ಸಂಶೋಧನ ಕ್ಷೇತ್ರಕ್ಕೆ ಆಗಮಿಸುತ್ತಿರುವವರ ಸಂಖ್ಯೆ ಹತ್ತು ವರ್ಷಗಳಿಂದ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಹೀಗಾಗಿ ಪ್ರಕಟವಾಗುತ್ತಿರುವ ಸಂಶೋಧನ ಫಲಿತಗಳೂ ವಿಫುಲವಾಗಿವೆ. ಇಲ್ಲಿನ ಸಮೀಕ್ಷಾರೂಪದ ಬರವಣಿಗೆಯಲ್ಲಿ ೧೯೯೧ ರಿಂದ ೨೦೦೦ ಇಸವಿಯವರೆಗೆ ಪ್ರಕಟವಾದ ಕೆಲವು ಸಂಶೋಧನ ಕೃತಿಗಳನ್ನು ಮತ್ತು ಲೇಖನ ಸಂಗ್ರಹಗಳನ್ನು ಮಾತ್ರ ಸಮೀಕ್ಷಿಲಾಗಿದೆ. ಕೃತಿಗಳ ಸಂಖ್ಯೆ ವಿಫುಲವಾವದ ಕಾರಣ ಇಲ್ಲಿಯ ಬರವಣಿಗೆಗೆ ಕೆಲವು ಕೃತಿಗಳನ್ನು ಮಾತ್ರ ಬಳಸಿ ಕೊಳ್ಳಲಾಗಿದೆ. ಇಲ್ಲಿ ಸಮೀಕ್ಷೆಯಾಗದ ಕೃತಿಗಳು ಅರ್ಹವಲ್ಲವೆಂಬ ಭಾವನೆ ನಮ್ಮದಲ್ಲ. ಸಕಾಲದಲ್ಲಿ ಕೆಲವು ಉತ್ತಮ ಕೃತಿಗಳು ದೊರೆಯದೇ ಇರುವುದರಿಂದ ಮತ್ತು ಹತ್ತಿಪ್ಪತ್ತು ಪುಟಗಳಲ್ಲಿ ಎಲ್ಲವನ್ನೂ ಗಮನಿಸುವುದು ಅಸಾಧ್ಯವಾದುದರಿಂದ ಲಭ್ಯವಾದ ಕೆಲವಾರು ಕೃತಿಗಳನ್ನು ಮಾತ್ರ ಇಲ್ಲಿ ಸಮೀಕ್ಷಿಸಲಾಗಿದೆ. ಆದರು ಇಲ್ಲಿ ಉಲ್ಲೇಖಿಸಲಾಗದ ಹಲವಾರು ಕೃತಿಗಳನ್ನೂ ಗಮನದಲ್ಲಿಟ್ಟುಕೊಂಡು ನಾಲ್ಕಾರು ಅಂಶಗಳನ್ನು ಹೇಳಲು ಇಲ್ಲಿ ಪ್ರಯತ್ನಿಸಲಾಗಿದೆ.

೧೯೯೦ರಲ್ಲಿ ಪ್ರಕಟವಾದ ಡಾ. ಚೆನ್ನಕ್ಕ ಪಾವಟೆಯವರ ‘ಬಂಕಾಪುರ ಶೋಧನ’ ಮತ್ತು ಶ್ರೀ ಎಂ. ಜಿ. ನಾಗರಾಜ್‌ ಅವರ ‘ಶಾಸನಶಿಲ್ಪಗಳು’ ಎಂಬ ಎರಡು ಕೃತಿಗಳಿಂದಲೇ ಈ ಸಮೀಕ್ಷೆಯನ್ನು ಆರಂಭಿಸಬಹುದು. ಡಾ. ಚೆನ್ನಕ್ಕ ಅವರ ಬಂಕಾಪುರ ಶೋಧನ ಕೃತಿಯು ಕೆಲವಾರು ಕಾರಣಗಳಿಂದ ಸಂಶೋಧನ ಕ್ಷೇತ್ರಕ್ಕೆ ಒಳ್ಳೆಯ ಕೊಡುಗೆಯಾಗಿದೆ. ಈ ಕೃತಿಯು ಸ್ಥಳೀಯ ಸಂಸ್ಕೃತಿಯ ಬಗೆಗೆ ಮತ್ತು ವ್ಯಾಪಕ ಕ್ಷೇತ್ರ ಕಾರ್ಯ ವಿಧಾನದಿಂದ ಪ್ರಕಟವಾದ ಮಹಿಳಾ ಸಂಶೋಧಕರೊಬ್ಬರ ಮೊದಲ ಬೃಹತ್‌ ಕೃತಿಯಾಗಿದೆ. ಇಲ್ಲಿನ ಸಂಶೋಧನೆಯಲ್ಲಿ ಆಯಾ ಕ್ಷೇತ್ರದ ತಜ್ಞರನ್ನು ಬಳಸಿಕೊಂಡಿರುವುದು ಅವರ ಪ್ರಾಮಾಣಿಕತೆಯನ್ನು ತೋರಿಸುತ್ತದೆ. ಇದೇ ವರ್ಷ ಪ್ರಕಟವಾದ ಮತ್ತೊಂದು ವಿನೂತನ ಕೃತಿ ಶ್ರೀ ಎಂ. ಜಿ. ನಾಗರಾಜ್‌ ಅವರ ‘ಶಾಸನಶಿಲ್ಪಗಳು’. ಇದುವರೆಗೂ ಶಾಸನಗಳ ಅಧ್ಯಯನವೆಂದರೆ ಕೇವಲ ಅದರ ಲಿಪಿಯ ಅಧ್ಯಯನವೇ ಆಗಿತ್ತು. ಕೆಲವು ವೇಳೆ ಸ್ಮಾರಕ ಶಾಸನಗಳನ್ನು ಅಧ್ಯಯನ ಮಾಡುವಾಗ ಪ್ರಾಸಂಗಿಕವಾಗಿ ಅದರಲ್ಲಿನ ಶಿಲ್ಪದ ಬಗೆಗೆ ಹೇಳಿರುವುದುಂಟು. ಹೀಗಾಗಿ ಶಾಸನ ಸಂಶೋಧನೆಯಲ್ಲಿ ನಿರ್ಲಕ್ಷಕ್ಕೆ ಒಳಗಾದ ಶಿಲ್ಪದ ಬಗೆಗೆ ವಿವರವಾದ ಚರ್ಚೆ ಇಲ್ಲಿಯವರೆಗೂ ನಡೆದಿರಲಿಲ್ಲ. ಶ್ರೀ ನಾಗರಾಜ್‌ ಅವರ ಕೃತಿ ಆ ಕೊರತೆಯನ್ನು ನೀಗಿಸಿದೆ. ಅವರ ವಿಷಯ ಮಂಡನಾಕ್ರಮದಲ್ಲಿ ಒಂದು ಶಿಸ್ತು ಕಂಡು ಬರದಿದ್ದರೂ ಅವರು ಗಮನಿಸಿರುವ ಕೆಲವೊಂದು ವಿಷಯಗಳು ಹೊಸತನದಿಂದ ಕೂಡಿವೆ. ವೀರಗಲ್ಲುಗಳ ಶಿಲ್ಪವನ್ನು ಅರ್ಥೈಸುವಾಗ ಬೇಗೂರಿನ ವೀರಗಲ್ಲಿನ ಬಗ್ಗೆ ಹೇಳುವ ಅಂಶಗಳು ವಿಚಾರಾರ್ಹವಾಗಿವೆ.

೧೯೯೩ರಲ್ಲಿ ಪ್ರಕಟಿಸಿದ ‘ಮಧುರ ಚೆನ್ನರ ಲೇಖನಗಳು’ ಎಂಬ ಕೃತಿಯ ಮೂಲಕ ಕನ್ನಡ ವಿಶ್ವವಿದ್ಯಾಲಯವು ಮೊದಲಿಗೆ ಸಂಶೊಧನ ಕ್ಷೇತ್ರದ ಪ್ರಟನೆಗೆ ನಾಂದಿ ಹಾಡಿತು. ಈ ಕೃತಿಯಲ್ಲಿ ಮಧುರ ಚೆನ್ನರು ವಿವಿಧ ಕ್ಷೇತ್ರಗಳಲ್ಲಿ ನಡೆಸಿದ್ದ ಸಂಶೋಧನೆ ಮತ್ತು ಇತರೆ ವಿಷಯಗಳ ಲೇಖನಗಳನ್ನು ಸಂಗ್ರಹಿಸಿಕೊಡಲಾಗಿದೆ. ಕನ್ನಡ ಸಂಶೋಧನೆ ಇನ್ನೂ ಹದಗೊಳ್ಳಬೇಕಾಗಿದ್ದ ಕಾಲದಲ್ಲಿ ಮಧುರ ಚೆನ್ನರ ಆಧುನಿಕ ಮನೋಧರ್ಮ ಆಶ್ಚರ್ಯವನ್ನುಂಟುಮಾಡುತ್ತದೆ. ಸಂಸ್ಕೃತಿ ಅಧ್ಯಯನದ ಆಕರಗಳ ಶೋಧ ಇನ್ನೂ ಆರಂಭ ಅವಸ್ಥೆಯಲ್ಲಿದ್ದ ಕಾಲದಲ್ಲಿ ಮಧುರಚೆನ್ನರ ವಿಮರ್ಶಾತ್ಮಕ ಗುಣ ಮೆಚ್ಚುವಂತದ್ದಾಗಿದೆ. ಇತಿಹಾಸ, ಕಲೆ, ಶಾಸನಗಳು, ಭಾಷಾಶಾಸ್ತ್ರ, ಜಾನಪದ, ಗ್ರಂಥಸಂಪಾದನೆ, ವಚನ ಸಾಹಿತ್ಯ ಮುಂತಾದ ಕ್ಷೇತ್ರಗಳಲ್ಲಿದ್ದ ಸ್ವಂತ ಅನುಭವದ ಮೂಸೆಯಲ್ಲಿಯೇ ಇಲ್ಲಿನ ಲೇಖನಗಳು ರಚಿತವಾಗಿವೆ.

ಸಂಶೋಧನೆ ಕ್ಷೇತ್ರದಲ್ಲಿ ಮಾದರಿಯಾಗಿ ನಿಂತ ಡಾ. ಎಂ. ಚಿದಾನಂದಮೂರ್ತಿಯವರು ಸಂಶೋಧನೆಯನ್ನು ಒಂದು ಕಲೆಯ ಮಟ್ಟಕ್ಕೆ ಬೆಳೆಸಿದವರು. ಕನ್ನಡ ವಿಶ್ವವಿದ್ಯಾಲಯವು ೧೯೯೩ರಲ್ಲಿ ಇವರ ಐವತ್ತು ಲೇಖನಗಳನ್ನು ಒಗ್ಗೂಡಿಸಿ ‘ಹೊಸತು ಹೊಸತು’ ಹೆಸರಿನಲ್ಲಿ ಪ್ರಕಟಿಸಿತು. ಡಾ. ಎಂ. ಚಿದಾನಂದಮೂರ್ತಿಯವರ ಒಟ್ಟು ಸಂಶೋಧನ ಗುಣವು ಇದರಿಂದ ಅನಾವರಣವಾದಂತಾಯಿತು. ಇದೇ ಕೃತಿಯನ್ನೆ ಕನ್ನಡ ಪುಸ್ತಕ ಪ್ರಾಧಿಕಾರವು ೧೯೯೮ ರಲ್ಲಿ ಮರುಮುದ್ರಣ ಮಾಡಿತು. ಹೀಗೆ ಪ್ರಕಟಿಸುವಾಗ ಹೆಚ್ಚಿನ ನಾಲ್ಕು ಲೇಖನಗಳನ್ನು ಸೇರಿಸಿದೆ. ಸಂಶೋಧನೆಯ ಮುಖ್ಯ ಉದ್ದೇಶ ಹೊಸತನ್ನು ಹೇಳುವುದು, ಜ್ಞಾನವನ್ನು ಹೆಚ್ಚಿಸುವುದು ಎಂಬುದು ಶ್ರೀ ಚಿದಾನಂದಮೂರ್ತಿಯವರ ನಂಬಿಕೆ. ಈ ನಂಬಿಕೆಗೆ ತಕ್ಕಂತೆ ಇಲ್ಲಿನ ಐವತ್ತುನಾಲ್ಕು ಲೇಖನಗಳಲ್ಲಿ ಹೊಸ ವಿಷಯಗಳ ಮಂಡನೆಯಾಗಿದೆ. ‘ಪಂಪ’ ಹೆಸರಿನ ಬಗ್ಗೆ, ಕುರಿಕ್ಯಾಲ ಶಾಸನದ ಬಗ್ಗೆ, ಭಗವತಿಯೇಱುವಿನ ಚರ್ಚೆ, ಶ್ರವಣಬೆಳ್ಗೊಳದ ಮೂಲದ ವಿಷಯ, ಬುಕ್ಕರಾಯನ ಶಾಸನದ ಮೇಲೆ ಹೊಸಬೆಳಕು, ಕನ್ನಡದಲ್ಲಿ ಬೌದ್ಧ ಸಾಹಿತ್ಯ, ಹಂಪೆಯಲ್ಲಿ ಹಲವು ವಿಷಯಗಳ ಶೋಧದ ಲೇಖನಗಳು ಹೀಗೆ ಇಲ್ಲಿರುವ ಎಲ್ಲ ಲೇಖನಗಳೂ ಒಂದಲ್ಲಾ ಒಂದು ರೀತಿಯಲ್ಲಿ ದೇಸಿ ಸಂಸ್ಕೃತಿ ಪ್ರಿಯರಿಗೆ ಇಷ್ಟವಾಗುತ್ತದೆ. ಆಡಳಿತಗಾರರ ಚರಿತ್ರೆಗೆ ಪೂರಕವಾಗಿ ಮಾತ್ರ ಬಳಕೆಯಾಗುತ್ತಿದ್ದ ಶಾಸನ ಪ್ರಕಾರವನ್ನು ಸಾಹಿತ್ಯ ಕ್ಷೇತ್ರಕ್ಕೆ ಮೊಟ್ಟ ಮೊದಲು ಎಳೆದು ತಂದವರು ಶ್ರೀ ಚಿದಾನಂದಮೂರ್ತಿಯವರು. ಇಲ್ಲಿನ ಬಹುಪಾಲು ಲೇಖನಗಳು ಈ ಮಾತಿಗೆ ಸಾಕ್ಷಿಯಾಗಿವೆ. ಆಕರಗಳ ಬಳಕೆ, ಕ್ರಮಬದ್ಧತೆ ಮತ್ತು ತಮ್ಮ ಆಲೋಚನೆಯನ್ನು ಓದುಗರ ಮುಂದೆ ಮಂಡಿಸುವಾಗಿನ ತಾಳ್ಮೆ ಬಹಳ ಅಪರೂಪದ್ದು. ಇಲ್ಲಿನ ಲೇಖನಗಳಲ್ಲಿ ಪಾಂಡಿತ್ಯ, ಪ್ರದರ್ಶನದ ಕಸರತ್ತು ಕಂಡುಬರುವುದಿಲ್ಲ. ಹೇಳುವ ವಿಷಯವನ್ನು ಸಣ್ಣದು – ದೊಡ್ಡದು ಎಂಬ ಭೇದವಿಲ್ಲದೆ ಆಸಕ್ತಿಯಿಂದ ಮಂಡಿಸುವರು. ಹೀಗಾಗಿ ಲೇಖನಗಳು ಶುಷ್ಕವಾಗಿರದೆ ಜೀವಂತಿಕೆಯಿಂದ ಕೂಡಿವೆ. ಅನೇಕ ಹೊಸ ಆಯಾಮಗಳತ್ತ ನಮ್ಮ ಗಮನವನ್ನು ಸೆಳೆಯುತ್ತವೆ. ಸರಳಭಾಷೆ, ನೇರ ನಿರೂಪಣೆ, ಪ್ರಾಮಾಣಿಕ ಅಭಿಪ್ರಾಯಗಳು ಇಲ್ಲಿನ ಲೇಖನಗಳ ಮುಖ್ಯ ಗುಣ. ಈ ಕಾರಣಗಳಿಂದ ಈ ಕೃತಿಯು ಸಂಶೋಧನಾಸಕ್ತರಿಗೆ ಒಂದು ಮಾದರಿ ಕೃತಿಯಾಗಿ ಇಂದಿಗೂ ಗಮನಸೆಳೆಯುತ್ತಿದೆ.

ಪ್ರೊ. ಎಂ.ವಿ. ಸೀತಾರಾಮಯ್ಯನವರು ನಮ್ಮ ಹಿರಿಯ ತಲೆಮಾರಿನ ಅತ್ಯುತ್ತಮ ಸಂಶೋಧಕರಲ್ಲೊಬ್ಬರು. ಕವಿರಾಜಮಾರ್ಗದ ರಚನೆಕಾರನ ಪ್ರಶ್ನೆ ಬಂದಾಗ ನೆನಪಾಗುವ ಹೆಸರು ಶ್ರೀ ಸೀತಾರಾಮಯ್ಯನವರದ್ದು. ಕವಿರಾಜಮಾರ್ಗವನ್ನು ಮೊದಲಿಗೆ ವ್ಯವಸ್ಥಿತವಾಗಿ ಸಂಪಾದಿಸಿ ಅದರ ರಚನಕಾರ ಶ್ರೀವಿಜಯನೆಂದು ವಾದಿಸಿದರು. ಈಗ ಇದನ್ನು ಎಲ್ಲರೂ ಒಪ್ಪಿದ್ದಾರೆ. ಇವರ ನೆನಪಿಗಾಗಿ ಅಭಿಮಾನಿಗಳು ಸಮರ್ಪಿಸಿದ ಕೃತಿ ‘ಕಧಂಬ’ವು ಎಂ. ವಿ.ಸೀ ಅವರ ಮೂವತ್ತೆರಡು ಸಂಶೋಧನ ಲೇಖನಗಳನ್ನು ಒಳಗೊಂಡಿದೆ. ಕಾವ್ಯಮೀಮಾಂಸೆ, ಛಂದಸ್ಸು, ವ್ಯಾಕರಣ, ಕವಿ – ಕಾಲವಿಚಾರ ಮತ್ತು ಕೆಲವು ಸಂಕೀರ್ಣ ವಿಷಯಗಳಿಗೆ ಸಂಬಂಧಪಟ್ಟ ಲೇಖನಗಳು ಇದರಲ್ಲಿವೆ. ಕವಿ ಹೃದಯದ ಎಂ. ವಿ.ಸೀ ಅವರ ಪ್ರಧಾನ ಆಸಕ್ತಿ ಸಂಶೋಧನೆಯೆಂಬುದು ಇಲ್ಲಿನ ಲೇಖನಗಳಿಂದ ತಿಳಿಯುತ್ತದೆ. ವ್ಯಾಕರಣ, ಮತ್ತು ಛಂದಸ್ಸುಗಳಲ್ಲಿ ಅಳವಾದ ಪಾಂಡಿತ್ಯವುಳ್ಳ ಇವರಿಂದ ಅನೇಕ ಹೊಸ ವಿಚಾರಗಳು ಬೆಳಕಿಗೆ ಬಂದಿವೆ. ಉದಯಾದಿತ್ಯಾಲಂಕಾರ, ಅನುಭೂತ್ಯಾಭಾಸ ಅಲಂಕಾರ, ಶಾಂತರಸ, ಏಳೆಯಸ್ವರೂಪ, ಓವನಿಗೆ, ಕನ್ನಡ ಅಷ್ಟಕಗಳು, ನಾಗವರ್ಮ (೨) ಕಾಲವಿಚಾರ ಮುಂತಾದ ವಿಷಯಗಳ ಬಗೆಗೆ ಹೊಸಬೆಳಕನ್ನು ಚೆಲ್ಲಲಾಗಿದೆ.

೧೯೯೪ರಲ್ಲಿ ಪ್ರಕಟವಾಗಿರುವ ‘ಕೇಳದಿ ಸಂಸ್ಥಾನ – ಸಮಗ್ರ ಅಧ್ಯಯನ’ ವೆಂಬ ವಿಚಾರ ಸಂಕಿರಣ ಮಂಡಿತ ಲೇಖನ ಸಂಗ್ರಹವು ಸಂಶೋಧಕರಿಗೆ ವರದಾನವಾಗಿದೆ. ಒಂದು ಸಂಸ್ಥಾನದ ಆಧ್ಯಯನದ ಮಾದರಿ ಇಲ್ಲಿದ್ದು, ವಿಷಯ ಸಂಗ್ರಹ ಮತ್ತು ಸಮಸ್ಯೆಯ ಹುಡುಕಾಟ ಇಲ್ಲಿ ಪ್ರಮುಖವಾಗಿ ಕಂಡು ಬರುತ್ತದೆ. ಒಟ್ಟು ನಲವತ್ತೊಂಬತ್ತು ಲೇಖನಗಳು ಇದರಲ್ಲಿದ್ದು ಎಲ್ಲವು ಆಕರನಿಷ್ಠ ಪ್ರಬಂಧಗಳಾಗಿವೆ. ಇತಿಹಾಸ, ರಾಜಕೀಯ, ಧಾರ್ಮಿಕ, ಸಮಾಜ, ವಾಣಿಜ್ಯ, ಆರ್ಥಿಕ, ಶಿಕ್ಷಣ, ಸಾಹಿತ್ಯ, ಶಿಲ್ಪ – ಕಲೆಗಳು ಎಂಬ ಒಂಬತ್ತು ಮುಖ್ಯ ವಿಭಾಗಗಳಲ್ಲಿ ವಿವಿಧ ಸಂಶೋಧಕರು ಪ್ರಬಂಧ ಮಂಡಿಸಿರುವರು. ಆದರೂ ಕೆಲವು ಲೇಖನಗಳು ಶ್ರಮವಿಲ್ಲದೆ, ಕೇವಲ ಭಾಷಣದಂತಿವೆ. ಉದಾಹರಣೆಗೆ ಹಿರಿಯ ವಿದ್ವಾಂಸರಾದ ಡಾ. ಹೆಚ್.ಆರ್. ರಘುನಾಥ ಭಟ್ಟರ ‘ಕೆಳದಿ ರಾಜ್ಯದ ಕೋಟೆ ಕೊತ್ತಲಗಳು – ಒಂದು ಸಮೀಕ್ಷೆ’ ಎಂಬ ಲೇಖನದಲ್ಲಿ ಪ್ರಾಥಮಿಕವಾಗಿ ನೀಡಬೇಕಾಗಿದ್ದ ಕೋಟೆಗಳ ಸ್ಥಳದ ಸೂಚನೆಗಳೇ ಇಲ್ಲ. ಶ್ರೀ ದತ್ತಾತ್ರೇಯರವರ ಲೇಖನದಲ್ಲೂ ಯಾವುದೇ ಉಪಯುಕ್ತ ಮಾಹಿತಿ ದೊರಕುತ್ತಿಲ್ಲ. ಈ ಕೆಲವೊಂದು ಕೊರತೆಗಳು ನಡುವೆಯೂ ಪ್ರಾದೇಶಿಕ ಇತಿಹಾಸ, ಸಂಸ್ಕೃತಿಯ ಅಧ್ಯಯನಕ್ಕೆ ಒಂದು ಮಾದರಿ ಕೃತಿಯಾಗಿ ರೂಪುಗೊಂಡಿದೆ. ಇದರ ಸಂಪಾದಕರಾದ ಡಾ. ಎಂ. ಎಂ. ಕಲಬುರ್ಗಿ ಮತ್ತು ರಾಮಭಟ್ಟರ ಶ್ರಮ ಈ ಮೂಲಕ ಸಾರ್ಥಕವಾಗಿದೆ. ಇದೇ ವರ್ಷ ಪ್ರಕಟವಾಗಿರುವ ಬಹಳಷ್ಟು ಜನರ ಗಮನಕ್ಕೆ ಬರದ ಒಂದು ವೈಶಿಷ್ಟ್ಯ ಪೂರ್ಣ ಕೃತಿಯೆಂದರೆ ಶ್ರೀ. ಎಸ್. ಶಿವಣ್ಣನವರು ಸಂಯೋಜಿಸಿರುವ ‘ವೀರಶೈವ ಹಸ್ತಪ್ರತಿ ಪುಷ್ಟಿಕೆಗಳು’ ಎಂಬ ಪುಸ್ತಕ. ಇದು ಒಂದು ಧರ್ಮದ ಪರ ಅಧ್ಯಯನ ಆಕರಗಳನ್ನು ಒಳಗೊಂಡಿದ್ದರೂ ಅದರಲ್ಲಿರುವ ವಿಷಯ ಬಾಹುಳ್ಯದ ದೃಷ್ಟಿಯಿಂದ ಎಲ್ಲ ಸಾಹಿತ್ಯಾಸಕ್ತರೂ ಗಮನಿಸಬೇಕಾದ ಕೃತಿಯಾಗಿದೆ. ಹಸ್ತಪ್ರತಿಶಾಸ್ತ್ರದ ಅದ್ವಿತೀಯ ವಿದ್ವಾಂಸರಾದ ಶ್ರೀ. ಶಿವಣ್ಣನವರು ಎರಡು ಸಾವಿರದ ಮನ್ನೂರಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಅಧ್ಯಯನಮಾಡಿ ರೂಪಿಸಿರುವ ಕೃತಿಯಿದು. ಕನ್ನಡದಲ್ಲಿ ಈ ರೀತಿಯ ಪ್ರಯತ್ನ ಭಾರತೀಯ ಭಾಷೆಯಲ್ಲಿಯೇ ಮೊದಲನೆಯದಾಗಿದೆ. ಇದೂವರೆಗೂ ಮರೆಯಾಗಿದ್ದ, ಹಲವಾರು ಸಂಗತಿಗಳು ಬೆಳಕಿಗೆ ಬರುವುದರ ಮೂಲಕ ‘ಹಸ್ತಪ್ರತಿ’ ಸಂಸ್ಕೃತಿಯ ಹೊಸಲೋಕವನ್ನು ತೋರಿಸಿಕೊಟ್ಟಂತಾಗಿದೆ. ಲಿಪಿಕಾರರ ಸಂಸ್ಕೃತಿಯನ್ನು ಪುನಾರಚಿಸುವಲ್ಲಿ, ಅವರ ಕೊಡುಗೆಗಳನ್ನು ಸಾಹಿತ್ಯ ಪ್ರಸರಣಕಾರ್ಯದಲ್ಲಿ ಗುರುತಿಸುವಲ್ಲಿ ಈ ಪುಸ್ತಕ ಹೊಸಮಾರ್ಗವನ್ನು ಸೂಚಿಸಿದೆ. ಸಾಹಿತ್ಯವು ತಲೆಮಾರಿನಿಂದ ತಲೆಮಾರಿಗೆ ಸಾಗಿಬರಲು ಶ್ರಮಿಸಿದ ಇವರು ಯಾವ ಸಾಹಿತ್ಯ ಚರಿತ್ರೆಯಲ್ಲಿಯೂ ಸ್ಥಾನಪಡೆದಿಲ್ಲ. ಇನ್ನು ಮುಂದಾದರು ಸಾಹಿತ್ಯ ಚರಿತ್ರೆಯಲ್ಲಿ ಇಲ್ಲಿಯ ಅನೇಕ ಅಂಶಗಳನ್ನು ಅಗತ್ಯವಾಗಿ ಸೇರಿಸಬೇಕಾಗಿದೆ. ಶ್ರೀ. ಶಿವಣ್ಣನವರು ಈ ಕೃತಿಯ ಮೂಲಕ ಹಸ್ತಪ್ರತಿ ಪುಷ್ಟಿಕೆಗಳು ಹೇಗೆ ಇತಿಹಾಸ, ಸಂಸ್ಕೃತಿ ಮತ್ತು ಪ್ರಾದೇಶಿಕ ಅಂಶಗಳ ಅಧ್ಯಯನದಲ್ಲಿ ನೆರವಾಗಬಲ್ಲವು ಎಂಬುದನ್ನು ತೋರಿಸಿರುವರು. ಇದೇ ಅವಧಿಯಲ್ಲಿ ಪ್ರಕಟವಾದ ಮತ್ತೊಂದು ಸಂಶೋಧನಾತ್ಮಕವಾದ ಕೃತಿ ಶ್ರೀ ಪಿ. ವಿ. ಕೃಷ್ಣಮುರ್ತಿಯವರ, ‘ಸುಗುಟೂರಿನ ವೀರಶೈವ ಅರಸು ಮನೆತನ’ ಎಂಬುದಾಗಿದೆ. ಸ್ವತಃ ಶಾಸನತಜ್ಞರಾಗಿರುವ ಶ್ರೀಯುತರು ಪ್ರಾದೇಶಿಕ ಸಂಸ್ಕೃತಿಯ ಅಧ್ಯಯನದಲ್ಲಿ ಮುಂಚೂಣಿಯಲ್ಲಿರುವವರು. ಈಗಿನ ಬೆಂಗಳೂರು, ಕೋಲಾರ ಜಿಲ್ಲೆಯ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳನ್ನೊಳಗೊಂಡಿದ್ದ ಸುಗುಟೂರು ಅರಸರ ಬಗ್ಗೆ ಹೇಳುವ ಈ ಕೃತಿಯ ಆಕರ ಸಂಗ್ರಹ ಮತ್ತು ವಸ್ತುನಿಷ್ಟ ಅಧ್ಯಯನಕ್ಕೆ ಉತ್ತಮ ಉದಾಹರಣೆಯಾಗಿದೆ. ಇಲ್ಲಿನ ವಿಷಯ ಮಂಡನೆಗೆ ಮುಖ್ಯ ಆಕರವಾಗಿ ಶಾಸನಗಳು, ಐತಿಹ್ಯಗಳು, ಸಾಹಿತ್ಯ, ಜನಪದ ಸಾಹಿತ್ಯ ಮತ್ತು ಸ್ಮಾರಕಗಳನ್ನು ಬಳಸಿಕೊಂಡಿದ್ದಾರೆ. ಈ ಅರಸರ ಪ್ರಾದೇಶಿಕ ವ್ಯಾಪ್ತಿ, ಚಾರಿತ್ರಿಕ ಹಿನ್ನೆಲೆ, ವಂಶದ ಉಗಮ, ಅರಸರ ಚರಿತ್ರೆ, ಆಡಳಿತ ಕ್ರಮ ಮತ್ತು ಸಾಂಸ್ಕೃತಿಕ ಕೊಡುಗೆಗಳು ಎಂಬ ಅಧ್ಯಾಯಗಳಲ್ಲಿ ಚರ್ಚಿಸಿರುವರು. ಇಲ್ಲಿನ ಬರವಣೆಗೆಯಲ್ಲಿ ವಸ್ತುನಿಷ್ಟವಾದ ವಿಮರ್ಶಕ ಗುಣವಿದೆ. ಅನುಬಂಧದಲ್ಲಿ ನೀಡಿರುವ ಶಾಸನಗಳ ಸಾರಾಂಶವು ಮುಂದಿನ ಸಂಶೋಧಕರಿಗೆ ನೆರವನ್ನೀಯುತ್ತದೆ.

೧೯೯೫ರಲ್ಲಿ ಪ್ರಕಟವಾದ ಮಹತ್ವದ ಕೃತಿಗಳಲ್ಲಿ ‘ಗೋವಿಂದ ಪೈ ಸಂಶೋಧನ ಸಂಪುಟ’ ಪ್ರಮುಖವಾದುದಾಗಿದೆ. ಶ್ರೀ ಗೋವಿಂದ ಪೈಗಳ ಸಮಗ್ರ ಲೇಖನಗಳನ್ನು ಸಂಪುಟರೂಪದಲ್ಲಿ ಪ್ರಕಟಸುವ ಮೂಲಕ ಹಿರಿಯ ತಲೆಮಾರಿನ ವಿದ್ವಾಂಸರೊಬ್ಬರ ಸಂಶೋಧನೆಯ ಪುನರ್ ವಿಮರ್ಶೆಗೆ ಸಹಾಯ ಮಾಡಿದಂತಾಗಿದೆ. ಹತ್ತು ಖಂಡಗಳಲ್ಲಿ ಇನ್ನೂರಕ್ಕೂ ಮಿಕ್ಕ ಲೇಖನಗಳನ್ನು ಇಲ್ಲಿ ಪ್ರಕಟಿಸಲಾಗಿದೆ. ಕವಿಗಳ ಕಾಲ – ದೇಶ ವಿಚಾರಗಳ ಚರ್ಚೆಯಲ್ಲಿ ಗೋವಿಂದ ಪೈಗಳ ಹೆಸರು ದೊಡ್ಡ ಹೆಸರು. ಇವರು ತಮ್ಮ ಸಂಶೋಧನೆಯ ಫಲಿತಗಳ ಮೂಲಕ ಕನ್ನಡ ಸಾಹಿತ್ಯ ಪುರಾತನವಾದುದೆಂದು ವಾದಿಸಲು ಪ್ರಯತ್ನಪಟ್ಟವರಲ್ಲಿ ಮೊದಲಿಗರು. ಕರ್ನಾಟಕ ಸಂಸ್ಕೃತಿಯ ಪ್ರಾಚೀನತೆಯ ಬಗ್ಗೆ ಗೋವಿಂದ ಪೈಗಳಿಗೆ ತಮ್ಮದೇ ಆದ ನಿಲುವಿತ್ತು. ಕರ್ನಾಟಕತ್ವದ ಬಗ್ಗೆ ಒಲವುಳ್ಳ ಕೆಲವೇ ಸಂಶೋಧಕರಲ್ಲಿ ಗೋವಿಂದ ಪೈ ಪ್ರಮುಖರಾಗಿರುವರು. ತಮ್ಮ ಎಲ್ಲ ಲೇಖನಗಳಲ್ಲೂ ಈ ಅಂಶವನ್ನು ಪ್ರತಿಪಾದಿಸಿರುವರು. ಪಂಪ, ರನ್ನ, ನಾಗವರ್ಮ, ದುರ್ಗಸಿಂಹ, ನಾಗಚಂದ್ರ, ದೇವರ ದಾಸಿಮಯ್ಯ, ಬಸವಣ್ಣ, ಬ್ರಹ್ಮಶಿವ, ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ, ರತ್ನಾಕರವರ್ಣಿ, ಪುರಂದರದಾಸ ಮೊದಲಾದವರ ಬಗ್ಗೆ ಆರಂಭದ ಸಂಶೋಧನೆಯನ್ನು ಕೈಗೊಂಡು ಹಲವು ತೀರ್ಮಾನಗಳನ್ನು ಹೊರಗೆಡವಿದ ಮೊದಲ ವಿದ್ವಾಂಸರಾಗಿ ಗೋವಿಂದ ಪೈ ನಮ್ಮ ಮನಗೆಲ್ಲುವರು. ಇಂದು ಇವರ ಅನೇಕ ತೀರ್ಮಾನಗಳು ಬದಲಾಗಿದ್ದರೂ ಕೂಡ, ಇಂದಿನ ತೀರ್ಮಾನಗಳಿಗೆ ಗೋವಿಂದ ಪೈಗಳ ಸಂಶೋಧನೆ ಪ್ರೇರಣೆಯನ್ನೊದಗಿಸಿದೆ. ತುಳುನಾಡಿನ ಸಂಸ್ಕೃತಿ ಮತ್ತು ಕರ್ನಾಟಕ ಇತಿಹಾಸದ ಬಗೆಗೆ ಅನೇಕ ರೀತಿಯ ಚರ್ಚೆಗಳಿಗೆ ಇವರು ದಾರಿ ಮಾಡಿಕೊಟ್ಟರು. ಇಂತಹ ದೇಸಿ ಸಂಶೋಧಕರ ಎಲ್ಲ ಲೇಖನಗಳನ್ನು ಒಂದೆಡೆ ಸೇರಿಸಿ ನೀಡುವುದರ ಮೂಲಕ ಅವರ ಚಿಂತನೆಗೆ ಮರುಹುಟ್ಟು ನೀಡಿದಂತಾಗಿದೆ. ಇದೇ ವರ್ಷ ಪ್ರಕಟವಾದ ಶ್ರೀ ಹುಲ್ಲೂರು ಶ್ರೀನಿವಾಸ ಜೋಯಿಸರ ಸಂಶೋಧನ ಲೇಖನಗಳ ಸಂಪುಟ ಸಂಶೋಧನಾಸಕ್ತರಿಗೆ ಬಹಳ ಒಳ್ಳೆಯ ಕೃತಿಯಾಗಿದೆ,. ಇವರ ಇಂಗ್ಲಿಷ್ ಲೇಖನಗಳನ್ನು ಸೇರಿಸಿ ಒಟ್ಟು ನಲತ್ತೊಂಬತ್ತು ಲೇಖನಗಳನ್ನು ಸಂಗ್ರಹಿಸಿ ಕೊಡಲಾಗಿದೆ. ಕನ್ನಡ ಲೇಖನಗಳನ್ನು ಸಾಹಿತ್ಯ ಮತ್ತು ಇತಿಹಾಸವೆಂಬ ಎರಡು ಭಾಗಗಳಲ್ಲಿ ನೀಡಿರುವರು. ಚಿತ್ರದುರ್ಗದ ಚರಿತ್ರೆಯ ಬಗೆಗೆ ಇವರ ಲೇಖನಗಳು ಬಹಳ ಹೆಸರುಮಾಡಿವೆ. ಚರಿತ್ರೆಯ ಪುನಾರಚನೆಯಲ್ಲಿ ಐತಿಹ್ಯಗಳು ಮತ್ತು ಸಾಹಿತ್ಯ ಪ್ರಕಾರಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬ ಜ್ಞಾನ ಜೋಯಿಸರಲ್ಲಿತ್ತು. ಇದರಿಂದಾಗಿ ಇವರ ಲೇಖನಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಪಡುವ ಶ್ರಮ ಪ್ರಾಮಾಣಿಕ ಶ್ರಮವಾಗಿದೆ. ಇದೇ ವರ್ಷ ಡಾ. ಜೆ. ಎಂ. ನಾಗಯ್ಯನವರು ‘ಕಲಕೇರಿ’ ಎಂಬ ಪುಟ್ಟ ಕೃತಿಯೊಂದನ್ನು ಪ್ರಕಟಿಸಿರುವರು. ಕಲಕೇರಿ ಎಂಬುದು ಹಾನುಗಲ್ಲು ತಾಲ್ಲೂಕಿನ ಒಂದು ಪುಟ್ಟಗ್ರಾಮ. ಹಿಂದೆ ಇದು ಬಹಳ ವೈಭವದಿಂದ ಮೆರೆದ ಒಂದ ಸಾಂಸ್ಕೃತಿಕ ಕೇಂದ್ರವಾಗಿತ್ತು. ಅಲ್ಲಿನ ಗತಕಾಲದ ಸಂಸ್ಕೃತಿಯನ್ನು ಮತ್ತೆ ಕಟ್ಟಿಕೊಡುವಲ್ಲಿ ಉತ್ತಮ ಪ್ರಯತ್ನವಾಗಿ ಈ ಕೃತಿ ಮೂಡಿಬಂದಿದೆ. ಶಾಸನಗಳು, ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು, ದೇವಾಲಯಗಳು ಮುಂತಾದವನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲಾಗಿದೆ. ಒಂದು ಗ್ರಾಮದ ಚರಿತ್ರೆಯನ್ನು ಸ್ಮಾರಕಗಳ ಹಿನ್ನೆಲೆಯಲ್ಲಿ ಹೇಗೆ ರಚಿಸಬಹುದೆಂಬುದಕ್ಕೆ ಈ ಪುಸ್ತಕ ಸಾಕ್ಷಿಯಾಗಿದೆ. ಆದರೂ ಶಾಸನ ಅಧ್ಯಯನದಲ್ಲಿ ಕಲಕೇರಿಯಲ್ಲಿ ದೊರೆತಿರುವ ಕೋಟೆಗಾಳಗದ ಶಾಸನಶಿಲ್ಪವನ್ನು ಗಮನಿಸಿಯೇ ಇಲ್ಲ. ಕರ್ನಾಟಕದ ಅಪರೂಪದ ಕೋಟೆಗಾಳಗದ ಚಿತ್ರಣವು ಈ ಗ್ರಾಮದ ಒಂದು ವೀರಗಲ್ಲಿನಲ್ಲಿದೆ.

೧೯೯೬ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಪ್ರೊ. ಜಿ. ಎಸ್‌. ಸಿದ್ಧಲಿಂಗಯ್ಯನವರ ‘ಶೂನ್ಯ ಸಂಪಾದನೆಗಳು ಒಂದು ಅವಲೋಕನ’ ಎಂಬ ಕೃತಿಯು ಶೂನ್ಯ ಸಂಪಾದನೆಗಳನ್ನು ಸಂಶೋಧನ ದೃಷ್ಟಿಯಿಂದ ಅಧ್ಯಯನ ಮಾಡಿದ ಮಹತ್ವದ ಕೃತಿಯಾಗಿದೆ. ಶೂನ್ಯ ಸಂಪಾದನೆಯ ಕೆಲವು ಸಮಸ್ಯೆಗಳನ್ನು ವಚನ ಸಾಹಿತ್ಯದ ಹಿನ್ನಲೆಯಲ್ಲಿಯೇ ಪರಿಹರಿಸಲು ಗಂಭೀರವಾಗಿ ಪ್ರಯತ್ನಿಸಲಾಗಿದೆ. ಮುಕ್ತಾಯಕ್ಕಗಳ ಸಂಪಾದನೆ ಮತ್ತು ಮಹಾದೇವಿಯಕ್ಕಗಳ ಸಂಪಾದನೆಗಳ ಬಗೆಗೆ ಮೊದಲ ಬಾರಿಗೆ ವ್ಯಾಪಕ ಅಧ್ಯಯನ ನಡೆಸಿದ ಕೀರ್ತಿ ಈ ಕೃತಿಗೆ ಸಲ್ಲುತ್ತದೆ. ಶೂನ್ಯ ಸಂಪಾದನೆಯ ಮೂಲ, ಅವುಗಳ ಸಂಖ್ಯಾ ನಿರ್ಣಯ, ಪರಿಷ್ಕರಣಕ್ಕೆ ಕಾರಣಗಳು ಮೊದಲಾದ ಅಂಶಗಳನ್ನು ಕುರಿತು ಚರ್ಚಿಸುವಾಗ ಬಹಳ ತಾಳ್ಮೆಯಿಂದ ವರ್ತಿಸುವ ಗುಣ ಇತರರಿಗೆ ಮಾದರಿಯಾಗಿದೆ.

ಜೈನಶಾಸ್ತ್ರ ಅಧ್ಯಯನ ವಿಚಾರದಲ್ಲಿ ಡಾ. ಹಂ.ಪ.ನಾ. ಅವರದ್ದು ದೊಡ್ಡ ಹೆಸರು. ಇತ್ತೀಚೆಗಂತೂ ಡಾ. ಹಂ.ಪ.ನಾ. ಅವರು ಜೈನಶಾಸ್ತ್ರದ ವಿವಿಧ ಮುಖಗಳನ್ನು ಅನ್ಯಶಿಸ್ತುಗಳ ನೆರವಿನಿಂದ ಗಂಭೀರ ಅಧ್ಯಯನ ಕೈಗೊಂಡರುವರು. ಕನ್ನಡದಲ್ಲಿ ಜೈನಶಾಸ್ತ್ರದ ಬಗ್ಗೆ ಬರೆಯುತ್ತಿರುವ ಮಧ್ಯೆ ಹಂಪನಾ ಅವರ ಸಂಶೋಧನೆಯ ಫಲಿತಗಳು ಅಧಿಕೃತವಾಗಿವೆ. ಇವರ ಸಂಶೋಧನ ಲೇಖನಗಳಲ್ಲಿ ಮುಖ್ಯವಾದವುಗಳನ್ನು ಆಯ್ದು ಕನ್ನಡ ವಿಶ್ವವಿದ್ಯಾಲಯವು ‘ಚಂದ್ರಕೊಡೆ’ ಎಂಬ ಹೆಸರಿನಲ್ಲಿ ೧೯೯೭ರಲ್ಲಿ ಪ್ರಕಟಿಸಿತು. ಈ ಕೃತಿಯಲ್ಲಿ ಅರತ್ತೈದು ಲೇಖನಗಳಿದ್ದು ಇವುಗಳಲ್ಲಿ ಎಲ್ಲ ಲೇಖನಗಳೂ ಕಳೆದು ಹೋಗಿರುವ ಜೈನ ಸಂಸ್ಕೃತಿಯ ಅಧ್ಯಯನ ಕೊಂಡಿಗಳನ್ನು ಬೆಸೆಯುವ ಪ್ರಯತ್ನವಾಗಿವೆ. ಅವರೇ ಹೇಳಿಕೊಳ್ಳುವಂತೆ ಈ ಗ್ರಂಥದಲ್ಲಿ ಶೇಕಡಾ ೭೫ಕ್ಕಿಂತಲೂ ಹೆಚ್ಚು ಲೇಖನಗಳು ಮೊದಲಿಗೆ ಪ್ರಕಟವಾಗುತ್ತಿರುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ಜೈನ ಸಂಸ್ಕೃತಿ ಅಧ್ಯಯನದಲ್ಲಿ ಶಾಸನಗಳ ಪಾತ್ರ ಬಹಳ ಮಹತ್ವದ್ದು. ಅವುಗಳಲ್ಲಿ ದೊರೆಯುತ್ತಿರುವ ಮಾಹಿತಿಗಳನ್ನು ಸಮರ್ಥವಾಗಿ ಹೊರಗೆಡಹುತ್ತಿರುವ ಕೀರ್ತಿ ಡಾ. ಹಂ. ಪ. ನಾ.ಗೆ ಸಲ್ಲುತ್ತದೆ. ಯಾಪನೀಯ ದಾಖಲೆ, ಅಳತೆಗೋಲು, ಕಡಿತಲೆ ಗೋತ್ರ, ಕತ್ತಲೆಯ ಕುಲ, ಚಂದ್ರಕೊಡೆ, ಮಹೋಗ್ರವಂಶ, ಬಿಟ್ಟಿಕುಲ, ನವಲೂರು ಸಂಘ, ಕಾಣೂರ್ಗಣ, ವಾಜಿವಂಶ, ಕವಡೆಯ ಬೊಪ್ಪ ಮೊದಲಾದ ವಿಷಯಗಳನ್ನು ಹೊಸ ಆಕರಗಳೊಂದಿಗೆ ಚರ್ಚಿಸಿದ್ದಾರೆ. ಇಲ್ಲಿನ ಎಲ್ಲ ಲೇಖನಗಳೂ ಪುಟ್ಟದಾಗಿದ್ದು ಸಂಶೋಧನ ಟಿಪ್ಪಣಿಗಳಂತಿವೆ.

ಡಾ. ಹೀರೇಮಲ್ಲೂರು ಈಶ್ವರನ್ ಅವರು ತಮ್ಮ ಬರಹಗಳನ್ನು ಸಂಶೋಧನ ಬರಹಗಳೆಂದು ಕರೆದುಕೊಂಡಿಲ್ಲವಾದರೂ ೧೯೯೭ರಲ್ಲಿ ಪ್ರಕಟವಾದ ಅವರ ಮೂರು ಪುಸ್ತಕಗಳು (ಇದರಲ್ಲಿ ಒಂದು ಹಿಂದೆಯೇ ಪ್ರಕಟವಾಗಿತ್ತು) ಸಾಮಾಜಿಕ ಸಂಶೋಧನೆಯಲ್ಲಿ ಮಹತ್ವದ ಮೈಲಿಗಲ್ಲಾಗಿವೆ. ಲಿಂಗಾತಿತ ಧರ್ಮ ಮತ್ತು ಸಂಸ್ಕೃತಿಯನ್ನು ಕೇಂದ್ರ ಬಿಂದುವನ್ನಾಗಿಸಿಕೊಂಡು ಅಧ್ಯಯನ ಮಾಡಿರುವ ‘ಲಿಂಗಾಯತ ಧರ್ಮ – ಒಂದು ಅಧ್ಯಯನ’, ‘ಬಸವಣ್ಣ ಹಾಗೂ ಲಿಂಗಾಯತ ಧರ್ಮ’, ಮತ್ತು ‘ಲಿಂಗಾಯತ, ಜೈನ ಮತ್ತು ಬ್ರಾಹ್ಮಣ ಧರ್ಮಗಳು; ಮಠಗಳ ಒಂದು ತೌಲನಿಕ ಅಧ್ಯಯನ’ ವೆಂಬ ಮೂರು ಪುಸ್ತಕಗಳು ಹೊಸಬಗೆಯ ಸಂಶೋಧನ ವಿಧಾನದಿಂದ ಕೂಡಿವೆ. ಸಮಾಜಶಾಸ್ತ್ರದ ತತ್ವಗಳ ಹಿನ್ನೆಲೆಯಲ್ಲಿ ಒಂದು ಧರ್ಮವನ್ನು ನೋಡುವ ವಿನೂತನ ದೃಷ್ಟಿ ಕನ್ನಡದ ಮಟ್ಟಿಗೆ ಹೊಸ ಬಗೆಯದ್ದಾಗಿದೆ.

ಒಂದನೇ ಪುಟದಲ್ಲಿ ಲಿಂಗಾಯತ ಧರ್ಮದ ಉಗಮ, ಸಂಸ್ಥೆಗಳು, ಧರ್ಮ, ಶೀಲ, ನಡತೆ ಮತ್ತು ಲಿಂಗಾಯತ ಧರ್ಮದ ನವೀಕರಣದ ಬಗ್ಗೆ ವಿಮರ್ಶಾತ್ಮಕವಾಗಿ ಅಧ್ಯಯನ ಮಾಡಿದ್ದು, ಅಧ್ಯಯನಕ್ಕೆ ಪೂರಕವಾಗಿ ವಚನ ಸಾಹಿತ್ಯವನ್ನು ಬಳಸಿಕೊಂಡಿರುವರು. ಕೆಲವು ಭಾಗಳಲ್ಲಿ ವಾಸ್ತವನ್ನು ನೇರವಾಗಿಯೇ ಮುಂದಿಡುವರು. ಬಸವಣ್ಣ ಹಾಗೂ ಲಿಂಗಾಯತ ಧರ್ಮ ಎಂಬ ಎರಡನೆಯ ಸಂಪುಟದಲ್ಲಿ ಬಸವಣ್ಣನವರು ಲಿಂಗಾಯಿತ ಧರ್ಮಕ್ಕೆ ನೀಡಿದ ತೇಜಸ್ಸನ್ನು ಹಂತ – ಹಂತವಾಗಿ ಗಮನಿಸಿದ್ದಾರೆ. ಬಸವಣ್ಣವನರ ಬಗ್ಗೆ ದೊರೆಯುವ ಆಕರಗಳನ್ನು ಚರ್ಚಿಸುವಾಗ ಜನಪದ ಹಾಡುಗಳಲ್ಲಿ ಬಸವಣ್ಣನ ಚಿತ್ರಣದ ಸತ್ಯಾಸತ್ಯತೆಯನ್ನು ಒರೆಗಲ್ಲಿಗೆ ಹಚ್ಚುವ ರೀತಿ ಅನುಕರಣೀಯವಾಗಿದೆ. ಲಿಂಗಾಯತ ಧರ್ಮವು ಹಿಂದೂ ಧರ್ಮವೇ ಅಥವಾ ಸ್ವತಂತ್ರ ಧರ್ಮವೇ ಎಂಬ ಬಿಸಿ ಚರ್ಚೆಯ ಈ ಕಾಲದಲ್ಲಿ ಶ್ರೀ ಈಶ್ವರನ್ ಅವರು ಲಿಂಗಾಯತ ಧರ್ಮವು ಹಿಂದೂ ಧರ್ಮಕ್ಕೆ ತದ್ವಿರುದ್ಧವಾದುದು ಎಂದು ಅನೇಕ ಪ್ರಮಾಣಗಳ ಮೂಲಕ ಸ್ಪಷ್ಟಪಡಿಸಿರುವರು. ಅವರ ವಾದದ ಸಮರ್ಥನೆಗೆ ವಚನ ಸಾಹಿತ್ಯ ಮತ್ತು ಸಾಮಾಜಿಕ ಅಂಶಗಳನ್ನು ಬಳಸಿಕೊಂಡಿರುವರು. ಬಸವತತ್ವವೆಂಬುದು ಅಂತರರಾಷ್ಟ್ರೀಯ ಮನ್ನಣೆಗೆ ಆರ್ಹವಾದುದುದೆಂದು ಅನೇಕ ದಾರ್ಶನಿಕರ ತತ್ವಗಳೊಂದಿಗೆ ತೌಲನಿಕವಾಗಿ ತೋರಿಸಿಕೊಟ್ಟಿರುವರು. ಮೂರನೇ ಸಂಪುಟದಲ್ಲಿ ಲಿಂಗಾಯತ, ಬ್ರಾಹ್ಮಣ ಮತ್ತು ಜೈನಮಠಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿರುವರು. ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಮಠಗಳನ್ನು ಅಧ್ಯಯನ ಮಾಡಿದ ಮೊದಲ ಬಾರತೀಯ ವಿದ್ವಾಂಸರೆಂದು ಈ ಕಾರಣದಿಂದ ಹೆಸರಾದರು. ಲಿಂಗಾಯತ ಮಠಗಳ ಉದಾರೀಕರಣ, ಆಧುನಿಕ ಶಾಸ್ತ್ರಗಳಿಗೆ ಸಂಸ್ಕೃತಿಗಳಿಗೆ ಆಸ್ಪದ ನೀಡುವ ಗುಣ, ಇನ್ನಿತರ ಮಠಗಳಲ್ಲಿರುವ ಗೊಡ್ಡು ಸಂಪ್ರದ್ರಾಯಗಳ ಅನುಕರಣೆ, ಅವುಗಳ ಮಿತಿ ಮೊದಲಾದುವನ್ನು ಸಕಾರಣವಾಗಿ ಚರ್ಚಿಸಿರುವರು. ಒಂದು ಮಠ ಸಮಾಜದ ಒಳಿತಿಗೆ ದುಡಿಯಬೇಕು ಎಂಬುದು ಇವರ ನಿಲುವು. ವೀರಶೈವ ಮಠಗಳು ಸಮಾಜದೊಂದಿಗೆ ಬೆರೆತ ಪ್ರೇರಣೆ, ಕಾರಣ ಮತ್ತು ಪರಿಣಾಮಗಳನ್ನು ಆಧುನಿಕವಾಗಿ ವಿಶ್ಲೇಷಿಸಿರುವರು ಆಹಾರ ಮತ್ತು ಶಿಕ್ಷಣಕ್ಕೆ ಒತ್ತುಕೊಟ್ಟ ವೀರಶೈವ ಮಠಗಳ ಇತ್ತೀಚಿನ ಬೆಳವಣಿಗೆಯನ್ನು ಯಾವ ಮುಲಾಜಿಲ್ಲದೆ ತಿಳಿಸಿರುವರು. ಸಂಸ್ಕೃತಿಯ ಪುನಾರಚನೆಯಲ್ಲಿ ಸಮಾಜಶಾಸ್ತ್ರವನ್ನು ಹೇಗೆ ಬಳಸಬಹುದೆಂದು ಈ ಮೂರು ಸಂಪುಟಗಳು ತೋರಿಸಿಕೊಟ್ಟಿವೆ.

ವಚನ ಸಾಹಿತ್ಯ ಸಂಶೋಧನೆಯಲ್ಲಿ ಮೂಂಚೂಣಿಯಲ್ಲಿರುವ ಹೆಸರು ಡಾ. ಎಸ್. ವಿದ್ಯಾಶಂಕರ ಅವರದ್ದು. ದ್ವಿತೀಯ ಘಟ್ಟದ ವಚನ ಸಾಹಿತ್ಯದ ಬಗ್ಗೆ ಅಧಿಕೃತವಾಗಿ ಮಾತಾಡಬಲ್ಲ ಇವರು ಇದಕ್ಕೆ ಸಂಬಂಧಪಟ್ಟ ನಲವತ್ತೆರಡು ಲೇಖನಗಳನ್ನು ‘ನೆಲದ ಮರೆಯ ವಿಧಾನ’ ವೆಂಬ ಕೃತಿಯಲ್ಲಿ ಸಂಕಲಿಸಿ ನೀಡಿರುವರು. ಆರಂಭದ ಹಂತದ ವಚನಾಕಾರರಷ್ಟೇ ಮಹತ್ವವುಳ್ಳ ದ್ವೀತಿಯ ಘಟ್ಟದ ವಚನಾಕಾರರಲ್ಲಿ ಬಹಳಷ್ಟು ಜನರು ವಚನ ಸಂಗ್ರಾಹಕರಾಗಿಯೂ ಹೆಸರು ಮಾಡಿರುವರು. ಸಂಗ್ರಾಹಕರಾಗಿ ತೋರುವ ಜಾಣ್ಮೆ, ವಚನ ರಚನಾಕಾರರಾಗಿ ತೋರುವ ಪ್ರತಿಭೆ ಇವೆರಡರ ನಡುವಿನ ಲಾಭ – ನಷ್ಟಗಳ ಬಗ್ಗೆ ಸರಿಯಾದ ಅಧ್ಯಯನ ಇನ್ನೂ ನಡೆದಿಲ್ಲ. ಬಸವಾದಿಗಳ ವಚನಗಳ ನೆರಳಿನಲ್ಲಿದ್ದೂ ಪ್ರಕಾಶಮಾನರಾಗಿ ಬೆಳಗಿದ ಅನೇಕ ಸಣ್ಣ – ಪುಟ್ಟ ವಚನಕಾರರು ಇನ್ನೂ ಬೆಳಕಿಗೆ ಬರಬೇಕಾಗಿದೆ. ಮೊದಲ ಹಂತದ ವಚನಕಾರರು ತೆಗೆದುಕೊಂಡ ತೀರ್ಮಾನಗಳು, ತಳೆದ ನಿಲುವುಗಳನ್ನು ದ್ವೀತೀಯ ಘಟ್ಟದ ವಚನಕಾರರು ತೆಗೆದುಕೊಳ್ಳಲಾಗಿಲ್ಲ. ಈ ಕಾರಣಗಳ ಬಗೆಗಿನ ಹುಡುಕಾಟದ ತೀರ್ವತೆ ಈ ಕೃತಿಯಲ್ಲಿದೆ. ಅನೇಕ ಮಹಿಳಾ ವಚನಕಾರ್ತಿಯರನ್ನು ತೌಲನಿಕವಾಗಿಯೂ ಅಧ್ಯಯನ ಮಾಡಿರುವುದು ಈ ಕೃತಿಯ ವೈಶಿಷ್ಟವಾಗಿದೆ.

೧೯೯೮ರಲ್ಲಿ ಪ್ರಕಟವಾದ ಡಾ. ತಾಳ್ತಜೆ ವಸಂತಕುಮಾರರ ‘ಸಂಶೋಧನ ರಂಗ’ ವೆಂಬ ಕೃತಿ ಸಂಶೋಧನ ಶಾಸ್ತ್ರವನ್ನು ವಿವರಿಸುವ ಮಹತ್ವದ ಕೃತಿಗಳಲ್ಲಿ ಇತೀಚಿನದ್ದಾಗಿದೆ, ಸಂಶೋಧನೆಯ ಶಿಸ್ತಿನ ಬಗ್ಗೆ ಉತ್ತಮ ಪ್ರಸ್ತಾವನೆಯನ್ನು ಒಳಗೊಂಡಂತೆ ಏಳು ಅಧ್ಯಾಯಗಳಿವೆ. ಪ್ರಸ್ತಾವನೆಯಲ್ಲಿ ಸಂಶೋಧನೆಯ ವಿವಿಧ ನೆಲೆಗಳನ್ನು ಮತ್ತು ರೂಪಗಳನ್ನು ಒಂದು ತಾತ್ವಿಕ ಚೌಕಟ್ಟಿಗೆ ತರಲು ಪ್ರಯತ್ನಿಸಿದ್ದಾರೆ. ಇದರ ಜೊತೆಯಲ್ಲಿ ಕನ್ನಡದಲ್ಲಿ ಇದೂವರೆಗೂ ನಡೆದಿರುವ ಸಂಶೋಧನೆಯ ಸ್ವರೂಪವನ್ನು ವಿಂಗಡನಾತ್ಮಕವಾಗಿ ವಿವರಿಸಿರುವರು. ವೈಯಕ್ತಿಕ ನೆಲೆಯಲ್ಲಿ ಜರುಗುತ್ತಿರುವ ಸಂಶೋಧನೆಗಳು ಸಾಂಸ್ಥಿಕ ರೂಪಕ್ಕೆ ಬರಬೇಕೆಂದು ಬಯಸುವ ಇವರು ಅದರ ಸಾಧಕ – ಬಾಧಕಗಳನ್ನು ವಿಮರ್ಶಾತ್ಮಕವಾಗಿ ಹೇಳಿರುವರು. ಎರಡನೆಯ ಭಾಗದಲ್ಲಿ ಕನ್ನಡದಲ್ಲಿ ಈವರೆಗೆ ನಡೆದಿರುವ ಸಾಂಸ್ಕೃತಿಕ ಸಂಶೋಧನೆಯ ಸ್ಥಿತಿ ಗತಿಯನ್ನು ತುಲನಾತ್ಮಕವಾಗಿ ವಿವರಿಸಿರುವರು. ಸಾಂಸ್ಕೃತಿಕ ಸಂಶೋಧನೆ ಎಂದರೇನು? ಎಂಬುದನ್ನು ಬಹಳ ನಿಖರವಾಗಿ ಗುರುತಿಸಿರುವರು. ಸಂಸ್ಕೃತಿಯ ಅನನ್ಯತೆಯನ್ನು ಇತ್ತೀಚೆಗೆ ಮೋಜಿಗಾಗಿ ಕೆಲವರು ಪ್ರಶ್ನಿಸುತ್ತಿರುವರು. ಇಂತಹ ಪೊಳ್ಳು ಚಿಂತಕರು ಈ ಕೃತಿಯನ್ನು ಓದಲೇಬೇಕಾಗಿದೆ. ಸಂಸ್ಕೃತಿಯ ಹೊರ ಅರ್ಥ ಏನಾದರಾಗಲಿ ಅದಕ್ಕಾಗಿ ಬಡಿದಾಡಿದೆ ಒಳಅರ್ಥವನ್ನು ಗಟ್ಟಿಗೊಳಿಸಿಕೊಳ್ಳಬೇಕಾದ ಈ ಕಾಲದಲ್ಲಿ ಸಂಸ್ಕೃತಿಯ ಬಗೆಗೆ ಆರೋಗ್ಯಕರವಾದ ಚರ್ಚೆಯಾಗಬೇಕಾಗಿದೆ.

ಇದೇ ಅವಧಿಯಲ್ಲಿ ಪ್ರಕಟವಾದ ಮತ್ತೊಂದು ಮಹತ್ವದ ಕೃತಿಯೆಂದರೆ ಡಾ. ಕಲಬುರ್ಗಿಯವರ ‘ಮಾರ್ಗ – III’ ಆಗಿದೆ. ‘ಮಾರ್ಗ’ದ ಹೆಸರಿನಲ್ಲಿ ಮೂರನೇ ಸಂಪುಟದಲ್ಲಿಯೂ ಸಂಶೋಧಕರಿಗೆ ಸಾಮಗ್ರಿಗಳನ್ನೊದಗಿಸಿದ್ದಾರೆ. ಈ ಕೃತಿಯಲ್ಲಿ ನಾಲ್ಕು ಮುಖ್ಯ ಶೀರ್ಷಿಕೆಗಳಲ್ಲಿ ಒಟ್ಟು ಎಂಬತ್ತು ಬರಹಗಳಿವೆ. ಡಾ. ಕಲಬುರ್ಗಿಯವರ ವೈಶಿಷ್ಟವೆಂದರೆ ವಿಷಯ ಸಣ್ಣದಿರಲಿ ಅಥವಾ ದೊಡ್ಡದಿರಲಿ ಅದನ್ನು ಉಪೇಕ್ಷೆ ಮಾಡದೆ ಸಂಶೋಧನ ಶಿಸ್ತಿನ ಚೌಕಟ್ಟಿನಲ್ಲೇ ಮಂಡಿಸುವುದು. ಇವರ ಆಕರ ಶೋಧ ಮತ್ತು ಆಕರಗಳ ಬಳಕೆ ಬೆರಗುಗೊಳಿಸುತ್ತದೆ. ಶಾಸನಗಳು, ಸ್ಮಾರಕಗಳು, ಸಾಹಿತ್ಯ, ಜನಪದ ಸಾಹಿತ್ಯ. ಐತಿಹ್ಯ ಮತ್ತು ಸಾಧಾರ ಊಹೆಗಳು ಒಂದಕ್ಕೊಂದು ಪೂರಕವಾಗಿ ಸಂಸ್ಕೃತಿಯ ಪುನಾರಚನೆಯಲ್ಲಿ ಯಾವ ರೀತಿ ನೆರವಾಗುತ್ತವೆಯೆಂಬುದನ್ನು ಇಲ್ಲಿನ ಎಲ್ಲ ಲೇಖನಗಳಲ್ಲೂ ಗಮನಿಸಹಹುದು. ಕಮ್ಮೆ ಬ್ರಾಹ್ಮಣರು, ಚಂಪೂ – ಪ್ರಸಂಗ, ತೊಳ್ಕಾಪ್ಪಿಯಂ – ಕವಿರಾಜಮಾರ್ಗ, ನಂದಿಮೊಗವಾಡ, ಚಾಗದ ಕಂಬ – ಬೀರದ ಶಾಸನ, ಉರಿಯ ಉಯ್ಯಾಲೆ ಮೊದಲಾದ ಸಂಪ್ರಬಂಧಗಳಲ್ಲಿ ಹೊಸ ಆಲೋಚನೆಗಳು ತುಂಬಿವೆ. ನಿರ್ವಚನ ಭಾಗದಲ್ಲಿ ಶರಣರ ವಚನಗಳನ್ನು ಮರು ಓದಿನ ಮೂಲಕ ನೂತನ ಅವರಣವನ್ನು ನಿರ್ಮಿಸಲಾಗಿದೆ. ತರುಣ ಸಂಶೋಧಕರಿಗೆ ಅನೇಕ ರೀತಿಯಲ್ಲಿ ಮಾದರಿಯಾಗಿರುವ ಡಾ. ಕಲಬುರ್ಗಿಯವರು ಕನ್ನಡ ನಾಡು ಕಂಡ ಅತ್ಯಂತ ಶ್ರೇಷ್ಠ ಸಂಶೋಧಕರಲ್ಲಿ ಒಬ್ಬರಾಗಿದ್ದಾರೆ.

೧೯೯೯ರಲ್ಲಿ ಡಾ. ಟಿ. ವಿ. ವೆಂಕಟಾಲಶಾಸ್ತ್ರಿಯವರ ಸಮಗ್ರ ಲೇಖನಗಳು ‘ಶಾಸ್ತ್ರೀಯ’ ಹೆಸರಿನ ನಾಲ್ಕು ಸಂಪುಟಗಳು ಪ್ರಕಟವಾಗಿದ್ದು, ಇವು ಶ್ರೀ ಶಾಸ್ತ್ರೀಯವರ ವಿದ್ವತ್ತಿಗೆ ಹಿಡಿದ ಕನ್ನಡಿಯಂತಿವೆ. ಗ್ರಂಥಸಂಪಾದನೆ, ವ್ಯಾಕರಣ, ಛಂದಸ್ಸು ಮತ್ತು ಹಳಗನ್ನಡ ಕಾವ್ಯ ವಿಮರ್ಶೆಯಲ್ಲಿ ಡಾ. ಶಾಸ್ತ್ರೀಯವರು ಹೆಸರು ಮಾಡಿರುವರು. ವಿದ್ವತ್‌ಲೋಕದಲ್ಲಿ ಡಾ. ಶಾಸ್ತ್ರೀಯವರ ಲೇಖನಗಳು ಶಾಸ್ತ್ರದ ಕಡೆಗೆ ಹೆಚ್ಚು ಮುಖ ಮಾಡಿ ಶುಷ್ಕವಾಗಿವೆ ಎಂಬ ಮಾತುಂಟು. ಆದರೂ ಇವರ ಪಾಂಡಿತ್ಯ ಮತ್ತು ಪ್ರತಿಭೆ ಅದ್ವಿತೀಯವಾದುದು. ಸರಳ ವ್ಯಕ್ತಿತ್ವದ ಶಾಸ್ತ್ರಿಗಳು ಆರಿಸಿಕೊಂಡ ಮಾರ್ಗ ಬಹಳ ಕಠಿಣ. ‘ಶಾಸ್ತ್ರೀಯ’ ಹೆಸರಿನ ನಾಲ್ಕು ಸಂಪುಟಗಳಲ್ಲಿ ಒಂದುನೂರಾ ತೊಂಬತ್ತಕ್ಕೂ ಹೆಚ್ಚಿನ ಲೇಖನಗಳಿವೆ. ಕನ್ನಡ ಸಾಹಿತ್ಯ ಚರಿತ್ರೆಯ ಚರ್ಚೆಯಲ್ಲಿ ಅನೇಕ ಕ್ಲಿಷ್ಟ ವಿಷಯಗಳನ್ನು ಅಂತಿಮಕ್ಕೆ ಮುಟ್ಟಿಸಿದ ಕೀರ್ತಿ ಇವರದ್ದು. ಪಂಪ ಭಾರತ, ಆದಿಪುರಾಣ, ವಡ್ಡಾರಾಧನೆಯ ಪಾಠ ವಿಚಾರಗಳು, ಶಬ್ಧಗಳ ಅರ್ಥ ಮೊದಲಾದ ವಿಷಯಗಳಲ್ಲಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳವಾಗಲೂ ಹಲವು ಆಕರಗಳನ್ನು ಒರೆಗಲ್ಲಿಗೆ ಹಚ್ಚುವರು. ಶಾಸನ ಸಾಹಿತ್ಯದ ಛಂದೋರೂಪವನ್ನು ನಿರ್ಧರಿಸುವಲ್ಲಿ, ಕ್ಲಿಷ್ಟ ಪದಗಳನ್ನು ಸರಳಗೊಳಿಸುವಲ್ಲಿ ಡಾ. ಶಾಸ್ತ್ರಿಯವರು ಸಿದ್ಧ ಹಸ್ತರು. ಇವರ ನಾಲ್ಕೂ ಸಂಪುಟಗಳನ್ನು ಒಟ್ಟಿಗೆ ಇಟ್ಟು ನೋಡಿದಾಗ ಕನ್ನಡ ಸಾಹಿತ್ಯದ ಆರಂಭಕಾಲವೆಂದೂ ಕರೆಯುವ ಬೌದ್ಧರ ಕಾಲದಿಂದ ಮೊದಲ್ಗೊಂಡು ಇಂದಿನ ಆಧಿನಿಕ ಸಾಹಿತ್ಯದವರೆಗೂ ಹಲವಾರು ಸಮಸ್ಯೆಗಳನ್ನು ಆಯ್ದುಕೊಂಡು ಪರಿಹಾರಕ್ಕಾಗಿ ಪ್ರಯತ್ನ ಪಟ್ಟಿರುವರು. ಈ ವಿಷಯದಲ್ಲಿ ಶ್ರೀ ಶಾಸ್ತ್ರಿಯವರು ಸಫಲರೂ ಆಗಿರುವರು.

ಇದೇ ವರ್ಷ ಕನ್ನಡ ವಿಶ್ವವಿದ್ಯಾಲಯವು ಡಾ.ಎಂ. ಬಿ. ನೇಗಿನಹಾಳ ಅವರ ಸಂಶೋಧನ ಪ್ರಬಂಧಗಳನ್ನು ಪ್ರಕಟಿಸಿದೆ. ನಮ್ಮೊಡನಿದ್ದು ಈಗ ಮರೆಯಾಗಿರುವ ಉತ್ತಮ ಸಂಶೋಧಕರಿವರು. ಇವರ ಅರವತ್ತು ಲೇಖನಗಳನ್ನು ಒಂದೆಡೆ ಸಂಗ್ರಹಿಸಿ ‘ನೇಗಿನಹಾಳ ಪ್ರಬಂಧಗಳು’ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಇಲ್ಲಿನ ಲೇಖನಗಳು ಭಾಷಾ ವಿಜ್ಞಾನ, ಸಾಹಿತ್ಯ, ವ್ಯಾಕರಣ, ಜಾನಪದ ಮತ್ತು ಶಾಸನಗಳನ್ನು ಕುರಿತ ಲೇಖನಗಳಾಗಿವೆ. ಶಂ. ಬಾ. ಜೋಶಿಯವರ ಅನೇಕ ಸೂತ್ರಗಳು ನೇಗಿನಹಾಳರ ಸಂಶೋಧನೆಯಲ್ಲಿ ಗುರುತಿಸಬಹುದು. ಭಾಷೆಯ ಪ್ರಯೋಗದ ಆಧಾರಗಳಿಂದ ಸಂಶೋಧನೆಯನ್ನು ಕೈಗೊಳ್ಳುವ, ಕಾಲವನ್ನು ನಿರ್ಧರಿಸುವ ರೀತಿ ಅಪರೂಪ. ನಾಡು – ನುಡಿಗಳ ಪ್ರಾಚೀನತೆ, ಬಿಂಜ, ಗೌಡ, ಮೈಲಾರಲಿಂಗ, ಗೋಸಾಸ ಶಾಸನಗಳು ಮೊದಲಾದ ಪ್ರಬಂಧಗಳಲ್ಲಿ ಭಾಷಾ ಪ್ರಯೋಗಗಳನ್ನೇ ಮುಖ್ಯವಾಗಿ ಬಳಸುವರು. ಅನ್ಯ ಶಿಸ್ತುಗಳನ್ನು ಕನ್ನಡ ಸಂಶೋಧನೆಗೆ ಒಗ್ಗಿಸಿಕೊಂಡ ಅಪರೂಪದ ಸಂಶೋಧಕವಾಗಿ ಈ ಕೃತಿಯ ಮೂಲಕ ನೇಗಿನಹಾಳರು ಚಿರಸ್ಥಾಯಿಯಾಗಿರುವರು. ಇದೇ ವರ್ಷ ಪ್ರಕಟವಾದ ಮತ್ತೊಂದು ಗಮನಾರ್ಹ ಕೃತಿಯೆಂದರೆ ‘ಕನ್ನಡ ಸಾಹಿತ್ಯ ಸಂಸ್ಕೃತಿ ಶೋಧನ’ ಎಂಬ ಪುಸ್ತಕ. ಸಂಶೋಧಕರಾದ ಡಾ. ಸಿ. ನಾಗಭೂಷಣರ ಕೆಲವು ಲೇಖನಗಳು ಇಲ್ಲಿ ಸಂಕಲಿತವಾಗಿದ್ದು ಅವರ ಸಂಶೋಧನ ಉತ್ಸಾಹವನ್ನು ಪ್ರತಿನಿಧಿಸುತ್ತಿವೆ. ಇಲ್ಲಿನ ಬಹುತೇಕ ಲೇಖನಗಳು ಈವರೆಗೆ ನಡೆದ ಸಂಶೋಧನೆಯ ಮುಂದುವರೆಕೆಯ ಪ್ರಯತ್ನವಾಗಿ ಕಂಡುಬರುತ್ತವೆ. ಹೈದರಾಬಾದ್ ಕರ್ನಾಟಕ ಶಾಸನಗಳ ಸಮೀಕ್ಷೆ, ಬಳ್ಳಿಗಾವೆ ಒಂದು ವಿದ್ಯಾ ಕೇಂದ್ರವಾಗಿ, ಮೂರು ಜಾವಿದೇವರು ಮೊದಲಾದವು ಉತ್ತಮ ಲೇಖನಗಳಾಗಿವೆ. ಲಕ್ಕಣ ದಂಡೇಶನ ಬಗೆಗೆ ಹೇಳುವ ತೀರ್ಮಾನ ಇನ್ನೂ ಗಟ್ಟಿಗೊಳ್ಳಬೇಕಾಗಿದೆ. ಲಕ್ಕಣ ದಂಡೇಶನ ಪೂರ್ವಿಕರು ಮತ್ತು ಈಗಿರುವ ವಂಶಸ್ಥರು ಬ್ರಾಹ್ಮಣರೆಂಬ ಒಂದೇ ಕಾರಣಕ್ಕೆ ಲಕ್ಕಣ ದಂಡೇಶನ ಧರ್ಮವನ್ನು ನಿರ್ಧರಿಸಲು ಸಾಧ್ಯವಿಲ್ಲ. ಈ ಪ್ರಶ್ನೆ ಹಿಂದಿನಿಂದಲೂ ನಮ್ಮ ವಿದ್ವಾಂಸರನ್ನು ಕಾಡುತ್ತ ಬಂದಿದೆ. ಅತ್ಯುತ್ಯಾಹದ ಕಾರಣದಿಂದಾಗಿ ಕೆಲವು ಸಣ್ಣ ಪುಟ್ಟ ಲೋಪಗಳನ್ನು ಹೊರತು ಪಡಿಸಿದರೆ ಸಂಶೋಧನಾಸಕ್ತರಿಗೆ ಇದು ಉಪಯುಕ್ತ ಕೃತಿಯಾಗಿದೆ.

ಡಾ. ಬಿ.ವಿ. ಮಲ್ಲಾಪುರ ಅವರು ತಮ್ಮ ಸಂಶೋಧನ ಲೇಖನಗಳ ಸಂಗ್ರಹವನ್ನು ‘ಸುಧಾರ್ಣವ’ ಎಂಬ ಹೆಸರಿನಲಿ ಎರಡು ಸಂಪುಟಗಳನ್ನಾಗಿ ಪ್ರಕಟಪಡಿಸಿರುವರು. ಮೊದಲ ಸಂಪುಟದಲ್ಲಿ ಹನ್ನೊಂದು ಲೇಖನಗಳನ್ನು ಸಂಶೋಧನೆ ಎಂಬ ಭಾಗದಲ್ಲಿ ನೀಡಿರುವರು. ಇಲ್ಲಿ ಲೇಖಕರ ಸಂಶೋಧನ ದೃಷ್ಟಿ ಗಂಭೀರವಾಗಿ ಬೇರೆ ಬೇರೆ ಶಿಸ್ತಿನ ಅಂಶಗಳನ್ನು ಗಮನಿಸಿರುವುದು ಅನುಕರಣೀಯವಾಗಿದೆ. ಸನ್ನತಿ, ಶಾಸನಗಳಲ್ಲಿ ಮುರಿಗಾ ಸಮಯ, ಶಾಸನೋಕ್ತ ಒಂದು ವೀರಶೈವಮಠ ಮತ್ತು ಶಕ್ತಿ ಪರ್ಷೆಯ ಕಿಟ್ಟಗಾವೆ ಸಂತತಿ ಎಂಬ ಲೇಖನಗಳು ಲೇಖಕರ ಅಧ್ಯಯನದ ಶಿಸ್ತನ್ನು ವ್ಯಕ್ತಪಡಿಸುತ್ತಿವೆ.

ಕಳೆದ ವರ್ಷ ಪ್ರಕಟವಾದ ‘ಕನ್ನಡ ದಾಖಲು ಸಾಹಿತ್ಯ’ ಡಾ. ಕೆ. ರವೀಂದ್ರನಾಥರ ಕೆಲವಾರು ಕಾರಣಗಳಿಂದ ಸಂಶೋಧಕರಿಗೆ ಅದರಲ್ಲೂ ಸಾಹಿತ್ಯ ಸಂಶೋಧಕರಿಗೆ ಉಪಯುಕ್ತ ಕೃತಿಯಾಗಿದೆ. ಸಂಶೋಧನೆಯಲ್ಲಿ ಆಕರಗಳಾಗುವ ಶಾಸನಗಳು, ಕಡತಗಳು, ನಿರೂಪಗಳು, ಭಿನ್ನವತ್ತಳೆಗಳು, ದಿನಚರಿಗಳು, ಕೈಫಿಯುತ್ತುಗಳು, ಬಖೈರುಗಳು, ನಾಮೆ, ಸ್ಥಳಪುರಾಣ ಮೊದಲಾದವುಗಳ ಬಗ್ಗೆ ವಿವರವಾದ ಅರ್ಥವನ್ನು ನಿಡೀರುವರು. ಹಂತ ಹಂತವಾಗಿ ಅವುಗಳ ಪ್ರಭೇದ, ಪ್ರಯೋಜನ ಹಾಗೂ ಮಿತಿಗಳನ್ನು ಉದಾಹರಣೆಗಳ ಸಮೇತ ವಿವರಿಸಿರುವರು. ಕಡತ, ನಿರೂಪ, ಸ್ಥಳ ಪುರಾಣ, ಮಹಾತ್ಮ್ಯೆಗಳ ಬಗೆಗೆ ಮೊಟ್ಟ ಮೊದಲಿಗೆ ಅತ್ಯಂತ ವ್ಯವಸ್ಥಿತವಾಗಿ ವಿವರಗಳನ್ನು ನೀಡಲಾಗಿದೆ. ಇವುಗಳು ಒಂದು ಸಾಂಸ್ಕೃತಿಕ ಪುನಾರಚನೆಯ ಅಧ್ಯಯನದ ಸಂದರ್ಭದಲ್ಲಿ ಹೇಗೆ ನೆರವಾಗುತ್ತದೆಂದು ಉದಾಹರಣೆಗಳ ಮೂಲಕ ವಿವರಿಸಿರುವರು.

ಸಂಶೋಧನಾಸಕ್ತರು ಕುತೂಹಲಕ್ಕಾದರೂ ಡಾ. ಐ. ಅಂತಪ್ಪ ವಿರಚಿತ ‘ಬೆಂಗಳೂರಿನಲ್ಲಿ ಕ್ರೈಸ್ತ ಧರ್ಮದ ಉಗಮ’ ಎಂಬ ಕೃತಿಯನ್ನು ನೋಡಬೇಕಾಗಿದೆ. ಭಾಗ ಒಂದರಲ್ಲಿ ಬೆಂಗಳೂರಿನ ಇತಿಹಾಸ, ಧರ್ಮ ಮತ್ತು ದೇವಾಲಯಗಳನ್ನು, ಭಾಗ ಎರಡರಲ್ಲಿ ಜೆಸುಯಿಟ್ ಪತ್ರಗಳ ವಿವರಗಳನ್ನು, ಭಾಗ ಮೂರಲ್ಲಿ ಬೆಂಗಳೂರಿನ ಹೊರಭಾಗದ ವಿವರ ನೀಡುವ ಜೆಸುಯೆಟ್ ಪತ್ರಗಳನ್ನು ವಿವರಿಸಿರುವರು. ಬೆಂಗಳೂರಿನ ಹೆಸರು ಮತ್ತು ಪ್ರಾಚೀನತೆಯನ್ನು ಹೇಳುವಾಗ ಇಲ್ಲಿಯವರೆಗಿನ ಸಂಶೋಧನೆಗಳನ್ನು ಬಹಳ ಹಗುರವಾಗಿ ತೆಗೆದುಕೊಂಡಂತಿದೆ. ಆಕರಗಳ ಶೋಧವಾದಂತೆಲ್ಲ ಸಂಶೋಧನ ತೀರ್ಮಾನಗಳು ಬದಲಾಗುತ್ತವೆ. ಅಥವಾ ಹುಸಿಯಾಗುತ್ತವೆ. ಹಾಗೆಂದು ಹಿಂದಿನ ಸಂಶೋಧನೆಯನ್ನು ವಸ್ತುನಿಷ್ಟವಾಗಿ ತಿರಸ್ಕರಿಸಿ ಮುಂದುವರಿಯಬೇಕೇ ವಿನಹ ವ್ಯಂಗ್ಯ ಮನೋಭಾವ ಇರಬಾರದು. ಭಾಗ ಎರಡು ಮತ್ತು ಮೂರಲ್ಲಿ ಸಂಶೋಧನೆಯಲ್ಲಿ ಇದುವರೆಗೂ ಕಡೆಗಣಿಸಿದ್ದ ಕ್ರೈಸ್ತರ ಧರ್ಮಗುರುಗಳ ಪತ್ರಗಳನ್ನು ಪರಿಚಯಿಸಿರುವರು. ಬೆಂಗಳೂರಿನ ಇತಿಹಾಸ ಮಾಗಡಿ ಕೆಂಪೇಗೌಡನಿಂದ ಆರಂಭವಾಯಿತು ಎಂಬ ವಾದ ಈಗ ಪ್ರಾಮುಖ್ಯತೆ ಕಳೆದು ಕೊಂಡಿದ್ದರೂ ಅದಕ್ಕೆ ಇನ್ನೂ ಹೆಚ್ಚಿನ ಆಧಾರಗಳು ಇರಲಿಲ್ಲ. ಆದರೆ ಈಗ ಆದರ ಸಮರ್ಥನೆಗೆ ಕ್ರೈಸ್ತ ಪತ್ರಗಳು ಹೆಚ್ಚಿನ ರೀತಿಯಲ್ಲಿ ನೆರವಾಗುತ್ತವೆಂದು ಮೊದಲಿಗೆ ಈ ಕೃತಿಯಲ್ಲಿ ತೋರಿಸಲಾಗಿದೆ.

ಇದೇ ವರ್ಷ ಕನ್ನಡ ವಿಶ್ವವಿದ್ಯಾಲಯವು ಪ್ರಕಟಪಡಿಸಿರುವ ಮತ್ತೊಂದು ಉಪಯುಕ್ತ ಸಂಶೋಧನ ಕೃತಿ ‘ತುಳುಕರ್ನಾಟಕ ಅರಸು ಮನೆತನಗಳು’ ಎಂಬುದಾಗಿದೆ. ವಿಚಾರ ಸಂಕಿರಣದಲ್ಲಿ ಮಂಡಿತವಾದ ಲೇಖನಗಳನ್ನು ಹೇರಂಜೆ ಕೃಷ್ಣಭಟ್‌ ಮತ್ತು ಎಸ್‌. ಡಿ. ಶೆಟ್ಟಿಯವರು ಅಚ್ಚುಕಟ್ಟಾಗಿ ಸಂಪಾದಿಸಿ ಕೊಟ್ಟಿರುವರು. ತುಳುಕರ್ನಾಟಕದ ಇತಿಹಾಸವನ್ನರಿಯಲು ಡ. ಕೆ. ವಿ. ರಮೇಶ್‌ ಅವರ ಪುಸ್ತಕವೇ ಇದೂವರೆಗೂ ಅನಿವಾರ್ಯವಾಗಿತ್ತು. ಬೇರೆಡೆ ಮಾಹಿತಿಗಳು ದೊರಕಿದರೂ ಅದು ಶಿಸ್ತಿನಿಂದ ಕೂಡಿದ್ದಿಲ್ಲ. ಈ ಪುಸ್ತಕ ಪ್ರಕಟನೆಯೊಂದಿಗೆ ತುಳುನಾಡಿನ ಸಂಸ್ಕೃತಿ ಮತ್ತು ಇತಿಹಾಸದ ಸಂಶೋಧಕರಿಗೆ ಬಹಳ ಪ್ರಯೋಜನವಾಗಿದೆ. ಒಟ್ಟು ಹನ್ನೊಂದು ಸ್ಥಳೀಯ ಅರಸರನ್ನು ಈ ಕೃತಿಯಲ್ಲಿ ಅಧ್ಯಯನ ಮಾಡಲಾಗಿದೆ ತುಳುನಾಡಿನ ಅರಸರ ಅಧ್ಯಯನಕ್ಕೆ ನಮಗಿರುವ ಮುಖ್ಯ ತೊಡಕು ಆಕರಗಳ ಶೋಧ. ಶಾಸನಗಳು ಮತ್ತು ಸ್ಮಾರಕಗಳು ಅಲ್ಲಿನ ಪ್ರಾಕೃತಿಕ ಕಾರಣಗಳಿಂದ ಬೇಗ ಮೂಲರೂಪವನ್ನು ಕಳೆದುಕೊಳ್ಳುತ್ತಿವೆ. ಸ್ಥಳೀಯ ಐತಿಹ್ಯಗಳೂ ಒಂದೇ ರೀತಿ ದೊರೆಯುತ್ತಿಲ್ಲ. ಅಲ್ಲಿನ ಭಾಷೆಯ ಕಾರಣದಿಂದಲೂ ಸಂಶೋಧಕರು ಪರದಾಡಬೇಕಾಗಿದೆ. ಇಲ್ಲಿನ ಕೆಲವು ಲೇಖನಗಳು ಅತ್ಯಂತ ಶಿಸ್ತುಬದ್ಧವಾಗಿ ಮಾಹಿತಿಯನ್ನು ಕಲೆಹಾಕಿ, ಅವುಗಳಲ್ಲಿ ಅಡಗಿದ್ದ ಸತ್ಯವನ್ನು ಹೊರಗೆಡವಿದ್ದಾರೆ. ಮುಂದಿನ ಅಧ್ಯಯನಗಳಿಗೆ ಇವು ಉತ್ತೇಜಿಸಿವೆ. ಆದರೂ ಇಲ್ಲಿನ ಲೇಖನಗಳಲ್ಲಿ ಸಾಂಸ್ಕೃತಿಕ ಅಧ್ಯಯನಕ್ಕೆ ಇನ್ನಷ್ಟು ಒತ್ತು ನೀಡಬೇಗಕಾಗಿತ್ತು.

ಈಸೂರಿನ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಬಗೆಗೆ ಸಮಗ್ರ ಅಧ್ಯಯನದ ಕೊರತೆಯನ್ನು ನೀಗಿಸಿದ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರು’ ಎಂಬ ಕೃತಿ ಇದೇ ವರ್ಷ ಪ್ರಕಟವಾಗಿದೆ. ಇದರ ರಚನಕಾರರು ಬಾಲ್ಯದಲ್ಲೇ ಚಳುವಳಿಗೆ ಧುಮುಕಿ, ಸೆರೆಮನೆವಾಸ ಅನುಭವಿಸಿ, ಈಸೂರಿನ ಸ್ವಾತಂತ್ರ್ಯಕ್ಕೆ ಹೋರಾಡಿದ ಶ್ರೀ ಸಿ. ಲಿಂಗಪ್ಪನವರು, ಈಸೂರಿನ ಚಳುವಳಿಯ ಪ್ರತಿ ಹಂತದಲ್ಲೂ ಭಾಗಿಯಾಗದ್ದರಿಂದ ಲಿಂಗಪ್ಪನವರ ಬರವಣೆಗೆಯಲ್ಲಿ ಪ್ರಮಾಣಿಕತೆ ತುಂಬಿದೆ. ಬಹಳ ಸರಳವಾಗಿ ಯಾವ ಆವೇಶವೂ ಇಲ್ಲದೆ ನಿರೂಪಿಸಿದ್ದಾರೆ. ಈಸೂರಿನ ಚಳುವಳಿಯ ಪ್ರೇರಣೆ, ಸಾಹುಕಾರ್ ಬಸವಣ್ಣೆಪ್ಪನವರ ಸೂತ್ರಧಾರಿಕೆ, ಅದರ ಪರಿಣಾಮ, ಬ್ರಿಟಿಷರ ದಬ್ಬಾಳಿಕೆ, ಅವರ ಆತಂಕ, ಚಳುವಳಿಗೆ ಸಾರ್ವಜನಿಕರ ಸಹಕಾರ ಎಲ್ಲವನ್ನು ಸಮಗ್ರವಾಗಿ ಅಧ್ಯಯನ ಮಾಡಲಾಗಿದೆ. ಬರವಣಿಗೆಯಲ್ಲಿ ಸಂಶೋಧಾನಾತ್ಮಕ ಗುಣ ಸಹಜವಾಗಿ ಮೂಡಿ ಬಂದಿರುವುದರಿಂದ ಹೇಳುವ ವಿಷಯದಲ್ಲಿ ವಿಮರ್ಶಾಗುಣವಿದೆ. ತಪ್ಪು – ಒಪ್ಪುಗಳನ್ನು ಚರ್ಚಿಸುತ್ತ ಸ್ವಾತಂತ್ರ್ಯ ಹೋರಾಟದ ಒಳಕುದಿಯನ್ನು ಸಮರ್ಥವಾಗಿ ಹೊರಗೆಡವಿದ್ದಾರೆ. ಪುಸ್ತಕದ ಅನುಬಂಧದಲ್ಲಿ ಭೂಗತರಾದವರು, ನೇಣುಗಂಬಕ್ಕೇರಿದವರು, ಜೀವಾವಧಿ ಶಿಕ್ಷೆಗೊಳಗಾದವರು ಮುಂತಾದವರ ವಿವರವಾದ ಪಟ್ಟಿಯನ್ನು ಮತ್ತು ಛಾಯಾಚಿತ್ರಗಳನ್ನು ನೀಡಲಾಗಿದೆ.

ಈ ದಶಕದ ಸಂಶೋಧನ ಕೃತಿಗಳನ್ನು ಗಮನಿಸಿದರೆ ಸಂಶೋಧನ ಕ್ಷೇತ್ರವು ಕೆಲವೊಂದು ತಿರುವುಗಳತ್ತ ಹೊರಳುತ್ತಿರುವುದು ಕಂಡುಬರುತ್ತಿದೆ. ವಸ್ತುನಿಷ್ಠ ಅಧ್ಯಯನದ ಫಲಿತಗಳೆಲ್ಲವೂ ಇಂದು ‘ಸಂಶೋಧನೆ’ ಎಂಬ ಶಿರ್ಷಿಕೆಯಡಿ ಪ್ರಕಟವಾಗುತ್ತಿವೆ. ಈ ಅವಧಿಯಲ್ಲಿ ಸಂಶೊಧನೆಯು ಶಾಸ್ತ್ರಗಳ ವ್ಯಾಪ್ತಿಯನ್ನು ಮೀರಿ ಬೆಳೆದಿದೆ. ಬಿಗುಗಾರಿಕೆಯನ್ನು ಮೀರಿ ಸೃಜನಶೀಲತೆಯತ್ತ ತಿರುಗುತ್ತಿದ್ದು. ಸಂಶೋಧನೆಯಲ್ಲಿ ಪಾಂಡಿತ್ಯದ ಪ್ರಧಾನತೆ ಗೌಣವಾಗಿ ಪ್ರತಿಭೆ ಮತ್ತು ಹೊಸದರ ಹುಡುಕಾಟ ಪ್ರಧಾನ್ಯತೆ ಪಡೆಯುತ್ತಿದೆ. ಮತ್ತೊಂದು ಮುಖ್ಯ ಬದಲಾವಣೆಯೆಂದರೆ ಇದುವರೆಗೂ ಅವಜ್ಞೆಗೆ ಒಳಗಾಗಿದ್ದ ಸ್ಥಳೀಯ ಸಾಂಸ್ಕೃತಿಕ ಘಟಕಗಳು ಮತ್ತು ಅಪ್ಪಟ ದೇಸೀಯ ಅಂಶಗಳು ಇಂದು ಅಧ್ಯಯನದ ಪ್ರಧಾನ ವಸ್ತುಗಳಾಗುತ್ತಿವೆ. ಇದು ನಿಜಕ್ಕೂ ಸಂತೋಷದ ಸಂಗತಿ, ಸಂಶೋಧನಶಾಸ್ತ್ರಜ್ಞರ ತಿರಸ್ಕಾರಕ್ಕೆ ಒಳಗಾಗಿದ್ದ ಮೌಖಿಕ ಸಾಹಿತ್ಯ ಮತ್ತು ಐತಿಹ್ಯಗಳು ಇತ್ತೀಚಿನ ದಿನಗಳಲ್ಲಿ ಪ್ರಧಾನ ಆಕರಗಳ ಸಾಲಿಗೆ ಬಂದು ನಿಂತಿವೆ. ಶಾಸ್ತ್ರ ಪರಿಕರಗಳನ್ನು ಮುಂದಿಟ್ಟುಕೊಂಡು ಬೆಳೆದು ಬಂದ ಸಂಶೋಧನೆಯು ಇಂದು ಅವುಗಳನ್ನು ಬೆನ್ನಿಗಿಟ್ಟುಕೊಂಡು ಮುಂದೆ ಹೊರಟಿದೆ. ಈ ಹೊಸ ಉತ್ಸಾಹದ ಪರಿಣಾಮವಾಗಿ ಕೆಲವೊಂದು ಲೋಪಗಳೂ ಆಗುತ್ತಿವೆ. ಸಂಶೋಧನೆಯ ಹೆಸರಲ್ಲಿ ಆತುರದ ತೀರ್ಮಾನಗಳು ಮತ್ತು ಆಕರ್ಷಕ ಸೂತ್ರಗಳು ಹುಟ್ಟುತ್ತಿರುವುದು ಬೇಸರದ ಸಂಗತಿಯಾಗಿದೆ. ಪರಿಚಯಾತ್ಮಕ ಲೇಖನಗಳ ಸಂಕಲನಗಳು ಸಂಶೋಧನೆಯ ಹೆಸರಲ್ಲಿ ಹೊರಬರುತ್ತಿವೆ. ಮೂಲ ಆಕರಗಳನ್ನು ಗಮನಿಸದೆ ಮತ್ತೊಬ್ಬರು ಬಳಸಿದ ಆಕರಗಳನ್ನೇ ಬಳಸಿ ತೀರ್ಮಾನ ನೀಡುವ ಸುಲಭ ತಂತ್ರ ವ್ಯಾಪಕವಾಗುತ್ತಿದ್ದು ಇದು ತಪ್ಪಿ ಸಂಶೋಧನೆಯು ಆರೋಗ್ಯ ಪೂರ್ಣವಾಗಿ ಮಂಡನೆಯಾಗಬೇಕಿದೆ. ಇವೆಲ್ಲದರ ನಡುವೆಯೂ ಇಂದು ಶಂಶೋಧನೆ ಹಿಂದಿಗಿಂತಲೂ ವ್ಯಾಪಕವಾಗಿ, ಸೂಕ್ಷ್ಮವಾಗಿ ಹೊಸ ಆಲೋಚನೆಗಳ ಮೂಸೆಯಲ್ಲಿ ಬದಲಾಗುವ ಲಕ್ಷಣಗಳನ್ನು ತೋರ್ಪಡಿಸುತ್ತಿದೆ. ಸಂಶೋಧಕರ ಸಂಖ್ಯೆ ಹೆಚ್ಚಾಗುವುದರ ಮೂಲಕ ಹೆಚ್ಚನ ಸಂಶೋಧನ ಫಲಿತಗಳು ನಮಗೊದಗುತ್ತಿವೆ.