ಈ ವಿಭಾಗದಲ್ಲಿ ಸಮೀಕ್ಷೆಗೆ ಒಳಗಾಗಿರುವ ಕೃತಿಗಳು ಭಾಷೆ, ಕೋಶ ರಚನೆ ಹಾಗೂ ಛಂದಸ್ಸು ಕ್ಷೇತ್ರಗಳಿಗೆ ಸಂಬಂಧಿಸಿವೆ. ಕಳೆದ ಹತ್ತು ವರ್ಷಗಳಿಂದ (೧೯೯೧ – ೨೦೦೦) ಈ ಕ್ಷೇತ್ರದ ಸಾಧನೆಗಳನ್ನು ಸ್ಥೂಲವಾಗಿ ಸಮೀಕ್ಷೆ ಮಾಡಲಾಗಿದೆ.

I

ಭಾಷಾಧ್ಯಯನ ಕ್ಷೇತ್ರದಲ್ಲಿ ಕನ್ನಡದಲ್ಲಿ ಈಚೆಗೆ ಸ್ವಲ್ಪ ಕೆಲಸಗಳಾಗುತ್ತಿವೆಯೆನ್ನಬಹುದು. ಕರ್ನಾಟಕ ಮತ್ತು ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಭಾಷಾವಿಜ್ಞಾನ ವಿಭಾಗಗಳಿರುವುದು, ಬೆಂಗಳೂರು ಮತ್ತು ಕನ್ನಡ ವಿಶ್ವವಿದ್ಯಾಲಯಗಳಲ್ಲಿ ಇದಕ್ಕೆ ಪ್ರೋತ್ಸಾಹವಿರುವುದು ಹಾಗೂ ಅನೇಕ ಕಡೆ ಕನ್ನಡ ವಿದ್ವಾಂಸರು ಇದರೆಡೆಗೆ ಆಕರ್ಷಿತರಾಗಿ ಬೇಸಿಗೆ ಶಾಲೆ, ಶಿಶಿರಶಾಲೆ ಮುಂತಾದವುಗಳಲ್ಲಿ ಪಾಲ್ಗೊಂಡಿರುವುದು ಪ್ರಾಯಶಃ ಇದಕ್ಕೆ ಕಾರಣಗಳಿರಬಹುದು. ತತ್ತ್ವ ಮತ್ತು ಸಿದ್ಧಾಂತಗಳನ್ನು ಅನುಲಕ್ಷಿಸಿ ಕನ್ನಡ ಭಾಷೆಯನ್ನು ಕುರಿತಂತೆ ಕೆಲಸಗಳು ಆಗಿವೆ.

ರಾಜೇಶ್ವರಿ ಮಹೇಶ್ವರಯ್ಯನವರ ‘ಕನ್ನಡ ಭಾಷಾ ಸ್ವರೂಪ’ ಕೆ. ಕೆಂಪೇಗೌಡರ ‘ಸಾಮಾನ್ಯ ಭಾಷಾವಿಜ್ಞಾನ’ ಡಿ.ಎನ್‌. ಶಂಕರಭಟ್‌ರ ‘ಭಾಷೆಯ ಬಗ್ಗೆ ನೀವೇನು ಬಲ್ಲಿರಿ?’ ಇವು ಭಾಷಾವಿಜ್ಞಾನದ ಸ್ವರೂಪ, ವ್ಯಾಪ್ತಿ, ಮಹತ್ವ ಮುಂತಾದ ಸಾಮಾನ್ಯ ತತ್ತ್ವಸಿದ್ಧಾಂತಗಳನ್ನು ತಿಳಿಸಿಕೊಡುತ್ತವೆ. ಈ ಎಲ್ಲ ಪುಸ್ತಕಗಳಿಗೆ ಇಂಗ್ಲಿಶಿನಲ್ಲಿ ಪ್ರಕಟವಾದ ಬ್ಲೂಮ್‌ಫೀಲ್ಡ್‌, ಹಾಕೆಟ್‌, ಗ್ಲಿಸನ್‌, ಪೈಕ್‌, ನೈಡಾ ಮುಂತಾದವರ ಬರೆಹಗಳೇ ಮುಖ್ಯ ಆಕರ. ಕನ್ನಡಕ್ಕನುಗುಣವಾಗಿ ಈ ಲೇಖಕರು ವಿಷಯ ನಿರೂಪಣೆ ಮಾಡಿರುವುದು ಉಚಿತವಾಗಿದೆ. ಇವುಗಳಲ್ಲಿ ಒಬ್ಬೊಬ್ಬರಾಗಿ ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಿ ಕಲೆ ಹಾಕಿರುವ ಸಾಮಗ್ರಿ ತುಂಬ ಉಪಯುಕ್ತವಾದುದು. ರಾಜೇಶ್ವರಿಯವರು ಕನ್ನಡ ಭಾಷಾಸಾಮಗ್ರಿಗಳನ್ನು ವರ್ಣನಾತ್ಮಕ ವಿಶ್ಲೇಷಣೆಗೆ ಒಳಪಡಿಸಿದ್ದರೆ, ಶಂಕರಭಟ್‌ರ ಬರೆಹ ಭಾಷಾಬಳಕೆಗೆ ಸಂಬಂಧಿಸಿದಂತೆ ಚಿಂತನಾ ಪ್ರಧಾನವಾಗಿದೆ.

ಭಾಷೆಯ ಪ್ರಭೇದಗಳನ್ನು ಕುರಿತು ಪ್ರಕೃತ ಲೇಖಕರ ಅವರ ‘ಭಾಷಾ ಕ್ಷೇತ್ರಕಾರ್ಯ’ ಕೃಷ್ಣ ಪರಮೇಶ್ವರ ಭಟ್ಟರ ‘ಕನ್ನಡ ತೆಲುಗು ದ್ವಿಭಾಷಿಕತೆಯ ಅಧ್ಯಯನ’ ಎಂ.ಜಿ. ವಾರಿಯವರ ‘ಹಳಗನ್ನಡ ವ್ಯಾಕರಣ ಮತ್ತು ಬಾದಾಮಿ ಉಪಭಾಷೆ’ ಇವು ಉಪಯುಕ್ತವಾಗಿವೆ. ಪ್ರಕೃತ ಲೇಖಕರು ಅವರು ಭಾಷೆ, ಸಾಹಿತ್ಯ ವಿದ್ಯಾರ್ಥಿಗಳನ್ನು, ಸಂಶೋಧಕರನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರಕಾರ್ಯದ ವಿಧಿ – ವಿಧಾನಗಳನ್ನು ನಿದರ್ಶನಗಳ ಮೂಲಕ ಸರಳವಾದ ಶೈಲಿಯಲ್ಲಿ ನಿರೂಪಿಸಿದ್ದಾರೆ. ಭಾಷಿಕರ ಭಾಷಾ ಮನೋವೃತ್ತಿಗಳನ್ನು ತಿಳಿದುಕೊಳ್ಳಲಿಕ್ಕೆ ನೆರವಾಗುವ ಥರ್ಟನ್‌ಪದ್ಧತಿ ಮತ್ತು ಲಿಕರ್ಟ್ ಪದ್ಧತಿಗಳನ್ನು ಮೊದಲಬಾರಿಗೆ ಭಾಷಾ ವಿದ್ವಾಂಸರ ಗಮನಕ್ಕೆ ತಂದಿದ್ದಾರೆ. ದ್ವಿಭಾಷಿಕತೆಯನ್ನು ಒಂದು ಶಾಸ್ತ್ರದ ಚೌಕಟ್ಟಿನಲ್ಲಿರಿಸಿ ಅಂತಹ ಭಾಷಾ ಪರಿಸರ ಹುಟ್ಟು ಹಾಕುವ ಸಾಮಾಜಿಕ, ಸಾಂಸ್ಕೃತಿಕ ಸಂಘರ್ಷಗಳ ಅಧ್ಯಯನ ಇಂದು ಪ್ರಸ್ತುತ. ಈ ದೃಷ್ಟಿಯಿಂದ ಕೃಷ್ಣಪರಮೇಶ್ವರ ಭಟ್ಟರು ಕೋಲಾರ ಪರಿಸರ ತೆಲುಗು ಕನ್ನಡದ ದ್ವಿಭಾಷಿಕ ಅಧ್ಯಯನವನ್ನು ನಡೆಸಿದ್ದಾರೆ. ವರ್ಣನಾತ್ಮಕ ಚೌಕಟ್ಟಿನಲ್ಲಿ ಇಲ್ಲಿ ವಿಶ್ಲೇಷಣೆ ನಡೆದರೂ ಮೊದಲೆರಡು ಅಧ್ಯಯಗಳಲ್ಲಿ ದ್ವಿಭಾಷಿಕತೆಯ ಸೈದ್ಧಾಂತಿಕ ಅಂಶಗಳು ಚರ್ಚಿತವಾಗಿವೆ. ವಾರಿಯವರ ಸಂಕಲನದಲ್ಲಿಯ ಆರು ಲೇಖನಗಳು ಬಾದಾಮಿ ಉಪಭಾಷೆಗೆ ಸಂಬಂಧ ಪಟ್ಟಿವೆ. ‘ಕಿಸಿ’ ಅರ್ಥ ಮತ್ತು ಪ್ರಯೋಗ, ‘ಜೀವದ ಸುತ್ತ ಮುತ್ತ ಕೆಲವು ನುಡಿಗಟ್ಟುಗಳು’ ಎಂಬ ಲೇಖನಗಳು ಮಾಹಿತಿ ಪ್ರಧಾನವಾಗಿದ್ದು ಸೌರಸ್ಯಕರವೂ ಆಗಿವೆ. ವಿಲ್ಯಂ ಮಾಡ್ತ, ಸೋಮಶೇಖರ ಗೌಡ, ಸಂಗಮೇಶ ಸವದತ್ತಿಮಠ ಮುಂತಾದವರು ಉಪಭಾಷೆ’ಗಳಿಗೆ ಸಂಬಂಧಿಸಿದಂತೆ ಕೆಲವು ಲೇಖನಗಳನ್ನು ಪ್ರಕಟಿಸಿದ್ದಾರೆ. ಆದರೆ ಈ ಎಲ್ಲ ವಿದ್ವಾಂಸರು ಭಾಷಾರಚನೆಗೆ ಒತ್ತು ಕೊಟ್ಟಂತೆ ಭಾಷೆಯ ಸಾಮಾಜಿಕ ಆಯಾಮಕ್ಕೆ ಒತ್ತಕೊಟ್ಟಿಲ್ಲದಿರುವುದು ಒಂದು ಸಣ್ಣ ಕೊರತೆಯೆಂದೇ ಹೇಳಬೇಕು.

ಕನ್ನಡ ಭಾಷೆಯ ಇತಿಹಾಸವನ್ನು ಕುರಿತು ಪ್ರಕಟವಾಗಿರುವ ಕೆಲವು ಬರೆಹಗಳು ಉಲ್ಲೇಖ ಯೋಗ್ಯವಾದುವು. ಬಿ. ರಾಮಚಂದ್ರರಾವ್‌ಅವರು ಇತ್ತೀಚಿನ ಭಾಷಾವೈಜ್ಞಾನಿಕ ಸಂಶೋಧನೆಗಳನ್ನು ಸಮನ್ವಯಿಸಿ ಭಾಷಾ ಬೆಳವಣಿಗೆಯ ನವೀಕರಣದ ನೆಲೆಯಲ್ಲಿ ‘ಕನ್ನಡ ಭಾಷೆಯ ಇತಿಹಾಸ’ ಎಂಬ ಕೃತಿಯನ್ನು ರಚಿಸಿದ್ದಾರೆ. ಸಾ.ಶಿ. ಮರುಳಯ್ಯ ಅವರು ಭಾಷೆ, ದ್ರಾವಿಡ ಭಾಷೆಗಳು, ಕರ್ನಾಟಕ: ನಾಡು ಮತ್ತು ನುಡಿ ಎಂಬ ಮೂರು ಅಧ್ಯಾಯಗಳಲ್ಲಿ ‘ಕನ್ನಡ ಭಾಷಾ ಚರಿತ್ರೆ’ಯ ಸ್ಥೂಲನೋಟವನ್ನು ಬಿಂಬಿಸಿದ್ದಾರೆ. ಎಂ.ಎಚ್‌. ಕೃಷ್ಣಯ್ಯನವರ ‘ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆ’ಯೂ ಇದೇ ಗುಂಪಿಗೆ ಸೇರಿದೆ. ಆದರೆ ಈ ಕೃತಿಗಳಲ್ಲಿ ಹೊಸ ಅಂಶಗಳಿಲ್ಲವೆಂದೇ ಹೇಳಬೇಕು. ಡಿ.ಎನ್‌. ಶಂಕರಭಟ್‌ರ ‘ಕನ್ನಡ ಭಾಷೆಯ ಕಲ್ಪಿತ ಚರಿತ್ರೆ’ ಈ ದಶಕದ ಗಮನಾರ್ಹ ಪುಸ್ತಕ. ಯಾವುದೇ ಭಾಷೆಯ ಪದಕೋಶ ಹಾಗೂ ವ್ಯಾಕರಣದ ರಚನೆಗಳನ್ನು ಕಾಲದ ದೃಷ್ಟಿಯಿಂದ ಘಟಕಗಳಾಗಿ ಒಡೆದು ಆ ಭಾಷೆಯ ಚರಿತ್ರೆ ನಿರೂಪಿಸುವುದು ಭಾಷಾಧ್ಯಯನದಲ್ಲಿ ಬೆಳೇದು ಬಂದ ಒಂದು ಮಾದರಿ. ಭಟ್‌ರ ಈ ಬರೆಹ ಆ ಮಾದರಿಯನ್ನು ವಿರಚನೆಗೊಳಿಸಿರುವುದು ಇಲ್ಲಿಯ ವಿಶಿಷ್ಟತೆ. ಕನ್ನಡ ಭಾಷೆಯ ಚರಿತ್ರೆಯನ್ನು ಎರಡು ನೆಲೆಗಳಿಂದ ಕಂಡು ಪ್ರತಿಯೊಂದಕ್ಕೂ ಬೇರೆಬೇರೆ ಮೂಲ ಭಾಷೆಗಳನ್ನು ಕಲ್ಪಿಸಿ ಆ ಮೂಲಕ ಭಾಷಾ ಚರಿತ್ರೆಯನ್ನು ವಿವರಿಸಲಾಗಿದೆ. ಇಲ್ಲಿ ಆಡುಮಾತನ್ನು ತಾತ್ವಿಕ ವಿವೇಚನೆಗೆ ಒಳಪಡಿಸಿ ಆ ಮೂಲಕ ಭಾಷೆಯ ಚರಿತ್ರೆಯನ್ನು ಕಲ್ಪಿಸಿದ್ದು ಕನ್ನಡಕ್ಕೆ ಹೊಸದು. ಹೀಗಾಗಿ ಈ ಗ್ರಂಥ ಕನ್ನಡ ಭಾಷಾಧ್ಯಯನಕ್ಕೆ ತಿರುವು ತರಬಲ್ಲ ಕೃತಿಯಾಗಿದೆ. ಸಿ. ಓಂಕಾರಪ್ಪನವರ ‘ಕುಮಾರವ್ಯಾಸ ಭಾರತ ಭಾಷಿಕ ಅಧ್ಯಯನ’ (ಪಿಎಚ್‌.ಡಿ ನಿಬಂಧ)ವು ವಿವರಣಾತ್ಮ ಭಾಷಾ ವಿಜ್ಞಾನದ ಕಕ್ಷೆಗೆ ಒಳಪಟ್ಟಿದ್ದರೂ ಕನ್ನಡ ಭಾಷೆಯ ಚಾರಿತ್ರಿಕ ಅಧ್ಯಯನದ ನೆಲೆಯಿಂದ ಉಪಯುಕ್ತ ಗ್ರಂಥ. ಮಧ್ಯಕಾಲೀನ ಕಾವ್ಯವೊಂದನ್ನು ಭಾಷಾವಿಜ್ಞಾನದ ದೃಷ್ಟಿಯಿಂದ ನೋಡುವ ಮೂಲಕ ಸಾಂಪ್ರದಾಯಕ ವ್ಯಾಕರಣ ವಿಧಾನವನ್ನು ಪ್ರಶ್ನಿಸುವ, ತುಲನೆ ಮಾಡುವ ಸಾಧ್ಯತೆಯನ್ನು ಹೊಂದಿದೆ. ಮಧ್ಯಕಾಲದ ರಚನೆಯನ್ನರಿಯಲು ಈ ಕೃತಿ ನೆರವಾಗುತ್ತದೆ. ಹಳಗನ್ನಡ ಮತ್ತು ಮರಾಠಿಗಳ ನಡುವೆ ಹಲವಾರು ರೂಪ ಸಾಮ್ಯಗಳನ್ನು ಹೆಕ್ಕಿ ತೆಗೆಯುವ ಯತ್ನ ರಂ.ಶಾ. ಲೋಕಾಪುರ ಅವರ ‘ಹಳಗನ್ನಡ ಮತ್ತು ಮರಾಠಿ’ ಕೃತಿಯಲ್ಲಿ ವಿವೇಚಿಸಲಾಗಿದೆ.

ಕನ್ನಡ ಭಾಷೆಯ ಸ್ವರೂಪವನ್ನು ಕುರಿತು ಪ್ರಕಟವಾಗಿರುವ ಕೆಲವು ಬರೆಹಗಳು ಉಲ್ಲೇಖನ ಯೋಗ್ಯವಾದವು. ವಿಲ್ಯಂ ಮಾಡ್ತ ಅವರು ಸಂಧಿ, ಸಮಾಸ, ವಾಕ್ಯ ಮುಂತಾದ ವ್ಯಾಕರಣ ವರ್ಗಗಳನ್ನು ಆಧುನಿಕ ಭಾಷಾವಿಜ್ಞಾನದ ನೆಲೆಯಲ್ಲಿ ‘ಕನ್ನಡ ವ್ಯಾಕರಣ ಸಮಸ್ಯೆಗಳು’ ಎಂಬ ಕೃತಿಯಲ್ಲಿ ಚರ್ಚಿಸಿದ್ದಾರೆ. ಎಚ್‌.ಎಸ್‌. ಬಿಳಿಗಿರಿ ಅವರ ‘ವರಸೆಗಳು’ ಕೃತಿಯ ೧೧ ಲೇಖನಗಳಲ್ಲಿ ಏಳು ಲೇಖನಗಳು ಭಾಷಾವಿಜ್ಞಾನಕ್ಕೆ ಸಂಬಂಧಿಸಿವೆ. ಕನ್ನಡದಲ್ಲಿ ಆಧುನಿಕ ಭಾಷಾವಿಜ್ಞಾನದ ನೀತಿ ನಿಯಮಗಳನ್ನು ಕರಾರುವಕ್ಕಾಗಿ ಅನ್ವಯಗೊಳಿಸಿ ಬರೆದವರಲ್ಲಿ ಬಿಳಿಗಿರಿ ಅವರು ಪ್ರಮುಖರು. ವರ್ಣನಾತ್ಮಕ ಭಾಷಾವಿಜ್ಞಾನದ ಅಧ್ಯಯನದ ಮಾದರಿಯನ್ನು ರೂಪಿಸಿದ ಈ ಗ್ರಂಥದ ಅತ್ಯಂತ ಮಹತ್ವದ ಲೇಖನವೆಂದರೆ ‘ವರ್ಣನಾತ್ಮಕ ವ್ಯಾಕರಣದ ಮೂಲ ತತ್ವಗಳು.’ ಈ ಲೇಖನ ಹಿಂದೊಮ್ಮೆ ಪ್ರಕಟವಾದರೂ ಅದಕ್ಕೆ ಐತಿಹಾಸಿಕ ಮಹತ್ವವನ್ನು ಕಲ್ಪಿಸಬೇಕಾಗಿದೆ. ಆದರಂತೆ ಗಮಕ ಸಮಾಸವು ಸಮಾಸವೇ? ಪ್ರಾಸಸ್ಥಾನದಲ್ಲಿ ಶಬ್ದವಿಕಾರ ಮುಂತಾದ ಲೇಖನಗಳು ಹೊಸಬಗೆಯ ವಿವೇಚನೆಯಿಂದ ಕೂಡಿವೆ.

ಭಾಷಾ ಬಳಕೆಯ ಹಲವು ವೈವಿಧ್ಯಗಳನ್ನು ಅಚ್ಚುಕಟ್ಟಾಗಿ, ಸರಳವಾಗಿ ಮತ್ತು ಸಮರ್ಪಕವಾಗಿ ನಿರೂಪಿಸುವ, ಕನ್ನಡ ಭಾಷೆಯ ಬದಲಾವಣೆಯನ್ನು ಸರಿಯಾಗಿ ಪ್ರತಿಬಿಂಬಿಸುವ, ಹೊಸಗನ್ನಡವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ದೃಷ್ಟಿಯಿಂದ ‘ಕನ್ನಡ ಶಬ್ದರಚನೆ’, ‘ಕನ್ನಡಕ್ಕೆ ಬೇಕು ಕನ್ನಡದೇ ವ್ಯಾಕರಣ’ ಎಂಬ ಕೃತಿಗಳನ್ನು ಡಿ.ಎನ್‌. ಶಂಕರಭಟ್‌ರು ರಚಿಸಿದ್ದಾರೆ. ಈವರೆಗೆ ಲಭ್ಯವಿರುವ ಸಂಸ್ಕೃತ ಮತ್ತು ಲ್ಯಾಟಿನ್‌ಮಾದರಿಯ ವ್ಯಾಕರಣಗಳು ಕನ್ನಡ ರಚನೆಯನ್ನು ಸರಿಯಾಗಿ ವಿವರಿಸುವುದಿಲ್ಲ. ಲಿಂಗ, ವಚನ, ಪದರಚನೆ ಮುಂತಾದ ವ್ಯಾಕರಣ ವರ್ಗಗಳಲ್ಲಿ ಕನ್ನಡಕ್ಕೆ ಅದರದ್ದೇ ಆದ ನಿಯಮಗಳಿವೆ. ಆ ನಿಯಮಗಳನ್ನು ಶಂಕರಭಟ್‌ರು ತಮ್ಮ ಕೃತಿಗಳಲ್ಲಿ ನಿರೂಪಿಸಿದ್ದಾರೆ. ಆ ಕೃತಿಗಳನ್ನು ಕುರಿತು ವ್ಯಾಪಕ ಚರ್ಚೆ ಆಗಬೇಕಾಗಗಿದೆ ಹಾಗೂ ಶಾಲಾ ಪಠ್ಯವಸ್ತುವಿನಲ್ಲಿ ಭಟ್‌ರ ವ್ಯಾಕರಣ ನಿಯಮಗಳನ್ನು ಅನ್ವಯಗೊಳಿಸಬೇಕಾಗಿದೆ. ಕನ್ನಡ ಭಾಷಾಧ್ಯಯನಕ್ಕೆ ಹೊಸ ಪರಿಭಾಷೆಯನ್ನು, ಆಕೃತಿಯನ್ನು ಕೊಟ್ಟಿರುವ ಇನ್ನೊಂದು ಮಹತ್ವದ ಕೃತಿ ಡಾ.ಎಸ್‌.ಎನ್‌.ಶ್ರೀಧರ ಅವರ ‘ಇಂದಿನ ಕನ್ನಡ ರಚನೆ: ಮತ್ತು ಬಳಕೆ’. ಆಧುನಿಕ ಭಾಷಾತತ್ತ್ವಗಳಿಗೆ ಕನ್ನಡದ ಸಾಮಗ್ರಿಯನ್ನು ಅನ್ವಯಿಸಿ, ನಿರೂಪಿಸಿದ ಕೃತಿಯಿದು. ಅತ್ಯಂತ ಆಧುನಿಕ ಅಧ್ಯಯನದ ಶಿಸ್ತನ್ನು ಅಳವಡಿಸಿಕೊಂಡು ಇಲ್ಲಿಯ ಆಲೋಚನೆ, ಬರವಣಿಗೆ ಸಾಗಿದೆ..ಸಾಂಪ್ರದಾಯಿಕ ವ್ಯಾಕರಣ ಹುಟ್ಟುಹಾಕಿದ ಅನೇಕ ಚಿಂತನೆಯ ಮಾದರಿಗಳನ್ನು ಪ್ರಶ್ನಿಸಿದೆ, ಒಡೆದಿದೆ. ಉದಾ. ‘ಕನ್ನಡದಲ್ಲಿ ಉಪಸರ್ಗಗಳು’ ನಮ್ಮ ಭಾಷಾಸಮುದಾಯದಲ್ಲಿ ಏರ್ಪಡುವ ಸಮಾಜೋ ಆರ್ಥಿಕ ಬದಲಾವಣೆಗಳಿಗೆ ಭಾಷೆ ಹೇಗೆ ಮೈಯೊಡ್ಡಿಕೊಳ್ಳುತ್ತದೆ ಅದಕ್ಕೆ ಪ್ರತಿಕ್ರಿಯೆಯಾಗಿ ಆಧುನೀಕರಣ, ಭಾಷಾ ಮಿಶ್ರಣ, ಭಾಷಾ ದ್ವಿಸ್ತರತೆ ಹಾಗೂ ಪ್ರಮಾಣೀಕರಣಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು ಇಲ್ಲಿಯ ಲೇಖನಗಳು ಚರ್ಚಿಸುತ್ತವೆ. ದ್ವಿಭಾಷಿಕತೆ ಹಾಗೂ ಬಹುಭಾಷಿಕತೆ ಗಳಂತಹ ಆಲೋಚನೆಗಳನ್ನು ವ್ಯಾಕರಣದ ನೆಲೆಯಿಂದ ಮಾತ್ರ ನೋಡದೆ ಮನೋಸಾಮಾಜಿಕ ನೆಲೆಯಿಂದ ಚರ್ಚಿಸುತ್ತಾರೆ. ಕನ್ನಡ ಭಾಷಾಧ್ಯಯನಕ್ಕೆ ಈ ಕೃತಿ ಹೊಸ ತಿರುವನ್ನು ನೀಡುತ್ತದೆ. ಕನ್ನಡ ವಿಶ್ವವಿದ್ಯಾಲಯದ ಕನ್ನಡ ಭಾಷಾಭಿವೃದ್ಧಿ ವಿಭಾಗದ ವಿಚಾರ ಸಂಕಿರಣಗಳ ಸಂಕಲನ ‘ಕನ್ನಡ ಭಾಷಾಭಿವೃದ್ಧಿ ಸಾಧನೆ ಮತ್ತು ಮುನ್ನೋಟ’ದಲ್ಲಿಯ ಭಾಷಾನೀತಿ, ಭಾಷಾಯೋಜನೆ ಹಾಗೂ ಕರ್ನಾಟಕದ ಭಾಷಾಧ್ಯಯನಕ್ಕೆ ಸಂಬಂಧಿಸಿದ ಐದು ಲೇಖನಗಳು ಮಾಹಿತಿ ಪ್ರಧಾನವಾಗಿವೆ. ಎಚ್‌.ಎಂ. ಮಹೇಶ್ವರಯ್ಯನವರ ‘ಭಾಷೆ ಮತ್ತು ಸೃಜನಶೀಲತೆ’ ಎಂಬ ಸಂಕಲನದ ಸಂಪ್ರಬಂಧಗಳು ಹೊಸ ಸಂಗತಿಗಳನ್ನು ನಿರೂಪಿಸುತ್ತವೆ. ಭಾಷೆಯ ರಚನೆ ಮತ್ತು ಬಳಕೆಗೆ ಸಂಬಂಧಿಸಿದ ಕೆ.ವಿ. ನಾರಾಯಣರ ‘ಭಾಷೆಯ ಸುತ್ತಮುತ್ತ’ ಒಂದು ಶ್ರೇಷ್ಠ ಕೃತಿಯಾಗಿ ನಿಲ್ಲುವುದರಲ್ಲಿ ಸಂದೇಹವಿಲ್ಲ.

ಕನ್ನಡ ಭಾಷೆಯನ್ನೀಗ ಹತ್ತಾರು ವಲಯಗಳಲ್ಲಿ ಬಳಸಿತೊಡಗಿದ್ದೇವೆ. ಅದು ಕನ್ನಡ ಭಾಷಾಭಿವೃದ್ಧಿಯ ಲಕ್ಷಣವೂ ಹೌದು. ತಂತ್ರಜ್ಞಾನದ ದಾಪುಗಾಲುಗಳೊಡನೆ ಕನ್ನಡ ಭಾಷೆ ಹೆಜ್ಜೆಯನ್ನಿಟ್ಟು ಸಾಗಬೇಕಾಗಿದೆ. ಹೀಗಾಗಿ ಕನ್ನಡದ ದಿನ ನಿತ್ಯಬಳಕೆಯಲ್ಲಿ ಆಧುನೀಕರಣ ಮತ್ತು ಪ್ರಮಾಣೀಕರಣ ಅತ್ಯಗತ್ಯವಾಗಿದೆ. ಈ ಅವಶ್ಯಕತೆಯನ್ನು ಪೂರೈಸಲು ಕನ್ನಡದ ವಿಶ್ವವಿದ್ಯಾಲಯವು ‘ಕನ್ನಡ ಶೈಲಿ ಕೈಪಿಡಿ’ಯನ್ನು ಸಿದ್ಧಪಡಿಸಿದೆ. ಅದಕ್ಕೆ The Chicago Style Manual ಮಾದರಿ. ಇದು ಕನ್ನಡದಲ್ಲಿ ಬರೆಯುವ, ಬರೆದುದನ್ನು ಮುದ್ರಿಸುವ ಹಾಗೂ ಓದುವ ಸಮುದಾಯಕ್ಕೆ ಅನುಕೂಲವಾಗುವ ಪರಾಮರ್ಶನ ಗ್ರಂಥ.

ಕನ್ನಡ ಭಾಷೆಯ ಸ್ವರೂಪವನ್ನರಿಯಲು ನೆರವಾಗುವ ಕೆಲವು ಸಂಪ್ರಬಂಧ ಸಂಕಲನಗಳು ಉಲ್ಲೇಖನ ಯೋಗ್ಯವಾದವು ಸಂಗಮೇಶ ಸವದತ್ತಿಮಠರ ‘ಭಾಷಾಲೇಖ’ದಲ್ಲಿ ಕನ್ನಡ ಭಾಷೆಯ ವಿವಿಧ ವಲಯಗಳಿಗೆ ಸಂಬಂಧಿಸಿದ ಸಂಪ್ರಬಂಧಗಳಿವೆ. ಕೆಲವು ಬರೆಹಗಳು ಉತ್ತರ ಕರ್ನಾಟಕದ ಭಾಷಾ ಪ್ರಭೇದಗಳನ್ನು ಕುರಿತು ವಿವರಣಾತ್ಮಕ ಸಮೀಕ್ಷೆಗೆ ಸಂಬಂಧಿಸಿದ್ದರೆ, ಧರ್ಮಾಮೃತ ಪ್ರಭುಲಿಂಗಲೀಲೆ, ವಚನಗಳ ಹಾಗೂ ಶಾಸನ ಮುಂತಾದ ಆಧುನಿಕ ಪೂರ್ವ ಕೃತಿಗಳ, ಗೋಕಾಕ, ಬೆಟಗೇರಿ, ಭೂಸನೂರಮಠರಂತಹ ಆಧುನಿಕ ಕೃತಿಕಾರರ ಕೃತಿಗಳ ವಿಶ್ಲೇಷಣೆ ಕೆಲವು ಬರೆಹಗಳಲ್ಲಿದೆ. ಅಂಕಿತನಾಮಗಳು, ಶಬ್ದನಿಷ್ಪತ್ತಿ, ಕೋಶರಚನೆಗೆ ಸಂಬಂಧಿಸಿದ ಬರೆಹಗಳೂ ಇಲ್ಲಿವೆ. ವ್ಯಾಪಕವಾದ ಅಧ್ಯಯನ ಹಾಗೂ ಕ್ಷೇತ್ರ ಕಾರ್ಯದ ನೆಲೆಯಲ್ಲಿ ರೂಪಗೊಂಡ ಇಲ್ಲಿಯ ಬರೆಹಗಳು ಕನ್ನಡ ಭಾಷಾಧ್ಯಯನ ಎಲ್ಲೆಯನ್ನು ವಿಸ್ತರಿಸುತ್ತವೆ.. ಪ್ರಕೃತ ಲೇಖಕರ ಸಂಪ್ರಬಂಧಗಳ ಸಂಕಲನ ‘ಶೋಧನ’ದಲ್ಲಿ ಕನ್ನಡ – ಮರಾಠಿ ದ್ವಿಭಾಷಿಕತೆ, ಕ್ಷೌರಿಕರ ವೃತ್ತಿ ಪದಕೋಶ, ಸಂಗ್ಯಾ ಬಾಳ್ಯಾ ಭಾಷಾಪ್ರಯೋಗ ಮುಂತಾದ ಏಳು ಲೇಖನಗಳು ಭಾಷಾಧ್ಯಯನಕ್ಕೆ ಸಂಬಂಧಿಸಿವೆ. ವ್ಯಾಪಕವಾದ ಮಾಹಿತಿಗಳು ಈ ಅಧ್ಯಯನದ ಕಕ್ಷೆಯೊಳಗೆ ಅರ್ಥಪೂರ್ಣವಾಗಿ ಬಳಕೆಗೊಂಡಿವೆ.

ಈ ದಶಕದಲ್ಲಿ ಭಾಷಾಸಾಮಗ್ರಿಯನ್ನು ಸಾಂಸ್ಕೃತಿಕ ಅಧ್ಯಯನಕ್ಕೆ ಬಳಸಿಕೊಳ್ಳುವ, ಭಾಷೆಯನ್ನು ಸಾಮಜಿಕ ಚೌಕಟ್ಟಿಗೆ ಒಳಪಡಿಸುವ ಅಧ್ಯಯನ ಪೂರ್ಣ ಲೇಖನಗಳು ಪ್ರಕಟವಾಗಿವೆ. ಡಾ. ಸೋಮಶೇಖರ ಗೌಡರ ‘ಭಾಷೆ – ರಚನೆ – ಬಳಕೆ’ ಎಂಬ ಸಂಪ್ರಬಂಧಗಳ ಸಂಕಲನ ಬೆಲೆಯುಳ್ಳದ್ದು. ಇದರಲ್ಲಿ ಸಾಮಾಜಿಕ ಭಾಷಾವಿಜ್ಞಾನದ, ದ್ವಿಭಾಷಿಕತೆ, ಲಿಪಿಸಂಸ್ಕ್ರರಣ, ದ್ವಿರೂಪತೆಗೆ ಸಂಬಂಧಿಸಿದ ಲೇಖನಗಳು ಸಾಮಾಜಿಕ ಭಾಷಾಧ್ಯಯನಕ್ಕೆ ಸಂಬಂಧಿಸಿದ್ದರೆ ಮಿಕ್ಕ ಲೇಖನಗಳು ಭಾಷೆಯ ಸ್ವರೂಪಕ್ಕೆ ಸಂಬಂಧಿಸಿವೆ. ಭಾಷಾಧ್ಯಯನದ ಹೊಸ ಸಾಧ್ಯತೆಯ ಮೂಲನೆಲೆಗಳನ್ನು ಅದರ ರಚನೆಯ ಚೌಕಟ್ಟುಗಳನ್ನು ಗುರುತಿಸುವ ಯತ್ನ ಇಲ್ಲಿ ಮಾಡಲಾಗಿದೆ. ಸಂಗಮೇಶ ಸವದತ್ತಿಮಠ ಅವರು ಸಂಪಾದಿಸಿದ ‘ಕನ್ನಡ ನಾಟಕಗಳ ಭಾಷೆ’ ನಾಟಕಗಳ ಭಾಷಾಧ್ಯಯನಕ್ಕೆ ನೆರವಾಗುವ ಮಹತ್ವದ ಗ್ರಂಥ. ದೂರದರ್ಶನ, ಬಾನುಲಿ, ಗೀತ ನಾಟಕ, ಕಲಂಪನಿ ನಾಟಕ ಹಾಗೂ ದೊಡ್ಡಾಟಗಳಲ್ಲಿ ಬಳಕೆಯಾದ ಭಾಷಾ ಸ್ವರೂಪವನ್ನು ಪರಿಚಯಾತ್ಮಕವಾಗಿ ವಿವಿಧ ವಿದ್ವಾಂಸರು ನಿರೂಪಿಸಿದ್ದಾರೆ. ಕನ್ನಡ ನಾಟಕಗಳ ಮೇಲೆ ಪರಿಸರ ಮತ್ತು ಪ್ರಭಾವನ್ನಾಧರಿಸಿ ದೇಶ್ಯ ಹಾಗೂ ಅನ್ಯದೇಶ್ಯಗಳ ಪ್ರಭಾವವನ್ನು ಕುರಿತು ಚಿಂತನೆ ನಡೆಯಬೇಕಾಗಿದೆ.

ಶಾಲಾ ವ್ಯಾಕರಣಕ್ಕೆ ಸಂಬಂಧಿಸಿದಂತೆ ಕೆಲವು ವ್ಯಾಕರಣ ಗ್ರಂಥಗಳು ಈ ದಶಕದಲ್ಲಿ ಪ್ರಕಟವಾಗಿವೆ. ಟಿ.ವಿ. ವೆಂಕಟಾಚಲಶಾಸ್ತ್ರೀ ಅವರ ‘ಹೊಸಗನ್ನಡ ವ್ಯಾಕರಣ’ ಮುಖ್ಯವಾದದ್ದು. ವರ್ಣಗಳನ್ನು ಮೊದಲುಗೊಂಡು ವಾಕ್ಯರಚನೆಯ ತನಕ ಎಲ್ಲ ವ್ಯಾಕರಣ ಪ್ರಕ್ರಿಯೆಗಳ ಸ್ವರೂಪವನ್ನು ಪರಿಚಯಿಸಲಾಗಿದೆ. ಇದರಲ್ಲಿ ಸಾಂಪ್ರದಾಯಿಕ ವಿವೇಚನೆಯ ಜೊತೆಗೆ ಭಾಷಾಶಾಸ್ತ್ರೀಯ ಸಂಗತಿಗಳು ಹಗುರಾಗಿ ಬೆರೆಸಿರುವುದು ಒಂದು ವಿಶೇಷ. ವ್ಯಾಕರಣ, ಭಾಷಾಭ್ಯಾಸ, ಛಂದಸ್ಸು, ಅಲಂಕಾರಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಆಯ್‌.ಎಸ್‌. ಅರಳಗುಪ್ಪಿ ಅವರ ‘ಸಮಗ್ರ ಹೊಸಗನ್ನಡ ವ್ಯಾಕರಣ’ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ. ಈ ದಶಕದಲ್ಲಿ ಕೆಲವು ಪ್ರೌಢ ವ್ಯಾಕರಣ ಕೃತಿಗಳೂ ರಚಿತವಾಗಿವೆ. ಉಪ್ಪಂಗಳ ರಾಮಭಟ್ಟರ ‘ಕರ್ನಾಟಕ ಶಬ್ದಾನುಶಾಸನ ವಿವೇಚನೆ’ ಎಂಬ ಪಿಎಚ್‌.ಡಿ. ನಿಬಂಧ ತುಂಬ ಮೌಲಿಕವಾಗಿದೆ. ಶಬ್ದಾನುಶಾಸನದ ಸೂತ್ರಗಳನ್ನು ಹೇಳಿ ಅದರ ವೃತ್ತಿಯನ್ನು ಸರಳಗನ್ನಡದಲ್ಲಿ ಅನುವಾದಿಸಿ, ಸಂವಾದಿಯಾಗಿ ಶಬ್ದಮಣಿದರ್ಪಣ ಹಾಗೂ ಮತ್ತಿತರ ವ್ಯಾಕರಣ ಸೂತ್ರಗಳನ್ನು ಉದ್ಧರಿಸಿ ಭಾಷಾಶಾಸ್ತ್ರೀಯ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ತೆಕ್ಕುಂಜ ಗೋಪಾಲ ಕೃಷ್ಣಭಟ್ಟರ ‘ಕೇಶಿರಾಜ ದರ್ಪಣ’ ಎಂಬುದು ಶಬ್ದಮಣಿದರ್ಪಣದ ವ್ಯಾಖ್ಯಾನ ಕೃತಿಯಾಗಿದೆ. ಪ್ರಸ್ತುತ ವ್ಯಾಖ್ಯಾನದಲ್ಲಿ ಸೂತ್ರ ಸಂಖ್ಯಾನು ಕ್ರಮದಿಂದ ವ್ಯಾಖ್ಯಾನ ಮಾಡುತ್ತ ಹೋಗಲಾಗಿದೆ. ಮೊದಲಿಗೆ ಸೂತ್ರವನ್ನು ಅನಂತರ ವೃತ್ತಿಯನ್ನು ಉದ್ಧರಿಸಲಾಗಿದೆ. ಅನಂತರ ಸೂತ್ರದ ವಿವರಣೆಯನ್ನು ಅವಶ್ಯವಿರುವ ಉದಾಹರಣೆಗಳ ಮೂಲಕ ನಿರೂಪಿಸಲಾಗಿದೆ. ಕೆಲವು ಸೂತ್ರಗಳನ್ನು ಭಾಷಾಶಾಸ್ತ್ರೀಯ ನೆಲೆಯಲ್ಲಿ ಚರ್ಚಿಸಲಾಗಿದೆ. ಬಿ.ಬಿ. ಮಹೀದಾಸ್‌ರ ‘ಕನ್ನಡ ವ್ಯಾಕರಣಗಳ ಹೊಸ ಸಮೀಕ್ಷೆ ಮತ್ತು ಇತರ ಪ್ರಬಂಧಗಳು’ ಎಂಬ ಸಂಕಲನದಲ್ಲಿ ಎರಡು ಲೇಖನಗಳು ಮಿಶನರಿ ಪಾದ್ರಿಗಳ ವ್ಯಾಕರಣ ಬರೆಹಗಳ ಸಮೀಕ್ಷೆಗೆ ಸಂಬಂಧಿಸಿವೆ. ಎಂ.ಜಿ. ವಾರಿಯವರ ‘ಹಳಗನ್ನಡ ವ್ಯಾಕರಣ ಮತ್ತು ಬಾದಾಮಿ ಉಪಭಾಷೆ’ ಎಂಬ ಲೇಖನಗಳ ಸಂಕಲನದಲ್ಲಿ ಹದಿಮೂರು ಲೇಖನಗಳು ಶಬ್ದಮಣಿದರ್ಪಣವನ್ನು ಕೇಂದ್ರವಾಗಿಟ್ಟುಕೊಂಡು ಮಹಾಪ್ರಾಣ, ಸಂಧಿವಿಕಲ್ಪ, ಗಳ್‌, ಆರ್ ಪ್ರತ್ಯಯ, ಲಿಂಗ, ವಚನ ವಿವೇಚನೆಗೆ ಸಂಬಂಧಿಸಿವೆ. ಆದರೆ ಈ ಟಿಪ್ಪಣಿಗಳಲ್ಲಿ ಹೊಸ ಅಂಶಗಳಿಲ್ಲದಿರುವುದು ಬಹು ದೊಡ್ಡ ಕೊರತೆ ಎಂದೇ ಹೇಳಬೇಕಾಗಿದೆ.

ಆನ್ವಯಿಕ ಭಾಷಾಧ್ಯಯನದ ಕಕ್ಷೆಯಲ್ಲಿ ಬರುವ ‘ಶೈಲಿಶಾಸ್ತ್ರ’ ಈಚೆಗೆ ಆಕರ್ಷಕ ಕ್ಷೇತ್ರಗಳಲ್ಲಿ ಒಂದಾಗಿದೆ. ಕೆ.ವಿ. ನಾರಾಯಣರ ‘ಶೈಲಿಶಾಸ್ತ್ರ’ದಲ್ಲಿ ಹೊಸಮುಖದ ವಿವೇಚನೆ ಇದೆ. ಕುವೆಂಪು ಹಾಗೂ ಬೇಂದ್ರೆಯವರ ಕಾವ್ಯ ಭಾಷೆ, ಶೈಲಿಯ ಹಲವು ಮುಖಗಳು ಪರಿಶೀಲನೆಯಾದಂತೆ ಇತರ ಕವಿಗಳ ಕಾವ್ಯ ಭಾಷೆಯ ಪರಿಶೀಲನೆ ಆಗಬೇಕಾಗಿದೆ. ಡಾ. ಲಕ್ಷ್ಮೀನಾರಾಯಣ ಆರೋರ ಅವರ ‘ಭಾಷಾಂತರ ಸೌರಭ’ ಭಾಷಾಂತರವನ್ನು ಆನ್ವಯಿಕ ಭಾಷವಿಜ್ಞಾನದ ನೆಲೆಯಿಂದ ಪರಿಭಾವಿಸುವ ಯಶಸ್ವೀ ಮಾದರಿಯನ್ನು ನೀಡಿದ್ದಾರೆ. ಭಾಷಾಧ್ಯಯನ ಕ್ಷೇತ್ರದಲ್ಲಿ ನಿರ್ಲಕ್ಷಿತ ಕ್ಷೇತ್ರವೆಂದರೆ ಭಾಷಾ ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ್ದು. ಭಾಷಾ ಬೋಧನೆಯ ತಂತ್ರ ಮತ್ತು ಕೌಶಲ್ಯಗಳನ್ನು ಪರಿಚಯ ಮಾಡಿಕೊಡುವ ಬರೆಹಗಳನ್ನು ಕೆಲವರು ಪ್ರಕಟಿಸಿದ್ದಾರೆ. ಕೆ.ವಿ. ನಾರಾಯಣರ ‘ಭಾಷೆಯ ಸುತ್ತ ಮುತ್ತ’ದ ಕಲಿಕೆ ಭಾಗದ ಟಿಪ್ಪಣಿಗಳಲ್ಲಿ ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಓಬಳೇಶ ಘಟ್ಟಿ, ಮಹಾಬಳೇಶ್ವರರಾವ್‌ಮುಂತಾದವರು ಪ್ರಶಿಕ್ಷಕರಿಗೆ ಅನ್ವಯವಾಗುವ ಬರೆಹಗಳನ್ನು ಬರೆದಿದ್ದಾರೆ.. ಆದರೂ ಈ ಕ್ಷೇತ್ರದಲ್ಲಿ ನಿರೀಕ್ಷಿತ ಕೆಲಸವಾಗಿಲ್ಲವೆಂದೇ ಹೇಳಬೇಕಾಗಿದೆ.

ಕನ್ನಡದಲ್ಲಿ ಈವರೆಗೆ ಈ ಕ್ಷೇತ್ರದಲ್ಲಿ ವರ್ಣನಾತ್ಮಕ, ಐತಿಹಾಸಿಕ ಮತ್ತು ತೌಲನಿಕ ಭಾಷಾಧ್ಯಯನ ಕ್ಷೇತ್ರಗಳಲ್ಲಿ ಕೆಲಸ ಆಗಿದೆ. ಸಾಮಾಜಿಕ, ಮನೋಭಾಷಾವಿಜ್ಞಾನ, ಭಾಷಾ ಬೋಧನೆ ಮತ್ತು ಕಲಿಕೆ, ಭಾಷಾಯೋಜನೆ ಮುಂತಾದ ಕ್ಷೇತ್ರಗಳಲ್ಲಿ ಆಗಿರುವ ಕೆಲಸ ಕಡಿಮೆ. ಭಾಷೆಯ ಪ್ರಭೇದಗಳ ಸಮಗ್ರ ಪರಿವೀಕ್ಷಣೆ ಆಗಬೇಕಾಗಿದೆ. ಪ್ರಾಚೀನ ಕಾವ್ಯಗಳಂತೆ ನಡುಗನ್ನಡ, ಹೊಸಗನ್ನಡ ಕೃತಿಗಳ ಸ್ವರೂಪವನ್ನು ಗುರುತಿಸಬೇಕಾಗಿದೆ. ಕನ್ನಡ ಮತ್ತು ನೆರೆಯ ಭಾಷೆಗಳ ಕೊಡುಕೊಳ್ಳುವಿಕೆಗಳ ವಿಶ್ಲೇಷಣೆ ಆಗಬೇಕಾಗಿದೆ.

II

ಭಾಷೆಯ ಬೆಳವಣಿಗೆಯಲ್ಲಿ ಕೋಶಗಳು ಪ್ರಮುಖ ಪಾತ್ರವಹಿಸುತ್ತವೆ. ಶಬ್ದಗಳ ಮೂಲವನ್ನು ಶೋಧಿಸಿ ಅವುಗಳ ಶಾಸ್ತ್ರೀಯ ನಿರೂಪಣೆಯನ್ನು ಅವು ಮಾಡಿಕೊಡುತ್ತವೆ. ಆನ್ವಯಿಕ ಭಾಷಾ ವಿಜ್ಞಾನದಲ್ಲಿ ‘ನಿಘಂಟುರಚನಾ ಶಾಸ್ತ್ರ’ ಎಂಬ ಪ್ರತ್ಯೇಕ ಶಾಖೆ ಆರಂಭವಾಗಿದೆ.

ಕನ್ನಡದಲ್ಲಿ ನಿಘಂಟು ರಚನೆಯ ಕ್ಷೇತ್ರ ಇತರ ಶಾಸ್ತ್ರ ಕ್ಷೇತ್ರಗಳಿಗೆ ಹೋಲಿಸಿದಾಗ ಅಷ್ಟೇನೂ ಸಂಪದ್ಯುಕ್ತವಾಗಿಲ್ಲವೆಂದೇ ಹೇಳಬೇಕು. ಇತರ ಕ್ಷೇತ್ರಗಳೊಂದಿಗೆ ಹೋಲಿಸಿದಾಗ ಇಲ್ಲಿ ಕೆಲಸ ಮಾಡಿರುವ, ಮಾಡಲು ತೊಡಗಿರುವ ಜನ ಕಡಿಮೆಯೇ. ಆಗಿರುವ ಕೆಲಸವೂ ವೈವಿದ್ಯ ರಹಿತವಾಗಿದ್ದರೂ ಮೊದಲು ಗುದ್ದಲಿಯೇಟೇ ಬೀಳದ ನೆಲದ ತುಣುಕುಗಳು ಹಲವು ಇಲ್ಲಿ ಉಳಿದುಕೊಂಡಿವೆಯಾದರೂ ಆಗಿರುವ ಅಲ್ಪಪ್ರಮಾಣದ ಕೆಲಸ ಅರೆಕೊರೆಗಳೊಂದಿಗೆ ತೃಪ್ತಿಯನ್ನುಂಟು ಮಾಡುವಷ್ಟು ಸಕ್ರಮವೂ ಶಾಸ್ತ್ರಶುದ್ಧವೂ ಆಗಿದೆಯೆಂಬುದು ನೆಮ್ಮದಿಯ ಸಂಗತಿ. ಕನ್ನಡದಲ್ಲಿ ಬಗೆಬಗೆಯ ಕೋಶಗಳಿವೆಯಾದರೂ ಅವುಗಳ ರಚನಾ ವಿಧಾನವನ್ನು ತಿಳಿಸುವ ಬರೆಹಗಳು ಕಡಿಮೆ. ಜಿ.ವೆಂಕಟಸುಬ್ಬಯ್ಯನವರ ‘ಕನ್ನಡ ನಿಘಂಟುಶಾಸ್ತ್ರ ಪರಿಚಯ’ ಕೋಶ ರಚನೆಯ ವಿಧಾನಗಳನ್ನು ತಿಳಿಸುವ ಮೊದಲ ಪ್ರಯತ್ನವಾದುದರಿಂದ ಅದರಲ್ಲಿ ವಿವರಗಳ ಅಭಾವ, ಚಾರಿತ್ರಿಕಾಂಶಗಳ ಕೊರತೆ, ತಮ್ಮ ಸ್ವಂತ ಅನುಭವಗಳನ್ನು ಹೇಳಿರುವುದು ಮುಂತಾದ ಅರೆಕೊರೆಗಳಿದ್ದರೂ ಐತಿಹಾಸಿಕವಾಗಿ ಅದು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇಂತಹದೊಂದು ಪುಸ್ತಕ ಬಂದಮೇಳೂ ನವೀನವಾಗಿ ಆಲೋಚನೆ ಮಾಡಬಹುದೆಂಬುದಕ್ಕೆ ವಿಲ್ಯಂ ಮಾಡ್ತ ಮತ್ತು ಆರ್.ವೈ. ಕುಲಕರ್ಣಿ ಅವರು ಜತೆಸೇರಿ ಬರೆದ ‘ನಿಘಂಟು ರಚನಾವಿಜ್ಞಾನ’ ಎಂಬುದು ಉತ್ತಮ ನಿದರ್ಶನ. ಅದರಲ್ಲಿಯ ಆರಂಭದ ಮೂರು ಲೇಖನಗಳಲ್ಲಿ ನಿಘಂಟುವಿನ ಸ್ವರೂಪ ಇತಿಹಾಸ ಹಾಗೂ ನಿಘಂಟುರಚನೆಯ ತಾತ್ವಿಕಾಂಶಗಳ ಬಗ್ಗೆ ವಿವೇಚನೆಯಿದ್ದರೆ ಮಿಕ್ಕ ಮೂರು ಲೇಖನಗಳಲ್ಲಿ ನಿಘಂಟು ರಚನೆಯ ತತ್ವಗಳನ್ನು ವೃತ್ತಿಪದ ಕೋಶಗಳಿಗೆ ಅನ್ವಯಿಸಿ ನಿರೂಪಿಸಿದ್ದಾರೆ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರು ಪ್ರಾಚ ಈನ ಮತ್ತು ಅವಾರ್ಚೀನ ಕೋಶ ರಚನೆಗೆ ಸಂಬಂಧಿಸಿದಂತೆ ಏಳು ಲೇಖನಗಳನ್ನು ಬರೆದಿದ್ದಾರೆ. ಅವು ‘ಶಾಸ್ತ್ರೀಯ ಸಂಪುಟ ೧’ರಲ್ಲಿ ಸಂಕಲಿತವಾಗಿವೆ.

ಕೆ.ವಿ. ನಾರಾಯಣರ ‘ಭಾಷೆಯ ಸುತ್ತಮುತ್ತ’ ಒಂದು ಬೆಲೆಯುಳ್ಳ ಪುಸ್ತಕ. ಭಾಷಾಧ್ಯಯನಕ್ಕೆ ಸಂಬಂಧಿಸಿದ ಕೃತಿಯಿದು. ಅದರಲ್ಲಿಯ ಪದಕೋಶ ಭಾಗ ಕೋಶಾಧ್ಯಯನ ಕ್ಷೇತ್ರಕ್ಕೆ ಗಣ್ಯ ಕೊಡುಗೆಯಾಗಿದೆ. ಅದರಲ್ಲಿ ನಾರಾಯಣರು ಮೊದಲ ಬಾರಿಗೆ ಆಧುನಿಕ ಕೋಶರಚನೆಗೆ ಕೆಲವು ಪರಿಭಾಷೆಗಳನ್ನು, ಪರಿಕಲ್ಪನೆಗಳನ್ನು ಒದಗಿಸಿಕೊಟ್ಟಿದ್ದಾರೆ. ಪದಕೋಶದಲ್ಲಿ ಒಳಚಲನೆ, ಕೋಶೀಯ – ಕೋಶೋತ್ತರ ಮುಂತಾದುವು. ಕನ್ನಡ ನಿಘಂಟು ರಚನೆಯನ್ನು ಮರುಪರಿಶೀಲನೆಗೆ ಒಳಪಡಿಸುವ, ಪಾರಂಪರಿಕ ಅಧ್ಯಯನ ಶಿಸ್ತನ್ನು ಒಡೆಯುವ ‘ಹೊಸಗನ್ನಡಕ್ಕೆ ಒಂದು ಹೊಸನಿಘಂಟು’ ಎಂಬುದು ಮೌಲಿಕ ಬರೆಹ. ಕೋಶರಚನಾ ವಿಧಾನದ ಬಗೆಗೆ ಅಧ್ಯಯನ ಮಾಡುವವರಿಗೆ ನಾರಾಯಣರ ಈ ಬರೆಹಗಳು ಮಾದರಿಯಾಗಿವೆ. ಪ್ರಕೃತ ಲೇಖಕರ ಪಿಹೆಚ್‌. ಡಿ. ನಿಬಂಧ ‘ಮಿಶನರಿಗಳ ದ್ವಿಭಾಷಿಕ ನಿಘಂಟುಗಳು – ತೌಲನಿಕ ಅಧ್ಯಯನ’ವು ಪ್ರಕಟವಾಗಬೇಕಾಗಿದೆ.

ಈ ದಶಕಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ಸಂಪುಟಗಳು (ಆರ ರಿಂದ ಎಂಟು) ಹಾಗೂ ತುಳು ನಿಘಂಟು ಸಂಪುಟಗಳು ಮಹತ್ವದ ಕೃತಿಗಳು. ಕ.ಸಾ.ಪ ಪ್ರಕಟಿಸಿದ ಕನ್ನಡ ನಿಘಂಟಿನ ಎಂಟನೆಯ ಸಂಪುಟದೊಂದಿಗೆ ನಮ್ಮ ಹಿರಿಯರು ೧೯೪೪ರಲ್ಲಿ ಕಂಡ ಕನ್ನಡ – ಕನ್ನಡ ನಿಘಂಟಿನ ಎಂಟನೆಯ ಸಂಪುಟ ರಚನೆಯ ಕನಸು ಸಾಕಾರಗೊಂಡಿತು. ಭಾಷಾ ಬೆಳವಣಿಗೆಯ ಚಾರಿತ್ರಿಕ ತತ್ತ್ವವನ್ನು ಬಳಸಿಕೊಂಡು ದೊರೆತ ಎಲ್ಲ ಆಕರ ಸಾಮಗ್ರಿಗಳನ್ನು ತೆಕ್ಕೆಗೆ ತಂದುಕೊಂಡು ವ್ಯುತ್ಪತ್ತಿ ಹಾಗೂ ಜ್ಞಾತಿ ಪದಗಳನ್ನು ಈ ನಿಘಂಟು ಗುರುತಿಸಿದೆ. ಕನ್ನಡ – ಕನ್ನಡ ಬೃಹನ್ನಿಘಂಟು ಕನ್ನಡ ವಿದ್ವತ್ವ್ ಪ್ರಪಂಚದ ಮಹತ್ವದ ಸಾಧನೆ. ಈ ನಿಘಂಟು ಮುಂದೆ ರಚಿಸಬಹುದಾದ ಹಲವಾರು ಬಗೆಯ ನಿಘಂಟುಗಳಿಗೆ ಬೀಜಗಳನ್ನು ತನ್ನಲ್ಲಿ ಹುದುಗಿಸಿಕೊಂಡಿದೆ. ಇದೇ ಸಂದರ್ಭದಲ್ಲಿ ಬಂದಿರುವ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹೊರತಂದಿರುವ ‘ತುಳುನಿಘಂಟು’ ಆಧುನಿಕ ಭಾರತೀಯ ಭಾಷೆಗಳಲ್ಲೇ ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ನಿಘಂಟುಗಳ ಸರಣಿ. ಆರು ಸಂಪುಟಗಳಲ್ಲಿ ಪ್ರಕಟವಾಗಿವೆ. ಪ್ರಸ್ತುತ ನಿಘಂಟು ತುಳು ಭಾಷೆಯ ಎಲ್ಲ ಪ್ರಾದೇಶಿಕ, ಸಾಮಾಜಿಕ ವೈಲಕ್ಷಣ್ಯಗಳನ್ನು ಕ್ಷೇತ್ರಾಧರಿತ ಮಾಹಿತಿಗಳಿಂದ ಖಚಿತಗೊಳಿಸಿಕೊಂಡಿದೆ. ಇದು ತುಳು ಪ್ರದೇಶದ ಸಾಂಸ್ಕೃತಿಕ ನಿಘಂಟಾಗಿದೆ. ಇದು ತುಳು ಕನ್ನಡ ಇಂಗ್ಲಿಷ್‌ನಲ್ಲಿ ರಚಿತವಾದ ತ್ರಿಭಾಷಾನಿಘಂಟಾಗಿದೆ.

ನಿಘಂಟುಗಳ ಹಲವು ಪ್ರಕಾರಗಳಲ್ಲಿ ಪದಪ್ರಯೋಗ ಕೋಶಗಳು [ಪ್ರಕೋಶ] ಮಹತ್ವದ್ದಾಗಿವೆ. ಕವಿ ಕಾವ್ಯಗಳ, ರಸಸ್ಥಾನಗಳ ಆಸ್ವಾದನೆಗೆ ಆ ಕವಿ ಬಳಸಿದ ಪದಗಳು ಹಾಗೂ ಅವುಗಳ ಬಳಕೆಯ ಸಂದರ್ಭ ಬಹುಮುಖ್ಯ ಪಾತ್ರವಹಿಸುತ್ತವೆ. ಜಿ. ವೆಂಕಟಸುಬ್ಬಯ್ಯನವರು ಮುದ್ದಣ್ಣನ ಕೃತಿಗಳನ್ನು ಕೇಂದ್ರವಾಗಿಟ್ಟುಕೊಂಡು ‘ಮುದ್ದಣ್ಣನ ಪದ ಪ್ರಯೋಗ ಕೋಶ’ವನ್ನು ಸಿದ್ಧಪಡಿಸಿದ್ದಾರೆ. ಮುದ್ದಣನ ಕೃತಿಗಳ ಅಧ್ಯಯನಕ್ಕೆ ಅದು ತುಂಬ ನೆರವಾಗುತ್ತದೆ. ಇದೇ ಲೇಖಕರಿಂದ ರಚಿತವಾದ ‘ಇಗೋಕನ್ನಡ’ ಭಾಷಾಬಳಕೆಯ ಸಾಮಾಜಿಕ ಆಯಾಮಕ್ಕೆ ಸಂಬಂಧಿಸಿದ ಕೋಶವಾಗಿದೆ. ಒಂದು ಭಾಷೆಗೆ ಅನ್ಯ ಭಾಷೆಗಳಿಂದ ಎರವಲಾಗಿ ಬಂದು ಬಳಕೆಯಾಗುವ ಪದಗಳ ಕುರಿತ ವ್ಯಾಸಂಗವು ಭಾಷಾ ವಿಜ್ಞಾನದ ಬಹುಮುಖ್ಯ ಅಂಗವಾಗಿದೆ. ಇದು ಭಾಷೆಯ ದೃಷ್ಟಿಯಿಂದ ಮಾತ್ರವಲ್ಲದೆ ಸಂಸ್ಕೃತಿಯ ದೃಷ್ಟಿಯಿಂದಲೂ ಪ್ರಧಾನವಾಗಿದೆ. ಕನ್ನಡಕ್ಕೆ ಅರಬ್ಬಿ, ಪಾರಸಿ, ಹಿಂದಿ, ಉರ್ದು, ಮರಾಠಿ ಮತ್ತು ಇಂಗ್ಲಿಶ್‌ಭಾಷೆಗಳಿಂದ ಬಂದಿರುವ ಎರವಲು ಶಬ್ದಗಳನ್ನು ಕಲೆಹಾಕಿದ ‘ಎರವಲು ಪದಕೋಶ’ ವನ್ನು ಜಿ.ವೆಂ. ಅವರು ಸಿದ್ಧಪಡಿಸಿದ್ದಾರೆ.

ವೃತ್ತಿಪದಗಳು ಆಯಾ ಜನಾಂಗದ ಸಾಮಾಜಿಕ, ಸಾಂಸ್ಕೃತಿಕ ಅಧ್ಯಯನಕ್ಕೆ ಸಂಬಂಧಿಸಿವೆ. ಈ ದಶಕದಲ್ಲಿ ಅನೇಕ ವೃತ್ತಿ ಪದಕೋಶಗಳು ಸಿದ್ಧವಾಗಿವೆ. ಪ್ರಕೃತ ಲೇಖಕರ ‘ಕುಂಬಾರ ವೃತ್ತಿ ಪದಕೋಶ ‘ಬಡಿಗ ವೃತ್ತಿಪದ ಮಂಜರಿ’ ಬೆಳಗಾವಿ ಜಿಲ್ಲೆಯನ್ನು ಕೇಂದ್ರವಾಗಿಟ್ಟುಕೊಂಡು ಕುಂಬಾರ, ಬಡಿಗರ ವೃತ್ತಿಪದಗಳನ್ನು ಕಲೆಹಾಕಿ ಸಿದ್ಧಪಡಿಸಿದ್ದಾರೆ. ಇವು ಕನ್ನಡದಲ್ಲಿ ಪ್ರಕಟವಾದ ಮೊದಲ ವೃತ್ತಪದ ಕೋಶಗಳಾಗಿವೆ. ಕನ್ನಡ ವಿಶ್ವವಿದ್ಯಾಲಯ ಕರ್ನಾಟಕ ವೃತ್ತಿ ಪದ ಮಂಜರಿಮಾಲೆಯ ಅಡಿಯಲ್ಲಿ ಕರ್ನಾಟಕವನ್ನು ಕೇಂದ್ರವಾಗಿಟ್ಟುಕೊಂಡು ಸಿದ್ದಪಡಿಸಿದ ಕೆ.ವಿ. ನಾರಾಯಣ ಮತ್ತು ಇತರರು ‘ಕೃಷಿ ಪದಕೋಶ’, ಡಿ. ಪಾಂಡುರಂಗಬಾಬು ಅವರು ‘ಪಾಂಚಾಳ ವೃತ್ತಿ ಪದಕೋಶ’, ಸಾಂಬಮೂರ್ತಿ ಅವರು ‘ನೇಕಾರ ವೃತ್ತಿ ಪದಕೋಶ’, ಅಶೋಕಕುಮಾರ ರಂಜೇರೆಯವರು ಗುಡಿಗಾರ, ಮೇದಾರ, ಕೋರಚ ವೃತ್ತಿಯನ್ನೊಳಗೊಂಡ ‘ವಿವಿಧ ವೃತ್ತಿ ಪದಕೋಶ’. ಎಸ್‌.ಎಸ್‌. ಅಂಗಡಿ ಅವರು ಗಾಣಿಗ, ಡೋಹರ, ಕುಂಬಾರ, ಕ್ಷೌರಿಕ, ಚಮ್ಮಾರ, ಹೂಗಾರ ವೃತ್ತಿಯನ್ನೊಳಗೊಂಡ ‘ಸಂಕೀರ್ಣ ವೃತ್ತಿ ಪದಕೋಶ’ವನ್ನು ಸಿದ್ಧಪಡಿಸಿದ್ದಾರೆ. ಪ್ರತಿಯೊಂದು ವೃತ್ತಿ ಪದಕೋಶದಲ್ಲಿಯೂ ಅರ್ಥಸ್ಪಷ್ಟತೆಗಾಗಿ ರೇಖಾಚಿತ್ರಗಳಿರುವುದು ಗಮನಾರ್ಹ.

ಕೇಶಿರಾಜ ತನ್ನ ಸಮಕಾಲೀನ ಕನ್ನಡವನ್ನು ಗಮನಿಸಿ ಧಾತು ಪ್ರಕರಣವನ್ನು ರೂಪಿಸಿದ. ಇದೂ ಒಳಗೊಂಡಂತೆ ಕನ್ನಡದ ಒಂದು ಸಮಗ್ರ ಧಾತು ಕೋಶದ ರಚನೆ ಬಹುದಿನಗಳ ಅವಶ್ಯಕತೆ ಎನಿಸಿದ್ದಿತು. ಪ್ರಕೃತ ಲೇಖಕರ ‘ಕನ್ನಡ ಕ್ರಿಯಾರೂಪಗಳು’ ಎಂಬ ಕೃತಿ ಆ ಕೊರತೆಯನ್ನು ಹೋಗಲಾಡಿಸಿದೆ. ಸಾಂಬಮೂರ್ತಿ ಅವರು ಕನ್ನಡದಲ್ಲಿ ಬಳಕೆಯಲ್ಲಿರುವ ನಿಷೇದ ಪದಗಳ ಸ್ವರೂಪವನ್ನು ತಿಳಿಸುವ ‘ನಿಷೇಧ ಪದಕೋಶ’ವನ್ನು ರಚಿಸಿದ್ದಾರೆ. ಭಾಷೆಯ ಸಾಮಾಜಿಕ ಆಯಾಮವನ್ನು ಅರ್ಥ ಮಾಡಿಕೊಳ್ಳುವಲ್ಲಿ ಜನಮಾತಿನಲ್ಲಿ ಬಳಕೆಯಲ್ಲಿರುವ ಪಡೆನುಡಿಗಳ ಪಾತ್ರ ಮುಖ್ಯವಾಗಿರುತ್ತದೆ. ವೇಣುಗೋಪಾಲ ಸೊರಬ ಅವರು ‘ಸಮಕಾಲೀನ ಪಡೆನುಡಿಕೋಶ’ವನ್ನು ಸಿದ್ಧಪಡಿಸಿದ್ದಾರೆ. ಭಾಷೆ ಸಂಸ್ಕೃತಿಯ ಅಂಗವಾಗಿರುವುದರಿಂದ ಭಾಷಾಸಮುದಾಯದ ಪದಗಳು ಆ ಸಂಸ್ಕೃತಿಯನ್ನು ಪ್ರತಿನಿಧಿಸುತ್ತವೆ. ಸಂಸ್ಕೃತಿಯ ದೃಷ್ಟಿಯಿಂದ ವಾಚ್ಯಾರ್ಥಕ್ಕೆ ಭಿನ್ನವಾದ ಅರ್ಥಕೊಡುವ ಪದಗಳು ಸಾಂಸ್ಕೃತಿಕ ಪದಕೋಶ’ವನ್ನು ಡಾ. ವೆಂಕಟೇಶ ಇಂದ್ವಾಡಿ ಅವರು ‘ನೀಲಗಾರರ ಸಾಂಸ್ಕೃತಿಕ ಪದಕೋಶ’ವನ್ನು ಸಿದ್ಧಪಡಿಸಿದ್ದಾರೆ. ಇವುಗಳ ಮೂಲಕ ಆ ಸಂಪ್ರದಾಯಗಳನ್ನು ಅರಿತುಕೊಳ್ಳಲು ನೆರವಾಗುತ್ತದೆ.

ಪ್ರತಿಯೊಂದು ಪದಕ್ಕೂ ಅದರದ್ದೇ ಆದ ಚರಿತ್ರೆ, ಐತಿಹ್ಯ, ಕಥೆ ಇರುತ್ತದೆ. ಪದದ ಅರ್ಥ ಸ್ವರೂಪವನ್ನು ಸುಲಭವಾಗಿ, ಸರಳವಾಗಿ ಸಾಮಾನ್ಯ ಜನರಿಗೆ ತಲುಪಿಸುವ ಕೆಲಸ ನಡೆಯದಿರುವುದು ವಿರಳ. ಪದಪ್ರಪಂಚದ ಸ್ವಾರಸ್ಯವನ್ನು ಜನರಿಗೆ ಮುಟ್ಟಿಸುವ ಕೆಲಸವನ್ನು ಪಾ.ವೆಂ. ಆಚಾರ್ಯರು ‘ಪದಾರ್ಥ ಚಿಂತಾಮಣಿ’ಯಲ್ಲಿ ಮಾಡಿದ್ದಾರೆ. ಪದದ ಅರ್ಥ, ಬೆಳವಣಿಗೆ, ಅನ್ಯಶಿಸ್ತುಗಳೊಂದಿಗೆ ಅದರ ಸಂಬಂಧದ ನೆಲೆಯಲ್ಲಿ ಚರ್ಚಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯದ ‘ದಿನದಿನ’ ಸಮೂಹ ಮಾಧ್ಯಮದಲ್ಲಿ ಬಳಕೆಯಾಗುತ್ತಿರುವ ಹೊಸ ಪದ, ಹೊಸರಚನೆಗಳನ್ನು ದಾಖಲಿಸುವ ಒಳ್ಳೆಯ ಪ್ರಯತ್ನವಾಗಿದೆ. ಕೊಳಂಬೆ ಪುಟ್ಟಣಗೌಡರ ‘ಅಚ್ಚಗನ್ನಡ ನುಡಿಕೋಶ’.ಮಲ್ಲೇಪುರಂ.ಜಿ. ವೆಂಕಟೇಶರ ‘ಭಾರತೀಯ ಕಾವ್ಯಶಾಸ್ತ್ರ ಪರಿಭಾಷೆ’, ಮೃತ್ಯುಂಜಯ ರುಮಾಲೆ ಅವರ ‘ರಗಳೆಗಳ ನಾಮಕೋಶ’ ಮುದೇನೂರು ಸಂಗಣ್ಣನವರ ‘ಚಿಗಟೇರಿ ಪದಕೋಶ’ ವಿಶಿಷ್ಟ ಉದ್ದೇಶವುಳ್ಳ ಕೋಶಗಳಾಗಿವೆ.

ಕನ್ನಡ ಬೌದ್ಧಿಕ ಜಗತ್ತನ್ನು ವಿಸ್ತರಿಸುವಲ್ಲಿ ವಿಶ್ವಕೋಶಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ದಶಕಗಳಲ್ಲಿ ಸುಮಾರು ಎಂಟು ವಿಶ್ವಕೋಶಗಳನ್ನು ಸಿದ್ಧಪಡಿಸಿದೆ. ‘ಭಾರತ ಸಮಾಜಕಾರ್ಯ ವಿಶ್ವಕೋಶ’(ಸಂ) ಎಚ್‌.ಎಂ. ಮರುಳಸಿದ್ಧಯ್ಯ, ‘ವೈದ್ಯವಿಶ್ವಕೋಶ’(ಸಂ) ಪಿ.ಎಸ್‌. ಶಂಕರ್, ‘ಕರ್ನಾಟಕ ಜನಪದ ಕಲೆಗಳ ಕೋಶ’ (ಸಂ) ಹಿ.ಚ ಇ. ಬೋರಲಿಂಗಯ್ಯ ಮತ್ತು ಇತರರು, ‘ಭಾಷೆ ವಿಶ್ವ ಕೋಶ’ (ಸಂ) ಕೆ.ವಿ. ನಾರಾಯಣ ಮತ್ತು ಇತರರು, ‘ಕರ ಕುಶಲಕಲೆಗಳ ವಿಶ್ವಕೋಶ’(ಸಂ) ಕರೀಗೌಡ ಬೀಚನಹಳ್ಳಿ ಮತ್ತು ಇತರರು, ‘ಧರ್ಮ ವಿಶ್ವಕೋಶ’(ಸಂ) ರಹಮತ್‌ತರೀಕೆರೆ ಮತ್ತು ಇತರರು. ಅದರಂತೆ ವಿಶಿಷ್ಟ ಬಗೆಯ ಕೋಶಗಳನ್ನೂ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿದೆ. ‘ಕರ್ನಾಟಕ ಸಮುದಾಯಕಲೋಶ’ (ಸಂ) ಹೆಚ್‌.ಡಿ. ಪ್ರಶಾಂತ, ‘ಕೊಪ್ಪಳ ಜಿಲ್ಲೆಯ ದೇವಾಲಯ ಕೋಶ’. ‘ಹಾವೇರಿ ಜಿಲ್ಲೆಯ ದೇವಾಲಯ ಕೋಶ’(ಸಂ) ’ಕೆ.ಎಂ. ಸುರೇಶ ಇತರರು, ‘ಹಾವೇರಿ ಜಿಲ್ಲೆಯ ದೇವಾಲಯ ಕೋಶ’ (ಸಂ)ಸಿ. ಮಹಾದೇವ ಮತ್ತು ಇತರರು. ಇವು ಸಂಸ್ಕೃತಿ ಅಧ್ಯಯನದ ದೃಷ್ಟಿಯಿಂದ ಮಹತ್ವತಕೋಶಗಳಾಗಿವೆ.

III

ಕನ್ನಡ ಸಂಶೋಧನೆಯ ಚಟುವಟಿಕೆಗಳಲ್ಲಿ ಛಂದಸ್ಸು ಎಂದಿನಿಂದಲೂ ಅಲಕ್ಷಕ್ಕೆ ಒಳಗಾದ ವಿಷಯವಾಗಿದೆ. ಅದೊಂದು ಲೆಕ್ಕಾಚಾರದ ವಿಷಯ ಎಂಬ ಕಲ್ಪನೆ ಇರುವುದೇ ಅದರ ಶುಷ್ಕತೆಗೆ ಕಾರಣವಾಗಿದೆ. ವಾಸ್ತವವಾಗಿ ಛಂದಸ್ಸು ಭಾಷೆ, ಶೈಲಿಗಳಂತೆ ಕಾವ್ಯದ ಒಳಗಿನ ಅಂಗ ಎಂಬ ಅಂಶ ಮನದಟ್ಟಾಗಬೇಕಾಗಿದೆ. ಪದರಚನೆ, ಶೈಲಿ ಮತ್ತು ಅಲಂಕಾರಗಳೊಂದಿಗೆ ಛಂದಸ್ಸನ್ನು ಸಮೀಕರಿಸಿದಾಗ ಸೌರಸ್ಯಕರವಾದ ಅಂಶಗಳು ಹೊರಬರುತ್ತವೆಯಲ್ಲದೆ ಛಂದಸ್ಸು ಚಲನಶೀಲ ವಿಷಯವಾಗುತ್ತದೆ. ಈ ಬಗೆಗೆ ಹೇಳಬೇಕಾದುದು ಬೇಕಾದಷ್ಟಿದೆ ಅದರ ಚರ್ಚೆಗೆ ಇದು ಸ್ಥಾನವಲ್ಲ.

ಈ ದಶಕದಲ್ಲಿ ಕನ್ನಡ ಛಂದಸ್ಸಿನ ಸ್ವರೂಪ, ಲಕ್ಷಣ, ಇತಿಹಾಸ ಹಾಗೂ ವಿವಿಧ ಬಂಧಗಳ ವಿಶ್ಲೇಷಣೆಗಳನ್ನು ಕುರಿತಂತೆ ಕೆಲವು ಪ್ರಮುಖ ಸಂಕಲನಗಳು ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾದುವು ಎಂ. ಚಿದಾನಂದಮೂರ್ತಿ ಅವರ ‘ಛಂದೋತರಂಗ’ ಹಾಗೂ ಟಿ.ವಿ. ವೆಂಕಟಾಚಲಶಾಸ್ತ್ರೀ ಅವರ ‘ಶಾಸ್ತ್ರೀ ಸಂಪುಟ – ೨’. ಚಿದಾನಂದ ಮೂರ್ತಿ ಅವರ ಛಂದೋತರಂಗ ಛಂದಸ್ಸಿನ ಅಧ್ಯಯನಕ್ಕೆ ಸಂಬಂಧಿಸಿದ ಇಪ್ಪತ್ತೈದು ಸಂಪ್ರಬಂಧಗಳ ಸಂಕಲನ. ಕರ್ನಾಟಕ ವಿಷಯ ಜಾತಿಗಳನ್ನು ಮೊದಲು ಮಾಡಿಕೊಂಡು ನವೋದಯ ಕಾವ್ಯಗಳಲ್ಲಿ ಛಂದಸ್ಸಿನ ಪ್ರಯೋಗಗಳ ವಿವೇಚನೆಯಿದೆ. ಕೆಲವು ಕೃತಿಗಳ ಛಂದಸ್ಸನ್ನು ಕುರಿತು ಐದು ಬರೆಹಗಳಿವೆ. ಚಂದ್ರ ರಾಜನ ಮದನ ತಿಲಕದಲ್ಲಿ ಕೆಲವು ಕನ್ನಡ ವೃತ್ತಗಳ ಬಗ್ಗೆ ವಿವೇಚಿಸಿದ್ದಾರೆ. ಬಸವಣ್ಣನವರ ವಚನಗಳಖಲ್ಲಿ ಛಂದೋಲಯವನ್ನು, ಮತಂಗದ ಬೃಹದ್ದೇಶಿ ಛಂದಸ್ಸನ್ನು ಕುರಿತು ಎರಡು ಬರೆಹಗಳಲ್ಲಿ ಚರ್ಚಿಸಿದ್ದಾರೆ. ‘ಹರಿಹರನ ಎರಡು ಪದ್ಯಗಳ ಬಗ್ಗೆ (ಕಲ್ಪನಾ ವಿಲಾಸ) ಒಂದು ಟಿಪ್ಪಣಿ’ ಈ ಲೇಖನ ವ್ಯಕ್ತಪಡಿಸುವ ಧ್ವನಿ ತುಂಬ ಸ್ವಾರಸ್ಯಕರವಾಗಿದೆ.

ಒನಕೆವಾಡು, ಲಯಗ್ರಾಹಿ ಮತ್ತು ಲಯೋತ್ತರ, ತ್ರಿಪದಿ ಅದರ ಸ್ವರೂಪ ಮತ್ತು ಇತಹಾಸ ಇಂತಹ ಛಂದಃ ಪ್ರಭೇದಗಳ ಬಗ್ಗೆ ಮೂರು ಬರೆಹಗಳಿವೆ. ಉಯ್ಯಾಲೆ ಗಣ ಇರುವುದನ್ನು ಸಾಬೀತು ಪಡಿಸುವ ಎರಡು ಸಂಪ್ರಬಂಧಗಳಿವೆ. ತೀ.ನಂ.ಶ್ರೀ ಅವರ ಛಂದೋ ವಿಚಾರಗಳನ್ನು ಒಮದು ಬರೆಹದಲ್ಲಿ ಪರಿಶೀಲಿಸಿದ್ದಾರೆ. ಹೊಸಗನ್ನಡ ಛಂದಸ್ಸಿಗೆ ಸಂಬಂಧಿಸಿದಂತೆ ಐದು ಬರೆಹಗಳಿವೆ. ‘ಛಂದಸ್ಸಿನ ಪ್ರಯೋಗಗಳು – ನವೋದಯ ಕಾವ್ಯದಲ್ಲಿ ’ಎಂಬ ಸಂಪ್ರಬಂಧದಲ್ಲಿ ನವೋದಯ ಕವಿಗಳು ಛಂದಸ್ಸಿನಲ್ಲಿ ಮೂಡಿಸಿದ ಹೊಸತನವನ್ನು ಕುರಿತು ಲಯದ ದೃಷ್ಟಿಯಿಂದ ವಿವೇಚಿಸಿದ್ದಾರೆ. ನವೋದಯ ಕವಿಗಳು ಹೊಸ ಛಂದಸ್ಸನ್ನು ಹೇಗೆ ರೂಪಿಸಿಕೊಂಡರು ಎಂಬುದರ ಬಗ್ಗೆ ಈ ಸಂಪ್ರಬಂಧ ಒಳ್ಳೆಯ ಮಾಹಿತಿ ನೀಡುತ್ತದೆ. ಅದರಂತೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಮತ್ತು ಚಿತ್ರಾಂಗದಾ ಕಾವ್ಯವನ್ನು ಕೇಂದ್ರವಾಗಿಟ್ಟುಕೊಂಡು ‘ರಗಳೆ, ಸರಳ ರಗಳೆ ದಮತ್ತು ಮಹಾಛಂದಸ್ಸು’ ಎಂಬ ಸಂಪ್ರಬಂಧದಲ್ಲಿ ಸರಳ ರಗಳೆ ಮತ್ತು ಮಹಾ ಛಂದಸ್ಸಿನ ಬಗ್ಗೆ ಹೆಚ್ಚಿನ ಅಂಶಗಳು ದೊರಕುತ್ತವೆ. ಈ ಸಂಕಲನದ ಪ್ರತಿಯೊಂದು ಲೇಖನದಲ್ಲಿಯೂ ಸಮಂಜಸವಾದ, ವಿಶ್ವಸನೀಯವಾದ ವಿವೇಚನೆ ಇದೆ. ಅವು ಶೋಧನೆಯ ಬೆಳಕನ್ನು, ಒಳನೋಟವನ್ನು ಕೊಡುತ್ತವೆ.

ಕನ್ನಡ ಛಂದಸ್ಸಿನ ಬೆಳವಣಿಗೆಗೆ ಪ್ರಬಲವಾದ ಒತ್ತಾಸೆಯಾಗಿ ಚಾಲನೆ ಕೊಟ್ಟವರು ವೆಂಕಟಾಚಲಶಾಸ್ತ್ರೀ ಅವರು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅವರ ಸಂಪ್ರಬಂಧಗಳು ‘ಶಾಸ್ತ್ರೀ ಸಂಪುಟ – ೨’ರಲ್ಲಿ ಸಮಾವೇಶಗೊಂಡಿವೆ. ಶಾಸ್ತ್ರೀಗಳ ಛಂದೋ ಅಧ್ಯಯ ನವನ್ನು ನಾಲ್ಕು ರೀತಿಯಾಗಿ ವಿಭಜಿಸಬಹುದು. ಅ. ಪ್ರಾಚೀನ ಕೃತಿಗಳ ಛಂದಸ್ಸು – ಕವಿರಾಜಮಾರ್ಗ, ಅನುಭವ ಮುಕುರ, ಮದನ ತಿಲಕ ಹಾಗೂ ಸೂಕ್ತಿ ಸುಧಾರ್ಣವಗಳ ಛಂದೋವಿಚಾರಗಳ ವಿವೇಚನೆ. ಆ. ಶಾಸನಗಳ ಛಂದಸ್ಸು;ಶಾಸನಗಳ ಛಂದಸ್ಸಿಗೆ ಸಂಬಂಧಿಸಿದಂತೆ ನಾಲ್ಕು ಬರೆಹಗಳಿವೆ. . ಪ್ರಾಚೀನ ಛಂದೋಗ್ರಂಥಗಳ ಪರಿಶೀಲನೆ – ಛಂದೋ ಬುಧಿ, ಛಂಧೋವಿಚಿತಿ, ಕವಿ ಜಿಹ್ವಾ ಬಂಧನಗಳನ್ನು ಪರಿಶೀಲಿಸಿದ್ದಾರೆ. ಈ ಅರ್ವಾಚೀನ ಕವಿ ಕೃತಿಗಳ ಛಂದಃ ಶಿಲ್ಪದ ಅಧ್ಯಯನ – ಶ್ರೀ ರಾಮಾಯಣ ದರ್ಶನಂ, ಪು.ತಿ.ನ ಕಾವ್ಯ ಛಂದಸ್ಸುಗಳು ಇಲ್ಲಿ ಸಮಾವೇಶಗೊಂಡಿವೆ. ಅನೇಕ ಮೂಲಗಳಿಂದ ತಂದು ತುಂಬಿರುವ ಸಾಮಗ್ರಿ ಹಿನ್ನೆಲೆ ಮತ್ತು ಮೂಲಗಳಿಂದ ಇಲ್ಲಿ ನಡೆದಿರುವ ವಿಶ್ಲೇಷಣೆ ಮೌಲಿಕವಾದುದು. ಛಂದಸ್ಸಿನ ಮೂಲ ತತ್ತ್ವಗಳನ್ನು ಅರಿಯುವ ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಶಾಸ್ತ್ರೀಗಳ ಈ ಬರೆಹಗಳು ತುಂಬ ನೆರವಾಗುತ್ತವೆ. ಈ ಎರಡು ಸಂಕಲನಗಳು ಛಂದಃ ಕ್ಷೇತ್ರಕ್ಕೆ ಈ ದಶಕದ ಗರ್ಣಯ ಕೊಡುಗೆಗಳಾಗಿವೆ.

‘ಹೊಸಗನ್ನಡ ಕವಿತೆಯ ಛಂದಸ್ಸು’ – ಕೆ.ಜಿ. ನಾರಾಯಣ ಪ್ರಸಾದ್‌ರ ಪಿ.ಎಚ್‌.ಡಿ. ನಿಬಂಧ. ಹೊಸ ಕಾವ್ಯದಲಯಗಳನ್ನು, ವೈವಿದ್ಯ – ವೈಶಿಷ್ಟ್ಯಗಳನ್ನು ಸೋದಾಹರಣವಾಗಿ ನಿರೂಪಿಸಿ, ವಿಶ್ಲೇಷಿಸಿ ಅಧಿಕೃತವಾಗಿ ಗುರುತಿಸಿದ ಶ್ರೇಷ್ಠ ಕೃತಿ. ನಿಬಂಧದ ಅಧ್ಯಾಯಗಳೇ ಹೊಸ ಛಂದಸ್ಸಿನ ಬೆಳವಣಿಗೆಯನ್ನು ಎತ್ತಿ ತೋರಿಸುತ್ತವೆ. ಛಂದಃ ಪರಿಭಾಷೆಗಳು, ಪದ್ಯದ ಶಿಲ್ಪ ಅಂಗಗಳು, ವೈದಿಕ ಛಂದಸ್ಸು ಮತ್ತು ಅಂಶ ಛಂದಸ್ಸು, ಮಾತ್ರಾ ಛಂದಸ್ಸು [ದ್ವಿಪದಿ, ತ್ರಿಪದಿ, ಚೌಪದಿ, ಪಂಚಪದಿ, ಷಟ್ಪದಿ, ಸಪ್ತಪದಿ, ಅಷ್ಟಪದಿ, ನವಪದಿ ಮತ್ತು ಮತ್ತಿತರ ಬಂಧಗಳು] ಸಾನೆಟ್‌, ಪ್ರಗಾಥ, ಸರಳರಗಳೆ, ಮಹಾಛಂದಸ್ಸು ಮತ್ತು ಇತರ ಬಂಧಗಳು, ಮುಕ್ತ ಛಂದಸ್ಸು ಎಂಬ ಹದಿನಾರು ಸ್ತರಗಳಲ್ಲಿ ಪ್ರಸ್ತುತ ಅಧ್ಯಯನ ವಿಕಸನಗೊಂಡಿದೆ. ಸಂಸ್ಕೃತ, ಪ್ರಾಕೃತ ಮತ್ತು ದ್ರಾವಿಡ ಛಂದೋ ಬಂಧಗಳನ್ನು ಪ್ರತ್ಯೇಕ ಪ್ರತ್ಯೇಕವಾಗಿ ತೆಗೆದುಕೊಂಡು ವ್ಯಾಪಕವಾಗಿ ಚರ್ಚಿಸಿದ್ದಾರೆ. ಹೊಸ ಪರಿಭಾಷೆಗಳನ್ನು, ಸಂಜ್ಞೆ ಮತ್ತು ಪ್ರಸ್ತಾರ ಕ್ರಮಗಳನ್ನು ಹೂಡಿದ್ದಾರೆ. ಹೊಸಛಂದಸ್ಸಿಗೆ ಸಂಬಂಧಿಸಿದ ಯಾವುದೇ ಬಂಧವೂ ವಿಷಯವೂ ಇಲ್ಲಿಯ ವಿಶ್ಲೇಷಣೆಯಿಂದ ತಪ್ಪಿಸಿಕೊಂಡಿಲ್ಲ. ಗಂಭೀರ ಸಂಶೋಧನೆಯಲ್ಲಿ ಆಸಕ್ತರಾಗಿರುವವರಿಗೆ ತುಂಬು ತೃಪ್ತಿಯನ್ನು ತುರುವ ಈ ಕೃತಿಯ ಲೇಖಕರು ಅಭಿನಂದನಾರ್ಹರು. ಈ ಕೃತಿಯ ಪ್ರಕಟಣೆಯಿಂದ ಕನ್ನಡ ಛಂದಸ್ಸಿನ ಅಧ್ಯಯನಕ್ಕೆ ಒಂದು ಹೊಸ ತಿರುವು ಪ್ರಾಪ್ತವಾಗಿದೆ. ಇದೇ ಲೇಖಕರು ಬೇಂದ್ರೆ ಅವರ ಕಾವ್ಯದಲ್ಲಿ ಕಂಡುಬರುವ ಛಂದೋ ವೈವಿಧ್ಯವನ್ನು ‘ಬೇಂದ್ರೆ ಕಾವ್ಯದ ಛಂದಸ್ಸು’ ಎಂಬ ಕೃತಿಯಲ್ಲಿ ಬೇಂದ್ರೆ ಅವರ ಛಂದಃ ಪ್ರಯೋಗಗಳನ್ನು ಸರಳವಾದ ಶೈಲಿಯಲ್ಲಿ ನಿರೂಪಿಸಿದ್ದಾರೆ. ಬೇಂದ್ರೆ ಅವರ ಛಂದಃ ಸಾಧನೆಯ ಒಂದು ಕಿರುಪರಿಚಯ ಈ ಕೃತಿಯ ಮೂಲಕ ಸಿಗುತ್ತದೆ.

‘ಯಕ್ಷಗಾನ ಛಂದಸ್ಸು – ಒಂದು ಅಧ್ಯಯನ’ ಕಬ್ಬಿನಾಲೆ ವಸನ್ತ ಭಾರದ್ವಾಜ ಅವರ ಪಿಎಚ್‌.ಡಿ ನಿಬಂಧ. ಮೊದಲ ಅಧ್ಯಾಯದಲ್ಲಿ ತಮ್ಮ ನಿಬಂಧದ ವಸ್ತುವಿನ ವ್ಯಾಪ್ತಿಯನ್ನು ಕಂಡುಕೊಳ್ಳಲು ಯತ್ನಿಸಿದ್ದಾರೆ. ಯಕ್ಷಗಾನದಲ್ಲಿ ಬಂದಿರುವ ಸಾಹಿತ್ಯದ ಸೂಕ್ಷ್ಮ ವಿವೇಚನೆ ಇಲ್ಲಿದೆ. ನಂತರದ ಅಧ್ಯಾಯಗಳಲ್ಲಿ ಯಕ್ಷಗಾನ ಕಾವ್ಯಗಳಲ್ಲಿ ಕಂಡು ಬರುವ ಅಕ್ಷರ ಗಣ, ಮಾತ್ರಾಗಣ ಮತ್ತು ಅಂಶಗಣಗಳ ಮಟ್ಟುಗಳ ಬಗ್ಗೆ ವಿವೇಚಿಸಿದ್ದಾರೆ. ಯಕ್ಷಗಾನ – ಚಿತ್ರಕಾವ್ಯ, ಯಕ್ಷಗಾನ – ದಾಸ ಸಾಹಿತ್ಯಗಳನ್ನು ತೌಲನಿಕವಾಗಿ ಎರಡು ಅಧ್ಯಾಯಗಳಲ್ಲಿ ವಿವೇಚಿಸಿದ್ದಾರೆ. ಯಕ್ಷಗಾನ ಛಂದಸ್ಸಿನ ತಾತ್ವಿಕ ಸ್ವರೂಪವನ್ನು ಗ್ರಹಿಸುವುದು, ಲಕ್ಷ್ಯಗಳಿಗೆ ವಿಶಿಷ್ಟ ಲಕ್ಷಣಾಂಶಗಳನ್ನು ಅನ್ವಯಿಸುವುದು ಹಾಗೆ ಗ್ರಹಿಸಿ, ಅನ್ವಯಿಸಿದ ಮೇಲೆ ಪ್ರಮುಖವಾದ ಛಂದೋ ವರ್ಗಗಳನ್ನು ವಿಭಜಿಸುವುದು ಈ ಅಧ್ಯಯದ ಕ್ರಮವಾಗಿದೆ. ನಿಬಂಧ ಕರ್ತರು ಸ್ವತಃ ಯಕ್ಷಗಾನ ಕಲಾವಿದರಾಗಿರುವುದರಿಂದ ಯಕ್ಷಗಾನ ತಾಳ ಮತ್ತು ರಾಗಗಳನ್ನು ಕುರಿತು ಹೊಸ ಅಂಶಗಳನ್ನು ಕಂಡು ಹಿಡಿದಿದ್ದಾರೆ. ಪ್ರತಿಯೊಂದು ಅಂಶಕ್ಕೂ ಅಗತ್ಯ ಆಧಾರ ಮತ್ತು ಆಕರಗಳನ್ನು ಒದಿಗಿಸಿದ್ದಾರೆ. ಶಾಸ್ತ್ರ ಬದ್ಧವಾಗಿ, ವಸ್ತು ನಿಷ್ಠವಾಗಿ ನಿರೂಪನೆ ಇದೆ. ಸಂಶೋಧನಾ ಮೌಲ್ಯ ಹೊಂದಿದ ಈ ನಿಬಂಧ ಕನ್ನಡ ಛಂದಃ ಕ್ಷೇತ್ರಕ್ಕೆ ಒಂದು ಮಹತ್ವದ ಕೊಡುಗೆಯಾಗಿದೆ.

ಕನ್ನಡ ಛಂದಸ್ಸು ಬೆಳದ ಬಂದ ರೀತಿಯನ್ನು ಆಯಾ ಛಂದಸ್ಸಿನ ಪದ್ಯಗಳ ಮುಖಾಂತರವೇ ಸಾದರ ಪಡಿಸಿವ ಲಕ್ಷಣ – ಲಕ್ಷ್ಯ ಸಮನ್ವಿತವಾದ ಅಪರೂಪದ ಕೃತಿ ಅ.ರಾ. ಮಿತ್ರರ ‘ಛಂದೋಮಿತ್ರ’. ಛಂದಸ್ಸಿನ ಸ್ವರೂಪ, ಇತಿಹಾಸ, ಅಕ್ಷರ, ಮಾತ್ರೆ, ಅಂಶಗಣ ಮಟ್ಟುಗಳು ಹಾಗೂ ಮಹಾಛಂದಸ್ಸು ಈ ಎಲ್ಲ ಬಂಧಗಳನ್ನೊಳಗೊಂಡ ಒಂದು ಸಮಗ್ರ ನೋಟವನ್ನು ಪದ್ಯಗಳಲ್ಲಿಯೇ ಕಾಣಿಸಿರುವುದು ಈ ಗ್ರಂಥದ ವೈಶಿಷ್ಟ್ಯ. ಛಂದಸ್ಸಿನಂತಹ ವಿಷಯವನ್ನ ಸಕಲರಿಗೂ ಅರ್ಥವಾಗುವ ರೀತಿಯಲ್ಲಿ ಹಾಸ್ಯ ಮಿಶ್ರಿತವಾಗಿ, ಸೃಜನಶೀಲವಾಗಿರುವುದು ಈ ಗ್ರಂಥದ ಇನ್ನೊಂದು ಗುಣ. ಕಾವ್ಯಾಸಕ್ತಿಯುಳ್ಳವರಿಗೆ ಛಂದಸ್ಸಿನ ವಿಷಯವನ್ನು ಆದ್ಯಂತವಾಗಿ ತಿಳಿಯ ಬಯಸುವವರಿಗೆ ಉತ್ತಮ ಮಾರ್ಗದರ್ಶಿ ಕೃತಿಯಿಂದಾಗಿದೆ.

‘ಕನ್ನಡ ಛಂದೋ ಪ್ರಬಂಧಗಳು’ ಸಾ.ಶಿ. ಮರುಳಯ್ಯ ಮತ್ತು ಶ್ರೀಮತಿ ತ್ರಿವೇಣಿ ಶಿವಕುಮಾರ್ ಅವರ ಸಂಪ್ರಬಂಧಗಳ ಸಂಕಲನ. ಈ ಬರೆಹಗಳಲ್ಲಿ ಕನ್ನಡ ಛಂಧಸ್ಸಿನ ಅನೇಕ ನೆಲೆಗಳನ್ನು ಪರಿಶೀಲಿಸಿದ್ದಾರೆ. ‘ಕಾವ್ಯಕ್ಕೆ ಛಂದಸ್ಸಿನ ಅವಶ್ಯಕತೆ’, ಶಬ್ದ – ಲಯ – ಗಣಗಳ ಸ್ವರೂಪ, ಕನ್ನಡಕ್ಕೆ ವಿಶಿಷ್ಟವೆನಿಸಿದ ಯತಿ – ವಡಿ – ಪ್ರಾಸ ವಿಚಾರ, ಅಂಶಗಣದ ತ್ರಿಪದಿ, ಷಟ್ಪದಗಳು ಮಾತ್ರಗಣವಾದ ಬಗೆ ಮುಂತಾದ ಅಂಶಗಳು ಛಂದಸ್ಸಿನ ತತ್ವಗಳಿಗೆ ಸಂಬಂಧಿಸಿವೆ. ಕನ್ನಡ ಕಾವ್ಯಗಳಲ್ಲಿ ಕಾಣಿಸುವ ಸಂಸ್ಕೃತ, ಪ್ರಾಕೃತ, ದೇಶಿ ಮಟ್ಟುಗಳ ಹಾಗೂ ಹೊಸ ಛಂದಸ್ಸಿ ರೂಪಗಳ ಸ್ವರೂಪ, ಲಕ್ಷಣಾದಿಗಳನ್ನು ಸಂಕ್ಷಿಪ್ತವಾಗಿ ಹೇಳಿದ್ದಾರೆ. ರಗಳೆಯ ವೈವಿಧ್ಯತೆಯನ್ನೊಳಗೊಂಡ ಲೇಖನ ಸೌರಸ್ಯಕರವಾಗಿದೆ. ಪ್ರಾಚೀನ ಮತ್ತು ಅರ್ವಾಚೀನ ಛಂದೋ ಗ್ರಂಥಗಳ ಸಮೀಕ್ಷೆ ಒಂದು ಬರೆಯದಲ್ಲಿದೆ. ಕನ್ನಡ ಛಂಧಸ್ಸಿನ ಒಂದು ಸ್ಥೂಲ ನೋಟವನ್ನು ಮರುಳಯ್ಯನವರು ಒದಗಿಸಿದ್ದಾರೆ. ಅಭ್ಯಾಸಿಗಳು ಗ್ರಹಿಸಬೇಕಾದ ಒಪ್ಪಿತ ಸಂಗತಿಗಳೇ ಇಲ್ಲಿ ನಿರೂಪಿಸಲಾಗಿದೆ. ವಿಷಯ ನಿರೂಪಣಿಯಲ್ಲಿ ವಸ್ತು ನಿಷ್ಠುತೆಯಿದೆ.

ಎಂ.ಪಿ. ಮಂಜಪ್ಪ ಶೆಟ್ಟಿ ಅವರ ಸಂಪ್ರಬಂಧಗಳ ಸಂಕಲನ ‘ಛಂದೋವಿಚಾರಮಂಜರಿ’. ಇದರಲ್ಲಿ ಮಾಲಾವೃತ್ತ, ದಂಡಕ, ದ್ವಿಪದಿ, ಚೌಪದಿ, ಸೀಸ, ಧವಲ ಎಂಬ ಆರು ಛಂದಃ ಪ್ರಕಾರಗಳ ಹಾಗೂ ಪು.ತಿ.ನ ಕವನಗಳಲ್ಲಿ ಛಂದೋ ವೈವಿಧ್ಯ, ಶ್ರೀ ಶಿವಕುಮಾರ ಚರಿತಂ ಕಾವ್ಯದ ಛಂದೋ ವೈಶಿಷ್ಟ್ಯ ಎಂಬ ಸಂಪ್ರಬಂಧಗಳು ಸಮಾವೇಶಗೊಂಡಿವೆ. ಪ್ರಚಲಿತವಿದ್ದ ವಿದ್ವತ್‌ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಪರಿಶೀಲಿಸಿದ್ದಾರೆ. ಎನ್‌.ಜಿ. ಪಟವರ್ಧನ್‌ಅವರು ‘ಛಂದಸ್ಪಾರ’ ಕೃತಿಯಲ್ಲಿ ಛಂದಃ ಶಾಸ್ತ್ರದ ಚಾರಿತ್ರಿಕ ಹಿನ್ನೆಲೆ ಅದ ನಿರ್ವಚನದೊಂದಿಗೆ ಕನ್ನಡ ಕಾವ್ಯಗಳಲ್ಲಿ ಬಳಕೆಯಾದ ಬಂಧಗಳನ್ನು ಸರಳವಾದ ಉದಾಹರಣೆಗಳೊಂದಿಗೆ ನಿರೂಪಿಸಿದ್ದಾರೆ. ಈ ಕೃತಿ ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಹಿಂದಿನ ತಲೆಮಾರಿನವರ ಕೆಲಸವನ್ನು ಬಿಟ್ಟರೆ ಹೊಸ ತಲೆಮಾರಿನ ಬರೆಹಗಾರರಲ್ಲಿ ಹೊಸತನ ಇಲ್ಲ. ಹಿಂದಿನವರ ಶೋಧನೆಯ ಬೆಳಕಿನಲ್ಲಿ ಹೊಸ ಪೀಳಿಗೆಯವರು ಹೊಸ ದೃಷ್ಟಿಕೋನ ಹರಿಸಬೇಕಾಗಿದೆ. ಜನಪದ ಸಾಹಿತ್ಯ, ವಚನಗಳು, ಕೀರ್ತನೆಗಳ ಹಾಗೂ ಶಾಸನ ಸಾಹಿತ್ಯಗಳ ಛಂದಃ ಪರಿಶೀಲನೆ ಆಗಬೇಕಾಗಿದೆ. ಇವು ಶ್ರದ್ದಾವಂತ ತರುಣರ ಬರವನ್ನು ಕಾಯುತ್ತಿವೆ.

ಒಟ್ಟಿನಲ್ಲಿ ಈ ದಶಕದಲ್ಲಿ ಪಾಂಡಿತ್ಯ ಕ್ಷೇತ್ರದ ಬೆಳಸು ತಕ್ಕ ಮಟ್ಟಿಗೆ ಹುಲುಸಾಗಿದೆ ನಿಜ; ಆದರೆ ಆಗಬೇಕಾದ ಕೆಲಸವು ಬೆಟ್ಟದಷ್ಟಿದೆ ಎಂಬುದು ಅಷ್ಟೇ ನಿಜ. ವ್ಯಕ್ತಿ ಪ್ರಯತ್ನಗಳಂತಗೆ ಸಾಂಸ್ಥಿಕ ಪ್ರಯತ್ನಗಳೂ ಈ ದಿಕ್ಕಿನಲ್ಲಿ ನಡೆಯುತ್ತಿರುವುದು ಈ ಕ್ಷೇತ್ರದ ಅಭಿವೃದ್ಧಿಯ ಸೂಚನೆಯಾಗಿದೆ.