ಹತ್ತಂಭತ್ತನೆಯ ಶತಮಾನದಲ್ಲಾದ ಯರೋಪಿನ ಕೈಗಾರಿಕಾ ಕ್ರಾಂತಿ ಕೇವಲ ಆ ರಾಷ್ಟ್ರಮಟ್ಟದ್ದಾಗಿ ಆಗಲಿ, ಆ ಕ್ಷೇತ್ರಮಟ್ಟದ್ದಾಗಿ ಆಗಲಿ ಉಳಿಯಲಿಲ್ಲ. ಬದಲಾಗಿ ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಈ ಕ್ರಾಂತಿಯ ಗಾಳಿ ಬೀಸಿತು. ಪರಿಣಾಮವಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕ್ಷೇತ್ರಗಳಲ್ಲಿ ಅಗಾಧವಾದ ಬದಲಾವಣೆಗಳು ಈ ಸಂದರ್ಭದಲ್ಲಿ ಆಗತೊಡಗಿದವು. ಪಶ್ಚಿಮದಿಂದ ಬೀಸತೊಡಗಿದ ಅಥವಾ ಬರತೊಡಗಿದ ಈ ಕ್ರಾಂತಿಯ ಕಿಡಿಗಳು ಭಾರತದಲ್ಲಿ ಪರಿಣಾಮ ಬೀರಿದವು. ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ಇದರ ಫಲಿತಗಳು ಕಾಣಿಸಿಕೊಂಡುದ್ದು ಪಶ್ಚಿಮ ಬಂಗಾಳದಲ್ಲಿ ಅನಂತರ ಕೆಲವೇ ದಿನಗಳಲ್ಲಿ ಇತರ ಪ್ರದೇಶಗಳಿಗೆ ಈ ಗಾಳಿ ವ್ಯಾಪಿಸಿಕೊಂಡಿತು.

ಭಾರತ ದೇಶದ ಆಡಳಿತ ಚುಕ್ಕಾಣಿ ಹಿಡಿದಿದ್ದ ಬ್ರಿಟೀಷರ ಸಂಪರ್ಕದಿಂದ, ಅವರ ಜೀವನದ ರೀತಿ – ನೀತಿ, ಆಚಾರ – ವಿಚಾರ, ಆಧುನಿಕ ಸಂಸ್ಕೃತಿ, ಜೀವನ ಮೌಲ್ಯಗಳು, ಮಾನವೀಯ ಸಂಬಂಧಗಳು ಪರಿಚಯ ಆಗತೊಡಗಿದವು. ಇದರ ಫಲವಾಗಿ ಪಾರಂಪರಿಕ ಭಾರತೀಯ ಸಂಸ್ಕೃತಿಯ ಜೀವನ ಮೌಲ್ಯ ಹಾಗೂ ಆಧುನಿಕ ಪಾಶ್ಚಾತ್ಯರ ಸಂಸ್ಕೃತಿಯ ಮೌಲ್ಯಗಳ ನಡುವೆ ದೊಡ್ಡ ಸಂಘರ್ಷ ಏರ್ಪಟ್ಟಿತು. ಪಾಶ್ಚಾತ್ಯ ವೈಭವರೀತ್ಯ ಜೀವನ ಶೈಲಿ, ಪ್ರಗತಿಪರ ಆಲೋಚನೆ, ಚಿಂತನೆಗಳನ್ನು ಕಂಡು ಬೆರಾಗಾದ ಭಾರತೀಯರು ಸಿದ್ಧಗೊಂಡಿದ್ದ ಪಾರಂಪರಿಕ ಮಾರ್ಗವನ್ನು ತೊರೆದು ಹೋಸ ಮಾರ್ಗದ ಕಡೆ ಹೆಜ್ಜೆ ಹಾಕ ತೊಡಗಿದರು. ಇದು ಭಾರತದ ಇತಿಹಾಸದಲ್ಲಿಯೇ ಅತ್ಯಂತ ಮಹತ್ವದ ಪೂರ್ಣವಾದ ಕಾಲ. ಪಶ್ಚಿಮದೊಂದಿಗಿನ ಈ ಮುಖಾಮುಖಿಯು ತಮ್ಮ ಆಂತರ್ಯದಲ್ಲಿ ಅನೇಕ ಹೊಸತನಗಳನ್ನು ರೂಪಿಸಿಕೊಂಡಿತು. ಈ ಕ್ರಾಂತಿಯಿಂದಾದ ಬದಲಾವಣೆಗಳು ನಿಧಾನವಾಗಿ ಕರ್ನಾಟಕದಲ್ಲೂ ಆಗಿ ಕಾಣಿಸಿಕೊಂಡವು.

ಆಧುನಿಕ ಕನ್ನಡ ಸಾಹಿತ್ಯದ ಮೇಲೆ ಪಾಶ್ಚಾತ್ಯರ ಪ್ರೇರಣೆ ಪ್ರಭಾವಗಳು ಆದದ್ದು ಇದೇ ಸಂದರ್ಭದಲ್ಲಿ. ಪಾಶ್ಚಾತ್ಯ ಸಾಹಿತ್ಯದ ಪ್ರೇರಣೆ, ಪ್ರಭಾವಗಳಿಗೆ ಒಳಗಾದ ಕನ್ನಡ ಸಾಹಿತ್ಯ ಅನೇಕ ಬದಲಾವಣೆಗಳನ್ನು ಕಂಡು ಕೊಂಡಿತು. ವರ್ಷಾರಂಭದ ಮೊದಲ ಮಳೆ ಹನಿ ನೆಲದ ಮೇಲೆ ಬಿದ್ದಾಗ, ಭೂಗರ್ಭದಲ್ಲಿ ಆಡಗಿದ್ದ ಬೀಜಸಂಕುಲವೆಲ್ಲ ಏಕಕಾಲಕ್ಕೆ ತನ್ನ ತಾಯೊಡಲ ಸೀಳಿ ಬರುವಂತೆ ಕನ್ನಡ ಸಾಹಿತ್ಯದಲ್ಲಿ ಸಣ್ಣ ಕತೆ, ಕಾದಂಬರಿ, ಮಕ್ಕಳ ಸಾಹಿತ್ಯ ವಿಮರ್ಶೆ, ಲಲಿತ ಪ್ರಬಂಧ, ಭಾವಗೀತೆ, ಪರ್ತಸಾಹಿತ್ಯ, ಪ್ರವಾಸ ಸಾಹಿತ್ಯ ವೈಚಾರಿಕ ಸಾಹಿತ್ಯ, ಅಭಿನಂದನ ಗ್ರಂಥ, ಆತ್ಮ ಚರಿತ್ರೆಯಂತಹ ಹೊಸ ಸಾಹಿತ್ಯ ಪ್ರಕಾರಗಳು ಕಾಣಿಸಿಕೊಂಡವು. ಒಂದರ್ಥದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹೊಸ ಕ್ರಾಂತಿಯೇ ಆಯಿತು.

ಈ ನವೋದಯ ಕಾಲದಲ್ಲಿ ಕಾಣಿಸಿಕೊಂಡ ಸಾಹಿತ್ಯ ಪ್ರಕಾರಗಳಲ್ಲಿ ‘ಲಲಿತ ಪ್ರಬಂಧ’ ಸಾಹಿತ್ಯವೂ ಒಂದು. ಅಂದ ಹಾಗೆ ಇದಕ್ಕೂ ಮುಂಚೆ ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರ ಇರಲಿಲ್ಲವೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಕನ್ನಡದಲ್ಲಿ ಈ ಪ್ರಕಾರ ಇರಲಿಲ್ಲವೆಂದಲ್ಲ, ಇತ್ತು. ಆದರೆ ಪಾಶ್ಚಾತ್ಯರ ಲಲಿತ ಪ್ರಬಂಧ ಸಾಹಿತ್ಯಕ್ಕಿದ್ದ ಲಕ್ಷಣಗಳು ಕನ್ನಡ ಪ್ರಬಂಧಗಳಲ್ಲಿ ಇರಲಿಲ್ಲವಷ್ಟೆ. ಗಳಗನಾಥರ ಕಾದಂಬರಿಗಳಲ್ಲಿ, ಗುಲ್ವಾಡಿಯವರ ‘ಇಂದಿರಾ ಬಾಯಿ’ ಯಲ್ಲಿ ಕನ್ನಡ ಲಲಿತ ಪ್ರಬಂಧ ಲಕ್ಷಣಗಳು ಕಂಡು ಬರುತ್ತವೆ.

ಭಾರತ ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿಯೇ ಕನ್ನಡದ ಸಣ್ಣ ಕತೆ, ಕಾದಂಬರಿಗಳಿಗೆ ಬಂಗಾಳಿ ಭಾಷೆಯ ಪ್ರಭಾವ ಆದಂತೆ ಲಲಿತ ಪ್ರಬಂಧದ ಪ್ರಭಾವ ಮೊದಲು ಆಗಿದ್ದು ಬಂಗಾಳಿ ಸಾಹಿತ್ಯದಿಂದಲೆ ಎಂಬ ಅಭಿಪ್ರಾಯವೂ ಇದೆ. ಈ ಮಾತನ್ನು ಸಂಪೂರ್ಣವಾಗಿ ತಳ್ಳಿ ಹಾಕುವಂತಿಲ್ಲ. ಇದನ್ನು ಒಪ್ಪಿಕೊಂಡರೂ ಕೂಡ ಪ್ರಬಂಧ ಪ್ರಕಾರದ ಗಾಢ ಪ್ರಭಾವ ಅದದ್ದು, ಇಂಗ್ಲಿಷ್ ಪ್ರಬಂಧ ಸಾಹಿತ್ಯದಿಂದಲೆ. ೨೦ ನೆಯ ಶತಮಾನದ ಕನ್ನಡದ ಲಲಿತ ಪ್ರಬಂಧ ಸಾಹಿತ್ಯ ದಷ್ಟಪುಷ್ಟವಾಗಿ ಬೆಳೆದು ಬಂದದ್ದೂ ಕೂಡ ಪಶ್ಚಿಮದ ಸತುವಿನಿಂದಲೇ ಎಂಬುದು ನಿರ್ವಿವಾದದ ಸಂಗತಿ. ಕನ್ನಡ ಲಲಿತ ಪ್ರಬಂಧ ಮೊದಲು ಅನುವಾದದ ಮೂಲಕ ಅರಂಭವಾಯಿತು. ಬಂಗಾಳಿ ಬಂಕಿಮ ಚಂದ್ರರ ‘ಲೋಕರಹಸ್ಯ’ ದ ಬಿ. ವೆಂಕಟಾಚಾರ್ಯರ ಕನ್ನಡ ಅನುವಾದ ಕನ್ನಡದ ಮೊದಲ ಲಲಿತ ಪ್ರಬಂಧವಾಗಿದೆ. ಮುಂದಿನ ಸ್ವತಂತ್ರ ಪ್ರಬಂಧಗಳಿಗೆ ಇದು ಪ್ರೇರಣೆಯಾಯಿತು.

ನವೋದಯ ಕಾಲದ ಪ್ರಮುಖ ಬರಹಗಾರರಾದ ಗೊರೂರು, ರಾಕಿ, ಪು.ತಿ.ನ, ಲಾಂಗೂಲಾಚಾರ್ಯ, ಕುವೆಂಪು, ಸತ್ಯನಾರಾಯಣ…. ಮುಂತಾದವರು ಪ್ರಬಂಧ ಸಾಹಿತ್ಯವನ್ನು ಸಮೃದ್ಧಗೊಳಿಸಿದರು. ಮೂರ್ತಿ ರಾವ್, ರಾಕು, ಪುತಿನ, ವಿ. ಸೀ ಯವರಂತೂ ಪ್ರಬಂಧ ಪ್ರಕಾರವನ್ನೇ ಜೀವನ ಶೋಧನೆಯ ಮಾರ್ಗವಾಗಿ ಆರಿಸಿಕೊಂಡರು. ಅನಂತರದ ನವ್ಯದವರು ತಮ್ಮ ಆವೇಶ, ಅಬ್ಬರಗಳಿಂದ, ನವೋದಯ ಸಾಹಿತ್ಯ ಪ್ರಕಾರ ಪ್ರಯೋಗ ನಡಿಸಿದ್ದ ಹಲವಾರು ಗದ್ಯ – ಪದ್ಯ ಪ್ರಕಾರಗಳು ಇದ್ದಕ್ಕಿದ್ದಂತೆ ಇಲ್ಲವಾದವು. ಆಗ ಭಾವಗೀತೆಯಂತೆ ಲಲಿತ ಪ್ರಬಂಧ ಪ್ರಕಾರವೂ ಕೂಡ ಸೊರಗಿತು.

ಇದರ ಸೊರಗುವಿಕೆಗೆ ವಿಮರ್ಶೆ ನಿರ್ಲಕ್ಷ್ಯತನವಲ್ಲದೆ ಪ್ರಬಂಧ ಹರಟೆಯ ಮಟ್ಟಕ್ಕೆ ಇಳಿದದ್ದು. ಇವೆರಡು ಮುಖ್ಯ ಕಾರಣಗಳಾಗಿದ್ದವು. ನವ್ಯೋತ್ತರ ಸಾಹಿತ್ಯ ಹೆಚ್ಚು ಸಮಾಜ ಮುಖಿಯಾಗುವ ನಿಟ್ಟಿನಲ್ಲಿ ನಿರ್ಲಕ್ಷಿಸಲ್ಪಟ್ಟ ಅನೇಕ ಸಾಹಿತ್ಯ ಪ್ರಕಾರಗಳಿಗೆ ಚಾಲನೆ ನೀಡಿದರು. ಇದರಿಂದ ಪ್ರಬಂಧ ಸಾಹಿತ್ಯ ಮರುಚೇತನವನ್ನು ಪಡೆಯಿತು. ಹೀಗೆ ಮೂಲೆ ಗುಂಪಾಗಿದ್ದ ಪ್ರಬಂಧ ಸಾಹಿತ್ಯ ಹೊಸ ಲೇಖಕರ ಮೂಲಕ ಮತ್ತೆ ಪ್ರವರ್ಧಮಾನಕ್ಕೆ ಬರುವುದಕ್ಕೂ ಕೂಡ ಒಂದು ರೀತಿಯ ಅಂತರ್ ಸಂಬಂಧವಿದೆ.

ದಲಿತ ಬಂಡಾಯ ಬರಹಗಾರರು ಪ್ರಬಂಧ ಸಾಹಿತ್ಯದ ತಂತ್ರಕ್ಕಿಂತ ಅದರ ಸೃಜನಶೀಲತೆಯ ಸ್ಮಾಂತ್ರಿಕತೆಗೆ ಹೆಚ್ಚು ಮಹತ್ವ ನೀಡಿದರು. ಅಲ್ಲದೆ ಈಗಿರುವ ಲಲಿತ ಪ್ರಬಂಧಗಳ ನಿಯಮಗಳನ್ನು ಮುರಿದು ಇನ್ನೊಂದು ಹೊಸ ದಿಕ್ಕಿನ ಕಡೆ ಹೆಜ್ಜೆ ಇಟ್ಟಿದ್ದಾರೆ. ಇಲ್ಲಿ ಪ್ರಬಂಧ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ ಎಂದು ಹೇಳಲಿಕ್ಕಾಗದು. ಸಿದ್ಧಲಿಂಗಯ್ಯ, ಪ್ರತಿಭಾನಂದಕುಮಾರ್ ಮೊಗಳ್ಳಿ ಗಣೇಶ, ವೈದೇಹಿ, ರಾಮಚಂದ್ರ ದೇವ, ನೇಮಿಚಂದ್ರರ ಪ್ರಬಂಧಗಳಲ್ಲಿ ಈ ಬದಲಾವಣೆಗಳನ್ನು ಗುರುತಿಸಬಹುದು. ಅಷ್ಟೇಕೆ ಸ್ವತಃ ಲೇಖಕರೇ ಹೇಳಿಕೊಂಡಿದ್ದೂ ಇದೆ. ಇದಕ್ಕೂ ಹಿಂದೆಯೇ ಲಂಕೇಶ ಮತ್ತು ತೇಜಿಸ್ವಿಯವರು ಈ ಮೇರೆಗಳನ್ನು ದಾಟಿದ್ದರು.

ಪ್ರಸ್ತುತ ಲೇಖನವು ಕನ್ನಡ ಲಲಿತ ಪ್ರಬಂಧ ನಡೆದ ಬಂದ ದಾರಿ, ಹೆಜ್ಜೆ ಗುರುತುಗಳನ್ನು ನೋಡುವುದಕ್ಕಿಂತ ೧೯೯೧ ರಿಂದ ೨೦೦ದ ವರೆಗಿನ ಹತ್ತು ವರ್ಷಗಳಲ್ಲಿ ಬಂದಿರುವ ಪ್ರಬಂಧಗಳಲ್ಲಿ ಅಧಿಕೃತವಾಗಿ ಕೆಲವನ್ನು ಮಾತ್ರ ಅರಿಸಿಕೊಂಡು ಈ ಪ್ರಬಂಧವನ್ನು ಸಿದ್ಧಪಡಿಸಲಾಗಿದೆ. ಇದು ಈ ಲೇಖನದ ಮಿತಿಯೂ ಕೂಡ.

ಲಲಿತ ಪ್ರಬಂಧಗಳು ಬಹುತೇಕ ವಸ್ತು ನಿಷ್ಟತೆಗಿಂತ ವ್ಯಕ್ತಿ ನಿಷ್ಟವಾಗಿದ್ದು, ಪ್ರಬಂಧಕಾರನ ಸುತ್ತಲೇ ಗಿರಕಿ ಹೊಡೆಯುತ್ತವೆ ಎಂಬ ಆಭಿಪ್ರಾಯ ಎಲ್ಲರಲ್ಲೂ ಮನೆಮಾತಾಗಿದೆ. ಇಲ್ಲಿಯ ತನಕ ಈ ಆಭಿಪ್ರಾಯ ನಿಜವೂ ಆಗಿದ್ದು ೨೦ ನೆಯ ಶತಮಾನದ ಉತ್ತರಾರ್ಧದ ಕೊನೆಯಲ್ಲಿ ಈ ಆಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಕೆಲವು ಪ್ರಬಂಧಗಳು ತನ್ನ ಲಕ್ಷಣಗಳನ್ನು ಬದಲಿಸಿಕೊಂಡಿವೆ. ಅಂದರೆ ವಸ್ತು, ಭಾಷೆ, ನಿರೂಪಣೆ, ಅಭಿವ್ಯಕ್ತಿಯಲ್ಲಿ ಹೊಸ ಮಾರ್ಪಾಟುಗಳನ್ನು ಮಾಡಿಕೊಂಡಿವೆ.

ಪ್ರಬಂಧದ ಬಗ್ಗೆ ಒಬ್ಬಿಬ್ಬರ ವ್ಯಾಖ್ಯಾನಗಳನ್ನು ಗಮನಿಸುವುದು ಇಲ್ಲಿ ಸೂಕ್ತವೆನಿಸುತ್ತದೆ. “ಮಸ್ಸಿನ ಸ್ವಚ್ಛಂದ ಲಹರಿ ಕಟ್ಟು ನಿಟ್ಟಿಲ್ಲದ ಮತ್ತು ಚಿಂತನೆಗೊಳಗಾದ ಸಣ್ಣ ಕೃತಿ, ನಿಯತವಾದ ಕ್ರಮ ಬದ್ಧ ರಚನೆಯಲ್ಲ ಎಂಬ ಮನಸ್ಸಿನ ಒಲವು ಓಟ, ಆಕಾಂಕ್ಷೆಗಳನ್ನು ನೇಯುವ ಒಂದು ಕ್ರಿಯೆ ಪ್ರಬಂಧ” – ವಿ. ಸೀ.

“ಆಡಿದ್ದೇ ಆಟ ನೋಡಿದ್ದೇ ನೋಟ ಎಂಬುದು ಪ್ರಬಂಧವು ತನ್ನ ತೆಕ್ಕೆಯಲ್ಲಿ ಎಲ್ಲ ವಿಷಯಗಳನ್ನು ಹಾಕಿಕೊಳ್ಳತ್ತದೆ ಎಂದೇ ತಿಳಿಸುತ್ತದೆ. ಜೀವನದ ರಸ ನಿಮಿಷ ದುಃಖದ ಸನ್ನಿವೇಶ, ಪ್ರವಾಸ, ಬಸ್ ಕಾಯುವ ಸಮಯ – ಗೆಳೆಯ ಗೆಳೆತಿಯರ ಪ್ರೆಂಮ ಪತ್ರಗಳ ರಂಜನೆ, ನಿರ್ಜೀವ ವಸ್ತುಗಳ ಮಾತುಕತೆ ಹೀಗೆ ಏನಾದರೂ ಆಗಿರಬಹುದು. ಯಾವ ದಿಕ್ಕಿನಿಂದಲೂ ಅವನು ತನ್ನ ವಸ್ತುಗಳನ್ನು ಆರಿಸಿಕೊಳ್ಳಬಹುದು. ಪರಮಾನ್ನದಿಂದ ಪಾರಮ್ಮಾರ್ಥದವರೆಗಿನ ಪ್ರಪಂಚ ಅವನಿಗೆ ತೆರೆದಿಟ್ಟಿದೆ” ಎಂಬ ಪ್ರಬಂಧ ಕುರಿತ ಎಚ್ಕೆಯವರ ಮಾತು ಪ್ರಬಂಧದ ವೈಸಾಲ್ಯತೆಯನ್ನು ಎತ್ತಿತೋರಿಸುತ್ತದೆ.

ಲಲಿತ ಪ್ರಬಂಧ ಪ್ರಬಂಧಕಾರನ ಮನೋವೃತ್ತಿ, ಅನೇಕ ವೇಳೆ ಪ್ರಪಂಚವೆಲ್ಲಾ ಒಪ್ಪಿ ಕೊಂಡಿರುವ ಅಂಶಗಳನ್ನು ವಿರೋಧಿಸಿಯೋ, ಕಡೆಗಣಿಸಿಯೋ ತನ್ನ ಅಭಿಪ್ರಾಯವೇ ನ್ಯಾಯವಾದದ್ದು ಎಂಬಂತೆ ಮಾತನಾಡುತ್ತಾನೆ ನಿಜ. ಆದರೆ ಅದು ಬರೀ ಹಾಸ್ಯಕ್ಕಾಗಿ ಮಾತ್ರ ಹೇಳುವ ಮಾತಲ್ಲ. ಈ ಹಾಸ್ಯದಲ್ಲಿ ವೈಚಾರಿಕತೆಯೂ ಮನೆಮಾಡಿಕೊಂಡಿರುತ್ತದೆ. ಸೀತಾರಾಮಯ್ಯ, ರಾಕು, ವಿ. ಸೀ., ಮೊಗಳ್ಳಿ ಗಣೇಶ್, ಲಂಕೇಶ್, ಎನ್ಕೆ ಮುಂತಾದವರ ಪ್ರಬಂಧಗಳನ್ನು ಗಮನಿಸಬಹುದು.

ಒಂದೊಂದು ಪ್ರಬಂಧ ಸಂಕಲನದ ಹಿಂದೆಯೂ ಪ್ರಬಂಧಕಾರನ ಸೂಕ್ಷ್ಮ ಸಂವೇದನೆ ಕೆಲಸಮಾಡಿರುತದೆ. ಪ್ರಬಂಧಕಾರನ ಜಾತಿ, ವರ್ಗ, ಗ್ರಹಿಕೆಯ ಕ್ರಮ, ವೈಚಾರಿಕ ಪ್ರಜ್ಞೆಗಳು ನೇರವಾಗಿ ಕಾಣದೆ ಅಗೋಚರವಾಗಿ ನೆಲೆಕೊಂಡಿರುತ್ತವೆ. ನಾಡಿನ ವಿಭಿನ್ನ ನೆಲೆ, ವರ್ಗ, ಜಾತಿ ಬರಹಗಾರರಿಂದ ಬಂದ ಪ್ರಬಂಧಗಳು ಅವರ ಪರಿಸರದ ಭೌಗೋಳಿಕ, ಧಾರ್ಮಿಕ, ಸಾಂಸ್ಕೃತಿಕ ಮಾಹಿತಿಯನ್ನು ಒಳಗೊಂಡಿರುತ್ತವೆ.

ಚಿಂತನೆಯ, ಪ್ರೌಢತೆಯ, ಹಾಸ್ಯ – ಹರಟೆ, ಆತ್ಮನಿವೇದನೆಯ ರೀತಿಗಳಲ್ಲಿ ಪರಿಣಾಮಕಾರಿಯಾಗಿ ಹೋರಾಟ ಮಾಡುವಂಥ ನೈತಿಕ ಮತ್ತು ಮಾನಸಿಕ ಸ್ಥೈರ್ಯವನ್ನು ಸಮಾಜಕ್ಕೆ ಈ ಪ್ರಬಂಧ ಸಾಹಿತ್ಯ ನೀಡುತ್ತದೆ. ಮುಂದೆ ಚರ್ಚಿಸುವ ಕೃತಿಗಳಲ್ಲಿ ಈ ಅಂಶಗಳನ್ನು ಮನಗಾಣಬಹುದು.

ಸಮಗ್ರ ಲಲಿತ ಪ್ರಬಂಧಗಳು‘ – (೧೯೯೯) ಎಂಬ ಕೃತಿಯನ್ನು ಬರೆದ ಎ. ಎನ್. ಮೂರ್ತಿರಾಯರು ಲಲಿತ ಪ್ರಬಂಧ ಸಾಹಿತ್ಯ ಆಚಾರ್ಯ ಪುರುಷರೆನಿಸಿಕೊಂಡಿದ್ದಾರೆ. ಅನುವಾದದ ಮುಖಾಂತರ ಕನ್ನಡ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿದ ಪ್ರಬಂಧ ಪ್ರಕಾರ, ನಂತರದ ಸ್ವತಂತ್ರ ಅಸ್ತಿತ್ವಕ್ಕೆ ಅಡಿಗಲ್ಲೇನೋ ಆಯಿತು. ಆದರೆ ಪ್ರಬಂಧ ನಿರ್ದಿಷ್ಟ ರೂಪ – ರೇಷಗಳನ್ನು ಪಡಿದುಕೊಂಡಿದ್ದು ಮೂರ್ತಿರಾಯರಿಂದಲೇ.

ಹಿರಿಯ ವಯಸ್ಸಿಗೆ ಹೋಲುವಂತಹ ಇವರ ಪ್ರಬಂಧಗಳು ಹಾಸ್ಯದೊಡನೆ ತೀಕ್ಷ್ಣ ಸಂವೇದನೆಯನ್ನು ಹೊಂದಿವೆ. ಭಾವಾಗೀತೆಯ ಸೂಕ್ಷ್ಮತೆ, ಸಣ್ಣಕತೆಯ ಲಾಲಿತ್ಯವನ್ನು ಇವರಲ್ಲಿ ಗುರುತಿಸಬಹುದು. ಜನರ ಮೇಲೆ ಅಪಾರ ಪ್ರೀತ್ಯಾದಾರಗಳನ್ನು, ಅಭಿಮಾನ, ಕಳಕಳಿಯನ್ನು ಇಟ್ಟುಕೊಂಡು ಅವರ ಏಳಿಗೆ ಶ್ರೇಯಸ್ಸನ್ನು ಬಯಸುವ ರಾಯರು ಸುತ್ತಮುತ್ತಲಿನ ನಿಸರ್ಗದಲ್ಲಿ ಸೌಂದರ್ಯವನ್ನು ಕಾಣುವಂತೆ, ಮಾನವ ಸ್ವಭಾವದಲ್ಲಿ ಅಡಕವಾದ ಹೃದಯ ಸೌಂದರ್ಯವನ್ನು ಕಾಣಬಲ್ಲ ಮಾನವತಾವಾದಿಗಳಾಗಿದ್ದಾರೆ. ಜೀವನಾನುಭವದಲ್ಲಿ ಕಂಡ ಪ್ರಮುಖ ಘಟನೆಗಳು, ದಾಂಪತ್ಯ ಬದುಕಿನ ಸರಸಸಲ್ಲಾಪಗಳು, ಗತಕಾಲದ ಸಾಂಸ್ಕೃತಿಕ ಸನ್ನಿವೇಶಗಳನ್ನು, ರಸಿಕತೆಯನ್ನು, ಕಲಾವಂತಿಕೆಯನ್ನು ರಮ್ಯವಾದ ಕನಸುಗಾರಿಕೆಯನ್ನು ನಿಷ್ಟಕ್ಷಪಾತ ದೃಷ್ಟಿ – ಸೃಷ್ಟಿಯನ್ನು ಇವರಲ್ಲಿ ಕಾಣುತ್ತೇವೆ. ಇವರ ಸರಳ – ಸುಂದರ ಮೋಹಕವಾದ ಗದ್ಯ ಹುಡುಗಾಟಿಕೆ ಮಾಡುವ ರೀತಿಯಲ್ಲಿ ಓದುಗರಲ್ಲಿ ಹಾಸ್ಯ ಉಂಟು ಮಾಡುತ್ತದೆ. ಅಲ್ಲದೆ ಅಂದಿನ ಅಧ್ಯಾಪಕರ, ಬರಹಗಾರರ ಕುರಿತ ವ್ಯಕ್ತಿ ಚಿತ್ರಗಳು ಸುಂದರ ಶೈಲಿಯಲ್ಲಿ ವಸ್ತು ನಿಷ್ಟವಾಗಿ ಮೂಡಿ ಬಂದಿವೆ. ಹೀಗೆ ವ್ಯಕ್ತಿಗಳ ಬಗ್ಗೆ ಪ್ರಬಂಧ ಬರೆಯುವಂಥದ್ದು ಅವರ ಬರಹದ ವೈಶಿಷ್ಟ್ಯಗಳಲ್ಲೊಂದು. ಧಾರವಾಡ ಸುತ್ತ ಮುತ್ತಲಿನ – ಸನ್ನಿವೇಶ ಸಂಗತಿಗಳನ್ನು ಕೆಲವು ಪ್ರಬಂಧಗಳಲ್ಲಿ ತುಂಬಾ ಸೊಗಸಾಗಿ ವರ್ಣಿಸಿದ್ದಾರೆ. (ಒಕ್ಕಲಗಿತ್ತಿಯರು – ಹಿಂದೂ – ಮುಸ್ಲಿಂ ಐಕ್ಯತೆ). ಇವರ ಪ್ರಬಂಧಗಳನ್ನು ಓದುವುದೆಂದರೆ ಕಾಂತೆಯೊಡನೆ ಸರಸವಾಡುವ ಅನುಭವದಂತೆ. ಇದಕ್ಕೂ ಮಿಗಿಲಾಗಿ ಒಬ್ಬ ಸಜ್ಜನನ ಸಹವಾಸಮಾಡಿದಂತಾಗುತ್ತದೆ.

ಎನ್ಕೆಯವರು ತಮ್ಮ “ಸಮಗ್ರಲಲಿತ ಪ್ರಬಂಧ”ಗಳಲ್ಲಿ (೧೯೯೩) ಮಾನವ ಸ್ವಾಭಾವದ ಅರೆ – ಕೋರೆಗಳನ್ನು ವ್ಯಕ್ತಪಡಿಸುವುದು ಹೆಚ್ಚಾಗಿ ಕಂಡುಬರುತ್ತದೆ. ಜೀವನಾನುಭವದ ಲೋಕಜ್ಞಾನ ರಸಿಕತೆ, ಸಾಮಾಜಿಕ ಕಾಳಜಿ, ಬದುಕಿನ ಬಗೆಗಿನ ಪ್ರೀತಿ ಇವರ ಪ್ರಬಂಧಗಳ ಕೇಂದ್ರ ಬಿಂದುವಾಗಿದೆ. ವಾಸ್ತವ ನಮ್ಮ ಸರ್ಕಾರದ ದುರಾಡಳಿತ, ಸಮಾಜದ ಅಸಮಾನ ವ್ಯವಸ್ಥೆಯ ಪೂರ್ವ ಗ್ರಹಿಕೆ, ಸಂಪ್ರದಾಯ ಅವೈಜ್ಞಾನಿಕ ಜೀವನ ಕ್ರಮವನ್ನು ಕಟುವ್ಯಂಗ್ಯವಾಗಿ ಟೀಕಿಸುತ್ತಾರೆ. ಉತ್ತರ ಕರ್ನಾಟಕ ಮಧ್ಯಮ ವರ್ಗದ ಜನರ ಜೀವನದ ರೀತಿ – ನೀತಿ ಆಚಾರ – ವಿಚಾರ ಹಾಗೂ ಆಸು – ಪಾಸಿನ ಸಂಗತಿಗಳ ಬಗ್ಗೆ ಇವರ ಪ್ರಬಂಧಗಳು ಕ್ಷ – ಕಿರಣ ಬೀರುತ್ತವೆ. ವಿಚಿತ್ರ ಸ್ವಭಾವಗಳ ವಿನೋದಪೂರ್ಣ ವಿಶ್ಲೇಷಣೆ ಇವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ. ತಮ್ಮ ಖಾಸಗಿ ಬದುಕಿನ ಸುಖ – ದುಃಖಗಳು ಹಬ್ಬ – ಹರಿದಿನಗಳು, ಮಾನವೀಯ ಸಹಜ ಸಂಬಂಧಗಳು ನಿರ್ಲಕ್ಷಿತ ವಸ್ತುಸಂಗತಿಗಳು ಅವರ ಪ್ರಬಂಧಗಳ ಮುಖ್ಯ ವಸ್ತುಗಳಾಗಿವೆ. ಕಿರಿಯದರಲ್ಲಿ ಹಿರಿಯದನ್ನು, ಕನಿಷ್ಟದಲ್ಲಿ ಶ್ರೇಷ್ಟತೆಯನ್ನು, ಕಸದಲ್ಲಿ ರಸವನ್ನು ಕಾಣುವ ಇವರ ರೀತಿ ಶರಣರ ಉದಾತ್ತ ಬದುಕನ್ನು ನೆನಪಿಗೆ ತರುವಥದ್ದು. ಎನ್ಕೆಯವರದು ಸಂಪೂರ್ಣವಾಗಿ ಹಾಸ್ಯ, ವಿನೋದದ ದೃಷ್ಟಿ. ಸಮಾಜ ತಿರಸ್ಕಾರವನ್ನು, ಠಕ್ಕುತನವನ್ನು ಕಾಂತೆ – ಕಾಂತನಿಗೆ ಹೇಳುವ ನವಿರಾದ ಮೆದು ಮಾತಿನ ಹಾಗೆ ನವುರಾದ, ಸೂಕ್ಷ್ಮವಾದ ರೀತಿಯಲ್ಲಿ ವಿಡಂಬನೆ ಮಾಡುತ್ತಾರೆ. ಆತ್ಮೀಯವಾದ, ಆಪ್ತವಾದ ಮಾತಿನ ಶೈಲಿ ಇವರ ವೈಶಿಷ್ಟ್ಯಗಳಲ್ಲೊಂದು. ಶ್ಲೇಷೆ, ಕಟಕಿ, ವ್ಯಂಗ್ಯ, ವಿಡಂಟನೆ, ಹಾಸ್ಯ – ವಿನೋದ ಒಮ್ಮೊಮ್ಮೆ ಗಂಭೀರವಾದ ಭಾಷಾಶೈಲಿಯಿಂದ ಜೀವಂತಿಕೆಯನ್ನು ಪಡಿದಿದೆ. ಅವರ ಪ್ರಬಂಧಗಳ ಹಾಸ್ಯ – ವಿನೋಧದ ಹಿಂದೆ ನೋವಿನ, ಸಂಕಟದ, ಅಸಂತೋಷ ಅಸಮಧಾನದ ಕರಿ ನೆರಳ ಛಾಯೆಯಿದೆ.

ವಿ.ಸೀತಾರಾಮಯ್ಯನವರು ಸುಖ ಸಂತೋಷದಿಂದ ಕೂಡಿದ ಸಾರ್ಥಕ ಬದುಕನ್ನು ಕಳೆದ ರಸಿಕರು. ಇವರು ತಮ್ಮ ಲಲಿತ ಪ್ರಬಂಧ ಸಂಪುಟ (೧೯೯೩) ಕೃತಿಯಲ್ಲಿ ಕಂಡದ್ದನ್ನು ಅನುಭವಿಸಿರುವುದನ್ನು ನೇರವಾಗಿ ಬಿಚ್ಚಿ ಹೇಳಿದೆ, ವರ್ಣಾನಾತ್ಮಕವಾಗಿ ಕಲಾತ್ಮಕವಾಗಿ ಹೇಳಿದ್ದಾರೆ. ಇವರ ‘ಪಂಪಾಯಾತ್ರೆ’ ಒಂದು ನೀಳವಾದ ಪ್ರವಾಸ ಕಥನವಾಗಿದ್ದು ಪ್ರಬಂಧದ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಕತೆ, ಕಾದಂಬರಿಯ ಲಕ್ಷಣಗಳು ಇದರಲಿ ಸೂಕ್ಷ್ಮವಾಗಿ ಸೇರಿಕೊಂಡಿವೆ. ಭಾರತೀಯ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಯ ಮುಖಾ ಮುಖಿ ಮಾಡಿರುವುದು ಈ ಪ್ರಬಂಧಗಳ ವೈಶಿಷ್ಟ್ಯ. (ನಮ್ಮ ಅಜ್ಜಿಯ ಅಡಿಗೆ, ಬದನೇಕಾಯಿ ಪ್ರಬಂಧಗಳಲ್ಲಿ). ಭಾರತೀಯರ ರುಚಿಕಟ್ಟಾದ ತಾಜಾತನ ಅಡಿಗೆಯ ಮುಂದೆ ಪಾಶ್ಚಾಮಾತ್ಯರ ಅಡಿಗೆ ಗೌಣವೆನಿಸುತ್ತದೆ. ಹೀಗೆ ಎದುರು ಮಾಡಿ ಪಾಶ್ಚಾತ್ಯರ ಅನನ್ಯತೆಯನ್ನು ವ್ಯಂಗ್ಯಮಾಡಿ ಹೇಳುತ್ತಾರೆ. ಪಶ್ಚಿಮದ ಸಂಸ್ಕೃತಿ ಜಗತ್ತಿನ ಇತರ ರಾಷ್ಟ್ರಗಳ ಸಂಸ್ಕೃತಿಗಿಂತ ಶ್ರೇಷ್ಟವಾದುದು ಮತ್ತು ಅನುಕರಣೀಯವಾದುದು ಎಂಬುದು ಅನೇಕ ಪೌರಾತ್ಯರಾಷ್ಟ್ರಗಳ ನಂಬಿಕೆ. ಇದು ಭಾರತೀಯರ ನಂಬಿಕೆಯೂ ಕೂಡ. ಈ ಅಭಿಮತವನ್ನು ಒಪ್ಪದ ಲೇಖಕರು. ಎರಡೂ ಸಂಸ್ಕೃತಿಗಳನ್ನು ಮೂಖಾಮುಖಿಗೊಳಿಸಿ ಭಾರತೀಯರ ಶುದ್ಧತೆ ಪಶ್ಚಿಮದ ಅನೌಚಿತ್ಯವನ್ನು ಬಹಳ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ‘ಮೈಸೂರು ರುಮಾಲು’ ಪ್ರಬಂಧದಲ್ಲಿ ಕಲಾಭಿಜ್ಞತೆ, ಸೊಗಸುಗಾರಿಕೆ, ಸ್ವದೇಶಿ ಸಂಸ್ಕೃತಿಯ ಸೊಗಡು ವ್ಯಕ್ತವಾಗಿದೆ. ವಿಸ್ತಾರವಾದ ಜೀವನಾನುಭವಗಳಿಂದ ವ್ಯಕ್ತವಾಗಿರುವ ಇವರ ಪ್ರಬಂಧಗಳು ಸಹೃದಯರನ್ನು ಭಾವನಾ ಪ್ರಪಂಚಕ್ಕೆ ಹೊಯ್ದು ವಾಸ್ತವ ಜಗತ್ತನ್ನು ಮರೆಸುತ್ತವೆ. ಸರಳತೆಯಿಂದ ಸಂಕೀರ್ಣದೆಡೆಗೆ, ಚಪಲತೆಯಿಂದ ಗಂಭೀರದೆಡೆಗೆ, ಹಾಸ್ಯದಿಂದ ವಿಚಾರದ ಕಡೆ ಮುಖಮಾಡುವುದು, ನಡುನಡುವೆ ನಮ್ಮ ಅನುಭವಕ್ಕೂ ಲೋಕಜೀವನಾನುಭವಕ್ಕೂ, ಸಂಗತಿಗಳನ್ನು ಸೇತುವೆಮಾಡಿ ಬೆಳೆಸುವುದು ಇವರ ಪ್ರಬಂಧದ ರೀತಿ. ಅವರು ಮನಸ್ಸಿನ ಆಲೋಚನೆ, ಒಲವು – ಗೆಲವು, ಆಸೆ – ಆಕಾಂಕ್ಷೆಗಳನ್ನು ಹೇಳುವ ರೀತಿಯೇ ಪ್ರಬಂಧವಾಗಿರುತ್ತದೆ. ಲೋಕಾಭಿರಾಮವಾದ ಕುರಿತ ವಿಷಯವನ್ನು ವಿಭಿನ್ನ ದೃಷ್ಟಿಕೋನಗಳನ್ನು ಭೀರಿ ಸುತ್ತಲೂ ಹರಡಿ, ಕತೆ – ಉಪಕತೆ, ಗಾದೆ, ಸಾಮತಿಗಳಿಂದ ವಿಸ್ತರಿಸುತ್ತ ಒಮ್ಮೆ ನೇರವಾಗಿ ಮತ್ತೊಮ್ಮೆ ವ್ಯಂಗ್ಯವಾಗಿ ವಿಷಯ ಕುರಿತು ಹೇಳುತ್ತಾ ಹೋಗುತ್ತಾರೆ. ಪ್ರಬಂಧಗಳಿಗೆ ಹೊಸ ತಿರುವು ಕೊಟ್ಟು, ಚಮತ್ಕಾರ, ಸೊಗಸುಗಾರಿಕೆ ಮಾಡುತ್ತ ವೈಚಾರಿಕ ಪ್ರಜ್ಞೆಯನ್ನು ಮೂಡಿಸುವುದು ಇವರ ಪ್ರಬಂಧಗಳ ವೈಶಿಷ್ಟ್ಯವೇ ಆಗಿದೆ.

ತಲೆಮಾರಿನ ಹಿಂದೆ – (೧೯೯೨) – ಸಿಂಪಿ ಲಿಂಗಣ್ಣ ಅವರ ಕೃತಿಯನ್ನು ಗಮನಿಸಿದಾಗ ಪರಂಪರಾಗತ ಆಯ್ಕೆಗಿಂತ ಇವರದು ಸ್ಲಲ್ಪ ಬೀನ್ನ. ಕಿತ್ತೂರು ಕರ್ನಾಟಕದ ಗ್ರಾಮೀಣ ಪರಿಸರದಲ್ಲಿ ತಲೆಮಾರಿನ ಹಿಂದೆ ಜೀವಂತವಾಗಿದ್ದ ಜಾನಪದ ಲಲಿತ ಕಲೆಗಳಾದ, ನಾಟಕ, ಬಯಲಾಟ, ಕುಸ್ತಿ, ಹೋಳಿ ಹುಣ್ಣಿಮೆ, ಮದುವೆ, ನ್ಯಾಯದಾನ, ಸಾಹಿತ್ಯ ಸಂಸ್ಕೃತಿ, ಆಧ್ಯಾತ್ಮಿಕ ಸಂಗತಿಗಳನ್ನು ಪ್ರಬಂಧಗಳಿಗೆ ವಸ್ತುವನ್ನಾಗಿಸಿಕೊಂಡಿದ್ದಾರೆ. ಒಂದು ಹಳ್ಳಿಯನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಕನ್ನಡ ನಾಡಿನ, ಭಾರತದೇಶದ ಪ್ರಾಚೀನ ಸಂಸ್ಕೃತಿಯನ್ನು ತಿಳಿಸುತ್ತಾರೆ. ಜಾನಪದ ಬದುಕಿನ ಅಪಾರ ಅನುಭವವನ್ನು ಪಡೆದಿರುವ ಸಿಂಪಿಯವರು ಪ್ರಬಂಧಗಳಲ್ಲಿ ವಿಫುಲವಾಗಿ ಪಡೆನುಡಿ, ಗಾದೆ, ಸಾಮತಿಗಳನ್ನು ಬಳಸಿರುವುದು ಭಾಷೆಗೆ ಶ್ರೀಮಂತಿಕೆಯನ್ನು ತಂದುಕೊಟ್ಟಿದ್ದಲ್ಲದೆ, ಇವರ ಗದ್ಯ ದೇಶಿಯ ಸೊಗಸಿನಿಂದ ಕಂಗೊಳಿಸುತ್ತದೆ. ಅಲಂಕಾರ ಯುಕ್ತವಾದ ನಿರೂಪಣೆ ಇವರ ಪ್ರಬಂಧಗಳಲ್ಲಿ ತುಂಬಿಕೊಂಡಿದೆ. ಸ್ವಾತಂತ್ರ್ಯೋತ್ತರ ಭಾರತದ ಗ್ರಾಮೀಣ ಪರಿಸರದ ಕೊಳಕುಗಳನ್ನು, ಕನ್ನಡ ನಾಡಿನ ಸಂಸ್ಕೃತಿಯ ಅನಾವರಣವನ್ನು ಇಲ್ಲಿ ಮಾಡಿದ್ದಾರೆ.

ಹೆದ್ದಾರಿಗುಂಟ‘ – (೧೯೯೯) ನಾಡ ಸಂಸ್ಕೃತಿಯ ಬಗೆಗೆ ಇವರಿಗಿರುವ ಪ್ರೀತಿ, ಕಾಳಜಿಯನ್ನು ಪ್ರಬಂಧದಲ್ಲಿ ಈರಪ್ಪ ಎಂ. ಕಂಬಳಿ ಅವರು ಗ್ರಾಮೀಣ ಪರಿಸರದಿಂದ ಬೆಂಗಳೂರಿನಂತಹ ಮಹಾನಗರಕ್ಕೆ ಪ್ರಯಾಣಿಸುವಾಗ ಸಂಕೀರ್ಣ ನಾಗರಿಕ ಬದುಕಿನ ಹಾದಿಯಲ್ಲಿ ನೋಡಿದ, ಅನುಭವಿಸಿದ ಸಂಗತಿಗಳನ್ನು ಅನಾವರಣಗೊಳಿಸುತ್ತಲೇ ಪ್ರಸ್ತುತ ಆಧುನಿಕ ಕರಾಳ ಜಗತ್ತಿನ ವಿದ್ಯಮಾನಗಳನ್ನು, ಕ್ರೂರತೆಯನ್ನು ತೆರಿದಿಡುತ್ತಾರೆ. ಮರ್ಯಾದೆ ಮೀರದ ತಿಳಿ ಹಾಸ್ಯ ವ್ಯಂಗ್ಯ ವಿಶಾದದಿಂದ ಕೂಡಿದ ವಿಡಂಬನೆ, ಗಂಬೀರವಾದಗತ್ತು ಇವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ. ಮುಗುಳುನಗೆಯನ್ನು ತರಿಸುವ ಇವರ ವಿನೋದ ತಕ್ಷಣವೇ ವೈಚಾರಿಕ ಚಿಂತನೆಯ ಕಡೆ ಬೆರಳುಮಾಡುತ್ತದೆ. ಜಾನಪದ ಮಣ್ಣಿನ ವಾಸನೆ ಹಾಸು ಹೊಕ್ಕಾಗಿದೆ. ಅಲ್ಲಲ್ಲಿ ಜಾನಪದ ತ್ರಿಪದಿ, ಗಾದೆ, ಒಗಟುಗಳ ಬಳಕೆಯಿಂದ ಭಾಷೆಗೆ ಮೆರಗು ಬಂದಿದೆ.

ಗ್ರಾಮೀಣ ಬದುಕನ್ನು ನಗರ ಬದುಕಿನ ನಡುವೆ ಎದುರು ಮಾಡುತ್ತ. ನಗರದಯಾತನಮಯ, ಕೃತಕ ಜೀವನದ ಬಗ್ಗೆ ಕಳವಳಪಡುತ್ತಾರೆ. ಅಸಹ್ಯಪಡುತ್ತಾರೆ.

ಹಾಸ್ಯ ಬೇಕರಿ‘ – (೧೯೯೪) ಕೃತಿಯಲ್ಲಿ ಕೃಷ್ಣಸುಬ್ಬರಾಯರು ದಿನಂಪ್ರತಿ ನಮ್ಮ ಕಣ್ಣಿಗೆ ಗೋಚರವಾಗುವ ನಮ್ಮ ಸುತ್ತಮುತ್ತಲಲ್ಲೇ ಇರುವ, ಜೀವನಕ್ಕೆ ತೀರ ಸನಿಹವಾದ ಘಟನೆಗಳನ್ನೇ ತಮ್ಮ ಪ್ರಬಂಧದಗಳಿಗೆ ವಸ್ತುವನ್ನಾಗಿಸಿಕೊಂಡಿದ್ದಾರೆ. ಅತ್ಯಂತ ಸರಳವಾದ, ಹಾಸ್ಯ ನಿರೂಪಣೆಯ ನಾಟಕೀಯ ಸಂಭಾಷಣೆ ಇವರ ಪ್ರಬಂಧಗಳ ವಿಶೇಷ. ಕಣ್ಣಿಗೆ ಗೋಚರಿಸದ ಅಥವಾ ಕಡೆಗಣಿಸಲ್ಪಟ್ಟ ಎಷ್ಟೋ ವಸ್ತು ಸಂಗತಿಗಳು ಸೂಕ್ಷ್ಮ ಒಳನೋಟದಿಂದ ಪ್ರಬಂಧಗಳಲ್ಲಿ ಕಾಣಿಸಿಕೊಂಡು ಆಹ್ಲಾದವನ್ನು ಉಂಟು ಮಾಡುತ್ತಿವೆ. ವಕ್ರೋಕ್ತಿ, ವಿಡಂಬನೆ, ಲೇವಡಿಗಳಿಗಿಂತ, ವಿನೋದ ಹಾಸ್ಯಗಳೇ ಇವರ ಪ್ರಬಂಧಗಳಲ್ಲಿ ಓತಪ್ರೋತವಾಗಿ ಬಂದಿವೆ. ತಮ್ಮ ಲೇಖನ ಪ್ರಕಟವಾದ ಪತ್ರಿಕೆಯಲ್ಲಿ ಬ್ರೆಡ್ಡು ಕಟ್ಟಿಕೊಡುವುದನ್ನು ಕಂಡ ಲೇಖಕ, ಸಾಹಿತ್ಯಕ್ಕೆ ಇಲ್ಲಿ ಸಿಗುವ ಬೆಲೆ, ಸಾಹಿತ್ಯದ ಬಗೆಗೆ ನಮಗಿರುವ ಕಾಳಜಿಯನ್ನು ಕಂಡು ನೊಂದುಕೊಳ್ಳುತ್ತಾರೆ. ಸರ್ಕಾರ ಮಾಡುವ ಅರ್ಥಹೀನ ಯೋಜನೆ, ಸನ್ಮಾನಗಳನ್ನು ವ್ಯಂಗ್ಯವಾಗಿ ಗೇಲಿ ಮಾಡುತ್ತಾರೆ.

ಲಲಿತ ಪ್ರಬಂಧಗಳು‘ – (೨೦೦೦) ಎಂಬ ಕೃತಿಯಲ್ಲಿ ವೀರೇಂದ್ರಸಿಂಪಿಯವರು ಮನುಷ್ಯನ ಜೀವನದಲ್ಲಿ ಘಟಿಸಬಲ್ಲ ಸಹಜ ಸಂಗತಿಗಳನ್ನು ವಸ್ತುವನ್ನಾಗಿಸಿಕೊಂಡಿದ್ದಾರೆ. ಸರಳವೂ ಗಂಭೀರವೂ ಅಲ್ಲದ ಶೈಲಿ ಇವರದು. ಹುಡುಗಾಟ, ಕಚಗುಳಿಯನ್ನಿಡುವಂತಹ ಇವರ ಪ್ರಬಂಧಗಳು ನಗೆಯ ಬುಗ್ಗೆಯನ್ನು ಹರಿಸುತ್ತವೆ. ವಸ್ತು ಸತ್ಯವನ್ನು ಅರಿಯದೆ ವಿನಾಕಾರಣ ಕಾಲಹರಣ ಮಾಡಿಸುವ ಕಾರ್ಯಗಳನ್ನು ವಿರೋಧಿಸುತ್ತಾರೆ. ಅಲ್ಲದೆ ಹೆಮ್ಮೆಯಿಂದ ಆ ಕಾರ್ಯದ ಬಗ್ಗೆ ಹೇಳಿಕೊಳ್ಳುವ ಹೊಗಳು ಬಟ್ಟರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ.

ಚಲ್ ಮೇರಿಲೂನಾ – (೧೯೯೭) ಪ್ರಬಂಧಗಳಲ್ಲಿ ಅರ್. ನಿರ್ಮಲರವರು ತಮ್ಮ ವಿದ್ಯಾಭ್ಯಾಸ ಪಡೆಯುತ್ತಿದ್ದ ಬಾಲ್ಯದ ಸ್ವಚ್ಛಂದ ಬದುಕಿನ ಮತ್ತು ವೃತ್ತಿ, ಸಾಂಸಾರಿಕ ಬಂಧನದ ಬದುಕಿನ ವೈಯಕ್ತಿಕ ಸಂದರ್ಭಗಳು ತಮ್ಮ ಪ್ರಬಂಧಗಳಿಗೆ ವಸ್ತು ಆಗಿವೆ. ನಿರಾಶಾಭಾವನೆ, ವಿಷಾದ, ತೆಳು ಹಾಸ್ಯ ಇವರ ಎಲ್ಲಾ ಪ್ರಬಂಧಗಳಲ್ಲಿ ಮಡವು ಗಟ್ಟಿದೆ. ನಿರಾಡಂಬರವಾದ – ಸಹಜ ವರ್ಣನೆ, ಸುಂದರ ನಿರೂಪಣೆ ಈ ಪ್ರಬಂಧಗಳ ವೈಶಿಷ್ಟ್ಯ. ಮಾನವತಾವಾದಿಗಳೂ ಪ್ರಕೃತಿ ಪ್ರಿಯರೂ ಆದ ಇವರು ೨೦ನೆಯ ಶತಮಾನದ ವಿಜ್ಞಾನದ ಹೊಸಶೋಧಗಳಿಂದ ಮಾನವ ಪ್ರಕೃತಿ ವಿನಾಶಕ್ಕೆ ಕೈಹಾಕಿದ್ದಾನೆ. ಈ ವಿನಾಶಕಾರಿ ಬೆಳವಣಿಗೆಯನ್ನು ಕಂಡು ಆಕ್ರೋಶರಾಗುತ್ತಾರೆ. ಪ್ರಕೃತಿ ಮಾತೆಯಲ್ಲಿ ತನ್ನ ಪ್ರಾರ್ಥನೆ, ವಿನಂತಿಯನ್ನು ಇಡುತ್ತಾಳೆ. (ಕರಗದಿರುಗುಡ್ಡಗಳೆ – ಪ್ರಬಂಧದಲ್ಲಿ) ಶೋಷಣೆಯ ವಿರುದ್ಧ ಮುಖ ಮಾಡಿ ನಡೆಯಿತ್ತಿರುವ ಆಧುನಿಕ ಮಹಿಳೆಯ ಸಹಜ ಧೋರಣೆಗಳು (ಚಲ್ ಮೇರಿಲೂನಾ – ಪ್ರಬಂಧದಲ್ಲಿ ) ಸೂಕ್ಷ್ಮವಾಗಿ ವ್ಯಕ್ತವಾಗಿವೆ.

ತಲೆಗೊಂದು ತರತರ – (೧೯೯೪) ಕೃತಿಯಲ್ಲಿ ಶ್ರೀನಿವಾಸ ವೈದ್ಯ ಅವರದು ಸಹಜ ವರ್ಣನೆ. ವಿನೋದ, ಹಾಸ್ಯಗಳಲ್ಲಿ ಸೌಜನ್ಯ ಮೀರದ ಕುತೂಹಲ, ಸದ್ಯದ ಇರುವಿನ ಬಗ್ಗೆ, ನಂಬಿಕೆಗಳ ಬಗ್ಗೆ ಮಾನವೀಯ ಮೌಲ್ಯಗಳ ಬಗ್ಗೆ, ಹಾಸ್ಯ ವಿನೋದದ ಮೂಲಕ ಚಿಂತನೆಗೆ ತೊಡಗಿಸುವುದು ಇವರ ಪ್ರಬಂಧಗಳ ವೈಶಿಷ್ಟ್ಯ. ವ್ಯಕ್ತಿಯ ನಡತೆ, ಸಾಂಪ್ರದಾಯಿಕ ನಂಬಿಕೆ, ಗಂಭೀರವಾದ ಸನ್ನಿವೇಶಗಳನ್ನು ಹಾಸ್ಯಕ್ಕೆ ಸಾಮಾಗ್ರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ. ಸಾಂಪ್ರದಾಯಿಕ ಗ್ರಾಮೀಣ ಬದುಕಿನ ಸಂಸ್ಕೃತಿ ಹಾಗೂ ನಾಗರಿಕ ನಗರ ಬದುಕಿನ ಮುಖಾಮುಖಿಯ ಸಂಗತಿಗಳು ಈ ಪ್ರಬಂಧಗಳಲ್ಲಿ ವಿವರಿಸಲ್ಪಟ್ಟಿವೆ.

ಕನ್ನಡ ಪ್ರಬಂಧ ಸಾಹಿತ್ಯ ಕಳೆದ ಏಳೆಂಟು ದಶಕಗಳಲ್ಲಿ ವಿಭಿನ್ನ ನೆಲೆಗಳಲ್ಲಿ ಬೆಳವಣಿಗೆಯನ್ನು ಹೊಂದಿದೆ. ನಮ್ಮ ಸಾಂಸ್ಕೃತಿಕ ಪುನರುಜ್ಜೀವನದ ಸಂದರ್ಭದಲ್ಲಿ ಕಾಲಿರಿಸಿದ ಪ್ರಬಂಧ ಗದ್ಯ ಪ್ರಕಾರ ಸಾಹಿತ್ಯ ನಿರ್ಮಾಣಕ್ಕೆ ಪ್ರೇರಕ ಶಕ್ತಿಯಾಯಿತು. ಕನ್ನಡ ಪ್ರಬಂಧ ಸಾಹಿತ್ಯ ಬೇರೆ ಬೇರೆ ವಿಚಾರಧಾರೆ, ತತ್ವಪ್ರಣಾಳಿಗಳ ಆಶಯಗಳನ್ನು ತನ್ನದಾಗಿಸಿಕೊಂಡು ರೂಪ ವೈವಿಧ್ಯವನ್ನು, ವೈಚಾರಿಕ ನೆಲೆಗಟ್ಟನ್ನೂ ಪಡೆದುಕೊಂಡಿದೆ. ಮತ್ತು ಲಘುಪ್ರಬಂಧ, ನೀಳಪ್ರಬಂಧ, ಪ್ರವಾಸ ಕಥನ, ಹಾಸ್ಯ ಪ್ರಬಂಧ, ವಿನೋಧ ಪ್ರಬಂಧ, ವಿಚಾರ ಪ್ರಬಂಧಗಳಾಗಿ ತನ್ನ ಶಾಖೆಗಳನ್ನು ಸೃಷ್ಟಿಸಿಕೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.

ನವೋದಯ ಕಾಲದಲ್ಲಿ ಬಂದಷ್ಟು ಸಮೃದ್ಧ ಪ್ರಬಂಧಗಳು ಮತ್ತ್ಯಾವ ಕಾಲಘಟ್ಟದಲ್ಲಿ ಬರಲಿಲ್ಲವೇಂದೇ ಹೇಳಬಹುದು. ಸದ್ಯದ ಪರಿಸ್ಥಿಯಲ್ಲಂತೂ ಪ್ರಬಂಧಗಳ ರಚನೆ ತುಂಬಾ ಕಡಿಮೆ. ಸಾಹಿತ್ಯ ಪ್ರಕಾರ ಬೇರೆ ರಚನೆಯಲ್ಲಿ ತೊಡಗಿರುವವರೇ ಆಗೊಮ್ಮೆ, ಈಗೊಮ್ಮೆ ಎನ್ನುವಂತೆ ಬಿಡಿ ಬಿಡಿ ಪ್ರಬಂಧಗಳನ್ನು ಪ್ರಕಟಸುತ್ತಿರುವುದು ೨೧ ನೆಯ ಶತಮಾನದ ಲಲಿತ ಪ್ರಬಂಧದ ಸ್ಥಿತಿಯನ್ನು ಬೆಟ್ಟು ಮಾಡಿ ತೋರಿಸುತ್ತದೆ.