ವೈಜ್ಞಾನಿಕ ವಿಷಯಗಳನ್ನು ಕುರಿತಂತೆ ಕನ್ನಡದಲ್ಲಿ ಬೆರಳೆಣಿಕೆಯಷ್ಟು ಕೃತಿಗಳು ಮಾತ್ರವೇ ಲಭ್ಯವಿದೆ.  ಇತರ ಸಾಹಿತ್ಯ ಪ್ರಕಾರಗಳಲ್ಲಿ ಅನೇಕ ಪುಸ್ತಕಗಳು ಪ್ರಕಟಗೊಳ್ಳುತ್ತಲೇ ಬಂದಿರುವುದು ಗಮನಾರ್ಹ. ಕನ್ನಡ ಸಾಹಿತ್ಯದ ಸಂಖ್ಯೆ ಮತ್ತು ಗುಣಮಟ್ಟ ಒಂದು ದಶಕದಿಂದ ಬೆಳೆಯುತ್ತಾ ಬಂದಿದೆಯಾದರೂ ವಿಜ್ಞಾನ ಸಾಹಿತ್ಯ ಪುಸ್ತಕಗಳ ಸಂಖ್ಯೆಯು ಅಷ್ಟಾಗಿ ಬೆಳೆದಿಲ್ಲವೆನ್ನುವ ಅಭಿಪ್ರಾಯ ಮೂಡಿಬರುವುದು ಸಹಜ. ಕಳೆದ ಒಂದು ದಶಕದಿಂದ ಈಚೆಗೆ ವಿಜ್ಞಾನ ಸಾಹಿತ್ಯವು ತನ್ನ ರೂಪನ್ನು ಪಡೆದುಕೊಳ್ಳುತ್ತಿದ್ದು ವೈಜ್ಞಾನಿಕ ವಿಷಯಗಳನ್ನು ನಿರೂಪಣಾತ್ಮಕವಾಗಿ ಜನಸಾಮಾನ್ಯರಿಗೂ ತಲುಪುವಂತೆ ಕೃತಿಗಳು ಪ್ರಕಟಗೊಳ್ಳುತ್ತಿರುವುದು ಸಮಧಾನಕಾರವಾದ ಸಂಗತಿ. ಇಂದು ಕನ್ನಡ ಭಾಷೆ ಪ್ರಬುದ್ಧವಾಗಿ ಬೆಳೆದಿದೆ. ವಿಜ್ಞಾನದ ಅನೇಕ ಪದಗಳು ಯಶಸ್ವಿಯಾಗಿ ಕನ್ನಡಕ್ಕೆ ಅನುವಾದಗೊಂಡು, ಪಾರಿಭಾಷಿಕ ಪದಗಳು ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಸಮರ್ಥವಾಗಿ ಬಳಸಲು ಇದ್ದ ಹಿಂಜರಿಕೆ ಮತ್ತು ಕೊರತೆಯಿವೆಯೆಂದು ಪರಿಗಣಿಸಿ ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಪೋಷಿಸುವಲ್ಲಿ ತೋರಿದ ನಿರ್ಲಕ್ಷವು ಮತ್ತೊಂದು ಕಾರಣವೆಂದರೆ ತಪ್ಪಾಗಲಾರದು.  ಇದರೊಂದಿಗೆ ಓದುಗನು ಪೂರ್ವಾಗ್ರಹ ಪೀಡಿತವಾಗಿ ಕನ್ನಡದಲ್ಲಿ ವಿಜ್ಞಾನವನ್ನು ಕಲಿಯಲು ಮತ್ತು ಅರಿಯಲು ಸಾಧ್ಯವಿಲ್ಲವೆಂದು ಭಾವಿಸಿ ಕನ್ನಡ ಭಾಷೆಯ ಅಂತಸ್ಥ ಸಾಮರ್ಥ್ಯವನ್ನು ಕಡೆಗಣಿಸಿರುವುದು ಮತ್ತು ವಿಜ್ಞಾನವನ್ನು ಆಂಗ್ಲಭಾಷೆಯಲ್ಲಿ ಮಾತ್ರ ಕಲಿಯಲು ಮತ್ತು ನಿರೂಪಿಸಲು ಸಾಧ್ಯವೆನ್ನುವ ಭ್ರಾಮಕ ಕಲ್ಪನೆ. ಇವುಗಳಿಂದ ಕನ್ನಡ ವಿಜ್ಞಾನ ಸಾಹಿತ್ಯವು ಕುಂಠಿವಾಗಿತ್ತು.

ಈ ದಿಸೆಯಲ್ಲಿ ಕಳೆದ ಒಂದು ದಶಕದಿಂದಲೂ ಈ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಸಾಕಷ್ಟು ಉತ್ತೇಜನ ಮತ್ತು ಪ್ರಾಮಾಣಿಕ ಪ್ರಯತ್ನಗಳು ನಡೆದುದರ ಫಲಿತವಾಗಿ ಈಗ ಕನ್ನಡದಲ್ಲಿ ಹೇರಳವಾಗಿ ವೈಜ್ಞಾನಿಕ ವಿಷಯಗಳನ್ನು ಕುರಿತ ಪುಸ್ತಕಗಳು ಹಾಗೂ ನಿಯತಕಾಲಿಕೆಗಳನ್ನು ವಿವಿಧ ಸಂಘ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳು ಪ್ರಕಟಿಸಿ ಜನಸಾಮಾನ್ಯರಿಗೆ ವಿಜ್ಞಾನದ ಹೊಳಹುಗಳನ್ನು ಪರಿಚಯಿಸುವ ಕಾರ್ಯವನ್ನು ಯಶಸ್ವಿಯಾಗಿ ನಡೆಸುತ್ತಿವೆ. ಈ ಸಂಸ್ಥೆಗಳು ಹಮ್ಮಿಕೊಂಡಿರುವ ಕೆಲಸಗಳನ್ನು ಇದೇ ಭರಾಟೆಯಲ್ಲಿ ಮುಂದುವರಿಸಿದ್ದೇ ಆದರೆ ಮುಂಬರುವ ವರ್ಷಗಳಲ್ಲಿ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ಉಜ್ವಲ ಭವಿಷ್ಯವಿದೆಯೆಂದರೆ ತಪ್ಪಾಗಲಾರದು. ವಿಜ್ಞಾನ ಸಾಹಿತ್ಯದಲ್ಲಿ ಇಂದು ಕಂಡು ಬರುವಂತಹ ನೂನ್ಯತೆಗಳನ್ನು ಸಮರ್ಪಕವಾಗಿ ತೊಡೆದು ಹಾಕಲೂಬಹುದು.

ಕಳೆದ ದಶಕದಲ್ಲಿ ಹಲವಾರು ಪುಸ್ತಕಗಳು ಪ್ರಕಟಗೊಂಡಿವೆಯಾದರೂ, ಇವುಗಳಲ್ಲಿ ಸಿಂಹಪಾಲು ಪುಸ್ತಕಗಳು ಜನಪ್ರಿಯ ವಿಜ್ಞಾನವನ್ನು ಜನಸಾಮಾನ್ಯರಿಗೆ ಪರಿಚಯಿಸುವಂತಹವೇ ಆಗಿವೆ. ಕೆಲವೊಂದು ಪುಸ್ತಕಗಳು ದೈನಂದಿನ ಸಮಸ್ಯೆ ಮತ್ತು ಪರಿಹಾರೋಪಾಯಗಳನ್ನು ಸೂಚಿಸುವ ಹೊತ್ತಿಗೆಗಳಾಗಿವೆ. ಕಿರುಹೊತ್ತಿಗೆಗಳು ಈ ಸಮಸ್ಯೆಗೆ ಉತ್ತರವೆಂಬಂತೆ ಪ್ರಕಟಗೊಂಡಿವೆ. ಇವುಗಳು ತಮ್ಮ ಧ್ಯೇಯೋದ್ದೇಶಗಳನ್ನು ಸ್ವಲ್ಪ ಮಟ್ಟಿಗೆ ಪೂರೈಸಿದ್ದು ಅವುಗಳು ಒಂದು ಹಂತದಲ್ಲಿ ತಮ್ಮ ಗುರಿಯನ್ನು ತಲುಪದೇ ನಿಂತು ಬಿಡುವುದನ್ನು ಕಾಣಬಹುದು. ಈ ತೆರನಾದ ಪುಸ್ತಕಗಳು ವಿಜ್ಞಾನ ಸಾಹಿತ್ಯದ ಮುನ್ನೋಟವೆಂದು ಪರಿಗಣಿಸಿ ಆಳವಾದ ಸಂಶೋಧನಾತ್ಮಕ, ವಿಶ್ಲೇಷಣಾತ್ಮಕ ಚರ್ಚೆಗಳನ್ನು ಒಳಗೊಂಡಂತಹ ವೈಜ್ಞಾನಿಕ ಪುಸ್ತಕಗಳು ಕನ್ನಡದಲ್ಲಿ ಬರುತ್ತಲಿವೆಯೆಂಬುದಕ್ಕೆ ಮುನ್ಸೂಚನೆಯೆಂದು ಭಾವಿಸಬಹುದು. ವಿಜ್ಞಾನ ಸಾಹಿತ್ಯದ ಕೆಲವು ಪುಸ್ತಕಗಳನ್ನು ಇಲ್ಲಿ ಪರಿಚಯಿಸುವುದು ಸೂಕ್ತ. ಹಲವಾರು ಪುಸ್ತಕಗಳು ಪ್ರಕಟಗೊಂಡಿವೆಯಾದರೂ ಅವುಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸಲಾಗುವುದು. ಇಲ್ಲಿ ಉಲ್ಲೇಖಿತವಾಗದ ಪುಸ್ತಕಗಳು ಕಳಪೆಯೆಂದಾಗಲಿ ಅಥವಾ ಗುಣಮಟ್ಟವನ್ನು ಹೊಂದಿಲ್ಲವೆಂದಲ್ಲ. ಪ್ರಕಟಗೊಂಡ ಬಹುಪಾಲು ಪುಸ್ತಕಗಳು ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಚಿಸಿದವುಗಳಾಗಿವೆ. ವೈದ್ಯಕೀಯ, ಸಾಮಾನ್ಯ ಆರೋಗ್ಯವನ್ನು ಕಾಯ್ದುಕೊಳ್ಳುವುದು, ಜೈವಿಕ ವಿಜ್ಞಾನ, ಮಾನಸಿಕ ಆರೋಗ್ಯ, ಕೆಲವು ಸಾಮಾನ್ಯ ರೋಗಗಳು, ಪರಿಸರ, ಕೃಷಿ, ತಂತ್ರಜ್ಞಾನ, ಭೌತವಿಜ್ಞಾನ, ವಿಜ್ಞಾನಿಗಳ ಸಾಧನೆ ಮತ್ತು ಪರಿಚಯ, ಮುಂತಾದ ವಿಷಯಗಳನ್ನು ಹೊಂದಿರುವ ಪುಸ್ತಕಗಳೇ ಅಧಿಕವಾಗಿ ಪ್ರಕಟವಾಗಿವೆ. ವಿಶ್ಲೇಷಣಾತ್ಮಕ ಕೃತಿಗಳು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲದಿರುವುದು ಗಮನಾರ್ಹ. ಕೆಲವು ಪುಸ್ತಕಗಳು ಹಲವಾರು ಬಿಡಿ ಲೇಖನಗಳನ್ನು ಒಳಗೊಂಡಿರುವಂತಹ ಕೃತಿಗಳಾಗಿವೆ.

‘ಬೆಳ್ಳಿ ಚುಕ್ಕೆ’ ಪುಸ್ತಕದಲ್ಲಿ ಆಯ್ದ ಇಪ್ಪತ್ತೆರಡು ಲೇಖನಗಳಿದ್ದು ವಿಜ್ಞಾನದ ಹಲವು ಪ್ರಚಲಿತ ಸಮಸ್ಯೆ ಮತ್ತು ವಿದ್ಯಮಾನಗಳನ್ನು ಓದುಗನಿಗೆ ತಿಳಿಸಿಕೊಡುತ್ತವೆ. ಇದರಂತೆ ‘ಬಾವಲಿಗಳು’ ಒಂದು ವಿಶ್ವವಿದ್ಯಾಲಯ ನಡೆಸಿದಂತಹ ದೀರ್ಘ ಅಧ್ಯಯನದ ಫಲಿತಾಂಶಗಳನ್ನು ನೀಡುವಲ್ಲಿ ಸಫಲಗೊಂಡಿದೆ. ಮೂಲತಃ ಈ ಕೃತಿಯು ಆಂಗ್ಲ ಭಾಷೆಯಲ್ಲಿದ್ದು, ಅದು ಕನ್ನಡಕ್ಕೆ ಅನುವಾದಗೊಂಡಿದೆ. ಪುಸ್ತಕವು ನೀಡುವ ಅನೇಕ ಅಂಕಿ ಅಂಶಗಳು, ಬಾವಲಿಗಳ ಬಗೆಗಿನ ಅನೇಕ ಅಂಧ ವಿಶ್ವಾಸಗಳನ್ನು ತೊಡೆಯುವಲ್ಲಿ ಸಹಕಾರಿಯಾಗುತ್ತದೆ. ಇಂತಹ ಪುಸ್ತಕಗಳು ಪ್ರಕಟಗೊಳ್ಳುವುದು ಮುಖ್ಯ. ವಿಶ್ವವಿದ್ಯಾಲಯಗಳು ಮತ್ತು ಸರಕಾರದಿಂದ ಅನುದಾನ ಪಡೆದು ಸಂಶೋಧನೆಗಳನ್ನು ಕೈಗೊಂಡಿರುವ ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಸಂಶೋಧನೆಗಳನ್ನು ಪ್ರಕಟಿಸಬೇಕು.

ವೈದ್ಯಕೀಯ ಮತ್ತು ಆರೋಗ್ಯ ಸಮಸ್ಯೆಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪುಸ್ತಕಗಳು ಅಧಿಕ ಸಂಖ್ಯೆಯಲ್ಲಿ ಪ್ರಕಟಗೊಂಡಿವೆ. ಅಂತಹ ಪುಸ್ತಕಗಳ ಅವಲೋಕನವನ್ನು ಇಲ್ಲಿ ಮಾಡಲಾಗುವುದು. ಮೈಸೂರು ವಿಶ್ವವಿದ್ಯಾನಿಲಯವು ಒಂದೇ ಲೇಖಕರ ‘ನಿಮ್ಮ ದೇಹವನ್ನು ತಿಳಿಯಿತಿ’ ಮತ್ತು ‘ದೇಹಾರೋಗ್ಯದ ಹಲವು ಸಮಸ್ಯೆಗಳು’ ಎಂಬ ಎರಡು ಪುಸ್ತಕಗಳನ್ನು ಪ್ರಕಟಿಸಿದೆ. ಮೊದಲ ಪುಸ್ತಕದಲ್ಲಿ ಒಟ್ಟು ಹದಿನಾಲ್ಕು ಆಕರ್ಷಕ ಶೀರ್ಷಿಕೆಯ ಅಧ್ಯಾಯಗಳಲ್ಲಿ ಎಂಬ ಇಡೀ ಮಾನವ ದೇಹ ಮತ್ತು ಅದರ ಕಾರ್ಯವೈಖರಿಯ ಸೂಕ್ಷ್ಮ ಚಿತ್ರಣವನ್ನು ನೀಡಲಾಗಿದೆ. ಮಾನವ ದೇಹದ ವಿವಿಧ ಅಂಗಗಳು, ಅವುಗಳ ರಾಸಾಯನಿಕ ರಚನೆ ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ಸುಲಲಿತವಾಗಿ ಪರಿಚಯಿಸಿ ಕೆಲವು ಅಂಕಿ ಅಂಶಗಳನ್ನು ನೀಡಿರುವುದು ಗಮನಾರ್ಹ. ಇನ್ನೊಂದು ಪುಸ್ತಕವು ದೇಹಾರೋಗ್ಯದ ಹಲವು ಸಮಸ್ಯೆಗಳು, ರೋಗಿಷ್ಟ ಸನ್ನಿವೇಶಗಳು, ಅವುಗಳನ್ನು ಕಂಡುಹಿಡಿಯುವ ಕೆಲವು ವಿಧಾನಗಳು ಹಾಗೂ ಕೆಲವು ಉಪಯುಕ್ತ ಮಾಹಿತಿಗಳನ್ನು ಸರಳವಾದ ರೀತಿಯಲ್ಲಿ ನಿರೂಪಿಸಲಾಗಿದೆ. ನೂರು ಸಮಸ್ಯೆಗಳನ್ನು ಪುಟ್ಟ ಪ್ರಬಂಧಗಳ ಮೂಲಕ ನಿರೂಪಿಸಿರುವುದು ಗಮನಾರ್ಹ. ಜಟಿಲವಾದ ವೈದ್ಯಶಾಸ್ತ್ರವನ್ನು ಕನ್ನಡದಲ್ಲಿ, ಆಕರ್ಷಕವಾಗಿ ಮಾಹಿತಿ ಲೋಪ ದೋಷಗಳಿಲ್ಲದೆ ಸೂಕ್ತ ಕನ್ನಡ ಪದಗಳಿಂದ ನಿರೂಪಿಸಲಾಗಿದೆ. ಎರಡೂ ಪುಸ್ತಕಗಳಲ್ಲಿ ಪಾರಿಭಾಷಿಕ ಶಬ್ದಗಳ ಪಟ್ಟಿಯನ್ನು ನೀಡಲಾಗಿದೆ. ಇವೆರಡು ಪುಸ್ತಕಗಳು ಒಂದಕ್ಕೊಂದು ಪೂರಕವಾಗಿವೆಯೆಂಬುದರಲ್ಲಿ ಸಂಶಯವಿಲ್ಲ. ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ‘ವೈದ್ಯ ವಿಶ್ವಕೋಶ’ ದಶಕದಲ್ಲಿ ಪ್ರಕಟಗೊಂಡ ಮುಖ್ಯ ಪ್ರಕಟಣೆಯಾಗಿದೆ. ಈ ವಿಶ್ವಕೋಶದಲ್ಲಿ ವೈದ್ಯಕೀಯ ವಿಜ್ಞಾನದ ಹಲವಾರು ವಿಷಯಗಳನ್ನು ಅತ್ಯಂತ ಸರಳವಾಗಿ, ಪಾರಿಭಾಷಿಕ ಪದಕೋಶ ಮತ್ತು ಸೂಕ್ತ ಚಿತ್ರಗಳೊಂದಿಗೆ ವಿಷಯಾನುಸಾರವಾಗಿ ವಿವರಿಸಲಾಗಿದೆ. ಕೆಲವು ವರ್ಣಚಿತ್ರಗಳು ಪುಸ್ತಕದಲ್ಲಿದ್ದು ಪುಸ್ತಕದ ಮೌಲ್ಯವನ್ನು ಹೆಚ್ಚಿಸಿವೆದ. ತಜ್ಞರಿಂದ ನಿರೂಪಿತವಾಗಿರುವ ಪುಸ್ತಕವು ವೈದ್ಯಕೀಯ ಶಾಸ್ತ್ರ ಮತ್ತು ಮಾನವ ದೇಹವನ್ನು ಕುರಿತು ತಿಳಿಸುವ ಅತ್ಯುತ್ತಮ ಕೃತಿಯೆಂದರೆ ತಪ್ಪಾಗಲಾರದು.

‘ಕಣ್ಣು ಮತ್ತು ದೃಷ್ಟಿ’ ‘ಕ್ಯಾನ್ಸರ್’ ‘ಲೈಂಗಿಕ ಸಮಸ್ಯೆಗಳು ಮತ್ತು ಪರಿಹಾರಗಳು’ ‘ಬ್ರುಸೆಲ್ಲಾ ರೋಗ,’ ‘ನಿಮ್ಮ ಮಗು’ ಪುಸ್ತಕಗಳು ಜನಸಾಮಾನ್ಯರನ್ನು ದೃಷ್ಟಿಯಲ್ಲಿರಿಸಿಕೊಂಡು ರಚಿತಗೊಂಡ ಪುಸ್ತಕಗಳಾಗಿವೆ. ಇವುಗಳ ಶೀರ್ಷಿಕೆಗಳೇ ಪುಸ್ತಕಗಳ ಮೂಲವಸ್ತುವನ್ನು ತಿಳಿಸಿಕೊಡುತ್ತವೆ. ಕನ್ನಡ ವಿಶ್ವವಿದ್ಯಾಲಯದ ಇನ್ನೊಂದು ಮಹತ್ವದ ಪ್ರಕಟಣೆಯೆಂದರೆ ‘ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಪರಿಪೂರ್ಣ ಜೀವನ ಶೈಲಿ’. ಪ್ರಾಚೀನ ಭಾರತದಲ್ಲಿ ಯೋಗಾಭ್ಯಾಸ, ಧ್ಯಾನ, ಪ್ರಾಣಾಯಾಮ, ವ್ಯಾಯಾಮ ಮುಂತಾದೆವುಗಳನ್ನು ಜನರು ಅನುಸರಿಸಿ, ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಪರಿಪೂರ್ಣ ಹಾಗೂ ನೆಮ್ಮದಿಯ ಜೀವನವನ್ನು ನಡೆಸಿದ್ದರು. ಅದರ ರಹಸ್ಯವನ್ನು ಅರಿತು, ಇತ್ತೀಚಿನ ದಿನಗಳಲ್ಲಿ ಪಾಶ್ಚಾತ್ಯರು ಆಹಾರ ವಿಜ್ಞಾನ, ಯೋಗಾಸನ, ಮನೋವಿಜ್ಞಾನ, ಧ್ಯಾನ, ಪ್ರಾಣಾಯಾಮ ಕ್ರಮಗಳನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು ಅನೇಕ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಂಡಿರುತ್ತಾರೆ. ಈ ಕ್ರಮದ ಜೀವನಶೈಲಿಗೆ ‘ಹೋಲಿಸ್ಟಿಕ್‌’ ಜೀವನ ಶೈಲಿಯೆಂದು ಕರೆಯುತ್ತಾರೆ. ಹೋಲಿಸ್ಟಿಕ್‌ ಅಥವಾ ‘ಪರಿಪೂರ್ಣ’ ಜೀವನಶೈಲಿಯು ಇಂದು ವಿಶ್ವದಲ್ಲೆಲ್ಲಾ ಪ್ರಚಲಿತವಾಗುತ್ತಿದ್ದು, ಜನರು ಅದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಇಂತಹ ಹೋಲಿಸ್ಟಿಕ್‌ ಜೀವನಶೈಲಿಯನ್ನು ಕುರಿತು, ತಮ್ಮ ಅನುಭವಗಳೊಂದಿಗೆ ಲೇಖಕರು ಈ ಪುಸ್ತಕದಲ್ಲಿ, ದೇಹಾರೋಗ್ಯದ ಸಮಸ್ಯೆ ಅವುಗಳ ನಿವಾರಣೆಗೆ ಮಾರ್ಗೋಪಾಯಗಳನ್ನು ಸೂಚಿಸಿದ್ದಾರೆ. ಸರಳ ಭಾಷೆ, ಸೂಕ್ತ ರೇಖಾಚಿತ್ರಗಳು, ಪಾರಿಭಾಷಿಕ ಪದಕೋಶದಿಂದ ಕೂಡಿರುವ ಈ ಪುಸ್ತಕವು ಪರಿಪೂರ್ಣವೆಂದು ಪರಿಗಣಿಸಬಹುದು.

‘ಆರೋಗ್ಯ ಮತ್ತು ಅನಾರೋಗ್ಯದಲ್ಲಿ ಮಿದುಳಿನ ರಚನೆ ಮತ್ತು ಕಾರ್ಯ ವಿಧಾನ’ ಪುಸ್ತಕದಲ್ಲಿ ಮಿದುಳಿನ ಪಾತ್ರವನ್ನು ವಿವರಿಸಲಾಗಿದೆ. ಸರಳ ಚಿತ್ರಗಳ ಮೂಲಕ, ಒಟ್ಟು ಹದಿನಾಲ್ಕು ಅಧ್ಯಾಯಗಳಿಂದ ಕೂಡಿರುವ ಹೊತ್ತಿಗೆಯು ಜನಸಾಮಾನ್ಯರಿಗೆ ಮಿದುಳಿನ ಕಾರ್ಯವೈಖರಿಯ ಬಗೆಗೆ ವಿಪುಲವಾದ ಮಾಹಿತಿಯನ್ನು ನೀಡುತ್ತದೆ. ‘ಸ್ತ್ರೀ ಆರೋಗ್ಯ ಸಂರಕ್ಷಣೆ ಹೇಗೆ? ಪುಸ್ತಕದಲ್ಲಿ ಹದಿನೇಳು ಅಧ್ಯಾಯಗಳಿದ್ದು, ಮುಖ್ಯವಾಗಿ ಸ್ತ್ರೀಯರ ಆರೋಗ್ಯದ ಬಗೆಗೆ ತಿಳಿಸಿಕೊಡುವುದರೊಂದಿಗೆ, ಗರ್ಭಿಣಿಯರ ಆರೋಗ್ಯ ರಕ್ಷಣೆ ಮತ್ತು ಸಮಸ್ಯೆಗಳಿಗೆ ಸಂಬಂಧಿಸಿದ ಪರಿಹಾರಗಳನ್ನು ಸೂಚಿಸಲಾಗಿದೆ. ಏಡ್ಸ್ ಇಂದು ವಿಶ್ವದ ಗಮನ ಸೆಳೆದಿರುವ ಒಂದು ಭಯಾನಕ ರೋಗ. ಅದರ ಹತೋಟಿಗೆ ಮತ್ತು ಚಿಕಿತ್ಸೆಗೆ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಇಂತಹ ರೋಗದ ಬಗೆಗೆ ತಿಳಿಸಿಕೊಡುವ ಪುಸ್ತಕವೆ ‘ಏಡ್ಸ್ ರೋಗ ಎಂದರೇನು? ಅದರ ಜೊತೆಗೆ ಬದುಕುವುದು ಹೇಗೆ?’. ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಶಿಯಾ ಪ್ರಾದೇಶಿಕ ಕಚೇರಿಯು ಇದನ್ನು ಪ್ರಕಟಿಸಿದೆ. ಇದು ಕನ್ನಡಕ್ಕೆ ಅನುವಾದಗೊಂಡ ಪುಸ್ತಕವಾಗಿದ್ದು, ಇದರಲ್ಲಿ ಈ ರೋಗಕ್ಕೆ ಪ್ರತಿಬಂಧಕ ಉಪಾಯಗಳನ್ನು ವಿವರಿಸಲಾಗಿದೆ. ಸಾಮಾಜಿಕ ಜಾಗೃತಿಯನ್ನು ಮೂಡಿಸುವಲ್ಲಿ ಈ ಕೃತಿಯು ಉಪಯುಕ್ತವಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರದ ‘ನಮ್ಮ ದೇಹ’ ಪುಸ್ತಕವು ಮಾನವ ದೇಹದ ಜೀರ್ಣಾಂಗ ವ್ಯವಸ್ಥೆ, ಉಸಿರಾಟ ಕ್ರಿಯೆ, ರಕ್ತ ಕಣಗಳ ರಚನೆ ಹಾಗೂ ರಕ್ತ ಪರಿಚಲನೆ ವ್ಯವಸ್ಥೆ, ದೇಹದ ಆರೋಗ್ಯಕ್ಕೆ ಅವಶ್ಯಕವಾದ ವಿಟಮಿನ್‌, ಪ್ರೋಟಿನ್‌ಗಳ ಮೂಲ, ಹಾರ್ಮೋನುಗಳ ಉತ್ಪತ್ತಿ, ಸಂವಹನ ಕ್ರಿಯೆ, ಜೀವಂತಿಕಯೆ ಮುಖ್ಯ ಲಕ್ಷಣವಾದ ಪುನರುತ್ಪಾದನೆ (ಪ್ರಜನನ ಕ್ರಿಯೆಯನ್ನು ವಿವರಿಸುವಲ್ಲಿ ಯಶಸ್ವಿಯಾಗಿದೆ. ‘ಮಧು ಮೂತ್ರ ಮತ್ತು ಸಹಜ ಜೀವನ’ ಪುಸ್ತಕವು ಅನುವಾದಿತ ಕೃತಿಯಾಗಿದೆ. ಈ ಪುಸ್ತಕದಲ್ಲಿ ಮೂರು ಅಧ್ಯಾಯಗಳಿದ್ದು, ಮಧು ಮೂತ್ರದ ಚಾರಿತ್ರಿಕ ಹಿನ್ನೆಲೆ, ಕಾಯಿಲೆಯ ವಿವರ ಮತ್ತು ಅದರ ಚರಿತ್ರೆಯ ವಿವರಗಳು, ಎರಡನೆಯ ಅಧ್ಯಾಯದಲ್ಲಿ ರೋಗ ನಿಯಂತ್ರಣದ ವಿವರಗಳು ಮತ್ತು ಅವುಗಳನ್ನು ತಡೆಗಟ್ಟುವ ಸೂಕ್ತ ಕ್ರಮಗಳು ಮತ್ತು ಮೂರನೆಯ ಅಧ್ಯಾಯದಲ್ಲಿ ಪ್ರಶ್ನೆ-ಉತ್ತರ ಹಾಗೂ ಪದಕೋಶಗಳಿವೆ. ಈ ಪುಸ್ತಕದಲ್ಲಿನ ವಿವರಗಳು ಈ ರೋಗದ ಬಗೆಗೆ ಅರಿವು ಮೂಡಿಸುತ್ತದೆ. ಕರ್ನಾಟಕ ವಿಶ್ವವಿದ್ಯಾಲಯವು ಪ್ರಕಟಿಸಿರುವ ‘ಹೆಣ್ಣು ಭ್ರೂಣ ಹತ್ಯೆ’ ಪುಸ್ತಕವು ಇಂದಿನ ಸಮಾಜದ ಸಮಸ್ಯೆಗಳನ್ನು ಎತ್ತಿ ಹಿಡಿಯುವಲ್ಲಿ ಸಫಲವಾಗಿದೆ. ಹೆಣ್ಣು ಹುಟ್ಟುವ ಮುನ್ನವೇ ಭ್ರೂಣದ ಸ್ಥಿತಿಯಲ್ಲಿಯೇ ಹತ್ಯೆಗೊಳ್ಳುತ್ತಿದ್ದು ಇದಕ್ಕಾಗಿ ವಿಜ್ಞಾನದ ಯಂತ್ರಗಳನ್ನು ದುರುಪಯೋಗಪಡಿಸಿಕೊಂಡಿರುವ ರೀತಿ, ಲಿಂಗದ ಬಗೆಗಿನ ಅಸಮಾನತೆ, ಮುಂತಾದವುಗಳನ್ನು ಲೇಖಕರು ವಿಶ್ಲೇಷಣಾತ್ಮಕವಾಗಿ ನಿರೂಪಿಸಿದ್ದಾರೆ. ಸಮಾಜದ ರೀತಿ ನೀತಿಗಳನ್ನು ಎತ್ತಿ ಹಿಡಿಯುವಲ್ಲಿ ಈ ಪುಸ್ತಕವು ಮುಖ್ಯ ಪಾತ್ರವಹಿಸುತ್ತದೆ.

‘ನಾನು ಗೌರಿಯ ಗರ್ಭಕೋಶ’ ‘ಆರೋಗ್ಯ ಶಿಕ್ಷಣ’ ಮಕ್ಕಳ ಮಾನಸಿಕ ಬೆಳವಣಿಗೆ’ ಪುಸ್ತಕಗಳು ಸಾಮಾನ್ಯ ಆರೋಗ್ಯದ ಬಗೆಗೆ ಅರಿವು ಮೂಡಿಸುತ್ತವೆ. ಇದರಂತೆ ‘ನನ್ನ ಆತ್ಮಕಥೆ ಇನ್‌ಸುಲಿನ್‌’ ‘ಬ್ರುಸೆಲ್ಲಾ ರೋಗ’. ‘ಜನಾರೋಗ್ಯ’ ಪುಸ್ತಕಗಳು ಸಹ ಈ ನಿಟ್ಟಿನಲ್ಲಿ ಪ್ರಕಟಗೊಂಡ ಕೃತಿಗಳು. ‘ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ’ ಪುಸ್ತಕವು ಮಾನಸಿಕ ಆರೋಗ್ಯದ ಹಲವು ಮುಖಗಳನ್ನು ಪರಿಚಯಿಸಿಕೊಡುತ್ತದೆ.

ವೈದ್ಯಕೀಯ ಶಾಸ್ತ್ರದಲ್ಲಿ ಆಯುರ್ವೇದವು ತನ್ನದೇ ಆದ ಸ್ಥಾನವನ್ನು ಹೊಂದಿದೆ. ಮಾನವನಿಗೆ ಆಯುರ್ವೇದ ಶಾಸ್ತ್ರವು ತನ್ನ ಕೊಡುಗೆಯನ್ನು ನೀಡಿದೆಯೆಂಬುದರಲ್ಲಿ ಸಂಶಯವಿಲ್ಲ. ಈ ವಿಜ್ಞಾನ ಪ್ರಕಾರದ ಉಗಮವು ಭಾರತದಲ್ಲಿ ಆಗಿರುವುದು ಹೆಮ್ಮೆಯ ಸಂಗತಿ. ಇದು ಪಂಡಿತರ ವೈದ್ಯವೆಂದೇ ಪ್ರಸಿದ್ಧಿಯನ್ನು ಪಡೆದಿದ್ದೂ, ಕಾಲಾನುಕ್ರಮದಲ್ಲಿ ಭಾರತದಲ್ಲಿ ಆಲಕ್ಷ್ಯಗೊಳಗಾಗಿತ್ತು. ಆದರೆ ಇಂದಿನ ಜಗತ್ತಿನಲ್ಲಿ ಜನರು ಇದಕ್ಕೆ ಮೊರೆಹೋಗುತ್ತಿದ್ದಾರೆ. ಈ ಶಾಸ್ತ್ರದ ಹಲವು ಮುಖಗಳನ್ನು ಪರಿಚಯಿಸುವ ಕೆಲವು ಹೊತ್ತಿಗೆಗಳು ಪ್ರಕಟಗೊಳ್ಳುತ್ತಲಿವೆ. ‘ಆಯುರ್ವೇದ ಪದಾರ್ಥ ವಿಜ್ಞಾನ’ ಮಾನವನ ಶರೀರ, ದೋಷ, ಧಾತು, ಮೂಲ, ವಿಜ್ಞಾನ ಸಿದ್ಧಾಂತ ತ್ರಿಗುಣ, ಪಂಚಮಹಾಭೂತ, ಲೋಕ ಅಥವಾ ಬ್ರಹ್ಮಾಂಡ, ಆತ್ಮ (ಪುರುಷ) ಬ್ರಹ್ಮಾಂಡ ಪಿಂಡಾಂಡಗಳ ಸಾಮ್ಯತೆ ಮುಂತಾದ ಆಯುರ್ವೇದ ಶಾಸ್ತ್ರದ ಮುಖ್ಯ ಸೂತ್ರಗಳು ಈ ಪುಸ್ತಕದಲ್ಲಿದೆ: ಹಾಗೂ ಇವುಗಳನ್ನು ಲೇಖಕರು ಸಮಗ್ರವಾಗಿ ಹಾಗೂ ಸರಳವಾಗಿ ವಿವರಿಸಿದ್ದಾರೆ. ‘ಆಯುರ್ವೇದ ನಿತ್ಯ ಜೀವನದ ಆರೋಗ್ಯ ಸೂತ್ರಗಳು’ ಪುಸ್ತಕವು ಆಯುರ್ವೇದ ಶಾಸ್ತ್ರದ ಮೂಲ, ಉಪಯುಕ್ತ ಗಿಡಮೂಲಿಕೆಗಳ ವಿವರ ಮತ್ತು ಈ ಶಾಸ್ತ್ರದ ಉಪಯುಕ್ತತೆಯನ್ನು ತಿಳಿಸಿಕೊಡುವಲ್ಲಿ ಯಶಸ್ವಿಯಾಗುತ್ತದೆ. ‘ಆಯುರ್ಭಾರತಿ’ ಪುಸ್ತಕವು ಸಹ ಆಯುರ್ವೇದ ಶಾಸ್ತ್ರದ ಪ್ರಾಥಮಿಕ ಮಾಹಿತಿಯನ್ನು ನೀಡುತ್ತದೆ. ಇದರಂತೆಯೇ ‘ಆಯುರ್ವೇದ ಸಾರ’ ಪುಸ್ತಕವು ಚರಕ,ಸುಶ್ರುತ, ಮುಂತಾದವರುಗಳ ಪರಿಶ್ರಮ ಹಾಗೂ ಶಾಸ್ತ್ರದ ಬಗೆಗೆ ವಿವರಿಸುತ್ತದೆ. ರೋಗ ಲಕ್ಷಣಗಳನ್ನು ಗುರುತಿಸುವಿಕೆ, ಅದಕ್ಕೆ ಔಷಧಿ, ಪಥ್ಯಕ್ರಮ, ನರಮಂಡಲ ರಚನೆ, ಮುಂತಾದವುಗಳನ್ನು ಹೊತ್ತಿಗೆಯಲ್ಲಿ ವಿವರಿಸಲಾಗಿದೆ.

ಸಸ್ಯ ಶಾಸ್ತ್ರ, ಪ್ರಾಣಿ ಶಾಸ್ತ್ರ ಮತ್ತು ಕೃಷಿಗತೆ ಸಂಬಂಧಿಸಿದ ಹಲವು ಉಪಯುಕ್ತ ಪುಸ್ತಕಗಳು ಈ ದಶಕದಲ್ಲಿ ಪ್ರಕಟಗೊಂಡಿವೆ. ಅವುಗಳಲ್ಲಿ ‘ಸಸ್ಯ ಪುರಾಣ’ ಮುಖ್ಯವಾಗಿದೆ. ನೂರಾರು ಗಿಡ ಮರಗಳ ಹೆಸರುಗಳನ್ನು, ಅವುಗಳಿಗೆ ಇರುವ ಸಸ್ಯಶಾಸ್ತ್ರದ ವೈಜ್ಞಾನಿಕ ಹೆಸರುಗಳು, ಕಾವ್ಯಗಳಲ್ಲಿ ಬಳಕೆಯಾಗಿರುವ ಪದಗಳು, ಕನ್ನಡೇತೆರ ಭಾಷೆಯ ಹೆಸರುಗಳು ಮತ್ತು ಪರ್ಯಾಯ ಪದಗಳನ್ನು ನೀಡಿರುವ ಪುಸ್ತಕವು ಪರಿಪೂರ್ಣವಾಗಿವೆ. ಇದರೊಂದಿಗೆ ಶಾಸನಗಳಲ್ಲಿ ಮತ್ತು ಕಾವ್ಯಗಳಲ್ಲಿ ಉಲ್ಲೇಖಿತವಾಗಿರುವ ಗಿಡ, ಮರ, ಹೂವು, ಹಣ್ಣುಗಳ ವಿವರಣೆಗಳಿಂದ ಕೂಡಿರುವ ಈ ಹೊತ್ತಿಗೆಯಲ್ಲಿ ಸೂಕ್ತ ರೇಖಾಚಿತ್ರಗಳಿವೆ. ‘ರಸಭರಿತ ಹಣ್ಣು ಚಿಕ್ಕು (ಸಪೋಟ)’ ಪುಸ್ತಕವು ಈ ಹಣ್ಣಿನ ಬಗೆಗೆ ವಿಪುಲವಾದ ಮಾಹಿತಿಯನ್ನು ನೀಡುತ್ತದೆ. ಈ ಹಣ್ಣಿನಲ್ಲಿರುವ ಪೌಷ್ಠಿಕಾಂಶಗಳು, ಅದರ ಸೇವನೆಯಿಂದ ಮಾನವನಿಗೆ ಆಗುವ ಉಪಕಾರಗಳನ್ನು ವಿವರಿಸಲಾಗಿದೆ. ‘ಸಾವಯವ ಕೃಷಿ’ ಪುಸ್ತಕವು ರೈತರಿಗಾಗಿ ರಚಿಸಲಾದ ಪುಸ್ತಕ. ಕೃಷಿಯಲ್ಲಿ ಆಗುತ್ತಿರುವ ಬದಲಾವಣೆಗಳು, ರಾಸಾಯನಿಕ ಗೊಬ್ಬರಗಳು ಮತ್ತು ಅದರ ಬಳಕೆ ಹಾಗೂ ಪರಿಣಾಮಗಳನ್ನು ವಿವರಿಸುವಲ್ಲಿ ಈ ಪುಸ್ತಕವು ಯಶಸ್ವಿಯಾಗಿದೆ. ಸಾಮಾನ್ಯ ಕೃಷಿಕನ ಸಮಸ್ಯೆಯನ್ನು ಮನಸ್ಸಿನಲ್ಲಿರಿಸಿಕೊಂಡು ರಚಿಸಲಾದ ಪುಸ್ತಕವು ಉಪಯೋಗಕರವಾಗಿದೆ. ‘ಗುಹೆಗಳ ಜೀವ ವೈವಿಧ್ಯತೆ’ ‘ಜೈವಿಕ ವೈವಿಧ್ಯ’ ‘ಕರಾವಳಿಯ ಪ್ರಾಣಿ ಸಂಪತ್ತು’ ಪ್ರಾಣಿ ಶಾಸ್ತ್ರವನ್ನು ಕುರಿತಾದ ಅನೇಕ ಮಾಹಿತಿಗಳನ್ನು ನೀಡುತ್ತವೆ. ‘ಸಾಮಾನ್ಯ ಪಕ್ಷಿಗಳು’ ಕನ್ನಡಕ್ಕೆ ಅನುವಾದಗೊಂಡ ಕೃತಿ. ಇದು ಪಕ್ಷಿಗಳ ವೈವಿಧ್ಯತೆಯನ್ನು ತೋರುವ ಮಾರ್ಗದರ್ಶಿ ಪುಸ್ತಕವಾಗಿದೆ.

ಸಾಮಾನ್ಯ ವಿಜ್ಞಾನದ ಬಗೆಗೆ ಕೆಲವು ಪುಸ್ತಕಗಳು ಪ್ರಕಟಗೊಂಡಿವೆ. ‘ಉಪಯುಕ್ತ ವಿಜ್ಞಾನ’. ಈಗಾಗಲೇ ದೈನಿಕ ಮತ್ತು ಸಾಪ್ತಾಹಿಕಗಳಲ್ಲಿ ಪ್ರಕಟಗೊಂಡಂತಹ ಲೇಖನಗಳ ಸಂಗ್ರಹ ಈ ಪುಸ್ತಕದಲ್ಲಿದೆ. ಸಸ್ಯ, ಜೀವ, ವೈದ್ಯ, ಖಗೋಲ ಶಾಸ್ತ್ರ, ಬಾಹ್ಯಾಕಾಶ ವಿಜ್ಞಾನ, ಮುಂತಾದ ವಿಜ್ಞಾನ ಶಾಖೆಗಳನ್ನು ಮೂವತ್ತು ಲೇಖನಗಳ ಮೂಲಕ ಪರಿಚಯಿಸಿಕೊಡುತ್ತದೆ. ‘ಪರಮಾಣು ಶಸ್ತ್ರಾಸ್ತ್ರಗಳು’ ಪುಸ್ತಕವು ಪರಮಾಣುವಿನ ಬಗೆಗಿನ ಅನೇಕ ಉಪಯುಕ್ತ ಮಾಹಿತಿಗಳನ್ನು ಒದಗಿಸುತ್ತದೆ. ‘ಅವಶ್ಯ ತಂತ್ರಜ್ಞಾನ’, ಪುಸ್ತಕವು ಮಾನವನಿಗೆ ಉಪಯೋಗವಾಗುವ ವಸ್ತುಗಳ ತಂತ್ರಜ್ಞಾನವನ್ನು ತಿಳಿಸಿಕೊಡುತ್ತದೆ. ‘ಪುಟಾಣಿ ಕಂಡ ಪರಮಾಣು ಲೋಕ’ ಪುಸ್ತಕವು ವಿಜ್ಞಾನದ ವಿದ್ಯಾರ್ಥಿಗಳಿಗಾಗಿ ರಚಿಸಲಾಗಿದೆ. ಬಾಲಕನೊಬ್ಬನಿಗೆ ಒಂದು ರಾತ್ರಿ ಕನಸು ಬೀಳುತ್ತದೆ. ಆ ಕನಸಿನಲ್ಲಿ ಪರಮಾಣು ಲೋಕದ ವಿಸ್ಮಯಕಾರಿ ಮಾಹಿತಿಗಳನ್ನು ಅವನು ತಿಳಿಯುತ್ತಾನೆ. ಲೇಖಕರ ನಿರೂಪಣಾ ಶೈಲಿಯು ವಿದ್ಯಾರ್ಥಿಗಳಿಗೆ, ವಿಜ್ಞಾನದ ವಿಷಯಗಳನ್ನು ತಿಳಿಸಿಕೊಡುವಲ್ಲಿ ಯಶ್ವಸಿಯಾಗುತ್ತದೆ. ‘ನಮ್ಮ ಜಲ ಸಂಪನ್ಮೂಲ’, ‘ನಿಗೂಢ ರಹಸ್ಯ’ ‘ಪರಿಸರ ಮುಂದೇನು?’ ‘ನೆಲ-ಜಲ-ಉಳಿಸಿ’ ‘ಸಾಗರ ವಿಜ್ಞಾನ’ ‘ದ್ರವ ಬಂಗಾರ ನೀರು’ ಪುಸ್ತಕಗಳು ಸಾಮಾನ್ಯ ವಿಜ್ಞಾನದ ಪುಸ್ತಕಗಳಾಗಿದ್ದು, ಜನಸಾಮಾನ್ಯನಿಗೆ ಸಂದೇಶವನ್ನು ತಲುಪಿಸುವಲ್ಲಿ ಯಶಸ್ಸನ್ನು ಸಾಧಿಸುತ್ತವೆ.

ವಿಜ್ಞಾನಿಗಳನ್ನು ಕುರಿತ ಬರಹಗಳಿಗೆ ಕೊರತೆಯಿಲ್ಲ. ಈ ನಿಟ್ಟಿನಲ್ಲಿ ಕಳೆದ ದಶಕದಲ್ಲಿ ಹಲವಾರು ಪ್ರಕಟಣೆಗಳು ಬೆಳಕಿಗೆ ಬಂದಿವೆ. ಅವುಗಳಲ್ಲಿ ‘ವಿಜ್ಞಾನಿಗಳೊಡನೆ ರಸ ನಿಮಿಷಗಳು’ ಪುಸ್ತಕವು ಗಮನಸೆಳೆಯುತ್ತದೆ. ಇದರಲ್ಲಿ ಅನೇಕ ಖ್ಯಾತ ವಿಜ್ಞಾನಿಗಳ ಹಾಸ್ಯಪ್ರಜ್ಞೆ, ಮರೆವು, ಅವರನ್ನು ಕುರಿತಾದ ರೋಚಕ ಕಥೆಗಳು ಮುಂತಾದ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿರುವ ಪುಸ್ತಕದಲ್ಲಿ ಐನ್‌ಸ್ಟೈನ್‌, ನ್ಯೂಟನ್‌, ಡಾರ್ವಿನ್‌, ಹೆಚ್‌.ಜೆ.ಬಾಭಾ, ಲೂಯಿಪಾಶ್ಚರ್, ಮುಂತಾದವರನ್ನು ಕುರಿತು ಬರೆಯಲಾಗಿದೆ. ಅವರ ವೈಯಕ್ತಿಕ ಬದುಕಿನ ಬಗೆಗೆ ಗಮನಸೆಳೆದಿದೆ ಈ ಪುಸ್ತಕ. ಕನ್ನಡ ಪುಸ್ತಕ ಪ್ರಾಧಿಕಾರವು ‘ವಿಜ್ಞಾನ ದೀಪಮಾಲೆ’ಯಲ್ಲಿ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಸಾಧನೆ ಮತ್ತು ಜೀವನ ಕುರಿತಂತೆ ಪುಸ್ತಕಗಳನ್ನು ಹೊರತಂದಿದೆ. ಪ್ರಕಟಗೊಂಡ ಮೂರು ಪುಸ್ತಕಗಳು ಜಗತ್ತಿನ ಅತ್ಯಂತ ಶ್ರೇಷ್ಠ ವಿಜ್ಞಾನಿಗಳಾಗಿದ್ದು ಮೂವರೂ ನೊಬೆಲ್‌ ಪಾರಿತೋಷಕವನ್ನು ಪಡೆದವರು ಎಂಬುದು ಗಮನಾರ್ಹ. ‘ರಾಬರ್ಟ್ ಕಾಕ್‌’ ಪುಸ್ತಕದಲ್ಲಿ ವಿಜ್ಞಾನಿ ರಾಬರ್ಟಕಾಕ್‌ನ ಬಗೆಗೆ ಪರಿಚಯ ಮಾಡಲಾಗಿದೆ. ಈತ ಜರ್ಮನ್‌ ದೇಶದ ಒಂದು ಸಣ್ಣ ಪಟ್ಟಣದಲ್ಲಿ ಜನಿಸಿ, ಪ್ರಶಸ್ತಿ ಪಡೆಯುವಷ್ಟು ಜಾಣನಲ್ಲದ್ದಿದ್ದರೂ ಬದುಕಿನ ಮೇಲೆ ಪ್ರೇಮಾಸಕ್ತಿಯನ್ನು ಬೆಳೆಸಿಕೊಂಡು ವೈದ್ಯಕೀಯವನ್ನು ವೃತ್ತಿಯನ್ನಾಗಿಸಿಕೊಂಡನು. ದೇಹರಚನಾ ಶಾಸ್ತ್ರವನ್ನು ದೀರ್ಘವಾಗಿ ಅಭ್ಯಯಿಸಿ ಪ್ರಶಸ್ತಿಗಳನ್ನು ಗೆದ್ದುಕೊಂಡನು.  ದೇಹರಚನಾ ಶಾಸ್ತ್ರದಲ್ಲಿ ಅನೇಕ ಪ್ರಯೋಗಗಳನ್ನು ನಡೆಸಿ ಅನೇಕ ಹೊಸ ವಿಷಯಗಳನ್ನು ವೈದ್ಯ ಜಗತ್ತಿಗೆ ತೋರಿಸಿಕೊಟ್ಟನು. ಆಂಥ್ರಾಕ್ಸ್‌, ಕಾಲರಾ, ಮತ್ತು ಕ್ಷಯ ರೋಗಗಳಿಕಗೆ ಕಾರಣವಾದ ರೋಗಾಣುಗಳನ್ನು ಮೊದಲ ಬಾರಿಗೆ ಪತ್ತೆ ಹಚ್ಚಿದ ಹೆಗ್ಗಳಿಗೆ ಈತನಿಗೆ ಸಲ್ಲುತ್ತದೆ. ಅನೇಕ ಹೊಸ ವಿಧಾನಗಳನ್ನು ಹಾಗೂ ಸಲಕರಣೆಗಳನ್ನು ತಾನೇ ಆವಿಷ್ಕರಿಸಿ ವೈದ್ಯಕೀಯ ಶಾಸ್ತ್ರದಲ್ಲಿ ಒಂದು ಹೊಸ ತಿರುವನ್ನು ನೀಡಿದನು. ಕಾಕ್‌ನು ನಿಯಮಿಸಿದ ಸೂತ್ರಗಳನ್ನು ವೈದ್ಯಕೀಯ ವಿದ್ಯಾರ್ಥಿಗಳು ಇಂದಿಗೂ ಅನುಸರಿಸುತ್ತಿರುವುದು ಗಮನೀಯ. ‘ರೋನಾಲ್ಡ್‌ ರಾಸ್‌’ಪುಸ್ತಕದಲ್ಲಿ ವಿಜ್ಞಾನಿ ರೋನಾಲ್ಡ್‌ ರಾಸ್‌ನ ಕುರಿತ ವಿವರಗಳಿವೆ. ಮೂಲತಃ ಬ್ರಿಟಿಶ್‌ನವನಾದರೂ ಅವನು ಭಾರತದಲ್ಲಿ ಜನಿಸಿ, ಭಾರತದಲ್ಲಿಯೇ ಮಲೇರಿಯಾ ರೋಗವನ್ನು ಕುರಿತು ಸಂಶೋಧನೆ ಕೈಗೊಂಡು, ರೋಗಕ್ಕೆ ಕಾರಣವಾದ ಕೀಟಾಣು ಮತ್ತು ವಾಹಕಗಳನ್ನು ಗುರುತಿಸುವುದರ ಮೂಲಕ ಮಲೇರಿಯಾ ರೋಗಕ್ಕೆ ಮದ್ದನ್ನು ಕಂಡುಕೊಳ್ಳುವಲ್ಲಿ ಸಹಾಯಕನಾದ. ವಿಶ್ವದಲ್ಲಿ ಈ ರೋಗಕ್ಕೆ ತುತ್ತಾಗುತ್ತಿದ್ದ ಲಕ್ಷಾಂತರ ಮಂದಿಯ ಮರಣವನ್ನು ತಪ್ಪಿಸಿದ ಮತ್ತು ತಪ್ಪಿಸುತ್ತಿರುವ ಕೀರ್ತಿ ಇವನಿಗೆ ಸಲ್ಲುತ್ತದೆ. ಪುಸ್ತಕವು ಅವನ ಜೀವನ ಮತ್ತು ಸಾಧನೆಯೊಂದಿಗೆ ರೋಗದ ಉದ್ಭವ, ವೈಶಿಷ್ಟತೆ ಮತ್ತು ಹತೋಟಿಯಲ್ಲಿಡುವ ಕ್ರಮಗಳನ್ನು ತಿಳಿಸಿಕೊಡುತ್ತದೆ. ನೊಬೆಲ್‌ ಪಾರಿತೋಷಕ ಬಹುಮಾನವನ್ನು ಪ್ರಥಮ ಬಾರಿಗೆ ಪಡೆದ ಭೌತವಿಜ್ಞಾನಿ ವಿಲ್‌ಹೆಲ್ಮ್ ಕಾನ್ರಾಡ್‌ ರಾಂಟ್‌ಜೆನ್‌. ಅವನ ಸಂಕ್ಷಿಪ್ತ ಜೀವನ ಚರಿತ್ರೆ ಸಂಶೋಧನೆ ಮತ್ತು ಸಾಧನೆಗಳನ್ನು ‘ವಿಲ್‌ಹೆಲ್ಮ್ ಕಾನ್ರಾಡ್‌ ರಾಂಟಜೆನ್‌’ ಪುಸ್ತಕ ಪರಿಚಯಿಸುತ್ತದೆ. ಇವನ ಆವಿಷ್ಕಾರವೇ ಎಕ್ಸ್ರೇ (ರೇಡಿಯಾಲಜಿ) ಉಪಕರಣ. ಇಂದು ವಿಶ್ವದಾದ್ಯಂತ ವೈದ್ಯ ಹಾಗೂ ಇತರ ಶಾಸ್ತ್ರಗಳಲ್ಲಿ ಈ ಉಪಕರಣವನ್ನು ಮಾನವನ ಏಳಿಗೆಗಾಗಿ ಬಳಸಲಾಗುತ್ತಿದೆ. ಈ ಪುಸ್ತಕದಲ್ಲಿ ಭೌತಶಾಸ್ತ್ರದ ಹಲವಾರು ಅಂಶಗಳನ್ನು ಲೇಖಕರು ನೀಡಿದ್ದಾರೆ.

‘ಮೇಡಂಕ್ಯೂರಿ’ ಕೃತಿಯು ವಿಜ್ಞಾನ ಕ್ಷೇತ್ರದಲ್ಲಿ ಆಪಾರ ಸಾಧನೆಗಯದ ಮೇಡಂ ಕ್ಯೂರಿಯ ಜೀವನ ಮತ್ತು ಸಾಧನೆಗಳನ್ನು ತಿಳಿಸಿಕೊಡುತ್ತದೆ. ಈಕೆಯು ಸಹ ನೊಬೆಲ್‌ ಪ್ರಶಸ್ತಿಯನ್ನು ಪಡೆದವಳು. ಪ್ರಥಮ ಬಾರಿಗೆ ಮಹಿಳೆಯೋರ್ವಳು ಈ ಪ್ರಶಸ್ತಿಯನ್ನು ಪಡೆದ ಹೆಗ್ಗಳಿಗೆ ಇವಳಿಗೆ ಸಲ್ಲುತ್ತದೆ. ಈಕೆ ಅನ್ವೇಷಿಸಿದ ರೇಡಿಯಂ ಧಾತು, ತನ್ನ ಅದ್ಭುತವಾದ ‘ವಿಕಿರಣ ಶಕ್ತಿ’ಯಿಂದ ಲಕ್ಷಾಂತರ ರೋಗಿಗಳನ್ನು ಗುಣಮುಖರನ್ನಾಗಿಸಿತು. ಇವರ ಜೀವನ ಮತ್ತು ಸಾಧನೆಗಳನ್ನು ಅರಿಯುವ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಚೇತನವೊಂದು ತುಂಬುತ್ತದೆ ಎಂದರೆ ತಪ್ಪಾಗಲಾರದು.

‘ವಿಜ್ಞಾನ ಸಾಹಿತ್ಯಕ್ಕೆ ತುಮಕೂರು ಜಿಲ್ಲೆಯ ಕೊಡುಗೆ’ ಪುಸ್ತಕದಲ್ಲಿ ಒಂದು ಜಿಲ್ಲೆಗೆ ಸೇರಿದ ವ್ಯಕ್ತಿಗಳು ವಿಜ್ಞಾನ ಸಾಹಿತ್ಯಕ್ಕೆ ನೀಡಿದ ಕೊಡುಗೆ,  ಬರವಣಿಗೆ ಕೈಗೊಂಡ ವ್ಯಕ್ತಿ-ವಿವರ, ಸಾಧನೆ, ಮುಂತಾದ ವಿವರಗಳನ್ನು ನೀಡಲಾಗಿದೆ. ಇದರಲ್ಲಿ ಪ್ರಕಟಗೊಂಡ ವೈಜ್ಞಾನಿಕ ಬರಹಗಳು ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಸೇರಿದವುಗಳೇ ಆಗಿವೆ. ಇಂಥಹ ಕೃತಿಗಳು ವೈಜ್ಞಾನಿಕ ಕ್ಷೇತ್ರದಲ್ಲಿ ದುಡಿಯುವವರಿಗೆ ಉತ್ತೇಜನಕಾರಿಯಾಗಿರುತ್ತದೆ ಎಂದು ಆಶಿಸಬಹುದು.

ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ‘ಭಾರತೀಯ ವಿಜ್ಞಾನದ ಹಾದಿ’ ಪುಸ್ತಕವು  ದಶಕದ ಮುಖ್ಯ ಪ್ರಕಟಣೆಗಳಲ್ಲಿ ಒಂದು. ಈ ಪುಸ್ತಕವು ಭಾರತದಲ್ಲಿ ವಿಜ್ಞಾನವು ಸಾಗಿ ಬಂದ ಪೂರ್ಣ ವಿವರಗಳಿವೆ. ವಿಜ್ಞಾನವು ಪ್ರಾಚೀನ ಭಾರತದಲ್ಲಿ ಪ್ರಚಲಿತವಾಗಿದ್ದು, ಚರಿತ್ರೆಯ ಪೂರ್ವ ಕಾಲದಿಂದ ಅದರ ಇರುವಿಕೆಯನ್ನು ಲೇಖಕರು ನಿರೂಪಿಸಿದ್ದಾರೆ. ಪುಸ್ತಕದಲ್ಲಿ ಸೂಕ್ತ ಉದಾಹರಣೆಗಳು, ಚರಿತ್ರೆ, ವಿಜ್ಞಾನ ಬೆಳೆದ ಬಗೆಗಳನ್ನು ಸಾಕಷ್ಟು ಪುರಾವೆಗಳೊಂದಿಗೆ ವಿಶ್ಲೇಷಣಾತ್ಮಕವಾಗಿ ವಿಷಯ ಮಂಡನೆ ಮಾಡಿರುವುದು ಗಮನಾರ್ಹ. ಇಂತಹ ಪ್ರಕಟಣೆಗಳು ವಿಜ್ಞಾನ ಸಾಹಿತ್ಯಕ್ಕೆ ನೀಡಿದ ಕೊಡುಗೆಯೆಂದರೆ ಅತಿಶಯೋಕ್ತಿಯಾಗಲಾರದು.

ವಿಜ್ಞಾನ ಸಾಹಿತ್ಯಕ್ಕೆ ದಶಕದ ಮತ್ತೊಂದು ಕೊಡುಗೆಯೆಂದರೆ ಕನ್ನಡ ವಿಶ್ವವಿದ್ಯಾಲಯವು ಪ್ರಕಟಿಸಿರುವ ‘ರಸಾಯನ ಶಾಸ್ತ್ರ’, ಜೀವಶಾಸ್ತ್ರ’ ಮತ್ತು ‘ಗಣಿತಶಾಸ್ತ್ರ’ ವಿಷಯಗಳನ್ನು ಕುರಿತ ಪದವಿಪೂರ್ವ ಮೊದಲ ಮತ್ತು ದ್ವಿತೀಯ ವರ್ಷದ ಪಠ್ಯಪುಸ್ತಕಗಳು. ಇದರಿಂದ ಕನ್ನದ ಮಾಧ್ಯಮದಲ್ಲಿ  ಅಭ್ಯಾಸ ಮಾಡುತ್ತಿರುವ ಸಹಸ್ರಾರು ವಿದ್ಯಾರ್ಥಿ ಮತ್ತು ಭೋಧಕರುಗಳಿಗೆ ಇದ್ದಂತಹ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿದೆಯೆಂದರೆ ತಪ್ಪಾಗಲಾರದು. ಕನ್ನಡದಲ್ಲಿ ಲಭ್ಯವಿರುವ ಪಠ್ಯಪುಸ್ತಕಗಳು ಆಂಗ್ಲದಿಂದ ಅನುವಾದಗೊಂಡಿದ್ದು, ಅವುಗಳಲ್ಲಿ ಭಾಷಾದೋಷಗಳು, ಪಾರಿಭಾಷಿಕ ಪದಗಳ ಕೊರತೆಯಿರುವುದರಿಂದ ಅವುಗಳು ಅಪೂರ್ಣವಾಗಿಯೇ ಉಳಿದು ತನ್ನ ಗುರಿಯನ್ನು ತಲುಪುವಲ್ಲಿ ವಿಫಲವಾಗಿದೆ. ಈ ದಿಕ್ಕಿನಲ್ಲಿ ಭೋಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಗುಣವಾಗಿ, ಪದವಿಪೂರ್ಣ ಪಠ್ಯಕ್ರಮದಂತೆ ವಿಜ್ಞಾನ ವಿಷಯಗಳಲ್ಲಿ ನುರಿತ ಅಧ್ಯಾಪಕರು, ಶಿಕ್ಷಣ ತಜ್ಞರು ಮತ್ತು ಭಾಷಾ ತಜ್ಞರುಗಳ ಸಲಹೆ, ಸಹಕಾರ ಮತ್ತು ಸೂಚನೆಯ ಮೇರೆಗೆ ಸಿದ್ಧಪಡಿಸಿದ ಪಠ್ಯಪುಸ್ತಕವನ್ನು ಹಲವು ಹಂತಗಳಲ್ಲಿ ವಿಶೇಷವಾಗಿ ಆಯ್ದ ತಜ್ಞಸ ಸಂಪಾದಕ ಮಂಡಳಿಯವರಿಂದ ಪರಿಶೀಲಿಸಿ ಕನ್ನಡ ವಿಶ್ವವಿದ್ಯಾಯಲಯ ಪಠ್ಯಪುಸ್ತಕ ಸಿದ್ಧಪಡಿಸಿದೆ. ಈ ಕಾರಣಗಳಿಗಾಗಿ ಇಂಗ್ಲಿಶ್‌ ಮಾಧ್ಯಮದಲ್ಲಿರುವ ಅದೇ ವಿಷಯಗಳಿಗೆ ಸಂಬಂಧಪಟ್ಟ ಪುಸ್ತಕಗಳಿಗಿಂತ ಕಡಿಮೆಯಿಲ್ಲವೆಂದು ಈ ಪುಸ್ತಕಗಳನ್ನು ಅಭ್ಯಸಿಸುವವರ ಅಭಿಪ್ರಾಯವಾಗಿದೆ. ಭೋಧಕವರ್ಗ ಮತ್ತು ವಿದ್ಯಾರ್ಥಿವೃಂದಗಳ ಮಹದಾಶೆಯನ್ನು ಕನ್ನಡ ವಿಶ್ವವಿದ್ಯಾಲಯವು ಪೂರೈಸಿದೆ. ಪಾರಿಭಾಷಿಕ ಶಬ್ದಗಳ ಅರ್ಥಕೋಶವನ್ನು ಅಕಾರಾದಿಯಾಗಿ ನೀಡಿರುವುದು ಪ್ರಶಂಸನೀಯ. ಈ ನಾಲ್ಕು ಪುಸ್ತಕಗಳಲ್ಲಿ ಕನ್ನಡ ಭಾಷೆಯಲ್ಲಿ ಅಂತಸ್ಥವಾಗಿರುವ ವಿಜ್ಞಾನ ಭಾಷೆಯೊಂದನ್ನು ಅತ್ಯಂತ ಸಮರ್ಪಕ ರೀತಿಯಲ್ಲಿ ಬಳಕೆಗೆ ತಂದಿರುವುದು ಗಮನೀಯವಾದ ಅಂಶ.

ವಿಜ್ಞಾನ ಸಾಹಿತ್ಯವನ್ನು ಜನಸಾಮಾನ್ಯರಿಗೆ ಸುಲಭವಾಗಿ ತಲುಪಿಸುವ ಮಾಧ್ಯಮಗಳೆಂದರೆ ನಿಯತಕಾಲಿಕೆಗಳು. ಸಾಮಾನ್ಯವಾಗಿ ಕೆಲವೊಂದು ಜನಪ್ರಿಯ ನಿಯತಕಾಲಿಕೆಗಳು ಮತ್ತು ದಿನಪತ್ರಿಕೆಗಳು ತಮ್ಮ ಒಂದು ಅಂಕಣವನ್ನು ವಿಜ್ಞಾನ ಸಾಹಿತ್ಯಕ್ಕೆಂದು ಮೀಸಲಿರಿಸಿರುವುದು ಚೇತೋಹಾರಿಯಾದ ಸಂಗತಿ. ಪ್ರಮುಖ ನಿಯತಕಾಲಿಕೆಗಳಲ್ಲಿ ವಿಜ್ಞಾನ ವಿಷಯಗಳಿಗಾಗಿಯೇ ಮೀಸಲಾಗಿ ಪ್ರಕಟಗೊಳ್ಳುತ್ತಿರುವ ಒಂದು ಮಾಸಿಕ ಪತ್ರಿಕೆಯೆಂದರೆ ‘ವಿಜ್ಞಾನ ಸಂಗಾತಿ’. ಕನ್ನಡ ವಿಶ್ವವಿದ್ಯಾಲಯವು ಸತತವಾಗಿ ಪ್ರಕಟಿಸುತ್ತಿರುವ ಈ ಪುಸ್ತಕದಲ್ಲಿ ಲೇಖನಗಳಿರುತ್ತವೆ. ಅವುಗಳು ಕೇವಲ ಅನುವಾದಿತವಾಗಿಲ್ಲದೆ, ಅನೇಕ ಲೇಖನಗಳು ಸ್ವತಂತ್ರವಾಗಿ ಮೂಡಿಬಂದಿರುವಂತಹುದೇ ಆಗಿವೆ. ಸುಂದರ ರಕ್ಷಾಪುಟ, ವೈಚಾರಿಕ ಲೇಖನಗಳು, ರೇಖಾ ಮತ್ತು ಛಾಯಾಚಿತ್ರಗಳು ಪ್ರಚಲಿತ ಸಮಸ್ಯೆಗಳು, ಆವಿಷ್ಕಾರಗಳು ಮತ್ತು ಇನ್ನೂ ಅನೇಕ ವಿಷಯಗಳನ್ನು ಸರಳವಾದ ಭಾಷೆಯಲ್ಲಿ ನಿರೂಪಿತವಾಗಿರುವುದು ಮಾಸಿಕದ ವಿಶೇಷ. ಈ ಪತ್ರಿಕೆಯು ಜನಸಾಮಾನ್ಯರಲ್ಲಿ ಅಡಕವಾಗಿರುವ ವೈಜ್ಞಾನಿಕ ಪ್ರಜ್ಞೆಯನ್ನು ಜಾಗೃತಗೊಳಿಸುವುದರಲ್ಲಿ ಸಫಲವಾಗುತ್ತದೆ ಎಂದು ದೃಢವಾಗಿ ಅಭಿಪ್ರಾಯಪಡಬಹುದು.

ವಿಜ್ಞಾನ ಸಾಹಿತ್ಯಕ್ಕೆ ಇನ್ನೊಂದು ನಿಯತಕಾಲಿಕೆಯು ತನ್ನ ಕೊಡುಗೆಯನ್ನು ನೀಡುತ್ತಲಿದೆ. ‘ಹಿತ್ತಲ ಗಿಡ’ ಎಂಬ ಚಾತುರ್ಮಾಸಿಕವು ರೈತ, ವಿಜ್ಞಾನಿ, ವಿದ್ಯಾರ್ಥಿ, ಸ್ವಯಂ ಸೇವಾ ಸಂಸ್ಥೆ ಮತ್ತು ವ್ಯಕ್ತಿಗಳ ಸಾಮೂಹಿಕ ಪ್ರಯತ್ನದಿಂದ ಅಡೆತಡೆಯಿಲ್ಲದೆ ಪ್ರಕಟಗೊಳ್ಳುತ್ತಲಿದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಆಸಕ್ತ ಪ್ರಾಧ್ಯಾಪಕ ಮತ್ತು ಅವರ ಸಹಚರರು ರೈತರಿಗೆ ಮತ್ತು ಕೃಷಿ ಮಾಡುವ ಆಸಕ್ತರಿಗಾಗಿ ಪ್ರಕಟಿಸುತ್ತಿರುವ ನಿಯತಕಾಲಿಕೆಯಲ್ಲಿ ರೈತವರ್ಗದವರು ಅನುಸರಿಸಬೇಕಾದ ಕ್ರಮಗಳು,  ಗಿಡ, ಪೈರು, ಮುಂತಾದ ಸಸ್ಯ ವರ್ಗಕ್ಕೆ ತಗಲುವ ರೋಗ ರುಜಿನಗಳು ಮತ್ತು ಅವುಗಳನ್ನು ಹತೋಟಿಯಲ್ಲಿಡುವ ಕ್ರಮಗಳನ್ನಲು ನುರಿತ ತಜ್ಞರ ಸಲಹೆಗಳೊಂದಿಗೆ ಮೂಡಿಸುತ್ತಿದ್ದಾರೆ. ಸೂಕ್ತ ಅಂಕಣಗಳು ಮತ್ತು ಶೀರ್ಷಿಕೆಗಳು ನಿಯತಕಾಲಿಕೆಯ ಗುಣಮಟ್ಟವನ್ನು ಹೆಚ್ಚುಸುವಲ್ಲಿ ಸಹಕಾರಿಯಾಗಿವೆ. ಇಂತಹ ಪ್ರಾಮಾಣಿಕ ಪ್ರಯತ್ನಗಳು ವಿಜ್ಞಾನ ಸಾಹಿತ್ಯಕ್ಕೆ ನೀಡುವ ಕೊಡುಗೆಯಾಗಿವೆ. ಇದರೊಂದಿಗೆ ಆಯಾ ಕ್ಷೇತ್ರಕ್ಕೆ ಅವರು ಸಲ್ಲಿಸುತ್ತಿರುವ ಸೇವೆಯಾಗಿದೆ. ಇವರ ಪ್ರಯತ್ನಗಳು ಕೃಷಿಕರಿಗೆ ತಲುಪಿ, ಅವರಲ್ಲಿ ಜಾಗೃತಿಯನ್ನು ಮೂಡಿಸುತ್ತದೆ ಹಾಗೂ ವ್ಯವಸಾಯ ಪದ್ಧತಿಯು ಸುಧಾರಿಸುತ್ತದೆ. ‘ಹಿತ್ತಲ ಗಿಡ’ ಮಾಡುತ್ತಿರುವ ಪ್ರಯತ್ನವು ನಿಜಕ್ಕೂ ಶ್ಲಾಘನೀಯ. ವಿಜ್ಞಾನದ ಹಲವಾರು ಶಾಖೆಗಳಿದ್ದು, ಆಯಾ ಕ್ಷೇತ್ರದಲ್ಲಿ ದುಡಿಯುತ್ತಿರುವ ವಿಜ್ಞಾನಿಗಳು, ವೈದ್ಯರು, ಆಸಕ್ತರು ವಿಜ್ಞಾನದ ವಿಷಯಗಳಿಗಾಗಿ ನಿಯತಕಾಲಿಕೆಗಳನ್ನು ಪ್ರಕಟಿಸಿದ್ದೇ ಆದರೆ, ಮುಂಬರುವ ದಿನಗಳಲ್ಲಿ ವಿಜ್ಞಾನ ಸಾಹಿತ್ಯವು ಬೆಳೆದು ಜನಸಾಮಾನ್ಯರನ್ನು ತಲುಪುವುದೆಂಬುದರಲ್ಲಿ ಯಾವ ಸಂಶಯವಿಲ್ಲ.

ಕನ್ನಡದಲ್ಲಿ ವಿಜ್ಞಾನ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ, ಅವಕಾಶಗಳನ್ನು ವಿವಿಧ ಸಂಘ ಸಂಸ್ಥೆಗಳು ನೀಡಬೇಕು. ಜನಸಾಮಾನ್ಯರಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದರೊಂದಿಗೆ ಗಂಭೀರವಾದ ಹಾಗೂ ಸಂಶೋಧನಾತ್ಮಕ ಲೇಖನಗಳನ್ನು ವಿಜ್ಞಾನಿಗಳು ಮತ್ತು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದವರು ಬರೆದು ಪ್ರಕಟಿಸಿದ್ದೇ ಆದರೆ ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ತೊಂದರೆಗಳಾದ ಪಾರಿಭಾಷಿಕ ಪದಗಳು, ಭಾಷಾ ಸಮಸ್ಯೆ, ಮುಂತಾದವುಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳಬಹುದು. ವೈಜ್ಞಾನಿಕ ಬೆಳವಣಿಗೆಯೊಂದಿಗೆ ಜನಸಾಮಾನ್ಯರಲ್ಲಿ ಸಾಮಾಜಿಕ ಮೌಲ್ಯ ಹೆಚ್ಚಿಸಿ ಮೂಢನಂಬಿಕೆಯನ್ನು ತೊಲಗಿಸಿ ವೈಜ್ಞಾನಿಕ ಪ್ರಜ್ಞೆ ಮತ್ತು ಚಿಂತನೆಗೆ ದಾರಿಯನ್ನು ಕನ್ನಡ ವಿಜ್ಞಾನ ಸಾಹಿತ್ಯವು ಮಾಡಬಲ್ಲದು ಎಂಬುದರಲ್ಲಿ ಸಂದೇಹವಿಲ್ಲ.