೯೦ರ ದಶಕದ ಕಾದಂಬರಿಗಳನ್ನು ಕುರಿತು ಆಲೋಚಿಸುವಾಗ ಈ ಪ್ರಕಾರದ ಹಿಂದಣ ಹೆಜ್ಜೆಗಳ ಕಡೆ ಗಮನ ಹೋಗುತ್ತದೆ. ಯಾಕೆಂದರೆ ಆಧುನಿಕ ಕನ್ನಡ ಸಾಹಿತ್ಯಕ್ಕೆ ಒಂದು ನೂರು ವರ್ಷಗಳು ತುಂಬಿವೆ. ಶತಮಾನದ ಕನ್ನಡ ಸಾಹಿತ್ಯವನ್ನು ಹಿಂತಿರುಗಿ ನೋಡುವ ಪ್ರಯತ್ನಗಳು ನಡೆಯುತ್ತಿವೆ. ಆಧುನಿಕ ಸಾಹಿತ್ಯದ ಅನೇಕ ಪ್ರಕಾರಗಳ ಮೇಲೆ ಪ್ರತ್ಯೇಕ ಚರ್ಚೆ, ಚಿಂತನೆಗಳು ಒಂದು ಕಡೆ ನಡೆದಿವೆ. ಇನ್ನೊಂದು ಕಡೆ ವಿಶ್ವವಿದ್ಯಾಲಯ, ಅಕಾಡೆಮಿ, ಪರಿಷತ್ತು, ಸಂಘ ಸಂಸ್ಥೆಗಳು ಶತಮಾನದ ಕಾವ್ಯ ಕಥೆ, ವಿಮರ್ಶೆ, ಸಂಶೋಧನೆ ಪ್ರಕಾರಗಳಲ್ಲಿ ‘ಅತ್ಯುತ್ತಮ’ ವಾದವುಗಳನ್ನು ಆಯ್ದು ‘ಇದು ಶತಮಾನದ ಸಾಹಿತ್ಯ’ ಎಂದು ಗುರುತಿಸಿ, ತೋರಿಸುವ ಪ್ರಯತ್ನಗಳು ನಡೆದಿವೆ. ಉತ್ತಮ ನಾಟಕಗಳ ಸಂಕಲನಗಳು ಹಿಂದೆ ಬಂದಿವೆ. ಕಾದಂಬರಿಗಳ ಸಂಕಲನಗಳು ಮಾತ್ರ ಬಂದಿಲ್ಲ. ತಾಂತ್ರಿಕ ತೊಂದರೆಯಿಂದ ಇದು ಸಾಧ್ಯವಾಗಿಲ್ಲ. ಆದರೂ ಮನೋಹರ ಗ್ರಂಥಮಾಲೆ ಪ್ರಯತ್ನಿಸಿದೆ. ಅತ್ಯುತ್ತಮ ಕಾದಂಬರಿಗಳನ್ನು ಗುರುತಿಸುವು ಲೇಖನಗಳು ಪ್ರಕಟವಾಗಿವೆ. ಈ ಎಲ್ಲ ಪ್ರಯತ್ನಗಳ ಹಿಂದೆ ಎರಡು ಮುಖ್ಯ ಉದ್ದೇಶಗಳು ಕಾಣುತ್ತವೆ. ಒಂದು, ಪರಂಪರೆಯನ್ನು ಗುರುತಿಸುವುದು. ಇನ್ನೊಂದು ಹಿಂದೆ ಮುಂದಿನವರಿಗೆ ಪ್ರೇರಣೆಯನ್ನು ಒದಗಿಸುವುದು ಇರಬಹುದು. ಇಂಥ ಕೆಲಸಗಳು, ಒಂದು ನಾಡಿನ ಸಾಹಿತ್ಯಕ ಸತ್ವವನ್ನು ಮನಗಾಣಿಸುವ ತಾತ್ವಿಕತೆ ಇರುವುದನ್ನು ಕಾಣುತ್ತೇವೆ.

೯೦ರ ದಶಕದಲ್ಲಿ ಪ್ರಕಟವಾದ ಕಾದಂಬರಿಗಳಲ್ಲಿ ಪರುಷೋತ್ತಮ, ಕೇಂದ್ರ ವೃತ್ತಾಂತ (ಯಶವಂತ ಚಿತ್ತಾಲ), ಜುಗಾರಿ ಕ್ರಾಸ್‌ (ತೇಜಸ್ವಿ), ಅಕ್ಕ (ಲಂಕೇಶ), ನಿರೀಂದ್ರಿಯ (ಕುಸುಮಾಕರ ದೇವರ ಗೆಣ್ಣೂರು), ಭವ (ಅನಂತಮೂರ್ತಿ) ಸಾರ್ಥ (ಭೈರಪ್ಪ), ಶಾಮಣ್ಣ (ಕುಂ. ವೀರಭದ್ರಪ್ಪ), ಹೆಜ್ಜಾಲ (ಚದುರಂಗ), ಓಂಣಮೋ (ಶಾಂತಿನಾಥ ದೇಸಾಯಿ), ಹಜ್ಜೆ (ವ್ಯಾಸರಾಯ ಬಲ್ಲಾಳ), ಉದ್ಗಮ (ಎಚ್‌. ಎಸ್‌. ಶ್ರೀಮತಿ), ಗಾಂಧಿ ಬಂದ (ನಾಗವೇಣಿ), ದಂಡೆ (ಕಾ. ತಾ. ಚಿಕ್ಕಣ್ಣ) ಬಿಸಲಪುರ ಲೋಕಾಪುರ ಬಾಳಾಸಾಹೇಬ ಮುಂತಾದ ಕಾದಂಬರಿಗಳು ಗಮನಾರ್ಹವಾಗಿವೆ. ೯೦ರ ದಶಕದ ಹಿಂದು, ಮುಂದಿನ ಅಂಚಿನಲ್ಲಿಯೂ ಕೆಲವು ಗಮನಿಸಬೇಕಾದ ಕಾದಂಬರಿಗಳು ಪ್ರಕಟವಾಗಿವೆ. ಚಿದಂಬರ ರಹಸ್ಯ, ಕುಸುಮಬಾಲೆ, ದಿವ್ಯ, ಬದುಕು (ಗೀತಾ ನಾಗಭೂಷಣ) ಕಾದಂಬರಿಗಳು ನೆನಪಿಗೆ ಬರುತ್ತಿವೆ.

ಕುತೂಹಲದ ಸಂಗತಿಯೆಂದರೆ ‘ನವ್ಯರಾದ’ ಯಶವಂತ ಚಿತ್ತಾಲ, ಅನಂತಮೂರ್ತಿ, ಲಂಕೇಶ್‌, ಶಾಂತಿನಾಥ ದೇಸಾಯಿ, ಚದುರಂಗ, ತೇಜಸ್ವಿ ಮುಂತಾದವರೇ ೯೦ರ ದಶಕದಲ್ಲಿ ಕಾದಂಬರಿಗಳನ್ನು ಬರೆದಿದ್ದಾರೆ. ಹೊಸ ಶತಮಾನದಲ್ಲಿಯೂ ಇವರು ಬರೆಯಬಹುದು. ಆದರೆ ಕೊನೆ ಕಾಲು ಶತಮಾನದ ಅವಧಿಯಲ್ಲಿ ಕಾದಂಬರಿಗಳನ್ನು ಬರೆಯಲು ಅನೇಕರು ಪ್ರಯತ್ನಿಸಿದ್ದರೂ ಇವರೆಲ್ಲರೂ ಕಥೆಗಳಲ್ಲಿ ತೋರಿಸಿದ ಪ್ರತಿಭೆಯನ್ನು ಕಾದಂಬರಿಗಳಲ್ಲಿ ತೋರಿಸಲು ಇನ್ನೂ ಸಾಧ್ಯವಾಗಿಲ್ಲ ಕುಂ. ವೀರಭದ್ರಪ್ಪ, ಗೀತಾನಾಗಭೂಷಣ, ಕಾ. ತ. ಚಿಕ್ಕಣ್ಣ, ಬೊಳುವಾರ, ಕಟ್ಟಾಡಿ, ವೈದೇಹಿ, ಸಾರಾ ಅಬೂಬಕ್ಕರ್, ಕೃಷ್ಣಮೂರ್ತಿ ಹನೂರು, ಎಚ್‌. ನಾಗವೇಣಿ ಮುಂತಾದವರು ಕಾದಂಬರಿ ಪ್ರಕಾರವನ್ನು ಗಂಭೀರವಾಗಿ ಪರಿಗಣಿಸಿ ಉತ್ತಮ ಕಾದಂಬರಿಗಳನ್ನು ಬರೆದಿದ್ದಾರೆ. ಬರೆಯುವ ಶಕ್ತಿಯುಳ್ಳವರಾಗಿದ್ದಾರೆ. ಮುಕುಂದ ಜೋಶಿ, ಕೇಶವ ಮಳಗಿ, ಮಹಾಬಲಮೂರ್ತಿ ಕೊಡ್ಲೆಕೆರೆ, ಉಮಾರಾವ್‌, ಬಾಳಾಸಾಹೇಬ ಲೋಕಾಪುರ, ಅಗ್ರಹಾರ ಕೃಷ್ಣಮೂರ್ತಿ, ಉದಯ ಕುಮಾರ ಹಬ್ಬು, ಪ್ರಲ್ಲಾದ ಅಗಸನಕಟ್ಟೆ, ವಿವೇಕ ಶಾನಭಾಗ ಮುಂತಾದವರು ಕಾದಂಬರಿ ಪ್ರಕಾರಕ್ಕೆ ಈಗೀಗ ಇಳಿದಿದ್ದಾರೆ. ತಮ್ಮ ಪ್ರತಿಭೆಯನ್ನು ಕಾದಂಬರಿಯಲ್ಲಿ ವ್ಯಕ್ತಪಡಿಸಲು ಇವರಿಗೆ ಇನ್ನೂ ಸಾಧ್ಯವಾಗಿಲ್ಲವಾದರೂ ಅವಕಾಶಗಳಿವೆ. ಕೊನೆಯ ಕಾಲು ಶತಮಾನದಲ್ಲಿ ಬಂದ ಕು. ವೀರಭದ್ರಪ್ಪನವರ ‘ಶಾಮಣ್ಣ’, ಗೀತಾ ನಾಗಭೂಷಣರ ‘ಬದುಕು’, ಎಚ್‌. ನಾಗವೇಣಿಯವರ ‘ಗಾಂಧಿ ಬಂದ’, ಶ್ರೀಮತಿ ಅವರ ‘ಉದ್ಗಮ’, ಕಾ. ತಾ. ಚಿಕ್ಕಣ್ಣನವರ ‘ದಂಡೆ’ ಕಾದಂಬರಿಗಳು ಕಾದಂಬರಿ ಪ್ರಕಾರ ಸೊರಗಿಲ್ಲ ಎಂಬುದನ್ನು ತೋರಿಸುವಂತಿವೆ.

ಈಚೆಗೆ ಸಾಹಿತ್ಯ ಸೃಷ್ಟಿಯೇ ಕಮ್ಮಿಯಾಗುತ್ತಿದೆ. ಸೃಷ್ಟಿಯಾದ ಸಾಹಿತ್ಯ ಮೌಲಿಕವಾಗಿಲ್ಲ, ಸತ್ವಯುತವಾಗಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ ಇದು ಚರ್ಚೆಗೆ ಅರ್ಹವಾದ ಮಾತಾಗಿದೆ. ಎಂಥ ಸಾಹಿತ್ಯಬೇಕು? ಅದನ್ನು ಸೃಷ್ಟಿಸುವವರು ಯಾರು? ಅವರ ಸಮಸ್ಯೆಗಳೇನು? ಸಮಾಜದಲ್ಲಿ ಆಗುವ ಸ್ಥಿತ್ಯಾಂತಗಳು ಪೂರಕವಾಗಿವೆಯೋ ಗೊಂದಲವಾಗಿವೆಯೋ ಇಲವೋ? ಈ ಎಲ್ಲ ಪ್ರಶ್ನೆಗಳು ಸಂಕೀರ್ಣವಾಗಿವೆ. ಆಧುನಿಕ ಪೂರ್ವ ಕಾಲದಲ್ಲಿ ಗ್ರಾಮೀಣ ಬದುಕು ಸಂಕೀರ್ಣವಾಗಿರಲಿಲ್ಲವೆಂದು ಹೇಳಬಹುದು. ಬ್ರಿಟೀಶ್‌ ವಸಹಾತುಶಾಹಿ ಆಡಳಿತದಿಂದ ಆಧುನಿಕತೆ ಬಂತು. ಆಧುನಿಕ ಶಿಕ್ಷಣವನ್ನು ಪಡೆದು, ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳುವ ಸಂಕ್ರಮಣ ಕಾಲದಲ್ಲಿ, ಸಮಾಜದಲ್ಲಿ ಆಗುವ ಬದಲಾವಣೆಗಳನ್ನು ಬರಹಗಾರರು ಗ್ರಹಿಸತೊಡಗಿದರು. ಅದರ ಪರಿಣಾಮವಾಗಿಯೇ ಕಾದಂಬರಿಗಳು ಹುಟ್ಟ ತೊಡಗಿದವು. ಮಾಸ್ತಿ, ಕಾರಂತ, ಕುವೆಂಪು, ರಾವು ಬಾಹುದ್ದೂರ, ಗೊರೂರು ಮುಂತಾದವರು ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿದವರು. ಹಳ್ಳಿಯಲ್ಲಿ ಹುಟ್ಟಿ ಬೆಳೆದು ಹಳ್ಳಿಯ ಬದುಕಿನ ಭಾಗವಾಗಿ ಬೆಳೆದವರು. ನಗರಕ್ಕೆ ಬಂದು ಆಧುನಿಕ ಶಿಕ್ಷಣವನ್ನು ಪಡೆದು ಸಾಂಪ್ರದಾಯಿಕ ಬದುಕನ್ನು ನೋಡುವುದಕ್ಕೆ ಒಂದು ಅಂತರವನ್ನು ದಕ್ಕಿಸಿಕೊಂಡವರು. ದಕ್ಕಿಸಿಕೊಂಡ ಈ ಅಂತರದಿಂದಾಗಿ ಬೃಹತ್‌ ಬದುಕನ್ನು ಕಾದಂಬರಿಯಲ್ಲಿ ಚಿತ್ರಿಸಲು ಅವರಿಗೆ ಸಾಧ್ಯವಾಯಿತು.

ನವ್ಯದ ಕಾಲದಲ್ಲಿ ಇದು ಬೇರೊಂದು ರೂಪ ಪಡೆಯಿತು. ಅಂದರೆ ನವ್ಯದ ಅನೇಕ ಲೇಖಕರು ಕೂಡ ಹಳ್ಳಿಯಲ್ಲಿ ಹುಟ್ಟಿ ಬೆಳೆದಿದ್ದರೂ ಆಧುನಿಕ ಶಿಕ್ಷಣವನ್ನು ಪಡೆದು, ಆಧುನಿಕ ಬದುಕನ್ನು ಸೃಷ್ಟಿಸಲು ತವಕಿಸಿದರು. ಪಶ್ಚಿಮದ ಸಿದ್ಧಾಂತಗಳನ್ನು ಮನುಷ್ಯನ ಬದುಕಿನಲ್ಲಿಟ್ಟು ನೋಡ ತೊಡಗಿದರು. ಮಾಸ್ತಿ, ಕಾರಂತ, ಕುವೆಂಪು, ಗೊರೂರು, ರಾವ್‌ ಬಹದ್ದುರ್ ಅವರಿಗೆ ದಕ್ಕಿದಷ್ಟು ಬದುಕು ನವ್ಯದ ಬರಹಗಾರರಿಗೆ ದಕ್ಕಲಿಲ್ಲ. ಗ್ರಾಮೀಣ ಮನುಷ್ಯನ ಸಾಮೂಹಿಕ ಬದುಕನ್ನು ಗ್ರಹಿಸಿದಂತೆ, ನವ್ಯದ ಲೇಖಕರು ಸಾಮೂಹಿಕ ಬದುಕನ್ನು ಗ್ರಹಿಸಲಿಲ್ಲ. ಮನುಷ್ಯನಿಗೆ ಮಾತ್ರ ಒತ್ತುಕೊಟ್ಟರು. ಸಮಾಜ ನೇಪಥ್ಯವಾಯಿತು. ಇದರಿಂದ ನವೋದಯದವರು ಸಮಾಜ – ಮನಸುಷ್ಯ ಕೂಡಿದ ವ್ಯಕ್ತಿತ್ವನ್ನು ಒಟ್ಟಾರೆ ಗ್ರಹಿಸಿದ್ದರಿಂದ ಬೃಹತ್‌ ಬದುಕನ್ನು ಚಿತ್ರಿಸಲು ಸಾಧ್ಯವಾಯಿತು. ನವ್ಯದವರು ಕೇವಲ ಮನುಷ್ಯನ ವ್ಯಕ್ತಿತ್ವವನ್ನ ಗ್ರಹಿಸಿದ್ದರಿಂದ ಸೀಮಿತ ಬದುಕನ್ನು ಚಿತ್ರಿಸಲು ಸಾಧ್ಯವಾಯಿತು. ಇದಕ್ಕೆ ನಗರಗಳ ಬೆಳವಣಿಗೆಗಳೂ ಕಾರಣವಿರಬಹುದು.

ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಎರಡು ದಶಕಗಳ ಅವಧಿಯಲ್ಲಿ ಕಾಣಿಸಿಕೊಂಡ ಬರಹಗಾರರೆಲ್ಲ ಆರ್ಥಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಮೇಲ್ವರ್ಗಕ್ಕೆ ಸೇರಿದವರಾಗಿದ್ದರು. ೭೦ರ ದಶಕದಿಂದ ಸರಕಾರದ ಸೌಲಭ್ಯಗಳನ್ನು ಪಡೆದು ಶಿಕ್ಷಣವನ್ನು ಕಲಿಯಲಾರಂಭಿಸಿದ ಕೆಳವರ್ಗದವರು ಮತ್ತು ಹಿಂದುಳಿದ ವರ್ಗದವರು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪಡೆದ ಶಿಕ್ಷಣವನ್ನು ದಕ್ಕಿಸಿಕೊಳ್ಳಬೇಕಾಯಿತು. ಈ ಪರಿಸ್ಥಿತಿಯನ್ನು ಗ್ರಹಿಸುವ ಕಡೆಗೆ ಕೆಲವರ್ಗಗಳು, ಹಿಂದುಳಿದ ವರ್ಗಗಳು ತೊಡಗುತ್ತಿದ್ದಂತೆ ಪ್ರಧಾನ ಸಂಸ್ಕೃತಿಗಳು ಹೊಸ ರೂಪದೊಂದಿಗೆ ಬೆಳೆಯುತ್ತ ಪ್ರಬಲವಾಗತೊಡಗಿದವು ಮತ್ತು ಪ್ರಧಾನ ಸಂಸ್ಕೃತಿಗಳ ಬೆಳವಣಿಗೆ ವೇಗವಾಗಿರುವುದರಿಂದ ಅಧೀನ ಸಂಸ್ಕೃತಿಗಳ ಕಷ್ಟಗಳು ಹೆಚ್ಚಾಗ ತೊಡಗಿದವು. ೨೦ನೇ ಶತಮಾನದ ಕೊನೆಯ ಕಾಲು ಭಾಗದ ಅವಧಿಯಲ್ಲಿ ಕೆಲವರ್ಗದವರಿಂದ, ಹಿಂದುಳಿದ ವರ್ಗದವರಿಂದ ಸಾಹಿತ್ಯ ರಚನೆಯಾಗಬೇಕಾದ ಸಾಧ್ಯತೆಗಳೇ ಹೆಚ್ಚಾಗಿದ್ದವು. ಅದು ತಕ್ಕಮಟ್ಟಿಗೆ ಸಾಧ್ಯವಾಗಿದೆ. ಇದರಿಂದಾಗಿ ಸಾಹಿತ್ಯದ ಸತ್ವದ ಬಗ್ಗೆ ತಕರಾರುಗಳಿದ್ದರೆ ಅದು ಮೇಲ್ವರ್ಗದವರಿಂದ ಬರುವಂತಹದಾಗಿರುತ್ತದೆ. ಈ ಕೆಳವರ್ಗದವರು ಅರಿವು ಪಡೆಯುತ್ತಿರುವ ಸಂದರ್ಭದ ಬೆನ್ನಲ್ಲೇ ಜಾಗತೀಕರಣದ ಆರಂಭವಾಗಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಪ್ರಕ್ರಿಯೆಗಳು ಯಾರಿಗೆ ಲಾಭದಾಯಕವಾಗಿವೆ? ಯಾರಿಗೆ ಕುತ್ತು ತಂದಿವೆ, ತರುತ್ತಿವೆ? ಎಂಬ ಸಂಗತಿಗಳು ಅರ್ಥವಾಗಲು ಈಗ ಆರಂಭವಾಗಿವೆ. ಜಾಗತೀಕರಣವನ್ನು ನಾವು ಅರ್ಥಮಾಡಿಕೊಳ್ಳಲು ಒಂದು ದಶಕ ಹಿಡಿದಿದೆ. ಕಾರ್ಮಿಕರು, ರೈತರು ಮತ್ತು ನೌಕರರು ಪೆಟ್ಟು ತಿನ್ನತೊಡಗಿರುವುದರಿಂದ ಈ ವರ್ಗದವರಿಗೆ ಜಾಗತೀಕರಣ ಮಾರಕವಾಗಿ ಪರಿಣಿಮಿಸಿದೆ. ಸಮಾಜದಲ್ಲಿ ಅರಾಜಕತೆ ಮೂಡಿದೆ. ಆದರೂ ಪ್ರಭುತ್ವ ಜಾಗತೀಕರಣದ ಪರವಾಗಿದೆ. ಪ್ರಜಾಪ್ರಭುತ್ವಕ್ಕೆ ಪೆಟ್ಟು ಬೀಳುತ್ತಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಸಾಹಿತ್ಯ ರಚನೆಯಾಗುವುದು ಕಷ್ಟದ ಕೆಲಸವೇ ಅದರಲ್ಲೂ ‘ಸೃಜನಶೀಲ’ ಸಾಹಿತ್ಯ ಎಂದು ಯಾವುದನ್ನು ಕರೆಯುತ್ತೇವೆಯೋ ಅದು ರಚನೆಯಾಗಲು ಸಮಯಬೇಕು ಅನ್ನಿಸುತ್ತದೆ. ಬದಲಾವಣೆಗಳು ತೀವ್ರಗತಿಯಲ್ಲಿ ಆಗುತ್ತಿವೆ. ಅವುಗಳನ್ನು ಗ್ರಹಿಸುವುದು ಕಷ್ಟವಾಗುತ್ತಿದೆ. ಜಾಗತೀಕರಣದ ಸಾಧಕ – ಬಾಧಕಗಳನ್ನು ಚಿಂತನೆಯ ನೆಲೆಯಲ್ಲಿ ಗ್ರಹಿಸಿ ವಿಚಾರಾತ್ಮಕ ಬರೆಹಗಳನ್ನು ಮಂಡಿಸಬಹುದು. ಈ ಕೆಲಸ ನಡೆಯುತ್ತಿದೆ.

ಜಾಗತೀಕರಣದಿಂದ ಸ್ಥಳೀಯ ಭಾಷೆ ಆಲೋಚನೆಗೆ ಉಪಯುಕ್ತವಾಗಿಲ್ಲ ಎಂಬ ಭಾವನೆ ಬೆಳೆಯುತ್ತಿದೆ. ನಮ್ಮ ಬದುಕು ಮತ್ತು ಭಾಷೆಗೆ ಹೊಂದಾಣಿಕೆ ಇಲ್ಲದಂತಾಗಿದೆ. ಇದರಿಂದಾಗಿಯೇ ಸಾಹಿತ್ಯ ಸೃಷ್ಟಿಗೆ ತೊಡಕುಗಳು ಸಂಭವಿಸಿವೆ. ಬದುಕು ಮತ್ತು ಭಾಷೆಗೆ ಹೊಂದಾಣಿಕೆ ಇದ್ದಲ್ಲಿ ಮಾತ್ರ ಸೃಷ್ಟಿಯಾಗುತ್ತದೆ. ಆದರೆ ಯುವ ಬರಹಗಾರರು ಈಚಿನ ದಶಕಗಳಲ್ಲಿ ಒಂದು ಕಡೆ ನೆಲೆ ನಿಲ್ಲುವುದು ಕಮ್ಮಿಯಾಗಿದೆ. ತಾವು ಹುಟ್ಟಿದ ಬದುಕಿನ ಪರಿಸರದಿಂದ ಬಹುಬೇಗ ಹೊರಬರುತ್ತಾರೆ. ನೆಲೆಯಲ್ಲದ ನೆಲೆಗಳಲ್ಲಿ ಬದುಕುವುದರಿಂದ ಅನುಭವ ಮತ್ತು ಭಾಷೆಯ ನಡುವೆ ಕಂದರ ಏರ್ಪಡುವುದರಿಂದ ಸಾಹಿತ್ಯ ಸೃಷ್ಟಿಗೆ ತೊಡಕಾಗಿದೆ ಎಂದು ಕಾಣುತ್ತದೆ. ೮೦ರ ದಶಕದಿಂದ ಕೆಳವರ್ಗದವರ, ಅಲಕ್ಷಿತ ವರ್ಗದವರ ಬದುಕೇ ಸಾಹಿತ್ಯದಲ್ಲಿ ನುಗ್ಗಿ ಬಂದುದರಿಂದ ನಗರಕೇಂದ್ರಿತ ಮಧ್ಯಮ ವರ್ಗದ ಬದುಕು ಸಾಹಿತ್ಯದಲ್ಲಿ ಕಣ್ಮರೆಯಾಯಿತು. ಈ ಬದುಕನ್ನು ಬರೆಯುವ ಸಾಧ್ಯತೆ ಇದ್ದವರು ಬರೆಯುವ ಧೈರ್ಯ ತೋರಿಸಲಿಲ್ಲವೇನೋ. ಹಿರಿಯ ಬರಹಗಾರರು ತಮಗೆ ದಕ್ಕಿದ್ದನ್ನು ಬರೆಯುವ ಕೆಲಸ ಮಾಡುತ್ತಿದ್ದಾರೆ.

ತೇಜಸ್ವಿಯವರ ‘ಜುಗಾರಿ ಕ್ರಾಸ್‌’ ಕಾದಂಬರಿಯಲ್ಲಿ, ಅಸ್ವಸ್ಥತೆಯಿಂದ ಕೂಡಿದ ಸಮಾಜದಲ್ಲಿ ಮನುಷ್ಯನ ಮನಸ್ಸು ಬದುಕು ಕ್ಷಣಕಾಲವೂ ನೆಮ್ಮದಿಯಿಂದ ಪ್ರಮಾಣಿಕತೆಯಿಂದ ಇರಲು ಸಾಧ್ಯವಾಗುವುದಿಲ್ಲ, ‘ಕ್ರಾಸ್‌’ ಎಂಬುದೇ ಅವಸರದ, ಕ್ಷಣಕಾಲದ, ಅಪ್ರಮಾಣಿಕತೆಯ ಸಂಕೇತವಾಗಿದೆ ಎಂಬುದನ್ನು ಕಾಣುತ್ತೇವೆ. ತೇಜಸ್ವಿ ಬದಲಾಗುತ್ತಿರುವ ಸಮಾಜದಲ್ಲಿ ಜನಸಮುದಾಯಗಳು ವಿರೂಪಗೊಂಡಂತೆ ಚಿತ್ರಿಸುತ್ತಾರೆ. ಮನುಷ್ಯನಲ್ಲಿ ಸೌಂದರ್ಯ ಪ್ರಜ್ಞೆ (ಕಲೆ ಅಂತಾದರೂ ಕರೆಯಿರಿ)ಯೇ ವಿರೂಪವಾಗುವುದನ್ನು ಅದಕ್ಕೆ ಆಧುನಿಕ ರಾಜಕಾರಣವೇ ಕಾರಣವೆಂದು ಚಿತ್ರಿಸುವುದನ್ನು ತೇಜಸ್ವಿ ಮೊದಲಿನಿಂದಲೇ ಮಾಡುತ್ತ ಬಂದಿದ್ದಾರೆ. ದೇಸಾಯಿ ಅವರ ‘ಓಂಣಮೋ’ ಕಾದಂಬರಿಯಲ್ಲಿ ರೊಟ್ಟಿ ಬಟ್ಟೆ ಸಮಸ್ಯೆಗಳನ್ನು ನೀಗಿಸಿಕೊಂಡ ಆಧುನಿಕ ಬದುಕಿನಲ್ಲಿ ಸುಲಭವಾಗಿ ಉಸಿರಾಡುವ ಮನುಷ್ಯರ ಕಾಮ ಪ್ರೇಮ ಮತ್ತು ಆಧ್ಯಾತ್ಮದ ಹುಡುಕಾಟವನ್ನು ನೋಡಬಹುದು. ತೇಜಸ್ವಿಯ ತಲ್ಲಣಗಳು ಶಾಂತಿನಾಥ ದೇಸಾಯಿ ಅವರ ತಲ್ಲಣಗಳು ಬೇರೆ ಬೇರೆ. ಕುಂ. ವೀರಭದ್ರಪ್ಪನವರ ‘ಶಾಮಣ್ಣ’, ಚದುರಂಗದ ‘ಹೆಜ್ಜಾಲ’, ಗೀತಾ ನಾಗಭೂಷಣರ ‘ಬದುಕು’, ಎಚ್‌. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿಗಳ ದಾರಿಗಳು ಒಂದೇ. ಅಂದರೆ ಗ್ರಾಮೀಣ ಬದುಕಿನ ಚಿತ್ರಣವನ್ನು ಹೊಂದಿವೆ. ವಿಚಿತ್ರವೆಂದರೆ ಈ ಹೊತ್ತಿನ ಜಾಗತಿಕರಣದ ಆತಂಕಗಳನ್ನು ಈ ಕಾದಂಬರಿಗಳು ಗಮನಿಸುವುದಿಲ್ಲ. ‘ಗಾಂಧಿ ಬಂದ’ ಮತ್ತು ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿಗಳು ಒಂದು ನಿರ್ದಿಷ್ಟ ಪ್ರದೇಶಕ್ಕೆ ಸೇರಿದ ಮತ್ತು ನಿರ್ದಿಷ್ಟ ಘಟನೆಯನ್ನು ಭಿನ್ನವಾಗಿ ಗ್ರಹಿಸಲು ಪ್ರಯತ್ನಿಸಿವೆ. ಸ್ವಾತಂತ್ರ್ಯ ಹೋರಾಟ ದಿನಗಳಲ್ಲಿ ‘ಗಾಂಧಿಯುಗ’ ಅಥವಾ ಗಾಂಧಿ ಪ್ರಭಾವ ಒಂದು ಸಾಂಪ್ರದಾಯಿಕ ಬದುಕಿನಲ್ಲಿ ಉಂಟುಮಾಡುವ ಬದಲಾವಣೆಗಳನ್ನು ಹೇಳುತ್ತದೆ. ಸಾಮಾಜಿಕ ಬದುಕಿನಲ್ಲಿ ಸ್ವಾತಂತ್ರ್ಯ ಚಳುವಳಿಯ ಬಿಸಿತಟ್ಟಿ ಸಾಮಾನ್ಯರೂ ಗಾಂಧಿಗೆ ಸ್ಪಂದಿಸಿದ ಗುಣವನ್ನು ಈ ಕಾದಂಬರಿಗಳಲ್ಲಿ ಕಾಣುತ್ತೇವೆ. ‘ಹೆಜ್ಜೆ’ ನಿರೂಪಣೆಯಲ್ಲಿ ‘ಜನಪ್ರಿಯ’ ಮಾದರಿಯನ್ನು ಅನುಸರಿಸಿದೆ. ಆದರೆ ‘ಗಾಂಧಿ ಬಂದ’ ಕಾದಂಬರಿಯಲ್ಲಿ ಹಬ್ಬದಂಥ ಆಚರಣೆಗಳನ್ನು ವಿವರಣಾತ್ಮಕವಾಗಿ ಹೇಳುವ ಮೂಲಕ ಕಾದಂಬರಿಗಳಲ್ಲಿ ನಿಂತುಹೋಗಿದ್ದ ವಿವರಣೆಗಳು ಪುನಃ ಈ ಕಾದಂಬರಿಯಲ್ಲಿ ಕಾಣಿಸಿಕೊಂಡಿವೆ. ‘ಶಾಮಣ್ಣ’ ಕಾದಂಬರಿಯಲ್ಲಿ ಬರುವ ವಿವರಣೆಗಳು ಭಾಷಿಕ ಸಾಮರ್ಥ್ಯವನ್ನು ತೋರಿಸಿದಂತೆ ಕಾಣುತ್ತದೆ. ಆದರೆ ‘ಗಾಂಧಿ ಬಂದ’ ಕಾದಂಬರಿಯ ವಿವರಣೆಗಳು ವಸ್ತು ವಿಷಯಗಳನ್ನು ಒಡೆಯ ಕಾಣುವಂತೆ ಮಾಡುತ್ತವೆ. ಕಾ. ತಾ. ಚಿಕ್ಕಣ್ಣನವರ ‘ದಂಡೆ’ ಕಾದಂಬರಿ ನಿರೂಪಣೆ ಒಂದು ಪ್ರಯೋಗವಾಗಿದೆ. ಅದರ ತಂತ್ರ ಏನೇ ಇರಲಿ ಅವ್ವಯ್ಯ ನೆನಪಿನಲ್ಲಿ ಉಳಿಯುವ ಪಾತ್ರವಾಗಿದೆ. ಅಗ್ರಹಾರ ಕೃಷ್ಣಮೂರ್ತಿ ಅವರ ‘ಪ್ರೀತಿ ಮತ್ತು ನೀರು’ ಚಿಕ್ಕ ಕಥನ ಕವಿತೆಯಂತಿದೆ.

೯೦ರ ದಶಕದಲ್ಲಿ ಬಂದ ಕಾದಂಬರಿಗಳನ್ನು ಗಮನಿಸಿದರೆ ಭಿನ್ನ ಭಿನ್ನವಾದ ಬದುಕಿನ ಧಾರೆಗಳು ಕಾದಂಬರಿಗಳಿಗೆ ವಸ್ತುವಾಗಿವೆ. ಭೈರಪ್ಪನವರ ‘ಸಾರ್ಥ’ ವೈದಿಕೇತರ ಶಕ್ತಿಗಳನ್ನು, ಅವುಗಳ ಸಾಧ್ಯತೆಗಳನ್ನು ಪರಿಶೀಲಿಸುತ್ತದೆ ಮತ್ತು ವೈದಿಕಧರ್ಮದ ಬಲವನ್ನು ಸ್ಥಾಪಿಸಲು ಪ್ರಯತ್ನಿಸುತ್ತದೆ. ತೇಜಸ್ವಿಯವರ ‘ಜುಗಾರಿ ಕ್ರಾಸ್‌’ ಎಲ್ಲವನ್ನೂ ವ್ಯಾಪಾರಿ ನೀತಿಯಿಂದ ನೋಡುವ ಪ್ರವೃತ್ತಿಯನ್ನು ಹೇಳುತ್ತದೆ. ಶಾಂತಿನಾಥ ದೇಸಾಯಿಯವರ ‘ಓಂಣಮೋ’ ಆಧುನಿಕ ಮನುಷ್ಯನ ಅಂತಿಮ ಕಾಲದ ಆಸಕ್ತಿಯನ್ನು ಹುಡುಕುತ್ತದೆ. ೨೧ನೇ ಶತಮಾನದ ಶುರುವಿಗೆ ಅನಂತಮೂರ್ತಿ, ಅವರ ‘ದಿವ್ಯ’ ಕಾದಂಬರಿ ಹೊರಬಿದ್ದಿದೆ. ಈ ಹಿರಿಯರ ಸೈದ್ಧಾಂತಿಕ ಹುಡುಕಾಟಗಳು ನಡುವೆ ‘ಶಾಮಣ್ಣ’, ‘ಗಾಂಧಿ ಬಂದ’, ‘ಹೆಜ್ಜೆ’, ಎಂಬ ಕಾದಂಬರಿಗಳು ನಿಂತಿವೆ. ಚದುರಂಗದ ‘ಹೆಜ್ಜಾಲ’, ಗೀತಾ ನಾಗಭೂಷಣರ ‘ಬದುಕು’ ಕಾದಂಬರಿಗಳು ಹಳೆ ಬದುಕನ್ನು ಹೊತ್ತು ನಿಂತಂತೆ ತೋರುತ್ತವೆ.