ಇಂದು ನಮ್ಮ ಸಾಂಸ್ಕೃತಿಕ ವಲಯದಲ್ಲಿ ತೀವ್ರವಾಗಿ ಕೇಳಿಸುತ್ತಿರುವ ಹಾಗೂ ಕಾಣಿಸುತ್ತಿರುವ ನಿರ್ವಸಾಹತೀಕರಣ ಪ್ರಕ್ರಿಯೆಯ ಫಲ – ಮೌಖಿಕ ಕಾವ್ಯಗಳ ಪಠ್ಯೀಕರಣ, ವ್ಯಾಖ್ಯಾನ, ಮರುವ್ಯಾಖ್ಯಾನ ಹಾಗೂ ವರ್ತಮಾನದೊಂದಿಗೆ ಅವುಗಳನ್ನು ಮುಖಾಮುಖಿಯಾಗಿಸುತ್ತಿರುವ ಪ್ರಯತ್ನ. ಸ್ವಾತಂತ್ರ್ಯಪೂರ್ವದಲ್ಲಿ ರಾಷ್ಟ್ರೀಯತೆಯ ದಿಕ್ಕಿನಲ್ಲಿ ಜಾನಪದ ಸಂಗ್ರಹ, ಹಾಡಿಕೆಯಲ್ಲಿ ನಮ್ಮವರು ತೊಡಗಿದರೆ, ೭೦ ನೆ ದಶಕದಲ್ಲಿ ಕ್ಷೇತ್ರಕಾರ್ಯ, ಪ್ರಕಾರ ಅಧ್ಯಯನದಲ್ಲಿ ನಮ್ಮ ಶೈಕ್ಷಣಿಕ ವಲಯ ತಲ್ಲೀನವಾಯಿತು. ಆಗ ಎಲ್ಲರ ಕಣ್ಣ ಮುಂದಿದ್ದುದು ವಿದೇಶಗಳ ಸಾಹಿತ್ಯ ವಿಭಾಗ ರೂಪಿಸಿದ ಜಾನಪದ ಅಧ್ಯಯನದ ಮಾದರಿಗಳು ಹಾಗೂ ಮಾನವಶಾಸ್ತ್ರ ಸ್ರೂಪಿಸಿದ ರೂಪಿಕೆಗಳು. ಆದರೆ ೨೦ನೆಯ ಶತಮಾನದ ಕೊನೆಯ ದಶಕದಲ್ಲಿ ವಸಾಹತುಶಾಹಿ ದೇಶಗಳು ತಮ ಆಲೋಚನಾ ವಿಧಾನದಲ್ಲಿ ಬದಲಾವಣೆ ತಮ್ಮನ್ನು ಒಡ್ಡಿಕೊಳ್ಳುತ್ತಾ ದೇಸೀಯ ಜ್ಞಾನಪರಂಪರೆಯ ಶೋಧ ಹಾಗೂ ತಮ್ಮ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸಿಕೊಳ್ಳುವಲ್ಲಿ ಹೊಸದಾರಿಯತ್ತ ಕ್ರಮಿಸತೊಡಗಿದವು. ಅದಕ್ಕೆ ಜನಪದ ಕಾವ್ಯಗಳು ಸೂಕ್ತ ವಾಹಕವಾದವು. ಭಾರತದಂತಹ ಬಹುಸಂಸ್ಕೃತಿಯ ದೇಶದ ಬಹುತ್ವವನ್ನು ನಿರ್ವಚಿಸಲು ಹಾಗೂ ವಸಾಹತುಶಾಹಿ ಸಂಸ್ಕೃತಿ ತಂದ ಏಕಾಕಾರದ ಕಲ್ಪನೆಯನ್ನು ಮೀರಲು ಜಾನಪದ ಆದರಲ್ಲೂ ವಿಶೇಷವಾಗಿ ಜನಪದ ಮಹಾಕಾವ್ಯಗಳ ಅಧ್ಯಯನ ನೆರವಾದವು. ನಾಡಿನ ನೂರಾರು ಬುಡಕಟ್ಟು ಹಾಗೂ ಹಿಂದುಳಿದ ಸಮುದಾಯಗಳ ನಡುವೆ ಮಾತ್ರ ಆತ್ಮರತಿಗಾಗಿ ಮಾತ್ರ ಪಿಸುಗುಟ್ಟಲಾಗುತ್ತಿದ್ದ ಅಥವಾ ಆಚರಣಾತ್ಮಕ ಸಂದರ್ಭದಲ್ಲಿ ಏರು ಧ್ವನಿಯಲ್ಲಿ ಅಪೂರ್ಣವಾಗಿ ಹಾಡಲಾಗುತ್ತಿದ್ದ ಕಾವ್ಯಗಳು ಇದೀಗ ಕಳೆದ ದಶಕದಲ್ಲಿ ಮೊದಲಬಾರಿಗೆ ವೈಜ್ಞಾನಿಕ ದಾಖಲಾತಿಗೆ ಒಳಗಾದವು. ಕಿವಿಗೆ ಮಾತ್ರ ಸೀಮಿತವಾಗಿದ್ದ ಕಾವ್ಯಗಳು ಅಕ್ಷರರೂಪತಾಳಿ ಓದುವ, ಬಗೆವ, ಆ ಮೂಲಕ ಹಲವು ಬಗೆಯ ಅನುಸಂಧಾನಕ್ಕೆ ಗುರಿಯಾದವು. ಜನಪದ ಕಾವ್ಯ ಕಥನಗಳನ್ನು ಶಿಷ್ಟ ಕಾವ್ಯಗಳ ನೇರಕ್ಕೆ ನೋಡಲಾಗದೆಂದೂ, ಆಶಯ ಹಾಗೂ ಆಕೃತಿಗಳೆರಡರಲ್ಲೂ ಬೇರೆ ಮಾದರಿಯವು ಎನ್ನುವ ತಿಳಿವಳಿಕೆ ಗ್ರಹಿಕೆಗೆ ಬಂದಿತು. (ಬೊರಲಿಂಗಯ್ಯ ೧೯೯೭) ನೆಲೆಸಿದ ಸಂಸ್ಕೃತಿಗೆ ವಿರುದ್ಧವಾದ ಕೆಳವರ್ಗದ ಅದೃಶ್ಯ ಸಂಸ್ಕೃತಿಯನ್ನು ಮೂರ್ತಗೊಳಿಸಿ ಪರ್ಯಾಯ ಸಂಸ್ಕೃತಿಯನ್ನು ನಿರ್ಮಾಣ ಮಾಡುವ ಉದ್ದೇಶ ಈ ಎಲ್ಲ ಕಾವ್ಯಗಳೊಳಗೆ ಇದ್ದಂತೆ ಭಾಸವಾಗುತ್ತದೆ. ಕೆಳವರ್ಗದಲ್ಲಿ ಕಾಣಿಸುವ ಸಂಸ್ಕೃತೀಕರಣ ಪ್ರಕ್ರಿಯೆ ಹಾಗೂ ತಮ್ಮ ಜಾತಿಯ ಅನನ್ಯತೆಯನ್ನು ಉಳಿಸಿಕೊಳ್ಳುವ ಛಲ ಈ ಎರಡರ ನಡುವೆಯೇ ಜನಪದ ಕಾವ್ಯಗಳು ಅದೂ ಜನಪದ ಕಾವ್ಯಗಳು ಅದೂ ಜನಪದ ಕಾವ್ಯ ಕಥನಗಳು ಹುಟ್ಟಿಬರುತ್ತವೆ ಎಂದೂ ಜಾತಿ ನಿಬದ್ಧವಾದ ಭಾರತೀಯ ಸಮುದಾಯದ ಜನಪದ ಕಾವ್ಯಗಳಿಗೆ ಇದರಿಂದ ವಿಶಿಷ್ಟರೂಪ ಬಂದಿರುವುದಾಗಿಯೂ ಡಾ. ಸಿ. ಎನ್‌. ರಾಮಚಂದ್ರನ್‌ ಬರೆಯುತ್ತಾರೆ (ರಾಮಚಂದ್ರನ್‌ ೨೦೦೧ : ೩) ಕಾವ್ಯ ಸಂಯೋಜನಗಳ್ಳುವ ಪ್ರಕ್ರಿಯೆಯ ದೃಷ್ಟಿಯಿಂದಲು ಜನಪದ ಕಾವ್ಯಗಳು ಶಿಷ್ಟ ಕಾವ್ಯಗಳಿಗಿಂತ ಭಿನ್ನ. ಶಿಷ್ಟ ಕಾವ್ಯಗಳು ಒಮ್ಮೆ ಕವಿಯ ಪ್ರತಿಭಾ ಬಲದಿಂದ ಆಕಾರ ಪಡೆದು ಅಕ್ಷರಕ್ಕಿಳಿದರೆ ಮುಗಿಯಿತು. ಆದರೆ ಮುಂಟೇಸ್ವಾಮಿ ಕತೆ, ಜುಂಜಪ್ಪನ ಕತೆ ಇವೆಲ್ಲ ಅದನ್ನು ಹಾಡುವ ನೀಲಗಾರರ ಅಥವಾ ಕಾಡುಗೊಲ್ಲರ ಬದುಕಿನ ಒಂದು ಉತ್ಪನ್ನ. ಅವರ ಬದುಕಿನ ಭಾಗವೇ ಆಗಿರುವ ಹಬ್ಬ, ಜಾತ್ರೆ, ಆಚರಣೆಗಳಿಗೂ ಈ ಕಾವ್ಯಗಳಿಗೂ ಒಂದು ನಂಟು ಇರುತ್ತದೆ. ಆಯಾ ದಿನದ ಒಂದು ಮನಸ್ಥಿತಿ, ತಾವಿರುವ ತಾಣ, ಸುತ್ತಲಿನ ಪ್ರಕೃತಿ, ತಾವು ಕಟ್ಟಿ ಹೇಳುತ್ತಿರುವ ಕಾವ್ಯವನ್ನು ಕೇಳುವವರ ಮನಸ್ಥಿತಿ ಎಲ್ಲದರ ಒಟ್ಟು ಫಲಿತದ ರೂಪದಲ್ಲಿ ಕಾವ್ಯ ಮೈದೋರುತ್ತಾ ಆಕಾರ ಪಡೆಯುತ್ತಾ ಹೋಗುತ್ತದೆ. ಅವರು ಇಂದು ಕಟ್ಟುವ ಕಾವ್ಯ ನಿನ್ನೆಯದಲ್ಲ. ಅದಕ್ಕೆ ಒಂದು ನಿಶ್ಚಿತ ಪೂರ್ವನಿರ್ಧಾರಿತ ಆಕೃತಿ ಇರುವುದಿಲ್ಲ. ಕವಿಯ ಮಾನಸ ಪಠ್ಯವು ಸ್ಥಿರ ಪಠ್ಯವಲ್ಲ, ಚರ ಪಠ್ಯ. ಕತೆಯ ಹಂದರ, ಪಾತ್ರಗಳ ಗುಣಶೀಲಗಳು, ಘಟನಾವಳಿಗಳು, ನಿರೂಪಣೆಯ ಲಯ ವೈವಿಧ್ಯ ಎಲ್ಲವೂ ಪರಂಪರೆಯ ಬಲದಿಂದಾಗಿ ಜನಪದ ಕವಿಗೆ ಖಚಿತವಾಗಿ ತಿಳಿದಿರುತ್ತದೆ. ಪರಂಪರೆಯಿಂದ ಪಡೆದ ಕಾವ್ಯಾನುಭವವು ನಿಗದಿತ ಸಂದರ್ಭದಲ್ಲಿ ವರ್ತಮಾನದ ಚಹರೆಯನ್ನು ಪಡೆದು ಕಾವ್ಯವನ್ನು ನಿರ್ಮಿಸುತ್ತದೆ. ಇಂತಹ ಕಾವ್ಯ ನಿರ್ಯಾತನನ್ನು ಕಥಾನಿರೂಪಕ, ಗಾಯಕ ಎಂಬ ಹೆಸರಿಂದ ಕರೆಯದೆ ಜನಪದ ಕವಿಯೆಂದೇ ಕರೆಯುವದು ಹೆಚ್ಚು ಸರಿ. ಇಂತಹ ಜನಪದ ಕಾವ್ಯಕ್ಕೆ ಕಾಲದ ಕಟ್ಟು ಹಾಕುವುದು ತರವಲ್ಲ. ಆದರೆ ಶಿಷ್ಟ ಮನಸ್ಸು ಕಾವ್ಯ ಹುಟ್ಟಿದ ಕಾಲವನ್ನು ವಿಚಾರಿಸುತ್ತಲೇ ಇರುತ್ತದೆ. ಇದನ್ನೇ ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ ಶಿಷ್ಟಕಾವ್ಯವೆನ್ನುವುದು ತನ್ನ ಜನ್ಮದ ಕಾಲಸೂತಕದಿಂದ ನಿರ್ಬಂಧಿತವಾಗಿರುತ್ತದೆ. ಆದರೆ ಜನಪದ ಕಾವ್ಯವೊಂದು ಮತ್ತೆ ಮತ್ತೆ ಹುಟ್ಟುತ್ತಲೇ ಇರುತ್ತದೆ, ವರ್ತಮಾನದ ತಲ್ಲಣಗಳಿಗೆ ಪ್ರತಿಸ್ಪಂದಿಸುತ್ತಲೇ ಇರುತ್ತದೆ. ಆಕಾರ, ಆಶಯ, ಸ್ವರೂಪಗಳಲ್ಲಿ ಮತ್ತೆ ಮತ್ತೆ ಹೊಸತನವನ್ನು ಪಡೆಯುತ್ತಲೇ ಇರುತ್ತದೆ. ಹೀಗಾಗಿ ಜನಪದ ಕಾವ್ಯಗಳ ಭಿನ್ನ ಭಿನ್ನ ಪಠ್ಯಗಳನ್ನು ಪಾಠಾಂತರಗಳೆಂದು ಪರಿಗಣಿಸಿದೆ, ಒಂದು ಒಳ್ಳೆಯದು ಇನ್ನೊಂದು ಸಾಮಾನ್ಯ ಎಂದು ಗುಣದಲ್ಲಿ ಶ್ರೇಣೀಕರಣ ಮಾಡದೆ ಒಂದೊಂದನ್ನೂ ಸ್ವತಂತ್ರ ಪಠ್ಯವೆಂದೇ ಪರಿಗಣಿಸಿ ಓದುತ್ತಲೇ ಇರಬೇಕು. ಅರ್ಥಶೋಧಕ್ಕೆ ಬಳಸುತ್ತಲೇ ಇರಬೇಕು. ಮಂಟೇಸ್ವಾಮಿ ಅಥವಾ ಮಲೆಮಾದೇಶ್ವರ ಕಾವ್ಯದ ಒಂದು ಪಠ್ಯ ಓದಿ ಕಾವ್ಯ ಓದಿಯಾಯಿತು ಎನ್ನುವಂತಿಲ್ಲ, ಒಂದರಿಂದಲೇ ಅದರ ಜೀವದ್ರವ್ಯವನ್ನು ಪಡೆಯುವಂತಿಲ್ಲ. ಇಂತಹ ಜನಪದ ಕಾವ್ಯವನ್ನು ಓದುವ, ಗ್ರಹಿಸುವ ಹಾಗೂ ಅರ್ಥೈಸುವ ನಿಟ್ಟಿನಲ್ಲಿ ತೆರೆದ ಮನಸ್ಸು ಇರಬೇಕಾಗಿದೆ. ಅಕ್ಷರ ಸಾಹಿತ್ಯ ಮೀಮಾಂಸಕರು ಸಾಗಿದ ಸವೆದ ಹಾದಿಯನ್ನು ಬಿಟ್ಟು ಹೊಸಹಾದಿಯತ್ತ ಹೊರಳಬೇಕಾಗಿದೆ. ಅಂದರೆ ನಾವೀಗ ಯಾರೋ ಕಡಿದ ರಾಜಮಾರ್ಗದಲ್ಲಿ ಸಾಗಿದೆ ಹೊಸದಾದ ಕಾಲುಹಾದಿಗಳನ್ನು ಕಡಿದು ಸಾಗಬೇಕಾಗಿದೆ.

೧೯೯೦ರ ಹಿಂದೆಯೇ ಡಾ. ಜೀಶಂಪ, ಡಾ. ಪಿ. ಕೆ. ರಾಜಶೇಕರ, ಡಾ. ರಾಗೌ ಮತ್ತಿತರರು ಜನಪದ ಮಹಾಕಾವ್ಯಗಳ ಸಂಗ್ರಹವನ್ನು ಮಾಡಿದ್ದುಂಟು. ಆದರೆ ಒಬ್ಬನೇ ಕವಿ/ಗಾಯಕನಿಂದ ಸಮಗ್ರವಾಗಿ ಒಂದು ಕಾವ್ಯವನ್ನು ಹಾಡಿಸಿ ಪಠ್ಯೀಕರಣಕ್ಕೆ ಗುರಿಪಡಿಸಿದ ಕಾರ್ಯ ಮೊದಲಬಾರಿಗೆ ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಕಾವ್ಯಮಾಲೆಯ ಮೂಲಕ ನಡೆಯಿತು ಎನ್ನುವುದು ಐತಿಹಾಸಿಕ ಸತ್ಯ. ಡಾ. ಹಿ. ಚಿ. ಬೋರಲಿಂಗಯ್ಯನವರ ನೇತೃತ್ವದಲ್ಲಿ ಒಂಬತ್ತು ‘ಬುಡಕಟ್ಟು ಕಾವ್ಯಗಳು ‘ ಪ್ರಕಟವಾದುವು. ಈ ಕಾವ್ಯ ಪ್ರಕಟಣೆಯ ಬಳಿಕ ಕಾವ್ಯಗಳ ಕಡೆಗೆ ಕಣ್ಣು ಹಾಯಿಸದೆ ಇದ್ದ ಅನೇಕ ಕನ್ನಡದ ವಿಮರ್ಶಕರು ಜಾನಪದ ಕಾವ್ಯಗಳ ಓದಿನಿಂದ ಕನ್ನಡದ ಕಾವ್ಯಮೀಮಂಸೆಗೆ ಹೊಸ ಆಯಾಮ ಪಡೆಯುವ ಸಾಧ್ಯತೆ ಇದೆ ಎನ್ನುವುದನ್ನು ಒಪ್ಪಿಕೊಂಡರು. ಸಂಸ್ಕೃತಿ ಚಿಂತಕರು ಹೊಸ ಪರಿಬಾಷೆಯನ್ನು ರೂಪಿಸಿಕೊಳ್ಳ ತೊಡಗಿದರು. ಡಾ. ಚಂದ್ರಶೇಖರ ಕಂಬಾರ, ಎಚ್. ಎಸ್. ಶಿವಪ್ರಕಾಶ್ ಮುಂತಾದವರು ಸೃಜನಶೀಲ ಅನುಸಂಧಾನವಾಗಿ ಈ ಕಾವ್ಯಗಳನ್ನು ಬಳಸಿಕೊಂಡರು. ಕನ್ನಡದ ಜನಪದ ಕಾವ್ಯಲೋಕದೊಳಗಿನ ಸಂಚಾರದಿಂದ ಕನ್ನಡ ಸಂಸ್ಕಿತಿಯ ಬಗ್ಗೆ ಹೊಸ ನಿರ್ವಚನವನ್ನೂ, ಜೀವಸೆಲೆಯನ್ನು ಪಡೆಯುವ ಸಾಧ್ಯತೆಯಿದೆ.

ಕಳೆದ ಒಂದು ದಶಕದಲ್ಲಿ ಕನ್ನಡದಲ್ಲಿ ಪ್ರಕಟವಾದ ಕೆಲವು ಪ್ರಮುಖ ಜನಪದ ಕಾವ್ಯಗಳನ್ನು ಪರಿಚಯಿಸುವುದು, ಅವುಗಳ ವಿಶಿಷ್ಟಾಂಶಗಳನ್ನು ಗುರುತಿಸುವುದು ನನ್ನ ಮುಂದಿನ ಕೆಲಸ.

ಕನ್ನಡ ವಿಶ್ವವಿದ್ಯಾಲಯದ ‘ಬುಡಕಟ್ಟು ಮಹಾಕಾವ್ಯ ಮಾಲೆ’ ಯಡಿ ಪ್ರಕಟವಾದ ಮೊದಲ ಕಾವ್ಯಮಂಟೇಸ್ವಾಮಿ‘. (೧೯೯೭) ಈ ಕಾವ್ಯವನ್ನು ಕಟ್ಟಿ ನಿರೂಪಿಸಿದ ಕಲಾವಿದರು ಮಹದೇವಯ್ಯ ಹಾಗೂ ಅವರ ಸಂಗಡಿಗರು. ಈ ಕಾವ್ಯದ ಸಂಪಾದಕರು ಡಾ. ಹಿ. ಚಿ. ಬೋರಲಿಂಗಯ್ಯನವರು. ಒಬ್ಬನೇ ಕವಿ ನಿರೂಪಿಸಿದ ಸಮಗ್ರ ಕಾವ್ಯವೊಂದು ಮೊದಲಬಾರಿಗೆ ಓದುಗರ ಕೈಸೇರಿದಾಗ ಆದರ ಗುಣ ಹಾಗೂ ವ್ಯಾಪ್ತಿಗೆ (೮೮೨ ಪುಟ) ಓದುಗರು ಬೆರಗಾದರು. ಅಲ್ಲಿಂದ ಜನಪದ ಕಾವ್ಯ ಕಥನಗಳ ಬಗೆಗೆ ಒಂದು ಹೊಸ ಸಂಕಥನ ಆರಂಭಗೊಂಡಿತು. ಈ ನಿಟ್ಟಿನಿಂದ ಈ ಕಾವ್ಯ ಕನ್ನಡ ಜನಪದ ಮಹಾಕಾವ್ಯ ಇತಿಹಾಸದಲ್ಲಿ ಒಂದು ಮೈಲಿಗಲ್ಲು. ಈ ಕಾವ್ಯಕ್ಕೆ ಸಂಪಾದಕರು ಮೌಲಿಕವಾದ ಒಂದು ಪ್ರಸ್ತಾವನೆ ಬರೆದು ಮಂಟೇಸ್ವಾಮಿ ಪರಂಪರೆಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಜನಪದ ಮಹಾಕಾವ್ಯದ ತಾತ್ವಿಕತೆ ಹಾಗೂ ಅನನ್ಯತೆಗಳ ಬಗ್ಗೆ ಒಂದು ಚರ್ಚೆಯನ್ನು ಹುಟ್ಟು ಹಾಕಿದ್ದಾರೆ. ಈ ಹಿಂದೆ ನಡೆದ ಕೆಲಸವನ್ನು ಗುರುತಿಸಿ ಸಂಪಾದಕರು ಅನುಭವೀ ಹಾಗೂ ಉತ್ತಮ ಕಲಾವಿದರನ್ನು ಹುಡುಕಿ ಈ ಕಾರ್ಯ (ಸಂಪಾದನ) ಕೈಗೊಳ್ಳಲಾಗಿದೆ ಎಂದಿದ್ದಾರೆ. ಹಲವು ಗಾಯಕರಿಂದ ಹಲವು ಪಠ್ಯಗಳನ್ನು ಸಂಗ್ರಹಿಸಿ ಬೇರೆ ಬೇರೆ ಪಠ್ಯದ ಉತ್ತಮಾಂಶಗಳನ್ನು ಹೆಕ್ಕಿ ಒಂದು ಕಾವ್ಯವನ್ನಾಗಿ ಸಂಪಾದಿಸುವ ಪರಂಪರೆಯನ್ನು ಮುರಿದು ಒಬ್ಬ ಕಲಾವಿದನಿಂದ ಸಮಗ್ರ ಕಾವ್ಯ ಸಂಪಾದನದ ಶಾಸ್ತ್ರೀಯ ವಿಧಾನವನ್ನು ಕನ್ನಡ ಜನಪದ ಕಾವ್ಯ ಸಂಪಾದನ ಪರಂಪರೆಯನ್ನು ಇಲ್ಲಿ ಹುಟ್ಟು ಹಾಕಿರುವುದು, ಮಹತ್ವದ ಇತ್ಯಾತ್ಮಕ ಅಂಶ. ‘ಜಗತ್ತು ಸೃಷ್ಟಿಯ ಸಾಲು’ ತೊಡಗಿ ‘ಸಿದ್ಧಪ್ಪಾಜಿ ಸಾಲು’ ಎಂಟು ‘ಸಾಲು’ ಗಳಲ್ಲಿ ಕಾವ್ಯ ಸಂಪನ್ನಗೊಂಡಿದೆ. ಪದಸೂಚಿ, ಅರ್ಥಕೋಶ, ‘ಕಲಾವಿದರೊಡನೆ ಸಂದರ್ಶನ’ ಗಳಿಂದ ಅನುಬಂಧ ಶಾಸ್ತ್ರೀಯಗೊಂಡಿದೆ. ಕಾವ್ಯದ ವಸ್ತು ನಿರ್ವಹಣೆ, ಕಲಾವಿದರ ವೈಯಕ್ತಿಕ ಬದುಕಿನ ಹಿನ್ನೆಲೆ, ಮಂಟೇಸ್ವಾಮಿ ಪರಂಪರೆಯ ಬಗೆಗೆ ಅವರ ದೃಷ್ಟಿ ಧೋರಣೆಯನ್ನು ಅನುಬಂಧದಲ್ಲಿ ಸಂಭಾಷಣೆಯ ರೂಪದಲ್ಲಿ ಸಂಪಾದಕರು ನಿರೂಪಿಸಿದ್ದಾರೆ. ಅವರ ಕಾವ್ಯ ಪಠ್ಯೀಕರಣ ಪ್ರಕ್ರಿಯೆಯ ದಟ್ಟವಾದ ವಿವರ ಒದಗಿಸುವುದು. ಕಲಾವಿದರ ಸಾಮಾಜಿಕ – ಕೌಟುಂಬಿಕ ವಿವರಗಳನ್ನು ಗ್ರಂಥದ ಪ್ರಸ್ತಾವನೆಯಲ್ಲಿ ನೀಡುವುದು, ಕಲಾವಿದರಿಗೆ ಇನ್ನಷ್ಟು ಮಾನ್ಯತೆ ಕಾವ್ಯದ ಮೊದಲಲ್ಲಿ ಕೊಡುವುದು ಜಾನಪದ ತಜ್ಞನೊಬ್ಬನ ಹೊಣೆಗಾರಿಕೆ ಎಂದು ಸ್ಭಾವಿಸಿ ಹೀಗೆ ಬರೆಯುತ್ತಿದ್ದೇನೆ.

‘ಬುಡಕಟ್ಟು ಮಹಾಕಾವ್ಯಮಾಲೆ’ಯಡಿ ಬಂದಿರುವ ಇನ್ನೊಂದು ಮಹತ್ವದ ಕೃತಿ ಮಲೆಮಾದೇಶ್ವರ ಕಾವ್ಯ (೧೯೯೭) ಸಂಪಾದಕರು ಡಾ. ಕೇಶವನ್ ಪ್ರಸಾದ್. ‘ಮಾಲೆ’ ಯ ಗೌರವ ಸಂಪಾದಕರಾದ ಪ್ರೊ. ಹಿ.ಚಿ. ಬೋರಲಿಂಗಯ್ಯನವರು ಸುದೀರ್ಘವಾದ ಪ್ರಸ್ತಾವನೆ ಬರೆದು ಮಾದೇಶ್ವರನ ಕಾವ್ಯದ ಸಾಂಸ್ಕೃತಿಕ ಹಿನ್ನೆಲೆಯನ್ನು ನೀಡಿದ್ದಾರೆ. ಕಾವ್ಯದ ವಸ್ತು ನಿರ್ವಹಣೆಯ ಅನನ್ಯತೆಯನ್ನು ಚರ್ಚಿಸಿದ್ದಾರೆ. ಕಾವ್ಯದ ಕವಿ ಹೆಬ್ಬಣಿ ಮಾದಯ್ಯನವರನ್ನು ಪರಿಚಯಿಸಿದ್ದಾರೆ. ಈ ಗ್ರಂಥದ ಸಂಪಾದನದ ವೈಧಾನಿಕತೆಯನ್ನು ಸಂಕ್ಷಿಪ್ತವಾಗಿ ತಿಳಿಯಪಡಿಸಿದ್ದಾರೆ. ‘ಬುಡಕಟ್ಟು ಮಹಾಕಾವ್ಯ’ ಎಂದು ಕರೆಯುವ ಬಗ್ಗೆ ಎದ್ದಿರುವ ಅಪಸ್ವರಕ್ಕೆ ಉತ್ತರ ನೀಡಿದ್ದಾರೆ.

ಸಂಪಾದಕ ಡಾ. ಕೇಶವನ್ ಪ್ರಸಾದ್ ಅವರು ಕಲಾವಿದ ಹೆಬ್ಬಣಿ ಮಾದಯ್ಯನವರ ಸಂದರ್ಶನದಲ್ಲಿ ಮಾದೇಶ್ವರ ಸಂಪ್ರದಾಯದ ಅನೇಕ ಸಾಂಸ್ಕೃತಿಕ ಅಂಶಗಳನ್ನು ಅನಾವರಣಗೊಳಿಸಿದ್ದಾರೆ. ಇದು ಕಾವ್ಯಾಧ್ಯಯನಕ್ಕೆ, ಉಪಯುಕ್ತ ಅಂಶ. ಆದರೆ ಸಂಪಾದಕರು ಸಂಪಾದನದ ವೈಧಾನಿಕತೆ, ಪಠ್ಯೀಕರಣದ ಸ್ವರೂಪ, ಸಂಪಾದನದ ತೊಡಕುಗಳು, ಮಾದೇಶ್ವರ ಸಂಪ್ರದಾಯದ ಸಾಂಸ್ಕೃತಿಕಾಂಶಗಳನ್ನು ಹೇಳುವ ಒಂದು ಸುದೀರ್ಘ ಪ್ರಸ್ತಾವನೆಯನ್ನು ಬರೆಯಬೇಕಿತ್ತು.

‘ಬುಡಕಟ್ಟು ಮಹಾಕಾವ್ಯ ಮಾಲೆ’ಯಡಿ ಬಂದಿರುವ ಇನ್ನೊಂದು ಸಂಪುಟ ‘ಕುಮಾರ ರಾಮ ಮತ್ತು ಕೃಷ್ಣಗೊಲ್ಲರ ಮಹಾಕಾವ್ಯ(೧೯೯೭) ಸಂಪಾದಕರು ಡಾ. ಕೆ. ಎಂ. ಮೈತ್ರಿ. ಮೊದಲ ಕಾವ್ಯ ೨೧೫ ಪುಟಗಳ ವಿಸ್ತಾರವನ್ನು ಹೊಂದಿದ್ದರೆ ಎರಡನೆಯದು ೫೫೦ ಪುಟಕ್ಕೂ ಮೀರಿ ಬೆಳೆದಿದೆ. ಮಾಲೆಯ ಗೌರವ ಸಂಪಾದಕ ಪ್ರೊ. ಹಿ. ಚಿ. ಬೋರಲಿಂಗಯ್ಯನವರ ಪ್ರಸ್ತಾವನೆಯಿಂದ ಈ ಸಂಪುಟಕ್ಕೆ ‘ತೂಕ’ ಬಂದಿದೆ. ಈ ಕಾವ್ಯದ ನಿರ್ಮಾತೃ ದರೋಜಿ ಈರಮ್ಮ ಒಬ್ಬ ಅತ್ಯಂತ ಸೃಷ್ಟಿಶೀಲ ಪ್ರತಿಭಾವಂತೆ. ಕಾವ್ಯದ ಶ್ರೇಷ್ಠತ್ವದ ಕುರಿತು ಮಾತನಾಡುವ ನಮ್ಮ ವಿಮರ್ಶಕರು ತೆರೆದ ಮನಸ್ಸಿನಿಂದ ಇಂತಹ ಕಾವ್ಯಗಳನ್ನು ಓದಬೇಕು.ಆಂಧ್ರ ಬುರ್ರ ಕಥಾ ಮಾದರಿಯಲ್ಲಿ ‘ಮೌಖಿಕ ಭಾಷಾಂತರ’ಕ್ಕೆ ಒಳಗಾದ ಕಾವ್ಯ ಇದು ಕನ್ನಡದ ಸಾಂಸ್ಕೃತಿಕ ವೀರರಲ್ಲಿ ಒಬ್ಬನಾದ ಕುಮಾರರಾಮನ ಕುರಿತ ಬಂದಿರುವ ಹಲವಾರು ಜನಪದ ಕಾವ್ಯಗಳಲ್ಲಿ ಇದು ಒಂದು. ಸಂಪಾದಕರು ಕಾವ್ಯವನ್ನು ಸಂಪಾದಿಸಿ, ಅರ್ಥಕೋಶ, ಟಿಪ್ಪಣಿ, ಬುಡ್ಗ ಜಂಗಮ ಕುಲಕೆ ಸೇರಿದ ಈರಮ್ಮನ ಪರಿಚಯ ನೀಡುವ ಶ್ರಮವನ್ನೇನೋ ಪಟ್ಟಿದ್ದಾರೆ. ಆ ಮೂಲಕ ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಒಂದು ಮಹತ್ವದ ಪಠ್ಯವನ್ನೇನೋ ನೀಡಿದರು. ಆದರೆ ಇಂತಹ ಜನಪದ ಕಾವ್ಯ ಸಂಪಾದಕರು ಕಾವ್ಯಕ್ಕೂ ಸಮುದಾಯಕ್ಕೂ ಇರುವ ಸಾಂಸ್ಕೃತಿಕ ಸಂಬಂಧ, ಕಾವ್ಯದ ಅನನ್ಯಾಂಶಗಳನ್ನು ಹೇಳುವ ಸಾಂಸ್ಕೃತಿಕ ಟಿಪ್ಪಣಿಯನ್ನು ನೀಡಲೇ ಬೇಕು. ಅದಿದ್ದಿದ್ದರೆ ಈ ಕಾವ್ಯಕ್ಕೆ ಇನ್ನಷ್ಟು ಬೆಲೆ ಬರುತ್ತಿತ್ತು. ಕುಮಾರರಾಮನನ್ನು ಕುರಿತು ಈಗಾಗಲೇ ಬಂದಿರುವ ಶಿಷ್ಟ ಕಾವ್ಯಗಳ ಎದುರು ಜನಪದ ಕಾವ್ಯಗಳನ್ನು ಮುಕಾಬಿಲೆಯಾಗಿಸಿ ನೊಡುವ ಒಂದು ಉಪಕ್ರಮಕ್ಕೆ ಈ ಕಾವ್ಯ ಪ್ರೇರಣೆ ನೀಡಬಹುದು.

ಕನ್ನಡ ವಿಶ್ವವಿದ್ಯಾಲಯದ ‘ಬುಡಕಟ್ಟು ಮಹಾಕಾವ್ಯಮಾಲೆ’ ಯಿಂದ ಹೊರಬಂದ ಇನ್ನೊಂದು ಗಮನಾರ್ಹ ಕಾವ್ಯ ಜುಂಜಪ್ಪ (೧೯೯೩) ಸಂಪಾದಕರು ಚಲುವರಾಜು. ಜುಂಜಪ್ಪನ ಕಾವ್ಯ ಗೊಲ್ಲ ಸಮುದಾಯದ ನಡುವೆ ಪರಿಚಲನಗೊಳ್ಳುತ್ತಿರುವ ಕಾವ್ಯಕಥನ. ಈ ಸಮುದಾಯದ ಬಗೆಗೆ ಈಗಾಗಲೇ ಡಾ. ತೀನಂಶಂಕರನಾರಾಯಣ, ಡಾ. ಕಾಳೇಗೌಡ ನಾಗವಾರ, ಡಾ. ಮೀರಾಸಾಬಿ ಹಳ್ಳಿ ಶಿವಣ್ಣ, ಮುಂತಾದವರು ಅಧ್ಯಯನ ನಡೆಶಿ ಜುಂಜಪ್ಪನ ಬಗ್ಗೆ ಹಾಗೂ ಆ ಕಾವ್ಯದ ಬಗೆಗೆ ಚರ್ಚೆಯೊಂದನ್ನು ಹುಟ್ಟುಹಾಕಿದ್ದರೂ ಮೊತ್ತ ಮೊದಲ ಬಾರಿಗೆ ಕಾವ್ಯವೊಂದು ಸಮಗ್ರವಾಗಿ ಬಂದಿರುವುದು ಶ್ರೀ ಚಲುವರಾಜರಿಂದಲೇ. ಅದಕ್ಕಾಗಿ ಅವರನ್ನು ಆಭಿನಂದಿಸಬೇಕು. ಸುಮಾರು ೭೮೦ ಪುಟಗಳಷ್ಟು ವಿಸ್ತಾರಕ್ಕೆ ಮೈಚಾಚಿರುವ ಈ ಕಾವ್ಯ ಬುಡಕಟ್ಟು ಸಮುದಾಯವೊಂದರ ದಟ್ಟ ಸಾಂಸ್ಕೃತಿಕ ವಿವರಗಳನ್ನು ಹಾಡಾಗಿಸಿದ್ದಕ್ಕಾಗಿ, ಅಷ್ಟೇ ಅಲ್ಲ ಮನುಷ್ಯನ ಮನಸ್ಸಿನ ಸೂಕ್ಷ್ಮಾತಿ ನೂರಾರು ಎಳೆಗಳ, ಸಿಕ್ಕುಗಳ, ವಿವರಗಳಿಗಾಗಿ ನಾವು ಗಮನಿಸಬೇಕಾಗಿದೆ. ಈ ಕಾವ್ಯದ ಕೊನೆಯಲ್ಲಿ ಈ ಕಾವ್ಯದ ಗಾಯಕ ದಾಸಪ್ಪನವರೊಂದಿಗೆ ಪ್ರೊ. ಹಿ. ಚಿ. ಬೋರಲಿಂಗಯ್ಯ ನಡೆಸಿದ ಸಂದರ್ಶನ ತುಂಬ ಉಪಯುಕ್ತವಾಗಿದೆ. ಗೊಲ್ಲ ಸಮುದಾಯದ ಜೀವನದೃಷ್ಟಿ, ಬದುಕಿನ ರೀತಿ ನೀತಿ, ಕಾವ್ಯಕ್ಕೂ ಬದುಕಿಗೂ ಇರುವ ಸಂಬಂಧ ಎಲ್ಲವೂ ಈ ಮಾತುಕತೆಯಲ್ಲಿ ಹೊರಬಂದಿದೆ. ಸಂಪಾದಕರೂ ಸಂಕ್ಷಿಪ್ತವಾದ ಒಂದು ಪ್ರಸ್ತಾವನೆ ಬರೆದು ಗೊಲ್ಲ ಸಮುದಾಯವನ್ನು, ಕಾವ್ಯಾಭಿವ್ಯಕ್ತಿಗೂ ಗಣೆಗೂ ಇರುವ ಸಂಬಂಧ, ಕಾವ್ಯದ ಪಠ್ಯೀಕರಣದ ಸಂದರ್ಭದ ತಮ್ಮ ಅನುಭವಗಳನ್ನು ನಿರೂಪಿಸಿದ್ದಾರೆ. ಕಾವ್ಯವನ್ನು ನೀಡಿದ ಕವಿ ದಾಸಪ್ಪನವರ ಬದುಕಿನ ಬಗ್ಗೆ ಇನ್ನೂ ಹೆಚ್ಚಿನ ವಿವರ ನೀಡಿದ್ದರೆ ಹೆಚ್ಚು ಅನುಕೂಲವಾಗುತ್ತಿತ್ತು.

ಧರೆಗೆ ದೊಡ್ಡವರ ಕತೆ ಮಂಟೇಸ್ವಾಮಿ ಕಾವ್ಯದ ಇನ್ನೊಂದು ಆವೃತ್ತಿ. (೧೯೬೬) ಸಂಪಾದಿಸಿದವರು ಡಾ. ರಾ. ವೆಂಕಟೇಶ ಇಂದ್ವಾಡಿ. ಹಾಡಿದವರು ಮೈಸೂರು ಜಿಲ್ಲೆಯ ಶ್ರೀಕಾರಪುದ ಪುಟ್ಟಮಾದಯ್ಯನವರ ಶಿಷ್ಯರಾದ ಶ್ರೀ ಮೊಳೆರಾಚಶೆಟ್ಟಿಯವರು. ಸಂಪಾದಕರು ಬರೆದಿರುವ ಸಂಕ್ಷಿಪ್ತ ಪ್ರಸ್ತಾವನೆಯಲ್ಲಿ ಕತೆಯಾಗಿಸಿದವರ ವಿವರವನ್ನೇನೂ ನೀಡಿಲ್ಲ. ಪಠ್ಯೀಕರಣದ ವಿವರ ಹೇಳಿಯೇ ಇಲ್ಲ. ಈ ಪಠ್ಯ ಮೈಸೂರು ಪರಿಸರಕ್ಕೆ ಸೇರಿದ್ದು ಎಂದಿದ್ದಾರೆಯೇ ಹೊರತು ಮಂಡ್ಯ ಪರಿಸರದ ಪಠ್ಯಕ್ಕಿಂತ ಯಾವ ರೀತಿಯಲ್ಲಿ ವಿಶಿಷ್ಟ, ಅದರ ಅನನ್ಯತೆ ಏನು ಎನ್ನುವುದನ್ನು ಸಂಪಾದಕರಾದವರಿಂದ ಓದುಗರು ಸಾಮಾನ್ಯವಾಗಿ ನಿರೀಕ್ಷಿಸುತ್ತಾರೆ. ಮಂಟೇಸ್ವಾಮಿ ಕಾವ್ಯದ ಇನ್ನೊಂದು ಪಠ್ಯ ಓದುಗರಿಗೆ ದೊರೆಯಿತಲ್ಲ ಎನ್ನುವುದೊಂದೇ ಸಮಾಧಾನ.

ಬುಡಕಟ್ಟು ಮಹಾಕಾವ್ಯಮಾಲೆ ಸರಣಿಯಲ್ಲಿ ಬಂದಿರುವ ಇನ್ನೊಂದು ಕುತೂಹಲದಾಯಕ ಕಾವ್ಯ ಸಂಗ್ರಹ ಮ್ಯಾಸಬೇಡರ ಕಥನಗಳು (೧೯೯೯) ಸಂಪಾದಕರು ಪ್ರಭಾಕರ ಎ. ಎಸ್‌. ಕರ್ನಾಟಕದ ಬುಡಕಟ್ಟು ಸಮುದಾಯಗಳಲ್ಲಿ ಒಂದಾದ ಮ್ಯಾಸಬೇಡರ ಜನಪದ ಕಾವ್ಯ ಕಥನಗಳ ಬಗ್ಗೆ ಮಹಿತಿ ಈ ಗ್ರಂಥದ ಮೂಲಕ ಲೋಕಕ್ಕೆ ತೆರೆದುಕೊಂಡಿದೆ. ಈ ಸಂಪುಟದಲ್ಲಿ ಗಾದ್ರಿಪಾಲನಾಯಕನ ಕಾವ್ಯ, ಜಗಳೂರಜ್ಜನ ಕಾವ್ಯ, ಕಂಪಳದೇವರ ಕಾವ್ಯ, ಬೋರೆದೇವರ ಕಾವ್ಯ, ಮಾರಮ್ಮನ ಕಾವ್ಯ – ಹೀಗೆ ಐದು ಕಾವ್ಯ ಕಥನಗಳಿವೆ. (ಸುಮಾರು ೯೦ ಪುಟ) ಹೀಗಾಗಿ ಈ ಕಥನಗಳನ್ನು ಕಥನ ಕಾವ್ಯ ಎನ್ನಲೂಬಹುದು. (ಸಂಪಾದಕರು ಮಹಾಕಥನಗಳೆಂದು ಕರೆದಿದ್ದಾರೆ) ಸಂಪಾದಕರು ಈ ಸಂಗ್ರಹಕ್ಕೆ ಬರೆದ ಪ್ರಸ್ತಾಪನೆ ನಮ್ಮ ಜನಪದ ಕಾವ್ಯಗಳನ್ನು ನೋಡುವ ದೃಷ್ಟಿಕೋನಕ್ಕೆ ಹೊಸ ಆಯಾಮವನ್ನು ಜೋಡಿಸಿದೆ. ಅವರು ಇಂತಹ ಕಾವ್ಯಗಳನ್ನು ನಮ್ಮ ನಾಡಿನ ‘ಅನುಭಾವಿ ಕಥನ’ವೆಂಬ ಹೊಸ ನಾಮಧೆಯದಿಂದ ಕರೆದು ಇಂತಹ ಕಾವ್ಯ ಹಾಗೂ ಅವು ರೂಪಿಸಿದ ಸಂಸ್ಕೃತಿಗಳ ಆಳದ ವೈಚಾರಿಕ ದಂಗೆಗಳನ್ನು ಗುರುತಿಸಲು ಬಹುರೂಪಿ ಪಾಶ್ಚಾತ್ಯ ಅಧ್ಯಯನ ಮಾದರಿಗಳು ಸಾಲವು ಎಂದಿದ್ದಾರೆ. ಒಂದು ಕಥನವನ್ನು ತಳಮಟ್ಟದ ಸಮುದಾಯವೊಂದು ಸೃಷ್ಟಿಸಿಕೊಳ್ಳುವ ಅಥವಾ ಆಯಾಕಾಲದಲ್ಲಿ ಪುನರ್ ಪ್ರಕಟಗೊಳಿಸಿಕೊಳ್ಳುವ ಸಂದರ್ಭ, ಒತ್ತಡ, ತಲ್ಲಣಗಳನ್ನು ಈಗಾಗಲೇ ಡಾ. ಡಿ. ಆರ್. ನಾಗರಾಜ್‌‌‌, ರೋಮಿಲಾಥಾಪರ್, ಮುಂತಾದ ವಿದ್ವಾಂಸರ ಆಲೋಚನೆಗಳನ್ನು ಮುಂದಿಟ್ಟು ಅಲ್ಲೇ ನಿಲ್ಲದೆ ಆಲೋಚನೆಯನ್ನು ಬೆಳೆಸಿದ್ದಾರೆ. ಪ್ರೌಢ ‘ಪ್ರಸ್ತಾವನೆ’ ಗಾಗಿ ಹಾಗೂ ಹೊಸ ‘ಮಹಾಕಥನ’ ವನ್ನು ಓದುವ ವರ್ಗಕ್ಕೆ ನೀಡಿದ್ದಕ್ಕಾಗಿ ಸಂಪಾದಕರಿಗೆ ಅಭಿನಂದನೆ ಹೇಳಲೇಬೇಕು.

ಬುಡಕಟ್ಟು ಮಹಾಕಾವ್ಯಮಾಲೆ ಸರಣಿಯ ಇನ್ನೊಂದು ಕಾವ್ಯ ಮಾಳಿಂಗರಾಯನ ಕಾವ್ಯ‘.(೧೯೯೮) ಈ ಕಾವ್ಯವನ್ನು ಹಾಡಿದ ಕಲಾವಿದರು ಅಡಿವೆಪ್ಪ ಒಡೆಯರು. ಸಂಪಾದಿಸಿದವರು ಗಂಗಾಧರ ದೈವಜ್ಞ. ಮಾಳಿಂಗರಾಯ ಕುರುಬರ ಆರಾಧ್ಯ ದೈವಗಳಲ್ಲಿ ಒಬ್ಬ. ಈ ಕಾವ್ಯ ಇಂದಿನ ಕರ್ನಾಟಕದ ಹೊರಗೆ ಸೊಲ್ಲಾಪುರ ಜಿಲ್ಲೆಯ ಹುಲಿಜಂತಿನ ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವುದು ಗಮನಾರ್ಹ. ಪ್ರತಿವರ್ಷ ನಡೆಯುವ ಜಾತ್ರೆಗೆ ನೆರೆಯ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡುಗಳಿಂದ ಭಕ್ತರು ಬಂದು ಪಾಲ್ಗೊಳ್ಳುವುದಲ್ಲದೆ ಈ ಕಾವ್ಯವನ್ನು ಹಾಡುವುದಾಗಿ ಸಂಪಾದಕರು ಬೆರೆಯುತ್ತಾರೆ. ಸಂಪಾದಕರು ಕಾವ್ಯದಲ್ಲಿ ಬರುವ ಮಾಳಿಂಗರಾಯನ ಬದುಕು ನಡೆದ ಅನೇಕ ಸ್ಥಳಗಳನ್ನು ಭೇಟಿ ಮಾಡಿ ಮಾಳಿಂಗರಾಯನ ಬಗ್ಗೆ ದೊರೆಯುವ ಮಾಹಿತಿಗಳನ್ನೆಲ್ಲ ಕಲೆಹಾಕಿ ಒಂದು ಸುದೀರ್ಘವಾದ ಪ್ರಸ್ತಾವನೆ ಬರೆದಿದ್ದಾರೆ. ಪಠ್ಯವನ್ನು ಜಾತ್ರೆ (ಆಚರಣೆ) ಹಾಗೂ ಅದರ ಉತ್ಪನ್ನ ಎಂಬ ಸಾಂಸ್ಕೃತಿಕ ಆಯಾಮದಲ್ಲಿಟ್ಟು ವಿಶ್ಲೇಷಣೆ ಮಾಡಿದ್ದಾರೆ. ಪುಸ್ತಕದ ಕೊನೆಯಲ್ಲಿ ಕಾವ್ಯ ನಿರ್ಮಾತರ ಜತೆ ಸಂದರ್ಶನ, ಅರ್ಥಕೋಶ ನೀಡಿದ್ದಾರೆ.

ಸಹ್ಯಾದ್ರಿಶ್ರೇಣಿಯ ನಿಬಿಡಾರಣ್ಯಗಳಲ್ಲಿ ವಾಸವಾಗಿರುವ ಗೊಂಡ ಸಮುದಾಯದವರ ಜೀವಂತವಾಗಿರುವ ರಾಮಾಯಣ ಕಾವ್ಯವನ್ನು ಪ್ರೊ.ಹಿ.ಚಿ. ಬೋರಲಿಂಗಯ್ಯನವರು ಗೊಂಡರ ರಾಮಾಯಣಎಂಬ ಹೆಸರಿನಲ್ಲಿ ಬೆಳಕಿಗೆ ತಂದಿದ್ದಾರೆ. (೧೯೯೯) ಈ ಕಾವ್ಯವನ್ನು ಕಟ್ಟಿ ಹಾಡಿದವರು ತಿಮ್ಮಪ್ಪ ಗೊಂಡ. ವಾಲ್ಮೀಕಿ ರಾಮಾಯಣವೇ ಮುಂತಾದ ಶಿಷ್ಟ ರಾಮಾಯಣದ ಕಥಾ ವಿಸ್ತರಣೆಯನ್ನಷ್ಟೇ ಕೇಳಿ ಹದಗೊಂಡ ಬಹುತೇಕರ ಮನಸ್ಸಿಗೆ ಜನಪದ ರಾಮಾಯಣಗಳ ಆಲೋಚನೆ ಅಸಹಜವೂ, ಅಪರಿಗ್ರಾಹ್ಯವೂ ಆಗುವ ಸಾಧ್ಯತೆ ಇದೆ. ಆದರೆ ಭಾಷೆ ಭಾಷೆಗಳಲ್ಲಿರುವ ನಮ್ಮ ಬಹುಸಂಸ್ಕೃತಿಯ ಪ್ರತಿನಿಧಿಗಳಂತಿರುವ ಜನಪದ ರಾಮಾಯಣ, ಮಹಾಭಾರತಗಳ ಸಂಗ್ರಹ ನಡೆದು ಆ ಬಳಿಕ ಮುಕ್ತ ಮನಸ್ಸಿನ ವಿಶ್ಲೇಷಣೆಯ ಮೂಲಕ ನಮ್ಮ ಸಮುದಾಯದ ನಿಜ ಸಂಸ್ಕೃತಿಯ ರಚನೆಯನ್ನು ಅರಿತುಕೊಳ್ಳುವುದಕ್ಕೆ ಸಾಧ್ಯ. ಜೊತೆಗೆ ಅಕ್ಷರ ನಿಬದ್ಧ ಸ್ಥಾಪಿತ ರಾಮಾಯಣ ಮಹಾಭಾರತಗಳ ಬಗೆಗೆ ಬಂದಿರುವ ವ್ಯಾಖ್ಯಾನಗಳ ಮಗ್ಗುಲು ಮುಗುಚಿ ನೋಡುವ ಆವಶ್ಯಕತೆ ಇದೆ. ಈ ನೆಲೆಯಲ್ಲಿ ‘ಗೊಂಡರ ರಾಮಾಯಣ’ ನಮ್ಮ ಆದಿವಾಸಿ ಸಮುದಾಯದ ಮನಸ್ಸು ಹರಿದ ರೀತಿಗೆ ಕನ್ನಡಿ ಹಿಡಿಯುತ್ತಿದೆ. ಸಂಪಾದಕರು ತಮ್ಮ ಹರಿತ ಹರುಯಬಿಟ್ಟು ಶಿಷ್ಟ ರಾಮಾಯಣದ ಜಾಡನ್ನು ಕೆದಕಿದ್ದಾರೆ, ಪ್ರಶ್ನಿಸಿದ್ದಾರೆ. ಜೊತೆಗೆ ಸಂಕಾಲಿಯಾ, ರೋಮಿಲಾಥಾಪರ್ ಮುಂತಾದವರ ಪುರಾತತ್ವ, ಚಾರಿತ್ರಿಕ ದೃಷ್ಟಿಕೋನದ ಹಿನ್ನೆಲೆಯಲ್ಲಿ ಗೊಂಡರ ರಾಮಾಯಣವನ್ನು ಬಗೆದಿದ್ದಾರೆ, ಈ ನೆಲದ ಮೂಲನಿವಾಸಿಗಳ ಸಂಸ್ಕೃತಿಯನ್ನು ನಮ್ಮ ಹಾಗೂ ಹೊರಗಿನ ವಿದ್ವಾಂಸರು ಉಪ ಪರಂಪರೆ, ಉಪ ಸಂಸ್ಕೃತಿ ಎಂದು ಮುಂತಾಗಿ ಕರೆದು ಶಿಷ್ಟ ಸಂಸ್ಕೃತಿಯನ್ನು ಮಹಾನ್ ಪರಂಪರೆ ಎಂದು ಕರೆದು ವ್ಯಾಖ್ಯಾನಿಸುವುದನ್ನು ಸಂಪಾದಕರು ಪ್ರಶ್ನಿಸಿರುವುದು ಅರ್ಥಪೂರ್ಣವಾಗಿದೆ. ಕರ್ನಾಟಕಾದ್ಯಂತ ಬುಡಕಟ್ಟು ಸಮುದಾಯಗಳಲ್ಲಿ ದೊರೆಯುವ ವೈವಿಧ್ಯಮಯ ರಾಮಾಯಣಗಳ ಸಂಗ್ರಹ, ಅಧ್ಯಯನಕ್ಕೆ ಈ ‘ಗೊಂಡರ ರಾಮಾಯಣ’ ಪ್ರೇರಣೆಯಾದರೆ ನಮ್ಮ ಸಂಸ್ಕೃತಿ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಬಹುದು.

‘ಬುಡಕಟ್ಟು ಮಹಾಕಾವ್ಯಮಾಲೆ’ ಯ ಇನ್ನೊಂದು ಸಂಗ್ರಹ ಕೃಷ್ಣಗೊಲ್ಲರ ಕಥನಕಾವ್ಯಗಳು (೧೯೯೮) ಸಂಪಾದಕರು ಡಾ. ಕೆ. ಎಂ. ಮೈತ್ರಿ. ಹೆಸರೇ ಹೇಳುವಂತೆ ಇಲ್ಲಿನ ಕಥನಕಾವ್ಯಗಳು ಕೃಷ್ಣಗೊಲ್ಲರ ಸಾಂಸ್ಕೃತಿಕ ನಾಯಕ – ನಾಯಿಕೆಯರಾದ ಈರಣ್ಣ, ನಿಂಗಣ್ಣ, ಚಿತ್ರಯ್ಯ, ಬೊಮ್ಮಲಿಂಗ, ತಿಮ್ಮಪ್ಪ, ಗೌರಸಂದ್ರರನ್ನು ಕೇಂದ್ರವಾಗಿರಿಸಿಕೊಂಡು ಹುಟ್ಟಿ ಬೆಳೆದಿವೆ. ಜೊತೆಗೆ ಅಭಿಮನ್ಯುವನ್ನು ಕುರಿತ ಒಂದು ಕಾವ್ಯವೂ ಇದೆ. ಪೂರಕವಾಗಿ, ಸುಮಾರು ೧೨೦ ಪುಟಗಳಷ್ಟು ಸಂಪ್ರದಾಯದ ಹಾಡುಗಳೂ ‘ಕಥನಕಾವ್ಯ’ ದೊಳಗೆ ಸೇರಿಕೊಂಡುಬಿಟ್ಟಿವೆ! ಸಂಪಾದಕರು ಪ್ರಸ್ತಾವನೆಯಲ್ಲಿ ಹೇಳಿರುವ ‘ಕುರುಬರು ಮತ್ತು ಕಾಡುಗೊಲ್ಲರು ಕಳ್ಳುಬಳ್ಳಿಯ ಸಂಬಂಧಿ ಬುಡಕಟ್ಟಿನವರೆ ಆಗಿದ್ದಾರೆ’ (ಪ್ರಸ್ತಾವನೆ ಪುಟ ೩) ‘ಕಳ್ಳು ಎಂದರೆ ಹಾಲು ಎಂದರ್ಥ. ಕಾಡುಗೊಲ್ಲರು ಪಶುಗಳಿಂದ ಹಾಲು ಉತ್ಪಾದಿಸುವವರು. ಹೀಗಾಗಿ ಕಳ್ಳುಗೊಲ್ಲರೆಂದರೆ ಹಾಲುಮತಸ್ಥರೆಂದರ್ಥ’ – ಇಂತಹ ಹೇಳಿಕೆಗಳ ಸಮರ್ಥನೆಗೆ ಇನ್ನೂ ಹೆಚ್ಚಿನ ಅಧ್ಯಯನ ಸಂಶೋಧನೆ ಬೇಕಾಗಬಹುದು. ಇಲ್ಲಿನ ಕಥನಕಾವ್ಯಗಳು ಕೃಷ್ಣಗೊಲ್ಲರಿಗೆ ಸೀಮಿತವಾಗಿರುವುದರಿಂದ ಇವು ಬುಡಕಟ್ಟು ಕಾವ್ಯಗಳು ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಪ್ರಸ್ತಾವನೆಯಲ್ಲಿ ಕಾಡುಗೊಲ್ಲ, ಕೃಷ್ಣಗೊಲ್ಲ, ಸಮುದಾಯದ ಸಂಸ್ಕೃತಿ ವಿಕಸನದ ಮಜಲುಗಳನ್ನು ವಿವರಿಸುತ್ತಾ, ಸಂಕಲನದೊಳಗಿನ ಕಾವ್ಯಗಳು ವೈಶಿಷ್ಟ್ಯಗಳನ್ನು ತಿಳಿಯಪಡಿಸಿದ್ದಾರೆ. ಕೃಷ್ಣಗೊಲ್ಲ ಸಮುದಾಯದೊಳಗಿನ ಆದರೆ ಅಕ್ಷರಲೋಕಕ್ಕೆ ಅಜ್ಞಾತವಾಗಿದ್ದ ಕಾವ್ಯಗಳನ್ನು ಬೆಳಕಿಗೆ ತಂದಿರುವುದು ಮೆಚ್ಚತಕ್ಕ ಅಂಶ.

ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗವು ೧೯೯೯ರಲ್ಲಿ ಮೂರು ಜನಪದ ಕಾವ್ಯಗಳನ್ನು ಹೊರತಂದಿದೆ. ಅವುಗಳಲ್ಲಿ ಡಾ. ಮಂಜುನಾಥ ಬೇವಿನಕಟ್ಟಿ ಸಂಪಾದಿಸಿದ ಮೈಲಾರಲಿಂಗನ ಕಾವ್ಯಒಂದು. ಮೈಲಾರನ ಆರಾಧನಾ ಸಂಪ್ರದಾಯ ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಪ್ರಚಲಿತವಾಗಿದ್ದು ಒಂದು ಸಂಕೀರ್ಣ ಸ್ವರೂಪದ್ದಾಗಿದೆ. ಕುರುಬರು ಅಧಿಕ ಸಂಖ್ಯೆಯಲ್ಲಿ ಮೈಲಾರನ ಜಾತ್ರೆಯಲ್ಲಿ ಭಾಗಿಯಾಗುತ್ತಿದ್ದರೂ ಮೈಲಾರ ಉ. ಕರ್ನಾಟಕದ ಭಿನ್ನ ಭಿನ್ನ ಜಾತಿ ಸಮುದಾಯದ ಆರಾಧ್ಯ ದೈವವಾಗಿರುವುದು ಗಮನಾರ್ಹ. ಹೀಗಾಗಿ ಮೈಲಾರಲಿಂಗನ ಕಾವ್ಯದ ಅಪಾರ ಭಿನ್ನ ಪಠ್ಯಗಳು ದೊರೆಯುತ್ತಿದ್ದು ಇದೀಗ ಮೊದಲ ಬಾರಿಗೆ ಒಗ್ಗರು ಹನುಮಂತಪ್ಪ (ಸಂಪಾದಕರು ತನ್ನನ್ನು ಪ್ರಸ್ಥಾಪಕರೆಂದೂ ಕಾವ್ಯದ ನಿರೂಪಕರನ್ನು ಸಂಕಥಕರೆಂದೂ ಕರೆದುಕೊಂಡಿದ್ದಾರೆ) ನವರು ನಿರೂಪಿಸಿದ ಪಠ್ಯ ಪ್ರಕಟವಾಗಿದೆ. ಈ ಕಾವ್ಯವನ್ನು ಮೈಲಾರಲಿಂಗನ ಗೊರವರು ಜಾತ್ರೆ, ದೋಣಿಸೇವೆ ಮುಂತಾದ ಆಚರಣೆಗಳ ಸಂದರ್ಭದಲ್ಲಿ ಹಾಡುತ್ತಾರೆ. ಸಂವಾದ ರೂಪದ ಕಥಾ ನಿರೂಪಣೆ ಈ ಕಾವ್ಯದ ಒಂದು ವಿಶಿಷ್ಟಾಂಶ. “ಮಾರ್ಗಕಾವ್ಯದ ನೀರಸ ನಿರೂಪಣೆಗೆ ಪರ್ಯಾಯವಾಗಿ ಹುಟ್ಟಿದ ದೇಶೀ ಅದ್ವಯವಾದಿ (?) ಗಳ ಈ ಕ್ರಮವು ವೈದಿಕ ಸಂಪ್ರದಾಯಗಳಿಗೆ ನೀಡಿದ ಕೊಡಲಿಪೆಟ್ಟು ಆಗಿದೆ” (ಪ್ರಸ್ತಾವನೆ ಪುಟ ೧೨) ಎನ್ನುವ ಸಂಪಾದಕರ ನಿಲುವು ವಿಚಾರ ಮಾಡತಕ್ಕುದಾಗಿದೆ. ಈ ಕಾವ್ಯವನ್ನು ಜನಪದ ಸಂಗೀತದ ಪರಿಭಾಷೆಗೆ ಅಳವಡಿಸುವ ಒಂದು ಪ್ರಯತ್ನವನ್ನು ಸಂಪಾದಕರು ಮಾಡಿರುವುದು ಒಂದು ಅರ್ಥಪೂರ್ಣ ಪ್ರಯೋಗ. ಹಾಡುಗಾರಿಕೆಯ ಲಯದ ಬದಲಾವಣೆಯನ್ನು ಸಂಕೇತಗಳ ಮೂಲಕ ಸೂಚಿಸಿದ್ದಾರೆ.

ಇದೇ ಕಾವ್ಯಮಾಲೆಯಡಿ ಬಂದಿರುವ ಇನ್ನೊಂದು ಕಾವ್ಯ ಸ್ಯಾಸಿಚಿನ್ನಮ್ಮನ ಕಾವ್ಯಸಂಪಾದಕರು ಡಾ. ಸ. ಚಿ. ರಮೇಶ್‌‌‌ ಅವರು. (೧೯೯೯) ಈ ಕಾವ್ಯವನ್ನು ಕಟ್ಟಿ ಹಾಡಿದವರು ಬುರ್ರಾ ಕಥಾ ಕಲಾವಿದೆ ದರೋಜಿ ಈರಮ್ಮನವರು. ಈಕೆ ಉ. ಕರ್ನಾಟಕದ ಅತ್ಯಂತ ಪ್ರತಿಭಾವಂತ ಸೃಜನಶೀಲ ಗಾಯಕಿ ಕವಿ. ಸುಮಾರು ಹದಿಮೂರು ಸುದೀರ್ಘ ಕಾವ್ಯಗಳನ್ನು ಒಡಲೊಳಗೆ ಅರಗಿಸಿಕೊಂಡವರು ಶ್ರೀಮತಿ ದರೋಜಿ ಈರಮ್ಮ. ನಮ್ಮ ನೆಲದ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಚರಿತ್ರೆಯನ್ನು ಮೌಖಿಕಕಾವ್ಯಗಳು ಕಟ್ಟಿಕೊಡುವಷ್ಟು ದಟ್ಟವಾಗಿ ಹಾಗೂ ಅಧಿಕೃತವಾಗಿ ಬಹುಶಃ ನಮ್ಮ ಲಿಖಿತ ಚರಿತ್ರೆಯೂ ನಿರ್ಮಿಸಲಾರದು ಎನ್ನುವುದಕ್ಕೆ ಈ ಕಾವ್ಯ ಸ್ಪಷ್ಟ ದಾಖಲೆಯಾಗಿದೆ. ನಮ್ಮ ಮಧ್ಯಕಾಲದ ಮತೀಯ ಹೋರಾಟವನ್ನು ನಮ್ಮ ಮಂಟೇಸ್ವಾಮಿ, ಜುಂಜಪ್ಪ ಕಾವ್ಯಗಳು ಎಷ್ಟು ಅಧಿಕೃತವೂ, ಕಲಾತ್ಮಕವೂ ಆಗಿ ಆಕಾರ ನೀಡಿರುವಂತೆಯೇ ಸ್ಯಾಸಿ ಚಿನ್ನಮ್ಮ ಕಾವ್ಯವೂ ನಮ್ಮ ಧಾರ್ಮಿಕ ಚರಿತ್ರೆಗೆ ಒಳ್ಳೆಯ ಆಕಾರವಾಗಿರುವಂತೆ ಕಾಣಿಸುತ್ತಿದೆ. ಶೈವ – ವೈಷ್ಣವ ಸಂಘರ್ಷವನ್ನು ಈ ಕಾವ್ಯ ಅತ್ಯಂತ ಅಚ್ಚುಕಟ್ಟಾಗಿ ನಿರೂಪಿಸಿದೆ. ಪ್ರಸ್ತಾವನೆಯಲ್ಲಿ ಸಂಪಾದಕರು ಈ ಬಗ್ಗೆ ಗಮನಸೆಳೆಯುವ ಮೂಲಕ ಒಳ್ಳೆಯ ಪ್ರಸ್ತಾವನೆ ಬರೆದಿದ್ದಾರೆ. ಶ್ರೀಮತಿ ದರೋಜಿ ಈರಮ್ಮನ ಮಾನಸಿಕ ಪಠ್ಯವು ತೆಲುಗು ಭಾಷೆಯಲ್ಲಿ ದಾಖಲಾಗಿದ್ದು ಅದು ಪಠ್ಯೀಕರಣ ಸಂದರ್ಭದಲ್ಲಿ ಕನ್ನಡ ರೂಪ ತಾಳಿದ್ದು ತುಂಬ ಮಹತ್ವದ ಸಂಗತಿ. ಈ ಪ್ರಕ್ರಿಯೆ ತುಂಬ ಕುತೂಹಲದಾಯಕವಾದದ್ದು, ಮಾತ್ರವಲ್ಲ ಕನ್ನಡಕ್ಕೆ ತೆಲುಗಿನ ಒಂದು ಕಾವ್ಯ ‘ಆದಾನ’ ವಾದದ್ದು ಇನ್ನೊಂದು ಇತ್ಯಾತ್ಮಕ ಅಂಶ.

‘ಕರ್ನಾಟಕ ಜನಪದ ಕಾವ್ಯಮಾಲೆ’ ಯ ಮೂಲಕ ಪ್ರಕಟವಾದ ಇನ್ನೊಂದು ಕಾವ್ಯ ಕಾಳಿಂಗರಾಯನ ಕಾವ್ಯಸಂಪಾದಿಸಿದವರು ಡಾ. ಎಚ್. ಕೆ. ನಾಗೇಶ್‌ (೨೦೦೦). ಕಾವ್ಯದ ನಿರ್ಮಾತೃ ಹಾಗೂ ನಿರೂಪಕಿ ಶ್ರೀಮತಿ ಚೌಡಮ್ಮ. ಹೊಸಪೇಟೆ ತಾಲೂಕಿನ ರಾಮಸಾಗರ ಆಕೆಯ ಹುಟ್ಟೂರು. ಮೇಲುನೋಟಕ್ಕೆ ಈ ‘ಕಾಳಿಂಗರಾಯನ ಕಾವ್ಯ’ ಹೆಣ್ಣಿನ ಪಾತಿವ್ರತ್ಯ, ಔದಾರ್ಯ, ಪತಿಯೇ ಪರದೈವ ಎನ್ನುವ ಧೋರಣೆಯ ಮುಗ್ಧತನವನ್ನು ಪೋಷಿಸುವ, ನಮ್ಮ ಆರ್ಷೇಯ ವೈದಿಕ ಮೌಲ್ಯಗಳನ್ನು ಪುನರ್ ಸ್ಥಾಪಿಸುವಂತೆ ಕಾಣುತ್ತದೆ. ಆದರೆ ವಾಸ್ತವವಾಗಿ ಹೆಣ್ಣನ್ನು ಮಾರುವ, ಈ ಹೆಣದ ಜತೆ ಮದುವೆ ಮಾಡಿಸಿ ಆಕೆಯ ಪಾತಿವ್ರತ್ಯದ ಬಲದಿಂದ ಸತ್ತ ಗಂಡನನ್ನು ಬದುಕುವಂತೆ ಮಾಡುವ ಹೆಣ್ಣಿನ ವೈಭವೀಕರಣ ಹೆಣ್ಣನ್ನು ‘ಸರಕು’ ಎಂದೇ ಕಲ್ಪಿಸುವ ಕಲ್ಪನೆಯೇ ಆಗಿದೆ. ಅಂದರೆ ನಮ್ಮ ಜನಪದ ಕಾವ್ಯಗಳು ಎಷ್ಟರ ಮಟ್ಟಿಗೆ ಸಂಸ್ಕೃತೀಕರಣಕ್ಕೆ ಪಕ್ಕಾಗಿವೆ, ಆಗುತ್ತಲಿವೆ ಎನ್ನುವುದಕ್ಕೆ ‘ಕಾಳಿಂಗರಾಯ’ ಒಂದು ಒಳ್ಳೆಯ ಉದಾಹರಣೆ.

ಇತ್ತೀಚೆಗೆ ಬಂದ ಬಹಳ ಮಹತ್ವದ ಇನ್ನೊಂದು ಜನಪದ ಕಾವ್ಯ ‘ಜನಪದ ಹಾಲುಮತದ ಮಹಾಕಾವ್ಯ’. ಈ ಕಾವ್ಯದ ರಚಕ ಹಾಗೂ ನಿರೂಪಕ ಶ್ರೀ ಸಿದ್ದಪ್ಪ ಮೇಟಿಯವರ ಪ್ರತಿಭೆಗೆ ಮೊದಲ ಗೌರವ ಸಲ್ಲಬೇಕು. ಆ ಬಳಿಕ ಆ ಕಾವ್ಯವನ್ನು ಶಾಸ್ತ್ರೀಯಾವಾಗಿ ಸಂಪಾದಿಸಿ ಕೊಟ್ಟ ಡಾ. ವೀರಣ್ಣದಂಡೆಯವರಿಗೆ ಮನ್ನಣೆ ಸಲ್ಲಬೇಕು. ಒಂದು ಸಮುದಾಯದ ಸಂಸ್ಕೃತಿಯ ಅಧ್ಯಯನಕ್ಕೆ ಮನವಶಾಸ್ತ್ರೀಯ, ಸಮಾಜಶಾಸ್ತ್ರೀಯ ರೂಪಿಕೆಗಿಂತ ಭಿನ್ನವಾಗಿ ನಮ್ಮ ಜಾತಿ ಸಮುದಾಯ ನಿಬದ್ಧವಾದ ಸಮಾಜದ ವಿವಿಧ ಜನಪದ ಕಾವ್ಯಗಳು ತಮ್ಮ ಅನನ್ಯತೆಯನ್ನು ವ್ಯಕ್ತಪಡಿಸುವ ವಿಧಾನವನ್ನು ಅಧ್ಯಯನ ಮಾಡಿದಾಗ ಅವುಗಳ ಇತಿಹಾಸ – ಸಂಸ್ಕೃತಿಯ ಚಿತ್ರ ಬೇರೆಯೇ ರೂಪದಲ್ಲಿ ಸಿಗಬಹುದು. ಅಲ್ಲಿ ದೊರೆಯುವ ವಿವರಗಳನ್ನು ಸಂಸ್ಕೃತಿ ಅಧ್ಯಯನದ ರೂಪಾವಳಿಯಾಗಿ ಬಳಸಿಕೊಳ್ಳುವಲ್ಲಿ ಜನಪದ ವಿದ್ವಾಂಸರಿಗೆ ಹೆಚ್ಚಿನ ಎಚ್ಚರಿಕೆ ಹಾಗೂ ಜವಾಬ್ದಾರಿ ಬೇಕಾಗುತ್ತದೆ. ಜನಪದ ಕಾವ್ಯಗಳು ರೂಪಿಸುವ ವೈಚಾರಿಕ ಆಕೃತಿಗಳು ಹೊರನೋಟಕ್ಕೆ ಮುಖ್ಯಧಾರೆಯ ಜತೆ ಕೈಕೈ ಹಿಡಿದು ನಡೆದಂತೆ ಕಂಡರೂ ಆಳದಲ್ಲಿ ಮುಖ್ಯ ಪ್ರವಾಹಕ್ಕೆ ಸಡ್ಡುಹೊಡೆದು ನಿಲ್ಲುವ ಆಶಯವನ್ನು ಹೊಂದಿರುವಂತೆ ಕಾಣುತ್ತದೆ. ‘ಹಾಲುಮತ ಕಾವ್ಯ’ವು ಕುರುಬ ಸಮುದಾಯದ ಪುರಾಣವೂ ಹೌದು. ಚರಿತ್ರೆಯೂ ಹೌದು. ಬೀರಪ್ಪ ಹಾಗೂ ಕನ್ನಿಕಾಮವ್ವ ಈ ಕಾವ್ಯದ ನಾಯಕ – ನಾಯಕಿಯರು. ಸುಮಾರು ೯೬೦ ಪುಟಗಳ ವ್ಯಾಪ್ತಿಯ ಕಾವ್ಯದಲ್ಲಿ ಹದಿನಾಲ್ಕು ಒಳವಿಭಾಗಗಳಿವೆ. ಜನಪದ ಮಹಾಕಾವ್ಯಗಳ ಸಾಮಾನ್ಯ ಲಕ್ಷಣಗಳನ್ನು ಹೇಳುತ್ತಾ ಹಲವು ‘ಕಥಾನಕಗಳ ಗುಚ್ಛವೇ ಮಹಾಕಾವ್ಯ’ ಎನ್ನುವ ಆಲೋಚನೆ (ಬಸವ ಪುರಾಣ ಹಾಗೂ ಕಲೇವಾಲದ ಮಾದರಿ) ಹೊಸಬಗೆಯಲ್ಲಿ ಚರ್ಚೆಗೆ ಒಳಗಾಗಬೇಕಾದ ಸಂಗತಿ. ಸಂಪಾದನ ವಿಧಾನ ಬಗ್ಗೆ ಸಂಪಾದಕರ ಆಲೋಚನೆ ಶಾಸ್ತ್ರೀಯವೇ ಆಗಿದೆ ಜನಪದ ಕಾವ್ಯ ಎಲ್ಲಾ ಸಂದರ್ಭಗಳಲ್ಲೂ ಏಕರೂಪಿಯಾಗಿ ಸ್ಥಗಿತ ಚಲನಹೀನ ರೂಪದಲ್ಲಿದ್ದು ಪ್ರಕಟಗೊಳ್ಳುತ್ತದೆ ಎನ್ನುವ ಕಲ್ಪನೆಯನ್ನು ಈ ಕಾವ್ಯವೂ ಸುಳ್ಳಾಗಿಸುತ್ತದೆ. ಆಧುನಿಕ ಸಂಗತಿಗಳು ಕಥನದ ಭಿತ್ತಿಯಲ್ಲಿ ಚಿತ್ರಣಗೊಳ್ಳುವ ವಾಸ್ತವವನ್ನು ಈ ಕಾವ್ಯವೂ ಹೇಳುತ್ತದೆ. ಒಟ್ಟಿನಲ್ಲಿ ಕರ್ನಾಟಕದ ಸಾಂಸ್ಕೃತಿಕ ಅಧ್ಯಯನಕ್ಕೆ ಉಪಯುಕ್ತ ಆಕರ ‘ಹಾಲುಮತ ಕಾವ್ಯ’.

ಜನಪದ ಮಹಾಕಾವ್ಯಗಳನ್ನು ಸಂಗ್ರಹಿಸುವ, ಪ್ರಕಟಿಸುವ, ಪ್ರಕಟಿಸುವಲ್ಲಿ ಅಪಾರ ಶ್ರಮವಹಿಸಿರುವ ಡಾ. ಪಿ. ಕೆ. ರಾಜಶೇಖರ ಈ ಕಾಲಾವಧಿಯಲ್ಲಿ ‘ಪಿರಿಯಾ ಪಟ್ಟಣದ ಕಾಳಗಎನ್ನುವ ಜನಪದ ವೀರಕಾವ್ಯವನ್ನು ಪ್ರಕಟಿಸಿದ್ದಾರೆ. (೧೯೯೦) ಇವರು ಪ್ರಸ್ತಾವನೆಯಲ್ಲಿ ಹೇಳಿರುವಂತೆ “ದೇವರ ಗುಡ್ಡರು, ನೀಲಗಾರರು, ತಂಬೂರಿಯವರು, ಚೌಡಿಕೆಯವರು, ಹಾಗೂ ಹೆಂಗಸರ ಹಾಡ್ಗತೆ – ಈ ಸಂಪ್ರದಾಯಗಳ ಮೂಲದಿಂದ ಕ್ಷೇತ್ರಕಾರ್ಯಮಾಡಿ ಎಂಟು ಪಾಠಗಳನ್ನಿಟ್ಟು ಗ್ರಂಥ ಸಂಪಾದನೆ ಮಾಡಿದ್ದೇನೆ” ಎನ್ನುವುದನ್ನು ಗಮನಿಸಬೇಕು. ಕಾವ್ಯದ ನಡುನಡುವೆ ತನಗೆ ಹಿತವೆನಿಸಿದ ಗಾಯಕರು ಹೇಳಿದ ಪಠ್ಯದ ಸಾಲುಗಳನ್ನು (ಕ. ಚ. ಛ ಇತ್ಯಾದಿ ಹೆಸರುಗಳಿಂದ ಗುರುತಿಸಿ) ಬೆಸೆಯುತ್ತಾ ಹೋಗುತ್ತಾರೆ. ಈ ವೈಧಾನಿಕತೆಯ ಮೂಲಕ ಮತ್ತು ಒಂದು ಕಾವ್ಯವನ್ನು ರೂಪಿಸಿರುವ ಸಂಪಾದಕರ ‘ನೈಪುಣ್ಯ’ಕ್ಕೆ ಏನೆನ್ನಬೇಕೋ ತಿಳಿಯುತ್ತಿಲ್ಲ. ಮೌಖಿಕ ಕಾವ್ಯಗಳನ್ನು ಹೀಗೆ ಬೆಸೆಯುವ ವಿಧಾನ ಸಲ್ಲದೆಂದು ವಿದ್ವತ್‌ಲೋಕ ಹೇಳಿರುವಾಗ ಮತ್ತೆ ಈ ಬಗ್ಗೆ ನಾನು ಏನನ್ನೂ ಹೇಳಬಯಸುವುದಿಲ್ಲ. ಜನಪದ ಕಾವ್ಯ ಸಂಪಾದನೆಗೆ ಗ್ರಂಥಸಂಪಾದನದ ವಿಧಿ ವಿಧಾನಗಳು, ಮಾನದಂಡಗಳು ಸಲ್ಲುವುದಿಲ್ಲ ಎನ್ನುವುದು ಖಚಿತವಾದ ಮಾತು. ಈ ಹಿನ್ನಲೆಯಲ್ಲಿ ‘ಪಿರಿಯಾಪಟ್ಟಣದ ಕಾಳಗ’ದ ಪುಸ್ತಕ ಪಠ್ಯವನ್ನು ಜನಪದ ಕಾವ್ಯವಾಗಿ ಒಪ್ಪಿಕೊಳ್ಳುವುದು ಕಷ್ಟ. ಸಂಪಾದಕರ ಅಪಾರ ಪರಿಶ್ರಮದ ಮೂಲಕ ಹಲವು ಸಂಪ್ರಾದಯಗಳ ಒಂದು ‘ಸಂಮಿಶ್ರಿತ’ ಕಾವ್ಯವೇನೋ ದೊರೆಯಿತೆಂದು ಸಮಾಧಾನಪಟ್ಟುಕೊಳ್ಳಬಹುದು.

ಪ್ರೊ. ಎ. ವಿ. ನಾವಡ ಹಾಗೂ ಡಾ. ಗಾಯತ್ರಿ ನಾವಡರು ಸಂಪಾದಿಸಿದ ಕಾಡ್ಯನಾಟ : ಪಠ್ಯ ಮತ್ತು ಪ್ರದರ್ಶನ(೧೯೯೩) ದಾಖಲಾತಿಯ ವಿಧಾನ ಹಾಗೂ ಬುಡಕಟ್ಟು ಸಮುದಾಯ (ಮೇರ) ವೊಂದು ನಡೆಸುತ್ತಿರುವ ಕಾಳಿಂಗ ಸರ್ಪಾಚರಣೆಯ – ಹಿನ್ನಲೆಯಲ್ಲಿ ರೂಪಗೊಳ್ಳುವ ಕಾವ್ಯಗಳು ವಸ್ತು ನಿರ್ವಹಣೆಯ ದೃಷ್ಟಿಯಿಂದ ತುಂಬ ಮಹತ್ವದ್ದು. ನಾಲ್ಕು ರಾತ್ರಿ ಮೂರು ಹಗಲುಗಳ ಸರ್ಪಾಚರಣೆಯೊಂದು ಮೇರ ಸಮುದಾಯದವರ ಪಾಲ್ಗೊಳ್ಳುವಿಕೆಯಲ್ಲಿ ನಡೆಯುತ್ತಿರುವುದು ಹಾಗೂ ಸರ್ಪಾಚರಣೆ ಎನ್ನುವುದು ಕರಾವಳಿಯ ಸ್ಥಳೀಕ ಜನರ ಅವೈದಿಕ ಆಚರಣೆ ಎನ್ನುವುದನ್ನು ಈ ಕಾವ್ಯ ಸಂಪುಟ ಸಾಬೀತುಮಾಡಿದೆ. ಅಷ್ಟೇ ಅಲ್ಲ ಒಂದು ಆಚರಣೆ ಹಾಗೂ ಅದರ ಉತ್ಪನ್ನವಾದ ಕಾವ್ಯವನ್ನು ದೃಶ್ಯ – ಶ್ರವ್ಯ, ಛಾಯಾಚಿತ್ರ – ಹೀಗೆ ಏಕಕಾಲದಲ್ಲಿ ಬಹುಮುಖೀ ದಾಖಲಾತಿಗೆ ಒಳಪಡಿಸಿದ ಮೊದಲ ಪ್ರಯತ್ನ ಈ ಕಾವ್ಯದ ಸಂಪಾದಕರಿಂದ ನಡೆಯಿತೆನ್ನುವುದು ಗಮನಾರ್ಹ. (೧೯೮೮–೧೯೯೧).

ಕರ್ನಾಟಕದೊಳಗಿನ ತುಳುನಾಡಿಗೆ ಸಂಬಂಧಿಸಿದಂತೆ ಎರಡು ಮಹತ್ವದ ಬೃಹತ್‌ಕಾವ್ಯಗಳು ಈ ಕಾಲಾವಧಿಯಲ್ಲಿ ಬಂದುವು. ತುಳುನಾಡಿನ ಸಿರಿಪಾಡ್ಡನವನ್ನು ಹತ್ತು ವರ್ಷಗಳ ಕಾಲಾವಧಿಯಲ್ಲಿ ದಟ್ಟವಾದ ಹಾಗೂ ಅತ್ಯಂತ ವೈಜ್ಞಾನಿಕ ದಾಖಲಾತಿ ವಿಧಾನವನ್ನು ಬಳಸಿಕೊಂಡು ಲಾರಿ ಹಂಕೊ, ಡಾ. ವಿವೇಕ ರೈ ಹಾಗೂ ಡಾ. ಚಿನ್ನಪ್ಪಗೌಡರು ಮೂರು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. (೧೯೯೮). ‘ಸಿರಿಪಾಡ್ಡನ’ದ ಪಠ್ಯವನ್ನು ಸಂಗ್ರಹಿಸಿವುದಷ್ಟೇ ಅವರ ಉದ್ದೇಶ ಆಗಿರಲಿಲ್ಲ. ಶ್ರೀ ಮಾಚಾರ್ ಗೋಪಾಲನಾಯ್ಕರೆನ್ನುವ ವೃತ್ತಿಶೀಲ ಸಿರಿ ಆರಾಧಕರ ಬದುಕನ್ನು ಕೇಂದ್ರವಾಗಿರಿಸಿಕೊಂಡು ಆಚರಣೆಯ ಹಿನ್ನೆಲೆಯಲ್ಲಿ ಬಹುಮುಖೀ ದಾಖಲಾತಿಯ ಮೂಲಕ ಕಾವ್ಯವೊಂದನ್ನು ಅಕ್ಷರ ಮಾಧ್ಯಮಕ್ಕಿಳಿಸಲಾಗಿದೆ. ರೋಮನ್‌ ಲಿಪಿಯಲ್ಲಿ ಕಾವ್ಯವನ್ನು ಬರೆಯಲಾಗಿದ್ದು, ಅದರ ಇಂಗ್ಲಿಷ್‌ ಅವತರಿಣಿಕೆಯನ್ನು ನೀಡಲಾಗಿದೆ. ಗೋಪಾಲನಾಯ್ಕರ ವ್ಯಕ್ತಿತ್ವದ ಎಲ್ಲ ಮುಖಗಳನ್ನು ದಾಖಲಿಸಿಕೊಂಡು ಆ ಹಿನ್ನಲೆಯಲ್ಲಿ ಬೃಹತ್‌ಕಾವ್ಯವೊಂದು ಹೇಗೆ ರೂಪಗೊಳ್ಳುತ್ತದೆ. ಮೌಖಿಕ ಕಾವ್ಯ ಸಂಯೋಜನ ಪ್ರಕ್ರಿಯೆಯ ಎಲ್ಲ ಸಾಧ್ಯತೆಗಳು, ತಂತ್ರಗಳು ಇಲ್ಲಿ ಚರ್ಚೆಗೆ ಒಳಗಾಗಿದೆ. ಬಹುಶಃ ಇಷ್ಟು ತಾಂತ್ರಿಕ ಪರಿಣತಿ ಹಾಗೂ ವೈಜ್ಞಾನಿಕವಾಗಿ ಭಾರತೀಯ ಭಾಷೆಯಲ್ಲೇ ಇನ್ನೊಂದು ಜನಪದ ಕಾವ್ಯ ಪಠ್ಯೀಕರಣಗೊಂಡಿಲ್ಲ ಎಂದರೆ ತಪ್ಪಾಗಲಾರದು.

೧೯೯೮ರಲ್ಲಿ ಕನ್ನಡ ವಿಶ್ವವಿದ್ಯಾಲಯದ ‘ಬುಡಕಟ್ಟು ಮಹಾಕಾವ್ಯಮಾಲೆ’ಯಡಿ ಪ್ರಕಟವಾದ ರಾಮಕ್ಕ ಮುಗ್ಗೇರ್ತಿ ಕಟ್ಟಿದ ಸಿರಿಪಾಡ್ಡನ ಒಂದು ವಿಶಿಷ್ಟ ತುಳುಕಾವ್ಯ ಸಂಗ್ರಹ. ಸಂಪಾದಕರು ಪ್ರೊ. ಎ. ವಿ. ನಾವಡರು. ೧೯೯೬ – ೯೭ರ ಕಾಲಾಧಿಯಲ್ಲಿ ಮೂರು ಕೂರುಗಳಲ್ಲಿ ಈ ಕಾವ್ಯವನ್ನು ಸಂಗ್ರಹಿಸಿರುವುದಾಗಿ ಪ್ರಸ್ತಾವನೆಯಲ್ಲಿ ಸಂಪಾದಕರು ಬರೆಯುತ್ತಾರೆ. ಲಾರಿ ಹಾಂಕೊ ಬಳಗದವರ ಸಿರಿ ಆಚರಣೆಯ ಪಾಲುದಾರ ‘ಕುಮಾರ’ನ ಪುರುಷ ಪಠ್ಯವನ್ನು ಒದಗಿಸಿದರೆ ರಾಮಕ್ಕನದು ನಾಟಗದ್ದೆಗಳಲ್ಲಿ ಉತ್ಪನ್ನಗೊಂಡು ಪರಿಚಲನಗೊಳ್ಳುವ ಮಹಿಳಾಪಠ್ಯ, ಹೀಗೆ ಎರಡು ಪಠ್ಯಗಳ ತೌಲನಿಕ ಅಧ್ಯಯನದ ಮೂಲಕ ಕಾವ್ಯಕ್ಕೆ ಭಿನ್ನ ನೆಲೆಯಲ್ಲಿ ಅರ್ಥದ ಪರಿಪ್ರೇಕ್ಷ್ಯವನ್ನು ನಿರ್ಮಿಸಬಹುದು. ಹೀಗೆ ಒಂದು ಕಾವ್ಯದ ಭಿನ್ನ ಪಠ್ಯಗಳು ಸಂಗ್ರಹಗೊಳ್ಳಬೇಕು. ಸಂಪಾದಕರು ಕನ್ನಡ ಅನುವಾದ ನೀಡಬೇಕಾಗಿತ್ತು.

ಪ್ರೊ. ಅಮೃತ ಸೋಮೇಶ್ವರ ಅವರು ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಸಿದ್ಧ ಮಾಡಿಕೊಟ್ಟ ತುಳು ಪಾಡ್ಡನ ಸಂಪುಟ ತುಳುನಾಡಿನ ಪಾಡ್ಡನಗಳ ರಚನೆ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ತಿಳಿಯಪಡಿಸುವ ಒಂದು ಒಳ್ಳೆಯ ಸಂಪುಟ. ತುಳು ಪಠ್ಯದ ಕನ್ನಡಾನುವಾದವನ್ನು ನೀಡಿರುವುದರಿಂದ ಕನ್ನಡಿಗರಿಗೆ ತುಳು ಪಾಡ್ಡನಗಳನ್ನು ಅರ್ಥೈಸಿಕೊಳ್ಳಲು ಅನುಕೂಲವಾಗಿದೆ. ಈ ಸಂಪುಟಕ್ಕೆ ಸಂಪಾದಕರು ಪ್ರಸ್ತಾಪನೆ ಇಡಿಯ ತುಳು ಸಂಸ್ಕೃತಿಯನ್ನು ಪಾಡ್ಡನಗಳ ಹಿನ್ನೆಲೆಯಲ್ಲಿ ಪರಿಚಯಿಸುವ ಒಂದು ಯಶಸ್ವೀ ಪ್ರಯೋಗವಾಗಿದೆ.

ಕನ್ನಡ ಜನಪದ ಕಾವ್ಯ ಪರಂಪರೆಯನ್ನು ಕಾವ್ಯ ಸಂಗ್ರಹ, ಅಧ್ಯಯನದ ಮೂಲಕ ‘ಒಳಗು’ ಮಾಡಿಕೊಳ್ಳುವ ಒಂದು ‘ಉತ್ಸಾಹ’ ಈ ದಶಕದ ‘ಜನಪದ ಅಧ್ಯಯನ ಪರ್ವ’ದಲ್ಲಾದ ಬಹಳ ದೊಡ್ಡ ತಿರುವು. ಈ ಬಗೆಯ ಜನಪದ ಕಾವ್ಯಗಳ ಮೂಲಕ ನಮ್ಮ ಐತಿಹಾಸಿಕ – ಸಾಂಸ್ಕೃತಿಕ ಪರಂಪರೆಯನ್ನು ಪುನರ್ ರಚಿಸುವ ಹಾಗು ಪುನರ್ ವ್ಯಾಖ್ಯಾನಿಸುವ ಸಾಧ್ಯತೆಯನ್ನು ಶೋಧಿಸಿರುವುದು ಒಂದು ಇತ್ಯಾತ್ಮಕ ಅಂಶ. ಜೊತೆಗೆ ಇಂತಹ ಜನಪದ ಕಾವ್ಯಗಳನ್ನು ಬರಿಯ ಸಾಹಿತ್ಯಿಕ ಪಠ್ಯವಾಗಿ ಅಷ್ಟೇ ನೋಡದೆ ಒಂದು ಸಾಂಸ್ಕೃತಿಕ ಪಠ್ಯವಾಗಿ ಗಮನಿಸುವ ಮನೋಧರ್ಮ ಪ್ರಕಟವಾಗಿರುವುದು ಒಳ್ಳೆಯ ಬೆಳವಣಿಗೆ. ಇಂತಹ ಬೃಹತ್‌ಕಾವ್ಯಗಳು ಸೃಜನಶೀಲ ಅನುಸಂಧಾನದ ಮೂಲಕ ನಾಟಕ, ಕತೆ, ಕಾದಂಬರಿ, ಚಲನಚಿತ್ರಗಳ ರೂಪವನ್ನು ಪಡೆಯುತ್ತಿರುವುದು ಇನ್ನೊಂದು ಗಮನಾರ್ಹ ಅಂಶ.

ಕನ್ನಡ ವಿಶ್ವವಿದ್ಯಾಲಯದ ‘ಬುಡಕಟ್ಟು ಮಹಾಕಾವ್ಯ ಮಾಲೆ’ ಹಾಗೂ ‘ಜಾನಪದ ಕಾವ್ಯಮಾಲೆ’ಯಿಂದ ಕರ್ನಾಟಕದಾದ್ಯಂತ ಹಬ್ಬಿ ಹರಡಿರುವ ಜನಪದ ಕಾವ್ಯಗಳ ‘ಗುಪ್ತನಿಧಿ’ಯ ಸಂಗ್ರಹ – ಪರಿಚಲನ ತುರ್ತಾಗಿ ನಡೆಯಬೇಕಾಗಿ ಆಗ್ರಹಪೂರ್ವಕ ವಿನಂತಿಸಿಕೊಳ್ಳುತ್ತಿದ್ದೇನೆ.