ಅನುವಾದ ಅಂದರೆ ಲಕ್ಷ್ಯಭಾಷೆ ಮತ್ತು ಅಕರ ಭಾಷೆಯ ನಡುವೆ ನಡೆಯುವ ಒಂದುತೆರನ ವ್ಯಾಖ್ಯಾನ. ಈ ವ್ಯಾಖ್ಯಾನ ಯಾವತ್ತೂ ಲಕ್ಷ್ಯಭಾಷೆ ಬೇಡಿಕೆ ಅಥವಾ ಅಗತ್ಯಕ್ಕೆ ಅನುಗುಣವಾಗಿ ನಡೆಯುತ್ತದೆ. ಇದಕ್ಕೆ ಸ್ಫೂರ್ತಿ ಕೇಂದ್ರ ಆಕರ ಭಾಷೆಯೇ ಆಗಿದ್ದರೂ ಸಹ ಅದು ಲಕ್ಷ್ಯಭಾಷೆಯನ್ನು ಕೇಂದ್ರೀಕರಿಸಿಯೇ ಪ್ರಕಟವಾಗುತ್ತಿರುತ್ತದೆ ಎಂಬುದು ವಾಸ್ತವ. ಹಾಗೆ ನೋಡಿದರೆ ಅಕರ ಭಾಷೆಯ ಸಂಸ್ಕೃತಿ ಮತ್ತು ಲಕ್ಷ್ಯಭಾಷೆಯ ಸಂಸ್ಕೃತಿ ತೀರಾ ಭಿನ್ನವಾಗಿಯೇ ಇರುತ್ತದೆ. ಇಂತಹ ಸಂದರ್ಭದಲ್ಲಿಯೂ ಅನುವಾದಕರು ಆಕರಭಾಷೆಯನ್ನು ತಮ್ಮ ಗ್ರಹಿಕೆಯ ನೆಲೆಯಲ್ಲಿಯೇ ವ್ಯಾಖ್ಯಾನಿಸಿರುತ್ತಾರೆ. ಇಂತಹ ವ್ಯಾಖ್ಯಾನಗಳು ಕೃತಿ ಹಾಗೂ ವ್ಯಕ್ತಿಯ ಕಾರಣದಿಂದ ಬೇರೆ ಬೇರೆ ಸ್ತರಗಳಲ್ಲಿ ವಿಭಿನ್ನವಾಗಿ ವ್ಯಕ್ತವಾಗುತ್ತಿರುತ್ತವೆ. ಇವುಗಳಲ್ಲಿ ಮುಖ್ಯವಾಗಿ ಮೂರು ಸ್ತರಗಳನ್ನು ಗುರುತಿಸಬಹುದು. ಒಂದು ವೈಯಕ್ತಿಕ ಸ್ತರ, ಎರಡನೆಯದು ಸಾಂಸ್ಥಿಕ ಸ್ತರ, ಹಾಗೆಯೆ ಮೂರನೆಯದು ಸಾಮುದಾಯಿಕ ಸ್ತರ. ಈ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಕಟವಾದ ಅನುವಾದ ಕೃತಿಗಳ ಮುಖ್ಯಧೋರಣೆಗಳನ್ನು ಪರಿಶೀಲಿಸಬಹುದು.

ವೈಯಕ್ತಿಕ ಅನುವಾದಗಳು

ಒಂದು ಕೃತಿಯನ್ನು ಅನುವಾದ ಮಾಡಬೇಕು ಎಂಬ ಯೋಚನೆ ವೈಯಕ್ತಿಕವಾಗಿ ಅನುವಾದಕರೊಬ್ಬರಿಗೆ ಬಂದಾಗ ಅಂತಹ ಅನುವಾದಗಳು ವೈಯಕ್ತಿಕ ನೆಲೆಯಲ್ಲಿಯೇ ಹೆಚ್ಚು ವ್ಯಾಖ್ಯಾನಗೊಳ್ಳುತ್ತಾ ಸಾಗುತ್ತದೆ. ಇಲ್ಲಿ ಅನುವಾದಕರಿಗೆ ಮುಕ್ತ ಸ್ವಾತಂತ್ರ ಇರುತ್ತದೆ. ತನ್ನ ತಿಳುವಳಿಕೆಗಳಿಗನುಗುಣವಾಗಿ ಅನುವಾದಗಳನ್ನು ತನ್ನ ವೈಯಕ್ತಿಕ ಉದ್ದೇಶಗಳಿಗೆ ತಕ್ಕಂತೆ ರೂಪಿಸಿಕೊಳ್ಳುತ್ತಾರೆ. ಇಂತಹ ಅನುವಾದಗಳಲ್ಲಿ ಆಕರ ಭಾಷೆಯ ಕೃತಿಗೆ ನಿಷ್ಠೆಯೋ ಅಥವಾ ಲಕ್ಷ್ಯಭಾಷೆಯ ಒತ್ತಡವೋ ಕಾಣಲಾರದು. ಅದನ್ನು ಮೀರಿ ವೈಯಕ್ತಿಕವಾಗಿ ಅವುಗಳನ್ನು ವ್ಯಾಖ್ಯಾನಿಸುವ ನೆಲೆಯನ್ನು ಸ್ವೀಕರಿಸಿರುತ್ತಾರೆ. ಈ ನೆಲೆಯಲ್ಲಿ ಕೆಲವು ಕೃತಿಗಳನ್ನು ಪರಿಶೀಲಿಸಬಹುದು.

ಬಂಗಾಲಿಯಿಂದ ಮಹಾಶ್ವೇತಾ ದೇವಿಯವರ ‘ದೊಪ್ಡಿ ಹಾಗೂ ಇತರ ಕತೆಗಳು’ (೧೯೯೬) ಮತ್ತು ‘ಬೇಟೆ’ ಎಂಬ ಎರಡು ಕಥಾ ಸಂಕಲನಗಳು ಕನ್ನಡದಲ್ಲಿ ಪ್ರಕಟವಾಗಿವೆ. ಬುಡಕಟ್ಟು ಜನರ ನೋವುಗಳನ್ನು, ಸಂಕಟಗಳನ್ನು ಶೋಷಣೆಯ ಬದುಕನ್ನು ಚಿತ್ರಿಸುವ ಇವರ ಬರೆವಣಿಗೆಯಲ್ಲಿ ಸಾಮಾಜಿಕ ಬದ್ಧತೆಯನ್ನು ಗುರುತಿಸಬಹುದು. ಇವುಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದವರು ಎಚ್. ಎಸ್. ಶ್ರೀಮತಿ.

ಸಿ.ವಿ. ಶ್ರೀರಾಮನ್ ಮಲಯಾಳಂನ ನವ್ಯ ಕತೆಗಾರರಲ್ಲೊಬ್ಬರು. ಇವರ ಹದಿನಾಲ್ಕು ಕತೆಗಳನ್ನೊಳಗೊಂಡ ಸಂಕಲನ ‘ಚಿದಂಬರಂ’ ಪಾಪ ಮತ್ತು ಅದಕ್ಕೆ ಪ್ರಯಶ್ಚಿತ್ತ ಇವರ ಬಹುತೇಕ ಕತೆಗಳ ವಸ್ತು. ವೃತ್ತಿಯಲ್ಲಿ ವಕೀಲರಾದ ಇವರ ಜೀವನಾನುಭವಗಳು ಕತೆಗಳಲ್ಲಿ ಎಡೆಯರಿತು ದಾಖಲಾಗಿವೆ. ಬೃಹತ್ತಾದುದನ್ನು ಸೂಚ್ಯವಾಗಿ ಹೇಳುವುದು ಇವರ ಕತೆಗಳ ಲಕ್ಷಣಗಳಲ್ಲೊಂದು. ಮಾನವೀಯ ಸಂಬಂಧಗಳಲ್ಲಿನ ತಲ್ಲಣಗಳ ಹಲವು ಮುಖಗಳನ್ನು ಮಾನಸಿಕ ಹೊಯ್ದಾಟದ ಹಲವು ನೆಲೆಗಳನ್ನು ಚಿತ್ರಿಸುವುದರಿಂದಲೇ ಲೇಖಕರು ವಿಶಿಷ್ಟರಾಗಿದ್ದಾರೆ. ಈ ಕತೆಗಳನ್ನು ಕನ್ನಡದ ಜಾಯಮಾನಕ್ಕೆ ಹೊಂದಿಸಿದವರು ಆಶೋಕ್ ಕುಮಾರ್.

ಕೆ.ಕೆ. ನಾಯರ್ ಅನುವಾದಿಸಿದ ‘ಕುಟ್ಯಕ್ಕ ಮತ್ತು ಇತರ ಕತೆಗಳು’ ಎಂ. ಟಿ. ವಾಸುದೇವನ್ ನಾಯರ್ ಅವರ ಕತೆಗಳ ಸಂಕಲನ. ಮಲಯಾಳಂ ಸಣ್ಣ ಕತೆಗಳ ಮೂಲಕ ಸಾಮಾಜಿಕ ವಿಷಯಗಳನ್ನು ಮುಖ್ಯವಾಗಿ ಅನುವರಣಗೊಳಿಸುತ್ತಿದ್ದ ಕಾಲಘಟ್ಟದಲ್ಲಿ ಮಾನವನ ಭಾವನೆಗಳನ್ನು ಕೇಂದ್ರೀಕರಿಸಿ ಬರೆಯುವುದರ ಮೂಲಕ ಮಲಯಾಳಂ ಸಣ್ಣ ಕತೆಗಳಿಗೆ ಹೊಸತೊಂದು ಆಯಾಮವನ್ನು ಒದಗಿಸಿದವರು ಎಂ.ಟಿ.ವಾಸುದೇವನ್ ನಾಯರ್. ಕೇರಳದ ಅವಿಭಕ್ತ ಕುಟುಂಬದಲ್ಲಿ ಕಾರಣವರ ದರ್ಪ ದೌಲತ್ತುಗಳಿಗೆ ಬಲಿಯಾಗಿ ತನ್ನತನವನ್ನು ಉಳಿಸಿಕೊಳ್ಳಲು ಹೆಣಗುತ್ತಿದ್ದ ಅನೇಕ ಮಾನವ ಜೀವಿಗಳ ಮನಸ್ಸಿನ ಭಾಷಿಕ ಅಭಿವ್ಯಕ್ತಿಯೇ ಎಂ. ಟಿ.ವಾಸುದೇವನ್ ನಾಯರ್ ಅವರ ಪ್ರಮುಖ ಕತೆಗಳಾಗಿವೆ. ಮನೆತನದ ಮಕ್ಕಳು ಪಡುತ್ತಿದ್ದ ಪಾಡು ಆ ಮಕ್ಕಳ ನೋವಿನಲ್ಲಿ ಭಾಗಿಯಾಗುವ ತಾಯಂದಿರು, ಇವರೆಲ್ಲರ ನೋವೇ ಇಲ್ಲಿನ ಕತೆಗಳಲ್ಲಿ ದಿಗ್ಭ್ರಮೆ ಮೂಡಿಸುವಷ್ಟಿದೆ. ಕೊನೆಯಿಲ್ಲದ ಆತ್ಮನಿಂದನೆ, ಏಕಾಂತದ ಅಸ್ಪಷ್ಟತೆ, ಬತ್ತಿಹೋಗದ ಹಗೆತನ, ಇವು ಎಂ. ಟಿ. ವಾಸುದೇವನ್ ನಾಯರ್ ಅವರ ಕತೆಗಳ ಅಂತಃಸತ್ವ. ಇವರ ಕಥಾ ಪಾತ್ರಗಳು ಏಕಕಾಲಕ್ಕೆ ಆತ್ಮಾಭಿಮಾನವನ್ನು, ಕ್ರಾಂತಿಕಾರಿ ಮನೋಭಾವವನ್ನು ಬೆಳೆಸಿಕೊಳ್ಳುವುದನ್ನು ಕಾಣಬಹುದು. ಇವರ ಕತೆಗಳ ಆಶಯಗಳು ವ್ಯಥೆಯಲ್ಲಿ ನೆನೆದಿವೆ. ನೆಲದ ಸಂಸ್ಕೃತಿಯಿಂದ ಪೋಷಣೆ ಪಡೆದಿವೆ. ಜೊತೆಗೆ ವ್ಯವಸ್ಥೆಯ ತೊಡಕಿನಿಂದಾಗಿ ನೆಲ ಕಚ್ಚಿದ ಆರ್ಥಿಕ ಸ್ಥಿಯ ಕುರಿತ ಖೇದವೂ ವ್ಯಕ್ತವಾಗಿದೆ.

ಈ ಸಂಕಲನದ ಮುಖ್ಯಕತೆ ಕುಟ್ಯಕ್ಕ. ತನ್ನವರಿಂದ ತನ್ನ ಪರಿಸರದ ಎಲ್ಲರಿಂದಲೂ ಅವಗಣನೆಗೊಳಗಾದ ಹೆಣ್ಣಿನ ದುರಂತ ಕಾವ್ಯವಾಗಿ ಈ ಕತೆ ದಾಖಲಾಗಿದೆ. ಒಬ್ಬ ಹುಡುಗನ ಪ್ರಜ್ಞೆಯ ಮೂಲಕ ಈ ಕತೆ ಬಿಚ್ಚಿಕೊಳ್ಳುತ್ತದೆ. ಎಂ. ಟಿ. ಯವರ ಬಹುತೇಕ ಕತೆಗಳ ತಂತ್ರವಿದು. ಅಮ್ಮ, ದೊಡ್ಡಮ್ಮಂದಿರ ಖಾರವಾದ ಮಾತುಗಳಲ್ಲೇ ಕುಟ್ಯಕ್ಕನ ವ್ಯಕ್ತಿತ್ವ ಹಾಗೂ ಮುದುಡುತ್ತಾ ಸಾಗಿದೆ. ವ್ಯಕ್ತಿತ್ವಕ್ಕೆ ಮುಕ್ತ ವಾತಾವರಣಕ್ಕೆ ಎರವಾದ ಬದುಕು ಹೇಗೆ ವ್ಯಕ್ತಿಯನ್ನು ಹತಾಶಗೊಳಿಸಬಹುದು ಎಂಬುದಕ್ಕೆ ಇಲ್ಲಿನ ಕುಟ್ಯಕ್ಕ ಸಾಕ್ಷಿ. ಜೊತೆಗೆ ಕ್ಷಯಬಾಧಿತ ತರವಾಡಿನ ದುರಂತ ಚಿತ್ರಣವು ಇದೆ. ಕುಟ್ಯಕ್ಕನ ಅದುಮಿಡಲಾರದ ಭಾವನೆಯನ್ನು ಮನಃಶಾಸ್ತ್ರೀಯ ನೆಲೆಯಿಂದ ಕತೆಗಾರರು ಇಲ್ಲಿ ಶೋಧಿಸಿದ್ದಾರೆ. ಅಕ್ಕ, ಒಂದು ಜನ್ಮ ದಿನದ ನೆನಪು ಈ ಕತೆಗಳಲ್ಲಿ ಕತೆಗಾರ ಕಟ್ಟಿಕೊಡುವ ನೋವಿನ ಲೋಕ ಹೃದಯಾರ್ದ್ರಗೊಳಿಸುತ್ತದೆ. ಮನುಷ್ಯನ ಮನದಾಳದ ನೋವು ಆ ನೋವಿಗೆ ಕಾರಣವಾದ ವ್ಯವಸ್ಥೆ, ಅದರ ಅಂತಂಗದ ಸೂಕ್ಷ್ಮತೆಗಳನ್ನು ಬಲ್ಲ ಕತೆಗಾರರು ಮಾನವ ಜೀವಿಯ ಮನೋಧರ್ಮವನ್ನು ಭಾವಸ್ಪರ್ಶಿಯಾಗಿ ದಾಖಲಿಸುತ್ತಾರೆ. ಆ ಮೂಲಕ ಕತೆಗಳನ್ನೇ ಅನುಭವವಾಗಿಸುವ ಪರಿ ವಿಶಿಷ್ಟವಾಗಿದೆ.

ಮೂಲತಃ ಎಂ. ಟಿ. ಈ ಕತೆಗಳಲ್ಲಿ ದಕ್ಷಿಣ ಮಲಬಾರು ಪ್ರದೇಶದ ಭಾಷೆಯನ್ನು ಸಾಂಸ್ಕೃತಿಕ ವಿವರಗಳ ಮೂಲಕ ದುಡಿಸಿಕೊಂಡಿದ್ದಾರೆ. ಇವರ ಮಾತುಗಳು ಬಾಣದ ಮೊನೆಗಳಂತೆ ಓದುಗನ ಒಳಗನ್ನು ಚುಚ್ಚುತ್ತವೆ. ಹೃದಯದ ಕಾವು, ನೋವು, ಕನಸುಗಳುಳ್ಳ ಆ ಮಾತುಗಳು ಒಂದೊಂದೂ ಜೀವಂತ ಪ್ರತಿಮೆಗಳಾಗಿವೆ. ಬಳಸಿದ ಒಂದು ವಾಕ್ಯ ಒಂದು ಪದ ಪ್ರಯೋಗ ಏರುಪೇರಾದರೂ ಕತೆಯೆ ಬಂಧವೇ ಕುಸಿಯಬಹುದು. ಅವರ ಕತೆಗಳನ್ನು ಇನ್ನೊಂದು ಭಾಷೆಗೆ ಅನುವಾದಿಸುವಾಗ ಕಳೆದು ಹೋಗಬಹುದಾದ ಸಾಂಸ್ಕೃತಿಕ ಆವರಣ ಅಪಾರವಾದುದು. ವಿವರಣೆಗಳ ಮೂಲಕ ಸಾಂಸ್ಕೃತಿಕ ವಿಚಾರಗಳ ಸಂವಹನ ಸಾಧ್ಯವಾಗಿಸಬಹುದು. ಇಲ್ಲಿಯ ಅನುವಾದ ಭಾಷೆ ಸರಳವಾಗಿದೆ. ಆದರೆ ಸಾಂಸ್ಕೃತಿಕ ವಾಗಿ ಚುರುಕು ಮುಟ್ಟಿಸುವುದಿಲ್ಲ.

ಇಲ್ಲಿನ ಕತೆಗಳು ಬೇರೆ ಬೇರೆ ಸಂದರ್ಭದಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾದವುಗಳು. ಪತ್ರಿಕೆಗಳಲ್ಲಿ ಬಿಡಿ ಬಿಡಿಯಾಗಿ ಬರುವಾಗಿನ ಉದ್ದೇಶಕ್ಕೂ ಸಂಕಲನ ರೂಪದಲ್ಲಿ ಪ್ರಕಟವಾದಾಗಿನ ಉದ್ದೇಶಕ್ಕೂ ವ್ಯತ್ಯಾಸವಿದೆ ಎಂಬುದನ್ನು ಗಮನಿಸಬೇಕು.

‘ಇರುವೆಗಳು ಮತ್ತು ಕತೆಗಳು’ ಗೋಪಿನಾಧ ಮೊಹಂತಿ ಅವರ ಹತ್ತು ಕತೆಗಳ ಸಂಕಲನ. ಎಚ್. ಎಸ್. ರಾಘವೇಂದ್ರ ರಾವ್ ಅವರು ಇಲ್ಲಿನ ಒರಿಯಾ ಭಾಷೆಯ ಕತೆಗಳನ್ನು ಹಿಂದಿ ಹಾಗೂ ಇಂಗ್ಲಿಷ್ ಭಾಷೆಯ ನೆರವಿನಿಂದ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಇಲ್ಲಿನ ಕತೆಗಳಲ್ಲಿ ಒರಿಸ್ಸಾದ ಬುಡಕಟ್ಟು ಜನರ ಸಾಂಸ್ಕೃತಿಕ ವಿವರಗಳು ಹಾಗೂ ಅಲ್ಲಿನ ಗ್ರಾಮೀಣಲಯಗಳು ದಾಖಲಾಗಿವೆ. ಜ್ಞಾನಪೀಠ ಪ್ರಶಸ್ತಿ ವಿಜೇತರ ಮಾಲೆಯಲ್ಲಿ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘವು ಇದನ್ನು ಪ್ರಕಟಿಸಿದೆ.

‘ಅನೂರೂಪ’ ದೇಶ ವಿದೇಶಗಳ ಪ್ರಸಿದ್ಧ ಹತ್ತು ಕತೆಗಳನ್ನೊಳಗೊಂಡ ಸಂಕಲನ. ಕರೀಗೌಡ ಬೀಚನಹಳ್ಳಿ ಯವರು ಅನುವಾದಿಸಿದ ಇಲ್ಲಿನ ಸೃಜನಾತ್ಮಕ ಗುಣಗಳನ್ನು ಪಡೆದಿವೆ. ಮೂಲತಃ ಕತೆಗಾರರೂ ಆದ ಅನುವಾದಕರು ತಮ್ಮ ಸೃಜನಾತ್ಮಕ ಅಂಶಗಳ ನೆಲೆಯಿಂದ ಇಲ್ಲಿನ ಕತೆಗಳನ್ನು ಅರ್ಥವತ್ತಾಗಿಸಿದ್ದಾರೆ. ಜೊತೆಗೆ ಲೇಖಕರ ಬಗೆಗೆ ವಿವರವಾದ ಪರಿಚಯಗಳನ್ನು ನೀಡಿರುವುದು ತುಂಬಾ ಉಪಯುಕ್ತವೆನಿಸಿದೆ.

ವೈಕಂ ಮುಹಮ್ಮದ್ ಬಶೀರರ ಎರಡು ಕಥಾಸಂಕಲನಗಳು ಈ ಅವಧಿಯಲ್ಲಿ ಪ್ರಕಟವಾಗಿವೆ. ಸುಮಾರು ಹದಿನಾರರಷ್ಟು ಕಥಾ ತುಣುಕುಗಳನ್ನು ಒಳಗೊಂಡ ಸಂಕಲನ ‘ವೈಕಂ ಕತೆಗಳು’. ಅನುವಾದಿಸಿದವರು ಎಸ್. ಗಂಗಾಧರಯ್ಯ. ಬಶೀರರ ಕತೆಗಳನ್ನು ಜನಪ್ರೀಯ ದಾಟಿಯಲ್ಲಿ ಇಲ್ಲಿ ಪುನರ್ ಸೃಷ್ಟಿಸಿದ್ದಾರೆ. ಹತ್ತು ಕತೆಗಳ ಸಂಕಲನ ‘ ಬಶೀರ್ ಕಥೆಗಳು’ ಅನುವಾದಿಸಿದವರು ಮೋಹನ ಕುಂಟಾರ್. ಬಶೀರರ ಕತೆಗಳ ಸಹಜಲಯವನ್ನು ಉಳಿಸಿಕೊಂಡೇ ಇವು ಕನ್ನಡಕ್ಕೆ ಬಂದಿವೆ.

ಕೊಟ್ಟಾರತ್ತಿಲ್ ಶಂಕುಣ್ಣಿ ಬರೆದ ‘ಐತಿಹ್ಯಮಾಲೆಯ ಕಥೆಗಳು’ ಒಂದು ಗಮನಾರ್ಹ ಕೃತಿ. ಇದರಲ್ಲಿ ಇಪ್ಪತ್ತು ಐತಿಹ್ಯ ಕತೆಗಳಿವೆ. ಅತ್ಯಂತ ಸಮರ್ಥವಾಗಿ ಇದನ್ನು ಅನುವಾದಿಸಿದವರು ಟಿ.ಆರ್. ವೆಂಕಟರಮಣ ಐತಾಳ್. ಕೇರಳದಲ್ಲಿ ಜನಪ್ರಿಯವಾಗಿರುವ ಈ ಐತಿಹ್ಯ ಕಥೆಗಳು ಕೇರಳದ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗಗಳು.

ಬಿ.ಎಂ. ಸುಹರಾ ಮಲಯಾಳಂನ ಮೊದಲ ಕಾದಂಬರಿಕಾರ್ತಿ. ಮೂರು ಕಾದಂಬರಿ ಮೂರು ಕಥಾಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸ್ಪಷ್ಟವಾದ ಹೆಜ್ಜೆಗಳನ್ನು ಮೂಡಿಸಿದ ಸುಹರಾ ಕೋಝಿಕೋಡಿನ ಕಾಲೇಜೊಂದರಲ್ಲಿ ಉಪನ್ಯಾಸಕರಾಗಿದ್ದಾರೆ. ಇವರ ಮೊಝಿ( ತಲ್ಲಾಖ್) ಎಂಬ ಕಾದಂಬರುಯನ್ನು ‘ಬಲೆ’ (೧೯೯೮) ಎಂಬ ಶೀರ್ಷಿಕೆಯಲ್ಲಿ ಸರಳ ಹಾಗೂ ಆತ್ಮೀಯವಾದ ಭಾಷೆಯಲ್ಲಿ ಸಾರಾ ಅವರು ಅನುವಾದಿಸಿದ್ದಾರೆ. ಮುಸ್ಲಿಂ ಸಮುದಾಯದ ಸಾಂಸ್ಕೃತಿಕ ಲೋಕದ ಒಳ ವಿವರಗಳನ್ನು ಬಲ್ಲ ಸಾರಾ ಅಬೂಬಕ್ಕರ್ ಅವರು ಮೂಲಕೃತಿಯನ್ನು ಕನ್ನಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಸಾಂಸ್ಕೃತಿಕ, ರಾಜಕೀಯ, ಇತಿಹಾಸಗಳನ್ನು ಗಮನಿಸಿದರೆ ಅವರಲ್ಲಿ ಮುಸಲ್ಮಾನ ಸಮುದಾಯದ ಕೊಡುಗೆ ಗಮನಾರ್ಹವಾಗಿದೆ. ಇವರ ಮನೆ ಮಾತು ಮಲಯಾಳಂ. ಆದರೂ ಸಾಹಿತ್ಯ ಕ್ಷೇತ್ರದಲ್ಲಿ ಇವರು ಪ್ರವೇಶ ಪಡೆದುದು ಈ ಶತಮಾನದ ನಲ್ವತ್ತರ ದಶಕದಲ್ಲಿ. ಅದೂ ವೈಕಂ ಮುಹಮ್ಮದ್ ಬಶೀರ್ ಅವರ ಬರವಣಿಗೆಯ ಮೂಲಕ ಸುಭದ್ರವಾದ ನೆಲೆಗಟ್ಟಿನಿಂದಲೇ ಆರಂಭವಾಯಿತು ಎನ್ನುವುದು ಮುಖ್ಯವಾದ ಸಂಗತಿ. ಆ ಬಳಿಕ ಅನೇಕರು ಈ ಹಾದಿಯಲ್ಲಿ ಮುನ್ನಡೆದವರಿದ್ದಾರೆ. ಆದರೆ ಮುಸಲ್ಮಾನ ಸಮುದಾಯದ ಲೇಖಕಿ ಮಲಯಾಳಂ ಸಾಹಿತ್ಯ ಲೋಕದಲ್ಲಿ ಕಾಣಿಸಿಕೊಳ್ಳಲು ವಿಳಂಬವಾದುದರ ಹಿಂದಿರುವ ಸಾಂಸ್ಕೃತಿಕ ರಾಜಕಾರಣವು ಅಧ್ಯಯನಯೋಗ್ಯ ವಿಷಯವಾಗಿದೆ. ಕೇರಳದ ಇತರ ಸಮುದಾಯದ ಮಹಿಳೆಯರ ಸಮಸ್ಯೆಗಳಿಗೂ ಮುಸಲ್ಮಾನ ಮಹಿಳೆಯರ ಸಮಸ್ಯೆಗಳಿಗೂ ಪರಸ್ಪರ ಸಾಮಾಜಿಕವಾಗಿ ಸಾಮ್ಯವಿದೆ. ಆದರೆ ಧಾರ್ಮಿಕವಾದ ಕಟ್ಟುಪಾಡುಗಳು ಆ ಸಮುದಾಯದ ಮಹಿಳೆಯರ ಬದುಕನ್ನು ಅತ್ಯಂತ ಬರ್ಬರವಾಗಿಸಿದೆ. ಮಾತಿನ ಮೂಲಕ ವಿಚ್ಛೇದನಕ್ಕೆ ಅವಕಾಶ ಕಲ್ಪಿಸಿದ ಈ ಸಮುದಾಯದಲ್ಲಿ ಮಹಿಳೆ ಎಷ್ಟು ಅತಂತ್ರಳು, ಅಸಹಾಯಕಳು ಎಂಬುದನ್ನು ಫಾತಿಮ್ಮಳ ಮೂಲಕ ಬಿ. ಎಂ. ಸುಹರಾ ಅವರು ಈ ಕಾದಂಬರಿಯಲ್ಲಿ ಆತ್ಮೀಯವಾಗಿ ಚಿತ್ರಿಸಿದ್ದಾರೆ ಹಿರಿಯರೆಲ್ಲ ನಿಶ್ವಯಿಸಿ ಫಾತಿಮ್ಮಳನ್ನು ಅಬ್ದುಲ್ಲನಿಗೆ ಮದುವೆ ಮಾಡಿಸಿದರೂ ಪರಿಸ್ಥಿತಿಯೇ ಕಾರಣವಾಗಿ ಆಕೆ ಫರಫ್‌ ಎಂಬಾತನ ಬಲೆಗೆ ಬಿದ್ದು ತನ್ನ ಬದುಕನ್ನು ಅರ್ಥಶೂನ್ಯಗೊಳಿಸಿದ ಹೃದಯವಿದ್ರಾವಕ ಕತೆಯಿದು. ಪುರುಷ ಪ್ರಧಾನ ವ್ಯವಸ್ಥೆಯೊಂದು ಹೆಣ್ಣಿನ ಹಿತಾಸಕ್ತಿಗಳನ್ನು, ಘನತೆ ಗೌರವಗಳನ್ನು ನಿರ್ಲಕ್ಷಿಸುವುದರ ಮೂಲಕ ಹೆಣ್ಣೊಬ್ಬಳ ಬಾಳನ್ನು ಛಿದ್ರವಾಗಿಸಿದ ಹೃದಯ ಸ್ಪರ್ಶಿ ಕತೆಯೊಂದರ ಮೂಲಕ ಶೋಷಣೆಯ ಆಯಾಮವೊಂದನ್ನು ಲೇಖಕಿ ಈ ಕಾದಂಬರಿಯಲ್ಲಿ ಹಿಡಿದಿರಿಸಿದ್ದಾರೆ.

ಮಲಯಾಳಂನಲ್ಲಿ ಚಲನ ಚಿತ್ರವಾಗಿ ಜನಪ್ರಿಯಗಳಿಸಿದ ‘ಬದುಕಲು ಮರೆತ ಸ್ತ್ರೀ’ (೧೯೯೯) ಕಾದಂಬರಿ ವಿಸ್ತಾರವಾದ ಬದುಕಿನ ಸ್ಥೂಲ ವಿವರಗಳನ್ನು ಕೆಲವೇ ಪುಟಗಳಲ್ಲಿ ಹಿಡಿದು ಕೊಟ್ಟಿದೆ. ಇದನ್ನು ಸರಳವಾಗಿ ಕನ್ನಡಕ್ಕೆ ಅನುವಾದಿಸಿದವರು ಪಾರ್ವತಿ ಜಿ. ಐತಾಳ್. ಹೆಣ್ಣಿನ ಮನದಾಳದ ಬಯಕೆಯ ಹುಡುಕಾಟ ಈ ಕಾದಂಬರಿಯ ವಸ್ತು. ಇಲ್ಲಿ ವಿಭಿನ್ನ ದೃಷ್ಟಿಕೋನಗಳ ಎರಡು ಸ್ತ್ರೀ ಪಾತ್ರಗಳಿವೆ. ಪ್ರೀತಿಸಿದ ಪುರುಷ ಅಕಾಲ ಮರಣಕ್ಕೆ ತುತ್ತಾದರೂ ಅವನಿಗೆ ನಿಷ್ಠಳಾಗಿಯೇ ಉಳಿದು ವಾಸ್ತವವನ್ನು ಮರೆತು ಎಲ್ಲಾ ಸುಖ ಸಂತೋಷಗಳನ್ನು ತಿರಸ್ಕರಿಸಿ ಭ್ರಮಾಲೋಕದಲ್ಲಿ ಬದುಕುವ ‘ಅವಿವಾಹಿತ ವಿಧವೆ’ ಒಂದೆಡೆ. ಪ್ರೀತಿಸಿದ ವ್ಯಕ್ತಿಯಿಂದ ಎಲ್ಲಾ ತೆರನ ಸುಖವನ್ನು ಪಡೆದು ಅವಿವಾಹಿತೆಯಾದರೂ ತಾಯಿಯಾಗಿ ಒಬ್ಬನೇ ಮಗನಿಗಾಗಿ ಹಗಲಿರುಳೂ ದುಡಿದು ಒಂಟಿಯಾದರೂ ಅಧೀರಳಾಗದೆ ಬದುಕಿನ ಎಲ್ಲಾ ಅವಕಾಶಗಳನ್ನು ಉಪಯೋಗಿಸಿಕೊಳ್ಳುವ ಹೆಣ್ಣು ಇನ್ನೊಂದೆಡೆ. ಈ ಎರಡು ವಿಭಿನ್ನ ಪಾತ್ರಗಳನ್ನು ಮುಖಾಮುಖಿಯಾಗಿಸುವುದರ ಮೂಲಕ ಬದುಕನ್ನು ಅರ್ಥಪೂರ್ಣಗೊಳಿಸುವ ಬಗೆಯನ್ನು ಕಾದಂಬರಿ ಚಿತ್ರಿಸುತ್ತದೆ. ಬದುಕಿನಲ್ಲಿ ನಡೆಯುವ ಘಟನೆ ಆಕಸ್ಮಿಕ. ಅವುಗಳ ಪರಿಣಾಮಗಳನ್ನು ವಾಸ್ತವನೆಲೆಯಿಂದ ಎದುರಿಸುವುದು ಹೆಚ್ಚು ಸೂಕ್ತ. ಗಂಡಾಗಲಿ, ಹೆಣ್ಣಾಗಲಿ ಬದುಕಿನಲ್ಲಿ ಯಾರು ಯಾರಿಗೂ ಅನಿವಾರ್ಯರಲ್ಲ. ತನ್ನ ಪಾಲಿನ ಕರ್ತವ್ಯ ನಿರ್ವಹಣೆಯಲ್ಲಿ ಹೆಣ್ಣು ಸ್ವತಂತ್ರಳು ಎಂಬುದನ್ನು ಈ ಕಾದಂಬರಿಯಲ್ಲಿ ಚಿತ್ರಿಸಲಾಗಿದೆ.

ಎಂ.ಟಿ. ವಾಸುದೇವನ್ ನಾಯರ್ ಅವರ ‘ಅಸುರವಿತ್ತ್ ‘ ಮಲಯಾಳಂ ಕಾದಂಬರಿಯ ಕನ್ನಡಾನುವಾದ ‘ದುರ್ಬೀಜ’ (೨೦೦೦).ಇದನ್ನು ಕನ್ನಡಕ್ಕೆ ಅನುವಾದಿಸಿದರು ಪಾರ್ವತಿ ಜಿ.ಐತಾಳ

ದುರ್ಬೀಜದ ನಾಯಕ ಗೋವಿಂದನ್ ಕುಟ್ಟಿಯು ತಾಯಿಯ ಇಳಿವಯಸ್ಸಿನಲ್ಲಿ ತಾನು ಹುಟ್ಟಿದುದೇ ಕಾರಣವಾಗಿ ಹೆಜ್ಜೆಹೆಜ್ಜೆಗೂ ಒಡಹುಟ್ಟಿದವರಿಂದಲೇ ಅವಹೇಳನಕ್ಕೆ ಗುರಿಯಾಗುವ ವಿಚಿತ್ರ ಸನ್ನಿವೇಶದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಕೊನೆಗೂ ಹಿರಿಯಕ್ಕನ ಔದಾರ್ಯಕ್ಕೆ ಕಟ್ಟುಬಿದ್ದು ಭಾವನ ಆಸ್ತಿಪಾಸ್ತಿಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುವುದರ ಮೂಲಕ ಬದುಕಿನ ನೆಲೆಯನ್ನು ಕಂಡೂಕೊಳ್ಳುವ ಅವಾಕಾಶವನ್ನು ಪಡೆದುಕೊಳ್ಳುತ್ತಾನೆ. ಆದರೆ ಬಾವನಾದವನೇ ತನ್ನ ಮಗನ ಕಾಮಕ್ಕೆ ಬಲಿಯಾದ ಹೆಣ್ಣೊಬ್ಬಳನ್ನು ಮದುವೆ ಮಾಡಿದ ಮೋಸದ ವಿಚಾರ ತಿಳಿದಾಗ ಗೋವಿಂದನ್ ಕುಟ್ಟಿಯ ಅಭಿಮಾವದ ಕೆಚ್ಚು ದ್ವೇಷದ ಜ್ವಾಲೆಯಾಗಿ ಹೊರಹೊಮ್ಮುತ್ತದೆ. ಬಾವನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಹೊಂಚುಹಾಕುವ ಗೋವಿಂದನ್ ಕುಟ್ಟಿಯನ್ನೇ ಕೊಲೆಗೈಯಲು ಮುಂದಾಗುವ ಜನರಿಂದ ರಕ್ಷಣೆ ಪಡೆಯಲು ಅತ ಕಂಡುಕೊಂಡ ದಾರಿ ಮತಾಂತರ. ಗೋವಿಂದನ್ ಕುಟ್ಟಿಗೆ ಇಲ್ಲಿನ ಸಮಾಜವೂ ಬದುಕಿಗೆ ಅರ್ಥವನ್ನು ಕಲ್ಪಿಸದೇ ಹೋದಾಗ ಹತಾಶನಾಗುತ್ತಾನೆ. ಪ್ರಾಮಾಣಿಕತೆಯನ್ನೇ ಬದುಕಿನುದ್ದಕ್ಕೂ ಗೋವಿಂದನ್‌ ಕಟ್ಟಿಗೆ ಸಮಾಜವು ಕೊಲೆಗಡುಕ, ಕಳ್ಳ ಇತ್ಯಾದಿ ಹಣೆಪಟ್ಟಿಯನ್ನು ಹಚ್ಚಿತು. ಆದ್ದರಿಂದ ಪ್ರೀತಿ ಪಾತ್ರರಾದವರೊಡನೆ ಬೆರೆಯುವುದಕ್ಕೂ ಅವಕಾಶವಿಲ್ಲದೆ ನಿಗೂಢನಾಗಿಯೇ ಉಳಿಯಬೇಕಾದ ಅನಿವಾರ್ಯತೆಯೊಡನೆ ಕಾದಂಬರಿ ಕೊನೆಯಾಗುತ್ತದೆ.

ಕಾದಂಬರಿಯಲ್ಲಿ ಒಂದು ಪುಟ್ಟಗ್ರಾಮದ ಸಾಂಸ್ಕೃತಿಕ ಬದುಕನ್ನು ಚಿತ್ರಿಸಲಾಗಿದೆ. ತರವಾಡು ಮನೆಗಳನ್ನು ಸಮೀಪದಿಂದ ಬಲ್ಲ ಲೇಖಕರು ತರವಾಡು ಮನೆಗಳಲ್ಲಿ ಕುಸಿಯುತ್ತಿರುವ ಅನೇಕ ಮಾನವ ಜೀವಿಗಳ ನೋಯುವ ಮನಸ್ಸನ್ನು ಇಲ್ಲಿ ಸೂಕ್ಷ್ಮವಾಗಿ ಅಭಿವ್ಯಕ್ತಿಸಿದ್ದಾರೆ. ಬೆಂಬತ್ತಿ ಬರುವ ಸಮಸ್ಯೆಗಳನ್ನು ದೂರಮಾಡಲು ಗೋವಿಂದನ್ ಕುಟ್ಟಿ ತೆಗೆದುಕೊಳ್ಳುವ ನಿರ್ಧಾರಗಳು ಯುವ ಜನಾಂಗದಲ್ಲಿ ಮನೆ ಮಾಡಿದ್ದ ಚಿತ್ತ ಚಾಂಚಲ್ಯವನ್ನು ಪ್ರತಿನಿಧಿಸುತ್ತದೆ. ಯುವ ತಲೆಮಾರನ್ನು ಇಂತಹ ಅನಿಶ್ಚಿತತೆಗೆ ಸಿಲುಕಿದ ಸಾಂಪ್ರದಾಯಕ ಹಾಗೂ ಸಮಕಾಲೀನ ಸಮಾಜದ ಮಾನವನ ಹಿತಾಸಕ್ತಿಗಳನ್ನು ಅನಾವರಣಗೊಳಿಸುವ ಈ ಕಾದಂಬರಿ ಕೇರಳದ ಸಾಂಸ್ಕೃತಿಕ ಇತಿಹಾಸದ ಒಂದು ನಿರ್ದಿಷ್ಟ ಕಾಲ ಘಟ್ಟದ ಮನುಷ್ಯ ಮನಸ್ಸಿನ ಪ್ರತಿನಿಧಿಯೆನಿಸಿದೆ.

ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿರುವ ಪಾರ್ವತಿ ಜಿ. ಐತಾಳ್ ಅವರು ದಕ್ಷಿಣ ಕನ್ನಡ ಪರಿಸರದ ಆಡುನುಡಿಯ ಸಹಜ ಲಯವನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾರೆ. ಮೂಲ ಕೃತಿಯ ಸಾಂಸ್ಕೃತಿಕ ಪರಿಸರವು ಕನ್ನಡದ ಸಾಂಸ್ಕೃತಿಕ ಪರಿಸರದಲ್ಲಿ ಸಂವಹನಾಗೊಳಿಸುವಲ್ಲಿ ಅನುವಾದಕರು ಯಶಸ್ವಿಯಾಗಿದ್ದಾರೆ. ಪಾತ್ರಗಳ ಸಂಭಾಷಣೆಗಳಲ್ಲಿ ಹಾಗೆಯೆ ಇತರ ಸಂದರ್ಭದಲ್ಲಿ ಬಳಸಿದ ಭಾಷೆ ಇತ್ಯಾದಿಗಳ ಮೂಲಕ ಕಾದಂಬರಿಯ ಸಹಜ ಲಯವನ್ನು ಕಟ್ಟಿಕೊಡುವಲ್ಲಿ ಅನುವಾದಕರು ಸಫಲರಾಗಿದ್ದಾರೆ.

‘ತೋಟಿಯ ಮಗ’ (೨೦೦೦) ತಗಳಿ ಶಿವಶಂಕರ ಪಿಳ್ಳೆಯವರ ಮಲಯಾಳಂ ಕಾದಂಬರಿಯ ಕನ್ನಡಾನುವಾದ. ಇದನ್ನು ಅನುವಾದಿಸಿದವರು ಮೋಹನ ಕುಂಟಾರ್. ತೋಟಿಯ ಜನರ ನರಕ ಸದೃಶವಾದ ಜೀವನ ಚಿತ್ರಣವನ್ನು ನೀಡುವ ಕಾದಂಬರಿಯಿದು. ಮೂರು ತಲೆಮಾರುಗಳ ತೋಟಿ ಜನರ ಸಾಂಸ್ಕೃತಿಕ ಇತಿಹಾಸವನ್ನು ಮುಂದಿಡುವ ಕಾದಂಬರಿ ವರ್ಗಸಂಘರ್ಷವನ್ನು ಪ್ರಚೋದಿಸುವ ದಾಟಿಯಲ್ಲಿದೆ. ಕೆಳವರ್ಗದ ಜನರನ್ನು ಕುರಿತು ಮಲಯಾಳಂನಲ್ಲಿ ಬಂದ ಮೊತ್ತಮೊದಲ ಕಾದಂಬರಿಯಿದು.

‘ನದೀ ದ್ವೀಪಗಳು’ ವೀಣಾಶಾಂತೇಶ್ವರ ಅವರು ಅವುವಾದಿಸಿದ ಆಗ್ನೇಯ ಅವರ ಹಿಂದಿ ಕಾದಂಬರಿಯ ಕನ್ನಡ ರೂಪ. ಅಲೆಮಾರಿ ಸ್ವಭಾವವನ್ನು ಹೊಂದಿದ ಸಮಾಜದ ಗಣ್ಯವ್ಯಕ್ತಿಗಳ ಜೀವನ ಕಥನ ಇದರಲ್ಲಿದೆ, ಸ್ನೇಹ ಮತ್ತು ಪ್ರೀತಿಯ ಬಗೆಗೆ; ಮನುಷ್ಯನ ಸಾಮಾಜಿಕ ಹಾಗೂ ಧಾರ್ಮಿಕ ಆಯಾಮದ ಬಗೆಗೆ ಅತ್ಯಂತ ಸೂಕ್ಷ್ಮ ಸಂವೇದಿಯಾಗಿ ಚಿತ್ರಸಲಾಗಿದೆ. ಪಾಶ್ವಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಪ್ರಾಶಸ್ತ್ಯ ನೀಡಿದ ನಾಗರಿಕ ಬದುಕಿನ ವಿಚಾರಪೂರ್ಣ ಕಾದಂಬರಿಯಿದು. ಈ ಮೇಲಿನ ಎರಡೂ ಕೃತಿಗಳೂ ಕ್ರೈಸ್ಟ್ ಕಾಲೇಜಿನ ಕನ್ನಡಸಂಘದ ಜ್ಞಾನಪೀಠ ಪ್ರಶಸ್ತಿ ವಿಜೇತರು ಮಾಲೆಯಲ್ಲಿ ಪ್ರಕಟವಾಗಿದೆ.

‘ಕಡಲ ತೀರದ ಒಂದು ಗ್ರಾಮದ ಕತೆ’ ತೋಪ್ಪಿಲ್ ಮಹಮದ್ ಮೀರಾನ್ ಅವರ ತಮಿಳು ಕಾದಂಬರಿಯ ಕನ್ನಡ ಅನುವಾದ. ಕಡಲ ತೀರದ ಗ್ರಾಮವೊಂದನ್ನು ಕೇಂದ್ರಿಕರಿಸಿ ಅಲ್ಲಿನ ಮುಸಲ್ಮಾನ ಸಂಸ್ಕೃತಿಯ ಹಿನ್ನೆಲೆಯಲ್ಲಿ ರೂಪು ಪಡೆದ ಕಾದಂಬರಿಯಿದು. ಅಹಮ್ಮದ್ ಕಣ್ಣು ಆ ಗ್ರಾಮದ ಮುಖಂಡ. ಮಸೀದಿಯ ಟ್ರಸ್ಟಿಯೂ ಹೌದು. ಅವನ ಮಗನನ್ನು ಕೆಲಸದ ಆಳೊಬ್ಬ ಏಕವಚನದಲ್ಲಿ ಸಂಭೋದಿಸಿದ್ದಕ್ಕಾಗಿ ಛಡಿಯೇಟಿನ ಶಿಕ್ಷೆ ವಿಧಿಸಿದ ನೇತಾರ. ಅವನಲ್ಲಿ ವಿಧೇಯವಾಗಿ ನಡೆದುಕೊಳ್ಳದವರ ಆಸ್ತಿ ಪಾಸ್ತಿಗಳನ್ನು ತನ್ನ ಹೆಸರಿಗೇ ಬರೆಯಿಸಿಕೊಂಡ ಅಮಾನವೀಯ ವ್ಯಕ್ತಿ. ಇಂತಹ ದರ್ಪ, ದೌಲತ್ತುಗಳಿಂದ ಮೆರೆದ ಅಹಮ್ಮದ್ ಕಣ್ಣು ತನ್ನದೆಲ್ಲವನ್ನು ಕಳಕೊಂಡು ತನ್ನ ಕುಟುಂಬದ ಸದಸ್ಯರ ಬದುಕನ್ನು ನಿರರ್ಥಕಗೊಳಿಸಿದ ಕತೆ. ಇದರ ಕಥಾಹಂದರ ಇಷ್ಟೇ ಆದರೂ ಅನೇಕ ಸಂಕೀರ್ಣಾ ವಿಷಯಗಳನ್ನು ಕಾದಂಬರಿ ಅತ್ಯಂತ ವಾಸ್ತವಿಕವಾಗಿ ಹಿಡಿದಿಡುತ್ತದೆ. ತಂದೆಯ ಒಣ ಪ್ರತಿಷ್ಠೆಗಾಗಿ ಮಗಳು ಹುಚ್ಚನನ್ನು ಮದೆವೆಯಾಗಿ ಪಡುವ ಪಾಡು, ಶಾಲೆಯ ಮಾಸ್ತರನಾಗಿ ಬಂದ ಹೊಸ ವಿಚಾರದ ಯುವಕ ಗ್ರಾಮದ ಜನರಿಂದ ಅನುಭವಿಸಿದ ಕಿರುಕಳ, ಧರ್ಮದ ಹೆಸರಿನಲ್ಲಿ ಕ್ರೌರ್ಯವನ್ನು ಮಾಡಲು ಹಿಂಜರಿಯದ ತಙಳ್‌ರ ಕುಹಕತನ ಇವೆಲ್ಲ ಒಂದು ಗ್ರಾಮದ ತೆಕ್ಕೆಯೊಳಗೆ ನಡೆಯುತ್ತದೆ. ಕಾಲ ಬದಲಾದಂತೆ ಮಾನವನ ಬದುಕಿನಲ್ಲಿ ಆಚಾರ ವಿಚಾರಗಳು ಬದಲಾಗಲು ಸುಲಭವಾಗಿ ಬಿಟ್ಟುಕೊಡದ ಈ ಗ್ರಾಮದ ಜನರ ಅಜ್ಞಾನ, ಬಡತನ, ಇವುಗಳನ್ನೇ ತಳಹದಿಯಾಗಿರಿಸಿಕೊಂಡು ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ನಡೆಸುವ ಕಾರ್ಯ, ದಬ್ಬಾಳಿಕೆ, ಶೋಷಣೆಗಳ ಚಿತ್ರಣ ಈ ಕಾದಂಬರಿಯಲ್ಲಿದೆ. ಯಾವುದೇ ಸಂದರ್ಭದಲ್ಲಿ ಭಾವುಕವಾಗದ ವಾಸ್ತವವಾದೀ ನೆಲೆಯಿಂದ ಇವುಗಳನ್ನೆಲ್ಲ ಕಾದಂಬರಿಕಾರರು ಚಿತ್ರಿಸಿದ್ದಾರೆ, ಶೇಷನಾರಾಯಣರ ಅನುವಾದವೂ ಕಾದಂಬರಿಯ ಆಶಯವನ್ನು ಕಟ್ಟಿಕೊಡುವಲ್ಲಿ ಅನುಕೂಲವಾಗಿದೆ. ತಮಿಳು ಭಾಷೆಯಲ್ಲಿ ಮುಸ್ಲಿಂ ಸಂಸ್ಕೃತಿಯನ್ನು ಅನಾವರಣಗೊಳಿಸುವ ಮೊದಲ ಕಾದಂಬರಿ ಇದು.

ತಮಿಳು ಸೆಲ್ಪಿಯವರು ಅನುವಾದಿಸಿದ ಕಾರ್ಲೋಸ್ ಅವರ ತಮಿಳು ಕಾದಂಬರಿ ‘ಇವರು ಕಥೆಯಾದವರು’. ವಸಾಹತು ಪೂರ್ವದ ಜೀವನ ಕ್ರಮವು ಕ್ರಮೇಣ ತಲೆಮಾರುಗಳ ಕಾಲಗತಿಯಲ್ಲಿ ವಸಾಹತು ಪ್ರಭಾವಗಳಿಗೆ ಒಳಗಾದ ಸಂಘರ್ಷದ ಕತೆಯಿತು.

ಸಮಾಜದ ಅನ್ಯಾಯ ಶೋಷಣೆಗಳ ವಿರುದ್ಧ ಹೋರಾಟದ ಮನೋಧರ್ಮವನ್ನು ಬೆಳೆಸಿಕೊಳ್ಳುಬೇಕೆಂಬ ಸಂದೇಶವನ್ನು ಸಾರುವ ಕಾದಂಬರಿ ಮಹಾಶ್ವೇತಾ ದೇವಿಯವರ ‘೧೦೮೪ರ ತಾಯಿ’ ಎಚ್.ಎಸ್. ಶ್ರೀಮತಿಯವರು ಇದನ್ನು ಕನ್ನಡದಲ್ಲಿ ಸಂವಹನ ಸುಲಭವಾಗಿ ಅನುವಾದಿಸಿದ್ದಾರೆ.

‘ಚೀನಾದ ಜನಪದ ಹಾಡುಗಳು’ ಇದನ್ನು ಕನ್ನಡಿಸಿದವರು ಕೆ. ಎನ್. ಜಯಲಕ್ಷ್ಮಿ. ಚೀನಾದ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಪ್ರಚಲಿತವಿದ್ದ ಪ್ರಾಚೀನ ಹಾಡುಗಳಿವು. ಇಲ್ಲಿ ಆಚರಣಾ ಸಂಬಂಧಿ ಹಾಗೂ ಜೀವನ ಸಂಬಂಧಿ ಹಾಡುಗಳಿವೆ. ಸಂಗೀತ, ಕುಣಿತಗಳೊಡನೆ ಚೀನಾದ ಜನಪದರು ಹಾಡುವ ಈ ಹಾಡುಗಳು ಅನುವಾದದಲ್ಲಿ ಗದ್ಯದಲ್ಲಿಯೇ ಮೂಡಿ ಬಂದಿದೆ. ಆಂಗ್ಲಭಾಷೆಯಿಂದ ಕನ್ನಡೀಕರಿಸಿದ್ದರಿಂದ ಚೀನೀ ಭಾಷೆಯ ಲಯವನ್ನಾಗಲಿ ಗೇಯಗುಣವನ್ನಾಗಲಿ ಇಲ್ಲಿ ನಿರೀಕ್ಷಿಸುವಂತಿಲ್ಲ. ಇದ್ದಿದ್ದರೆ ಚೀನಿಯರ ಸಾಂಸ್ಕೃತಿಕ ವಿವವರಗಳನ್ನು ಕಟ್ಟಿಕೊಡುವ ಇಂತಹ ಹಾಡುಗಳು ಕನ್ನಡದ ಸಂದರ್ಭದಲ್ಲಿ ಹೊಸಮೆರಗು ಪಡೆದು ಶೋಭಿಸಬಲ್ಲವಾಗಿದ್ದವು. ಅನುವಾದಕರು ಕೆಲವೆಡೆ ಕೊಟ್ಟ ಟಿಪ್ಪಣಿಗಳು, ಹಾಡುಗಳನ್ನು ಕುರಿತ ವಿವರಗಳು ಸಂಕಲನದ ಮಹತ್ವವನ್ನು ಹೆಚ್ಚಿಸಿ ಅರ್ಥೈಸಿಕೊಳ್ಳುವಲ್ಲಿ ನೆರವು ನೀಡುತ್ತವೆ.

‘ನನ್ನ ಮೈನಗರ’ ಎಚ್. ಎಸ್. ಶಿವಪ್ರಕಾಶ್ ಅವರು ಅನುವಾದಿಸಿದ ಸಚ್ಚಿದಾನಂದನ್ ಅವರ ಮಲಯಾಳಂ ಕವಿತೆಗಳ ಸಂಕಲನ. ಇಲ್ಲಿ ಮಲಯಾಳಂ ಕವಿತ್ವದ ಶಕ್ತಿಯನ್ನು ಕಟ್ಟಿಕೊಡುವ ಬದಲಾಗಿ ಎಚ್. ಎಸ್. ಶಿವಪ್ರಕಾಶರ ಕವಿತೆಯ ಗುಣವೇ ಮೇಲ್ಮೆಪಡೆದಿದೆ. ಕವಿಯೊಬ್ಬನ ಕವಿತೆಗಳ ಸ್ಫೂರ್ತಿ ಪಡೆದು ಇನ್ನೊಬ್ಬ ಕವಿ ಕವನಿಸಿದ ಕವಿತೆಗಳೆನಿಸಿವೆ.

‘ಮರುರೂಪಗಳು’ ಎಚ್. ಎಸ್. ಶಿವಪ್ರಕಾಶರ ಲೇಖನಿಯಿಂದ ಹೊರಹೊಮ್ಮಿದ ವಿವಿಧ ಭಾಷೆಗಳ ದೇಶಗಳ ಕವಿತೆಗಳು. ಇವುಗಳು ಮರುರೂಪ ಪಡೆಯಲು ಮೆಚ್ಚುಗೆಯೊಂದೇ ಮಾನದಂಡವೆಂಬುದು ಮರುರೂಪಿಸಿದ ಕವಿಯ ಮಾತು. ಇಲ್ಲಿನ ಕವಿತೆಗಳನ್ನು ಬೇರೆಬೇರೆ ಸಂದರ್ಭದಲ್ಲಿ ಮರುಸೃಷ್ಟಿಸಲಾಗಿದೆ. ಈ ಸಂಗ್ರಹ ರೂಪುಗೊಳ್ಳುವಲ್ಲಿ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕೊರತೆಯೊಂದನ್ನು ನೀಗಿಸುವ ಮಹದುದ್ದೇಶವಿದೆಯೆಂದು ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾರೆ. ಕನ್ನಡದ ಕಾವ್ಯಕ್ರಿಯೆಯ ಏಕತಾನತೆಯಿಂದ ಬಿಡಿಸಿ ಹೊರಬರುವ ಬಯಕೆಯನ್ನು ದೃಷ್ಟಿಯಲ್ಲಿಟ್ಟಕೊಂಡು ಇಲ್ಲಿನ ಕವಿತೆಗಳಿಗೆ ಕನ್ನಡದ ಅಂಗಿ ತೊಡಿಸಲಾಗಿದೆ. ಕವಿತೆಗಳು ವಿಭಿನ್ನ ಭಾಷೆಗೆ ಹಾಗೂ ದೇಶಗಳಿಗೆ ಸಂಬಂಧಿಸಿದವುಗಳಾದ್ದರಿಂದ ಇಲ್ಲಿನ ರಚನೆಗಳು ವಿಭಿನ್ನ ಬಗೆಯ ಸಾಂಸ್ಕೃತಿಕ ಪರಿವೇಷ ಉಳ್ಳವು. ವಿಭಿನ್ನ ಬಗೆಯ ಧೋರಣೆಯುಳ್ಳವು. ಹಾಗೆಯೇ ವಿಭಿನ್ನ ಛಂದಸ್ಸು, ಲಯಗಳಲ್ಲಿ ಮೈವಡೆದವು. ಈ ಕಾರಣಕ್ಕಾಗಿ ಅವುಗಳಲ್ಲಿ ಹಲವು ತನವಿದೆ. ಬಿ.ಎಂ.ಶ್ರೀ ಯವರ ‘ಇಂಗ್ಲಿಷ್ ಗೀತೆಗಳು’ ಕೃತಿಯ ನಂತರ ಇಷ್ಟೊಂದು ವೈವಿಧ್ಯಮಯವಾದ ಕವಿತೆಗಳು ಅನುವಾದಗೊಂಡು ಸಂಕಲನ ರೂಪದಲ್ಲಿ ಹೊರಬರುತ್ತಿರುವುದು ಇದೇ ಮೊದಲಿರಬಹುದು.

‘ಉಮರನ ಸಂದೇಶ’ (೧೯೯೭) ಫಾರಸಿ ಕವಿ ಉಮರ ಖಯ್ಯಾಮನ ರೂಬಾಯಿಗಳ ಸಂಗ್ರಹ. ಅಕ್ಷರ ಪ್ರಕಾಶನದ ಅಕ್ಷರ ಚಿಂತನ ಮಾಲೆಯಲ್ಲಿ ಪ್ರಕಟವಾದ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಶಾ. ಬಾಲೂರಾವ್ ಅವರು. ಉಮರನ ರೂಬಾಯಿಗಳನ್ನು ಡಿ.ವಿ.ಜಿಯವರು ಇಂಗ್ಲೀಷಿನಿಂದ ಕನ್ನಡಕ್ಕೆ ಈ ಹಿಂದೆಯೇ ಅನುವಾದಿಸಿದ್ದರು. ಅವರದು ಸಂಪ್ರದ್ರಾಯನಿಷ್ಠ ಅನುವಾದ. ಅದರೆ ಬಾಲೂರಾಯರದು ಸೃಜನಶೀಲ ಅನುವಾದ. ಅವರು ಇಂಗ್ಲಿಷ್ ಭಾಷೆ ಹಾಗೇ ಮೂಲ ಫಾರಸೀ ಭಾಷೆಯ ಧ್ವನಿ, ಲಯಗಳನ್ನು ಮನನ ಮಾಡಿ ಈ ಅನುವಾದವನ್ನು ರೂಪಿಸಿದ್ದಾರೆ. ಕನ್ನಡ ಭಾಷೆಯ ಕಾವ್ಯಲಯಕ್ಕೆ ಹೊಂದಿಕೊಳ್ಳುವ ಈ ಅನುವಾದ ಕೃತಿ ಕನ್ನಡ ಸಂದರ್ಭದಲ್ಲಿ ಗಮನಾರ್ಹವಾಗಿದೆ.

‘ಜೀವನೋತ್ಸಾಹ’ ಆಧುನಿಕ ತೆಲಗು ಕವಿತೆಗಳ ಸಂಗ್ರಹ. ಸುಮಾರು ನಲವತ್ತನಾಲ್ಕು ಮಂದಿ ಕವಿಗಳ ಐವತ್ತು ಕವನಗಳನ್ನು ಅನುವಾದಿಸಿದವರು ಗುರುಮೂರ್ತಿ ಪೆಂಡಕೂರು. ತೆಲುಗಿನ ಕ್ರಾಂತ್ರಿಕಾರಿ ಮನಸ್ಸುಗಳು ಸಮಾಜದ ಶೋಷಿತ ಜನಾಂಗದ ಪರವಾದ ಧ್ವನಿಯೆತ್ತಿ ಉಳ್ಳವರ ವಿರುದ್ಧ ಕೆಂಡ ಕಾರಿವೆ. ಅಂತಹ ಅನೇಕ ಕವಿ, ಕವಯಿತ್ರಿಯವರು ತಮ್ಮ ಕವಿತೆಗಳ ಮೂಲಕ ಸಾಮಾಜಿಕ ಎಚ್ಚರಿಕೆಯನ್ನು ಮೂಡಿಸಿದ್ದಾರೆ. ಕ್ರಾಂತ್ರಿಕಾರೀ ಮನೋಧರ್ಮದ ಈ ಕವಿತೆಗಳು ಕನ್ನಡದ ಸಂದರ್ಭದಲ್ಲಿ ಹೊಸವಿಚಾರವನ್ನು ಹಾಗೂ ಅರಿವನ್ನು ಮೂಡಿಸುವಲ್ಲಿ ಸಫಲವಾಗ ಬಲ್ಲವು. ಈ ಕವಿತೆಗಳು ಅನುವಾದಕರ ವೈಯಕ್ತಿಕ ಆಸಕ್ತಿಯಿಂದ ಅನುವಾದಗೊಂಡರೂ ಅವು ಸಂಕಲನಗೊಂಡು ಒಂದು ಸಾಮೂಹಿಕ ಅಗತ್ಯವನ್ನು ಸೃಷ್ಟಿಸುವಲ್ಲಿ ಸಫಲ ಹಾದಿ ತುಳಿದಿವೆ.

‘ನನ್ನ ಐವತ್ತೊಂದು ಕವಿತೆಗಳು’ ಅಟಲ ಬಿಹಾರಿ ವಾಜಪೇಯಿಯವರ ಕವನಗಳ ಸಂಕಲನ. ಇದನ್ನೂ ಕನ್ನಡೀಕರಿಸಿದವರು ಗುರುಮೂರ್ತಿ ಪೆಂಡಕೂರು. ಆಟಲ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾದ ಬಳಿಕ ಅವರ ಕವಿತೆಗಳಿಗೆ ಪ್ರಾಮುಖ್ಯ ಬಂದಿದೆ. ಅವರನ್ನು ಕವಿಯಾಗಿ ಗುರುತಿಸುವವರೂ ಅಧಿಕಗೊಂಡಿದ್ದಾರೆ. ಅವರ ಕವಿತೆಗಳಿಗೆ ಸಂಗೀತ ಅಳವಡಿಸಿ ಜನಪ್ರೀಯ ಗೊಳಿಸುವುದು ಒಂದೆಡೆ. ಅವರ ಕವಿತೆಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಿ ಪರಿಚಯಿಸುವುದು ಇನ್ನೊಂದೆಡೆ. ಈ ಹಿನ್ನೆಲೆಯಲ್ಲಿ ‘ನನ್ನ ಐವತ್ತೊಂದು ಕವಿತೆಗಳು’ ಸಂಕಲನ ಹುಟ್ಟಿಕೊಂಡಿದೆ. ಅಟಲ ಬಿಹಾರಿ ವಾಜಪೇಯಿಯವರು ಪ್ರಧಾನ ಮಂತ್ರಿಯಾದುದು ಎಷ್ಟು ಆಕಸ್ಮಿಕವೋ ಅವರ ಕವಿತೆಗಳು ಅನುವಾದಗೊಂಡುದು ಅಷ್ಟೇ ಆಕಸ್ಮಿಕ.

ಸಂಘಂ ಸಾಹಿತ್ಯದ ನಂತರದ ಕಾಲಘಟ್ಟದಲ್ಲಿ ಜನ್ಮ ತಳೆದ ತಮಿಳಿನ ಪಂಚ ಮಹಾಕಾವ್ಯಗಳಲ್ಲಿ ಒಂದು ‘ಸಿಲಪ್ಪದಿಗಾರಂ’. ಇದನ್ನು ವಿದ್ವಾಂಸರಾದ ಕುಕ್ಕಿಲ ಕೃಷ್ಣಭಟ್ಟರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಿಲಂಬು ಎಂದರೆ ಕಾಲ್ಕಡಗ. ಕಾಲ್ಕಡಗದ ಕತೆಯೇ ಈ ಕಾವ್ಯದ ಮುಖ್ಯ ಜೀವಾಳ. ಕಣ್ಣಾಗಿ ಎಂಬಾಕೆ ಚೋಳ ದೇಶದ ಗೃಹಣಿಯಾಗಿ ಬಾಳಿ ಪಾಂಡ್ಯದೇಶದ ರಾಜಧಾನಿಯಾದ ಮದುರೈಯಲ್ಲಿ ಅನ್ಯಾಯವಾಗಿ ಪತಿಯನ್ನು ಕಳೆದುಕೊಂಡು ವಿಧವೆಯಾಗಿ ಚೇರ ದೇಶದ ರಾಜಧಾನಿ ಕಂಚಿನಗರದಲ್ಲಿ ಸತಿದೇವತೆಯ ವಿಗ್ರಹ ರೂಪದಲ್ಲಿ ಪ್ರತಿಷ್ಠೆಗೊಳ್ಳುವುದೇ ಈ ಕಾವ್ಯದ ಮುಖ್ಯ ಕಥಾವಸ್ತು. ಹೆಣ್ಣಿಗೆ ಪಾತಿವ್ರತ್ಯ, ರಾಜನಿಗೆ ನ್ಯಾಯಪರತೆಯೇ ಮೌಲ್ಯವಾಗಿದ್ದ ದಿನಗಳ ಕತೆಯಿದು. ಅನ್ಯಾಯವಾಗಿ ಕೋವಿಲನಿಗೆ ಮರಣದಂಡನೆಯಾದಾಗ ಆತನ ಮಡದಿ ಕಣ್ಣಗಿಯ ಶಾಪಕ್ಕೆ ತುತ್ತಾಗಿ ಮದುರೈನಾಡು ಅಗ್ನಿಗಾಹುತಿಯಾಗುವ ಚಿತ್ರಣ ಇದರಲ್ಲಿದೆ. ಚೇರ ರಾಜ್ಯದ ಅಧಿಪತಿಯಾದ ಚೆಂಗುಟ್ಟವನ್ ಕಣ್ಣಗಿಯ ಶಿಲೆಯನ್ನು ಮಹಾಸತಿಯ ರೂಪದಲ್ಲಿ ರಾಜ್ಯದ ಗಿರಿ ಶಿಖರಗಳಲ್ಲಿ ಪ್ರತಿಷ್ಠಾಪಿಸುತ್ತಾನೆ. ಮಹಾಸತಿಯ ವಿಗ್ರಹಕ್ಕೆ ಬೇಕಾದ ಶಿಲೆಯನ್ನು ಆತ ಅಪಾರ ಸೈನ್ಯದೊಡನೆ ಉತ್ತರ ಭಾರತಕ್ಕೆ ದಂಡಯಾತ್ರೆ ಮಾಡಿ ಅಲ್ಲಿಂದ ತರುತ್ತಾನೆ. ದ್ರಾವಿಡಸಂಸ್ಕೃತಿಯ ಅಪೂರ್ವ ದರ್ಶನವನ್ನು ಮಾಡುವ ಈ ಕಾವ್ಯ ಕನ್ನಡಿಗರಿಗೆ ಲಭಿಸುವಂತಾದುದು ಶ್ಲಾಘನೀಯ ಸಂಗತಿ. ದ್ರಾವಿಡ ಸಂಸ್ಕೃತಿಯನ್ನು ಕನ್ನಡ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ನುರ್ವಹಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯ ಇದನ್ನು ಪ್ರಕಟಿಸಿದೆ.

ಸಂಸ್ಕೃತದ ಮೊದಲ ಗದ್ಯಕಾವ್ಯ ಸುಬಂಧುವಿನ ವಾಸ್ಸವದತ್ತಾ (೨೦೦೦) ಕನ್ನಡದಲ್ಲಿ ಮೊದಲಬಾರಿಗೆ ಅನುವಾದಗೊಂಡಿದೆ. ಇದನ್ನು ಅನುವಾದಿಸಿದವರು ನೀರ್ಪಾಜೆ ಭೀಮಭಟ್ಟ. ಸಂಸ್ಕೃತದಿಂದ ಅನೇಕ ಕೃತಿಗಳನ್ನು ಅನುವಾದಿಸಿರುವ ಭೀಮಭಟ್ಟರ ಈ ಅನುವಾದ ಸೊಗಸಾಗಿದೆ. ಸುಬಂಧುವಿನ ವಾಸವದತ್ತಾದಲ್ಲಿ ಜನಪದಕ್ಕೆ ಸೇರಿದ ಪುಟ್ಟ ಕತೆಯೊಂದಿದೆ. ಈ ಕತೆಯು ವಿಪುಲವಾದ ವರ್ಣನೆಗಳಿಂದ ಒಡಗೊಂಡಿದೆ. ಇದು ಶೃಂಗಾರ ರಸ ಸಂಬಂಧಿಯಾದ ಕಥನಕ. ಕಂದರ್ಪ ಎಂಬ ರಾಜಕುಮಾರನು ವಾಸದತ್ತೆ ಎಂಬ ರಾಜಕುಮಾರಿಯನ್ನು ಸಾಹಸ ಪಟ್ಟು ಪರಿಣಯವಾಗುವ ಕತೆ. ಐದು ಮತ್ತು ಆರನೆಯ ಶತಮಾನದ ಸಾಂಸ್ಕೃತಿಕ ಜಗತ್ತನ್ನು ಈ ಕೃತಿಯಿಂದ ತಿಳಿದುಕೊಳ್ಳಬಹುದು. ಅನುವಾದಕರಿಗೆ ಸಂಸ್ಕೃತದ ಮೇಲಿರುವ ಹಿಡಿತ, ವಿದ್ವತ್ತು ಹಾಗೂ ಪರಿಶ್ರಮಗಳು ಇಲ್ಲಿನ ಪುಟ ಪುಟಗಳಲ್ಲೂ ವ್ಯಕ್ತವಾಗಿವೆ.

ಎಸ್. ಜಗನ್ನಾಥ ಅವರು ಅನುವಾದಿಸಿದ ‘ಪುಂಡಲೀಕ’ (೧೯೯೮)ವು ಸಂಸ್ಕೃತ ಗದ್ಯ ಮಹಾಕಾವ್ಯ ಬಾಣಭಟ್ಟನ ಕಾದಂಬರಿ, ಕೃತಿಯ ಕನ್ನಡನುವಾದ. ಇದು ಈ ಹಿಂದೆಯೇ ಎರಡು ಬಾರಿ ಕನ್ನಡಕ್ಕೆ ಅನುವಾದಗೊಂಡಿದೆ. ಮೂಲದ ವರ್ಣನೆಯನ್ನು ತಕ್ಕಮಟ್ಟಿಗೆ ಉಳಿಸಿಕೊಂಡು ವರ್ಣನಾತ್ಮಕ ಕಾದಂಬರಿಯಂತೆ ಅನುವಾದಿಸಿದ್ದಾರೆ. ಬಾಣಭಟ್ಟನ ಬಗೆಗೆ ವ್ಯಾಪಕವಾಗಿ ಅಧ್ಯಯನ ಮಾಡಿರುವ ಅನುವಾದಕರು ಕನ್ನಡದಲ್ಲಿ ಕೃತಿ ಸಮಕಾಲೀನವಾಗಿ ಓದುಗರನ್ನು ದೃಷ್ಟಿಯಲ್ಲಿರಿಸಿ ಅನುವಾದಿಸಿದ್ದೊಂದು ವಿಶೇಷ. ಪುಸ್ತಕದ ಮೊದಲಿಗೆ ಬಾಣಭಟ್ಟ ಹಾಗೂ ಆತನ ಕೃತಿಗಳ ಬಗೆಗೆ ಕೊಟ್ಟಿರುವ ವಿವರಗಳು ಉಪಯುಕ್ತವಾಗಿವೆ.

ಬ್ರೆಕ್ಟ್‌ನ ‘ಮದರ್ ಕರೇಜ್’ ಜಗತ್ತಿನ ಮುಖ್ಯ ನಾಟಕಗಳಲ್ಲಿ ಒಂದು. ಇದು ಯುದ್ಧ ವಿರೋಧಿ ನಾಟಕ. ಯುದ್ಧವನ್ನು ವಸ್ತುವಾಗಿಟ್ಟುಕೊಂಡು ೧೯೩೯ ರಲ್ಲಿ ಬ್ರೆಕ್ಟ್ ಬರೆದ ಮೊದಲ ನಾಟಕವೂ ಹೌದು. ಬ್ರೆಕ್ಟ್ ತಾನು ಕಂಡ ಮೊದಲ ಲೋಕ ಮಹಾಯುದ್ಧದ ಭೀಕರತೆ ಹಾಗೂ ವಿನಾಶಗಳತ್ತ ತನ್ನ ಗಮನವನ್ನು ಕೇಂದ್ರೀಕರಿಸಿದ್ದಾನೆ. ಮೊದಲ ಲೋಕ ಮಹಾಯುದ್ಧದ ಪ್ರಜ್ಞೆಯಿಂದಲೇ ಈ ನಾಟಕಗಳನ್ನು ಬರೆದಿದ್ದನಾದರೂ ಅದನ್ನೇ ವಸ್ತುವಾಗಿಟ್ಟುಕೊಳ್ಳದೆ ಇದಕ್ಕೆ ಹಿನ್ನೆಲೆಯಾಗಿ ಹದಿನೇಳನೇ ಶತಮಾನದಲ್ಲಿ ನಡೆದ ಧಾರ್ಮಿಕ ಯುದ್ಧವನ್ನು ಬಳಸಿಕೊಂಡಿದ್ದಾನೆ. ಸಾಮಾನ್ಯ ಜನರು ಯುದ್ಧದಿಂದಾಗಿ ತಮಾಗಾಗಬಹುದಾದ ಲಾಭದ ಮೇಲೆ ಕಣ್ಣಿಟ್ಟು ಹೇಗೆ ಯುದ್ಧದೊಂದಿಗೆ ತಾವು ಕೈ ಜೋಡಿಸುತ್ತಾ ಹೋಗುತ್ತಾರೆ ಎಂಬುದನ್ನು ಹೇಳಲು ಮದರ್ ಕರೇಜ್ ಹಾಗೂ ಅಯ್‌ನ ಫರ್ಲಿಂಗ್ ಗೆ ನಾಟಕದಲ್ಲಿ ಪ್ರಾಮುಕ್ಯತೆ ಕೊಡಲಾಗಿದೆ. ಮದರ್ ಕರೇಜ್ ತನ್ನ ತಳ್ಳುಗಾಡಿಯ ವ್ಯಾಪಾರದಲ್ಲಿಯೇ ಯುದ್ಧ ಸಂದರ್ಭದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತಾ ಯುದ್ಧದ ಕ್ರೌರ್ಯವನ್ನು ಅರಿಯದೇ ಹೋಗುತ್ತಾಳೆ. ವಾಸ್ತವ ಅನುಭದಿಂದಲೇ ಪಾಠ ಕಲಿಯುದ ಮದರ್ ಕರೇಜ್‌ಳ ಬದುಕಿನಿಂದ ಪ್ರೇಕ್ಷಕರ ಮೇಲಾಗಬಹುದಾದ ಪರಿಣಾಮದ ಕಡೆಗೆ ಬ್ರೆಕ್ಟ್‌ನ ಲಕ್ಷ್ಯವಿದೆ. ಯುದ್ಧದ ಚಿತ್ರಣವನ್ನು ಕೊಡುವಲ್ಲಿ ಬ್ರೆಕ್ಟ್‌ನ ಆಸಕ್ತಿ ಇಲ್ಲ. ಆದರೆ ಯುದ್ಧದ ದೆಸೆಯಿಂದ ಜನಸಾಮಾನ್ಯರ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಶೋಧಿಸುವುದರಲ್ಲಿಯೇ ಬ್ರೆಕ್ಟ್‌ನ ಆಸಕ್ತಿ. ಅದಕ್ಕಾಗಿಯೇ ಲಾಭದ ಆಸೆಯಿಂದ ಸಿಕ್ಕಿದ್ದನ್ನೆಲ್ಲಾ ಸಿಕ್ಕಿದವರಿಂದೆಲ್ಲಾ ದೋಚುತ್ತಾ ಹೋಗುವ ಆಸೆಬುರುಕಿ ಹೆಂಗಸು ‘ಮದರ್ ಕರೇಜ್’ ಳನ್ನು ನಾಯಕಿಯಾಗಿ ಆರಿಸಿಕೊಂಡಿದ್ದಾನೆ. ಯುದ್ಧದ ಹಿನ್ನೆಲೆಯಲ್ಲಿ ಏರಿಳಿಯುವ ಈಕೆಯ ಬದುಕಿನ ಮಾರ್ಪಾಡುಗಳನ್ನೇ ನಾಟಕದುದಕ್ಕೂ ನೋಡುತ್ತೇವೆ. ಕ್ಷುಲ್ಲಕ ಕಾರಣಗಳಿಗಾಗಿ ಬಂಡವಾಳಶಾಹಿಗಳು ನಡೆಸುವ ಯುದ್ಧಕ್ಕೆ ಬಲಿಯಾಗುವ ಜನಸಾಮಾನ್ಯರ ಪ್ರತಿನಿಧಿ ಇಲ್ಲಿನ ಮದರ್ ಕರೇಜ್. ಈಕೆಗೆ ದಂಧೆ ನಡೆಸಲು ಯುದ್ಧದ ಆಗತ್ಯವಿದೆ. ಯುದ್ಧದ ಸಂದರ್ಭದಲ್ಲಿ ದೇಹ ಮಾರಿ ಹಣ ಮಾಡುವ ಅನೇಕ ಹೆಂಗಸರಿದ್ದಾರೆ. ಅವರ ಪ್ರತಿನಿಧಿಯಾಗಿ ಇಲ್ಲಿ ಯವಟ್ಟೆಯ ಪಾತ್ರವಿದೆ, ಸೂಳೆಗಾರಿಕೆಯೊಂದೇ ಯುದ್ಧದ ಸಂದರ್ಭದಲ್ಲಿ ಹಣ ಸಂಪಾದಿಸುವ ಮಾರ್ಗ ಎಂಬುದನ್ನು ತೋರಿಸುವುದರ ಮೂಲಕ ಬ್ರೆಕ್ಟ್ ಸಮಾಜದ ಅವನತಿಯನ್ನು ಚಿತ್ರಿಸುತ್ತಾನೆ. ನಾಟಕದ ಒಟ್ಟು ಗ್ರುಹಿಕೆಯನ್ನು ಒಳಹೊಕ್ಕು ನೋಡಿದರೆ ಎಲ್ಲ ದೇಶಗಳಿಗೂ ಅನ್ವಯವಾಗಬಹುದಾದ ಬಂಡವಾಳಶಾಹಿ ಧೋರಣೆಗಳು ಹುಟ್ಟುಹಾಕಿದ ಕ್ರೂರ ವ್ಯವಸ್ಥೆಯ ಅದ್ಭುತ ಚಿತ್ರಣವನ್ನು ಕಾಣಬಹುದು. ನಾಟಕ ಇಂತಹ ಒಂದು ಸ್ತಿತಿಯನ್ನು ಅರ್ಥಪೂರ್ಣವಾಗಿ ಮುಂದಿಡುತ್ತದೆ. ಲಿಂಗದೇವರು ಹಳೇ ಮನೆಯವರ ಈ ಅನುವಾದ ರಂಗಭೂಮಿಗಾಗಿಯೇ ಸಿದ್ಧಪಡಿಸಿದ್ದರಿಂದ ಹೆಚ್ಚು ಯಶಸ್ವಿಯಾಗಿದೆ.

‘ಚಿರೇಬಂದಿವಾಡೆ’ ಎಂಬುದು ಮಹೇಶ್ ಎಲ್ ಕುಂಚವಾರ್ ಮರಾಠಿ ನಾಟಕ. ಇದನ್ನು ಕನ್ನಡದಲ್ಲಿ ಕೊಟ್ಟವರು ಮಾರುತಿ ಶಾನಭಾಗ. ಇದೊಂದು ಪ್ರೌಢವಾದ ರಚನೆ. ಮರಾಠಿ ರಂಘಭೂಮಿಯಲ್ಲಿ ಜನಮನ್ನಣೆ ಪಡೆದ ಈ ನಾಟಕವನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಲಾಗಿದೆ. ಸಂಭಾಷಣೆ ಮತ್ತು ಭಾಷೆಯ ದೃಷ್ಟಿಯಿಂದ ಪರಿಣಾಮ ಕಾರಿಯಾದ ಈ ಅನುವಾದದಲ್ಲಿ ರಂಗಭೂಮಿಯನ್ನು ಕುರಿತಂತೆ ಈ ನಾಟಕಕಾರರ ವಿಚಾರಗಳನ್ನು ಕೊಟ್ಟುದು ನಾಟಕದ ಸಂದರ್ಭದಲ್ಲಿ ಔಚಿತ್ಯಪೂರ್ಣವಾಗಿದೆ.

ಇಂಗ್ಲಿಷ್ ನಲ್ಲಿ ರಚನೆಯಾದ ಮುಕುಂದರಾವ್ ಅವರ ನಾಟಕ ‘ಮಹಾತ್ಮ’ ವನ್ನು ಕನ್ನಡಕ್ಕೆ ಅನುವಾದಿಸಿದವರು ಕೆ. ವಿ. ಸುಬ್ಬಣ್ಣ. ದೇಶ ವಿಭಜನೆಯ ಘಟನೆಯ ಹಿನ್ನೆಲೆಯಲ್ಲಿ ಗಾಂಧಿಯನ್ನು ಚಿತ್ರಿಸಲಾಗಿದೆ. ಲಿಂಗ, ಧರ್ಮ, ಜಾತಿ ಇವುಗಳಿಂದಾದ ಅಸಮಾನತೆ ಹಾಗೂ ಕ್ರೌರ್ಯಗಳಿಗೆ ಗಾಂಧಿಯನ್ನು ಆಧರಿಸಿ ಪ್ರೀತಿ ಮತ್ತು ಆಹಿಂಸೆಯ ಪರಿಹಾರವನ್ನು ಮುಂದಿಡಲಾಗಿದೆ ರಂಗ ಪ್ರಯೋಗಕ್ಕಾಗಿಯೇ ರೂಪಿಸಿದ ಈ ನಾಟಕ ಎತ್ತುವ ವಿಚಾರಗಳೂ ಕೂಡಾ ಸಮಕಾಲೀನ ಪ್ರಸ್ತುತವೇ ಆಗಿದೆ.

ಮಲ್ಲೇಪುರಂ ಜಿ. ವೆಂಕಟೇಶ ಅವರು ಅನುವಾದಿಸಿದ ‘ಮೂರ್ಖರಮೇಳ’ ಒಂದು ವಿಶಿಷ್ಟ ನಾಟಕ. ಸಂಸ್ಕೃತ ನಾಟಕ ಪರಂಪರೆಯಲ್ಲಿ ಅಷ್ಟೇನು ಪರಿಚಿತವಲ್ಲದ ಶಂಕಧರನ ನಾಟಕದ ಅನುವಾದವಿದು. ಸಮಾಜದ ಓರೆ ಕೋರೆಗಳನ್ನು ಹಾಗೂ ಪೊಳ್ಳುತನವನ್ನು ಪ್ರತಿಫಲಿಸುವುದರೊಂದಿಗೆ ಡೋಂಗಿತನವನ್ನು ಬಯಲಿಗೆಳೆಯುವುದು ಈ ನಾಟಕ ಪ್ರಮುಖ ಆಶಯ. ವ್ಯಂಗ್ಯವೇ ಶಂಕಧರನ ನಾಟಕದ ಮುಖ್ಯ ಧ್ವನಿಯಾಗಿದೆ. ಸಮಾಜದ ವೈವಿಧ್ಯಮಯವಾದ ಪಾರ್ತಗಳನ್ನು ವೈನೋದಿಕವಾಗಿ ಮಾತಾನಾಡಿಸುತ್ತಾ ಸಮಕಾಲೀನ ಸಮಾಜದ ಆವನತ ಮುಖೀ ಚಿತ್ರಣವನ್ನು ಈ ನಾಟಕದಲ್ಲಿ ಕೊಡಲಾಗಿದೆ.

‘ಪರಿಹಾರ’ ಭೀಷ್ಮ ಸಾಹನಿ ಅವರ ಹಿಂದೀ ನಾಟಕದ ಅನುವಾದ. ಕನ್ನಡಕ್ಕೆ ಅನುವಾದಿಸಿದವರು ಅಶ್ವಿನಿ ಗಂಗಾ. ಇದು ಸಂತ್ರಸ್ತರಿಗೆ ನೀಡುವ ಪರಿಹಾರದ ನೆಪದಿಂದ ರಾಜಕೀಯ ಮುಂದಾಳುಗಳು, ಆಡಳಿತಾಧಿಕಾರಿಗಳು ಮಾಡುವ ಸುಲಿಗೆಯನ್ನು ಆಧಾರವಾಗಿರಿಸಿ ಬರೆದ ನಾಟಕವಾಗಿದೆ. ಸ್ವಾರ್ಥ, ವಂಚನೆಗಳೇ ವಿಜೃಂಭಿಸುವ ಭಾರತದ ಸಂದರ್ಭವನ್ನು ಗುರಿ ಮಾಡುವ ನಾಟಕವಿದು. ಈ ಕಾರಣಕ್ಕಾಗಿ ಸಮಕಾಲೀನ ಪ್ರಸ್ತುತತೆ ಇದೆ.

ಷೇಕ್ಸ್ ಪಿಯರನ ‘ಮರ್ಚಂಟ್ ಆಫ್ ದಿ ವೆನಿಸ್’ ನಾಟಕದ ಎರಡು ಅನುವಾದಗಳು ಈ ಅವಧಿಯಲ್ಲಿ ಪ್ರತಟವಾಗಿದೆ. ಕೆ. ಎಸ್. ಭಗವಾನ್ ಅವರು ಅನುವಾದಿಸಿರುವ ಕೃತಿಯ ಷೇಕ್ಸ್ ಸ್ಪಿಯರ್ ನನ್ನು ಅಭ್ಯಾಸಮಾಡುವ ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿರಿಸಿ ರಚನೆಯಾಗಿದೆ. ಸರಳವಾಗಿ ಸಹಜಲಯದಲ್ಲಿ ಕನ್ನಡಿಸಿರುವುದು ಇದರ ವೈಶಿಷ್ಟ. ಡಿ.ಆರ್.ಶಶಿಧರ ಅವರು ಇದೇ ನಾಟಕವನ್ನು ರಂಗಪ್ರಯೋಗಕ್ಕೆ ಅನುಕೂಲವಾಗುವಂತೆ ಅನುವಾದಿಸಿದ್ದಾರೆ. ಇಲ್ಲಿನ ಸಂಭಾಷಣೆಯಲ್ಲಿನ ಚುರುಕುತನ ನಾಟಕ ಪುರಾಣಗಳ ಬಗೆಗಿನ ವಿವವರಗಳು ನಾಟಕವನ್ನು ಅರ್ಥೈಸಲು ಪೂರಕವಾಗಿವೆ. ಮೂಲಕೃತಿಯ ಸಾಹಿತ್ಯ ಗುಣಗಳನ್ನು ಉಳಿಕೊಂಡು ರಂಗಕೃತಿಯಾಗಿ ಪುನರ್ರಚಿಸುವಲ್ಲಿ ಅನುವಾದಕರು ಯಶಶ್ವಿಯಾಗಿದ್ದಾರೆ.

ವೈಯಕ್ತಿಕ ನೆಲೆಯಲ್ಲಿ ಅನುವಾದಗೊಂಡ ಕೃತಿಗಳಲ್ಲಿ ಅನುವಾದಕರ ಮನೋಧರ್ಮಕ್ಕೆ ಅನುಗುಣವಾಗಿ ಸಾಕಷ್ಟು ವೈವಿಧ್ಯತೆ ಇದೆ. ಇವುಗಳಲ್ಲಿ ಅಭಿಜಾತ ಕೃತಿಗಳೂ ಇವೆ.

ಇಲ್ಲಿ ಮುಖ್ಯವಾಗಿ ಎದ್ದುಕಾಣುವುದು ಅನುವಾದಕರ ಅಧ್ಯಯನಾಸಕ್ತಿ. ಒಂದು ಕೃತಿಯ ಅನುವಾದ ಎಂದರೆ ಕೇವಲ ಕೃತಿಯ ಆಶಯವನ್ನು ಲಕ್ಷ್ಯಭಾಷೆಗೆ ವರ್ಗಾಯಿಸುವ ಕೆಲಸವಲ್ಲ. ಅದು ಒಂದು ಸಾಂಸ್ಕೃತಿಕ ಪರಿಸರವನ್ನು ಇನ್ನೊಂದು ಸಾಂಸ್ಕೃತಿಕ ಪರಿಸರದಲ್ಲಿ ಪ್ರತಿಷ್ಠಾಪಿಸುವ ಮಹತ್ವದ ಜವಾಬ್ದಾರಿ ಎಂಬುದನ್ನು ಇಲ್ಲಿನ ಅನುವಾದಕರು ಭಾವಿಸಿದಂತಿದೆ. ಈ ಕಾರಣಕ್ಕಾಗಿಯೇ ಇಲ್ಲಿನ ಅವುವಾದ ಕೃತಿಗಳಲ್ಲಿ ಆಕರ ಬಗೆಗೆ ವಿವರಣಾತ್ಮಕವಾದ ಪ್ರಸ್ತಾವನೆಗಳು, ಇತರರಿಂದ ಬರೆಸಿದ ಮುನ್ನುಡಿಗಳು ಮೂಲ ಕೃತಿಕಾರರ ಬಗೆಗೆ ಸುದೀರ್ಘ ಪರಿಚಯ ಇವುಗಳನ್ನು ಪೂರಕವಾಗಿ ಒದಗಿಸಲಾಗಿದೆ. ಒಂದು ಅಧ್ಯಯನ ಫಲಿತದ ರೂಪದಲ್ಲಿ ಈ ಕೃತಿಗಳು ಲಕ್ಷಭಾಷೆಯಲ್ಲಿ ಗ್ರಹೀತವಾಗಬೇಕು ಎಂಬ ಕಾಳಜಿ ಈ ಎಲ್ಲಾ ಅನುವಾದ ಕೃತಿಗಳ ಹಿಂದೆ ಇದೆ. ಭಾಷೆಯ ಕೃತಿಯ ಸಮಗ್ರ ಅರಿವನ್ನು ಪಡೆದೇ ಅನುವಾದ ಪ್ರಕ್ರಿಯೆಗೆ ಇವರು ಕೈಯಿಕ್ಕಿದಂತಿದೆ. ಪುಸ್ತಕ ರೂಪದಲ್ಲಿ ಬರಬೇಕು ಎಂಬ ಏಕೈಕ ಕಾಳಜಿಯನ್ನು ಇರಿಸಿಕೊಂಡು ಅನುವಾದ್ದಗೊಂಡ ಕೃತಿಗಳಲ್ಲ ಇವು. ಆಯಾ ಸಂದರ್ಭದಲ್ಲಿ ತನ್ನ ವೈಯಕ್ತಿಕ ಆಸಕ್ತಿಯಿಂದ ಅನುವಾದ ಕೆಲಸವನ್ನು ರೂಢಿಸಿಕೊಂಡ ಪರಿಣಾಮವಾಗಿ ಇವು ಸಿದ್ಧಗೊಂಡಿವೆ. ಅವರು ಅನುವಾದದ ಜವಾಬ್ದಾರಿಯನ್ನು ತಮ್ಮ ಮೇಲೆ ಸ್ವತಹ ಎಳೆದುಕೊಂಡು ಕಾರ್ಯಪ್ರವೃತ್ತರಾದವರು. ಹಾಗಾಗಿ ಇಲ್ಲಿನ ಅನುವಾದಗಳಲ್ಲಿ ಲವಲವಿಕೆ, ಅಧ್ಯಯನ ಪ್ರವೃತ್ತಿ ಮೂಲಕೃತಿಯ ಸಾಂಸ್ಕೃತಿಕ ಸನ್ನಿವೇಶವನ್ನು ಸಂವಹನಗೊಳಿಸಬೇಕೆಂಬ ಉತ್ಸಾಹ ಎದ್ದು ಕಾಣುವಂತಿದೆ. ಇಲ್ಲಿನ ಎಲ್ಲಾ ಅನುವಾದಗಳು ಉತ್ತಮವೆಂದು ಭಾವಿಸಬೇಕಾಗಿಲ್ಲ. ಕೆಲವೊಮ್ಮೆ ಕೃತಿಯ ಆಯ್ಕೆಯಲ್ಲಿ ಅನುವಾದಕರು ಎಡವಿದ್ದೂ ಇದೆ. ಹಾಗಾಗಿ ಕನ್ನಡದ ಸಂದರ್ಭದಲ್ಲಿ ಕೃತಿಯ ಪ್ರಸ್ತುತತೆ ಸಾದ್ಯವಾಗದೇ ಹೋದದೂ ಇದೆ. ಇಲ್ಲಿನ ಕಥಾ ಸಂಕಲನದಲ್ಲಿ ಬಂದ ಕತೆಗಳು ಕವಿತೆಗಳು ಬಿಡಿಬಿಡಿಯಾಗಿ ಪ್ರಕಟಿಸಬೇಕು ಎಂಬ ಆಲೋಚನೆ ಪ್ರಕಾಶಕರಿಗೆ ಬಂದಿದೆ. ಕೆಲವೊಮ್ಮೆ ಲೇಖಕರೇ ಪ್ರಕಾಶಕರಾದ ಸಂದರ್ಭವೂ ಕಾಣಿಸಿಕೊಂಡಿದ್ದಿದೆ. ಅನುವಾದಗೊಂಡು ಅಲ್ಲಿ ಇಲ್ಲಿ ಪ್ರಚಾರ ಪಡೆದ ಅಥವಾ ಕನ್ನಡದ ಸಂದರ್ಭದಲ್ಲಿ ಇವುಗಳ ಉಪಯುಕ್ತತೆಯನ್ನು ಮನಗಂಡು ಪ್ರಕಾಶಕರು ಇವುಗಳ ಪ್ರಕಟಣೆಗೆ ಮುಂದಾಗಿದ್ದಾರೆ. ಅಂತಹ ಪ್ರಕಾಶಕರಲ್ಲಿ ಮುಖ್ಯವಾಗಿ ಅಕ್ಷರ ಪ್ರಕಾಶನ, ಕನ್ನಡ ಸಂಘ ಕ್ರೈಸ್ಟ್ ಕಾಲೇಜ್, ನವಕರ್ನಾಟಕ ಪ್ರಕಾಶನ ಸಂಸ್ಥೆಗಳ ಕೊಡುಗೆ ಅನುವಾದ ಕೃತಿಗಳಿಗೆ ಈ ದಶಕದಲ್ಲಿ ಗಮನಾರ್ಹವೆನಿಸಿದೆ.

ಸಾಂಸ್ಥಿಕ ಅನುವಾದಗಳು

ಕೃತಿಯನ್ನು ಅನುವಾದ ಮಾಡಬೇಕೆಂದು ಅನುವಾದಕರಿಗೆ ಸೂಚಿಸಿದ ಪರಿಣಾಮವಾಗಿ ಇಲ್ಲಿನ ಅನುವಾದಗಳು ರೂಪುಗೊಳ್ಳುತ್ತವೆ. ಇಲ್ಲಿ ಸಾಮಾನ್ಯವಾಗಿ ಸಂಸ್ಥೆಯು ಹಾಕಿದ ಒತ್ತಡಕ್ಕೆ ಅನುಗುಣವಾಗಿ ಅನುವಾದ ವ್ಯಾಖ್ಯಾನವು ರೂಪುಗೊಳ್ಳುತ್ತಿರುತ್ತದೆ. ಇದು ಒಂದು ತೆರನ ಯಾಂತ್ರಿಕವಾದ ಅನುವಾದಗಳಂತೆ ರೂಪುಗೊಂಡರೂ ಅಚ್ಚರಿಪಡಬೇಕಾಗಿಲ್ಲ. ಇಲ್ಲಿ ಅನುವಾದದ ತುರ್ತು ಇರುವುದು ಸಂಸ್ಥೆಗೆ ಹೊರತು ಅನುವಾದಕರಿಗಲ್ಲ. ವೈಯಕ್ತಿಕ ಹಾಗೂ ಸಾಮುದಾಯಕ ಸ್ತರದಲ್ಲಿ ಅನುವಾದಕರು ಒಂದು ತೆರನ ತುರ್ತುನ್ನು ತಮಗೆ ತಾವೇ ಆವಾಹಿಸಿಕೊಂಡವುಗಳು. ಆದರೆ ಸಾಂಸ್ಥಿಕ ಸ್ತರದಲ್ಲಿ ನಡೆಯುವ ಅನುವಾದಗಳಲ್ಲಿ ಅನುವಾದದ ರೀತಿ ಅಥವಾ ವಿಧಾನದ ಬಗೆಗೆ ನಿರ್ದಿಷ್ಟ ಕಾಳಜಿಗಳು ಗೋಚರಿಸುವುದಿಲ್ಲ. ಅದೇನಿದ್ದರೂ ಸಾಂಸ್ಥಿಕ ಒತ್ತಡದ ಕಾರಣಗಳಿಗಾಗಿ ಅನುವಾದದ ತುರ್ತುನ್ನು ಸಾಂದರ್ಭಿಕವಾಗಿ ಅವಾಹಿಸಿಕೊಂಡವರು. ಅವರು ಆಕರ ಭಾಷೆಯ ಸಾಂಸ್ಕೃತಿಕ ವಿವರಗಳನ್ನಾಗಲಿ, ಲಕ್ಷ್ಯ ಬಾಷೆಯ ಸಾಂಸ್ಕೃತಿಕ ವಿವರಗಳನ್ನಾಗಲಿ, ಹೆಚ್ಚು ಸೂಕ್ಷ್ಮ ಪರಿಶೀಲನೆಗೆ ಒಳಪಡಿಸದೆ ನಿರಂತರ ವ್ಯಾಖ್ಯಾನದಲ್ಲಿ ತೊಡಗಿರುತ್ತಾರೆ. ಅನುವಾದ ಮಾಡುವ ಕೃತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಅನುವಾದಕರಿರುವುದಿಲ್ಲ. ಕೃತಿ ಸಾಂಸ್ಕೃತಿಕ ಅಯ್ಕೆಯಾಗಿರುತ್ತದೆ. ಸಂಸ್ಥೆಯು ಅನುವಾದಕ್ಕಾಗಿ ಕೃತಿಯನ್ನು ಅಯ್ಕೆಮಾಡುವ ಕಾಲಕ್ಕೂ ಅದನ್ನು ಅನುವಾದಿಸುವ ಕಾಲ ಹಾಗೂ ಪ್ರಕಟಗೊಳ್ಳುವ ಕಾಲಕ್ಕೂ ತುಂಬಾ ಅಂತರವಿರುತ್ತದೆ. ತಾಂತ್ರಿಕ ಕಾರಣಗಳಿಂದಾಗುವ ಕಾಲದ ಅನಿವಾರ್ಯ ಅಂತರದಿಂದ ಅನುವಾದಗೊಳ್ಳುವ ಕೃತಿ ಆಕರ ಭಾಷೆಯಲ್ಲಿ ಪ್ರಸ್ತುತಗೊಳ್ಳುವಂತೆ ಲಕ್ಷ್ಯಭಾಷೆಯಲ್ಲಿ ಪ್ರಸ್ತುತಗೊಳ್ಳದೇ ಹೋಗುವ ಸಾಧ್ಯತೆಯೂ ಇರುತ್ತದೆ. ಆದರೆ ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಸಾಂಸ್ಥಿಕ ಆಯ್ಕೆಗಳು ಯಾವತ್ತೂ ಆಕರ ಹಾಗೂ ಲಕ್ಷ್ಯಭಾಷೆಯಲ್ಲಿ ಕಾಲಾತೀತವಾಗಿಯೂ ನಿಲ್ಲುವ ಆಶಯಗಳನ್ನು ಒಳಗೊಂಡಿರುತ್ತದೆ ಎಂಬುದು. ಈ ಹಿನ್ನೆಲೆಯಲ್ಲಿ ಕೆಲವು ಕೃತಿಗಳನ್ನು ಪರಿಶೀಲಿಸಬಹುದು.

‘ತೆಲಗು ಕಥೆ’ (೧೯೯೮) ರಾಮಲಿಂಗಮ್ ಅವರು ಸಂಪಾದಿಸಿದ ತೆಲಗು ಕತೆಗಳ ಸಂಕಲನ. ಇದನ್ನು ಕುಂ. ವೀರಧದ್ರಪ್ಪ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ಎರಡನೆಯ ತೆಲಗು ಕಥಾ ಸಂಕಲನ ಇದು. ೧೯೩೫ – ೧೯೮೨ ರ ನಡುವೆ ಪ್ರಕಟಗೊಂಡ ವಿವಿಧ ಲೇಖಕರ ಸುಮಾರು ಮೂವತ್ತು ಕಥೆಗಳು ಈ ಸಂಕಲನದಲ್ಲಿವೆ.

ಬೇರೆ ಬೇರೆ ಕಾಲಘಟ್ಟದಲ್ಲಿ ಬರೆದ ಕತೆಗಳಾದ್ದರಿಂದ ಇವುಗಳ ವಸ್ತು ವಿನ್ಯಾಸಗಳಲ್ಲಿ ವೈವಿಧ್ಯವಿದೆ. ತೆಲಗು ಸಣ್ಣ ಕತೆಗಳ ಪರಂಪರೆ, ಹಾಗೂ ಪ್ರಾದೇಶಿಕ ವೈಶಿಷ್ಟಗಳು ಇಲ್ಲಿನ ಕತೆಗಳಲ್ಲಿ ಗಮನ ಸೆಳೆಯುತ್ತವೆ. ಬೇರೆ ಬೇರೆ ಲೇಖಕರ ಕತೆಗಳನ್ನು ಕುಂ. ವೀ ಅವರು ತಮ್ಮ ಪರಿಸರದ ಭಾಷೆಗೆ – ಉತ್ತರ ಕರ್ನಾಟಕದ ಅದರಲ್ಲೂ ಬಳ್ಳಾರಿ ಜಿಲ್ಲೆಯ ಕನ್ನಡದಲ್ಲಿ – ಅನುವಾದಿಸಿದ್ದಾರೆ.

ರವಿ ಪಟ್ನಾಯಕ್ ಅವರ ಒರಿಯಾ ಕತೆಗಳ ಸಂಕಲನ ‘ವಿಚಿತ್ರ ವರ್ಣ’, ಇದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೯೩) ಬಂದಿದೆ. ಇಲ್ಲಿರುವ ಹದಿನೆಂಟು ಕತೆಗಳನ್ನು ಸ್ನೇಹಲತಾ ರೋಹಿಡೇಕರ್ ಅವರು ಕನ್ನಡಕ್ಕೆ ಅನುವಾದಿ (೨೦೦೦)ಸಿದ್ದಾರೆ. ಸ್ತ್ರೀ ಕೇಂದ್ರೀತ ನೆಲೆಯಲ್ಲಿ ಇಲ್ಲಿನ ಕತೆಗಳು ವಿಸ್ತರಿಸಿವೆ. ಹೆಣ್ಣು ಅನುಕಂಪಕ್ಕೆ, ವಾತ್ಸಲ್ಯಕ್ಕೆ, ಗೌರವಕ್ಕೆ ಅರ್ಹಳು ಎಂಬುದನ್ನು ವಿವಿಧ ಕತೆಗಳ ಮೂಲಕ ಚಿತ್ರಿಸಿದ್ದಾರೆ. ಹಾಗೆಯೇ ವ್ಯವಸ್ಥೆಯ ವಿರುದ್ಧ ಸಿಡಿದೇಳಬಲ್ಲ ಕ್ರಾಂತಿಕಾರಿಯಾಗಿಯೂ ಆಕೆ ಸಾಂದರ್ಭಿಕವಾಗಿ ಕಾಣಿಸಿಕೊಳ್ಳಬಲ್ಲಳು ಎಂಬುದನ್ನು ಇಲ್ಲಿನ ಕತೆಗಳು ಸ್ಟಷ್ಟಪಡಿಸುತ್ತವೆ.

‘ಕಾಗೆಗಳು ಮತ್ತು ಕಾಲಾಪಾನಿ’ ನಿರ್ಮಲ್ ವರ್ಮ ಅವರ ಕಥಾಸಂಕಲನ. ಇದಕ್ಕೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಇಲ್ಲಿನ ಏಳು ಕತೆಗಳನ್ನು ಬಾಲಚಂದ್ರ ಜಯಶೆಟ್ಟಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತ ಹಾಗೂ ಯುರೋಪಿಯನ್ ರಾಷ್ಟ್ರಗಳ ಹಿನ್ನೆಲೆಯಲ್ಲಿ ಮಧ್ಯಮವರ್ಗದ ಕೌಟುಂಬಿಕ ಹಾಗೂ ಸಾಮಾಜಿಕ ಚಿತ್ರಣಗಳನ್ನೊಳಗೊಂಡ ಕತೆಗಳಿವು.

ಅಖಿಲನ್ ಅವರು ಸಂಕಲಿಸಿದ ‘ತಮಿಳು ಸೌರಭ’ದಲ್ಲಿ ಹದಿನೆಂಟು ಕತೆಗಳಿವೆ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಶೇಷನಾರಾಯಣ ಅವರು. ಬಡತನ ಮತ್ತು ಬಾಲಕರ ಸುತ್ತ ಕೇಂದ್ರೀಕೃತವಾಗುವ ಇಲ್ಲಿನ ಕತೆಗಳು ನಮ್ಮ ಪ್ರಗತಿಶೀಲ ಸಂದರ್ಭವನ್ನು ನೆನಪಿಸುತ್ತವೆ.

‘ದೇವರ ವಿಕಾರಗಳು’ ಎಂ. ಮುಕುಂದನ್ ಅವರ ‘ದೈವತ್ತಿಂಡೆ ವಿಕೃತಿಗಳ್ ‘ ಮಲಯಾಳಂ ಕಾದಂಬರಿಯ ಕನ್ನಡ ರೂಪ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ನಾ. ದಾಮೋದರಶೆಟ್ಟಿ. ಮುಕುಂದನ್ ವ್ಯಕ್ತಿ ವಿಶಿಷ್ಟ ಕಾದಂಬರಿಗಳ ಮೂಲಕ ಮಲಯಾಳಂನಲ್ಲಿ ವಿಶಿಷ್ಟರಾದ ಬರೆಹಗಾರರು. ಅವರು ಕತೆಗಳ ಮೂಲಕ, ಕಾದಂಬರಿಗಳ ಮೂಲಕ ಹಿಂದೆ ಫ್ರೆಂಚ್ ವಸಾಹತುವಿನ ಅದೀನವಾಗಿದ್ದ ಮಾಹೆಯ (ಮಯ್ಯಳಿ) ಅಂತಃ ಪ್ರಜ್ಞೆಯನ್ನು ದಾಖಲಿಸಿ ಮಲಯಾಳಂ ಕಥಾಕ್ಷೇತ್ರದಲ್ಲಿ ವಿನೂತನವಾಗಿ ಕಾಣಿಸಿಕೋಂಡವರು. ಮುಕುಂದನ್ ಅವರಿಗೆ ತಮ್ಮ ಹುಟ್ಟೂರಾದ ಮಯ್ಯಳಿಯ ಪರಿಸರವು ನಿರಂತರವಾಗಿ ಬರೆವಣಿಗೆಯುದ್ದಕ್ಕೂ ಕಾಡಿದೆ ಎಂದಲ್ಲ. ಅದನ್ನು ಬಿಟ್ಟೂ ಅವರ ಬರೆವಣಿಗೆ ಸಾಗಿದೆ. ಆದರೆ ಅವರ ಪ್ರಮುಖ ಕೃತಿಗಳು ಮಯ್ಯಳಿಯ ಆವರಣದಲ್ಲಿಯೇ ಮೂರ್ತಗೊಳ್ಳುತ್ತವೆ ಎಂಬುದು ಗಮನಾರ್ಹ.

ಮಯ್ಯಳಿ ಕೇರಳದಿ ಇತರ ಪ್ರದೇಶಗಳಿಗಿಂತ ಭಿನ್ನವಾದ ಹಿನ್ನೆಲೆಯನ್ನು ಸಂಸ್ಕೃತಿಯನ್ನು ಹೊಂದಿದೆ. ಮಯ್ಯಳಿ ಇಂದಿಗೂ ರಾಜಕೀಯವಾಗಿ ಕೇಂದ್ರಾಡಳಿತ ಪ್ರದೇಶ. ಫ್ರೆಂಚ್ ವಸಾಹತುಶಾಹಿಯ ಅದೀನದಲ್ಲಿ ಬೆಳೆದ ಮಯ್ಯಳಿಯ ಸಾಂಶ್ಕೃತಿಕ ವಿವರಗಳು ಕಾದಂಬರಿಯಲ್ಲಿವೆ. ಕಾದಂಬರಿಯ ಹರವು ಮುಖ್ಯವಾಗಿ ಸ್ವಾತಂತ್ರ್ಯ ನಂತರದ ಎರಡು ದಶಕಗಳ ಅವಧಿಯನ್ನು ವ್ಯಾಪಿಸಿದೆ. ಬಿಲ್ಲವರೂ ಆಂಗ್ಲೋ ಇಂಡಿಯನ್ನರೂ ಅನ್ಯೋನ್ಯ ಮೈತ್ರಿಯಿಂದ ಬಾಳುತ್ತಿರುವ ಮಯ್ಯಳಿಯ ಸ್ವಾತಂತ್ರ್ಯ ಹೋರಾಟ, ಆಂಗ್ಲೋ ಇಂಡಿಯನ್ನರ ವಂಶನಾಶ, ಮಯ್ಯಳಿಯ ಸ್ವಾತೆಂತ್ರ್ಯಾ ನಂತರದ ಪರಿವರ್ತನೆಗಳು ಈ ಕಾದಬಂರಿಯಲ್ಲಿ ದಾಖಲಾಗಿವೆ.

ಸಂವಹನಕ್ಕೆ ತೊಡಕಾದ ಭಾಷಾ ಬಳಕೆ ಮೂಲಕ ಇದನ್ನು ಕನ್ನಡೀಕರಿಸಿದ್ದಾರೆ. ಸಂಭಾಷಣೆಗಳಲ್ಲಿ ಮಂಗಳೂರಿನ ಆಡುನಡಿಯನ್ನು ಉಪಯೋಗಿಸಿದರಿಂದ ಅನುವಾದಕ್ಕೊಂದು ಹೊಸತನ ಪ್ರಾಪ್ತವಾಗಿದೆ. ಹದಿನಾರು ಕಾದಂಬರಿಗಳನ್ನು, ಹತ್ತರಷ್ಟು ಕಥಾ ಸಂಕಲನಗಳನ್ನು ಪ್ರಕಟಿಸಿರುವ ಮುಕುಂದನ್ ಈ ಕಾದಬಂರಿಗಾಗಿ ಸಾಹಿತ್ಯ ಆಕಾಡೆಮಿಯ ಪ್ರಶಸ್ತಿಯನ್ನು ಪಡೆದಿದ್ದಾರೆ.

ಪಿ.ಕೆ. ಬಾಲಕೃಷ್ಣನ್ ಅವರ ‘ನಾನಿನ್ನು ನಿದ್ರಿಸುವೆ’ ಮಹಾಭಾರತದ ಕೆಲವು ಪಾತ್ರಗಳ ಮಾನಸಿಕ ತುಮುಲಗಳನ್ನು ಚಿತ್ರಿಸುವ ಕಾದಂಬರಿ. ಮಲಯಾಳಂನಿಂದ ಕನ್ನಡಕ್ಕೆ ಅನುವಾದಿಸಿದವರು ಸಾರಾ ಅಬೂಬಕ್ಕರ್.

ಹದಿನೆಂಟು ದಿನಗಳಲ್ಲಿ ಕುರುಕ್ಷೇತ್ರ ಯುದ್ಧ ಮುಗಿದಿದೆ. ಹತ್ತೊಂಬತ್ತನೆಯ ದಿನದಲ್ಲಿ ಬದುಕಿ ಉಳಿದವರು ಮಾನಸಿಕ ತುಮುಲಗಳ ನೆಲೆಯಿಂದ ಅದರಲ್ಲೂ ಮುಖ್ಯವಾಗಿ ಧರ್ಮರಾಯ, ಕುಂತಿ, ದ್ರೌಪದಿ ಇವರ ಮನಸ್ಸನ್ನು ಕಾಡುವ ನೋವಿನ ಮೂಲಕ ಮಹಾಭಾರತದ ಕತೆಯೇ ದಾಖಲಾಗಿದೆ. ಇಲ್ಲಿ ಮುಖ್ಯವಾಗಿ ಗಮನ ಸೆಳೆಯುವ ಭಾಗಗಳು ಎರಡು. ಒಂದು ಕರ್ಣನ ನಿಜವೃತ್ತಾಂತವನ್ನು ಕೃಷ್ಣನು ತಿಳಿಸುವ ಸನ್ನಿವೇಶ. ಇಲ್ಲಿ ಕರ್ಣನು ಸ್ವಾಭಿಮಾನಿಯಾಗಿ, ಒಬ್ಬ ಉದಾತ್ತನಾಗಿ ಚಿತ್ರಿತವಾಗಿದ್ದಾನೆ. ಆತನು ದ್ರೌಪದಿಯ ವಸ್ತ್ರಾಪಹರಣ ಸಂದರ್ಭದಲ್ಲಿ ಬೆಂಬಲಿಸಿದನೆಂಬ ಆರೋಪವೊಂದಿದೆ. ಆದರೆ ಆತ ಆ ದಿನ ಸಭಾ ವೇದಿಕೆಯಲ್ಲಿ ಕಂಡುದು ವಿವಸ್ತ್ರಳಾಗುತ್ತಿದ್ದ ಅಸಹಾಯಕಳಾಗಿದ್ದ ಒಬ್ಬ ರಾಜಕುಮಾರಿಯನ್ನಲ್ಲ. ಆತ ನಕ್ಕಿದ್ದು ದ್ರೌಪದಿಯ ಅವಮಾನವನ್ನು ಕಂಡಲ್ಲ. ಸಭಾ ವೇದಿಕೆಯಲ್ಲಿ ನಿಂತಿರುವ ಭೀಮಾರ್ಜುನರ ಪರಾಕ್ರಮ ತಿರಸ್ಕಾರಗೊಳ್ಳುತ್ತಿರುವ ಚಿತ್ರವನ್ನು ಕರ್ಣನು ಕಂಡನು. ನಿಂದನೆಗೊಳಗಾಗುತ್ತಿರುವ ಹುಳುವಿನಂತೆ ತುಳಿದು ಅಮುಕಿದ ಭೀಮಾರ್ಜುನರ ಪರಾಕ್ರಮವನ್ನು ಕಂಡು ಕರ್ಣನಂದು ಅಟ್ಟಹಾಸಗೈದನು. ಯಾರನ್ನು ಕಂಡರೆ ಕರ್ಣನು ನರಿಯಂತೆ ಓಡುವನೆಂದು ಭೀಷ್ಮನು ಹೇಳಿದ್ದನೋ ಆ ಅರ್ಜುನನು ಸ್ವಂತ ಪತ್ನಿಯ ಬಟ್ಟೆ ಕಳಚುವುದನ್ನು ಕಂಡು ತನ್ನ ಪರಾಕ್ರಮವನ್ನೆಲ್ಲ ಕಳೆದುಕೊಂಡಂತೆ ನಿಂತಿದ್ದ ದೃಶ್ಯವನ್ನು ಭೀಷ್ಮರು ಕಣ್ಣಾರೆ ನೋಡುತ್ತಿದ್ದುದನ್ನು ಕಂಡು ಕರ್ಣನು ಆ ದಿನ ಉನ್ಮತ್ತನಾಗಿ ನಕ್ಕಿದ್ದನು. ಅವರ ವೃತ್ತಿಯನ್ನು ನಿರ್ದಯವಾಗಿ ಅವಹೇಳನ ಮಾಡಿದಾಗ ಸುಚರಿತಳಾದ ರಾಜಪುತ್ರಿಯ ಮನೋಭಾವದ ಕುರಿತು ಆತ ಯೋಚಿಸರಲೇ ಇಲ್ಲ.

ಹಾಗೆಯೇ ಇನ್ನೊಂದು ಸಂದರ್ಭವೆಂದರೆ ಕರ್ಣನು ಕುಂತಿಗೆ ಕೊಟ್ಟಮಾತಿನಂತೆ ಪಾಂಡವರಲ್ಲಿ ನಾಲ್ವರನ್ನು ರಕ್ಷಿಸಿದ್ದಾನೋ ಎಂಬ ದ್ರೌಪದಿಯ ಸಂದೇಹಕ್ಕೆ ಸಂಜಯನು ಕೊಡುವ ಉತ್ತರ. ದ್ರೌಪದಿಗೆ ಮಾಂಗಲ್ಯ ಭಾಗ್ಯವನ್ನು ಉಳಿಸಿಕೊಳ್ಳುವಲ್ಲಿ ಕರ್ಣನ ಕೃಪೆಯಿದೆ. ಪರಾಕ್ರಮಿಗಳಾದ ಧರ್ಮರಾಯ ಭೀಮ, ನಕುಲ ಸಹದೇವರನ್ನು ಅವಹೇಳನಗೈದು ಕರ್ಣನು ಯುದ್ಧ ವಿಮುಖರನ್ನಾಗಿಸಿದನೆಂಬ ವಿವರ ದ್ರೌಪದಿಗೆ ಸಹ್ಯವಾದುದಲ್ಲ. ಅವಳ ಪತಿಯಂದಿರಿಗೆ ಕರ್ಣನ ಪ್ರಾಣಭಿಕ್ಷೆ ಲಭ್ಯವಾದುದು ಆಕೆಗೆ ಲಜ್ಜೆಯ ವಿಷಯ.

ಇಂತಹ ಮಾನಸಿಕವಾದ ಸೂಕ್ಷ್ಮಾತಿ ಸೂಕ್ಷ್ಮ ಅವಲೋಕನಗಳ ಮೂಲಕ ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಭಾರತಕತೆಯನ್ನೂ ಇಲ್ಲಿ ಚಿತ್ರಿಸಲಾಗಿದೆ. ಐವರ ಮಡದಿಯಾಗಿ, ಗರತಿಯಾಗಿ ವಿಧವೆಯೂ ಆಗದೆ ಬದುಕಿದ ದ್ರೌಪದಿ ಯುದ್ಧ ನಂತರದ ಆ ದಿನವೊಂದರಲ್ಲಿ ಅನುಭವಿಸಿದ ಉದ್ವೇಗಗಳು, ಕೇಳಿಸಿಕೊಂಡ ಮಾತುಗಳಿಂದ ಮನಸ್ಸು ಭಾರವಾಗಿತ್ತು. ಅದುವರೆಗಿನ ಬದುಕಿನಲ್ಲಿ ಅನುಭವಿಸಿದ ಬವಣೆಗಳಿಗೆ ತುತ್ತಾಗಿ ನಿದ್ದೆಯಿಲ್ಲದೆ ಕಳೆದ ದಿನಗಳ ಹೊರೆ ಕಳಚಿಕೊಳ್ಳುತ್ತಾ ‘ನಿದ್ರಿಸುವೆನೆಂದು’ ಆಕೆ ಸಮಾಪ್ತಿ ಹಾಡುತ್ತಾಳೆ, ಇಲ್ಲಿನ ಎಲ್ಲಾ ಪಾತ್ರಗಳ ಸಂದೇಹಗಳಿಗೆ ಉತ್ತರವನ್ನು ಕೊಡುವವರು ಎಲ್ಲಾ ಸನ್ನಿವೇಶಗಳಿಗೆ ಸಾಕ್ಷಿಯಾದ ಕೃಷ್ಣ, ನಾರದ, ಸಂಜಯರೇ ಆಗಿದ್ದಾರೆ ಎನ್ನುವುದು ಗಮನಾರ್ಹ.

ಸಾರಾ ಅಬೂಬಕ್ಕರ್ ಅವರ ಅನುವಾದ ಕೂಡಾ ಪೌರಾಣಿಕ ಆವರಣದ ನೆಲೆಯಲ್ಲಿಯೇ ಸಮರ್ಥವಾಗಿದೆ.

‘ಇಂದುಲೇಖಾ’ ಮಲಯಾಳಂನ ಮೊದಲ ಸಮಾಜಿಕ ಕಾದಂಬರಿ. ಇದನ್ನು ಕನ್ನಡಕ್ಕೆ ಅನುವಾದಿಸಿದವರು. ಸಿ. ರಾಘವನ್‌, ಮಾಧವನ್‌ ಮತ್ತು ಇಂದುಲೇಖಾರ ಪ್ರಣಯ ಕತೆಯ ಮೂಲಕ ಕೇರಳದ ಸಾಂಪ್ರಾದಯಕ ನಾಯರ್ ತರವಾಡು ಮನೆತನದಲ್ಲಿ ಹೊಸ ಅಲೆ ಮೂಡಿಸಿದ್ದನ್ನು ಇಲ್ಲಿ ಚಿತ್ರಿಸಲಾಗಿದೆ. ಇಂಗ್ಲಿಷ್‌ ಶಿಕ್ಷಣವನ್ನು ಪಡೆಯುವುದರ ಮೂಲಕ ಅರ್ಥಶೂನ್ಯವಾದ ಸಂಪ್ರದಾಯಗಳನ್ನು ಯುವ ತಲೆಮಾರು ಮೆಟ್ಟಿ ನಿಲ್ಲಬಹುದು ಎಂಬುದನ್ನು ಈ ಕಾದಂಬರಿ ಸೂಚಿಸುತ್ತದೆ. ನಾಯರ್ ಹೆಣ್ಣು ಮತ್ತು ನಂಬೂದರಿ ಹುಡುಗರ ನಡುವೆ ನಡೆಯುತ್ತಿದ್ದ ‘ಸಂಬಂಧ’ ಎಂಬ ಸಂಪ್ರಾದಾಯವನ್ನು ತಿರಸ್ಕರಿಸಿ ಇಂಗ್ಲಿಷ್‌ ಓದಿದ ಇಂದುಲೇಖಾ ಪ್ರೀತಿಸಿದ ಹುಡುಗನನ್ನು ಮದುವೆಯಾಗುವುದು ಇಲ್ಲಿನ ಕತೆ. ಕೇರಳದ ಅನೇಕ ಸಾಂಸ್ಕೃತಿಕ ವಿಚಾರಗಳನ್ನು ಈ ಕಾದಂಬರಿ ತನ್ನೊಡಲೊಳಗೆ ಹುದುಗಿಸಿಕೊಂಡಿದೆ. ೧೮೮೯ ರಲ್ಲಿ ಚಂದುಮೇನೋನ್‌ ಬರೆದ ಈ ಕಾದಂಬರಿ ಕನ್ನಡದಲ್ಲಿ ಅನುವಾದಗೊಂಡುದು ೧೯೯೪ರಲ್ಲಿ. ಅಂದರೆ ಸುಮಾರು ೧೦೫ ವರ್ಷಗಳ ತರುವಾಯ.

‘ಕೋಸಲಾ’ (ತೆರಣಿಯ ಹುಳು) ಬಾಲಚಂದ್ರ ನೇಮಾಡೆ ಅವರ ಮರಾಠಿ ಕಾದಂಬರಿ. ಇದನ್ನು ವಾಮನಬೇಂದ್ರೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದರಲ್ಲಿ ಕೋಸಲಾ ಪ್ರತಿಮೆಯಾಗಿ ಅರ್ಥವತ್ತಾಗುತ್ತದೆ. ಸಾಮಾಜಿಕ ವ್ಯವಸ್ಥೆ ಹಾಗೂ ವ್ಯಕ್ತಿಯ ವೈಯಕ್ತಿಕ ಬದುಕಿನ ನಡುವಣ ಅಂತರವನ್ನು ಕಾದಂಬರಿ ಸೂಕ್ಷ್ಮವಾಗಿ ಅವಲೋಕಿಸುತ್ತದೆ. ವಾಸ್ತವ ಬದುಕಿನ ಶಕ್ತವಾದ ಗ್ರಹಿಕೆಯ ಮೂಲಕ ಲೇಖಕರು ವ್ಯವಸ್ಥೆಯ ಬಿಗಿತನದಿಂದ ಆಗುವ ವೈಯಕ್ತಿಕ ಸೋಲನ್ನು ಕಾದಂಬರಿಯಲ್ಲಿ ನಿರೂಪಿಸಿದ್ದಾರೆ. ಇಲ್ಲಿ ವ್ಯಕ್ತಿ ಹುಳುವಾಗಿ ವ್ಯವಸ್ಥೆ ಗೂಡಾಗಿ ಪ್ರತಿಮಾತ್ಮಕವಾಗುತ್ತದೆ.

ಬಾಲಗಂಗಾಧರ ತಿಳಕರ ಜೀವನ ವೃತಾಂತವನ್ನಾದರಿಸಿ ಬರೆದ ಕಾದಂಬರಿ ‘ದುರ್ದಮ್ಯ’. ಗಂಗಾಧರ ಗಾಡ್ಗೀಲರು ಮರಾಠಿಯಲ್ಲಿ ಬರೆದ ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ವಂತ ದಿವಾಣಜಿಯವರು, ಇದು ಜೀವನ ವೃತ್ತಾಂತವಾದದ್ದರಿಂದಲೋ ಏನೋ ಸೃಜನಶೀಲ ಪ್ರತಿಭೆಯ ಹೊಳಹುಗಳು ಈ ಕೃತಿಯಲ್ಲಿ ಗೋಚರಿಸುವುದಿಲ್ಲ. ಜೀವನ ವೃತ್ತಾಂತ ಇಲ್ಲಿ ಬರುವ ಸಾಮಾಜಿಕ, ರಾಜಕೀಯ ಘಟನೆಗಳ ಕಾಲ ಇತ್ಯಾದಿಗಳನ್ನು ಅನುಭವಿಸಿದ ಕಥನಗಳನ್ನು ವಾಸ್ತವವಾಗಿ ಇಲ್ಲಿ ಚಿತ್ರಿಸಲಾಗಿದೆ. ಪದಶಃ ಅನುವಾದವಾಗಿ ಈ ಕೃತಿ ರೂಪಗೊಂಡಿದ್ದರಿಂದ ಸರಾಗ ಓದಿಗೆ ತೊಡಕೆನಿಸುತ್ತದೆ.

‘ಬತ್ತಲೆ ರಾಜ’ (೧೯೯೭) ಬಂಗಾಳ ಕವಿ ನಿರೇಂದ್ರನಾಥ ಚಕ್ರವರ್ತಿಯವರ ಕವನಗಳ ಸಂಕಲನ. ಸಣ್ಣ ಪುಟ್ಟ ಮೂವತ್ತೈದು ಕವನಗಳು ಈ ಕೃತಿಯಲ್ಲಿವೆ. ಸಮಾಜದ ಕ್ರೂರಮುಖವನ್ನು ವಿಡಂಬಿಸುವ ಜನರ ನೋವು ನಲಿವುಗಳನ್ನು ಮನಸಿಕ ತೋಳಲಾಟಗಳನ್ನು ದಾಖಲಿಸುವ ಕವನಗಳು ಇಲ್ಲಿಯವು. ಬಂಗಾಳಿ ಭಾಷೆಯ ಆಧುನಿಕ ಕವಿತೆಗಳ ಜಾಡನ್ನು ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ತುಂಬುಡುಗೆಯ ಸೌಂದರ್ಯದ ನವಿರಿನ ಜೊತೆಗೆ ಅದರಾಚೆಯ ಬತ್ತಲೆಯ ಕ್ರೌರ್ಯವನ್ನು ಬೆಟ್ಟು ಮಾಡುವ ಇಲ್ಲಿನ ಕವಿತೆಗಳು ಸಮಕಾಲೀನ ಸಮಾಜದ ಕೈಗನ್ನಡಿಯಂತಿವೆ. ಪ್ರತಿಮೆಗಳ ಮೂಲಕ ಕಾವ್ಯಕಟ್ಟುವ, ಸಾಂಕೇತಿಕವಾಗಿ ಕವನಗಳನ್ನು ಧ್ವನಿರಮ್ಯಗೊಳಿಸುವ ಗುಣ ಇಲ್ಲಿನ ಕವಿತೆಗಳ ಪ್ರಮುಖ ಲಕ್ಷಣ.

‘ಆಧುನಿಕ ಮಲಯಾಳಂ ಕವಿತೆಗಳು’ ಒಂದು ಮಹತ್ವದ ಸಂಕಲನ. ಕನ್ನಡ ವಿಶ್ವ ವಿದ್ಯಾಲಯವು ಹತ್ತು ದಿನಗಳ ಕಾಲ ನಡೆಸಿದ ಅನುವಾದ ಕಮ್ಮಟದಲ್ಲಿ ರೂಪುಗೊಂಡ ಐವರು ಕವಿಗಳ ಮೂವತ್ತು ಕವಿತೆಗಳು ಇದರಲ್ಲಿವೆ. ಕವಿ ಮತ್ತು ಅನುವಾದಕರು ಪರಸ್ಪರ ಕುಳಿತು, ಓದಿ, ಚರ್ಚಿಸಿ ಅನುಸೃಷ್ಟಿಸಿದ ಕವಿತೆಗಳಿವು, ಇಲ್ಲಿ ಮಲಯಾಳಂ ಕವಿತೆಯ ಲಯ, ಸಾಂಸ್ಕೃತಿಕ ಕಸುವು ಉಳಿದುಕೊಂಡೇ ಕನ್ನಡದ ರಚನೆಗಳಾಗಿ ರೂಪುಗೊಂಡಿವೆ. ಇದೊಂದು ಸಾಂಸ್ಥಿಕ ಅನುವಾದವೇ ಆದರೂ ವೈಯಕ್ತಿಕವಾಗಿ ಪರಸ್ಪರ ಒಂದೆಡೆ ಕವಿಗಳು ಮತ್ತು ಅನುವಾದಕರು ಒಂದುಗೂಡುವಂತಾದುದುರಿಂದ ರೂಪುಗೊಂಡಿದೆ. ಇದರ ಪರಿಣಾಮ ಅನುವಾದ ಕವಿತೆಗಳ ಮೇಲೆ ನಿಚ್ಚಳವಾಗಿದೆ. ಹಾಗಾಗಿ ಇಲ್ಲಿನ ಕವಿತೆಗಳು ಸಂವಹನದ ತೊಡಕಿಲ್ಲದೆ ಕನ್ನಡಗೊಂಡಿವೆ.

ಎರಡನೆಯ ಸ್ತರದಲ್ಲಿ ಅಂದರೆ ಸಾಂಸ್ಥಿಕ ಸ್ತರದಲ್ಲಿ ಅನುವಾದಗೊಂಡ ಕೃತಿಗಳು ಬಹುತೇಕ ನೀರಸ ಅನುವಾದಗಳಾಗಿ ಕಾಣಿಸುತ್ತದೆ. ಕೆಲವು ಕೃತಿಗಳು ಮಾತ್ರ ಸಮರ್ಥ ಅನುವಾದಗಳಾಗಿ ಪ್ರಕಟವಾಗಿವೆ. ಸಾಂಸ್ಥಿಕ ಸ್ತರದಲ್ಲಿ ಪ್ರಮುಖ ಕೃತಿಗಳನ್ನು ಅದರಲ್ಲೂ ಮುಖ್ಯವಾಗಿ ಪ್ರಶಸ್ತಿ ಪಡೆದ ಕೃತಿಗಳನ್ನು ಆಯ್ಕೆ ಮಾಡಲಾಗುತ್ತದೆ. ಈ ಆಯ್ಕೆ ಸಂಸ್ಥೆಗಳೇ ಮಾಡಿ ಅನುವಾದಕರಿಗೆ ಒದಗಿಸುತ್ತಾರೆ. ಆಯ್ದ ಕೃತಯೇ ಉತ್ತಮವಾಗಿದ್ದು ಅದರ ಗುಣದಿಂದ ಅನುವಾದಗಳು ಹೆಚ್ಚು ಪ್ರಿಯವಾದ ಸಂದರ್ಭಗಳೂ ಇವೆ. ಆದರೆ ಅನುವಾದ ಮಾಡುವ ಸಂದರ್ಭದಲ್ಲಿ ಮೂಲ ಕೃತಿಯ ಸಾಂಸ್ಕೃತಿಕ ಪರಿಸರದ ವಿಶಿಷ್ಟ ಪರಿಚಯವನ್ನು ಅನುವಾದ ಕೃತಿಗಳಲ್ಲಿ ಕೊಡುವುದಿರಲಿ ಅನುವಾದಕ ಅನುವಾದಕ್ಕೆ ಬೇಕಾದ ಪೂರ್ವಸಿದ್ಧತೆಯಾಗಿಯಾದರೂ ಮೂಲಕೃತಿಗಳ ಪರಿಸರವನ್ನು ಗಮನಿಸದ ಸಂದರ್ಭಗಳಿವೆ. ‘ನಿಶಿಕುಟುಂಬ’ ದಂತಹ ಕಾದಂಬರಿಗಳ ಅನುವಾದಗಳನ್ನು ನೋಡಿದರೆ ಇದು ಸುಸ್ಪಷ್ಟ. ಸಾಂಸ್ಥಿಕ ಸ್ತರದಲ್ಲಿ ಬಂದ ಅನುವಾದ ಕೃತಿಗಳಲ್ಲಿ ಮೂಲ ಲೇಖಕರ ಬಗೆಗೆ ಮಹಿತಿಯಾಗಲಿ ಕೃತಿಯ ಸಾಂಸ್ಕೃತಿಕ ಪರಿಸರದ ಪರಿಚಯವನ್ನಾಗಲಿ ನಿರೀಕ್ಷಿಸುವಂತಿಲ್ಲ. ಒಂದು ರೀತಿಯ ಯಾಂತ್ರಿಕ ಭಾಷಾಂತರದಂತೆ ಈ ಕೃತಿಗಳು ಗೋಚರವಾಗುತ್ತವೆ. ಬೆರಳೆಣಿಕೆಯ ಕೃತಿಗಳು ಮಾತ್ರ ಇಲ್ಲಿ ಸಮರ್ಥವಾಗಿ ಅನುವಾದಗೊಂಡುದನ್ನು ಕಾಣಬಹುದು. ಸಾಂಸ್ಥಿಕ ಸ್ತರದಲ್ಲಿ ಮುಖ್ಯವಾಗಿ ಹೆಸರಿಸಬೇಕಾದ ಪ್ರಕಾಶನ ಸಂಸ್ಥೆಗಳು ಸಾಹಿತ್ಯ ಅಕಾಡೆಮಿ ಹಾಗೂ ನ್ಯಾಷನಲ್‌ ಬುಕ್‌ ಟ್ರಸ್ಟ್‌. ಇವುಗಳ ಪ್ರಕಟಣೆಯ ಸಂಖ್ಯೆಗಳೂ ಸಾಕಷ್ಟಿವೆ. ಈ ಸ್ತರದಲ್ಲಿ ಅನುವಾದಗೊಂಡು ಪ್ರಕಟವಾಗುವ ಕೃತಿಗಳಲ್ಲಿ ಗಮನಿಸಬೇಕಾದ ಅಂಶವೊಂದಿದೆ. ಅದು ಮೂಲ ಕೃತಿಯ ಆಕರ ಭಾಷೆಯಲ್ಲಿ ಪ್ರಕಟವಾಗಿ ಪ್ರಚಾರ, ಪ್ರಶಸ್ತಿಗಳನ್ನು ಪಡೆದು ಸುದೀರ್ಘ ಅವಧಿಯ ಬಳಿಕವೇ ಕನ್ನಡದಲ್ಲಿ ಕಾಣಿಸಿಕೊಂಡಿವೆ. ಈ ವಿಳಂಬ ಕೂಡಾ ಲಕ್ಷ್ಯ ಭಾಷೆಯ ಓದುಗರ ದೃಷ್ಟಿಯಿಂದ ಗಮನಾರ್ಹ ಅಂಶವೇ ಆಗಿದೆ. ವೈಯಕ್ತಿಕ ಅನುವಾದಗಳಲ್ಲಿರುವ ವೈವಿಧ್ಯತೆ ಇಲ್ಲಿ ಗೋಚರಿಸುವುದಿಲ್ಲ.

ಸಾಮುದಾಯಕ ಅನುವಾದಗಳು

ಸಾಮುದಾಯಕ ಸ್ತರದಲ್ಲಿ ಭಾಷೆಯಿಂದ ಭಾಷೆಗೆ ಕೃತಿಯೊಂದು ಅನುವಾದಗೊಳ್ಳಬೇಕಾದರೆ ಸಾಮುದಾಯಕ ಒತ್ತಡವಿರುತ್ತದೆ. ಈ ಒತ್ತಡದ ಹಿನ್ನೆಲೆಯಿಂದ ಕೃತಿಯೊಂದನ್ನು ಅನುವಾದಕ್ಕೆ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಲಕ್ಷ್ಯ ಭಾಷೆಯ ನಿರ್ದಿಷ್ಟ ಸಮುದಾಯದ ಪೂರೈಕೆಗೆ ಅನುಗುಣವಾಗಿ ಅನುವಾದದ ಲಕ್ಷಣಗಳನ್ನು ವಿಸ್ತರಿಸಿಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಆಕರ ಭಾಷೆಯ ಕೃತಿಯ ಸಂಸ್ಕೃತಿಯಾಗಲಿ ಸಾಹಿತ್ಯಕ ಮೌಲ್ಯವಾಗಲಿ ಮುಖ್ಯವಾಗುವುದಿಲ್ಲ. ಅಂತಹ ಆಯ್ಕೆಯ ಪ್ರಶ್ನೆಯನ್ನು ಅನುವಾದಕರು ಗಂಭೀರವಾಗಿ ಪರಿಗಣಿಸಲಾರರು. ಲಕ್ಷ್ಯಭಾಷೆಯ ಬೇಡಿಕೆಯನ್ನು ಪೂರೈಸುವ ಸಲುವಾಗಿ ಅನುವಾದವನ್ನು ವ್ಯಾಖ್ಯಾನಿಸುವ ರೀತಿಗೆ ಕಟ್ಟುಬೀಳುತ್ತಾರೆ. ಇಂತಹ ಅನುವಾದಗಳ ಕೇಂದ್ರ ಹಾಗೂ ನಿಯಂತ್ರಣ ಶಕ್ತಿ ಲಕ್ಷ್ಯಭಾಷೆಯ ಸಮುದಾಯವೇ ಆಗಿರುತ್ತದೆ.

ಈ ಹಿನ್ನಲೆಯಲ್ಲಿ ನೋಡಿದರೆ ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡ ಕೃತಿಗಳ ಸಂಖ್ಯೆ ಸಾಕಷ್ಟಿದೆ. ಲಕ್ಷ್ಯಭಾಷೆಯ ಓದುಗರ ಆಸಕ್ತಿ ಹಾಗೂ ಬೇಡಿಕೆಗೆ ಅನುಗುಣವಾಗಿ ಪ್ರಕಾಶಕರು ಜನಪ್ರಿಯ ಕಾದಂಬರಿಗಳನ್ನು ಬರೆಯಿಸಿ ಪ್ರಕಟಿಸಿದ್ದಾರೆ. ಇದು ಓದುಗರ ವಾಚನಾಭಿರುಚಿಗೆ ಪೂರಕವಾಗಿ ನೀಡುವ ಮಾಹಿತಿಗಳನ್ನು ಕಪ್ಪು ಬಿಳುಪು ಪಾತ್ರಗಳನ್ನು ಹಾಗೂ ಕುತೂಹಲಕರವಾಗಿ ಕತೆಗಳನ್ನು ಹೆಣೆದ ಮನಪ್ರಿಯ ಬರೆಹಗಳಿವು. ಈ ಮಾದರಿಯ ಕಾದಂಬರಿಗಳೇ ತೆಲುಗಿನಿಂದ ಕನ್ನಡಕ್ಕೆ ಅನುವಾದಗೊಂಡಿವೆ. ವರದಕ್ಷಿಣೆಯ ಸಮಸ್ಯೆ, ಪ್ರಣಯ ಸಮಸ್ಯೆ, ಅಂತರ್ಜಾತಿಯ ವಿವಾಹ, ಬಡತನ, ಸ್ವೇಚ್ಛೆಯಿಂದ ನಡೆದ ಹೆಣ್ಣಿನ ದುರಂತ ಹೀಗೆ ಹತ್ತು ಹಲವು ಬಗೆಯ ಸಾಮಾಜಿಕ ಸನ್ನಿವೇಶದ ಸುತ್ತ ಹೆಣೆದ ಕಾದಂಬರಿಗಳಿವು. ಒಂದು ಓದಿಗೆ ಮಾತ್ರ ಸೀಮಿತವಾದ ಈ ತೆರನ ಕಾದಂಬರಿಗಳು ಅನುವಾದಕರಿಗೆ, ಪ್ರಕಾಶಕರಿಗೆ ಹಣ ಸಂಪಾದನೆಯಲ್ಲಿ ನೆರವಾಗುತ್ತವೆ. ಇಂತಹ ಕಾದಂಬರಿಗಳ ಪ್ರಕಟಣೆಯನ್ನೇ ಕಾಯುತ್ತಿರುವ ನಿರ್ದಿಷ್ಟ ಓದುಗ ಸಮುದಾಯವೂ ಇದೆ ಎಂಬುದು ಮುಖ್ಯ ಸಂಗತಿ.

ಉಪಸಂಹಾರ

ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಪ್ರಕಟವಾದ ಅನುವಾದಿತ ಕತೆ, ಕಾದಂಬರಿ, ಕಾವ್ಯ ಹಾಗೂ ನಾಟಕ ಕೃತಿಗಳಲ್ಲಿ ಕೆಲವನ್ನಿಲ್ಲಿ ಪರಿಶೀಲಿಸಲಾಯಿತು. ನಮ್ಮದಲ್ಲದ ಸಾಂಸ್ಕೃತಿಕ ಸೃಜನ ಮನಸ್ಸುಗಳ ಹೊಸಲೋಕ ಓದುಗರಿಗೆ ದೊರೆಯಲೆಂದು ಕೆಲವು ಕೃತಿಗಳನ್ನು ದೀರ್ಘವಾಗಿಯೇ ಪರಿಶೀಲಿಸಲಾಗಿದೆ. ಹೆಸರಿಸದೇ ಬಿಟ್ಟ ಕೃತಿಗಳ ಸಂಖ್ಯೆಯೂ ಅಧಿಕವಿದೆ. ಈ ಅವಧಿಯಲ್ಲಿ ಸುಮಾರು ಐವತ್ತಕ್ಕೂ ಮಿಕ್ಕಿದ ಕೃತಿಗಳ ಅನುವಾದಗೊಂಡಿವೆ. ಸ್ವತಂತ್ರ ಕೃತಿಗಳ ನಡುವೆ ಇಷ್ಟು ಕೃತಿಗಳು ಅನುವಾದಗೊಂಡುದು ಗಮನಾರ್ಹವೇ ಹೌದು. ಈ ಅವಧಿಯ ಒಟ್ಟು ಕೃತಿಗಳನ್ನು ಗಮನಿಸಿದರೆ ಮುಖ್ಯವಾಗಿ ಎದ್ದು ಕಾಣುವ ಸಂಗತಿ ಎಂದರೆ ಅನುವಾದಗೊಂಡ ಕೃತಿಗಳಲ್ಲಿ ಹೆಚ್ಚಿನವು ಮಲಯಾಳಂ ಭಾಷೆಯಿಂದ ಎಂಬುದು. ಕತೆ, ಕಾದಂಬರಿ, ಕಾವ್ಯಗಳನ್ನು ಮಾತ್ರ ಲೆಕ್ಕಹಾಕಿದರೂ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳು ಕಳೆದ ದಶಕದಲ್ಲಿ ಪ್ರಕಟವಾಗಿವೆ. ವೈಯಕ್ತಿಕ ನೆಲೆಯಲ್ಲಿ ಅನುವಾದಗೊಂಡು ಖಾಸಗೀ ಪ್ರಕಾಶಕರು ಪ್ರಕಟಿಸಿದ ಕೃತಿಗಳೂ ಇವೆ. ಸಾಹಿತ್ಯ ಅಕಾಡೆಮಿ ಹಾಗೂ ನೇಷನಲ್‌ ಬುಕ್‌ ಟ್ರಸ್ಟ್‌ ಪ್ರಕಟಿಸಿದ ಕೃತಿಗಳೂ ಇವೆ. ಇವೆಲ್ಲ ಮೌಲಿಕವಾದ ಸಾಹಿತ್ಯ ಕೃತಿಗಳೇ ಹೌದು. ಮಲಯಾಳಂ ಸಾಹಿತ್ಯ ಮತ್ತು ಸಂಸ್ಕೃತಿ ಕನ್ನಡ ಸಂದರ್ಭದಲ್ಲಿ ಹೆಚ್ಚಾಗಿ ಬರತೊಡಗಿದ್ದು ಕಳೆದ ಶತಮಾನದ ಕೊನೆಯ ಮೂರು ದಶಕಗಳಲ್ಲಿಯೇ. ಅದರ ಸಂಖ್ಯೆ ಅದ್ಭುತವೇ ಇದೆ. ಆದರೆ ಆ ಪ್ರಮಾಣದಲ್ಲಿ ಕನ್ನಡದ ಕೃತಗಳು ಮಲಯಾಳಂಗೆ ಹೋಗುತ್ತಿಲ್ಲ ಎಂಬುದು ವಾಸ್ತವ. ಮಲಯಾಳಂ ಭಾಷೆಯನ್ನು ಬಲ್ಲ ಅನೇಕರು ಅನುವಾದ ಕೆಲಸಗಳಲ್ಲಿ ತೊಡಗಿಕೊಂಡುದು ಈ ಹೆಚ್ಚಳಕ್ಕೆ ಕಾರಣ ಇರಬಹುದು. ಹಾಗೆಯೇ ಮಲಯಾಳಂನಲ್ಲಿ ಬರುವ ಕೃತಿಗಳ ಮೌಲಿಕತೆಯೂ ಇನ್ನೊಂದು ಕಾರಣವಾಗಿರಬಹುದು. ಏನೇ ಇರಲಿ ಕಳೆದ ಹತ್ತು ವರ್ಷಗಳಲ್ಲಿ ಪ್ರಕಟವಾದ ಅನುವಾದ ಕೃತಿಗಳು ಕನ್ನಡದ ಸಂದರ್ಭದಲ್ಲಿ ವಿಭಿನ್ನ ಸಾಂಸ್ಕೃತಿಕ ಲೋಕಗಳನ್ನು ಅನಾವರಣಗೊಳಿಸಿವೆ. ಇದು ಕನ್ನಡದ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಹೊಸ ಬಗೆಯ ಅಲೋಚನೆಯನ್ನು ಹುಟ್ಟು ಹಾಕಲಿದೆ. ಹೊಸ ನೆಲೆಯ ಓದುಗರನ್ನು ಸೃಷ್ಟಿ ಮಾಡಲಿದೆ.