ಕಂ|| ಶ್ರೀ ನಾರೀವಲ್ಲಭನಭಿ
ಮಾನಧನಂ ಹರಿಗನಾ ಕುರುಕ್ಷೇತ್ರದೊಳಂ|
ತೇನುಂ ಮಾಣದೆ ಬಿಟ್ಟುದ
ನಾ ನೆಗೞ್ದ ಸುಯೋಧನಂಗೆ ಚರರಱಪುವುದುಂ|| ೧

ಗುರು ಗುರುಸುತ ಶಕುನಿ ಕೃಪಾಂ
ಗರಾಜರಂ ಬರಿಸಿ ನುಡಿದನವನಿಪನೇಂ ಕೇ|
ಳ್ದಿರೆ ಪಾಂಡುಸುತರ ಮುನಿಸಿನ
ತಱಸಲವಿನ ಚಲದ ಬಲದ ಕಲಿತನದಳವಂ|| ೨

ಬಂದು ಕುರುಕ್ಷೇತ್ರದೊಳಳ
ವೊಂದಿರೆ ನಮ್ಮೊಳ್ ಕಡಂಗಿ ಮಿಗೆ ತಳ್ತಿಱಯ|
ಲ್ಕೆಂದಾನುಂ ಬಂದಿರ್ದರಿ
ದೇಂ ದಾಯಿಗತನಮನೆಮಗವರ್ ತೋಱದಪರ್|| ೩

ಮ|| ಪಡೆವಳ್ಳಂ ಗಡಮಾ ಬಲಕ್ಕೆ ದಲೆ ಧೃಷ್ಟದ್ಯುಮ್ನನೆಂಬೊಳ್ಳೆಯಾ
ಪಡೆಯೊಳ್ ಗಂಡನುಮಾ ಮೊಲಂ ದ್ರುಪದನುಂ ಪೇರೊಟ್ಟೆಯಾ ಮತ್ಸ್ಯನುಂ|
ಗಡಮಂತಾ ಬಲಕಾಳ್ದನೇನಱಯಿರೇ ಧರ್ಮಜ್ಞನಾ ಧರ್ಮಜಂ
ಗಡಮೇಂ ನಾಯಕರೊಳ್ಳಿದರ್ ನೆರೆದರೋ ಕಾದಲ್ಕೆ ಮತ್ಸೈನ್ಯದೊಳ್|| ೪

ವ|| ಎಂಬುದುಂ ಕುಂಭಸಂಭವನಿಂತೆಂದಂ-

ಮ|| ಕಳವೇೞ್ದೆ  ಕುರುಭೂಮಿಯಂ ಕಳಕವರ್ ವಂದಿರ್ದರೆಂದಂತೆ ದೋ
ರ್ವಳ ಚಾತುರ್ವಳ ತತ್ಸುಹೃದ್ಬಳಮನಿನ್ನೇಗೇಳ್ದಪೈ ಪಾಂಡವರ್|
ಬಳಸಂಪನ್ನರುದಗ್ರದೈವಬಲಸಂಪನ್ನರ್ ಮರುಳ್ಮಾತನಿ
ನ್ನುೞ ಗಾಂಗೇಯರ ಪೇೞ್ದದೊಂದು ತೆಱದಿಂ ನೀಂ ಕಾದು ದುರ್ಯೋಧನಾ|| ೫

ವ|| ಎಂಬುದುಮಾ ಮಾತಂ ಮನದೇಗೊಂಡಂತೆಗೆಯ್ವೆನೆಂದನಿಬರುಮಂ ವಿಸರ್ಜಿಸಿ ನಿಶಾಸಮಯದೊಳ್ ಪತ್ತೆಂಟು ಕೆಯ್ದೀವಿಗೆಗಳ ಬೆಳಗಿನೊಳಂ ಕತಿಪಯ ಪರಿಜನ ಪರಿವೃತನಾಗಿ ರಾಜರಾಜಂ ಸಿಂಧುಜನರಮನೆಗೆವಂದು ವಾಹನದಿಂದಮಿೞದು ಕುರುಪಿತಾಮಹಂಗೆಱಗಿ ಪೊಡೆವಡುವುದುಂ ಪರಸಿ ಮಂಚದೊಳೇಱಲ್ ಕರೆದೊಡೊಲ್ಲೆಂ ಮಹಾಪ್ರಸಾದಮಿಂತಿರ್ಪೆನೆಂದು ಮಣಿಮಯ ಹೇಮಾಸನದೊಳ್ ಕುಳ್ಳಿರ್ದನಂ ನೋಡಿ ಕಜ್ಜಂ ಪುಟ್ಟಿದೊಡೆಮಗೆ ಬೞಯಟ್ಟದೀ ಪೊೞದಾವುದು ಮನವಾೞ್ತೆಗೆೞ್ತಂದೆಯೆಂದೊಡೆ ಸುಯೋಧನನಿಂತೆಂದಂ-

೧. ಸಂಪಲ್ಲಕ್ಷ್ಮೀಪತಿಯೂ ಅಭಿಮಾನಧನನೂ ಆದ ಅರ್ಜುನನು ಕುರುಕ್ಷೇತ್ರದಲ್ಲಿ ಯಾವ ತಡೆಯೂ ಇಲ್ಲದೆ ಬೀಡುಬಿಟ್ಟುದನ್ನು ಆ ಪ್ರಸಿದ್ಧನಾದ ದುರ್ಯೋಧನನಿಗೆ ದೂತರು ತಿಳಿಸಿದರು. ೨. ದ್ರೋಣ, ಅಶ್ವತ್ಥಾಮ, ಶಕುನಿ, ಕೃಪ, ಕರ್ಣರನ್ನು ಬರಮಾಡಿ ದುರ್ಯೋಧನನು ಹೇಳಿದನು- ಪಾಂಡವರ ಕೋಪದ, ನಿಶ್ಚಯದ, ಛಲದ, ಬಲದ, ಪರಾಕ್ರಮದ ಅಳತೆಯನ್ನು ಕೇಳಿದಿರಾ?

೩. ಸಮರ್ಥರಾಗಿ ಕುರುಕ್ಷೇತ್ರಕ್ಕೆ ಬಂದು ವಿಶೇಷ ಉತ್ಸಾಹದಿಂದ ನಮ್ಮಲ್ಲಿ ಯುದ್ಧಮಾಡುವುದಕ್ಕಾಗಿಯೇ ಬಂದಿದ್ದಾರೆ. ಅವರು ನಮ್ಮಲ್ಲಿ ಎಂತಹ ಜ್ಞಾತಿತ್ವವನ್ನು ತೋರಿಸುತ್ತಿದ್ದಾರೆ! ೪. ಆ ಪಾಂಡವಸೈನ್ಯಕ್ಕೆ ನಿಜವಾಗಿಯೂ ಸೇನಾನಾಯಕನಾಗಿರುವವನು ಧೃಷ್ಟದ್ಯುಮ್ನನೆಂಬ ನೀರುಹಾವು, ಆ ಸೈನ್ಯದಲ್ಲಿ ಶೂರನಾಗಿರುವವರು ದ್ರುಪದನೆಂಬ ಮೊಲ, ಮತ್ಸ್ಯನೆಂಬ ಒಂಟೆ, ಆ ಸೈನ್ಯಕ್ಕೆ ಯಜಮಾನ ಧರ್ಮದ ಗೊಡ್ಡಾದ ಧರ್ಮರಾಯ (ಅವರ ಯೋಗ್ಯತೆ ನನಗೆ ತಿಳಿಯದೇ?) ಒಳ್ಳೆಯ ನಾಯಕರು ನನ್ನ ಸೈನ್ಯದೊಡನೆ ಯುದ್ಧಮಾಡುವುದಕ್ಕೆ ಸೇರಿದ್ದಾರೆ! ವ|| ಎಂಬುದಾಗಿ ಹೇಳಲು ದ್ರೋಣಾಚಾರ್ಯನು ಹೀಗೆಂದನು. ೫. ನೀನು ಕುರುಕ್ಷೇತ್ರವನ್ನು ಯುದ್ಧ ಭೂಮಿಯನ್ನಾಗಿ ನಿಷ್ಕರ್ಷಿಸಿದೆ. ನೀನು ಹೇಳಿದ ಹಾಗೆ (ಅದರಂತೆ) ಅವರು ಯುದ್ಧರಂಗಕ್ಕೆ ಬಂದಿದ್ದಾರೆ. ಅವರ ಬಾಹುಬಲವನ್ನೂ ಚತುರಂಗಸೈನ್ಯದ ಬಲವನ್ನೂ ಅವರ ಮಿತ್ರವರ್ಗದ ಶಕ್ತಿಯನ್ನೂ ಇನ್ನೇನೆಂದು ಕೇಳುತ್ತೀಯಾ? ಪಾಂಡವರು ಬಲಸಂಪನ್ನರು, ಉತ್ತಮವಾದ ದೈವಬಲದಿಂದ ಕೂಡಿರುವವರು. ಅವಿವೇಕದ ಮಾತನ್ನು ಬಿಟ್ಟುಬಿಡು. ದುರ್ಯೋಧನಾ, ಭೀಷ್ಮರು ಹೇಳಿದ ರೀತಿಯಲ್ಲಿ ಯುದ್ಧಮಾಡು. ವ|| ಎನ್ನಲು ಆ ಮಾತನ್ನು ಅಂಗೀಕರಿಸಿ ಹಾಗೆಯೇ ಮಾಡುತ್ತೇನೆಂದು ಒಪ್ಪಿದನು. ಅಷ್ಟು ಮಂದಿಯನ್ನೂ ಬಿಟ್ಟು ಕಳೆದು ರಾತ್ರಿಯ

ಕಂ|| ಹರಿ ಬಲದಿಂ ಪಾಂಡವರನು
ವರಮಂ ಪೊತ್ತಿಸಿದರೆನ್ನೊಳಾಂ ಕರಮಱದಾ|
ಹರಿಯಂ ಕೋಡಗಗಟ್ಟಾ
ಗಿರೆ ಕಟ್ಟಿದೊಡಂದು ನೀಮೆ ಬಿಡಿಸಿದಿರಲ್ತೇ|| ೬

ಕರಿಗಂ ಪರಮಾಣುಗಮಂ
ತರಮಾವುದೊ ನಿಮಗಮಸುರವೈರಿಗಮೇನಂ|
ತರಮಂತೆ ನಿಮ್ಮೊಳಗ್ಗದ
ಪರಶುಧರಂ ಪೊಣರ್ದು ತಾನದಂದೇನಾದಂ|| ೭

ಪಿಡಿದರವರಸುರವೈರಿಯ
ನೊಡಂಬಡಿಂ ತೊೞ್ತುವೆಸದಿನಾಂ ನಿಮ್ಮಡಿಯಂ|
ಪಿಡಿದೆನದೇಂ ತಾನೆಚ್ಚುಂ
ಪಿಡಿದೊಡವರ್ವಂದು ಪಿಡಿದರೆನ್ನರೆ ಗೆಲ್ಲಂ||

ಮ|| ಕೊರಲೊಳ್ ಕಟ್ಟಿದ ದೇವಿಯಂತಿರುರದೊಳ್ ಶ್ರೀ ತೊಟ್ಟಲೊಳ್ ತೊಟ್ಟನಂ
ತರಮೆನ್ನೊಳ್ ನೆಲಸಿತ್ತು ನಿಮ್ಮ ದಯೆಯಿಂ ನಿಮ್ಮಂ ಕರಂ ನಚ್ಚಿ ಸಂ|
ಗರಮಂ ಬಲ್ಲಿದರೊಳ್ ಪೊಣರ್ಚಿದೆನದರ್ಕೆನ್ನೊಳ್ ರಣಶ್ರೀ ರಣಾ
ಜಿರದೊಳ್ ಮಾಣದೆ ಪೊರ್ದುವಂತೆ ಬೆಸಸಿಂ ನಿಮ್ಮೊಂದಭಿಪ್ರಾಯಮಂ|| ೯

ವ|| ಎಂದು ನುಡಿದ ತನ್ನ ಮೊಮ್ಮನ ನಯದ ವಿನಯದ ನುಡಿಗಳ್ಗೆ ಕರುಣಿಸಿ ಕುರುವೃದ್ಧನಿಂತೆಂದಂ-

ಮ|| ಧೃತರಾಷ್ಟ್ರಂ ನುಡಿದಾರ್ತನೇ ಹರಿ ಭರಂಗೆಯ್ದಾರ್ತನೇ ನೀಂ ಪೃಥಾ
ಸುತರಂ ನೋಯಿಸಲಾಗದೆಂದು ನುಡಿದೇನಾಮಾರ್ತೆಮೇ ನಿನ್ನೊರಂ|
ಟುತನಂ ಕೈಗೞವಾಯ್ತದಪ್ಪೊಡೆ ಮಹಾಭಾರಾವತಾರಂ ರಣೋ
ದ್ಯತನಾಗೆಂಬುದನೆಮ್ಮನನ್ಯರವೊಲೇಂ ನೀಂ ಪ್ರಾರ್ಥಿಸಲ್ವೇೞ್ಪುದೇ|| ೧೦

ವ|| ಎಂಬುದುಂ ಮಹಾಪ್ರಸಾದಮೆಂದು ದುರ್ಯೋಧನಂ ಪೋದನಿತ್ತ ಗಾಂಗೇಯಂ ತನ್ನಂತರ್ಗತದೊಳ್-

ಸಮಯದಲ್ಲಿ ಹತ್ತೆಂಟು ಕೈದೀವಿಗೆಗಳ ಬೆಳಕಿನಲ್ಲಿ ಕೆಲವೇ ಜನ ಸೇವಕರಿಂದ ಕೂಡಿದವನಾಗಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನ ಅರಮನೆಗೆ ಬಂದನು. ವಾಹನದಿಂದಿಳಿದು ಕುರುಪಿತಾಮಹನಾದ ಭೀಷ್ಮನಿಗೆ ಬಗ್ಗಿ ನಮಸ್ಕಾರ ಮಾಡಿದನು. ಅವರು ಹರಸಿ ಅವನನ್ನು ಮಂಚದ ಮೇಲೆ ಹತ್ತಿ ಕುಳಿತುಕೊಳ್ಳಹೇಳಿದರು. ‘ಒಲ್ಲೆ ಹಾಗೆ ಮಾಡಲಾರೆ, ಇದೇ ನನಗೆ ಪರಮಾನುಗ್ರಹ, ಹೀಗಿರುತ್ತೇನೆ, ಎಂದು ರತ್ನಖಚಿತವಾದ ಚಿನ್ನದ ಪೀಠದ ಮೇಲೆಯೇ ಕುಳಿತುಕೊಂಡನು. ಭೀಷ್ಮನು ಅವನನ್ನು ನೋಡಿ ‘ಕಾರ್ಯವುಂಟಾದರೆ ನಮಗೆ ದೂತರ ಮೂಲಕ ಹೇಳಿಕಳುಹಿಸದೆ ಈ ಹೊತ್ತಿನಲ್ಲಿಯೂ ಮನೆವಾರ್ತೆಗಾಗಿ ಬಂದೆ’ ಎಂದರು. ದುರ್ಯೋಧನನು ಹೀಗೆಂದನು- ೬. ಆ ಪಾಂಡವರು ಕೃಷ್ಣನ ಬಲದಿಂದ ನಮ್ಮಲ್ಲಿ ಯುದ್ಧವನ್ನು ಹತ್ತಿಸಿದ್ದಾರೆ. ಇದನ್ನು ನಾನು ತಿಳಿದೇ ಅಂದು ಕೃಷ್ಣನನ್ನು ಕೋಡಗಗಟ್ಟಿನಿಂದ ಕಟ್ಟಿದರೆ ಆ ದಿನ ನೀವೆ ಬಿಡಿಸಿದಿರಲ್ಲವೇ ೭. ಆನೆಗೂ ಸೂಕ್ಷ್ಮವಾದ ಅಣುವಿಗೂ ಎಷ್ಟು ವ್ಯತ್ಯಾಸ? ನಿಮಗೂ ಕೃಷ್ಣನಿಗೂ ಯಾವ ಅಂತರ? ನಿಮ್ಮಲ್ಲಿ ಆ ಪ್ರಸಿದ್ಧನಾದ ಪರಶುರಾಮನು ಜಗಳವಾಡಿ ಆದಿನ ತಾನೇ ಏನಾದ? ೮. ಅವರು ಶ್ರೀಕೃಷ್ಣನನ್ನು ಸಮಾನಪ್ರತಿಪತ್ತಿಯಿಂದ ಆಶ್ರಯಿಸಿದ್ದಾರೆ. ನಾನು ನಿಮ್ಮ ಪಾದವನ್ನು ಸೇವಕವೃತ್ತಿಯಿಂದ ಹಿಡಿದಿದ್ದೇನೆ. ಒಂದು ಸಲ ಹೊಡೆದೂ ಪುನ ಆಶ್ರಯಿಸಿದ್ದಾರೆ ಎನ್ನುವುದಿಲ್ಲವೇ (?) ೯. ನಿಮ್ಮದಯೆಯಿಂದ ರಾಜ್ಯಲಕ್ಷ್ಮಿಯು ಕೊರಳಲ್ಲಿ ಕಟ್ಟಿದ ದುರ್ಗಾಪದಕದಂತೆ ತೊಟ್ಟಿಲಲ್ಲಿ ಬಾಲ್ಯತನದಿಂದ ಇಲ್ಲಿಯವರೆಗೆ ಏಕಪ್ರಕಾರವಾಗಿ ನನ್ನಲ್ಲಿ ನೆಲಸಿದ್ದಾಳೆ. ನಿಮ್ಮನ್ನು ಪೂರ್ಣವಾಗಿ ನಂಬಿ ಬಲಿಷ್ಠರಾದವರಲ್ಲಿ ಯುದ್ಧವನ್ನು ಹೂಡಿದ್ದೇನೆ. ಈಗ ರಣರಂಗದಲ್ಲಿ ಯುದ್ಧಲಕ್ಷ್ಮಿಯು ನನ್ನನ್ನೇ ತಪ್ಪದೆ ಸೇರುವಂತೆ ಮಾಡಬೇಕು. ನಿಮ್ಮ ಅಭಿಪ್ರಾಯವನ್ನು ಕೊಡಿರಿ. ವ|| ಎಂದು ನುಡಿದ ತನ್ನ ಮೊಮ್ಮಗನ ವಿನಯದಿಂದ ಕೂಡಿದ ಮಾತುಗಳಿಗೆ ಕರುಣಿಸಿ ಭೀಷ್ಮನು ಹೀಗೆ ಹೇಳಿದನು. ೧೦. ನೀನು ಪಾಂಡವರನ್ನು ನೋಯಿಸಬಾರದು ಎಂದು ಹೇಳಿ ನಿನ್ನ ತಂದೆಯಾದ ಧೃತರಾಷ್ಟ್ರನು ನಿನ್ನನ್ನು ತಿದ್ದಲು ಪ್ರಯತ್ನಿಸಿದ. ಕೃಷ್ಣನು ಆರ್ಭಟಮಾಡಿ ನೋಡಿದ. ಅವರಿಬ್ಬರೂ ಸಮರ್ಥರಾಗಲಿಲ್ಲ. ಕುಂತೀ ಪುತ್ರರನ್ನು ನೋಯಿಸಬಾರದೆಂದು ಹೇಳಿದೆವು. ನಾವು ಸಮರ್ಥರಾದೆವೇ? ನಿನ್ನ ಒರಟುತನ ಕೈಮೀರಿದ್ದಾಯಿತು. ಮುಂದಾಗುವುದಾದರೋ ಮಹಾಭಾರತ ಯುದ್ಧ. ಯುದ್ಧಕಾರ್ಯದಲ್ಲಿ ತೊಡಗು ಎಂದು ನಮ್ಮನ್ನು ಇತರರ ಹಾಗೆ ನೀನು ಪ್ರಾರ್ಥಿಸಬೇಕೆ? ವ|| ಎನ್ನಲು ದುರ್ಯೋಧನನು ಮಹಾಪ್ರಸಾದ ಎಂದು ಹೇಳಿಹೋದನು. ಈ ಕಡೆ ಭೀಷ್ಮನು ತನ್ನ

ಕಂ|| ಅಣಿಯರಮೊದವಿದ ಮುಳಿಸಿನೊ
ಳಣಮಱದವರೆಂದು ರಣದೆ ಜಯಿಸಲ್ ನಾರಾ
ಯಣನೊಳಮುದಾತ್ತನಾರಾ
ಯಣನೊಳಮಿಂತೆತ್ತಿಕೊಂಡ ಗಂಡರುಮೊಳರೇ|| ೧೧

ನಿನ್ನನೆ ನಚ್ಚಿದನನುವರ
ಕೆನ್ನನೆ ಪೂಣಿಸಿದನೆನಗೆರೞ್ತಂಡಮುಮೋ|
ರನ್ನರೆ ದಲೆಂತು ಕಾದುವೆ
ನೆನ್ನಯ ಮಕ್ಕಳೊಳಮೆನ್ನ ಮೊಮ್ಮಕ್ಕಳೊಳಂ|| ೧೨

ಮಕ್ಕಳ ಮೊಮ್ಮಕ್ಕಳ ರಥ
ಮೆಕ್ಕೆಯಿನೆಡೆಗೊಂಡೊಡವರನೋವದೆ ರಣದೊಳ್|
ಮಕ್ಕಳನಾಂ ಕೊಂದೊಡೆ ತ
ನ್ನಿಕ್ಕಿದ ತತ್ತಿಯನೆ ಪಾವು ನೊಣೆವಂತಕ್ಕುಂ|| ೧೩

ನರ ನಾರಾಯಣರಿರ್ವರೆ
ಧುರದೊಳ್ ಮಾರ್ಕೊಳ್ವರೆನ್ನನೊರ್ವಂ ಮೊಮ್ಮಂ|
ಪರಮಗುರುಪೊರ್ವನವರಿ
ರ್ವರುಮಂ ಕಾದೞವೆನುೞದ ರಿಪುನೃಪಬಲಮಂ|| ೧೪

ವ|| ಎಂದು ತನ್ನೊಳ್ ಬಲೆಯುತ್ತಿರ್ಪಿನಮತ್ತ ದುರ್ಯೋಧನಂ ಸಹಸ್ರ ಕಿರಣೋದಯದೊಳನೇಕಸಹಸ್ರನರಪತಿ ಪರಿವೃತನುಮಾಗಿ ಮಂದಾಕಿನೀತನೂಜಂಗೆ ಬೞಯನಟ್ಟಿ ಬರಿಸಿ ಮಣಿಮಯಪೀಠದೊಳ್ ಕುಳ್ಳಿರಿಸಿ ದೇವಾಸುರಯುದ್ಧದೊಳ್ ಗುಹಂಗೆ ವೀರಪಟ್ಟಮಂ ಕಟ್ಟುವ ಪುರಂದರನಂದಮನೆ ಪೋಲ್ತು-

ಉ|| ತುಂಗ ಮೃದಂಗ ಶಂಖ ಪಟಹಧ್ವನಿ ದಿಕ್ತಟದಂತನೆಯ್ದೆ ವಾ
ರಾಂಗನೆಯರ್ ಚಳಲ್ಲುಳಿತ ಚಾಮರಮಂ ನೆರೆದಿಕ್ಕೆ ಪಂಚ ರ|
ತ್ನಂಗಳುಮಂ ಪುದುಂಗೊಳಿಸಿ ಪೊಂಗಳಸಂಗಳೊಳಿರ್ದ ಪುಣ್ಯತೋ
ಯಂಗಳೊಳೞ್ಕಱಂ ಮಿಸಿಸಿ ಕಟ್ಟಿದನಾ ವಿಭು ವೀರಪಟ್ಟಮಂ|| ೧೫

ವ|| ಅಂತು ಪರಶುರಾಮನನಂಜಿಸಿದ ವೀರಂಗೆ ವೀರಪಟ್ಟಮಂ ಕಟ್ಟಿ ಪಗೆವರನೆನ್ನ ಮಂಚದ ಕಾಲೊಳ್ ಕಟ್ಟಿದೆನೆಂದು ಪೊಟ್ಟಳಿಸುವ ಸುಯೋಧನನ ನುಡಿಯನವಕರ್ಣಿಸಿ ಕರ್ಣನಿಂತೆಂದಂ-

ಮನಸ್ಸಿನಲ್ಲಿ ಚಿಂತಾಕ್ರಾಂತನಾದನು. ೧೧. ದುರ್ಯೋಧನನು ವಿಶೇಷವಾಗಿ ತನಗುಂಟಾದ ಕೋಪದಲ್ಲಿ ಪಾಂಡವರು ನಿಶ್ಶಕ್ತರು, ಸತ್ವಶಾಲಿಗಳಲ್ಲ ಎಂದು ಜಯ ಪಡೆಯುವುದಕ್ಕಾಗಿ ನಾರಾಯಣನನ್ನೂ ಉದಾತ್ತನಾರಾಯಣನನ್ನೂ ಲಕ್ಷ್ಯಮಾಡದೆ ಯುದ್ಧದಲ್ಲಿ ಜಯಿಸುವುದಕ್ಕೆ ಹೊರಟಿದ್ದಾನೆ. ಇಂತಹ ಶೂರನು ಬೇರೆ ಇದ್ದಾನೆಯೇ. ೧೨. ದುರ್ಯೋಧನನು ನನ್ನನ್ನೇ ನಂಬಿದ್ದಾನೆ. ಯುದ್ಧಮಾಡುತ್ತೇನೆಂದು ನನ್ನಿಂದ ಪ್ರತಿಜ್ಞೆ ಮಾಡಿಸಿದ್ದಾನೆ. ನನಗೆ ಎರಡು ಗುಂಪಿನವರೂ ಸಮಾನರಾದವರಲ್ಲವೇ? (ಸಮಾನಬಂಧುಗಳಲ್ಲವೇ?) ನನ್ನ ಮಕ್ಕಳೊಡನೆಯೂ ಮೊಮ್ಮಕ್ಕಳೊಡನೆಯೂ ಹೇಗೆ ಯುದ್ಧಮಾಡಲಿ? ೧೩. ಮಕ್ಕಳ ಮೊಮ್ಮಕ್ಕಳ ತೇರುಗಳು ಗುಂಪುಗುಂಪಾಗಿ ನಡುವೆ ಎದುರಿಸಿದರೆ ಅವರನ್ನು ರಕ್ಷಿಸದೆ ಯುದ್ಧದಲ್ಲಿ ಮಕ್ಕಳನ್ನು ಕೊಂದೆನಾದರೆ ಹಾವು ತಾನು ಇಕ್ಕಿದ (ಪ್ರಸವಿಸಿದ-ಹೆತ್ತ) ಮೊಟ್ಟೆಗಳನ್ನು ತಾನೆ ನುಂಗಿದಂತಾಗುತ್ತದೆಯಲ್ಲವೇ? ೧೪. ನರನಾರಾಯಣರಿಬ್ಬರೇ ಯುದ್ಧದಲ್ಲಿ ನನ್ನನ್ನು ಪ್ರತಿಭಟಿಸುವವರು. ಅವರಲ್ಲಿ ಒಬ್ಬ ಮೊಮ್ಮಗ, ಮತ್ತೊಬ್ಬ ಪರಮಗುರು. ಅವರಿಬ್ಬರನ್ನೂ ರಕ್ಷಿಸಿ ಉಳಿದ ಶತ್ರುರಾಜಸೈನ್ಯವನ್ನು ನಾಶಪಡಿಸುತ್ತೇನೆ. ವ|| ಎಂದು ತನ್ನಲ್ಲಿ ಯೋಚಿಸುತ್ತಿರಲಾಗಿ ಆ ಕಡೆ ದುರ್ಯೋಧನನು ಸೂರ್ಯೋದಯದಲ್ಲಿ ಅನೇಕ ಸಾವಿರ ರಾಜರುಗಳಿಂದ ಸುತ್ತುವರಿಯಲ್ಪಟ್ಟು ಭೀಷ್ಮನಿಗೆ ದೂತರ ಮೂಲಕ ಹೇಳಿಕಳುಹಿಸಿ ಬರಮಾಡಿದನು. ರತ್ನಖಚಿತವಾದ ಪೀಠದಲ್ಲಿ ಕುಳ್ಳಿರಿಸಿದನು. ದೇವಾಸುರಯುದ್ಧದಲ್ಲಿ ಷಣ್ಮುಖನಿಗೆ ವೀರಪಟ್ಟವನ್ನು ಕಟ್ಟುವ ಇಂದ್ರನ ರೀತಿಯನ್ನೇ (ಅನುಕರಿಸಿ) ೧೫. ಶ್ರೇಷ್ಠವಾದ ಮೃದಂಗ, ಶಂಖ, ತಮಟೆ, ಮೊದಲಾದವುಗಳ ಉಚ್ಚಧ್ವನಿಯು ದಿಕ್ಕುಗಳ ಕೊನೆಯನ್ನು ಮುಟ್ಟುತ್ತಿರಲು ವೇಶ್ಶಾಸ್ತ್ರೀಯರು ಚಲಿಸುತ್ತಿರುವ ಚಾಮರವನ್ನು ಗುಂಪಾಗಿ ಬೀಸುತ್ತಿರಲು ಪಂಚರತ್ನಗಳ ರಾಶಿಗಳಿಂದ ಕೂಡಿದ ಚಿನ್ನದ ಕಲಶಗಳ ಪುಣ್ಯ ತೀರ್ಥಗಳಲ್ಲಿ ಪ್ರೀತಿಯಿಂದ ಸ್ನಾನ ಮಾಡಿಸಿ ಚಕ್ರವರ್ತಿಯಾದ ದುರ್ಯೋಧನನು ಭೀಷ್ಮನಿಗೆ ವೀರಪಟ್ಟವನ್ನು ಕಟ್ಟಿದನು. ವ|| ಹಾಗೆ ಪರಶುರಾಮನನ್ನೇ ಹೆದರಿಸಿದ

ಚಂ|| ಭಗವತಿಯೇಱುವೇೞ್ವ ತೆರದಿಂ ಕಥೆಯಾಯ್ತಿವರೇಱು ನೀನಿದಂ
ಬಗೆದಿವರಿನ್ನುಮಾಂತಿಱವರೆಂದು ವಿಮೋಹಿಸಿ ವೀರಪಟ್ಟಮಂ|
ಬಗೆಯದೆ ಕಟ್ಟಿದೈ ಗುರುಗಳಂ ಕುಲವೃದ್ಧರನಾಜಿಗುಯ್ದು ಕೆ
ಮ್ಮಗೆ ಪಗೆವಾಡಿಯೊಳ್ ನಗಿಸಿಕೊಂಡೊಡೆ ಬಂದಪುದೇಂ ಸುಯೋಧನಾ|| ೧೬

ಕಂ|| ಕಟ್ಟಿದ ಪಟ್ಟಮೆ ಸರವಿಗೆ
ನೆಟ್ಟನೆ ದೊರೆ ಪಿಡಿದ ಬಿಲ್ಲೆ ದಂಟಿಂಗೆಣೆ ಕ|
ಣ್ಗೆಟ್ಟ ಮುದುಪಂಗೆ ಪಗೆವರ
ನಿಟ್ಟೆಲ್ವಂ ಮುಱವೊಡೆನಗೆ ಪಟ್ಟಂಗಟ್ಟಾ|| ೧೭

ಆದಿಯೊಳವರಂ ಪಿರಿದೊಂ
ದಾದರದಿಂ ನಡಪಿದಜ್ಜರಪ್ಪುದಱಂದಂ|
ಕಾದರಿವರವರೊಳವರುಂ
ಕಾದರ್ ನೆರೆದಿವರೊಳೆಂತು ನಂಬುವೆ ನೃಪತೀ|| ೧೮

ವ|| ಎಂಬುದುಮಾ ನುಡಿಗೆ ಸಿಡಿಲ್ದು ಕುಂಭಸಂಭವನಿಂತೆಂದಂ-

ಕಂ|| ಸಿಂಗದ ಮುಪ್ಪು ನೆಗ್ದ
ಗಾಂಗೇಯರ ಮುಪ್ಪುಮಿೞಕೆವಡೆಗುಮೆ ವನಮಾ|
ತಂಗಂಗಳಿನಸುಹೃಚ್ಚತು
ರಂಗಬಲಂಗಳಿದನದೆಂತುಮಂಗಾಪತೀ|| ೧೯

ಕುಲಜರನುದ್ಧತರಂ ಭುಜ
ಬಲಯುತರಂ ಹಿತರನೀ ಸಭಾಮಧ್ಯದೊಳ|
ಗ್ಗಲಿಸಿದ ಮದದಿಂ ನಾಲಗೆ
ಕುಲಮಂ ತುಬ್ಬುವವೊಲುಱದೆ ನೀಂ ಕೆಡೆನುಡಿವೈ|| ೨೦

ವ|| ಎಂದು ನುಡಿದ ಗುರುವಿನ ಕರ್ಣಕಠೋರವಚನಂಗಳ್ಗೆ ಕರ್ಣಂ ಕಿನಿಸಿ-

ಚಂ|| ಕುಲಮೆನೆ ಮುನ್ನಮುಗ್ಗಡಿಪಿರೇಂ ಗಳ ನಿಮ್ಮ ಕುಲಂಗಳಾಂತು ಮಾ
ರ್ಮಲೆವನನಟ್ಟಿ ತಿಂಬುವೆ ಕುಲಂ ಕುಲಮಲ್ತು ಚಲಂ ಕುಲಂ ಗುಣಂ|
ಕುಲಮಭಿಮಾನಮೊಂದೆ ಕುಲಮಣ್ಮು ಕುಲಂ ಬಗೆವಾಗಳೀಗಳೀ
ಕಲಹದೊಳಣ್ಣ ನಿಮ್ಮ ಕುಲವಾಕುಲಮಂ ನಿಮಗುಂಟುಮಾಡುಗುಂ|| ೨೧

ವೀರನಿಗೆ ವೀರಪಟ್ಟವನ್ನು ಕಟ್ಟಿ ಶತ್ರುಗಳನ್ನು ನನ್ನ ಮಂಚದ ಕಾಲಿನಲ್ಲಿ ಕಟ್ಟಿದೆನೆಂದು ಅಹಂಕಾರ ಪಡುತ್ತಿರುವ ದುರ್ಯೋಧನನ ಮಾತನ್ನು ಕೇಳಿ ಕರ್ಣನು ಹೀಗೆಂದನು. ೧೬. ಹಿಂದಿನ ಕಟ್ಟುಕಥೆಯಂತಾಯ್ತು ಇವರ ಯುದ್ಧದ ಕತೆ. ಇದನ್ನು ತಿಳಿಯದೆ ನೀನು ಇವರು ಇನ್ನೂ ಪ್ರತಿಭಟಿಸಿ ಯುದ್ಧಮಾಡುತ್ತಾರೆ ಎಂದು ಭ್ರಾಂತಿಗೊಂಡು ವಿಚಾರಮಾಡದೆ ಇವರಿಗೆ ಸೇನಾಪತ್ಯದ ಪಟ್ಟವನ್ನು ಕಟ್ಟಿದೆ. ಗುರುಗಳೂ ಕುಲವೃದ್ಧರೂ ಆದ ಇವರನ್ನು ಯುದ್ಧರಂಗಕ್ಕೆ ಸೆಳೆದು ನಿಷ್ಪ್ರಯೋಜನಕವಾಗಿ ಶತ್ರುಗಳ ಗುಂಪಿನಲ್ಲಿ ನಗಿಸಿಕೊಂಡರೆ ನಿನಗೆ ಬರುವ ಪ್ರಯೋಜನವೇನು ದುರ್ಯೋಧನ? ೧೭. ಕಣ್ಣು ಕಾಣದ ಈ ಮುದುಕನಿಗೆ ಕಟ್ಟಿದ ವೀರಪಟ್ಟವು ಹಗ್ಗಕ್ಕೆ ಸಮಾನವಲ್ಲವೇ? ಆತನು ಧರಿಸಿರುವ ಬಿಲ್ಲು ದಂಟಿಗೆ ಸಮಾನವಲ್ಲವೇ? ಶತ್ರುಗಳ ನಿಟ್ಟೆಲುಬುಗಳನ್ನು ಪುಡಿಮಾಡಬೇಕಾದರೆ ನನಗೆ ಪಟ್ಟ ಕಟ್ಟಯ್ಯ. ೧೮. ಬಾಲ್ಯದಿಂದಲೂ ಅವರನ್ನು ವಿಶೇಷ ಪ್ರೀತಿಯಿಂದ ಸಾಕಿದ ಅಜ್ಜರಾದುದರಿಂದ ಇವರು ಅವರೊಡನೆ ಕಾದುವುದಿಲ್ಲ. ಅವರೂ ಇವರೊಡನೆ ಪ್ರತಿಭಟಿಸಿ ಕಾದುವುದಿಲ್ಲ. ರಾಜನೇ ಹೇಗೆ ಇವರನ್ನು ನಂಬುತ್ತೀಯೆ? ವ|| ಎನ್ನಲು ಆ ಮಾತಿಗೆ ದ್ರೋಣನು ಸಿಡಿದು ಹೀಗೆಂದನು. ೧೯. ಸಿಂಹದ ಮುಪ್ಪನ್ನೂ ಭೀಷ್ಮರ ಮುಪ್ಪನ್ನೂ ಅಲ್ಲಗಳೆಯಬೇಡ, ಸಿಂಹವು ಮುಪ್ಪಾದರೆ ಆನೆಗಳಿಗೆ ಸದರವೇನು? ಹಾಗೆಯೇ ಭೀಷ್ಮರು ಮುದುಕರಾದುದರಿಂದ ಚತುರಂಗಸೈನ್ಯವು ಅವರನ್ನು ಗೆಲ್ಲಬಲ್ಲವೇ? ೨೦. ಸತ್ಕುಲಪ್ರಸೂತರಾದವರನ್ನು ಶ್ರೇಷ್ಠರಾದವರನ್ನು ಎಲ್ಲರಿಗೂ ಹಿತರಾದವರನ್ನು ಕುರಿತು ಈ ಸಭಾಮಧ್ಯದಲ್ಲಿ ಹೆಚ್ಚಿದ ಕೊಬ್ಬಿನಿಂದ ನೀನು ನಿಷ್ಪ್ರಯೋಜನವಾಗಿ ತಿರಸ್ಕಾರದ ಮಾತನಾಡಿದ್ದೀಯೆ. ಕುಲವನ್ನು ನಾಲಗೆ ಆಡಿ ತೋರಿಸುತ್ತದೆಯಲ್ಲವೆ? ವ|| ಎಂದು ನುಡಿದ ಕಿವಿಗೆ ಕರ್ಕಶವಾದ ಮಾತುಗಳಿಗೆ ಕರ್ಣನು ಕೋಪಿಸಿಕೊಂಡು ೨೧. ಮಾತಿಗೆ ಮೊದಲು ಕುಲವನ್ನೇ ಏಕೆ ಕುರಿತು ಘೋಷಿಸುತ್ತೀರಿ? ನಿಮ್ಮ ಕುಲಗಳು

ಕಂ|| ಗಂಗಾಸುತಂ ಪೃಥಾಸುತ
ರಂ ಗೆಲ್ದೊಡೆ ತಪಕೆ ಪೋಪೆನವರ್ಗಳ ಕೆಯ್ಯೊಳ್|
ಗಾಂಗೇಯನೞದೊಡಹಿತರ
ನಾಂ ಗೆಲೆ ತಳ್ತಿಱವೆನನ್ನೆಗಂ ಬಿಲ್ವಿಡಿಯೆಂ|| ೨೨

ವ|| ಎಂದು ಕರ್ಣಂ ಪ್ರತಿಜ್ಞೆಗೆಯ್ವುದುಂ ಸಿಂಧುತನೂಜನಿಂತೆಂದಂ-

ಚಂ|| ಕಲಿತನದುರ್ಕು ಜವ್ವನದ ಸೊರ್ಕು ನಿಜೇಶನ ನಚ್ಚು ಮಿಕ್ಕ ತೋ
ಳ್ವಲದ ಪೊಡರ್ಪು ಕರ್ಣ ನಿನಗುಳ್ಳನಿತೇನೆನಗುಂಟೆ ಭಾರತಂ|
ಕಲಹಮಿದಿರ್ಚುವಂ ಹರಿಗನಪ್ಪೊಡೆ ಮೊಕ್ಕಳಮೇಕೆ ನೀಂ ಪಳಂ
ಚಲೆದಪೆಯಣ್ಣ ಸೂೞ್ಪಡೆಯಲಪ್ಪುದು ಕಾಣ ಮಹಾಜಿರಂಗದೊಳ್|| ೨೩

ವ|| ಎಂದು ಮತ್ತಮಿಂತೆಂದಂ-

ಕಂ|| ಮುದುಪರ ಬಿಲ್ಬಲ್ಮೆಯುಮಿಱ
ವದಟುಂ ಬಗೆವಾಗಳಣ್ಣನೆಂದಂತುಟೆ ತ
ಪ್ಪದು ಕರಮೆ ತುಚ್ಛಮಕ್ಕುಂ
ತದನದೊಳಿನ್ನೆನ್ನ ನುಡಿದ ನುಡಿಯಂ ಕೇಳಿಂ|| ೨೪

ಮ|| ಪಿಡಿಯೆಂ ಚಕ್ರಮನೆಂಬ ಚಕ್ರಿಯನಿಳಾಚಕ್ರಂ ಭಯಂಗೊಳ್ವಿನಂ
ಪಿಡಿಯೆಪ್ಪೆಂ ಕರಚಕ್ರಮಂ ನರರಥಂ ತೂಳ್ದಾ ಕುರುಕ್ಷೇತ್ರದಿಂ|
ಪಡುವೆಣ್ಗಾವುದು ಪೋಗೆ ಪೋಗಡಿಸುವೆಂ ನಿಚ್ಚಂ ಧರಾಶರಂ
ಪಡಲಿಟ್ಟಂತಿರೆ ಮಾೞ್ಪೆನೋವದೆ ಪಯಿಂಛಾಸಿರ್ವರಂ ಯುದ್ಧದೊಳ್|| ೨೫

ವ|| ಎಂದು ಮಹಾಪ್ರತಿಜ್ಞಾರೂಢನಾದ ಗಾಂಗೇಯನಳವನಳವಲ್ಲದೆ ಪೊಗೞ್ದವರಂ ಬೀಡಿಂಗೆ ಬಿಜಯಂಗೆಯ್ಯಿಮೆಂದು ಕಳಿಪಿ ಮಱುದಿವಸಂ ಯುದ್ಧಸನ್ನದ್ಧರಾಗಿ ಪ್ರಯಾಣಭೇರಿಯಂ ಪೊಯ್ಸಿದಾಗಳ್-

ಮ|| ಕೆಡೆದಂ ಪದ್ಮಜನಾಸನಾಂಬುರುಹದಿಂದಾಗಳ್ ಸುರೇಂದ್ರಾಚಳಂ
ನಡುಗಿತ್ತರ್ಕನಳುರ್ಕೆಗೆಟ್ಟು ನಭದಿಂ ತೂಳ್ದಂ ಮರುಳ್ದಪ್ಪಿದಳ್|
ಮೃಡನಂ ಗೌರಿ ಸಮಸ್ತಮೀ ತ್ರಿಭುವನಂ ಪಂಕೇಜಪತ್ರಾಂಬುವೋಲ್
ನಡುಗಿತ್ತೆಂಬಿನಮುರ್ವಿ ಪರ್ವಿದುದು ತತ್ಸನ್ನಾಹಭೇರೀರವಂ|| ೨೬

ಪ್ರತಿಭಟಿಸಿದವರನ್ನು ಎದುರಿಸಿ ಹಿಂಬಾಲಿಸಿ ತಿಂದು ಹಾಕುತ್ತವೆಯೇನು? ಹುಟ್ಟಿದ ಜಾತಿ ನಿಜವಾದ ಕುಲವಲ್ಲ ; ಛಲ-ಕುಲ, ಸದ್ಗುಣ-ಕುಲ, ಆತ್ಮಗೌರವವೊಂದೆ ಕುಲ, ಪರಾಕ್ರಮವೆಂಬುದು ಕುಲ, ವಿಚಾರಮಾಡುವುದಾದರೆ ಈಗ ಈ ಯುದ್ಧದಲ್ಲಿ ಅಣ್ಣಾ, ನಿಮ್ಮ ಈ ಕುಲವು ನಿಮಗೆ ವ್ಯಥೆಯನ್ನುಂಟುಮಾಡುತ್ತದೆ. ೨೨. ಭೀಷ್ಮನು ಪಾಂಡವರನ್ನು ಗೆದ್ದರೆ ನಾನು ತಪಸ್ಸಿಗೆ ಹೋಗಿಬಿಡುತ್ತೇನೆ. ಅವರುಗಳ ಕಯ್ಯಲ್ಲಿ ಭೀಷ್ಮನು ನಾಶವಾದರೆ ಶತ್ರುಗಳನ್ನು ಗೆಲ್ಲುವುದಕ್ಕಾಗಿ ನಾನು ಸಂಸಿ ಯುದ್ಧಮಾಡುತ್ತೇನೆ. ಅಲ್ಲಿಯವರೆಗೆ ನಾನು ಬಿಲ್ಲನ್ನೇ ಹಿಡಿಯುವುದಿಲ್ಲ. ವ|| ಎಂಬುದಾಗಿ ಕರ್ಣನು ಪ್ರತಿಜ್ಞೆ ಮಾಡಲು ಭೀಷ್ಮನು ಹೀಗೆ ಹೇಳಿದನು. ೨೩. ಕರ್ಣ ಶೌರ್ಯದ ಗರ್ವ, ಯವ್ವನದ ಮದ, ಸ್ವಾಮಿಯ ನಂಬಿಕೆ, ಮೀರಿದ ಬಾಹುಬಲದ ವೈಭವ -ಇವು ನಿನಗಿರುವಷ್ಟು ನನಗಿದೆಯೇನಪ್ಪ. ಇದು ಭಾರತದ ಯುದ್ಧ, ಎದುರಿಸುವವನು ಹರಿಗನಾಗಿರುವಾಗ ಈ ಹೀಯಾಳಿಕೆಯೇಕೆ? ನೀನು ಪ್ರತಿಭಟಿಸಿ ಕಾದುವೆಯಣ್ಣಾ, ಈ ಮಹಾಯುದ್ಧದಲ್ಲಿ ನಿನಗೂ ಸರಗಿ ಬರುತ್ತದೆ ನೋಡುವೆಯಂತೆ ವ|| ಎಂದು ಪುನ ಹೀಗೆಂದನು- ೨೪. ನಾನೇನೋ ಮುದುಕ. ಮುದುಕರ ಅಸ್ತ್ರವಿದ್ಯಾಕೌಶಲ್ಯವನ್ನೂ ಯುದ್ಧಮಾಡುವ ಪರಾಕ್ರಮವನ್ನೂ ವಿಚಾರಮಾಡಿ ನೋಡಿದರೆ ಕರ್ಣನು ಹೇಳಿದ ಹಾಗೆಯೇ. ತಪ್ಪೇನಿಲ್ಲ, ವಿಶೇಷವಾಗಿ ನಿಜವೇ ಆಗುತ್ತದೆ. ಆದರೂ ಯುದ್ಧದಲ್ಲಿ ಇನ್ನು ಮೇಲೆ ನನ್ನ ಪ್ರತಿಜ್ಞೆಯನ್ನು ಕೇಳಿ- ೨೫. ಚಕ್ರವನ್ನು ಹಿಡಿಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವ ಕೃಷ್ಣನ ಕೈಯಲ್ಲಿ ಭೂಮಂಡಲವೆಲ್ಲ ಭಯಪಡುವ ಹಾಗೆ ಚಕ್ರವನ್ನು ಹಿಡಿಸುತ್ತೇನೆ. ಅರ್ಜುನನ ತೇರು ಹಾರಿ ಕುರುಕ್ಷೇತ್ರದಲ್ಲಿ ಪಶ್ಚಿಮಕ್ಕೆ ಎಂಟುಗಾವುದ ಹೋಗುವ ಹಾಗೆ ಬಾಣಪ್ರಯೋಗ ಮಾಡುತ್ತೇನೆ. ಪ್ರತಿದಿನವೂ ಯುದ್ಧದಲ್ಲಿ ಹತ್ತು ಸಾವಿರ ರಾಜರನ್ನು ಕೆಳಗುರುಳಿಸುತ್ತೇನೆ. (ಕೆಳಗೆ ಮಲಗುವ ಹಾಗೆ ಮಾಡುತ್ತೇನೆ) ವ|| ಎಂದು ಮಹಾಪ್ರತಿಜ್ಞೆಯನ್ನು ಮಾಡಿದ ಭೀಷ್ಮನ ಶಕ್ತಿಯನ್ನು ಅಳತೆಯಿಲ್ಲದಷ್ಟು ಎಲ್ಲರೂ ಹೊಗಳಿದರು. ಅವರನ್ನು ‘ಬೀಡಿಗೆ ದಯಮಾಡಿಸಿ’ ಎಂದು ಕಳುಹಿಸಿಕೊಟ್ಟನು. ಮಾರನೆಯದಿನ ಯುದ್ಧಸನ್ನದ್ಧನಾಗಿ ಪ್ರಯಾಣಸೂಚಕವಾದ ಭೇರಿಯನ್ನು ಶಬ್ದಮಾಡಿಸಿದನು. ೨೬. ಆ ಭೇರಿಯ ಶಬ್ದವನ್ನು ಕೇಳಿ

ವ|| ಅಂತು ಮೊೞಗುವ ಭೇರೀರವದೊಡನೆ ನೆಲಂ ಮೊೞಗೆಯುಂ ತಳ್ತೆತ್ತಿದ ವಿಚಿತ್ರಕೇತುಗಳೊಡನುತ್ಪಾತಕೇತುಗಳ್ ಮೂಡೆಯುಂ ಪೆರ್ವೆಂಡಿರ್ ಸೇಸೆಯೊಡನೆ ರುರವರ್ಷಂ ಸುರಿಯೆಯುಂ ಹಿತ ಪುರೋಹಿತ ಜಯ ಜಯ ಧ್ವನಿಗಳೊಡನೆ ಹಾಹಾಕ್ರಂದನ ಧ್ವನಿಗಳ ನಿಮಿತ್ತಮಾಕಾಶದೊಳ್ ನೆಗೞೆಯುಂ ಕಾದುವೆನೆಂದು ನೆಗೞೆ ನುಡಿದ ನುಡಿಯುಮಂ ಪಿಡಿದ ಚಲಮುಮಂ ಬಗೆದು ಸೆರಗಂ ಬೆರಗುಮಂ ಬಗೆಯದೆ ಮಂಗಳಾಭರಣದೊಳ್ ನೆಯೆ ಕೆಯ್ಗೆಯ್ದು ಮುತ್ತಿನ ಮಾಣಿಕದ ಮಂಡನಾಯೋಗಂಗಳೊಳಾಯೋಗಂಗೊಂಡು ಬಂದ ಮದಾಂಧಗಂಧಸಿಂಧುರಮಪ್ಪ ಪಟ್ಟವರ್ಧನದ ಬೆಂಗೆವಾಯ್ದು-

ಕಂ|| ನಯಮನಯಂ ಜಯಮೆನಗಪ
ಜಯವಿದು ಯಶಮಯಶಮೆಂಬಿದಂ ಬಗೆಯದೆ ನಿ|
ಶ್ಚಯಿಸಿ ಕಲಹಮನೆ ಮನದೊಳ್
ಭಯಮಱಯದ ಕಲಿ ಸುಯೋಧನಂ ಪೊಱಮಟ್ಟಂ|| ೨೭

ವ|| ಅಂತು ಪೊಱಮಟ್ಟು ಮುಂದೆ ಪರಿವ ಧವಳಚ್ಛತ್ರಚಾಮರಂಗಳುಂ ಮಿಳಿರ್ವ ಪಾಳಿ ಕೇತನಂಗಳುಂ ಪೊಯ್ವ ಪಂಚಮಹಾಶಬ್ದಂಗಳುಂ ತನಗೆ ರಾಜರಾಜ ಶಬ್ದಮನನ್ವರ್ಥಂ ಮಾಡೆ ಜಯದ್ರಥ ಜಯತ್ಸೇನ ಸುದಕ್ಷಿಣ ಶಲ್ಯ ಶಕುನಿ ಧೃಷ್ಟಕೇತು ನೀಳ ಭಗದತ್ತ ಶ್ರುತಾಯುಧ ನಿಯತಾಯುಧಾಚ್ಯುತಾಯುಧಾದಿಗಳಪ್ಪ ಪನ್ನೊಂದಕ್ಷೋಹಿಣೀಪತಿಗಳುಂ ಗಾಂಗೇಯ ದ್ರೋಣಾಶ್ವತ್ಥಾಮ ಕೃಪ ಕೃತವರ್ಮ ಪ್ರಭೃತಿಗಳುಂ ಕರ್ಣ ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳ್ ಮೂವರುಂ ಬೆರಸು ಬರೆ ಬಾಹ್ಲಿಕ ಭೂರಿಶ್ರವಸೋಮದತ್ತರೆಂಬ ಮೂವರುಮನಂತ ಬಲಂ ಬೆರಸು ಕೂಡಿಬರೆಯವಂತಿದೇಶಾಶ್ವರರಪ್ಪ ವಿಂದಾನುವಿಂದರೆಣ್ಬತ್ತು ನಾಲ್ಸಾಸಿರ ಮದದಾನೆ ವರೆಸು ಬಂದು ಕೂಡೆ ಕಳಿಂಗರಾಜಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೊಳ್ ಸತ್ತ ಬಕಾಸುರ ಜಟಾಸುರರ ಮಕ್ಕಳ್ ಚತುಸ್ತ್ರಿಂಶತ್ಸಹಸ್ರ ನಕ್ತಂಚರ ಪರಿವೃತ ಹಳಂಭೂಷ ಮುಸಲಾಯುಧ ಕಾಳನೀಳ ವಿದ್ಯುನ್ಮಾಲ್ಯಾದಿಗಳುಂ ಬಂದು ಕೂಡೆ ತ್ರಿಗರ್ತಾಶಂ ಸುಶರ್ಮನುಂ ಸಂಸಪ್ತಕರ್ ಪದಿನೆಂಟು ಕೋಟಿ ರಥಂ ಬೆರಸು ಬಂದು ಕೂಡೆ ಮತ್ತಮನೇಕ ದೇಶಾಶ್ವರರುಂ ಬರೆ ಯುಯುತ್ಸು ದುಶ್ಶಾಸನ ಚಿತ್ರಸೇನ ದುಸ್ಸಹ ದುಸ್ಸಳ ವಿಂದಾನುವಿಂದ ದುರ್ಧರ್ಷಣ ದುರ್ಮರ್ಷಣ ದುಸ್ಸ ರ್ಶನ ಸುಬಾಹು ದುರ್ಮುಖ ದುಷ್ಕರ್ಣ ವಿಕರ್ಣ ವಿವಿಂಶತಿ ಸುಲೋಚನ ಚಿತ್ರೋಪಚಿತ್ರ ನಂದೋಪನಂದ ಚಿತ್ರಾಂಗದ ಚಿತ್ರಕುಂಡಲ ಜರಾಸಂಧ

ಬ್ರಹ್ಮನು ಕಮಲಾಸನದಿಂದ ಉರುಳಿದನು; ಮೇರುಪರ್ವತವು ನಡುಗಿತು. ಸೂರ್ಯನು ಸ್ಥಾನಭ್ರಷ್ಟನಾಗಿ ಆಕಾಶದಿಂದ ಹಾರಿದನು. ಪಾರ್ವತಿಯು ಭ್ರಾಂತಿಗೊಂಡು ಈಶ್ವರನ್ನು ತಬ್ಬಿಕೊಂಡಳು. ಈ ಸಮಸ್ತ ಭೂಮಂಡಲವು ಕಮಲದೆಲೆಯ ಮೇಲಿನ ನೀರಿನ ಹಾಗೆ ನಡುಗಿತು ಎನ್ನುವಂತೆ ಆ ಪ್ರಯಾಣಭೇರೀ ಶಬ್ದವು ಹೆಚ್ಚಿ ಹಬ್ಬಿತು. ವ|| ಆಗ ಭೂಮಿಯು ಗುಡುಗಿತು. ಎತ್ತಿ ಕಟ್ಟಿರುವ ಚಿತ್ರಮಯವಾದ ಧ್ವಜಗಳೊಡನೆ ಅಪಶಕುನ ಸೂಚಕವಾದ ನಕ್ಷತ್ರಗಳು ಕಾಣಿಸಿಕೊಂಡವು. ವೃದ್ಧಸ್ತ್ರೀಯರು ಚೆಲ್ಲುವ ಮಂತ್ರಾಕ್ಷತೆಗಳೊಡನೆ ರಕ್ತದ ಮಳೆಯು ಸುರಿಯಿತು. ಹಿತರಾದ ಪುರೋಹಿತರ ಜಯಜಯಶಬ್ದಗಳೊಡನೆ ಅಳುವ ಶಬ್ದವು ಅಕಾರಣವಾಗಿ ಆಕಾಶದಲ್ಲಿ ಉಂಟಾಯಿತು. ಆದರೂ ದುರ್ಯೋಧನನು ಯುದ್ಧ ಮಾಡುತ್ತೇನೆಂದು ಸ್ಪಷ್ಟವಾಗಿ ಆಡಿದ ಮಾತನ್ನೂ ಹಿಡಿದ ಛಲವನ್ನೂ ಯೋಚನೆ ಮಾಡಿ ಭಯವನ್ನೂ ಅಪಾಯವನ್ನೂ ಯೋಚಿಸಲೇ ಇಲ್ಲ. ಮಂಗಳಕರವಾದ ಒಡವೆಗಳಿಂದ ಪೂರ್ಣವಾಗಿ ಅಲಂಕಾರಮಾಡಿಕೊಂಡು ಮುತ್ತು ಮಾಣಿಕ್ಯದ ಆಭರಣಗಳಿಂದ ಅಲಂಕೃತವಾಗಿ ಬಂದ ಮದಗಜವಾದ ಪಟ್ಟದಾನೆಯನ್ನು ಹತ್ತಿ ೨೭. ಇದು ನೀತಿ ಇದು ಅನೀತಿ, ಇದು ಜಯ ಇದು ಅಪಜಯ, ಇದು ಯಶಸ್ಸು ಇದು ಅಪಯಶಸ್ಸು ಎಂದು ವಿಚಾರಮಾಡದೆ ಯುದ್ಧವನ್ನೇ ಮನಸ್ಸಿನಲ್ಲಿ ನಿಷ್ಕರ್ಷಿಸಿ ಭಯವೆಂದರೇನೆಂಬುದನ್ನೇ ತಿಳಿಯದ ಶೂರನಾದ ದುರ್ಯೋಧನನು ಯುದ್ಧಕ್ಕೆ ಹೊರಟನು. ವ|| ಹಾಗೆ ಹೊರಟು ತನ್ನ ಮುಂದೆ ನಡೆಯುತ್ತಿದ್ದ ಶ್ವೇತಚ್ಛತ್ರಚಾಮರಗಳೂ ಅಲುಗಾಡುತ್ತಿದ್ದ ಕೊಂಬು, ತಮಟೆ, ಭೇರಿ, ಘಂಟೆ ಮತ್ತು ಬಿನ್ನಹಂಗಳಗಳೆಂಬ ಪಂಚಮಹಾವಾದ್ಯಗಳೂ ತನ್ನ ಚಕ್ರವರ್ತಿ ಎಂಬ ಶಬ್ದವನ್ನು ಅನ್ವರ್ಥವಾಗಿ ಮಾಡುತ್ತಿದ್ದವು. ಜಯದ್ರಥ, ಜಯತ್ಸೇನ, ಸುದಕ್ಷಿಣ, ಶಲ್ಯ, ಶಕುನಿ, ಧೃಷ್ಟಕೇತು, ನೀಳ, ಭಗದತ್ತ, ಶ್ರುತಾಯುಧ, ನಿಯತಾಯುಧ, ಅಚ್ಯುತಾಯುಧರೇ ಮೊದಲಾದ ಹನ್ನೊಂದಕ್ಷೋಹಿಣೀ ನಾಯಕರೂ ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪ, ಕೃತವರ್ಮ ಮೊದಲಾದವರೂ ಕರ್ಣ, ವೃಷಸೇನ ಚಿತ್ರಸೇನರೆಂಬ ತಂದೆ ಮಕ್ಕಳು ಮೂವರೂ ಒಟ್ಟುಗೂಡಿ ಬಂದರು. ಬಾಹ್ಲಿಕ ಭೂರಿಶ್ರವ ಸೋಮದತ್ತರೆಂಬ ಮೂವರೂ ಕಡೆಯಿಲ್ಲದಷ್ಟು ಸೇನಾಸಮೇತರಾಗಿ ಬಂದು ಸೇರಿದರು. ಅವಂತೀದೇಶದ ಒಡೆಯರಾದ ವಿಂದಾನುವಿಂದರು ಎಂಬತ್ತುನಾಲ್ಕು ಸಾವಿರ ಮದ್ದಾನೆಯೊಡಗೂಡಿ ಬಂದು ಕೂಡಿದರು. ಕಳಿಂಗ ರಾಜನಾದ ಕ್ಷೇಮಧೂರ್ತಿಯೂ ಭೀಮಸೇನನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಹಳಂಭೂಷ ಮುಸಲಾಯುಧ ಕಾಳ ನೀಳ ವಿದ್ಯುನ್ಮಾಲಿ ಮೊದಲಾದವರೂ ಮೂವತ್ತುನಾಲ್ಕುಸಾವಿರ ರಾಕ್ಷಸರಿಂದ ಸುತ್ತುವರಿಯಲ್ಪಟ್ಟು ಬಂದು ಜೊತೆಗೂಡಿದರು. ತ್ರಿಗರ್ತಾಶ್ವರನಾದ ಸುಶರ್ಮನೂ ಸಂಶಪ್ತಕರೂ ಹದಿನೆಂಟು ಕೋಟಿ ತೇರಿನೊಡನೆ ಬಂದು ನೆರೆದರು. ಇನ್ನೂ ಅನೇಕ ದೇಶಾಶರು ಬಂದು ಒಟ್ಟುಗೂಡಿದರು. ಯುಯುತ್ಸು, ದುಶ್ಶಾಸನ, ಚಿತ್ರಸೇನ, ದುಸ್ಸಹ, ದುಸ್ಸಳ, ವಿಂದಾನುವಿಂದ,

ಸತ್ಯಸಂಧ ಸುಹಸ್ತ ದೃಢಹಸ್ತ ಪ್ರಮಾಥಿ ದೀರ್ಘಬಾಹು ಮಹಾಬಾಹುಗಳ್ ಮೊದಲಾಗೆ ತನ್ನ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಂ ಸುತ್ತಿಱದು ಬಳಸಿ ಬರೆ ವಿಳಯಕಾಳ ವಾತಾಹತಿಯಿಂ ಜಳನಿಯೆ ತಳರ್ವಂತೆ ತಳರ್ದು ಕುರುಕ್ಷೇತ್ರಕ್ಕೆ ಮೊಗಸಿದಾಗಳ್-

ಚಂ|| ಕರಿ ಮಕರಂಗಳಂ ಕರಿ ಘಟಾವಳಿಯಬ್ದಕುಳಂಗಳಂ ಭಯಂ
ಕರತರಮಾದ ಪೆರ್ದೆರೆಗಳಂ ಹಯಸಂತತಿ ಮತ್ಸ್ಯಕೋಟಿಯಂ|
ಸುರಿತ ನಿಶಾತಹೇತಿಯುತ ಸದ್ಭಟಕೋಟಿ ನಿರಂತರಂ ತಿರ
ಸ್ಕರಿಸಿರೆ ಘೂರ್ಣಿತಾರ್ಣವಮನೊತ್ತರಿಸಿತ್ತು ಚತುರ್ಬಲಾರ್ಣವಂ|| ೨೮

ಮ|| ಮದವದ್ದಂತಿ ವರೂಥ ವಾಜಿ ಭಟ ಸಂಘಾತಂಗಳೀ ಲೆಕ್ಕಮೆಂ
ಬುದನಾಂ ನಿಟ್ಟಿಸಲಾನೊಂದನಱವೆಂ ತತ್ಸೈನ್ಯ ಪಾದೋತ್ಥಿತಂ|
ಪುದಿದೆತ್ತಂ ರಜಮಂಬರಸ್ಥಳಮುಮಂ ಮುಟ್ಟಿತ್ತು ತಳ್ತುರ್ವಿ ಪ
ರ್ವಿದೊಡಾ ಮುನ್ನಿನ ತೆಳ್ಪುಗೆಟ್ಟು ಕೆಸಱುಯ್ತಾಕಾಶ ಗಂಗಾಜಲಂ|| ೨೯

ಚಂ|| ರವಿಕಿರಣಾಳಿಗಳ್ ಧ್ವಜಪಟಾಳಿಯ ತಿಂತಿಣಿಯಿಂದಮುರ್ಚಲಾ
ಱವೆ ರವಿವಾಜಿಗಳ್ ನೆಗೆದ ಪಾಂಸುಗಳಿಂ ದೆಸೆಗೆಟ್ಟು ಪೋಗಲಾ|
ಱವೆ ರವಿಬಿಂಬಮಂದೆಸೆಯಲಾಱದೆ ಪೆಂಪಿನ ತಿಣ್ಪನಾಂತ ಕೌ
ರವಬಳದಂತು ಮೇರೆ ಪವಣೆಂಬುದನಿನ್ನಱವಂದಮಾವುದೋ|| ೩೦

ಮ|| ಮದವದ್ದಂತಿ ಮದಾಂಬುಧಾರೆಗಳವಂದೊಂದೊಂದಳ್ ಕೂಡೆ ಪ
ಣ್ಣಿದ ಜಾತ್ಯಶ್ವ ರಥಾಶ್ವ ಸಂಕುಳ ಖಲೀನೋದ್ಭೂತ ಲಾಲಾಜಲಂ|
ಕದಡೆೞ್ದೆತ್ತಮವುಂಕೆ ಬೇ ಪರಭಾಗಂಬೆತ್ತು ಲೋಕಕ್ಕೆ ಸ
ನ್ನಿದಮಾಗಿರ್ದುವು ಕೌರವಧ್ವಜಿನಿಯೊಳ್ ಕಾಳಿಂದಿಯುಂ ಗಂಗೆಯುಂ|| ೩೧