ಅನುವಾದವನ್ನು ಸೃಜನಶೀಲ ಮತ್ತು ಸೃಜನೇತರ ಎಂದು ವಿಂಗಡಿಸುವುದು ಸರಿಯಲ್ಲ. ಏಕೆಂದರೆ ಪ್ರತಿಯೊಂದು ಕಾರ್ಯವೂ ಸೃಜನಶೀಲವೆಂದು ಪರಿಗಣಿಸಬೇಕಾದ್ದು ಸೂಕ್ತ. ಹಾಗಿರುವಾಗಲೂ ಅಧ್ಯಯನದ ಅನುಕೂಲಕ್ಕಾಗಿ ಈ ವಿಂಗಡಣೆ ಅನಿವಾರ್ಯವಾಗಿ ಕಾಣುತ್ತದೆ. ಈ ಹೊತ್ತಿನಲ್ಲಿ ಕನ್ನಡ ಸಾಹಿತ್ಯ ಲೋಕವು ಬೇರೆಬೇರೆ ಭಾಷೆಗಳಿಂದ ಅನುವಾದಗೊಂಡ ಕೃತಿಗಳ ಮುಖೇನ ಬಹಳ ಸಮೃದ್ಧವಾಗಿ ಬೆಳೆದಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡ ಓದುಗ ಸಮುದಾಯವು ತನ್ನ ಆಸಕ್ತಿ ಹಾಗೂ ಅತ್ಯಗತ್ಯ ಭಾವನೆಯ ಮೂಲಕ ಈ ಸಮೃದ್ಧತೆಗೆ ಕಾರಣವಾಗಿರುವುದು ಗಮನೀಯ. ಆಕರ ಮತ್ತು ಸ್ವೀಕಾರ ಭಾಷೆಗಳ ನಡುವೆ ನಡೆಯುವ ವಿಶಿಷ್ಟ ವ್ಯಾಖ್ಯಾನವೆನ್ನಬಹುದು ಅನುವಾದವನ್ನು. ಈ ವ್ಯಾಖ್ಯಾನ ಕ್ರಿಯೆ ಮುಖ್ಯವಾಗಿ ಸ್ವೀಕಾರ ಭಾಷೆಯ ಓದುಗನನ್ನು ಕುರಿತದಾಗಿರುತ್ತದೆ. ಸ್ವೀಕೃತ ಭಾಷೆಯ ಸಾಂಸ್ಕೃತಿಕ ಅವಶ್ಯಕತೆಗಳು ಯಾವುದೇ ಕೃತಿಯ ಅನುವಾದದ ಅಗತ್ಯ ಮತ್ತು ಮಹತ್ವವನ್ನು ನಿರ್ಧರಿಸುತ್ತವೆ. ಒಂದು ದೃಷ್ಟಿಯಿಂದ ಗಮನಿಸಿದರೆ ಅನುವಾದ ಆಕರ – ಸ್ವೀಕಾರ ಭಾಷೆಗಳೆರಡರ ಮುಖಾಮುಖಿ ಸ್ಥಳವಾಗಿರುವುದು ಸುಸ್ಪಷ್ಟ. ಸಾಂಸ್ಕೃತಿಕ ಮಹತ್ವದ ಅರಿವು ದಿನೇ ದಿನೇ ಜಾಗೃತವಾಗುತ್ತಿರುವ ಈ ದಿನಗಳಲ್ಲಿ ಅನುವಾದವು ಒಂದು ಬಹುಮುಖ್ಯ ಅಂಗವಾಗಿದ್ದರೆ, ಆ ಕಾರ್ಯದಲ್ಲಿ ತೊಡಗಿರುವ ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳೆನಿಸಿದ್ದಾರೆ. ಆಕರ ಭಾಷೆಯಂತೆ ಸ್ವೀಕಾರ ಭಾಷೆಗೂ ‘ಅರ್ಥದ ಒಂದು ಗರ್ಭಗುಡಿ’ಯಿದ್ದು ಅನುವಾದ ಮುಖೇನ ಈ ದಿಶೆಯಲ್ಲಿ ಸಾಮ್ಯತೆಯು ಸಾಧ್ಯವಾಗಿದೆ. ಎಂತಲೇ ಅನುವಾದವನ್ನು ಇಂದು ಒಂದು ಜವಾಬ್ದಾರಿಯ ಕಾರ್ಯಕ್ಷೇತ್ರವಾಗಿ ಪರಿಗಣಿಸುತ್ತಿರುವುದು. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಹೇಳಬಹುದಾದರೆ, ಅನುವಾದವು ಇಂದು ಅಗತ್ಯ. ಅನಿವಾರ್ಯ ಎಂಬಂಥ ವ್ಯಾಪ್ತಿಗಿಂತಲೂ ಸಹಜತೆಯತ್ತಲೇ ಬರುತ್ತಿದೆ ಎನ್ನಬಹುದು. ಭಾರತದಂತಹ ಬಹುಭಾಷೆ ಮತ್ತು ಸಂಸ್ಕೃತಿಯುಳ್ಳ ಪ್ರದೇಶಗಳಲ್ಲಿ ಅನುವಾದವನ್ನು ಸಹಜವಾದ ಕಾರ್ಯವೆಂದೇ ಪರಿಗಣಿಸಬಹುದೇನೋ!

೧೯೯೧ರಿಂದ ೨೦೦೦ವರೆಗಿನ ಹತ್ತು ವರ್ಷಗಳ ಅವಧಿಯಲ್ಲಿ ಈ ಮೇಲೆ ಹೆಸರಿಸಿರುವ ವಿಂಗಡಣೆಯ ಕೃತಿಗಳು ಅಪಾರ. ಆದರೆ ಎಲ್ಲಿಯೂ ಒಂದೆಡೆ ಆಕರವಾಗಿ ದಕ್ಕುವುದಿಲ್ಲ. ನನ್ನ ಗಮನಕ್ಕೆ ಬಂದಿರುವಂತೆ ಈ ಅವಧಿಯಲ್ಲಿನ ಕೃತಿಗಳು ಸುಮಾರು ಎರಡು ನೂರಕ್ಕೂ ಹೆಚ್ಚು. ಕತೆ, ಕವ್ಯಾದಿಗಳಂತೆ ಸೃಜನೇತರ ಕೃತಿಗಳು ಅನುವಾದವಾಗುವುದು ಕಡಿಮೆಯೇ. ವಿಮರ್ಶೆ, ವೈಚಾರಿಕತೆ, ಕಲೆ, ವಿಜ್ಞಾನ, ವ್ಯಕ್ತಿಚಿತ್ರಗಳು, ಚರಿತ್ರೆ, ಜಾನಪದ, ಆತ್ಮ ಕಥೆಗಳು, ಜೀವನ ಚರಿತ್ರೆಗಳು, ಗೃಹವಾಸ್ತು, ತಂತ್ರಜ್ಞಾನ, ವೈದ್ಯಕೀಯ, ಯೋಗ, ರಾಜಕೀಯ, ಆಡಳಿತ, ಧರ್ಮ, ಶಿಕ್ಷಣ ಮುಂತಾಗಿ ಬೇರೆಬೇರೆ ಕೃತಿಗಳಿವೆ ಇದರಲ್ಲಿ. ಇವೆಲ್ಲ ಇಂಗ್ಲಿಶ್‌, ತೆಲುಗು, ಹಿಂದಿ, ಮರಾಠಿ, ತಮಿಳು, ಸಂಸ್ಕೃತ, ತುಳು ಮುಂತಾದ ಭಾಷೆಗಳಿಂದ ನೇರವಾಗಿ ಅನುವಾದಕೊಂಡ ಕೃತಿಗಳಾಗಿರುವುದು ವಿಶೇಷ ಗಮನೀಯ. ಕೆಲವಾರು ಕೃತಿಗಳು ಮಾತ್ರ ಇಂಗ್ಲಶ್‌ ಮುಖೇನ ಅನುವಾದಗೊಂಡಿವೆ. ಅನುವಾದಕರು ಮೂಲ ಭಾಷೆಯನ್ನು ಚೆನ್ನಾಗಿ ಬಲ್ಲವರಾಗಿದ್ದಾಗ ಅನುವಾದ ಸ್ವರೂಪ ಬಹಳ ಗಂಭಿರವಾಗಿರುತ್ತದೆ ಎಂದು ಮತ್ತೆಮತ್ತೆ ಹೇಳಬೇಕಾಗಿಲ್ಲ. ಈ ಕಾರಣವೇ ನಮ್ಮ ನೆರೆಹೊರೆಯ ಭಾಷೆ, ಸಂಸ್ಕೃತಿಯ ವಿಚಾರಗಳ ಸೂಕ್ಷ್ಮ ತಿಳಿವಳಿಕೆ ನಮಗೆ ಸುಲಭವಾಗಿ ಗಮನಿಸಲು ಸಾಧ್ಯವಾಗಿರುವುದು. ಆದರೆ ಒಂದು ಅಂಶವನ್ನು ಇಲ್ಲಿ ನಮೂದಿಸುವುದು ಅವಶ್ಯ. ಈ ದಶಕದಲ್ಲಿ ಸೃಜನೇತರ ಕೃತಿಗಳು ಅನುವಾದಗೊಂಡಿರುವುದರಲ್ಲಿ ಶೇಕಡ ಅರವತ್ತಕ್ಕಿಂತಲೂ ಹೆಚ್ಚಿನವು ಇಂಗ್ಲಿಶ್‌ ಮೂಲದವುಗಳೇ ಆಗಿವೆ. ನಮ್ಮ ನೆರೆಹೊರೆಯ ಭಾಷೆ, ಸಂಸ್ಕೃತಿಗಳನ್ನು ನಮ್ಮಲ್ಲಿ ತಂದುಕೊಳ್ಳುವ ಪ್ರಕ್ರಿಯೆ ಇತ್ತೀಚಿಗಷ್ಟೇ ಆರಂಭವಾಗಿರುವುದು. ಹಾಗಾಗಿ ಬರುವ ಮುಂದಣ ದಿನಗಳಲ್ಲಿ ಇಂಗ್ಲಿಶ್‌ಗಿಂತಲೂ ಈ ಕರತಿಗಳೇ ಹೆಚ್ಚಾಗಬಹುದು ಎಂಬುದು ನನ್ನ ಅಭಿಪ್ರಾಯ. ನಮ್ಮನ್ನು ನಾವು ಯಾವ ಪೂರ್ವಗ್ರಹಪೀಡಿತ ವಿಚಾರಗಳು ಇಲ್ಲದೆ ಮರು ಅವಲೋಕನ ಮಾಡಿಕೊಳ್ಳಲು ಹಾಗೂ ಭವಿಷ್ಯದ ನಿರ್ಮಾಣ ಕಾರ್ಯವನ್ನು ಸುಭದ್ರಗೊಲಿಸುವುದಕ್ಕೆ ಈ ಪ್ರಕ್ರಿಯೆಯೇ ಹೆಚ್ಚು ಪ್ರಯೋಜನಕಾರಿ.

ವಿಮರ್ಶೆ

ಭಾರತೀಯ ಸಂಸ್ಕೃತಿಯ ಎರಡು ವಿಶ್ವಕೋಶಗಳೆನಿಸಿರುವ ರಾಮಾಯಣ ಮತ್ತು ಮಹಾಭಾರತಗಳನ್ನು ಕುರಿತಂತೆ ೨೦ನೆಯ ಶತಮಾನದಲ್ಲಿ ಬಂದ ವಿಮರ್ಶೆ ಅಪಾರವಾದುದು. ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಮಾನವಶಾಸ್ತ್ರೀಯವೇ ಮೊದಲಾದ ದೃಷ್ಟಿಕೋನದವುಗಳಾಗಿವೆ ಇವುಗಳನ್ನು ಕುರಿತ ವಿಮರ್ಶೆ. ವೇದಗಳಲ್ಲೇನಿದೆ? ಇದೇ ರಾಮಾಯಣ, ರಾಮನಿಗೆ ಸೀತೆ ಎನಾಗಬೇಕು? ಮೊದಲಾದವುಗಳು ರಾಮಾಯಣವನ್ನು ಕುರಿತಂತೆ ಬಂದಿರುವ ವಿಮರ್ಶೆಗಳು. ಇನ್ನು ಮಹಾಭಾರತದ ಬಗ್ಗೆ ಯುಗಾಂತ, ವ್ಯಾಸಪರ್ವ, ಮಹಾಭಾರತದ ಶಾಪಗಳು, ಮಹಾಭಾರತದಲ್ಲಿ ಕುಮಾರಸಂಭವ ಎಂಬ ಮುಖ್ಯವಾದ ನಾಲ್ಕು ಕೃತಿಗಳು ಬಂದಿವೆ. ಕನ್ನಡದಲ್ಲಿ ರಾಮಾಯಣ, ಮಹಾಭಾರತಗಳಿಂದ ಉಂಟಾದ ಪ್ರೇರಣೆ ಹೆಚ್ಚಾಗಿ ಸೃಜನಶೀಲವಾಗಿಯೇ ಅಭಿವ್ಯಕ್ತವಾಗಿರುವುದು ಹೆಚ್ಚು. ಆದರೆ ನಮ್ಮ ನೆರೆಯ ಭಾಷೆಗಳಾದ ತೆಲುಗು, ಮರಾಠಿಗಳಲ್ಲಿ ಈ ಕುರತಂತೆ ಬಂದಿರುವುದು ಹೆಚ್ಚಾಗಿ ವಿಮರ್ಶೆಯೇ.

ವೇದಗಳಲ್ಲೇನಿದೆ ಎಂಬ ಕೃತಿ ವೈಚಾರಿಕವಾದುದು. ಆರ್ಯರ ಬದುಕಿನ ಒಟ್ಟು ನೋಟವೇ ವೇದಗಳು. ಸಮಷ್ಟಿ ಬದುಕನ್ನು ಋಗ್ವೇದದ ಆರಂಭದಲ್ಲಿ ಚಿತ್ರಿಸಲಾಗಿಸಿದ್ದರೆ, ಕೊನೆಗೆ ಅದು ಸಾಧ್ಯವಾಗಬೇಕೆಂಬ ಋಕ್ಕುಗಳಿವೆ. ಸಮಾನತೆ, ಸಮಷ್ಟಿ ಭಾವಗಳು ಈ ಕಾಲದಲ್ಲೇ ವಾಸ್ತವವಾಗ ತೊಡಗಿದ್ದವೆಂಬುದನ್ನು ಪ್ರಸ್ತುತ ಕೃತಿಯು ಮುಖ್ಯವಾಗಿ ಚರ್ಚಿಸುತ್ತದೆ. ಸತ್ಯ, ಪ್ರಮಾಣಿಕತೆಯನ್ನು ಕುರಿತು ಋಗ್ವೇದದಲ್ಲಿ ಮತ್ತೆ ಮತ್ತೆ ಹೇಳಲಾಗಿದೆ. ಹರಿಶ್ಚಂದ್ರನ ಮಗ ಲೋಹಿತ ಶುನಶ್ಯೇಪನನ್ನು ವರುಣನಿಗೆ ಬಲಿಕೊಡಲು ತರುವ ವಿಚಾರ ಗಂಭೀರವಾದುದು. ದೇವತೆಗಳ ಅವಿನಯ, ಅಪ್ರಾಮಾಣಿಕತೆಯೂ ಚಿತ್ರಿತವಾಗಿದೆ. ಒಟ್ಟಾರೆ ಕೃತಿಯ ಧ್ವನಿ ಬಚ್ಚಿಟ್ಟ ಜ್ಞಾನದ ರೂಪಗಳೇ ವೇದಗಳು ಎಂಬುದು. ಬ್ರಾಹ್ಮಣರು ಓದಿನ ವಾರಸುದಾರರಾಗಿ ವೇದಗಳನ್ನು ಜನಸಾಮಾನ್ಯರಿಗೆ ದಕ್ಕದಂತೆ ಮಾಡಿದ ವಿಚಾರವೂ ಇದೆ.

ರಾಮಾಯಣ, ಮಹಾಭಾರತಗಳ ಪೌರಾಣಿಕ, ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಮಾನವಶಾಸ್ತ್ರೀಯ ನೆಲೆಗಳು ಎಷ್ಟು ವಿಶಿಷ್ಟವಾದುವು ಎಂಬುದನ್ನು ಈ ಮೇಲೆ ಹೆಸರಿಸಿದ ಕೃತಿಗಳು ಮನಗಾಣಿಸುತ್ತವೆ. ವಾಲ್ಮೀಕಿ ಚಿತ್ರಿಸಿರುವ ರಾಮಾಯಣದ ಸ್ಥಳಗಳು ಎಷ್ಟು ವಾಸ್ತವ ಎಂಬ ಬಗ್ಗೆ ಚರ್ಚಿಸುತ್ತಾ ವಿಮರ್ಶಕರು. ವಾಲ್ಮೀಕಿಗೆ ಭೌಗೋಳಿಕ ಪರಿಚಯವೇ ಇರಲಿಲ್ಲವೆಂಬ ನಿರ್ಣಯಕ್ಕೆ ಬರುತ್ತಾರೆ. ಕಾರಣ ವಾಲ್ಮೀಕಿ ಚಿತ್ರಿಸಿರುವ ಲಂಕಾ ಇಂದಿನ ಶ್ರೀಲಂಕಾ ಅಲ್ಲ ಎಂಬುದು ಅವರು ನೀಡುವ ಮುಖ್ಯ ಆಧಾರ. ರಾಮಾಯಣ ವಿವರಾನುಸಾರ ಭಾರತದಲ್ಲಿಯೇ ಅಂತಹ ಹತ್ತು ಲಂಕೆಗಳನ್ನು ಸಂಶೋಧಕರು ಗುರುತಿಸಿದ್ದಾರೆ. ಈ ಕಾರಣಕ್ಕೆ ಇರಬೇಕು ರಾಮಾಯಣವನ್ನು ಕಾವ್ಯ ಎಂದು ಹೇಳುವುದು. ಹಾಗೆಯೇ ಪುರುಷ ಪ್ರಭುತ್ವ, ವರ್ಣಾಶ್ರಮ ಧರ್ಮಗಳ ಪಾಲನೆ, ಪುರೋಹಿತಶಾಹಿಯ ಪರಿಪೋಷಣೆ, ಸ್ತ್ರೀ ವರ್ಗದ ಅಲಕ್ಷ್ಯತೆ, ಅಪಮಾನ ಪಾಲನೆಯೇ ಮುಂತಾದ ಸಂಗತಿಗಳನ್ನು ಬಹಳ ಗಂಭೀರವಾಗಿ ಚರ್ಚಿಸಲಾಗಿದೆ. ‘ರಾಮರಾಜ್ಯ’ ಎಂಬ ನಮ್ಮ ಪಾರಂಪರಿಕ ಪರಿಕಲ್ಪನೆಯನ್ನು ಮತ್ತೊಮ್ಮೆ ಪರಾಮರ್ಶೆ ಮಾಡುವುದಕ್ಕೆ ಇಂಥ ಕೃತಿಗಳು ಪ್ರೇರೇಪಿಸುತ್ತವೆ.

ಮಹಾಭಾರತವನ್ನು ಭಾರತ ಇತಿಹಾಸ ಎನ್ನುವುದುಂಟು. ಅಲ್ಲದೆ ಪ್ರಪಂಚದಲ್ಲಿ ಇರುವುದೆಲ್ಲ ಮಹಾಭಾರತದಲ್ಲಿದೆ ಎಂಬ ಹೆಗ್ಗಳಿಕೆಯ ಮಾತೊಂದು ಇದೆ. ಅಂತೆಯೇ ‘ವ್ಯಾಸೋಚ್ಚಿಷ್ಟಂ ಜಗತ್ಸರ್ವಂ’ ಎಂಬ ನಾಣ್ನುಡಿಯೂ ಇರುವುದು ಗಮನೀಯ. ಮಹಾಭಾರತದ ಬಗ್ಗೆ ಬಹಳ ಹೆಚ್ಚಾಗಿ ವಿಮರ್ಶೆ ಬಂದಿರುವುದು ಮರಾಠಿಯಲ್ಲಿ. ಇರಾವತಿ ಕರ್ವೆಯವರ ‘ಯುಗಾಂತ’ ಮಹಾಭಾರತವನ್ನು ಹೊಸದೃಷ್ಟಿಯಿಂದ ನೋಡಲು ಪ್ರೇರೇಪಿಸಿತು. ಇದು ಮುಖ್ಯವಾಗಿ ಜನಾಂಗೀಯ ಅಧ್ಯಯನ. ಮಹಾಭಾರತದ ಜನಾಂಗಗಳ ಹುಟ್ಟು, ಬೆಳವಣಿಗೆ, ಬದುಕು ಮತ್ತು ನಾಶದ ಸ್ವರೂಪವನ್ನು ಬಹಳ ವಿಶಿಷ್ಟವಾಗಿ ಚಿತ್ರಿಸಿದ್ದಾರೆ. ಕರ್ವೆಯವರು. ಯುಗಾಂತದ ಪ್ರಭಾವ ‘ಪರ್ವ’ (ಭೈರಪ್ಪ) ಕಾದಂಬರಿಯ ಮೇಲೆ ವಿಶೇಷವಾಗಿ ಆಗಿದೆ ಎಂದು ನಮ್ಮ ಕೆಲವು ವಿಮರ್ಶಕರು ಹೇಳಿದ್ದಾರೆ. ಕರ್ವೆಯವರು ಮೊತ್ತಮೊದಲಿಗೆ ಮಹಾಭಾರತವನ್ನು ಅದರ ಪೌರಾಣಿಕ ಆಯಾಮವನ್ನು ಬದಿಗಿಟ್ಟು ಒಟ್ಟಾರೆ ಮನುಷ್ಯ ಬದುಕಿನ ಹಿನ್ನೆಲೆಯಲ್ಲಿ ಪ್ರತಿಯೊಂದು ಪಾತ್ರವನ್ನು ವಿಶ್ಲೇಷಿಸಿರುವುದು ಅತ್ಯಂತ ಕುತೂಹಲಕಾರಿ. ಕೃಷ್ಣನ ಎದುರಿನಲ್ಲಿಯೇ ಯಾದವ ಕುಲದವರೆಲ್ಲ ಪರಸ್ಪರ ಹೊಡೆದಾಡಿ ಸಾಯುವ ಪ್ರಸಂಗವನ್ನು ಇಲ್ಲಿ ನಿದರ್ಶನಕ್ಕೆ ತೆಗೆದು ಕೊಳ್ಳಬಹುದು. ಒನಕೆಯಿಂದ ಯಾದವಕುಲ ನಾಶವಾಗುತ್ತದೆ ಎಂಬುದು ಒಬ್ಬ ಋಷಿಯು ನೀಡಿದ್ದ ಶಾಪ. ಬೆಳೆದು ನಿಂತಿದ್ದ ಜೊಂಡಿನ ನಡುವೆ ಇಡಲಾಗಿದ್ದ ಒನಕೆಗಳನ್ನೆತ್ತಿ ಕುಡಿದ ಅಮಲಿನಲ್ಲಿಯೇ ಹೋರಾಡಿ ಸಾಯುವುದನ್ನು ಕೃಷ್ಣನೂ ತಡೆಯಲು ಆಗುವುದಿಲ್ಲ. ಕೊನೆಗೆ ಆತನೂ ಬೇಡನೊಬ್ಬನಿಂದ ಸಾಯುತ್ತಾನೆ. ದುರ್ಗಾ ಭಾಗವತರು ‘ವ್ಯಾಸ ಪರ್ವ’ ಎಂಬ ಹೆಸರಿನಲ್ಲಿ ಬರೆದ ವಿಮರ್ಶೆ ಸಮಾಜೋ ವಿಶ್ಲೇಷಣೇಯಾಗಿದೆ. ಮಹಾಭಾರತದ ಇತಿಹಾಸ ಸ್ವರೂಪದಲ್ಲಿ ರಾಜಕೀಯ, ಧರ್ಮ, ತತ್ತ್ವಜ್ಞಾನ, ಸಾಮಾಜಿಕ ಚಿಂತನೆ, ಭೂಗೋಳ, ವಂಶವಾಹಿನಿ, ಭಾಷೆ, ಚಾರಿತ್ರ್ಯ ಎಲ್ಲವನ್ನೂ ಅಭ್ಯಾಸ ಮಾಡಿರುವ ಸಂಗತಿಯನ್ನು ಪ್ರಸ್ತುತ ಕೃತಿಯಲ್ಲಿ ವಿವರಿಸಲಾಗಿದೆ. ಅಲ್ಲದೆ ವ್ಯಕ್ತಿಗಳ ನಡವಳಿಕೆಯನ್ನು ಸೂಕ್ಷ್ಮವಾಗಿ ಹಿಡಿದಿಟ್ಟಿದ್ದಾರೆ ಕೃತಿಕಾರರು. ಭೀಷ್ಮನ ಅವಿವಾಹಿತತೆ ಮತ್ತು ಅಧಿಕಾರ ತ್ಯಾಗ, ದ್ರೌಪದಿ ರೂಪದ ಅಭಿಮಾನ, ಭೀಮನ ಆಕ್ರೋಶ, ಅರ್ಜುನನ ಹೋರಾಟ, ಯುಧಿಷ್ಠಿರನ ಚಿಂತನೆ, ದುರ್ಯೋದನನ ದ್ವೇಷ, ಕುಂತಿಯ ಚಿಂತೆ, ಕೃಷ್ಣನ ನಿರ್ಘೃಣ ವ್ಯವಹಾರ ಪಟುತ್ವ – ಈ ಎಲ್ಲವೂ ಇಲ್ಲಿ ಸೂಕ್ಷ್ಮವಾಗಿ ಬಂದಿದೆ. ಮಹಾಭಾರತವನ್ನು ಭಿನ್ನವಾಗಿ ನೋಡುವಲ್ಲಿ ಈ ಮೇಲಣ ಎರಡೂ ಕೃತಿಗಳು ಹೆಚ್ಚು ಉಪಯುಕ್ತವಾದುವಾಗಿವೆ.

ಇದರಂತೆಯೇ ಮಹಾಭಾರತದ ಶಾಪಪ್ರಸಂಗಗಳನ್ನು ಆಧರಿಸಿದ ಕೃತಿಯೂ ಮರಾಠಿಯಲ್ಲಿ ಬಂದಿದೆ. ದೂರ್ವಾಸ, ಅಂಬೆ ಮುಂತಾದವರ ಶಾಪಸಂಕುಲದ ಸಂದರ್ಭಗಳು ಒಟ್ಟಾರೆ ೧೪೭, ಶಾಪದ ಸ್ವರೂಪ, ಇತಮಿತ, ಪ್ರತಿಶಾಪ ಇತ್ಯಾದಿ ಅಂಶಗಳು ವಿವರವಾಗಿವೆ. ಜೊತೆಗೆ ಆರ್ಯ ಆರ್ಯೇತರ (ಯಜ್ಞ ತಂತ್ರ) ರ ಸಂಗತಿಗಳು, ಯಜ್ಞದ ವಿವರಗಳು, ಮಂತ್ರ ಮುಂತಾದ ಬಗ್ಗೆಯೂ ಚರ್ಚಿಸಲಾಗಿದೆ. ಈ ಎಲ್ಲಾ ಕೃತಿಗಳು ರಾಮಾಯಣ, ಮಹಾಭಾರತಗಳ ಅಧ್ಯಯನದಲ್ಲಿ ಹೊಸ ದೃಷ್ಟಿಗಳನ್ನು ಬಿಂಬಿಸುವುವಾಗಿವೆ.

ಥೇರೀಗಾಥಾ, ಅನುಭಾವಿಗಳ ಕ್ರಾಂತಿ, ದಿಗಂತದಾಚೆ, ಸ್ತ್ರೀಪುರುಷ, ತಮಿಳು ಕಾವ್ಯಮಿಮಾಂಸೆ ಮುಂತಾದ ಕೃತಿಗಳೆಲ್ಲ ಸ್ತ್ರೀವಾದಿ ದೃಷ್ಟಿ, ಪರಂಪರೆ ಮತ್ತು ಸಂಪ್ರದಾಯಗಳ ನಡುವಣ ಅಂತರ, ಪರಿಣಾಮ ಹಾಗೂ ಚಾರಿತ್ರಿಕ ತಿಳಿವಳಿಕೆಗಳನ್ನು ಮೂಡಿಸುವುವಾಗಿವೆ. ಸಮಕಾಲೀನ ಸಂದರ್ಭವು ಬಹಳ ಸಂಕೀರ್ಣವಾದುದು. ನಮ್ಮ ಪ್ರತಿಯೊಂದು ಆಗುಹೋಗುಗಳು ಪ್ರರೂಪುಗೊತ್ತಿರುವುದು ನಮ್ಮ ಸೂಕ್ಷ್ಮವಾದ ತಿಳಿವಳಿಕೆಯಿಂದಲೇ. ಮನುಷ್ಯ ಬದುಕು ಪಡೆಯುತ್ತಾ ಬಂದ ಪಲ್ಲಟಗಳಿಗೆ ಅನುಗುಣವಾಗಿ ಅವನ ಧರ್ಮ, ಸಂಸ್ಕೃತಿಗಳು ವಿಶಿಷ್ಟವಾಗಿ ರೂಪುಗೊಳ್ಳುತ್ತಾ ಹೋಗುತ್ತವೆ. ಬದುಕು ಸಾಮುದಾಯಿಕವಾಗಿ ಸ್ವತಂತ್ರವಾಗಿದ್ದಾಗ ಮನುಷ್ಯ ಮನುಷ್ಯರ ನಡುವೆ ತಿಳಿವಳಿಕೆ ತುತ್ತು ಸಹಬಾಳ್ವೆ ಇರುತ್ತದೆ. ಅದು ವ್ಯತ್ಯಸ್ತವಾಗುವುದು ಪಂಥ ಪ್ರಧಾನವಾದಾಗ. ಜಾತಿ, ಧರ್ಮವು ಶ್ರೇಷ್ಠತೆಯ ಅಂಗಗಳಾಗಿ ಪರಿಗಣಿತವಾದಾಗ ಮನುಷ್ಯ ಬದುಕಿನ ಸಹಜತೆಯಲ್ಲಿ ಭಂಗ ಉಂಟಾಗುತ್ತದೆ, ವ್ಯತ್ಯಯವೂ ತಲೆದೋರುತ್ತದೆ, ಅನುಮಾನ ದ್ವೇಷ ಮುಂತಾದ ಭಾವನೆಗಳಿಗೆ ಎಡೆಮಾಡುತ್ತದೆ. ಅದು ವ್ಯಕ್ತಿಗಳನ್ನು ಗಂಡು ಹೆಣ್ಣು ಮುಂತಾಗಿ ವಿಭಜಿಸಿದರಂತೂ ಅದರ ಪರಿಣಾಮ ಗಂಭೀರ. ಆದಿಕಾಲದಿಂದ ಇಂದಿನವರೆಗೂ ಸ್ತ್ರೀ ತನ್ನ ಸ್ಥಾನಕ್ಕಾಗಿ ಹೋರಾಡುತ್ತಲೇ ಬಂದಿರುವ ಸಂಕಥನವನ್ನು ಈ ಎಲ್ಲ ಕೃತಿಗಳಲ್ಲೂ ಚರ್ಚಿಸಲಾಗಿದೆ. ಅನುಭಾವಿಗಳು, ಪವಾಡ ಸದೃಶ ವ್ಯಕ್ತಿಗಳು ಹೋರಾಟ ನಡೆಸಿದರೂ ಮನುಷ್ಯ ಸಮಾಜದಲ್ಲಿ ಸಮಾನತೆಯು ಸಾಧ್ಯವಾಗಿಯೇ ಇಲ್ಲ. ಇನ್ನೂ ಸ್ತ್ರೀಯ ಸಮಾನತೆಯ ಪ್ರಶ್ನೆ ಹೇಗೆ. ಈ ಮುಂತಾದ ವಿಚಾರಗಳು ಇಲ್ಲಿ ಈ ಕೃತಿಗಳ ಅಧ್ಯಯನದಿಂದ ಮನಸ್ಸಿನಲ್ಲಿ ಮೂಡುತ್ತವೆ.

ವೀರಶೈವ ಧರ್ಮದ ಪ್ರಮುಖ ನೆಲೆಗಳಾದ ಸಾಮಾಜಿಕ ಪರಿವರ್ತನೆ ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳ ಒಟ್ಟು ಆಧ್ಯಯನವೇ ‘ಅನುಭಾವಗಳ ಕ್ರಾಂತಿ’. ಅನುಭಾವ ಪರಂಪರೆಯ ವ್ಯಾಪ್ತಿ ದೀರ್ಘವಾದುದು. ೧೨,೧೫ ಮತ್ತು ೧೯ನೆಯ ಶತಮಾನದ ಕಾಲಘಟ್ಟಗಳಲ್ಲಿ ಇದನ್ನು ವಿಂಗಡಿಸಿ ಅಧ್ಯಯನ ಮಾಡಲಾಗಿದೆ. ವಚನ ಚಳವಳಿಯ ಗತಿಶೀಲತೆ, ಜಾತಿ ಶ್ರಮ ಮತ್ತು ಸಂಪತ್ತು ಹಾಗೂ ಮಹಿಳೆಯರ ಸ್ಥಾನಮಾನಗಳ ಹಿನ್ನೆಲೆಯಲ್ಲಿ ಗಂಭೀರವೂ, ಸೂಕ್ಷ್ಮವೂ ಆದ ವಿಶ್ಲೇಷಣೆ ಇಲ್ಲಿ ವ್ಯಕ್ತವಾಗಿದೆ. ಕರ್ನಾಟಕದ ಸಾಮಾಜಿಕ – ಸಾಂಸ್ಕೃತಿಕ ಇತಿಹಾಸದ ಹಿನ್ನೆಲೆಯಿಂದಲೂ ಪ್ರಸ್ತುತ ಕೃತಿ ಮುಖ್ಯವಾದುದಾಗಿದೆ. ಕನ್ನಡೇತರ ಆಕರಗಳು, ವಿದೇಶಿ ವಿದ್ವಾಂಸರು ಈ ಎರಡು ಅಂಶಗಳು ‘ಪೂರ್ವಗ್ರಹ’ ದಿಂದ ವಿಮೋಚನೆ ಪಡೆವಲ್ಲಿ ಅನುಕೂಲವಾಗಿವೆ.

ಚರಿತ್ರೆ

ಕನ್ನಡದ ನಾಡಿನ ನಮ್ಮ ಆಳರಸರ ಚರಿತ್ರೆ ಕ್ರಿ. ಶ. ೪ನೆಯ ಶತಮಾನದಿಂದ ಆರಂಭವಾಗುತ್ತದಾದರೂ ಕ್ರಿ. ಶ. ೧೩೩೬ ರಿಂದ ೧೫೬೫ ವರೆಗಿನ ಮಹಾಸಾಮ್ರಾಜ್ಯರ ವಿಜಯನಗರವೇ ಪ್ರಮುಖವಾಗಿ ಪರಿಗಣಿಸಲ್ಪಟ್ಟಿದೆ. ಕನ್ನಡ ಭಾಷೆ, ಸಂಸ್ಕೃತಿ, ಧರ್ಮ, ಪರಂಪರೆಗಳೆಲ್ಲದರ ಮುಖ್ಯ ನೆಲೆಯಾಗಿ ಹೆಸರಿಸುತ್ತಿರುವುದು ವಿಜಯನಗರ ಸಾಮ್ರಾಜ್ಯವನ್ನೇ. ಈ ಸಾಮ್ರಾಜ್ಯ ತನ್ಮೂಲಕ ಕೇವಲ ಧರ್ಮವನ್ನು ಮಾತ್ರವಲ್ಲ ಕನ್ನಡ ಭಾಷಾ ಸಂಸ್ಕೃತಿಯನ್ನು ಅಜರಾಮರವಾಗಿ ಉಳಿಯುವಂತೆ ಮಾಡಿದ ಸತ್ಕೀರ್ತಿಗೆ ಪಾತ್ರವಾದುದಾಗಿದೆ. ಕರ್ನಾಟಕದಲ್ಲಿ ಈ ಹೊತ್ತಿನಲ್ಲಿ ಬೇರೆಬೇರೆ ರಾಜರುಗಳಿದ್ದರು. ಬಿಜಾಪುರದ ಆದಿಲಶಾಹಿ, ಗುಲಬರ್ಗಾದ ಬಾಹಮನಿ ಸುಲ್ತಾನರು, ಪಾಳೆಗಾರರೂ, ಸಾಮಂತರೇ ಮೊದಲಾದವರಿದ್ದರೂ ಕನ್ನಡ ಭಾಷೆ, ಸಂಸ್ಕೃತಿಯ ಬಗ್ಗೆ ಅವರ ಕೊಡುಗೆ ವಿಜಯನಗರದಷ್ಟು ಗಣನೀಯವಾಗಿಲ್ಲ. ತನಗಿಂತಲೂ ಎರಡು ಶತಮಾನಗಳ ಹಿಂದಿನ ಕರ್ನಾಟಕದ ವೀರಶೈವ ಧರ್ಮ ಚಿಂತನೆಗಳನ್ನು ಪ್ರಸರಣಗೊಳಿಸುವಲ್ಲಿಯೂ ಈ ಸಾಮ್ರಾಜ್ಯದ ಪಾತ್ರ ಶ್ಲಾಘನೀಯ. ಈ ಹಿನ್ನಲೆಯಲ್ಲಿ ಈ ದಶಕದಲ್ಲಿ ಅವಶ್ಯ ಗಮನಿಸಬಹುದಾದ ಐದು ಚಾರಿತ್ರಿಕ ಕೃತಿಗಳಿವೆ. ಎರಡು ವಿಜಯನಗರ ಸಾಮ್ರಾಜ್ಯವನ್ನು ಕುರಿತುವು, ಎರಡು ಬಿಜಾಪುರದ ಆದಿಲಶಾಹಿ ಇತಿಹಾಸವನ್ನು ಕುರಿತುವು. ಮತ್ತೊಂದು ದಕ್ಷಿಣ ಭಾರತದಲ್ಲಿ ವಸಾಹತುಶಾಹಿ ಆಡಳಿತ ಮತ್ತು ಸಂಘರ್ಷವನ್ನು ಕುರಿತುದು.

ರಾಬರ್ಟ್‌ ಸಿವೆಲ್‌ನು ವಿಜಯನಗರ ಸಾಮ್ರಾಜ್ಯವನ್ನು ಕುರಿತಂತೆ ‘A Forgotten Empire’ ಎಂದು ಕರೆದಿದ್ದಾನೆ. ಕ್ರಿ. ಶ. ೧೩೩೬ ರಿಂದ ೧೫೬೫ ರವರೆಗಿನ ವಿಜಯನಗರದ ಐತಿಹಾಸಿಕ ಸಂಗತಿಗಳನ್ನು ಒಟ್ಟು ೧೭ ಅಧ್ಯಾಯಗಳಲ್ಲಿ ಹೇಳಲಾಗಿದೆ. ಪ್ರವಾಸಿಗರು, ಚರಿತ್ರೆಗಾರರು ನೀಡಿದ ಮಾಹಿತಿಯನ್ನು ಆಧರಿಸಿದ ಈ ಕೃತಿಯಲ್ಲಿ ಸಿವೆಲ್‌ರು ಕೆಲವಾರು ದ್ವಂದ್ವಾತ್ಮಕ ಹೇಳಿಕೆಗಳನ್ನು. ನೀಡುತ್ತಾರೆ. ನಿದರ್ಶನಕ್ಕೆ ‘ಆನೆಗುಂದಿ ದೊರೆಗಳ ಬಗೆಗೆ ನಮಗೆ ಬಹಳ ಗೊತ್ತಿಲ್ಲ’ ಎಂಬ ಹೇಳಿಕೆಯನ್ನು ನೋಡಬಹುದು. ಆನೆಗುಂದಿಯೇ ವಿಜಯನಗರ ಸಾಮ್ರಾಜ್ಯದ ಮೂಲ. ಹಾಗಿರುವಾಗ ಸಿರಿಸ್ತಾ ಹೇಳಿದ್ದನೆಂಬ ಮಾತನ್ನು ಸಿವೆಲ್‌ ಪುರಸ್ಕರಿಸುವುದು ವಿಚಿತ್ರವೆನಿಸುತ್ತದೆ. ಮುಂದುವರೆದು ತಾನು ಬಂಡೆಗಳ ಮೆಲೆ ನಿಂತು ನೋಡಿದಾಗ ಕಂಡ ವಿಜಯನಗರದ ಚಿತ್ರವನ್ನು ಆಧರಿಸಿ ಈ ಸಾಮ್ರಾಜ್ಯ ಕನ್ನಡಿಗರಲ್ಲಿ ಮರೆತು ಹೋಗಿದೆ ಎಂದು ಬರೆದಿರುವುದು ಸುಮಾರು ಮುನ್ನೂರು ವರ್ಷಗಳ ಮೆರೆದ ಮಹಾ ಸಾಮ್ರಾಜ್ಯದ ದೃಷ್ಟಿಯಿಂದ ಲಘುವೆನಿಸತ್ತದೆ. ದಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಮತ್ತು ರಾಜಕೀಯ ದೃಷ್ಟಿಯಿಂದ ಮಹತ್ವದ ಸಾಮ್ರಾಜ್ಯವೆನಿಸಿದ ವಿಜಯನಗರ ಕನ್ನಡಿಗರ ಮನಸ್ಸಿನಿಂದ ಮರೆತು ಹೋಗಿದೆ ಎಂಬ ಮಾತು ಸಲ್ಲ. ಅಲ್ಲದೆ ರಾಬರ್ಟ್‌ ಸಿವೆಲ್‌ ಈ ಕೃತಿಯನ್ನು ರಚಿಸಿದ ಕಾಲದಲ್ಲಿ ಭಾರತದಲ್ಲಿ ಬಿಟ್ರಿಶ್‌ ಆಡಳಿತ ವಿರುದ್ಧ ಹೋರಾಟ ಆರಂಭವಾಗಿತ್ತು. ಇದೇ ಸರಿ ಸುಮಾರಿಗೆ ಹರಿನಾರಾಯಣ ಆಪ್ಟೆಯವರ ‘ವಜ್ರಾಘಾತ ಅಥವಾ ವಿಜಯನಗರದ ವಿನಾಕಾಲ’ (ಕನ್ನಡಿಗರ ಕರ್ಮಕತೆ) ಎಂಬ ಕಾದಂಬರಿಯೂ ಪ್ರಕಟವಾಗಿತ್ತು. ಆ ಮೂಲಕ ನಮ್ಮ ಐತಿಹಾಸಿಕ ಪರಂಪರೆಯನ್ನು ಜನರಲ್ಲಿ ಮನದಟ್ಟು ಮಾಡಿಕೊಟ್ಟು ಹೋರಾಟಕ್ಕೆ ಪ್ರಚೋದನೆಗೊಳಿಸುವ ಪ್ರಕ್ರಿಯೊಂದು ಆರಂಭವಾಗಿತ್ತು ಎಂಬುದು ಗಮನೀಯ. ಇಂಥ ಹೊತ್ತಿನಲ್ಲಿ ರಾಬರ್ಟ್‌ ಸಿವೆಲ್‌ ಈ ಬಗೆಯ ಕೃತಿಯನ್ನು ಬರೆಯುವುದು ಅನಿವಾರ್ಯವಾಗಿತ್ತೋ ಏನೋ. ಒಟ್ಟಾರೆ ಭಾರತೀಯ ಹೋರಾಟಗಾರರ ಸ್ಪೂರ್ತಿಗೆ ತಣ್ಣೀರೆರಚುವ ಉದ್ದೇಶವಂತೂ ಇದೆ.

ಈ ಹಿನ್ನೆಲೆಯಲ್ಲಿ ಗಮನಿಸಬಹುದಾದ ಮತ್ತೊಂದು ಕೃತಿ ಬಿ. ಸೂರ್ಯ ನಾರಾಯಣರಾವ್‌ ಅವರ ‘The Never to Be Forgetten Empire’ (ಮರೆಯಲಾಗದ ಮಹಾ ಸಾಮ್ರಾಜ್ಯ). ಕ್ರಿ. ಶ. ೧೯೦೫ ರಲ್ಲಿ ಪ್ರಕಟವಾದ ಈ ಕೃತಿ ರಾಬರ್ಟ್‌ ಸಿವೆಲ್‌ ಅವರ ಕೃತಿಗೆ ಪ್ರತಿಯಾಗಿ ಬಂದುದಾಗಿದೆ. ಕರ್ನಾಟಕದ ಇತಿಹಾಸದಲ್ಲಿ ತನ್ನದೇ ಆದ ಸ್ಥಾನ ಹೊಂದಿರುವ ವಿಜಯನಗರ ಸಾಮ್ರಾಜ್ಯವು ಯುದ್ದಾನಂತರ ಜನರ ಮನಸ್ಸಿನಿಂದ ಅಳಿಸಿ ಹೋಗಲಿಲ್ಲ. ಲೇಖಕರು ತಮ್ಮ ಪ್ರಸ್ತಾವನೆಯಲ್ಲಿ ವಿಜಯನಗರದ ಅರಸು ಮನೆತನಗಳ ಬಗ್ಗೆ ಐತಿಹಾಸಿಕವಾಗಿ ಅಮೂಲ್ಯ ಕಾಣಿಕೆಯನ್ನಿತ್ತ ಸಿವೆಲ್ಲರು, ‘ಮರೆತು ಹೋದ’ ಎಂಬ ತಮ್ಮ ಕೃತಿಯ ಶೀರ್ಷಿಕೆಗೆ ಸೂಕ್ತವಾದ ವಿವರಣೆ ನೀಡಿಲ್ಲ ಎಂಬ ಮೂಲಭೂತ ವಿಚಾರದ ಬಗ್ಗೆ ಬರೆದಿದ್ದಾರೆ. ಗ್ರೀಕ್‌, ರೋಮನ್‌ ಸಾಮ್ರಾಜ್ಯಗಳಂತೆ ವಿಜಯನಗರವು ತನ್ನ ಬೌದ್ಧಿಕ ಕೊಡುಗೆಯ ಮೂಲಕ ಇಂದಿಗೂ ಹಚ್ಚಹಸರಾಗಿದೆ ಅದರ ಇತಿಹಾಸವನ್ನು ಧಾರ್ಮಿಕ ಸಂಘಟನೆಗಳು, ರಾಜಕೀಯ ನಡಾವಳಿಗಳು, ಸಾಮಾಜಿಕ ಜೀವನ ಮತ್ತು ಸ್ಥಾನಮಾನಗಳು ಮತ್ತು ಸಾಹಿತ್ಯದ ಹಿರಿಮೆಯನ್ನು ಬಿಂಬಿಸುತ್ತಿರುವ ಕೃತಿಗಳ ಹಿನ್ನೆಲೆಯಲ್ಲಿ ಅವಲೋಕಿಸಬೇಕಾದ್ದು ಅವಶ್ಯ. ಸುಮಾರು ೨೦೦ ಬಂದರುಗಳನ್ನು ವಿಶಾಲ ಪ್ರದೇಶವನ್ನು ತನ್ನ ಅಧಿಕಾರದಲ್ಲಿ ಹೊಂದಿದ್ದ ವಿಜಯನಗರದ ಇತಿಹಾಸ ಈ ಮೇಲಣ ಅಂಶಗಳಿಂದ ಮಾತ್ರವಲ್ಲದೆ ಜನಪದರದಲ್ಲಿ ಇಂದಿಗೂ ಕೇಳಿ ಬರುವ ವಿಫುಲ ಮಾಹಿತಿಗಳಿಂದ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಜನರಿಂದ ಮರೆತು ಹೋಗಿಲ್ಲ ಎಂಬುದನ್ನು ಬಿಂಬಿಸುತ್ತದೆ. ಹಾಗಿರುವಾಗ ಮರೆತು ಹೋಗಿರುವ ಮಾತು ಸರಿಹೊಂದುವುದಿಲ್ಲ. ಒಂದು ಖಚಿತವಾದ ನಿರ್ದಿಷ್ಟ ಉದ್ದೇಶ, ಸಾಧನೆ ಮತ್ತು ಸಾಫಲ್ಯತೆಯ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದ ವಿಜಯನಗರ ಸಾಮ್ರಾಜ್ಯದ ವಿಚಾರವನ್ನು ಈ ಎರಡೂ ಕೃತಿಗಳು ವಿಫುಲವಾಗಿ ಹೇಳುತ್ತವೆ. ಸಿವೆಲ್‌ ಹೇಳಿಕೇಳಿ ಬ್ರಿಟಿಶ್‌ ಆಡಳಿತಾಧಿಕಾರಿ. ಎಂತಲೇ ಆತನ ಒಲವು ಬ್ರಿಟಿಶ್‌ ಸಾಮ್ರಾಟರ ಪರವಾಗಿತ್ತು. ಸೂರ್ಯನಾರಾಯಣರಾವ್‌ ನೀಡುವ ಬೇರೆಬೇರೆ ಮಾಹಿತಿಗಳು ಭಾರತದ ಸಾಮ್ರಾಜ್ಯ ಪರಂಪರೆಯ ಬಗ್ಗೆ ಪುನರಾವಲೋಕನಕ್ಕೆ ಕಾರಣವಾಗುತ್ತವೆ ಎಂಬ ಅಂಶ ಗಮನೀಯ.

ವಿಜಯನಗರದಂತೆಯೇ ಇಂದಿನ ಕರ್ನಾಟಕದ ಒಂದು ಜಿಲ್ಲೆಯಾಗಿರುವ ವಿಜಯಪುರ ಅರ್ಥಾತ್‌ ಬಿಜಾಪುರದ ಆದಿಲಶಾಹಿಗಳ ಸಾಮ್ರಾಜ್ಯದ ಬಗ್ಗೆ ಎರಡು ಕೃತಿಗಳು ಬಂದಿವೆ. ಜುಬೇರಿಯ ‘ಬಸಾತೀನುಸ್ಸಲಾತೀನ್‌’ (ಬುಸಾತಿನೇ ಸಲಾತಿನೇ) ಮತ್ತು ಮುಲ್ಲಾನುಸ್ರತಿಯ ‘ತಾರೀಖೇ ಇಸ್ಕಂದರಿ’ ಎಂಬುವರೆಡು. ಇವುಗಳಲ್ಲಿ ಮೊದಲನೆಯದು ಗದ್ಯ ಗ್ರಂಥ, ಮತ್ತೊಂದು ಕಾವ್ಯ. ಎರಡೂ ಮೂಲ ಪರ್ಶಿಯನ್‌ ಭಾಷೆಯವಾದರೂ ಮರಾಠಿಯ ಮೂಲಕ ಕನ್ನಡಕ್ಕೆ ಬಂದುವಾಗಿವೆ. ಜುಬೇರಿಯು ತನ್ನ ಕೃತಿಯಲ್ಲಿ ಎಂಟು ಜನ ಆದಿಲಶಾಹಿಗಳು, ಸಾಮ್ರಾಜ್ಯದ ವಿಸ್ತಾರ, ಆಡಳಿತ ಸ್ವರೂಪ, ಸಾಂಸ್ಕೃತಿಕ, ಸಾಹಿತ್ಯಕ, ಕಲೆ, ಸಾಮಾಜಿಕ ಸಂಗತಿಗಳನ್ನು ಬಹು ವಿಸ್ತೃತವಾಗಿ ಬರೆದಿದ್ದಾನೆ. ಈ ಆದಿಲಶಾಹಿ ಸಾಮ್ರಾಜ್ಯದೊಂದಿಗೇ ವಿಜಯನಗರದ ಕೊನೆಯ ಯುದ್ಧವಾಗುವುದು. ೧೯೬೫ರ ತಾಳಿಕೋಟೆ ಕದನದಲ್ಲಿ ಅಳಿಯ ರಾಮರಾಯನ ವಧೆಯಾಗುತ್ತದೆ. ವಿಜಯನಗರ ಬೃಹತ್‌ ಸೇನೆ ಸೋಲಿಗೆ ಒಳಗಾಗುತ್ತದೆ. ಐತಿಹಾಸಿಕವಾಗಿ ಈ ಘಟನೆ ಬಹಳ ಮುಖ್ಯವಾದುದು ಜುಬೇರಿ ಆದಿಲಶಾಹಿಗಳ ವಿಜಯವನ್ನು ಬಹಳ ವಿಸ್ತೃತವಾಗಿ ವಿಜೃಂಭಣೆಯಿಂದಲೆ ವರ್ಣಿಸಿದ್ದಾನೆ. ಈ ಕೃತಿ ಎಂಟನೆಯ ದೊರೆ ಸಿಕಂದರ ಆದಿಲಶಾಹಿನ ಸೆರೆಯೊಂದಿಗೆ ಮೊಗಲರು ಆದಿಲಶಾಹಿ ಸಾಮ್ರಾಜ್ಯವನ್ನು ತಮ್ಮ ಅಧಿಕಾರ ವ್ಯಾಪ್ತಿಗೆ ತೆಗೆದುಕೊಳ್ಳುವವರೆಗೂ ವಿವರಗಳನ್ನು ಕೊಡುತ್ತದೆ.

ಇದೇ ಸಾಮಾಜ್ಯದ ಸಂಕಥನವನ್ನು ಕುರಿತ ಕಾವ್ಯ’ತಾರೀಖೆ ಇಸ್ಕಂದರಿ’ ಇದು ಮುಖ್ಯವಾಗಿ ಆದಿಲಶಾಹಿ ಎಂಟನೆಯ ದೊರೆ ಸಿಕಂದರನ ಸೈನ್ಯಕ್ಕೂ ಉಮ್ರಾಣಿಯಲ್ಲಿ ನಡೆದ ಯುದ್ಧವನ್ನು ಕುರಿತುದಾಗಿದೆ. ನುಸ್ರುತಿ ಮೂಲತಃ ಕವಿಯಾದುದರಿಂದ ಯುದ್ಧದ ಭೀಕರತೆಯನ್ನು ಗಂಭಿರವಾಗಿ ಚಿತ್ರಸಿದ್ದಾನೆ. ಬಹಲೋಲಖಾನನೆಂಬ ಆದಿಲಶಾಹಿ ಸರದಾರನು ಉಮ್ರಾಣಿಯಲ್ಲಿ ಮರಾಠರೊಂದಿಗೆ ಹೋರಾಡಿ ಜಯಸಾಧಿಸಿದ ಸಂಗತಿಯನ್ನು ನುಸ್ರತಿಯು ವ್ಯಕ್ತಿ, ವ್ಯಕ್ತಿತ್ವ, ಹೋರಾಟದ ಸ್ವರೂಪ, ನೇತೃತ್ವ ವಹಿಸಿದವನು ಹೊಂದಿರಬೇಕಾದ ಮನೋಭಾವ, ಜಯಾಪಜಯಗಳನ್ನು ಕುರಿತು ಅತ್ಯಂತ ಸೂಕ್ಷ್ಮವಾಗಿ ಹೇಳಿದ್ದಾನೆ. ಎರಡನೆಯ ಪಾಣಿಪತ್ ಕದನದಲ್ಲಿ ಹೀಮೂವಿನ ಪಡೆಗೂ, ತಾಳಿಕೋಟಿಯ ಕದನದಲ್ಲಿ ವಿಜಯನಗರ ಸೇನೆಗೂ ಅಪಜಯ ಏಕೆ ಅನಿವಾರ್ಯವಾಯಿತು ಎಂಬುದನ್ನು ಧ್ವನಿಪೂರ್ಣವಾಗಿ ಅಭಿವ್ಯಕ್ತಿಸಿದ್ದಾನೆ. ಸುಮಾರು ಎರಡು ಶತಮಾನಗಳ ಕಾಲ (ಕ್ರಿ. ಶ. ೧೪೮೯ ರಿಂದ ೧೬೮೯) ಸಾಮ್ರಾಜ್ಯ ನಡೆಸಿದ ಆದಿಲಶಾಹಿಗಳು ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಅಪೂರ್ವ ಕಾಣಿಕೆಯನ್ನು ಈ ಎರಡು ಕೃತಿಗಳು ವಿಶೇಷವಾಗಿ ಮನಗಾಣಿಸುತ್ತವೆ. ವಿಜಾಪುರ ಪಂಚನದಿಗಳ ನಾಡು ಎಂಬಂತಯೇ ಗೋಲಗುಂಬಜ್ ಮೊದಲಾದವುಗಳ ಕಲಾ ಬೀಡು, ಈ ಕಲೆಗಳಿಗೆಲ್ಲ ಮುಖ್ಯ ಕಾರಣಕರ್ತರೆಂದರೆ ಆದಿಲಶಾಹಿಗಳು.

ವಿಜಯನಗರ ಮತ್ತು ಆದಿಲಶಾಹಿ ಮತ್ತು ಟಿಪ್ಪು ಸುಲ್ತಾನನ ಸಾಮ್ರಾಜ್ಯಗಳ ಪತನಾ ನಂತರದಲ್ಲಿ ದಕ್ಷಿಣ ಭಾರತವನ್ನು ವ್ಯಾಪಿಸಿದ ವಸಾಹತುಶಾಹಿತ್ವದ ವಿವರಗಳನ್ನು ಕಂಡರಿಸುವ ಕೃತಿ ‘ದಕ್ಷಿಣಾ ಭಾರತ ವಸಾಹತುಶಾಹಿ ರಾಪ್ಟೀಯತೆ ಮತ್ತು ಸಂಘರ್ಷ’, ಕರ್ನಾಟಕ, ತಮಿಳುನಾಡು, ಅಂಧ್ರಪ್ರದೇಶ ಮತ್ತು ಕೇರಳ ರಾಜ್ಯಗಳ ವ್ಯಾಪ್ತಿಯನ್ನು ಕುರಿತು ಹೇಳುವ ಈ ಕೃತಿ ವಸಾಹತುಶಾಹಿ ಯುಗದಲ್ಲಿ ಯುರೋಪಿನ ಪ್ಲಾಂಟರುಗಳು ಬಹಳ ಸುಲಭವಾಗಿ ಇಲ್ಲಿ ಕಾಫೀ ಟೀ ತೋಟಗಳನ್ನು ಅಭಿವೃದ್ಧಿ ಪಡಿಸುವ ಮೂಲಕ ಪ್ರಧಾನ್ಯತೆಯನ್ನು ಸ್ಥಾಪಿಸಿದ ಹಿನ್ನೆಲೆ ಮುನ್ನೆಲೆಗಳನ್ನು ಸವಿರವಾಗಿ ಹೇಳುತ್ತದೆ. ಈ ನಾಲ್ಕು ರಾಜ್ಯಗಳನ್ನು ಒಗ್ಗೂಡಿಸುವಂಥ ಪಂಥಗಳಾಗಲೀ, ಪವಿತ್ರ ಕ್ಷೇತ್ರಗಳಾಗಲೀ, ಮಾರುಕಟ್ಟೆಯ ಅರ್ಥವ್ಯವಸ್ಥೆಯಾಗಲೀ ಇರಲಿಲ್ಲ. ರಾಜರುಗಳಲ್ಲಿ ಪರಸ್ಪರ ಒಗ್ಗಟ್ಟಿಲ್ಲದೆ ಬ್ರಿಟಿಷರ ವಿರುದ್ದ ಹೋರಾಡುವುದು ಸಾಧ್ಯವಾಗದಿರುವ ಸೂಕ್ಷ್ಮ ಸಂಗತಿಯನ್ನು ಕೃತಿ ಗಂಭೀರವಾಗಿ ಮನಗಾಣಿಸುತ್ತದೆ. ಒಗ್ಗಟ್ಟಿಲ್ಲದೆ ನಡೆದ ಪ್ರತಿಯೊಂದು ದಂಗೆಯೂ ವಿಫಲವಾಗಿ ಬ್ರಿಟಿಶರು ಎಲ್ಲ ಹಂತಗಳಲ್ಲೂ ಜಯಶೀಲರಾಗುತ್ತಾರೆ. ಬ್ರಿಟಿಶ್‌ ವ್ಯವಸ್ಥೆಯಾದ ಈಸ್ಟ್‌ ಇಂಡಿಯಾ ಕಂಪೆನಿಗೆ ಭಾರತೀಯ ಮಾರುಕಟ್ಟೆ ಮತ್ತು ಯೂರೋಪಿನ ಕೈಗಾರಿಕೆಗಳಿಗೆ ಬೇಕಾದ ಕಚ್ಚಾವಸ್ತುಗಳು ಬೇಕಾಗಿದ್ದವು. ಅವುಗಳನ್ನು ಬ್ರಿಟಿಶ್‌ ಅಧಿಕಾರಿಗಳು ದೊರಕಿಸಿಕೊಳ್ಳವಲ್ಲಿ ಯಶಸ್ವಿಯಾದುದರ ವಸಾಹತುಶಾಹಿ ಸಂಕಥನವನ್ನು ಪ್ರಸ್ತುತ ಕೃತಿಯಲ್ಲಿ ವಿವರಸಿಲಾಗಿದೆ. ಈ ಎಲ್ಲ ಅನುವಾದಗಳು ಕರ್ನಾಟಕದ ಹಾಗೂ ದಕ್ಷಿಣ ಭಾರತದ ಆಡಳಿತ ವ್ಯವಸ್ಥೆಯನ್ನು ಒಳಗೊಂಡು ಮುಖ್ಯವಾದುವಾಗುತ್ತವೆ. ಭಾರತೀಯರಿಗೆ ಇತಿಹಾಸವೇ ಇಲ್ಲ ಎಂಬುದು ಪಶ್ಚಾತ್ಯ ಓರಿಯಂಟಲಿಸ್ಟರ ಉಕ್ತಿ. ಈ ಕೃತಿಗಳು ಆ ಉಕ್ತಿಗೆ ಪ್ರತ್ಯುತ್ತರವಾಗಿವೆ.

ದ್ರಾವಿಡ ಭಾಷೆಗಳ ಸಾಂಸ್ಕೃತಿಕ ಚರಿತ್ರೆಯನ್ನು ಸಂಕ್ಷಿಪ್ತವಾಗಿ ವಿವರಿಸುವ ಕೃತಿ ತೆಲುಗು – ದಾಕ್ಷಿಣಾತ್ಯ ಸಾಹಿತ್ಯ. ದಾಕ್ಷಿಣಾತ್ಯ ಭಾಷೆಗಳ ಏಕ ಕುಟುಂಬ ಮೂಲ ಹಾಗೂ ಸಂಸ್ಕೃತದಿಂದ ಭಿನ್ನವಾಗಿರುವುದು, ತಲುಗು – ಕನ್ನಡ, ತೆಲುಗು – ತಮಿಳು, ತೆಲುಗು – ಮಲಯಾಳಂ ಭಾಷೆಗಳ ನಡುವಣ ಸಂಬಂಧ ಹಾಗೂ ಪರಸ್ಪರ ಪ್ರಭಾವಗಳ ವಿವೇಚನೆ ವಿಶಿಷ್ಟವಾಗಿದೆ. ಒಂದೇ ದ್ರಾವಿಡ ವರ್ಗದ ಭಾಷೆಗಳಾದರೂ ಈ ಭಾಷೆಗಳ ವಿದ್ವಾಂಸರಲ್ಲಿ ಬೇರೂರಿರುವ ಮೂಲಪ್ರಜ್ಞೆ, ಪೂರ್ವಾಗ್ರಹ ಪೀಡಿತ ಅಂಶಗಳು, ತನ್ನ ಭಾಷೆಯೇ ಪ್ರಾಚೀನವೆಂಬ ಅಹಂ ಮತ್ತು ಅವಜ್ಞೆಗಳನ್ನು ಲೇಖಕರು ಬೇರಬೇರೆ ನೆಲೆಗಳಿಂದ ಮನಗಾಣಿಸುತ್ತಾರೆ. ‘ಕನ್ನಡವು ತಮಿಳು ಮತ್ತು ತೆಲಗು ಭಾಷೆಗಳ ಕೂಡುವಿಕೆಯಿಂದ ಉಂಟಾದ ಭಾಷೆ ಎಂಬ ಪ್ರಾಚೀನ ತಮಿಳು ವಿದ್ವಾಸರ ವಿಚಾರ’ ಇಲ್ಲಿ ಗಮನಿಸಬೇಕಾದ್ದು. ಈ ಅವಜ್ಞೆಯೇ ನೆರೆಭಾಷಾ ಕಲಿಕೆ, ನೆರೆಭಾಷಾ ಅರಿಯುವಿಕೆಯ ಮುಖ್ಯ ತೊಡರುಗಳಾಗುವ ಅಂಶವನ್ನು ಪ್ರಸ್ತುತ ಕೃತಿಯಲ್ಲಿ ವ್ಯಕ್ತಪಡಿಸುಲಾಗಿದೆ. ಒಟ್ಟಾರೆ ದ್ರಾವಿಡ ಭಾಷೆಗಳ ಸಾಂಸ್ಕೃತಿಕ ವಿಚಾರಗಳ ದೃಷ್ಟಿಯಿಂದ ಈ ಪುಟ್ಟ ಕೃತಿಯು ಗಮನಿಸುವಂಥದು.

ಜೀವನ ಚರಿತ್ರೆ ಮತ್ತು ಆತ್ಮ ಚರಿತ್ರೆಗಳು

ನಮ್ಮೆಲ್ಲರ ಬಾಪು ಗಾಂಧೀಜಿ, ಮಹಾತ್ಮಗಾಂಧಿ, ಈಶ್ವರ ಚಂದ್ರ ವಿದ್ಯಾಸಾಗರ, ಬಾಬಾಫರೀದ್‌, ಸಮಾಜ ಸುಧಾರಕ ಮಹಾತ್ಮ ಪುಲೆ, ಭಾರತಿಯಾರ್, ನಾಳೀನ ಚಿಂತ್ಯಾಕ, ನಾಮದೇವ ಮುಂತಾದ ಹಲವಾರು ಜೀವನ ಚರಿತ್ರೆಗಳು ಈ ಕಾಲದಲ್ಲಿ ಪ್ರಕಟವಾಗಿವೆ. ಬದಲಾಗುತ್ತಿದ್ದ ಸಾಮಾಜಿಕ ಸಂದರ್ಭದಲ್ಲಿ ಸ್ವಾತಂತ್ರ್ಯ, ಸಮಾನತೆ, ಬಡತನ ನಿವಾರಣೆ, ಸ್ತ್ರೀಯರನ್ನೊಳಗೊಂಡಂತೆ ಎಲ್ಲರಿಗೂ ಶಿಕ್ಷಣದ ಅಗತ್ಯತೆಯನ್ನು ಒತ್ತಿ ಹೇಳಿದವರಾಗಿದ್ದಾರೆ ಎಲ್ಲ ಮಹನೀಯರು. ಇವರಲ್ಲಿ ಕೆಲವರು ತಂತಮ್ಮ ರಾಜ್ಯಗಳ ಮಟ್ಟಕ್ಕೆ ಹೋರಾಡಿದವರಾದರೆ, ಮತ್ತೆ ಕೆಲವರು ಸಮಗ್ರ ಭಾರತವನ್ನು ಕಟ್ಟಲು ಶವರಮಿಸಿದವರು. ಪ್ರತಿಯೊಂದು ಜೀವನ ಚರಿತ್ರೆಯಲ್ಲಿಯೂ ವ್ಯಕ್ತವಾಗಿರುವುದು ವಸಾಹತುಶಾಹಿಯು ಉಂಟು ಮಾಡಿದ ಕ್ರಾಂತಿ ಮತ್ತು ವಸಾಹತುಶಾಹಿ ವ್ಯವಸ್ಥೆಯ ವಿರುದ್ದದ ಹೋರಾಟ. ಸ್ತ್ರೀಶಿಕ್ಷಣ, ಬಹುಪತ್ನಿತ್ವದ ರದ್ಧತಿ ಹಾಗೂ ವಿಧವಾ ವಿವಾಹಗಳಿಗೆ ಪ್ರೋತ್ಸಾಹದಂತಹ ಮುಖ್ಯ ದೃಷ್ಟಿಕೋನಗಳನ್ನು ಬಿಂಬಿಸಿ ಸಮಾಜದಲ್ಲಿ ಸಮಾನತೆಯನ್ನು ತರಲು ಶ್ರಮಿಸಿದ ವಿಚಾರಗಳು ಇಲ್ಲಿ ವ್ಯಕ್ತವಾಗಿವೆ. ಬೌದ್ಧಿಕ ಜಡತ್ವ ಮತ್ತು ಅನೈಕ್ಯತೆಯೇ ಭಾರತ ಹೊಂದಿದ ಏನೆಲ್ಲ ಅವಸ್ಥೆಗಳ ಮೂಲಕಾರಣ. ಗಾಂಧೀಜಿಯವರೇ ಮೊದಲಾಗಿ ಎಲ್ಲರೂ ತಮ್ಮ ಬದುಕಿನಲ್ಲಿ ಕಂಡುಂಡ ಅನುಭವ ಮುಖೇನ ಸಮಗ್ರ ಹಾಗೂ ಸದೃಢ ಭಾರತದ ಕನಸನ್ನು ಕಂಡವರು. ಗಾಂಧೀಜಿ ತಮ್ಮ ವ್ಯಕ್ತಿತ್ವ ಮತ್ತು ಕ್ರೀಯಾಶೀಲತೆಯಿಂದ ಪ್ರಪಂಚವನ್ನೇ ನಿಬ್ಬೆರಗಾಗುವಂತೆ ಮಾಡಿದವರಾಗಿದ್ದಾರೆ. ಅವರ ಚಿಂತನೆಗಳು ಇಂದು ಪ್ರಾಪಂಚಿಕ ಮಟ್ಟದಲ್ಲಿ ಚರ್ಚಿತವಾಗುತ್ತಲಿವೆ. ಒಬ್ಬ ಸಾಮಾನ್ಯ ಅಷ್ಟೇನು ಆಕರ್ಷಕನಲ್ಲದ ವ್ಯಕ್ತಿಯು ಇಡೀ ಜಗತ್ತಿಗೆ ಹೇಗೆ ಕೇಂದ್ರ ಬಿಂದುವಾದ, ತನ್ನ ಸ್ನಿಗ್ಧ ನಗು ಹಾಗೂ ಮುಗ್ಧ ಮನಸ್ಸಿನಿಂದ ಹೇಗೆ ಪ್ರಪಂಚವನ್ನೇ ಗೆದ್ದ ಎಂಬುದು ಅವರ ಜೀವನ ಚರಿತ್ರೆಯಲ್ಲಿ ವಿಸ್ಮಯ ಪ್ರಶ್ನೆ. ಜೀವನ ಚರಿತ್ರೆಗಳು ಮುಖ್ಯವಾಗಿ ಪ್ರತಿಪಾದಿಸುವುದು ಪ್ರಭಾವಶಾಲಿಯಾದ ವ್ಯಕ್ತಿತ್ವವನ್ನು. ಬಾಲ್ಯ, ವಿದ್ಯಾಭ್ಯಾಸ, ವೈಯಕ್ತಿಕ ಬದುಕಿನ ಹೋರಠಟ, ಸಮಗ್ರ ಬದುಕಿನ ಹೋರಾಟ, ಫಲಾಫಲಗಳು ಹಾಗೂ ಸಾಧನೆಯ ಮಟ್ಟ ಇವುಗಳನ್ನೆಲ್ಲ ಇಲ್ಲಿ ಕಾಣಬಹುದಾಗಿದೆ.

ಜೀವನ ಚರಿತ್ರೆಯಂತೆ ಬಹಳ ಆಳವಾದ ಅನುಭವವನ್ನು ಬಿಂಬಿಸುವುವು ಆತ್ಮ ಚರಿತ್ರೆಗಳು. ಕನ್ನಡದಲ್ಲಿ ಬಹಳಷ್ಟು ಆತ್ಮ ಚರಿತ್ರೆಗಳಿದ್ದು ಆಯಾ ವ್ಯಕ್ತಿಯು ತನ್ನನ್ನು ತಾನು ಕಂಡುಕೊಂಡ ಬಗೆಯು ಬಿಂಬಿತವಾಗಿವೆ. ಈ ದಶಕದಲ್ಲಿ ದೊಡ್ಡದೊಡ್ಡ ಮಹನೀಯರಿಗೆ ವಿಶಿಷ್ಟವಾಗಿದ್ದ ಆತ್ಮ ಚರಿತ್ರೆಗಳಂತೆ ಶೋಷಣೆಗೆ ಒಳಗಾದವರ ಆತ್ಮಚರಿತ್ರೆಗಳು ಅನುವಾದಗೊಂಡು ಕನ್ನಡ ಲೇಖಕರನ್ನು ಪ್ರಭಾವಿಸಿವೆ. ಆತ್ಮ ಚರಿತ್ರೆಗಳ ಸಂಕಥನದಲ್ಲಿಯೂ ಸಹ ವೈಯಕ್ತಿಕ ಮತ್ತು ಸಮಗ್ರ ಜನತೆಯ ಬದುಕಿನ ಉನ್ನತಿಗಾಗಿ ಹೋರಾಟ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸಾಮಾಜಿಕ ಸಮಾನತೆಗಾಗಿ ಶ್ರಮಿಸಿದ ಬಗೆ ಎಲ್ಲವೂ ವ್ಯಕ್ತವಾಗಿರುತ್ತದೆ. ಈ ದಶಕದಲ್ಲಿ ಬಹಳಷ್ಟು ಆತ್ಮಕಥನಗಳು ಬಂದುದು ಮರಾಠಿಯಲ್ಲಿ. ದಲಿತರು, ಸ್ತ್ರೀಯರು ಈ ಪ್ರಕಾರವನ್ನು ದೃಷ್ಟಿಸುವಂತೆ ಮಾಡಿದ್ದಾರೆ. ಮರಾಠಿಯಂತೆ ಮಲಯಾಳಂ, ಇಂಗ್ಲಶ್‌ನಿಂದಲೂ ಕೃತಿಗಳು ಅನುವಾದಗೊಂಡಿವೆ. ಆಕ್ರಮ ಸಂತಾನ, ಉಚಲ್ಯಾ, ಗಬಾಳ, ಕುಣಿಯೇ ಘುಮ, ಹೋರಾಟ, ಗತಿಸಿದ ಕಾಲ, ರಾಜ ರಾಮಣ್ಣನವರ ತೀರ್ಥಯಾತ್ರೆಯ ವರುಷಗಳು ಈ ಅವಧಿಯ ಪ್ರಮುಖ ಕೃತಿಗಳು. ಬಡತನ, ಅವಮಾನ, ಕ್ರೌರ್ಯ, ಹಿಂಸೆ, ಶೋಷಣೆ ಇವುಗಳೆಲ್ಲ ಇಲ್ಲಿನ ಆತ್ಮಕಥನಗಳಲ್ಲಿ ಕಂಡುಬರುವ ಸಾಮಾನ್ಯವಾದ ಅಂಶಗಳಾಗಿವೆ. ಈ ಎಲ್ಲವುಗಳನ್ನು ಅನುಭವಿಸಿದ ಮನುಷ್ಯ ವಿಷಾದ, ಅಸಹನೆ, ಅಕ್ರೋಶ, ಹೋರಾಟ, ಸಂಘಟನೆ ಎಲ್ಲವನ್ನು ಅವಲಂಬಿಸುವುದು ಅನಿವಾರ್ಯವಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ಈ ಅವಮಾನವೀಯ ಅಂಶಗಳು ಚಾಲ್ತಿಯಲ್ಲಿರುವುದು ನಾಚಿಕೆಗೇಡಿನ ಸಂಗತಿ. ಈ ಎಲ್ಲಾ ಆತ್ಮಚರಿತ್ರೆಗಳು ಶೋಷಿತ ವ್ಯಕ್ತಿಯ ಆತ್ಮಚರಿತ್ರೆಯಾಗಿಯಷ್ಟೇ ಉಳಿಯದೆ, ಶೋಷಕರು ಹಾಗೂ ಸಮಗ್ರ ಸಮಾಜದ ಆತ್ಮ ವಿಮರ್ಶೆಗೆ ಕಾರಣವಾಗಿಸುತ್ತವೆ ಎಂಬುದು ಗಮನಾರ್ಹ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಭೂಮಿ, ಜನವಸತಿ, ಜನ, ದೇವಾಲಯ, ಕಾರ್ಯಾಲಯ ಮುಂತಾದ ಕಡೆಗಳಲ್ಲೆಲ್ಲ ಅಸ್ಪೃಶ್ಯತೆ ಕಾಡಿದ್ದು, ಅದಕ್ಕಾಗಿ ಸಂಘಟಿತ ಹೋರಾಟ ಕೈಗೊಂಡು ಪ್ರತಿಹಿಂಸೆಗೂ ಕೈಹಾಕಬೇಕಾಗಿ ಬಂದ ದುರಂತ ವಾಸ್ತವವನ್ನು ಚಿತ್ರಿಸುತ್ತವೆ ಪ್ರಸ್ತುತ ಕೃತಿಗಳು ಸಾಮುದಾಯಿಕ ಬದುಕಿನಲ್ಲಿ ಪರಸ್ಪರ ಅಗತ್ಯವಾದಂಥ ನೆಲೆಯಲ್ಲೂ ಮನುಷ್ಯ ಸಮುದಾಯವೊಂದನ್ನು ದೂರವಿಡುವಂಥ ಆಚರಣೆ ಅಂಧ ಸಂಪ್ರದಾಯಗಳನ್ನು ಕಂಡಾಗ ತೀವ್ರ ಅಸಹನೆ ಮತ್ತು ಆಕ್ರೋಶ ವ್ಯಕ್ತವಾಗುವ ಅನಿವಾರ್ಯತೆಗಳು ಈ ಕೃತಿಗಳಲ್ಲಿ ಅತ್ಯಂತ ವಾಸ್ತವ ನೆಲೆಯಲ್ಲಿ ಚಿತ್ರಿತವಾಗಿವೆ.

ವೈಚಾರಿಕ ಕೃತಿಗಳು

ಸತ್ಯ ಶೋಧನೆ, ಕೋಮವಾದ ಮತ್ತು ಭಾರತೀಯ ಇತಿಹಾಸ, ಗಾಂಧಿವಾದದ ಶವಪರೀಕ್ಷೆ, ಚಾರಿ‌ತ್ರಿಕ ವ್ಯಾಖ್ಯಾನಗಳು ಮತ್ತು ಭಾರತೀಯ ಸಮಾಜವಾದದ ಧರ್ಮ ನಿರಪೇಕ್ಷ್ಯೀಕರಣ, ಖಾಕಿ ಚೆಡ್ಡಿ ಕೇಸರಿ ಬಾವುಟ, ದಾರು ಪರತಿಮಾನ ಪೂಜಿವೆ, ವಿಮೆಟ್ನಾಮ್‌ ಆನೆಯನ್ನು ಮಣಿಸಿದ ಮಿಡತೆಗಳು, ವಸಾಹತು ಶಾಹಿ ಮತ್ತು ವಿಮೋಚನೆ, ಹಿಂದುತ್ವ, ಇತಿಹಾಸ ಮತ್ತು ಇಸ್ಲಾಂ ಮುಂತಾಗಿ ಬಹಳಷ್ಟು ವೈಚಾರಿಕ ಕೃತಿಗಳು ಪ್ರಕಟವಾಗಿವೆ. ಜಾತಿ, ಧರ್ಮ, ದೇಶ, ಭಾಷೆ, ಗಡಿ, ಸಂಕೇತಗಳು, ದೇವರು, ಪೂಜೆ, ಯಜಮಾನ್ಯ ಧೋರಣೆ ಈ ಏನೆಲ್ಲ ಅಂಶಗಳು ಮನುಷ್ಯ ಸಮುದಾಯವನ್ನು ಬಾಧಿಸುತ್ತಿವೆ ಎಂಬ ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿಚಾರಪ್ರಜ್ಞೆ ಜಾಗೃತವಾಗುತ್ತದೆ. ಸ್ವಾತಂತ್ರ್ಯೋತ್ತರ ಭಾರತ ಈ ಮೇಲೆ ಹೇಳಿದ ಅಂಶಗಳೆಲ್ಲದರಿಂದಲೂ ನಾನಾ ಬಗೆಯ ಪರಿಣಾಮಗಳಿಗೆ ಒಳಗಾಗಿದೆ. ಸಮುದಾಯ ಪ್ರಜ್ಞೆಗಿಂತಲೂ ಜಾತಿ, ಮತ, ಭಾಷೆ, ದೇವರು ಮುಖ್ಯವಾದಾಗಲೆಲ್ಲ ಕೋಮುವಾದ ಮೇರೆ ಮೀರಿ ಬೇಳೆಯುತ್ತದೆ ಎಂಬುದನ್ನು ಈ ಎಲ್ಲ ಕೃತಿಗಳು ಬಹಳ ಸೂಕ್ಷ್ಮವಾಗಿ ಪ್ರತಿಪಾದಿಸುತ್ತವೆ. ಅಹಿಂಸೆ, ಸಂಹಿಷ್ಣುತೆಯನ್ನು ಜೀವನದ ಗಂಭೀರ ಮೌಲ್ಯಗಳನ್ನಾಗಿ ಪ್ರತಿಪಾದಿಸುತ್ತಾ ಬಂದಿರುವ ಭಾರತದಂತಹ ದೇಶದಲ್ಲಿ ಮತೀಯವಾದವು. ವಿಚಿತ್ರವಾಗಿ ಬೆಳೆದಿರುವುದು ವಿಸ್ಮಯವೆನಿಸುತ್ತದೆ. ವೈಚಾರಿಕಪ್ರಜ್ಞೆ ಜಾಗೃತವಾಗದಿರುವ ಭಾರತದಂಥ ಮೂರನೆಯ ಜಗತ್ತಿನ ರಾಷ್ಟ್ರಗಳಲ್ಲಿ ಇಂದು ಈ ಮೇಲಣ ಅಂಶಗಳೆಲ್ಲ ತೀರಾ ಭಾವನಾತ್ಮಕ ಹಂತಕ್ಕೆ ತಲುಪಿ ಮನುಷ್ಯ ಸಮಾಜದಲ್ಲಿ ಪರಸ್ಪರ ಸಂಘರ್ಷಕ್ಕೆ ಕಾರಣವಾಗಿರುವುದನ್ನು ಈ ಎಲ್ಲ ಕೃತಿಗಳು ಮನಗಾಣಿಸುತ್ತವೆ. ನವ ವಸಹಾತುಶಾಹಿಯು ಭಾರತದಂಥ ಮೂರನೆಯ ಜಗತ್ತಿನ ರಾಷ್ಟ್ರಗಳನ್ನು ತನ್ನ ಕಬಂಧ ಬಾಹುಗಳಲ್ಲಿ ಹಿಡಿಯಲು ಇಂಥ ವಿಚಾರಗಳೇ ಮುಖ್ಯ ಕಾರಣಗಳಾಗಿವೆ. ಈ ಮೇಲಣ ಕೃತಿಗಳು ಈ ಕಾರಣದಿಂದಾಗಿಯೇ ಭಾರತದಲ್ಲಿನ ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಕಾಲಗಳಲ್ಲಿ ಸಂಭವಿಸಿರುವ ಕೋಮುಗಲಭೆಗಳು, ಅದಕ್ಕೆ ಮೂಲಕಾರಣವಾದ ಸಮಾಜಿಕ ಅಸಮಾನತೆಯನ್ನು ನಿಖರವಾದ ಚರ್ಚೆಗೆ ಒಳಪಡಿಸುತ್ತವೆ. ವಾಸ್ತವ ಸತ್ಯವನ್ನು ಕಂಡರಿಸಬೇಕಾದರೆ ಜಾತ್ಯಾತೀತವಾದ ದೃಷ್ಟಿಕೋನವನ್ನು ರೂಢಿಸಿಕೊಳ್ಳಬೇಕೆಂಬುದನ್ನು ಪ್ರಸ್ತುತ ಕೃತಿಗಳಲ್ಲಿ ಪ್ರತಿಪಾದಿಸಲಾಗಿದೆ. ಈ ಶತಮಾನ ಎರಡು ಮಹಾನ್‌ ಅನ್ವೇಷಣೆಗಳನ್ನು ಕಂಡಿದೆ. ಮೊದಲನೆಯದು ಮಾನವತಾವಾದದ ಮಹಾನ್‌ ಮೂರ್ತಿ ಮಹಾತ್ಮ ಗಾಂಧೀಜಿ ಮತ್ತೊಂದು ಅಣುಬಾಂಬ್‌. ಆಶಿಶ್‌ ನಂದಿಯೇ ಮೊದಲಾದವರೆಲ್ಲ ಗಾಂಧೀಜಿಯ ಹತ್ಯೆಯನ್ನು ಶತಮಾನದಲ್ಲಿ ಮಾನವ ಸಮುದಾಯ ಕಂಡುಂಡ ಮಹಾನ್ ದುರಂತವಾಗಿ ವಿಶ್ಲೇಷಿಸಿದ್ದಾರೆ. ಇನ್ನು ಅಣುಬಾಂಬ್ ಮತೀಯವಾದಿಗಳು ಮತ್ತು ವಸಾಹತುಶಾಹಿ ಶಕ್ತಿಗಳ ಕೈಯಲ್ಲಿ ಸಿಕ್ಕು ಮಾಡುತ್ತಿರುವ ಅಟ್ಟಹಾಸವನ್ನು ಬಣ್ಣಿಸಲದಳವಾಗಿದೆ. ಅಲ್ಲದೆ ಇಲ್ಲಿನ ಕೃತಿಗಳು ಕೆಲವು ದೇಶಿಯ ಜ್ಞಾನ ಪರಂಪರೆಗಳ ಬಗ್ಗೆಯೂ ಚರ್ಚಿಸಿ ಆ ಅರಿವನ್ನು ಮನಗಾಣುವತ್ತ ಹೆಚ್ಚು ಒತ್ತು ನೀಡುತ್ತವೆ.

ಇಲ್ಲಿ ಗಮನಿಸಬಹುದಾದ ಎರಡು ಮುಖ್ಯ ಕೃತಿಗಳೆಂದರೆ ಮೂರನೆಯ ಜಗತ್ತಿನ ರಾಷ್ಟ್ರಗಳಾದ ಕೀನ್ಯಾ ಮತ್ತು ವಿತ್ಯಟ್ನಾಮ್‌ಗಳಲ್ಲಿ ವಸಾಹತುಶಾಹಿ ವಿರುದ್ಧ ಪ್ರತಿರೋಧದ ಸಂಕಥನ ಚರಿತ್ರೆಯ ಚಿಂತನೆಗಳು. ಭಾಷಿಕ ಮತ್ತು ಆಕ್ರಮಣಶಾಲಿ ವಸಾಹತುಶಾಹಿಯನ್ನು ವ್ಯವಸ್ಥಿತವಾಗಿ ಪ್ರತಿರೋಧಿಸಿದ ವಿವರಗಳಿವೆ. ಆಫ್ರಿಕನ್ ರಾಷ್ಟ್ರಗಳು (ಮೂರನೆಯ ಜಗತ್ತಿನ ರಾಷ್ಟ್ರಗಳೆಲ್ಲವೂ ಸೇರಿದಂತೆ) ಭಾಷೆ, ಜನಾಂಗ, ರಾಜಕೀಯ ಎಲ್ಲ ಅಂಶಗಳಿಂದಲೂ ಬಿಗಿಪಾಶಕ್ಕೆ ಸಿಕ್ಕು ಬಳಲುತ್ತಿವೆ. ತನ್ನ ಭಾಷೆಯಲ್ಲಿ ಬರೆಯುವುದೇ ಅಪಮಾನಕರವೆಂಬ ಭಾವನೆ ಹುಟ್ಟಿಸುವಷ್ಟು ಪರಿಣಾಮಕಾರಿಯಾಗಿದೆ ವಸಾಹತುಶಾಹಿ ಪ್ರಜ್ಞೆ ಎಂತಲೇ ಮೂರನೆಯ ಜಗತ್ತಿನ ಬಹುತೇಕ ಪ್ರಮುಖ ಲೇಖಕರು ಮೊದಲಿಗೆ ಇಂಗ್ಲಿಷನಲ್ಲಿ ಬರೆಯಲು ಹವಣಿಸುತ್ತಾರೆ. ಕನ್ನಡದಲ್ಲಿ ಕುವೆಂಪು ಅವರೂ ಮೊದಲಿಗೆ ಇಂಗ್ಲಿಶ್‌ನಲ್ಲಿ. ಜೇಮ್ಸ್‌ಕಸಿನ್ಸ್‌ರು ಮಾತೃಬಾಷೆಯ ಬಗ್ಗೆ ಹೇಳಿದ ಮಾತುಗಳು ಕುವೆಂಪೊ ಅವರನ್ನು ಕನ್ನಡದತ್ತ ತಿರುಗಿಸಿದವು. ಕೀನ್ಯಾದ ಗೂಗಿ ವಾ ಥಿಯೊಂಗೊ ಇಂಗ್ಲಿಶ್ ಭಾಷೆಗೆ ವಿದಾಯ ಹೇಳುವ ಮೂಲಕ ವಸಾಹತುಶಾಹಿಯಿಂದ ವಿಮೋಚನೆ ಪಡೆಯುವ ಪ್ರತಿರೋಧ ತೋರಿದ್ದಾನೆ. ಅವನ ಪ್ರಕಾರ ಭಾಷೆ ‘ಆಧ್ಯಾತ್ಮಿಕ ದಾಸ್ಯಕ್ಕೆ ‘ ತಳ್ಳುವಂಥ ಬಹುಮುಖ್ಯ ಅಸ್ತ್ರ. ಮೂರನೆಯ ಜಗತ್ತಿನ ಬಹುತೇಕ ಲೇಖಕರು ಈ ದಾಸ್ಯಕ್ಕೆ ಒಳಗಾಗಿದ್ದಾರೆ. ತನ್ನ ತಾಯ ಭಾಷೆಯಿಂದ ಹೊತ್ತುಕೊಂಡು ಹೋಗಿ ಇತರರ ಭಾಷೆಯನ್ನು ಸಮೃದ್ಧಗೊಳಿಸುವ ಈ ಗೀಳು ವ್ಯಕ್ತಿಯ ಸಂವಹನ ಸಾಮರ್ಥ್ಯವನ್ನು ಒಂದು ಬಗೆಯಲ್ಲಿ ಶಂಕೆಯ ಮೂಲಕ ವಿಚಲಿತ ಗೊಳಿಸುವುದೂ ಹೌದು. ಕತ್ತಿ, ಬಂದೂಕುಗಳಿಂತಲೂ ಭಯಂಕರವಾದ ಈ ಪ್ರಜ್ಞೆಯಿಂದ ವಿಮೋಚನೆ ಪಡೆಯುವುದು ಅತ್ಯವಶ್ಯವೆಂದು ವಿಶ್ಲೇಷಿಸಿರುತ್ತಾನೆ ಗೂಗಿ.

ಈ ದಿಶೆಯಲ್ಲಿ ಸಾಮ್ರಾಜ್ಯಶಾಹಿ ಆಕ್ರಮಣವನ್ನೂ ಹಿಮ್ಮೆಟ್ಟಿಸಿದ ಸಂಕಥನವನ್ನು ಹೇಳುವ ಮತ್ತೊಂದು ಕೃತಿ ‘ವಿಯೆಟ್ನಾಮ್ ಆನೆಯನ್ನು ಮಣಿಸಿದ ಮಿಡತೆಗಳು’. ಸಂಘಟನಾತ್ಮಕ ಹೋರಾಟ ನಡೆದಲ್ಲೆಲ್ಲ ಸಾಮ್ರಾಜ್ಯಶಾಹಿ ಶಕ್ತಿಯು ಮಣಿದಿರುವುದು, ಹಿಮೆಟ್ಟಿರುವುದು ಗಮನೀಯ ಸಂಗತಿ. ಅಮೇರಿಕನ್ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಇಂದಿನವರೆವಿಗೆ ನಡೆದಿರುವ ಘಟನೆಗಳನ್ನು ಗಮನಿಸಿದಾಗ ಈ ಅಂಶ ಮನವರಿಕೆಯಾಗುತ್ತದೆ. ಪ್ರಪಂಚದ ನಕ್ಷೆಯಲ್ಲಿ ಒಂದು ಪುಟ್ಟದೇಶ ವಿಯೆಟ್ನಾಂ, ಕುಬ್ಲಖಾನ್, ಚೈನೀಯರು, ಫ್ರೆಂಚರು, ಸ್ಪ್ಯಾನಿಶ್‌ರು, ಅಮೇರಿಕನ್ನರೇ ಮೊದಲಾದವರೆಲ್ಲ ಈ ಪುಟ್ಟ ದೇಶವನ್ನು ಘಾತಿಸಿದವಾರಾಗಿದ್ದಾರೆ. ಈ ಪುಟ್ಟದೇಶ ತನ್ನೆಲ್ಲ ಶಕ್ತಿ ಸಾಮರ್ಥ್ಯವನ್ನು ಸಂಘಟಿಸಿ ಈ ಎಲ್ಲ ಸಾಮ್ರಜ್ಯ ಶಾಹಿಗಳನ್ನು ಪ್ರತಿಹಂತದಲ್ಲೂ ಎದುರಿಸಿ ಹೆಮೆಟ್ಟಿಸಿದ ವಿವರಗಳು ಭಾರತದಂತಹ ಮೂರನೆಯ ಜಗತ್ತಿನ ರಾಷ್ಟ್ರಗಳಿಗೆ ಒಂದು ಮುಖ್ಯವಾದ ಆಕರಗಳಾಗುತ್ತವೆ. ‘ಆಪತ್ತಿಗಾಗುವನು ನೆಂಟ’ ಎಂಬ ಮಾತುಂಟು. ಆ ನೆಂಟನೇ ಕೊನೆಗೆ ಭಂಟನಾಗಿ ತನ್ನ ಧಾರ್ಷ್ರ್ಯವನ್ನು ತೋರ್ಪಡಿಸುವ ಪ್ರಕ್ರಿಯೆ ಇತ್ತೀಚಿನ ಗಮನಾರ್ಹ ಚರಿತ್ರೆ, ಫ್ರೆಂಚ್, ಜಪಾನ್‌ಗಳ ಬಾಹುಪಾಶದಿಂದ ಮುಕ್ತಿಗಾಗಿ ಅಮೇರಿಕ ವಿಯೆಟ್ನಾಮ್ ನ ನೆರವಿಗೆ ಬಂದಿತು. ಮುಂದೆ ಅಮೇರಿಕಾವೇ ವಿಯೆಟ್ನಾಮ್‌ನ ಸ್ವಾತಂತ್ರ್ಯಕ್ಕೆ ವಿಘ್ನವನ್ನುಂಟು ಮಾದುತ್ತದೆ. ಹೀಗೆ ವಿಯೆಟ್ನಾಮ್ ನಿರಂತರ ಯುದ್ಧಗಳ ಮೂಲಕವೇ ತನ್ನ ಅಸ್ತಿತ್ವವನ್ನು ತಾನು ಪ್ರಕಟಗೊಳಿಸಿ ಕೊಳ್ಳಬೇಕಾಗುವ ಅನಿವಾರ್ಯತೆ ಉಂಟಾಗುತ್ತದೆ. ಉಳಿದೆಲ್ಲ ದೇಶಗಳಿಗಿಂತ ಅಮೇರಿಕಾದಿಂದ ವಿಯೆಟ್ನಾಮ್ ಮುಕ್ತಿ ಪಡೆದ ವಿಚಾರಗಳು ಸಮಕಾಲೀನವಾಗಿ ಬಹಳ ಮುಖ್ಯವಾದುವು ಮತ್ತು ಅತ್ಯಂತ ರೋಚಕವಾದುವು. ಎರಡನೆಯ ಮಹಾಯುದ್ಧ ನಂತರ ಪ್ರಪಂಚದಲ್ಲಿಯೇ ಅತ್ಯಂತ ಪ್ರಭಾವಶಾಲಿಯಾದ ರಾಷ್ಟ್ರ ಅಮೇರಿಕಾ. ವಿನೂತನವಾದ ತಂತ್ರಜ್ಞಾನಗಳು, ವೈಜ್ಞಾನಿಕ ಅನ್ವೇಷಣೆಗಳು, ಪ್ರಬಲ ಶಸ್ತ್ರಾಸ್ತ್ರಗಳು ಅತ್ಯಂತ ತರಬೇತಿಯಿಂದ ನುರಿತಂಥ ಸೈನಿಕರಿಂದ ಸುಸಜ್ಜಿತವಾದ ಅಮೇರಿಕಾವನ್ನು ೧೯೫೪ ರಿಂದ ೧೯೭೫ ರವರೆಗೆ ವಿಯೆಟ್ನಾಮಿಗರು ಎದುರುಸಿ ಸ್ವತ್ರಂತ್ರರಾಗುತ್ತಾರೆ. ಜನಸಂಘಟನೆಯೊಂದನ್ನುಳಿದರೆ ಮತ್ತಾವ ಪ್ರಬಲ ಅಸ್ತ್ರಗಳೂ ಇವರಲ್ಲಿರಲಿಲ್ಲ. ಆದರೂ ತಮ್ಮ ಸ್ವಾತಂತ್ರ್ಯಕ್ಕಾಗಿ ಹಗಲಿರುಳೆನ್ನದೆ ಹೋರಾಡಿ ಅಮೇರಿಕಾ ಅಲ್ಲಿಂದ ಕಾಲ್ತೆಗೆಯುವಂತೆ ಮಾಡುವ ವಿವರಗಳು ಇಲ್ಲಿವೆ. ‘ಜನಶಕ್ತಿಯು ಎದುರು ಅಣುಶಕ್ತಿಯು ಈಡಲ್ಲ’ ಎಂಬ ನೀತಿ ಪಾಠವನ್ನು ಜಗತ್ತಿಗೆ ತೋರ್ಪಡಿಸಿದ್ದು ಪುಟ್ಟದೇಶ ವಿಯೆಟ್ನಾಮ್. ವಿಶ್ವದ ಚರಿತ್ರೆಯಲ್ಲಿ ಇಂಥವು ಅತ್ಯಂತ ಗಮನೀಯವಾಗಿ ಉಳಿಯುವಂತಹ ಅಂಶಾಗಳಾಗಿವೆ.

ಈ ದಶಕದಲ್ಲಿ ವಿಜ್ಞಾನ, ತಂತ್ರಜ್ಞಾನ, ವೈದ್ಯ, ಯೋಗ, ವಾಸ್ತುವನ್ನು ಕುರಿತಂತೆ ಕೃತಿಗಳು ಬಂದಿವೆ, ಇತ್ತೀಚೆಗೆ ಹೆಚ್ಚು ಜನಪ್ರಿಯಾವಾಗುತ್ತಿರುವುದು ವಾಸ್ತು ಶಾಸ್ತ್ರ. ಎಂತಲೇ ಸುಮಾರು ಹತ್ತು ಕೃತಿಗಳು ಅನುವಾದವಾಗಿವೆ. ಒಟ್ಟಾರೆ ಸೃಜನೇತರ ಅನುವಾದಗಳು ಕನ್ನಡ ಭಾಷಾಂತರ ಚರಿತ್ರೆಯಲ್ಲಿ ಸಾಂಸ್ಕೃತಿಕ, ಸಾಮಾಜಿಕ, ವೈಚಾರಿಕ ಹಾಗೂ ಚಾರಿತ್ರಿಕ ಚಿಂತನೆಗಳನ್ನು ಕಟ್ಟಿಕೊಟ್ಟಿವೆ. ಮತ್ತೊಂದು ವಿಶಿಷ್ಟ ಗಮನೀಯ ಅಂಶವೆಂದರೆ, ನಮ್ಮ ನೆರೆಯ ಭಾಷೆಗಳಿಂದ ನೇರವಾಗಿ ಬರುತ್ತಿರುವ ಕೃತಿಗಳು ಹೆಚ್ಚಾಗಿರುವುದು. ಇದರಿಂದ ಒಟ್ಟಾರೆ ಭಾರತೀಯ ಚಿಂತನ ಕ್ರಮವನ್ನು ಅರಿಯುವುದು ಸಾಧ್ಯ.