ಕನ್ನಡದಲ್ಲಿ ನಾಟಕ, ಕಥೆ, ಕಾದಂಬರಿ, ಕಾವ್ಯ ಮುಂತಾದ ಸಾಹಿತ್ಯ ಪ್ರಕಾರಗಳಂತೆ ಆತ್ಮ ಕಥೆಗಳಿಗೂ ವಿಶಿಷ್ಟ ಸ್ಥಾನ ದೊರತಿದೆ. ಕವಿ, ಕಲಾವಿದ, ಪ್ರವಾಸಿಗ, ಕಾರ್ಮಿಕ, ಕ್ರೀಡಾಪಟು, ಪತ್ರಿಕೋದ್ಯಮಿ, ರಾಜಕಾರಣಿ, ಮಠಾಧಿಪತಿಗಳೆಲ್ಲರು ಆತ್ಮ ಕಥೆಗಳ ರಚನೆಗೆ ಭಾಜನರಾಗಿದ್ದಾರೆ. ಇವುಗಳ ಉದ್ದೇಶ ಕೀರ್ತಿ, ಪ್ರತಿಷ್ಠೆಗೆ; ಮಾನವೀಯ ಮೌಲ್ಯಗಳ ಪ್ರಸಾರದ ಅಪೇಕ್ಷಣೆ; ಇಲ್ಲವೆ ತಮ್ಮ ಪರಿಸರದ ವಿದ್ಯಮಾನಗಳನ್ನು ದಾಖಲಿಸುವ ಇಚ್ಛೆಯಿಂದ ಬಹುತೇಕ ಆತ್ಮ ಕಥೆಗಳು ಹುಟ್ಟಿಕೊಂಡಿರುವ ಸಾಧ್ಯತೆಯಿದೆ. ಇನ್ನು ಆತ್ಮ ಕಥೆಗಳು ಘಟನಾ ಪ್ರಧಾನವಾಗಿರುತ್ತವೆ. ಜೊತೆಗೆ ನೇರ ನಿರಾಡಂಬರ ನಿರೂಪಣಾ ಶೈಲಿಯಿಂದ ಉತ್ತಮ ಸಾಹಿತ್ಯ ಸ್ವರೂಪವನ್ನು ಪಡೆದುಕೊಂಡಿರುತ್ತವೆ. ಇವುಗಳು ಏಕ ವ್ಯಕ್ತಿ ಕರ್ತೃ ರಚನೆಗಳಾದರು, ಇವುಗಳ ವಿಷಯದ ವ್ಯಾಪ್ತಿ ಸಮಕಾಲೀನ ಮತ್ತು ಚಾರಿತ್ರಿಕ ಸಂಗತಿಗಳಾದ ಸಮಾಜಿಕ, ಧಾರ್ಮಿಕ, ಆರ್ಥಿಕ, ಶೈಕ್ಷಣಿಕ ಹೀಗೆ ಹಲವು ಹತ್ತು ಪರಿಸರಗಳಿಂದ ಕೂಡಿದ್ದಾಗಿರುತ್ತದೆ. ಅಂದರೆ “ವ್ಯಕ್ತಿಯೊಬ್ಬ ತಾನು ಬದುಕಿದ ರೀತಿಯನ್ನು ತಾನೇ ಬರೆದುಕೊಳ್ಳುವುದು ಆತ್ಮ ಕಥೆಯಾದರೆ; ಅದೇ ವ್ಯಕ್ತಿಯ ಬದುಕಿನ ರೀತಿಯನ್ನು ಬೇರೊಬ್ಬರು ಬರೆದರೆ ಅದು ಜೀವನಚರಿತ್ರೆಯೆನಿಸುತ್ತದೆ. ಈ ಎರಡೂ ಸಾಹಿತ್ಯ ಪ್ರಕಾರ ರಚನೆಗೆ ಆಕರ ಸಾಮಗ್ರಿಯೆಂದರೆ ದಿನಚರಿ. ದಿನಚರಿಯ ಮುಂದುವರಿಕೆ ಆತ್ಮ ಕಥೆಯಾಗಬಹುದಾದರೊ ಎಲ್ಲವೂ ಆತ್ಮ ಕಥೆಗಳಲ್ಲ. ಇದರ ಜೊತೆಗೆ ಪತ್ರಗಳು, ಜರ್ನಲ್‌ಗಳಂಥ ಪ್ರಮುಖ ಆಕರಗಳ ಸಹಾಯದಿಂದ ಆತ್ಮ ಕಥೆ ಸಿದ್ಧವಾಗುತ್ತದೆ. ಬಹುತೇಕ ಆತ್ಮ ಕಥೆಗಳು ಜೀವನಚರಿತ್ರೆಯಲ್ಲಿ ಸೇರಿ ಹೋಗಿರುತ್ತವೆಯೇ ಹೊರತು ದಿನಚರಿಯಂತೆ ಸ್ವತಂತ್ರ್ಯ ಅಸ್ತಿತ್ವ ಪಡೆದುಕೊಂಡಿರುವುದಿಲ್ಲ”. (ಕನ್ನಡ ದಾಖಲು ಸಾಹಿತ್ಯ: ಡಾ. ಕೆ. ರವೀಂದ್ರನಾಥ, ಪ್ರಸಾರಾಂಗ ಕನ್ನಡ ವಿ. ವಿ. ಹಂಪಿ. ಪುಟ ೯೯) ಹೀಗಾಗಿ ಅನ್ಯರಿಂದ ರಚನೆಯಾದುದಾಗಿರದೆ; ವ್ಯಕ್ತಿ ತನ್ನ ಬದುಕನ್ನು ಕುರಿತು ಸಿಂಹಾವಲೋಕನ ಮಾಡಿಕೊಂಡ ಜೀವನಗಾಥೆ. ವಾಸ್ತವದ ಜೊತೆಗೆ ಕಲಾತ್ಮಕತೆ ಈ ಸಾಹಿತ್ಯ ರಚನೆಯ ಜೀವನಾಡಿ. ವ್ಯಕ್ತಿ ಚರಿತ್ರೆಯ ಜೊತೆಗೆ ವ್ಯಕ್ತಿತ್ವ (ಚಾರಿತ್ರಿಕ) ಚರಿತ್ರೆ ರೂಪಗೊಳ್ಳುವುದು ಇದರ ವಿಶೇಷ. ನಿದರ್ಶನಕ್ಕೆ ಗಾಂಧೀಜಿಯವರ ‘ನನ್ನ ಸತ್ಯಶೋಧನೆ’ಯಲ್ಲಿ ಅವರ ಬದುಕಿನ ಸಿದ್ಧಾಂತಗಳಾದ ಸತ್ಯ, ಅಹಿಂಸೆ, ತ್ಯಾಗಗಳು ಹೇಗೆ ಅವರ ವ್ಯಕ್ತಿತ್ವ ಅನಾವರಣಕ್ಕೆ ಕಾರಣಗಳಾಗಿದ್ದವೆಂಬುದನ್ನು ಗಮನಿಸಬಹುದು. ಹೀಗೆ ಒಬ್ಬ ವ್ಯಕ್ತಿ ಬದುಕಿನುದ್ದಕ್ಕೂ ಅನುಸರಿಸಿದ ಜೀವನ ಪದ್ಧತಿ, ಆಚರಣೆಗೆ ತಂದ ತತ್ವ ಸಿದ್ಧಾಂತ; ಕಂಡುಂಡ ಅನುಭವಗಳಂತಹ ವಾಸ್ತವ ಸಂಗತಿಗಳ ಕಲಾತ್ಮಕ ಸಾಹಿತ್ಯ ಆತ್ಮಕಥೆಗಳು. ಬಹುತೇಕ ಆತ್ಮಚರಿತ್ರೆಗಳನ್ನು ಗಮನಿಸಿದಾಗ ವಸ್ತುಸ್ಥಿತಿ ದೃಷ್ಟಿಯಿಂದ ಕೆಲವು ಸಂದೇಹಗಳು ಕಾಡುತ್ತವೆ. ಉದಾಹರಣೆಗೆ ಆತ್ಮ ಕಥೆಗಾರರಲ್ಲಿ ಕೆಲವರು ಉತ್ತಮ ಸ್ಥಿತಿಯಲ್ಲಿಯೇ ಬದುಕಿ ಬೆಳೆದಿರುತ್ತಾರೆ. ಆದರೆ ನಿರ್ಗತಿಕರಾಗಿ ಜನಿಸಿ ಸಾಧನೆಗಳಿಂದ ಉನ್ನತ ಸ್ಥಾನ ಪಡೆದವರಂತೆ ಚಿತ್ರಿಸಿಕೊಂಡಿರುತ್ತಾರೆ. ಇನ್ನು ಕೆಲವರು ನಿರ್ಗತಿಕರಾಗಿರುತ್ತಾರೆ. ಹೇಳಿಕೊಳ್ಳಲು ಸಂಕೋಚಗೊಂಡು ನಿಜಸ್ಥಿತಿಯನ್ನೇ ಮರೆಮಾಚಿರುತ್ತಾರೆ. “ಪ್ರಾಚೀನ ನಮ್ಮ ಕವಿಗಳಿಗೆ ಆತ್ಮ ಚರಿತ್ರೆಗಿಂತ ಆತ್ಮ ಪ್ರಶಂಸೆ ಇಷ್ಟ ವಸ್ತು. ಈ ಪ್ರಶಂಸೆಯ ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಯಿತು ಅವರ ಚರಿತ್ರೆ. ವೀರನಾರಾಯಣನೇ ಕವಿ ಲಿಪಿಕಾರ ಕುಮಾರವ್ಯಾಸ ಎಂಬ ಸಮರ್ಪಣಭಾವದ ಕವಿಗಳಂತೂ ತಮ್ಮ ಚರಿತ್ರೆಯ ಚಕಾರ ಶಬ್ಧವನ್ನೆತ್ತಲಿಲ್ಲ. ಸಾಲುದಕ್ಕೆ ಆ ಮತಮುಗ್ಧರು ಸುಳ್ಳು ಕಥೆಗಳ ಮುಳ್ಳು ಮರಗಳನ್ನೇ ಬಿತ್ತಿದರು. ಹೀಗಾಗಿ ಕನ್ನಡಿಗರ ಸತ್ಯಕಥೆ ಕಟ್ಟು ಕಥೆಯಲ್ಲಿ ಕರಗುತ್ತ ಬಂದಿತು.” (ಕವಿರಾಜ ಮಾರ್ಗ ಪರಿಸರದ ಕನ್ನಡ ಸಾಹಿತ್ಯ. ಡಾ. ಎಂ. ಎಂ. ಕಲಬುರ್ಗಿ; ಕರ್ನಾಟಕ ವಿ. ವಿ. ಪುಟ ೩) ಎಂದು ಹೇಳುವ ಕಲಬುರ್ಗಿಯವರ ಮಾತನ್ನು ಆಧುನಿಕ ಆತ್ಮಚರಿತ್ರೆಗಳಿಗೆ ಅನ್ವಯಿಸಿ ಹೇಳಿದರೆ ತಪ್ಪಾಗಲಿಕ್ಕಿಲ್ಲ. ಪ್ರಸ್ತುತ ಲೇಖನ ಹತ್ತು ವರ್ಷಗಳಲ್ಲಿ (೧೯೯೧ – ೨೦೦೦) ರಚನೆಗೊಂಡ ಆತ್ಮ ಚರಿತ್ರೆಗಳನ್ನು ಸಮೀಕ್ಷೆಗೊಳಪಡಿಸುವುದು ಅಸಾಧ್ಯವಾದ ಮಾತು ಕೃತಿಗಳ ಅನುಪಲಬ್ಧತೆ ಹಾಗೂ ಪುಟಗಳ ವಿಸ್ತಾರವಾದ ಭಯದಂತಹ ಹಲವಾರು ಕಾರಣಗಳಿಂದ ಪ್ರಾತಿನಿಧಿಕವಾಗಿ ಮಾತ್ರ ಆತ್ಮಕಥೆ ಕೃತಿಗಳ ಹೆಜ್ಜೆ ಗುರುತುಗಳನ್ನು ಇಲ್ಲಿ ಗುರುತಿಸಿಕೊಡಲಾಗಿದೆ.

ಬಹುಕು ಅರ್ಥಪೂರ್ಣವಾಗಬೇಕಾದರೆ ವಾಸ್ತವದ ಅರಿವಿರಬೇಕು. ಜೀವನದಲ್ಲಿ ಬಂದ ಕಷ್ಟ – ನಷ್ಟಗಳನ್ನು ಧೈರ್ಯವಾಗಿ ಎದುರಿಸುವ ಮನೋದಾಷ್ಟ್ಯ ನಮ್ಮಲ್ಲಿರಬೇಕು. ನಾವು ಕಲ್ಪನೆ ಮಾಡಿಕೊಂಡಂತೆ ಎಂದೂ ಜೀವನವಿರುವುದಿಲ್ಲ. ಅವುಗಳಿಗೆಲ್ಲ ಸ್ಥಿತ ಪ್ರಜ್ಞರಾಗಿದ್ದಾಗ ಮಾತ್ರ ಬಾಳಿನಲ್ಲಿ ಗುರಿ ತಲಪಬಹುದು. ಹೀಗೆ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಂಡು ಬದುಕಿದವರ ಚರಿತ್ರೆಗಳಾಗಿವೆ, ಆತ್ಮಕಥೆಗಳು. ಇಲ್ಲಿ ಕೇವಲ ಜೀವನದ ಪಯಣದ ವಿವರಣೆ ಇರುವುದಿಲ್ಲ. ಜೊತೆಗೆ ಬದುಕಿನ ಎಡರು ತೊಡರುಗಳು; ಅಸ್ತಿತ್ವದ ಹೋರಾಟಗಳು, ಆತ್ಮಕಥೆಯಲ್ಲಿ ದಾಖಲೀಕರಣಗೊಂಡಿವೆ. ಆತ್ಮಕಥೆಗಳು ನಮ್ಮ ಜೀವನಕ್ಕೆ ಹೊಸ ತಿರುವನ್ನು ನೀಡುತ್ತವೆ ಹಾಗೂ ಓದುಗರಲ್ಲಿ ಆತ್ಮಸ್ಥೈರ್ಯವನ್ನು ಮೂಡಿಸುತ್ತವೆ. ತಮ್ಮದೇ ಆದ ಕ್ಷೇತ್ರದಲ್ಲಿ ಸೇವೆಗೈದ ಎಷ್ಟೋ ವಿದ್ವಾಂಸರು, ತತ್ವಜ್ಞಾನಿಗಳು, ರಾಜಕಾರಣಿಗಳು, ಸಾಹಿತಿಗಳು ರಂಗ ಕಲಾವಿದರು, ತಂತ್ರಜ್ಞರು, ಇವರ ಜೀವನದ ಕಹಿ ಅನುಭವಗಳೇ ಅವರಿಗೆ ಸೋಪಾನವಾದುದನ್ನು ಇಂದಿನ ಸೋಲು ಮುಂದಿನ ಗೆಲುವಿಗೆ ಹಾದಿ ಮಾಡಿಕೊಟ್ಟಿದ್ದನ್ನು ಹಾಗೂ ಅತಿಯಾದ ಸಂಕಷ್ಟಗಳೇ ಸಂತೋಷಕ್ಕೆ ಕಾರಣವಾದ ಬಗೆಯನ್ನು ತುಂಬಾ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. ಕೆಲವು ಆತ್ಮ ಕಥೆಗಳಂತೂ ವೈಚಾರಿಕ ಸಾಹಿತ್ಯಕ್ಕೆ ಪರಮಾವಧಿ ನಿದರ್ಶನಗಳೆನಿಸಿವೆ. ನ್ಯಾಯ ನಿಷ್ಠುರ ದಾಕ್ಷಿಣ್ಯ ಪರನಲ್ಲದ ಮನಸ್ಥಿತಿಯಲ್ಲಿ ಅವರ ವಿಚಾರಗಳನ್ನು ನಿರ್ಭಿಡೆಯಿಂದ ಹೇಳಿದ್ದಾರೆ. ಇದರಿಂದಾಗಿ ವ್ಯಕ್ತಿಯ ನೈತಿಕ ಹಾಗೂ ವೈಚಾರಿಕ ಗುಣಮಟ್ಟವನ್ನು ಅಳೆಯಲು ಸಾಧ್ಯವಾಗುತ್ತದೆ.

೧೯೯೪ರಲ್ಲಿ ಆತ್ಮಕಥೆಗಳ ರಚನೆ ತುಂಬಾ ಕಡಿಮೆ. ಇಲ್ಲಿ ಲಭ್ಯ ಕೃತಿಗಳು ನಾಲ್ಕು ಮಾತ್ರ ಮಲ್ಲಾಡಿ ಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮೀಜಿಯವರ ಆತ್ಮಕಥೆ “ಜೋಳಿಗೆಯ ಪವಾಡಹೆಸರೇ ಸೂಚಿಸುವಂತೆ ಜೋಳಿಗೆಯ ಪವಾಡವನ್ನು, ನೂರು ವರುಷಗಳ ಆನುಭವಗಳನ್ನು ವಿವರ ವಿವರವಾಗಿ ಈ ಕೃತಿ ದಾಖಲಿಸಿದೆ. ಇದರಲ್ಲಿ ಹತ್ತಾರು ಸಂಘ ಸಂಸ್ಥೆಗಳು ಮಾಡಬಹುದಾದುದನ್ನು ಒಬ್ಬ ವ್ಯಕ್ತಿ ಮಾಡಿ ತೋರಿಸಿದ ಸಾಧನೆಯ ಪುರಾವೆ ಇದೆ. ಆಧ್ಯಾತ್ಮ ಮತ್ತು ವೈಚಾರಿಕತೆಗಳ ಸಂಘರ್ಷದ ನಡುವಿನ ಉದಾರವಾದಿ ನೈತಿಕತೆಯ ಮಂಡನೆ ಇದೆ. ಹೊಸ ನಾಡು ಕಟ್ಟುವ ಆಶಯದ ಪ್ರಾಥಮಿಕ ತುಡಿತವಿದೆ.

ನಾನೊಬ್ಬಸಾರ್ವಜನಿಕಕೆ. ಚನ್ನ ಬಸವನಗೌಡರ ಆತ್ಮಕಥೆ. ಗೌಡರು ತಮ್ಮ ಬಾಲ್ಯ, ಶಿಕ್ಷಣ, ನೌಕರಿ, ರಾಜಕೀಯ ಜೀವನ ಕುರಿತು ನಿರ್ಭಾವುಕರಾಗಿ ಬರೆದಿದ್ದಾರೆ. ಕೆಲವು ಕಡೆ ಆತ್ಮ ಪ್ರತ್ಯಯ ದೌರ್ಬಲ್ಯದಂತೆ ಕಂಡೂ ಖಾಸಗಿ ಜೀವನದ ಎಂಥ ವಿಷಯವೇ ಇರಲಿ ಸೋಸುವ ಕ್ರಮವನ್ನಂತೂ ಅನುಸರಿಸಿದಂತಿಲ್ಲ. ಹಾಗಾಗಿ ಆತ್ಮಕಥೆಗೆ ಒಂದು ರೀತಿಯ ಗಟ್ಟಿತನ ಪ್ರಾಪ್ತವಾಗಿದೆ. ನೌಕರಿಗೆ ರಾಜೀನಾಮೆ ಕೊಟ್ಟು ಸಾರ್ವಜನಿಕ ಸೇವೆಗೆ ತಮ್ಮನ್ನು ಅರ್ಪಿಸಿಕೊಂಡ ನಂತರದ ದಿನಗಳು ಆಸಕ್ತಿದಾಯಕವಾಗಿವೆ. ಗೌಡರು ತಮ್ಮ ರಾಜಕೀಯ ಜೀವನದಲ್ಲಿ ಮಾಡಿದ ಹೋರಾಟದ ಸ್ವರೂಪ ಚರಿತ್ರೆಯ ನಿರ್ದಿಷ್ಟ ಭಾಗ ಒಂದು ಎನಿಸುತ್ತದೆ.

ಪೆರ್ಲ ಕೃಷ್ಣಭಟ್ ಅವರ ಬದುಕಿ ಫಲವೇನು?” ಎಂಬುದು. ಭಟ್ಟರು ತಾವು ನಂಬಿದ ಮೌಲ್ಯ ಸಿದ್ಧಾಂತಕ್ಕೆ ಅನುಗುಣವಾಗಿ ಇದನ್ನು ರಚಿಸಿದಂತಿದೆ. ತಮ್ಮ ಜೀವನದ ಯಾವುದೇ ಸಣ್ಣಪುಟ್ಟ ವಿಷಯಗಳಿರಲಿ ಅವನ್ನು ಹಾಗೆಯೆ ಯಥಾವತ್ ಮಂಡಿಸಿಲ್ಲ. ಬದಲಾಗಿ ಅಂಥವನ್ನು ಸಾರ್ವಜನಿಕ ಬದುಕಿನಲ್ಲಿಟ್ಟು ತಮ್ಮದೇ ದಾಟಿಯಲ್ಲಿ ವಿಮರ್ಶೆ ವ್ಯಾಖ್ಯಾನಗಳಿಗೆ ಒಳಪಡಿಸಲಾಗಿದೆ. ಇಂಥ ವ್ಯಾಖ್ಯೆಗಳು ಮಧ್ಯಮ ವರ್ಗದ ಉದಾರವಾದ ಮಾನವತಾವಾದ ಹಾಗೂ ಗಾಂಧಿವಾದಗಳಿಂದ ಪ್ರೇರಿತವಾದಂತಿವೆ.

ಅರವಿಂದ ಮಾಲಗತ್ತಿಯವರ ಆತ್ಮಕಥನ ಗೌರ್ಮೆಂಟ್ ಬ್ರಾಹ್ಮಣ್“. ಮೇಲಿನ ಮಾದರಿಗಿಂತ ಭಿನ್ನವಾದುದರಿಂದ ಬೇರೆ ಬಗೆಯಲ್ಲಿ ಇದನ್ನು ಚರ್ಚಿಸಬೇಕಾಗಿದೆ. ಈಗಾಗಲೇ ಮರಾಠಿಯಲ್ಲಿ ಉಚಲ್ಯಾ, ಅಕ್ರಮ ಸಂತಾನ ಎಂಬೆರಡು ದಲಿತ ಆತ್ಮಕಥನಗಳು ಬಂದಿವೆ. ತಮ್ಮ ಬದುಕಿನ ದಟ್ಟ ಅನುಭವಗಳನ್ನು ಆಭಿವ್ಯಕ್ತಿಸುವಲ್ಲಿ ಅಲ್ಲಿಯ ಲೇಖಕರು ಅಸಮಾನ್ಯ ಎದೆಗಾರಿಕೆ ತೋರಿದ್ದಾರೆ. ಮಾಲಗತ್ತಿಯವರು ಕೂಡ ತಮ್ಮ ಗೌರ್ಮೆಂಟ್ ಬ್ರಾಹ್ಮಣದ ಮೂಲಕ ತಮ್ಮ ಬದುಕಿನ ದಟ್ಟ ಅನುಭವಗಳನ್ನು ಪ್ರಕಟಪಡಿಸಿದ್ದಾರೆ. ಇದರಲ್ಲಿ ೨೨ ಬಿಡ ಬರಹಗಳಿವೆ. ಇವು ಸರ್ಕಾರಿ ಕೆಲಸಕ್ಕೆ ಸೇರುವವರೆಗಿನ ವಿಚಾರಗಳಿಗೆ ಮಾತ್ರ ಸಂಬಂಧಿಸಿವೆ. ಲೇಖಕರ ಪ್ರಕಾರ ಇದು ಮೊದಲ ಕಂತಿನ ಕೃತಿ. ಯಾವುದೇ ವಿಷಯಕ್ಕೆ ಸಂಪೂರ್ಣ ಸಾಹಿತ್ಯಿಕ ಲೇಪನ ದೊರೆತಾಗ ಅದು ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಬದಲಾವಣೆಯಾಗಿರುತ್ತದೆ. ದಲಿತ ತನವನ್ನು ಸರಳವಾಗಿ ಹಿಡಿದಿಡಲು ಈ ದಾರಿ ಹಿಡಿದಿದ್ದೇನೆ ಎಂಬಂತೆ ಮಾಲಗತ್ತಿಯವರೇ ಹೇಳಿಕೊಂಡಿದ್ದಾರೆ. ಇಲ್ಲಿನ ಅನೇಕ ಅನುಭವಗಳನ್ನು ಹೇಳಿಕೊಳ್ಳುವಲ್ಲಿ ಲೇಖಕರು ಹೊಯ್ದಾಟ ಯಾತನೆ ವೇದನೆಗಳನ್ನು ಅನುಭವಿಸಿದ್ದಾರೆ. ಇಂಥ ಸಂಕೀರ್ಣತೆ, ಸಂದಿಗ್ಧತೆ ಹಾಗೂ ವ್ಯಕ್ತಿ ಕೇಂದ್ರಿತ ಇಲ್ಲವೆ ಸಮಾಜ ಕೇಂದ್ರಿತ ನೆಲೆಯದೋ ಜೊತೆಗೆ ಇದರಲ್ಲಿ ಯಾವುದು ಪ್ರಧಾನ ಯಾವುದು ಅನುಷಂಗಿಕ? ಈ ದಿಕ್ಕಿನಲ್ಲಿ ಗಂಭೀರ ಚರ್ಚೆಯೂ ಅವಶ್ಯವಿದೆ. ಕೆಲವರ ಖಾಸಾ ಅನುಭವಗಳಿಗೆ ಸಾಮಾಜಿಕ ಅಂಗೀಕಾರ ದೊರೆತು ಮೌಲ್ಯಪ್ರಾಪ್ತವಾಗುತ್ತವೆ. ಚಾರಿತ್ರಿಕ ಗತಿಯಲ್ಲಿ ಇವು ಉಳ್ಳವರ ಇಲ್ಲವೆ ಪ್ರಭುತ್ವದ ಮುಖವಾಣಿಗಳಾಗಿರುತ್ತವೆ. ಇನ್ನು ಕೆಲವರ ಖಾಸಾ ಅನುಭವಗಳು ಮೇಲಿನದಕ್ಕೆ ಮುಖಾಮುಖಿಯಾಗುತ್ತವೆ. ಈ ನಿಟ್ಟಿನಲ್ಲಿ ಮಾಲಗತ್ತಿಯರದು ದಲಿತ ಆತ್ಮ ಚರಿತ್ರೆಗಳಲ್ಲಿ ಮೊದಲ ಪ್ರಯತ್ನವೆನ್ನಬೇಕು.

ದಲಿತ ಕವಿ ಸಿದ್ಧಲಿಂಗಯ್ಯರ ಆತ್ಮಕಥೆ ಊರು ಕೇರಿ ಬಡತನ ಮತ್ತು ಪ್ರತಿಭೆಗಳ ನಡುವಣ ಸಂಬಂಧ ಹೊಂದಿದೆ. ದಲಿತ ಸಾಹಿತಿಗಳ ಆತ್ಮ ಕಥೆಗಳು. ಏಕಾಕಲಕ್ಕೆ ಆಸಕ್ತಿ ಮತ್ತು ಆತಂಕಗಳನ್ನು ಹುಟ್ಟಿಸುತ್ತವೆ. ಒಂದು ಹೊಸ ಲೋಕವೊಂದರ ಶೋಧನೆ ಎಂಬ ಕಾರಣಕ್ಕೆ ಆಸಕ್ತಿ, ಸವರ್ಣೀಯ ಸಮಾಜದ ಹಿಂಸೆ ಆತ್ಮಕಥನದ ಸಾಹಿತ್ಯ ಕೃತಿಯಲ್ಲಿಯೇ ಎದ್ದು ಕಾಣುವುದು ಎಂಬ ಕಾರಣಕ್ಕೆ ಆತಂಕ. ಮಹಾರಾಷ್ಟ್ರೀಯ ಅಥವಾ ಕನ್ನಡದ ದಲಿತ ಲೇಖಕರ ಆತ್ಮ ಕಥನಗಳನ್ನು ಓದಿದಾಗ ಒಂದು ‘ಬೋನ್ಸಯ್’ ಮರವನ್ನು ಕಂಡ ಅನುಭವವಾಗುತ್ತದೆ.

ದಲಿತ ಲೇಖಕರ ಕೃತಿಗಳಲ್ಲಿ ನಾವು ನಿರೀಕ್ಷಿಸಬಹುದಾದ ಅನೇಕ ಅಂಶಗಳು ಇವರ ಆತ್ಮ ಕತೆಯಲ್ಲಿವೆ. ಬಡತನ, ರೊಚ್ಚು, ಅವಮಾನ ಇತ್ಯಾದಿಗಳೆಲ್ಲ ಇವೆ. ಆದರೆ ಇಡೀ ಕೃತಿಯಲ್ಲಿ ಹೋಸದಾಗಿ ಅನಿರೀಕ್ಷಿತವಾದ ಒಂದು ಮುಖ್ಯಾಂಗವೂ ಇದೆ. ಅದು ಬಡತನ ಮತ್ತು ಹಿಂಸೆಯ ಬಗ್ಗೆ ಭೀತಿಯ ಗೈರುಹಾಜರಿ. ಈ ಕೃತಿಯ ವಸ್ತು ದಲಿತ ಕೃತಿಗಳಿಗೆ ತೀರಾ ಸಾಮಾನ್ಯವಾದದ್ದು, ಸಹಜವಾದದ್ಧು. ಆದರೆ ಈ ವಸ್ತುವನ್ನು ನಿರ್ವಹಿಸುವ ಧ್ವನಿ ಭಿನ್ನವಾದದ್ದು ಚೇತೋಹಾರಿಯಾದದ್ದು. ಬಡತನ, ಜಾತಿ, ಅವಮಾನದ ಭೀತಿಗಳಿಂದ ದಲಿತ ಕಥೆ ಸುಳ್ಳು, ಆದರೆ ಅವನ್ನು ಪ್ರತಿಭೆಯಲ್ಲಿ ಲೇಖಕರು ಗೆಲ್ಲುತ್ತಾರೆ ಎಂಬುದು ಸತ್ಯ. ಈ ಆತ್ಮಕಥೆ ಬಾಲ್ಯ ಮತ್ತು ಕಾಲೇಜು ದಿನಗಳಷ್ಟನ್ನೇ ಕುರಿತಿದೆ ಎಂಬುದೊಂದು ವಿಶೇಷ.

ಅರಣ್ಯಾಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಯಲ್ಲಪ್ಪ ರೆಡ್ಡಿಯವರು ತುಳಿದದ್ದು ಹಸಿರು ಹಾದಿಯನ್ನು. ಹಸಿರೆಂದರೆ ಬದುಕಿ, ಬಾಗಿ ಬೀಗುವ ಮರಗಿಡಗಳು ಅರಣ್ಯವೆಂದರೆ ಹಸಿರು ರಾಜ್ಯವೇ. ಅದು ಹಸಿರಾಗಿರುವಷ್ಟು ಕಾಲಮಾನ ನಮ್ಮ ಹಸಿವು ಇಂಗುತ್ತದೆ. ಕಾಡಿಗೂ ಮನುಷ್ಯನಿಗೂ ಇರುವ ನಂಟು ನಿಕಟವಾದದ್ದು. ನಂಟಿನ ಕೊಂಡಿ ಹಸಿರು. ಕಾಡು ತನ್ನ ಹಸಿರನ್ನು ಕಳೆದುಕೊಂಡು ಬರಡಾದರೆ ಮನುಷ್ಯನ ಬದುಕಿನಲ್ಲಿರುವ ಹರುಷವು ಮರೆಯಾಗುತ್ತದೆ. ಕಾಡಿನ ಹಸಿರನ್ನು ಉಳಿಸಿಕೊಳ್ಳುವುದು ಬುದ್ಧಿವಂತಿಕೆಯ ಲಕ್ಷಣ. ಹಸಿರು ಹಾದಿಯನ್ನು ಹಸಿರಾಗಿಯೇ ಉಳಿಸುವ ಕಳಕಳಿಯಿಂದಲೇ ಅವರು ತಮ್ಮ ಅಧಿಕಾರಾವಧಿಯನ್ನು ಕಳೆದರು. ಅವರ ಬರವಣಿಗೆಯಲ್ಲಿ ಸಾಮಾಜಿಕ ಕಳಕಳಿ ಎದ್ದು ಕಾಣುತ್ತದೆ. ಸರಕಾರದ ಒಂದು ಇಲಾಖೆಯಲ್ಲಿ ಬಂದೊದಗುವ ಸಮಸ್ಯೆಗಳು, ಅವನ್ನು ಪರಿಹರಿಸಲು ಇರುವ ಹಲವಾರು ದಾರಿಗಳು, ರಾಜಕಾರಣಿಗಳು ಸ್ವಯಂ ಸ್ಪೂರ್ತಿಯಿಂದಲೋ ಅಥವಾ ಬೇರೆಯವರ ಪ್ರೇರಣೆಯಿಂದಲೋ ವಹಿಸುವ ವೇಷಗಳು ಇದರಿಂದಾಗುವ ಏರುಪೇರುಗಳು, ಅಂಕುಡೊಂಕುಗಳು, ಕಹಿಕಸರುಗಳು ಪ್ರಾಮಾಣಿಕತೆಗೆ ಇರುವ ಆತಂಕಗಳು. ಗೆದ್ದ ಎತ್ತಿನ ಬಾಲ ಹಿಡಿಯುವ ಪ್ರವೃತ್ತಿಯುಳ್ಳ ಉದ್ದಿಮೆಗಳು, ಹಣದ ಆಸೆಗೆ ಇರುವ ಹತ್ತು ಮುಖಗಳು, ಜೋರು ಜಬರದಸ್ತಿಗಳ ಪಾತ್ರ ದುರ್ಬಲರಿಗೆ ಒದಗುವ ಸಂಕಟ ನ್ಯಾಯಕ್ಕೆ ಅನ್ಯಾಯದಿಂದ ಒದಗುವ ಘಾಸಿ ಮುಂತಾದ ಸಾಮಾಜಿಕ ಆಸ್ಥಿರತೆಗೆ ಕಾರಣವಾಗುವ ಸಂಗತಿಗಳನ್ನು ಸ್ವಾರಸ್ಯವಾಗಿ ಈ ಆತ್ಮ ಕಥೆ ವಿವರಿಸುತ್ತದೆ.

ಉಪಜೀವನಕ್ಕಿಂತ ಜೀವನ ಮುಖ್ಯ. ವ್ಯಕ್ತಿ ಕೇಂದ್ರಿತವಾಗಿ ಬದುಕುವುದು ಉಪಜೀವನ, ಸಮಾಜ ಕೇಂದ್ರಿತವಾಗಿ ಬದುಕುವುದು ಜೀವನ, ಹೀಗೆ ಸಮಾಜ ಕೇಂದ್ರಿತವಾದ ಜೀವನವನ್ನು ಬದುಕಿನುದ್ದಕ್ಕೂ ಆರಿಸಿಕೊಂಡು, ಬದುಕಿದವರು ಕೋ. ಚನ್ನಬಸಪ್ಪನವರು. ಅವರ ನನ್ನ ಮನಸ್ಸು ನನ್ನ ನಂಬುಗೆತಮ್ಮೆಲ್ಲ ಹೋರಾಟಮಯ ಬದುಕನ್ನು ಚಿತ್ರಿಸಿದ್ದಾರೆ. ಆತ್ಮಕಥಾ ರಚನೆ ಅಷ್ಟೇನು ಸುಲಭವಲ್ಲದ ಕಲೆ. ಉತ್ಪ್ರೇಕ್ಷಿತ ಸ್ವಪ್ರಶಂಸೆಯಿಲ್ಲದೆ, ಶೃಂಗಾರವಿಲ್ಲದ ಸತ್ಯಾಂಶಗಳಿಂದ ಕೂಡಿದ ಮಾತುಗಳನ್ನು ಅರ್ಥಕ್ಕೆ ಊನಬಾರದಂತೆ ಬಳಸಿ ತನ್ನ ಬಗೆಗೆ ತಾನೇ ಬರೆದುಕೊಳ್ಳಲು ಧೈರ್ಯ ಮಾಡುವುದು ಸಾಹಸದ ಕೆಲಸವೇ ಸರಿ. ಅಂತಹ ಕಷ್ಟದ ಕೆಲಸವನ್ನು ಕೋ. ಚೆ. ತಮ್ಮ ನಿವೃತ್ತೋತ್ತರ, ಆತ್ಮಾವಲೋಕನ ಮಾಡಲು ಯತ್ನಿಸಿರುವುದೂ ಸ್ತುತಾರ್ಹ್ಯ. ಈ ಹೊತ್ತಿಗೆಯಲ್ಲಿ ೧೯೭೭ರಲ್ಲಿ ನ್ಯಾಯಾಂಗದಿಂದ ನಿವೃತ್ತರಾದ ನಂತರ ನಮ್ಮ ನಾಡಿನ ಈ ದೇಶದ ಸಾಹಿತ್ಯಿಕ ಸಾಮಾಜಿಕ, ರಾಜಕೀಯ ಮತ್ತು ನ್ಯಾಯಾಂಗದ ಪ್ರಚಲಿತ ಇತಿಹಾಸದ ಕಥನವನ್ನು ಬಿಚ್ಚಿಟ್ಟಿದ್ದಾರೆ. ವ್ಯಕ್ತಿ ನಿಮಿತ್ತ ಮಾತ್ರವಾಗಿ, ವ್ಯಕ್ತಿಯ ಕಾಲ, ದೇಶ, ಪರಿಸರ ಪ್ರಜ್ಞೆಯ ನಿಜವಾದ ಅನಾವರಣದಿಂದಾಗಿ ಆತ್ಮಕಥೆಗೆ ಮಹತ್ವ ಬರುತ್ತದೆ. ಈ ದೃಷ್ಟಿಯಿಂದ ನೋಡಿದಾಗ ಈ ಕೃತಿಗೆ ಆತ್ಮಚಾರಿತ್ರ್ಯದ ಮಹತ್ವ ಲಭ್ಯವಾಗುತ್ತದೆ. ಸಾಹಿತ್ಯಿಕ ಮತ್ತು ಚಾರಿತಿಕ ಮನ್ನಣೆಗಳು ಸಲ್ಲುತ್ತವೆ.

ಎಂ. ಗೋಪಾಲಕೃಷ್ಣ ಅಡಿಗರ ನೆನಪಿನ ಗಣಿಯಿಂದ ಅತ್ಮಕಥೆಯನ್ನು ಅವರು ತಮ್ಮ ಅನುಭವ ಕಥನವೆಂದು ಹೇಳಿಕೊಂಡಿದ್ದಾರೆ. ಅಡಿಗರು “ನನಗೆ ಎಪ್ಪತೆರಡು ವರ್ಷ ಎಂದು ನಂಬುವುದೇ ಕಷ್ಟ ನಿನ್ನೆಯೋ ಮೊನ್ನೆಯೋ ನಾನು ಸ್ಲೇಟು, ಪುಸ್ತಕ ತೆಗೆದುಕೊಂಡು ಮೊಗೇರಿ ಮನೆಯಿಂದ ಬಿಜೂರು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಂತಹ ನೆನಪಾಗುತ್ತದೆ. ಬಂದ ನೆನಪುಗಳು ಯಾವಾಗ ಎನ್ನುವುದು ತಿಳಿಯದೆ ಹಾದು ಹೋಗುತ್ತವೆ. ಯಾವ ಇಸವಿ ಎನ್ನುವುದು ತಿಳಿಯುವುದಿಲ್ಲ. ಕೆಲವು ಸಲ ಯಾವುದು ಮೊದಲು ಎನ್ನುವುದು ಕೂಡ ಮಸುಕು ಎಂದು ಅರೆಮನಸ್ಸಿನಿಂದಲೇ ನೆನಪಿನಗಣಿಯನ್ನು ವಾರಕ್ಕೊಮ್ಮೆ ಕನ್ನಡಪ್ರಭ ಪತ್ರಿಕೆಗೆ ಬರೆಯಲಾರಂಭಿಸಿದರು. ಆತ್ಮಕಥನ ಬರೆಯುವ ಯಾವ ಸಿದ್ಧತೆಯನ್ನು ಮಾಡಿಕೊಂಡಿದ್ದವರಲ್ಲ. ಆದರೆ ಅವರ ಕಾವ್ಯದಲ್ಲಿ ಅವರ ಏರುಪೇರು ಬದುಕಿನ ನೆನಪು ಹಾಗೂ ಅನುಭವಗಳ ದಟ್ಟಛಾಯೆ ಇದೆ. ಅನೇಕ ಮುಖ್ಯ ನೆನಪುಗಳು ನನ್ನ ಕವನಗಳಲ್ಲಿ ಸೂಚ್ಯವಾಗಿ ಬಂದಿವೆ. ಒಂದು ಕಾಲಕ್ಕೆ ನಲಿವನ್ನೋ, ಆಳಲನ್ನೋ ತಂದ ಇನ್ನೆಷ್ಟೋ ನೆನಪುಗಳು ನನ್ನ ಕಾವ್ಯಕ್ಕೆ ಅಷ್ಟೇನೂ ಉಪಯೋಗವಾಗದೆ ಉಳಿದಿವೆ. ಆಗಲೇ ನೆನಪು ಮಸಕಾಗಿರುವುದರಿಂದ ಗಣಿಯಿಂದ ಅರ್ಥಪೂರ್ಣವಾದ ಲೋಹದ ಅದಿರು ತೆಗೆಯುವುದು ಅಸಾಧ್ಯ ಎನಿಸುತ್ತದೆ. ಅಡಿಗರು ಮುಂದುವರಿದು ನಿಜವಾದ ಸಾಹಿತಿ ದೂರದಿಂದ ಎಷ್ಟು ದೊಡ್ಡವರಾಗಿ ಕಾಣುತ್ತಾರೋ ಅವನ ಸಂಗ ಹತ್ತಿರದಲ್ಲಿರುವವರೆಗೆ ಅಷ್ಟು ಅಪ್ಯಾಯಮಾನವಾಗಿ ಇರುವುದಿಲ್ಲ. ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂದು ಸರ್ವಜ್ಞ ಹೇಳಿದ್ದು ನಿಜವೆ, ಹಾಗೆ ದುರ್ಜನರ ಕೂಡ ಒಡನಾಟ ಬಚ್ಚಲಿನ ರೊಜ್ಜು ಎಂದಿದ್ದು ಸರಿ. ಆದರೆ ಪ್ರತಿಯೊಬ್ಬ ಮನುಷ್ಯನು ಅವನು ಸಾಹಿತಿ, ರಾಜಕಾರಣಿ, ಮಹಾನ್ ಋಷಿ ಯಾರೇ ಇರಲಿ. ಸೌಜನ್ಯ, ದೌರ್ಜನ್ಯಗಳ ದ್ವಂದ್ವದ ರಂಗಸ್ಥಳ ಎಂಬ ಮಾತು ನಿಜವೇ. ಮನಸ್ಸಿನ ಮೂಲ ಪ್ರವೃತ್ತಿಗಳಾದ ಒಳ್ಳೆಯತನ, ಕೆಟ್ಟತನ ಜೊತೆ ಜೊತೆಯಾಗಿಯೇ ಇರುತ್ತವೆ. ಸಜ್ಜನರು ತನ್ನ ಕೆಟ್ಟದ್ದನ್ನು ಹದ್ದು ಬಸ್ತಿನಲ್ಲಿಡುವಂತೆ ದುರ್ಜನನೂ ತನ್ನ ಒಳ್ಳೆತನವನ್ನು ಹತ್ತಿಕ್ಕಿ ಬದುಕುತ್ತಾನೆ. ಆದರೆ ಹತ್ತಿಕ್ಕಿದ ಇಂಥ ಮೂಲ ಪ್ರವೃತ್ತಿ ಎಂದೂ ನಿರ್ನಾಮವಾಗುವುದಿಲ್ಲ. ಯಾವ ಹೊತ್ತಿಗೆ ಬೇಕಾದರೂ ಆಕಸ್ಮಾತ್ ಎನ್ನುವಂತೆ ಅವಿಷ್ಕಾರಗೊಳ್ಳಬಹುದು. ಆದ್ದರಿಂದ “ದೂರದ ಬೆಟ್ಟ ನುಣ್ಣಗೆ” ಎಂಬ ಗಾದೆ ಸತ್ಯ. ಸಾಹಿತಿಯಾಗಿಯೇ ಈ ಮಾತನ್ನು ನಾನು ಹೇಳುತ್ತೇನೆ. ನಾನೆಂಥವನು ಎಂದು ತಿಳಿಯಲು ನನ್ನ ಸಂಗ ಮಾಡಬೇಕು ಎಂದು ಆತ್ಮಾವಲೋಚನ ಮಾಡಿಕೊಂಡಿದ್ದಾರೆ. ಅಡಿಗರ ಈ ಆತ್ಮನಿರೀಕ್ಷೆ ದ್ವಂದ್ವ ಗುಣಾವಗುಣಗಳನ್ನು ಈ ಪುಸ್ತಕದಲ್ಲಿ ಕಾಣಬಹುದಾಗಿದೆ.

ನೆನಪಿನಂಗಳದಲ್ಲಿಆತ್ಮಕಥನ ಬರೆದುಕೊಂಡಿರುವ ಜಿ. ಎಂ. ಪಾಟೀಲರಲ್ಲಿ ಚಿಕ್ಕಂದಿನಿಂದಲೇ ಸಂಗೀತ ಹಾಗೂ ಸಾಹಿತ್ಯದಲ್ಲಿ ಆಸಕ್ತಿ ಬೆಳೆದು ಬಂದಿದೆ. ಹೇಮರೆಡ್ಡಿ ಮಲ್ಲಮ್ಮ, ಬಡವರ ರೊಟ್ಟಿ, ಭಕ್ತ ಪ್ರಹ್ಲಾದ ಮೊದಲಾದ ನಾಟಕಗಳಲ್ಲಿ ಸ್ವತಃ ಪಾತ್ರಧಾರಿಗಳಾಗಿ ಅಭಿನಯಿಸಿದರು. ನಾಟಕದ ಮಾಸ್ತರರಾಗಿ ಹೇಮರೆಡ್ಡಿ ಮಲ್ಲಮ್ಮನ, ನಾಟಕವನ್ನು ಆಡಿಸಿದರು. ಭಾರತವೀರ, ಕರ್ಣಾ, ಜನತಾರಾಜ್ಯ ಎಂಬ ನಾಟಕಗಳನ್ನು ರಚಿಸಿದ್ದಾರೆ. ತಪ್ಪು ಯಾರದು? ಎಂಬ ಸಣ್ಣ ಕತೆಯನ್ನು ಚಿಕ್ಕವರಾಗಿರುವಾಗಲೇ ಬರೆದಿದ್ದಾರೆ. ನೃತ್ಯದಲ್ಲಿಯೂ ಸಾಕಷ್ಟು ಪರಿಣತಿ ಇರುವ ಪಾಟೀಲರು ಉತ್ತಮ ಗಾಯಕರು ಹೌದು. ಜೀವನದಲ್ಲಿ ಯಶಸ್ಸು ಸುಮ್ಮನೆ ಬರುವುದಿಲ್ಲ. ಜಿವನ ಯಾತ್ರೆಯು ಒಂದು ನಿರಂತರ ಘೋರ ಸಮರಾಭ್ಯಾಸ. ಈ ಮಹಾಯುದ್ಧದಲ್ಲಿ ಸೋಲು – ಗೆಲವು ಇದ್ದೇ ಇರುವುದು. ಯುದ್ಧದಲ್ಲಿ ಪರ್ಯಾವಸನ ಹೊಂದುವ ಜನರೇ ಅತ್ಯಧಿಕ. ಸಿದ್ಧಿಯು ಪ್ರಾಪ್ತವಾಗುವುದು. ಎಲ್ಲಿಯೋ ಕೆಲವರಿಗೆ ಮಾತ್ರ. ಸಿದ್ಧಿ ಎಂದರೆ ಗೌತಮ ಬುದ್ಧನು ಪಡೆದ ಸಿದ್ಧಿಯೇ ಆಗಬೇಕಿಲ್ಲ. ಪ್ರತಿಯೊಬ್ಬರಿಗೂ ಜೀವನದಲ್ಲಿ ಅವರವರ ಸಾಹಸಕ್ಕನುಗುಣವಾದ ಸಿದ್ಧಿ ಇದ್ದೇ ಇರುತ್ತದೆ. ಆ ಅರ್ಥದಲ್ಲಿ ಶ್ರೀ ಜಿ. ಎಂ. ಪಾಟೀಲರ ಸಾಧನೆ ಗಮನಾರ್ಹ. ಇವರು ಸಾಹಸದಿಂದ ಬದುಕಿ ಶ್ರೇಯಸ್ಸುನ್ನು ಪಡೆದ ಮಹನೀಯರು. ತಮ್ಮ ಜೀವನ ಗಾಥೆಯನ್ನು ಅವರು ಅತ್ಯಂತ ಸುಂದರವಾಗಿ ನಿರೂಪಿಸಿದ್ದಾರೆ. ಇಲ್ಲಿ ಉಪಯೋಗಿಸುವ ಭಾಷೆ ತುಂಬಾ ಸರಳ ಮತ್ತು ನೇರ ನಿರೂಪಣಾ ಸಂಯಮ ತೋರಿದ್ದಾರೆ. ಎಲ್ಲಿ ಎಷ್ಟು ಹೇಳಬೇಕೋ ಅಷ್ಟನ್ನು ಮಾತ್ರ ಹೇಳಿದ್ದಾರೆ. ಅನುಭವಿಕ ವಕೀಲರಲ್ಲಿಯೂ ಇಂಥ ಬರವಣಿಗೆಯ ಹಿಡಿತವನ್ನು ನೋಡಿದರೆ ಉತ್ತಮ ಸಾಹಿತ್ಯ ಬರವಣಿಗೆಯ ರೀತಿ ಕರಗತವಾಗಿದೆ. ಈ ಕಾರಣವಾಗಿ ಓದುಗರಿಗೆ ಕುತೂಹಲವನ್ನು ಕಾಯ್ದುಕೊಳ್ಳುವ ಸೊಗಸಾದ ರಚನೆಯಾಗಿದೆ. ವೃತ್ತಿಯಿಂದ ವಕೀಲ – ಪ್ರವೃತ್ತಿಯಿಂದ ಕಲಾವಿದರಾದ ಪಾಟೀಲರ ಆತ್ಮಕಥೆಯೆಂದರೆ ಕನ್ನಡ ಕಲಾವಿದರ ಜೀವನ ಚರಿತ್ರೆಯೇ ಆಗಿ ಮಹತ್ವ ಪಡೆಯುತ್ತದೆ.

ಎಮ್‌. ರಾಮಚಂದ್ರ ಅವರ ನೆನಪಿನ ಬುತ್ತಿ ಇಲ್ಲಿ ಉತ್ಸವ ಸಂಘಟನೆಗಳಿಗೆ ಸಂಬಂಧಿಸಿದ ಐದು ಲೇಖನಗಳಿವೆ. ಕೆಲವು ಸಂದರ್ಭಗಳಲ್ಲಿ ವಿಶೇಷಗಳ ಸ್ಮೃತಿ ಸಂಚಯ ಇದಾಗಿದೆ. ಒಲವಿಗೆ ಒಲವಲ್ಲದೆ ಬೇರೇನಿದೆ ಕೊಡುಗೆ? ಎಂದು ಪ್ರಶ್ನಿಸುವಲ್ಲಿ ಇವರ ಅಭಿಮಾನ ಹಾಗೂ ಪ್ರೀತಿ – ಪರ ಪದುಕನ್ನು ಅರಿಯಬಹುದಾಗಿದೆ. ಸಮ್ಮೇಳನಗಳು. ಶ್ರೀ ಕ್ಷೇತ್ರ ಧರ್ಮಸ್ಥಳ, ಅಲ್ಲಿ ಸ್ಥಾಪಿತವಾದ ಭಗವಾನ್‌ ಬಾಹುಬಲಿ ಮೂರ್ತಿ ಮತ್ತು ಕ್ಷೇತ್ರದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಸಾಧನೆಯನ್ನು ಅನಂತರ ಕರ್ಮ ಧರ್ಮ ಭೂಮಿಯಾಗಿರುವ ಶ್ರೀ ಭುವನೇಂದ್ರ ಕಾಲೇಜಿನ ಬೆಳ್ಳಿ ಹಬ್ಬವನ್ನು ಪ್ರಸ್ತುತ ಕೃತಿ ಬಣ್ಣಿಸುತ್ತದೆ.

ಸ್ವಾಮಿ ವೀರಾಜೇಶ್ವರ ಅವರ ವಿಜ್ಞಾನಿಯ ಸತ್ಯಾನ್ವೇಷಣೆ ವಿಜ್ಞಾನಿ ಸನ್ಯಾಸಿಯಾದ ಆತ್ಮಕಥೆ. ಅಲ್ಲದೆ ಇದು ವೀರಾಜೇಶ್ವರ ಆಧ್ಯಾತ್ಮಯಾತ್ರೆ ಸಹ ಆಗಿದೆ. ಅವಸರ ಮತ್ತು ಗೊಂದಲಗಳಿಂದ ಕೂಡಿದ ಅಮೇರಿಕದ ಜೀವನದ ನಡುವೆ ಅವರ ಅಭ್ಯಾಸ ಮತ್ತು ವೈರಾಗ್ಯ ಮನೋಧರ್ಮಗಳು ಮೊಳಕೆಯೊಡೆದುದನ್ನು ಇಲ್ಲಿ ವಿವರಿಸುತ್ತಾ ಹೋಗುತ್ತಾರೆ. ಅರಿಯದ ಗುರಿ ಇಲ್ಲದ ದಾರಿಯಲ್ಲಿ ಅಲೆದಾಡುವಂತೆ ತೋರುವ ಈ ಯಾತ್ರೆ ಕೊನೆಯಲ್ಲಿ ತನ್ನೊಳಗೇ ಅಂತ್ಯಗೊಂಡಾಗ ಜೀವನದ ಎಲ್ಲಾ ಮೌಲ್ಯಗಳ ತಾರತಮ್ಯಗಳಿಗೆ ಸಾಧ್ಯವಾಗುತ್ತದೆ. ಆತ್ಮಕಥೆ ಆಧ್ಯಾತ್ಮಕ ಸಾಧನೆಯ ಪರಮ ಶಾಂತಿಯಲ್ಲಿ ಮುಕ್ತಾಯವಾಗುವುದರಿಂದ ಶಿಸ್ತು ಬದ್ಧವಾದ ಜ್ಞಾನ ಶಾಖೆಗೆ ತಮ್ಮನ್ನೇ ಮೊದಲಿಗೆ ಅರ್ಪಿಸಿಕೊಂಡ ವೀರಾಜೇಶ್ವರ ಅವರು ಅದರ ಜೊತೆಗೆ ಆಧ್ಯಾತ್ಮ ಜ್ಞಾನವನ್ನು ಸಂಯೋಜಿಸಿಕೊಂಡು ಬದುಕಿದ ರೀತಿ ನೀತಿಗಳ ವ್ಯಾಖ್ಯಾನವಾಗಿದೆ ಇವರ ಆತ್ಮಕಥೆ.

ನಾನುಎಂಬ ಹೆಸರಿಟ್ಟು ಆತ್ಮಕಥನ ಬರೆದುಕೊಂಡಿರುವ ಪ್ರೊ. ಎಸ್. ಆರ್. ಗುಂಜಾಳ ಅವರು ಶರಣರ ಜೀವನವನ್ನು ಬದಕಿನಲ್ಲಿ ಅಳವಡಿಸಿಕೊಂಡು ಬಾಳಿದವರು. ‘ನಾನು’ ಇಲ್ಲದಿದ್ದರೆ ನಮ್ಮ ಅಸ್ತಿತ್ವವು ಎಲ್ಲಿದೆ? ನಾನು ಮುಖ್ಯವೇ. ಆದ್ದರಿಂದ ವಿಶ್ವಮಾನವ ಬಸವಣ್ಣನವರು ತಮ್ಮ ವಚನದಲ್ಲಿ ನಾನು ಎಂಬ ಪದವನ್ನು “ಭಕ್ತಿಯಿಲ್ಲದ ಬಡವ ನಾನಯ್ಯ” ಎಂದು ಸಮರ್ಥಿಸಿಕೊಂಡಿದ್ದಾರೆ. ಗುಂಜಾಳರು ಕುಮಾರವ್ಯಾಸನ ಹುಟ್ಟೂರಾದ ಕೋಳಿವಾಡದಲ್ಲಿ ಹುಟ್ಟಿದವರು. ಗ್ರಾಮೀಣ ಪರಿಸರದಲ್ಲಿ ಹುಟ್ಟಿದ ಅವರು ದಿನಾಲೂ ಎಮ್ಮೆ ಮೇಯಿಸುವುದು ಹೊಲಕಾಯುವುದು. ಎಡೆಕುಂಟಿ ಹೊಡೆಯುವುದು. ಹಂತಿ ತಿರುವುದು ಹೀಗೆ ಕಮತದ ಕೆಲಸಗಳನ್ನೆಲ್ಲಾ ಪೊರೈಸಿ ರಾತ್ರಿ ಮಲಗಲು ಕನ್ನಡ ಶಾಲೆಗೆ ಬರುತ್ತಿದ್ದರು. ಇದ್ದಕ್ಕಿದ್ದಂತೆ ಮನೆಬಿಟ್ಟು ಹಾವೇರಿಗೆ ಹೋಗಿ ಅಲ್ಲಿ ಶಿವಯೋಗೀಶ್ವರ ವಿದ್ಯಾರ್ಥಿನಿಲಯದಲ್ಲಿ ಠಿಕಾಣಿ ಹೂಡಿ ಕಂತೆಭಿಕ್ಷೆ ಮಾಡಿಕೊಂಡು ಬದುಕಿನ ಎಲ್ಲ ಕಷ್ಟ ಸಹಿಸಿಕೊಂಡು ವಿದ್ಯಾರ್ಥಿಗಳಿಗೆ ಅಕ್ಷರಾಭ್ಯಾಸ ಮಾಡಿಸುವ ಟ್ಯೂಶನ್ ಶಿಕ್ಷಕರಾಗಿ, ತಿಂಗಳ ಕೊನೆಗೆ ನಾಲ್ಕು ರೂಪಾಯಿ ಪ್ರತಿಫಲದಿಂದ ತೃಪ್ತಿಕರ ಬದುಕನ್ನು ನಡೆಸಿದರು. ಕಾಯ ಕಷ್ಟದಿಂದ ಅವರು ಜೀವನದಲ್ಲಿ ಮೊಟ್ಟ ಮೊದಲು ಗಳಿಸಿದ ಈ ನಾಲ್ಕು ರೂಪಾಯಿಗಳಲ್ಲಿ ಮೂರು ರೂಪಾಯಿ ಶಾಲೆ ಶುಲ್ಕ ಕೊಟ್ಟು ಉಳಿದ ಒಂದು ರೂಪಾಯಿ ಒಡೆಯನಾಗಿ ಗುಂಜಾಳರವರು ಆ ದಿನವಿಡೀ ಆನಂದ ಸಾಗರದಲ್ಲಿ ಓಲಾಡಿದ್ದು ಅದನ್ನು ಬಹು ಕಾಳಜಿಯಿಂದ ಕಿಸೆಯಲ್ಲಿಟ್ಟುಕೊಂಡು ಆಗಾಗ ಕೈ ಮುಟ್ಟಿ ಹರ್ಷ ಪಟ್ಟುಕೊಂಡಿದ್ದರ ಆನಂದವನ್ನು ಹಂಚಿಕೊಳ್ಳುತ್ತಲೇ ೧೦೦೦ ರೂಪಾಯಿ ಸಂಬಳ ತೆಗೆದುಕೊಂಡರೂ ಮೊದಲ ಗಳಿಕೆಯ ಮೊದಲ ರೂಪಾಯಿಯನ್ನು ಕಿಸೆಯಲ್ಲಿಟ್ಟುಕೊಂಡು ಅಡ್ಡಾಡಿದಾಗಿನ ಸುಖ ಸಂತೋಷ ಈಗ ಆಗುತ್ತಿಲ್ಲ ಎನ್ನುತ್ತಾರೆ. ನಿಜ ಉಂಡವರಿಗೆ ಗೊತ್ತು ಆದರರುಚಿ ಎನ್ನುವ ಹಾಗೆ ಕಷ್ಟಪಟ್ಟವರಿಗೆ ಸ್ಪಲ್ಪ ಸಂತೋಷ ಬಂದರೂ ಅದನ್ನು ಸ್ವೀಕರಿಸುವ ವಿಧಾನ ಸಂದರ್ಭದ ಆನಂದ ಅದಮ್ಯ. ಅಂತಹ ಕಷ್ಟ ನಂತರ ಪ್ರತಿಫಲ ಎರಡನ್ನೂ ಸಮಾನವಾಗಿ ಸ್ವೀಕರಿಸಿ ಜೀವನದ ಹೆಜ್ಜೆಗಳನ್ನು ದಿಟ್ಟವಾಗಿ ತುಳಿದು ಅದನ್ನು ಎದುರಿಸಿದ ರೀತಿಯನ್ನು ಗುಂಜಾಳರವರ “ನಾನು”: ಆತ್ಮಕಥೆ ವಿವರಿಸುತ್ತದೆ.

ಅಜ್ಞಾತ ಆಧ್ಯಾಪಕನ ಆತ್ಮಕಥನಎ. ಎಸ್. ನಂಜುಂಡ ಸ್ವಾಮಿಯವರು ವಿದ್ಯಾರ್ಥಿಯಾಗಿ, ಶಿಕ್ಷಕರಾಗಿ, ಲೇಖಕರಾಗಿ, ಗಳಿಸಿದ ಕೆಲವು ಅನುಭವಗಳನ್ನು ಹಂಚಿಕೊಂಡಿದ್ದಾರೆ. ಶಾಲೆ – ಕಾಲೇಜುಗಳ ಪರಿಸ್ಥಿತಿ ಅದರಲ್ಲೂ ತರಬೇತಿ ಅನುಭವಗಳನ್ನು, ಅಧ್ಯಾಪಕರಾಗಿ, ಅವರ ಶಿಕ್ಷಣದ ಅನುಭವಗಳನ್ನು ಇಲ್ಲಿ ನಿರೂಪಿಸಿದ್ದಾರೆ. ಇವರ ವಿದ್ಯಾರ್ಥಿನಿಯೊಬ್ಬರು ಒಂದು ಸಮಾರಂಭದಲ್ಲಿ ನೆನೆಸಿಕೊಂಡು ಈ ರೀತಿ ಹೆಳೀದ್ದಾಳೆ. “ಅವರು (ನಂಜುಂಡ ಸ್ವಾಮಿ) ಗಡಿಯಾರದಂತೆ ಕರಾರುವಕ್ಕಾಗಿ ಕೆಲಸ ಮಾಡುತ್ತಿದ್ದರು. ತಾವೇ ನಿಯಮಿತವಾಗಿ ಹಾಗೂ ಸಕಾಲದಲ್ಲಿ ತರಗತಿಗೆ ಆಗಮಿಸುತ್ತಿದ್ದರಲ್ಲದೆ, ಅಂತಹ ನಿಯಮಗಳನ್ನು ಪಾಲಿಸದಿದ್ದ ವಿದ್ಯಾರ್ಥಿಗಳನ್ನು ನಿಯಮಿತವಾಗಿ ಹಾಗೂ ಸಕಾಲದಲ್ಲಿ ಬರುವಂತೆ ಮಾಡಿದರು.” ಅಂದರೆ ಬುದ್ಧಿವಂತರನ್ನಷ್ಟೇ ಅವರು ಕ್ರಿಯಾಶೀಲರನ್ನಾಗಿ ಮಾಡಲಿಲ್ಲ ದಡ್ಡರನ್ನೂ ಕ್ರಿಯಾಶೀಲ ವಿದ್ಯಾರ್ಥಿಗಳನ್ನಾಗಿ ರೂಪಿಸಿದ್ದು ಅವರ ವ್ಯಕ್ತಿತ್ವದ ದ್ಯೋತಕವಾಗಿದೆ. ಶಿಸ್ತು, ಸಂಯಮ – ಶ್ರಮ ಸಂಸ್ಕೃತಿಯ ಪರಿಚಯ ಇಂಥವರ ಆತ್ಮ ಕಥೆಯಿಂದಾಗುತ್ತದೆ.

ಹಾಸ್ಯ – ವಿಡಂಬನೆಗಳ ಮೂಲಕ ಸಾಮಾಜಿಕ ಓರೆ ಕೋರೆಗಳನ್ನು ಬಯಲು ಮಾಡಿದ ಬೀಚಿಯವರ ಆತ್ಮಕಥನ ನನ್ನ ಭಯಾಗ್ರಫಿಯಲ್ಲಿಯೂ ಇದೇ ಮಾದರಿಯನ್ನೇ ಅನುಸರಿಸಿದ್ದಾರೆ. ಮಾನವನ ಜೀವನದಲ್ಲಿ ಸುಖ ಸಂತೋಷದ ಸನ್ನೀವೇಶಗಳು ಇರುವಂತೆ ನೋವಿನ ಸಂಗತಿಗಳು ಇರುವುದು ಸಹಜ. ಇಡೀ ತಿಂಗಳು ಯಾರಿಗೂ ಹುಣ್ಣಿಮೆಯ ಬೆಳದಿಂಗಳು ಇಲ್ಲ. ಅಂತೆಯೇ ಅಮವಾಸ್ಯೆಯ ಕಗ್ಗತ್ತಲೂ ಅಲ್ಲ ಇವೆರಡರ ಬೆರಕೆಯೇ ಮನುಷ್ಯನ ಬಾಳು. ಬೀಚಿಯವರು ಬರೆಯುವಾಗ ಆ ಸನ್ನಿವೇಶಗಳಲ್ಲಿ ಮತ್ತೊಮ್ಮೆ ಜೀವಿಸಿಯೋ ಅನುಭವಿಸಿ ಬರೆಯಬೇಕು. ಇದೊಂದು ಅತಿ ನೋವಿನ ಸಾಹಸ. ಇಂತಹವನ್ನು ಬರೆಯುವಾಗ ನಾನು ಕಣ್ಣೀರು ಹರಿಸಿದ್ದು ಅದೆಷ್ಟೋ ಎನ್ನುತ್ತಾರೆ. ಮೂರ್ಖನು ತನ್ನ ಅನುಭವದಿಂದ ಕಲಿಯುತ್ತಾನೆ. ಜಾಣನು ಮೂರ್ಖನ ಅನುಭವದಿಂದ ಕಲಿಯುತ್ತಾನೆ. ನನ್ನ ತಪ್ಪೊಪ್ಪುಗಳು ಮುಂದಿನ ಪೀಳಿಗೆ ಪಾಠವಾಗಲಿ ಎಂಬುದೇ ಬೀಚಿಯವರ ಆಸೆ, ಹಿಂದಿನವರ ತಪ್ಪುಗಳನ್ನರಿತು ಹೆಜ್ಜೆ ಇಟ್ಟರೆ ಒಳಿತಲ್ಲವೆ? ಹಳಬರ ಬಾಳು ಹೊಸ ಜೀವನಿಗೆ ಗೊಬ್ಬರ ಎನ್ನುತ್ತಾರೆ. ಅನೇಕ ಸದ್ಗುಣಗಳಲ್ಲಿ ಬಹುದೊಡ್ಡ ಲೋಪಗಳಿರುತ್ತವೆ ಎಂಬುದನ್ನು ಹಾಸ್ಯ ಸಾಹಿತಿ ತನ್ನ ಸೂಕ್ಷ್ಮ ದೃಷ್ಟಿಯಿಂದ ಕಂಡು ಹಿಡಿಯುತ್ತಾರೆ. ಬಹುದೊಡ್ಡ ಲೋಪಗಳಿರುವುದರಿಂದಲೇ ಅವರಲ್ಲಿ ಅಷ್ಟು ಸದ್ಗುಣಗಳೂ ಇರುತ್ತವೆ. ಎಂದರ್ಥ ಮಾಡುತ್ತಾರೆ, ನಕ್ಕು ಬಿಡುತ್ತಾರೆ, ಕ್ಷಮಿಸುತ್ತಾರೆ. ಹಾಸ್ಯಮಯವಾಗಿಯೇ ಅವರ ಭಯಾಗ್ರಫಿಯಲ್ಲಿ ಬೀಚಿಯವರು ಕಂಡು ಬರುತ್ತಾರೆ.

ರಂಗ ಭೀಷ್ಮ ಎಂದೇ ಹೆಸರಾಗಿ ಕರ್ನಾಟಕದ ಪ್ರಪ್ರಥಮ ರಂಗ ಕಲಾವಿದರು ಗುಬ್ಬಿ ವೀರಣ್ಣನವರು. ವೀರಣ್ಣನವರೆಂದರೆ ರಂಗಭೂಮಿ, ರಂಗಭೂಮಿಯೆಂದರೆ ವೀರಣ್ಣನವರು. ಕಲೆಯೇ ಕಾಯಕಎಂಬ ಆತ್ಮಕಥನ ಬರೆಯುವುದರ ಮೂಲಕ ಕನ್ನಡದ ಆತ್ಮ ಚರಿತ್ರೆಗೆ ವಿಶೇಷವಾದ ಕೊಡುಗೆಯನ್ನು ಕೊಟ್ಟವರು. ಇಡೀ ದಕ್ಷಿಣ ಭಾರತದಲ್ಲಿಯೇ ಚಿರಪರಿಚಿತರು. ನಾಲ್ಕಾರು ಭಾರಿ ಆಂದ್ರ – ತಮಿಳುನಾಡುಗಳಲ್ಲಿ ಪ್ರವಾಸ ಮಾಡಿ ಕನ್ನಡದ ವೃತ್ತಿರಂಗದ ಹಿರಿಮೆಯನ್ನು ಮೆರೆದವರು. ಇವರಿಗೆ ತೆಲುಗಿನವರು “ಕರ್ನಾಟಕಾಂಧ್ರನಾಟಕ ಸಾರ್ವಭೌಮ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಹುಟ್ಟು ನಟರು, ಸಮರ್ಥರಾದ ನಿರ್ದೇಶಕರು, ಧೀಮಂತ ನಿರ್ಮಾತೃಗಳು, ತಮ್ಮ ಮನೆಯೇ ಒಂದು ರಂಗಮಂದಿರ. ಇಡೀ ಮನೆತನದ ಸದಸ್ಯರೆಲ್ಲ ಹುಟ್ಟು ಕಲಾವಿದರು. ಒಂದು ಕಂಪನಿಯನ್ನು ಕಟ್ಟಿಕೊಂಡು ಊರೂರು ಅಲೆದು ‘ಶಿವನ ಸಂಸಾರ’ ನಡೆಸಿಕೊಂಡು, ಅಡಿಗಡಿಗೂ ಪಡಬಾರದ ಪಾಡು ಪಟ್ಟರೂ, ತೊಟ್ಟ ಹಟ ಬಿಡದೆ, ಸಂಸ್ಥೆಯನ್ನು ವಿಜಯದಿಂದ ವಿಜಯಕ್ಕೆ ನುಗ್ಗಿಸಿಕೊಂಡು ಹೋಗುವಲ್ಲಿ ಅವರ ಕಲಾ ನಮ್ರತೆಯು ದೊಡ್ಡ ಪಾತ್ರವನ್ನು ವಹಿಸಿತು. ನಾಟಕ ಸಂಸ್ಥೆಯನ್ನು ನಡೆಸುವಂತವನಿಗೆ ನೂರು ಕಣ್ಣುಗಳಿರಬೇಕು. ಹತ್ತು ಕಿವಿಗಳಿರಬೇಕು. ಎರಡಾದರೂ ನಾಲಿಗೆ ಬೇಕೆಬೇಕು. ರಂಗದ ಆ ರಾಜ್ಯದಲ್ಲಿ ಅವೆಲ್ಲ ಅವಶ್ಯಕ ಎಂದು ಆಬಿಪ್ರಾಯ ಪಟ್ಟಿರುವ ವೀರಣ್ಣನವರು, ಇಡೀ ರಾಜ್ಯದ ಕಲಾಭಿಮಾನಗಳ ಹೃದಯ ಸಾಮ್ರಾಜ್ಯವನ್ನೇ ಆಳಿದರು. ಒಬ್ಬ ಕಲಾವಿದನಾಗಿ ಇಡೀ ಕಲಾಕುಟುಂಬಕ್ಕೆ ಹೊಂದಿಕೊಂಡು ಅವರ ನೋವು – ನಲಿವುಗಳಲ್ಲಿ ಭಾಗಿಯಾಗಿ ಒಂದೇ ಕುಟುಂಬದ ಸದಸ್ಯರಂತೆ ಎಲ್ಲರನ್ನು ಕಂಡು ಸಾಲಸೂಲ ಮಾಡಿ ಛಲವನ್ನು ಬಿಡದೆ ಮುನ್ನಡೆದ್ದದ್ದು ಒಂದು ಸಾಹಸವೇ ಸರಿ. “ಓದು ಒಕ್ಕಾಲು ಇದ್ದರೂ ಬುದ್ಧಿ ಮುಕ್ಕಾಲು” ಎಂಬಂತೆ ತಮ್ಮದೇ ಆದ ಸಾಂಸ್ಕೃತಿಕ ಪರಿಸರದಲ್ಲಿ ಬೆಳೆದು ಕೌಶಲ್ಯ, ಬುದ್ಧಿಯಿಂದ ಕರ್ನಾಟಕದ ರಂಗಭೂಮಿ, ಕಲಾವಿದರಿಗೆ ಚೈತನ್ಯ ಶಕ್ತಿಯಾದವರು. ಕಲೆಯನ್ನೇ ಕಾಯಕ ಮಾಡಿಕೊಂಡು ಬದುಕಿದ ಇವರು ಜೀವನದುದ್ದಕ್ಕೂ ದ್ವಂದ್ವ ಸಂಕಷ್ಟಗಳನ್ನು ಅನುಭವಸಿರುವುದು ಇವರ ಆತ್ಮಕಥೆಯಿಂದ ತಿಳಿದುಬರುತ್ತದೆ.

ನಾಳಿನ ಚಿಂತ್ಯಾಕಎನ್ನುವ ಶಿರೋನಾಮೆಯಲ್ಲಿ ಉತ್ತರ ಕರ್ನಾಟಕದ ಸೊಗಡಿನಲ್ಲಿ ಆತ್ಮಕಥನ ಬರೆದಿರುವವರು ಕಲಾವಿದೆ ಶಾಂತಾ ಹುಬುಳೀಕರರು. ನಾಡಿನಲ್ಲಿ ಸುಮಾರು ೫೦ ವರ್ಷಗಳ ಹಿಂದೆ ಒಬ್ಬ ರಂಗ ಕಲಾವಿದೆಯಾಗಿ ಬದುಕನ್ನು ಸಾಧಿಸಿದ ಇವರು ತಾದ್ಯಾತ್ಮಕವಾಗಿ ಅಭಿನಯಿಸುವುದನ್ನು ರೂಢಿಸಿಕೊಂಡಿದ್ದರು, ‘ಮಾಣೂಸ’ ಎಂಬ ಚಿತ್ರದ ಕಥೆಯಲ್ಲಿ ವೇಶ್ಯೆಯ ಪುತ್ರಿ ಮೈನಾಳಾಗಿ “ಕುಶಲಾ ಉದ್ಯಾಚಿ ಬಾತ” ಎಂದು ಹಾಡಿ ರಸಿಕರ ಮನಗೆದ್ದರು. ಕಲಾರಂಗದಲ್ಲಿ ಕೀರ್ತಿಯ ಶಿಖರಕ್ಕೇರಿದ ಅವರಿಗೆ ಪತಿಯೇ ಆಕೆಗೆ ಮೋಸ ಮಾಡಿ ಅವಳ ಆಸ್ತಿ ಅಪಹರಿಸಿ, ಹೊಟ್ಟೆಯಲ್ಲಿ ಹುಟ್ಟಿದ ಮಗನೂ ಸೊಸೆಯೂ ಇವರನ್ನೂ ಮನೆಯಿಂದ ಹೊರಹಾಕಿದಾಗ ಅವರು ಪಟ್ಟಪಾಡು ಅಷ್ಟಿಷ್ಟಲ್ಲ. ಕೊನೆಗೆ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದದ್ದು ಇವರ ಬದುಕಿನ ದುರಂತವೇ ಸರಿ. ಒಂದು ಹೆಣ್ಣು ಇಡೀ ಸಮಾಜವನ್ನು ಎದುರಿಸಿ ಒಬ್ಬ ರಂಗಕಲಾವಿದೆಯಾಗಿ ಶಾಂತಾ ಮೆರೆದಿರುವುದು ಪ್ರವಾಹ ವಿರುದ್ಧ ಈಜಿದಂತೆಯೇ ಸರಿ, ಬಡತನ, ನೋವು, ಜೀವನಾನುಭವ ಒಬ್ಬ ವ್ಯಕ್ತಿಯನ್ನು ಪರಿಪಕ್ವವನ್ನಾಗಿ ಮಾಡಲು ಸಾಧ್ಯ ಎಂಬುದು ಶಾಂತಾ ಹುಬುಳೀಕರರ ಆತ್ಮ ಕಥನ ಓದಿದಾಗ ತಿಳಿದು ಬರುವ ಸಂಗತಿಯಾಗಿದೆ. ಇಷ್ಟೆಲ್ಲಾ ನಿಜ ಬದುಕಿನಲ್ಲಿ ಕೌಟುಂಬಿಕ ಕಷ್ಟಗಳನ್ನು ಅನುಭವಿಸಿದರೂ. ಕಲಾವಿದೆಯ ಬೆಲೆಯನ್ನು ಸ್ಮರಿಸಿಕೊಂಡು ಕೃತಜ್ಞತೆಯಿಂದ ಜನರು ಕೊಟ್ಟ ತವರು ಮನೆಯ ಉಡುಗೊರೆ ಈಗಲಾದರೂ ಸಿಕ್ಕಿತಲ್ಲ, ಎಂಬ ಅವರ ಮಾತು, ಅವರ ಅಳು ನುಂಗಿ ನಗುವ ಮನದ ಸ್ಥಿಮಿತತೆಯನ್ನು ವ್ಯಕ್ತಪಡಿಸುತ್ತದೆ.

ಕೆರೆಮನೆ ಶಿವರಾಮ ಹೆಗಡೆಯವರ ನೆನಪಿನ ರಂಗಸ್ಥಳ ದಲ್ಲಿ ಯಕ್ಷಗಾನ ಕಲಾವಿದನಾಗಿ ತಾವು ಬದುಕಿದ ರೀತಿಯನ್ನು ಹೇಳುತ್ತಾ ಹೋಗುತ್ತಾರೆ. ಹೆಗಡೆಯವರು ಸಾಮಾನ್ಯವಾಗಿ ಮಾತನಾಡಿದರೂ ಅವರು ರಂಗದಲ್ಲಿ ಮಾತಾಡಿದಂತೆ ಭಾಸವಾಗುತ್ತದೆ. ನಿಂತಲ್ಲೇ ರಂಗವನ್ನು ಸೃಷ್ಟಿಸಿ ರಂಗೇರಿಸಿದಂತಹ ವ್ಯಕ್ತಿತ್ವ ಅವರದು. ಬಡತನದಲ್ಲಿ ಹುಟ್ಟಿ ದಿನದ ಅನ್ನಕ್ಕಾಗಿ ಕಟಪಟೆ ಮಾಡುತ್ತಲೇ ಮುಖಕ್ಕೆ ಬಣ್ಣ ಹಚ್ಚಿ ಕುಣಿಯುವ ಗೀಳನ್ನು ರೂಢಿಸಿಕೊಂಡವರು ಯಕ್ಷಗಾನದ ರಂಗಭೂಮಿಗೂ ಅದರ ಸುತ್ತಲಿನ ಸಮಾಜಕ್ಕೆ ನಂಟನ್ನು ಬೆಳಸಿ, ಚೈತನ್ಯ ನೀಡಿದವರು. ಆ ನೆಲದ ಸಂಸ್ಕೃತಿಯ ಸಾರವನ್ನು ಹೀರಿಕೊಂಡು ಪುನಃ ಆ ನೆಲಕ್ಕೆ ಕಸುವನ್ನು ನೀಡಿದವರು. ಎಂಭತ್ತು ನಾಲ್ಕು ವರ್ಷಗಳ ಬಾಳಿನ ಅನುಭವಕ್ಕೆ ತನ್ನ ಅಂತರಂಗವನ್ನೆ ಚಾಚಿಕೊಂಡವರು ಜೀವನದಲ್ಲಿ ಏಣಿಯನ್ನು ಏರಿದ ಮೇಲೆ ಮತ್ತು ಅವರು ಏಣಿಯನ್ನು ಒದೆಯಲಿಲ್ಲ ಎಂಬಂತೆ ಬಡತನದಲ್ಲಿ ಹುಟ್ಟಿ ಬೆಳೆದು ತಾವು ಉತ್ತುಂಗಕ್ಕೆ ಏರಿದಾಗ ಬಡತನವನ್ನು ಮರೆಯದ ಕಲಾವಿದರಾಗಿದ್ದರೆಂಬುದು ಅವರ ಆತ್ಮಕಥೆಯಿಂದ ನಮಗೆ ತಿಳಿದು ಬರುತ್ತದೆ.

ಡಾ. ಸಿಂಧವಳ್ಳಿ ಅನಂತಮೂರ್ತಿ ಅವರು ಐವತ್ತು ವರ್ಷಗಳಲ್ಲಿಯ ರಂಗ ಜೀವನದಲ್ಲಿ ಎಲ್ಲ ಮುಖಗಳಿಗೆ ಒಡ್ಡಿಕೊಂಡವರು. ನಾಟಕದೊಂದಿಗೆ ಉಳಿದ ಮಾಧ್ಯಮಗಳಲ್ಲೂ ಸಕ್ರೀಯವಾಗಿ ಭಾಗವಹಿಸಿ, ತಾವು ಪಟೆದುಕೊಂಡ ವಿಶಿಷ್ಟ ಅನುಭವಗಳನ್ನು ಬರಹ ರೂಪದಲ್ಲಿ ಹಿಡಿದಿಡುವ ಪರಿಶ್ರಮವನ್ನು ಇವರ ನನ್ನದು ಬಣ್ಣದ ಬದುಕು ಗ್ರಂಥದಲ್ಲಿ ಮಾಡಿದ್ದಾರೆ. ಜೀವನದ ಹಲವಾರು ರೀತಿಯ ಮಹತ್ತರ ಘಟವನ್ನು ತಿಳಿಸುತ್ತದೆ. “ಸಮತಂತೋ” ಎಂಬ ಒಂದು ಘಟಕವನ್ನು ಮಾಡಿಕೊಂಡು ‘ರಂಗ ಮನೆ’ ಎಂಬ ಚಿಕ್ಕ ಚೊಕ್ಕ ನಾಟಕ ಗೃಹ ಮಾಡಿಕೊಂಡು ರಂಗಕ್ಕೆ ಸಂಬಂಧಿಸಿದಂತೆ ಹೊಸ ರೀತಿಯ ಆಲೋಚನೆ, ಚಿಂತನೆಗಳಿಗೆ ಒಂದು ಅರ್ಥವಂತಿಕೆಯನ್ನು ಈ ಆತ್ಮ ಕಥೆಯಲ್ಲಿ ಸವಿಸ್ತಾರವಾಗಿ ವಿವರಿಸುತ್ತದೆ.

ನಾಟ್ಯಭೂಷಣ ಏಣಗಿ ಬಾಲಪ್ಪನವರ ಆತ್ಮ ಕಥನ ನನ್ನ ಬಣ್ಣದ ಬದುಕು. ಒಬ್ಬ ಧೀಮಂತ ಕಲಾವಿದನ ವೃತ್ತಿ ರಂಗಭೂಮಿಯ ಅನುಭವದ ಜಾಡುಗಳು. ಜಿಡ್ಡುಗಟ್ಟಿದ ವೃತ್ತಿ ರಂಗಭೂಮಿಗೆ ನವ ಚೈತನ್ಯದ ಅಲೆಗಳನ್ನು ಎಬ್ಬಿಸಿದವರು. ಹವ್ಯಾಸಿ ಮತ್ತು ವೃತ್ತಿರಂಗಗಳನ್ನು ಮೇಳೈಸಿ ಸಾಹಸಗೈದು ಅನೇಕ ರೀತಿಯ ಹೊಸ ದಾಖಲೆಗಳನ್ನು ನಿರ್ಮಿಸಿ ಕರ್ನಾಟಕ – ಮಹಾರಾಷ್ಟ್ರಗಳಲ್ಲಿ ವಿಜಯದ ಪತಾಕೆಯನ್ನು ಹಾರಿಸಿದವರು ಏಣಗಿ ಬಾಳಪ್ಪನವರು, ಇವರಿಗೆ ಪರ್ಯಾಯವಾಗಿ ಕನ್ನಡ ಮೃತ್ತಿರಂಗದ ವಿಶ್ವಕೋಶವೆಂದರೂ ಸರಿಯೇ. ಎಂಟುದಶಕಗಳ ಕಾಲ ಅವರು ವೃತ್ತಿರಂಗಭೂಮಿಗೆ ಸ್ಪಂದಿಸಿದ ಹಲವು ಮಜಲುಗಳ ಪರಿಚಯ ಇವರ ಅತ್ಮಕಥೆಯಲ್ಲಿ ಮೂಡಿ ಬಂದಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಇವರು ಆಡಿರುವ ನಾಟಕಗಳು ಸಮೂಹ ಮಾಧ್ಯಮವಾಗಿ ಹೇಗೆ ಜನರನ್ನು ಎಚ್ಚರಿಸಿದವು. ಸ್ವಾತಂತ್ರ್ಯದ ಬಗ್ಗೆ ಜನರಿಗೆ ಹೇಗೆ ಅರಿವನ್ನು ಮೂಡಿಸಲು ಪ್ರಯತ್ನಿಸಿದರು. ಸಮಾಜಿಕ ಆಗು – ಹೋಗುಗಳಿಗೆ ಕಲಾವಿದ ಮತ್ತು ರಂಗಭೂಮಿಯ ಮಹತ್ವವೇನೆಂಬುದು ಇವರ ಆತ್ಮಕಥೆಯಿಂದ ತಿಳಿದು ಬರುತ್ತದೆ.

ನಾಟಕವೆಂದರೆ ಹೂಮಿನ ಹಾಸಿಗೆಯಲ್ಲ. ಈ ಕ್ಷೇತ್ರದಲ್ಲಿ ಬರುವ ಎಲ್ಲಾ ಏಳು – ಬೀಳುಗಳನ್ನು ಸಹಿಸಿಕೊಂಡು ತನ್ನದೇ ಆದ ಅಸ್ತಿತ್ವದ ಮೆರಗನ್ನು ಪಡೆದವರು ಕೇ. ನಾಗರತ್ನಮ್ಮ. ಮರಿಯಮ್ಮನಹಳ್ಳಿ ರಂಗಸಿರಿ ಎಂಬ ಆತ್ಮಕಥೆಯಲ್ಲಿ ತಮ್ಮ ರಂಗದ ಹಾಗೂ ಸಾರ್ವಜನಿಕ ಕ್ಷೇತ್ರದ ಜೀವನಾನುಭವಗಳನ್ನು ಹೇಳುತ್ತಾ ಹೋಗುತ್ತಾರೆ. ಏಕಾಂಗಿಯೇ? ಸಂಸಾರಿಯೇ ಹಾಗೂ ದ್ರೌಪದಿಗೆ ಕೂಲಿಂಗ್‌ ಗ್ಲಾಸ್‌ ಇವು ಅವರ ಬಾಳಿನ ದಿಟ್ಟ ಹೆಜ್ಜೆಗಳನ್ನು ಹೊಸರೀತಿಯ ಸವಾಲುಗಳನ್ನು ಮತ್ತು ಅನುಭವಗಳನ್ನು ತಂದುಕೊಟ್ಟ ರಸ ಪ್ರಸಂಗಗಳು. ಪ್ರಬುದ್ಧ ನಟಿಯಾಗಿ ಶೀಲಾವತಿ ನಾಟಕದಲ್ಲಿ ಆ ಪಾತ್ರಕ್ಕೆ ಜೀವಂತಿಕೆಯನ್ನು ನೀಡಿದಂತಹ ನಟನಾ ಸಾಮರ್ಥ್ಯ ಪುರುಷ ಪ್ರಧಾನ ನಮ್ಮ ಸಮಾಜದಲ್ಲಿ, ಕರ್ನಾಟಕದ ಹಿಂದುಳಿದಿರುವ ಪ್ರದೇಶದಲ್ಲಿ ಹುಟ್ಟಿ ಬೆಳೆದು ಯಾವುದೇ ರೀತಿಯ ತರಬೇತಿಯಿಲ್ಲದೆ ಕಲೆಯನ್ನು ರೂಢಿಸಿಕೊಂಡು ತನ್ನ ಅನನ್ಯತೆ ಮೆರೆದಿರುವುದನ್ನು ಆತ್ಮಕಥೆಯಲ್ಲಿ ದಾಖಲಿಸಲಾಗಿದೆ. ತುಂಗಭದ್ರಾ ನದಿಯಲ್ಲಿ ಮುಳುಗಿ ಇತಿಹಾಸವಾಗಿರುವ ‘ಬಸಾಪುರ’ ಗ್ರಾಮದಲ್ಲಿ ಹುಟ್ಟಿ ಮರಿಯಮ್ಮನಹಳ್ಳಿಯ ರಂಗಸಿರಿಯಾಗಿ ಬೆಳೆದು ನಾಡಿನಾದ್ಯಂತ ಕೀರ್ತಿಗೆ ಭಾಜನರಾಗಿ ಜೀವನದ ಹಲವು ಮಹತ್ವದ ಸಂಗತಿಗಳನ್ನು ಇವರ ಆತ್ಮಕಥೆ ಸಾರಿಹೇಳುತ್ತದೆ.

ದುಡಿತವೇ ನನ್ನ ದೇವರು ಎಂಬ ತನ್ನ ಆತ್ಮಕಥೆ ಬರೆದುಕೊಂಡಿರುವ ಕಯ್ಯಾರ ಕಿಞ್ಲಣ್ಣರೈ ಇವರು ಹುಟ್ಟಾ ಕನ್ನಡಾಭಿಮಾನಿಗಳು ಕಾಸರಗೋಡೆಂಬ ಆತ್ಮ, ಕರ್ನಾಟಕವೆಂಬ ಪರಮಾತ್ಮನಲ್ಲಿ ಸೇರಬೇಕೆಂಬ ಹೆಬ್ಬಯಕೆ ಹೊಂದಿದವರು. ಅದಕ್ಕಾಗಿ ಏಕೀಕರಣದಿಂದಲೂ ಇಂದಿಗೂ ಅವರ ಹೋರಾಟ ನಡೆಯುತ್ತಲೇ ಇದೆ; ದೇಶ ಭಾಷೆಯ ಬಗ್ಗೆ ಪ್ರೀತಿ ಅಭಿಮಾನವನ್ನು ಬೆಳೆಸಿಕೊಂಡವರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಉತ್ತಮ ಶಿಕ್ಷಕ, ಶ್ರೇಷ್ಠ ಕವಿ ಎಂದು ಹೆಸರು ಪಡೆದವರು. ಹಳ್ಳಿಯಲ್ಲಿ ಹುಟ್ಟಿ ಅಪ್ಪಟ ಕೃಷಿಕರಾಗಿ, ಶ್ರಮಿಸಿರುವ ವ್ಯಕ್ತಿತ್ವ ಇವರದು. ಗಡಿನಾಡ ಕನ್ನಡಿಗರ ಅಳಲನ್ನು ತೋಡಿಕೊಂಡು ಅವರಿಗಾಗಿ ಜೀವನದಲ್ಲಿ ನಿರಂತರ ಹೋರಾಡಿದವರು. ತಮ್ಮಲ್ಲಿ ಯಾವುದೇ ರೀತಿಯ ಸಾಂಸ್ಕೃತಿಕ ಪರಿಸರವಿರದಿದ್ದರೂ ವಿದ್ಯಾರ್ಥಿ ದೆಸೆಯಿಂದ ತಾವೇ ಅದನ್ನು ರೂಢಿಸಿಕೊಂಡು ಗಡಿನಾಡಿನಲ್ಲಿ ಕನ್ನಡತನವನ್ನು ಉಳಿಸಿದವರು. ಅದನ್ನು ಗಟ್ಟಿಯಾಗಿ ಹಿಡಿದುಕೊಂಡವರು. ಇವೆಲ್ಲದರ ಪರಿಚಯ ಇವರ ಆತ್ಮಕಥೆಯಲ್ಲಿದೆ.

ಉರಿ ಬರಲಿ, ಸಿರಿ ಬರಲಿ ಆತ್ಮಕಥೆ ಬರೆದಿರುವ ಆರ್. ಸಿ. ಹಿರೇಮಠರು. ತಮ್ಮ ಬದುಕಿನಲ್ಲಿ ಬೆಳದಿಂಗಳಿಗಿಂತ ಬಿಸಿಲನ್ನೇ ಹೆಚ್ಚಾಗಿ ಕಂಡವರು. ಅದರಲ್ಲಿ ಬೆಳೆದು ಅದಕ್ಕೆ ಒಗ್ಗಿಕೊಂಡು ಕಷ್ಟಗಳಿಗೆ ಕಲ್ಲಾದವರು. ವಾರನ್ನ ಉಂಡು ವಿದ್ಯೆಯನ್ನು ಕಲಿತವರು. ಬದುಕಿನಲ್ಲಿ ಅವರು ಪ್ರಪಾತಕ್ಕೆ ಬಿದ್ದವರೂ ಹೌದು, ಶಿಖರಕ್ಕೆ ಏರಿದವರೂ ಹೌದು. ಆದರೂ ಅವರು ನೋವು – ನಲಿವುಗಳಿಗೆ ನರ್ಲಿಪ್ತರಾಗಿದ್ದವರು. ಧಾರವಾಡದ ನೆಲದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠಕ್ಕೆ ಹಿರೇಮಠರು ಭದ್ರವಾಗಿ ಬನಾದಿಯನ್ನು ಹಾಕಿದವರು. ಕೊನೆಗೆ ಕುಲಪತಿಯಾಗಿ ನಿವೃತ್ತಿ ಹೊಂದಿದವರು. ಸಾಹಿತ್ಯ ಸಂಶೋಧನೆ ಎರಡರಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ‘ಜೋಳಿಗೆಯಿಂದ ಏಳಿಗೆಯಾದವರು, ಪಟ್ಟಪಾಡೆಲ್ಲಾ ಹಾಡಾದಾಗ ಇವರು ಉರಿಬಂದರೂ ಬಗ್ಗದವರು, ಸಿರಿಬಂದರೂ ಹಿಗ್ಗದವರಾಗಿದ್ದರು. ಕನ್ನಡ ನಾಡುಕಂಡ ಧೀಮಂತ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಇವರ ಆತ್ಮಕಥೆ ಓದಿದಾಗ ಆರ್. ಸಿ. ಹಿರೇಮಠರು ಬಡತನದ ಬವಣೆಯಿಂದ ಬದುಕುವುದಕ್ಕಾಗಿ ಹೋರಾಟ, ತಾವು ಆತ್ಮವಿಶ್ವಾಸದಿಂದ ವಿದ್ಯೆ ಕಲಿತು ಕುಲಪತಿಗಳ ಹುದ್ದೆ ಹಿಡಿಯುವವರೆಗೆ ಬೆಳೆಯುದಕ್ಕಾಗಿ ಹೋರಾಟ, ಜೊತೆಗೆ ತಮ್ಮ ಶಿಷ್ಯ ಪರಂಪರೆಯನ್ನು ಸಂಘ – ಸಂಸ್ಥೆಗಳನ್ನು ಬೆಳೆಸುವುದಕ್ಕಾಗಿ’ ಹೋರಾಟ ಮಾಡಿದವರೆಂಬುದು ತಿಳಿದುಬರುತ್ತದೆ.

ಎಸ್‌. ಎಲ್‌. ಭೈರಪ್ಪನವರು ತಮ್ಮ ಭಿತ್ತಿ ಆತ್ಮಕಥೆಯಲ್ಲಿ ವಾಸ್ತವ ಅನುಭವಗಳೇ ದಿಟ್ಟವಾಗಿ ಚಿತ್ರಣಗೊಂಡಿವೆ. ಬದುಕಿನ ಏರಿಳಿತಗಳನ್ನು ಆತ್ಮಕಥೆ ಕಾದಂಬರಿ ರೀತಿಯಲ್ಲಿಯೇ ಓದಿಸಿಕೊಂಡು ಹೋಗುತ್ತದೆ, ನೌಕರಿಗಾಗಿ ಪರದಾಡಿದ್ದು, ತಾವೇ ದುಡಿದ ಹಣವನ್ನು ತಮ್ಮ ತಂದೆ ತೆಗೆದುಕೊಂಡು ಹೋಗಿ ಅವರು ಅದನ್ನು ತಮ್ಮ ಚಟಕ್ಕೆ ಬಳಸಿಕೊಂಡಿದ್ದು, ಈ ಎಲ್ಲ ವಿಪರ್ಯಾಸದ ನಡುವೆ ತಾವು ಬೆಳೆದಿದ್ದು. ಇಲ್ಲಿ ಭಾಷೆಯ ನಿಖರತೆ ಹಾಗೂ ಶೈಲಿಯ ಸೊಗಸು ಈ ಕೃತಿಯಲ್ಲಿ ಮೂಡಿ ಬಂದಿದೆ. ಸಾಹಿತ್ಯ ಕೃತಿಗಳ ಆಧ್ಯಯನಕ್ಕೆ ಆತ್ಮಕಥೆಗಳು ವಿಶೇಷವಾದ ರೀತಿಯಲ್ಲಿ ಸಹಾಯಕವಾಗುತ್ತದೆ. ಜೀವನದಲ್ಲಿ ನೋವುಂಡವರು ಲೇಖರಾಗುವುದಕ್ಕೆ ಸಾಧ್ಯವೇನೋ ಎಂಬುದು ಇವರ ಆತ್ಮಕಥೆಯ ಆಶಯವಾಗಿದೆ.

ಹುಳಿ ಮಾವಿನ ಮರ ಎಂಬ ಆತ್ಮಕಥೆ ಬರೆದಿರುವ ಪಿ. ಲಂಕೇಶರು ಕರ್ನಾಟಕದಲ್ಲಿ ಹೆಸರಾಂತ ಪತ್ರಕರ್ತರು. ಹಲವು ದಶಕಗಳ ಕಾಲ ಓದುಗರ ಮನವನ್ನು ಗೆದ್ದವರು. ಸಮಾಜವಾದಿಯಾಗಿ, ಕ್ರಿಯಾಶೀಲ ಬರಹಗಾರರಾಗಿ, ಬಂಡಾಯ, ಹೋರಾಟಗಳನ್ನೇ ವಿದ್ಯಾರ್ಥಿ ದೆಸೆಯಿಂದಲೇ ರೂಢಿಸಿಕೊಂಡು, ವ್ಯವಸ್ಥೆಯ ವಿರುದ್ಧ ಬರೆಯುವ ಸಾಹಸವನ್ನು ತೋರಿದವರು. ಚಲನಚಿತ್ರ ಮಾಡಿ ಅದರಲ್ಲಿ ಕೈ ಸುಟ್ಟುಕೊಂಡರೂ ತಮ್ಮ ಪ್ರಯತ್ನವನ್ನೇ ಪಟ್ಟು ಬಿಡದೆ ತೋರಿಸಿದ್ದಾರೆ.

ತಾವು ಚಿಕ್ಕಂದಿನಲ್ಲಿ ಅನುಭವಿಸಿದ ಬಡತನ ನೋವು ತಂದೆ – ತಾಯಿಯರು ಪಟ್ಟ ಕಷ್ಟವನ್ನು ವಾಸ್ತವ ನೆಲೆಯಲ್ಲಿ ಹೇಳಿಕೊಂಡು ಬರವಣಿಗೆಯ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ದಿಗ್ಗಜರ ಸಾಲಿಗೆ ನಿಂತ ವ್ಯಕ್ತಿತ್ವ ಲಂಕೇಶರದು. ‘ರಸಿಕನಾಡುವ ಮಾತು ಶಶಿಯುದಿಸಿ ಬಂದಂತೆ’ ಎಂಬ ಹೇಳಿಕೆಯಂತೆ ರಸಿಕರಾಗಿ, ತುಂಟತನದಿಂದ ಬರೆದು ಕರ್ನಾಟಕದ ಪತ್ರಿಕಾ ಇತಿಹಾಸದಲ್ಲಿಯೇ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯನ್ನು ಹಿಗ್ಗಿಸಿದವರು. ಅವರೇ ಹೇಳಿಕೊಂಡಂತೆ ತಮ್ಮ ಗದ್ದೆಯ ಹತ್ತಿರವಿದ್ದ ಮಾವಿನಮರ ನೆನಪಿಟ್ಟುಕೊಂಡು ವಾಟೆ, ಸಸಿ, ಗಿಡ, ಮರ ಈ ಶೀರ್ಷಿಕೆಯ ಮೂಲಕ ತಮ್ಮ ಜೀವನಾನುಭವಗಳನ್ನು ಹೇಳುತ್ತಾ ಹೋಗುತ್ತಾರೆ. ಸುಳ್ಳು ಹಾಗೂ ಸತ್ಯಗಳ ತೊಳಲಾಟದಲ್ಲಿ ಆತ್ಮಕಥನ ಬರೆಯುವ ಆಶಯವನ್ನು ತೋರಿದ್ದಾರೆ.

ಒಟ್ಟಿನಲ್ಲಿ ಈವರೆಗೆ ಅವಲೋಕಿಸಿದ ಆತ್ಮ ಕಥೆಗಳಲ್ಲಿ ಹಲವು ವ್ಯಕ್ತಿಗಳ ಹಲವು ಅನುಭವಗಳು ವೇದ್ಯವಾಗುತ್ತವೆ, ಕಲಾವಿದರ ಬೀದಿ ಪಾಲಿನ ಕಥೆ, ದಲಿತ ಜನಾಂಗದ ಶೋಷಣೆಯ ವ್ಯಥೆ, ರಾಜಕಾರಣಿಯಗಳ ಏಳು – ಬೀಳುಗಳ ಪ್ರಸಂಗ, ಧರ್ಮಾಧಿಕಾರಿಗಳ ಸಮಾಜೋ – ಧಾರ್ಮಿಕಾಭಿಮಾನ, ವಿದ್ವಾಂಸರ ವ್ಯಕ್ತಿತ್ವದರ್ಶನ, ಚಿಂತಕರ ವಿಚಾರಮಂಥನಗಳು, ಬಹುತೇಕ ಆತ್ಮ ಕಥೆಗಳಲ್ಲಿ ಮಡುಗಟ್ಟಿ ನಿಂತಿವೆ. ಹೀಗಾಗಿ ಆತ್ಮ ಕಥೆಗಳ ರಚನೆ ವ್ಯಕ್ತಿ ನೆಲೆಯಾದ್ದಾದರೂ ಸಮಷ್ಟಿ ನೆಲೆಯನ್ನು ಪರಿಚಯಿಸುವುದರ ಮೂಲಕ ಕಥೆಗಳಾಗಿ ಮಾತ್ರ ಉಳಿಯದೆ ಒಂದು ಪ್ರದೇಶ, ಪರಿಸರ, ಜನಾಂಗದ ಚರಿತ್ರೆಯಾಗಿ ಬೆಳೆದು ಬಂದಿರುವುದನ್ನು ಗುರುತಿಸಬಹುದಾಗಿದೆ. ವಾಸ್ತವ ಬದುಕನ್ನು ಅನಾವರಣಗೊಳಿಸುವ ಕಾರಣವಾಗಿ ಚರಿತ್ರೆಯ ಮಹತ್ವವನ್ನು; ಆ ಬದುಕಿಗೆ ಕಲಾತ್ಮಕ ಅಭಿವ್ಯಕ್ತಿಕೊಟ್ಟ ಕಾರಣವಾಗಿ ಸಾಹಿತ್ಯಿಕ ಗೌರವವನ್ನು ಪಡೆದುಕೊಂಡ ಆತ್ಮ ಕಥನಗಳು ಚರಿತ್ರೆಗೆ ಚರಿತ್ರೆ; ಸಾಹಿತ್ಯಕ್ಕೆ ಸಾಹಿತ್ಯವೆನಿಸಿವೆ. ಆತ್ಮಕಲ್ಯಾಣ – ಲೋಕಕಲ್ಯಾಣಗಳನ್ನು ಬದುಕಿನ ಪರಮಗತ್ಯವೆಂದು ಬಾಳಿದ ಕೆಲವರಂತೂ ಮೃದೂನಿ ಕುಸುಮಾದಪಿ, ಕಠೋರಾಣಿ ವಜ್ರಾದಪಿಯಾದ ವ್ಯಕ್ತಿತ್ವದಿಂದ ಬದುಕಿರುವುದು ಗಮನಿಸಬೇಕಾದ ಅಂಶವಾಗಿದೆ.