ಮಾನವ ಬುದ್ಧಿ ಜೀವಿ. ಅವನು ಬುಧ್ವಿಯುಳ್ಳ ಪ್ರಾಣಿಯಾಗಿರುವುದರಿಂದಲೇ ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಸಾಮಾಜಿಕ ಜೀವಿಯಾಗಿರಲು ಸಾಧ್ಯವಾಯಿತು. ಆದ್ದರಿಂದಲೆ ‘Man is Rational animal’ ಎಂದಿದ್ದಾರೆ. ಆತನು ನಡೆಸುವ ಬದುಕೇ ಬುದ್ಧಿವಂತಿಕೆಯಿಂದ ಕೂಡಿರುವುದರಿಂದ, ಮತ್ತು ತನ್ನ ವೈಚಾರಿಕ ಪ್ರಜ್ಞೆಯ ಮೇಲೆ ಬಾಳನ್ನು ನಡೆಸಬೇಕಾಗಿರುವುದರಿಂದ, ಆತನಲ್ಲಿ ವೈಚಾರಿಕತೆ ಮೂಡುವುದು ಸಹಜ. ಈ ವೈಚಾರಿಕತೆ ಇರುವುದರಿಂದಲೇ ಮಾನವ ಉಳಿದ ಪ್ರಾಣಿಗಳಿಗಿಂತ ಭಿನ್ನನೆನೆಸಿಕೊಳ್ಳುತ್ತಾನೆ. ಇದು ತೀರಾ ಪ್ರಾಚೀನ ಮಾತಾಯಿತು. ಮುಖ್ಯವಾಗಿ ಅಲೆಮಾರಿ ಜೀವನದಿಂದ ಆಲೋಚನೆಯತ್ತ ಬಂದ ಮಾನವನ ಪ್ರಾಥಮಿಕ ಪ್ರಗತಿಯ ಹಂತವೇ ‘ವಿಚಾರ’ ಎಂಬುದರ ತಳಹದಿ ಎಂದು ಕರೆಯಲು ಯಾವುದೇ ಗೊಂದಲವಿಲ್ಲ. ವಿಚಾರವೆಂದರೆ ತೀರಾ ಆಧುನಿಕವಾದ ನಾಗರಿಕ ಎಂದೆನಿಸಿಕೊಂಡು, ವೈಜ್ಞಾನಿಕ ಪಾತಳಿಯ ಮೇಲೆ ವ್ಯಾಖ್ಯಾನಿಸುವುದೇನಲ್ಲ. ಪ್ರಾಚೀನ ಕಾಲದಿಂದಲೂ ಸಾಹಿತ್ಯ ಮುಂತಾದ ಅನೇಕ ಬಗೆಯಲ್ಲಿ ಪುರಾಣ ಕಾವ್ಯಗಳಲ್ಲಿ ಈ ಬಗೆಯ ವೈಚಾರಿಕ ಮನೋಭಾವ ಒಡಮೂಡಿ ಬಂದಿದೆ. ಪಂಪ ಮಹಾಕವಿಯು ತನ್ನ ‘ವಿಕ್ರಮಾರ್ಜುನ ವಿಜಯ’ ಕಾವ್ಯದಲ್ಲಿ ‘ಮಾನವ ಕುಲಂ ತಾನೊಂದೆ ವಲಂ’ ಎಂಭ ಪ್ರಪಂಚ ಒಪ್ಪುವ ಸತ್ಯದ ನುಡಿಯಲ್ಲಿ ವೈಚಾರಿಕ ಮನೋಭಾವದ ಉತ್ತುಂಗ ನೆಲೆಯನ್ನು ಕಾಣಬಹುದಾಗಿದೆ. ಆದುದರಿಂದಲೆ ವೈಚಾರಿಕತೆ ಅಥವಾ ವಿಚಾರ ಎಂಬ ಮಾತು ಇಂದಿನ ಪಾಶ್ಚಾತ್ಯ ಪ್ರಭಾವ ಪ್ರೇರಣೆ ಯಿಂದ ಸಾಹಿತ್ಯದ ಇತರ ಬಗೆಗಳಂತೆ ಕನ್ನಡಕ್ಕೆ ಬಂದದ್ದಲ್ಲ ಎಂದು ಯಾವುದೇ ಹಂಗಿಲ್ಲದೆ ಹೇಳಬಹುದು. ಹೆಚ್ಚೆಂದರೆ ಈ ಶತಮಾನದ ಪ್ರಾರಂಭದ ದಶಕದಿಂದ ಇಲ್ಲಿಯವರೆಗೆ ಬೆಳೆದು ಬಂದಂತಂಹ ವೈಚಾರಿಕ ಸಾಹಿತ್ಯವು ಕೊಂಚ ಪಾಶ್ಚಾತ್ಯರ ನೆರಳಿನಿಂದ ಪ್ರಭಾವಿತಗೊಂಡಿದ್ದರೆ ಅದಕ್ಕೆ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಈ ಸಾಹಿತ್ಯ ಕನ್ನಡದ ಬುದ್ಧಿ ಜೀವಿಗಳು ಆರಿಸಿಕೊಂಡ ಜೀವನ ಕ್ರಮದ ಮಾದರಿಯಾಗಿ ಅಭಿವ್ಯಕ್ತಿಗೊಂಡಿದೆ. ಆಧುನಿಕವಾಗಿ ಈ ವೈಚಾರಿಕ ಸಾಹಿತ್ಯ ಅನೇಕ ಭಿನ್ನ ಆಲೋಚನೆಯೊಂದಿಗೆ ಮೂಡಿ ಬಂದಿದೆ. ವಿಚಾರ ಸಾಹಿತ್ಯಯೆಂಬುದಕ್ಕೆ ಇಂಥದೇ ಎಂಬ ಸಿದ್ಧ ವಸ್ತುವಿಲ್ಲ, ಸರಿಯಾಗಿ ಹೇಳಲು ವ್ಯಾಖ್ಯಾನವೂ ಇಲ್ಲ. ಇದರ ವಿಷಯ ವ್ಯಾಪ್ತಿ ತುಂಬಾ ದೊಡ್ಡದು. ಆದ್ದರಿಂದ ಇದರ ಭೂಮಿಕೆಯೆಂದು ಮೇಲಿನದನ್ನು ಗಮನಿಸಿಕೊಂಡು ಮುಂದೆ ಅದರ ವ್ಯಾಖ್ಯಾನದ ತೊಡಕು ಮತ್ತು ಅದಕ್ಕೆ ಕೊಡಬಹುದಾದ ಅರ್ಥವನ್ನು ತಿಳಿಯುವ ಪ್ರಯತ್ನ ಮಾಡಬಹುದು.

ವಿಚಾರ – ಸಾಹಿತ್ಯವನ್ನು ಕುರಿತು ಬರೆಯುವಾಗ ಅದಕ್ಕೆ ನಿರ್ಧಿಷ್ಟವಾದ ಅರ್ಥವಾಗಲಿ, ಲಕ್ಷಣವಾಗಲಿ ಹೇಳುವುದು ಕಷ್ಟ. ಯಾಕೆಂದರೆ ಈ ವಿಷಯದ ಮೇಲೆ ಬಹಳಷ್ಟು ಅಧ್ಯಯನ ಕೈಗೊಂಡಿದ್ದರೆ ಖಚಿತತೆ ಮತ್ತು ಸ್ಪಷ್ಟತೆ ಬರುತ್ತಿತ್ತು. ಆದರೆ ಇದುವರೆಗೆ ನಡೆದ ಅಧ್ಯಯನ ಮತ್ತು ದೊರೆತ ಆಧಾರದ ಮೇಲೆ ವಿವರಿಸುವುದಾದರೆ, ಜ್ಞಾನ ಸಾಹಿತ್ಯ ಮತ್ತು ಲಲಿತ ಸಾಹಿತ್ಯವೆಂದು ಸಾಹಿತ್ಯದಲ್ಲಿ ಎರಡು ಪ್ರಕಾರಗಳನ್ನಾಗಿ ವಿಂಗಡಿಸಬಹುದು. ಆದರೆ ಜ್ಞಾನ ಸಾಹಿತ್ಯದ ಒಂದು ಅಂಗವೇ ವಿಚಾರ ಸಾಹಿತ್ಯವಾಗಿದೆ. ಇನ್ನೊಂದರ್ಥದಲ್ಲಿ ವಿಚಾರ ಸಾಹಿತ್ಯವನ್ನು ಜ್ಞಾನ ಸಾಹಿತ್ಯವೆಂದು ಕರೆಯಬಹುದು. ಆದರೆ ಜ್ಞಾನ ಸಾಹಿತ್ಯವೆಲ್ಲ ವಿಚಾರ ಸಾಹಿತ್ಯವೆಂದು ಕರೆಯುವಂತಿಲ್ಲ. “ಬುದ್ಧಿಯುಳ್ಳವರೆಲ್ಲರೂ ಬುದ್ಧಿವಂತರಲ್ಲ; ಬುದ್ಧಿವಂತರೆಲ್ಲರೂ ಬುದ್ಧಿವಾದಿಗಳಲ್ಲ” ಎಂಬ ಗೌರೀಶ ಕಾಯ್ಕಿಣಿಯವರ ಮಾತನ್ನೂ ಇಲ್ಲಿ ಗಣಿಸಿಬೇಕಾಗುತ್ತದೆ. ಅಂದರೆ ಇಲ್ಲಿ ಜ್ಞಾನ, ಬುದ್ಧಿ, ವಿಚಾರಗಳನ್ನು ಕುರಿತು ಖಚಿತವಾಗಿ ವಿವರಿಸುವುದು ಕಷ್ಟವೆಂಬ ಅಭಿಪ್ರಾಯವಿದೆ. ಮಾನವ ಮೂಲತಃ ಪ್ರಾಣಿ ಪಶುವಿನಂತಿದ್ದ. ಕಾಳಿನ ತೆನೆಯಂತೆ ವಿಕಾಸ ಕ್ರಮದಲ್ಲಿ ನಿಧಾನವಾಗಿ ವಿಕಾಸಗೊಂಡು ಅವನಲ್ಲಿ ವಿಚಾರ ಶಕ್ತಿ ಬೆಳೆದಿದೆ.

ವಿಚಾರ ಸಾಹಿತ್ಯದ ವ್ಯಾಖ್ಯಾನದ ಮತ್ತೊಂದು ತೊಡಕೆಂದರೆ, ಈ ಮುಂಚೆ ಹೇಳಿದಂತೆ ಜ್ಞಾನ ಸಾಹಿತ್ಯವೆಲ್ಲ ಅಥವಾ ಅದರ ಅಂಗ ವಿಚಾರ ಸಾಹಿತ್ಯವೆಂದು ಕರೆದುಕೊಂಡಲ್ಲಿ ಉಳಿದ ಮನುಷ್ಯನ ಮತಿಯಲ್ಲಿ ಅಡಗಿಕೊಂಡು, ಅವನ ಪ್ರಜ್ಞಾವಂತಿಕೆಯಿಂದ ಬಂದ ಇತರ ಸಾಹಿತ್ಯವನ್ನು ಏನೆಂದು ಕರೆಯಬೇಕು? ಇಲ್ಲಿ ಮೂಲಭೂತವಾದ ಮಾತೆಂದರೆ ‘ವಿಚಾರ’ ಎಂಬುದೇ [ಪದ] ಒಂದು ನಿರ್ಧಿಷ್ಟ ವಿಷಯದ ನಿರ್ದಿಷ್ಟ ಚೌಕಟ್ಟಿಗೆ ಅಳವಟ್ಟಿಲ್ಲವೆಂದು ತಿಳಿಯಬೇಕಾಗುತ್ತದೆ. ಯಾವುದು ವಿಚಾರ, ಯಾವುದು ವಿಚಾರವಲ್ಲ ಎಂದು ನಿರ್ಧರಿಸುವುದು ಕಷ್ಟಕರ. ಇದಕ್ಕೆ ಒಂದು ಉದಾಹರಣೆಯ ಮೂಲಕ ಸ್ಪಷ್ಟೀಕರಣ ಕೊಟ್ಟುಕೊಳ್ಳುವ ಪ್ರಯತ್ನ ಮಾಡಬಹುದು. ಅದೇನೆಂದರೆ ಒಬ್ಬ ಕವಿ ತನ್ನ ಭಾವನಾ ಲಹರಿಯಿಂದ, ಒಂದು ಕವನವನ್ನು ಬರೆಯುತ್ತಾನೆ, ಅದರಂತೆ ಒಬ್ಬ ಕಥೆಗಾರ, ಕಾದಂಬರಿಕಾರ ಮುಂತಾದವರೂ ಬರೆಯುತ್ತಾರೆ. ಇದೆಲ್ಲಾ ಬಂದದ್ದು ಎಲ್ಲಿಂದ.? ಅವನ ಬುದ್ಧಿಯಲ್ಲಡಗಿದ ವಿಚಾರದಿಂದ ತಾನೆ ಇದೆಲ್ಲಾ ಮೇಲ್ನೋಟಕ್ಕೆ ಅರ್ಥಹೀನ ಪ್ರಶ್ನೆಗಳಾಗಿ ಕಾಣಬಹುದು. ಆದರೆ ಸೂಕ್ಷ್ಮವಾಗಿ ಆಲೋಚಿಸಿದರೆ ಗಂಭೀರವಾದ ಚಿಂತನೆಗತೆ ಎಡೆಮಾಡುತ್ತವೆ. ಹೀಗಾಗಿ ವಿಚಾರ ಸಾಹಿತ್ಯಕ್ಕೆ ಗಡಿ ರೇಖೆ ಗುರುತಿಸಲಾಗುವುದಿಲ್ಲ. ಒಂದು ವಿಷಯದ ಚರ್ಚೆಗೆ ತೆಗೆದುಕೊಂಡಾಗ ಸಂಶಯ, ಪ್ರಮೇಯ ಸಮಸ್ಯೆ, ಪ್ರಶ್ನೆ, ಉಪ ಪ್ರಶ್ನೆ, ಹೊಸ – ಹೊಸ ತರ್ಕಸರಣಿ ಹೀಗೆ ಬೆಳೆಯುತ್ತಲೇ ಹೋಗುವುದರಿಂದ ಇದು ಸೀಮೋಲ್ಲಂಘನ ಕ್ರಿಯೆಗೆ ಒಳಗಾಗಿದೆ.

ಆದರೂ ವಿಚಾರ ಸಾಹಿತ್ಯವೆಂದರೆ ಇದೇ ಎಂದು ಒಂದು ಚೌಕಟ್ಟಿನಲ್ಲಿ ಬಂಧಿಸುವ ಕಾರ್ಯ ನಮ್ಮಲ್ಲಿ ನಡೆದಿದೆ. ಇದು ಅನಿವಾರ್ಯವೂ ಎಂಬಂತೆ – ಒಪ್ಪಿಕೊಳ್ಳುವಲ್ಲಿ ಅದರ ಆಳ – ಅಗಲ – ವಿಸ್ತಾರಗಳು ತಿಳಿದು, ಅರಗಿಸಿಕೊಂಡು ಅಧ್ಯಯನ ಮಾಡುವುದು ಒಂದು ಅಧ್ಯಯನದ ಶಿಸ್ತು ಎಂದು ಭಾವಿಸಬೇಕು. ಈ ಪ್ರಯತ್ನದಲ್ಲಿ ಅಂದರೆ ವಿಚಾರ ಸಾಹಿತ್ಯದ ವ್ಯಾಖ್ಯಾನ ನೀಡುವಲ್ಲಿ ಶಿವರಾಮಕಾರಂತ; ದ.ರಾ. ಬೇಂದ್ರೆ; ಗೌರೀಶ ಕಾಯ್ಕಿಣಿ,ನಿರಂಜನ ಮುಂತಾದವರು ಪ್ರೌಢ ರೀತಿಯಲ್ಲಿ ಹೇಳಿದ್ದಾರೆ.

“ಚಿಂತನೆ ಮನನಗಳನ್ನು ಪ್ರೇರಿಸುವುದು, ಚರ್ಚೆಯ ವಿಷಯದ ಹೊಸ ಹೊಸ ಮಗ್ಗುಲುಗಳನ್ನು ಸೂಚಿಸುವುದು, ಆ ಕುರಿತು ಆವರೆಗಿನ ತಿಳಿವಳಿಕೆಗೆ ಹೊಸದೊಂದು ಪರಿಣಾಮವನ್ನು, ಆಯಾಮವನ್ನು ಸೇರಿಸಿ ಹೆಚ್ಚಿನ ಬಿತ್ತರದ ಕ್ಷಿತಿ ಜಗಳನ್ನು ತೆರೆದು ತೋರಿಸುವುದು ಇದುವೇ ವೈಚಾರಿಕ ಬರಹದ ಮರ್ಮವೂ, ಧರ್ಮವೂ ಆಗಿದೆ. ಜ್ಞಾನ ಸಾಹಿತ್ಯದ ಗುರಿ ಮಾಹಿತಿ; ವಿಚಾರ ಸಾಹಿತ್ಯದ ಗುರಿ ಮಾನಸಿಕ ಮಾರ್ಪಾಟು” – ಎಂಬ ಗೌರೀಶ ಕಾಯ್ಕಿಣಿಯವರ ಮಾತು ವೈಚಾರಿಕ ಸಾಹಿತ್ಯದ ಸ್ವರೂಪ ಹೇಳುತ್ತದೆ. “ಸಂಶಯಗಳಿಗೆ ಎಡೆಕೊಡುವ, ಅಪನಂಬಿಕೆ ಮೂಡಿಸುವ ವಿಷಯಗಳು ಯಾವುವೆಂದು ನಾವೀಗ ಹೆಚ್ಚು ಯೋಚಿಸಬೇಕಾಗಿಲ್ಲ. ಪರಂಪರೆಯಿಂದ ಸಾಗಿ ಬಂದಿರುವ ಆಧ್ಯಾತ್ಮ – ಮತಧರ್ಮ, ಜಾತಿ ಪಂಥ ಇವುಗಳಲ್ಲಿಯ ಮೌಢ್ಯ, ಅರ್ಥರಹಿತವಾದ ವಿಧಿ ನಿಷೇಧಗಳು ಮೂಢ ನಂಬಿಕೆಗಳು ಮತ್ತು ಅಂಥ ಸಂಪ್ರದಾಯ ಇವೇ ಮೊದಲಾದುವು ಆ ವಿಷಯಗಳು. ಇವುಗಳನ್ನು ವಿಶ್ಲೇಷಣೆ ಮಾಡಿ, ಅವುಗಳಿಂದ ಮಾನವ ಪ್ರಗತಿಗೆ ಆಗಿರುವ ತೊಡಕುಗಳನ್ನು ವಿಶದೀಕರಿಸಿ, ಅವುಗಳ ಜಾಲದಿಂದ ಪುಟಿದೆದ್ದು ಹೊರಬರಲು ಪ್ರಚೋದನೆ ನೀಡುವಂಥ ಸಾಹಿತ್ಯವೇ ವೈಚಾರಿಕ ಸಾಹಿತ್ಯವೆಂದು ಈಗ ನಿರ್ಧರಿಸಬಹುದು.” ಎಂದು ಶಿವರಾಮ ಕಾರಂತರು ಹೇಳುತ್ತಾರೆ.

“ವಿಚಾರಶೀಲವಾದ ವಿಚಾರವನ್ನುಳ್ಳ ಸಾಹಿತ್ಯವೆಲ್ಲ ವಿಚಾರ ಸಾಹಿತ್ಯ” ಎನ್ನುತ್ತಾರೆ ನಿರಂಜನರು. ಹೀಗೆ ನೋಡಿದಾಗ ಎಲ್ಲ ಸಾಹಿತ್ಯವೂ, ‘ವಿಚಾರ ಸಾಹಿತ್ಯ’ವೆಂದಂತಾಯಿತು. ಆದರೂ ಅದು ರೂಢಿಯಲ್ಲಿ ಬೇರೆಯದೇ ಆದ ಸ್ವರೂಪವನ್ನು ಪಡೆದುಕೊಂಡಿದೆ. ಅದೇನಿದ್ದರೂ ‘ವಿಚಾರ ಸಾಹಿತ್ಯ’ ಎಂಬುದಕ್ಕೆ ಒಬ್ಬ ವ್ಯಕ್ತಿ ತನ್ನಲ್ಲಿ ಮೂಡಿದ ಅಭಿಪ್ರಾಯ, ಅನಿಸಿಕೆಗಳನ್ನು ಸ್ಪಷ್ಟಪಡಿಸಬೇಕಾದರೆ ಅದಕ್ಕೆ ಬೇಕಾದ ತಾರ್ಕಿಕ ಅನುಕ್ರಮ ಮತ್ತು ಆಧಾರಗಳೊಂದಿಗೆ ನಿರೂಪಿಸುವುದು ಅವನ ವೈಚಾರಿಕತೆಯ ಹೊಣಿಗಾರಿಕೆ. ಅವನ ಅಭಿಪ್ರಾಯಗಳನ್ನು ಉಳಿದವರು ಯಾಕೆ ಮನ್ನಿಸಬೇಕು ಎಂಬುದನ್ನೂ ಅವರಲ್ಲಿ ಮನಗಾಣಿಸುವುದು ವಿಚಾರವಂತನ ಕರ್ತವ್ಯ. ಬದ್ಧ ಮತ್ತು ವಾದ ಇಂತಹ ಕರ್ತವ್ಯವನ್ನು ನಿರ್ವಹಿಸಲು ಬೇಕಾದ ಮಾನಸಿಕ ಶಿಕ್ಷಣವೇ “ವಿಚಾರ ಸಾಹಿತ್ಯ” ಎಂದು ಒಟ್ಟಾರೆಯಾಗಿ ಹೇಳಬಹುದು.

ವಿಚಾರ ಸಾಹಿತ್ಯದ ಸಂಪ್ರಬಂಧದ ವ್ಯಾಪ್ತಿ, ೧೯೯೧ – ೨೦೦೦ ದವರೆಗೆ ಎಂಬ ಮಿತಿಯನ್ನಿಟ್ಟು ಕೊಂಡಿದೆಯಾದ್ದರಿಂದ, ಅದನ್ನು ನೋಡುವ ಮುಂಚೆ ಪ್ರಾಚೀನ ಸಾಹಿತ್ಯದ ವಿಚಾರ ಮಾಡಿಗಟ್ಟಿಗೊಳಿಸಿಕೊಂಡು, ಆಧುನಿಕ ವಿಚಾರ ಸಾಹಿತ್ಯದ ಕಟ್ಟಡವನ್ನು ಕಟ್ಟುವ ಪ್ರಯತ್ನ ಮಾಡುವುದು ಒಳಿತು. ಅದನ್ನು ತೀರಾ ಸಂಕ್ಷೇಪವಾಗಿ ನೋಡಬಹುದು.

ಪ್ರಾಚೀನ ಸಾಹಿತ್ಯವನ್ನು ಪರಾಮರ್ಶಿಸಿ ನೋಡಿದಾಗ, ಗೊತ್ತು, ಗುರಿ ಇಲ್ಲದ ಬರವಣಿಗೆ ಅದು ಅಲ್ಲವೇ ಅಲ್ಲ. ವಿಚಾರದ ಅಂಶಕ್ಕಂತೂ ಅದೆಂತಹ ವಿಚಾರವೇ ಇರಲಿ ಕೊರತೆಯೆಂಬುದೇ ಇಲ್ಲ. ಕಾವ್ಯಗಳ ತುಂಬಾ, ವಚನಗಳ ತುಂಬಾ, ಕೀರ್ತನೆಗಳ ತುಂಬಾ ಬದ ಉಕಿನ ಮೀಮಾಂಸೆ, ಸಮಾಜದ ವಿಮರ್ಶೆಯೇ ತುಂಬಿದೆ. ಜೈನರು ತಮ್ಮ ಕಾವ್ಯಗಳ ಮೂಲಕ ಮಹತ್ತರವಾದ ವೈಚಾರಿಕತೆಯನ್ನು ಮೆರೆದರು. ಪಂಪನಂತವರು ಮಾನವೀಯ ಮೌಲ್ಯವನ್ನು ಮೆರೆದರು. ಪ್ರಾಮಾಣಿಕತೆ; ತ್ಯಾಗ, ಸಹನೆ; ಶಾಂತಿ, ಜೀವದಯೆ, ಮಾನವೀಯ ಅನುಕಂಪ, ಹೃದಯ ವೈಶಾಲ್ಯತೆ – ಮುಂತಾದುವನ್ನು ಜೈನ ಕವಿಗಳು ಮೆರೆದಿದ್ದಾರೆ. ಅವರ ಕಾವ್ಯಗಳ ಮುಖೇನ.

ಹಿಂದೂ ಸಂಸ್ಕೃತಿಯಲ್ಲಿ ಪರಂಪರಾಗತವಾಗಿ ಬಂದ ವಿಚಾರಧಾರೆಗೆ ಹೊಸ ತಿರುವು ಕೊಟ್ಟವರು ವಚನಕಾರರು ಮತ್ತು ದಾಸರು. ಅವರ ವಚನಗಳಲ್ಲಿ ನಮಗೆ ಕಂಡು ಬರುವುದು ಮನುಕುಲದ ಸಾರ್ವಕಾಲಿಕ, ಸರ್ವದೇಶಗಳಿಗೂ ಬೇಕಾಗುವ ವೈಚಾರಿಕ ನೀತಿ ತತ್ವಗಳು. ಅದರಂತೆ ಕೀರ್ತನೆ, ದಾಸರ ಪದಗಳಲ್ಲಿಯೂ ಜನ ಸಾಮಾನ್ಯರಿಗೆ ಜೀವನ ಮೌಲ್ಯಗಳನ್ನು ಬೋಧಿಸುವ ಮೂಲಕ ಅವರ ಮನೋವಿಕಾಸವನ್ನು ಯಶಸ್ವಿಯಾಗಿ ಸಾಧಿಸುವಲ್ಲಿ ದಾಸರ ಪ್ರಖರವಾದ ವೈಚಾರಿಕತೆ ಅಡಗಿದೆ.

ಈ ಹಿನ್ನೆಲೆಯೊಂದಿಗೆ ಆಧುನಿಕ ವಿಚಾರ ಸಾಹಿತ್ಯವನ್ನು ಅವಲೋಕಿಸುತ್ತ ೧೯೯೧ – ೨೦೦೦ ದವರೆಗೆ ಕನ್ನಡದಲ್ಲಿ ಬಂದಂತಹ ಎಲ್ಲಾ ವೈಚಾರಿಕ ಕೃತಿಗಳನ್ನು ನೋಡಲಾಗದಿದ್ದರೂ ಪ್ರಾತಿನಿಧಿಕವಾಗಿ ಕೆಲವು ಕೃತಿಗಳ ಹೂರಣವನ್ನು, ಕೆಲವಲು ಶೀರ್ಷಿಕೆಗಳನ್ನು ಹಾಕಿಕೊಂಡು ಅದರೊಳಗಡೆ ಪ್ರಸ್ತಾಪಿಸುತ್ತಾ ಹೋಗಬಹುದು. ಕೃತಿ ಸಮೀಕ್ಷೆಯನ್ನು ಗಮನಿಸದೇ ಒಟ್ಟಾರೆ ವಿಚಾರ ಸಾಹಿತ್ಯದ ಬದಲಾವಣೆಯ ಮುಖ್ಯ ಹಂತಗಳನ್ನು ಗಮನಿಸುತ್ತಲೇ, ವೈಚಾರಿಕ ಸಾಹಿತ್ಯದ ಬಗೆಗಳು, ಅದರ ಆಯಾಮ ಇತರ ಜ್ಞಾನ ಸಾಹಿತ್ಯದಿಂದ. ಇದಕ್ಕೆ ಅಂಟಿಸಬಹುದಾದ ನಂಟು ಮುಂತಾದ ಹಲವಾರು ವಿಷಯಗಳನ್ನು ಇಲ್ಲಿ ನೋಡಲಾಗುತ್ತದೆ.

ವಿಚಾರ ಸಾಹಿತ್ಯ ಇಂದು ಕೇವಲ ಬರಹದಲ್ಲಿ ಮಾತ್ರ ಇಲ್ಲ. ಬರಹವನ್ನು ಒಳಗೊಂಡಂತೆ ಅನೇಕ ಉಪನ್ಯಾಸ, ಚಚೆರ್ದ, ಮಂಥನ, ಚಿಂತನೆ, ಟಿ.ವಿ. ರೇಡಿಯೋ ಮುಂತಾದ ಮಾಧ್ಯಮಗಳ ಮೂಲಕ ಬಾಯಿ ಮಾತಿನಿಂದ ಬಂದ ಅನೇಕ ರೀತಿಯ ವೈಚಾರಿಕ ಅಂಶಗಳು ಇಲ್ಲಿ ಸಮಾವೇಶಗೊಳಿಸಬೇಕಾಗುತ್ತದೆ. ಇಂಥಾ ಅಪ್ರಕಟಿತ ಬರಹ ಮತ್ತು ಮಾತಿನಲ್ಲಿಯ ವಿಚಾರದ ಬಗೆಯೇ ಒಂದು ರೀತಿಯದು. ಈ ದೃಷ್ಟಿಯಿಂದ ಸಂಕ್ಷಿಪ್ತವಾಗಿ ಸಮೂಹ ಮಾಧ್ಯಮ ಮತ್ತು ವಿಚಾರ ಸಾಹಿತ್ಯ ಎಂಬ ಶೀರ್ಷಿಕೆಯಡಿಯಲ್ಲಿ ಇದನ್ನು ವಿಶ್ಲೇಷಿಸಿಕೊಳ್ಳಬಹುದು.

ಸಮೂಹ ಮಾಧ್ಯಮ ಮತ್ತು ವೈಚಾರಿಕತೆ

ವಿಚಾರ ಸಾಹಿತ್ಯ ಎಂದ ಕೂಡಲೇ ಇದು ಒಂದು ನಿರ್ದಿಷ್ಟ ಪುಸ್ತಕದಿಂದ ಬರಬಹುದಾದ್ದೆಂದೇನಲ್ಲ. ಸಮೂಹ ಮಾಧ್ಯಮಗಳಾದ ರೇಡಿಯೋ – ದೂರದರ್ಶನ, ಪತ್ರಿಕೆ ಮುಂತಾದುವು ತಮ್ಮ ಮೂಲಕ ವಿಚಾರವನ್ನು ಹರಿಬಿಟ್ಟು ಸಮಾಜದಲ್ಲಿ ವೈಚಾರಿಕತೆ – ವೈಜ್ಞಾನಿಕ ಮನೋಭಾವವನ್ನು ಮೂಡಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಲಿವೆ. ರೇಡಿಯೋದಲ್ಲಿ ಬರುವ ಇಂತಹ ವಿಚಾರಗಳಿಂದ ಗ್ರಾಮೀಣ ಜನತೆಯ ಜಾಗೃತಿ – ತಕ್ಕಮಟ್ಟಿಗೆ ಆಗಿದೆಯೆನ್ನಬಹುದು. ಆಕಾಶವಾಣಿಯ ಮೂಲಕ ಪ್ರಸಾರವಾಗುವ ‘ಚಿಂತನ’ ಎಂಬ ಕಾರ್ಯಕ್ರಮ ವಿವಿಧ ವಿದ್ವಾಂಸರಿಂದ ಸಾಮಾಜಿಕ – ಆರ್ಥಿಕ – ಸಾಂಸ್ಕೃತಿಕ – ಸಾಹಿತ್ಯಕ ವಿಚಾರಧಾರೆಯನ್ನು ಕೇವಲ ಐದು ನಿಮಿಷಗಳಲ್ಲಿ ಬಿತ್ತರಿಸುತ್ತಾರೆ. ಇದು ಮುಖ್ಯವಾಗಿ ನಾಡಿನ ಸಾಂಸ್ಕೃತಿಕ ಬದುಕನ್ನು ಬಿಂಬಿಸುವಂತಹುದು ಗ್ರಾಮೀಣ ಅನಕ್ಷರಸ್ಥ ಸಮುದಾಯಕ್ಕೆ ಈ ಮಾಧ್ಯಮದಿಂದ ‘ಗ್ರಾಮ ವಿಕಾಸ’ ಎಂಬ ಕಾರ್ಯಕ್ರಮ, ಅವರ ಸರ್ವತೋಮುಖ ಬುದ್ಧಿ ವಿಕಾಸದ ಬೆಳವಣಿಗೆಗೆ ಉತ್ತಮ ಅಂಶಗಳನ್ನು ನೀಡುತ್ತದೆ. ಅದರಂತೆ ಕಾರ್ಮಿಕರಿಗಾಗಿ ‘ಕಾರ್ಮಿಕರ ಕಾರ್ಯಕ್ರಮ’ ಸ್ತ್ರೀಯರಿಗಾಗಿ ವಿಶೇಷವಾಗಿ ಮೂಡಿಬರುವ ‘ಮಾವು ಮಲ್ಲಿಗೆ’ ‘ಬೆಳಕಿನಂಗಳ’ ಮುಂತಾದುವು ಗ್ರಾಮೀಣ ಮಹಿಳೆ ಮತ್ತು ಒಟ್ಟಾರೆ ಅವಳ ಹಕ್ಕು, ಕರ್ತವ್ಯ, ಸ್ವಾವಲಂಬಿ ಜೀವನಕ್ಕೆ ಇರುವ ಹಾದಿ ಮುಂತಾದ ಬಗ್ಗೆ ಶಿಕ್ಷಣ ನೀಡುತ್ತವೆ. ವಾರಕ್ಕೊಮ್ಮೆ ಬಿತ್ತರವಾಗುವ ವಾರದ ಕೌಟುಂಬಿಕ ಚರ್ಚೆಯು ಆ ವಾರದಲ್ಲಿ ನಡೆದಂತಹ ಅನೇಕ, ದೇಶದ ವಿದ್ಯಮಾನ ಕುರಿತಾಗಿ ಸಂಕ್ಷಿಪ್ತ ನೋಟ ನೀಡುತ್ತದೆ. ಒಂದೊಂದು ಘಟನೆಯನ್ನು ಕುರಿತಾದ ವೈಚಾರಿಕೆ ವಿಮರ್ಶೆಯಂತೆ ದ‘ಅವಲೋಕನ’ ಎಂಬ ಕಾರ್ಯಕ್ರಮದಿಂದ ತಿಳಿಸುತ್ತಾರೆ. ದೂರದರ್ಶನವೂ ಕೂಡ ಈ ರೀತಿಯ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ.

ವಿಚಾರ ಸಾಹಿತ್ಯದ ಘನತೆಯನ್ನು ಅತಿ ಎತ್ತರಕ್ಕೆ ಕೊಂಡೊಯ್ಯುವುದು ಪತ್ರಿಕಾ ಮಾಧ್ಯಮವೆಂದು ಹೇಳಬಹುದು. ಈ ಹೊತ್ತು ಪ್ರಪಂಚದ ವಿದ್ಯಮಾನವನ್ನೆಲ್ಲಾ ಒಂದಲ್ಲ ಒಂದು ಬಗೆಯಲ್ಲಿ ನಿರೂಪಿಸುವ ಪ್ರಬಲ ಮಾಧ್ಯಮವಿದು. ಪ್ರಜಾವಾಣಿ – ಕನ್ನಡ ಪ್ರಭ – ಸಂಯುಕ್ತ ಕರ್ನಾಟಕ – ವಿಜಯ ಕರ್ನಾಟಕ ಮುಂತಾದ ದೈನಿಕಗಳು – ಲಂಕೇಶ್‌ಸಂಕ್ರಮಕಣ – ಸುಧಾ – ತರಂಗ – ಶೂದ್ರ ಇನ್ನೂ ಹಲವಾರು ವಾರ – ಮಾಸಿಕ ಪತ್ರಿಕೆಗಳಲ್ಲಿ ಬರುವಂತಹ ಸಂಪಾದಕೀಯ ಬರಹಗಳು – ಸಂಪ್ರಬಂಧಗಳು – ಸಾಹಿತ್ಯ ಸಂವಾದ – ಭಗವತ್‌ಚಿಂತನ – ಚಿಂತನಮಾಲೆ – ಆರ್ಥಿಕ ಚಿಂತನೆ ಮುಂತಾದ ಕಾಲಂಗಳ ಅಡಿಯಲ್ಲಿ ಬರೆಯುವ ಎಲ್ಲಾ ಬರಹಗಳು ವೈಚಾರಿಕ ಸಾಹಿತ್ಯವೇ ಹೌದು. ಸಂಪಾದಕೀಯ ಬರಹಗಳು ಪ್ರಸ್ತುತ ದೈನಂದಿನ ವಿದ್ಯಮಾನ ಕುರಿತಾಗಿರುತ್ತವೆ. ಇಲ್ಲಿ ರಾಜಕೀಯ – ಸಾಮಾಜಿಕ – ಆರ್ಥಿಕ – ಆಧ್ಯಾತ್ಮಿಕ – ವೈಯಕ್ತಿಕ ಮುಂತಾದ ವಿಷಯಗಳ ವಿಶ್ಲೇಷಣೆ – ಟೀಕೆ – ಸಮರ್ಥನೆ ಮುಂತಾದ ವಿಚಾರದ ನೆಲೆಯು ಮಡುಗಟ್ಟಿ ನಿಂತಿದೆ. ಸಂಕ್ರಮಣ – ಶೂದ್ರ ಪತ್ರಿಕೆಗಳಲ್ಲಿ ಬರುವ ಅನೇಕ ವೈಚಾರಿಕ ಲೇಖನಗಳು ವಿಚಾರ ಸಾಹಿತ್ಯ ನಿರ್ಮಾಣಕ್ಕೆ ಗಟ್ಟಿ ಬುನಾದಿಯನ್ನು ಹಾಕುತ್ತಿವೆ. ಇದಕ್ಕೆ ಒಂದೆರಡು ನಿದರ್ಶನಗಳನ್ನೂ ನೋಡಿದರೆ ತಪ್ಪೇನಿಲ್ಲ. ‘ವಿಚಾರ ಮತ್ತು ಭಾವದ ಬಾಂಧವ್ಯ’ – ಎಂಬ ಲೇಖನ (ಅನ್ವೇಷಣೆ – ೧೯೯೯) ದಲ್ಲಿ – ನಿಸಾರ್ ಅಹಮದ್‌ ಅವರು ನಮ್ಮಲ್ಲಿ ಮೂಡುವ ಭಾವನೆಗಳನ್ನು ವಿಚಾರವಾಗಿ ಹೇಗೆ ನಿರೂಪಿಸಬಹುದೆಂದು ಹೇಳಿದ್ದಾರೆ. ಅದರಂತೆ ‘ದೇವರು ಮತ್ತು ಪುನರ್ಜನ್ಮ’ – ಎಚ್‌. ನರಸಿಂಹಯ್ಯ ಪ್ರಜಾವಾಣಿ – ೧೯೯೯

‘ಜಾಗತೀಕರಣದಲ್ಲಿ ನಲುಗುತ್ತಿರುವ ಗಾಂಧೀಜಿಯ ಗ್ರಾಮ ಭಾರತ’ – ನಿಂಗಪ್ಪ ಮುದೇನೂರು – ಪ್ರಜಾವಾಣಿ, ‘ರೈತರ ಆತ್ಮಹತ್ಯೆ ಏಕೆ ನಡೆದವು’ ಮುಜಾಫರ್ ಅಸ್ಸಾದಿ – ಕನ್ನಡ ಅಧ್ಯಯನ, ಮುಂತಾದುವು ಪತ್ರಿಕೆಗಳ ಮೂಲಕ ಪ್ರಸಕ್ತ ಸಮಸ್ಯೆಗಳಾದ ಜಾಗತೀಕರಣ, ಖಾಸಗೀಕರಣ ಆ ಮೂಲಕ ಗ್ರಾಮೀಣ ರೈತರ ಆತ್ಮಹತ್ಯೆ ಪ್ರಕರಣ ಹೀಗೆ ವೈವಿಧ್ಯಮಯ ವಿಷಯಗಳು ಪತ್ರಿಕೆಗಳ ಮೂಲಕ ಪ್ರಕಟಗೊಂಡು ವೈಚಾರಿಕ ಪ್ರಜ್ಞೆಯನ್ನು ಮೂಡಿಸುವಲ್ಲಿ ಮಹತ್ತರ ಕಾರ್ಯವನ್ನು ಮಾಡುತ್ತಲಿವೆ.

ಮತ್ತೊಂದು ಮುಖ್ಯ ವಿಷಯವೆಂದರೆ ‘ಅಂಕಣ ಬರಹ’ಗಳನ್ನು ವಿಚಾರ ಸಾಹಿತ್ಯದಲ್ಲಿ ಸಮಾವೇಶಗೊಳಿಸುವುದೇ, ಬೇಡವೇ? ಎಂಬುದು. ಪತ್ರಿಕೆಗಳಲ್ಲಿ ಬರುವ ಅಂಕಣಗಳು ಹೆಚ್ಚಾಗಿ ವೈಚಾರಿಕ ಒಳನೋಟಗಳನ್ನು ಬಿಚ್ಚಿ ಕೊಡುವುದರಿಂದ ಇದನ್ನು ಸೇರಿಸಬಹುದೆಂಬುದು ನನ್ನ ಅಭಿಪ್ರಾಯ. ಹಾಮಾನಾ – ವಸಂತಕುಮಾರ ಪೆರ್ಲ, ಲಿಂಗದೇವರು ಹಳೇಮನೆ – ಬೊಳುವಾರು – ಕಟ್ಟಾಡಿ ಮುಂತಾದವರು ಬರೆಯುವ ಅಂಕಣ ಬರಹಗಳು ವೈವಿಧ್ಯಮಯ ವಿಚಾರಗಳಿಂದ ಕೂಡಿದ ಮೌಲ್ಯಯುತ ಬರಹಗಳಾಗಿವೆ. ಅಂಕಣ ಬರಹಗಳು ಪ್ರತ್ಯೇಕವಾಗಿ ಕೃತಿಗಳಾಗಿ ಪ್ರಕಟಗೊಂಡಿದೆ. ೧೯೯೪ ರಲ್ಲಿ ಪ್ರಕಟಗೊಂಡ ವಸಂತಕುಮಾರ ಪೆರ್ಲ ಅವರ – ‘ಪ್ರಸ್ತಾಪ’ ಮತ್ತು ಪಾಟೀಲ ಪುಟ್ಟಪ್ಪ ಅವರ ‘ಅನುಭವದಲ್ಲಿ ಅಮೃತತ್ವವಿದೆ – ೨೦೦೦; ಸಿದ್ಧಲಿಂಗ ಪಟ್ಟಣಶೆಟ್ಟಿಯವರ ‘ಚಹಾದ ಜೋಡಿ ಚೂಡಾದ್ಹಾಂಗ” – ೨೦೦೦; ‘ಪಾಪು ಪ್ರಪಂಚ’ ಎಂಬ ಕೃತಿ ಬರೆದ ಪಾಟೀಲ ಪುಟ್ಟಪ್ಪನವರ ಬರಹ; ೨೦೦೦; ಲಿಂಗದೇವರು ಹಳೇಮನೆ ಅವರ ‘ಪ್ರಸ್ತುತ’ ಮತ್ತು ‘ಸಂದರ್ಭ’ – ೨೦೦೧ – ಮುಂತಾದವು ಅಂಕಣ ಬರಹಗಳ ವೈಚಾರಿಕ ಸಂಗ್ರಹಗಳಾಗಿದ್ದು ಅನುಭವ ಲಹರಿಯಿಂದ ಮೂಡಿಬಂದ ಮೌಲ್ಯಯುತ – ಬರಹಗಳಾದ್ದರಿಂದ ಅನುಮಾನವಿಲ್ಲದೇ ಅಂಕಣ ಬರಹ ವಿಚಾರ ಸಾಹಿತ್ಯಕ್ಕೆ ಒಳಗೊಳ್ಳುತ್ತದೆ.

ವಿಚಾರ ಸಾಹಿತ್ಯ ಮತ್ತು ವಿನೋದ

ವೈನೋದಿಕ ಬರಹದ ನೆಲೆಯಲ್ಲಿ ವಿಚಾರ ಸಾಹಿತ್ಯವನ್ನು ಆಲೋಚಿಸುವುದಾದರೆ ಅದೊಂದು ಬಗೆಯ ವಿಶಿಷ್ಟತೆಯನ್ನು ಪಡೆದುಕೊಳ್ಳುತ್ತದೆ. ಈ ಬಗೆಯ ವೈಚಾರಿಕತೆಯಲ್ಲಿ ‘ಹಾಸ್ಯ ಕೇಂದ್ರ’ ಬಿಂದು. ಹಾಗಿದ್ದರೂ ಇದು ಸಂಪೂರ್ಣ ಅದಕ್ಕೇ ಮೀಸಲಲ್ಲ. ಹಾಸ್ಯದಲ್ಲಿಯೇ ‘ನಗುನಗುತ್ತಾ ಅಳು’ ಎಂಬಂತೆ ವಿಚಾರ ಪೂರ್ಣ ಚಿಂತನೆಯ ಮೊನಚು ಸಮಾಜಕ್ಕೆ ನೀಡಬಲ್ಲ ಶಕ್ತಿ ಇದರಲ್ಲಿರುತ್ತದೆ. ಲಲಿತ ಪ್ರಬಂಧಗಳನ್ನು, ಹರಟೆಗಳನ್ನು ಇದಕ್ಕೆ ಸೇರಿಸಬಹುದು. ವಿಶೇಷವಾಗಿ ಇವ್ಯಾವು ವೈಚಾರಿಕ ಸಾಹಿತ್ಯದ ಬೆನ್ನಲ್ಲಿ ನಿಲ್ಲದಾದರೂ ಅದರ ಮಟ್ಟಿಗೆ ಗಂಭೀರತೆಯನ್ನು ಉಳಿಸಿಕೊಂಡು ತನ್ನ ಅಸ್ತಿತ್ವವನ್ನು ಒಂದೆಡೆ ಕೇಂದ್ರೀಕರಿಸಿದೆಯೆಂದು ಸೂಕ್ಷ್ಮವಾಗಿ ತಿಳಿಯಬಹುದು. ಎ.ಎನ್‌.ಮೂರ್ತಿರಾವ್‌; ರಾಕು; ಎನ್ಕೆ; ಸಿಂಪಿಲಿಂಗಣ್ಣ; ವಿ.ಬಿ. ಮೊಳೆಯಾರ ಮುಂತಾದವರ ಲಲಿತ ಪ್ರಬಂಧಗಳು ಈ ದಿಸೆಯಲ್ಲಿ ವೈಚಾರಿಕತೆಯನ್ನು ಹೊತ್ತು ನಿಂತಂತ ಕೃತಿಗಳೆಂದರೂ ತಪ್ಪೇನಲ್ಲ. ಯಾಕೆಂದರೆ ಲಲಿತತೆಯಲ್ಲಿ ಗಂಭೀರ ಚಿಂತನೆಗಳಿರುವುದು ಅರಿಯಬಹುದು. ೧೯೯೫ ರಲ್ಲಿ ಬಂದಂತಹ ವಿ.ಬಿ. ಮೊಳೆಯಾರ ಅವರ ‘ಸಮುಚಿತ’ ಎಂಬ ಚಿಂತನ ಬರಹಗಳ ಮಾಲಿಕೆಯಲ್ಲಿ ಪ್ರತೀಕಾರದ ಬೆಲೆ; ಶಿಸ್ತು; ಹೆಸರಿನ ಆಸೆ, ಸಂಸ್ಕೃತಿ, ನಾಗರೀಕತೆ ಮುಂತಾದ ಸಂಪ್ರಬಂಧಗಳು ಈ ಬಗೆಯ ಹಾಸ್ಯದೊಂದಿಗೆ ಗಂಭೀರ ಚಿಂತನೆಯ ಕಡೆ ಕೊಂಡೊಯ್ಯುತ್ತದೆ. ಇಂಥಾ ಸಂದರ್ಭದಲ್ಲಿ ‘ವಿಚಾರಸಾಹಿತ್ಯ’ ಎಂಬ ತಲೆಬರಹದ ವ್ಯಾಖ್ಯಾನದ ತೊಡಕನ್ನು ಮೀರಿ ಬರುವಂತೆ ಕಂಡರೂ ಬಹುಮಟ್ಟಿಗೆ ಅದನ್ನು ವಿಶಿಷ್ಟ ನೆಲೆಯಲ್ಲಿ ನಿಂತು ಅರ್ಥೈಸುವ ಹಾದಿಯನ್ನು ಇದು ತೋರಿಸುತ್ತದೆ. ಈ ಬಗೆಯ ಅನೇಕ ಕೃತಿಗಳು ವೈನೋದಿಕತೆಯೊಂದಿಗೆ ವಿಚಾರ ಮಂಥನವನ್ನು ಅಡಗಿಸಿಕೊಂಡಿವೆ.

ವೈಚಾರಿಕ ಸಾಹಿತ್ಯದ ವಿವಿಧ ಆಯಾಮಗಳು

ವೈಚಾರಿಕತೆಯೆಂಬುದು ಕೇವಲ ಒಂದು ವಿಷಯದ ಭೂಮಿಕೆಯಾಗಿ ತನ್ನ ವ್ಯಾಪ್ತಿಯನ್ನು ಹರಡಿಕೊಂಡದ್ದಲ್ಲ. ಈ ಸಾಹಿತ್ಯ ವಿವಿಧ ವಸ್ತು ವೈವಿಧ್ಯದಿಂದ ಕೂಡಿದ್ದು, ವಿವಿಧ ಆಯಾಮಗಳಲ್ಲಿ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಂಡಿದೆ. ಕನ್ನಡದ ಬುದ್ಧಿಜೀವಿಗಳು ಆರಿಸಿಕೊಂಡ ಈ ಬಗೆಯ ಸಾಹಿತ್ಯ ಸೃಷ್ಟಿಯಲ್ಲಿ ಕೇವಲ ಆಧುನಿಕ ಎನ್ನಬಹುದಾದ ಅಥವಾ ವೈಜ್ಞಾನಿಕ ಮನೋಭಾವದವರು ಒಂದೆಡೆಯಾದರೆ, ಇದೇ ಸಮಯಕ್ಕೆ ಪಂಡಿತರಾದ ಸಾಧು – ಸಂತ – ಸನ್ಯಾಸಿಗಳು ಅಧ್ಯಾತ್ಮವನ್ನು, ಆಸ್ತಿಕತೆಯನ್ನು ಮತ್ತೊಂದು ಪಾತಳಿಯ್ಲಿ ನಿಲ್ಲಿಸಿ ವೈಚಾರಿಕತೆಯನ್ನು ಮೆರೆದರು. ಇದನ್ನು ಕಡೆಗಣಿಸಲಾಗದು. ಇಂಥಾ ಕೆಲವು ಆಯಾಮಗಳನ್ನಿಟ್ಟುಕೊಂಡು ಕೆಲವು ಮಾತುಗಳನ್ನು ಹೀಗೆ ಬರೆಯಬಹುದೆನಿಸುತ್ತದೆ.

ಆಧ್ಯಾತ್ಮಿಕ ವಿಚಾರ ಸಾಹಿತ್ಯ

ನಮ್ಮ ದೇಶದ ಬಹುತೇಕ ಜನತೆಯು ಆಸ್ತಿಕವಾದವನ್ನು ಒಪ್ಪಿಕೊಂಡಂತೆ, ಅದರ ಜೊತೆಯಲ್ಲಿ ದೇವರು – ಧರ್ಮ ಮುಂತಾದುವನ್ನು ವೈಚಾರಿಕ ನೆಲೆಯಲ್ಲಿ ಅರ್ಥೈಸುವ ದೇವರ ಕಲ್ಪನೆಯನ್ನು ವಾಸ್ತವವಾದಿ ನೆಲೆಯಲ್ಲಿ ತಿಳಿಹೇಳುವ, ಸತ್ಯವನ್ನು ಹೊರಹಾಕುವ ಆಧ್ಯಾತ್ಮ ಚಿಂತನೆಯು ನಮ್ಮಲ್ಲಿ ನಡೆಯಿತು. ಮಹಾಭಾರತ – ರಾಮಾಯಣ – ಭಗವದ್ಗೀಥೆ – ಮುಂತಾದ ಬಗ್ಗೆ ವೈಚಾರಿಕ ಅಧ್ಯಯನಗಳೂ ಆಗಿವೆ. ನಾಡಿನ ಧಾರ್ಮಿಕ ಮಠಮಾನ್ಯಗಳು ಅಧ್ಯಾತ್ಮ ವಿಚಾರವಾದಕ್ಕೆ ಉನ್ನತ ಕೊಡುಗೆಯನ್ನು ನೀಡಿವೆಯೆನ್ನಬಹುದು. ತನ್ಮೂಲಕ ಅನೇಕ ಪತ್ರಿಕೆ; ಪುಸ್ತಕಗಳನ್ನೂ ಪ್ರಕಟಿಸಿದೆ. ಅಲ್ಲದೆ ಅನೇಕ ವಿದ್ವಾಂಸರೂ ಈ ಬಗ್ಗೆ ಬರೆದಿದ್ದಾರೆ. ೧೯೯೧ ರಲ್ಲಿ ಪ್ರಕಟವಾದ ಎ.ಎನ್‌. ಮೂರ್ತಿರಾಯರ ‘ದೇವರು’ ಇಂಥಾ ಪೆಟ್ಟಿಗೆ ಸೇರುತ್ತದೆ. ದೇವರು ಅದರ ಕಲ್ಪನೆ ಮುಂತಾದುವನ್ನು ಇಲ್ಲಿ ಚಿಂತಿಸಲಾಗಿದೆ. ೧೯೯೬ ರಲ್ಲಿ ಪ್ರಕಟವಾದ ‘ಈಶ್ವರ ಸಂಕಲ್ಪ ಮತ್ತು ದೈವಲೀಲೆ’ – (ಸೇಡಿಯಾಪು) ಪಂಡಿತಾರಾಧ್ಯರ – ‘ಜಾಗೃತವಾಣಿ’ – ೧೯೯೦೭ ರಲ್ಲಿ ಬಂದ ಈನಿಂಕಿಯರವರ – ‘ದೇವರು ಮತ್ತು ದಲಿತರು’ ಮುಂತಾದ ಕೃತಿಗಳು ಜನತೆಯನ್ನು ವಾಸ್ತವ ಬದುಕಿನತ್ತ ಆಸ್ತಿಕನ ಹೆಜ್ಜೆಗೆ ಅರಿವನ್ನು ಮೂಡಿಸಿ, ದಿಟ್ಟ ಹೆಜ್ಜೆ ಹಾಕಲು ಪ್ರಯತ್ನಿಸುವ ಉತ್ತಮ ಕೃತಿಗಳು. ‘ದೇವರು ಮತ್ತು ದಲಿತರು’ ಕೃತಿ ದೇವರನ್ನು ಹುಟ್ಟು ಹಾಕುವ ಮೂಲಕ, ಶೋಷಿತರಾಗಿ ಉಳಿದ ಕೆಳವರ್ಗದವರ ಪಾಡನ್ನು ಚಿತ್ರಿಸುವ ವಿಚಾರಪರ ಕೃತಿ.

ಭಗವದ್ಗೀತೆಯನ್ನೂ ಆಧುನಿಕ ವಿದ್ಯಮಾನದಿಂದ ಆಲೋಚಿಸಿ ವಿಶ್ಲೇಷಿಸುವ ‘ಭಗವದ್ಗೀತೆ – ಒಂದು ವೈಚಾರಿಕ ಒಳನೋಟ’ ಬಿ.ವಿ. ವೀರಭದ್ರಪ್ಪ – ೧೯೯೭; ಮತ್ತು ಮಾರ್ಕ್ಸ್‌ನ ವರ್ಗ ಪ್ರತಿಪಾದನೆ, ಶ್ರಮ, ಕಾರ್ಮಿಕರ ನೆಲೆಯಲ್ಲಿಟ್ಟು ಈ ಗೀತೆಯನ್ನು ವಿಶ್ಲೇಷಿಸುವ ‘ಮಾರ್ಕ್ಸ್‌ವಾದ ಮತ್ತು ಭಗವದ್ಗೀತೆ’ – ಎಸ್‌.ಜಿ. ದೇಸಾಯಿ – ೧೯೯೭ ಕೃತಿಗಳು ವಿಚಾರ ಸಾಹಿತ್ಯ ಮತ್ತು ಆಧ್ಯಾತ್ಮವನ್ನು ಸಮ್ಮಿಳನಗೊಳಿಸುವ ಕ್ರಿಯೆ. ಇದೇ ರೀತಿ ಧರ್ಮದ ಬಗೆಗೂ ಸಾಕಷ್ಟು ವೈಚಾರಿಕ ಕೃತಿಗಳು ಕನ್ನಡದಲ್ಲಿ ಬಂದಿವೆ. ಆಧ್ಯಾತ್ಮದೊಂದಿಗೆ ಧರ್ಮವು ಸೇರಿ ಅದರ ಮುಖವನ್ನು ಬದಲಾಯಿಸುತ್ತದೆ. ಇದಕ್ಕೆ ಹಿಂದೂ – ಮುಸ್ಲಿಂ – ಸಿಖ್‌ ಮುಂತಾದ ಧರ್ಮದ ತಿರುಳುಗಳನ್ನು ಸ್ಪಷ್ಟವಾಗಿಸುವ ಕೃತಿಗಳಿವೆ. ರೊಮಿಲಥಾಪರ್ ಅವರ ‘ಕೋಮುವಾದ ಮತ್ತು ವೈಚಾರಿಕತೆ’ – (೧೯೯೫); ಬಿ.ವಿ. ವೀರಭದ್ರಪ್ಪ ಅವರ ‘ಧರ್ಮ ಮತ್ತು ವೈಚಾರಿಕತೆ’ – (೧೯೯೯); ಲೋಹಿಯಾ ಅವರ ‘ಹಿಂದೂ ಧರ್ಮ ಮತ್ತು ಹಿಂದೂ ಮುಸಲ್ಮಾನ ಸಮಸ್ಯೆ’ – ೧೯೯೩. (ಅನು:ರಾಂಪ್ರಸಾದ್‌) ಮುಂತಾದ ಕೃತಿಗಳು ಆಧ್ಯಾತ್ಮ ವೈಚಾರಿಕತೆಯೊಂದಿಗೇ ಬೆಳೆದು ಬರುವ ಧರ್ಮದ ಬಗೆಗೆ ಇರುವ ಚಿಂತನವನ್ನು ಹೇಳುವ ಉತ್ತಮ ಪುಸ್ತಕಗಳು. ಅಧ್ಯಾತ್ಮ ವೈಚಾರಿಕತೆಗೆ ಇತ್ತೀಚಿಗೆ ಓಶೋ ರಜನೀಶ ಬರೆದಿರುವ ‘ಓಶೋ ವಾಕ್ಯ’ ಮುಂತಾದ ಪತ್ರಿಕೆಗಳೂ ಈ ಬಗೆಯ ಆಧ್ಯಾತ್ಮ ವೈಚಾರಿಕತೆಯ ಒಳ ತಿರುಳನ್ನು ಎಳೆ – ಎಳೆಯಾಗಿ ಬಿಚ್ಚಿ ತೋರುವಂತ ಪ್ರಯತ್ನ ಮಾಡುತ್ತಿವೆ.

ಲೌಕಿಕ ವಿಚಾರ ಸಾಹಿತ್ಯ

ಆಧ್ಯಾತ್ಮವನ್ನು ಹೊರತು ಪಡಿಸಿದಂತೆ ಲೌಕಿಕ ವಿಚಾರ ಸಾಹಿತ್ಯದಲ್ಲಿ ನೂರಾರು ಸಾಮಾಜಿಕ ಬದುಕಿನ ವಿಷಯಗಳು ಸಮಾವೇಶಗೊಳ್ಳುತ್ತವೆ. ನೂರಾರು ಬಗೆಯಲ್ಲಿ ಬಂದಂತಹ ವಸ್ತು ವೈವಿಧ್ಯದಿಂದ ಕೂಡಿದ ಈ ವಿಚಾರ ಸಾಹಿತ್ಯ ಪರಿಕಲ್ಪನೆಯನ್ನು ಇಲ್ಲಿ ಸಂಕ್ಷೇಪಗೊಳಿಸಿ ಮುಂದೆ ವಸ್ತು ವಿಷಯ ವೈವಿಧ್ಯದಲ್ಲಿ ಸಾಧಾರವಾಗಿ ಚರ್ಚಿಸಲಾಗುತ್ತದೆ. ಇಲ್ಲಿ ಮುಖ್ಯವಾದ ಒಂದೆರಡು ಅಂಶಗಳನ್ನು ತಿಳಿಯುವ ಪ್ರಯತ್ನ ಮಾಡಿದೆ.

ವ್ಯಕ್ತಿಯಾಧಾರಿತವೈಚಾರಿಕ ಸಾಹಿತ್ಯ

ಈ ಮುಂಚೆ ವೈಚಾರಿಕ ಬರಹಗಾರರಾಗಿದ್ದ ಅನೇಕ ವಿದ್ವಾಂಸರನ್ನು ಕುರಿತಾದ ವಿಚಾರ ಸಾಹಿತ್ಯ ಆಯಾ ವ್ಯಕ್ತಿಯ ಜೀವನದೊಂದಿಗೆ ಅವರ ವಿಚಾರದ ವಿಶ್ಲೇಷಣೆಯನ್ನು ಮತ್ತೊಮ್ಮೆ ಅರ್ಥೈಸುವ ಕೆಲಸ ನಡೆದಿದೆ. ಪಂಜೆ: ಗೋವಿಂದ ಪೈ: ಬಿ.ಎಂ. ಶ್ರೀ ಮುಂತಾದವರ ಬಗ್ಗೆ ೭೦ರ ದಶಕದಲ್ಲಿ ಸಾಹಿತ್ಯ ರಚನೆಯಾಯಿತು. ಗಾಂಧಿ, ಲೋಹಿಯಾ, ಅಂಬೇಡ್ಕರ ಮುಂತಾದವರ ವಿಚಾರವನ್ನು ಹೇಳುವ ನೂರಾರು ಕೃತಿಗಳು ಬಂದಿವೆ. ೧೯೯೪ರಲ್ಲಿ ಪ್ರಕಟವಾದ ಸಾಹಿತ್ಯ ಅಕಾಡೆಮಿಯ ಸುಮಾರು ೩೦ ಕೃತಿಗಳು ಕೇವಲ ವ್ಯಕ್ತಿಯಾಧಾರಿತ – ವೈಚಾರಿಕ ಕೃತಿಗಳು. ಇಲ್ಲಿ ಬಸವ – ಬುದ್ಧ – ಗಾಂಧಿ – ಅಂಬೇಡ್ಕರ – ಕನಕದಾಸ – ಲಿಂಕನ್‌ ಕೊಪರ್ನಿಕಸ್‌ ಮಹಾವೀರ ಹೀಗೆ ಹಲವಾರು ಜನರ ಬಗೆಗಿನ ಗ್ರಂಥಗಳು ಬಂದವು. ಇದೊಂದು ಬಗೆಯೆಂದು ನಾವಿಟ್ಟುಕೊಳ್ಳಬಹುದು.

ತಿಪ್ಪೇರುದ್ರಸ್ವಾಮಿಯವರ ವೈಚಾರಿಕ ಸಾಹಿತ್ಯ; ಕುವೆಂಪು ಅವರ ವಿಚಾರ ಸಾಹಿತ್ಯ; ಸೇಡಿಯಾಪು ಅವರ ವಿಚಾರ ಪ್ರಪಂಚ ಹೀಗೆ ಹಲವಾರು ವ್ಯಕ್ತಿ ನೆಲೆಯ ಸಂಶೋಧನಾ ಕೃತಿಗಳೂ ಬಂದಿವೆ.

ಸ್ತ್ರೀವಾದ ಮತ್ತು ವೈಚಾರಿಕತೆ

ಇತ್ತೀಚೆಗೆ ‘ಸ್ತ್ರೀ’ ಧ್ವನಿಯು ತನ್ನ ಒಳಗುಟ್ಟನ್ನು ಬಿಚ್ಚಿಕೊಳ್ಳುತ್ತಾ ವಿಶಾಲವಾದ ವಿಚಾರ ಪ್ರಪಂಚಕ್ಕೆ ಕಾಲಿಡುತ್ತಲಿದೆ. ಸ್ತ್ರೀತ್ವದ ಬಗ್ಗೆ,ಅವಳ ಹಕ್ಕು; ಕರ್ತವ್ಯ; ಸ್ವಾತಂತ್ರ್ಯ ಮುಂತಾದ ಬಗ್ಗೆ ಮಾತಾಡುವ ಯಾವುದೇ ಮಾತು ಮತ್ತು ಬರಹ ವಿಚಾರವಾಗುತ್ತದೆ. ಸ್ತ್ರೀ ಕುರಿತಾದ ನೂರಾರು ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಅವುಗಳನ್ನು ಇಲ್ಲಿ ನೋಡದೆ ಪ್ರಾತಿನಿಧಿಕವೆಂಬಂತೆ – ‘ನಾಗರತ್ನ, ಎಂ. ಶಿವರ ಅವರ ‘ಚಿಂತನಲಹರಿ’ಯನ್ನು (೧೯೯೫) ನೋಡಿದರೆ ಇಲ್ಲಿ ಆಧುನಿಕ ಸ್ತ್ರೀ ಮತ್ತು ಸಮಾನತೆ; ಸಾಹಿತ್ಯ ಮತ್ತು ಮಹಿಳೆ; ಮುಂತಾದ ಬಗ್ಗೆ ಬರೆದಿದ್ದಾರೆ.

ಎಚ್‌.ವಿ. ನಾಗೇಶ ಅವರ ‘ಸಮಾಜ ಸಮ್ಮುಖ’ದಲ್ಲಿ ಸ್ತ್ರೀ ದ್ವೇಷ; ಗ್ರಾಮೀಣ ಮಹಿಳೆಯ ಸ್ಥಿತಿ ಗತಿ ಮುಂತಾದ ಚಿಂತನೆಗಳಿವೆ. ಹೀಗೆ ಮಹಿಳಾ ಪರವಾದಂತಹ ವಿವಿಧ ವೈಚಾರಿಕ ಚಿಂತನೆಗಳು ನಮ್ಮಲ್ಲಿವೆ.

ಸಂಕೀರ್ಣ ವಿಚಾರವಾದ

ಸಂಕೀರ್ಣ ವಿಚಾರವಾದವೆಂಬುದು ಕೇವಲ ಒಂದು ಅನುಕೂಲದ ಪರಿಕಲ್ಪನೆಯಷ್ಟೆ. ಏಕೆಂದರೆ ಇಲ್ಲಿ ಸಮಾವೇಶಗೊಳ್ಳುವುದು ವಿಚಾರವೇ ಹೊರೆತು ಬೇರೇನಲ್ಲ. ಆದರೂ ಒಂದು ವಿಷಯ ಕೇಂದ್ರವಾಗಿರದೇ, ಅದಕ್ಕೆ ಮೀರಿ ಅನೇಕ ಬಗೆಯ ಲೇಖನಗಳು, ಲೇಖನದ ಒಳಗಡೆ ವಿಷಯಾಂತರವಾಗಿರುವುದು ಮುಂತಾದುವನ್ನು ಇದಕ್ಕೆ ಆರೋಪಿಸಬಹುದು. ಜೊತೆಗೆ ವಿವಿಧ ಲೇಖನಗಳನ್ನೊಳಗೊಂಡ ಮತ್ತು ಒಂದೇ ವಿಷಯವನ್ನು ಕೇಂದ್ರೀಕರಿಸಿ ವಿವಿಧ ನೆಲೆಯಲ್ಲಿ ಅರ್ಥೈಸುವ ಬರಹಗಳೂ ಇಲ್ಲಿವೆ. ಸಂಕೀರ್ನ ವಿಚಾರವಾದವೆಂಬ ಸಾಂಕೇತಿಕ ಶೀರ್ಷಿಕೆಯಡಿ ಉದಾಹರಿಸಬಹುದಾದಂತಹ ಕೃತಿಗಳೆಂದರೆ ಮುಖ್ಯವಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿದ ವಿಚಾರ ಸಾಹಿತ್ಯದ ಕೃತಿಗಳು. ಮತ್ತು ಡಿ.ಆರ್. ನಾಗರಾಜರ ಚಿಂತನೆಗಳನ್ನೂ ಇಲ್ಲಿ ಸೇರಿಸಿದರೆ ತಪ್ಪಾಗಲಾರದು. ಈ ಸಾಲಿಗೆ ಸೇರಬಹುದಾದ ಅನೇಕ ಕೃತಿಗಳಿವೆಯಾದರೂ ಮೇಲಿನವು ಮಾದರಿಯಷ್ಟೆ.

ವಿಚಾರ ಸಾಹಿತ್ಯದ ವಸ್ತುವಿಷಯ ವೈವಿಧ್ಯ೯೦ ದಶಕದ ಆಚೆಈಚೆ

ಯಾವುದೇ ಸಾಹಿತ್ಯ ಸಮಾಜವು ಬದಲಾವಣೆ ಹೊಂದುತ್ತಲೇ ಇರುತ್ತದೆ. ಇದು ಕಾಲಮಾನದ ದೃಷ್ಟಿಯಿಂದ ಅನಿವಾರ್ಯ. ಯಾವುದೇ ಅರಿವಿಲ್ಲದಮತೆ ತನ್ನೊಳಗೇ ಬದಲಾವಣೆಯನ್ನು ಪಡೆಯುತ್ತಿರುತ್ತದೆ. ಆದರೆ ಇದು ದಿಢೀರನೆ ಆಗುವುದು ಸಾಧ್ಯವಿಲ್ಲ. ಈ ಬದಲಾವಣೆಗೆ ತುಂಬಾ ಸಮಯಾವಕಾಶ ಬೇಕಾಗುತ್ತದೆ. ಆದರೂ ಒಂದೊಂದು ದಶಕವನ್ನಿಟ್ಟುಕೊಂಡರೆ ಬದಲಾವಣೆಯ ಸಾಧ್ಯತೆಗಳು ಕಂಡು ಬರುತ್ತವೆ. ವಿಚಾರ ಸಾಹಿತ್ಯವೂ ಇಂಥಾ ಪ್ರಕ್ರಿಯೆಗೆ ಒಳಪಟ್ಟಿದೆ ಎನ್ನಬಹುದು.

ಸ್ವಾತಂತ್ರ್ಯಪೂರ್ವದಲ್ಲಿ ಮುಖ್ಯವಾಗಿ ಸ್ವಾತಂತ್ರ್ಯದ ಕನಸು – ಹೋರಾಟ, ಬ್ರಿಟಿಷರ ದಬ್ಬಾಳಿಕೆ – ದಾಸ್ಯ – ಗಾಂಧೀಜಿಯ ಅಹಿಂಸೆ – ಅಂಬೇಡ್ಕರರ ಜಾತಿಹೋರಾಟ – ಏಕೀಕರಣ – ರಾಜಪ್ರಭುತ್ವ, ಶೈಕ್ಷಣಿಕ ಮೌಲ್ಯ – ವಿವೇಕಾನಂದ – ಪರಮಹಂಸರ ವಿಚಾರ ಧಾರೆಗಳು – ಲೋಹಿಯಾ ಸಿದ್ಧಾಂತಗಳು – ಮಾರ್ಕ್ಸ್ ಮುಂತಾದವರ ಬರಹಗಳು ಭಕ್ತಿ ಪಂಥದ ಚಿಂತನೆ ಮುಂತಾದ ಬಗ್ಗೆ ವಿಚಾರ ಸಾಹಿತ್ಯ ಮೂಡಿಬಂತು. ಸ್ವಾತಂತ್ರ್ಯಾನಂತರ ಒಳರಾಜಕೀಯ; ಆರ್ಥಿಕ ದುಸ್ಥಿತಿ; ಯುದ್ಧ ಭಯ; ಮೀಸಲಾತಿ, ಏಕೀಕರಣದ ಸಮಸ್ಯೆ ಮುಂತಾದ ಬಗ್ಗೆ ಕೆಲವು ದಶಕಗಳಲ್ಲಿ ಚರ್ಚೆ ಆಯಿತು. ೮೦ ರ ದಶಕದಿಂದೀಚೆಗೆ ಹೆಚ್ಚಾಗಿ ವಿಚಾರ ಸಾಹಿತ್ಯ ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಬದಲಾವಣೆಯಾಗುತ್ತಾ ನಡೆದಿದೆ.

೧೯೯೦ರಿಂದ ೨೦೦೦ದ ಅವಧಿಯಲ್ಲಿ ವಿಚಾರ ಸಾಹಿತ್ಯದ ವಿಷಯ – ವಸ್ತು ವೈವಿಧ್ಯವನ್ನು ಸ್ವಲ್ಪ ಮಟ್ಟಿಗೆ ಗುರುತಿಸಬಹುದಷ್ಟೇ. ೧೦ ವರ್ಷದ ಅವಧಿಯಲ್ಲಿ ದಿಢೀರನೆ ಬದಲಾವಣೆ ಗುರುತಿಸುವುದು ಸುಲಭವಲ್ಲ. ಆದರೂ ಆಯಾ ಕಾಲಮಾನದ ಅವಧಿಯಲ್ಲಿ ನಡೆದ ಘಟನೆ – ಸಾಮಾಜಿಕ ಸ್ಥಿತ್ಯಂತರಗಳು ಇದಕ್ಕೆ ಮೂಲ ಕಾರಣಗಳು. ಈ ಹೊತ್ತು ಆಧುನಿಕ ವಿಚಾರವಾದಿಗಳ ಮುಖ್ಯ ಹೂರಣವಾಗಿ ರೇಸಿಸಂ – ಫ್ಯಾಸಿಸಂ – ಟೆರ್ರ‍ರಿಸಂ ಕಲೊನಿಯಲಿಸಂ – ನ್ಯೂಕ್ಲಿಯರ್ ಸೈಲೋಸ್‌ – ಇಂಪೀರಿಯಲಿ ಸಂ – ವರ್ಲ್ಡ್ ಕ್ಯಾಪ್ಟಲಿಸಂ – ಮಲ್ವಿನ್ಯಾಷನಲಿಸಂ – ಗ್ಯಾಟ್‌ಲಿಬರಲೈಜೇಷನ್‌ಪ್ರೈವೇಟೈಜೇಶನ್‌ಗ್ಲೋಬಲೈಜೇಷನ್‌ಕೋಮುವಾದ – ಜಾತಿವಾದ – ಆಧುನಿಕ ಮಾನವನ ವಿಕೃತ ವೇಷಗಳು – ಪರಿಸರ ಮಾಲಿನ್ಯ ಮುಂತಾದುವು ನಿಂತಿವೆ. ಇವೆಲ್ಲವೂ ಕೂಡ ಆಯಾ ಕಾಲದ ಮಿತಿಯಲ್ಲಿ ಬಂದು ಹೋಗುವಂತಹವು. ಇದಕ್ಕೆ ನಿದರ್ಶನಗಳನ್ನು ನೋಡುತ್ತಾ ಹೋಗಬಹುದು –

ಭಾರತದಲ್ಲಿ ನಡೆದ ಬಾಬರಿ ಮಸೀದಿ ವಿವಾದವು ಒಂದು ದೊಡ್ಡ ಕೋಮು ಗಲಭೆಯಾಗಿ ಮಾರ್ಪಟ್ಟಾಗ ಈ ಕುರಿತಾದ ಅನೇಕ ಪುಸ್ತಕಗಳು ಹೊರಬಂದವು. ಕರ್ನಾಟಕದಲ್ಲಿಯೂ ಬಾಬಾ ಬುಡನ್‌ಗಿರಿಯಲ್ಲಾದ ಗಲಭೆಯು ಮೇಲಿನ ಮಸೀದಿ ವಿವಾದದ ನೆರಳಿನಲ್ಲಿಯೇ. ಮುಖ್ಯವಾಗಿ “ದಕ್ಷಿಣ ಕನ್ನಡದಲ್ಲಿ ಅಯೋಧ್ಯಾ ಕೋಮು ಗಲಭೆಗಳು – ಒಮದು ಸಮೀಕ್ಷೆ”, “ಕೋಮುವಾದ ಮತ್ತು ಜನಸಂಸ್ಕೃತಿ’ ಬಿಳಿಮಲೆ ‘ಬಿಲ ಹೊಕ್ಕ ಹಾವು’ – ರಹಮತ್‌ ತರೀಕೆರೆ; ರಾಜೇಂದ್ರ ಚೆನ್ನಿ; ಎಂಬ ಕೃತಿಗಳು ಅಯೋಧ್ಯೆಯ ಕರಿ ನೆರಳಿನ ಪ್ರಭಾವ – ಬಾಬಾ ಬುಡನ್‌ಗಿರಿಯಲ್ಲಿ ಆರ್.ಎಸ್‌.ಎಸ್‌. ತೋರಿದ ಕ್ರಿಯೆ ಮುಂತಾದ ಬಗ್ಗೆ ಆ ಸಮಯದೊಂದಿಗೆ ರಚನೆಯಾದಂತಹವು. ‘ಕೋಮು ಸೌಹಾರ್ದ’ – ದೊರೆಸ್ವಾಮಿ – ೧೯೯೧; ‘ಕೋಮುವಾದ ರಾಜಕೀಯ’ – ಜಿ. ರಾಜಶೇಖರ. ‘ಭಾರತದಲ್ಲಿ ಕೋಮುವಾದ ವಿಷಚಕ್ರದಿಂದ ಬಿಡುಗಡೆ ಹೇಗೆ? – ಕೆ.ಎನ್‌. ಫಣಿಕ್ಕರ್. ಹೀಗೆ ಅನೇಕ ಕೃತಿಗಳು ಕೇವಲ ಒಂದು ಘಟನೆಯ ಸುತ್ತಮುತ್ತ ಬಂದಂತಹ ವೈಚಾರಿಕ ಬರಹಗಳು. ಕೋಮು ಗಲಭೆಯ ಖಂಡನೆ – ಮಂಡನೆ ಇಲ್ಲಿ ಕಾಣಬಹುದು.

ಭಾರತಕ್ಕೆ ಗಂಟು ಬಿದ್ದ ‘ಗ್ಯಾಟ್‌’ ಒಪ್ಪಂದ ಘಟನೆಯೂ ವೈಚಾರಿಕ ಸಾಹಿತ್ಯದ ಬರಹಕ್ಕೆ ಪ್ರೇರಣೆಯಾಯಿತು. ಗ್ಯಾಟ್‌ ನಂಥರ ಡಬ್ಲ್ಯೂ.ಟಿ.ಓ ಹೀಗೆ ಆರ್ಥಿಕ ವಿಚಾರಗಳಿವೆ. ಇವುಗಳಿಗೆ ಸಂಬಂಧಿಸಿದಂತೆ ಅನೇಕ ಕೃತಿಗಳು ಬಂದವು. ಮುಖ್ಯವಾಗಿ ‘ಗ್ಯಾಟ್‌ ಒಪ್ಪಂದ’ ಅ.ಗೋ. ಪೂಜಾರಿ – ೧೯೯೬,’ ‘ಅಭಿವೃದ್ಧಿಯೋ ಅವಸಾನವೋ’ – (೧೯೯೯೯) ಕಾರ್ಗಲ್‌ ಭೋಗರಾಜು; ‘ಪೇಟೆಂಟ್‌ ವರವೋ ಶಾಪವೋ’ – ಎಸ್‌.ಬಿ. ಅಂಗಡಿ (೧೯೯೯) ಇವು ಆರ್ಥಿಕ ವಿಚಾರದ ಘಟನೆಯ ಸುತ್ತ ಬಂದಂತಹ ವೈಚಾರಿಕ ಬರಹಗಳು. ಹಾಗೆಯೇ ‘ಡಂಕೆಲ್‌ ಪ್ರಸ್ತಾವ ಕೃಷಿಕ್ಷೇತ್ರದ ವಿಷಕಳೆ – ಎಸ್‌.ಬಿ. ಅಂಗಡಿ – (೧೯೯೩) ಇಂಥಾ ಕೃತಿಗಳು ವಿದೇಶಿ ವ್ಯಾಪಾರದೊಂದಿಗೆ ಭಾರತ ಕೈಗೂಡಿಸುವುದರಿಂದ ಆಗಬಹುದಾದ ಸ್ಥಿತಿಯನ್ನು ಸವಿವರವಾಗಿ ವಿವರಿಸುತ್ತವೆ.

ಕಳೆದ ಎರಡು ಮೂರು ವರ್ಷಗಳಲ್ಲಿ ಬಂದಂತಹ ಪ್ರಳಯ ಭೀತಿಯನ್ನು ಸಮೂಹ ಮಾಧ್ಯಮಗಳು ಬಹಳಷ್ಟು ಪ್ರಚಾರ ಮಾಡಿದವು. ಈ ಸಮಯದಲ್ಲಿಯೇ ಅನೇಕ ವಿಚಾರವಾದಿಗಳು ‘ಆಸ್ತಿಕ ಪಂಡಿತರು ಪ್ರಳಯ ಕುರಿತಾದ ವಿಚಾರವಾದವನ್ನು ಮಂಡಿಸಿದರು. ‘ಪ್ರಳಯ ಮುಂದೇನು’ – ಪಂಡಿತಾರಾಧ್ಯ ಶಿವಾಚಾರ್ಯ; ‘ಪ್ರಳಯ ಎಂದರೇನು’ – ಪಂಡಿತಾರಾಧ್ಯ – (೧೯೯೭ – ೯೮) ಇಂಥಾ ಕೃತಿಗಳಲ್ಲಿ ಅದನ್ನು ವಿವರವಾಗಿ ತಿಳಿಸಿದ್ದಾರೆ. ಈ ಪ್ರಳಯದ ಭೀಕರತೆಯನ್ನು ಪತ್ರಿಕೆಗಳು ಸಂಪಾದಕೀಯದಲ್ಲಿ ಬರೆದವು. ರೇಡಿಯೋ ಮುಂತಾದ ಶ್ರವಣ ಮತ್ತು ದೃಶ್ಯ ಮಾಧ್ಯಮಗಳು ಈ ವಿಷಯವಾಗಿ ಕಾರ್ಯಕ್ರಮ ರೂಪಿಸಿದವು.

ಕಂಬಾಲಪಲ್ಲಿಯಲ್ಲಿ ಜೀವಂತವಾಗಿ ದಲಿತರನ್ನು ಬೂದಿ ಮಾಡಿದ್ದು; ಪಾಕಿಸ್ತಾನ ಮತ್ತು ಭಾರತದ ಕಾರ್ಗಿಲ್‌ ಯುದ್ಧ; ಇವುಗಳ ಸುತ್ತಮುತ್ತಲೂ ಅನೇಕ ವಿಚಾರವಾದಗಳು ಮಂಡಿಸಲ್ಪಟ್ಟಿವೆ. ಈ ದೃಷ್ಟಿಯಿಂದ ವಿಚಾರ ಸಾಹಿತ್ಯದ ಹರವು ಒಂದೊಂದು ಘಟನೆಯ ಸುತ್ತಲೂ ಹೆಚ್ಚಾಗಿ ೯೦ರ ದಶಕದಿಂದೀಚೆಗೆ ಬೆಳೆಯುತ್ತಿದೆ. ಜೊತೆಗೆ ಇನ್ನಿತರ ಅನೇಕೆ ಸಾಮಾಜಿಕ – ಸಾಂಸ್ಕೃತಿಕ ವಿಷಯಗಳು ಎಡೆಪಡೆದಿವೆ.

ಹೀಗೆ ವಿಚಾರ ಸಾಹಿತ್ಯ ‘ಬೃಹತ್‌’ ರೀತಿಯಲ್ಲಿ ವೈವಿಧ್ಯಮಯವಾಗಿ ಬೆಳೆದು ನಿಂತಿದೆ. ಇಲ್ಲಿ ನೂರಾರು ಗೊಂದಲಗಳಿವೆ. ಅವೆಲ್ಲವನ್ನೂ ಬೇದಿಸಿಕೊಂಡು ಒಂದು ಸ್ಪಷ್ಟತೆಯನ್ನು ತರುವ ಪ್ರಯತ್ನ ಅನೇಕರು ಮಾಡಿದ್ದಾರೆ. ಈ ಸಂಪ್ರಬಂಧ ವ್ಯಾಪ್ತಿ ಹತ್ತು ವರ್ಷಗಳ ಅವಧಿಯಾದರೂ, ಪೂರ್ಣ ಸಮೀಕ್ಷೆಯನ್ನು ಮಾಡದೇ, ಮತ್ತು ಹತ್ತು ವರ್ಷದ ಅವಧಿಯ ಪ್ರಾತಿನಿಧಿಕವೆಂಬಂತೆ – ಆಯಾ ವಸ್ತು ವಿಷಯದ ಮೇರೆಗೆ ಅಲ್ಲಲ್ಲಿ ಉದಾಹರಿಸಲಾಗಿದೆ. ಒಂದೊಂದು ಕಡೆ ವಿಚಾರ ಸಾಹಿತ್ಯದ ವಿವಿದ ಮಜಲುಗಳನ್ನು ರೂಪಿಸುವ ಮೂಲಕ ಅಧ್ಯಯನಕ್ಕೆ ಸುಲಭವಾಗಬಹುದೆಂದು ಕಲ್ಪಿಸಿದ್ದೇನೆ. ಅವು ಸ್ಪಷ್ಟ ಮತ್ತು ನಿರ್ದಿಷ್ಟ ಅಲ್ಲದೇ ಇರಬಹುದು. ಆದರೂ ವಿಚಾರ ಸಾಹಿತ್ಯದಂತಹ ವಿಶಾಲ ಗಾತ್ರದ ಬಗೆಯನ್ನು ಸ್ವಲ್ಪದರಲ್ಲಿ ಹಿಡಿದಿಡುವುದು ಕಷ್ಟ ಸಾಧ್ಯವೆಂಬ ಮಿತಿಯೊಡನೆ ಈ ಸಂಪ್ರಬಂಧ ಮೂಡಿ ನಿಂತಿದೆ.