ಪ್ರಾಚೀನ ಕಾಲದಲ್ಲಿ ಅದೆಷ್ಟೋ ಜನರು ಗೃಹಸ್ಥಾಶ್ರಮ ಕಳೆದು ವಾನಪ್ರಸ್ಥಾಶ್ರಮಕ್ಕೆ ತೆರಳಿ ಆಶ್ರಮ ನಿರ್ಮಿಸಿಕೊಂಡು ಋಷಿ, ಮುನಿ, ಸಂತ ಸಾಧುಗಳನ್ನು ಇತಿಹಾಸದಿಂದ ತಿಳಿದ್ದೇವೆ. ಇದಕ್ಕೆ ಕಾರಣ ಏಕಾಂತದ ಹಂಬಲ, ತನ್ನ ಆತಂಕದ ಮನಸ್ಸಿಗೆ ನೆಮ್ಮದಿ ಆನಂದವನ್ನು ತಂದು ಕೊಳ್ಳುವ ಉಪಕ್ರಮ. ಇದರಿಂದ ಸಿಗಬಹುದಾದ ನೆಮ್ಮದಿ ತೃಪ್ತಿಯನ್ನು ಸೀಮಿತವಲಯದಲ್ಲಿ ಅಭಿವ್ಯಕ್ತಿಸುವ ಅನುಭವಗಳನ್ನು ತುಂಬಿಕೊಳ್ಳುವ ಹಿನ್ನೆಲೆಯಲ್ಲಿ ಕಾವ್ಯ, ಶಾಶ್ತ್ರ, ಪುರಾಣಗಳು ಸೃಷ್ಟಿಯಾದವು, ಹಾಗೆಯೇ ಇಂದಿಗೂ ಲೌಖಿಕ ಬದುಕಿನಲ್ಲಿ ಬೇಸರವಾದರೆ ನಾಲ್ಕು ದಿನ ಬಂಧುಗಳ ಮನೆಗೂ, ನೆಂಟರ ಮನೆಗೂ, ಸ್ನೇಹಿತರ ಮನೆಗೂ, ಹೋಗಿ ಬರುತ್ತೇವೆಂದು ಹೇಳವುದನ್ನು ಕೇಳುತ್ತೇವೆ. ಇದರಿಂದಾಗಿ ಮಾನವನ ಏಕಾತಾನತೆಯ ಬದುಕಿಗೆ ಈ ರೀತಿಯ ಸ್ಥಳ ಬದಲಾವಣೆ, ಪರಿಸರ ಬದಲಾವಣೆ ಒಂದು ರೀತಿಯ ನವೀನ ಚೈತನ್ಯವನ್ನು ತಂದು ಕೊಡಬಲ್ಲದು. “ಕೋಶ ಓದು ಇಲ್ಲವೆ ದೇಶ ನೋಡು” ಎನ್ನುವ ಗಾದೆ ಮಾತು ನಮ್ಮಲ್ಲಿ ಪ್ರಚಲಿತವಿದೆ. ಪುಸ್ತಕದಿಂದ ದೊರೆಯುವ ಜ್ಞಾನ, ಸ್ವತಃ ದೇಶಗಳನ್ನು ಸುತ್ತಿ ಅರಿಯುವ ಜ್ಞಾನ ಎರಡು ಸಮನಾದವುಗಳು. ಹೀಗೆ ಒಂದು ಕಾಲಕ್ಕೆ ಮನೋರಂಜಕವಾಗಿ ಬೆಳೆದುಕೊಂಡು ಬಂದ ಪ್ರವಾಸ ಜೊತೆಗೆ ಜ್ಞಾನ ಅಭೀಪ್ಸೆ ಹಿನ್ನಲೆಯಲ್ಲಿ ಬೆಳವಣಿಗೆ ಹೊಂದಿ ಇತ್ತೀಚೆಗೆ ವ್ಯಾಪಾರ, ವ್ಯವಹಾರ, ಸಾಂಸ್ಕೃತಿಕ ವಿನಿಮಯಗಳ ಆಶಯಗಳನ್ನು, ಹೊತ್ತು ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಸೃಷ್ಟಿಯಾದ ಸಾಹಿತ್ಯ ಪ್ರವಾಸ ಸಾಹಿತ್ಯ. ಇದನ್ನೆ ಡಾ ಕೆ. ಅನಂತರಾಮು ಹೀಗೆ ವ್ಯಾಖ್ಯಾನಿಸಿದ್ದಾರೆ.

ಮನುಷ್ಯನು ಸ್ವತಂತ್ರ್ಯ ಪ್ರೇಮಿ. ಅದು ಆತನ ಹುಟ್ಟು ಗುಣ. ಬಂಧನದಿಂದ ಬಿಡುಗಡೆ ಹೊಂದಬೇಕು. ಹುಟ್ಟು ಸಾವುಗಳ ಸಂಸಾರದಿಂದ ಮುಕ್ತನಾಗಬೇಕು. ಇನ್ನು ಈ ಭವ ಸಾಗರದಲ್ಲಿ ಬೀಳಬಾರದು ಎಂದು ಅವನು ಹಂಬಲಿಸುತ್ತಾನೆ. ಆಧ್ಯಾತ್ಮಿಕವಾಗಿ ಹೀಗೆ ಹುಟ್ಟಿದ ಹಂಬಲವನ್ನು ಮುಮುಕ್ಷುತ್ವ ಎಂದು ಕರೆಯುತ್ತಾರೆ. ಅತ್ಯಂತ ಸುಸಂಸ್ಕೃತ ಚೇತನಗಳಿಗೆ ಅಂತಹ ಬಯಕೆ ಉಂಟಾಗುತ್ತದೆ. ಅವು ಅದಕ್ಕೊಪ್ಪುವ ಸಾಧನೆ ಮಾಡುತ್ತವೆ ಹುಟ್ಟಡಗಿಸಿಕೊಂಡು ಮೋಕ್ಷವೆಂಬ ಶಾಶ್ವತವೂ ಬ್ರಹ್ಮಾನಂದಮಯವೂ ಆದ ಪರಮ ಪದದಲ್ಲಿ ನೆಲಸಿಬಿಡುತ್ತದೆ. ಆಧ್ಯಾತ್ಮಿಕ ತರಹದ ಮುಮುಕ್ಷತ್ವದಂತೆಯೆ ಲೌಕಿಕ ನೆಲೆಯಲ್ಲಿಯೂ ಮುಮುಕ್ಷುತ್ವ ಗುಣವೊಂದುಂಟು. ಮನೆ, ಮಠ, ಊರು, ಕೇರಿ, ಕೆಲಸ, ಕಾರ್ಯವೆಂಬ, ಲೌಕಿಕ ಬಂಧನದಿಂದ ತಾತ್ಕಾಲಿಕ್ಕಾಗಿಯಾದರೂ ಮುಕ್ತವಾಗಬೇಕು. ಹಕ್ಕಿಯಂತೆ ಹಾರಾಡಿ ಹುಲ್ಲೆಯಂತೆ ಜಿಗಿದಾಡಿ, ಮೀನಿನಂತೆ ತೇಲಾಡಿ, ಮಗುವಿನಂತೆ ನಲಿದಾಡಿ ನಾನೇ ನಾನಾಗಿದ್ದುಕೊಂಡು ಹೊರ ಜಗತ್ತನೆಲ್ಲ ನೋಡಬೇಕು. ತಿಳಿಯಬೇಕು ಎಂದು ಆಸೆ ಮಾಡುವುದೇ ಈ ಲೌಕಿಕ ಸ್ತರದ ಮುಮುಕ್ಷುತ್ವ. ಮನೆಯಿಂದ ಮುಕ್ತವಾಗಿ ಹೊಸ ಹೊಸದನ್ನು ಕಾಣಲು ಹೊಸ ಹೊಸದನ್ನು ತಿಳಿಯಲು ಹೊಸದನ್ನು ಪಡೆಯಲು ಹೊಸ ಹೊಸದನ್ನು ಹೊಸೆಯಲು ಮುಂದಾಗುವುದನ್ನೇ ನಾವು ಪ್ರವಾಸವೆಂದು ಕರೆಯುತ್ತೇವೆ….. ಹಾಗೆ ನೋಡಿದ್ದನ್ನೆಲ್ಲ ಅನುಭವಿಸಿ ಸಿಕ್ಕಿದ್ದೆಲ್ಲ ನಾನು ಕಂಡೆ ನಾನು ಉಂಡೆ ನಾನು ಮುಟ್ಟಿದೆ ನಾನು ಮೋಸಿದೆ ನಾನು ನಡೆದಾಡಿದೆ ಬಿದ್ದೆ ಗೆದ್ದೆ ನಾನು ಮರುಗಿದೆ ಎಂಬ ಆತ್ಮವಿಲಾಸಡೊಡಗೂಡಿಸಿ ರಸಮಯವಾಗಿ ಬಣ್ಣಿಸಿ ಲೋಕಕ್ಕೆ ಸಮರ್ಪಿಸುವ ಪ್ರಜ್ಞಾ ಪ್ರವಾಹವನ್ನೇ ಪ್ರವಾಸಕಥನ ಎಂದು ಕರೆಯಲಾಗಿದೆ. ಹೀಗೆ ಯಾವುದೇ ಒಬ್ಬ ವ್ಯಕ್ತಿ ತನ್ನ ಪರಿಸರವನ್ನು ತೊರೆದು ಮತ್ತೊಂದು ಹೊಸ ಪರಿಸರಕ್ಕೆ ಹೋದಾಗ ಅಲ್ಲಾಗುವ ಅನುಭವಗಳನ್ನೂ, ವಿಸ್ಮಯಗಳನ್ನು, ಅನುಭವಿಸಿ ಅರಗಿಸಿಕೊಂಡ ಆ ಸ್ಥಳಗಳ ವೈವಿದ್ಯತೆಗಳ ಆನಂದಗಳನ್ನು, ವರ್ಣಿಸುವ ಅಭಿವ್ಯಕ್ತಿಸುವ ವಿವರಿಸುವ ವಿಧಾನವೇ ‘ಪ್ರವಾಸ ಕಥನ’ ಎಂದು ಕರೆಯಬಹುದಾಗಿದೆ.

ಮಾನವನ ಜೀವನದ ಆರಂಭದ ಅಲೆಮಾರಿತನವು ಒಂದು ರೀತಿಯ ಪ್ರವಾಸವೆಂದರೆ ತಪ್ಪಾಗಲಾರದು, ಆಹಾರ ಹುಡುಕುವಿಕೆಯೇ ಮುಖ್ಯವಾದುದು. ಹಾಗೂ ನಿಸರ್ಗದಲ್ಲಾಗುವ ವಿಸ್ಮಯಗಳ ಬದಲಾವಣೆಗಳು ಅವರನ್ನೂ ಸ್ಥಳದಿಂದ ಸ್ಥಳಕ್ಕೆ ವಲಸೆ ಹೋಗುವಂತೆ ಪ್ರೇರೇಪಿಸಬೇಕು. ಹೀಗೆ ಉಪ ಜೀವನಕ್ಕಾಗಿ ವಲಸೆ ಹೊರಟು ಮುಂದೊಂದು ದಿನ ಒಂದು ಕಡೆ ನೆಲಯೂರಿದ, ಹೀಗೆ ಮಾನವ ತನ್ನ ಅಗತ್ಯ ಕಾರಣಗಳಿಗಾಗಿ ಪ್ರವಾಸ ಕೈಗೊಳ್ಳುತ್ತಿದ್ದನು. ಈ ಮೂಲಕ ತನ್ನ ಅನುಭವಗಳನ್ನೂ ಹಂಚಿಕೊಳ್ಳುತ್ತಿದ್ದನು, “ಪ್ರಾಚೀನ ಭಾರತದಲ್ಲಿ ಪ್ರವಾಸವೆಂಬುದು ತೀರ್ಥಯಾತ್ರೆ ರೂಪದಲ್ಲಿ ಪ್ರಚಲಿತವಾಗಿತ್ತು. ಪುಣ್ಯ ಸಂಪಾದನೆಗಾಗಿ, ಸಂಸ್ಕಾರ ಸಂವರ್ಥನೆಗಾಗಿ, ಚಿತ್ತ ಶುದ್ಧಿಗಾಗಿ ಹಿಂದಿನವರು ವಿಶೇಷ ಸೌಲಭ್ಯವಿಲ್ಲದ ಕಾರಣ ಕಾಲ್ನಡಿಗೆಯಲ್ಲೇ ದೂರದೂರದ ದಿವ್ಯ ಕ್ಷೇತ್ರಗಳನ್ನು ಸಂದರ್ಶಿಸಿದ್ದರು.” ಹೀಗೆ ಅಂದಿನ ಯಾತ್ರೆ ದಿವ್ಯವಾದ ಸಂಪಾದನೆಗಾಗಿ ಎಂಬ ಕಲ್ಪನೆ ಅಧ್ಯಾತ್ಮಿಕ ಪರಿಭಾವನೆ ಹೊಂದಿದ್ದದನ್ನು ಕಾಣಬಹುದಾಗಿದೆ. ಆದರೆ ಇಂದು ಸಂಪೂರ್ಣ ಬದಲಾದ ಸ್ಥಿತಿಯಿದೆ. ವಿದ್ಯಾಭ್ಯಾಸಕ್ಕಾಗಿಯೋ, ವ್ಯವಹಾರಕ್ಕಾಗಿಯೋ, ಉದ್ಯೋಗಕ್ಕಾಗಿಯೋ, ನೆಂಟರ ಸಂದರ್ಶನಕ್ಕಾಗಿಯೋ, ಕ್ರೀಡೆ ಮನೋರಂಜನೆಗಾಗಿಯೋ, ಧರ್ಮ ಪ್ರಚಾರಕ್ಕಾಗಿಯೋ, ರಾಜಕೀಯದ ಕಾರ್ಯ ಚಟುವಟಿಕೆಗಳಿಗಾಗಿಯೋ, ಉತ್ಸಾಹ ಆನಂದಕ್ಕಾಗಿಯೋ, ಪ್ರವಾಸ ಮಾಡುವುದು ಕಾಣಬಹುದು, ಈ ಸಂದರ್ಭದಲ್ಲಿ ಅವರ ಹೊಸ ಜಗತ್ತಿನ ಹೊಸ ಅನುಭವಗಳನ್ನು ಅಭಿವ್ಯಕ್ತಿಸತೊಡಗಿದ ಸಾಹಿತ್ಯ; ಪ್ರವಾಸ ಸಾಹಿತ್ಯವೆಂದು ಪರಿಗಣಿಸಲಾಯಿತು.

ಇತರ ಸಾಹಿತ್ಯ ಪ್ರಕಾರದಂತೆ ಪ್ರವಾಸ ಸಾಹಿತ್ಯಕ್ಕೂ ಕೆಲವು ಲಕ್ಷಣಗಳಿವೆ. ಯಾಕೆಂದರೆ ಇಲ್ಲಿ ಕಲ್ಪನೆ, ರಮ್ಯತೆ, ಸಮಾಜಿಕತೆ, ಧಾರ್ಮಿಕತೆ, ರಾಜಕೀಯತೆ, ಆಚಾರ – ವಿಚಾರ – ಸಂಸ್ಕಾರಗಳ ಅನಾವರಣಗಳಿರುತ್ತವೆ. ಈ ವಿಚಾರವನ್ನು ಡಾ. ಅನಂತರಾಮು ಅವರು ವಸ್ತು ನಿಷ್ಠತೆ, ವ್ಯಕ್ತಿ ನಿಷ್ಠತೆ, ಸಾಹಿತ್ಯಾತ್ಮಕತೆ ಚಿತ್ರಮಯತೆ ಮನೋರಂಜಕತೆ ಹಾಗೂ ಲೌಕಿಕ ದೃಷ್ಟಿಕೋನ ಎಂಬುದಾಗಿ ವರ್ಗೀಕರಿಸುತ್ತಾರೆ. ಇದರಿಂದಾಗಿ ಈ ಸಾಹಿತ್ಯ ಉಳಿದ ಸಾಹಿತ್ಯದಷ್ಟೆ ಸತ್ವ ಮಹತ್ವ ಪಡೆದು ಕೊಂಡಿದೆಂಬುದನ್ನು ಡಾ. ಜಿ. ಎಸ್‌. ಶಿವರುದ್ರಪ್ಪ ಮುಂತಾದ ಚಿಂತಕರು ಅಭಿಪ್ರಾಯಪಡುತ್ತಾರೆ. ಇದನ್ನು ಸೃಜನಶೀಲ ಸಾಹಿತ್ಯವೆನ್ನಬೇಕೋ. ಬೇಡವೆ? ಎಂಬ ಸುದೀರ್ಘವಾದ ಚರ್ಚೆ ವಾದ – ವಿವಾದಗಳೂ ನಡೆದಿವೆಯಾದರೂ ಇದರಲ್ಲಿರುವ ಕಾವ್ಯಾಂಶ, ಪ್ರತಿಪಾದಿಸುವ ರೀತಿ ನೀತಿಗಳನ್ನು ಲಕ್ಷಿಸಿ ಸೃಜನಶೀಲ ಮನಸ್ಸಿನ ಹಿನ್ನೆಲೆಯಲ್ಲಿ ಹುಟ್ಟಿದ ಈ ಸಾಹಿತ್ಯವನ್ನು ಸೃಜನಶೀಲ ಸಾಹಿತ್ಯವೆಂದು ಬಹು ಜನ ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಆ ಎಲ್ಲ ಅಭಿಪ್ರಾಯದ ಸಾರಭೂತ ಆಶಯವನ್ನು ಹೀಗೆ ಕ್ರೋಢಿಕರಿಸಿ ಹೇಳಬಹುದು.

) ವಸ್ತು ನಿಷ್ಠವಾದ ಕಥೆ ಶೈಲಿ – ವಸ್ತು ಸ್ವರೂಪದ ಚಿತ್ರ ಶೈಲಿಯಿಂದ ಕೂಡಿದ್ದು.

) ವೈವಿಧ್ಯತೆಯಲ್ಲಿ ಏಕತೆಯನ್ನು ತಂದು ನಿಲ್ಲಿಸುವಂಥದ್ದು.

) ಜಗತ್ತಿನ ಎಲ್ಲ ಆಗು – ಹೋಗುಗಳನ್ನು ತನ್ನ ತೆಕ್ಕೆಯಲ್ಲಿ ಹಿಡಿದುರವಂತದ್ದು.

) ಇತಿಹಾಸ, ಸಮಾಜಶಾಸ್ತ್ರ, ಮಾನವ ಶಾಸ್ತ್ರ, ಭೌತಶಾಸ್ತ್ರ, ಕಲೆ – ವಾಸ್ತು, ನೃತ್ಯ – ಸಂಗೀತ, ಸಂಸ್ಕಾರಗಳನ್ನೊಳ್ಳಗೊಂಡ ಸಕಲ ಜ್ಞಾನಗಳ ವಿಚಾರ ಸಾಹಿತ್ಯವೆನಿಸಿದೆ.

) ಹಲವು ಜ್ಞಾನ ಶಿಸ್ತುಗಳನ್ನು ಒಂದರೊಳಗೊಂದಿಟ್ಟು ಚಿಂತನ ಮಾಡುವ ವಿಚಾರ ಸರಣಿಗಳ ಮೇಲೆ ಬೆಳಕು ಚೆಲ್ಲುವ, ಆ ಮೂಲಕ ತನ್ನ ಬದುಕನ್ನು ಹಸನಗೊಳಿಸಿಕೊಳ್ಳುವ ಗುರುತರವಾದ ಹೊಣೆಗಾರಿಕೆಯನ್ನು ಈ ಸಾಹಿತ್ಯ ನೀಡಬಲ್ಲದು.

) ಅಭಿವ್ಯಕ್ತಿಯ ದೃಷ್ಟಿಯಿಂದ ಉಪಮೆ – ರೂಪಕ, ದೃಷ್ಟಾಂತ – ಕಥಾ ನಿರೂಪಣ ಶೈಲಿ, ಮೂರ್ತಗೊಂಡು ರಸ ನಿರೂಪಣಾ ಭಾವಗಳಾದ ಅತ್ಯುತ್ತಮ ಸಾಹಿತ್ಯವೆನಿಸಿದೆ.

ಒಟ್ಟಿನಲ್ಲಿ ಕಾವ್ಯಾಂಶ ಘಟನಾವಳಿಗಳ ದಾಖಲೀಕರಣ ಸಾಂಸ್ಕೃತಿಕ ವಿನಿಮಯ ಕರಣಗಳಿಂದಾಗಿ ಇದೊಂದು ಸೃಜನಶೀಲ ಸಾಹಿತ್ಯವೆಂಬ ಮನ್ನಣೆಗೆ ಪಾತ್ರವಾಗಿದೆ. ಈ ಸಾಹಿತ್ಯದ ಸೃಷ್ಟಿಯ ಹಿಂದೆ ಹಲವು ಕಾರಣಗಳಿರಬಹುದು, ಆ ಕಾರಣಗಳ ಹಿನ್ನಲೆಯಲ್ಲಿ ಪ್ರವಾಸ ಸಾಹಿತ್ಯವನ್ನು ವರ್ಗೀಕರಿಸಿ ಅಧ್ಯಯನ ಮಾಡುವ, ಅಧ್ಯಯನ ಮಾಡಿಸುವ ನಿದರ್ಶನಗಳು, ನಮ್ಮಲ್ಲಿವೆ, ಇಲ್ಲಿ ಒಂದು ಮಾತನ್ನು ನವು ಗಮನಿಸಬೇಕು. ಒಂದು ಪ್ರವಾಸ ಸಾಹಿತ್ಯ ಕೃತಿ ಕೇವಲ ಒಂದೇ ವಿಷಯವನ್ನು ಗೆರೆ ಕೊರೆದಂತೆ ನಿರೂಪಿಸುತ್ತವೆ ಎಂಬುದನ್ನು ಕಟ್ಟುನಿಟ್ಟಾಗಿ ಹೇಳಲಾಗದು. ಬದಲಾಗಿ ತಾನು ಪ್ರವಾಸ ಕೈಗೊಂಡ ಉದ್ದೇಶ ಹಿನ್ನೆಲೆಯಲ್ಲಿ ಅದನ್ನು ಅರ್ಥೈಸಿಕೊಳ್ಳಬಹುದಾಗಿದೆ. ವರ್ಗೀಕರಣಕ್ಕೆ ಸಂಬಂಧಿಸಿದಂತೆ ಹಲವಾರು ವಿದ್ವಾಂಸರು ಚರ್ಚೆ ಮಾಡಿದ್ದಾರೆ. ಸಾ. ಶಿ. ಮರಳಯ್ಯನವರು ೧) ತೀರ್ಥಯಾತ್ರೆ, ೨) ಸಾಂಸ್ಕೃತಿಕ, ೩) ಶೈಕ್ಷಣಿಕ, ೪) ವ್ಯವಹಾರಿಕ, ೫) ಪ್ರವಾಸ ಪ್ರೇಮ ಎಂದು ವರ್ಗೀಕರಿಸಿದರೆ ವರದರಾಜ ಹುಯಿಲಗೋಳರು ೧) ಪತ್ರರೂಪ, ೨) ದಿನಚರಿ, ೩) ಕಥಾ ರೂಪವೆಂದು ವಿಭಾಗಿಸಿದ್ದಾರೆ. ಮುಂದುವರೆದು ಪ್ರಾದೇಶಿಕತೆಯನ್ನು ಗಮನಿಸಿ ೧) ಕರ್ನಾಟಕ, ೨) ಭಾರತ ೩) ವಿದೇಶಿಯಾತ್ರಾ ಪ್ರವಾಸ ಸಾಹಿತ್ಯವೆಂದು ತಿಳಿಸುತ್ತಾರೆ. ಎನ್‌. ಎಸ್‌. ತಾರಾನಾಥ ಅವರು ೧) ಮಾಹಿತಿ ಕಥನ, ೨) ತೋರು ವಾಸ್ತವಿಕತೆ ಭ್ರಾಮಕ, ೩) ನಿರ್ದಿಷ್ಟವಾದ ಉದ್ದೇಶ. ಪ್ರವಾಸ ಸಾಹಿತ್ಯಗಳೆಂದು ವರ್ಗೀಕರಿಸಿ ಇವುಗಳಿಗೆ ಹೊಂದಿಕೆಯಾಗುವ ಟ್ರಾವಲ್ಸ್‌ ಆಫ್‌ ಸರ್ ಜಾನ್‌ ಮ್ಯಾಂಡವಿಲ್‌, ಡೇನಿಯಲ್‌ ಡೀಪೋನ್‌ ಮುಂತಾದವರ ಮಾದರಿ ಗ್ರಂಥಗಳನ್ನು ಉದಾಹರಿಸುತ್ತಾರೆ. ಹಾಗೆಯೇ ಇನಾಂದಾರ ಅವರ ಮಂಗಳ ಲೋಕದಲ್ಲಿ ಮೂರು ವಾರಗಳು ಕೃತಿಯನ್ನು ಎತ್ತಿಕೊಂಡು ಪ್ರವಾಸ ಸಾಹಿತ್ಯವೆಂದು ಇಂತಹ ಕೃತಿಗಳನ್ನು ಹೇಳುವುದೆಷ್ಟು ಸಮಂಜಸವೆನ್ನುತ್ತಾರೆ. ಆದರೆ ಡಾ. ಕೆ. ಅನಂತರಾಮುರವರು ಪ್ರವಾಸ ಸಾಹಿತ್ಯವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ ೧) ಸ್ವದೇಶಿ, ೨) ವಿದೇಶ ಪ್ರವಾಸ ಕಥನಗಳೆಂದು ವರ್ಗೀಕರಿಸಿ ಸ್ವದೇಶಿ ಪ್ರವಾಸ ಕಥನಗಳಲ್ಲಿ ಸ್ವರಾಜ್ಯ ಪ್ರವಾಸ ಕಥನ, ಹಾಗೂ ಅನ್ಯ ರಾಜ್ಯ ಪ್ರವಾಸ ಕಥನ ಎಂದೂ, ವಿದೇಶಿ ವ್ರವಾಸ ಸಾಹಿತ್ಯದಲ್ಲಿ ಏಷ್ಯಾ, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಯುರೋಪ್‌, ಆಫ್ರಿಕಾ, ಆಸ್ಟ್ರೇಲಿಯಾ ಪ್ರವಾಸ ಸಾಹಿತ್ಯವೆಂದು ವರ್ಗೀಕರಿಸುವುದನ್ನು ಕಾಣಬಹುದಾಗಿದೆ.

ಒಟ್ಟಿನಲ್ಲಿ ಸ್ವದೇಶಿಯಿರಲಿ ವಿದೇಶಿಯಿರಲಿ ಇಲ್ಲಿ ಅನುಭವಗಳ ಅಭಿವ್ಯಕ್ತಿ ಮುಖ್ಯ ಮತ್ತು ಕೈಗೊಂಡ ಪ್ರವಾಸ ಉದ್ದೇಶವೂ ಕೂಡಾ, ಇಂತಹ ಉದ್ದೇಶಗಳಿಗೆ ಅಭಿವ್ಯಕ್ತಿಗಳಿಗೆ ವ್ಯತ್ಯಾಯವಾದಾಗ ಆ ಸಾಹಿತ್ಯವನ್ನು ಲಲಿತ ಪ್ರಬಂಧ, ಕ್ಷೇತ್ರ ಸಾಹಿತ್ಯ, ರೂಪಕ, ಸ್ಥಳ ಪುರಾಣ ಮಹಾತ್ಮ್ಯೆಗಳೆಂದು ಕರೆಯುವುದು ಸೂಕ್ತವೆಂಬ ಚರ್ಚೆಗಳೂ ನಡೆದಿವೆ, ಅದೇನಿದ್ದರೂ ಇಂದು ಪ್ರವಾಸಿ ತಾಣಗಳ ಹಾಗೂ ಪ್ರವಾಸಿಗಳ ಸಂಖ್ಯೆ ಹೆಚ್ಚು, ಅನುಕೂಲಗಳು ಹೆಚ್ಚಾಗಿರುವುದರಿಂದ ಈ ಕುರಿತ ಸಾಹಿತ್ಯವೂ ಹೆಚ್ಚಾಗಿ ಬೆಳದು ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಸೃಷ್ಟಿಯಾದ ಪ್ರವಾಸ ಸಾಹಿತ್ಯದ ಕೃತಿಗಳನ್ನು ಸಂಕ್ಷಿಪ್ತವಾಗಿ ಸಿಂಹಾವಲೋಕನ ಮಾಡಿ ಈ ಸಾಹಿತ್ಯದ ಹೆಜ್ಜೆ ಗುರುತುಗಳನ್ನು ಕಂಡಿರಿಸುವ ಪ್ರಯತ್ನ ಈ ಲೇಖನವಾಗಿದೆ.

೧೯೯೧ ರಿಂದ ೨೦೦೦ ವರೆಗೆ ಪ್ರಕಟವಾಗಿರುವ ಪ್ರವಾಸ ಕಥನ ಕೃತಿಗಳ ಸಂಖ್ಯೆ ಸುಮಾರು ನಲವತ್ತೊಂಬತ್ತು. (ನನ್ನ ಗಮನಕ್ಕೆ ಬಂದಿರುವ ಬಹುತೇಕ ಕೃತಿಗಳನ್ನು ಗಮನಿಸಿ) ಬೇರೆ ಸಾಹಿತ್ಯ ಪ್ರಕಾರ ಕೃತಿಗಳಿಗೆ ಹೋಲಿಸಿದ್ದಲ್ಲಿ ಇದು ಸಂಖ್ಯಾ ದೃಷ್ಟಿಯಿಂದ ತೀರಾ ಕಡಿಮೆಯೆಂದೇ ಹೇಳಬೇಕು. ಆದರೂ ಪ್ರವಾಸ ಕೈಗೊಂಡವರೆಲ್ಲರೂ ಪ್ರವಾಸ ಕಥನ ಬರೆಯುತ್ತಾರೆಂಬುದಲ್ಲ. ಪ್ರವಾಸ ಕೈಗೊಂಡ ಸೃಜನಶೀಲ ವ್ಯಕ್ತಿ ಮಾತ್ರ ಪ್ರವಾಸ ಕಥನಗಳನ್ನು ಬರೆಯುವುದನ್ನು ಕಾಣಬಹುದು. ಈ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ವಿದೇಶಿ ಪ್ರವಾಸ ಕಥನಗಳು ಹಾಗೂ ಸ್ವದೇಶಿಪ್ರವಾಸ ಕಥನಗಳು ಎಂದು ವರ್ಗೀಕರಿಸಿಕೊಳ್ಳಬಹುದು.

ನಾನು ಗಮನಿಸಿದ ನಲವತ್ತೊಂಬತ್ತು ಪ್ರವಾಸ ಕಥನಗಳಲ್ಲಿ ವಿದೇಶಿ ಪ್ರವಾಸ ಕಥನಗಳ ಸಂಖ್ಯೆ ಇಪ್ಪತ್ತೇಳು. ಹಾಗೆಯೇ ಸ್ವದೇಶಿ ಪ್ರವಾಸ ಕಥನಗಳ ಸಂಖ್ಯೆ ಇಪ್ಪತ್ತೆರಡು ಮಾತ್ರ.

ವಿದೇಶಿ ಪ್ರವಾಸ ಕಥನ

ವಿದೇಶಿ ಪ್ರವಾಸ ಮನುಷ್ಯನ ಚಿಂತನೆಯ ಹುಡುಕಾಟದ ಬೇರೆ – ಬೇರೆ ನಿಲುವುಗಳಾಗಿವೆ. ಅಂದರೆ ಪ್ರವಾಸ ಕೈಗೊಂಡ ಮತ್ತು ಪ್ರವಾಸದಲ್ಲಿ ಕಂಡುಂಡ ವಿಭಿನ್ನ ನಿಸರ್ಗ, ವಿಭಿನ್ನ ಸಂಸ್ಕೃತಿ ವಿಭಿನ್ನ ಜನ, ವಿಭಿನ್ನವಾದ ಪರಂಪರೆ ಮೊದಲಾದವುಗಳನ್ನು ವರದಿಯಂತೆ ಸಂಗ್ರಹಿಸದೆ ಒಬ್ಬ ಸೃಜನಶೀಲ ವ್ಯಕ್ತಿಯಾಗಿ, ತನ್ನಲ್ಲಿ ಉಂಟಾದ ಭಾವನೆಗಳನ್ನು ವಿಚಾರದ ಮಂಥನದಿಂದ ಚರಿತ್ರೆಯ ಸಾಕಾರದಿಂದ ಕಾವ್ಯಾತ್ಮಕವಾಗಿ ಕಟ್ಟಿಕೊಡುವುದರ ಮೂಲಕ ಸಹೃದಯ ಮನಸ್ಸನ್ನು ಸೊರೆಗೈಯುತ್ತಾನೆ. ಈ ರೀತಿಯ ವಿಭಿನ್ನವಾದ ವಿದೇಶಿ ಪ್ರವಾಸ ಪ್ರಾಚೀನ ಕಾಲದಿಂದಲೂ ನಡೆದು ಬಂದಿದ್ದಾಗಿದೆ. ಈ ವಿದೇಶಿ ಪ್ರವಾಸ ಕಥನಗಳ ಸಂಖ್ಯೆ ಈ ದಶಕದಲ್ಲಿ ಇಪ್ಪತ್ತೇಳು ಆಗಿದ್ದರೂ ಅವುಗಳಲ್ಲಿ ಅಮೇರಿಕಾ ದೇಶದ ಪ್ರವಾಸವನ್ನೇ ಕುರಿತು ಬಂದಿರುವ ಕೃತಿಗಳು ಸುಮಾರು ಹನ್ನೆರಡು ಇನ್ನುಳಿದ ವಿದೇಶಿ ಕೃತಿಗಳು ಪ್ರಪಂಚದ ನಾನಾ ಭಾಗಗಳಿಗೆ ಅಂದರೆ ನಾನಾ ದೇಶಗಳಿಗೆ ಸಂಬಂಧಿಸಿದವುಗಳು, ಅಮೇರಿಕಾ ದೇಶದ ಪ್ರವಾಸ ಕಥನಗಳು ಇಲ್ಲಿ ಹೆಚ್ಚಾಗಿರುವುದು ಹಲವಾರು ಕಾರಣಗಳಿಂದ ಎನ್ನಬಹುದು. ಅಂದರೆ ಅಮೇರಿಕಾ ಪ್ರವಾಸ ಕೈಗೊಳ್ಳುವುದು ಬೇರೆ ಬೇರೆ ಕಾರಣಗಳಿಂದ, ಕೇವಲ ಪ್ರವಾಸದ ಉದ್ದೇಶ ಇಟ್ಟುಕೊಂಡು ಹೋಗುವುದಕ್ಕಿಂತ ಇನ್ನಿತರೆ ಕಾರಣಗಳಿಂದ ಅಮೇರಿಕಾ ಪ್ರವಾಸ ಮಾಡುವುದು ಹೆಚ್ಚು. ಅಂದರೆ ವಿದ್ಯಾಭ್ಯಾಸಕ್ಕಾಗಿಯೋ, ವ್ಯಾಪಾರ ವ್ಯವಹಾರಕ್ಕಾಗಿಯೋ, ನೆಂಟರ ಸಂದರ್ಶನಕ್ಕಾಗಿಯೋ, ಕ್ರೀಡೆ – ಮನೋರಂಜನೆಗಾಗಿಯೋ, ಧರ್ಮ ಪ್ರಚಾರಕ್ಕಾಗಿಯೋ, ರಾಜಕೀಯ ಚಟುವಟಿಗಳಿಗಾಗಿಯೋ ಪ್ರವಾಸ ಹೋಗುವುದೇ ಹೆಚ್ಚು.

ಈ ನಿಟ್ಟಿನಲ್ಲಿ ಭೀಮಸೇನ ರಾವ್‌ರವರ ‘ಅಮೇರಿಕಾದ ಜೀವನದ ಅನುಭವಗಳು’ ಎನ್ನುವ ಈ ಕೃತಿ ಬಹಳ ಗಮನೀಯವಾದದ್ದು. ಪ್ರವಾಸಕ್ಕೆಂದು ಹೋದವರು ತುರಾತುರಿಯಲ್ಲಿ ಪ್ರವಾಸ ಸ್ಥಳಗಳನ್ನು ವೀಕ್ಷಿಸಿ, ನೋಡಿದ ಕ್ಷೇತ್ರಗಳನ್ನು ಅಭಿವ್ಯಕ್ತಿಸುವಾಗ ಅಷ್ಟೇ ತುರಾತುರಿಯಲ್ಲಿ ಅಭಿವ್ಯಕ್ತಿಸುವುದುಂಟು. ಆದರೆ ಭೀಮಸೇನ ರಾವ್‌ರವರು ದೀರ್ಘಕಾಲ ಅಮೇರಿಕಾದಲ್ಲಿ ನೆಲಸಿ ಅಲ್ಲಿಯ ಆಗು – ಹೋಗುಗಳನ್ನು ಕೂಲಂಕುಷವಾಗಿ ಓದುಗನ ಮುಂದೆ ಅಭಿವ್ಯಕ್ತಿಸುತ್ತಾರೆ. ಅಲ್ಲಿನ ಜನಜೀವನ, ಸಂಘ ಸಂಸ್ಥೆಗಳ ಕಾರ್ಯ ವೈಖರಿ, ಭಿನ್ನ ಭಿನ್ನವಾದ ಪ್ರವಾಸ ಕ್ಷೇತ್ರಗಳ ವೈಶಿಷ್ಟತೆ ಮತ್ತು ಇಡೀ ಅಮೇರಿಕಾ ದೇಶದ ಪರ್ಯಟನೆಗೈದ ಫಲ ಶೃತಿ ಇದರಲ್ಲಿದೆ. ಮೊದಲು ಶಿಕ್ಷಣಕ್ಕಾಗಿ ಅಮೇರಿಕಾಕ್ಕೆ ಹೊರಟ ಇವರು ಅಲ್ಲಿಯೇ ಉದ್ಯೋಗದಲ್ಲಿ ನೇಮಕಗೊಂಡು ಇಡೀ ಅಮೇರಿಕಾದ ಜೀವಂತ ಚಿತ್ರಣಗಳ ಜೊತೆಗೆ ಭಾರತ ಮತ್ತು ಅಮೇರಿಕಾದ ಸಂಸ್ಕೃತಿಯ ಗೋಜುಗಳನ್ನು ಅಲ್ಲಿಯ ತಿಕ್ಕಾಟಗಳನ್ನು ಮನಪೂರ್ವಕವಾಗಿ ಸಹೃದಯದಲ್ಲಿ ಹಂಚಿಕೊಂಡಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿ ಕಂಡ ಅಮೇರಿಕಾ ನಂತರ ಉದ್ಯೋಗಕ್ಕಾಗಿ ಹೊರಟು ಆಗ ಕಂಡ ಅಮೇರಿಕಾಗಳ ವಿಹಂಗಮ ಚಿತ್ರಣವನ್ನು ರಾವ್‌ರವರು ಆಶ್ಚರ್ಯಕರವಾಗಿ ವಿವೇಚಿಸಿದ್ದಾರೆ. ಹೀಗೆ ವಿದ್ಯಾರ್ಥಿಯಾಗಿ, ಉದ್ಯೋಗಸ್ಥನಾಗಿ, ಪ್ರವಾಸಿಗನಾಗಿ ವಿವಿಧ ದೃಷ್ಟಿಕೋನದಿಂದ ಹೊರ ಬಂದ ಕೃತಿ ಇದಾಗಿದೆ.

ಬಿ. ವಿರೂಪಾಕ್ಷಪ್ಪನವರ “ನಾನು ಕಂಡ ಅಮೇರಿಕಾ” ಪ್ರವಾಸ ಕಥನವು ವಿಶೇಷವಾದದ್ದು. ಇಲ್ಲಿ ವಿರೂಪಾಕ್ಷಪ್ಪನವರು ಅಮೇರಿಕಾ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಆ ಸ್ಥಳಗಳ ಸವಿವರಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾರೆ. ಅಮೇರಿಕಾ ಸಂಸ್ಕೃತಿಯಲ್ಲಿ ಮಿಲಿತ ಗೊಂಡ ಭಿನ್ನ ಭಿನ್ನ ಸ್ವರೂಪಗಳನ್ನು ಇಲ್ಲಿ ಸೂಕ್ಷ್ಮವಾಗಿ ವಿವರಿಸುತ್ತಾರೆ. ಜಗತ್ತಿನ ಬಹುಜನರ ಆಕರ್ಷಣೆಗೆ ಅಮೇರಿಕ ಏಕೆ ಕಾರಣವಾಗಿದೆಂಬುದನ್ನು ಇಲ್ಲಿ ವಿವೇಚಿಸಿದ್ದಾರೆ. ಅಲ್ಲದೆ ಅಮೇರಿಕಾ ಇಂಡಿಯಾ ನಡುವಣ ಕೆಲವು ನಿಲುವುಗಳ ಬಗೆಗೆ ಲೇಖಕರು ಪ್ರಸ್ತಾಪಿಸುತ್ತಾರೆ. ಭಾರತೀಯ ಸಂಸ್ಕೃತಿಯ ಹಿನ್ನಲೆಯಲ್ಲಿ ಅಮೇರಿಕಾದ ಸಂಸ್ಕೃತಿಯನ್ನು ಸಮಯ ಪ್ರಜ್ಞೆಯನ್ನು, ದುಡಿತದ ವಿಧಾನವನ್ನು, ಪ್ರಾಮಾಣಿಕವಾದ ಕಾಯಕ ಪ್ರಜ್ಞೆಯನ್ನು ಲೇಖಕರು ಮೆಚ್ಚಿ ಗುಣಗಾನ ಮಾಡಿದ್ದಾರೆ. ಒಟ್ಟಾರೆ ಅಮೇರಿಕಾದ ಉಪಯುಕ್ತ ಮಾಹಿತಿ ಸಂಗ್ರಹಿಸಲು ಹಾಗೂ ಅಮೇರಿಕಾದ ಸಂಸ್ಕೃತಿಯ ಚಿತ್ರಣವನ್ನು ಅರಿಯಲು ಇದೊಂದು ಉತ್ತಮ ಪ್ರವಾಸ ಕಥನವಾಗಿದೆ.

ಇದೇ ಪ್ರಕಾರದ ಇನ್ನೊಂದು ಪ್ರವಾಸ ಕಥನ. ಅಮೇರಿಕಾ: ವಾಸ ಪ್ರವಾಸ, ಕನ್ನಡ ಹಿರಿಯ ಸಾಹಿತಿಗಳಲ್ಲೊಬ್ಬರಾದ ಶ್ರೀಮತಿ ಪದ್ಮಾ ಶೆಣ್ಕಿಯವರು ತಮ್ಮ ಬಂಧುಗಳ ಮನೆಯಲ್ಲಿ ತಂಗಿ ಅಮೇರಿಕಾದಲ್ಲಿ ಅಮೇರಿಕಾದ ಬದುಕಿನ ಘಟನೆಗಳನ್ನು ಅಲ್ಲದೆ ಅಮೇರಿಕಾದ ವಿಭಿನ್ನ ಸಾಂಸ್ಕೃತಿಕ ಚಹರೆಗಳನ್ನು ಅಧಿಕೃತವಾಗಿ ಮಾಹಿತಿ ಸಂಗ್ರಹದೊಂದಿಗೆ ಓದುಗರಿಗೆ ಉಣಬಡಿಸುತ್ತಾರೆ. ಇಲ್ಲಿ ವಾಸ್ತವತೆ, ಆತ್ಮ ವೃತ್ತಾಂತ ವಸ್ತುನಿಷ್ಠತೆ ಸೃಜನಶೀಲತೆ, ಕವಿ ಹೃದಯತೆ ಎಲ್ಲವನ್ನು ಒಳಗೊಂಡ ಪ್ರವಾಸ ಕಥನ ಇದಾಗಿದೆ. ಭಾಷೆಯ ಅಭಿವ್ಯಕ್ತಿಯಲ್ಲೂ ಶ್ರೀಮತಿ ಪದ್ಮಾ ಶೆಣ್ಕಿರವರು ಜಾಗ್ರತೆಯನ್ನು ವಹಿಸಿಕೊಂಡಿರುವುದು ವೇದ್ಯವಾಗುತ್ತದೆ. “ಅಂಕಿ, ಅಂಶ ದಾಖಲೆಗಳಿಗಿಂತ ವಿಗಿಲಾಗಿ ಸ್ವಾನುಭವ ಜನ್ಮ ವ್ಯಕ್ತಿ ವಿಶಿಷ್ಟತೆಯಿಂದ ಕೂಡಿದ ಪ್ರವಾಸ ಕಥನಗಳು ಓದುಗರಿಗೆ ಹೆಚ್ಚು ಹತ್ತಿರವಾಗುತ್ತದೆ. ಶ್ರೀಮತಿ ಪದ್ಮಾ ಶೆಣ್ಕಿರವರ ಅಮೇರಿಕಾ ವಾಸ ಪ್ರವಾಸ ಶುದ್ದಾಂಗವಾಗಿ ಪ್ರವಾಸ ಕಥನಕ್ಕಿಂತ ಹೆಚ್ಚಾಗಿ ಅಮೇರಿಕಾದ ಕರಾಳ ಬದುಕಿನ ಕನ್ನಡಿ ಹಿಡಿದ ಮಾಹಿತಿ ಗ್ರಂಥ ಎನ್ನಬಹುದು,” ಎನ್ನುವ ಎ. ವಿ. ನಾವಡರವರ ಮಾತು ಅರ್ಥವತ್ತಾಗಿದೆ.

ಅಮೇರಿಕಾ ಮತ್ತು ಭಾರತ ಸಂಸ್ಕೃತಿಗಳ ತೌಲನಿಕ ಅಧ್ಯನದಂತೆ ಮೂಡಿಬಂದಿರುವ ಶ್ರೀ ಮಿತ್ತೂರುರವರ ‘ಅಮೇರಿಕಾ ನಾನು ಕಂಡಂತೆ’ ಎನ್ನುವ ಪ್ರವಾಸ ಕಥನ ಚರ್ಚಿಸಬೇಕಾದಂತ ಕೃತಿ. ಅಮೇರಿಕಾ ಪ್ರವಾಸ ಕೈಗೊಂಡ ಶ್ರೀ ಮಿತ್ತೂರುರವರು ಅಮೇರಿಕಾದ ಪ್ರಮುಖ ಘಟನೆಗಳನ್ನು ಅಲ್ಲಿನ ಸಂಸ್ಕೃತಿಗಳನ್ನು ಜನಜೀವನದ ಸ್ಥಿತಿಯನ್ನು ಅಲ್ಲಿನ ಸಮಯ ಪ್ರಜ್ಞೆಯ ಕಾರ್ಯ ಧಕ್ಷತೆಯನ್ನು ಎಲ್ಲವನ್ನು ಭಾರತ ದೇಶಕ್ಕೆ ಹೋಲಿಸಿ ತೌಲನಿಕವಾಗಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ ಅಂದರೆ ಭಾರತ ಮತ್ತು ಅಮೇರಿಕಾದ ವ್ಯವಸ್ಥೆಯನ್ನು ವಿಶ್ಲೇಷಿತ್ತಾ ಒಂದು ರೀತಿಯ ಅತಿರೇಕಕ್ಕೆ ಹೋಗಿ ಅಮೇರಿಕಾವನ್ನು ಪ್ರಶಂಸಿಸುತ್ತಾ ಭಾರತವನ್ನು, ಭಾರತದ ಸಂಸ್ಕೃತಿಯನ್ನು ಅಣಕಿಸುತ್ತಾರೆ. ಆದರೆ ಮೂಲಭೂತವಾಗಿ ಅಮೇರಿಕಾದಲ್ಲಿರುವ ಲೈಂಗಿಕತೆಯನ್ನು ಒಪ್ಪದ ಲೇಖಕರು ಭಾರತದ ಗುಪ್ತ ಲೈಂಗಿಕತೆಯನ್ನು ಮೆಚ್ಚುವಂತ ಅಂಶವನ್ನು ಇಲ್ಲಿ ಕಾಣುತ್ತೇವೆ.

ಹೀಗೆ ಅಮೇರಿಕಾವನ್ನು ಕೇಂದ್ರವಾಗಿಟ್ಟುಕೊಂಡು ಬಂದ ಪ್ರವಾಸ ಕಥನಗಳ ಸಂಖ್ಯೆ ಅಧಿಕವಾಗಿವೆ. ಅಲ್ಲದೆ ನಾಗೇಶ್‌ ಹೆಗಡೆಯವರ ‘ಗಗನ ಸಖಿಯರ ಸೆರಗ ಹಿಡಿದು’ ಗಮನಿಸುವ ಪ್ರವಾಸ ಕಥನದ ಕೃತಿಯಾಗಿದೆ. ಇದೇ ಪ್ರಕಾರವಾಗಿ ಕೆ. ಎಸ್‌. ರಾಮಚಂದ್ರನ್‌ರವರ ‘ಅಮೇರಿಕಾದಲ್ಲೊಬ್ಬ ಗುಂಪು’, ನಾಗತಿಹಳ್ಳಿ ಚಂದ್ರಶೇಖರ್ ರವರ ‘ಆಯಾನ’. ಎಂ. ಗೋಪಾಲ ಕೃಷ್ಣ ಶಾನಭೋಗರ ‘ಅಮೇರಿಕಾ ಅನುಭವಗಳು’ ಎಚ್‌. ಆರ್. ಚಂದ್ರವರ್ಧನ ರಾವ್‌ರವರ ‘ಪ್ರದಕ್ಷಿಣೆ’; ಇವೆಲ್ಲಾ ಅಮೇರಿಕಾ ಕುರಿತಾಗಿ ಪ್ರಕಟಗೊಂಡ ಪ್ರವಾಸ ಕಥನ ಕೃತಿಗಳಲ್ಲಿ ನೋಡಬಹುದಾಗಿದೆ. ಒಟ್ಟಾರೆ ಅಮೇರಿಕಾದ ಸಿಹಿ ಕಹಿ ಘಟನೆಗಳನ್ನು ಸ್ವಚ್ಛವಾದ ಸಂಸ್ಕೃತಿ ಪರಿಚಯವನ್ನು ಮತ್ತು ಭಾರತ ದೇಶದೊಂದಿಗೆ ಅಮೇರಿಕಾದ ತೌಲನಿಕ ಅಧ್ಯಯನದಂತೆ ಮೂಡಿಬಂದಿವೆ. ಅಲ್ಲದೆ ಅಮೇರಿಕಾದ ರಾಜಕೀಯ ಧಾರ್ಮಿಕ ಸ್ಥಿತಿ ಗತಿ. ವಾಣಿಜ್ಯ ವ್ಯವಹಾರಗಳ ಅಂಶಗಳು ಸುಂದರವಾದ ತಾಣಗಳು, ಸ್ವಚ್ಛಂದವಾದ ಸ್ವತಂತ್ರತೆ ಮೊದಲಾದವುಗಳನ್ನು ಈ ಕೃತಿಗಳ ಒಡಲಾಳದಲ್ಲಿ ಕಾಣಬಹುದಾಗಿದೆ. ಅಮೇರಿಕಾದ ಪ್ರವಾಸ ಕಥನಗಳನ್ನು ಹೊರತುಪಡಿಸಿದರೆ ಯುರೋಪಿನ ಕುರಿತಾದ ಪ್ರವಾಸ ಕಥನಗಳ ಕೃತಿಗಳು ಬಂದಿರುವುದನ್ನು ನಾವು ಗಮನಿಸಬಹುದು. ನಾಡಿನ ಪ್ರಖ್ಯಾತ ಕವಿಗಳು, ಲೇಖಕರು ರಷ್ಯಾದಂತಹ ದೇಶವನ್ನು ಪ್ರವಾಸ ಮಾಡಿ ಆ ದೇಶದೊಂದಿಗೆ ಆದ ಅನುಭವಗಳನ್ನು ತಮ್ಮ ಕೃತಿಗಳಲ್ಲಿ ಮೂಡಿಸಿದ್ದಾರೆ. ಈ ಸಾಲಿನಲ್ಲಿ ಶಿವರಾಮಕಾರಂತರ ‘ಯಕ್ಷ ರಂಗಕ್ಕೊಂದು ಪ್ರವಾಸ’ ಎನ್ನುವ ಕೃತಿ ವಿಶೇಷವಾದದ್ದು. ರಷ್ಯಾದಲ್ಲಿ ಪ್ರದರ್ಶನ ಪಡಿಸಿದ ಯಕ್ಷಗಾನದ ಲೇಖನಗಳ ಸ್ವರೂಪ ಈ ಕೃತಿಯಲ್ಲಿದೆ. ರಷ್ಯಾದಲ್ಲಿ ನಮ್ಮ ಪ್ರದರ್ಶನಗಳು ಲೇಖನಗಳಲ್ಲಿ ಭಾರತೀಯ ಪ್ರದರ್ಶನ ಮತ್ತು ರಷ್ಯಾದ ಸಂಸ್ಕೃತಿಯ ಪರಂಪರಾಗತವಾಗಿ ಬಂದ ಕಲೆಗಳನ್ನು ವಿಶ್ಲೇಷಿಸಿದ್ದಾರೆ.

ಒಟ್ಟಾರೆ ಒಂದು ಜನಾಂಗದ ನಾಶವಾಗಿ ಆ ಸ್ಥಾನದಲ್ಲಿ ಮತ್ತೊಂದು ಸಂಸ್ಕೃತಿಯ ಹೊಸ ತಿರುವನ್ನು ಹೇಗೆ ಹೊಂದುತ್ತದೆಂಬುದನ್ನು ಕಾರಂತರು “ಇಂಕಾ” ಜನಾಂಗದ ಸಂಸ್ಕೃತಿಯನ್ನು ಗಮನದಲ್ಲಿರಿಸಿಕೊಂಡು ಚಿತ್ರಿಸಿದ್ದಾರೆ. ರಷ್ಯಾದ ದೇಶವನ್ನು ಪ್ರವಾಸಗೊಂಡು ಹಿರಿಯ ಲೇಖಕರಾದ ದೇ. ಜ. ಗೌ. ರವರು ‘ವಿದೇಶದಲ್ಲಿ ಮೂರು ವಾರ’ ಎಂಬ ಕೃತಿಯಲ್ಲಿ ರಷ್ಯಾ, ಜರ್ಮನಿ, ಆಸ್ಟ್ರೇಲಿಯಾದಲ್ಲಿ ತಾವು ಕಂಡ ಹೊಸ ಅನುಭವಗಳನ್ನು ಸಹೃದಯರೊಂದಿಗೆ ಹಂಚಿಕೊಂಡಿದ್ದಾರೆ. ಅವರೇ ಹೇಳುವಂತೆ “ನನ್ನದು ಬಿರುಗಾಳಿಯ ಪ್ರವಾಸವಾದ್ದರಿಂದ ನನಗೆ ರಷ್ಯನ್‌ ಭಾಷೆಯಾಗಲೀ ಜರ್ಮನ್‌ ಭಾಷೆಯಾಗಲೀ ಬರುತ್ತಿಲ್ಲವಾದ್ದರಿಂದ ಜನಜೀವನದ ಸಂಪೂರ್ಣ ಪರಿಚಯ ನನಗೆ ದೊರೆಯಿತೆಂದು ಹೇಳುವಂತಿಲ್ಲ” ಎನ್ನುತ್ತಾ ಆ ಭಾಷೆಯನ್ನು ಕಲಿತು ಅವರೊಡನೆ ಕೆಲವು ವರ್ಷ ಬಾಳಿದರೆ ಸಂಪೂರ್ಣ ಅವರ ಸಂಸ್ಕೃತಿಯನ್ನು ಅರಿಯಬಹುದೆಂಬ ಅಭಿಪ್ರಾಯ ತಳೆಯುತ್ತಾರೆ. ಈ ನಿಟ್ಟಿನಲ್ಲಿ ಹರಿದಾಸ ಭಟ್ಟರವರ ‘ರಶಿಯಾದಲ್ಲಿ ಡೊಳ್ಳಿನ ದಿಗ್ವಿಜಯ’ ಕೃತಿಯೂ ಗಮನೀಯ. ಹೀಗೆ ನಾನಾ ದೇಶಗಳನ್ನು ಪ್ರವಾಸ ಮಾಡುವ ಮೂಲಕ ನಾನಾ ವಿಚಾರಗಳಲ್ಲಿ ನನಾ ಸಂಸ್ಕೃತಿಗಳಲ್ಲಿ ಪರಿಚಯಿಸುವ ಪ್ರವಾಸ ಕಥನಗಳು ನಮ್ಮಲ್ಲಿ ಸಾಕಷ್ಟಿವೆ. ಅವುಗಳಲ್ಲಿ ಲತಾ ಗುತ್ತಿಯವರ ‘ನಾನು ಕಂಡ ಅರೇಬಿಯಾ’, ಪಿ. ಆರ್. ತಿಪ್ಪೇಸ್ವಾಮಿರವರ ‘ಕಲಾವಿದ ಕಂಡ ಫ್ರಾನ್ಸ’, ಟಿ. ಮಹಾಬಲೇಶ್ವರ ಭಟ್ಟರವರ ‘ಆಸ್ಟ್ರೇಲಿಯಾದಲ್ಲಿ ಎಪ್ಪತ್ತು ದಿನಗಳು’, ಶಶಿಕಲಾ ನಾಯಕ್‌ರವರ ‘ಪೂರ್ವ ಪಶ್ಚಿಮ ಸಂಸ್ಕೃತಿಗಳ ತುಲನೆ’, ಆಶಾದೇವಿಬೂಬ್‌ರವರ ‘ನನ್ನ ಪ್ರವಾಸ ಕಥನ’ ಎಸ್‌. ಜಾನಕಿ ಬ್ರಹ್ಮರವರ ‘ತಿರುಗಾಟದ ತಿರುಳು’ ಎನ್ನುವ ವಿದೇಶಿ ಕೃತಿಗಳು ಬೇರೆ ಬೇರೆ ದೆಶಗಳ ಬೇರೆ ಬೇರೆ ಸಂಸ್ಕೃತಿಗಳ ತಿರುಳನ್ನು ಪ್ರವಾಸ ಕಥನಗಳ ಮೂಲಕ ಸಹೃದಯಿಗಳಿಗೆ ಅಭಿವ್ಯಕ್ತಿಸಿದ್ದಾರೆ. ಇದರಿಂದ ನಮ್ಮ ದೇಶದ ಸಂಸ್ಕೃತಿಯೊಂದಿಗೆ ವಿದೇಶದ ಸಂಸ್ಕೃತಿಗಳನ್ನು ವಸ್ತು ಸ್ಥಿತಿಯ ತೌಲನಿಕ ವಿವೇಚನೆ ಇಂತಹ ಪ್ರವಾಸ ಕಥನಗಳಿಂದ ನಾವು ಕಾಣಬಹುದಾಗಿದೆ. ಬಹುತೇಕ ಕಾಲದ ಮಿತಿಯಿಂದ ಕೈಗೊಂಡ ಪ್ರವಾಸವಾಗಿರುವುದರಿಂದ ಪೂರ್ಣಪ್ರಮಾಣದ ಮಾಹಿತಿ ಕೊಡಲಾಗುವುದಿಲ್ಲವೆಂಬ ಆತಂಕ ಅಥವಾ ಮನೋಭಾವ ಎಲ್ಲ ಪ್ರವಾಸ ಕಥನಕಾರರಲ್ಲೂ ಕಾಣುವ ಅಂಶವಾಗಿದೆ.

ಒಟ್ಟಾರೆ ಈ ದಶಮಾನದಲ್ಲಿ ಬಂದಿರುವ ವಿದೇಶಿ ಪ್ರವಾಸ ಕಥನಗಳಲ್ಲಿ ಸಿಂಹಪಾಲು ಅಮೇರಿಕಾ ದೇಶ ಪ್ರವಾಸ ಕಥನಗಳಿದ್ದು, ಉಳಿದಂತೆ ಅಲ್ಲೊಂದು ಇಲ್ಲೊಂದು ಬೇರೆ ದೇಶಕ್ಕೆ ಸಂಬಂಧಿಸಿದ ಪ್ರವಾಸ ಕಥನಗಳನ್ನು ಕಾಣಬಹುದು. ಅಮೇರಿಕಾ ದೇಶವನ್ನು ಕೇಂದ್ರವಾಗಿರುವ ಪ್ರವಾಸ ಕಥನಗಳಿಗೆ ಹಲವಾರು ಕಾರಣಗಳಿವೆ.

ಸ್ವದೇಶಿ ಪ್ರವಾಸ ಕಥನಗಳು

ಈ ದಶಮಾನದಲ್ಲಿ ಸ್ವದೇಶಿ ಪ್ರವಾಸ ಕಥನಗಳ ಕೃತಿಗಳು ಪ್ರಕಟವಾಗಿರುವ ಸಂಖ್ಯೆ ಹೆಚ್ಚು ಕಡಿಮೆ ವಿದೇಶಿ ಪ್ರವಾಸ ಕಥನಗಳ ಕೃತಿಗಳಷ್ಟೆ. ಇಲ್ಲಿ ಕರ್ನಾಟಕದ ವಿದ್ವಾಂಸರು ಶೈಕ್ಷಣಿಕ ಪ್ರವಾಸ ಕೈಗೊಂಡು, ರಚಿಸಿದ ಪ್ರವಾಸ ಕಥನಗಳು ಈ ವಿಭಾಗದಲ್ಲಿ ನೋಡಬಹುದು. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಸಹಾಯದಿಂದ ಪ್ರತಿವರ್ಷ ಒಂದೊಂದು ರಾಜ್ಯದ ಪ್ರವಾಸ ಕೈಗೊಂಡು ಅದರ ಫಲ ಶೃತಿಯಾಗಿ ರೂಪಗೊಂಡ ಪ್ರವಾಸ ಕಥನಗಳು ಇದರಲ್ಲಿ ಚರ್ಚಿಸಬಹುದು. ಅಲ್ಲದೆ ನಮ್ಮ ರಾಜ್ಯದಲ್ಲೇ ಪ್ರಸಿದ್ಧವಾದ ಐತಿಹಾಸಿಕ ಪ್ರವಾಸ ಸ್ಥಳಗಳ ಕುರಿತು ಬುಡಕಟ್ಟು ಜನಗಳ ಸಾಂಸ್ಕೃತಿಕ ಕುರಿತು ಬಂದಂತಹ ಕೃತಿಗಳು ಈ ವಿಭಾಗದಲ್ಲಿ ಕಾಣಲಾಗುತ್ತದೆ. ಸ್ವದೇಶಿ ಪ್ರವಾಸ ಕಥನಗಳಲ್ಲಿ ಸಿಂಹಪಾಲು ಉತ್ತರ ಭಾರತಕ್ಕೆ ಸಂಬಂಧಿಸಿದವುಗಳಾಗಿವೆ. ಉತ್ತರ ಭಾರತದ ಪ್ರವಾಸ ಕೈಗೊಂಡು ರಚಿತವಾದ ಕೃತಿಗಳಲ್ಲಿ ಪ್ರಮುಖವಾದವೆಂದರೆ ಡಾ. ಕೃಷ್ಟಾನಂದ ಕಾಮತ್‌ರವರ ‘ಬಸ್ತರ ಪ್ರವಾಸ’ ಕೃತಿಯು ಅಪರೂಪವಾದದ್ದು. ಇಲ್ಲಿ ಮಧ್ಯಪ್ರದೇಶದಲ್ಲಿ ವಾಸಿಸುವ ಒಂದು ಬುಡಕಟ್ಟು ಜನಾಂಗವನ್ನು ಕುರಿತಾದ ಪ್ರವಾಸ ಕಥನ ಇದಾಗಿದೆ. ಬಸ್ತರ ಪ್ರವಾಸ ಸಾಹಿತ್ಯವು ಆದಿವಾಸಿ ಜನಾಂಗವೊಂದರ ಸಮಾಜಿಕ ಜೀವನ ವಿಧಾನವನ್ನು ಮತ್ತು ಆ ಜನರ ಸಂಸ್ಕೃತಿಯ ಪ್ರತೀಕವಾದ ರೂಢಿ – ಸಂಪ್ರದಾಯ ಆಚಾರ – ವಿಚಾರಗಳನ್ನು ಪರಿಚಯಿಸಲಾಗಿದೆ. ಇಂದು ಈ ವೈಜ್ಞಾನಿಕ ಯುಗದಲ್ಲೂ ಈ ರೀತಿಯಾದ ತೀರಾ ಆದಿಮಾನವರಂತೆ ವಾಸಿಸುವ ಒಂದು ಜನಾಂಗದ ಪರಿಚಯ ಕೃತಿ ಇದಾಗಿದೆ. ತುಂಬಾ ಶ್ರಮ ವಹಿಸಿ ಬಸ್ತರ ನಾಡನ್ನು ಪ್ರವೇಶಿಸಿ ಅಲ್ಲಿನ ವಸ್ತುನಿಷ್ಠ ಚಿತ್ರಣಗಳನ್ನು ಈ ಕೃತಿಯಿಂದ ಲೇಖಕರು ಮೂಡಿಸಿದ್ದಾರೆ. ಈ ದಶಮಾನದ ಆರಂಭದಲ್ಲಿಯೇ ಇದೇ ಪ್ರಕಾರದ ಇನ್ನೊಂದು ಕೃತಿ ಹೊರ ಬಂದಿರುವುದನ್ನು ಗಮನಿಸಬಹುದು. ಅದು ಹಿ. ಚಿ. ಬೋರಲಿಂಗಯ್ಯನವರ “ಗಿರಿಜನನಾಡಿಗೆ ಪಯಣ” ಎನ್ನುವ ಕೃತಿ. ಇದು ಕರ್ನಾಟಕದ ಪಶ್ಚಿಮ ಘಟ್ಟದ ಕರಾವಳಿತೀರದಲ್ಲಿನ ಗಿರಿಜನ ಕುರಿತ ಅನುಭವದ ಪ್ರವಾಸ ಕಥನವಾಗಿದೆ. ಈ ಕೃತಿಯ ಬಗ್ಗೆ ಹಿ. ಚಿ. ಬೋರಲಿಂಗಯ್ಯನವರೇ ಹೀಗೆ ಅಭಿಪ್ರಾಯಪಡುತ್ತಾರೆ “ಈ ಪ್ರಯಾಣದ ಬರಹಗಳು ಗಿರಿಜನ ಕುರಿತ ಆಳವಾದ ಸಂಶೋಧನೆಯಲ್ಲಿ ಬದಲಾಗಿ ಕುತೂಹಲದ ಕಣ್ಣು ನೋಡಿದ ಪ್ರಥಮ ಅನುಭವ” ಅನ್ನುವ ಅವರ ಮಾತು ನಿಜಕ್ಕೂ ಮೆಚ್ಚುವಂತಹದು, ಸಂಪೂರ್ಣವಾಗಿ ಅಲ್ಲವೆಂದರು ಒಂದು ಜನಾಂಗದಲ್ಲಿ (ಒಳ ವಿಹಂಗಗಳನ್ನು) ಹುದುಗಿರುವ ಆಂತರಿಕ ಸಂಸ್ಕೃತಿಯ ಬೇರುಗಳನ್ನು ಇಲ್ಲಿ ಚರ್ಚಿಸಿದ್ದಾರೆ. ಹೀಗೆ ಈ ಎರಡು ಕೃತಿಗಳು ಪ್ರವಾಸ ಕಥನ ಕೃತಿಗಳಲ್ಲೇ ವಿಶೇಷವೆಂದು ಹೇಳಬಹುದು. ಉತ್ತರ ಭಾರತಕ್ಕೆ ಸಂಬಂಧಿಸಿದಂತೆ ಹಲವಾರು ಉಪಯುಕ್ತ ಪ್ರವಾಸ ಕಥನಗಳು ಪ್ರಕಟವಾಗಿರುವುದನ್ನು ಕಾಣಬಹುದು. ಇದರಲ್ಲಿ ಎಂ. ಕೆ. ಶ್ರೀಧರ್ ರವರ ‘ಮೌನಕಣಿವೆಯ ಸಾಹಸಯಾತ್ರೆ’, ಶಮಂತರವರ ‘ಗಿರಿಸ್ನೇಹ’, ಕೃಷ್ಣಾನಂದ ಕಾಮತ್‌ರವರ ‘ಮಧ್ಯಪ್ರದೇಶದ ಮಡಿಲಲ್ಲಿ’, ಕೆ. ಜಿ. ವೆಂಕಟರಾಮಪ್ಪನವರ ‘ಹಿಮ ಶೃಂಗ ಮಡಿಲಲ್ಲಿ’, ಪ್ರೊ. ಓ. ಎಲ್‌. ನಾಗಭೂಷಣಸ್ವಾಮಿಯವರ ‘ನನ್ನ ಹಿಮಾಲಯ’, ಬಿ. ಎಸ್‌. ಸುಮಿತ್ರ ಬಾಯಿ ರವರ ‘ಬ್ರಹ್ಮಪುತ್ರ ಕಣಿಮೆಯಲ್ಲಿ’, ಎಂ. ರಾಜಗೋಪಾಲ್‌ ರವರ ‘ಜೈ ಅಮರನಾಥ’ ಹೀಗೆ ಉತ್ತರ ಭಾರತವನ್ನು ಕೇಂದ್ರವಾಗಿರಿಸಿಕೊಂಡು ಬಂದ ಪ್ರವಾಸ ಕಥನಗಳಾಗಿವೆ. ಉತ್ತರ ಭಾರತದ ಪ್ರಮುಖ ಸ್ಥಳಗಳ ಕುರಿತಾಗಿ ಬಂದ ಈ ಕೃತಿಗಳು ಆಯಾ ತಾಣಗಳ ಸಂಪೂರ್ಣ ಚಿತ್ರಣವನ್ನು ನೀಡುತ್ತದೆ, ಜೊತೆಗೆ ಲೇಖಕರ ಅನುಭವಗಳು ಹಾಗೂ ಆಯಾ ಸ್ಥಳಗಳು ಜನರಲ್ಲಿ ನಡೆಯುವ ಸ್ಥಿತ್ಯಂತರಗಳನ್ನು ಕಾಣಬಹುದಾಗಿದೆ.

ಪ್ರವಾಸ ಕಥನಗಳಲ್ಲಿ ವಿಶೇಷವಾಗಿ ಹೆಸರಸಲೇ ಬೇಕಾದ ಕೃತಿಗಳೆಂದರೆ ‘ಭೂಕಂಪದ ಅಂತರಂಗ’ ಎನ್ನುವ ಕೃತಿ ಇದು ಜಿ. ಪಿ. ಬಸವರಾಜರವರದು, ನಂತರ ರವಿ ಬೆಳಗೆರೆಯವರ “ಕಾರ್ಗಿಲ್‌ನಲ್ಲಿ ಹದಿನೇಳು ದಿನ” ಹಾಗೂ ಚನ್ನಣ್ಣ ವಾಲೀಕಾರರ ಮಹಾರಾಷ್ಟ್ರ ರಾಜ್ಯ ತುಂಬ ಹರಿಯುತ್ತಿರುವ ವೇಶ್ಯಾ ಸೋದರಿಯರ “ಕಣ್ಣೀರು ಕಡಲಿನ ಕೋಗಿಲೆ ಗಾನ” ಈ ಮೂರು ಕೃತಿಗಳು ನಡೆದ ಸತ್ಯ ಸಾಕ್ಷ್ಯಾಚಿತ್ರಗಳನ್ನು ನೀಡುವಂತವು. ಜಿ. ಪಿ. ಬಸವರಾಜುರವರ “ಭೂಕಂಪದ ಅಂತರಂಗ” ಮಾಹಾರಾಷ್ಟ್ರದ ಭಿಕರ ಭೂಕಂಪ ಚಿತ್ರಣ ಕೃತಿಯ ವಸ್ತು. ಅಂದರೆ ಲಾಹೂರು ಕಿಲಾರಿಗಳಲ್ಲಿ ಸಂಭವಿಸಿದ ಭೂಕಂಪದಲ್ಲಿ ತಲ್ಲಣಿಸಿದ ಮಾನವರ ಸಚಿತ್ರ ಕಥನ ಇದರಲ್ಲಿದೆ. ಪ್ರಕೃತಿ ವಿಕೋಪದ ಭೂಕಂಪನದಿಂದ ಕಂಪನಗೊಂಡ ಸುತ್ತ ಮುತ್ತ ಪ್ರದೇಶಗಳನ್ನು ಸುತ್ತಿ ಅಲ್ಲಿನ ವಿವರಗಳನ್ನು ಸೋದಾರವಾಗಿ ವಿವರಿಸುವ ಕೃತಿ ಇದಾಗಿದೆ. ಬಿ. ಪಿ. ಬಸವರಾಜುರವರು. ಪ್ರವಾಸ ನಿಮಿತ್ತವಾಗಿ ಆ ಮೂಲಕ ಸತ್ತವರ ದಾರುಣತೆಯನ್ನು ಬದುಕುಳಿದವರ ಬವಣೆಯ ಹಾಹಾಕಾರವನ್ನು ಬಹು ಸೂಕ್ಷ್ಮವಾಗಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ಆರಂಭದಲ್ಲಿ ಪ್ರವಾಸದ ಸಿಹಿಯೂಟ ಉಣ ಬಡಿಸುವ ಇವರು ನಂತರ ಭೀಕರದ ಚಿತ್ರಣವನ್ನು ತೋರಲ್ಪಡಿಸುತ್ತಾರೆ. ಬದುಕುಳಿದ ಜನಗಳ ರೋಚಕ ರೋಧಕ ನುಡಿಗಳನ್ನು ಚಿತ್ರಿಸಿ ಸಹೃದಯರಿಗೆ ಈ ಪ್ರಕೃತಿಯ ಭತ್ಸೆಯನ್ನು ತೋರಿಸುತ್ತಾರೆ.

ಇದೇ ಮಾದರಿಯ ಇನ್ನೊಂದು ಪ್ರವಾಸ ಕಥನ ರವಿ ಬೆಳೆಗೆರೆಯವರ “ಕಾರ್ಗಿಲ್‌ನಲ್ಲಿ ಹದಿನೇಳು ದಿನ” ಈ ಕೃತಿಯಲ್ಲಿ ಗಡಿ ಪ್ರದೇಶದಲ್ಲಿ ನಮ್ಮ ವೀರರ ಶೂರತನವನ್ನು ಮತ್ತು ದೇಶ ರಕ್ಷಣೆಗೆ ತಮ್ಮ ಪ್ರಾಣದ ಹಂಗನ್ನೂ ತೊರೆದು ಶತ್ರುಗಳನ್ನು ಎದೆಗುಂದಿಸುವ ಚಿತ್ರಣ ಈ ಪ್ರವಾಸ ಕಥನವಾಗಿದೆ. ಗಡಿ ಪ್ರದೇಶದ ಜನ ಜೀವನ, ಯೋಧರು ಪಡುವ ಅನೇಕ ರೀತಿಯ ಆತಂಕಗಳು, ತಮ್ಮ ಜನ್ಮ ಭೂಮಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವ ಧೀರತನ ಎಲ್ಲವೂ ಭವ್ಯಯೋಧರ ಚರಿತ್ರೆಯಂತೆ ರೂಪಿಸಿದ್ದಾರೆ. ಒಬ್ಬ ಸಹೃದಯ ಲೇಖಕರಾಗಿ ರಣರಂಗದಲ್ಲಾಗುವ ವಿಚಿತ್ರ ಭಾವನೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾರೆ. ಭೀಕರವಾದ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಅಲ್ಲಿ ನಡೆಯುವ ಅಪರೂಪದ ಘಟನೆಗಳನ್ನು ಪ್ರವಾಸ ಕಥನ ರೂಪವಾಗಿ ಬರೆದಿರುವುದು ಲೇಖಕರ ಧೈರ್ಯ ಮೆಚ್ಚುವಂತಹದ್ದು. ಯೋಧರ ಜೀವನದ ಮಹತ್ವದ ಘಟನೆಗಳನ್ನು ಬಿಚ್ಚು ಮನಸ್ಸಿನಿಂದ ಸಹೃದಯರಿಗೆ ತೋರಿಸುತ್ತಾರೆ. ಪ್ರವಾಸ ಕಥನಗಳಲ್ಲಿ ಬಸವರಾಜುರವರ “ಭೂಕಂಪ ಅಂತರಂಗ” ಹಾಗೂ ರವಿ ಬೆಳಗೆರೆಯವರ “ಕಾರ್ಗಿಲ್‌ನಲ್ಲಿ ಹದಿನೇಳು ದಿನಗಳು” ವಿಶೇಷ ಕೃತಿಗಳಾಗಿವೆ.

ಈ ಮೇಲಿನ ಎರಡು ಕೃತಿಗಳನ್ನು ಹೊರತು ಪಡಿಸಿದರೆ ಪ್ರಾದೇಶಿಕವಾಗಿ ವಿಶೇಷ ಗಮನ ಸೆಳೆಯುವ ಕೃತಿ ಡಾ. ಚಿದಾನಂದ ಮೂರ್ತಿಯವರ ‘ಕನ್ನಡಾಯಣ’ ಇದು ಕನ್ನಡ ನಾಡಿನ ಹಳ್ಳಿ ಹಳ್ಳಿಗಳ ಚರಿತ್ರೆಯನ್ನು ಬಿಚ್ಚಿತೋರಿಸುವ ಪ್ರಾದೇಶಿಕ ಪ್ರವಾಸ ಕಥನ ಕೃತಿ. ಡಾ. ಚಿದಾನಂದ ಮೂರ್ತಿರವರು ಇಡೀ ಕರ್ನಾಟಕವನ್ನು ನಲ್ವತ್ತೆಂಟು ದಿನಗಳ ಪ್ರವಾಸಗೈದು ಪ್ರತಿ ಹಳ್ಳಿ ಹಳ್ಳಿಯಲ್ಲಿನ ವಿಶೇಷತೆಗಳನ್ನು, ಜನ ಜೀವನವನ್ನು, ಜನತೆಯಲ್ಲಿ ಮಿಳಿತಗೊಂಡ ಆಶೋತ್ತರಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ಒಂದು ರೀತಿಯಿಂದ ಇದೊಂದು ಗ್ರಾಮ ಸೂಚಿಯೆಂದರೂ ತಪ್ಪಾಗಲಿಕ್ಕಿಲ್ಲ, ದೇಶದ, ನಾಡಿನ ಅಭಿವೃದ್ಧಿ ಹೊಂದಬೇಕಾದರೆ ಗ್ರಾಮಗಳ ಅಭಿವೃದ್ಧಿ ಅವಶ್ಯಕವಾದದ್ದು ಎಂಬುದನ್ನು ಈ ಕೃತಿಯಿಂದ ತಿಳಿದು ಬರುತ್ತದೆ. ನಾಡಿನ ಸಂಸ್ಕೃತಿ ಗ್ರಾಮೀಣ ಪ್ರದೇಶದಲ್ಲಿ ಹೇಗೆ ವ್ಯಕ್ತವಾಗಿದೆ ಎಂಬುದನ್ನು ಈ ಕೃತಿಯಿಂದ ಅರಿಯಬಹುದಾಗಿದೆ. ಈ ರೀತಿ ಈ ಮೂರು ಕೃತಿಗಳು ಒಂದೊಂದು ಕ್ಷೇತ್ರ ದರ್ಶನದಂತೆ ಮೂಡಿ ಬಂದಿದೆ. ‘ಭೂಕಂಪದ ಅಂತರಂಗ ಹಾಗೂ ಕಾರ್ಗಿಲ್‌ನಲ್ಲಿ ಹದಿನೇಳು ದಿನ’ ಪ್ರವಾಸ ಕಥನಗಳು ಪ್ರವಾಸ ಸಾಹಿತ್ಯ ಕೃತಿಗಳಲ್ಲೇ ವಿಶೇಷವಾದವುಗಳು. ಅದೇ ರೀತಿ ಕರ್ನಾಟಕ ಪ್ರವಾಸ ಕೈಗೊಂಡ ಹಿರಿಯರೂ ವಿದ್ವಾಂಸರೂ ಆದ ಚಿದಾನಂದ ಮೂರ್ತಿಯವರ ‘ಕನ್ನಡಾಯಣ’ ತುಂಬಾ ವಿಶೇಷವಾದ ಪ್ರವಾಸ ಕಥನಗಳಲ್ಲಿ ಸೇರುತ್ತದೆ.

ಪ್ರವಾಸ ಕಥನಗಳಲ್ಲಿಯೇ ತೀರ ವಿಶೇಷವಾದ ಕೃತಿ ಶಮಂತರವರ ‘ಗಿರಿಸ್ನೇಹ’. ಇದು ಸಾಹಸದ ಪ್ರವಾಸಕಥನ, ಮೂವರ ಸ್ನೇಹಮಯ ಪ್ರವಾಸದ ಹಿನ್ನಲೆಯನ್ನು ಒಳಗೊಂಡ ಈ ಕೃತಿ ಮಹಿಳೆಯರ ಸಾಹಸ ಚಿತ್ರವನ್ನು ನೀಡುತ್ತದೆ. ಗಡಿಗಳಲ್ಲಿನ ವಿಚಿತ್ರವಾದ ವಾತಾವರಣಗಳಲ್ಲೂ ಸಂತಸ ಉತ್ಸಾಹ ವ್ಯಕ್ತಪಡಿಸುವ ಲೇಖಕಿ ಸಂಪೂರ್ಣವಾಗಿ ಹಿಮಾಲಯಕ್ಕೆ ಸಹೃದಯ ಓದುಗರನ್ನು ಕರೆದೊಯ್ಯುತ್ತಾರೆ. ಅಲ್ಲಿನ ಪರಿಸರ ಮತ್ತು ಸಾಮಾಜಿಕ ಸ್ಥಿತ್ಯಂತರಗಳನ್ನು ತುಂಬು ಹೃದಯದಿಂದ ವಿವರಿಸುತ್ತಾರೆ. ನೇಪಾಳದ ಒಂದು ಭಾಗದ ಜನಜೀವನದ ಸಚಿತ್ರ ನೀಡುವಲ್ಲಿ ಶಮಂತರವರು ಸಮರ್ಥರೆನ್ನಿಸಿಕೊಂಡಿದ್ದಾರೆ. ದಾರಿಯುದ್ದಕ್ಕೂ ಸಿಗುವ ಪ್ರವಾಸಿಗಳು ಜೊತೆ ಸ್ನೇಹ ಭಾವವನ್ನು ವ್ಯಕ್ತಪಡಿಸುತ್ತ ನೇಪಾಳವು ಪ್ರವಾಸಿಗಳ ಆಕರ್ಷಣೆಯನ್ನು ಸೆಳೆಯುತ್ತಿದೆ ನಿಜ, ಆದರೆ ತನ್ನ ಮೂಲ ಸಂಸ್ಕೃತಿಯಿಂದ ಕಳಚಿಕೊಳ್ಳುವ ಅಂಶಗಳನ್ನು ಇವರು ಇಲ್ಲಿ ಎತ್ತಿ ತೋರಿಸುತ್ತಾರೆ. ಕೊನೆಯಲ್ಲಿ ಮುಕ್ತನಾಥನ ದರ್ಶನದಿಂದಾದ ಆತ್ಮ ತೃಪ್ತಿ ಧನ್ಯತೆಯ ಭಾವವನ್ನು ಹೊಂದಿದ ಜೀವಕ್ಕೆ ಸ್ಪಂದಿಸುವಂತೆ ಸಹೃದಯರನ್ನು ಮುಕ್ತನಾಥನ ಆತ್ಮದರ್ಶನ ಮಾಡಿಸುತ್ತಾರೆ.

ಹೀಗೆ ಉತ್ತರ ಭಾರತಕ್ಕೆ ಸೇರಿದ ಇನ್ನೊಂದು ಕೃತಿ, ಡಾ. ಕೃಷ್ಣಾನಂದ ಕಾಮತ್‌ರವರ ‘ಮಧ್ಯಪ್ರದೇಶದ ಮಡಿಲಲ್ಲಿ’. ಇದರಲ್ಲಿ ಮಧ್ಯಪ್ರದೇಶದಲ್ಲಿ ವಾಸಿಸುವ ಕೊರ್ಕ ಭಿಲ್ಲ ಆದಿನಿವಾಸಿಗಳ ಬದಕನ್ನು ಹಾಗೂ ಅವರು ರೂಢಿಸಿಕೊಂಡ ಸಂಸ್ಕೃತಿಯನ್ನು ನಿಬ್ಬೆರಗಾಗುವಂತೆ ಚಿತ್ರಿಸಿದ್ದಾರೆ. ವೈಜ್ಞಾನಿಕವಾಗಿ ಚರ್ಚಿಸಿರುವ ಇಲ್ಲಿನ ವಿಷಯಗಳು ಕೊನೆಗೆ ಮಾನವೀಯತೆಯ ಅಂತಃಕರಣಪೂರಿತ ದೃಷ್ಟಿಕೋನದಿಂದ ವಿವರಿಸಿ ಓದುಗರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. “ಬರಹಗಾರನ ವ್ಯಕ್ತಿತ್ವದ ಗುರುತುಪಡೆದುಕೊಂಡು ಸರಳ ನಿರೂಪಣ ತಂತ್ರದ ಫಲವಾಗಿ ಮಾನವಕುಲದ ವಿವರಣ ಶಾಸ್ತ್ರ ಎಷ್ಟೋ ಏನೋ ಎಂಬುವಂತಿದೆ, ಕಡೆ ನಿರೂಪಣೆ ಗದ್ಯರೂಪದ ಭಾವಗೀತೆಗಳಾಗುತ್ತವೆ.” ಎಂದು ಅಭಿಪ್ರಾಯ ವ್ಯಕ್ತಪಡಿಸುವ ಎ. ವಿ. ನಾವಡ ರವರ ಮಾತು ನಿಜವೆನಿಸುತ್ತದೆ.

ಈ ಸಾಲಿನಲ್ಲಿ ಬರುವ ಪ್ರವಾಸ ಕಥನಗಳಲ್ಲಿ ಮನಸೆಳೆಯುವ ಇನ್ನೊಂದು ಕೃತಿ ರಾಜಗೋಪಾಲ ರವರ “ಸಾಕಾರದಿಂದ ನಿರಾಕರಕ್ಕೆ” ಇದು ‘ಮಾನಸ ಕೈಲಾಸ’ದ ಯಾತ್ರೆಯ ಪ್ರವಾಸ ಕಥನವಾಗಿದೆ. ಪ್ರವಾಸ ಕಥನದಲ್ಲಿ ರಾಜಗೋಪಾಲ ಕೃಷಿ ಭಿನ್ನವೆಂದೇ ಹೇಳಬೇಕು. ಪ್ರಕೃತಿಯ ರಮಣೀಯತೆಯ ಸೂಕ್ತ ಅನುಭವಗಳ ಸಾಕಾರ ಗೊಳಿಸುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ವಿಧಾನ ಶ್ಲಾಘನೀಯವಾದದ್ದು. ಆದರೂ ಅವರು ವ್ಯಕ್ತಪಡಿಸುವ ಸಮಸ್ಯೆ ಮತ್ತು ಆತಂಕಗಳು ಓದುಗರನ್ನು ಕೂತೂಹಲಗೊಳಿಸುತ್ತವೆ. ನನ್ನ ರಕ್ತದೊಂದಿಗೆ ಬೆರತು ಹೋದ ಆ ನಿರ್ದಿಷ್ಟ ಕಾಲ ಪ್ರವಾಹವನ್ನು ಅಲ್ಲಿನ ಘಟನೆಗಳನ್ನು ಅನುಮಾನಗಳನ್ನು ವ್ಯಕ್ತಪಡಿಸಲು ಯಾವ ಮಾಧ್ಯಮವನ್ನು ಆರಿಸಲಿ ಹಿನ್ನೆಲೆಗೆ ‘ಅದ್ಭುತ’ ಆ ವಾಕ್‌ಗಳ ಹೇಳ ತೀರದ ಋಷಿ ನಡೆತದ ತೀವ್ರ ಆಯಾಸ ಮತ್ತು ಕಾಡಿದ ಹಸಿವೆಗಳನ್ನಷ್ಟೆ ಶಾಯಿ ಭಾವದಲ್ಲಿ ಇರಿಸಿಕೊಂಡು ಕ್ಷಣ ಕ್ಷಣಗಳ ದೈಹಿಕ ಮತ್ತು ಮಾನಸಿಕ ಸ್ಥಿತಿಗಳನ್ನು ಪ್ರತಿಬಿಂಬಿಸುವಂತೆ ಬಲ್ಲ ಶಬ್ಧಗಳಲ್ಲಿ ಗೀಚುವ ಪ್ರಯತ್ನ ಮಾಡಬೇಕೆ? ಒಂದು ಬರಹದ ಆಯ್ಕೆಗೆ ಎಲ್ಲವೂ ಮುಖ್ಯವಲ್ಲವೇ? ಎಂಬ ಲೇಖಕರು ತಮ್ಮ ಈ ಪ್ರವಾಸ ಕಥನದಲ್ಲಿ ಇರಿಸಿಕೊಂಡ ಆಂಶಗಳನ್ನು ಕಾಣಬಹುದಾಗಿದೆ. ಇದೇ ಪ್ರಕಾರ ಇನ್ನೊಂದು ವಿಶೇಷವಾದ ಕೃತಿ ಚನ್ನಣ್ಣ ವಾಲೀಕಾರರವರದು ಮಹಾರಾಷ್ಟ್ರಾದಾದ್ಯಂತ ಮಹಾ ನಗರದಲ್ಲಿ ವೇಶ್ಯಾವಾಟಿಕೆಯಲ್ಲಿ ಬಳಲುತ್ತಿರುವ ಹೀನ ಹೆಣ್ಣುಗಳ ಕಣ್ಣೀರ ಕಥೆ ಇದಾಗಿದೆ. ಈ ರೀತಿಯ ಪ್ರವಾಸಿ ಕಥನಗಳ ಕೃತಿಗಳು ತೀರ ಅಪರೂಪ. ವಿಭಿನ್ನವಾದ ವಿಶೇಷವಾದ ಸಂಸ್ಕೃತಿಯನ್ನು ಒಳಗೊಂಡ ಕೃತಿಗಳನ್ನು ಇಲ್ಲಿ ಕಾಣಬಹುದು.

ಒಟ್ಟು ಈ ದಶಮಾನದಲ್ಲಿ ಬಂದಂತ ಹಲವಾರು ಗ್ರಂಥಗಳನ್ನು ನಿಯತ ಕಾಲಿಕೆಗಳೆಲ್ಲಾ ಪರಿಶೀಲಿಸಿ, ಪ್ರಕಟವಾದ ಕೃತಿಗಳ ಪಟ್ಟಿಯನ್ನು ಕೊಡಲಾಗಿದೆ. ಅಲ್ಲದೆ ಪ್ರವಾಸ ಕಥನಗಳಲ್ಲಿ ವಾರ ಪತ್ರಿಕೆಗಳಲ್ಲಿ ಮತ್ತು ಮಾಸ ಪತ್ರಿಕೆಗಳ ಸೇವೆಯನ್ನು ದಿನ ಪತ್ರಿಕೆಯ ಮಾಹಿತಿಯನ್ನು ಗಮನಿಸಲೇಬೇಕು. ಪ್ರವಾಸ ಕೈಗೊಂಡ ಪ್ರವಾಸಿಗ ಬಿಡಿ – ಬಿಡಿ ಲೇಖನ ರೂಪದಲ್ಲಿ ಪತ್ರಿಕೆಗಳ ಮೂಲಕ ಸಹೃದಯನಿಗೆ ಮುಟ್ಟಿಸುವುದು ಯೋಗ್ಯವೇ ಆಗಿದೆ.

ಹೀಗೆ ಪ್ರವಾಸ ಸಾಹಿತ್ಯವು ಸಾಮಾಜಿಕ ಅಧ್ಯಯನದಿಂದ ಒಂದು ಸಾಂಸ್ಕೃತಿಕ ಅಧ್ಯಯನವಾಗಿ ವಿಸ್ತರಿಸುವುದು ಕಾಣಬಹುದಾಗಿದೆ. ಸಾಹಿತಿಯಲ್ಲಿ ಇರಬೇಕಾದ ಎಲ್ಲಾ ವಿಶೇಷ ಗುಣಗಳಿರುವಂತೆ ಪ್ರವಾಸ ಕಥನಗಾರನಿಗೂ ಇರಬೇಕಾಗುತ್ತದೆ. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಪ್ರವಾಸ ಕಥನಗಾರನಿಗೆ ಇರಬೇಕಾಗುತ್ತದೆ. ಏಕೆಂದರೆ “ಕೋಶ ಓದಬೇಕು ಇಲ್ಲವೆ ದೇಶ ನೋಡಬೇಕು” ಎನ್ನುವಂತೆ ಕೋಶ ಓದಿ ಅರಗಿಸಿ ಕೊಳ್ಳುವಂತೆ ನೋಡಿದ ದೇಶವನ್ನು ಸಹೃದಯನಿಗೆ ಹೃದಯಸ್ಪರ್ಶಿಯಾಗುವಂತೆ ತಿಳಿಸಬೇಕಾದರೆ ಸಾಹಿತಿಗಿಂತ ಪ್ರತಿಭಾ ಸಂಪನ್ನನಾಗಿರಬೆಕು.ಡಾ.ಕೆ.ಅನಂತರಾಮು ರವರು ಒಬ್ಬ ಪ್ರವಾಸ ಕಥನಕಾರರಿಗೆ ಇರಬೇಕಾದ ಗುಣಗಳನ್ನು ಹೀಗೆ ವ್ಯಕ್ತಪಡಿಸುತ್ತಾರೆ. “ಪ್ರವಾಸ ಕಥನಕಾರನು ಪ್ರತಿಭೆ, ಪಾಂಡಿತ್ಯ, ಉತ್ಪತ್ತಿ ಮತಿತ್ವಗಳ ತ್ರಿವೇಣಿ ಸಂಗಮನಾಗಿರಬೇಕು. ಲೋಕದ ಎಲ್ಲ ಸದ್ವದ್ವಿಚಾರವು ನನಗೆ ಬೇಕು, ಎಲ್ಲ ಜ್ಞಾನವು ನನಗೆ ಬೇಕು ಎಂಬ ಸರ್ವ ಕುತೂಹಲ ಅವನಾಗಿರಬೇಕು. ಸ್ನೇಹ ಶೀಲವೂ, ಆಸ್ತಿಕವೂ, ಉದಾರವೂ, ನಿರಾಡಂಬರವೂ, ಪ್ರಾಮಾಣಿಕವೂ, ಗರ್ವರಹಿತವೂ ಮಂದಹಾಸಾಯುಕ್ತವೂ, ಆದ ವ್ಯಕ್ತಿತ್ವ ಅವನದಾಗಿರಿಬೇಕು. “ಇಂತಹ ಪ್ರವಾಸ ಕಥನಕಾರನಿಂದ ಉತ್ತಮ ಕೃತಿ ಬರಬಹುದೆಂದು ಅವರು ಅಭಿಪ್ರಾಯ ಪಡುತ್ತಾರೆ. ಜಗತ್ತಿನ ವಿಶಾಲತೆ, ವೈವಿಧ್ಯತೆ, ವರ್ಣಮಯತೆ, ಸಮೃದ್ಧಿಯಾದ ವಿಚಾರ ಶೀಲತೆ ಪ್ರವಾಸ ಸಾಹಿತ್ಯದಿಂದ ತಿಳಿದು ಬರುತ್ತದೆ. ಅಲ್ಲದೆ ನಮ್ಮ ಸಂಕುಚಿತ ಸ್ವಭಾವದ ಗರ್ವ ಭಂಗಕ್ಕೆ ಒಂದು ಉತ್ತಮವಾದ ಸಾಹಿತ್ಯ ಪ್ರಕಾರ ಪ್ರವಾಸ ಕಥನ ಪ್ರಕಾರ ಎಂದು ಹೇಳಬಹುದು. ಪ್ರವಾಸ ಕಥನಗಳು ನಮ್ಮೊಳಗಿನ ಸಂಕುಚಿತವನ್ನು ಕಳೆಯುವ ಹಾಗೂ ಕತ್ತಲನ್ನು ಹೋಗಲಾಡಿಸುವ ‘ವಿಶ್ವದ ಜ್ಞಾನ ದೀವಿಗೆ’ ಗಳೆನ್ನಬೇಕಾಗುತ್ತದೆ.