ವಸಾಹತುಶಾಹಿ ಸಂಪರ್ಕದಿಂದ ಒಳಬಂದ ಹೊಸ ಶಿಕ್ಷಣ ನೀತಿಯಿಂದಾಗಿ ‘ಮಕ್ಕಳ ಸಾಹಿತ್ಯ’ ಎನ್ನುವ ಪ್ರಕಾರ ಹೊಸದಾಗಿ ಹುಟ್ಟಿಕೊಂಡಿತು. ಬದಲಾದ ಮಕ್ಕಳ ಪರಿಕಲ್ಪನೆಯಿಂದ ಅದರ ಸಾಹಿತ್ಯ ಸ್ವರೂಪವೂ ಹೊಸ ಬಗೆಯ ಆಯಾಮವನ್ನು ಪಡೆದುಕೊಂಡಿತು. ‘ಶೈಕ್ಷಣಿಕೆ’ ಎನ್ನಬಹುದಾದ ಉದ್ದೇಶವೇ ಮಕ್ಕಳ ಸಾಹಿತ್ಯದ ನಿಯಂತ್ರಕ. ಪಂಚತಂತ್ರ, ಜಾತಕ ಕಥೆಗಳಂತಹ ಮಾರ್ಗೀಯ ಕೃತಿಗಳಿಂದಾಗಿ, ದೇಗುಲಗಳ ಚಿತ್ರಕಥಾ ಮಾಲಿಕೆಗಳಿಂದಾಗಿ, ಮೌಕಿಕ ಕಾವ್ಯ ಕಥೆಗಳಿಂದಾಗಿ, ಮಕ್ಕಳಿಗೆ ಅನೌಪಚಾರಿಕ ಶಿಕ್ಷಣ ನೀಡುತ್ತಿದ್ದ ದೇಶ ಒಂದರಲ್ಲಿ ಆಧುನಿಕತೆಯ ಪ್ರವೇಶ ಒಂದು ಕ್ರಾಂತಿಕಾರಿ ಸ್ಥಿತ್ಯಂತರವನ್ನುಂಟು ಮಾಡಿತು. ವಸಾಹತು ಪ್ರಣೀತ ಶಿಕ್ಷಣ ಹಾಗೂ ಕಲಿಕಾ ಪ್ರಕ್ರಿಯೆಗಳು, ಮಕ್ಕಳಿಗೆ ಉಪಯುಕ್ತವಾಗುವುದನ್ನು ಮಾತ್ರ ಕಲಿಸಬೇಕೆನ್ನುವ ನಿರ್ಧರಿತ ಸ್ವಭಾವದವು. ಇವು ಮಗುವನ್ನು ನಿರ್ಜಿವ ವಸ್ತುವನ್ನಾಗಿ ತನಗೆ ಬೇಕಾದಂತೆ ರೂಪಿಸಿಕೊಳ್ಳುವ ಮಾಧ್ಯಮವನ್ನಾಗಿ ವ್ಯವಹಾರೀಕರಿಸಿದವು. ಕೊಟ್ಟಿದ್ದನ್ನು ವಿಧೇಯತೆಯಿಂದ ಉಪಯುಕ್ತವಾಗುವಂತೆ ಕಲಿಯುವ, ಶಿಕ್ಷಕ, ಪಾಲಕರ ಮುತುವರ್ಜಿಯಲ್ಲಿರುವ ಒಂದು ಉತ್ಪಾದಕ ವಸ್ತುವನ್ನಾಗಿ ಪರಿಗಣಿಸಿತು. ಇಂಥ ವ್ಯಸ್ಥೆಯನ್ನು ಪೋಷಿಸುವಂತೆ ಹುಟ್ಟಿದ ಮಕ್ಕಳ ಸಾಹಿತ್ಯ ‘ಸೂಕ್ತ’ ಎನ್ನುವ ಮೌಲ್ಯಗಳನ್ನು ಒತ್ತಾಯ ಪೂರ್ವಕವಾಗಿ ಮಕ್ಕಳ ಮೇಲೆ ಹೇರುತ್ತದೆ. ಹಾಗೆ ಅವರನ್ನು ನಿರ್ಭಾವುಕರೆಂದೂ ತಿಳಿಯುತ್ತದೆ. ನಿರ್ದಿಷ್ಠತೆಯ ಹೆಸರಿನಲ್ಲಿ ಬದುಕಿನ ಬಹುಮುಖತೆಯನ್ನೂ ಸಹಜತೆಯನ್ನೂ ನಿಯಂತ್ರಿಸುವ ಹೊಸ ಶಿಕ್ಷಣ ನೀತಿ, ನಿರ್ಭಾವುಕವಾದ ಸಂಗತಿಗಳನ್ನು ಮಕ್ಕಳ ಮೇಲೆ ಹೇರುತ್ತದೆ. ಅದು ಮಕ್ಕಳ ಸಾಮರ್ಥ್ಯದ ಬಗ್ಗೆ ಯೋಚಿಸುವುದಿಲ್ಲ. ಹೀಗಾಗಿ ಇಂದಿನ ಮಕ್ಕಳ ಶಾಲೆಯಿಂದ ಹೊರಬಂದ ಮೇಲೆ ತಮ್ಮ ಬದುಕನ್ನು ತಾವೇ ನಿಯಂತ್ರಿಸಿಕೊಳ್ಳಲು ವಿಫಲರಾಗಿ ಮತ್ತೊಬ್ಬರ ದುಡಿಮೆಯ ಮೇಲೆ ಬದುಕವಂತಾಗುತ್ತಿದೆ.

ಪಂಚತಂತ್ರದಂತಹ ಪ್ರಾಚೀನ ಕಥಾ ಗುಚ್ಚಗಳೂ ಮೌಖಿಕ ಕಾವ್ಯ ಕಥಾ ಪ್ರಕಾರಗಳೂ ಜೀವನ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡುವಂಥವುಗಳಾಗಿದ್ದರೂ ಅವನ್ನೂ ನಾವು ಇಂದಿನ ಹಾಗೆ ಮಕ್ಕಳ ಸಾಹಿತ್ಯ ಎಂದು ಗುರುತಿಸುವುದಿಲ್ಲ. ಹಾಗೆ ಗುರುತಿಸದಿದ್ದರೂ ಸಹ ಇಂದಿನ ಮಕ್ಕಳ ಸಾಹಿತ್ಯದ ಆರಂಭದ ಕಾಲದ ಬಹಳಷ್ಟು ಕೃತಿಗಳು ಪಂಚತಂತ್ರದ ಜಾಡಿನಲ್ಲಿ ಬೆಳೆದು ಬಂದದ್ದು ಸ್ಪಷ್ಟವಾಗುತ್ತದೆ.

ಈ ದಶಕದ ಮಕ್ಕಳ ಸಾಹಿತ್ಯವನ್ನು ಈ ನಿಟ್ಟಿನಲ್ಲಿ ಗಮನಿಸಿದಾಗ ಸಂಖ್ಯೆಯಲ್ಲಿ ಗಣನೀಯವೆನಿಸುವ ಪ್ರಮಾಣದಲ್ಲಿ ಮಕ್ಕಳ ಸಾಹಿತ್ಯ ಕೃತಿಗಳು ಪ್ರಕಟವಾಗಿವೆ. ಆದರೆ ಗುಣಮಟ್ಟದ ದೃಷ್ಟಿಯಿಂದ ಬೆಳೆಗಿಂತ ‘ಕಳೆ’ಯೇ ಜಾಸ್ತಿ ಎಂದು ಕಾಣುತ್ತದೆ ಆದರೆ ವೈವಿಧ್ಯತೆಯ ದೃಷ್ಟಿಯಿಂದ ಕುತೂಹಲ ಮೂಡಿಸುವಂತ ಕೃತಿಗಳೂ ಕಂಡುಬರುತ್ತದೆ. ದಶಕದ ಮಕ್ಕಳ ಸಾಹಿತ್ಯದಲ್ಲಿ ಆದ ಹೊಸ ಬೆಳವಣಿಗೆಗಳನ್ನು ಸ್ವಲ್ಪ ಪ್ರಮಾಣದಲ್ಲಾದರೂ ಗುರುತಿಸಲು ಇದರಿಂದ ಸಾಧ್ಯವಾಗುತ್ತದೆ. ಪ್ರಕಟವಾದ ಪ್ರಕಾರದ ಕೃತಿಗಳ ಸಮೀಕ್ಷೆ ಅಥವಾ ಪರಾಮರ್ಶೆಗಿಂತ ಈ ದಶಕದಲ್ಲಿ ನಡೆದ ಪ್ರಯೋಗಗಳನ್ನು ಮತ್ತು ಅದರ ಫಲಿತದ ಸ್ವರೂಪವನ್ನು ಇಡಿಯಾಗಿ ಗ್ರಹಿಸುವುದು ಇಲ್ಲಿನ ಬಹುಮುಖ್ಯ ಉದ್ದೇಶ. ಮಕ್ಕಳಲ್ಲಿನ ಪ್ರಮುಖವಾದ ಪ್ರವೃತ್ತಿಗಳಾದ ಆಲಿಸುವುದು, ಅನುಕರಿಸುವುದು, ಮಾತುಗಾರಿಕೆ, ಗ್ರಹಿಕೆ, ಅಭಿವ್ಯಕ್ತಿ ಇವು ಗಟ್ಟಿಕೊಳ್ಳಬೇಕಾದರೆ ಓದುವ, ಕೇಳುವ, ಕಟ್ಟುವ ಪ್ರಕ್ರಿಯೆಗಳಲ್ಲಿ ಅವರನ್ನು ತೊಡಗಿಸಬೇಕಾಗುತ್ತದೆ.

ಕೇಳುವ ಕ್ರಿಯೆ ಮಕ್ಕಳ ಬೆಳವಣಿಗೆಯಲ್ಲಿ ಬಹುಮುಖ್ಯವಾದದ್ದು. ಇಂದಿನ ಹೊಸ ಶಿಕ್ಷಣ ಕ್ರಮದಲ್ಲಿ ಈ ಕೇಳುವ ಕ್ರಿಯೆಯೇ ಪ್ರಧಾನವಾದದ್ದೂ ಕೂಡ. ತಾಯಿಯ ಲಾಲಿಯಿಂದ ಪ್ರಾರಂಭವಾಗಿ, ಅಜ್ಜಿಕಥೆ, ಗುರುಗಳ ಪಾಠ. ಹಿರಿಯರ ಅನುಭವದವರೆಗೂ ಇದರ ವ್ಯಾಪ್ತಿ. ಹಾಗೆ ನೋಡಿದರೆ ನಮ್ಮ ಪ್ರಾಚೀನ ಪರಂಪರೆಯಲ್ಲಿ ಕೇಳಿಸಿಕೊಳ್ಳುವ ಕ್ರಿಯೆಯೇ ಪ್ರಧಾನವಾಗಿ ನಡೆದು ಬಂದಿದೆ. ತಾಯಿ ಗರ್ಭದೊಳಗಿನ ಶಿಶುವಿನಿಂದ ಹಿಡಿದು ಪರೋಹಿತಶಾಹಿ ಮನಸ್ಸುಗಳವರೆಗೂ ಇದರ ವ್ಯಾಪ್ತಿ ಇದೆ. ಮೌಖಿಕ ಪರಂಪರೆಯಂತೂ ಮನರಂಜನೆ ಜೊತೆಗೆ ಸಾಮಾನ್ಯ ಜ್ಞಾನವನ್ನು ಕೊಡುತ್ತಾ ಬಂದಿತು. ಕಾಲದ ವ್ಯವಸ್ಥೆಯ ಕೈಯಲ್ಲಿ ಈ ಸಾರ್ವತ್ರಿಕ ಶಿಕ್ಷಣ ಖಾಸಗೀಕರಣಗೊಂಡಿತು.

ಕಾವ್ಯ : ಇಂದಿನ ಪ್ರಾಥಮಿಕ ಶಿಕ್ಷಣ ಇದಕ್ಕೇನು ಹೊರತಾಗಿಲ್ಲ. ಪೂರ್ವ ಪ್ರಾಥಮಿಕ ಹಂತವಂತೂ ಕಲಿಕೆಗಿಂತ ಆಲಿಸುವಿಕೆಗೆ ಮಹತ್ವ ನೀಡುವಂತಥದ್ದು. ಕಥೆ, ಹಾಡುಗಳ ಮೂಲಕ ಕಲಿಸುವ ಈ ಕ್ರಿಯೆ ಮಕ್ಕಳಲ್ಲಿ ಅನುಕರಣ ಪ್ರವೃತ್ತಿಯನ್ನೂ ಮಾತನಾಡುವ ಕಲೆಯನ್ನೂ ಪೋಷಿಸುವಂಥದ್ದು. ಭಾರತೀಯ ಭಾಷಾ ಸಂಸ್ಥೆಯವರು ಹೊರತಂದಿರುವ ಚಿಗುರು (೧೯೯೬), ಕಂಚ್ಯಾಣಿ ಶರಣಪ್ಪ ಅವರ ಗುಡುಗುಡು ಗುಂಡ (೧೯೯೯), ದೊಡ್ಡಣ್ಣ ಗದ್ದನಕೇರಿಯವರ ಬೆಂಡಿನ ಗಾಡಿ (೨೦೦೦) ಎಸ್‌. ಎಸ್‌. ಅಂಗಡಿ ಅವರ ಕನ್ನಡ ಶಿಶು ಪದಗಳು (೧೯೯೭) ಇಂಥ ಪದ್ಯ ಸಂಕಲನಗಳು ಮುಖ್ಯವಾದಂಥವು. ಇವು ಮಕ್ಕಳಲ್ಲಿ ಓದು ಬರಹಕ್ಕಿಂತ ಆಲಿಸುವಿಕೆಯನ್ನು ಪ್ರಧಾನವಾಗಿ ಗಮನದಲ್ಲಿರಿಸಿ ಕೊಂಡಿರುವಂಥವು. ಚಿತ್ರಗಳ ಮೂಲಕ ತಿಳಿದಿರುವುದರಿಂದ ತಿಳಿಯದುದರ ಕಡೆಗೆ ಹೋಗುವ ಕಲಿಕಾ ಕ್ರಮವನ್ನು ಇಲ್ಲಿ ಕಾಣಬಹುದು. ಅರ್ಥ ಅರಿಯದೆ ಕಿವಿಗೆ ಸಂತೈಸುವ ಜೋಗುಳ ಹಾಡು ಒಂದು ಬಗೆಯಾದರೆ, ಪ್ರಾಸ ವಿನ್ಯಾಸಗಳಿಂದ ಲಯಬದ್ಧತೆಯಿಂದ ಮಕ್ಕಳು ಸ್ವತಃ ಕಲಿತು, ಹಾಡಿ, ಕುಣಿಯುವ ಹಾಡುಗಳು ಇನ್ನೊಂದು ಬಗೆಯವು.

ಗಿರಿಗಿರಿ ಉಂಡಿ
ಇಬತ್ತಿ ಉಂಡಿ

ದಡಂ ದುಡಿಕಿ
ಪಂಚೇರ ಅಡಿಕಿ ಮುಂತಾದವು.

ಆಧುನಿಕತೆ ಇಂದು ಕಿವಿಗಿಂತ ಕಣ್ಣಿಗೆ, ಮೆದುಳಿಗಿಂತ ದೇಹಕ್ಕೆ ಸಂಬಂಧಿಸಿದ ಜ್ಞಾನವನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಿದೆ. ಭಾಷೆಯ ಮೂಲಕ ಸಾಗಬೇಕಾದ ಓದು, ಕಾಣುವ ಮತ್ತು ಕಟ್ಟುವ ದಿಕ್ಕಿನತ್ತ ಮಕ್ಕಳನ್ನು ಪ್ರೇರೇಪಿಸಬೇಕು. ಮಾತೃಭಾಷೆಯಲ್ಲಿ ನಾದ, ಲಯ, ಗೇಯತೆ ಸಿಗುವಂತಿರಬೇಕು.

ಆದರೆ ಇಂದು ಜ್ಞಾನವೆಂಬುದು ಮಕ್ಕಳಿಗೆ ಇಂಥ ಭಾಷೆಯ ಹಂಗಿಲ್ಲದೇ ಕಣ್ಣಿನ ಮೂಲಕ ಬಂದು ಬಿಡುತ್ತಿದೆ. ಬರೀ ಸೂಚಕಗಳೇ ಪ್ರಧಾನವಾದ ಇಂಥ ತಿಳುವಳಿಕೆಗಳಿಗೆ ಮಕ್ಕಳ ಮನಸ್ಸನ್ನು ಅರಳಿಸುವ ಸಾಮರ್ಥ್ಯವಿಲ್ಲ. ಇಂದು ಮಕ್ಕಳು ಓದುತ್ತಾ ನೋಡುವ ಬದಲು ನೋಡುತ್ತಾ ಓದುತ್ತಿರುವುದು ಇದಕ್ಕೆ ಕಾರಣ. ಇಂಥ ತಿಳುವಳಿಕೆಗಳು ನಾವು ಒಪ್ಪಿಕೊಳ್ಳುತ್ತಿರುವ ಬದುಕಿನ ರೀತಿನೀತಿಗಳನ್ನು ನಮ್ಮ ತನವನ್ನು ಮರೆಯಬೇಕೆಂದು ಒತ್ತಾಯಿಸುತ್ತವೆ. ಇವು ಅಂತರಂಗಕ್ಕಿಂತ ಬಾಹ್ಯ ಜಗತ್ತನ್ನೇ ವಾಸ್ತವವೆಂದು ಪರಿಭ್ರಮಿಸುತ್ತವೆ. ನಮ್ಮ ಅಂತರಂಗದ ವಿಕಾಸದ ಬಗ್ಗೆ ಅವಜ್ಞತೆಯನ್ನು ಬೆಳೆಸುತ್ತಿವೆ, ಅಕ್ಷರ, ಓದು, ಇವೆಲ್ಲ ಅನಗತ್ಯ ಎನ್ನುವ ನಂಬಿಕೆಗಳನ್ನು ಪಸರಿಸುತ್ತಿವೆ. ಅಥವಾ ಕನ್ನಡವನ್ನು ದ್ವಿತೀಯ ದರ್ಜೆಯ ಭಾಷೆಯೆಂದು ಬಗೆಯುತ್ತವೆ.

ಕಣ್ಣಿಗೆ ಹೊಡೆಯುವ ರಂಗುರಂಗಿನ ಚಿತ್ರಗಳ ಮೂಲಕ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಇದರಲ್ಲಿ ಸೋವಿಯತ್‌ ಒಕ್ಕೂಟದಿಂದ ಬಂದವುಗಳೂ ಇವೆ. ದೇಸೀ ಮಾರುಕಟ್ಟೆಯಿಂದ ರೂಪಗೊಂಡವುಗಳೂ ಇವೆ. ಓರಿಯಂಟಲ್‌ ಲಾಂಗ್‌ಮನ್‌ ಹಾಗೂ ನೆಹರು ಬಾಲ ಪುಸ್ತಕಾಲಯ ಮಾಲೆಯಲ್ಲಿ ನ್ಯಾಷನಲ್‌ ಬುಕ್‌ ಟ್ರಸ್ಟಿನವರು ಮಕ್ಕಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಇಲ್ಲಿನ ಎರಡು ಪದ್ಯ ಸಂಕಲನಗಳಲ್ಲಿ ಕನ್ನಡ ಎರಡನೆ ದರ್ಜೆ ಭಾಷೆಯಾಗಿ ಬಳಕೆಯಾಗಿದೆ. ಇಂಗ್ಲಿಷಿನಿಂದ ಅನುವಾದಗೊಂಡ ಇವುಗಳಲ್ಲಿ ಸಂವಹನದ ಕೊರತೆ ಎದ್ದುಕಾಣುತ್ತದೆ.

ಸ್ಥಳೀಯ ವಿದ್ವಾಂಸರು ಬರೆದ ಕವನಗಳು ಇದಕ್ಕಿಂತ ಭಿನ್ನವಾದ ಅನುಭವವನ್ನು ಮಕ್ಕಳಿಗೆ ನೀಡುತ್ತವೆ. ಶಿಶು ಸಂಗಮೇಶ ಅವರ ಕಾಡಿನ ಕಲಿಗಳು (೧೯೯೭) ಸವಿ ಸಾಹಿತ್ಯ (೧೯೯೬) ಚಕ್ಕಾ ಚೌಕಳಿ (೧೯೯೭) ಶಾಲೆಗಿಂತ ಚೀಲಭಾರ (೧೯೯೭) ಮುಂತಾದವು.

ಚಕ್ಕಾ ಚೌಕಳಿ ಮಾಡಿದರಿಬ್ಬರು
ಚೌಕಡಿ ಸೀರೆಯ ಹರಿದು
(ಚಕ್ಕಾ ಚೌಕಳಿ)

ಈ ಪದ್ಯ ಬಹಳ ಪ್ರಮುಖವಾದದ್ದು, ಮಕ್ಕಳ ಸಹಜ ಕಲಿಕೆಗೆ, ಜಾಣ್ಮೆಗೆ ಚಟುವಟಿಕೆಯುಕ್ತ ತಿಳುವಳಿಕೆ, ಸ್ಥಳೀಯ ಸಂಪನ್ಮೂಲವನ್ನೇ ಬಳಸಿ ತಮಗೆ ಬೇಕಾದ ವಸ್ತುವನ್ನು ತಯಾರಿಸಿಕೊಳ್ಳುವ ಮೂಲಶಿಕ್ಷಣವನ್ನು ಇದು ಪ್ರತಿನಿಧಿಸುತ್ತದೆ. ಮಕ್ಕಳು ಅತ್ತರೆ ಸಾಕು ನೂರಾರು ರೂಪಾಯಿ ಖರ್ಚುಮಾಡಿ ನಿರ್ಭಾವುಕರಾದ ಆಟದ ಸಾಮಾನು ಕೊಡಿಸುವ ಶ್ರೀಮಂತ ಮತ್ತು ನಗರವಾಸಿ ಜನಗಳೊಂದೆಡೆ, ಮಣ್ಣುದಿಬ್ಬ, ತಿಪ್ಪೆಗುಂಡಿಯಲ್ಲಿ ಆಡಿ ಬೆಳೆದು ಬದುಕಿನ ಶಿಕ್ಷಣ ಪಡೆಯುವ ಗ್ರಾಮೀಣ ಮಕ್ಕಳು ಮತ್ತೊಂದೆಡೆ.

ಬುಕ್ಕ ಬೆಳೆದವೀಗ
ಒಜ್ಜೆ ಹೊರಲು ಆಗದೀಗ
ನಮ್ಮ ಬೆನ್ನ ಮ್ಯಾಗ
(ಶಾಲೆಗಿಂತ ಚೀಲ ಭಾರ)

ಮೂಗಿಗಿಂತ ಮೂಗುತಿಭಾರ ಎನ್ನುವಂತೆ ಮಕ್ಕಳಿಗೆ ಆಸಕ್ತಿ ಇರಲಿ ಇಲ್ಲದಿರಲಿ, ಕಲಿಯಲಿ ಬಿಡಲಿ ಅವರ ವಯಸ್ಸಿಗಿಂತ ಆವರ ಶಾಲೆಯ ಪುಸ್ತಕಗಳೇ ಬಹುಭಾರ.

ಹಾಗೆ ಫಗು ಸಿದ್ಧಾಪುರ ಅವರ ಪುಟ್ಟನ ಪ್ರಶ್ನೆ (೧೯೯೯) ಹುಯ್ಯೋ ಮಳೆರಾಯ (೧೯೯೬) ತಾರಲೋಕಕ್ಕೆ ಹಾರುವೆನು (೧೯೯೫) ಇವು ಕೂಡ ಮಕ್ಕಳಿಗೆ ಮನುಜಮತದ ತಿಳುವಳಿಕೆಯನ್ನು ನೀಡುತ್ತವೆ.

ಅಜ್ಜನ ಜೊತೆ ಆಡುವುದೆಂದರೆ
ಎನ್ನೆದೆ ಅರಳುವುದು
ಸಕ್ಕರೆ ಹಾಲನು ಗಟಗಟ
ಕುಡಿದಂತಾಗುವುದು
(ಆಟಪಾಠ)

ಆಧುನಿಕ ಶಿಕ್ಷಣದ ಹೆಸರಿನಲ್ಲಿ, ನಾಗರೀಕತೆಯ ಸೋಗಿನಲ್ಲಿ, ಮಗುವನ್ನು ನಿಸರ್ಗವಿಮುಖಿಯಾಗಿ ಬೆಳೆಸಲಾಗುತ್ತದೆ. ನಗರಗಳಲ್ಲಂತೂ ಮಕ್ಕಳನ್ನು ಪೋಷಿಸಲು ಪ್ರೀತಿಸಲು ತಂದೆ ತಾಯಿಗೆ ಸಮಯವೇ ಸಿಗದು. ಗಳಿಕೆಯ ಬೆನ್ನುಹತ್ತಿದ ಜನಕ್ಕೆ ಹುಟ್ಟಿದ ಮಗು ಸ್ವಲ್ಪೆ ದಿನದಲ್ಲಿ ತಂದೆ – ತಾಯಿಂದ ಬೇರ್ಪಟ್ಟು ಬೇರೊಬ್ಬರ ಆಶ್ರಯದಲ್ಲಿ ಬೆಳೆಯಲು ಶುರುಮಾಡುತ್ತದೆ. ತಾಯಿಂದ ಬೇರ್ಪಟ್ಟ ಮಗು ಸಹಜವಾಗೇ ಅನಾಥ ಪ್ರಜ್ಞೆಯನ್ನು ಅನುಭವಿಸುತ್ತದೆ. ಸಿದ್ಧ ಆಹಾರ ಪದಾರ್ಥಗಳ, ಆಟಿಗೆ ಸಾಮಾನುಗಳ, ಲಾಲನೆ ಪಾಲಕರ ಕೈಯಲ್ಲಿ ಮಗುವಿನ ಬೆಳವಣಿಗೆ ನಿರ್ಭಾವುಕವಾಗಿ ಆಗುತ್ತದೆ. ಅಜ್ಜ, ಅಜ್ಜಿ ತೊಡೆಯೇರಿ ಕೇಕೇ ಹಾಕಿ, ಹಾಡು, ಕಥೆ ಕೇಳಿ ಒಂದು ಕೌಟುಂಬಿಕ ಹಾಗೂ ಸಾಂಸ್ಕೃತಿಕ ವಾತಾವರಣದಲ್ಲಿ ಬೆಳೆಯಬೇಕಾದ ಅದು ಇಂಥ ಅನಿಭವದಿಂದ ವಂಚಿತವಾಗುತ್ತದೆ.

ಹಾರು ತಟ್ಟೆಯ ಹತ್ತಿರ ಹೋಗಿ
ಆಡಗಿದ ಗುಟ್ಟನು ಅರಿಯುವೆನು
ತಾರಾಮಂಡಲ ಭೇದಿಸಿ ಬೇಗನೆ
ಹೋಸ ಬಗೆಯ ಚರಿತೆಯ ಬರೆಯುವೆನು
(ತಾರಾಲೋಕಕೆ ಹಾರುವೆನು)

ಮಗುವಿನಲ್ಲಿ ಬೆಳೆಯಬೇಕಾದ ಇಂಥ ಆತ್ಮವಿಶ್ವಾಸ ಬೆಳೆಯದೆ ಅದು ಕುಂಠಿತಗೊಳ್ಳುವ ವಾತಾವರಣವನ್ನು ಇಂದಿನ ಗಲಿಬಿಲಿ ಸಂಸ್ಕೃತಿ ಹುಟ್ಟು ಹಾಕುತ್ತಿದೆ. ಹಾಗೆ ಫಳಕಳ ಸೀತಾರಾಮ ಭಟ್ಟರ ‘ಬಣ್ಣದ ಚಿಲುಮೆ’, ಎಸ್.ಜಿ. ಸಿದ್ಧರಾಯಯ್ಯನವರ ‘ಚಿತ್ತಾರ’ ಈ ನಿಟ್ಟಿನಲ್ಲಿ ಗಮನಿಸುವಂಥವು.

ಕವಿತಾ ವಿಭಾಗದಲ್ಲಿ ಹೆಸರಿಸುವಂಥ ಇನ್ನೊಂದು ಪುಸ್ತಕ ಟಿ.ಎಸ್. ನಾಗರಾಜ ಶೆಟ್ಟರ ‘ಸಮಗ್ರ ಮಕ್ಕಳ ಕವಿತೆಗಳು’, ‘ನವಿಲುಗರಿ’, ‘ಸಕ್ಕರೆಗೊಂಬೆ’, ‘ಆಮೆ ಮತ್ತು ಹಂಸಗಳು’, ‘ಚಂದ್ರನ ಶಾಲೆ’, ‘ಮಕ್ಕಳ ನೆಹರು’ ಸಂಕಲನಗಳಲ್ಲದೆ, ಅನೇಕ ಅಪ್ರಕಟಿತ ಕವನಗಳನ್ನೊಳಗೊಂಡ ೧೩೧ ಕವಿತೆಗಳ ಸಂಕಲನ ಇದಾಗಿದೆ. ಈಗಾಗಲೇ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದ ಇಲ್ಲಿನ ಕವನಗಳು ಮಕ್ಕಳ ಮನಸ್ಸಿಗೆ ಮುದನೀಡುವ. ವಿಚಾರಶೀಲತೆಯನ್ನು ಪ್ರಚೋದಿಸುವ, ಪರಿಸರ ಪ್ರಜ್ಞೆಯನ್ನು ಬೆಳೆಸುವ ನಿಟ್ಟಿನಲ್ಲಿ ಗಮನಾರ್ಹ ಪಾತ್ರವಹಿಸುತ್ತವೆ. ದೊಡ್ಡಣ್ಣ ಗದ್ದನಕೇರಿ ಅವರ ಬೆಂಡಿನಗಾಡಿ (೨೦೦೦) ಮಕ್ಕಳ ಕವಿತೆಗಳಲ್ಲಿ ವಿಭಿನ್ನವಾದದ್ದು. ಹಿರಿಯರಿಗೆ ಮೀಸಲಾದಂತೆ ವರ್ತಿಸುತ್ತಿರುವ ಚುಟುಕು ಸಾಹಿತ್ಯವನ್ನು ಮಕ್ಕಳ ಮನೋಧರ್ಮಕ್ಕನುಗುಣವಾಗಿ ರಚಿಸಿಕೊಟ್ಟಿದ್ದಾರೆ. ದಿನನಿತ್ಯದ ಬಳಕೆಯ ವಸ್ತುಗಳು, ಘಟನೆಗಳು, ಸುತ್ತಲಿನ ಪರಿಸರವನ್ನೇ ಪ್ರಧಾನವಾಗಿರಿಸಿಕೊಂಡು ಸೋಗಸಾದ ಹಾಗೂ ಮೊನಚಾದ ಚುಟುಕುಗಳನ್ನು ಬರೆದಿದ್ದಾರೆ. ಹೀಗೆ ಸಾಹಸ ಪ್ರಧಾನವಾದ, ಕೌಟುಂನಿಕ ಸಂಬಂಧಗಳ ದಟ್ಟ ಅನುಭವವನ್ನು ಹೊಂದಿರುವ, ಪರಿಸರ, ಪ್ರೇಮವನ್ನು ಬೆಳೆಸುವ ಬಹುಮುಖ್ಯ ಪ್ರವೃತ್ತಿಗಳು ದಶಕದ ಕವನ ಪ್ರಕಾರದಲ್ಲಿ ಕಾಣಿಸಿಕೊಳ್ಳುತ್ತವೆ.

ಕಥೆ : ಜೀವನ ಶಿಕ್ಷಣ ಹಾಗೂ ಮನೋರಂಜನೆಗಾಗಿ ಬಳಕೆಯಾಗುತ್ತಿದ್ದ ಕಥೆಗಳಿಂದು ಮಕ್ಕಳಲ್ಲಿ ವಿವಿಧ ರೀತಿಯ ಕೌಶಲ್ಯ ಸಾಮರ್ಥ್ಯಗಳನ್ನು ಹುಟ್ಟು ಹಾಕಲು ಪ್ರಯತ್ನಿಸುತ್ತವೆ. ಮಕ್ಕಳಿಗೆ ಕವಿತೆಗಿಂತ ಕಥೆ ಕೇಳುವುದೆಂದರೆ ಬಲು ಪ್ರೀತಿ. ಇದನ್ನು ಬೇಕಾದರೆ ಕೇಳುವ ಸಾಹಿತ್ಯವೆಂದು ಕರೆಯಬಹುದು. ಬಹಳಷ್ಟು ಕಥೆಗಳು ನಿರೂಪಣಾ ಮಾದರಿಯೇ ಆಗಿರುತ್ತವೆ. ನಮ್ಮ ಪರಂಪರೆಯಲ್ಲಿ ಸಿಗುವ ಪಂಚತಂತ್ರ ಕಥೆಗಳು, ಬುದ್ಧನ ಜಾತಕ ಕಥೆಗಳು, ಇಲ್ಲೆಲ್ಲ ಕೇಳುವಿಕೆಯೇ ಪ್ರಧಾನ. ಕೇಳುವಿಕೆ ಮಕ್ಕಳಲ್ಲಿ ಮಾತುಗಾರಿಕೆ, ಓದುವಿಕೆ. ಆಭಿವ್ಯಕ್ತಿ, ಹಾಗೂ ಗ್ರಹಿಕಾ ಸಾಮರ್ಥ್ಯವನ್ನು ವಿಕಸಿತಗೊಳಿಸುತ್ತದೆ. ಆದರೆ ಆಧುನಿಕ ಹಾಗೂ ವೈಜ್ಞಾನಿಕ ಕಥೆಗಳಿಗೆ ಬಂದಾಗ ಮಕ್ಕಳೆ ತಮಗೆ ಬೇಕಾದ ಕಥೆಯನ್ನು ತಾವೇ ಕೇಳಿ ಪಡೆಯುವುದು, ಪಾತ್ರದಾರಿಗಳಾಗುವುದನ್ನು ಕಾಣುತ್ತೇವೆ.

ಭಾಷಾ ಬೋಧನೆಯಲ್ಲಿ ಆಸಕ್ತಿ ಹುಟ್ಟಿಸಲು ಬಹುಮುಖ್ಯವಾಗಿ ಕಥೆಗಳನ್ನು ಬಳಸಲಾಗುತ್ತದೆ. ಕಥೆಕೇಳಿ ಕನ್ನಡ ಕಲಿಯಿರಿ (೧೯೯೭) ಎಸ್. ಸೀತಾಲಕ್ಷ್ಮಿ ಯವರ ಈ ಪುಸ್ತಕ ಈ ಸಾಲಿನಲ್ಲಿ ಗಮನಿಸುವಂಥದ್ದು. ಮನರಂಜನೆಗಾಗಿ, ಸಮಯ ಕಳೆಯುವುದಕ್ಕಾಗಿ ಬಳಕೆಯಾಗುತ್ತಿದ್ದ ಮಾಧ್ಯಮವನ್ನು. ಕಲಿಕೆಯಲ್ಲಿ ಶ್ರದ್ಧೆ ಹುಟ್ಟಿಸಲು, ಮಕ್ಕಳಲ್ಲಿ ತಿಳುವಳಿಕೆ ಸಾಮರ್ಥ್ಯವನ್ನು ಹೆಚ್ಚಿಸಲು ಈ ಸಚಿತ್ರ ಪುಸ್ತಕ ಪ್ರಯತ್ನಿಸುತ್ತದೆ. ಮಕ್ಕಳಲ್ಲಿ ವಿಚಾರ ಹಾಗೂ ಆಲೋಚನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇದೊಂದು ಪ್ರಯೋಗಾತ್ಮಕ ಪುಸ್ತಕವಾಗಿದೆ.

ಇದೇ ರೀತಿ ಕನ್ನಡ ಸಾಹಿತ್ಯ ಕಾಲು ಶತಮಾನ ಸರಣಿಯಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿಸಿದ ಮಕ್ಕಳ ಸಾಹಿತ್ಯ ಕಥೆಗಳು (೧೯೯೮) ಪುಸ್ತಕ ೧೯೬೮ ರಿಂದ ೧೯೯೩ರ ವರೆಗಿನ ಕಥೆಗಳನ್ನು ಆಯ್ಕೆ ಮಾಡಿಕೊಂಡಿವೆ. ವಸ್ತು, ಭಾಷೆ, ನಿರೂಪಣೆಯಲ್ಲಿ ಹೊಸತನ ತಂದಿರುವ ಈ ಕೃತಿ ವಿವಿಧ ವಯೋಮಾನದ, ಮನೋಧರ್ಮದ, ಮಕ್ಕಳನ್ನು ದೃಟ್ಟಿಯಲ್ಲಿಕೊಂಡು ಸಂಕಲಿತವಾಗಿದೆ. ಪ್ರಾದೇಶಿಕ ಭಿನ್ನತೆಯುಳ್ಳ ರಚನೆಗಳೂ ಇಲ್ಲಿವೆ.

ಸೋಮದೇವ ಕಥಾ ಸರಿತ್ಸಾಗರವನ್ನು ಎಲ್ಸಿ ನಾಗರಾಜರು ಕನ್ನಡಿಸಿದ್ದಾರೆ. (ಮಕ್ಕಳ ಕಥಾ ಸರಿತ್ಸಾಗರ; ೧೯೯೮) ಯುಕ್ತಿ, ನೈಪುಣ್ಯತೆ, ಜಾಣ್ಮೆ, ಪುರಾಣದ ಶಿವಲೋಕ, ಲೌಕಿಕದ ಪ್ರಾಣಿಜಗತ್ತಿಗೆ ಸಂಬಂಧಿಸಿದ ೩೦ ಕಥೆಗಳನ್ನು ಗರ್ಭಿಕರಿಸಿಕೊಂಡಿರುವ ಕೃತಿ.

ಮಾದೇವ ಮಿತ್ರರ ‘ನನ್ನ ಹೆಜ್ಜೆಗಳು’, ರಾಜೇಂದ್ರ ಸ್ವಾಮಿಯವರ ‘ಚಿನ್ನದ ಚೆಂಡು’, ಈಶ್ವರ ಸ್ಕಾಪಸೆಯವರ ‘ಚಿಂವ್ ಚಿಂವ್ ಗುಬ್ಬಿ’, ಪರುಶುರಾಮ ಚಿತ್ರಗಾರ ‘ನಗುವ ಹೂಗಳು’ ಗುರುಸ್ವಾಮಿ ಗಣಾಚಾರಿಯಾವರ ‘ಬಾಗಲಕೋಟೆ ಮಕ್ಕಳ ಕಥೆಗಳು’ ಇವೆಲ್ಲ ೬೮ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ (೨೦೦೦) ಪ್ರಕಟನೆಗಳು. ಮಕ್ಕಳಿಗೆ ನೀತಿ, ಪರಿಸರ ಪ್ರಜ್ಞೆ ಸಾಹಸ, ಪ್ತ್ರೀತಿ – ವಿಶ್ವಾಸಭರಿತ ಅನುಭವಗಳನ್ನು ನೀಡುವಂಥವುಗಳಾಗಿವೆ. ಗುರುಸ್ವಾಮಿ ಗಣಾಚಾರಿಯವರ ‘ಮಕ್ಕಳ ಕಥೆ’ ಅದೊಂದು ಪ್ರಾತಿನಿಧಿಕ ಹಾಗೂ ಉಪಯುಕ್ತವಾದ ಕಥಾಸಂಕಲನ. ಮಕ್ಕಳ ಮುತ್ತು (೧೯೯೫) ಕಾಸರಗೋಡು ಜಿಲ್ಲೆಗೆ ಸೀಮಿತವಾದ ಹತ್ತು ಕಥೆಗಳ ಸಂಕಲನ. ವ್ಯಕ್ತಿಗತ ಸಂಕಲನಗಳು ಮಕ್ಕಳ ಕಲಿಕೆಯಲ್ಲಿ ಒಂದು ರೀತಿಯ ಪ್ರಭಾವ ಬೀರಿದರೆ ಇಂಥ ಪ್ರಾತಿನಿಧಿಕ ಸಂಕಲನಗಳು ಇನ್ನು ಹೆಚ್ಚಿನ ರೀತಿಯ ಅನುಭವಗಳನ್ನು ಭಿನ್ನ ದೃಷ್ಟಿಕೋನಗಳನ್ನು ಮಕ್ಕಳಿಗೆ ಕಲ್ಪಿಸಿಕೊಡಬಲ್ಲವು.

ಟಿ.ಎಸ್. ನಾಗರಾಜ ಶೆಟ್ಟರ ‘ಕರಡಿ ರಸಾಯನ’ (೧೯೯೭) ದುನಿಂ ಬೆಳಗಲಿ ಅವರ ‘ಬದುಕುವ ಬಯಕೆ’ (೧೯೯೭), ಎಸ್.ಆರ್. ಪಾಡಿ ಅವರ ‘ಬಣ್ಣದ ಚಿಟ್ಟೆ’ (೧೯೯೪), ಸಂಗಮೇಶ ಗುಜಗೊಂಡ ಅವರ ‘ಆಕಾಶದ ಅಂಚು’ (೧೯೯೪, ಮೂರನೇ ಮುದ್ರಣ ), ಶಿ. ಶು. ಸಂಗಮೇಶ ಅವರ ‘ಮಂಕುಮರಿ’ (೧೯೯೩), ಆಯ್ದ ಮಕ್ಕಳ ಕಥೆಗಳು (೧೯೯೩), ಫ. ಗು. ಸಿದ್ಧಾಪೂರ ಅವರ ‘ಯಾವೂರಾನೆ ಬಿಜಾಪುರಾನೆ’ (೧೯೯೯), ಪಂಚಾಕ್ಷರಿ ಹಿರೇಮಠರ ‘ನೀತಿ ಕಥೆಗಳು’ (೧೯೯೪), ಬದ್ರಯ್ಯ ತಿಮ್ಮಸಂದ್ರ ಅವರ ಕಿಶೋರ ಕಥೆಗಳು (೧೯೯೫), ಹೊಯಿಸಳರ ‘ಅಕ್ಕಸಾಲಿಯ ಆನೆ’ (೧೯೯೧), ‘ವೀರಕುಮಾರ’ (೧೯೯೧), ‘ಪುಟ್ಟು ತಮ್ಮ ಯಾರು’ (೧೯೯೧), ‘ಧೈರ್ಯಶಾಲಿ ಸಂಗಪ್ಪ ‘ (೧೯೯೯), ಪಾರ್ವತಮ್ಮ ಮಹಾಲಿಂಗ ಶೆಟ್ಟಿ ಅವರ ‘ಅಜ್ಜಿ ಹೇಳಿದ ಕಥೆಗಳು (೧೯೯೮), ಸು. ರುದ್ರಮೂರ್ತಿ ಶಾಸ್ತ್ರಿಗಳ ‘ನಸರುದ್ದೀನನ ಕಥೆಗಳು’ (೧೯೯೮), ಕೃ. ನಾರಾಯಣರಾವ್ ಅವರ ‘ಗಣಪನ ಸ್ವಾರಸ್ಯ ಕತೆಗಳು’ (೧೯೯೮), ಇಲ್ಲೆಲ್ಲ ನಿರೂಪಣಾ ಮಾಧ್ಯಮವೆ ಪ್ರಧಾನವಾದುದು. ಸಾಂಪ್ರದಾಯಿಕ ಕಥನ ಪದ್ಧತಿಯ ಮೇಲೆ ನಡೆಯುವ ಇಲ್ಲಿನ ಕಥೆಗಳು ಶ್ರಮ, ಜಾಣ್ಮೆ, ಯುಕ್ತಿ, ಅಕ್ಷರ ಕಲಿಕೆಯ ಮಹತ್ವ, ದುಷ್ಟಶಿಕ್ಷೆ, ಶಿಷ್ಟರಕ್ಷೆ, ಪ್ರೀತಿ, ಸ್ನೇಹ, ಪರೋಪಕಾರ ವ್ಯವಹಾರ ಜ್ಞಾನ, ದೇಶಭಕ್ತಿ, ಪರಿಸರ ಜಾಗೃತಿ, ಸಂತ ಮಹಾಪುರುಷರ ಚರಿತ್ರೆಗಳನ್ನು ಬೋಧಿಸುವ ಮೂಲಕ ನೈತಿಕ ಶಿಕ್ಷಣಕ್ಕೆ ಹೆಚ್ಚು ಒತ್ತುಕೊಡುತ್ತವೆ. ಆಯಾ ಸ್ಥಳೀಯ ಅನುಭವಕ್ಕೆ ಹೆಚ್ಚು ಒತ್ತು ಕೊಡುವ ಇಲ್ಲಿನ ಕಥೆಗಳು ದೇಸೀ ತಿಳುವಳಿಕೆಯನ್ನು ಉಪಯುಕ್ತಗೊಳಿಸುವತ್ತ ದಾಪುಗಾಲು ಹಾಕುತ್ತವೆ. ಈ ನಿಟ್ಟಿನಲ್ಲಿ ತನ್ನದೇ ಆದ ಪ್ರಖರತೆಯನ್ನು ಉಳಿಸಿಕೊಳ್ಳುವಲ್ಲಿ ಸೋಲುತ್ತವೆ.

ಸಂಗಮೇಶ ಗುಜಗೊಂಡ ‘ಮಣ್ಣಿನಲ್ಲೆ ಚಿನ್ನ’ ಕಥೆಯಂತೂ ಅತಿಯಾದ ದುರಾಸೆಯೂ ಒಳ್ಳೆ ಕೆಲಸಕ್ಕೆ ಮೂಲ ಎನ್ನುವ ಸಂಗತಿಯನ್ನು ತಿಳಿಸಿದರೆ, ಎಂ. ಜಿ. ಗೋವಿಂದರಾಜು ಅವರು ದೊಡ್ಡವರ ದ್ವಿಮುಖ ಕ್ರಿಯೆಗಳನ್ನು ಕಟ್ಟಿಕೊಡುತ್ತಾರೆ. ಇರುವೆ, ಆಲ, ಹುಂಜ, ಸಮುದ್ರ, ಇಂಥ ನಿಸರ್ಗಮುಖಿ ವಸ್ತುಗಳಿಂದ ಬದುಕಿನ ಕ್ರಮವನ್ನು ವಿಶ್ಲೇಷಿಸುತ್ತಾರೆ. ಮನುಷ್ಯನ ನಿಸರ್ಗಪರ ಜೀವನವನ್ನು ಎತ್ತಿ ತೋರಿಸುತ್ತಾರೆ.

ಫ.ಗು. ಸಿದ್ಧಾಪೂರವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ ಬರಗಾಲದ ಹೆಸರಿನಲ್ಲಿ ನಡೆಯುವ ಪರಿಹಾರೋಪಾಯಗಳು, ಅದರ ವಿಫಲ ಪ್ರಯೋಗಗಳು, ಅಧಿಕಾರಿಶಾಹಿ ಮೇಲಾಟ, ಬರದ ಹೆಸರಿನಲ್ಲಿ ಜನಸಾಮಾನ್ಯರಿಗಾಗುವ ಮೋಸ, ವಂಚನೆಗಳಂಥಹ ಜ್ವಲಂತ ಸಮಸ್ಯೆಗಳನ್ನು ಸರಳವಾಗಿ ಚಿತ್ರಿಸಿಕೊಡುತ್ತರೆ. ಮಕ್ಕಳಿಗೆ ಬರೀ ಗತದ ಪರಿಕಲ್ಪಕನೆಗಳನ್ನೇ ತಿರುಗಾ ಮುರುಗಾ ಹೇಳದೆ ಸಮಕಾಲೀನ ಸಂದರ್ಭದ ಸಮಸ್ಯೆಗಳ ಕಡೆಗೆ ಅವರ ಮನಸ್ಸನ್ನು ತಿರುಗಿಸುವತ್ತ ಆಸಕ್ತಿವಹಿಸುತ್ತಾರೆ.

ನವಕರ್ನಾಟಕ ಪ್ರಕಾಶನದವರು ವಿವಿಧ ಲೇಖಕರಿಂದ ಮಕ್ಕಳಿಗೆ ನಾಳಿನ ಕಥೆಗಳು, ನಿನ್ನೆಯ ಕಥೆಗಳು ಎನ್ನುವ ಕಥಾ ಸರಣಿಗಳನ್ನು ತಂದಿರುವುದಲ್ಲದೆ ಬೇರೆ ಬೇರೆ ರೀತಿಯ ಕಥೆಗಳನ್ನು ಪ್ರಕಟಿಸಿ ಮಕ್ಕಳ ಸಾಹಿತ್ಯಕ್ಕೆ ಅಮೋಘ ಸೇವೆ ಸಲ್ಲಿಸಿದ್ದಾರೆ. ನವಗಿರಿ ನಂದನ ಕಥಾ ಮಾಲಿಕೆಯಲ್ಲಿ ಖ್ಯಾತ ಮಕ್ಕಳ ಸಾಹಿತಿ ನವಗಿರಿನಂದ ಅವರ ‘ವಿಚಿತ್ರಗಿಳಿ’ (೨೦೦೦), ‘ರಾಮನ ಸಾಮರ್ಥ್ಯ’ (೨೦೦೦) ‘ಮಲ್ಲಿಗೆಯ ಮಳೆ’, (೨೦೦೦), ‘ಚಂದಮಾಮನ ಮನೆಗೆ’ (೨೦೦೦), ‘ಚೌಕಾಸಿಯ ಪಾರ’ (೨೦೦೦) ಎನ್ನುವ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಗಿಳಿ, ಬೆಕ್ಕು ದನಗಳಂತಹ ಸಾಕು ಪ್ರಾಣಿಗಳ ಜಾಣತನ ಸ್ವಾಮಿನಿಷ್ಠೆಗಳು, ಮನುಷ್ಯನ ದುರ್ಬುದ್ಧಿ, ಸಣ್ಣತನಗಳಲ್ಲಿ ಹೇಗೆ ಕಳೆದು ಹೋಗುತ್ತವೆ ಎನ್ನುವುದನ್ನು ಇಲ್ಲಿನ ಕಥೆಗಳು ಚಿತ್ರಿಸುತ್ತವೆ. ಕಳ್ಳರು, ಸೋಮಾರಿಗಳು, ಹೊಟ್ಟೆಪಾಡಿಗಾಗಿ ಹೂಡುವ ಆಟಗಳು ಎಂಥವಾಗಿರುತ್ತವೆ. ಎನ್ನುವ ಮೂಲಕ, ಮಕ್ಕಳಲ್ಲಿ ನೀತಿ, ಧೈರ್ಯ, ಸಾಹಸದಂತಹ ಗುಣಗಳನ್ನು ಪ್ರಚೋದಿಸುತ್ತವೆ.

ಹಾಗೆ ಇನ್ನೊಬ್ಬ ಖ್ಯಾತ ಮಕ್ಕಳ ಸಾಹಿತಿ ಫಳಕಳ ಸೀತಾರಾಮ ಭಟ್ಟರ ‘ರಸ್ತೆ ಮಿಠಾಯಿ’ (೧೯೯೮) ‘ಪುಟ್ಟಿಯ ಸಾಹಸ’ (೧೯೯೫), ‘ಕಿಟ್ಟನ ಸಾಹಸ’ (೧೯೯೫) ‘ಸನ್ಯಾಸಿ ಮತ್ತು ದರೋಡೆಕೋರರು’ (೧೯೯೫), ‘ಹಕ್ಕಿಯಾದ ಹೆಣ್ಣು’ (೧೯೯೭), ಇವು ಕಿನ್ನರ ಲೋಕದ ಅದ್ಭುತ ರಮ್ಯ ಅನುಭವಗಳನ್ನು ಮಕ್ಕಳಿಗೆ ನಿಡುತ್ತವೆ. ಆನೆಗೆ ಉದ್ದ ಸೊಂಡಿಲು, ಕೊಕ್ಕರೆಗೆ ಉದ್ದಕಾಲು ಕತ್ತು ಮೂಡಿದ ಸಂದರ್ಭಗಳು, ಹೆಣ್ಣೊಬ್ಬಳು ಹಕ್ಕಿಯಾಗುವುದು, ರೋಚಕ ಹಾಗೂ ಕುತೂಹಲ ಭರಿತ ಸಂಗತಿಗಳೇ. ಸರಳ ಭಾಷೆಯ ಮೂಲಕ ಅದ್ಭುತ ಕಥಾ ಲೋಕವನ್ನು ಮಕ್ಕಳಿಗಾಗಿ ಕಟ್ಟಿಕೊಟ್ಟಿದ್ದಾರೆ.

ಇಲ್ಲೆಲ್ಲ ಮನುಷ್ಯ ಪ್ರಾಣಿ, ವನ್ಯ ಸಂಪತ್ತುಗಳ ಪರಸ್ಪರ ಪೂರಕ ಹಾಗೂ ವಿರೋಧಾತ್ಮಕ ಚಹರೆಗಳನ್ನು ಕಾಣುತ್ತೇವೆ. ನಿಸರ್ಗ ಸಹಜ ಮಾನವ ಬದುಕು ಆತನ ಕುಕೃತ್ಯಗಳಲ್ಲಿ ಚಿತ್ರತಗೊಂಡಿದೆ. ಕಥೆಯ ಸಾಂಪ್ರದಾಯಿಕ ದೃಷ್ಟಿಕೋನ ಇಲ್ಲಿ ಬಹುಮುಖ್ಯ ಸ್ಥಾನ ಪಡೆದಿದೆ.

ಹೆಚ್ಚಿನ ಕಥೆಗಳು ಆಕಾಶ ಮತ್ತು ಭೂಮಿಯನ್ನು ತಮ್ಮ ಕಾರ್ಯ ಕ್ಷೇತ್ರವನ್ನಾಗಿಸಿಕೊಂಡಿರೆ, ಇವೆರಡರ ಮಧ್ಯದ ಜಾಗವನ್ನು ವೈಜ್ಞಾನಿಕ ಕಥೆಗಳು ಆಯ್ಕೆ ಮಾಡಿಕೊಳ್ಳುತ್ತವೆ. ಕನ್ನಡ ಮಕ್ಕಳ ಕಥಾ ಲೋಕಕ್ಕೆ ಹೊಸ ವ್ಯಾಖ್ಯಾನವನ್ನು ಸೃಜನ ಶೀಲತೆಯನ್ನು ಈ ವೈಜ್ಞಾನಿಕ ಕಥೆಗಳು ತಂದುಕೊಟ್ಟವು.

ರಾಜಶೇಖರ ಭೂಸನೂರಮಠ ಅವರ ‘ರೋಬಟ್ ರಮಣಿ’ (೧೯೯೧), ‘ನಿಯಮಗಳ ನಾಡಿನಲ್ಲಿ’ (೧೯೯೧), ‘ಕಾಲನೌಕೆ’ (೧೯೯೧), ‘ಬಲೆ ಪಿಂಕಿ’ (೧೯೯೧), ‘ಪರಮಾಣು ಲೋಕದಲ್ಲಿ’ (೧೯೯೧), ‘ಶಕ್ತಿ ನಗರದಲ್ಲಿ’ (೧೯೯೧) ಸಂಕಲನಗಳು ಮಕ್ಕಳಿಗಾಗಿ ನಾಳೆಯ ಕಥೆಗಳು ಮಾಲಿಕೆಯಲ್ಲಿ ನವಕರ್ನಾಟಕದವರಿಂದ ಪ್ರಕಟಗೊಂಡಿವೆ. ಬಹುಮುಖ್ಯವಾಗಿ ಮಕ್ಕಳಲ್ಲಿ ಅನ್ವೇಷಕ ಪ್ರವೃತ್ತಿಯನ್ನು, ವೈಚಾರಿಕ ಆಕೃತಿಯನ್ನು, ವೈಜ್ಞಾನಿಕ ಮನೋಧರ್ಮವನ್ನು, ಧೈರ್ಯ ಸಾಹಸಗಳನ್ನು ಇವು ಬೆಳೆಸುವಂಥವು. ಘಟನೆಯ ಬಗ್ಗೆ ಕುತೂಹಲ ಮತ್ತು ಅದನ್ನು ಭೇದಿಸುವ ತಂತ್ರ ಕಥೆಗಳ ಹಿಂದಿನ ಮುಖ್ಯ ಆಶಯ.

ಇಲ್ಲಿಯ ಕಥನ ರೀತಿಯೇ ಇನ್ನುಳಿದ ಸಾಹಿತ್ಯ ಕಥೆಗಳಿಗಿಂತ ಭಿನ್ನವಾದದ್ದು. ಪರಂಪರಾಗತ ಸಾಹಿತ್ಯದ ಕಥನ ರೀತಿಗಿಂತ ವಿಶಿಷ್ಟ. ಕಥೆಗಳಲ್ಲಿ ಸಾಂಪ್ರದಾಯಕ ಎನಿಸುವ ಕಾಕಾ, ಮಾಮಾ, ಸಂಬಂಧಗಳಿದ್ದರೂ ಅವು ಭಿನ್ನ ರೀತಿಯಲ್ಲಿ ತಮ್ಮ ಕಾರ್ಯನಿರ್ವಹಣೆಯನ್ನು ಇಲ್ಲಿ ಮಾಡುತ್ತವೆ. ಸಾಂಪ್ರದಾಯಕ ಕಥಾನಕದಲ್ಲಿ ಸೂರ್ಯ, ಚಂದ್ರ, ಸ್ವರ್ಗ, ಗ್ರಹ, ನಿಸರ್ಗಗಳು ಊರ್ಧ್ವಮುಖ ಬೆಳವಣಿಗೆ ಹೊಂದುತ್ತವೆ (ಪರದೇಶಿ ಕಥೆ ೪: ೧೯೯೧) ಚಂದ್ರನ ಮೇಲೆ ಬಹಳ ಕಟ್ಟುನಿಟ್ಟಾಗಿ ಕಾಲಕಳೆದ ಕುಂಟ ಕಾಕಾನಂತವರನ್ನು ಆತನ ಮೇಲಾಧಿಕಾರಿಗಳು ‘ನಿನ್ನನ್ನು ಪೃಥ್ವಿಗೆ ಕಳಿಸಬೇಕು ಬಹಳ ದಿಮಾಕು ನಿನ್ನದು’ ಎಂದು ಹೆದರಿಸುತ್ತಾರೆ. ಪಾರಂಪರಿಕ ಕಥನ ಕ್ರಮದ ನಂಬಿಕೆಗೆ ವಿರುದ್ಧ ದಿಕ್ಕಿನಲ್ಲಿ ಕಥಾ ಚಲನೆಯಿರುತ್ತದೆ. ನಂಬಿಕೆ ಜಗತ್ತನ್ನು ಮುರಿದು ಹೊಸದಾಗಿ ಕಟ್ಟುವ, ನಿಗೂಢವನ್ನು ಛಿದ್ರಗೊಳಿಸುವ, ತಿಳಿಯುವ ಆತುರ ಇಲ್ಲಿನ ಕಥೆಗಳದ್ದು. ಕಥೆಯ ಮುಖ್ಯ ಪರಿಸರ ಮತ್ತು ಪಾತ್ರಗಳು ಗಗನ, ಯಂತ್ರ, ಯಂತ್ರಮಾನವ ಮತ್ತು ನಿಗೂಢತೆಗಳು, ಅನ್ವೇಷಣೆಗಳು.

ಇಲ್ಲಿ ಕಥೆ ಹೇಳುವವಳು ಅಜ್ಜಿಯಲ್ಲ, ಕುಂಟ ಕಾಕಾ. ದೇವರು ಮನುಷ್ಯನನ್ನು ತನ್ನ ಪ್ರತಿಬಿಂಬವಾಗಿ ರೂಪಿಸಿದರೆ, ವಿಜ್ಞಾನಿಗಳು ರೋಬಟ್ಟರನ್ನು ಮನುಷ್ಯರ ಪ್ರತಿನಿಧಿಯಾನ್ನಾಗಿ ನಿರ್ಮಿಸುತ್ತಾರೆ. ಖಗೋಳ ವಿಜ್ಞಾನ, ವಿಜ್ಞಾನಿಗಳು ಪ್ಲಬರ್ ಶೋಧ, ಪರಮಾಣು, ಹಾರುವ ಕಾರು, ವಿದ್ಯುತ್ ಉತ್ಪಾದನೆ, ಮುಂತಾದ ಆಧುನಿಕ ವಿಜ್ಞಾನ ಮತ್ತು ಅವುಗಳ ಫಲಿತಗಳ ಕಾಣ್ಕೆ ಈ ಕಥೆಗಳ ಮುಖ್ಯ ಪ್ರಮೇಯ. ನಿರೂಪಣೆಗಿಂತ ಪ್ರಯೋಗಶೀಲತೆ ಇಲ್ಲಿ ಮುಖ್ಯವಾಗುತ್ತದೆ. ಈ ಕಥೆಗಳಲ್ಲಿ ಬರುವ ಮಕ್ಕಳು ಬರೀ ಕಥೆಕೇಳಿ ಹೂಂ ಗುಡುವವರಲ್ಲ ತಾವೇ ಪ್ರಯೋಗಕ್ಕೆ ಇಳಿಯುವರು. ಎಷ್ಟರಮಟ್ಟಿಗೆಂದರೆ ಶಾಲಾಪಠ್ಯವನ್ನೇ ಇವರು ಉಪೇಕ್ಷಿಸುವ ಮಟ್ಟಕ್ಕೆ ಬರುತ್ತಾರೆ.

‘ನಮ್ಮ ಟೀಚರು ಕಲಿಸಿದ ಇತಿಹಾಸ ನಮಗೆ ತಿಳಿಯುವುದೇ ಇಲ್ಲ ಸುಮ್ಮನೆ ಪುಸ್ತಕದಲ್ಲಿ ಬರೆದಿರುತ್ತಾರೆ ಇಲ್ಲದಿದ್ದರೆ ಚಿತ್ರಗಳಲ್ಲಿ ತೋರಿಸುತ್ತಾರೆ’ (ಕಾಕನೌಕೆ ಪು. ೯: ೧೯೯೧) ಚರಿತ್ರೆಯನ್ನು ಬರೀ ಕಥೆಯ ಅಥವಾ ಘಟನೆಗಳ ಮಟ್ಟದಲ್ಲಿ ಗ್ರಹಿಸದೇ ಅದನ್ನು ಪ್ರತ್ಯಕ್ಷಜ್ಞಾನದಿಂದ ಕಲಿಯುವ ತವಕ ಇಲ್ಲಿನ ಹುಡುಗರದು.

ಆಟದ ಮೂಲಕ ಪಾಠಕ್ಕೆಳೆಸುವ ಇಲ್ಲಿನ ಕಲಿಕೆ ಕ್ರಿಯಾತ್ಮಕವಾದದ್ದು. ಪರಮಾಣು ಲೋಕವನ್ನು ಎಲೆಕ್ಟ್ರಾನ್ + ಪ್ರೋಟನ್ = ಹೈಡ್ರೋಜನ್ ಪರಮಾಣು (ರಾಧ+ ಕೃಷ್ಣ=ಸಂತಾನ) ಸಂಬಂಧದಲ್ಲಿ ಕಾಣುತ್ತಾರೆ. ನಾಯಿ, ಕುದರೆ, ಪರಮಾಣುಗಳೇ ನಾಯಕರು ಹಾಗೂ ಮಾರ್ಗದರ್ಶಿಗಳು ತಮ್ಮ ಕಥೆಯನ್ನು ತಾವೇ ನಿರೂಪಿಸುವ ಅಥವಾ ಮಕ್ಕಳ ಅವಶ್ಯಕತೆಗೆ ತಕ್ಕಂತೆ ಸ್ಪಂದಿಸುವ ಪಾತ್ರಗಳಿವು.

ನೀಲಾಂಬರಿಯವರ ಆಶ್ವಶಕ್ತಿ ೫೦೦೦ (೧೯೯೯), ಬಿದಿರು ಹೊಳೆಗೆ ಬೆಂಕಿ (೧೯೯೪), ಅರಣ್ಯ ಗ್ರಾಮಕ್ಕೆ ಪ್ರಾವಾಸ (೧೯೯೧), ಸಿಂಗರಾಯನ ಗವಿ(೧೯೯೭) ಸೂರ್ಯನಲ್ಲಿಗೆ ನಿಯೋಗ (೧೯೯೭) ಇಲ್ಲೆಲ್ಲ ಆಧುನಿಕತೆಯೊಂದಿಗೆ ಮನುಷ್ಯನ ವಿಕಾರ ಮುಖಗಳ ಸ್ವಾರ್ಥಮೂಲವಾದ ಉದ್ದೇಶಗಳನ್ನು ಹೇಳಲಾಗುತ್ತದೆ. ಈ ಕಥೆಗಳ ಇನ್ನೊಂದು ಹೆಚ್ಚುಗಾರಿಕೆ ಎಂದರೆ ಇಡೀ ಅರಣ್ಯವನ್ನೇ ಒಂದು ಆಧುನಿಕ ವಿಶ್ವಗಳ ನಗರವನ್ನಾಗಿ ಪರಿವರ್ತಿಸುವುದು. ಆ ಮಧ್ಯ ವಿವಿಧ ಜಾತಿಯ ಗಿಡ, ಮರ, ಬಳ್ಳಿ, ಪಶು, ಪಕ್ಷಿ, ಪ್ರಾಣಿಗಳೊಂದಿಗೆ ಮಕ್ಕಳಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸುತ್ತವೆ. ಪ್ರವಾಸ ಮೂಲವಾದ ಪ್ರತ್ಯಕ್ಷ ಜ್ಞಾನವನ್ನೇ ಈ ಕಥೆಗಳು ಕೊಡುತ್ತವೆ. ಇಷ್ಟೆಲ್ಲ ಗುಣಾತ್ಮಕವಾಗಿದ್ದಾಗಲೂ ನಗರಕೇಂದ್ರಿತ ಚಿಂತನೆಯ ಪ್ರಯುಕ್ತ ಒಂದು ಮುಂದುವರೆದ ಜನಾಂಗಕ್ಕೆ ಮಾತ್ರ ಇವುಗಳ ಉಪಯುಕ್ತತೆ ಸೀಮಿತವಾಗುತ್ತದೆ ಎನ್ನುವುದು ಗಮನಾರ್ಹ.

ಪ್ರಾಣಿ, ಪಕ್ಷಿ, ಮನುಷ್ಯರು, ಪರಮಾಣುಗಳು ಜೀವಂತ ಪಾತ್ರಗಳಾಗಿ ಮೇಲಿನ ಎಲ್ಲ ಕಥೆಗಳಲ್ಲಿ ಮೂಡಿ ಬಂದರೆ, ತರಕಾರಿ, ಗೆಡ್ಡೆಗೆಣಸುಗಳು ಜೀವತುಂಬಿ ನಲಿಯುವುದನ್ನು ಎ. ಎಸ್. ಲಿಲಿತಮ್ಮನವರ ‘ತರಕಾರಿಗಳ ತಿರುಪತಿಯಾತ್ರೆ’ (೧೯೯೭) ಸಂಕಲನದಲ್ಲಿ ಕಾಣುತ್ತೇವೆ. ತರಕಾರಿಗಳನ್ನು ಜೀವಂತ ಪಾತ್ರಗಳಾಗಿ ದುಡಿಸುವಲ್ಲಿ ಕಥೆಗಾರರು ಯಶಸ್ವಿಯಾಗಿದ್ದಾರೆ.

ಹೀಗೆ ಇಡೀ ಬ್ರಹ್ಮಾಂಡವನ್ನೇ ತನ್ನ ಅಗತ್ಯಕ್ಕೆ ತಕ್ಕಂತೆ ಬಡಿದು ಬಗ್ಗಿಸಿ ಅದರ ಚಲನ ಶೀಲಗುಣವನ್ನು ಸೃಜನಾತ್ಮಕವಾಗಿ ಬಳಸಿಕೊಂಡ ಕೀರ್ತಿ ಇಲ್ಲಿನ ಎಲ್ಲ ಕಥೆಗಳದ್ದಾಗಿದೆ.

ಪ್ರವಾಸ ಕಥನ : ಮಕ್ಕಳ ಸಾಹಿತ್ಯದಲ್ಲಿ ಇದೊಂದು ಹೊಸ ಅಧ್ಯಾಯವೆಂದೇ ನನ್ನ ಭಾವನೆ. ನೀಳಾದೇವಿಯವರ ‘ಸಬಲನ ವಿದೇಶ ಪ್ರವಾಸ’ (೧೯೯೭) ಕೃತಿ ಇಲ್ಲಿ ಚರ್ಚಾರ್ಹವಾದುದು. ಹೆಚ್ಚಾಗಿ ಮಕ್ಕಳ ಸಾಹಿತ್ಯಿಕ ಬರಹಗಳು ಭಾರತದ ಭೂಮಿ, ಚಂದ್ರಲೋಕ, ಕಿನ್ನರ ಲೋಕಗಳನ್ನೇ ಮುಖ್ಯವಾಗಿಟ್ಟುಕೊಂಡು ಭೂಮಿಯ ಇನ್ನೊಂದು ಅದ್ಭುತವಾದ ಪಾಶ್ಚಾತ್ಯ ಪರಿಸರದತ್ತ ಅಷ್ಟೊಂದು ಗಮನಹರಿಸುವುದಿಲ್ಲ.

ಮಕ್ಕಳು ಭಾರತದ ಭೂಭಾಗ ನೋಡುವುದು ಒತ್ತಟ್ಟಿಗಿರಲಿ ಮನೆ, ಶಾಲೆ, ಬಿಟ್ಟು ದೂರ ಹೋಗಲೂ ಸಾಧ್ಯವಾಗದ ಸ್ಥಿತಿ ಇರುತ್ತದೆ. ಇಲ್ಲಿ ಸಬಲನೆಂಬ ಹುಡುಗನ ವಿದೇಶ ಪ್ರವಾಸವನ್ನು ಕಥಿಸುವ ಮೂಲಕ ಮಕ್ಕಳಿಗೂ ಒಂದು ಪ್ರವಾಸ ಕಥನವನ್ನು ಕಟ್ಟಿಕೊಟ್ಟಿದ್ದು ನಿಜಕ್ಕೂ ಹೊಸ ಪ್ರಯತ್ನ. ಪಾಸ್ ಪೋರ್ಟ್, ವೀಸಾಗಳ ಪರಿಚಯದೊಂದಿಗೆ ಶುರುವಾಗುವ ಕಥನ, ಜಗತ್ತಿನ ವಿವಿಧ ಅದ್ಭುತ ಮತ್ತು ಐತಿಹಾಸಿಕ ಭಾಗಗಳನ್ನು, ಘಟನೆಗಳನ್ನು, ವ್ಯಕ್ತಿ ವಿಶಿಷ್ಟತೆಗಳನ್ನು ಬಹಳ ನವಿರಾಗಿ ಪರಿಚಯಿಸುತ್ತದೆ. ಪ್ರತ್ಯಕ್ಷ ಕಲಿಕೆಯ ಭಾಗವಾಗಿ ಬರುವ ಪ್ರವಾಸವು ಮಕ್ಕಳಲ್ಲಿ ಮಾನಸಿಕ ವಿಕಾಸಕ್ಕೆ ಬಹುದೊಡ್ಡ ಕಾಣಿಕೆ ನೀಡುತ್ತದೆ. ಇದೊಂದು ಉತ್ತಮ ಪುಸ್ತಕ. ನೋಡಿಕಲಿ ಎನ್ನುವ ಮಾತನ್ನು ಈ ಪುಸ್ತಕ ಸಮರ್ಥಿಸುತ್ತದೆ.

ಕಾದಂಬರಿ : ಬರೀ ಕಾವ್ಯ, ಕಥೆ, ಚುಟುಕಿಗೆ ಸೀಮಿತವಾದ ಮಕ್ಕಳ ಸಾಹಿತ್ಯ, ಕಾದಂಬರಿಯಂತಹ ಪ್ರಕಾರಕ್ಕೆ ಮುಖ ಮಾಡಿರುವುದು ಸಂತೋಷವೆ. ಇಂದು ನಮ್ಮ ಶಿಕ್ಷಣ ಕ್ರಮ ಬದಲಾಗಿದೆ. ಬದಲಾದ ಕಾಲಗತಿಯಲ್ಲಿ ಬದಲಾದ ತಿಳುವಳಿಕೆ ಅನಿವಾರ್ಯ. ಈ ನಿಟ್ಟಿನಲ್ಲಿ ಇಲ್ಲಿನ ಕಾದಂಬರಿಗಳಿಗೆ ಹೆಚ್ಚು ಮಹತ್ವವಿದೆ. ಓದು ಪ್ರಧಾನವಾದ ಈ ಪ್ರಕಾರ ಮಕ್ಕಳಲ್ಲಿ ಓದುವ ಅಭಿರುಚಿಯನ್ನು ದ್ವಿಗುಣಗೊಳಿಸುತ್ತದೆ.

ನಾ. ಡಿಸೋಜಾ ಅವರ ‘ಗೋಪಿಯ ಗೊಂಬೆ’ (೧೯೯೩) ‘ಕಾಡನೆಯ ಕೊಲೆ’ (೧೯೯೩), ಎಸ್‌. ವಿ. ಶ್ರೀನಿವಾಸಮೂರ್ತಿಯವರ ‘ಹಾರೋಹನುಮ’, ಆನಂದ ಪಾಟೀಲರ ‘ಬೆಳದಿಂಗಳು’ (೨೦೦೦), ಗಾಯತ್ರಿ ಮೂರ್ತಿಯವರ ‘ಅದೃಶ್ಯ ಮಾನವ’, ‘ಟಿನಿ ಟಿನಿ ಟಿನ್‌’, ಮುಖ್ಯ ಕಾದಂಬರಿಗಳು.

ಪಾರಂಪರಿಕ ಕಥನ ಪ್ರಜ್ಞೆಯಿಂದ ಹೊರತಾದ ಹೊಸ ಆಯಾಮವನ್ನು ಇಲ್ಲಿನ ಕಥನಗಳು ಮತ್ತು ಪಾತ್ರಗಳಾದ ಮಕ್ಕಳು ಅಪೇಕ್ಷೆ ಪಡುತ್ತಾರೆನ್ನುವುದಕ್ಕೆ ‘ಹಾರೋಹನುಮ’ ಕಾದಂಬರಿಯ ಒಂದು ಸಂಭಾಷಣೆಯನ್ನು ನೋಡಬಹುದು.

‘ರಾಜ, ರಾಣಿ, ಗೊರಲಜ್ಜಿ, ಮನುಷ್ಯರನ್ನು ತಿನ್ನೋ ರಾಕ್ಷಸರ ಕಥೆ ಕೇಳಿ ಕೇಳಿ ಬೇಜಾರಿಗಿದೆ ಅಜ್ಜಿ’ – ಕಾನ್ವೆಂಟ್‌ ವಿದ್ಯಾರ್ಥಿ ಆರು ವರ್ಷದ ಅನಂತ ನುಡಿದ. ‘ಹೊಸ ಮಾದರಿ ಕಥೆ ಥ್ರಿಲಿಂಗ್‌ ಆಗಿರ್ಬೇಕು, ಪ್ರಾಣಿ, ಪಕ್ಷಿ ಎಲ್ಲಾ ಇರ್ಬೇಕು’ ಕೆ. ಜಿ. ಶಾಲೆಯ ಮುಂಕುಂದ ನುಡಿದ (ಹಾರೋಹನುಮ ಪುಟ. ೧, ೧೯೯೭). ಮಕ್ಕಳ ಮಾನಸಿಕ ಪರಿವರ್ತನೆಯನ್ನು ಬದಲಾದ ಶೈಕ್ಷಣಿಕ ವಾತಾವರಣವನ್ನು ಈ ಸಂಗತಿ ಸ್ಪಷ್ಟ ಪಡಿಸುತ್ತದೆ.

ಬಹು ಮುಖ್ಯವಾಗಿ ಮಕ್ಕಳಿಗೆ ಮುದವಾಗುವ ಪ್ರಾಣಿಸಂಕುಲ, ಕಾಡು, ಗೊಂಬೆ, ಬೆಳದಿಂಗಳು ಇಲ್ಲಿನ ಕಥಾವಸ್ತು. ಅನ್ವೇಷಕ ಪ್ರವೃತ್ತಿಯನ್ನು, ಪರಿಸರ ಪ್ರೇಮವನ್ನು, ಪ್ರಾಣಿದಯೆಯಂಥ ಮಾನವಿಕ ಮೌಲ್ಯಗಳನ್ನು ಈ ಕಥೆಗಳು ಒತ್ತಿ ಹೇಳುತ್ತವೆ. ಮಕ್ಕಳ ಕಾಡಿನ ಪ್ರವಾಸ ಬರೀ ಮೋಜಾಗದೇ ಅವರ ಧೈರ್ಯ ಸಾಹಸದ, ಹುಡುಕಾಟದ ಪ್ರವೃತ್ತಿಯ ನೆಲೆಗಳಿಗೆ ಪೋಷಕವಾಗಿ ನಿಲ್ಲುತ್ತದೆ. ಮುಗ್ಧ ಮಕ್ಕಳಿಗಾಗಿ ಬಾಳಿನ ಭವಿಷ್ಯಕ್ಕಾಗಿ ಉಳಿಯಬೇಕಾದ ವನ್ಯಸಂಪತ್ತನ್ನು ನಾಶ ಮಾಡುವ ಮನುಷ್ಯನ ಸ್ವಾರ್ಥ ಮೂಲ ಪ್ರವೃತ್ತಿಗಳನ್ನು ಹತ್ತಿಕ್ಕುವ ಇಲ್ಲಿನ ಪಾತ್ರಗಳು ಮನೋಜ್ಞವಾಗಿವೆ. ಮಕ್ಕಳ ಸ್ವತಃ ಭಾಗಿತ್ವದ ಇಲ್ಲಿನ ನೆಲೆಗಳು ಅರ್ಥಪೂರ್ಣವಾದಂಥವು.

ನಾಟಕ : ಇದುವರೆಗೂ ಚರ್ಚಿಸಿದ ಪ್ರಕಾರಗಳಿಗಿಂತ ಭಿನ್ನವಾದ ಮಾದರಿಯಿದು. ಇಲ್ಲಿ ಆಂಗಿಕಾಭಿನಯವೇ ಬಹು ಮುಖ್ಯವಾದದ್ದು. ವೈದೇಹಿ ಅವರ ನಾಟಕಗಳು ಈ ನಿಟ್ಟಿನಲ್ಲಿ ಗಮನಿಸುವಂಥವು. ‘ಗೊಂಬೆ ಮ್ಯಾಕ್‌ಬೆತ್‌’ (೧೯೯೨), ‘ನಾಯಿಮರಿ’ (೧೯೯೨), ‘ಧಾಂ ಧೂಂ ಸುಂಟರಗಾಳಿ’ (೧೯೯೨), ‘ಢಾಣಾ ಡಂಗುರ’ (೧೯೯೨), ‘ಮೂಕನ ಮಕ್ಕಳು’ (೧೯೯೨) ‘ಮೂರು ಮಕ್ಕಳ ನಾಟಕಗಳು’ (೧೯೯೭) ‘ಐದು ಮಕ್ಕಳ ನಾಟಕಗಳು’ (೧೯೯೨), ಎ. ಎಸ್‌ ಮೂರ್ತಿಯವರ ‘ನಕ್ಷತ್ರಮಾಲೆ’ (೧೯೯೬) ಪ್ರಯೋಗ ಸಿದ್ಧತೆಯ ಶ್ರಮ ಈ ಎಲ್ಲ ನಾಟಕಗಳ ಹಿಂದೆ ಇದೆ. ಇದರಲ್ಲಿ ಬಹಳಷ್ಟು ನಾಟಕಗಳು ಪ್ರದರ್ಶನಗೊಂಡಂಥವುಗಳೇ ಆಗಿವೆ. ಅಧಿಕಾರ, ಅದಕ್ಕಾಗಿ ಕೊಲೆ ಸುಲಿಗೆ, ವಿಶ್ವಾಸದ್ರೋಹ, ದೊಡ್ಡವರೆನಿಸಿಕೊಂಡವರ ವಿದ್ರೋಹದ ನಡುವಳಿಕೆ, ಅಮಾಯಕರ ಶೋಷಣೆ, ಆ ಮೂಲಕ ಪರ್ಯಾಯದ ಹುಡುಕಾಟ, ಸಂಸ್ಕೃತಿಮುಖಿ ಚಲನೆ, ಅಕ್ಷರ ಕ್ರಾಂತಿ ಈ ನಾಟಕಗಳ ಮೂಲಭಿತ್ತಿ.

ನಾಯಿ ಮರಿ ಹಾಗೂ ಡಾಣಾಡಂಗುರ ನಾಟಕದಲ್ಲಿ ಬದನೆ, ಮೆಣಸಿಗಿಡ, ಹೂಗಿಡ, ಗಿಳಿ, ಇಲಿ, ಬೆಕ್ಕು, ಸೊಳ್ಳೆ – ನೊಣ ವೃಕ್ಷಗಳೆಲ್ಲ ಜೀವಂತ ಪಾತ್ರಗಳಾಗಿ ಮನುಷ್ಯನ ಸ್ವಾರ್ಥಮುಖಗಳನ್ನು ಎತ್ತಿತೋರಿಸುವ ರೀತಿ ಅರ್ಥಪೂರ್ಣವಾದದ್ದು. ನಕ್ಷತ್ರ ಮಾಲೆ ನಾಟಕವೂ ಬಹುಮುಖ್ಯವಾಗಿ ಇದೇ ಆಶಯವನ್ನು ಹೇಳಿದರೂ ಸ್ವಲ್ಪ ಭಿನ್ನವಾಗಿ ಅಕ್ಷರ ಕ್ರಾಂತಿ ಬಾಲಕಾರ್ಮಿಕರ ಶೋಷಣೆಗಳಂತಹ ವಿಷಯಗಳನ್ನು ಹಾಡು, ನಾಟ್ಯ, ಚಿತ್ರ, ಅಭಿನಯಗಳ ಮೂಲಕ ಕಲಿಸಲು ಪ್ರಯತ್ನಿಸುತ್ತದೆ. ಇದೊಂದು ಅಚ್ಚುಕಟ್ಟಾದ ಸಂಗ್ರಹ ಕೂಡ ಹೌದು.

‘ಕಣ್ಣುತೆರೆಯಿತು ಮತ್ತು ಇತರ ನಾಟಕಗಳು’ (೧೯೯೩) ಶ್ರೀಮತಿ ಸರಸ್ವತಿ ಅವ್ವ ಅವರ ಈ ನಾಟಕ ವರ್ಣ ಮತ್ತು ವರ್ಗಭೇದದ ಕರಾಳತೆಯನ್ನೂ ಅದು ಮಕ್ಕಳ ಮನಸ್ಸಿನ ಮೇಲೆ ಬೀರಬಹುದಾದ ಗಂಭೀರ ಪರಿಣಾಮವನ್ನೂ, ಇಂಥ ಪರಿಣಾಮದ ನಿವಾರಣೆಗಾಗಿ ವಿಚಾರಶೀಲ ಶಿಕ್ಷಕನು ಅನುಸರಿಸಬೇಕಾದ ಮಾರ್ಗವನ್ನೂ ತುಂಬ ಅರ್ಥಪೂರ್ಣವಾಗಿ ಚಿತ್ರಿಸುತ್ತದೆ.

ಆರ್. ವಿ. ಭಂಡಾರಿಯವರ ‘ಬೆಳಕಿನ ಕಡೆಗೆ’ (೧೯೯೬) ಸಂಕಲನದಲ್ಲಿ ೧೩ ನಾಟಕಗಳಿವೆ. ಇದರಲ್ಲಿ ‘ಅಪ್ಪಿಕೊ’ ನಾಟಕ ಗಮನ ಸೆಳೆಯುವಂಥದ್ದು. ವಿದ್ಯುತ್‌ ಯೋಜನೆಗೆಂದು, ಅಣುಸ್ಥಾವರಕ್ಕೆಂದು, ಮನೆಕಟ್ಟಲಿಕ್ಕೆಂದು ಅರಣ್ಯನಾಶ ಮಾಡುವ ಹಿತಾಸಕ್ತಿಗಳ ವಿರುದ್ದ, ವನ್ಯ ಸಂರಕ್ಷಣೆ ಕುರಿತ ಜಾಗೃತಿಯನ್ನು ಈ ನಾಟಕ ಮಾಡುತ್ತದೆ. ವನ್ಯಸಂರಕ್ಷಣೆ ಮನುಕುಲದ ಸಂರಕ್ಷಣೆ. ಗಿಡಗಳೇ ಮಾಡುವ ಸಂಭಾಷಣೆಯೊಂದು ಹೀಗಿದೆ.

ಮರ : ನಾವು ಶಾಶವಾದರೆ ಉಪಯುಕ್ತ ಅನಿಲ ಇಲ್ಲದೇ ಮನುಷ್ಯಕುಲ ನಾಶವಾಗುತ್ತದೆ.

ಮರ : ಭೂಮಿ ಬಂಜರು ಬೀಳುತ್ತದೆ.

ಮರ : ಪ್ರಾಣಿಗಳು ನಾಶವಾಗುತ್ತವೆ.

ಮರ : ಪ್ರಾಣಿ ನಾಶವಾದರೆ ಮನುಷ್ಯನಿಗೆ ಸಾರಜನಕ ಇಲ್ಲದೆ ಸಾಯುತ್ತಾನೆ.

ಮರ : ಮಳೆ ಇಲ್ಲದೆ ಬರಗಾಲ ಬೀಳುತ್ತದೆ.

ಮರ : ನೋಡಿ ನೋಡಿ ಬರುತ್ತಿದ್ದಾರೆ. ದಂಡು ದಂಡು. ನಮ್ಮ ಸಂಹಾರ ಈಗ ನಡೆಯುತ್ತದೆ

ಭೂಮಿ, ಗಾಳಿ, ನೀರು, ಮರ, ಪ್ರಾಣಿ, ನಿಸರ್ಗ ಸಂಪತ್ತಿನ ನಾಶದ ಮೂಲಕ ತನ್ನನ್ನು ತಾನೇ ನಾಶಮಾಡಿಕೊಳ್ಳುವ ಮನುಷ್ಯನ ಭಸ್ಮಾಸುರ ಪ್ರವೃತ್ತಿಯನ್ನು ಈ ಸಂಭಾಷಣೆ ಕಾಳಜಿ ಪೂರ್ವಕವಾಗಿ ಚಿತ್ರಿಸುತ್ತದೆ. ಪಾರ್ವತಿ ಜಿ. ಐತಾಳರ ‘ಗುರುದಕ್ಷಿಣೆ’ (೧೯೯೮), ದೊಡ್ಡಣ್ಣ ಗದ್ದನಕೇರಿ ಅವರ ‘ಚಿಣ್ಣರ ನಾಟಕಗಳು’ (೨೦೦೦), ಫಳಕಳ ಸೀತಾರಾಮ ಭಟ್ಟರ ‘ಪ್ರೀತಿಯ ಧರ್ಮ’ (೧೯೯೭) ಮಕ್ಕಳ ಸಮೂಹ ಚಟುವಟಿಗಳಿಗೆ, ಕೋಮು ಸೌಹಾರ್ಧ ಸಾಧಿಸಲು ಮಕ್ಕಳಲ್ಲಿ ಪ್ರೀತಿ ವಿಶ್ವಾಸ ಸ್ನೇಹ ಸಹಾಕಾರ ಬೆಳೆಸಲು ಹಂಬಲಿಸುತ್ತವೆ. ನೀತಿಶಿಕ್ಷಣ, ಶಕ್ತಿ, ಸಾಹಸ, ಇತಿಹಾಸ ಪರಿಚಯ ಕೂಡ ಇಲ್ಲಿ ಸಾಧ್ಯವಾಗುತ್ತದೆ.

ರೇಡಿಯೋ ರೂಪಕಗಳದ್ದು ಇನ್ನೊಂದು ಮಜಲು. ಟಿ. ಎಸ್. ನಾಗರಾಜ ಶೆಟ್ಟರ ‘ಪ್ರಾಣಿಗಳ ಪ್ರವಾಸ’ (೧೯೯೮) ೧೦ ಬಾನುಲಿ ರೂಪಕಗಳ ಸಂಗ್ರಹ. ಶ್ರವ್ಯ ಪಾತಳಿಯ ಇಲ್ಲಿಯ ನಾಟಕಗಳು ಸಾಹಿತ್ಯ ಹಾಗೂ ಸಂಗೀತವನ್ನು ಜೊತೆಜೊತೆಯಲ್ಲೆ ಕೊಂಡೊಯ್ಯುತ್ತವೆ. ಮಾನವನ ಐಬುಗಳನ್ನು ಪ್ರಾಣಿಗಳಿಗೆ ಹೋಲಿಸುವ, ಮನುಜರಂತೆ ಪ್ರಾಣಿಗಳು ಸುಸಜ್ಜಿತ ಪ್ರವಾಸ ಮಾಡುವ, ಬಡಿದಾಡುವ, ಚಿತ್ರಗಳು ಹೊಸ ಅನುಭವ ನೀಡುತ್ತವೆ. ಬಾಹುಬಲಿ ಕಥೆ ಹೇಳುವ ‘ವಿಜಯ ಚಕ್ರಿ’ ಸಾಕ್ಷರತಾ ಪ್ರಸಾರದ ‘ವಿಕಾಸ ವಿದ್ಯೆಯಂತಹ ನಾಟಕಗಳು ಕಠಿಣ ವಿಷಯವನ್ನು ಸುಲಲಿತವಾಗಿ ತಿಳಿಸಿಕೊಡುತ್ತವೆ’. ‘ಮಕ್ಕಳ ಯುಗಾದಿ’ (೧೯೯೩) ಬೇವು, ಬೆಲ್ಲ, ಯುಗಾದಿಯ ಸಾಂಸ್ಕೃತಿಕ ಮಹತ್ವ, ಸಂವತ್ಸರದ ಸವಿವರವಾದ ಮಾಹಿತಿಯನ್ನು ಗಟ್ಟಿಯಾಗಿ ಚಿತ್ರಿಸಿಕೊಡುತ್ತದೆ.

ಇಲ್ಲಿನ ನಾಟಕ ಮತ್ತು ರೂಪಕಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ರಸಗ್ರಹಣ ಸಾಮರ್ಥ್ಯ ಅಭಿವೃದ್ಧಿಗೆ ಹಂಬಲಿಸುವುವಲ್ಲದೆ ನೀತಿ, ರಂಜನೆ, ನಟನೆ, ಮಾತುಗಾರಿಕೆ, ಕೌಶಲ್ಯಗಳನ್ನು ಪೋಷಿಸುತ್ತವೆ. ಸಣ್ಣ ಸಣ್ಣ ಸಂಭಾಷಣೆ, ಚುರುಕಾದ ನಟನೆ, ಮಕ್ಕಳ ಸಾಮೂಹಿಕ ಭಾಗವಹಿಸುವಿಕೆ, ರಂಗಚಲನೆ, ಸರಳತಾಂತ್ರಿಕತೆಗೆ ಈ ನಾಟಕಗಳು ಹೆಚ್ಚಿನ ಆಸಕ್ತಿ ವಹಿಸುತ್ತವೆ.

ಶೈಕ್ಷಣಿಕ ಚಿಂತನೆ : ಈ ದಶಕದಲ್ಲಿ ಮಕ್ಕಳ ಶಿಕ್ಷಣ ಚಿಂತನೆ ಕುರಿತು ಕೆಲವು ಪುಸ್ತಕಗಳೂ ಪ್ರಕಟವಾಗಿವೆ. ಮಹಾಬಲೇಶ್ವರರಾವ್‌ ಅವರ ‘ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಭೋಧನೆ’ (೧೯೯೬) ಲಲಿತಾಂಬಾ ವೃಷಭೇಂದ್ರ ಸ್ವಾಮೀ ಅವರ ‘ಮಕ್ಕಳ ಶಿಕ್ಷಣ’ (೧೯೯೭) ಎಸ್‌. ಸೀತಾಲಕ್ಷ್ಮೀಯವರ ‘ಕಥೆಕೇಳಿ ಕನ್ನಡ ಕಲಿಯಿರಿ’ (೧೯೯೭) ಪ್ರಮುಖ ಕೃತಿಗಳು. ಮಕ್ಕಳ ಕಲಿಕೆ ಹಾಗೂ ಭಾಷಾ ಬೋಧನೆ ಕುರಿತು ವಿವಿಧ ರೀತಿಯ ಚಿಂತನೆಗಳನ್ನು ಇವುಗಳಲ್ಲಿ ನೆಲೆಗೊಳಿಸಲಾಗಿದೆ. ಪ್ರಾಥಮಿಕ ಹಂತವು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಎಷ್ಟು ಮುಖ್ಯವಾದದ್ದು ಎನ್ನುವ ವಿಚಾರಗಳನ್ನು ಇಲ್ಲಿ ಕಾಣಬಹುದು. ಮಕ್ಕಳ ಕಲಿಕೆ ಎಷ್ಟು ಮುಖ್ಯವೋ ಅದಕ್ಕೆ ತಕ್ಕ ಶಿಕ್ಷಕ ‘ಆತನ ತರಬೇತಿ’ ತಿಳುವಳಿಕೆ, ಬೋಧನಾ ವಿಧಾನಗಳ ಬಗ್ಗೆ ಗಮನಹರಿಸಲಾಗಿದೆ. ಭಾಷಾ ಭೋಧನೆಯಲ್ಲಿ ವಿಷಯ ಜ್ಞಾನ ಮಾತ್ರ ಮುಖ್ಯವಲ್ಲ. ಆ ಮೂಲಕ ಭಾಷೆಯ ಬಳಕೆಯ ರೀತಿಯನ್ನು ಕಲಿಯುವುದು. ಕಲಿಸುವುದು ಮುಖ್ಯವಾದದ್ದು. ಇಂಥ ಕಲಿಕೆಯಲ್ಲಿ ಮನೆ, ಶಾಲೆ, ಸಮಾಜ ವಹಿಸಬೇಕಾದ ಎಚ್ಚರ, ಮಕ್ಕಳ ಬೆಳವಣಿಗೆಯಲ್ಲಿನ ದೋಷ ಪರಿಹಾರ ಹೀಗೆ ಹಲವಾರು ವಿಷಯಗಳ ಕುರಿತು ಗಂಭೀರವಾದ ಚಿಂತನೆಗಳನ್ನು ಈ ಪುಸ್ತಕಗಳಲ್ಲಿ ಮಂಡಿಸಲಾಗಿದೆ.

ಕೋಶಗಳು : ಕನ್ನಡ ವಿಶ್ವವಿದ್ಯಾಲಯ ಹೊರತಂದ ‘ಕಿರಿಯರ ಕರ್ನಾಟಕ ಸಚಿತ್ರಕೋಶ’ ಬಹುಮುಖ್ಯವಾದದ್ದು. ಪ್ರಾಧಮಿಕ ಹಂತದಿಂದ ಪ್ರೌಢಶಾಲಾ ಶಿಕ್ಷಣದವರೆಗೂ ಉಪಯುಕ್ತವಾಗುವ ನಮೂದುಗಳು ಇಲ್ಲಿವೆ. ಕರ್ನಾಟಕದ ಸಚಿತ್ರ ಸ್ವರೂಪವನ್ನು ಕಟ್ಟಿಕೊಡುವ ಇದು ಮಕ್ಕಳಿಗೆ ಬೌಧ್ಧಿಕ ವಿಕಾಸಕ್ಕೆ ಮಹತ್ವದ ಕೊಡಗೆ. ಆಧುನಿಕ ಮಾಧ್ಯಮಗಳಾದ ಟಿ. ವಿ. ಪ್ರತ್ರಿಕೆ ಕಂಪ್ಯೂಟರ್ ಗಳು, ಮಕ್ಕಳಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ. ಅರೇಬಿಯನ್‌ ನೈಟ್ಸ್‌ಕಥೆಗಳು, ಜಂಗಲ್‌ಬುಕ್‌, ಕಾರ್ಟೂನ್ಸ್‌ಗಳು, ಕಾಮಿಕ್ಷ್‌ಗಳು, ಶಕ್ತಿ ಅಂಥಹ ಧಾರವಾಹಿಗಳು ಮಕ್ಕಳಿಗೆ ವಿವಿಧ ರೀತಿಯ ತಿಳುವಳಿಕೆಯನ್ನು ನೀಡುತ್ತವೆ. ಮೊದಲೇ ಹೇಳಿದಂತೆ ಇಂದು ಭಾಷೆಯ ಹಂಗಿಲ್ಲದೇ ಕಣ್ಣಿನ ಮೂಲಕವೇ ಹಲವಾರು ತಿಳುವಳಿಕೆಗಳನ್ನು ಮಕ್ಕಳು ಪಡೆಯಬಹುದಾಗಿದೆ. ಪೆನ್ನು ಪೇಪರು ರಹಿತ ಸಮಾಜ ನಿರ್ಮಾಣವಾಗುತ್ತಿರುವ ಹೊತ್ತಿನಲ್ಲಿ ಮಕ್ಕಳ ಸಾಹಿತ್ಯ ಹಿಡಿಯಬೇಕಾದ ದಾರಿಯ ಬಗ್ಗೆ ಗಂಭೀರ ಚಿಂತನೆಯ ಅವಶ್ಯಕಥೆ ಇದೆ.

ಜಾಗತೀಕರಣ ಖಾಸಗೀಕರಣಗಳ ಒತ್ತಡಗಳಿಂದಾಗಿ ಸಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ರಂಗಗಳಲ್ಲಿ ಅನೇಕ ತರದ ಸ್ಥಿತ್ಯಂತರಗಳು ಸಾಧ್ಯವಾಗುತ್ತಿವೆ. ಇದರಿಂದಾಗಿ ನಮ್ಮ ಸಾಂಸ್ಕೃತಿಕ ಜಗತ್ತು ಹೊಸ ಬಗೆಯ ಚರ್ಚೆ, ಸಂವಾದ, ಶಿಕ್ಷಣ ನೀತಿಗಳನ್ನು ಬಯಸುತ್ತಿದೆ. ಇಂದು ಸಾಹಿತ್ಯ ಸಂಸ್ಕೃತಿ ಸ್ವರೂಪ ಕುರತಂತೆ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಎನ್ನುವ ಪರಿಕಲ್ಪನೆಗಳು ಪ್ರತಿಪಾದಿತವಾಗುತ್ತಿವೆ. ತಂತ್ರಜ್ಞಾನವು ಅಕ್ಷರ ಅನಗತ್ಯ, ಓದು ಅನಗತ್ಯ ಎನ್ನುವ ಪರಿಕಲ್ಪನೆಗಳನ್ನು ಢಾಳಾಗಿ ಬಿತ್ತರಿಸುತ್ತಿದೆ. ಹೀಗಾಗಿ ಅಂಥ ಗಂಭೀರ ಬೆಳವಣಿಗೆಯನ್ನೂ ಚಿಂತನೆಯನ್ನೂ ಕಾಣದ ಕನ್ನಡ ಮಕ್ಕಳ ಸಾಹಿತ್ಯವು ಇಡಬೇಕಾದ ಹೆಜ್ಜೆ ಕುರಿತು ಗಟ್ಟಿಯಾಗಿ ಚಿಂತಸಬೇಕಾಗಿದೆ.

ಈ ಕ್ಷೇತ್ರದ ಇತ್ತೀಚಿನ ಸಾಧನೆ ಪ್ರಗತಿಶೀಲವಾಗಿದ್ದರೂ ಶಾಸ್ತ್ರಶುದ್ಧವಾಗಿದೆಯೆನಿಸುವಂತಿದ್ದರೂ ಕೋಶರಚನೆ ಹಾಗೂ ಪರಿಶೀಲನೆಯಲ್ಲಿ ಹೊಸತನ ಕಡಿಮೆ. ಕಣ್ಣು ಕುಕ್ಕುವಂತಹ ಮಹತ್ವಪೂರ್ಣ ಶೋಧನೆಗಳು ಕೋಶ ತತ್ತ್ವ ಹಾಗೂ ಸಿದ್ಧಾಂತಗಳನ್ನು ಕುರಿತು ಕಡಮೆಯೇ. ಈ ಕ್ಷೇತ್ರದಲ್ಲಿ ಆಗಬೇಕಾದ ಕೆಲಸವಂತೂ ಅಪಾರವಾಗಿದೆ. ಕನ್ನಡ ಪ್ರಮುಖ ಕವಿಗಳ ಶಬ್ದ ಶಿಲ್ಪಗಳ ಅಧ್ಯಯನವಾಗಿಲ್ಲ. ಸಂಸ್ಕೃತ ಮತ್ತು ಅನ್ಯದ್ರಾವಿಡ ಭಾಷೆಗಳೊಡನೆ ಕನ್ನಡ ಕೋಶಗಳ ಸ್ವರೂಪದ ಹೋಲಿಕೆಯಾಗಲಿ ಕನ್ನಡ ಕೋಶ ಮೀಮಾಂಸೆಯಾಗಲಿ ಆಗಿಲ್ಲ. ಆದರೂ ಈ ದಶಕದಲ್ಲಿ ಸಾಮಾಜಿಕ ಆಯಾಮಕ್ಕೆ ಸಂಬಂಧಿಸಿದ ನಿಘಂಟುಗಳು ರಚಿತವಾಗುತ್ತಿರುವುದು ಕನ್ನಡಭಾಷಾಭಿವೃದ್ಧಿಯ ಸೂಚಕವಾಗಿದೆ.

ದಶಕದ ಈ ಸಾಹಿತ್ಯದಲ್ಲಿ ಈ ರೀತಿಯ ಚಿಂತನೆಯ ಹೊಳಹುಗಳು ಇಲ್ಲವೆಂದರೂ ನಡೆದೀತು. ಮಕ್ಕಳಿಗೆ ಬರೀ ರಂಜನೆ, ರೋಮಾಂಚನ, ವಿಸ್ಮಯ ನೀತಿ ರೀತಿಗಳನ್ನು ಕಲಿಸಿದರೆ ಸಾಲದು. ಇಂದಿನ ಸಂದಿಗ್ಧ ಪರಿಸ್ಥಿತಿಗೆ ಮಕ್ಕಳು ಹೊಂದಿಕೊಳ್ಳಬೇಕಾದ ನಿಟ್ಟಿನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಕಂಡುಕೊಂಡರೆ ಮಾತ್ರ ಅವರ ಭವಿಷ್ಯ ಉಜ್ವಲವಾಗುವುದು. ಇಲ್ಲದೆ ಹೋದರೆ ಮಕ್ಕಳ ಸಾಹಿತ್ಯ ಅವರ ಬದುಕು ನಿಸ್ಸತ್ವವೂ, ನಿರ್ಭಾವುಕವೂ ಆಗುವುದರಲ್ಲಿ ಸಂದೇಹವೇ ಇಲ್ಲ.