ಕನ್ನಡದಲ್ಲಿ ಪರಿಚಲನೆಗೊಳ್ಳುತ್ತಿರುವ ಮಾನವಿಕಗಳಲ್ಲಿ ಜಾನಪದ ಹೆಚ್ಚು ಕ್ರಿಯಾಶೀಲವಾದುದು. ಹವ್ಯಾಸದ ರೂಪದಲ್ಲಿ ಜನಪದ ಸಾಹಿತ್ಯವನ್ನು ಕೇಳಿಸಿ ಬರೆದುಕೊಳ್ಳುವಲ್ಲಿಂದ ಆರಂಭವಾದ ನಮ್ಮ ಜಾನಪದ ಸಂಗ್ರಹ, ಇಂದು ಮಾನವಿಕ ವಿಜ್ಞಾನದ ಒಂದು ಶಾಖೆಯಾಗಿ ಬೆಳೆದಿದೆ. ಸಾಹಿತ್ಯ ವಿಭಾಗದಲ್ಲಿ ಮೊದಲ ಪೋಷಣೆ ಕಂಡ ಜಾನಪದ ಇಂದು ಅದರಾಚೆಗೆ ತನ್ನ ಅಸ್ತಿತ್ವವನ್ನು ಕಂಡುಕೊಂಡಿದೆ. ಪ್ರಾದೇಶಿಕ ಅಧ್ಯಯನಕ್ಕೆ ಒತ್ತು ನೀಡುವ ಜಾನಪದ ಅಂತರಾಷ್ಟ್ರೀಯ ಅಧ್ಯಯನ ಶೀಲತೆಯ ಸಂಸ್ಪರ್ಶವನ್ನು ಕಂಡುಕೊಳ್ಳಹತ್ತಿದೆ. ಹೀಗಾಗಿ ಜಾನಪದದಲ್ಲಿ ನಿರೂಪಕ – ಸಂಗ್ರಾಹಕ – ವಿದ್ವಾಂಸರ ನಡುವಣ ಏಣಿಶ್ರೇಣಿ ವ್ಯವಸ್ಥೆಯ ಬಿಗುಮಾನ ಸಡಿಲಗೊಂಡು ನಿರೂಪಕನು ವಿದ್ವಾಂಸಷ್ಟೇ ಮುಖ್ಯನಾಗಿದ್ದಾನೆ. ಇಂತಹ ಬೆಳವಣಿಗೆಗಳು ನಮ್ಮ ಜಾನಪದ ಅಧ್ಯಯನ ಪ್ರಕಟಣೆಗಳಲ್ಲಿ ಕಾಣಿಸಿಕೊಳ್ಳಬೇಕಾಗಿದೆ. ಈ ಬಗೆಯ ಅಧ್ಯಯನ ಹೆಚ್ಚೆಚ್ಚು ಶ್ರಮವನ್ನೂ, ತಾತ್ವಿಕ ಒಳರಚನೆಯನ್ನೂ ಬಯಸುತ್ತಿದೆ. ಆದರೆ ನಮ್ಮ ಇಂದಿನ ಜಾನಪದ ಪ್ರಕಟಣೆಗಳು ಬಹುಪಾಲು ವಿವರಣಾತ್ಮಕ ವ್ಯಖ್ಯಾನಕ್ಕೆ ಮೀಸಲಾಗಿರುವುದು, ಮಾರ್ಗ ಬದಲಾವಣೆ ಬೇಕಾಗಿರುವುದನ್ನು ಒತ್ತಿ ಹೇಳುತ್ತಿದೆ. ಜಾನಪದ ಆರಾಧನೆಗೆ, ಸ್ವ ವೈಭವೀಕರಣಕ್ಕೆ ತಕ್ಕುದಾದುದಲ್ಲ ಎಂಬ ಅರಿವು ನಮ್ಮ ಬಹುಪಾಲು ಅಧ್ಯಯನಕಾರರಿಗೆ ತಿಳಿದಿದ್ದರೂ ಕೆಲವರಿಗೆ ಇನ್ನೂ ಹಳೆಯ ಗೀಳು ಹೊರಟು ಹೋಗಿಲ್ಲ. ರೊಮ್ಯಾಂಟಿಕ್‌ ಕಾಲಬಾಧಿಕ ಕೃತಿಗಳು ಇನ್ನೂ ಬರುತ್ತಿರುವುದು ಇದರ ಫಲ. ಇನ್ನೊಂದು ಸಮಸ್ಯೆಯೆಂದರೆ ಸಂಗ್ರಹಗಳದು. ‘ಜಾನಪದ ಕಳೆದು ಹೋಗುತ್ತಿರುವ ಸಂಗತಿ’ ಎಂಬ ಭೀತಿಗೆ ಒಳಗಾದ ಜನ ಅವಸರದಿಂದ ತರುತ್ತಿರುವ ಇತ್ತೀಚಿನ ಕೆಲವು ಸಂಗ್ರಹಗಳು ಜಾನಪದಕ್ಕೆ ಗೌರವ ತರತಕ್ಕವುಗಳಲ್ಲ. ಈ ಬಗೆಯ ಸಂಗ್ರಹಗಳಿಗೆ ವಿಶೇಷ ಶ್ರಮಬೇಕಿಲ್ಲ. ಕಲಾವಿದೆ ಗಾಯಕರ ಮುಂದೆ ವಿದ್ಯುನ್ಮಾನ ಯಂತ್ರವಿರಿಸಿ ಆ ಬಳಿಕ ಲಿಪ್ಯಂತರ ಮಾಡಿಬಿಟ್ಟರೆ ಕೆಲಸ ಮುಗಿಯಿತು. ಆದರೆ ವಾಸ್ತವಿಕವಾಗಿ ‘ಜಾನಪದ ಸಂಗ್ರಹ’ ಹೆಚ್ಚಿನ ಶ್ರಮವನ್ನೂ, ತಾತ್ವಿಕ ಚಿಂತನವನ್ನೂ ನಿರೀಕ್ಷಿಸುತ್ತದೆ. ನಮಗಿಂದು ಬೇಕಾಗಿರುವುದು ಬರಿಯ ಶಾಬ್ದಿಕ ಪಠ್ಯವಲ್ಲ. ಸಾಹಿತ್ಯ ಕೇಂದ್ರಿತ ನಮ್ಮ ದೃಷ್ಟಿಕೋನ ಇಂತಹ ಪಠ್ಯಗಳನ್ನು ನಿರ್ಮಿಸಲು ಕಾಡುತ್ತವೆ. ಅನೇಕರಿಗೆ ಜಾನಪದದ ‘ಬೃಹತ್‌ ಪಠ್ಯ’ದ ಕಲ್ಪನೆಯೂ ಇಲ್ಲ. ಆ ಬಗ್ಗೆ ಕಾಳಜಿಯೂ ಇಲ್ಲ. ನಮ್ಮ ಹಿಂದಿನ ವಿದ್ವಾಂಸರಿಗೆ ಜಾನಪದವನ್ನು ದ್ವಿಕಾಲಿಕ ನೆಲೆಯಲ್ಲಿರಿಸಿ ನೋಡುವ ಬಗೆಗೆ ಆಸಕ್ತಿಯಿದ್ದಿತ್ತು. ಆದರೆ ಇಂದಿನವರೆಗೆ ಅದನ್ನು ‘ಏಕಕಾಲಿಕ’ ಪ್ರದರ್ಶನವಾಗಿ ಪರಿಭಾವಿಸುವುದರಲ್ಲೇ ಒಲವು. ಇಂತಹ ವೈವಿಧ್ಯಮಯವಾದ ಒಲುಮೆ ಹೆಚ್ಚಿನ ಅಧ್ಯಯನಗಳಲ್ಲಿ ತೋರಿ ಬರುತ್ತಿರುವುದು ಗಮನಾರ್ಹವಾದುದು.

ಹತ್ತು ವರ್ಷಗಳಿಂದೀಚೆಗೆ ಜಾನಪದದ ಬೇರೆಬೇರೆ ಪ್ರಕಾರಗಳಲ್ಲಿ ಅಧ್ಯಯನಗಳು ತೀವ್ರವಾಗಿ ನಡೆಯುತ್ತವೆ. ಈ ಹತ್ತು ವರ್ಷಗಳಲ್ಲಿ ಬಹುಮುಖ್ಯವಾಗಿ ಸಮುದಾಯಗಳ ಅಧ್ಯಯನ, ಗ್ರಾಮ ಅಧ್ಯಯನಗಳು, ದೈವಗಳ ಅಧ್ಯಯನಗಳು, ಜೀವನ ಚರಿತ್ರೆ ಹಾಗೂ ಸಂಸ್ಮರಣ ಗ್ರಂಥಗಳು, ಕಲೆಗಳ ಬಗೆಗಿನ ಅಧ್ಯಯನಗಳು, ವಿವಿಧ ವೃತ್ತಿಗಳು ಹಾಗೂ ಆವೃತ್ತಿಗಳಿಗೆ ಸಂಬಂಧಿಸಿದ ಆಚರಣೆಗಳ ಅಧ್ಯಯನಗಳು, ವಿವಿಧ ಆರಾಧನೆ ಹಾಗೂ ಆಚರಣೆಗಳ ಬಗೆಗಿನ ಅಧ್ಯಯನಗಳು, ಉಡುಗೆ ಹಾಗೂ ಆಹಾರಪಾನೀಯಗಳ ಬಗೆಗಿನ ಅಧ್ಯಯನಗಳು, ಸೋಗುಗಳ ಬಗೆಗಿನ ಅಧ್ಯಯನ, ಜಾನಪದದಲ್ಲಿ ಸ್ತ್ರೀವಾದಿ ಅಧ್ಯಯನಗಳು, ನಗರ ಜಾನಪದ, ಕೈಗಾರಿಕಾ ಜಾನಪದ ಹಾಗೂ ಬಂಡಾಯ ಜಾನಪದಕ್ಕೆ ಸಂಬಂದಿಸಿದ ಅಧ್ಯಯನಗಳು, ಬುಡಕಟ್ಟು, ಸಮುದಾಯದ ಅಧ್ಯಯನಗಳು, ದಲಿತ ಜಾನಪದದ ಬಗೆಗಿನ ಅಧ್ಯಯನಗಳು, ಹೀಗೆ ಹತ್ತು ಹಲವಾರು ಜಾನಪದ ಪ್ರಕಾರಗಳ ಬಗೆಗಿನ ಅಧ್ಯಯನಗಳು ನಡೆದಿವೆ.

ಸಮುದಾಯಗಳ ಬಗೆಗಿನ ಅಧ್ಯಯನಗಳು ಮೊದಲಿನಿಂದಲೂ ನಡೆಯುತ್ತಿದ್ದರೂ, ಕರ್ನಾಟಕ ಸಾಹಿತ್ಯ ಅಕಾಡೆಮಿಯು ಉಪಸಂಸ್ಕೃತಿ ಮಾಲೆಯಲ್ಲಿಯ ಸುಮಾರು ಮುವತ್ತಕ್ಕೂ ಹೆಚ್ಚು ಸಮುದಾಯಗಳ ಅಧ್ಯಯನವು ತೀವ್ರವಾಗಿ ಆಸಕ್ತಿಯನ್ನು ಮೂಡಿಸುತು. ಈ ಹಿನ್ನಲೆಯಲ್ಲಿ ಬಹಳಷ್ಟು ಅಧ್ಯಯನಕಾರರು ಸಮುದಾಯಗಳ ಕುರಿತು ಲೇಖನಗಳು, ಪುಸ್ತಕಗಳು ಹಾಗೂ ಪಿಎಚ್‌.ಡಿ. ಅಧ್ಯಯನಗಳಲ್ಲಿ ತೊಡಗಿದರು. ಹಾಗಾಗಿ ಇದುರವರೆಗೂ ಅಕ್ಷರ ಲೋಕದಲ್ಲಿ ಮೂಡಿಬರದ ಅನೇಕ ಸಮುದಾಯಗಳ ಬಗೆಗಿನ ಮಾಹಿತಿಗಳು ಅಕ್ಷರ ಜಗತ್ತಿಗೆ ಪಾದಾರ್ಪಣೆ ಮಾಡಿವೆ. ಬಂದಂತಹ ಮಾಹಿತಿಗಳಲ್ಲಿ ಪುನಾರಾವರ್ತನೆಗಳಿವೆ, ವಿಶ್ಲೇಷಣೆಗಳು ಇಲ್ಲ. ಆದರೂ ಸಹ ಕೆಲವುಗಳಲ್ಲಿ ಸ್ಪಷ್ಟವಾದ ವಿಶ್ಲೇಷಣೆಗಳಿದ್ದು, ಮಾಹಿತಿಗಳು ತುಂಬಾ ಉಪಯುಕ್ತಕರವಾಗಿವೆ. ಆದರೂ ಈ ಅಧ್ಯಯನಗಳು ತುಂಬಾ ಉಪಯುಕ್ತವಾದವುಗಳಾಗಿವೆ.

ಗ್ರಾಮಗಳ ಬಗೆಗಿನ ಅಧ್ಯಯನಗಳನ್ನು ಸಮಾಜಶಾಸ್ತ್ರಜ್ಞರು ಮೊದಲಿನಿಂದಲೂ ಮಾಡುತ್ತಾ ಬಂದಿದ್ದಾರೆ. ಜಾನಪದ ವಿದ್ವಾಂಸರೂ ಸಹ ಇತ್ತೀಚಿಗೆ ಗ್ರಾಮ ಅಧ್ಯಯನಗಳ ಬಗ್ಗೆ ತೀವ್ರವಾಗಿ ತೊಡಗಿದ್ದಾರೆ. ಮೊದಲು ಜಾನಪದದಲ್ಲಿ ಬುಡಕಟ್ಟುಗಳ ಬಗೆಗಿನ ಅಧ್ಯಯನಗಳಲ್ಲಿ, ಬುಡಕಟ್ಟುಗಳು ಇದ್ದ ಪ್ರದೇಶಗಳ ಬಗೆಗೆ ಅಲ್ಲಲ್ಲಿ ನಡೆದಿದ್ದುಂಟು. ಆದರೆ ಇತ್ತೀಚೆಗೆ ಚಿಕ್ಕ ಚಿಕ್ಕ ಗ್ರಾಮಗಳಿಂದ ಹಿಡಿದು ಹೋಬಳಿಗಳವರೆಗು ಅಧ್ಯಯನಗಳು ನಡೆದಿವೆ, ಹಾಗೂ ನಡೆಯುತ್ತಿವೆ. ಪ್ರಾದೇಶಿಕ ಅಧ್ಯಯನಗಳ ಹಿನ್ನಲೆಯಲ್ಲಿಯೂ ಸಹ ವಿವಿಧ ಅಧ್ಯಯನಗಳು ನಡೆದಿವೆ. ಹಾಗೆಯೇ ದೈವಗಳ ಮತ್ತು ಜಾತ್ರೆಗಳು ಕುರಿತು ಮೊದಲಿಂದಲೂ ಅಧ್ಯಯನಗಳು ನಡೆಯುತ್ತಿದದರೂ, ಈ ದಶಕದಲ್ಲಿ ನಡೆದ ಅಧ್ಯಯನಗಳು ತುಂಬಾ ಜಾಸ್ತಿಯಾಗಿವೆ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ನಡೆಸಿದ ಗ್ರಾಮ ದೈವಗಳ ಅಧ್ಯಯನಗಳು ಮಹತ್ವವಾಗಿವೆ. ಜೊತೆಗೆ ಆಸಕ್ತರು ತಮ್ಮ ತಮ್ಮ ಗ್ರಾಮ ದೈವಗಳು ಹಾಗೂ ಜಾತ್ರೆಗಳ ಬಗೆಗೆ ಕುರಿತು ಅಧ್ಯಯನ ಮಾಡಿದ್ದಾರೆ. ಹಾಗೆಯೇ ವಿವಿಧ ಜಾತ್ರೆಗಳ ಕುರಿತು ಹಲವಾರು ಅಧ್ಯಯನಗಳು ನಡೆದಿವೆ. ಈ ಗ್ರಾಮ ದೈವಗಳ ಬಗೆಗಿನ ಅಧ್ಯಯನಗಳು ಹಲವಾರು ಅರೆಕೊರೆಗಳನ್ನು ಹೊಂದಿದ್ದರು ಸಹ ಉಪಯುಕ್ತಕರವಾದ ಅಧ್ಯಯನಗಳಾಗಿವೆ. ಕಲಾವಿದರ ಜೀವನಚರಿತ್ರೆ, ವಿದ್ವಾಂಸರ ಜೀವನಚರಿತ್ರೆಗೆ ಸಂಬಂಧಿಸಿದ ಅಧ್ಯಯನಗಳು ಸಹ ಹಲವಾರಿದ್ದು, ತುಂಬಾ ಉಪಯುಕ್ತಕರವಾಗಿವೆ. ಜನಪದ ಕಲೆಗಳ ಕುರಿತು ಬಹಳಷ್ಟು ಅಧ್ಯಯನಗಳು ನಡೆದಿವೆ. ಈ ಅಧ್ಯಯನಗಳು ಬಹುಮುಖ್ಯವಾಗಿ, ಕಲಾ ಪ್ರದರ್ಶನದ ಹಿನ್ನೆಲೆಯಲ್ಲಿ ನಡೆದಿವೆ. ಜೊತೆಗೆ ಕಲೆಗಳ ಪರಿಚಯ, ಸಂಸ್ಕೃತಿಯಲ್ಲಿ ಅವುಗಳ ಮಹತ್ವ, ಅವುಗಳ ಪರಂಪರೆ ಮುಂತಾದವುಗಳ ಕುರಿತು ಬಹಳಷ್ಟು ಅಧ್ಯಯನಗಳು ನಡೆದಿವೆ. ಭೂತಾರಾಧನೆಯ ಕುರಿತು ಹಲವಾರು ಲೇಖನ ಹಾಗೂ ಅಧ್ಯಯನಗಳು ನಡೆದಿವೆ.

ಪ್ರಕಾರಗಳ ಸ್ಥಿತ್ಯಂತರ ಕುರಿತು ಕಳೆದ ಹತ್ತು ವರ್ಷಗಳಲ್ಲಿ ಜನಪದ ಉಡುಗೆ – ತೊಡುಗೆ, ಆಹಾರ ಪದ್ಧತಿ, ಜನಪದ ಆಟಗಳು ಹೀಗೆ ಹತ್ತು ಹಲವಾರು ಪ್ರಕಾರಗಳ ಬಗೆಗೆ ತೀವ್ರವಾದ ಅಧ್ಯಯನಗಳು ನಡೆದಿವೆ ಮತ್ತು ನಡೆಯುತ್ತಿವೆ. ಹಾಗೆಯೇ ಜಾನಪದ ಕುರಿತು ಹಲವಾರು ಅಧ್ಯಯನಗಳು ನಡೆಯುತ್ತಿವೆ. ಈ ಹತ್ತು ವರ್ಷಗಳನ್ನು ಅಧ್ಯಯನದ ದೃಷ್ಟಿಯಿಂದ ನೋಡಿದಾಗ ಮೊದಲು ನಡೆಯುತ್ತಿದ್ದ ಅಧ್ಯಯನಗಳಿಗಿಂತ ತೀವ್ರವಾಗಿದೆ. ಜೊತೆಗೆ ಹೊಸ ಹೊಸ ವಿಷಯಗಳ ಕುರಿತು ಅಧ್ಯಯನಗಳು ನಡೆದಿವೆ. ಹೊಸ ಹೊಸ ವಿದ್ವಾಂಸರು ಜಾನಪದಕ್ಕೆ ಕಾಲಿಡುತ್ತಿದ್ದಾರೆ. ಬೇರೆ ಬೇರೆ ಶಿಸ್ತುಗಳ ಅಧ್ಯಯನಕಾರರು ಜಾನಪದಕ್ಕೆ ಕಾಲಿಡುತ್ತಿದ್ದಾರೆ. ಇದು ಉತ್ತಮವಾದ ಬೆಳವಣಿಗೆಯಾಗಿದೆ.

ಕಳೆದ ಹತ್ತು ವರ್ಷಗಳ ಜಾನಪದ ಅಧ್ಯಯನಗಳನ್ನು ನೋಡಿದಾಗ ನಮಗೆ ಗೊತ್ತಾಗುವುದೇನೆಂದರೆ; ಜಾನಪದ ಅಧ್ಯಯನ ಪ್ರಾರಂಭವಾದಾಗ ಇದ್ದ ಸಂಗ್ರಹದ ಕಲ್ಪನೆ ಬದಲಾಗಿದೆ. ಕೇವಲ ಜಾನಪದ ಸಾಹಿತ್ಯಕ್ಕಷ್ಟೇ ಮೀಸಲಾಗಿದ್ದ ಜಾನಪದ ಅಧ್ಯಯನ ತನ್ನ ಇತರ ಪ್ರಕಾರಗಳಿಗೆ ಪ್ರಸರಿಸಿದೆ. ಆ ನಿಟ್ಟಿನಲ್ಲಿ ಹಲವಾರು ಅಧ್ಯಯನಗಳು ಬಂದಿವೆ. ಮೊದಲೇ ಹೇಳಿದಂತೆ ಜಾನಪದ ಅಧ್ಯಯನದಲ್ಲಿ ಇದ್ದ ವಕ್ತೃ ಮತ್ತು ವಿದ್ವಾಂಸ ಎಂಬ ಭಿನ್ನ ರೀತಿಯ ಕಲ್ಪನೆಗಳು ಕಡಿಮೆಯಾಗುತ್ತಿವೆ. ಜಾನಪದ ಹೊಸ ಹೊಸ ಪರಿಕಲ್ಪನೆಗಳ ಬಗೆಗೆ ಅಧ್ಯಯನ ನಡೆಯುತ್ತಿರುವು ಗಮನಾರ್ಹವಾದುದು. ಹೊಸ ಹೊಸ ಪರಿಕಲ್ಪನೆಗಳ ಮುಖಾಂತರ ಜಾನಪದದ ಸೂಕ್ಷ್ಮಾತಿ ಸೂಕ್ಷ್ಮ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಅನುಕೂಲವಾಗುತ್ತದೆ. ಹೀಗಾಗಿ ಜಾನಪದ ಅಧ್ಯಯನ ಹೊಸದಾರಿಯಲ್ಲಿ ಸಾಗುವುದನ್ನು ಗುರುತಿಸಬಹುದು. ಸಂಗ್ರಹಕ್ಕಿಂತ ವಿವರಣೆ ಮತ್ತು ವಿಶ್ಲೇಷಣೆಗೆ ಹೆಚ್ಚು ಒತ್ತು ಕೊಡುವುದರ ಜೊತೆಗೆ ಬೇರೆ ಬೇರೆ ಶಿಸ್ತುಗಳ ಹಿನ್ನೆಲೆಯನ್ನು ಅಧ್ಯಯನಕ್ಕೆ ಬಳಸಿಕೊಂಡಿರುವುದನ್ನು ಕಾಣಬಹುದು. ಬಹುಪಾಲು ಅಧ್ಯಯನಗಳಲ್ಲಿ ವೈಚಾರಿಕ ಚಿಂತನೆಗಳನ್ನು ಕಾಣಬಹುದು.

ಸಮತಾವಾದಿಗಳು, ಸಮಾಜವಾದಿಗಳು, ಮಹಿಳಾವಾದಿಗಳು ತಾವು ಪಡೆದ ಜ್ಞಾನದ ಹಿನ್ನೆಲೆಯಲ್ಲಿ ಜಾನಪದದ ಸೂಕ್ಷ್ಮಾತಿ ಸೂಕ್ಷ್ಮ ವಿಚಾರಗಳನ್ನು ವಿಶಿಷ್ಟವಾದ ಮತ್ತು ಸ್ಪಷ್ಟವಾದ ರೀತಿಯಲ್ಲಿ ವಿಶ್ಲೇಷಿಸಿರುವುದನ್ನು ಗಮನಿಸಬಹುದು. ಈ ಹಿನ್ನೆಲೆಯಲ್ಲಿ ಜಾನಪದ ಅಧ್ಯಯನಕ್ಕೆ ಹೊಸ ಹೊಸ ಆಯಾಮಗಳು ದೊರೆತಿವೆ.

ಹತ್ತು ವರ್ಷದ ಅಧ್ಯಯನಗಳಲ್ಲಿ ಬಹುಮುಖ್ಯವಾಗಿ ಜಾನಪದ ಸಿದ್ದಾಂತಗಳ ಹಿನ್ನೆಲೆಯಲ್ಲಿ ಚರ್ಚಿಸಿರುವುದನ್ನು ಕಾಣಬಹುದು. ಪಾಶ್ಚಾತ್ಯ ಸಿದ್ಧಾಂತಗಳು ನಮ್ಮ ಜಾನಪದವನ್ನು ವಿಶ್ಲೇಷಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವಿದ್ದಾಗಲು ವಿದ್ವಾಂಸರು ಮತ್ತೆ ಮತ್ತೆ ಸಿದ್ಧಾಂತಗಳ ಬೆನ್ನು ಹತ್ತಿದ್ದಾರೆ. ಅದರಲ್ಲೂ ಪ್ರದರ್ಶನ ಸಿದ್ದಾಂತದ ಹಿನ್ನೆಲೆಯಲ್ಲಿ ಅಧ್ಯಯನಗಳು ನಡೆದಿರುವುದನ್ನು ಕಾಣಬಹುದು. ಪಾಶ್ಚಾತ್ಯ ಸಿದ್ಧಾಂತಗಳನ್ನು ಬೆನ್ನು ಹತ್ತಿದವರು ಒಂದು ಕಡೆ ಜಾನಪದವನ್ನು ವಿಶ್ಲೇಷಿಸುತ್ತಿದ್ದಾಗಲೇ, ದೇಸೀ ಚಿಂತನೆಯ ಹಿನ್ನೆಲೆಯಲ್ಲಿಯೂ ವಿದ್ವಾಂಸರು ಅಧ್ಯಯನಕ್ಕೆ ತೊಡಗಿದ್ದಾರೆ. ಆ ನಿಟ್ಟಿನಲ್ಲಿಯೂ ಬಹುಪಾಲು ವಿದ್ವಾಂಸರು ಯಶಸ್ವಿಯಾಗುತ್ತಿದ್ದಾರೆ. ಜೊತೆಗೆ ನಮ್ಮ ಜಾನಪದದ ವಿಶ್ಲೇಷಣೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.

ಜಾಗತೀಕರಣದ ಹಿನ್ನೆಲೆಯಲ್ಲಿ ಇಡೀ ಪ್ರಪಂಚವೇ ಗ್ರಾಮವಾಗುತ್ತಿರುವ ಹಿನ್ನಲೆಯಲ್ಲಿ ಸ್ಥಿತ್ಯಂತರಗೊಳ್ಳುತ್ತಿರುವ ಇಂದಿನ ಜನಪದ ಬದುಕಿನ ಜತೆ ಜತೆಗೆ ಅದರ ಜಾನಪದವೂ ಚಲನಶೀಲವಾಗುತ್ತಿದೆ. ಅದಕ್ಕೆ ಹೊಂದಿಕೊಂಡಂತೆ ಬೇರೆ ಬೇರೆ ಶಿಸ್ತು, ಸಿದ್ಧಾಂತ, ಸಮೀಪನಗಳ ಸಹಾಯದಿಂದ ಜಾನಪದ ಅಧ್ಯಯನವೂ ಭಿನ್ನ ಆಯಾಮವನ್ನು ಪಡೆದುಕೊಳ್ಳಲಿದೆ.