್ತಕ ಲೋಕದಲ್ಲಿಯೇ ಅತ್ಯಂತ ಮಹತ್ವದ ಪ್ರಕಟನೆಗಳೆಂದು ಪರಿಗಣಿಸಸ್ಪಟ್ಟಿವೆ. ಬಸವಣ್ಣ, ಪ್ರಭುದೇವ, ಚೆನ್ನಬಸವಣ್ಣ, ಸಿದ್ಧರಾಮ, ಶಿವಶರಣೆಯರ ವಚನಗಳ ಐದು ಸಂಪುಟಗಳು, ಬಸವ ಸಮಕಾಲೀನ ಮಿಕ್ಕ ಶರಣರ ವಚನಗಳ ನಾಲ್ಕು ಸಂಪುಟಗಳು, ಬಸವ ಸಮಕಾಲೀನ ಮಿಕ್ಕ ಶರಣರ ವಚನಗಳ ನಾಲ್ಕು ಸಂಪುಟಗಳು, ಬಸವೋತ್ತರ ಕಾಲದ (ಅದುನಿಕ ವಚನ ಸಾಹಿತ್ಯವನ್ನು ಹೊರತುಪಡಿಸಿ) ಐದು ಸಂಪುಟಗಳು, ಒಂದು ವಚನ ಪರಿಭಾಷಾಕೋಶ ಹೀಗೆ ಹದಿನೈದು ಸಂಪುಟಗಳಲ್ಲಿ ಸುಮಾರು ೧೦ ಸಾವಿರ ಪುಟವ್ಯಾಪ್ತಿಯ, ೨೦ ಸಾವಿರ ವಚನಗಳು ಒಂದೇ ಕಡೆ ಲಭ್ಯವಾಗಿರುವುದು ಗಮನಾರ್ಹ ಸಂಗತಿ. ಎಂ.ಎಂ. ಕಲಬುರ್ಗಿ, ಬಿ.ವಿ. ಮಲ್ಲಾಪುರ, ಎಸ್, ವಿದ್ಯಾಶಂಕರ, ವೀರಣ್ಣ ರಾಜೂರ, ಬಿ.ಆರ್. ಹೀರೆಮಠ, ಎಸ್. ಶಿವಣ್ಣ ಅವರು ಈ ಸಂಪುಟಗಳ ಸಪಾದಕರಾಗಿದ್ದಾರೆ. ಪ್ರಧಾನ ಸಂಪಾದಕರಾದ ಎಂ.ಎಂ.ಕಲಬುರ್ಗಿ ಅವರು ಈ ಯೋಜನೆಯ ಉದ್ದೇಶವನ್ನು ಸ್ಪಷ್ಟಪಡಿಸುತ್ತಾ “ಎಲ್ಲ ಶರಣರ ವಚನಗಳನ್ನು ಎಲ್ಲ ಪ್ರಾಚೀನ ಆಕರಗಳಿಂದ ಸಂಗ್ರಹಿಸುವುದು, ಪ್ರಕ್ಷಿಪ್ತವಾಗಿರಬಹುದಾದ ವಚನಗಳನ್ನು ಕೈಬಿಡುವುದು, ನಿಜವಚನಗಳ ಪಾಠವನ್ನು ಪರಿಷ್ಕರಿಸುವುದು” ಬಹುಮುಖ್ಯವಾದುದೆಂದು ಹೇಳಿದ್ದಾರೆ. ಈ ಸಂಪುಟಗಳ ಪರಿಷ್ಕರಣದ ವಿಧಾನದ ಬಗೆಗೆ ಲಭ್ಯವಿರುವ ಪಾಠಾಂತರಗಳಲ್ಲಿ ಯೋಗ್ಯವಾದುದನ್ನು ಸ್ವೀಕರಿಸಿ, ಅನ್ಯಪಾಠಗಳನ್ನು ಅಡಿಯಲ್ಲಿ ನಮೂದಿಸದೇ ಕೈಬಿಡಲಾಗಿದೆ. ಜನಸಾಮಾನ್ಯರ ಅನುಕೂಲತೆಗಾಗಿ ಶಕಟರೇಫೆಗೆ ಬದಲು ರೇಫೆಯನ್ನು ಇಟ್ಟುಕೊಳ್ಳಲಾಗಿದೆ. ಓದುಗರ ಅನುಕೂಲಕ್ಕಾಗಿ ಕಠಿಣ ಪದಕೋಶ, ವಚನಗಳ ಆಕರಕೋಶ, ವಚನಗಳ ಅಕಾರಾದಿಯನ್ನು ಅನುಬಂಧದಲ್ಲಿ ಕೊಡಲಾಗಿದೆ.

ಇನ್ನು ವಚನಗಳ ಅನುಕ್ರಮಣಿಕೆ ಗಮನಿಸುವುದಾದರೆ ಸ್ಥಲಕಟ್ಟಿನ ಪ್ರಾಚೀನ ಸಂಕಲನಗಳನ್ನು ಹಾಗೆಯೇ ಉಳಿದುಕೊಂಡು ಹೆಚ್ಚಿನ ವಚನಗಳನ್ನು ಎರಡನೆಯ ಭಾಗದಲ್ಲಿ ಅಕಾರಾದಿಯಾಗಿ ಜೋಡಿಸಲಾಗಿದೆ. ಸ್ಥಲಕಟ್ಟು ಇಲ್ಲದ ಸಂದರ್ಭದಲ್ಲಿ ಪ್ರತಿಯೊಬ್ಬ ಶಿವಶರಣನ ವಚನಗಳನ್ನು ಅಕಾರಾದಿ ಕ್ರಮದಲ್ಲಿರಿಸಲಾಗಿದೆ. ಹಸ್ತಪ್ರತಿಗಳಲ್ಲಿ ಎರಡಾಗಿದ್ದ ವಚನಗಳನ್ನು ಬಿಡಿಸಿಕೊಂಡು ಚರಣ ಪಲ್ಲಟ, ಪದಪಲ್ಲಟ, ಅಂಕಿತಪಲ್ಲಟಗಳನ್ನು ಸರಿಪಡಿಸಿಕೊಂಡಿರುವುದು, ಶಬ್ಧರೂಪಗಳನ್ನು ಪರಿಷ್ಕರಿಸಿದ್ದು, ಅಲ್ಪವ್ಯತ್ಯಾಸದಿಂದ ಪುನರುಕ್ತವಾಗಿದ್ದ ವಚನಗಳ ಸಮಸ್ಯೆಯನ್ನು ನಿವಾರಿಸಿಕೊಂಡಿರುವುದು ಪ್ರತಿಯೊಂದು ಸಂಪುಟದಲ್ಲಿಯೂ ಕಾಣುತ್ತೇವೆ. ಉದಾಹರಣೆಗೆ ಬಾಲೆಶೈವರು ಅಬಾಲೆಶೈವರು ಎಂದು ಪ್ರಾರಂಭವಾಗುವ ವಚನ ಮಹದೇವಿಯರದಲ್ಲ ಮಹದೇವಿರಯ್ಯನದು. ಈತನ ಅಂಕಿತ ಸರ್ವೇಶ್ವರ ಚೆನ್ನಮಲ್ಲಿಕಾರ್ಜುನನೆಂಬುದನ್ನು ಮೊದಲ ಬಾರಿಗೆ ಶೋಧಿಸಲಾಗಿದೆ. ಈವರೆಗೆ ಭಾವಿಸಿದ್ದ ಅಮರಗುಂಡದ ಮಲ್ಲಿಕಾರ್ಜುನ ತಂದೆಯ ಮುದ್ರಿಕೆ ಅಮರಗುಂಡ ಮಲ್ಲಿಕಾರ್ಜುನ ಅಲ್ಲ. ಮಾಗುಂಡದ ಮಲ್ಲಿಕಾರ್ಜುನ. ಮನೆ ನೋಡಾ ಬಡವರು ವಚನದಲ್ಲಿಯ ‘ಸೋಂಕಿನಲಿ ಸುಖಿ’ ಎಂಬುದರ ನಿಜಪಾಠ ಕಳನೊಳಗೆ ಭಾಷೆ ಪೂರಾಯವಯ್ಯ ಎಂಬಂಥ ಅನೇಕ ಪಾಠಾಂತರಗಳನ್ನು ಪರಿಷ್ಕರಿಸಲಾಗಿದೆ. ಎಷ್ಟೇ ಎಚ್ಚರವಹಿಸಿದರೂ ಇನ್ನೂ ಅನೇಕ ವಚನಗಳ ಪರಿಷ್ಕರಣಗಳು ಶುದ್ಧವಾಗಿಲ್ಲವೆಂಬುದನ್ನು ಸಂಪಾದಕರು ಒಪ್ಪಿಕೊಂಡಿರುವುದು ಅವರ ಪ್ರಾಮಾಣಿಕತೆಗೆ ನಿದರ್ಶನವೆನಿಸಿದೆ. ಒಟ್ಟಿನಲ್ಲಿ ಬಸವಯುಗಕ್ಕೆ ಸಾವಿರಾರು ಹೊಸ ವಚನಗಳನ್ನು ಸೇರಿಸುತ್ತಾ, ಬಸವೋತ್ತರ ಯುಗದ ಮುಕ್ಕಾಲು ಪಾಲು ವಚನಗಳನ್ನು ಪ್ರಥಮಸಲ ಸಂಗ್ರಹಿಸಿಕೊಟ್ಟಿರುವುದು ಈ ಸಂಪುಟಗಳ ವಿಶೇಷತೆಯಾಗಿದೆ. ಪ್ರಸ್ತಾವನೆಯಲ್ಲಿ ಅಯಾ ಶಿವಶರಣರ ವ್ಯಕ್ತಿತ್ವ, ಅವರ ವಚನಗಳ ಅನನ್ಯತೆಯನ್ನು ಸ್ಥೂಲವಾಗಿ ಸಂಪಾದಕರು ಗುರುತಿಸಿರುವರು. ಇದರಿಂದ ಓದುಗರು ವಚನಗಳನ್ನು ಅರ್ಥೈಸುವಲ್ಲಿ ತುಂಬ ಸಹಾಯವಾಗುತ್ತದೆ. ಈಗ (೨೦೦೧) ಹೊಸದಾಗಿ ಲಭ್ಯವಾದ ವಚನಗಳನ್ನೂ ಸೇರಿಸಿ ಕನ್ನಡ ಪುಸ್ತಕ ಪ್ರಾಧಿಕಾರವು ಈ ಸಂಪುಟಗಳನ್ನು ಪುನರ್ಮುದ್ರಿಸಿದೆ.

ಸ್ವರವಚನ, ಶಿವಶರಣರು, ಶಿವಕವಿಗಳು ಹುಟ್ಟು ಹಾಕಿದ ಒಂದು ಹೊಸ ಪರಿಭಾಷೆ. ತಮ್ಮ ಅನುಭಾವದ ವಚನಪಾತಳಿಗಾಗಿ ವಚನಗಳನ್ನು ಬರೆದ ಶ್ರವಣಪಾತಳಿಗಾಗಿ ಸ್ವರವಚನಗಳನ್ನು ರಚಿಸಿದರು. ಸಮಗ್ರ ವಚನ ಸಂಪುಟಗಳ ಮಾದರಿಯಲ್ಲಿಯೇ ಮೈಸೂರಿನ ಜಗದ್ಗುರು ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆಯು ‘ಸಮಗ್ರ ಸ್ವರವಚನ ಸಾಹಿತ್ಯ ಪ್ರಕಟನ ಯೋಜನೆ’ಯನ್ನು ಕೈಗೆತ್ತಿಕೊಂಡಿರುವುದು ಈ ದಶಕದ ಮತ್ತೊಂದು ಮಹತ್ವದ ಸಾಹಿತ್ಯಿಕ ಸಾಧನೆಯಾಗಿದೆ. ಈ ಯೋಜನೆಯ ಸ್ವರೂಪವನ್ನು ಕುರಿತು ಪ್ರಕಾಶಕರು ಹೀಗೆ ಹೇಳಿದ್ದಾರೆ; ಅಪ್ರಕಟಿತ ರೂಪದಲ್ಲಿರುವ ಲಿಖಿತ ಮತ್ತು ಮೌಖಿಕ ಪರಂಪರೆಯಲ್ಲಿ ಬಂದ ಎಲ್ಲ ಸ್ವರವಚನಗಳನ್ನು ಪ್ರಕಟಿಸುವ ಉದ್ದೇಶ ನಮ್ಮದು. ಇಲ್ಲಿ ಸ್ವರವಚನ ಕೃತಿಗಳನ್ನು ಪರಿಷ್ಕರಿಸಿ ಪ್ರಕಟಿಸುವುದು, ಹಸ್ತಪ್ರತಿಗಳಲ್ಲಿ ಬಿಡಿಬಿಡಿಯಾಗಿ ಸಿಗುವ ಸ್ವರವಚನಗಳನ್ನು ಸಂಗ್ರಹಿಸಿ ಸಂಪುಟರೂಪದಲ್ಲಿ ಪ್ರಕಟಿಸುವುದು. ಬೇರೆಬೇರೆ ಪ್ರದೇಶಗಳಲ್ಲಿ ಮೌಖಿಕ ಪರಂಪರೆಯಲ್ಲಿ ಸಿಗುವ ಸ್ವರವಚನಗಳನ್ನು ಧ್ವನಿಮುದ್ರಣ ಮಾಡಿಕೊಂಡು ಸಂಪುಟಗಳಲ್ಲಿ ಪ್ರಕಟಿಸುವುದು ಮೊದಲ ಹಂತದ ಕಾರ್ಯ. ಇನ್ನು ಎರಡನೆಯ ಹಂತದಲ್ಲಿ ಎಲ್ಲ ಮೂಲಗಳಿಂದ ಸಂಗ್ರಹಿಸಿ ನಾವು ಪ್ರಕಟಿಸಿದ ಮತ್ತು ಈಗಾಗಲೇ ಅನ್ಯಸಂಸ್ಥೆಗಳು ಪ್ರಕಟಿಸಿದ ಎಲ್ಲ ಸ್ವರವಚನಗಳ ರಾಶಿಯನ್ನು ಒಂದು ಶಿಸ್ತಿಗೆ ಅಳವಡಿಸಿ, ಹದಿನೈದು ಸಂಪುಟಗಳಲ್ಲಿ ಏಕಕಾಲಕ್ಕೆ ಪ್ರಟಿಸುವುದು. ಈ ಉದ್ದೇಶಕ್ಕನುಗುಣವಾಗಿ ೧೯೯೫ ಮತ್ತು ೧೯೯೭ರಲ್ಲಿ ತಲಾ ಐದು ಸಂಪುಟಗಳು ಹೊರಬಂದಿವೆ. ಎಸ್‌. ಶಿವಣ್ಣ (ಸಂಪುಟ ೧, ೪) ಜಿ. ಜಿ. ಮಂಜುನಾಥನ್‌ (ಸಂಪುಟ ೩), ವೈ. ಸಿ. ಭಾನುಮತಿ (ಸಂಪುಟ ೪, ೧೦), ಕೆ. ಆರ್. ಶೇಷಗಿರಿ (ಸಂಪುಟ ೫), ಎಸ್‌. ಎಂ. ಹಿರೇಮಠ (ಸಂಪುಟ ೬), ಶಿವರಾಜ ಎಂ. ದೇವಪ್ಪ (ಸಂಪುಟ ೭), ಬಿ. ವಿ. ಮಲ್ಲಾಪುರ (ಸಂಪುಟ ೮), ವೀರಣ್ಣ ರಾಜೂರ (ಸಂಪುಟ ೯) ಅವರು ಸಂಪಾದಕರಾಗಿದ್ದಾರೆ.

ಬಸವಾದಿ ಶರಣರಿಂದ ಮೊದಲ್ಗೊಂಡು ಅಕ್ಕಮಹಾದೇವಿ, ಸಕಲೇಶ ಮಾದರಸ, ನಿಜಗುಣ ಶಿವಯೋಗಿ, ಸಪ್ತಕಾವ್ಯದ ಗುರುಬಸವ, ಸರ್ಪಭೂಷಣ ಶಿವಯೋಗಿ, ಮುಪ್ಪಿನ ಷಡಕ್ಷರಿ, ಬಾಲಲೀಲಾ ಮಹಾಂತ ಶಿವಯೋಗಿ, ಮೈಲಾರ ಬಸವಲಿಂಗ ಶರಣರು, ಕೆಸ್ತೂರದೇವ, ಗುರುಬಸವಾರ್ಯ, ಕರಿಬಸವೇಶ್ವರ, ನೀಲಗ್ರೀವ, ಮೊಗ್ಗೆಯ ಮಾಯಿದೇವ, ಕರಸ್ಥಲದ ವೀರಣ್ಣೊಡೆಯ, ಗುರಗುಂಡ ಬಸವ ಮೊದಲಾದ ಕವಿಗಳ ಸ್ವರವಚನಗಳು ಇಲ್ಲಿ ಸೇರ್ಪಡೆಯಾಗಿವೆ. ಪ್ರತಿಯೊಂದು ಸಂಪುಟದ ಪ್ರಸ್ತಾವನೆಯಲ್ಲಿ ಸ್ವರವಚನಕಾರರ ಇತಿವೃತ್ತ ವಿಚಾರ, ಸ್ವರವಚನಗಳ ವಿಶಿಷ್ಟತೆ ಮತ್ತು ಅವುಗಳ ಮಹತ್ವವನ್ನು ಕುರಿತಂತೆ ಸಂಪಾದಕರು ಚರ್ಚಿಸಿದ್ದಾರೆ. ಈ ಚರ್ಚೆಗಳು ಸ್ವರವಚನ ಸಾಹಿತ್ಯದ ಬಗೆಗೆ ಅಧ್ಯಯನ ಕೈಕೊಳ್ಳುವವರಿಗೆ ದಿಕ್ಸೂಚಿಯಂತೆ ಕಂಡುಬರುತ್ತವೆ. ಇಲ್ಲೆಲ್ಲ ಸಂಪಾದಕರ ಆಳವಾದ ಅಧ್ಯಯನ, ಪಾಠಾಂತರಗಳನ್ನು ನಿರ್ಧರಿಸುವಲ್ಲಿ ವಹಿಸಿದ ಎಚ್ಚರ, ಪ್ರಾಮಾಣಿಕತೆ ಮೆಚ್ಚುವಂತಹುದಾಗಿದೆ. ಅನುಬಂಧದಲ್ಲಿ ಸ್ವರವಚನಗಳ ಆಕಾರಾದಿ, ರಾಗ ತಾಳಗಳ ಉಲ್ಲೇಖ, ವಿಶಿಷ್ಟ ನಾಮಸೂಚಿ, ಪಾರಿಭಾಷಿಕ ಪದಕೋಶಗಳಿವೆ. ಉದಾಹರಣೆಗೆ ಕೆ. ಆರ್. ಶೇಷಗಿರಿಯವರು ಸಂಪಾದಿಸಿದ ಕೃತಿಯಲ್ಲಿ ನೀಲಗ್ರೀವನ ಸ್ವರವಚನಗಳಿವೆ. ಸಂಪಾದಕರೇ ಹೇಳುವಂತೆ “ಈ ಗ್ರಂಥ ಏಕೈಕ ಹಸ್ತಪ್ರತಿ (ಮೈಸೂರು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಾಂಡಾರದ ಕೆ – ೫೮೪ನೆಯ ಕ್ರಮಾಂಕದ ಹಸ್ತಪ್ರತಿ) ಯನ್ನಾಧರಿಸಿ ಪರಿಷ್ಕರಿಸಿದುದಾಗಿದೆ. ಮೇಲಾಗಿ ಸಂಗೀತದಲ್ಲಿ ಪ್ರಚಾರವಾಗುತ್ತ ಬಂದ ಕಾರಣ ಪಾಠಾಂತರ ಪ್ರಮಾಣ ಹೆಚ್ಚಿದಂತಿದೆ. ಹೀಗಾಗಿ ಇದರ ಪರಿಷ್ಕರಣ ತುಂಬಾ ಜಟಿಲ. ಕೆಲವು ವಚನಗಳು ಕವಿ ನೀಡಿರುವ ಶೀರ್ಷಿಕೆಯ ಅಡಿಯಲ್ಲಿ ಬರುವ ವಸ್ತುವಿಗೆ ಭಿನ್ನವಾಗಿವೆ. ಕೃತಿಯ ನಾಲ್ಕು ಭಾಗಗಳಲ್ಲಿ ಒಮ್ಮೆ ಪ್ರಕರಣವೆಂದೂ, ಮತ್ತೊಮ್ಮೆ ಪದ್ಧತಿಯೆಂದೂ ವಿಭಿನ್ನವಾಗಿ ಕರೆದಿದ್ದಾನೆ. ಆದರೆ ಇಲ್ಲಿ ಎಲ್ಲಾ ಭಾಗಗಳನ್ನು ಪದ್ಧತಿಯೆಂದೇ ಕರೆಯಲಾಗಿದೆ. ‘ಮೂ’ ಎಂಬ ಚಿಹ್ನೆಯು ಈಗ ಬಳಸಿಕೊಂಡಿರುವ ಏಕೈಕ ಮೂಲ ಪ್ರತಿಯನ್ನು ಸೂಚಿಸುತ್ತದೆ”, ೧೯೮ ಹಾಡುಗಳನ್ನೊಳಗೊಂಡ ಇದರಲ್ಲಿ ಭಕ್ತಿ, ಧರ್ಮ, ನೀತಿ, ಸಂಸಾರ, ವೈರಾಗ್ಯ, ಗುರು – ಲಿಂಗ – ಜಂಗಮ, ಕಾಯಕ ಇತ್ಯಾದಿ ವಿಷಯಗಳು ನಿರೂಪಿತಗೊಂಡಿವೆ.

ವೈ.ಸಿ. ಭಾನುಮತಿಯವರ ‘ಕವಿಲಿಂಗನ ಪದಗಳು’ ಸ್ವರವಚನ ಪರಂಪರೆಯಲ್ಲಿ ಬಂದ ಮತ್ತೊಂದು ಸಂಕಲನ. ಅಪ್ರಕಟಿತ ವಚನ, ಸ್ವರವಚನ ಪ್ರಕಟನೆಗೆ ಹೆಸರಾದ ಗದುಗಿನ ಶ್ರೀ ವೀರಶೈವ ಅಧ್ಯಯನ ಸಂಸ್ಥೆಯಿಂದ ೧೯೯೮ರಲ್ಲಿ ಇದು ಪ್ರಕಟಗೋಂಡಿದೆ. ಸಾಳ್ವನರಸಿಂಗನ ಆಸ್ಥಾನ ಕವಿಯಾದ ಕವಿಲಿಂಗನ ೧೧೮ ಸ್ವರವಚನಗಳಲ್ಲಿ ಶೃಂಗಾರ ನಿರೂಪಣೆ, ಬೆತ್ತಲೆ ಸೇವೆ, ಪ್ರಾಣಿಬಲಿ, ರಾಜವ್ಯವಸ್ಥೆ, ತೆರಿಗೆ ಪದ್ದತಿ ಮೊದಲಾದ ಲೌಕಿಕ ವಿಷಯಗಳು ಅಡಕಗೊಂಡಿವೆ. ಸುದೀರ್ಘವಾದ ಪ್ರಸ್ತಾವನೆಯಲ್ಲಿ ಕವಿಯಕಾಲ, ಅಂಕಿತ, ಪಾಂಡಿತ್ಯ, ಕೃತಿಯ ಉದ್ದೇಶಗಳನ್ನು ಕುರಿತು ವಿವೇಚಿಸಲಾಗಿದೆ. ಹೀಗೆ ಈ ದಶಕದಲ್ಲಿ ಪ್ರಕಟಗೊಂಡ ಇನ್ನೂ ಇಂಥ ಹಲವಾರು ಸ್ವರವಚನ ಸಂಕಲನಗಳು ಮಧ್ಯಕಾಲೀನ ಕನ್ನಡಸಾಹಿತ್ಯ, ಸಂಸ್ಕೃತಿಯನ್ನು ಹೊಸ ಆಯಾಮದಿಂದ ನೋಡುವಲ್ಲಿ ಮಹತ್ವದ ಆಕರಗಳಾಗಿ ನಮಗೆ ನೆರವಾಗುತ್ತವೆ.

ಲಘು ಸಾಹಿತ್ಯ

ನಡುಗನ್ನಡ ಸಾಹಿತ್ಯದ ಕೆಲವು ಪ್ರಕಾರಗಳನ್ನು ಲಘುಸಾಹಿತ್ಯವೆಂದು ಕರೆಯಲಾಗುತ್ತಿದೆ. ಈ ಸಾಲಿಗೆ ತಾರಾವಳಿ, ಅಷ್ಟಕ, ಕಾಲಜ್ಞಾನ, ಚೌಪದಿ ಮುಂತಾದ ರೂಪಗಳು ಸೇರುತ್ತವೆ. ವಿಶೇಷವಾಗಿ ಈ ದಶಕದಲ್ಲಿ ಇಂಥ ಪ್ರಕಾರಕ್ಕೆ ಸೇರುವ ಹಲವಾರು ಸಂಕಲನಗಳು ಪ್ರಕಟಗೊಂಡಿವೆ. ಅವುಗಳಲ್ಲಿ ವೀರಶೈವ ತಾರಾವಳಿ ಸಂಪುಟ (ಸಂ: ವೀರಣ್ಣ ರಾಜೂರ), ವೀರಶೈವ ಅಷ್ಟಕ ಸಂಪುಟ (ಸಂ. ಬಿ. ಬಿ. ಬಿರಾದಾರ, ಬಿ. ವಿ. ಯಕ್ಕುಂಡಿಮಠ), ಕೊಡೇಕಲ್ಲ ವಚನವಾಕ್ಯ (ಸಂ: ಬಸವಲಿಂಗ ಸೊಪ್ಪಿನಮಠ), ಎಮ್ಮೆ ಬಸವನ ಕಾಲಜ್ಞಾನ ಸಾಹಿತ್ಯ, ಕರಸ್ಥಲ ಸಾಹಿತ್ಯ (ಸಂ.: ಎಫ್‌. ಟಿ. ಹಳ್ಳಿಕೇರಿ), ಬಸವಯುಗದ ವಚನೇತರ ಸಾಹಿತ್ಯ (ಸಂ: ಕೆ. ರವೀಂದ್ರನಾಥ), ಸೋದೆ ಸದಾಶಿವರಾಯನ ಕೃತಿಗಳು (ಸ: ಬಿ. ಆರ್. ಹಿರೇಮಠ), ನಾಗಲಿಂಗಸ್ವಾಮಿಯ ತತ್ವಪದಗಳು (ಸಂ: ಎಸ್‌. ಆರ್. ಚೆನ್ನವೀರಪ್ಪ) ಮೊದಲಾದ ಕೃತಿಗಳನ್ನು ಹೆಸರಿಸಬಹುದು.

ಇಪ್ಪತ್ತೇಳು ನುಡಿ ಅಥವಾ ಪದ್ಯಗಳಲ್ಲಿ ಓರ್ವ ಮಹತ್ವದ ವ್ಯಕ್ತಿಯ ಅಥವಾ ಪೂಜ್ಯ ವಸ್ತುವಿನ ಸಮಗ್ರ ವಿಚಾರವನ್ನು ನಿರೂಪಿಸುವುದು ತಾರಾವಳಿ ಸಾಹಿತ್ಯದ ಪ್ರಮುಖ ಲಕ್ಷಣ. ಸ್ತೋತ್ರ ಸಾಹಿತ್ಯದ ಗುಂಪಿಗೆ ಸೇರುವ ಈ ರೂಪವು ಹೆಚ್ಚಾಗಿ ರಗಳೆಯ ನಡೆಯನ್ನು ಅನುಸರಿಸುತ್ತದೆ. ಆದ್ದರಿಂದ ರಗಳೆಯೇ ತಾರಾವಳಿಯ ಮೂಲ ಛಂದಸ್ಸಾಗಿದ್ದು, ಅನಂತರ ಕಂದ, ವೃತ್ತ, ಷಟ್ಪದಿ, ತ್ರಿಪದಿಗಳು ಎಡೆಪಡೆದುಕೊಂಡಿವೆ. ಪ್ರಸ್ತುತ ಸಂಪುಟದಲ್ಲಿ ೬೩ ತಾರಾವಳಿ ಕೃತಿಗಳು ಸಮಾವೇಶಗೊಂಡಿವೆ. ಇವುಗಳನ್ನು, ಸ್ತುತಿರೂಪದ ತಾರಾವಳಿಗಳು, ಜಾತ್ರೆ, ಪೂಜೆ, ಪಲ್ಲಕ್ಕಿ, ವರ್ಣನಾಪರ ತಾರಾವಳಿಗಳು ತತ್ವಪ್ರಧಾನ ತಾರಾವಳಿಗಳು, ಐತಿಹಾಸಿಕ ತಾರಾವಳಿಗಳೆಂದು ವಿಭಜಿಸಿ ಅಧ್ಯಯನ ಮಾಡಬಹುದು. ಶಿವ ಪಾರ್ವತಿ, ವೀರಭದ್ರ, ಶಿವಶರಣರು, ವಿರಕ್ತರನ್ನು ಕುರಿತು ಇಲ್ಲಿ ಸ್ತುತಿಸಲಾಗಿದೆ. ಇನ್ನು ಕೆಲವು ತಾರಾವಳಿಗಳಲ್ಲಿ ನಾಡಿನ ಕೆಲವು ಪ್ರಸಿದ್ಧ ಜಾತ್ರೆಗಳ ವಿಶಿಷ್ಟತೆಯನ್ನು ಎತ್ತಿಹೇಳಲಾಗಿದೆ. ಮುಖ್ಯವಾಗಿ ಇವುಗಳ ಮಹತ್ವ ಕಂಡುಬರುವುದು ಐತಿಹಾಸಿಕ ಸಂಗತಿಗಳನ್ನು ದಾಖಲಿಸಿರುವುದರಿಂದ. ದಂಡಿನ ತಾರಾವಳಿ, ಮುರಿಗೆ ತಾರಾವಳಿ, ಮದಕರಿ ರಾಜೇಂದ್ರನ ತಾರಾವಳಿ, ಮೈಸೂರು ದೊರೆಗಳ ತಾರಾವಳಿ ಕೃತಿಗಳಲ್ಲಿ ಐತಿಹಾಸಿಕ ಸಂಗತಿಗಳು ಅಧಿಕ ಪ್ರಮಾಣದಲ್ಲಿ ದೊರಕುತ್ತವೆ. ವಿಜಯನಗರದ ತರುವಾಯ ಬಂದ ಚಿತ್ರದುರ್ಗ, ಹಾಗಲವಾಡಿ, ನಾಯಕನಹಟ್ಟಿ ಪಾಳೇಗಾರರು, ಸೋದೆ, ಕೆಳದಿ, ಮೈಸೂರು ಅರಸರ ಬಗೆಗೆ ಹೊಸ ಸಂಗತಿಗಳತ್ತ ಇವು ನಮ್ಮ ಗಮನ ಸೆಳೆಯುತ್ತವೆ. ಕೊಲ್ಲಾಪುರದ ದೊರೆ ದುಂಡಪಂತ ಸವಣೂರಿನ ಮೇಲೆ ದಾಳಿ ಮಾಡಿ ಮೂರು ತಿಂಗಳ ಕಾಲ ಕದನ ನಡೆಸಿ ವಿಜಯ ಸಾಧಿಸಿದ ವಿವರಗಳನ್ನು ದಂಡಿನ ತಾರಾವಳಿ ವಿವರಿಸುತ್ತದೆ. ಹೀಗಾಗಿ ಕಾವ್ಯ, ಶಾಸನ, ಕೈಫಿಯತ್ತು ಮತ್ತು ಇತರ ದಾಖಲೆಗಳಂತೆ ತಾರಾವಳಿಗೂ ಸಹ ಇತಿಹಾಸ ರಚನೆಗೆ ಪೂರಕವಾದ ಮಾಹಿತಿಯನ್ನು ನೀಡುತ್ತವೆ.

ಸಂಪಾದಕರಾದ ವೀರಣ್ಣ ರಾಜೂರ ಅವರು ಇಲ್ಲಿಯ ತಾರಾವಳಿಗಳನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಪರಿಷ್ಕರಿಸಿದ್ದಾರೆ. ೬೪ ಪುಟಗಳ ದೀರ್ಘವಾದ ಪ್ರಸ್ತಾವನೆಯಲ್ಲಿ ತಾರಾವಳಿ ಸಾಹಿತ್ಯದ ಸ್ವರೂಪ, ಲಕ್ಷಣ, ಹುಟ್ಟು, ಬೆಳವಣಿಗೆ, ವರ್ಗಿಕರಣ, ಕವಿಚರಿತೆ, ಛಂದಸ್ಸು, ಸಂಗೀತಗಳ ಬಗೆಗೆ ವಿವೇಚಿಸಲಾಗಿದೆ. ಅನುಬಂಧದಲ್ಲಿ ಕೃತಿಯ ಹೆಸರು, ಕರ್ತೃ, ಕಾಲ, ಕೃತಿಸ್ವರೂಪ, ಗಾತ್ರ, ಆಕರ (ಪ್ರಕಟಿತ – ಅಪ್ರಕಟಿತ) ಗ್ರಂಥಗಳನ್ನು ಸೂಚಿಸಿರುವುದು ಅನುಕೂಲವಾಗಿದೆ. ಒಟ್ಟಿನಲ್ಲಿ ಈ ಸಂಪುಟವು ತಾರಾವಳಿ ಸಾಹಿತ್ಯದ ಅಧ್ಯಯನ, ಚಿಂತನೆ, ಸಂಶೋಧನೆಗೆ ಒಂದು ಅಧಿಕೃತ ಆಕರವಾಗಿ ಪರಿಣಮಿಸುತ್ತದೆ. ವೀರಶೈವ ಅಷ್ಟಕ ಸಂಪುಟ ಇದೇ ಮಾದರಿಯಲ್ಲಿ ಬಂದ ಮತ್ತೊಂದು ಸಂಕಲನ. ಇದರಲ್ಲಿ ೧೦೩ ಅಷ್ಟಕಗಳಿವೆ. ಸಾಕಷ್ಟು ವಿವರಗಳನ್ನು ಕಲೆಹಾಕಿ ಸಂಪಾದಕರು ಕನ್ನಡ ಅಷ್ಟಕ ಸಾಹಿತ್ಯವನ್ನು ಪುನಾರಚಿಸಿದ್ದಾರೆ. ಈ ಪ್ರಕಾರದ ವಿಶೇಷತೆಯನ್ನು ಮಾತ್ರವಲ್ಲದೆ, ಇತಿಮಿತಿಗಳನ್ನು ವಸ್ತುನಿಷ್ಟವಾಗಿ ಗುರುತಿಸಿದ್ದಾರೆ. ಕಾಲಜ್ಞಾನ, ರಗಳೆ, ತ್ರಿಪದಿ, ಚೌಪದಿ, ಕಂದ ಮುಂತಾದ ಹಲವಾರು ಪ್ರಕಾರದಲ್ಲಿರುವ ಸಾಹಿತ್ಯ ಒಂದು ಕಡೆ ಸಂಗ್ರಹಗೊಂಡು ಪ್ರಕಟಗೊಳ್ಳುವುದು ಅವಶ್ಯವಿದೆ. ಆ ಮೂಲಕ ಕನ್ನಡ ಸಾಹಿತ್ಯದ ವ್ಯಾಪ್ತಿಯನ್ನು ಕಂಡುಕೊಳ್ಳಬಹುದಾಗಿದೆ.

ವಿಜಯನಗರೋತ್ತರ ಕಾಲದ ಅರಸು ಮನೆತನಗಳಲ್ಲಿ ಒಂದಾದ ಸೋದೆ ಮನೆತನದಲ್ಲಿದ್ದ ಇಮ್ಮಡಿ ಸದಾಶಿವರಾಯ (೧೭೪೭–೧೭೬೩)ನು ಸ್ವತಃ ಕವಿಯೂ ಆಗಿದ್ದನು. ಈತನು ರಚಿಸಿದ ಹಲವಾರು ಕೃತಿಗಳು ಮೊದಲ ಬಾರಿಗೆ ಸೋದೆ ಸದಾಶಿವರಾಯನ ಕೃತಿಗಳು (ಸಂ: ಬಿ. ಆರ್. ಹಿರೇಮಠ) ಎಂಬ ಹೆಸರಿನಿಂದ ಬೆಳಕು ಕಂಡಿವೆ. ಇಮ್ಮಡಿ ಸದಾಶಿವರಾಯನು ವೈವಿಧ್ಯಮಯವಾದ ಕೃತಿಗಳನ್ನು ರಚಿಸಿದ್ದು, ಅವು ಶಿವನ ಲೀಲೆಗಳು, ತೀರ್ಥಕ್ಷೇತ್ರಗಳು, ಸಂಗೀತ, ಚದುರಂಗದಾಟ, ಪ್ರಾಣಿ ಇತ್ಯಾದಿ ವಿಷಯಗಳನ್ನು ನಿರೂಪಿಸುವಲ್ಲಿ ಯಶಸ್ವಿಯಾಗಿವೆ. ವಿವಿಧ ರೀತಿಯ ಛಂದೋಬಂಧಗಳಿಂದ ಕೂಡಿದ ಇಲ್ಲಿಯ ಕೃತಿಗಳು ಆ ಕಾಲದ ಭಾಷಾವೈವಿಧ್ಯತೆಯನ್ನು ತಿಳಿದುಕೊಳ್ಳುವಲ್ಲಿ ನೆರವಾಗುತ್ತವೆ. ಒಂದೇ ಹಸ್ತಪ್ರತಿಯಿಂದ ತುಂಬ ಅಚ್ಚುಕಟ್ಟಾಗಿ ಹಿರೇಮಠ ಅವರು ಸಂಪಾದಿಸಿದ್ದಾರೆ. ಬಸವಯುಗದ ವಚನೇತರ ಸಾಹಿತ್ಯ ವೈವಿಧ್ಯಮಯವಾದುದು. ಕರಣ ಹಸಿಗೆ, ಮಿಶ್ರಾರ್ಪಣ, ಮಂತ್ರಗೋಪ್ಯ, ಕಾಲಜ್ಞಾನ, ಸ್ವರವಚನ, ಕೊರವಂಜಿ, ತ್ರಿವಿಧಿ ಹೀಗೆ ಹಲವಾರು ಪ್ರಕಾರಗಳಲ್ಲಿ ಸೃಷ್ಟಿಗೊಂಡ ಈ ವಚನೇತರ ಸಾಹಿತ್ಯ ಒಂದೆಡೆ ಸಿಗುತ್ತಿರಲಿಲ್ಲ. ಅಂಥ ಒಂದು ಕೊರತೆಯನ್ನು ಡಾ. ಕೆ. ರವೀಂದ್ರನಾಥ ಅವರು ಬಸವಯುಗದ ವಚನೇತರ ಸಾಹಿತ್ಯ ಕೃತಿಯನ್ನು ಸಂಪಾದಿಸಿ ಪರಿಷ್ಕರಿಸಿರುವುದರ ಮೂಲಕ ಹೋಗಲಾಡಿಸಿದ್ದಾರೆ. ಈ ಸಂಪುಟದಲ್ಲಿ ಬಸವ, ಚೆನ್ನಬಸವ, ಪ್ರಭುದೇವ, ಸಿದ್ಧರಾಮ, ಆದಯ್ಯ, ಅಕ್ಕಮಹಾದೇವಿ, ಹಾವಿನಹಾಳ ಕಲ್ಲಯ್ಯ, ನೀಲಲೋಚನೆ, ಹಡಪದಪ್ಪಣ್ಣನಂಥ ಹತ್ತಾರು ಶಿವಶರಣರ ವಚನೇತರ ಸಾಹಿತ್ಯ ಸೇರ್ಪಡೆಗೊಂಡಿದೆ. ಪ್ರಸ್ತಾವನೆಯಲ್ಲಿ ಈ ಸಾಹಿತ್ಯದ ಉಗಮ, ವಿಕಾಸ, ಲಕ್ಷಣಗಳನ್ನು ವಿವೇಚಿಸುತ್ತಾ ಅವುಗಳ ಮಹತ್ವವನ್ನು ದೀರ್ಘವಾಗಿ ಚರ್ಚಿಸಲಾಗಿದೆ. ಅಲ್ಲಲ್ಲಿ ಚೆದುರಿ ಹೋಗಿದ್ದ ಈ ಸಾಹಿತ್ಯವನ್ನು ಒಂದೆಡೆ ಕಲೆಹಾಕಿ ಕ್ರಮಬದ್ದವಾಗಿ ಜೋಡಿಸಿ, ಪರಿಷ್ಕರಿಸಲಾಗಿದೆ. ಬಸವಯುಗದ ವಚನೇತರ ಸಾಹಿತ್ಯವನ್ನು ಕುರಿತು ಅಧ್ಯಯನ ಮಾಡುವವರಿಗೆ ಈ ಗ್ರಂಥ ನೆರವಿಗೆ ಬರುತ್ತದೆ.

ಕಾವ್ಯ

ತೊಂಬತ್ತರ ದಶಕದಲ್ಲಿ ಕೆಲವು ಮಹತ್ವದ ಕಾವ್ಯಗಳು ಪ್ರಕಟವಾಗಿವೆ. ಸಿರುಮನ ಚರಿತೆ (ಎಂ. ಎಂ. ಕಲಬುರ್ಗಿ) ಬಾರಾಮಾಸ (ಶಾಂತರಸ), ಪಂಪಕವಿ ವಿರಚಿತ ಆದಿಪುರಾಣ (ಟಿ. ವಿ. ವೆಂಕಟಾಚಲಶಾಸ್ತ್ರಿ), ಶ್ರೀ ಪರ್ವತ ಮಹಾತ್ಮೆ (ಎಸ್‌. ಉಮಾಪತಿ), ರಾಚಪ್ಪಯ್ಯನ ಕೃತಿಗಳು (ಶಿವಾನಂದ ವಿರಕ್ತಮಠ), ಷಟ್ಪಲ್ಥ ಶಿವಾಯಣ (ಎಂ. ಎಂ. ಕಲಬುರ್ಗಿ, ಸಿ,ಪಿ.ಕೆ.), ಹೊಸ ಕುಮಾರರಾಮನ ಸಾಂಗತ್ಯ (ಎಂ. ಎಂ. ಕಲಬುರ್ಗಿ, ವೀರಣ್ಣ ರಾಜುರ), ಮೈದುನ ರಾಮಯ್ಯನ ಚರಿತ್ರೆ (ಪಿ. ಕೆ. ರಾಠೋಡ, ಎಚ್‌. ಎಸ್‌. ಮೇಲಿನಮನಿ) ಇಂಥ ಕಾವ್ಯಗಳನ್ನು ಹೆಸರಿಸಬಹುದು. ಸಿರುಮನ ಚರಿತೆ ಒಂದು ಐತಿಹಾಸಿಕ ಕಾವ್ಯ. ಡಾ. ವರದರಾಜ ರಾವ್‌ ಅವರು ನಕಲು ಮಾಡಿಕೊಂಡ ಪ್ರತಿಯ ಆಧಾರದಿಂದ ಈ ಕೃತಿಯನ್ನು ಪರಷ್ಕರಿಸಲಾಗಿದೆ. ಮಧ್ಯಕಾಲೀನ ಕರ್ನಾಟಕದ ವೀರನಾದ ಕುಮಾರ ರಾಮನನ್ನು ಕುರಿತಂತೆ ಕಾವ್ಯಗಳು ಹುಟ್ಟಿಕೊಂಡಂತೆ ಸಿರುಮನನ್ನು ಕುರಿತಂತೆ ಮೂರು ಕೃತಿಗಳು ರಚನೆಗೊಂಡಿವೆ. ಅವುಗಳಲ್ಲಿ ಪ್ರಸ್ತುತ ಸಿರುಮನ ಚರಿತೆಯು ಕೆಂಚಸೆಟ್ಟಿಯ ಸುತ ರಾಮನದು. ಹೆಸರೇ ಸೂಚಿಸುವಂತೆ ಇದು ಸಿರುಮ ಹೆಸರಿನ ಪಾಳೇಗಾರನ ಯುದ್ದಘಟನೆಗಳನ್ನು ನಿರೂಪಿಸುತ್ತದೆ. ಕಲಬುರ್ಗಿಯವರು ತುಂಬ ಶ್ರಮವಹಿಸಿ ಈ ಹಸ್ತಪ್ರತಿಯನ್ನು ಪತ್ತೆಹಚ್ಚಿ, ಮೂಲಕ್ಕೆ ಧಕ್ಕೆ ಬರದ ಹಾಗೆ ಸಂಪಾದಿಸಿದ್ದಾರೆ. ಅವರೇ ಹೇಳುವಂತೆ “ಇದು ಇತಿಹಾಸ ಕಾವ್ಯವಾಗಿರುವುದರಿಂದ ಇಲ್ಲಿನ ಇತಿಹಾಸದ ಪರಿಚಯ ಸಂಪಾದಕನಿಗೆ ಅಗತ್ಯ. ಇಲ್ಲಿ ಕಂಡುಬರುವ ಆ ಕಾಲದ ಅನೇಕ ವ್ಯಕ್ತಿನಾಮ, ಸ್ಥಳನಾಮಗಳು, ಆ ಕಾಲದ ಪದಗಳ ಪರಿಚಯವೂ ಸಂಪಾದಕನಿಗೆ ಅವಶ್ಯ. ಒಟ್ಟಿನಲ್ಲಿ ಒಬ್ಬ ಇತಿಹಾಸಕಾರ ಒಬ್ಬ ಪ್ರಾದೇಶಿಕ ವಿದ್ವಾಂಸ, ಹೆಚ್ಚಿನದಾಗಿ ಒಬ್ಬ ಸಾಹಿತ್ಯ ಸಂಪಾದಕ ಈ ಮೂರು ಅಂಶಗಳ ಸಂಯುಕ್ತ ಪ್ರಜ್ಞೆ ಇಲ್ಲಿ ಅಗತ್ಯವೆನಿಸುತ್ತದೆ. ಈ ಎಲ್ಲ ತಿಳುವಳಿಕೆಯ ಹಿನ್ನೆಲೆಯಲ್ಲಿ ಈ ಕೃತಿಯನ್ನು ಪರಿಷ್ಕರಿಸಲಾಗಿದೆ”. ಪ್ರಸ್ತಾವನೆಯಲ್ಲಿ ಸಿರುಮನನ್ನು ಕುರಿತ ಕೃತಿಗಳ ಪರಿಚಯ, ಸಿರುಮನ ಚರಿತೆಯ ಕಥಾಸಾರ, ಜೊತೆಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಶ್ರೀ ರಾಮಪುರವೇ ಸಿರುಮನ ಮೂಲ ನೆಲೆಯೆಂದು ಕ್ಷೇತ್ರಕಾರ್ಯದ ಮೂಲಕ ಪರಿಶೀಲನೆ ನಡೆಸಿ ಗುರತಿಸಲಾಗಿದೆ. ಅನುಬಂಧದಲ್ಲಿಯ ನಾಮಸೂಚಿ ಅಧ್ಯಯನಕಾರರಿಗೆ ತುಂಬ ನೆರವಾಗುತ್ತದೆ.

ಸ್ಥಳ ಮಹಾತ್ಮೆಯನ್ನು ತಿಳಿಸುವಂಥ ಹಲವು ಕೃತಿಗಳು ನಮ್ಮಲ್ಲಿ ಲಭ್ಯವಿವೆ. ಈ ಸಾಲಿಗೆ ಸೇರಿವ ಮತ್ತೊಂದು ಕೃತಿ ಶ್ರೀ ಪರ್ವತ ಮಹಾತ್ಮೆ. ೧೫ನೆಯ ಶತಮಾನದ ಆದಿಭಾಗದಲ್ಲಿದ್ದ ಕವಿ ಚೆನ್ನವೀರಾಂಕನು ಶ್ರೀಶೈಲದ ಪರಿಸರದ ಪವಿತ್ರತೆ ಮತ್ತು ಮಹತ್ವವನ್ನು ಈ ಕೃತಿಯ ಮುಖಾಂತರ ಸ್ಥೂಲವಾಗಿ ವಿವರಿಸಿದ್ದಾನೆ. ವಾರ್ಧಕ ಷಟ್ಪದಿಯಲ್ಲಿ ರಚನೆಗೊಂಡ ಇದು ೨೧ ಸಂಧಿಗಳನ್ನೊಳಗೊಂಡಿದೆ. ಸಂಪಾದಕರಾದ ಎಸ್‌. ಉಮಾಪತಿಯವರು ತಮಗೆ ದೊರೆತ ಏಕೈಕ ತಾಡೋಲೆ ಪ್ರತಿಯಿಂದ ಇದನ್ನು ಪರಿಷ್ಕರಿಸಿದ್ದಾರೆ. ಪ್ರಸ್ತಾವನೆಯಲ್ಲಿ ಕವಿ ಕಾವ್ಯ ಪರಂಪರೆ, ಕೃತಿಯ ಮಹತ್ವ ಕುರಿತು ವಿವೇಚಿಸುತ್ತಾ ರಾಘವಾಂಕ, ಚಾಮರಸ, ನೇಮಿಚಂದ್ರರ ಪ್ರಭಾವ ಈ ಕಾವ್ಯದ ಮೇಲಾದುದನ್ನು ಗುರುತಿಸಲಾಗಿದೆ. ಶ್ರೀಶೈಲವನ್ನು ಕುರಿತ ಹಲವು ಮಾಹಿತಿಗಳನ್ನು ಓದುಗರಿಗೆ ಈ ಕೃತಿ ನೀಡುತ್ತದೆ. ಪಿ. ಕೆ. ರಾಠೋಡ ಹಾಗೂ ಎಚ್‌. ಎಸ್‌. ಮೇಲಿನಮನಿಯವರು ಸಂಯುಕ್ತವಾಗಿ ಸಂಪಾದಿಸಿದ ಮೈದುನರಾಮಯ್ಯನ ಚರಿತ್ರೆಯು ೬೨೨ ತ್ರಿಪದಿಯನ್ನೊಳಗೊಂಡ ಕಿರುಕೃತಿ. ಮೈದುನ ರಾಮಯ್ಯನ ಜನನದಿಂದ ಹಿಡಿದು ದೀಪಾವಳಿ ಹಬ್ಬಕ್ಕಾಗಿಯೇ ಅಕ್ಕ ಭಾವನನ್ನು ಕರೆಯಲು ಶ್ರೀಶೈಲಕ್ಕೆ ಹೋಗಿ ಪಾರ್ವತಿ ಪರಮೇಶ್ವರರನ್ನು ತನ್ನೂರಿಗೆ ಕರೆತಂದ ಕಥೆ ಇದರಲ್ಲಿದೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಾಂಡಾರದ ೩೨೪೪ನೆಯ ಕ್ರಮಾಂಕದ ಕಾಗದದ ಏಕೈಕ ಪ್ರತಿಯಿಂದ ಇದನ್ನು ಸಂಪಾದಿಸಲಾಗಿದೆ. ಅಶುದ್ಧ ಪಾಠಗಳನ್ನು ಅಡಿಯಲ್ಲಿ ಹಾಕಿ ಶುದ್ಧ ಪಾಠವನ್ನು ಊಹಿಸಿ ಕಂಸಿನಲ್ಲಿ ಕೊಡಲಾಗಿದೆ. ಪ್ರಸ್ತಾವನೆಯಲ್ಲಿ ಮೈದುನ ರಾಮಯ್ಯನ ಚರಿತ್ರೆಯನ್ನು ಕಟ್ಟಿಕೊಡಲಾಗಿದೆ. ಗ್ರಂಥಸಂಪಾದನದಂಥ ಶಾಸ್ತ್ರ ಶುದ್ಧವಾದ ಕ್ಷೇತ್ರಕ್ಕೆ ರಾಠೋಡ ಹಾಗೂ ಮೇಲಿನಮನಿಯವರಂಥ ಯುವಕರು ಕಾಲಿಡುತ್ತಿರುವುದು ಸಂತೋಷದ ಸಂಗತಿ.

ಮಧ್ಯಕಾಲೀನ ಕರ್ನಾಟಕದ ವೀರಜೀವನವನ್ನು ಚಿತ್ರಿಸುವ ಮಹತ್ವದ ಕೃತಿ ಹೊಸ ಕುಮಾರರಾಮನ ಸಾಂಗತ್ಯ. ಎಂ. ಎಂ. ಕಲಬುರ್ಗಿ ಮತ್ತು ವೀರಣ್ಣ ರಾಜೂರ ಅವರು ಏಕೈಕ ಹಸ್ತಪ್ರತಿಯ ಆಧಾರದಿಂದ ಪರಿಷ್ಕರಿಸಿದ್ದಾರೆ. (ಕನ್ನಡ ವಿ. ವಿ. ಹಸ್ತಪ್ರತಿ ಭಾಂಡಾರದ ೩೨೪ನೆಯ ಕ್ರಮಾಂಕದ ಕಾಗದ ಪ್ರತಿ. ಇದು ಕಂಪ್ಲಿಯ ಶ್ರೀದೊಡ್ಡನಗೌಡರಿಂದ ಸಂಗ್ರಹಿಸಿದುದು.) ಪ್ರಸ್ತಾವನೆಯಲ್ಲಿ ಕುಮಾರರಾಮನನ್ನು ಕುರಿತ ಲಿಖಿತ ಸಾಹಿತ್ಯವನ್ನು ವಿವರಿಸಿ, ಪ್ರಸ್ತುತ ಹೊಸಕುಮಾರರಾಮನ ಸಾಂಗತ್ಯದ ಕೃತಿ ಆಕೃತಿ ಸಂಸ್ಕೃತಿಯನ್ನು ಸ್ಥೂಲವಾಗಿ ವಿಶ್ಲೇಷಣೆಗೊಳಪಡಿಸಲಾಗಿದೆ. ದೇಶೀ ಕಾವ್ಯ ಸಂಪಾದನ ವಿಧಾನದಲ್ಲಿ ಹೊಸತನವನ್ನು ಅಳವಡಿಸಿಕೊಂಡ ಬಗೆಗೆ ಸಂಪಾದಕರು ಸ್ಪಷ್ಟಪಡಿಸುತ್ತಾ, “ಕಾಲದೃಷ್ಟಿಯಿಂದ ಪ್ರಾಚೀನ, ಭಾಷಾದೃಷ್ಟಿಯಿಂದ ಶುದ್ಧ, ಪ್ರತಿ ದೃಷ್ಟಿಯಿಂದ ಪ್ರಾಚೀನ, ಭಾಷಾ ದೃಷ್ಟಿಯಿಂದ ಸಮಗ್ರವಾಗಿರುವ ಒಂದು ಪ್ರತಿಯನ್ನು ಮಾತ್ರ ಆಯ್ದುಕೊಂಡು, ಸಾಧ್ಯವಿದ್ದಲ್ಲಿ ಬೇರೆ ಒಂದೋ ಎರಡೋ ಹಸ್ತಪ್ರತಿಗಳಿಂದ ಶುದ್ಧಪಾಠ ಸ್ವೀಕರಿಸಬಹುದು. ತೀರ ಅನಿವಾರ್ಯ ಪ್ರಸಂಗದಲ್ಲಿ ಊಹೆ ಮಾಡಬಹುದು. ಇದು ದೇಶೀ ಕಾವ್ಯಗಳ ಸಂಪಾದನೆಯ ಸರಿಯಾದ ಕ್ರಮ. ಇದರಿಂದ ಕೃತಿ ಮಿಶ್ರಪಾಠಕ್ಕೆ ಗುರಿಯಾಗುವುದನ್ನು ತಪ್ಪಿಸಿ ಕೊನೆಯ ಪಕ್ಷ ಒಂದು ಪ್ರತಿಯನ್ನಾದರೂ ಶುದ್ಧವಾಗಿ ಉಳಿಸಿಕೊಟ್ಟಂತಾಗುತ್ತದೆ”. ಆದರೆ ಈ ವಿಧಾನವನ್ನು ಎಲ್ಲ ದೇಶೀ ಕಾವ್ಯಗಳ ಸಂಪಾದನೆಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ. ಇಲ್ಲಿ ಶುದ್ದ ಪಾಠವೆಂದು ನಿರ್ಣಯಿಸಿರುವುದನ್ನು ಚೌಕಕಂಸಿನಲ್ಲಿ ಕೊಡಲಾಗಿದೆ. ಉದಾ ಬಟ್ಟ (ಗಂಧರ), ಹೊರ(ಡೆ), ಮಾಡು(ವ), (ಮನಗೆ) ಆದರೆ ಇವುಗಳ ಮೂಲಪಾಠವೇನಿತ್ತು ಎಂಬುದು ಓದುಗರಿಗೆ ತಿಳಿಯುವುದಿಲ್ಲ. ಹೀಗಾಗಿ ದೇಶೀ ಕಾವ್ಯಗಳ ಪರಿಷ್ಕರಣದಲ್ಲಿ ಇನ್ನೂ ಸ್ಪಷ್ಟವಾದ ನಿಲುವುಗಳನ್ನು ರೂಪಿಸಿಕೊಳ್ಳಬೇಕಾದುದು ಅಗತ್ಯವಾಗಿದೆ.

ಮಧ್ಯಕಾಲೀನ ಕರ್ನಾಟಕದ ಪ್ರಮುಖ ಸಾಂಸ್ಕೃತಿಕ ನಾಯಕರಲ್ಲಿ ಒಬ್ಬನಾದ ಕೊಡೇಕಲ್ಲ ಬಸವಣ್ಣನ ಪರಂಪರೆಯ ಬಗೆಗೆ ಇತ್ತೀಚೆಗೆ ವ್ಯಾಪಕವಾದ ಅಧ್ಯಯನಗಳು ನಡೆಯುತ್ತಿವೆ. ಅಂಥವುಗಳಲ್ಲಿ ಶಿವಾನಂದ ವಿರಕ್ತಮಠ ಅವರ ರಾಚಪ್ಪಯ್ಯನ ಕೃತಿಗಳು ಸಂಪುಟ ಪ್ರಮುಖವಾದದು. ಇದರಲ್ಲಿ ಒಟ್ಟು ೧೧ ಕೃತಿಗಳಿದ್ದು, ಅವು ಹೆಚ್ಚಾಗಿ ಸಾಂಗತ್ಯದಲ್ಲಿಯೆ ರಚನೆಗೊಂಡಿವೆ. ಜೊತೆಗೆ ತತ್ವಪದಗಳು ಸೇರ್ಪಡೆಗೊಂಡಿರುವುದೊಂದು ಈ ಸಂಪುಟದ ವಿಶೇಷ. ಪ್ರಸ್ತಾವನೆಯಲ್ಲಿ ಉತ್ತರದ ಧಾಳಿ ಮತ್ತು ಕಾಲಜ್ಞಾನ ಸಾಹಿತ್ಯ, ಕಲ್ಯಾಣ ಪರಂಪರೆ, ಕೊಡೇಕಲ್ಲ ಪರಂಪರೆ, ರಾಚಪ್ಪಯ್ಯನ ಕಾಲ ಸ್ಥಳ ಮತ್ತು ಇತರ ಚಾರಿತ್ರಿಕ ಘಟನೆಗಳು, ರಾಚಪ್ಪಯ್ಯನ ಒಟ್ಟು ಕೃತಿಗಳ ಸ್ಥೂಲ ನೋಟವನ್ನು ಕೊಡಲಾಗಿದೆ. ಹೀಗಾಗಿ ಈ ಸಂಪುಟ ಉಪೇಕ್ಷಿತ ಕವಿಯೊಬ್ಬನ ಸಮಗ್ರ ಕೃತಿಗಳನ್ನು ಅಧ್ಯಯನ ಮಾಡಲಿಕ್ಕೆ ಒಂದು ಆಕರ ಗ್ರಂಥವಾಗಿದೆ.

ಸಂಕೀರ್ಣ ಸಾಹಿತ್ಯ

ಯಾವುದೇ ಒಂದು ನಿರ್ದಿಷ್ಟ ಪ್ರಕಾರಕ್ಕೆ ಸೆರದ ಕೃತಿಗಳನ್ನು ‘ಸಂಕೀರ್ಣ ಸಾಹಿತ್ಯ’ವೆಂದು ಪರಿಗಣಿಸಿ ವಿವೇಚಿಸಲಾಗಿದೆ. ಹಲಗೆಯಾರ್ಯನ ಶೂನ್ಯಸಂಪಾದನೆ ಪ್ರಕಟಗೊಂಡಿರುವುದು ಈ ದಶಕದ ಮತ್ತೊಂದು ಮಹತ್ವದ ಸಾಧನೆ. ಏಕೆಂದರೆ ಇಲ್ಲಿಯವರೆಗೆ ಗೂಳೂರು ಸಿದ್ಧವೀರಣ್ಣನ ಶೂನ್ಯಸಂಪಾದನೆ (೧೯೩೦), ಶಿವಗಣ ಪ್ರಸಾದಿ ಮಹಾದೇವಯ್ಯನ ಶೂನ್ಯಸಂಪಾದನೆ (೧೯೬೯), ಗುಮ್ಮಳಾಪುರದ ಸಿದ್ಧಲಿಂಗಯತಿಯ ಶೂನ್ಯಸಂಪಾದನೆ (೧೯೭೨)ಗಳು ಪ್ರಕಟಗೊಂಡಿದ್ದವು. ಎಸ್‌. ವಿದ್ಯಾಶಂಕರ್ ಮತ್ತು ಜಿ. ಎಸ್‌. ಸಿದ್ಧಲಿಂಗಯ್ಯನವರು ತುಂಬ ಶ್ರಮವಹಿಸಿ ಹಲಗೆಯಾರ್ಯನ ಶೂನ್ಯಸಂಪಾದನೆಯನ್ನು ಪರಿಷ್ಕರಿಸಿ ಪ್ರಕಟಿಸಿದ್ದಾರೆ. ಇದರಿಂದಾಗಿ ಶೂನ್ಯಸಂಪಾದನೆಗಳನ್ನು ಸಮಗ್ರವಾಗಿ ತೌಲನಿಕ ಅಧ್ಯಯನ ಮಾಡುವುದಕ್ಕೆ ಅನುಕೂಲವಾದಂತಾಗಿದೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿ ಭಾಂಡರದ ಏಕೈಕ ಹಸ್ತಪ್ರತಿಯಿಂದ ಸಂಪಾದನೆ ಕೈಗೊಳ್ಳಲಾಗಿದೆ. ಪ್ರಸ್ತಾವನೆಯಲ್ಲಿ ನಾಲ್ಕು ಶೂನ್ಯ ಸಂಪಾನೆಗಳಲ್ಲಿರಬಹುದಾದ ಸಾಮ್ಯತೆ ಭಿನ್ನತೆಗಳನ್ನು ಗುರುತಿಸುತ್ತಾ, “ಈಗ ಲಭ್ಯವಾಗಿರುವ ನಾಲ್ಕು ಶೂನ್ಯಸಂಪಾದನೆಗಳನ್ನು ತೌಲನಿಕವಾಗಿ ನೋಡಿದರೆ ಮಹಾದೇವಯ್ಯನ ಕೃತಿ ಪ್ರಥಮ ಪರಿಷ್ಕರಣವೆಂಬುದು ಖಚಿತವಾಗುತ್ತದೆ. ಗುಮ್ಮಳಾಪುರದ ಸಿದ್ಧಲಿಂಗಯತಿ ಹಾಗೂ ಗೂಳೂರು ಸಿದ್ಧವೀರಣ್ಣನ ಪರಿಷ್ಕರಣಗಳನ್ನು ಮೂಲ ಮಹದೇವಯ್ಯನ ಮಹಾನ್‌ ಪ್ರತಿಭಾಕೃತಿ ಶೂನ್ಯಸಂಪಾದನೆಯ ದರ್ಶನ ಹಾಗು ಹಲಗೆಯಾರ್ಯನ ಶೂನ್ಯಸಂಪಾದನೆಯ ಪರಿಷ್ಕರಣ ಶೂನ್ಯಸಂಪಾದನೆಗಳ ಅಧ್ಯಯನ ಕ್ರಮದಲ್ಲಿ ಅತ್ಯಂತ ಮಹತ್ವದ್ದು. ಇದು ಮಹಾದೇವಯ್ಯನ ಮೂಲ ಶೂನ್ಯ ಸಂಪಾದನೆಗೂ ಉಳಿದೆರಡು ಪರಷ್ಟರಣಗಳಿಗೂ ಮಧ್ಯದ ಅತ್ಯಂತ ಅರ್ಥಪೂರ್ಣವಾದ ಕೊಂಡಿ. ಈ ಕೊಂಡಿ ಕಳಚಿಕೊಂಡರೆ ಪರಿಷ್ಕರಣಗಳ ಮೌಲಿಕತೆಯ ಅರ್ಥವಾಗುವುದಿಲ್ಲ. ಈ ಪರಿಷ್ಕರಣ ಕ್ರಮ ಕೇವಲ ಯಾಂತ್ರಿಕವಾದುದಲ್ಲ ಪ್ರತಿಭಾಪೂರ್ಣವಾದುದು” ಎಂಬುದನ್ನು ಸಂಪಾದಕರು ಮನವರಿಕೆ ಮಾಡಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಸಂಪಾದನೆಯ ಪ್ರಕಟನೆಯಿಂದಾಗಿ ಒಟ್ಟು ಶೂನ್ಯ ಸಂಪಾದನೆಗಳ ಅಧ್ಯಯನಕ್ಕೆ ಸಮಗ್ರತೆ ಪ್ರಾಪ್ತವಾದಂತಾಗಿದೆ.

ಜನಪ್ರಿಯ ಪ್ರಾಚೀನ ಸಾಹಿತ್ಯ ಮಾಲೆಯಡಿಯಲ್ಲಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಕೇಶೀರಾಜ ವಿರಚಿತ ಶಬ್ದಮಣಿದರ್ಪಣವನ್ನು ಪರಿಷ್ಕೃತ ಪಠ್ಯದೊಂದಿಗೆ ೧೯೯೪ರಲ್ಲಿ ಪ್ರಕಟಿಸಿದೆ. ಸಂಪಾದಕರಾದ ಡಾ. ಟಿ. ವಿ. ವೆಂಕಟಾಚಲಶಾಸ್ತ್ರೀ ಅವರು ಪ್ರೊ. ಡಿ. ಎಲ್‌. ನರಸಿಂಹಾಚಾರ್ಯರ ಪರಿಷ್ಕರಣವನ್ನು ಆಧಾರ ಪ್ರತಿಯನ್ನಾಗಿಟ್ಟುಕೊಂಡು ಸಿದ್ಧಪಡಿಸಿದ್ದಾರೆ. ಜೊತೆಗೆ ಇಲ್ಲಿಯವರೆಗೂ ಬಂದ ಶಬ್ದಮಣಿದರ್ಪಣದ ಎಲ್ಲ ಸಂಪಾದನೆಗಳನ್ನು ಬಳಸಿಕೊಂಡಿದ್ದಾರೆ. ೧೪೩ ಪುಟಗಳ ಸುಧೀರ್ಘವಾದ ಉಪೋದ್ಭಾತದಲ್ಲಿ ಶಬ್ದಮಣಿದರ್ಪಣದ ವಸ್ತು ವಿಶೇಷತೆಯನ್ನು ವಿಮರ್ಶಾತ್ಮಕ ದೃಷ್ಠಿಕೋನದಿಂದ ಗಮನಿಸಲಾಗಿದೆ. ಇಲ್ಲಿ ಕೇಶೀರಾಜನ ಸಾಧನೆಗಳನ್ನು, ಮಿತಿಗಳನ್ನು ಗುರುತಿಸಿ ಸೂಕ್ತವಾದ ತಿದ್ದುಪಡಿ ಮಾಡಲಾಗಿದೆ. ಈ ಕೃತಿಯಲ್ಲಿರುವ ಹಲವು ಬಗೆಯ ಪಾಠಗಳ ಲೋಪದೋಷಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಲಾಗಿದೆಯೆಂದು ಸಂಪಾದಕರು ಆರಂಭದಲ್ಲಿ ಹೇಳಿಕೊಂಡಿದ್ದಾರೆ. ಹೀಗಾಗಿ ಇಲ್ಲಿಯವರೆಗಿನ ಶಬ್ದಮಣಿದರ್ಪಣದ ಪಠ್ಯಗಳಿಗಿಂತ ಈ ಸಂಪುಟ ಹೆಚ್ಚು ಸಮರ್ಪಕವಾಗಿ ಪರಿಷ್ಕೃತಗೊಂಡಿದೆಯೆಂದು ಹೇಳಬಹುದು. ಈ ಸಂಪುಟ ಕೇಶೀರಾಜನ ವ್ಯಾಕರಣವನ್ನು ಅರ್ಥೈಸಿಕೊಳ್ಳುವಲ್ಲಿ ಜನಸಾಮಾನ್ಯರಿಗೂ, ವಿದ್ವಾಂಸರಿಗೂ ನೆರವಾಗುತ್ತದೆ.

ಪ್ರಾಚೀನ ಕರ್ನಾಟಕ, ವಿಶೇಷವಾಗಿ ವಿಜಯನಗರೋತ್ತರ ಕಾಲದ ಚರಿತ್ರೆಯ ಅಧ್ಯಯನಕ್ಕೆ ‘ಕರ್ನಾಟಕದ ಕೈಫಿಯತ್ತುಗಳು’ ಸಂಪುಟವು ಒಂದು ಹೊಸ ಆಕರ ಸಾಮಗ್ರಿಯಾಗಿ ನಮಗೆ ಕಂಡುಬರುತ್ತದೆ. ೧೯೯೪ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿದ ಈ ಕೃತಿಯ ಸಂಪಾದಕರು ಎಂ. ಎಂ. ಕಲಬುರ್ಗಿಯವರು. ಸತತವಾಗಿ ಹತ್ತು ವರುಷಗಳ ಕಾಲ ಶ್ರಮಿಸಿ ಈ ಕೈಫಿಯತ್ತುಗನ್ನು ಒಂದೆಡೆ ಸಂಗ್ರಹಿಸಿ ಪರಿಷ್ಕರಿಸಿ ಕೊಟ್ಟಿರುವರು. ಮೈಸೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆ ಹಾಗೂ ಬಳ್ಳಾರಿ ಪ್ರದೇಶಗಳ ೧೩೪ ಕೈಫಿಯತ್ತುಗಳ ಪಠ್ಯ ಇಲ್ಲಿದೆ. ೩೪ ಪುಟಗಳ ಪ್ರಸ್ತಾವನೆಯಲ್ಲಿ ಕೈಫಿಯತ್ತುಗಳನ್ನು ಬರೆಯಿಸಿದ ಕರ್ನಲ್‌ ಮೆಂಕಜಿಯ ಜೀವನ ಸಾಧನೆ, ಕೈಫಿಯತ್ತುಗಳ ಶಿಲ್ಪ, ಸಂಖ್ಯಾನಿರ್ಣಯ, ಅವುಗಳನ್ನು ಹಲವು ಮಗ್ಗಲುಗಳಿಂದ ವಿಶ್ಲೇಷಣೆ ಗೊಳಪಡಿಸಲಾಗಿದೆ. ಅನುಬಂಧದಲ್ಲಿರುವ ೧೪೮ ಪುಟಗಳ ನಾಮಸೂಚಿಯು ಅಧ್ಯಯನಾಸಕ್ತರಿಗೆ ಕತೂಹಲವನ್ನು ಕೆರಳಿಸುತ್ತದೆ.

ಹಸ್ತಪ್ರತಿ ಸೂಚಿ ಸಂಪುಟಗಳು

ಗ್ರಂಥಸಂಪಾದನೆಯ ಆಕರಗಳಲ್ಲಿ ಒಂದಾದ ಹಸ್ತಪ್ರತಿ ಸೂಚಿಸಂಪುಟಗಳನ್ನು ಈ ದಶಕದುದ್ದಕ್ಕೂ ಕೆಲವು ಸಂಸ್ಥೆಗಳು ಪ್ರಕಟಿಸಿವೆ. ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಚೇಂದ್ರ ಬ್ರಹನ್ಮಠದ ಹಸ್ತಪ್ರತಿಗಳ ಸೂಚಿಯೊಂದನ್ನು ಶಿವಣ್ಣನವರು ಸಿದ್ಧಪಡಿಸಿ ಪ್ರಕಟಿಸಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಹಸ್ತಪ್ರತಿ ಭಾಂಡಾರದಿಂದ ಹತ್ತು ಸೂಚಿ ಸಂಪುಟಗಳು ಹೊರಬಂದಿವೆ. ಒಂದು ಸಂಪುಟದಲ್ಲಿ ನೂರುಕಟ್ಟುಗಳಲ್ಲಿರುವ ಕೃತಿಗಳು ಅಡಕಗೊಂಡಿವೆ. ಆದರೆ ಇನ್ನೂ ಉಳಿದ ಸಂಪುಟಗಳು ಪ್ರಕಟಗೊಳ್ಳಬೇಕಾದುದು ಅಗತ್ಯವಾಗಿದೆ. ಈ ದಶಕದ ಆರಂಭದಲ್ಲಿ ಸ್ಥಾಪನೆಗೊಂಡ ಹಂಪಿ ಕನ್ನಡ ವಿಶ್ವವಿದ್ಯಾಲಯವು ಹಸ್ತಪ್ರತಿಗಳ ಸಂಗ್ರಹ ಸೂಚಿರಚನೆಗೆ ವಿಶೇಷ ಗಮನಹರಿಸುವುದಕ್ಕಾಗಿ ‘ಹಸ್ತಪ್ರತಿಶಾಸ್ತ್ರ ವಿಭಾಗ’ವನ್ನೇ ಪ್ರತ್ಯೇಕವಾಗಿ ಆರಂಭಿಸಿದೆ. ಉತ್ತರ ಕರ್ನಾಟಕದ ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಕೈಕೊಂಡು ಸುಮಾರು ೨೫೦೦ ಹಸ್ತಪ್ರತಿಗಳನ್ನು ಸಂಗ್ರಹಿಸಿ ಸಂರಕ್ಷಿಸಲಾಗುತ್ತಿದೆ. ಈ ಕಾರ್ಯ ನಿರಂತರವಾಗಿ ಮುಂದುವರೆದಿದೆ. ೪೦೦ ಹಸ್ತಪ್ರತಿ ಕಟ್ಟುಗಳೊಂದರಂತೆ ಎರಡು ಸಂಪುಟಗಳು ಈಗ ಬೆಳಕು ಕಂಡಿವೆ. ಮೊದಲನೆಯ ಸಂಪುಟ (ಸಂ. ಎಫ್‌. ಟಿ. ಹಳ್ಳಿಕೇರಿ, ಕೆ. ರವೀಂದ್ರನಾಥ)ದಲ್ಲಿ ೭೨೩ ಕೃತಿಗಳ ಸೂಚಿಯಿದ್ದರೆ, ಎರಡನೆಯ ಸಂಪುಟ (ಸಂ. ವೀರೇಶ ಬಡಿಗೇರ, ಎಸ್‌, ಆರ್. ಚೆನ್ನವೀರಪ್ಪ)ದಲ್ಲಿ ೫೪೫ ಕೃತಿಗಳ ಸೂಚಿಯಿದೆ. ಈವರೆಗೆ ಪ್ರಕಟವಾದ ಹಸ್ತಪ್ರತಿ ಸೂಚಿ ಸಂಪುಟಗಳನ್ನು ಸಮಗ್ರವಾಗಿ ಪರಿಶೀಲಿಸಿ, ಅವುಗಳಲ್ಲಿರುವ ದೋಷಗಳನ್ನು ಸರಿಪಡಿಸಿಕೊಂಡು ಎಂ. ಎಂ. ಕಲಬುರ್ಗಿಯವರು ಸಿದ್ಧಪಡಿಸಿದ ಸೂಚಿಯನ್ನು ಮಾದರಿ (ಮಾರ್ಗ ೩, ಪುಟ ೧೬೪)ಯಾಗಿಟ್ಟುಕೊಂಡು ಈ ಸಂಪುಟಗಳನ್ನು ಪ್ರಕಟಿಸಲಾಗಿದೆ. ಅನುಬಂಧದಲ್ಲಿ ಕವಿ, ಸ್ಥಳನಾಮ, ಲಿಪಿಕಾರರ ಸೂಚಿ, ದಾನಿಗಳ ಸೂಚಿಯನ್ನು ಕೊಟ್ಟಿರುವುದು ತುಂಬ ಅನುಕೂಲಕರವಾಗಿದೆ. ಹಸ್ತಪ್ರತಿಯನ್ನು ದಾನವಾಗಿ ನೀಡಿದಂಥ ಮಹನೀಯರನ್ನು ಇಲ್ಲಿ ಉಲ್ಲೇಖಿಸಿರುವುದು ವಿಶೇಷವಾಗಿದೆ. ಹೀಗೆಯೇ ಉಡಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನ, ಶ್ರವಣಬೆಳಗೊಳದ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೊಧನ ಕೇಂದ್ರ, ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿಮಠ ಮೊದಲಾದ ಸಾರ್ವಜನಿಕ, ಧಾರ್ಮಿಕ ಸಂಸ್ಥೆಗಳು ತಮ್ಮಲ್ಲಿದ್ದ ಹಸ್ತಪ್ರತಿಗಳ ಸೂಚಿ ಸಂಪುಟಗಳನ್ನು ಪ್ರಕಟಿಸಿ ಅಧ್ಯಯನಕಾರರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಕನ್ನಡ ಗ್ರಂಥಸಂಪಾದನೆಯ ಪರಂಪರೆಯಲ್ಲಿ ಹಸ್ತಪ್ರತಿ ಕುರಿತು ಸೈದ್ಧಾಂತಿಕ ದೃಷ್ಟಿಕೋನವನ್ನೊಳಗೊಂಡ ಕೃತಿಗಳು ಈ ದಶಕದಲ್ಲಿ ಪ್ರಕಟಗೊಂಡಿವೆ. ಬಿ. ಎಸ್‌. ಸಣ್ಣಯ್ಯನವರ ಹಸ್ತಪ್ರತಿಶಾಸ್ತ್ರ ಪರಿಚಯ, ಎಂ. ಎಂ. ಕಲಬುರ್ಗಿಯವರ ಹಸ್ತಪ್ರತಿಶಾಸ್ತ್ರ, ಬಿ. ಕೆ. ಹಿರೇಮಠ ಅವರ ಕನ್ನಡ ಹಸ್ತಪ್ರತಿಗಳು: ಒಂದು ಅಧ್ಯಯನ ಎಫ್‌. ಟಿ. ಹಳ್ಳಿಕೇರಿಯವರ ಹಸ್ತಪ್ರತಿ ಕ್ಷೇತ್ರಕಾರ್ಯ, ವೀರೇಶ ಬಡಿಗೇರ ಅವರ ಸಾಫ್ಟ್‌ವೇರ್‌ತಂತ್ರಜ್ಞಾನ ಮತ್ತು ಕನ್ನಡಮಹತ್ವದ ಗ್ರಂಥಗಳೆನಿಸಿವೆ. ಪಿ. ಎಚ್‌. ಡಿ ಅಧ್ಯಯನಕ್ಕಾಗಿ ಬಿ. ಕೆ. ಹಿರೇಮಠರು ಹಸ್ತಪ್ರತಿಗಳನ್ನು ಆಯ್ಕೆ ಮಾಡಿಕೊಂಡು ಆಳವಾದ ಅಧ್ಯಯನ ಕೈಕೊಂಡಿರುವರು. ಇವೆಲ್ಲ ಕೃತಿಗಳು ಗ್ರಂಥ ಸಂಪಾದನೆಯನ್ನು ಕೈಕೊಳ್ಳುವವರಿಗೆ ಕೈಪಿಡಿಯಾಗಿ ನೆರವಾಗುತ್ತವೆ.

ಒಂದು ದಶಕದ ಗ್ರಂಥಸಂಪಾದನೆಯ ಸಾಧನೆ, ಇತಿಮಿತಿಗಳನ್ನು ಒಂದು ಲೇಖನದಲ್ಲಿ ವಿಶ್ಲೇಷಿಸುವುದು ಕಷ್ಟ ಸಾಧ್ಯವಾದ ಕೆಲಸ. ಈ ದಶಕದಲ್ಲಿ ವಿವಿಧ ಛಂದಸ್ಸಿನಲ್ಲಿರುವ ಸುಮಾರು ೧೨೦ಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಅದೇನೆ ಇರಲಿ, ಕಳೆದ ದಶಕದಲ್ಲಿ ಗ್ರಂಥಸಂಪಾದನ ಕ್ಷೇತ್ರದಲ್ಲಾದ ಸಾಧಕ ಬಾಧಕಗಳನ್ನು ಹೀಗೆ ಗುರುತಿಸಬಹುದು.

. ಕಳೆದ ದಶಕ (೧೯೮೧–೯೦)ಕ್ಕೆ ಹೋಲಿಸಿದರೆ ಈ ದಶಕದಲ್ಲಿ ಪ್ರಕಟನೆಯ ಸಂಖ್ಯೆಯಲ್ಲಿ ಇಳಿಮುಖ ಕಂಡುಬಂದಿದೆ.

. ಹತ್ತೊಂಬತ್ತನೆಯ ಶತಮಾನ ಪೂರ್ವದ ವಚನ ಸಾಹಿತ್ಯ ಸಮಗ್ರವಾಗಿ ಒಂದೆಡೆ ಪ್ರಕಟಗೊಂಡು ಜನಸಾಮಾನ್ಯರಿಗೂ ನಿಲುಕುವಂತಾದುದು. ಈ ದಶಕದ ವಿಶೇಷತೆಯಾಗಿದೆ.

. ಮಧ್ಯಕಾಲೀನ ಕನ್ನಡದ ಲಘುಸಾಹಿತ್ಯ ಪ್ರಕಾರಗಳಾದ ತಾರಾವಳಿ, ಅಷ್ಟಕ, ಕಾಲಜ್ಞಾನ, ತತ್ವಪದಗಳ ಸಂಕಲನಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಂಡುದು.

. ವಿಶೇಷವಾಗಿ ಮೈಸೂರಿನ ಸುತ್ತೂರು ಮಠವು ಸಮಗ್ರ ಸ್ವರವಚನಗಳ ಪ್ರಕಟನ ಯೋಜನೆಯನ್ನು ರೂಪಿಸಿ, ಹತ್ತು ಸಂಪುಟಗಳನ್ನು ಪ್ರಕಟಸಿದುದು.

. ಕವಿಚರಿತೆಕಾರರ ಗಮನಕ್ಕೆ ಬಾರದೆ ಹೋದಂಥ ಅನೇಕ ಕೃತಿಗಳು ಈ ದಶಕದಲ್ಲಿ ಬೆಳಕುಕಂಡಿವೆ.

. ಗ್ರಂಥ ಸಂಪಾದನ ಕ್ಷೇತ್ರಕ್ಕೆ ಯುವ ವಿದ್ವಾಂಸರು ಸೇರ್ಪಡೆಯಾಗಿದ್ದುದು ಗಮನಿಸತಕ್ಕ ಸಂಗತಿ.

. ಅಲ್ಲಲ್ಲಿ ಬಿಡಿಬಿಡಿಯಾಗಿ ಪ್ರಕಟಗೊಂಡಿದ್ದ ಹಲವಾರು ಲಘು ಕೃತಿಗಳ ಜೊತೆಗೆ ಅಪ್ರಕಟಿತ ಕೃತಿಗಳನ್ನು ಸೇರಿಸಿ ಸಂಪುಟ ರೂಪದಲ್ಲಿ ಹೊರತರಲಾಗಿದೆ. ಉದಾ. ವೀರಶೈವ ತಾರಾವಳಿ ಸಂಪುಟ, ಕರಸ್ಥಲ ಸಾಹಿತ್ಯ ಸಂಪುಟ, ಬಸವಯುಗದ ವಚನೇತರ ಸಾಹಿತ್ಯ

. ದೇಶೀ ಕಾವ್ಯವನ್ನು ಸಂಪಾದಿಸುವ ವಿಧಾನದಲ್ಲಿ ಸರಳತೆಯನ್ನು ಅಳವಡಿಸಿಕೊಂಡಂತೆ ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಂದರೆ ನಿಜವೆನ್ನಬಹುದಾದ ಪಾಠವನ್ನು ನಿಷ್ಕರ್ಷಿಸಿ, ಹಸ್ತಪ್ರತಿಯಲ್ಲಿದ್ದ (ಅಶುದ್ಧಪಾಠ?) ಪಾಠವನ್ನು ಅಡಿಯಲ್ಲಿ ಉಲ್ಲೇಖಿಸದಿರುವುದು. ಇದರಿಂದ ಭಾಷಾಸ್ವರೂಪ, ಒಪ್ಪಿತ ಪಾಠದ ಶೋಧ ಮೊದಲಾದ ವಿಷಯಗಳ ಬಗೆಗೆ ಅಧೈಯನ ಮಾಡುವಾಗ ತೊಡಕುಂಟಾದುದನ್ನು ಕೆಲವು ಸಂಪುಟಗಳಲ್ಲಿ ಕಾಣಬಹುದು.

. ಹಿಂದಿನ ಪರಿಷ್ಕರಣಗಳಲ್ಲಾದ ದೋಷಗಳನ್ನು ಸರಿಪಡಿಸಿಕೊಂಡು ಪರಿಷ್ಕೃತ ಆವೃತ್ತಿಗಳು ಈ ದಶಕದಲ್ಲಿ ಬಂದಿವೆ. ಉದಾ. ಪಂಪನ ಆದಿಪುರಾಣ, ಮುದ್ರಾಮಂಜೂಷ.

ಒಟ್ಟಿನಲ್ಲಿ ಪ್ರಾಚೀನ ಸಾಹಿತ್ಯದ ಪ್ರಕಟನಕಾರ್ಯ ನಿರಂತರವಾಗಿ ಮುಂದುವರೆಯುತ್ತಲಿದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಪರಂಪರಾಗತವಾದಂಥ ಸಾಹಿತ್ಯಕೃತಿಗಳ ಅವಶ್ಯಕತೆ ಇದೆಯೇ ಎಂಬ ಪ್ರಶ್ನೆಗಳು ಉದ್ಭವಗೊಂಡಿವೆ. ಇಂದಿನ ಸಾಹಿತ್ಯದ ಪರಿಸರವನ್ನು ಅರಿತುಕೊಳ್ಳಲು ಪ್ರಾಚೀನ ಸಾಹಿತ್ಯವೂ ಪ್ರೇರಣೆ ಎಂಬುದನ್ನು ನಾವು ಮನಗಾಣಬೇಕು. ಈ ನಿಟ್ಟಿನಲ್ಲಿ ಇನ್ನೂ ಅಪ್ರಕಟಿತ ಸ್ಥಿತಿಯಲ್ಲಿದ್ದ ಹಲವಾರು ಕಾವ್ಯಗಳು ಬೆಳಕಿಗೆ ಬರಬೇಕಾಗಿದೆ. ಶಾಲಾ ಕಾಲೇಜುಗಳಲ್ಲಿ ಹಳಗನ್ನಡ ನಡುಗನ್ನಡ ಕಾವ್ಯಗಳ ಆಯ್ದ ಭಾಗಗಳನ್ನು ಸಹ ಬೋಧಿಸಲು ಹಿಂದೇಟು ಹಾಕಲಾಗುತ್ತಿದೆ. ಇದರಿಂದಾಗಿ ನಮ್ಮ ಹೊಸ ಶಿಕ್ಷಣ ಪದ್ದತಿಯಿಂದಾಗಿ ವಿದ್ಯಾರ್ಥಿಗಳಿಗೆ ಪರಂಪರೆಯ ತಿಳುವಳಿಕೆಯಿಲ್ಲವಾಗುತ್ತಿದೆ. ಈ ತಿಳುವಳಿಕೆ ಬರಬೇಕಾದರೆ ಪಠ್ಯಕ್ರಮದಲ್ಲಿ ಪ್ರಾಚೀನ ಸಾಹಿತ್ಯದ ಭಾಗಗಳನ್ನು ಉಳಿಸಿಕೊಳ್ಳಬೇಕಾದುದು ಅಗತ್ಯವಿದೆ.