ನಮ್ಮ ಬಾಳ್ವೆಗಳು ಘನತೆ ಬರಲಪ್ಪುದೆಂದು
ಘನವಮತರು ಬಾಳ್ವೆ ನೆನಹು ಕೊಡುತಿಹುದು
ಬೀಳ್ಕೊಂಡ ಅವರು ಬಿಟ್ಟಿಹರು ಹಿಂದೆ ಇಲ್ಲಿ
ಹೆಜ್ಜೆಗುರುತುಗಳ ಕಾಲವೆಂಬಾ ಮಳಲಿನಲ್ಲಿ

ಎಚ್. ಡಬ್ಲ್ಯೂ. ಲಾಂಗ್‌ಫೆಲೋನ ಉಕ್ತಿಯಂತೆ, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಬಗ್ಗೆ ಜನಸಾಮಾನ್ಯರಲ್ಲಿರುವ ಗೌರವಾದರಗಳನ್ನು ಸಮರ್ಪಿಸುವ ಇಲ್ಲವೇ ಆಯಾ ವ್ಯಕ್ತಿಯ ಆದರ್ಶಗಳನ್ನು ಮೇಲ್ಪಂಕ್ತಿಯಾಗಿಸಿಕೊಂಡು ಬದುಕುವ ಸದವಕಾಶವ ದೊರಕಿಸಿಕೊಡುವ ಮಾರ್ಗವೇ ಜೀವನ ಚರಿತ್ರೆ ಎನ್ನಬಹುದು. ಸಾಹಿತ್ಯ ಕ್ಷೇತ್ರದ ಅತ್ಯಂತ ಸರಳ, ಸ್ಪಷ್ಟ, ಪರಿಣಾಮಕಾರಿಯಾದ ಪ್ರಕಾರ ಜೀವನ ಚರಿತ್ರೆ. “ನೇರವಾಗಿ, ಸರಳವಾಗಿ, ನಿರ್ಭಯವಾಗಿ ಹಾಗೂ ಉದಾರವಾಗಿ ಉಕ್ತಗೊಂಡ ಸತ್ಯವೇ ಜೀವನ ಚರಿತ್ರೆಯ ಸಂಮ್ಮೋಹನ ಗುಣವೆಂದು” ಆಲ್ ಫ್ರೆಡ್ ಆರ್ ಕಾಂಕ್ಲಿಂಗ್ ಹೇಳುತ್ತಾನೆ. ಕನ್ನಡ ವಾಙ್ಮಯ ಪ್ರಪಂಚದಲ್ಲಿ ಸಾಕಷ್ಟು ಜನಪರ ಸಾಹಿತ್ಯ ಮಾಲಿಕೆಯಾಗಿ ಮೂಡಿ ಬಂದ ಈ ಪ್ರಕಾರ ವ್ಯಕ್ತಿಯೊಬ್ಬನ ಸ್ತುತಿಯಾಗದೇ, ಆ ವ್ಯಕ್ತಿಯ ವಿವಿಧ ದೃಷ್ಟಿಕೋನಗಳನ್ನು ಆಭಿವ್ಯಕ್ತಿಸುವ ಏಕೈಕ ಮಾರ್ಗವೆನಿಸಿದೆ. ವ್ಯಕ್ತಿಯೊಬ್ಬನ ಸಮಷ್ಟಿ ವ್ಯಕ್ತಿತ್ವವನ್ನು ವ್ಯಷ್ಟಿಯಾಗಿ ರೂಪಿಸುವದೇ ಜೀವನ ಚರಿತ್ರೆ ಎಂದರೆ ತಪ್ಪಾಗಲಿಕ್ಕಿಲ್ಲ.

ಜೀವನ ಚರಿತ್ರೆಯೆಂಬ ವಿಶಿಷ್ಟ ಪ್ರಕಾರ ಸಾಹಿತ್ಯಕ್ಕೆ ಜೇಮ್ಸ್ ಬಾಸ್ ವೆಲ್ ತಳಹದಿಯನ್ನು ಹಾಕಿಕೊಟ್ಟನು. ೧೮ ನೇ ಶತಮಾನದ ಇಂಗ್ಲಿಷ್ ಸಾಹಿತ್ಯ ಕ್ಷೇತ್ರದ ದಿಗ್ಗಜನಾದ ಡಾ. ಸಾಮ್ಯುಯಲ್ ಜಾನಸನ್‌ರನ್ನು ಕುರಿತು ಅವರ ಸಮಕಾಲೀನನಾದ ಬಾಸ್ ವೆಲ್ ಬರೆದ ‘Boswell’s life of Jhonson’ (ಜಾನಸನ್ ರನ್ನು ಕುರಿತು ಬಾಸ್ ವೆಲ್ ಬರೆದ ಜೀವನ ಚರಿತ್ರೆ) ಜೀವನ ಚರಿತ್ರೆಯೆಂಬ ಸಾಹಿತ್ಯ ಪ್ರಕಾರಕ್ಕೆ ನಾಂದಿಯಾಯಿತೆನ್ನಬಹುದು. ಬದುಕು ಬರಹ, ಜೀವನ ಚರಿತ್ರೆ, ಜೀವನ ಸಾಧನೆ, ವ್ಯಕ್ತಿ ಚಿತ್ರ ಹೀಗೆ ವಿವಿಧ ಆಯಾಮಗಳಲ್ಲಿ ಮೂಡಿಬರುವ ಜೀವನ ಚರಿತ್ರೆ ಪ್ರಚಲಿತ ಮಾಧ್ಯಮವಾಗಿ ತುಂಬ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸಾಹಿತ್ಯ ಚರಿತ್ರೆಯ ನೆಲೆಗಟ್ಟಿನಲ್ಲಿ ಈ ಪ್ರಕಾರ ವೈವಿಧ್ಯತೆಯನ್ನು ಸಾಧಿಸಿಕೊಂಡಿಲ್ಲವಾದರೂ, ಈ ಪ್ರಕಾರ ಇತ್ತೀಚಿನ ದಶಕಗಳಲ್ಲಿ ಸಮೃದ್ಧತೆಯನ್ನು ಪಡೆದುಕೊಂಡಿರುವುದು ಗಮನೀಯ ಅಂಶ. ಪುಸ್ತಕೋದ್ಯಮದಲ್ಲಿ ಇವುಗಳ ಹೆಚ್ಚಳವನ್ನು ಗಮನಿಸಿದಾಗ ಈ ಪ್ರಕಾರ ಜನಪ್ರಿಯತೆ ವೇದ್ಯವಾಗುತ್ತದೆ.

ಮೊದಮೊದಲು ಜೀವನ ಚರಿತ್ರೆ, ಚರಿತ್ರೆಯ ಒಂದು ಭಾಗವಾಗಿತ್ತೇ ವಿನಃ ಸಾಹಿತ್ಯದ ವ್ಯಾಪ್ತಿಯೊಳಗೆ ಅವಕಾಶವಿರಲಿಲ್ಲ. ತೀರಾ ಇತ್ತೀಚಿನ ದಶಕಗಳಲ್ಲಿ ಅದೊಂದು ವಿಭಿನ್ನ ವೈಚಾರಿಕ ಪ್ರಜ್ಞೆಯ ನೆಲೆಯಲ್ಲಿ ಒಂದು ಬಗೆಯ ವಿಶ್ಲೇಷಣಾತ್ಮಕ ಬರಹವಾಗಿ ರೂಪುಗೊಳ್ಳುತ್ತಿದೆ. ಔಚಿತ್ಯಪೂರ್ಣವಾದ ದಾಖಲೆಗಳೊಂದಿಗೆ, ವಿಶಾಲ ವ್ಯಾಪ್ತಿಯೊಂದಿಗೆ ಈ ವಲಯ ದಾಪುಗಾಲು ಹಾಕುತ್ತಿದೆಯೆಂದರೆ ಅತಿಶಯೋಕ್ತಿಯೇನಲ್ಲ.

ಸಮಾಜ ಸಂಸ್ಕೃತಿಗಳ ಉನ್ನತಿಗೆ ಕೆಲವು ವ್ಯಕ್ತಿಗಳ ಕೊಡುಗೆ ವಿಶಿಷ್ಟವಾಗಿರುತ್ತವೆ. ಒಬ್ಬ ವ್ಯಕ್ತಿಯ ವಿಶಿಷ್ಟ ವ್ಯಕ್ತಿತ್ವದ ನೆಲೆಗಟ್ಟಿನಲ್ಲಿ ಜೀವನ ಚರಿತ್ರೆ ರೂಪುಗೊಂಡಿರುತ್ತದೆ. ಆ ವ್ಯಕ್ತಿಗಳ ಸ್ಮೃತಿ ವಾಸ್ತವ ಸಮಾಜದ ಸಂಸ್ಕರಣೆಗೆ ಅತ್ಯಗತ್ಯವಾಗಿರುತ್ತದೆ. ಒಂದು ರೀತಿಯಲ್ಲಿ ಸಮಾಜ ಸಂಸ್ಕೃತಿಗಳ ಮೌಲ್ಯ ಪ್ರತಿಪಾದನೆಗೆ ಜೀವನ ಚರಿತ್ರೆ ಆವಶ್ಯಕವಾಗಿರುತ್ತದೆ. ಇಂತಹ ಮೌಲಿಕ ಕೃತಿಯೊಂದಕ್ಕೆ ಸೂತ್ರ ನಿಯಮಗಳ ಬದ್ಧತೆಗಿಂತ ಚರಿತ್ರಕಾರ ತಾನು ಚಿತ್ರಿಸಲಿರುವ ವ್ಯಕ್ತಿಯೊಂದಿಗೆ ತಾದ್ಯಾತ್ಮ್ಯತೆ ಸಾಧಿಸಿದಲ್ಲಿ ಅರ್ಥಪೂರ್ಣ ಜೀವನ ಚರಿತ್ರೆಯೊಂದು ಮೂಡಿಬರಲು ಸಾಧ್ಯವಿದೆ. ಆದಗ್ಯೂ ಜೀವನ ಚರಿತ್ರೆಯೊಂದು ವ್ಯಕ್ತಿಯ ಸ್ತುತಿಕೇಂದ್ರಿತ ನೆಲೆಯಲ್ಲಿರದೇ ಆಯಾ ಸನ್ನಿವೇಶಗಳ ನೆಯ್ಗೆಯಲ್ಲಿ ವ್ಯಕ್ತಿಯ ಗುಣಾದರ್ಶಗಳು ಪ್ರತಿಫಲಿತವಾಗುತ್ತಿದ್ದರೆ ಅದು ಸಮಾಜಕ್ಕೊಂದು ಕೊಡುಗೆಯಾಗಿರುತ್ತೆದೆ. ಸಾಕಷ್ಟು ಸಂಶೋಧನೆ, ನಾಯಕನ ಒಟ್ಟಾರೆ ಸಾಂಸ್ಕೃತಿಕ ಬದುಕಿನ ಉಚಿತಾನುಚಿತ ಪರಿಜ್ಞಾನ, ಕಲಾತ್ಮಕತೆ ಹಾಗೂ ಅಧಿಕೃತತೆ ಇವು ಜೀವನ ಚರಿತ್ರೆಯ ಪ್ರಮುಖ ಅಂಶಗಳಾಗಿರುತ್ತವೆ.

ಜೀವನ ಚರಿತ್ರೆಯ ಗುಣಲಕ್ಷಣಗಳನ್ನು ಆಲ್ ಫ್ರೆಡ್ ಹೀಗೆ ವಿವರಿಸುತ್ತಾನೆ.

೧. ವ್ಯಕ್ತಿಗೆ ಸಂಬಂಧಿಸಿದ ಸಂಗತಿಗಳನ್ನು ಕೂಲಂಕಷವಾಗಿ ಅರಿತುಕೊಳ್ಳಬೇಕು.

೨. ಅವುಗಳನ್ನು ಆಕಾರಾದಿಯಾಗಿ ಅಥವಾ ವಿಷಯಕ್ಕನುಗುಣವಾಗಿ ಜೋಡಿಸಿಕೊಳ್ಳಬೇಕು.

೩. ಯಾವುದನ್ನು ಹಿಗ್ಗಿಸಬೇಕು, ಯಾವುದನ್ನು ಕುಗ್ಗಿಸಬೇಕು, ಯಾವುದಕ್ಕೆ ಎಷ್ಟು ಜಾಗ ಕೊಡಬೇಕು ಎಂಬುದನ್ನು ಮೊದಲೇ ನಿರ್ಣಯಿಸಿಕೊಳ್ಳಬೇಕು.

೪. ರಚನೆಯ ಕಾರ್ಯ ವಿಧಾನ ಸಮರ್ಪಕವಾಗಿ ಸಾಗಬೇಕು.

೫. ಹೊಗಳಿಕೆ, ತೆಗಳಿಕೆಗಳನ್ನು ಕೈ ಬಿಡಬೇಕು. ಸಂಗತಿಗಳೇ ಗುಣಾವಗುಣಗಳನ್ನು ಹೊಮ್ಮಿಸುವಂತಿರಬೇಕು.

೬. ಓದುಗ ತಿಳಿಯಬೇಕಾದ ಸಂಗತಿಗಳನ್ನು ಮರೆಮಾಡಬಾರದು.

ಕೆಲವು ವಿದ್ವಾಂಸರ ಆಭಿಮತದಂತೆ ಜೀವನ ಚರಿತ್ರೆ ಸಿದ್ಧಾಂತದ ಚೌಕಟ್ಟಿನೊಳಗೆ ರೂಪುಗೊಳ್ಳುವ ವ್ಯವಸ್ಥಿತ ಪ್ರಯತ್ನವಾಗಿದೆ. ಪರಿಸರ ಸಿದ್ಧಾಂತ, ವ್ಯಷ್ಟಿಮಹಿಮೋನ್ನತಿ ಸಿದ್ಧಾಂತ, ವಿಧಿ ಸಿದ್ಧಾಂತಗಳು ಈ ಪ್ರಯತ್ನದಲ್ಲಿ ಪೂರಕ ಅಂಶಗಳು ವ್ಯಕ್ತಿಯ ಸಾಂಸ್ಕೃತಿಕ ಪರಿಸರದ ಚಿತ್ರಣದೊಂದಿಗೆ, ನಾಯಕನ ವ್ಯಕ್ತಿತ್ವ ವಿಕಸನ ಬಹುಮುಖ್ಯ ಅಂಶವಾಗಿರುತ್ತದೆ. ಇಲ್ಲದಿದ್ದರೆ ಘಟನೆಗಳ ಸರಪಳಿಯಿಂದಾಗಿ ಅದೊಂದು ವರದಿಯಾಗುವ ಸಾಧ್ಯತೆ ಹೆಚ್ಚು. ಹೀಗಾದಲ್ಲಿ ಅದು ಚರಿತ್ರೆಯಾಗುತ್ತದೆ. ಸಾಂಸ್ಕೃತಿಕ ಪರಿಸರದ ವಿವರಣೆಯೇ ಮೊದಲಾದ ಅಂಶಗಳು. ನಾಯಕನ ವ್ಯಕ್ತಿತ್ವದ ಉನ್ನತಿಗಾಗಿ ಶ್ರಮಿಸಿ ರಸವಾಹಿನಿಗಳಾಗಿ ಸುರಸ ರಸಾಯನಕ್ಕೆ ಕಾರಣೀಭೂತವಾದರೆ, ಅದು ಅತ್ಯುತ್ಕೃಷ್ಟ ಜೀವನ ಚರಿತ್ರೆ. ಹಾಗಾಗಿ ಲಿಟ್ಟನ್ ಸ್ಯಾಟಿ ಹೇಳುತ್ತಾನೆ. “ಲೇಖನ ಕಲೆಯ ಶಾಖೆಗಳಲ್ಲಿ ಇದು ಮಧುರವೂ, ವಿಶಿಶ್ಟವೂ ಮತ್ತು ಮಾನವೀಯವೂ ಆದ ಪ್ರಕಾರ” ಎಂದು.

ಜೀವನ ಚರಿತ್ರೆಗಳು ಐತಿಹಾಸಿಕ ಇಲ್ಲವೇ ಸಮಕಾಲೀನ ವ್ಯಕ್ತಿಯದೂ ಆಗಬಹುದು. ಮೊದಲೆರಡಕ್ಕಿಂತ ಮೂರನೆಯ ಪ್ರಕಾರ ತುಂಬ ಜಾಗ್ರತೆಯಾಗಿ ಅಭಿವ್ಯಕ್ತಿಯಾಗಬೇಕು. ಕಾರಣ, ಸಮಕಾಲೀನ ವ್ಯಕ್ತಿಯಾದ್ದರಿಂದ ಆರಾಧಕ ಭಾವದಿಂದಲೇ ನಾಯಕ ಚಿತ್ರಿತನಾಗಬಹುದು. ಸಮಾಜ – ಸಂಸ್ಕೃತಿಗಳ ಒತ್ತಡವು ಅಪ್ರತ್ಯಕ್ಷವಾಗಿ ಲೇಖಕನ ಮೇಲಿರುತ್ತದೆ. ಹಾಗಾಗಿ ಸಮಗ್ರ ಬದುಕಿನ ಚಿತ್ರಣ ಪಾರ್ಶ್ವಿಕ ಬದುಕಾಗುತ್ತದೆ. ಒಟ್ಟಿನಲ್ಲಿ ಈ ಬಗೆಯ ಜೀವನ ಚರಿತ್ರೆಗಳು ವೈಭವೀಕರಣದ ಪ್ರಕ್ರಿಯೆಯಾಗುತ್ತದೆ. ಇದಕ್ಕೆ ವಿರುದ್ಧವಾಗಿ ಪೂರ್ವಗ್ರಹ ಪೀಡಿತನಾಗಿ ವಿವರಗಳನ್ನು ತಿರುಚಿ ಬರೆಯುವದು ಅತ್ಯಂತ ಅಪಾಯಕಾರಿ ಸನ್ನೀವೇಶವಾಗಿರುವದೊಂದು ಗನನಾರ್ಹ ಸಂಗತಿ, ಜೀವನ ಚರಿತ್ರೆ ಪ್ರಮುಖವಾಗಿ ಎರಡು ವಿಧಗಳಲ್ಲಿ ಮೂಡಿಬರುತ್ತದೆ.

. ಒಬ್ಬ ವ್ಯಕ್ತಿಯ ಪರಿಚಯವನ್ನು ಮಾಡಿಕೊಡುವ, ಜೀವನ ವಿವರಗಳನ್ನು ಒದಗಿಸುವದು.

. ನಾಯಕನೆನಿಸುವ ವ್ಯಕ್ತಿ ತನ್ನ ಬದುಕಿನಲ್ಲಿ ನಡೆಸಿದ ಹೋರಾಟ, ಎದುರಿಸಿದ ಬಿಕ್ಕಟ್ಟು, ಸಮಾಜದ ಪರ ಅಥವಾ ವಿರೋಧಿ ನೆಲೆಗಳು, ಇಂತಹ ಸ್ಥಿಯಲ್ಲಿ ಆ ವ್ಯಕ್ತಿ ತನ್ನ ಧ್ಯೇಯಾದರ್ಶಗಳನ್ನು ಕಂಡಕೊಂಡ ಬಗೆಯನ್ನು ಚಿತ್ರಿಸುವದು.

ಆತ್ಮಚರಿತ್ರೆಯೂ ಒಂದೊಮ್ಮೆ ಜೀವನ ಚರಿತ್ರೆಯ ನೆಲೆಯಲ್ಲೆ ಸಾಗುವದಾದರೂ ಕೆಲವು ವ್ಯತ್ಯಾಸಗಳು ಇದ್ದೇ ಇರುತ್ತವೆ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. “ಆತ್ಮಚರಿತ್ರೆಯೇ ಅತ್ಯುತ್ತಮ ಜೀವನ ಚರಿತ್ರೆ” ಎಂದು ಜಾನ್ ಸನ್ ಹೇಳುತ್ತಾನೆ. ಆದರೆ ಈ ಹೇಳಿಕೆ ಪಾರ್ಶ್ವಿಕ ಸತ್ಯವಾಗಬಹುದು. ಕೃತಿಕಾರನು ಈ ಪ್ರಕಾರದ ರಚನೆಯಲ್ಲಿ ವಿಸ್ಮೃತಿ ಯಿಂದಾಗಲೀ, ಔಚಿತ್ಯದಿಂದಾಗಲೀ ವಿವರಗಳನ್ನು ಬಿಡುವ ಸಾಧ್ಯತೆ ಇದೆ. ತನ್ನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಚಿತ್ರಿಸಿಕೊಳ್ಳುವ ಭರದಲ್ಲಿ ಅನೇಕ ದೋಷಗಳನ್ನು ಗೌಪ್ಯವಾಗಿಡುವ ಸಾಧ್ಯತೆಯಿರುವದರಿಂದ ಇದರಲ್ಲಿ ಪರಿಪೂರ್ಣತೆ ಸಾಧ್ಯವಿಲ್ಲ. ಇಂಗ್ಲಿಷ್ ಸಾಹಿತ್ಯ ಪ್ರಪಂಚದಲ್ಲಿ ಪ್ರಖ್ಯಾತವಾಗಿರುವ ಗಿಬ್ಸನ್ ಆತ್ಮಕಥೆ Potery and Truth ಕೂಡಾ ಈ ದೋಷದಿಂದ ಹೊರತಾಗಿಲ್ಲ. ಅಲ್ಲದೇ ಸ್ವಪ್ರತಿಷ್ಠೆ ಹಾಗೂ ಭಾವೋದ್ರೇಕದಿಂದ ಕೂಡಿದ ಆ ಕೃತಿಯಲ್ಲಿ ಆತನ ಜೀವನದ ನೈಜ ಚಿತ್ರಣ ಸಿಗದೆ ಹೋಗಿದ್ದರೆ ಚೆನ್ನಾಗಿತ್ತು ಎಂಬ ಊಹಾತ್ಮಕ ಅಂಶ ಸಿಗುವ ಸಾಧ್ಯತೆಯಿದೆ. ಇವಕ್ಕೆ ವ್ಯತಿರಿಕ್ತವಾಗಿ ತಮ್ಮನ್ನು ತಾವೇ ದಂಡಿಸಿಕೊಳ್ಳುವ ಸ್ವಭಾವದವರು ಇರುತ್ತಾರೆ. ಯೂರೋಪ್ ಖಂಡದಲ್ಲಿ ಈ ಪ್ರಕಾರದ ಹುಟ್ಟು ಮತ್ತು ಬೆಳವಣಿಗೆ ಕ್ರೈಸ್ತಮತದ ಮುಖ್ಯ ಅಂಶಗಳಲೊಂದಾದ ಪಾಪ ನಿವೇದನೆ ಮೂಲವಾಗಿರುತ್ತದೆ. ಹಾಗಾಗಿ ಕೆಲವರು ಕರ್ಮ ಪ್ರಾಯಶ್ಚಿತ ಎನ್ನುವ ರೀತಿಯಲ್ಲಿ ಆತ್ಮಕಥೆಯನ್ನು ಬರೆದುದು ಇದೆ. ಆಲೂರು ವೆಂಕಟರಾಯರು ಆತ್ಮ ಚರಿತ್ರೆಯನ್ನು ಬರೆಯುವಾಗ ಈ ರೀತಿ ಹೇಳಿಕೊಂಡಿದ್ದಾರೆ. “ಅಹಂಕಾರಾತಿರೇಕದಿಂದ ಉಬ್ಬಿಯೂ ಹೋಗಬಾರದೆಂದು, ವಿನಯಾತಿರೇಕದಿಂದ ನಿಷ್ಕಾರಣವಾಗಿ ತಗ್ಗಿಯೂ ಹೋಗಬಾರದೆಂದು ನಿಶ್ಚಯ ಮಾಡಿದ್ದೇನೆ” ಎಂದು. ಅತ್ಮಚರಿತ್ರೆಯನ್ನು ಬರೆಯಲು ಬೇಕಾಗುವದು ನೆನಪಿನ ಶಕ್ತಿ ಮತ್ತು ಆತ್ಮಸ್ಥೈರ್ಯ. ಬಾಳಿನಲ್ಲಿ ಅನೇಕ ಹೋರಾಟಗಳನ್ನು ಎದುರಿಸಿ ಜಯಶಾಲಿಯಾದ ಜೀವವೊಂದಕ್ಕೆ ಹಳೆಯ ನೆನಪುಗಳನ್ನು ಮೆಲುಕು ಹಾಕಿ, ಇತರರೊಂದಿಗೆ ಅನುಭವವನ್ನು ಹಂಚಿಕೊಂಡಾಗ ಅದು ಬಹುಮುಖಿಯಾಗಿರುತ್ತದೆ. ಅಲ್ಲದೇ ವ್ಯಕ್ತಿಗತವಾಗಿ ಆ ಅನುಭವಗಳು ಬದುಕಿನ ಅನುಭವಾಗುವ ಪರಂಪರೆ ಆತ್ಮಕಥೆಯಾಗುತ್ತದೆ.

ಜೀವನ ಚರಿತ್ರೆ ಇದಕ್ಕಿಂತ ವಿಭಿನ್ನವಾಗಿ ವ್ಯಕ್ತಿಗತವಾದ ಪರಹಿತಚಿಂತನೆಯ ದೃಷ್ಟಿಯಿಂದ ಕೂಡಿದ್ದಾಗಿರುತ್ತವೆ. ಜೀವನ ಚರಿತ್ರೆಕಾರರು ನಿಷ್ಪಕ್ಷಪಾತ ಧೋರಣೆಯಿಂದ ಇನ್ನೊಬ್ಬ ವ್ಯಕ್ತಿಯ ಸ್ವಾಗತಾರ್ಹ ಅಂಶಗಳನ್ನು, ದೋಷಗಳನ್ನು ಚಿತ್ರಿಸಿರುತ್ತಾರೆ. ಸ್ವಂತ ಅನುಭವ ಬಿಚ್ಚಿ ಹೇಳುವ ಮುಜುಗರ ಇವರಲಿರುವದಿಲ್ಲ. ಬದಲಾಗಿ ಸಮಕಾಲೀನ ವ್ಯಕ್ತಿಯಾಗಿ ಅಥವಾ ಕಾಲವ್ಯತ್ಯಾಸವಿದ್ದರೆ, ನಿಖರವಾದ ದಾಖಲೆಗಳಿಂದ ಪ್ರಬುದ್ಧ ವ್ಯಕ್ತಿತ್ವವನ್ನು ಚಿತ್ರಸಲಾಗಿರುತ್ತದೆ. ಜೀವನ ಚರಿತ್ರೆಕಾರ ತನ್ನ ಭಾವನೆಗಳನ್ನು ನಾನಾ ಆತ್ಮದೊಳಗೆ ಸೇರಿಸಿ, ನಿರ್ದೇಶಕ ಪಾತ್ರಧಾರಿಯನ್ನು ನಡೆಸುವಂತೆ ನಡೆಸುತ್ತಿರುತ್ತಾನೆ. ಪರಕಾಯಪ್ರವೇಶ ಇಲ್ಲಿ ಸಹಜವಾಗಿರುತ್ತದೆ. ಹಾಗಾಗಿ ಲೇಖಕನು ಮೊದಲು ನಾಯಕನ ವ್ಯಕ್ತಿತ್ವದ ಓದುಗನಾಗಿದ್ದು, ನಂತರ ಆ ಅನುಭವಗಳನ್ನು ಜೀವನ ಚರಿತ್ರೆಯಾಗಿ ಬರೆದಿರುತ್ತಾನೆ. ಅರ್ಥಾತ್ ಜೀವನ ಚರಿತ್ರೆಕಾರ ಮತ್ತು ನಾಯಕ ತುಸುಮಟ್ಟಿಗಾದರೂ ಸಮಾನ ಧರ್ಮಿಗಳಾಗಿರಬೇಕೆಂಬುದು ವಿದಿತ ಸಂಗತಿ.

ಗಾಢ ಪರಿಚಯ ಇದ್ದವರು ಅಥವಾ ವ್ಯಕ್ತಿಯ ಸಮೀಪ ರಕ್ತ ಸಂಬಂಧಿಯೊಬ್ಬರು ಕೃತಿ ರಚನೆ ಮಾಡಿದರೆ ಆ ಜೀವನ ಚರಿತ್ರೆಯು ವಾಸ್ತವಕ್ಕೆ ದೂರವಾಗಿರುತ್ತದೆ. ಅದು ಅರ್ದಸತ್ಯ ಕೂಡಿರುತ್ತದೆ. ಲೇಖಕನೊಬ್ಬ ತನ್ನ ಅಭಿವ್ಯಕ್ತಿ ಮಾರ್ಗವಾಗಿ ವ್ಯಕ್ತಿಯ ಜೀವನ ಚಿತ್ರಿಸಿದಾಗ ಮಾತ್ರ ಸಮರ್ಥ ಜೀವನ ಚರಿತ್ರೆ ಬರಲು ಸಾಧ್ಯ. ಇಲ್ಲದಿದ್ದಲ್ಲಿ ಸಂಬಂಧಿಗಳಿಗೆ ಮಾತ್ರವಲ್ಲ ಪ್ರತಿಯೊಬ್ಬ ಕೃತಿಕಾರ ಈ ಸಮಸ್ಯೆಯನ್ನು ಎದುರಿಸುತ್ತಾನೆ. ಶೆಲ್ಲಿಯ ಜೀವನ ಚರಿತ್ರೆಯನ್ನು ಮೌರಾಯ್ ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಚಿತ್ರಿಸಿದುದು ಉದಾಹರಣೀಯನೀ ದೃಷ್ಟಿಕೋನದಿಂದ ಶ್ರೀಮತಿ ರಾಣಿ ಸತೀಶ್ ರವರು ತಮ್ಮ ತಂದೆಯನ್ನು ಕುರಿತು ರಚಿಸಿದ ‘ಹೆಚ್. ಎಂ. ಚೆನ್ನಬಸಪ್ಪನವರು’ ಕೃತಿ ಗಮನಿಸಬಹುದು. ಲೇಖಕರು ತಮ್ಮ ತಂದೆಯವರ ಸಾಕ್ಷಿ ಪ್ರಜ್ಞೆಯಿಂದ, ಜೀವನ ಚರಿತ್ರೆಯನ್ನು ರಚಿಸಿದ್ದದ್ದೀ ಕೃತಿಯ ಪರಿಶೀಲನೆಯಲ್ಲಿ ಇಂಥ ಪ್ರಶ್ನೆ ಉದ್ಭವಿಸುವುದಿಲ್ಲ ಎಂಬುದು ಸ್ಪಷ್ಟ.

ಜೀವನ ಚರಿತ್ರೆಯೊಂದರ ಬಗೆಯನ್ನು ಇದೇ ರೀತಿ ಎಂದು ನಿರ್ಧರಿಸುವುದು ಸಾಧ್ಯವಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಕೃತಿಯ ಸ್ವರೂಪ ವ್ಯತ್ಯಸ್ತವಾಗುತ್ತದೆ, ಅದರ ನಿರೂಪಣೆ, ಆಕರ್ಷಣೆ ಇವುಗಳು ಜೀವನ ಚರಿತ್ರೆಯ ಪ್ರಾಧಾನ್ಯತೆಯ ದ್ಯೋತಕವಾಗಿರುತ್ತವೆ. ಸಮಾಜ ಸುಧಾರಕರೊಬ್ಬರ ಚರಿತ್ರೆ, ಸಂಗೀತ ವಿದ್ವಾಂಸರಿಗಿಂತ ಬೇರೆಯಾಗಿರುತ್ತದೆ. ರಚನಾಕ್ರಮದ ಚರ್ಚೆಗಿಂತ ಇದು ಒಂದು ಸೃಷ್ಟಿಶೀಲ ಕಾರ್ಯ. ಇಲ್ಲಿ ಲೇಖಕ ನಾಯಕನನ್ನು ಪಾತ್ರ ರೂಪದಲ್ಲಿ ಚಿತ್ರಿಸುತ್ತಾನೆ. ಆ ಪಾತ್ರದ ವರ್ತನೆ, ಕ್ರಿಯೆ ಹಾಗೂ ಮಾತುಕತೆಗಳ ಮೂಲಕ ಓದುಗ ವ್ಯಕ್ತಿಯೊಂದರ ಜೀವನ ಚರಿತ್ರೆಯನ್ನು ಅರ್ಥೈಸಿಕೊಳ್ಳುತ್ತಾನೆ. ಹಾಗೆಂದು ಜೀವನ ಚರಿತ್ರೆಕಾರ ತನ್ನ ಇಷ್ಟಾನಿಷ್ಟಗಳನ್ನು ಸೃಷ್ಟಿಸಬಾರದು. ದಾಖಲೆ ಪತ್ರಗಳು ದೊರೆತ ನಾಯಕನ ವ್ಯಕ್ತಿತ್ವಕ್ಕೆ ಮೆರಗು ನೀಡುವುದಿಲ್ಲವೆಂಬ ಕಾರಣದಿಂದ ಸಂಗತಿಗಳನ್ನು ಮರೆಮಾಡಬಾರದು.

ಜೀವನ ಚರಿತ್ರೆಯೊಂದರ ಉದಯಕ್ಕೆ ವ್ಯಕ್ತಿ ವಿಶಿಷ್ಟತೆಗೆ ಇಂಬುಕೊಡುವ ಸಾಂಸ್ಕೃತಿಕ ಪರಿಸರವೊಂದು ಅಗತ್ಯವಿರುತ್ತದೆ. ಮಹಾತ್ಮಗಾಂಧಿ, ನೇತಾಜಿ ಸುಭಾಸಚಂದ್ರಬೋಸ್ ಮೊದಲಾದವರು ವಸಾಹತುಶಾಹಿ ರಾಜಕಾರಣದ ವಿರುದ್ಧ ಬಂಡೆದ್ದು ರಾಷ್ಟ್ರನಾಯಕರಾದರು. ಆ ಪರಿಸರ ಅವರುಗಳಿಗೆ ಆ ಬಗೆಯ ನೆಲೆಯನ್ನೊದಗಿಸಿತು. ಬದಲಾದ ಸಾಂಸ್ಕೃತಿಕ ಪರಿಸರಕ್ಕೆ ತಕ್ಕಂತೆ ಹೊಂದಿಕೊಳ್ಳುವ ಇಲ್ಲವೇ ಆಗ ಸ್ಫುರಣೆಗೊಂಡ ಪ್ರಜ್ಞಾಶಕ್ತಿಯಿಂದ ವೈಚಾರಿಕತೆಯನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ರಾಜಾರಾಮ್ ಮೋಹನ್ ರಾಯ್, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಮೊದಲಾದವರು. ಉದಯಿಸಿದರು. ಇತ್ತೀಚಿನ ದಶಕಗಳಲ್ಲಿ ಇಂತಹ ಕೃತಿ ರಚನೆ ವ್ಯಕ್ತಿಗಳ ಜೀವನ ಕುರಿತು ಸಿಂಹಪಾಲು. ಒಂದೇ ವರ್ಷದಲ್ಲಿ ಅಂಬೇಡ್ಕರ ಕುರಿತಾದ ಕೃತಿಗಳು ಹಲವಾರು ಬಂದಿವೆ.

. ಡಾ. ಕೆ. ಆರ್. ದುರ್ಗಾದಾಸ್ ‘ಬಾಬಾ ಸಾಹೇಬ್ ಅಂಬೇಡ್ಕರ್’

. ಮಾಗಡಿ ರಂಗನರಸಿಂಹಯ್ಯ ‘ದಲಿತ ಜ್ಯೋತಿ ಡಾ. ಅಂಬೇಡ್ಕರ್’

. ಜಸ್ಟಿಸ್. ಕೆ. ಭೀಮಯ್ಯ ‘ಭಾರತದ ಸಂವಿಧಾನ ಶಿಲ್ಪಿ ಅಂಬೇಡ್ಕರ್’

ಹೀಗೆಯೇ ಮಹಾತ್ಮ ಗಾಂಧಿಯನ್ನು ಕುರಿತು ಅನೇಕ ಕೃತಿಗಳು ಬಂದಿವೆ ಎಂಬುದನ್ನು ಗಮನಿಸಬಹುದು. ಮತ್ತೆ ವ್ಯಕ್ತಿಯೊಬ್ಬನ ಚರಿತ್ರೆ ವಿಭಿನ್ನ ಕಾಲಘಟ್ಟಗಳಲ್ಲಿ ಪದೇ ಪದೇ ಚಿತ್ರಿತವಾಗಿರುವುದಕ್ಕೆ ಆಯಾಯ ಯುಗದ ಮೌಲ್ಯಗಳ ಅಭಿವ್ಯಕ್ತಿಗೆ ಇದು ಮಾಧ್ಯಮವಾಗಿರುವದು ಕಾರಣವಾಗಿದೆ. ವ್ಯಕ್ತಿಯ ಆದರ್ಶ ವ್ಯಕ್ತಿತ್ವ ಪ್ರತಿಯುಗದಲ್ಲೂ ಆರಾಧಕ ಭಾವದೊಂದಿಗೆ ಪುನರಾವರ್ತಿತವಾಗುತ್ತಿರುತ್ತದೆ. ರಾಮ, ಕೃಷ್ಣ, ಬುದ್ಧ, ಬಸವ ಇವರೆಲ್ಲ ಪದೇ ಪದೆ ಚರ್ಚಿತರಾಗುತ್ತಿರುವದು ಈ ಹಿನ್ನೆಲೆಯಲ್ಲಿ.

ಒಬ್ಬ ವ್ಯಕ್ತಿಯನ್ನು ಕುರಿತು ಹತ್ತು ಹಲವಾರು ಕೃತಿಗಳು ಹೊರಬಂದಿದೆ. ಉದಾಹರಣೆಗಾಗಿ, ೧೯೯೪ರಲ್ಲಿ ಎಸ್. ಎಮ್. ಭಾಸ್ಕರಾಚಾರ್ ‘ಸರ್ದಾರ ಭಗತಸಿಂಗ್’, ೧೯೯೫ರಲ್ಲಿ ಮೋಹನ ಮಟ್ಟನ ವಿಲೆ ಅವರ ‘ಸರ್ದಾರ್ ಭಗತಸಿಂಗ್’, ೧೯೯೬ರಲ್ಲಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವರರ ‘ಪತ್ರಗಳು ಚಿತ್ರಿಸಿದ ಸೇಡಿಯಾಪು’, ೧೯೯೭ರಲ್ಲಿ ಪಾದೇಕಲ್ಲು ವಿಷ್ಣುಭಟ್ಟರು ‘ಸೇಡಿಯಾಪು ಕೃಷ್ಣಾಭಟ್ಟರು’ ಪ್ರಕಟವಾದವು. ಈ ವೈವಿಧ್ಯಕ್ಕೆ ವಿಭಿನ್ನ ಲೇಖಕರು ತಳೆಯುವ ವಿಭಿನ್ನ ವೈಚಾರಿಕ ದೃಷ್ಟಿಕೋನ ಕಾರಣವಾಗಿದೆ. ಸಮಕಾಲೀನ ಲೇಖಕ ಚಿತ್ರಿಸುವುದಕ್ಕಿಂತ ಬೇರೆ ಬಗೆಯಲ್ಲಿ ನಂತರದ ಲೇಖಕ ಚಿತ್ರಿಸುವ ಸಾಧ್ಯತೆಯಿದೆ. ಇದಕ್ಕೆ ಎರಡೂ ಕಡೆಯಿಂದ ವಾದವಿದೆ. ಅದೆಂದರೆ ನಂತರದ ಕಾಲಘಟ್ಟಗಳಲ್ಲಿ ಬರುವ ಲೇಖಕ ಪಕ್ಷಪಾತ, ಪೂರ್ವಗ್ರಹಗಳಿಂದ ದೂರವಿದ್ದು ಅನೇಕ ದಾಖಲೆಗಳ ಆಧಾರದ ಮೇಲೆ ವಾಸ್ತವ ಸ್ವರೂಪವನ್ನು ರೂಪಿಸುತ್ತಾನೆ. “ಸಮಕಾಲೀನವಾದರೆ ಮಾತ್ರ ಸಮರ್ಥ ಜೀವನ ಚರಿತ್ರೆಯೊಂದು ಮೂಡಿಬರಲು ಸಾಧ್ಯ ಇಲ್ಲದಿದ್ದರೆ ಅದೊಂದು ಕಲ್ಪಿತ ಕಥೆ” ಎಂದು ವಾಲ್ಟೇರ್ ಹೇಳುತ್ತಾನೆ. ಸಹವರ್ತಿಯಾದರೂ ನಾಯಕನ ಬಾಹ್ಯ ಕ್ರಿಯೆಯನ್ನು ತಿಳಿಯಲು ಸಾಧ್ಯವೇ ವಿನಃ ಅಂತಂರಂಗದ ಕ್ರಿಯೆ ತಿಳಿಯಲಸಾಧ್ಯ. ಅಲ್ಲಿಯೂ ನಾಯಕನ ಸಮಗ್ರ ವ್ಯಕ್ತಿತ್ವ ಚಿತ್ರಣ ಸಾಧ್ಯವಿಲ್ಲವೆಂಬುದು ಅಭಿಪ್ರಾಯ. ಅರ್ಥಾತ್ ಸಮಕಾಲೀನ ಕಾಲದಲ್ಲಿ ಬಂದ ಜೀವನ ಚರಿತ್ರೆ ವ್ಯಕ್ತಿಯ ಗುಣಶೀಲಗಳಿಗೆ ಪ್ರಾಮುಖ್ಯತೆ ನೀಡುವುದಾದರೆ, ನಂತರದು ಅವನ ಕಥಾನಕಕ್ಕೆ ಪ್ರಾಮುಖ್ಯ ನೀಡುತ್ತದೆ ಎಂಬುದು ಮಥಿತಾರ್ಥ.

೧೯೯೧ – ೨೦೦೦ದ ವರೆಗಿನ ಜೀವನ ಚರಿತ್ರೆಗಳ ಸಂಖ್ಯೆ ಅಂದಾಜು ೩೦೦ಕ್ಕಿಂತ ಹೆಚ್ಚಾಗಬಹುದು. ವರ್ಷದಿಂದ ವರ್ಷಕ್ಕೆ ಇವುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಒಟ್ಟು ಜೀವನ ಚರಿತ್ರೆಗಳ ಸಮೀಕ್ಷೆ ದುಃಸ್ಸಾಹಸವೇ ಸರಿ. ಸರ್ಕಾರದ ಪ್ರಕಟಣೆಯಾಗಿ, ಸಂಘ ಸಂಸ್ಥೆಗಳ ಪ್ರಕಟಣೆಯಾಗಿ ಇವುಗಳ ಸಂಖ್ಯೆ ವಿಪರೀತವಾಗಿರುವದರಿಂದ, ವರ್ಷವೊಂದರ ವಿಮರ್ಶೆ/ ಸಮೀಕ್ಷೆಸಾಧುವಲ್ಲ. ನವ ಕರ್ನಾಟಕ ಪ್ರಕಾಶನದ ಮಾಲಿಕೆ, ಪ್ರತಿಭಾವಂತ ಸಂಸದೀಯಪಟು ಮಾಲಿಕೆ, ಜ್ಞಾನ ಪೀಠ ಪ್ರಶಸ್ತಿ ವಿಜೇತರು ಮಾಲಿಕೆ, ವೀರಶೈವ ಪುಣ್ಯ ಪುರುಷ ಸಾಹಿತ್ಯರತ್ನಮಾಲೆ, ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಣೆ, ಕನ್ನಡ ಸಾಹಿತ್ಯ ಪರಿಷತ್ತು, ವೀರಶೈವ ಅಧ್ಯಯನ ಸಂಸ್ಥೆ ಪ್ರಕಟಣೆ, ದಾಸ ಸಾಹಿತ್ಯ ಅಧ್ಯಯನ ಕೇಂದ್ರ ಹೀಗೆ ಹಲವಾರು ಮಾಲಿಕೆಗಳಡಿ ಜೀವನ ಚರಿತ್ರೆಗಳು ಮೂಡಿ ಬಂದಿವೆ. ವೈಯಕ್ತಿಕ ಪ್ರಕಟಣೆಗಳು ಇದರಲ್ಲಿ ಸೇರಿವೆ.

ಬಹುಶಃ ಕೆಲವು ಕೃತಿಗಳನ್ನು ಬಿಟ್ಟರೆ ಉಳಿದೆಲ್ಲ ಕೃತಿಗಳು ಪ್ರಸಿದ್ಧ ಸಾಹಿತಿಗಳ, ಕಲಾವಿದರ, ವಿದ್ವಾಂಸರ ಚರಿತ್ರೆಗಳೇ ಪದೇ ಪದೇ ಈ ಜನಪ್ರಿಯ ಮಾಲಿಕೆಯಲ್ಲಿ ಕಾಣಿಸಿಕೊಂಡಿವೆ. ಹಳ್ಳಿಕೇರಿ ವಿರೂಪಾಕ್ಷಪ್ಪನವರು ‘ಶ್ರೀ ಹೊಸರಿತ್ತಿ ಅನ್ನದಾನ ಮರಿದೇವರು’ ನೇಮಿಚಂದ್ರ ಅವರ ‘ನೋವಿಗದ್ದಿದ ಕುಂಚ’ (ವ್ಯಾನಗೋನ ಜೀವನ ಚಿತ್ರ), ಕೀರ್ತನ ಕೇಸರಿ ಕೊಣನೂರರ ‘ಶ್ರೀಕಂಠಶಾಸ್ತ್ರಿಗಳ ಜೀವನ ಚರಿತ್ರೆ’ ಎಂ. ಆರ್. ದತ್ತಾತ್ರೇಯ ಅವರ ‘ಶ್ರೀ ಶಂಕರ ಭಗವತ್ಪಾದ:’ ಶ್ರೀಮತಿ ವಿದ್ಯಾಕಬೆಯವರ ‘ಹರಿ ಭಕ್ತೆ ಯಮುನಕ್ಕ’ ಕೃತಿ ಹಾಗೂ ಜಯತೀರ್ಥ ಕುಲಕರ್ಣಿಯವರ ‘ಗುರುಭಕ್ತಿ ಶ್ರೀ ಅಥಣಿ ಭೀಮದಾಸರು’ ಇವುಗಳು ಉಪೇಕ್ಷಿತ ದಾಸ ಸಾಹಿತ್ಯಕಾರರನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿವೆ. ರಾಯಚೂರು ದಾಸಸಾಹಿತ್ಯ ಅಧ್ಯಯನ ಕೇಂದ್ರದ ಪಾತ್ರ ಬಹುಮುಖ್ಯವಾಗಿದೆ. ವೀರಶೈವ ಅಧ್ಯಯನ ಕೇಂದ್ರದಿಂದ ಪ್ರಕಾಟವಾಗಿರುವ ಕೃತಿಗಳಿಂದ ಅನೇಕ ವಿದ್ವಾಂಸರ, ಯೋಗಿಗಳ ಪರಿಚಯವಾಗುತ್ತವೆ. ಇನ್ನು ಆಯಾ ಪ್ರದೇಶದ ಕೆಲ ಸಾಂಸ್ಕೃತಿಕ ಸಂಘದವರು, ಆಯಾ ಪ್ರಾದೇಶಿಕರ ಬಗ್ಗೆ ಪ್ರಕಟಿಸುವ ಆದರಪೂರ್ವಕ ಜೀವನ ಚರಿತ್ರೆಗಳು ಈ ದಶಕದಲ್ಲಿ ಹೆಚ್ಚಾಗಿವೆ. ಆದರೂ ಒಂದು ಹಂತದಲ್ಲಿ ಪೂಜ್ಯರ/ಯತಿಗಳ ಜೀವನ ಚರಿತ್ರೆಯ ಪ್ರಮಾಣ ತುಂಬ ಹೆಚ್ಚಾಗಿ ಬಂದಿವೆ. ಸಾಮಾನ್ಯವಾಗಿ ಆರಾಧಕ ಭಾವನೆಯಿಂದ ಬಂದ ಕೃತಿಗಳು ಮತ್ತು ತಮಗೆ ಪರಿಚಯವಿರುವವರನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಬಂದ ಕೃತಿಗಳು ಹೆಚ್ಚಾಗಿವೆ. ಇನ್ನು ಜನಪ್ರಿಯ ಮಾಲಿಕೆಯಡಿಯಲ್ಲಿಯೂ ಅನೇಕ ಕೃತಿಗಳು ಮೂಡಿಬಂದಿವೆ. ಮಕ್ಕಳಿಗಾಗಿ ಪಠ್ಯ ಪುಸ್ತಕಕೊಸ್ಕರವೇ ಬರೆದ ಕೃತಿಗಳು ಇಲ್ಲವೆನ್ನಬಹುದು. ಆದಾಗ್ಯೂ ಕೆಲವು ಕೃತಿಗಳು ಒಂದು ‘ಟ್ರೆಂಡ್ ‘ನಿಂದ ದೂರ ಸರಿದು ತನ್ನದೇ ಆದ ವಿಶಿಷ್ಟ ನೆಲೆಯಲ್ಲಿ ರೂಪು ಗೊಂಡಿರುತ್ತವೆ. ಅಂತಹ ಕೆಲವು ವಿಶಿಷ್ಟ ನೆಲೆಯ ಕೃತಿಗಳನ್ನು ಇಲ್ಲಿ ಚರ್ಚಿಸಲಾಗಿದೆ.

ಸುಬ್ರಹ್ಮಣನ್ ಚಂದ್ರಶೇಖರ್

ಜಿ. ಟಿ. ನಾರಾಯಣರಾವ್ ಬರೆದ ‘ಸುಬ್ರಹ್ಮಣನ್ ಚಂದ್ರಶೇಖರ್’ರನ್ನು ಕುರಿತ ಜೀವನ ಚರಿತ್ರೆ ಚಂದ್ರಶೇಖರರ ಬಾಲ್ಯ, ಯೌವನ, ಸಾಧನೆಯ ಹಂತಗಳು ಹಾಗೂ ನೊಬಲ್ ಬಹುಮಾನ ಪಡೆದುದನ್ನು ಆಂಶಿಕ ಅಗತ್ಯಗಳಾಗಿ ಚಿತ್ರಿಸಿದ್ದಾರೆ. ಈ ಅಂಶಗಳು ಸಾಧನೆಯ ಕ್ಷಿತಿಜದಲ್ಲಿ ಹೇಗೆ ಸಹಕಾರಿ ಅಂಶಗಳಾದವು ಎಂಬುದನ್ನು ಚಿತ್ರಿಸಿದ್ದಾರೆ. ಬಾಲ್ಯವನ್ನು ವಿವರಿಸುತ್ತಲೇ, ಶಿಕ್ಷಣ ಎಂಬ ಶೀರ್ಷಿಕೆಯಡಿ ಹಿರಿಚಿಂತನೆಗಳ ಜೊತೆ ಮರಿಚೇತನ ಎಂದು ಅವರ ಆಸಕ್ತಿ ಕ್ಷೇತ್ರದ ಚರ್ಚೆಯನ್ನು ಮಂಡಿಸುತ್ತಾರೆ. ಅಂದಿನ ವಿಶೇಷ ಚರ್ಚೆ ಸೊಮ್ಮರ ಫೆಲ್ಡ್ ನ ‘Atomic structure and spectral lines The Bible of Atomic physics’ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಅವರು ಭೌತ ವಿಜ್ಞಾನದ ವಿದ್ಯಾರ್ಥಿಯಾದರೂ ತಂದೆಯ ಅಣತಿಯಂತೆ ತನ್ನ ಗಣಿತ ದಾಹವನ್ನು ಭೌತ ವಿಜ್ಞಾನದ ಸೈದ್ಧಾಂತಿಕ ವಿಭಾಗದಲ್ಲಿ ಅಂದರೆ ಅನ್ವಯಿಕ ಗಣಿತದಲ್ಲಿ ಉಪಶಮನ ಗೊಳಿಸಿಕೊಂಡರು. ನಿಸರ್ಗದ ದ್ಯತ ನಿಯಮದಿಂದಾಗುವ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನಗೈಯುವ ವಿಭಾಗ ಸಂಖ್ಯಾಕಲನ ವಿಜ್ಞಾನ ಎಂಬ ವಾದ ಚಂದ್ರಶೇಖರರಲ್ಲಿ ಬಲವಾಗಿ ಬೇರೂರಿತ್ತು. ಸೊಮ್ಮರ ಫೆಲ್ಡ್‌ನ ಮುಂದಿನ ಹೆಜ್ಜೆಯಾಗಿ ‘The compton sealtering and the New Statistics’ ಎಂಬ ಸಂಶೋಧನ ಪ್ರಬಂಧ ಬರೆದರು. ಹೀಗೆ ಪ್ರಚಲಿತ ಭೌತ ವಿಜ್ಞಾನದ ಜಗತ್ತನ್ನು ವಿಜ್ಞಾನ ಮಂಚಿಕೆ ಎಂಬ ಅಧ್ಯಾಯದಲ್ಲಿ ವಿವರಿಸುತ್ತಾ ತನ್ನ ಮನೆಯ ಒತ್ತಡ ವಾತಾವರಣದ ಹಿನ್ನೆಲೆಯಲ್ಲೂ ತನ್ನ ಸುಪ್ತ ಬಯಕೆಯನ್ನು ಪ್ರಚಲಿತ ವಿದ್ಯಮಾನದೊಡನೆ ಚಂದ್ರಶೇಖರ ಈಡೇರಿಸಿಕೊಂಡ ಬಗೆಯನ್ನು ತುಂಬ ರೋಚಕ ಸಂಗತಿಯಾಗಿ ವಿವರಿಸಿದ್ದಾರೆ. ನಂತರದ ಅವತರಣಿಕೆಗಳನ್ನು ಸಾಧನಾ ದಿಗಂತದ ಸೋಪಾನಗಳಾಗಿ ಚರ್ಚಿಸುತ್ತಾ ಹೋಗಿದ್ದಾರೆ. ಇದನ್ನು ರಂಗ ಪ್ರಕ್ರಿಯೆ ಹಿನ್ನೆಲೆಯಲ್ಲಿ ಹೇಳಿರುವ ಕ್ರಮ ತುಂಬ ಮನೋಜ್ಞವಾಗಿದೆ. ಅನೇಕ ಅಧ್ಯಾಯಗಳು (ಭೌತ ವಿಜ್ಞಾನದ ಪಾಠದಷ್ಟು ವೈಜ್ಞಾನಿಕ ಚರ್ಚೆಯನ್ನೊಳಗೊಂಡಿದೆ. ಕೊನೆಯಲ್ಲಿ ಅನೇಕ ಎಡರು ತೊಡರುಗಳ ಹಾದಿಯಲ್ಲಿ ಖಭೌತ ವಿಜ್ಞಾನಿಯಾಗಿ ಪರಿಶೋಧಿಸಿದ, ಸೈದ್ಧಾಂತಿಕ ತಿರುಳನ್ನು ಕೊಡಲಾಗಿದೆ. ಈ ಸೈದ್ಧಾಂತಿಕ ವೈಚಿತ್ರ್ಯವೇ ಜಾನ್ ಅರ್ಚಿಬಾಲ್ಡ್ ವ್ಹೀಲರ್ ಸೂಚಿದಂತೆ Black Hole ಸಿದ್ಧಾಂತ ಅಥವಾ ಅಂತಾರಾಷ್ಟ್ರೀಯ ಖ್ಯಾತಿಯ ಭಾರತಿಯ ಖಭೌತ ವಿಜ್ಞಾನಿ ಜಯಂತ ವಿಷ್ಣುನಾರ್ಲಿಕರ್ ಹೇಳಿರುವಂತೆ ಕೃಷ್ಣ ವಿವರ ಎಂಬುದನ್ನು ಸವಿವರವಾಗಿ ನಿರೂಪಿಸಿದ್ದಾರೆ. ಸೈದ್ಧಾಂತಿಕ ಚರ್ಚೆಯ ವಿವರ ಹೀಗಿದೆ. ಐನ್ ಸ್ಟೈನ್ ಅಯತವನ್ನು ನಿಸರ್ಗದ ಪರಿಪೂರ್ಣ ಚೌಕಕ್ಕೆ ಪೊರ್ವಿಸುವಲ್ಲಿ ಕೃಷ್ಣ ವಿವರ ಪರಿಕಲ್ಪನೆ ಮೈಳೆಯುತ್ತದೆ. “ವಿಶ್ವದಲ್ಲಿರಬಹುದಾದ ಪರಿಪೂರ್ಣ ಸುಂದರ ಬೃಹದ್ವಸ್ತುಗಳೇ ಕೃಷ್ಣ ವಿವರಗಳು. ಐನ್ ಸ್ಟೈನ್‌ನ ಸಾಪೇಕ್ಷ ಸಿದ್ಧಾಂತವನ್ನು E=MC2 ವಿವರಣೆಯಿಂದ ಆರಂಭಿಸಿ ಚಂದ್ರಶೇಖರ ಪ್ರಕಟಿತ ಫಲಿತಾಂಶವೆನಿಸಿದ ವಿಮೋಚನ ವೇಗ C=೮2 Gm/R ಎಂಬ ಸಿದ್ಧಾಂತವನ್ನು ಅವರ ಸಾಧನೆಗಳ ಹಿನ್ನೆಲೆಯಲ್ಲಿನ ಚರ್ಚೆಯನ್ನು ಲೇಖಕರು ಮಾರ್ಮಿಕವಾಗಿ ತಿಳಿಸಿಕೊಡುತ್ತಾರೆ. ಅಲ್ಲಲ್ಲಿ ಋಗ್ವೇದ, ರಾಮಾಯಣ ದರ್ಶನಂ, ಗೋಪಾಲಕೃಷ್ಣ ಅಡಿಗರ ಕಾವ್ಯಗಳ ಭಾಗಗಳನ್ನು ಸೇರಿಸುತ್ತಾ ಹೋಗುವ ಅವರ ಕ್ರಮದಿಂದಾಗಿ ಸಾಹಿತ್ಯಿಕ ಕೃತಿಗಳ ಮೂಲಕ ವೈಜ್ಞಾನಿಕ ಚರ್ಚೆಯನ್ನು ಬೆಳೆಸುವ ರೀತಿಯೋ ಅಥವಾ ವೈಜ್ಞಾನಿಕ ಸಿದ್ಧಾಂತವೊಂದನ್ನು ಸಾಹಿತ್ಯಿಕವಾಗಿ ಚಿತ್ರಿಸುವ ಬಗೆ ಹೇಗೆ ಎಂದು ಓದುಗ ಒಂದು ಕ್ಷಣಕಾಲ ದಿಗ್ಮೂಢನಾಗುವ ಸಂಭವನೀಯತೆ ಹೆಚ್ಚು. ಒಂದೊಮ್ಮೆ ವಿಜ್ಞಾನದ ಪಠ್ಯಪುಸ್ತಕದಂತೆ ತೋರುವ ಈ ಜೀವನ ಚರಿತ್ರೆ ನಿಜಕ್ಕೂ ಜೀವನ ಚರಿತ್ರೆಯೆಂಬ ಪ್ರಕಾರದಲ್ಲಿ ಹೊಸ ಹೊಳಹನ್ನು ನೀಡುತ್ತದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

ಚಾಪ್ಲಿನ್

ಕುಂ. ವೀರಭದ್ರಪ್ಪನವರು ರಚಿಸಿದ ‘ಚಾಪ್ಲಿನ್’ ಕುರಿತಾದ ಜೀವನ ಚರಿತ್ರೆ ಜಗತ್ತಿನ ಮಹಾನ್ ಕಲಾವಿದನ ಜೀವನಗಾಥೆ. ಬಹುಶಃ ಜೀವನ ಚರಿತ್ರೆಯ ಎರಡನೆಯ ಪ್ರಕಾರಕ್ಕೆ ಈ ಕೃತಿ ಹೊಂದಿಕೊಂಡಿದೆ. ಚಾಪ್ಲಿನ್ ಆಸ್ಕರ್ ಪ್ರಶಸ್ತಿ ಪಡೆದ ಅಪ್ರತಿಮ ಕಲಾವಿದನಾದರೂ, ಆ ಹಂತದ ಮೇಲೇರುವಿಕೆಗೆ ಆತ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹಾಸ್ಯ ರಸಪ್ರತಿಪಾದನೆಯ ಹಿಂದೆ ಪ್ರತಿಕ್ಷಣದ ನೋವಿನ ಮ್ಲಾನತೆಯೂ ಇದೆ. ಜನರನ್ನು ಹಾಸ್ಯ ಹೊನಲಿನಲ್ಲಿ ತೇಲಿಸಿ ಜಯಭೇರಿಗಳಿಸಿದ ಮಹಾನ್ ಚೇತನ ಸಾವಿರಾರು ಮಾನಸಿಕ ಆಘಾತಗಳನ್ನು, ಸಾಂಸಾರಿಕ ತಾಪತ್ರಯವನ್ನು, ದುರ್ಭರತೆಯನ್ನು ಬಾರಿಬಾರಿಗೂ ಅನುಭವಿಸಿ ಪರಿಪಕ್ವ ನಟನಾದನೆನ್ನುವದು ಗಮನಾರ್ಹ ಸಂಗತಿ. ಲೇಖಕರು ಚಾಪ್ಲಿನ್‌ನ ಬಾಲ್ಯ, ಯೌವ್ವನ ಹಾಗೂ ಇನ್ನಿತರ ಘಟ್ಟಗಳನ್ನು ಕಥೆಯಂತೆ ಮನಮುಟ್ಟುವ ಹಾಗೆ ವಿವರಿಸಿದ್ದಾರೆ. ಓದುತ್ತಾ ಹೋದಂತೆ ಅದೊಂದು ಕರುಣಾರಸದ ಪ್ರವಾಹವೆನಿಸುತ್ತದೆ. ಆ ಕರುಣಾರಸ ಪ್ರವಾಹದಲ್ಲಿ ಓದುಗ ತೇಲುತ್ತಿರುವಂತೆಯೇ ಓದುಗ ಚಾಪ್ಲಿನ್‌ನ ಹಾಲಿವುಡ್ ಪ್ರವೇಶದೊಡನೆ ಹಾಲಿವುಡ್‌ನ ಪರಿಚಯ ಪಡೆಯುತ್ತಾನೆ. ಕೇವಲ ಚಾಪ್ಲಿನ್ ಕುರಿತ ಕಥೆಯಾಗಿ ರಚಿಸದೇ ಇಂಗ್ಲೆಂಡಿನ ಆ ಕಾಲದ ಪ್ರಸಕ್ತ ಚಿಂತಾಜನಕ ಸ್ಥಿತಿಗತಿಗಳನ್ನು, ಒಂದು ತುಂಡು ಬ್ರೆಡ್‌ಗಾಗಿ ಕೊಳಗೇರಿಯ ನಿವಾಸಿಯೊಬ್ಬ ಪಡಬೇಕಾದ ಪಾಡನ್ನು, ರಂಗಭೂಮಿಯ ಮೇರುನಟರಾಗಿ ಜೀವನದಲ್ಲಿ, ದಾಂಪತ್ಯದಲ್ಲಿ ಪಡೆಯುವ ವೈಫಲ್ಯತೆಯನ್ನು, ಇಂಗ್ಲೆಂಡಿನ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಚರ್ಚಿಸಿದ್ದಾರೆ. ಸ್ಥಾವರ, ಜಂಗಮ ಎಂಬ ದ್ವಂದ್ವ ಸ್ಥಿತಿಗಳ ಹಿನ್ನೆಲೆಯಲ್ಲಿ ಮೂಡಿಬಂದ ಚಲನಚಿತ್ರವೆಂಬ ಉದ್ಯಮದ ಭಾಷೆ, ಕಲೆ, ಕಲೆಯ ಮೂಲ ಅಭಿವ್ಯಕ್ತಿಯೆನಿಸಿದೆ.

ನಾಟ್ಯ ಮೀಮಾಂಸೆಯನ್ನು ಚರ್ಚಿಸುತ್ತಾ, ನಾಟ್ಯದ ಆಂಗಿಕ ಅಭಿನಯವನ್ನು ಸೆರೆಹಿಡಿಯುವ ಫೋಟೋಗ್ರಫಿ ತಂತ್ರಜ್ಞಾನವನ್ನು ಬಳಸಿಕೊಂಡು ದೃಶ್ಯ ಮಾಧ್ಯಮವಾಗಿ, ಸಂವಹನ ಅತ್ಯುತ್ಕೃಷ್ಟಿ ಮಾಧ್ಯಮವಾಗಿ ಮಾಡಿದ ಚರಿತ್ರೆಯನ್ನು ಕೂಲಂಕುಶವಾಗಿ ಚರ್ಚಿಸಿದ್ದಾರೆ. ನಂತರದ ಘಟ್ಟಗಳಲ್ಲಿ ಭಾರತೀಯ ಮತ್ತು ಜಾಗತಿಕ ಮಟ್ಟದ ಚಲನಚಿತ್ರದ ವಿವಿಧ ಮಜಲುಗಳನ್ನು ವಿವರಿಸುತ್ತಾ ಚಾಪ್ಲಿನ್‌ನ ವ್ಯಕ್ತಿತ್ವ (Character)ದ ಪರಿಚಯ ಮಾಡಿಸುವ ಕ್ರಮ ಜೀವನ ಚರಿತ್ರೆಯೊಂದರ ವಿಭಿನ್ನ ಮಾದರಿ ಎಂದೆನಿಸುತ್ತದೆ. ಜೀವನದ ವಿವರಣೆಯೇ ಪ್ರಮುಖವಾದರೂ ಈ ವಿವರಣೆಗೆ ಅಂದಿನ ಸಾಮಾಜಿಕ, ರಾಜಕೀಯ, ಅರ್ಥಿಕ ಅಂಶಗಳು ಪ್ರಭಾವಿ ವಲಯಗಳಾಗಿ ವ್ಯಕ್ತಿತ್ವವನ್ನು ಅತ್ಯುತ್ಕೃಷ್ಟ ರೀತಿಯಲ್ಲಿ ಪೋಷಿಸಿದೆ. ಅದು ನಾಯಕನ ಬಾಲ್ಯದ ಘಟನೆಯಾಗಿರಬಹುದು. ಇಂಗ್ಲೆಡಿನ ಕೊಳಚೆ ಪ್ರದೇಶದ ನಾಗರಿಕ ದುರ್ಭರತೆ, ಅನಾಥಾಲಯಗಳಿಗೆ ಮಕ್ಕಳನ್ನು ಸೇರಿಸುವುದು, ಆ ಮಕ್ಕಳು ವಿಚಿತ್ರ ಹಿಂಸೆಯಲ್ಲಿ ಬೆಳೆದು ಸೇನಾಪಡೆಗೆ ಸೇರಿಕೊಳ್ಳುವುದು, ರಂಗಭೂಮಿ ಕಲಾವಿದರಿಗೆ ಅಸಭ್ಯ ಪ್ರೇಕ್ಷಕರಿಂದಾಗುವ ಮಾನಸಿಕ ಹಿಂಸೆ. ಇವುಗಳೆಲ್ಲ ಅಂದಿನ ಸಾಮಾಜಿಕ ಚಿತ್ರಣವನ್ನು ಕಟ್ಟಿಕೊಡುತ್ತವೆ. ನಂತರ ಚಾಪ್ಲಿನ್ ಪ್ರಖ್ಯಾತಿಯ ತುತ್ತ ತುದಿಗೇರಿದನಾದರೂ ಅಮೆರಿಕಾ ಸರ್ಕಾರ ಪತ್ರಿಕೆಗಳಲ್ಲಿ ಪ್ರಕಾಟವಾದ ಸುದ್ಧಿಯನ್ವಯ, ಬಗೆಬಗೆಯ ಅಪಾದನೆ ಹೊರಿಸಿ ದೇಶಭ್ರಷ್ಟನನ್ನಾಗಿ ಮಾಡುತ್ತದೆ. ಮಿಕ್ಕೆಲ್ಲ ದೇಶಗಳು ಮಹಾನ್ ಕಲಾವಿದನಾಗಿ ಗುರುತಿಸಿದರೂ, ಅಮೆರಿಕದ ನಿರಂಕುಶ ಪ್ರಭುತ್ವ ಇದನ್ನು ಒಪ್ಪಿಕೊಳ್ಳುವುದಿಲ್ಲ. ಲೇಖಕರು ಹೇಳುವಂತೆ, “ಜಗತ್ತಿನ ಅದ್ವೀತಿಯ ಪ್ರತಿಭೆಯೆಂದು ಪ್ರಸಿದ್ಧ ನಾಟಕಕಾರರಿಂದ ಹೊಗಳಿಸಿಕೊಂಡ ಚಾಪ್ಲಿನ್ ವಿಶ್ವಮಾನವ. ಅವನು ಯಾವುದೇ ರಾಜಕೀಯ ಪಕ್ಷಕ್ಕೆ ಕಟ್ಟು ಬಿದ್ದವನಲ್ಲ. ಎಡಪಂಥೀಯ ವಿಚಾರವಾದಿಗಳ ಸ್ನೇಹ ಸಾನಿಧ್ಯದಲ್ಲಿರುತ್ತಿದ್ದರಿಂದ ಆತ ಕಮ್ಯುನಿಷ್ಟ ಎಂಬ ಅಪಮಾನಕ್ಕೆ ಗುರಿಯಾಗಿ ಅಮೇರಿಕಾ ಸರ್ಕಾರದಿಂದ ೧೩ ವರ್ಷಗಳ ಕಾಲ ಪಡಬಾರದ ಕಷ್ಟಗಳನ್ನು ಅನುಭವಿಸಿದ. ಆತ ವ್ಯವಸ್ಥೆಯೊಂದಿಗೆ ರಾಜಿಯಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಕಳೆದುಕೊಳ್ಳದೇ ಚಿತ್ರ ಮಾಧ್ಯಮದ ಮೂಲಕ ಮುಕ್ತವಾಗಿ ಪ್ರತಿಪಾದಿಸಿದ, ಸಂಪಾದಿಸಿದ ಈ ಸಂದೇಶದಿಂದ ಕೊನೆಗೊಳ್ಳುವ ಇದೊಂದು ಬಗೆಯ ವಿಭಿನ್ನ ನೆಲೆಯ ಜೀವನ ಚರಿತ್ರೆ.

ಜೀವನ ಚರಿತ್ರೆಯೊಂದು ಆತನ ಘಟನಾವಳಿಗಳನ್ನು ಸಾಗಿ ಬಂದಂತೆ ಚಿತ್ರಸುವುದು ರೂಢಿ. ಆದರೆ ಇಲ್ಲಿಯ ಬರಹರೂಪವು ೪೦೬ ಸಂಖ್ಯಾತ್ಮಕ ರೂಪದಲ್ಲಿ (Points) ನಿರೂಪಿತವಾಗಿದೆ. ಎಷ್ಟೋ ದಿನಗಳ ಮೇಲೆ ಜ್ಞಾಪಕ ಮಾಡಿಕೊಂಡು ಬರೆದ ಕಾರಣ ಘಾಟನಾವಳಿಗಳು ಹಿಂದು ಮುಂದಾಗಿವೆ. ಇವರನ್ನು ಕುರಿತು ಅನೇಕ ಚರಿತ್ರೆಗಳು ಬಂದರೂ ಇಷ್ಟು ವೈಶಾಲ್ಯತೆ ಇಲ್ಲ. ಇನ್ನೊಂದು ವಿಶೇಷವೆಂದರೆ ಇದು ತಮಿಳು ಮೂಲದಿಂದ ಅನುವಾದವಾಗಿ ಬಂದಿದೆ.

ಮಹಾವೈದ್ಯನಾಥ ಅಯ್ಯರ್

ಸಂಗೀತ ಪ್ರಪಂಚದ ಮೇರು ಶಿಖರವೆನಿಸಿದ ಮಹಾವೈದ್ಯನಾಥ ಅಯ್ಯರ್ ರವರನ್ನು ಕುರಿತು ಈಕೃತಿಯಲ್ಲಿ ಕರ್ನಾಟಕ ಸಂಗೀತ ಪದ್ಧತಿಯ ಕೆಲವು ವಿವರಣೆಯಿದೆ. ರಾಗ, ತಾಳ ಮತ್ತು ಪಲ್ಲವಿಗಳಿಗೆ ಈ ಪದ್ಧತಿಯಲ್ಲಿ ಪ್ರಾಮುಖ್ಯತೆ ಇದೆ. ವಾಗ್ಗೇಯಕಾರರ ರಚನೆಗಳನ್ನು ಸ್ವಲ್ಪ ಮಟ್ಟಿಗೆ ಹಾಡಿ, ನಂತರ ತಮ್ಮ ಸ್ವಂತ ಸಾಮರ್ಥ ತೋರಿಸಲು ಪಲ್ಲವಿ ಗಾಯನ ಅತೀ ಮುಖ್ಯ ಸಾಧನ. ಅಂತಹ ಅಪ್ರತಿಮ ಸಾಮರ್ಥ ಪಡೆದವರಲ್ಲಿ ವೈದ್ಯನಾಥ ಅಯ್ಯರ್ ರವರು ಒಬ್ಬರು. ಇದೊಂದು ವಿಶಿಷ್ಟ ಬಗೆಯ ಜೀವನ ಚರಿತ್ರೆಯಾಗಿದೆ. ಅನುವಾದಕರು ತಮ್ಮ ಮಾತಿನಲ್ಲಿ ಹೇಳುತ್ತಾರೆ. “ಕಥಾನಾಯಕ ಕಾಲವಾಗಿ ನೂರು ವರ್ಷವಾಯಿತು. ಮೂಲ ತಮಿಳು ಲೇಖಕರು ಕಾಲವಾಗಿ ೩೭ ವರ್ಷವಾಯಿತು. ಪುಸ್ತಕ ಪ್ರಕಾಟವಾಗಿ ಕಾಲು ಶತಮಾನದ ಮೇಲಾಯಿತು. ಪರಿಷ್ಕರಿಸಿದವರೂ ಈಗ ಇಲ್ಲ. ಹಾಗಿರುವಾಗ ಇಂತಹ ಪುಸ್ತಕದಿಂದ ಪ್ರಯೋಜನವೇನು? ಎಂಬ ಪ್ರಶ್ನೆ ಏಳಬಹುದು. ಅದಕ್ಕೆ ಉತ್ತರ, ಎಷ್ಟೋ ಚಾರಿತ್ರಿಕ ವ್ಯಕ್ತಿಗಳು ಕಾಲವಾಗಿ ಶತಮಾನಗಳು ಕಳೆದಿದ್ದರೂ, ಇತಿಹಾಸಕಾರ ಅಥವಾ ಸಂಶೋಧಕನೊಬ್ಬನಿಗೆ ಅಲ್ಪಸ್ವಲ್ಪ ಮಾಹಿತಿ ಸಿಕ್ಕಾಗ ಅದಕ್ಕೆ ತನ್ನ ಊಹಾಬಲದಿಂದ ಒಂದು ಚರಿತ್ರೆಯನ್ನು ನಿರ್ಮಿಸುತ್ತಾನೆ. ಹಾಗಿರುವಾಗ ಇಷ್ಟೊಂದು ವಿಷಯಗಳನ್ನು ನೇರವಾಗಿ ಕಂಡ ವ್ಯಕ್ತಿಯೊಬ್ಬನು ಹೇಳುವಾಗ ಅದು ಹೆಚ್ಚು ವಿಶ್ವಸನೀಯವಲ್ಲವೆ” ಎಂದು. ಕೃತಿಯಲ್ಲಿ ಅವರ ಅಣ್ಣ ರಾಮಸ್ವಾಮಿ ಶಿವನ್‌ರವರ, ಪಟ್ಟಂ ಸುಬ್ರಹ್ಮಣ್ಯ ಅಯ್ಯರ್ ರವರ ಹೀಗೆ ಬೇರೆಯವರ ಸಾಧನೆ ಕೂಡಾ ತಿಳಿದುಬರುತ್ತದೆ. ದೇಶದಲ್ಲೆಲ್ಲಾ ಬ್ರಿಟಿಷ್ ಅರ್ಕಾರದ ಆಡಳಿತವಿದ್ದರೂ ಒಳಾಡಳಿತ ದೇಶಿಯ ರಾಜ ಕೈಯಲ್ಲಿತ್ತು. ರಾಜರು, ಜಮೀನ್ದಾರರು ವಿದ್ವಾಂಸರನ್ನು ಪೋಷಿಸುತ್ತಿದ್ದರು. ಈ ಮಾಹಿತಿಗಳಿಂದ ಅಂದಿನ ರಾಜಕೀಯ ಚಿತ್ರಣ ಸಿಗುತ್ತದೆ. ಅಲ್ಲಲ್ಲಿ ತಾಳಬದ್ಧ ಪಲ್ಲವಿಗಳಿವೆ. ಇದು ಸಂಗೀತ ಕ್ಷೇತ್ರದವರಿಗೆ ಒಂದು ಉಪಯುಕ್ತ ಮಾಹಿತಿ. ಇದು ವಿವಿಧ ಅದ್ಯಯನ ಶಿಸ್ತುಗಳಿಗೂ ಒಂದು ಆಕರ ಸಾಮಗ್ರಿಯಾಗಿರುವದೊಂದು ವಿಶೇಷ.

ಬಾಬಾ ಫರೀದ್

ಭಾರತೀಯ ಸಾಹಿತ್ಯ ನಿರ್ಮಾಪಕರು ಮಾಲಿಕೆಯಡಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಬಾಬಾ ಫರೀದ್ ಅವರನ್ನು ಕುರಿತು ಬಲವಂತ ಸಿಂಗ್ ಆನಂದ ಪ್ರಕಟಿಸಿರುವ ಪುಸ್ತಕವನ್ನು ಚೆನ್ನವೀರ ಕಣವಿ ಅನುವಾದ ಮಾಡಿದ್ದಾರೆ. ಕವಿಯ ಜೀವನದ ಬಗ್ಗೆ ಅಧಿಕೃತವಾದ ಮಾಹಿತಿ ದೊರೆಯದೇ ಇದ್ದರೂ, ಲಭ್ಯವಿರುವ ಪದ್ಯಗಳ ಮೂಲಕ ಕೆಲವು ನೋಟಗಳನ್ನು ಕಂಡುಕೊಂಡಿದ್ದಾರೆ. ಫರೀದ್ ಪದ್ಯಗಳನ್ನು ಮಕಾಲಿಫ್ ಅಥವಾ ಗೋಪಾಲಸಿಂಗ್ ಭಾಷಾಂತರ ಮಾಡಿದ್ದಾರೆ. ಇದು ಶಬ್ಧಶಃ ಅನುವಾದವಾಗಿದ್ದರೂ ಅಳವಾದ ಧಾರ್ಮಿಕ ಅಥವಾ ಆಧ್ಯಾತ್ಮಿಕ ಗೂಢಾರ್ಥಗಳನ್ನು ಒಳಗೊಂಡಿಲ್ಲವಾದರೂ ಲೇಖಕರು ಈ ಅನುವಾದವನ್ನೆ ಆಶ್ರಯಿಸಿದ್ದಾರೆ. ಅರೇಬಿಯಾ ಅಥವಾ ಪರ್ಶಿಯಾ ದೇಶಗಳಲ್ಲಿ ಸೂಫಿ ತತ್ವಜ್ಞಾನ ಬೆಳೆದು ಬಂದ ಬಗೆ, ಭಾರತದಲ್ಲಿ ಸೂಫಿ, ಸಿಲ್‌ಸಿಲಾಗಳು ವಿವಿಧ ರೂಪದಲ್ಲಿ ಪ್ರವೇಶ ಪಡೆದುದನ್ನು ನಿರೂಪಿಸಲಾಗಿದೆ. ಸಿಖ್ಖರ ಪವಿತ್ರ ಗುರು ಗ್ರಂಥ ಸಾಹಿಬ್‌ನಲ್ಲಿ ಫರೀದನ ಕೆಲವು ಪದ್ಯಗಳ ಸೇರ್ಪಡೆಯಾದುದ್ದರ ಮೌಲ್ಯವನ್ನು ಪ್ರತಿಪಾದಿಸಲಾಗಿದೆ. ಬಾಬಾ ಫರೀದನೆಂದು – ಪ್ರಸಿದ್ಧನಾದ ಷೇಕ್ ಫರೀದ್ – ಉದ್ – ದಿನ್ ಗಂಜ್ – ಐ – ಶಕರನಂ ಪಂಜಾಬದ ಪ್ರಥಮ ಸೂಫಿ ಕವಿ. ಆತ ಅರೇಬಿಕ್, ಪರ್ಶಿಯನ್, ಪಂಜಾಬಿ ಹಾಗೂ ಇತರ ಭಾಷೆಗಳಲ್ಲಿ ಪದ್ಯಗಳನ್ನು ರಚಿಸಿದರೂ ಪಂಜಾಬಿ ಭಾಷೆಯ ಬಗ್ಗೆ ಅಭಿಮಾನ ಇದ್ದವನು. ಹಾಗಾಗಿಯೇ ಆಳವಾದ ಬೌದ್ಧಿಕತೆ ಹಾಗೂ ಭಾವಪೂರ್ಣ ಬಂಧದಿಂದ ಸ್ಪುರಣೆಗೊಂಡ ಆತನ ಪದ್ಯಗಳನ್ನು ಗ್ರಂಥಸಾಹಿಬ್ ನಲ್ಲಿ ಸೇರಿಸಲಾಗಿದೆ. ಸ್ವತಃ ಗುರುನಾಯಕರೇ ಪದ್ಯಗಳನ್ನು ಸಂರಕ್ಷಿಸಿದರು. ಎಂಬುದು ಇನ್ನೊಂದು ವಿಶೇಷ. ಫರೀದನ ಪದ್ಯವೊಂದನ್ನು ಗಮನಿಸ ಬಹುದು.

ಓಡೊಂಬ ಕಾಗೆಗಳೇ ನನ್ನಸ್ಥಿಪಂಜರವನ್ನೆಲ್ಲ ಶೋಧಿಸಿ
ತಿಂದು ಹಾಕಿದ್ದೀರಿ ನನ್ನೆಲ್ಲ ಮಾಂಸ
ಎರಡು ಕಣ್ಣುಗಳ ಮಾತ್ರ ಮುಟ್ಟದಿರಿ, ನನ್ನ
ಪ್ರಿಯತಮನೆ ಕಾಣಬೇಕೆಂಬಾಸೆ ನನಗೆ.

ಇದರಿಂದ ಫರೀದ ಎರಡು ಜಗತ್ತುಗಳಲ್ಲಿದ್ದ ಎಂಬುದು ವಿದಿತವಾಗುತ್ತದೆ. ಇಸ್ಲಾಂ ಶರಿಯತ್‌ದಲ್ಲಿ ಆಡಕಗೊಂಡ ನೈತಿಕ ನಡಾವಳಿಯ ಆಧಾರದ ಬಿಗುವಿನ ಜೀವನಕ್ರಮವನ್ನು ಕುರಾನ್ ಮತ್ತು ಸುನ್ನಾಹ ಅವಶ್ಯವಾಗಿ ಬಯಸುತ್ತದೆ. ಜಗತ್ತಿನ ಅಂತಿಮ ಸತ್ಯದೊಡನೆ ವೈಯುಕ್ತಿಕ ಹಾಗೂ ನೇರ ಅನುಭವಕ್ಕೆ ಅವನು ಪ್ರಯತ್ನಿಸಿದ. ಸೂಫಿ ಜಗತ್ತು ಹೀಗೆ ಧರ್ಮದ ಐಕ್ಯತೆಯನ್ನು ಸಾರುತ್ತದೆ ಎಂದು ಹೇಳುವ ಒಂದು ವಿಶಿಷ್ಟ ಕೃತಿ ಇದಾಗಿದೆ. ಜೊತೆಗೆ ಇಸ್ಲಾಂ ಸಂಸ್ಕೃತಿಯ ಆಗಮನದ ನಂತರ ಕಾಣಿಸಿಕೊಂಡ ಮೌಲ್ವಿಗಳು, ಉಲೇಮಾಗಳು ಮತ್ತು ಸೂಫಿ ತತ್ವ ಚಾರಿತ್ರಿಕ ಬೆಳವಣಿಗೆಯನ್ನು ಪ್ರಸ್ತಾಪಿಸುತ್ತದೆ. ಹಾಗೂ ಅಂದಿನ ಧಾರ್ಮಿಕ ಜಗತ್ತಿನ ಪರಿಚಯ ಮಾಡಿಕೊಡುತ್ತದೆ.

ಶಂಕರ ಶೇಠ

‘ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆಯ ಸಂಕಲನವೇ ಇತಿಹಾಸ’ ಎಂದು ಕಾರ್ಲೈಲ್ ಹೇಳಿದ್ದು ಪಾರ್ಶ್ವಿಕ ಸತ್ಯವಾದರೂ, ಜೀವನ ಚರಿತ್ರೆಗಳ ಆಧ್ಯಯನ ಇತಿಹಾಸದ ಮೇಲೆ ಬಹುಮಟ್ಟಿಗೆ ಬೆಳಕು ಚೆಲ್ಲಲು ಸಮರ್ಥವಾಗುವದೆಂಬ ಮಾತು ನಿರ್ವಿವಾದವಾದದ್ದು ಎಂಬುದು ಈ ಕೃತಿಯನ್ನೋದಿದ ಪ್ರತಿಯೊಬ್ಬರಿಗೂ ಅನ್ನಿಸದೆ ಇರಲಾರದು. ಭಾರತದ ವಾಣಿಜ್ಯ ರಾಜಧಾನಿಯಾದ ಮುಂಬೈನ ಬೃಹತ್‌ ಬೆಳವಣಿಗೆಗೆ ಕಾರಣ ಪುರಷರಾದ ‘ಶಂಕರ ಶೇಠ’ ರನ್ನು ಕನ್ನಡಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಅನುವಾದ ಕೃತಿ ರೂಪ ತಳೆದಿದೆ. ಕರ್ನಾಟಕದಲ್ಲಿ ಪ್ರಭುತ್ವ ಹೊಂದಿದ್ದ ಒಡೆಯರ್ ಮನೆತನದವರು ಕನ್ನಡ ಸಾಹಿತ್ಯ ಸಂಸ್ಕೃತಿಯ ಜಾಗೃತಿಗಾಗಿ ಯಾವ ರೀತಿ ಸ್ಪಂದಿಸದರೋ, ಅದೇ ರೀತಿಯಾಗಿ ನಾನಾ ರೀತಿಯ ವ್ಯಕ್ತಿತ್ವ, ಜೀವನ, ಕ್ರಿಯಾಶೀಲತೆ ಹಾಗೂ ಕಾರ್ಯಕ್ಷೇತ್ರಗಳ ವಿಶ್ವತೋಮುಖವುಳ್ಳವರಾಗಿದ್ದರು. ಹಾಗೂ ಸೀಮಾತೀತವಾದ ಕಾರ್ಯಸಾಧನೆಗಳಿಂದ ನಾಯಕತ್ವವನ್ನು ಪಡೆದ ಮಹನೀಯರ ಚರಿತ್ರೆ ಇದಾಗಿದೆ. ಇವರು ಮುಂಬೈನಲ್ಲಿ ಆಧುನಿಕ ಇಂಗ್ಲಶ್ ಶಾಲೆ, ಹುಡುಗಿಯರ ಶಾಲೆ, ಜೆ. ಜೆ. ಸ್ಕೂಲ್‌ ಆಫ್‌ ಆರ್ಟ್ಸ, ಏಷ್ಯಾಟಿಕ್‌ ಸೊಸೈಟಿ, ೧೮೫೫ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆಗೆ ಹಿನ್ನೆಲೆ ಒದಗಿಸಿದ ಬಾಂಬೆ ಪ್ರೆಸಿಡೆನ್ಸಿ ಮೊದಲಾದ ಸಂಸ್ಥೆಗಳ ಸಂಸ್ಥಾಪಕರೆನಿಸಿದರು. ಮುಂಬೈ ನಗರ ಪಾಲಿಕೆ, ಮುಂಬೈ ವಿಶ್ವವಿದ್ಯಾಲಯ, ಮುಂಬೈ ನಾಟಕ ಶಾಲೆ, ಮೃಗಾಲಯ, ಗ್ರ್ಯಾಂಡ್‌ ಮೆಡಿಕಲ್‌ ಕಾಲೇಜ್‌ ಹೀಗೆ ಮುಂಬೈ ನಗರ ನಿರ್ಮಾಣಕ್ಕೆ ಕಾರಣೀಭೂತರಾದ ವ್ಯಕ್ತಿ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದ್ದರು. ನಾಗರಿಕ ಸೌಲಭ್ಯಗಳಿಂದ ಜನ ವಂಚಿತರಾದಾಗ ಸಹಾಯ ನೀಡುತ್ತಿದ್ದರು. ತಮಗೆ ಒದಗಿ ಬಂದ ವೈಚಾರಿಕತೆಗನುಗುಣವಾಗಿ ಜನತೆಯನ್ನು ಮೌಢ್ಯತೆಯ ಸಂಕೋಲೆಯಿಂದ ಬಿಡಿಸಿದರು. ಹೀಗೆ ಸಾಂಸ್ಕೃತಿಕ, ಸಾಹಿತ್ಯಿಕ ಚಟುವಟಿಕೆಗಳನ್ನು ಮುನ್ನಡೆಸಿಕೊಂಡು ಬಂದ ವ್ಯಕ್ತಿ ಚಿತ್ರಣದ ಜೊತೆಗೆ ಅವರ ಬಗೆಗಿನ ಐತಿಹಾಸಕ ದಾಖಲೆಗಳ ಉಲ್ಲೇಖದಿಂದ ಇದೊಂದು ಮಹತ್ವ ಪೂರ್ಣ ಕೃತಿಯಾಗಿದೆ. ಇವರೊಬ್ಬ ನವೋದಯದ ಹರಿಕಾರರಾಗಿ ಚಿತ್ರಣ ಇಲ್ಲಿ ದೊರೆಯುತ್ತದೆ. ಜೀವನ ಚರಿತ್ರೆಯ ಪ್ರಕಾರದಲ್ಲಿಂದು ವಿಶಿಷ್ಟತೆಯನ್ನು ಸಾಧಿಸಿದ ಕೃತಿಯಾಗಿದೆ.

ಕಲ್ಯಾಣ ಸರಸ್ವತಿ

ಕನ್ನಡ ಲೇಖಕಿಯರ ಸಂಘದವರು ಆರ್. ಕಲ್ಯಾಣಮ್ಮನವರನ್ನು ಕುರಿತು ‘ಕಲ್ಯಾಣ ಸರಸ್ವತಿ’ ಎಂಬ ಕೃತಿಯನ್ನು ಶತಮಾನೋತ್ಸವ ಸಂದರ್ಭದಲ್ಲಿ ‘ಸ್ಮೃತಿ’ ರೂಪದಲ್ಲಿ ಪ್ರಕಟಿಸಿದ್ದಾರೆ. ಕನ್ನಡ ನಾಡು ನುಡಿ ಏಳ್ಗೆಯಾಗುತ್ತಿರುವ ಆ ಕಾಲದ ಸಾಂದರ್ಭಿಕ ಹಿನ್ನೆಲೆಯಲ್ಲಿ, ಪಾಶ್ಚಾತ್ಯ ಅಧ್ಯಯನದಿಂದಾದ ಸಾಮಾಜಿಕ ಕ್ರಾಂತಿಯ ಕಿಡಿಯಾಗಿ ಹೊಮ್ಮಿದ ಆರ್. ಕಲ್ಯಾಣಮ್ಮನವರ ಸಮಗ್ರ ವ್ಯಕ್ತಿತ್ವನ್ನಿಲ್ಲಿ ಪರಿಚಯಿಸಲಾಗಿದೆ. ಬದುಕು ಬರಹಗಳೆಡರಿಂದಲೂ ಸಾಮಾಜಿಕ ಸಮಾನತೆಯನ್ನು ಸಾಧಿಸಿದ ಮಹಿಳೆ ಇವರಾಗಿದ್ದಾರೆ. ಇತಿಹಾಸ ಪುಟಗಳಲ್ಲಿ ಸೇರಿಹೋದ ಆರ್ಯಸಮಾಜದ ಹೆಣ್ಣನ್ನು ೧೯ನೆಯ ಶತಮಾನದಲ್ಲಿ ನೆನಪಿಸಿಕೊಟ್ಟ ಧೀಮಂತ ವ್ಯಕ್ತಿತ್ವ ಇವರದು. ವ್ಯಕ್ತಿಗತ ಸಾದನೆಗಳ ನೆಲೆಯಿಂದ ತುಂಬ ವಿಶಿಷ್ಟರಾಗಿ ತೋರುವ ಕಲ್ಯಾಣಮ್ಮ ಅಭಿವ್ಯಕ್ತಿಯನ್ನು ಕ್ರಿಯಾತ್ಮಕವಾಗಿ ನೀಡಿದವರು ಎಂಬುದು ಈ ಜೀವನ ಚರಿತ್ರೆಯ ಆಶಯವಾಗಿದೆ. ಬದಲಾದ ಸಾಂಸ್ಕೃತಿಕ ಸಂದರ್ಭದಲ್ಲಿ ಸ್ತ್ರೀಯಾತ್ಮಕ ನೆಲೆಯೊಂದನ್ನು ಒದಗಿಸುವಲ್ಲಿ ಯಶಸ್ವಿಯಾದ ಮಹಿಳೆಯನ್ನು ಕುರಿತು ಬರೆದ ಮೌಲಿಕ ಕೃತಿಯಾಗಿದೆ. ಅಧ್ಯಯನ ಶಿಸ್ತಿನ ನೆರಳಲ್ಲಿ ಮಾಹಿತಿ ಸಂಗ್ರಹಿಸಿ ಬರೆದ ಕೃತಿಗಿಂತಲೂ, ಅನೇಕ ಔಚಿತ್ಯಪೂರ್ಣ ಮಾಹಿತಿಗಳನ್ನೊಳಗೊಂಡು ಮೂಡಿಬಂದ ಈ ಕೃತಿ ತುಂಬ ಮನೋಜ್ಞವಾಗಿದೆ. ಶಿಕ್ಷಣಾವಕಾಶ ಸಿಗುವುದೇ ದುರ್ಭರವಾದ ಪರಾಂಪರಿಕ ಕುಟುಂಬದಲ್ಲಿ ಬೆಳೆದು ಬಂದ ಕಲ್ಯಾಣಮ್ಮ, ಸಾಮಾಜಿಕ ಕಳಕಳಿಯನ್ನು ಬೆಳೆಸಿಕೊಂಡು, ಸಾಹಿತ್ಯ ಕ್ಷೇತ್ರದಲ್ಲಿ ಅದರಲ್ಲೂ ಪತ್ರಿಕೋದ್ಯಮದಲ್ಲಿ ತಮ್ಮ ಹೆಸರು ನೋಂದಾಯಿಸಿದವರು. ೧೯೧೭ರಲ್ಲಿ ‘ಸರಸ್ವತಿ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ ಸಂಪಾದಕೀಯ, ಟಿಪ್ಪಣಿ, ವೈಚಾರಿಕ ಲೇಖನಗಳು, ಸೃಜನಶೀಲ ಮನಸ್ಸು ಕಂಡಕನಸು ಇದೇ ಬಗೆಯ ಒಳನೋಟಗಳಲ್ಲಿ ಅನೇಕ ಮಹಿಳಾ ಸಾಹಿತಿಗಳನ್ನು ಸೃಷ್ಟಿಸಿದರು. ಈ ಪತ್ರಿಕೆ ವಸಾಹತುಶಾಹಿ ಆಡಳಿತಕ್ಕೆ ಪ್ರತ್ಯುತ್ಪನ್ನವಾಗಿ ಮೂಡಿಬರದೆ ಆ ಕಾಲದ ಸಂಸ್ಕೃತಿಕ ದಾಖಲೆಯಾಗಿ ಮೈತಳೆಯಿತು. ಬಹುಮುಖ್ಯವಾಗಿ ಈ ಕೃತಿ ಕಲ್ಯಾಣಮ್ಮನವರನ್ನು ಕುರಿತ ಒಂದು ಅಧ್ಯಯನವಾಗಿ ಮೂಡಿಬಂದಿರುವುದು ಗಮನೀಯ ಅಂಶ.

ದಾರಾಶಿಖೋ

ದಾರಾಶಿಖೋ (ಜೀವನ ಮತ್ತು ಚಿಂತನೆ) ಇತಿಹಾಸ ಗರ್ಭದಲ್ಲಿ ಹೂತು ಹೋಗಿ ನಂತರದ ಉತ್ಖನನದಲ್ಲಿ ದೊರತೆ ಉತ್ಪನ್ನವಾಗಿ ಮೂಡಿಬಂದಿದೆ. ಮೊಘಲ್‌ ಸಾಮ್ರಾಜ್ಯದ ಸಾಮ್ರಾಟನಾಗಿ ಮೆರೆದು ‘ಮೊಹಮ್ಮದ್‌ ದಾರಾ ಶಿಖೋ ನಾಮಾ’ ಬರೆಸಿಕೊಳ್ಳಬೇಕಾದ ದಾರಾಶಿಖೋ ಇತಿಹಾಸದ ವಿಸ್ಮೃತಿಯ ಮೂರ್ತರೂಪ. ಆಧ್ಯಾತ್ಮಿಕ ವರ್ಚಸ್ಸಿನಿಂದ ಸೂಫಿ ಸಂತನಾಗಿಯೂ ಹಿಂದು – ಮುಸ್ಲಿಂ ಐಕ್ಯತೆಯನ್ನು ಜೀವನಾದರ್ಶವಾಗಿ ಬಾಳಿದ ದಾರ್ಶನಿಕನಾಗಿಯೂ ಚಿತ್ರಿತನಾಗಿದ್ದಾನೆ. ಮುಸ್ಲಿಂ ಮತೀಯನಾದರೂ, ಉಪನಿಷತ್ತುಗಳನ್ನು ಶುದ್ಧವಾಗಿ ಮತ್ತು ತದ್ವತ್ತಾಗಿ ಪರ್ಶಿಯನ್‌ ಭಾಷೆಗೆ ಭಾಷಾಂತರಿಸಿದ. ಏಕೆಂದರೆ ಅದನ್ನು ಅಪೌರುಷೇಯ ಗ್ರಂಥಗಳಲೆಲ್ಲಾ ಮೊಟ್ಟಮೊದಲ ಗ್ರಂಥವೆಂದೂ ವಾಸ್ತವತೆಯ ಚಿಲುಮೆಯ ಮೂಲ ಮತ್ತು ಏಕದೇವವಾದದ ಸಾಗರ ಎಂದೂ ದಾರಾ ಹೇಳುತ್ತಾನೆ. ಈ ಹೇಳಿಕೆಗೆ ಬೆಂಬಲವಾಗಿ ದಾರಾ ಕುರಾನ್‌ ಉಕ್ತಿಯನ್ನು ಉದ್ಧರಿಸುತ್ತಾನೆ.

ಒಂದು ಗ್ರಂಥವಿದೆ ಅದು ರಹಸ್ಯವಾಗಿದೆ.
ಪರಿಶುದ್ಧರಲ್ಲದ ಯಾರೂ ಮುಟ್ಟಲಾರರು ಅದನು.
ಜಗತ್ತುಗಳ ಒಡೆಯ ಕೊಟ್ಟಿದ್ದು ಅದು.

ಅಖಂಡ ದೈವತ್ವದ ಬಗ್ಗೆ ಇಸ್ಲಾಂ ಮತ್ತು ಹಿಂದೂ ಸಿದ್ಧಾಂತಗಳಲ್ಲಿ ಒಂದು ಬಗೆಯ ಸಮಾನಾಂಶಗಳನ್ನು ಸ್ಥಾಪಿಸುವ ಆಸೆ ದಾರಾನಿಗೆ ಇತ್ತು. ತಾತ್ವಿಕ ಮುಖಾಮುಖಿಯನ್ನು ಅನೇಕ ವಿವರಣೆಗಳ ಮೂಲಕ ಒದಗಿಸಿರುವ ಈ ಜೀವನ ಚರಿತ್ರೆಯ ಒಂದು ಐತಿಹಾಸಿಕ ದಾಖಲೆ. ಇತಿಹಾಸಕಾರರಿಗೆ ಆಕರ ಗ್ರಂಥವೆಂಬುದರಲ್ಲಿ ಅತಿಶಯೋಕ್ತಿಯೇನಿಲ್ಲ. ಹೀಗೆ ವಿಭಿನ್ನ ದೃಷ್ಟಿಕೋನವನ್ನು ತನ್ನ ಕಥನ ಶೈಲಿಯಲ್ಲಿ ಅಭಿವ್ಯಕ್ತಿಸಿದ ಕೆಲವು ಕೃತಿಗಳನ್ನು ಮಾತ್ರ ಇಲ್ಲಿ ಅವಲೋಕಿಸಲಾಗಿದೆ.