ಆಧುನಿಕ ಕನ್ನಡ ಸಣ್ಣಕಥೆ ಪ್ರಕಾರಕ್ಕೆ ನೂರುವರ್ಷ. ಇದು ಕನ್ನಡದ ಅನೇಕ ಕಥೆಗಾರರನ್ನು ತನ್ನೊಡಲೊಳಗೆ ತಬ್ಬಿಕೊಂಡು ಇಂದು ಒಂದು ಪ್ರಕಾರಜನ್ಮವಾಗಿ ಬೆಳೆದಿದೆ. ಇದರ ಬೇರುಗಳು ಕಥಾಸರಿತ್ಸಾಗರ, ಪಂಚತಂತ್ರ, ಜಾತಕ, ಜೈನ, ಜೆನ್‌, ಸೂಫಿ, ಜನಪದ ಹೀಗೆ ವಿವಿಧ ಪ್ರಾಚೀನ ಕಥಾಭಿತ್ತಿಗಳಲ್ಲಿವೆ. ಆಧುನಿಕ ಕಥೆಗಳಲ್ಲಿ ಈ ಹಳೆಯ ಕಥೆಗಳು ವಿವಿಧ ವಿನ್ಯಾಸಗಳಲ್ಲಿ ಹಾಸುಹೊಕ್ಕಾಗಿ ಬೆರತುಕೊಂಡಿವೆ. ಈ ಶತಮಾನದ ಮೊದಲ ದಶಕಗಳಲ್ಲಿ ಆರಂಭದ ಸಣ್ಣ ಕಥೆಗಳು ಕೇಳಿಕೊಂಡ ಸಾಮಾಜಿಕ ಪ್ರಶ್ನೆಗಳನ್ನು, ಸಾಂಸ್ಕೃತಿಕ ಕಾಳಜಿಗಳನ್ನು ಈ ಶತಮಾನದ ಕೊನೆಯ ದಶಕದ ಸಣ್ಣಕಥೆಗಳಲ್ಲಿ ನೋಡಿದಾಗ ಈ ಪ್ರಕಾರದಲ್ಲಿ ಅಗಾಧವಾದ ಬದಲಾವಣೆ ಹಾಗೂ ಬೆಳವಣಿಗೆ ಉಂಟಾಗಿರುವುದನ್ನು ಕಾಣಬಹುದು. ಇಂತಹ ಕೆಲವು ಅನನ್ಯವಾದ ಸಾಂಸ್ಕೃತಿಕ ಕಾಳಜಿಗಳನ್ನು, ಪಲ್ಲಟಗಳನ್ನು ಈ ಕೊನೆಯ ಒಂದು ದಶಕದ ಕೆಲವು ವಿಶಿಷ್ಟವಾದ ಕಥಾಸಂಕಲನಗಳನ್ನು ಸಮೀಕ್ಷೆಗೆ ಒಳಗು ಮಾಡುವುದರ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ. ಹಾಗಾಗಿ ಇದು ಹತ್ತು ವರ್ಷಗಳ ಅವಧಿಯ ಕನ್ನಡ ಸಣ್ಣಕಥೆಗಳನ್ನು ಕುರಿತ ಅತಿಸ್ಥೂಲವಾದ ಸಮೀಕ್ಷೆಯಾಗಿದೆ. ಇದರಿಂದ ಇದಕ್ಕೆ ನಿರ್ದಿಷ್ಟವಾದ ಅವಧಿ, ನಿಯಮಿತವಾದ ಮಿತಿ ಪ್ರಾಪ್ತಿಯಾಗಿದೆ. ಈಗ ಕೈಗೊಂಡಿರುವಂಥ ಸಮೀಕ್ಷೆಯ ಸಲುವಾಗಿ ಈ ಹತ್ತು ವರ್ಷಗಳ ಅವಧಿಯಲ್ಲಿ ಪ್ರಕಟವಾಗಿರುವ ಎಲ್ಲ ಕಥಾಸಂಕಲನಗಳನ್ನೂ ಒಬ್ಬ ಲೇಖಕ ನೋಡುವುದು ಸಾಧ್ಯವಿಲ್ಲ. ಅದಕ್ಕೆ ಇಂದಿನ ಸ್ಥಿತಿಯಲ್ಲಿ ಅವಕಾಶವೂ ಕಡಿಮೆ. ಪ್ರಕಟವಾದ ಪುಸ್ತಕಗಳ ಅಧಿಕೃತ ಪಟ್ಟಿಯನ್ನು ಯಾರೂ ಪ್ರಕಟಿಸುವುದಿಲ್ಲ. ಪ್ರತಿವರ್ಷವೂ ಇಂತಹ ಒಂದು ವ್ಯವಸ್ಥೆ ಬೇಕು ಅನ್ನಿಸುತ್ತದೆ. ಒಂದು ವರ್ಷದಲ್ಲಿ ಸುಮಾರು ಇಪ್ಪತ್ತು ಕಥಾಸಂಕಲನಗಳು ಪ್ರಕಟವಾಗುತ್ತವೆ ಎಂದು ಇಟ್ಟು ಕೊಂಡರೆ, ಈ ಹತ್ತು ವರ್ಷಗಳಲ್ಲಿ ಸುಮಾರು ಇನ್ನೂರು ಕಥಾಸಂಕಲನಗಳು ಬಂದಿರಬಹುದು. ಆದರೆ ಇವುಗಳೆಲ್ಲಾ ನಮ್ಮ ಗಮನಕ್ಕೆ ಬಂದಿರುತ್ತವೆ ಎಂದು ಹೇಳಲು ಬರುವುದಿಲ್ಲ. ಆದರೂ ಈ ಸಮೀಕ್ಷೆಯಲ್ಲಿ ಸಾಧ್ಯವಾದಷ್ಟು ತುಂಬಿಕೊಡಲು ಪ್ರಯತ್ನ ಮಾಡಲಾಗಿದೆ.

ಕನ್ನಡದ ಆರಂಭದ ದಶಕಗಳ ಸಣ್ಣ ಕಥೆಗಳಲ್ಲಿ ಕಥೆಗಾರರು ಇಂಗ್ಲಿಷ್‌ ಶಿಕ್ಷಣ, ವಿಧವಾ ವಿವಾಹ, ನೈತಿಕತೆ, ಸ್ತ್ರೀ ಸ್ವಾತಂತ್ರ್ಯ – ಸಮಾನತೆಯ ಪ್ರಶ್ನೆಗಳನ್ನು ಎದುರಿಸಿರುವುದನ್ನು ಪ್ರಧಾನವಾಗಿ ಕಾಣಬಹುದು. ಇದು ಈ ಶತಮಾನದ ಕೊನೆಯ ದಶಕದ ಹೊತ್ತಿಗೆ ಸಣ್ಣಕಥೆಗಳಲ್ಲಿ ಸ್ತ್ರೀ ಸಂವೇದನೆ, ದಲಿತ ಸಮಸ್ಯೆ, ಪಟ್ಟಣ ಮತ್ತು ನಗರಗಳ ಸಂಘರ್ಷ, ಗ್ರಾಮೀಣ ಬದುಕು, ಪರಿಸರ ಹಾಗೂ ಜಾಗತೀಕರಣದ ಸಂಬಂಧ, ಸಮಾಜ ಮತ್ತು ವಿವಿಧ ಪ್ರಗತಿಪರ ಚಳುವಳಿಗಳ ಮಹತ್ವ – ಹೀಗೆ ವಿವಿಧ ಸಮಸ್ಯೆಗಳು, ಸಂವೇದನೆಗಳು ಹಾಗೂ ಸವಾಲುಗಳು ಕಾಣಿಸಿಕೊಂಡು ಸಣ್ಣಕಥೆಯ ವ್ಯಾಪ್ತಿ ಹಾಗೂ ಮಹತ್ವವನ್ನು ಮತ್ತಷ್ಟು ಹಿಂದಿಗಿಂತ ಹೆಚ್ಚಿನ ಜವಾಬ್ದಾರಿಯಲ್ಲಿ ವಿಸ್ತರಿಸಿವೆ. ಈ ದಶಕದಲ್ಲಿಯೂ ಹಿರಿಯ ಕಥೆಗಾರರಾದ ಚದುರಂಗ, ಬಲ್ಲಾಳ, ಬೆಸಗರಹಳ್ಳಿ, ತೇಜಸ್ವಿ ಮುಂತಾದವರ ಕಥಾಸಂಕಲನಗಳಿಂದ ಹಿಡಿದು ಇತ್ತೀಚಿನ ಅನೇಕ ಕಿರಿಯ ಕಥೆಗಾರರ ಕಥಾಸಂಕಲನಗಳವರೆಗೂ ಕೃತಿಗಳೂ ಬಂದಿದ್ದು ಇವು ಈ ದಶಕದ ಸಣ್ಣಕಥಾ ಸಾಹಿತ್ಯ ಕ್ಷೇತ್ರವನ್ನು ಸಮೃದ್ಧಿಗೊಳಿಸಿವೆ.

ಮೊದಲಿಗೆ ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗೈಯ್ಯಾಳಿಗಳು’ (೧೯೯೧) ಕಥಾಸಂಕನಲದ ಮೂಲಕ ಈ ದಶಕದ ಸಣ್ಣಕಥಾ ಸಾಹಿತ್ಯವನ್ನು ಸಮೀಕ್ಷೆಗೆ ಒಳಗುಪಡಿಸುವುದು ಆಕಸ್ಮಿಕವೇನೂ ಅಲ್ಲ. ಅರವತ್ತರ ದಶಕದಲ್ಲಿ ನವ್ಯ ಕಥೆಗಳನ್ನು ಸೃಷ್ಟಿಸಿ, ಕನ್ನಡ ಸಣ್ಣಕಥೆಯ ಕ್ಷೇತ್ರದಲ್ಲಿ ಕಾಲದಿಂದ ಕಾಲಕ್ಕೆ ಹೊಸಹೊಸ ಪ್ರಯೋಗಗಳನ್ನು ನಡೆಸಿದವರಲ್ಲಿ ತೇಜಸ್ವಿಯವರೂ ಒಬ್ಬರು. ಇವರು ತೊಂಬತ್ತರ ದಶಕದ ಹೊತ್ತಿಗೆ ಸಣ್ಣಕಥೆಗೆ ಮತ್ತೊಂದು ಸಾಮಾಜಿಕ ಹಾಗೂ ರಾಜಕೀಯ ಆಯಾಮವನ್ನು ತಂದುಕೊಟ್ಟ ಹೊಣೆಗೆ ಪಾತ್ರರಾಗಿದ್ದಾರೆ. ತಮ್ಮ ಹಿಂದಿನ ಕಥೆಗಳಲ್ಲಿ ಕಂಡುಬರುತ್ತಿದ್ದ ಸೌಂದರ್ಯಪ್ರಜ್ಞೆ ಮತ್ತು ಕಲಾಪ್ರಜ್ಞೆಯನ್ನು ಈ ಕಥೆಗಳಲ್ಲಿ ಮತ್ತಷ್ಟು ಎತ್ತರಕ್ಕೆ ವಿಸ್ತರಿಸಿದ್ದಾರೆ. ಇವರ ಬಹುಪಾಲು ಕಥೆಗಳ ಆವರಣ ಮಲೆನಾಡು. ಅವರ ‘ಕಿರಗೂರಿನ ಗೈಯ್ಯಾಳಿಗಳು’ ಕಥೆಯ ಪರಿಸರವೂ ಮಲೆನಾಡೇ ಆಗಿದೆ. ಇದರಲ್ಲಿ ಸ್ತ್ರೀ ಬಗ್ಗೆ ಸಾಂಪ್ರದಾಯಕ ಸಮಾಜ ಹೊಂದಿದ್ದ ನಂಬಿಕೆಗಳನ್ನು ಸುಳ್ಳಾಗಿಸಿ, ಆಕೆಯ ಶಕ್ತಿಯನ್ನು, ಸಂವೇದನೆಯನ್ನು ಹೊಸರೀತಿಯಲ್ಲಿ ಧ್ವನಿಸಿದ್ದಾರೆ. ಇವರ ಕಥೆಗಳಲ್ಲಿ ನಿಗೂಢತೆ, ರಹಸ್ಯ ಇವು ಅತ್ಯಂತಸ್ಥವಾಗಿವೆ. ರೈತ ಚಳುವಳಿಯ ಪ್ರಭಾವದಿಂದ ಇಲ್ಲಿನ ಕಥೆಗಳಿಗೆ ಒಂದು ಹೊಸ ತಿರುವು ಬಂದಿದೆ. ಕುಡಿತದ ವಿರುದ್ಧ, ಕ್ಷುದ್ರತೆಯ ವಿರುದ್ದ ಸ್ತ್ರೀಯರು ಇಲ್ಲಿ ಪ್ರತಿಭಟನೆಯ ದನಿ ಎತ್ತಿದ್ದಾರೆ. ಮಹಿಳೆಯರಿಂದಲೇ ಸಾಮಾಜಿಕ ಸ್ಪೋಟವಾಗುವುದು ಹೆಚ್ಚು ಅರ್ಥಪೂರ್ಣ ಎಂಬ ತಿಳಿವಳಿಕೆ ಈ ಕಥೆಗಳ ಹಿಂದಿನ ಮುಖ್ಯ ಶಕ್ತಿಯಾಗಿದೆ. ನಿರೂಪಣೆ ಮತ್ತು ವಿನ್ಯಾಸಗಳೆರಡರಲ್ಲೂ ‘ಗೈಯ್ಯಾಳಿಗಳು’ ಮತ್ತು ‘ಕೃಷ್ಣೇಗೌಡನ ಆನೆ’ ಕಥೆಗಳು ಮಹತ್ವಾಕಾಂಕ್ಷೆಯನ್ನು, ಬದಲಾದ ಸಾಮಾಜಿಕ ಸನ್ನಿವೇಶವನ್ನು ಬಲಿಷ್ಠವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಎಲ್ಲ ಕಾಲಘಟ್ಟಗಳಲ್ಲಿಯೂ, ಎಲ್ಲ ಚಳುವಳಿಗಳ ಸಂದರ್ಭದಲ್ಲಿಯೂ ಆರೋಗ್ಯಕಾರಿಯಾದ ನಿಲುವನ್ನು ಇಟ್ಟುಕೊಂಡು ಕಥೆಗಳನ್ನು ಬರೆದ ಹಿರಿಯ ಕಥೆಗಾರರಲ್ಲಿ ಚದುರಂಗರೂ ಒಬ್ಬರು. ಇವರ ಕಥೆಗಳು ಭೂಮಿ ಮತ್ತು ಮನುಷ್ಯನ ಸಂಬಂಧ, ಮನುಷ್ಯ ಮತ್ತು ಜಾತಿಯ ಸಂಬಂಧ, ಮನುಷ್ಯ ಮತ್ತು ಪ್ರತಿಭಟನೆ, ಕ್ರಾಂತಿಯ ಸಂಬಂಧ ಹೀಗೆ ವಿವಿಧ ಬಗೆಗಳನ್ನು ಶೋಧಿಸುವ ಪ್ರವೃತ್ತಿಯನ್ನು ಪ್ರಕಟಿಸುತ್ತವೆ. ಇವರ ಕಥೆಗಳ ವಸ್ತು, ಆವರಣ ಮತ್ತು ಭಾಷೆಯ ವೈವಿಧ್ಯತೆ ಮುಖ್ಯವಾಗಿ ಹಳೇ ಮೈಸೂರು, ಹುಣಸೂರು, ಪರಿಯಾಪಟ್ಟಣದ ಪ್ರಾಂತ್ಯಕ್ಕೆ ಸೇರಿದ್ದು. ಇವರ ‘ಕ್ವಾಟೆ’ (೧೯೯೨) ‘ಮೃಗಯಾ’ (೧೯೯೪) ಈ ಎರಡು ಕಥಾಸಂಕಲನಗಳು ಈ ದಶಕದ ಬಹುಮುಖ್ಯ ಕಥಾಸಂಕಲನಗಳ ಪಾಲಿಗೆ ಸೇರಿವೆ. ಹೆಣ್ಣಿನ ಮಾನಸಿಕ ಮತ್ತು ಲೈಂಗಿಕ ಶೋಷಣೆಯನ್ನು ‘ಕ್ವಾಟೆ’ ಸಂಕಲನದ ಕಥೆಗಳು ಚಿತ್ರಿಸಿದರೆ, ಮಾನವೀಯತೆಗೆ ಒದಗಿದ ದುಸ್ಥಿತಿಯನ್ನು ‘ಮೃಗಯಾ’ ಕಥಾಸಂಕಲನದ ಕಥೆಗಳು ಶೋಧಿಸುತ್ತವೆ. ಹಿಂದು ಮುಸ್ಲಿಂ ಕೋಮುಗಲಭೆಯಲ್ಲಿ ಮಾನವೀಯತೆ ಪ್ರಕಟೆಸುವ ಇವರ ‘ತಿರುವು’ ಕಥೆ ಗಮನಾರ್ಹವಾಗಿದೆ. ಅವಿವಾಹಿತ ಹೆಣ್ಣು ಗರ್ಭಿಣಿಯಾದಾಗ ಅವಳ ರಕ್ತಸಂಬಂಧಿಗಳು ತಾಳುವ ನಿಲುವು ಎಂತಹುದು ಎಂಬುದಕ್ಕೆ ಚದುರಂಗರ ಕಥೆಗಳು ಸಹಜವಾಗಿ ಚಿತ್ರಿಸುತ್ತವೆ. ಈ ಸಿನಿಕತನದ ನಿಲವು ಮಧ್ಯಮವರ್ಗದ ಜನತೆಯ ವಾಸ್ತವ ಪ್ರತಿಕ್ರಿಯೆಗೆ ಸಾಕ್ಷಿಯಾಗಿದೆ.

ಶಾಂತರಸ, ಡಾ. ಬೆಸಗರಹಳ್ಳಿ, ರಾಮಣ್ಣ, ವ್ಯಾಸರಾಯ ಬಲ್ಲಾಳ, ವೀರಭದ್ರ ಇವರು ನಮ್ಮ ಹಿರಿಯ ಕಥೆಗಾರರು. ಈ ದಶಕದಲ್ಲಿ ರಾಮಣ್ಣನವರ ‘ಕೊಳಲು ಮತ್ತು ಖಡ್ಗ’ (೧೯೯೮), ವ್ಯಾಸರಾಯ ಬಲ್ಲಾಳರ ‘ತ್ರಿಕಾಲ’ (೧೯೯೨), ಶಾಂತರಸರ ‘ಉರಿದ ಬದುಕು’ (೧೯೯೬) ಈ ಕಥಾಸಂಕಲನಗಳು ಪ್ರಕಟವಾಗಿವೆ. ಶಾಂತರಸರ ಕಥೆಗಳ ಕೇಂದ್ರವಸ್ತು ನೈತಿಕ ಪ್ರಜ್ಞೆಯ ವಿಕಾಸ ಮತ್ತು ಶೋಧನೆ. ಅವರ ಕಥೆಗಳು ಜೀವನ ಮೌಲ್ಯಗಳ ಹುಡುಕಾಟದಲ್ಲಿ ತೊಡಗುತ್ತವೆ. ಹೈದ್ರಾಬಾದು ಕರ್ನಾಟಕ ಪ್ರದೇಶದ ಬದುಕಿನ ಮಹತ್ವದ ಸಂಗತಿಗಳನ್ನು ಹುಡುಕುವ ಮನೋಧರ್ಮವನ್ನು ಶಾಂತರಸರ ಕಥೆಗಳು ಪ್ರಕಟಿಸುತ್ತವೆ. ಮುಂಬೈನ ಮಧ್ಯಮ ವರ್ಗದ ಜನತೆಯ ಸುಖದುಃಖಗಳನ್ನು, ಅವರು ಆಧುನಿಕ ನಾಗರೀಕತೆಯ ದಾಳಿಯ ಸಂದರ್ಭದಲ್ಲಿ ಎದುರಿಸುವ ತಲ್ಲಣ, ಸಂಘರ್ಷ ಹಾಗೂ ಸಂಪ್ರದಾಯದ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ಚಿತ್ರಿಸುತ್ತವೆ. ಹಾಗೆಯೇ ವೀರಭದ್ರ ಅವರ ಕಥೆಗಳಲ್ಲಿ ಬಂಡವಾಳಶಾಹೀ ಪ್ರವೃತ್ತಿಗಳನ್ನು ಅನಾವರಣಗೊಳಿಸುವ ಮನೋಧರ್ಮವು ಪರಿಣಾಮಕಾರಿಯಾಗಿ ಚಿತ್ರಿತವಾಗಿರುವುದನ್ನು ಕಾಣಬಹುದು. ಈ ದೃಷ್ಟಿಯಿಂದ ಅವರ ‘ಕನ್ನಡಿ ನೋಡಿದ ನಾಯಿ’ (೧೯೯೪) ಒಂದು ಗಮನಾರ್ಹವಾದ ಕಥೆ. ಹಾಗೆಯೇ ಬಲ್ಲಾಳರ ‘ತ್ರಿಕಾಲ’ ಕೂಡ ಒಂದು ವಿಶಿಷ್ಟವಾದ ಕಥೆಯಾಗಿದೆ. ಆದರೆ ಬೆಸಗರಹಳ್ಳಿ ರಾಮಣ್ಣನವರು ತಮ್ಮ ಕಥೆಗಳ ವಸ್ತುವಿನ ದೃಷ್ಟಿಯಿಂದ ಸಮಕಾಲೀನ ಕಥೆಗಾರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಅವರ ಸಮಕಾಲೀನ ಕಥೆಗಳ ವಸ್ತು ಭಾರತದ ಗ್ರಾಮೀಣ ಪ್ರದೇಶ. ಅವರ ಕಥೆಗಳ ನಾಯಕರು ಗ್ರಮಾಂತರ ಪ್ರದೇಶದ ರೈತಾಪೀ ವರ್ಗ ಅಥವಾ ಜನಪದರಂತೆ ನಿರಕ್ಷರ ಕುಕ್ಷಿಗಳು. ಅವರ ಅಭಿವ್ಯಕ್ತಿ ಕ್ರಮವಂತೂ ತದ್ವತ್‌ ಗ್ರಾಮ್ಯದ ಭಾಷೆ. ಅವರ ಕಥೆಗಳು ಬದುಕಿನ ಸಾದೃಶ್ಯದ ಚಿತ್ರಣಗಳನ್ನು ನಿರ್ಮಿಸುವಲ್ಲಿ ಅತ್ಯಂತ ಯಶಸ್ವೀ ರಚನೆಗಳು. ಬದುಕಿನ ಕೇಡು ಮತ್ತು ಮಾರ್ದವತೆಗಳೆರಡನ್ನೂ ಇವರಷ್ಟು, ಕನ್ನಡದಲ್ಲಿ ಚೆನ್ನಾಗಿ ಚಿತ್ರಿಸಿದ ಕಥೆಗಾರರು ವಿರಳ; ಈ ದೃಷ್ಟಿಯಿಂದ ರಾಮಣ್ಣನವರ ‘ಕೊಳಲು ಮತ್ತು ಖಡ್ಗ’ ಕಥಾಸಂಕಲನದ ಕಥೆಗಳು ಗಮನಾರ್ಹ ರಾಮಣ್ಣನವರು ಕಥೆಗಳನ್ನು ರೂಪಕದ ಮೂಲಕ, ಪ್ರತಿಮೆಗಳ ಮೂಲಕ ಕಟ್ಟಲು ತಮ್ಮ ಕೊನೆಕೊನೆಯ ಘಟ್ಟಗಳಲ್ಲಿ ಪ್ರಯತ್ನ ಮಾಡುತ್ತಿದ್ದರು. ಇದಕ್ಕೆ ಅವರ ಈ ಸಂಕಲನವೇ ಸಾಕ್ಷಿಯಾಗಿದೆ.

ಶ್ರೀಕೃಷ್ಣ ಆಲನಹಳ್ಳಿ ಅವರ ‘ಗೋಡೆ’ (೨೦೦೦), ಕೆ. ವಿ. ತಿರುಮಲೇಶರ ‘ಕಳ್ಳಿಗಿಡ ಹೂ’ (೧೯೯೮), ಎಸ್‌, ದಿವಾಕರರ ‘ಉತ್ತರ ದಕ್ಷಿಣ ದಿಕ್ಕುಗಳನ್ನು ಬಲ್ಲವನು’ (೧೯೯೮), ಮಹಮದ್‌ ಕುಂಞ ಅವರ ‘ಆಕಾಶಕ್ಕೆ ನೀಲಿ ಪರದೆ’ (೧೯೯೨), ಕ್ಯಾತನಹಳ್ಳಿ ರಾಮಣ್ಣನವರ ‘ಎಂದು ಬಂದೀತೋ ಮಳೆ’ (೨೦೦೦) ಈ ಕಥಾಸಂಕಲನಗಳು ಈ ದಶಕದ ಪ್ರಮುಖ ಕೃತಿಗಳು. ಕೃಷ್ಣ ಆಲನಹಳ್ಳಿ, ಅವರು ತಮ್ಮ ಈ ಸಂಕಲನದಲ್ಲಿರುವ ಮೂರೂ ಕಥೆಗಳ ಮೂಲಕ ಮನುಷ್ಯ ಸಂಬಂಧಗಳನ್ನು ಶೋಧನೆಗೆ ಒಳಗು ಮಾಡಿದ್ದಾರೆ. ಈ ಕಥೆಗಳ ಹೊಳಹು ಆಧುನಿಕ ಮನಸ್ಸಿನಿಂದ ಪ್ರೇರಿತವಾದುದು. ಇದರಲ್ಲಿರುವ ‘ಸುಟ್ಟತಿಕದ ದೇವರು’ ಒಂದು ಅತ್ಯುತ್ತಮ ಕಥೆಯಾಗಿದೆ. ಕಲ್ಪನೆ, ತರ್ಕಕ್ಕೆ ಮೀರಿದ ಮನುಷ್ಯ ಸಂಬಂಧಗಳು ಇಲ್ಲಿ ಘಟಿಸುತ್ತವೆ. ಆಲನಹಳ್ಳಿಯವರು ತಮ್ಮ ವಿಶಿಷ್ಟವಾದ ಕಥನ ಶೈಲಿಯ ನಿರೂಪಣೆಯಿಂದ ಮತ್ತು ದುರಂತದ ಬಗ್ಗೆ ಹೊಂದಿರುವ ವಿಷಾದದಿಂದ ಈ ಕಥೆಗಳ ಶಿಲ್ಪವನ್ನು ಕಟ್ಟಿದ್ದಾರೆ. ಹೊಸ ಮತ್ತು ಹಳೆಯ ನಾಗರಿಕತೆಯ ಸಂಘರ್ಷ ಇಲ್ಲಿನ ಕಥೆಗಳಲ್ಲಿ ಅಭಿವ್ಯಕ್ತಗೊಂಡಿದೆ. ಅವರ ಹಿಂದಿನ ಕಥೆಗಳಲ್ಲಿ ಕಂಡುಬರುತ್ತಿದ್ದ ಅತಿವ್ಯಾಮೋಹ ಮತ್ತು ವೈಭವ ಇಲ್ಲಿ ಒಂದು ಹದವಾದ ಹಂತವನ್ನು ಮುಟ್ಟಿ ಕಥೆಗಳ ಸಾಫಲ್ಯಕ್ಕೆ ಕಾರಣವಾಗಿದೆ. ಇದರಲ್ಲಿರುವ ಮತ್ತೊಂದು ಮಹತ್ವದ ಕಥೆ ‘ಗೋಡೆ’. ನವ್ಯಲೇಖಕರಲ್ಲಿ ಕೆ. ವಿ. ತಿರುಮಲೇಶರೂ ಒಬ್ಬರು. ವಸ್ತು, ಭಾಷೆ, ಮನೋಧರ್ಮ ಮೂರರಲ್ಲೂ ಹೊಸತನ ಪ್ರಕಟಿಸಿದ ಕಥೆಗಾರರು ಇವರು, ಇವರ ‘ಕಳ್ಳಿಗಿಡ ಹೂ’ ಕಥಾಸಂಕಲನದ ಕಥೆಗಳು ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ನಡುವಿನ ಸಂಬಂಧಗಳನ್ನು ಪರಿಣಾಮಕಾರಿಯಾಗಿ ಶೋಧಿಸುತ್ತವೆ. ಇವರ ಕಥೆಗಳಲ್ಲಿ ಕನ್ನಡ ಭಾಷೆಯು ಒಂದು ಸ್ಪಟಿಕದ ಸಲಾಖೆಯಂತೆ ಬಳಕೆಯಾಗುವುದನ್ನು ಕಾಣಬಹುದು. ಎಸ್‌. ದಿವಾಕರ ಮತ್ತು ಬೋಳುವಾರರು ತಮ್ಮ ಕಥೆಗಳಲ್ಲಿ ತಂತಮ್ಮ ಸಮುದಾಯದ ಧರ್ಮ, ಸಂಪ್ರದಾಯ, ನಂಬಿಕೆಗಳನ್ನು ಶೋಧನೆಗೆ, ಪ್ರಶ್ನೆಗಳಿಗೆ ಒಡ್ಡುವುದನ್ನು ಕಾಣಬಹುದು. ಬದುಕಿನ ಕ್ರೌರ್ಯದ ಮುಖಗಳನ್ನು ಸಮುದಾಯದಲ್ಲಿ ನಡೆಯುವ ಮದುವೆ, ಮುಂಜಿ, ಸಾವು, ನೋವು, ವಿಚ್ಛೇದನ ಇತ್ಯಾದಿ ಸಂಗತಿಗಳನ್ನು ಮಾನವೀಯತೆಯ ನೆಲೆಯಿಂದ ವಿಶ್ಲೇಷಣೆಗೆ ಒಳಗುಮಾಡುವುದನ್ನು ಕಾಣುತ್ತೇವೆ. ಈ ದೃಷ್ಟಿಯಿಂದ ಬೋಳುವಾರು ಅವರ ‘ಆಕಾಶಕ್ಕೆ ನೀಲಿ ಪರದೆ’ ಈ ದಶಕದ ಮಹತ್ವದ ಕಥಾಸಂಕಲನಗಳಲ್ಲಿ ಒಂದಾಗಿದೆ.

ಮೊಗಳ್ಳಿ ಗಣೇಶರ ‘ಬುಗುರಿ’ (೧೯೯೨), ವಿವೇಕ ಶಾನಭಾಗರ ‘ಲಂಗರು’ (೧೯೯೨) ‘ಹುಲಿಸವಾರಿ’ (೧೯೯೫), ಕಾ. ತ. ಚಿಕ್ಕಣ್ಣ ಅವರ ‘ಮನಸು ಮುಗಿಲು’ (೧೯೯೩), ನನ್ನ ‘ನೆನಪಲ್ಲ ವಾಸ್ತವ’ (೧೯೯೧) ‘ಕಡಲ ಮಂತು’ (೧೯೯೫) ಈ ಕಥಾಸಂಕಲನಗಳು ಈ ದಶಕದಲ್ಲಿ ಬಂದ ಅತ್ಯಂತ ಮಹತ್ವದ ಕೃತಿಗಳಾಗಿವೆ. ಮೊಗಳ್ಳಿ ಅವರ ಕಥೆಗಳು ಕೆಳಜಾತಿ ಮತ್ತು ಅಸ್ಪೃಶ್ಯ ಜನಾಂಗದ ಸುಖದುಃಖಗಳನ್ನು, ನಂಬಿಕೆ ಆಚರಣೆಗಳನ್ನು ಸಮರ್ಥವಾಗಿ ಚಿತ್ರಿಸುತ್ತವೆ. ಇವರ ಕಥೆಗಳಲ್ಲಿ ಶೋಷಣೆಯ ವಿವಿಧ ಮುಖಗಳನ್ನು ಸಿಟ್ಟು ಹಾಗೂ ವಿಷಾದದೊಡನೆ ಜೀವಂತವಾಗಿ ಪರಿಭಾವಿಸುವುದನ್ನು ಕಾಣುತ್ತೇವೆ. ಹಳ್ಳಿಗಳ ಬದಲಾವಣೆಗಳನ್ನು ಮೊಗಳ್ಳಿಯವರ ಕಥೆಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಇವರ ‘ಬುಗುರಿ’ ಮತ್ತು ‘ನನ್ನಜ್ಜನಿಗೊಂದಾಸೆಯಿತ್ತು’ ಕಥೆಗಳಲ್ಲಿ ಅಸ್ಪೃಶ್ಯತೆಯ ಸಮಸ್ಯೆ ಮತ್ತು ಜನಪದ ನಂಬಿಕೆಯೊಂದರ ಸಮಸ್ಯೆಯನ್ನು ವಿಶ್ಲೇಷಣೆಗೆ, ಶೋಧನೆಗೆ ಒಳಗುಮಾಡುವುದನ್ನು ಗುರುತಿಸಬಹುದು. ಹೀಗಾಗಿ ಇವರ ಕಥೆಗಳು ಸಾಮುದಾಯಿಕ ನೆಲೆಯಲ್ಲಿ ಬಿಚ್ಚಿಕೊಳ್ಳುತ್ತವೆ. ವಿವೇಕ ಶಾನಭಾಗರದು ವ್ಯಕ್ತಿಕೇಂದ್ರಿತ ನೆಲೆ. ಇದಕ್ಕೆ ‘ಲಂಗರು’ ಕಥಾನಾಯಕನೇ ಸಾಕ್ಷಿ. ಮಧ್ಯಮ ವರ್ಗದ ಪಾತ್ರಗಳ ಸೃಷ್ಟಿಗಳು ಬೇರೆಬೇರೆ ಸಂದರ್ಭಗಳಲ್ಲಿ ವಿವಿಧ ಪ್ರತಿಮೆ, ಸಂಕೇತಗಳ ಮೂಲಕ ಕಾಣಿಸಿಕೊಳ್ಳುತ್ತವೆ. ಇವರ ಕಥೆಗಳ ನಾಯಕರು ತಪ್ತರು. ಜಾಗತೀಕರಣದಿಂದ ತಲ್ಲಣಗೊಂಡವರು. ಶಾಂತಿಗಾಗಿ, ನೆಮ್ಮದಿಗಾಗಿ ಹುಡುಕಾಡುವವರು ಮತ್ತು ಕೊನೆಗೆ ನಿರಾಶೆಗೆ ಒಳಗಾಗುವವರು. ‘ಹುಲಿಸವಾರಿ’ ಕಥೆಯು ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕ ಲಾಭವನ್ನೇ ಗುರಿಯಾಗಿಟ್ಟುಕೊಂಡು ನಡೆಸುವ ವ್ಯಾವಹಾರಿಕ ಮನೋಧರ್ಮದ ಅಭಿವ್ಯಕ್ತಿಗೆ ಸಾಂಕೇತಿಕವಾಗಿದೆ. ನನ್ನ ‘ಕಡಲ ಮಂತು’ ಕಥೆಗಳ ಬಗ್ಗೆ ‘ಪುಸ್ತಕ ಮಾಹಿತಿ’ಯಲ್ಲಿ ಡಾ. ಮೋಹನಕುಂಟಾರ‍್ ಅವರು, “ಕರೀಗೌಡ ಬೀಚನಹಳ್ಳಿ ಅವರ ಕಥೆಗಳು ಕಟ್ಟಿಕೊಡುವ ಲೋಕವೇ ಹೊಸ ತೆರನಾದುದು. ಮುಗ್ಧ ಜನರ ಮೂಲಕ ಬದುಕಿನ ಅನೇಕ ಮೌಲ್ಯಗಳನ್ನು ಪಾರದರ್ಶಕವಾಗಿ ನೋಡುವುದೇ ಗೌಡರ ಕಥೆಗಳ ವೈಶಿಷ್ಟ್ಯ. ಈ ದೃಷ್ಟಿಯಿಂದ ‘ವಿಯೋಗ’, ‘ಅವಶೇಷ’ ಕಥೆಗಳು ತಮ್ಮಷ್ಟಕ್ಕೆ ತಾವೇ ಹೊಸ ಶೋಧನೆಯತ್ತ ಹೊರಟ ಕಥೆಗಳಾಗಿವೆ. ಜನಪದ ಆಚರಣೆ, ಪರಿಸರ, ನಂಬಿಕೆ, ಪುರಾಣಗಳನ್ನು ಕಥೆಗಳವಿನ್ಯಾಸಕ್ಕೆ ಬಳಸಿಕೊಳ್ಳುವ ರೀತಿ ಮತ್ತು ಮನೋಧರ್ಮ ಆಧುನಿಕವಾಗಿದೆ” ಎಂದು ಅಭಿಪ್ರಾಯ ಪಡುತ್ತಾರೆ. ಗ್ರಾಮೀಣ ಬದುಕನ್ನು ಮುಗ್ಧ ಪಾತ್ರಗಳ ಮೂಲಕ ನೋಡುವ ಮತ್ತು ಆ ಅನುಭವವನ್ನು ವಿಶ್ಲೇಷಣೆಗೆ ಒಳಗುಮಾಡುವ ಪ್ರಕ್ರಿಯೆಯನ್ನು ಕಾ. ತ. ಚಿಕ್ಕಣನವರ ‘ಮನಸು ಮುಗಿಲು’ ಕಥಾಸಂಕಲನದ ಕಥೆಗಳಲ್ಲಿ ಕಾಣುತ್ತೇವೆ. ಬದುಕಿನಲ್ಲಿನ ಕರುಣೆ, ಆದರ್ಶ ಮತ್ತು ಪ್ರೀತಿಯನ್ನು ತಮ್ಮ ವಿಶಿಷ್ಟ ಭಾಷೆಯ ಮೂಲಕ ಚಿಕ್ಕಣ್ಣವರು ಆಪ್ತವಾಗಿ ಚಿತ್ರಿಸುವುದನ್ನು ನೋಡಬಹುದು. ಹೀಗಾಗಿ ಇವರ ಕಥೆಗಳಲ್ಲಿ ಒಂದು ವಿಶಿಷ್ಟವಾದ ಗ್ರಾಮೀಣ ಬದುಕಿನ ಸೊಗಡಿದೆ.

ಪ್ರಸ್ತುತ ದಶಕದಲ್ಲಿ ಕೆಲವು ವಿಶಿಷ್ಟ ರಚನೆಗಳಿಗೆ ಕಾರಣರಾದವರಲ್ಲಿ ಎಂ. ಎಸ್. ಕೆ. ಪ್ರಭು ಅವರ ‘ಮುಖಾಬಿಲೆ’ (೧೯೯೧), ಅಮರೇಶ ನುಗಡೋಣಿ ಅವರ ‘ತಮಂಧದ ಕೇಡು’ (೧೯೯೭), ರಾಘವೇಂದ್ರ ಪಾಟೀಲರ ‘ದೇಸಗತಿ’ (೧೯೯೫), ಬಿದರಹಳ್ಳಿ ನರಸಿಂಹಮೂರ್ತಿ ಅವರ ‘ಶಿಶು ಕಂಡ ಕನಸು’ (೧೯೯೩), ಜಯಂತ ಕಾಯ್ಕಿಣಿ ಅವರ ‘ಬಣ್ಣದ ಕಾಲು’ (೧೯೯೯) ಕಥಾಸಂಕಲನಗಳು ಗಮನೀಯ. ನುಗಡೋಣಿಯವರು ಹೈದ್ರಾಬಾದ್ ಕರ್ನಾಟಕ ಪ್ರದೇಶಕದ ಗ್ರಾಮೀಣ ಬದುಕನ್ನು ತಮ್ಮ ಕಥೆಗಳ ವಸ್ತುವನ್ನಾಗಿ ಆಯ್ಕೆ ಮಾಡಿಕೊಂಡು ತಮ್ಮ ವಿಶಿಷ್ಟ ಆಭಿವ್ಯಕ್ತಿಯಲ್ಲಿ ಕಲಾತ್ಮಕವಾಗಿ ಚಿತ್ರಿಸುತ್ತಾರೆ. ಬದುಕಿನಲ್ಲಿ ಬಡತನ, ಮೌಢ್ಯ ಇವುಗಳ ನಡುವೆ ಚಿಮ್ಮುವ ಜೀವನೋತ್ಸಹವನ್ನು ಚೇತೋಹಾರಿಯಾಗಿ ನಿರೂಪಿಸುತ್ತಾರೆ. ಮಹಿಳಾ ಪಾತ್ರಗಳು ಎದುರಿಸುವ ಸಮಸ್ಯೆಗಳ ಸಂಕೀರ್ಣ ಸ್ವರೂಪವನ್ನು ಬಿಚ್ಚಿಡಲು ಪ್ರಯತ್ನಿಸುತ್ತಾರೆ. ಪಾಟೀಲರು ಕುಟುಂಬಗಳ ಸಂಘರ್ಷವನ್ನು ಮತ್ತು ಬಾಳಿನ ಲಯವನ್ನು ಹಿಡಿಯಲು ತಮ್ಮ ಕಥೆಗಳಲ್ಲಿ ಪ್ರತತ್ನ ಮಾಡಿದ್ದಾರೆ. ಜಮೀನುದಾರಿ ಪದ್ಧತಿಯ ಮೌಲ್ಯಗಳನ್ನು ಪಾಟೀಲರು ಯಶಸ್ವಿಯಾಗಿ ಶೋಧನೆಗೆ ಒಳಗು ಮಾಡುತ್ತಾರೆ. ಹೆಣ್ಣಿನ ವಿವಿಧ ಮುಖಗಳನ್ನು ಅರ್ಥೈಸಿಕೊಳ್ಳುವಲ್ಲಿ ಅವರ ಕಥೆಗಳು ಪ್ರವೃತ್ತವಾಗಿವೆ. ಸ್ತ್ರೀಪರ ಕಾಳಜಿ, ಗಾಂಧಿಯುಗದ ಆದರ್ಶ ಇವು ಇವರ ಕಥೆಗಳ ವಿಶಿಷ್ಟ ವಿನ್ಯಾಸಗಳಾಗಿವೆ. ಆಧುನಿಕ ಜೀವನ ಕ್ರಮವನ್ನು ಮತ್ತು ಅದರ ಸಂರ್ಘಷಗಳನ್ನು ಚಿತ್ರಿಸುವಲ್ಲಿ ಜಯಂತ ಕಾಯ್ಕಿಣಿ ಅವರ ಕಥೆಗಳು ಯಶಸ್ವೀ ರಚನೆಗಳಾಗಿವೆ. ಬಿದರಹಳ್ಳಿ ನರಸಿಂಹಮೂರ್ತಿ ಅವರ ಕಥೆಗಳು ಕೆಲವು ವಿಶಿಷ್ಟಸ್ವನಗಳಿಂದ ಕೂಡಿವೆ. ಸಾಮಾಜಿಕ ಪರಿಸರದಲ್ಲಿ ಸತ್ಯ. ಮಾನವೀಯತೆಗಳ ಹುಡುಕಾಟ ಇವರ ಕಥೆಗಳಲ್ಲಿ ಪ್ರಧಾನವಾದ ವಸ್ತುವಾಗಿದೆ. ಇವರ ಕಥೆಗಳ ಆಶಯ ಮತ್ತು ಅಭಿವ್ಯಕ್ತಿ ವಿಶ್ವಪ್ರಜ್ಞೆಯನ್ನು ಬಿಂಬಿಸುತ್ತವೆ. ‘ಶಿಶು ಕಂಡ ಕನಸು’ ಮತ್ತು ‘ಹಂಸೆ ಹಾರಿತ್ತು’ ಈ ದಶಕದ ಬಹುಮುಖ್ಯ ಕಥೆಗಳಾಗಿವೆ. ಆದರೆ ಈ ಕಥೆಗಳ ಸಖ್ಯದ ವಿನ್ಯಾಸ ಸೀಮಾತೀತವಾದುದು ಎಂ. ಎಸ್. ಕೆ. ಪ್ರಭು ಅವರು ತಮ್ಮ ಕಥೆಗಳ ಮೂಲಕ ಫ್ಯಾಂಟಸಿ ಅಂಶಗಳನ್ನು ಕಥಾಸಾಹಿತ್ಯಕ್ಕೆ ಸೇರಿಸಿದವರು.

ಈ ದಶಕದಲ್ಲಿ ಕನ್ನಡ ಸಣ್ಣ ಕಥೆಯ ಕ್ಷೇತ್ರಕ್ಕೆ ಬೌದ್ಧಿಕತೆ ಮತ್ತು ಪ್ರಯೋಗಶೀಲತೆಯ ಅಂಶಗಳು ವಿಶಿಷ್ಟ ರೂಪದಲ್ಲಿ ಸೇರ್ಪಡೆಯಾಗಿವೆ. ಕೆ. ಸತ್ಯನಾರಾಯಣ ಅವರ ‘ನಿಮ್ಮ ಮೊದಲ ಪ್ರೇಮದ ಕತೆ’ (೧೯೯೩), ‘ವಿಕ್ಟೋರಿಯಾ ಮಗ ದೇವಲಿಂಗು’ (೧೯೯೯), ಎಂ. ಎಸ್. ಶ್ರೀರಾಮ ಅವರ ‘ಮಾಯಾದರ್ಪಣ’ (೧೯೯೧), ನಟರಾಜ ಹುಳಿಯಾರು ಅವರ ‘ಮತ್ತೊಬ್ಬ ಸರ್ವಾಧಿಕಾರಿ’ (೧೯೯೩), ಕೃಷ್ಣಮಾಸಡಿ ಅವರ ‘ಭೂತ’ (೨೦೦೦), ರಾಜೇಂದ್ರ ಚೆನ್ನಿ ಅವರ ‘ದೊಡ್ಡ ಮರ’ (೧೯೯೪) ಮತ್ತು ‘ಮಳೆಯಲ್ಲಿ ಬಂದಾತ’ (೧೯೯೯) ಕಥಾಸಂಕಲನಗಳು ಈ ನಿಟ್ಟಿನಲ್ಲಿ ಬಹು ಮುಖ್ಯ ಕೃತಿಗಳಾಗಿವೆ. ಕೆ. ಸತ್ಯನಾರಾಯಣರ ಕಥೆಗಳ ಹಿಂದೆ ಮಾಸ್ತಿಯವರ ಪ್ರಭಾವವಿದ್ದರೂ ಹೊಸನಾಗರೀಕತೆಯನ್ನು ಕಟ್ಟುವತ್ತ ಅವು ತುಡಿಯುತ್ತವೆ. ಕನ್ನಡ ಕಥನ ಪರಂಪರೆ ಯಾವಾಗಲೂ ಸೃಜನಶೀಲವಾದುದು. ಅದು ಒಬ್ಬರಿಂದೊಬ್ಬರನ್ನು ಪರಸ್ಪರ ಪ್ರಭಾವಿಸುವ ಗುಣಾತ್ಮಕವಾದ ಮೌಲ್ಯಗಳಿಂದ ಕೂಡಿದೆ. ಕನ್ನಡದ ಹಿರಿಯ ತಲೆಮಾರಿನ ಕಥೆಗಾರರಾದ ಪಂಜೆ, ಮಾಸ್ತಿ, ಕುವೆಂಫು ಇವರಿಂದ ಮುಂದಿನ ಅನೇಕ ಕಥೆಗಾರರು ಪ್ರಭಾವಿತರಾದದ್ದೂ ಇದೆ. ಈ ಪ್ರಭಾವ, ಪ್ರೇರಣೆ ತಪ್ಪಲ್ಲ. ಒಬ್ಬ ಲೇಖಕನು ಪರಂಪರೆಯ ಸಂದರ್ಭದಲ್ಲಿ ಭಿನ್ನವಾಗಿ ಬೆಳೆಯಲು ಈ ಪ್ರಭಾವ ಕಾರಣವಾಗುತ್ತದೆ. ಕನ್ನಡ ಕಥನ ಪರಂಪರೆಗೆ ಹಾಗೆ ಪ್ರಭಾವಿಸುವ ಬಲಿಷ್ಠವಾದ ಶಕ್ತಿ ಇದೆ. ಪ್ರೇಮ, ಪ್ರಣಯ, ಮಾನವೀಯತೆಯ ಬಗ್ಗೆ ಸತ್ಯನಾರಾಯಣರ ಕಥೆಗಳು ಹೊಸ ಪ್ರಯೋಗಶೀಲತೆಯಿಂದ ವ್ಯಾಖ್ಯಾನವನ್ನು ಕಟ್ಟಿಕೊಡುತ್ತವೆ. ನಟರಾಜ ಹುಳಿಯಾರರು ತಮ್ಮ ಕಥೆಗಳ ಮೂಲಕ ಗ್ರಾಮೀಣ ಬದುಕಿನ ಸಣ್ಣತನಗಳನ್ನು ಶೋಧಿಸುತ್ತಾರೆ. ಆಧುನಿಕ ಪ್ರಜ್ಞೆಯ ಮೂಲಕ ಅವರ ಪಾತ್ರಗಳು ನಗರಕ್ಕೆ ಪ್ರವೇಶ ಮಾಡುತ್ತವೆ. ನವ್ಯ, ಬಂಡಾಯ ಎರಡೂ ಪ್ರವೃತ್ತಿಗಳು ಇವರ ಕಥೆಗಳಲ್ಲಿ ಅಭಿವ್ಯಕ್ತಗೊಂಡಿವೆ. ಅವರ ‘ಹುತ್ತಗಟ್ಟದೆ’, ‘ನಾನೆಂಬುದೇನಿಲ್ಲ’ ಎಂಬ ಕಥೆಗಳು ಸಾಂಪ್ರದಾಯಿಕ ಚೌಕಟ್ಟಿನಿಂದ ಆಧುನಿಕತೆಯತ್ತ ಹೊರಳುವ ಪ್ರವೃತ್ತಿಯನ್ನು ಪ್ರಧಾನವಾಗಿ ಕಾಣಿಸುತ್ತವೆ. ಎಂ. ಎಸ್. ಶ್ರೀರಾಮ ಅವರ ಕಥೆಗಳು ಬದುಕಿನ ಕಡುವಾಸ್ತವಕ್ಕೆ ಹತ್ತಿರವಾದುವು. ಆಧುನಿಕ ವಿದ್ಯಾವಂತ ಸಮಾಜದ ಪ್ರೀತಿ, ಪ್ರೇಮ, ನೆನಪು, ದ್ವಂದ್ವಗಳನ್ನು ಇವರ ಕಥೆಗಳು ಶೋಧಿಸುತ್ತವೆ. ಇವರ ಕಥೆಗಳ ನಿರೂಪಣಾ ವಿಧಾನ ಪಾರದರ್ಶಕವಾದುದು. ಈ ದಶಕದ ಪ್ರಮುಖ ಕಥೆಗಾರರಾಗಿ ಹೊಮ್ಮಿದವರಲ್ಲಿ ರಾಜೇಂದ್ರ ಚೆನ್ನಿ ಅವರೂ ಒಬ್ಬರು. ಮಧ್ಯಮ ವರ್ಗದ ಜನತೆಯ ಮಾನವೀಯ ಸಂಬಂಧಗಳನ್ನು ಇವರ ಕಥೆಗಳು ಶೋಧನೆಗೆ, ವಿಶ್ಲೇಷಣೆಗೆ ಒಳಪಡಿಸುತ್ತವೆ. ಬದುಕಿನ ಬಗೆಗೆ ವ್ಯಾಪಕವಾದ ಚಿಂತನೆ ಹಾಗೂ ಮಂಡನೆ ಕಂಡುಬರುತ್ತದೆ. ಇವರ ಕಥೆಗಳಲ್ಲಿ ಹೊಸತನದ ಅಭಿವ್ಯಕ್ತಿಯ ಚಿತ್ರಣಗಳು ಕಾಣಿಸುತ್ತವೆ. ಈ ದೃಷ್ಟಿಯಿಂದ ಇವರ ‘ದೊಡ್ಡಮರ’ ಮತ್ತು ‘ಮಳೆಯಲ್ಲಿ ಬಂದಾತ’ ಕಥೆಗಳು ಅಪರೂಪದ ರಚನೆಗಳಾಗಿವೆ. ಕೃಷ್ಣಮಾಸಡಿ ಅವರ ಕಥೆಗಳು ಸಾಮಾಜಿಕ ನಂಬಿಕೆ, ಮೌಢ್ಯತೆಯ ವಿರುದ್ಧ ಗುದ್ದಾಟ ನಡೆಸುವುದನ್ನು ಕಾಣಬಹುದು.

ಈ ದಶಕದ ಸಣ್ಣಕಥಾ ಸಾಹಿತ್ಯಕ್ಕೆ ಇನ್ನಷ್ಟು ಕೆಲವು ಮುಖ್ಯ ಕಥೆಗಾರರನ್ನು ಸೇರಿಸಬಹುದಾಗಿದೆ. ಮಹಾಬಲಮೂರ್ತಿ ಕೊಡ್ಲೆಕೆರೆ ಅವರ ‘ಯಕ್ಷ ಸೃಷ್ಟಿ’ (೧೯೯೪), ಜಯಪ್ರಕಾಶ್ ಮಾವಿನಕುಳಿ ಅವರ ‘ಮುಖಗಳು’ (೧೯೯೪), ಎಂ. ರಾಜಗೋಪಾಲ ಅವರ ‘ಸೂರ್ಯ ಕಾಣದ ಕಣಿವೆ’ (೧೯೯೬), ಮನುಜ ಅವರ ‘ಬುರುಡೆ ಸ್ವರ್ಗ’ (೧೯೯೮), ಮೂಡ್ನಕೂಡು ಚಿನ್ನಸ್ವಾಮಿ ಅವರ ‘ಮೋಹದ ದೀಪ’ (೧೯೯೯), ಜಿ.ಪಿ. ಬಸವರಾಜು ಅವರ ‘ಒಂದು ಗುಲಾಬಿ’ (೧೯೯೯), ಮಲ್ಲಿಕಾರ್ಜುನ ಹಿರೇಮಠರ ‘ಅಮೀನುಪುರದ ಸಂತೆ’ (೧೯೯೭), ಬಾಳಾಸಾಹೇಬ ಲೋಕಾಪುರರ ‘ಹಾರುವ ಹಕ್ಕಿ ಮತ್ತು ಆಕಾಶ’ (೧೯೯೭) ಈ ಕಥಾ ಸಂಕಲನಗಳನ್ನು ಇಲ್ಲಿ ಮುಖ್ಯವಾಗಿ ಹೆಸರಿಸಬುದಾಗಿದೆ. ಮಾವಿನಕುಳಿಯವರ ಕಥೆಗಳು ಮಧ್ಯಮ ವರ್ಗದ ಕುಟುಂಬಗಳ ಸ್ಥಿತಿಗತಿಗಳನ್ನು ಚಿತ್ರಿಸುತ್ತವೆ. ಹಾಗೂ ಸಾಮಾಜಿಕ ವ್ಯವಸ್ಥೆಯ ಲೋಪದೋಷಗಳನ್ನು ನವ್ಯದ ಮಾದರಿಯಲ್ಲಿ ಕಟ್ಟಿಕೊಡುತ್ತವೆ. ರಾಜಗೋಪಾಲರು ತಮ್ಮ ಕಥೆಗಳಲ್ಲಿ ಬದುಕಿನ ಚಿತ್ರಣಗಳನ್ನು ವಾಸ್ತವ ಮಾರ್ಗದ ಧಾಟಿಯಲ್ಲಿ ನಿರೂಪಿಸುತ್ತಾರೆ. ಬದುಕಿನ ದುರಂತ ಹಾಗೂ ಅಧಿಕಾರ ಮೋಹದ ಚಿತ್ರಣಗಳು ಇವರ ಕಥೆಗಳಲ್ಲಿ ಕಾಣಿಸಿಕೊಳ್ಳುತ್ತವೆ. ಕೊಡ್ಲೆಕೆರೆ ಅವರ ಕಥೆಗಳು ಮಾನವೀಯ ಸಂಬಂಧಗಳನ್ನು ಕನ್ನಡ ಉಪಭಾಷೆಯ ಮೂಲಕ, ಕರಾವಳಿಯ ಜನಜೀವನದ ಮೂಲಕ ಶೋಧಿಸುತ್ತವೆ. ಮನುಜ ಮತ್ತು ಚಿನ್ನಸ್ವಾಮಿ ಅವರ ಕಥೆಗಳು ಶೋಷಣೆಗೆ ಒಳಗಾದ ಸಮುದಾಯದ ನೋವುಗಳನ್ನು ಸಮರ್ಥವಾಗಿ ಕಟ್ಟಿಕೊಡುತ್ತವೆ. ಅಸ್ಪೃಶ್ಯ ಜನಾಂಗದ ಅಸಹಾಯಕತೆಯನ್ನು ಶ್ರೇಣೀಕೃತ ಸಮಾಜದ ಸಂದರ್ಭದಲ್ಲಿಟ್ಟು, ಆ ಜನಾಂಗದಲ್ಲಿನ ಮಾನವೀಯತೆ ಮತ್ತು ಅನನ್ಯತೆಯನ್ನು ಇವರ ಕಥೆಗಳು ಶೋಧಿಸುವುದನ್ನು ಕಾಣುತ್ತೇವೆ. ಜಿ. ಪಿ. ಬಸವರಾಜು ಅವರ ಕಥೆಗಳು ನವ್ಯದ ಮಾದರಿಯಲ್ಲಿದ್ದರೂ ಅವುಗಳಲ್ಲಿ ತುಡಿಯುವ ಮಾನವೀಯ ಸಂಬಂಧಗಳು ಹಾಗೂ ಹೊಸ ಸಮಾಜ ನಿರ್ಮಾಣದ ತುಡಿತಗಳು ಗಮನಾರ್ಹವಾಗಿವೆ. ಮಲ್ಲಿಕಾರ್ಜುನ ಹಿರೇಮಠ ಮತ್ತು ಬಾಳಾಸಾಹೇಬ ಲೋಕಾಪುರರ ಕಥೆಗಳು ಉತ್ತರ ಕರ್ನಾಟಕದ ಗ್ರಾಮೀಣ ಜನಜೀವನವನ್ನು ಪ್ರೀತಿಯಿಂದ ನೋಡಿ ಚಿತ್ರಿಸುತ್ತವೆ. ಉತ್ತರ ಕರ್ನಾಟಕದ ಜಮೀನ್ದಾರಿ ಪದ್ಧತಿಯಲ್ಲಿ ಘಟಿಸುವ ಲೈಂಗಿಕ ಶೋಷಣೆ, ದಲಿತರ ಬದುಕಿನ ಹತಾಶೆ, ನಗರದ ಬದುಕಿನ ಸಂಕೀರ್ಣತೆ ಇವುಗಳನ್ನು ಇವರ ಕಥೆಗಳು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಮಾನವೀಯತೆಯೇ ಇವರ ಕಥೆಗಳ ಪ್ರಧಾನ ವಸ್ತು. ಪ್ರಾದೇಶಿಕ ಸೊಗಡು ಇವರ ಕಥೆಗಳಲ್ಲಿ ಉನ್ನತ ಸ್ತರದಲ್ಲಿ ಪ್ರಕಟವಾಗಿದೆ.

ಈ ದಶಕದ ಕೊನೆಗೆ ಕೆಲವು ವಿಶಿಷ್ಟವಾದ ದನಿಗಳು ಪ್ರಕಟವಾಗಿವೆ. ಇವು ನಿರ್ಲಕ್ಷಿತ ಹಾಗೂ ಕತ್ತಲ ಕೋಣೆಯ ಸಂಸ್ಕೃತಿಯ ವಿವರಗಳನ್ನು ವಿಶಿಷ್ಟ ಸ್ವರೂಪದಲ್ಲಿ ಆಭಿವ್ಯಕ್ತಗೊಳಿಸಿವೆ. ಈ ತಲೆಮಾರಿನ ಕಥೆಗಾರರ ಕಥನದ ಅಧ್ಯಯನ ಕುತೂಹಲಕಾರಿಯಾಗಿದೆ. ಇಲ್ಲಿ ಕೆಲವು ಕಥೆಗಾರರನ್ನು ಹೆಸರಿಸುವುದಾರೆ, ಎಸ್. ವಸುಧೇಂದ್ರ ಅವರ ‘ಮನೀಷೆ’ (೧೯೯೮), ಬಸವರಾಜು ಕುಕ್ಕರಹಳ್ಳಿ ಅವರ ‘ಲೋಕಾರ’ (೧೯೯೮), ರಾಜುಹೆಗಡೆ ಅವರ ‘ಅಪ್ಪಚ್ಚಿ’ (೧೯೯೯), ಶ್ರೀಧರ ಬಳಿಗಾರರ ‘ಮುಖಾಂತರ’ (೧೯೯೯), ಶ್ರೀಕಾಂತ ಪಾಟೀಲರ ‘ಬೆಂಕಿ ಮರೆಯ ತಂಪು’ (೧೯೯೭), ವೀರನಗೌಡ ಗುಮಗೇರಿ ಅವರ ‘ಬಿರುಕು ಭೂಮಿ’ (೧೯೯೭), ಮೋಹನ ನಾಗಮ್ಮನವರ ‘ಸಂಕಟಪುರ ನಾಟಕ ಪ್ರಸಂಗ ‘ (೧೯೯೯), ಮಲ್ಲಿಕಾರ್ಜುನ ವಣೇನೂರರ, ‘ಮಣ್ಣಿನ ಕುಡಿಕೆ’, (೧೯೯೯), ಆನಂದ ಋಗ್ವೇದಿಯವರ ‘ಜನ್ನ ಮತ್ತು ಅನೂಹ್ಯ ಸಾಧ್ಯತೆ’ (೨೦೦೦), ಸಿ. ನಾಗಣ್ಣನವರ ‘ಮನಮೆಚ್ಚಿದ ಕಥೆಗಳು’ (೨೦೦೦), ಅದೀಬ್ ಅಖ್ತರ್ ಅವರ ‘ಬೃಂದಾವನ ಮತ್ತು ಇತರ ಕಥೆಗಳು’ (೨೦೦೦), ಶಿವಕುಮಾರ ನಾಗವಾರರ ‘ಹಣದಿ’ (೨೦೦೦), ಚಂದ್ರಶೇಖರ ಕಂಠಿ ಅವರ ‘ಪಟ್ಟ’ (೨೦೦೦), ಅಬ್ದುಲ್ ರಶೀದ್ ಅವರ ‘ಪ್ರಾಣಪಕ್ಷಿ’ (೧೯೯೭), ಕಲಿಗಣನಾಥ ಗುಡದೂರು ಅವರ ‘ಉಡಿಯಲ್ಲಿಯ ಉರಿ’ (೨೦೦೦), ವೇಣುಗೋಪಾಲ ಸೊರಬ ಅವರ ‘ಉತ್ಸವ’ (೧೯೯೧), ಶೂದ್ರ ಶ್ರೀನಿವಾಸರ ‘ಅಜ್ಜ ಮತ್ತು ಇತರ ಕಥೆಗಳು’ (೧೯೯೧) ಇವು ಈ ದಶಕದ ಪ್ರಮುಖ ಕೃತಿಗಳು. ಈ ಕಥೆಗಳಲ್ಲಿ ಭಿನ್ನ ಮಾದರಿಗಳು, ಮನೋಧರ್ಮಗಳು ವೈವಿಧ್ಯಮಯವಾಗಿ ಪ್ರಕಾಟವಾಗಿವೆ. ವಸುಧೇಂದ್ರ ಅವರ ಕಥೆಗಳ ಪರಿಸರ ಬಳ್ಳಾರಿ ಪ್ರದೇಶ. ಈ ಕಥೆಯಲ್ಲಿ ಬ್ರಾಹ್ಮಣ ಕುಟುಂಬದ ಲಯಗಳು ಮುಕ್ತವಾಗಿ ಬಿಚ್ಚಿಕೊಂಡಿವೆ. ಇವರ ‘ನಮ್ಮ ವಾಜಿನ್ನೂ ಆಟಕ್ಕೆ ಸೇರಿಸ್ಕೋಳ್ರೋ’ ಎನ್ನುವ ಕಥೆ ಕನ್ನಡ ಕಥಾಸಾಹಿತ್ಯದ ಮಹತ್ವದ ಅಪರೂಪದ ಕಥೆಯಾಗಿದೆ. ಮೇಲುಜಾತಿಯ ಹಾಗೂ ಸಂಪ್ರದಾಯಬದ್ಧವಾದ ಕುಟುಂಬದ ಹೆಣ್ಣೊಬ್ಬಳು, ಕೆಳ ಹಾಗೂ ಅಸ್ಪೃಶ್ಯ ಜಾತಿಯ ಮಕ್ಕಳನ್ನು ಕುರಿತು, ತನ್ನ ಮಕ್ಕಳನ್ನು ನಿಮ್ಮೊಡನೆ ಆಟಕ್ಕೆ ಸೇರಿಸಿಕೊಳ್ಳಿ ಎಂದು ದೈನ್ಯತೆಯಿಂದ ಕೇಳಿಕೊಳ್ಳುವ ಪ್ರಸಂಗ ಬದಲಾದ ಸಾಮಾಜಿಕ ಹಾಗೂ ಚಾರಿತ್ರಿಕ ಸನ್ನಿವೇಶದಲ್ಲಿ ಗಮನಾರ್ಹವಾದ ಬೆಳವಣಿಗೆಯಾಗಿದೆ. ಈ ಕಥೆಯ ಅನೇಕ ಅರ್ಥಪರಂಪರೆಗಳನ್ನು ಬಿಚ್ಚುತ್ತಾ ಹೋಗುತ್ತದೆ. ಆನಂದ ಋಗ್ವೇದಿಯವರ ಕಥೆಗಳು ಸಹ ಇಂತಹುದೆ ಭಿನ್ನ ಧ್ವನಿಗಳನ್ನು ಸಾಮಾಜಿಕ ಸಂದರ್ಭದಲ್ಲಿ ಪ್ರಕಟಿಸುತ್ತವೆ. ಅಪ್ಪಚ್ಚಿಯವರ ಕಥೆಗಳು ಪುರಾಣದ ಕಥಾವಸ್ತುವನ್ನು ಆಯ್ದುಕೊಂಡು ಆ ಮೂಲಕ ಸಮಕಾಲೀನವಾದ ವಿದ್ಯಮಾನಗಳನ್ನು ತುಂಬುವುದರೊಂದಿಗೆ ಹೊಸದನಿಯನ್ನು ಹೊರಡಿಸುವ ಯತ್ನವನ್ನು ಮಾಡುತ್ತಾರೆ. ಪುರಾಣಗಳನ್ನು ಒಡೆದು ಕಟ್ಟುವುದು, ಸಮಕಾಲಿನ ಸಮಸ್ಯೆಗಳನ್ನು ಆ ಮೂಲಕ ಅರ್ಥಮಾಡಿಕೊಳ್ಳವುದು ಸ್ವಾಗತಾರ್ಹವಾದ ಕೆಲಸವೇ. ಇಲ್ಲಿಯ ಕಥೆಗಾರರ ಕೆಲವು ಕಥೆಗಳು ಮಲೆನಾಡಿನ ಜನತೆಯ ಮಾನವೀಯ ಸಂಬಂಧದ ಎಳೆಗಳನ್ನು ತೆರೆದಿಡುತ್ತವೆ. ಇನ್ನು ಕೆಲವು ಕಥೆಗಾರರು ಕ್ರಾಂತಿಯ ಕನಸುಗಳನ್ನು ಬಣ್ಣಿಸಿದರೆ, ಮತ್ತೆ ಕೆಲವರ ಕಥೆಗಳು ಉತ್ತರ ಕರ್ನಾಟಕದ ಆಳು ಒಡೆಯರ ಸಂಬಂಧ, ಕನ್ನಡದ ಮಹತ್ವ, ಗ್ರಾಮೀಣ ಜನತೆಯ ಮುಗ್ಧತೆ ಹಾಗೂ ಅಸಹಾಯಕತೆ, ಹಿಂದು ಮುಸ್ಲಿಂ ಹಾಗೂ ಶಿಷ್ಟ ಪರಿಶಿಷ್ಟರ ಸಂಬಂಧಗಳನ್ನು ಶೋಧಿಸುತ್ತವೆ. ಕೇಶವರೆಡ್ಡಿ ಹಂದ್ರಾಳರ ಕಥೆಗಳು ಬಯಲುಸೀಮೆಯ ಬದುಕನ್ನು ಅನಾವರಣಗೊಳಿಸುತ್ತವೆ. ಈ ದಶಕದಲ್ಲಿ ಪ್ರಾದೇಶಿಕ ಸಾಂಸ್ಕೃತಿಕ ವಿವರಗಳನ್ನು ರವಿಬೆಳಗೆರೆ, ಚಂದ್ರಕಾಂತವಡ್ಡು, ಕೆ. ಆರ್. ವಿದ್ಯಾಧರ ಮುಂತಾದ ಅನೇಕ ಕಥೆಗಾರರು ತಂತಮ್ಮ ಕಥೆಗಳಲ್ಲಿ ಅಂತರ್ಗತ ಮಾಡಿಕೊಳ್ಳುವುದನ್ನು ಕಾಣಬಹುದು. ಈ ದೃಷ್ಟಿಯಿಂದ ಬೀದರ್, ಗುಲ್ಬರ್ಗ, ಬಳ್ಳಾರಿ, ರಾಯಚೂರು, ಬಿಜಾಪುರ ಭಾಗಗಳಿಂದ ಈ ದಶಕದಲ್ಲಿ ಕಾಣಿಸಿಕೊಂಡ ಕಥೆಗಾರರ ಮಹತ್ವ ವಿಶಿಷ್ಟವಾದುದಾಗಿದೆ. ಸ್ಥಳೀಯ ಜ್ಞಾನ ಪರಂಪರೆಯ ವಿಸ್ತರಣೆಯಾಗಿ, ಶ್ರೇಷ್ಠ ಮನಸ್ಸುಗಳ ನಿರ್ಮಾಣದ ಅಂಶವಾಗಿ, ಓದುಗರಲ್ಲಿ ಉತ್ತಮ ಅಭಿರುಚಿಯ ನಿರ್ಮಾಣವಾಗಿ ಈ ಕಥೆಗಳು ತುಡಿಯುವುದನ್ನು ಗುರುತಿಸಬಹುದು. ಸಣ್ಣಕಥೆ ಪ್ರಕಾರ ಇನ್ನೂ ಜೀವಂತವಾಗಿ, ಕಲಾತ್ಮಕವಾಗಿ ಪ್ರಕಟವಾಗುತ್ತಿರುವುದಕ್ಕೆ ಈ ಕಥಾಸಂಕಲನಗಳು ಸಾಕ್ಷಿಯಾಗಿವೆ.

ಇನ್ನು ಈ ದಶಕದಲ್ಲಿ ಬಂದ ಕೆಲವು ಮಹತ್ವದ ಕಥೆಗಾರ್ತಿಯರ ಬಗ್ಗೆ ಇಲ್ಲಿ ಹೇಳಲೇಬೇಕು. ಇದರರ್ಥ ಇವರನ್ನು ಪ್ರತ್ಯೇಕವಾಗಿ ನೋಡಲಾಗುವುದು ಎಂದೇನೂ ಅಲ್ಲ. ಈ ರೀತಿಯ ವಿಂಗಡಣೆ ಸರಿಯಾದ ಕ್ರಮವೇ ಅಲ್ಲ ಎಂಬ ಅರಿವು ನನಗಿದೆ. ಆದರೆ ಸಮೀಕ್ಷೆಯ ದೃಷ್ಟಿಯಿಂದ ಇದು ಬೇಕು ಅನ್ನಿಸಿದೆ. ಲೇಖಕರು ತಮ್ಮ ಕಥೆಗಳಲ್ಲಿ ಸ್ತ್ರೀ ಸಂವೇದನೆಯನ್ನು ಗ್ರಹಿಸಿಲ್ಲ ಎಂದೇನೂ ಭಾವಿಸಬೇಕಾಗಿಲ್ಲ. ಅಥವಾ ಲೇಖಕಿಯರೂ ಪುರುಷ ಪ್ರಧಾನ ಸಮಾಜದ ವಿರೋಧಿಗಳೆಂದೇನೂ ತಿಳಿಯಬೇಕಾಗಿಲ್ಲ. ಆದರೆ ಸ್ತ್ರೀ ಸಂವೇದನೆಯನ್ನು ಸ್ತ್ರೀಯೇ ಇನ್ನೂ ದಟ್ಟವಾಗಿ ಈ ದಶಕದಲ್ಲಿ ಗ್ರಹಿಸಿರುವುದಕ್ಕೆ, ಅಭಿವ್ಯಕ್ತಗೊಳಿಸಿರುವುದಕ್ಕೆ, ಪ್ರಕಟವಾಗಿರುವ ಅನೇಕ ಕಥಾ ಸಂಕಲನಗಳೇ ಸಾಕ್ಷಿಯಾಗಿವೆ. ಸಾರಾ ಅಬೂಬಕರ್ ಅವರ ‘ಪಯಣ’ (೧೯೯೨), ವೀಣಾ ಶಾಂತೇಶ್ವರ ಅವರ ‘ಬಿಡುಗಡೆ’ (೧೯೯೪), ವೈದೇಹಿ ಅವರ ‘ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಗಳು’ (೧೯೯೧), ಚಸುಮತಿ ಉಡುಪ ಅವರ ‘ಬಂದನಾ ಹುಲಿರಾಯ’ (೧೯೯೬), ನೇಮಿಚಂದ್ರ ಅವರ ‘ಮತ್ತೆ ಬರೆದ ಕಥೆಗಳು’ (೧೯೯೨), ಹೆಚ್.ಎಸ್. ಸುಜಾತ ಅವರ ‘ಮಜಲುಗಳು’ (೧೯೯೮), ಕೆ.ಆರ್. ಸಂದ್ಯಾರೆಡ್ಡಿ ಅವರ ‘ಬೇರೊಂದು ದಾರಿ’ (೧೯೯೯), ಬಾನು ಮುಶ್ತಾಕ್ ಅವರ ‘ಬೆಂಕಿ ಮಳೆ’ (೧೯೯೯), ಕಮಲಾ ಹೆಮ್ಮಿಗೆ ಅವರ ‘ಹನ್ನೊಂದು ಕಥೆಗಳು’ (೧೯೯೩), ಮಾಲತಿ ಪಟ್ಟಣ ಶೇಟ್ಟಿ ಅವರ ‘ಸೂರ್ಯ ಮುಳುಗುವುದಿಲ್ಲ’ (೧೯೯೯), ಡಾ. ಎಚ. ಗಿರಿಜಮ್ಮ ಅವರ ‘ಹೂ ಬಳ್ಳಿಗಳಲ್ಲಿ ಆಸರೆ’ (೧೯೯೪), ಎಂ, ಎಸ್. ವೇದಾ ಅವರ ‘ಪಾಲು’ (೧೯೯೭), ಎಚ್. ನಾಗವೇಣಿ ಅವರ ‘ನಾಕನೇ ನೀರು’ (೧೯೯೭), ಸುಮಂಗಲ ಬಾದರದಿನ್ನಿ ಅವರ ‘ಸೀತಾಳೆ ಮತ್ತು ಇತರ ಕಥೆಗಳು’ (೨೦೦೦), ತುಳಸಿ ವೇಣುಗೋಪಾಲ್ ಅವರ ‘ಮುಂಜಾವಿಗೆ ಕಾದವಳು’ (೧೯೯೩), ಉಮಾರಾವ್ ಅವರ ‘ಕಡಲ ಹಾದಿ’ (೧೯೯೫), ಮಿತ್ರಾ ವೆಂಕಟರಾಜ್ ಅವರ ‘ಹಕ್ಕಿ ಮತ್ತು ಅವಳು’ (೧೯೯೭), ಕುಸುಮಾ ಅವರ ‘ಪ್ರಕೃತಿ’ (೧೯೯೯), ಇವು ಈ ದಶಕದಲ್ಲಿ ಬಂದ ಗುರುತರವಾದ ಕಥಾ ಸಂಕಲನಗಳು.

ಮಹಿಳೆ ಮತ್ತು ಕಥೆಯ ಸಂಬಂಧ ಬರೀ ಈ ದಶಕದ್ದಲ್ಲ. ಭಾರತೀಯ ಪರಂಪರೆಯಲ್ಲಿ ಕಥೆಗೆ ದೈವೀ ನೆಲೆಯನ್ನು ಕಲ್ಪಿಸಲಾಗಿದೆ. ಕಥೆ ಹೇಳುವ ಕ್ರಿಯೆ ಮೊದಲು ಹುಟ್ಟಿದ್ದು ಮಹಿಳೆಯಿಂದಲೇ. ಕಥೆ ಇಂದು ಇಪ್ಪತ್ತನೆಯ ಶತಮಾನದಲ್ಲಿ ಒಂದು ಗಂಭೀರ ಸಾಹಿತ್ಯ ಪ್ರಕಾರವೆಂದು ಕನ್ನಡದಲ್ಲಿ ನೆಲೆಗೊಂಡಿದೆ. ಈ ಪರಂಪರೆಯ ನೆಲೆಗೆ ಲೇಖಕರು, ಲೇಖಕಿಯರು ಇಬ್ಬರೂ ಕಾರಣರಾಗಿದ್ದಾರೆ. ಕಥೆ ಇಂದು ಸಾಮಾಜಿಕವಾಗಿ ರಾಜಕೀಯವಾಗಿ ಹೆಚ್ಚು ವಿನ್ಯಾಸವನ್ನು ಪಡೆದಿದೆ; ಆರಂಭದಲ್ಲಿ ಇದು ಪೌರಾಣಿಕವಾಗಿದ್ದದ್ದು, ಧಾರ್ಮಿಕವಾಗಿದ್ದದು ಆಗಿತ್ತು. ಆದರೆ ಇಂದು ಇದು ಹೊಸ ಹೊಸ ಸವಾಲುಗಳನ್ನು ಎದುರಿಸುತ್ತಿದೆ; ಹೊಸ ಸಾಧ್ಯತೆಗಳನ್ನು ಹುಡುಕುತ್ತಿದೆ. ಕಳೆದ ಅರೇಳು ದಶಕಗಳಲ್ಲಿ ಮಹಿಳಾ ಕಥಾ ಸಾಹಿತ್ಯಕ್ಕೂ ಒಂದು ಪರಂಪರೆ ಇದೆ ಎಂಬುದನ್ನು ಇದು ನಿರ್ಮಾಣ ಮಾಡಿದೆ. ಮಹಿಳೆಯರ ಕಥೆಗಳೂ ಕೂಡ ವೈಜ್ಞಾನಿಕ ತಿಳಿವು ಮತ್ತು ವೈಚಾರಿಕತೆಯ ಒಳನೋಟಗಳನ್ನು ಹೊಂದಿದ್ದು ಸಣ್ಣ ಕಥೆಯ ಮಾಧ್ಯಮಕ್ಕೆ ಹೊಸ ಆಳ, ವಿಸ್ತಾರಗಳನ್ನು ಒದಗಿಸುತ್ತಿವೆ. ಸ್ತ್ರೀಯರನ್ನು ಕೇವಲ ಒಂದು ಬಲಿಪಶುವನ್ನಾಗಿ ಕಾಣದೆ, ಅವಳಲ್ಲಿ ಕರ್ತೃತ್ವ ಶಕ್ತಿಯನ್ನು ಗುರುತಿಸುವ ಮೂಲಕ ಅವಳನ್ನು ಜೀವಂತವಾಗಿ ಕಾಣಲಾಗಿದೆ ಅವಳ ಬದುಕಿನ ಸಂಕೀರ್ಣತೆಯನ್ನು ಮೂರ್ತಗೊಳಿಸುವಲ್ಲಿ ಆಸಕ್ತಿ ತೋರಲಾಗಿದೆ. ಹೆಣ್ಣೇ ಹೆಣ್ಣಿನ ಆಳ ಅಗಲಗಳನ್ನು ತಮ್ಮ ಕಥೆಗಳಲ್ಲಿ ಅರಿತುಕೊಳ್ಳಲು, ಅಭಿವ್ಯಕ್ತಗೊಳಿಸಿಕೊಳ್ಳಲು ತೊಡಗಿದ್ದು ಮಹತ್ವದ ಬೆಳವಣಿಗೆ ಪುರುಷರಂತೆ ಸ್ತ್ರೀಯರೂ ಸಣ್ಣಕಥೆಯ ಕ್ಷೇತ್ರದಲ್ಲಿ ಪ್ರಯೋಗಶೀಲರಾಗಿರುವುದು ಕಂಡುಬರುತ್ತದೆ. ಬಹಳಷ್ಟು ಮಹಿಳಾ ಕಥೆಗಾರ್ತಿಯರೂ ಸಮಾಜದ ಮಧ್ಯಮ ವರ್ಗದಿಂದ ಬಂದವರಾದ್ದರಿಂದ ಅವರಿಗೂ ಪುರುಷ ಸಾಹಿತ್ಯದಲ್ಲಿದ್ದಂತೆಯೇ ಅನೇಕ ಮಿತಿಗಳೂ ಇವೆ. ಏನೇ ಆದರೂ ಕನ್ನಡದ ಬಹುಸಂಸ್ಕೃತಿಯ ವಿವರಗಳನ್ನು ಹಿಡಿಯುವಲ್ಲಿ ಸ್ತ್ರೀಯರ ಕಥೆಗಳೇನೂ ಹಿಂದೆ ಉಳಿದಿಲ್ಲ. ಇವರ ಕಥೆಗಳಲ್ಲಿ ಸ್ತ್ರೀ ದೃಷ್ಟಿಕೋನ, ಸ್ತ್ರೀಯ ದನಿಗಳು, ಸ್ತ್ರೀ ಸಂವೇದನೆ ಇವೆಲ್ಲಾ ಬಹುಮುಖ್ಯವಾದ ಸಂಗತಿಗಳಾಗಿವೆ. ಹಲವಾರು ಸಂಸ್ಕೃತಿಗಳು ಮಹಿಳೆಯರ ಸಣ್ಣ ಕಥೆಗಳಿಗೆ ವಸ್ತುವಾಗಿದ್ದು ಸಮೃದ್ಧತೆಯನ್ನು ತಂದುಕೊಟ್ಟಿವೆ. ಸಾರಾ ಅಬೂಬಕರ್, ಬಾನು ಮುಶ್ತಾಕ್ ಅವರ ಕಥೆಗಳಿಗೆ ಅವರು ಹುಟ್ಟಿ ಬೆಳೆದು ಬಂದ ಸಮುದಾಯದ ಚೌಕಟ್ಟುಗಳನ್ನು ಮೀರುವ ಪ್ರಸ್ತುತೆಯಿರುವುದು ಕಂಡು ಬರುತ್ತದೆ. ಸಾರಾ ಅವರ ಕಥೆಗಳ ವಸ್ತು ಮುಸ್ಲಿಂ ಸಮುದಾಯದ ಸಮಸ್ಯೆಗಳು. ಅದರಲ್ಲಿಯೂ ವಿಶೇಷವಾಗಿ ವಿಚ್ಛೇದನ ಅಥವಾ ತಲಾಖ್ ಪದ್ಧತಿ ಮತ್ತು ಅರಬ್ ರಾಷ್ಟ್ರಗಳಿಗೆ ಹೆಣ್ಣುಗಳನ್ನು ಸರಬರಾಜು ಮಾಡುವ ದಲ್ಲಾಳಿ ಪ್ರವೃತ್ತಿ. ಹೀಗಾಗಿ ಇವರ ಕಥೆಗಳಲ್ಲಿ ಹೆಣ್ಣು ಬಲಿಪಶು ಮಾತ್ರ. ಇವರದು ಸರಳ ನಿರೂಪಣೆ. ಆದರೆ ಬಾನುಮುಶ್ತಾಕ್ ಅವರ ಕಥೆಗಳಿಗೆ ಬಂಡಾಯದ ವಿನ್ಯಾಸವಿದೆ. ಇವರ ಕಥೆಗಳ ಆವರಣ ಕೂಡ ಸಾರಾ ಅವರ ಕಥೆಗಳ ಪರಿಸರದ ಹಾಗೆಯೇ ಮುಸ್ಲಿಂ ಜನಾಂಗದ ಪರಿಸರ. ಈ ಜನಾಂಗದ ಸಪ್ರದಾಯಬದ್ಧ ಕುಟುಂಬ ವ್ಯವಸ್ಥೆಯ ಒಳನೋಟಗಳನ್ನು ಬಾನು ಅವರ ಕಥೆಗಳು ಸಹಜವಾಗಿಯೇ ಕಟ್ಟಿಕೊಡುತ್ತವೆ. ಇವರ ಕಥೆಗಳಲ್ಲಿ ಬರುವ ಸ್ತ್ರೀ ಪಾತ್ರಗಳು ವ್ಯವಸ್ಥೆಯ ಕ್ರೂರತನಕ್ಕೆ ಬೇಸತ್ತು ಅರ್ಥಪೂರ್ಣವಾದ ಆಶಾವಾದದೊಡನೆ, ಬಂಡಾಯದ ಪ್ರವೃತ್ತಿಯೊಡನೆ ನಿಲುಗಡೆಗೆ ಬರುತ್ತವೆ.

ವೀಣಾಶಾಂತೇಶ್ವರ ಅವರು ನವ್ಯ ಲೇಖಕಿ. ಮಹಿಳಾ ಸಣ್ಣ ಕಥೆಗೆ ಮಹತ್ವದ ತಿರುವನ್ನು ಕೊಟ್ಟ ಲೇಖಕಿ ಇವರು. ವೀಣಾ ಅವರ ಕಥೆಗಳ ಪುರುಷ ಪಾತ್ರಗಳು ಇಬ್ಬಂದಿತನವನ್ನು ಅನುಭವಿಸುವವರು. ಇವರ ಸ್ತ್ರೀ ಪಾತ್ರಗಳು ಭಗ್ನ ಸ್ಥಿಯಿಂದ ಬಿಡುಗಡೆಯ ಹಾದಿ ಹಿಡಿಯುತ್ತವೆ. ಇವರ ಸ್ತ್ರೀವಾದಿ ನೆಲೆಯ ಮಾದರಿಯು ಮುಂದಿನ ಹಲವಾರು ಲೇಖಕಿಯರನ್ನು ಪ್ರಭಾವಿಸಿರುವುದನ್ನು ಕಾಣಬಹುದು. ವೈದೇಹಿಯವರ ಕಥೆಗಳ ವಸ್ತು ಪ್ರಮುಖವಾಗಿ ಮಾನವೀಯ ಸ್ವಭಾವ ಮತ್ತು ಅವುಗಳ ಸಂಬಂಧಗಳನ್ನು ಸಾಮಾಜಿಕ ಸಂದರ್ಭದಲ್ಲಿಟ್ಟು ಶೋಧಿಸುತ್ತವೆ. ಹಾಗಾಗಿ ಇವರ ಕಥೆಗಳಿಗೂ ಒಂದು ನಿರ್ದಿಷ್ಟವಾದ, ಸಂಪ್ರದಾಯಬದ್ಧವಾದ ಸಾಂಸ್ಕೃತಿಕ ಪರಿಸರವಿದೆ. ಈ ಪರಿಸರದಲ್ಲಿ ಮಧ್ಯಮ ವರ್ಗದ ಸಂಪ್ರದಾಯಬದ್ಧ ಕುಟುಂಬದಲ್ಲಿ ಹೆಣ್ಣು ಎದುರಿಸುವ ಸಮಸ್ಯೆಗಳನ್ನು ಚಿತ್ರಿಸುತ್ತಾ, ಅದರಿಂದ ಒಂದು ತಿಳಿವಳಿಕೆಯನ್ನು ಮತ್ತು ಛಲವನ್ನು ಇವರ ಕಥೆಗಳು ಮೂಡಿಸುತ್ತವೆ. ವಸುಮತಿ ಉಡುಪ ಅವರು ಹೆಣ್ಣಿನ ಅಂತರಂಗದ ತಾಕಲಾಟಗಳನ್ನು ನೇರವಾಗಿ, ಸರಳವಾಗಿ ನಿರೂಪಿಸಿ, ಆ ಮೂಲಕ ಒಂದು ಹೊಸ ಭರವಸೆಯನ್ನು ಮೂಡಿಸುತ್ತಾರೆ. ನೇಮೀಚಂದ್ರ ಅವರು ತಮ್ಮ ಕಥೆಗಳ ಮೂಲಕ ಸ್ತ್ರೀ ಸಂವೇದನೆಗೆ ಹೊಸ ಅರ್ಥವನ್ನು ಹುಟ್ಟಿಸುತ್ತಾರೆ. ತಾಯ್ತತನದ ಸಮಸ್ಯೆ ಸ್ತ್ರೀ ಪ್ರಜ್ಞೆಯನ್ನು ಆಳವಾಗಿ ಪ್ರಭಾವಿಸುವ ಸಮಸ್ಯೆ. ಹೆಣ್ಣು ಗಂಡಿನ ಸಂಬಂಧಗಳು ಜಟಿಲವಾಗಿವೆ. ಆ ಸಂಬಂಧಗಳಲ್ಲಿ ಪರಿವರ್ತನೆಯಾಗಬೇಕಾಗಿದೆ. ಮಕ್ಕಳಿಲ್ಲದಿದ್ದಾಗ ಆಕೆ ಅನೇಕ ಸಾಮಾಜಿಕವಾದ, ಕೌಟುಂಬಿಕವಾದ ಪ್ರಶ್ನೆಗಳನ್ನು ಎದುರಿಸಬೇಕಾಗುತ್ತದೆ. ಗಂಡನಿಂದ ಗೌರವಕ್ಕೆ ಪಾತ್ರಳಾದರೂ ಅವಳಲ್ಲಿ ಮಕ್ಕಳಿಲ್ಲವಲ್ಲ ಎಂಬ ಕೊರಗು ಉಳಿದೇ ಬಿಡುತ್ತದೆ. ಅವಳಲ್ಲಿರುವ ಸೃಜನಶೀಲತೆ ಎಂದರೆ ಆಕೆ ಒಬ್ಬ ಕಲಾವಿದೆ. ಆದರೆ ಅವಳಿಗೆ ತಾಯ್ತನ ಪಡೆಯುವ ಶಕ್ತಿ ಇಲ್ಲ. ಈ ದಶಕದಲ್ಲಿ ಗಂಡು ಹೆಣ್ಣಿನ ಸಂಬಂಧ ಪಡೆದುಕೊಂಡ ಒಂದು ಉತ್ತಮ ಮಾದರಿಗೆ ಇವರ ‘ಹೊಸ ಹುಟ್ಟು’ ಕಥೆ ಉದಾಹರಣೆಯಾಗಿ ನಿಲ್ಲುತ್ತದೆ. ಹೆಚ್‌. ಎಸ್‌. ಸುಜಾತ, ಕೆ. ಆರ್. ಸಂಧ್ಯಾರೆಡ್ಡಿ, ಸುಮಂಗಲ ಬಾದರದಿನ್ನಿ ಅವರ ಕಥೆಗಳು ಈ ದಶಕದಲ್ಲಿ ಉಲ್ಲೇಖಕ್ಕೆ ಅರ್ಹವಾಗಿವೆ. ಸುಜಾತ ಅವರ ಕಥೆಗಳು ಮಧ್ಯಮ ವರ್ಗದ ಕುಟುಂಬದ ಏಳು ಬೀಳುಗಳನ್ನು, ಹೊಯ್ದಾಟಗಳನ್ನು ಚಿತ್ರಿಸಿದರೆ, ಸಂಧ್ಯಾರೆಡ್ಡಿ ಅವರ ಕಥೆಗಳು ಹೆಣ್ಣು ಗಂಡಿನ ನಡುವಿನ ವೈವಾಹಿಕ ಸಂಬಂಧಗಳು, ಆಧುನಿಕತೆಯ ಪ್ರಭಾವದಿಂದ ವ್ಯಕ್ತಿಯಲ್ಲಿ ಆಗುವ ಬದಲಾವಣೆ ಇವುಗಳನ್ನು ಅರ್ಥಪೂರ್ಣವಾಗಿ ಶೋಧಿಸುತ್ತವೆ. ಆದರೆ ಬಾದರದಿನ್ನೆ ಅವರ ಕಥೆಗಳು ಉತ್ತರ ಕರ್ನಾಟಕದ ಬಿಜಾಪುರದ ಸುತ್ತ ಮುತ್ತಲಿನ ಪರಿಸರದ ದೇಸೀ ನೆಲೆಗಳನ್ನು ಶೋಧಿಸುತ್ತವೆ.

ಕುಸುಮಾ ಅವರ ‘ಪ್ರಕೃತಿ’ ಸಂಕಲನದ ಕಥೆಗಳು ಹಳ್ಳಿಯಲ್ಲಿ ನಡೆಯುವ ರಾಜಕೀಯ ವಿದ್ಯಮಾನಗಳನ್ನು ಹೆಣ್ಣೊಬ್ಬಳ ಕಣ್ಣಿನಿಂದ ನೋಡಿ ಚಿತ್ರಿಸುತ್ತವೆ. ವಿದ್ಯೆಗಾಗಿ ಹಳ್ಳಿಯಲ್ಲಿ ಹೆಣ್ಣು ಮಕ್ಕಳು ಪರದಾಡುವ ಸ್ಥಿತಿ, ಅವರು ಎದುರಿಸುವ ಸಾಮಾಜಿಕ ಪ್ರಶ್ನೆಗಳು, ರಾಜಕಾರಣದ ಪ್ರಭಾವದಿಂದ ಹಳ್ಳಿಗಳಲ್ಲಿ ಉಂಟಾಗುವ ವಿಘಟನೆಗಳು ಇವು ಇವರ ಕಥೆಗಳಲ್ಲಿ ಶೋಧನೆಗೆ ಒಳಗಾಗಿವೆ. ಆಧುನಿಕ ಮಾನವನ ಸ್ವಾರ್ಥತೆಯಿಂದಾಗಿ ಪರಿಸರದ ಮೇಲೆ ಆಗುವ ಆಘಾತಗಳಿಗೆ ಸೃಜನಾತ್ಮಕವಾಗಿ ಇವರ ಕಥೆಗಳು ಪ್ರಿತಿಕ್ರಿಯಿಸುತ್ತವೆ. ತುಳಸಿ ವೇಣುಗೋಪಾಲರ ಕಥೆಗಳಲ್ಲಿ ನೇಮೀಚಂದ್ರರ ಕಥೆಗಳಿಗಿಂತ ಭಿನ್ನವಾದ ಮನೋಧರ್ಮ ಪ್ರಕಟವಾಗುತ್ತದೆ. ದೂರ ಸರಿದ ಗಂಡ ಹೆಂಡತಿಯರ ಸಂಬಂಧವನ್ನು ಇವರ ಕಥೆಗಳು ತೆರದಿಡುತ್ತವೆ. ಗಂಡ ಒಬ್ಬ ಲೇಖಕ, ಆತ ಎಲ್ಲವನ್ನೂ ಮುಕ್ತವಾಗಿ ಯೋಚಿಸಬೇಕು, ಅನುಭವಿಸಬೇಕು ಎನ್ನುವ ಮನೋಭಾವದವನು. ಅವನಿಗೆ ಅವನ ಸೃಜನಶೀಲತೆಯ ಬಗ್ಗೆ ಆಸಕ್ತಿ ಇದೆ. ಇದರೆ ತನ್ನ ಹೆಂಡತಿ ಮಾತ್ರ ತನ್ನ ಅಧೀನದಲ್ಲಿರಬೇಕು ಎಂದು ಬಯಸುವವನು. ಇದರಲ್ಲಿ ಅವನಲ್ಲಿ ಬದಲಾಗುವ ಇಚ್ಛೆ ಕಂಡು ಬರುವುದಿಲ್ಲ. ಇಂತಹ ಒಂದು ಸಮಸ್ಯೆಯನ್ನು ತುಳಸಿ ಅವರು ಸಮರ್ಥವಾಗಿ ತಮ್ಮ ‘ತಪ್ತರು’ ಕಥೆಯಲ್ಲಿ ನಿರೂಪಿಸಿದ್ದಾರೆ. ಗಿರಿಜಮ್ಮನವರ ಕಥೆಗಳಲ್ಲಿ ಹೆಣ್ಣು ಗಂಡಿನ ನಡುವಿನ ಅನುಮಾನ, ಭಯ, ಆತಂಕ, ಸಂಕೋಚಗಳು ಬಿಚ್ಚಿಕೊಳ್ಳುತ್ತೇವೆ. ಹೆಣ್ಣಿನ ಬಗ್ಗೆ ಗಂಡು ಹೊಂದಿರುವ ಉದಾಸೀನತೆ, ಸಿನಿಕತನ ಇವುಗಳನ್ನು ಇವರ ಕಥೆಗಳು ಶೋಧನೆಗೆ ಒಡ್ಡುತ್ತವೆ.

ಬದಲಾದ ಅಥವಾ ಬದಲಾಗುತ್ತಿರುವ ಸಾಮಾಜಿಕ ಸಂದರ್ಭದಲ್ಲಿ ವ್ಯತ್ಯಸ್ತವಾದ ಸ್ತ್ರೀಯ ಸ್ಥಾನಮಾನಗಳು ಮತ್ತು ಪರುಷ ಪ್ರಧಾನ ವ್ಯವಸ್ಥೆಯಲ್ಲಿ ಈ ಕಾರಣದಿಂದ ವ್ಯಕ್ತವಾದ ದ್ವಂದ್ವ ಸಂಬಂಧಗಳು ಅನೇಕ ಸಂಕೀರ್ಣ ಸಮಸ್ಯೆಗಳನ್ನು ಸೃಷ್ಟಿಸಿವೆ. ಇಂತಹ ಅವಸ್ಥೆಗೆ ಮಹಿಳಾ ಚಳುವಳಿಗಳು ಬಹುಮಟ್ಟಿಗೆ ಕಾರಣವೆನ್ನಬಹುದು. ಇಂತಹ ಸಮಸ್ಯೆಗಳನ್ನು ಮಾಲತಿ ಪಟ್ಟಣ ಶೆಟ್ಟಿ ಅವರ ಕಥೆಗಳು ವಿಶ್ಲೇಷಣೆಗೆ ಒಳಗು ಮಾಡುತ್ತವೆ. ಕಮಲಾ ಹೆಮ್ಮಿಗೆ ಅವರ ಕಥೆಗಳು ವೈವಾಹಿಕ ವಿರಸವನ್ನೇ ಚಿತ್ರಿಸಿದರೂ ಸ್ತ್ರೀ ಮತ್ತು ಪರುಷರ ನಡುವಿನ ಪ್ರೀತಿ, ಪ್ರೇಮ, ನಗೆಯನ್ನು ಸಮರ್ಥವಾಗಿ ಹಿಡಿದಿಡುತ್ತವೆ. ಇವರ ಕಥೆಗಳು ಸಹ ಬದುಕಿನ ಬಗ್ಗೆ ಭವಿಷ್ಯವನ್ನೂ ಪರಿವರ್ತನೆಯನ್ನೂ ಪ್ರತಿಪಾದಿಸುತ್ತವೆ. ಇದು ಗುಣಾತ್ಮಕವಾದ ಅಂಶವಾಗಿದೆ. ಆದರೆ ಉಮಾರಾವ್‌ ಅವರ ಕಥೆಗಳು ಭಿನ್ನವಾದ ಅರ್ಥಗಳನ್ನು ಹೊರಡಿಸುತ್ತವೆ. ಇವರ ಕಥೆಗಳಲ್ಲೂ ದಾಂಪತ್ಯ ಜೀವನವಿದೆ. ಆದರೆ ಈ ದಾಂಪತ್ಯದಿಂದ ಸರಸವಾಗಲಿ, ವಿರಸವಾಗಲಿ ಹೊರಹೊಮ್ಮದು. ಕಥಾನಾಯಕ ವಿನಿಮಯ ಅರ್ಥವ್ಯವಸ್ಥೆಯ ಒಂದು ಅಂಗವಾಗುತ್ತಾನೆ. ಆತ ಆರ್ಥಿಕತೆಯನ್ನು ಹಿಂಬಾಲಿಸಿ ಹೋಗುತ್ತಾನೆ. ಆತ ಮೂಲತಃ ಹಳ್ಳಿಯಿಂದ ಬಂದವನು. ಆಧುನಿಕತೆ ಹಾಗೂ ನಗರದ ನಾಗರೀಕತೆಗೆ ಮಾರುಹೋದವನು. ಅವನಿಗೆ ತನ್ನಲ್ಲಾಗಿರುವ ಪರಿವರ್ತನೆಯ ಬಗ್ಗೆ ಆಶ್ಚರ್ಯ. ಆದರೆ ಆತ ತನ್ನ ಹಳ್ಳಿಗಾಡಿನ ಬಾಲ್ಯಕ್ಕೆ ಮರಳಲಾರದ ಹಂತ ಮುಟ್ಟಿಬಿಟ್ಡಿದ್ದಾನೆ. ಅದರಿಂದ ಅವನು ದುರಂತ ತಂದುಕೊಳ್ಳುತ್ತಾನೆ. ಔದ್ಯೋಗಿಕ ಸಂಸ್ಕೃತಿಯ ಆಳವಾದ ತಿಳಿವಿನಲ್ಲಿ ಈ ಕಥೆಯನ್ನು ಉಮಾರಾವ್‌ ಅವರು ಭದ್ರವಾಗಿ ಕಟ್ಟಿದ್ದಾರೆ. ಈ ಕಥೆಯ ಮುಖ ಕೊನೆಗೆ ಭರವಸೆಯತ್ತ ಧಾವಿಸುತ್ತದೆ.

ಈ ದಶಕದಲ್ಲಿ ಕಾಣಿಸಿಕೊಂಡ ಲೇಖಕಿಯರಲ್ಲಿ ಎಚ್ಚ್. ನಾಗವೇಣಿ, ವಿತ್ರಾ ವೆಂಕಟ್ರಾಜ್‌, ಎಂ. ಎಸ್‌. ವೇದಾ ಇವರ ಕಥೆಗಳ ಬಗ್ಗೆ ಇಲ್ಲಿ ಉಲ್ಲೇಖಿಸಬೇಕಾಗಿದೆ. ವ್ಯಕ್ತಿ ವ್ಯಕ್ತಿಗಳ ನಡುವಿನ ಸಂಬಧದ ಆಳದ ಅರಿವನ್ನು ಇವರ ಕಥೆಗಳು ಅರ್ಥೈಸುತ್ತವೆ. ಇವು ಕುಟುಂಬದ ಸಂದರ್ಭದಲ್ಲಿ ಘಟಿಸುವ ಅನೇಕ ಅರ್ಥಪರಂಪರೆಗಳನ್ನು ಸಂಯಮದ ಧಾಟಿಯಲ್ಲಿ ನಿರೂಪಿಸುತ್ತವೆ. ಇಲ್ಲಿ ಪ್ರೀತಿ, ಪ್ರೇಮ, ವಾತ್ಸಲ್ಯ, ದಕ್ಷತೆ, ಲೈಗಿಕ ಸಂಬಂಧಗಳ ಬಗೆಗಿನ ಸಾಂಪ್ರದಾಯಿಕ ನಂಬುಗೆಗಳು ಹೊಸ ಅರ್ಥವನ್ನು ಪಡೆದುಕೊಳ್ಳುತ್ತವೆ. ‘ಹಕ್ಕಿ ಮತ್ತು ಅವಳು’ ಕಥೆಯಲ್ಲಿ ಒಂದು ಸಾಂಪ್ರದಾಯಿಕ ಮಿತಿಯನ್ನು ಮೀರಲು ಯತ್ನಿಸುವುದನ್ನು ಕಾಣುತ್ತೇವೆ. ನಾಗವೇಣಿ ಅವರ ಕಥೆಗಳ ವಸ್ತು, ಪಾತ್ರ, ಆವರಣ ಇವೆಲ್ಲಾ ದಕ್ಷಿಣ ಕನ್ನಡದ, ಅದರಲ್ಲೂ ತುಳುನಾಡಿನ ಪ್ರಾಂತ್ಯಕ್ಕೆ ಸೇರಿದ್ದಾಗಿವೆ. ಇವರ ಕಥೆಗಳು ಮಾನವೀಯ ಗುಣಗಳನ್ನು ಎತ್ತಿ ಹಿಡಿಯುವಲ್ಲಿ ಪ್ರವೃತ್ತವಾಗಿವೆ. ನಿರ್ಲಕ್ಷಿತ ಸಂಸ್ಕೃತಿಯೊಂದರ ಸಾಂಸ್ಕೃತಿಕ ವಿವರಗಳನ್ನು ಇವರು ಕಥೆಗಳಲ್ಲಿ ಜೀರ್ಣಿಸಿಕೊಳ್ಳುವ ಬಗೆ ಚೇತೋಹಾರಿಹಾಗಿದೆ. ಬದುಕಿನ ಬಗ್ಗೆ ಪ್ರೀತಿ ಮತ್ತು ಬರವಸೆಯನ್ನು ಇವರ ಕಥೆಗಳು ಹುಟ್ಟಿಸುತ್ತವೆ. ಹಾಗೆಯೇ ಎಂ. ಎಸ್‌. ವೇದಾ ಅವರ ಕಥೆಗಳ ಮೇಲೆ ಅನೇಕ ಹಿರಿಯ ಕಥೆಗಾರರ ನೆರಳು ಕಂಡು ಬಂದರೂ ತಮ್ಮ ವಿಶಿಷ್ಟವಾದ ಸತ್ವಯುತ ಭಾಷೆಯಿಂದಾಗಿ ಇವರ ಕಥೆಗಳು ದಟ್ಟವಾದ, ಸಂಘರ್ಷಮಯವಾದ ಪರಿಸರವನ್ನು ಸೃಷ್ಟಿಸುತ್ತವೆ. ಬಡತನ, ಜಾತಿ ಮತ್ತು ಸಂಪ್ರದಾಯದ ನಡುವಿನ ಸಂಬಂಧಗಳನ್ನು, ಸಮಸ್ಯೆಗಳನ್ನು ಇವರ ಕಥೆಗಳು ಶೋಧಿಸಿ, ಕೊನೆಗೆ ವ್ಯಕ್ತಿಯ ಆಂತರ್ಯದಲ್ಲಿರುವ ಮಾನವೀಯ ಅನುಕಂಪಗಳನ್ನು ಎತ್ತಿ ಹಿಡಿಯುತ್ತವೆ.

ಈ ಲೇಖನವನ್ನು ಸಿದ್ಧಪಡಿಸಲು ನನಗೆ ಅನೇಕ ಮಿತಿಗಳಿವೆ. ಸಮಯ ಮತ್ತು ಸಂದರ್ಭದಿಂದಾಗಿ ನನ್ನ ಗಮನಕ್ಕೆ ಈ ಒಂದು ದಶಕದಲ್ಲಿ ಬಂದಿರಬಹುದಾದ ಇನ್ನೂ ಕೆಲವು ಕಥಾ ಸಂಕಲನಗಳು/ಕಥೆಗಳು ನನ್ನ ಗಮನಕ್ಕೆ ಬಾರದೇ ಹೋಗಿರುವ ಸಂಭಾವ್ಯ ಇರಬಹುದು. ಹಾಗೆ ಬಿಟ್ಟು ಹೋಗಿರುವವರ ಕಥೆಗಳಲ್ಲಿ ವ್ಯಕ್ತವಾಗುವ ಭಾವನೆಗಳು, ಸಂವೇದನೆಗಳು, ಗ್ರಹಿಕೆಗಳು ಇದರೊಳಗೆ ಬಂದಿರುವ ಕಥೆಗಾರರಲ್ಲಿ ಕಾಣಿಸಿಕೊಂಡಿವೆ ಎಂದು ಕೊಂಡಿದ್ದೇನೆ.