ಕಂ|| ಮೃಗರಾಜನಖರ ಬಾಣಾ
ಳಿಗಳಿಂ ತೆಗೆನೆದು ಶಲ್ಯನುಱದಿಸೆ ಬಿದುವಂ|
ಮೃಗರಾಜಂಗಳೆ ಪೋೞ್ವವೊ
ಲಗಲ್ವಿನಂ ಪೋೞ್ದುವುಗ್ರ ಬಾಣಾವಳಿಗಳ್|| ೧೦೯

ವ|| ಅಂತಾ ದಂತಿಘಟೆಯಂ ಪಡಲ್ವಡಿಸಿ ನೀಳನೇಱದಾನೆಯುಮನೂಱ ಕೊಂಡೆಚ್ಚಾಗಳ್-

ಕಂ|| ಪೆಱಗಿಡುವ ದಂತಿಯಂ ಕಲಿ
ನಿಱಸಿ ಚಲಂ ನೆಲಸೆ ತೋಱಕುಡುವುದುಮಾಗಳ್|
ಪೊಱಮುಯ್ವುವರಂ ತೆಗೆನೆ
ದುಱದೆಚ್ಚಂ ಶಲ್ಯನಾಂತ ನೀಳನ ತಲೆಯಂ|| ೧೧೦

ವ|| ಅಂತು ನೀಳಂ ನೀಳಗಿರಿಯ ಮೇಗಣಿಂ ಬಱಸಿಡಿಲ್ ಪೊಡೆಯೆ ಕೆಡೆವ ಮೃಗರಾಜನಂತೆ ಹಸ್ತಿಮಸ್ತಕದಿಂ ಕೆಡೆವುದುಮತ್ತ ಭೂರಿಶ್ರವನ ಮೊನೆಯೊಳ್ ಕಾದುತ್ತಿರ್ದುತ್ತರಂ ನಾಲ್ವತ್ತು ಸಾಸಿರಮಾನೆವೆರಸರಸನಂ ಪೆಱಗಿಕ್ಕಿ ಬಂದಾಂತಾಗಳ್-

ಚಂ|| ನಗೆ ಪಗೆವಾಡಿ ಗೋಗ್ರಹಣದೊಳ್ ಪೊಱಮಾಱದ ಬನ್ನಮೊಂದು ನೆ
ಟ್ಟಗೆ ಮನಮಂ ಪಳಂಚಲೆಯೆ ಮಾಣದೆ ಶಲ್ಯನನಂದಶಲ್ಯನಂ|
ಬಗೆವವೊಲೇಳಿದಂ ಬಗೆದು ದಂತಿಯನಾಗಡೆ ತೋಱಕೊಟ್ಟು ತೊ
ಟ್ಟಗೆ ರಥಮಂ ಪಡಲ್ವಡಿಸಿ ಪೊೞ್ದನರಾತಿಯನಸ್ತ್ರಕೋಟಿಯಿಂ|| ೧೧೧

ವ|| ಅಂತುತ್ತರಂ ತನಗಳವುಮದಟುಂ ರಾಜೋತ್ತರಮಾಗೆ ಕಾದಿದೊಡೆ ಶಲ್ಯಂ ವಿರಥನಾಗಿ ಸಿಗ್ಗಾಗಿ-

ಉ|| ತಾರಕನಂ ಗುಹಂ ಮುಳಿದು ಶಕ್ತಿಯಿನಾಂತಿಡುವಂತರಾತಿ ಸಂ
ಹಾರಕವಪ್ಪ ವಿಸುರಿತ ಶಕ್ತಿಯಿನಾತನನಿಟ್ಟು ಖೞ್ಗದಿಂ|
ವಾರಣಮಂ ಪಡಲ್ವಡಿಸಿ ತಾಂ ಪೆಱಪಿಂಗುವುದುಂ ಬಲಕ್ಕೆ ಹಾ
ಹಾ ರವಮುಣ್ಮೆ ದಂತಿರವೆರಸಾಜಿಯೊಳುತ್ತರನೞ ತೞದಂ|| ೧೧೨

ವ|| ಅಂತುತ್ತರನಂ ಜವಂಗೆ ಪೊಸತಿಕ್ಕುವಂತಿಕ್ಕಿ ಬಸವೞದ ಶಲ್ಯನಂ ಕೃತವರ್ಮಂ ತನ್ನ ರಥಮನೇಱಸಿಕೊಂಡು ನಿಂದನನ್ನೆಗ ಮಿತ್ತಲಮರಾಪಗಾಸುತನ ಮೊನೆಯೊಳ್ ಭರಂಗೆಯ್ದು ಕಾದುವ ಸೇನಾನಾಯಕಂ ಶ್ವೇತಂ ತನ್ನ ತಮ್ಮನತೀತನಾದುದಂ ಕೇಳ್ದು-

ಯಾದ ನೀಲನು ಮಧ್ಯೆ ನುಗ್ಗಿ ಹನ್ನೆರಡು ಸಾವಿರ ಆನೆಗಳೊಡನೆ ಕೂಡಿ ಪ್ರತಿಭಟಿಸಿದನು. ೧೦೯. ಸಿಂಹದ ಉಗುರಿನಂತಿದ್ದ ಬಾಣಗಳ ಸಮೂಹದಿಂದ ಶಲ್ಯನು ದೀರ್ಘವಾಗಿ ಸೆಲೆದು ಹೊಡೆಯಲಾಗಿ ಕುಂಭಸ್ಥಳಗಳನ್ನು ಸಿಂಹಗಳೇ ಸೀಳುವ ಹಾಗೆ ಆ ತೀಕ್ಷ್ಣವಾದ ಬಾಣಸಮೂಹಗಳು (ಕುಂಭಸ್ಥಳಗಳನ್ನು) ಬೇರೆಯಾಗುವ ಹಾಗೆ (ಹೋಳಗಳಾಗುವ ಹಾಗೆ) ಸೀಳಿ ಹಾಕಿದುವು. ವ|| ಹಾಗೆ ಆ ಆನೆಯ ಸಮೂಹವನ್ನು ಚೆಲ್ಲಾಪಿಲ್ಲಿಯಾಗುವ ಹಾಗೆ ಮಾಡಿ ನೀಲನು ಹತ್ತಿದ ಆನೆಯನ್ನೂ ಬಲವಾಗಿ ಅಮುಕಿ ಹೊಡೆದನು.

೧೧೦. ಹಿಮ್ಮೆಟ್ಟುತ್ತಿದ್ದ ಆನೆಯನ್ನು ಶೂರನಾದ ನೀಲನು ನಿಲ್ಲಿಸಿ ಹೆಚ್ಚಿನ ಛಲದಿಂದ ಅದನ್ನು ಶಲ್ಯನ ಮೇಲೆ ಛೂಬಿಡಲು ಆಗ ಶಲ್ಯನು ಭುಜದವರೆಗೆ ಬಾಣಗಳನ್ನು ಸೆಳೆದು ತನ್ನನ್ನು ಪ್ರತಿಭಟಿಸಿದ ನೀಲನ ತಲೆಯನ್ನು ಸಾವಕಾಶಮಾಡದೆ- ವೇಗವಾಗಿ ಹೊಡೆದನು. ವ|| ನೀಲನು ಬರಸಿಡಿಲು ಹೊಡೆಯಲು ನೀಲಪರ್ವತದ ಮೇಲಿನಿಂದ ವೇಗವಾಗಿ ಕೆಳಗುರುಳುವ ಸಿಂಹದ ಹಾಗೆ ಆನೆಯ ಕುಂಭಸ್ಥಳದಿಂದ ಕೆಡೆದನು. ಆಕಡೆ ಭೂರಿಶ್ರವನ ಯುದ್ಧದಲ್ಲಿ ಕಾದುತ್ತಿದ್ದ ಉತ್ತರನು ನಲವತ್ತುಸಾವಿರ ಆನೆಯೊಡನೆ ಕೂಡಿ ಬಂದು ರಾಜನನ್ನು ಹಿಂದಿಕ್ಕಿ ಪ್ರತಿಭಟಿಸಿದನು. ೧೧೧. ಗೋಗ್ರಹಣಕಾಲದಲ್ಲಿ ಶತ್ರುಸೈನ್ಯವು ನುಗ್ಗುವ ಹಾಗೆ ಬೆನ್ನಿತ್ತುಹೋದ ಅವಮಾನವು ನೇರವಾಗಿ ತನ್ನ ಮನಸ್ಸನ್ನು ತಗುಲಿ ವೇದನೆಯನ್ನುಂಟುಮಾಡುತ್ತಿರಲು ತಡೆಯದೆ ಉತ್ತರನು ಶತ್ರುರಾಜನನ್ನು ಅಸ್ತ್ರರಹಿತನಾದವನನ್ನು ನೋಡುವ ಹಾಗೆ ಉದಾಸೀನದಿಂದ ಕಡೆಗಣಿಸಿ ನೋಡಿ (ತನ್ನ) ಆನೆಯನ್ನು ಅವನ ಮೇಲೆ ಛೂಬಿಟ್ಟು ಒಮ್ಮೆಯೇ ತೇರಿನಿಂದ ಕೆಳಗುರುಳಿಸಿ ಶತ್ರುವನ್ನು ಬಾಣಸಮೂಹದಿಂದ ಹೂಳಿದನು. ವ|| ಹಾಗೆ ಉತ್ತರನು ತನಗೆ ಪರಾಕ್ರಮವೂ ಶಕ್ತಿಯೂ ಚಂದ್ರನಂತೆ ಅಭಿವೃದ್ಧಿಯಾಗುವ ಹಾಗೆ ಕಾದಲು ಶಲ್ಯನು ರಥಹೀನನಾಗಿ ಅವಮಾನಗೊಂಡು- ೧೧೨. ಹಿಂದೆ ತಾರಕಾಸುರನನ್ನು ಷಣ್ಮುಖನು ಎದುರಿಸಿ ಶಕ್ತ್ಯಾಯುಧದಿಂದ ಹೊಡೆದ ಹಾಗೆ ಶತ್ರುಸಂಹಾರವೂ ಕಾಂತಿಯುಕ್ತವೂ ಆದ ಶಕ್ತ್ಯಾಯುಧದಿಂದ ಉತ್ತರನನ್ನು ಹೊಡೆದು ಆತನ ಆನೆಯನ್ನು ಕೆಳಗುರುಳಿಸಿದನು. ಪಾಂಡವಸೈನ್ಯದಲ್ಲಿ ಹಾ ಹಾ ರವವನ್ನುಂಟುಮಾಡಿ ಶಲ್ಯನು ಹಿಂದಿರುಗುತ್ತಿರಲು ಯುದ್ಧದಲ್ಲಿ ಉತ್ತರನು ಆನೆಯೊಡನೆ ಸತ್ತು ಕೆಳಗುರುಳಿದನು (ಕುಸಿದನು). ವ|| ಉತ್ತರನನ್ನು ಯಮನಿಗೆ ಹೊಸದಾಗಿ ಬಲಿ ಕೊಡುವ ಹಾಗೆ ಬಲಿಕೊಟ್ಟು ಶಕ್ತಿಗುಂದಿದ ಶಲ್ಯನನ್ನು ಕೃತವರ್ಮನು

ಚಂ|| ಪ್ರಳಯಪಯೋವೋಲಳುರ್ದು ಪೆಂಕುಳಿಗೊಂಡ ಮದೇಭವೈರಿವೋಲ್
ಕೆಳರ್ದು ಲಯಾಗ್ನಿವೋಲಳುರ್ದು ಮದ್ರಮಹೀಶನನೆಯ್ದೆ ತಾಗೆ ಬ|
ಳ್ವಳ ಬಳೆದತ್ತು ಶಲ್ಯನೊಳೆ ಕಾಳೆಗಮೀಗಳೆನುತ್ತುಮಂತೆ ಕೆ
ಯ್ಕೊಳಲಹಿಕೇತು ಸಿಂಧುತನಯಂಬೆರಸಾಗಡೆ ಬಂದು ತಾಗಿದಂ|| ೧೧೩

ವ|| ಇತ್ತ ಧರ್ಮಪುತ್ರನುಂ ವಿರಾಟ ಧೃಷ್ಟದ್ಯುಮ್ನ ಶಿಖಂಡಿ ಚೇಕಿತಾನ ಕೇಕಯ ಸಾತ್ಯಕಿ ನಕುಳ ಸಹದೇವ ಸೌಭದ್ರ ಪ್ರಮುಖ ನಾಯಕರ್ವೆರಸು ರಣಪಟಹಂಗಳಂ ನೆಗೞ್ಚೆ ಕೃಪ ಕೃತವರ್ಮ ವಿವಿಂಶತಿ ವಿಕರ್ಣ ಚಿತ್ರಸೇನ ಸೋಮದತ್ತ ಭಗದತ್ತ ಬಾಹ್ಲೀಕ ಭೂರಿಶ್ರವ ಪ್ರಭೃತಿಗಳ್ ಗಱಸನ್ನೆಗೈದು ಕಾದುವಾಗಳ್-

ಚಂ|| ನಡುವ ಸರಲ್ ಸರಲ್ಕೊಳೆ ಸುರುಳ್ವ ಹಯಂ ಹಯದುಳ್ಗರುಳ್ಗಳೊಳ್
ತೊಡರ್ವ ಭಟರ್ ಭಟರ್ಕಳೊಳೆ ತೊೞ್ತುೞಮಾೞ್ಪ ರಥಂ ರಥಕ್ಕೆ ವಾ|
ಯ್ದಡಿಗಿಡೆ ಮೆಯ್ವೊಣರ್ಚುವ ಮಹಾರಥರಾಜಿಯೊಳಂತಗುರ್ವಿನ
ಚ್ಚುಡಿದಿರೆ ಕಾದಿ ಬಿಚ್ಚೞಸಿದರ್ ಬಿಸುನೆತ್ತರ ಸುಟ್ಟುರೆ ಸೂಸುವನ್ನೆಗಂ|| ೧೧೪

ವ|| ಅಂತೆರಡುಂ ಪಡೆಯ ನಾಯಕರೊರ್ವರೊರ್ವರೊಳ್ ತಲೆಮಟ್ಟು ಕಾದುವಾಗಳ್ ಶ್ವೇತಂ ತನ್ನ ತಮ್ಮನೞವಿನೊಳಾದ ಮುಳಿಸಿನೊಳ್ ಕಣ್ಗಾಣದೆ ಶಲ್ಯನಂ ಮುಟ್ಟೆವಂದು-

ಚಂ|| ಮುಳಿಸಿನೊಳೆಯ್ದೆ ಕೆಂಪಡರ್ದ ಕಣ್ಗಳಿನೊರ್ಮೆಯೆ ನುಂಗುವಂತಸುಂ
ಗೊಳೆ ನಡೆ ನೋಡಿ ಮಾಣದುರಮಂ ಬಿರಿಯೆಚ್ಚೊಡೆ ಸೂಸಿ ಪಾಯ್ವಸೃ|
ಗ್ಜಳಮವನುಗ್ರ ಕೋಪಶಿಖಿ ತಳ್ತಳುರ್ವಂತೆವೊಲಾಗೆ ಶಲ್ಯನಾ
ಗಳೆ ರಣದೊಳ್ ನೆಱಲ್ದೊಡವನಂ ಪೆಱಗಿಕ್ಕಿ ಸುರಾಪಗಾತ್ಮಜಂ|| ೧೧೫

ವ|| ಅಂತು ಪ್ರಳಯಕಾಲದಂದು ಮೂಡುವ ಪನ್ನಿರ್ವರಾದಿತ್ಯರ ತೇಜಮುಮಂ ಮಹೇಶ್ವರ ಭೈರವಾಡಂಬರಮುಮಂ ಯುಗಾಂತ ಕಾಲಾಂತಕನ ಮಸಕಮುಮಂ ತನ್ನೊಳಳವಡಿಸಿಕೊಂಡು-

ತನ್ನ ರಥದಲ್ಲಿ ಹತ್ತಿಕೊಂಡು ತಾನು ಯುದ್ಧಕ್ಕೆ ನಿಂತನು. ಅಷ್ಟರಲ್ಲಿ ಈಕಡೆ ಭೀಷ್ಮನು ಯುದ್ಧದಲ್ಲಿ ಆರ್ಭಟಿಸಿ ವೇಗದಿಂದ ಯುದ್ಧಮಾಡುತ್ತಿದ್ದ ಸೇನಾನಾಯಕನಾದ ಶ್ವೇತನು ತನ್ನ ತಮ್ಮನು ಸತ್ತುಹೋದುದನ್ನು ಕೇಳಿದನು- ೧೧೩. ಪ್ರಳಯಕಾಲದ ಸಮುದ್ರದಂತೆ ವ್ಯಾಪಿಸಿ ಹುಚ್ಚುಹಿಡಿದ ಸಿಂಹದಂತೆ ಪ್ರಳಯಾಗ್ನಿಯಂತೆ ಹರಡಿ ಶಲ್ಯರಾಜನನ್ನು ವೇಗದಿಂದ ಬಂದು ತಾಗಿದನು. ಈಗ ಶಲ್ಯನಲ್ಲಿ ಯುದ್ಧವು ಅಕವಾಗಿ ಬೆಳೆದಿದೆ ಎಂದು ಹೇಳುತ್ತ ದುರ್ಯೋಧನನು ಆ ಯುದ್ಧಭಾರವನ್ನು ತಾನೇ ವಹಿಸುವುದಕ್ಕಾಗಿ (ಶಲ್ಯನನ್ನು ರಕ್ಷಿಸುವುದಕ್ಕಾಗಿ) ಭೀಷ್ಮನೊಡನೆ ಅಲ್ಲಿಗೆ ಬಂದು ತಾಗಿದನು. ವ|| ಈಕಡೆ ಧರ್ಮರಾಜನೂ ವಿರಾಟ, ಧೃಷ್ಟದ್ಯುಮ್ನ, ಶಿಖಂಡಿ, ಚೇಕಿತಾನ, ಕೇಕಯ, ಸಾತ್ಯಕಿ, ನಕುಲ, ಸಹದೇವ, ಅಭಿಮನ್ಯುವೇ ಮೊದಲಾದ ನಾಯಕರೊಡಗೂಡಿ ಯುದ್ಧರಂಗಕ್ಕೆ ಬಂದು ರಣಭೇರಿಯನ್ನು ಹೊಡೆಯಿಸಿದನು. ಕೃಪ, ಕೃತವರ್ಮ, ವಿವಿಂಶತಿ, ವಿಕರ್ಣ, ಚಿತ್ರಸೇನ, ಸೋಮದತ್ತ, ಭಗದತ್ತ, ಬಾಹ್ಲಿಕ, ಭೂರಿಶ್ರವರೇ ಮೊದಲಾದ ಪ್ರತಿಪಕ್ಷದವರು ಬಾಣದ ಗರಿಗಳಿಂದಲೇ ಸನ್ನೆಮಾಡಿ ಯುದ್ಧಮಾಡಲು ಪ್ರಾರಂಭಿಸಿದರು. ೧೧೪. ಬಾಣಗಳು ನಾಟಿಕೊಂಡವು. ಕುದುರೆಗಳು ಸುರುಳಿಕೊಂಡು ಬಿದ್ದುವು. ಅವುಗಳ ಒಳಗರುಳಿನಲ್ಲಿ ಶೂರರು ಸಿಕ್ಕಿಕೊಂಡರು. ತೇರು ಹರಿದು ಅವರನ್ನು ಅಜ್ಜುಗುಜ್ಜಿ ಮಾಡಿದವು. ಮಹಾರಥರು ನುಗ್ಗಿ ತೇರನ್ನೆಡವಿ ಮುರಿದು ಬಿದ್ದು ಬಿಸಿರಕ್ತದ ಪ್ರವಾಹವು ಹರಿಯುವವರೆಗೆ ಅದ್ಭುತವಾಗಿ ಯುದ್ಧಮಾಡಿದರು. ವ|| ಹಾಗೆ ಎರಡುಸೈನ್ಯದ ನಾಯಕರೂ ಪರಸ್ಪರ ಪ್ರತ್ಯಕ್ಷವಾಗಿ ಯುದ್ಧಮಾಡುತ್ತಿದ್ದಾಗ ಶ್ವೇತನು ತನ್ನ ತಮ್ಮನ ಸಾವಿನಿಂದ ಆದ ಕೋಪದಿಂದ ಮುಂದಾಲೋಚನೆಯಿಲ್ಲದೆ ಶಲ್ಯನ ಸಮೀಪಕ್ಕೆ ಬಂದನು. ೧೧೫. ಕೋಪದಿಂದ ವಿಶೇಷವಾಗಿ ಕೆಂಪೇರಿದ್ದ ಕಣ್ಣುಗಳಿಂದ ಒಂದೇಸಲ ನುಂಗುವಹಾಗೆಯೂ ಪ್ರಾಣಾಪಹಾರ ಮಾಡುವ ಹಾಗೆಯೂ ದೀರ್ಘವಾಗಿ (ಗುರಿಗಟ್ಟಿ) ನೋಡಿ ಅಷ್ಟಕ್ಕೇ ಬಿಡದೆ ಎದೆಯು ಸೀಳುವ ಹಾಗೆ ಹೊಡೆದನು. (ಅದರಿಂದ) ರಕ್ತಪ್ರವಾಹವು ಹರಿಯಿತು. ಅವನ ತೀಕ್ಷ್ಣವಾದ ಕೋಪಾಗ್ನಿಯು ಸೇರಿ ವ್ಯಾಪಿಸಿದ ಹಾಗಾಯಿತು. ಶಲ್ಯನು ಆಗಲೇ ಯುದ್ಧದಲ್ಲಿ ನಿಶ್ಚೇಷ್ಟನಾದನು. ಭೀಷ್ಮನು ಅವನನ್ನು ಹಿಂದಿಕ್ಕಿ ತಾನು ಮುನ್ನುಗ್ಗಿದನು. ವ|| ಪ್ರಳಯಕಾಲದ ದ್ವಾದಶಾದಿತ್ಯರ ತೇಜಸ್ಸನ್ನು ಮಹೇಶ್ವರನ ಭಯಂಕರವಾದ ಅಟಾಟೋಪವನ್ನು ಯುಗಾಂತದ ಯಮನ ರೇಗುವಿಕೆಯನ್ನು ತನ್ನಲ್ಲಿ

ಚಂ|| ಖರ ಕಿರಣ ಪ್ರಚಂಡ ಕಿರಣಾವಳಿ ಲೋಕಮನೆಯ್ದೆ ಪರ್ವುವಂ
ತಿರೆ ಕಡುಕೆಯ್ದು ತನ್ನೆರಡು ಕೆಯ್ಯೊಳಮೆಚ್ಚ ಶರಾಳಿಗಳ್ ಭಯಂ|
ಕರತರಮಾಗೆ ಭೂಭುವನಮೆಲ್ಲಮನೊರ್ಮೆಯೆ ಸುತ್ತಿ ಮುತ್ತಿ ಕೊಂ
ಡಿರೆ ದೆಸೆಗಾಣಲಾಗದು ದಲಾ ರಣಗೞ್ತಲೆ ಮಂದಮಾದುದೋ|| ೧೧೬

ವ|| ಎಂಬಿನಮಂಬಿನ ಬಂಬಲೊಳಂ ಜೋಡಾಗಿ ಕೋಡನೂಱ ಕೆಡೆದ ಗಜ ವ್ರಜಂಗಳ ಡೊಣೆವುಗಳಿಂದೊತು ಪರಿವ ನೆತ್ತರ ಕಡಲ್ಗಳುಂ ನೆತ್ತರ ಕಡಲ್ಗಲೊಳ್ ಮಿಳಿರ್ವ ಪೞವಿಗೆಗಳ್ ತಲೆದೋ ಮುೞುಂಗಿದ ರಥಂಗಳುಂ ರಥಂಗಳ ಗಾಲಿಗಳ್ಗಡ್ಡಮಾಗಿ ಬಿೞರ್ದ ಮದಹಸ್ತಿಗಳುಂ ಮದಹಸ್ತಿಮಸ್ತಕಂಗಳನೋಸರಿಸಿ ರಥಮಂ ಪರಿಯಿಸುವ ರಥಚೋದಕರುಂ ರಥಚೋದಕರ ಬಿಟ್ಟ ಬಾಯ್ ಬಿಟ್ಟಂತಿರೆ ಬಿಟ್ಟ ತಮ್ಮ ಕರುಳ್ಗಳೊಳ್ ತವೆ ತೊಡರ್ದು ಕೀೞಂ ಕರ್ಚಿ ದಿಂಡುಮಗುಳ್ದು ಕೆಡೆವ ಜಾತ್ಯಶ್ವಂಗಳುಂ ಜಾತ್ಯಶ್ವಂಗಳ ಪೆಣದ ತಿಂತಿಣಿಯೊಳ್ ತೊಡರ್ದೆಡಪುತ್ತುಮಾಡುವ ಸುಭಟರಟ್ಟೆಗಳುಂ ಸುಭಟರಟ್ಟೆಗಳನೆೞ್ಬಟ್ಟಿ ಕುಟ್ಟುವ ತೊಂಡು ಮರುಳ್ಗಳುಂ ಮರುಳ್ಗಳಾಟಮಂ ಪಳಪಳನೆಮೆಯಿಕ್ಕದೆ ನೋಡಿ ಮುಗುಳ್ನಗೆ ನಗುವ ವೀರಭಟರ ಪಂದಲೆಗಳುಮಗುರ್ವುಮದ್ಭುತ ಭಯಾನಕ ವೀರ ಬೀಭತ್ಸ ರೌದ್ರ ರಸಂಗಳಂ ಪುದುಂಗೊಳಿಸೆ ಗಾಂಗೇಯಂ ನಾಡೆಯುಂ ಪೋೞ್ತು ಕಾದೆ-

ಮ|| ಪಟ್ಟಂಗಟ್ಟಿದಿಳಾನಾಥರೆ ಪಯಿಂಛಾಸಿರ್ವರೊಳ್ಳಾನೆಗಳ್
ಪಟ್ಟಂಗಟ್ಟಿದುವೊಂದು ಲಕ್ಕ ತುರಗಂ ಪತ್ತೆಂಟು ಲಕ್ಕಂ ಪಡ|
ಲ್ವಟ್ಟೞ್ಕೂಡಿದುವೊಂದೆ ಬಿಲ್ಗೆನೆ ನದೀಪುತ್ರಂಗೆ ಪೇೞುರ್ ಚಲಂ
ಬಟ್ಟುಂ ಮಾರ್ಮಲೆದಂಬುದೊಟ್ಟುಮುೞವರ್ ಸಂಗ್ರಾಮರಂಗಾಗ್ರದೊಳ್|| ೧೧೭

ವ|| ಎಂಬನ್ನೆಗಂ ಶ್ವೇತನುಮನವರತ ಶರಾಸಾರದಿಂ ಕುರುಬಲಮೆಲ್ಲಮನರೆದು ಸಣ್ಣಿಸಿದಂತೆ ಮಾಡಿ ತವೆ ನೆರವಿಯನೆನಿತಂ ಕೊಂದೊಡಮೇವಂದಪುದೆಂದು ಗಾಂಗೇಯಂಗದಿರದಿದಿರಂ ಮಾರ್ಕೊಂಡು ಬಿಲ್ವೊಯ್ದು ನಿಂದಾಗಳ್-

ಉ|| ಶ್ವೇತನ ಬಿಲ್ಲೊಳಿರ್ದ ಮದನಾರಿಯ ರೂಪೆರ್ದೆಗೊಳ್ವುದುಂ ನದೀ
ಜಾತನುದಾತ್ತ ಭಕ್ತಿಯಳೆ ಕೆಯ್ಮುಗಿದಾಗಳಿದೆಂತೊ ನಿಮ್ಮ ಪೆ|
ರ್ಮಾತಿನ ಬೀರಮೀಯೆಡೆಗೆವಂದುದೆ ಮುಪ್ಪಿನೊಳೆಯ್ದೆ ಲೋಕ ವಿ
ಖ್ಯಾತರಿರಾಗಿ ಕೆಯ್ದುವಿಡಿವಲ್ಲಿಯೆ ಕಾಲ್ವಿಡಿಯಲ್ಕೆ ತಕ್ಕುದೇ|| ೧೧೮

ಅಳವಡಿಸಿಕೊಂಡನು. ೧೧೬. ಸೂರ್ಯನ ತೀಕ್ಷ್ಣವಾದ ಕಿರಣಸಮೂಹಗಳು ಲೋಕವನ್ನೆಲ್ಲ ಪೂರ್ಣವಾಗಿ ಆವರಿಸುವ ಹಾಗೆ ವೇಗಶಾಲಿಯಾದ ತನ್ನ ಎರಡು ಕೈಗಳಿಂದಲೂ ಬಿಟ್ಟ ಬಾಣಸಮೂಹಗಳು ಅತ್ಯಂತ ಭಯಂಕರವಾಗಿ ಪ್ರಪಂಚವೆಲ್ಲವನ್ನೂ ಒಟ್ಟಿಗೆ ಸುತ್ತಿಮುತ್ತಿಕೊಂಡುವು. ಆ ಯುದ್ಧದ ಕತ್ತಲೆಯಿಂದ ನಿಜವಾಗಿಯೂ ದಿಕ್ಕೇ ಕಾಣದಂತಾಯಿತು. ಆ ರಣಗತ್ತಲೆ ಅತ್ಯಂತ ಸಾಂದ್ರವಾಗಿತ್ತು. ವ|| ಬಾಣಗಳ ಸಮೂಹದಿಂದ ಜೊತೆ ಜೊತೆಯಾಗಿ ಕೊಂಬನ್ನೂರಿ ಕೆಡೆದಿದ್ದ ಆನೆಗಳ ಗಾಯದ ಡೊಗರುಗಳಿಂದ ಜಿನುಗಿ ಹರಿಯುವ ರಕ್ತದ ಸಮುದ್ರಗಳೂ, ರಕ್ತಸಮುದ್ರದಲ್ಲಿ ಚಲಿಸುತ್ತಿರುವ ಬಾವುಟಗಳ ತುದಿಗಳು ಮಾತ್ರ ತೋರುತ್ತ ಮುಳುಗಿದ್ದ ತೇರುಗಳೂ ತೇರುಗಳಿಗೆ ಅಡ್ಡವಾಗಿ ಬಿದ್ದಿದ್ದ ಮದ್ದಾನೆಗಳೂ ಮದ್ದಾನೆಗಳ ತಲೆಗಳನ್ನು ಒಂದು ಕಡೆಗೆ ಓಸರಿಸಿ ತೇರನ್ನು ಹರಿಯಿಸುವ ಸಾರಥಿಗಳೂ ಸಾರಥಿಗಳು ಬಿಟ್ಟ ಬಾಯಿ ಬಿಟ್ಟ ಹಾಗೆ ತಮ್ಮ ಕರುಳುಗಳೂ ಸೇರಿಕೊಂಡ ಹಾಗೆಯೇ ಕಡಿವಾಣವನ್ನು ಕಚ್ಚಿಕೊಂಡು ರಾಶಿರಾಶಿಯಾಗಿ ಬಿದ್ದಿದ್ದ ಉತ್ತಮವಾದ ಜಾತ್ಯಶ್ವಗಳೂ ಜಾತಿಕುದುರೆಗಳ ಸಮೂಹದಲ್ಲಿ ಸೇರಿಕೊಂಡು ಎಡವುತ್ತ ಆಡುತ್ತಿರುವ ಶೂರರ ಮುಂಡಗಳೂ ಆ ಶೂರರ ಮುಂಡಗಳನ್ನು ಎಬ್ಬಿಸಿ ಓಡಿಸಿ ಬಡಿಯುತ್ತಿರುವ ತುಂಟ ಪಿಶಾಚಿಗಳ ಆಟವನ್ನು ಪಳಪಳನೆ ರೆಪ್ಪೆಬಡಿಯದೆ ನೋಡಿ ಹುಸಿನಗೆ ನಗುವ ಪರಾಕ್ರಮಶಾಲಿಗಳ ಹಸಿಯ ತಲೆಗಳೂ ಭಯ, ಆಶ್ಚರ್ಯ, ಅದ್ಭುತ, ಭಯಾನಕ, ವೀರ, ಬೀಭತ್ಸ, ರೌದ್ರರಸಗಳನ್ನು ಒಟ್ಟುಗೂಡಿಸಿದ್ದಂತೆ ಕಾಣುತ್ತಿತ್ತು. ೧೧೭. ಭೀಷ್ಮನ ಒಂದೇ ಬಿಲ್ಲಿಗೆ ಪಟ್ಟಾಭಿಷಿಕ್ತರಾದ ಹತ್ತು ಸಾವಿರ ಚಕ್ರವರ್ತಿಗಳೂ ಪಟ್ಟಾಭಿಷಿಕ್ತವಾದ ಒಂದು ಲಕ್ಷ ಭದ್ರಗಜಗಳೂ (ಮಂಗಳಕರವಾದ ಆನೆ) ಹತ್ತೆಂಟುಲಕ್ಷ ಕುದುರೆಗಳೂ ಕೆಳಗುರುಳಿ ನಾಶವಾದುವು ಎನ್ನಲು ಯುದ್ಧದಲ್ಲಿ ಪಣದೊಟ್ಟು (ಹಟಮಾಡಿ) ಭೀಷ್ಮನಿಗೆ ಪ್ರತಿಭಟಿಸಿ ಬಾಣಪ್ರಯೋಗಮಾಡಿ ಉಳಿಯುವವರು ಯಾರಿದ್ದಾರೆ? ವ|| ಎನ್ನುತ್ತಿರುವಲ್ಲಿ ಶ್ವೇತನೂ ಒಂದೇ ಸಮನಾದ ಬಾಣದ ಮಳೆಯಿಂದ ಕೌರವಸೈನ್ಯವನ್ನೆಲ್ಲ ಅರೆದು ಪುಡಿಮಾಡಿದಂತೆ ಮಾಡಿ ನಾಶಪಡಿಸಿ ಈ ಸಾಮಾನ್ಯ ಸೈನ್ಯವಷ್ಟನ್ನೂ ಕೊಂದರೆ ಏನು ಪ್ರಯೋಜನ ಎಂಬುದಾಗಿ ಭೀಷ್ಮನಿಗೆ ಹೆದರದೆ ಇದಿರಾಗಿ ಪ್ರತಿಭಟಿಸಿ ಬಿಲ್ಲನ್ನು ಸೆಳೆದು ನಿಂತನು- ೧೧೮. ಶ್ವೇತನ ಬಿಲ್ಲಿನಲ್ಲಿದ್ದ ಮಹಾಶಿವನ ಆಕಾರವು ತನ್ನ ಹೃದಯವನ್ನು ಸೂರೆಗೊಂಡಿತು. ಭೀಷ್ಮನು ಅತ್ಯಂತ ಶ್ರೇಷ್ಠವಾದ ಭಕ್ತಿಯಿಂದ ಕೈಮುಗಿದನು. (ಶ್ವೇತನು ಅವರನ್ನು ಕುರಿತು) ಇದೇನಿದು? ನಿಮ್ಮ ಪ್ರಸಿದ್ಧವಾದ ಪರಾಕ್ರಮವು ಮುಪ್ಪಿನಲ್ಲಿ ಈ ಸ್ಥಿತಿಗೆ ಬಂದಿತೇ?

ಚಂ|| ಎನಗೆ ರಣಾಗ್ರದೊಳ್ ಪೊಣರ್ವೊಡಂಕದ ಪೊಂಕದ ಸಿಂಧುಪುತ್ರನೊ
ರ್ವನೆ ದೊರೆಯೆಂದು ನಿಮ್ಮೊಳೆ ವಲಂ ತಱಸಂದಿಱಯಲ್ಕೆ ಪೂಣ್ದೆನಾ|
ನೆನಗಿಱವೞಯಂ ಕಿಡಿಸಿ ನಿಮ್ಮಳವಂ ಪೆಱಗಿಕ್ಕಿ ನೀಮುಮಿಂ
ತಿನಿತೆರ್ದೆಗೆಟ್ಟಿರಿಂ ತುೞಲ ಸಂದರನಾರುಮನೆಂತು ನಂಬುವರ್|| ೧೧೯

ವ|| ಎಂದು ತನ್ನಂ ನೋಯೆ ನುಡಿದೊಡೆ ಸಿಂಧುಪುತ್ರನಿಂತೆಂದಂ-

ಮ|| ನಿನಗೇನೆಂದೊಡಮೆಂದುದೊಪ್ಪಿದಪುದಂತೇಕೆನ್ನನಿನ್ನೀ ಶರಾ
ಸನದೊಳ್ ಶೂಲಕಪಾಲಪಾಣಿ ದಯೆಯಿಂ ಬಂದಿರ್ದನುಂತಾನುಮಿಂ|
ತಿನಿತಂ ನೀಂ ನುಡಿವನ್ನೆಗಂ ತಡೆವೆನೇ ತ್ರೈಲೋಕ್ಯನಾಥಂ ಕಣಾ
ವಿನಮನ್ಮಸ್ತಕನಾದೆನಣ್ಮುವೊಡೆ ನೀನೀ ದೇವನಂ ತೋಱುವೈ|| ೧೨೦

ಕಂ|| ಇಱವಂತು ನಿನಗೆ ಮನದೊಳ್
ತಱಸಲವುಂಟಪ್ಪೊಡೆಲವೊ ದೇವೇಶನನೇಂ|
ಸೆವಿಡಿದೆ ತೊಲಗು ದೇವನ
ಮಯಂ ಬೞಕಱಯಲಕ್ಕುಮೆನಗಂ ನಿನಗಂ|| ೧೨೧

ವ|| ಎಂಬುದುಂ ಶ್ವೇತನಿಂತೆಂದಂ-

ಉ|| ಕಾಗೆವೊಲಿಂತು ಬಿಲ್ಗೆ ಕರಮಂಜುವಿರಂಜಲಿಮಾ ತ್ರಿಣೇತ್ರನಂ
ಪೋ ಗೆಡೆಗೊಂಡು ಕಾದುವೆನೆ ಕಾದೆನಿದಂ ಹರನಿತ್ತನೆಂದು ನೋ|
ಡಾಗಡುಮೞಯಿಂ ಪಿಡಿವೆನಕ್ಕಟ ನಿಮ್ಮನದಿರ್ಪುವಲ್ಲಿ ಚಾ
ಪಾಗಮಮೇವುದಂತೆನಗೆ ಬಿಲ್ವರಮಾಜಿಯೊಳಾಂಪ ಗಂಡರಾರ್|| ೧೨೨

ಮ|| ಬಿಸುಟೆಂ ಬಿಲ್ಲನದೇವುದೆಂದು ಕಡುಪಿಂದೀಡಾಡಿ ಸೂರ್ಯಪ್ರಭಾ
ಪ್ರಸರಂಗಳ್ ಮಸುಳ್ವನ್ನೆಗಂ ಪೊಳೆವುದೊಂದಂ ಶಕ್ತಿಯಂ ಕೊಂಡಗು|
ರ್ವಿಸಿ ಗಾಂಗೇಯನನಿಟ್ಟನಿಟ್ಟೊಡದನೀರಯ್ದಸ್ತ್ರದಿಂದೆಚ್ಚು ಖಂ
ಡಿಸಿ ಪೇರಾಳ ತಿಱದಿಕ್ಕಿದಂತೆ ತಲೆಯಂ ಪೋಗೆಚ್ಚನಾ ಶ್ವೇತನಾ|| ೧೨೩

ಪೂರ್ಣವಾಗಿ ಲೋಕಪ್ರಸಿದ್ಧವಾಗಿರುವ ನೀವು ಶಸ್ತ್ರಗ್ರಹಣ ಮಾಡಬೇಕಾದ ಕಾಲದಲ್ಲಿ ಶರಣಾಗತರಾಗುವುದು ಯೋಗ್ಯವೇ?

೧೧೯. ಯುದ್ಧಮುಖದಲ್ಲಿ ಕಾದಬೇಕಾದರೆ ಪ್ರಸಿದ್ಧನೂ ಗರ್ವಿಷ್ಠನೂ ಆದ ಭೀಷ್ಮನೊಬ್ಬನೇ ನನಗೆ ಸಮಾನನಾದವನು ಎಂದು ಪೂರ್ಣವಾಗಿ ನಿಷ್ಕರ್ಷೆ ಮಾಡಿಕೊಂಡು ಯುದ್ಧ ಮಾಡುವುದಕ್ಕೆ ನಾನು ಪ್ರತಿಜ್ಞೆ ಮಾಡಿ ಬಂದೆ. ನನಗುಂಟಾದ ಯುದ್ಧೋತ್ಸಾಹವನ್ನು ಕೆಡಿಸಿ ನಿಮ್ಮ ಪರಾಕ್ರಮವನ್ನು ಹಿಂದುಮಾಡಿ ನೀವೂ ಹೇಗೆ ಧೈರ್ಯಹೀನರಾಗಿದ್ದೀರಿ. ಇನ್ನು ಮೇಲೆ ಪರಾಕ್ರಮಶಾಲಿಗಳನ್ನು ಯಾರನ್ನಾದರೂ ಹೇಗೆ ನಂಬುವುದು? ವ|| ಎಂದು ತನಗೆ ನೋವುಂಟಾಗುವ ಹಾಗೆ ನುಡಿಯಲು ಭೀಷ್ಮನು ಹೇಳಿದನು- ೧೨೦. ನೀನು ಏನು ಹೇಳಿದರೂ ನಿನಗೆ ಒಪ್ಪುತ್ತದೆ. ಏಕೆನ್ನುವೆಯಾ? ನಿನ್ನ ಈ ಬಿಲ್ಲಿನಲ್ಲಿರುವ ಶೂಲಕಪಾಲಪಾಣಿಯಾದ ಈಶ್ವರನು ದಯೆಯಿಂದ ಕಾಣಿಸಿಕೊಂಡಿದ್ದಾನೆ. ಹಾಗಿಲ್ಲದ ಪಕ್ಷದಲ್ಲಿ ನೀನು ಇಷ್ಟು ಹರಟುವವರೆಗೆ ತಡೆಯುತ್ತಿದ್ದೆನೇ? ಶಿವನು ಮೂರುಲೋಕದ ಒಡೆಯನಲ್ಲವೇ? ಆದುದರಿಂದ ನಮಸ್ಕಾರ ಮಾಡಿದೆ. ನಾನು ಯುದ್ಧ ಮಾಡುವುದಕ್ಕೆ ಬರಲು ನೀನು ಈಶ್ವರದೇವನನ್ನು ತೋರಿಸುತ್ತೀಯೆ.

೧೨೧. ನಿನಗೆ ಮನಸ್ಸಿನಲ್ಲಿ ಯುದ್ಧಮಾಡುವ ನಿಶ್ಚಯವೇ ಇದ್ದರೆ ದೇವಶ್ರೇಷ್ಠನಾದ ಈಶ್ವರನನ್ನೇಕೆ ಮರೆಹಿಡಿದಿದ್ದೀಯೆ? ದೇವನ ಆಶ್ರಯವನ್ನು ಬಿಟ್ಟು ಕಳೆ. ಬಳಿಕ ನನಗೂ ನಿನಗೂ ಇರುವ ಅಂತರವನ್ನು ತಿಳಿಯಲು ಸಾಧ್ಯವಾಗುತ್ತದೆ. ವ|| ಎನ್ನಲು ಶ್ವೇತನು ಹೀಗೆಂದನು. ೧೨೨. ಕಾಗೆಯ ಹಾಗೆ ಬಿಲ್ಲಿಗೆ ಹೆದರುತ್ತೀರಿ; ಹೆದರಬೇಡಿ, ಛೀ ಆ ಮುಕ್ಕಣ್ಣನನ್ನು ಆಶ್ರಯಿಸಿ ಕಾದುತ್ತೇನೆಯೆ? ನಾನು! ಇಲ್ಲ. ಇದು ಈಶ್ವರದತ್ತವೆಂಬ ಪ್ರೀತಿಯಿಂದ ಮಾತ್ರ ಇದನ್ನು ಯಾವಾಗಲೂ ಧರಿಸಿದ್ದೇನೆ. ಅಯ್ಯೋ ನಿಮ್ಮನ್ನು ಅಡಗಿಸುವುದಕ್ಕೆ ಧನುರ್ವಿದ್ಯೆ ತಾನೆ ಏಕೆ ನನಗೆ? ಅಲ್ಲದೆ ನಾನು ಬಿಲ್ಲನ್ನು ಹಿಡಿದರೆ ನನ್ನನ್ನು ಪ್ರತಿಭಟಿಸುವ ಶೂರನೂ ಇದ್ದಾನೆಯೇ? ೧೨೩. ಇದೋ ಬಿಲ್ಲನ್ನು ಬಿಸುಟಿದ್ದೇನೆ. ಅದರಿಂದೇನಾಗಬೇಕು ಎಂದು ವೇಗದಿಂದ ಎಸೆದು ಸೂರ್ಯಕಾಂತಿ ಸಮೂಹವನ್ನೂ ಮಸಕುಮಾಡುವಷ್ಟು ಕಾಂತಿಯುಕ್ತವಾದ ಒಂದು ಶಕ್ತಾಯುಧವನ್ನು ತೆಗೆದುಕೊಂಡು ಆರ್ಭಟಮಾಡಿ ಹೊಡೆದನು. ಆ ಹಿರಿಯನು (ಭೀಷ್ಮನು) ಅದನ್ನು

ಕಂ|| ಶ್ವೇತನ ಬೀರಮನುಪಮಾ
ತೀತಮನೀ ಧರೆಗೆ ನೆಗೞೆ ನೆಗೞ್ದುದನಿದನಾಂ|
ಪಾತಾಳಕ್ಕಱಪುವೆನೆಂ
ಬೀ ತೆಱದೊಳೆ ದಿನಪನಪರಜಲನಿಗಿಱದಂ|| ೧೨೪

ವ|| ಆಗಳೆರಡುಂ ಪಡೆಯ ನಾಯಕರಪಹಾರತೂರ್ಯಂಗಳಂ ಬಾಜಿಸಿ ತಮ್ಮ ತಮ್ಮ ಬೀಡುಗಳ್ಗೆ ಪೋದರನ್ನೆಗಮಿತ್ತ ಸಂಸಪ್ತಕಬಲಮನೆಲ್ಲಮನೊಂದೆ ರಥದೊಳಾದಿತ್ಯ ನಸುರರನದಿರ್ಪುವಂತಾಟಂದು ವಿಕ್ರಮಾರ್ಜುನನುಮರಾತಿಕಾಳಾನಳನುಮತಿರಥ ಮಥನನುಂ ರಿಪುಕುರಂಗಕಂಠೀರವನುಂ ಸಾಹಸಾಭರಣನುಮಮ್ಮನ ಗಂಧವಾರಣನುಂ ಪಡೆಮಚ್ಚೆಗಂಡನುಂ ಪರಸೈನ್ಯಭೈರವನುಮೆಂಬ ಪೆಸರ್ಗಳನನ್ವರ್ಥಂ ಮಾಡಿ-

ಚಂ|| ನೆರೆದನುರಾಗದಿಂ ಪಡೆಯ ಪಾಡಿಯ ಬೀರರ ಪೆಂಡಿರೞ್ಕಱಂ
ಪರಸಿಯೊಱಲ್ತು ಸೇಸೆಗಳನಿಕ್ಕೆ ಮುರಾರಿಯ ಪಾಂಚಜನ್ಯ ವಿ|
ಸುರಿತ ರವಂ ಜಯತ್ಸೋವದ ಘೋಷಣೆಯಂತಿರೆ ಪೊಕ್ಕನಾತ್ಮ ಮಂ
ದಿರಮನುದಾತ್ತಚಿತ್ತನವನೀತಳ ಪೂಜ್ಯಗುಣಂ ಗುಣಾರ್ಣವಂ|| ೧೨೫

ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರ ವಚನ ರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್ ದಶಮಾಶ್ವಾಸಂ

ಹತ್ತು ಬಾಣಗಳಿಂದ ಹೊಡೆದು ಕತ್ತರಿಸಿ ಆ ಶ್ವೇತನ ತಲೆಯನ್ನು ತಿರುಪಿ (ಜಿಗಟಿ) ಕತ್ತರಿಸಿದಂತೆ ಹೊಡೆದು ಹಾಕಿದನು. ೧೨೪. ಈ ಲೋಕದಲ್ಲಿ ಪ್ರಸಿದ್ಧವಾಗಿದ್ದು ಹೋಲಿಕೆಗೂ ಮೀರಿದ್ದ ಈ ಶ್ವೇತನ ಪರಾಕ್ರಮವನ್ನು ನಾನು ಪಾತಾಳಕ್ಕೂ ತಿಳಿಸುತ್ತೇನೆ ಎನ್ನುವ ರೀತಿಯಲ್ಲಿ ಸೂರ್ಯನು ಪಶ್ಚಿಮಸಮುದ್ರಕ್ಕೆ ಇಳಿದನು. ವ|| ಆಗ ಎರಡು ಸೈನ್ಯದ ನಾಯಕರೂ ಯುದ್ಧವನ್ನು ನಿಲ್ಲಿಸಲು ಸೂಚಕವಾದ ವಾದ್ಯಗಳನ್ನು ಬಾಜಿಸಿ ತಮ್ಮ ತಮ್ಮ ಬೀಡುಗಳಿಗೆ ಹೋದರು. ಅಷ್ಟರಲ್ಲಿ ಈ ಕಡೆ ಸಂಸಪ್ತಕ ಸೈನ್ಯವೆಲ್ಲವನ್ನೂ ಒಂದೇ ತೇರಿನಲ್ಲಿ ಕುಳಿತು ಸೂರ್ಯನು ರಾಕ್ಷಸರನ್ನು ಅಡಗಿಸುವಂತೆ ಶತ್ರುಗಳ ಮೇಲೆ ಬಿದ್ದು ಅರ್ಜುನನೂ ಕೂಡಿ ತನ್ನ ಅರಾತಿಕಾಳಾನಳ, ಅತಿರಥಮಥನ, ರಿಪುಕುರಂಗ ಕಂಠೀರವ, ಸಾಹಸಾಭರಣ, ಗಂಧವಾರಣ, ಪಡೆಮೆಚ್ಚಗಂಡ, ಪರಸೈನ್ಯಭೈರವ ಎಂಬ ತನ್ನ ಹೆಸರುಗಳನ್ನು ಸಾರ್ಥಕವಾಗುವಂತೆ (ಅರ್ಥಕ್ಕನುಗುಣವಾಗುವಂತೆ) ಮಾಡಿದನು. ೧೨೫. ಸೈನ್ಯಸಮೂಹದಲ್ಲಿದ್ದ ವೀರಸ್ತ್ರೀಯರು ಸಂತೋಷದಿಂದ ಒಟ್ಟುಗೂಡಿ ಪ್ರೀತಿಯಿಂದ ಹರಸಿ ಸೇಸೆಯನ್ನಿಕ್ಕಿದರು. ಶ್ರೀಕೃಷ್ಣನ ಪಾಂಚಜನ್ಯವೆಂಬ ಶಂಖದ ವಿಜೃಂಭಿತ ಧ್ವನಿಯು ವಿಜಯೋತ್ಸವದ ಡಂಗುರದಂತಿತ್ತು. ಉದಾತ್ತಚಿತ್ತನೂ ಭೂಮಂಡಲದಲ್ಲಿ ಪೂಜಿಸಲ್ಪಡುವ ಗುಣಗಳಿಂದ ಕೂಡಿದವನೂ ಆದ ಗುಣಾರ್ಣವನು ತನ್ನ ಮಂದಿರವನ್ನು ಪ್ರವೇಶಿಸಿದನು. ಇದು ಅನೇಕ ದೇವತೆಗಳಿಂದ ಸ್ತುತಿಸಲ್ಪಟ್ಟ ಜಿನಪಾದಕಮಲಗಳ ವರಪ್ರಸಾದದಿಂದ ಹುಟ್ಟಿ ತಿಳಿಯೂ ಗಂಭೀರವೂ ಆದ ಮಾತುಗಳ ರಚನೆಯಲ್ಲಿ ಚಾತುರ್ಯವುಳ್ಳ ಕವಿತಾಗುಣಾರ್ಣವನಿಂದ ರಚಿತವಾದುದೂ ಆದ ‘ವಿಕ್ರಮಾರ್ಜುನ ವಿಜಯ’ದಲ್ಲಿ ಹತ್ತನೆಯ ಆಶ್ವಾಸ.