ಅಭಿನಂದನಾ ಗ್ರಂಥ ಪ್ರಕಾರ ಎನ್ನುವುದು ಲೇಖಕರ ಸಾಧನೆಯನ್ನು ಗುರುತಿಸಿ, ಅವರ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಸೇವೆಯನ್ನು ಮನ್ನಿಸಿ ಗೌರವ ಗ್ರಂಥವನ್ನು ಸಮರ್ಪಿಸುವ ಕ್ರಿಯೆಯಾಗಿದೆ. ಇದು ಆಧುನಿಕ ಕಾಲದ ಸಾಹಿತ್ಯ ಸಂಸ್ಕೃತಿಯ ಗುಣಾತ್ಮಕ ಪ್ರಕ್ರಿಯೆಯಾಗಿ ಮುಂದುವರಿದಿದೆ. ನಾಡಿನ ನುಡಿ ಸೇವೆಗಾಗಿ ಸಲ್ಲಿಸಿದ ಗಣನೀಯ ಸಾಧನೆಯನ್ನು ಪರಿಗಣಿಸಿ ಅಭಿನಂದನಾ ಗ್ರಂಥಗಳನ್ನು ಅರ್ಪಿಸುವುದು ಬಿ.ಎಂ.ಶ್ರೀಕಂಠಯ್ಯನವರಿಂದಲೇ ಆರಂಭವಾಯಿತೆಂದು ತೋರುತ್ತದೆ. ಅಪಾರ ಶಿಷ್ಯರು ಹಾಗೂ ಕನ್ನಡ ಸಾಹಿತ್ಯ ವಲಯದ ದಿಗ್ಗಜರು ಸೇರಿ ಶ್ರೀಯವರಿಗೆ ‘ಸಂಭಾವನೆ’ಯಾಗಿ ಸಮರ್ಪಿಸಿದ ಗ್ರಂಥ ಪರಮಪರೆಯು ಅವ್ಯಾಹತವಾಗಿ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಹೊಸಗನ್ನಡ ಸಾಹಿತ್ಯದ ಪುನರುಜ್ಜೀವನ ಕಾಲಘಟ್ಟದಲ್ಲಿ ಕನ್ನಡದ ಪೂರ್ವಸೂರಿಗಳು ತಮ್ಮ ತಮ್ಮ ಪಾಂಡಿತ್ಯ – ಪ್ರತಿಭೆಗಳ ಸಮ್ಮಿಲನದಿಂದ ಅನನ್ಯವಾದ ಸಾಹಿತ್ಯ ಕೃಷಿಯನ್ನು ಮಾಡಿಕೊಂಡು ಬಂದವರಾಗಿದ್ದಾರೆ. ಹೀಗಾಗಿ ಆಧುನಿಕ ಕನ್ನಡದ ಮೊದಲ ತಲೆಮಾರಿನ ಸಾಹಿತಿಗಳ ಕ್ರಿಯಾಶೀಲತೆ ಹಾಗೂ ಸಾಂಸ್ಕೃತಿಕ ಹೊಣೆಗಾರಿಕೆಗಳನ್ನು ಗುರುತಿಸಿ ಅಭಿನಂದಾ ಗ್ರಂಥಗಳನ್ನು ಸಮರ್ಪಿಸುವುದು ನಾಡಿನ ಸುಸಂಸ್ಕೃತರ ಜವಾಬ್ದಾರಿಯುತವಾದ ಪರಂಪರೆಯಾಗಿ ಮುನ್ನಡೆದಿದೆ. ಮೊದಲ ತಲೆಮಾರಿನ ಸಾಹಿತಿಗಳ ವಿಷಯದಲ್ಲಿ ಈ ಪ್ರಕ್ರಿಯೆಯು ತುಂಬಾ ಶಕ್ತಿಯುತವಾಗಿ ಸಾಗಿಬಂದಿದೆ. ಕ್ರಮೇಣ ಚಟುವಟಿಕೆಯು ಸಡಿಲಗೊಂಡು ವ್ಯತ್ಯಸ್ಥವಾಗಿಯೂ ಮುಂದುವರಿದಿದ್ದನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ.

ಅಭಿನಂದನ ಗ್ರಂಥಗಳ ಒಟ್ಟು ಚಲನಶೀಲ ಪ್ರಕ್ರಿಯೆಯನ್ನು ಗಮನಿಸಿ, ಹೊಸಗನ್ನಡದ ಆರಂಭಕಾಲದಿಂದ ಹಿಡಿದು ಇಂದಿನವರೆಗೆ ಈ ಪ್ರಕಾರದಲ್ಲಿ ಸಾಗಿಬಂದ ಪ್ರಮುಖ ಆಶಯಗಳನ್ನು ಗುರುತಿಸುವುದು ಸೂಕ್ತವಾದ ಗಮನಿಕೆಯಾಗುತ್ತದೆ. ಈ ನೆಲೆಯಿಂದ ಪಟ್ಟಿ ಮಾಡುವ ಆಶಯಗಳು ಪ್ರಸ್ತುತ ತೊಂಬತ್ತರ ದಶಕದ ಅಭಿನಂದನಾ ಗ್ರಂಥಗಳ ಬಗೆಗೂ ಅನ್ವಯಿಸುವುದರಿಂದ ಅವುಗಳ ಗುಣಲಕ್ಷಣಗಳನ್ನು ಇಲ್ಲಿ ಹೀಗೆ ಗುರುತಿಸಬಹುದಾಗಿದೆ:

೧. ಸಾಹಿತ್ಯ ಪರಂಪರೆಯಲ್ಲಿ ಮುಖ್ಯರೆಂದು ಪರಿಗಣಿತರಾದ ಮೊದಲ ತಲೆಮಾರಿನ ಸಂಶೋಧಕರು, ಕವಿಗಳು, ಕಾದಂಬರಿಕಾರರು, ಚಿಂತಕರು ಮೊದಲಾದವರಿಗೆ ಉತ್ಕೃಷ್ಟವಾಗಿ ಅಭಿನಂದನಾ ಗ್ರಂಥಗಳು ಬಂದವು.

೨. ಅಭಿನಂದನೆಯಷ್ಟನ್ನೇ ಮುಖ್ಯವಾಗಿ ಪ್ರಕಟಿಸುವುದರ ಬದಲು, ಅದರ ಉಪಯುಕ್ತತೆಯನ್ನು ಹೆಚ್ಚಿಸುವ ಸಲುವಾಗಿ ಅದನ್ನು ಆಕರ ಗ್ರಂಥವನ್ನು ರೂಪಿಸುವುದು.

೩. ವಿದ್ವತ್ತಿನ ಪ್ರೌಢಿಮೆ ಕಡಿಮೆಯಾದಂತೆ ಅಭಿನಂದನಾ ಗ್ರಂಥದ ಸ್ವರೂಪದಲ್ಲಿ ಬದಲಾವಣೆಯಾಗಿರುವುದು.

೪. ಅಭಿನಂದನೆಯ ಜೊತೆ ಜೊತೆಗೆ ಸಾಹಿತ್ಯ ಪರಂಪರೆಯಲ್ಲಿ ಮುನ್ನೆಲೆಗೆ ಬಂದ ‘ಥೀಮ್‌’ನ್ನು ಗುರುತಿಸಿ, ಆ ಕ್ಷೇತ್ರಕ್ಕೆ ಸಂಬಂಧಿಸಿದ ಲೇಖನಗಳನ್ನು ಸೇರಿಸಿ ಅಭಿನಂದನಾ ಗ್ರಂಥವನ್ನು ರೂಪಿಸುವುದು.

೫. ಅಭಿನಂದನೆಗೆ ಅರ್ಹರಾದ ಲೇಖಕರ ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದಂತೆಯೇ ಲೇಖನಗಳನ್ನು ಸ್ವೀಕರಿಸಿ ಅಭಿನಂದನಾ ಗ್ರಂಥವನ್ನು ಹೊರತರುವುದು.

೬. ಅಭಿನಂದನೆಯ ಭಾಗವನ್ನು ಸಂಕ್ಷಿಪ್ತವಾಗಿ ಸಮೀಕ್ಷೆಯಲ್ಲಿ ಅಡಕಗೊಳಿಸಿ, ನಿರ್ದಿಷ್ಟವಗಾಗಿ ಒಂದು ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನಾ ಲೇಖನಗಳಿಂದ ಕೃತಿಯನ್ನು ರೂಪಿಸುವುದು.

೭. ಸಂಶೋಧನಾ ಲೇಖನಗಳ ಸಂಕಲನವಾಗಿ ಒಂದು ಕೃತಿಯನ್ನೂ, ಅಭಿನಂದನೆಗೆ ಸಂಬಂಧಿಸಿದ ಲೇಖನಗಳ ಸಂಕಲನವಾಗಿ ಇನ್ನೊಂದು ಕೃತಿಯನ್ನೂ ಹೀಗೆ ಎರಡು ಅಭಿನಂದನಾ ಗ್ರಂಥಗಳನ್ನು ಹೊರತರುವುದು.

೮. ಸಾಹಿತಿಗಳು, ಸಂಶೋಧಕರು ಮೊದಲಾದವರಿಂದ ಆರಂಭವಾದ ಈ ಪ್ರಕ್ರಿಯೆಯನ್ನು ಸಾಂಸ್ಕೃತಿಕವಾಗಿ ಗಣನೀಯ ಸೇವೆ ಸಲ್ಲಿಸಿದ ಸಮಾಜ ಸುಧಾರಕರು, ಮಠಾಧಿಪತಿಗಳು, ರಾಜಕಾರಣಿಗಳು ಹಾಗೂ ರಂಗಭೂಮಿ, ಸಂಗೀತ – ಕಲೆಗಳಿಗೆ ಸಂಬಂಧಪಟ್ಟ ಮಹನೀಯರನ್ನು ಗುರುತಿಸಿ ಅಭಿನಂದನಾ ಗ್ರಂಥಗಳನ್ನು ಸಮರ್ಪಿಸುವುದು.

೯. ಅಭಿನಂದನೆಗೆ ಅರ್ಹರಾದ ವ್ಯಕ್ತಿಗಳು ಸೃಜನ ಪ್ರಕಾರದ ಸಾಹಿತಿಗಳೊ, ವಿಮರ್ಶಕರೊ, ಸಂಶೋಧಕರೊ ಎನ್ನುವ ಲಕ್ಷಣಗಳಿಗಿಂತ ಅವರವರ ಜನಪ್ರಿಯತೆ, ಶಿಷ್ಯ ಸಂಪತ್ತು, ಪ್ರಭಾವಳಿ ಹಾಗೂ ಸಾಹಿತ್ಯ ಶ್ರೇಷ್ಠತೆಗಳ ಕಾರಣಗಳಿಂದಾಗಿ ಅಭಿನಂದನಾ ಗುಣಾಗಾತ್ರಗಳು ಪ್ರಾಪ್ತವಾಗಿವೆ.

ಹಿಂಚಲನೆ: ಸ್ವತಃ ಲೇಖಕರು ಈ ಪರಂಪರೆಯಲ್ಲಿ ಸೇರಿಕೊಳ್ಳಲು ತಮ್ಮ ಶಿಷ್ಯರನ್ನು ಒತ್ತಾಯಪೂರ್ವಕವಾಗಿ ಒಪ್ಪಿಸಿ ತಮ್ಮ ನೇತೃತ್ವದಲ್ಲಿಯೇ ಅಭಿನಂದನಾ ಗ್ರಂಥವನ್ನು ಸಿದ್ಧಪಡಿಸಿಕೊಳ್ಳುವುದು.

ಅಭಿನಂದನಾ ಗ್ರಂಥಗಳ ಚೌಕಟ್ಟು

ಲೇಖಕ, ಕವಿ, ಕಲಾವಿದ, ಸಂಗೀತಗಾರ ಮೊದಲಾದವರ ಅಭಿನಂದನೆಗಾಗಿಯೇ ರೂಪಿತವಾದ ಪ್ರಕಾರ ಇದಾಗಿರುವುದರಿಂದ, ಈ ಕೃತಿಯಲ್ಲಿ ಅಭಿನಂಧನೆಗೆ ಹೊರತಾಗಿ ಏನನ್ನೂ ನಿರೀಕ್ಷಿಸುವ ಹಾಗಿಲ್ಲ. ಆದರೆ, ಈ ಪ್ರಕಾರದಲ್ಲಿ ಆದ ಬದಲಾವಣೆ ಏನೆಂದರೆ ‘ಸಂಶೋಧನಾ ಲೇಖನಗಳ ಭಾಗ’ ವೊಂದನ್ನು ಇಲ್ಲಿ ಖಡ್ಡಾಯವಾಗಿ ಸೇರಿಸುತ್ತಾ ಬಂದಿರುವುದು. ಆದ್ದರಿಂದಲೇ ಇದು ಅಭಿನಂದನೆಯನ್ನೂ ಮೀರಿ ಕನ್ನಡ ಸಾಹಿತ್ಯ ಸಂಸ್ಕೃತಿಯ ಅಧ್ಯಯಗಳ ಆಕರ ಪ್ರಕಾರವಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಲು ಬಂದಿದೆ. ಈ ಕಾರಣಕ್ಕಾಗಿ ಪ್ರತಿಯೊಬ್ಬ ಸಂಶೋಧಕರು, ಅಧ್ಯಯನಕಾರರು ಈ ಪ್ರಕಾರದ ಗ್ರಂಥ ಸಮೂಹವನ್ನು ಪರಿಶೀಲಿಸುವುದನ್ನು ಒಂದು ಶಿಸ್ತನ್ನಾಗಿ ಮಾಡಿಕೊಂಡು ಬಂದಿದ್ದಾರೆ.

ಅಭಿನಂದನ ಗ್ರಂಥಗಳ ಸ್ವರೂಪದಲ್ಲಿ ಹಲವು ಭಾಗಗಳಿರುತ್ತವೆ. ಇವುಗಳಲ್ಲಿ ಲೇಖಕರನ್ನು ಅಭಿನಂದಿಸುವ ಲೇಖನಗಳ ಭಾಗ ಒಂದಾದರೆ; ಇನ್ನೊಂದು ಭಾಗದಲ್ಲಿ ಅವರ ಕೃತಿಗಳನ್ನು ಸಮೀಕ್ಷಿಸುವ ವಿಷಯವಿರುತ್ತದೆ. ಮತ್ತೊಂದರಲ್ಲಿ ಹರಕೆ – ಹಾರೈಕೆಗಳು ಹಾಗೂ ಸಾಂಸ್ಕೃತಿಕ ಬರಹಗಳನ್ನು ಸೇರಿಸಲಾಗುತ್ತದೆ. ಸಂಶೋಧನಾ ಲೇಖನಗಳ ಭಾಗವೊಂದು ಪ್ರತ್ಯೇಕವಾಗಿರುತ್ತದೆ. ಅನುಬಂಧದ ಭಾಗದಲ್ಲಿ ಲೇಖಕರ ಒಟ್ಟು ಕೃತಿಗಳ ಪಟ್ಟಿಯನ್ನು ಹಾಗೂ ಅವರ ಜೀವನದ ಮಹತ್ವದ ಘಟ್ಟಗಳ ಕ್ಯಾಲೆಂಡರ್ ದಾಖಲಾತಿಯನ್ನು ಒದಗಿಸಲಾಗುತ್ತದೆ. ಇಷ್ಟು ಭಾಗಗಳು ಸಾಮಾನ್ಯವಾಗಿ ಎಲ್ಲ ಅಭಿನಂದನಾ ಗ್ರಂಥಗಳಲ್ಲಿ ಪಾಲಿತವಾಗುವ ಕ್ರಮವಾಗಿ ಜಾರಿಯಲ್ಲಿವೆ.

ಇತ್ತೀಚಿನ ಅಭಿನಂದನ ಗ್ರಂಥಗಳ ಚೌಕಟ್ಟುಗಳಲ್ಲಿ ಕ್ರಾಂತಿಕಾರಿ ಎನಿಸುವ ಮಹತ್ವದ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇಲ್ಲಿರುವ ಅಭಿನಂದನ ಭಾಗವನ್ನು ಕಡಿಮೆ ಮಾಡಿ, ಈ ಗ್ರಂಥವನ್ನು ಸಂಶೋಧನಾ ಆಕರ ಗ್ರಂಥವನ್ನಾಗಿ ಮಾಡಬೇಕೆಂಬ ಒತ್ತಾಸೆಯು ಕೆಲಸಮಾಡುತ್ತಿದೆ. ವ್ಯಕ್ತಿಯ ಸಂಭ್ರಮಿಕೆಗಳನ್ನು ಕ್ಷೀಣಗೊಳಿಸಿ, ಹೊಗಳಿಕೆ, ಹಾರೈಕೆ, ಪ್ರಶಂಸೆಗಳನ್ನು ನಿಲ್ಲಿಸಿ, ವಸ್ತುನಿಷ್ಠತೆಯನ್ನಷ್ಟೇ ಸ್ವೀಕರಿಸಬೇಕೆಂಬ ಹಂಬಲವು ಮುನ್ನೆಲೆಯಾಗಿ ಬಂದ ಪರಿಣಾಮವಾಗಿ ಹೀಗಾಗುತ್ತಿರಬಹುದು. ಜ್ಞಾನವನ್ನು ಅಧಿಕೃತವಾಗಿ ಲೇಖಕನೊಬ್ಬನ ವಾರಸುದಾರಿಕೆಯಲ್ಲಿ ಹುಗಿದಿಡುವುದರ ಬದಲಾಗಿ ಅದನ್ನು ಚಲನಶೀಲವಾಗಿಡಲು ಬಯಸಲಾಗುತ್ತಿದೆ. ಜ್ಞಾನ ಯಾರ ಮುದ್ರೆಯಲ್ಲಿಯೂ ಇರದಂತೆ ನಿರಂತರವಾಗಿ ಸಾಗುವ ಪ್ರಕ್ರಿಯೆಯ ಭಾಗವಾಗಿ ಗ್ರಹಿಸಬೇಕೆಂಬ ನಿಲುವುಗಳಿಂದ ವ್ಯಕ್ತಿ ಪ್ರಜ್ಞೆಯ ಅಂಕಿತವು ಮರೆಯಾಗಿ ಹೋಗುತ್ತಿದೆ. ಆದ್ದರಿಂದ ಸಾಹಿತಿಗಳ ಅಭಿನಂದನೆಯ ಆಶಯಗಳನ್ನು ದಾಖಲು ಮಾಡಿ, ಹೊಸ ಶೋಧಗಳ ಜ್ಞಾನ ಮೀಮಾಂಸೆಯ ಲೇಖನಗಳನ್ನೇ ಇಡಿಯಾಗಿ ತುಂಬಿ ಅಭಿನಂದನ ಗ್ರಂಥಗಳನ್ನು ಹೊರತರಲಾಗುತ್ತಿದೆ. ಕನ್ನಡ ಅಭಿನಂದನ ಗ್ರಂಥಗಳ ಆರೋಗ್ಯಕರ ಬೆಳವಣಿಗೆಯಾಗಿಯೇ ಇದನ್ನು ನಾವು ಗ್ರಹಿಸಬೇಕಾಗುತ್ತದೆ.

ಪ್ರಾತಿನಿಧಿಕ ಅಭಿನಂದನ ಗ್ರಂಥಗಳ ಸಮೀಕ್ಷೆ

ತೊಂಬತ್ತರ ದಶಕದ ಅಭಿನಂದನ ಗ್ರಂಥಗಳನ್ನು ಸಮೀಕ್ಷಿಸುವುದು ಇಲ್ಲಿನ ಉದ್ದೇಶವಾದರೂ ಎಲ್ಲಾ ಅಭಿನಂದನ ಗ್ರಂಥಗಳನ್ನು ಕುರಿತು ಬರೆಯುವುದು ಒಂದು ದೊಡ್ಡ ಉಪಕ್ರಮವಾಗುತ್ತದೆ. ಆದ್ದರಿಂದ ಪ್ರಾತಿನಿಧಿಕವಾಗಿ ನನಗೆ ಲಭ್ಯವಾಗಿರುವ ಕೆಲವು ಅಭಿನಂದನಾ ಗ್ರಂಥಗಳನ್ನು ಕುರಿತು ಇಲ್ಲಿ ಟಿಪ್ಪಣಿಗಳನ್ನು ಮಾಡಲಾಗಿದೆ.

ಸಂಶೋಧನ ಡಾ.ಎಂ. ಚಿದಾನಂದಮೂರ್ತಿ ಅಭಿನಂದನ ಗ್ರಂಥ. ಸಂ: ಲಕ್ಷಣ ತೆಲಗಾವಿ ೧೯೯೧. ರಾಗಿಣಿ, ವಿಜಯನಗರ, ಬೆಂಗಳೂರು – ೪೦

ಪ್ರಸ್ತುತ ಅಭಿನಂದನ ಗ್ರಂಥದಲ್ಲಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಶಾಸನ, ಚರಿತ್ರೆ ಮತ್ತು ಕಲೆಗಳಿಗೆ ಸಂಬಂಧಿಸಿದ ಲೇಖನಗಳ ಭಾಗವನ್ನು ೯೧ ಲೇಖನಗಳಿಂದಲೂ, ಬದುಕು ಬರಹ ಹಾಗೂ ಆತ್ಮಕಥನದ ಭಾಗವನ್ನು ೧೭ ಲೇಖನಗಳಿಂದಲೂ ಪೂರೈಸಲಾಗಿದೆ. ಆಧುನಿಕ ಭಾಷಾವಿಜ್ಞಾನದ ಅಧ್ಯಯನಗಳ ನೆಲೆಯಲ್ಲಿ ಧ್ವನಿ – ಧ್ವನಿಮಾ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳಲ್ಲಿ ರ,ಳ ಧ್ವನಿಗಳ ಚರ್ಚೆಯನ್ನು, ಸ್ವರಗಳ ಸ್ಪೆಕ್ಟ್ರೋಗ್ರಾಫಿಕ್‌ ವಿಶ್ಲೇಷಣೆಯನ್ನು ಮಾಡಲಾಗಿದೆ. ಭಾಷಾ ಆಧುನೀಕರಣ ಪ್ರಕ್ರಿಯೆಯ ತಾತ್ವಿಕ ಚರ್ಚೆಯನ್ನು ಮಂಡಿಸಿದ ಶ್ರೀಧರ್ ಅವರ ಲೇಖನದ ಅನುವಾದವನ್ನು ಇಲ್ಲಿ ಕೊಡಲಾಗಿದೆ. ಕನ್ನಡ ಉಪಭಾಷೆಗಳು, ಸಾಮಾಜಿಕ ಉಪಭಾಷೆಗಳು, ದ್ವಿಭಾಷಿಕ ಪರಿಸರ; ನಿಘಂಟು, ನಾಮವಿಜ್ಞಾನ ಹಾಗೂ ಸ್ಥಳನಾಮ ವಿಜ್ಞಾನಕ್ಕೆ ಸಂಬಂಧಿಸಿದ ಭಾಷಾ ಲೇಖನಗಳು ಆರಂಭದ ಭಾಗದಲ್ಲಿವೆ. ಛಂದಸ್ಸಿನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕವಿರಾಜಮಾರ್ಗ ಪೂರ್ವದ ಛಂದೋಬಂಧಗಳು, ಏಳೆ, ವಿಷ್ಣುರಗಳೆ, ಉಯ್ಯಾಲೆ ಗಣ ಮತ್ತು ಅಪೂರ್ವ ಲಯ, ಷಟ್ಪದಿಗಳ ಪದ್ಯಾಂತ ಶೈಲಿ ಮೊದಲಾದ ವಿಷಯಗಳ ಲೇಖನಗಳಿವೆ. ವಚನಗಳ ತಾತ್ವಿಕತೆ ಹಾಗೂ ಆನ್ವಯಿಕತೆ ನೆಲೆಯಲ್ಲಿ ಕೆಲವು ಲೇಖನಗಳಿವೆ. ಜಾನಪದ ಅಧ್ಯಯನದ ಮೈಲಾರಲಿಂಗ, ಎಲ್ಲಮ್ಮ, ಪಾಡ್ಡನ, ಮಾಸ್ತಿ ಆಚರಣೆ, ಪ್ರದರ್ಶನ ಸಿದ್ಧಾಂತ, ಭಜನೆಯ ಹಾಡುಗಳು, ಯಕ್ಷಗಾನ ರಂಗಭೂಮಿ, ಮಣಿಪುರಿ ನೃತ್ಯ ಮೊದಲಾದ ಲೇಖನಗಳಿವೆ. ಶಾಸನಗಳಲ್ಲಿ ವ್ಯಕ್ತವಾದ ಸಂಸ್ಕೃತಿ ಅಧ್ಯಯನದ ಲೇಖನಗಳು. ಸಂಸ್ಕೃತಿ ಚಿಂತನೆಯ ಆಧುನಿಕ ವಿಮರ್ಶೆಯ ಲೇಖನಗಳು, ತೌಲನಿಕ ಸಾಹಿತ್ಯ ಅಧ್ಯಯನಗಳು; ಶಾಸನ, ನಾಣ್ಯ, ಮೊದಲಾದ ಆಕರಗಳನ್ನು ಆಧರಿಸಿದ ಸಾಂಸ್ಕೃತಿಕ ಅಧ್ಯಯನ ಲೇಖನಗಳು ಇಲ್ಲಿನ ಮೊದಲ ಭಾಗದಲ್ಲಿವೆ.

ಎರಡನೆಯ ಭಾಗದಲ್ಲಿ ಡಾ. ಚಿದಾನಂದ ಮೂರ್ತಿಯವರ ವ್ಯಕ್ತಿತ್ವವನ್ನು ಗೆಳೆಯರಾಗಿ, ಸಹಪಾಠಿಗಳಾಗಿ, ಬಂಧುಗಳಾಗಿ, ಕ್ಷೇತ್ರಕಾರ್ಯಕರ್ತರಾಗಿ, ಆಕರ ಸಂಶೋಧಕರಾಗಿ ಹಾಗೂ ಸಂಶೋಧನಾ ಕ್ಷೇತ್ರದ ಅನನ್ಯ ಸಂಶೋಧಕರಾಗಿ ಕಂಡ ಹಿರಿಯ ವಿದ್ವಾಂಸರ ಲೇಖನಗಳಿವೆ. ಅವರ ಸಂಶೋಧನಾ ಅಧ್ಯಯನ ಕ್ಷೇತ್ರಗಳಾದ ಭಾಷಾವಿಜ್ಞಾನ, ಶಾಸನ, ಸಾಹಿತ್ಯ, ಸಮಾಜೋ – ಸಾಂಸ್ಕೃತಿಕ, ಅಂತರ್ ಶಿಸ್ತೀಯ ವಲಯಗಳನ್ನು ಕುರಿತು ಸಮೀಕ್ಷಾ ಲೇಖನಗಳಿವೆ. ಒಂದು ಲೇಖನದಲ್ಲಿ ಮೂರ್ತಿಯವರ ಕೃತಿಗಳು ಮತ್ತು ಲೇಖನಗಳ ಪಟ್ಟಿ ಇದೆ. ಕೊನೆಯಲ್ಲಿ ಚಿದಾನಂದ ಮೂರ್ತಿಯವರೇ ಬರೆದಿರುವ ತಮ್ಮ ಬದುಕಿನ ವಿವರದ ಆತ್ಮಕಥನವು ಇದೆ.

ಕನ್ನಡ ಸಂಶೋಧನಾ ಕ್ಷೇತ್ರದ ದಿಗ್ಗಜರಾದ ಡಿ.ಎಲ್‌. ನರಸಿಂಹಾಚಾರ್, ಗೋವಿಂದ ಪೈ, ಶಂಬಾಜೋಶಿ, ತೀನಂಶ್ರೀಯವರ ಪರಂಪರೆಗೆ ಸೇರಿದ ಡಾ.ಎಂ. ಚಿದಾನಂದ ಮೂರ್ತಿಯವರ ಈ ಅಭಿನಂದನಾ ಗ್ರಂಥವು ಅವರ ಅಧ್ಯಯನ ಕ್ಷೇತ್ರಗಳ ವಿಶ್ಲೇಷಣೆಗಳೊಟ್ಟಿಗೆ ಚಿ.ಮೂ. ಕ್ಷೇತ್ರದಲ್ಲಿ ಬೇರೆ ಕನ್ನಡ ವಿದ್ವಾಂಸರು ಸಂಶೋಧಕರಾಗಿ ಪ್ರವೇಶಿಸುತ್ತಿರುವುದರ ಬಗೆಗಳಾಗಿ ಇಲ್ಲಿನ ಲೇಖನಗಳು ಮಾದರಿಯಾಗಿವೆ. ಕೆಲವು ಭಾಷಾವಿಜ್ಞಾನದ ಲೇಖನಗಳು ಹಾಗೂ ಜಾನಪದ ಅಧ್ಯಯನದ ಲೇಖನಗಳು ಮೂರ್ತಿಯವರಿಂದ ಬಿಡಿಸಿಕೊಂಡ ಮಾದರಿಗಳಾಗಿಯೂ ಇದೇ ಗ್ರಂಥದಲ್ಲಿ ಸೇರಿರುವುದು ವಿಶೇಷವಾಗಿದೆ. ಒಟ್ಟಾರೆ ಸಂಶೋಧನಾ ಅಧ್ಯಯನದ ಆಸಕ್ತರಿಗೆ ಉಪಯುಕ್ತ ಆಕರವಾಗಿ ಈ ಕೃತಿಯು ಬೃಹತ್‌ ಹಾಗೂ ಗುಣಾತ್ಮಕವಾದ ತನ್ನ ಅಸ್ತಿತ್ವವನ್ನು ಪ್ರಕಟಪಡಿಸುತ್ತದೆ.

ನಮ್ಮ ಸುಬ್ಬಣ್ಣ: ಕೆ.ವಿ. ಸುಬ್ಬಣ್ಣನವರ ಅಭಿನಂದನ ಗ್ರಂಥ, ಸಂ:ಬೋಳಂತಕೋಡಿ, ಈಶ್ವರಭಟ್ಟ ೧೯೯೧ – ಕರ್ನಾಟಕ ಸಂಘ,ಪುತ್ತೂರು. ದ.ಕ.

ಹೆಗ್ಗೂಡಿನ ಕೆ.ವಿ. ಸುಬ್ಬಣ್ಣನವರಿಗೆ ‘ಮ್ಯಾಗ್ಸೇಸೆ’ ಪ್ರಶಸ್ತಿ ಬಂದ ಸವಿನೆನಪಿಗಾಗಿ ‘ನಮ್ಮ ಸುಬ್ಬಣ್ಣ’ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿದೆ. ಕೆ.ವಿ. ಸುಬ್ಬಣ್ಣನವರು ಹೆಗ್ಗೋಡಿನಲ್ಲಿ ಕಟ್ಟಿದ ‘ನೀನಾಸಂ’ ಕೇಂದ್ರವು ಕನ್ನಡ ರಂಗಭೂಮಿ ವಲಯದಲ್ಲಿ ಒಂದು ಸಾಂಸ್ಕೃತಿಕ ಸಂಸ್ಥೆಯಾಗಿ ಬೆಳೆದಿದೆ. ನಾಟಕಗಳನ್ನು ಆಡಿಸೋದು, ಆಡುವುದು, ಕರ್ನಾಟಕದ ತುಂಬೆಲ್ಲಾ ಸುತ್ತಾಡಿ ನಾಟಕಗಳ ಪ್ರಯೋಗಳನ್ನು ನಡೆಸುವುದು ಇವು ‘ನೀನಾಸಂ’ ಕೇಂದ್ರದ ಕಾರ್ಯಚಟುವಟಿಕೆಗಳಾಗಿರುವುದು ಕನ್ನಡಿಗರಿಗೆ ಸುಪರಿಚವಾದ ಸಂಗತಿಗಳೇ ಆಗಿವೆ. ಇಷ್ಟೆಲ್ಲಕ್ಕೂ ಸುಬ್ಬಣ್ಣನವರು ಕಾರಣರಾಗಿರುವುದರಿಂದ ಅವರು ಕನ್ನಡದ ಸಾಂಸ್ಕೃತಿಕ ವ್ಯಕ್ತಿಯಾಗಿದ್ದಾರೆ. ಈ ಆಶಯವನ್ನು ‘ನಮ್ಮ ಸುಬ್ಬಣ್ಣ ಎಂಬ ಅಭಿನಂದನಾ ಗ್ರಂಥ ಸಾದರಪಡಿಸುತ್ತದೆ. ‘ನೀನಾಸಂ’ ಭಾಗವಾಗಿ ಅಕ್ಷರ ಪ್ರಕಾಶನವನ್ನು ಹುಟ್ಟಿ ಬೆಳೆಸಿದ ಕೀರ್ತಿಗೂ ಅವರೇ ಕಾರಣರಾಗಿದ್ದಾರೆ. ಈ ಎಲ್ಲ ಸಾಂಸ್ಕೃತಿಕ ಜವಾಬ್ದಾರಿಯನ್ನು ನೆನಪು ಮಾಡಿಕೊಂಡು ಇಲ್ಲಿನ ಲೇಖನಗಳು ಕೆ.ವಿ. ಸುಬ್ಬಣ್ಣನವರ ಕಲೆ ಮತ್ತು ಬರಹಗಳ ಬದುಕನ್ನು ಬಹುಮುಖಿ ನೆಲೆಯಲ್ಲಿ ಅರ್ಥೈಸಿಕೊಳ್ಳಲು ಪ್ರಯತ್ನಿಸಿವೆ. ಇಂಗ್ಲಿಷ್‌ ಹಾಗೂ ಕನ್ನಡ ಉಭಯ ಭಾಷೆಗಳಲ್ಲಿರುವ ಈ ಲೇಖನಗಳು ಪರಿಚಯ, ವಿಶ್ಲೇಷಣೆಗಳೊಟ್ಟಿಗೆ ಸಾಂಸ್ಕೃತಿಕ ಅನನ್ಯತೆಯನ್ನು ಗುರುತಿಸುವ ಹಾಗೂ ವ್ಯಾಖ್ಯಾನಿಸುವ ನೆಲೆಯಲ್ಲಿಯೂ ಕಾರ್ಯ ಪ್ರವೃತ್ತವಾಗಿರುವುದನ್ನು ಗುರುತಿಸಬಹುದಾಗಿದೆ.

ಪರಮೇಶ್ವರ ಪ್ರಶಸ್ತಿ: ಪ್ರೊ. ಎಸ್‌.ವಿ. ಪರಮೇಶ್ವರ ಭಟ್ಟರ ಅಭಿನಂದನ ಗ್ರಂಥ, ೧೯೯೨ ಸಂ: ಎಂ.ವಿ. ಸುಬ್ಬರಾವ್, ಕನ್ನಡ ಸಾಹಿತ್ಯ ಕುಟೀರ, ದಾಸರಹಳ್ಳಿ – ಬೆಂಗಳೂರು.

ಎಸ್‌.ವಿ. ಪರಮೇಶ್ವರಭಟ್ಟರು ಕನ್ನಡದ ನವೋದಯ ಕವಿಯಾಗಿ ಚಿರಪರಿಚಿತರು. ಕಾವ್ಯ ಪ್ರತಿಭೆಯಷ್ಟೇ ಮುಖ್ಯವಾಗಿ ಅವರ ಅನುವಾದ ಪ್ರತಿಭೆಯು ಭಟ್ಟರನ್ನು ಜೀವಂತಗೊಳಿಸಿದೆ. ಕಾಳಿದಾಸ, ಭಾಸ, ಹರ್ಷ, ಭವಭೂತಿ, ಅಶ್ವಘೋಷ, ಭರ್ತೃಹರಿ, ಜಯದೇವ, ಲಕ್ಷ್ಮೀ ನರಸಿಂಹ ಮೊದಲಾದವರ ಸಂಸ್ಕೃತ ಕೃತಿಗಳನ್ನು ಹಾಗೂ ಹಾಲ ಮಹಾಕವಿಯ ಪ್ರಾಕೃತ ಕೃತಿಯನ್ನು ಕನ್ನಡಕ್ಕೆ ತಂದುಕೊಟ್ಟ ಕೀರ್ತಿ ಪರಮೇಶ್ವರಭಟ್ಟರದು. ಕಾವ್ಯ ಪ್ರಪಂಚದಲ್ಲಿನ ಅವರ ಪ್ರಯೋಗಶೀಲತೆಯನ್ನು ವಿಶೇಷವಾಗಿ ಗುರುತಿಸಲಾಗುತ್ತಿದೆ. ಈ ಒಟ್ಟು ಸೇವೆಯನ್ನು ನೆನೆಯಲು ‘ಪರಮೇಶ್ವರ ಪ್ರಶಸ್ತಿ’ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿದೆ. ಮೂರು ಭಾಗಗಳಲ್ಲಿರುವ ಈ ಕೃತಿಯಲ್ಲಿ ಅವರ ಸಾಹಿತ್ಯ ಸೇವೆಯನ್ನು ವಿಶ್ಲೇಷಿಸುವ ಭಾಗ ಆರಂಭದಲ್ಲಿದೆ. ಎರಡನೆಯ ಭಾಗದಲ್ಲಿ ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಕುರಿತ ಬರಹಗಳಿವೆ. ಮೂರನೆಯ ಭಾಗದಲ್ಲಿ ಮಕ್ಕಳು ಮತ್ತು ಸೊಸೆಯರು ಬರೆದ ಸಂಬಂಧವಾಚಿ ಬರಹಗಳೊಟ್ಟಿಗೆ ಅವರ ಎಲ್ಲ ಕೃತಿಗಳ ಪಟ್ಟಿಯನ್ನು ನೀಡಲಾಗಿದೆ. ಕೊನೆಯಲ್ಲಿ ಎಸ್‌.ವಿ. ಪರಮೇಶ್ವರ ಭಟ್ಟರೇ ಬರೆದಿರುವ ಆತ್ಮಕಥಾ ಭಾಗವಿದೆ.

ಸಿಂಪಿಯ ಮುತ್ತು: ಸಿಂಪಿ ಲಿಂಗಣ್ಣನವರ ಅಭಿನಂದನ ಗ್ರಂಥ ೧೯೯೩, ಸಂ: ಚ.ವಿ. ಮುಳಗುಂದ, ಮಾತೋಶ್ರೀ ಪ್ರಕಾಶನ, ಮುದ್ದೇಬಿಹಾಳ

ಸಿಂಪಿ ಲಿಂಗಣ್ಣನವರನ್ನು ಒಳಗೊಂಡ ಹಲಸಂಗಿ ಗೆಳೆಯರ ಬಳಗವು ಕನ್ನಡ ನವೋದಯ ಸಂದರ್ಭದಲ್ಲಿ ಮಾಡಿದ ಸಾಂಸ್ಕೃತಿಕ ಸೇವೆಯು ಅನನ್ಯವಾದುದು. ಆ ಗೆಳೆಯರ ಬಳಗದ ಒಬ್ಬೊಬ್ಬರದೂ ಒಂದೊಂದು ಮಾರ್ಗ. ಜಾನಪದ ಸಂಸ್ಕೃತಿಯ ಬರಹವನ್ನು ಮುನ್ನೆಲೆಗೆ ತಂದವರೆಂದು ಸಿಂಪಿ ಲಿಂಗಣ್ಣನವರಿಗೆ ಖ್ಯಾತಿಯಿದೆ. ನವೋದಯದ ಸುಗ್ಗಿಯ ಕಾಲದಲ್ಲಿ ಕಾವ್ಯಕ್ಕೆ ಜಾನಪದ ಲಯವನ್ನು ಸೇರಿಸಿದ ಸಿಂಪಿಯವರು ಪ್ರಬಂಧ ಸಾಹಿತ್ಯ, ಜಾನಪದ ಸಾಹಿತ್ಯ, ಸಂಪಾದನೆ, ಜೀವನ ಚರಿತ್ರೆ, ವಿಡಂಬನ, ಹರಟೆಗಳಲ್ಲದೆ ಕಾವ್ಯ, ಕಥೆ, ಕಾದಂಬರಿ, ನಾಟಕ, ಅನುವಾದ ಕೃತಿಗಳನ್ನೂ ಬರೆದಿದ್ದಾರೆ.. ಅರವಿಂದ, ರಾಮಕೃಷ್ಣ ಪರಮಹಂಸ ಮೊದಲಾದವರ ಆಧ್ಯಾತ್ಮಿಕತೆ ಹಾಗೂ ಜಾನಪದ ಸಂಸ್ಕೃತಿಯ ಭಾವೋತ್ಕರ್ಷತೆಗಳಿಂದ ನೂತನ ಅಭಿವ್ಯಕ್ತಿಗಳನ್ನು ಮಾಡಿದ ಸಿಂಪಿ ಲಿಂಗಣ್ಣನವರು ನವೋದಯ ಕಾಲದ ಅಪರುಪದ ಸಾಂಸ್ಕೃತಿಕ ಚೇತನವಾಗಿದ್ದಾರೆ. ೨೯ ಲೇಖನಗಳಲ್ಲಿ ಸಿಂಪಿಯವರ ಒಡನಾಡಿಗಳಿಮದ ಹಿಡಿದು ಅವರ ಮೊಮ್ಮಗ ಪ್ರವೀಣ ಸಿಂಪಿಯವರವರೆಗೆ “ಸಿಂಪಿಯ ಮುತ್ತಿನ” ಬರಹಗಳು ಇವೆ. ಅನುಬಂಧದಲ್ಲಿ ಲಿಂಗಣ್ಣನವರ ಜೀವನದ ಪ್ರಮುಖ ಹಂತಗಳನ್ನು ದಾಖಲಿಸಿ, ಅವರ ಕೃತಿಗಳ ಪಟ್ಟಿಯನ್ನು ಒದಗಿಸಲಾಗಿದೆ. ಶ್ರೀ ಸಿದ್ದೇಶ್ವರ ಸ್ವಾಮಿ, ಡಾ.ಎಂ.ಎಂ. ಕಲಬುರ್ಗಿಯವರ ಪ್ರೋತ್ಸಾಹದಿಂದ ಶ್ರೀ ಮುಳಗುಂದ ಅವರು ವ್ಯಕ್ತಿದರ್ಶನ ಹಾಗೂ ಸಾಹಿತ್ಯ ಸಮೀಕ್ಷೆಗಳ ಚೌಕಟ್ಟಿನಲ್ಲಿ ಸ್ಮರಣೀಯವಾಗಿ ಈ ಕೃತಿಯನ್ನು ಹೊರತಂದಿದ್ದಾರೆ.

ಪ್ರಪಂಚದ ಪಾಪು: ಪಾಟೀಲ ಪುಟ್ಟಪ್ಪನವರ ಅಭಿನಂದನ ಗ್ರಂಥ, ೧೯೯೩, ಐ.ಬಿ.ಎಚ್‌. ಪ್ರಕಾಶನ, ಬೆಂಗಳೂರು. ಸಂ:ಸಿ.ಪಿ. ಹೇಮಗಿರಿಮಟ, ನಿರಂಜನ ವಾಲಿಶೆಟ್ಟರ,

ಪ್ರಪಂಚ ಪತ್ರಿಕೆಯ ಸಂಪಾದಕರು ಹಾಗೂ ಪತ್ರಿಕೋದ್ಯಮದ ಬರಹಗಾರರು ಆಗಿರುವುದರಿಂದ ಪಾಟೀಲ ಪುಟ್ಟಪ್ಪ ಅವರಿಗೆ ಅವರ ಪತ್ರಿಕೆಯ ಹೆಸರಿಂದಲೇ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿದೆ. ನಾಡು – ನುಡಿಯ ಬಗೆಗೆ ನಿರರ್ಗಳ ಮಾಹಿತಿಗಳೊಂದಿಗೆ ಅಧಿಕೃತವಾಗಿ ಮಾತಾಡುವ ವ್ಯಕ್ತಿಯಾಗಿ ಪಾಟೀಲ ಪುಟ್ಟಪ್ಪನವರು ಖ್ಯಾತರು. ಪಾಪು ಅವರು ಗಡಿ ಸಮಸ್ಯೆ, ಭಾಷಾ ಸಮಸ್ಯೆ, ದ್ವಿಭಾಷಾ ಪರಿಸರದಲ್ಲಿ ಕನ್ನಡ ಶಾಲೆಗಳ ವಾಸ್ತವ ಪರಿಸ್ಥಿತಿ ಹಾಗೂ ಭಾಷಾವಾರು ಪ್ರಾಂತ್ಯದಿಂದ ಕನ್ನಡಕ್ಕೆ ಆದ ಅನ್ಯಾಯಗಳನ್ನು ನಿರರ್ಗಳವಾದ ಶೈಲಿಯಲ್ಲಿ ಸಾಂಸ್ಕೃತಿಕವಾದ ಹಕ್ಕೊತ್ತಾಯಗಳ ಮೂಲಕ ತಮ್ಮ ವಾದವನ್ನು ಮಂಡಿಸುತ್ತಾರೆ. ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕನ್ನಡದ ಧ್ವನಿಯನ್ನು ವಿಧಾನ ಸೌಧದಲ್ಲಿ ಮೊಳಗಿಸಿದ ಕೀರ್ತಿ ಅವರದು. ಹಲವು ಪತ್ರಿಕೆಗಳ ಸಂಪಾದಕತ್ವ ಹಾಗೂ ಸಂಘ ಸಂಸ್ಥೆಗಳ ಅಧ್ಯಕ್ಷತೆಯನ್ನು ನಿರ್ವಹಿಸುತ್ತಾ, ಹೋರಾಟಗಾರರಾಗಿ ಉಳಿದುಕೊಂಡ ಪಾಪು ಅವರಿಗೆ ೭೨ರ ವಯೋಮಾನದಲ್ಲಿ ಈ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿದೆ. ಏಳು ಭಾಗಗಳಲ್ಲಿ ಯೋಜಿಸಲಾದ ಇಲ್ಲಿನ ಲೇಖನಗಳು ಪಾಪು ವ್ಯಕ್ತಿತ್ವ, ಅಂಕಣ ಬರಹಗಾರ, ಪತ್ರಕರ್ತ, ಕನ್ನಡ ಹೋರಾಟಗಾರ, ಲೇಖಕ, ಪ್ರಬಂಧಕಾರ, ಕಥೆಗಾರ, ಹಾಗೂ ಸಂದರ್ಶನಗಳ ಸ್ವರೂಪದಲ್ಲಿ ಹರಡಿಕೊಂಡಿವೆ. ಕೌಟುಂಬಿಕ ಬಳಗದವರು ಪಾಪು ಅವರನ್ನು ಕಂಡ ಬಗೆಯನ್ನು ಕೊನೆಯಲ್ಲಿ ಸೇರಿಸಲಾಗಿದೆ. ಸಾಂಸ್ಕೃತಿಕ ಸ್ವರೂಪದ ಕನ್ನಡದ ಚರ್ಚೆಗಳು ಪಾಪು ಅವರ ಸಂದರ್ಭದೊಡನೆ ಮಂಡಿತವಾಗಿರುವುದು ಇಲ್ಲಿನ ಲೇಖನಗಳ ವಿಶೇಷತೆಯಾಗಿದೆ.

ಭಾಷೋಪಾಸಕ: ಡಾ. ಕೆ.ಜಿ. ಶಾಸ್ತ್ರಿ ಅಭಿನಂದನ ಗ್ರಂಥ, ೧೯೯೩, ಸಂ: ಡಾ.ಜಿ.ಎಂ.ಹೆಗಡೆ, ಅಭಿನಂದನ ಸಮಿತಿ, ಧಾರವಾಡ.

ಡಾ. ಕೆ.ಜಿ. ಶಾಸ್ತ್ರಿಯವರಿಗೆ ೭೦ ವರ್ಷಗಳು ತುಂಬಿದ ಸಂದರ್ಭದಲ್ಲಿ ಅವರ ಆಸಕ್ತಿ ಕ್ಷೇತ್ರವನ್ನು ಪರಿಗಣಿಸಿ ‘ಭಾಷೋಪಾಸಕ’ ಎಂಬ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಗಿದೆ. ನಾಲ್ಕು ಭಾಗಗಳಲ್ಲಿರುವ ಈ ಕೃತಿಯ ಆರಂಭದ ಭಾಗದಲ್ಲಿ ಶಾಸ್ತ್ರಿಯವರ ವ್ಯಕ್ತಿತ್ವದ ವಿವಿಧ ಮುಖಗಳನ್ನು ಕುರಿತು ಗೌರೀಶ ಕಾಯ್ಕಿಣಿ, ಸು.ರಂ. ಎಕ್ಕುಂಡಿ, ಎಲ್‌.ಆರ್. ಹೆಗಡೆ ಮೊದಲಾದವರು ಬರೆದಿದ್ದಾರೆ. ಶಾಸ್ತ್ರಿಯವರ ಬರಹಗಳನ್ನು ಸಂಪಾದಕರೇ ಅವಲೋಕಿಸಿದ್ದಾರೆ. ಎರಡನೆ ಭಾಗದಲ್ಲಿ ಕೆ.ಜಿ. ಶಾಸ್ತ್ರಿಯವರೇ ಬರೆದಿರುವ ೨೪ ಪ್ರಾತಿನಿಧಿಕ ಲೇಖನಗಳನ್ನು ಪ್ರಕಟಿಸಲಾಗಿದೆ. ಮೂರನೆಯ ಭಾಗದಲ್ಲಿ ಬೇರೆ ಬೇರೆ ವಿದ್ವಾಂಸರ ೧೦ ಲೇಖನಗಳಿವೆ. ನಾಲ್ಕನೆಯ ಭಾಗದಲ್ಲಿ ಕುಟುಂಬದವರ ನೆನಕೆಗಳನ್ನು ಹಾಗೂ ಶಾಸ್ತ್ರಿಯವರ ಆತ್ಮಕಥನವನ್ನು ಸೇರಿಸಲಾಗಿದೆ. ಅನುಬಂಧದಲ್ಲಿ ಶಾಸ್ತ್ರಿಯವರ ಕೃತಿಗಳ ಬಗ್ಗೆ ಬೇರೆ ವಿದ್ವಾಂಸರು ಬರೆದಿರುವ ಅಭಿಪ್ರಾಯಗಳನ್ನು ಆಯ್ದುಕೊಡಲಾಗಿದೆ.

ಕೃತಾರ್ಥ: ಕೆ.ಸಿ. ಪುಟ್ಟನರಸಯ್ಯನವರ ಅಭಿನಂದನ ಗ್ರಂಥ – ೧೯೯೩,

ಸಂ: ಡಾ. ಸಾ.ಶಿ. ಮರಳಯ್ಯ ಪ್ರ: ಅಭಿನಂದನ ಸಮಿತಿ, ಶೇಷಾದ್ರಿಪುರಂ, ಬೆಂಗಳೂರು ಶ್ರೀ.ಕೆ.ಸಿ. ಪುಟ್ಟನರಸಯ್ಯನವರು ಕರ್ನಾಟಕ ಸರ್ಕಾರದ ಆಡಳಿತ ಸೇವೆಯಲ್ಲಿ ಉನ್ನತ ಹುದ್ದೆಗಳನ್ನು ಖ್ಯಾತರಾದವರು. ಹಳೆಯ ಮೈಸೂರಿನ ಕೃಷ್ಣರಾಜ ಒಡೆಯರ ಮತ್ತು ಜಯಚಾಮರಾಜ ಒಡೆಯರ ಕಾಲದಿಂದ ತಮ್ಮ ಆಡಳಿತ ಸೇವೆಯನ್ನು ನಡೆಸಿಕೊಂಡು ಬಂದವರು. ಆಡಳಿತದಲ್ಲಿ ದಕ್ಷತೆಗೆ ಹೆಸರಾದ ಇವರು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯನ್ನು ಬೆಳೆಸಿದವರು. ಸಾಹಿತ್ಯ ರಂಗದಲ್ಲೂ ತಮ್ಮನ್ನು ಗುರುತಿಸಿಕೊಂಡ ಪುಟ್ಟನರಸಯ್ಯನವರ ೯೧ರ ಸವಿನೆನಪಿಗಾಗಿ ಈ ಅಭಿನಂದನಾ ಗ್ರಂಥವನ್ನು ಸಮರ್ಪಿಸಲಾಗಿದೆ. ಮೂರು ಭಾಗಗಳಲ್ಲಿ ವರ್ಗೀಕರಿಸಲಾದ ಈ ಕೃತಿಯಲ್ಲಿ ಪುಟ್ಟನರಸಯ್ಯನವರ ‘ನಾನು ಮತ್ತು ನನ್ನ ಊರು’ ಎಂಬ ಹೆಸರಿನ ಆತ್ಮಕಥನವು ಮೊದಲ ಭಾಗದಲ್ಲಿದೆ. ಎರಡನೆಯ ಭಾಗದಲ್ಲಿ ವಿವಿಧ ವಿದ್ವಾಂಸರ ೨೫ ಲೇಖನಗಳಿವೆ. ಮೂರನೆಯ ಭಾಗದಲ್ಲಿ ಹರಕೆ – ಹಾರೈಕೆ – ನೆನಪುಗಳನ್ನು ಒಳಗೊಂಡ ೧೧ ಬರಹಗಳಿವೆ. ದಕ್ಷ ಆಡಳಿತ ಸೇವೆ ಮತ್ತು ಸಮಾಜ ಸೇವೆಯನ್ನು ನೆನೆದು ಈ ಅಭಿನಂದನಾ ಗ್ರಂಥವನ್ನು ರೂಪಿಸಿದ್ದು ಇಲ್ಲಿನ ವಿಶೇಷತೆಯಾಗಿದೆ.

ಮಾನ: ಹಾ.ಮಾ. ನಾಯಕ ಅಭಿನಂದನ ಗ್ರಂಥ, ೧೯೯೨ ಸಂ:ಎಸ್‌.ಎಲ್‌. ಭೈರಪ್ಪ, ಜೆ.ಆರ್. ಲಕ್ಷ್ಮಣರಾವ್‌, ಪ್ರಧಾನ್‌ ಗುರುದತ್ತ, ಗೀತಾಬುಕ್‌ ಹೌಸ್‌ ಮೈಸೂರು.

ಹಾ.ಮಾ.ನಾ ಅವರು ಲಲಿತ ಕನ್ನಡದ ಮಾತುಗಾರ ಮತ್ತು ಬರಹಗಾರರೆಂದೇ ಖ್ಯಾತರಾಗಿದ್ದವರು. ವಿಶ್ವಕೋಶ ಸಂಪಾದನೆ, ಭಾಷಾಶಾಸ್ತ್ರ, ಅನುವಾದ, ಜಾನಪದ ವೈಜ್ಞಾನಿಕ ಅಧ್ಯಯನ, ಲಲಿತ ಪ್ರಬಂಧ, ವೈಚಾರಿಕ ಸಾಹಿತ್ಯ ಮೊದಲಾದ ವಲಯಗಳಲ್ಲದೆ ಅಂಕಣ ಸಾಹಿತ್ಯಕ್ಕೆ ವಿಶೇಷ ಸೇವೆ ಸಲ್ಲಿಸಿದವರು. ಗದ್ಯ ಬರಹಕ್ಕೆ ಹೆಸರಾದ ಹಾಮಾನಾ ಅವರ ಅಂಕಣ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ದೊರಕಿದೆ. ಕನ್ನಡದ ಧೀಮಂತ ಹಿರಿಯ ನಾಯಕರಾಗಿಯೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ಹಾಮಾನಾ ಅವರ ಅರವತ್ತರ ಸವಿನೆನಪಿಗಾಗಿ ಈ ಅಭಿನಂದನ ಗ್ರಂಥವನ್ನು ಅರ್ಪಿಸಲಾಗಿದೆ.

ಆರಂಭದ ಹಾರಯಕೆಯ ಭಾಗದಲ್ಲಿ ಶಿವರಾಮ ಕಾರಂತ, ವಿ.ಕೃ. ಗೋಕಾಕ. ಪು.ತಿ.ನ. ಮತ್ತು ಎ.ಎನ್‌ ಮೂರ್ತಿರಾಯರು ಬರೆದಿರುವ ಲೇಖನಗಳಿವೆ. ಭಾಗ ಒಂದರಲ್ಲಿ ಹಾಮಾನಾ ವ್ಯಕ್ತಿ – ಕೃತಿ ಕುರಿತು ಹಿರಿಯ ವಿದ್ವಾಂಸರ ೯ ಲೇಖನಗಳಿವೆ. ಭಾಗ ಎರಡರಲ್ಲಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ೪ ಕನ್ನಡ, ೪ ಇಂಗ್ಲೀಷ್‌ ಲೇಖನಗಳಿವೆ. ಭಾಗ ಮೂರರಲ್ಲಿ ಸಂಶೋಧನಾ ವಲಯದ ೯ ಲೇಖನಗಳಿವೆ. ಭಾಗ ನಾಲ್ಕರಲ್ಲಿ ಭಾಷೆ ಮತ್ತು ಸಾಹಿತ್ಯ ವಲಯಗಳನ್ನು ಕುರಿತು ೨೬ ಲೇಖನಗಳಿವೆ. ಈ ಕೃತಿಯಲ್ಲಿರುವ ಲೇಖನಗಳಲ್ಲಿ ಹಾಮಾನಾ ಅವರ ಬದುಕು ಬರಹಗಳನ್ನು ಬಿಟ್ಟು ಉಳಿದ ೪೩ ಲೇಖನಗಳು ಕೂಡ ಹೊಸ ಅಧ್ಯಯನಕಾರರಿಗೆ ಉಪಯುಕ್ತವಾಗಿವೆ.

ಗಂಧಕೊರಡು: ಡಾ. ಶಂಕರ ಮೊಕಾಶಿ ಪುಣೇಕರ ಅವರ ಅಭಿನಂದನ ಗ್ರಂಥ – ೧೯೯೮

ಸಂ: ಶಾಮಸುಂದರ ಬದಿರಕುಂದಿ, ರಮಾಕಾಂತ ಜೋಶಿ, ಜಿ.ಎಂ. ಹೆಗಡೆ, ಧಾರವಾಡ ಶಂಕರ ಮೊಕಾಶಿ ಪುಣೇಕರ ಅವರು ಆಧುನಿಕ ಕನ್ನಡ ಸಾಹಿತ್ಯದ ಕಾವ್ಯ, ಕಾದಂಬರಿ, ವಿಮರ್ಶೆ, ಸಣ್ಣಕತೆ, ವೈಚಾರಿಕೆ ಸಾಹಿತ್ಯ, ಮೀಮಾಂಸೆ ಮೊದಲಾದ ಪ್ರಕಾರಗಳಲ್ಲಿ ಮಹತ್ವದ ಸಾಧನೆ ಮಾಡಿದವರು. ಗಂಗವ್ವ ಮತ್ತು ಗಂಗಾಮಾಯಿ, ನಟನಾರಾಯಣಿ, ಅವಧೇಶ್ವರಿ, ಮಾಯಿಯ ಮೂರು ಮುಖಗಳು ಮತ್ತು ಯುರೋಪಿನ್‌ ವಿಮರ್ಶೆಯ ಇತಿಹಾಸ ಇವು ಅವರ ಮಹತ್ವದ ಕೃತಿಗಳು. ‘ಅವಧೇಶ್ವರಿ’ಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ ಲಭಿಸಿದೆ. ಅನ್ಯ ಪ್ರಭಾವಗಳಿಗಿಂತ ವ್ಯಕ್ತಿಗತವಾದ ಸ್ವಂತಿಕೆಯ ಮುದ್ರೆಯಲ್ಲಿ ತಮ್ಮ ಕಥನ ಬರಹವನ್ನು ರೂಪಿಸಿಕೊಂಡ ಪುಣೇಕರ್ ಅವರು ಆಧುನಿಕ ಕನ್ನಡದ ಮಹತ್ವದ ಲೇಖಕರಲ್ಲೊಬ್ಬರು. ಅವರ ೭೧ರ ಸವಿ ನೆನಪಿಗಾಗಿ ಈ ಗೌರವ ಗ್ರಂಥವನ್ನು ಹೊರತರಲಾಗಿದೆ. ಇಡೀ ಕೃತಿಯು ಪುಣೇಕರ್ ಅವರ ವ್ಯಕ್ತಿತ್ವ ಹಾಗೂ ಬರಹಗಳಿಗಾಗಿಯೇ ಮೀಸಲಾಗಿದೆ. ಅವರ ಕೃತಿಗಳನ್ನು ಕುರಿತು ಕುರ್ತುಕೋಟಿಯವರಿಂದ ಹಿಡಿದು ಸಂಪಾದಕರವರೆಗೆ ಅನೇಕ ಚಿಂತಕರು ಗಂಭೀರವಾಗಿ ಚರ್ಚಿಸಿದ್ದಾರೆ. ಈ ವಿಮರ್ಶಾ ಬರಹಗಳಲ್ಲದೆ ಹಾರೈಕೆಯ ಬರಹಗಳು, ನೆನಪುಗಳು, ಸಂದರ್ಶನ ಹಾಗೂ ಮೊಕಾಶಿಯವರ ಆತ್ಮವೃತ್ತಗಳನ್ನು ಇಲ್ಲಿ ಒಳಗೊಳಿಸಲಾಗಿದೆ.

ನಾಟ್ಯ ಭೂಷಣ: ಏಣಗಿ ಬಾಳಪ್ಪನವರಿಗೆ ಅರ್ಪಿಸಿದ ಗೌರವ ಗ್ರಂಥ, ೧೯೯೮, ಸಂ: ರಾಮಕೃಷ್ಣ ಮರಾಠೆ. ಕರ್ನಾಟಕ ರಂಗಭೂಮಿ ಉತ್ತೇಜನ ಹಾಗೂ ಅಭಿವೃದ್ಧಿ ಸಹಕಾರಿ ಸಂಘ, ಬೆಳಗಾವಿ.

ಏಣಗಿ ಬಾಳಪ್ಪನವರು ಜೀವಮಾನವಿಡೀ ನಟರಾಗಿ, ನಾಟಕ ನಿರ್ದೇಶಕರಾಗಿ ನಾಟಕಕಾರರಾಗಿ ದುಡಿದು ತಮ್ಮ ರಂಗಭೂಮಿ ಸೇವೆಯನ್ನು ಸಲ್ಲಿಸಿದವರು. ಜಾನಪದ, ವೃತ್ತಿ, ಹವ್ಯಾಸಿ ರಂಗಭೂಮಿಗಳ ಸಂಘರ್ಷಗಳಲ್ಲಿ ತಮ್ಮ ಕಲಾಪ್ರಜ್ಞೆಯನ್ನು ಜೀವಂತಗೊಳಿಸಿಕೊಂಡು ಬಂದವರು. ಬಾಳಪ್ಪನವರ ರಂಗಭೂಮಿ ಸೇವೆಯನ್ನು ಸ್ಮರಿಸುವ ನೆಲೆಯಲ್ಲಿ ಈ ಗೌರವ ಗ್ರಂಥವನ್ನು ಸಮರ್ಪಿಸಲಾಗಿದೆ. ‘ರಂಗಭೂಮಿ’ ಕ್ಷೇತ್ರದ ವೈವಿಧ್ಯತೆಗಳ ವಲಯದಲ್ಲಿ ಚಿಂತನೆ ನಡೆಸಿರುವ ವಿದ್ವಾಂಸರಿಂದ ಲೇಖನಗಳನ್ನು ಬರೆಸಿರುವುದರಿಂದ ಇದು ರಂಗಭೂಮಿ ಕ್ಷೇತ್ರಕ್ಕೆ ಒಳ್ಳೆಯ ಆಕರ ಗ್ರಂಥವಾಗಿ ಉಳಿದಿದೆ. ಬಾಳಪ್ಪನವರ ಜೀವನ – ಸಾಧನೆ, ಆಧುನಿಕ ರಂಗ ಸಿದ್ಧಾಂತಗಳು, ಕರ್ನಾಟಕ ರಂಗಭೂಮಿ ಹಾಗೂ ಕಂಪನಿ ನಾಟಕಗಳ ರಂಗಮೌಲ್ಯ ಎಮಬ ನಾಲ್ಕು ಭಾಗಗಳಲ್ಲಿ ಇಲ್ಲಿನ ಲೇಖನಗಳನ್ನು ವಿಭಾಗಿಸಲಾಗಿದೆ. ನಾಟ್ಯಭೂಷಣರೆನಿಸಿಕೊಂಡ ಏಣಗಿ ಬಾಳಪ್ಪನವರಿಗೆ ಅವರ ಕಲಾಕ್ಷೇತ್ರಕ್ಕೆ ಸಂಬಂಧಿಸಿದಂತೆಯೇ ಈ ಅಭಿನಂದನಾ ಗ್ರಂಥವನ್ನು ಉಪಯುಕ್ತವಾಗಿ ಹಾಗೂ ಔಚಿತ್ಯಪೂರ್ಣವಾಗಿ ಹೊರತರಲಾಗಿದೆ.

ನೀಲಾಂಜನ: ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಅಭಿನಂದನ ಗ್ರಂಥ, ೧೯೯೬,ಸಂ: ಎಲ್‌.ಎಸ್‌. ಶೇಷಗಿರಿರಾವ್‌ ಮತ್ತು ಇತರರು. ಪುಸ್ತಕಾಲಯ, ಬೆಂಗಳೂರು ಭಾವಗೀತೆಯ ಕವಿಯೆಂದೇ ಖ್ಯಾತರಾದ ನವೋದಯ ಕವಿ ಲಕ್ಷ್ಮೀನಾರಾಯಣ ಭಟ್ಟರಿಗೆ ‘ನೀಲಾಂಜನ’ ಅಭಿನಂದನ ಗ್ರಂಥವನ್ನು ಅರ್ಪಿಸಲಾಗಿದೆ. ಹರಕೆ, ಹಾರೈಕೆಯ ಭಾಗದಲ್ಲಿ ಹಿರಿಯ ಕವಿಗಳು, ಸಾಹಿತಿಗಳು ಬರೆದಿರುವ ಬರಹಗಳಿದ್ದರೆ; ವ್ಯಕ್ತಿ ಪರಿಚಯದ ಭಾಗದಲ್ಲಿ ಅವರ ಒಡನುಡಿಗಳ, ಬಂಧುಗಳ ಸಾಹಿತಿಗಳ ಆಪ್ತ ಬರಹಗಳಿವೆ. ಕೃತಿಗಳು ಭಾಗದಲ್ಲಿ ಭಟ್ಟರ ಕೃತಿಗಳನ್ನು ಕುರಿತ ವಿಚಾರ, ವಿಶ್ಲೇಷಣೆಗಳಿವೆ. ಭಟ್ಟರ ಸಮಗ್ರ ಕೃತಿಗಳ ಸಂವಾದವು ಇಲ್ಲಿರುವುದರಿಂದ ಈ ಭಾಗವು ವಿಸ್ತಾರವಾಗಿದೆ. ನಾಲ್ಕನೆಯ ಭಾಗದಲ್ಲಿ ಈಗಾಗಲೇ ಪತ್ರಿಕೆಗಳಲ್ಲಿ ಬಂದ ಎನ್‌.ಎಸ್‌.ಎಲ್‌ರ ಕೃತಿಗಳ ವಿಮರ್ಶೆಗಳನ್ನು ಸೇರಿಸಲಾಗಿದೆ. ಅನುಬಂಧದಲ್ಲಿ ಸಂದರ್ಶನವನ್ನು ಹಾಗೂ ಭಟ್ಟರ ಕಾವ್ಯಗಳಲ್ಲಿನ ಸೂಕ್ತಿಗಳನ್ನು ಒದಗಿಸಲಾಗಿದೆ. ಇಡೀ ಕೃತಿಯನ್ನು ಎನ್‌.ಎಸ್‌.ಎಲ್‌ ಅವರ ವ್ಯಕ್ತಿತ್ವ ಹಾಗೂ ಬರಹಗಳಾಗಿ ಮೀಸಲಾಗಿರಿಸಲಾಗಿದೆ.

ಭೈರಪ್ಪಾಭಿನಂದನಾ: ಡಾ.ಎಸ್‌.ಎಲ್‌. ಭೈರಪ್ಪನವರ ಅಭಿನಂದನ ಗ್ರಮಥ – ೧೯೯೩, ಸಂ: ಕೊಂಡಜ್ಜಿ ಕೆ. ವೆಂಕಟೇಶ, ಕೊಂಡಜ್ಜಿ ಪ್ರಕಾಶನ – ಬೆಂಗಳೂರು

ಭೈರಪ್ಪನವರು ಕನ್ನಡ ಕಾದಂಬರಿಕಾರರಲ್ಲಿ ಜನಪ್ರಯ ಲೇಖಕರು. ಆಧುನಿಕ ಕನ್ನಡ ವಿಮರ್ಶಕರು ಇವರ ಕಾದಂಬರಿಗಳ ಬಗ್ಗೆ ಅನೇಕ ಭಿನ್ನಾಭಿಪ್ರಾಯಗಳನ್ನು ಮಂಡಸಿದರೂ ಭೈರಪ್ಪನವರು ತಮ್ಮದೇ ಆದ ತಾತ್ವಿಕ ಭೂಮಿಕೆಯಲ್ಲಿ ಹಲವು ಕಾದಂಬರಿಗಳನ್ನು ಬರೆದಿದ್ದಾರೆ. ಭಾಷಾಂತರ ಪ್ರಕ್ರಿಯೆಯಲ್ಲೂ ಭೈರಪ್ಪನವರ ಕೃತಿಗಳು ಭಾರತೀಯ ಭಾಷೆಗಳಲ್ಲೆಲ್ಲ ಅನುವಾದವಾಗಿವೆ. ಆ ಮೂಲಕ ಅಖಿಲ ಭಾರತ ಮಟ್ಟದ ಜನಪ್ರಿಯತೆಯನ್ನು ಗಳಿಸಿಕೊಟ್ಟಿವೆ. ಕಾದಂಬರಿ ಕ್ಷೇತ್ರದ ಅವರ ಬೆಳವಣಿಗೆಯನ್ನು ಗುರುತಿಸಿ ಈ ಅಭಿನಂದನ ಗ್ರಂಥವನ್ನು ಅರ್ಪಿಸಲಾಗಿದೆ. ಈ ಕೃತಿಯಲ್ಲಿ ಅವರ ಎಲ್ಲಿ ಕಾದಂಬರಿಗಳ ಕುರಿತು ಸಂವಾದ ಬೆಳೆಸಿದ ವಿಮರ್ಶಕರ ೩೦ ಲೇಖನಗಳಿವೆ. ಆರಂಭದಲ್ಲಿ ಕಾರಂತರ ಹಾರೈಕೆಯಿದೆ. ಭೈರಪ್ಪನವರ ಕೃತಿಗಳ ಓದಿನಲ್ಲಿ ಪೂರಕವಾಗಬಹುದಾದ ವಿಮರ್ಶೆಗಳು ಇಲ್ಲಿ ಸೇರಿರುವುದು ಕೃತಿಯ ವಿಶೇಷತೆಯಾಗಿದೆ.

ಸುರಗಿ: ಎಂ.ಕೆ. ಇಂದಿರಾ ಅವರ ಅಭಿನಂದನಾ ಗ್ರಂಥ, ೧೯೯೧, ಸಂ: ಎಚ್‌.ಎಸ್‌. ಪಾರ್ವತಿ, ಇಳಾ ಪ್ರಕಾಶನ, ಬೆಂಗಳೂರು,

ಮಹಿಳಾ ಲೇಖಕಿ ಎಂ.ಕೆ. ಇಂದಿರಾ ಅವರ ೭೫ರ ಸಂದರ್ಭದಲ್ಲಿ ಈ ಅಭಿನಂದನ ಗ್ರಂಥವನ್ನು ಕರ್ನಾಟಕ ಲೇಖಕಿಯರ ಸಂಘದಿಂದ ಸಮರ್ಪಿಸಲಾಗಿದೆ. ಮೊದಲ ಭಾಗದಲ್ಲಿ ಇಂದಿರಾ ಅವರ ಬದುಕು – ಬರಹಗಳನ್ನು ಕುರಿತ ಸಾಂಸ್ಕೃತಿಕ ಬರಹಗಳನ್ನು ಒಳಗೊಳಿಸೊಲಾಗಿದೆ. ಎರಡನೆಯ ಭಾಗದಲ್ಲಿ ಅವರ ಕೃತಿಗಳನ್ನು ಕುರಿತು ಚಿಂತನೆ ಮಾಡಿದ ವಿಮರ್ಶಕರ ಬರಹಗಳು ಇವೆ. ಇಂದು ‘ಸ್ತ್ರೀವಾದ’ ಹಲವು ಚಾಚುವಿಕೆಗಳನ್ನು ಪಡೆದುಕೊಂಡಿರುವಾಗ ಈ ಪೂರ್ವದ ಇಂದಿರಾ ಅವರ ಬರಹಗಳಲ್ಲಿದ್ದ ಸ್ತ್ರೀವಾದಿ ಹೆಜ್ಜೆ ಗುರುತುಗಳನ್ನು ಇಲ್ಲಿನ ಸ್ತ್ರೀವಾದಿ ಲೇಖಕಿಯರು ಚರ್ಚೆಗೆ ಒಳಪಡಿಸಿದ್ದಾರೆ. ಹೆಚ್ಚಿನ ಬರಹಗಳು ಸಮೀಕ್ಷಾ ಮಾದರಿಯವುಗಳಾಗಿವೆ. ಇಂದಿರಾ ಅವರ ಕೃತಿಗಳು ಚಲನಚಿತ್ರ ಮಾಧ್ಯಮದಲ್ಲಿ ಕಾಣಿಸಿಕೊಂಡ ಚರ್ಚೆಯನ್ನು ಕೆಲವು ಲೇಖನಗಳಲ್ಲಿ ಮಾಡಲಾಗಿದೆ.

ವಿಭಾವ: ಡಾ.ಎಂ.ಬಿ. ಕೊಟ್ರಶೆಟ್ಟಿ ಅವರ ಅಭಿನಂದನ ಗ್ರಂಥ, ೧೯೯೩, ಸಂ: ಡಾ. ಬಸವರಾಜ ಮಲಶೆಟ್ಟಿ, ಹೊಸಪೇಟೆ.

ಡಾ.ಎಂ.ಬಿ. ಕೊಟ್ರಶೆಟ್ಟಿ ಅವರು ಕರ್ನಟಕ ವಿಶ್ವವಿದ್ಯಾಲಯದಲ್ಲಿ ಆದರ್ಶ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಮೀಮಾಂಸೆ, ವಿಮರ್ಶೆ, ಸಾಹಿತ್ಯ ಚರ್ಚೆ ಹಾಗೂ ಜಿಜ್ಞಾಸೆಗಳಲ್ಲಿ ಚಿಂತಕರೆನಿಸಿಕೊಂಡ ಕೊಟ್ರಶೆಟ್ಟಿಯವರು ಒಳ್ಳೆಯ ಸಂಶೋಧಕರು ಹಾಗೂ ಮಾರ್ಗದರ್ಶಕರಾಗಿ ಖ್ಯಾತರಾದವರು. ಅವರು ತೀರಿಕೊಂಡ ಸಂದರ್ಭದಲ್ಲಿ ಅವರ ವಿದ್ವತ್ತನ್ನು – ಗುರುಸೇವೆಯನ್ನು ನೆನೆಸಿಕೊಂಡು ಈ ಅಭಿನಂದನಾ ಗ್ರಂಥವನ್ನು ಹೊರತರಲಾಗಿದೆ. ಕೊಟ್ರಶೆಟ್ಟಿಯವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಿಗೆ ಸಂಬಂಧಿಸಿದ ವಿವಿಧ ವಿದ್ವಾಂಸರ ಲೇಖನಗಳನ್ನು ಸಂಕಲಿಸಿ ಈ ಕೃತಿಯನ್ನು ರೂಪಿಸಲಾಗಿದೆ. ಆರಂಭದಲ್ಲಿ ಬಸವರಾಜ ಮಲಶೆಟ್ಟಿಯವರು ಕೊಟ್ರಶೆಟ್ಟಿಯವರ ಬದುಕು – ಬರಹಗಳ ಪರಿಚಯ ಲೇಖನವನ್ನು ಬರೆದು ಸೇರಸಿದ್ದಾರೆ. ಕೊಟ್ರಶೆಟ್ಟಿಯವರ ಗುರುಗಳಾದ ಆರ್.ಸಿ. ಹಿರೇಮಠ ಅವರಿಂದ ಮುನ್ನುಡಿ ಬರೆಸಿ ಉಪಯುಕ್ತವಾಗಿ ಅಭಿನಂದನಾ ಗ್ರಂಥವನ್ನು ಸಿದ್ಧಪಡಿಸಲಾಗಿದೆ.

ಸ್ವಾತಂತ್ರ್ಯದೆಡೆಗೆ: ಎಂ.ಎನ್‌. ಜೋಯಿಸ್‌ ಅವರ ಅಭಿನಂದನ ಗ್ರಂತ, ೧೯೯೧, ಸಂ: ಬಿ.ಆರ್. ಪ್ರಾಣೇಶರಾವ್‌ ಮತ್ತು ಇತರರು. ಡಿ.ವಿ.ಕೆ. ಮೂರ್ತಿ, ಮೈಸೂರು.

ಸ್ವಾತಂತ್ರ್ಯ ಸಮರದಲ್ಲಿ ಹಳೇ ಮೈಸೂರಿನ ಪ್ರದೇಶದಲ್ಲಿ ತಮ್ಮ ಹೋರಾಟದ ಬದುಕಿನಿಂದ ಖ್ಯಾತರಾದ ಎಂ.ಎನ್‌. ಜೋಯಿಸ್‌ ಅವರ ಸವಿನೆನಪಿಗಾಗಿ ಈ ಅಭಿನಂದನ ಗ್ರಂಥವನ್ನು ಸಮರ್ಪಿಸಲಾಗಿದೆ. ಬೂದಾನ ಚಳುವಳಿ, ಜೆ.ಪಿ. ಚಳುವಳಿ ಹಾಗೂ ಇತರ ಸ್ಥಳೀಯ ಹೋರಾಟಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳನ್ನು ಹೊತ್ತ ಜೋಯಿಸರನ್ನು ಈ ಅಭಿನಂದನಾ ಗ್ರಂಥದಲ್ಲಿ ಸಾಂಸ್ಕೃತಿಕವಾಗಿ ನೆನೆಸಿಕೊಳ್ಳುವ ರೀತಿಯಲ್ಲಿ ಈ ಕೃತಿಯನ್ನು ಸಿದ್ಧಪಡಿಸಲಾಗಿದೆ. ಎಸ್‌. ನಿಜಲಿಂಗಪ್ಪ, ಕಡಿದಾಳ ಮಂಜಪ್ಪ, ಸೂರ್ಯನಾಥ ಕಾಮತ್‌ ಹಾಗು ಅವರ ಒಡನಾಡಿಗಳ ಬರಹಗಳು ಇಲ್ಲಿವೆ.

ಸಿರಿ: ಅಮೃತ ಸೋಮೇಶ್ವರ ಅಭಿನಂದನ ಸಂಪುಟ, ೧೯೯೫, ಸಂ:ಡಾ. ಪುರುಷೋತ್ತಮ ಬಿಳಿಮಲೆ ಮತ್ತು ಇತರರು,ಕಲಾಗಂಗೋತ್ರಿ, ಸೋಮೇಶ್ವರ ಉಚ್ಚಿಲ.

ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಬರಹಗಾರರೆಂದು ಖ್ಯಾತರಾದ ಅಮೃತ ಸೋಮೇರ್ಶವರ ಅವರು ಕತೆಗಾರ, ಕಾದಂಬರಿಕಾರ ಹಾಗೂ ಕವಿಗಳಾಗಿ ಪ್ರಸಿದ್ಧರು. ಎಲ್ಲಕ್ಕೂ ಹೆಚ್ಚಾಗಿ ಅವರು ಯಕ್ಷಗಾನಗಳ ಪ್ರಸಂಗಗಳನ್ನು ಬರೆದಿರುವುದರಿಂದ ಜನಪ್ರಿಯರಾಗಿದ್ದಾರೆ. ಅವರ ತುಳುನಾಡಿನ ಸಾಂಸ್ಕೃತಿಕ ಸೇವೆಯ ನೆನಪಿಗಾಗಿ ಈ ಅಭಿನಂದನ ಗ್ರಂಥವನ್ನು ಹೊರತರಲಾಗಿದೆ. ‘ಯಕ್ಷಗಾನ’ ಕಲೆಯ ಸುತ್ತ ಆವರಿಸಿಕೊಂಡಿರುವ ಅಮೃತ ಸೋಮೇಶ್ವರ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ಬರಹಗಳು ಎರಡು ಮತ್ತು ಮೂರನೆಯ ಭಾಗದಲ್ಲಿವೆ. ಆರಂಭದಲ್ಲಿ ‘ಗುರಿಯಿರದ ಪಯಣ’ ಎಂಬ ಶೀರ್ಷಿಕೆಯಲ್ಲಿ ಅಮೃತರೇ ಬರೆದ ಆತ್ಮ ಕಥನವಿದೆ. ಸಿರಿ ನಾಲ್ಕು ಎಂಬ ಭಾಗದಲ್ಲಿ ಅಮೃತರ ಬರಹಗಳನ್ನು ಕುರಿತ ಲೇಖನಗಳಿವೆ. ಸಿರಿ ಐದರಲ್ಲಿ ಬೇರೆ ಬೇರೆ ಲೇಖಕರು ಬರೆದಿರುವ ತುಳುನಾಡು ಹಾಗೂ ಜಾನಪದ ಸಾಂಸ್ಕೃತಿಕ ಅಧ್ಯಯನಕ್ಕೆ ಸಂಬಂಧಿಸಿದ ಬರಹಗಳಿವೆ. ಸಿರಿ ಆರರ ಅನುಬಂಧದಲ್ಲಿ ಅಮೃತರ ರಚನೆಗಳ ಪಟ್ಟಿಯನ್ನು ಹಾಗೂ ಅವರಿಗೆ ಸಂದ ಪುರಸ್ಕಾರ ಗೌರವಗಳ ವಿವರಗಳನ್ನು ಒದಗಿಸಲಾಗಿದೆ.

ವಾತ್ಸಲ್ಯ: ಶ್ರೀ ಪಂಚಾಕ್ಷರಿ ಹಿರೇಮಠ ಅವರ ಅಭಿನಂದನ ಗ್ರಂಥ, ೧೯೯೬, ಸಂ: ಡಾ.ಸಿ.ವಿ. ವೇಣುಗೋಪಾಲ,ಡಾ. ಬಸವರಾಜ ನಾಯ್ಕರ, ಧಾರವಾಡ

ಡಾ. ಪಂಚಾಕ್ಷರಿ ಹಿರೇಮಟ ಅವರ ಬದುಕು ಬರಹಗಳು ಸಂಕೀರ್ಣ ಸ್ವರೂಪದವು. ಸ್ವಾತಂತ್ರ್ಯ ಹೋರಾಟ ಹಾಗೂ ಭಾವನಾತ್ಮಕ ಬದುಕುಗಳ ಸಮ್ಮಿಲನದಲ್ಲಿ ಹಾಯ್ದು ಬಂದ ಪಂಚಾಕ್ಷರಿ ಹಿರೇಮಠ ಅವರು ಆಧುನಿಕ ಸಾಹಿತ್ಯದ ಕಾವ್ಯ, ವಿಮರ್ಶೆ, ಕಥೆ, ಅನುವಾದ, ಪತ್ರಸಾಹಿತ್ಯ, ಚರಿತ್ರೆ, ಮಕ್ಕಳ ಸಾಹಿತ್ಯ, ನಾಟಕ, ಪ್ರವಾಸಕಥನ, ಸಂಪಾದನೆ ಮೊದಲಾ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದವರು. ನವೋದಯ ಪರಂಪರೆಗೆ ಸೇರುವವರಾದ ಪಂಚಾಕ್ಷರಿ ಹಿರೇಮಠರನ್ನು ಕುರಿತು ಅವರ ಅರವತ್ತರ ನೆನಪಿಗಾಗಿ ಈ ಗೌರವಗ್ರಂಥವನ್ನು ಅರ್ಪಿಸಲಾಗಿದೆ. ಭಾಗ ಒಂದರಲ್ಲಿ ಹಿರೇಮಠರ ಜೀವನ ಸಾಧನೆ – ಸಿದ್ಧಿಗಳನ್ನು ಪರಿಚಯಿಸುವ ಬರಹಗಳಿದ್ದರೆ, ಭಾಗ ಎರಡರಲ್ಲಿ ಕಾವ್ಯದ ಮೂಲಕ ಕಾವ್ಯಾಂಜಲಿಯನ್ನು ಸಲ್ಲಿಸಲಾಗಿದೆ. ಭಾಗ ಮೂರರಲ್ಲಿ ಅವರ ಕೃತಿಗಳ ಅಧ್ಯಯನ ಲೇಖನಗಳಿವೆ.. ಕೊನೆಯಲ್ಲಿ ಹಿರೇಮಠರನ್ನು ಕುರಿತು ವಚನ ರೂಪದಲ್ಲಿ ಬರೆದ ಚಿಕ್ಕ ಕೃತಿಯಿದೆ.

ಕಾಯಕ ಪರಿಣಾಮಿ: ಶ್ರೀ ಚನ್ನಬಸವ ಪಟ್ಟದ್ದೇವರು ಭಾಲ್ಕಿ ಅವರ ಅಭಿನಂದನ ಗ್ರಂಥ ೧೯೯೧. ಸಂ: ಶಾಂತರಸ ಮತ್ತು ಇತರರು, ಭಾಲ್ಕಿ

ಭಾಲ್ಕಿಯ ಪೂಜ್ಯ ಶ್ರೀಗಳಾದ ಚೆನ್ನಬಸವ ಪಟ್ಟದ್ದೇವರ ಶತಮಾನೋತ್ಸವದ ನೆನಪಿಗಾಗಿ ಈ ಗೌರವ ಗ್ರಂಥವನ್ನು ಸಮರ್ಪಿಸಲಾಗಿದೆ. ನಾಡಿಗಾಗಿ,ನುಡಿಗಾಗಿ ಸೇವೆ ಸಲ್ಲಿಸುತ್ತಾ ವಚನಕಾರರ ಆದರ್ಶದಲ್ಲಿ ಜಾತಿ ಸಮಾನತೆಯ ಸಾಂಸ್ಕೃತಿಕ ಬದುಕನ್ನು ಭಾಲ್ಕಿ ಮಠದಲ್ಲಿ ರೂಪಿಸಿದ ಸೃಜನಶೀಲ ಚೇತನ ಜೀವಿಗಳಾದ ಭಾಲ್ಲಕಿ ಚನ್ನಬಸವ ಸ್ವಾಮಿಗಳು ಉತ್ತರ ಕರ್ನಾಟಕದ ಸಾಂಸ್ಕೃತಿಕ ಮೌಲ್ಯವಾಗಿದ್ದಾರೆ. ಅವರ ಶೈಕ್ಷಣಿಕ, ಸಾಂಸ್ಕೃತಿಕ ಸೇವೆಯ ನೆನಪು ಈ ಕೃತಿಯ ಹಂದರದಲ್ಲಿದೆ. ಬೃಹತ್‌ ಸಂಪುಟದ ಆರಂಭದಲ್ಲಿ ಜಿ.ಬಿ. ವಿಸಾಜಿಯವರು ಬರೆದಿರುವ ಚನ್ನಬಸವರ ಜೀವನ ಚರಿತ್ರೆಯನ್ನು ಕೊಡಲಾಗಿದೆ. ಭಾಗ ಎರಡರಲ್ಲಿ ಕವಿತಗೆಗಳ ಮೂಲಕ ವ್ಯಕ್ತಿ ಚಿತ್ರವನ್ನು ರೂಪಿಸಲಾಗಿದೆ. ಭಾಗ ಮೂರರಲ್ಲಿ ಪಟ್ಟದ್ದೇವರನ್ನು ಕುರಿತ ಬರಹಗಳಿವೆ. ಭಾಗ ನಾಲ್ಕರಿಂದ ಭಾಗ ಎಂಟರ ವರೆಗೆ ಇರುವ ಒಳಪುಟಗಳಲ್ಲಿ ಬೇರೆ ಬೇರೆ ವಿದ್ವಾಂಸರ ಲೇಖನಗಳಿವೆ. ಚರಿತ್ರೆ, ಸಂಶೋಧನೆ, ಧರ್ಮ, ತತ್ವಶಾಸ್ತ್ರ ಈ ವಿಷಯಗಳ ಲೇಖನಗಳು ೪ ರಲ್ಲಿಯೂ, ವಿವೇಚನೆ, ವಿಶ್ಲೇಷಣೆಗೆ ಸಂಬಂಧಿಸಿದ ಲೇಖನಗಳು ೫ ರಲ್ಲಿಯೂ ಸಾಮಾಜಿ, ರಾಜಕೀಯ, ಆರ್ಥಿಕ ವಿಷಯಗಳ ಲೇಖನಗಳು ೬ ರಲ್ಲಿಯೂ; ಸಾಹಿತ್ಯ, ಕಲೆ, ಸಂಗೀತ, ನೃತ್ಯ ವಿಷಯಗಳ ಲೇಖನಗಳು ೭ ರಲ್ಲಿಯೂ ಹಾಗೂ ರಚನಾತ್ಮಕ, ಬಂಡಾಯ, ಪ್ರತಿಭಟನೆ ಮೊದಲಾದ ವಿಷಯಗಳ ಲೇಖನಗಳು ಭಾಗ ೮ ರಲ್ಲಿವೆ.

ಸಾರಂಗಶ್ರೀ: ಶ್ರೀ ಚನ್ನವೀರ ಸ್ವಾಮಿಗಳ ಸ್ಮರಣ ಸಂಪುಟ, ೧೯೯೪, ಸಂ: ಡಾ.ಎಂ.ಎಂ. ಕಲಬುರ್ಗಿ, ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಾರಂಗಮಠ, ಸಿಂದಗಿ

ಸಿಂದಗಿಯ ಸಾರಂಗಮಠದ ಪೂಜ್ಯ ಶ್ರೀ ಚೆನ್ನವೀರ ಮಹಾಸ್ವಾಮಿಗಳ ಜನ್ಮ ಶತಮಾನೋತ್ಸವದ ಅಂಗವಾಗಿ ಈ ಸ್ಮರಣ ಸಂಪುಟವನ್ನು ಹೊರತರಲಾಗಿದೆ. ಈ ಕೃತಿಯ ಆರಂಭದಲ್ಲಿರುವ ಸಾರಂಗ ಮಠಾಧೀಶ್ವರರು ಮತ್ತು ಚೆನ್ನವೀರ ಮಹಾಸ್ವಾಮಿಗಳು ಎಂಬ ಎರಡು ಲೇಖನಗಳನ್ನು ಬಿಟ್ಟರೆ ಉಳಿದೆಲ್ಲ ಲೇಖನಗಳು ಒಂದು ಅಧ್ಯಯನ ಕ್ಷೇತ್ರಕ್ಕೆ ಸಂಬಂಧಿಸಿವೆ. ವೀರಶಯವ ಅರಸು ಮನೆತನಗಳ ಅಧ್ಯಯನಕ್ಕೆ ಅವಕಾಶ ಕಲ್ಪಿಸಿಕೊಂಡು, ಸ್ಥಳೀಯ ಪಾಳೇಗಾರರು,ನಾಯಕರು, ದೇಸಗತಿ ಮನೆತನಗಳು ಮುಂತಾದ ಅಲಕ್ಷಿತ ಚರಿತ್ರೆಯ ಸಂಗತಿಗಳನ್ನು ಇಲ್ಲಿ ಶೋಧಿಸಿಕೊಡಲಾಗಿದೆ. ಸಂಸ್ಮರಣ ಗ್ರಂಥವನ್ನು ಒಂದು ಅಧ್ಯಯನ ಕ್ಷೇತದ ಆಕರ ಗ್ರಂಥವನ್ನಾಗಿ ರೂಪಿಸುವ ಮಾದರಿಗೆ ಈ ಕೃತಿಯು ಒಳ್ಳೆಯ ಮಾದರಿಯಾಗಿದೆ.

ಶಿವಮಯ: ಪ್ರೊ.ಕೆ. ಭೈರವಮೂರ್ತಿ ಅವರ ಅಭಿನಂದನ ಗ್ರಂಥ, ೧೯೯೯, ಪ್ರ.ಸಂ. ಪ್ರೊ. ಎಚ್ಚೆಸ್ಕೆ, ಅಭಿನಂದನ ಗ್ರಂಥ ಸಮಿತಿ, ಮೈಸೂರು.

ಪ್ರೊ.ಕೆ. ಭೈರವಮೂರ್ತಿ ಅವರ ಬದುಕು ಬರಹಗಳನ್ನು ನೆನಪಿಸಿಕೊಂಡು ಈ ಗೌರವ ಗ್ರಂಥವನ್ನು ಅರ್ಪಿಸಿದರೂ ಕೂಡಿದನ್ನು ಕನ್ನಡದ ಸಾಂಸ್ಕೃತಿಕ ಲೋಕದ ಒಳ್ಳೆಯ ಆಕರ ಗ್ರಂಥವನ್ನಾಗಿ ರೂಪಿಸಿದ್ದು ಇದರ ವಿಶೇಷತೆಯಾಗಿದೆ. ಆರಂಭದ ಪೀಠಿಕಾ ಭಾಗದಲ್ಲಿ ಪ್ರೊ.ಕೆ. ಭೈರವಮೂರ್ತಿಯವರ ವ್ಯಕ್ತಿತ್ವ – ಬದುಕು – ಬರಹಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಲಾಗಿದೆ. ಉಳಿದ ಕೃತಿಯ ಭಾಗವೆಲ್ಲವೂ ತುಂಬಾ ಉಪಯುಕ್ತವಾಗಿದೆ. ಭಾಗ ಒಂದರಲ್ಲಿ ಕುವೆಂಪು ಅವರಿಂದ ಹಿಡಿದು ಕಾರ್ನಾಡರ ವರೆಗೆ ಎಲ್ಲ ಜ್ಞಾನಪೀಠ ಪ್ರಶಸ್ತಿ ವಿಜೇತರನ್ನು ಕುರಿತು ಬರೆದ ವಿಮರ್ಶಕರ ಸೂಕ್ತ ಬರಹಗಳಿವೆ. ಭಾಗ ಎರಡರಲ್ಲಿ ‘ಶ್ರೀ ರಾಮಾಯಣದರ್ಶನಂ’ ಕೃತಿಯಿಂದ ಹಿಡಿದು ‘ಬಕುಲದ ಹೂವುಗಳು’ ಕೃತಿಯವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆದ ೩೬ ಕೃತಿಗಳನ್ನು ಕುರಿತು ಬರೆದ ವಿಮರ್ಶಕರ ಲೇಖನಗಳಿವೆ. ಭಾಗ ಮೂರರಲ್ಲಿ ಪಂಪ ಪ್ರಶಸ್ತಿ ಪಡೆದ ಕನ್ನಡದ ದಿಗ್ಗಜರಾದ ೧೩ ಜನ ಸಾಹಿತಿಗಳನ್ನು ಕುರಿತು ಬರೆದ ಬರಹಗಳಿವೆ. ಭಾಗ ನಾಲ್ಕರಲ್ಲಿ ಚಿರಸ್ಮರಣೀಯರಾದ ೧೧ ಜನ ಲೇಖಕಿಯರನ್ನು ಗುರುತಿಸಿ ಬರೆದ ಲೇಖನಗಳಿವೆ. ಭಾಗ ಐದರಲ್ಲಿ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸಿದ ಮಹನೀಯರಾದ ಬಿ.ಎಂ.ಶ್ರೀ, ಎ.ಆರ್. ಕೃಷ್ಣಶಾಸ್ತ್ರಿ, ಆಲೂರು ವೆಂಕಟರಾಯರು, ಮಾಸ್ತಿ, ಕುವೆಂಪು, ದೇಜಗೌ, ಅನಕೃ, ತರಾಸು, ತಿಪ್ಪೇರುದ್ರಸ್ವಾಮಿ, ಚಿದಾನಂದಮೂರ್ತಿ ಹಾಗೂ ಜಿ. ನಾರಾಯಣ ಅವರನ್ನು ಕುರಿತ ಬರಹಗಳಿವೆ. ಬಾಗ ಆರರಲ್ಲಿ ಸಮಾಜಸೇವೆಗಾಗಿ ದುಡಿದ ವ್ಯಕ್ತಿಗಳನ್ನು ಹಾಗೂ ಸಂಸ್ಥೆಗಳನ್ನು ಕುರಿತು ೩೩ ಲೇಖನಗಳಿವೆ. ಒಟ್ಟಾರೆ ಆರು ಭಾಗಗಳಲ್ಲಿ ಕನ್ನಡದ ಸಾಂಸ್ಕೃತಿಕ ವಲಯವನ್ನು ಗುರುತಿಸಿ, ವಿಭಾಗೀಕರಿಸಿ, ಆಕರ ಗ್ರಂಥವನ್ನಾಗಿ ರೂಪಿಸಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ. ಅನುಬಂಧದಲ್ಲಿ ಪ್ರೊ.ಕೆ. ಭೈರವಮೂರ್ತಿಯವರ ಕೃತಿಗಳ ಹಾಗೂ ಜೀವನ ಮಾಹಿತಿಗಳ ಪಟ್ಟಿಯನ್ನು ಒದಗಿಸಲಾಗಿದೆ. ಭೈರವಮೂರ್ತಿಯವರ ನೆನಪಿಗಾಗಿ ಅರ್ಪಿಸಿದ ‘ಶಿವಮಯ’ ಗೌರವ ಗ್ರಂಥವು ತುಂಬಾ ಉಪಯುಕ್ತವಾಗಿದೆ.

ಯು.ಆರ್. ಅನಂತಮೂರ್ತಿ: ಜೀವನ ಹಾಗೂ ಕೃತಿಗಳ ಸಮೂಹಶೋಧ, ೨೦೦೦, ಸಂ: ಮುರಳೋಧರ ಉಪಾಧ್ಯ ಹಿರಿಯಡಕ, ಕರ್ನಾಟಕ ಸಂಘ, ಪುತ್ತೂರು

ಯು.ಆರ್. ಅನಂತಮೂರ್ತಿ ಅವರು ಕನ್ನಡದ ಸಾಂಸ್ಕೃತಿಕ ಚಿಂತಕರಾಗಿ ಪ್ರಸಿದ್ಧರಾದವರು. ಆಧುನಿಕ ಸಾಹಿತ್ಯ ಪ್ರಕಾರಗಳಲ್ಲಿನ ತಮ್ಮ ಗಂಭೀರ ಬರಹಗಳಿಂದ ತುಂಬಾ ಚರ್ಚಿತರಾದವರು. ಅವರನ್ನು ಗೌರವಿಸುವ ನೆಲೆಯಲ್ಲಿ ಈ ಕೃತಿಯನ್ನು ಹೊರತರಲಾಗಿದೆ. ಅನಂತಮೂರ್ತಿಯವರ ಜೀವನ ಹಾಗೂ ಕೃತಿಗಳನ್ನು ಶೋಧಿಸುವ ಹಂದರದಲ್ಲಿ ಈ ಕೃತಿಯ ಚೌಕಟ್ಟನ್ನು ರೂಪಿಸಲಾಗಿದೆ. ಅನಂತಮೂರ್ತಿಯವರೇ ಬರೆದ ಅನುಭವ ಕಥನದೊಟ್ಟಿಗೆ, ಸಂವಾದಗಳು, ಸಂದರ್ಶನಗಳು, ಪತ್ರಿಕೆಯ ಸಂಪಾದಕೀಯಗಳನ್ನು ಕೂಡ ಇಲ್ಲಿ ಒಳಗೊಳಿಸಲಾಗಿದೆ. ಹಿರಿಯ ಲೇಖಕರ ಅಭಿನಂದನಾ ಬರಹಗಳನ್ನು ಇಲ್ಲಿನ ಮೊದಲ ಭಾಗದಲ್ಲಿ ಸೇರಿಸಲಾಗಿದೆ. ಮುಂದಿನ ಭಾಗಗಳಲ್ಲಿ ಸಣ್ಣ ಕಥಾ ಸಂಕಲನಗಳು, ಕಾದಂಬರಿಗಳು, ವಿಮರ್ಶೆ, ಕಾವ್ಯ ಮೊದಲಾದ ಪ್ರಕಾರದ ಅನಂತಮೂರ್ತಿಯವರ ಬರಹಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಇವರ ಕೃತಿಗಳ ಬಗೆಗೆ ಬಂದಿರುವ ಬಿಡಿ ಟಿಪ್ಪಣಿಗಳನ್ನು ಕೊನೆಯಲ್ಲಿ ಒದಗಿಸಲಾಗಿದೆ. ಶೀರ್ಷಿಕೆಯಲ್ಲಿ ಸೂಚಿತವಾದಂತೆ ಇಡೀ ಕೃತಿ ಅನಂತಮೂರ್ತಿಯವರಿಗಾಗಿಯೇ ಮೀಸಲಾಗಿದೆ.

ಸಾರ್ಥಕ: ಪ್ರೊ.ಎಂ. ಮರಿಯಪ್ಪ ಭಟ್‌ ಅವರ ಸಂಸ್ಮರಣ ಗ್ರಂಥ, ೧೯೯೫, ಸಂ: ಡಾ. ಶ್ರೀಕೃಷ್ಣಭಟ್‌ ಅರ್ತಿಕಜೆ, ಸಂಸ್ಮರಣ ಸಮಿತಿ, ಮೈಲಾಪುರ, ಮದರಾಸು.

ಹೊರನಾಡು ಕನ್ನಡಿಗರಾಗಿ ಭಾಷಾಧ್ಯಯನಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರೊ. ಮರಿಯಪ್ಪ ಭಟ್‌ರ ಸ್ಮರಣೆಗಾಗಿ ಈ ಗೌರವ ಗ್ರಂಥವನ್ನು ಅರ್ಪಿಸಲಾಗಿದೆ. ಕೃತಿಯ ಮೊದಲ ಭಾಗದಲ್ಲಿ ಮರಿಯಪ್ಪ ಭಟ್‌ರ ಜೀವನ ಹಾಗೂ ವ್ಯಕ್ತಿತ್ವವನ್ನು ಕುರಿತು ಬರೆದ ಬರಹಗಳಿವೆ. ಎರಡನೆಯ ಭಾಗದಲ್ಲಿ ಅವರ ಸಮಗ್ರ ಕೃತಿಗಳ ಸಮೀಕ್ಷೆಯ, ವಿಶ್ಲೇಷಣೆಯ ಬರಹಗಳಿವೆ. ಭಾಗ ಮೂರರಲ್ಲಿ ಶಬ್ದಕೋಶಗಳ ಬಗೆಗಿನ ಲೇಖನಗಳಿವೆ. ಭಾಗ ನಾಲ್ಕರಲ್ಲಿ ಸಂಸ್ಕೃತಿ ಚಿಂತನೆಯ ಲೇಖನಗಳಿವೆ. ಭಾಗ ಐದರಲ್ಲಿ ಗ್ರಂಥ ಸಂಪಾದನೆಯ ಬರಹಗಳನ್ನೂ, ಭಾಗ ಆರರಲ್ಲಿ ಸಂಕೀರ್ಣ ಬರಹಗಳನ್ನೂ ಅಳವಡಿಸಲಾಗಿದೆ. ಅನುಬಂಧದಲ್ಲಿ ಮರಿಯಪ್ಪಭಟ್‌ ಅವರ ಕೃತಿಗಳು ಹಾಗೂ ಲೇಖನಗಳು ಕುರಿತ ಸೂಚಿಗಳಿವೆ.

ಭೂಷಣ: ಶ್ರೀ ಸರ್ಪಭೂಷಣ ಶಿವಯೋಗಿಗಳ ದ್ವಿಶತಮಾನೋತ್ಸವ ಸಂಸ್ಮರಣ ಸಂಪುಟ. ಸಂ: ಎಂ. ಚಿದಾನಂದ ಮೂರ್ತಿ, ಸಿ.ಯು. ಮಂಜುನಾಥ, ಸರ್ಪಭೂಷಣ ಶಿವಯೋಗೀಶ್ವರ ಮಠ, ಬೆಂಗಳೂರು

ಬಹುಮುಖ್ಯ ಗೇಯಕಾರರಾಗಿಯೂ, ಕೈವಲ್ಯ ಹಾಡುಗಾರರಾಗಿಯೂ ಖ್ಯಾತರಾಗಿದ್ದ ತತ್ವಪದಕಾರ ಸರ್ಪಭೂಷಣ ಶಿವಯೋಗಿಗಳವರ ದ್ವಿಶತಮಾನೋತ್ಸವದ ಅಂಗವಾಗಿ ಈ ನೆನಪಿನ ಗ್ರಂಥವನ್ನು ರೂಪಿಸಲಾಗಿದೆ. ಭಾಗ ಒಂದರಲ್ಲಿ ಸರ್ಪಭೂಷಣ ಶಿವಯೋಗಿಗಳನ್ನು ಹಾಗೂ ಸರ್ಪಭೂಷಣ ಮಠದ ಸಾಂಸ್ಕೃತಿಕ ವಿವರಗಳನ್ನು ಕುರಿತ ಬರಹಗಳನ್ನು ಬರೆಸಲಾಗಿದೆ. ಭಾಗ ಎರಡರಲ್ಲಿ ತತ್ವಪದಕಾರರು ಹಾಗೂ ಅವರ ಸಾಂಸ್ಕೃತಿಕ ಸಂಗತಿಗಳನ್ನು ಗಮನಿಸುವ ಲೇಖನಗಳನ್ನು ಬರೆಸಲಾಗಿದೆ. ಈ ವಿಸ್ತೃತ ಭಾಗವು ತತ್ವಪದಕಾರರ ಅಧ್ಯಯನಕ್ಕೆ ಉಪಯುಕ್ತ ಆಕರವಾಗಿದೆ. ವಚನ – ಸ್ವರವಚನ – ಗೇಯ ಕೃತಿಗಳು; ಕೀರ್ತನಕಾರರು – ಕೀರ್ತನಗಳು, ತಮಿಳು – ತೆಲುಗು – ಮರಾಠಿ – ಹಿಂದಿಗಳ ಗೇಯಕಾರರ ತೌಲನಿಕ ಚರ್ಚೆಗಳು, ಜನಪದ ಕವಿಗಳಲ್ಲಿ ಗೇಯತೆ ಮೊದಲಾದ ವಿವರಗಳನ್ನು ಒಂದೇ ಕೃತಿಕಯಲ್ಲಿ ಸೇರಿಸಿರುವುದು ಉಚಿತವಾಗಿದೆ ಹಾಗೂ ಅಧ್ಯಯನ ಯೋಗ್ಯವಾಗಿದೆ.

ಮಹಿಳಾ ಅಧ್ಯಯನ: ಪ್ರೊ.ಎಚ್‌.ವಿ. ನಾಗೇಶ್‌ ಅವರ ಅಭಿನಂದನ ಗ್ರಂಥ, ೧೯೯೩, ಸಂ: ಡಾ. ವೀಣಾ ಶಾಂತೇಶ್ವರ, ಸನ್ಮಾನ ಸಮಿತಿ, ಧಾರವಾಡ

ಸಮಾಜ ವಿಜ್ಞಾನಿಗಳೂ ಕನ್ನಡದ ಚಿಂತಕರೂ ಆದ ಪ್ರೊ. ಎಚ್‌.ವಿ. ನಾಗೇಶ್‌ ಅವರನ್ನು ಗೌರವಿಸುವ ಕಾರಣಕ್ಕಾಗಿ ಈ ಅಭಿನಂದನ ಗ್ರಂಥವನ್ನು ರೂಪಿಸಲಾಗಿದೆ. ಮೊದಲ ಭಾಗದಲ್ಲಿ ನಾಗೇಶ ಅವರನ್ನು ಅಭಿನಂದಿಸುವ ಬರಹಗಳನ್ನು ಒಳಗೊಳಿಸಿದರೆ; ಎರಡನೆಯ ಭಾಗದಲ್ಲಿ ಮಹಿಳಾ ಅಧ್ಯಯನಕ್ಕೆ ಸಂಬಂಧಿಸಿದ ಲೇಖನಗಳನ್ನು ಒಳಗೊಳಿಸಲಾಗಿದೆ. ಕೃತಿಯನ್ನು ಸ್ತ್ರೀವಾದಿ ಅಧ್ಯಯನದ ಲೇಖನಗಳಿಂದ ರೂಪಿಸಲಾಗಿದೆ.

ನಿಜಗುಣ: ಶ್ರೀ.ನಿ.ಪ್ರ.ಶ್ರೀ ನಿಜಗುಣ ಮಹಾಸ್ವಾಮಿಗಳವರ ಗೌರವ ಸಂಪುಟ., ೧೯೯೬, ಸಂ: ಎಚ್‌.ಎಂ. ಮರುಳಸಿದ್ಧಯ್ಯ, ಷಣ್ಮುಖಯ್ಯ ಅಕ್ಕೂರಮಠ, ಅಮೃತ ಮಹೋತ್ಸವ ಸಮಿತಿ, ಬೆಂಗಳೂರು.

ಬೆಂಗಳೂರು ಗವಿಪುರ ಬಡಾವಣೆಯಲ್ಲಿನ ಜಂಗಮ ಮಠದ ಶ್ರೀಗಳಾದ ಶ್ರೀ ನಿಜಗುಣ ಮಹಾಸ್ವಾಮಿಗಳವರ ಅಮೃತ ಮಹೋತ್ಸವದ ಸವಿನೆನಪಿಗಾಗಿ ಈ ಗೌರವ ಗ್ರಂಥವನ್ನು ಅರ್ಪಿಸಲಾಗಿದೆ. ಮೂರು ಭಾಗಗಳಲ್ಲಿರುವ ಈ ಕೃತಿಯ ಮೊದಲ ಭಾಗದಲ್ಲಿ ಹಾರೈಕೆಯ ಬರಹಗಳನ್ನು ಅಳವಡಿಸಿಕೊಳ್ಳಲಾಗಿದೆ. ಎರಡನೆಯ ಭಾಗದಲ್ಲಿ ಧರ್ಮವನ್ನು ಇತರ ಜ್ಞಾನ ಶಿಸ್ತುಗಳೊಂದಿಗೆ ತೌಲನಿಕವಾಗಿ ಅಧ್ಯಯನಕ್ಕೊಳಪಡಿಸಿರುವ ಲೇಖನಗಳನ್ನು ಒಳಗೊಳಿಸಲಾಗಿದೆ. ಮೂರನೆಯ ಭಾಗದಲ್ಲಿ ವಚನ ಸಾಹಿತ್ಯಕ್ಕೆ ಸಂಬಂಧಸಿದ ಲೇಖನಗಳನ್ನು ಸೇರಿಸಲಾಗಿದೆ. ಶ್ರೀಗಳ ಗೌರವ ಸಂಪುಟವೊಂದನ್ನು ಧರ್ಮ ಮತ್ತು ವಚನ ಪರಂಪರೆಗೆ ಸಂಬಂಧಿಸಿದ ಲೇಖನಗಳಿಂದ ರೂಪಿಸಿರುವುದು ಈ ಕೃತಿಯ ವಿಶೇಷತೆಯಾಗಿದೆ.

ಶತಾಯುಷಿ: ಪ್ರೊ. ಎ.ಎನ್‌. ಮೂರ್ತಿರಾವ್‌ ಅವರ ಅಭಿನಂದನ ಗ್ರಂಥ, ೨೦೦೦, ಸಂ: ಸು. ರಂಗಸ್ವಾಮಿ, ಹಂಸಧ್ವನಿ ಪ್ರಕಾಶನ, ಬೆಂಗಳೂರು

ಎ.ಎನ್‌. ಮೂರ್ತಿರಾವ್‌ ಅವರ ಸಾಹಿತ್ಯ ಸೇವೆಯನ್ನು ಗಮನಿಸಿ, ನೂರು ವರ್ಷದ ಬದುಕನ್ನು ನೆನಪಿಸಿಕೊಳ್ಳುವ ಕಾರಣಕ್ಕಾಗಿ ಈ ಶತಾಯುಷಿ ಅಭಿನಂದನಾ ಗ್ರಂಥವನ್ನು ಹೊರತರಲಾಗಿದೆ. ಪ್ರಬಂಧ ಸಾಹಿತ್ಯ, ವೈಚಾರಿಕ ಬರಹಗಳು, ಭಾಷಾಂತರಗಳು, ಪ್ರವಾಸ ಕಥನ ಮೊದಲಾದ ಪ್ರಕಾರಗಳಲ್ಲಿ ಕೆಲಸ ಮಾಡಿದ ಎ.ಎನ್‌. ಮೂರ್ತಿರಾಯರು ‘ದೇವರು’ ಪುಸ್ತಕದಿಂದ ಜನಪ್ರಿಯರಾದರು. ಪ್ರಬಂಧ ಹಾಗೂ ವೈಚಾರಿಕ ಬರಹಗಳು ಅವರ ಆಸಕ್ತಿಯ ವಿಷಯಗಳು. ಹಿರಿಯ ತಲೆಮಾರಿನ ಲೇಖಕರಲ್ಲಿ ಖಚಿತ ವೈಜ್ಞಾನಿಕತೆ ಹಾಗೂ ತಾತ್ವಿಕ ಜಿಜ್ಞಾಸೆಯಿಂದ ಬರೆಯುವ ಸಾಹಿತಿಯೆಂಬ ಹೆಗ್ಗಳಿಕೆಯು ಮೂರ್ತಿರಾಯರಿಗಿದೆ.

ಈ ಸಂಭಾವನ ಗ್ರಂಥದಲ್ಲಿ ಅವರ ವ್ಯಕ್ತಿತ್ವ – ಬರಹಗಳನ್ನು ಕುರಿತ ಲೇಖನಗಳನ್ನು ಒಳಗೊಳಿಸಲಾಗಿದೆ. ಅವರ ಕೃತಿಗಳನ್ನು ವಿವರವಾದ ಅಧ್ಯಯನಕ್ಕೆ ಇಲ್ಲಿ ಒಳಪಡಿಸಲಾಗಿದೆ. ಲಕ್ಷ್ಮೀನಾರಯಣಭಟ್ಟರ ಸಂವಾದವನ್ನು ಇಲ್ಲಿ ಸೇರಿಸಿರುವುದು ಉಚಿತವಾಗಿದೆ. ಆಧುನಿಕ ಜ್ಞಾನ ಮತ್ತು ಚಿಂತನ ಕುರಿತ ಮಹತ್ವದ ಗ್ರಂಥವನ್ನು ಮೂರ್ತಿರಾಯರ ಸಾಂದರ್ಭಿಕತೆಯೊಡನೆ ಇಲ್ಲಿ ರೂಪಿಸಲಾಗಿದೆ.

ಪದ್ಮಾಂತರಂಗ: ಎಸ್‌.ಕೆ. ಪದ್ಮಾದೇವಿ ಅಮೃತೋತ್ಸವ ಅಭಿನಂದನ ಗ್ರಂಥ ಸಂ:ಡಾ.ವಿಜಯಾ ಪ್ರ: ಎಂಟರ್ ಟೈನರ್ಸ್ ಇಂಡಿಯಾ, ಬೆಂಗಳೂರು.

ಉತ್ಕೃಷ್ಟ ಕಲಾವಿದೆಯಾದ ಎಸ್‌.ಕೆ. ಪದ್ಮಾದೇವಿ ಅವರ ೭೫ರ ವಯೋಮಾನವನ್ನು ನೆನಪಿಸಿಕೊಂಡು ಈ ಗೌರವ ಗ್ರಂಥವನ್ನು ಅರ್ಪಿಸಲಾಗಿದೆ. ಇಡೀ ಬದುಕನ್ನು ಕಲೆಗಾಗಿ ಸಮರ್ಪಿಸಿಕೊಂಡ ಪದ್ಮಾದೇವಿಯವರ ಕಲಾಕ್ಷೇತ್ರಕ್ಕೆ ಸಂಬಂಧಿಸಿದಂತೆಯೇ ಈ ಕೃತಿಯನ್ನು ರೂಪಿಸಲಾಗಿದೆ. ಅಭಿನೇತ್ರಿಯಾಗಿ ಬಣ್ಣದ ಲೋಕದೊಂದಿಗೆ ಬೆಳೆದು ಬಂದ ಪದ್ಮಾವತಿಯ ಕಲಾ ಜೀವನವನ್ನು ಸಮೀಕ್ಷಿಸಿ, ಅವಳ ಅನುಭವ ಕಥನವನ್ನು ಇಲ್ಲಿನ ಅನೇಕ ಲೇಖನಗಳಲ್ಲಿ ಪರಿಚಯಿಸಲಾಗಿದೆ. ಕೊನೆಯ ಭಾಗದಲ್ಲಿ ರಂಗಭೂಮಿ, ಚಲನಚಿತ್ರ, ಆಕಾಶವಾಣಿ, ದೂರವಾಣಿ ಮೊದಲಾದ ಮಾಧ್ಯಮಗಳ ಸಂಬಂಧದಲ್ಲಿ ಕಲೆಯ ಗುಣಾತ್ಮಕತೆಯನ್ನು ಚರ್ಚಿಸುವ ಲೇಖನಗಳನ್ನು ವಿದ್ವಾಂಸರಿಂದ ಬರೆಸಿ ಸೇರಿಸಲಾಗಿದೆ. ಕಲಾ ಪ್ರಪಂಚ ಮತ್ತು ಕಲಾವಿದೆಯ ಬದುಕಿನ ವಿವರಗಳಿಂದ ಉತ್ತಮ ಗೌರವ ಗ್ರಂಥವೊಂದನ್ನು ತಂದಿರುವುದು ಒಟ್ಟು ಅಭಿನಂದನ ಗ್ರಂಥಗಳ ಸಂದರ್ಭದಲ್ಲಿ ಇದು ಗಮನಾರ್ಹ ಸಂಗತಿಯಾಗಿದೆ.

ಅಭಿಜ್ಞಾನ: ಡಾ.ಕೆ. ಕೃಷ್ಣಮೂರ್ತಿಯವರ ಅಭಿನಂದನ ಗ್ರಂಥ. ೧೯೯೫, ಸಂ: ಟಿ.ವಿ. ವೆಂಕಟಾಚಲಶಾಸ್ತ್ರಿ, ಅನಂತರಾಮು, ಎನ್‌.ಎಸ್‌. ತಾರಾನಾಥ ಪ್ರ: ಡಿ.ವಿ.ಕೆ. ಮೂರ್ತಿ ಮೈಸೂರು.

ಕೆ.ಕೃಷ್ಣಮೂರ್ತಿ ಅವರು ಸಂಸ್ಕೃತ ವಿದ್ವಾಂಸರು. ಅವರು ಸಂಸ್ಕೃತದ ಕಾವ್ಯ ಮೀಮಾಂಸೆ ಮತ್ತು ಭಾಷಾ ಅಧ್ಯಯನಕ್ಕೆ ಸಂಬಂಧಪಟ್ಟ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ತಂದಿರುವವರು. ವ್ಯಾಕರಣ, ಭಾಷಾವಿಜ್ಞಾನ ಮತ್ತು ಮೀಮಾಂಸೆಯಲ್ಲಿ ಅಪರೂಪದ ವಿದ್ವಾಂಸರಾದ ಕೆ.ಕೃಷ್ಣಮೂರ್ತಿಯವರ ಆಸಕ್ತಿಯ ಅಧ್ಯಯನ ಕ್ಷೇತ್ರಗಳಿಗೆ ಸಂಬಂಧಪಟ್ಟ ಹಾಗೆ ವಿವಿಧ ವಿದ್ವಾಂಸರ ಲೇಖನಗಳನ್ನು ಈ ಅಭಿನಂದನ ಗ್ರಂಥದಲ್ಲಿ ಅಳವಡಿಸಿಕೊಳ್ಳಲಾಗಿದೆ. ಪ್ರಾಚೀನ ಜ್ಞಾನ ಶಿಸ್ತುಗಳ ಬಗೆಗೆ ಬರೆದಿರುವ ಇಲ್ಲಿನ ಲೇಖನಗಳು ವಿದ್ವತ್‌ ಪೂರ್ಣವಾಗಿ ಮಂಡಿತವಾಗಿವೆ. ಭಾಷಾ ಅಧ್ಯಯನಕ್ಕೆ ಇಲ್ಲಿನ ಹೆಚ್ಚಿನ ಲೇಖನಗಳು ಮೀಸಲಾಗಿರುವುದು ಔಚಿತ್ಯಪೂರ್ಣವಾಗಿದೆ.

ಅನ್ವೇಷಕ: ಪ್ರೊ.ಕೆ.ಜಿ. ನಾಗರಾಜಪ್ಪ ಅವರ ಅಭಿನಂದನ ಗ್ರಂಥ, ೧೯೯೮ ಸಂ: ಎಂ.ಎಚ್‌.ನಾಗರಾಜು, ಎ.ಕೆ.ಹಂಪಣ್ಣ, ಅನಿಕೇತನ, ತುಮಕೂರು

ಕನ್ನಡ ವಿಮರ್ಶಕರಾಗಿ, ಚಿಂತಕರಾಗಿ ಹಾಗೂ ಸಾಂಸ್ಕೃತಿಕ ಹೋರಾಟಗಾರರಾಗಿ ಕಾಣಿಸಿಕೊಂಡ ಕೆ.ಜಿ. ನಾಗರಾಜಪ್ಪ ಅವರಿಗೆ ಈ ಗೌರವಗ್ರಂಥವನ್ನು ಅರ್ಪಿಸಲಾಗಿದೆ. ಈ ಸಂಕಲನದಲ್ಲಿ ನಾಗರಾಜಪ್ಪನವರ ಬದುಕು – ಬರಹಗಳನ್ನು ಕುರಿತು ಮಾತ್ರ ಲೇಖನಗಳನ್ನು ಒಳಗೊಳಿಸಲಾಗಿದೆ. ಆರಂಭದ ಬರಹಗಳು ಅವರ ಬದುಕನ್ನು ಕುರಿತಾದವುಗಳಾದರೆ ಎರಡನೆಯ ಭಾಗದಲ್ಲಿ ಕೆ.ಜಿ.ಎನ್‌ ಅವರ ಮರುಚಿಂತನೆ, ಇಕ್ಕಟ್ಟು ಬಿಕ್ಕಟ್ಟು ಮೊದಲಾದ ವಿಮರ್ಶಾ ಕೃತಿಗಳ ಬಗೆಗೆ ಬರೆದಿರುವ ಹಿರಿಯ ವಿಮರ್ಶಕರ ಬರಹಗಳಿವೆ. ಅವರ ಇತರ ಕೃತಿಗಳನ್ನೂ ಇಲ್ಲಿ ಸಮೀಕ್ಷೆಗೆ ಒಳಪಡಿಸಲಾಗಿದೆ. ಮೂರನೆಯ ಭಾಗದಲ್ಲಿ ಎರಡು ಸಂದರ್ಶನಗಳನ್ನು ಸೇರಿಸಲಾಗಿದೆ.

ಜೀಶಂಪ ಸಂಸ್ಮರಣೆ: ಜೀ.ಶಂ. ಪರಮಶಿವಯ್ಯ ಅವರ ಅಭಿನಂದನ ಗ್ರಂಥ ಸಂ: ಎಚ್‌.ಜೆ.ಲಕ್ಕಪ್ಪಗೌಡ, ೧೯೯೫, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.

ಕನ್ನಡ ಜಾನಪದ ಲೋಕದ ಮೊದಲ ತಲೆಮಾರಿನ ವಿದ್ವಾಂಸರಾದ ಜೀಶಂಪ ಅವರ ಗೌರವಾರ್ಥ ಈ ಅಭಿನಂದನ ಗ್ರಂಥವನ್ನು ರೂಪಿಸಲಾಗಿದೆ. ನಾಲ್ಕು ಭಾಗಗಳಲ್ಲಿ ನಿಯೋಜಿಸಲಾದ ಇಲ್ಲಿನ ಲೇಖನಗಳಲ್ಲಿ ಎರಡು ಮತ್ತು ಮೂರನೆಯ ಭಾಗಗಳು ಅವರ ಬರಹಗಳನ್ನು ಕುರಿತಾಗಿವೆ. ಭಾಗ ಒಂದರಲ್ಲಿ ಅವರ ಜೀವನ ಸಂಸ್ಮರಣೆಯ ಲೇಖನಗಳನ್ನು ಒಳಗೊಳಿಸಲಾಗಿದೆ. ಕೊನೆಯ ಭಾಗದಲ್ಲಿ ತೀ.ನಂ.ಶಂಕರನಾರಾಯಣ ಅವರು ಮಾಡಿದ ಜೀಶಂಪ ಸಂದರ್ಶನವಿದೆ. ಅನುಬಂಧದಲ್ಲಿ ಜೀ.ಶಂ.ಪ ಅವರ ಬದುಕಿನ ಮಹತ್ವದ ಘಟನೆಗಳನ್ನು ಹಾಗೂ ಅವರ ಕೃತಿಗಳ ವಿವರಗಳನ್ನು ಒದಗಿಸಲಾಗಿದೆ.

ನಾಗಾಭಿನಂದನ: ಶ್ರೀ.ಎಂ.ಜಿ. ನಾಗರಾಜ್‌ ಅವರ ಅಭಿನಂದನ ಗ್ರಮಥ, ೧೯೯೪, ಸಂ: ಡಾ.ಎಚ್‌.ಎಸ್‌. ಗೋಪಾಲರಾವ್‌. ಅಭಿನಂದನಾ ಸಮಿತಿ, ಬೆಂಗಳೂರು.

ಪ್ರಾಚೀನ ಕನ್ನಡ ಸಾಹಿತ್ಯ, ಶಾಸನಗಳ ಸಂಶೋಧನಾ ವಲಯದಲ್ಲಿ ಎಂ.ಜಿ. ನಾಗರಾಜ್‌ ಅವರ ಹೆಸರು ಸುಪರಿಚಿತವಾದುದು. ಸಾಹಿತ್ಯ ಪರಿಷತ್ತು, ಇತಿಹಾಸ ಅಕಾಡೆಮಿಗಳಲ್ಲಿ ಕೂಡ ಇವರು ಸೇವೆ ಸಲ್ಲಿಸಿರುವವರು. ಅವರ ಸಂಶೋಧನಾ ಕ್ಷೇತ್ರದ ವಲಯಕ್ಕೆ ಸಂಬಂಧಿಸಿದ ಲೇಖನಗಳ ಮೂಲಕವೇ ಈ ಅಭಿನಂದನ ಗ್ರಂಥವನ್ನು ರೂಪಿಸಿದ್ದು ಕೃತಿಯ ವಿಶೇಷತೆಯಾಗಿದೆ. ಇಲ್ಲಿನ ೨೮ ಲೇಖನಗಳು ಪ್ರಾಚೀನ ಪರಂಪರೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿವೆ. ಮೂರು ಲೇಖನಗಳಲ್ಲಿ ನಾಗರಾಜ್‌ ಅವರ ಬದುಕು – ಬರಹಗಳನ್ನು ಕುರಿತ ವಸ್ತು ವಿವರಗಳಿವೆ.

ನಾದಲೀಲಾ: ಎಚ್‌.ಆರ್.ಲೀಲಾವತಿ ಅವರ ಅಭಿನಂದನ ಗ್ರಂಥ, ೨೦೦೦ ಸಂ:ಡಾ. ಪ್ರೀತಿ ಶುಭಚಂದ್ರ, ಅಭಿನಂದನ ಸಮಿತಿ, ಮೈಸೂರು.

ಸುಗಮ ಸಂಗೀತ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸಿದ ಎಚ್‌.ಆರ್. ಲೀಲಾವತಿ ಅವರ ಗೌರವಾರ್ಥ ಈ ಅಭಿನಂದನ ಗ್ರಂಥವನ್ನು ರೂಪಿಸಲಾಗಿದೆ. ಮೊದಲ ಭಾಗದಲ್ಲಿ ಕವಿಗಳು, ಸಾಹಿತಿಗಳು ಲೀಲಾವತಿಯವರನ್ನು ಗಮನಿಸಿ ಬರೆದ ಲೇಖನಗಳನ್ನು ಒಳಗೊಳಿಸಲಾಗಿದೆ ಎರಡನೆಯ ಭಾಗದಲ್ಲಿ ಕಲಾವಿದರ ದೃಷ್ಟಿಕೋನದಲ್ಲಿ ಲೀಲಾವತಿಯವರನ್ನು ವಿಶ್ಲೇಷಿಸಿದರೆ, ಮೂರನೆಯ ಭಾಗದಲ್ಲಿ ಬಾನುಲಿಯವರು ಕಂಡದ್ದನ್ನು ವಿಶ್ಲೇಷಿಸಲಾಗಿದೆ. ನಾಲ್ಕರಲ್ಲಿ ಬಂಧುಗಳು ಬರೆದ ಲೇಖನಗಳಿವೆ. ೫ರಲ್ಲಿ ಪತ್ರಿಕಾಕರ್ತರ ಬರಹಗಳಿವೆ. ೬ರಲ್ಲಿ ಶಿಷ್ಯರ ಬರಹಗಳಿವೆ. ೭ರಲ್ಲಿ ಅಭಿಮಾನಿಗಳ ಬರಹಗಳಿವೆ. ೮ನೆಯ ಭಾಗದಲ್ಲಿ ಲೀಲಾವತಿಯವರ ಆತ್ಮಕಥನವಿದೆ.

ಸಂತುಷ್ಟಿ: ಡಾ.ಎಂ.ಎಸ್‌.ಲಠ್ಠೆ ಅವರ ಅಭಿನಂದನ ಗ್ರಂಥ ೧೯೯೩ ಸಂ: ಡಾ ಸಂಗಮೇಶ ಸವದತ್ತಿಮಠ, ವಿದ್ಯಾನಿಧಿ ಪ್ರಕಾಶನ, ಗದಗ

ಡಾ. ಎಂ.ಎಸ್‌. ಲಠ್ಠೆಯವರು ಜಾನಪದ ವಿದ್ವಾಂಸರು. ೬೮ ಸಾಹಿತ್ಯ ಕೃತಿಗಳನ್ನು ರಚಿಸಿರುವ ಡಾ.ಲಠ್ಠೆಯವರ ಅರವತ್ತರ ಸವಿನೆನಪಿಗಾಗಿ ಈ ಅಭಿನಂದನ ಗ್ರಂಥವನ್ನು ಅರ್ಪಿಸಲಾಗಿದೆ. ನಾಲ್ಕು ಭಾಗಗಳಲ್ಲಿ ನಿಯೋಜಿತವಾದ ಈ ಕೃತಿಯ ಆರಂಭದ ಭಾಗದಲ್ಲಿ ಅನೇಕ ವಿದ್ವಾಂಸರ ಲೇಖನಗಳಿವೆ. ಎರಡನೆಯ ಭಾಗದಲ್ಲಿ ಹರಕೆ – ಹಾರೈಕೆ ಮತ್ತು ಅಭಿನಂದನಾ ಬರಹಗಳಿವೆ. ಭಾಗ ೩ರಲ್ಲಿ ಡಾ. ಲಠ್ಠೆಯವರ ಬರಹಗಳ ವಿಮರ್ಶೆಗಳಿವೆ. ಭಾಗ ೪ರಲ್ಲಿ ಲಠ್ಠೆಯವರೇ ಬರೆದಿರುವ ತಮ್ಮ ಬದುಕು – ಬರಹಗಳ ಆತ್ಮಕಥನವಿದೆ. ಡಾ.ಲಠ್ಠೆಯವರ ಜಾನಪದ ಸೇವೆಗೆ ಪೂರಕವಾಗಿ ಈ ಅಭಿನಂದನ ಗ್ರಂಥವನ್ನು ರೂಪಿಸಿರುವುದು ಔಚಿತ್ಯಪೂರ್ಣವಾಗಿದೆ. ಜನಪದ ಕವಿಚರಿತೆ ಮತ್ತು ಅವರ ಸಂಪಾದಿತ ಕೃತಿಗಳ ಮಹತ್ವವನ್ನು ಆದ್ಯಂತವಾಗಿ ವಿಶ್ಲೇಷಿಸಿರುವುದು ಕೃತಿಯ ಗುಣಾತ್ಮಕ ಅಂಶವಾಗಿದೆ.

ಮಹಾಮಾರ್ಗ: ಡಾ.ಎಂ.ಎಂ. ಕಲಬುರ್ಗಿ ಅವರ ಅಭಿನಂದನ ಗ್ರಂಥ, ೧೯೯೮ ಸಂ: ಸದಾನಂದ ಕನವಳ್ಳಿ, ಡಾ.ವೀರಣ್ಣ ರಾಜೂರು ತೋಂಟದಾರ್ಯಮಠ ಗದಗ ಮತ್ತು ನಾಗನೂರು ರುದ್ರಾಕ್ಷಿಮಠ ಬೆಳಗಾವಿ.

ಸಂಶೋಧಕರಾದ ಡಾ.ಎಂ.ಎಂ. ಕಲಬುರ್ಗಿಯವರ ಅರವತ್ತನೆಯ ವರ್ಷದ ಸವಿನೆನಪಿಗಾಗಿ ಈ ಮಹಾಮಾರ್ಗ ಮತ್ತು ಕಲಬುರ್ಗಿ ೬೦ ಎಂಬ ಅಭಿನಂದನ ಗ್ರಂಥಗಳನ್ನು ಸಮರ್ಪಿಸಲಾಗಿದೆ. ಅಭಿನಂದನ ಗ್ರಂಥಗಳನ್ನು ಅರ್ಥಪೂರ್ಣವಾಗಿ ತರಬೇಕೆಂಬ ಸತ್ಪರಂಪೆಯ ದ್ಯೋತಕವಾಗಿ ಈ ಕೃತಿಗಳನ್ನು ರೂಪಿಸಲಾಗಿದೆ. ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರುವ ಡಾ.ಎಂ.ಎಂ. ಕಲಬುರ್ಗಿಯವರಿಗೆ ಅಭಿನಂದನಾ ಗ್ರಂಥವನ್ನು ರೂಪಿಸುವ ಸಂದರ್ಭದಲ್ಲಿ ಸಂಪಾದಕರು ಅವರ ಆಸಕ್ತಿ ವಿಷಯಗಳಿಗೆ ಸಂಬಂಧಿಸಿದ ಲೇಖನಗಳನ್ನೇ ಬರೆಸಿದ್ದಾರೆ. ಸಂಶೋಧನ ಪರಿಕಲ್ಪನೆ ಹಾಗೂ ಈವರೆಗಿನ ಸಂಶೋಧನ ಚಟುವಟಿಕೆಗಳ ಸಮೀಕ್ಷೆಯನ್ನು ಈ ಕೃತಿಯಲ್ಲಿ ಮಾಡಲಾಗಿದೆ. ಸಂಶೋಧನ ವಿಧಾನವೆಂಬ ಮೊದಲ ಭಾಗದಲ್ಲಿ ಕನ್ನಡ ಸಂಶೋಧನ ವಲಯಗಳನ್ನು ಗುರುತಿಸಿ, ಆಯಾ ಕ್ಷೇತ್ರದ ತಜ್ಞರಿಂದ ಬರೆಸಿದ್ದು ಉಪಯುಕ್ತವಾಗಿದೆ. ಸಂಶೋಧನೆಯ ಶುದ್ಧ ಪರಿಕಲ್ಪನೆಯಿಂದ ಆರಂಭವಾದ ಇಲ್ಲಿನ ಮೊದಲ ಭಾಗದ ಲೇಖನಗಳು ಸಾಹಿತ್ಯ, ಸಂಸ್ಕೃತಿ, ಭಾಷೆ, ಲಿಪಿ, ವ್ಯಾಕರಣ, ನಿಘಂಟು, ಛಂದಸ್ಸು, ನಾಮವಿಜ್ಞಾನ, ಗ್ರಂಥ ಸಂಪಾದನೆ, ಕಾವ್ಯಮೀಮಾಂಸೆ, ಧರ್ಮ, ಶಾಸನ, ಸಮಾಜ, ಚರಿತ್ರೆ, ಚಿತ್ರಕಲೆ ಮೊದಲಾದ ವಿಷಯಗಳನ್ನು ಒಳಗೊಂಡಿವೆ. ಪರಂಪರೆ ಎಂಬ ಎರಡನೆಯ ಭಾಗದಲ್ಲಿ ವಸಾಹತುಕಾಲದಲ್ಲಿ ಸಂಗ್ರಹ, ಶೋಧನ, ಸಂಶೋಧನ, ಸಂಪಾದನ ಚಟುವಟಿಕೆಗಳನ್ನು ಆರಂಭಿಸಿದ ಮಿಶನರಿಗಳು, ಆರ್. ನರಸಿಂಹಾಚಾರ, ಫ.ಗು.ಹಳಕಟ್ಟಿ, ಉತ್ತಂಗಿ ಚನ್ನಪ್ಪ ಮೊದಲಾದ ಪೂರ್ವಸೂರಿಗಳನ್ನು ಕುರಿತ ಸಮೀಕ್ಷಾ ಲೇಖನಗಳಿವೆ. ಮೂರನೆಯ ಭಾಗದಲ್ಲಿ ಕಲಬುರ್ಗಿಯವರ ಸಂಶೋಧನಾ ಚಟುವಟಿಕೆಯನ್ನು ಸಾಹಿತ್ಯ ಸಂಶೋಧನೆ, ಶಾಸ್ತ್ರ ಸಂಶೋಧನೆ, ಶಾಸನ ಸಂಶೋಧನೆ, ಜಾನಪದ ಸಂಶೋಧನೆ, ಗ್ರಂಥ ಸಂಪಾದನೆ ಎಂಬ ಶೀರ್ಷಿಕೆಗಳಲ್ಲಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ನಾಲ್ಕನೆಯ ಭಾಗದಲ್ಲಿ ಕಲಬುರ್ಗಿಯವರ ಒಟ್ಟು ಕೃತಿಗಳನ್ನೂ ಐದನೆಯ ಭಾಗದಲ್ಲಿ ಅವರ ಸಾಧನೆಯ ಘಟ್ಟಗಳನ್ನೂ ಪರಿಚಯಿಸಿಕೊಡಲಾಗಿದೆ. ಆರನೆಯ ಭಾಗದಲ್ಲಿ ಪಿ.ಎಚ್‌.ಡಿ ಪ್ರಬಂಧಗಳ ಸೂಚಿಯನ್ನು ನೀಡಲಾಗಿದೆ.

ಈ ಮಹಾಮಾರ್ಗದ ಜೊತೆಗೆ ಇನ್ನೊಂದು ಪ್ರತ್ಯೇಕವಾದ ಅಭಿನಂದನಾ ಗ್ರಂಥವನ್ನು ಕಲಬುರ್ಗಿ ೬೦ ಎಂಬ ಹೆಸರಿನಲ್ಲಿ ಹೊರತರಲಾಗಿದೆ. ಅಧ್ಯಯನಕ್ಕೆ ಸಂಬಂಧಪಟ್ಟ ಭಾಗವನ್ನು ‘ಮಹಾಮಾರ್ಗ’ದಲ್ಲೂ ಹರಕೆ, ಹಾರೈಕೆ, ಅನುಭವ ಕಥನ, ಸಂವಾದ, ಅಭಿನಂದನೆ ಮೊದಲಾದ ಭಾಗವನ್ನು ‘ಕಲಬುರ್ಗಿ ೬೦’ ಕೃತಿಯಲ್ಲೂ ವಿಭಾಗೀಕರಿಸಿಕೊಳ್ಳಲಾಗಿದೆ. ಒಂದನ್ನು ಅಕಾಡೆಮಿಕ್‌ ಶಿಸ್ತಿನ ಅಧ್ಯಯನ ಯೋಗ್ಯ ಕೃತಿಯನ್ನಾಗಿಯೂ ಇನ್ನೊಂದನ್ನು ಕಲಬುರ್ಗಿಯವರನ್ನು ಅನುಭವಲೋಕದ ಮೂಲಕ ಅಭಿನಂದಿಸುವ ಸಾಂಸ್ಕೃತಿಕ ಪರಂಪರೆಯ ಕೃತಿಯನ್ನಾಗಿಯೂ ಹೀಗೆ ಎರಡು ಕೃತಿಗಳನ್ನು ರೂಪಿಸಿರುವುದು ಮಹತ್ವದ ಸಂಗತಿಯಾಗಿದೆ. ಈ ವರೆಗಿನ ಅಭಿನಂದನ ಗ್ರಂಥಗಳಲ್ಲಿ ಎರಡೂ ಗುಣಗಳನ್ನು ಒಂದರಲ್ಲೇ ತರಲಾಗುತ್ತಿತ್ತು. ಕಲಬುರ್ಗಿಯವರ ಸಂದರ್ಭದಲ್ಲಿ ಎರಡು ಕೃತಿಗಳಲ್ಲಿ ಈ ಪರಂಪರೆಯನ್ನು ಬೆಳೆಸುವ ಆಶಯವನ್ನು ದಾಖಲಿಸಲಾಗಿದೆ.

ಒಟ್ಟು ಈ ವರೆಗೆ ಸ್ಥೂಲವಾಗಿ ಸಮೀಕ್ಷಿಸಲಾದ ಅಭಿನಂದನ ಗ್ರಂಥಗಳು ನನ್ನ ಗಮನಕ್ಕೆ ಬಂದವುಗಳು ಮಾತ್ರ. ಇನ್ನೂ ಅನೇಕ ಕೃತಿಗಳು ತೊಂಬತ್ತರ ದಶಕದಲ್ಲಿ ಬಂದಿರುವ ಸಂಗತಿಯು ನಿಜವೇ ಹೌದು. ಉಳಿದ ಎಲ್ಲ ಗ್ರಂಥಗಳನ್ನು ಲೇಖಕನ ಮಿತಿಯ ಕಾರಣಕ್ಕಾಗಿ ನೋಡಲಾಗಲಿಲ್ಲ. ಸಮಗ್ರವಲ್ಲದಿದ್ದರೂ ಸಾಧ್ಯವಾದಷ್ಟರಲ್ಲಿ ಪ್ರಾತಿನಿಧಿಕವಾಗಿ ಕೆಲವು ಅಭಿನಂದನ ಗ್ರಂಥಗಳನ್ನು ಇಲ್ಲಿ ಪರಿಚಯಿಸಲಾಗಿದೆ. ಅವುಗಳ ಸಾಂಸ್ಕೃತಿಕ ಮಹತ್ವವನ್ನು ಸಾಂದರ್ಭಿಕವಾಗಿ ಚರ್ಚಿಸಲಾಗಿದೆ. ಸಾಹಿತಿಗಳಲ್ಲದೆ ಸಮಾಜ ಸುಧಾರಕರು, ಕಲಾವಿದರು, ರಂಗಭೂಮಿ ತಜ್ಞರು, ಸಂಗೀತಗಾರರು, ಜಾನಪದ ತಜ್ಞರು, ಶೈಕ್ಷಣಿಕ ಸೇವೆಯ ಶ್ರೀಗಳು ಮೊದಲಾದವರನ್ನು ಗುರುತಿಸಿದ ಅಭಿನಂದನ ಗ್ರಂಥಗಳನ್ನು ಹುಡುಕಿ ಇಲ್ಲಿನ ಸಮೀಕ್ಷಾ ಚೌಕಟ್ಟಿನಲ್ಲಿ ವಿಶ್ಲೇಷಿಸಲಾಗಿದೆ. ಅಭಿನಂದನ ಗ್ರಂಥಗಳ ಹರಹು ತುಂಬಾ ದೊಡ್ಡದು. ನಾಲ್ಕಾರು ವಾಕ್ಯಗಳಲ್ಲಷ್ಟೇ ಹೇಳಬೇಕಾದ ಜರೂರು ಉಂಟಾದಾಗ ಆಯಾ ಅಭಿನಂದಕರನ್ನು ಅವರ ಕ್ಷೇತ್ರದಲ್ಲಿ ಗುರುತಿಸಿ, ಅಭಿನಂದಾ ಗ್ರಂಥದ ಬಾಹ್ಯಸ್ವರೂಪವನ್ನು ವಿಶ್ಲೇಷಿಸುವ ಕ್ರಮವನ್ನು ಇಲ್ಲಿ ಅನುಸರಿಸಲಾಗಿದೆ. ಆರಂಭದಲ್ಲಿ ಗುರುತಿಸಲಾದ ಆಶಯಗಳು ಹಾಗೂ ಅಭಿನಂದನಾ ಚೌಕಟ್ಟನ್ನು ಬಹುಶಃ ಎಲ್ಲ ಅಭಿನಂದನ ಗ್ರಂಥಗಳ ಸಂದರ್ಭದಲ್ಲಿಯೂ ಗಮನಕ್ಕೆ ತಂದುಕೊಳ್ಳುವುದು ಅಗತ್ಯವಾಗಿದೆ.