ಮಾನವಿಕಗಳಲ್ಲಿ ಚರಿತ್ರೆ ಮತ್ತು ಪುರಾತತ್ವ ಕ್ಷೇತ್ರಗಳು ನಿರ್ಣಾಯಕ ಪಾತ್ರವಹಿಸಿರುವುದು ಸತ್ಯವೆಂಬುದಕ್ಕೆ ಈಗಾಗಲೇ ಪ್ರಕಟಣೆಗೊಂಡ ಪುಸ್ತಕಗಳೇ ಸಾಕ್ಷಿ. ಏಕೀಕರಣೋತ್ತರ ಕಾಲಘಟ್ಟವು ಇಂಥಾ ಮಹತ್ತರ ಪರಿವರ್ತನೆಗಳಿಗೆ ನಾಂದಿಯಾಗಿದೆ. ಕನ್ನಡದಲ್ಲಿ ಬಂದ ಚರಿತ್ರೆ ಮತ್ತು ಪುರಾತತ್ವ ಕೃತಿಗಳು ಆರಂಭದಲ್ಲಿ ಬಹುತೇಕ ಬ್ರಿಟಿಷ್‌ ಮಾದರಿಯ ರಚನಾ ಶೈಲಿಯನ್ನು ಅಳವಡಿಸಿಕೊಂಡಿದ್ದವು. ಇಲ್ಲಿನ ಸೈದ್ಧಾಂತಿಕ ವಿಧಾನಗಳು ಸಹಾ ‘ಯುರೋಪ್‌’ ಕೇಂದ್ರವನ್ನಾಗಿಟ್ಟುಕೊಂಡಂಥವು. ಜಾಗತೀಕರಣ ಮತ್ತು ಸ್ಥಳೀಕರಣಗಳ ತಾಕಲಾಟಗಳ ಮಧ್ಯೆ ವಾಸ್ತವವಾಗಿ ಮೈತಾಳಿ ನಿಂತಿವೆ ಈ ಹೊತ್ತಿನ ಬರೆಹಗಳು. ಅಂದರೆ, ಸಾಂಪ್ರದಾಯಿಕ ಅಧ್ಯಯನಕ್ಕೆ ಹಾತೊರೆದದ್ದು ಆರಂಭದಲ್ಲಿ ಎಂಬುದು ನಿಜ. ಕ್ರಮೇಣ ಅದಕ್ಕೆ ಮಹತ್ವ ಕೊಡದೆ ವಿನೂತನ ಸೈದ್ಧಾಂತಿಕ ಪ್ರಕ್ರಿಯೆಗಳಿಗೆ ತೊಡಗಿಸಿಕೊಂಡ ಅಧ್ಯಯನಗಳೇ ಹೆಚ್ಚು.

ಕ್ರಿ.ಶ. ೧೯೯೧ರಿಂದ ೨೦೦೦ವರೆಗೆ ಬಂದಂಥ ಚರಿತ್ರೆ ಮತ್ತು ಪುರಾತತ್ವ ಕೃತಿಗಳು ಶಿಸ್ತು, ವಿಧಾನ, ಶೈಲಿಗಳಲ್ಲಿ ಏನೆಲ್ಲಾ ರೂಪಗಳನ್ನು ಪಡೆದಿರುವುದು ವಾಸ್ತವ ಸಂಗತಿ. ಮಹಾ ಪರಿವರ್ತನೆಗಳ ನೆರಳಲ್ಲಿ ಅಭಿವ್ಯಕ್ತಿಯ ಬಿಚ್ಚುನುಡಿಗಳು, ಆಯಾ ಸಂವೇದನಾಶೀಲ ಪ್ರವೃತ್ತಿಯನ್ನು, ಒಳನೋಟಗಳ ಮೂಲಕ ತೋರಿಸಿರುವುದು ಈ ದಶಕದ ವಿಶೆಷ. ಇದನ್ನು ಬಂಡಾಯ ಚರಿತ್ರೆಯ ರೂಪದಲ್ಲಿ ಕಟ್ಟುವ ಕೆಲಸವೆಂದರೂ ತಪ್ಪಲ್ಲ. ಈ ಹಿಂದೆ ಚರಿತ್ರೆಯನ್ನು ಬರೆದವರು ಪ್ರಚಾರಕ್ಕೆ ತಂದವರು ಮೇಲ್ವರ್ಗದವರು. ಅದರಲ್ಲೂ ಬ್ರಾಹ್ಮಣರೇ ವಾರಸುದಾರರು. ಅಕ್ಷರ ಸಂಸ್ಕೃತಿಯ ಅಧಿಪತ್ಯಕ್ಕೆ ಒಡೆಯರಾದ ಇವರು ಹೇಳಿದ್ದು – ರಚಿಸಿದ್ದೇ ವೇದ ವಾಕ್ಯ. ಆರಂಭದಲ್ಲಿ ಇಂಥಾ ಪೂರ್ವಗ್ರಹ ಪೀಡಿತ ಕೆಲಸಗಳಾದರೂ, ಅನಂತರ ಚರಿತ್ರೆ ರಚನೆಯ ಸಿದ್ಧಾಂತ, ಲೇಖನ ಕಲೆ ಪಕ್ವವಾಗಿ ಬೆಳೆಯಿತು. ಇದರ ಫಲ ಪ್ರಭಾವಿಸಿದ್ದು ಇತ್ತೀಚೆಗೆ. ಇಂಥಾ ದಾಸ್ಯತನ, ಮಲತಾಯಿ ಧೋರಣೆ ತಳೆದದ್ದು ರಾಜ ಪ್ರಭುತ್ವಗಳ ಚರಿತ್ರೆ ರಚನೆಯಲ್ಲಿ ಕಾಣಲಾಗುತ್ತದೆ. ಕಳೆದ ಶತಮಾನದ ಅಂತ್ಯದ ವೇಳೆಗೆ ಇಂಥಾ ತಪ್ಪುಗಳನ್ನು ತಿದ್ದಿ, ಕ್ರಾಂತಿಕಾರಿ ಬದಲಾವಣೆಯಾದುದು ಸ್ಪಷ್ಟ.

ವಿವಿಧ ರೀತಿಯ ಚಾರಿತ್ರಿಕ ಅಧ್ಯಯನಗಳ ಮೇಲೆ ಸಮಕಾಲೀನ ಘಟನೆಗಳ ದಟ್ಟ ಪ್ರಭಾವವಿರುವುದನ್ನು ಅಲ್ಲಗಳೆಯುವಂತಿಲ್ಲ. ಈ ಬಗೆಗಿನ ಕೆಲವು ಲಕ್ಷಣಗಳನ್ನು ಅವಲೋಕಿಸುವುದು ಸೂಕ್ತ. ನಮ್ಮನ್ನಾಳಿದವರ ಬಗ್ಗೆ ನಾವು ಚಿಂತಿಸದೇ ಹೋದರೆ ಸದಾ ಗಭಾವಸ್ಥೆಯಲ್ಲಿದ್ದಂತೆ. ಹೀಗಾಗಿ ಅಕ್ಷರ ಕ್ರಾಂತಿಯ ಮೂಲಕ ಪುಸ್ತಕ ಪ್ರಕಟಣೆಗೆ ನಾಂದಿಯಾಯಿತೆಂಬ ಮಾತು ನಿಜ. ಕಲಾಜ್ಞಾನ – ವಿಜ್ಞಾನಗಳ ಸಮಯೋಗದಲ್ಲಿ ರೂಪು ತಳೆದದು ಈ ಸಮಾಜ ವಿಜ್ಞಾನ. ಏಕ ಶಿಸ್ತಿನಿಂದ ಬಹುಶಿಸ್ತುಗಳ ಕಡೆಗೆ ಅಧ್ಯಯನದ ಒಲವುಗಳು, ತಾತ್ವಿಕವಾಗಿ ನಿರ್ದಿಷ್ಟ ವಿಷಯ ಮತ್ತು ಅಧ್ಯಯನ ಸ್ವರೂಪ ಭಿನ್ನವಾಗಿರುವುದು, ಲಿಂಗಾಧಾರಿತ ಅಧ್ಯಯನಕ್ಕೆ ಆದ್ಯತೆ, ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಮಾದರಿ ಅಧ್ಯಯನ, ಮರೆಯಾದ ಸಾಂಸ್ಕೃತಿಕ ಹೆಗ್ಗುರುತುಗಳ ಹುಡುಕಾಟ ಮತ್ತು ಪುನಾರಚನೆ, ನಿರ್ಲಕ್ಷಿಸಲ್ಪಟ್ಟ ಸಮುದಾಯಗಳತ್ತ ಲಕ್ಷೆ ಮತ್ತು ಆದ್ಯತೆ, ಚರಿತ್ರೆ ರಚನೆಯಲ್ಲಿ ಪರಿಗಣಿಸುವಂಥ ಕೋಮು ಸಾಮರಸ್ಯ, ವೈಭವೀಕರಣಕ್ಕೆ ಕತ್ತರಿಬಿದ್ದು ವೈಜ್ಞಾನಿಕ ವಿಶ್ಲೇಷಣೆಗೆ ಆಸ್ಪದ, ವಾಸ್ತವತೆಯ ಬೇಟೆಗಾಗಿ ಅಧ್ಯಯನ – ಮರು ಅಧ್ಯಯನ ಪ್ರಕ್ರಿಯೆ ಆರಂಭ, ಅನ್ಯಾಯವಾದ ಚರಿತ್ರೆ ಪುಟಗಳಿಗೆ ನ್ಯಾಯ ಒದಗಿಸುವ ಚರಿತ್ರೆಕಾರನ ಜವಾಬ್ದಾರಿ ಹೆಚ್ಚಾದುದು, ದೇಶೀ ಚಿಂತನಾ ನೆಲೆಗಳಲ್ಲಿ ಸ್ಥಳೀಯ ವ್ಯಕ್ತಿ, ವಿಷಯ, ಚಾರಿತ್ರಿಕ ನೆಲೆಗಳ ಅಧ್ಯಯನ ಪ್ರಗತಿ, ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಅಧ್ಯಯನ ಚೌಕಟ್ಟು, ಲಕ್ಷಣ, ಸಂಗತಿಗಳ ಹುಡುಕಾಟ ಹೋಲಿಕೆ, ರಾಜಕೀಯ ಸಂಗತಿಗಳ ಮೂಲಕ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನ ಹೊಸರೂಪ ಪಡೆದಿದ್ದು, ಚರಿತ್ರೆ ರಚನೆಯಲ್ಲಿ ಹೊಸ ಸಿದ್ಧಾಂತಗಳ ಅಳವಡಿಕೆ, ಧರ್ಮನಿರಪೇಕ್ಷಿತ ಬರವಣಿಗೆ; ಸ್ಥಳೀಯ, ಮೌಖಿಕ ಮತ್ತು ಪ್ರಾದೇಶಿಕ ಅಧ್ಯಯನಗಳ ಮೂಲಕ ಸಮಕಾಲೀನ ಒತ್ತಡಕ್ಕೆ ಮಣಿದು ಬಂದ ಬರವಣಿಗೆಗಳು – ಹೀಗೆ ಇಂಥಾ ಅನೇಕ ಸಂಗತಿಗಳನ್ನು ಚರಿತ್ರೆ ರಚನೆಗೆ ಪ್ರಧಾನವಾಗಿ ಬಳಸಿಕೊಂಡಿರುವುದು ಗಮನಾರ್ಹ.

ಚರಿತ್ರೆ ಮತ್ತು ಪುರಾತತ್ವ ಅಧ್ಯಯನಗಳ ಪ್ರಸ್ತುತತೆ

ಈ ದಶಕದಲ್ಲಿ ಚರಿತ್ರೆ ಕುರಿತ ಅಧ್ಯಯನಗಳು ವಿವಿಧ ಬಗೆಯಲ್ಲಿ ಪರಿಣಾಮಕಾರಿಯಾಗಿವೆ. ಆಗ ತಾನೇ ಭಾರತಕ್ಕೆ ದಾಪುಗಾಲು ಹಾಕಿದ ಸಬಾಲ್ಟರ್ನ್ ಅಧ್ಯಯನ ಹೆಚ್ಚು ಜನಪ್ರಿಯತೆ ಗಳಿಸಿದ್ದು ಈ ಅವಧಿಯಲ್ಲಿಯೇ. ಕರ್ನಾಟಕದಲ್ಲಿ ಈ ಕುರಿತ ಚಿಂತನೆಗಳು ಪ್ರಬಲವಾಗಿ ಬೆಳಕಿಗೆ ಬಂದುದು ಸ್ವಾತಂತ್ರ್ಯ ಪೂರ್ವ ಮತ್ತು ಆನಂತರದ ಘಟನೆಗಳ ಮೂಲಕ. ಹೀಗೆ ಆಧುನಿಕೋತ್ತರ ಅಧ್ಯಯನ ಕ್ರಮಗಳು ಚರಿತ್ರೆ ರಚನೆಯನ್ನು ಹೊಸ ಬಗೆಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದವು. ಈ ಹೊತ್ತಿಗಾಗಲೇ ಅಂತರ ಶಿಸ್ತೀಯ ಅಧ್ಯಯನಕ್ಕೆ ಹಾಸು ಹೊಕ್ಕಾದ ಪರಿಸರವನ್ನು ನಿರ್ಮಿಸಿದ್ದು, ಚರಿತ್ರೆಯ ಮಟ್ಟಿಗೆ ತೀರಾ ಪ್ರಸ್ತುತ. ಸಾಂಸ್ಕೃತಿಕ ಮತ್ತು ಜಾನಪದೀಯ ನೆಲೆಗಳಂತೆ ‘ಮೌಖಿಕ ಚರಿತ್ರೆ’ ರಚನೆಯಲ್ಲಿ ಪ್ರಗತಿಗೆ ಧಾವಿಸಿದ್ದು ಹೊಸ ಪ್ರಕ್ರಿಯೆ. ಈ ಎಲ್ಲ ಅಧ್ಯಯನ ಕ್ರಮಗಳು ಸೈದ್ಧಾಂತಿಕವಾಗಿ ವಿದೇಶಿ ಪ್ರಭಾವ, ಪ್ರೇರಣೆ ಪಡೆದಿದ್ದರೂ ಸ್ಥಳೀಯತೆಯ ಹುಡುಕಾಟ ವಾಸ್ತವವಾಗಿ ಆಯಾ ನೆಲೆಯಲ್ಲಿ ವಿಶ್ಲೇಷಿಸಿರುವುದು ಇಲ್ಲಿನ ಚಾರಿತ್ರಿಕ ಸತ್ಯಾಂಶಗಳನ್ನೇ (Facts).

ವಿಶ್ವವನ್ನೇ ಪರಿಸರದ ಕೇಂದ್ರವೆಂದು ಗಮನಿಸಿದ ಚರಿತ್ರೆಕಾರರು ಪ್ರತಿಯೊಂದು ಸಂಗತಿಯನ್ನು ಸೂಕ್ಷ್ಮ ಹಾಗೂ ವಿವೇಚನ ಪರವಾಗಿಸಿಕೊಂಡರು. ಜಾಗತೀಕರಣದ ಪ್ರಭಾವದಿಂದ ಮುಕ್ತ ವ್ಯಾಪಾರ, ಬಂಡವಾಳ ಹೂಡಿಕೆ – ಉತ್ಪಾದನೆ, ವಿತರಣೆ – ಅನುಭೋಗಗಳ ಮೂಲಕ ಖಾಸಗೀಕರಣಗೊಂಡ ಸಂಗತಿಗಳು ವಾಸ್ತವತೆಯನ್ನು ಸಾರುತ್ತವೆ. ಜನಸಾಮಾನ್ಯರ ಸ್ಥಿತಿ ಶೋಚನೀಯವಾಗಿದ್ದು, ತಮ್ಮ ಪರಂಪರೆ ಸಂಸ್ಕೃತಿಗಳನ್ನು ಹುಡುಕಾಡುವ ಹಿನ್ನೆಲೆಯಲ್ಲಿ ಶೋಧಿಸಬೇಕಾಗಿದೆ. ನವ ವಸಾಹತುಶಾಹಿ ಪರಿಣಾಮಗಳ ತಳಹದಿಯಲ್ಲಿ ಮೇಲಿನ ಸಂಗತಿಗಳು ದ್ವಂದ್ವರೂಪದಲ್ಲಿ ವಿಶ್ಲೇಷಣೆಗೊಳಪಡುವುದು ದುರದೃಷ್ಟ. ಹೀಗಾಗಿ ಆಧುನಿಕ ಚಿಂತನೆಗಳು ಸ್ಥಳೀಯತೆಯ ಹುಡುಕಾಟಕ್ಕಾಗಿ ಯೋಗ್ಯವಾದ ಪರಿಸರ ನಿರ್ಮಾಣ ಮಾಡಿಕೊಂಡಿದ್ದು – ಈ ಹಿನ್ನೆಲೆಯಲ್ಲಿ. ಇಲ್ಲಿ ಆಧುನಿಕತೆ, ಜಾಗತೀಕರಣ, ನವವಸಾಹತುಶಾಹಿ, ಆಧುನಿಕೋತ್ತರ ಲಕ್ಷಣಗಳನ್ನು ಸ್ಪಷ್ಟೀಕರಿಸುವಲ್ಲಿ ವಿದ್ವಾಂಸರ ಹೆಣಗಾಟವು ಮೆಚ್ಚತಕ್ಕ ಸಂಗತಿ.

ತೊಂಬತ್ತರ ದಶಕವು ವಿಶಿಷ್ಟ ರೀತಿಯ ಪರಿಣಾಮಗಳನ್ನು ಕಂಡಿದೆ. ಅದೇ ರೀತಿ, ಕಾರಣ ಸವಾಲುಗಳೊಂದಿಗೆ ತನ್ನ ಕಕ್ಷೆಯನ್ನು ಗಟ್ಟಿಗೊಳಿಸಿಕೊಳ್ಳಲು ಏನೆಲ್ಲಾ ಸಾಹಸಗಳನ್ನು ಕಂಡಿರುವುದುಂಟು. ಜಾಗತಿಕ ಮಟ್ಟದಲ್ಲಿ ಕೊಲ್ಲಿಯುದ್ಧವು (೧೯೯೧) ಇರಾಕ್‌ಅಮೆರಿಕಾಗಳ ನಡುವೆ ಸಂಭವಿಸಿತು. ಸದ್ದಾಂ ಹುಸೇನ್‌ ಮತ್ತು ಜಾರ್ಜ್‌ಬುಶ್‌ರು ಪ್ರತಿಕೂಲ ಪರಿಣಾಮಗಳನ್ನು ಎದುರಿಸಿದರು. ಇದನ್ನು ಮೂರನೇ ಜಗತ್ತಿನ ಯುದ್ಧವೆಂದು ಬಣ್ಣಿಸಿದರೂ ಎರಡೂ ರಾಷ್ಟ್ರಗಳ ನಡುವಿನ ಯುದ್ಧವೆಂಬುದು ವಾಸ್ತವ. ರಷ್ಯಾದಲ್ಲಿ ಸೊಸಿಯಲಿಸ್ಟ್‌ ಸೊವಿಯತ್‌ ರಿಪಬ್ಲಿಕ್‌ ಒಕ್ಕೂಟ (U.S.S.R) ಪತನವಾದುದು ಅಮೆರಿಕ ಜಾಗತಿಕ ಮಟ್ಟದಲ್ಲಿ ಹಿರಿಯಣ್ಣನಾಗಿ ಮೆರೆಯಲು (ಸೂಪರ್ ಪವರ್ ಕಂಟ್ರಿ) ನಾಂದಿಯಾಯಿತು. ಬಿಲ್‌ಕ್ಲಿಂಟನ್‌ರ ಅಧಿಕಾರವಧಿಯು ವಿಶ್ವದಲ್ಲಿ ಶಾಂತಿ, ಸಮನ್ವಯತೆಗೆ ಕರೆ; ಪ್ರಮುಖ ಸಂಗತಿಗಳಲ್ಲಿ ಜನಮನ ಗೆದ್ದ ನೆಲ್ಸನ್‌ ಮಂಡೇಲಾ ದಕ್ಷಿಣ ಆಫ್ರಿಕಾದ ಅಧ್ಯಕ್ಷನಾದುದು ಅಪೂರ್ವ ಘಟನೆಗಳಾಗಿವೆ. ೧೯೯೧ರ ಇಂಗ್ಲೆಂಡಿನ ರಾಜಕುಮಾರಿ ಡಯಾನಳ ದುರಂತ ಸಾವು ರಾಜವಂಶಗಳವನತಿಗೆ ಒಂದು ಉದಾಹರಣೆಯಾಗಿದೆ. ಭಾರತದ ಮಟ್ಟಿಗೆ ರಾಜೀವ್‌ಗಾಂಧಿ ಹತ್ಯೆ, ೧೯೯೨ ಡಿಸೆಂಬರ್ ೬ ರಂದು ನಡೆದ ಬಾಬರಿ ಮಸೀದಿ ನೆಲಸಮದ ಘಟನೆಯಿಂದ ಕೋಮು – ಗಲಭೆ ಭುಗಿಲೆದ್ದದ್ದು ಅವಿಸ್ಮರಣೀಯ. ಈ ಸಂದರ್ಭದಲ್ಲಿ ರಾಷ್ಟ್ರೀಯ ಭಾವೈಕ್ಯತೆ, ಧರ್ಮ ನಿರಪೇಕ್ಷಿತ ಕೃತಿ, ಲೇಖನಗಳು ವಿಪುಲವಾಗಿ ಪ್ರಕಟಗೊಂಡವು. ಸಾರ್ಕ್‌ನ (SARRC) ಉದಯ – ದಕ್ಷಿಣ ಏಷ್ಯಾದಲ್ಲಾದ ಸಾಂಸ್ಕೃತಿಕ ಒಡಂಬಡಿಕೆಗೆ ದ್ಯೋತಕವಾಯಿತು. ವಿಶ್ವದ ಸಾಂಸ್ಕೃತಿ ಕ ಹೆಬ್ಬಾಗಿಲಿಗೆ ಕನ್ನಡ ನಾಡಿನ ಕಲಾಸೌಂದರ್ಯ, ಸ್ಮಾರಕಗಳು ದ್ವಾರಪಾಲಕರಂತೆ ಗುರುತಿಸಲ್ಪಟ್ಟವು (ಯುನೆಸ್ಕೊ). ಕರ್ನಾಟಕದಲ್ಲಿ ವಸಾಹತುಶಾಹಿ ಪ್ರಭಾವದ ಹಿನ್ನೆಲೆಯಲ್ಲಿ ಜನ್ಮತಾಳಿದ ಇಲ್ಲಿನ ಸಂಘ – ಸಂಸ್ಥೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡಿದವು. ಇವುಗಳಲ್ಲದೆ, ಕರ್ನಾಟಕ ಇತಿಹಾಸ ಅಕಾಡೆಮಿ, ಕರ್ನಾಟಕ ಹಿಸ್ಟರಿ ಕಾಂಗ್ರೆಸ್‌ ಇತರ ಸಂಘ ಸಂಸ್ಥೆಗಳನ್ನು ಹೆಸರಿಸಬಹುದು.

ಮೇಲಿನ ಕೆಲವು ಘಟನೆಗಳು ಪುರಾತತ್ವಶಾಸ್ತ್ರದ ಮೇಲೆ ಪ್ರಭಾವಿಸಿರುವುದುಂಟು. ಭಾರತ ದೇಶದ ಧರ್ಮ, ನಾಗರೀಕತೆ ಮತ್ತು ಸಂಸ್ಕೃತಿಯ ಹುಡುಕಾಟದಲ್ಲಿ ಪ್ರಾಚೀನ ನೆಲೆಗಳ ಶೋಧ ಮತ್ತು ಅವುಗಳೊಂದಿಗಿನ ಭಾವ ಸಂಯೋಗವನ್ನು ಈ ಶಾಸ್ತ್ರ ಗುರುತಿಸುತ್ತದೆ. ಭಾರತದಲ್ಲಿ ಕರ್ನಾಟಕವು ಪುರಾತತ್ವ ನೆಲೆಗಳ ಕಣಜ. ಇಂಥವುಗಳ ಶೋಧ, ಸರ್ವೇಕ್ಷಣೆ ಮತ್ತು ಉತ್ಖನನ ಕಾರ್ಯಗಳು ನಡೆಯುತ್ತಿರುವುದು ಶ್ಲಾಘನೀಯ. ತೊಂಬತ್ತರ ದಶಕದಲ್ಲಿ ಪುರಾತತ್ವ ಶಾಸ್ತ್ರ ತನ್ನ ಕ್ಷಿತಿಜವನ್ನು ವಿಸ್ತರಿಸಿಕೊಂಡಿರುವುದು ಗಮನಾರ್ಹ.

ಪುರಾತತ್ವಶಾಸ್ತ್ರ ಕರ್ನಾಟಕದಲ್ಲಿ ತನ್ನ ಶಕ್ತಾನುಸಾರ ಪ್ರಗತಿ ಕಾಣಲು ಮುಂದಾಗಿದೆ. ಇದಕ್ಕೆ ಕಾರಣ ಪುರಾತತ್ವ ಪಂಡಿತರು. ಈ ಶಾಸ್ತ್ರವು ತನ್ನ ಶಾಖೆಗಳನ್ನು ಕರ್ನಾಟಕ ವಿಶ್ವವಿದ್ಯಾಲಯ – ಧಾರವಾಡ, ಕುವೆಂಪು ವಿಶ್ವವಿದ್ಯಾಲಯ – ಭದ್ರಾಜಲಾಶಯ, ಮೈಸೂರು ವಿಶ್ವವಿದ್ಯಾಲಯ ಮತ್ತು ಕನ್ನಡ ವಿಶ್ವವಿದ್ಯಾಲಯ – ಹಂಪಿಯಲ್ಲಿ ಸ್ಥಾಪಿಸಿಕೊಂಡಿದೆ. ಇವುಗಳಲ್ಲದೆ, ಕೇಂದ್ರ ಮತ್ತು ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಗಳ ಕಾರ್ಯವೈಖರಿಯನ್ನು ಗುರುತಿಸಬಹುದು.

ವೈಜ್ಞಾನಿಕ ಅಧ್ಯಯನಗಳ ಮೂಲಕ ಬೆಳೆದು ಬಂದ ಪುರಾತತ್ವಶಾಸ್ತ್ರಕ್ಕೆ ಗಟ್ಟಿ ನೆಲೆ ಒದಗಿಸುವುದರಲ್ಲಿ ಕರ್ನಾಟಕದವರ ಪಾತ್ರ ದೊಡ್ಡದು. ಡಾ.ಅ.ಸುಂದರ, ಡಾ. ಶ್ರೀನಿವಾಸ ಪಾಡಿಗಾರ, ಡಾ. ರವಿಕೋರಿ ಶೆಟ್ಟರ್, ಡಾ. ರಾಜಾರಾಮ ಹೆಗಡೆ, ಡಾ.ಕೆ.ಬಿ. ಶಿವತಾರಕ್‌, ಡಾ.ರು.ಮ. ಷಡಕ್ಷರಯ್ಯ, ಡಾ.ಎಚ್‌.ಆರ್. ರಘನಾಥ ಭಟ್ಟ, ಡಾ.ಎಸ್‌. ರಾಜಶೇಖರ, ಡಾ.ಎ.ವಿ. ನರಸಿಂಹಮೂರ್ತಿರ ಮತ್ತು ಪ್ರೊ. ಲಕ್ಷ್ಮಣ್‌ ತೆಲಗಾವಿ ಮೊದಲಾದವರನ್ನು ಸ್ಮರಿಸಬಹುದಾಗಿದೆ. ಇವರು ಪುರಾತತ್ವ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿರುವುದು ಶ್ಲಾಘನೀಯ. ಅಂತರಶಿಸ್ತೀಯ ಅಧ್ಯಯನಗಳಿಗೆ ಪುರಾತತ್ವ ಮುಖ್ಯ ನೆಲೆಯಾಗಿದ್ದು ಈ ದಶಕದ ವಿಶೇಷ. ಭೂಗೋಳ, ಭೂಗರ್ಭ, ರಸಾಯನ ಶಾಸ್ತ್ರಗಳಲ್ಲದೆ, ಜನಪದವು ಇದರೊಂದಿಗೆ ನಿಕಟ ಸಂಬಂಧ ಹೊಂದಿದೆ.

ಪುರಾತತ್ವ ಅಧ್ಯಯನದಲ್ಲಿ ಅನ್ವೇಷಣೆ ಮತ್ತು ಉತ್ಖನನಗಳು ಪ್ರಮುಖವಾದವು. ಈಗಾಗಲೇ ಕಾವೇರಿ, ತುಂಗಭದ್ರಾ, ಕೃಷ್ಣಾ, ಘಟಪ್ರಭಾ, ಮಲಪ್ರಭಾ ಮೊದಲಾದ ನದಿ ಕೊಳ್ಳಗಳ ಪುರಾತತ್ವ ನೆಲೆಗಳನ್ನು ಶೋಧಿಸಿ – ಅನ್ವೇಷಿಸಿ, ಉತ್ಖನನ ನಡೆಸಿರುವುದು ಸ್ವಾಗತಾರ್ಹ. ಅವುಗಳಲ್ಲಿ ಟಿ. ನರಸೀಪುರ, ವಡಂಗಾವ್‌ ಮಾಧವಪುರ, ಹಳ್ಳೂರು, ಪಿಕ್ಕಿಹಾಳ್‌, ತಲಕಾಡು, ಬನವಾಸಿ, ಹಂಪೆ ಮತ್ತು ಸನ್ನತಿ ಇತರ ಸ್ಥಳಗಳು ಪ್ರಮುಖವಾಗಿವೆ. ಇಂಥ ಅನೇಕ ನೆಲೆಗಳ ಶೋಧನೆ ಬಗ್ಗೆ ಇತಿಹಾಸ ಅಕಾಡೆಮಿ ಹೊರತಂದ ‘ಇತಿಹಾಸ ದರ್ಶನ’ದಲ್ಲಿ ಮಾಹಿತಿಯಿದೆ. ಇಲ್ಲಿ ಅಕಾಡೆಮಿಕ್‌ ಮತ್ತು ನಾನ್‌ ಅಕಾಡೆಮಿಕ್‌ ಮಾದರಿ ಬರವಣಿಗೆಗಳನ್ನು ಗುರುತಿಸಬಹುದು. ಶಿಲ್ಪ, ಶಾಸನ, ವೀರಗಲ್ಲು, ಮಾಸ್ತಿಕಲ್ಲು, ದೇವಾಲಯ, ಕೋಟೆ, ಬಾವಿ, ಕೆರೆ, ಕಟ್ಟೆ ಇತರ ಸಂಗತಿಗಳನ್ನು ಮೇಲಿನಂತೆ ಅಧ್ಯಯನ ಮಾಡಲಾಗಿದೆ. ಈ ಕುರಿತಂತೆ ದೇವಾಲಯ ಕೋಶ, ಕೋಟೆಗಳು, ಆಡಳಿತ ವಿಭಾಗಗಳು ಹೀಗೆ ಅಜ್ಞಾತವಾಗಿರುವ ದೃಶ್ಯಗಳನ್ನು ಜನಪದ ಪುರಾತತ್ವಶಾಸ್ತ್ರದ (Folk Archaeology) ಮೂಲಕ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಸಾಗರಾಧ್ಯಯನ ಪುರಾತತ್ವಶಾಸ್ತ್ರವು (Marine Archaeology) ಇತ್ತೀಚೆಗೆ ಜನಪ್ರಿಯವಾಗುತ್ತಿದೆ. ಭೂಗರ್ಭ ಪುರಾತತ್ವ ಶಾಸ್ತ್ರಗಳಲ್ಲಿ (Geo – Archaeology) ಸ್ಪರ್ಧೆಯಿಂದ ಅಧ್ಯಯನಗಳು ನಡೆಯುತ್ತವೆ. ಒಟ್ಟಾರೆ ಪುರಾತತ್ವ ಮತ್ತು ಚರಿತ್ರೆ ಕ್ಷೇತ್ರಗಳು ಕರ್ನಾಟಕದ ಮಟ್ಟಿಗೆ ಅಭೂತ ಪೂರ್ವ ಸಾಧನೆ ಮಾಡಿರುವುದಕ್ಕೆ ಪ್ರಕಟಣೆಗೊಂಡ ಕೃತಿಗಳೇ ಸಾಕ್ಷಿ.

ಸಂಕ್ರಮಣ ಕಾಲಘಟ್ಟ: ತೊಂಬತ್ತರ ದಶಕ

ಕರ್ನಾಟಕದಲ್ಲಿ ತೊಂಬತ್ತರ ದಶಕವು ಒಂದು ಬಗೆಯಲ್ಲಿ ಸಂಕ್ರಮಣದ ಕೊಂಡಿಯಂತಿತ್ತು. ಹಳೆಯ ವಿಧಾನಗಳಿಗೆ ವಿದಾಯ, ವಿನೂತನ ಶೈಲಿ – ವಿಧಾನಗಳಿಗೆ ದಾಪುಗಾಲು ಹಾಕುವುದು ಇಲ್ಲಿನ ಬರವಣಿಗೆ ವಿಶೇಷ..ಚರಿತ್ರೆಕಾರ ತನ್ನನ್ನು ತಾನು ಅರಿತು ಈ ನಾಡಿನ ಚರಿತ್ರೆ ರೂಪಿಸಿದ್ದು ಗಮನಾರ್ಹ. ಚರಿತ್ರೆಕಾರ ತನ್ನ ಅದಮ್ಯವಾದ ವಿದ್ವತ್ತನ್ನು ಗಳಿಸಿದರೆ ಸಾಲದು, ಅದರ ವಿನಿಯೋಗವಾದರೆ ಮಾತ್ರ ಸಾರ್ಥಕ. ಇಲ್ಲಿನ ಘಟನೆಗಳು ವಾಸ್ತವತೆಯ ಪರಧಿಯಲ್ಲಿ ಸಂಕ್ರಮಣ ಸ್ಥಿತಿಯನ್ನು ಪ್ರದರ್ಶಿಸಿವೆ. ಆ ಮೂಲಕ ಇಂದಿನ ಸಮುದಾಯಗಳಿಗೆ ಗತಕಾಲದ ಜನಜೀವನವನ್ನು ತಿಳಿಸುವಲ್ಲಿ ಅನ್ವಯಿಕ ಚರಿತ್ರೆಯ ಕೃಷಿ ನಡೆದಂತಿದೆ. ನೀತಿ ಪಾಠವನ್ನು ಬೋಧಿಸುವ, ತಪ್ಪುಗಳನ್ನು ತಿದ್ದಿಕೊಂಡು ಒಳ್ಳೆಯದನ್ನು ಸಾಧಿಸುವುದು ಇಲ್ಲಿನ ಪರಮ ಗುರಿ. ಹೀಗಾಗಿ ಸಣ್ಣ – ಪುಟ್ಟ ರಾಜಮನೆತನಗಳು, ಪಾಳೆಯಗಾರರು, ಸಾಮಂತನಾಯಕರ ಪ್ರಭುತ್ವನ್ನು ವಿಶ್ಲೇಷಿಸಲಾಗಿದೆ.

ಕರ್ನಾಟಕ ಚರಿತ್ರೆ ಮತ್ತು ಪುರಾತತ್ವ ಕ್ಷೇತ್ರಗಳಲ್ಲಿನ ನಡೆದ ಸಂಶೋಧನೆಗಳು, ಅಧ್ಯಯನಗಳು ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಕಾಲಕ್ಕೆ ಸೇರಿದಂಥವು. ಈ ಎಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ರಾಜಪ್ರಭುತ್ವಗಳ ಅಧ್ಯಯನ, ಸಾಮಂತ, ನಾಯಕ ಪಾಳೆಯಗಾರರ ಅಧ್ಯಯನ, ಕನ್ನಡನಾಡು – ನುಡಿ ಮತ್ತು ಸಂಸ್ಕೃತಿ ಅಧ್ಯಯನ, ಕಲೆಗಳ ಅಧ್ಯಯನ (ವಾಸ್ತು ಶಿಲ್ಪ, ಕಲೆ, ಸಂಗೀತ, ಕೋಟೆ, ಕೆರೆ, ಕಟ್ಟೆ ಇತ್ಯಾದಿ), ಸ್ವಾತಂತ್ರ್ಯ ಹೋರಾಟ, ಜೀವನ ಚರಿತ್ರೆ ಮತ್ತು ಇತ್ತೀಚಿನ ಚರಿತ್ರೆ ಬೆಳವಣಿಗೆ ಕುರಿತು ಬಂದ ಕೃತಿಗಳ ಅವಲೋಕನವನ್ನು ಸಮೀಕ್ಷಿಸಲಾಗಿದೆ. ರಾಜ ಪ್ರಭುತ್ವದ ಒಡೆಯನನ್ನು ಕುರಿತು ಕಾವ್ಯ ಹುಟ್ಟಬಹುದು. ಕಾವ್ಯದಲ್ಲಿ ಘಟನೆಗಿಂತ ದರ್ಶನ ಮುಖ್ಯ. ಈ ಹಿನ್ನೆಲೆಯಲ್ಲಿ ಕಾವ್ಯವನ್ನು ಅಧ್ಯಯನ ಮಾಡಬೇಕಾಗುತ್ತದೆ. ಚರಿತ್ರೆ ರಚನೆಯಲ್ಲಿ ಶಾಸನ ಘಟನೆಗೆ ಪೂರಕ, ನಿಷ್ಠೆಯಾಗಿರುತ್ತದೆ. ಘಟನೆಗಳೇ ಚರಿತ್ರೆಯಲ್ಲ, ಘಟನೆಗಳ ವಿಶ್ಲೇಷಣೆ ಚರಿತ್ರೆ. ಇಂಥಾ ಕೆಲವು ಸೂಕ್ಷ್ಮ ಸಂಗತಿಗಳನ್ನು ಗಂಭೀರವಾಗಿ ಪರಿಗಣಿಸಿರುವುದು ಇಲ್ಲಿ ಕಂಡುಬರುತ್ತದೆ. ಜಾಗತೀಕರಣ ಹಿನ್ನೆಲೆಯಲ್ಲಿ ಕನ್ನಡದಲ್ಲಿನ ಮಾನವಿಕಗಳು ಪಶ್ಚಿಮದ ದಾರಿಯಿಂದ ಮುಕ್ತವಾಗಿ ದೇಶೀಯತೆ ಮೂಲಕ ಅರಳಬೇಕೆಂಬ ಆಶಯಗಳನ್ನು ಹೊಂದಿವೆ. ಆಯಾ ಪ್ರಾದೇಶಿಕತೆಗೆ ತಕ್ಕಂತೆ ಚರಿತ್ರೆ ಮತ್ತು ಪುರಾತತ್ವ ಕೃತಿಗಳು ಜನ ಮನ್ನಣೆ ಪಡೆದಿರುವುದು ವಾಸ್ತವ.

ರಾಜ ಪ್ರಭುತ್ವ ಕುರಿತ ಅಧ್ಯಯನ ಕೃತಿಗಳು

ಕರ್ನಾಟಕದ ಕ್ಷೇತ್ರವು ನೆಲ – ಜಲ, ಸಸ್ಯದಂತೆ ಹಲವು ಜನಸಮುದಾಯಗಳ ಆವಾಸಕೇಂದ್ರವು ಹೌದು. ಸಂಸ್ಕೃತಿಯ ಹಿನ್ನೆಲೆಯಲ್ಲಿ ಮಾನವ ಈ ಹಂತಕ್ಕೆ ಬರುವ ಪೂರ್ವದಲ್ಲಿ ಗೆಡ್ಡೆ – ಗೆಣಸು ತಿಂದು, ಬೇಟೆಮಾಡಿ, ಪಶುಪಾಲನೆ ಮಾಡುತ್ತಿದ್ದ ಹಂತಗಳನ್ನು ದಾಟಿದ್ದ. ಹೀಗಾಗಿ ಸಂಘಟನೆ ಮನೋಭಾವ ಬೆಳೆದು ರಾಜ್ಯಾಳ್ವಿಕೆ ಮಾಡಿದ್ದು ಸ್ಮರಣೀಯ. ಬನವಾಸಿ ಕದಂಬರು, ತಲಕಾಡಿನ ಗಂಗರು, ಬಾದಾಮಿ ಮತ್ತು ಕಲ್ಯಾಣದ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳ, ಕುಮ್ಮಟ ದುರ್ಗದ ಅರಸರು, ವಿಜಯನಗರ ಸಾಮ್ರಾಜ್ಯ, ಪಾಳೆಯಗಾರರು ಮತ್ತು ಮೈಸೂರು ಸಂಸ್ಥಾನವನ್ನು ಕುರಿತ ಕೃತಿಗಳೇ ಹೆಚ್ಚು. ಕನ್ನಡ ಸಂಸ್ಕೃತಿಗೆ ನಾಂದಿ ಹಾಡಿದ್ದು ಬನವಾಸಿ ಕದಂಬರು. ಆ ಮನೆತನದ ಶಾಖೆಗಳು ಹಲವು. ಅವುಗಳಲ್ಲಿ ಹಾನಗಲ್ಲು ಒಂದು. ಇದರ ಬಗ್ಗೆ ಡಾ. ಚೆನ್ನಕ್ಕ ಪಾವಟೆಯವರು ‘ಹಾನಗಲ್ಲು ಕದಂಬರು’ (೧೯೯೮) ಎಂಬ ಕೃತಿ ರಚಿಸಿರುವರು. ಹಾನಗಲ್ಲು ಕದಂಬರ ಬಗ್ಗೆ ವಿಪುಲ ವಿವರಗಳನ್ನು ತಿಳಿಸುವ ಕೃತಿಯಿದು. ಖಚಿತ, ವಾಸ್ತವ ನೆಲೆಗಟ್ಟಿನಲ್ಲಿ ವಿಶ್ಲೇಷಿಸಿದ್ದು, ಸಮಗ್ರ ಅಧ್ಯಯನಕ್ಕೆ ಸಮನಾದದು ಈ ಕೃತಿ. ಮಧ್ಯಕಾಲದಲ್ಲಿ ರಾಜಪ್ರಭುತ್ವ ನಡೆಸಿದವರು ಮಾಂಡಲಿಕರಾಗಿ, ಸ್ವತಂತ್ರ ರಾಜ್ಯ ಕಟ್ಟಿದ್ದು ಸ್ಪಷ್ಟ. ಹಾನಗಲ್ಲು ಕದಂಬರ ರಾಜಧಾನಿ ಕೇಂದ್ರ. ಕ್ರಿ.ಶ.ಸು. ೯೭೦ ರಿಂದ ೧೩೫೦ ರವರೆಗೆ (೩೮೦ ವರ್ಷ) ಆಳ್ವಿಕೆಯ ಭವ್ಯತೆಯನ್ನು ಸಾರುತ್ತದೆ. ಕೋಟೆ, ದೇವಾಲಯ, ವೀರಗಲ್ಲು, ಶಾಸನ ಮೊದಲಾದವುಗಳನ್ನು ನಿರ್ಮಿಸಿದ ಅರಸರ ಔದಾರ್ಯವನ್ನು ಲೇಖಕರು ಬಣ್ಣಿಸಿದ್ದಾರೆ. ಕಾಲಾಂತರದಲ್ಲಿ ಆವಾಜ್ಞೆಗೊಳಗಾದ ಇಂಥವುಗಳ ಬಗ್ಗೆ ಒಲವು ವಿಕಸಿತಗೊಂಡಿದ್ದನ್ನು ಗುರುತಿಸುವ ಲೇಖಕರ ಆಶಯ, ಅಂತರ ಶಿಸ್ತೀಯ ನಿಲುವುಗಳನ್ನು ಮೆಚ್ಚಬಹುದಾಗಿದೆ.

ಪ್ರಸ್ತುತ ಕೃತಿಯಲ್ಲಿ ೧೪ ಆಧ್ಯಾಯಗಳಿದ್ದು, ಕದಂಬರ ವಿವಿಧ ಮನೆತನಗಳು, ಆಡಳಿತ ವ್ಯಾಪ್ತಿ, ಸ್ಥಳನಾಮ ಅಧ್ಯಯನ, ಹಾನಗಲ್ಲು ಕದಂಬರು, ಆಳಿದ ರಾಜರು, ಆಡಳಿತ, ಧಾರ್ಮಿಕ, ಆರ್ಥಿಕ ವ್ಯವಸ್ಥೆ, ಕಟ್ಟಿದ ದೇವಾಲಯಗಳು, ಸಾಂಸ್ಕೃತಿಕ ಪರಂಪರೆ, ಆಕಾಲದ ಸಾಹಿತ್ಯ ಕೃಷಿ, ಇತರ ಐತಿಹಾಸಿಕ ಸ್ಥಳಗಳ ಅವಲೋಕನವಿದೆ. ಈ ಹೊತ್ತಿಗೆ ಪ್ರಕಟಿತ ಕೃತಿಗಳ ಅವಲೋಕನ ಅಗತ್ಯವಿತ್ತು. ಅಲ್ಲಲ್ಲಿ ಕೊರತೆಯನ್ನು ನೀಗಿಸಲು ಧಾರವಾಡ ಜಿಲ್ಲೆಯ ಗಾಜೆಟಿಯರ್ ಪ್ರಮುಖ ಪಾತ್ರ ವಹಿಸುತ್ತಿತ್ತು. ಲೇಖಕರು ಇತ್ತ ಗಮನ ಹರಿಸದೆ, ಕ್ಷೇತ್ರಾಧ್ಯಯನಕ್ಕೆ ಒತ್ತು ಕೊಟ್ಟಿದ್ದಾರೆ. ಒಟ್ಟಾರೆ ಕದಂಬರ ಬಗ್ಗೆ ಬಂದ ಕೃತಿಗಳಲ್ಲಿ ಇದು ಪ್ರಮುಖವಾದುದು. ಇದೇ ರೀತಿ ಡಾ.ದೇವರ ಕೊಂಡಾರೆಡ್ಡಿಯವರು ‘ತಲಕಾಡಿನ ಗಂಗರ ದೇವಾಲಯಗಳು’ ಕುರಿತ ಸಂಶೋಧನ ಪ್ರಬಂಧವನ್ನು ಪ್ರಕಟಿಸಿದ್ದಾರೆ (೧೯೯೫). ದೇವಾಲಯ, ಶೈಲಿ, ವಿಧಾನಗಳನ್ನು ಇಲ್ಲಿ ಚರ್ಚಿಸಿದ್ದಾರೆ.

ರಾಜಪ್ರಭುತ್ವದಲ್ಲಿ ವಿಜಯನಗರದ ಪಾತ್ರವು ಪರಿಗಣಾನಾರ್ಹ. ವಿಜಯನಗರ ಕಾಲದ ಅಧ್ಯಯನ ಕುರಿತಂತೆ ಹಲವು ಕೃತಿಗಳು ಪ್ರಕಟಗೊಂಡಿವೆ. ಅವುಗಳ ಪೈಕಿ ರಾಬರ್ಟಸಿವೆಲನ ದಿ ಫಾರಗಟನ್‌ ಎಂಪೈರ್: ವಿಜಯನಗರ ಎಂಬ ಕೃತಿ ಪ್ರಮುಖವಾದುದು. ಸದಾನಂದ ಕನವಳ್ಳಿಯವರು (೧೯೯೨) ಮರೆತು ಹೋದ ಮಹಾ ಸಾಮ್ರಾಜ್ಯ: ವಿಜಯನಗರ ವೆಂದು ಇದನ್ನು ಅನುವಾದಿಸಿದ್ದಾರೆ. ಇಡೀ ವಿಜಯನಗರದ ಬಗ್ಗೆ ಗಟ್ಟಿಯಾಗಿ ನಿಲ್ಲುವ, ಆಕರ ಗ್ರಂಥವಿದು. ಅನೇಕ ಸಂಗತಿಗಳ ವಿಶ್ಲೇಷಣೆ ಇಲ್ಲಿದ್ದು, ತಪ್ಪುಗಳ ಸರಮಾಲೆಯು ರಾಬರ್ಟಸಿವೆಲ್‌ನನ್ನು ಪ್ರಶ್ನಿಸುವಂಥವು ಆಗಿವೆ.

ಮಧ್ಯಕಾಲೀನ ಭಾರತೀಯ ಚರಿತ್ರೆಯಲ್ಲಿ ಮುಸ್ಲಿಮರ ಪ್ರಭುತ್ವವು ನಿರ್ಣಾಯಕವಾದುದು. ಇಂಥಾ ರೋಚಕ ಪುಟಗಳಲ್ಲಿ ವಿಜಾಪುರದ ಆದಿಲಶಾಹಿಗಳ ಚರಿತ್ರೆ ಪ್ರಕಟಗೊಂಡಿದ್ದು ಹೆಮ್ಮೆಯ ಸಂಗತಿ. ಈ ಪೈಕಿ ಅನುವಾದ ಕೃತಿಯಾದ ಬುಸಾತಿನೆ ಸಲಾತೀನ ಉತ್ತಮ ಉದಾಹರಣೆ. ಇದರ ಮೂಲ ಕರ್ತೃ (ಪರ್ಶಿಯನ್‌) ಮಹಮ್ಮದ ಇಬ್ರಾಹಿಮ ಜುಬೇರಿ. ಮರಾಠಿಗೆ ನರಸಿಂಹ ವಿಠಲಪಾರಸನೀಸ ಅನುವಾದಿಸಿದರೆ, ಮರಾಠಿಯಿಂದ ಕನ್ನಡಕ್ಕೆ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಮಾಡಿದ್ದು, ಕನ್ನಡ ವಿ.ವಿ. ಪ್ರಕಟಿಸಿದೆ (೧೯೯೯).

ಈ ರಾಜ್ಯವು ೧೪೮೯ – ೧೬೮೯ ರವರೆಗಿತ್ತು. ೮ ಜನ ಬಾದಶಹರು ಇಲ್ಲಿ ಆಳ್ವಿಕೆ ನಡೆಸಿರುವರು. ಸಾಹಿತ್ಯ ಸಂಗೀತ, ಕಲೆ, ವಾಸ್ತುಶಿಲ್ಪ, ಧರ್ಮ ಹೀಗೆ ಅನೇಕ ಸಂಗತಿಗಳು ಅನಾವರಣಗೊಂಡಿರುವುದು ಈ ಕಾಲಘಟ್ಟಕ್ಕೆ ಕೈಗನ್ನಡಿಯಂತಿದೆ ಪ್ರಸ್ತು ಕೃತಿ. ತನಗಿಂತ ಮೊದಲು ರಚನೆಗೊಂಡ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಕೃತಿ ರಚಿಸಿದ್ದಾನೆ ಜುಬೇರಿ. ಲೇಖಕ ಮಹಮ್ಮದ ಇಬ್ರಾಹಿಮ ಜುಬೇರಿಯು ಮೂಲದಲ್ಲಿ ವಿಜಾಪುರದವರನು. ಈ ಕೃತಿ ಪರ್ಶಿಯನ್‌ ಭಾಷೆಯಲ್ಲಿ ರಚನೆಯಾಗಿ ಮರಾಠಿಗೆ ನಂತರ ಕನ್ನಡಕ್ಕೆ ಅನುವಾದಗೊಂಡದ್ದು ಚೌಚಿತ್ಯವೇ ಸರಿ.

ಆದಿಲ ಶಾಹಿಗಳ ಸು.೧೪೦ ವರ್ಷಗಳ ಇತಿಹಾಸವು ಇಲ್ಲಿ ಅನಾವರಣಗೊಂಡಿದೆ. ಕೃತಿಕಾರ ಮುಸ್ಲಿಮನಾಗಿದ್ದು, ತನ್ನ ಗೋತ್ರದ ಅರಸನ ಗುಣಗಾನವು ಇಲ್ಲಿ ಮನಮೋಹಕವೆನಿಸಿದೆ. ಅಸಹಜ ವರ್ಣನೆಗೆ ಬಲಿಯಾದ ಜುಬೇರಿ ವಾಸ್ತವ ದೊಡನೆ ತಾಕಲಾಟಗಳನ್ನು ಸೃಷ್ಟಿಸಿರುವನು. ಜುಬೇರಿ ಮನೆತನ ಪೈಗಂಬರರ ಕಾಲದಷ್ಟು ಹಳೆಯದು. ಇವರಿಗೆ ಎಲ್ಲೋ ಒಂದೆಡೆ ನಂಟಿದ್ದಂತಿದೆ. ಧಾರ್ಮಿಕ ನೆಲೆಯಲ್ಲಿ ಹೆಣೆದ ಚರಿತ್ರೆ ಕಥಾಸ್ವರೂಪವನ್ನು ಹೋಲುತ್ತದೆಂಬುದು ಸ್ಪಷ್ಟ. ವಿಜಯನಗರದೊಂದಿಗೆ ಇಲ್ಲಿನ ಸಂಗತಿಗಳು ತಳಕು ಹಾಕಿಕೊಂಡಿವೆ.

ರಾಮರಾಜನೊಂದಿಗೆ ಯುದ್ಧ ಮಾಡಿದ ಆದಿಲಶಾಹಿ ಸುಲ್ತಾನರ ವಿವರ ಇಲ್ಲಿದೆ. ಲೇಖಕ ತಾಳಿಕೋಟೆ ಯುದ್ಧವನ್ನು ಹಿಂದೂ – ಮುಸ್ಲಿಮರ ನಡುವೆ ನಡೆದ ಯುದ್ಧವೆಂದು ತಿಳಿಸಿರುವುದು ವಿಷಾದನೀಯ. ಎರಡು ರಾಜ್ಯಗಳ, ಇಬ್ಬರು ಅರಸರ ನಡುವಿನ ಯುದ್ಧವೆಂದು ತಿಳಿಸಿದ್ದರೆ ಸಮಂಜಸವಾಗುತ್ತಿತ್ತು. ರಾಮರಾಜನ ತಲೆ ಕಡಿದು ಪ್ರದರ್ಶಿಸಿದಾಗ ಹಿಂದೂ ಸೈನಿಕರು ಹೆದರಿ ಒಡದಿದ್ದರೆ ಯುದ್ಧ ಸಾಗಿ ವಿಜನಯನಗರಕ್ಕೆ ಗೆಲುವಾಗುವ ಸಾಧ್ಯತೆಯಿತ್ತು. ಆ ಹೊತ್ತಿಗಾಗಲೇ ಮುಸ್ಲಿಂ ಅರಸರು ಸೋಲುತ್ತೇವೆಂಬ ಭೀತಿಯಿಂದಲೇ ಯುದ್ದ ರಂಗ ಪ್ರವೇಶಿಸಿದ್ದರೆಂಬುದು ಲೇಖಕರ ಅಭಿಪ್ರಾಯ. ಹೀಗಾಗಿ ತಾಳಿಕೋಟೆ ಯುದ್ಧದಲ್ಲಿ ಹಿಂದೂಗಳ ಹತ್ಯೆ (ಸೈನಿಕ) ಗುಡ್ಡದ ರಾಶಿಯಂತೆ ಬಿದ್ದ ಶವಗಳು ಕಣ್ಣು ಕುಕ್ಕುತ್ತಿದ್ದವು. ಇವನು ಬೇಡರ ಸೈನ್ಯ ಮತ್ತು ಶಹಾಪುರ, ಸುರಪುರ ಅರಸರನ್ನು ತಿಳಿಸುತ್ತಾನೆ. ಯಾವುದೇ ರಾಜ ಪ್ರಭುತ್ವದ ಏಳು ಬೀಳುಗಳ ಚಿತ್ರಣವನ್ನು ಕಾಣಲು ಇಂಥ ಕೃತಿ ಮಾದರಿ ಮತ್ತಿಉ ಉದಾಹರಣೆ.

‘ಬೀಳಗಿ ಅರಸು ಮನೆತನ’ (೧೯೯೫) ಕೃತಿಯನ್ನು ಡಾ.ಎಚ್‌.ಆರ್. ರಘುನಾಥ ಭಟ್ಟ ಮತ್ತು ಡಾ.ಎಂ.ಎಂ. ಕಲಬುರ್ಗಿಯವರು ಸಂಪಾದಿಸಿದ್ದಾರೆ. ಚರಿತ್ರೆ ರಚನೆಗೆ ಆಕರಗಳು ಅತ್ಯಗತ್ಯ. ಇಂಥ ಆಕರಗಳನ್ನು ಸೃಷ್ಟಿಸುವುದಕ್ಕಿಂತ ಲಭ್ಯತೆ ಇರುವುದನ್ನು ಗಮನಿಸಿ – ಸಂಗ್ರಹಿಸಿ ಇಲ್ಲಿ ವಿಶ್ಲೇಷಿಸಲಾಗಿದೆ. ಕೈಫಿಯತ್ತುಗಳಾಗಲಿ, ಒಖೈರುಗಳಾಗಲಿ, ವಂಶಾವಳಿ, ಕಡತ, ಹಸ್ತಪ್ರತಿ – ಹೀಗೆ ಯಾವುದೇ ಆಕರವು ಚರಿತ್ರೆಯ ಪರಿಧಿಗೆ ಒಳಪಡುತ್ತದೆ.ಇದನ್ನು ಜಾಗರೂಕತೆಯಿಂದ ಬಳಸಿಕೊಳ್ಳುವುದು ಚರಿತ್ರೆಕಾರನಿಗೊಂದು ಸವಾಲು. ಇಂಥ ಸಾಲಿಗೆ ಬೀಳಗಿ ಅರಸು ಮನೆತನ ಸೇರುತ್ತದೆ. ವಿವಿಧ ಲೇಖಕರು ಬರೆದಿರುವ ಲೇಖನಗಳನ್ನಿಲ್ಲಿ ಸಂಗ್ರಹಿಸಲಾಗಿದೆ. ಪ್ರಾತಿನಿಧಿಕ ಸಂಗತಿ, ನಿಲುವುಗಳು ಒಂದೇ ಬಿಗಿಯಾದ ಕ್ರಮವನ್ನು ಚರಿತ್ರೆಯ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಸಾಹಸ ಮಾಡಿದಂತಿದೆ. ಆದರೂ ರಾಜಮನೆತನದ ಚೌಕಟ್ಟಿನಲ್ಲಿ ನಿರೂಪಿಸಬೇಕೆಂಬ ಅಭಿಲಾಷೆಯನ್ನು ಅಲ್ಲಿಲ್ಲಿ ನಿಸ್ಸಾಹಯಕರಾಗಿ ತಿಳಿಸಿದ್ದಾರೆ.

ಕಿರು ಅರಸು ಮನೆತನ ಮತ್ತು ಜನಾಂಗೀಯ ಅಧ್ಯಯನ ಕೃತಿಗಳು

ಕರ್ನಾಟಕವು ನೆಲ, ಜಲ, ಸಸ್ಯ ಹೀಗೆ ಪ್ರಾಕೃತಿಕ, ಕಲಾ ಸೌಂದರ್ಯಗಳ ನಡುವೆ ಮಾನವನ ಅಭ್ಯುದಯದ ನೆಲೆಗಳನ್ನು ತನ್ನೋಡಲಲ್ಲಿ ಗರ್ಭೀಕರಿಸಿಕೊಂಡಿದೆ. ಜನರ ದೈನಂದಿನ ಬದುಕು ವರ್ತಮಾನದ ಚರಿತ್ರೆ ಆವಾಗುತ್ತದೆ. ಆಳಿದ, ಅವಸಾನ ಹೊಂದಿದ ಅರಸು ಮನೆತನಗಳು ಹಲವು. ಕೋಟೆ, ಕೊತ್ತಲು, ಅರಮನೆ ಇತರ ಭಗ್ನಗೊಂಡ ಅವಶೆಷಗಳು ಅಂಥ ಚರಿತ್ರೆಗೆ ಸಾಕ್ಷಿ. ಇವು ಭವ್ಯತೆಯನ್ನು ಸಾರುವ ಸಂಕೇತಗಳು. ಕರ್ನಾಟಕದಲ್ಲಿ ಇಂಥ ಕಿರು ಅರಸು ಮನೆತನಗಳು (ರಾಜ್ಯ, ಸಂಸ್ಥಾನ, ಮನೆತನ ಇತ್ಯಾದಿ) ಕಂಡು ಬರುತ್ತವೆ. ಇವುಗಳ ಅಧ್ಯಯನ ಅಲ್ಲಲ್ಲಿ ನಡೆದಿದ್ದು, ತಲಸ್ಫರ್ಶಿ ಅಧ್ಯಯನಕ್ಕೆ ಅವಕಾಶಗಳಿವೆ. ರಾಜಮನೆತನಗಳ ಚರಿತ್ರೆಯು ಪ್ರಜಾಪ್ರಭುತ್ವಕ್ಕೆ ತೀರಾ ಪ್ರಸ್ತುತ. ಸಮಕಾಲೀನ ಒತ್ತಡಗಳಿಗೆ ಮಣಿದ ಚರಿತ್ರೆಕಾರ ಗತವನ್ನು ಅವಲೋಕಿಸುವಾಗ ಎದುರಾಗುವ ಸಮಸ್ಯೆಗಳು ಹಲವು. ಅವುಗಳಲ್ಲಿ ರಾಜಮನೆತನ, ಘಟನೆ, ಕಾಳಗ, ಒಪ್ಪಂದ ಹೀಗೆ ಆಧುನಿಕತೆಯ ಕನ್ನಡಿಯಲ್ಲಿ ಪ್ರಾಚೀನ ಕಥೆಯನ್ನು ನೋಡುವ ವೈಜ್ಞಾನಿಕ ದೃಷ್ಟಿಯು ಇಲ್ಲಿ ಪರಿಗಣನಾರ್ಹ.

ಗೋವಿಂದಮೂರ್ತಿ ದೇಸಾಯಿಯವರ (೧೯೯೯) ‘ಸವಣೂರು ನವಾಬರು’ ಎಂಬ ಕೃತಿ ನವಾಬರ ಚರಿತ್ರೆ ಕ್ಷೇತ್ರಕ್ಕೊಂದು ಮೈಲಿಗಲ್ಲು. ಅಲಕ್ಷ್ಯಕ್ಕೊಳಗಾದ ರಾಜಮನೆತನಗಳ ಅದು ಮುಸ್ಲಿಂ ರಾಜಮನೆತನದ ಇತಿಹಾಸ ರಚನೆಯೆಂದರೆ ಕುರುಡನಿಗೆ ಕಣ್ಣು ಬಂದಂತೆ. ಹಿಂದೂ ರಾಜಪ್ರಭುತ್ವಕ್ಕಿಂತ ನವಾಬರ ಆದರ್ಶಗಳು, ರಾಜಕೀಯ ಏಳು – ಬೀಳುಗಳ ಚಿತ್ರಣವು ಅಲ್ಲಲ್ಲಿ ನೈಜ ತೆಯನ್ನು ವಿಶ್ಲೇಷಿಸುವಲ್ಲಿ ಲೇಖಕರ ಸಾಧನೆ ಪ್ರಶಂಸನಾರ್ಹ. ಸವಣೂರು ಒಂದು ಸಾಮಾನ್ಯ ಪಟ್ಟಣ. ಆ ಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ಆಳಿದ ನವಾಬರು ಕನ್ನಡ ಕಲೆ, ಸಾಹಿತ್ಯ – ಸಂಗೀತ ಕ್ಷೇತ್ರಗಳಿಗೆ ನೀಡಿದ ಕೊಡುಗೆಗಳು ಅವಿಸ್ಮರಣೀಯ. ಈ ಹಿನ್ನೆಲೆಯಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಚಿತ್ರಣವನ್ನು ಈ ಕೃತಿ ಅನಾವರಣಗೊಳಿಸುತ್ತದೆ.

ಇತ್ತೀಚೆಗೆ ಕನ್ನಡ ವಿಶ್ವವಿದ್ಯಾಲಯ ಹಮ್ಮಿಕೊಂಡ ಮಹತ್ತರ ಯೋಜನೆಗಳಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿದ್ದ ಅರಸು ಮನೆತನಗಳ ಕೃತಿಗಳನ್ನು ಪ್ರಕಟಿಸುವುದು ಒಂದಾಗಿತ್ತು. ವಿಶೇಷವೆಂಧರೆ ಮೊದಲು ವಿಚಾರ ಸಂಕಿರಣಗಳನ್ನು ಏರ್ಪಡಿಸಿ, ಮಂಡಿಸಿದ ಪ್ರಬಂಧಗಳನ್ನು ಪರಿಷ್ಕರಿಸಿ ಪ್ರಕಟಿಸಿದ್ದು. ಸಬಾಲ್ಟರ್ನ್, ಪ್ರಾದೇಶಿಕ, ಸ್ಥಳೀಯ, ಮೌಖಿಕ – ಚರಿತ್ರೆಯ ಅಧ್ಯಯನದ ಫಲಿತಾಂಶಗಳಲ್ಲಿ ಪ್ರಭಾವಿಸಿವೆ. ಈಗಾಗಲೇ ಕರ್ನಾಟಕದ ಪಾಳೆಯಗಾರರು, ಇತರ ಸಣ್ಣ – ಪುಟ್ಟ ಅರಸರ ಬಗೆಗೆ ಕೃತಿ – ಲೇಖನಗಳು ಪ್ರಕಟವಾಗಿವೆ. ನೂತನ ಶೈಲಿ, ವಿಧಾನ, ಅಧ್ಯಯನದ ಬಗೆಗಳನ್ನು ಇಲ್ಲಿ ಕಾಣಬಹುದು. ‘ತುಳು ಕರ್ನಾಟಕ ಅರಸು ಮನೆತನಗಳು’ – ೧, ಸಂಪಾದಕರು ಹೆರಂಜೆ ಕೃಷ್ಣಭಟ್ಟ ಮತ್ತು ಡಾ.ಎಸ್‌.ಡಿ. ಶೆಟ್ಟಿ (೨೦೦೦). ‘ದಕ್ಷಿಣ ಕರ್ನಾಟಕದ ಅರಸು ಮನೆತನಗಳು’(೨೦೦೦) ಡಾ. ವಸುಮಳಲಿ ಇದರ ಸಂಪಾದಕರು. ಮೂರನೆಯದು, ‘ಮಲೆ ಕರ್ನಾಟಕ ಅರಸು ಮನೆತನಗಳು ’ (೨೦೦೧) ಡಾ. ರಾಜಾರಾಮ ಹೆಗಡೆ ಮತ್ತು ಅಶೋಕ ಶೆಟ್ಟರ್ ಇದರ ಸಂಪಾದಕರು. ಈ ಮೂರು ಕೃತಿಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಸ್ಥಳೀಯ ಪ್ರಭುಗಳ ಆಳ್ವಿಕೆಯನ್ನು ತಿಳಿಸುತ್ತವೆ.

‘ತುಳು ಕರ್ನಾಟಕ’ದಲ್ಲಿ ಕರಾವಳಿ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಆಳಿದ ಭೈರರು, ಬಾಣರು, ಕದಂಬರು, ಆಳುಪ ಮೊದಲಾದವರ ವಿವರಗಳಿವೆ. ‘ಮಲೆ (ನಾಡು) ಕರ್ನಾಟಕ’ದಲ್ಲಿ ಕೆಳದಿ, ತರೀಕೆರೆ, ಬೇಲೂರು, ಬಸವಾಪಟ್ಟಣ, ಬಾಣವಾರ, ಗೇರುಸೊಪ್ಪ, ಹಾಲೇರಿ ಮೊದಲಾದ ಸ್ಥಳಗಳ ಚರಿತ್ರೆ ಮತ್ತು ಸಂಸ್ಕೃತಿ ಅಧ್ಯಯನ ಇಲ್ಲಿದೆ. ನಾಯಕ ಮನೆತನಗಳಲ್ಲದೆ, ಇತರ ಅರಸು ಮನೆತನಗಳ ಚರಿತ್ರೆ ಇಲ್ಲಿ ದಾಖಲಾಗಿದ್ದು ನಿಜ. ವಿಶ್ಲೇಷಣಾಕ್ರಮ, ಅಧ್ಯಯನ ವಿಧಾನಗಳು ಪರಿಣಾಮಕಾರಿಯಾಗಿವೆ. ಮೂರನೆಯದು. ‘ದಕ್ಷಿಣ ಕರ್ನಾಟಕ’ದ ಅರಸು ಮನೆತನಗಳ ಚರಿತ್ರೆ. ಪೂರ್ತ ಪಾಳೆಯಗಾರರ ಚರಿತ್ರೆ ಎಂಬ ಮಾನ ದಂಡಕ್ಕೆ ಪಾತ್ರವಾಗಿದೆ ಈ ಕೃತಿ. ಚಿತ್ರದುರ್ಗ, ನಿಡಗಲ್ಲು, ಹರತಿ ಕೋಟೆ, ನಾಯಕನ ಹಟ್ಟಿ, ಗುಮ್ಮನಾಯಕನ ಪಾಳ್ಯ, ಹಾಗಲವಾಡಿ, ಮಧುಗಿರಿ, ಯಲಹಂಕ – ಹೀಗೆ ಅನೇಕ ಮನೆತನಗಳು ವಿಜಯನಗರೋತ್ತರದಲ್ಲಿ ತಲೆಎತ್ತಿ ಮೆರೆದ ಘಟನೆಗಳ ವಿವರಗಳು ಗಮನಾರ್ಹವಾಗಿವೆ. ಹೊಸದಾದ ಸಂಗತಿಗಳನ್ನು ತಿಳಿಸುವ ಪ್ರಯತ್ನ ಇಲ್ಲಿದೆ. ಪಾಳೆಯಗಾರರೆಂದರೆ ಕಟುಕರು, ಕ್ರೂರಿಗಳು ಮತ್ತು ಊಳಿಗಮಾನ್ಯ ದೊರೆಗಳೆಂಬ ನೀಚಾರ್ಥವನ್ನು ಮೀರಿದ ಅಧ್ಯಯನಗಳಿಲ್ಲಿ ಹೊಸ ಬಗೆಯವು. ಪ್ರತಿಯೊಬ್ಬ ಲೇಖಕರ ಸಾಧನೆ ಇಲ್ಲಿ ಶ್ಲಾಘನ ಈಯ. ಸಮಕಾಲೀನ ಸಮಾಜಕ್ಕೆ ಒಪ್ಪುವಂತ ವಿವರಗಳು ಈ ಕೃತಿಗಳಲ್ಲಿ ಮೇಳೈಸಿವೆ. ಹೀಗೆ ಚರಿತ್ರೆ ನೆಲೆಯಲ್ಲಿ ಜನಾಂಗೀಯ ಅಧ್ಯಯನಗಳು ನಡೆದಿವೆ. ಈ ಪೈಕಿ ‘ಮೈಸೂರು ಸಂಸ್ಥಾನದ ಕ್ರೈಸ್ತರ ಇತಿಹಾಸ’ವನ್ನು ಫಾ. ದಯಾನಂದ ಪ್ರಭು (೧೯೯೪) ರಚಿಸಿದ್ದಾರೆ. ಕ್ರೈಸ್ತರ ಹಿನ್ನೆಲೆ, ಚರಿತ್ರೆ, ಸಂಸ್ಕೃತಿ, ಭಾಷೆ, ಶಿಕ್ಷಣ, ಹಬ್ಬ, ಇತರ ಸಂಗತಿಗಳ ವಿಶ್ಲೇಷಣೆ ಮಾಡಲಾಗಿದೆ.

ನಾಯಕಪಾಳೆಗಾರರ ಕುರಿತ ಕೃತಿಗಳು

ಕರ್ನಾಟಕದಲ್ಲಿ ನಾಯಕ – ಪಾಳೆಯ ಪಟ್ಟುಗಳು ಸುಮಾರು ೭೭ ಎಂದು ಸಾಂಖಿಕವಾಗಿ ಹೇಳುವುದುಂಟು. ತೊಂಭತ್ತರ ದಶಕದಲ್ಲಿ ಸಾಮಂತ ಅರಸ, ದಂಡನಾಯಕ, ಬೇಡ – ನಾಯಕ ಅರಸರ ಬಗ್ಗೆ ಬೆಳಕು ಚೆಲ್ಲುವಂಥ ಕೆಲಸ ನಡೆದದ್ದು ವಿರಳ. ಅವುಗಳ ಪೈಕಿ ಕೆಲವು ಕೃತಿಗಳು ಮಾತ್ರ ಗಮನಾರ್ಹವೆನಿಸಿವೆ. ಪಾಳೆಯಗಾರರೆಂದು ಕರೆಸಿಕೊಂಡವರು ಬೇಡರಷ್ಟೇ ಅಲ್ಲವಾದರೂ, ಚಾರಿತ್ರಿಕವಾಗಿ ಇವರನ್ನೇ ಗುರುತಿಸುವುದುಂಟು.

‘ಅಂತಃಕರಣದ ನಂಟು’ (೧೯೯೫) ಎಂಬ ಕೃತಿಯನ್ನು ಪ್ರೊ.ಸಿ. ಆಂಜನೇಯ ಅವರು ಸಂಪಾದಿಸಿದ್ದಾರೆ. ಪ್ರಸ್ತುತ ಕೃತಿಯಲ್ಲಿ ಟಿ.ಎನ್‌. ಗಂಡುಗಲಿ ಮತ್ತು ಚಿತ್ರದುರ್ಗದ ನಾಯಕ ವಂಶಸ್ಥರನ್ನು ಕುರಿತ ಬಿಡಿ ಲೇಖನಗಳಿವೆ. ಆ ಮೂಲಕ ಚಿತ್ರದುರ್ಗದ ದೊರೆಗಳನ್ನು ನೋಡುವ ಇಣುಕು ನೋಟವು ಪ್ರಮುಖವಾಗಿದೆ. ರಾಜಮನೆತನದ ಪರಂಪರೆ, ಪಾಳೆಯಗಾರರ ರಾಜ್ಯಾಳ್ವಿಕೆ, ಜನಕಲ್ಯಾಣ ಕಾರ್ಯಗಳು, ನಿಜವಾದ ವಾರಸುದಾರರರ ಹುಟುಕಾಟ – ಸ್ಪಷ್ಟನೆ ಪ್ರಮುಖ ಸಂಗತಿಗಳಾಗಿವೆ. ಖಾಸವಂಶಸ್ಥರೆಂದು ಜನಮನ್ನಣೇ ಪಡೆದ ಗಂಡುಗಲಿಗೆ (ಬಗ್ಗೆ) ಇತಿಹಾಸಕಾರರಲ್ಲಿ ಒಮ್ಮತಾಭಿಪ್ರಾಯವಿಲ್ಲ. ಇವರ ಪರ ಮತ್ತು ವಿರುದ್ಧ ಬಂದ ಆಪಾದನೆಗಳಿಗೆ ಉತ್ತರಗಳು ಈ ಕೃತಿಯಲ್ಲಿವೆ. ಜನಪರ ಚರಿತ್ರೆಗೆ ಮನ್ನಣೇ ನೀಡುವುದಾದರೆ ಗಂಡುಗಲಿಯವರು ಚಿತ್ರದುರ್ಗ ನಾಯಕರ ಖಾಸವಂಶಸ್ಥರೆಂದು ಖ್ಯಾತರಾಗಿರುವರು. ಜನರಿಂದ ಮಾನ್ಯವಾಗಿರುವ ಗಂಡುಗಲಿಯವರ ಬಗ್ಗೆ ಗಣ್ಯ ವ್ಯಕ್ತಿಗಳ ಅಭಿಪ್ರಾಯಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಅವು ವಸ್ತು ಸಂಗ್ರಹಾಲಯ, ಚಿತ್ರದುರ್ಗ ಇತಿಹಾಸ ಮತ್ತು ಗಂಡುಗಲಿಯನ್ನು ಕುರಿತಂತೆ ಬೆಳಕು ಚೆಲ್ಲುತ್ತದೆ. ತ.ರಾ.ಸು, ಹರತಿವೀರನಾಯಕರನ್ನು ಸ್ಮರಿಸಿರುವುದು ಕೊನೆಯಲ್ಲಿ ಕಂಡು ಬರುವ ಚಿತ್ರಣ.

ಚಿತ್ರದುರ್ಗದ ಚರಿತ್ರೆ ಕುರಿತ ಇನ್ನೊಂದು ಕೃತಿ ‘ಪ್ರಮುಖ’ (೧೯೯೫). ಇದನ್ನು ತಿಮ್ಮಣ್ಣನಾಯಕ (ಟಿ.ಎನ್‌) ಗಂಡುಗಲಿ ರಚಿಸಿದ್ದಾರೆ. ತಾನು ಇದರ ವಾರಸುದಾರನಾದ್ದರಿಂದ ತನ್ನ ರಾಜವಂಶದ ಹಿರಿಮೆ, ವೈಭವ ಅವಸಾನಗಳ ಚಿತ್ರಣವನ್ನು ನೈಜವೆಂಬಂತೆ ದಾಖಲಿಸಿರುವರು. ತೀರಾ ಸರಳ ಹಾಗೂ ಭಾವನಾತ್ಮಕ ಬರವಣಿಗೆ ಈ ಕೃತಿಯ ವೈಶಿಷ್ಟ್ಯ. ಚರಿತ್ರೆಕಾರನಿಗಿಂತ ಭಿನ್ನ ನಿಲುವುಗಳು ಇಲ್ಲಿ ಎದ್ದು ಕಾಣುತ್ತವೆ. ಗಂಡುಗಲಿಯವರು ಇತಿಹಾಸಕಾರರ (ಪತ್ರಕರ್ತರು, ಸಾಹಿತ್ಯಿಗಳು, ವಿರೋಧಿಗಳು) ಸವಾಲುಗಳಿಗೆ ಉತ್ತರ ಕೊಡುವ ದಾಟಿಯಲ್ಲಿದೆ ಇಲ್ಲಿನ ವಿಶ್ಲೇಷಣೆ. ಸಾರ್ವತ್ರಿಕ ಅಭಿಪ್ರಾಯಗಳಿಗೆ ವಾರಸುದಾರರಂತೆ ಚಿತ್ರದುರ್ಗದ ಚರಿತ್ರೆಯ ವಿವಿಧ ಘಟನೆಗಳ ಆತುರ ನಿರೂಪಣೆ ಮಾಡಿ ಮುಗ್ಗರಿಸಿದ್ದಾರೆ. ಒಟ್ಟಾರೆ ಹೇಳುವುದಾದರೆ ಚಿತ್ರದುರ್ಗ ಅರಸರ ರಾಜಕೀಯ, ಸಾಮಾಜಿಕ ಕ್ಷೇತ್ರಗಳ ಪ್ರಗತಿಗಿಂತ ಧಾರ್ಮಿಕ ಮತ್ತು ಲೋಕೋಪಯೋಗಿ ಕೆಲಸಗಳ ಬಗ್ಗೆ ಈ ಕೃತಿಯಲ್ಲಿ ಚರ್ಚಿಸಲಾಗಿದೆ. ಆ ಮೂಲಕ ವಿವಿಧ ಮುಖಗಳು ಇಲ್ಲಿ ಅನಾವರಣಗೊಂಡಿವೆ. ಇವರ ಕೃತಿಗಳನ್ನು ಓದುವುದೆಂದರೆ ಚಿತ್ರದುರ್ಗದ ನಾಯಕರ ಆಳ್ವಿಕೆಯನ್ನು ಕಣ್ಣು ಕಟ್ಟಿ ಕಥೆ ತೋರಿಸುವಂಥೆ ಹೇಳುವಂತೆ ಭಾಸವಾಗುತ್ತದೆ. ಪ್ರೇರೇಪಣೆ, ಆಸಕ್ತಿ ಬೆಳೆಯಲು ಈ ಕೃತಿ ಚಿತ್ರದುರ್ಗದ ಮಟ್ಟಿಗೆ ಅನಿವಾರ್ಯವು ಹೌದು. ಸಮಕಾಲೀನ ಒತ್ತಡಗಳಿಗೆ ಮಣಿದಂತೆ ಲೇಖಕರು ಮತ್ತು ರಾಜವಂಶೀಕರು ಆದ ಗಂಡುಗಲಿಯವರ ಸಾಧನೆ ಶ್ಲಾಘನೀಯ.

ವಿಜಯನಗರೋತ್ತರ ಪಾಳೆಯಗಾರರಲ್ಲಿ ಹರಪನಹಳ್ಳಿ ನಾಯಕರು ಪ್ರಮುಖರಾಗಿ ಕಂಡು ಬರುತ್ತಾರೆ. ಮೂಲತಃ ಬೇಡರಾದ ಇವರು ವೀರಶೈವರಾಗಿ ಪರಿವರ್ತನೆಗೊಳ್ಳುವುದು ಗಮನಾರ್ಹ. ‘ಹರಪನಹಳ್ಳಿ ಪಾಳೆಯಗಾರರು’ (೧೯೯೬) ಎಂಬ ಕೃತಿಯಲ್ಲಿ ಈ ಎಲ್ಲಾ ಸಂಗತಿಗಳನ್ನು ಕುಂಬಾ ಸದಾಶಿವಪ್ಪ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಪ್ರಾದೇಶಿಕ, ಸ್ಥಳೀಯ ಚರಿತ್ರೆ ರಚನೆಗೆ ಈ ಕೃತಿ ಮಾದರಿಯಾಗುವಲ್ಲಿ ಅಡ್ಡಿಯಿಲ್ಲ. ಹರಪನಹಳ್ಳಿ ಸ್ಥಳನಾಮ, ಪುರಾಣ ಹೀಗೆ ಅದರ ಆಸುಪಾಸಿನ ಎಲ್ಲ ಸಂಗತಿಗಳನ್ನು ಕಲೆಹಾಕಿ ತಕ್ಕಮಟ್ಟಿಗೆ ಹೆಣಿದಿರುವರು. ಗುಡೆಕೋಟೆ, ಜರಿಮಲೆ, ಬೀರಲಗುಡ್ಡ ಮುಂತಾದವು ಇವರ ಸಮಕಾಲೀನ ಪಾಳೆಯಪಟ್ಟುಗಳು. ಇಂಥವುಗಳ ಬಗ್ಗೆ ಈವರೆಗೆ ಕೃಷಿ ನಡೆದಿಲ್ಲ. ಇವರ ಸಾಧನೆ ಮೆಚ್ಚತಕ್ಕದ್ದು. ಇಲ್ಲಿ ವಿವಿಧ ಅರಸರ ಆಳ್ವಿಕೆ, ದಾನ ಪ್ರಕ್ರಿಯೆ, ಶಿಕ್ಷಣ, ಕ್ರೀಡೆ, ನೀರಾವರಿಯೋಜನೆ, ಬಾವಿ ನಿರ್ಮಾಣ, ಲೋಕೋಪಯೋಗಿ ಕೆಲಸ ಕಾರ್ಯಗಳ ವಿವರಗಳಿವೆ. ಈ ಅರಸರು ‘ಕಿರಾತ ಪಡೆ’ ಕಟ್ಟಿ ಯುದ್ಧ ಮಾಡಿದ್ದು ವಿಸ್ಮಯಕಾರಿ ಘಟನೆ. ಅರಸರ ಧಾಳಿ – ಪ್ರತಿಧಾಳಿ, ಒಪ್ಪಂದ ಇತರ ವಿಷಯಗಳ ವಿಶ್ಲೇಷಣೆ ಆಕರ್ಷಣೀಯ. ಚಿತ್ರದುರ್ಗ ಸೇರಿದಂತೆ ಇತರರೊಂದಿಗೆ ಮಾಡಿದ ಯುದ್ಧ, ಒಪ್ಪಂದ, ವೈವಾಹಿಕ ಸಂಬಂಧಗಳು ವೃದ್ಧಿಯಾಗಿದ್ದು ವಿಶೇಷ. ಹೈದರಾಲಿ – ಟಿಪ್ಪುಸುಲ್ತಾನರ ಅವಧಿಯಲ್ಲಿ ಅವಸಾನ ಹಂತ ತಲುಪಲು ಈ ಅರಸರ ಮನೋಧೋರಣೆಗಳೇ ಕಾರಣ.

ಹರಪನಹಳ್ಳಿ ಬಗ್ಗೆ ಸ್ಥೂಲವಾಗಿ ಪರಿಚಯಿಸುವ ಈ ಕೃತಿ ಸಾಹಿತ್ಯ ನೆಲೆಯಲ್ಲಿ ರೂಪುಗೊಂಡಂತಿದೆ. ಆದರೆ ಆಯಾ ಕಾಲಘಟ್ಟದ ರೋಮಾಂಚನ ಘಟನೆಗಳ ಭವ್ಯ ವಿಶ್ಲೇಷಣೆ ಮನಮೋಹಕವೆನೆಸಿದೆ. ಈ ವಂಶಸ್ಥರ ಕುರಿತ ಮೊದಲ ಕೃತಿಯಿದು ಎಂಬ ತೀರ್ಮಾನವಿದೆ. ಭಗ್ನಾವಶೇಷಗಳಿಂದ ಕೂಡಿರುವ ಹರಪನಹಳ್ಳಿ ಚರಿತ್ರೆ ಮಾತುಬಾರದ ಮೂಕನಂತೆ ಗೋಚರಿಸುತ್ತದೆ. ಮೂರು – ನಾಲ್ಕು ತಲೆಮಾರುಗಳ ಚರಿತ್ರೆಯನ್ನು ವರ್ತಮಾನಕ್ಕೆ ಮೂಕನಂತೆ ಗೋಚರಿಸುತ್ತದೆ. ಮೂರು – ನಾಲ್ಕು ತಲೆಮಾರುಗಳ ಚರಿತ್ರೆಯನ್ನು ವರ್ತಮಾನಕ್ಕೆ ಒಪ್ಪಿಸುವ ಕೆಲಸವನ್ನು ಲೇಖಕರು ಶ್ರಮವಹಿಸಿ ಮಾಡಿರುವರು. ರಾಜಕೀಯ ಆಳ್ವಿಕೆಯಲ್ಲಿ ಅರಸರ ವಿವರಗಳೇ ವ್ಯಾಪಕ ವಿಶ್ಲೇಷಣೆ ಬಯಸಿವೆ. ಸಾಂಸ್ಕೃತಿಕ ಕ್ಷೇತ್ರವನ್ನು ಅಲಕ್ಷಿಸಿದ ಲೇಖಕರು ಅಸಂಗತವಾದ ವಿವರಗಳನ್ನು ಔಚಿತ್ಯವಲ್ಲದ ಸಂದರ್ಭದಲ್ಲಿ ಪೋಣಿಸಿದ್ದಾರೆ. ಶಾಸನ, ಹಸ್ತ ಪ್ರತಿ, ಮೌಖಿಕ ಸಾಹಿತ್ಯವನ್ನು ಬಳಸಿಕೊಂಡಿರುವರು. ದಾದಯ್ಯ ನಾಯಕ, ಬಸವಪ್ಪ ನಾಯಕ ಮತ್ತು ಸೋಮಶೇಖರ ನಾಯಕ ಮೊದಲಾದವರು ಪ್ರಸಿದ್ಧಿ ಪಡೆದ ಅರಸರು. ಹೀಗೆ ಹತ್ತಾರು ಸಂಗತಿಗಳು ಪ್ರಸ್ತುವೆನಿಸಿದ್ದು, ಆಳವಾಗಿ ಅಧ್ಯಯನ ಮಾಡುವವರಿಗೆ ಈ ಕೃತಿ ನೆರವಾಗುತ್ತದೆ.

ಮಲೆನಾಡಿನಲ್ಲಿ ಆಳ್ವಿಕೆ ನಡೆಸಿದ ಪಾಳೆಯಗಾರರ ಪೈಕಿ ತರೀಕೆಯವರು ಅಗ್ರಗಣ್ಯರು. ಇವರ ಸಾಹಸ, ಧೈರ್ಯಗಳು ಚರಿತ್ರೆಯ ಪುಟಗಳಲ್ಲಿ ಇಂದಿಗೂ ಅಜರಾಮರ. ಈ ಬಗ್ಗೆ ‘ತರೀಕೆರೆ ಪಾಳೆಯಗಾರರು’(೧೯೯೭) ಎಂಬ ಕೃತಿಯನ್ನು ಹವ್ಯಾಸಿ ಬರಹಗಾರರು, ಇತಿಹಾಸ ಪ್ರೇಮಿಗಳಾದ ಅಬ್ದುಲ್‌ ಸತ್ತಾರ್ ರಚಿಸಿದ್ದಾರೆ. ಕೈಫಿಯತ್ತು, ಬಖೈರು ಹೀಗೆ ಕಡೆಗಣಿಸಲ್ಪಟ್ಟ ಆಖರಗಳಿಂದ ಈ ಕೃತಿಯನ್ನು ಸಿದ್ಧಪಡಿಸಲಾಗಿದೆ. ಈ ಆರಸರು ತರೀಕೆರೆಗಿಂತ ಮೊದಲು ಬಸವಾಪಟ್ಟಣ, ಸಂತೆ ಬೆನ್ನೂರುಗಳಲ್ಲಿ ಆರಂಭದ ರಾಜ್ಯಾಳ್ವಿಕೆ ಮಾಡಿದ್ದರು. ತರುವಾಯ ತರೀಕೆರೆ ರಾಜಧಾನಿಯಾಯಿತು. ತರೀಕೆರೆಯ ಇತಿಹಾಸವನ್ನು ಕೆದಕುತ್ತಾ ಅದರ ಸ್ಥಳನಾಮ, ಆರಂಭದ ಆಳ್ವಿಕೆ, ಯುದ್ಧ, ಅವಸಾನಗಳ ಚಿತ್ರಣ ಇದರಲ್ಲಿದೆ. ಕೆಂಗಣ್ಣ ನಾಯಕ, ಸರ್ಜಾಹನುಮಪ್ಪನಾಯಕ ಹೀಗೆ ನಾಯಕರ ಆಳ್ವಿಕೆಯಲ್ಲಿ ಗಣನೀಯ ಪಾತ್ರ ವಹಿಸಿರುವವರು ಕೆಲವರು ಮಾತ್ರ. ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸಿದ ಸರ್ಜಾಹನುಮಪ್ಪನಾಯಕ ಮತ್ತು ಅವನ ತಂದೆ ರಂಗಪ್ಪನಾಯಕರ ಪಾತ್ರವನ್ನು ಮರೆತರೆ ಇವರ ಚರಿತ್ರೆಯೇ ಅಪೂರ್ಣ. ಅಜರಾಮರ ಚರಿತ್ರೆ ಹೊಂದಿರುವ ತರೀಕೆರೆ ಇತರ ಸಂಸ್ಥಾನಗಳೊಂದಿಗೆ ನಿಕರ ಸಂಬಂಧ ಹೊಂದಿದ್ದಿತು. ಮೈಸೂರು ಸಂಸ್ಥಾನಗಳೊಂದಿಗೆ ತರೀಕೆರೆಯವರು ಒಡನಾಟ ಹೊಂದಿದ್ದರು. ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದು ಮಹತ್ವ ಪೂರ್ಣ ಸಂಗತಿ. ಹಿಂದೂ ಧರ್ಮದ ರಕ್ಷಣೆಗಾಗಿ ಉದಯಿಸಿದ ಸಂಸ್ಥಾನಗಳ ತೆಕ್ಕೆಗೆ ತರೀಕೆರೆಯನ್ನು ಕೊಂಡೋಯ್ಯುವುದುಂಟು. ಪ್ರಜೆಗಳ ರಕ್ಷಣೆಗಾಗಿ ಉದಯಿಸಿದ ಪಾಳೆಯಪಟ್ಟೆಂಬುದು ವಾಸ್ತವ. ಭಗ್ನಗೊಂಡ ಅವಶೇಷಗಳು, ಕೆರೆ, ದೇವಾಲಯ, ಕೋಟೆ ಮೊದಲಾದವು ತರೀಕೆರೆಯ ಕಣ್ಣೀರಿನ ಕಥೆಯನ್ನು ಸಾರುವ ಮೂಲಕ ಪ್ರೇಕ್ಷಕರಂತಿವೆ. ಈ ಬಗ್ಗೆ ಜನಪದದಲ್ಲಿ ಲಭ್ಯವಿರುವ ಸರ್ಜಪ್ಪ ನಾಯಕನ ಕಥನವು ಬಹು ಜನಪ್ರಿಯ. ಸಾಹಿತ್ಯ ಪ್ರೇರಣೆಯಿಂದ ಅರಳಿ ಬಂದ ಈ ಕುಸುಮವು ಚಾರಿತ್ರಿಕ ಆಸಕ್ತಿಯನ್ನು ತೋರ್ಪಡಿಸುತ್ತಾ, ತರೀಕೆರೆಯ ಬಗ್ಗೆ ನಿರೂಪಿಸುವಲ್ಲಿ ಸಮರ್ಥನೀಯವಾಗಿದೆ. ಸತ್ಯದ ಪ್ರತಿಪಾದಕರಾದ ಚರಿತ್ರೆಕಾರರಿಗೆ ಮೇಲಿನ ಸಂಗತಿಗಳು ಸ್ಫೂರ್ತಿ ಮತ್ತು ಸವಾಲಿನಂತಿವೆ. ಪ್ರಸ್ತುತ ಕೃತಿಗೆ ೧೯೯೮ನೇ ಸಾಲಿನ ‘ಹರತಿವೀರನಾಯಕ’ ಪ್ರಶಸ್ತಿ ಲಭಿಸಿರುವುದು ಸ್ವಾಗತಾರ್ಹ.

‘ಹಾಗಲವಾಡಿ ನಾಯಕರು’ (೧೯೯೯) ಎಂಬ ಕೃತಿಯನ್ನು ಡಾ.ಡಿ.ಎನ್‌. ಯೋಗಿಶ್ವರಪ್ಪನವರು (ಪಿಎಚ್‌.ಡಿ. ಪ್ರಬಂಧ) ರಚಿಸಿದ್ದಾರೆ. ವಿಜಯನಗರ ಕುರಿತ ಅಧ್ಯಯನಗಳ ಫಲಿತಾಂಶಗಳೇ ನಾಯಕ ಸಮುದಾಯ ಕುರಿತ ಅಧ್ಯಯನಗಳಿಗೆ ನಾಂದಿಹಾಡಿದ್ದು. ಸಾಹಿತ್ಯ ನೆಲೆಯಲ್ಲಿ ಚಾರಿತ್ರಿಕ ವಿಶ್ಲೇಷಣೆ ಮಾಡಿರುವ ಲೇಖಕರು ಅಕಾಡೆಮಿಕ್‌ ಶಿಸ್ತನ್ನು ಅಳವಡಿಸಿಕೊಂಡಿರುವರು. ದಕ್ಷಿಣ ಕರ್ನಾಟಕದ ನಾಯಕ ಮನೆತನಗಳ ಸಾಲಿಗೆ ಹಾಗಲವಾಡಿ ಮಧ್ಯಕಾಲೀನ ಮತ್ತು ಆಧುನಿಕ ಕರ್ನಾಟಕದ ಚರಿತ್ರೆಗೆ ಕೊಂಡಿಯಂತಿತ್ತು. ಸಿರಾದ ನವಾಬ, ಹೈದರಾಲಿ ಟಿಪ್ಪುಸುಲ್ತಾನ್‌, ಬ್ರಿಟಿಷರ ಅವಧಿ ಮತ್ತು ಅದಕ್ಕೂ ಪೂರ್ವದ – ನಂತರದ ರಾಜಕೀಯ ಏಳು – ಬೀಳುಗಳ ಚಿತ್ರಣ ಇದರಲ್ಲಿದೆ. ಲಿಖಿತ ಮತ್ತು ಮೌಖಿಕ ಆಕರಗಳ ನೆರವು ಬಹುಶಿಸ್ತೀಯ ಅಧ್ಯಯನಕ್ಕೆ ಆಸ್ಪದ ಮಾಡಿಕೊಡುವಂತೆ ಇಲ್ಲಿಯು ಆಪರಿ ಕಾಣಬರುತ್ತದೆ. ಚರಿತ್ರೆ ಸಿದ್ಧಾಂತಗಳ ವಿಶ್ಲೇಷಣೆ, ತಾರ್ಕಿಕತೆಯನ್ನು ಒಪ್ಪಿಸಲು ಲೇಖಕರು ದುಸ್ಸಾಹಸ ಮಾಡಿದಂತಿದೆ.

ವ್ಯಕ್ತಿ ಕೇಂದ್ರಿತ ಅಧ್ಯಯನ ಕೃತಿಗಳು

‘ಮಹಾನುಭಾವರ ಜೀವನ ಚರಿತ್ರೆಯೇ ಇತಿಹಾಸ’ ಎಂದ ಥಾಮಸ್‌ ಕಾರ್ಲೆಯ ಮಾತು ಪ್ರಸ್ತುತ. ಭಾರತೀಯರು ತಮ್ಮ ಪೂರ್ವಜರ ಬಗ್ಗೆ ಚಿಂತಿಸಿದ್ದು ಕಡಿಮೆ. ಜಪಾನ್‌, ಚೀನಾ ಮೊದಲಾದ ರಾಷ್ಟ್ರಗಳಲ್ಲಿ ಈ ಬಗೆಯ ಆರಾಧನೆ, ದಾಖಲಿಸಲ್ಪಡುವ ಕ್ರಮವಿದೆ. ಕರ್ನಾಟಕದಲ್ಲಿಯು ಇಂಥಾ ದುಸ್ಥಿತಿಯನ್ನು ಎದುರಿಸಲಾಗುತ್ತಿದೆ. ವ್ಯಕ್ತಿ ಅಧ್ಯಯನಗಳು ನಡೆದಿರುವುದು ವಿರಳವಾದರೂ ಕೆಲವು ಗಮನಾರ್ಹವೆನಿಸಿವೆ. ಈ ಪೈಕಿ ಧರ್ಮಾನಂದ ಕೋಸಂಬಿ (೧೯೯೮) ರಚಿಸಿದ ‘ಭಗವಾನ್‌ ಬುದ್ಧ’ ಕೃತಿಯನ್ನು ಕನ್ನಡಕ್ಕೆ ಆದ್ಯ ರಂಗಾಚಾರ್ಯರು ತಂದಿರುವರು. ಸೊಗಸಾದ ನಿರೂಪಣೆ ಶೈಲಿ ಅಷ್ಟೇ ಆಕರ್ಷಕ ಭಾಷೆ, ಇತರ ಸಂಗತಿಗಳು ಮನನೀಯವಾಗಿವೆ. ಕೋಸಾಂಬಿಯವರು ಬುದ್ಧನನ್ನು ನೋಡುವ ದೃಷ್ಟಿಕೋನವೇ ಬೇರೆ ಬಗೆಯದು. ಅಧಿಕೃತ ಆಕರಗಳಲ್ಲಿ ವಿಶೇಷವಾಗಿ ಪಾಲಿಭಾಷೆಯ ತ್ರಿಪಿಟಗಳನ್ನು ಬಳಸಿಕೊಂಡಿರುವುದು ಔಚಿತ್ಯವೆನಿಸಿದೆ. ಭಾರತೀಯ ಜನ ಸಮುದಾಯಗಳ ಜೀವನ ಧರ್ಮವನ್ನು ಮೆಲುಕು ಹಾಕುವಲ್ಲಿ ಮೂಲ ಜನಾಂಗ, ಸಂಸ್ಕೃತಿ, ಧರ್ಮ – ಹೀಗೆ ಬುದ್ಧನ ವಿನೂತನ ಮಾರ್ಗ – ಧ್ಯೇಯಗಳ ಬಗ್ಗೆ ಗುರುತಿಸುತ್ತಾರೆ. ರಾಜಪ್ರಭುತ್ವದ ಏಳು ಬೀಳುಗಳಲ್ಲಿ ಜನ ಸಾಮಾನ್ಯರ ಪಾತ್ರವನ್ನು ಚಿತ್ರಿಸಿರುವುದು ವಿಶೇಷ. ಊಳಿಗಮಾನ್ಯ ವ್ಯವಸ್ಥೆ, ದಾಸ – ಆರ್ಯರ ಸಂಘರ್ಷಗಳು ಇಲ್ಲಿ ಮುಖಾ ಮುಖಿಯಾಗಿವೆ. ಬುದ್ಧ, ಮಹಾವೀರ, ಬಸವಣ್ಣ, ಕಬೀರ ಇತರ ಸಂತರ ಜೀವನ ಚರಿತ್ರೆಗಳ ಪರಸ್ಪರ ಭಿನ್ನ ಶೈಲಿ ಹೊಂದಿವೆ. ಬುದ್ಧನ ಹೊಸಪಂಥ, ರೋಹಿಣಿ ನದಿಯ ಪಾತ್ರ, ಶಾಕ್ಯರಿಗೂ ಶೋಲಿಯರ ನಡುವಿನ ಸಂಘರ್ಷ ಕುರಿತ ಕೋಸಾಂಬಿಯವರ ವಿಶ್ಲೇಷಣೆ ಗಮನಾರ್ಹ. ಒಟ್ಟಾರೆ ಇಲ್ಲಿ ಬುದ್ಧನ ಮೂಲಕ ಭಾರತೀಯ ಚರಿತ್ರೆಯನ್ನು ಮತ್ತು ಭಾರತೀಯ ಚರಿತ್ರೆಯ ಮೂಲಕ ಬುದ್ಧನನ್ನು ನೋಡುವ, ಗುರುತಿಸುವ ಹೊಸ ಪ್ರಕ್ರಿಯೆಯನ್ನು ಗುರುತಿಸಬಹುದು.

ಕನ್ನಡ ನಾಡ ಪ್ರಭುಗಳ ಜೀವನ ಚರಿತ್ರೆಗಳು ಈಗಾಗಲೇ ಪ್ರಕಟಗೊಂಡು ಜನ ಮನ್ನಣೆ ಪಡೆದಿವೆ. ಮಯೂರವರ್ಮ, ಎರಡನೇ ಪುಲಕೇಶಿ, ಅಮೋಘವರ್ಷ, ವಿಕ್ರಮಾದಿತ್ಯ, ಕುಮಾರ ರಾಮ, ಕೃಷ್ಣದೇವರಾಯ, ಮದಕರಿನಾಯಕ ಮೊದಲಾದವರನ್ನು ಹೆಸರಿಸುವುದು ಅವರು ಗಳಿಸಿದ ಗೌರವದಿಂದ. ಇಂಥವರ ಸಾಲಿಗೆ ಮೈಸೂರು ಸಂಸ್ಥಾನದ ಒಡೆಯರು ಸೇರುತ್ತಾರೆ. ‘ನಾಲ್ವಡಿ ಕೃಷ್ಣರಾಜ ಒಡೆಯರ್ ಒಂದು ದರ್ಶನ’ (೧೯೯೬) ಎಂಬ ಕೃತಿಯನ್ನು ಡಾ.ಪಿ.ವಿ. ನಂಜರಾಜ ಅರಸು ಮತ್ತು ಎಸ್‌.ಆರ್.ಚಂದ್ರರಾಜ ಅರಸರು ಸಂಪಾದಿಸಿದ್ದಾರೆ. ಮೈಸೂರು ಅರಸರ ಚರಿತ್ರೆಯ ಮಟ್ಟಿಗೆ ಈ ಕೃತಿ ಮೈಲಿಗಲ್ಲು! ಮೈಸೂರು ಸಂಸ್ಥಾನವನ್ನು ‘ಆದರ್ಶ ಸಂಸ್ಥಾನ’ವಾಗಿ ಮಾಡಿದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುವುದು. ಪ್ರಸ್ತುತ ಕೃತಿಯಲ್ಲಿ ಆಧುನಿಕ ಮೈಸೂರು ರಾಜ್ಯದ ಪ್ರಗತಿಯ ವಿವಿಧ ಮುಖಗಳನ್ನು ಪರಿಚಯಿಸಲಗಿದೆ. ವೈಭವದಿಂದ ದೂರವಿದ್ದ ನಾಲ್ವಡಿ ಕೃಷ್ಣರಾಜ ಅರಸರು ಪ್ರಜಾಪಾಲನೆ ಮಾಡಿದ ಬಗ್ಗೆ ಅದ್ಭುತ ಅಧ್ಯಾಯವೊಂದು ಅನಾವರಣಗೊಂಡಂತಿದೆ. ನಿಜಕ್ಕೂ ಬ್ರಿಟಿಷ್‌ರ ಆಳ್ವಿಕೆಯಲ್ಲಿ ಇತರ ಪ್ರದೇಶಗಳು ವಿವಿಧ ರೀತಿಯಲ್ಲಿ ತತ್ತರಿಸುತ್ತಿರುವಾಗ ಮೈಸೂರಿನ ಅರಸರು ಸ್ಥಳೀಯ ಆಡಳಿತಕ್ಕೆ ಮಹತ್ವ ನೀಢಿದ್ದು ಗಮನಾರ್ಹ. ಆಧುನಿಕತೆಯ ಪ್ರಭಾವ ವೃದ್ಧಿಸಿದ್ದು ಇಲ್ಲಿಯೇ. ಶಿಕ್ಷಣ ಮಾಧ್ಯಮವನ್ನು ಉಚಿತವಾಗಿ ನೀಡಿದ್ದು ಇವರ ಸಾಧನೆ. ವಯಸ್ಕರ ಶಿಕ್ಷಣಕ್ಕೆ ಆದ್ಯತೆ ನೀಡಿದ್ದು, ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ, ಬ್ಯಾಂಕ್‌ ಸ್ಥಾಪನೆ, ಪ್ರಜಾಪ್ರತಿನಿಧಿ ಸಭೆ ರಚನೆ, ಜಲವಿದ್ಯುತ್‌ ಯೋಜನೆ, ಉಕ್ಕು, ಸಕ್ಕರೆ, ಕಾಗದ ಗಂಧದೆಣ್ಣೆ, ಸಾಬೂನು ಮತ್ತಿತರ ಕಾರ್ಖಾನೆಗಳ ಸ್ಥಾಪನೆ – ಇತರ – ಕೆಲಸ – ಕಾರ್ಯಗಳು ಅವಿಸ್ಮರಣೀಯವಾದವು. ಪಂಚಮರ ಮತ್ತು ಹಿಂದುಳಿದ ಜನಾಂಗದ ಹಿತರಕ್ಷಣೆಗಾಗಿ ಸಮಿತಿ ರಚನೆ, ದುರ್ಬಲ – ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಹೀಗೆ ಹತ್ತು – ಹಲವು ಬೃಹತ್‌ ಕೆಲಸ ಕಾರ್ಯಗಳನ್ನು ಅಭಿವೃದ್ಧಿ ಗೊಳಿಸಿದ್ದು ವಿಸ್ಮಯ. ಮೈಸೂರು ರಾಜ್ಯದ ಅಭಿವೃದ್ಧಿ ಪಥವೆಂಬ ನೌಕೆಯನ್ನು ದಡ ತಲುಪಿಸಿದ ಚತುರ ನಾವಿಕ ಈತ. ಮಹಾ ವಿದ್ವಾಂಸ, ಚಿಂತಕರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಭುದ್ಧ ರಾಜಕಾರಣಿಯ ಹೌದು.

ಕರ್ನಾಟಕ ಚರಿತ್ರೆಗೆ ಮಹಾತಿರುವನ್ನು ತಂದುಕೊಟ್ಟ ಮಾಜಿ ಮುಖ್ಯಮಂತ್ರಿ ದಿವಂಗತ ಡಿ. ದೇವರಾಜ ಅರಸರ ಕಾರ್ಯ – ಸಾಧನೆಗಳು ಶ್ಲಾಘನೀಯ. ಇಂಥ ವ್ಯಕ್ತಿಯನ್ನು ಕುರಿತಂತೆ ಅನೇಕ ಕೃತಿಗಳು ಪ್ರಕಟವಾಗಿವೆ. ಅವುಗಳಲ್ಲಿ ಪ್ರಮುಖವಾಗಿ ಕರ್ನಾಟಕದ ನಾಮಕರಣ, ಭೂಸುಧಾರಣೆ, ತುರ್ತು ಪರಿಸ್ಥಿತಿ, ಬೂಸಾಚಳವಳಿ, ಹಿಂದುಳಿದ ವರ್ಗಗಳ ಆಯೋಗ ರಚನೆ ಎಲ್‌.ಜಿ. ಹಾವನೂರು ನೇತೃತ್ವದಲ್ಲಿ – ಹೀಗೆ ಹತ್ತು ಹಲವು ಮಹತ್ತರ ಯೋಜನೆಗಳು ಫಲಪ್ರದವಾದವು. ಹಾಗೆಯೇ ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ದಿ.ಎಸ್‌. ನಿಜಲಿಂಗಪ್ಪ, ಕೆ. ಹನುಮಂತಯ್ಯ, ಜೆ.ಎಚ್.ಪಟೇಲ್‌, ರಾಮಕೃಷ್ಣ ಹೆಗಡೆ ಮೊದಲಾದ ಮಾಜಿ ಮುಖ್ಯ ಮಂತ್ರಿಗಳ ಬಗ್ಗೆ ಕೃತಿಗಳು ಬಂದಿವೆ.

ಕನ್ನಡ ನಾಡುನುಡಿ, ಸಂಸ್ಕೃತಿ ಕುರಿತ ಕೃತಿಗಳು

ಕನ್ನಡ ನಾಡನ್ನು ಶ್ರೀಗಂಧದ ಬೀಡು, ಹೊನ್ನ ಬಿತ್ತಿ ಬೆಳೆವ ನಾಡು, ಫಲವತ್ತಾದ ಮತ್ತು ಎತ್ತರವಾದ ಪ್ರದೇಶವೆಂದು ಕರೆಯಲಾಗಿದೆ. ಹೀಗೆ ಕನ್ನಡಿಗರ ಜನಜೀವನವನ್ನು ಪ್ರತಿನಿಧಿಸುವ ನಾಡು, ವಿಭಾಗ, ಸ್ಥಳ, ಕೋಟೆ, ಬೆಟ್ಟ ಇತರ ಯಾವುದೇ ವಿಷಯವಾಗಿದ್ದರೂ ಅದು ನಾಡಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಈ ಕುರಿತಂತೆ ಅನೇಕ ಗ್ರಂಥಗಳು ಈಗಾಗಲೇ ಪ್ರಕಟಗೊಂಡಿವೆ. ಕೆಲವು ಮಾತ್ರ ನೆನಪಿನಲ್ಲಿ ಉಳಿಯಲು ಸಾಧ್ಯ! ಶಾಸ್ತ್ರೀಯ ಅಧ್ಯಯನಗಳ ಫಲವಾಗಿ ಪ್ರಕಟಗೊಂಡ ಕೃತಿಗಳೇ ವಿರಳ..ಅಂಥ ಕೆಲವು ಕೃತಿಗಳ ಸಮೀಕ್ಷೆ ಈ ಕೆಳಗಿನಂತಿದೆ.

‘ಸಗರನಾಡಸಿರಿ’ (೧೯೯೬) ಎಂಬ ಸಂಶೋಧನ ಕೃತಿಯ ಲೇಖಕರು ಡಿ.ಎನ್‌. ಅಕ್ಕಿ. ಒಂದು ಪ್ರಾದೇಶಿಕ ವಿಭಾಗದ ಚರಿತ್ರೆ – ಸಂಸ್ಕೃತಿಯನ್ನು ಬೆಳಕಿಗೆ ತರುವ ಮೂಲಕ ಸ್ಮಾರಕಗಳನ್ನು ಸ್ಥೂಲವಾಗಿ ಪರಿಚಯಿಸುವ ಪ್ರಯತ್ನ ಇದರಲ್ಲಿದೆ. ಐತಿಹ್ಯ, ಪ್ರತೀತಿಗಳನ್ನು ಬಳಸಿಕೊಂಡು ವಿಶ್ಲೇಷಿಸಿರುವುದು ಗಮನಾರ್ಹ. ಆ ಮೂಲಕ ವಾಸ್ತುಶಿಲ್ಪ ಕುರಿತು ಸಂಸ್ಕೃತಿಯ ಇಣುಕುನೋಟವು ಬೇರೆಬಗೆಯದಾಗಿದೆ. ಚರಿತ್ರೆಕಾರನ ಮನೋಧೋರಣೆಗಳಿಗಿಂತ ಭಿನ್ನವಾಗಿ ನೋಡುವ ಅಕ್ಕಿಯವರು ಮೂಲತಃ ಶಿಕ್ಷಕರಾದರೂ ಪ್ರವೃತ್ತಿಯಿಂದ ಇಂಥ ಸಾಹಸ ಮಾಡಿರುವು ಪ್ರಶಂಸನೀಯ.

‘ಹೆಸರಾದ ಪಟ್ಟಣ ಬಸ್ರೂರು ಒಂದು ಅರ್ಧಯಯನ’ (೧೯೯೭) ಕೃತಿಯು ಬಸ್ರೂರಿನ (ದ.ಕ.) ಶ್ರೀ ಶಾರಾದಾ ಕಾಲೇಜಿನ ಬೆಳ್ಳಿ ಹಬ್ಬದ ನೆನಪಿನ ಸಂಪುಟವಾಗಿ ಹೊರಹೊಮ್ಮಿದೆ. ವಿವಿಧ ಲೇಖಕರು ಬಸ್ರೂರು ಪಟ್ಟಣದ ಮೂಲಕ ತಮ್ಮ ಚಿಂತನೆಗಳನ್ನು ಹಂಚಿಕೊಂಡಿದ್ದಾರೆ. ಪಟ್ಟಣದ ಚರಿತ್ರೆ ಪೂರ್ವದಲ್ಲಿ ಹಳ್ಳಿ, ಗ್ರಾಮ ಅಧ್ಯಯನಗಳ ತಾತ್ವಿಕತೆಯ ಚರ್ಚೆ ನಡೆದಿದೆ. ಆ ಮೂಲಕ ಪಟ್ಟಣ, ನಗರಗಳಿಗೆ ವಿಸ್ತರಿಸಿದಂತಾಗುತ್ತದೆ. ಬಸ್ರೂರು ಪಟ್ಟಣದ ಜನಪದ ಸಂಸ್ಕೃತಿ, ಚರಿತ್ರೆ, ಆರ್ಥಿಕ ಹಾಗೂ ಸಾಮಾಜಿಕ ಜೀವನದ ವಿವಿಧ ಆಯಾಮಗಳ ಒಳ ನೋಟಗಳು ಮುಖಾಮುಖಿಯಾಗಿವೆ. ಪಟ್ಟಣದ ಪ್ರಾಚೀನತೆಯನ್ನು ಗತಾವಲೋಕಿಸಿದ್ದು, ನಾನಾ ಕಾಲಘಟ್ಟಗಳಲ್ಲಾದ ಪರಿವರ್ತನೆಗಳ ಹಿನ್ನೋಟವನ್ನು ಮೆಲುಕು ಹಾಕಲಾಗಿದೆ. ಈ ಬಗ್ಗೆ ಲಭ್ಯವಿರುವ ಸಾಮಾಜಿಕ, ರಾಜಕೀಯ, ಜಾನಪದ ಸಂಗತಿಗಳ ವಿಶ್ಲೇಷಣೆ ಆಕರ್ಷಕವಾಗಿದೆ. ಶಾಸನಗಳನ್ನು ಬಳಸಿಕೊಂಡು ಚರಿತ್ರೆ ಕಟ್ಟುವಲ್ಲಿ ರಫ್ತು, ಆಮದು, ವ್ಯಾಪಾರ, ಬಂದರುಗಳ ವಿಶ್ಲೇಷಣೆಯು ಸಹಾ ಅದ್ಭುತ. ಇಂಥ ಅಧ್ಯಯನಗಳು ಪ್ರಾದೇಶಿಕ ಚರಿತ್ರೆ ಅಧ್ಯಯನಕ್ಕೆ ಹೊಸ ಸೇರ್ಪಡೆ ಎಂದರೆ ತಪ್ಪಾಗದು.

ಹಾಸನದಲ್ಲಿ ನಡೆದ ಅಖಿಲ ಭಾರತ ೬೫ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಂದ ಸ್ಮರಣ ಸಂಚಿಕೆಯೇ ‘ಹೊಯ್ಸಳ ಸಂಪದ’ (೧೯೯೬). ಇದರ ಸಂಪಾದಕರು ಡಾ. ಮಳಲಿ ವಸಂತಕುಮಾರ್, ಪ್ರಾದೇಶಿಕ ಸಂಸ್ಕೃತಿ, ಚರಿತ್ರೆ, ವ್ಯಕ್ತಿ ವಿಚಾರ, ಇತರ ಸಂಕೀರ್ಣ ಸಂಗತಿಗಳು ಇದರಲ್ಲಿವೆ. ಬೇಲೂರು ನಾಯಕರ ಚಿತ್ರಣವು ಚರ್ಚಿತಗೊಂಡಿದೆ. ರಾಷ್ಟ್ರೀಯ ಹೋರಾಟ, ಹೆಣ್ಣಿನ ಬಲಿದಾನ, ಮೌಖಿಕ ಇತಿಹಾಸ, ಬೌದ್ಧ ಸಾಹಿತ್ಯ – ಇತರ ಲೇಖನಗಳು ನಾಡು – ನುಡಿಯನ್ನು ಒಳಗೊಂಡಿವೆ.

‘ಹಂಪೆಯ ಬಜಾರುಗಳು’ (೧೯೯೭) ಎಂಬ ಎಂ.ಫಿಲ್‌. ಪ್ರಬಂಧವನ್ನು ಪುಸ್ತಕ ರೂಪಕ್ಕೆ ತಂದವರು ಲೇಖಕ ಎಸ್‌.ವೈ. ಸೋಮಶೇಖರ್. ಹಂಪಿ ವಿಜಯನಗರದ ರಾಜಧಾನಿ ಕೇಂದ್ರ. ಇಲ್ಲಿನ ಬಜಾರುಗಳು ತೀವ್ರ ನಿರ್ಲಕ್ಷೆಗೆ ಗುರಿಯಾಗಿದ್ದವು. ಇಂಥ ಸೂಕ್ಷ್ಮ ವಿಷಯಗಳ ಮೂಲಕ ಅಲ್ಲಿನ ಜನಜೀವನ, ಸಂಸ್ಕೃತಿ, ವ್ಯಾಪಾರ – ವಹಿವಾಟಿನ ವಿಶ್ಲೇಷಣೆ ಇಲ್ಲಿದೆ. ನಮಗೆ ತಿಳಿದಿರುವ ದಾರಿ ಮಾರ್ಗಗಳಿಗೆ ಭೂತಕಾಲದಲ್ಲಿದ್ದ ಕಥೆ, ಪುರಾಣ, ಹೆಸರುಗಳೇ ಬೇರೆ. ಇಂಥ ಪ್ರಾಚೀನ ಸಂಗತಿಗಳನ್ನು ಪ್ರಸ್ತುತ ಚರಿತ್ರೆಯ ಕನ್ನಡಿಯಲ್ಲಿ ಕಾಣುವ ಬಯಕೆ, ಆಸಕ್ತಿ ಇಲ್ಲಿನ ವಿಶೇಷ ಲಕ್ಷಣಗಳು. ದೈನಂದಿನ ಬದುಕಿಗೆ ಚಟುವಟಿಕೆಗಳ ಕೇಂದ್ರಗಳಾದ ಬಜಾರುಗಳಲ್ಲಿನ ಆರ್ಥಿಕ ಸ್ಥಿತಿ – ಗತಿ, ಸಾಮಾಜಿಕ ಸ್ಥಿತಿ – ಗತಿಯನ್ನು ಅವಲೋಕಿಸಿರುವುದು ಗಮನಾರ್ಹ.

ಪ್ರೊ. ಲಕ್ಷ್ಮಣ್‌ ತೆಲಗಾವಿಯವರು ರಚಿಸಿದ ‘ಇದು ಚಿತ್ರದುರ್ಗ’ (೧೯೯೭) ಎಂಬ ಕೃತಿ ಚಿತ್ರದುರ್ಗದ ಬಗ್ಗೆ ಹೊಸ ದೃಷ್ಟಿಯನ್ನು ಹಾಯಿಸಿದ್ದು, ಮರೆಯಾದ ಅನೇಕ ಸಂಗತಿಗಳನ್ನು ಅನಾವರಣಗೊಳಿಸುತ್ತದೆ. ಬಹು ದಿನಗಳ ಆಳವಾದ ಅಧ್ಯಯನ, ಚಿಂತನೆ ಮತ್ತು ಕ್ಷೇತ್ರ ಕಾರ್ಯದ ಪ್ರತಿಫಲದಿಂದ ರೂಪುಗೊಂಡಿದೆ ಈ ಕೃತಿ. ಚಿತ್ರದುರ್ಗದ ಚರಿತ್ರೆಯನ್ನು ಜನಸಾಮಾನ್ಯರಿಂದ ವಿದ್ವಾಂಸರವರೆಗೆ ಪರಿಚಯಿಸುವ ನಿಟ್ಟಿನಲ್ಲಿ ವಿನೂತನ ಶೈಲಿ, ಲೇಖಕರ ಸಾಹಸ ಶ್ಲಾಘನೀಯ. ಈ ವರೆಗೆ ಪ್ರಕಟಗೊಂಡ ಅನೇಕ ಕೃತಿಗಳು ಚಿತ್ರದುರ್ಗವನ್ನು ಚಿತ್ರಿಸಿ, ವ್ಯಾಖ್ಯಾನಿಸಿರುವುದಕ್ಕಿಂತ ಇದು ತೀರಾ ಭಿನ್ನ. ಸರಳವಾಗಿ ನಿರೂಪಿಸುವ ವಿಧಾನ, ಸಂಶೋಧನ ಪ್ರಜ್ಞೆ, ಮನ ಮಿಡಿಯುವಂಥದ್ದು. ಅದ್ಭುತ – ರಮ್ಯವಾದ ಬೆಟ್ಟ – ಕೋಟೆಯ ದೃಶ್ಯಗಳನ್ನು ಛಾಯಾಚಿತ್ರಗಳ ಮೂಲಕ ಸೆರೆಹಿಡಿದಿರುವುದು ಅಪೂರ್ವವಾದುದು. ಚಿತ್ರದುರ್ಗ ಪ್ರಾಚೀನ ಕಾಲದಲ್ಲಿ ಹೇಗಿತ್ತು ಎಂಬುದರ ಬಗ್ಗೆ ಕದಂಬ, ಗಂಗ, ಚಾಲುಕ್ಯ, ಹೊಯ್ಸಳ, ವಿಜಯನಗರ ಮತ್ತು ಪಾಳೆಯಗಾರರ ಅವಧಿಗಳ ಚರಿತ್ರೆಯನ್ನು ಅವಲೋಕಿಸಲಾಗಿದೆ. ವಿವಿಧ ಅರಸರ ಆಳ್ವಿಕೆಯಲ್ಲಿ ರಾಜಧಾನಿಯಾಗಿ, ಆರ್ಥಿಕ ಕೇಂದ್ರವಾಗಿ, ಶಿಕ್ಷಣ ಕೇಂದ್ರವಾಗಿದ್ದ ಚಿತ್ರದುರ್ಗದ ಭವ್ಯ ಪರಂಪರೆಯನ್ನು ಸಮರ್ಥವಾಗಿ ವಿಶ್ಲೇಷಿಸಿದ್ದಾರೆ. ಭಾವನಾತ್ಮಕವಾಗಿ ಇಲ್ಲಿನ ಪರಿಸರವನ್ನು ವಿಶ್ಲೇಪಿಸುವಾಗ ಅಲಕ್ಷಿಸದೇ, ವಾಸ್ತವತೆಯ ಪರಧಿಯಲ್ಲಿಯೇ ಚಿತ್ರದುರ್ಗವನ್ನು ತೋರಿಸುವ ಲೇಖಕರು ಅಭಿನಂದನಾರ್ಹರು.

‘ತುಳುನಾಡಿನ ಗತ ವೈಭವ’(೧೯೯೮)ವು ಉದಯವರ್ಮ ರಾಜರಿಂದ ರಚನೆಗೊಂಡಿದೆ. ಪುರಾಣ ಕಾಲದಲ್ಲಿ ನಾನಾ ತಾಕಲಾಟಗಳನ್ನು ಕಂಡ ತುಳುನಾಡನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಿಕೊಂಡಿದ್ದು ಇತ್ತೀಚೆಗೆ. ಈ ಲೇಖಕರು ತುಳುನಾಡಿನ ಮಾಯಿಪ್ಪಾಡಿ ರಾಜಮನೆತನಕ್ಕೆ ಸೇರಿದವರಾದ್ದರಿಂದ ಇಲ್ಲಿನ ಚರಿತ್ರೆ ನೈಜ ಮತ್ತು ವಾಸ್ತವ ನೆಲೆಯಲ್ಲಿ ರೂಪುಗೊಂಡಿದೆ. ದಕ್ಷಿಣ ಕನ್ನಡದ ವೈಭವ, ಸಂಸ್ಕೃತಿ ಮತ್ತು ನಾಗರಿಕತೆಗಳ ಶೋಧನೆ ಮೂಲಕ ತುಳುವ ಮತ್ತು ಕನ್ನಡಿಗರ ನಡುವೆ ಭಾವನಾತ್ಮಕ ಬೆಸುಗೆಯನ್ನು ಹೆಣಿದಿರುವರು. ಜನಕೇಂದ್ರಿತ ಚರಿತ್ರೆ ಇದಲ್ಲವಾದರೂ ಜನರಿಗೆ ತಿಳಿಸುವ ಮಹದಾಸೆ ಇಲ್ಲಿ ವ್ಯಕ್ತಪಟ್ಟಿದೆ. ಪುರಾಣದಲ್ಲಿ ಇದರ ಬಗೆಗಿನ ವಿವರಗಳು ಕುತೂಹಲ ಮೂಡಿಸುತ್ತವೆ. ಸಪ್ತಕೊಂಕಣ, ಪರಶುರಾಮನ ಕ್ಷೇತ್ರವಾದ ಇದು ವೈಭವ – ವರ್ಣನೆ ಕಂಡರೂ ಅದು ವಾಸ್ತವದ ನೆಲೆಯಲ್ಲಿಯೇ. ಮರೆಯಾದ ಸಾಂಸ್ಕೃತಿಕ ಚಿತ್ರಣವನ್ನು ಪರಿಚಯಿಸುವ ನಿಟ್ಟಿನಲ್ಲಿ ಇತಿಹಾಸ, ಭಾಷೆ, ಸಂಸ್ಕೃತಿ ಕುರಿತ ಅವಲೋಕನ ಇಲ್ಲಿದೆ. ಕಾಸರಗೋಡು ಕನ್ನಡ ಭೂಭಾಗವಾಗಿದ್ದು, ತುಳುನಾಡಿನ ಸಿರಿ ಒಡಲಲ್ಲಿ ಅಡಗಿಸಿಕೊಂಡಿರುವ ಅನೇಕ ಸಂಗತಿಗಳು ಇಲ್ಲಿ ಪ್ರಸ್ತುತವಾಗಿವೆ. ಚರಿತ್ರೆ ಗುರುತಿಸುತ್ತಾ ಕದಂಬ, ಗಂಗ, ಬಾದಾಮಿ ಚಾಲುಕ್ಯರು, ಸ್ಥಳೀಯ ಅರಸರ ಆಳ್ವಿಕೆಯನ್ನು ದಾಖಲಿಸಿದ ಲೇಖಕರ ಸಾಧನೆ ಶ್ಲಾಘನೀಯ. ವಿಷಯ – ವಸ್ತು ಮತ್ತು ವಿಶ್ಲೇಷಣೆಯಲ್ಲಿ ತೀರಾ ಭಿನ್ನವಾದ ಈ ಕೃತಿ, ಸಂಪ್ರದಾಯಿಕ ಚಿತ್ರಣವನ್ನು ಮೀರಿದೆ. ಕೊನೆಯಲ್ಲಿ ಕುಂಬಳ ರಾಜಮನೆತನ, ಬ್ರಿಟಿಷರು ಮತ್ತು ಸ್ವಾತಂತ್ರ್ಯ ಹೋರಾಟದ ವಿವಿಧ ಸಂಗತಿಗಳ ವಿಶ್ಲೇಷಣೆ ಅರ್ಥಪೂರ್ಣ ಎನಿಸಿವೆ.

ಕನ್ನಡ ನಾಡು – ನುಡಿಗಳ ಬಗ್ಗೆ ಇತಿಹಾಸಕಾರರಿಗಿಂತ ಹವ್ಯಾಸಿ ಲೇಖಕರೇ ಬರೆದುದು ಹೆಚ್ಚು. ಈ ಸಾಲಿಗೆ ಶಿವಾನಂದ ಬೇಕಲ್‌ ರಚಿಸಿದ ‘ಬೇಕಲ ಕೋಟೆ: ಒಂದು ಚಾರಿತ್ರಿಕ ಅಧ್ಯಯನ’ (೧೯೯೯) ಸೇರುತ್ತದೆ. ಇಲ್ಲಿ ಕೋಟೆ, ಕೆರೆ, ಬಾವಿ, ಕಂದಕಗಳ ಮೂಲಕ ಕೇರಳ – ಕರ್ನಾಟಕ ಭಾಗದ ಕೊಂಡಿಯಾಗಿರುವ ಬೇಕಲಕೋಟೆಯನ್ನು ಪರಿಚಯಿಸಿದ್ದಾರೆ. ವಿಶೇಷವಾಗಿ ಕೆಳದಿ ಅರಸರ ವೈಭವದ ಚರಿತ್ರೆಯ ಇಲ್ಲಿನ ಮುಖ್ಯ ವಸ್ತು ವಿಶ್ಲೇಷಣೆ. ಒಂದು ಕಾಲಾನು ಕ್ರಮಣಿಕೆಯನ್ನು ಪಾಲಿಸದೆ ಲೇಖಕರು ಕೋಟೆ, ಸುತ್ತ ಮುತ್ತಲಿನ ಸಾಹಿತ್ಯ ಚರಿತ್ರೆ ಆಕರಗಳ ಹುಡುಕಾಟದಿಂದ ಖಚಿತತೆಗಾಗಿ ಪರಿದಾಡಿದ್ದಾರೆ. ಕೆಳದಿಯ ಅವಸಾನದಲ್ಲಿ ಹೈದರಾಲಿ – ಟಿಪ್ಪು ಸುಲ್ತಾನರ ಆಡಳಿತ ವೈಖರಿಯ ಅವಲೋಕನ ಇಲ್ಲಿನ ಚರ್ಚಿತ ಸಂಗತಿಗಳು. ಚಾರಿತ್ರಿಕ ಅಧ್ಯಯನವೆನಿಸಿದರೂ ಚರಿತ್ರೆಯ ಶಿಸ್ತು, ಸಿದ್ಧಾಂತಗಳ ಪ್ರತಿಪಾದನೆ ಗೌಣವೆಂಬಂತೆ ತೋರುತ್ತದೆ.

ತೊಂಬತ್ತರ ದಶಕದ ಮಧ್ಯಭಾಗದಲ್ಲಿ ಕೆ.ಎಸ್‌. ಶಿವಣ್ಣ ರಚಿಸಿದ ‘ಕಳಲೆ ಮನೆತನದ ವೀರಶೈವ ದಳವಾಯಿಗಳು’ ಎಂಬ ಕೃತಿ ಗಮನಾರ್ಹವಾದುದು. ಮೂಲತಃ ಬೇಡ ಪಂಗಡಕ್ಕೆ ಸೇರಿದ ದಳವಾಯಿ ಮನೆತನದವರು ವೀರಶೈವರಾದ ಸಂದರ್ಭ, ಸಾಮಾಜಿಕ ಶ್ರೇಣೀಕರಣ, ಧಾರ್ಮಿಕ ಹಿನ್ನೆಲೆ ಇಲ್ಲಿ ಚರ್ಚಿತ ಸಂಗತಿಗಳು. ೧೭ ಮತ್ತು ೧೮ ನೇ ಶತಮಾನಗಳ ಮೈಸೂರು ರಾಜಕೀಯದಲ್ಲಿ ಸರ್ವಾಧಿಕಾರಿಗಳಾಗಿ, ದಳವಾಯಿಗಳಾಗಿ ಮೈಸೂರು ಒಡೆಯರ ಚರಿತ್ರೆಯೊಂದಿಗೆ ಇವರ ಚರಿತ್ರೆ ಬೆಸೆದುಕೊಂಡಿದೆ. ನಂಜರಾಜಯ್ಯ ಮತ್ತು ದೇವರಾಜಯ್ಯ ಎಂಬ ಸಹೋದರರಿಬ್ಬರು ಫ್ರೆಂಚರಪರ, ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಮ, ಹೈದರಾಲಿ ಇವರ ರಾಜಕೀಯ ಕಮ್ಮಟದಲ್ಲಿ ಪಳಗಿದ್ದು ವಾಸ್ತವ. ಈ ಕೃತಿಯಲ್ಲಿರುವ ಲೇಖನಗಳು ವಿಚಾರ ಸಂಕಿರಣದಲ್ಲಿ ಮಂಡಿಸಿದವು. ಕಳಲೆ ದಳವಾಯಿಗಳನ್ನು ಕುರಿತ ಆಕರ, ರಾಜಕೀಯ, ಇತಿಹಾಸ, ಸಾಹಿತ್ಯ ಮತ್ತು ಕಲೆ, ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿ ಇತರ ಸಂಗತಿಗಳ ವಿಶ್ಲೇಷಣೆಯಿದೆ.

ಇತ್ತೀಚಿನ ಸಂದರ್ಭದಲ್ಲಿ ಕನ್ನಡ ನಾಡು – ನುಡಿ, ಸಂಸ್ಕೃತಿ ಕುರಿತ ಕೃತಿಗಳ ಪ್ರಕಟಣೆಗೆ ಲೆಕ್ಕವಿಲ್ಲ. ಎಚ್‌.ಎಸ್‌. ಗೋಪಾಲರಾವ್‌ (೧೯೯೩) ‘ನಮ್ಮ ನಾಡು ಕರ್ನಾಟಕ’ ಎಂಬ ಕೃತಿಯನ್ನು ರಚಿಸಿದ್ದು, ತಮ್ಮ ಕಳಕಳಿಯನ್ನು ನಾಡಿನ ಬಗ್ಗೆ ವ್ಯಕ್ತಿಪಡಿಸಿರುವುದು ಚರಿತ್ರೆಯ ತಳಹದಿಯ ಮೇಲೆ. ಇದೇ ದಾಟಿಯಲ್ಲಿದೆ ಜೆ.ಎಂ. ನಾಗಯ್ಯನವರ ‘ಕಲಕೇರಿ’ (೧೯೯೫) ಎಂಬ ಕೃತಿ. ಕನ್ನಡ ವಿ.ವಿ.ಯಲ್ಲಿ ಡಿ. ಲಿಟ್‌ ಪದವಿಗಾಗಿ ಮಂಡಿಸಿದ ಪ್ರಬಂಧ ಕೃತಿ ರೂಪವಾದುದು ‘ಬಾದಾಮಿ: ಸಾಂಸ್ಕೃತಿಕ ಅಧ್ಯಯನ’ (೨೦೦೦). ಡಾ. ಶೀಲಕಾಂತ ಪತ್ತಾರ ಇದರ ಲೇಖಕರು. ಬಾದಾಮಿಯನ್ನು ಆಳಿದ ವಿವಿಧ ರಾಜವಂಶಗಳ ಕಾಲ ಘಟ್ಟಗಳಲ್ಲಿದ್ದ ಸಂಸ್ಕೃತಿ, ಕಲೆ, ಜನಜೀವನದ ವಿಶೇಷತೆಗಳನ್ನು ಇದರಲ್ಲಿ ವಿಶ್ಲೇಷಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟ ಕುರಿತ ಕೃತಿಗಳು

ದಾಸ್ಯದ ನೊಗವನ್ನು ಕಿತ್ತೊಗೆಯಲು, ಸ್ವೇಚ್ಛೆಯಿಂದ ಬದುಕಲು ಮತ್ತು ಪರಕೀಯರಿಂದ ವಿಮೋಚನೆಗೊಂಡು ಮುಕ್ತವಾಗಿರಲು ಸ್ವಾತಂತ್ರ್ಯ ಹೋರಾಟ ಅಂತಿಕಮ ಅಸ್ತ್ರವಾಯಿತು. ಇಲ್ಲಿ ಸ್ವಾತಂತ್ರ್ಯ ಕುರಿತಂತೆ ಚಳವಳಿ, ಸಂಗ್ರಾಮ, ಹೋರಾಟ, ಸಮರ, ದಂಗೆ ಎಂದೆಲ್ಲ ಕರೆಯಲಾಗಿದೆ. ವಸಾಹತುಶಾಹಿಯನ್ನು ಕುರಿತು ಬಂದ ಪ್ರಕಟಣೆಗಳು ಹಲವು. ಈ ಹಿಂದೆ ಪ್ರಕಟವಾದ ಕೃತಿಗಳಿಗಿಂತ ವ್ಯತಿರಿಕ್ತವಾದ ಲಕ್ಷಣಗಳನ್ನು ಇವು ಹೊಂದಿವೆ. ಕರ್ನಾಟಕವನ್ನು ದಕ್ಷಿಣ ಭಾರತದೊಳಗೆ ನೋಡುವ ಕುತೂಹಲ ಇತ್ತೀಚಿನ ಬೆಳವಣಿಗೆಯಾಗಿದೆ. ಈ ಕುರಿತು ‘ದಕ್ಷಿಣ ಭಾರತ: ವಸಾಹತುಶಾಹಿ ರಾಷ್ಟ್ರೀಯತೆ ಮತ್ತು ಸಂಘರ್ಷ’ ಎಂಬ ಕೃತಿಯನ್ನು (೨೦೦೦) ಡಾ.ಎಸ್‌. ಚಂದ್ರಶೇಖರ್ ರಚಿಸಿರುವರು. ಉತ್ತರ ಭಾರತಕ್ಕೆ ವ್ಯತಿರಿಕ್ತವಾದ ದಕ್ಷಿಣ ಭಾರತದ ಚರಿತ್ರೆಯನ್ನು ಕಟ್ಟಿಕೊಡುವಲ್ಲಿ ಉದಾಸೀನತೆ ಕವಿದಿತ್ತು. ಇಂಥ ಪ್ರಯತ್ನಗಳಿಗೆ ಹಾಸುಹೊಕ್ಕಾದ ಪರಿಸರ ನಿರ್ಮಿಸಿದ್ದು ತೊಂಭತ್ತರ ದಶಕ. ವಸಾಹತುಶಾಹಿ ವಿರುದ್ಧ ದಂಡೆದ್ದ ಸ್ಥಳೀಯರ ಪ್ರತಿ ರೋಧವು ಇಲ್ಲಿ ಗಮನಾರ್ಹ. ಸ್ವಾತಂತ್ರ್ಯ ಹೋರಾಟದ ಕ್ರಾಂತಿ ಪುಟಗಳಿಗೆ ಸೇರಿದ ಹುತಾತ್ಮರ ವೀರಸ್ಮರಣೆಯನ್ನು ಇತರರು ಮಾಡಿದ್ದಾರೆ. ತ್ಯಾಗ, ಬಲಿದಾನ, ಆತ್ಮಾಹುತಿಗಳ ಚಿತ್ರಣವು ದಾಖಲಾಗಿರುವುದು ಸ್ತುತ್ಯರ್ಹ.

ಇಂಥಾ ಸಾಲಿಗೆ ಆಯಾಜಿಲ್ಲೆಗಳ ಮಟ್ಟಿಗೆ ಪುಸ್ತಕಗಳು ಪ್ರಕಟಗೊಂಡಿವೆ. ಅವು ಸಮಗ್ರ ಕರ್ನಾಟಕವನ್ನು ಒಳಗೊಳ್ಳದೇ, ಬಿಡಿ ಬಿಡಿ ಅಧ್ಯಯನಗಳಾಗಿವೆ. ಬಳ್ಳಾರಿ, ಬೆಳಗಾವಿ, ರಾಯಚೂರು ಹೀಗೆ ಕೆಲವು ಜಿಲ್ಲೆಗಳನ್ನು ಹೆಸರಿಸಬಹುದು. ಸಿ. ಲಿಂಗಪ್ಪನವರು ಪ್ರಕಟಿಸಿದ ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈಸೂರು’ (೨೦೦೦) ಗಮನಾರ್ಹ ಕೃತಿ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ – ಬಲಿದಾನವಾದ ಹುತಾತ್ಮರನ್ನು ಸ್ಮರಿಸುವ ನಿಟ್ಟಿನಲ್ಲಿ ಮುಖ್ಯಪಾತ್ರವಹಿಸಿವೆ. ಮೂಲತಃ ಸ್ವಾತಂತ್ರ್ಯ ಹೋರಾಟಗಾರರಾದ ಲೇಖಕರು ಘಟನೆಗಳನ್ನು ನೈಜವಾಗಿ ಚಿತ್ರಿಸಿರುವುದುಂಟು. ಹೋರಾಟಗಾರರಿಗೆ ಸ್ಫೂರ್ತಿದಾಯಕ ಸ್ಥಳವಾದ ವೀರಭದ್ರಸ್ವಾಮಿ ದೇವಸ್ಥಾನವು ಒಂದು. ಸರ್ಕಾರ ಇದನ್ನು ಜೀರ್ಣೋದ್ಧಾರ ಮಾಡಿಸಿದೆ. ‘ಬ್ರಿಟಿಷರೇ ಭಾರತವನ್ನು ಬಿಟ್ಟು ತೊಲಗಿ’ ಎಂಬ ಚಳುವಳಿಗೆ ಶಿವಮೊಗ್ಗ ಜಿಲ್ಲೆಯ ಈಸೂರು ಸ್ಪಂಧಿಸಿದ್ದು ಅಮೋಘ. ಈ ಸಂಬಂಧವಾಗಿ ೫ ಜನ ನೇಣುಗಂಬವೇರಿದ ವಿವರವಿದೆ. ಅವರುಗಳೆಂದರೆ: ಗುರಪ್ಪ ಬಿನ್‌ ಈಶ್ವರಪ್ಪ (೮ – ೩ – ೧೯೪೩), ಮಲ್ಲಪ್ಪ ಬಿನ್‌ ಬಸಪ್ಪ (೮ – ೩ – ೧೯೪೩), ಸೂರ್ಯನಾರಾಯಣಚಾರ್ (೯ – ೩ – ೧೯೪೩), ಬಿಡಕಳ್ಳಿ ಹಾಲಪ್ಪ ಬಿನ್‌ ಬಸಪ್ಪ (೯೦೩ – ೧೯೩) ಮತ್ತು ಗೌಡ್ರ ಶಂಕ್ರಪ್ಪ ಬಿನ್‌ ಹೊಳೆಯಪ್ಪ (೧೦ – ೩ – ೧೯೪೩) ನವರುಗಳ ಹೆಸರುಗಳನ್ನು ಸ್ಮಾರಕದಲ್ಲಿ ಕೆತ್ತಲಾಗಿದೆ. ಪ್ರಸ್ತುತ ಕೃತಿಯಲ್ಲಿ ೧೯೨೦ರ ಅಸಹಕಾರ ಚಳುವಳಿ, ೧೯೩೦ ರ ಉಪ್ಪಿನ ಸತ್ಯಾಗ್ರಹ, ೧೯೩೦ – ೩೧ ಉತ್ತರ ಕನ್ನಡದ ಸಿರ್ಸಿ, ಸಿದ್ಧಾಪುರ, ಅಂಕೋಲಗಳಲ್ಲಿ ಕರಬಂಧಿ ಸತ್ಯಾಗ್ರಹ, ೧೯೩೮ ರ ಶಿವಪುರ ಸತ್ಯಾಗ್ರಹ, ವಿದುರಾಶ್ವತ್ಥ ಘಟನೆ, ೧೯೩೯ – ೪೦ ಅರಣ್ಯ ಸತ್ಯಾಗ್ರಹ ಮೊದಲಾದವುಗಳ ವಿಶ್ಲೇಷಣೆಯಿದೆ. ಇಲ್ಲಿರುವ ಸ್ಮಾರಕವು ಈ ಎಲ್ಲ ಘಟನೆಗಳಿಗೆ ಸಾಕ್ಷಿ.

ಇತಿಹಾಸ ದರ್ಶನ ಸಂಪುಟಗಳು (ಸಂ. ರಿಂದ ೧೧ ರವರೆಗೆ)

ಕರ್ನಾಟಕ ಇತಿಹಾಸ ಅಕಾಡೆಮಿ ಪ್ರತಿ ವರ್ಷದ ಸಮ್ಮೇಳನದಲ್ಲಿ ಮಂಡಿಸಲ್ಪಟ್ಟ ಲೇಖನಗಳನ್ನು ಇತಿಹಾಸ ದರ್ಶನದಲ್ಲಿ ಪ್ರಕಟಿಸುತ್ತದೆ. ೧೯೯೧ ರಲ್ಲಿ ಪುರಾತತ್ವಕ್ಕೆ ಸಂಬಂಧಿಸಿದ ಲೇಖನಗಳೇ ಹೆಚ್ಚಾಗಿ ಪ್ರಕಟಗೊಂಡಿವೆ. ಜಟಿಂಗರಾಮೇಶ್ವರದಲ್ಲಿ ಪ್ರಾಗೈತಿಹಾಸಿಕ ನೆಲೆಗಳನ್ನು ಡಾ.ಅ. ಸುಂದರರು ಐತಿಹ್ಯಗಳ ಮೂಲಕ ವಿವೇಚಿಸಿದ್ದಾರೆ. ಡಾ.ಎಚ್‌.ಆರ್. ರಘುನಾಥ ಭಟ್ಟರು ಬನವಾಸಿಯಲ್ಲಿ ದೊರೆತ ರೋಮನ ‌ಅವಶೇಷಗಳ ಬಗ್ಗೆ ತಿಳಿಸಿದ್ದಾರೆ. ಅಪ್ರಕಟಿತ ಶಾಸನ, ವಿಗ್ರಹ, ದೇವಾಲಯ, ವಾಸ್ತು ಅವಶೇಷಗಳು, ಭಿತ್ತಿ ಚಿತ್ರಗಳು, ವಿಗ್ರಹಾರಾಧನೆ, ಕೈಗಾರಿಕೆ, ವ್ಯವಸಾಯ, ನೀರಾವರಿ, ಕೋಟೆ, ಕಾಮಗಾರಿ, ಹೊಯ್ಸಳರು ಮತ್ತು ಪಾಳೆಯಗಾರರಲ್ಲದೆ, ಬ್ಯಾಂಕಿಂಗ್‌ ವ್ಯವಸ್ಥೆ ಮೊದಲಾದ ಸಂಗತಿಗಳಿವೆ.

೧೯೯೨ರಲ್ಲಿ (ಸಂ.೭) ತುಮಕೂರು ಜಿಲ್ಲೆಯ ಪ್ರಾಗೈತಿಹಾಸಿಕ ನೆಲೆಗಳ ಶೋಧ, ಬಾರಕೂರು, ತರೀಕೆರೆಗಳ ಶಾಸನ – ಶಿಲ್ಪ, ಬೌದ್ಧಾವಶೇಷಗಳು, ದಾನ, ದೇವಾಲಯ – ನಾಗರ ಶೈಲಿಗಳ ವಿವರವಿದೆ. ಚಿತ್ರದುರ್ಗದ ವೀರ ಮಾಸ್ತಿಕಲ್ಲು, ಕೆರೆಗಳ ಶೋಧನೆ, ನೀರಾವರಿ, ಹರಪನಹಳ್ಳಿ, ಹಂಡೆ – ಕೆಳದಿ ಪಾಳೆಯಗಾರರ ಕಾಲದ ಸಂಸ್ಕೃತಿ ಕುರಿತ ವಿವರಗಳಿವೆ. ಬಲಿ, ಕುಕ್ಕಲನಾಡು, ಗುಲಾಮಗಿರಿ ಪದ್ಧತಿ, ಬೇಟೆ, ಒನಕೆ ಓಬವ್ವ ಮೊದಲಾದ ಸಂಗತಿಗಳಿಗೆ ಮರು ಜೀವ ಕೊಡಲಾಗಿದೆ.

ಬನ್ನೇರುಘಟ್ಟ, ಚಲುವನ ಹಳ್ಳಿ, ಹೊಳಕಲ್‌ ಬೆಟ್ಟ, ದೇವಾಲಯ ಶಿಖರಗಳು, ಬೀದರ್ ಜಿಲ್ಲೆಯ ದೇವಿ ಶಿಲ್ಪಿಗಳು, ಕದಂಬರ ಕಾಲದ ವೈದಿಕ ಸಂಸ್ಕೃತಿ, ಕೊಡಗಿನ ದೇವರ ಕಾಡು, ಹೈದರಾಬಾದ್‌ ಕರ್ನಾಟಕ – ಪತ್ರಿಕೋದ್ಯಮ, ವಡ್ಡಾರಾಧನೆಯಲ್ಲಿ ಶಿಕ್ಷಣ ವ್ಯವಸ್ಥೆ ಮೊದಲಾದ ಲೇಖನಗಳು ೧೯೯೩ ರ ಸಂಪುಟ ೮ ರಲ್ಲಿ ಪ್ರಕಟವಾಗಿವೆ.

ಚರಿತ್ರೆಯ ಪುನಾರಚನೆಗೆ ಸಂಬಂಧಿಸಿದಂತೆ ೧೯೯೪ ರಲ್ಲಿ (ಸಂ೯) ವಿಶೇಷ ಕಾಳಜಿ ವ್ಯಕ್ತಪಟ್ಟಿತು. ಶಿಲಾಯುಗ ನೆಲೆ ಮೂಗನಾಯಕನ ಕೋಟೆ, ತಲಕಾಡಿನ ಉತ್ಖನನ, ಸನ್ನತಿದುರ್ಗ, ಶ್ರವಣಬೆಳಗೊಳ, ಚಂದ್ರಗುತ್ತಿ, ಗದ್ದೆಮೆನೆ ಶಾಸನ ಮೊದಲಾದ ವಿಷಯಗಳು ಗಮನಾರ್ಹವಾದವು. ದೇವಾಲಯಗಳ ವಾಸ್ತು, ಪರಿಭಾಷೆ, ಇಕ್ಕೇರಿ, ಬಿದನೂರು, ಬಸವನ ಬಾಗೇವಾಡಿ ಇತರ ಸ್ಥಳಗಳಲ್ಲಿನ ಪುರಾತತ್ವ ಅವಶೇಷಗಳು ಮುಖ್ಯವಾಗಿವೆ. ದೇವಾಲಯಗಳ ವಾಸ್ತು, ಪರಿಭಾಷೆ, ಇಕ್ಕೇರಿ, ಬಿದನೂರು, ಬಸವನಬಾಗೇವಾಡಿ ಇತರ ಸ್ಥಳಗಳಲ್ಲಿನ ಪುರಾತತ್ವ ಅವಶೇಷಗಳಲ್ಲದೆ, ರಾಷ್ಟ್ರಕೂಟರ ಕಾಲದ ಸಂಸ್ಕೃತಿ ಬಗ್ಗೆ ಕೃಷಿ ನಡೆದಿದೆ. ಮೈಸೂರಿನ ಕೋಟೆ, ನಾಯಕನಹಟ್ಟಿ ದೇವಾಲಯ, ಪ್ರಾಚೀನ ಭಾರತದ ಆಯುಧಗಳು, ಹೊಯ್ಸಳರ ಅಳತೆಗೋಲು, ಗಂಗರ ಕಾಲದ ಜೈನ ಧರ್ಮ, ಬಂಕಾಪುರ ಕದಂಬರು, ವಿದ್ಯಾರಣ್ಯ – ಕ್ರಿಯಾಶಕ್ತಿ ವಿವಾದ, ಕೆಳದಿ ರಾಣಿ ವೀರಮ್ಮಾಜಿ ಸಮಾಧಿ, ಮಲೆನಾಡು, ಕೊಡಗು ಇತರ ಪ್ರಾದೇಶಿಕ ಸಂಗತಿಗಳು ಗಮನಾರ್ಹವಾಗಿವೆ.

ಭದ್ರಾ ಜಲಾಶಯದಲ್ಲಿ ಶಿಲಾಯುಧಗಳು ದೊರೆತದ್ದು ೧೯೯೫ನೇ (ಸಂ – ೧೦) ವರ್ಷದ ಹೊಸ ಸಂಗತಿ. ಬೃಹತ್‌ ಶಿಲಾ ಸ್ಮಾರಕ ನೆಲೆಗಳ ಸಮಾಧಿಗಳು, ಕನಕಗಿರಿಯ ೪ ಲೌಕಿಕ ಶಿಲ್ಪಗಳು, ಬಾದಾಮಿ ಗುಹೆಗಳು, ಪರಸಗಡ, ಹಾಸನ, ವಿಠಲಾಪುರ, ಸೊಂಡೂರು, ಬಾದಾಮಿಗಳ ವಿವರಗಳಿವೆ. ಸನ್ನತಿ ಉತ್ಖನನ, ಜನಾಂಗಿಕ ವಿವರಗಳು, ಎಮ್ಮೆ ಬಸವ, ಹೊಯ್ಸಳರ ಬಿರುದು, ನಾಗಪಂಥ, ಕೆಳದಿ ಅರಸರು ಮತ್ತು ನರಸಿಂಹ ಶಿಲ್ಪ ಇತರ ವಿವರಗಳಿವೆ. ಹೀಗೆ ಇತರ ಸಂಪುಟಗಳಲ್ಲಿ ತುಮಕೂರು ಬ ಳಿ ಹಳೆ ಶಿಲಾಯುಗ, ಬಳ್ಳಿಗಾವಿ, ಪುರ್ವಭಾವಿ ಇತಿಹಾಸ ಸಂಸ್ಕೃತಿ, ಸಾಸಲು, ಸೇಡಂ ತಾಲೂಕಿನ ಅವಶೇಷಗಳು, ವಾಸಂತಿಕಾದೇವಿ, ಚಾಲುಕ್ಯರ ನಾಣ್ಯ, ಶಿಲ್ಪಗಳು, ಶಾಸನಗಳು ಗುಮ್ಮನಾಯಕನ ಪಾಳೆಯಗಾರರು, ಬೆಳ್ವೊಲ – ೩೦೦, ನಿಡಗಲ್ಲು, ಸಂಕೇಶ್ವರ, ಮಧುಗಿರಿ ಇತರ ಸ್ಥಳಗಳ ಚರಿತ್ರೆ ಮತ್ತು ಸಾಂಸ್ಕೃತಿಕ ಸಂಗತಿಗಳು ವಿಶ್ಲೇಷಣೆಗೊಳಗಾಗಿವೆ.

ಕನ್ನಡ ವಿ.ವಿ. ಸಮಗ್ರ ಚರಿತ್ರೆ ಸಂಪುಟಗಳು

ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಸ್ಥಾಪನೆಯಾದಾಗ ಹಮ್ಮಿಕೊಂಡ ಆರಂಭಿಕ ಯೋಜನೆಗಳಲ್ಲಿ ಕರ್ನಾಟಕ ಸಮಗ್ರ ಚರಿತ್ರೆ ಸಂಪುಟಗಳ ಯೋಜನೆ (೧೯೯೨ – ೧೯೯೭) ಯು ಪ್ರಮುಖವಾದುದು. ಕರ್ನಾಟಕ ಚರಿತ್ರೆಯನ್ನು ಸಂಪೂರ್ಣವಾಗಿ ಹೊಸ ಬಗೆಯಲ್ಲಿ ಬರೆಯಿಸಿ, ಪ್ರಕಟಿಸುವ ದೃಷ್ಟಿಯಿಂದ ಖ್ಯಾತ ಇತಿಹಾಸಕಾರ ಡಾ.ಬಿ. ಷೇಕ್‌ ಅಲಿ ಅವರನ್ನು ಪ್ರಧಾನ ಸಂಪಾದಕರಾಗಿ ನೇಮಿಸಲಾಗಿತ್ತು. ಅನೇಕ ಲೇಖಕರು, ಸಂಪಾದಕರು, ಸಂಯೋಜಕರು ಇಲ್ಲಿ ಕೆಲಸ ಮಾಡಿರುವುದು ಶ್ಲಾಘನೀಯ. ಇವರೆಲ್ಲರ ಪರಿಶ್ರಮದಿಂದ ೧೯೯೭ ಅಕ್ಟೋಬರ್ ೧೮ ರಂದು ೭ ಸಂಪುಟಗಳು ಪ್ರಕಟವಾದವು.

ಸಂಪುಟ – ೧, ಆದಿ ಹಳೇ ಶಿಲಾಯುಗದಿಂದ ಕ್ರಿ.ಶ. ೬೪೦ ರವರೆಗಿದೆ. ಇದರ ಸಂಪಾದಕರು ಡಾ.ಅ. ಸುಂದರ. ಇದರಲ್ಲಿ ಕರ್ನಾಟಕವನ್ನು ಆಧುನಿಕ ಅಧ್ಯಯನ ಕ್ರಮಗಳಿಂದ ವಿಶಿಷ್ಟವಾಗಿ ಪರಿಚಯಿಸಲಾಗಿದೆ. ನೆಲ ಮತ್ತು ಜನ ಸಮುದಾಯ, ಮೂಲ ಆಕರಗಳು, ಪರಿಸರ ಮತ್ತು ಸಂಸ್ಕೃತಿ, ಪ್ರಾಚೀನತಮ ಮಾನವ ಸಂಸ್ಕೃತಿಗಳು, ವಿಕಸನದ ಹಂತಗಳು, ಪೂರ್ವಭಾವಿ ಇತಿಹಾಸ ಹಂತದ ಸಂಸ್ಕೃತಿಗಳು, ಪ್ರಾಗಿತಿಹಾಸ ಕಾಲದ ನಿರ್ಮಿತಿ ಮತ್ತು ಚಿತ್ರಕಲೆ, ಸಾಮ್ರಾಜ್ಯ ಪ್ರಭಾವ: ಮೌರ್ಯರು, ಸಾಮ್ರಾಜ್ಯದ ಉದಯ – ಶಾತವಾಹನರು, ಅದಿಕದಂಬ, ಗಂಗ ಮತ್ತು ಬಾದಾಮಿ ಚಾಲುಕ್ಯರವರೆಗೆ ರಾಜಕೀಯ ಮತ್ತು ಸಾಂಸ್ಕೃತಿಕ ವಿವರಗಳಿವೆ. ಕರ್ನಾಟಕದ ಪುರಾತತ್ವ ನೆಲೆಗಳನ್ನು ಗುರುತಿಸುವಾಗ ಮಾನವ ಸ್ಥಿತ್ಯಂತರಗೊಂಡ ಬೇಟೆ, ಪಶುಪಾಲನೆ ಮತ್ತು ಕೃಷಿ ಹಂತಗಳನ್ನಲ್ಲದೆ, ಸಂಘಟನೆಗೊಂಡು ಆಳ್ವಿಕೆ ನಡೆಸಿದ ವಿವರಗಳು ಮಹತ್ವವಾಗಿವೆ. ಕರ್ನಾಟಕ ಚರಿತ್ರೆಯನ್ನು ಭಿನ್ನವಾಗಿ ಕಟ್ಟಿಕೊಡುವ ನಿಟ್ಟಿನಲ್ಲಿ ಮರೆಯಾದ ಸಂಗತಿಗಳಿಗೆ ಇಲ್ಲಿ ಆದ್ಯತೆಯಿದೆ. ಬನವಾಸಿ, ಚಂದ್ರವಳ್ಳಿ, ಬ್ರಹ್ಮಗಿರಿ, ಹಳ್ಳೂರು, ಸನ್ನತಿ, ವಡಗಾಂವ್‌ ಮಾಧವಪುರ, ತಿ.ನರಸೀಪುರ, ತಲಕಾಡು, ಹಂಪಿ ಮೊದಲಾದ ಸ್ಥಳಗಳ ಉತ್ಖನನ ಕಾರ್ಯ ನಡೆದಿರುವುದು ಶ್ಲಾಘನೀಯ. ಕನ್ನಡ ಸಂಸ್ಕೃತಿಗೆ ನಾಂದಿ ಹಾಕಿದ ಕದಂಬರ ಇತಿಹಾಸವು ರೋಮಾಂಚನ. ಹೀಗೆ ರಾಜಪ್ರಭುತ್ವಗಳ ಚರಿತ್ರೆ ಇಲ್ಲಿ ದಾಖಲಾಗಿರುವುದು ಸ್ತುತ್ಯರ್ಹ.

ಸಂಪುಟ ಎರಡರ ಸಂಪಾದಕರು ಪ್ರೊ.ಬಿ. ಸುರೇಂದ್ರರಾವ್‌. ಇದರಲ್ಲಿ ರಾಷ್ಟ್ರಕೂಟರ ರಾಜಕೀಯ ಏಳಿಗೆಯಿಂದ ಚರಿತ್ರೆ ಆರಂಭವಾಗುತ್ತದೆ. ಇತಿಹಾಸ ರಚನೆ – ವಸಾಹುತು ಧೋರಣೆ, ಸ್ಥಳೀಯತೆಯ ಹುಡುಕಾಟ ಇಲ್ಲಿ ಬಿಂಬಿತಗೊಂಡಿರುವುದುಂಟು. ಮಧ್ಯಯುಗದ ಚಕ್ರಾಧಿಪತ್ಯ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯರು, ಕರ್ನಾಟಕದಲ್ಲಿ ಕಲಚೂರಿಗಳು, ಸೇವುಣರು, ವಾರಂಗಲ್ಲಿನ ಕಾಕತೀಯರು, ಹೊಯ್ಸಳರ ಬಗ್ಗೆ ವಿಶ್ಲೇಷಿಸಲಾಗಿದೆ. ಬರವಣಿಗೆಯ ಸ್ವರೂಪ, ಶಾಸನಗಳ ಬಳಕೆ, ಲಿಖಿತ – ಮೌಖಿಕ ಆಕರಗಳು ಇತರ ಸಂಗತಿಗಳ ವೈಜ್ಞಾನಿಕ ವಿಶ್ಲೇಷಣೆಯಿದೆ. ಕ್ರಿ.ಶ. ೬೪೦ರಿಂದ ೧೩೩೬ರವರೆಗೆ ಇದರ ಕಾಲ ವ್ಯಾಪ್ತಿ. ರಾಷ್ಟ್ರಕೂಟರ ಕಾಲದ ಅಧಿಕಾರಿಗಳು, ಕಂದಾಯ, ಸ್ಥಳೀಯ ಮುಖ್ಯಸ್ಥ, ಪ್ರಾಂತ ಮತ್ತು ಗ್ರಾಮ ಹಂತ, ಮಹಾಜನ, ಹೀಗೆ ರಾಜಕೀಯದಲ್ಲಿ ಉಚ್ಛ್ರಾಯ ಹಂತ ರಾಷ್ಟ್ರಕೂಟರದು. ಧ್ರುವ, ೩ನೇ ಗೋವಿಂದ, ಅಮೋಘವರ್ಷ ನೃಪತುಂಗ, ೨ನೇ ಕೃಷಣ, ೩ನೇ ಕೃಷ್ಣ ಇವರಲ್ಲಿ ಪ್ರಮುಖ ಅರಸರು. ಕಲ್ಯಾಣದ ಚಾಲುಕ್ಯರು ಮೂಲದಲ್ಲಿ ಬಾದಾಮಿ ಚಾಲುಕ್ಯರನ್ನು ಹೋಲುತ್ತಾರೆ. ತೈಲ, ಸತ್ಯಾಶ್ರಯ, ವಿಕ್ರಮಾದಿತ್ಯ, ೩ನೇ ಸೋಮೇಶ್ವರ, ಜಗದೇಕಮಲ್ಲ, ಭೂಲೋಕ ಮಲ್ಲ ಮೊದಲಾದ ಅರಸರು ಪ್ರಸಿದ್ಧರಾಗಿರುವರು. ರಾಜ್ಯ ವಿಸ್ತಾರಕ್ಕೆ ಯುದ್ಧ ಅನಿವಾರ್ಯ. ಚಾಲುಕ್ಯ – ಚೋಳರು ನಡುವಿನ ‘ಕೊಪ್ಪಂ ಯುದ್ದ’ ಮುಖ್ಯವಾದುದು. ಇವರು ವಾಸ್ತುಶಿಲ್ಪ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಿಗೆ ಕೊಟ್ಟ ಪ್ರೋತ್ಸಾಹವು ಪರಿಗಣನಾರ್ಹ. ೩ನೇ ಸೋಮೇಶ್ವರನ ಮಾನಸೋಲ್ಲಾಸ ವಿಶ್ವಕೋಶ, ಬಸವಣ್ಣ, ಬಿಜ್ಜಳ, ವರಂಗಲ್ಲಿನ ಕಾಕತೀಯ, ಹೊಯ್ಸಳ ಮೊದಲಾದವರ ರಾಜಕೀಯ ಮತ್ತು ಸಾಂಸ್ಕೃತಿಕ ಚಿತ್ರಣ ಇಲ್ಲಿ ಅನಾವರಣಗೊಂಡಿದೆ.

ಕೆ.ಎಸ್‌. ಶಿವಣ್ಣ ಸಂಪಾದಕರಾಗಿರುವ ಮೂರನೇ ಸಂಪುಟದಲ್ಲಿ (೧೩೩೬ – ೧೭೬೦) ವಿಜಯನಗರ ಸ್ಥಾಪನೆ ಅದರ ಸುತ್ತಮುತ್ತಲಿನ ಚರಿತ್ರೆ ಬಹು ಭಾಗ ಸೇರಿದೆ. ವಿಶೇಷವಾಗಿ ಅಮರನಾಯಕರ ಪಾತ್ರ ವಿಶ್ಲೇಷಣೆಗೊಳಗಾಗಿದೆ. ಕೃಷಿ ವ್ಯವಸ್ಥೆ, ಕೃಷಿಯೇತರ ತೆರಿಗೆ, ಕೈಗಾರಿಕೆ, ವ್ಯಾಪಾರ ಮತ್ತು ವಾಣಿಜ್ಯ, ವಿಜಯನಗರ ಕಾಲದ ಸಮಾಜ, ಮೈಸೂರು ಒಡೆಯರ ಇತಿಹಾಸ, ವಿಜಯನಗರೋತ್ತರ ಕಾಲದ ರಾಜ್ಯಾಡಳಿತ, ಸಾಮಾಜಿಕ ಒಲವುಗಳು, ಧಾರ್ಮಿಕ ಸ್ಥಿತಿ – ಗತಿಗಳು, ಕಲೆ ಮತ್ತು ವಾಸ್ತುಶಿಲ್ಪ, ಕನ್ನಡ ಸಾಹಿತ್ಯ, ಸಂಸ್ಕೃತ ಸಾಹಿತ್ಯ, ಮೈಸೂರಿನ ಕಿರಿಯ ರಾಜವಂಶಗಳು ಮೊದಲಾದ ವಿಷಯಗಳಿವೆ. ಯುರೋಪ್‌ ಕೇಂದ್ರಿತ ಅಧ್ಯಯನಕ್ಕಿಂತ ವ್ಯತಿರಿಕ್ತವಾದ ಕ್ರಮಗಳನ್ನು ಇಲ್ಲಿ ಅನುಸರಿಸಲಾಗಿದೆ. ದೇಶೀಯತೆ, ನವ ವಸಾಹತುಶಾಹಿ ಬರವಣಿಗೆಗಳನ್ನು ಇಲ್ಲಿ ಗಮನಿಸಬಹುದು.

ಸಂಪುಟ ನಾಲ್ಕು ೧೩೪೭ರಿಂದ ೧೭೬೦ರವರೆಗೆ ವ್ಯಾಪ್ತಿ ಹೊಂದಿದ್ದು, ಇದರ ಲೇಖಕರು ಡಾ.ಬಿ. ಪೇಕ್‌ ಅಲಿ. ವಿಜಯನಗರ ಸಂದರ್ಭದಲ್ಲಿ ತಲೆಎತ್ತಿದ ಬಹಮನಿಗಳ ಉದಯ ಗುಲ್ಬರ್ಗಾ ಹಂತ, ಬೀದರ್ ಹಂತ, ವಿಜಾಫುರದ ಆದಿಲ್‌ಶಾಹಿಗಳ ಉದಯ, ಏಳಿಗೆಯ ಕಾಲ, ಅಂತಿಮಕಾಲ, ಬಹಮನಿ ರಾಜ್ಯಾಡಳಿತ, ರಾಜ್ಯನೀತಿ, ಬಿಜಾಪುರದ ಆಡಳಿತ, ಆರ್ಥಿಕ ಸ್ಥಿತಿಗತಿಗಳು, ಸಾಮಾಜಿಕ ಸ್ಥಿತಿ – ಗತಿಗಳು, ಧಾರ್ಮಿಕ ಜೀವನ, ಭಾಷೆ ಮತ್ತು ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಈ ಎಲ್ಲ ಆಧ್ಯಾಯಗಳು ಈ ಸಂಪುಟದಲ್ಲಿವೆ.

ಹದಿನೆಂಟನೆ ಶತಮಾನದ ಕರ್ನಾಟಕದ ರಾಜಕೀಯವನ್ನು ಸಂಪುಟ ೫ರಲ್ಲಿ (೧೭೬೦ – ೧೮೦೦) ಚಿತ್ರಿಸಲಾಗಿದೆ. ಇದರ ಸಂಪಾದಕರು ಡಾ. ಬಿ.ಷೇಕ್‌ ಅಲಿ. ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ವಿವರಗಳೇ ಬಹುಪಾಲು ಪುಟಗಳನ್ನು ಹೊಂದಿವೆ. ಅಧಿಕಾರಕ್ಕೆ ಬಂದ ಹೈದರಾಲಿ, ವಿಜಯಗಳು ಮತ್ತು ಸಂಘಟನೆ, ಮರಾಠರೊಂದಿಗೆ ಸಂಬಂಧಗಳು, ಇಂಗ್ಲೀಷರೊಂದಿಗೆ ಸಂಬಂಧಗಳು – ಮೊದಲ ಹಂತ (೧೭೬೧ – ೬೯) ಮತ್ತು (೧೭೬೯ – ೮೨) ಟಿಪ್ಪು ಸುಲ್ತಾನ್‌ನೆರೆಯವರೊಂದಿಗೆ ಯುದ್ಧ, ಹೊರ ಜಗತ್ತಿನೊಂದಿಗೆ ಸಂಬಂಧ, ಮೂರನೆಯ ಮೈಸೂರು ಯುದ್ಧ (೧೭೯೦ – ೯೨), ನಾಲ್ಕನೆ ಮೈಸೂರು ಯುದ್ಧ (೧೭೯೯), ರಾಜಕೀಯ, ಆರ್ಥಿಕ, ಸಾಮಾಜಿಕತೆ, ಸಂಸ್ಕೃತಿ, ಸಾಹಿತ್ಯವನ್ನು ಇಲ್ಲಿ ಅವಲೋಕಿಸಬಹುದು.

ಸಂಪುಟ ಆರು ೧೮೦೦ರಿಂದ ೧೯೦೦ರವರೆಗೆ ಕಾಲ ವ್ಯಾಪ್ತಿಯಿದ್ದು, ಡಾ. ಸೆಬಾಸ್ಟಿಯನ್‌ ಜೋಸೆಫ್‌ ಸಂಪಾದಕರಾಗಿದ್ದಾರೆ. ವಸಾಹತುಶಾಹಿಯ ಆಗಮನ ಮತ್ತು ಅದರ ವಿರುದ್ಧ ಸ್ಥಳೀಯರ ಹೋರಾಟ, ಸಂಘರ್ಷ, ೧೯ನೇ ಶತಮಾನದಲ್ಲಿ ದಕ್ಷಿಣ ಕನ್ನಡದ ರೈತ ಬಂಡಾಯಗಳು, ಇತರ ರೈತ ಬಂಡಾಯಗಳು, ರೈತರಲ್ಲಿ ಒಗ್ಗಟ್ಟು ಮತ್ತು ಪ್ರತಿಭಟನೆ ಮೈಸೂರು, ಭೂ ಸ್ವಾಮ್ಯ ಮತ್ತು ಸಾಮಾಜಿಕ ಬದಲಾವಣೆ ವಸಾಹತುಶಾಹಿಯ ಸಂದರ್ಭದಲ್ಲಿ ದಕ್ಷಿಣ ಕನ್ನಡ, ರಾಜನೀತಿ, ಸಮಾಜ ಮತ್ತು ಆರ್ಥಿಕತೆ ಮುಂಬಾಯಿ ಮತ್ತು ಹೈದರಾಬಾದ್‌ ಕರ್ನಾಟಕ, ಬ್ರಿಟಿಷ್‌ ಕಂದಾಯ ವ್ಯವಸ್ಥೆ, ಮೈಸೂರಿನಲ್ಲಿ ಕ್ಷಾಮ, ವ್ಯಾಪಾರ, ಶಿಕ್ಷಣ, ಸಾಂಸ್ಕೃತಿಕ ದೃಶ್ಯ, ಸಾಹಿತ್ಯ ಇತರ ಸಂಗತಿಗಳು ಅನಾವರಣಗೊಂಡಿವೆ.

ಸ್ವಾತಂತ್ರ್ಯ ಚಳವಳಿಯನ್ನು ಹೊತ್ತ ಸಂಪುಟ ಏಳನೆಯದು. ಡಾ.ಎಸ್‌. ಚಂದ್ರಶೇಖರ್ ಇದರ ಸಂಪಾದಕರು. ಈವರೆಗೆ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯ ಅಧ್ಯಯನಗಳು, ರಾಷ್ಟ್ರವಾದದ ಉಗಮ, ಸಮಾಜ ಸುಧಾರಣಾ ಚಳವಳಿಗಳು, ಕರ್ನಾಟಕ ಸ್ವಾತಂತ್ರ್ಯ ಚಳವಳಿಯ ಆರ್ಥಿಕ ಹಿನ್ನೆಲೆ. ಕರ್ನಾಟಕದಲ್ಲಿ ಕ್ಷೋಭೆ, ಸಾಹಿತ್ಯ ಮತ್ತು ರಾಷ್ಟ್ರವಾದ, ಕನ್ನಡ ಸಾಹಿತ್ಯದಲ್ಲಿ ಕಂಡಂತೆ, ಬ್ರಾಹ್ಮಣೇತರರು, ರಾಷ್ಟ್ರವಾದ ಮತ್ತು ಕಾಂಗ್ರೆಸ್‌, ಗಾಂಧೀಜಿ ಆಗಮನ, ರಾಷ್ಟ್ರೀಯ ಚಳವಳಿಯಲ್ಲಿ ಪತ್ರಿಕೆಗಳ ಪಾತ್ರ ಕರ್ನಾಟಕದ ಸಂದರ್ಭ, ರೈತರ ಪಾತ್ರ, ನಗರ ಕಾರ್ಮಿಕ ವರ್ಗದ ಪಾತ್ರ, ಸ್ವಾತಂತ್ರ್ಯ ಚಳವಳಿಯಲ್ಲಿ ಮಹಿಳೆಯರು, ಸ್ವಾತಂತ್ರ್ಯ ಚಳವಳಿಯಲ್ಲಿ ವಿದ್ಯಾರ್ಥಿಗಳು, ದಲಿತ ವರ್ಗಗಳು ಹಾಗೂ ಸ್ವಾತಂತ್ರ್ಯ ಹೋರಾಟ, ಪ್ರಾಂತೀಯ ಸ್ವಾಯತ್ತತೆ ಕ್ವಿಟ್‌ ಇಂಡಿಯ ಚಳವಳಿ, ಸ್ವಾತಂತ್ರ್ಯದೆಡೆಗೆ, ಏಕೀಕರಣ ಮೊದಲಾದ ಅಧ್ಯಾಯಗಳು ಇಲ್ಲಿ ಪ್ರಧಾನ ಸಂಗತಿಗಳು. ಒಟ್ಟಾರೆ ಈ ಚರಿತ್ರೆ ಸಂಪುಟಗಳ ಸರಣಿ ಒಂದಕ್ಕೊಂದು ಸಂಬಂಧಿಸಿದ್ದು, ವಿಶಿಷ್ಟ ರೀತಿಯಲ್ಲಿ ವಿದ್ಯಾರ್ಥಿ, ಶಿಕ್ಷಕ, ಸಂಶೋಧಕರಿಗೆ ಆಕರಗಳಾಗಿವೆ.

ಏಕೀಕರಣೋತ್ತರ ಕರ್ನಾಟಕದ ಪ್ರಮುಖ ಚಳವಳಿ ಸಂಪುಟಗಳು (ಕನ್ನಡ ವಿ.ವಿ)

೧೯೯೮-೯೯ನೇ ಸಾಲಿನಲ್ಲಿ ಚರಿತ್ರೆ ವಿಭಾಗ ಕೈಗೊಂಡ ಸಾಂಸ್ಥಿಕ ಯೋಜನೆಯ ಪ್ರತಿಫಲವೇ ಆರು (೬) ಸಂಪುಟಗಳಲ್ಲಿ ಬಂದ ಚಳವಳಿಗಳು. ಗಡಿ, ಜಲ, ಪರಿಸರ, ರೈತ, ಹಿಂದುಳಿದ – ದಲಿತ ಮತ್ತು ಕನ್ನಡ ಚಳವಳಿಗಳು ಸಮಕಾಲೀನ ಚರಿತ್ರೆಗೆ ಸೇರ್ಪಡೆಯಾಗಿವೆ.

ಸಮಕಾಲೀನ ಕರ್ನಾಟಕದ ಸಮಸ್ಯೆಗಳಲ್ಲಿ ಗಡಿ ಸಮಸ್ಯೆಯು ಒಂದು. ಹೀಗೆ ಸಮಕಾಲೀನ ಕರ್ನಾಟಕವನ್ನು ಅನೇಕ ಸಮಸ್ಯೆಗಳು ಕಾಡುತ್ತಿವೆ. ಅವುಗಳ ದಾಖಲೆಯೇ ಮೇಲಿನ ಕೃತಿಗಳು. ಕಾಸರಗೋಡು, ಜತ್ತ, ಆಲೂರು, ಆದೋನಿ, ರಾಯದುರ್ಗ, ಈರೋದ್‌, ಊಟಿ ಮೊದಲಾದವು ಕರ್ನಾಟಕಕ್ಕೆ ಸೇರಬೇಕು. ಮಹಾಜನ್‌ ವರದಿಯಂತೆ ಇತರ ವರದಿಗಳು ಈ ಬಗ್ಗೆ ಬೆಳಕು ಚೆಲ್ಲುತ್ತವೆ. ಕನ್ನಡ ನೆಲೆ-ಹಿನ್ನೆಲೆಯನ್ನು ಗುರುತಿಸುತ್ತಾ, ಹೊರನಾಡಿನಲ್ಲಿ ಕನ್ನಡಗಡಿಯ ರಕ್ಷಣೆಗಾಗಿ ನಡೆಯುವ ಚಳವಳಿಗಳು ಗಮನಾರ್ಹವಾದವು. ಉದಾ: ಕಾಸರಗೋಡಿನ ಮೂಲಭೂತ ಸಮಸ್ಯೆಗಳು-ಗಡಿನಾಡು ಜನರ ಅಭಿಪ್ರಾಯಗಳು.ಇಲ್ಲಿ ಲೇಖಕರಾದ ಚಿನ್ನಸ್ವಾಮಿ ಸೋಸಲೆ ಅವರು ಅನೇಕ ಸಂಗತಿಗಳನ್ನು ಕಲೆಹಾಕಿದ್ದಾರೆಂಬುದಕ್ಕೆ ಸಾಕ್ಷಿ ‘ಗಡಿ ಚಳವಳಿಗಳು’.

‘ಕರ್ನಾಟಕದ ಜಲಸಂಬಂಧಿ ಚಳವಳಿಗಳು’ ಎರಡನೆಯ ಸಂಪುಟ. ಇದರ ಲೇಖಕರು ವಿರೂಪಾಕ್ಷಿ ಪೂಜಾರ ಹಳ್ಳಿ, ಪ್ರಾಚೀನ ಕಾಲದಿಂದ ಇಂದಿನವರೆಗೆ ಜಲದ ಉಪಯೋಗ, ಕೆರೆ ಕಟ್ಟೆ, ಬಾವಿಗಳ ನಿರ್ಮಾಣ, ನದಿಗಳ ಉಪಯೋಗ-ಹಿನ್ನೆಲೆ, ಆಣೆಕಟ್ಟುಗಳ ನಿರ್ಮಾಣದ ವಿವರಗಳಿವೆ. ಪ್ರಾಚೀನ ಕಾಲದಲ್ಲಿಯು ಜಲ ವಿವಾದವಿದ್ದು ಯುದ್ಧಗಳು ಸಂಭವಿಸಿದ್ದವು. ನದಿ ಹರಿಯುವಾಗ ರಾಜ್ಯದ ಗಡಿದಾಟುವುದು ಸಹಜ. ಇಂಥಾ ಸಂದರ್ಭದಲ್ಲಿ ಎರಡು ರಾಜ್ಯಗಳ ನಡುವೆ ವಿವಾದ ಏರ್ಪಟ್ಟು ಕೊನೆಗೆ ನ್ಯಾಯಾಲಯದವರೆಗೂ ಹೋಗುತ್ತದೆ. ಕೃಷ್ಣಾ, ಕಾವೇರಿ, ತುಂಗಭದ್ರಾ ನದಿ ನೀರು ವಿವಾಗಳಲ್ಲದೆ, ರಾಜ್ಯದ ಆಂತರಿಕ ನದಿ ನೀರು ಚಳವಳಿಗಳು ಮತ್ತು ಕುಡಿಯುವ ನೀರಿಗಾಗಿ ನಡೆಯುವ ಚಳವಳಿಗಳನ್ನು ವಿವರಿಸಲಾಗಿದೆ.  ಮುಂದೆ ಸಂಭವಿಸುವ ಚಳವಳಿಗಳ ಉಲ್ಲೇಖವು ಗಮನಾರ್ಹ.

‘ಪರಿಸರ ಚಳವಳಿಗಳು’ ಸಂಪುಟದ ಲೇಖಕರು ಕೆ. ಮೋಹನ ಕೃಷ್ಣ ರೈ.  ಕರ್ನಾಟಕದಲ್ಲಿ ಪರಿಸರ ಕುರಿತ ಚಳವಳಿಗಳು ಬೆರಳೆಣಿಕೆಯಷ್ಟಾದರೂ ಅವು ಗಮನಾರ್ಹವಾದವು. ಇಲ್ಲಿ ಚಳವಳಿಗಳ ಸ್ವರೂಪ-ತಾತ್ವಿಕತೆಯಲ್ಲಿ ವಿಶ್ಲೇಷಿಸಿದ್ದಾರೆ. ಚಳವಳಿಯ ಹಿನ್ನೆಲೆ, ನೆಲೆಗಳ ಪರಿಚಯ, ಪ್ರಮುಖ ಪರಿಸರ ಚಳವಳಿಗಳನ್ನು ದಾಖಲಿಸಿದ್ದಾರೆ. ಕುದುರೆಮುಖ, ತುಂಗಾ ಮೇಲ್ದಂಡೆ, ನವ ಮಂಗಳೂರು ಇತ್ಯಾದಿ ಪರಿಸರ ಘಟನೆಗಳ  ವಿವರವಿದೆ.

‘ಕನ್ನಡ ಚಳವಳಿಗಳು’ ನಾಲ್ಕನೇ ಸಂಪುಟ.  ಡಾ.ಸಿ.ಆರ್. ಗೋವಿಂದರಾಜು ಇದರ ಲೇಖಕರು.  ಕನ್ನಡ ಚಳವಳಿಗಳ ಚಾರಿತ್ರಿಕ ಹಿನ್ನೆಲೆ, ಸೈದ್ಧಾಂತಿಕ ಪ್ರೇರೆಣೇ ಹಾಗೂ ಒತ್ತಡ, ಚಳವಳಿಯ ಮೊದಲ ಘಟ್ಟ, ರಾಜಕಾರಣ, ಚಳವಳಿಯ ವಿಭಿನ್ನ ಹಂತಗಳು-ಎರಡು ದಶಕಗಳ ಚರಿತ್ರೆಯ ಅವಲೋಕನ ಇಲ್ಲಿದೆ.

ಕರ್ನಾಟಕದಲ್ಲಿ ‘ರೈತ ಚಳವಳಿಗಳು’ ಡಾ.ಟಿ.ಪಿ. ವಿಜಯ್‌ರಿಂದ ರಚನೆಗೊಂಡ ಐದನೆಯ ಸಂಪುಟ. ಪ್ರಸ್ತುತ ಕೃತಿಯಲ್ಲಿ ರೈತ ಚಳವಳಿಯ ಹಿನ್ನೆಲೆ, ರೈತ ಸಂಘದ ಚರಿತ್ರೆ, ಮಲಪ್ರಭಾ ರೈತ ಚಳವಳಿ ಮೊದಲಾದ ಅಧ್ಯಾಯಗಳಿವೆ. ಹೀಗಾಗಿ ಕರ್ನಾಟಕದಲ್ಲಿ ಬಂದಿರುವ ರೈತ ಚಳವಳಿಗಳು ಸೂಕ್ಷ್ಮ ಅಧ್ಯಯನ ಕೃತಿಗಳ ಪೈಕಿ ಇದು ಸೇರ್ಪಡೆಯಾಗಲಿದೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳ ಮೇಲೆ ರೈತ ಸಂಘದ ಪ್ರಭಾವವನ್ನು ಇನ್ನಷ್ಟು ವಿಶ್ಲೇಷಿಸುವ ಅಗತ್ಯವಿತ್ತು. ರೈತ ಸಂಘದ ಉದಯ ಮಾದರಿ, ರೈತ ಚಳವಳಿಗಳ ಮೇಲಿನ ಟಿಪ್ಪಣಿಗಳು ಇಲ್ಲಿ ದಾಖಲೆಗೊಂಡಿವೆ.

ಆರನೆಯದು ಮತ್ತು ಕೊನೆಯದು ‘ಹಿಂದುಳಿವ ವರ್ಗಗಳ ಮತ್ತು ದಲಿತ ಚಳವಳಿಗಳು’. ಪ್ರೊ. ಲಕ್ಷ್ಮಣ್‌ ತೆಲಗಾವಿ ಇದರ ಲೇಖಕರು. ಚಳವಳಿ, ಆಯೋಗಗಳು, ವರದಿ, ದಲಿತ ಚಳವಳಿ ವಿವಿಧ ನೆಲೆಗಳು ಪ್ರಚಲಿತವಾಗಿವೆ. ಈ ಹಿನ್ನೆಲೆಯಲ್ಲಿ ಇತರ ಚಳವಳಿಗಳನ್ನು ಅವಲೋಕಿಸಿರುವುದು ಗಮನಾರ್ಹ. ಆ ಮೂಲಕ ಮೀಸಲಾತಿ ವಿಭಾಗಿಸುವ ಅಥವಾ ಪ್ರತ್ಯೇಕಕ್ಕಾಗಿ ಸಲಹೆ ನೀಡಿರುವ ಇತರ ಸಂಗತಿಗಳಿವೆ.

ಒಟ್ಟಾರೆ ಹೇಳುವುದಾದರೆ ರಾಷ್ಟ್ರ ಮತ್ತು ಪ್ರಾದೇಶಿಕ ಚರಿತ್ರೆ ಕೃತಿಗಳ ಪ್ರಕಟಣೆಗೆ ಹೋಲಿಸಿದರೆ ರಾಜಪ್ರಭುತ್ವ ಮತ್ತು ಸ್ಥಳೀಯ ಚರಿತ್ರೆ ಕೃತಿಗಳು ಸಂಖ್ಯೆಯಲ್ಲಿ ಹೆಚ್ಚು. ಪ್ರಾಚೀನ, ಮಧ್ಯ ಮತ್ತು ಆಧುನಿಕ ಕಾಲ ಘಟ್ಟದಲ್ಲಿ ಈ ಕೃತಿಗಳು ಗಮನಾರ್ಹವಾಗಿವೆ. ಕದಂಬ, ಗಂಗ, ಚಾಲುಕ್ಯ, ರಾಷ್ಟ್ರಕೂಟರ ಚರಿತ್ರೆ ಮತ್ತು ಸಂಸ್ಕೃತಿ ಕೃತಿಗಳು ಒಂದೆಡೆಯಾದರೆ, ಕುರುಗೋಡು ಸಿಂದರು, ಕುಮ್ಮಟ ನಾಯಕರು, ವಿಜಯನಗರ, ಕೆಳದಿ, ಚಿತ್ರದುರ್ಗದ ಪಾಳೆಯಗಾರರು, ಮೈಸೂರು ಸಂಸ್ಥಾನ, ಸ್ವಾದಿ ಅರಸು ಮನೆತನ, ಸುಗುಟೂರು ಅರಸರು, ಬ್ರಿಟಿಷರ ಆಳ್ವಿಕೆ ಮೊದಲಾದ ಕೃತಿಗಳು ಬಂದಿವೆ.

ಹಲಗಲಿ ಬಂಡಾಯವು ಬ್ರಿಟಿಷರನ್ನು ಭಾರತದಿಂದ ಹೊರದೂಡಲು ನಡೆಸಿದ ಮೊದಲ ಬುಕಟ್ಟು ಜನರ ದಂಗೆ. ರಾಷ್ಟ್ರೀಯ ಸ್ವಾತಂತ್ಯ್ರ ಹೋರಾಟ ಕುರಿತು ಹತ್ತಾರು ಕೃತಿಗಳು ಪ್ರಕಟವಾಗಿವೆ. ನಾಡು-ನುಡಿ ಸಂಸ್ಕೃತಿ ಬಗೆಗಿನ ಅಧ್ಯಯನ ಒಲವುಗಳು ಇತ್ತೀಚಿಗೆ ಗಟ್ಟಿಯಾಗುತ್ತಲಿವೆ. ಬ್ರಿಟಿಷರ ಆಳ್ವಿಕೆಯಲ್ಲಿ ರಚನೆಗೊಂಡ ಕೃತಿಗಳು, ಅನಂತರ ಅದೇ ಮಾದರಿ ಅನುಸರಿಸಿ ಬಂದ ಕೃತಿಗಳಿಗಿಂತ ವ್ಯತಿರಿಕ್ತವಾದ ಅಧ್ಯಯನ ಕೃತಿಗಳು ಪ್ರಕಟಗೊಂಡವು.

ಚಾರಿತ್ರಿಕ ಮಹತ್ವದ ಪಡೆದ ಸ್ಥಳಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಬನವಾಸಿ, ಬಾದಾಮಿ, ಹಂಪೆ, ತಲಕಾಡು ಇತರೆ ಸ್ಥಳಗಳ ಬಗ್ಗೆ ಕೃತಿಗಳು ಬಂದಿವೆ. ದೇವಾಲಯ, ವಾಸ್ತು, ಶಿಲ್ಪ, ಕೋಟೆ, ನಾಡು, ಶಾಸನ, ಇತಿಹಾಸಕಾರರ ಅಭಿನಂದನ ಗ್ರಂಥಗಳು ಗಮನಾರ್ಹವಾದವು. ಹೈದರಾಬಾದ್‌ ಸ್ವಾತಂತ್ಯ್ರ ಹೋರಾಟದಲ್ಲಿ ಗಜೇಂದ್ರಗಡ, ಕೆಳದಿ ಸಮಗ್ರ ಅಧ್ಯಯನ, ಮೊದಲಾದ ಕೃತಿಗಳು ಪ್ರಸ್ತುತವೆನಿಸಿವೆ. ಲಿಖಿತ ಆಕರಗಳನ್ನು ಕಡೆಗಣಿಸದೆ, ಮೌಖಿಕ ಆಕರಗಳನ್ನು ಬಳಸಿಕೊಂಡು ಮೌಖಿಕ ಚರಿತ್ರೆ ರಚಿಸಲಾಗಿದ್ದು, ‘ಗಾದರಿ ಪಾಲನಾಯಕ’ ಒಂದು ಉದಾಹರಣೆಯಾಗಿದೆ. ಕನ್ನಡದಲ್ಲಿ ಅನೇಕ ಕೃತಿಗಳು ಪ್ರಕಟವಾದಂತೆ, ಇಂಗ್ಲಿಷ್‌ನಲ್ಲಿಯು ಅಲ್ಪವಾಗಿ ಪ್ರಕಟಗೊಂಡಿವೆ. ಒಟ್ಟಾರೆ ತೊಂಭತ್ತರ ದಶಕವು  ಚರಿತ್ರೆ ರಚನೆಯಿಂದ ಮಹಾಪರಿವರ್ತನೆಯನ್ನು ಕಂಡಿದೆ.