ಕಳೆದ ಹತ್ತು ವರ್ಷಗಳ ಕನ್ನಡ ಕಾವ್ಯವನ್ನು ಪರಿಶೀಲಿಸುವುದಕ್ಕೆ ಮೊದಲು ಒಟ್ಟಾರೆಯಾಗಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಸಂದರ್ಭದ ಬಗ್ಗೆ ಒಂದೆರಡು ವಿಚಾರವನ್ನು ಪ್ರಸ್ತಾಪಿಸುವ ಅಗತ್ಯವಿದೆ. ಕಳೆದ ಶತಮಾನದ ಆರಂಭಿಕ ದಶಕಗಳು ಕನ್ನಡ ಭಾಷೆಯನ್ನು ಹೊಸಕಾವ್ಯಕ್ಕೆ ಅಣಿಗೊಳಿಸುವ ತುರ್ತಿನಲ್ಲಿದ್ದರೆ, ಕೊನೆಯ ದಶಕವು ಮಾಹಿತಿ ತಂತ್ರಜ್ಞಾನಕ್ಕೆ ಕನ್ನಡವನ್ನು ಮಣಿಸುವ ತವಕದಲ್ಲಿದೆ. ಹಾಗೆಯೇ ಆರಂಭಿಕ ದಿನಗಳ ಕನ್ನಡದ ಗಮನ ಕರ್ನಾಟಕತ್ವವನ್ನು ಅದರ ಏಕತೆಯಲ್ಲಿ ಕಟ್ಟುವ ಕಡೆಗಿದ್ದರೆ, ಅಂತಿಮ ದಿನಮಾನಗಳು ಅದರ ಬಹುತ್ವವನ್ನು ಶೋಧಿಸುವ ಕಡೆಗಿದೆ. ಮೇಲಿನ ಈ ಎರಡೂ ಅಂಶಗಳನ್ನು ಗಮನಿಸಿದ್ದಾದರೆ ಕನ್ನಡವು ಆ ಹೊತ್ತು ಈ ಹೊತ್ತು ತನ್ನ ಮೈಮೇಲೆ ಎಳೆದುಕೊಂಡಿರುವ ಜವಾಬ್ದಾರಿಯ ಸ್ವರೂಪವೇನು ಎಂಬುದು ಗೋಚರಿಸುತ್ತದೆ. ಕನ್ನಡವು ಯಾವತ್ತೂ ತಾನು ವ್ಯಾಪಿಸಿಕೊಂಡಿರುವ ಸಾಂಸ್ಕೃತಿಕ ಪರಿಸರದ ಆಗುಹೋಗುಗಳಿಗೆ ತನನ್ನು ಒಡ್ಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಇದು ಮೊದಲ ಅಂಶ.

ಇನ್ನು ಎರಡನೆಯ ಅಂಶ. ಕನ್ನಡ ಭಾಷೆ ಮತ್ತು ಸಾಹಿತ್ಯ ತನ್ನ ಸಾಂಸ್ಕೃತಿಕ ಸಂದರ್ಭದಲ್ಲಿ ವಿಶೇಷ ಸ್ಥಾನವನ್ನು ಸದಾ ಅಪೇಕ್ಷಿಸುತ್ತಿರುವಂತೆಯೇ ಅದು ಹಲವಾರು ಸಂಕಷ್ಟಗಳನ್ನು ಎದರಿಸುತ್ತಲೇ ಬಂದಿದೆ. ಕನ್ನಡ ಭಾಷೆಯ ಬಗೆಗಿನ ಹೋರಾಟ. ಚಿಂತನೆಗಳು ನಿರಂತರವಾಗಿ, ನಡೆಯುತ್ತಿದ್ದೂ, ಸಾಹಿತ್ಯಿಕ ಹಿರಿಮೆಯನ್ನು ಮೆರೆಯುತ್ತಿದ್ದೂ ಕೂಡ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಲೇ ಇದೆ. ಸಂಪರ್ಕ ಮಾಧ್ಯಮ, ವಿಜ್ಞಾನ ತಂತ್ರಜ್ಞಾನ ಇತ್ಯಾದಿ ನೆಪದಲ್ಲಿ ಕನ್ನಡವನ್ನು ಮೀರಿದ ಪ್ರಭುತ್ವ ಭಾಷೆಯಾಗಿ ಇಂಗ್ಲೀಷ್‌ ತನ್ನ ಹಿಡಿತವನ್ನು ಬಲಪಡಿಸಿಕೊಳ್ಳುತ್ತಲೇ ಇದೆ. ಆಡಳಿತ ಕನ್ನಡ, ಮಾಧ್ಯಮ ಕನ್ನಡ ಇತ್ಯಾದಿ ಕ್ಷೇತ್ರಗಳಲ್ಲಿನ ಹಿಂಜರಿತ ಕನ್ನಡ ಭಾಷೆಯನ್ನು ಪ್ರಭುತ್ವದ ಪರಿಧಿಯಿಂದ ಹೊರಗೇ ಉಳಿಸಿದೆ. ಒಂದು ಸಮುದಾಯದ ಸಾಂಸ್ಕೃತಿಕ ಹರಿಕಾರನಾಗಿ ಕನ್ನಡ ಭಾಷೆ ಶತಶತಮಾನಗಳಿಂದ ದುಡಿಯುತ್ತಿದ್ದೂ ಅದು ಅಧಿಕಾರದ ಸ್ಥಾನದಿಂದ ಅಸ್ಪೃಶ್ಯವಾಗಿಯೇ ಇದೆ. ಈ ವಿಚಾರದಲ್ಲಿ ಕನ್ನಡ ಸಮುದಾಯದ ರಾಜಕೀಯ ಇಚ್ಛಾಶಕ್ತಿ ಯಾಕೋ ದಿನದಿನವೂ ಕುಗ್ಗುತ್ತಲೇ ಇದೆ. ಕನ್ನಡ ಭಾಷೆ ನರ್ವಹಿಸುತ್ತಿರುವ ಜವಾಬ್ದಾರಿ ಹಾಗು ಅದಕ್ಕೆ ದೊರೆತಿರುವ ಪ್ರಾತಿನಿಧ್ಯದ ನಡುವಿನ ಬಿರುಕು ವಿಸ್ತರಿಸುತ್ತಲೇ ಇದೆ. ಈ ಎರಡು ಅಂಶಗಳನ್ನು ಹಿನ್ನೆಲೆಯಲ್ಲಿಟ್ಟುಕೊಂಡೇ ಕಳೆದ ಹತ್ತು ವರ್ಷಗಳ ಕಾವ್ಯವನ್ನು ಗಮನಿಸಬೇಕಿದೆ.

ಕನ್ನಡ ಕಾವ್ಯ ಆದಿಯಿಂದಲೂ ಪ್ರಭುತ್ವವನ್ನು ಕುರಿತಂತೆ ತನ್ನ ನಿಲುವೊಂದನ್ನು ಸ್ಪಷ್ಟಪಡಿಸುತ್ತಲೇ ಬಂದಿದೆ. ಅದರ ಪ್ರಕಾರ ಕಾವ್ಯಪ್ರತಿಭೆ ಪ್ರಭುತ್ವವನ್ನು ಮೀರಿ ನಿಲ್ಲುವುದು; ಪ್ರಭುತ್ವದ ನಿರಾಕರಣೆಯಲ್ಲಿ ತನ್ನ ಉಜ್ವಲತೆಯನ್ನು ಮೆರೆಯುವುದು. ಆದ್ದರಿಂದಲೇ ಆದಿ ಕವಿ ಪಂಪ ಆಸ್ಥಾನಕವಿಯಾಗಿದ್ದು ಪ್ರಭುತ್ವದ ಬಗ್ಗೆ ಹಲವು ಬಾರಿ ನಿರ್ದಾಕ್ಷಿಣ್ಯದ ನಿಲುವನ್ನು ತೋರುತ್ತಾನೆ. ಅಲ್ಲಿಂದ ಮುಂದೆಯೂ ಈ ಗುಣ ಕಾಲದಿಂದ ಕಾಲಕ್ಕೆ ವ್ಯಕ್ತವಾಗುತ್ತಲೇ ಬಂದಿದೆ. ವಚನಕಾರರು, ದಾಸರು, ಕುಮಾರವ್ಯಾಸ, ಹರಿಹರ ಇತ್ಯಾದಿಗಳೆಲ್ಲರೂ ಇದಕ್ಕೆ ಬಗೆಬಗೆಯ ಸಾಕ್ಷಿಯನ್ನು ಒದಗಿಸುತ್ತಲೇ ಬಂದಿದ್ದಾರೆ. ಪ್ರಭುತ್ವವನ್ನು ಮುಖಾಮುಖಿಯಾಗುವ ಇಂತಹ ಸಂಕೀರ್ಣ ಸಂದರ್ಭಗಳನ್ನೇ ಆಧುನಿಕ ವಿಮರ್ಶೆ ಕನ್ನಡ ಕಾವ್ಯದ ಸ್ವೋಪಜ್ಞ ನೆಲೆಗಳಾಗಿ ಗುರುತಿಸಿದೆ ಸಹ. ಈ ಹಿನ್ನಲೆಯಲ್ಲಿ ಆಧುನಿಕವು ಕಾವ್ಯ ಸಂದರ್ಭವನ್ನು ಗ್ರಹಿಸುವುದಾದರೆ ಕನ್ನಡ ಪ್ರಭುತ್ವದ ದನಿಯಾಗದಿರುವುದು ಅಥವ ಅದಕ್ಕಾಗಿ ನಿರಂತರವಾಗಿ ಹೆಣಗುತ್ತಿರುವುದೂ ಕನ್ನಡ ಸಾಹಿತ್ಯದ ಆಂತರಿಕ ಸತ್ವವನ್ನು ಹೆಚ್ಚಿಸಿರಬಹುದಾದ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ. ಅಧಿಕಾರಶಾಹಿಯಲ್ಲಿ ವ್ಯಾಪಿಸಲಾರದ ಕನ್ನಡ ತನ್ನ ಮಹತ್ವಾಕಾಂಕ್ಷೆಯನ್ನು ಸಾಹಿತ್ಯದ ಮೂಲಕ ಪದೇ ಪದೇ ಮನವರಿಕೆ ಮಾಡಲು ಯತ್ನಿಸುತ್ತಿದ್ದರೆ ಅದು ಆ ಭಾಷಾ ಸಮುದಾಯದ ಅವಗುಣವಂತೂ ಖಂಡಿತ ಅಲ್ಲ. ಹಾಗಾಗಿ ಅತ್ಯಂತ ಹೆಚ್ಚು ಜ್ಞಾನಪೀಠ ಪುರಸ್ಕಾರಗಳನ್ನು ಪಡೆದ ಸಾಹಿತ್ಯ ಶ್ರೀಮಂತ ಕನ್ನಡ ಹಾಗೂ ಆಡಳಿತ ಭಾಷೆಯಾಗಲು ಹೆಣಗುತ್ತಿರುವ ವ್ಯಾವಹಾರಿಕ ಕನ್ನಡಗಳ ನಡುವಿನ ಒತ್ತಡ ನಿಜಕ್ಕೂ ಅಧ್ಯಯನ ಯೋಗ್ಯವಾದುದಾಗುತ್ತದೆ. ಆಡಳಿತ ಕನ್ನಡ ಮತ್ತು ಸಾಹಿತ್ಯ ಕನ್ನಡಗಳ ನಡುವಿನ ವಿಭಿನ್ನ ಒತ್ತಡವು ಕಳೆದ ದಶಕದ ಪ್ರಧಾನ ಲಕ್ಷಣವೂ ಆಗಿರುವುರುವುದರಿಂದ ಅದನ್ನಿಲ್ಲಿ ಪ್ರಸ್ತಾಪಿಸಲಾಗಿದೆ. ಈ ಕಾಲಾವಧಿಯು ಕನ್ನಡ ಕಾವ್ಯ ಸಾಧನೆಯ ಹಿಂದೆ ಇರುವ ಕನ್ನಡಿಗರ ಮಹತ್ವಾಕಾಂಕ್ಷೆಯ ಸ್ವರೂಪವನ್ನು ಇದು ತೋರಿಸುತ್ತದೆ.

ಸಾಹಿತ್ಯ ಪರಂಪರೆ ಪ್ರಧಾನವಾಗಿ ಕಾವ್ಯ ಪರಂಪರೆ, ಅಂದರೆ ಕಾವ್ಯಕ್ಕೆ ವಿಶೇಷ ಮನ್ನಣೆಯನ್ನು ನೀಡಿದ ಪರಂಪರೆ. ಹಾಗಾಗಿಯೇ ಕಾವ್ಯ ಪ್ರಯೋಗಗಳ ಶ್ರಮ ಈ ಪರಂಪರೆಗೆ ಮಹತ್ವವಾದುದು. ಈ ವಿಚಾರದಲ್ಲಿ ಕನ್ನಡವಾದರೂ ಅಷ್ಟೆ, ಕಾವ್ಯಮುಖಿಯಾದುದು. ಆಧುನಿಕ ಸಂದರ್ಭದಲ್ಲಿ ಗದ್ಯವು ವಿಶೇಷವಾಗಿ ಬೆಳೆದಿದ್ದರೂ ಕನ್ನಡದ ಸಾಹಿತ್ಯ ಚರ್ಚೆಗಳು ಆಧರಿಸಿದ್ದು ಕಾವ್ಯವನ್ನೇ. ಪ್ರಗತಿಶೀಲವೊಂದನ್ನು ಹೊರತು ಪಡಿಸಿ ಉಳಿದೆಲ್ಲ ಪ್ರಸ್ಥಾನಗಳು ರೂಪಿಸಿದ್ದು ವಿಶೇಷವಾಗಿ ಕಾವ್ಯ ಮಾದರಿಗಳನ್ನೇ. ಕಳೆದ ಶತಮಾನವು ಹೆಚ್ಚು ಕಡಿಮೆ ೨೦ – ೨೫ ವರ್ಷಗಳ ಅಂತರದಲ್ಲಿ ಭಿನ್ನ ಪ್ರಣಾಳಿಕೆಗಳನ್ನು ಕಾವ್ಯ ಪ್ರಯೋಗದಲ್ಲಿ ಹೊರಡಿಸುತ್ತ ಬಂದಿದೆ. ಈ ದೃಷ್ಟಿಯಿಂದ ನೋಡಿದರೆ ೯೦ರ ದಶಕದಲ್ಲಿ ವಿಶೇಷವಾದ ಕಾವ್ಯ ಪ್ರಣಾಳಿಕೆಯೊಂದು ಹೊರಟಿಲ್ಲ. ಪ್ರಸ್ಥಾನಗಳು, ಪಂಥಗಳು ಪ್ರಣಾಳಿಕೆಗಳು ಕಾವ್ಯ ಪರಂಪರೆಯ ಮುನ್ನಡೆಯ ಸಂಕೇತವೆಂದು ನಂಬುವುದಾದರೆ ಅಷ್ಟರಮಟ್ಟಿಗೆ ಕನ್ನಡ ಕಾವ್ಯ ನಿಂತ ನೀರಾಗಿದೆ ಎನ್ನಬಹುದು. ಈ ಕೊರತೆ ಸಾಕಷ್ಟು ಗಾಢವಾಗಿಯೇ ಕಾಣುತ್ತದೆ ಸಹ. ಈ ಅರ್ಥದಲ್ಲಿ ಕಳೆದ ಹತ್ತುವರ್ಷ ಕನ್ನಡ ಕಾವ್ಯದ ಬಗ್ಗೆ ಮಾತನಾಡಲು ಅಷ್ಟೇನು ಉತ್ಸಾಹವನ್ನು ಹುಟ್ಟಿಸುವ ವಿಷಯವಾಗಿಲ್ಲ. ತುರ್ತಿನ ಸಂಗತಿ ಅಂತಲೂ ಅನ್ನಿಸುತ್ತಿಲ್ಲ. ಎಪ್ಪತ್ತರ ದಶಕದಲ್ಲಿ ಎದ್ದ ಸಾಹಿತ್ಯ – ಸಾಮಾಜಿಕ ತುರ್ತು ಎಂಬ ಪ್ರಶ್ನೆ ಕನ್ನಡ ಕಾವ್ಯಪ್ರಯೋಗದ ಐತಿಹಾಸಿಕ ಮೈಲುಗಲ್ಲಾಯಿತು. ಅಲ್ಲಿಂದ ಕಾವ್ಯಾಲಂಕಾರದ ಉಬ್ಬರ ಇಳಿಯಿತು. ಸಾಹಿತ್ಯದ ಕೇಂದ್ರ ಬಿಂದು ಕಾವ್ಯದಿಂದ ವಿಮರ್ಶೆಗೆ ಅಂದರೆ ಗದ್ಯಕ್ಕೆ ವೈಚಾರಿಕತೆಗೆ ಪಲ್ಲಟಗೊಂಡಿತು. ಸಾಮಾಜಿಕ ತುರ್ತಿನ ಅಗತ್ಯಗಳು ಗದ್ಯಕ್ಕೆ ಹೆಚ್ಚು ಪರಿಣಾಮಕಾರಿಯಾಗಬಹುದೆಂಬ ನಂಬಿಕೆ ಬಲಿಯಿತು. ಒಟ್ಟಾರೆಯಾಗಿ ಕಾವ್ಯದ ಬಗೆಗಿನ ನಿರೀಕ್ಷೆಗಳೇ ಕಡಿಮೆಯಾಗತೊಡಗಿದವು. ಸಾಹಿತ್ಯ ಪ್ರತಿಭೆಯ ಸಂದರ್ಭದಲ್ಲಿ ಕಾವ್ಯಕ್ಕಿದ್ದ ವಿಶೇಷ ಗಮನ ‘ವಿಮರ್ಶೆಗೆ’ ಹೊರಳಿತು. ಅದುವರೆಗೂ ಕವಿಗಳಿಗಿದ್ದ ಮನ್ನಣೆ ಆನಂತರ ವಿಮರ್ಶಕರದಾಯಿತು.

ಇಡಿಯಾಗಿ ಸಾಹಿತ್ಯ ಮೀಮಾಂಸೆ, ವಿಮರ್ಶೆಗಳು ಎಷ್ಟರ ಮಟ್ಟಿಗೆ ಕಾವ್ಯಮುಖಿಯಾಗಿದ್ದವು ಎಂಬುದರ ವಿಶ್ಲೇಷಣೆ ಅದರ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ. ಸಾಹಿತ್ಯ ಚರ್ಚೆಯ ಕಣ್ಮಣಿಯಾಗಿ ತನ್ನನ್ನು ಕಾಯ್ದುಕೊಂಡಿದ್ದ, ವಿಮರ್ಶೆಯ ಬೆಂಗಾವಲಿನಲ್ಲಿ ಮುನ್ನುಗುತ್ತಿದ್ದ ಕಾವ್ಯ ನಿಜಕ್ಕೂ ಪರಾವಲಂಬಿ ಎನ್ನಿಸುವ ಮಟ್ಟಿಗೆ ಅದನ್ನು ಆಶ್ರಯಿಸಿದ್ದರೆ ಅದೂ ಆಶ್ಚರ್ಯದ ಸಂಗತಿಯೇನಲ್ಲ. ಯಾವಾಗ ಅಂಗರಕ್ಷನಂತೆ ವರ್ತಿಸುತ್ತಿದ್ದ ವಿಮರ್ಶೆ ತನ್ನನ್ನು ಕೇಂದ್ರಕ್ಕೆ ತಂದುಕೊಂಡಿತೋ ಆಗ ಕಾವ್ಯದ ಮಹತ್ವಾಕಾಂಕ್ಷೆ ಕುಗ್ಗಿದಂತೆ ಕಾಣುತ್ತದೆ. ಇದು ಕಳೆದ ಹತ್ತು ವರ್ಷಗಳ ಕಾವ್ಯದಲ್ಲಿ ನಿಚ್ಚಳವಾಗಿ ಕಂಡು ಬರುತ್ತದೆ. ಈ ದಿನಗಳಲ್ಲಿ ತನ್ನ ಆಸಕ್ತ ಕ್ಷೇತ್ರವಾಗಿ ವಸಾಹತುಶಾಹಿ ಅಧ್ಯಯನ, ಸಂಸ್ಕೃತಿ ಚಿಂತನೆ, ಅಂತರಶಿಸ್ತೀಯ ಅಧ್ಯಯನ ಇತ್ಯಾದಿಗಳ ಕಡೆ ಕನ್ನಡ ವಿಮರ್ಶೆ ಸಂಪೂರ್ಣವಾಗಿ ಮಗ್ನವಾದುದರಿಂದ ಅದು ಕಾವ್ಯದ ಬಗ್ಗೆ ವಿಶೇಷ ಬೇಡಿಕೆಯನ್ನು ಮಂಡಿಸುವುದರಲ್ಲಿ ಆಸಕ್ತವಾಗಲಿಲ್ಲ. ಸಾಹಿತ್ಯದ ಕೇಂದ್ರವಾಗಿ ಬೆಳೆದ ವಿಮರ್ಶೆ ತನ್ನ ಆಸಕ್ತಿಯನ್ನು ಸಾಹಿತ್ಯೇತರ ಚೌಕಟ್ಟಿನಲ್ಲಿ ಗುರುತಿಸಿಕೊಂಡಿತು. ಸ್ನೇಹ ಸೌಜನ್ಯದ ಹಿನ್ನೆಲೆಯಲ್ಲಿ ಕಾವ್ಯದ ಬಗ್ಗೆ ನಾಲ್ಕು ಮಾತನಾಡಲು ಯತ್ನಿಸಿದರೂ ಅದು ಈ ಹಿಂದೆ ಹಾಕುತ್ತಿದ್ದ ಶ್ರಮಕ್ಕೆ ಯಾವ ರೀತಿಯಲ್ಲೂ ಸರಿಗಟ್ಟುವುದಾಗಲಿಲ್ಲ. ಕಾವ್ಯ ಸಂದರ್ಭವನ್ನು ಬೆಳೆಸುವ ಮಹತ್ವಾಂಕಾಕ್ಷಿ ಚರ್ಚೆಯಾಗಲಿಲ್ಲ. ಅಂತಹ ಸಮಯದಲ್ಲಿ ವಿಮರ್ಶೆಯನ್ನು ನಂಬಿ ಕಾವ್ಯ ಬೆಳೆಯ ಬೇಕಿತ್ತು ಎಂಬುದು ಒಳ್ಳೆಯ ಪ್ರಶ್ನೆ. ಬೆಳೆಯ ಬೇಕಿರಲಿಲ್ಲ ನಿಜ. ಆದರೆ ಕಳೆದ ಹತ್ತು ವರ್ಷಗಳ ಕಾವ್ಯದ ಬೆಳವಣಿಗೆಯನ್ನು ನೋಡಿದರೆ ಆ ಅಭ್ಯಾಸವನ್ನು ಕನ್ನಡ ಕಾವ್ಯ ಬೆಳೆಸಿಕೊಂಡ ಹಾಗೆ ಕಾಣುತ್ತದೆ. ಏಕೆಂದರೆ ಈ ಹಿಂದೆ ಸಾಹಿತ್ಯ ಸಂದರ್ಭದಲ್ಲಿ ಅದು ಪ್ರಕಟಿಸುತ್ತಿದ್ದ ಠೇಂಕಾರ, ಎಬ್ಬಿಸುತ್ತಿದ್ದ ಗದ್ದಲ ಇತ್ಯಾದಿಗಳೆಲ್ಲ ಸದ್ದಿಲ್ಲದಂತಾಗಿದೆ. ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ತಾನು ಒಂದೆಂದು ಬೆರೆತು ಬದುಕುವುದನ್ನು ಕಲಿತಿದೆ. ಕನ್ನಡ ಕಾವ್ಯದ ಈ ಸ್ಥಿತಿ ಅದರ ಸತ್ವವನ್ನು ಕುಗ್ಗಿಸಿದೆಯೇ ಅಥವ ಅದಕ್ಕೊಂದು ಆರೋಗ್ಯಪೂರ್ಣ ಸ್ಥಿತಿಯನ್ನು ಸೃಷ್ಟಿಸಿದೆಯೇ ಎಂಬುದು ಗಮನಿಸಬೇಕಾದ ಅಂಶ.

….. ಕಳೆದ ಹತ್ತು ವರ್ಷಗಳು ಕಾವ್ಯ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಹೊಸ ಪ್ರಸ್ಥಾನದ ಆವರ್ತವನ್ನು ಎಬ್ಬಿಸದೆ ಆಗಿ ಹೋದ ಕಾಲ ಎಂಬ ಆಂಶವು ಅದರ ಸತ್ವದ ನಿರ್ಧಾರಕ ಗುಣವಾಗಬೇಕೆ ಎಂಬ ಪ್ರಶ್ನೆಯನ್ನು ಸ್ವಲ್ಪ ಪಕ್ಕಕ್ಕಿಟ್ಟು ಈ ಕಾಲಮಾನದ ಕಾವ್ಯವು ಪ್ರಕಟಿಸಿದ ಆಕಾಂಕ್ಷೆಗಳನ್ನು ವಿವರಗಳಲ್ಲಿ ಗ್ರಹಿಸುವ ಕೆಲಸಕ್ಕೆ ತೊಡಗಬಹುದಾಗಿದೆ. ಇದಕ್ಕೆ ಪ್ರಾತಿನಿಧಿಕವಾಗಿ ಕೆಲವು ಕವಿಗಳ ಕಾವ್ಯವನ್ನು ಆರಿಸಿಕೊಳ್ಳಲಾಗಿದೆ.

ತೊಂಬತ್ತರ ದಶಕದ ಕಾವ್ಯವನ್ನು ಹಿರಿಯರಂತೆ ನಿಂತು ಮುನ್ನುಡೆಸುತ್ತಿರುವವರು ಎಚ್.ಎಸ್. ಶಿವಪ್ರಕಾಶ. ಸಮಕಾಲಿನ ವೈಚಾರಿಕತೆಯನ್ನು ಕಾವ್ಯಕ್ಕೆ ತಿದ್ದಿಕೊಳ್ಳುತ್ತಲೇ, ಸಾಂಪ್ರದಾಯಿಕ ಕಾವ್ಯದ ನಿಲುವನ್ನು ಸಮಕಾಲೀನತೆಗೆ ತಿದ್ದಿಕೊಂಡ, ಈ ತಿದ್ದಿಕೊಳ್ಳುವಿಕೆಯನ್ನು ನಮ್ರವಾಗಿ ನಂಬಿದ ಕವಿ ಇವರು. ದೇಶಿ ಛಂದಕ್ಕೆ ವಿದೇಶಿ ಸಂಗತಿಗಳನ್ನು, ವಿದೇಶೀ ರಿದಂಗೆ ದೇಶಿ ಸಂಗತಿಗಳನ್ನು ಅತ್ಯಂತ ಸಾವಯವವಾಗಿ ಬೆಸೆಯುವ ಮೂಲಕ ಕನ್ನಡ ಸಾಂಸ್ಕೃತಿಕ ಬದುಕಿಗೆ ಬೇಕಾದ ಒಳ ಹೊರಗಿನ ಸತ್ವಸಂಗತಿಗಳನ್ನೆಲ್ಲ ಕಾವ್ಯದಲ್ಲಿ ಕಟ್ಟಿಕೊಡಲೆತ್ನಿಸುವುದು ಇವರ ಕಾವ್ಯದ ಮುಖ್ಯ ಗುಣ. ಇವರ ಬಹುಪಾಲು ಕವಿತೆಗಳು ಕಾವ್ಯದ ಹೊಸತನವನ್ನು, ಸಂವೇದನೆಯ ಹೊಸತನವಾಗಿಯೇ ರೂಢಿಸಿಕೊಳ್ಳುತ್ತವೆ. ಆದ್ದರಿಂದಲೇ ಕನ್ನಡದ ಈ ಹೊತ್ತಿನ ಸಾಂಸ್ಕೃತಿಕ ಮಹಾತ್ವಾಕಾಂಕ್ಷೆಯನ್ನು ಶಿವಪ್ರಕಾಶರ ಮಹತ್ವದ ಕವಿತೆಯೊಂದರ ಓದಿನಲ್ಲಿ ಮೈತಡೆವಬಹುದಾದ ಅನುಭವವಾಗುತ್ತದೆ. ಅಷ್ಟರಮಟ್ಟಿಗೆ ಕತೆ – ಕಾದಂಬರಿ ಕಟ್ಟಿಕೊಡುವ ವಾಸ್ತವದರ್ಶನ, ಸಂಸ್ಕೃತಿ ಚಿಂತನೆ ರೂಪಿಸುವ ವೈಚಾರಿಕ ತಳಹದಿ, ಅನುಭಾವಿ ಕಾವ್ಯವೊಂದು ದಕ್ಕಿಸುವ ಸಂವೇದನೆ ಇತ್ಯಾದಿಗಳನ್ನೆಲ್ಲ ಇವರ ಕಾವ್ಯ ಅನುಭವವನ್ನು ತಂದುಕೊಡಲು ಶಕ್ತವಾಗುತ್ತದೆ. ಹಾಗಾಗಿಯೇ ಮೂರನೇ ಮಹಾಯುದ್ಧದ ಭೀತಿಯಲ್ಲಿ ನಿಂತಿರುವ ಈ ಕ್ಷಣದಲ್ಲಿ ಶಿವಪ್ರಕಾಶರ ಕಾವ್ಯದ ಒಂದು ತುಣುಕು ಹೊಸ ಓದೊಂದನ್ನು ಒತ್ತಾಯಿಸುತ್ತದೆ.

ಬಾ ಬಾ, ದುವಾ ಮಾಡಿ
ನನಗೆ ಗೊತ್ತು
ನೆತ್ತಿ ಮೇಲೆ ಹಾರುತ್ತಿರುವ ವಿಮಾನಗಳು
ಮೂಲತಃ
ದಿವ್ಯಲೋಕದ ಅಮರ ಪಕ್ಷಿಗಳು ಪಾಪ
ಅವು ಅಮೆರಿಕಾದಲ್ಲಿ ಹೀಗಾಗಿ ಬಿಟ್ಟವು (ಬಾಗ್ದಾದ: ಒಂದು ಪ್ರಾರ್ಥನೆ)

ಮೇಲಿನ ಆರು ಸಾಲಿನ ತುಂಡು ತುಂಡು ವಾಕ್ಯಗಳಿಗೆ ಈ ಬಗೆಯಲ್ಲಿ ಒತ್ತಾಯಿಸುವ ಸಾಮರ್ಥ್ಯ ಬಂದುದಾದರೂ ಎಲ್ಲಿಂದ ಎಂಬುದು ಆಶ್ವರ್ಯದ ಸಂಗತಿ. ಕಾವ್ಯದಲ್ಲಿ ಜಗತ್ತನ್ನು ಕಾಣುವ, ಕನ್ನಡದಲ್ಲಿ ಜಗತ್ತನ್ನು ಕಟ್ಟುವ ಈ ಶಕ್ತಿ ತೊಂಭತ್ತರ ದಶಕದ್ದು. ಆ ಸಾಧನೆಯ ಹಿಂದಿನ ಶ್ರಮವನ್ನು ಸ್ವತಃ ಕವಿ ಹೀಗೆ ವಿವರಿಸಿಕೊಳ್ಳುತ್ತಾರೆ.

‘ನನ್ನ ವಿಶಿಷ್ಟ ದನಿಯನ್ನು ಸ್ಥಾಪಿಸುವ ಇಂಗಿತಕ್ಕೆ ಬದಲಾಗಿ ಜಡಜಂಗಮಗಳ ಹಲವಂದದ ದನಿಗಳಲ್ಲಿ ನನ್ನದೆಂಬ ದನಿಯನ್ನು ಹುಡುಕಿಕೊಂಡು ಆ ಎಲ್ಲ ದನಿಗಳೊಂದಿಗೆ ವ್ಯವಹರಿಸುತ್ತ, ನನ್ನ ಸಣ್ಣ ದನಿಯನ್ನು ಎಲ್ಲ ದನಿಗಳ ಬೀಜವಾದ ಮೊದಲ ಜೀವದ ದನಿಗೆ ಮರು ತಾಕಿಸುವ ಒಳಗಿನ ಒತ್ತಡವೇ ನನಗೆ ಮೂಲ ಪ್ರೇರಣೆಯಾಗಿದೆ’.

ಕವಿ ಹೇಳಿಕೊಳ್ಳುವ ಈ ಒಳಗಿನ ಒತ್ತಡ ಕಾವ್ಯದಲ್ಲಿ ಕಂಡು ಬರುತ್ತದೆ ಸಹ. ಜಡ ಜಂಗಮಗಳ ಜಗತ್ತಿನ ಚರಿತ್ರೆಯ ಜೊತೆಗಿನ ತಾಳಮೇಳಗಳು ಇವರ ಕಾವ್ಯದ ಪ್ರಧಾನಗುಣ. ಕುಸುಮ ಬಾಲೆಯ ಅಳು, ಬಾಗ್ದಾದದ ಪ್ರಾರ್ಥನೆಗಳು ಒಂದರೊಳಗೊಂದು ಬೆರತು ಹೋಗುತ್ತವೆ. ಅರಬ್ಬಿಯ ಸೂಫಿ ಕಾವ್ಯತ್ವ, ಮಂಟೇಸ್ವಾಮಿಯ ಕಾವ್ಯ ಚರ್ಯೆಗಳೂ ಒಂದರೊಳಗೊಂದು ಕರಗಿ ಹೋಗುತ್ತವೆ. ಒಳ್ಳೆಯ ಕಾವ್ಯಕ್ಕೆ ಅನನ್ಯತೆಗಿಂತ ಹೆಚ್ಚಾಗಿ ಹಂಗುಬೇಕು. ಆ ಹಂಗು ಗದ್ಯದ್ದು, ಶೂದ್ರತ್ವದ್ದು, ಉಪೇಕ್ಷಿತದ್ದು, ಅಲಕ್ಷಿತದ್ದು… ಎಲ್ಲವೂ ಆಗಿರಬೇಕು. ಬಹುಶಃ ನವ್ಯರ ಸಂದರ್ಭದಲ್ಲಿ ಕಾವ್ಯ ಪಡೆದುಕೊಂಡ ಪೆಡಸು, ಅಹಂಗಳು ಈ ಹಂಗಿನಿಂದ ಮಾತ್ರ ಹರಿಯಲು ಸಾಧ್ಯ. ಹಾಗಾಗಿ ಯಾವ ಕಾವ್ಯದಲ್ಲಿ ಈ ಅಹಂ ನಿರಸನಗೊಂಡಿದೆ, ಹಂಗು ತೊರೆಯಾಗಿ ಹರಿದಿದೆ, ಆ ಕಾವ್ಯ ತೊಂಭತ್ತರ ದಶಕದ ಪ್ರಾತಿನಿಧಿಕ ಕಾವ್ಯವಾಗಿದೆ.

…. ಹೊಸತನ, ಪ್ರಯೋಗಶೀಲತೆ ಇತ್ಯಾದಿ ಗುಣಗಳೇ ಕಾವ್ಯದ ಮಹತ್ತಿನ ನಿರ್ಧಾರಕ ಅಂಶಗಳು ಎಂಬುದನ್ನು ಬದಿಗಿಟ್ಟು ನೋಡುವುದಾದರೆ ಪ್ರತಿಭಾನಂದಕುಮಾರ್ ಕುತೂಹಲಕಾರಿ ಕವಿಯಾಗಿ ಕಂಡು ಬರುತ್ತಾರೆ. ಪ್ರತಿಭಾ ಆರಂಭದಲ್ಲಿ ಬರೆಯುತ್ತಿದ್ದ ಹಾಗೆ ಈಗಲೂ ಬರೆಯುತ್ತಾರೆ. ಈ ಮಾತನ್ನು ಹಾಗೆ ಬೇಕಾದರೂ ಗ್ರಹಿಸಬಹುದು. ಆದರೆ ಕುತೂಹಲದ ಸಂಗತಿ ಎಂದರೆ ಹೇಗೆ ಬರೆಯುತ್ತಿದ್ದರೂ ಅವರ ಕಾವ್ಯ ಓದುಗರ ಕುತೂಹಲವನ್ನು ಉಳಿಸಿಕೊಂಡಿದೆ ಎಂಬುದು. ತೊಂಭತ್ತರ ದಶಕವನ್ನು ಕೆಲವು ವಿಮರ್ಶಕರು ಮಹಿಳಾ ಕಾವ್ಯದ ಕಾಲವೆನ್ನುವಂತೆ ವರ್ಣಿಸುತ್ತಾರೆ. ಇದು ಗಮನಾರ್ಹ ಮಾತು. ಮಹಿಳೆಯರು ಹೊಸ ಉತ್ಸಾಹವನ್ನು ಕಾವ್ಯಕ್ಕೆ ತುಂಬುತ್ತಿದ್ದಾರೆ. ಸ್ತ್ರೀ ಸಂವೇದನೆಯನ್ನು ಕಾವ್ಯ ಸಂವೇದನೆಯ ಕೇಂದ್ರಕ್ಕೆ ತರಲೆತ್ನಿಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಅವರ ಕಾವ್ಯ ಪ್ರಯೋಗವೆಂಬುದನ್ನು ಸ್ತ್ರೀ ಸಂವೇದನೆಯ ಸಾಧನ ಸಾಮಗ್ರಿಯಾಗಿ ಕಂಡಕೊಂಡಿದ್ದಾರೆ, ಕೊನೆಗೆ ಆ ಸಂವೇದನೆಯೇ ತಮ್ಮ ಕಾವ್ಯಶಿಲ್ಪವಾಗ ಬೇಕೆಂದು ಹಠ ಹಿಡಿದಿದ್ದಾರೆ. ಆ ಕಾರಣಕ್ಕಾಗಿಯೇ ಇವರು ಹೊಸದಾಗಿಯೇ ಕಾವ್ಯ ಎಂದರೇನು ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ವಿವರಿಸಿಕೊಳ್ಳತೊಡಗಿದ್ದಾರೆ. ಪರಂಪರೆಯೂ ನೀಡಿದ ಆ ಕುರಿತ ಅನುಭವೋಕ್ತಿಗಳನ್ನೆಲ್ಲ ಒರೆಹಚ್ಚುತ್ತಲೇ ತಮ್ಮ ಅನುಭವಕ್ಕಾಗಿ ತಡಕಾಡಿದ್ದಾರೆ. ತಮ್ಮ ಸಂವೇದನೆಗೆ ಪ್ರತಿಮೆಯಾಗುವ ಕಾವ್ಯ ಶಿಲ್ಪದ ಸಿದ್ಧಿಗಾಗಿ ಶ್ರಮಿಸಿದ್ದಾರೆ. ಈ ಬಗೆಯ ಶ್ರಮವನ್ನು ಗಮನಿಸಿದ್ದಾದರೆ ನಿಜಕ್ಕೂ ಕಳೆದ ಹತ್ತು ವರ್ಷಗಳಲ್ಲಿನ ಉತ್ತಮ ಕಾವ್ಯ ನಿರ್ಮಾಣದಲ್ಲಿನ ಸ್ತ್ರೀಯ ಉತ್ಸಾಹ, ಶ್ರಮಗಳು ಹೆಚ್ಚು ಮಹತ್ವಾಕಾಂಕ್ಷಿಯದು ಎನಿಸುತ್ತದೆ. ಆ ಬಗೆಯ ಶ್ರಮವನ್ನು ಉತ್ಸಾಹವನ್ನು ಪ್ರತಿಭಾ ಮತ್ತು ಮಮತಾ ಅವರ ಕಾವ್ಯದಲ್ಲಿ ಕಾಣಬಹುದು.

ಕಾವ್ಯದ ವಿಚಾರದಲ್ಲಿ ಪುರುಷನದು ಉಮರ್ ಖಯ್ಯಾಮ್‌ನ ಪರಂಪರೆ, ಕಾವ್ಯ, ಮದಿರೆ, ಕನ್ಯೆ ಮೂರನ್ನು ಸಮಾನಾಂತರದಲ್ಲಿ ಭಾವಿಸಿ, ಭೋಗಿಸುವ ಪರಂಪರೆ. ಅದಕ್ಕೆ ಕಾವ್ಯವೊಂದು ಕನ್ಯೆ. ಕಾವ್ಯವೊಂದೊ ನಶೆ. ಆದ್ದರಿಂದಲೇ ಕಾಶ್ಮೀರಿ ಕವಿಯೊಬ್ಬ ಬಿಕ್ಕಳಿಸುತ್ತಾನೆ.

ಅವರು ನನ್ನ ಕವನದ ಮಾನಭಂಗ ಮಾಡಿದರು
ಸೆರೆಗಳೆದು ಮುಡಿಕೆದರಿ ಹಾಳು ಗೆಡವಿದರು
ಪುಟದ ಗಲ್ಲಿ ಗಲ್ಲಿಗಳಲ್ಲಿ ಎಳೆದು ವಿರೂಪಗೊಳಿಸಿದರು.
(ಕವಡೆಯಾಟ/ಪ್ರತಿಭಾ ನಂದಕುಮಾರ್)

ಈ ಸಂವೇದನೆಯನ್ನು ಅನುಸರಿಸುವುದಾದರೆ ಸ್ತ್ರೀ ಒಂದೋ ತನ್ನನ್ನೆ ಕಾವ್ಯವಾಗಿಸಿ ಕೊಳ್ಳಬೇಕು ಇಲ್ಲ ಪುರಷರನ್ನು ಕಾವ್ಯವಾಗಿಸಿಕೊಳ್ಳಬೇಕು. ಈ ಎರಡೂ ಮಾದರಿಗಳನ್ನು ಈ ದಶಕದಲ್ಲಿ ನೋಡಬಹುದಾಗಿದೆ.

ಕವಿತೆಯೆಂದರದೊಂದು ತೆವಲು.
ದಷ್ಟ ಪುಷ್ಟ; ಮೈ ಕಟ್ಟಿನ
ಪ್ರಿಯತಮನ ಹಾಗೆ
ಶಬ್ದಗಳ ತೂಕ ಅವನ ಒಂದೊಂದು
ಸ್ನಾಯು ಬಲವಿದ್ದ ಹಾಗೆ
ಓದುತ್ತಲೇ ಗಕ್ಕನೆ ಅಪ್ಪಿಬಿಡಬೇಕು
ಅವನಪ್ಪುಗೆಯ ಹಾಗೆ
ಕವಿತೆ ಸಿದ್ಧವಾದ ಮೇಲೆ ಹಿತವಾಗಿರಬೇಕು.
ಅವನ ಜತೆ ಕಳೆದ ರಾತ್ರಿಯ
ನೆನಪಿನ ಹಾಗೆ. (ಕಾಡನವಿಲನ ಹೆಜ್ಜೆ, ಮಮತ, ಜಿ. ಸಾಗರ್)

ಇದು ನೇರವಾಗಿ ಪುರಷ ಸಂವೇದನೆಯನ್ನು ತನ್ನ ಆಳಕ್ಕಿಳಿಸಿಕೊಳ್ಳುವ ವಿಧಾನ. ಪುರುಷನಿಗೆ ಕಾವ್ಯ – ಕನ್ಯೆಯ ನಡುವೆ ವ್ಯತ್ಯಾಸವಿಲ್ಲದಿದ್ದಂತೆ ಸ್ತ್ರೀಗೆ ಕವಿತೆ – ಪ್ರಿಯತಮನ ನಡುವೆ ಹೊಂದಾಣಿಕೆ ಏರ್ಪಡುವ ವಿಧಾನ. ಇಂತಹ ಕಾವ್ಯ ಶಿಲ್ಪದ ಬಗೆಗಿನ ಉತ್ಸಾಹವನ್ನು ಲೇಖಕಿಯರು ಹಲವಾರು ಬಾರಿ ತೋರಿಸಿದ್ದಾರೆ. ಇದೊಂದು ಉದಾಹರಣೆ ಅಷ್ಟೆ. ಮೇಲಿನದಕ್ಕಿಂತ ಭಿನ್ನವಾಗಿ ಪುರುಷನ ಸಂವೇದನೆಯನ್ನು ತಿದ್ದಿ ತನ್ನದಾಗಿಸಿಕೊಳ್ಳುವ ಇನ್ನೊಂದು ಕಾವ್ಯ ಶಿಲ್ಪವೂ ಕನ್ನಡ ಲೇಖಕಿಯರಿಗೆ ದಕ್ಕಿದೆ. ಅದು ಕಾವ್ಯವೆಂದರೆ ನಾನೇ ಎಂಬ ಮಹಾತ್ವಾಕಾಂಕ್ಷೆಯನ್ನು ಅಂತರ್ಗತಗೊಳಿಸಿಕೊಂಡು ಆಕೃತಿಗೊಳ್ಳುವ ಕಾವ್ಯ. ಕಾವ್ಯವಾಗುತ್ತಲೇ ನಶೆ ಏರಿಸುತ್ತಲೇ ಅವನನ್ನು ಬಿಗಿದುಕಟ್ಟುವ ಹುಮ್ಮಸ್ಸಿನ ಕಾವ್ಯ.

ಇವಳು ಕತ್ತಲ ಕನ್ಯೆ!
ಅಡಗಿದ್ದ ಸೂರ್ಯನ್ನ
ಆಕಾಶಕ್ಕೆ ಕೊಡವಿ,
ಮತ್ತೆ ಮುಡಿ ಕಟ್ಟುತ್ತಾಳೆ, (ನದಿಯ ನೀರಿನ ತೇವ, ಮಮತ, . ಸಾಗರ್)

ಕೊಡ ಮೊಗೆದು ತುಂಬಿ ಎರೆದು
ಮೃಗನಯನಿ ನಿಟ್ಟುಸಿರಿಟ್ಟು
ಬಿಗಿದ ಕಂಚುಕ ಸಡಿಲಿಸಿಹಾಯೆಂದಿದ್ದು
ನಿನ್ನೆ ಮೊನ್ನೆ.
…….
ಗಗನ ಬಿರಿದು ಬಂದ ಸ್ವರ್ಗದ ಹಕ್ಕಿ
ಕರೆದೊಯ್ದಿದ್ದು ನಿಧಿಯ ಮುಚ್ಚಿಟ್ಟ ಹೊದಿಕೆ
ತನ್ನ ಪಾಲಿನ ವನವಾಸ ಮುಗಿಸಿದನಂತೆ ಪಾಪಿ
ಮೃಗನಯನಿ ಪಾಪ ಮೃಗಜಲದ ಹಿಂದೆ. (ಕವಡೆಯಾಟ, ಪ್ರತಿಭಾ ನಂದಕುಮಾರ)

ಕತ್ತಲ ಕನ್ಯೆಯ ಆತ್ಮ ವಿಶ್ವಾಸ, ಮೃಗನಯನಿಯ ನಿಟ್ಟುಸಿರು ಇವೆಲ್ಲ ತೊಂಬತ್ತರ ದಶಕದ ಮಹೀಳಾ ಕಾವ್ಯದ ವಿವಿಧ ಮಾದರಿಗಳು. ಕಾವ್ಯವನ್ನು ತನ್ನ ಅಂಗೈಗೆ ತಂದುಕೊಳ್ಳುವ ಹಂಬಲ ಸಾಹಸ, ಅಂಗೈ ಹತ್ತಿದ್ದರ ಬಗೆಗಿನ ಅಸಮಾಧಾನ, ಆತಂಕ, ಆ ಆತಂಕವನ್ನೇ ಪದೇ ಪದೇ ಕಾವ್ಯವಾಗಿಸುವ ಹಠ ಇತ್ಯಾದಿಗಳೆಲ್ಲದರ ಪ್ರತಿರೂಪವಾಗಿ ಮಹಿಳಾ ಕಾವ್ಯ ಕಂಡುಬರುತ್ತದೆ.

…. ಕಾವ್ಯ ವೈಯಕ್ತಿಕವಾದುದೇ ಇಲ್ಲ ಸಾಮಾಜಿಕವಾದುದೇ ಎಂಬ ಚರ್ಚೆ ೮೦ರ ದಶಕದಲ್ಲಿ ಪ್ರಧಾನವಾಗಿ ನಡೆದಿದೆ. ಆ ಚರ್ಚೆಯಲ್ಲಿ ಅವೆರಡನ್ನೂ ಪ್ರತ್ಯೇಕವಾಗಿ ಭಾವಿಸಿ, ಎರಡರಲ್ಲಿ ಒಂದರ ಪರ ನಿಂತು ವಾದಿಸಿದವರೂ, ಹಠ ತೊಟ್ಟುಬರೆದವರೂ ಇದ್ದಾರೆ. ಈ ಎಲ್ಲ ಪ್ರಯತ್ನಗಳು ೯೦ರ ದಶಕದಲ್ಲಿ ಮುಂದುವರಿದಿದ್ದು ನವ್ಯ ಬಂಡಾಯ ಇತ್ಯಾದಿ ಕಾವ್ಯಸಂವೇದನೆಗಳು ಹಲವಾರು ಕವಿಗಳ ಸಂದರ್ಭದಲ್ಲಿ ಅಷ್ಟೇ ಮಡಿವಂತಿಕೆಯನ್ನು ಉಳಿಸಿ ಕೊಂಡಿರುವುದು ಕಂಡು ಬರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ ಯಾವ ಎಗ್ಗೂ ಇಲ್ಲದೆ ಒಂದಿಷ್ಟು ರಮ್ಯ, ಮತ್ತಷ್ಟು ನವ್ಯ, ಕಡೆಗೊಂದಿಷ್ಟು ಬಂಡಾಯ ಎಂಬಂತೆ ಜೋಡಿಸಿ ಕಾವ್ಯ ಕಟ್ಟಿದವರೂ ಹೇರಳವಾಗಿದ್ದಾರೆ. ಇಂತಹ ಕಾವ್ಯಗಳಿಗೆ ನವ್ಯ, ನವೋದಯ, ಬಂಡಾಯ ಇತ್ಯಾದಿಗಳೆಲ್ಲಿ ಕೇವಲ ಛಂದಸ್ಸಿನಂತೆ, ಇಂತಿಂತಹ ವಸ್ತುವನ್ನು ಆರಿಸಿಕೊಂಡಾಗ ಈ ಮನೋಭಾವವನ್ನು ಅನುಸರಿಸಬೇಕು. ಬಡವರ, ದಲಿತರ ಬಗ್ಗೆ ಬರೆಯುವಾಗ ಬಂಡಾಯ ಸಂವೇದನೆ, ಪರಂಪರೆ ಬಗ್ಗೆ ಬರಿಯುವಾಗ ರಮ್ಯ, ಹೆಣ್ಣಿನ ಬಗ್ಗೆ ಬರೆದಾಗ ಸ್ವಲ್ಪ ರಮ್ಯ, ಸ್ವಲ್ಪ ಬಂಡಾಯ…. ಹೀಗೆ. ಇಲ್ಲಿ ಇಂತಹ ಕಾವ್ಯದ ಪಟ್ಟಿ ಮಾಡುವ ಅಗತ್ಯವೇ ಹೊಳೆಯುತ್ತಿಲ್ಲ.

ಈ ಮಧ್ಯೆ ಕನ್ನಡ ಕಾವ್ಯವು ಕೈಗೆತ್ತಿಕೊಂಡ ವೈಯಕ್ತಿಕ ಇಲ್ಲ ಸಾಮಾಜಿಕ ಎಂಬ ಚರ್ಚೆಯನ್ನು ಕಾವ್ಯದ – ಕವಿಯ ಅಂತಃ ಸತ್ವದ ಪ್ರಶ್ನೆಯಾಗಿ ಪರಿಭಾವಿಸಿ ಕಾವ್ಯ ನಿರ್ಮಾಣದಲ್ಲಿ ತೊಡಗಿದ ಕೆಲವು ಕವಿಗಳು ೯೦ ರ ದಶಕದ ಕಾವ್ಯವನ್ನು ನಿಜವಾದ ಅರ್ಥದಲ್ಲಿ ಪ್ರತಿನಿಧಿಸುವವರಾಗಿದ್ದಾರೆ. ಇವರ ಕಾವ್ಯ ದಲಿತ, ಬಂಡಾಯಗಳ ನಂತರ ಕನ್ನಡ ಕಾವ್ಯ ಚಲನರಾಹಿತ್ಯವಾಗಿ ನಿಂತಿದೆಯೇ ಎಂಬ ಅನುಮಾನವನ್ನು ಬಹುಮಟ್ಟಿಗೆ ದೂರಾಗಿಸುತ್ತವೆ. ತನ್ನ ಪರಂಪರೆಯು ನಡೆಸಿದ ವಾಗ್ವಾದಗಳನ್ನು, ತಳೆದ ನಿಲುವುಗಳನ್ನು ಅರಗಿಸಿಕೊಳ್ಳತ್ತಲೇ, ತಾನು ನಿಂತ ನೆಲೆಯನ್ನು ಸಮರ್ಥವಾಗಿ ಪ್ರತಿಪಾದಿಸಿಕೊಳ್ಳುವ ಈ ಕಾವ್ಯ ಹೆಚ್ಚು ಮಹತ್ವಾಕಾಂಕ್ಷೆಯಾಗಿದೆ. ಅಂತಹ ಕವಿಗಳಲ್ಲಿ ಗುರುತಿಸಲೇಬೇಕಾದವರು ಬಂಜಗೆರೆ ಜಯಪ್ರಕಾಶ ಮತ್ತು ಬಿ. ಪೀರ ಭಾಷಾ.

ಅಯ್ಯೇ! ಕಡಲೇ ಕವಿತೆಯೇ
ಯಾವ ಮಾತು ಬರೆದರೂ ನಾನು, ಮುಗಿವಿಲ್ಲ ನಿನ್ನ ಅಲೆಗಳಿಗೆ
ಹೇಗೆ ಹೇಳಿದರೋ ಅದನ್ನು
ಮಾತು ಎಷ್ಟಾದರೂ ಮಾತೇ
ನಾನು ನುಂಗುತ್ತಿರುವ ಬೆಂಕಿ ಮಾತ್ರ ತೃಣವಾದರೂ
ನಿಜದ ಅನುಭವದ ಬೆಂಕಿ ಗೊತ್ತೆ
(ನಾಳೆಗಾದರು ಸಿಗದೆ ನಿನ್ನ ತಾವಿನ ಗುರುತು, ಬಂಜಗೆರೆ ಜಯಪ್ರಕಾಶ)

ಕನ್ನಡ ಕಾವ್ಯ ಪರಂಪರೆಯ ಶ್ರದ್ಧೆ ದೊಡ್ಡದು. ಕವಿತೆ ಎಂಬುದು ಕಡಲಿನಂತೆ, ಅದರ ಅಲೆಗಳಿಗೆ ಮುಗಿವಿಲ್ಲ ನಿಜ. ಆದರೂ ಅದು ಜೀವನದ ಹಲವಾರು ‘ಅಗ್ನಿದಿವ್ಯ’ಗಳ ಮುಖಾಮುಖಿಯಲ್ಲಿ ಕೇವಲ ಮಾತಾಗಿ ಬಿಡುತ್ತದೆ ತೃಣಮಾತ್ರವಾಗಿಯೇ ಬಂದೊದಗುವ ಆ ಅನುಭವಗಳು ಬೆಂಕಿಯಂತೆ ಬದುಕನ್ನು, ಕಾವ್ಯವನ್ನು ತೃಣವಾಗಿಸಿ ಆಹುತಿ ತೆಗೆದುಕೊಂಡು ಬಿಡಬಲ್ಲುದಾಗಿದೆ. ಆದ್ದರಿಂದಲೇ ಕವಿತೆ ಮುಗಿಯದ ಅಲೆಗಳಾದರೆ ಸಾಲದು. ಸಾಗರದಾಳವು ಆಗಬೆಕು. ಆಗ ಕಾವ್ಯ ತನ್ನ ವೈಯಕ್ತಿಕತೆಯನ್ನು ಪ್ರೀತಿಸುತ್ತಲೇ ಸಾಮಾಜಿಕತೆಯನ್ನು ಸ್ವೀಕರಿಸಿ ಬಿಡುತ್ತದೆ. ಅಂತಹ ಕ್ಷಣದಲ್ಲಿ ಹುಟ್ಟುವ ಕಾವ್ಯ ಸಮಾಜದಲ್ಲಿ ಜೀವದ್ರವವನ್ನು ಕರೆಯುತ್ತದೆ.

ಕಣ್ಣೀರು ಕರೆಯುವೆನು
ಕಣ್ಣೀರೊಳಗೆ ಕಣ್ಣೋಟವಾಗು ಸೂರ್ಯನೆ! ಕರೆಯುವೆನು
ಹೂವಿನೆದರು ಕಂಬನಿ ದುಂಬಿ
ಪ್ರಾರ್ಥನೆಗೆ ಬಾಗುವೆನು
ತಂದೆಯೇ ನಿನ್ನ ಮುಂಜಾನೆ ಕಿರಣಗಳು
ಕೊನೆಗೊಳಿಸಲೀ ದುಃಸ್ವಪ್ನವನ್ನು
ಮತ್ತೆ ಬರೆಯಲೀ ದುರ್ಬಲ ಕೈಗಳ ಹಣೆ ಬರಹವನ್ನು
ಬದಲಿಸಲೀ ಶೋಕಗೀತೆಯ
ಕೊನೆಯ ಚರಣಗಳನ್ನು (ನಾಳೆಗಾದರೂ……ಜಯಪ್ರಕಾಶ)

ಶಾಂತಿಯನ್ನು ನಾನು
ಯಾವ ಭಾಷೆಯಲ್ಲೂ ಕರೆಯಲಾಗಲಿಲ್ಲ
ಮರಳು ಗಾಡಿಗೆ ಹೆದರಿ, ನಾನಂದು
ಮಗುವ ಕಣ್ಣಿನೊಳಗಿದ್ದೆ,,
ಪ್ರೀತಿ….. ನನ್ನನ್ನು ಪ್ರಶ್ನಿಸಿದಾಗೆಲ್ಲ
ನಾನು ಮೂಕನಾದೆ. ಹೃದಯಕ್ಕೆ
ಮಾತು ಮೂಡುವ ಮೊದಲೇ
ನಾನದನ್ನು ಕಳೆದು ಕೊಂಡಿದ್ದೆ. (ಜಾಲಿ ಹೂಗಳ ನಡುವೆ, ಬಿ. ಪೀರ್ ಬಾಷಾ)

ಮೇಲಿನ ಎರಡು ಕಾವ್ಯ ತುಣುಕುಗಳನ್ನು ಗಮನಿಸಿದ್ದಾದರೆ ಕನ್ನಡ ಕಾವ್ಯವು ಹಂಬಲಿಸುತ್ತಿರುವ ಸಾಮಾಜಿಕ ಬದ್ಧತೆಯ ಸ್ವರೂಪ, ಅದಕ್ಕೆ ಕಾವ್ಯವನ್ನು ಹದಗೊಳಿಸಿಕೊಳ್ಳುತ್ತಿರುವ ವಿಧಾನಗಳು ಮನದಟ್ಟಾಗುತ್ತವೆ. ಇಂತಹ ಉದಾಹರಣೆಗಳು ಹೇರಳವಾಗಿ ದೊರೆಯದಿದ್ದರೂ, ದೊರೆಯುವ ಕೆಲವು ಉದಾಹರಣೆಗಳೆ ಕನ್ನಡ ಕಾವ್ಯದ ಬಗ್ಗೆ ಭರವಸೆಯನ್ನು ಉಳಿಸಿ ಬೆಳೆಸುವುದಾಗಿದೆ. ಆ ಭರವಸೆ ದಾರ್ಶನಿಕತೆಯೊಳಗಿನ ಬಂಡಾಯವನ್ನು, ವೈಯಕ್ತಿಕತೆಯೊಳಗಿನ ಸಾಮಾಜಿಕತೆಯನ್ನು ಮೂಲದ್ರವ್ಯವಾಗಿ ಬಳಸುವುದಾಗಿದೆ. ಹಾಗಾಗಿಯೇ ಮೇಲಿನ ಉದಾಹರಣೆಗಳು ತನ್ನ ಕಾವ್ಯ ಪಂಥಗಳ ಶಠತ್ವವನ್ನು ಕಳೆದುಕೊಂಡು ಅವುಗಳೆಲ್ಲದರ ಸಾರವನ್ನು ಹೀರಿಕೊಂಡೇ ಮುನ್ನುಗ್ಗುವ ಪ್ರಯತ್ನ ನಡೆಸುತ್ತದೆ.