ಕಳೆದ ಹತ್ತು ವರ್ಷಗಳ ಜಾನಪದ ಕ್ಷೇತ್ರವನ್ನು ಸಿಂಹಾವಲೋಕನ ಮಾಡಿದಾಗ ಬಹಳಷ್ಟು ಸಂಶೋಧನಗಳು ನಡೆದಿರುವುದು ಕಂಡು ಬರುತ್ತದೆ. ಜಾನಪದ ಬದಲಾಗುತ್ತಿರುವ ಜ್ಞಾನ ಶಾಖೆ ಆ ಕಾರಣಕ್ಕಾಗಿ ಅದು ಇತರ ‘ವಿಕಾಸ ಶೀಲ’ ಶಾಸ್ತ್ರ ಶಾಖೆಗಳಂತೆ ಸ್ವತಂತ್ರವಾಗಿ ದೇಶ ಕಾಲಕ್ಕನುಸರಿಸಿ ಬೆಳೆಯುತ್ತಿದೆ. ಈ ಕಾರಣದಿಂದ ಅನ್ಯ ಶಿಸ್ತುಗಳ ವಿದ್ವಾಂಸರು ಕೂಡ ಈ ಕ್ಷೇತ್ರದಲ್ಲಿ ಕೃಷಿ ನಡೆಸಿದ್ದಾರೆ. ಈ ಕಾರಣದಿಂದ ಜಾನಪದ ಕ್ಷೇತ್ರದ ಸಂಶೋಧನೆಯ ಗತಿಯೂ ಕೂಡ ಸಹಜವಾಗಿ ತೀವ್ರಗತಿಯಲ್ಲಿ ಸಾಗಲು ಸಾಧ್ಯವಾಯಿತು. ಇಲ್ಲಿಯ ಚಿಂತನಾ ಕ್ರಮಗಳು ದೇಶೀಯ ಮಾರ್ಗವನ್ನು ಹಿಡಿದಿರುವುದು ಗಮನಿಸಬೇಕಾದ ಮಹತ್ವದ ಅಂಶವಾಗಿದೆ. ಹಿಂದಿನ ನಮ್ಮ ಜಾನಪದ ಸಂಶೋಧನಗಳು ಪಾಶ್ಚಾತ್ಯ ಸಿದ್ಧಾಂತಗಳ ಹಿನ್ನೆಲೆಯಲ್ಲಿ ನಡೆದಿದ್ದೇ ಹೆಚ್ಚು. ಈಚಿನ ದಿನಗಳಲ್ಲಿ ಈ ಪರಿಪಾಠವನ್ನು ಬದಿಗೆ ಸರಿಸಿ ತಮ್ಮದೇ ಆದ ಸ್ವತಂತ್ರ ಅಲೋಚನಾ ಕ್ರಮವಾದ ದೇಶೀ ಪ್ರಜ್ಞೆಯಲ್ಲಿ ಶೋಧಿಸಿರುವುದು ನಿಜಕ್ಕೂ ಸಂತಸದ ಸಂಗತಿಯಾಗಿದೆ. ಇಲ್ಲಿನ ಸಂಶೋಧನೆಗಳಲ್ಲೆಲ್ಲ ಹೊಚ್ಚ ಹೊಸ ಆಲೋಚನೆಗಳ ಹೊಳಪು ಮತ್ತು ವಿಷಯದ ಚಲನಶೀಲ ಗುಣಗಳು ವ್ಯಕ್ತವಾಗುತ್ತವೆ. ಜಾನಪದವೆನ್ನುವುದು ಕೇವಲ ಅನಕ್ಷರಸ್ಥ ಗ್ರಾಮೀಣ ಸುಮುದಾಯದ ಅಭಿವ್ಯಕ್ತಿಯಲ್ಲ ಅದು ನಗರ ಸಮುದಾಯದಲ್ಲೂ ಪ್ರಖರತೆಯಿಂದ ಒಡಮೂಡುತ್ತದೆ. ಇಂದಿನ ಆಧುನಿಕ ಜಗತ್ತಿನ ಕಂಪ್ಯೂಟರ್ ಕಾಲದಲ್ಲೂ ಅದರ ಬಾಹುಗಳು ಚಾಚಿಕೊಂಡಿವೆ. ನಗರ ಜೀವನದ ಯಾವುದೇ ಸವಲತ್ತುಗಳು ಜಾನಪದಕ್ಕೆ ಏನು ಮಾಡಲಾರವು ಎನ್ನುವ ಸತ್ಯ ಶೋಧನೆಯಿಂದ ಕಂಡು ಬರುತ್ತದೆ. ಇಂದಿನ ಆಧುನಿಕ ಯುಗವು ಒದಗಿಸಿದ ವೈಜ್ಞಾನಿಕ, ತಾಂತ್ರಿಕತೆಯ ಸೌಲತ್ತುಗಳು ಜಾನಪದವನ್ನು ಚುರುಕುಗೊಳಿಸಿ ಆ ಕಾಲದ ಜೊತೆಗೆ ಬದುಕಲು, ಹೊಸ ರೂಪವನ್ನು ಪಡೆದುಕೊಳ್ಳುವಂತೆ ಮಾಡಿವೆ.

ನಮ್ಮಲ್ಲಿ ಈಗ ನಡೆಯುವ ಸಂಶೋಧನಗಳನ್ನು ಗಮನಸಿದಾಗ ಅವುಗಳೆಲ್ಲ ಜನವರ್ಗಗಳನ್ನು ಕುರಿತ, ದೈವಗಳನ್ನು ಕುರಿತು, ಬೃಹತ್‌ ಪಠ್ಯವೊಂದರಿಂದ ನಿರ್ದಿಷ್ಟ ವಿಷಯವೊಂದಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲೆ ಹಾಕುವ ಪ್ರಯತ್ನ, ಜಾನಪದ ಸಂಗ್ರಹಿತ ಸಂಗ್ರಹ ಆಧಾರದ ಹಿನ್ನೆಲೆಯಿಂದ ಅರ್ಥೈಸುವ ಮಾದರಿಗಳಲ್ಲಿ ಒಂದಲ್ಲ ಒಂದನ್ನು ಮುಗ್ಧವಾಗಿ ಅನುಸರಿಸಿರುವುದು ಕಂಡುಬರುತ್ತದೆ. ಮೇಲಿನ ಮಾದರಿಗಳಿಗಿಂತ ಭಿನ್ನವಾದ ಮಾದರಿಗಳಲ್ಲಿ ಸಮಾಜ ವಿಜ್ಞಾನಿಗಳು ಇಲ್ಲಿ ಕೃಷಿ ಮಾಡಿದ್ದಾರೆ. ಇಂತಹ ಸಂಶೋಧನೆಯಲ್ಲಿ ಸಂಶೋಧಕರಿಗೆ ಪುಟ್ಟ ಸಮಸ್ಯೆಯೊಂದು ದೊರೆತರೆ ಸಾಕು ಅನಂತರ ಅದರ ಬಗೆಗೆ ದೊರೆಯುವ ಶಾಸನಗಳು, ಸಾಹಿತ್ಯಿಕ ಉಲ್ಲೇಖಗಳು, ಪ್ರಾಗೈತಿಹಾಸಿಕ ಮಾಹಿತಿಗಳು, ಉತ್ಖನನ ಸಂಗತಿಗಳು, ಭಾಷಣದ ವಿವರಗಳು, ಜನಪದ ನಿರೂಪಣೆಗಳು, ಸ್ಥಳ ಪುರಾಣಗಳು – ಹೀಗೆ ಎಷ್ಟು ವೈವಿಧ್ಯಮಯವಾದ ಮಾಹಿತಿಗಳು ದೊರೆಯುತ್ತವೆಯೋ ಅವೆಲ್ಲವನ್ನು ಅತ್ಯಂತ ಶ್ರಮವಹಿಸಿ ಸಂಗ್ರಹಿಸಲಾಗುವುದು. ಅನಂತರ ಸಂಗ್ರಹಿಸಿದನ್ನು ಸಂಶೋಧಕನ ಕೇಂದ್ರ ಉದ್ದೇಶಕ್ಕೆ ಬದ್ಧವಾಗಿ ಜೋಡಿಸಿ, ಹೊಸ ಅರ್ಥವೊಂದನ್ನು ಸೃಜಿಸಿ ಅದನ್ನು ವ್ಯಾಖ್ಯಾನಿಸಲಾಗುತ್ತದೆ. ಇದು ಒಂದು ರೀತಿಯ ಪಾಂಡಿತ್ಯದ ಹಾದಿಯಾಗಿದೆ. ಬೇರೆ ಬೇರೆ ಭಾಷೆಗಳ ಬಗೆಗೆ ತಿಳುವಳಿಕೆಗಳು ಹೆಚ್ಚಿದಷ್ಟೂ, ಈ ಬಗೆಯ ಸಂಶೋಧನೆಯ ವ್ಯಾಪ್ತಿ ವಿಸ್ತೃತವಾಗುತ್ತಾ ಹೋಗುತ್ತದೆ.

ಕಳೆದ ಹತ್ತು ವರ್ಷಗಳಲ್ಲಿ ಸಂಶೋಧನ ಪ್ರಬಂಧಗಳು ಬಹಳಷ್ಟು ಪ್ರಕಟವಾಗಿವೆ. ಅವುಗಳಲ್ಲಿ ಪ್ರಕಟವಾದ ಪಿಎಚ್. ಡಿ ಹಾಗೂ ಎಂ.ಫಿಲ್‌ ಸಂಶೋಧನ ಕೃತಿಗಳಲ್ಲಿ ನನಗೆ ಲಭ್ಯವಾದ ಕೃತಿಗಳನ್ನು ಮಾತ್ರ ಗಮನಿಸಿ, ಅವುಗಳ ಸಂಕ್ಷಿಪ್ತ ಸಮಾಲೋಚನೆಯನ್ನು ನೀಡಲಾಗಿದೆ. ಕನ್ನಡದಲ್ಲಿ ಬೇಟೆ ಸಾಹಿತ್ಯ. ನರೇಂದ್ರ ರೈ ದೆರ್ಲ ಅವರು ೧೯೯೦ರಲ್ಲಿ ಎಂ. ಫಿಲ್ ಪದವಿಗಾಗಿ ಸಿದ್ಧಪಡಿಸಿದ ನಬಂಧವಾಗಿದೆ. ಲೇಖಕರು ಕೃತಿಯನ್ನು ಮೂರು ಅಧ್ಯಾಯಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಮೊದಲ ಅಧ್ಯಾಯದಲ್ಲಿ ಬೇಟೆ ಪದದ ನಿಷ್ಪತ್ತಿ. ಅರ್ಥ, ಹುಟ್ಟು, ಬೆಳವಣಿಗೆಗಳ ಬಗೆಗೆ ಚರ್ಚಿಸಿದ್ದರೆ. ಹಳಗನ್ನಡ ಸುಮಾರು ನಲುವತ್ತು ಸಾಹಿತ್ಯ ಕೃತಿಗಳಲ್ಲಿ ಬರುವ ಬೇಟೆಯ ವಿವರಗಳನ್ನು ಎರಡನೇ ಅಧ್ಯಾಯದಲ್ಲಿ ವಿಶ್ಲೇಷಿಸಿದ್ದಾರೆ. ಕೊನೆಯ ಭಾಗದಲ್ಲಿ ಹೊಸಗನ್ನಡ ಸಾಹಿತ್ಯ ಕೃತಿಗಳಲ್ಲಿ ಬರುವ ಬೇಟೆಯ ವಿವರಗಳನ್ನು ಸಂಗ್ರಹಿಸಿದ್ದಾರೆ.

ಪ್ರಾಚೀನ ಹಾಗೂ ಅಧುನಿಕ ಕನ್ನಡ ಸಾಹಿತ್ಯ, ಜಾನಪದ, ಶಾಸನ ಮತ್ತು ವೀರಗಲ್ಲುಗಳಲ್ಲಿ ಉಲ್ಲೇಖಗೊಂಡಿರುವ ಬೇಟೆಯ ವಿಷಯಗಳನ್ನು ಸಂಕ್ಷಿಪ್ತವಾಗಿ ಸಂಶೋಧನಾತ್ಮಕವಾಗಿ ಸಂಗ್ರಹಿಸಿದ್ದಾರೆ. ಅನಾದಿಕಾಲದಿಂದ ಇಂದಿನವರೆಗೆ ಮಾನವನು ಆಹಾರ, ಹವ್ಯಾಸ, ಶೌರ್ಯ, ಪ್ರತಿಷ್ಠೆ, ಮನೋರಂಜನೆ ಮತ್ತು ಉಡುಗೊರೆಗಳಿಗಾಗಿ ಬೇಟೆಯನ್ನು ರೂಢಿಸಿಕೊಂಡು ಬಂದಿರುವ ಕ್ರಿಯೆಯನ್ನು ಈ ಕೃತಿಯಲ್ಲಿ ದೇರ್ಲ ಅವರು ಅನಾವಾರಣಗೊಳಿಸಿದ್ದಾರೆ. ಅಷ್ಟಾದಶ ವರ್ಣನೆಗಳಲ್ಲಿ ಒಂದಾಗಿ ಬರುವ ಬೇಟೆಯ ವರ್ಣನೆಯನ್ನು ಸರಳವೂ, ಸುಂದರವೂ ಆದ ಭಾಷಾಶೈಲಿ, ತಂತ್ರ ನಿರೂಪಣೆಗಳಿಂದ ಕನ್ನಡ ಸಾಹಿತ್ಯಾಸಕ್ತರಿಗೆ ಬೇಟೆ ಸಾಹಿತ್ಯದ ಸವಿಯನ್ನು ಉಣಿಸುತ್ತಾರೆ. ಇದೊಂದು ಬೇಟೆಯ ಬಗೆಗಿರುವ ಒಳ್ಳೆಯ ಸಂಶೋಧನಾತ್ಮಾಕ ಕೃತಿಯಾಗಿದೆ.

ಈ ಬಗೆಯ ಸಂಶೋಧನೆಯಲ್ಲಿ ಮೊದಲು ಅಧ್ಯಯನ ನಡೆಸ ಬಯಸುವ ಕ್ಷೇತ್ರವನ್ನು ಆಯ್ದುಕೊಳ್ಳಲಾಗುತ್ತದೆ. ಅನಂತರ ಈ ಕ್ಷೇತ್ರದಲ್ಲಿ ಹುಡುಕ ಬಯಸುವ ವಿಷಯವನ್ನೂ ಖಚಿತಗೊಳಿಸಿ ಕೊಳ್ಳಲಾಗುತ್ತದೆ. ಈ ಬಗೆಗೆ ದೇರ್ಲ ಅವರು ಹೀಗೆ ಬರೆಯುತ್ತಾರೆ. “ಇದಕ್ಕಾಗಿ ನಾನು ಕನ್ನಡ ಸಾಹಿತ್ಯದ ನೂರಾರು ಕೃತಿಗಳನ್ನು ತಡಕಾಡಿದ್ದು, ಓದಿದ್ದು ಮಾತ್ರ ಸತ್ಯ. ವಡ್ಡಾರಾಧಾನೆಯಿಂದ ತೊಡಗಿ ಹೊಸಗನ್ನಡದ ಕೆದಂಬಾಡಿ ಜತ್ತಪ್ಪರೈಯವರ ಮೃಗಯಾ ಸಾಹಿತ್ಯದ ವರೆಗೆ ಬೇಟೆಯ ದಾಖಲೆಗಾಗಿ ನಾನು ಬೇಟೆಯಾಡಿದ್ದೇನೆ. ಆ ಪತ್ತೇದಾರಿ ಕೆಲಸದ ಸಹಜ ಕುತೂಹಲದ ಫಲಿತಾಂಶವೇ ಈ ಕೃತಿ ಸಂಗ್ರಹ” ಈ ಬಗೆಯ ಪತ್ತೇದಾರಿ ಮಾದರಿಗಳು ಕನ್ನಡ ಸಂಶೋಧನೆಯಲ್ಲಿ ಮೊದಲಿನಿಂದಲೂ ಜನಪ್ರಿಯವಾಗಿದ್ದೂ ಮುಂದಿನ ಅಧ್ಯಯನಗಳು ಅದರ ಮುಂದುವರಿಕೆಯಾಗಿವೆ. ಇಲ್ಲಿ ವಿಶ್ಲೇಷಣೆಯು ಬಹುಮಟ್ಟಿಗೆ ಗೈರು ಹಾಜರಾಗಿರುತ್ತದೆ. ಆದರೆ ತಾಳ್ಮೆಯ ಸರ್ವೇಕ್ಷಣೆ ಮತ್ತು ಸೂಕ್ಷ್ಮ ವೀಕ್ಷಣೆ ಇಲ್ಲಿರುತ್ತದೆ.

ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಜಾನಪದ ಕಥೆಗಳು : ಒಂದು ಅಧ್ಯಯನ : ಡಾ. ಎಂ. ಜಯಚಂದ್ರ ಅವರ ಪಿಎಚ್. ಡಿ. ಗ್ರಂಥ. ಪ್ರಸ್ತುತ ಗ್ರಂಥದಲ್ಲಿ ೯ ನೆಯ ಶತಮಾನದಿಂದ ೧೯ ನೆಯ ಶತಮಾನದವರೆಗೆ ಒಂದು ಸಾವಿರ ವರ್ಷಗಳ ಅಂತರದಲ್ಲಿ ಕನ್ನಡ ಜೈನ ಸಾಹಿತ್ಯದಲ್ಲಿ ಪ್ರಕಟಗೊಂಡ ೧೩೪ ಕಥೆಗಳನ್ನು ಅಧ್ಯಯನಕ್ಕೊಳಪಡಿಸಲಾಗಿದೆ. ಒಟ್ಟು ಎಂಟು ಅಧ್ಯಾಯಗಳಲ್ಲಿ ರಚನೆಗೊಂಡಿದೆ. ಕ್ರಮವಾಗಿ ಅಧ್ಯಯನ ಉದ್ದೇಶ ವ್ಯಾಪ್ತಿಯ ಕುರಿತು, ಈವರೆಗೆ ಉಲ್ಲೇಖಗೊಂಡ ಜೈನ ಕಥೆಗಳ ಸಮೀಕ್ಷೆ, ಕನ್ನಡದಲ್ಲಿ ಪ್ರಕಟವಾದ ಜೈನ ಕಥೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಉಪಕಥೆಗಳ ಪಠ್ಯಗಳನ್ನು ಕೊಡಲಾಗಿದೆ. ಪಠ್ಯಗಳ ಜೊತೆಗೆ ಕಥೆಯ ಸಂದರ್ಭ, ಆಶಯಗಳನ್ನು ಮತ್ತು ಕಥೆಗಳನ್ನು ಬಳಸಿಕೊಂಡ ಉಲ್ಲೇಖಗಳನ್ನು ಅಡಿ ಟಿಪ್ಪಣಿಯಲ್ಲಿ ಕೊಡಲಾಗಿದೆ. ಕಥೆಗಳ ಆಶಯ, ಮಾದರಿ ಮತ್ತು ಐತಿಹ್ಯಗಳ ಬಗೆಗೆ ಅಧ್ಯಾಯ ಏಳರಲ್ಲಿ ಚರ್ಚಿಸಲಾಗಿದೆ. ಒಟ್ಟು ಅಧ್ಯಯನದ ಅಂಶಗಳನ್ನು ಉಪಸಂಹಾರದಲ್ಲಿ ಹೇಳಲಾಗಿದೆ. ಅನುಬಂಧದಲ್ಲಿ ಅಧ್ಯಯನಕ್ಕೆ ಪೂರಕವಾದ ಅಂಶಗಳನ್ನು ಮೂರು ಭಾಗದಲ್ಲಿ ನೀಡಲಾಗಿದೆ. ಕ್ರಮವಾಗಿ ಐತಿಹ್ಯಗಳ ಮಠ್ಯ ಮತ್ತು ಉಲ್ಲೇಖ ವಿವಿರ, ಜೈನ ಕಥೆಗಳಿಗೆ ಸಂಬಂಧಿಸಿದ ೩೮ ಬಗೆಯ ಆಶಯಗಳು ಮತ್ತು ಅಧ್ಯಯನಕ್ಕೆ ಬಳಸಿಕೊಂಡ ೧೩೪ ಕಥೆಗಳ ಆಕಾರದಿ ಸೂಚಿಯ ವಿವರ ನೀಡಲಾಗಿದೆ.

ಒಟ್ಟಿನಲ್ಲಿ ಜೈನ ಸಾಹಿತ್ಯದಲ್ಲಿ ಬಳಕೆಯಿರುವ ೯೦ ಕಥೆಗಳು ಮತ್ತು ೫೦ ರಷ್ಟು ಉಪಕಥೆಗಳಿವೆ. ೪೬ ರಷ್ಟು ಕನ್ನಡ ಜನಪದ ಕಥೆಗಳ ಸಂಗ್ರಹಗಳನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ. ಕನ್ನಡ ಜೈನ ಸಾಹಿತ್ಯದಲ್ಲಿ ಪ್ರಕಟವಾದ ಗ್ರಂಥಸ್ಥ ಕಥೆಗಳು ನೀತಿ ಪ್ರಧಾನ ಕಥೆಗಳು ಪ್ರಸ್ತುತ ಕೃತಿಯಲ್ಲಿವೆ. ಕನ್ನಡ ಜನಪದ ಕಥೆಗಳ ಅಧ್ಯಯನದ ವೈಜ್ಞಾನಿಕ ಕ್ರಮವನ್ನು ಇಲ್ಲಿ ಬಳಸಿಕೊಂಡಿಲ್ಲವಾದರೂ ವೈಷ್ಣವ, ಶೈವ, ಕ್ರೈಸ್ತ, ಬೌದ್ಧ ಹೀಗೆ ಅನೇಕ ಮತಧರ್ಮಗಳ ನೆಲೆಯಲ್ಲೂ ಈ ರೀತಿ ಅಧ್ಯಯನ ಸಾಧ್ಯವಾಗುವುದಕ್ಕೆ ಈ ಗ್ರಂಥ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ದೇರ್ಲ ಅವರ ಅಧ್ಯಯನ ಕೃತಿಯಂತೆ ಇದೂ ಒಂದು. ಜಯಚಂದ್ರ ಅವರು ಹೀಗೆ ಬರೆಯುತ್ತಾರೆ. “ಜಾನಪದ ಕಥೆಗಳು ನಮ್ಮ ಪ್ರಾಚೀನ ಕನ್ನಡ ಜೈನ ಸಾಹಿತ್ಯದಲ್ಲಿ ಇವೆಯೇ? ಇದ್ದರೆ ಎಷ್ಟಿವೆ? ಅವು ಯಾವುವು? ಅವುಗಳನ್ನು ಗುರುತಿಸುವುದು ಹೇಗೆ? ಯಾವ ಉದ್ದೇಶಕ್ಕಾಗಿ ಬಳಕೆಯಾಗಿವೆ? ಈ ಮೊದಲಾದ ಅಂಶಗಳನ್ನು ಕುರಿತು ಅಧ್ಯಯನ ಮಾಡುವುದೇ ಈ ಮಹಾಪ್ರಬಂಧದ ಪ್ರದಾನ ಉದ್ದೇಶ” ಜನವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆಗೆ ತೊಡಗಿದ ಶೋಧನೆಗಳಲ್ಲಿ ಭಿತ್ತಿ ವಿಶಾಲವಾಗಿ ಹರಡಿಕೊಂಡಿರುವುದು ಕಂಡು ಬರುತ್ತದೆ. ಅಂಬಳಿಕೆಯವರ ಮಲೆನಾಡಿನ ವಕ್ಕಲಿಗರು ಮತ್ತು ಅವರ ಜಾನಪದ, ಕರಿಶೆಟ್ಟಿ ರುದ್ರಪ್ಪನವರ ಮ್ಯಾಸ ನಾಯಕರು ಒಂದು ಜನಾಂಗಿಕ ಅಧ್ಯಯನ, ಹರಿಲಾಲ್‌ ಪವಾರ್ ಅವರ ಕರ್ನಾಟಕದ ಹೆಳವರು ಒಂದು ಅಧ್ಯಯನ, ಟಿ. ಗೋವಿಂದರಾಜು ಅವರ ಚೆನ್ನಾದೇವಿ ಜಾನಪದೀಯ ಅಧ್ಯಯನ, ಅರ್ಜುನ ಗೊಳಸಂಗಿ ಅವರ ದಲಿತರ ಬದುಕು ಮತ್ತು ಸಂಸ್ಕೃತಿ : ಜನಪದೀಯ ಅಧ್ಯಯನಗಳು ಉತ್ತಮ ಉದಾಹರಣೆಗಳಾಗಿವೆ. ಎಂ. ಜಿ. ಈಶ್ವರಪ್ಪ ಅವರ ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ ಕೃತಿಯನ್ನು ಈ ಮಾದರಿಯ ವ್ಯಾಪ್ತಿಗೆ ಸೇರಿಸಬಹುದು.

ಮುಗೇರರು ಜನಾಂಗ ಜಾನಪದ ಅಧ್ಯಯನ : ಆಭಯಕುಮಾರರ ಪಿಎಚ್‌.ಡಿ ಮಹಾಪ್ರಬಂಧವಾಗಿದೆ. ದಕ್ಷಿಣ ಕನ್ನಡ ಪರಿಶಿಷ್ಟ ಜನವರ್ಗದ ಮುಗೇರರ ಬಗೆಗಿನ ವಿಸ್ತೃತವಾದ ಅಧ್ಯಯನ. ಎಂಟು ಅಧ್ಯಯನ ವಿಭಾಗಗಳನ್ನು ಮಾಡಿಕೊಳ್ಳಲಾಗಿದೆ. ಪ್ರಬಂಧದ ಉದ್ದೇಶ ವ್ಯಾಪ್ತಿ. ಸೈದ್ದಾಂತಿಕತೆಯ ಬಗೆಗಿನ ಪೀಠಿಕೆ, ಜನಾಂಗದ ಪರಿಚಯ, ವಾಸ, ಕೌಟುಂಬಿಕ ವಿವರ, ಆಚರಣೆ, ಹಬ್ಬ – ಮೊದಲಾದವುಗಳ ಜೊತೆಗೆ ಸಾಂಸ್ಕೃತಿಕ ಪರಿಚಯ, ಆಚರಣಾ ಲೋಕದ ತಾತ್ತ್ವಿಕ ವಿಶ್ಲೇಷಣೆ ಇದೆ. ಗ್ರಂಥದ ಹೃದಯ ಭಾಗವಾದ ಇಲ್ಲಿ ಪ್ರಬಂಧಕಾರರು ಮತ್ತೆ ಮತ್ತೆ ಪ್ರಸ್ತಾಪಿಸುವ ‘ಪ್ರದರ್ಶನ ಸಿದ್ಧಾಂತ’ದ ಅನ್ವಯಿಕ ಚರ್ಚೆಯಾಗಿದೆ. ಅಧ್ಯಾಯ ನಾಲ್ಕರಲ್ಲಿ ಮುಗೇರರ ಧಾರ್ಮಿಕ ವಿಧಿಯಾದ ‘ಮಂಜ’ ಮತ್ತು ಕೋಲದ ತೌಲನಿಕ ಚರ್ಚೆಯಿದೆ. ಅಧ್ಯಾಯ ಐದರಲ್ಲಿ ಮುಗೇರರ ಆಚರಣಾತ್ಮಕ ‘ಕೋಲ’ಗಳಾದ ‘ಆಟಿಕಳೆಂಜ’ ‘ಕರಂಗೋಲು’ ‘ಚೆನ್ನುಪಿಲಿಪಂಜಿ’ – ಇವುಗಳ ಬಗೆಗೆ ವಿಶ್ಲೇಷಣೆ ಇದೆ. ಮನರಂಜನಾ ಕಲೆಗಳೆಂದು ವರ್ಗೀಕರಿಸಲಾದ ‘ದುಡಿ ಕುಣಿತ’ದ ವಿವಿಧ ಪ್ರಭೇಧಗಳ ಬಗೆಗೆ ಅಧ್ಯಾಯ ಆರರಲ್ಲಿ ಚರ್ಚಿಸಲಾಗಿದೆ. ಅಧ್ಯಾಯ ಏಳರಲ್ಲಿ ಮುಗೇರ ಮತ್ತು ಇತರ ದಲಿತರ ಕುಣಿತಗಳ ತೌಲನಿಕ ಅಧ್ಯಯನವಿದೆ. ಅಧ್ಯಾಯ ಎಂಟು ಮುಗೇರ ಕುಣಿತಗಳ ಶೈಲಿಯ ಬಗೆಗಿನ ಚರ್ಚೆಯಾಗಿದೆ. ಮುಗೇರರ ಸಾಂಸ್ಕೃತಿಕ ವೀರರ ಆರಾಧನೆಯಾದ ‘ಮುಗೇರ ಕೋಲ’ದ ವಿಸ್ತೃತವಾದ ಅಧ್ಯಯನ ಈ ಗ್ರಂಥದ ಹೃದಯಭಾಗ. ಮುಗೇರ ಕೋಲದ ಪ್ರಾದೇಶಿಕ ವೈಶಿಷ್ಟ ಅದರ ಪ್ರದರ್ಶನ ಸಂದರ್ಭ, ಅವರ ಪ್ರಾಚೀನ ಬದುಕು ಮತ್ತು ಕೋಲ, ಅಪಸಂಸ್ಕೃತೀಕರಣ ಮತ್ತು ಮುಗೇರ ಕೋಲ, ಭಿನ್ನಪಾಠಗಳ ವಿವರ, ಪ್ರೇಕ್ಷಕರು ಮತ್ತು ಪ್ರದರ್ಶನದ ಸಂಬಂಧಗಳ ಬಗೆಗೆ ಚರ್ಚಿಸಲಾಗಿದೆ.

ಸಂಶೋಧಕರು ನೀಡಲಾದ ಅಪೂರ್ವ ಮಾಹಿತಿಗಳು ಪ್ರಸ್ತುತ ಅಧ್ಯಯನದ ಮಹತ್ವವನ್ನು ಹೆಚ್ಚಿಸಿವೆ. ಮುಗೇರ ಕೋಲದ ಬಗೆಗೆ ಮಾಹಿತಿಗಳನ್ನು ಪೂರ್ಣ ಪ್ರಮಾಣದಲ್ಲಿ ಇನ್ನಿಲ್ಲವೆನ್ನು ವಂತೆ ಸಂಗ್ರಹಿಸಿದ್ದಾರೆ. ಈ ಮಾಹಿತಿಗಳು ಸಂಸ್ಕೃತಿಕ ಚಿಂತಕರಿಗೆ ತುಂಬ ಉಪಯುಕ್ತವಾಗುತ್ತವೆ.

ಇದುವರೆಗಿನ ಜನಾಂಗೀಯ ಅಧ್ಯಯನಗಳು ಒಂದು ಸಿದ್ಧ ಮಾದರಿಯ ನೆರಳಿನಲ್ಲಿ ನಡೆದಿವೆ. ಅವುಗಳೆಲ್ಲ ಮಾನವಶಾಸ್ತ್ರದ ಅಧ್ಯಯನದ ಮಾದರಿಗಳು. ಅಧ್ಯಯನದಲ್ಲಿ ಮಾನವಶಾಸ್ತ್ರವು ತನ್ನದೇ ಆದ ಛಾಪು ಮೂಡಿಸಿಕೊಂಡಿದೆ. ಜನಪ್ರೀಯತೆಯ ಕಾರಣದಿಂದಾಗಿ ಇಂಥ ಅಧ್ಯಯನಗಳು ಅವುಗಳ ಮಾದರಿಗಳನ್ನು ಅನುಸರಿಸಿವೆ. ಉದಾ: ವಿದ್ಯಾವಂತರು ಜನಪದರವನ್ನು ಅಧ್ಯಯನ ಮಾಡುವುದು ಪ್ರಸ್ತುತ ಅಧ್ಯಯನ ಇದರ ಮುಂದುವರಿಕೆಯಾಗಿದೆ.

ಕರ್ನಾಟಕದ ಹೆಳವರು ಒಂದು ಅಧ್ಯಯನ : ಹರಿಲಾಲ್ ಕೆ. ಪವಾರ್ ಅವರ ಮಹಾಪ್ರಬಂಧ. ಕೃತಿಯ ಆರು ಅಧ್ಯಾಯಗಳಲ್ಲಿ ಹರಡಿಕೊಂಡಿದೆ. ಹೆಳವರ ಮೂಲ, ಚರಿತ್ರೆ, ಪ್ರಸರಣ, ಸಂಸ್ಕಾರ, ಸಂಪ್ರದಾಯ, ಕುಲವೃತ್ತಿ, ವಿಧಿನಿಷೇಧ, ಸಾಮಾಜಿಕ ವ್ಯವಸ್ಥೆ, ವೃತ್ತಿ ನಡವಳಿಕೆ ಭಾಷೆ ಮುಂತಾದವುಗಳ ಬಗ್ಗೆ ದೀರ್ಘವಾದ ವಿವರಗಳನ್ನೊಳಗೊಂಡ ವಿಶ್ಲೇಷಣೆಯಿಂದ ಕೂಡಿದೆ. ಕರ್ನಾಟಕದಾದ್ಯಂತ ಪಸರಿಸಿರುವ ಆ ಜನಾಂಗದ ಬಗ್ಗೆ ಕ್ಷೇತ್ರಕಾರ್ಯದಿಂದ ವಿಪುಲ ಮಾಹಿತಿ ಸಂಗ್ರಹಿಸಿರುವುದು ಅಧ್ಯಯನದಿಂದ ತಿಳಿದುಬರುತ್ತದೆ. ಲೇಖಕರ ಶ್ರಮ ಹಾಗೂ ತಾಳ್ಮೆಗಳು ಇಲ್ಲಿ ಕಾಣಬಹುದು. ಜೀವನಾವರ್ತನದ ಆಚರಣೆಗಳನ್ನು ವಿವರಿಸುವ ಜೊತೆಗೆ ಅವರ ವಾರ್ಷಿಕಾವರ್ತನದ ಆಚರಣೆಗಳನ್ನು ಹೇಳಿದ್ದರೆ, ಈ ಅಧ್ಯಯನಕ್ಕೆ ನ್ಯಾಯ ದೊರಕಿಸಿ ಕೊಟ್ಟಾಂತಾಗುತ್ತಿತ್ತು. ಒಂದು ಜನವರ್ಗವನ್ನು ಬೆಳಕಿಗೆ ತಂದು ಅದರ ಬಗೆಗೆ ಹೇರಳವಾದ ಮಾಹಿತಿಗಳನ್ನು ನೀಡಿದ್ದಾರೆ. ಜನಾಂಗದ ಸಂಶೋಧನಾ ಅಧ್ಯಯನಕ್ಕೆ ಇದು ಸಹಕಾರಿಯಾಗುತ್ತದೆ.

ಚನ್ನಾದೇವಿ ಅಗ್ರಹಾರ ಜಾನಪದೀಯ ಅಧ್ಯಯನ : ಟಿ. ಗೋವಿಂದರಾಜು ಅವರ ಪಿಎಚ್. ಡಿ ಪ್ರಬಂಧವಾಗಿದೆ. ಒಂದು ಹಳ್ಳಿ ಯಾವ ಯಾವ ದೃಷ್ಟಿಯಿಂದ ಹೇಗಿದೆ ಎಂಬ ವಿಪುಲ ಮಾಹಿತಿಗಳನ್ನು ಸಂಗ್ರಹ ಮಾಡಿ ಪ್ರಕಟಿಸುವ ಪಟ್ಟಿಯಲ್ಲ. ಅದು ಆ ಹಳ್ಳಿಯ ಸಮಸ್ತ ಬದುಕನ್ನು ಆದರ ಎಲ್ಲ ಒಳಸುಳಿಗಳ ಒತ್ತಡಗಳ ಒತ್ತಡದಲ್ಲಿ ಸರಿಯಾಗಿ ಗ್ರಹಿಸುವ ಕೆಲಸ. ಇಲ್ಲಿ ಸಂಶೋಧಕ ಕೂಡ ಎಚ್ಚರವಹಿಸಬೇಕಾಗುತ್ತದೆ. ಪ್ರಸ್ತುತ ಕೃತಿಯನ್ನು ಓದುವಾಗ ಸಂಶೋಧಕರು ಕೂಡ ಇಂಥ ಸಂದಿಗ್ಥಗಳಿಗೆ ಸಿಲುಕಿದ್ದಾರೆನ್ನಬಹುದಾದರೂ ಸಾಕಷ್ಟು ಕಡೆ ಇವೆಲ್ಲವನ್ನು ಒಟ್ಟುಗೂಡಿಸಿ ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಶ್ರೀ ಅರ್ಚಕ ರಂಗಸ್ವಾಮಿ ಭಟ್ಟರವರ ‘ಹುಟ್ಟಿದ ಹಳ್ಳಿ’ಯಿಂದ ಪ್ರಸ್ತುತ ‘ಚನ್ನಾದೇವಿ ಅಗ್ರಹಾರ’ದ ವರೆಗೆ ಒಂದೇ ಹಳ್ಳಿಯನ್ನು ಇಟ್ಟುಕೊಂಡು ಅಧ್ಯಯನ ಮಾಡಿದವರ ಸಂಖ್ಯೆ ತೀರ ವಿರಳ, ಅದರಲ್ಲೂ ಹುಟ್ಟಿದ ಹಳ್ಳಿಯನ್ನು ಕುರಿತು ಬರೆದ ಕಾಲಕ್ಕೂ ಗೋವಿಂದರಾರು ಬರೆಯುತ್ತಿರುವ ಕಾಲಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈಗಿನ ಅಧ್ಯಯನ ಸಂದರ್ಭದಲ್ಲಿ ಅರ್ಚಕ ರಂಗಸ್ವಾಮಿ ಬಟ್ಟರ ಮುಗ್ಧತೆ ಈಗಿನ ಅಧ್ಯಯನಕ್ಕೆ ಸಾಧ್ಯವಾಗುವುದಿಲ್ಲ. ಈ ದೃಷ್ಟಿಯಿಂದ ಸ್ವಾತಂತ್ರ್ಯ ನಂತರದ ಭಾರತದ ಒಂದು ಹಳ್ಳಿಯನ್ನು ಅದರೆಲ್ಲ ಸಮಕಾಲೀನ ಸಮಸ್ಯೆಗಳ ಜೊತೆಯಲ್ಲಿ ಅಧ್ಯಯನ ಮಾಡಿದಾಗ ಮಾತ್ರ ಅದು ಸಾರ್ಧಕವಾಗುತ್ತದೆ. ಮಾಹಿತಿ ಸಂಗ್ರಹ ಮತ್ತು ಅದರ ವಿಂಗಡನೆ ಹಾಗೂ ವಿಶ್ಲೇಷಣೆಯ ದೃಷ್ಟಿಯಿಂದ ಗೋವಿಂದರಾಜು ಗಮನಾರ್ಹ ಕೆಲಸವನ್ನು ಮಾಡಿದ್ದಾರೆ.

ದಲಿತರ ಬದುಕು ಮತ್ತು ಸಂಸ್ಕೃತಿ : ಜಾನಪದೀಯ ಅಧ್ಯಯನ : ಡಾ ಅರ್ಜುನ ಗೊಳಸಂಗಿಯವರ ‘ಪಿಎಚ್‌.ಡಿ. ಮಹಾಪ್ರಬಂಧ’. ಹೊಲೆಯರು, ಸುಡುಗಾಡ ಸಿದ್ಧರು, ಮಾದಿಗರು, ದಕ್ಕಲಿಗರು, ಸಮಗಾರರು, ಡೋರರು, ಡೊಂಬರು, ಕೊರವರು, ಕಿಳ್ಳೇಕ್ಯಾತರು, ಒಡ್ಡರು ಹೀಗೆ ಉತ್ತರ ಕರ್ನಾಟಕದಲ್ಲಿನ ಹತ್ತು ದಲಿತ ಸಮುದಾಯಗಳ ಸಮಗ್ರ ಬದುಕನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಪ್ರತಿ ಸಮುದಾಯದ ಹೆಸರು; ಹೆಸರಿನ ಅರ್ಥ, ವಿಶ್ಲೇಷಣೆಗಳು, ಜೀವನ ವಿಧಾನಗಳು, ಭೌತಿಕ ಬದುಕು ಮತ್ತು ಸಂಸ್ಕೃತಿ ಹಾಗೂ ಅಭೌತಿಕ ಬದುಕು ಮತ್ತು ಸಂಸ್ಕೃತಿ ಎಂಬ ಎರಡು ನೆಲೆಯಲ್ಲಿ ವಿವರಿಸುವ ಪ್ರಯತ್ನ ನಡೆಸಿದ್ದಾರೆ, ಮುಂದಿನ ಶೋಧನೆಯಡಿಯಲ್ಲಿ ಊಟೋಪಚಾರ ವಸತಿ ಉಡುಗೆ – ತೊಡುಗೆ, ಭಾಷೆ, ಕಸುಬು, ಸಾಮಾಜಿಕ ಕೌಟುಂಬಿಕ ರಚನೆ ಮುಂತಾದವುಗಳು ಭೌತಿಕ ಭಾಗದಲ್ಲಿ ಚರ್ಚಿಸಲಾಗಿದೆ. ಪ್ರತಿ ಸಮುದಾಯದ ಹುಟ್ಟುವಿವರ ಮರಣದವರೆಗಿನ ಜೀವನಾವೃತ್ತದ ಆಚರಣೆಗಳನ್ನು ಅಬೌತಿಕ ಭಾಗದಲ್ಲಿ ಚರ್ಚಿಸಲಾಗಿದೆ. ಹಬ್ಬ – ಹರಿದಿನಗಳಲ್ಲಿ – ಜಾತ್ರೆಗಳನ್ನು ಸಾರ್ವತ್ರಿಕವೆಂಬಂತೆ ಪ್ರತಿ ದಲಿತ ಸಮುದಾಯಗಳಿಗೂ ಪ್ರತ್ಯೇಕವಾಗಿ ವಾರ್ಷಿಕಾವರ್ತನದ ಆಚರಣೆಗಳನ್ನು ವಿವರಿಸಿದ್ದಾರೆ.

ಇಲ್ಲಿನ ಅಧ್ಯಯನದಲ್ಲಿ ಸಂಶೋಧಕರ ಶ್ರಮ, ಶಿಸ್ತು ಪ್ರಾಮಾಣಿಕತೆಗಳು ಎದ್ದು ತೋರುತ್ತವೆ. ವ್ಯಾಪಕವಾದ ಕ್ಷೇತ್ರ ಕಾರ್ಯಮಾಡಿ ಪ್ರತಿ ಜನವರ್ಗದ ವಿಪುಲ ಮಾಹಿತಿ ಸಂಗ್ರಹಿಸಿ ಅವುಗಳನ್ನು ಬರಹ ರೂಪಕ್ಕಿಳಿಸುವಾಗ ಆ ಜನವರ್ಗದ ನೈಜ ಬದುಕಿಗೆ ಅನ್ಯಾಯವಾಗದಂತೆ ನೋಡಿಕೊಂಡಿದ್ದಾರೆ. ಇವು ಸಂಶೋಧಕರ ಗುಣಾತ್ಮಕ ಅಂಶಗಳೂ ಹೌದು. ಸಂಶೋಧಕರು ಪ್ರತಿ ಜನವರ್ಗದ ಬಗೆಗೆ ಒದಗಿಸುವ ಅಪೂರ್ವ ಮಾಹಿತಿಗಳು ದಲಿತಲೋಕದ ಸಾಂಸ್ಕೃತಿಕ ಬದುಕನ್ನು ಅನಾವರಣಗೊಳಿಸುತ್ತವೆ. ಮಾಹಿತಿಗಳ ವಿಶ್ಲೇಷಣೆಗೆ ಸಂಶೋಧಕರು ತಲೆಕೆಡಿಸಿಕೊಳ್ಳದೆ ಅದರ ಯಥಾವತ್ತದ ನಿರೂಪಣೆಯನ್ನೇ ಪ್ರಧಾನವಾಗಿಸಿದ್ದಾರೆ. ಇಲ್ಲಿ ಸಂಗ್ರಹಿಸಿ ಕೊಟ್ಟ ಸಾಕಷ್ಟು ವಿಪುಲ ಮಾಹಿತಿಗಳನ್ನು ಬಳಸಿಕೊಂಡು ಈ ಕ್ಷೇತ್ರದಲ್ಲಿನ ಆಸಕ್ತ ಸಂಶೋಧಕರು ತಮ್ಮದೇ ಹೊಸ ದೃಷ್ಟಿಕೋನದಿಂದ ವಿಶ್ಲೇಷಣೆ ನಡೆಸಬಹುದು. ಇದೇ ಈ ಕೃತಿಯ ಸಾರ್ಥಕತೆ ಎನ್ನಬಹುದು. ಮೊದಲ ಅಧ್ಯಾಯದಲ್ಲಿ ಸಂಶೋಧಕರು ದಲಿತರು ಎಂದರೆ ಯಾರು? ಎನ್ನುವ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಉಪಸಂಹಾರದಲ್ಲಿ ‘ದಲಿತ’ ವಿವರ ವ್ಯಾಖ್ಯಾನ ಮಾಡಿದ್ದಾರೆ. ಅವರ ಪ್ರಕಾರ “ಸಾಮಾಜಿಕವಾಗಿ, ಅರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಶೋಷಣೆಗೆ ಒಳಗಾದ ಅಸ್ಪೃಶಗಳು ಮಾತ್ರ ದಲಿತರು” ಆದರೆ ಸುಬ್ಬಣ್ಣ ರೈ ಅವರು ಹೀಗೆ ಅಭಿಪ್ರಾಯ ವ್ಯಕ್ತಪಡಿಸಿತ್ತಾರೆ. “ಆದರೆ ಕೆಲವು ಸಂದರ್ಭಗಳಲ್ಲಿ ಲೇಖಕರ ಈ ಅಭಿಪ್ರಾಯವನ್ನು ಪುನರ್ ಪರೀಶೀಲಿಸಬೇಕಾದ ಅವಶ್ಯಕತೆ ಇದೆ ಎನಿಸುತ್ತದೆ. ಸರಕಾರದ ನಿಯಮಾನುಸಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳೆನಿಸಿಕೊಂಡ ಎಲ್ಲರನ್ನೂ ‘ದಲಿತ’ ರೆಂದು ಪರಿಗಣಿಸುವ ಆಲೋಚನಾ ಕ್ರಮವೊಂದಿದೆ. ಅದರಲ್ಲಿ ಅಸ್ಪೃಶರು ಮಾತ್ರವಲ್ಲದೆ ಸ್ಪೃಶ್ಯ ಸಮುದಾಯದವರೂ ಒಳಗೊಳ್ಳುತ್ತಾರೆ. ಲೇಖಕರು ಅನೇಕ ಕಡೆ ‘ದಲಿತ ಮತ್ತು ಬುಡಕಟ್ಟು’ ಎಂಬ ಪರಿಭಾಷೆಗಳೆರಡನ್ನು ಸಮೀಕರಿಸಿದಂತಿದೆ. ಇಂಥಹ ಸಂದರ್ಭದಲ್ಲಿ ನಾವು ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಶೋಷಣೆ ಎನ್ನುವುದು ಜಾತಿ ವ್ಯವಸ್ಥೆಯ ಪರಿಧಿಗೊಳಪಟ್ಟದು. ಅದರಾಚೆಗಿನ ಬುಡಕಟ್ಟು ಸಂಸ್ಕೃತಿಗೆ ನಾವು ಈ ಪರಿಕಲ್ಪನೆ – ಪರಿಭಾಷೆಗಳಲ್ಲಿ ಅನ್ವಯಿಸುವುದು ಅಷ್ಟೊಂದು ಸಮಂಜಸವೆನಿಸಲಾರದು. ಬುಡಕಟ್ಟುಗಳು ಜಾತಿಗಾಗಿ ಸ್ಥಿತ್ಯಂತರಗೊಂಡ ನಂತರದ ಹಂತದಲ್ಲಾದರೆ ಇದು ಅನ್ವಯವಾಗುವುದು” ಎಂದು ಹೇಳುತ್ತಾರೆ.

ಭಾಷೆಯ ಬಳಕೆಯಲ್ಲಿ ಇನ್ನಷ್ಟು ಖಚಿತತೆಯನ್ನು ಸಾಧಿಸಿದ್ದರೆ ಬರವಣಿಗೆ ಗಟ್ಟಿಯಾಗುತ್ತಿತ್ತು. ಉದಾಹರಣೆಗೆ ಪುಟ ೧೯೫ ರಲ್ಲಿ “ಜನಪದ ವಿಶಿಷ್ಟ ಕಲೆಯಾದ ಡೊಂಬರಾಟ, ನವಿಲು ಕುಣಿತ, ಹಾಡು ಇತ್ಯಾದಿ ಅಂಶಗಳನ್ನು ಒಳಗೊಂಡ ಡೊಂಬರ ಅಲೆಮಾರಿ ಪಂಗಡಗಳು ಯಂತ್ರೋಪಕರಣ, ಮತ್ತು, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ನವ ನಾಗರಿಕತೆಯ ಬಿರುಗಾಳಿ ಸಿಲುಕಿ ನಶಿಸಿ ಹೋಗುತ್ತಿರುವುದು ಶೋಚನೀಯ ಸಂಗತಿ” ಎಂದಿದೆ. ಇಲ್ಲಿ ನಶಿಸಿ ಹೋಗುತ್ತಿರುವುದು ಡೊಂಬರ ಪಂಗಡವೇ? ಅಥವಾ ಅವರ ಕಲೆಯೇ? ಎಂಬ ಪ್ರಶ್ನೆ ಎದುರಾಗುತ್ತದೆ. ಅದೇ ರೀತಿ ಪುಟ ೨೩೧ ರಲ್ಲಿ ಕಿಳ್ಳೆಕ್ಯಾತರಿಗಿರುವ ಬೇರೆ ಬೇರೆ ಹೆಸರುಗಳನ್ನು ವಿವರಿಸುತ್ತ “ಮಹಾರಾಷ್ಟ್ರದಲ್ಲಿ ‘ಚಿತ್ರ ಮಾರಾಠರು’ ದಕ್ಷಿಣ ಕರ್ನಾಟಕದ ಕಡೆ ‘ಗೊಂಬೆರಾಮರು’ ಎನ್ನುತ್ತಾರೆ. ಇವರು ಬ್ರಾಹ್ಮಣ ಜಾತಿಗೆ ಸೇರಿದ್ದು, ಸೂತ್ರದ ಗೊಂಬೆಗಳನ್ನು ಆಡಿಸುವವರಾಗಿದ್ದಾರೆ” ಎಂದು ಹೇಳುತ್ತಾರೆ. ಇಲ್ಲಿ ಬ್ರಾಹ್ಮಣ ಯಾರು? ಎಂಬುದು ಸ್ಪಷ್ಟವಾಗುತ್ತಿಲ್ಲ. ಒಂದು ವೇಳೆ ಗೊಂಬೆಯವರು ಬ್ರಾಹ್ಮಣರಿದ್ದರೂ ಕಿಳ್ಳೆಕ್ಯಾತರಿಗಿರುವ ಬೇರೆ ಬೇರೆ ಹೆಸರುಗಳು” ಎಂಬ ಉಪಶೀರ್ಷಿಕೆಯಡಿಯಲ್ಲಿ ಅವರ ಪ್ರಸ್ತಾಪ ಅಗತ್ಯವಿದೆಯೇ? ಇವೆಲ್ಲ ಗೊಂದಲಗಳುಂಟಾಗುತ್ತವೆ. ಡಾ. ಸುಬ್ಬಣ್ಣ ರೈಯವರು ಸಂಶೋಧಕರ ನ್ಯೂನತೆಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ. ಭಾಷೆಯಲ್ಲಿ ಚಮತ್ಕಾರವನ್ನು ಪ್ರಯೋಗಿಸುವ ಯತ್ನದಲ್ಲಿ ವಿಷಯದ ಗಂಭೀರತೆಯನ್ನು ಕಡೆಗಣಿಸಿದ್ದಂತಿದೆ. ಉದಾಹರಣೆಗೆ ಪುಟ ೧೪೯ ರಲ್ಲಿ “ಒಬ್ಬರಿಗೊಬ್ಬರು ಬಳಕೆ – ಕಲಬೆರಕೆ ಯಾವುದರಲ್ಲಿಯೂ ನಡೆಯುವುದಿಲ್ಲವೆನ್ನುತ್ತಾರೆ”. ಎಂಬಲ್ಲಿ ಮನುಷ್ಯ ಜಾತಿಗಳ ಅಂತರ ಸಂಬಂಧಗಳನ್ನು ಸೂಚಿಸಲು ‘ಕಲಬೆರಕೆ’ ಪದ ಬಳಸಿದ್ದು ಎಷ್ಟು ಔಚಿತ್ಯಪೂರ್ಣ! ಒಂದುವೇಳೆ ಕಲಬೆರೆಕೆ ಪದಬಳಸಿದ್ದರೆ ಅಷ್ಟೊಂದು ಆಭಾಸವೆನಿಸುತ್ತಿರಲಿಲ್ಲ. ಅದೇರೀತಿ ಪುಟ ೧೭೦ರಲ್ಲಿ “ಇದು ಡೋರರ ಬದುಕು ಮತ್ತು ಸಂಸ್ಕೃತಿಯ ಓರೆ ನೋಟ ಎಂದಿದೆ. ಸಂಶೋಧಕನ ದೃಷ್ಟಿ ಓರೆ ನೋಟವಾದರೆ ಹೇಗೆ? ಅದು ನೇರ ನೋಟವಾಗಿರಬೇಡವೆ? ಇಂಥಹ ಕೆಲವು ಭಾಷಾ ಪ್ರಯೋಗಗಳ ಬಗೆಗೆ ನಿಗಾವಹಿಸಿದ್ದರೆ ಕೃತಿಯ ಮೌಲಿಕತೆ ಇನ್ನಷ್ಟು ಹೆಚ್ಚುತ್ತಿತ್ತು ಇವೆಲ್ಲವುಗಳ ಜೊತೆಗೆ ಸಂಶೋಧನಾ ಬರವಣಿಗೆಯಲ್ಲಿ ಗ್ರಾಮ್ಯ ಅಥವಾ ಪ್ರಾದೇಶಿಕ ಭಾಷಾ ರೂಪಗಳನ್ನು ಬಳಸಿದ ಹೆಗ್ಗಳಿಕೆಯೂ ಈ ಗ್ರಂಥಕ್ಕೆ ಸಲ್ಲುತ್ತದೆ. ಅಂಥ ಕೆಲವು ವಿಶಿಷ್ಟ ಸಾಂಸ್ಕೃತಿಕ ಪದಗಳಿಗೆ ಅಡಿಟಿಪ್ಪಣೆಯಲ್ಲಿ ಅರ್ಥ – ವಿವವರಣೆಗಳನ್ನು ನೀಡಿದ್ದರೂ ಪ್ರತ್ಯೇಕ ಸಾಂಸ್ಕೃತಿಕ ಪದಕೋಶವೊಂದರ ಅಗತ್ಯ ಪ್ರಸ್ತುತ ಕೃತಿಗಿದೆ. ಅನೇಕ ಸಂದರ್ಭಗಳಲ್ಲಿ ಲೇಖಕರು ಬಳಸುವ ಉತ್ತರ ಕರ್ನಾಟಕದ ಗ್ರಾಮ್ಯ – ಸಾಂಸ್ಕೃತಿಕ ಪದಗಳು ಕನ್ನಡ ನಾಡಿನ ಇತರೆಡೆಯ ಓದುಗರಿಗೆ ಅರ್ಥವಾಗದೆ ಹೋಗುವ ಸಾಧ್ಯತೆ ಇದೆ.” ಕೆಲ ಮಿತಿಗಳ ನಡುವೆಯು ಪ್ರಸ್ತುತ ಕೃತಿ ದಲಿತ ಜನಪದ ಗುಂಪುಗಳ ಬದುಕು ಮತ್ತು ಸಂಸ್ಕೃತಿಯನ್ನು ದಾಖಲಿಸುವಲ್ಲಿ ಯಶಸ್ವೀಯಾಗಿದೆ. ಮೊಟ್ಟ ಮೊದಲಿಗೆ ಅಕ್ಷರಲೋಕದಲ್ಲಿ ದಲಿತರ ಬದುಕು ಇಲ್ಲ ದಾಖಲೆ ಮಾಡಿದೆ. ದಲಿತರ ಬಗೆಗಿನ ಪುರಾಣ – ಐತಿಹ್ಯಗಳು, ವೃತ್ತಿ ಮತ್ತು ಸಾಮಾಜಿಕ ವಿವರಗಳು ಬಿಡದೆ ಚರ್ಚಿಸಿದ್ದಾರೆ. ವ್ಯಾಪಕ ಕ್ಷೇತ್ರ ಕಾರ್ಯದಿಂದ ವಿಪುಲ ಮಾಹಿತಿ ಇಲ್ಲಿ ದೊರಕುತ್ತದೆ. ಜನವರ್ಗದ ಅಧ್ಯಯನ ಮಾಡ ಬಯಸುವರಿಗೆ ಇದೊಂದು ಉಪಯುಕ್ತ ಆಕರ ಗ್ರಂಥವಾಗಿದೆ.

ಚಿತ್ರದುರ್ಗ ಜಿಲ್ಲೆಯ ವ್ಯವಸಾಯ ಜಾನಪದ : ಪ್ರಸ್ತುತ ಕೃತಿ ಡಾ. ಎಂ.ಜಿ. ಈಶ್ವರಪ್ಪ ಅವರ ಪಿಎಚ್. ಡಿ ಸಂಶೋಧನ ನಿಬಂಧವಾಗಿದೆ. ವ್ಯವಸಾಯಕ್ಕೆ ಸಂಬಂಧಪಟ್ಟ ಜಾನಪದವನ್ನು ದಾಖಲಿಸುವುದರ ಜೊತೆಗೆ ಚಿತ್ರದುರ್ಗ ಜಿಲ್ಲೆಯ ಪಾರಂಪರಿಕ ಕೃಷಿ ಪದ್ಧತಿಯ ಅಧ್ಯಯನ, ಪ್ರಾಸಂಗೀಕವಾಗಿ ತತ್ಸಂಬಂಧಿ ಭೌತಿಕ, ಮೌಖಿಕ, ಅನುಸರಣಾತ್ಮಕ ಹಾಗೂ ಆಚರಣಾತ್ಮಕ ಜಾನಪದ ಸಂಗತಿಗಳನ್ನೂ ಇಲ್ಲಿ ವಿಶ್ಲೇಷಿಸಲಾಗಿದೆ. ಕೃತಿಯ ಉದ್ದಕ್ಕೂ ಸಂಶೋಧಕರು ನಡೆಸಿದ ವ್ಯಾಪಕ ಕ್ಷೇತ್ರಕಾರ್ಯ ಮತ್ತು ಗ್ರಂಥಾಧ್ಯಯನಗಳು ಕಂಡುಬರುತ್ತದೆ.

ಒಟ್ಟು ಒಂಬತ್ತು ಅಧ್ಯಾಯಗಳಿವೆ. ಅಧ್ಯಯನಕ್ಕೆ ಸಂಬಂಧಿಸಿದ ಪೂರಕ ಅಂಶಗಳೇ ಸಾಕಷ್ಟು ವಿಸ್ತರವಾಗಿ ಮೊದಲ ಮೂರು ಅಧ್ಯಾಯಗಳಲ್ಲಿ ಚರ್ಚಿತವಾಗಿವೆ. ವಿಶ್ವ – ರಾಷ್ಟ್ರ – ರಾಜ್ಯಗಳಿಗೆ ಅನ್ವಯಿಸಿ ವ್ಯವಸಾಯದ ಉಗಮ ವಿಕಾಸವನ್ನು ಮಾನವನ ಸಂಸ್ಕೃತಿ – ನಾಗರಿಕತೆಗಳ ಇತಿಹಾಸದೊಂದಿಗೆ ಇಲ್ಲಿ ವಿವರಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ವ್ಯವಸಾಯದ ವಿವಿಧ ಬಗೆಗಳನ್ನು ಮುಂದಿನ ನಾಲ್ಕು ಅಧ್ಯಯನಗಳು ಪರಿಚಯಿಸುತ್ತವೆ. ಜಿಲ್ಲೆಯ ಮಳೆ ಜಾನಪದ, ಖುಷ್ಕಿ – ತರಿ ಹಾಗೂ ಬಾಗಾಯ್ತು ಬೆಳೆಗಳ ಬಗೆಗೆ, ಕೃಷಿ – ಬೆಳೆಗಳು, ಅವುಗಳ ಬಿತ್ತನೆ, ನಾಟಿ, ಗೊಬ್ಬರ, ನಿವಾರಣೋಪಾಯ, ಕೊಯಿಲು, ದಾಸ್ತಾನು, ಬಳಕೆ – ಹೀಗೆ ವ್ಯವಸಾಯದ ಎಲ್ಲ ಮಜಲುಗಳನ್ನು ಆಯಾ ಸಂದರ್ಭದ ವಿಶಿಷ್ಟ ನಂಬಿಕೆ ಆಚರಣೆಗಳನ್ನೂ ಅವಶ್ಯ ಛಾಯಾಚಿತ್ರ, ರೇಕಾಚಿತ್ರಗಳೊಂದಿಗೆ ದಾಖಲಿಸಲಾಗಿದೆ. ಕೃಷಿ ಕೆಲಸದ ಉಪಕರಣಗಳು, ಅವುಗಳನ್ನು, ತಯಾರಿಸುವ ಆಯಾಗಾರರು, ಅವರಿಗೆ ಕೃಷಿ ಚಟುವಟಿಕೆಗಳೊಂದಿಗಿರುವ ಅವಿನಾ ಸಂಬಂಧ, ವ್ಯವಸಾಯದ ಅನಿವಾರ್ಯ ಅಂಗವಾಗಿರುವ ಪಶುಪಾಲನೆ, ಪಶುವೈದ್ಯ ಇತ್ಯಾದಿ ವಿವರಗಳೂ ಪ್ರಸುತ ಗ್ರಂಥದಲ್ಲಿ ಲಭಿಸುತ್ತವೆ.

‘ಉಪಸಂಹಾರ’ ದಲ್ಲಿ “ವ್ಯವಸಾಯ ಜಾನಪದ ಅಧ್ಯಯನವು ಹೇಗೆ ಕೃಷಿ ವಿಜ್ಞಾನ ಮತ್ತು ಸಾಂಸ್ಕೃತಿಕ ಮಾನವಶಾಸ್ತ್ರಗಳ ಅಧ್ಯಯನವಾಗುತ್ತದೆಂಬುದನ್ನು ಸೂಕ್ಷ್ಮವಾಗಿ ಪ್ರಸ್ತಾಪಿಸಲಾಗಿದೆ. ಆನ್ವಯಿಕ ಜಾನಪದ ಅಧ್ಯಯನ ಪರಿಕಲ್ಪನೆಗೂ ಲೇಖಕರ ಈ ವಿಚಾರಗಳೂ ಪರಸ್ಪರ ಸಂಬಂಧ ವಿದೆಯೆನಿಸುತ್ತದೆ, ‘ಆನ್ವಯಿಕ ಜಾನಪದ’ ವೆಂಬ ಪರಿಭಾಷೆಯನ್ನಿಲ್ಲಿ ಬಳಸದಿದ್ದರೂ ಪಾರಂಪರಿಕ ವ್ಯಸಾಯಾ ಕ್ರಮಗಳನ್ನು ಸೂಕ್ತ ವಿವೇಚನೆಯೊಡನೆ ವರ್ತಮಾನದ ಕೃಷಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆನ್ನುವ ಒತ್ತಾಸೆಯು ಆನ್ವಯಿಕ ದೃಷ್ಟಿಗಿಂತ ಭಿನ್ನವಾದುದೇನಲ್ಲ. ಇವತ್ತೀನ ನಗರೀಕರಣ ಕೈಗಾರೀಕರಣ ಪ್ರವೃತ್ತಿಯಿಂದಾಗಿ ವ್ಯವಸಾಯವು ಅದರಲ್ಲೂ ಸಾಂಪ್ರದಾಯಿಕ ವ್ಯವಸಾಯವು ಮೂಲೆಗುಂಪಾಗುತ್ತಿರುವ ಸಂಕ್ರಮಣ ಸ್ಥಿತಿಯಲ್ಲಿ ಈ ಅಧ್ಯಯನವು ಪರೋಕ್ಷವಾಗಿ ಅಂತಹ ವ್ಯವಸಾಯ ಪದ್ಧತಿಯನ್ನು ಮಹತ್ವವನ್ನು ಎತ್ತಿ ಹೇಳುತ್ತದೆ”. (ಸುಬ್ಬಣ್ಣ ರೈ)

ಕರಿಶೆಟ್ಟಿ ರುದ್ರಪ್ಪನವರು ಬುಡಕಟ್ಟೊಂದರ ಅಧ್ಯಯನವನ್ನು ಜನಾಂಗಿಕ ಅಧ್ಯಯನ ಎಂದು ಕರೆದುಕೊಂಡಿದ್ದಾರೆ. ಜನಾಂಗ ಪದವನ್ನು ‘ರೇಸ್’ ಗೆ ಸಂಪಾದಿಯಾಗಿ ನಾವು ಬಳಸುತ್ತೇವೆ. ಹಾಗೆ ಜಾತಿ ಪದವನ್ನು ‘ಕಾಸ್ಟ’ಗೆ ಸಂವಾದಿಯಾಗಿಯೂ, ‘ಬುಡಕಟ್ಟು’ ಪದವನ್ನು ‘ಟ್ರೈಬಲ್’ಗೆ ಸಂವಾದಿಯಾಗಿಯೂ ಬಳಸುತ್ತಿದ್ದೇವೆ. ಈ ಪಾರಿಭಾಷಿಕ ಪದಗಳನ್ನು ಖಚಿತಾರ್ಥದಲ್ಲಿ ಬಳಸದೇ ಹೋದರೆ ಗೊಂದಲಗಳು ಇನ್ನಷ್ಟು ಹೆಚ್ಚಾಗುತ್ತವೆ. ಹರಿಲಾಲ್ ಪವಾರ್ ಅವರು ಕೂಡ ಜನಪದೀಯ ಅಧ್ಯಯನದ ಅರ್ಥವ್ಯಾಪ್ತಿಯನ್ನು ಸ್ಟಷ್ಟಪಡಿಸಿಲ್ಲ ಒಂದು ಬುಡಕಟ್ಟು ಜನಾಂಗದ ಆಳವಾದ ಅಧ್ಯಯನವಾದುದರಿಂದ ಇವುಗಳಿಗೆ ಜಾನಪದೀಯ ಅಧ್ಯಯನ ಎನ್ನುವುದು ಸೂಕ್ತವೆನಿಸುತ್ತದೆ ಎಂದು ಹೇಳುವ ಅವರು ಮುಂದಿನ ವಾಕ್ಯದಲ್ಲಿಯೇ ಸಾಂಸ್ಕೃತಿಕ ಪರಿವರ್ತನೆಯ ಕುರಿತು ವಿವರ ನೀಡುತ್ತಾರೆ. ಬೇರೆ ಜ್ಞಾನ ಶಾಖೆಗಳ ತಿಳುವಳಿಕೆಯ ಕೊರತೆ ಇಲ್ಲಿ ತಾನೇ ತಾನಾಗಿ ಎದ್ದು ಕಾಣುತ್ತವೆ. ಆದರೆ ಎಂ. ಜಿ. ಈಶ್ವರಪ್ಪನವರ ಕೃತಿ ಮಾತ್ರ ಇಂಥ ಮಿತಿಗಳನ್ನು ಮೀರಲು ಪ್ರಾಮಾಣಿಕ ಪ್ರಯತ್ನ ನಡೆಸಿದೆ.

ಲಂಬಾಣಿ ಜನಪದ ಸಾಹಿತ್ಯ : ಡಾ. ಡಿ.ಬಿ. ನಾಯಕ್ ಅವರ ಪಿಎಚ್. ಡಿ ಮಹಾ ಪ್ರಬಂಧ. ಪ್ರಸ್ತುತ ಕೃತಿ ಲಂಬಾಣಿ ಸಮುದಾಯದ ಸಂಕ್ಷಿಪ್ತ ಪರಿಚಯವನ್ನು ಪೀಠಿಕಾ ಭಾಗದಲ್ಲಿ ವಿವರಿಸುತ್ತದೆ. ಮುಂದಿನ ಅಧ್ಯಾಯಗಳಲ್ಲಿ ಕ್ರಮವಾಗಿ ಲಂಬಾಣಿ ಜನಪದ ಗೀತೆಗಳು, ಕಥನ ಗೀತೆಗಳು, ಜನಪದ ಕಥೆಗಳು, ಗಾದೆಗಳು, ಒಗಟುಗಳು ಹಾಗೂ ಪ್ರದರ್ಶನ ಕಲೆಗಳನ್ನು ಕುರಿತು ಚರ್ಚಿಸಲಾಗಿದೆ. ಲಂಬಾಣಿ ಭಾಷೆಯ ಮೂಲ ಪಠ್ಯಗಳನ್ನು ಕೊಡುವುದರ ಜೊತೆಗೆ ಓದುಗರ ಅನುಕೂಲಕ್ಕಾಗಿ ಅವುಗಳ ಕನ್ನಡ ಅನುವಾದವನ್ನೂ ಒದಗಿಸುತ್ತಾರೆ.

ಲಂಬಾಣಿ ಜನ ಸಮುದಾಯದಲ್ಲಿ ಬುಡಕಟ್ಟಿನಲ್ಲಿ ವಿಶಿಷ್ಟ ಲಕ್ಷಣಗಳನ್ನು ನಾವು ಇಂದಿಗೂ ಕಾಣಬಹುದು. ತಮ್ಮ ಭಾಷೆ, ಉಡುಗೆ ತೊಡುಗೆ, ವಾಸಸ್ಥಳ, ಆಹಾರ ಪದ್ಧತಿ, ವೃತ್ತಿ, ಆರಾಧನಾ ಸಂಪ್ರದಾಯಗಳು, ಜೀವನಾವರ್ತನ ಹಾಗೂ ವಾರ್ಷಿಕಾವರ್ತನ ಆಚರಣೆಗಳು ಹೀಗೆ ತಮ್ಮ ಬದುಕಿನ ಕ್ರಮದಲ್ಲಿ ತಮ್ಮತನವನ್ನು ಉಳಿಸಿಕೊಂಡು ಬಂದಿರುವ ಜನ ಸಮುದಾಯವಾಗಿದೆ. ಆಧುನಿಕ ಜಗತ್ತಿನ ಗಾಳಿ ಎಷ್ಟೇ ಬೀಸಿದರೂ ಲಂಬಾಣಿಗಳು, ತಮ್ಮತನವನ್ನೂ ಉಳಿಸಿಕೊಂಡು ಬಂದಿರುವುದು ಸೋಜಿಗವೆನಿಸಿದೆ. ಇವರು ರಾಜಸ್ಥಾನದಿಂದ “ಅಲೆಮಾರಿಗಳಾಗಿ” ವಲಸೆ ಬಂದವರೆಂದು ಸಂಶೋಧಕರು ಹೇಳುತ್ತಾರೆ. ಇವರು ವಾಸಮಾಡುವ ಸ್ಥಳಗಳಿಗೆ ‘ತಾಂಡ’ಗಳೆಂದು ಕರೆಯುತ್ತಾರೆ. ಮೂಲತಃ ಸರಕು ಸಾಗಾಣಿಕೆ ವೃತ್ತಿಯನ್ನವಲಂಬಿಸಿಕೊಡಿದ್ದರೆಂದು ತಿಳಿದು ಸಂಶೋಧಕರು ಹೇಳುತ್ತಾರೆ. ಈಗಾಗಲೇ ಕನ್ನಡದಲ್ಲಿ ಲಂಬಾಣಿಗಳ ಬಗೆಗೆ ಅಧ್ಯಯನಗಳು ನಡೆದಿದ್ದರೂ ಸಮಗ್ರವಾಗಿ ನಡೆದಿರಲ್ಲಿಲ್ಲ, ಈ ಕೊರೆತೆಯನ್ನು ಪ್ರಸ್ತುತ ಕೃತಿ ತುಂಬುತ್ತದೆ. ಲಂಬಾಣಿ ಜನಪದ ಸಾಹಿತ್ಯದ ಅಧ್ಯಯನದ ಹಿನ್ನೆಲೆಯಲ್ಲಿ ಆ ಸಮುದಾಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸ್ಥಿತಿ ಗತಿಗಳನ್ನು ಕಂಡುಕೊಳ್ಳುವ ಪ್ರಯ್ನವನ್ನು ಮಾಡಲಾಗಿದೆ. ಮುಖ್ಯವಾಗಿ ಕರ್ನಾಟಕದ ಲಂಬಾಣಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಡೆಸದ ಸಮಾಜೋ ಸಾಂಸ್ಕೃತಿಕ ಅಧ್ಯಯನವು ಅವರ ವಿಶಿಷ್ಟತೆಯನ್ನು ಗುರುತಿಸುವುದರ ಜೊತೆಗೆ ಕನ್ನಡ ಜನಪದ ಸಾಹಿತ್ಯದೊಂದಿಗಿನ ಸಮಾಂತರತೆಯನ್ನು ಸಂದರ್ಭಿಕವಾಗಿ ಪ್ರಸ್ತಾಪಿಸಲಾಗಿದೆ. ಕೆಲವು ಸಂಪ್ರದಾಯದ ಹಾಡುಗಳು ಆ ಸಮುದಾಯದ ಅನನ್ಯತೆಯನ್ನೂ ಎತ್ತಿ ಹಿಡಿಯುತ್ತವೆ. ಅವುಗಳನ್ನು ಅವರ ಸಮುದಾಯದಲ್ಲಿ ಮಾತ್ರ ಕಾಣಬಹುದಾಗಿದೆ. “ಢಾವಲೋಗೀದ” ಮದುವೆ ಸಂದರ್ಭದಲ್ಲಿ ಹಾಡುವ ಹಾಡು ಇದರ ವಿಷ್ಟತೆಯೆಂದರೆ ಮದುವೆಯಾಗುವ ಹೆಣ್ಣೇ ದುಃಖದಿಂದ ಹಾಡುವುದು. ವಧುವಿನ ಸುತ್ತ ಸುತ್ತಿದ ಗೆಳತಿಯರು ವಧುವಿಗೆ ಸ್ನಾನ ಮಾಡಿಸಿ ಅರಶಿನ ಹಚ್ಚಿ, ಹಣೆಗೆ ಕುಂಕುಮದ ತಿಲಕವನ್ನಿಟ್ಟು ಕನ್ಯಾತನದ ವಸ್ತ್ರಾಭರಣಗಳನ್ನು ಕಳಚಿ, ಮುತ್ತೈದೆಯ ವಸ್ತ್ರಾಭರಗಣಗಳನ್ನು ತೊಡಿಸುತ್ತಾರೆ. ಆ ಸಂದರ್ಭದಲ್ಲಿ ವಧುವು “ಗೆಳತಿಯರೆ, ಇಷ್ಷೊಂದು ತೊಂದರೆಯಲ್ಲಿ ನನ್ನನ್ನೇಕೆ ಸಿಲುಕಿಸುತ್ತಿರುವಿರಿ ನನ್ನ ತಾಯಿಯ ಕೈಯಿಂದ ಹೆಣೆಯಲ್ಪಟ್ಟಿರುವ ಸುಂದರವಾದ ಕಾಲಿನ ಸರವನ್ನು ತೆಗೆಯದಿರಿ, ಜೊತೆಗಾತಿಯರೇ ನಿಮ್ಮ ಕೈಗಳಿಂದಲೇ ಹೆಣೆಯಲ್ಪಟ್ಟಿರುವ ಅಂದವಾದ ಈ ಕೂದಲಿನ ಜಟೆಯನ್ನು ಬಿಚ್ಚದಿರಿ. ಸಖಿಯರೇ, ತಾಯಿಯ ಕೈಯ ಸುಂದರವಾದ ಜುಮಕಿಗಳನ್ನೂ ನನ್ನಿಂದ ಬೇರೆ ಮಾಡದಿರಿ. ಗೆಳೆತಿಯರೆ, ತಂದೆ ಕೊಡಿಸಿರುವ ಸುಂದರವಾದ ಬಣ್ಣದ ವಸ್ತುಗಳನ್ನೂ ನನ್ನಿಂದ ದೂರ ಮಾಡದಿರಿ” (ಪು. ೪೮) ಎಂದು ಹಾಡುವ ಹಾಡು ನಿಜಕ್ಕೂ ವಿಶಿಷ್ಟದಿಂದ ಕೂಡಿದೆ.

ಪ್ರಸ್ತುತ ಕೃತಿಯ ಲೇಖಕರು ಲಂಬಾಣಿ ಸಮುದಾಯದಿಂದ ಬಂದವರಾಗಿದ್ದರಿಂದ ಆ ಸಂಸ್ಕೃತಿಯ ಒಳ ಹೊರಗನ್ನು ತಿಳಿದು ಆಳದಲ್ಲಿ ಅಡಗಿದ ಸಂಸ್ಕೃತಿಯ ಜೀವನಾಡಿಯನ್ನು ಹಿಡಿದು, ಅಲ್ಲಿನ ಸ್ಪಂದನಗಳ ಮೇಲೆ ಹೊಸ ಬೆಳಕನ್ನು ಚಲ್ಲಲು ಸಾಧ್ಯವಾಗಿದೆ. ಕೃತಿಯನ್ನು ವಿರ್ಮಶಿಸಿದ ಡಾ. ಸುಬ್ಬಣ್ಣ ರೈ ಅವರು ಹೀಗೆ ಹೇಳುತ್ತಾರೆ “ಸಮುದಾಯದ ಸ್ಪಂದನಗಳನ್ನು ಅರ್ಥಮಾಡಿಕೊಂಡು ಅದರಲ್ಲಿನ ಅನನ್ಯತೆಯನ್ನು ಅನಾವರಣಗೊಳಿಸಲು ಸಾಧ್ಯಯವಾಗಿದೆ. ಇದು ಒಟ್ಟು ಕೃತಿಯ ಇತ್ಯಾತ್ಮಕ ಅಂಶವೂ ಹೌದು. ಕೊನೆಯದಾಗಿ ಗ್ರಂಥದ ಭಾಷೆಯ ಬಗೆಗೆ ಒಂದು ಮಾತನ್ನು ಹೇಳ ಬೇಕೆನಿಸುತ್ತದೆ. ಆಧುನಿಕ ಕನ್ನಡದ ‘ವಿಭಕ್ತಿ ಪಲ್ಲಟ’ಕ್ಕೆ ಪ್ರಸ್ತುತ ಕೃತಿಯಲ್ಲಿ ಅಸಂಖ್ಯ ‘ಲಕ್ಷ್ಯ’ಗಳು ಸಿಗುತ್ತವೆ. ಉದಾ : ಕೆಲವನಿಲ್ಲಿ ಗಮನಿಸಬಹುದು.

ಸ್ವರ್ಗ ಲೋಕದಲ್ಲಿದೇವಿಗೆಸೋಲಿಸಿದ್ದೂ
ಮೂರು ದಿವಸಗಳವರೆಗೆ ತನಗೆ ಯಾರೂ ಮುಟ್ಟಬಾರದೆಂದು
ಅವನ ದೇಶಕ್ಕೆ ಅವನಿಗೆ ಬಿಟ್ಟು ಬಿಡು
ಕೊನೆಗೆ ಪೂಜಾರಿಯು ಹೂನಾಬಾಯಿಗೆ ಕ್ಷಮೆಯಾಚಿಸಿದ
ನೀರು ಕುಡಿದು ತೃಪ್ತನಾಗಿ ಯುವತಿಯವರಿಗೆ ಕಾಡಿಸಲು

ಇಂತಹ ಪ್ರಯೋಗಗಳು ಕೃತಿಯುದ್ದಕ್ಕೂ ಕಂಡು ಬರುತ್ತದೆ. ಇದನ್ನು ದೋಷವೆನ್ನುವುದಕ್ಕಿಂತಲೂ ಭಾಷಾ ವೈಶಿಷ್ಟ್ಯವೆನ್ನಬಹುದೇನೋ?” ಲಂಬಾಣಿ ಸಮುದಾಯದ ಸಾಂಸ್ಕೃತಿಕ ಅನನ್ಯತೆಯನ್ನು ಅನಾವರಣಗೊಳಿಸಿ, ಅವರ ಜನಪದ ಸಾಹಿತ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಕಾರ್ಯವನ್ನು ಈ ಕೃತಿ ಮಾಡಿದೆ. ಈ ಕೃತಿಯ ಜನವರ್ಗದ ಅಧ್ಯಯನಕಾರರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುತ್ತದೆ.

ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು ಒಂದು ಅಧ್ಯಯನ : ಡಾ. ಸಿ. ಕೆ ನಾವಲಗಿ ಅವರ ಪಿಎಚ್‌.ಡಿ ಮಹಾಪ್ರಬಂಧ. ವಚನ ಸಾಹಿತ್ಯದ ಬಗೆಗೆ ಬಹಳಷ್ಟು ಅಧ್ಯಯನಗಳು ನಡೆದಿವೆ. ಕೆಲವು ಅಧ್ಯಯನಗಳು ವ್ಯಕ್ತಿನಿಷ್ಠ ನೆಲೆಯಲ್ಲಿ ನಡೆದರೆ ಇನ್ನು ಕೆಲವು ತತ್ತ್ವನಿಷ್ಠ ನೆಲೆಯಲ್ಲಿ ನಡೆದಿವೆ. ಜಾನಪದ ಅಂಶಗಳನ್ನು ಗುರುತಿಸುವಾಗ ವಚನಗಳನ್ನು ಮೂಲ ದ್ರವ್ಯವಾಗಿರಿಸಿಕೊಂಡದ್ದು ಇದೇ ಮೊದಲನೆಯದು. ಇದುವರೆಗಿನ ಕೊರತೆಯನ್ನು ಪ್ರಸ್ತುತ ಕೃತಿ ತುಂಬಿ ಕೊಡುತ್ತದೆ.

ಇದುವರೆಗೆ ಬಂದ ವಚನ ಸಾಹಿತ್ಯದ ಕುರಿತ ಅಧ್ಯಯನಗಳ ಇತಿ ಮತಿಗಳನ್ನು ತಿಳಿಸಿ. ಮುಕ್ತ ಸಮಾಜದ ಏಳಿಗೆಗೆ ದುಡಿದ ವಚನಕಾರರ ರಚನೆಯಲ್ಲಿ ತುಂಬಿಕೊಂಡ ಜಾನಪದ ನಂಬಿಕೆ ಮೌಲ್ಯ ಪ್ರತಿಪಾದನೆ, ಸಂಪ್ರದಾಯ ಅನುಷ್ಠಾನ ಹೇಗೆ ಒಡ ಮಾಡಿವೆ ಎನ್ನುವುದನ್ನು ತಿಳಿಸುತ್ತ, ವಚನ ಸಾಹಿತ್ಯದಲ್ಲಿ ತಳಹದಿಯೇ ಜಾನಪದ ಅಂಶಗಳು ಎನ್ನುವುದನ್ನು ಸಂಶೋಧಕರು ಒತ್ತಿ ಹೇಳುತ್ತಾರೆ. ಅಲ್ಲದೆ ಸಂಶೋಧಕರು ಇಲ್ಲಿಯವರೆಗಿನ ಜಾನಪದ ಅಧ್ಯಯನ, ಅಧ್ಯಾಪನ, ವಿಶ್ಲೇಷಣೆಗಳ ಆಶಯಗಳನ್ನು ಗಮನಿಸಿ ಪ್ರಸ್ತುತ ಕಾಲಕ್ಕೆ ಜಾನಪದ ಪ್ರಭಾವಕ್ಕೆ ಒಳಗಾದ ಹೊಲೆ ಮಾದಿಗರ ಹಾಡುಗಳಂಥ ಕೃತಿಗಳನ್ನು ವಿಶ್ಲೇಷಣೆಗೆ ಅಳವಡಿಸಲಾಗಿದೆ.

ಮುಂದಿನ ಅಧ್ಯಯನದಲ್ಲಿ ಜಾನಪದ ಆಶಯಗಳ ಹಿನ್ನೆಲೆಯಲ್ಲಿ ಮದುವೆ, ಮೂಢನಂಬಿಕೆ, ಆಚಾರ – ವಿಚಾರ ಶಕುನ – ಅಪಶಕುನ, ಭೂತ – ಪೀಡೆ, ಸಂಪ್ರದಾಯಗಳಾದ ಸಂಸ್ಕಾರ, ಶ್ರಾದ್ಧ, ಕುಲಕಸುಬುಗಳಾದ ನೇಕಾರಿಕೆ, ಕಮ್ಮಾರಿಕೆ, ಕಂಬಾರಿಕಿ, ಸಾಂಸ್ಕೃತಿಕ ಪರವಾದ ಉಡುಗೆ – ತೊಡುಗೆ, ಊಟ – ಉಪಚಾರಗಳಂಥ ಜೀವನ ಪದ್ಧತಿಗಳನ್ನು ಸಾಮಾಜಿಕ ನೆಲೆಯಲ್ಲಿ ಚಿತ್ರಿಸಲಾಗಿದೆ. ಧಾರ್ಮಿಕ ಹಿನ್ನೆಲೆಯಲ್ಲಿ ದೈವಗಳ ನಂಬಿಕೆ, ಅವುಗಳಿಗಿರುವ ಸಂಶೋಧಕರ ಬಗೆಗೆ, ಚಿಂತಿಸಿ, ಅವುಗಳು ಕಂಠಕಪ್ರಾಯವೆಂದೆನಿಸಿದಾಗ ಅವುಗಳನ್ನು ನಾಶ ಮಾಡುವ ಮತ್ತು ಆರೋಗ್ಯ ಪೂರ್ಣವೆನಿಸಿದಾಗ ಅವುಗಳನ್ನು ಪುನರಶ್ವೇತನಕ್ಕೆ ಹೇಗೆ ಪ್ರೇರಣೆ ಮಾಡಿದರೆಂದು ಸ್ಪಷ್ಟವಾಗಿ ಗುರುತಿಸಲಾಗಿದೆ. ಕಲಾಜೀವನ ವೃತ್ತಾಂತಗಳಲ್ಲಿ ಕಂಡು ಬರುವ ಜಾನಪದ ಅಂಶಗಳ ಕಡೆಗೆ ವಿಶೇಷ ಗಮನ ಹರಿಸಲಾಗಿದೆ. ಉದಾ: ವೃತ್ತಿಯನ್ನು ಕಲೆಯಾಗಿ ಸ್ವೀಕರಿಸಿದ ಢಕ್ಕೆಯ ಮಾರಯ್ಯ, ಬಹುರೂಪಿ ಚೌಡಯ್ಯ, ಕಲಕೇತ ಬೊಮ್ಮಯ್ಯ, ಕೂಗಿನ ಮಾರಿತಂತೆ, ಶಂಕರೀ ಕಕ್ಕಯ್ಯ, ರಾಗದ ಸುಂಕಣ್ಣ, ಕಿನ್ನರಿಬ್ರಹ್ಮಯ್ಯ, ನಗೆಮಾರಿತಂದೆ ಮುಂತಾದವರು. ಇಲ್ಲೆಲ್ಲ ಬಳಸಿದ ಆಡುಭಾಷೆ ಜಾನಪದರ ಜೀವಾಳವಾಗಿದೆ. ಇದೊಂದು ರೀತಿಯ ಭಾರತೀಯ ಭಾಷಾ ಶಾಸ್ತ್ರಕ್ಕೆ ವಚನಕಾರರು ನೀಡಿದ ವಿಶೇಷವಾದ ಕಾಣಿಕೆ ಎಂಬುದನ್ನು ಭಾಷಿಕ ಹಿನ್ನೆಲೆಯಲ್ಲಿ ಕುಲ – ವೃತ್ತಿ ಆಧಾರಿತ ಬಯ್ಗುಳಗಳು, ಗಾದೆ, ಬಡಪು, ಪಡಿನುಡಿಗಳ ಮೂಲಕ ಕಟ್ಟಿ ಕೊಡಲಾಗಿದೆ. ಜಾನಪದ ಅಂಶಗಳ ಹೆಸರಿನಡಿ ವಚನಗಳನ್ನು ವ್ಯಾಖ್ಯಾನಿಸಿರುವುದು ಉಪಯುಕ್ತ ದೃಷ್ಟಿಯಿಂದ ಮಹತ್ವದ್ದಾಗಿದೆ. ಪ್ರಸ್ತುತ ಕೃತಿಯಲ್ಲಿ ಸಂಶೊಧಕರ ಪರಿಶ್ರಮ ಆಳವಾದ ಅಧ್ಯಯನಗಳು ಎದ್ದು ತೋರುತ್ತವೆ. ಸಂಶೋಧಕರಿಗೆ ಉಪಯುಕ್ತ ವಿಫುಲ ಮಾಹಿತಿಯನ್ನು ನೀಡುವ ಈ ಕೃತಿ ಜನಪದಕ್ಕೆ ಉತ್ತಮ ಸೇರ್ಪಡ.

ಕರಾವಳಿ ಜನಪದ ಸಾಹಿತ್ಯದಲ್ಲಿ ಸ್ತ್ರೀವಾದಿ ನೆಲೆಗಳು : ಹೊಸ ಬಗೆಯಲ್ಲಿ ಚಿಂತಿಸುವ ಹಾಗೂ ವಿಶ್ಲೇಷಿಸುವ ಗಾಯತ್ರಿ ನಾವಡರ ಪಿ ಹೆಚ್‌. ಡಿ ಮಹಾಪ್ರಬಂಧವು ತಾತ್ವಿಕ ಚೌಕಟ್ಟನ್ನು ನಿರ್ಮಿಸಿದೆ. ಈ ಕೃತಿ, ಪುರುಷ ಹೆಣ್ಣನ್ನು ನೋಡಿದ ರೀತಿ ಗ್ರಹಿಕೆಯನ್ನು ಮರುಚಿಂತನೆಗೆ ಒಡ್ಡಿದೆ. ಸಂಶೋಧಕರೇ ಹೇಳಿಕೊಂಡ ಹಾಗೆ “ಮೌನ ಮುರಿದ ಮಾತಿನಲ್ಲೆ ಹೇಳಿಕೊಂಡಂತೆ ಪುರಷ ದೃಷ್ಟಿಯ ಹೆಣ್ಣುತನದ ಅರ್ಥ ಮತ್ತು ಗ್ರಹಿಕೆಯನ್ನು ಮರು ನಿರ್ವಚಿಸುವ ಆಶಯ ಈ ಅಧ್ಯಯನದ್ದು. ಮಾತೃರೂಪಿ ಸಾಂಸ್ಕೃತಿಕ ಪರಿವಲಯದ ಮೌಖಿಕ ಲೋಕದ ಮಹಿಳಾ ಸಂಕಥನದಿಂದ ಹೆಣ್ಣುತನದ ಮರು ನಿರ್ವಚನ ಸಾಧ್ಯ ಎನ್ನುವುದನ್ನು ಆ ಅಧ್ಯಯನ ಕಂಡುಕೊಂಡ ಶೋಧನೆ.”

ಅಧ್ಯಯನಕ್ಕೆ ಆಯ್ದುಕೊಂಡ ವಿಷಯದ ಹಿನ್ನೆಲೆ, ವಿನ್ಯಾಸ, ಹಾಗೂ ಸ್ತ್ರೀವಾದಿ ಅಧ್ಯಯನ ಮೂಡಿಸಿದ ಹೆಜ್ಜೆಗಳ ಪಕ್ಷಿ ನೋಟವನ್ನು ಮೊದಲ ಅಧ್ಯಯನದಲ್ಲಿ ಚರ್ಚಿಸಲಾಗಿದೆ. ತಾಂತ್ರಿಕ ಹಿನ್ನೆಲೆಯಲ್ಲಿ ಸ್ತ್ರೀ ವಾದದ ಸ್ವರೂಪ, ಹೆಣ್ಣಿನ ಸ್ವರೂಪ, ಮೌನ ಮತ್ತು ಅದೃಶ್ಯಕ್ಕೂ ಗಂಡಿನ ಮಾತು ಮತ್ತು ಅಸ್ತಿತ್ವಕ್ಕೂ ಇರುವ ನಿರ್ದಿಷ್ಟ ಸಂಬಂಧಗಳ ಹುಡುಕಾಟ, ಸ್ತ್ರೀವಾದವನ್ನು ದೇಶಿ ನೆಲೆಗಟ್ಟಿನಲ್ಲಿ ಅರ್ಥೈಸುವ ಪ್ರಯತ್ನದ ಜೊತೆಗೆ ಭಾರತೀಯ ಸ್ತ್ರೀವಾದದ ತಾತ್ವಿಕತೆಯನ್ನು ಕಟ್ಟಿಕೊಡುವ ಪ್ರಯತ್ನವನ್ನು ಎರಡನೇ ಅಧ್ಯಾಯದಲ್ಲಿ ಕಾಣಬಹುದು. ಜಾನಪದರಲ್ಲಿ ಲಿಂಗ ಬಗೆಗಿನ ವಿವಕ್ಷೆ, ಲಿಂಗ ಪ್ರಭೇದ ಆಧಾರಿತ ಜಾನಪದ ಪ್ರಕಾರಗಳು, ಮಹಿಳಾ ಉತ್ಪಾದಕರು, ಪ್ರದರ್ಶನದಲ್ಲಿ ಮಹಿಳೆಯರ ಪಾತ್ರಗಳನ್ನು, ಸಂಶೋಧಕರು ಸ್ತ್ರೀವಾದಿ ಜನಪದವನ್ನು ಮೂರು ನೆಲೆಯಲ್ಲಿ ಆಮೂಲಾಗ್ರವಾಗಿ ಚರ್ಚಿಸಿದ್ದಾರೆ. ಅಧ್ಯಾಯ ನಾಲ್ಕರಲ್ಲಿ ಕರಾವಳಿ ಜಾನಪದ ಸಾಹಿತ್ಯ ಮತ್ತು ಮಾತೃರೂಪಿ ಸಂಸ್ಕೃತಿಯ ಅಧ್ಯಾಯ ನಡೆದಿದೆ. ಜಾನಪದ ನೆಲೆಯಲ್ಲಿ ಮಾತೃ ವಂಶೀಯ ಬಂಧುತ್ವನ್ನೂ ಚರ್ಚಿಸಿ ಹೊಸ ಬಗೆಯ ಸ್ತ್ರೀ ಸಂಕಥನವನ್ನೂ ಹೆಣೆಯಲಾಗಿದೆ. ಮಾತೃರೂಪಿ ಸಂಸ್ಕೃತಿಯಲ್ಲಿ ಹೆಣ್ಣು, ಮಾತೃವಂಶೀಯ ಬಂಧುತ್ವ ಸ್ವರೂಪದಲ್ಲಿ ಹೆಣ್ಣು, ಕರಾವಳಿ ಜನಪದ ಸಾಹಿತ್ಯ, ಜನಪದ ಕಥೆಗಳು, ಸ್ತ್ರೀ ಶಕ್ತಿಯ ವಿರಚನೆಯ ಮಾದರಿಯಾಗಿ ಚಾಲಾಕಿ ಹೆಣ್ಣುಗಳು, ಪಾಡ್ಡನಗಳು ಮೊದಲಾದ ಜನಪದ ಪ್ರಕಾರಗಳನ್ನು ಹಿನ್ನೆಲೆಯಾಗಿಟ್ಟುಕೊಂಡ ಹೆಣ್ಣಿನ ಚರಿತ್ರೆಯನ್ನು ಮರುಚಿಂತಿಸುವ ಪ್ರಯತ್ನವನ್ನು ಇಲ್ಲಿ ಕಾಣಬಹುದು.

ಐದನೆಯ ಅಧ್ಯಾಯವು ಸಿರಿಯನ್ನು ತುಳು ಬಂಧುತ್ವ ವ್ಯವಸ್ಥೆಯ ಸ್ತ್ರೀಶಕ್ತಿಯ ಮಾದರಿಯಾಗಿ ವಿಶ್ಲೇಷಿಸುತ್ತದೆ. ತುಳುವಿನ ಬಂಧುತ್ವ ವ್ಯವಸ್ಥೆ ಪರಿಕಲ್ಪನೆ ಮತ್ತು ಸಿರಿ ಪಾಡ್ಡನದ ಪ್ರದರ್ಶನ ಸಂದರ್ಭ, ತುಳುವರ ವೀರತ್ವದ ಪರಿಕಲ್ಪನೆ ಮತ್ತು ಸಿರಿ, ಸಿರಿ ಪಾಡ್ಡನದ ಕಥಾನಕ, ಸಿರಿಯ ಅನನ್ಯತೆ, ಸಿರಿಯ ಮತಾಚರಣೆ ಲೌಕಿಕಕ್ಕೆ ಪರ್ಯಾಯವಾಗಿ ಅಲೌಕಿಕದ ಸೃಷ್ಟಿ ಈ ಹಿನ್ನೆಲೆಯಲ್ಲಿ ಗಂಡಿನ ಪ್ರಭುತ್ವನ್ನೂ ಪ್ರಶ್ನಿಸಿ, ಹೆಣ್ಣಿನ ಶಕ್ತಿಯ ನೆಲೆಯನ್ನೂ ಹುಡುಕುವ ಪ್ರಯತ್ನ ನೆಡೆದಿದೆ. ಸ್ತ್ರೀ ಸಂವೇದನೆ, ಸ್ತ್ರೀ ಪಠ್ಯ ಮತ್ತು ಭಾಷೆಗಳ ವಿಶ್ಲೇಷಣೆ ಅಧ್ಯಾಯ ಆರರಲ್ಲಿ ನಡೆದಿದೆ. ಪ್ರಾಯೋಗಿಕ ಹಿನ್ನೆಲೆಯನ್ನು ವಕ್ತೃಗಳ ಲಿಂಗ ಮತ್ತು ಪಠ್ಯದ ಸ್ವರೂಪ, ಪ್ರೇಕ್ಷಕರ ಲಿಂಗ ಮತ್ತು ಪಠ್ಯ ಸ್ವರೂಪವನ್ನು ಅಧ್ಯಯ ಏಳರಲ್ಲಿ ನಿರ್ವಚಿಸಲು ಯತ್ನಿಸಿದೆ. ಸಂಶೋಧಕರ ಅಭಿಪ್ರಾಯ ಹೀಗೆ. “ಲಿಂಗ ಪ್ರಭೇದ ಪರಿಕಲ್ಪನೆಯು ಜೈವಿಕ ನೆಲೆಯಿಂದ ಬೇರೆಯಾಗಿ ಸಾಂಸ್ಕೃತಿಕ ನೆಲೆಯಲ್ಲಿ ಹೆಣ್ಣುತನ, ಗಂಡುತನವನ್ನು ಗ್ರಹಿಸುವುದರಿಂದ ಮಹಿಳಾ ಪಠ್ಯ, ಪರುಷ ಪಠ್ಯಗಳನ್ನು ಈ ಪರಿಭಾವನೆಯಲ್ಲಿಯೇ ಸ್ವೀಕರಿಸಬೇಕಾಗುತ್ತದೆ.” ಸ್ತ್ರೀ ವಾದವನ್ನು ಒಂದು ಕ್ರಮಬದ್ಧ ಚೌಕಟ್ಟಿನೊಳಗೆ ಕಟ್ಟಿಕೊಡುವ ಪ್ರಯತ್ನ ನೆಡೆದಿದೆ. ತುಳು ಸಂಸ್ಕೃತಿಯ ಒಳ ಹೊಕ್ಕು ಸ್ತ್ರೀ ವಾದವನ್ನು ಗುರುತಿಸಿ, ಅದನ್ನು ಮರಚಿಂತಿಸಿ, ಹೊಸಬಗೆಯಲ್ಲಿ ಮಹಿಳಾ ವಾದವನ್ನು ಕಟ್ಟಿಕೊಡುವ ಈ ಕೃತಿ ಸ್ತ್ರೀವಾದಿ ಚಿಂತಕರಿಗೆ ಉಪಯುಕ್ತವಾಗಿದೆ.

ಶಾಲಾ ಮಕ್ಕಳು ಹೇಳಿದ ಜನಪದ ಕಥೆಗಳ ಅಧ್ಯಯನ : ಶಾಲಾ ಮಕ್ಕಳು ಹೇಳಿದ ಜನಪದ ಕಥೆಗಳ ಅಧ್ಯಯನ ಕೃತಿಯು ಶ್ರೀಮತಿ ಜಯಲಲಿತ ಅವರ ಎಂ.ಪಿಲ್‌ ನಿಬಂಧವಾಗಿದೆ. ಪ್ರಸ್ತುತ ಕೃತಿಯಲ್ಲಿ ಕನ್ನಡ ಜನಪದ ಕ್ಷೇತ್ರದಲ್ಲಿ ಅಧ್ಯಯನ ನಡೆಯದೇ ಇದ್ದ ಮಕ್ಕಳ ಕಥೆಗಳ ಬಗೆಗೆ ಅಧ್ಯಯನ ನಡೆಸಲಾಗಿದೆ. ಕಥೆಗಳು ಮಾತ್ರ ಹಳೆಯ ತಲೆಮಾರಿನ ಜನ ಹೇಳಿದುದನ್ನು ಕೇಳಿದ ಮಕ್ಕಳು ತಮ್ಮ ಕಲ್ಪನೆಯ ಚೌಕಟ್ಟಿನ ಒಳಗೆ ಕಥೆಗಳನ್ನು ಮರು ಸೃಷ್ಟಿಸುತ್ತಾರೆ. ಹಾಗೆಯೇ ಕಥೆಗಳಿಗೆ ಕೇಳುವ ಒಂದು ವರ್ಗವೂ ಇದೆ. ಇಲ್ಲಿ ಹೇಳುವವನೇ ಮುಖ್ಯನಾಗಿರುವುದು ಒಂದು ವಿಶೇಷ. ಆದರೆ ಹಿರಿಯರು ಹೇಳುವ ಕಥೆಗಳಲ್ಲಿ ಕೇಳುಗನೇ ಮುಖ್ಯವಾಗಿರುತ್ತಾನೆ ಎನ್ನುವುದು ಈ ಅಧ್ಯಯನದಿಂದ ತಿಳಿದು ಬರುತ್ತದೆ.

ಪ್ರಸ್ತುತ ಕೃತಿಯನ್ನು ಆರು ಭಾಗಗಳಲ್ಲಿ ಆಧ್ಯಯನಕ್ಕೆ ಒಳಪಡಿಸಿದ್ದಾರೆ. ಕ್ರಮವಾಗಿ ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ, ಶಾಲಾ ಮಕ್ಕಳ ಕಥೆಗಳು, ಕೆಲವು ಲಕ್ಷಣಗಳು, ವಯಸ್ಸಿನ ಮತ್ತು ಜಾತಿಯಾಧಾರದ ಮೇಲೆ ಕಥೆಗಳ ಸಂಕ್ಷಿಪ್ತ ರೂಪ ಹಾಗೂ ಕಥೆಗಳನ್ನು ಹೇಳಿದ ಮಕ್ಕಳ ವಿವರಗಳನ್ನು ಕೊನೆಯಲ್ಲಿ ನೀಡಲಾಗಿದೆ. ಶ್ರೀಮತಿ ಜಯಲಲಿತಾ ಅವರು ಬೇರೆ ಬೇರೆ ಶಾಲೆ, ತರಗತಿ, ಭಾಷೆ, ಧರ್ಮ, ಜಾತಿ, ಲಿಂಗ, ಹಾಗೂ ವಯಸ್ಸಿನ ಮಕ್ಕಳಿಂದ ೧೫೫ ಕಥೆಗಳನ್ನು ಸಂಗ್ರಹಿಸಿದ್ದಾರೆ. ಸಂಗ್ರಹಿಸಿದ ಕಥೆಗಳನ್ನು ವಿವಿಧ ನೆಲೆಗಳಿಂದ ಸೂಕ್ಷ್ಮವಾಗಿ ಅವಲೋಕಿಸಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಮಕ್ಕಳ ಕಥೆಗಳ ಅಧ್ಯಯನ ಒಂದು ಹೊಸ ಬಗೆಯದು. ಕಥೆಗಳ ಒಡಲೊಳಗಿನಿಂದ ಹೊರಹೊಮ್ಮುವ ಮಕ್ಕಳ ಮಾನಸಿಕ ತುಮುಲವನ್ನು ವಿವರಿಸುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ಕಾಣಬಹುದಾಗಿದೆ. ಈಗಿನ ಶಿಕ್ಷಣ ಸಂದರ್ಭದಲ್ಲಿಯೂ ಮಕ್ಕಳಲ್ಲಿ ಆಡಗಿರುವ ಕಥೆಗಳನ್ನು ಹುಡುಕುವ, ಆ ಮೂಲಕ ಕಥೆಗಳಲ್ಲಿ ವ್ಯಕ್ತವಾಗುವ ದರ್ಶನಗಳನ್ನು ಕಂಡುಕೊಳ್ಳುವ ಬಗೆಗೆ ಶ್ರೀಮತಿ ಜಯಲಲಿತಾ ಅವರು ಬೆರಳು ಮಾಡುತ್ತಾರೆ. ಇದುವರೆಗೆ ನಿರ್ಲಕ್ಷಕ್ಕೆ ಒಳಗಾದ ಮಕ್ಕಳ ಕಥೆಗಳ ಬಗೆಗೆ ಹೆಚ್ಚಿನ ಅಧ್ಯಯನ ನಡೆಯಬೇಕೆಂದು ಲೇಖಕರು ಹಂಬಲಿಸುತ್ತಾರೆ. ಅನುಬಂಧದಲ್ಲಿ ನೀಡಿದ, ಕಥೆಗಳನ್ನು ಹೇಳಿದ ಮಕ್ಕಳ ವಿವರ ಕೃತಿಯನ್ನು ಅರ್ಥೈಸುವಲ್ಲಿ ಸಹಾಯಕವಾಗಿದೆ. ಜನಪದ ಆಸಕ್ತರಿಗೆ. ಸಂಶೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು ಜನಪದ ಗ್ರಂಥ ಲೋಕಕ್ಕೆ ಇದೊಂದು ಹೊಸ ಸೇರ್ಪಡೆಯಾಗಿದೆ.

ಕರ್ನಾಟಕ ಜನಪದ ಚಿತ್ರಕಲೆ : ‘ಉತ್ತರ ಕರ್ನಾಟಕದ ಜನಪದ ಚಿತ್ರಕಲೆ’ ಜನಪದ ಹಿನ್ನೆಲೆಯಲ್ಲಿ ಪ್ರಾಗೈತಿಹಾಸದಿಂದ ಹಿಡಿದು ಇತ್ತೀಚಿನವರೆಗೆ ಡಾ. ಎಸ್. ಸಿ. ಪಾಟೀಲರು ಅಧ್ಯಯನ ನೆಡೆಸಿದ್ದಾರೆ. ಪ್ರಸ್ತುತ ಅಧ್ಯಯನದಲ್ಲಿ ಚಿತ್ರಕಲೆ ಮತ್ತು ಜನಪದ ಚಿತ್ರಕಲೆ ಯನ್ನು ಸೂಕ್ಷ್ಮವಾಗಿ ವಿಭಜಿಸಿ ವೈಜ್ಞಾನಿಕವಾಗಿ ಚರ್ಚಿಸಿದ್ದಾರೆ. ಆರು ವಿಭಾಗಗಳಲ್ಲಿ ಜನಪದ ಸಂಸ್ಕೃತಿಯಲ್ಲಿ ಚಿತ್ರಕಲೆಯ ಮೊದಲ ಹೆಜ್ಜೆಯ ಗುರುತನ್ನು ಸಮರ್ಥಿಸುತ್ತಾ, ನಾಗರಿಕ ಬದುಕನ್ನು ನಿರೂಪಿಸಲಾಗಿದೆ. ಅಲ್ಲದೆ ಶಿಷ್ಟಪದ ಮತ್ತು ಜನಪದ ಚಿತ್ರಕಲೆಯ ಲಕ್ಷಣಗಳನ್ನು ವಿವರಿಸಲಾಗಿದೆ. ಪ್ರಾಚೀನ ಮಾನವನ ಚಟುವಟಿಕೆಗಳನ್ನು ಮತ್ತು ತನ್ನ ಭಾವನೆಗಳನ್ನು ಚಿತ್ರರೂಪದಲ್ಲಿ ಮೂಡಿಸಿದ ಚಿತ್ರಕಲೆಯನ್ನು ಗಮನದಲ್ಲಿ ಇಟ್ಟುಕೊಂಡು ರೇಖಾವಿನ್ಯಾಸ ಮತ್ತು ವರ್ಣವಿನ್ಯಾಸಗಳ ಅಧ್ಯಯನ ನಡೆಸಿದ್ದಾರೆ. ಧಾರ್ಮಿಕ ಹಿನ್ನೆಲೆಯಲ್ಲಿ ಮೂಡಿ ಬರುವ ಮಂತ್ರ – ಮಾಟ, ಮದುವೆ, ಹಬ್ಬ, ಉತ್ಸವ ಇತ್ಯಾದಿಗಳನ್ನು ವಿವರಿಸುತ್ತ ಚಿತ್ರಕಲೆಯ ವೃತ್ತಿಮೂಲಗಳನ್ನು ಕುರಿತು ಸಂಕ್ಷಿಪ್ತ ಪರಿಚಯ ಮಾಡಿಕೊಟ್ಟಿದ್ದಾರೆ.

ಚಿತ್ರ ಕಲೆಯನ್ನು ಕುರಿತ ಈ ಕೃತಿಯ ಉತ್ತರ ಕರ್ನಾಟಕದ ಜನಪದ ಚಿತ್ರಕಲೆಗೆ ಉಪಯುಕ್ತ ಮಾಹಿತಿಗಳನ್ನು ನೀಡುವುದಲ್ಲದೆ, ವಿಶ್ಲೇಷಣಾತ್ಮಕವೂ ಆಗಿದೆ.

ಗ್ರಾಮದೇವತೆಗಳು : ಡಾ. ಸಿದ್ಧಲಿಂಗಯ್ಯ ಅವರ ಪಿ.ಎಚ್. ಡಿ. ಮಹಾಪ್ರಬಂಧ. ಈ ಸಂಶೊಧನ ಗ್ರಂಥವು ಜನಪದ ದೈವಗಳ ಅಧ್ಯಯನಕ್ಕೆ ಪ್ರವೇಶಿಕೆಯಂತಿದ್ದು, ಇದರಲ್ಲಿ ಏಳು ಅಧ್ಯಾಯಗಳಿವೆ. ಮೊದಲೆನೆಯ ಅಧ್ಯಾಯದಲ್ಲಿ ಸಂಶೊಧಕರು ಗ್ರಾಮದೇವತೆಗಳ ಅಧ್ಯಯನದ ಆಗತ್ಯವನ್ನು ಮನಗಾಣಿಸಿದ್ದಾರೆ. ಗ್ರಾಮ ಜೀವನದ ಹಲವು ಹತ್ತು ಮುಖಗಳನ್ನು ತೆರೆದು ತೋರಿಸುವ ಸಾಧನವಾಗಿ ಸಿದ್ಧಲಿಂಗಯ್ಯನವರು ಜನಪದ ದೈವಗಳನ್ನು ನೋಡಿದ್ದಾರೆ. ದೈವಗಳ ಶಕ್ತಿ ಮತು ದೌರ್ಬಲ್ಯಗಳ ಬಗೆಗೆ ನಡೆದ ಚಿಂತನೆಗಳನ್ನು ಅವರು ಸಮರ್ಪಕವಾಗಿ ವಿಶ್ಲೇಷಿಸಿದ್ದಾರೆ. ಗ್ರಾಮದೇವತೆಯ ಖಚಿತ ಪರಿಕಲ್ಪನೆಯನ್ನು ಅವರು ನೀಡುತ್ತಾರೆ. ಅವರು ಮಾಡಿದ ವರ್ಗೀಕರಣದಲ್ಲಿ ರಾಷ್ಟ್ರೀಯ ದೇವತೆಗಳು, ಪ್ರಾಂತಿಯ ದೇವತೆಗಳು ಮತ್ತು ಸ್ಥಳೀಯ ದೇವತೆಗಳೆಂಬ ಪ್ರಬೇದಗಳು ಮಾತ್ರ ಚರ್ಚಾಸ್ಪದವಾಗಿವೆ. ನಾಲ್ಕನೇ ಅಧ್ಯಾಯದಲ್ಲಿ ಸಂಶೋಧಕರು ದೈವಗಳ ಬಗೆಗಿನ ಪುರಾಣ ಮತ್ತು ಐತಿಹ್ಯಗಳ ಸಂಗ್ರಹದ ಬಗೆಗೆ ವಿಶ್ಲೇಷಿಸಿದ್ದಾರೆ. ಇಲ್ಲಿ ಅವರ ಶ್ರಮ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಕಾಣಬಹುದು. ಐದನೆಯ ಅಧ್ಯಾಯದಲ್ಲಿ ಅಚರಣೆಗಳ ಬಗೆಗಿನ ವಿವರಣೆಯು ತುಂಬ ಅರ್ಥಪೂರ್ಣವಾಗಿದೆ. ಒಟ್ಟು ಅಧ್ಯಯನದ ಮಾಹಿತಿಗಳನ್ನಾಧರಿಸಿ ಗ್ರಾಮದೇವತೆಗಳ ವಿಶಿಷ್ಟತೆಯನ್ನು ಆರನೆಯ ಅಧ್ಯಾಯದಲ್ಲಿ ಸಮರ್ಪಕವಾಗಿ ನಿರೂಪಿಸಿದ್ದಾರೆ. ದೇವತೆಗಳ ಕಟ್ಟಳೆಗಳ ಉಲ್ಲಂಘನೆ, ಪ್ರತಿಭಟನೆ, ಜನೋಪಕಾರ, ನ್ಯಾಯನೀಡಿಕೆ, ಶಿಕ್ಷೆ ಮೊದಲಾದ ವಿಷಯಗಳು ಚರ್ಚಿತವಾಗಿವೆ.

ಸಾಮಾನ್ಯವಾಗಿ ಈ ಬಗೆಯ ಕ್ಷೇತ್ರದಲ್ಲಿ ತೊಡಗಿದವರು ಭಾವುಕರಾಗಿ, ವಿಷಯಗಳನ್ನು ಸರಳೀಕರಿಸಿ ಮಂಡಿಸುವುದುಂಟು. ಇಲ್ಲಿ ಸಂಶೊಧಕರು ಅಂಥ ಭಾವುಕತೆಗೆ ಒಳಗಾಗಿದ್ದಾಗಲಿ, ವಿಷಯವನ್ನು ಸರಳೀಕರಿಸಿದ್ದಾಗಲಿ, ಕಂಡುಬರುವುದಿಲ್ಲ. ದೈವಗಳು ಯಾವ ಬಗೆಯ ಕೆಲಸವನ್ನು ಆಧುನೀಕರಣಗೊಂಡ ಸಮಾಜದಲ್ಲಿ ನಿರ್ವಹಿಸುತ್ತವೆ? ಅವು ಜನರಿಗೆ ನೀಡುವ ಉಪಕಾರಗಳನ್ನು ಪೂರೈಸಿಕೊಳ್ಳುತ್ತಿದ್ದಾರೆ? ಎಂಬುದರ ಬಗೆಗೆ ವಿಶ್ಲೇಷಣೆ ನಡೆಸಿದ್ದಾರೆ. “ಗ್ರಾಮದೇವತೆಯ ಅವಸಾನದೊಂದಿಗೆ ಕೆಲವರ್ಗದ ಸಂಸ್ಕೃತಿಯು ಅವಸಾನವಾಗುವ ಅಪಾಯ ಇದ್ದೇ ಇದೆ. ವೈವಿಧ್ಯವನ್ನು ವೈಶಿಷ್ಟಗಳನ್ನು ಹೊಂದಿರುವ ಈ ಸಂಸ್ಕೃತಿಯನ್ನು ಅದರ ಜನವಿರೋಧಿ ಆಶಯಗಳನ್ನು ದೂರ ಮಾಡಿ ಉಳಿಸಿಕೊಳ್ಳುವ ಅಗತ್ಯ ಇಂದು ಹೆಚ್ಚಾಗಿದೆ.” (ಪು. ೧೧೯) ಎಂಬ ಅವರ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಜನಪದ ದೈವಗಳ ಕುರಿತ ಈ ಕೃತಿಯು ಉಪಯುಕ್ತವಾದ ಮಾಹಿತಿಗಳನ್ನು ನೀಡುವುದಲ್ಲದೇ, ವಿಶ್ಲೇಷಣಾತ್ಮಕವಾಗಿದೆ. ಅನುಬಂಧದಲ್ಲಿ ಒದಗಿಸಿದ ಛಾಯಚಿತ್ರಗಳು ಗ್ರಂಥದ ಉದ್ದೇಶಕ್ಕೆ ಪೂರಕವಾಗಿವೆ. ಸಂಶೊಧಕರ ಅತ್ಯಾಧುನಿಕ ಜನಪದ ಗ್ರಹಿಕೆಗಳನ್ನು ಕಥೆಗಳ ಭಿನ್ನಪಾಠಗಳ ಅಧ್ಯಯನದಲ್ಲಿ ಕಾಣಬಹುದು. ಒಟ್ಟ ದೈವಗಳ ಮಾಹಿತಿ ಹಾಗೂ ಐತಿಹ್ಯಗಳನ್ನಾಧರಿಸಿ ಹೊಸ ಭಿನ್ನ ಹೊಳಪುಗಳನ್ನ ಕಾಣಲು ಸಾಧ್ಯವಿದೆ.

ಹೈದರಾಬಾದ್ ಕರ್ನಾಟಕದ ಗ್ರಾಮದೇವತೆಗಳ ಜಾನಪದೀಯ ಅಧ್ಯಯನ : ಡಾ.ಚನ್ನಣ್ಣ ವಾಲೀಕರ ಅವರ ಪಿ. ಎಚ್.ಡಿ. ಮಹಾಪ್ರಬಂಧ. ಜನಪದ ಬದುಕಿನೊಂದಿಗೆ ಬೆರೆತಿರುವ ಗ್ರಾಮದೇವತೆಗಳ ಬಗೆಗೆ ಸಾಕಷ್ಟು ವಿಸ್ತಾರವಾದ ವಿವರಣೆಗೊಳೊಂದಿಗೆ, ಡಾ. ವಾಲೀಕರರ ಅವರು ಚರ್ಚಿಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಹದಿನೈದು ಅಧ್ಯಾಯಗಳಿವೆ. ಗುಲಬರ್ಗಾ, ರಾಯಚೂರು, ಬೀದರ್ ಜೆಲ್ಲೆಗಳನ್ನು ಅಧ್ಯಯನಕ್ಕೆ ಒಳಪಡಿಸಿಕೊಂಡು ವ್ಯಾಪಕ ಕ್ಷೇತ್ರ ಕಾರ್ಯ ನಡೆಸಿದ್ದಾರೆ. ಗ್ರಾಮದೇವತೆಗಳನ್ನು ವಿಶ್ಲೇಷಣೆಯ ಜೊತೆಗೆ ಸೈದ್ದಾಂತಿಕ ನೆಲೆಗಳಲ್ಲಿ ಚರ್ಚಿಸಿದ್ದಾರೆ.

ಅಧ್ಯಯನದ ಉದ್ದೇಶ, ವ್ಯಾಪ್ತಿ ಹಾಗೂ ಗ್ರಾಮ ದೇವತೆಗಳ ಬಗೆಗೆ ವಿದ್ವಾಂಸರ ಹೇಳಿಕೆಗಳನ್ನು ಅಧ್ಯಾಯ ಒಂದರಲ್ಲಿ ವಿವರಿಸುತ್ತಾರೆ. ಗ್ರಾಮದೇವತೆ ಎಂದರೆ ಕೇವಲ ಸ್ತ್ರೀ ದೈವಗಳಲ್ಲ. ಗ್ರಾಮಕ್ಕೆ ಸಂಬಂಧಿಪರ ಸ್ತ್ರೀ ಮತ್ತು ಪುರುಷ ದೈವಗಳಾಗಿವೆ. “ಆದರೂ ಸ್ತ್ರೀ ದೇವತೆಯೇ ಆರಂಭದಲ್ಲಿ ಪೂಜೆಗೊಂಡಿದ್ದು ಎಂಬ ನಿಲುವಿಗೆ ಬದ್ಧರಾಗುತ್ತಾರೆ. ನಂತರ ನಮ್ಮ ದೇಶದಲ್ಲಿ ಆರ್ಯ ದ್ರಾವಿಡರೇ ಮೂಲವಲ್ಲ ಅವರಿಗಿಂತಲೂ ಮೊದಲಿದ್ದವರ ನಿಕ್ಷಾದರು ಎಂಬ ಮಾತು ಸಮಂಜಸವೆನಿಸುವುದಿಲ್ಲ. ಏಕೆಂದರೆ ನಿಕ್ಷಾದರಿಗಿಂತ ಪೂರ್ವದಲ್ಲಿ ಆದಿಮ ಸಂಸ್ಕೃತಿಯೂ ಇತ್ತು. ಅಲ್ಲದೆ ಸಪ್ತ ಮಾತೃಕೆಯರಾದ ದ್ಯಾವಮ್ಮ, ಎಲ್ಲಮ್ಮ, ಮದಗಮ್ಮ, ದುರಗಮ್ಮ, ಕಾಳಮ್ಮ, ಚೌಡಮ್ಮ, ಪಾಲಕಮ್ಮ ಗ್ರಾಮದೇವತೆಗಳು ಇವೆ.” ಎರಡನೆ ಅಧ್ಯಾಯದಲ್ಲಿ ಹೈದರಾಬಾದ ಕರ್ನಾಟಕದ ಸ್ವರೂಪ ಮತ್ತು ಇತಿಹಾಸವನ್ನು ಚರ್ಚಿಸಿದ್ದಾರೆ. ನಿಜಾಮನ ಆಳ್ವಿಕೆಯ ಸಂಕ್ಷಿಪ್ತ ವಿವರಣೆ, ಭೌಗೋಳಿಕ ಸ್ವರೂಪ ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ಹಿನ್ನೆಲೆ ಹಾಗೂ ಪ್ರಾದೇಶಿಕ ಪ್ರಭಾವಿ ದೈವಗಳ ಬಗೆಗೆ ಚಿಂತಿಸಲಾಗಿದೆ. ಈಚೆಗೆ ಹುಟ್ಟಿಕೊಂಡವೆನ್ನಲಾದ ಲಕ್ಷ್ಮಿ ಪಾರ್ವತಿ, ಹನುಮಂತ, ಮಲ್ಲಯ್ಯ, ವೀರಭದ್ರ, ರೇವಣಸಿದ್ಧಯ್ಯ ಮುಂತಾದ ದೈವಗಳ ಬಗೆಗೆ ವಿವರಣೆ ಇದೆ. ಗ್ರಾಮದೇವತೆಗಳ ಪರಿಕಲ್ಪನೆ, ಸಿದ್ಧಾಂತಗಳು, ದೈವಗಳ ಬಗೆಗಿನ ವಿವಿಧ ವಿದ್ವಾಂಸರ, ಓರ್ವ ಹೇಳಿಕೆಗಳನ್ನು ಮೂರು ಮತ್ತು ನಾಲ್ಕನೆ ಅಧ್ಯಾಯಗಳಲ್ಲಿ ಲಭ್ಯವಾಗುತ್ತವೆ. ಹೈದ್ರಾಬಾದ್‌ ಕರ್ನಾಟಕದ ಪ್ರಮುಖ ಗ್ರಾಮದೇವತೆಗಳಾದ ಪಾರ್ವತಿ ಪರಂಪರೆಯ ದೈವಗಳು, ಲಕ್ಷ್ಮಿ ಪರಂಪರೆಯ ದೈವಗಳು. ಆಯಾ ದೇವತೆಗಳ ಕಾಲಾನುಸಾರಿ ಸೇವೆ, ಅವುಗಳ ಕರ್ತವ್ಯ ವಿಶೇಷ ಸೇವೆಗಳು ಹಾಗೂ ಆಚರಣೆ, ನಂಬಿಕೆ, ವಿಧಿ – ವಿಧಾನಗಳು, ಉತ್ಸವ – ಜಾತ್ರೆ, ಪವಾಡ, ಬಲಿ ಪದ್ಧತಿ, ಬಸವಿ ಸೇವೆ, ಬೆತ್ತಲೆ ಸೇವೆಗಳ ಬಗೆಗೆ ಅಧ್ಯಾಯ ಐದರಲ್ಲಿ ವಿವರಿಸಿದ್ದಾರೆ. ದೇವತೆಗಳ ಮೂರ್ತಿ ಹಾಗೂ ಗುಡಿಗಳ ರಚನಾ ವಿನ್ಯಾಸಗಳು, ಚಾಲುಕ್ಯ ಪೂರ್ವಯುಗ, ಚಾಲುಕ್ಯಯುಗ, ರಾಷ್ಟ್ರಕೂಟ ಯುಗ, ಹೊಯ್ಸಳ ಯುಗ, ವಿಜಯನಗರ ಯುಗಗಳ ಕಾಲದ ಮೂರ್ತಿ ಶಿಲ್ಪಗಳನ್ನು ಕೂಲಂಕುಷವಾಗಿ ಆರನೇ ಅಧ್ಯಾಯದಲ್ಲಿ ಚರ್ಚಿತವಾಗಿವೆ. ದೈವಗಳ ಪ್ರೇರಿತವಾದ ಸಾಂಸ್ಕೃತಿಕ ಮೌಲ್ಯ, ವೈಷಮ್ಯ ಹಾಗೂ ಆಯಾ ದೇವತೆಗಳ ಕಲೆ, ಸಾಹಿತ್ಯ, ಜೀವನ ಸಂಸ್ಕೃತಿ ಶಾಸ್ತ್ರಗಳ ವಿವಾದಗಳ ಬಗೆಗೆ ಎರಡನೆ ಅಧ್ಯಾಯದಲ್ಲಿ ವಿವರವಿದೆ.

ಪ್ರದರ್ಶನ ಸಿದ್ಧಾಂತ ಹಿನ್ನೆಲೆಯಲ್ಲಿ ಗ್ರಾಮದೇವತೆಗಳ ವಿಧಿ ವಿಧಾನಗಳನ್ನೂ ಒಂಬತ್ತನೆಯ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಗ್ರಾಮದೇವತೆಗಳಿಗೆ ಸಂಬಂಧಿಸಿದ ವಿವರಗಳನ್ನು ನೀಡಿದ ವಕ್ತೃಗಳ ವಿವರಗಳನ್ನು ಹತ್ತು ಮತ್ತು ಹನ್ನೊಂದರಲ್ಲಿ ನೀಡುತ್ತಾರೆ. ಗುಲ್ಬರ್ಗಾ, ಬೀದರ್, ರಾಯಚೂರು ಜಿಲ್ಲೆಗಳ ಗ್ರಾಮದೇವತೆಗಳ ಐತಿಹಾಸಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಪ್ರಾಕೃತಿಕ, ಸಾಂಸ್ಕೃತಿಕ ಹಿನ್ನೆಲೆಯಲ್ಲಿ ವಿವರಿಸಿ ಅವುಗಳು ಪ್ಯೂಡಲ್‌ ಸಂಸ್ಕೃತಿಯಿಂದ ಬಿಡುಗಡೆಗೊಂಡದ್ದನ್ನ ಹದಿಮೂರನೆಯ ಅಧ್ಯಾಯದಲ್ಲಿ ಚರ್ಚಿಸಿದ್ದಾರೆ. ಆಧುನಿಕ ಜಗತ್ತಿನಲ್ಲಿ ದೈವಗಳು ಉಳಿಸಿಕೊಂಡು ಬಂದ ಸ್ಥಾನಮಾನಗಳನ್ನು ಹದಿನಾಲ್ಕನೆ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಕ್ಷೇತ್ರ ಕಾರ್ಯದ ಸ್ಥಳ, ನಿರೂಪಕರ ವಿವರ ಹಾಗೂ ಗ್ರಾಮದೇವತೆಗಳ ಹಾಡುಗಳನ್ನು ಅನುಬಂಧದಲ್ಲಿ ನೀಡಿದ್ದಾರೆ.

ಗ್ರಾಮದೇವತೆಗಳ ವಿವರಣೆಯ ಜೊತೆಗೆ ಆಯಾಯ ಪೂಜಾರಿಗಳ ವಿವರಣೆ ನೀಡಿದ್ದರೆ. ಕೃತಿಗೆ ಹೆಚ್ಚಿನ ನ್ಯಾಯ ದೊರಕಿಸಿದಂತಾಗುತ್ತಿತ್ತು. ಆದರೂ ಗ್ರಾಮದೇವತೆಗಳ ಬಗೆಗೆ ಹೆಚ್ಚಿನ ಅಧ್ಯಯನ ಮಾಡುವ ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ ಈ ಕೃತಿ ಸಾಕಷ್ಟು ವಿಸ್ತಾರವಾದ ಮಾಹಿತಿಯನ್ನು ನೀಡುತ್ತದೆ.

ಯಕ್ಷಗಾನ ತಾಳ ಮದ್ದಳೆ ನವ್ಯೋತ್ತರ ಸಂಕಥನ : ಮಾಧವ ಪೆರಾಜೆ ಅವರ ಪಿಎಚ್‌ಡಿ ಪ್ರಬಂಧವಾಗಿದೆ. ಯಕ್ಷಗಾನದ ಬಗೆಗೆ ವಿಶೇಷ ಒಲವು ಹೊಂದಿರುವ ಡಾ. ಮಾಧವ ಪೆರಾಜೆ ಅವರು ‘ಯಕ್ಷಗಾನ ತಾಳ ಮದ್ದಳೆ’ ಯನ್ನು ಹೊಸ ದೃಷ್ಟಿಕೋನದಿಂದ ನೋಡಿದ ಕೆಲವೇ ಮಂದಿ ವಿದ್ವಾಂಸರಲ್ಲಿ ಒಬ್ಬರು. ಸಂಶೋಧಕರಿಗೆ ಯಕ್ಷಗಾನದ ಒಳ ಹೊರಗುಗಳು ಚೆನ್ನಾಗಿ ತಿಳಿದಿದ್ದರಿಂದ ಪ್ರಸ್ತುತ ವಿಷಯಕ್ಕೆ ಸೈದ್ಧಾಂತಿಕ ರೂಪ, ಬಂದಿದೆ ಎಂದರೆ ತಪ್ಪಾಗಲಾರದು. ಪ್ರಸ್ತುತ ಕೃತಿಯಲ್ಲಿ ನಿಗಮನ ಅಧ್ಯಯನ ಅನುಸರಿಸಿ, ಪಠ್ಯ ಮತ್ತು ಪ್ರದರ್ಶನವನ್ನು ನವ್ಯೋತ್ತರ ಸಂಕಥನದ ಹಿನ್ನೆಲೆಯಲ್ಲಿ ಚರ್ಚಿಸಲಾಗಿದೆ.

ಪ್ರಸ್ತುತ ಒಟ್ಟು ೧೨ ಅಧ್ಯಾಯಗಳಲ್ಲಿ ಹರಡಿಕೊಂಡು, ತಾಳಮದ್ದಳೆ, ಪಠ್ಯ ಮತ್ತು ಪ್ರದರ್ಶನ, ಹಿನ್ನಲೆಯಲ್ಲಿ ಚರ್ಚಿಸುವ ಪ್ರಯತ್ನ ಮಾಡಿದೆ. ಅಧ್ಯಯನದ ಉದ್ದೇಶ ಮತ್ತು ವಿಧಾನವನ್ನು ಮೊದಲ ಅಧ್ಯಯನದಲ್ಲಿ ಚರ್ಚಿಸಲಾಗಿದೆ. ತಾಳಮದ್ದಳೆಯ ಅಧ್ಯಯನದ ವಿಮರ್ಶಾತ್ಮಕ ಸಮೀಕ್ಷೆ, ಕಲಾವಿದರು ಮತ್ತು ಸಹೃದಯರು ನಿರೂಪಿಸುವ ತಾಳಮದ್ದಳೆ ಬಗೆಗೆ ಎರಡು ಮತ್ತು ಮೂರನೆಯ ಅಧ್ಯಯನದಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ಅಧ್ಯಯನದ ವಸ್ತುವಿನ ಜೊತೆಗೆ ಕಾವ್ಯಾನುಸಂಧಾನ ಮಾದರಿಗಳು ಮತ್ತು ಕಾವ್ಯೋಪಯೋಗಿ ಕಲೆಗಳನ್ನು ಅಧ್ಯಾಯ ನಾಲ್ಕರಲ್ಲಿ ಚರ್ಚಿಸಲಾಗಿದೆ. ಯಕ್ಷಗಾನ ಪಠ್ಯ : ತಾತ್ತ್ವಿಕ ವಿವೇಚನೆ, ಪ್ರಾತಿನಿಧಿಕ ಯಕ್ಷಗಾನ ಪ್ರಸಂಗಗಳು ಹಾಗೂ ಅಭಿಜಾತ ಕಾವ್ಯಗಳು, ಅರ್ಥಗಾರಿಕೆಯ ತಾತ್ತ್ವಿಕತೆಗಳು ಅಧ್ಯಾಯ ಐದು, ಆರು ಮತ್ತು ಏಳರಲ್ಲಿ ಚರ್ಚಿತಗೊಂಡಿವೆ, ಮುಂದಿನ ಅಧ್ಯಯನಗಳಲ್ಲಿ ಅರ್ಥದ ಅರ್ಥ, ಬರವಣಿಗೆ ಮತ್ತು ಮಾತು, ಪ್ರಸಂಗವೊಂದರ ಬರವಣಿಗೆ ಮತ್ತು ಕನ್ನಡದ ಅಪೂರ್ವ ಸಂಕಥನ ಅರ್ಥಗಾರಿಕೆ ಬಗೆಗಿನ ವಿಷಯಗಳು ಚರ್ಚೆಗೆ ಒಳಪಡಿಸಲಾಗಿದೆ.

ಯಕ್ಷಗಾನ ತಾಳಮದ್ದಳೆ ಪಠ್ಯ ಮತ್ತು ಪ್ರದರ್ಶನ ನವ್ಯೋತ್ತರ ಸಂಕಥನದ ಹಿನ್ನೆಲೆಯಲ್ಲಿ ಚರ್ಚಿಸಿದ ಮಾಧವ ಅವರು, ಬರೆಯುವುದು ಹೀಗೆ “ಯಕ್ಷಗಾನ ಎಂದು ಕರೆಯಲಾಗುವ ಕಲಾ ಪ್ರಕಾರದಲ್ಲಿ ಬಯಲಾಟ ಮತ್ತು ತಾಳೆಮದ್ದಳೆ ಎಂಬ ಎರಡು ಕವಲುಗಳಿವೆ. ಬಯಲಾಟ ಯಕ್ಷಗಾನದ ಸಮಗ್ರ ರೂಪವಾದರೆ ತಾಳಮದ್ದಳೇ ಅದರ ಸಂಕ್ಷಿಪ್ತ ರೂಪ. ಹಾಗೆಂದು ಇವೆರಡೂ ಪ್ರತ್ಯೇಕವೆಂದಾಗಲೀ ಅಥವಾ ಒಂದೇ ಎಂದಾಗಲೀ ಭಾವಿಸುವಂತಿಲ್ಲ. ತಮ್ಮದೇ ಆದ ವಿಶಿಷ್ಟತೆಯಿಂದ ಏಕಕಾಲಕ್ಕೆ ಅಭಿನ್ನವೂ ಭಿನ್ನವೂ ಆಗುವ ಸಾಧ್ಯತೆ ಇಲ್ಲಿದೆ. ಅವೆರಡರ ವಿಸ್ತೃತವಾದ ಅಧ್ಯಯನದ ಮೂಲಕವೇ ಯಕ್ಷಗಾನದ ಇಡಿಯಾದ ರೂಪವೊಂದರ ಗೃಹಿಕೆಯಾಗಲು ಸಾಧ್ಯ” ಅಧುನಿಕತೆಯ ಹಿನ್ನೆಲೆಯಲ್ಲಿ ಯಕ್ಷಗಾನಕ್ಕೆ ನೀಡಬೇಕಾದ ಸೈದ್ಧಾಂತಿಕ ಖಚಿತತೆ ಮುಂತಾದಂತೆ ಯಕ್ಷಗಾನ ರಂಗಭೂಮಿಗೆ ಸಂಶೋಧಕರ ಗಂಭೀರ ಚಿಂತನೆಯಿಂದಾಗಿ ನ್ಯಾಯ ಒದಗಿದೆ ಎಂದು ಹೇಳಬಹುದು.

ಉತ್ತರ ಕರ್ನಾಟಕದ ಜಾನಪದ ಗೀತ ಮೇಳಗಳು ಒಂದು ಸಾಂಸ್ಕೃತಿಕ ಅಧ್ಯಯನ: ಡಾ. ವೀರೇಶ ಬಡಿಗೇರ ಅವರ ಪಿಎಚ್‌.ಡಿ ಮಹಾಪ್ರಬಂಧವಾಗಿದೆ. ಜಾನಪದವನ್ನು ದೇಶೀ ನೆಲೆಯಲ್ಲಿ ಚಿಂತಿಸುವ ಡಾ. ವೀರೇಶ ಬಡಿಗೇರ ಅವರು ಉತ್ತರ ಕರ್ನಾಟಕದ ಕೆಲವೇ ವಿದ್ವಾಂಸರಲ್ಲಿ ಒಬ್ಬರು. ವಸಾಹತು ಪ್ರಜ್ಞೆಯ ಹಿನ್ನೆಲೆಯಲ್ಲಿ ಸಿದ್ಧ ಮಾದರಿಗಳ ಬೆನ್ನ ಹಿಂದೆ ಬಿದ್ದು ನಮ್ಮ ಅಧ್ಯಯನಗಳು ಹುರುಳಿಲ್ಲದಾಗಿವೆ. ಹುರುಳಿರುವ ನಮ್ಮ ಸಂಸ್ಕೃತಿಯ ಅಧ್ಯಯನವನ್ನು ನಮ್ಮದೇ ಮಾದರಿಯಲ್ಲಿ ಚಿಂತಿಸುವುದರಿಂದ ಅಕ್ಷರವಿಲ್ಲದವರ ಜ್ಞಾನ ತಿಳುವಳಿಕೆಗಳಲ್ಲೂ ಸಮಾಜದ ಹಿತಾಶಕ್ತಿಯನ್ನು ಕಾಯಬಲ್ಲ ಅಂಶಗಳಿವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬಹುದು. ಪ್ರಸ್ತುತ ಕೃತಿಯಲ್ಲಿ ವೀರೇಶ ಅವರು ಅಂಥ ಅಕ್ಷರವಿಲ್ಲದವರ ಐದು ಗೀತ ಮೇಳಗಳನ್ನು ದೇಶೀ ನೆಲೆಯಲ್ಲಿ ಚಿಂತಿಸಿದ್ದಾರೆ. ಪ್ರಸ್ತುತ ಕೃತಿಗೆ ಮುನ್ನುಡಿ ಬರೆದ ಡಾ. ಚಂದ್ರಶೇಖರ ಕಂಬಾರರು ಹೀಗೆ ಬರೆಯುತ್ತಾರೆ “ಜಾನಪದ ಅಧ್ಯಯನದ ಇಂದಿನ ಜರೂರು ಎಂದರೆ ವಸಾಹತು ಆಡಳಿತ ತಂದಿತ್ತ ಇಂಥ ಹುಸಿ ರಚನೆಗಳನ್ನು ಪ್ರಶ್ನಿಸುವ ಮೂಲಕ ಈ ನೆಲದ ಸ್ವಭಾವಕ್ಕೆ ಹೊಂದುವಂತಹ ಹೊಸಬಗೆಯ ಸಂರಚನೆಗಳನ್ನು, ಈ ನೆಲದ ಭಾಷೆಯ ಮೂಲಕವೇ ಕಟ್ಟಿಕೊಳ್ಳುವುದು. ಈ ಮೂಲಕ ಕನ್ನಡ ಭಾಷೆ ಮತ್ತು ಜಾನಪದದ ಉತ್ಸಾಹಕ ಗುಣಗಳಲನ್ನು ಅವುಗಳ ಕ್ರಿಯಾತ್ಮಕ ನೆಲೆಗಳನ್ನೂ ಕಂಡುಕೊಂಡು ಕಸಿಮಾಡಿ ಆಧುನಿಕ ಸವಾಲುಗಳಿಗೆ ಸಜ್ಜುಗೊಳಿಸುವುದು” ಈ ಹಿನ್ನೆಲೆಯಲ್ಲಿ ಡಾ. ವೀರೇಶ ಅವರ ಗೀತ ಮೇಳಗಳ ಅಧ್ಯಯನ ಗಮನಾರ್ಹವಾಗುತ್ತದೆ.

ಅಧ್ಯಯನದ ಉದ್ದೇಶ ಮತ್ತು ವ್ಯಾಪ್ತಿ, ಅಧ್ಯಯನದ ಸೈದ್ಧಾಂತಿಕ ಚೌಕಟ್ಟು ಮತ್ತು ಅಧ್ಯಯನದ ವಿಧಾನ. ಅಧ್ಯಯನದ ಆಕರ ಸಾಮಗ್ರಿ, ಆ ಕ್ಷೇತ್ರದಲ್ಲಿ ಇದುವರೆಗೂ ನಡೆದ ಅಧ್ಯಯನದ ಸಮೀಕ್ಷೆ ಮತ್ತು ಗೀತ ಮೇಳಗಳ ವರ್ಗೀಕರಣಗಳನ್ನು ಅಧ್ಯಾಯ ಒಂದರಲ್ಲಿ ವಿವರಿಸಿದ್ದಾರೆ. ಅಧ್ಯಾಯ ಎರಡರಿಂದ ಅಧ್ಯಾಯ ಆರರವರೆಗೆ ಚೌಡಿಕೆ ಮೇಳ, ಗೊಂದಲಿಗರ ಮೇಳ, ಡೊಳ್ಳು ಮೇಳ, ಭಜನೆ ಮೇಳ ಮತ್ತು ಗೀಗೀ ಮೇಳಗಳನ್ನು ಅವುಗಳ ಸಾಂಸ್ಕೃತಿಕ ಹಿನ್ನೆಲೆ, ಹಾಡುಗಾರಿಕೆಯ ಸ್ವರೂಪ, ಉಪಯೋಗಿಸುವ ಪರಿಕರಗಳು, ಆಯಾಯಾ ಮೇಳಗಳ ಪ್ರದರ್ಶನಗಳ ತೌಲನಿಕ ಅಧ್ಯಯನ ಮತ್ತು ಅವು ಮಾಡುವ ಕಾರ್ಯಗಳ ಬಗೆಗಿನ ಮಾಹಿತಿ ನೀಡುವುದರ ಜೊತೆಗೆ ಸ್ವವಿಶ್ಲೇಷಣೆ ಮಾಡಿದ್ದಾರೆ. ಇಲ್ಲೆಲ್ಲ ಡಾ. ವೀರೇಶರ ಪ್ರಾಮಾಣಿಕ ಪ್ರಯತ್ನ, ವಿಪುಲ ಕ್ಷೇತ್ರ ಕಾರ್ಯದ ಅನುಭವ, ಶ್ರದ್ಧೆ, ನಿಷ್ಠೆಗಳು ಪ್ರಕಟಗೊಳ್ಳುತ್ತವೆ.

ಐದೂ ಗೀತ ಮೇಳಗಳ ಸಮಾನ ಅಂಶಗಳನ್ನು ಭಿನ್ನ ಅಂಶಗಳನ್ನು ಮತ್ತು ವಿಶಿಷ್ಟ ಅಂಶಗಳನ್ನು ಅಧ್ಯಾಯ ಏಳರಲ್ಲಿ ಪಟ್ಟಿ ಮಾಡಲಾಗಿದೆ. ಅಧ್ಯಾಯ ಎಂಟರಲ್ಲಿ ಅಧ್ಯಯನದಲ್ಲಿ ಕಂಡುಕೊಂಡು ಹೊಸ ಅಂಶಗಳ ಕುರಿತು ಚರ್ಚಿಸಿದ್ದಾರೆ. ಅನುಬಂಧದಲ್ಲಿ ನೀಡಿ ಚೌಡಿಕೆ ಮೇಳದ ನಾಲ್ಕು ಪ್ರದರ್ಶನದ ಕೋಷ್ಠಕವು ಮಹತ್ವದ್ದಾಗಿದ್ದು, ಹೆಚ್ಚಿನ ಓದಿಗೆ ಅನುಕೂಲವಾಗಿದೆ. ಇದರಿಂದ ಪ್ರಸ್ತುತ ಕೃತಿಗೆ ಹೆಚ್ಚಿನ ಬೆಲೆ ಬಂದಿದೆ. ಅನುಬಂಧ ೨.೩.೪ ರಲ್ಲಿ ಹಾಡು, ಮತ್ತು ಕಥೆಗಳು, ಗೀತ ಮೇಳಗಳು ಮತ್ತು ನಿರೂಪಕರು ಮತ್ತು ಪರಾಮರ್ಶನ ಗ್ರಂಥಗಳ ವಿವರ ಒದಗಿಸಿದ್ದಾರೆ.

ಇದುವರೆಗೆ ನಡೆದ ಅಧ್ಯಯನಗಳಲ್ಲಿ ಗೀತ ಮೇಳಗಳ ಬಗೆಗೆ ಮಾಹಿತಿ ಲಭ್ಯವಿರಲಿಲ್ಲ. ಈ ಕೊರೆತೆಯನ್ನು ಈ ಕೃತಿ ತುಂಬಿದೆ. ಇದು ಉತ್ತರ ಕರ್ನಾಟಕದ ಗೀತ ಮೇಳಗಳ ಕುರಿತು ವ್ಯವಸ್ಥಿತವಾದ, ವಿಸ್ತೃತವಾದ, ವೈಜ್ಞಾನಿಕವಾದ ಅಧ್ಯಯನವಾಗಿದೆ. ಗೀತ ಮೇಳಗಳ ಬಗೆಗೆ ತಮ್ಮದೇ ಆದ ಹೊಸ ವಿಧಾನವನ್ನು ಅಳವಡಿಸಿ ಅಧ್ಯಯನಿಸಿದ್ದಾರೆ. ಇಲ್ಲಿಯ ಸಂಗ್ರಹಿತ ಮಾಹಿತಿ ಮತ್ತು ವಿಶ್ಲೇಷಣೆಗಳು ಸಂಶೋಧಕರ ಶ್ರಮ ಹಾಗೂ ಕ್ರಿಯಾಶೀಲತೆಯನ್ನು ಪ್ರತಿಬಿಂಬಿಸುತ್ತವೆ. ಸಂಗ್ರಹ ಯೋಗ್ಯವಾದ ಈ ಕೃತಿ ಜಾನಪದ ಕ್ಷೇತ್ರಕ್ಕೆ ಉತ್ತಮ ಸೇರ್ಪಡೆ.