ವ|| ಅಂತು ದುರ್ಯೋಧನಂ ತನ್ನ ಬಲದ ಕರಿಘಟೆಗಳ ಕರ್ಣ ತಾಳಾಹತಿಯಿಂ ಕುಲಗಿರಿಗಳಳ್ಳಾಡೆಯುಂ ತನ್ನ ಬಲದ ಪದಾಭಿಘಾತದೊಳಂ ಕುಲಗಿರಿಗಳ್ ಜೀೞ್ದು ಪಾೞೆಯುಂ ತನ್ನ ಬಲದ ಪದೋತ್ಥಿತ ರಜಮೆ ಮಹಾಸಮುದ್ರಂಗಳಂ ತೆಕ್ಕನೆ ತೀವೆಯುಂ ನಿಚ್ಚವಯಣದಿಂ ಬಂದು ಕುರುಕ್ಷೇತ್ರದ ಪೂರ್ವ ದಿಗ್ಭಾಗದೊಳ್ ಪ್ರಳಯಂ ಮೂರಿವಿಟ್ಟಂತೆ ಬೀಡಂಬಿಟ್ಟು ಧರ್ಮಪುತ್ರನಲ್ಲಿ ಗುಳೂಕನೆಂಬ ದೂತನನಿಂತೆಂದಟ್ಟಿದಂ-

ದುರ್ಧಷಣ, ದುರ್ಮರ್ಷಣ, ದುಸ್ಪರ್ಶನ, ದುಷ್ಕರ್ಣ, ಸುಬಾಹು, ದುರ್ಮುಖ, ವಿಕರ್ಣ, ವಿವಿಂಶತಿ, ಸುಲೋಚನ, ಚಿತ್ರೋಪಚಿತ್ರ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹುಗಳೇ ಮೊದಲಾದ ನೂರುಜನ ತಮ್ಮಂದಿರೂ ಲಕ್ಷಣನೇ ಮೊದಲಾದ ನೂರುಜನ ಮಕ್ಕಳೂ ಸುತ್ತುಗಟ್ಟಿ ಬಂದರು. ಪ್ರಳಯಕಾಲದ ಗಾಳಿಯ ಪೆಟ್ಟಿನಿಂದ ಸಮುದ್ರವೇ ಚಲಿಸುವಂತೆ ಚಲಿಸಿ ಸೈನ್ಯವು ಕುರುಕ್ಷೇತ್ರವನ್ನು ಮುತ್ತಿಕೊಂಡಿತು. ೨೮. ನೀರಾನೆಗಳನ್ನೂ ಮೊಸಳೆಗಳನ್ನೂ ಆನೆಯ ಸಮೂಹವೂ, ಮೇಘಸಮೂಹವನ್ನೂ ಅತಿಭಯಂಕರವಾದ ದೊಡ್ಡ ಅಲೆಗಳನ್ನೂ ಕುದುರೆಗಳ ಸಮೂಹವೂ, ಮೀನಿನ ಸಮೂಹವನ್ನು ಪ್ರಕಾಶಮಾನವೂ ಹರಿತವೂ ಆದ ಕತ್ತಿಗಳಿಂದ ಕೂಡಿದ ಒಳ್ಳೆಯ ಭಟಸಮೂಹವೂ ಒಂದೇಸಮನಾಗಿ ತಿರಸ್ಕರಿಸುತ್ತಲು ಚತುರಂಗಸೇನಾಸಮುದ್ರವು ಘೋಷಿಸುತ್ತಿರುವ ಸಮುದ್ರವನ್ನೇ ಮೀರಿ ಬಂದಿತು. ೨೯. ಮದ್ದಾನೆ, ತೇರು, ಕುದುರೆ, ಕಾಲಾಳುಗಳು ಈ ಲೆಕ್ಕವುಳ್ಳದ್ದು ಎಂದು ನಾನು ಹೇಳಲಾರೆ. ಇಷ್ಟು ಮಾತ್ರ ಹೇಳಬಲ್ಲೆ. ಆ ಸೈನ್ಯದ ತುಳಿತದಿಂದ ಮೇಲೆದ್ದು ಎಲ್ಲ ಕಡೆಯಲ್ಲೂ ವ್ಯಾಪಿಸಿ ಆಕಾಶಪ್ರದೇಶವನ್ನು ಮುಟ್ಟಿದ್ದ ಧೂಳು ಮತ್ತೂ ಹೆಚ್ಚಾಗಿ ವ್ಯಾಪಿಸಲು ಆಕಾಶಗಂಗಾನದಿಯ ನೀರು ತನ್ನ ಮೊದಲಿನ ಸ್ವಚ್ಛತೆಯನ್ನು ಕಳೆದುಕೊಂಡು ಬಗ್ಗಡವಾಯಿತು. ೩೦. ಸೂರ್ಯನ ಕಿರಣಗಳ ಸಮೂಹವು ಬಾವುಟದ ಬಟ್ಟೆಗಳ ಸಮೂಹವನ್ನು ಭೇದಿಸಿಕೊಂಡು ಬರಲಾರವು, ಸೂರ್ಯನ ಕುದುರೆಗಳು ಮೇಲೆದ್ದ ಧೂಳಿನಿಂದ ದಿಕ್ಕೆಟ್ಟು ಮುಂದೆ ಹೋಗಲಾರವು, ಸೂರ್ಯಬಿಂಬವು ಪ್ರಕಾಶಹೀನವಾಗಿ ವೈಭವದ ಭಾರದಿಂದ ಕೂಡಿದ ಕೌರವಸೇನೆಯಂತೆಯೇ ಕೊನೆ, ಎಲ್ಲೆ, ಪ್ರಮಾಣಗಳನ್ನು ತಿಳಿಯಲಾರದಂತಿದ್ದುವು ೩೧. ಮದ್ದಾನೆಗಳ ಮದೋದಕದ ಒಟ್ಟುಗೂಡಿದ ಪ್ರವಾಹವೂ ಸಿದ್ಧವಾಗಿ ಅಲಂಕೃತವಾಗಿರುವ ಜಾತ್ಯಶ್ವ ಮತ್ತು ರಥಾಶ್ವ (ಜಾತಿ ಕುದುರೆ ಮತ್ತು ತೇರಿನ ಕುದುರೆ)ಗಳ ಕಡಿವಾಣಗಳ ಸಮೂಹದಿಂದ ಹುಟ್ಟಿದ ಜೊಲ್ಲಿನ ರಸವೂ ಒಂದರೊಡನೊಂದುಗೂಡಲು (ಒಂದನ್ನೊಂದು ಒತ್ತರಿಸಲು) ಗಂಗಾ ಯುಮುನಾನದಿಗಳು ಬೇರೆ ಆಕಾರವನ್ನು ಪಡೆದು ಕೌರವ ಸೈನ್ಯ ಪ್ರದೇಶದಲ್ಲಿ ಹರಿಯುವ ಹಾಗಿದ್ದುವು. ವ|| ದುರ್ಯೋಧನನು ಸೈನ್ಯದ ಆನೆಗಳ ಸಮೂಹದ ಕಿವಿಯ ಬೀಸುವಿಕೆಯ ಪೆಟ್ಟಿನಿಂದ ಕುಲಪರ್ವತಗಳಳ್ಳಾಡಿದುವು. ಅವನ ಸೈನ್ಯದ ಕಾಲಿನ ತುಳಿತದಿಂದ ಕುಲಪರ್ವತಗಳು ಪುಡಿಯಾಗಿ ಮೇಲಕ್ಕೆದ್ದು

ಚಂ|| ಮಸೆಯಿಸುಗುಳ್ಳ ಕೆಯ್ದುಗಳನರ್ಚಿಸುಗಾನೆಗಳಂ ತಗುಳ್ದು ಪೂ
ಜಿಸುಗೆ ವಿಶುದ್ಧ ವಾಜಿಗಳನಾಜಿಗೆ ಜೆಟ್ಟಿಗರಾಗಿ ಕೊಳ್ಳಿವೀ|
ಸೀಸುಗೆ ನಿರಂತರಂ ರವಳಿ ಘೋಷಿಸುಗಿಂದೆ ಕಡಂಗಿ ಸಾರ್ಚಿ ಬಿ
ಟ್ಟುಸಿರದೆ ನಿಲ್ವ ಕಾರಣಮದಾವುದೊ ನೆಟ್ಟನೆ ನಾಳೆ ಕಾಳೆಗಂ|| ೩೨

ವ|| ಎಂದಾ ದೂತನಾ ಮಾೞ್ಕೆಯೊಳೆ ಬಂದು ಪೇೞೆ ಕೇಳ್ದು ಯಮನಂದನನಿಂತೆಂದಂ-

ಚಂ|| ಪಗೆ ಮಸೆದಂದೆ ಕೆಯ್ದು ಮಸೆದಿರ್ದುವು ಪೂಡಿಸುವಂಕದಾನೆ ವಾ
ಜಿಗಳೆಮಗಿಲ್ಲ ಜಟ್ಟಿಗರೆ ಎನ್ನೊಡವುಟ್ಟಿದರಲ್ತೆ ನಾಲ್ಕುಮಾ|
ನೆಗಳಿವನಾಂ ದಲಿಂ ರಣದೊಳರ್ಚಿಸಿ ಬಿಟ್ಟಪೆನೇಕೆ ಮಾಣ್ಬೆನಾ
ವಗಮಿದನಂತೆ ಪೇೞು ನೆಯೆ ನಾಳೆಯೆ ಕಾಳೆಗಮಂತೆ ಗೆಯ್ವಮಾಂ|| ೩೩

ವ|| ಎಂದಾ ದೂತನಂ ವಿಸರ್ಜಿಸಿ ಪುಂಡರೀಕಾಕ್ಷಂಗೆ ಬೞಯನಟ್ಟಿ ಬರಿಸಿ ನಮ್ಮ ಪಡೆಯೊಳಾರ್ಗೆ ವೀರಪಟ್ಟಮಂ ಕಟ್ಟುವಂ ಪೇೞಮೆನೆ-

ಶಾ|| ಮಾತಂಗಾಸುರವೈರಿಯಲ್ಲಿ ಪಡೆದುಂ ಬಿಲ್ಲಂ ಧನುರ್ವಿದ್ಯೆಗಂ
ತಾತಂಗಗ್ಗಳಮಾರುಮಲ್ಲದಱನಾ ಶ್ವೇತಂಗಮಂತಾ ನದೀ
ಜಾತಂಗಂ ದೊರೆ ಯುದ್ಧಮೆಂದಱದು ತಚ್ಛೆ ತಂಗೆ ಭೂಲೋಕವಿ
ಖ್ಯಾತಂಗಗ್ಗಳ ವೀರಪಟ್ಟಮನುದಾರಂ ಕಟ್ಟಿದಂ ಧರ್ಮಜಂ|| ೩೪

ವ|| ಅಂತು ವಿರಾಟನಂದನನಂ ಧರ್ಮನಂದನಂ ಸೇನಾನಾಯಕನಂ ಮಾಡೆ ನಾಳೆ ಕಾಳಗಮೆಂದು ಪಡೆವಳರ್ ಪೋಗಿ ಸಾಱಮೆಂಬುದುಮವರ್ ಬೀಡುವೀಡುಗಳ್ಗೆಲ್ಲಂ ಸಾಱದಾಗಳ್-

ಚಂ|| ಪಗೆ ಸುಗಿವನ್ನೆಗಂ ಮಸೆವ ವೀರಭಟರ್ಕಳ ರೌದ್ರಮಪ್ಪ ಕೆ
ಯ್ದುಗಳಿನಗುರ್ವಿನದ್ಭುತದಿನುರ್ವಿದ ಕೆಂಗಿಡಿಗಳ್ ಪಳಂಚಿ ತೊ|
ಟ್ಟಗೆ ಕೊಳೆ ಪಾಯ್ದವೋಲ್ ಪೊಳೆವ ಸಂಜೆಯ ಕೆಂಪದು ಸಾಣೆಗೊಡ್ಡಿದಿ
ಟ್ಟಗೆಯ ರಜಂಬೊಲೆಂಬಿನೆಗಮಸ್ತಮಯಕ್ಕಿೞದಂ ದಿವಾಕರಂ|| ೩೫

ಹಾರಿದುವು. ಅವನ ಸೈನ್ಯದ ಕಾಲಿನಿಂದ ಎದ್ದ ಧೂಳೇ ಮಹಾಸಮುದ್ರಗಳನ್ನು ಇದ್ದಕ್ಕಿದ್ದ ಹಾಗೆ ತುಂಬಿತು. ಹೀಗೆ ನಿತ್ಯಪ್ರಯಾಣದಿಂದ ಬಂದು ಕುರುಕ್ಷೇತ್ರದ ಪೂರ್ವದಿಗ್ಭಾಗದಲ್ಲಿ ಪ್ರಳಯ ಕಾಲವೇ ಗುಂಪುಕೂಡಿದ ಹಾಗೆ ಬೀಡನ್ನು ಬಿಟ್ಟು ದುರ್ಯೋಧನನು ಧರ್ಮರಾಜನ ಹತ್ತಿರಕ್ಕೆ ಉಳೂಕನೆಂಬ ಆಳಿನ ಮೂಲಕ ಹೀಗೆಂದು ಹೇಳಿ ಕಳುಹಿಸಿದನು. ೩೨. ಇರುವ ಆಯುಧಗಳನ್ನು ಹರಿತಮಾಡಲಿ, ಆನೆಗಳನ್ನು ಪೂಜಿಸಲಿ, ಪರಿಶುದ್ಧರಾದ ಕುದುರೆಗಳನ್ನು ಶ್ರದ್ಧೆಯಿಂದ ಪೂಜಿಸಲಿ; ಯುದ್ಧವೀರರಾಗಿ ಯುದ್ಧ ಸೂಚಕಗಳಾದ ದೀವಟಿಗೆಗಳನ್ನು ಬೀಸಿಸಲಿ. ನಿಲ್ಲಿಸದೆ ಒಂದೇಸಮನಾಗಿ ಯುದ್ಧ ಘೋಷವಾಗುತ್ತಿರಲಿ; ಉತ್ಸಾಹದಿಂದ ಕೂಡಿ ಯುದ್ಧಮಾಡಬೇಕಾದ ಈದಿನ ಯುದ್ಧರಂಗದಲ್ಲಿ ವ್ಯರ್ಥಾಲಾಪ ಮಾಡುತ್ತಿರಲು ಕಾರಣವೇನು? ನೇರವಾಗಿ ನಾಳೆಯಿಂದಲೇ ಕಾಳಗ ಪ್ರಾರಂಭವಾಗತಕ್ಕದ್ದು. ವ|| ಎಂದು ಹೇಳಿದ ಆ ಮಾತನ್ನು ಆ ದೂತನು ಆ ರೀತಿಯಿಂದಲೇ ಬಂದು ಹೇಳಲಾಗಿ ಧರ್ಮರಾಜನು ಕೇಳಿ ಹೀಗೆಂದನು.

೩೩. ಹಗೆತನ ಪ್ರಾರಂಭವಾದ ದಿನವೇ ಆಯುಧಗಳು ಸಾಣೆಗೊಂಡಿವೆ. ಪೂಜಿಸಬೇಕಾದ ಪ್ರಸಿದ್ಧವಾದ ಪ್ರತ್ಯೇಕ ಆನೆ ಕುದುರೆಗಳು ನಮಗಿಲ್ಲ ; ನನ್ನೊಡನೆ ಹುಟ್ಟಿದವರೇ ಜಟ್ಟಿಗಳಾದವರಲ್ಲವೇ? ಈ ನಾಲ್ಕು ಆನೆಗಳನ್ನೇ ಪೂಜಿಸಿ ಯುದ್ಧದಲ್ಲಿ ಬಿಡುತ್ತೇನೆ. ಏಕೆ ತಡೆಯಲಿ? ಇದನ್ನು ಹೀಗೆಯೇ ಪೂರ್ಣವಾಗಿ ಹೇಳು. ನಾಳೆಯೇ ಯುದ್ಧವಾಗಲಿ. ನಾವೂ ಹಾಗೆಯೇ ಮಾಡುತ್ತೇವೆ. ವ|| ಎಂದು ಆ ದೂತನನ್ನು ಕಳುಹಿಸಿಕೊಟ್ಟನು. ಶ್ರೀಕೃಷ್ಣನಿಗೆ ಸಮಾಚಾರವನ್ನು ದೂತರ ಮೂಲಕ ಕಳುಹಿಸಿ ಬರಮಾಡಿದನು. ‘ನಮ್ಮ ಸೈನ್ಯದಲ್ಲಿ ಯಾರಿಗೆ ವೀರಪಟ್ಟವನ್ನು ಕಟ್ಟೋಣ ಅಪ್ಪಣೆ ಕೊಡಿ’ ಎಂದು ಕೇಳಿದನು. ೩೪. ಶ್ವೇತನು ಈಶ್ವರನಲ್ಲಿ ಬಿಲ್ಲನ್ನು ಪಡೆದಿದ್ದಾನೆ. ಬಿಲ್ವಿದ್ಯೆಯಲ್ಲಿ ಆತನನ್ನು ಮೀರಿಸುವವರಾರೂ ಇಲ್ಲ. ಆದುದರಿಂದ ಆ ಶ್ವೇತನಿಗೂ ಭೀಷ್ಮನಿಗೂ ಯುದ್ಧವು ಸಮಾನವಾದುದು ಎಂದು ತಿಳಿದು ಆ ಉದಾರಿಯಾದ ಧರ್ಮರಾಜನು ಭೂಲೋಕವಿಖ್ಯಾತನಾದ ಶ್ವೇತನಿಗೆ ಅತಿಶಯವಾದ ವೀರಪಟ್ಟವನ್ನು ಕಟ್ಟಿದನು. ವ|| ಹಾಗೆ ವಿರಾಟನ ಮಗನಾದ ಶ್ವೇತನನ್ನು ಧರ್ಮರಾಜನು ಸೇನಾನಾಯಕನನ್ನಾಗಿ ಮಾಡಿ ನಾಳೆಯೇ ಯುದ್ಧವೆಂದು ಸೇನಾಪತಿಗಳು ಹೋಗಿ ಸಾರಿರಿ ಎನ್ನಲು ಅವರು ಬೀಡುಬೀಡುಗಳಲ್ಲೆಲ್ಲ ಘೋಷಿಸಿದರು- ೩೫. ಶತ್ರುವು ಹೆದರುವಂತೆ ಮಸೆದಿರುವ ವೀರಭಟರುಗಳ ಭಯಂಕರವಾದ ಆಯುಧಗಳಿಂದ ಭಯಂಕರವೂ ಆಶ್ಚರ್ಯಕರವೂ ಆಗಿ ಎದ್ದಿರುವ ಕೆಂಗಿಡಿಗಳು ತಗಲಿ ಆವರಿಸಲು ಮೇಲೆ ಹಾಯುವ ಹಾಗೆ

ವ|| ಆಗಳುಭಯಬಲಂಗಳೊಳಂ ಚಾತುರ್ಯಾಮಾವಸಾನಘಟಿತ ಘಂಟಿಕಾಧ್ವನಿಗಳುಂ ಸಂಧ್ಯಾಸಮಯಸಮುದಿತ ಶಂಖಧ್ವನಿಗಳುಂ ಪಂಚಮಹಾಶಬ್ದಧ್ವನಿಗಳುಮೊಡನೊಡನೆ ನೆಗೞ್ದುವಾಗಳೆರಡುಂ ಬೀಡುಗಳೊಳಂ ಭೋರೆಂದಾರ್ದು ರವಳಿ ಘೋಷಿಸಿ ಕೊಳ್ಳಿವೀಸಿದಾಗಳ್-

ಕಂ|| ಉರಿಮುಟ್ಟಿದರಳೆಯಂತಂ
ಬರಮುರಿದತ್ತಜನ ಪದ್ಮವಿಷ್ಟರದೆಸಳಂ|
ದರೆಸೀದುವಖಿಳ ದಿಗ್ದಿ ರ
ದರದಂಗಳ್ ಕರಮೆ ಕರಿಪುಗಾಱದುವಾಗಳ್|| ೩೬

ವ|| ಅಂತು ಕೊಳ್ಳಿವೀಸಿದಿಂಬೞಯಂ-

ಕಂ|| ಧೃತ ಧವಳವಸನರಾರಾ
ತಶಿವರರ್ಚಿತ ಸಮಸ್ತಶಸ್ತ್ರರ್ ನೀರಾ|
ಜಿತತುರಗರೊಪ್ಪಿದರ್ ಕೆಲ
ರತಿರಥ ಸಮರಥ ಮಹಾರಥಾರ್ಧರಥರ್ಕಳ್|| ೩೭

ಉಡಲುಂ ತುಡಲುಂ ವಸ್ತ್ರಂ
ತುಡುಗೆಯನಾನೆಯುಮನರ್ಥಿಸಂತತಿಗೀಯಲ್|
ಬಿಡುವೊನ್ನುಮನಾಳ್ಗಟ್ಟುವ
ತೊಡರೊಳ್ ತೊಡರ್ದಿರ್ದರರಸುಮಕ್ಕಳ್ ಕೆಲಬರ್|| ೩೮

ವ|| ಆ ಪ್ರಸ್ತಾವದೊಳೊರ್ವಂ ತನ್ನ ದೋರ್ವಲದಗುರ್ವಿನೊಳುರ್ವೀಪತಿಯನಿಂತೆಂದಂ-

ಉ|| ನಾಳೆ ವಿರೋ ಸಾಧನ ಘಟಾಘಟಿತಾಹವದಲ್ಲಿ ನಿನ್ನ ಕ
ಟ್ಟಾಳಿರೆ ಮುಂಚಿ ತಾಗದೊಡಮಳ್ಕು ತಾಗಿ ವಿರೋಸೈನ್ಯ ಭೂ|
ಪಾಳರನೊಂದೆ ಪೊಯ್ಯದೊಡಮೀ ತಲೆ ಪೋದೊಡಮಟ್ಟೆಯಟ್ಟಿ ಕ
ಟ್ಟಾಳನೆ ಮುಟ್ಟಿ ತಳ್ತಿಱಯದಿರ್ದೊಡಮಂಜಿದೆನಾಂ ಮಹೀಪತೀ|| ೩೯

ವ|| ಎಂದು ತನ್ನ ಮನದ ಪೊಡರ್ಪುಮಂ ಕೂರ್ಪುಮನುಂಟುಮಾಡಿ ನುಡಿದಂ ಮತ್ತೊರ್ವಂ ತನ್ನನಾಳ್ದಂ ಪೆರ್ಚಿ ಪೊರೆದುದರ್ಕೆ ಕರಂ ಮೆಯ್ವೆರ್ಚಿ ನುಡಿದಂ-

ಹೊಳೆಯುತ್ತಿರುವ ಆ ಸಂಜೆಗೆಂಪು ಸಾಣೆಗೆ ಕೊಟ್ಟ ಇಟ್ಟಿಗೆಯ ಧೂಳೆನ್ನುವ ಹಾಗಿರಲು ಸೂರ್ಯನು ಮುಳುಗಿದನು. ವ|| ಆಗ ಎರಡು ಸೈನ್ಯಗಳಲ್ಲಿಯೂ ನಾಲ್ಕು ಯಾಮಗಳ ಕಡೆಯಲ್ಲಿ ಉಂಟಾಗುವ ಗಂಟೆಯ ಶಬ್ದಗಳೂ ಸಂಧ್ಯಾಕಾಲದಲ್ಲಿ ಶಂಖಧ್ವನಿಗಳೂ ಪಂಚಮಹಾಧ್ವನಿಗಳೂ ಜೊತೆಜೊತೆಯಲ್ಲಿಯೇ ಉಂಟಾದುವು. ಆಗ ಎರಡು ಬೀಡುಗಳಲ್ಲಿಯೂ ಭೋರೆಂದು ಸಾಮೂಹಿಕ ಶಬ್ದವನ್ನು ಘೋಷಿಸಿ ಆ ಯುದ್ಧಸೂಚಕವಾದ ದೀವಟಿಗೆಗಳನ್ನು ಬೀಸಿದರು. ೩೬. ಬೆಂಕಿ ತಗುಲಿದ ಹತ್ತಿಯಂತೆ ಆಕಾಶವು ಉರಿದುಹೋಯಿತು. ಬ್ರಹ್ಮನ ಕಮಲಾಸನದ ದಳಗಳು ಅರ್ಧ ಸುಟ್ಟವು. ಎಲ್ಲ ದಿಗ್ಗಜಗಳ ದಂತಗಳೂ ವಿಶೇಷವಾಗಿ ಕರ್ರಗಾದುವು ವ|| ಹಾಗೆ ಕೊಳ್ಳಿ ಬೀಸಿದ ಬಳಿಕ ೩೭. ಆ ಸೈನ್ಯದಲ್ಲಿ ವಸ್ತ್ರವನ್ನು ಧರಿಸಿದವರೂ ಶಿವನನ್ನು ಆರಾಸಿದವರೂ ಸಮಸ್ತ ಆಯುಧಗಳನ್ನು ಪೂಜಿಸಿದವರೂ ಕುದುರೆಗಳಿಗೆ ಆರತಿಯನ್ನೆತ್ತಿದವರೂ ಆದ ಕೆಲವರು ಅತಿರಥ, ಸಮರಥ, ಮಹಾರಥ, ಅರ್ಧರಥರುಗಳು ಪ್ರಕಾಶಿಸಿದರು.

೩೮. ಉಡಲು ವಸ್ತ್ರವನ್ನೂ ತೊಡಲು ಆಭರಣವನ್ನೂ ಆನೆಯನ್ನೂ ಯಾಚಕಸಮೂಹಕ್ಕೆ ಕೊಡಲು ಬಿಡಿ ಹೊನ್ನುಗಳನ್ನೂ ಸೇವಕರಿಗೆ ಕಳುಹಿಸುವ ಸಡಗರದಲ್ಲಿ ಕೆಲವು ಅರಸು ಮಕ್ಕಳು ತೊಡಗಿದ್ದರು. ವ|| ಆ ಸಂದರ್ಭದಲ್ಲಿ ಒಬ್ಬನು ತನ್ನ ತೋಳಬಲದ ಆಕ್ಯದಿಂದ ರಾಜನಿಗೆ ಹೀಗೆ ಹೇಳಿದನು- ೩೯. ಎಲೈ ರಾಜನೆ ನಾಳೆ ನಡೆಯಲಿರುವ ಶತ್ರುಸೈನ್ಯದ ಗಜಯುದ್ಧದಲ್ಲಿ ನಿನ್ನ ಶೂರರಿರಲು ಅವರನ್ನು ಮುಂಚಿ ಶತ್ರುಸೈನ್ಯವನ್ನು ಪ್ರತಿಭಟಿಸುತ್ತೇನೆ. ಭಯವುಂಟಾಗುವಂತೆ ತಗುಲಿ ಶತ್ರುರಾಜರನ್ನು ಒಂದೇಸಮನಾಗಿ ಹೊಡೆದು ಹಾಕುತ್ತೇನೆ. ಈ ತಲೆ ಹೋದರೂ ಮುಂಡವೇ ಶೂರರನ್ನು ಬೆನ್ನಟ್ಟಿ ಹೋಗಿ ತಗಲಿ ಕತ್ತರಿಸುತ್ತದೆ. ಹಾಗೆ ಮಾಡದಿದ್ದರೆ ನಾನು ಅಂಜಿದವನಾಗುತ್ತೇನೆ. ವ|| ಎಂದು ತನ್ನ ಮನದ ಉತ್ಸಾಹವನ್ನೂ ಕೆಚ್ಚನ್ನೂ ಪ್ರದರ್ಶನ ಮಾಡಿ ತೋರಿಸಿದನು. ಮತ್ತೊಬ್ಬನು ತನ್ನ ಯಜಮಾನನು ತನ್ನನ್ನು

ಚಂ|| ಒದವಿದ ನಿನ್ನದೊಂದು ದಯೆ ಮೇಣ್ ಪಿರಿದೋ ನೆಗೞ್ದೆನ್ನ ಗಂಡುಮಾ
ದದಟುಮಳುರ್ಕೆಯುಂ ಪಿರಿದೊ ಸಂದೆಯಮಾದಪುದಿಂತಿದಿಲ್ಲಿ ತೂ|
ಗಿದೊಡಱಯಲ್ಕೆ ಬಾರದದು ಕಾರಣದಿಂ ರಿಪುಭೂಪ ದಂತಿದಂ
ತದ ತೊಲೆಯೊಳ್ ಪರಾಕ್ರಮದಿನೆನ್ನನೆ ಭೂಪತಿ ತೂಗಿ ತೋನೇ|| ೪೦

ವ|| ಎಂದು ತನ್ನ ಸೆರಗುಂ ಬೆರಗುಮಿಲ್ಲದ ಕಲಿತನಮನಱಯೆ ನುಡಿದಂ ಮತ್ತಮೊಂದೆಡೆಯೊಳೊರ್ವ ವೀರಭಟನುದಾರ ವೀರರಸರಸಿಕನಾಗಿ-

ಚಂ|| ಕುದುರೆಯನೇಱದಂಬೆರಸು ಸೌಳೆನೆ ವೋಗಿರೆ ಪೊಯ್ದುಮೆಯ್ದೆ ಕ
ಟ್ಟಿದಿರೊಳೆ ನೂಂಕಿದಾನೆಗಳ ಕೋಡುಗಳಂ ಬಳೆವೋಗೆ ಪೊಯ್ದುಮಾಂ|
ತದಟರನೊಂದೆವೊಯ್ದುಮೆರಡುಂ ಬಲಮೆನ್ನನೆ ನೋಡೆ ತಕ್ಕಿನೆ
ನ್ನದಟುಮನೆನ್ನ ವೀರಮುಮನಾಜಿಯೊಳೆನ್ನರಸಂಗೆ ತೋಱುವೆಂ|| ೪೧

ವ|| ಎಂದತಿರಭಸ ರಣವ್ಯಸನಮನಾತ್ಮೀಯಶಾಸನಾಯತ್ತಂ ಮಾಡಿದಂ ಮತ್ತೊರ್ವ ನತ್ಯುಗ್ರ ಮಂಡಳಾಗ್ರಮನನುಗೆಯ್ದು ವೀರಗ್ರಹಗ್ರಸ್ತನಾಗಿ-

ಚಂ|| ಸಿಡಿಲೊಳೆ ತಳ್ತು ಪೋರ್ವ ಸಿಡಿಲಂತಿರೆ ಬಾಳೊಳೆ ಬಾಳ್ ಪಳಂಚಿ ಮಾ
ರ್ಕಿಡಿವಿಡೆ ನೋಡಲಂಜಿ ದೆಸೆದೇವತೆಗಳ್ ಪೆಱಪಿಂಗ್ ತೋಳ ತೀನ್|
ಕಿಡೆ ನಲಿದೊಂದೆರೞ್ಕುದುರೆಯಟ್ಟೆಯುಮೊಂದೆರಡಾನೆಯಟ್ಟೆಯುಂ
ತೊಡರ್ದೊಡನಾಡೆ ತಳ್ತಿಱಯದಿರ್ದೊಡೆ ಜೋಳಮನೆಂತು ನೀಗುವೆಂ|| ೪೨

ವ|| ಎಂದು ನಿಜಭುಜವಿಜಯಮನಪ್ಪುಕೆಯ್ದು ನುಡಿದಂ ಮತ್ತೊರ್ವನಲ್ಲಿಯೆ-

ಮ|| ಸುರಲೋಕಂ ದೊರೆಕೊಳ್ವುದೊಂದು ಪರಮ ಶ್ರೀಲಕ್ಷ್ಮಿಯುಂ ಬರ್ಪುದಾ
ದರದಿಂ ದೇವನಿಕಾಯದೊಳ್ ನೆರೆವುದೊಂದುತ್ಸಾಹಮುಂ ತನ್ನ ಮೆ|
ಯ್ಸಿರಿ ಭಾಗ್ಯಂ ನೆರಮಪ್ಪುದೊಂದೆ ರಣದೊಳ್ ಗೆಲ್ದಾಜಿಯಂ ತಳ್ತು ಸಂ
ಗರದೊಳ್ ಜೋಳದ ಪಾೞಯಂ ನೆರಪಿದಂ ಗಂಡಂ ಪೆಱಂ ಗಂಡನೇ|| ೪೩

ವಿಶೇಷವಾಗಿ ಸಾಕಿದುದಕ್ಕೆ ತೃಪ್ತಿಗೊಂಡು ಮೆಯ್ಯುಬ್ಬಿ ಮಾತನಾಡಿದನು- ೪೦. ನನ್ನಲ್ಲಿ ನಿನಗುಂಟಾದ ದಯೆ ಹೆಚ್ಚಿನದೊ ಅಥವಾ ನನ್ನ ಪ್ರಸಿದ್ಧವಾದ ಪೌರುಷವೂ ಪರಾಕ್ರಮವೂ ಕೀರ್ತಿಯೂ ದೊಡ್ಡದೋ ಎನ್ನುವುದು ಸಂದೇಹವಾಗಿದೆ. ಇಲ್ಲಿ ಇವೆರಡರನ್ನೂ ತೂಗಿ ನೋಡಲು ಸಾಧ್ಯವಿಲ್ಲ. ಆದುದರಿಂದ ಶತ್ರುರಾಜರ ಆನೆಯ ದಂತದ ತಕ್ಕಡಿಯಲ್ಲಿ ಪರಾಕ್ರಮದ ದೃಷ್ಟಿಯಿಂದ ನನ್ನನ್ನು ತಾನೇ ತೂಗಿ ತೋರಿಸುತ್ತೇನೆ. ವ|| ಎಂದು ತನ್ನ ಭಯವೂ ಅಪಾಯವೂ ಇಲ್ಲದ ಶೌರ್ಯವನ್ನು ಸ್ಪಷ್ಟವಾಗಿ ಪ್ರದರ್ಶಿಸಿದನು. ಬೇರೊಂದು ಸ್ಥಳದಲ್ಲಿ ವೀರಭಟನು ಔದಾರ್ಯದಿಂದ ಕೂಡಿದ ವೀರರಸದಲ್ಲಿ ಮಗ್ನನಾಗಿ ನುಡಿದನು. ೪೧. ಹತ್ತಿದ ಕುದುರೆಯೊಡನೆ ಸವಾರನನ್ನು ‘ಸಿಳ್’ ಎಂದು ಕತ್ತರಿಸುವ ಹಾಗೆ ಚೆನ್ನಾಗಿ ಹೊಡೆದು, ನೇರ ಎದುರಾಗಿ ನುಗ್ಗಿದ ಆನೆಗಳ ಕೊಂಬುಗಳನ್ನು ಅವುಗಳ ಅಣಸು ಬಿದ್ದುಹೋಗುವಂತೆ ಎದುರಿಸಿದ ಶೂರರನ್ನೂ ಒಟ್ಟಿಗೆ ಧ್ವಂಸ ಮಾಡಿ ಎರಡು ಸೈನ್ಯಗಳೂ ನನ್ನನ್ನೇ ನೋಡುವಷ್ಟು ಸಮರ್ಥವಾದ ನನ್ನ ಪರಾಕ್ರಮವನ್ನೂ ನನ್ನ ವೀರವನ್ನೂ ಯುದ್ಧದಲ್ಲಿ ನನ್ನ ಸ್ವಾಮಿಗೆ ತೋರಿಸುತ್ತೇನೆ ವ|| ಎಂದು ಅತ್ಯಂತ ರಭಸದಿಂದ ಕೂಡಿದ ತನ್ನ ಯುದ್ಧಾಸಕ್ತಿಯನ್ನು ತೋರ್ಪಡಿಸಿಕೊಂಡನು. ಮತ್ತೊಬ್ಬನು ಬಹಳ ಭಯಂಕರವಾದ ಕತ್ತಿ ಸಿದ್ಧಪಡಿಸಿಕೊಂಡು ಪರಾಕ್ರಮವೆಂಬ ಗ್ರಹದಿಂದ ಹಿಡಿಯಲ್ಪಟ್ಟವನಾದನು. ೪೨. ಸಿಡಿಲನ್ನು ಸಂಸಿ ಹೋರಾಡುವ ಸಿಡಿಲಿನಂತೆ ಕತ್ತಿಯಲ್ಲಿ ಕತ್ತಿಯು ಘಟ್ಟಿಸಿ ಎದುರು ಕಿಡಿಗಳನ್ನು ಚೆಲ್ಲುತ್ತಿರಲು ಅದನ್ನು ನೋಡಿ ದಿಗ್ದೇವತೆಗಳೆಲ್ಲ ಹೆದರಿ ಹಿಮ್ಮೆಟ್ಟುತ್ತಿರಲು ತೋಳಿನ ನವೆಯು ತೀರುವ ಹಾಗೆ ಒಂದೆರಡು ಕುದುರೆಯ ಮುಂಡಗಳೂ ಒಂದೆರಡಾನೆಯ ಮುಂಡಗಳೂ ಕತ್ತಿಗೆ ಸಿಕ್ಕಿ ಜೊತೆಯಲ್ಲಿ ಕುಣಿಯುವಂತೆ ಸಂತೋಷದಿಂದ ಸಂಸಿ ಕಾದದಿದ್ದರೆ ಜೋಳದ ಋಣವನ್ನು ನಾನು ಹೇಗೆ ತೀರಿಸುತ್ತೇನೆ? ವ|| ಎಂದು ತನ್ನ ತೋಳಿನ ಜಯವನ್ನು ಕ್ರಯಿಸಿ ಮಾತನಾಡಿದನು. ಅಲ್ಲಿಯೇ ಮತ್ತೊಬ್ಬನು ೪೩. ದೇವಲೋಕ ಪ್ರಾಪ್ತಿಯಾಗುವುದು ಒಂದು ಫಲ, ಹಾಗೆಯೇ ಉತ್ತಮ ಐಶ್ವರ್ಯವೂ ಪ್ರಾಪ್ತವಾಗುವುದು ಮತ್ತೊಂದು ಫಲ. ನನ್ನ ಉತ್ಸಾಹವೂ ಮೆಯ್ಸಿರಿಯೂ ಹೆಚ್ಚುವುದು. ಇಂತಹ ಒಂದು ಯುದ್ಧದಲ್ಲಿ ಭಾಗವಹಿಸಿ ವಿಜಯಶಾಲಿಯಾಗಿ ಅನ್ನದ

ವ|| ಎಂದು ನುಡಿದಂ-

ಮ|| ತವೆ ಮಾಱುಂತ ಬಲಂ ಕಱುತ್ತಿಱದು ತನ್ನಾಳ್ದಂ ಕರಂ ಮೆಚ್ಚೆ ಗೆ
ಲ್ದವನಂ ಶ್ರೀವಧು ಪತ್ತುಗುಂ ಮಡಿದನಂ ದೇವಾಂಗನಾನೀಕಮು|
ತ್ಸವದಿಂದುಯ್ಗುಮದೆಂತುಮಿಂಬು ಸುಭಟಂಗಿಂತಪ್ಪುದಂ ಕಂಡುಮಂ
ಜುವನೇಕಂಜುವನೆಂದು ಪೆರ್ಚಿ ನುಡಿದಂ ಮತ್ತೊರ್ವನಾಸ್ಥಾನದೊಳ್|| ೪೪

ವ|| ಅಂತು ನುಡಿದೆರಡುಂ ಬಲಂಗಳುಂ ತಂತಮ್ಮ ವೀರಮಂ ಚಾಗಮಂ ಮೆದು ತಮ್ಮ ಕೆಯ್ದುಗಳನರ್ಚಿಸಿ ದರ್ಭಶಯನಂ ಮಾಡಿ ಪಲ್ಲಂ ಸುಲಿದು ಶಸ್ತ್ರಸಂಗ್ರಹರಾಗಿ ಪಲರುಂ ವೀರಭಟರ್ ತಮ್ಮಂ ತಾಮೆ ಪರಿಚ್ಛೇದಿಸಿರ್ದರತ್ತ ಮತ್ತಮೊರ್ವಂ ತನ್ನ ನಲ್ಲಳೊಳಿಂತೆಂದನೀ ಪೊೞ್ತೆ ಪೊೞ್ತು ನಾಳೆ ದೇವಲೋಕದ ಕನ್ಯಕೆಯರೋಲಗದೊಳಿರ್ಪೆನೆಂದು ನುಡಿಯೆ ನೀನೆಂದಂತು ಪೋಗಲ್ ತೀರದು ನಾಳೆ ಮಗುೞ್ದು ಬಂದೆನ್ನೊಳ್ ನೆರೆವೆಯೆಂದು ಪೇೞೆ ನಿನಗಱವುಂಟೆ ಎಂದು ಕೇಳೆಯೆನ್ನೋಲೆವಾಗ್ಯಮುಂಟೆಂದಳ್ ಮತ್ತಮೊಂದೊಡೆಯೊಳೊರ್ವಳ್ ದರ್ಭಶಯನಸ್ಥನಾದ ನಿಜಪ್ರಾಣೇಶ್ವರನ ಪರಿಚ್ಛೇದಮನಱದು ತನ್ನ ಸಾವಂ ಪರಿಚ್ಛೇದಿಸಿ-

ಉ|| ತಾಂ ಗಡ ನಾಳೆ ಪೋಗಿ ದಿವಿಜಾಂಗನೆಯೊಳ್ ತೊಡರ್ದಿರ್ಪನಿಲ್ಲಿ ಮಾ
ಣ್ದಾಂ ಗಡಮಿರ್ಪೆನಂತನಿತು ಬೆಳ್ಳೆನೆ ಮುನ್ನಮೆ ಪೋಗಿ ನಲ್ಮೆಗೆ
ಲ್ಲಂಗೊಳೆ ದೇವಲೋಕದೊಳಶನನಾದಿರ್ಗೊಳ್ವೆನೋವೊ ಸ
ಗ್ಗಂಗಳೊಳಿರ್ಪ ದೇವಡಿತಿ ತೊೞರೊಳೞಯನಾಗಲೀವೆನೇ|| ೪೫

ವ|| ಎಂದು ಕೈದವಮಿಲ್ಲದ ನಲ್ಮೆಯಂ ನಾಲಗೆಯ ತುದಿಗೆ ತಂದು ನುಡಿದಳ್ ಮತ್ತೊರ್ವಳ್ ತನ್ನಾಣ್ಮನ ದೋರ್ವಲದಗುರ್ವಂ ನೆಚ್ಚಿ-

ಚಂ|| ಜಲಯೊಳಾದ ಮುತ್ತುಗಳವೇಂ ಪೊಸತಾದುವೆ ನಿನ್ನ ತೋಳ ಬಾ
ಳೊಳೆ ಬಲಗರ್ವದಿಂ ತೆಗೆದುದಗ್ರ ವಿರೋ ಮದೇಭ ಮಸ್ತಕ|
ಸ್ಥಳ ಜಳರಾಶಿಯೊಳ್ ಬಳೆದ ನಿರ್ಮಳ ನಿರ್ವ್ರಣ ವೃತ್ತಮೌಕ್ತಿಕಾ
ವಳಿಯನೆ ತರ್ಪುದೆಂದು ನುಡಿದೞ್ಕಳಾಱಸಿದಳ್ ನಿಜೇಶನಂ|| ೪೬

ಋಣವನ್ನು ತೀರಿಸಿದವನೇ ನಿಜವಾಗಿ ಶೂರ. ಬೇರೆಯವನು ಶೂರನೇ ವ|| ಎಂಬುದಾಗಿ ಹೇಳಿದನು. ೪೪. ಪ್ರತಿಭಟಿಸಿದ ಸೈನ್ಯವು ಸಂಪೂರ್ಣವಾಗಿ ನಾಶವಾಗುವಂತೆ ಗುರಿಯಿಟ್ಟು ಹೊಡೆದು ತನ್ನ ಸ್ವಾಮಿಯು ವಿಶೇಷವಾಗಿ ಮೆಚ್ಚುವಂತೆ ಗೆದ್ದವನು ಅಪಾರವಾದ ಐಶ್ವರ್ಯವನ್ನು ಪಡೆಯುತ್ತಾನೆ. ದೇವಸ್ತ್ರೀಯರ ಸಮೂಹವು ಸಂತೋಷದಿಂದ ಸ್ವಾಗತಿಸುತ್ತದೆ. ಇವೆರಡೂ ಸುಭಟನಿಗೆ ಸಂತೋಷಕರವಾದುದೇ. ಹೀಗಿರುವುದನ್ನು ತಿಳಿದೂ ಹೆದರುವವನು ಏಕೆ ಹೆದರುತ್ತಾನೆ ಎಂದು ಮತ್ತೊಬ್ಬನು ಆ ರಾಜಸಭೆಯಲ್ಲಿ ಉಬ್ಬಿ ಹೇಳಿದನು. ವ|| ಹೀಗೆ ಮಾತನಾಡಿ ಎರಡು ಸೈನ್ಯದವರೂ ತಮ್ಮ ತಮ್ಮ ವೀರವನ್ನೂ ತ್ಯಾಗವನ್ನೂ ಪ್ರದರ್ಶಿಸಿ ತಮ್ಮ ಆಯುಧಗಳನ್ನು ಪೂಜಿಸಿ ದರ್ಭೆಯ ಮೇಲೆ ಮಲಗಿ, ಹಲ್ಲನ್ನು ತೊಳೆದು ಶಸ್ತ್ರಧಾರಿಗಳಾಗಿ ಅನೇಕ ವೀರಭಟರು ತಮ್ಮ ವಿಷಯವನ್ನು ತಾವೇ ನಿಶ್ಚಯಿಸಿದರು. ಆ ಕಡೆ ಮತ್ತೊಬ್ಬನು ತನ್ನ ಪ್ರಿಯಳೊಡನೆ ಹೀಗೆಂದನು. ಈ ಹೊತ್ತೇ ಹೊತ್ತು. ನಾಳೆ ದೇವಲೋಕದ ಸ್ತ್ರೀಯರಲ್ಲಿ ಸಂತೋಷದಿಂದಿರುತ್ತೇನೆ ಎಂದು ಹೇಳಿದನು. ಅವಳು ‘ನೀನು ಹೇಳಿದ ಹಾಗೆ ಹೋಗುವುದು ಸಾಧ್ಯವಿಲ್ಲ. ನಾಳೆ ಪುನ ನೀನು ಬಂದು ನನ್ನಲ್ಲಿ ಸೇರುತ್ತೀಯೆ’ ಎಂದಳು. ‘ಅದು ನಿನಗೆ ಹೇಗೆ ಗೊತ್ತು’ ಎಂದು ಪ್ರಶ್ನಿಸಿದನು. ಅವಳು ‘ನನ್ನ ಓಲೆಭಾಗ್ಯವುಂಟು’ ಎಂದಳು. ಬೇರೊಂದು ಕಡೆಯಲ್ಲಿ ಒಬ್ಬಳು ದರ್ಭೆಯ ಹಾಸಿಗೆಯಲ್ಲಿದ್ದ ತನ್ನ ಪತಿಯ ನಿಶ್ಚರ್ಯವನ್ನು ತಿಳಿದು ತನ್ನ ಸಾವನ್ನು ನಿಷ್ಕರ್ಷಿಸಿ ೪೫. ನನ್ನ ಪತಿಯು ನಾಳೆ ಹೋಗಿ ದೇವತಾಸ್ತ್ರೀಯರಲ್ಲಿ ಸೇರಿರುತ್ತಾನೆ, ಇಲ್ಲಿ ನಾನು ಮಾತ್ರ ಇರುತ್ತೇನಲ್ಲವೆ? ಅಷ್ಟು ದಡ್ಡಳೇ ನಾನು! ಮೊದಲೇ ಹೋಗಿ ನನ್ನ ಸದ್ಗುಣವು ಪ್ರಕಾಶವಾಗುವ ಹಾಗೆ ದೇವಲೋಕದಲ್ಲಿ ನನ್ನ ಪತಿಯನ್ನು ಇದಿರುಗೊಳ್ಳುತ್ತೇನೆ. ಓಹೋ ಸ್ವರ್ಗದಲ್ಲಿರುವ ದೇವಸ್ತ್ರೀಯರೆಂಬ ದಾಸಿಯರಲ್ಲಿ (ನನ್ನ ಪತಿಯು) ಪ್ರೀತಿಸುವುದಕ್ಕೆ ಅವಕಾಶ ಕೊಡುತ್ತೇನೆಯೇ?

ವ|| ಎಂದು ಕಪಟವಿಲ್ಲದ ತನ್ನ ಪ್ರೇಮವನ್ನು ನಾಲಗೆಯ ತುದಿಗೆ ತಂದು ಸ್ಪಷ್ಟವಾಗಿ ಹೇಳಿದಳು. ಮತ್ತೊಬ್ಬಳು ತನ್ನ ಒಡೆಯನ ಬಾಹುಬಲದ ಆಕ್ಯವನ್ನು ನಂಬಿ ೪೬. ಸಮುದ್ರದಲ್ಲಿ ಹುಟ್ಟಿದ ಮುತ್ತುಗಳು ಮಹತ್ತಾದುದೇನು? ನಿನ್ನ ತೋಳೆಂಬ ಕತ್ತಿಯಿಂದ ಬಲಪ್ರದರ್ಶನಮಾಡಿ ಉದ್ಧಾರ ಮಾಡಿದ ಭಯಂಕರವಾದ ಶತ್ರುರಾಜರ ಮದ್ದಾನೆಯ ಕುಂಭಸ್ಥಳವೆಂಬ ಮುತ್ತುಗಳೇ ಅನರ್ಘ್ಯವಾದುವು. ಅವು ನಿರ್ಮಲವೂ ಊನವಿಲ್ಲದುದೂ ದುಂಡಾದುದೂ ಆಗಿವೆ. ಆ ಮುತ್ತಿನ ರಾಶಿಯನ್ನೇ ತಂದುಕೊಡಬೇಕು ಎಂದು ಪ್ರೀತಿಯಿಂದ

ವ|| ಅಂತುಭಯ ಬಲಂಗಳೊಳಂ ವೀರಜನಜನಿತಾಳಾಪಂಗಳ್ ನೆಗೞೆ ವಿಕ್ರಮಾರ್ಜುನನನಂತನುಂ ತಾನುಂ ಜಲಕ್ಕನಿರೆ ಪಲ್ಲಂ ಸುಲಿದಗಣ್ಯ ಪುಣ್ಯ ತೀರ್ಥೋದಕಂಗಳಂ ಮಿಂದು ಮಂಗಳವಸದನಂಗೊಂಡು ಸಾಮಾನ್ಯಯಜ್ಞಂಗೆಯ್ದು ಪಲವುಂ ತೆಱದ ಪಗಳೆಸೆಯೆ ನಾಂದೀಮುಖಮಂ ನಿರ್ವರ್ತಿಸಿ ಶುಭಲಕ್ಷಣಲಕ್ಷಿತನುಂ ಸನ್ನಾಹಕರ್ಮನಿರ್ಮಿತನುಂ ಹಸ್ತಾಯುಧ ಕುಶಳನುಂ ಭದ್ರಮನನುಮಪ್ಪ ವಿಜಯಗಜಮುಮನಕ್ಷಯರಥಾಶ್ವಕೇತನ ಶರಾಸನ ಶರ ವಿಚಿತ್ರ ತನುತ್ರ ವಿವಿಧಾಸ್ತ್ರಶಸ್ತ್ರಂಗಳುಮಂ ಗಂಧ ಧೂಪ ದೀಪಾದಿಗಳಿಂದರ್ಚಿಸಿ ಪೊಡೆವಟ್ಟಾಗಳ್-

ಕಂ|| ಬೆಳಗುವ ಸೊಡರ್ಗಳ ಬೆಳಗುಮ
ನಿಳಿಸಿ ತೞತ್ತೞಸಿ ಪೊಳೆಯೆ ತಮ್ಮಯ ಬೆಳಗ|
ಗ್ಗಳಿಸಿ ತೞತೞಸಿ ವಿದ್ಯು
ದ್ವಿಳಸಿತಮನೆನಿಸಿದುವು ನರನ ದಿವ್ಯಾಸ್ತ್ರಂಗಳ್|| ೪೭

ಕಂ|| ಸೊಡರ್ಗುಡಿಯ ಕೆಂಪಿನೊಳ್ ಕೆಂ
ಪಿಡಿದಿರೆ ರಿಪುನೃಪತಿಬಲದ ಶೋಣಿತಜಳಮಂ|
ಕುಡಿಯದೆಯುಂ ದಲ್ ಮುನ್ನಮೆ
ಕುಡಿದಂತೆಸೆದಿರ್ದುವರಿಗನಸ್ತ್ರಚಯಂಗಳ್|| ೪೮

ವ|| ಅಂತಾಯಿರುಳುಂ ವಿಜಯಂ ವಿಜಯೋದ್ಯೋಗದೊಳ್ ಕಳೆಯೆ ಬೆಳಗಪ್ಪ ಜಾವದೊಳ್ ಬೀಡುವೀಡುಗಳ್ಗೆಲ್ಲಂ ತೋೞಲ್ದೇಕಿರ್ಪಿರೇೞಂ ಪಣ್ಣಿಮೆನೆ-

ಉ|| ತಂಡದೆ ಕೀಱ ಸಾಱುವ ಪಲರ್ ಪಡೆವಳ್ಳರ ಮಾತುಗಳ್ ಮನಂ
ಗೊಂಡಿರೆ ಸನ್ನಣಂದುಡುವ ಪಣ್ಣುವ ಬಾೞ್ತೆಯವಂದಿರಂ ಮರು|
ಳ್ಗೊಂಡವೊಲೂಳ್ವ ಬಗ್ಗಿಸುವ ಬೇಗದೊಳಾ ಕಟಂಕಗಳೆಯ್ದೆ ಕೆ
ಯ್ಕೊಂಡುವು ಮಂದರ ಕ್ಷುಭಿತ ದುಗ್ಧಪಯೋ ಗಭೀರನಾದಮಂ|| ೪೯

ಚಂ|| ಕೃತ ವಿವಿಧಾಸ್ತ್ರ ವೀರಭಟಕೋಟಿ ಭಯಂಕರಮಾಗೆ ಬೀಸುವಾ
ವುತಿಯ ಕಳಂಕ ಪಂಕದೊಳೆ ಪೆರ್ಚಿದ ಕೞ್ತಲೆ ತೀವ್ರ ಶಸ್ತ್ರಸಂ|
ಹತಿಗಳ ದೀಪ್ತಿಯಿಂ ಬಿಸುಗೆಯಾಗಿ ಕರಂ ಪೊಗರ್ವಟ್ಟಗುರ್ವುದು
ದ್ಭುತಮುಮನೀಯೆ ಪಣ್ಣಿದುವು ಪಾಂಡವ ಕೌರವ ರೌದ್ರಸಾಧನಂ|| ೫೦

ನುಡಿದು ತನ್ನ ಪತಿಯನ್ನು ಸಮಾಧಾನಪಡಿಸಿದಳು. ವ|| ಹಾಗೆ ಎರಡು ಸೈನ್ಯದಲ್ಲಿಯೂ ವೀರಲಾಪಗಳು ಮೊಳಗುತ್ತಿದ್ದುವು. ವಿಕ್ರಮಾರ್ಜುನನೂ ಕೃಷ್ಣನೂ ನಿರ್ಮಲವಾಗಿ ಹಲ್ಲನ್ನು ತೊಳೆದು ಅಸಂಖ್ಯಾತವಾದ ಪವಿತ್ರ ತೀರ್ಥಗಳಲ್ಲಿ ಸ್ನಾನಮಾಡಿ ಮಂಗಳಾಭರಣಗಳನ್ನು ತೊಟ್ಟು ನಿತ್ಯಕರ್ಮಗಳನ್ನು ಮುಗಿಸಿದರು. ನಾನಾ ರೀತಿಯ ವಾದ್ಯಗಳು ಮೊಳಗುತ್ತಿರಲು ನಾಂದಿಮುಖವೆಂಬ ಪಿತೃಕಾರ್ಯವನ್ನು ಮುಗಿಸಿದರು. ಶುಭಲಕ್ಷಣಗಳಿಂದ ಕೂಡಿದುದೂ ಯುದ್ಧಕಾರ್ಯಕ್ಕೆ ಸಿದ್ಧಮಾಡಲಟ್ಟುದೂ ಕರಕೌಶಲ್ಯ ಉಳ್ಳುದೂ ಭದ್ರಜಾತಿಗೆ ಸೇರಿದುದೂ ಆದ ವಿಜಯಗಜವನ್ನೂ ನಾಶವಿಲ್ಲದ ತೇರು, ಕುದುರೆ, ಧ್ವಜ, ಬಿಲ್ಲು, ಬಾಣ, ಕವಚ, ವಿವಿಧ ಅಸ್ತ ಶಸ್ತ್ರ -ಮೊದಲಾದವುಗಳನ್ನೂ ಗಂಧ, ಧೂಪ, ದೀಪ, ಮೊದಲಾದವುಗಳಿಂದ ಪೂಜಿಸಿ ನಮಸ್ಕರಿಸಿದರು. ೪೭. ಅರ್ಜುನನ ದಿವ್ಯಾಸ್ತ್ರಗಳು ಅಲ್ಲಿ ಕಾಂತಿಯುಕ್ತವಾಗಿ ಪ್ರಕಾಶಮಾನವಾಗಿದ್ದ ದೀಪದ ಬೆಳಕನ್ನು ಕೀಳುಮಾಡಿ ಥಳಥಳನೆ ಹೊಳೆಯಲು ತಮ್ಮ ಕಾಂತಿಯು ಅತ್ಯಕವಾಗಿ ಮಿಂಚಿನಿಂದ ಕೂಡಿದುವೋ ಎಂಬಂತೆ ಪ್ರಕಾಶಿಸಿದುವು. ೪೮. ಆತನ ಬಾಣಸಮೂಹವು ದೀಪದ ಕುಡಿಯ ಕೆಂಪುಬಣ್ಣದಿಂದ ಕೆಂಪಾಗಿ ಶತ್ರುರಾಜರ ರಕ್ತಜಲವನ್ನು ಕುಡಿಯದಿದ್ದರೂ ಅದಕ್ಕೆ ಮೊದಲೇ ಅವು ಕುಡಿದಿದ್ದಂತೆ ಶೋಭಾಯಮಾನವಾಗಿದ್ದುವು. ವ|| ಹಾಗೆ ಈ ರಾತ್ರಿಯನ್ನು ಅರ್ಜುನನು ಯುದ್ಧೋದ್ಯೋಗದಲ್ಲಿಯೇ ಕಳೆದು ಬೆಳಗಿನ ಜಾವದಲ್ಲಿ ಬೀಡು ಬೀಡುಗಳಲ್ಲೆಲ್ಲ ಅಲೆದು ‘ಏಕೆ ಸುಮ್ಮನಿದ್ದೀರಿ ಎದ್ದು ಸಿದ್ಧರಾಗಿ’ ಎಂದನು. ೪೯. ಗುಂಪುಗುಂಪಾಗಿ ಕೋಪಿಸಿಕೊಂಡು ಸಾರಿ ಹೇಳುತ್ತಿರುವ ಅನೇಕ ಸೇನಾನಾಯಕರ ಮಾತುಗಳು ಮನಸ್ಸನ್ನು ಸೆಳೆಯುತ್ತಿರಲು, ಕಡಿವಾಣವನ್ನು ತೊಡಿಸುವ, ಯುದ್ಧಕ್ಕೆ ಅಣಿಮಾಡುತ್ತಿರುವ, ಕೆಲಸದಲ್ಲಿರುವವರನ್ನು ಹುಚ್ಚು ಹಿಡಿದವರ ಹಾಗೆ ಹೆದರಿಸುತ್ತಿರುವ ಆ ಸೈನ್ಯವು ವೇಗದಲ್ಲಿ ಮಂದರಪರ್ವತದಿಂದ ಕಡೆಯಲ್ಪಟ್ಟ ಕ್ಷೀರಸಮುದ್ರದ ಗಭೀರನಾದವನ್ನು ಅಂಗೀಕಾರಮಾಡಿತು. ೫೦. ನಾನಾವಿಧವಾದ ಅಸ್ತ್ರಶಸ್ತ್ರಗಳಲ್ಲಿ ಪೂರ್ಣಪಾಂಡಿತ್ಯವನ್ನು ಪಡೆದಿರುವ ವೀರಭಟರ ಸಮೂಹವು ಭಯವಾಗುವ ಹಾಗೆ ಬೀಸುತ್ತಿರುವ ಆವುತಿಯೆಂಬ ಆಯುಧದ ಕರೆಯೆಂಬ ಕೆಸರಿನಲ್ಲಿಯೇ ಹೆಚ್ಚಾದ ಕತ್ತಲೆಯು ಹರಿತವಾದ ಶಸ್ತ್ರ ಸಮೂಹಗಳ ಕಾಂತಿಯೊಡನೆ ಚೆನ್ನಾಗಿ ಬೆಸೆದುಕೊಂಡು ಕಾಂತಿಯುಕ್ತವಾಗಿ ಭಯವನ್ನೂ ಆಶ್ಚರ್ಯವನ್ನೂ ಏಕಕಾಲದಲ್ಲಿ ಉಂಟುಮಾಡುತ್ತಿರಲು

ವ|| ಅಂತೆರಡುಂ ಪಡೆಗಳುಂ ಪಣ್ಣಪಣ್ಣನೆ ಪಣ್ಣಿ ಕಾಳೆಗಕ್ಕೆ ನಡೆಯಲೊಡರಿಸಿದಾಗಳ್-

ಕಂ|| ಲೋಕೈಕಚಕ್ಷು ನವ ಕಮ
ಲಾಕರ ಬಾಂಧವನನೇಕ ದಿತಿಸುತ ಸಮರಾ|
ನೀಕ ಭಯಂಕರನೆರಡುಮ
ನೀಕಂಗಳನಡರೆ ನೋಡುವಂತುದಯಿಸಿದಂ|| ೫೧

ವ|| ಆಗಳೇಱಸಿದ ಬಿಸುಗೆಗಳುಮಿಕ್ಕಿದ ಲೋಹವಕ್ಕರೆಗಳುಮುರ್ಚಿದ ಮೊಗವಡಂಗಳುಂ ಕಟ್ಟಿದ ಪೞಯಿಗೆಗಳುಮೊಟ್ಟಿದ ಮೂವತ್ತೆರಡಾಯುಧಂಗಳುಂ ಬೆರಸೆಱಂಕೆವೆರಸಿದ ಕುಲಗಿರಿಗಳೆ ತಳರ್ವಂತೆ ತಳರ್ವ ಮದಾಂಧಗಂಧಸಿಂಧುರಂಗಳುಮಂ ಚಕ್ರಚೀತ್ಕೃತ ನಾದದೊಳ್ ದಿಕ್ಚಕ್ರಮುಮಂ ಚಕ್ರಘಾತದೊಳ್ ಧರಾಚಕ್ರಮನಾಕ್ರಮಿಸಿ ನಿಶಾತಹೇತಿಗರ್ಭಂಗಳುಮನೇಕ ಪ್ರಕಾರ ಕೇತನ ವಾಜಿರಾಜಿಗಳುಮಾಗಿ ದೊಮ್ಮಳಿಸಿ ನಡೆವ ರಥಂಗಳುಮಂ ಕಣ್ಣುಂ ಖುರಮುಂ ತೋ ಪಕ್ಕರೆಯಿಕ್ಕಿ ಪೊಳೆವ ಪೊನ್ನ ಪರ್ಯಾಣಂಗಳುಮೆಸೆಯೆ ಘೋಳಾಯ್ಲರ್ ಪೊಳೆಯಿಸೆ ಬಿಸಿಲ್ಗುದುರೆಗಳ್ ಪೊಳೆವಂತೆ ಪೊಳೆವ ಕಡುಗುದುರೆಗಳುಮಂ ಮಿಡುಮಿಡುಕನೆ ಮಿಡುಕುವ ಸಿಡಿಲೇೞ್ಗೆಯುಮಂ ಕೋಳ್ಮಸಗಿದ ಪುಲಿಯ ಪಿಂಡುಗಳುಮನನುಕರಿಸಿ ನಡೆವಣಿಯ ಸಂದಣಿಯುಮಂ ಕಾೞ್ತುಱು ಮಸಗಿದಂತೆ ಮಸಗಿದ ದುರ್ಧರ ಧನುರ್ಧರಬಲಮುಮಂ ಶ್ವೇತ ಭೀಷ್ಮರ ಪೇೞ್ದೋಜೆಯೊಳೆರಡುಂ ಪಡೆಗಳ ಪಡೆವಳರ್ಕಳ್ ಕುರುಕ್ಷೇತ್ರದೊಳ್ ಚಿತ್ರಿಸಿದಂತೊಡ್ಡಿ ನಿಂದಾಗಳ್-

ಚಂ|| ಜಲಶಯನೋದರಾಂತರದಿನೀ ತ್ರಿಜಗಂ ಪೊಱಮಟ್ಟುದೀಗಳೆಂ
ಬುಲಿ ಸಲೆ ತಮ್ಮ ತಮ್ಮ ಶಿಬಿರಂಗಳಿನುಗ್ರ ಚತುರ್ಬಲಂಗಳಂ|
ಪಲವುಮನೊಂದೆ ಮಾಡಿ ದೆಸೆಗಳ್ ಮಸುಳಲ್ ನಡೆತಂದರಾಜಿಗಿ
ರ್ವಲದಲರಾತಿನಾಯಕರುಮೊರ್ಬರನೊರ್ಬರೆ ಗೆಲ್ವ ತಕ್ಕಿನೊಳ್|| ೫೨

ವ|| ಆಗಳ್ ಕೌರವಬಲದ ಸೇನಾನಾಯಕಂ ಗಾಂಗೇಯನಡ್ಡಮಾಗೆ ತನ್ನೊಡ್ಡಿದ ಮಕರವ್ಯೂಹದ ಮೊನೆಯೊಳ್ ಸುತ್ತಿಱದೆತ್ತಿದ ಪೊನ್ನ ತೊಳಪ ಪೞಯಿಗೆಗಳುಂ ಮೆವ ಬೆಳ್ಳಿಯ ರಥಮುಮಾ ರಥದೊಳೊಡಂಬಡೆ ಪೂಡಿದ ಕುದುರೆಗಳುಂ ಜೋಲ್ದ ಪುರ್ವನೆತ್ತಿ ಕಟ್ಟಿದ ಲಲಾಟಪಟ್ಟದೊಳಿಟ್ಟಳಮೊಪ್ಪುವ ಬೀರವಟ್ಟಮುಮಸದಳಮೆಸೆಯೆ ದಿವ್ಯಕವಚಮಂ ತೊಟ್ಟು ಪರಶುರಾಮಂ ಬಾೞ್ಗೆಂದು ಪ್ರಚಂಡ ಕೋದಂಡಮಂ ಕೊಂಡು ಪಾಂಡವಬಲಮಂ ಮಾರ್ಕೊಂಡು ನಿಂದಾಗಳ್ ಶ್ವೇತನುಮಾ ವ್ಯೂಹಕ್ಕೆ ಪ್ರತಿವ್ಯೂಹಮಾಗಿ ಸೂಚೀವ್ಯೂಹಮನೊಡ್ಡಿ ಕನಕಕವಚಾಲಂಕೃತ ಶರೀರನುಮಾರೂಢ ಸಮರ ರಸನುಮುಪಾರೂಢ ಕನಕರಥನುಮಾಗಿ ಕೈಲಾಸವಾಸಿಗೆ ಪೊಡೆವಟ್ಟು ಬಿಲ್ಲಂ ಕೊಂಡು ಗಂಗಾಸುತಂಗದಿರದಿದಿರ್ಚಿ ನಿಂದಾಗಳ್-

ಪಾಂಡವ ಕೌರವರ ಭಯಂಕರವಾದ ಸೈನ್ಯಗಳು ಯುದ್ಧಕ್ಕೆ ಸಿದ್ಧವಾದುವು. ವ|| ಹಾಗೆ ಎರಡು ಸೈನ್ಯಗಳೂ ಮೆಲ್ಲಮೆಲ್ಲನೆ ಯುದ್ಧಸನ್ನದ್ಧವಾಗಿ ಯುದ್ಧಕ್ಕೆ ಹೊರಡಲು ಪ್ರಾರಂಭಿಸಿದಾಗ ಸೂರ್ಯೋದಯವಾಯಿತು. ೫೧. ಲೋಕಚಕ್ಷುಸ್ಸೂ, ಕಮಲಬಾಂಧವನೂ ಭಯಂಕರನೂ ಆದ ಸೂರ್ಯನು ಎರಡು ಸೈನ್ಯಗಳನ್ನು ಮೇಲಿಂದ ನೋಡುವಂತೆ ಉದಯಿಸಿದನು. ವ|| ಆಗ ಎತ್ತಿ ಕಟ್ಟಿದ ಅಂಬಾರಿಗಳು, ಹಾಕಿರುವ ಲೋಹದ ಪಕ್ಷರಕ್ಷೆಗಳು, ಬಿಚ್ಚಿರುವ ಮೊಗವಾಡಗಳು, ಕಟ್ಟಿದ ಧ್ವಜಗಳು ರಾಶಿಮಾಡಿರುವ ಮೂವತ್ತೆರಡಾಯುಧಗಳು ಇವುಗಳಿಂದ ಕೂಡಿ ರೆಕ್ಕೆಗಳಿಂದ ಕೂಡಿದ ಕುಲಪರ್ವತಗಳೇ ನಡೆಯುವಂತೆ ಮದಾಂಧವಾದ ಆನೆಗಳು ನಡೆದುವು. ಚಕ್ರದ ಚೀತ್ಕಾರ ಶಬ್ದದಿಂದ ದಿಕ್ಕುಗಳ ಸಮೂಹವನ್ನೂ, ಚಕ್ರಗಳ ಹೊಡೆತದಿಂದ ಭೂಮಂಡಲವನ್ನೂ ಆಕ್ರಮಿಸಿ ಹರಿತವಾದ ಆಯುಧಗಳನ್ನೊಳಗೊಂಡು ನಾನಾ ರೀತಿಯ ಬಾವುಟ ಮತ್ತು ಕುದುರೆಗಳ ಸಮೂಹಗಳನ್ನುಳ್ಳುದಾಗಿ ಸಡಗರದಿಂದ ತೇರುಗಳು ನಡೆದುವು. ಕಣ್ಣು ಗೊರಸುಗಳನ್ನುಳಿದು ಪಾರ್ಶ್ವಕ್ಕೆ ಹಾಕಿದ ಗುಳದಿಂದಲೂ ಹೊಳೆಯುತ್ತಿರುವ ಚಿನ್ನದ ಜೀನುಗಳಿಂದಲೂ ಅಲಂಕರಿಸಲ್ಪಟ್ಟ ಬಿಸಿಲ್ಗುದುರೆಗಳ ಹಾಗೆ ಹೊಳೆಯುತ್ತಿರುವ ವೇಗಶಾಲಿಗಳಾದ ಕುದುರೆಗಳು ಮುಂದುವರಿದುವು. ವಿಶೇಷವಾಗಿ ಪ್ರಕಾಶಿಸುತ್ತಿರುವ ಸಿಡಿಲಿನ ವೈಭವವನ್ನೂ ಕೋಪಗೊಂಡ ಹುಲಿಗಳ ಹಿಂಡನ್ನೂ ಅನುಕರಿಸುತ್ತಿರುವ ಕಾಲಾಳುಗಳ ಸಮೂಹ ಮುಂದೆ ನಡೆಯಿತು. ಕಾಡ ಹಸು ರೇಗಿದ ಹಾಗೆ ರೇಗಿರುವ ಧರಿಸಲಸಾಧ್ಯವಾದ ಬಿಲ್ಲಾಳಿನ ಸೈನ್ಯವೂ ಮುನ್ನುಗ್ಗಿತು. ಎರಡು ಸೈನ್ಯವೂ ಶ್ವೇತ ಮತ್ತು ಭೀಷ್ಮರು ಆಜ್ಞೆ ಮಾಡಿದ ರೀತಿಯಲ್ಲಿ ನಡೆದು ಕುರುಕ್ಷೇತ್ರದ ರಣರಂಗದಲ್ಲಿ ಸೇರಿರಲು ಅವು ಚಿತ್ರದಲ್ಲಿ ಬರೆದ ಹಾಗೆ ಕಂಡವು. ೫೨. ವಿಷ್ಣುವಿನ ಗರ್ಭದಿಂದ ಈಗ ಮೂರುಲೋಕಗಳೂ ಹೊರಹೊರಟವು ಎಂಬ ಮಾತು ಸಲ್ಲುತ್ತಿರಲು ದಿಕ್ಕುಗಳು ಕಾಂತಿಹೀನವಾಗುತ್ತಿರಲು ಎರಡು ಸೈನ್ಯದ ಶತ್ರುನಾಯಕರೂ ಒಬ್ಬರನ್ನೊಬ್ಬರು ಗೆಲ್ಲುವ ಸಾಮರ್ಥ್ಯದಿಂದ ಯುದ್ಧಕ್ಕೆ ನಡೆದು ಬಂದರು. ವ|| ಆಗ ಕೌರವ ಸೈನ್ಯದ ನಾಯಕನಾದ ಭೀಷ್ಮನು ತಾನು ಅಡ್ಡಲಾಗಿ ಮೊಸಳೆಯ ಆಕಾರದ ಸೈನ್ಯರಚನೆಯನ್ನು ಒಡ್ಡಿದನು. ಅದರ ಮುಂಭಾಗದಲ್ಲಿ ಸುತ್ತಲೂ ಎತ್ತಿ ಕಟ್ಟಿರುವ ಪ್ರಕಾಶಮಾನವಾದ ಚಿನ್ನದ ಬಾವುಟಗಳೂ ಶೋಭಾಯಮಾನವಾಗಿರುವ ಬೆಳ್ಳಿಯ ತೇರು, ಆ ರಥಕ್ಕೆ ಹೊಂದಿಕೊಳ್ಳುವ ಹಾಗೆ