ಇಪ್ಪತ್ತನೇ ಶತಮಾನದ ಅಂತ್ಯವೆನ್ನಬಹುದಾದ ಹತ್ತು ವರ್ಷಗಳ ಅವಧಿಯಲ್ಲಿ ‘ಸಾಹಿತ್ಯ ವಿಮರ್ಶೆ’ ಕನ್ನಡದಲ್ಲಿ ವಿಫುಲವಾಗಿ ಮೂಡಿ ಬಂದಿದೆ. ಸಂಖ್ಯಾ ದೃಷ್ಟಿಯಿಂದ ವಿಫುಲವಾಗಿರುವ ಗುಣಾತ್ಮಕವಾಗಿ ವೈವಿಧ್ಯಮಯವಾಗಿರುವ ಈ ಬಗೆಯನ್ನು ‘ಸಾಹಿತ್ಯ ವಿಮರ್ಶೆ’ ಎಂಬ ಸಾಂಪ್ರದಾಯಿಕ ಪರಿಭಾಷೆಯಿಂದ ವಿವರಿಸಕೊಳ್ಳುವುದು ತುಸು ಕಷ್ಟಕರ! ಕನ್ನಡದ ಮಟ್ಟಿಗೆ ಸಾಹಿತ್ಯ ವಿಮರ್ಶೆಯ ಶುದ್ಧಾಂಗವಾಗಿ ‘ಸಾಹಿತ್ಯ ವಿಮರ್ಶೆ’ಯಾಗಿಯೇ ಉಳಿದಿಲ್ಲವಾದ್ದರಿಂದ ಈ ಕ್ಷೇತ್ರದಲ್ಲಿ ಹಲವು ಬಗೆಯ ವ್ಯವಸ್ಥಿತ ದೃಷ್ಟಿಕೋನಗಳನ್ನು ಗುರುತಿಸಬಹುದು:

. ಸಾಹಿತ್ಯವನ್ನು ಕರಿತ ವಿಮರ್ಶೆ
. ಸಂಸ್ಕೃತಿಯನ್ನು ಆಧರಿಸಿದ ಸಾಹಿತ್ಯ ವಿಮರ್ಶೆ

ಅಥವಾ

ಸಾಹಿತ್ಯವನ್ನು ಆಧರಿಸಿದ ಸಂಸ್ಕೃತಿ ವಿಮರ್ಶೆ
. ಸಾಹಿತ್ಯ ಮತ್ತು ಸಂಸ್ಕೃತಿಗಳ ಗತಿಶೀಲ ಮುಖಾಮುಖಿ.

ಸಾಹಿತ್ಯ ವಿಮರ್ಶೆಯ ಈ ಮೂರು ದಾರಿಗಳು ನೈಜವಾದ ಮಾತಿನಲ್ಲಿ ಹೇಳುವುದಾದರೆ ‘ವಸ್ತು’ವನ್ನು ಕುರಿತ ತ್ರಿವಿಧ ಅಧ್ಯಯನ ಕ್ರಮಗಳಾಗಿವೆ. ಮಾನವ ಮನಸ್ಸಿನ ಸೌಂದರ್ಯಾತ್ಮಕ ಚಟುವಟಿಕೆಯಾಗಿರುವ ಸಾಹಿತ್ಯದ ಸೃಷ್ಟಿಯಂತೆಯೇ ಸಾಹಿತ್ಯ ಮಿವರ್ಶೆಯು ಕೂಡ ಸಾಹಿತ್ಯದ ದೃಷ್ಟಿ ವಿಶೇಷವಾಗಿದೆ. ಈ ದೃಷ್ಟಿ ವಿಶೇಷದ ಒಡಲಿನಲ್ಲಿ ವ್ಯವಸ್ಥಿತವಾದ ಆಲೋಚನಾ ಕ್ರಮಗಳು ನಿರ್ದೇಶಕ ಸೂತ್ರಗಳಾಗಿರುವುದನ್ನು ನಿರಾಕರಿಸಲಾಗದು. ಇದನ್ನು ವಿಶಿಷ್ಟ ಆಯ್ಕೆ ಮತ್ತು ಯಥೋಚಿತ ಪ್ರತಿಪಾದನೆಗಳಿಂದ ಸ್ಪಷ್ಟಪಡಿಸುವ ಕ್ರಮ ಇಲ್ಲಿದೆ.

ಹತ್ತು ಕಟ್ಟುವ ಕಡೆ ಒಂದು ಮುತ್ತು ಕಟ್ಟು – ಎಂಬ ಗಾದೆ ಮಾತಿಗನುಗುಣವಾಗಿ ಮೂಡಿ ಬಂದಿರುವ ಡಾ. ಕೆ. ವಿ. ನಾರಾಯಣ ಅವರ ‘ಬೇರು – ಕಾಂಡ – ಚಿಗುರು’ ವಿಮರ್ಶಾಗ್ರಂಥವು ನನ್ನ ದೃಷ್ಟಿಯಲ್ಲಿ ಇಪ್ಪತ್ತನೇ ಶತಮಾನದ ಕೊನೆಯ ದಶಕದ ಬಹುವಿಶಿಷ್ಟ ಕೃತಿಯಾಗಿದೆ. ಸಾಹಿತ್ಯ ವಿಮರ್ಶೆ, ಸಾಹಿತ್ಯ ಸಿದ್ಧಾಂತ, ಸಾಹಿತ್ಯ ಚರಿತ್ರೆ, ಭಾಷಾವಿಜ್ಞಾನ, ಶೈಲಿ ವಿಜ್ಞಾನ, ತರ್ಕ, ವ್ಯಾಕರಣ, ಛಂದಸ್ಸು, ಕಾವ್ಯಮೀಮಾಂಸೆ, ಸಾಹಿತ್ಯ ಚರಿತ್ರೆ ಸಂಶೋಧನೆ, ಸಂಸ್ಕೃತಿ ಚಿಂತನೆ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಇತಿಹಾಸ, ರಾಜಶಾಸ್ತ್ರ, ಪ್ರಾಕೃತಿಕ ವಿಜ್ಞಾನಗಳು – ಇವೇ ಮುಂತಾದ ಅಧ್ಯಯನ ಕ್ರಮಗಳು ಪರಸ್ಪರ ಸಂಬಂಧವಿಲ್ಲದಂತೆ ಹರಿದು ಹಂಚಿ ಹೋಗಿರುವುದನ್ನು ಮನಗಂಡವರಿಗೆ ಕೆ. ವಿ. ಎನ್‌ ಅವರ ಪುಸ್ತಕ ಅಂಥ ಎಲ್ಲ ವಿಚಾರಗಳ ಹಾಸುಹೊಕ್ಕಾದ ನೇಯ್ಗೆಯಾಗಿರುವುದು ಅಚ್ಚರಿ ಹುಟ್ಟಿಸುತ್ತದೆ. ಸಾಹಿತ್ಯದ ಅನನ್ಯತೆಗೆ ಊನವಾಗದಂತೆ ಸಾಹಿತ್ಯ ಕೃತಿಯ ಒಳ ಹೊಕ್ಕು ಅಲ್ಲೇ ಸಿಕ್ಕಿಕೊಳ್ಳದೆ, ಹೊರ ಬರುವ ‘ನವನವೋನ್ಮೇಷಾಲಿ’ಯಾದ ಪ್ರತಿಭಾ ದೃಷ್ಟಿಗೆ ‘ಬೇರು – ಕಾಂಡ – ಚಿಗುರು’ ಉತ್ತಮ ನಿದರ್ಶನವಾಗಿದೆ.

ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರಗಳನ್ನು ರಾಮನವಮಿ ಮತ್ತು ಇಮಾಂ ಸಾಬಿ ಎಂದು ತಿಳಿದವರಿಗೆ, ಕೆ. ವಿ. ಎನ್‌ ಅವರು ಅಧ್ಯಯನ ಕ್ರಮದಲ್ಲಿ ಏರ್ಪಟ್ಟಿರುವ ಸೂಕ್ಷ್ಮ ಸಂಬಂಧಗಳನ್ನು ಬಿಡಿಸಿ ತೋರಿಸಿದ್ದಾರೆ. ನಮ್ಮ ಸಾಹಿತ್ಯ ವಿಮರ್ಶೆಯ ಪರಿಕರಗಳ ಮೂಲ ನೆಲೆ ಯಾವುದೆಂಬುದನ್ನು ಕೆ. ವಿ. ಎನ್‌ ಹೀಗೆ ಗುರುತಿಸಿದ್ದಾರೆ: ಭೌತ ವಿಜ್ಞಾನದ ಬೆಳವಣಿಗೆಯ ಒಂದು ಹಂತದಲ್ಲಿ ಆಕಾರ ಪಡೆದ ಜಗತ್ತನ್ನು ಯಾಂತ್ರಿಕೃತ ಮಾದರಿಯಲ್ಲಿ ಗ್ರಹಿಸುವ ನ್ಯೂಟನ್ ಪ್ರಣೀತ ಮಾರ್ಗಕ್ಕೆ ಜೋತು ಬಿದ್ದಿದ್ದೇವೆ. ಜೀವ ವಿಜ್ಞಾನದಲ್ಲಿ ಡಾರ್ವಿನ್ ಪ್ರಣೀತ ವಿಕಾಸವಾದದ ಮಾದರಿಯನ್ನು ಪ್ರಶ್ನಾತೀತವಾಗಿ ಒಪ್ಪಿಕೊಂಡಿದ್ದೇವೆ. ಇವೆರಡೂ ನಮ್ಮ ಸಾಹಿತ್ಯ ಕೃತಿಗಳ ಹಿಂದಿನ ಲೋಕ ಗ್ರಹಿಕೆಗಳನ್ನು ನಿಯಂತ್ರಿಸುತ್ತಿವೆ (ಪು. ೦೩). ಸಾಕಾರ ಜಗತ್ತನ್ನು ವಿವರಿಸಿಕೊಳ್ಳುವ ವಿಭಿನ್ನ ಮಾದರಿಗಳಿಗೆ ಉದಾಹರಣೆಗಳೆಂಬಂತೆ ನ್ಯೂಟನ್‌ ಮಾರ್ಗ ಮತ್ತು ಡಾರ್ವಿನ್‌ ಮಾರ್ಗವು ಲೋಕ ಪ್ರಸಿದ್ಧವಾಗಿದ್ದು ಇದರ ನೇರ ನಿಷ್ಟತ್ತಿಯಂತೆ ‘ಸಾಹಿತ್ಯ ವಿಮರ್ಶೆ’ ಬೇರು ಬಿಟ್ಟಿರುವುದನ್ನು ಕೆ. ವಿ. ಎನ್‌ ಪ್ರಸ್ತಾಪಿಸಿದ್ದಾರೆ. ಇದನ್ನು ಕೊಂಚ ಸ್ಪಷ್ಟಪಡಿಸಿಕೊಳ್ಳೋಣ:

ಭೌತವಿಜ್ಞಾನವನ್ನು ಯಾಂತ್ರಿಕೃತ ಮಾದರಿಯಲ್ಲಿ ಗ್ರಹಿಸಿ ನಿರೂಪಿಸುವುದು ನ್ಯೂಟನ್‌ ಮಾರ್ಗವೆನಿಸಿಕೊಂಡರೆ, ಜೀವವಿಜ್ಞಾನವನ್ನು ವಿಕಾಸವಾದಿ ಮಾದರಿಯಲ್ಲಿ ಗ್ರಹಿಸಿ ನಿರೂಪಿಸುವುದು ಡಾರ್ವಿನ್‌ ಮಾರ್ಗವೆನಿಸಿಕೊಳ್ಳುತ್ತದೆ. ಯಾವುದೇ ವಸ್ತು ವಿಷಯಗಳನ್ನು (=Phenomena) ‘ಸಿದ್ಧ ವಸ್ತು’ವಿನಂತೆ (=Finished product) ಪರಿಗಣಿಸುವುದು ನ್ಯೂಟನ್‌ ಮಾರ್ಗವಾದರೆ, ‘ವಿಕಸಿತ ವಸ್ತು’ವಿನಂತೆ (=Developed product) ಪರಿಕಲ್ಪಿಸುವುದು ಡಾರ್ವಿನ್‌ ಮಾರ್ಗವಾಗುತ್ತದೆ. ಈ ಸಂದರ್ಭದಲ್ಲಿ ಕೆ. ವಿ. ಎನ್‌ ವಾಚ್ಯವಾಗಿ ಹೇಳದಿದ್ದರೂ ಗ್ರಹಿಸಬೇಕಾದ ಮತ್ತೊಂದು ವಿಚಾರ ಪ್ರಣಾಲಿಯೆಂದರೆ ಭಾಷಾ ವಿಜ್ಞಾನವನ್ನು ‘ಸ್ವಯಂ ಪೂರ್ಣ’ ಮಾದರಿಯಲ್ಲಿ ಗ್ರಹಿಸಿ ನಿರೂಪಿಸಿರುವ ಚಾಮ್‌ಸ್ಕಿ ಮಾರ್ಗ. ಇದು ವಸ್ತು ವಿಷಯಗಳನ್ನು ಸಿದ್ಧ ವಸ್ತುವಿನಂತೆ ಅಥವಾ ವಿಕಸಿತ ವಸ್ತುವಿನಂತೆ ನೋಡದೆ ಅದನ್ನೊಂದು ‘ವಸ್ತು ಸಿದ್ಧಿ’ಯಂತೆ (=Becoming product) ಪರಿಭಾವಿಸುತ್ತದೆ. ವಾಸ್ತವವಾಗಿ ಕೆ. ವಿ. ಎನ್‌ ಅವರು ‘ವಸ್ತು’ವನ್ನು ನೋಡುವ ಕ್ರಮ ಕೂಡ ಇದೇ ಆಗಿದೆ. ವಸ್ತು ಗ್ರಹಿಕೆಯ ಈ ಗುಣಾತ್ಮಕ ಸ್ಥಿತ್ಯಂತರವೇ ನೆಲೆಸಿದ ಸಾಹಿತ್ಯ ವಿಮರ್ಶೆಯಿಂದ ಕೆ. ವಿ. ಎನ್‌ ಅವರನ್ನು ಪ್ರತ್ಯೇಕಿಸಿ ಬಿಡುತ್ತದೆ. ಜಾಡಿಗೆ ಬಿದ್ದ ವಿಮರ್ಶಾ ಮಾರ್ಗದಲ್ಲಿ ಗಾಣದೆತ್ತುಗಳಂತೆ ಸುತ್ತು ಹಾಕುವವರಿಗೆ ಕೆ. ವಿ. ಎನ್‌ ಅವರ ಸ್ವತಂತ್ರ ಚಲನೆ ರುಚಿಸದು!

ಇದಕ್ಕೆ ಸಾಕ್ಷಿಯಾಗಿ, ಕೆ.ವಿ.ಎನ್‌ ಅವರನ್ನು ಸಾಹಿತ್ಯ ಕೃತಿಯ ‘ಆಂತರ್ಯ’ ಮತ್ತು ‘ಸ್ವಯಂ ಪೂರ್ಣ’ ತತ್ವದ ಪ್ರತಿಪಾದಕರು ಎಂಬಂತೆ ನೇತ್ಯಾತ್ಮಕವಾಗಿ ತಪ್ಪುತಪ್ಪಾಗಿ ಅರ್ಥೈಸಿರುವುದನ್ನು ಉದಾಹರಿಸಬಹುದು. [ನೋಡಿ: ಮಾರ್ಕ್ಸವಾದಿ ವಿಮರ್ಶೆ, ವಿ. ಚಂದ್ರಶೇಖರ ನಂಗಲಿ, ಪು. ೫೪, ೧೯೯೫] ನಮ್ಮ ದೇಶದಲ್ಲಿ ನಗರೀಯ – ಗ್ರಾಮೀಣ ಮತ್ತು ಅರಣ್ಯಕ ನೆಲೆಗಳಿರುವಂತೆಯೇ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಸಾಹಿತ್ಯ ನಗರಿ, ಸಾಹಿತ್ಯ ಗ್ರಾಮ, ಸಾಹಿತ್ಯಾರಣ್ಯಗಳಿವೆಯೆಂದು ತಿಳಿಯೋಣ: ಸಾಹಿತ್ಯ ನಗರಿಯು ಯಾಂತ್ರಿಕೃತ ಮಾದರಿಯದಾದರೆ, ಸಾಹಿತ್ಯ ಗ್ರಾಮವು ವಿಕಾಸವಾದಿ ಮಾದರಿಯದು. ಆದರೆ ಅರಣ್ಯಗಳು ತಂತಾನೆ ಸ್ವಯಂಪೂರ್ಣವಾಗಿರುತ್ತವೆ. ಸಂಸ್ಕೃತಿಯ ಮಹಾ ಪ್ರಸ್ಥಾನದಲ್ಲಿ ಸಾಹಿತ್ಯ ಕೃತಿಯೊಂದು ಸ್ವಯಂಪೂರ್ಣ ಮತ್ತು ಗತಿಶೀಲ “ಆಗುವ” ಬಗೆ ಚೇತೋಹಾರಿಯಾದುದು. ಹೀಗೆ ಆಗುವಿಕೆಯ ಬಹುಮುಖಿ ಸಾಧ್ಯತೆಗಳತ್ತ ಸಹೃದಯ ಸಾಮಾಜಿಕರನ್ನು ಕರೆದೊಯ್ಯುವ ಜವಾಬುದಾರಿಯ ಕೈಮರದ ಕಾಯಕ ಕೆ. ವಿ. ಎನ್‌ ವಿಮರ್ಶೆಯಲ್ಲಿದೆ. ‘ಸಾಹಿತ್ಯಾರಣ್ಯ’ದಲ್ಲಿ ಅಲೆದಾಡಿ ಅನುಭವವಿಲ್ಲದ ‘ನಗರನಿಷ್ಠ’ರಿಗೆ ಮತ್ತು ‘ಗ್ರಾಮನಿಷ್ಠ’ರಿಗೆ ಕೆ. ವಿ. ಎನ್‌ ಒಬ್ಬ ವಿಲಕ್ಷಣ ವೈರುದ್ಯಗಳುಳ್ಳವರಾಗಿ ಕಾಣುತ್ತಾರೆ.

ನಗರಗಳಲ್ಲಿರುವ ಯಾಂತ್ರೀಕೃತ ನಿರ್ಮಾಣಗಳು ಮತ್ತು ಏಕತಾನತೆಯ ಜೀವನ ಶೈಲಿಗಳನ್ನೇ ಕಂಡುಂಡು ಬೆಳೆದವರಿಗೆ ಸಾಹಿತ್ಯ ಕೃತಿಗಳು ಕೂಡ ಅಂತಹುದೇ ಮತ್ತೊಂದು ‘ಸಿದ್ಧ ವಸ್ತು’ಗಳಂತೆ ಗೋಚರಿಸುತ್ತವೆ. ಸಾಹಿತ್ಯವನ್ನು ಕುರಿತ ಅವರ ಅಧ್ಯಯನವೆಲ್ಲ ಅದೇ ಯಾಂತ್ರೀಕೃತ ಶೈಲಿಯದಾಗಿರುತ್ತದೆ.

ಗ್ರಾಮಗಳಲ್ಲಿರುವ ವಿಕಾಸವಾದಿ ನಿರ್ಮಾಣಗಳು ಮತ್ತು ಪುನರ್ ನವೀಕರಣದ ಜೀವನ ಶೈಲಿಗಳನ್ನು ಕಂಡುಂಡು ಬೆಳೆದವರಿಗೆ ಸಾಹಿತ್ಯ ಕೃತಿಗಳು ಕೂಡ ಅಂತಹುದೇ ಮತ್ತೊಂದು ‘ವಿಕಸಿತ ವಸ್ತು’ಗಳಂತೆ ಗೋಚರಿಸುತ್ತವೆ. ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಕುರಿತು ಅವರ ಅಧ್ಯಯನವೆಲ್ಲ ಅದೇ ವಿಕಾಸವಾದದ ನೆರಳಿನಲ್ಲೇ ನಡೆದಿರುತ್ತದೆ.

ಸಾಹಿತ್ಯಾರಣ್ಯದ ಮಾತೇ ಬೇರೆ! ಇಲ್ಲಿ ಸಾಹಿತ್ಯಿಕ ಪುರೋಹಿತಶಾಹಿ, ಸಾಹಿತ್ಯಕ ಜಾತಿ ಪದ್ಧತಿ, ಸಾಹಿತ್ಯಿಕ ಅಸ್ಪೃಶ್ಯತೆಗಳಿಗೆ ಎಡೆಯಿಲ್ಲ, ಸಾಹಿತ್ಯ ಕೃತಿಯ ಮೇಲು ನೋಟದ ಪರಿಶೀಲನೆ ಮಾಡಿ ಹಣೆಬರಹ ಬರೆದು ಬಿಡುವ ಅಧ್ಯಯನ ಕ್ರಮವನ್ನೇ ಸಾಹಿತ್ಯಿಕ ಪರೋಹಿತಶಾಹಿಯೆಂದೂ, ಸಾಹಿತ್ಯ ಕೃತಿಗಳನ್ನು ವಸ್ತು – ರೂಪ – ರಸ – ಕಾಲ – ಭಾಷೆ – ಮತ ಮುಂತಾದ ವಿಭಾಗ ಕ್ರಮಗಳಿಂದಲೇ ಪ್ರವೇಶಿಸುವ ವಿಧಾನವನ್ನೆ ಸಾಹಿತ್ಯಿಕ ಜಾತಿ ಪದ್ದತಿಯೆಂದೂ, ಪಟ್ಟಭದ್ರ ಹಿತಾಸಕ್ತಿಗಳಿಗನುಗುಣವಾಗಿ ಆಯ್ಕೆ ಮಾಡಿಕೊಳ್ಳುತ್ತಾ, ಉಳಿದದ್ದನ್ನೆಲ್ಲ ಕಣ್ಣೆತ್ತಿಯೂ ನೋಡದ ಮನೋಧರ್ಮವನ್ನೆ ಸಾಹಿತ್ಯಕ ಅಸ್ಪೃಶ್ಯತೆಯೆಂದೂ ನಾನಿಲ್ಲಿ ಕರೆದಿದ್ದೇನೆ.

ಸಾಹಿತ್ಯಾರಣ್ಯದಲ್ಲಿ ಹುಲ್ಲು – ಮಹಾವೃಕ್ಷ, ಗಿರಿಶಿಖರ – ಗಿರಿಕಂದರ, ಬೋಳುಗುಡ್ಡ – ಪರ್ವತಾರಣ್ಯ, ಸುವಿಶಾಲ ಬಯಲು – ಇಕ್ಕಟ್ಟಿನ ಹಾದಿಗಳು, ನದಿ ಜಲಪಾತ – ಬಂಜರು ಪ್ರದೇಶ ಎಲ್ಲವೂ ಒಂದರೊಳಗೊಂದು ಮೇಳೈಸಿಕೊಂಡಿರುತ್ತವೆ. ಮನುಷ್ಯ ನಿರ್ಮಿತ ಶ್ರೇಣಿಕೃತ ವ್ಯವಸ್ಥೆಗಳೊಂದೂ ಇಲ್ಲಿರುವುದಿಲ್ಲ. ಎಲ್ಲೆಲ್ಲೂ ಅರಣ್ಯವೋ ಅರಣ್ಯ! ಇಪ್ಪತ್ತೊಂದನೆ ಶತಮಾನದಲ್ಲಿರುವ ನಮಗೆ – ಪಂಪ, ಬಸವ, ಅಲ್ಲಮ, ಕುಮಾರವ್ಯಾಸ, ಕುವೆಂಪು, ಬೇಂದ್ರೆ, ಯರ್ಮುಂಜ ರಾಮಚಂದ್ರ, ಎಸ್‌. ಎಲ್‌. ಬೈರಪ್ಪ – ಎಲ್ಲರೂ ಸಮಕಾಲೀನರೇ ಆಗಿರುತ್ತಾರೆ. ಪ್ರಾಚೀನ ಸಾಹಿತ್ಯಕ್ಕೊಂದು ಬಗೆಯ ವಿಮರ್ಶಾಮಾನದಂಡಗಳು, ಮಧ್ಯಕಾಲೀನ ಸಾಹಿತ್ಯಕ್ಕೆ ಮತ್ತೊಂದು ಬಗೆಯ ವಿಮರ್ಶಾಪರಿಗಳು, ಆಧುನಿಕ ಸಾಹಿತ್ಯಕ್ಕೆ ವಿಶಿಷ್ಟವಾದ ವಿಮರ್ಶಾಸಿದ್ಧಾಂತಗಳು ಎಂಬಂಥ ಪೂವಾಗ್ರಹವನ್ನು ಕೆ. ವಿ. ಎನ್‌ ಅವರು ತೋರುವುದಿಲ್ಲ.

ಮಾಸ್ತಿಕತೆಗಳ ಒಡಲನ್ನು ಛಿದ್ರಿಸುತ್ತಾ ಕನ್ನಡದಲ್ಲಿ ಇದೀಗ ಹುಟ್ಟಿಕೊಳ್ಳುತ್ತಿರುವ ಹೊಸ, ಹೊಸ ಕತೆಗಳು ನಮಗೆ ಮರಳಿ ನೋಡಲು ಕಲಿಸುತ್ತಾ, ಮಾಸ್ತಿಕತೆಗಳನ್ನು ಹೊಸ ಹೊಸದಾಗಿ ಗ್ರಹಿಸಲು ಹೀಗೆ ನೆರವಾಗುತ್ತವೆಯೆಂಬುದನ್ನು ಕೆ. ವಿ. ಎನ್‌ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಹಳೆಯದರಿಂದ ಹೊಸದನ್ನೂ, ಹೊಸತಿನಿಂದ ಹಳೆಯದನ್ನೂ ಬೆಸದು ನೋಡುವ ಸಮಾವಿಷ್ಟ ಮನಸ್ಸಿಗೆ ಮಾತ್ರ ‘ಮೂಕಜ್ಜಿ’ಯಲ್ಲಿ ‘ಕಸಾಂಡ್ರ’ಗಳನ್ನು ಗುರುತಿಸುವ ಪನ್ನತಿಕೆ ಲಭ್ಯವಾಗುತ್ತದೆ: “….ಮೂಕಜ್ಜಿಯ ಹೊಸ ಬಗೆಯವಳು, ನಿತ್ಯದ ಬದುಕಿನ ಐಂದ್ರಿಯಿಕ ಅನುಭವಗಳನ್ನು ಪಡೆಯುತ್ತಲೇ, ಅದರ ಮೂಲಕವೇ ಹೊಸದೊಂದು ಜಗತ್ತನ್ನು ಆಕೆ ಕಾಣಬಲ್ಲಳು. ಒಂದು ಬಗೆಯಲ್ಲಿ ಗ್ರೀಕ್‌ ಪುರಾಣ ಜಗತ್ತಿನ ಕಸಾಂಡ್ರಳಂತೆ, ಆಕೆ ಈಗ ಆಗುತ್ತಿರುವುದನ್ನಷ್ಟೇ ಅಲ್ಲ. ಹಿಂದೆ ಆದದ್ದನ್ನೂ, ಮುಂದೆ ಆಗುವುದನ್ನೂ ನೋಡಬಲ್ಲವಳಾಗಿದ್ದಾಳೆ,….” (ಪು. ೩೧೯). ಕಾಡನ್ನು ಕಾಡಿನೊಳಗಿನಿಂದ ನೋಡಬೇಕೇ ವಿನಾ ನಗರದ ದೃಷ್ಟಿಯಿಂದಾಗಲಿ, ಗ್ರಾಮ ದೃಷ್ಟಿಯಿಂದಾಗಲಿ ನೋಡಲಾಗದು! ಇದೇ ಕೆ. ವಿ. ಎನ್‌ ಪ್ರತಿಪಾದಿಸುವ ಅಂತರ್ಯದ ಮತ್ತು ಸ್ವಯಂ ಪೂರ್ಣತತ್ವ. ಇದು ಚಾಮ್‌ಸ್ಕಿಯನ್‌ ರೆವೆಲ್ಯೂಷನನ್ನು ಹೋಲುವಂತಹುದು. ಡಾರ್ವಿನ್‌ ಮತ್ತು ನ್ಯೂಟನ್‌ ಮಾರ್ಗದ ಜಾಡುಗಳಲ್ಲೇ ಸುಳಿದಾಡುವವರಿಗೆ ಕೆ. ವಿ. ಎನ್‌ ವಿಮರ್ಶೆಗಳು ಅಪಥ್ಯ ಮತ್ತು ವರ್ಜ್ಯ! ಸಿಗುರಿದೆಯೆಂದು ಕಬ್ಬನ್ನು ತಿನ್ನದಿರಲಾದೀತೆ?

ನ್ಯೂಟನ್‌ ಮಾರ್ಗದ ಯಾಂತ್ರೀಕೃತ ಮಾದರಿಗಳಲ್ಲೆ ಸಿಕ್ಕಿ ಹಾಕಿಕೊಂಡವರಿಗೆ ಚರಿತ್ರೆಯೊಂದು ಕಾಲನಿಷ್ಟ ಸ್ಥಾವರವಿದ್ದಂತೆ. ಭೂತ – ವರ್ತಮಾನ – ಭವಿಷ್ಯಗಳ ನಡುವೆ ಪರಸ್ಪರ ಒಳಹೋಗಲು ದಾರಿಗಳಿಲ್ಲದ ಅಡ್ಡಗೊಡೆಗಳಿಲ್ಲಿ ನಿರ್ಮಾಣಗೊಂಡಿರುತ್ತವೆ. ಕೃತಿ ಮತ್ತು ಕಾಲಗಳ ನಡುವೆ ಜನ್ಯ – ಜನಕ ಸಂಬಂಧ ಮತ್ತು ಅಭೇದ ಭಾವದ ಪ್ರತಿಪಾದನೆ ಇಲ್ಲಿನ ಅಪರಿಹಾರ್ಯ ಸಂಗತಿಯಾಗಿದೆ. ಡಾರ್ವಿನ್‌ ಮಾರ್ಗದ ವಿಕಾಸವಾದಿ ಮಾದರಿಗಳನ್ನು ಅನುಸರಿಸುವವರೆಗೆ ಚರಿತ್ರೆಯೆಂದರೆ ರೇಖಾತ್ಮಕ ವಿಕಾಸ ಮಾತ್ರ! ಭೂತ – ವರ್ತಮಾನ – ಭವಿಷ್ಯಗಳನ್ನು ಜೀವ ವಿಕಾಸದಂತೆಯೇ ರೇಕಾತ್ಮಕವಾಗಿ ಗ್ರಹಿಸುವ ಪರಿ ಇಲ್ಲಿರುತ್ತದೆ. ಕೃತಿ ಮತ್ತು ಕಾಲಗಳನ್ನು ಸಂದರ್ಭ ಮೂಲ ಅಧ್ಯಯನಕ್ಕೆ (=Study of Historical and Social Genesis) ಒಳಪಡಿಸುತ್ತಾ ಚರಿತ್ರೆಯನ್ನೊಂದು ಚೈತನ್ಯ ಪೂರ್ಣವಿಕಾಸದಂತೆ ಪರಿಗಣಿಸುವುದು ಇಲ್ಲಿನ ವೈಶಿಷ್ಠ್ಯ, ರೇಖಾತ್ಮಕ ವಿಕಾಸವಾದಿ ದೃಷ್ಟಿಕೋನದಿಂದಾಗಿ ಇದು ಬಹುಮಟ್ಟಿಗೆ ಏಕರೂಪಾತ್ಮಕ ನೆಲೆಗಳತ್ತ ಅನಿವಾರ್ಯವಾಗಿ ಚಲಿಸಿಬಿಡುತ್ತದೆ. ಆದರೆ, ಕೆ. ವಿ. ಎನ್‌ ಪ್ರತಿಪಾದಿಸುವ ಚಾಮ್‌ಸ್ಕಿ ಮಾರ್ಗದ ‘ಸ್ವಯಂ ಪೂರ್ಣ’ ಮಾದರಿಯ ಭೂತ – ವರ್ತಮಾನ – ಭವಿಷ್ಯಗಳನ್ನು ವಿಭಜಿಸಿ ನೋಡದೆ, ಪರಸ್ಪರ ಸಮಾವಿಷ್ಟವಾದ, ಒಳಹೊಕ್ಕು ಹೊರಬರುವ ‘ಅನಿಕೇತನ’ ಪ್ರಜ್ಞೆಯನ್ನು ಪ್ರತಿಪಾದಿಸುತ್ತದೆ. ಇದರಿಂದಾಗಿಯೇ, ಚರಿತ್ರೆಯನ್ನು ನಿತ್ಯನೂತನವಾಗಿ ಬಹುರೂಪಾತ್ಮಕ ಗತಿಶೀಲ ಸಂಬಂಧಗಳಲ್ಲಿ ನಿರೂಪಿಸುವ ದೃಷ್ಟಿಕೋನ ಇಲ್ಲಿರುತ್ತದೆ. ಈ ಉಲ್ಲೇಖ ಗಮನಿಸಿ: “ಎಷ್ಟೋ ಶತಮಾನಗಳ ಹಿಂದೆ ಹುಟ್ಟಿದ ಕೃತಿಯೊಂದನ್ನು ನಾವು ನಮ್ಮ ಪ್ರಸ್ತುತವನ್ನು ಅರಿತುಕೊಳ್ಳಲು ಬಳಸಬಹುದೆಂಬುದೇ ಆ ಕೃತಿಯ ಹೆಚ್ಚಳ” (ಪು. ೪೨೧)

ಚರಿತ್ರೆಯನ್ನು ಗತಿಶೀಲವಾಗಿ ನೋಡದೆ, ಕಾಲನಿಷ್ಠ ಸ್ಥಾವರಗಳಂತೆ ಪರಿಗಣಿಸುವ ದೃಷ್ಟಿಕೋನದ ಉಗಮಸ್ಥಾನಗಳಾವುದೆಂಬದನ್ನು ಕೆ. ವಿ. ಎನ್‌ ತಮ್ಮ ಕೃತಿಯುದ್ದಕ್ಕೂ ಪ್ರಸಾಂಗಿಕವಾಗಿ ಪ್ರಸ್ತಾಪಿಸಿದ್ದಾರೆ. ಅವುಗಳ ಪೈಕಿ ‘ಕೃತಿಕಾರ – ಕೃತಿ ಸಮೀಕರಣ’ ಎಂಬ ತಾತ್ವಿಕತೆಯೂ ಒಂದು. ಆಯ್ದ ಈ ಉಲ್ಲೇಖಗಳನ್ನು ಗಮನಿಸಿ:

. ಕೃತಿಯಲ್ಲಿ ಅಧಿಕೃತತೆ ಎಂದರೆ ಕೃತಿಕಾರನ ಅನುಭವಗಳ ಅಧಿಕೃತತೆ ಎಂದೇ ತಿಳಿಯಲಾಗುತ್ತಿದೆ. ಪು ೪

. ಬರೆಹಗಳ ಮೇಲೆ ಬರೆಹಗಾರನಿಗೆ ಇರುವ ಹಕ್ಕನ್ನು ಸಾಧಿಸುವ ನಮ್ಮ ಆಧುನಿಕ ಚಿಂತನೆಗಳು ಬರೆಹಕ್ಕೂ ಅದನ್ನು ಸೃಷ್ಟಿಸಿದವನಿಗೂ ಬಿಡಿಸಲಾಗದ ನಂಟನ್ನು ಕಟ್ಟಿಕೊಟ್ಟಿವೆ. ಅಂದರೆ ಮಾತು ನಿಲ್ಲುವುದಿಲ್ಲ. ಆದರೆ, ಬರೆಹ ನಿಲ್ಲುತ್ತವೆ ಮಾತ್ರವಲ್ಲ; ಬರೆದವನ ಅಧಿಕೃತ ದಾಖಲೆಯಾಗುತ್ತದೆ. ಪು. ೫

. (ನಿಜ) ಕರ್ತೃ (ನಿಜ) ಕೃತಿ ಎಂಬ ಸಮೀಕರಣವೇ ನಮ್ಮ ಸಂಸ್ಕೃತಿಯ ಸ್ವರೂಪವನ್ನು ಅರಿಯುವಲ್ಲಿ ಹಾದಿಮುಳ್ಳಾಗಿದೆ. ಭಾಷಿಕ ಸಂಕಥನಗಳು ಸಂಸ್ಕೃತಿಯಲ್ಲಿ ಹೇಗೆ ಏಕೆ ರೂಪಗೊಳ್ಳುತ್ತವೆಂಬ ಪ್ರಶ್ನೆಯನ್ನು ಎದುರಿಸಲು ನಾವು ಸಿದ್ದರಿಲ್ಲ. ಪು ೧೬೯

. ಕೃತಿ – ಕೃತಿಕಾರ ಸಮೀಕರಣದಿಂದಾಗಿ ವಚನಗಳ ನಡುವೆಯೇ ನಡೆಯಬಹುದಾದ ಸಂವಾದಕ್ಕೂ ಮಿತಿಯನ್ನು ಕಲ್ಪಿಸಿದಂತಾಗುತ್ತದೆ. ಇಂಥದೊಂದು ಸಂಸ್ಕೃತಿ ಸಂವಾದದ ನೆಲೆಯ ವಚನ ಸಂಕಲನಕ್ಕೆ ಈ (ವಚನ) ಸಂಪುಟಗಳ ರಚನೆಯ ಅನಂತರವೂ ಇನ್ನೂ ಅವಕಾಶ ಉಳಿದಿದೆ. ಅದೇ……

. ಕವಿಯೊಬ್ಬನ ರಚನೆಗಳನ್ನು ತನ್ನ ಸ್ವಂತ ಅನುಭವಗಳ ಮಂಡನೆಯೆಂದು ತಿಳಿಯುವುದು ಓದುಗನ ಗುರಿಯಲ್ಲ. ಪು ೨೬೫

ನನಗೆ ತಿಳಿದಂತೆ, ಕನ್ನಡದಲ್ಲಿ ‘ಕೃತಿಕಾರ – ಕೃತಿ ಸಮೀಕರಣ’ ಮೀಮಾಂಸೆಯನ್ನು ಮೊದಲ ಬಾರಿಗೆ ಶ್ರೀ ಜಿ. ರಾಜಶೇಖರ್ ಅವರು ‘ಕಾರಂತರು ಮತ್ತು ಕಮ್ಯುನಿಷ್ಟರು’ – ಎಂಬ ಎಪ್ಪತ್ತರ ದಶಕದ ಬರೆಹದಲ್ಲಿ ಗುರುತಿಸ, ಕುಟ್ಟಿ ಕೆಡಹಿದ್ದಾರೆ. (ಹೆಚ್ಚಿನ ವಿವರಗಳಿಗೆ: ಮಾರ್ಕ್ಸ್‌ವಾದಿ ವಿಮರ್ಶೆ ಪು ೪೩, ವಿ. ಚಂದ್ರಶೇಖರ ನಂಗಲಿ) ಕೆ. ವಿ. ಎನ್‌ ಅವರಂತೆಯೇ ವಿಮರ್ಶೆಯಲ್ಲಿ ಸೂಕ್ಷ್ಮಗ್ರಾಹಿ ಸಂವೇದನೆಗೆ ಹೆಸರಾಗಿರುವ ಶ್ರೀ ಜಿ. ರಾಜಶೇಖರ್ ಅವರ ವಿಮರ್ಶಾ ಸಂಕಲನವು ಇದುವರೆಗೆ ಪ್ರಕಟವಾಗದಿರುವುದು, ಇಂಥ ಸಮೀಕ್ಷಾ ದೃಷ್ಟಿಯಿಂದ ಬಹುದೊಡ್ಡ ಕೊರತೆಯಾಗಿದೆ. ಈ ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿರುವ ‘ಸಾಹಿತ್ಯ ಮತ್ತು ಸಂಸ್ಕೃತಿಗಳ ಗತಿಶೀಲ ಮುಖಾಮುಖಿ’ಯನ್ನು ‘ಸಾಹಿತ್ಯವಿಮರ್ಶೆ’ಯಲ್ಲಿ ಪ್ರತಿಪಾದಿಸುತ್ತಿರುವ ಕ್ರಮಕ್ಕೆ ಡಾ. ಕೆ. ವಿ. ನಾರಾಯಣ ಅವರೊಂದಿಗೆ ಜಿ. ರಾಜಶೇಖರ್, ಕಿ. ರಂ. ನಾಗರಾಜ, ರಾಜೇಂದ್ರ ಚೆನ್ನಿ, ಬಸವರಾಜ ಕಲ್ಗುಡಿ ಮುಂತಾದವರನ್ನು ಸ್ಮರಿಸುವುದು ಅವಶ್ಯವಾಗಿದೆ.

ಡಾ. ಬಸವರಾಜ ಕಲ್ಗುಡಿ ಅವರ ‘ನಕ್ಷೆ – ನಕ್ಷತ್ರ’ವು ತೊಂಬತ್ತರ ದಶಕದ ಮತ್ತೊಂದು ಗಮನಾರ್ಹ ವಿಮರ್ಶಾ ಸಂಕಲನವಾಗಿದೆ. ‘ತತ್ವ’ ನಿಷ್ಠರಾಗಿ ‘ಆಕೃತಿ’ಯೊಡನೆ ಅನುಸಂಧಾನ ನಡೆಸುವುದಕ್ಕೂ ‘ಆಕೃತಿ’ಯ ಗರ್ಭದಿದಲೆ ತತ್ವವೊಂದು ಅನಾವರಣಗೊಳ್ಳುವುದಕ್ಕೂ ಇರುವ ವ್ಯತ್ಯಾಸಗಳ ಗ್ರಹಿಕೆಗೆ ಇಲ್ಲಿನ ಲೇಖನಗಳು ಮಾರ್ಗದರ್ಶಕವಾಗಿವೆ. ಕೃತಿ ‘ಜನಕ’ ಕೇಂದ್ರಗಳು (=ಕೃತಿಕಾರನ ಹಿನ್ನೆಲೆ, ಸಾಮಾಜಿಕ ಸಂದರ್ಭ, ಆಯಾ ಕಾಲ ಘಟ್ಟ ಇತ್ಯಾದಿಗಳು) ಅಥವಾ ಕೃತಿ ‘ಪೋಷಕ’ ಕೇಂದ್ರಗಳು (=ತತ್ವಜ್ಞಾನ, ಸಂಸ್ಕೃತಿ ಶಾಸ್ತ್ರ, ಧಿಯಾಲಜಿ ಮುಂತಾದ ಅನ್ಯಜ್ಞಾನ ಶಿಸ್ತುಗಳು) ವಿಮರ್ಶೆಯ ಪರಿಪ್ರೇಕ್ಷ್ಯವಾಗದೆ ಕವಿ ಮತ್ತು ಸಹೃದಯ, ಕೃತಿ ಮತ್ತು ಸಂಸ್ಕೃತಿಗಳ ‘ಗತಿಶೀಲ’ ಸಂವಾದದ ಮೂಲಕ ಅನಾವರಣಗೊಳ್ಳುವ ಒಳನೋಟಗಳು ಇಲ್ಲಿ ಮುಖ್ಯವಾಗಿವೆ.

(೧) ಹಳಗನ್ನಡ ಸಾಹಿತ್ಯವನ್ನಾಗಲಿ (=ಪಂಪನ ಕಾವ್ಯಗಳು, ವಚನ ಸಾಹಿತ್ಯ, ಮಧ್ಯಕಾಲೀನ ಸಾಹಿತ್ಯ) ಅಥವಾ (೨) ಆಧುನಿಕ ಸಾಹಿತ್ಯವನ್ನಾಗಲಿ (=ಕುವೆಂಪು, ಬೇಂದ್ರೆ, ಮಾಸ್ತಿ, ಚಿತ್ತಾಲ, ಎಕ್ಕುಂಡಿ, ಲಂಕೇಶ್, ಕಂಬಾರ ಮುಂತಾದವರು) ಅಥವಾ (೩) ಜನಪದ ಸಾಹಿತ್ಯವನ್ನಾಗಲಿ ಅಧ್ಯಯನ ಮಾಡುವಾಗ ಬೇರೆ ಬೇರೆ ಮಾನದಂಡಗಳನ್ನಿಟ್ಟುಕೊಳ್ಳುವ ಗೊಂದಲ ಇಲ್ಲಿಲ್ಲ. ‘ವಸ್ತು’ವನ್ನು ‘ಸ್ಥಿತಿ’ಯನ್ನಾಗಿ (=Static) ನೋಡುವ ಓರಿಯಂಟಲ್‌ ಮತ್ತು ಎಂಪರಿಸಿಸ್ಟ್‌ ಮಾದರಿಗಳಿಗೆ ಶರಣಾಗದೆ, ‘ವಸ್ತು’ವನ್ನು ‘ಗತಿ’ ತತ್ವದಿಂದ (=Dynamic) ನೋಡುವ ಡಯಲೆಕ್ಟಿಕಲ್‌ ದೃಷ್ಟಿಕೋನ ಈ ಕೃತಿಯ ಗುಣಾತ್ಮಕ ಅಂಶವಾಗಿದೆ. ಚಾರಿತ್ರಿಕ ಎನ್ನಬಹುದಾದ ‘ವಸ್ತು’ವನ್ನು ಆಯ್ಕೆ ಮಾಡಿಕೊಂಡಿರುವ ಕನ್ನಡದ ಕಾದಂಬರಿ ಮತ್ತು ನಾಟಕ ಪರಂಪರೆಯನ್ನು ಕುರಿತು ಕಲ್ಗುಡಿಯವರು ನೀಡಿರುವ ಅಭಿಪ್ರಾಯದಲ್ಲಿ ‘ಚರಿತ್ರೆ’ಯನ್ನು ‘ಸ್ಥಗಿತ’ ನೆಲೆಯಿಂದ ಬಿಡಿಸಿ ‘ಗತಿಶೀಲ’ವಾಗಿ ನೋಡುವ ಮನೋಧರ್ಮವಿದೆ: “….. ಗಮನಿಸಬೇಕಾದ ಅಂಶವೆಂದರೆ, ಗತಿ ತರ್ಕವನ್ನು ಹಿಡಿದಿರುವ ಸಮರ್ಥ ಚಾರಿತ್ರಿಕ ಕಾದಂಬರಿಯ ಪರಂಪರೆ ಕನ್ನಡದಲ್ಲಿ ಇನ್ನೂ ರೂಪಗೊಂಡಿಲ್ಲ. ಯಾವುದನ್ನು ಟೆಕ್ನಿಕಲ್‌ ಅರ್ಥದಲ್ಲಿ ಚಾರಿತ್ರಿಕ ಕಾದಂಬರಿಗಳೆಂದು ಕರೆಯುವುದಿಲ್ಲವೋ ಅಂತ ಕಲಾಕೃತಿಗಳು ಕೆಲವು (ಉದಾ: ಗ್ರಾಮಾಯಣ, ಕಾನೂರ ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು ಮುಂತಾದವು) ತಮ್ಮ ಕಲಾಕೃತಿಯ ಚೌಕಟ್ಟಿನಲ್ಲಿ ಕೊಡುವ ಜೀವನ ದರ್ಶನದಲ್ಲಿಯೇ ಚಾರಿತ್ರಿಕ ಗತಿಯ ಸ್ವರೂಪವನ್ನೂ ಕೊಡುತ್ತವೆ…… ಗಿರೀಶ್‌ ಕಾರ್ನಾಡರ ‘ತುಘಲಕ್‌’ ಮತ್ತು ಲಂಕೇಶರ ‘ಸಂಕ್ರಾತಿ’ ಇವೆರಡೂ ನಾಟಕಗಳಲ್ಲೂ, ಹಿನ್ನೆಲೆಯಲ್ಲಿ ಐತಿಹಾಸಿಕ ಸ್ವರೂಪವೊಂದರ ಉಲ್ಲಂಘನೆಯೇನೂ ಇಲ್ಲ. ಅವೆರೆಡರಲ್ಲೂ ಅವುಗಳನ್ನು ಗಟ್ಟಿಗೊಳಿಸುತ್ತ ಹೋಗುವುದಷ್ಟೇ ಅಲ್ಲ. ಅವುಗಳ ಅಂತರಾಳದಿಂದಲೇ ಜೀವನದ ಬಗೆಗಿನ ಹೊಸ ವ್ಯಾಖ್ಯೆಗಳನ್ನು ಕೊಡತ್ತ ಹೋಗುತ್ತವೆ.” (ಪು. ೧೫೨).

ವಿಮರ್ಶೆಯ ಶಿಸ್ತು ಇಲ್ಲಿ ಯಾವುದೇ ವಿಧವಾದ ಪೂರ್ವ ಸಿದ್ಧಾಂತ ಮತ್ತು ಸಿದ್ಧ ಕಲ್ಪನೆಗಳನ್ನು ಆಶ್ರಯಿಸದೆ ಸಾಹಿತ್ಯ ಕೃತಿಯ ‘ಅನುಭವ’ ದ್ರವ್ಯದ ಮೂಲಕ ಮಾತನಾಡುತ್ತಿರುವುದು ವಿಚಾರ ರಮಣೀಯತೆಗೆ ಕಾರಣವಾಗಿದೆ: “ಭಾರತೀಯ ಸಾಹಿತ್ಯ ಪರಂಪರೆಯ ಮುಖ್ಯಗುಣ ಸಹೃದಯಾಭಿಮುಖವಾಗಿರವುದೇ ಆಗಿದೆ. ಈ ಕಾರಣದಿಂದಲೋ ಏನೋ ಆಧುನಿಕ ವಿಮರ್ಶೆಯೂ ಸಾಹಿತ್ಯಕ್ಕೆ ಸಂಬಂಧಿಸಿದ ಸಾಂಸ್ಕೃತಿಕ ನೆಲೆಗಳ ವಿವರಣೆ – ವಿಶ್ಲೇಷಣೆಯತ್ತಲೇ ಹೆಚ್ಚು ಮುಖ ಮಾಡಿದೆ” (ಪು. ೬೨) – ಎಂಬ ಮಾತುಗಳಲ್ಲಿ ಪರಂಪರೆಗೂ ವರ್ತಮಾನಕ್ಕೂ ನಡುವಣ ವಿಚಾರ ಮೈತ್ರಿಯ ಪ್ರತಿಪಾದನೆಯಿದೆ. ಭಾರತೀಯ ಕಾವ್ಯಮೀಮಾಂಸೆ ಮತ್ತು ಆಧುನಿಕ ಸಾಹಿತ್ಯ ಚಿಂತನೆಗಳನ್ನು ಪ್ರತ್ಯೇಕ ದಡಗಳಂತೆ ನೋಡುತ್ತಿರುವ ‘ಸ್ಥಾಪಿತ’ ನೆಲೆಯನ್ನು ಮೇಲಿನ ಅಭಿಪ್ರಾಯವು ಛಿದ್ರಿಸುತ್ತಿರುವುದು ಗಮನಾರ್ಹ!

ಎಲ್ಲಕ್ಕಿಂಥ ಮಿಗಿಲಾಗಿ ‘ಸಾಹಿತ್ಯ ಕೃತಿ’ಯೊಂದರ ಓದಿನ ಅನುಭವವು (೧) ಸ್ಥಗಿತತೆ (೨) ಏಕಮೇವತೆ (೩) ಅಂತಿಮತೆಗಳಿಗೆ ಸಿಲುಕಿ ನರಳುತ್ತಿರುವ ಸಮಕಾಲೀನ ಸಾಹಿತ್ಯಿಕ ಪರಿಸರದಲ್ಲಿ ತದ್ವಿರುದ್ಧವಾಗಿ ಕಂಡು ಬರುವ ‘ನಕ್ಷೆ – ನಕ್ಷತ್ರ’ವು ತನ್ನೊಳಗಿನ ವಿಮರ್ಶಾಲೇಖನಗಳ ಮೂಲಕ, ಓದುವುದೆಂದರೆ……. (೧) ನವತ್ವ (೨) ಬಹುತ್ವ (೩) ಅನಂತ್ಯಗಳ ಅನುಸಂಧಾನವೆಂದು ಖಚಿತವಾಗಿ ಎತ್ತಿ ಹಿಡಿದಿದೆ. “ಈಗ ಕನ್ನಡ ಸಾಹಿತ್ಯದ ಸ್ವರೂಪದ ಸಮಸ್ಯೆಯು ಕೇವಲ ಸಾಹಿತ್ಯ ಮೀಮಾಂಸೆಯ ಸೌಂದರ್ಯಾತ್ಮಕ ಸಮಸ್ಯೆ ಎಂದು ಭಾವಿಸುವ ಹಾಗಿಲ್ಲ.” (ಪು. ೮೪) – ಎಂಬ ಮಾತುಗಳು ವಿಮರ್ಶಕನು ನಂಬಿರುವ ‘ಕೃತಿ – ಸಂಸ್ಕೃತಿ ಸಂವಾದ’ಕ್ಕೆ ನಿದರ್ಶನವಾಗಿದೆಯಲ್ಲದೆ, ಇಂದಿನ ಕನ್ನಡ ವಿಮರ್ಶೆಯ ‘ಗತಿಮತಿಯ’ಯ ಅಭಿವ್ಯಕ್ತಿಯಾಗಿದೆ.

ಕೀರ್ತಿಶೇಷ ಡಾ. ಡಿ. ಆರ್. ನಾಗರಾಜ್‌ ಅವರ ‘ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ’ಯು ತೊಂಬತ್ತರ ದಶಕದ ಕನ್ನಡ ಸಾಹಿತ್ಯ ವಿಮರ್ಶೆಯಲ್ಲೊಂದು ನೂತನ ನಕ್ಷತ್ರವಾಗಿದೆ. ಇದುವರೆಗೆ, ನಿರೂಪಿಸಿದ ಡಾ. ಕೆ. ವಿ. ಎನ್‌ ಮತ್ತು ಡಾ. ಕಲ್ಗುಡಿ ಅವರಿಗಿಂತಲೂ ವಿಭಿನ್ನವಾದ ‘ಗ್ಲೋಕಲ್‌’ (=ಗ್ಲೋಬಲ್‌ + ಲೋಕಲ್‌) ಅನುಸಂಧಾನ ಈ ಕೃತಿಯ ವೈಶಿಷ್ಟ್ಯವಾಗಿದೆ. ವಚನಗಳ ರೂಪದಲ್ಲಿ ಅಲ್ಲಮನು ಶಂಕರಾಚಾರ್ಯನೊಂದಿಗೆ ‘ವಾಕ್ಯಾರ್ಥದರ್ಶನ’ (=Inquisition Concerning a doctrine) ನಡೆಸಿದ್ದಾನೆಂಬ ಡಿ. ಆರ್. ವಿವರಣೆಯಲ್ಲಿ ಒಂದು ನಿರ್ದಿಷ್ಟ ಕಾಲ – ದೇಶದ ತಾತ್ವಿಕ ಸಂಧರ್ಭಕ್ಕೆ ಅಲ್ಲಮನ ವಚನಗಳನ್ನು ‘ಲಾಳ’ದಂತೆ ಬಳಸಿಕೊಂಡಿದರುವುದು ಸುಸ್ಪಷ್ಟವಾಗಿದೆ. ಇದು ಸ್ಥಗಿತವೂ ಪರಿಮಿತವೂ ಆಗಿ ಬಿಡಬಹುದೆಂಬ ಅಂಜಿಕೆ ಇದ್ದುದರಿಂದಲೇ ಡಿ. ಆರ್. ಅವರು ಇಪ್ಪತ್ತನೆ ಶತಮಾನದ ರಾಷ್ಟ್ರೀಯವಾದದ ವಿರಾಟ್‌ ಐಕ್ಯತೆಯ ಪಡಿಯಚ್ಚಿನಲ್ಲಿ ಪ್ರಕಟಗೊಂಡ ಏಕರೂಪಾತ್ಮಕ ಅಧ್ಯಯನದ ವಿವಿಧ ಮಾದರಿಗಳು ಮತ್ತು ಮೂಲ ಮಾತೃಕೆಗಳನ್ನು ಗುರುತಿಸುತ್ತಾ ಇವುಗಳ ಒಡಲಾಳದಲ್ಲೇ ಪ್ರಕಟಗೊಂಡಿರುವ ಬಹು ರೂಪಾತ್ಮಕ ದೃಷ್ಟಿಯ ‘ದೇಸಿ ದಂಗೆಗಳು’ ಎಂಬಂತೆ ಅಲ್ಲಮನ ವಚನಗಳು ಮತ್ತು ಶೂನ್ಯ ಸಂಪಾನೆಗಳನ್ನು ವ್ಯಾಖ್ಯಾನಿಸಿದ್ದಾರೆ.

ಇಲ್ಲಿ ಗಮನಿಸಬೇಕಾದ ಸೂಕ್ಷ್ಮಾಂಶವೆಂದರೆ ಡಿ. ಆರ್. ಗುರುತಿಸುತ್ತಿರುವ ಚಾರಿತ್ರಿಕ ಅಥವಾ ಸಾಮಾಜಿಕ ಸಂದರ್ಭಗಳು ಇಪ್ಪತ್ತನೇ ಶತಮಾನದ್ದಿರಲಿ ಅಥವಾ ಪ್ರಾಚೀನ – ಮಧ್ಯಕಾಲೀನವೇ ಇರಲಿ ಅವರು ನೋಡುವ ರೀತಿ ‘ಸ್ಥಗಿತ’ವಾಗಿದೆ. ಅಂದರೆ, ಆಯಾ ಕಾಲಘಟ್ಟಗಳಿಗೆ ಸೇರಿದ ನಿರ್ದಿಷ್ಟ ಪಂಥಗಳು ಮತ್ತು ಲಕ್ಷಣಗಳನ್ನು ವಿಶ್ಲೇಷಿಸುತ್ತಾ ಅವುಗಳನ್ನು ಅಲ್ಲಮನ ವಚನಗಳು ಮತ್ತು ಶೂನ್ಯ ಸಂಪಾದನೆಗಳು ಹೇಗೆ ಉತ್ತರಿಸಿದೆ? ಎಂಬ ಉತ್ಖನನ ಪ್ರವೃತ್ತಿ ಇಲ್ಲಿ ಎದ್ದು ಕಾಣುತ್ತದೆ. ಯಾವುದಾದರೊಂದು ಕಾಲ – ದೇಶದ ಚಾರಿತ್ರಿಕ ಮತ್ತು ಸಮಾಜಿಕ ಸಂದರ್ಭಗಳನ್ನು ‘ಸ್ಥಗಿತ’ವಾಗಿ ನೋಡುವ ಬಗೆ ‘ವಸ್ತು ಸಂವೃತಿ’ (Closed Phenomenon) ಎನಿಸಿಕೊಂಡರೆ, ‘ಗತಿಶೀಲ’ವಾಗಿ ನೋಡುವ ಬಗೆ ‘ವಸ್ತು ವಿವೃತಿ’ (Open Phenomenon) ಎನಿಸಿಕೊಳ್ಳುತ್ತದೆ. ಕಾಲಾನುಕ್ರಮ ಚರಿತ್ರೆ ಅಥವಾ ಗತಚರಿತ್ರೆ ಅಥವಾ ವರ್ತಮಾನದ (=ಇಪ್ಪತ್ತನೆ ಶತಮಾನದ) ಚರಿತ್ರೆಗಾಗಿ ಸಾಹಿತ್ಯ ‘ವಸ್ತು’ವೊಂದು ಸಾಧನವಾಗುವುದಾದರೆ ಅದರಲ್ಲಿ ಹೆಚ್ಚುಗಾರಿಕೆಯೇನಿದೆ? ಸಾಹಿತ್ಯಕ್ಕೆ ಅಂಟಿ ಬಂದಿರುವ ಸೀಮಿತವಾದ ನಾನಾ ಉದ್ದೇಶಗಳಲ್ಲಿ ಇದೂ ಒಂದೆಂದು ಹೇಳಬಹುದಷ್ಟೆ! ಇತರ ಯಾವುದೇ ಅನ್ಯಜ್ಞಾನ ಶಿಸ್ತುಗಳಿಗೆ ಸಾಧ್ಯವಾಗದ ‘ವಿಶಿಷ್ಟ ಅನುಭವ’ವನ್ನು ನೀಡುವುದರಿಂದಲೇ ಅದನ್ನು “ನಿಚ್ಚಂ ಪೊಸತು…..” ಎಂದು ಕರೆಯಲಾಗಿದೆ.

ಈ ದೃಷ್ಟಿಯಿಂದ ನೋಡಿದಲ್ಲಿ, ಅಲ್ಲಮನಿಗೆ ತಾನೊಂದು ‘ಸಿದ್ದಾಂತ’ ಅಥವಾ ‘ತತ್ವಜ್ಞಾನ’ ಅಥವಾ ‘ಬೋಧಾಮೃತ’ ನೀಡಬೇಕೆಂಬ ಸಂಕಲ್ಪವೇ ಇಲ್ಲ. ‘ವೀರಶೈವ’ವೂ ಸೇರಿದಂತೆ ಪ್ರಚಲಿತ ಮತಧರ್ಮದ ಪರಿಭಾಷೆಗಳು ಮತ್ತು ‘ಸ್ಥಾಪಿತ’ವಾಗಿರುವ ತಾತ್ವಿಕತೆಯ ಚೌಕಟ್ಟುಗಳು ಅಲ್ಲಮನ ವಚನಗಳನ್ನು ಗ್ರಹಿಸಲು ನೆರವಾಗುವುದಿಲ್ಲ. ಈ ದೃಷ್ಟಿಯಿಂದ ಅಲ್ಲಮನನ್ನು ಕನ್ನಡ ಸಂಸ್ಕೃತಿಯ ‘ಝೆನ್‌’ ಎಂದು ಹೇಳಬಹುದು. ಝೆನ್‌ ಎಂದು ಗುರುತಿಸಲ್ಪಡುತ್ತಿರುವ ಕಥಾ ಪ್ರಸಂಗಗಳು, ಸಂವಾದ, ಒಗಟು, ಮುಂಡಿಗೆಗಳಲ್ಲಿ ೧) ಬೆಡಗು ೨) ಬೆರಗು ೩) ಬೆಳಗು ಇವು ಮೂರೂ ಮುಪ್ಪರಿಗೊಂಡಿರುವಂತೆಯೇ ಅಲ್ಲಮನ ವಚನಗಳಲ್ಲೂ ಬೆಡಗಿದೆ, ಬೆರಗಿದೆ, ಬೆಳಗಿದೆ. ಪೂರ್ವ ಸಿದ್ಧಾಂತಗಳು ‘ಸ್ವಕೀಯ’ವಾಗಿರಲಿ ಅಥವ ‘ಪರಕೀಯ’ವಾಗಿರಲಿ ಅವುಗಳೊಂದಿಗೆ ಅಲ್ಲಮನು ರಾಜಿಯಾಗುವುದಿಲ್ಲ.

“…..ನಿನ್ನ ಅರಿವೆಲ್ಲವ ಹರಿ ಹಂಚಮಾಡಿ
ನೀನರಿ ಮರಳೇ ಅನುಭಾವಿಯಾದಡೆ…… “

ಇಂಥ ಕಾಡು ಪ್ರಜ್ಞೆಯ ಅಲ್ಲಮನನ್ನು ಡಿ. ಆರ್. ಚರ್ಚಿಸುತ್ತಾ ಅಗಾಗ್ಗೆ ಯಾವುದಾದರೊಂದು ಸಿದ್ಧಾಂತ ಅಥವಾ ತತ್ವಜ್ಞಾನದ ನೆಡು ತೋಪುಗಳಿಗೆ ಕರೆದೊಯ್ಯುತ್ತಾರೆ. ‘ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ’ – ಕೃತಿಯುದ್ದಕ್ಕೂ ಹಲವು ಬಗೆಯ ಸಿದ್ಧಾಂತ ಪ್ರತಿಪಾದನೆ ಮತ್ತು ಸಾಮಾನ್ಯೀಕರಣಗಳೇ ಸಮೃದ್ಧವಾಗಿ ತುಂಬಿ ಹೋಗಿರುವುದನ್ನು ಅಲ್ಲಗಳೆಯಲಾಗದು. ಆದ್ದರಿಂದಲೇ ಪಂಪನಿಂದ ಹಿಡಿದು ಪು.ತಿ.ನ. ವರೆಗೆ, ಕಿರ್ಕ್‌‌ಗಾರ್ಡ್‌ನಿಂದ ಹಿಡಿದು ಅಭಿನವ ಗುಪ್ತನವರೆಗೆ, ಕಬೀರನಿಂದ ಹಿಡಿದು ನಾರಾಯಣ ಗುರುಗಳವರೆಗೆ ತೌಲನಿಕ ವಿಶ್ಲೇಷಣೆ ನಡೆಸುತ್ತಾ ರಷ್ಯನ್‌ ಸಾಹಿತ್ಯಚಿಂತಕ ಬಾಖ್ತಿನ್‌, ಎಡ್ವರ್ಡ್‌ಸೈ‌ದ್‌, ಶೈಲ್ಡನ್‌ ಪೋಲಾಕ್‌ ಮುಂತಾದವರನ್ನೆಲ್ಲ ಜಮಾಯಿಸಿ ಅತ್ಯಾಧುನಿಕವಾದ ‘ಸರ್ವದರ್ಶನ’ ಸಮೀಕ್ಷೆಯೊಂದನ್ನು ಮಂಡಿಸಿದ್ದಾರೆ. ಇಲ್ಲೆಲ್ಲ ಡಿ. ಆರ್. ಅವರ ಅಧ್ಯಯನದ ಹರಹು, ವಿದ್ವತ್ತಿನ ಆಳಗಳು ಪರಿಚಯವಾಗುತ್ತವೆಯೇ ಹೊರತು ಅಲ್ಲಮನ ಝೆನ್‌ ಶೈಲಿಯ ‘ಕಾಣ್ಕೆ’ಗೆ, ಹೊಳಹಿಗೆ ನೆರವಾಗುವುದಿಲ್ಲ, ಈ ಕೃತಿಯಲ್ಲಿ ಎಣಿಸಿದಂತೆ ೯೬ ಅಲ್ಲಮನ ವಚನಗಳ (=ಒಂದು ಹಾಡೂ ಸೇರಿ) ಉಲ್ಲೇಖವಿದೆ. ಇವುಗಳನ್ನಾಧರಿಸಿದ ತಾತ್ವಿಕ ಚಿಂತನೆ ಅಲ್ಲಮನ ಸಮಗ್ರ ವಚನಗಳಲ್ಲಿ ಪ್ರತಿಶತ ಒಂದು ಭಾಗಕ್ಕೆ ಹತ್ತಿರವಾಗಿದೆಯೆಂಬುದನ್ನಿಲ್ಲಿ ಗಮನಿಸಬೇಕು.

ಡಿ.ಆರ್. ಅವರಿಗೆ ತಾವು ಮಂಡಿಸುತ್ತಿರುವ ‘ವಾಕ್ಯಾರ್ಥ ದರ್ಶನ’ ಮತ್ತು ‘ಸರ್ವದರ್ಶನ’ ಸಮೀಕ್ಷೆಗಳು ತೃಪ್ತಿ ಕೊಟ್ಟಿಲ್ಲವೇನೋ. ಆದ್ದರಿಂದಲೇ ‘ವಚನಗಳ ಪ್ರಾಯೋಗಿಕ ವಿಮರ್ಶೆ: ಆಶಯಗಳು – ಪ್ರತಿಮೆಗಳು’ ಎಂಬ ಆರನೆ ಅಧ್ಯಾಯ ಜೋಡಣೆಯಂತಿದೆಯಾದರೂ ಇದೇ ಡಿ. ಆರ್. ಗ್ರಂಥದ ವಿಶಿಷ್ಟ ಕೊಡುಗೆ ಎಂದು ಹೇಳಲೇಬೇಕಾಗಿದೆ. ಏಕೆಂದರೆ, ‘ಸಂದರ್ಭ’ವನ್ನು ‘ಗತಿಶೀಲ’ವಾಗಿ ನೋಡುವ ‘ವಸ್ತು ವಿವೃತಿ’ಯ (=Open Phenomenon) ವಿಧಾನವಿಲ್ಲಿದೆ. ಈ ಭಾಗದಲ್ಲಿ ಡಿ. ಆರ್. ಯಾವುದೇ ಸಿದ್ದಾಂತ ಮತ್ತು ತತ್ವಜ್ಞಾನದ ಹಂಗಿಲ್ಲದೆ ಅಲ್ಲಮನ ವಚನಗಳನ್ನು ತನಿತನಿಯಾಗಿ, ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿ ಪ್ರವೇಶಿಸಿ ಬಹು ಅಮೂಲ್ಯವಾದ ಒಳನೋಟಗಳನ್ನು ನೀಡಿದ್ದಾರೆ: ೧) ಹಿರಿಯರು ಲಕ್ಷ್ಮಿಯ ದ್ವಾರಪಾಲಕರು ೨) ದೇವಸತ್ತ ೩) ಪ್ರಳಯದೊಡನೆ ಸೆಣಸು – ಸ್ನೇಹ….. ಇತ್ಯಾದಿ. ಅತ್ಯಂತ ಮಹತ್ವಾಂಕ್ಷೆಯ ಡಿ. ಆರ್. ಕೃತಿಯನ್ನು ಶ್ರದ್ಧೆಯಿಂದ ಓದಿ ಮುಗಿಸಿದ ಸಹೃದಯರಿಗೆ ರವೀಂದ್ರ ವಾಣಿಯೊಂದು ನೆನಪಾಗಬಹುದು:

“…… ಪ್ರಭೂ! ನಿನ್ನ ಮಾತು ಎಷ್ಟು ಸರಳ! ಆದರೆ
ನಿನ್ನನ್ನು ಕುರಿತು ಮಾತನಾಡುತ್ತಾರಲ್ಲ, ಅವರ ಮಾತು
ಜಟಿಲ! ನಿನ್ನ ನಕ್ಷತ್ರಗಳ ಧ್ವನಿ ನನಗೆ ಅರ್ಥವಾಗುತ್ತದೆ.
ಹಾಗೆಯೇ ನಿನ್ನ ಮರಗಳ ಮೌನವೂ……”
(ಉಕ್ತ: ಪರಿಶೀಲನ, ಜಿ.ಎಸ್. ಶಿವರುದ್ರಪ್ಪ, ಪು. ೧೫೯)

ಅಲ್ಲಮನ ವಚನಗಳೆಂಬ ನಿಃಶಬ್ದ ಮಹಾಸಾಗರದಲ್ಲಿ ವೈಭವೋಪೇತವಾಗಿ ಸಾಗುವ ಡಿ. ಆರ್. ಅವರ ಶಬ್ದಯಾನದ ಟೈಟಾನಿಕ್ ನೌಕೆಯನ್ನು ಸುಮ್ಮನೆ ವೀಕ್ಷಿಸುತ್ತಿರುವ ಒಂದು ‘ಕಿಂಚಿತ್‌’ ಜಲಚರವಾಗಿ ನನ್ನ ಅಭಿಪ್ರಾಯಗಳನ್ನಿಲ್ಲಿ ದಾಖಲಿಸಿದ್ದೇನೆ:

ಚರಾ ಚರವೆಂಬುದೊಂದು ಕಿಂಚಿತ್
ಚತುರ್ಯುಗವೆಂಬುದೊಂದು ಕಿಂಚಿತ್
ಅಪ್ಪುದೆಂಬುದೊಂದು ಕಿಂಚಿತ್
ಆಗದೆಂಬುದೊಂದು ಕಿಂಚಿತ್
ತಾನು ಶುದ್ಧವಾದ ಶರಣಂಗೆ
ಗುಹೇಶ್ವರನೆಂಬುದೊಂದು ಕಿಂಚಿತ್.

ಇದುವರೆಗೆ, ಡಾ. ಕೆ. ವಿ. ನಾರಾಯಣ ಮತ್ತು ಕೀರ್ತಿ ಶೇಷ ಡಿ. ಆರ್. ನಾಗರಾಜ ಅವರನ್ನು ಲಕ್ಷಿಸಿ, ಕನ್ನಡ ಸಾಹಿತ್ಯ ವಿಮರ್ಶೆಯ ಪ್ರಮುಖ ವಾಗ್ವಾದವೊಂದನ್ನು ಇಲ್ಲಿ ಹಿಡಿದಿಡಲು ಯತ್ನಿಸಿದ್ದೇನೆ.

ತೊಂಬತ್ತರ ದಶಕದ ಕನ್ನಡ ಸಾಹಿತ್ಯ ವಿಮರ್ಶೆಯ ಗತಿಮತಿಯ ದೃಷ್ಟಿಯಿಂದ ಪ್ರಸ್ತಾಪಿಸಲೇ ಬೇಕಾದ ಸಂಗತಿಯೆಂದರೆ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಟಣೆಗಳು. ಕನ್ನಡ ಸಾಹಿತ್ಯದ ಪುನರ್ ಮೌಲ್ಯೀಕರಣ ಮತ್ತು ಉಪಸಂಸ್ಕೃತಿಯ ಮಾಲಿಕೆಗಳು ಕ್ರಮವಾಗಿ ‘ಮೇಲು ರಚನೆ’ಗಳೆರಡನ್ನೂ ಲಕ್ಷಿಸಿದ ಯೋಜನೆಗಳಾಗಿವೆ. ಮೇಲು ರಚನೆಯೆನ್ನಬಹುದಾದ ಇಡೀ ಕನ್ನಡ ಸಾಹಿತ್ಯ ಪರಂಪರೆಯನ್ನು ಪುನರ್ ಮೌಲ್ಯೀಕರಣಕ್ಕೊಳಪಡಿಸುವ ಅಂತೆಯೇ, ತಳರಚನೆಯೆನ್ನಬಹುದಾದ ಅಲಕ್ಷಿತ ಜನಸಮುದಾಯಗಳ ಜೀವನದ ವಿಧಾನಗಳನ್ನು ಲಕ್ಷ್ಯೀಕರಿಸಿ ನೋಡುವ ಈ ಸಾಂಸ್ಥಿಕ ಪ್ರಯತ್ನದಲ್ಲಿ (ಅಧ್ಯಕ್ಷರು: ಬರಗೂರು ರಾಮಚಂದ್ರಪ್ಪ) ೩೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನಾಡಿನ ಹಿರಿಯ – ಕಿರಿಯ ಬರೆಹಗಾರರು ಭಾಗವಹಿಸಿದ್ದೊಂದು ವಿಶೇಷ. ಇಲ್ಲಿನ ಚಿಂತನೆಗಳು ಗುಣಮಟ್ಟದಲ್ಲಿ ಸಮಾನವೆಂದಾಗಲೀ, ಒಂದೇ ಬಗೆಯ ತಾತ್ವಿಕ ನಿಲವುಗಳನ್ನು ಹೊಂದಿದೆಯೆಂದಾಗಲಿ – ತಿಳಿಯಲಾಗದು. ವಿವರಣಾತ್ಮಕ, ವಿಶ್ಲೇಷಣಾತ್ಮಕ ಧಾಟಿಯ ವಿಮರ್ಶೆಗಳಲ್ಲದೆ ತಾತ್ವಿಕ ದೃಷ್ಟಿ ಮತ್ತು ಗಂಭೀರ ಚಿಂತನೆಯ ವಿಮರ್ಶಾ ಲೇಖನಗಳಿಂದ ಕೂಡಿದ ಈ ಪ್ರಕಟಣೆಗಳು ತೊಂಬತ್ತರ ದಶಕದ ಕನ್ನಡ ವಿಮರ್ಶೆಯ ಬಹುತ್ವ, ವಾಗ್ವಾದ ಭೂಮಿಕೆ ಮತ್ತು ಸಮಷ್ಟೀಕರಣದ ಉತ್ತಮ ನಿದರ್ಶನಗಳಾಗಿವೆ. ಇದನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಅನುಭವಮಂಟಪ’ವೆಂದು ಕರೆದಲ್ಲಿ ಉತ್ಪ್ರೇಕ್ಷೆಯಾಗುವುದಿಲ್ಲ. ಎಷ್ಟೋ ಮಂದಿ ಬರೆಹಗಾರರಿಗೆ ಈ ಅನುಭವಮಂಟಪವೊಂದು ಚಾಲಕ ಶಕ್ತಿಯಾಗಿದ್ದು ಬೆರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಬಹುವಾಗಿ ಪ್ರಚೋದಿಸಿದೆ.

ಮೂಲತಃ ‘ವಿಚಾರ ಸಾಹಿತ್ಯ’ಕ್ಕೆ ಸೇರಿದ್ದಾದರೂ ‘ಸಾಹಿತ್ಯ ವಿಮರ್ಶೆ’ಯಲ್ಲಿ ನಿಚ್ಚಳವಾದ ಪ್ರಭಾವ ಬೀರಿದ ‘ಉಪ ಸಂಸ್ಕೃತಿ’ ಮಾಲಿಕೆಯ ಬಗ್ಗೆ ಪರಿಕಲ್ಪನಾತ್ಮಕ ಚರ್ಚೆಯೊಂದನ್ನಿಲ್ಲಿ ಪ್ರಸ್ತಾಪಿಸಬಹುದೆನಿಸುತ್ತದೆ. ‘ರಾಷ್ಟ್ರೀಯತೆ ಮತ್ತು ಉಪರಾಷ್ಟ್ರೀಯತೆ’ಗಳ ಸಾಮ್ಯದಿಂದ ರೂಪಿಸಲಾದ ‘ಸಂಸ್ಕೃತಿ ಮತ್ತು ಉಪಸಂಸ್ಕೃತಿ’ (=ಪ್ರಧಾನ ಮತ್ತು ಅಧೀನ ಸಂಸ್ಕೃತಿ) – ಎಂಬ ಗ್ರಹಿಕೆ ಈ ದಶಕದಲ್ಲೆ ಹಲವು ತಕರಾರುಗಳನ್ನೆದುರಿಸಬೇಕಾಯ್ತು. ‘ಮೂಲ ಸಂಸ್ಕೃತಿ’ (ಕೆ. ರಾಮಯ್ಯ), ಆದಿ ಮೂಲ ಸಂಸ್ಕೃತಿ, ಆದಿಮ ಸಂಸ್ಕೃತಿ (ಲಕ್ಷ್ಮೀಪತಿ ಕೋಲಾರ) ಪ್ರತಿ ಸಂಸ್ಕೃತಿ (ರಹಮತ್‌ ತರಿಕೆರೆ), ಪರಿಶಿಷ್ಟ ಸಂಸ್ಕೃತಿ (ಪುರಷೋತ್ತಮ ಬಿಳಿಮಲೆ), ಮಾರ್ಗ ಮತ್ತು ದೇಶಿ ಸಂಸ್ಕೃತಿ (ಡಿ. ಆರ್. ನಾಗರಾಜ) ಎಂಬಂಥ ಚಿಂತನಾ ಕ್ರಮಗಳು ಉಪಸಂಸ್ಕೃತಿ ಮಾಲಿಕೆಯ ಜೊತೆ ಜೊತೆಯಲ್ಲೆ ಮೂಡಿಬಂದಿದ್ದು ಇಪ್ಪತ್ತನೆ ಶತಮಾನದ ಕೊನೆಯ ದಶಕದ ಒಂದು ದೃಷ್ಟಿ ವಿಶೇಷವೆಂದೇ ಹೇಳಬೇಕಾಗಿದೆ. ಉಪಸಂಸ್ಕೃತಿ ಅಥವಾ ಅಧೀನ ಸಂಸ್ಕೃತಿ ಎಂಬ ಗ್ರಹಿಕೆಯನ್ನು ಪ್ರಶ್ನಿಸುವ ಮನೋಧರ್ಮವಿದೆನ್ನಬಹುದಾದರೂ ಯಜಮಾನ ಸಂಸ್ಕೃತಿಯ ಸ್ಥಾನದಲ್ಲಿ ನಿಂತು ನೋಡದೆ ಶ್ರಮ ಸಂಸ್ಕೃತಿಯ ಜೊತೆಗೆ ಗುರುತಿಸಿಕೊಳ್ಳುವ ಸದಾಗ್ರಹವೂ ಇಲ್ಲಿದೆ. ಇಂಥ ಸದಾಗ್ರಹ ಭಾವನೆಯು ‘ಉಪ ಸಂಸ್ಕೃತಿ’ಯ ವ್ಯಾಖ್ಯೆಯಲ್ಲೂ ಇದೆಯೆಂಬುದನ್ನು ಬರಗೂರರ ವಿವರಣೆ ಸೃಷ್ಟೀಕರಿಸಿದೆ.

ನೈಜವಾಗಿ ಹೇಳಬೇಕೆಂದರೆ, ‘ಕವಿ’ ಎಂಬ ಶಬ್ದಕ್ಕೆ ಹೇಗೆ ಯಾವೊಂದು ವಿಶೇಷಣಗಳ ಅಗತ್ಯವಿಲ್ಲವೋ ಹಾಗೆಯೇ ‘ಸಂಸ್ಕೃತಿ’ಗೂ ಯಾವುದೇ ಪೂರ್ವಪದ ಅವಶ್ಯಕತೆಯಿಲ್ಲ. ಜನ ಸಮುದಾಯಗಳು ಬದುಕುವ ಬಗೆಯೇ ‘ಸಂಸ್ಕೃತಿ’ ಯಾಗುವುದರಿಂದ ಮುಖ್ಯ – ಉಪ, ಪ್ರಧಾನ – ಅಧೀನ, ಹಿರಿಯ – ಕಿರಿಯ, ಮಾರ್ಗ – ದೇಶಿ, ಇತ್ಯಾದಿ ಸಾಪೇಕ್ಷ ಭಾವದ ಗುಹೆಗಳು ಕಾಲಗತಿಯಲ್ಲಿ ನಿರಂತರ ಚಲನೆ – ಉಭಯ ವೈರುಧ್ಯ – ಪರಿವರ್ತನೆಯ ಮಹಾಪ್ರಕ್ರಿಯೆಗೊಳಪಟ್ಟಿರುತ್ತದೆ ಎಂಬುದನ್ನು ಮರೆಯಲಾಗದು! ಬಹು ಹಿಂದೆಯೇ, ‘ಸ್ಪೀಕಿಂಗ್‌ ಆಪ್‌ ಶಿವ’ ಮುನ್ನುಡಿಯಲ್ಲಿ ಎ. ಕೆ. ರಾಮಾನುಜನ್‌ ಹೇಳಿರುವುದು ಮತ್ತು ‘ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ’ಯಲ್ಲಿ ಡಿ. ಆರ್. ನಾಗರಾಜ್‌ ಪ್ರತಿಪಾದಿಸಿರುವುದು ಇದೇ ದೃಷ್ಟಿಯನ್ನೇ. ಇವರಿಬ್ಬರು ‘ಸಂಸ್ಕೃತಿ’ಗಳನ್ನು ಒಳಹೊಕ್ಕು ಬರಲು ದಾರಿಗಳಿಲ್ಲದ ಉಕ್ಕಿನ ಕೋಟೆಯೆಂದು ತಿಳಿಯುವುದಿಲ್ಲ. ಒಂದರೊಳಗೊಂದು ಸೇರುತ್ತಾ, ಒಂದು ಮತ್ತೊಂದನ್ನು ಪ್ರಭಾವಿಸುತ್ತಾ ಸದಾ ಸಂಚಲನಾತ್ಮಕವಾಗಿರುವುದೇ ಸಂಸ್ಕೃತಿಗಳ ವೈಶಿಷ್ಟ್ಯವೆಂಬ ಪ್ರತಿಪಾದನೆ ಇಲ್ಲಿದೆ. ಒಟ್ಟಿನಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿಗಳ ‘ಗತಿಶೀಲ ಸಂವಾದ’ವನ್ನು ಬಹು ಎಚ್ಚರದಿಂದ ಕಂಡುಕೊಳ್ಳುವ ಪ್ರವೃತ್ತಿಯಿಂದಾಗಿ ಕನ್ನಡದಲ್ಲಿ ‘ಸಾಹಿತ್ಯ ವಿಮರ್ಶೆ’ ‘ಶುದ್ಧ ಸಾಹಿತ್ಯ ವಿಮರ್ಶೆ’ಯಾಗಿಯೇ ಉಳಿಯುವ ಜಡತ್ವವನ್ನು ಎಂದೋ ಬಿಟ್ಟುಕೊಟ್ಟಿದೆ. ಆದ್ದರಿಂದಲೇ, ಈ ಲೇಖನದಲ್ಲಿ ‘ಸಾಹಿತ್ಯವನ್ನು ಕುರಿತ ವಿಮರ್ಶೆ’ಯ ಪರಿಶೀಲನೆಗೆ ಕೈ ಹಾಕಿಲ್ಲ.

ನಾನಿಲ್ಲ ತೊಂಬತ್ತರ ದಶಕದ ಕನ್ನಡ ಸಾಹಿತ್ಯ ವಿಮರ್ಶೆಯ ಗತಿಮತಿಯನ್ನು ಗುರುತಿಸುತ್ತಿದ್ದೇನೆಯೇ ಹೊರತು ಈ ಅವಧಿಯಲ್ಲಿ ಪ್ರಕಟವಾಗಿರುವ ಎಲ್ಲ ವಿಮರ್ಶಾ ಕೃತಿಗಳ ಸಮೀಕ್ಷೆ ಮಾಡುತ್ತಿಲ್ಲವೆಂಬುದನ್ನು ಸಹೃದಯರು ಮನಗಾಣುವರೆಂದು ಭಾವಿಸಿದ್ದೇನೆ.