ಒಂದು ದಶಕದ (೧೯೯೧ – ೨೦೦೦) ಸಂಶೋಧನ ಮಹಾಪ್ರಬಂಧಗಳನ್ನು ಗಮನಿಸಿದರೆ ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಸ್ಕೃತಿಯ ಹಲವು ಮಗ್ಗುಲಗಳ ಪರಿಚಯವಾಗುತ್ತದೆ. ಕಾವ್ಯ, ಶಾಸನ, ಹಸ್ತಪ್ರತಿ, ನಾಟಕ, ಕಾದಂಬರಿ, ಕಥೆ, ಜಾನಪದ, ಭಾಷೆ, ಛಂದಸ್ಸು ಮುಂತಾದ ಹಲವಾರು ಪ್ರಕಾರಗಳಲ್ಲಿ ಅಧ್ಯಯನ ನಡೆದಿವೆ. ಹತ್ತು ವರ್ಷಗಳ ಸಂಶೋಧನಾ ಸಾಧನೆಗಳನ್ನು ಸಮಗ್ರವಾಗಿ ಸಮೀಕ್ಷೆ ಮಾಡುವುದು ದುರ್ಲಭ. ಲಭ್ಯವಾದ ಕೃತಿಗಳನ್ನನುಲಕ್ಷಿಸಿ ಸಂಶೋಧನೆಯ ದಶಕದ ಹೆಜ್ಜೆಗುರುತುಗಳನ್ನು ಅವಲೋಕಿಸಲಾಗಿದೆ. ಅಧ್ಯಯನದ ದೃಷ್ಟಿಯಿಂದ ಪ್ರಬಂಧಗಳನ್ನು ೧. ಕವಿ – ಕಾವ್ಯ ಅಧ್ಯಯನ ೨. ಸಾಂಸ್ಕೃತಿಕ ಅಧ್ಯಯನ ೩. ಹಸ್ತಪ್ರತಿ – ಶಾಸನಗಳ ಅಧ್ಯಯನ ೪. ತೌಲನಿಕ ಅಧ್ಯಯನ ಎಂದು ವರ್ಗೀಕರಿಸಿಕೊಳ್ಳಲಾಗಿದೆ.

. ಕವಿಕಾವ್ಯ ಅಧ್ಯಯನ : ಕವಿಬದುಕಿದ, ಸಾಹಿತ್ಯ ಸೃಷ್ಟಿಯಾದ ಕಾಲವನ್ನನುಲಕ್ಷಿಸಿ ಇಲ್ಲಿಯ ಅಧ್ಯಯನಗಳನ್ನು ೧. ಪ್ರಾಚೀನ ಹಾಗೂ ೨. ಆಧುನಿಕ ಎಂದು ವಿಭಾಗಿಸಿ ಸಮೀಕ್ಷೆ ಮಾಡಲಾಗಿದೆ.

. ಪ್ರಾಚೀನ : ಒಬ್ಬ ಕವಿ, ಒಂದು ಕೃತಿ ಇಲ್ಲವೇ ಕೃತಿ ಪ್ರಕಾರವನ್ನಿರಿಸಿಕೊಂಡು ಅಧ್ಯಯನ ಮಾಡಿರುವುದು ಕಂಡುಬರುತ್ತದೆ. ಹೀಗಾಗಿ ಡಾ. ಸುಶೀಲಾ ನರಕೆ ಅವರ (೨೦೦೦) ಮೋಳಿಗೆ ಮಾರಯ್ಯ ಮತ್ತು ಮಹಾದೇವಿಯಮ್ಮ : ಒಂದು ಅಧ್ಯಯನ ಎಂಬ ಕೃತಿ ೧೨ನೆಯ ಶತಮಾನದಲ್ಲಿ ಬಾಳಿ ಬದುಕಿದ ಶರಣ ದಂಪತಿಗಳ ಚರಿತ್ರೆಯನ್ನು ನಿರೂಪಿಸುತ್ತದೆ. ಅವರ ವಚನಗಳಲ್ಲಿ ಪ್ರತಿಪಾದಿತವಾದ ತತ್ತ್ವದರ್ಶನ. ಕಾವ್ಯದರ್ಶನಗಳನ್ನು ವಿಶ್ಲೇಷಿಸಲಾಗಿದೆ. ಭಾರತದಲ್ಲಿ ಸವಾಲಕ್ಷ ಹೆಸರಿನ ಪ್ರದೇಶಗಳು, ನಾಡಿಯಲ್ಲಿ ಮೋಳಕೇರಿ ಬಾಂಧವರ ಓಣಿ, ಗವಿಗಳನ್ನು ಕುರಿತ ಮಾಹಿತಿ ಇಲ್ಲಿದೆ. ಡಾ. ಸುಧಾವೆಂಕಟರಾವ ಮನಸೂರರ ಮೂರನೆಯ ಮಂಗರಸ ಮತ್ತು ಅವನ ಕೃತಿಗಳು (೧೯೯೮) ಎಂಬ ಪ್ರಬಂಧ ಒಂದು ಸಣ್ಣ ಪ್ರದೇಶವಾದ ಕಲ್ಲಹಳ್ಳಿ ಪರಿಸರದ ಪಾಳೆಗಾರ ಮತ್ತು ಜೈನಕವಿಯಾದ ಮಂಗರಸನ ವ್ಯಕ್ತಿತ್ವ ಹಾಗೂ ಕವಿತ್ವವನ್ನು ಕಟ್ಟಿಕೊಡುತ್ತದೆ. ಸೂಪಶಾಸ್ತ್ರದಂತಹ ಲೌಕಿಕಶಾಸ್ತ್ರ ಕೃತಿಯನ್ನು ಕನ್ನಡಕ್ಕೆ ನೀಡಿದ ಈತನ ನೈಪುಣ್ಯತೆಯನ್ನು ಗುರುತಿಸುವಲ್ಲಿ ಮತ್ತು ಪೂರ್ವಪುರಾಣ ಹಾಗೂ ಈತನ ಕನ್ನಡ ಕೃತಿಗಳಿಗೆ ಇರುವ ವ್ಯತ್ಯಯಗಳನ್ನು ವಿಶ್ಲೇಷಿಸುವಲ್ಲಿ ಸಂಶೋಧಕರ ಶ್ರಮ ಆಳತವಾಗಿದೆ. ರಾಮನಸಂಗೀತವೆಂಬುದು ಈತನ ಮೊದಲ ಕೃತಿಯೆಂದು ಪ್ರತಿಪಾದಿಸಿರುವ ಸಂಗತಿ ಕುತೂಹಲಕಾರಿಯಾಗಿದೆ. ಜನ್ನ : ಒಂದು ಅಧ್ಯಯನ (೨೦೦೦) ಪ್ರಬಂಧದ ಡಾ. ಕೆ. ವೈ. ಶಿವಕುಮಾರ ಅವರು ಧಾರ್ಮಿಕ ಹಾಗೂ ರಾಜಕೀಯ ಹಿನ್ನೆಲೆಯನ್ನು ಬೆಳಸಿಕೊಂಡು ಬದುಕಿದ್ದ ಕವಿಯೊಬ್ಬನನ್ನು ಆತನ ಕೃತಿಗಳ ಉಗಮಸ್ಥಾನವನ್ನು ಶೋಧಿಸಿದ್ದಾರೆ. ಅನಂತನಾಥ ಪುರಾಣದ ಕಥಾ ಪರಂಪರೆಯನ್ನು ಕಟ್ಟಿಕೊಟ್ಟಿರುವುದು ಅಧ್ಯಯನ ಯೋಗ್ಯವಾಗಿದೆ. ಡಾ. ಪಿ. ಎಂ. ಹುಗ್ಗಿಯವರು ಷಡಕ್ಷರಿದೇವ : ಒಂದು ಅಧ್ಯಯನ ಎಂಬ ಕೃತಿಯಲ್ಲಿ ೧೭ನೆಯ ಶತಮಾನದಲ್ಲಿ ಜೀವಿಸಿದ್ದ ಷಡಕ್ಷರದೇವನ ಸಮಾಜಿಕ ಪ್ರಜ್ಞೆ, ಮಾನವೀಯ ಸಂವೇದನೆ ಹಾಗೂ ರಾಜಕೀಯ ದೃಷ್ಟಿಕೋನವನ್ನು ಆತನ ಕೃತಿಗಳ ಮೂಲಕ ವಿವೇಚಿಸಿದ್ದಾರೆ. ಇದೇ ಕವಿಯ ಸಂಸ್ಕೃತ ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಕುರಿತು ವಿವೇಚಿಸುವ ಕೃತಿ ಡಾ. ಡಿ. ಶೀಲಾಕುಮಾರಿಯವರದು (೧೯೯೫). ಕನ್ನಡ ಸಾಹಿತ್ಯಕ್ಕೆ ಸಂಸ್ಕೃತವೇ ಗುರಿ – ಗುರು ಎಲ್ಲಾ ಎಂಬ ರೂಢಿಯ ಮಾತು ಜನಜನಿತವಾಗಿದ್ದ ದಿನಮಾನಗಳಲ್ಲಿ ಕನ್ನಡವೇ ಸಂಸ್ಕೃತ ಸಾಹಿತ್ಯಕ್ಕೆ ಪ್ರೇರಣೆ ಎನ್ನುವಂತೆ ವ್ಯಾಖ್ಯಾನಿಸಲು ಆಧಾರಸ್ತಂಭವಾಗಿ ನಿಲ್ಲಬಲ್ಲ ಕವಿ ಷಡಕ್ಷರಿಯೆಂಬುದನ್ನು ಸಾಧಾರಪೂರ್ವಕವಾಗಿ ಹೇಳಿದ್ದಾರೆ. ಡಾ. ಎಫ್‌. ಟಿ. ಹಳ್ಳಿಕೇರಿಯವರ ಕೆರೆಯ ಪದ್ಮರಸ ಮತ್ತು ಆತನ ವಂಶಜರು : ಒಂದು ಅಧ್ಯಯನ (೧೯೯೬) ಒಬ್ಬ ಕವಿಯನ್ನು ಕೇಂದ್ರವಾಗಿಟ್ಟುಕೊಂಡು ಆತನ ಪರಿವಾರದ ಒಟ್ಟು ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಬದುಕನ್ನು ನಿರೂಪಿಸುವುದಾಗಿದೆ. ಸಾಹಿತ್ಯ, ಭಾಷೆ, ಸಮಾಜ, ಧರ್ಮ, ಸಂಸ್ಕೃತಿಗೆ ಈ ವಂಶಸ್ಥರ ಕೊಡುಗೆಯನ್ನು ವಿಶ್ಲೇಷಿಸುವಲ್ಲಿ ಸಮರ್ಪಕವಾದ ಪ್ರಯತ್ನ ನಡೆದಿದೆ. ಡಾ. ರಾಜೇಂದ್ರ ಅಣ್ಣಾನವರ ಅದೃಶ್ಯಕವಿ ಜೀವನ ಮತ್ತು ಕೃತಿಗಳು (೨೦೦೦) ಎಂಬ ಪ್ರಬಂಧ ನೂತನ, ಪುರಾತನ ಶರಣರ ಬದುಕನ್ನು ಚಿತ್ರಿಸುವ ಪ್ರೌಢದೇವರಾಯನ ಕಾವ್ಯವನ್ನು ಆತನ ಕಾಲದ ಸಾಂಸ್ಕೃತಿಕ ಚಿತ್ರಣವನ್ನು ವಿಶ್ಲೇಷಿಸುತ್ತದೆ.

ಯುಗಧರ್ಮಕ್ಕೆ ಅನ್ವಯಿಸಿ ವ್ಯಾಖ್ಯಾನಿಸುವ ಉಪಕ್ರಮಗಳಿಂದಾಗಿ ಒಂದೇ ಕಥೆ ಇಲ್ಲವೇ ಕಥಾನಾಯಕ ಬೇರೆ ಬೇರೆ ಕವಿಗಳಿಗೆ ವಸ್ತುವಾಗಿರುವುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಡಾ. ಪದ್ಮಾಶೇಖರ ಅವರ ಕನ್ನಡದಲ್ಲಿ ಜೀವಂಧರ ಕಥಾಸಾಹಿತ್ಯ (೧೯೯೬) ಎಂಬ ಪ್ರಬಂಧ ೨೫ನೇ ಕಾಮದೇವ ಜೀವಂಧರನ ಕುರಿತು ರಚನೆಗೊಂಡ ಸಂಸ್ಕೃತ, ಪ್ರಾಕೃತ, ತಮಿಳು ಕೃತಿಗಳನ್ನು ಮತ್ತು ಕನ್ನಡ ಜೀವಂಧರ ಚರಿತೆಗಳ ರಚನೆಕಾರರ ಇತಿವೃತ್ತವನ್ನು, ಕಾವ್ಯಗಳ ತೌಲನಿಕ ವಿವೇಚನೆಯನ್ನು ಮಾಡಲಾಗಿದೆ. ಒಟ್ಟು ಜೈನಕಥಾ ಸಾಹಿತ್ಯ ಪರಂಪರೆಯ ಅದ್ಯಯನಕ್ಕೆ ತಕ್ಕ ಪ್ರೇವೇಶಿಕೆಯನ್ನು ಹಾಕಿರುವುದು ಈ ಪ್ರಬಂಧದ ವಿಶೇಷವಾಗಿದೆ. ಡಾ. ಎನ್.ವಿ. ವಿಮಲ ಅವರ ಹರಿಶ್ಛಂದ್ರನ ಕಥೆಯ ಬೆಳವಣಿಗೆ : ಒಂದು ಅಧ್ಯಯನವು ಸಂಸ್ಕೃತ, ಉಪನಿಷತ್ತು, ಪುರಾಣ, ಮಹಾಕಾವ್ಯ ಹಾಗೂ ಆಧುನಿಕವಾಗಿ ಪು. ತಿ. ನ. ಅವರ ಕೃತಿಗಳಲ್ಲಿ ಹೇಗೆ ಹೊಸ ರೂಪದಲ್ಲಿ ಬೆಳವಣಿಗೆ ಪಡೆದುಕೊಂಡಿದೆಂಬ ವಿವರಣೆ ಮಾತ್ರವಿದೆ. ಈ ಬದಲಾವಣೆ ಕಾರಣವಾಗಿರಬಹುದಾದ ಸಂಗತಿಗಳನ್ನು ಶೋಧಿಸುವಲ್ಲಿ ಸಂಶೋಧಕರು ವಿಫಲರಾಗಿದ್ದಾರೆ. ಕನ್ನಡ ಮಹಾಕಾವ್ಯಗಳಲ್ಲಿ ಸೀತೆಯ ಪಾತ್ರ (೧೯೯೫) ಪ್ರಬಂಧದಲ್ಲಿ ಡಾ. ಮಂದಾಕಿನಿ ಭೀಮಸೇನರಾವ್ ತವಗ ಅವರು ರಾಮಾಯಣ ಪರಂಪರೆ, ಸೀತೆಯ ಪಾತ್ರ ಕಲ್ಪನೆ, ಹಾಗೂ ಕನ್ನಡ ಕಾವ್ಯಗಳಲ್ಲಿ ಸೀತೆಯ ಪಾತ್ರ ಚಿತ್ರಣ ಎಂದು ವರ್ಗಿಕರಿಸಿಕೊಂಡು ಅಧ್ಯಯನ ಮಾಡಿದ್ದಾರೆ. ಶಿಷ್ಟ ಮಹಾಕಾವ್ಯಗಳನ್ನು ಅಧ್ಯಯನಕೆ ಅಳವಡಿಸಿಕೊಂಡಿರುವ ಸಂಶೋಧಕರು ಜನಪದ ಮಹಾಕಾವ್ಯಗಳನ್ನು ಸೇರಿಸಿಕೊಂಡಿದ್ದರೆ ಅಧ್ಯಯನಕ್ಕೆ ಪರಿಪೂರ್ಣತೆ ಪ್ರಾಪ್ತವಾಗುತ್ತಿತ್ತು. ಡಾ. ಸರಸ್ವತಿ ವಿಜಯಕುಮಾರ ಅವರ ಕನ್ನಡ ಆದಿತೀರ್ಥಂಕರ ಚರಿತೆಗಳು : ತೌಲನಿಕ ಅಧ್ಯಯನ (೧೯೯೪) ಸಂಸ್ಕೃತ ಪ್ರಾಕೃತ ಹಾಗೂ ಕನ್ನಡ ಆದಿಪುರಾಣಗಳನ್ನು ತುಲನಾತ್ಮಕವಾಗಿ ನೋಡುವುದಾಗಿದೆ. ಹೀಗೆ ಭಿನ್ನಭಾಷೆಗಳಲ್ಲಿಯ ಪುರಾಣಗಳ ಸಾದೃಶ್ಯ – ವೈದೃಶ್ಯಗಳನ್ನು ಕೂಡಿಹಾಕಿ ವಿವರಣಾತ್ಮಕ ಯಾದಿಯನ್ನು ಕೊಡುವುದರಲ್ಲಿಯೇ ಸಂಶೋಧಕರು ತೃಪ್ತಿಹೊಂದಿದ್ದಾರೆ. ಈ ಭಿನ್ನ ಭಾಷೆಯ ಪುರಾಣಗಳು ಹೇಗೆ ಪೂರಕ ಎಂಬ ತಾತ್ವಿಕ ಚರ್ಚೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿತ್ತು. ಕನ್ನಡ ಸಾಹಿತ್ಯದಲ್ಲಿ ಕರ್ಣ (೧೯೯೯) ಪ್ರಬಂಧದ ಕತೃ ಡಾ. ವಿ. ಎಸ್. ಮಾಳಿಯವರು. ವ್ಯಾಸಭಾರತವನ್ನು ಪ್ರಧಾನ, ಕನ್ನಡ ಪ್ರಾಚೀನ ಮತ್ತು ಆಧುನಿಕ ಕಾವ್ಯಗಳನ್ನು ಪೋಷಕ ಮತ್ತು ವಿಮರ್ಶಾ ಲೇಖನಗಳನ್ನು ಪೂರಕ ಸಾಮಾಗ್ರಿಗಳನ್ನಾಗಿ ಬಳಸಿಕೊಂಡು ಕರ್ಣನ ಚರಿತ್ರೆ – ಚಾರಿತ್ರಿಕ ಬದುಕನ್ನು ಗುರುತಿಸಿರುವುದು ಅಧ್ಯಯನ ಶಿಸ್ತಿಗೆ ನಿದರ್ಶನವಾಗಿದೆ. ಕರ್ಣ ಪ್ರಾತ್ರದ ಹಿಂದಿರುವ ಜಾಗ, ನನ್ನಿ, ನಿಷ್ಠೆಗಳನ್ನು ಗುರುತಿಸುವುದರ ಮೂಲಕ ಕರ್ಣ ನಾಡಿನ ಸಾಂಸ್ಕೃತಿಕ ಪ್ರತಿನಿಧಿಯೆಂಬುದನ್ನು ವ್ಯಾಖ್ಯಾನಿಸಿದ್ದಾರೆ. ಡಾ. ವೈ. ಸಿ. ಬಾನುಮತಿಯವರ ಕನ್ನಡದಲ್ಲಿ ವರ್ಧಮಾನ ಸಾಹಿತ್ಯ (೨೦೦೦) ಕೃತಿಯು ೨೪ನೆಯ ತೀರ್ಥಂಕರನಾದ ವರ್ಧಮಾನ ಮಹಾವೀರನನ್ನು ತೌಲನಿಕವಾಗಿ ಅಧ್ಯಯನಕ್ಕೊಳಪಡಿಸಲಾಗಿದೆ. ವರ್ಧಮಾನನ ಕಥಾಪರಂಪರೆಯಲ್ಲಿ ಗುಣಭದ್ರ, ನಾಗವರ್ಮ ಹಾಗೂ ಪದ್ಮಕವಿಗಳ ಮಾರ್ಗಗಳನ್ನು ಗುರುತಿಸಿರುವುದು ಸಂಶೋಧಕರ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಗಾಗೆಯೇ ಡಾ. ರಾಜಶೇಖರ ಈ. ಇಚ್ಚಂಗಿಯವರ ಪಾರ್ಶ್ವನಾಥ ಪುರಾಣ (೨೦೦೦) ದಲ್ಲಿ ೨೩ನೆಯ ತೀರ್ಥಂಕರನಾದ ಪಾರ್ಶ್ವನಾಥನನ್ನು ಕೇಂದ್ರವಾಗಿಟ್ಟುಕೊಂಡು ರಚನೆಯಾದ ಕೃತಿಗಳ ಕಥಾ ಸಂಯೋಜನೆಯನ್ನು ಗುರುತಿಸಲಾಗಿದೆ.

ಕೃತಿಗಳ ಹೆಸರಿನ ಶೀರ್ಷಿಕೆಯೊಂದಿಗೆ ಅಧ್ಯಯನ ಕೈಗೊಂಡ ಕೃತಿಗಳಲ್ಲಿ ಡಾ. ಅನ್ನಪೂರ್ಣ ಎಂ. ಜಾಲವಾದಿ ಅವರ ಶಂಕರದಾಸೀಮಯ್ಯ ಪುರಾಣ (೧೯೯೯) ಬಸವ ಪೂರ್ವಯುಗದ ಶರಣನೊಬ್ಬನ ಚರಿತ್ರೆಯನ್ನು ಸೈದ್ಧಾಂತಿಕವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ. ಕನ್ನಡದ ಮೊದಲ ಗದ್ಯ ಕೃತಿಯಾದ ವಡ್ಡಾರಾಧನೆ ಕುರಿತು ಎರಡು ಪ್ರಬಂಧಗಳು ಪ್ರಕಟಗೊಂಡಿವೆ. ವಡ್ಡಾರಾಧನೆ : ಸಮಗ್ರ ಆಧ್ಯಯನ (೧೯೯೯) ಎಂಬುದು ಡಾ. ಹಂಪನಾ ಅವರು ೧೯೮೧ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್‌ ಪಡೆದ ಕೃತಿ. ಅತ್ಯಂತ ಪ್ರಾಚೀನ ಹಾಗೂ ಮಹತ್ವದ ಓಲೆಗರಿಯನ್ನು ಶೋಧಿಸಿ ವಡ್ಡಾರಾಧನೆಯ ಕರ್ತೃ ಬ್ರಾಜಿಷ್ಣು, ಆತನ ಕಾಲ ಕ್ರಿ.ಶ. ೮೦೦ ಎಂದು ಪ್ರತಿಪಾದಿಸುವುದರೊಂದಿಗೆ ಹತ್ತು ವರ್ಷಗಳ ನಂತರ ಹೊಸ ವಿಚಾರಗಳನ್ನು ಸೇರ್ಪಡೆ ಮಾಡಿ ಪ್ರಕಟಿಸಿದ್ದಾರೆ. ಆರಾಧನಾ ಕರ್ನಾಟಕ ಟೀಕಾ ಎಂಬುದನ್ನು ಅನುಬಂಧದಲ್ಲಿ ನೀಡಿ, ಬೃಹತ್ತಾದ ಈ ಕೃತಿಯಿಂದ ೧೯ ಕಥೆಗಳು ಬೇರೆಯಾದ ಕಾರಣ? ಬೇರ್ಪಡಿಸಿದ ವ್ಯಕ್ತಿ ಯಾರು? ಮತ್ತು ಯಾವಾಗ? ಎಂಬ ಪ್ರಶ್ನೆಗಳಿಂದ ಒಟ್ಟು ವಡ್ಡಾರಾಧನೆ ರಚನೆಯ ಹಿಂದೆ ಘಟಿಸಿರಬಹುದಾದ ಪರಿಸರವನ್ನು ಸೂಕ್ಷ್ಮವಾಗಿ ಭೇದಿಸುತ್ತಾ ನಡೆದಿರುವುದು ವಿದ್ವತ್ ಪೂರ್ಣವಾಗಿದೆ. ಡಾ. ಬಿ.ಕೆ. ಖಡಬಡಿ ಅವರ ವಡ್ಡಾರಧನೆ (೧೯೯೯) (ಕನ್ನಡ ಅವತರಣಿಕೆ) ಎಂಬುದು ಧಾರ್ಮಿಕ, ಸಾಮಾಜಿಕ ಹಾಗೂ ಆ ಕಾಲದ ಸಾಂಸ್ಕೃತಿಕ ಮಹತ್ವವನ್ನು ತಿಳಿಸುವುದಾಗಿದೆ. ವಿಶೇಷವಾಗಿ ಭಗವತೀ ಆರಾಧನೆ, ವಡ್ಡಾರಾಧನೆ ಹಾಗೂ ಕನ್ನಡ ವಡ್ಡಾರಾಧನೆ ಕಥೆಗಳ ಉದ್ದೇಶ, ತಂತ್ರ, ಮತ್ತು ಜೈನ ಧರ್ಮದ ಪ್ರಸರಣ ಮಾಧ್ಯಮವಾಗಿ ಹೇಗೆ ನಿಲ್ಲುತ್ತವೆಂಬುದನ್ನು ಚರ್ಚಿಸಲಾಗಿದೆ. ಡಾ. ಕಮಲಾ ಹಂಪನಾ ಅವರ ತುರಂಗಭಾರತ : ಒಂದು ಅಧ್ಯಯನ (೧೯೯೬) ಅಲಕ್ಷಿತ ಕಾವ್ಯವೊಂದನ್ನು ಸಂಶೋಧನ ಸಮಸ್ಯೆಯನ್ನಾಗಿಸಿಕೊಂಡು ಅಧ್ಯಯನ ಮಾಡಿರುವುದು. ತರಂಗ ಭಾರತದ ನೆಪದಲ್ಲಿ ಸಂಸ್ಕೃತ, ಪ್ರಾಕೃತ ಹಾಗೂ ಕನ್ನಡ ಭಾರತಗಳ ತುಲನಾತ್ಮಕ ಅಧ್ಯಯನ ಕೈಗೊಂಡಿರುವುದು ವಿಶೇಷ. ಜಿನಸೇನನ ಹರಿವಂಶಾ ಪುರಾಣ : ಒಂದು ಅಧ್ಯಯನ (೧೯೯೫)ದಲ್ಲಿ ಡಾ. ಬಿ. ಎನ್. ಸುಮಿತ್ರಾಬಾಯಿಯವರು ೨೨ನೆಯ ತೀರ್ಥಂಕರನಾದ ನೇಮಿನಾಥನ ಚರಿತ್ರೆಯೊಂದಿಗೆ ಕೃಷ್ಣಚರಿತ್ರೆ ಮತ್ತು ಪಾಂಡವ ಚರಿತ್ರೆಗಳಂತಹ ಜೈನ ಮಹಾಭಾರತಗಳ ಪರಂಪರೆಯನ್ನು ಗುರುತಿಸಲು ಈ ಕೃತಿ ಹೇಗೆ ಸಹಕಾರಿಯಾಗುತ್ತದೆಂಬುದನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ್ದಾರೆ. ಜೈನ ಕೃತಿಗಳ ಅಧ್ಯಯನದಿಂದ ಭಾರತೀಯ ಸಾಂಸ್ಕೃತಿಕ ತಿಳುವಳಿಕೆಯನ್ನು ವಿಸ್ತರಿಕೊಳ್ಳುವ ಅಗತ್ಯವನ್ನು ಈ ಪ್ರಬಂಧ ಒತ್ತಿಹೇಳುತ್ತದೆ. ಹೊನ್ನಮ್ಮನ ಹದಿಬದೆಯಧರ್ಮ (೧೯೯೫) ಕುರಿತು ಅಧ್ಯಯನ ಮಾಡಿರುವ ಡಾ. ಮಧುವೆಂಕಾರೆಡ್ಡಿಯವರು ಸಂಪ್ರದಾಯಕವಾದ ಸ್ತ್ರೀ ಸಂವೇದನೆಗಳನ್ನು ಹೊನ್ನಮ್ಮ ತನ್ನ ಕಾವ್ಯದಲ್ಲಿ ಪ್ರತಿಪಾದಿಸಿದ್ದರೂ, ಸ್ತ್ರೀ ಪರ ನಿಲುವುಗಳನ್ನು ಹೆಕ್ಕಿ ತೆಗೆದಿದ್ದಾರೆ. ಡಾ. ಎ. ರಂಗಸ್ವಾಮಿಯವರ ಚಾವುಂಡರಾಯನ ಲೋಕಾಪಕಾರ (೧೯೯೬) ಕೃತಿಯು ಒಂದು ಶಾಸ್ತ್ರ ಸಮುಚ್ಛಯ. ಇದರ ವಸ್ತು ವೈವಿಧ್ಯಮಯ. ವಾಸ್ತು, ನವಪಟಲ, ಪಂಚಾಂಗ, ಉತ್ಪಾತ, ವೃಕ್ಷಾಯುರ್ವೇದ ಸೂಪಶಾಸ್ತ್ರ, ನರಾದಿವೈದ್ಯ, ವಿಷವೈದ್ಯ ಶಕುನ ಮುಂತಾದ ಹಲವು ಶಾಸ್ತ್ರಗಳು ಪ್ರತಿಪಾದಿತವಾಗಿವೆ. ಇವೆಲ್ಲವುಗಳನ್ನು ತುಂಬಾ ವ್ಯವಸ್ಥಿತವಾಗಿ ಚರ್ಚೆಗೆ ತೊಡಗಿಸಿಕೊಂಡಿದ್ದಾರೆ. ಈ ಕೃತಿಯ ಜಾನಪದ ಸೊಡರನ್ನು ಗುರುತಿಸಿ ಅದರ ಸ್ಥಾನ ನಿರ್ದೇಶನ ಮಾಡಿರುವುದು ಗಮನಿಸಬೇಕಾದ ಸಂಗತಿ.

ರಗಳೆ ಮತ್ತು ವಚನಗಳ ಸಾಹಿತ್ಯಕ ಅಧ್ಯಯನ ಮಾಡಿದ ಎರಡು ಕೃತಿಗಳೆಂದರೆ ಡಾ. ಕೆ.ಪಿ. ಮಹಾದೇವಯ್ಯನವರ ಹರಿಹರನ ರಗಳೆಗಳ ಸಾಹಿತ್ಯಿಕ ಅಧ್ಯಯನ (೧೯೯೯) ಮತ್ತು ಡಾ. ಸಿ.ವಿ. ಪ್ರಭುಸ್ವಾಮಿ ಮಠರ ಬಸವಣ್ಣನವರ ವಚನಗಳ ಸಾಹಿತ್ಯಕ ಅಧ್ಯಯನ (೧೯೯೬). ಮೊದಲನೆಯದು ಹರಿಹರನ ಕಥೆಗಾರಿಕೆ, ಶೈಲಿ, ಅಭಿವ್ಯಕ್ತಿ, ಹಾಗೂ ವಸ್ತು ಕುರಿತು ಚರ್ಚಿಸಿದರೆ, ಎರಡನೆಯದು ವಚನಗಳ ರೂಪ, ಆಕೃತಿ, ರಾಚನಿಕ ಸ್ವರೂಪ, ಭಾಷಾ ನಿರ್ವಹಣೆ ಕುರಿತು ವಿಶ್ಲೇಷಿಸುತ್ತದೆ. ಪ್ರಾಚೀನ ಕನ್ನಡಜೈನ ಸಾಹಿತ್ಯದಲ್ಲಿ ಜಾನಪದ ಕಥೆ (೧೯೯೪) ಗಳನ್ನು ಕುರಿತು ಅಧ್ಯಯನ ಮಾಡಿರುವ ಡಾ. ಎಂ. ಎ. ಜಯಚಂದ್ರ ಅವರು ೯ನೇ ಶತಮಾನದ ಶ್ರೀವಿಜಯ ಆದಿಯಾಗಿ, ೧೯ನೆಯ ಶತಮಾನದ ಕವಿಚಂದ್ರಯ್ಯನವರೆಗೆ ಪ್ರಕಟಗೊಂಡ ಜೈನಕೃತಿ ಹಾಗೂ ಹಸ್ತಪ್ರತಿಗಳನ್ನು ಬಳಸಿಕೊಂಡಿದ್ದಾರೆ. ಇಲ್ಲಿಯ ಜಾನಪದ ಕಥೆಗಳಿಗೆ ಸಂವಾದಿಯಾದ ಬೇರೆ ಸಾಹಿತ್ಯದಲ್ಲಿರುವ ಕಥೆಗಳನ್ನು ಸೂಚಿಸಿರುವುದು ಮುಂದಿನ ಅಧ್ಯಯನಕಾರರಿಗೆ ತೋರ್ಬೆರಳಾಗಿದೆ. ಡಾ. ವ್ಹಿ. ಜಿ. ಪೂಜಾರ ಅವರು ವೀರಶೈವ ಸಾಹಿತ್ಯದಲ್ಲಿ ಪವಾಡ ಕಥೆಗಳು (೧೯೯೭) ಎಂಬ ಪ್ರಬಂಧದಲ್ಲಿ ೧೨೦೦ ರಿಂದ ೧೬೭೨ರ ವರೆಗೆ ವೀರಶೈವ ಸಾಹಿತ್ಯದಲ್ಲಿ ಕಂಡುಬರುವ ಪವಾಡಗಳ ಕಥೆಗಳನ್ನು ವಿಶ್ಲೇಷಿಸಿದ್ದಾರೆ. ಪವಾಡದ ಕಲ್ಪನೆ, ಆಶಯಗಳಲ್ಲದೆ ಸಾಹಿತ್ಯ ರಚನೆಗಳಾಗಿ ಬೆಳೆದುಬಂದ ಬಗೆಯನ್ನು ಗುರುತಿಸಲಾಗಿದೆ. ಹರಿದಾಸ ಆಂದೋಲನ (೧೯೯೧) ಕೃತಿಯನ್ನು ರಚಿಸಿದ ಡಾ.ಎನ್. ಕೆ. ರಾಮಶೇಷನ್ ಅವರು ತುಂಬಾ ವ್ಯಾಪಕವಾದ ವಿಷಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಪರಿಣಾಮವಾಗಿ ಸಹಜವಾಗಿಯೇ ಹಲಕೆಲ ಕೊರತೆಗಳು ತಲೆಹಾಕಿವೆ. ಹರಿದಾಸ ಪರಂಪರೆಯ ಸ್ಥೂಲ ಪರಿಚಯ ಈ ಕೃತಿಯ ಆಶಯ. ಶರಣಬಸವೇಶ್ವರರು ಹಾಗೂ ಅವರ ಪರಿಸರದ ಸಾಹಿತ್ಯ (೨೦೦೦) ಪ್ರಬಂಧವನ್ನು ಬರೆದ ಡಾ. ಎಸ್. ಎಂ. ಹೀರೇಮಠರು ೧೮ನೆಯ ಶತಮಾನದಲ್ಲಿ ಜೀವಿಸಿದ ಶರಣಬಸವೇಶ್ವರರನ್ನು ಕೇಂದ್ರವಾಗಿರಿಸಿಕೊಂಡು ಅವರ ಪರಿಸರದಲ್ಲಿ ಬರುವ ಕಡಕೊಳ್ಳ ಮಡಿವಾಳಪ್ಪ, ಖೈನೂರು ಕೃಷ್ಣಪ್ಪ, ತೆಲುಗುಬಾಳು ರ್ಯಾವಪ್ಪ, ಮುಂತಾದ ತತ್ವಪದಕಾರರನ್ನು ಅಧ್ಯಯನ ಮಾಡಿದ್ದಾರೆ. ತತ್ವಪದಗಳ ಮೂಲಕ ಸಾಹಿತ್ಯ – ಸಂಸ್ಕೃತಿಯ ಹೆಚ್ಚುಗಾರಿಕೆಯನ್ನು ಮಾಡಿದ ಹಲವು ಜನರಲ್ಲಿ ಕೂಡಲೂರು ಬಸವಲಿಂಗ ಶರಣರು ಒಬ್ಬರು. ಇವರನ್ನು ಕುರಿತು ಡಾ. ಎಂ. ಜಿ. ಶಾಸ್ತ್ರೀಮಠ (೧೯೯೨)ರು ಆಧ್ಯಯನ ಮಾಡಿದ್ದಾರೆ. ಪ್ರಸ್ತುತ ಅಧ್ಯಯನದಲ್ಲಿ ಬಸವಲಿಂಗಶರಣರ ಕುರಿತಾದ ಮೂರು ಅಧ್ಯಾಯಗಳು ಬಹುಮುಖ್ಯವೆನಿಸಿದರೆ, ಬಸವಪೂರ್ವದಿಂದ ೧೮ನೆಯ ಶತಮಾನದ ವರೆಗಿನ ಶರಣರ ಕಾರ್ಯಗಳನ್ನು ಪ್ರಸ್ತಾಪಿಸಿರುವ ಮೊದಲ ಅಧ್ಯಾಯ ಕೃತಿಗೆ ಅನಾವಶ್ಯಕ ಭಾರವೆನಿಸಿದೆ. ಗ್ರಾಮೀಣ ಬದುಕಿನ ದಟ್ಟು ಅನುಭವದ ಶರಣನಿಗೆ ಸಾಹಿತ್ಯ ಚರಿತ್ರೆಯಲ್ಲಿ ಸ್ಥಾನ ನಿರ್ದೇಶನ ಮಾಡಿರುವುದು ಸೂಕ್ತವಾಗಿದೆ. ಡಾ. ಮಹಾದೇವಿ ಮಾಲಿಪಾಟೀಲ (೧೯೯೯)ರ ಅಂಬುಗಿ ಚನ್ನಮಲ್ಲಕವಿ ಜೀವನ ಮತ್ತು ಕೃತಿಗಳು ಎಂಬ ಕೃತಿ ಉಪೇಕ್ಷಿತ ತತ್ತ್ವಪದಕಾರನ ಸಾಧನೆಯನ್ನು ಗುರುತಿಸುವುದಾಗಿದೆ. ಡಾ. ಶ್ರೀಮತಿಯವರ ಹಳಗನ್ನಡ ಸಾಹಿತ್ಯಾಧ್ಯನ ಸಮೀಕ್ಷೆ (೧೯೯೩) ಕೃತಿಯಲ್ಲಿ ಒಂದು ನೂರು ವರ್ಷಗಳಲ್ಲಿ ಹಳಗನ್ನಡ ಸಾಹಿತ್ಯಾಧ್ಯಯನ ನಡೆದುಬಂದ ದಾರಿಯನ್ನು ಸಿಂಹಾವಲೋಕನ ಮಾಡಿದ್ದಾರೆ. ಪ್ರಾಚೀನ ಸಾಹಿತ್ಯಾಧ್ಯಯನದ ಗತಿಶೀಲತೆಯನ್ನು ತಿಳಿದುಕೊಳ್ಳುವುದರಿಂದ ಈ ಹೊತ್ತಿನ ಅಧ್ಯಯನಗಳು ಹೇಗಿರಬೇಕೆಂಬುದರ ಬಗ್ಗೆ ಚಿಂತನೆ ಮಾಡುವುದು ಅನಿವಾರ್ಯ ಹಾಗೂ ಅಗತ್ಯ. ಈ ದೃಷ್ಟಿಯಿಂದ ಪ್ರಸ್ತುತ ಪ್ರಬಂಧ ಗಮನಾರ್ಹವಾದುದು. ಪ್ರಾಚೀನವಿರಲಿ, ಆಧುನಿಕವಿರಲಿ, ಅದು ತನ್ನ ಓದಿನ ಸಾಫಲ್ಯವನ್ನು ಕೇಳುಗ ಸಮುದಾಯದ ಮೂಲಕವೇ ಕಂಡುಕೊಳ್ಳುತ್ತಿತ್ತು ಎಂಬುದನ್ನು ಸಂಶೋಧಕರು ಇಲ್ಲಿ ಗುರುತಿಸಿದ್ದಾರೆ.

. ಆಧುನಿಕ: ಪಾಶ್ಚಾತ್ಯ ಶಿಕ್ಷಣ ಹಾಗೂ ಅಧ್ಯಯನ ಕ್ರಮಗಳಿಂದ ಕನ್ನಡದಲ್ಲಿ ವಿನೂತನ ಯುಗವೊಂದು ತೆರೆದುಕೊಂಡಿತು. ಈ ಯುಗದ ಪ್ರವರ್ತಕರೆಂಬಂತೆ ಅನೇಕ ಜನ ಕರ್ನಾಟಕದ ಚಿಂತಕರು ನಾಡು – ನುಡಿಗೆ ಹೊಸ ಕಾಯಕಲ್ಪವನ್ನು ನೀಡಲು ಮುಂದಾದರು. ಬಿ.ಎಂ.ಶ್ರೀ., ಗೋವಿಂದಪೈ, ಪಂಜೆ, ಆಲೂರ, ಶಂಬಾ, ಹರ್ಡೇಕರ್, ಹಳಕಟ್ಟಿ, ಡೆಪ್ಯುಟಿ, ಹುಯಿಲಗೋಳ, ಗಳಗನಾಥ, ಮಧುರಚೆನ್ನ, ಪು.ತಿ.ನ., ಎಂ. ಆರ್. ಶ್ರೀ, ಮಾಸ್ತಿ, ಕಾರಂತ, ಕುವೆಂಪು, ಬೇಂದ್ರೆ, ನಾಟಕಕಾರರಾದ ಗರುಡ, ಕೆರೂರು, ನಲವಡಿ ಶ್ರೀಕಂಠಶಾಸ್ತ್ರಿ ಮುಂತಾದ ಹಿರಿಯ ತಲೆಮಾರಿನವರಲ್ಲದೆ ತಿಪ್ಪೇರುದ್ರಸ್ವಾಮಿ, ಭೂಸನೂರಮಠ, ಗೋಕಾಕ, ಪುರಾಣಿಕ, ಬಣಗಾರ, ಕಟ್ಟೀಮನಿಯವರಂತಹ ನೂರಾರು ಜನರನ್ನು ಹೆಸರಿಸಬಬುದು. ಇವರೆಲ್ಲರ ಸಾಧನೆಯನ್ನು ಅನಾವರಣಗೊಳಿಸುವ ಅಧ್ಯಯನಗಳು ನಡೆದಿವೆ. ಕಳೆದ ಹತ್ತುವರ್ಷಗಳಲ್ಲಿ ಇಂತಹ ಪ್ರಬಂಧಗಳ ಸಂಖ್ಯೆ ಅಧಿಕ. ಇದರಿಂದ ನಾಡಿನಲ್ಲಿ ಆಂಗ್ಲರ ಆಡಳಿತದ ಪರಿಸರ, ಪರಿಣಾಮ, ನಂತರದ ವಿದ್ಯಮಾನಗಳನ್ನು ಐತಿಹಾಸಿಕವಾಗಿ ನೋಡುವುದರ ಜೊತೆಗೆ ನಮ್ಮ ಜ್ಞಾನ ಶಾಖೆಗಳು ಹೇಗೆ ವೈಚಾರಿಕ ಶಿಸ್ತುಗಳ ಕಡೆಗೆ ತೆರೆದುಕೊಂಡುವೆಂಬುದನ್ನು ತಿಳಿದುಕೊಳ್ಳಲು ಅನುವು ಮಾಡಿಕೊಟ್ಟಂತಾದಿದೆ.

ನಾನು ಗಮನಿಸಿದಂತೆ ಕನ್ನಡದ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡ ವಿದೇಶಿಯನ್ನು ಪರಿಚಯಿಸುವ ಎರಡು ಕೃತಿಗಳೆಂದರೆ ಡಾ. ನೊರೋನ ಅವರ ಕನ್ನಡ ಧಾರ್ಮಿಕ ಸಾಹಿತ್ಯಕ್ಕೆ ಕ್ರೈಸ್ತಮಿಶನರಿಗಳ ಕೊಡುಗೆ (೧೯೯೬), ಡಾ. ಕೆ. ಎಂ. ಮ್ಯಾಥ್ಯೋ ಅವರ ರೆ. ಎಫ್‌. ಕಿಟಲ್‌ : ಒಂದು ಸಮಗ್ರ ಅಧ್ಯಯನ (೧೯೯೪). ಮೊದಲನೆಯದು ೧೭ನೆಯ ಶತಮಾನದ ಮಧ್ಯಭಾಗದಿಂದ ೧೯೩೨ರ ವರೆಗೆ ೧೩೦ ಧಾರ್ಮಿಕ ಗ್ರಂಥಗಳನ್ನು ಕನ್ನಡಕ್ಕೆ ನೀಡಿದ ಕೆಥೋಲಿಕ ಪಂಥದ ಸಾಧನೆಯನ್ನು ವಿಶ್ಲೇಷಿಸುವುದಾಗಿದೆ. ಎರಡನೆಯದು ಕ್ರೈಸ್ತ ವಿದ್ವಾಂಸರಲ್ಲಿ ಅಗ್ರಗಣ್ಯರಾದ ರೆ. ಎಫ್. ಕಿಟಲ್‌ರು ಧರ್ಮಪ್ರಚಾರವನ್ನು ಬದಿಗಿರಿಸಿ ಕನ್ನಡ ಭಾಷೆ, ನಿಘಂಟು, ವ್ಯಾಕರಣ ಕ್ಷೇತ್ರಕ್ಕೆ ತಮ್ಮನ್ನು ಮೀಸಲಾಗಿರಿಸಿಕೊಂಡಿದ್ದರ ಉದ್ದೇಶ, ಅನಿವಾರ್ಯತೆಗಳನ್ನು ಐತಿಹಾಸಿಕವಾಗಿ ವಿಶ್ಲೇಷಿಸುವಲ್ಲಿ ಈ ಕೃತಿ ವಿಫಲವಾಗಿದೆನ್ನಬಹುದು.

ಡಾ. ಜಿ. ಡಿ. ಜೋಶಿಯವರ ಹುಯಿಲಗೋಳ ನಾರಾಯಣರಾಯರು ಜೀವನ ಗಾಹೂ ಸಾಹಿತ್ಯ (೧೯೯೬) ಎಂಬ ಕೃತಿ ಕರ್ನಾಟಕ ಏಕೀಕರಣ, ರಾಷ್ಟೀಯ ಚಳುವಳಿಯಲ್ಲಿ ಇವರ ಪಾತ್ರವನ್ನು ಪರಿಚರಿಸುತ್ತದಲ್ಲದೆ, ಇವರ ಗದ್ಯ, ಕಾವ್ಯ, ನಾಟಕ ಸಾಹಿತ್ಯವನ್ನು ವಿಶ್ಲೇಷಿಸುತ್ತದೆ. ಆದರೆ ನಾಡಿನ ಏಕೀಕರಣದ ಸಂದರ್ಭದಲ್ಲಿ ಇವರ ಸಾಹಿತ್ಯದ ಜರೂರತು ಏನಿತ್ತೆಂಬುದರ ಕಾರಣವನ್ನು ಅಧ್ಯಯನ ಪೂರ್ಣವಾಗಿ ಕಟ್ಟಿಕೊಡಬಹುದಾಗಿತ್ತು. ಹಾಗೆಯೇ ಗಾಂದೀವಾದಿ, ಸಮಾಜಕಾರ್ಯಕರ್ತ ದಿನಕರದೇಸಾಯಿಯವರ ಬದುಕು – ಬರಹವನ್ನು ಕುರಿತು ಡಾ. ಶ್ರೀಪಾದಶೆಟ್ಟಿಯವರು (೧೯೯೬) ಪ್ರಬಂಧ ರಚಿಸಿದ್ದಾರೆ. ದೇಸಾಯಿಯವರ ಕಾವ್ಯ, ಚೌಪದಿ, ಶಿಶುಗೀತೆ, ಕೊಂಕಣಿಕಾವ್ಯ, ಪ್ರವಾಸಕಥನ ಹಾಗೂ ಸಂಶೋಧನೆಗಳಂತಹ ಸಾಹಿತ್ಯಕ ಸಾಧನೆಯನ್ನು ಮತ್ತು ಶಿಕ್ಷಣ, ಪತ್ರಿಕೋದ್ಯಮ, ಕಾರ್ಮಿಕ ಹಾಗೂ ರೈತಾಪಿ ಹೋರಾಟದಂತಹ ಸಾರ್ವಜನಿಕ ಸೇವೆಯನ್ನು ವಿಪುಲ ಮಾಹಿತಿಗಳಿಂದ ಚರ್ಚಿಸಿದ್ದಾರೆ.

ಕನ್ನಡ ಕಥಾ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಮಾಸ್ತಿಯವರು ವಿಮರ್ಶಾ ಕ್ಷೇತ್ರದಲ್ಲೂ ಹೆಸರು ಮಾಡಿದವರು. ಹೀಗಾಗಿ ಡಾ. ಜಿ. ಎಂ. ಹೆಗಡೆಯವರ ಮಾಸ್ತಿಯವರ ವಿಮರ್ಶೆ : ಒಂದು ಅಧ್ಯಯನ (೧೯೯೧) ಎಂಬ ಪ್ರಬಂಧ ಅವರ ವಿಮರ್ಶಾ ಪ್ರಕಾರಕ್ಕಾಗಿಯೇ ಮೀಸಲಿರಿಸಿದೆ. ಜನಪದಸಾಹಿತ್ಯ, ಕವಿಕೃತಿಗಳು, ಆಧುನಿಕ ಸಾಹಿತ್ಯ ಮತ್ತು ಭಾರತೀಯ ಹಾಗೂ ವಿಶ್ವಸಾಹಿತ್ಯ ಕೃತಿಗಳನ್ನು ಕುರಿತು ಮಾಸ್ತಿಯವರು ತೆಳೆದಿರುವ ಧೋರಣೆಯನ್ನು, ಆ ಮೂಲಕ ಅವರಿಗಿರುವ ತಿಳುವಳಿಕೆ, ಕಾಳಜಿಗಳನ್ನು ತುಂಬಾ ವಿಸ್ತೃತವಾಗಿ ಇಲ್ಲಿ ಚರ್ಚಿಸಲಾಗಿದೆ. ಮಾಸ್ತಿಯವರ ನಂತರ ಸಣ್ಣಕಥೆಗಳ ಹರಿಕಾರರರೆಂದೇ ಪ್ರಸಿದ್ಧರಾದ ಆನಂದರ ಬದುಕುಬರಹವನ್ನು ಕುರಿತು ಅಧ್ಯಯನ ಮಾಡಿರುವ ಡಾ. ಎಂ. ಎಸ್. ವಿಜಯಹರನ್ (೧೯೯೮) ಅವರು ಆನಂದರ ನಾಟಕ, ಆತ್ಮಚರಿತ್ರೆ, ಸಣ್ಣಕಥೆಗಳನ್ನು ವಸ್ತುವಾಗಿರಿಸಿಕೊಂಡು ಹೊಸಗನ್ನಡ ಸಾಹಿತ್ಯ ಚರಿತ್ರೆಯಲ್ಲಿ ಇವರ ಸ್ಥಾನವನ್ನು ನಿರ್ಧರಿಸಿದ್ದಾರೆ. ಕಥಾ ಪರಂಪರೆಗೆ ಕೇವಲ ಮಾಸ್ತಿ, ಆನಂದ ಮುಂತಾದ ಪುರುಷ ಲೇಖಕರು ಮಾತ್ರವಲ್ಲದೆ, ಮಹಿಳೆಯರ ಪಾತ್ರವೂ ಹಿರಿದಾದುದ್ದು. ಹೀಗಾಗಿ ಕನ್ನಡದಲ್ಲಿ ಮಹಿಳಾ ಕಥಾ ಸಾಹಿತ್ಯ ಎಂಬ ಶೀರ್ಷಿಕೆಯೊಂದಿಗೆ ಅಧ್ಯಯನ ಮಾಡಿರುವ ಡಾ. ಮಲ್ಲಿಕಾಘಂಟಿ (೧೯೯೪)ಯವರು ಸುಮಾರು ಏಳು ದಶಕಗಳಷ್ಟು ವ್ಯಾಪ್ತಿಯನ್ನು ಹೊಂದಿರುವ ಮಹಿಳಾ ಕಥಾ ಕ್ಷೇತ್ರವನ್ನು ಸಮಷ್ಟಿ ನೆಲೆಯಲ್ಲಿ ಅಧ್ಯಯನ ಮಾಡಿದ್ದಾರೆ. ನವೋದಯ ಪೂರ್ವ, ನವೋದಯ, ಪ್ರಗತಿಶೀಲ, ನವ್ಯ ಹಾಗೂ ಬಂಡಾಯ – ದಲಿತಗಳಲ್ಲಿ ಮಹಿಳಾ ಕಥಾ ಸಾಹಿತ್ಯದ ಅಶಯಗಳನ್ನು ಗುರುತಿಸಿದ್ದಾರೆ. ಇದೇ ರೀತಿ ಡಾ. ಎನ್.ಕೆ. ಕೋದಂಡರಾಮ ಅವರು ಹೊಸಗನ್ನಡ ಕಥಾ ಸಾಹಿತ್ಯದ ಮೊದಲ ತಲೆಮಾರಿನವರಾದ ಮಾಸ್ತಿ ಅದಿಯಾಗಿ ಇತ್ತೀಚಿನ ಆಬ್ದುಲ್ ರಶೀದ್, ಸಾರಾ ಅಬೂಬಕ್ಕರ್, ಕುಂವೀ, ಮುಂತಾದ ಕಥೆಗಾರರನ್ನು ಕುರಿತು ಅವರ ಕಥೆಗಳಲ್ಲಿಯ ಸಾಂಸ್ಕೃತಿಕ ಸಂಘರ್ಷವನ್ನು ಹುಡುಕಾಡುವ ಪ್ರಯತ್ನಮಾಡಿದ್ದಾರೆ, ಕನ್ನಡ ಕಥಾಸಾಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ (೧೯೯೬) ಎಂಬ ಪ್ರಬಂಧದಲ್ಲಿ. ಇಲ್ಲಿ ಶೋಧನೆಗಿಂತ ವಿಮರ್ಶಾ ಚತುರತೆಯನ್ನು ಕಾಣಬಹುದು.

ಹೊಸಗನ್ನಡ ಸಾಹಿತ್ಯದಲ್ಲಿ ಹಲವು ಪ್ರಕಾರಗಳಂತೆ ಕಾದಂಬರಿ ಪ್ರಕಾರವೂ ಹುಲುಸಾಗಿ ಬೆಳೆದಿದೆ. ಕಾರಣ, ಕಾದಂಬರಿಗಳನ್ನೇ ಕೇಂದ್ರವಾಗಿರಿಸಿಕೊಂಡು ಹಲವು ಪ್ರಬಂಧಗಳು ಮೈತೆಳೆದಿವೆ. ಅವುಗಳಲ್ಲಿ ಡಾ. ಲೀಲಾವತಿ ತೋರಣಗಟ್ಟಿ ಅವರ ಭೈರಪ್ಪನವರ ಕಾದಂಬರಿಗಳ ಸ್ವರೂಪ (೧೯೯೨). ಒಟ್ಟು ಪ್ರಬಂಧವನ್ನು ಗಮನಿಸಿದರೆ ವಸ್ತುನಿಷ್ಠತೆಗಿಂತ ವ್ಯಕ್ತಿವಿಷ್ಠ ಅಧ್ಯಯನಕ್ಕೆ ಎಡೆದೊರೆತಂತಿದೆ. ದುಡಿವವರ್ಗ, ಬಡತನದ ಬೇಗೆ, ಸ್ತ್ರೀಸಂವೇದನೆ ಹಾಗೂ ವೈದ್ಯವೃತ್ತಿ ಇವುಗಳಿಂದ ರೂಪಗೊಂಡಿರುವುದು ಅನುಪಮ ನಿರಂಜನರ ಜೀವನ ವೃತ್ತಾಂತ. ಈ ವೃತ್ತಾಂತಗಳ ಸಾಹಿತ್ಯಕ ದಾಖಲೀಕರಣ ಅವರ ಕಾದಂಬರಿಗಳು. ಅವುಗಳ ಕುರಿತು ಸಾಮಾಜಿಕ, ಮನೋವೈಜ್ಞಾನಿಕ ಹಾಗೂ ವೈಚಾರಿಕ ನೆಲೆಯಲ್ಲಿ ಅಧ್ಯಯನ ಮಾಡಿರುವ ಕೃತಿ ಡಾ. ವಿಜಯಶ್ರೀಸಬರದರ ಅನುಪಮಾ ನಿರಂಜನ ಅವರ ಕಾದಂಬರಿಗಳು: ಒಂದು ಸಾಹಿತ್ಯಕ ಅಧ್ಯಯನ (೧೯೯೪). ಇಲ್ಲಿ ಕಾದಂಬರಿಗಳ ಒಳನೋಟಗಳನ್ನು ಕಟ್ಟಿಕೊಡುವಲ್ಲಿ ಸಾಧ್ಯವಾಗಿದ್ದರೂ ಸಾರಸಗಟಾಗಿ ಕಥೆಯನ್ನು ವಿವರಿಸುವುದು ಕಂಡುಬರುತ್ತದೆ. ಶಿವಶರಣರನ್ನು ವಸ್ತುವಾಗಿರಿಸಿಕೊಂಡು ಕನ್ನಡದಲ್ಲಿ ಕಾದಂಬರಿಗಳು ಸೃಷ್ಟಿಯಾಗಿವೆ. ಹೀಗಾಗಿ ಅವುಗಳನ್ನೆಲ್ಲ, ಸೇರಿಸಿ ಡಾ. ಜೆ. ಪಿ. ದೊಡ್ಡಮನಿ ಅವರು ಶರಣರ ಕುರಿತ ಕನ್ನಡ ಕಾದಂಬರಿಗಳು (೧೯೯೬) ಎಂಬ ಪ್ರಬಂಧವನ್ನು ರಚಿಸಿದ್ದಾರೆ. ಬಸವಣ್ಣ ಪ್ರಭುದೇವ, ಸಿದ್ಧರಾಮ, ಅಕ್ಕಮಹಾದೇವಿ, ಚೆನ್ನಬಸವಣ್ಣ, ಆದಯ್ಯ ಇವರನ್ನು ಕುರಿತು ಇದುವರೆಗೂ ಬಂದ ಕಾದಂಬರಿಗಳನ್ನು ಅಧ್ಯಯನಕ್ಕೆ ಅವಳಡಿಸಿಕೊಂಡಿದ್ದಾರೆ. ಇಲ್ಲಿ ಬೇರೆ ಬೇರೆ ಲೇಖಕರ ಕಾದಂಬರಿಗಳ ಹಾಗೂ ಒಬ್ಬರೇ ಲೇಖಕರ ಬೇರೆ ಬೇರೆ ಕಾದಂಬರಿಗಳ ತುಲನೆ ಮೂಲಕ ಅಲ್ಲಿಯ ಗುಣ ದೋಷಗಳನ್ನು, ಐತಿಹಾಸಿಕ ಸಂಗತಿಯನ್ನು ಮಿಮರ್ಶೆಗೆ ಒಳಪಡಿಸಿದ್ದಾರೆ. ಪ್ರಗತಿಶೀಲ ಪಂಥದ ಮಹತ್ವದ ಲೇಖಕ ಡಾ. ಬಸವರಾಜಕಟ್ಟಿಮನಿಯವರು. ೪೦ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿ ಅವುಗಳನ್ನೇ ತಮ್ಮ ಬದುಕಿನಲ್ಲಿ ಸಾಹಿತ್ಯ ನಿರ್ಮಿತಿಯ ಮುಖ್ಯರೂಪವನ್ನಾಗಿ ಮಾಡಿಕೊಂಡು ಬೇಳೆದವರು. ಅವರ ಕಾದಂಬರಿಗಳ ವಿಶೇಷವೆಂದರೆ ರಾಷ್ಟ್ರೀಯತೆ, ಕಾರ್ಮಿಕ ಹೋರಾಟ, ರಾಜಕೀಯ, ಸಾಮಾಜಿಕ ಸಂಗತಿಗಳ ಚಿತ್ರಣ. ಈ ಚಿತ್ರಣಗಳ ಹಿಂದೆ ಕಟ್ಟಿಮನಿಯವರಿಗಿರುವ ಕಾಳಜಿಗಳನ್ನು ಕಂಡರಿಸುವ ಪ್ರಯತ್ನವನ್ನು ಮಾಡಿದ್ದಾರೆ, ಡಾ. ಬಸವರಾಜ ಸಾದರ ಅವರು ಬಸವರಾಜ ಕಟ್ಟೀಮನಿಯವರ ಕಾದಂಬರಿಗಳು (೨೦೦೦) ಎಂಬ ಕೃತಿಯಲ್ಲಿ. ಧಾರ್ಮಿಕತೆ, ಡಾಂಭಿಕತೆ, ಜಾತಿವ್ಯವಸ್ಥೆ, ವೇಶ್ಯಾ ಸಮಸ್ಯೆ ಹಲವು ಹತ್ತು ವೈರುಧ್ಯತೆಗಳನ್ನು ಇವರ ಕಾದಂಬರಿಗಳು ಹೇಗೆ ಬಿಚ್ಚಿತೋರಿಸುತ್ತವೆಂಬುದನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಿದ್ದಾರೆ. ಡಾ. ಸುನೀತ ಎಂ. ಶೆಟ್ಟಿಯವರ ಶಿವರಾಮಕಾರಂತರ ಕಾದಂಬರಿಗಳಲ್ಲಿ ಸ್ತ್ರೀ (೨೦೦೦) ಎಂಬ ಪ್ರಬಂಧ ಕಾರಂತರ ಸ್ತ್ರೀಸಂವೇದನೆಯನ್ನು ಸೂಕ್ಷ್ಮ ಅಧ್ಯಯನದ ಮೂಲಕ ಪೂರೈಸುವಲ್ಲಿ ಯಶಸ್ವಿಯಾಗಿದೆ.

ಸಾಮಾಜಿಕ ಸ್ಥಿತ್ಯಂತರಗಳನ್ನು ಪ್ರಕಟಿಸುವ ಹಲವು ಸಾಹಿತ್ಯಕ ಸಂವಹನ ಮಾಧ್ಯಮಗಳಲ್ಲಿ ವಚನ ಸಾಹಿತ್ಯವೂ ಒಂದು. ೧೨ನೆಯ ಶತಮಾನದಿಂದ ಮೊದಲುಗೊಂಡು ಇಂದಿಗೂ ಈ ಪ್ರಕಾರ ನಡೆದುಬಂದಿದೆ. ನಮ್ಮಲ್ಲಿ ವಚನಗಳನ್ನು ಹೆಚ್ಚು ಬರೆದು ಆಧುನಿಕ ವಚನಕಾರೆಂದು ಹೆಸರಾದವರು ಕೆಲವರಿದ್ದಾರೆ. ಅವರನ್ನು ಕುರಿತು ವ್ಯಕ್ತಿ ನೆಲೆಯಲ್ಲಿ ಇಡೀ ಸಾಹಿತ್ಯವನ್ನು ಕುರಿತು ಸಮಷ್ಠಿನೆಲೆಯಲ್ಲಿ ಅಧ್ಯಯನಗಳು ನಡೆದಿವೆ. ಡಾ.ಎನ್. ಬಿ. ಬುಳ್ಳಾ ಅವರ ಡಾ.ಸಿದ್ಧಯ್ಯಪುರಾಣಿಕರ ಕೃತಿಗಳು (೧೯೯೯) ಎಂಬ ಆಧುನಿಕ ವಚನಕಾರ, ಗಾಂಧೀವಾದಿ ದೇಶಭಕ್ತನೊಬ್ಬನನ್ನು ಅವರ ಸಾಹಿತ್ಯದ ಮೂಲಕ ಪರಿಚಯಿಸಿದ್ದಾರೆ. ಸಮಕಾಲೀನ ಲೇಖಕರೊಡನೆ ಪುರಾಣಿಕರನ್ನು ಗುರುತಿಸಿದ ರೀತಿ ಗಂಭೀರವಾಗಿದ್ದರೂ, ಆಕರಗಳ ಬಳಕೆಯಲ್ಲಿ ವಿಶ್ಲೇಷಣೆಗಿಂತ ವಿವರಣೆಯೇ ಎದ್ದು ಕಾಣುತ್ತದೆ. ಡಾ.ಸಂಗಮೇಶ ಹಂಡಿಗಿಯವರ ಶ್ರೀ .. ನಿ ವಚನಸಾಹಿತ್ಯ: ಒಂದು ಅಧ್ಯಯನ (೧೯೯೨)ದಲ್ಲಿ ಮಠಾಧಿಪತಿ, ದಾರ್ಶನಿಕ ಸಾಹಿತಿಗಳಾದ ಜ. ಚ.ನಿಯವರ ವಚನಗಳ ವೈಶಿಷ್ಟವನ್ನು ಗುರುತಿಸಿ ಅಧುನಿಕ ಆದ್ಯವಚನಕಾರರ ಸಾಲಿನಲ್ಲಿ ನಿಲ್ಲಬಹುದಾದ ಸಾಮರ್ಥ್ಯ ಇವರಿಗಿದೆಯೆಂದು ಅಭಿಪ್ರಾಯ ಪಟ್ಟಿದ್ದಾರೆ. ಮಹದೇವ ಬಣಕಾರರ ಕೃತಿಗಳು (೧೯೯೯) ಎಂಬ ಪ್ರಬಂಧ ರಚಿಸಿದ ಡಾ. ನೀಲಮ್ಮ ಕತ್ನಳ್ಳಿಯವರು ಬಣಕಾರರು ಸಾಹಿತ್ಯದ ಮೂಲಕ ಒಬ್ಬ ಚಿಂತಕರಾಗಿ ಹೇಗೆ ಕಂಡುಬರುತ್ತಾರೆಂಬುದನ್ನು ಮತ್ತು ಮಹಾಜನ್ ವರದಿ, ಮಂಡಲ್ ವರದಿಗಳಂತಹ ಬಹುಮುಖ್ಯ ವಿಚಾರಗಳ ಬಗ್ಗೆ ಅವರ ಯೋಚನೆಗಳೇನಾಗಿದ್ದವೆಂಬುದನ್ನು ಪರಿಚಯಿಸುತ್ತದೆ. ೨೦ನೇ ಶತಮಾನದ ವಚನ ಸಾಹಿತ್ಯ (೧೯೯೫) ಕುರಿತು ಪ್ರಬಂಧ ರಚಿಸಿದ ಡಾ. ಪ್ರೀತಿಶುಭಚಂದ್ರರ ಅವರು ಅಧುನಿಕ ವಚನ ಸಾಹಿತ್ಯ ಮೈದೆಳೆದ ರೀತಿ, ಅದರ ಮುಖ್ಯ ಆಶಯ ಹಾಗೂ ೧೨ನೆಯ ಶತಮಾನದ ಆಶಯದೊಂದಿಗೆ ಈಗಿನ ವಚನಗಳ ಮೌಲ್ಯ ನಿರ್ದೇಶನ ಮಾಡಿರುವುದು ಉಪಯುಕ್ತವಾಗಿದೆ.

ವೈಚಾರಿಕ ಹಾಗೂ ದಾರ್ಶನಿಕ ಮನೋಧರ್ಮದ ಮೂಲಕ ಸಾಹಿತ್ಯಕ್ಕೆ ಅನುಭಾವದ ಸ್ಪರ್ಶ ನೀಡಿರುವುದು ನವೋದಯ ಕಾಲದ, ಹಲಕೆಲವು ಹಿರಿಯ ವಿದ್ವಾಂಸರ ಹಾಗೂ, ಮಹಾಕಾವ್ಯಗಳಲ್ಲಿ ಕಂಡುಬರುತ್ತದೆ. ಈ ಅಂಶವನ್ನು ಗಮನಿಸಿದ ಸಂಶೋಧನ ಕೃತಿಗಳು ಹುಟ್ಟಿಕೊಂಡಿವೆ. ಡಾ.ಡಿ. ಮಂಗಳಾಪ್ರಿಯದರ್ಶಿನಿಯವರ ನವೋದಯ ಕಾವ್ಯದಲ್ಲಿ ಅನುಭಾವದ ಅಂಶಗಳು : ಒಂದು ಅಧ್ಯಯನ (೧೯೯೪) ಎಂಬ ಕೃತಿ, ಕಾವ್ಯಗಳಲ್ಲಿ ಪ್ರತಿಪಾದಿತವಾದ ಪ್ರಕೃತಿ, ಪ್ರೇಮ. ದೈವೀಮನೋಧರ್ಮ, ಮಾನವೀಕರಣ, ಕಾಲಾತೀತತೆ, ಭಾವನಾತ್ಮಕತೆ, ಸಾಮಾಜಿಕ ಪರವಾದ ಅಂಶಗಳ ಮೂಲಕ ಕೇವಲ ಇಂದ್ರಿಯಾತೀತವಾದ ಆಧ್ಯಾತ್ಮಿಕ ಪರಿಭಾಷೆಯ ಅನುಭಾವ ಮಾತ್ರ ಅನುಭಾವವಲ್ಲ ಇಂತಹ ಸಂವೇದನೆಗಳು ಸಹ ಅನುಭಾವಗಳೆಂಬುದನ್ನು ಪ್ರತಿಪಾದಿದ್ದಾರೆ. ಗೋಕಾಕರ ಭಾರತ ಸಿಂಧೂ ರಶ್ಮಿಯ ಮೂಲಕ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಅಂಶಗಳನ್ನು ತೆರೆದಿಡುವ ಕೃತಿ ಡಾ. ಟಿ.ವಿ. ಸುಬ್ರಮಣ್ಯ ಅವರ ಭಾರತ ಸಿಂಧೂರಶ್ಮಿ : ಒಂದು ಸಾಂಸ್ಕೃತಿಕ ಮತ್ತು ಸಾಹಿತ್ಯದ ಸಮಾಲೋಚನೆ (೧೯೯೫) ಆಧುನಿಕ ಪರಿಸರದಲ್ಲಿ ಮಹಾಕಾವ್ಯಗಳ ಪರಿಕಲ್ಪನೆಯೇನು, ವೇದ ಹಾಗೂ ಇತಿಹಾಸ ಕಾಲದ ಸಂಸ್ಕೃತಿಯ ಚಿಂತನೆಗಳಾವುವು ಎಂಬ ತಾತ್ವಿಕ ಚರ್ಚೆಯನ್ನು ಇಲ್ಲಿ ಮಾಡಿದ್ದಾರೆ. ಈ ಚರ್ಚೆಯನ್ನು ಭಾರತ ಸಿಂದೂರಶ್ಮಿ ಕೃತಿಯ ಮೂಲಕ ಆಧುನಿಕ ಸಂದರ್ಭಕ್ಕೆ ಅನ್ವಯಿಸಿ ವ್ಯಾಖ್ಯಾನಿಸಿದ್ದರೆ ಗೋಕಾಕಾರ ಆಶಯಕ್ಕೆ ನ್ಯಾಯ ಒದಗಿಸಬಹುದಾಗಿತ್ತು. ಅದೇನೇ ಇದ್ದರೂ ಅಧ್ಯಯನ ಶಿಸ್ತು – ಸಂಯಮ ಕುರಿತು ಎರಡು ಮಾತಿಲ್ಲ. ಕನ್ನಡದಲ್ಲಿ ಮೀಮಾಂಸೆ, ಅನುಭಾವ, ಸಂಸ್ಕೃತಿಗಳ ಗಡಿಗೆರೆಗಳನ್ನು ವಿಸ್ತರಿಸಿದ ವಿದ್ವಾಂಸ ಪ್ರಾಧ್ಯಾಪಕರಲ್ಲಿ ಡಾ. ತಿಪ್ಪೇರುಧ್ರ ಸ್ವಾಮಿಯವರು ದೊಡ್ಡ ಹೆಸರು. ಅವರು ಸಾಹಿತ್ಯದ ಯಾವ ಪ್ರಕಾರ್ರವನ್ನೇ ಬರೆಯಲಿ ಅಲ್ಲಿಯ ಮುಖ್ಯ ಆಶಯ ಪ್ರತಿಪಾದನೆ. ಇದನ್ನು ಕುರಿತು ಡಾ. ಪೂಜಾರ ಗದಿಗೆಮ್ಮನವರು ಡಾ.ಎಚ್. ತಿಪ್ಪೇರುದ್ರ ಸ್ವಾಮಿಗಳವರ ವಿಚಾರ ಸಾಹಿತ್ಯ (೨೦೦೦) ಎಂಬ ಕೃತಿಯ ಮೂಲಕ ಪರಿಚಯಿಸಿದ್ದಾರೆ. ವೈಚಾರಿಕತೆ, ವಿಚಾರವಾದ, ವಿಚಾರಸಾಹಿತ್ಯ ಇವುಗಳಿಗಿರುವ ವ್ಯತ್ಯಾಸಗಳನ್ನು ಗುರುತಿಸುವಲ್ಲಿ ಕಲೆಹಾಕಿದ ಮಾಹಿತಿ ವಿಪುಲವಾಗಿದೆ. ಡಾ.ಸ್ವಾಮಿಯವರ ಕೃತಿಗಳ ಆಂತಃಸತ್ವವನ್ನು ಹೆಕ್ಕಿ ಸಂಯೋಜಿಸಿದ ಮಹತ್ವ ಈ ಪ್ರಬಂಧಕ್ಕಿದೆ. ಜೈನ ಸಂಸ್ಕೃತಿ, ಸಾಹಿತ್ಯವನ್ನು ಪರಿಚಲನೆಗೊಳಿಸಲು ಅವಿಶ್ರಾಂತವಾಗಿ ದುಡಿದ ಎರ್ತೂರು ಶಾಂತರಾಜ ಶಾಸ್ತ್ರೀಗಳ ಸಾಧನೆಯನ್ನು ಪರಿಚಯಿಸುವ ಪ್ರಬಂಧ ಡಾ. ಸತ್ಯವತಿಯವರ ಶಾಂತರಾಜ ಶಾಸ್ತ್ರಿಗಳ ಕೃತಿಗಳು : ಒಂದು ಅಧ್ಯಯನ (೧೯೯೫). ಗುಣಭದ್ರಾಚಾರ್ಯರ ಮಹಾಪುರಾಣವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ ಇವರು ೫೦ಕ್ಕೂ ಹೆಚ್ಚು ಜೈನ ಗ್ರಂಥಗಳನ್ನು ರಚಿಸಿ ಆಧುನಿಕ ಜಿನಸೇನರೆನಿಸಿದ್ದಾರೆ. ಇಂತಹ ಮಹನೀಯರನ್ನು ಆಧ್ಯಯನಕ್ಕೆ ಒಳಗುಮಾಡಿಕೊಂಡಿರುವುದು ಸ್ತುತ್ಯರ್ಹವಾದ ಸಂಗತಿ.

ಕನ್ನಡದಲ್ಲಿ ನಾಟಕ ಸಾಹಿತ್ಯಕ್ಕೆ ಚರಿತ್ರೆಯ ಮಹತ್ವವಿದೆ. ಹತ್ತಾರು ಕಂಪನಿಗಳು, ನಟರು, ನಾಟಕಕಾರರು ಇದರ ಏಳಿಗೆಗೆ ದುಡಿದಿದ್ದಾರೆ. ಆಧುನಿಕವಾಗಿಯೂ ಹಲವು ರೂಪಗಳಲ್ಲಿ ಈ ಪ್ರಕಾರ ಬೆಳೆದುಬಂದಿದೆ. ನಲವಡಿ ಶ್ರೀಕಂಠಶಾಸ್ತ್ರಿ, ಗರುಡ ಸದಾಶಿವರಾಯರಂತಹ ಹಿರಿಯರಂತೆ ಕುವೆಂಪು ಮುಂತಾದ ನಾಟಕಕಾರರು ಈ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಹೀಗಾಗಿ ಕನ್ನಡದಲ್ಲಿ ಇವರನ್ನು ಕುರಿತು ಅಧ್ಯಯನಗಳು ನಡೆದಿವೆ. ಡಾ.ಮೃತ್ಯುಂಜಯ ಹೊರಕೇರಿಯವರ ನಲವಡಿ ಶ್ರೀಕಂಠಶಾಸ್ತ್ರಿಗಳ ಜೀವನ ಮತ್ತು ಕೃತಿಗಳು (೧೯೯೨) ಎಂಬ ಪ್ರಬಂಧ ಉತ್ತರಕರ್ನಾಟಕದ ವೃತ್ತಿರಂಗಭೂಮಿಗೆ ದುಡಿದ ಹಿರಿಯ ಜೀವವನ್ನು ಪರಿಚಯಿಸುತ್ತದೆ. ನಾಡು – ನುಡಿ – ಸಂಸ್ಕೃತಿಯ ಅಭಿಮಾನವನ್ನು ತಮ್ಮ ನಾಟಕಗಳ ಮೂಲಕ ತುಂಬಿಕೊಟ್ಟ ನಲವಡಿಯವರ ಬದುಕನ್ನು ಚಿತ್ರಿಸುವಲ್ಲಿ ಡಾ. ಹೊರಕೇರಿಯವರ ವ್ಯಾಪಕವಾದ ಕ್ಷೇತ್ರಕಾರ್ಯ ಪರಿಚಯವಾಗುತ್ತದೆ. ತೂಕಬದ್ಧ ಹೇಳಿಕೆ, ಉತ್ತರಕರ್ನಾಟಕದ ಆಡುಭಾಷೆಯಿಂದ ಕೃತಿಗೆ ಪ್ರಾದೇಶಿಕ ಮಹತ್ವ ಪ್ರಾಪ್ತವಾಗಿದೆ. ಡಾ.ಬಸವರಾಜ ಜಗಜಂಪಿಯವರ ಗರುಡ ಸದಾಶಿವರಾಯರು : ನಾಟಕ ಸಾಹಿತ್ಯ ಮತ್ತು ವೃತ್ತಿರಂಗ ಭೂಮಿ ಅಧ್ಯಯನ (೧೯೯೩) ಕೃತಿಯು ನಲವಡಿಯವರಂತೆ ಉತ್ತರ ಕರ್ನಾಟಕದ ವೃತ್ತಿರಂಗಭೂಮಿಗೆ ಅವಿರತವಾಗಿ ದುಡಿದ ಸದಾಶಿವರಾಯರನ್ನು ಪರಿಚಯಿಸುತ್ತದೆ. ದತ್ತಾತ್ರೇಯ ಸಂಗೀತ ನಾಟಕ ಮಂಡಳಿ, ಅದರ ಕಲಾವಿದರು, ರಂಗಪರಿಕರ, ಗರುಡರು ನಿರ್ವಹಿಸಿದ ಪಾತ್ರಗಳು, ಮತ್ತು ಅವರ ಅನುವಾದಿತ ಮತ್ತು ಸ್ವತಂತ್ರ ನಾಟಕಗಳನ್ನು ವಿಶ್ಲೇಷಿಸಲಾಗಿದೆ. ಡಾ. ರಾಮಕೃಷ್ಣ ಮರಾಠೆಯವರ ಉತ್ತರ ಕರ್ನಾಟಕದ ವೃತ್ತಿರಂಗಭೂಮಿ (೧೯೯೫) ಪ್ರಬಂಧ ವೃತ್ತಿರಂಗ ಉತ್ತರ ಕರ್ನಾಟಕದಲ್ಲಿ ಜನಿಸಿದ ರೀತಿ, ಬೆಳವಣಿಗೆ, ಪರಂಪರೆ, ಈ ಹಿನ್ನೆಲೆಯಲ್ಲಿ ದುಡಿದ ಸುಮಾರು ೪೫ ನಾಟಕಕಂಪನಿಗಳು ನಾಟಕ ಸಾಹಿತ್ಯ ಹಾಗೂ ನಾಟಕಕಾರರನ್ನು ಪರಿಚಯಿಸುತ್ತದೆ. ಈ ಮೇಲಿನ ಮೂರು ಪ್ರಬಂಧಗಳು ವೃತ್ತಿರಂಗಭೂಮಿಯ ಇತಿಹಾಸವನ್ನು ಉತ್ತರ ಕರ್ನಾಟಕದಿಂದಲೇ ಬರೆಯಬೇಕಾಗುತ್ತದೆಂಬುದನ್ನು ಒಕ್ಕೊರಲಿನಿಂದ ಹೇಳುತ್ತವೆ.

ಇನ್ನು ಅಧುನಿಕವಾಗಿ ನಾಟಕ ಪ್ರಕಾರ ವಿವಿಧ ಆಯಾಮಗಳಲ್ಲಿ ಬೆಳವಣಿಗೆ ಹೊಂದಿತು. ಕಾಲೈಕ್ಯ, ಕ್ರಿಯ್ಯಾಕ್ಯ ಹಾಗೂ ಸ್ಥಳೈಕ್ಯ ಕಾರಣವಾಗಿ ಈ ಪ್ರಕಾರ ಏಕಾಂಕ, ಗೀತ, ಬೀದಿನಾಟಕಗಳೆಂದು ರೂಪಾಂತರ ಹೊಂದಿದವು. ಈ ಪ್ರಕಾರಗಳಿಗೆ ಹಲವಾರು ಜನ ವಿದ್ವಾಂಸರು ಕೊಡುಗೆಯಿತ್ತಿದ್ದಾರೆ. ಕನ್ನಡ ಗೀತನಾಟಕಗಳ ಅಧ್ಯಯನ (೧೯೯೫) ಡಾ. ವಿಜಯಲಕ್ಷ್ಮಿ ಸುಬ್ಬರಾವ್ ಅವರ ಪ್ರಬಂಧಗಳಲ್ಲಿ ಗೀತನಾಟಕಗಳ ಹುಟ್ಟು, ಬೆಳವಣಿಗೆಯ ಜೊತೆ ಪು.ತಿ.ನ, ಕಾರಂತರ ನಾಟಕಗಳನ್ನು ವಿಶ್ಲೇಷಿಸಲಾಗಿದೆ. ಜೊತೆಗೆ ಕನ್ನದ ಗೀತ ನಾಟಕಗಳನ್ನು ಪಾಶ್ಚಾತ್ಯ ಅಪೆರಾಗಳೊಂದಿಗೆ ಹೋಲಿಸಿ ಅವುಗಳ ಸ್ಥಿತಿಗತಿಗಳನ್ನು ವಿವರಿಸಲಾಗಿದೆ. ಕೇವಲ ಮಾಹಿತಿ ಮತ್ತು ವಿವರಗಳ ಸಂಯೋಜನೆಯಲ್ಲಿಯೇ ಅಧ್ಯಯನ ಕೊನೆಗೊಂಡಿದೆ. ಇವುಗಳ ಹಿಂದಿರುವ ತಾತ್ವಿಕ ನೆಲೆಗಳನ್ನು ಗುರುತಿಸಿದ್ದರೆ ಪ್ರಬಂಧಕ್ಕೆ ಹೆಚ್ಚಿನ ಮೆರಗು ಬರುತ್ತಿತ್ತು. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡಿದ ಕುವೆಂಪು ಅವರು ನಾಟಕ ಸಾಹಿತ್ಯಕ್ಕೂ ದುಡಿದಿದ್ದಾರೆ. ಡಾ. ಮಳಲಿ ವಸಂತಕುಮಾರ ಕುವೆಂಪು ಅವರ ನಾಟಕಗಳು : ಒಂದು ಅಧ್ಯಯನ (೧೯೯೫)ದಲ್ಲಿ ನಾಟಕ ಪೌರಾಣಿಕವಿರಲಿ, ಐತಿಹಾಸಿಕವಿರಲಿ ಇಲ್ಲವೇ ಸಾಮಾಜಿಕವಿರಲಿ ಇವೆಲ್ಲವುಗಳಲ್ಲಿ ಕುವೆಂಪು ವೈಚಾರಿಕ ಸಂವಾದವನ್ನು ಹೇಗೆ ಹುಟ್ಟುಹಾಕಿದ್ದರೆಂಬುದನ್ನು ಪ್ರಬಂಧಕಾರರು ಗುರುತಿಸುತ್ತಾರೆ. ಮೂಲಕಥೆಗಳನ್ನು ಕುವೆಂಪು ಬದಲಿಸಿಕೊಂಡ ರೀತಿ, ಇದರಿಂದ ಪಡೆದ ಸಾಧಕ ಬಾಧಕಗಳನ್ನು ಎಳೆ ಎಳೆಯಾಗಿ ತಿಳಿಸುತ್ತಾರೆ. ಪರಂಪರೆಯ ಜ್ಞಾನವನ್ನು ಪರಿಚಯಿಸುವ ಗುಣವನ್ನು ಇವರ ಪೌರಾಣಿಕ ನಾಟಕಗಳಲ್ಲಿ ನೋಡುವುದಾದರೆ, ವಿಶ್ವಬಂಧುತ್ವ ಅವರ ನಾಟಕಗಳ ಒಟ್ಟು ಆಶಯವೆಂಬುದನ್ನು ತಿಳಿಸುತ್ತಾರೆ. ಕೊನೆಯಲ್ಲಿ ಭಾಷೆಯ ಸಂಹವನ ತೊಡಕಿನಿಂದಾಗಿ ನಾಟಕಗಳು ಶ್ರೀಸಾಮಾನ್ಯರಿಂದ ದೂರ ಉಳಿದಿವೆಂಬುದನ್ನು ಹೇಳಲು ಸಂಶೋಧಕರು ಮರೆತಿಲ್ಲ.

ದೇಶದ ಸ್ವಾತಂತ್ರ್ಯ ಬಂದು ಸಂವಿಧಾನಾತ್ಮಕ ಆಡಳಿತ ಅನುಷ್ಠಾನಗೊಂಡು ಕೆಲವು ರಾಜ್ಯಗಳಲ್ಲಿ ಬೇರೆ ಬೇರೆ ಸಂಸ್ಥಾನಿಕರ ಹಿಡಿತದಿಂದಾಗಿ ಅಲ್ಲಿಯ ಮಾತೃಭಾಷೆ ಮರೆಯಾಗಿ ಆಡಳಿತ ಭಾಷೆ ಜಾರಿಯಲ್ಲಿತ್ತು. ಪ್ರಾಯಶಃ ಮೊದಲಿಗೆ ಸಂಸ್ಕೃತ ನಂತರದಲ್ಲಿ ಇಂಗ್ಲಿಷ್, ಮರಾಠಿ, ಉರ್ದು, ಇತ್ಯಾದಿ ಭಾಷೆಗಳು ಕನ್ನಡವನ್ನಾಳಿದವು. ಈ ಕಾರಣವಾಗಿ ಅನೇಕ ಸಂಘಟನೆಗಳ ಮೂಲಕ, ಸಾಹಿತ್ಯದ ಮೂಲಕ ಚಿಂತಕರು, ಕವಿಗಳು ದನಿಯೆತ್ತಿದರು. ಈ ನುಡಿ ಪರವಾದ ಚಳುವಳಿಯನ್ನು ದಾಖಲಿಸುವ ಎರಡು ಪ್ರಬಂಧಗಳು ಮುಖ್ಯವೆನಿಸಿವೆ. ಒಂದು ಡಾ. ಸಿ.ಆರ್. ಗೋವಿಂದರಾಜು ಅವರ ಕರ್ನಾಟಕದ ಏಕೀಕರಣ ಚಳುವಳಿ ಮತ್ತು ಕನ್ನಡ ಸಾಹಿತ್ಯ (೧೯೯೫), ಮತ್ತೊಂದು ಡಾ. ಕಾ.ವೆಂ. ಶ್ರೀನಿವಾಸ ಮೂರ್ತಿಯವರ ಕನ್ನಡಪರ ಚಿಂತನೆ ಮತ್ತು ಪರಂಪರೆ (೨೦೦೦).ಸಾಹಿತ್ಯದ ಮೂಲಕ ಚರಿತ್ರೆಯನ್ನು ನೋಡುವ, ಬೆಲೆಕಟ್ಟುವ ಕೆಲಸ ಗೋವಿಂದರಾಜು ಅವರ ಪ್ರಬಂಧದಲ್ಲಿ ನಡೆದಿದೆ. ವಿದ್ಯಾವರ್ಧಕ ಸಂಘದಂತಹ ಹತ್ತಾರು ಸಂಸ್ಥೆಗಳು, ಶಾಂತಕವಿಯಾದಿಯಾಗಿ ನೂರಾರು ಜನ ಚಿಂತಕರು ನಾಡಿನ ಏಕೀಕರಣಕ್ಕೆ ಅರ್ಪಿಸಿಕೊಂಡ ರೀತಿಯನ್ನು ಸಾದರಪೂರ್ವಕವಾಗಿ ನಿರೂಪಿಸಲಾಗಿದೆ. ಏಕೀಕರಣದ ಚಾರಿತ್ರಿಕ ಹಿನ್ನಲೆ, ತುಡಿತ ಒತ್ತಡಗಳ ಸ್ವರೂಪ ಹೇಗಿತ್ತೆಂಬುದನ್ನು ತಾತ್ವಿಕನೆಲೆಯಲ್ಲಿ ವಿಶ್ಲೇಷಿಸಿಲಾಗಿದೆ. ಡಾ. ಕಾ. ವೆಂ. ಶ್ರೀನಿವಾಸ ಮೂರ್ತಿಯವರು ಕನ್ನಡ ಭಾಷೆಯ ಉಗಮದಿಂದ ಹಿಡಿದು ನಿನ್ನೆಮೊನ್ನೆಯ ಏಕೀಕರಣದವರೆಗೆ ಹಾಗೂ ಶಾಸನ, ಕಾವ್ಯ ಸ್ಥಳನಾಮ, ಹಸ್ತಪ್ರತಿ, ದೇವಾಲಯಗಳ ನೆಲೆಗಳಲ್ಲದೆ ಆಧುನಿಕವಾಗಿ ನಾಟಕ, ಕಥೆ, ಕಾದಂಬರಿ, ಲಾವಣಿ ಮುಂತಾದ ಪ್ರಕಾರಗಳಲ್ಲಿ ಕನ್ನಡಪರ ಚಿಂತನೆ ಒಂದು ಪರಂಪರೆಯಾಗಿ ನೆಡೆದು ಬಂದಿದೆಂಬುದನ್ನು ವ್ಯವಸ್ಥಿತವಾಗಿ ಸಂಯೋಜಿಸಿಕೊಟ್ಟಿದ್ದಾರೆ.

ಶಾಲಾಶಿಕ್ಷರಾಗಿ, ಶಿಕ್ಷಣಾಧಿಕಾರಿಗಳಾಗಿ, ಸ್ವಾತಂತ್ರ್ಯಯೋಧರಾಗಿದ್ದುಕೊಂಡು ಅವರ ಅಪಾರ ಪಾಂಡಿತ್ಯದಿಂದ ಸಾಹಿತ್ಯ ಕ್ಷೇತ್ರದಲ್ಲಿ ದುಡಿದ ಅನೇಕರಲ್ಲಿ ಮಿರ್ಜಿ ಅಣ್ಣಾರಾಯರು, ಎಂ.ಆರ್.ಶ್ರೀ, ಕೆ. ಜಿ. ಕುಂದಣಗಾರಂತಹ ಹಿರಿಯರು ಅಪರೂಪದ ವ್ಯಕ್ತಿತ್ವವುಳ್ಳವರು. ಹತ್ತು ವರ್ಷಗಳಲ್ಲಿ ಇವರನ್ನು ಕುರಿತು ಪ್ರಬಂಧಗಳು ಬಂದಿವೆ. ಡಾ.ಶಿವಾನಂದಗಾಳಿಯವರು ಮಿರ್ಜಿ ಅಣ್ಣಾರಾಯ : ಒಂದು ಅಧ್ಯಯನ (೧೯೯೫) ಎಂಬ ಪ್ರಬಂಧಗಳಲ್ಲಿ ೧೪೦ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಅಧ್ಯಯನಕ್ಕೆ ಒಳಪಡಿಸಿಕೊಂಡು ಅವರ ಪ್ರಾದೇಶಿಕ, ಹಾಗೂ ಧಾರ್ಮಿಕ ಮನೋಧರ್ಮವನ್ನು ಹಿಡಿದಿಟ್ಟಿದ್ದಾರೆ. ಎಂ.ಆರ್.ಶ್ರೀಯವರನ್ನು ಕುರಿತು ಕೃತಿ ರಚಿಸಿದ ಡಾ. ನಗುವನಹಳ್ಳಿ ಪಿ. ರತ್ನ (೧೯೯೪) ಅವರು ನವೋದಯಕಾಲಕ ಘಟ್ಟದ ಶ್ರೆಷ್ಠರಲ್ಲಿ ಒಬ್ಬರಾದ ಎಂ ಆರ್. ಶ್ರೀಯವರ ಸಾಹಿತ್ಯಿಕ ಗುಣಾಂಶಗಳನ್ನು ದಾಖಲಿಸಿದ್ದಾರೆ. ಕನ್ನಡದ ಕಟ್ಟಾಳು ಡೆಪ್ಯುಟಿ ಚನ್ನಬಸಪ್ಪನವರನ್ನು ಅಧ್ಯಯನಕ್ಕೆ ಆಯ್ಕೆಮಾಡಿಕೊಳ್ಳುವುದರ ಮೂಲಕ ಕನ್ನಡ, ಕನ್ನಡಿಗರ ಅಂದಿನ ಸ್ಥಿತಿಗಳನ್ನು ವಿವರಿಸುವ ಪ್ರಬಂಧ ಡಾ. ಬಾಳಣ್ಣ ಸೀಗೀಹಳ್ಳಿಯವರ ಡೆಪ್ಯುಟಿ ಚನ್ನಬಸಪ್ಪನವರು (೧೯೯೪). ಕನ್ನಡದ ನೆಲದಲ್ಲಿ ಕನ್ನಡ ಮಕ್ಕಳು ಮರಾಠಿ ಕಲಿಯಬೇಕಾದ ವಿರೋಧಾಭಾಸವನ್ನು ಬ್ರಿಟಿಷರಿಗೆ ಮನವರಿಕೆ ಮಾಡಕೊಟ್ಟ ಚನ್ನಬಸಪ್ಪನವರು ಪತ್ರಿಕೋದ್ಯಮಿಯಾಗಿ, ಕನ್ನಡ ಶಿಕ್ಷಣ ಪ್ರೇಮಿಯಾಗಿ ಸಲ್ಲಿಸಿದ ಸೆವೆಯನ್ನು ಐತಿಹಾಸಿಕವಾಗಿ ಪರಿಚಯಿಸುತ್ತದೆ. ಆಧುನಿಕ ಕರ್ನಾಟಕದ ಪಂಡಿತ ಪರಂಪರೆಯಲ್ಲಿ ದೊಡ್ಡ ಹೆಸರು ಮಾಡಿರುವ ಕೆ. ಜಿ. ಕುಂದಣಗಾರನ್ನು ಕುರಿತು ಡಾ. ಸದಾನಂದ ಬಿಳ್ಳೂರರು ಕೆ. ಜಿ. ಕುಂದಣಗಾರ: ಒಂದು ಅಧ್ಯಯನ (೨೦೦೦) ಎಂಬ ಪ್ರಬಂಧವನ್ನು ರಚಿಸಿದ್ದಾರೆ. ಇವರ ಶಾಸನಶೋಧ, ಗ್ರಂಥಸಂಪಾದನೆ ಸೃಜನ, ಅನುವಾದಿತ ಕೃತಿಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಲಾಗಿದೆ. ಗ್ರಂಥಸಂಪಾದನೆ ಇನ್ನೂ ಶಾಸ್ತ್ರೀಯ ಚೌಕಟ್ಟನ್ನು ಪಡೆಯದಿದ್ದ ಕಾಲದಲ್ಲಿ ಅದಕ್ಕೊಂದು ಶಾಸ್ತ್ರೀಯತೆಯನ್ನು ತಂದುಕೊಟ್ಟ ಶ್ರೇಯಸ್ಸು ಕುಂದಣಗಾರರಿಗೆ ಸಲ್ಲುತ್ತದೆಂಬ ಸಂಶೋಧಕರ ಹೇಳಿಕೆ ಗಮನಿಸಬೇಕಾದ ಅಂಶವಾಗಿದೆ. ನೀಳ್ಗತೆ, ಅನುಪಲಬ್ದ ಸಾಹಿತ್ಯವನ್ನು ಶೋಧಿಸಿ ಗುರುತಿಸಿರುವುದು ಡಾ. ಬಿಳ್ಳೂರರ ಪರಿಶ್ರಮಕ್ಕೆ ನಿದರ್ಶನವಾಗಿದೆ.

ಎಂ. ಕೆ. ಇಂದಿರಾ : ಸಮಗ್ರ ಅಧ್ಯಯನ (೧೯೯೧) ಎಂಬ ಪ್ರಬಂಧ ರಚಿಸಿದ ಡಾ. ಮಂದಾಕಿನಿ ಅವರು ನವೋದಯ ಕಾಲದ ಲೇಖಕಿ ಎಂ. ಕೆ. ಇಂದಿರಾ ಅವರು ತಮ್ಮ ಕೃತಿಗಳಲ್ಲಿ ಮಲೆನಾಡಿನ ಜನಜೀವನದ ದಟ್ಟ ಚಿತ್ರಣವನ್ನು ಹೇಗೆ ತಂದಿದ್ದಾರೆಂಬುದನ್ನು ತಿಳಿಸುತ್ತಾರೆ. ಗೋಕಾಕರು ಆರು ದಶಕಗಳ ಕಾಲ ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ ಪ್ರಗತಿಶೀಲ ಲೇಖಕ. ಗದ್ಯಪ್ರಕಾರವನ್ನು ತಮ್ಮ ಕಾಂದಂಬರಿ, ಪ್ರವಾಸಸಾಹಿತ್ಯ, ನಾಟಕ, ಪ್ರಬಂಧ, ಮೀಮಾಂಸೆ, ವಿಮರ್ಶೆ ಮತ್ತು ಸಂಕೀರ್ಣ ಬರಹಗಳಲ್ಲಿ ಇವರು ಹೇಗೆ ಹುಲುಸಾಗಿ ಬೆಳೆಸಿದ್ದಾರೆಂಬುದನ್ನು ಡಾ. ಕೆ. ಎಸ್‌. ರತ್ನಮ್ಮ ಅವರು ಗೋಕಾಕರ ಗದ್ಯಸಾಹಿತ್ಯ (೧೯೯೭) ಪ್ರಬಂಧದಲ್ಲಿ ಪರಿಚಯಿಸಿದ್ದಾರೆ. ಸಮಬಂಧಶೈಲಿ, ಅಪೂರ್ವ ನಿರೂಪಣೆ, ಸೋಪಜ್ಞತೆ, ಕಾವ್ಯಸತ್ವ, ಚಿತ್ರಕಶಕ್ತಿ, ಪ್ರಬಂಧಾತ್ಮಕ ಗುಣ ಹಾಗೂ ಚಿಂತನ ಪರವಾದ ಅಂಶಗಳನ್ನು ಇವರ ಗದ್ಯದಲ್ಲಿ ಗುರುತಿಸಿದ್ದಾರೆ.

ಕನ್ನಡ ಕಾವ್ಯಗಳು ಕೇವಲ ಸಾಹಿತ್ಯಕ, ಧಾರ್ಮಿಕ ಇಲ್ಲವೇ ಸಾಂಸ್ಕೃತಿಕ ವಿವರಗಳಾಗದೆ ಐತಿಹಾಸಿಕ ಸಂಗತಿಗಳನ್ನು ತಿಳಿಸುವ ದಾಖಲೆಗಳಾಗಿವೆ. ಈ ಅಂಶವನ್ನು ಕನ್ನಡ ಕಾವ್ಯಗಳಲ್ಲಿನ ಐತಿಹಾಸಿಕ ವಿಚಾರಗಳು (೧೯೯೨) ಪ್ರಬಂಧದ ಮೂಲಕ ಡಾ. ರಾಗೌ ಅನಾವರಣಗೊಳಿಸಿದ್ದಾರೆ. ಇತಿಹಾಸವನ್ನು ಒಂದು ಸಾಹಿತ್ಯಕ ಕೃತಿ ಹೇಗೆ ತನ್ನಲ್ಲಿರಿಸಿಕೊಂಡಿರುತ್ತದೆಂಬ ತಾತ್ವಿಕತೆಯನ್ನು ಪರಿಣಾಮಕಾರಿಯಾಗಿ ಚರ್ಚಿಸಿದ್ದಾರೆ. ಪಂಪಭಾರತ, ಗದಾಯುದ್ಧಗಳಂತಹ ಪ್ರಾಚೀನ ಕೃತಿಗಳನ್ನು ಚಾರಿತ್ರಿಕ ನೆಲೆಯಲ್ಲಿ, ಕೆಳದಿನೃಪವಿಜಯ, ರಾಮನಾಥ ಚರಿತೆ, ಚಿಕ್ಕದೇವರಾಜ ವಿಜಯದಂತಹ ಮಧ್ಯಕಾಲೀನ ಕೃತಿಗಳನ್ನು ಐತಿಹಾಸಿಕ ನೆಲೆಯಲ್ಲಿ ಪ್ರತ್ಯೇಕಗೊಳಿಸಿ ಅಧ್ಯಯನ ಮಾಡಿರುವುದರ ಉದ್ದೇಶ ಸ್ಪಷ್ಟವಾಗಿಲ್ಲ. ಇಡೀ ಚಿತ್ರದುರ್ಗದ ಇತಿಹಾಸವನ್ನು ತಮ್ಮ ಒಂದೊಂದು ಕಾದಂಬರಿಗಳಲ್ಲಿ ಸೆರೆಹಿಡಿದ ತ.ರಾ.ಸು. ಅವರು ಸಾಹಿತ್ಯದ ಮೂಲಕ ಐತಿಹಾಸಿಕ ದರ್ಶನ ಮಾಡಿಸಿದ್ದಾರೆ. ಕಾದಂಬರಿಗಳ ಮೂಲಕ ಹೀಗಾಗಿ .ರಾ.ಸು ಹಾಗೂ ಅವರ ಕಾದಂಬರಿಗಳು ಹೆಸರಿನ ಮಹಾಪ್ರಬಂಧ ರಚಿಸಿದ್ದಾರೆ. ಡಾ. ಎಂ. ಎಸ್‌. ಪಾಟೀಲರು. ಇಲ್ಲಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಕಾದಂಬರಿಗಳನ್ನು ವಿಶ್ಲೇಷಣೆಗೆ ಒಳಗು ಮಾಡಿಕೊಳ್ಳುವುದರ ಮೂಲಕ ಕನ್ನಡದ ಬಹುಮುಖ್ಯ ಚಳುವಳಿಯನ್ನು ಗುರುತಿಸಿದ್ದಾರೆ. ಡಾ. ಕೃಷ್ಣಕಟ್ಟಿಯವರ ಬೇಂದ್ರೆ ಮತ್ತು ಕನ್ನಡ ಭಾವಗೀತದ ಸ್ವರೂಪ (೧೯೯೬) ಎಂಬ ಪ್ರಬಂಧದಲ್ಲಿ ಆಧುನಿಕ ಭಾವಗೀತೆಯ ಸ್ವರೂಪ, ಪರಿಭಾಷೆ ಕುರಿತು ಇದುವರೆಗೂ ಜನರಲ್‌ ಆದ ಪರಿಕಲ್ಪನೆಯನ್ನು ಪರಿಚಯಿಸಿರುವುದು ಹಾಗೂ ಭಾವಗೀತೆ, ದೀರ್ಘಕವನಗಳು, ಕಾವ್ಯಗಳೆಂದು ವರ್ಗಿಕರಿಸಿಕೊಂಡು ಪುಂಖಾನು ಪುಂಖವಾಗಿ ಬೇಂದ್ರೆ ಗೀತೆಗಳನ್ನು ವ್ಯಾಖ್ಯಾನಿಸುವುದರಲ್ಲಿಯೇ ಪ್ರಬಂಧದ ಬಹುಭಾಗ ತುಂಬಿಹೋಗಿದೆ. ಬೇಂದ್ರೆ ಮತ್ತು ಅವರು ಭಾವಗೀತೆಗಳೆಂದರೆ ಭೂತದ ನಿರ್ದೇಶನ, ಭವಿಷ್ಯದ ಮಾರ್ಗದರ್ಶನ. ಅವರಲ್ಲಿಯ ಕ್ರಿಯಾಶೀಲತೆ, ಗ್ರಾಮೀಣತೆ, ಜೀವಂತಿಕೆ, ಚಲನಾತ್ಮಕತೆ ಎಲ್ಲವೂ ದೇಸಿಮಯ. ಈ ಹಿನ್ನಲೆಯಲ್ಲಿ ಅವರ ಭಾವಗೀತೆಗಳನ್ನು ಅಧ್ಯಯನ ಮಾಡುವುದಲ್ಲದೆ, ಈ ಗುಣ ತನ್ನ ಪರಿಸರದ ಒಟ್ಟು ಕನ್ನಡ ಭಾವಗೀತದ ಸ್ವರೂಪವನ್ನು ಕಟ್ಟಿಕೊಡುವಲ್ಲಿ ಎಷ್ಟರ ಮಟ್ಟಿಗೆ ಸಾರ್ಥಕತೆಯನ್ನು ಪಡೆದಿದೆಂಬುದನ್ನು ಡಾ. ಕಟ್ಟಿಯವರು ಚರ್ಚಿಸಿದ್ದರೆ ಪ್ರಬಂಧಕ್ಕೆ ಇನ್ನೂ ಹೆಚ್ಚಿನ ಆಕರ್ಷಣೆ ಬರುತ್ತಿತ್ತು.

. ಸಾಂಸ್ಕೃತಿಕ ಅಧ್ಯಯನ : ಕಾವ್ಯ, ಅರಸುಮನೆತನ, ಸಮುದಾಯ ಇಲ್ಲವೇ ಅನುಭಾವಿ ಸಂತರನ್ನು ವಸ್ತುವಾಗಿರಿಸಿಕೊಂಡು ಸಾಂಸ್ಕೃತಿಕ ಅಧ್ಯಯನ ಮಾಡಿದ ಕೃತಿಗಳು ಬಂದಿವೆ ಎಂ.ಎಂ. ಪಡಶೆಟ್ಟಿಯವರ ತಿಂಥಿಣಿ ಮೋನಪ್ಪಯ್ಯ : ಒಂದು ಅಧ್ಯಯನ (೧೯೯೨) ೧೭ನೇ ಶತಮಾನದಲ್ಲಿ ಬದುಕಿದ್ದ ಅನುಭಾವಿ ಸಂತನನ್ನು ಕುರಿತು ಸಾಂಸ್ಕೃತಿಕ ಅಧ್ಯಯನ ಮಾಡಲಾಗಿದೆ. ಆ ಮೂಲಕ ಈ ನಾಡಿನಲ್ಲಿ ಪ್ರಧಾನ ಸಂಸ್ಕೃತಿಯ ಆಚಾರ್ಯಪುರಷರು ಮಾತ್ರ ಧಾರ್ಮಿಕ ಚರಿತ್ರೆಯಲ್ಲಿ ದಾಖಲಾಗಲು ಯೋಗ್ಯರಲ್ಲ ಇಂತಹ ಶರಣರು, ಅನುಭಾವಿಗಳು ಅಭ್ಯಾಸಯೋಗ್ಯರೆಂಬುದನ್ನು ತೋರಿಸಿಕೊಟ್ಟಿದ್ದಾರೆ. ಡಾ. ಬಸವಲಿಂಗಸೊಪ್ಪಿನಮಠ ಅವರ ಕೊಡೇಕಲ್ಲು ಬಸವಣ್ಣ : ಒಂದು ಅಧ್ಯಯನ (೧೯೯೫)ವೂ ಕಾಲಜ್ಞಾನಿಯೊಬ್ಬನ ಉಪೇಕ್ಷಿತ ಸಾಹಿತ್ಯವನ್ನು ಬೆಳಕಿಗೆ ತರುವುದರ ಮೂಲಕ ಮಧ್ಯಕಾಲೀನ ಸಾಂಸ್ಕೃತಿಕ ಚರಿತ್ರೆಯಲ್ಲಿ ಈ ಪರಂಪರೆಯ ಪಾತ್ರವನ್ನು ಗುರುತಿಸಿದ್ದಾರೆ. ಪ್ರಕಟಿತ ಅಪ್ರಕಟಿತ ಹಸ್ತಪ್ರತಿಗಳು, ದಾಖಲೆಗಳು ಹಾಗೂ ಆಚಾರ ವಿಚಾರಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿರುವುದು ಡಾ. ಸೊಪ್ಪಿನಮಠರ ಸಾಂಸ್ಕೃತಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ.

ಇನ್ನು ಅರಸು ಮನೆತನಗಳ ಚರಿತ್ರೆಯನ್ನು ಕುರಿತಂತೆ ಡಾ. ದೇವರಕೊಂಡಾರೆಡ್ಡಿಯವರು ತಲಕಾಡಿನ ಗಂಗರ ದೇವಾಲಯಗಳು : ಒಂದು ಅಧ್ಯಯನ (೧೯೯೪)ದ ಮೂಲಕ ಗಂಗರ ವಾಸ್ತು ನಿರ್ಮಾಣದ ಸಾಧನೆಯನ್ನು ಗುರುತಿಸುತ್ತಾರೆ. ಸಮಾರು ೨೦೦ ದೇವಾಲಯಗಳ ಸಂಕ್ಷಿಪ್ತ ಮಾಹಿತ ಈ ಕೃತಿಯ ಮೌಲಿಕತೆಗೆ ಕಾಣವಾಗಿದೆ. ಡಾ. ಚೆನ್ನಬಸವ ಹಿರೇಮಠರ ಕುರುಗೋಡು ಸಿಂದರು : ಒಂದು ಅಧ್ಯಯನ (೧೯೯೫) ನಾಡಿನ ಹೆಸರಾಂತ ಅರಸುಮನೆತನಗಳ ಚರಿತ್ರೆ ಮಾತ್ರ ದಾಖಲಾರ್ಹವಲ್ಲ. ಬದಲಾಗಿ, ಕುರುಗೋಡು ಸಿಂದರಂತಹ ಸಣ್ಣಮನೆತನಗಳು ನಾಡಿನ ಸಾಂಸ್ಕೃತಿಕ ಚರಿತ್ರೆಗೆ ಕೊಡುಗೆಯಾಗಬಲ್ಲವೆಂಬುದನ್ನು ತೋರಿಸಿಕೊಡಲಾಗಿದೆ. ಬಲ್ಲಕುಂದೆ ೩೦೦ರ ಆಡಳಿತವನ್ನು ವಹಿಸಿಕೊಂಡು, ಶಿವಭಕ್ತನಿಷ್ಠರಾಗಿ ಸಾಮಾಜಿಕ ಬದುಕಿಗೆ ಮಹತ್ತರ ಸಾಧನೆಗೈದುದನ್ನು ಸಕಾರಣಗಳಿಂದ ವ್ಯಾಖ್ಯಾನಿಸಿದ್ದಾರೆ. ಡಾ. ಎಂ. ಜಿ. ವಾರಿಯವರ ಸೋದೆ ಅರಸುಮನೆತನ : ಒಂದು ಅಧ್ಯಯನ (೧೯೯೯) ಉತ್ತರ ಕನ್ನಡ ಜಿಲ್ಲೆಯನ್ನು ನೂರಾರು ವರ್ಷಗಳ ಕಾಲ ಆಳಿದ ಸೋದೆ ಅರಸುಮನೆತನದ ಸಾಂಸ್ಕೃತಿ ಇತಿಹಾಸವನ್ನು ಶಾಸನ, ಸಾಹಿತ್ಯ ಹಾಗೂ ವಿದೇಶಿ ವಿದ್ವಾಂಸರ ದಾಖಲೆಗಳಿಂದ ವಿವೇಚಿಸುತ್ತದೆ. ಆರ್ಥಿಕ, ಆಡಳಿತ, ರಾಜಕೀಯ ವಹೀವಾಟುಗಳನ್ನು ವಸ್ತುನಿಷ್ಠವಾಗಿ ಕಟ್ಟಿಕೊಡಲಾಗಿದೆ. ಪ್ರಾಚೀನ ಕರ್ನಾಟಕದಲ್ಲಿ ಶಿಲ್ಪಾಚಾರಿಯವರು ಎಂಬ ಪ್ರಬಂಧವನ್ನು ರಚಿಸಿದ ಡಾ. ಎ. ಎಸ್‌. ಕುಮಾರಸ್ವಾಮಿ (೧೯೯೯)ಯವರು ಶಿಲ್ಪಶಾಸ್ತ್ರವನ್ನು ಉಪಜೀವನಕ್ಕೆ ಬಳಸಿಕೊಂಡು ಬದುಕುತ್ತಿದ್ದ ಒಂದು ಜನವರ್ಗವನ್ನು ಗುರುತಿಸುವ ಪ್ರಯತ್ನಮಾಡಿದ್ದಾರೆ. ಶಿಲ್ಪಿಗಳಿಗೆ ನೀಡುವ ಆಯ, ದಾನದತ್ತಿ ಅವರು ಕೊಡಬೇಕಾಗಿದ್ದ ತೆರಿಗೆ ಮುಂತಾದವುಗಳನ್ನು ಪರಿಚಯಿಸಲಾಗಿದೆ.

ಸಾಹಿತ್ಯ ಕೃತಿಗಳ ಮೂಲಕ ಸಂಸ್ಕೃತಿಯನ್ನು ವ್ಯಾಖ್ಯಾನಿಸುವಲ್ಲಿ ಎರಡು ಕೃತಿಗಳು ಮಹತ್ವ ಪೂರ್ಣವೆನಿಸುತ್ತವೆ. ಒಂದು ಚಂಪೂ ಪ್ರಕಾರದ ಪಂಪಭಾರತ, ಮತ್ತೊಂದು ಹರಿಹರನ ರಗಳೆಗಳು. ಡಾ. ಶಾಂತಿನಾಥ ದಿಬ್ಬದ ಅವರ ಪಂಪಭಾರತ : ಒಂದು ಸಾಂಸ್ಕೃತಿಕ ಅಧ್ಯಯನ (೧೯೯೪)ದಲ್ಲಿ ವೃತ್ತಿಗಾಯಕರು, ಕುಲಕಸಬುದಾರರು, ಅರಸು ಪರಿವಾರದವರು, ಶ್ರೀಸಾಮಾನ್ಯರ ಆಚಾರ – ನಂಬಿಕೆಗಳನ್ನು ಕಲೆಹಾಕಿರುವುದು ಶ್ರಮದಿಂದ ಕೂಡಿದೆ. ಪಂಪಭಾರತದ ಅಧ್ಯಯನವೆಂದರೆ ಕರ್ನಾಟಕದ ಎಲ್ಲ ಕಾಲದ ಜನಜೀವನದ ಸಂವೇದನೆಯೆಂಬುದನ್ನು ಮನದಟ್ಟು ಮಾಡಿಕೊಡುತ್ತದೆ. ಈ ಪ್ರಬಂಧ. ಹರಹರನ ರಗಳೆಗಳು : ಒಂದು ಸಾಂಸ್ಕೃತಿಕ ಅಧ್ಯಯನ (೧೯೯೯) ಮಾಡಿರುವ ಡಾ. ಸದಾನಂದ ಪಾಟೀಲರು ಆ ಕಾಲದ ರಾಜಕೀಯ, ಸಮಾಜಿಕ, ಆಡಳಿತ, ಧಾರ್ಮಿಕ ಸಂಗತಿಗಳ ಜೊತೆಗೆ ಕಲೆ, ಸಂಗೀತ ಮುಂತಾದ ವಿವರಗಳನ್ನು ಪರಿಚಯಿಸಿದ್ದಾರೆ. ಬಸವಪೂರ್ವಕಾಲೀನ, ಬಸವಕಾಲೀನ ಹಾಗೂ ಬಸವನಂತರದ ಇತಿಹಾಸವನ್ನು ತಿಳಿದುಕೊಳ್ಳಲು ರಗಳೆಗಳು ಹೇಗೆ ಸಹಕಾರಿಯಾಗುತ್ತವೆಂಬುದನ್ನು ತಿಳಿಸುವುದು ಈ ಕೃತಿಯ ಹೆಗ್ಗಳಿಕೆಯಾಗಿದೆ.

. ಹಸ್ತಪ್ರತಿಶಾಸನಗಳ ಆಧ್ಯಯನ : ಹತ್ತು ವರ್ಷಗಳಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳು ಬಂದಿರುವುದು ಬೆರಳೆಣಿಕೆಯಷ್ಟು. ಅದರಲ್ಲೂ ಹಸ್ತಪ್ರತಿಗೆ ಸಂಬಂಧಿಸಿದ ಏಕೈಕ ಕೃತಿ ಡಾ. ಬಿ. ಕೆ. ಹಿರೇಮಠರ ಕನ್ನಡ ಹಸ್ತಪ್ರತಿಗಳು : ಒಂದು ಅಧ್ಯಯನ (೧೯೯೨). ಹಸ್ತಪ್ರತಿಗಳ ತಯಾರಿಕೆ, ಸ್ವರೂಪ, ಸಂರಕ್ಷಣೆ, ಚಿತ್ರ, ಕುಶಲಕರ್ಮಿಗಳು, ಲಿಪಿಕಾರರು, ಮಹತ್ವ ಕುರಿತಾಗಿ ಎಲ್ಲ ಮುಖಗಳ ಅಧ್ಯಯನ ನಡೆದಿದೆ. ಉಪೇಕ್ಷಿತ ಕ್ಷೇತ್ರದಲ್ಲಿ ಇದೊಂದು ಅತ್ಯುತ್ತಮ ಸಂಶೋಧನ ಕೃತಿಯೆನ್ನಬಹುದು.

ಶಾಸನಗಳನ್ನೇ ಪ್ರಮುಖ ಆಕರಗಳನ್ನಾಗಿರಿಸಿಕೊಂಡು ನಾಡಿನ ಆಡಳಿತ, ಹಾಗೂ ಸಾಂಸ್ಕೃತಿಕ ಚರಿತ್ರೆಯನ್ನು ಕಟ್ಟಿದ ಕೃತಿಗಳು ರಚನೆಯಾಗಿರುವುದು ಮೂರು. ಡಾ. ಜೆ. ಎಂ. ನಾಗಯ್ಯನವರ ಆರನೇಯ ವಿಕ್ರಮಾದಿತ್ಯನ ಶಾಸನಗಳು : ಒಂದು ಅಧ್ಯಯನ (೧೯೯೨). ವಿಕ್ರಮಾದಿತ್ಯನ ವ್ಯಕ್ತಿತ್ವ ಹಾಗೂ ೫೦ ವರ್ಷಗಳ ಆಡಳಿತಾತ್ಮಕ ವೈಖರಿಗಳನ್ನು ಕಟ್ಟಿಕೊಟ್ಟಿರುವುದು ಈ ಪ್ರಬಂಧದ ವೈಶಿಷ್ಟ್ಯ. ಆಡಳಿತ ಪದ್ಧತಿ, ವಿಭಾಗ, ಅಧಿಕಾರಿವರ್ಗ, ಮುಂತಾದವುಗಳನ್ನು ಸಾಹಿತ್ಯಕೃತಿ ಹಾಗೂ ಶಾಸಾನಾಧಾರಗಳಿಂದ ವಿಶ್ಲೇಷಿಸುರುವುದು ಅಧ್ಯಯನ ಯೋಗ್ಯವಾಗಿದೆ. ಹಾಗೆಯೇ ಡಾ. ಕೆ. ಜಿ. ವೆಂಕಟೇಶ್‌ ಜೋಯಿಸ್‌ ಅವರ ಕೆಳದಿ ಶಾಸನಗಳ ಸಾಂಸ್ಕೃತಿಕ ಅಧ್ಯಯನ (೧೯೯೯). ವಿಜಯನಗರದ ನಂತರ ಕರ್ನಾಟಕದಲ್ಲಿ ತಲೆಯೆತ್ತಿದೆ ಮಹತ್ವದ ಅರಸುಮನೆತನ ಕೆಳದಿ. ಈ ಮನೆತನದ ಚೌಡಪ್ಪನಾಯಕ, ಶಿವಪ್ಪನಾಯಕ, ಚನ್ನಬಸವನಾಯಕ, ಚಿನ್ನಾಮ್ಮಾಜಿ ಮುಂತಾದ ಅರಸರು ಮೂರು ಶತಮಾನಗಳ ಕಾಲ ಆಡಳಿತ ನಡೆಸಿದ್ದಾರೆ. ಈ ಅವಧಿಯಲ್ಲಿ ದೊರೆತ ಸುಮಾರು ೪೦೦ ಶಾಸನಗಳು ಪ್ರಸ್ತುತ ಅಧ್ಯಯನದಲ್ಲಿ ಆಕರ ಸಾಮಾಗ್ರಿಗಳಾಗಿವೆ. ಇವುಗಳ ಸಹಾಯದಿಂದ ಕೆಳದಿ ಅರಸರ ದಾನಗುಣ, ಧಾರ್ಮಿಕ ವ್ಯವಸ್ಥೆ, ಆಡಳಿತ ಕ್ರಮ, ಸಮಾಜಿಕ ಸ್ಥಿತಿಗತಿಗಳನ್ನು ದಾಖಲಿಸಲಾಗಿದೆ. ಕನ್ನಡ ಶಾಸನ ಶಿಲ್ಪ ಎಂಬ ಡಾ.ಡಿ.ವಿ.ಪರಮಶಿವಮೂರ್ತಿ (೧೯೯೯) ಯವರ ಕೃತಿ. ಶಾಸನಗಳಿಗಿರುವ ಪಠ್ಯ ಮತ್ತು ಶಿಲ್ಪಗಳೆರಡು ರೂಪಗಳಲ್ಲಿ, ಶಿಲ್ಪಗಳನ್ನು ಆಕರಗಳನ್ನಾಗಿರಿಸಿಕೊಂಡು ಅಧ್ಯಯನ ಮಾಡಿರುವುದಾಗಿದೆ. ಕ್ರಿ.ಶ. ೪೫೦ರ ಹಲ್ಮಿಡಿ ಶಾಸನದ ಉಬ್ಬುಶಿಲ್ಪದಿಂದ ಹಿಡಿದು ೧೮ನೇ ಶತಮಾನದ ವರೆಗಿನ ಸುಮಾರು ೧೧೫೦ಕ್ಕಿಂತ ಹೆಚ್ಚು ಶಾಸನಗಳನ್ನು ಅಧ್ಯಯನಕ್ಕೆ ಬಳಸಿಕೊಂಡಿದ್ದಾರೆ. ಬಲಿದಾನ, ಸಮಾಧಿ, ನಿಷಧಿ, ಮಾಸ್ತಿ, ಮಹಾಸತಿ ಹಿನ್ನೆಲೆಯಲ್ಲಿ ಶಿಲ್ಪಗಳನ್ನು ಶಾಸ್ತ್ರೀಯವಾಗಿ ಡಾ. ಪರಮಶಿವಮೂರ್ತಿ ಅಧ್ಯಯನ ಮಾಡಿದ್ದಾರೆ.

. ತೌಲನಿಕ ಅಧ್ಯಯನ : ಒಂದು ಭಾಷೆ, ಒಬ್ಬ ಕವಿ, ಇಲ್ಲವೇ ಒಂದು ಧರ್ಮ – ಪಂಥ ಹಾಗೂ ಸಿದ್ಧಾಂತಗಳನ್ನು ಇನ್ನೊಂದು ಭಾಷೆ, ಕವಿ, ಧರ್ಮ – ಪಂಥ ಮತ್ತು ಸಿದ್ಧಾಂತಗಳಿಗೆ ಹೋಲಿಸಿ ನೋಡುವ, ಆ ಮೂಲಕ ಅವುಗಳಲ್ಲಿರುವ ಸಮಾನ ಗುಣಾಂಶಗಳನ್ನು, ವೈಪರಿತ್ಯಗಳನ್ನು ತುಲನಾತ್ಮಕವಾಗಿ ಗುರುತಿಸುವ ಅಧ್ಯಯನಗಳು ನಡೆದಿವೆ. ಅವುಗಳಲ್ಲಿ ಭಾಷೆ ಕುರಿತಂತೆ ಡಾ. ವೃಷಭಭೇಂದ್ರಾಚಾರ್ ಅರ್ಕಸಾಲಿ ಅವರ ಸ್ವಾತಂತ್ರೋತ್ತರ ಕನ್ನಡ ಹಾಗೂ ತೆಲಗು ಕಾವ್ಯಗಳಲ್ಲಿ ಸಾಮಾಜಿಕ ಪ್ರಜ್ಞೆ (೧೯೯೧) ಎಂಬ ಪ್ರಬಂಧವು ಭಿನ್ನ ಸಂಸ್ಕೃತಿಯನ್ನೊಳಗೊಂಡ ಎರಡು ಭಾಷೆಗಳ ಕಾವ್ಯಗಳಲ್ಲಿ ಕಂಡುಬರುವ ಸಾಮಾಜಿಕ ಪ್ರಜ್ಞೆಯನ್ನು ವಿಶ್ಲೇಷಿಸುತ್ತದೆ. ಸಾಮಾಜಿಕ ವಾಸ್ತವ ಸ್ಥಿತಿ, ಹಾಗೂ ಶೋಷಣೆಯ ನೆಲೆಗಳಲ್ಲಿ ಹುಟ್ಟಿಕೊಂಡ ಕಾವ್ಯಗಳ ಕಾಳಜಿಯನ್ನು ತುಂಬಾ ವ್ಯವಸ್ಥಿತವಾಗಿ ಕಟ್ಟಿಕೊಡಲಾಗಿದೆ. ಆಳುವರ್ಗ ಹಾಗೂ ಕಾರ್ಮಿಕ ವರ್ಗಗಳ ಸಂಘರ್ಷವನ್ನು ಮತ್ತು ಸಮಷ್ಠಿ ಬದುಕಿನ ಆಶಯವನ್ನು ಕಾವ್ಯಗಳು ಹೇಗೆ ಪ್ರತಿಪಾದಿಸುತ್ತವೆಂಬದನ್ನು ಸಾಧಾರ ಪೂರ್ವಕವಾಗಿ ವಿವರಿಸಲಾಗಿದೆ.

ಡಾ. ಬಸವರಾಜ ಸಬರದ ಅವರ ಬಸವೇಶ್ವರ ಮತ್ತು ಪುರಂದರದಾಸ : ಒಂದು ಅಧ್ಯಯನ (೧೯೯೩) ಎರಡು ಕಾಲಘಟ್ಟಗಳ ಸಾಂಸ್ಕೃತಿಕ ತಾಕಲಾಟಗಳನ್ನು ಅದಕ್ಕೆ ಸ್ಪಂದಿಸಿದ ವಚನ ಕೀರ್ತಿನ ಪ್ರಕಾರಗಳ ವೈಶಿಷ್ಟ್ಯವನ್ನು ಇಲ್ಲಿ ಗುರುತಿಸಲಾಗಿದೆ. ಡಾ. ಸಬರದ ಆಧುನಿಕ ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಅರ್ಥೈಸುವ, ಒಳಪದರುಗಳನ್ನು ಶೋಧಿಸುವ ಪ್ರಯತ್ನದಿಂದ ಹೇಗೆ ಇವರೀರ್ವರ ಸಾಹಿತ್ಯ ಜನಮುಖಿ – ಸಮಾಜಮುಖಿಯಾಗುತ್ತದೆಂಬುದನ್ನು ಸೈದ್ಧಾಂತಿಕವಾಗಿ ನಿರೂಪಿಸುತ್ತಾರೆ. ಹಾಗೆಯೇ ೧೨ ಮತ್ತು ೨೦ನೇ ಶತಮಾನಗಳ ವಚನಸಾಹಿತ್ಯ ಕುರಿತು ತುಲನಾತ್ಮಕ ಅಧ್ಯಯನ ಮಾಡಿದವರು ಡಾ. ಸಿಸ್ಟರ್ ವಯಲೆಟ್ (೧೯೯೯) ಅವರು ಪ್ರಾಚೀನ ಹಾಗೂ ಆಧುನಿಕ ವಚನಕಾರರ ಆಶಯ, ಧೋರಣೆ, ಕಾವ್ಯಕಲೆ ಮುಂತಾದ ಹಿನ್ನೆಲೆಯಲ್ಲಿ ವಚನಸಾಹಿತ್ಯವನ್ನು ವಿವೇಚಿಸಿದ್ದಾರೆ. ಡಾ. ಅಬ್ದುಲ್‌ಹಮೀದ್‌ ಅವರು ಸೂಫಿಪಂಥ ಮತ್ತು ಶರಣಪಂಥಗಳು : ತೌಲಿನಕ ಅಧ್ಯಯನ (೧೯೯೮) ಎಂಬ ಕೃತಿಯಲ್ಲಿ ಎರಡು ಪಂಥಗಳ ವೈಚಾರಿಕ ವಿಚಾರಗಳನ್ನು ವಿವರಿಸಿದ್ದಾರೆ, ಆಯಾ ಪಂಥಗಳ ಉಗಮ, ವಿಕಾಸ, ಬೆಳವಣಿಗೆ ಗುರುತಿಸುವುದರ ಮೂಲಕ ಅವೆರಡೂ ವಾಗ್ವಾದಕ್ಕಿಂತ ಸಂವಾದ ನೆಲೆಯಲ್ಲಿ ಬೆಲೆ ಪಡೆದುಕೊಳ್ಳುತ್ತವೆಂಬುದನ್ನು ಸಂಶೋಧಕರು ಕಂಡುಕೊಳ್ಳುವುದು ಅಗತ್ಯವಿತ್ತೆನಿಸುತ್ತದೆ. ಪರಿವಿಡಿ ಇಲ್ಲದ ಪುಸ್ತಕ ಮಹಾಪ್ರಬಂಧದ ಗಾಂಭೀರ್ಯವನ್ನು ಕಳೆದುಕೊಂಡಿದೆ. ಡಾ. ಆರ್. ಪಿ. ಹೆಗಡೆ ಅವರ ಶಿಶುನಾಳ ಶರೀಫ್ಮತ್ತು ಸಂತಕಬೀರ : ಒಂದು ತೌಲನಿಕ ಅಧ್ಯಯನ (೧೯೯೩) ವೇದ, ಉಪನಿಷತ್ತು, ಗೀತೆ, ಭಾಗವತಗಳಲ್ಲಿ ಭಾರತೀಯ ಭಕ್ತಿ ಪರಂಪರೆಯ ಒಳನೋಟಗಳನ್ನು ವಿವರಿಸುತ್ತದೆ. ಉತ್ತರಭಾರತದ ಶ್ರೀರಾಮಾನಂದರ ಸುಗುಣ ಹಾಗೂ ನಿರ್ಗುಣ, ಇಸ್ಲಾಂ ಏಕೇಶ್ವರವಾದ, ಸೂಫಿಸಿದ್ದಾಂತ, ಗುರನಾನಕರ ಸಮನ್ವಯ ದರ್ಶನ, ಶಾಕ್ತರ ಯೋಗಮಾರ್ಗ, ವಾರಕರಿ ಸಂಪ್ರಾದಾಯ, ನಾಥಪಂಥ ಇವುಗಳ ಪ್ರೇರಣೆ ಕಬೀರರ ಮೇಲೆ ಹೇಗಾಯಿತ್ತೆಂಬುದನ್ನು ಕಟ್ಟಿಕೊಡುವಲ್ಲಿ ಸಂಶೋಧಕರ ಆಳವಾರ ಪರಿಶ್ರಮವಿದೆ. ಇಬ್ಬರು ಸಂತರ ಸಾಮಾಜಿಕ ಚಿಂತನೆ, ತತ್ತ್ವಚಿಂತನೆ ಹಾಗೂ ಕಾವ್ಯಗುಣಗಳನ್ನು ಇಲ್ಲಿ ವಿಶ್ಲೇಷಿಸಿದ್ದಾರೆ.

ಲಭ್ಯವಾದ ಕೃತಿಗಳ ಇಲ್ಲಿಯವರೆಗಿನ ಸಮೀಕ್ಷೆಯಿಂದ ಬಹುತೇಕ ಪ್ರಬಂಧಗಳು ಸಂಶೋಧನ ಶಿಸ್ತಿಗೆ ಒಳಗಾಗಿವೆ. ಶಾಸನ, ಸಾಹಿತ್ಯ, ಕಲೆ, ಸಂಸ್ಕೃತಿ, ಭಾಷೆ ಇತ್ಯಾದಿ ನೆಲೆಗಳಿಂದ ಇಲ್ಲಿಯ ಅಧ್ಯಯನಗಳು ತಾವು ಆಯ್ಕೆಮಾಡಿಕೊಂಡು ವಿಷಯಕ್ಕೆ ನ್ಯಾಯದೊರಕಿಸಿಕೊಟ್ಟಿವೆ. ಸಮಾಜಶಾಸ್ತ್ರ, ಚರಿತ್ರೆಗಳಿಗಿಂತ ಬೇರಯಾದ ಸಾಂಸ್ಕೃತಿಕ ಅಧ್ಯಯನವನ್ನು ಸಾಹಿತ್ಯ ಸಂಶೋಧನೆಯಿಂದ ಕಟ್ಟಿಕೊಡಬಹುದಾಗಿದೆ ಎಂಬುದನ್ನು ಕೆಲವು ಪ್ರಬಂಧಗಳು ಬೆರಳುಮಾಡಿ ತೋರಿಸುತ್ತವೆ. ಮಾಹಿತಿ ಸಂಗ್ರಹ, ಸಂಗ್ರಹವಾದ ಮಾಹಿತಿಯ ವರ್ಗಿಕರಣ, ಅರ್ಥೈಸುವಿಕೆಯಲ್ಲಿ ಕೆಲವು ಪ್ರಬಂಧಗಳು ಹಿಂದೆ ಬಿದ್ದಿವೆಂಬುದು ಈ ಹತ್ತು ವರ್ಷಗಳ ಸಮೀಕ್ಷೆಯಿಂದ ಮನವರಿಕೆಯಾಗುತ್ತದೆ. ಇಷ್ಷಾಗಿಯೂ ಹೊಸ ಅಲೋಚನೆ, ಮಾಹಿತಿ, ಆಳವಾದ ಅಧ್ಯಯನಕ್ಕೆ ಮುಂದಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಬೇರೆ ಬೇರೆ ವಸ್ತು ವಿಷಯಗಳನ್ನು ಸಂಶೋಧನೆಗೆ ಆಯ್ಕೆಮಾಡಿಕೊಂಡ ಕಾರಣವಾಗಿ ಎಲ್ಲವನ್ನೂ ಒಂದೇ ತಕ್ಕಡಿಯಲ್ಲಿ ಸರಾಸಗಟಾಗಿ ಪರಿಶೀಲಿಸುವುದು ಸಾಧುವೂ ಅಲ್ಲ. ಸಾದ್ಯವೂಯಿಲ್ಲ ಎಂಬ ಎಚ್ಚರಿಕೆ ಈ ಲೇಖನದ ರಚನೆಯಲ್ಲಿ ಕೆಲಸಮಾಡಿದೆಂಬುದನ್ನು ಹೇಳಬೇಕಾಗುತ್ತದೆ.