ಕರ್ನಾಟಕದ ಚಿತ್ರಕಲಾ ಸಾಹಿತ್ಯದ ಪ್ರಮುಖ ಕೃತಿಗಳನ್ನು ಇಲ್ಲಿ ವಿಶೇಷವಾಗಿ ಗಮನಿಸಲಾಗಿದೆ. ೧೯೯೧ರಿಂದ ೨೦೦೦ದ ಅವಧಿಯಲ್ಲಿ ಚಿತ್ರಕಲಾ ಕ್ಷೇತ್ರದ ವಿವಿಧ ಆಯಾಮಗಳ ಕುರಿತಾಗಿ ಕಲಾ ಸಾಹಿತ್ಯ ಪ್ರಕಟಣೆಗಳು ಬಂದಿವೆ. ಸಾಹಿತ್ಯ ಮುಂತಾದ ಶಿಸ್ತುಗಳಲ್ಲಿ ಬಂದಷ್ಟು ಈ ಕ್ಷೇತ್ರದಲ್ಲಿ ಪ್ರಕಟಣೆಗಳು ಬಂದಿಲ್ಲ. ಚಿತ್ರಕಲಾ ಕ್ಷೇತ್ರ ಹೆಚ್ಚು ಪ್ರಾಯೋಗಿಕತೆಗೆ (ಪ್ರಾಕ್ಟಿಕಲ್‌ಗೆ) ಮಹತ್ವ ನೀಡುತ್ತ ಬಂದ ಕಾರಣವಾಗಿ ಕಲಾ ಸಾಹಿತ್ಯದ ಕೃಷಿ ಅಷ್ಟಾಗಿ ನಮ್ಮ ದೇಶದಲ್ಲಿ ಆಗಿಲ್ಲವೆಂದೇ ಹೇಳಬೇಕಾಗುತ್ತದೆ. ಪಾಶ್ಚಿಮಾತ್ಯರಲ್ಲಿ ಕಲಾಕೃತಿ ರಚನೆ ಮತ್ತು ಕಲಾ ಸಾಹಿತ್ಯ ಎರಡೂ ಕ್ಷೇತ್ರಗಳಲ್ಲಿ ಕೆಲಸ ನಡೆದ ಕಾರಣವಾಗಿ ಅಲ್ಲಿನ ಕಲಾ ಸಾಹಿತ್ಯ ಇಂದು ಮನಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಈಚಿನ ವರ್ಷಗಳಲ್ಲಿ ಚಿತ್ರಕಲಾ ಸಾಹಿತ್ಯವೂ ಗಣನೀಯ ಪ್ರಮಾಣದಲ್ಲಿ ಬರುತ್ತಿರುವುದು, ಈ ಕ್ಷೇತ್ರದಲ್ಲಾದ ಒಂದು ಹೊಸ ಬೆಳವಣಿಗೆಯನ್ನಬಹುದು.

ಪಾಶ್ಚಿಮಾತ್ಯರ ಪ್ರಭಾವ ಪ್ರೇರಣೆಗಳಿಂದ ಕರ್ನಾಟಕದಲ್ಲಿ ಕಲಾ ಸಾಹಿತ್ಯ ವಿಶೇಷವಾಗಿ ಸೃಷ್ಟಿಯಾದದ್ದು ಕಂಡುಬರುತ್ತದೆ. ಕಲಾ ಸಾಹಿತ್ಯವು ವಿವಿಧ ಪ್ರಕಾರಗಳಲ್ಲಿ ಬಂದಿರುವುದನ್ನು ಅಧ್ಯಯನದ ಹಿನ್ನಲೆಯಲ್ಲಿ ಈ ರೀತಿ ವಿಂಗಡಿಸಿಕೊಂಡು ವಿವೇಚಿಸಬಹುದಾಗಿದೆ.

೧) ಸಂಪಾದನ ಕಲಾ ಗ್ರಂಥಗಳು

೨) ಸಂಶೋಧನ ಗ್ರಂಥಗಳು

೩) ಪ್ರವಾಸ ಕಲಾ ಸಾಹಿತ್ಯದ ಗ್ರಂಥಗಳು

೪) ಕಲಾ ಕೋಶ / ವಿಶ್ವಕೋಶ ಗ್ರಂಥಗಳು

೫) ಕಲಾವಿದರ ಅಭಿನಂದನ ಗ್ರಂಥಗಳು

೬) ಕಲಾವಿದರ ಜೀವನ ಹಾಗೂ ಕಲಾ ದೃತಿಗಳ ಪರಿಚಯಾತ್ಮಕ ಗ್ರಂಥಗಳು (ಕನ್ನಡ, ಇಂಗ್ಲೀಷ್)

೭) ಕಲೆಯ ವಿವಿಧ ಪ್ರಕಾರಗಳ ಪರಿಚಾಯತ್ಮಕ ಗ್ರಂಥಗಳು

೮) ವೈಚಾರಿಕ ಮತ್ತು ವಿಮರ್ಶಾತ್ಮಕ ಗ್ರಂಥಗಳು

೯) ಅನುವಾದಿತ ಕಲಾ ಗ್ರಂಥಗಳು

) ಸಂಪಾದನ ಕಲಾ ಗ್ರಂಥಗಳು: ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾ ಸಾಹಿತ್ಯ ಕುರಿತು ಇದುವರೆಗೆ ೧೨೩ ಪ್ರಕಟಣೆಗಳನ್ನು ತಂದಿದೆ. ಬಹುಪಾಲು ಪ್ರಕಟಣೆಗಳು ಈ ಅಕಾಡೆಮಿಯಿಂದಲೇ ಪ್ರಕಟವಾಗಿವೆ. ೧೯೯೩ರಲ್ಲಿ ಅ.ಲ.ನ. ಮತ್ತು ಎನ್. ಮರಿಶಾಮಾಚಾರ ಅವರು ಸಂಪಾದಿಸಿರುವ ‘ಚಿತ್ರ ಕಲಾ ಪ್ರಪಂಚ’ ಒಂದು ಗಮನಾರ್ಹವಾದ ಸಂಪಾದನೆ ಕೃತಿ. ಈ ಸಂಪುಟದಲ್ಲಿ ೭೦ ಲೇಖನಗಳಿದ್ದು ಪ್ರಕಟವಾದ ಈ ಲೇಖನಗಳನ್ನು ಬೇರೆ ಬೇರೆ ಗ್ರಂಥಗಳ ಮೂಲದಿಂದ ಸಂಗ್ರಹಿಸಿ ಆಯ್ಕೆ ಮಾಡಿದ್ದಾರೆ. ಇತಿಹಾಸ ಪೂರ್ವಕಾಲದ ಗುಹಾಲಯ ಚಿತ್ರಗಳಿಂದ ಹಿಡಿದು ಆಧುನಿಕ ಮತ್ತು ಮಕ್ಕಳ ಚಿತ್ರ ಕಲೆಯವರೆಗೆ ಹಲವಾರು ಲೇಖನಗಳು ಸಂಗ್ರಹಗೊಂಡಿವೆ. ಇಲ್ಲಿಯ ಲೇಖನಗಳು ಚಿತ್ರ ಕಲೆಯ ವಿವಿಧ ಆಯಾಮಗಳನ್ನು ಪರಿಚಯಿಸುತ್ತವೆ. ಅನೇಕ ಲೇಖನಗಳು ವಿದ್ವುತ್‌ಪೂರ್ಣವಾಗಿದ್ದು ಸಂಶೋಧಕರಿಗೆ ಅಧ್ಯಯನಕಾರರಿಗೆ ಇದೊಂದು ಉತ್ತಮ ಆಕರ ಗ್ರಂಥವಾಗಿದೆ. ಬಿ.ವ್ಹಿ.ಕೆ. ಶಾಸ್ತ್ರೀಯವರ (ಸಂ) ‘ರೇಖಾಚಿತ್ರ’ (೧೯೯೧) ಕೃತಿಯಲ್ಲಿ ೭ ಜನ ಬರಹಗಾರರ ಲೇಖನಗಳಿವೆ. ರೇಖಾಚಿತ್ರದ ಚಾರಿತ್ರಿಕ ಹಿನ್ನೆಲೆಯೊಂದಿಗೆ ಪಾಶ್ಚಿಮಾತ್ಯ ಮತ್ತು ಭಾರತೀಯರಲ್ಲಿ ರೇಖಾಚಿತ್ರದ ಬೆಳವಣಿಗೆಯ ಸ್ಥೂಲ ನೋಟವನ್ನು ಈ ಬರಹಗಳು ನೀಡುತ್ತವೆ. ಅ.ಲ. ನರಸಿಂಹನ್ ಅವರ (ಸಂಪಾದಿಸಿದ) ’ಶುಭರಾಯ’ ಕೃತಿ – (೧೯೯೩)ಯಲ್ಲಿ ಅಜ್ಞಾತ ಕಲಾವಿದನೊಬ್ಬನ ಬಗ್ಗೆ ೬ ಜನರು ವಿಭಿನ್ನ ನೆಲೆಯಲ್ಲಿ ಶುಭರಾಯ ಚಿತ್ರ ಕಲಾವಿದನನ್ನು ಅಧ್ಯಯನಕ್ಕೆ ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಕಲಾವಿದನ ಅನೇಕ ಕಲಾ ಕೃತಿಗಳು ತೌಲನಿಕವಾಗಿ ವಿವೇಚನೆಗೊಂಡಿವೆ. ಕನ್ನಡ ವಿ.ವಿ. ಹಂಪಿಯ (೧೯೯೨) ಪ್ರಕಟಿಸಿದ ಶ್ರೀ ತತ್ವ ನಿಧಿ ಸಂ. ೧ಯನ್ನು ಎಸ್.ಕೆ. ರಾಮಚಂದ್ರರಾವ್ ಸಂಪಾದಿಸಿದ್ದಾರೆ. ವಿದ್ವತ್‌ಪೂರ್ಣವಾದ ಸಂಪಾದಕೀಯ ಮತ್ತು ಮುಮ್ಮಡಿ ಕೃಷ್ಣರಾಜ ಒಡೆಯರು ರಚಿಸಿದ ಸ್ವರ ಚೂಡಾಮಣಿಗೆ ಅನೇಕ ಕಲಾವಿದರು ರಚಿಸಿದ ಶ್ರೇಷ್ಠ ಮಟ್ಟದ ರಾಗಮಾಲಾ ಚಿತ್ರಗಳು ೧೫೦೦ ಪುಟಗಳ ಈ ಮೂಲ ಕೃತಿಯಲ್ಲಿ ಸು. ಒಂದು ಸಾವಿರ ಕಿರು ವರ್ಣಚಿತ್ರಗಳಿವೆ, ಇಲ್ಲಿ ಕಪ್ಪು ಬಿಳುಪು ಮತ್ತು ಕೆಲವು ವರ್ಣ ಚಿತ್ರಗಳನ್ನು ಈ ಸಂಪಾದನೆಯಲ್ಲಿ ಹಾಕಲಾಗಿದೆ. ಕರ್ನಾಟಕದ ಹಸ್ತ ಪ್ರತಿ ಚಿತ್ರಕಲೆಯ ಮಹತ್ವ ಆಕರ ಗ್ರಂಥವಾಗಿದೆ.

ಡಾ.ಎಸ್.ಸಿ. ಪಾಟೀಲರು ಸಂಪಾದಿಸಿರುವ ಚಿತ್ರಕಲೆ ಮತ್ತು ಪೂರಕ ಕ್ಷೇತ್ರಗಳು, (೧೯೯೫) ಕೃತಿಯಲ್ಲಿ ೧೪ ಜನ ವಿದ್ವಾಂಸರು ಬರೆದ ಚಿತ್ರಕಲೆ ಮತ್ತು ವಿವಿಧ ಅನ್ಯ ಶಿಸ್ತಗಳ ಆಂತರಿಕ ಸಹ ಸಂಬಂಧದ ಮಹತ್ವ ಲೇಖನಗಳಿವೆ. ಚಿತ್ರಕಲೆ, ವಾಣಿಜ್ಯ, ಸಂಗೀತ, ಶಿಲ್ಪ, ಇತಿಹಾಸ, ಮನೋವಿಜ್ಞಾನ ರಂಗಭೂಮಿ, ಶಾಸನಗಳು, ಸಾಹಿತ್ಯ ಸಮಾಜ, ಶಿಕ್ಷಣ ಇತ್ಯಾದಿ ಪೂರಕ ಕ್ಷೇತ್ರಗಳ ಅಧ್ಯಯನಶೀಲ ಬರಹಗಳು ಇಲ್ಲಿ ಸಂಗ್ರಹಗೊಂಡಿವೆ.

ಕಿ.ರಂ. ನಾಗರಾಜ ಸಂಪಾದನೆಯ ಅ.ನ.ಸು. ಕಲಾಚಿಂತನ (೧೯೯೨) ಕಲಾವಿದರ ಅತ್ಯಂತ ಸ್ಥೂಲವಾದ ಪರಿಚಯವನ್ನು ನೀಡುತ್ತದೆ.

. ಸಂಶೋಧನ ಗ್ರಂಥಗಳು: ಕನ್ನಡದಲ್ಲಿ ಸಂಶೋಧನೆಯ ಅನೇಕ ಬಿಡಿ ಲೇಖನಗಳು ಸಾಕಷ್ಟು ಪ್ರಮಾಣದಲ್ಲಿ ಬಂದಿವೆ. ಆದರೆ ಪಿ.ಎಚ್.ಡಿ. ಅಧ್ಯಯನಗಳು ತುಂಬಾ ಕಡಿಮೆ. ಬೆರಳೆಣಿಕೆಯಲ್ಲಿ ಹೇಳುವಷ್ಟು ಸಂಶೋಧನೆ ಗ್ರಂಥಗಳು, ಈ ಕ್ಷೇತ್ರದಲ್ಲಿ ಬಂದಿವೆ. ಕರ್ನಾಟಕದಲ್ಲಿ ಚಿತ್ರಕಲಾ ಕ್ಷೇತ್ರದಲ್ಲಿ ಮೊದಲು ಸಂಶೋಧನಾ ಗ್ರಂಥ ಹೊರಬಂದಿರುವುದು. ಡಾ.ಎಸ್.ಸಿ. ಪಾಟೀಲರ ’ಕರ್ನಾಟಕದ ಜನಪದ ಚಿತ್ರಕಲೆ’ (೧೯೯೩) ಇದು ವಿಶೇಷವಾಗಿ ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ ಜನಪದ ಮೂಲದ ಚಿತ್ರಕಲೆಯನ್ನು ಇಲ್ಲಿ ವೃತ್ತಿ, ಸೌಂದರ್ಯ, ಧರ್ಮಮೂಲವಾಗಿ ವ್ಯವಸ್ಥಿತವಾಗಿ ಅಧ್ಯಯನಕ್ಕೊಳಪಡಿಸಲಾಗಿದೆ.

ಡಾ.ಅ.ಲ.ನ ಅವರ ಕರ್ನಾಟಕದ ಚಿತ್ರಕಲೆಯಲ್ಲಿ ಸಾಂಸ್ಕೃತಿಕ ಅಂಶಗಳು ಪಿ.ಎಚ್.ಡಿ. ಮಹಾಪ್ರಬಂಧ ಕ್ಷೇತ್ರದ ಎರಡನೆಯ ಸಂಶೋಧನೆಯ ಗ್ರಂಥ. ಇದರ ವಿಸ್ತೃತ ರೂಪ ಕರ್ನಾಟಕದ ಭಿತ್ತಿ ಚಿತ್ರ ಪರಂಪರೆ ಕೃತಿ (೧೯೯೮)ರಲ್ಲಿ ಬಂದಿದೆ. ಮೊದಲಿನದು ದೇಶಿ ಪರಂಪರೆಯ ಅಧ್ಯಯನವಾದರೆ ಇದು ಮಾರ್ಗ (ಶಿಷ್ಟ) ಪರಂಪರೆಯ ಅಧ್ಯಯನವಾಗಿದೆ.

ಕರ್ನಾಟಕದ ಚಿತ್ರಕಲಾ ಪರಂಪರೆಯಲ್ಲಿ ಬಹುಮುಖ್ಯ ಆಯಾಮಗಳಾದ ‘ದೇಶಿ’ ಮತ್ತು ‘ಮಾರ್ಗ’ ಸಂಪ್ರದಾಯದ ಮೂಲಭೂತ ವಿಶಿಷ್ಟ ನೆಲೆಗಳನ್ನು ಶೋಧಿಸುವ ಕಾರಣಕ್ಕಾಗಿ ಈ ಎರಡು ಸಂಶೋಧನ ಮಹಾಪ್ರಬಂಧಗಳಿಗೆ ಸಹಜವಾಗಿಯೇ ಪ್ರಾಮುಖ್ಯತೆ ಪ್ರಾಪ್ತವಾಗಿದೆ. ಡಾ.ಅ.ಸುಂದರ ಅವರ ‘ಕರ್ನಾಟಕದ ಪ್ರಾಗಿತಿಹಾಸಕಾಲದ ಕಲೆ’, (೧೯೯೪)ಯಲ್ಲಿ ಇತಿಹಾಸ ಪೂರ್ವಕಾಲದ ಕರ್ನಾಟಕದ ಚಿತ್ರಕಲೆಯ ಅನೇಕ ಹೊಸ ಚಿತ್ರಕಲೆಯ ನೆಲೆಗಳನ್ನು ಶೋಧಿಸಿ ಅವುಗಳ ಸ್ಥೂಲ ವಿವರವನ್ನು ಇಲ್ಲಿ ಕೊಟ್ಟಿದ್ದಾರೆ. ಈ ದಿಸೆಯಲ್ಲಿ ಅಧ್ಯಯನ ಮಾಡುವವರಿಗೆ ಇದೊಂದು ಮಹತ್ವದ ಸಂಶೋಧನ ಗ್ರಂಥವಾಗಿದೆ. ಡಾ. ಶಿವರಾಮಕಾರಂತರ ‘ಭಾರತೀಯ ಚಿತ್ರಕಲೆ’ ದ್ವಿತೀಯ ಮುದ್ರಣವಾಗಿದೆ. ೧೯೩೦ರಲ್ಲಿ ಪ್ರಥಮ ಮುದ್ರಣವಾಗ ಈ ಕೃತಿ ಇದೀಗ ಎರಡನೆಯ ಮುದ್ರಣವಾಗಿ ಬಂದಿದೆ. ಭಾರತೀಯ ಚಿತ್ರಕಲೆಯ ಐತಿಹಾಸಿಕ ವಿವರಗಳನ್ನು ವೈಚಾರಿಕ ನೆಲೆಯಲ್ಲಿ ವಿವೇಚನೆ ಒಳಪಡಿಸಿರುವ ಸಂಶೋಧನ ಕೃತಿ ಇದಾಗಿದೆ. ಇಲಾ ಅಧ್ಯನಕಾರರಿಗೆ ಇದು ಉತ್ತಮ ಆಕರ ಗ್ರಂಥ. ಆನೇಕ ಕಪ್ಪು ಬಿಳಪು ಚಿತ್ರಗಳು ಇದರಲ್ಲಿವೆ. ಡಾ.ಎಸ್.ಸಿ. ಪಾಟೀಲರ ‘ಆಚರಣೆಯಲ್ಲಿ ಜನಪದ ವಾಸ್ತುಶಿಲ್ಪಗಳು (೧೯೯೭) ಹೆಸರೇ ಸೂಚಿಸುವಂತೆ, ಜನಪದ ವಾಸ್ತುಶಿಲ್ಪಗಳ ಸ್ಥೂಲವಾದ ವಿವರಗಳಿವೆ.

. ಪ್ರವಾಸ ಕಲಾ ಸಾಹಿತ್ಯದ ಗ್ರಂಥಗಳು: ಪ್ರವಾಸದ ಮೂಲಕ ಕಲೆಯನ್ನು ಅಧ್ಯಯನ ಮಾಡಿ ಅದನ್ನು ಗ್ರಂಥ ರೂಪದಲ್ಲಿ ತಂದಿರುವುದು ಕಂಡುಬರುತ್ತದೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಕರ್ನಾಟಕೇತರ ರಾಜ್ಯಗಳಲ್ಲಿರುವ ದೃಶ್ಯಕಲೆಯನ್ನು ಪರಿಚಯಿಸುವ ದಿಸೆಯಲ್ಲಿ ಇಂತಹ ಗ್ರಂಥಗಳನ್ನು ಬರೆಯಿಸಿದೆ. ಇನ್ನೂ ಕೆಲವರು ವಿದೇಶಕ್ಕೆ ಹೋಗಿ ಬಂದ ನಂತರ ತಮ್ಮ ಕಲಾ ಅನುಭವಗಳನ್ನು ಗ್ರಂಥರೂಪದಲ್ಲಿ ತಂದಿರುವುದು ಕಂಡುಬರುತ್ತವೆ. ಈ ದಿಸೆಯಲ್ಲಿ ಪಿ.ಆರ್. ತಿಪ್ಪೇಸ್ವಾಮಿಯವರ ‘ಕಲಾವಿದ ಕಂಡ ಪ್ರಾನ್ಸ್’ (೧೯೯೪) ಅವರ ಪ್ರಾನ್ಸಿನ ಪ್ರವಾಸದಲ್ಲಿ ಕಂಡ ಕಲೆ, ಕಲಾವಿದರ, ಕಲಾಚಟುವಟಿಕೆಗಳ ವಿವರಣೆ ಈ ಗ್ರಂಥದಲ್ಲಿ ದಾಖಲಾಗಿವೆ. ಪಿ.ಆರ್. ತಿಪ್ಪೇಸ್ವಾಮಿ ಕಲಾವಿದರಾದುದರಿಂದ ಸಹಜವಾಗಿ ಕಲೆಯನ್ನೇ ಮುಖ್ಯವಾಗಿ ಇಲ್ಲಿ ಗಮನಿಸಿರುವುದು ವೈಶಿಷ್ಟ್ಯ. ಶಂಕರ ಪಾಟೀಲ ‘ಹಿಮಾಚಲದ ಹಿನ್ನಲೆಯ ಪ್ರವಾಸ’ (೧೯೯೭) ಹಿಮಾಲಯ ಪ್ರದೇಶದ ಕಲೆ ಸಂಸ್ಕೃತಿಯನ್ನು ದಾಖಲಿಸುವ ಕೃತಿಯಾಗಿದೆ. ಅಲ್ಲಲ್ಲಿ ಕರ್ನಾಟಕದ ಕಲೆಯನ್ನು ತೌಲನಿಕವಾಗಿ ನೋಡುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಇದೇ ರೀತಿ ಕೆ.ವಿ. ಸುಬ್ರಹ್ಮಣ್ಯಂ ಅವರ ‘ಮಧ್ಯಪ್ರದೇಶದ ಕಲೆ’ (೧೯೯೫). ಅ.ಲ.ನ. ಅವರ ‘ತಮಿಳುನಾಡಿನಲ್ಲಿ ಚಿತ್ರಕಲೆ’ (೧೯೯೨), ವೆಂಕಟರಾಜ ಪುಣಿಂಚತ್ತಾಯ ಮತ್ತು ಪಿ.ಯಸ್. ಪುಣಿಂಚಿತ್ತಾಯರ ‘ಕೇರಳದ ವರ್ಣಚಿತ್ರ ಲೋಕ’ (೧೯೯೩) ಇವೆಲ್ಲ ಆಯಾ ಪ್ರದೇಶದ ಭಿತ್ತಿ ಚಿತ್ರ, ಕಲಾವಿದರ, ಕಲಾಗ್ರಯಾಲರಿ, ಕಲೆಯ ಪ್ರಮುಖ ನೆಲೆಗಳ ಸ್ಥೂಲವಾದ ಮಾಹಿತಿಯನ್ನು ನೀಡುವ ಪ್ರಯತ್ನ ಮಾಡಿವೆ.

. ಕಲಾಕೋಶ / ವಿಶ್ವಕೋಶ ಗ್ರಂಥಗಳು: ಚಿತ್ರಕಲೆಯ ಕುರಿತಾದ ಕಲಾಕೋಶ / ವಿಶ್ವಕೋಶಗಳ ಗ್ರಂಥಗಳು ಕೂಡ ತುಂಬ ಕಡಿಮೆ. ಡಾ. ಕರಿಗೌಡ ಬೀಚನಹಳ್ಳಿ ಅವರು ಸಂಪಾದನೆಯ ಕರಕುಶಲ ಕಲೆಗಳ ವಿಶ್ವಕೋಶ (೨೦೦೦) ಕನ್ನಡ ವಿ.ವಿ. ಹಂಪಿಯಿಂದ ಪ್ರಕಟವಾಗಿವೆ. ಕರ್ನಾಟಕದ ಜನಪದ ಮೂಲ ಚಿತ್ರಕಲೆಯನ್ನು ಸ್ಥೂಲವಾಗಿ ಪರಿಚಯಿಸುವ ಮಹತ್ವವಾದ ಕಾರ್ಯ ಈ ಕೃತಿಯ ಮೂಲಕ ನಡೆದಿದೆ. ಇನ್ನೂ ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ಪಿ.ಆರ್‌. ತಿಪ್ಪೇಸ್ವಾಮಿ ಪ್ರಧಾನ ಸಂಪಾದನೆಯಲ್ಲಿ ಬಂದ ‘ಕಲಾ ಕೋಶ’ (೧೯೯೪) ಚಿತ್ರಕಲೆಯ ಕುರಿತಾದ ಅನೇಕ ಹೊಸ ಹೊಸ ವಿವರಣೆಗಳನ್ನು ಒಂದೆಡೆಗೆ ದಾಖಲಿಸುವ ಕಾರ್ಯವನ್ನು ಮಾಡಲಾಗಿದೆ.

ಈ ಮೇಲಿನ ಎರಡು ಕಲಾಕೋಶಗಳು ಈ ಕ್ಷೇತ್ರದಲ್ಲಿ ಅಧ್ಯಯನ ಮಾಡುವವರಿಗೆ ಹಾಗೂ ಕಲಾವಿದರಿಗೆ ತುಂಬ ನೆರವಾಗುವ ಮಹತ್ವದ ಗ್ರಂಥಗಳಾಗಿವೆ.

. ಕಲಾವಿದರ ಅಭಿನಂದನ ಗ್ರಂಥಗಳು: ಕಲಾಕ್ಷೇತ್ರದಲ್ಲಿ ವಿಶೇಷವಾಗಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಸ್ಮರಿಸುವ ಇಲ್ಲವೆ ಗೌರವಿಸುವ ಹಿನ್ನಲೆಯಲ್ಲಿ ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಲೇಖನಗಳನ್ನು ತಜ್ಞರಿಂದ ಬರೆಯಿಸುವುದು, ಮತ್ತು ಅವರ ವ್ಯಕ್ತಿತ್ವದ ಬಗ್ಗೆ ಕೆಲವು ಲೇಖನಗಳನ್ನು ಬರೆಯಿಸಿ ಪ್ರಕಟಿಸುವ ಪರಂಪರೆ, ಕಲಾಕ್ಷೇತ್ರದಲ್ಲಿ ಅಡಿ ಇಟ್ಟಿದೆ. ೧೯೯೧ ರಿಂದ ೨೦೦೦ ದ ಅವಧಿಯಲ್ಲಿ ಐದು ಚಿತ್ರಕಲಾವಿದರ ಅಭಿನಂದನ ಗ್ರಂಥಗಳು ಪ್ರಕಟವಾಗಿವೆ. ಮಹಲಿಂಗಯಾಳಗಿಯವರು ಸಂಪಾದನೆಯ, ಕಲಾತಪಸ್ವಿ, ಎಂ.ಎ. ಚೆಟ್ಟಿ ಅವರ ಅಭಿನಂದನ ಗ್ರಂಥ (೧೯೯೧) ಡಾ.ಎಸ್‌.ಸಿ. ಪಾಟೀಲ ಅವರು ಸಂಪಾದಿಸಿರುವ ‘ಚಿತ್ರಾಕ್ಷಿ’ ಚಿತ್ರಕಾರ ಡಿ.ವ್ಹಿ. ಹಾಲಭಾವಿ ಅವರ ಅಭಿನಂದನ ಸ್ಮರಣ ಸಮಚಿಕೆ (೯೫). ಎಸ್‌.ಎ. ಭೋಜ ಮತ್ತು ರಾಘವೇಂದ್ರ ಜೋಶಿ ಅವರ ಸಂಪಾದಿಸಿರುವ ‘ಚೈತನ್ಯ’ ಕಲಾವಿದ ವ್ಹಿ.ಸಿ. ಮಾಲಗತ್ತಿ ಅಭಿನಂದನ ಗ್ರಂಥ (೯೭). ಕೆ.ಆರ್‌. ಕೃಷ್ಣಸ್ವಾಮಿ ಸಂಪಾದನೆಯ ಎಸ್‌.ಎನ್‌, ಸ್ವಾಮಿ ‘ಗ್ರಾಮೀಣ ಚಿತ್ರಗಳು ನೆನಪಿನ ಬರಹಗಳು’ (೧೯೯೬). ಚಂದ್ರಹಾಸ ಜಾಲಿಹಾಳರು ಸಂಪಾದಿಸಿದ ‘ಅಂದಾನಿ ಐವತ್ತು (೧೯೯೭)’ ಅಭಿನಂದನ ಸಂಚಿಕೆ ಡಾ.ಕೆ.ಪಿ. ಈರಣ್ಣ ಮತ್ತು ಸಿದ್ದು, ಯಾಪಲಪರವಿಯವರು ಸಂಪಾದಿಸಿರುವ, ‘ಮನೋಹರ’ ಕಲಾವಿದ ಎಮ್‌.ಡಿ. ಕಡ್ಲಿಕೊಪ್ಪ ಅವರ ಅಭಿನಿಂದನ ಗ್ರಂಥ (೨೦೦೦). ಈ ಮೇಲಿನ ಅಭಿನಂಧನ ಗ್ರಂಥಗಳಲ್ಲಿ ಆಯಾ ವ್ಯಕ್ತಿಗಳ ಬಗ್ಗೆ ಅಭಿಮಾನಿಗಳು, ಗೆಳೆಯರು ವಿದ್ವಾಂಸರು ಬರೆದ ಲೇಖನಗಳು ಮತ್ತು ಅವರ ಕಲಾಕೃತಿಗಳ ಕಲಾಸಾಧನೆಯ ವಿವರಗಳು ಅಲ್ಲದೇ, ಕಲೆಯ ಬೇರೆ ಬೇರೆ ಕ್ಷೇತ್ರದ ಲೇಖನಗಳು ಅವುಗಳಲ್ಲಿ ಇರುವುದನ್ನು ಕಾಣುತ್ತೇವೆ.

. ಕಲಾವಿದರ ಜೀವನಕಲಾಕೃತಿಗಳ ಪರಿಚಯದ ಗ್ರಂಥಗಳು: ಕರ್ನಾಟಕ ಲಲಿತ ಕಲಾ ಅಕಾಡೆಮಿ ಮತ್ತು ಇತರ ಸಂಘ ಸಂಸ್ಥೆಗಳು ಕಲಾವಿದರ ಜೀವನ ಕಲಾ ಕೃತಿಗಳ ಪರಿಚಯದ ಹಲವಾರು ಗ್ರಂಥಗಳು ಬಂದಿದ್ದು, ಅವುಗಳಲ್ಲಿ ಗಮನಾರ್ಹವಾದ ಕೆಲಸವನ್ನು ಮಾತ್ರ ಇಲ್ಲಿ ಉದಾಹರಣೆಗೆ ಹೆಸರಿಸಲಾಗಿದೆ. ಕೆ.ವ್ಹಿ. ಸುಬ್ರಹ್ಮಣ್ಯಂ ಅವರ ವೆಂಕಟಪ್ಪ ಸಮಕಾಲೀನ ಪುನರಾವಲೋಕನ (೧೯೯೧). ಇಲ್ಲಿ ೨೧ ಜನ ಚಿತ್ರಕಾರರ ಜೀವನ ಹಾಗೂ ಕಲಾಕೃತಿಗಳ ಕಲಾ ಪ್ರದರ್ಶನ, ಪ್ರಶಸ್ತಿ, ಗೌರವ, ಇತ್ಯಾದಿ ಅವರ ಬದುಕಿನ ಮಹತ್ವದ ಅಂಶಗಳನ್ನು ದಾಖಲಿಸಿದ್ದಾರೆ.  ಎ.ಎಸ್‌. ಮೂರ್ತಿಯವರ ಪ್ರತಿಭಾ ಚೇತನ ಅ.ನ.ಸು. (೧೯೯೨). ನೇಮಿಚಂದ್ರ ಅವರ ‘ನೋವಿಗದ್ದಿದ ಕುಂಚ’ (೧೯೯೩). ಬಿ.ವ್ಹಿ.ಕೆ. ಶಾಸ್ತ್ರಿಯರ ‘ಕಲೆಯ ಗೊಂಚಲು’ (೧೯೯೪). ಎನ್‌. ಮರಿಶಾಮಾಚಾರ ಅವರ ರಾಜಾ ರವಿವರ್ಮ (೧೯೯೪) ಇತ್ಯಾದಿ ಕೃತಿಗಳು ಕಲಾವಿದರ ಜೀವನ ಸಾಧನೆಯನ್ನು ಚಿತ್ರಿಸುತ್ತವೆ. ಲಲಿತ ಕಲಾ ಅಕಾಡೆಮಿ ಕಲಾವಿದರ ಜೀವನ ಚಿತ್ರಗಳು ಕನ್ನಡ ಇಂಗ್ಲೀಷ್‌ ಭಾಷೆಗಳಲ್ಲಿ ಪ್ರಕಟಗೊಂಡಿರುವುದು ವೈಶಿಷ್ಟ್ಯವಾಗಿದೆ. ಉದಾಹರಣೆಗೆ. ಬಾ.ನ ಶಾಂತ ಪ್ರಿಯ ಅವರ ‘ಪೀಟರ್‌ ಲೂಯಿಸ್‌ (೧೯೯೬). ಎಂ.ಎಚ್. ಕೃಷ್ಣಯ್ಯ ಅವರ ಆರ್.ಎಂ. ಹಡಪದ್ (೧೯೯೭). ಮಮತಾ ಜಿ. ಸಾಗರ ಅವರ ಎಸ್.ಎಸ್. ಮುನೊಳಿ (೧೯೯೮) ಮುಂತಾದ ಕೃತಿಗಳನ್ನು ಹೆಸರಿಸಬಹುದಾಗಿದೆ.

ಇನ್ನು ಕರ್ನಾಟಕದ ಕೆಲವು ಕಲಾವಿದರ ಕುರಿತು ಆಂಗ್ಲ ಭಾಷೆಯಲ್ಲಿ ಸಹ ಗ್ರಂಥಗಳು ಪ್ರಕಟವಾಗಿವೆ. ಶಂಕರ ಪಾಟೀಲರ ‘ದಿ ಲಿವ್ಹಿಂಗ್ ಲೈನ್ಸ್’ (೧೯೯೬). ೪೪, ರೇಖಾ ಚಿತ್ರಗಳ ಕೃತಿ ಇದಾಗಿದ್ದು, ಹೆಬ್ಬಾರರ ಸಿಂಗಿಂಗ್ ಲೈನ್ಸ್ ಕೃತಿಯನ್ನು ಇದು ನೆನಪಿಸುತ್ತದೆಯಾದರೂ, ಇದು ತುಂಬ ಭಿನ್ನವಾದ ಕೃತಿ. ಇಲ್ಲಿ ಅವರ ೧೮ ರೇಖಾ ಚಿತ್ರಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವಿದ್ವಾಂಸರು, ಕವಿಗಳು, ವಿಮರ್ಶಕರು ಸಾಹಿತಿಗಳು ಒಂದೊಂದು ಚಿತ್ರಕ್ಕೆ ಅವರದೇ ಆದ ರೀತಿಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಮಾಡಿದ್ದಾರೆ. ಆಯಾ ಚಿತ್ರದ ಬದಿ ಅವರ ವಿವರಣೆಗಳಿವೆ. ಒಂದು ಚಿತ್ರದ ಕುರಿತೇ ಅವರೆಲ್ಲರ ಅಭಿಪ್ರಾಯವಿದ್ದರೆ, ಇನ್ನೂ ಹೆಚ್ಚಿನ ರೀತಿಯಲ್ಲಿ ಆ ಚಿತ್ರಗಳು ತಮ್ಮನ್ನೂ ತೆರೆದುಕೊಳ್ಳುತ್ತಿದ್ದುವೇನೋ? ಉತ್ತಮ ಮುದ್ರಣದಿಂದ ಕಲಾತ್ಮಕವಾಗಿ ಈ ಕೃತಿ ಬಂದಿದೆ.

ಎಸ್.ಎನ್. ಸ್ವಾಮಿ ಪೇಯಿಂಟಿಂಗ್ಸ್ (೨೦೦೦). ಕದಂಬ ಜನಪದ ಅಕಾಡೆಮಿ ಬೆಂಗಳೂರು ಇವರು ಈ ಗ್ರಂಥವನ್ನು ತಂದಿದ್ದಾರೆ. ೬೦ ವರ್ಣ ಚಿತ್ರಗಳು ೫೦ ಕಪ್ಪು ಬಿಳಪು ರೇಖಾ ಚಿತ್ರಗಳು ಆರ್ಟ್ ಪೇಪರಿನಲ್ಲಿ ತುಂಬ ಸೊಗಸಾಗಿ ಮುದ್ರಣಗೊಂಡಿವೆ. ಕಲಾ ಗ್ರಂಥವೊಂದು ಹೇಗೆ ಪ್ರಕಟವಾಗಬೇಕು ಹಾಗೆ ಇದು ಬಂದಿರುವುದು ಗಮನಾರ್ಹ ಅಂಶ. ಕಲಾವಿದನ ಪರಿಚಯ ಅತ್ಯಂತ ಸಂಕ್ಷಿಪ್ತವಾದರೆ ೯೦ ಪುಟಗಳಷ್ಟು ಕಲಾ ಕೃತಿಗಳೇ ತುಂಬಿಕೊಂಡು ಕಲೆಯನ್ನು ಪರಿಚಯಿಸುತ್ತವೆ. ಇದೇ ಪರಂಪರೆಯಲ್ಲಿ ವಿಜಯ ಸಿಂಧೂರ ಅವರು ತಮ್ಮ ೫೦ಕ್ಕೂ ಹೆಚ್ಚು ವರ್ಣಚಿತ್ರಗಳನ್ನು ತಮ್ಮದೇ ಆದ ಪ್ರಕಾಶನದ ಮೂಲಕ ಪ್ರಕಟಪಡಿಸಿದ್ದಾರೆ. ‘ಜಯ ಸಿಂಧೂರ್ ಪೇಂಟಿಂಗ್ಸ್’ಗಳನ್ನು ಗ್ರಂಥ ರೂಪದಲ್ಲಿ ಮೂಲ ಕೃತಿಯನ್ನೇ ನೋಡಿದ ಅನುಭವವಾಗುವಷ್ಟು ಸುಂದರವಾದ ಮುದ್ರಣ ವಿನ್ಯಾಸವಿದೆ. ಪ್ರಾರಂಭದಲ್ಲಿ ಕಲಾವಿದರ ವರ್ಣ ಚಿತ್ರಗಳಿವೆ. ಕನ್ನಡದಲ್ಲಿ ಇಷ್ಟೊಂದು ಶ್ರೀಮಂತವಾಗಿ ಪ್ರಕಟಣೆ ಮಾಡಿದ ಕಲಾವಿದ ಇವರೇ ಇರಬಹುದೇನೋ, ಕನ್ನಡದಲ್ಲಿಯೂ ಈ ಕೃತಿ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಕರ್ನಾಟಕದ ಕಲಾವಿದರಿಗೂ ಹೆಚ್ಚು ಪ್ರಯೋಜನಕಾರಿಯಾಗುತ್ತಿತ್ತು.

ಕರ್ನಾಟಕದ ಕೆಲವು ಮೇಲಿನ ಕೃತಿಗಳನ್ನು ಬಿಟ್ಟರೆ ಇನ್ನುಳಿದವಗಳೆಲ್ಲ ಕನ್ನಡದಲ್ಲಿ ಪ್ರಕಟವಾಗಿರುವುದನ್ನೂ ಕಾಣಬಹುದು.

. ಕಲೆಯ ವಿವಿಧ ಪ್ರಕಾಗಳ ಪರಿಚಯ ಗ್ರಂಥಗಳು: ಕಲೆಯ ವೈವಿಧ್ಯಮಯವಾದ ಪ್ರಕಾರಗಳನ್ನೂ ಪರಿಚಯಿಸುವ ಪ್ರಕಟಣೆಗಳು ಬಂದಿವೆ. ಮಾದರಿಗಾಗಿ ಆರ್.ಎಚ್. ಕುಕರ್ಣಿವರ ಕಿನ್ನಾಳ ಕಲೆ (೧೯೯೨). ಕಿನ್ನಾಳದ ಕಲಾ ಕುಟುಂಬದ ಚಾರಿತ್ರಿಕ ಹಿನ್ನಲೆಯ ಸ್ಥೂಲ ನೋಟವಿದೆ. ‘ಇಂಪ್ರೆಷನಿಸಂ’ (೧೯೯೪). ಅ.ಲ.ನ. ಅವರ ಕೃತಿ. ಹಾಗೆಯೇ ರವಿಕುಮಾರ ಕಾಶಿಯವರ ‘ಪಾಪ್ ಕಲೆ’ (೧೯೯೭) ಪಾಶ್ಚಾತ್ಯ ಕಲಾವಾದಗಳ ಸ್ಥೂಲ ಪರಿಚಯವಿದೆ. ಜನಪ್ರಿಯ ಮಾಲೆಯ. ಚಿ.ಸು. ಕೃಷ್ಣಶೆಟ್ಟಿಯವರ ದೃಶ್ಯಕಲೆ ಎಂದರೇನು? (೧೯೯೫). ಡಾ.ಸಿ.ಆರ್. ಚಂದ್ರಶೇಖರ ಅವರ ಚಿತ್ರ ಕಲೆ ಮತ್ತು ಮನೋವಿಕಾಸ (೧೯೯೫), ಡಾ.ಎಸ್.ಸಿ. ಪಾಟೀಲ ಅವರ ಜನಪದ ಚಿತ್ರಕಲೆ (೧೯೯೫) ಡಾ.ಅ.ಲ.ನ. ಅವರ ಇಂಪ್ರೆಶನಿಸಂ (೧೯೯೫) ಇತ್ಯಾದಿ ಕೃತಿಗಳು ಬಂದಿವೆ. ಇವೆಲ್ಲ ಜನಸಾಮಾನ್ಯರಿಗೆ ಕಲೆಯ ಪರಿಚಯ ಮಾಡಿಕೊಡುವ ದಿಸೆಯಲ್ಲಿ ಬಂದಿರು ಜನಪ್ರಿಯ ಕೃತಿಗಳಾಗಿವೆ. ಎನ್. ಶ್ರೀ ಪತಿಯವರ ‘ಶಿಕ್ಷಣ ಸೃಜನಶೀಲ ಕಲೆ’ (೧೯೯೩). ಶ್ರೀಪತಿಯವರು ಇಲ್ಲಿ ಶಿಕ್ಷಣ ಮತ್ತು ಚಿತ್ರಕಲೆಯ ಸಂಬಂಧ ಶಿಕ್ಷಣದಲ್ಲಿ ಕಲೆಯ ಮೂಲಕ ಸೃಜನಶೀಲ ಬೆಳವಣಿಗೆ, ಇತ್ಯಾದಿ ಅಂಶಗಳ ಸ್ಥೂಲ ವಿವೇಚನೆ ಇದೆ. ಕೆ.ವಿ. ಕಾಳೆಯವರ ಕರ್ನಾಟಕದ ಚಿತ್ರಕಲೆಯಲ್ಲಿ ಬಣ್ಣದ ಬಳಕೆ (೨೦೦೦). ಚಿತ್ರಕಲೆಯಲ್ಲಿ ಬಳಕೆಯಾಗುವ ವಿವಿಧ ರೀತಿಯ ವರ್ಣವಿನ್ಯಾಸದ ವಿವರಣೆಗಳಿವೆ. ಎನ್. ಮರಿಶಾಮಾಚಾರ್ ಅವರ ಭಾರತದ ಜಾನಪದ ಕಲೆ(೧೯೯೧)ಯಲ್ಲಿ ಭಾರತದ ಜಾನಪದ ಕಲೆಯ ವೈಶಿಷ್ಟ್ಯತೆಯನ್ನು ಪರಿಚಯಿಸಿದ್ದಾರೆ.

ಚಿತ್ರಕಲೆಯ ವಿವಿಧ ಪ್ರಕಾರಗಳ ಪರಿಚಯಾತ್ಮಕ ಗ್ರಂಥಗಳು ಮಾತ್ರ ಬಂದಿವೆ. ಪ್ರಬುದ್ಧ ರೀತಿಯ ಗ್ರಂಥಗಳ ಕೊರತೆ ಇನ್ನೂ ಈ ಕ್ಷೇತ್ರದಲ್ಲಿ ಹಾಗೆಯೇ ಇದೆ.

ವೈಚಾರಿಕ ಮತ್ತು ವಿಮರ್ಶಾತ್ಮಕ ಕಲಾ ಗ್ರಂಥಗಳು: ಕರ್ನಾಟಕದ ಕಲಾ ಸಾಹಿತ್ಯದಲ್ಲಿ ವಿಮರ್ಶಾತ್ಮಕ ವೈಚಾರಿಕ ಕೃತಿಗಳ ಸಂಖ್ಯೆಯೂ ತುಂಬ ಕಡಿಮೆ. ಅಲ್ಲೊಂದು ಇಲ್ಲೊಂದು ಇತ್ತೀಚೆಗೆ ಬರಲಾರಂಭಿಸಿವೆ. ಎಂ.ಎಚ್. ಕೃಷ್ಣಯ್ಯನವರು ಸಂಪಾದಿಸಿದ ‘ಸಾಹಿತ್ಯ ಕಲೆಗಳಲ್ಲಿ ಪರಿವರ್ತನೆ ಮತ್ತು ಪ್ರಗತಿ’ (೧೯೯೧). ಎಲ್ಲ ಅಕಾಡೆಮಿಗಳ ಕಲಾ ಶಿಸ್ತುಗಳಲ್ಲಾದ ಪರಿವರ್ತನೆ ಪ್ರಗತಿಯ ಕುರಿತಾದ ೯ ಜನ ವಿದ್ವಾಂಸರ ತೌಲನಿಕ ಚಿಂತನೆಯ ಲೇಖನಗಳಿವೆ. ಚಂದ್ರಕಾಂತ ಕುಸನೂರ ಅವರ ಸಾಹಿತ್ಯ ಮತ್ತು ಚಿತ್ರಕಲೆ ಅಂತರ್ಶಿಸ್ತೀಯ ಅಧ್ಯಯನ ಯೋಜನೆಯ ಕೃತಿ. ವೈಚಾರಿಕವಾಗಿ ಕಲೆಯ ಬೇರೆ ಬೇರೆ ಅಯಾಮಗಳನ್ನು ಪರಿಚಯಿಸುವ ದಿಸೆಯಲ್ಲಿ ಚಿಂತನೆಗಳಿರುವುದನ್ನೂ ಕಾಣುತ್ತೇವೆ. ಎನ್‌.ಮರಿಶಾಮಾಚಾರ ಅವರ ‘ಕಲಾ ಸಂಕಲನ (೧೯೯೪). ಕಲೆಯ ಚಿಂತನ ಶೀಲ ಲೇಖನಗಳಿವೆ. ಶಂಕರ ಪಾಟೀಲರ ‘ಚಿತ್ರ ಕಲಾ ಚಿಂತನೆ (೧೯೯೫). ಚಿತ್ರ ಕಲೆಯ ವಿಷಯ ವಿವರಣೆಗಳನ್ನೂ ಸಂಶೋಧನಾತ್ಮಕವಾಗಿ ನಿರೂಪಿಸುವ ಒಂದು ಸೃಜನಶೀಲ ಕೃತಿ ಇದಾಗಿದೆ. ಅವರದೇ ಇನ್ನೊಂದು ಕೃತಿ ಚಿತ್ರಾಂತರಂಗ, (೧೯೯೮) ಇಲ್ಲಿ ದೀರ್ಘವಾದ ಲೇಖನಗಳಿವೆ. ಹೆಚ್ಚು ವೈಚಾರಿಕವಾದ ವಿವೇಚನೆಯನ್ನು ಇಲ್ಲಿನ ಲೇಖನಗಳು ಮಾಡುತ್ತವೆ. ಅ.ಲ.ನ. ಅವರ ಸಂಪಾದನೆಯ, ‘ಸಂಯೋಜನೆ’ (೧೯೯೭). ಇದರಲ್ಲಿ ಕಲೆಯ ವೈಚಾರಿತೆಯ ಹಿನ್ನಲೆಯಲ್ಲಿ ೫ ಜನ ಕಲಾವಿದರ ಚಿಂತನೆಗಳಿವೆ.

ಕೆ.ವಿ. ಸುಬ್ರಹ್ಮಣ್ಯಂ ಅವರ ‘ಕಲಾ ಸಂವೇದನೆಯ ಒಳನೋಟಗಳು’ (೧೯೯೭) ಇಲ್ಲಿ ಚಿತ್ರ ಕಲಾ ಕ್ಷೇತ್ರದ ಹಲವಾರು ಮಗ್ಗುಲಗಳನ್ನು ತಿಳಿಸುವ ವೈವಿಧ್ಯಮಯವಾದ ವಿವೇಚನೆಯನ್ನು ಮಾಡುವ ೧೯ ಲೇಖನಗಳಿವೆ. ವಿಮರ್ಶಕರಾದ ಸುಬ್ರಹ್ಮಣ್ಯಂ ಅವರ ಹಲವಾರು ವರ್ಷಗಳ ಚಿಂತನೆಯ ವಿಭಿನ್ನ ನೆಲೆಗಳು ಇಲ್ಲಿ ಆಕಾರ ಪಡೆದಕೊಂಡಿವೆ. ಡಾ.ಅ.ಲ.ನ. ಅವರ ಇಂತಹದೆ ಒಂದು ಗ್ರಂಥ ‘ಆಲೇಖ್ಯ’ (೧೯೯೯). ೧೯೮೫ರಿಂದ ೧೯೯೮ ಅವಧಿಯಲ್ಲಿ ಬರೆದ ಲೇಖನಗಳ  ಸಂಗ್ರಹವಿದು. ಚಿತ್ರ ಕಲೆಯ ವಿಭಿನ್ನ ನೆಲೆಗಳನ್ನು ಕುರಿತು ಅವರು ನಡೆಸಿದ ಅಧ್ಯಯನದ ಹಿನ್ನಲೆಯಲ್ಲಿ ಇಲ್ಲಿನ ಲೇಖನಗಳು ಆಕಾರ ಪಡೆದಿವೆ. ಅಧ್ಯಯನಕಾರರಿಗೆ ತುಂಬ ಉಪಯುಕ್ತ ವಿವರಗಳನ್ನು ಇಲ್ಲಿನ ಲೇಖನಗಳು ಒದಗಿಸುತ್ತವೆ.

ಎಚ್. ಎ. ಅನೀಲ ಕುಮಾರ ಅವರ ಸಂಪಾದನೆಯ ‘ಚೌಕಟ್ಟು’ (೧೯೯೭) ಇವರದೇ ಆದ ವಿಮರ್ಶಾ ಲೇಖನಗಳ ಸಂಗ್ರಹ ನೋಟ ಪಲ್ಲಟ, (೧೯೯೭), ತುಂಬ ಗಂಭೀರವಾದ ಚಿಂತನೆಗೆ ಈಡು ಮಾಡು ವೈಚಾರಿಕ ಬರಹಗಳಾಗಿವೆ. ಇತ್ತೀಚೆಗೆ ಬಂದ ಚಿ.ಸು. ಕೃಷ್ಣಶೆಟ್ಟಿಯವರ ವರ್ಣಾವರಣ. ಚಿತ್ರ ಚಿತ್ರ, ಗ್ರಂಥಗಳು ವಿಮರ್ಶೆ ನೆಲೆಯಲ್ಲಿ ತೀವ್ರತರದ ಆಲೋಚನೆಗೆ ಹಚ್ಚುವ ಸಮಕಾಲೀನ ಕಲಾ ವಿಮರ್ಶೆಯ ಲೇಖನಗಳಾಗಿವೆ. ವ್ಹಿ.ಜಿ. ಅಂದಾನಿಯವರ ಸಂಪಾದನೆಯ ದೃಶ್ಯ ಕಲಾ ವಿಮರ್ಶೆ, (೧೯೯೮-೧೯೯೯) ಒಂದು ವರ್ಷದುದ್ದಕ್ಕೂ ಬಂದ ಕಲಾ ವಿಮರ್ಶೆಯ ಲೇಖನಗಳನ್ನು ಲಂದೆಡೆಗೆ ತಂದಿದ್ದಾರೆ. ಒಟ್ಟು ೨೨ ಲೇಖನಗಳಿದ್ದು ನಾಲ್ಕು ಇಂಗ್ಲಿಷ ಭಾಷೆಯಲ್ಲಿ ಬರೆದ ಪತ್ರಿಕಾ ವಿಮರ್ಶಾ ಲೇಖನಗಳಿವೆ. ಸಮಕಾಲೀನ ವಿಮರ್ಶೆಯ ನೆಲೆ ಬೆಲೆಯನ್ನು ತಿಳಿದಕೊಳ್ಳಲು ಇಂತಹ ದೃತಿಗಳು ಅವಶ್ಯಕವಾಗಿವೆ.

. ಅನುವಾದ ಕಲಾ ಗ್ರಂಥಗಳು: ಚಿತ್ರ ಕಲೆಯ ಕುರಿತಾದ ಹಲವಾರು ಅಂಗ್ಲ ಭಾಷೆಯ ಮತ್ತು ಹಿಂದಿ ಭಾಷೆಯಲ್ಲಿ ಬಂದ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಆದರೆ ಈ ಅವಧಿಯಲ್ಲಿ ಒಂದುದು ಪುಸ್ತಕ ಮಾತ್ರ ಅನುವಾದಗೊಂಡಿದೆ. ಸಿ. ಶಿವರಾಮ ಮೂರ್ತಿಯವರ ಇಂಡಿಯನ್ ಪೇಯಿಂಟಿಂಗ್, ಕನ್ನಡಕ್ಕೆ ಪಿ.ಆರ್. ತಿಪ್ಪೇಸ್ವಾಮಿ ಅವರು ಭಾರತೀಯ ಚಿತ್ರಕಲೆ (೧೯೯೮) ಎಂದು ಅನುವಾದಿಸಿದ್ದಾರೆ. ನ್ಯಾಶನಲ್ ಬುಕ್ ಟ್ರಸ್ಟ್ ಇಂಡಿಯಾ ಇದನ್ನು ಪ್ರಕಟಿಸಿದೆ. ಭಾರತೀಯ ಚಿತ್ರ ಕಲೆಯ ಮಹತ್ವದ ವಿವರಗಳು ಇಲ್ಲಿ ಸಂಗ್ರಹಗೊಂಡಿವೆ. ಚಿತ್ರ ಕಲೆಯ ಕುರಿತ ಗ್ರಂಥಗಳು, ಕಲಾ ಸಾಮಗ್ರಿ, ಕಲಾ ಶಾಲೆಗಳು, ಅಲ್ಲದೆ ಇತಿಹಾಸ ಪೂರ್ವಕಾಲದಿಂದ ೧೯ನೆಯ ಶತಮಾನದವರೆಗೆ ಚಿತ್ರಕಲೆಯ ವಿವಿಧ ಕಾಲಮಾನಗಳಲ್ಲಿ ವಿವಿಧ ಅರಸರ ಪ್ರೋತ್ಸಾಹದಲ್ಲಿ ಬೆಳೆದು ಬಂದ ರೀತಿಯನ್ನು ಇಲ್ಲಿ ಸ್ಥೂಲವಾಗಿ ವಿವೇಚಿಸಲಾಗಿದೆ. ಒಟ್ಟಾರೆ ಇದೊಂದು ಅಭ್ಯಾಸಯೋಗ್ಯ ಗ್ರಂಥವಾಗಿದೆ.